ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

31.12.09 - ದಿವ್ಯವಾಣಿ

ಸಂತ ಯೊವಾನ್ನನು ಬರೆದ ಶುಭ ಸಂದೇಶದಿಂದ ವಾಚನ - 1:  1-18


“ ಅ ದಿವ್ಯವಾಣಿ ಮನುಷ್ಯ ಆದರು. ಮನುಷ್ಯನಾಗಿ ನಮ್ಮೊಡನೆ ವಾಸ ಮಾಡಿದರು’

ಜಗತ್ತು ಉಂಟಾಗುವ ಮೊದಲೇ “ದಿವ್ಯವಾಣಿ ಎಂಬವರಿದ್ದರು. ಆ ದಿವ್ಯವಾಣಿ ದೇವರಾಗಿದ್ದರು.
ಆ ದಿವ್ಯವಾಣಿ ದೇವರೊಂದಿಗೇ ಇದ್ದರು; ಅನಾದಿಯಿಂದಲೇ ಅವರು ದೇವರೊಂದಿಗೆ ಇದ್ದರು.
ದಿವ್ಯವಾಣಿಯ ಮುಖಾಂತರವೇ ಸಮಸ್ತವೂ ಉಂಟಾಯಿತು.
ಉಂಟಾದವುಗಳಲ್ಲಿ ಯಾವುದೂ ಆ ದಿವ್ಯವಾಣಿಯಿಂದಲ್ಲದೆ ಆದುದಲ್ಲ.
ಆ ದಿವ್ಯವಾಣಿ ಸಜ್ಜೀವವಿತ್ತು. ಆಜೀವವೇ ಮಾನವ ಜನಾಂಗದ ಜ್ಯೋತಿಯಾಗಿತ್ತು.
ಆ ಜ್ಯೋತಿ ಕತ್ತಲಲ್ಲಿ ಪ್ರಕಾಶಿಸುತ್ತದೆ, ಕತ್ತಲಿಗಾದರೋ ಅದನ್ನು ನಿಗ್ರಹಿಸಲಾಗಲಿಲ್ಲ.
ದೇವರು ಒಬ್ಬ ವ್ಯಕ್ತಿಯನ್ನು ಕಳುಹಿಸಿದರು, ಆತನ ಹೆಸರು ಯೊವಾನ್ನ.
ಈತನು ಸಾಕ್ಷಿ ಕೊಡಲು ಬಂದನು.
ತನ್ನ ಮುಖಾಂತರವೇ ಸರ್ವರೂ ವಿಶ್ವಾಸಿಸುವಂತೆ ಆ ಜ್ಯೋತಿಯನ್ನು ಕುರಿತು ಸಾಕ್ಷಿ ನೀಡಿದನು.
ಈತನೇ ಜ್ಯೋತಿಯಾಗಿರಲಿಲ್ಲ; ಆ ಜ್ಯೋತಿಯನ್ನು ಕುರಿತು ಸಾಕ್ಷಿ ನೀಡಲೆಂದೇ ಬಂದವನು.
ನಿಜವಾದ ಜ್ಯೋತಿ ಆ ದಿವ್ಯವಾಣಿಯೇ.
ಮಾನವರೆಲ್ಲರನ್ನು ಬೆಳಗಿಸಲು ಲೋಕಕ್ಕೆ ಆಗಮಿಸಲಿದ್ದ ಜಗಜ್ಜ್ಯೋತಿ ಅವರೇ.
ದಿವ್ಯವಾಣಿ ಲೋಕದಲ್ಲಿ ಇದ್ದರು, ಅವರ ಮುಖಾಂತರವೇ ಲೋಕವು ಉಂಟಾಯಿತು.
ಲೋಕವಾದರೋ ಅವರನ್ನು ಅರಿತುಕೊಳ್ಳದೇ ಹೋದರು.
ಕೆಲವರಾದರೋ ಅವರನ್ನು ಬರಮಾಡಿಕೊಂಡರು.
ಅಂಥವರಿಗೆ, ಅಂದರೆ, ಅವರಲ್ಲಿ ವಿಶ್ವಾಸವಿಟ್ಟವರಿಗೆ,
ದೇವರ ಮಕ್ಕಳಾಗುವ ಹಕ್ಕನ್ನು ಕೊಟ್ಟರು
ಅಂಥವರ ಜನನವು ರಕ್ತ ಸಂಬಂಧದಿಂದ ಅಲ್ಲ,ಶಾರೀರಿಕ ಇಚ್ಛೆಯಿಂದ ಅಲ್ಲ,
ಮಾನವ ಸಹಜ ಬಯಕೆಯಿಂದಲೂ ಅಲ್ಲ, ದೇವರಿಂದ ಆದುದು.
ಆ ದಿವ್ಯವಾಣಿ ಮನುಷ್ಯ ಆದರು. ಮನುಷ್ಯನಾಗಿ ನಮ್ಮೊಡನೆ ವಾಸ ಮಾಡಿದರು.
ಅವರ ಮಹಿಮೆಯನ್ನು ನಾವು ನೋಡಿದೆವು.
ಪಿತನಿಂದ ಪಡೆದ ಆ ಮಹಿಮೆ ಏಕೈಕ ಪುತ್ರನಿಗೆ ಮೀಸಲಾದ ಮಹಿಮೆಯೇ.
ಎಂದೇ ಅವರು ವರಪ್ರಸಾದದಿಂದಲೂ ಸತ್ಯದಿಂದಲೂ ಪರಿಪೂರ್ಣರಾಗಿದ್ದರು.
ಯೊವಾನ್ನನು ಅವರನ್ನು ಕುರಿತು ಸಾಕ್ಷಿ ನುಡಿಯುತ್ತಾ,
“’ಅವರು ನನ್ನ ಬಳಿಕ ಬಂದವರಾದರೂ ನನಗಿಂತ ಮೊದಲೇ ಇದ್ದವರು; ಆದುದರಿಂದ ಅವರು ನನಗಿಂತಲೂ ಶ್ರೇಷ್ಠರು’ ಎಂದು ನಾನು ಹೇಳಿದ್ದು ಅವರನ್ನು ಕುರಿತೇ,”ಎಂದು ಘೋಷಿಸಿದನು.ಅವರ ಪರಿಪೂರ್ಣತೆಯಿಂದ ನಾವೆಲ್ಲರೂ ವರಪ್ರಸಾದದ ಮೇಲೆ ವರಪ್ರಸಾದ ಪಡೆದಿದ್ದೇವೆ.

ಧರ್ಮಶಾಸ್ತ್ರವನ್ನು ಮೋಶೆಯ ಮುಖಾಂತರ ಕೊಡಲಾಯಿತು.ವರಪ್ರಸಾದ ಹಾಗು ಸತ್ಯವಾದರೋ ಯೇಸುಕ್ರಿಸ್ತರ ಮುಖಾಂತರ ಬಂದವು ಯಾರೂ ಎಂದು ದೇವರನ್ನು ಕಂಡಿಲ್ಲ; ಪಿತನ ವಕ್ಷಸ್ಥಲದಲ್ಲಿರುವ, ಸ್ವತ: ದೇವರಾಗಿರುವ ಏಕೈಕ ಪುತ್ರನೇ ಅವರನ್ನು ತಿಳಿಯಪಡಿಸಿದ್ದಾರೆ.

25.12.09 - ಲೋಕೋದ್ಧಾರಕ ಜನಿಸಿದ್ದಾರೆ

ಸಂತ ಲೂಕನು ಬರೆದ ಶುಭ ಸಂದೇಶದಿಂದ ವಾಚನ - 2: 1-14
“ಇಂದೇ ನಿಮಗೋಸ್ಕರ ಲೋಕೋದ್ಧಾರಕ ಜನಿಸಿದ್ದಾರೆ.”

ಅ ಕಾಲದಲ್ಲಿ ಚಕ್ರವರ್ತಿ ಔಗಸ್ತನು ತನ್ನ ಸಾಮ್ರಾಜ್ಯದಲ್ಲೆ ಲ್ಲಾ ಜನಗಣತಿ ಮಾಡಬೇಕೆಂದು ಆಜ್ಞೆ ಹೊರಡಿಸಿದನು. ಮೊಟ್ಟ ಮೊದಲನೆಯ ಆ ಜನಗಣತಿ, ಕುರೇನ್ಯನು ಸಿರಿಯ ನಾಡಿಗೆ ರಾಜ್ಯಪಾಲನಾಗಿದ್ದಾಗ ನಡೆಯಿತು. ಆಗ ಎಲ್ಲರೂ ತಮ್ಮ ಹೆಸರನ್ನು ದಾಖಲೆ ಮಾಡಿಸಿಕೊಳ್ಳಲು ತಮ್ಮ ತಮ್ಮ ಊರುಗಳಿಗೆ ಹೊರಟರು. ಜೋಸೆಫನು ದಾವೀದನ ಮನೆತನದವರು ಹಾಗೂ ಗೊತ್ರದವನು.ಆದುದರಿಂದ ಅವನೂ ಗಲಿಲೇಯ ಪ್ರಾಂತ್ಯದ ನಜರೇತ್ ಎಂಬ ಊರಿನಿಂದ ಹೊರಟು ಜುದೇಯನಾಡಿನ ಬೆತ್ಲೆಹೇಮೆಂಬ ದಾವೀದನ ಊರಿಗೆ ಹೋದನು. ಆತನ ಸಂಗಡ ಆತನಿಗೆ ನಿಶ್ಚಿತಾರ್ಥಳಾಗಿದ್ದ ಹಾಗೂ ಪೂರ್ಣ ಗರ್ಭವತಿಯಾಗಿದ್ದ ಮರಿಯಳು ಸಹ ಹೋದಳು. ಹೀಗೆ ಅವರು ಬೆತ್ಲೆಹೇಮಿನಲ್ಲಿ ಇದ್ದಾಗ, ಮರಿಯಳಿಗೆ ಪ್ರಸವ ಕಾಲ ಸಮೀಪಿಸಿತು. ಆಕೆ ಚೊಚ್ಚಲ ಮಗನಿಗೆ ಜನ್ಮವಿತ್ತು. ಇದ್ದ ಬಟ್ಟೆಯಲ್ಲೇ ಸುತ್ತಿ, ಅದನ್ನು ಗೋದಲಿಯಲ್ಲಿ ಮಲಗಿಸಿದಳು. ಕಾರಣ - ಛತ್ರದಲ್ಲಿ ಅವರಿಗೆ ಸ್ಥಳ ಸಿಗಲಿಲ್ಲ.


ಅದೇ ನಾಡಿನಲ್ಲಿ ಕೆಲವು ಕುರುಬರು ಹೊಲಗಳಲ್ಲಿದ್ದುಕೊಂಡು ರಾತ್ರಿಯಲ್ಲಿ ಕುರಿ ಮಂದೆಗಳನ್ನು ಕಾಯುತ್ತಿದ್ದರು. ಇದ್ದಕಿದ್ದಂತೆ ದೇವದೂತನೊಬ್ಬನು ಅವರೆದುರಿಗೆ ಪ್ರತ್ಯಕ್ಷನಾಗಲು ಸರ್ವೇಶ್ವರನ ಪ್ರಭೆ ಅವರ ಸುತ್ತಲೂ ಪ್ರಕಾಶಿಸಿತು. ಅವರು ಬಹಳವಾಗಿ ಹೆದರಿದರು. ಆ ದೂತನು ಅವರಿಗೆ “ಭಯಪಡಬೇಡಿ, ಇಗೋ, ಜನರೆಲ್ಲರಿಗೂ ಪರಮಾನಂದವನ್ನು ತರುವ ಶುಭಸಂದೇಶವನ್ನು ನಿಮಗೆ ತಿಳಿಸುತ್ತೇನೆ. ಅದೇನೆಂದರೆ, ಇಂದೇ ದಾವೀದನ ಊರಿನಲ್ಲಿ ನಿಮಗೋಸ್ಕರ ಲೋಕೋದ್ಧಾರಕ ಜನಿಸಿದ್ದಾರೆ. ಅವರೇ ಪ್ರಭು ಕ್ರಿಸ್ತ. ಇಗೋ ನಿಮಗೊಂದು ಸೂಚನೆ - ಆ ಶಿಶುವನ್ನು ಬಟ್ಟೆಯಲ್ಲಿ ಸುತ್ತಿ ಗೋದಲಿಯೊಂದರಲ್ಲಿ ಮಲಗಿಸಿರುವುದನ್ನು ಕಾಣುವಿರಿ,” ಎಂದನು. ತಕ್ಷಣವೇ ಆ ದೂತನ ಸಂಗಡ ಸ್ವರ್ಗದ ದೂತ ಪರಿವಾರವಾರವೊಂದು ಕಾಣಿಸಿಕೊಂಡಿತು. “ಮಹೋನ್ನತದಲ್ಲಿ ದೇವರಿಗೆ ಮಹಿಮೆ; ಭೂಲೋಕದಲ್ಲಿ ದೇವರೊಲಿದ ಮಾನವರಿಗೆ ಶಾಂತಿ ಸಮಾಧಾನ,” ಎಂದು ಸರ್ವೇಶ್ವರನ ಸ್ತುತಿ ಮಾಡಿತು.

21.12.09 - "ನಂಬಿ ಧನ್ಯಳಾದೆ ನೀನು"

ಸಂತ ಲೂಕ ಬರೆದ ಶುಭ ಸಂದೇಶದಿಂದ ವಾಚನ - 1:39-45


ಇದಾದ ಕೆಲವು ದಿನಗಳಲ್ಲೇ ಮರಿಯಳು ಪ್ರಯಾಣ ಹೊರಟು ಜುದೇಯದ ಗುಡ್ಡಗಾಡಿನಲ್ಲಿರುವ ಒಂದು ಊರಿಗೆ ತ್ವರೆಯಾಗಿ ಬಂದಳು. ಆಲ್ಲಿ ಜಕರೀಯನ ಮನೆಗೆ ಹೋಗಿ ಎಲಿಜಬೇತಳನ್ನು ವಂದಿಸಿದಳು.ಮರಿಯಳ ವಂದನೆಯನ್ನು ಎಲಿಜಬೇತಳು ಕೇಳಿದ್ದೇ ತಡ, ಆಕೆಯ ಗರ್ಭದಲ್ಲಿದ್ದ ಶಿಶು ನಲಿದಾಡಿತು; ಎಲಿಜಬೇತಳು ಪವಿತ್ರಾತ್ಮಭರಿತಳಾಗಿ ಹರ್ಷೋದ್ಗಾರದಿಂದ ಹೀಗೆಂದಳು;
"ಸ್ತ್ರೀಯರಲ್ಲಿ ಧನ್ಯಳು ನೀನು;
ನಿನ್ನ ಕರುಳ ಕುಡಿಯೂ ಧನ್ಯ!"
ನನ್ನ ಪ್ರಭುವಿನ ತಾಯಿ ನೀನು;
ನನ್ನ ಬಳಿಗೆ ಬಂದದು ಅದೆಂಥ ಭಾಗ್ಯ!
ನಿನ್ನ ವಂದನೆಯ ದನಿ ನನ್ನ ಕಿವಿ ತಾಕಿದೊಡನೆ
ನಲಿದಾಡಿತು ಆನಂದದಿಂದ, ನನ್ನ ಕರುಳ ಕುಡಿ!
ನಂಬಿ ಧನ್ಯಳಾದೆ ನೀನು, ದೇವರಿಂದ ಬಂದ ವಾರ್ತೆ
ನೆರವೇರಿಯೇ ತೀರುವುದಂದು."

20.12.09 - "ಸ್ತ್ರೀಯರಲ್ಲಿ ಧನ್ಯಳು ನೀನು; ನಿನ್ನ ಕರುಳ ಕುಡಿಯೂ ಧನ್ಯ!"

ಸಂತ ಲೂಕ ಬರೆದ ಶುಭ ಸಂದೇಶದಿಂದ ವಾಚನ - 1:39-44


"ಸ್ತ್ರೀಯರಲ್ಲಿ ಧನ್ಯಳು ನೀನು; ನಿನ್ನ ಕರುಳ ಕುಡಿಯೂ ಧನ್ಯ!"

ಇದಾದ ಕೆಲವು ದಿನಗಳಲ್ಲೇ ಮರಿಯಳು ಪ್ರಯಾಣ ಹೊರಟು ಜುದೇಯದ ಗುಡ್ಡಗಾಡಿನಲ್ಲಿರುವ ಒಂದು ಊರಿಗೆ ತ್ವರೆಯಾಗಿ ಬಂದಳು. ಆಲ್ಲಿ ಜಕರೀಯನ ಮನೆಗೆ ಹೋಗಿ ಎಲಿಜಬೇತಳನ್ನು ವಂದಿಸಿದಳು.ಮರಿಯಳ ವಂದನೆಯನ್ನು ಎಲಿಜಬೇತಳು ಕೇಳಿದ್ದೇ ತಡ, ಆಕೆಯ ಗರ್ಭದಲ್ಲಿದ್ದ ಶಿಶು ನಲಿದಾಡಿತು; ಎಲಿಜಬೇತಳು ಪವಿತ್ರಾತ್ಮಭರಿತಳಾಗಿ ಹರ್ಷೋದ್ಗಾರದಿಂದ ಹೀಗೆಂದಳು; "ಸ್ತ್ರೀಯರಲ್ಲಿ ಧನ್ಯಳು ನೀನು; ನಿನ್ನ ಕರುಳ ಕುಡಿಯೂ ಧನ್ಯ!" ನನ್ನ ಪ್ರಭುವಿನ ತಾಯಿ ನೀನು; ನನ್ನ ಬಳಿಗೆ ಬಂದದು ಅದೆಂಥ ಭಾಗ್ಯ! ನಿನ್ನ ವಂದನೆಯ ದನಿ ನನ್ನ ಕಿವಿ ತಾಕಿದೊಡನೆ ನಲಿದಾಡಿತು  ಆನಂದದಿಂದ, ನನ್ನ ಕರುಳ ಕುಡಿ!"

18.12.09 - "ಏಕೆಂದರೆ ಆತನು ತನ್ನ ಜನರನ್ನು ಅವರ ಪಾಪಗಳಿಂದ ರಕ್ಷಿಸುವನು"

ಸಂತ ಮತ್ತಾಯನು ಬರೆದ ಶುಭ ಸಂದೇಶದಿಂದ ವಾಚನ - 1:18-24

"ಏಕೆಂದರೆ ಆತನು ತನ್ನ ಜನರನ್ನು ಅವರ ಪಾಪಗಳಿಂದ ರಕ್ಷಿಸುವನು"


ಯೇಸು ಕ್ರಿಸ್ತನ ತಾಯಿ ಮರಿಯಳು.ಯೇಸುವಿನ ಜನನ ಈ ರೀತಿ ಸಂಭವಿಸಿತು: ಮದುವೆ ಮಾಡಿಕೊಳ್ಳಲು ಯೋಸೇಫನಿಗೂ ಮರಿಯಳಿಗೂ ನಿಶ್ಚಿತಾರ್ಥವಾಗಿತ್ತು. ಆದರೆ ಮದುವೆಗೆ ಮೊದಲೇ ತಾನು ಗರ್ಭಿಣಿಯಾಗಿರುವುದು ಮರಿಯಳಿಗೆ ತಿಳಿದು ಬಂತು. ಮರಿಯಳು ಪವಿತ್ರಾತ್ಮನ ಪ್ರಭಾವದಿಂದ ಗರ್ಭಿಣಿಯಾಗಿದ್ದಳು. ಮರಿಯಳನ್ನು

ಮದುವೆಯಾಗಲಿದ್ದ ಯೋಸೇಫನು ನೀತಿವಂತನಾಗಿದ್ದನು.ಮರಿಯಳನ್ನು ಜನರ ಮುಂದೆ ನಾಚಿಕೆಪದಿಸಲು ಅವನು ಇಷ್ಟಪಡಲಿಲ್ಲ. ಆದರಿಂದ ಅವನು ಗುಟ್ಟಾಗಿ ನಿಶ್ಚಿತಾರ್ಥವನ್ನು ರದ್ದುಗೊಳಿಸಬೇಕೆಂದಿದ್ದನು. ಯೋಸೇಫನು ಹೀಗೆ ಆಲೋಚಿಸಿಕೊಂಡ ನಂತರ, ಪ್ರಭುವಿನ ದೂತನು ಯೋಸೇಫನಿಗೆ ಕನಸಿನಲ್ಲಿ ಕಾಣಿಸಿಕೊಂಡನು. ಆ ದೂತನು,"ದಾವೀದನ ಮಗನಾದ ಯೋಸೇಫನೇ ಮರಿಯಳನ್ನು ನಿನ್ನ ಹೆಂಡತಿಯಾಗಿ ಸ್ವೀಕರಿಸಲು ಭಯಪಡಬೇಡ. ಆಕೆ ಪವಿತ್ರಾತ್ಮನ ಪ್ರಭಾವದಿಂದ ಗರ್ಭಿಣಿಯಾಗಿದ್ದಾಳೆ. ಆಕೆ ಒಬ್ಬ ಮಗನನ್ನು ಹೆರುವಳು. ನೀನು ಆ ಮಗನಿಗೆ ಯೇಸು ಎಂದು ಹೆಸರಿಡುವೆ.ನೀನು ಆತನಿಗೆ ಆ ಹೆಸರನ್ನೇ ಇಡು: ಏಕೆಂದರೆ ಆತನು ತನ್ನ ಜನರನ್ನು ಅವರ ಪಾಪಗಳಿಂದ ರಕ್ಷಿಸುವನು" ಎಂದು ಹೇಳಿದನು. ಪ್ರವಾದಿಯ ಮೂಲಕ ಪ್ರಭು ತಿಳಿಸಿದ್ದೆಲ್ಲ ನೆರವೇರುವಂತೆ ಇದೆಲ್ಲಾ ನಡೆಯಿತು. ಅದೇನೆಂದರೆ: ಕನ್ನಿಕೆಯೊಬ್ಬಳು ಗರ್ಭಿಣಿಯಾಗಿ ಒಬ್ಬ ಮಗನಿಗೆ ಜನ್ಮ ಕೊಡುತ್ತಾಳೆ.ಆತನಿಗೆ ಇಮ್ಮಾನಿವೇಲ್ ಎಂಬ ಹೆಸರನ್ನು ಇಡುವರು.(ಇಮ್ಮಾನುವೇಲ್ ಎಂದರೆ" ದೇವರು ನಮ್ಮ ಸಂಗಡ ಇದ್ದಾನೆ" ಎಂಬರ್ಥ.)

ಯೋಸೇಫನು ಎಚ್ಚರಗೊಂಡ ಮೇಲೆ ಪ್ರಭುವಿನ ದೂತನು ಕನಸಿನಲ್ಲಿ ಹೇಳಿದ್ದಂತೆಯೇ ಮರಿಯಳನ್ನು ಪತ್ನಿಯನ್ನಾಗಿ ಸ್ವೀಕರಿಸಿಕೊಂಡನು. ಆದರೆ ಮರಿಯಳು ಮಗನನ್ನು ಹೆರುವ ತನಕ ಯೋಸೇಫನು ಅವಳೊಂದಿಗೆ ಶರೀರ ಸಂಬಂಧವಿಲ್ಲದೆ ಇದ್ದನು.ಯೋಸೇಫನು ಆ ಮಗುವಿಗೆ "ಯೇಸು" ಎಂದು ಹೆಸರಿಟ್ಟನು.

17-12-2009 - ದೇವರ ಸಾಮ್ರಾಜ್ಯದಲ್ಲಿ ಕನಿಷ್ಠನು ಕೂಡ ಅವನಿಗಿಂತ ಶ್ರೇಷ್ಠನೇ ಸರಿ

ಸಂತ ಲೂಕನು ಬರೆದ ಶುಭ ಸಂದೇಶದಿಂದ ವಾಚನ - 7: 24:30

“ಇಗೋ,ನನ್ನ ದೂತನನ್ನು ನಿನಗೆ ಮುಂದಾಗಿ ಕಳುಹಿಸುವೆನು.ಆತನು ನಿನ್ನ ಮಾರ್ಗವನ್ನು ಮುಂಚಿತವಾಗಿ ಸಿದ್ಧಗೊಳಿಸುವನು.”

ಯೇಸು ಜನ ಸಮೂಹಕ್ಕೆ ಯೊವಾನ್ನನನ್ನು ಕುರಿತು ಹೀಗೆಂದರು : “ಬೆಂಗಾಡಿನಲ್ಲಿ ನೀವು ಏನನ್ನು ನೋಡಲೆಂದು ಹೋದಿರಿ?
ಗಾಳಿಗೆ ಓಲಾಡುವ ಜೊಂಡನ್ನೇ? ಇಲ್ಲವಾದರೆ ಮತ್ತೇನನ್ನು ನೋಡಹೋದಿರಿ? ನಯವಾದ ರೇಷ್ಮೆ ಉಡುಪನ್ನು ಧರಿಸಿರುವ
ವ್ಯಕ್ತಿಯನ್ನೇ?ಅಂಥ ಶೃಂಗಾರವಾದ ಉಡುಗೆ ತೊಡುಗೆಯನ್ನು ಧರಿಸಿ, ಭೋಗ ಜೀವನ ನಡೆಸುವವರು ಅರಮನೆಗಳಲ್ಲಿರುತ್ತಾರಷ್ಟೆ!

ಹಾಗಾದರೆ ನೀವು ಇನ್ನೇನನ್ನು ನೋಡಲು ಹೋದಿರಿ? ಪ್ರವಾದಿಯನ್ನೇ? ಹೌದು ಪ್ರವಾದಿಗಿಂತಲೂ ಶ್ರೇಷ್ಠನಾದವನನ್ನು ನೋಡಿದಿರಿ, ಎಂಬುದು ನಿಜ. ‘ಇಗೋ, ನನ್ನ ದೂತನನ್ನು ನಿನಗೆ ಮುಂದಾಗಿ ಕಳುಹಿಸುವೆನು. ಆತನು ನಿನ್ನ ಮಾರ್ಗವನ್ನು ಮುಂಚಿತವಾಗಿ ಸಿದ್ಧಗೊಳಿಸುವನು ಎಂದು ಪವಿತ್ರಗ್ರಂಥದಲ್ಲಿ ಪ್ರಸ್ತಾಪಿಸಿರುವುದು ಈ ಯೊವಾನ್ನನನ್ನು ಕುರಿತೇ. ಮಾನವನಾಗಿ ಜನಿಸಿದ ಯಾವನೂ ಸ್ನಾನಿಕ ಯೊವಾನ್ನನಿಗಿಂತ ಶ್ರೇಷ್ಠನಲ್ಲ ಎಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ. ಆದರೂ ದೇವರ ಸಾಮ್ರಾಜ್ಯದಲ್ಲಿ ಕನಿಷ್ಠನು ಕೂಡ ಅವನಿಗಿಂತ ಶ್ರೇಷ್ಠನೇ ಸರಿ,” ಎಂದರು.

ಯೊವಾನ್ನನ ಉಪದೇಶವನ್ನು ಜನಸಾಮಾನ್ಯರೆಲ್ಲರೂ ಕೇಳಿದರು. ಅವರು, ವಿಶೇಷವಾಗಿ ಸುಂಕದವರು, ದೈವಯೋಜನೆಗೆ ತಲೆಬಾಗಿ ಆತನಿಂದ ಸ್ನಾನದೀಕ್ಷೆಯನ್ನು ಪಡೆದರು. ಆದರೆ ಫರಿಸಾಯರು ಮತ್ತು ಧರ್ಮಶಾಸ್ತ್ರಿಗಳು ತಮ್ಮನ್ನು ಕುರಿತಾದ ದೈವೇಚ್ಛೆಯನ್ನು ಅಲ್ಲಗಳೆದು, ಯೊವಾನ್ನನಿಂದ ಸ್ನಾನದೇಕ್ಷೆಯನ್ನು ಪಡೆಯದೆ ಹೋದರು.

16.12.09 - ನನ್ನಲ್ಲಿ ವಿಶ್ವಾಸ ಕಳೆದುಕೊಳ್ಳದವನು ಭಾಗ್ಯವಂತನು

ಸಂತ ಲೂಕನು ಬರೆದ ಶುಭ ಸಂದೇಶದಿಂದ ವಾಚನ - 7: 19-23

“ನೀವು ಕಂಡದನ್ನೂ ಕೇಳಿದ್ದನ್ನೂ ಯೊವಾನ್ನನಿಗೆ ತಿಳಿಸಿರಿ.”

ಸ್ನಾನಿಕ ಯೊವಾನ್ನನ್ನು, ತನ್ನು ಶಿಷ್ಯರಲ್ಲಿ ಇಬ್ಬರನ್ನು ಕರೆದು, “ಬರಬೇಕಾದವರು ನೀವೋ ಅಥವಾ ಬೇರೊಬ್ಬರಿಗಾಗಿ ನಾವು ಎದುರು ನೋಡಬೇಕೋ?” ಎಂದು ಯೇಸುಸ್ವಾಮಿಯನ್ನು ಕೇಳಲು ಅವರ ಬಳಿಗೆ ಕಳುಹಿಸಿದನು. ಆ ಶಿಷ್ಯರು ಯೇಸುವಿನ ಬಳಿಗೆ ಬಂದು, “ಬರಬೇಕಾದವರು ನೀವೋ ಅಥವಾ ನಾವು ಬೇರೊಬ್ಬರನ್ನು ಎದುರುನೋಡಬೇಕೋ ಎಂದು ವಿಚಾರಿಸಲು ಸ್ನಾನಿಕ ಯೊವನ್ನನು ನಮ್ಮನ್ನು ತಮ್ಮ ಬಳಿಗೆ ಕಳುಹಿಸಿದ್ದಾರೆ,”ಎಂದರು.ಅದೇ ಸಮಯದಲ್ಲಿ ಯೇಸು ರೋಗ ರುಜಿನಗಳಿಂದ ನರಳುತ್ತಿದ್ದ ಹಾಗೂ ದೆವ್ವಹಿಡಿದಿದ್ದ ಅನೇಕರನ್ನು ಗುಣಪಡಿಸುತ್ತಿದ್ದರು ಮತ್ತು ಹಲವು ಮಂದಿ ಕುರುಡರಿಗೆ ದೃಷ್ಟಿಯನ್ನು ದಯಪಾಲಿಸುತ್ತಿದ್ದರು. ಯೇಸು ಅವರಿಗೆ ಪ್ರತ್ಯುತ್ತರವಾಗಿ,“ನೀವು ಕಂಡದ್ದನ್ನೂ ಕೇಳಿದ್ದನ್ನೂ ಯೊವಾನ್ನನಿಗೆ ಹೋಗಿ ತಿಳಿಸಿರಿ : ಕುರುಡರು ನೋಡುತ್ತಾರೆ, ಕುಂಟರು ನಡೆಯುತ್ತಾರೆ, ಕುಷ್ಠರೋಗಿಗಳು ಸ್ವಸ್ಥರಾಗುತ್ತಾರೆ, ಕಿವುಡರು ಕೇಳುತ್ತಾರೆ, ಸತ್ತವರು ಮತ್ತೆ ಜೀವ ಪಡೆಯುತ್ತಾರೆ. ದೀನದಲಿತರಿಗೆ ಶುಭಸಂದೇಶವನ್ನು ಪ್ರಕಟಿಸಲಾಗುತ್ತಿದೆ. ನನ್ನಲ್ಲಿ ವಿಶ್ವಾಸ ಕಳೆದುಕೊಳ್ಳದವನು ಭಾಗ್ಯವಂತನು,” ಎಂದು ಹೇಳಿ ಕಳುಹಿಸಿದರು.

15.12.09 - ಕೆಟ್ಟ ಜನರೆಂದು ನೀವು ಯೋಚಿಸುತ್ತಿರುವವರು ನಿಮಗಿಂತ ಮುಂಚೆಯೇ ದೇವರ ರಾಜ್ಯವನ್ನು ಪ್ರವೇಶಿಸುತ್ತಾರೆ.

ಸಂತ ಮತ್ತಾಯನು ಬರೆದ ಶುಭ ಸಂದೇಶದಿಂದ ವಾಚನ - 21 : 28-32

ಆದರೆ ಅವರು ನಿಮಗಿಂತ ಮುಂಚೆಯೇ ದೇವರ ರಾಜ್ಯವನ್ನು ಪ್ರವೇಶಿಸುತ್ತಾರೆ


ಒಬ್ಬ ಮನುಷ್ಯನಿಗೆ ಇಬ್ಬರು ಗಂಡು ಮಕ್ಕಳಿದರು.ಆ ಮನುಷ್ಯನು ಮೊದಲ ಮಗನ ಬಳಿಗೆ ಹೋಗಿ," ಮಗನೇ ಈ ದಿನ ನೀನು ಕೆಲಸಕ್ಕೆ ಹೋಗಿ, ನನ್ನ ದ್ರಾಕ್ಷಿ ತೋಟದಲ್ಲಿ ಕೆಲಸ ಮಾಡು" ಎಂದು ಹೇಳಿದನು. ಅದಕ್ಕೆ ಮಗನು "ನಾನು ಹೋಗುವುದಿಲ್ಲ" ಎಂದನು.ಆದರೆ ಆ ಬಳಿಕ ತನ್ನ ಮನಸ್ಸನು ಬದಲಾಯಿಸಿಕೊಂಡು ಕೆಲಸಕ್ಕೆ ಹೋದನು.

ತಂದೆಯು ಇನ್ನೊಬ್ಬ ಮಗನ ಬಳಿಗೆ ಹೋಗಿ," ಮಗನೇ ಈ ದಿನ ನೀನು ದ್ರಾಕ್ಷಿ ತೋಟಕ್ಕೆ ಹೋಗಿ ಕೆಲಸ ಮಾಡು’ ಎಂದನು. ಆಗಲಿಯಪ್ಪ ನಾನು ಹೋಗಿ ಕೆಲಸ ಮಾಡುತ್ತೇನೆ ಎಂದನು.ಆದರೆ ಆ ಮಗನು ಹೋಗಲೇ ಇಲ್ಲ."ಈ ಇಬ್ಬರು ಮಕ್ಕಳಲ್ಲಿ ತಂದೆಗೆ ಯಾರು ವಿಧೇಯರಾದರು?" ಆಗ ಯೊಹೂದ್ಯ ನಾಯಕರು "ಮೊದಲನೆಯ ಮಗ" ಎಂದು ಉತ್ತರಕೊಟ್ಟರು

ಯೇಸು ಅವರಿಗೆ ’ ನಿಮಗೆ ಸತ್ಯವಾಗಿ ಹೇಳುತ್ತೇನೆ. ಸುಂಕ ವಸೂಲಿಗಾರರನ್ನು ಮತ್ತು ವೇಶ್ಯೆಯರನ್ನು ಕೆಟ್ಟ ಜನರೆಂದು ನೀವು ಯೋಚಿಸುತ್ತೀರಿ.ಆದರೆ ಅವರು ನಿಮಗಿಂತ ಮುಂಚೆಯೇ ದೇವರ ರಾಜ್ಯವನ್ನು ಪ್ರವೇಶಿಸುತ್ತಾರೆ. ನೀವು ಜೀವಿಸತಕ್ಕ ಸರಿಯಾದ ಮಾರ್ಗವನ್ನು ತೋರಿಸಲು ಯೋಹಾನನ್ಉ ಬಂದನು.ನೀವು ಯೋಹಾನನ್ನು ನಂಬಲಿಲ್ಲ.ಆದರೆ ಸುಂಕ ವಸೂಲಿಗಾರರು ಮತ್ತು ವೇಶ್ಯೆಯರು ನಂಬಿದ್ದನ್ನು ನೀವು ನೋಡಿದ್ದೀರಿ.ಆದರೆ ನೀವಿನ್ನೂ ಬದಲಾವಣೆ ಹೊಂದಲು ಮತ್ತು ಅವನನ್ನು ನಂಬಲು ಇಷ್ಟಪಡುತ್ತಿಲ್ಲ.

14.12.09- ಸ್ನಾನದೀಕ್ಷೆ ಕೊಡುವ ಅಧಿಕಾರ

ಸಂತ ಮತ್ತಾಯನು ಬರೆದ ಶುಭ ಸಂದೇಶದಿಂದ ವಾಚನ -  21: 23-27


“ಸ್ನಾನದೀಕ್ಷೆ ಕೊಡುವ ಅಧಿಕಾರ ಎಲ್ಲಿಂದ ಬಂದಿತು?.”

ಯೇಸುಸ್ವಾಮಿ ಮಹಾದೇವಾಲಯದ ಒಳಕ್ಕೆ ಹೋಗಿ ಅಲ್ಲಿ ಬೋಧನೆ ಮಾಡತೊಡಗಿದರು.ಮುಖ್ಯ ಯಾಜಕರೂ ಪ್ರಜಾಪ್ರಮುಖರೂ ಅವರ ಬಳಿಗೆ ಬಂದು, “ಇದನ್ನೆಲ್ಲಾ ನೀನು ಯಾವ ಅಧಿಕಾರದಿಂದ ಮಾಡುತ್ತಿರುವೆ? ನಿನಗೆ ಈ ಅಧಿಕಾರವನ್ನು ಕೊಟ್ಟವರಾರು?” ಎಂದು ಪ್ರಶ್ನಿಸಿದರು. ಅದಕ್ಕೆ ಯೇಸು, “ನಾನು ನಿಮಗೆ ಒಂದು ಪ್ರಶ್ನೆ ಕೇಳುತ್ತೇನೆ; ಅದಕ್ಕೆ ನೀವು ಉತ್ತರಕೊಟ್ಟರೆ ನಾನು ಯಾವ ಅಧಿಕಾರದಿಂದ ಇದನ್ನೆಲ್ಲಾ ಮಾಡುತ್ತಿದ್ದೇನೆಂದು ನಿಮಗೆ ತಿಳಿಸುತ್ತೇನೆ.

‘ಸ್ನಾನದೀಕ್ಷೆ ಕೊಡುವ ಅಧಿಕಾರ ಯೊವಾನ್ನನಿಗೆ ಎಲ್ಲಿಂದ ಬಂದಿತು? ದೇವರಿಂದಲೋ, ಮನುಷ್ಯರಿಂದಲೋ?” ಎಂದು ಕೇಳಿದರು. ಅದಕ್ಕೆ ಅವರು ತಮ್ಮ ತಮ್ಮೊಳಗೇ ಹೀಗೆಂದು ತರ್ಕಮಾಡಲಾರಂಭಿಸಿದರು: “ದೇವರಿಂದ ಬಂತು ಎಂದು ಉತ್ತರಿಸಿದರೆ, ‘ಹಾಗಾದರೆ ನೀವೇಕೆ ಅತನನ್ನು ನಂಬಲಿಲ್ಲ?’ ಎಂದು ಕೇಳುವನು. ‘ಮನುಷ್ಯರಿಂದ ಬಂತು’ ಎಂದು ಹೇಳಿದೆವಾದರೆ ಜನಸೂಮೂಹಕ್ಕೆ ನಾವು ಭಯಪಡಬೇಕಾಗಿದೆ. ಏಕೆಂದರೆ ಯೊವಾನ್ನನು ಒಬ್ಬ ಪ್ರವಾದಿಯೆಂದು ಸರ್ವರೂ ಸನ್ಮಾನಿಸುತ್ತಾರೆ” ಎಂದುಕೊಂಡರು. ಬಳಿಕ ಬಂದು, “ನಮಗೆ ಗೊತ್ತಿಲ್ಲ,” ಎಂದು ಯೇಸುವಿಗೆ ಉತ್ತರಕೊಟ್ಟರು. ಆಗ ಯೇಸು, “ಹಾಗಾದರೆ, ನಾನು ಕೂಡ ಯಾವ ಅಧಿಕಾರದಿಂದ ಇದನ್ನೆಲ್ಲಾ ಮಾಡುತ್ತೇನೆಂದು ನಿಮಗೆ ಹೇಳುವುದಿಲ್ಲ,” ಎಂದರು.

12.12.09 - ಎಲೀಯನು ಈಗಾಗಲೇ ಬಂದಾಗಿದೆ

ಸಂತ ಮತ್ತಾಯನು ಬರೆದ ಶುಭ ಸಂದೇಶದಿಂದ ವಾಚನ - ೧೭: ೧೦-೧೩


“ಎಲೀಯನು ಈಗಾಗಲೇ ಬಂದಾಗಿದೆ; ಜನರು ಆತನನ್ನು ಗುರುತಿಸಲಿಲ್ಲ”

ಬೆಟ್ಟದಿಂದ ಇಳಿದು ಬರುವಾಗ ಶಿಷ್ಯರು” ಎಲೀಯನೇ ಮೊದಲು ಬರಬೇಕಾಗಿದೆ ಎಂದು ಶಾಸ್ತ್ರಜ್ಞರು ಹೇಳುತ್ತಾರಲ್ಲ ಅದು ಹೇಗೆ?”ಎಂದು ಯೇಸುವನ್ನು ಕೇಳಿದರು.ಅದಕ್ಕೆ ಪ್ರತ್ಯುತ್ತರವಾಗಿ ಯೇಸು.“ಎಲೀಯನು ಬಂದು ಎಲ್ಲವನ್ನೂ ಸಜ್ಜುಗೊಳಿಸಿವನು ಎಂಬುದು ನಿಜ. ಆದರೆ ನಾನು ನಿಮಗೆ ಹೇಳುತ್ತೇನೆ; ಎಲೀಯನು ಈಗಾಗಲೇ ಬಂದಾಗಿದೆ; ಜನರು ಆತನನ್ನು ಗುರುತಿಸದೇ ತಮಗೆ ಇಷ್ಟ ಬಂದ ಹಾಗೆ ಹಿಂಸಿಸಿದ್ದೂ ಆಗಿದೆ.ಅಂತೆಯೇ ನರಪುತ್ರನೂ ಅವರ ಕೈಯಿಂದ ಯಾತನೆಯನ್ನು ಅನುಭವಿಸುವನು” ಎಂದರು.ಅವರು ಹೇಳುತ್ತಿರುವುದು ಸ್ನಾನಿಕ ಯೊವಾನ್ನನನ್ನು ಕುರಿತೇ ಎಂದು ಪ್ರೇಷಿತರು ಆಗ ಅರ್ಥಮಾಡಿಕೊಂಡರು.

11.12.09 - ಜ್ಞಾನವು ತನ್ನ ಕ್ರಿಯೆಗಳಿಂದಲೇ ತನ್ನ ಯೋಗ್ಯತೆಯನ್ನು ತೋರ್ಪಡಿಸುತ್ತದೆ

ಸಂತ ಮತ್ತಾಯನು ಬರೆದ ಶುಭ ಸಂದೇಶದಿಂದ ವಾಚನ - 11: 16-19

ಜ್ಞಾನವು ತನ್ನ ಕ್ರಿಯೆಗಳಿಂದಲೇ ತನ್ನ ಯೋಗ್ಯತೆಯನ್ನು ತೋರ್ಪಡಿಸುತ್ತದೆ

ಈ ಕಾಲದ ಜನರ ಕುರಿತು ನಾನು ಏನು ಹೇಳಲಿ? ಅವರು ಯಾವ ರೀತಿ ಇದ್ದಾರೆ? ಈ ಕಾಲದ ಜನರು ಮಾರುಕಟ್ಟೆಯಲ್ಲಿ ಕುಳಿತುಕೊಂಡಿರುವ ಮಕ್ಕಳಂತಿದ್ದಾರೆ. ಒಂದು ಗುಂಪಿನ ಮಕ್ಕಳು ಇನ್ನೂಂದು ಗುಂಪಿನ ಮಕ್ಕಳಿಗೆ ಹೀಗೆನ್ನುತ್ತಾರೆ: "ನಾವು ನಿಮ್ಮಗೋಸ್ಕರ ವಾದ್ಯ ಬಾರಿಸಿದೆವು, ನೀವು ಕುಣಿಯಲಿಲ್ಲ, ನಾವು ಶೋಕ ಗೀತೆ ಹಾಡಿದೆವು ನೀವು ದು:ಖಿಸಲಿಲ್ಲ".

ಇಂದಿನ ಜನರು ಈ ಮಕ್ಕಳಂತಿದ್ದಾರೆ ಎಂದು ನಾನು ಹೇಳಿದ್ದೇಕೆ? ಏಕೆಂದರೆ ಯೋಹಾನನು ಬಂದನು.ಆದರೆ ಅವನು ಬೇರೆ ಜನರಂತೆ ಊಟ ಮಾಡಲಿಲ್ಲ; ದ್ರಾಕ್ಷಾರಸವನ್ನು ಕುಡಿಯಲಿಲ್ಲ. ಆದರೆ ಜನರು ’ಅವನಿಗೆ ದೆವ್ವ ಹಿಡಿದಿದೆ’ ಎಂದು ಹೇಳುತ್ತಾರೆ. ಮನುಷ್ಯ ಕುಮಾರನು ಬಂದನು, ಆತ ಬೇರೆ ಜನರಂತೆ ಊಟ ಮಾಡುತ್ತಾನೆ: ದ್ರಾಕ್ಷಾರಸವನ್ನು ಕುಡಿಯುತ್ತಾನೆ. ಆದರೆ ಜನರು ’ನೋಡಿರಿ! ಅವನು ಹೊಟ್ಟೆಬಾಕ, ಅವನು ಕುಡುಕ.ಸುಂಕ ವಸೂಲಿ ಮಾಡುವವರು ಮತ್ತು ಇತರ ಕೆಟ್ಟ ಜನರೇ ಅವನ ಸ್ನೇಹಿತರು’ ಎಂದು ಹೇಳುತ್ತಾರೆ.

 ಆದರೆ ಜ್ಞಾನವು ತನ್ನ ಕ್ರಿಯೆಗಳಿಂದಲೇ ತನ್ನ ಯೋಗ್ಯತೆಯನ್ನು ತೋರ್ಪಡಿಸುತ್ತದೆ."

10-12-2009 - ಸ್ನಾನಿಕ ಯೊವಾನ್ನ

ಸಂತ ಮತ್ತಾಯನು ಬರೆದ ಶುಭ ಸಂದೇಶದಿಂದ ವಾಚನ

“ಮಾನವನಾಗಿ ಜನಿಸಿದ್ದವರಲ್ಲಿ ಸ್ನಾನಿಕ ಯೊವಾನ್ನನಿಗಿಂತ ಶ್ರೇಷ್ಠನಾರೂ ಹುಟ್ಟಿಲ್ಲ!

ಯೇಸು ಜನಸಮೂಹಕ್ಕೆ ಯೊವಾನ್ನನನ್ನು ಕುರಿತು ಹೀಗೆಂದರು: ಮಾನವನಾಗಿ ಜನಿಸಿದ್ದವರಲ್ಲಿ ಸ್ನಾನಿಕ ಯೊವಾನ್ನನಿಗಿಂತ ಶ್ರೇಷ್ಠನಾರೂ ಹುಟ್ಟಿಲ್ಲ! ಎಂದು ನಿಮಗೆ ಸ್ಪಷ್ಟವಾಗಿ ಹೇಳುತ್ತೇನೆ. ಆದರೂ ಸ್ವರ್ಗಸಾಮ್ರಾಜ್ಯದಲ್ಲಿ ಕನಿಷ್ಠನಾದವನು ಕೂಡ ಅವನಿಗಿಂತ ಶ್ರೇಷ್ಠನೇ ಸರಿ. ಯೊವಾನ್ನನು ತನ್ನ ಸಂದೇಶವನ್ನು ಸಾರಿದಂದಿನಿಂದ ಇಂದಿನವರೆಗೆ ಸ್ವರ್ಗಸಾಮ್ರಾಜ್ಯವು ನೂಕುನುಗ್ಗಲಿಗೆ ಗುರಿಯಾಗಿದೆ. ಬಲಪ್ರಯೋಗ ಮಾಡುವವರು ಅದನ್ನು ಸ್ವಾಧೀನಪಡಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಯೊವಾನ್ನನ ಕಾಲದ ತನಕ ಧರ್ಮಶಾಸ್ತ್ರ ಹಾಗು ಎಲ್ಲ ಪ್ರವಾದಿಗಳು ದೇವರ ಸಾಮ್ರಾಜ್ಯವನ್ನು ಕುರಿತು ಪ್ರವಾದನೆ ಮಾಡಿದರು. ಅವರ ಹೇಳಿಕೆಯನ್ನು ನಂಬಲು ನಿಮಗಿಷ್ಟವಿದ್ದರೆ, ಇಗೋ, ಬರತಕ್ಕ ಎಲೀಯನು ಈ ಯೊವಾನ್ನನೇ. ಕೇಳುವುದಕ್ಕೆ ಕಿವಿಯುಳ್ಳವನು ಕೇಳಿಸಿಕೊಳ್ಳಲಿ.

09-12-2009 - ನನ್ನ ನೊಗ ಹಗುರು, ನನ್ನ ಹೊರೆ ಸುಗಮ

ಸಂತ ಮತ್ತಾಯನು ಬರೆದ ಶುಭ ಸಂದೇಶದಿಂದ ವಾಚನ -  11: 28-30

“ದುಡಿದು, ಭಾರಹೊತ್ತು, ಬಳಲಿ ಬೆಂಡಾಗಿರುವ ಸರ್ವಜನರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ.”

ಆ ಸಮಯದಲ್ಲಿ ಯೇಸು ಹೀಗೆಂದರು : “ದುಡಿದು, ಭಾರಹೊತ್ತು, ಬಳಲಿ ಬೆಂಡಾಗಿರುವ ಸರ್ವಜನರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ, ನಾನು ನಿಮಗೆ ವಿಶ್ರಾಂತಿಕೊಡುತ್ತೇನೆ. ನಾನು ವಿನಯಶೀಲನು, ದೀನ ಹೃದಯನು; ನನ್ನ ನೊಗಕ್ಕೆ ಹೆಗಲುಕೊಟ್ಟು ನನ್ನಿಂದ ಕಲಿತುಕೊಳ್ಳಿ. ಆಗ ನಿಮಗೆ ವಿಶ್ರಾಂತಿ ಸಿಗುವುದು. ನನ್ನ ನೊಗ ಹಗುರು, ನನ್ನ ಹೊರೆ ಸುಗಮ.”

08-12-2009 - "ದೇವರಾಶೀರ್ವಾದ ಹೊಂದಿದವಳೇ, ನಿನಗೆ ಶುಭವಾಗಲಿ"

ಸಂತ ಲೂಕನು ಬರೆದ ಶುಭ ಸಂದೇಶದಿಂದ ವಾಚನ 1: 26-38
"ದೇವರಾಶೀರ್ವಾದ ಹೊಂದಿದವಳೇ, ನಿನಗೆ ಶುಭವಾಗಲಿ"

ಎಲಿಜಬೇತಳು ಆರು ತಿಂಗಳ ಗರ್ಭಿಣಿಯಾಗಿದ್ದಾಗ, ದೇವರು ತನ್ನ ದೂತನಾದ ಗಬ್ರಿಯೇಲನು ಗಲಿಲೇಯ ಪ್ರಾಂತ್ಯದ ನಜರೇತ್ ಎಂಬ ಊರಿನಲ್ಲಿ ವಾಸಿಸುತ್ತಿದ್ದ ಒಬ್ಬ ಕನ್ಯೆಯ ಬಳಿಗೆ ಕಳುಹಿಸಿದನು.ಆಕೆಗೆ ದಾವಿದನ ಮನೆತನದ ಯೋಸೆಫನೊಂದಿಗೆ ನಿಶ್ಚಿತಾರ್ಥವಾಗಿತ್ತು. ಆಕೆಯ ಹೆಸರು ಮರಿಯಳು. ದೇವದೂತನು ಆಕೆಯ ಬಳಿಗೆ ಬಂದು "ದೇವರಾಶೀರ್ವಾದ ಹೊಂದಿದವಳೇ, ನಿನಗೆ ಶುಭವಾಗಲಿ!  ಪ್ರಭು ನಿನ್ನೊಡನೆ ಇದ್ದಾನೆ" ಎಂದು ಹೇಳಿದನು.

ದೇವದೂತನ ಮಾತನ್ನು ಕೇಳಿ ಬಹು ಗಲಿಬಿಲಿಗೊಂಡ ಮರಿಯಳು "ಇದರ ಅರ್ಥವೇನಿರಬಹುದು" ಎಂದು ಆಶ್ಚರ್ಯಪಟ್ಟಳು. ದೇವದೂತನು ಆಕೆಗೆ " "ಮರಿಯಳೇ, ಭಯಪಡಬೇಡ ದೇವರು ನಿನ್ನನ್ನು ಬಹಳವಾಗಿ ಆಶೀರ್ವದಿಸಿದ್ದಾನೆ. ಕೇಳು! ನೀನು ಗರ್ಭಿಣಿಯಾಗಿ ಒಂದು ಗಂಡು ಮಗುವನ್ನು ಹೆರುವೆ.ಆತನಿಗೆ,"ಯೇಸು" ಎಂದು ಹೆಸರಿಡಬೇಕು ಆತನು ಮಹಾ ಪುರುಷನಾಗುವನು.ಜನರು ಆತನನ್ನು ಮಹೋನ್ನತನ ಮಗನೆಂದು ಕರೆಯುವರು. ಪ್ರಭುವಾದ ದೇವರು ಆತನಿಗೆ ಆತನ ಪೂರ್ವಿಕನಾದ ದಾವೀದನ ಅಧಿಕಾರವನ್ನು ಕೊಡುವನು. ಯೇಸುವು ಯಾಕೋಬನ ಜನರನ್ನು ಸದಾ ಕಾಲ ಆಳುವನು.ಆತನ ರಾಜ್ಯ ಎಂದಿಗೂ ಅಂತ್ಯವಾಗುವುದಿಲ್ಲ." ಎಂದು ಹೇಳಿದನು.

ಮರಿಯಳು ದೇವದೂತನಿಗೆ "ಇದು ಹೇಗೆ ಸಂಭವಿಸುವುದು? ನಾನು ಮದುವೆಯಾಗಿಲ್ಲವಲ್ಲ!" ಎಂದು ಹೇಳಿದನು. ದೇವದೂತನು ಮರಿಯಳಿಗೆ "ಪವಿತ್ರಾತ್ಮನು ನಿನ್ನ ಮೇಲೆ ಬರುವನು; ಮಹೋನ್ನತನ ಶಕ್ತಿಯು ನಿನ್ನನ್ನು ಆವರಿಸುವುದು.ಈ ಕಾರಣದಿಂದ ನಿನ್ನಲ್ಲಿ ಹುಟ್ಟುವ ಈ ಪವಿತ್ರ ಮಗುವು ’ದೇವರ ಮಗ’ನೆನಿಸಿಕೊಳ್ಳುವನು. ಇದ್ದಲ್ಲದೆ, ನಿನ್ನ ಬಂಧುವಾದ ಎಲಿಜಬೇತಳು ಗರ್ಭಿಣಿಯಾಗಿದ್ದಾಳೆ.ಆಕೆಯು ಮುಪ್ಪಿನವಳಾಗಿದ್ದರೂ ಆಕೆಗೊಬ್ಬ ಮಗ ಹುಟ್ಟುವನು.ಜನರಿಂದ ಬಂಜೆ ಎನಿಸಿಕೊಂಡಿದ್ದ ಆಕೆ ಈಗ ಆರು ತಿಂಗಳ ಗರ್ಭಿಣಿಯಾಗಿದ್ದಾಳೆ.ದೇವರಿಗೆ ಯಾವುದೂ ಆಸಾಧ್ಯವಲ್ಲ." ಎಂದು ಹೇಳಿದನು.

ಮರಿಯಳು" ನಾನು ಪ್ರಭುವಿನ ದಾಸಿ. ನೀನು ಹೇಳಿದಂತೆಯೇ ನನಗಾಗಲಿ!" ಆಂದಳು. ಬಳಿಕ ದೇವ ದೂತನು ಹೊರಟು ಹೋದನು.

07.12.2009 - "ಈ ದಿನ ನಾವು ಆಶ್ಚರ್ಯಕರವಾದ ಸಂಗತಿಯನ್ನು ಕಂಡೆವು!"

ಸಂತ ಲೂಕನು ಬರೆದ ಶುಭ ಸಂದೇಶದಿಂದ ವಾಚನ 5: 17-26


ಮನುಷ್ಯಕುಮಾರನಿಗೆ ಭೂಲೋಕದಲ್ಲಿ ಪಾಪಗಳನ್ನು ಕ್ಷಮಿಸುವ ಅಧಿಕಾರ ಉಂಟೆಂಬುದು ನಿಮಗೆ ಖಚಿತವಾಗಬೇಕು

ಒಂದು ದಿನ ಯೇಸು ಜನರಿಗೆ ಬೋಧಿಸುತ್ತಿದ್ದರು.ಫರಿಸಾಯರು ಮತ್ತು ಧರ್ಮೋಪದೇಶಕರು ಸಹ ಅಲ್ಲಿ ಕುಳಿತುಕೊಂಡಿದ್ದರು. ಅವರು, ಗಲಿಲೇಯದಿಂದಲೂ ಜುದೇಯ ಪ್ರಾಂತ್ಯದ ಊರುಗಳಿಂದಲೂ, ಜೆರುಸಲೇಮಿನಿಂದಲೂ ಬಂದಿದ್ದರು. ರೋಗಿಗಳನ್ನು ಗುಣಪಡಿಸಲು ಪ್ರಭುವಿನ ಶಕ್ತಿಯು ಆವರಲ್ಲಿತ್ತು. ಒಬ್ಬ ಪಾರ್ಶ್ವವಾಯು ರೋಗಿ ಅಲ್ಲಿದ್ದನು. ಒಂದು ಚಿಕ್ಕ ಹಾಸಿಗೆಯಲ್ಲಿ ಅವನನ್ನು ಕೆಲವು ಮಂದಿ ಗಂಡಸರು ಹೊತ್ತುಕೊಂಡು ಬಂದು ಯೇಸುವಿನ ಮುಂದೆ ಇಡಲು ಪ್ರಯತ್ನಿಸಿದರು. ಆದರೆ ಅಲ್ಲಿ ಬಹಳ ಜನ ಇದ್ದುದರಿಂದ ಯೇಸುವಿನ ಬಳಿಗೆ ಹೋಗಲು ಸಾಧ್ಯವಾಗಲಿಲ್ಲ.ಆದ್ದರಿಂದ ಅವರು ಮನೆಯ ಮೇಲೆ ಹತ್ತಿ ಹೆಂಚುಗಳನ್ನು ತೆಗೆದು ಪಾಶ್ವರ್ವಾಯು ರೋಗಿಯನ್ನು ಹಾಸಿಗೆಯ ಸಹಿತ ಯೇಸುವಿನ ಮುಂದೆ ಇಳಿಸಿದರು. ಈ ಜನರ ನಂಬಿಕೆಯನ್ನು ನೋಡಿ ಯೇಸು ಆ ರೋಗಿಗೆ, "ಸ್ನೇಹಿತನೇ, ನಿನ್ನ ಪಾಪಗಳನ್ನು ಕ್ಷಮಿಸಲ್ಪಟ್ಟಿವೆ" ಎಂದು ಹೇಳಿದರು.

ಯೆಹೊದ್ಯ ಧರ್ಮೋಪದೇಶಕರು ಮತ್ತು ಫರಿಸಯರು " ಈ ಮನುಷ್ಯನು ಯಾರು? ಈತನು ದೇವರಿಗೆ ವಿರುದ್ಧವಾದ ಸಂಗತಿಗಳನ್ನು ಹೇಳುತ್ತಾನಲ್ಲ! ದೇವರೊಬ್ಬರೇ ಪಾಪಗಳನ್ನು ಕ್ಷಮಿಸಬಲ್ಲರು" ಎಂದು ತಮ್ಮೊಳಗೆ ಯೋಚಿಸಿದರು. ಆದರೆ ಅವರ ಆಲೋಚನೆಯನ್ನು ತಿಳಿದಿದ್ದ ಯೇಸು ಅವರಿಗೆ "ನೀವು ರೀತಿ ಯೋಚಿಸುವುದೇಕೆ"? ಯಾವುದು ಸುಲಭ?" ನಿನ್ನ ಪಾಪಗಳನ್ನು ಕ್ಷಮಿಸಲ್ಪಟ್ಟಿವೆ" ಎಂದು ಪಾರ್ಶ್ವವಾಯು ರೋಗಿಗೆ ಹೇಳುವುದೋ ಅಥವಾ ’ಎದ್ದು ನಿಂತು ನಡೆ’ ಎನ್ನುವುದೋ? ಆದರೆ ಮನುಷ್ಯಕುಮಾರನಿಗೆ ಭೂಲೋಕದಲ್ಲಿ ಪಾಪಗಳನ್ನು ಕ್ಷಮಿಸುವ ಅಧಿಕಾರ ಉಂಟೆಂಬುದು ನಿಮಗೆ ಖಚಿತವಾಗಬೇಕು ಎಂದು ಹೇಳಿ, ಪಾರ್ಶ್ವವಾಯು ರೋಗಿಗೆ "ಏಳು! ನಿನ್ನ ಹಾಸಿಗೆಯನ್ನು ಹೊತ್ತುಕೊಂಡು ಮನೆಗೆ ಹೋಗು!" ಎಂದು ಹೇಳಿದರು.

ಆ ಕೂಡಲೇ ಅವನು ಜನರ ಮುಂದೆ ಎದ್ದು ನಿಂತು, ತನ್ನ ಹಾಸಿಗೆಯನ್ನು ಹೊತ್ತುಕೊಂಡು ದೇವರನ್ನು ಸ್ತುತಿಸುತ್ತಾ ಮನೆಗೆ ಹೋದನು.ಜನರೆಲ್ಲರೂ ಬಹಳ ಆಶ್ಚರ್ಯಪಟ್ಟು ದೇವರನ್ನು ಸ್ತುತಿಸತೊಡಗಿದರು ಮತ್ತು ದೇವರಲ್ಲಿ ಭಯ ಭಕ್ತಿಯುಳ್ಳವರಾಗಿ, "ಈ ದಿನ ನಾವು ಆಶ್ಚರ್ಯಕರವಾದ ಸಂಗತಿಯನ್ನು ಕಂಡೆವು!" ಎಂದರು.

06-12-09 - ಪ್ರಭುವಿಗಾಗಿ ಮಾರ್ಗವನ್ನು ಸಿದ್ಧಪಡಿಸಿರಿ ಹಾದಿಯನ್ನು ಸರಾಗ ಮಾಡಿರಿ

ಸಂತ ಲೂಕನು ಬರೆದ ಶುಭ ಸಂದೇಶದಿಂದ ವಾಚನ 3: 1-6


ಪ್ರಭುವಿಗಾಗಿ ಮಾರ್ಗವನ್ನು ಸಿದ್ಧಪಡಿಸಿರಿ, ಆತನ ಆಗಮನಕ್ಕಾಗಿ ಹಾದಿಯನ್ನು ಸರಾಗ ಮಾಡಿರಿ

ಅದು ತಿಬೇರಿಯಸ್ ಚಕ್ರವರ್ತಿಯ ಆಡಳಿತ ಕಾಲದ ಹದಿನೈದನೆಯ ವರ್ಷ. ಆ ಕಾಲದಲ್ಲಿ ಜುದೇಯ ಪ್ರಾಂತ್ಯಕ್ಕೆ ಪೋನ್ಸಿಯಸ್ ಪಿಲಾತನು ರಾಜ್ಯಪಾಲನಾಗಿದ್ದನು.ಗಲಿಲೇಯ ಪ್ರಾಂತ್ಯಕ್ಕೆ ಹೆರೋದನೂ ಇತುರೆಯ ಮತ್ತು ತ್ರಕೋನಿತಿ ಪ್ರಾಂತ್ಯಗಳಿಗೆ ಇವನ ತಮ್ಮನಾದ ಫಿಲಿಪ್ಪನೂ ಮತ್ತು ಅಬಿಲೇನೆ ಪ್ರಾಂತ್ಯಕ್ಕೆ ಲುಸಾನಿಯನೂ ಸಾಮಂತನಾಗಿದ್ದನು.ಆನ್ನನ್ನು ಮತ್ತು ಕಾಯಿಫನು ಅಂದಿನ ಪ್ರಧಾನ ಯಾಜಕರು.ಆಗ ಬೆಂಗಾಡಿನಲ್ಲಿ ಜಕರೀಯನ ಮಗ ಯೊವಾನ್ನನಿಗೆ ದೇವರ ಶುಭಸಂದೇಶ ಬೋಧೆಯಾಯಿತು.


ಆತನು ಜೋರ್ಡಾನ್ ನದಿಯ ಪರಿಸರ ಪ್ರಾಂತ್ಯದಲ್ಲೆಲ್ಲಾ ಸಂಚರಿಸುತ್ತಾ " ಪಶ್ಚಾತ್ತಾಪ ಪಟ್ಟು ಪಾಪಕ್ಕೆ ವಿಮುಖರಾಗಿ,ದೇವರಿಗೆ ಅಭಿಮುಖರಾಗಿರಿ ಮತ್ತು ಸ್ನಾನ ದೀಕ್ಷೆ ಪಡೆದುಕೊಳ್ಳಿರಿ;ದೇವರು ನಿಮ್ಮ ಪಾಪಗಳನ್ನು ಕ್ಷಮಿಸಿಬಿಡುವರು," ಎಂದು ಸಾರಿ ಹೇಳುತ್ತಿದ್ದನು. ಈ ಬಗ್ಗೆ ಪ್ರವಾದಿ ಯೆಶಾಯನ ಗ್ರಂಥದಲ್ಲಿ ಮುಂಚಿತವಾಗಿಯೇ ಹೀಗೆಂದು ಬರೆದಿಡಲಾಗಿದೆ: " ಪ್ರಭುವಿಗಾಗಿ ಮಾರ್ಗವನ್ನು ಸಿದ್ಧಪಡಿಸಿರಿ, ಆತನ ಆಗಮನಕ್ಕಾಗಿ ಹಾದಿಯನ್ನು ಸರಾಗ ಮಾಡಿರಿ" ಎಂದು ಬೆಂಗಾಡಿನಲ್ಲಿ ಒಬ್ಬನು ಘೋಷಿಸುತ್ತಿದ್ದಾನೆ.ಹಳ್ಳ ಕೊಳ್ಳಗಳೆಲ್ಲ ಭರ್ತಿಯಾಗಬೇಕು:ಬೆಟ್ಟ ಗುಡ್ಡಗಳು ಮಟ್ಟವಾಗಬೇಕು; ತಗ್ಗುಮುಗ್ಗಾದ ಹಾದಿಗಳು ಹಸನಾಗಬೇಕು.ಆಗ ದೇವರು ದಯಪಾಲಿಸುವ ಜೀವೋದ್ಢಾರವನ್ನು ಮಾನವರೆಲ್ಲರೂ ಕಾಣುವರು."

ಬೆಳೆಯೇನೋ ಹೇರಳ; ಕೊಯಿಲುಗಾರರೋ ವಿರಳ - 05.12.09

ಸಂತ ಮತ್ತಾಯನು ಬರೆದ  ಶುಭ ಸಂದೇಶದಿಂದ ವಾಚನ   9:35, 10:1,6-8
 
"ಯೇಸುಸ್ವಾಮಿ ಜನಸಮೂಹವನ್ನು ಕಂಡಾಗ ಅವರ ಮನ ಕರಗಿತು”

ಯೇಸುಸ್ವಾಮಿ, ಊರೂರುಗಳಲ್ಲೂ, ಹಳ್ಳಿಹಳ್ಳಿಗಳಲ್ಲೂ ಸಂಚಾರ ಮಾಡುತ್ತಾ ಅಲ್ಲಿಯ ಪ್ರಾರ್ಥನಾ ಮಂದಿರಗಳಲ್ಲಿ ಬೋಧಿಸಿದರು.  ಶ್ರೀಸಾಮ್ರಜ್ಯದ ಶುಭಸಂದೇಶವನ್ನು ಸಾರಿದರು. ಎಲ್ಲಾ ತರಹದ ರೋಗ ರುಜಿನಗಳನ್ನು ಗುಣಪಡಿಸಿದರು.  ಆ ಜನಸೂಮೂಹವನ್ನು ಕಂಡಾಗ ಅವರ ಮನ ಕರಗಿತು.  ಏಕೆಂದರೆ, ಕುರುಬನಿಲ್ಲದ ಕುರಿಗಳಂತೆ ಅವರು ತೊಳಲಿದ್ದರು ಹಾಗೂ ಬಳಲಿದ್ದರು.  ಆದುದರಿಂದ ಯೇಸು ತಮ್ಮ ಶಿಷ್ಯರಿಗೆ, “ಬೆಳೆಯೇನೋ ಹೇರಳ; ಕೊಯಿಲುಗಾರರೋ ವಿರಳ; ಈ ಕಾರಣ ತನ್ನ ಕೊಯಿಲಿಗೆ ಆಳುಗಳನ್ನು ಕಳುಹಿಸುವಂತೆ ಬೆಳೆಯ ಯಜಮಾನನನ್ನು ಪ್ರಾರ್ಥಿಸಿರಿ,” ಎಂದರು. ಯೇಸುಸ್ವಾಮಿ ತಮ್ಮ ಹನ್ನೆರಡು ಮಂದಿ ಶಿಷ್ಯರನ್ನು ಒಟ್ಟಿಗೆ ಕರೆದು, ಎಲ್ಲ ರೋಗರುಜಿನಗಳನ್ನು ಗುಣಪಡಿಸುವುದಕ್ಕೂ ದೆವ್ವಗಳನ್ನು ಬಿಡಿಸುವುದಕ್ಕೂ ಅವರಿಗೆ ಅಧಿಕಾರವನ್ನು ಕೊಟ್ಟರು. ಆ ಹನ್ನೆರಡು ಮಂದಿಯ ನಿಯೋಗವನ್ನು ಕಳುಹಿಸುವಾಗ ಯೇಸು ಅವರಿಗೆ ಕೊಟ್ಟ ಆದೇಶವೇನೆಂದರೆ : ತಪ್ಪಿಹೋದ ಕುರುಗಳಂತೆ ಇರುವ ಇಸ್ರಯೇಲ್ ಜನರ ಬಗೆ ಹೋಗಿರಿ; ಹೋಗುತ್ತಾ, ‘ಸ್ವರ್ಗಸಾಮ್ರಾಜ್ಯವು ಸಮೀಪಿಸಿದೆ’ ಎಂದು ಬೋಧನೆಮಾಡಿರಿ.  ರೋಗಿಗಳನ್ನು ಗುಣಪಡಿಸಿರಿ, ಸತ್ತವರನ್ನು ಮತ್ತೆ ಬದುಕಿಸಿರಿ, ಕುಷ್ಟರೋಗಿಗಳನ್ನು ಸ್ವಸ್ಥಮಾಡಿರಿ, ದೆವ್ವಗಳನ್ನು ಬಿಡಿಸಿರಿ, ಉಚಿತವಾಗಿ ಪಡೆದಿರುವಿರಿ, ಉಚಿತವಾಗಿ ಕೊಡಿರಿ.

ಯೇಸುಸ್ವಾಮಿಯಲ್ಲಿ ವಿಶ್ವಾಸವಿಟ್ಟ ಕುರುಡರು ಗುಣಹೊಂದಿದರು


ಸಂತ ಮತ್ತಾಯನು ಬರೆದ ಶುಭ ಸಂದೇಶದಿಂದ ವಾಚನ   - 9:27-31

“ಯೇಸುಸ್ವಾಮಿಯಲ್ಲಿ ವಿಶ್ವಾಸವಿಟ್ಟ ಇಬ್ಬರು ಕುರುಡರು ಗುಣಹೊಂದಿದರು.”


ಯೇಸುಸ್ವಾಮಿ ಅಲ್ಲಿಂದ ಹೋಗುತ್ತಿರುವಾಗ ಇಬ್ಬರು ಕುರುಡರು, “ಸ್ವಾಮೀ, ದಾವೀದ ಕುಲಪುತ್ರರೇ, ನಮಗೆ ದಯತೋರಿ,” ಎಂದು ದನಿಯೆತ್ತಿ ಕೂಗಿಕೊಳ್ಳುತ್ತಾ ಅವರ ಹಿಂದೆ ಹೋದರು. ಯೇಸು ಮನೆ ಸೇರಿದಾಗ ಆ ಕುರುಡರು ಸಮೀಪಕ್ಕೆ ಬಂದರು. “ನಾನು ನಿಮ್ಮನ್ನು ಗುಣಪಡಿಸಬಲ್ಲೆನೆಂದು ನೀವು ವಿಶ್ವಾಸವಿಡುತ್ತೀರೋ?” ಎಂದು ಯೇಸು ಪ್ರಶ್ನಿಸಿದರು. “ಹೌದು ಸ್ವಾಮೀ, ಹೌದು,” ಎಂದು ಅವರು ಉತ್ತರವಿತ್ತರು. ಆಗ ಯೇಸು ಅವರ ಕಣ್ಣುಗಳನ್ನು ಮುಟ್ಟಿ, “ನೀವು ವಿಸ್ವಾಸವಿಟ್ಟ ಪ್ರಕಾರವೇ ನಿಮಗೆ ಗುಣವಾಗಲಿ,” ಎಂದರು. ಅವರಿಗೆ ದೃಷ್ಠಿ ಬಂದಿತು. “ಈ ವಿಷಯ ಯಾರಿಗೂ ತಿಳಿಯಬಾರದು, ಎಚ್ಚರಿಕೆ!” ಎಂದು ಯೇಸು ಅವರಿಗೆ ಕಟ್ಟಪ್ಪಣೆ ಮಾಡಿದರು. ಆದರೂ ಅವರು ಹೋಗಿ ಆ ಪ್ರಾಂತ್ಯದಲ್ಲೆಲ್ಲಾ ಸ್ವಾಮಿಯ ಕೀರ್ತಿಯನ್ನು ಹರಡಿದರು.

ಸ್ವರ್ಗಸಾಮ್ರಾಜ್ಯವನ್ನು ಪ್ರವೇಶಿಸುವವನು - 03.12.09

ಸಂತ ಮತ್ತಾಯನು ಬರೆದ ಶುಭ ಸಂದೇಶದಿಂದ ವಾಚನ 7:21,24-27

“ಸ್ವರ್ಗದಲ್ಲಿರುವ ನನ್ನ ತಂದೆಯ ಚಿತ್ತಾನುಸಾರ ನಡೆಯುವವನು ಮಾತ್ರ ಸ್ವರ್ಗಸಾಮ್ರಾಜ್ಯವನ್ನು ಪ್ರವೇಶಿಸುವನು.”

ಯೇಸು ತಮ್ಮ ಶಿಷ್ಯರಿಗೆ ಹೀಗೆಂದರು: “ನನ್ನನ್ನು ‘ಸ್ವಾಮಿ, ಸ್ವಾಮಿ,’ ಎನ್ನುವ ಪ್ರತಿಯೊಬ್ಬನೂ ಸ್ವರ್ಗಸಾಮ್ರಾಜ್ಯವನ್ನು ಪ್ರವೇಶಿಸನು. ಸ್ವರ್ಗದಲ್ಲಿರುವ ನನ್ನ ತಂದೆಯ ಚಿತ್ತಾನುಸಾರ ನಡೆಯುವವನು ಮಾತ್ರ ಅದನ್ನು ಪ್ರವೇಶಿಸುವನು. ನನ್ನ ಈ ಮಾತನ್ನು ಕೇಳಿ ಅದರಂತೆ ನಡೆಯುವ ಪ್ರತಿಯೊಬ್ಬನು ಬಂಡೆಯ ಮೇಲೆ ಮನೆ ಕಟ್ಟಿಕೊಂಡ ಬುದ್ದಿವಂತನನ್ನು ಹೋಲುತ್ತಾನೆ. ಮಳೆ ಬಿತ್ತು, ನೆರೆ ಬಂತು, ಗಾಳಿ ಬೀಸಿ ಆ ಮನೆಗೆ ಅಪ್ಪಳಿಸಿತು. ಆದರೂ ಅದು ಬೀಳಲಿಲ್ಲ. ಕಾರಣ ಅದರ ಅಡಿಗಟ್ಟು ಬಂಡೆಯ ಮೇಲಿತ್ತು. ನನ್ನ ಈ ಮಾತುಗಳನ್ನು ಕೇಳಿಯೂ ಅದರಂತೆ ನಡೆಯದ ಪ್ರತಿಯೊಬ್ಬನೂ ಮರಳಿನ ಮೇಲೆ ಮನೆ ಕಟ್ಟಿಕೊಂಡ ಬುದ್ಧಿಹೀನನನ್ನು ಹೋಲುತ್ತಾನೆ. ಮಳೆ ಬಿತ್ತು, ನೆರೆ ಬಂತು, ಗಾಳಿ ಬೀಸಿ ಆ ಮನೆಗೆ ಅಪ್ಪಳಿಸಿತು; ಅದು ಕುಸಿದು ಬೊತ್ತು. ಅದಕ್ಕಾದ ಪತನವೋ ಅಗಾಧ !”

ಏಳು ರೊಟ್ಟಿಗಳು ಮತ್ತು ಕೆಲವು ಸಣ್ಣ ಮೀನುಗಳು - 02.12.09


ಸಂತ ಮತ್ತಾಯನು ಬರೆದ ಶುಭ ಸಂದೇಶದಿಂದ ವಾಚನ 15:19-27

“ಯೇಸು ಅನೇಕರನ್ನು ಗುಣಪಡಿಸುತ್ತಾರೆ ಮತ್ತು ಏಳು ರೊಟ್ಟಿಗಳು ಮತ್ತು ಕೆಲವು ಸಣ್ಣ ಮೀನುಗಳನ್ನು ನಾಲ್ಕು ಸಾವಿರ ಜನರಿಗೆ ಹಂಚುತ್ತಾರೆ.”


ಯೇಸುಸ್ವಾಮಿ ಆ ಸ್ಠಳವನ್ನು ಬಿಟ್ಟು, ಗಲಿಲೇಯ ಸರೋವರದ ತೀರದಲ್ಲೇ ನಡೆದು, ಒಂದು ಗುಡ್ಡವನ್ನು ಹತ್ತಿ ಅಲ್ಲಿ ಕುಳಿತುಕೊಂಡರು. ಜನರು ಗುಂಪುಗುಂಪಾಗಿ ಅಲ್ಲಿಗೆ ಬಂದರು. ಕುಂಟರು, ಕುರುಡರು, ಮೂಕರು, ಅಂಗವಿಕಲರು ಮುಂತಾದ ಅನೇಕರನ್ನು ತಮ್ಮೊಡನೆ ಕರೆತಂದು ಯೇಸುವಿನ ಪಾದಸನ್ನಿಧಿಯಲ್ಲಿ ಬಿಟ್ಟರು. ಯೇಸು ಅವರನ್ನು ಗುಣಪಡಿಸಿದರು. ಮೂಕರು ಮಾತನಾಡುವುದನ್ನೂ ಅಂಗವಿಕಲರು ಸ್ವಸ್ಥರಾಗುವುದನ್ನೂ ಕುಂಟರು ನಡೆಯುವುದನ್ನೂ ಕುರುಡರು ನೋಡುವುದನ್ನೂ ಈ ಜನರು ಕಂಡು ಆಶ್ಚರ್ಯ ಚಕಿತರಾಗಿ ಇಸ್ರಯೇಲಿನ ದೇವರನ್ನು ಕೊಂಡಾಡಿದರು. ಯೇಸುಸ್ವಾಮಿ ತಮ್ಮ ಶಿಷ್ಯರನ್ನು ಹತ್ತಿರಕ್ಕೆ ಕರೆದು, “ಈ ಜನಸ್ತೋಮ ಕಳೆದ ಮೂರು ದಿನಗಳಿಂದಲೂ ನನ್ನ ಬಳಿ ಇದೆ. ಊಟಕ್ಕೆ ಇವರಲ್ಲಿ ಏನೂ ಇಲ್ಲ. ಇವರನ್ನು ಕಂಡು ನನ್ನ ಹೃದಯ ಕರಗುತ್ತದೆ. ಇವರನ್ನು ಹಸಿದ ಹೊಟ್ಟೆಯಲ್ಲಿ ಕಳಿಸಿಬಿಡಲು ನನಗೆ ಇಷ್ಟವಿಲ್ಲ, ದಾರಿಯಲ್ಲಿ ಬಳಲಿ ಬಿದ್ದಾರು,” ಎಂದರು. ಅದಕ್ಕೆ ಶಿಷ್ಯರು, “ಇಷ್ಟು ದೊಡ್ಡ ಗುಂಪಿಗೆ ಆಗುವಷ್ಟು ರೊಟ್ಟಿಯನ್ನು ಈ ಅಡವಿಯಲ್ಲಿ ನಾವು ತರುವುದಾದರೂ ಎಲ್ಲಿಂದ?” ಎಂದು ಕೇಳಿದರು. “ನಿಮ್ಮಲ್ಲಿ ಎಷ್ಟು ರೊಟ್ಟಿಗಳಿವೆ?” ಎಂದು ಯೇಸು ಕೇಳಿದರು. “ಏಳು ರೊಟ್ಟಿಗಳು ಮತ್ತು ಕೆಲವು ಸಣ್ಣ ಮೀನುಗಳಿವೆ,” ಎಂದು ಶಿಷ್ಯರು ಉತ್ತರಕೊಟ್ಟರು. ಆಗ ಜನ ಸಮೂಹಕ್ಕೆ ನೆಲದ ಮೇಲೆ ಕುಳಿತುಕೊಳ್ಳುವಂತೆ ಯೇಸು ಆಜ್ಞಾಪಿಸಿದರು. ಅನಂತರ ಆ ಏಳು ರೊಟ್ಟಿಗಳನ್ನೂ ಮೀನುಗಳನ್ನೂ ತೆಗೆದುಕೊಂಡು, ದೇವರಿಗೆ ಸ್ತೋತ್ರಸಲ್ಲಿಸಿ, ಅವುಗಳನ್ನು ಮುರಿದು ತಮ್ಮ ಶಿಷ್ಯರಿಗೆ ಕೊಟ್ಟರು; ಶಿಷ್ಯರು ಜನರಿಗೆ ಬಡಿಸಿದರು. ಜನರೆಲ್ಲರೂ ಉಂಡು ತೃಪ್ತರಾದರು. ಊಳಿದ ತುಂಡುಗಳನ್ನು ಶಿಷ್ಯರು ಏಳು ಕುಕ್ಕೆಗಳ ತುಂಬ ತುಂಬಿಸಿಕೊಂಡರು.

“ಯೇಸುಸ್ವಾಮಿ ಪವಿತ್ರಾತ್ಮರಿಂದ ಹರ್ಷಾವೇಶಗೊಂಡರು” - 01.12.2009

ಸಂತ ಲೂಕನು ಬರೆದ ಶುಭ ಸಂದೇಶದಿಂದ ವಾಚನ ೧೦:೨೧-೨೪

“ಯೇಸುಸ್ವಾಮಿ ಪವಿತ್ರಾತ್ಮರಿಂದ ಹರ್ಷಾವೇಶಗೊಂಡರು”

ಯೇಸುಸ್ವಾಮಿ ಪವಿತ್ರಾತ್ಮರಿಂದ ಹರ್ಷಾವೇಶಗೊಂಡು, “ಪಿತನೇ, ಭೂಸ್ವರ್ಗಗಳ ಒಡೆಯನೇ, ಈ ವಿಷಯಗಳನ್ನು ಜ್ಞಾನಿಗಳಿಗೂ ಮೇಧಾವಿಗಳಿಗೂ ಮರೆಮಾಡಿ, ಮಕ್ಕಳಂಥವರಿಗೆ ನೀವು ಶ್ರುತಪಡಿಸಿದ್ದೀರಿ; ಇದಕ್ಕಾಗಿ ನಿಮ್ಮನ್ನು ವಂದಿಸುತ್ತೇವೆ. ಹೌದು ಪಿತನೇ, ಇದೇ ನಿಮ್ಮ ಸುಪ್ರೀತ ಸಂಕಲ್ಪ. ನನ್ನ ಪಿತ ಸಮಸ್ತವನ್ನೂ ನನ್ನ ವಶಕ್ಕೆ ಒಪ್ಪಿಸಿದ್ದಾರೆ. ಪುತ್ರನು ಯಾರೆಂದು ಪಿತನ ಹೊರತು ಬೇರಾರೂ ಅರಿಯರು. ಪಿತನು ಯಾರೆಂದು ಪುತ್ರನು ಮತ್ತು ಯಾರಿಗೆ ಪುತ್ರನು ಅವರನ್ನು ಶ್ರುತಪಡಿಸಲು ಇಚ್ಛಿಸುತ್ತಾನೋ ಅವರೇ ಹೊರತು ಮತ್ತಾರೂ ಅರಿಯರು,” ಎಂದು ಹೇಳಿದರು. ಅನಂತರ ಯೇಸು ಶಿಷ್ಯರ ಕಡೆ ತಿರುಗಿ, ಅವರಿಗೆ ಪ್ರತ್ಯೇಕವಾಗಿ, “ ನೀವು ಕಾಣುವುದನ್ನು ಕಾಣುವ ಕಣ್ಣುಗಳು ಭಾಗ್ಯವುಳ್ಳವು, ಏಕೆಂದರೆ, ಎಷ್ಟೋ ಪ್ರವಾದಿಗಳು ಹಾಗೂ ಅರಸರು ನೀವು ನೋಡುವುದನ್ನು ನೋಡುವುದಕ್ಕೂ, ನೀವು ಕೇಳುವುದನ್ನು ಕೇಳುವುದಕ್ಕು, ಆಶಿಸಿದರು. ಆದರೂ ಅದನ್ನು ಅವರು ನೋಡಲೂ ಇಲ್ಲ, ಕೇಳಲೂ ಇಲ್ಲ ಎಂದು ನಿಮಗೆ ಹೇಳುತ್ತೇನೆ” ಎಂದರು.