ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

27.02.10 - ಪರಿಪೂರ್ಣತೆ

ಸಂತ ಮತ್ತಾಯನು ಬರೆದ ಶುಭಸಂದೇಶದಿಂದ ವಾಚನ - 5:43-48

"ನಿಮ್ಮ ಶತ್ರುಗಳನ್ನು ಪ್ರೀತಿಸಿರಿ; ನಿಮ್ಮನ್ನು ಪೀಡಿಸುವವರಿಗಾಗಿ ಪ್ರಾರ್ಥನೆ ಮಾಡಿರಿ"

ಯೇಸುಸ್ವಾಮಿ ಶಿಷ್ಯರಿಗೆ ಹೀಗೆಂದರು: “ ‘ಮಿತ್ರನನ್ನು ಪ್ರೀತಿಸು, ಶತ್ರುವನ್ನು ದ್ವೇಷಿಸು’ ಎಂದು ಹೇಳಿರುವುದು ನಿಮಗೆ ತಿಳಿದೇ ಇದೆ. ನಾನು ಹೇಳುವುದನ್ನು ಗಮನಿಸಿರಿ: ನಿಮ್ಮ ಶತ್ರುಗಳನ್ನು ಪ್ರೀತಿಸಿರಿ; ನಿಮ್ಮನ್ನು ಪೀಡಿಸುವವರಿಗಾಗಿ ಪ್ರಾರ್ಥನೆ ಮಾಡಿರಿ. ಇದರಿಂದ ಸ್ವರ್ಗದಲ್ಲಿರುವ ನಿಮ್ಮ ತಂದೆಗೆ ನೀವು ಮಕ್ಕಳಾಗುವಿರಿ.ಅವರು ಸಜ್ಜನರ ಮೇಲೂ ದುರ್ಜನರ ಮೇಲೂ ತಮ್ಮ ಸೂರ್ಯನು ಉದಯಿಸುವಂತೆ ಮಾಡುತ್ತಾರೆ; ನೀತಿವಂತರ ಮೇಲೂ ಅನೀತಿವಂತರ ಮೇಲೂ ಮಳೆಗೆರೆಯುತ್ತಾರೆ.ನಿಮ್ಮನ್ನು ಪ್ರೀತಿಸುವವರನ್ನು ಮಾತ್ರ ನೀವು ಪ್ರೀತಿಸಿದರೆ ಅದರಿಂದೇನು ಫಲ? ಸುಂಕ ವಸೂಲಿ ಮಾಡುವವರೂ ಹಾಗೆ ಮಾಡುವುದಿಲ್ಲವೇ? ನಿಮ್ಮ ಮಿತ್ರರನ್ನು ಮಾತ್ರ ನೀವು ಗೌರವಿಸಿದರೆ ಅದರಲ್ಲೇನು ವಿಶೇಷ? ಅನ್ಯ ಜನರೂ ಹಾಗೆ ಮಾಡುತ್ತಾರಲ್ಲವೇ? ಆದುದರಿಂದ ಸ್ವರ್ಗದಲ್ಲಿರುವ ನಿಮ್ಮ ತಂದೆ ಪರಿಪೂರ್ಣರಾಗಿರುವಂತೆ ನೀವೂ ಪರಿಪೂರ್ಣರಾಗಿರಿ.”

26.02.2010 - ಫರಿಸಾಯರ ಧರ್ಮನಿಷ್ಠೆ ಹಾಗೂ ಯೇಸುವಿನ ಸ್ವರ್ಗಸಾಮ್ರಾಜ್ಯ್ಸದ ಪರಿಕಲ್ಪನೆ

ಸಂತ ಮತ್ತಾಯನು ಬರೆದ ಶುಭ ಸಂದೇಶದಿಂದ ವಾಚನ - 5:20-26

"ಧರ್ಮಶಾಸ್ತ್ರಿಗಳ ಹಾಗೂ ಫರಿಸಾಯರ ಧರ್ಮನಿಷ್ಠೆಗಿಂತ ನಿಮ್ಮ ಧರ್ಮನಿಷ್ಠೆ ಉತ್ತಮವಾಗದ ಹೊರತು ನೀವು ಸ್ವರ್ಗಸಾಮ್ರಾಜ್ಯವನ್ನು ಪ್ರವೇಶಿಸಲಾರಿರಿ"

ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು: " ಧರ್ಮಶಾಸ್ತ್ರಿಗಳ ಹಾಗೂ ಫರಿಸಾಯರ ಧರ್ಮನಿಷ್ಠೆಗಿಂತ ನಿಮ್ಮ ಧರ್ಮನಿಷ್ಠೆ ಉತ್ತಮವಾಗದ ಹೊರತು ನೀವು ಸ್ವರ್ಗಸಾಮ್ರಾಜ್ಯವನ್ನು ಪ್ರವೇಶಿಸಲಾರಿರಿ ಎಂಬುದು ನಿಶ್ಚಯ.""ನರಹತ್ಯೆ ಮಾಡಬೇಡ: ನರಹತ್ಯೆ ಮಾಡುವವನು ನ್ಯಾಯ ತೀರ್ಪಿಗೆ ಗುರಿಯಾಗುವನು" ಎಂದು ಪೂರ್ವಿಕರು ಹೇಳಿದ್ದನ್ನು ನೀವು ಕೇಳಿದ್ದೀರಿ. ಆದರೆ ನಾನೀಗ ನಿಮಗೆ ಹೇಳುತ್ತೇನೆ, ಕೇಳಿ : ತನ್ನ ಸೋದರನ ಮೇಲೆ ನಿಷ್ಕಾರಣವಾಗಿ ಕೋಪಗೊಳ್ಳುವ ಪ್ರತಿಯೊಬ್ಬನೂ ನ್ಯಾಯ ತೀರ್ಪಿಗೆ ಈಡಾಗುವನು;ತನ್ನ ಸೋದರನ ತುಚ್ಛೀಕರಿಸುವವನು ನ್ಯಾಯ ಸಭೆಯ ವಿಚಾರಣೆಗೆ ಗುರಿಯಾಗುವನು.ಆದಕಾರಣ, ಬಲಿಪೀಠದ ಮುಂದೆ ದೇವರಿಗೆ ಕಾಣಿಕೆಯನ್ನು ಅರ್ಪಿಸಲಿರುವಾಗ, ನಿನ್ನ ಸೋದರನಿಗೆ ನಿನ್ನ ಮೇಲೆ ಏನೋ ಮನಸ್ತಾಪವಿದೆ ಎಂಬುದು ನಿನ್ನ ನೆನಪಿಗೆ ಬಂದರೆ, ನಿನ್ನ ಕಾಣಿಕೆಯನ್ನು ಆ ಬಲಿಪೀಠದ ಮುಂದೆಯೇ ಇಟ್ಟು ಬಿಡು. ಮೊದಲು ಹೋಗಿ ನಿನ್ನ ಸೋದರನೊಡನೆ ಸಮಾಧಾನ ಮಾಡಿಕೊ ಅನಂತರ ಬಂದು ನಿನ್ನ ಕಾಣಿಕೆಯನ್ನು ಒಪ್ಪಿಸು. ನಿನ್ನ ಎದುರಾಳಿ ನಿನ್ನನ್ನು ನ್ಯಾಯಸ್ಥಾನಕ್ಕೆ ಎಳೆಯುವಾಗ ಮಾರ್ಗ ಮಧ್ಯದಲ್ಲೇ ಅವನೊಡನೆ ಬೇಗ ಸಂಧಾನ ಮಾಡಿಕೊ. ಇಲ್ಲದಿದ್ದರೆ, ಅವನು ನಿನ್ನನ್ನು ನ್ಯಾಯಾಧಿಪತಿಗೆ ಒಪ್ಪಿಸಬಹುದು. ನ್ಯಾಯಾಧಿಪತಿ ನಿನ್ನನ್ನು ಪೋಲಿಸರ ವಶಕ್ಕೆ ಬಿಡಬಹುದು.ಅನಂತರ ನಿನಗೆ ಸೆರೆವಾಸ ಪ್ರಾಪ್ತಿಯಾದೀತು! ಅಲ್ಲಿಂದ ನೀನು ಹೊರಗೆ ಬರಬೇಕಾದರೆ ಬಿಡಿಕಾಸನ್ನೂ ಬಿಡದೆ ಎಲ್ಲವನ್ನೂ ತೆರಬೇಕಾಗುವುದು, ಇದನ್ನು ನೆನಪಿನಲ್ಲಿಡು."

25.02.2010 - ಧರ್ಮಶಾಸ್ತ್ರದ ಹಾಗೂ ಪ್ರವಾದನೆಗಳ ಸಾರ

ಸಂತ ಮತ್ತಾಯನು ಬರೆದ ಶುಭ ಸಂದೇಶದಿಂದ ವಾಚನ - 7:7-12

"ಜನರು ನಿಮಗೆ ಏನೇನು ಮಾಡಬೇಕೆಂದು ನೀವು ಅಪೇಕ್ಷಿಸುತ್ತೀರೋ, ಅದನ್ನೇ ನೀವು ಅವರಿಗೆ ಮಾಡಿ"

ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು :ಕೇಳಿರಿ, ನಿಮಗೆ ಕೊಡಲಾಗುವುದು; ಹುಡುಕಿರಿ ನಿಮಗೆ ಸಿಗುವುದು; ತಟ್ಟಿರಿ, ನಿಮಗೆ ಬಾಗಿಲು ತೆರೆಯಲಾಗುವುದು.ಏಕೆಂದರೆ ಕೇಳಿಕೊಳ್ಳುವ ಪ್ರತಿಯೊಬ್ಬನಿಗೂ ಕೊಡಲಾಗುವುದು,ಹುಡುಕುವವನಿಗೆ ಸಿಗುವುದು,ತಟ್ಟುವವನಿಗೆ ಬಾಗಿಲು ತೆರೆಯಲಾಗುವುದು. ನಿಮ್ಮಲ್ಲಿ ಯಾವನು ತಾನೇ ತನ್ನ ಮಗ ರೊಟ್ಟಿಯನ್ನು ಕೇಳಿದರೆ ಕಲ್ಲನ್ನು ಕೊಟ್ಟಾನು?ಮೀನನ್ನು ಕೇಳಿದರೆ ಹಾವನ್ನು ಕೊಟ್ಟಾನು?ಕೆಟ್ಟವರಾದ ನೀವೇ ನಿಮ್ಮ ಮಕ್ಕಳಿಗೆ ಒಳ್ಳೆಯ ಪದಾರ್ಥಗಳನ್ನು ಕೊಡಬಲ್ಲವರಾದರೆ,ಅದಕ್ಕಿಂತಲೂ ಎಷ್ಟೋ ಹೆಚ್ಚಾಗಿ ಸ್ವರ್ಗದಲ್ಲಿರುವ ನಿಮ್ಮ ತಂದೆ ತಮ್ಮನ್ನು ಕೇಳಿಕೊಳ್ಳುವವರಿಗೆ ಒಳ್ಳೆಯ ಕೊಡುಗೆಗಳನ್ನು ಕೊಡಬಲ್ಲರು!ಜನರು ನಿಮಗೆ ಏನೇನು ಮಾಡಬೇಕೆಂದು ನೀವು ಅಪೇಕ್ಷಿಸುತ್ತೀರೋ, ಅದನ್ನೇ ನೀವು ಅವರಿಗೆ ಮಾಡಿ. ಧರ್ಮಶಾಸ್ತ್ರದ ಹಾಗೂ ಪ್ರವಾದನೆಗಳ ಸಾರ ಇದೇ."

24.02.10 - ಸೊಲೊಮೋನ, ಯೋನನಿಗಿಂತಲೂ ಮೇಲಾದವರು!

ಸಂತ ಲೂಕ ಬರೆದ ಶುಭಸಂದೇಶದಿಂದ ವಾಚನ - 11:29-32

"ಆದರೆ ಪ್ರವಾದಿ ಯೋನನಿಗಿಂತಲೂ ಮೇಲಾದವನು ಇಗೋ, ಇಲ್ಲಿದ್ದಾನೆ.”


ಜನರ ಗುಂಪು ಹೆಚ್ಚುತ್ತಿದ್ದಾಗ,ಯೇಸುಸ್ವಾಮಿ ಹೀಗೆಂದು ಮುಂದುವರಿಸಿದರು:“ಈ ಪೀಳಿಗೆ ಕೆಟ್ಟ ಪೀಳಿಗೆ ಇದು ಅದ್ಭುತಕಾರ್ಯಗಳನ್ನು ಸಂಕೇತವಾಗಿ ಕೋರುತ್ತದೆ.ಪ್ರವಾದಿ ಯೋನನ ಸಂಕೇತವೇ ಹೊರತು ಬೇರೆ ಯಾವ ಸಂಕೇತವೂ ಅದಕ್ಕೆ ದೊರಕದು. ಹೇಗೆಂದರೆ, ನಿನವೆ ನಗರದ ಜನರಿಗೆ ಪ್ರವಾದಿ ಯೋನನು ಸಂಕೇತವಾದಂತೆ ನರಪುತ್ರನು ಈ ಸಂತತಿಗೆ ಸಂಕೇತವಾಗಿರುವನು. ದೈವ ತೀರ್ಪಿನ ದಿನ ದಕ್ಷಿಣ ದೇಶದ ರಾಣಿ ಈ ಪೀಳಿಗೆಗೆ ಎದುರಾಗಿ ನಿಂತುಕೊಂಡು, ಇವರನ್ನು ಅಪರಾಧಿಗಳೆಂದು ತೋರಿಸುವಳು.ಆಕೆ ಸೊಲೊಮೋನನ ಜ್ಞಾನೋಕ್ತಿಗಳನ್ನು ಕೇಳುವುದಕ್ಕಾಗಿ ದೇಶದ ಕಟ್ಟಕಡೆಯಿಂದ ಬಂದಳು.

ಆದರೆ ಸೊಲೊಮೋನನಿಗಿಂತಲೂ ಮೇಲಾದವನು ಇಗೋ, ಇಲ್ಲಿದ್ದಾನೆ. ತೀರ್ಪಿನ ದಿನ ನಿನೆವೆ ನಗರದವರು ಈ ಪೀಳಿಗೆಗೆ ಎದುರಾಗಿ ನಿಂತು ಇದನ್ನು ಅಪರಾಧಿ ಎಂದು ತೋರಿಸುವರು. ಏಕೆಂದರೆ, ಪ್ರವಾದಿ ಯೋನನ ಬೊಧನೆಯನ್ನ್ನು ಕೇಳಿ ಪಶ್ಚಾತ್ತಾಪಪಟ್ಟು ಅವರು ದೇವರಿಗೆ ಅಭಿಮುಖರಾದರು. ಆದರೆ ಪ್ರವಾದಿ ಯೋನನಿಗಿಂತಲೂ ಮೇಲಾದವನು ಇಗೋ, ಇಲ್ಲಿದ್ದಾನೆ.”

23.02.2010 - ಸರಳ ಪಾರ್ಥನೆ

ಸಂತ ಮತ್ತಾಯನು ಬರೆದ ಶುಭಸಂದೇಶದಿಂದ ವಾಚನ - 6: 7-15

"ಪ್ರಾರ್ಥನೆ ಮಾಡುವಾಗ ಪರಕೀಯರಂತೆ ನಿರರ್ಥಕ ಪದಗಳನ್ನು ಪಿಸಗುಟ್ಟಬೇಡಿ"

ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು :ಪ್ರಾರ್ಥನೆ ಮಾಡುವಾಗ ಪರಕೀಯರಂತೆ ನಿರರ್ಥಕ ಪದಗಳನ್ನು ಪಿಸಗುಟ್ಟಬೇಡಿ. ತಮ್ಮ ಪ್ರಾರ್ಥನೆ ದೀರ್ಘವಾದಷ್ಟೂ ದೇವರು ಆಲಿಸುತ್ತಾರೆಂದು ಅವರು ಭಾವಿಸುತ್ತಾರೆ.ನೀವು ಅವರಂತೆ ಆಗಬೇಡಿ.ನಿಮ್ಮ ಅಗತ್ಯಗಳೇನೆಂಬುದು ನೀವು ಕೇಳುವುದಕ್ಕೆ ಮೊದಲೇ ನಿಮ್ಮ ತಂದೆಗೆ ಗೊತ್ತಿದೆ.ಆದುದರಿಂದ ಹೀಗೆಂದು ಪ್ರಾರ್ಥನೆ ಮಾಡಿ:

‘ಸ್ವರ್ಗದಲ್ಲಿರುವ ಓ ನಮ್ಮ ತಂದೆಯೇ,
ನಿಮ್ಮ ಪವಿತ್ರ ನಾಮ ಪೂಜಿತವಾಗಲಿ;
ನಿಮ್ಮ ಸಾಮ್ರಾಜ್ಯ ಬರಲಿ;
ನಿಮ್ಮ ಚಿತ್ತ ಸ್ವರ್ಗದಲ್ಲಿ ನೆರವೇರುವ ಪ್ರಕಾರ
ಜಗತ್ತಿನಲ್ಲಿಯೂ ನೆರವೇರಲಿ.
ನಮ್ಮ ಅನುದಿನದ ಆಹಾರವನ್ನು ನಮಗಿಂದು ಕೊಡಿ.
ನಮಗೆ ತಪ್ಪು ಮಾಡಿದವರನ್ನು ನಾವು ಕ್ಷಮಿಸುವ ಪ್ರಕಾರ
ನಾವು ಮಾಡಿದ ತಪ್ಪುಗಳನ್ನು ಕ್ಷಮಿಸಿ.
ನಮ್ಮನ್ನು ಶೋಧನೆಗೆ ಒಳಪಡಿಸಬೇಡಿ;ಕೇಡಿನಿಂದ ನಮ್ಮನ್ನು ಕ್ಷಮಿಸಿರಿ.’
ಜನರ ತಪ್ಪುಗಳನ್ನು ನೀವು ಕ್ಷಮಿಸಿದರೆ ಸ್ವರ್ಗದಲ್ಲಿರುವ
ನಿಮ್ಮ ತಂದೆ ನಿಮ್ಮನ್ನು ಕ್ಷಮಿಸುವರು
ಜನರನ್ನು ನೀವು ಕ್ಷಮಿಸದಿದ್ದರೆ, ನಿಮ್ಮ ತಂದೆಯೂ
ನಿಮ್ಮ ತಪ್ಪುಗಳನ್ನು ಕ್ಷಮಿಸರು.”

19.02.10 - ಮದುವಣಿಗ ಹಾಗೂ ದು:ಖ

ಸಂತ ಮತ್ತಾಯನು ಬರೆದ ಶುಭ ಸಂದೇಶದಿಂದ ವಾಚನ - 9:14-15

"ಮದುವಣಿಗನು ಜೊತೆಯಲ್ಲಿ ಇರುವಷ್ಟು ಕಾಲ ಅವನ ಆಪ್ತರು ದು:ಖ ಪಡುವುದುಂಟೇ?

ಯೊವಾನ್ನನ ಶಿಷ್ಯರು ಯೇಸುಸ್ವಾಮಿಯ ಬಳಿಗೆ ಬಂದರು."ನಾವೂ ಫರಿಸಾಯರೂ ಉಪವಾಸ ವ್ರತವನ್ನು ಕೈಗೊಳ್ಳುತ್ತೇವೆ. ಆದರೆ ನಿಮ್ಮ ಶಿಷ್ಯರು ಏಕೆ ಹಾಗೆ ಮಾಡುವುದಿಲ್ಲ?" ಎಂದು ಪ್ರಶ್ನೆ ಹಾಕಿದರು. ಅದಕ್ಕೆ ಯೇಸು "ಮದುವಣಿಗನು ಜೊತೆಯಲ್ಲಿ ಇರುವಷ್ಟು ಕಾಲ ಅವನ ಆಪ್ತರು ದು:ಖ ಪಡುವುದುಂಟೇ? ಮದುವಣಿಗನು ಅವರಿಂದ ಅಗಲಬೇಕಾಗುವ ಕಾಲವು ಬರುವುದು: ಆಗ ಅವರು ಉಪವಾಸ ಮಾಡುವರು," ಎಂದರು.

18.02.10 -"ನರಪುತ್ರನು ಕಠಿಣವಾದ ಯಾತನೆಯನ್ನು ಅನುಭವಿಸಬೇಕಾಗಿದೆ"

ಸಂತ ಲೂಕನು ಬರೆದ ಶುಭ ಸಂದೇಶದಿಂದ ವಾಚನ - 9:22-25

ಒಬ್ಬನು ಪ್ರಪಂಚವನ್ನೆಲ್ಲಾ ಗೆದ್ದುಕೊಂಡು ತನ್ನ ಪ್ರಾಣವನ್ನೇ ಕಳೆದುಕೊಂಡರೆ ಅಥವಾ ತೆತ್ತರೆ ಅವನಿಗೆ ಅದರಿಂದ ಬರುವ ಲಾಭವಾದರೂ ಏನು?

ಯೇಸು ಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು:"ನರಪುತ್ರನು ಕಠಿಣವಾದ ಯಾತನೆಯನ್ನು ಅನುಭವಿಸಬೇಕಾಗಿದೆ.ಸಭಾ ಪ್ರಮುಖರಿಂದಲೂ ಮುಖ್ಯ ಯಾಜಕರಿಂದಲೂ ಧರ್ಮಶಾಸ್ತ್ರಿಗಳಿಂದಲೂ ಆತನು ತಿರಸ್ಕೃತನಾಗಿ ಕೊಲ್ಲಲ್ಪಡುವನು. ಆದರೆ ಮೂರನೆಯ ದಿನ ಆತನು ಪುನರುತ್ಥಾನ ಹೊಂದುವನು," ಎಂದು ಅವರಿಗೆ ತಿಳಿಸಿದರು.

ಯೇಸುಸ್ವಾಮಿ ಎಲ್ಲರನ್ನೂ ನೋಡಿ ಹೇಳಿದ್ದೇನೆಂದರೆ:"ಯಾರಿಗಾದರೂ ನನ್ನನ್ನು ಹಿಂಬಾಲಿಸಲು ಮನಸ್ಸಿದ್ದರೆ,ಅವನು ತನ್ನನ್ನು ತಾನೇ ಪರಿತ್ಯಜಿಸಿ,ತನ್ನ ಶಿಲುಬೆಯನ್ನು ಅನುದಿನವೂ ಹೊತ್ತುಕೊಂಡು ನನ್ನನ್ನು ಹಿಂಬಾಲಿಸಿಸಲಿ.ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಹಾತೊರೆಯುವವನು ಅದನ್ನು ಕಳೆದುಕೊಳ್ಳುವನು.ಆದರೆ ನನ್ನ ನಿಮಿತ್ತ ತನ್ನ ಪ್ರಾಣವನ್ನು ಕಳೆದುಕೊಳ್ಳುವವನು ಅದನ್ನು ನಿತ್ಯಕ್ಕೂ ಉಳಿಸಿಕೊಳ್ಳುವನು.ಒಬ್ಬನು ಪ್ರಪಂಚವನ್ನೆಲ್ಲಾ ಗೆದ್ದುಕೊಂಡು ತನ್ನ ಪ್ರಾಣವನ್ನೇ ಕಳೆದುಕೊಂಡರೆ ಅಥವಾ ತೆತ್ತರೆ ಅವನಿಗೆ ಅದರಿಂದ ಬರುವ ಲಾಭವಾದರೂ ಏನು?

16.02.10 - ಹುಳಿಹಿಟ್ಟಿನ ವಿಷಯದಲ್ಲಿ ಜಾಗರೂಕರಾಗಿರಿ

ಸಂತ ಮಾರ್ಕನು ಬರೆದ ಶುಭ ಸಂದೇಶದಿಂದ ವಾಚನ - 8:14-21

"ಕಿವಿಗಳಿದ್ದೂ ಕೇಳಲಾರಿರಾ? ಕಣ್ಣುಗಳಿದ್ದೂ ನೋಡಲಾರಿರಾ?"

ಶಿಷ್ಯರು ಬುತ್ತಿಯನ್ನು ಕಟ್ಟಿಕೊಳ್ಳಲು ಮರೆತಿದ್ದರು. ದೋಣಿಯಲ್ಲಿ ಒಂದೇ ಒಂದು ರೊಟ್ಟಿಯಿತ್ತು. ಯೇಸುಸ್ವಾಮಿ ಅವರಿಗೆ. " ಎಚ್ಚರಿಕೆ, ಫರಿಸಾಯರ ಹಾಗೂ ಹೆರೋದನ ಹುಳಿಹಿಟ್ಟಿನ ವಿಷಯದಲ್ಲಿ ಜಾಗರೂಕರಾಗಿರಿ," ಎಂದು ಹೇಳಿದರು. ಇದನ್ನು ಕೇಳಿದ ಶಿಷ್ಯರು,’ ನಮ್ಮಲ್ಲಿ ರೊಟ್ಟಿಯಿಲ್ಲದ್ದರಿಂದ ಹೀಗೆ ಹೇಳುತ್ತಿರಬಹುದೇ" ಎಂದು ಚರ್ಚಿಸತೊಡಗಿದರು. ಆ ಚರ್ಚೆಯನ್ನು ಯೇಸು ಗಮನಿಸಿ, ರೊಟ್ಟಿ ಇಲ್ಲವೆಂದು ಚರ್ಚೆ ಏಕೆ? ನಿಮಗೆ ಇನ್ನೂ ಅರಿವಾಗಲಿ, ಗ್ರಹಿಕೆಯಾಗಲಿ ಇಲ್ಲವೇ? ನೀವಿನ್ನೂ ಮಂದಮತಿಗಳಾಗಿರುವಿರೋ? ಕಿವಿಗಳಿದ್ದೂ ಕೇಳಲಾರಿರಾ? ಕಣ್ಣುಗಳಿದ್ದೂ ನೋಡಲಾರಿರಾ? ನಾನು ಐದು ರೊಟ್ಟಿಗಳಿಂದ ಐದು ಸಾವಿರ ಜನರನ್ನು ತೃಪ್ತಿ ಪಡಿಸಿದಾಗ ಉಳಿದ ರೊಟ್ಟಿಯ ತುಂಡುಗಳನ್ನು ಎಷ್ಟು ಬುಟ್ಟಿ ತುಂಬ ಒಟ್ಟುಗೂಡಿಸಿದಿರಿ? ನಿಮಗೆ ಜ್ಞಾಪಕವಿಲ್ಲವೇ?" ಎಂದು ಕೇಳಿದರು. "ಹನ್ನೆರಡು ಬುಟ್ಟಿಗಳು" ಎಂದು ಅವರು ಉತ್ತರವಿತ್ತರು.

"ಅಲ್ಲದೆ ನಾನು ಏಳು ರೊಟ್ಟಿಗಳಿಂದ ನಾಲ್ಕು ಸಾವಿರ ಜನರನ್ನು ತೃಪ್ತಿಪಡಿಸಿದಾಗ ಎಷ್ಟು ಕುಕ್ಕೆ ತುಂಬ ರೊಟ್ಟಿಯ ತುಂಡುಗಳನ್ನು ಒಟ್ಟುಗೂಡಿಸಿದಿರಿ?" ಎಂದು ಪುನ: ಅವರನ್ನು ಕೇಳಲು," ಏಳು ಕುಕ್ಕೆಗಳು,’ ಎಂದರು. ಆಗ ಯೇಸು," ಇಷ್ಟಾದರೂ ನಿಮಗಿನ್ನೂ ತಿಳುವಳಿಕೆ ಇಲ್ಲವೆ?" ಎಂದರು.

15.02.10 - "ಒಂದು ಅದ್ಭುತವನ್ನು ಮಾಡಿ ತೋರಿಸು"

ಸಂತ ಮಾರ್ಕನು ಬರೆದ ಶುಭ ಸಂದೇಶದಿಂದ ವಾಚನ - 8:11-13

"ಈ ಪೀಳಿಗೆ ಅದ್ಭುತವನ್ನು ಸಂಕೇತವಾಗಿ ಅಪೇಕ್ಷಿಸುವುದೇಕೆ?"

ಫರಿಸಾಯರು ಯೇಸುಸ್ವಾಮಿಯ ಬಳಿಗೆ ಬಂದು, ಅವರೊಡನೆ ತರ್ಕಮಾಡಿ, ಅವರನ್ನು ಪರೀಕ್ಷಿಸುವ ಉದ್ದೇಶದಿಂದ:" ನೀನು ದೇವರಿಂದ ಬಂದವನೆಂಬುದನ್ನು ಸೂಚಿಸಲು ಒಂದು ಅದ್ಭುತವನ್ನು ಮಾಡಿ ತೋರಿಸು," ಎಂದು ಕೇಳಿದರು. ಇದನ್ನು ಕೇಳಿ ಯೇಸು, ಮನಸ್ಸಿನಲ್ಲಿ ನೊಂದುಕೊಂಡು, ನಿಟ್ಟುಸಿರಿಟ್ಟು,"ಈ ಪೀಳಿಗೆ ಅದ್ಭುತವನ್ನು ಸಂಕೇತವಾಗಿ ಅಪೇಕ್ಷಿಸುವುದೇಕೆ? ಇದಕ್ಕೆ ಅಂಥ ಯಾವ ಸಂಕೇತವನ್ನು ಕೊಡಲಾಗದು, ಇದು ಖಂಡಿತ," ಎಂದರು. ಅನಂತರ ಯೇಸು ಅವರನು ಬಿಟ್ಟು, ದೋಣಿಯನ್ನು ಹತ್ತಿ ಸರೋವರದ ಆಚೆದಡಕ್ಕೆ ಹೊರಟು ಹೋದರು.

14.02.10 - ಅಷ್ಟ ಭಾಗ್ಯಗಳು

ಸಂತ ಲೂಕನು ಬರೆದ ಶುಭಸಂದೇಶದಿಂದ ವಾಚನ  - 6: 17,20-26

"ದೀನ ದಲಿತರೇ, ನೀವು ಭಾಗ್ಯವಂತರು! ದೇವರ ಸಾಮ್ರಾಜ್ಯ ನಿಮ್ಮದು."

ಅನಂತರ ಯೇಸುಸ್ವಾಮಿ ಅವರೊಂದಿಗೆ ಬೆಟ್ಟದಿಂದ ಇಳಿದು, ಸಮತಟ್ಟಾದ ಸ್ಥಳಕ್ಕೆ ಬಂದರು. ಶಿಷ್ಯರ ದೊಡ್ಡ ಗುಂಪು ಅಲ್ಲಿ ನೆರದಿತ್ತು. ಜುದೇಯ ಪ್ರಾಂತ್ಯದಿಂದಲೂ ಜೆರುಸಲೇಮ್ ಪಟ್ಟಣದಿಂದಲೂ ಸಮುದ್ರ ತೀರದ ಟೈರ್ ಹಾಗೂ ಸಿದೋನ್ ಪಟ್ಟಣಗಳಿಂದಲೂ ಜನಸಮೂಹ ಅಲ್ಲಿಗೆ ಬಂದಿತ್ತು. ಯೇಸುಸ್ವಾಮಿ ತಮ್ಮ ಶಿಷ್ಯರ ಕಡೆಗೆ ದೃಷ್ಟಿಸಿ ನೋಡಿ ಹೀಗೆಂದು ಬೋಧಿಸಿದರು: “ದೀನ ದಲಿತರೇ, ನೀವು ಭಾಗ್ಯವಂತರು! ದೇವರ ಸಾಮ್ರಾಜ್ಯ ನಿಮ್ಮದು. ಈಗ ಹಸಿದಿರುವವರೇ, ನೀವು ಭಾಗ್ಯವಂತರು! ನಿಮಗೆ ಸಂತೃಪ್ತಿಯಾಗುವುದು. ಈಗ ಅತ್ತು ಗೋಳಾಡುವವರೇ, ನೀವು ಭಾಗ್ಯವಂತರು! ನೀವು ನಕ್ಕುನಲಿದಾಡುವಿರಿ.! ನರಪುತ್ರನ ಶಿಷ್ಯರು ನೀವಾದುದರಿಂದ ನಿಮ್ಮನ್ನು ದ್ವೇಷಿಸಿ,ಬಹಿಷ್ಕರಿಸಿ,ಧಿಕ್ಕರಿಸಿ ನಿಮ್ಮ ಹೆಸರೆತ್ತುವುದು ಕೂಡ ಕೇಡೆಂದು ತಿರಸ್ಕರಿಸಿದಾಗ ನೀವು ಭಾಗ್ಯವಂತರು! ಈ ಜನರ ಪೂರ್ವಜರು ಪ್ರವಾದಿಗಳನ್ನು ಹೀಗೆಯೇ ತೆಗಳಿದ್ದರು.

ಇದೆಲ್ಲಾ ಸಂಭವಿಸುವಾಗ ಹಿಗ್ಗಿ ನಲಿದಾಡಿರಿ. ಏಕೆಂದರೆ, ಸ್ವರ್ಗದಲ್ಲಿ ನಿಮಗೆ ಲಭಿಸುವ ಪ್ರತಿಫಲ ಮಹತ್ತರವಾದುದು.: ಆದರೆ ಧನಿಕರೇ, ನಿಮಗೆ ಧಿಕ್ಕಾರ! ನೀವು ಸುಖಜೀವನವನ್ನು ಅನುಭವಿಸಿಯಾಗಿದೆ. ಈಗ ತಿಂದು ತೃಪ್ತಿಯಾಗಿರುವವರೇ, ನಿಮಗೆ ಧಿಕ್ಕಾರ! ನೀವು ಹಸಿದು ಬಳಲುವಿರಿ.ಈಗ ನಕ್ಕುನಲಿದಾಡುವವರೇ, ನಿಮಗೆ ಧಿಕ್ಕಾರ! ನೀವು ದು:ಖಿಸಿ ಗೋಳಾಡುವಿರಿ. ಜನರೆಲ್ಲರಿಂದ ಹೊಗಳಿಸಿಕೊಳ್ಳುವಾಗ ನಿಮಗೆ ಧಿಕ್ಕಾರ! ಕಪಟ ಪ್ರವಾದಿಗಳೂ ಈ ಜನರ ಪೂರ್ವಜರಿಂದ ಹೀಗೆಯೇ ಹೊಗಳಿಸಿಕೊಂಡಿದ್ದರು.

13.02.08 - “ನಿಮ್ಮಲ್ಲಿ ಎಷ್ಟು ರೊಟ್ಟಿಗಳಿವೆ?”

ಸಂತ ಮಾರ್ಕನು ಬರೆದ ಶುಭಸಂದೇಶದಿಂದ ವಾಚನ  - 8: 1-10


 ಜನರೆಲ್ಲರೂ ಉಂಡು ತೃಪ್ತರಾದರು.


ಜನರು ಪುನ: ದೊಡ್ಡ ಸಂಖ್ಯೆಯಲ್ಲಿ ಬಂದು ನೆರದಿದ್ದರು. ಊಟ ಮಾಡಲು ಅವರಲ್ಲಿ ಆಹಾರವಿರಲಿಲ್ಲ.ಆಗ ಯೇಸುಸ್ವಾಮಿ ಶಿಷ್ಯರನ್ನು ಕರೆದು” ಈ ಜನರು ಕಳೆದ ಮೂರು ದಿನಗಳಿಂದಲೂ ನನ್ನ ಬಳಿ ಇದ್ದಾರೆ; ಊಟಕ್ಕೆ ಇವರಲ್ಲಿ ಏನೂ ಇಲ್ಲ. ಇವರನ್ನು ಕಂಡಾಗ ನನ್ನ ಹೃದಯ ಕರಗುತ್ತದೆ. ಬರೀ ಹೊಟ್ಟೆಯಲಿ ಮನೆಗೆ ಕಳುಹಿಸಿದರೆ ದಾರಿಯಲ್ಲಿ ಬಳಲಿ ಬಿದ್ದಾರು.ಕೆಲವರಂತೂ ಬಹುದೂರದಿಂದ ಬಂದಿದ್ದಾರೆ,” ಎಂದರು. ಅದಕ್ಕೆ ಶಿಷ್ಯರು “ಇಷ್ಟು ದೊಡ್ಡ ಗುಂಪಿಗೆ ಆಗುವಷ್ಟು ರೊಟ್ಟಿಯನ್ನು ಈ ಅಡವಿಯಲ್ಲಿ ನಾವು ತರುವುದಾದರೂ ಎಲ್ಲಿಂದ? ಎಂದು ಮರುನುಡಿದರು. ಯೇಸು “ನಿಮ್ಮಲ್ಲಿ ಎಷ್ಟು ರೊಟ್ಟಿಗಳಿವೆ?” ಎಂದು ಕೇಳಲು ಅವರು,” ಏಳು ಇವೆ,” ಎಂದರು. ಯೇಸು ಜನರ ಗುಂಪಿಗೆ ನೆಲದ ಮೇಲೆ ಕುಳಿತುಕೊಳ್ಳುವಂತೆ ಆಜ್ಞಾಪಿಸಿದರು. ಅನಂತರ ಆ ಏಳು ರೊಟ್ಟಿಗಳನ್ನು ತೆಗೆದುಕೊಂಡು ದೇವರಿಗೆ ಸ್ತೋತ್ರಸಲ್ಲಿಸಿ,ಅವುಗಳನ್ನು ಮುರಿದು, ಜನರ ಗುಂಪಿಗೆ ಬಡಿಸಲು ಶಿಷ್ಯರಿಗೆ ಕೊಟ್ಟರು. ಅವರು ಬಡಿಸಿದರು.ಅವರಲ್ಲಿ ಕೆಲವು ಸಣ್ಣ ಮೀನುಗಳಿದ್ದವು. ಯೇಸು ಅವುಗಳಿಗೆ ದೇವಸ್ತುತಿಮಾಡಿ ಅವುಗಳನ್ನು ಹಂಚಬೇಕೆಂದು ಆಜ್ಞಾಪಿಸಿದರು. ಜನರೆಲ್ಲರೂ ಉಂಡು ತೃಪ್ತರಾದರು. ಉಳಿದ ರೊಟ್ಟಿಯ ತುಂಡುಗಳನ್ನು ಒಟ್ಟುಗೂಡಿಸಿದಾಗ. ಅವು ಏಳು ಕುಕ್ಕೆಗಳ ತುಂಬ ಆದವು. ಊಟ ಮಾಡಿದವರ ಸಂಖ್ಯೆಯ  ನಾಲ್ಕು ಸಾವಿರ. ಊಟವಾದ ಬಳಿಕ ಯೇಸು ಜನರನ್ನು ಕಳುಹಿಸಿಕೊಟ್ಟು ವಿಳಂಬ ಮಾಡದೆ ದೋಣಿಯನ್ನು ಹತ್ತಿ, ಶಿಷ್ಯರೊಡನೆ ದಲ್ಮನೂಥ ಎಂಬ ಪ್ರದೇಶಕ್ಕೆ ಹೋದರು.

12.02.10 - 'ಎಪ್ಪಥಾ’ಎಂದರೆ ತೆರೆಯಲಿ ಎಂದರು

ಸಂತ ಮಾರ್ಕನು ಬರೆದ ಶುಭ ಸಂದೇಶದಿಂದ ವಾಚನ - 7:31-37

ಇವರು ಎಲ್ಲಾ ಕಾರ್ಯವನ್ನು ಚೆನ್ನಾಗಿ ಮಾಡುತ್ತಾರೆ;ಕಿವುಡರು ಕೇಳುವಂತೆಯೂ ಮೂಕರು ಮಾತನಾಡುವಂತೆಯೂ ಮಾಡುತ್ತಾರಲ್ಲಾ!"
ಯೇಸುಸ್ವಾಮಿ ಆ ಸ್ಥಳವನ್ನು ಬಿಟ್ಟು ಸಿದೋನಿನ ಮಾರ್ಗವಾಗಿ ದೆಕಪೋಲಿ ಪ್ರದೇಶವನ್ನು ಹಾದು ಗಲಿಲೇಯ ಸರೋವರದ ತೀರಕ್ಕೆ ಹಿಂದಿರುಗಿದರು.ಮಾತನಾಡಲಾಗದ ಒಬ್ಬ ಕಿವುಡನನ್ನು ಜನರು ಅವರ ಬಳಿಗೆ ಕರೆತಂದರು.ಅವನ ಮೇಲೆ ಕೈಗಳನ್ನಿಡಬೇಕೆಂದು ಬೇಡಿಕೊಂಡರು. ಯೇಸು ಅವನನ್ನು ಜನರ ಗುಂಪಿನಿಂದ ಪ್ರತ್ಯೇಕವಾಗಿ ಕರೆದೊಯ್ದು, ತಮ್ಮ ಬೆರಳುಗಳನ್ನು ಅವನ ಕಿವಿಯೊಳಗೆ ಇಟ್ಟರು. ತಮ್ಮ ಉಗುಳಿನಿಂದ ಅವನ ನಾಲಗೆಯನ್ನು ಮುಟ್ಟಿದರು.ಬಳಿಕ ಸ್ವರ್ಗದತ್ತ ಕಣ್ಣೆತ್ತಿ ನೋಡಿ, ದೀರ್ಘವಾಗಿ ಉಸಿರೆಳೆದು.'ಎಪ್ಪಥಾ’ಎಂದರೆ ತೆರೆಯಲಿ ಎಂದರು.ತಕ್ಷಣವೇ ಅವನ ಕಿವಿಗಳು ತೆರೆದವು; ನಾಲಗೆಯ ಬಿಗಿ ಸಡಿಲಗೊಂಡಿತು;ಅವನು ಸರಾಗವಾಗಿ ಮಾತನಾಡತೊಡಗಿದನು. ಇದನ್ನು ಯಾರಿಗೂ ಹೇಳಕೂಡದೆಂದು ಯೇಸು ಜನರಿಗೆ ಕಟ್ಟಪ್ಪಣೆ ಮಾಡಿದರು.ಆದರೆ ಎಷ್ಟು ಹೇಳಿದರೂ ಕೇಳದೆ ಅವರು ಮತ್ತಷ್ಟು ಆಸಕ್ತಿಯಿಂದ ಈ ಕಾರ್ಯವನ್ನು ಪ್ರಚಾರ ಮಾಡಿದರು.ಎಲ್ಲರೂ ಆಶ್ಚರ್ಯಭರಿತರಾಗಿ," ಇವರು ಎಲ್ಲಾ ಕಾರ್ಯವನ್ನು ಚೆನ್ನಾಗಿ ಮಾಡುತ್ತಾರೆ; ಕಿವುಡರು ಕೇಳುವಂತೆಯೂ ಮೂಕರು ಮಾತನಾಡುವಂತೆಯೂ ಮಾಡುತ್ತಾರಲ್ಲಾ!" ಎಂದುಕೊಳ್ಳುತ್ತಿದ್ದರು.

ಲೂರ್ದು ಮಾತೆಯ ಹಬ್ಬ


ಭೂಲೋಕದ ಅತೃಪ್ತಿಯನ್ನು ವ್ಯಕ್ತಪಡಿಸಲು 
ನಿರ್ಜನ ಪ್ರದೇಶದಲ್ಲಿ ದರ್ಶನವಿತ್ತ 
ಲೂರ್ದು ಮಾತೆಯೇ
 ನಮಗಾಗಿ ಪ್ರಾರ್ಥಿಸಿ

11.02.10 - ನನ್ನ ಗಳಿಗೆ ಇನ್ನೂ ಬಂದಿಲ್ಲ

ಸಂತ ಯೊವಾನ್ನನು ಬರೆದ ಶುಭ ಸಂದೇಶದಿಂದ ವಾಚನ - 2:01-11

" ಆತ ಹೇಳಿದಂತೆ ಮಾಡಿ"
ಮಾರನೆಯ ದಿನ ಗಲಿಲೇಯದ ಕಾನ ಎಂಬ ಊರಿನಲ್ಲಿ ಒಂದು ಮದುವೆ ನಡೆಯಿತು. ಯೇಸುಸ್ವಾಮಿ ತಾಯಿ ಅಲ್ಲಿಗೆ ಬಂದಿದ್ದರು. ಯೇಸುವಿಗೂ ಅವರ ಶಿಷ್ಯರಿಗೂ ಆ ಮದುವೆಗೆ ಅಮಂತ್ರಣವಿತ್ತು. ಆ ಸಂದರ್ಭದಲ್ಲಿ ದ್ರಾಕ್ಷಾರಸ ಸಾಲದೆ ಹೋಯಿತು. ಆಗ ಯೇಸುವಿನ ತಾಯಿ" ಅವರಲ್ಲಿ ದ್ರಾಕ್ಷರಸ ಮುಗಿದು ಹೋಗಿದೆ," ಎಂದು ಯೇಸುವಿಗೆ ಹೇಳಿದರು. ಅದಕ್ಕೆ ಯೇಸು." ಅಮ್ಮಾ, ಇದನ್ನು ನನಗೇಕೆ ಹೇಳುತ್ತೀ? ನನ್ನ ಗಳಿಗೆ ಇನ್ನೂ ಬಂದಿಲ್ಲ," ಎಂದು ಉತ್ತರಕೊಟ್ಟರು. ತಾಯಿ ಸೇವೆಕರಿಗೆ," ಆತ ಹೇಳಿದಂತೆ ಮಾಡಿ," ಎಂದು ತಿಳಿಸಿದರು.

ಯೆಹೂದ್ಯರ ಶುದ್ಧಾಚಾರ ಪದ್ಧತಿಯಂತೆ ಆರು ಕಲ್ಲುಬಾನೆಗಳನ್ನು ಅಲ್ಲಿ ಇಟ್ಟಿದ್ದರು. ಅವು ಒಂದೊಂದು ಎರಡು ಮೂರು ಕೊಡ ನೀರು ಹಿಡಿಯುವಷ್ಟು ದೊಡ್ಡದಾಗಿದ್ದವು. ಯೇಸುಸ್ವಾಮಿ ಸೇವಕರಿಗೆ, "ಆ ಬಾನೆಗಳಲ್ಲಿ ನೀರು ತುಂಬಿರಿ," ಎಂದು ಹೇಳಿದರು. ಅವರು ಕಂಠದವರೆಗೆ ತುಂಬಿದರು. ಯೇಸು, "ಈಗ ತೋಡಿಕೊಂಡು ಹೋಗಿ ಔತಣದ ಮೇಲ್ವಿಚಾರಕನಿಗೆ ಕೊಡಿ,"ಎಂದು ಹೇಳಲು ಅವರು ಹಾಗೆಯೇ ಮಾಡಿದರು.ಮೇಲ್ವಿಚಾರಕನು ದ್ರಾಕ್ಷಾರಸವಾಗಿ ಮಾರ್ಪಟ್ಟಿದ್ದ ನೀರಿನ ರುಚಿ ನೋಡಿದನು.ಅದು ಎಲ್ಲಿಂದ ಬಂದಿತೆಂಬುದು ಅವನಿಗೆ ತಿಳಿದಿರಲಿಲ್ಲ.ನೀರನ್ನು ತೋಡಿಕೊಂಡು ಬಂದ ಸೇವಕರಿಗೆ ಮಾತ್ರ ತಿಳಿದಿತ್ತು.ಆದುದರಿಂದ ಅವನು ಮದುಮಗನನ್ನು ಕರೆದು,"ಜನರೆಲ್ಲರೂ ಉತ್ತಮವಾದ ದ್ರಾಕ್ಷಾರಸವನ್ನು ಮೊದಲು ಹಂಚುತ್ತಾರೆ; ಅತಿಥಿಗಳು ಯಥೇಚ್ಚವಾಗಿ ಕುಡಿದಾದ ಮೇಲೆ ಸಾಧಾರಣ ದ್ರಾಕ್ಷಾರಸವನ್ನು ಕೊಡುತ್ತಾರೆ.ನೀನಾದರೋ ಉತ್ತಮವಾದುದನ್ನು ಈವರೆಗೂ ಇಟ್ಟಿದ್ದೀಯಲ್ಲಾ" ಎಂದು ಹೇಳಿದನು.

ಯೇಸು ಮಾಡಿದ ಮೊದಲನೆಯ ಸೂಚಕಕಾರ್ಯ ಇದು. ಇದನ್ನು ಗಲಿಲೇಯ ನಾಡಿನ ಕಾನಾ ಊರಿನಲ್ಲಿ ಮಾಡಿ ತಮ್ಮ ಮಹಿಮೆಯನ್ನು ತೋರ್ಪಡಿಸಿದರು.ಅವರ ಶಿಷ್ಯರಿಗೂ ಅವರಲ್ಲಿ ವಿಶ್ವಾಸ ಮೂಡಿತು.

10.02.10 - ಕೇಳುವುದಕ್ಕೆ ಕಿವಿಯಿರುವವನು ಕೇಳಲಿ

ಸಂತ ಮಾರ್ಕನು ಬರೆದ ಶುಭ ಸಂದೇಶದಿಂದ ವಾಚನ - 7:14-23

"ಎಲ್ಲಾ ಕೇಡುಗಳು ಮಾನವನ ಅಂತರಂಗದಿಂದಲೇ ಉದ್ಭವಿಸಿ, ಅವನನ್ನು ಅಶುದ್ಧ ಮಾಡುತ್ತವೆ"

ಅನಂತರ ಯೇಸುಸ್ವಾಮಿ ಜನರ ಗುಂಪನ್ನು ತಮ್ಮ ಬಳಿಗೆ ಕರೆದು," ನಾನು ಹೇಳುವುದನ್ನು ನೀವೆಲ್ಲರೂ ಕೇಳಿ ಗ್ರಹಿಸಿಕೊಳ್ಳಿ: ಹೊರಗಿನಿಂದ ಮನುಷ್ಯನ ಒಳಗೆ ಹೋಗುವ ಯಾವುದೂ ಅವನನ್ನು ಕಲುಷಿತಗೊಳಿಸುವುದಿಲ್ಲ."ಮನುಷ್ಯನ ಅಂತರಂಗದಿಂದ ಹೊರ ಬರುವಂತಹುದೇ ಅವನನ್ನು ಕಲುಷಿತಗೊಳಿಸುತ್ತದೆ. (ಕೇಳುವುದಕ್ಕೆ ಕಿವಿಯಿರುವವನು ಕೇಳಲಿ)" ಎಂದರು. ಯೇಸು ಜನರ ಗುಂಪನ್ನು ಬಿಟ್ಟು ಮನೆ ಸೇರಿದ ಬಳಿಕ ಶಿಷ್ಯರು, ಅವರ ಬಳಿಗೆ ಬಂದು ಆ ಸಾಮತಿಯ ಅರ್ಥವೇನೆಂದು ಕೇಳಿದರು. ಅದಕ್ಕೆ ಅವರು,"ನೀವು ಕೂಡ ಮಂದಮತಿಗಳೋ? ನಿಮಗೂ ಇದು ಅರ್ಥವಾಗದೋ?"ಹೊರಗಿನಿಂದ ಮನುಷ್ಯನ ಒಳಕ್ಕೆ ಹೋಗುವ ಯಾವುದೂ ಅವನನ್ನು ಕಲುಷಿತಗೊಳಿಸುವುದಿಲ್ಲ.ಅವನು ತಿಂದದ್ದು ಅವನ ಹೃದಯವನ್ನು ಹೊಕ್ಕದೆ ಅವನ ಹೊಟ್ಟೆಯನ್ನು ಮಾತ್ರ ಸೇರಿ ಬಳಿಕ ದೇಹದಿಂದ ವಿಸರ್ಜಿತವಾಗುತ್ತದೆ.(ಹೀಗೆ ಆಹಾರ ಪದಾರ್ಥಗಳು ಯವುವೂ ಅಶುದ್ಧವಲ್ಲವೆಂದು ಯೇಸು ಸೂಚಿಸಿದರು).

ಆದರೆ ಮನುಷ್ಯನ ಅಂತರಂಗದಿಂದ ಹೊರ ಹೊಮ್ಮುವ ಯೋಚನೆಗಳು ಅವನನ್ನುಕಲುಷಿತಗೊಳಿಸುತ್ತದೆ.ಮಾನವನ ಹೃದಯಾಂತರಾಳದಿಂದ ದುರಾಲೋಚನೆ, ಅನೈತಿಕತೆ, ಕಳ್ಳತನ, ಕೊಲೆ, ವ್ಯಭಿಚಾರ, ಲೋಭ, ಕೆಡುಕುತನ, ಮೋಸ,ಭಂಡತನ,ಅಸೂಯೆ,ಅಪದೂರು,ಅಹಂಕಾರ,ಮೂರ್ಖತನ ಮೊದಲಾದವು ಹೊರಬರುತ್ತವೆ. ಈ ಎಲ್ಲಾ ಕೇಡುಗಳು
ಮಾನವನ ಅಂತರಂಗದಿಂದಲೇ ಉದ್ಭವಿಸಿ, ಅವನನ್ನು ಅಶುದ್ಧ ಮಾಡುತ್ತವೆ," ಎಂದರು.

09.02.10 - ನೀವು ಬೋಧಿಸುವ ಸಂಪ್ರದಾಯಗಳಿಂದಾಗಿ ದೇವರ ವಾಕ್ಯವನ್ನೇ ನಿರರ್ಥಕಗೊಳಿಸುತ್ತೀರಿ

ಸಂತ ಮಾರ್ಕನು ಬರೆದ ಶುಭಸಂದೇಶದಿಂದ ವಾಚನ - 7: 1- 13

"ನಿನ್ನ ಶಿಷ್ಯರು ಪೂರ್ವಜರಿಂದ ಬಂದ ಆಚಾರಗಳನ್ನೇಕೆ ಅನುಸರಿಸುವುದಿಲ್ಲ?"


ಒಮ್ಮೆ ಫರಿಸಾಯರು ಮತ್ತು ಜೆರುಸಲೇಮಿನಿಂದ ಬಂದ ಕೆಲವು ಮಂದಿ ಧರ್ಮಶಾಸ್ತ್ರಿಗಳು ಯೇಸುಸ್ವಾಮಿಯ ಬಳಿಗೆ ಬಂದು ಸೇರಿದರು.ಯೇಸುವಿನ ಶಿಷ್ಯರಲ್ಲಿ ಕೆಲವರು ಅಶುದ್ಧ ಕೈಗಳಿಂದ,ಎಂದರೆ ಶುದ್ಧಾಚಾರಕ್ಕೆ ಅನುಗುಣವಾಗಿ ಕೈ ತೊಳೆದುಕೊಳ್ಳದೆ ಊಟ ಮಾಡುವುದನ್ನು ಅವರು ನೋಡಿದರು.ಫರಿಸಾಯರು ಇತರ ಯೆಹೂದ್ಯರಂತೆ ಕೈಗಳನ್ನು ವಿಧಿಬದ್ಧವಾಗಿ ತೊಳೆಯದೆ ಊಟ ಮಾಡುವುದಿಲ್ಲ. ಇದು ಅವರ ಪೂರ್ವಜರಿಂದ ಬಂದ ಸಂಪ್ರದಾಯ, ಪೇಟೆ ಬೀದಿಗಳ್ಳಿಗೆ ಹೋಗಿ ಬಂದರೆ ಸ್ನಾನ ಮಾಡಿಯೇ ಊಟ ಮಾಡುವುದು; ತಂಬಿಗೆ,ಬೆಂಬು,ತಪ್ಪಲೆಗಳನ್ನು ಸೂತ್ರ ಬದ್ಧವಾಗಿ ತೊಳೆಯುವಿದು; ಇವೇ ಮೊದಲಾದ ಅನೇಕ ಆಚಾರಗಳು ಅವರಲ್ಲಿ ರೂಢಿಯಲ್ಲಿದ್ದವು. ಆದುದರಿಂದ ಫರಿಸಾಯರೂ ಧರ್ಮಶಾಸ್ತ್ರಿಗಳು. “ ನಿನ್ನ ಶಿಷ್ಯರು ಪೂರ್ವಜರಿಂದ ಬಂದ ಆಚಾರಗಳನ್ನೇಕೆ ಅನುಸರಿಸುವುದಿಲ್ಲ?ಅಶುದ್ಧವಾದ ಕೈಗಳಿಂದಲೇ ಅವರು ಊಟಮಾಡುತ್ತಿದ್ದಾರಲ್ಲಾ?” ಎಂದು ಯೇಸುವನ್ನು ಕೇಳಿದರು. ಅದಕ್ಕೆ ಯೇಸು”ಕಪಟಿಗಳೇ, ನಿಮ್ಮ ವಿಷಯದಲ್ಲಿ ಯೆಶಾಯನು ಎಷ್ಟೊಂದು ಚೆನ್ನಾಗಿ ಪ್ರವಾದಿಸಿದ್ದಾನೆ:

‘ಬರಿ ಮಾತಿನ ಮನ್ನಣೆಯನ್ನೀಯುತ,ಹೃದಯವನು ದೂರವಿರಿಸುತ, ನರಕಲ್ಪಿತ ಕಟ್ಟಳೆಗಳನೆ ದೇವ ವಾಕ್ಯವೆಂದು ಉಪದೇಶಿಸುತ,ಈ ಜನರೆನಗೆ ಮಾಡುವ ಆರಾಧನೆ ವ್ಯರ್ಥ! ಎಂದರು ದೇವರು.’ ನೀವು ದೇವರ ಆಜ್ಞೆಯನು ತೊರೆದು ಮಾನವನಿರ್ಮಿತ ಸಂಪ್ರದಾಯಗಳನ್ನು ನಿಷ್ಠೆಯಿಂದ ಪರಿಪಾಲಿಸುತ್ತಿದ್ದೀರಿ. ಸಂಪ್ರದಾಯದ ನೆಪದಲ್ಲಿ ದೇವರ ಆಜ್ಞೆಗಳನ್ನು ನೀವು ಜಾಣ್ಮೆಯಿಂದ ಬದಿಗೊತ್ತಿರುವುದು ಬಲು ಚೆನ್ನಾಗಿದೆ! ‘ನಿಮ್ಮ ತಂದೆ ತಾಯಿಗಳನ್ನು ಗೌರವಿಸಬೇಕು; ತಂದೆಯನ್ನಾಗಲಿ ತಾಯಿಯನ್ನಾಗಲಿ ದೂಷಿಸುವವನಿಗೆ ಮರಣ ದಂಡನೆ ಆಗಲೇಬೇಕು,’ ಎಂಬುದು ಮೋಶೆ ವಿಧಿಸಿದ ಆಜ್ಞೆ. ನೀವಾದರೋ, ಒಬ್ಬನು ತನ್ನ ತಂದೆಗೆ ಅಥವಾ ತಾಯಿಗೆ ’ನನ್ನಿಂದ ನಿಮಗೆ ಸಲ್ಲತಕ್ಕದು “ಕೊರ್ಬಾನ್”( ಎಂದರೆ ದೇವರಿಗೆ ಮುಡಿಪು) ಎಂದು ಹೇಳಿಬಿಟ್ಟರೆ ಸಾಕು, ಮುಂದೆ ಅವನು ತನ್ನ ತಂದೆ ತಾಯಿಗಳಿಗೆ ಯಾವ ಸಹಾಯವನ್ನೂ ಮಾಡುವುದಕ್ಕೆ ನೀವು ಬಿಡುವುದಿಲ್ಲ. ಹೀಗೆ ನೀವು ಬೋಧಿಸುವ ಸಂಪ್ರದಾಯಗಳಿಂದಾಗಿ ದೇವರ ವಾಕ್ಯವನ್ನೇ ನಿರರ್ಥಕಗೊಳಿಸುತ್ತೀರಿ. ಇಂಥಾ ಕೃತ್ಯಗಳು ಇನ್ನೆಷ್ಟೋ!” ಎಂದರು.

08.02.10 - ಯೇಸು ಎಲ್ಲೆಲ್ಲಿ ಇದ್ದಾರೆಂದು ಕೇಳಿದರೋ ಅಲ್ಲೆಲ್ಲಾ ಹೋಗತೊಡಗಿದರು

ಸಂತ ಮಾರ್ಕನು ಬರೆದ ಶುಭಸಂದೇಶದಿಂದ ವಾಚನ - 6: 53-56


ಯೇಸು ಎಲ್ಲೆಲ್ಲಿ ಇದ್ದಾರೆಂದು ಕೇಳಿದರೋ ಅಲ್ಲೆಲ್ಲಾ ಹೋಗತೊಡಗಿದರು
ಅವರೆಲ್ಲರೂ ಸರೋವರವನ್ನು ದಾಟಿ ಗನಸರೇತ್ ಊರಿನ ದಡ ಸೇರಿದರು. ಅವರು ದೋಣಿಯನ್ನು ಕಟ್ಟಿ. ಅದರಿಂದ ಇಳಿದ ಕೂಡಲೇ ಅಲ್ಲಿಯ ಜನರು ಯೇಸುಸ್ವಾಮಿಯ ಗುರುತು ಹಚ್ಚಿದರು. ಒಡನೆ ಸುತ್ತಮುತ್ತಲ್ಲೆಲ್ಲಾ ಓಡಾಡಿ, ರೋಗಿಗಳನ್ನು ಹಾಸಿಗೆಗಳ ಸಮೇತ ಹೊತ್ತುಕೊಂಡು, ಯೇಸು ಎಲ್ಲೆಲ್ಲಿ ಇದ್ದಾರೆಂದು ಕೇಳಿದರೋ ಅಲ್ಲೆಲ್ಲಾ ಹೋಗತೊಡಗಿದರು. ಯೇಸು ಹಳ್ಳಿಗಳಿಗಾಗಲಿ, ಪಟ್ಟಣ ಪಾಳೆಯಗಳಿಗಾಗಲಿ ಹೋದಾಗಲೆಲ್ಲಾ ಜನರು ರೋಗಿಗಳನು ಅಲ್ಲಿಯ ಸಂತೆ ಬೀದಿ ಚೌಕಗಳಿಗೆ ಕರೆತರುತ್ತಿದ್ದರು. ಅವರ ಉಡುಪಿನ ಅಂಚನ್ನಾದರೂ ಮುಟ್ಟುಗೂಡಿಸಬೇಕೆಂದು ಯೇಸುವನ್ನು ಬೇಡಿಕೊಳ್ಳುತ್ತಿದ್ದರು. ಹಾಗೆ ಮುಟ್ಟಿದವರೆಲ್ಲರೂ ಗುಣಹೊಂದುತ್ತಿದ್ದರು.

06.02.10 - ಆ ಜನರು ಕುರುಬನಿಲ್ಲದ ಕುರಿಗಳಂತಿರುವುದನ್ನು ಕಂಡು ಯೇಸುವಿನ ಮನ ಕರಗಿತು

ಸಂತ ಮಾರ್ಕನು ಬರೆದ ಶುಭಸಂದೇಶದಿಂದ ವಾಚನ - 6: 30 - 34

"ಬನ್ನಿ ಪ್ರತ್ಯೇಕವಾಗಿ ನಾವು ನಿರ್ಜನ ಪ್ರದೇಷಕ್ಕೆ ಹೋಗಿ ವಿಶ್ರಮಿಸಿಕೊಂಡು ಬರೋಣ,”

ಪ್ರೇಷಿತರು ಯೇಸುಸ್ವಾಮಿಯ ಬಳಿಗೆ ಹಿಂದಿರುಗಿ ಬಂದು ತಾವು ಮಾಡಿದ ಸಕಲ ಕಾರ್ಯಕಲಾಪಗಳ ಹಾಗೂ ನೀಡಿದ ಬೋಧನೆಯ ವರದಿಅಯನ್ನು ಒಪ್ಪಿಸಿದರು. ಜನರು ಗುಂಪು ಗುಂಪಾಗಿ ಎಡಬಿಡದೆ ಬರುತ್ತಾ ಹೋಗುತ್ತಾ ಇದ್ದುದರಿಂದ ಯೇಸುವಿಗೆ ಮತ್ತು ಅವರ ಶಿಷ್ಯರಿಗೆ ಊಟ ಮಾಡಲೂ ಬಿಡುವಿರಲಿಲ್ಲ. ಆದುದರಿಂದ ಯೇಸು, "ಬನ್ನಿ ಪ್ರತ್ಯೇಕವಾಗಿ ನಾವು ನಿರ್ಜನ ಪ್ರದೇಷಕ್ಕೆ ಹೋಗಿ ವಿಶ್ರಮಿಸಿಕೊಂಡು ಬರೋಣ,” ಎಂದರು. ಅಂತೆಯೇ ಅವರೆಲ್ಲರೂ ಪ್ರತ್ಯೇಕವಾಗಿ ದೋಣಿಯನ್ನು ಹತ್ತಿ ಏಕಾಂತ ಪ್ರದೇಶಕ್ಕೆ ಹೊರಟರು.ಆದರೆ ಅವರು ಹೋಗಿತ್ತಿರುವುದನ್ನು ಕಂಡು ಗುರುತಿಸಿದ ಅನೇಕರು ಎಲ್ಲಾ ಊರುಗಳಿಂದ ಕಾಲ್ದಾರಿಯಲ್ಲಿ ತ್ವರಿತವಾಗಿ ಸಾಗಿ ಅವರಿಗೆ ಮುಂಚಿತವಾಗಿ ಆ ಸ್ಥಲವನ್ನು ಸೇರಿದರು. ಯೇಸು ದೋಣಿಯಿಂದ ಇಳಿದಾಗ ಅಲ್ಲಿ ದೊಡ್ಡ ಜನಸಮೂಹವೇ ಸೇರಿತ್ತು. ಆ ಜನರು ಕುರುಬನಿಲ್ಲದ ಕುರಿಗಳಂತಿರುವುದನ್ನು ಕಂಡು ಯೇಸುವಿನ ಮನ ಕರಗಿತು. ಆನೇಕ ವಿಷಯಗಳನ್ನು ಕುರಿತು ಅವರಿಗೆ ಉಪದೇಶವಿತ್ತರು.

04.02.10 - ದೇವದೂತನೊಬ್ಬ ಆತನೊಡನೆ ಮಾತನಾಡಿದನು

ಸಂತ ಯೊವನ್ನನು ಬರೆದ ಶುಭ ಸಂದೇಶದಿಂದ ವಾಚನ - 12:20-32

"ಆದರೆ ನನ್ನನ್ನು ಭೂಮಿಯಿಂದ ಮೇಲೇರಿಸಿದಾಗ, ನಾನೆಲ್ಲರನ್ನು ನನ್ನೆಡೆಗೆ ಸೆಳೆದುಕೊಳ್ಳುತ್ತೇನೆ"

ಆರಾಧನೆಗೆಂದು ಹಬ್ಬಕ್ಕೆ ಬಂದಿದ್ದವರಲ್ಲಿ ಕೆಲವರು ಗ್ರೀಕರು. ಇವರು ಗಲಿಲೇಯದ ಬೆತ್ಸಾಯಿಅದ ಎಂಬ ಊರಿನವರಾದ ಫಿಲಿಪ್ಪನ ಬಳಿ ಬಂದು, ’ಅಯ್ಯಾ, ನಾವು ಯೇಸುವನ್ನು ನೋಡಬೇಕೆಂದಿದ್ದೇವೆ," ಎಂದು ಕೇಳಿಕೊಂಡರು.ಫಿಲಿಪ್ಪನು ಬಂದು ಅಂದ್ರೇಯನಿಗೆ ಹೇಳಿದನು.ಅವರಿಬ್ಬರೂ ಹೋಗಿ ಯೇಸುವಿಗೆ ಈ ವಿಷಯವನ್ನು ದರು.ಅದಕ್ಕೆ ಯೇಸು "ನರಪುತ್ರನು ಮಹಿಮೆಯನ್ನು ಹೊಂದುವ ಗಳಿಗೆ ಬಂದಿದೆ.ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ; ಗೋಧಿಯ ಕಾಳು ಭೂಮಿಯಲ್ಲಿ ಬಿದ್ದು ಸಾಯದಿದ್ದರೆ ಅದು ಒಂಟಿಯಾಗಿ ಊಳಿಯುತ್ತದೆ:ಅದು ಸತ್ತರೆ ಮಾತ್ರ ಸಮೃದ್ಢಿಯಾದ ಫಲವನ್ನು ಕೊಡುತ್ತದೆ.ತನ್ನ ಪ್ರಾಣವನ್ನು ಪ್ರೀತಿಸುವವನು ಅದನ್ನು ಕಳೆದುಕೊಳ್ಳುತ್ತಾನೆ. ತನ್ನ ಪ್ರಾಣವನ್ನು ಈ ಲೋಕದಲ್ಲಿ ದ್ವೇಷಿಸುವವನು ಅದನ್ನು ನಿತ್ಯ ಜೀವಕ್ಕಾಗಿ ಕಾಯ್ದಿರಿಸಿಕೊಳ್ಳುತ್ತಾನೆ. ನನ್ನ ಸೇವೆ ಮಾಡಬೇಕೆಂದಿರುವವನು ನನ್ನನು ಹಿಂಬಾಲಿಸಲಿ. ಆಗ ನಾನಿರುವಲ್ಲಿಯೇ ನನ್ನ ಸೇವಕನೂ ಇರುತ್ತಾನೆ. ನನ್ನ ಸೇವೆ ಮಾಡುವವನು ನನ್ನ ಪಿತನಿಂದ ಸನ್ಮಾನ ಹೊಂದುತ್ತಾನೆ," ಎಂದರು.

ಯೇಸುಸ್ವಾಮಿ ತಮ್ಮ ಮಾತನ್ನು ಮುಂದುವರಿಸುತ್ತಾ," ಈಗ ನನಾತ್ಮ ತತ್ತರಿಸುತ್ತಿದೆ. ನಾನು ಏನೆಂದು ಹೇಳಲಿ?’ಪಿತನೇ,  ಗಳಿಗೆಯಿಂದ ನನ್ನನ್ನು ಕಾಪಾಡು’ ಎನ್ನಲೇ? ಇಲ್ಲಾ, ಅದಕ್ಕೆ ಬದಲಾಗಿ ಇದನ್ನು ಅನುಭವಿಸಲೆಂದೇ ನಾನು ಈ ಗಳಿಗೆಗೆ ಕಾಲಿಟ್ಟಿದ್ದೇನೆ. ಪಿತನೇ, ನಿಮ್ಮ ನಾಮ ಮಹಿಮೆಯನ್ನು ಬೆಳಗಿಸಿ," ಎಂದು ನುಡಿದರು. ಆಗ,"ಹೌದು ಆ ಮಹಿಮೆಯನ್ನು ಬೆಳಗಿಸಿದ್ದೇನೆ, ಪುನ: ಬೆಳಗಿಸುತ್ತೇನೆ" ಎಂಬ ಸ್ವರ್ಗೀಯ ವಾಣಿ ಕೇಳಿಸಿತು. ಅಲ್ಲಿ ನಿಂತಿಕೊಂಡಿದ್ದ ಜನರು ಆ ವಾಣಿಯನ್ನು ಕೇಳಿ,’ ಇದೇನು ಗುಡುಗಿನ ಸದ್ದು?" ಎಂದರು. ಕೆಲವರು " ದೇವದೂತನೊಬ್ಬ ಆತನೊಡನೆ ಮಾತನಾಡಿದನು," ಎಂದರು. ಯೇಸುಸ್ವಾಮಿ,"ಈ ವಾಣಿಯಾದುದು ನಿಮಗಾಗಿ,ನನಗಾಗಿ ಅಲ್ಲ.ಈಗ ಈ ಲೋಕವು ನ್ಯಾಯ ತೀರ್ಪಿಗೆ ಒಳಗಾಗುವುದು.ಇದೀಗಲೇ ಈ ಲೋಕದ ಲೋಕಾಧಿಪತಿಯನ್ನು ಹೊರದೂಡಲಾಗುವುದು. ಆದರೆ ನನ್ನನ್ನು ಭೂಮಿಯಿಂದ ಮೇಲೇರಿಸಿದಾಗ, ನಾನೆಲ್ಲರನ್ನು ನನ್ನೆಡೆಗೆ ಸೆಳೆದುಕೊಳ್ಳುತ್ತೇನೆ" ಎಂದು ನುಡಿಡರು.

03.02.10 - ಇವನು ಪಡೆದಿರುವ ಜ್ಞಾನವಾದರೂ ಎಂಥದ್ದು?

ಸಂತ ಮಾರ್ಕನು ಬರೆದ ಶುಭ ಸಂದೇಶದಿಂದ ವಾಚನ - 6:1-6


ಪ್ರವಾದಿಗೆ ಬೇರೆ ಎಲ್ಲಿಯಾದರೂ ಗೌರವ ದೊರಕೀತು ಆದರೆ ಸ್ವಗ್ರಾಮದಲ್ಲಿ, ಸ್ವಜನರಲ್ಲಿ, ಸ್ವಗೃಹದಲ್ಲಿ ಗೌರವ ದೊರಕದು,"
ಸ್ವಾಮಿ ಅಲ್ಲಿಂದ ಹೊರಟು ತಮ್ಮ ಸ್ವಂತ ಊರಿಗೆ ಹೋದರು. ಶಿಷ್ಯರು ಅವರನ್ನು ಹಿಂಬಾಲಿಸಿದರು. ಸಬ್ಬತ್ ದಿನ ಅಲ್ಲಿಯ ಪ್ರಾರ್ಥನಾ ದಿರದಲ್ಲಿ ಉಪದೇಶ ಮಾಡತೊಡಗಿದರು. ಕಿಕ್ಕಿರಿದು ನೆರದಿದ್ದ ಜನರು ಯೇಸುವಿನ ಬೋಧನೆಯನ್ನು ಕೇಳಿ ಬೆರಗಾದರು. ಇದೆಲ್ಲಾ ಇವನಿಗೆ ಎಲ್ಲಿಂದ ಬಂದಿತು? ಇವನು ಪಡೆದಿರುವ ಜ್ಞಾನವಾದರೂ ಎಂಥದ್ದು? ಇವನಿಂದ ಮಹತ್ಕಾರ್ಯಗಳು ಆಗುವುದಾದರೂ ಹೇಗೆ? ಅವನು ಬಡಗಿಯಲ್ಲವೇ ಮರಿಯಳ ಮಗನಲ್ಲವೇ? ಯಕೋಬ,ಯೋಸೆ, ಯೂದ ಮತ್ತು ಸಿಮೋನರ ಸಹೋದರನಲ್ಲವೇ? ಇವನ ಸಹೋದರಿಯರು ಇಲ್ಲಿಯೇ ವಾಸ ಮಾಡುತ್ತಿಲ್ಲವೇ?"ಎಂದು ಹೇಳುತ್ತಾ ಯೇಸುವನ್ನು ತಾತ್ಸಾರ ಮಾಡಿದರು.ಆಗ ಯೇಸು,"ಪ್ರವಾದಿಗೆ ಬೇರೆ ಎಲ್ಲಿಯಾದರೂ ಗೌರವ ದೊರಕೀತು ಆದರೆ ಸ್ವಗ್ರಾಮದಲ್ಲಿ,ಸ್ವಜನರಲ್ಲಿ,ಸ್ವಗೃಹದಲ್ಲಿ ಗೌರವ ದೊರಕದು," ಎಂದರು. ಕೆಲವು ರೋಗಿಗಳ ಮೇಲೆ ಕೈಗಳನ್ನಿರಿಸಿ ಅವರನ್ನು ಗುಣಪಡಿಸಿದ್ದನ್ನು ಬಿಟ್ಟರೆ ಇನ್ನಾವ ಮಹತ್ವವಾದ ಕಾರ್ಯಗಳನ್ನೂ ಅವರು ಇಲ್ಲಿ ಮಾಡಲಾಗಲಿಲ್ಲ. ಆ ಜನರ ಅವಿಶ್ವಾಸವನ್ನು
ಕಂಡು ಯೇಸುವಿಗೆ ಬಹಳ ಅಚ್ಚರಿಯಾಯಿತು.