ಮೊದಲನೇ ವಾಚನ: ಯೆಜೆಕೀಯಲ: 17: 22-24
ಸರ್ವೇಶ್ವರನಾದ ದೇವರ ವಾಣಿಯಿದು: ನಾನೇ ನೆಡುವೆನು ರೆಂಬೆಯೊಂದನು ಎತ್ತರದ ದೇವದಾರು ಮರದ ಮೇಲಿಂದ ತಂದು ತುತ್ತ ತುದಿಯ ಚಿಗುರುಗಳಲೊಂದನ್ನು ತಂದು ಅತೀ ಕೋಮಲವಾದುದನು ಚಿವುಟಿ ತಂದು, ನೆಡುವೆನದನು ಉನ್ನತೋನ್ನತವಾದ ಪರ್ವತದಲ್ಲಿ. ಹೌದು, ನೆಡುವೆನು ಇಸ್ರಯೇಲಿನ ಪರ್ವತಾಗ್ರದಲ್ಲಿ. ಆಗುವುದದು ಸೊಂಪಾದ ದೇವದಾರು ಮರ, ರೆ೦ಬೆಗಳನದು ಹರಡಿಕೊಂಡು ಕೊಡುವುದು ಫಲ. ಸಕಲ ವಿಧ ಪಕ್ಷಿಗಳು ವಾಸಿಸುವುವು ಅದರಲ್ಲಿ. ಆಶ್ರಯ ಪಡೆವುವು ಅದರ ರೆಂಬೆಗಳ ನೆರಳಲ್ಲಿ. ಆಗ ತಿಳಿವುವು ವನದ ವೃಕ್ಷಗಳು: ಎತ್ತರವಾದ ಮರಗಳ ತಗ್ಗಿಸುವವನು, ತಗ್ಗಾದುದನ್ನು ಎತ್ತರ ಪಡಿಸುವವನು ಹಸಿರಾದುದನ್ನು ಒಣಗಿಸುವವನು, ಒಣಗಿದುದನು ಚಿಗುರಿಸುವವನು ಸರ್ವೇಶ್ವರ ನಾನೇ ಎಂದು. ಇದ ನುಡಿದವ ನಾನು, ನುಡಿದದ್ದನ್ನು ನಡೆಸುವವ ನಾನು."ಎರಡನೇ ವಾಚನ: 2 ಕೊರಿಂಥಿಯರಿಗೆ: 5: 6-10
ಈ ಕಾರಣದಿಂದಲೇ ನಾವು ಸದಾ ಸ್ಥಿರ ಚಿತ್ತರಾಗಿದ್ದೇವೆ. ಈ ದೇಹವನ್ನೇ ನೆಚ್ಚಿ ಇದರಲ್ಲೇ ನೆಲೆಯಾಗಿರುವವರೆಗು ನಾವು ಪ್ರಭುವಿನಿಂದ ದೂರವಿರುವ ಪ್ರವಾಸಿಗಳಂತೆ ಇದ್ದೇವೆ. ನಾವು ನೋಡಿ ನಡೆಯುವವರಲ್ಲ, ನಂಬಿ ನಡೆಯುವವರು. ಆದ್ದರಿಂದ ಈ ದೇಹವನ್ನು ತ್ಯಜಿಸಿ, ಪ್ರಭುವನ್ನೇ ನೆಚ್ಚಿ ನೆಲಸುವುದು ಲೇಸೆಂದು ಧೈರ್ಯದಿಂದ ಹೇಳುತ್ತೇವೆ. ಈ ಕಾರಣ ಇಲ್ಲಾದರು ಸರಿ, ಅಲ್ಲಾದರು ಸರಿ, ಪ್ರಭು ಮೆಚ್ಚುವಂತೆ ಬಾಳುವುದೊಂದೆ ನಮ್ಮ ಗುರಿ. ನಾವು ಎಲ್ಲರು ನ್ಯಾಯ ವಿಚಾರಣೆಗಾಗಿ ಕ್ರಿಸ್ತ ಯೇಸುವಿನ ಮುಂದೆ ನಿಲ್ಲಲೇಬೇಕು. ಪ್ರತಿಯೊಬ್ಬನು ತನ್ನ ದೈಹಿಕ ಜೀವನದಲ್ಲಿ ಮಾಡಿದ ಪಾಪ ಪುಣ್ಯ ಕಾರ್ಯಗಳಿಗೆ ತಕ್ಕ ಪ್ರತಿಫಲವನ್ನು ಪಡೆಯಲೇ ಬೇಕು.
ಕೀರ್ತನೆ: 92:2-3, 13-14, 15-16
ಶ್ಲೋಕ: ಹೇ ಪ್ರಭೂ, ನಿನ್ನ ಗುಣಗಾನ ಮ೦ಗಳಕರ
ಶುಭಸ೦ದೇಶ: ಮಾರ್ಕ: 4: 26-34
ಯೇಸುಸ್ವಾಮಿ ಇನ್ನೊಂದು ಸಾಮತಿಯನ್ನು ಹೇಳಿದರು: "ದೇವರ ಸಾಮ್ರಾಜ್ಯವು ರೈತನೊಬ್ಬನು ತನ್ನ ಹೊಲದಲ್ಲಿ ಮಾಡಿದ ಬಿತ್ತನೆಗೆ ಹೋಲಿಕೆಯಾಗಿದೆ. ಬಿತ್ತನೆಯಾದ ಬಳಿಕ ಅವನು ರಾತ್ರಿಯಲ್ಲಿ ಮಲಗಿರಲಿ, ಹಗಲಲ್ಲಿ ಎದ್ದಿರಲಿ, ಅವನಿಗೆ ಹೇಗೆಂದು ತಿಳಿಯದೆಯೇ ಆ ಬೀಜವು ಮೊಳೆತು ಬೆಳೆಯುತ್ತಿರುತ್ತದೆ. ಭೂಮಿ ಮೊದಲು ಸಸಿಯನ್ನು ಅನಂತರ ಹೊಡೆಯನ್ನು ತರುವಾಯ ತೆನೆತುಂಬ ಕಾಳನ್ನೂ ತನ್ನಷ್ಟಕ್ಕೆ ತಾನೇ ಉತ್ಪತ್ತಿ ಮಾಡುತ್ತದೆ. ಬೆಳೆಯು ಮಾಗಿದಾಗ, ಸುಗ್ಗಿಯು ಬಂತೆದು ವ್ಯವಸಾಯಗಾರನು ಕುಡುಗೋಲನ್ನು ಬಳಸುತ್ತಾನೆ," ಎಂದರು. ಯೇಸುಸ್ವಾಮಿ ತಮ್ಮ ಉಪದೇಶವನ್ನು ಮುಂದುವರಿಸಿ, "ದೇವರ ಸಾಮ್ರಾಜ್ಯವನ್ನು ಇನ್ನು ಯಾವುದಕ್ಕೆ ಹೋಲಿಸೋಣ? ಅದಕ್ಕಾಗಿ ಯಾವ ಸಾಮತಿಯನ್ನು ಉಪಯೋಗಿಸೋಣ? ಭೂಮಿಯಲ್ಲಿರುವ ಕಾಳುಗಳಲ್ಲಿ ಅತೀ ಚಿಕ್ಕದಾಗಿರುವ ಸಾಸಿವೆ ಕಾಳಿಗೂ ಅದನ್ನು ಹೋಲಿಸ ಬಹುದು. ಸಾಸಿವೆ ಕಾಳು ಚಿಕ್ಕದಾಗಿದ್ದರು ಬಿತ್ತನೆಯ ತರುವಾಯ ಮೊಳೆತು ಎಲ್ಲಾ ಕಾಯಿ ಪಲ್ಯದ ಸಸಿಗಳಿಗಿಂತಲೂ ದೊಡ್ಡದಾಗಿ ಬೆಳೆಯುತ್ತದೆ. ಹಕ್ಕಿಗಳು ಕೂಡ ಬಂದು ಅದರ ನೆರಳಲ್ಲಿ ಗೂಡು ಕಟ್ಟಿ ವಾಸಿಸುವಷ್ಟು ದೊಡ್ಡದಾದ ರೆ೦ಬೆಗಳನ್ನು ಅದು ತಳೆಯುತ್ತದೆ," ಎಂದರು. ಯೇಸುಸ್ವಾಮಿ ಈ ಬಗೆಯ ಸಾಮತಿಗಳನ್ನು ಉಪಯೋಗಿಸಿ ಜನರಿಗೆ ದೇವರ ಸಂದೇಶವನ್ನು ಅವರವರ ತಿಳುವಳಿಕೆಗೆ ತಕ್ಕಂತೆ ಉಪದೇಶಿಸುತ್ತಿದ್ದರು. ಸಾಮತಿಗಳನ್ನು ಉಪಯೋಗಿಸದೇ ಅವರು ಭೋದಿಸುತ್ತಿರಲಿಲ್ಲ. ಆದರೆ ತಮ್ಮ ಆಪ್ತ ಶಿಷ್ಯರೊಡನೆ ಪ್ರತ್ಯೇಕವಾಗಿದ್ದಾಗ ಅವರಿಗೆ ಎಲ್ಲವನ್ನು ವಿವರಿಸಿ ಹೇಳುತ್ತಿದ್ದರು.
No comments:
Post a Comment