ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

01.07.2018

ಮೊದಲನೇ ವಾಚನ: ಜ್ಞಾನಗ್ರಂಥ: 1: 13-15, 2:23-24

ಏಕೆಂದರೆ ದೇವರು ಉಂಟುಮಾಡಿಲ್ಲ ಮರಣವನ್ನು ಆತ ನೋಡಿ ಹಿಗ್ಗುವವನಲ್ಲ ಜೀವಿಗಳ ಸಾವನ್ನು, ಅಸ್ತಿತ್ವದಲ್ಲಿರಲೆಂದೇ ದೇವಾ ಸೃಷ್ಠಿಸಿದನು ಸಮಸ್ತವನ್ನು ಸೃಷ್ಠಿಗಳಲ್ಲಿದೆ ಆರೋಗ್ಯ, ಅವುಗಳಲಿಲ್ಲ ಮಾರಕ ವಿಷಯ ಅಧೋಲೋಕಕ್ಕೆ ಈ ಲೋಕದ ಮೇಲಿಲ್ಲ ಅಧಿಕಾರವು. ಅಂತ್ಯವೆಂಬುದಿಲ್ಲ ನ್ಯಾಯ ನೀತಿಗೆ. ದೇವರು ಮಾನವನನ್ನು ಸೃಷ್ಠಿಸಿದ್ದು ಅಮರತ್ವಕ್ಕಾಗಿ, ಅವನನ್ನು ರಚಿಸಿದ್ದು ತಮ್ಮ ಸ್ವರೂಪಕ್ಕನುಗುಣವಾಗಿ. ಸೈತಾನನ ಮತ್ಸರದಿಂದಲೆ ಮರಣ ಪ್ರವೇಶಿಸಿತು ಲೋಕವನ್ನು. ಅವನ ಪಕ್ಷಕೆ ಸೇರಿದವರೆಲ್ಲರು  ಅನುಭವಿಸುವರೂ ಅದನು.



ಕೀರ್ತನೆ: 30:2, 4, 5-6, 11, 12-13

ಶ್ಲೋಕ: ನಿನಗೆನ್ನ ವಂದನೆ ಪ್ರಭು, ನನ್ನನುದ್ಧರಿಸಿದೆ.

ಎರಡನೇ ವಾಚನ: 2 ಕೊರಿಂಥಿಯರಿಗೆ: 8:7, 9, 13-15

ವಿಶ್ವಾಸ, ವಾಕ್ಚಾತುರ್ಯ, ಜ್ನಾನ, ಶ್ರದ್ದೆ, ನಮ್ಮ ಬಗ್ಗೆ ನಿಮಗಿರುವ ಪ್ರೀತಿ - ಈ ಎಲ್ಲಾ ವಿಷಯಗಳಲ್ಲೂ ನೀವು ಸಮೃದ್ದರಾಗಿದ್ದೀರಿ. ಹಾಗೆಯೇ ಈ ಸೇವಾಕರ್ಯದಲ್ಲೂ ಸಮೃದ್ದರಾಗಿರಿ. ಪ್ರಭು ಯೇಸು ಕ್ರಿಸ್ತರ ಕೃಪಾಶಕ್ತಿಯನ್ನು ನೀವು ಬಲ್ಲಿರಿ. ಅವರು ತಮ್ಮ ಬಡತನದಿಂದ ನಿಮ್ಮನ್ನು ಶ್ರೀಮಂತವಾಗಿಸಲೆಂದು, ತಾವು ಶ್ರೀಮಂತರಾಗಿದ್ದರೂ ನಿಮಗೋಸ್ಕರ ಬಡವರಾದರು. ನಿಮ್ಮ ಕೊಡುಗೆಯಿಂದ ಇತರರ ಕಷ್ಟಪರಿಹಾರವಾಗಬೇಕು; ಅದರಿಂದ ನಿಮಗೆ ನಷ್ಟವುಂಟಾಗಬೇಕು ಎಂದು ಸಮಾನತೆ ಇರಬೇಕು. ಈ ಕಾಲದಲ್ಲಿ ನಿಮಗೆ ಸಮೃದ್ದಿಯಾಗಿರುವುದರಿಂದ ಅವರ ಕೊರತೆಯನ್ನು ನೀವು ನೀಗಿಸಬೇಕು. ಮುಂದಕ್ಕೆ ಅವರು ಸಮೃದ್ದಿಯಿಂದಿರುವಾಗ, ನಿಮ್ಮ ಕೊರತೆಯನ್ನು ಅವರು ನೀಗಿಸುವರು. ಹೀಗೆ ನಿಮ್ಮಲ್ಲಿ ಸಮಾನತೆ ಉಂಟಾಗುವುದು. "ಅತಿಯಾಗಿ ಶೇಖರಿಸಿದವನಿಗೆ ಅಧೀಕವಾಗಲಿಲ್ಲ, ಮಿತಿಯಾಗಿ ಶೇಖರಿಸಿದವನಿಗೆ ಕೊರತೆಯಾಗಲಿಲ್ಲ" ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ.

ಶುಭಸಂದೇಶ: ಮಾರ್ಕ: 5:21-43 ( ಮಾರ್ಕ : 21-24, 35-42)

ಯೇಸುಸ್ವಾಮಿ ದೋಣಿಯನ್ನೇರಿ ಸರೋವರದ ಈಚೆದಡಕ್ಕೆ ಮರಳಿದರು. ತೀರವನ್ನು ಸೇರಿದೊಡನೆ ಜನರು ದೊಡ್ಡ ಗುಂಪಾಗಿ ಅವರ ಸುತ್ತಲೂ ನೆರೆದರು. ಪ್ರಾರ್ಥನಾ ಮಂದಿರದಿಂದ ಅಧಿಕಾರಿಯೊಬ್ಬನು ಅಲ್ಲಿಗೆ ಬಂದನು. ಅವನ ಹೆಸರು ಯಾಯಿರ. ಅವನು ಯೇಸುವನ್ನು ನೋಡಿದೊಡನೆ ಅವರ ಪಾದಕ್ಕೆರಗಿ, "ನನ್ನ ಪುಟ್ಟ ಮಗಳು ಮರಣಾವಸ್ಥೆಯಲ್ಲಿದ್ದಾಳೆ; ತಾವು ಬಂದು ತಮ್ಮ ಹಸ್ತವನ್ನು ಅವಳ ಮೇಲಿಟ್ಟು, ಅವಳು ಗುಣ ಹೊಂದಿ ಬದುಕುವಂತೆ ಅನುಗ್ರಹಿಸಬೇಕು," ಎಂದು ಬಹಳವಾಗಿ ವಿನಂತಿಸಿದನು. ಯೇಸು ಅವನ ಜೊತೆಯಲ್ಲಿ ಹೊರಟರು. ದೊಡ್ಡ ಜನಸ್ತೋಮವು ಯೇಸುವನ್ನು ಮುತ್ತಿಕೊಂಡು ಅವರ ಜೊತೆಯಲ್ಲೇ ಹೊರಟಿತು.

ಹನ್ನೆರಡು ವರ್ಷಗಳಿಂದಲೂ ರಕ್ತಸ್ರಾವ ರೋಗದಿಂದ ಬಳಲುತ್ತಿದ್ದ ಮಹಿಳೆಯೊಬ್ಬಳು ಆ ಗುಂಪಿನಲ್ಲಿದ್ದಳು. ಅನೇಕ ವೈದ್ಯರಿಂದ ಚಿಕಿತ್ಸೆ ಪಡೆದಿದ್ದರೂ ಕೈಯಲ್ಲಿದ್ದ ಹಣವನ್ನೆಲ್ಲಾ ವ್ಯಯ ಮಾಡಿದ್ದರೂ ಅವಳ ರೋಗಮಾತ್ರ ಉಲ್ಬಣ ಆಗುತಿತ್ತೇ ಹೊರತು ಸ್ವಲ್ಪವೂ ಗುಣಮುಖ ಆಗುತ್ತಿರಲಿಲ್ಲ. ಯೇಸುವಿನ ವಿಷಯವಾಗಿ ಜನರು ಹೇಳುತ್ತಿದ್ದುದನ್ನು ಆಕೆ ಕೇಳಿ, ಜನರ ಗುಂಪಿನಲ್ಲಿ ಸೇರಿ, ಯೇಸುವನ್ನು ಹಿಂಬಾಲಿಸಿದಳು. "ನಾನು ಅವರ ಉಡುಪನ್ನು ಮುಟ್ಟಿದರೂ ಸಾಕು ಗುಣಹೊಂದುವೆನು" ಎಂದುಕೊಂಡು ಯೇಸುವಿನ ಉಡುಪನ್ನು ಮುಟ್ಟಿದಳು. ಅದನ್ನು ಮುಟ್ಟಿದಾಕ್ಷಣ ಅವಳ ರಕ್ತಸ್ರಾವ ನಿಂತು ಹೋಯಿತು. ಕಾಡುತ್ತಿದ್ದ ವ್ಯಾಧಿಯಿಂದ ತಾನು ಗುಣಹೊಂದ್ದಿದ್ದೇನೆಂದು ಆಕೆಗೆ ಅರಿವಾಯಿತು. ಇತ್ತ ಯೇಸು, ರೋಗವನ್ನು ಗುಣಪಡಿಸುವ ಶಕ್ತಿ ತಮ್ಮಿಂದ ಹೊರಹೊಮ್ಮಿದ್ದನ್ನು ತಕ್ಷಣ ತಿಳಿದು, ಸುತ್ತಲಿದ್ದ ಜನರತ್ತಾ ತಮ್ಮ ದೃಷ್ಠಿಯನ್ನು ಹರಿಸಿ, "ನನ್ನ ಉಡುಪನ್ನು ಮುಟ್ಟಿದವರಾರು?" ಎಂದು ಪ್ರಶ್ನಿಸಿದರು. ಅದಕ್ಕೆ ಶಿಷ್ಯರು, "ತಮ್ಮ ಸುತ್ತಲೂ ಜನರು ಮುತ್ತಿಕೊಂಡಿರುವುದು ತಮಗೆ ತಿಳಿದೇ ಇದೆ. ಆದರೂ ’ನನ್ನನ್ನು ಮುಟ್ಟಿದವರು ಯಾರು’ ಎಂದು ಕೇಳುತ್ತೀರಲ್ಲಾ." ಎಂದರು. ಆದರೆ ಯೇಸು ತಮ್ಮನ್ನು ಮುಟ್ಟಿದವರು ಯಾರೆಂದು ಗುರುತಿಸಲು ಸುತ್ತಲೂ ನೋಡುತ್ತಿದ್ದರು. ತನ್ನಲ್ಲಿ ಸಂಭವಿಸಿದ್ದನ್ನು ಅರಿತಿದ್ದ ಆ ಮಹಿಳೆ ಭಯದಿಂದ ನಡುಗುತ್ತಾ ಮುಂದೆ ಬಂದು ಯೇಸುವಿನ ಪಾದಕ್ಕೆ ಎರಗಿ, ಅವರಿಗೆ ನಡೆದ ಸಂಗತಿಯನ್ನು ತಿಳಿಸಿದಳು. ಯೇಸು ಆಕೆಗೆ, "ಮಗಳೇ, ನಿನ್ನ ವಿಶ್ವಾಸ ನಿನ್ನನ್ನು ಗುಣಪಡಿಸಿದೆ; ಸಮಾಧಾನದಿಂದ ಹೋಗು, ವ್ಯಾಧಿಮುಕ್ತಳಾಗಿ ಆರೋಗ್ಯದಿಂದಿರು." ಎಂದು ಅನುಗ್ರಹಿಸಿದರು. ಯೇಸುಸ್ವಾಮಿ ಇನ್ನೂ ಮಾತನಾಡುತ್ತಾ ಇರುವಾಗಲೇ ಯಾಯಿರನ ಮನೆಯಿಂದ ಕೆಲವರು ಬಂದು ಅವನಿಗೆ, "ನಿಮ್ಮ ಮಗಳು ತೀರಿಹೋದಳು; ಇನ್ನೇಕೆ ಗುರುವಿಗೆ ತೊಂದರೆ ಕೊಡುತ್ತೀರಿ?" ಎಂದರು. ಅವರು ಹೇಳಿದ ಮಾತುಗಳಾನ್ನು ಯೇಸು ಕೇಳಿಯೂ ಅವನ್ನು ಲಕ್ಷಕ್ಕೆ ತೆಗೆದುಕೊಳ್ಳದೇ ಯಾಯಿರನಿಗೆ, "ಭಯಪಡಬೇಡ ನಿನ್ನಲ್ಲಿ ವಿಶ್ವಾಸ ಒಂದಿದ್ದರೆ ಸಾಕು." ಎಂದರು.  

ಅನಂತರ ಪೇತ್ರ, ಯಕೋಬ ಹಾಗು ಅವನ ಸೋದರ ಯೊವಾನ್ನ, ಇವರನ್ನು ಮಾತ್ರ ತಮ್ಮ ಜೊತೆಯಲ್ಲಿ ಕರೆದುಕೊಂಡು ಯಾಯಿರನ ಮನೆಯನ್ನು ತಲುಪಿದರು. ಅಲ್ಲಿ ಜನರ ಗೋಳಾಟ, ಗೊಂದಲದ ದೃಶ್ಯ ಅವರ ಕಣ್ಣಿಗೆ ಬಿತ್ತು. ಯೇಸು ಮನೆಯೊಳಕ್ಕೆ ಹೋಗಿ, "ಏತಕ್ಕೆ ಇಷ್ಟೆಲ್ಲಾ ಗಲಭೆ, ಗೋಳಾಟ? ಬಾಲಕಿ ಸತ್ತಿಲ್ಲ, ನಿದ್ರಿಸುತ್ತಿದ್ದಾಳೆ," ಎಂದರು. ಇದನ್ನು ಕೇಳಿದ ಜನರು, ಯೇಸುವನ್ನು ಪರಿಹಾಸ್ಯ ಮಾಡಿದರು. ಆದರೆ ಯೇಸು ಎಲ್ಲರನ್ನೂ ಹೊರಗೆ ಕಳುಹಿಸಿ ಬಾಲಕಿಯ ತಂದೆ ತಾಯಿಯನ್ನು ಮತ್ತು ತಮ್ಮೊಂದಿಗಿದ್ದ ಮೂವರು ಶಿಷ್ಯರನ್ನು ಮಾತ್ರ ಕರೆದುಕೊಂಡು ಆ ಬಾಲಕಿಯನ್ನು ಮಲಗಿಸಿದ್ದ ಕೊಠಡಿಯನ್ನು ಪ್ರವೇಶಿಸಿದರು. ಆಕೆಯ ಕೈಯನ್ನಿಡಿದು "ತಲಿಥಾಕೂಮ್"ಎಂದರು. (’ಮಗಳೇ, ನಿನಗೆ ಹೇಳುತ್ತೇನೆ, ಎದ್ದೇಳು’ ಎಂಬುದು ಆ ಮಾತಿನ ಅರ್ಥ). ಅವಳು ತಟ್ಟನೆ ಎದ್ದು ನಡೆದಾಡ ತೊಡಗಿದಳು. ಅಲ್ಲಿದ್ದವರೆಲ್ಲರೂ ಆಶ್ಚರ್ಯ ಭರಿತರಾದರು. ಅವಳಿಗೆ ಹನ್ನೆರಡು ವರ್ಷ ವಯಸ್ಸು ಆಗಿತ್ತು. ಈ ವಿಷಯವನ್ನು ಬೇರೆ ಯಾರಿಗೂ ತಿಳಿಸಬಾರದೆಂದು ಯೇಸು ಅವರಿಗೆ ಕಟ್ಟಪ್ಪಣೆ ಮಾಡಿದರು. ಬಾಲಕಿಗೆ ತಿನ್ನಲು ಏನಾದರು ಕೊಡುವಂತೆ ತಿಳಿಸಿದರು. 

30.06.2018

ಮೊದಲನೇ ವಾಚನ: ಪ್ರಲಾಪಗಳು 2:2, 10-14, 18-19 

ಸ್ವಾಮಿ ಯಕೋಬಿನ ನಿವಾಸಗಳನ್ನು ನಾಶಪಡಿಸಿಹನು, ರೌದ್ರದಿಂದ ಯೆಹೂದ ಕೋಟೆಗಳನ್ನು ನೆಲಮವಾಗಿಸಿಹನು, ರಾಜ್ಯವನ್ನೂ ಅದರ ಪಾಲಕರನ್ನೂ ನೀಚಸ್ಥಿತಿಗೆ ಇಳಿಸಿಹನು.  ತಲೆಯಮೇಲೆ ಧೂಳನ್ನು ತೂರಿಕೊಂಡು ಗೋಣಿತಟ್ಟನ್ನು ಸೊಂಟಕ್ಕೆ ಸುತ್ತಿಕೊಂಡು ಕುಕ್ಕರಿಸಿಹರು. ಸಿಯೋನ್ ನಗರಿಯ ಪ್ರಮುಖರು ತಲೆ ತಗ್ಗಿಸಿಹರು ಜೆರುಸಲೇಮಿನ ಯುವತಿಯರು. ಕಂಬನಿಗರೆದು ಇಂಗಿಹೋಗಿದೆ ಕಣ್ಣು ಕುದಿಯುತ್ತಿದೆ ನನ್ನೊಳಗೆ ಕರುಳು! ನನ್ನ ಜನತೆಯೆಂಬ ಯುವತಿ ಹಾಳಾಗಿ ಮಕ್ಕಳು ಹಾದಿಬೀದಿಗಳಲ್ಲಿ ಮೂರ್ಛೆ ಹೋಗಿ ನನ್ನ ಕರುಳು ಕರಗಿಹೋಗಿದೆ ನೀರಾಗಿ. 'ಅಮ್ಮಾ ತಿನ್ನಲಿಕ್ಕಿಲ್ಲವೇ? ಕುಡಿಯಲಿಕ್ಕಿಲ್ಲವೇ'  ಎನ್ನುತ ಮಕ್ಕಳು ಮೂರ್ಛೆಗೊಂಡಿವೆ. ಗಾಯಗೊಂಡವರಂತೆ ನಗರದ ಚೌಕಗಳೊಳು ಪ್ರಾಣಬಿಡುತ್ತಿವೆಯಲ್ಲಾ ತಾಯಿಯ ಎದೆಯಮೇಲೆ ಆ ಹಸುಳೆಗಳು. ಎಲೈ ಜೆರುಸಲೇಮ್ ಯುವತಿಯೇ ನಿನಗೆ ಏನು ಹೇಳಲಿ? ನಿನ್ನನ್ನು ಯಾವುದಕ್ಕೆ ಹೋಲಿಸಲಿ? ಸಿಯೋನ್ ಕನ್ಯೆಯೇ, ನಿನ್ನನ್ನು ಹೇಗೆ ಸಂತೈಸಲಿ? ಸಂತೈಸುವ ಸಾಮತಿಯನ್ನು ಎಲ್ಲಿಂದ ತರಲಿ?  ನಿನಗೊದಗಿರುವ ನಾಶ ಸಾಗರದಂತೆ ಅಪಾರ ನಿನ್ನನ್ನು ಸ್ವಸ್ಥಗೊಳಿಸಲು ಯಾರಿಂದ ತಾನೆ ಸಾಧ್ಯ? ನಿನ್ನ ಜನರು ಮೊರೆಯಿಡಲಿ ಮನಃಪೂರ್ವಕವಾಗಿ ಸಿಯೋನ್ ನಗರದ ಕೋಟೆಗೆ ಕೋಟೆಯೇ ಕಣ್ಣೀರಿಡಲಿ. ಹಗಲಿರುಳು ಕಂಬನಿ ಹರಿಯಲಿ ತೊರೆಯಂತೆ ನಿಮ್ಮ ನೇತ್ರಗಳಿಂದ ಸುರಿಯಲಿ ಒಂದೇ ಸಮನೆ. ರಾತ್ರಿಯ ಒಂದೊಂದು ಜಾವದಲ್ಲೂ ಎದ್ದು ಗೋಳಾಡಿರಿ. ನಿಮ್ಮ ಹೃದಯ ಕರಗಿ, ನೀರಾಗಿ ಸ್ವಾಮಿಯ ಮುಂದೆ ಹರಿಯಲಿ. ನಿಮ್ಮ ಮಕ್ಕಳ ಪ್ರಾಣವನ್ನು ಉಳಿಸಬೇಕೆಂದು ಕೈ ಮುಗಿದು ಪ್ರಾರ್ಥನೆ ಮಾಡಿ. ಹಸಿವಿನಿಂದ ಅವು  ಮೂರ್ಛೆ ಹೋಗಿವೆ, ಬೀದಿಯ ಮೂಲೆಮೂಲೆಗಳಲ್ಲಿ.

 ಕೀರ್ತನೆ:  74:1b-2, 3-5, 6-7, 20-21 

 ಶ್ಲೋಕ : ನೀ ಮರೆತುಬಿಡಬೇಡ ನಿನ್ನ ದೀನ ದಲಿತರನು ಒಮ್ಮೆಗೆ. 

 ಶುಭಸಂದೇಶ ಮತ್ತಾಯ 8:5-17 

ಯೇಸುಸ್ವಾಮಿ ಕಫರ್ನವುಮ್ ಊರಿಗೆ ಬಂದಾಗ ಶತಾಧಿಪತಿಯೊಬ್ಬನು ಅವರನು ಎದುರುಗೊಂಡನು. "ಪ್ರಭೂ, ನನ್ನ ಸೇವಕ  ಮನೆಯಲ್ಲಿ ಪಾರ್ಶ್ವವಾಯು ರೋಗದಂದ ಹಾಸಿಗೆ ಹಿಡಿದಿದ್ದಾನೆ ಬಹಾಳವಾಗಿ ನರಳುತ್ತಿದ್ದಾನೆ," ಎಂದು ವಿನಂತಿಸಿದನು. ಯೇಸು, "ನಾನೇ ಬಂದು ಅವನನ್ನು ಗುಣಪಡಿಸುತ್ತೇನೆ," ಎಂದರು. ಅದಕ್ಕೆ ಆ ಶತಾಧಿಪತಿ, "ಪ್ರಭುವೇ, ತಾವು ನನ್ನ ಮನೆಗೆ ಬರುವಷ್ಟು ಯೋಗ್ಯತೆ ನನಗಿಲ್ಲ. ತಾವು ಒಂದೇ ಒಂದು ಮಾತು ಹೇಳಿದರೆ ಸಾಕು, ನನ್ನ ಸೇವಕ ಸ್ವಸ್ಥನಾಗುವನು. ಏಕಂದರೆ, ನಾನು ಮತ್ತೊಬ್ಬರ ಕೈಕೆಳಗಿರುವವನು, ನನ್ನ ಅಧೀನದಲ್ಲೂ ಸೈನಿಕರಿದ್ದಾರೆ, ಅವರಲ್ಲಿ ಒಬ್ಬನಿಗೆ ನಾನು,  "ಬಾ" ಎಂದರೆ ಬರುತ್ತಾನೆ ಇನ್ನೊಬ್ಬನಿಗೆ "ಹೋಗು" ಎಂದರೆ ಹೋಗುತ್ತಾನೆ. ಸೇವಕನಿಗೆ, "ಇಂತಿದ್ದನ್ನು ಮಾಡು" ಎಂದರೆ ಮಾಡುತ್ತಾನೆ, ಎಂದನು. ಈ ಮಾತನ್ನು ಕೇಳಿದ್ದೇ ಯೇಸುವಿಗೆ ಅತ್ಯಶ್ಚರ್ಯವಾಯಿತು. ತಮ್ಮನ್ನು ಹಿಂಬಾಲಿಸಿ ಬರುತ್ತಿದ್ದ ಜನರನ್ನು ನೋಡಿ ಹೀಗೆಂದರು: "ಇಂತಹ ಗಾಢ ವಿಶ್ವಾಸವನ್ನು ನಾನು ಇಸ್ರಯೇಲ್ ಜನರಲ್ಲಿ ಕೂಡ ಕಾಣಲಿಲ್ಲವೆಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ. ಪೂರ್ವ ಪಶ್ಚಿಮ ದಿಕ್ಕುಗಳಿಂದ ಅನೇಕ ಜನರು ಬಂದು ಅಬ್ರಹಾಮ, ಇಸಾಕ, ಯಕೋಬರ ಸಮೇತ ಸ್ವರ್ಗಸಾಮ್ರಾಜ್ಯದ ಹಬ್ಬದೂಟದಲ್ಲಿ ಭಾಗಿಗಳಾಗುವರು. ಆದರೆ ಯಾರು ಈ ಸಾಮ್ರಾಜ್ಯಕ್ಕೆ ಬಾಧ್ಯಸ್ಥರೋ  ಅವರನ್ನೇ ಹೊರಗೆ ದಬ್ಬಲಾಗುವುದು; ಅಲ್ಲಿ, ಆ ಕಾರ್ಗತ್ತಲಲ್ಲಿ, ಅವರ ಗೋಳಾಟವೇನು! ಹಲ್ಲು ಕಡಿತವೇನು!" ಆನಂತರ ಯೇಸು ಆ ಶತಾಧಿಪತಿಗೆ, "ಇನ್ನು ಮನೆಗೆ ಹೋಗು, ನೀನು ವಿಶ್ವಾಸಿಸಿದಂತೆಯೇ ಆಗುವುದು,"ಎಂದರು. ಅದೇ ಕ್ಷಣದಲ್ಲಿ ಅವನ ಸೇವಕನು ಸ್ವಸ್ಥನಾದನು. ತರುವಾಯ ಯೇಸುಸ್ವಾಮಿ ಪೇತ್ರನ ಮನೆಗೆ ಬಂದರು. ಅಲ್ಲಿ ಪೇತ್ರನ ಅತ್ತೆ ಜ್ವರದಿಂದ ಮಲಗಿರುವುದನ್ನು ಕಂಡರು. ಯೇಸು ಆಕೆಯ ಕೈ ಮುಟ್ಟಿದುದ್ದೇ ಜ್ವರ ಬಿಟ್ಟುಹೋಯಿತು, ಆಕೆ ಎದ್ದು ಅವರನ್ನು ಸತ್ಕರಿಸಿದಳು. ಸಂಜೆಯಾಯಿತು ದೆವ್ವ ಹಿಡಿದಿದ್ದ ಅನೇಕರನ್ನು ಯೇಸುವಿನ ಬಳಿಗೆ ಕರೆತರಲಾಯಿತು. ಯೇಸು ತಮ್ಮ ಒಂದು ಮಾತಿನಿಂದಲೇ ದೆವ್ವಗಳನ್ನು ಬಿಡಿಸಿದರು. ಮಾತ್ರವಲ್ಲ, ರೋಗಪೀಡಿತರೆಲ್ಲರನ್ನೂ ಗುಣಪಡಿಸಿದರು. ಹೀಗೆ, "ನಮ್ಮ ದುರ್ಬಲತೆಗಳನ್ನುವಹಿಸಿಕೊಂಡನು," ಎಂಬ ಯೆಶಾಯನ ಪ್ರವಾದನೆ ಈಡೇರಿತು.

29.06.2018 - ಸಂತ ಪೇತ್ರ ಮತ್ತು ಪೌಲರ ಮಹೋತ್ಸವ


ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು: 12: 1-11

  ಆ ದಿನಗಳಲ್ಲಿ ಅರಸ ಹೆರೋದನು ಕ್ರೈಸ್ತಸಭೆಯ ಸದಸ್ಯರಲ್ಲಿ ಕೆಲವರನ್ನು ಹಿಂಸಿಸಲು ಆರಂಭಿಸಿದನು. ಯೊವಾನ್ನನ ಸಹೋದರ ಯಕೋಬನನ್ನು ಖಡ್ಗದಿಂದ ಕೊಲ್ಲಿಸಿದನು. ಇದರಿಂದ ಯೆಹೂದ್ಯರಿಗೆ ಮೆಚ್ಚುಗೆಯಾಯಿತೆಂದು ತಿಳಿದು ಪೇತ್ರನನ್ನು ಬಂಧಿಸಿದನು. (ಆಗ ಹುಳಿರಹಿತ ರೊಟ್ಟಿಯ ಹಬ್ಬ ನಡೆಯುತ್ತಿತ್ತು). ಪೇತ್ರನನ್ನು ಬಂಧಿಸಿದ ಮೇಲೆ ಸೆರೆಮನೆಯಲ್ಲಿಟ್ಟು ಅವನನ್ನು ಕಾಯಲು ನಾಲ್ಕು ನಾಲ್ಕು ಸೈನಿಕರಿದ್ದ ಚತುರ್ದಳಕ್ಕೆ ವಹಿಸಿದನು. ಪಾಸ್ಕಹಬ್ಬದ ನಂತರ ಪೇತ್ರನು ಬಹಿರಂಗ ವಿಚಾರಣೆಗೆ ಗುರಿಪಡಿಸಲು ಉದ್ದೇಶಿಸಿದ್ದನು. ಪೇತ್ರನನ್ನು ಹೀಗೆ ಸೆರೆಯಲ್ಲಿಟ್ಟಿದ್ದಾಗ, ಸಭೆಯು ಅವನಿಗಾಗಿ ಶ್ರದ್ದೆಯಿಂದ ದೇವರಿಗೆ ಪ್ರಾರ್ಥನೆಮಾಡುತ್ತಿತ್ತು.  ಹೆರೋದನು ಪೇತ್ರನನ್ನು ಜನರ ಮುಂದೆ ತರಬೇಕೆಂದಿದ್ದ ಹಿಂದಿನ ರಾತ್ರಿ ಅದು, ಪೇತ್ರನು ಇಬ್ಬರು ಸೈನಿಕರ ನಡುವೆ ನಿದ್ರಿಸುತ್ತಿದ್ದನು. ಅವನನ್ನು ಎರಡು ಸರಪಣಿಗಳಿಂದ ಕಟ್ಟಲಾಗಿತ್ತು. ಪಹರೆಯವರು ಸೆರೆಮನೆಯ ದ್ವಾರದಲ್ಲಿ ಕಾವಲಿದ್ದರು. ಫಕ್ಕನೆ ದೇವದೂತನೊಬ್ಬನು ಕಾಣಿಸಿಕೊಂಡನು. ಆ ಕೋಣೆಯೆಲ್ಲಾ ಪ್ರಕಾಶಮಯವಾಯಿತು. ಬೀದಿಯೊಂದರಲ್ಲಿ ಹಾದು ಹೋಗುತ್ತಿರಲು ಒಮ್ಮೆಲೆ ದೂತನು ಪೇತ್ರನನ್ನು ಬಿಟ್ಟು ಅದೃಶ್ಯನಾದನು. ನಡೆದ ಸಂಗತಿ ಏನೆಂದು ಪೇತ್ರನಿಗೆ ಅರಿವಾದಾಗ ಆತನು, "ನಡೆದುದೆಲ್ಲಾ ಸಾಕ್ಷಾತ್ ಸತ್ಯವೆಂದು ಈಗ ನನಗೆ ತಿಳಿಯಿತು. ಪ್ರಭು ತಮ್ಮ ದೂತರನ್ನು ಕಳುಹಿಸಿ ಹೆರೋದನ ಕೈಯಿಂದಲೂ ಯೆಹೂದ್ಯರು ಮಾಡಬೇಕೆಂದಿದ್ದ ಕೇಡಿನಿಂದಲೂ ನನ್ನನ್ನು ಪಾರುಮಾಡಿದ್ದಾರೆ," ಎಂದುಕೊಂಡನು. 

ಕೀರ್ತನೆ: 34:2-3, 4-5, 6-7, 8-9 
 ಶ್ಲೋಕ: ಭಯಭಕುತಿಯುಳ್ಳವರ ಸುತ್ತಲು ಕಾವಲಿದ್ದು ಕಾಯುವನು ಪ್ರಭುವಿನ ದೂತನೇ ಬಂದಿಳಿದು. 

 ಎರಡನೇ ವಾಚನ: 2 ತಿಮೊಥೇಯನಿಗೆ 4:6-8, 17-18 

 ಅತಿ ಪ್ರಿಯನೇ, ನಾನು ಯಜ್ಞಪಶುವಾಗಿ ಅರ್ಪಿತನಾಗುವ ಸಮಯವು ಬಂದಿದೆ. ಈ ಲೋಕದಿಂದ ತೆರಳಬೇಕಾದ ಕಾಲವೂ  ಕೂಡಿಬಂದಿದೆ ಬಾಳಿನ ಸ್ಪರ್ಧೆಯಲ್ಲಿ ಭಾಗವಹಿಸಿದ್ದೇನೆ. ನನ್ನ ಓಟವನ್ನು ಮುಗಿಸಿದ್ದೇನೆ. ವಿಶ್ವಾಸವನ್ನು ಕಾಪಾಡಿಕೊಂಡಿದ್ದೇನೆ. ಇನ್ನು ನನಗೆ ಉಳಿದಿರುವುದು ಒಂದೇ: ಸಜ್ಜನರಿಗೆ ಸಲ್ಲುವಂಥ ಜಯಮಾಲೆ ನನಗೀಗ ಸಿದ್ದವಾಗಿದೆ. ಅದನ್ನು ನೀತಿವಂತ, ನ್ಯಾಯಾಧಿಪತಿಯಾದ ಪ್ರಭು ಆ ದಿನದಂದು ನನಗೆ ಕೊಡುವರು; ನನಗೆ ಮಾತ್ರವಲ್ಲ, ಅವರ ಪ್ರತ್ಯಕ್ಷತೆಯನ್ನು ಪ್ರೀತಿಯಿಂದ ನಿರೀಕ್ಷಿಸುತ್ತಿರುವ ಎಲ್ಲರಿಗೂ ಕೊಡುವರು. ಪ್ರಭು ನನಗೆ ಬೆಂಬಲವಾಗಿ ನಿಂತರು. ನಾನು ಶುಭಸಂದೇಶವನ್ನು ಸಂಪೂರ್ಣವಾಗಿ ಸಾರುವಂತೆಯೂ ಅನ್ಯಧರ್ಮಿಯರೆಲ್ಲರು ಅದನ್ನು ಕೇಳುವಂತೆಯೂ ಮಾಡಿದರು. ಅಲ್ಲದೆ, ಸಿಂಹದ ಬಾಯಿಂದಲೂ ನನ್ನನ್ನು ಸಂರಕ್ಷಿಸಿದರು. ಪ್ರಭು ನನ್ನನ್ನು ಸಕಲ ಕೇಡುಗಳಿಂದ ರಕ್ಷಿಸಿ, ತಮ್ಮ ಸ್ವರ್ಗಸಾಮ್ರಾಜ್ಯಕ್ಕೆ ನನ್ನನ್ನು ಸುರಕ್ಷಿತವಾಗಿ ಸೇರಿಸುವರು. ಯುಗಯುಗಾಂತರಕ್ಕೂ ಅವರಿಗೆ ಮಹಿಮೆ ಸಲ್ಲಲಿ, ಆಮೆನ್.

 ಶುಭಸಂದೇಶ: ಮತ್ತಾಯ 16:13-19 

 ಯೇಸುಸ್ವಾಮಿ 'ಫಿಲಿಪ್ಪನ ಸೆಜರೇಯ' ಎಂಬ ಪ್ರಾಂತ್ಯಕ್ಕೆ ಬಂದರು. ಅಲ್ಲಿ ತಮ್ಮ ಶಿಷ್ಯರನ್ನು ಉದ್ದೇಶಿಸಿ, "ನರಪುತ್ರನನ್ನು ಜನರು ಯಾರೆಂದು ಹೇಳುತ್ತಾರೆ?" ಎಂದು ಕೇಳಿದರು. ಅದಕ್ಕೆ ಶಿಷ್ಯರು, "ಸ್ನಾನಿಕ ಯೊವಾನ್ನ", ಎಂದು ಕೆಲವರು ಹೇಳುತ್ತಾರೆ; ಮತ್ತೆ ಕೆಲವರು, 'ಎಲೀಯನು' ಎನ್ನುತಾರೆ, "ಯೆರೆಮೀಯನು ಅಥವಾ ಪ್ರವಾದಿಗಳಲ್ಲಿ ತಾವೂ ಒಬ್ಬರು," ಎಂಬುದು ಇನ್ನೂ ಕೆಲವರ ಅಭಿಪ್ರಾಯ, ಎಂದು ಉತ್ತರ ಕೊಟ್ಟರು. ಆಗ ಯೇಸು, "ಆದರೆ ನೀವು ನನ್ನನ್ನು ಯಾರೆನ್ನುತ್ತೀರಿ" ಎಂದು ಪ್ರಶ್ನಿಸಿದರು. ಅದಕ್ಕೆ ಪೇತ್ರನು, "ಅಭಿಷಿಕ್ತರಾದ ಲೋಕೋದ್ಧಾರಕ ತಾವೇ, ಜೀವಸ್ವರೂಪರಾದ ದೇವರ ಪುತ್ರ ತಾವೇ,"  ಎಂದನು. ಅದಕ್ಕೆ ಪ್ರತ್ಯುತ್ತರವಾಗಿ ಯೇಸು  ಹೀಗೆಂದರು: "ಯೋನ್ನನ ಮಗ ಸಿಮೋನನೇ, ನೀನು ಧನ್ಯ! ಈ ವಿಷಯವನ್ನು ನಿನಗೆ ಶ್ರುತ ಪಡಿಸಿದ್ದು ನರಮಾನವನ ಶಕ್ತಿ ಅಲ್ಲ, ಸ್ವರ್ಗದಲ್ಲಿರುವ ನನ್ನ ಪಿತನೇ. ನಾನು ನಿನಗೆ ಹೇಳುತ್ತೇನೆ, ಕೇಳು: ನಿನ್ನ ಹೆಸರು ಪೇತ್ರ; ಈ ಬಂಡೆಯ ಮೇಲೆ ನನ್ನ ಧರ್ಮಸಭೆಯನ್ನು ಕಟ್ಟುವೆನು. ಪಾತಾಳಲೋಕದ ಶಕ್ತಿಯು ಅದನ್ನು ಎಂದಿಗೂ ಜಯಿಸಲಾರದು. ಸ್ವರ್ಗಸಾಮ್ರಾಜ್ಯದ ಬೀಗದ ಕೈಗಳನ್ನು ನಿನಗೆ ಕೊಡುವೆನು. ಇಹದಲ್ಲಿ ನೀನು ಏನನ್ನು ಬಂಧಿಸುತ್ತೀಯೋ ಅದನ್ನು ಪರದಲ್ಲಿಯೂ ಬಂಧಿಸಲಾಗುವುದು. ಇಹದಲ್ಲಿ ನೀನು ಏನನ್ನು ಬಿಚ್ಚುತ್ತೀಯೋ ಅದನ್ನು ಪರದಲ್ಲಿಯೂ ಬಿಚ್ಚಲಾಗುವುದು."


28.06.2018


ಮೊದಲನೇ ವಾಚನ: 2 ಅರಸುಗಳು 24:8-17


ಬಾಬಿಲೋನಿನ ಅರಸ ನೆಬೂಕದ್ನೆಚ್ಚರನ ಸೈನ್ಯದವರು ಜೆರುಸಲೇಮಿಗೆ ದಂಡೆತ್ತಿ ಬಂದು ಅದಕ್ಕೆ ಮುತ್ತಿಗೆ ಹಾಕಿದರು. ಅಷ್ಟರಲ್ಲಿ ನೆಬೂಕದ್ನೆಚ್ಚರನೂ ಬಂದನು. ಆಗ ಜುದೇಯದ ಅರಸ ಯೆಹೋಯಾಖೀನನು, ತನ್ನ ತಾಯಿ, ಪರಿವಾರದವರು, ಸೇನಾಪತಿಗಳು, ಕಂಚುಕಿಗಳು ಇವರೊಡನೆ ಅವನ ಬಳಿಗೆ ಹೋದನು. ಅವನು ಇವನನ್ನು ತನ್ನ ಆಳ್ವಿಕೆಯ ಎಂಟನೆಯ ವರ್ಷದಲ್ಲಿ ಸೆರೆಹಿಡಿದನು. ಇದಲ್ಲದೆ, ಸರ್ವೇಶ್ವರ ಮುಂತಿಳಿಸಿದ ಪ್ರಕಾರ, ಅವನು ಸರ್ವೇಶ್ವರನ ಆಲಯದ ಮತ್ತು ಅರಮನೆಯ ಭಂಡಾರಗಳಲ್ಲಿದ್ದ ದ್ರವ್ಯವನ್ನೆಲ್ಲಾ ದೋಚಿಕೊಂಡು ಹೋದನು. ಇಸ್ರಯೇಲರ ಅರಸನಾದ ಸೊಲೊಮೋನನು ಸರ್ವೇಶ್ವರನ ಆಲಯಕ್ಕಾಗಿ ಮಾಡಿಸಿದ್ದ ಬಂಗಾರದ ಎಲ್ಲಾ ಆಭರಣಗಳನ್ನು ಮುರಿದುಬಿಟ್ಟನು. ಜೆರುಸಲೇಮಿನಲ್ಲಿದ್ದ ಎಲ್ಲಾ ಪದಾಧಿಕಾರಿಗಳನ್ನೂ ಯೋಧರನ್ನೂ ಕಮ್ಮಾರರು ಮೊದಲಾದ ಕೈಗಾರಿಕೆಯವರನ್ನೂ ಒಟ್ಟಾರೆ ಹತ್ತುಸಾವಿರ ಜನರನ್ನು ಸೆರೆಗೊಯ್ದನು. ನಾಡಿನ ಜನರಲ್ಲಿ ಕೇವಲ ಬಡವರನ್ನು ಹೊರತಾಗಿ ಬೇರೆ ಯಾರನ್ನೂ ಬಿಡಲಿಲ್ಲ. ಅವನು ಯೆಹೋಯಾಖೀನನ್ನೂ ಅವನ ತಾಯಿ, ಹೆಂಡತಿಯರು, ಕಂಚುಕಿಗಳನ್ನೂ ನಾಡಿನ ಪ್ರಧಾ ಪುರುಷರು ಇವರನ್ನೂ, ಏಳು ಸಾವಿರ ಮಂದಿ ಯೋಧರನ್ನೂ ಸಾವಿರ ಮಂದಿ ಕಮ್ಮಾರರು ಮೊದಲಾದ ಕೈಗಾರಿಕೆಯವರನ್ನೂ ಜೆರುಸಲೇಮಿನಿಂದ ಬಾಬಿಲೋನಿಗೆ ಒಯ್ದನು. ಅವರೆಲ್ಲರು ಪುಷ್ಟರೂ ರಣವೀರರೂ ಆಗಿದ್ದರು. ಬಾಬಿಲೋನಿನ ಅರಸನು ಯೆಹೋಯಾಖೀನನಿಗೆ ಬದಲಾಗಿ ಅವನ ಚಿಕ್ಕಪ್ಪನಾದ ಮತ್ತನ್ಯ ಎಂಬುವನನ್ನು ಅರಸನ್ನಾಗಿ ನೇಮಿಸಿ ಅವನಿಗೆ 'ಚಿದ್ಕೀಯ' ಎಂಬ ಹೆಸರಿಟ್ಟನು.

ಕೀರ್ತನೆ: 79:1-2, 3-5, 8-9 

ಶ್ಲೋಕ: ದೇವಾ, ನೆರವಾಗು ನಿನ್ನ ನಾಮಮಹಿಮೆಯ ನಿಮಿತ್ತ

ಶುಭಸಂದೇಶ: ಮತ್ತಾಯ 7: 21-29

"ನನ್ನನ್ನು "ಸ್ವಾಮೀ, ಸ್ವಾಮೀ," ಎನ್ನುವ ಪ್ರತಿಯೊಬ್ಬನೂ ಸ್ವರ್ಗಸಾಮ್ರಾಜ್ಯವನ್ನು ಪ್ರವೇಶಿಸನು. ಸ್ವರ್ಗದಲ್ಲಿರುವ ನನ್ನ ತಂದೆಯ ಚಿತ್ತಾನುಸಾರ ನಡೆಯುವವನು ಮಾತ್ರ ಅದನ್ನು ಪ್ರವೇಶಿಸುವನು. ತೀರ್ಪಿನ ದಿನದಂದು, "ಸ್ವಾಮೀ, ಸ್ವಾಮೀ, ನಿಮ್ಮ ಹೆಸರಿನಲ್ಲಿ ನಾವು ಪ್ರವಾದನೆ  ಮಾಡಲಿಲ್ಲವೇ? ನಿಮ್ಮ ಹೆಸರಿನಲ್ಲಿ ದೆವ್ವಗಳನ್ನು ಬಿಡಿಸಲಿಲ್ಲವೇ? ನಿಮ್ಮ ಹೆಸರಿನಲ್ಲಿ ಹಲವಾರು ಮಹಾತ್ಕಾರ್ಯಗಳನ್ನು ಮಾಡಲಿಲ್ಲವೇ?" ಎಂದು ಅನೇಕರು ನನಗೆ ಹೇಳುವರು. ಆಗ ನಾನು ಅವರಿಗೆ 'ಇಂದಿಗೂ ನಿಮ್ಮ ಗುರುತೇ ನನಗಿಲ್ಲ. ಅಧರ್ಮಿಗಳೇ, ನನ್ನಿಂದ ತೊಲಗಿರಿ," ಎಂದು ಬಹಿರಂಗವಾಗಿ ಹೇಳಿಬಿಡುವೆನು."  "ನನ್ನ ಮಾತನ್ನು ಕೇಳಿ ಅದರಂತೆ ನಡೆಯುವ ಪ್ರತಿಯೊಬ್ಬನೂ ಬಂಡೆಯ ಮೇಲೆ ಮನೆ ಕಟ್ಟಿಕೊಂಡ ಬುದ್ದಿವಂತನನ್ನು ಹೋಲುತ್ತಾನೆ. ಮಳೆ ಬಿತ್ತು, ನೆರೆ ಬಂತು, ಗಾಳಿ ಬೀಸಿ ಮನೆಗೆ ಅಪ್ಪಳಿಸಿತು. ಆದರೂ ಅದು ಬೀಳಲಿಲ್ಲ. ಕಾರಣ ಅದರ ಅಡಿಗಟ್ಟು ಬಂಡೆಯ ಮೇಲಿತ್ತು. ನನ್ನ ಮಾತುಗಳನ್ನು ಕೇಳಿಯೂ ಅದರಂತೆ ನಡೆಯದ ಪ್ರತಿಯೊಬ್ಬನೂ ಮರಳಿನ ಮೇಲೆ ಮನೆ ಕಟ್ಟಿಕೊಂಡ ಬುದ್ದಿಹೀನನನ್ನು ಹೋಲುತ್ತಾನೆ. ಮಳೆ ಬಿತ್ತು, ನೆರೆ ಬಂತು, ಗಾಳಿ ಬೀಸಿ ಮನೆಗೆ ಅಪ್ಪಳಿಸಿತು; ಅದು ಕುಸಿದು ಬಿತ್ತು. ಅದಕ್ಕಾದ ಪತನವೋ ಅಗಾಧ!" ಯೇಸುಸ್ವಾಮಿ ಇದೆಲ್ಲವನ್ನು ಹೇಳಿ ಮುಗಿಸಿದರು. ಅವರ ಭೋಧನೆ ಜನರಲ್ಲಿ ಅಮೋಘ ಪ್ರಭಾವವನ್ನು ಬೀರಿತು. ಏಕಂದರೆ, ಅವರ ಧರ್ಮಶಾಸ್ತ್ರಿಗಳಂತೆ ಬೋಧಿಸದೆ ಯೇಸು ಅಧಿಕಾರ ವಾಣಿಯಿಂದ ಪ್ರಬೋಧಿಸುತ್ತಿದ್ದರು.

27.06.2018

ಮೊದಲನೇ ವಾಚನ: 2 ಅರಸುಗಳು 22:8-13; 23:1-3 

ಪ್ರಧಾನ ಯಾಜಕ ಹಿಲ್ಕೀಯನು ಲೇಖಕ ಶಾಫಾನನಿಗೆ, "ಸರ್ವೇಶ್ವರನ ಆಲಯದಲ್ಲಿ ನನಗೆ ಧರ್ಮೋಪದೇಶ ಗ್ರಂಥವು ಸಿಕ್ಕಿರುತ್ತದೆ" ಎಂದು ಹೇಳಿ ಅದನ್ನು ಅವನ ಕೈಯಲ್ಲಿ ಕೊಟ್ಟನು; ಶಾಫಾನನು ಓದಿದನು. ಆನಂತರ ಅವನು ಹಿಂದಿರುಗಿ ಅರಸನ ಬಳಿಗೆ ಹೋಗಿ, "ನಿಮ್ಮ ಸೇವಕರು ದೇವಾಲಯದಲ್ಲಿ ಸಂಗ್ರಹವಾದ ಹಣವನ್ನು ತೆಗೆದು ದೇವಾಲಯದ ಕೆಲಸವನ್ನು ಮಾಡಿಸುವ ಮೇಸ್ತ್ರಿಗಳಿಗೆ ಒಪ್ಪಿಸಿದರು; ಇದಲ್ಲದೆ ಯಾಜಕ ಹಿಲ್ಕೀಯನು ನನಗೆ ಒಂದು ಗ್ರಂಥವನ್ನು ಕೊಟ್ಟಿದ್ದಾನೆ," ಎಂದು ಹೇಳಿ ಅದನ್ನು ಅರಸನ ಮುಂದೆ ಓದಿದನು. ಅರಸನು ಧರ್ಮೋಪದೇಶ ಗ್ರಂಥ ವಾಕ್ಯಗಳನ್ನು ಕೇಳಿದಾಗ ದುಃಖಾವೇಶದಿಂದ ಬಟ್ಟೆಗಳನ್ನು ಹರಿದುಕೊಂಡು, ಯಾಜಕ ಹಿಲ್ಕೀಯನು, ಶಾಫಾನನ ಮಗ ಆಹೀಕಾಮ್, ಮೀಕಾಯನ ಮಗ ಅಕ್ಬೋರ್, ಲೇಖಕ ಶಾಫಾನ್ ಹಾಗು ತನ್ನ ಹಸ್ತಕನಾದ ಅಸಾಯ ಎಂಬುವರಿಗೆ, " ನಮ್ಮ ಪೂರ್ವಜರೂ ನಮಗೆ ಸಿಕ್ಕಿರುವ ಈ ಗ್ರಂಥ ವಾಕ್ಯಗಳಿಗೆ ಕಿವಿಗೊಡದೆ ಹಾಗೂ ಅವುಗಳನ್ನು ಕೈಗೊಳ್ಳದೆ ಹೋದುದರಿಂದ ಸರ್ವೇಶ್ವರನ ಉಗ್ರ ಕೋಪಕ್ಕೆ ಪಾತ್ರರಾಗಿದ್ದೇವೆ. ಆದುದರಿಂದ ನೀವು ನನಗಾಗಿ ಜನರಿಗಾಗಿ ಹಾಗು ಎಲ್ಲಾ ಯೆಹೂದ್ಯರಿಗಾಗಿ ಸರ್ವೇಶ್ವರನ ಬಳಿಗೆ ಹೋಗಿ ಈ ಗ್ರಂಥ ವಾಕ್ಯಗಳ ವಿಷಯವಾಗಿ ವಿಚಾರಿಸಿರಿ," ಎಂದು ಆಜ್ಞಾಪಿಸಿದನು. ಆನಂತರ ಅರಸನು ದೂತರ ಮುಖಾಂತರ ಜೆರುಸಲೇಮಿನ ಮತ್ತು ಜುದೇಯ ಪ್ರಾಂತ್ಯದ ಬೇರೆ ಎಲ್ಲಾ ಊರುಗಳ  ಹಿರಿಯರನ್ನು ತನ್ನ ಬಳಿಗೆ ಕರೆಯಿಸಿದನು. ಜೆರುಸಲೇಮಿನವರನ್ನೂ ಬೇರೆ ಎಲ್ಲಾ ಯೆಹೂದ್ಯರನ್ನೂ ಯಾಜಕರನ್ನೂ ಪ್ರವಾದಿಗಳನ್ನೂ ಕರೆದುಕೊಂಡು ಸರ್ವೇಶ್ವರನ ಆಲಯಕ್ಕೆ ಹೋದನು. ಚಿಕ್ಕವರೂ ದೊಡ್ಡವರೂ ಎಲ್ಲರೂ ಅವನನ್ನು ಹಿಂಬಾಲಿಸಿದರು. ಅಲ್ಲಿ ಅವನು ಎಲ್ಲರಿಗೂ ಕೇಳಿಸುವಂತೆ ಸರ್ವೇಶ್ವರನ ಆಲಯದಲ್ಲಿ ಸಿಕ್ಕಿದ ನಿಬಂಧನಾ ಗ್ರಂಥವನ್ನು ಸಂಪೂರ್ಣವಾಗಿ ಓದಿಸಿದನು. ಕಂಬದ ಬಳಿಯಲ್ಲಿ ನಿಂತು ತಾನು ಸರ್ವೇಶ್ವರನ ಮಾರ್ಗದಲ್ಲಿ ನಡೆಯುವುದಕ್ಕಾಗಿಯೂ ಅತನ ಆಜ್ಞಾನಿಯಮ ವಿಧಿಗಳನ್ನು ಪೂರ್ಣಮನಸ್ಸಿನಿಂಲೂ ಪೂರ್ಣಪ್ರಾಣದಿಂದಲೂ ಕೈಕೊಳ್ಳುವುದಾಗಿಯೂ ಮತ್ತು ನಿಬಂಧನಾ ಗ್ರಂಥದಲ್ಲಿ ಬರೆದಿರುವ ಎಲ್ಲಾ ವಾಕ್ಯಗಳನ್ನು ನೆರವೇರಿಸುವುದಾಗಿಯೂ ಸರ್ವೇಶ್ವರನಿಗೆ ಪ್ರಮಾಣ ಮಾಡಿದನು. ಎಲ್ಲಾ ಜನರೂ ಹಾಗೆಯೇ ಪ್ರಮಾಣ ಮಾಡಿದರು. 

ಕೀರ್ತನೆ: 119:33, 34,  36-37, 40 

ಶ್ಲೋಕ : ನಿನ್ನ ನಿಬಂಧನೆಯನು, ಪ್ರಭೂ, ಕಲಿಸೆನಗೆ. 

ಶುಭಸಂದೇಶ: ಮತ್ತಾಯ 7:15-20 

"ಸುಳ್ಳು ಪ್ರವಾದಿಗಳ ಬಗ್ಗೆ ಎಚ್ಚರಿಕೆಯಿಂದಿರಿ. ಹೊರಗೆ ಕುರಿಯ ವೇಷದಲ್ಲಿ ಬಂದರೂ ಒಳಗೆ ಅವರು ಕಿತ್ತು ತಿನ್ನುವ ತೋಳಗಳು. ಅವರ ವರ್ತನೆಯಿಂದ ನೀವು ಅವರನ್ನು ಗುರುತು ಹಚ್ಚುವಿರಿ. ಮುಳ್ಳುಕಳ್ಳಿಯಲ್ಲಿ ದ್ರಾಕ್ಷಿ  ಕೊಯ್ಯುವುದುಂಟೇ? ಮದ್ದುಗುಣಿಕೆಯಲ್ಲಿ ಅಂಜೂರ ಕೀಳುವುದುಂಟೇ? ಅದರಂತೆಯೇ ಒಳ್ಳೆಯ ಮರ ಒಳ್ಳೆಯ ಹಣ್ಣನ್ನೂ ಕೆಟ್ಟ ಮರವು ಕೆಟ್ಟ ಹಣ್ಣನ್ನೂ ಕೊಡುತ್ತದೆ. ಒಳ್ಳೆಯ ಮರ ಕೆಟ್ಟ ಹಣ್ಣನ್ನು ಕೊಡಲಾರದು, ಹಾಗೆಯೇ ಕೆಟ್ಟ ಮರ ಒಳ್ಳೆಯ ಹಣ್ಣನ್ನು ಕೊಡಲಾರದು. ಒಳ್ಳೆಯ ಫಲವನ್ನು ಕೊಡದ ಪ್ರತಿಯೊಂದು ಮರವನ್ನೂ ಕಡಿದು ಬೆಂಕಿಯಲ್ಲಿ ಹಾಕಲಾಗುವುದು. ಅದ್ದರಿಂದ ಸುಳ್ಳು ಪ್ರವಾದಿಗಳನ್ನು ಅವರ ನಡತೆಯಿಂದ ಗುರುತು ಹಚ್ಚುವಿರಿ" ಎಂದರು ಯೇಸುಸ್ವಾಮಿ.

26.06.2018

ಮೊದಲನೇ ವಾಚನ: 2 ಅರಸುಗಳು 19:9-11, 14-21, 31-35, 36 


ಅಷ್ಟರಲ್ಲಿ ಸುಡಾನಿನ ರಾಜ ತಿರ್ಹಾಕನು ತನಗೆ  ವಿರುದ್ದವಾಗಿ ಹೊರಟ್ಟಿದ್ದಾನೆ ಎಂಬ ಸುದ್ಧಿ ಅಸ್ಸೀರಿಯಾದ ಅರಸನಿಗೆ ಮುಟ್ಟಿತು. ಆಗ ಅವನು ಜುದೇಯದ ಅರಸನಾದ ಹಿಜ್ಕೀಯನಿಗೆ "ಜೆರುಸಲೇಮ್ ನನ್ನ ವಶವಾಗುವುದಿಲ್ಲವೆಂದು ನೀನು ನಂಬುವ ದೇವರು ನಿನಗೆ ಹೇಳಿ ನಿನ್ನನ್ನು ಮೋಸಗೊಳಿಸಬಹುದು. ಅಸ್ಸೀರಿಯಾದ ಅರಸನು ಎಲ್ಲಾ ರಾಜ್ಯಗಳನ್ನು ಸಂಪೂರ್ಣವಾಗಿ ನಾಶಪಡಿಸಿದ್ದಾನೆಂಬ ಸಮಾಚಾರ ನಿನಗೆ ಮುಟ್ಟಿರಬೇಕು, ಹೀಗಿರುವಲ್ಲಿ ನೀನು ಮಾತ್ರ ತಪ್ಪಿಸಿಕೊಳ್ಳುವೆಯೋ? ಹಿಜ್ಕೀಯನು, ದೂತರು ತಂದ ಪತ್ರವನ್ನು ತೆಗೆದುಕೊಂಡು ಓದಿದ ನಂತರ, ದೇವಾಲಯಕ್ಕೆ ಹೋಗಿ ಅದನ್ನು ಸರ್ವೇಶ್ವರಸ್ವಾಮಿಯ ಮುಂದೆ ತೆರೆದಿಟ್ಟು, ಹೀಗೆಂದು ಪ್ರಾರ್ಥನೆ ಮಾಡಿದನು: "ಇಸ್ರಯೇಲಿನ ದೇವರೇ, ಸರ್ವೇಶ್ವರಾ, ಕೆರೂಬಿಗಳ ಮೇಲೆ ಆಸೀನಾರೂಡರಾಗಿರುವವರೇ, ಎಲ್ಲಾ ಭೂರಾಜ್ಯಗಳನ್ನು ಆಳುವ ದೇವರು ನೀವೊಬ್ಬರೇ; ಪರಲೋಕ ಭೂಲೋಕಗಳನ್ನುಂಟು ಮಾಡಿದವರು ನೀವೇಸರ್ವೇಶ್ವರಾ, ಕಿವಿಗೊಟ್ಟು ಕೇಳಿ ; ಸರ್ವೇಶ್ವರಾ, ಕಣ್ಣಿಟ್ಟು ನೋಡಿ: ಸನ್ ಹೇರೀಬನು ಜೀವಸ್ವರೂಪ ದೇವರಾದ ನಿಮ್ಮನ್ನು ನಿಂದಿಸುವುದಕ್ಕಾಗಿ ಹೇಳಿಕಳುಹಿಸಿದ ಮಾತುಗಳನ್ನೆಲ್ಲಾ ಮನಸ್ಸಿಗೆ ತಂದುಕೊಳ್ಳಿ, ಸರ್ವೇಶ್ವರ ಅಸ್ಸೀರಿಯಾದ ರಾಜರು ಸಕಲ ರಾಷ್ಪ್ರಗಳನ್ನೂ ಹಾಗೂ ಅವರ ನಾಡುಗಳನ್ನೂ ಹಾಳುಮಾಡಿದ್ದಾರೆ. ಅವರ ದೇವರುಗಳನ್ನೂ ಬೆಂಕಿಗೆ ಹಾಕಿದ್ದು ನಿಜ. ಅವು ದೇವರುಗಳಲ್ಲ, ಕೇವಲ ಮನಷ್ಯರು ಕೆಟ್ಟಿದ ಕಲ್ಲು ಮರಗಳ ಬೊಂಬೆಗಳಷ್ಟೆ, ಆದುದರಿಂದಲೇ ಅವು ಅವರಿಂದ ಹಾಳಾದವುನಮ್ಮ ದೇವರಾದ ಸರ್ವೇಶ್ವರಾ, ನೀವೇ ಏಕೈಕ ದೇವರು ಎಂಬುದನ್ನು ಭೂಮಿಯ ರಾಷ್ಪ್ರಗಳೆಲ್ಲವೂ ತಿಳಿದುಕೊಳ್ಳುವಂತೆ ನಮ್ಮನ್ನು ಅಸ್ಸೀರಿಯನ ಕೈಯಿಂದ ಬಿಡಿಸಿರಿ." ಆಗ ಆಮೋಚನ ಮಗನಾದ ಯೆಶಾಯನು ಹಿಜ್ಕೀಯನಿಗೆ ಹೇಳಿಕಳುಹಿಸಿದ್ದೇನೆಂದರೆ; "ಇಸ್ರಯೇಲಿನ ದೇವರಾದ ಸರ್ವೇಶ್ವರಸ್ವಾಮಿಯ ಮಾತುಗಳನ್ನು ಕೇಳು: ನೀನು ಅಸ್ಸೀರಿಯದ ರಾಜನಾದ ಸನ್ ಹೇರೀಬನ ವಿಷಯವಾಗಿ ಮಾಡಿದ ಬಿನ್ನಹಗಳು ಸರ್ವೇಶ್ವರಸ್ವಾಮಿಗೆ ಮುಟ್ಟಿವೆ. ಅವರು ಅವನನ್ನು ಕುರಿತು ಹೀಗೆಂದಿದ್ದಾರೆ; "ನಿನ್ನನ್ನು ಪರಿಹಾಸ್ಯಮಾಡಿ ತಿರಸ್ಕರಿಸುತಿಹಳು ಕನ್ಯೆಯಾದ ಸಿಯೋನಿನ ಕುವರಿಯು; ನಿನ್ನ ಹಿಂದೆ ತಲಯಾಡಿಸಿ ಮೂದಲಿಸುತಿಹಳು ಜೆರುಸಲೇಮಿನ ಕುವರಿಯು. ಅಳಿದುಳಿದವರು ಜೆರುಸಲೇಮಿನಲ್ಲೇ ಹರಡಿಕೊಳ್ಳುವರು; ಸಿಯೋನ್ ಪರ್ವತದಲ್ಲಿ  ಅಭಿವೃದ್ಧಿಯಾಗುವರು. ಸರ್ವೇಶ್ವರಸ್ವಾಮಿಯ ಅಗ್ರಹವೇ ಇದನ್ನು ಸಾಧಿಸುವುದು. "ಅಸ್ಸೀರಿಯದ ಅರಸನನ್ನು ಕುರಿತು ಸರ್ವೇಶ್ವರ ಹೇಳಿರುವ  ಮಾತಿದು: "ಅವನು ಪಟ್ಟಣವನ್ನು ಸಮೀಪಿಸುವುದಿಲ್ಲ, ಅದರತ್ತ ಬಾಣವನ್ನೆಸೆಯುವುದಿಲ್ಲ ಕವಚಧಾರಿಗಳನ್ನು ಕಳುಹಿಸುವುದಿಲ್ಲಾ. ಅದರ ಆಕ್ರಮಣಕ್ಕಾಗಿ ಮಣ್ಣು ದಿಬ್ಬಗಳನ್ನು ಎಬ್ಬಿಸುವುದಿಲ್ಲ. ಅವನು ಬಂದ ದಾರಿಯಿಂದಲೇ ಹಿಂದಿರುಗಿ ಹೋಗುವನು; ಪಟ್ಟಣಕ್ಕೆ ಕಾಲಿಡನು. ನನಗಾಗಿಯೂ ನನ್ನ ದಾಸ ದಾವೀದನಿಗಾಗಿಯೂ ಪಟ್ಟಣವನ್ನು ಉಳಿಸಿ ಕಾಪಾಡುವೆನು,' ಎಂದಿದ್ದಾರೆ". ಅದೇ ರಾತ್ರಿಯಲ್ಲಿ ಸರ್ವೇಶ್ವರಸ್ವಾಮಿಯ ದೂತನು ಹೊರಟು  ಬಂದು ಅಸ್ಸೀರಿಯರ ಪಾಳೆಯದಲ್ಲಿ 185,000 ಮಂದಿ ಸೈನಿಕರನ್ನು ಮರಣಕ್ಕೆ ಈಡು ಮಾಡಿದನು; ಅಸ್ಸೀರಿಯರು ಬೆಳಗ್ಗೆ ಎದ್ದು ನೋಡುವಾಗ ಪಳೆಯ ತುಂಬಾ ಹೆಣಗಳು ಇದ್ದವು ಆದ್ದರಿಂದ ಅಸ್ಸೀರಿಯರ ಅರಸನಾದ ಸನ್ ಹೇರೀಬನು ಹಿಂದಿರುಗಿದನು. ನಿನವೆ ಪಟ್ಟಣಕ್ಕೆ ಹೋಗಿ ಅಲ್ಲೆ ವಾಸಿಸಿದನು.


ಕೀರ್ತನೆ: 48:2-3ab, 3cd-4, 10-11 

ಶ್ಲೋಕ: ನಿನ್ನಚಲ ಪ್ರೀತಿಯನು ದೇವಾ, ಸ್ಮರಿಸುವೆವು. 

 ಶುಭಸಂದೇಶ: ಮತ್ತಾಯ  7:6, 12-14 

"ಪವಿತ್ರವಾದುದನ್ನು ನಾಯಿಗಳಿಗೆ ಹಾಕಬೇಡಿ - ಅವು ನಿಮ್ಮ ಮೇಲೆ ತಿರುಗಿಬಿದ್ದು ನಿಮ್ಮನ್ನು ಸೀಳಿಬಿಟ್ಟಾವು; ಮುತ್ತುಗಳನ್ನು ಹಂದಿಗಳ ಮುಂದೆ ಚೆಲ್ಲಬೇಡಿ - ಅವು ಆ ಮುತ್ತುಗಳನ್ನು ಕಾಲಿನಿಂದ ತುಳಿದು ಹಾಕಿಯಾವು". "ಜನರು ನಿಮಗೆ ಏನೇನು ಮಾಡಬೇಕೆಂದು ನೀವು ಅಪೇಕ್ಷಿಸುತ್ತೀರೋ, ಅದನ್ನೆ ನೀವು ಅವರಿಗೆ ಮಾಡಿ. ಧರ್ಮಶಾಸ್ತ್ರದ ಹಾಗೂ ಪ್ರವಾದನೆಗಳ ಸಾರ ಇದೇ". "ಕಿರಿದಾದ ಬಾಗಿಲಿನಿಂದಲೇ ಒಳಕ್ಕೆ  ಹೋಗಿರಿ. ಏಕಂದರೆ ವಿನಾಶಕ್ಕೆ ಒಯ್ಯುವ ಬಾಗಿಲು ಹಿರಿದು; ಅದರ ಮಾರ್ಗ ಸರಾಗ; ಅದನ್ನು ಹಿಡಿಯುವವರು ಅನೇಕರು. ಅಮರ ಜೀವಕ್ಕೆ ಕೊಂಡೊಯ್ಯುವ ಮಾರ್ಗ ದುರ್ಭರ; ಅದರ ಬಾಗಿಲು ಕಿರಿದು; ಅದನ್ನು ಗುರುತಿಸುವವರು ಕೆಲವರು."

25.06.2018

ಮೊದಲನೇ ವಾಚನ: 2 ಅರಸುಗಳು 17:5-8, 13-15, 18


ಅಸ್ಸೀರಿಯದ ಅರಸನು ದೇಶವನ್ನೆಲ್ಲಾ ಸ್ವಾಧೀನ ಮಾಡಿಕೊಂಡು ಸಮಾರಿಯಕ್ಕೆ ಬಂದು ಮೂರು ವರ್ಷಗಳವರೆಗೂ ಅದಕ್ಕೆ ಮುತ್ತಿಗೆ ಹಾಕಿದನು. ಅದು ಹೋಶೇಯನ ಆಳ್ವಿಕೆಯ ಒಂಬತ್ತನೆಯ ವರ್ಷದಲ್ಲಿ ಅವನ ಸ್ವಾಧೀನವಾಯಿತು. ಅವನು ಎಲ್ಲಾ ಇಸ್ರಯೇಲರನ್ನು ಅಸ್ಸೀರಿಯ ದೇಶಕ್ಕೆ ಒಯ್ದು ಹಲಹು ಎಂಬ ಪ್ರಾಂತ್ಯದಲ್ಲಿ, ಹಾಬೋರ್ ನದಿಯಿರುವ ಗೋಜಾನ್ ಪ್ರಾಂತ್ಯದಲ್ಲಿ ಹಾಗು ಮೇದ್ಯರ ಪಟ್ಟಣಗಳಲ್ಲಿ ಇರಿಸಿದನು. ಇಸ್ರಯೇಲರ ಈ ದುರ್ಗತಿಗೆ ಅವರ ದುರ್ನಡತೆಯೇ ಕಾರಣ: ಹೇಗೆಂದರೆ, ಅವರು ತಮ್ಮನ್ನು ಈಜಿಪ್ಟಿನ ಅರಸನಾದ ಫರೋಹನ ಕೈಯಿಂದ ಬಿಡಿಸಿ ಅವನ ರಾಜ್ಯದಿಂದ ಹೊರ ತಂದು ದೇವರಾದ ಸರ್ವೇಶ್ವರನಿಗೆ ವಿರುದ್ಧ ಪಾಪ ಮಾಡಿ ಅನ್ಯದೇವತೆಗಳನ್ನು ಪೂಜಿಸಿದರು. ತಮ್ಮ ನಾಡಿನಿಂದ ಸರ್ವೇಶ್ವರ ಹೊರಡಿಸಿ ಬಿಟ್ಟಿದ್ದ ಜನಾಂಗಗಳ ಮತ್ತು ಇಸ್ರಯೇಲ್ ರಾಜರ ದುರಾಚಾರಗಳನ್ನು ಅವರು ಅನುಸರಿಸಿದರು. ದರ್ಶಿನಿಗಳೆನಿಸಿಕೊಂಡ ತಮ್ಮ ಪ್ರವಾದಿಗಳ ಮುಖಾಂತರ ಸರ್ವೇಶ್ವರ ಇಸ್ರಯೇಲ ಯೆಹೂದ್ಯರಿಗೆ, "ನೀವು ನಿಮ್ಮ ದುರಾಚಾರವನ್ನು  ಬಿಟ್ಟು ನಾನು ನಿಮ್ಮ ಪೂರ್ವಜರಿಗೂ ನನ್ನ ದಾಸರಾದ ಪ್ರವಾದಿಗಳ ಮುಖಾಂತರ ನಿಮಗೂ ಕೊಟ್ಟಂಥ ನನ್ನ ಎಲ್ಲಾ ಆಜ್ಞಾನಿಯಮ ವಿಧಿಗಳನ್ನು ಕೈಗೊಂಡು ನಡೆಯಿರಿ," ಎಂದು ಖಂಡಿತವಾಗಿ ಹೇಳಿದರು. ಆದರೆ ಅವರು, ದೇವರಾದ ಸರ್ವೇಶ್ವರನನ್ನು ನಂಬದೆ, ಅವರ ಆಜ್ಞೆಗಳಿಗೆ ಮಣಿಯದೆಯಿದ್ದ ತಮ್ಮ ಹಿರಿಯರಂತೆ, ಕಿವಿಗೊಡದೆ ಹೋದರು. ಸರ್ವೇಶ್ವರ ತಮ್ಮ ಪೂರ್ವಜರಿಗೆ ಕೊಟ್ಟ ವಿಧಿ ನಿಬಂಧನೆಗಳನ್ನೂ ತಮಗೆ ಹೇಳಿಸಿದ ಬುದ್ಧಿ ವಾಕ್ಯಗಳನ್ನೂ ತಿರಸ್ಕರಿಸಿ, ಮಿಥ್ಯಾ ದೇವತೆಗಳನ್ನು ಪೂಜಿಸಿ ನಿಸ್ಸಾರ್ಥಕರಾದರು. ಸುತ್ತಣ ಜನಾಂಗಗಳನ್ನು  ಅನುಸರಿಸಬಾರದೆಂದು ಸರ್ವೇಶ್ವರ ಆಜ್ಞಾಪಿಸಿದರೂ ಕೇಳದೆ ಜನಾಂಗಗಳನ್ನೇ ಅನುಸರಿಸಿದರು. ಈ ಪ್ರಕಾರ ನಡೆದುದರಿಂದ ಸರ್ವೇಶ್ವರ ಅವರ ಮೇಲೆ ಕಡುಕೋಪಗೊಂಡು ಯೆಹೂದ ಕುಲದವರ ಹೊರತು, ಉಳಿದ ಎಲ್ಲಾ ಕುಲಗಳವರನ್ನು ತಮ್ಮ ಸನ್ನಿಧಿಯಿಂದ ತಳ್ಳಿಬಿಟ್ಟರು. 

ಕೀರ್ತನೆ: 60:3, 4-5, 12-13 

ಶ್ಲೋಕ: ಪ್ರಭೂ, ನಿನಗೆ ಪ್ರಿಯವಾದ ನಮ್ಮ ಮೊರೆಯನಾಲಿಸು. 

ಶುಭಸಂದೇಶ: ಮತ್ತಾಯ 7:1-5 

"ನೀವು ಇತರರ ಬಗ್ಗೆ ತೀರ್ಪುಕೊಡಬೇಡಿ; ಆಗ ದೇವರು ನಿಮ್ಮ ಬಗ್ಗೆ ತೀರ್ಪುಕೊಡುವುದಿಲ್ಲ. ನೀವು ಇತರರ ಬಗ್ಗೆ ಕೊಡುವ ತೀರ್ಪಿಗೆ ಅನುಗುಣವಾಗಿಯೇ ದೇವರು ನಿಮಗೂ ತೀರ್ಪುಕೊಡುವರು. ಇತರರಿಗೆ ನೀವು ಕೊಟ್ಟ ಅಳತೆಯಲ್ಲೇ ದೇವರು ನಿಮಗೂ ಅಳೆದು ಕೊಡುವರು. ನಿನ್ನ ಕಣ್ಣಿನಲ್ಲಿರುವ ದಿಮ್ಮಿಯನ್ನು ನೋಡದೆ ನಿನ್ನ ಸೋದರನ ಕಣ್ಣಿನಲ್ಲಿರುವ ಅಣುವನ್ನು ನೀನು ಗಮನಿಸುವುದೇಕೆ? ನಿನ್ನ ಕಣ್ಣಿನಲ್ಲಿ ಒಂದು ದಿಮ್ಮಿಯೇ ಇರುವಾಗ, "ತಾಳು, ನಿನ್ನ ಕಣ್ಣಿನಲ್ಲಿರುವ ಅಣುವನ್ನು ತೆಗೆದು ಬಿಡುತ್ತೇನೆ," ಎಂದು ನಿನ್ನ ಸೋದರನಿಗೆ ಹೇಗೆ ಹೇಳಬಲ್ಲೆ? ಎಲೈ ಕಪಟಿಯೇ, ಮೊದಲು ನಿನ್ನ ಕಣ್ಣಿನಲ್ಲಿರುವ ದಿಮ್ಮಿಯನ್ನು ತೆಗೆದುಹಾಕು. ಆನಂತರ ನಿನ್ನ ಸೋದರನ ಕಣ್ಣಿನಿಂದ ಅಣುವನ್ನು ತೆಗೆಯಲು ನಿನ್ನ ಕಣ್ಣು ನಿಚ್ಚಳವಾಗಿ ಕಾಣಿಸುವುದು.

24.06.2018 - ಸಾಧಾರಣ ಕಾಲದ ಹನ್ನೆರಡನೆಯ ಭಾನುವಾರ

ಸಂತ ಸ್ನಾನಿಕ ಯೊವಾನ್ನರ ಜಯಂತಿ 



ಮೊದಲನೇ ವಾಚನ ಯೆಶಾಯ 49:1-6 

ಕಿವಿಗೊಡಿ ನನ್ನ ದ್ವೀಪ ನಿವಾಸಿಗಳೇ, ಆಲಿಸಿ ನನ್ನನ್ನು ದೂರದ ಜನಾಂಗಗಳೇ, ಸರ್ವೇಶ್ವರ ಕರೆದನೆನ್ನನ್ನು ಗರ್ಭದಲ್ಲಿದ್ದಾಗಲೇ; ಹೆಸರಿಟ್ಟನೆನಗೆ ನಾನು ತಾಯಿಯ ಉದರಲ್ಲಿದ್ದಾಗಲೇ. ಮಾಡಿದನು ನನ್ನ ನುಡಿಯನ್ನು ಹರಿತವಾದ ಖಡ್ಗವನ್ನಾಗಿ, ಮುಚ್ಚಿಟ್ಟಿಹನು ನನ್ನನ್ನು ತನ್ನ ಕರದ ನೆರಳಿನಲ್ಲಿ, ರೂಪಿಸಿಹನು ನನ್ನನ್ನು ಚೂಪಾದ ಬಾಣವನ್ನಾಗಿ, ಬಚ್ಚಿಟ್ಟಿಹನು ನನ್ನನ್ನು ತನ್ನ ಬತ್ತಳಿಕೆಯಲ್ಲಿ ಆತನೆನಗೆ ಇಂತಂದ: "ನೀನೆನ್ನ ದಾಸ; ನನ್ನ ಮಹಿಮೆ ಬೆಳಗಿಸುವ ಇಸ್ರಯೇಲ," ಇಂತಂದುಕೊಂಡೆ ನಾನಾಗ ವ್ಯರ್ಥವಾಯಿತು ನನ್ನ ಸಾಮರ್ಥ್ಯವೆಲ್ಲ ಶೂನ್ಯವಾಗಿ ಹೋಯಿತು ನನ್ನ ಶಕ್ತಿಯೆಲ್ಲ. ನನಗೆ ದೊರಕುವುದು ನ್ಯಾಯ ಸರ್ವೇಶ್ವರನ ಕೈಯಲ್ಲೇ, ನನಗೆ ಬರುವುದು ಬಹುಮಾನ ಆ ದೇವರಿಂದಲೇ. ಯಕೋಬ್ಯರನ್ನು ತನ್ನ ಬಳಿಗೆ ಕರೆತರಲು, ಇಸ್ರಯೇಲರನ್ನು ತನ್ನೊಂದಿಗೆ ಸೇರಿಸಿಕೊಳ್ಳಲು ತನ್ನ ದಾಸನನ್ನಾಗಿ ನನ್ನ ರೂಪಿಸಿದನು, ತಾಯ ಗರ್ಭದಲ್ಲಿದ್ದಾಗಲೇ ಮಾಡಿದನಿದನು. ಸನ್ಮಾನ್ಯನು ನಾನು ಸರ್ವೇಶ್ವರನ ದೃಷ್ಟಿಯಲಿ; ನನ್ನ ಶಕ್ತಿಸಾಮರ್ಥ್ಯ ಇರುವುದು ಆ ದೇವರಲ್ಲಿ. ಮತ್ತೆ ಆತ ಇಂತೆಂದನು ನನಗೆ: "ಮಹಾತ್ಕಾರ್ಯವೇನೂ ಅಲ್ಲ, ನನ್ನ ದಾಸನಾದ ನನಗೆ ಕುಲಗಳನ್ನು ಉದ್ಧರಿಸುವ ಮಾತ್ರಕೆ ಇಸ್ರಯೇಲರಲ್ಲಿ ರಕ್ಷಿತರಾದವರನ್ನು ಮರಳಿ ಬರಮಾಡುವ ಮಾತ್ರಕೆ. ನೇಮಿಸಿರುವೆನು ನಿನ್ನನ್ನು ಜ್ಯೋತಿಯನ್ನಾಗಿ ಸರ್ವ ಜನಾಂಗಗಳಿಗೆ ನನ್ನ ರಕ್ಷಣೆ ವ್ಯಾಪಿಸಿರುವಂತೆ ಮಾಡಲು ಜಗದ ಕಟ್ಟ ಕಡೆಯವರೆಗೆ." 

ಕೀರ್ತನೆ: 139:1-3, 13-15 ಕೀರ್ತನೆ ಕೇಳಿ
ಶ್ಲೋಕ: ನಿನಗೆ ವಂದನೆ, ನೀ ನನ್ನ ಭಯಭಕ್ತಿಗೆ ಪಾತ್ರ 



ಎರಡನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 13:22-26 

ಆನಂತರ ದೇವರು ಸೌಲನನ್ನು ತ್ಯಜಿಸಿ ದಾವೀದನನ್ನು ಅರಸನನ್ನಾಗಿ ನೇಮಿಸಿದರು. ಇವನ ಬಗ್ಗೆ ದೇವರು, "ಜೆಸ್ಸೆಯನ ಮಗ ದಾವೀದನು ನನಗೆ ಮೆಚ್ಚುಗೆಯಾದ ವ್ಯಕ್ತಿ; ಇವನು ನನ್ನ ಆಶೆ ಆಕಾಂಕ್ಷೆಗಳನ್ನೆಲ್ಲಾ ಪೊರೈಸುವನು," ಎಂದು ತಮ್ಮ ಒಪ್ಪಿಗೆಯನ್ನು ಸೂಚಿಸಿದರು. ಈ ದಾವೀದನ ಸಂತತಿಯಿಂದಲೇ ದೇವರು ತಮ್ಮ ವಾಗ್ದಾನದ ಪ್ರಕಾರ ಇಸ್ರಯೇಲ್ ಜನರಿಗೆ ಒಬ್ಬ ಉದ್ಧಾರಕನನ್ನು ಕಳುಹಿಸಿದರು. ಇವರೇ ಯೇಸುಸ್ವಾಮಿ. ಇವರ ಆಗಮನಕ್ಕೆ ಸಿದ್ಧತೆಯಾಗಿ ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿ ದೇವರಿಗೆ ಅಭಿಮುಖರಾಗಿ ಸ್ನಾನದೀಕ್ಷೆಯನ್ನು ಪಡೆಯಬೇಕೆಂದು ಯೊವಾನ್ನನು ಇಸ್ರಯೇಲಿನ ಎಲ್ಲ ಜನರಿಗೆ ಸಾರಿದನು. ಯೊವಾನ್ನನು ತನ್ನ ನಿಯೋಗವನ್ನು ಪೂರೈಸುತ್ತಿದ್ದಂತೆ ಜನರಿಗೆ, "ನಾನು ಯಾರೆಂದು ನೀವು ನೆನಸುತ್ತೀರಿ? ನೀವು ಎದುರು ನೋಡುತ್ತಿರುವ ವ್ಯಕ್ತಿ ನಾನಲ್ಲ. ನನ್ನ ಅನಂತರ ಒಬ್ಬರು ಬರುವರು; ಅವರ ಪಾದರಕ್ಷೆಗಳನ್ನು ಬಿಚ್ಚುವುದಕ್ಕೂ ನಾನು ಯೋಗ್ಯನಲ್ಲ,' ಎಂದನು. "ನನ್ನ ಸಹೋದರರೇ, ಅಬ್ರಹಾಮನ ಸಂತತಿಯವರೇ ಮತ್ತು ದೇವರಲ್ಲಿ ಭಯಭಕ್ತಿಯುಳ್ಳ ಇನ್ನಿತರರೇ, ಈ ಜೀವೋದ್ಧಾರದ ಸಂದೇಶವನ್ನು ಕಳುಹಿಸಿರುವುದು ನಮಗಾಗಿಯೇ. 


ಶುಭಸಂದೇಶ: ಲೂಕ 1:57-66, 80

ದಿನ ತುಂಬಿದಾಗ ಎಲಿಜಬೇತಳು ಗಂಡು ಮಗುವಿಗೆ ಜನ್ಮವಿತ್ತಳು. ಸರ್ವೇಶ್ವರ ಆಕೆಗೆ ವಿಶೇಷ ಕೃಪೆ ತೋರಿದ್ದಾರೆಂದು ಅರಿತುಕೊಂಡ ನೆರೆಹೊರೆಯವರೂ ಬಂಧುಬಳಗದವರೂ ಬಂದು ಆಕೆಯೊಡನೆ ಸೇರಿ ಸಂತೋಷಪಟ್ಟರು. ಎಂಟನೆಯ ದಿನ ಮಗುವಿನ ಸುನ್ನತಿಗಾಗಿ ಅವರು ಬಂದು ಅದಕ್ಕೆ, ತಂದೆಯ ಹೆಸರನ್ನು ಅನುಸರಿಸಿ, ಜಕರೀಯನೆಂದು ನಾಮಕರಣ ಮಾಡುವುದರಲ್ಲಿದ್ದರು. ಆದರೆ ಮಗುವಿನ ತಾಯಿ , "ಇಲ್ಲ, ಅದು ಕೂಡದು, ಅವನಿಗೆ 'ಯೊವಾನ್ನ' ಎಂಬ ಹೆಸರಿಡಬೇಕು," ಎಂದಳು. ಅದಕ್ಕೆ ಅವರು, "ನಿನ್ನ ಬಂಧು ಬಳಗದವರಲ್ಲಿ ಯಾರಿಗೂ ಈ ಹೆಸರು ಇಲ್ಲವಲ್ಲಾ," ಎಂದ ಹೇಳಿ, "ಮಗುವಿಗೆ ಏನು ಹೆಸರಿಡಬೇಕೆನ್ನುತ್ತೀರಿ?" ಎಂದು ಮಗುವಿನ ತಂದೆಗೆ ಸನ್ನೆಮಾಡಿ ಕೇಳಿದರು. ಆಗ ಜಕರೀಯನು ಬರೆಯುವ ಒಂದು ಹಲಗೆಯನ್ನು ತರಿಸಿಕೊಂಡು, "ಇವನ ಹೆಸರು ಯೊವಾನ್ನ" ಎಂದು ಬರೆದನು. ಎಲ್ಲರೂ ಬೆರಗಾದರು. ತಕ್ಷಣವೇ ಅವನಿಗೆ ಬಾಯಿ ಬಂದಿತು. ನಾಲಿಗೆ ಸಡಿಲವಾಯಿತು; ಅವನು ಮಾತನಾಡಲು ಆರಂಭಿಸಿ ದೇವರನ್ನು ಸ್ತುತಿಸಿದನು. ನೆರೆಹೊರೆಯವರೆಲ್ಲರೂ ತಲ್ಲಣಗೊಂಡರು. ಈ ಸಮಾಚಾರ ಜುದೇಯದ ಗುಡ್ಡಗಾಡು ಪ್ರಾಂತ್ಯದಲ್ಲೆಲ್ಲಾ ಹರಡಿತು. ಕೇಳಿದವರೆಲ್ಲರೂ ಈ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಂಡು, 'ಈ ಮಗು ಮುಂದೆ ಎಂಥವನಾಗುವನೋ!' ಎಂದುಕೊಂಡರು. ನಿಶ್ಚಯವಾಗಿಯೂ ಸರ್ವೇಶ್ವರನ ಅಭಯ ಹಸ್ತವು ಈ ಮಗುವಿನ ಮೇಲಿತ್ತು. ಬಾಲಕನು ಬೆಳೆದಂತೆ ಆತ್ಮಶಕ್ತಿಯುತನಾದನು. ಇಸ್ರಯೇಲ್ ಜನರಿಗೆ ಬಹಿರಂಗವಾಗಿ ಕಾಣಿಸಿಕೊಳ್ಳುವವರೆಗೂ ಅವನು ಬೆಂಗಾಡಿನ‌ಲ್ಲೇ ವಾಸಿಸುತ್ತಿದ್ದನು.

23.06.2018

ಮೊದಲನೇ ವಾಚನ: 2 ಪೂರ್ವಕಾಲದ ಇತಿಹಾಸ 24:17-25 

 ಯೆಹೋಯಾದನು ಮೃತನಾದ ಮೇಲೆ, ಜುದೇಯದ ಪದಾಧಿಕಾರಿಗಳು ಅರಸ ಯೆಹೋವಾಷನ ಬಳಿಗೆ ಬಂದು, ಅವನಿಗೆ ಅಡ್ಡ ಬಿದ್ದು ಅವನನ್ನು ಒಲಿಸಿಕೊಂಡರು. ಅಂದಿನಿಂದ ಅವರು ತಮ್ಮ ಪೂರ್ವಜರ ದೇವರಾದ ಸರ್ವೇಶ್ವರನ ಆಲಯವನ್ನು ನಿರಾಕರಿಸಿ, ಆಶೇರ ಸ್ತಂಭಗಳನ್ನೂ ವಿಗ್ರಹಗಳನ್ನೂ ಪೂಜಿಸತೊಡಗಿದರು. ಅವರ ಈ ಆಪರಾಧದಿಂದ ಜುದೇಯದ ಮೇಲೂ ಜೆರುಸಲೇಮಿನ ಮೇಲೂ ದೈವ ಕೋಪ ಎರಗಿತು. ಸರ್ವೇಶ್ವರ ಅವರನ್ನು ತಮ್ಮ ಕಡೆಗೆ ತಿರುಗಿಸಿಕೊಳ್ಳುವುದಕ್ಕಾಗಿ ಅವರ ಬಳಿಗೆ ಪ್ರವಾದಿಗಳನ್ನು ಕಳುಹಿಸಿದರು. ಇವರ ಮುಖಾಂತರ ಎಷ್ಟು ಎಚ್ಚರಿಸಿದರೂ ಅವರು ಕಿವಿಗೊಡಲಿಲ್ಲ, ಆಗ ಯಾಜಕ ಯೆಹೋಯಾದನ ಮಗ ಜೆಕರ್ಯನು ದೇವಾತ್ಮನಿಂದ ಆವೇಶ ಉಳ್ಳವನಾದನು. ಅವನು ಜನರ ಎದುರಿಗೆ ಉನ್ನತ ಸ್ಥಾನದಲ್ಲಿ ನಿಂತು, "ದೇವರ ಮಾತುಗಳನ್ನು ಕೇಳಿರಿ; ನೀವೇಕೆ ಸರ್ವೇಶ್ವರನ ಆಜ್ಞೆಗಳನ್ನು ಮೀರಿ, ನಿಮ್ಮನ್ನೆ ನಾಶಮಾಡಿಕೊಳ್ಳುತ್ತೀರಿ? ನೀವು ಸರ್ವೇಶರಸ್ವಾಮಿಯನ್ನು ಬಿಟ್ಟಿದ್ದರಿಂದ ಅವರೂ ನಿಮ್ಮನ್ನು ಬಿಟ್ಟು ಬಿಟ್ಟಿದ್ದಾರೆ." ಎಂದನು. ಆಗ ಅವರು ಆತನಿಗೆ ವಿರೋಧವಾಗಿ ಹೊಳಸಂಚು ಮಾಡಿ, ಸರ್ವೇಶ್ವರನ ಆಲಯದ  ಪ್ರಾಕಾರದಲ್ಲಿ ಅವನನ್ನ ಕಲ್ಲೆಸೆದು ಕೊಂದರು. ಇದು ಅರಸ ಯೆಹೋವಾಷನ ಅಪ್ಪಣೆಯಿಂದಲೇ ಆಯಿತು. ಜೆಕರಿಯನ ತಂದೆ ಯೆಹೋಯಾದನಿಂದ ತನಗಾದ ಉಪಕಾರವನ್ನು ನೆನಪುಮಾಡಿಕೊಳ್ಳದೆ ಈ ಯೆಹೋವಾಷನು ಅವನ ಮಗನನ್ನು ಕೊಲ್ಲಿಸಿದನು. ಜೆಕರೀಯನು ಸಾಯುವಾಗ, "ಸರ್ವೇಶ್ವರಸ್ವಾಮಿಯೇ ಇದನ್ನು ನೋಡಿ ತಕ್ಕ ಶಾಸ್ತಿಮಾಡಲಿ" ಎಂದನು. ವರ್ಷಾಂತ್ಯದಲ್ಲಿ ಸಿರಿಯಾದ ಸೈನ್ಯ ಯೆಹೋವಾಷನ ಮೇಲೆ ದಾಳಿ ಮಾಡಲು ಹೊರಟಿತು. ಆ ಸೈನ್ಯದವರು ಜುದೇಯ ನಾಡಿನೊಳಗೆ ನುಗ್ಗಿ ಜೆರುಸಲೇಮಿಗೆ ಬಂದು, ಇಸ್ರಯೇಲರ ಎಲ್ಲ ಜನಾಧಿಪತಿಗಳನ್ನು ನಿರ್ನಾಮ ಮಾಡಿ ಅವರಲ್ಲಿ ಸಿಕ್ಕಿದ ಕೊಳ್ಳೆಯನ್ನೆಲ್ಲಾ ದಮಸ್ಕದ ಅರಸನಿಗೆ ಕಳುಹಿಸಿದರು.     

ಸಿರಿಯಾದ ಸೈನ್ಯದಿಂದ ಬಂದ ಗುಂಪು ಚಿಕ್ಕದಾದ್ದರೂ ಯೆಹೂದ್ಯರು ತಮ್ಮ ಪೂರ್ವಜರ ದೇವರಾದ ಸರ್ವೇಶ್ವರನನ್ನು ಬಿಟ್ಟು ಬಿಟ್ಟಿದ್ದರಿಂದ ಶಿಕ್ಷೆಗೆ ಗುರಿಯಾದರು. ತಮ್ಮದು ಮಹಾಸೈನ್ಯವಾಗಿದ್ದರೂ ಸಿರಿಯಾದವರ  ಕೈಯಲ್ಲಿ ಸೋಲನ್ನು ಅನುಭವಿಸಿದರು; ಯೆಹೋವಾಷನಿಗೆ ದಂಡನೆಯಾಯಿತು. ಕಠಿಣವಾಗಿ ಗಾಯಗೊಂಡದ್ದ ಅವನನ್ನು ಸಿರಿಯಾದವರು ಬಿಟ್ಟುಹೋದರು. ಅವನ ಸೇವಕರೇ, ಯಾಜಕ ಯೆಹೋಯಾದವನ ಮಗನ ವಧೆಯ ನಿಮಿತ್ತ, ಅವನಿಗೆ ವಿರೋಧವಾಗಿ ಒಳಸಂಚುಮಾಡಿ ಅವನನ್ನು ಹಾಸಿಗೆಯಲ್ಲೇ ಕೊಂದುಹಾಕಿದರು. ಅವನ ಶವವನ್ನು ದಾವೀದ ನಗರದೊಳಗೆ ಸಮಾಧಿ ಮಾಡಿದರು; ಆದರೆ ರಾಜ ಸ್ಮಶಾನದಲ್ಲಿ ಮಾಡಲಿಲ್ಲ. 

ಕೀರ್ತನೆ 89:4-5, 29-30, 31-32, 33-34 
ಶ್ಲೋಕ : ಇರುವುದು ಎನ್ನಚಲ ಪ್ರೀತಿ ಅವನ ಮೇಲೆ ಶಾಶ್ವತವಾಗಿ. 

ಶುಭಸಂದೇಶ: ಮತ್ತಾಯ 6:24-34 

ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು: "ಯಾರೂ ಇಬ್ಬರು ಯಜಮಾನನಿಗೆ ಜೀತಮಾಡಲಾಗದು. ಅವನು ಒಬ್ಬನನ್ನು ದ್ವೇಷಿಸಿ ಇನ್ನೊಬ್ಬನನ್ನು ಪ್ರೀತಿಸುತ್ತಾನೆ; ಅಥವಾ, ಒಬ್ಬನೊಡನೆ ಹೊಂದಿಕೊಂಡು ಇನ್ನೊಬ್ಬನನ್ನು ತಾತ್ಸಾರ ಮಾಡುತ್ತಾನೆ. ದೇವರಿಗೂ ದ್ರವ್ಯಕ್ಕೂ ಒಟ್ಟಿಗೆ ಸೇವೆ ಮಾಡಲು ನಿಮ್ಮಿಂದಾಗದು."  "ನಾನು ಹೇಳುವುದನ್ನು ಕೇಳಿ; "ಪ್ರಾಣದಾರಣೆಗೆ ಏನು ಉಣ್ಣುವುದು, ಏನು ಕುಡಿಯುವುದು; ದೇಹರಕ್ಷಣೆಗೆ ಏನು ಹೊದೆಯುವುದು" ಎಂದು ಚಿಂತೆಮಾಡಬೇಡಿ. ಊಟಕ್ಕಿಂತ ಪ್ರಾಣ, ಉಡುಪಿಗಿಂತ ದೇಹ ಮೇಲಾದುದಲ್ಲವೇ? ಆಕಾಶದಲ್ಲಿ ಹಾರಾಡುವ ಪಕ್ಷಿಗಳನ್ನು ಗಮನಿಸಿ; ಅವು ಬಿತ್ತುವುದಿಲ್ಲ, ಕೊಯ್ಯುವುದಿಲ್ಲ, ಕಣಜಗಳಲ್ಲಿ ಕೂಡಿಡುವುದೂ ಇಲ್ಲ. ಆದರೂ ಸ್ವರ್ಗದಲ್ಲಿರುವ ನಿಮ್ಮ ತಂದೆ ಅವುಗಳನ್ನು ಪೋಷಿಸುತ್ತಾರೆ. ಹಕ್ಕಿಗಳಿಗಿಂತ ನೀವು ಎಷ್ಟೋ ಮೇಲಾದವರಲ್ಲವೇ? ಚಿಂತಿಸಿ, ಚಿಂತಿಸಿ, ನಿಮ್ಮ ಜೀವನಾವಧಿಯನ್ನು ಕೊಂಚಕಾಲವಾದರೂ ದೀರ್ಘಮಾಡಲು ನಿಮ್ಮಲ್ಲಿ ಯಾರಿಂದಾದೀತು? ಉಡುಗೆತೊಡುಗೆಗಳ ಚಿಂತೆ ನಿಮಗೇಕೆ? ವನಕುಸುಮಗಳು ಬೆಳೆಯುವ ರೀತಿಯನ್ನು ಗಮನಿಸಿ ನೋಡಿ: ಅವು ದುಡಿಯುವುದಿಲ್ಲ , ನೂಲುವುದಿಲ್ಲ. ಆದರೂ ಅರಸ ಸೊಲೊಮೋನನು ತನ್ನ ಸರ್ವವೈಭವದಲ್ಲಿ ಇದ್ದಾಗಲೂ ಈ ಕಸುಮಗಳಲ್ಲಿ ಒಂದರಷ್ಟೂ ಸುಂದರವಾದ ಉಡುಪನ್ನು ಧರಿಸಿರಲಿಲ್ಲ. ಅಲ್ಪ ವಿಶ್ವಾಸಿಗಳೇ, ಇಂದಿದ್ದು ನಾಳೆ ಒಲೆ ಪಾಲಾಗುವ ಬಯಲಿನ ಹುಲ್ಲಿಗೆ ದೇವರು ಹೀಗೆ ಉಡಿಸಿದರೆ, ನಿಮಗೆ ಮತ್ತಷ್ಟೂ ಮಾಡಲಾರರೇ? ಆದುದರಿಂದ ತಿನ್ನಲು ಏನು? ಕುಡಿಯಲು ಏನು? ಉಡಲು ಏನು? ಎಂದು ಪೇಚಾಡಬೇಡಿ. ಇವೆಲ್ಲವುಗಳಿಗಾಗಿ ಪರಕೀಯರೂ ಪರದಾಡುತ್ತಾರೆ; ಇವೆಲ್ಲಾ ನಿಮಗೆ ಅವಶ್ಯ  ಎಂದು ಸ್ವರ್ಗದಲ್ಲಿವ ನಿಮ್ಮ ತಂದೆಗೆ ತಿಳಿದಿದೆ. ನೀವಾದರೋ ಮೊದಲು ದೇವರ ಸಾಮ್ರಾಜ್ಯಕ್ಕಾಗಿ, ಅವರ ಸತ್ಸಂಬಂಧಕ್ಕಾಗಿ ತವಕಪಡಿ. ಇದರೊಂದಿಗೆ ಅವೆಲ್ಲವೂ ನಿಮಗೆ ನೀಡಲಾಗುವುದು. ಆದುದರಿಂದ ನಾಳೆಯ ಚಿಂತೆ ನಿಮಗೆ ಬೇಡ. ನಾಳೆಯ ಚಿಂತೆ ನಾಳೆಗೇ ಇರಲಿ. ಇಂದಿನ ಪಾಡೇ ಇಂದಿಗೆ ಸಾಕು."