ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

Showing posts with label ಶುಭ ಸಂದೇಶ. Show all posts
Showing posts with label ಶುಭ ಸಂದೇಶ. Show all posts

04.06.2025 - ನಾನು ಲೋಕಕ್ಕೆ ಹೇಗೆ ಸೇರಿದವನಲ್ಲವೋ ಹಾಗೆಯೇ ಇವರೂ ಲೋಕಕ್ಕೆ ಸೇರಿದವರಲ್ಲ.

ಮೊದಲನೆಯ ವಾಚನ: ಪ್ರೇಷಿತರ ಕಾರ್ಯಕಲಾಪಗಳಿಂದ ವಾಚನ 20:28-38

ಪೌಲನು ಎಫೆಸದ ಸಭೆಯ ಹಿರಿಯರನ್ನು ಉದ್ದೇಶಿಸಿ ಮಾತನಾಡುತ್ತಾ ಹೀಗೆಂದನು: "ನೀವು ನಿಮ್ಮ ವಿಷಯದಲ್ಲಿ ಹಾಗೂ ಪವಿತ್ರಾತ್ಮ ನಿಮ್ಮ ಪಾಲನೆಗೆ ವಹಿಸಿರುವ ಮಂದೆಯ ವಿಷಯದಲ್ಲಿ ಜಾಗರೂಕರಾಗಿರಿ. ಪ್ರಭು ತಮ್ಮ ಸ್ವಂತ ರಕ್ತ ಸುರಿಸಿ ಸಂಪಾದಿಸಿದ ಧರ್ಮಸಭೆ ಉತ್ತಮ ಕುರಿಗಾಹಿಗಳಾಗಿರಿ. ನಾನು ಹೋದ ಬಳಿಕ ಕ್ರೂರವಾದ ತೋಳಗಳು ನಿಮ್ಮ ಮಧ್ಯೆ ನುಗ್ಗುವುವು ಎಂದು ನಾನು ಬಲ್ಲೆ. ಅವು ಮಂದೆಗೆ ಹಾನಿ ಮಾಡದೆ ಬಿಡವು. ಇದಲ್ಲದೆ ನಿಮ್ಮಲ್ಲೇ ಕೆಲವರು ಎದ್ದು ಭಕ್ತವಿಶ್ವಾಸಿಗಳನ್ನು ತಮ್ಮ ಕಡೆಗೆ ಸೆಲೆದುಕೊಳ್ಳಲು ಅಸತ್ಯವಾದುವುಗಳನ್ನು ಹೇಳುವರು. ಆದುದರಿಂದ ಎಚ್ಚರಿಕೆ! ನಾನು ಮೂರು ವರ್ಷಗಳ ಕಾಲ ಹಗಲಿರುಳು ಕಣ್ಣೀರಿಡುತ್ತಾ ಪ್ರತಿಯೊಬ್ಬನಿಗೂ ಬುದ್ಧಿ ಹೇಳಿದ್ದೇನೆಂಬುದನ್ನು ಮರೆಯಬೇಡಿ. ಈಗ ನಿಮ್ಮನ್ನು ದೇವರ ಕೈಗೂ, ಅವರ ಅನುಗ್ರಹ ಸಂದೇಶಕ್ಕೂ ಒಪ್ಪಿಸಿಕೊಡುತ್ತೇನೆ. ಅದು ನಿಮ್ಮನ್ನು ಅಭಿವೃದ್ಧಿಗೊಳಿಸಬಲ್ಲದು. ಮಾತ್ರವಲ್ಲ, ಪಾವನಪುರುಷರ ಬಾಧ್ಯತೆಯಲ್ಲಿ ಭಾಗಿಗಳಾಗುವಂತೆ ಮಾಡಬಲ್ಲದು. ನಾನು ಯಾರ ಬೆಳ್ಳಿಬಂಗಾರಕ್ಕೂ ಬಟ್ಟೆಬರೆಗೂ ಆಶೆಪಟ್ಟವನಲ್ಲ. ನನ್ನ ಹಾಗೂ ನನ್ನ ಸಂಗಡಿಗರ ಅವಶ್ಯಕತೆಗಳನ್ನು ನೀಗಿಸಲು ಈ ಕೈಗಳೇ ದುಡಿದಿವೆಯೆಂಬುದು ನಿಮ್ಮೆಲ್ಲರಿಗೂ ತಿಳಿದಿದೆ. ಹೀಗೆ ಕಷ್ಟಪಟ್ಟು ದುಡಿದು, ದುರ್ಬಲರಿಗೆ ನೆರವಾಗಬೇಕೆಂದು ನಾನು ನಿಮಗೆ ಹಲವಾರು ವಿಧದಲ್ಲಿ ತೋರಿಸಿಕೊಟ್ಟಿದ್ದೇನೆ. ' ಕೊಳ್ಳುವ ಕೈಗಿಂತ ಕೊಡುವ ಕೈ ಧನ್ಯವಾದುದು ' ಎಂಬ ಯೇಸುವಿನ ಮಾತುಗಳನ್ನು ನೆನಪಿನಲ್ಲಿಡಿ." ಇಷ್ಟು ಹೇಳಿದ ಮೇಲೆ ಪೌಲನು ಅವರೆಲ್ಲರ ಸಂಗಡ ಮೊಣಕಾಲೂರಿ ಪ್ರಾರ್ಥನೆ ಮಾಡಿದನು. ಅನಂತರ ಅವರು ಅವನನ್ನು ತಬ್ಬಿಕೊಂಡು ಮುದ್ದಿಟ್ಟು ಬೀಳ್ಕೊಟ್ಟರು. ಅವರ ಕಣ್ಣಲ್ಲಾದರೋ ನೀರು ಧಾರಾಕಾರವಾಗಿ ಸುರಿಯುತ್ತಿತ್ತು. ' ಇನ್ನೆಂದೂ ನೀವು ನನ್ನ ಮುಖವನ್ನು ಕಾಣಲಾರಿರಿ, ' ಎಂಬ ಅವನ ಮಾತು ಅವರನ್ನು ಅತೀವ ದುಃಖಕ್ಕೆ ಈಡುಮಾಡಿತ್ತು. ಅವರು ಹಡಗಿನವರೆಗೂ ಹೋಗಿ ಅವನನ್ನು ಬೀಳ್ಕೊಟ್ಟರು.

ಕೀರ್ತನೆ 
ಶ್ಲೋಕ: ಭೂರಾಜ್ಯಗಳೇ, ಸ್ತುತಿಸಿರಿ ದೇವರನು.

ಶುಭಸಂದೇಶ: ಯೊವಾನ್ನ 17:11-19


ಆ ಕಾಲದಲ್ಲಿ ಯೇಸು ಆಕಾಶದತ್ತ ಕಣ್ಣೆತ್ತಿ ಹೀಗೆಂದು ಪ್ರಾರ್ಥಿಸಿದರು: ಪವಿತ್ರ ಪಿತನೇ, ನಾವು ಒಂದಾಗಿರುವಂತೆ, ನೀವು ನನಗೆ ಕೊಟ್ಟಿರುವ ಇವರೂ ಒಂದಾಗಿರುವ ಹಾಗೆ ನಿಮ್ಮ ನಾಮದ ಶಕ್ತಿಯಿಂದ ಇವರನ್ನು ಸುರಕ್ಷಿತವಾಗಿರಿಸಿರಿ. ನಾನು ಇವರೊಡನೆ ಇದ್ದಾಗ ಇವರನ್ನು ಕಾಪಾಡಿದೆನು. ನೀವಿತ್ತ ಇವರನ್ನು ನಿಮ್ಮ ನಾಮದ ಶಕ್ತಿಯಿಂದ ಸುರಕ್ಷಿತವಾಗಿ ನೋಡಿಕೊಂಡು ಬಂದೆನು. ಪವಿತ್ರಗ್ರಂಥದ ಮಾತು ನೆರವೇರುವಂತೆ ವಿನಾಶಕ್ಕೆ ಗುರಿಯಾಗಬೇಕಿದ್ದ ಒಬ್ಬನನ್ನು ಬಿಟ್ಟರೆ, ಇವರಲ್ಲಿ ಬೇರೆ ಯಾರೂ ನಾಶವಾಗಲಿಲ್ಲ. ಈಗ ನಾನು ನಿಮ್ಮ ಬಳಿಗೆ ಬರುತ್ತಿದ್ದೇನೆ. ನನ್ನ ಆನಂದವು ಅವರ ಹೃದಯದಲ್ಲಿ ತುಂಬಿತುಳುಕುವಂತೆ ಈ ಲೋಕದಲ್ಲಿರುವಾಗಲೇ ಇವುಗಳನ್ನು ಹೇಳುತ್ತಿದ್ದೇನೆ. ನಿಮ್ಮ ಸಂದೇಶವನ್ನು ಇವರಿಗೆ ತಿಳಿಸಿದ್ದೇನೆ. ನಾನು ಲೋಕಕ್ಕೆ ಸೇರಿದವನಲ್ಲ. ಅಂತೆಯೇ, ಇವರೂ ಲೋಕಕ್ಕೆ ಸೇರಿದವರಲ್ಲ. ಈ ಕಾರಣ, ಲೋಕಕ್ಕೆ ಇವರ ಮೇಲೆ ದ್ವೇಷವಿದೆ. ಇವರನ್ನು ಲೋಕದಿಂದ ತೆಗೆದುಬಿಡಬೇಕೆಂದು ನಾನು ನಿಮ್ಮನ್ನು ಕೇಳಿಕೊಳ್ಳುತ್ತಿಲ್ಲ. ಆದರೆ ಕೇಡಿಗನಿಂದ ಇವರನ್ನು ಕಾಪಾಡಬೇಕೆಂದು ಕೇಳಿಕೊಳ್ಳುತ್ತೇನೆ. ನಾನು ಲೋಕಕ್ಕೆ ಹೇಗೆ ಸೇರಿದವನಲ್ಲವೋ ಹಾಗೆಯೇ ಇವರೂ ಲೋಕಕ್ಕೆ ಸೇರಿದವರಲ್ಲ. ಇವರನ್ನು ಸತ್ಯಸಂಧರನ್ನಾಗಿಸಿ ನಿಮ್ಮ ಸೇವೆಗೆ ಮೀಸಲಾಗಿಡಿ. ನಿಮ್ಮ ಮಾತೇ ಸತ್ಯ. ನೀವು ನನ್ನನ್ನು ಲೋಕಕ್ಕೆ ಕಳಿಸಿದಂತೆ ನಾನೂ ಇವರನ್ನು ಲೋಕಕ್ಕೆ ಕಳಿಸಿದ್ದೇನೆ. ಸತ್ಯಸಂಧರಾಗಿ ಇವರು ನಿಮ್ಮ ಸೇವೆಗೆ ಮೀಸಲಾಗಬೇಕೆಂದು ನನ್ನನು ನಾನೇ ಮೀಸಲಾಗಿಸಿಕೊಂಡಿದ್ದೇನೆ.

03.09.20 - ಆ ಬೆಸ್ತರು ದೋಣಿಗಳನ್ನು ದಡಕ್ಕೆ ಸಾಗಿಸಿದ್ದೇ ಎಲ್ಲವನ್ನು ತ್ಯಜಿಸಿಬಿಟ್ಟು ಯೇಸುವನ್ನು ಹಿಂಬಾಲಿಸಿದರು

ಮೊದಲನೇ ವಾಚನ: 1 ಕೊರಿಂಥಿಯರಿಗೆ 3:18-23

ಸಹೋದರರೇ, ಯಾರೂ ತನ್ನನ್ನು ತಾನೇ ವಂಚಿಸಿಕೊಳ್ಳದಿರಲಿ. ನಿಮ್ಮಲ್ಲಿ ಯಾರಾದರೂ ಈ ಲೋಕದ ದೃಷ್ಟಿಯಲ್ಲಿ ತಾನು ಜಾಣನೆಂದು ಭಾವಿಸುವುದಾದರೆ ಅಂಥವನು ಮೊದಲು ಹುಚ್ಚನಂತಿರಲು ಕಲಿಯಲಿ. ಆಗ ಅವನು ನಿಜವಾಗಿಯೂ ಜಾಣನಾಗುತ್ತಾನೆ.  ಇಹಲೋಕದ ಜಾಣತನವು ದೇವರ ದೃಷ್ಟಿಯಲ್ಲಿ ಹುಚ್ಚುತನವೇ ಸರಿ. “ದೇವರು ಜ್ಞಾನಿಗಳನ್ನು ಅವರ ಜಾಲದಲ್ಲಿಯೇ ಸಿಕ್ಕಿಸುವರು” ಎಂದೂ  “ಜ್ಞಾನಿಗಳ ಯೋಜನೆಗಳು ನಿಷ್ಫಲವೆಂಬುದು ಪ್ರಭುವಿಗೆ ತಿಳಿದಿದೆ” ಎಂದೂ ಲಿಖಿತವಾಗಿದೆಯಲ್ಲವೆ?  ಆದ್ದರಿಂದ ಕೇವಲ ನರಮಾನವರನ್ನೇ ನೆಚ್ಚಿಕೊಂಡು ಯಾರೂ ಹೆಚ್ಚಳಪಡದಿರಲಿ.  ವಾಸ್ತವವಾಗಿ ಸಮಸ್ತವೂ ನಿಮ್ಮದೇ. ಪೌಲ, ಅಪೊಲೋಸ್, ಕೇಫ - ಇವರಾಗಲಿ; ಜಗತ್ತು, ಜೀವ, ಮರಣ - ಇವುಗಳಾಗಲಿ, ಅಥವಾ ವರ್ತಮಾನ, ಭವಿಷ್ಯತ್ಕಾಲಗಳಾಗಲಿ, ಇವೆಲ್ಲವೂ ನಿಮ್ಮವೇ.  ಆದರೆ ನೀವು ಕ್ರಿಸ್ತಯೇಸುವಿಗೆ ಸೇರಿದವರು; ಕ್ರಿಸ್ತಯೇಸು ದೇವರಿಗೆ ಸೇರಿದವರು.

ಕೀರ್ತನೆ: 24:1-2, 3-4, 5-6

ಶ್ಲೋಕ: ಜಗವೂ ಅದರ ಜೀವಜಂತುಗಳೆಲ್ಲವೂ ಪ್ರಭುವಿನದೇ

ಶುಭಸಂದೇಶ: ಲೂಕ: 5:1-11


ಒಮ್ಮೆ ಯೇಸುಸ್ವಾಮಿ ಗೆನೆಸರೇತ್ ಎಂಬ ಸರೋವರದ ತೀರದಲ್ಲಿ ನಿಂತಿದ್ದಾಗ, ಜನ ಸಮೂಹವು ದೇವರ ವಾಕ್ಯವನ್ನು ಕೇಳಲು ನೂಕುನುಗ್ಗಲಾಗಿ ಬಂದು ಅವರನ್ನು ಒತ್ತರಿಸುತ್ತಿತ್ತು. ಆಗ ದಡದ ಮೇಲಿದ್ದ ಎರಡು ದೋಣಿಗಳು ಯೇಸುವಿನ ಕಣ್ಣಿಗೆ ಬಿದ್ದವು. ಬೆಸ್ತರು ದೋಣಿಗಳನ್ನು ಅಲ್ಲಿಯೇ ಬಿಟ್ಟು ತಮ್ಮ ಬಲೆಗಳನ್ನು ತೊಳೆಯುತ್ತಿದ್ದರು. ಆ ದೋಣಿಗಳಲ್ಲಿ ಒಂದು ಸಿಮೋನನದು. ಯೇಸು ಅದನ್ನು ಹತ್ತಿ ದಡದಿಂದ ಸ್ವಲ್ಪ ದೂರ ತಳ್ಳಲು ಹೇಳಿ, ಅದರಲ್ಲೇ ಕುಳಿತುಕೊಂಡು ತಮ್ಮ ಬೋಧನೆಯನ್ನು ಮುಂದುವರಿಸಿದರು. ಬೋಧನೆ ಮುಗಿದದ್ದೇ ಸಿಮೋನನಿಗೆ, “ನೀರು ಆಳವಾಗಿರುವ ಸ್ಥಳಕ್ಕೆ ದೋಣಿಯನ್ನು ಹಾಯಿಸಿ, ಮೀನುಬೇಟೆಗೆ ನಿಮ್ಮ ಬಲೆಗಳನ್ನು ಹಾಕಿರಿ,” ಎಂದರು. ಅದಕ್ಕೆ ಸಿಮೋನನು, “ಗುರುವೇ, ನಾವು ರಾತ್ರಿಯೆಲ್ಲಾ ದುಡಿದಿದ್ದೇವೆ; ಏನೂ ಸಿಗಲಿಲ್ಲ. ಆದರೂ ನಿಮ್ಮ ಮಾತಿಗೆ ಬೆಲೆ ಕೊಟ್ಟು ಬಲೆಗಳನ್ನು ಹಾಕುತ್ತೇವೆ,” ಎಂದನು. ಬಲೆಗಳನ್ನು ಹಾಕಿದ್ದೇ ಮೀನುಗಳು ರಾಶಿರಾಶಿಯಾಗಿ ಸಿಕ್ಕಿಕೊಂಡವು; ಬಲೆಗಳು ಹರಿದುಹೋಗುವುದರಲ್ಲಿದ್ದವು. ಆದುದರಿಂದ ಬೇರೆ ದೋಣಿಯಲ್ಲಿದ್ದ ತಮ್ಮ ಸಂಗಡಿಗರಿಗೆ ಸನ್ನೆಮಾಡಿ ಸಹಾಯಕ್ಕಾಗಿ ಕರೆದುಕೊಂಡರು. ಅವರೆಲ್ಲರೂ ಸೇರಿ ಮೀನುಗಳನ್ನು ತುಂಬಿಕೊಳ್ಳಲು, ದೋಣಿಗಳೆರಡೂ ಮುಳುಗಲು ಆರಂಭಿಸಿದವು. ಇದನ್ನು ಕಂಡ ಸಿಮೋನ್ ಪೇತ್ರನು ಯೇಸುವಿನ ಕಾಲಿಗೆ ಬಿದ್ದು, “ಸ್ವಾಮೀ, ನಾನು ಪಾಪಾತ್ಮ; ನನ್ನಿಂದ ದೂರವಿರಿ!” ಎಂದನು. ಹಿಡಿದ ಮೀನಿನ ರಾಶಿಯನ್ನು ಕಂಡು ಅವನ ಸಂಗಡಿಗರೆಲ್ಲರೂ ನಿಬ್ಬೆರಗಾಗಿ ಹೋಗಿದ್ದರು.  ಸಿಮೋನನ ಪಾಲುಗಾರರಾದ ಜೆಬೆದಾಯನ ಮಕ್ಕಳು - ಯಕೋಬ ಮತ್ತು ಯೊವಾನ್ನರು - ಹಾಗೆಯೇ ಬೆರಗಾಗಿದ್ದರು. ಆಗ ಯೇಸು ಸಿಮೋನನಿಗೆ, “ಹೆದರಬೇಡ, ಇಂದಿನಿಂದ ನೀನು ಮೀನು ಹಿಡಿಯುವ ಬದಲು ಮನುಷ್ಯರನ್ನೇ ಹಿಡಿಯುವವನು ಆಗುವೆ,” ಎಂದರು.  ಆ ಬೆಸ್ತರು ದೋಣಿಗಳನ್ನು ದಡಕ್ಕೆ ಸಾಗಿಸಿದ್ದೇ ಎಲ್ಲವನ್ನು ತ್ಯಜಿಸಿಬಿಟ್ಟು ಯೇಸುವನ್ನು ಹಿಂಬಾಲಿಸಿದರು.



07.08.20 - "ಆದರೆ ನನ್ನ ನಿಮಿತ್ತ ತನ್ನ ಪ್ರಾಣವನ್ನು ಕಳೆದುಕೊಳ್ಳುವವನು ಅದನ್ನು ಕಂಡುಕೊಳ್ಳುವನು"

ಮೊದಲನೇ ವಾಚನ: ನಹೂಮ2:1 , 3; 3:1-3, 6-7

ನಿನೆವೆಯೇ, ನಿನಗೆದುರಾಗಿ ನಿಂತಿಹನು, ನಿನ್ನನ್ನು ಚದುರಿಸುವವನು! ಕಾವಲಿಡು ಕೋಟೆಯ ಸುತ್ತಲು ಪಹರೆಯಿಡು ದಾರಿ ಕಾಯಲು; ಅಣಿಯಾಗಲಿ ನಿನ್ನ ಸೈನ್ಯವಿಡೀ, ನಡುಕಟ್ಟಿ ನಿಲ್ಲು. ಶತ್ರುವಿನ ಶೂರರ ಗುರಾಣಿ ರಕ್ತಗೆಂಪು, ಪರಾಕ್ರಮಿಗಳ ಉಡುಪು ಕಡುಗೆಂಪು. ರಣರಂಗದೊಳು ಥಳಥಳಿಸುತ್ತವೆ ರಥಗಳು ಝಳಪಿಸುತ್ತವೆ ಈಟಿಗಳು. ಕಾಳಗಕ್ಕೆ ಕಾತರದಿಂದಿವೆ ಕುದುರೆಗಳು. ಧಿಕ್ಕಾರ ರಕ್ತಮಯವಾದ ನಗರಕೆ! ತುಂಬಿದೆ ಅದರಲಿ ಸುಳ್ಳು ಮತ್ತು ಸುಲಿಗೆ ನಿಲ್ಲದೆ ನಡೆಯುತ್ತಿದೆ ಅದರಲಿ ಕೊಳ್ಳೆ. ಕೇಳಿ, ಚಕ್ರಗಳಚೀತ್ಕಾರ, ಚಾಟಿಗಳ ಚಟಪಟ; ಕುದುರೆಗಳ ಭರದೌಡು, ರಥಗಳ ಹಾರಾಟ. ರಾಹುತರ ರಭಸ, ಕತ್ತಿಯ ಥಳಥಳಿಪು, ಈಟಿಯ ಝಳಿಪು; ಹತರಾದವರು ಅಗಣಿತ, ಸತ್ತವರು ಅಸಂಖ್ಯಾತ, ಶವಗಳ ರಾಶಿ ವಿಪರೀತ; ನುಗ್ಗುವವರು ಎಡವುತಿಹರು ಹೆಣಗಳನು ದಾಟಿಹೋಗುತ. ಎಸೆಯುವೆನು ನಿನ್ನ ಮೇಲೆ ಹೊಲಸನು ಕಳೆಯುವೆನು ನಿನ್ನ ಮಾನವನು ಪರಿಹಾಸ್ಯಕ್ಕೀಡುಮಾಡುವೆನು ನಿನ್ನನು. ನಿನ್ನ ನೋಡುವವರು ನಿನ್ನಿಂದ ದೂರ ಓಡುವರು “ನಿನೆವೆ ಹಾಳುಬಿದ್ದಿದೆ, ಅದಕ್ಕೆ ಗೋಳಿಡುವರಾರು? ಅದನ್ನು ಸಂತೈಸುವವರು ನಮಗೆಲ್ಲಿ ಸಿಕ್ಕಿಯಾರು?, ಎಂದುಕೊಳ್ಳುವರು.”

ಧರ್ಮೋಪದೇಶಕಾಂಡ: 32:35-36, 39, 41

ಶ್ಲೋಕ: ಬದುಕಿಸುವವನು, ಕೊಲ್ಲುವವನು ನಾನೇ.

ಶುಭಸಂದೇಶ: ಮತ್ತಾಯ 16:24-28


ಯೇಸು ತಮ್ಮ ಶಿಷ್ಯರಿಗೆ ಹೀಗೆಂದರು: “ಯಾರಿಗಾದರೂ ನನ್ನನ್ನು ಹಿಂಬಾಲಿಸಲು ಮನಸ್ಸಿದ್ದರೆ, ಅವನು ತನ್ನನ್ನು ತಾನೇ ಪರಿತ್ಯಜಿಸಿ ತನ್ನ ಶಿಲುಬೆಯನ್ನು ತಾನೇ ಹೊತ್ತುಕೊಂಡು ನನ್ನನ್ನು ಹಿಂಬಾಲಿಸಲಿ.  ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಹಾತೊರೆಯುವವನು ಅದನ್ನು ಕಳೆದುಕೊಳ್ಳುವನು. ಆದರೆ ನನ್ನ ನಿಮಿತ್ತ ತನ್ನ ಪ್ರಾಣವನ್ನು ಕಳೆದುಕೊಳ್ಳುವವನು ಅದನ್ನು ಕಂಡುಕೊಳ್ಳುವನು.  ಪ್ರಪಂಚವನ್ನೆಲ್ಲಾ ಗೆದ್ದುಕೊಂಡರೂ ಒಬ್ಬನು ತನ್ನ ಪ್ರಾಣವನ್ನೇ ಕಳೆದುಕೊಂಡರೆ ಅದರಿಂದ ಅವನಿಗೆ ದೊರಕುವ ಲಾಭವೇನು? ಅಥವಾ ಮನುಷ್ಯರು ತನ್ನ ಪ್ರಾಣಕ್ಕೆ ಈಡಾಗಿ ಏನನ್ನು ತಾನೇ ಕೊಡಬಲ್ಲನು?  ನರಪುತ್ರನು ತನ್ನ ಪಿತನ ಪ್ರಭಾವದೊಡನೆ ತನ್ನ ದೂತರ ಸಮೇತ ಬರಲಿದ್ದಾನೆ. ಆಗ ಪ್ರತಿಯೊಬ್ಬ ಮಾನವನಿಗೆ ಅವನವನ ಕೃತ್ಯಕ್ಕೆ ತಕ್ಕ ಪ್ರತಿಫಲ ಕೊಡುವನು.  ಇಲ್ಲಿರುವವರಲ್ಲಿ ಕೆಲವರು ನರಪುತ್ರನು ತನ್ನ ಸಾಮ್ರಾಜ್ಯದಲ್ಲಿ ಪ್ರತ್ಯಕ್ಷನಾಗುವುದನ್ನು ಕಾಣುವುದಕ್ಕೆ ಮುನ್ನ ಸಾವನ್ನು ಸವಿಯುವುದಿಲ್ಲ ಎಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ”.

06.08.20 - "ಅವರ ಮುಖ ಸೂರ್ಯನಂತೆ ಪ್ರಕಾಶಿಸಿತು"

ಮೊದಲನೇ ವಾಚನ: ದಾನಿಯೇಲ 7:9-10, 13-14

ನಾನು ನೋಡುತ್ತಿದ್ದ ಹಾಗೆ: ಸಿಂಹಾಸನಗಳನ್ನು ಹಾಕಲಾಯಿತು. ಮಹಾವೃದ್ಧನೊಬ್ಬನು ಆಸೀನನಾದನು. ಆತನ ಉಡುಪು ಬೆಳ್ಳಗಿತ್ತು ಹಿಮದಂತೆ. ಆತನ ತಲೆಗೂದಲಿತ್ತು ನಿರ್ಮಲವಾದ ಬಿಳಿಯ ಉಣ್ಣೆಯಂತೆ. ಆತನ ಸಿಂಹಾಸನ ಅಗ್ನಿಜ್ವಾಲೆಗಳು. ಧಗಧಗಿಸುವ ಬೆಂಕಿ ಅದರ ಚಕ್ರಗಳು.  ಆ ಸಿಂಹಾಸನದ ಸಮ್ಮುಖದಿಂದ ಪ್ರಜ್ವಲ ಪ್ರವಾಹವೊಂದು ಉಕ್ಕಿ ಹರಿದುಬಂದಿತು. ಲಕ್ಷೋಪಲಕ್ಷ ದೂತರು ಆತನಿಗೆ ಸೇವೆಸಲ್ಲಿಸುತ್ತಿದ್ದರು. ಕೋಟ್ಯಾನುಕೋಟಿ ಕಿಂಕರರು ಆತನ ಮುಂದೆ ನಿಂತಿದ್ದರು. ನ್ಯಾಯಸಭೆಯವರು ತೀರ್ಪುನೀಡಲು ಕುಳಿತುಕೊಂಡರು. ಪಟ್ಟಿಪುಸ್ತಕಗಳನ್ನು ತೆರೆಯಲಾಯಿತು. ನಾನು ಕಂಡ ರಾತ್ರಿಯ ಕನಸಿನಲ್ಲಿ ನರಪುತ್ರನಂತಿರುವವನು ಆಕಾಶದ ಮೇಘಗಳೊಂದಿಗೆ ಬಂದು ಆ ಮಹಾವೃದ್ಧನನ್ನು ಸಮೀಪಿಸಿದನು. ಅವನನ್ನು ಆತನ ಸನ್ನಿಧಿಗೆ ತಂದರು. ಸಕಲ ರಾಷ್ಟ್ರ-ಕುಲ-ಭಾಷೆಗಳವರು ಅವನಿಗೆ ಸೇವೆ ಸಲ್ಲಿಸಲೆಂದು ಅವನಿಗೆ ದೊರೆತನ, ಘನತೆ, ರಾಜ್ಯತ್ವ ಇವುಗಳನ್ನು ಕೊಡಲಾಯಿತು. ಅವನ ಆಳ್ವಿಕೆಗೆ ಅಂತ್ಯವಿಲ್ಲ, ಅದು ಶಾಶ್ವತವಾದುದು, ಅವನ ರಾಜ್ಯ ಎಂದಿಗೂ ಅಳಿಯದು!

ಕೀರ್ತನೆ: 97:1-2, 5-6, 9

ಶ್ಲೋಕ: ಪ್ರಭುವೇ, ಸರ್ವಾಧಿಕಾರಿ ನೀನು ಲೋಕಕ್ಕೆಲ್ಲಾ

ಎರಡನೇ ವಾಚನ: ಪೇತ್ರ 1:16-19

ನಮ್ಮ ಪ್ರಭು ಯೇಸುಕ್ರಿಸ್ತರ ಶಕ್ತಿಸಾಮರ್ಥ್ಯವನ್ನು ಮತ್ತು ಅವರ ಪುನರಾಗಮನವನ್ನು ನಿಮಗೆ ತಿಳಿಯಪಡಿಸುವಾಗ ಚಮತ್ಕಾರದಿಂದ ಕಲ್ಪಿಸಿದ ಕಟ್ಟುಕತೆಗಳನ್ನು ಆಧರಿಸಿ ನಾವು ಮಾತನಾಡಲಿಲ್ಲ. ನಾವೇ ಅವರ ಮಹತ್ತನ್ನು ಕಣ್ಣಾರೆಕಂಡು ಅದನ್ನು ತಿಳಿಯಪಡಿಸಿದ್ದೇವೆ.  ತಂದೆಯಾದ ದೇವರಿಂದ ಅವರು ಗೌರವವನ್ನೂ ಮಹಿಮೆಯನ್ನೂ ಪಡೆದಾಗ, “ಈತನು ನನ್ನ ಪುತ್ರ, ನನಗೆ ಪ್ರಿಯನಾದವನು; ನನ್ನ ಅಪಾರ ಮೆಚ್ಚುಗೆಗೆ ಪಾತ್ರನು,” ಎಂದು ಅವರನ್ನು ಕುರಿತೇ ವಾಣಿಯೊಂದು ಮಹೋನ್ನತ ವೈಭವದಿಂದ ಕೇಳಿಬಂದಿತು.  ಆಗ ನಾವು ಆ ಪುನೀತ ಪರ್ವತದ ಮೇಲೆ ಅವರೊಡನೆ ಇದ್ದೆವು. ಸ್ವರ್ಗದಿಂದ ಆ ವಾಣಿಯನ್ನು ನಾವು ಕೇಳಿದೆವು. ಆದ್ದರಿಂದ ಪ್ರವಾದನೆಯ ಸಂದೇಶವು ನಮಗೆ ಮತ್ತಷ್ಟು ಖಚಿತವಾಗಿ ಗೊತ್ತಾಗಿದೆ. ಇದನ್ನು ನೀವು ಕತ್ತಲಲ್ಲಿ ಬೆಳಗುವ ದೀಪವೆಂದು ಪರಿಗಣಿಸಿ ಲಕ್ಷ್ಯಕೊಟ್ಟರೆ ಒಳ್ಳೆಯದು. ನಿಮ್ಮ ಹೃದಯದಲ್ಲಿ ಬೆಳಕು ಹರಿದು ಅರುಣೋದಯದ ನಕ್ಷತ್ರವು ಮೂಡುವವರೆಗೂ ಈ ದೀಪವು ಬೆಳಗುತ್ತಿರುತ್ತದೆ.

ಶುಭಸಂದೇಶ: ಮತ್ತಾಯ 17:1-9


ಪೇತ್ರ, ಯಕೋಬ ಮತ್ತು ಆತನ ಸಹೋದರ ಯೊವಾನ್ನ ಇವರನ್ನು ಯೇಸುಸ್ವಾಮಿ ಪ್ರತ್ಯೇಕವಾಗಿ ತಮ್ಮೊಡನೆ ಕರೆದುಕೊಂಡು ಎತ್ತರವಾದ ಒಂದು ಬೆಟ್ಟಕ್ಕೆ ಹೋದರು. ಅಲ್ಲಿ ಆ ಶಿಷ್ಯರ ಕಣ್ಣೆದುರಿಗೇ ಸ್ವಾಮಿ ರೂಪಾಂತರ ಹೊಂದಿದರು, ಅವರ ಮುಖ ಸೂರ್ಯನಂತೆ ಪ್ರಕಾಶಿಸಿತು. ಅವರ ಉಡುಪು ಬೆಳಕಿನಂತೆ ಪ್ರಜ್ವಲಿಸಿತು. ಇದ್ದಕ್ಕಿದ್ದ ಹಾಗೆ ಮೋಶೆ ಮತ್ತು ಎಲೀಯ ಪ್ರತ್ಯಕ್ಷರಾಗಿ ಯೇಸುವಿನೊಡನೆ ಮಾತನಾಡುತ್ತಿದ್ದುದು ಅವರಿಗೆ ಕಾಣಿಸಿತು. ಆಗ ಪೇತ್ರನು ಯೇಸುವಿಗೆ, “ಪ್ರಭೂ, ನಾವು ಇಲ್ಲೇ ಇರುವುದು ಎಷ್ಟು ಒಳ್ಳೆಯದು! ಅಪ್ಪಣೆಯಾದರೆ ಇಲ್ಲಿ ಮೂರು ಗುಡಾರಗಳನ್ನು ಕಟ್ಟುವೆನು. ತಮಗೊಂದು, ಮೋಶೆಗೊಂದು, ಎಲೀಯನಿಗೊಂದು,” ಎಂದನು. ಪೇತ್ರ ಇನ್ನೂ ಮಾತನಾಡುತ್ತಿರುವಾಗಲೇ ಪ್ರಕಾಶಮಾನವಾದ ಮೇಘವೊಂದು ಅವರನ್ನು ಆವರಿಸಿತು; ಆ ಮೇಘದಿಂದ ಒಂದು ವಾಣಿ, ‘ಈತನು ನನ್ನ ಪುತ್ರ, ನನಗೆ ಪರಮಪ್ರಿಯನು, ನನ್ನ ಅಪಾರ ಮೆಚ್ಚುಗೆಗೆ ಪಾತ್ರನು. ಈತನ ಮಾತಿಗೆ ಕಿವಿಗೊಡಿ,” ಎಂದಿತು. ಶಿಷ್ಯರು ಈ ವಾಣಿಯನ್ನು ಕೇಳಿ ಭಯಭ್ರಾಂತರಾದರು; ಬೋರಲು ಬಿದ್ದರು. ಆಗ ಯೇಸು ಅವರ ಹತ್ತಿರಕ್ಕೆ ಬಂದು ಅವರನ್ನು ಮುಟ್ಟಿ, “ಏಳಿ, ಭಯಪಡಬೇಡಿ,” ಎಂದರು. ಅವರು ಕಣ್ಣೆತ್ತಿ ನೋಡಿದಾಗ ಯೇಸುವನ್ನು ಬಿಟ್ಟು ಮತ್ತೆ ಯಾರನ್ನೂ ಕಾಣಲಿಲ್ಲ. ಅವರೆಲ್ಲರು ಬೆಟ್ಟದಿಂದ ಇಳಿದುಬರುವಾಗ ಯೇಸು, “ನರಪುತ್ರನು ಸತ್ತು ಪುನರುತ್ಥಾನ ಹೊಂದುವ ತನಕ ನೀವು ಕಂಡ ಈ ದರ್ಶನವನ್ನು ಯಾರಿಗೂ ಹೇಳಬೇಡಿ,” ಎಂದು ಆಜ್ಞಾಪಿಸಿದರು. 

05.08.20 - “ತಾಯಿ, ನಿನ್ನ ವಿಶ್ವಾಸ ಅಚಲವಾದುದು. ನಿನ್ನ ಕೋರಿಕೆ ನೆರವೇರಲಿ,”

ಮೊದಲನೇ ವಾಚನ: ಪ್ರವಾದಿ ಯೆರೆಮೀಯನ ಗ್ರಂಥ  31:1-7
ಸರ್ವೇಶ್ವರಸ್ವಾಮಿ ಹೀಗೆನ್ನುತ್ತಾರೆ: “ಕಾಲ ಬರಲಿದೆ, ಆಗ ಇಸ್ರಯೇಲಿನ ಸಕಲ ಗೋತ್ರಗಳಿಗೆ ನಾನೇ ದೇವರಾಗಿರುವೆನು. ಅವರು ನನಗೆ ಪ್ರಜೆಯಾಗಿರುವರು.  ಇದು ಸರ್ವೇಶ್ವರನಾದ ನನ್ನ ನುಡಿ. ಅಳಿದುಳಿದಾ ಜನಕ್ಕೆ ಅರಣ್ಯದಲ್ಲಿ ದಯೆ ದೊರೆಯಿತು. ಇಸ್ರಯೇಲ್ ಶಾಂತಿಯನ್ನು ಅರಸುತ್ತಾ ಹೋಗುವಾಗ ಸರ್ವೇಶ್ವರನಾದ ನಾನು ದೂರದಿಂದ ಅದಕ್ಕೆ ದರ್ಶನಕೊಟ್ಟು: ‘ನಾನು ನಿನ್ನನ್ನು ಪ್ರೀತಿಸುವುದು ಶಾಶ್ವತ ಪ್ರೇಮದಿಂದ. ಈ ಕಾರಣದಿಂದ ನಿನ್ನನ್ನು ಆಕರ್ಷಿಸಿಕೊಂಡಿದ್ದೇನೆ ಅಚಲ ಪ್ರೇಮದಿಂದ.  ಇಸ್ರಯೇಲೆಂಬ ಯುವತಿಯೇ, ನಿನ್ನ ಪಾಳುಬಿದ್ದ ಪ್ರದೇಶಗಳನ್ನು ನಾನು ಪುನಃ ಕಟ್ಟುವೆನು, ಅವು ಕಟ್ಟಡಗಳಿಂದ ಕೂಡಿರುವುವು. ನೀನು, ಮತ್ತೆ ತಾಳಮೇಳಗಳನ್ನು ತೆಗೆದುಕೊಂಡು ನಲಿದಾಡುವವರ ನಾಟ್ಯಗಳಲ್ಲಿ ಭಾಗವಹಿಸುವೆ.  ಸಮಾರಿಯದ ಗುಡ್ಡಗಳಲ್ಲಿ ಮರಳಿ ದ್ರಾಕ್ಷಾತೋಟಗಳನ್ನು ಮಾಡಿಕೊಳ್ಳುವೆ. ನೆಡುವವರೇ ನೆಟ್ಟ ಫಲಗಳನ್ನು ಸವಿಯುವರು. 6ಹೌದು, ದಿನ ಬರುವುದು. ಆಗ ಕಾವಲುಗಾರರು ಎಫ್ರಯಿಮಿನ ಗುಡ್ಡಗಳ ಮೇಲೆ ನಿಂತು, ‘ಎದ್ದೇಳಿ, ಹೋಗೋಣ. ಬನ್ನಿ ಸಿಯೋನಿಗೆ, ನಮ್ಮ ದೇವರಾದ ಸರ್ವೇಶ್ವರನ ಸನ್ನಿಧಾನಕ್ಕೆ’ ಎಂದು ಕೂಗಿ ಕರೆ ನೀಡುವರು.” ಸರ್ವೇಶ್ವರ ಹೀಗೆನ್ನುತ್ತಾರೆ: “ಯಕೋಬನನ್ನು ಕುರಿತು ಹರ್ಷಧ್ವನಿಗೈಯಿರಿ ಜನಾಂಗಗಳಾ ಶಿರೋಮಣಿಗೆ ಜೈಕಾರಮಾಡಿರಿ. ‘ಸರ್ವೇಶ್ವರ ಆಳಿದುಳಿದಾ ಇಸ್ರಯೇಲರನ್ನು ರಕ್ಷಿಸಿಹನು’ ಎಂದು ಘೋಷಿಸುತ್ತಾ ಸ್ತುತಿಸಿರಿ.

ಕೀರ್ತನೆ: 31-10,11-12,13

ಶ್ಲೋಕ: ಕುರಿಮಂದೆಯನ್ನು ಕಾಯುವ ಕುರುಬನಂತೆ ಪ್ರಭು ನಮ್ಮನ್ನು ಕಾಪಾಡುವರು 

ಶುಭಸಂದೇಶ: ಮತ್ತಾಯ 15:21-28


ಯೇಸುಸ್ವಾಮಿ ಅಲ್ಲಿಂದ ಹೊರಟು ಟೈರ್ ಹಾಗೂ ಸಿದೋನ್ ಪ್ರಾಂತ್ಯಕ್ಕೆ ಹೋದರು. ಅಲ್ಲಿ ವಾಸವಾಗಿದ್ದ ಕಾನಾನ್ ನಾಡಿನ ಮಹಿಳೆ ಒಬ್ಬಳು ಅವರ ಬಳಿಗೆ ಬಂದಳು. “ಸ್ವಾಮೀ, ದಾವೀದ ಕುಲಪುತ್ರರೇ, ನನಗೆ ದಯೆತೋರಿ, ನನ್ನ ಮಗಳಿಗೆ ದೆವ್ವಹಿಡಿದು ಬಹಳ ಸಂಕಟಪಡುತ್ತಿದ್ದಾಳೆ,” ಎಂದು ಕೂಗಿಕೊಂಡಳು. ಯೇಸು ಆಕೆಗೆ ಒಂದು ಮಾತನ್ನೂ ಹೇಳಲಿಲ್ಲ. ಶಿಷ್ಯರು ಹತ್ತಿರಕ್ಕೆ ಬಂದು, “ಇವಳನ್ನು ಕಳಿಸಿಬಿಡಿ, ಒಂದೇ ಸಮನೆ ಗೋಳಿಡುತ್ತಾ, ನಮ್ಮನ್ನು ಬೆಂಬತ್ತಿ ಬರುತ್ತಿದ್ದಾಳೆ,” ಎಂದು ಕೇಳಿಕೊಂಡರು. ಆಗ ಯೇಸು, “ನನ್ನನ್ನು ಕಳಿಸಿರುವುದು ತಪ್ಪಿಹೋದ ಕುರಿಗಳಂತಿರುವ ಇಸ್ರಯೇಲ್ ಜನಾಂಗದವರ ಬಳಿಗೆ ಮಾತ್ರ,” ಎಂದರು. ಆದರೂ ಆಕೆ ಯೇಸುವಿಗೆ ಅಡ್ಡಬಿದ್ದು, “ಸ್ವಾಮೀ, ಸಹಾಯ ಮಾಡಿ,” ಎಂದು ಯಾಚಿಸಿದಳು. ಅದಕ್ಕೆ ಯೇಸು, “ಮಕ್ಕಳ ಆಹಾರವನ್ನು ತೆಗೆದು ನಾಯಿಗಳಿಗೆ ಎಸೆಯುವುದು ಸರಿಯಲ್ಲ,” ಎಂದರು. ಆಗ ಆಕೆ, “ಅದು ನಿಜ ಸ್ವಾಮೀ, ನಾಯಿಗಳಾದರೂ ತಮ್ಮ ಯಜಮಾನನ ಮೇಜಿನಿಂದ ಕೆಳಕ್ಕೆ ಬೀಳುವ ಚೂರುಪಾರನ್ನು ತಿನ್ನುತ್ತವೆ, ಅಲ್ಲವೇ?’ ಎಂದು ಮರುತ್ತರ ಕೊಟ್ಟಳು. ಆಗ ಯೇಸು, “ತಾಯಿ, ನಿನ್ನ ವಿಶ್ವಾಸ ಅಚಲವಾದುದು. ನಿನ್ನ ಕೋರಿಕೆ ನೆರವೇರಲಿ,” ಎಂದರು. ಅದೇ ಕ್ಷಣದಲ್ಲಿ ಆಕೆಯ ಮಗಳು ಗುಣ ಹೊಂದಿದಳು.



22.07.20 - “ಏಕಮ್ಮಾ ಅಳುತ್ತಿರುವೇ? ಏನನ್ನು ಹುಡುಕುತ್ತಿರುವೇ?’

ಮೊದಲನೇ ವಾಚನ: ಪರಮಗೀತೆ  3:1-4  

ಮದುಮಗಳು ಇಂತೆನ್ನುತ್ತಾಳೆ: ನನ್ನ ಪ್ರಾಣಕಾಂತನನ್ನು ರಾತ್ರಿಯೆಲ್ಲಾ ಹುಡುಕಿದೆ ಹಾಸಿಗೆಯ ಮೇಲೆ ಹಾತೊರೆದೆ ಹುಡುಕಿ ಹುಡುಕಿ ಸಿಗಲಾರದೆ ಬೇಸತ್ತೆ. ಎದ್ದು ಊರೆಲ್ಲಾ ಅಲೆದಾಡಿದೆ ಬೀದಿಗಳಲ್ಲಿ, ಚೌಕಗಳಲ್ಲಿ ಹುಡುಕಾಡಿದೆ. ಹುಡುಕಿ ಹುಡುಕಿ ಸಿಗಲಾರದೆ ಬೇಸತ್ತೆ. ಊರಲ್ಲಿ ತಿರುಗುವ ಪಹರೆಯವರ ಕೈಗೆ ಸಿಕ್ಕಿಬಿದ್ದೆ “ನನ್ನ ಪ್ರಾಣಕಾಂತನನ್ನು ಕಂಡಿರಾ?’ ಎಂದು ವಿಚಾರಿಸಿದೆ. ಅವರನ್ನು ಬಿಟ್ಟ ತುಸು ಹೊತ್ತಿನಲ್ಲೆ ನನ್ನ ಪ್ರಾಣಕಾಂತನನ್ನು ಕಂಡುಕೊಂಡೆ.

ಕೀರ್ತನೆ: 63:2, 3-4, 5-6, 8-9

ಶ್ಲೋಕ: ನಿನಗೋಸ್ಕರ ಎನ್ನ ತನು ಸೊರಗಿದೆ, ಮನ ಬಾಯಾರಿದೆ

ಶುಭಸಂದೇಶ: ಯೊವಾನ್ನ20:1-2, 11-18


ಅಂದು ಭಾನುವಾರ, ಮುಂಜಾನೆ. ಇನ್ನೂ ಕತ್ತಲಾಗಿತ್ತು. ಮಗ್ದಲದ ಮರಿಯಳು ಸಮಾಧಿಯ ಬಳಿಗೆ ಬಂದಳು. ಸಮಾಧಿಯ ಬಾಗಿಲಿಗೆ ಮುಚ್ಚಲಾಗಿದ್ದ ಕಲ್ಲು ಅಲ್ಲಿಂದ ತೆಗೆದುಹಾಕಿರುವುದನ್ನು ಕಂಡಳು. ಆಗ ಆಕೆ ಸಿಮೋನ ಪೇತ್ರನ ಮತ್ತು ಯೇಸುವಿಗೆ ಆಪ್ತನಾಗಿದ್ದ ಇನ್ನೊಬ್ಬ ಶಿಷ್ಯನ ಬಳಿಗೆ ಓಡಿಬಂದು, “ಪ್ರಭುವನ್ನು ಸಮಾಧಿಯೊಳಗಿಂದ ತೆಗೆದುಕೊಂಡು ಹೋಗಿಬಿಟ್ಟಿದ್ದಾರೆ; ಅವರನ್ನು ಎಲ್ಲಿ ಇಟ್ಟಿದ್ದಾರೋ ಗೊತ್ತಿಲ್ಲ,” ಎಂದು ಹೇಳಿದಳು. ಮರಿಯಳು ಅಳುತ್ತಾ ಸಮಾಧಿಯ ಹೊರಗೆ ನಿಂತುಕೊಂಡಿದ್ದಳು. ಆಕೆ ಅಳುತ್ತಾ ಸಮಾಧಿಯೊಳಗೆ ಬಗ್ಗಿನೋಡಿದಾಗ ಶ್ವೇತವಸ್ತ್ರಧಾರಿಗಳಾದ ಇಬ್ಬರು ದೇವದೂತರನ್ನು ಅಲ್ಲಿ ಕಂಡಳು. ಯೇಸುವಿನ ಪಾರ್ಥಿವ ಶರೀರವನ್ನು ಇಟ್ಟಿದ್ದ ಸ್ಥಳದಲ್ಲಿ ಒಬ್ಬನು ಅವರ ತಲೆಯಿದ್ದ ಕಡೆಯಲ್ಲೂ ಮತ್ತೊಬ್ಬನು ಕಾಲಿದ್ದ ಕಡೆಯಲ್ಲೂ ಕುಳಿತಿದ್ದರು.ಅವರು ಆಕೆಯನ್ನು, “ಏಕಮ್ಮಾ ಅಳುತ್ತಿರುವೆ?” ಎಂದು ಕೇಳಿದರು. “ನನ್ನ ಪ್ರಭುವನ್ನು ತೆಗೆದುಕೊಂಡು ಹೋಗಿಬಿಟ್ಟಿದ್ದಾರೆ. ಎಲ್ಲಿ ಇಟ್ಟಿದ್ದಾರೋ ತಿಳಿಯದು,” ಎಂದಳು. ಹಾಗೆ ಹೇಳಿ ಹಿಂದಕ್ಕೆ ತಿರುಗಿದಾಗ ಅಲ್ಲೇ ಯೇಸು ನಿಂತಿರುವುದು ಆಕೆಗೆ ಕಾಣಿಸಿತು. ಆದರೆ ಯೇಸುವೇ ಅವರೆಂದು ಆಕೆಗೆ ತಿಳಿಯಲಿಲ್ಲ. ಯೇಸು, “ಏಕಮ್ಮಾ ಅಳುತ್ತಿರುವೇ? ಏನನ್ನು ಹುಡುಕುತ್ತಿರುವೇ?’ ಎಂದು ಕೇಳಿದಾಗಲೂ ಮರಿಯಳು ಅವರು ತೋಟಗಾರನೆಂದು ಭಾವಿಸಿ, “ಅಯ್ಯಾ, ನೀವೇನಾದರೂ ಅವರನ್ನು ಕೊಂಡೊಯ್ದಿದ್ದರೆ ಎಲ್ಲಿ ಇಟ್ಟಿರುವಿರಿ, ಹೇಳಿ; ನಾನು ತೆಗೆದುಕೊಂಡು ಹೋಗುತ್ತೇನೆ,” ಎಂದು ಹೇಳಿದಳು. ಆಗ ಯೇಸು, “ಮರಿಯಾ” ಎಂದು ಹೆಸರಿಡಿದು ಕರೆದರು. ಆಕೆ ಹಿಂದಿರುಗಿ ನೋಡಿ, “ರಬ್ಬೂನಿ” ಎಂದಳು. (ಯೆಹೂದ್ಯರ ಭಾಷೆಯಲ್ಲಿ ಹಾಗೆಂದರೆ “ಗುರುದೇವಾ” ಎಂದರ್ಥ). ಯೇಸು ಆಕೆಗೆ, “ನನ್ನನ್ನು ಹಿಡಿದುಕೊಂಡಿರಬೇಡ, ನಾನು ಇನ್ನೂ ಪಿತನ ಬಳಿಗೆ ಏರಿಹೋಗಿಲ್ಲ. ನೀನು ನನ್ನ ಸಹೋದರರ ಬಳಿಗೆ ಹೋಗಿ ನನ್ನ ಪಿತನೂ ನಿಮ್ಮ ಪಿತನೂ ನನ್ನ ದೇವರೂ ನಿಮ್ಮ ದೇವರೂ ಆಗಿರುವಾತನಲ್ಲಿಗೆ ನಾನು ಏರಿಹೋಗುತ್ತೇನೆಂದು ತಿಳಿಸು,” ಎಂದು ಹೇಳಿದರು. ಮಗ್ದಲದ ಮರಿಯಳು ಶಿಷ್ಯರ ಬಳಿಗೆ ಬಂದು, “ನಾನು ಪ್ರಭುವನ್ನು ಕಂಡೆ. ಅವರು ಹೀಗೆಲ್ಲಾ ಹೇಳಿದರು,” ಎಂದು ತಿಳಿಸಿದಳು.

13.07.2020 - "ನಿಮ್ಮನ್ನು ಸ್ವಾಗತಿಸುವವನು ನನ್ನನ್ನು ಸ್ವಾಗತಿಸುತ್ತಾನೆ;"

ಮೊದಲನೇ ವಾಚನ: ಪ್ರವಾದಿ ಯೆಶಾಯನ ಗ್ರಂಥ 1:10-17 


ಸೊದೋಮಿನ ಅಧಿಪತಿಗಳಂತಿರುವವರೇ, ಸರ್ವೇಶ್ವರಸ್ವಾಮಿಯ ಮಾತನ್ನು ಕೇಳಿರಿ. ಗೊಮೋರದ ಪ್ರಜೆಗಳನ್ನು ಹೋಲುವವರೇ, ನಮ್ಮ ದೇವರ ಉಪದೇಶಕ್ಕೆ ಕಿವಿಗೊಡಿ. ಸ್ವಾಮಿ ಇಂತೆನ್ನುತ್ತಾರೆ : “ನೀವು ಅರ್ಪಿಸುವ ಅಸಂಖ್ಯಾತ ಬಲಿದಾನಗಳಿಂದ ನನಗೇನು ಪ್ರಯೋಜನ? ಟಗರುಗಳು, ಸರ್ವಾಂಗಹೋಮ, ಪುಷ್ಟಪಶುಗಳ ಕೊಬ್ಬು ಇವೆಲ್ಲ ನನಗೆ ಬೇಸರ. ಹೋತಹೋರಿಗಳ, ಕುರಿಮರಿಗಳ ರಕ್ತ ನನಗೆ ತಾತ್ಸಾರ. ನನ್ನ ಸನ್ನಿಧಾನಕ್ಕೆ ಬರುವಾಗ ಇದನ್ನೆಲ್ಲ ತರಬೇಕೆಂದು ನಿಮಗೆ ಹೇಳಿದವರಾರು? ನಿಮ್ಮ ನೈವೇದ್ಯಗಳನ್ನು ಇನ್ನು ತರಬೇಡಿ, ಅವು ವ್ಯರ್ಥ. ನಿಮ್ಮ ಧೂಪಾರತಿ ನನಗೆ ಅಸಹ್ಯ. ನೀವು ಆಚರಿಸುವ ಹಬ್ಬ ಹುಣ್ಣಿಮೆ, ಸಬ್ಬತ್ ವಿಶ್ರಾಂತಿ, ನಿಮ್ಮ ಸಭೆಕೂಟಗಳು ನನಗೆ ಬೇಡ. ಅಧರ್ಮದಿಂದ ಕೂಡಿದ ಇಂಥ ಸಮಾರಂಭಗಳು ನನಗೆ ಇಷ್ಟವಿಲ್ಲ. ನಿಮ್ಮ ಹಬ್ಬ ಹುಣ್ಣಿಮೆಗಳು, ಉತ್ಸವ ದಿನಗಳು ನನ್ನ ಮನಕ್ಕೆ ವಿರುದ್ಧ, ಹೊರಲಾಗದ ಭಾರ, ಸಹಿಸಲಾಗದ ಬೇಸರ. ನೀವು ಕೈಯೆತ್ತಿ ಬೇಡುವಾಗ ನಾನು ಕಣ್ಣುಮುಚ್ಚಿಕೊಳ್ಳುವೆನು. ನೀವು ಎಷ್ಟೇ ಪ್ರಾರ್ಥನೆಗಳನ್ನು ಮಾಡಿದರೂ ನಾನು ಕಿವಿಗೊಡೆನು, ಏಕೆಂದರೆ ನಿಮ್ಮ ಕೈಗಳು ರಕ್ತಸಿಕ್ತವಾಗಿವೆ. ತೊಳೆದುಕೊಳ್ಳಿರಿ, ನಿಮ್ಮನ್ನೆ ಶುದ್ಧಮಾಡಿಕೊಳ್ಳಿರಿ. ಕಣ್ಣಿಗೆ ಕಟ್ಟಿದಂತಿರುವ ನಿಮ್ಮ ದುಷ್ಕೃತ್ಯಗಳು ನೀಗಿಹೋಗಲಿ. ಕೇಡನ್ನು ಬಿಟ್ಟು ಒಳಿತನ್ನು ಕೈಗೊಳ್ಳಿರಿ. ನ್ಯಾಯನೀತಿಗಳಲ್ಲಿ ನಿರತರಾಗಿರಿ. ಹಿಂಸಾತ್ಮಕರನ್ನು ತಿದ್ದಿ ಸರಿಪಡಿಸಿರಿ. ಅನಾಥರಿಗೆ ನ್ಯಾಯ ದೊರಕಿಸಿರಿ. ವಿಧವೆಯರ ಪರವಾಗಿ ವಾದಿಸಿರಿ.

ಕೀರ್ತನೆ: 50:8-9, 16-17, 21, 23

ಶ್ಲೋಕ: ಸನ್ಮಾರ್ಗ ಹಿಡಿದವನಿಗೆ ತೋರುವೆ ಪರಮ ಜೀವೋದ್ದಾರವನು

ಶುಭಸಂದೇಶ: ಮತ್ತಾಯ 10:34--11:1

ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು: "ನಾನು ಲೋಕಕ್ಕೆ ಸಮಾಧಾನವನ್ನು ತರಲು ಬಂದೆನೆಂದು ಭಾವಿಸಬೇಡಿ; ಸಮಾಧಾನವನ್ನಲ್ಲ, ಛೇದಿಸುವ ಖಡ್ಗವನ್ನು ತರಲು ಬಂದೆನು. ತಂದೆಗೆ ವಿರುದ್ಧ ಮಗನಿಗೂ, ತಾಯಿಗೆ ವಿರುದ್ದ ಮಗಳಿಗೂ, ಅತ್ತೆಗೆ ವಿರುದ್ದ ಸೊಸೆಗೂ ಭೇದ ಹುಟ್ಟಿಸಲು ಬಂದೆನು; ಒಡಹುಟ್ಟಿದವರೇ ಒಬ್ಬನ ಕಡುವೈರಿಗಳಾಗುವರು. "ನನ್ನನ್ನು ಪ್ರೀತಿಸುವುದಕ್ಕಿಂತ ಹೆಚ್ಚಾಗಿ ತನ್ನ ತಂದೆಯನ್ನು ಅತವಾ ತಾಯಿಯನ್ನು ಪ್ರೀತಿಸುವವನು ನನ್ನವನಾಗಲು ಯೋಗ್ಯನಲ್ಲ. ನನ್ನನ್ನು ಪ್ರೀತಿಸುವುದಕ್ಕಿಂತ ಹೆಚ್ಚಾಗಿ ತನ್ನ ಮಗನನ್ನು ಅಥವಾ ಮಗಳನ್ನು ಪ್ರೀತಿಸುವವನು ನನ್ನವನಾಗಲು ಯೋಗ್ಯನಲ್ಲ. ತನ್ನ ಶಿಲುಬೆಯನ್ನು ಹೊತ್ತು ನನ್ನನ್ನು ಹಿಂಬಾಲಿಸದವನು ನನ್ನವನಾಗಲು ಯೋಗ್ಯನಲ್ಲ. ತನ್ನ ಪ್ರಾಣವನ್ನು ಕಾಪಾಡಿಕೊಳ್ಳುವವನು ಅದನ್ನು ಕಳೆದುಕೊಳ್ಳುತ್ತಾನೆ. ನನಗೋಸ್ಕರವಾಗಿ ತನ್ನ ಪ್ರಾಣವನ್ನು ಕಳೆದುಕೊಳ್ಳುವವನು ಅದನ್ನು ಕಾಪಾಡಿಕೊಳ್ಳುತ್ತಾನೆ. "ನಿಮ್ಮನ್ನು ಸ್ವಾಗತಿಸುವವನು ನನ್ನನ್ನು ಸ್ವಾಗತಿಸುತ್ತಾನೆ; ನನ್ನನ್ನು ಸ್ವಾಗತಿಸುವವನು ನನ್ನನ್ನು ಕಳುಹಿಸಿಕೊಟ್ಟಾತನನ್ನೇ ಸ್ವಾಗತಿಸುತ್ತಾನೆ. ಪ್ರವಾದಿಯನ್ನು ಪ್ರವಾದಿಯೆಂದು ಸ್ವಾಗತಿಸುವವನು ಪ್ರವಾದಿಗೆ ಸಿಗುವ ಪ್ರತಿಫಲವನ್ನು ಪಡೆಯುತ್ತಾನೆ. ಸತ್ಪುರುಷನನ್ನು ಸತ್ಪುರುಷನೆಂದು ಸ್ವಾಗತಿಸುವವನು ಸತ್ಪುರುಷನಿಗೆ ಸಿಗುವ ಪ್ರತಿಫಲವನ್ನು ಪಡೆಯುತ್ತಾನೆ. ಯಾರಾದರೂ ಈ ಚಿಕ್ಕವರಲ್ಲಿ ಒಬ್ಬನಿಗೆ ಅವನು ನನ್ನ ಶಿಷ್ಯನೆಂದು ಕುಡಿಯಲು ಒಂದು ಲೋಟ ತಣ್ಣೀರನ್ನು ಕೊಟ್ಟರೂ ಅದಕ್ಕೆ ತಕ್ಕ ಪ್ರತಿಫಲವನ್ನು ಪಡೆಯದೆ ಹೋಗನೆಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ." ಯೇಸುಸ್ವಾಮಿ ತಮ್ಮ ಹನ್ನೆರಡು ಮಂದಿ ಶಿಷ್ಯರಿಗೆ ಆದೇಶವನ್ನು ಕೊಟ್ಟಾದ ಮೇಲೆ ಅಲ್ಲಿಂದ ಹೊರಟು ಉಪದೇಶ ಮಾಡುವುದಕ್ಕೂ ಬೋಧಿಸುವುದಕ್ಕೂ ಹತ್ತಿರದ ಊರುಗಳಿಗೆ ಹೋದರು.

11.07.2020 - "ಅನೇಕ ಗುಬ್ಬಚ್ಚಿಗಳಿಗಿಂತ ನೀವು ಎಷ್ಟೋ ಮೌಲ್ಯವುಳ್ಳವರು"

ಮೊದಲನೇ ವಾಚನ: ಪ್ರವಾದಿ ಯೆಶಾಯನ ಗ್ರಂಥ 6:1-8 

ಅರಸ ಉಜ್ಜೀಯನು ಕಾಲವಾದ ವರ್ಷದಲ್ಲಿ ನನಗೆ ಸರ್ವೇಶ್ವರಸ್ವಾಮಿಯಿಂದ ದರ್ಶನವಾಯಿತು: ಉನ್ನತೋನ್ನತ ಸಿಂಹಾಸನದಲ್ಲಿ ಅವರು ಆಸೀನರಾಗಿದ್ದರು. ಅವರ ಮೇಲುವಸ್ತ್ರ ನೆರಿಗೆ ನೆರಿಗೆಯಾಗಿ ದೇವಾಲಯವನ್ನೆಲ್ಲ ಆವರಿಸಿತ್ತು. 2ಅವರ ಸುತ್ತಲು ಸೆರಾಫಿಯರೆಂಬ ತೇಜಸ್ವಿಗಳು ಇದ್ದರು. ಪ್ರತಿಯೊಬ್ಬರಿಗೂ ಆರಾರು ರೆಕ್ಕೆಗಳಿದ್ದವು. ಎರಡು ರೆಕ್ಕೆಗಳಿಂದ ಅವರ ಮುಖ ಮುಚ್ಚಿತ್ತು. ಇನ್ನೆರಡು ರೆಕ್ಕೆಗಳಿಂದ ಅವರ ಪಾದಗಳು ಮುಚ್ಚಿದ್ದವು. ಮತ್ತೆರಡು ರೆಕ್ಕೆಗಳನ್ನು ಬಡಿಯುತ್ತಾ ನೆಲಸೋಕದೆ ನಿಂತಿದ್ದರು. ಅವರಲ್ಲಿ ಒಬ್ಬನು ಮತ್ತೊಬ್ಬನಿಗೆ : “ಪವಿತ್ರ, ಪವಿತ್ರ, ಪವಿತ್ರ ಸೇನಾಧೀಶ್ವರ ಸರ್ವೇಶ್ವರ ಜಗವೆಲ್ಲ ಆತನ ಪ್ರಭಾವಭರಿತ” ಎಂದು ಕೂಗಿ ಹೇಳಿದನು. ಆ ಶಬ್ದಕ್ಕೆ ದೇವಾಲಯದ ಅಸ್ತಿವಾರವೇ ಕಂಪಿಸಿತು. ಧೂಮವು ಆಲಯವನ್ನೆಲ್ಲ ತುಂಬಿತು. ಆಗ ನಾನು “ಅಯ್ಯೋ, ನನ್ನ ಗತಿಯೇನು? ನನ್ನ ಕಥೆ ಮುಗಿಯಿತು. ಅಶುದ್ಧ ವದನದವನು ನಾನು. ಅಶುದ್ಧ ವದನದವರ ಮಧ್ಯೆ ಬಾಳುವವನು. ನನ್ನ ಕಣ್ಣುಗಳು ರಾಜಾಧಿರಾಜನನ್ನು, ಸೇನಾಧೀಶ್ವರ ಸರ್ವೇಶ್ವರನನ್ನು ಕಂಡೆವಲ್ಲಾ!” ಎಂದು ಕೂಗಿಕೊಂಡೆನು. ಆಗ ಸೆರಾಫಿಯರಲ್ಲಿ - ತೇಜಸ್ವಿಯೊಬ್ಬನು ಬಲಿಪೀಠದಿಂದ, ಉರಿಯುವ ಕೆಂಡವೊಂದನ್ನು ಇಕ್ಕಳದಿಂದ ಹಿಡಿದುಕೊಂಡು ನನ್ನತ್ತ ಹಾರಿಬಂದನು. ಆ ಉರಿಕೆಂಡವನ್ನು ನನ್ನ ಬಾಯಿಗೆ ಮುಟ್ಟಿಸಿ: “ಇದು ನಿನ್ನ ತುಟಿಗಳನ್ನು ತಾಕಿದೆ. ಈಗ ದೋಷ ನೀಗಿತು. ನಿನ್ನ ಪಾಪ ಪರಿಹಾರ ಆಯಿತು,” ಎಂದನು. ಆಗ, “ಯಾರನ್ನು ಕಳುಹಿಸಲಿ? ನಮ್ಮ ಪರವಾಗಿ ಹೋಗುವವರು ಯಾರು?” ಎಂಬ ನುಡಿ ಕೇಳಿಸಿತು. ಅದಕ್ಕೆ ನಾನು, “ಇಗೋ, ನಾನು ಸಿದ್ಧ, ನನ್ನನ್ನು ಕಳುಹಿಸಿ” ಎಂದೆನು.

ಕೀರ್ತನೆ: 93:1, 1-2, 5

ಶ್ಲೋಕ:  ವಹಿಸಿಹನು ಪ್ರಭು ರಾಜ್ಯಾಧಿಕಾರವನು

ಶುಭಸಂದೇಶ: ಮತ್ತಾಯ 10:24-33



ಯೇಸುಸ್ವಾಮಿ ಶಿಷ್ಯರಿಗೆ ಕೊಟ್ಟ ಆದೇಶ ಇದು: "ಗುರುವಿಗಿಂತ ಶಿಷ್ಯನು ಶ್ರೇಷ್ಠನಲ್ಲ; ದಾಸನು ದಣಿಗಿಂತ ದೊಡ್ಡವನಲ್ಲ. ಗುರುವಿನಂತೆ ಶಿಷ್ಯನೂ ದಣಿಯಂತೆ ದಾಸನೂ ಆದರೆ ಸಾಕು. ಮನೆಯ ಯಜಮಾನನನ್ನೇ ‘ಬೆಲ್ಜಬೂಲ್’ ಎಂದು ಕರೆದಿರುವಾಗ ಅವನ ಮನೆಯವರನ್ನು ಇನ್ನೆಷ್ಟು ಅವಹೇಳನ ಮಾಡಲಾರರು?” “ಜನರಿಗೆ ಭಯಪಡಬೇಡಿ. ಮುಚ್ಚುಮರೆ ಆಗಿರುವುದೆಲ್ಲ ಬಟ್ಟಬಯಲಾಗುವುದು. ಗುಟ್ಟಾಗಿ ಇರುವುದೆಲ್ಲ ರಟ್ಟಾಗುವುದು. ನಾನು ಕತ್ತಲಲ್ಲಿ ಹೇಳುವುದನ್ನು ನೀವು ಬೆಳಕಿನಲ್ಲಿ ಪ್ರಚುರಪಡಿಸಿರಿ, ಕಿವಿಮಾತಾಗಿ ಕೇಳಿದ್ದನ್ನು ಮನೆಮಾಳಿಗೆಯ ಮೇಲೆ ನಿಂತು ಸಾರಿರಿ. ದೇಹವನ್ನು ಕೊಂದು ಹಾಕುವವರಿಗೆ ಭಯಪಡಬೇಡಿ; ಏಕೆಂದರೆ, ಅವರಿಂದ ಆತ್ಮವನ್ನು ಕೊಲ್ಲಲು ಆಗದು. ಆದರೆ ದೇಹಾತ್ಮಗಳೆರಡನ್ನೂ ನರಕದಲ್ಲಿ ನಾಶಮಾಡಬಲ್ಲ ದೇವರಿಗೆ ಭಯಪಡಿ. ಒಂದು ಕಾಸಿಗೆ ಎರಡು ಗುಬ್ಬಚ್ಚಿಗಳನ್ನು ಮಾರುವುದಿಲ್ಲವೆ? ಆದರೂ ಅವುಗಳಲ್ಲಿ ಒಂದಾದರೂ ನಿಮ್ಮ ತಂದೆಯ ಅನುಮತಿಯಿಲ್ಲದೆ ನೆಲಕ್ಕೆ ಬೀಳುವುದಿಲ್ಲ. ಅಲ್ಲದೆ ನಿಮ್ಮ ತಲೆಗೂದಲುಗಳು ಸಹ ಎಲ್ಲವೂ ಎಣಿಕೆಯಾಗಿವೆ. ಆದುದರಿಂದ ಭಯಪಡಬೇಡಿ; ಅನೇಕ ಗುಬ್ಬಚ್ಚಿಗಳಿಗಿಂತ ನೀವು ಎಷ್ಟೋ ಮೌಲ್ಯವುಳ್ಳವರು. “ಜನರ ಮುಂದೆ, ತಾನು ನನ್ನವನೆಂದು ಬಹಿರಂಗವಾಗಿ ಒಪ್ಪಿಕೊಳ್ಳುವ ಪ್ರತಿಯೊಬ್ಬನನ್ನು ನಾನು ಸಹ ಸ್ವರ್ಗದಲ್ಲಿರುವ ನನ್ನ ಪಿತನ ಮುಂದೆ ನನ್ನವನೆಂದು ಒಪ್ಪಿಕೊಳ್ಳುತ್ತೇನೆ. ಆದರೆ ಯಾವನಾದರೂ ತಾನು ನನ್ನವನಲ್ಲ ಎಂದು ಜನರ ಮುಂದೆ ಬಹಿರಂಗವಾಗಿ ನಿರಾಕರಿಸಿದರೆ, ಅಂಥವನನ್ನು ನಾನು ಸಹ ಸ್ವರ್ಗದಲ್ಲಿರುವ ನನ್ನ ಪಿತನ ಮುಂದೆ ನನ್ನವನಲ್ಲವೆಂದು ನಿರಾಕರಿಸುತ್ತೇನೆ."

10.07.2020 - "ಏಕೆಂದರೆ ನೀವು ಹೇಳಬೇಕಾದುದ್ದನ್ನು ಅದೇ ಗಳಿಗೆಯಲ್ಲಿ ನಿಮಗೆ ಕಲಿಸಿಕೊಡಲಾಗುವುದು"

ಮೊದಲನೇ ವಾಚನ: ಪ್ರವಾದಿ ಹೋಶೇಯನ ಗ್ರಂಥ 14:2-10 

ಇಸ್ರಯೇಲ್, ನಿನ್ನ ಸರ್ವೇಶ್ವರನಾದ ದೇವರ ಬಳಿಗೆ ಹಿಂದಿರುಗು. ನಿನ್ನ ಪಾಪದ್ರೋಹಗಳೇ ನಿನ್ನ ಪತನಕ್ಕೆ ಕಾರಣ. ಆದುದರಿಂದ ಪಶ್ಚಾತ್ತಾಪದ ಮಾತುಗಳೊಂದಿಗೆ ದೇವರಿಗೆ ಅಭಿಮುಖವಾಗಿ, “ಪ್ರಭುವೇ, ನಮ್ಮ ಅಪರಾಧವನ್ನು ತೊಡೆದುಹಾಕು. ನಮ್ಮಲ್ಲಿ ಒಳಿತಾದುದನ್ನೇ ಅಂಗೀಕರಿಸು. ನಿನಗೆ ಸ್ತುತಿಬಲಿಯನ್ನು ಸಮರ್ಪಿಸುವೆವು. ಅಸ್ಸೀರಿಯದಿಂದ ನಮಗೆ ರಕ್ಷಣೆ ದೊರಕದು. ನಾವು ಕಾಳಗದ ಕುದುರೆಗಳ ಮೇಲೆ ಇನ್ನೆಂದೂ ಸವಾರಿ ಮಾಡೆವು. ನಮ್ಮ ಕೈಗಳು ನಿರ್ಮಿಸಿರುವ ವಿಗ್ರಹಗಳನ್ನು ವೀಕ್ಷಿಸಿ, ‘ನೀವೇ ನಮ್ಮ ದೇವರು’ ಎಂದು ಜಪಿಸೆವು. ಓ ದೇವಾ, ದಿಕ್ಕಿಲ್ಲದವರಿಗೆ ಕರುಣೆತೋರಿಸುವವನು ನೀನೇ,” ಎಂದು ಹೇಳು. ಸರ್ವೇಶ್ವರ ಇಂತೆನ್ನುತ್ತಾರೆ: ಪರಿಹರಿಸುವೆನು ಜನರ ಭ್ರಷ್ಟತನವನು ಪ್ರೀತಿಸುವೆನು ಮನಪೂರ್ವಕವಾಗಿ ಅವರನು ತ್ಯಜಿಸಿಬಿಡುವೆನು ಅವರ ಮೇಲಿದ್ದ ಕೋಪವನು. ಇರುವೆನು ಇಸ್ರಯೇಲಿಗೆ ಇಬ್ಬನಿಯಂತೆ ಅರಳುವುದು ಆ ನಾಡು ತಾವರೆಯಂತೆ ಬೇರೂರುವುದು ಲೆಬನೋನಿನ ದೇವದಾರು ವೃಕ್ಷದಂತೆ. ಹರಡಿಕೊಳ್ಳುವುದದು ಮರದ ರೆಂಬೆಗಳಂತೆ ಕಂಗೊಳಿಸುವುದು ಚೆಲುವಾದ ಓಲಿವ ಮರದಂತೆ ಅದರ ಪರಿಮಳ ಮನೋಹರ ಲೆಬನೋನಿನ ಲತೆಗಳಂತೆ. ಮರಳಿ ಆಶ್ರಯಿಸುವರು ನನ್ನ ನೆರಳನ್ನು ಆ ಜನತೆ ಅಭಿವೃದ್ಧಿಯಾಗುವರು ಉದ್ಯಾನವನದಂತೆ ಫಲಪ್ರದವಾಗುವರು ಆ ಜನರು ದ್ರಾಕ್ಷಾಲತೆಯಂತೆ ಸುಪ್ರಸಿದ್ಧ ಅವರ ಕೀರ್ತಿ ಲೆಬನೋನಿನ ದ್ರಾಕ್ಷಾರಸದಂತೆ. ನುಡಿವುದು ಎಫ್ರಯಿಮ್, “ನನಗಿನ್ನು ಬೇಡ ವಿಗ್ರಹಗಳ ಗೊಡವೆ”. ಅದಕ್ಕೆ ಒಲಿದು ಕಟಾಕ್ಷಿಸುವವನು ನಾನೇ ಅದಕ್ಕೆ ಹಚ್ಚಹಸಿರಾದ ತುರಾಯಿಮರದಂತಿರುವೆ ಅದಕ್ಕೆ ಫಲವನ್ನು ನೀಡುವವನು ನಾನೇ.” ಬುದ್ಧಿವಂತನು ಈ ಮಾತುಗಳನ್ನು ಗ್ರಹಿಸಿಕೊಳ್ಳಲಿ. ವಿವೇಕಿಯು ಈ ನುಡಿಗಳನ್ನು ಅರ್ಥಮಾಡಿ ಕೊಳ್ಳಲಿ. ಸರ್ವೇಶ್ವರಸ್ವಾಮಿಯ ಮಾರ್ಗಗಳು ನೇರವಾದವುಗಳು. ಸನ್ಮಾರ್ಗಿಗಳು ಅವುಗಳನ್ನು ಕೈಗೊಂಡು ನಡೆಯುವರು. ದುರ್ಮಾರ್ಗಿಗಳು ಅವುಗಳನ್ನು ಕೈಬಿಟ್ಟು ಮುಗ್ಗರಿಸಿ ಬೀಳುವರು.

ಕೀರ್ತನೆ: 51:3-4, 8-9, 12-13, 14, 17

ಶ್ಲೋಕ:  ನಿನ್ನ ಸತ್ಯಸಂಧತೆಯನು ಸಾರುವೆ ಮುಕ್ತಕಂಠದಿಂದ

ಶುಭಸಂದೇಶ: ಮತ್ತಾಯ 10:16-23

ಯೇಸುಸ್ವಾಮಿ ಶಿಷ್ಯರ ನಿಯೋಗವನ್ನು ಕಳುಹಿಸುವಾಗ ಅವರಿಗೆ ಕೊಟ್ಟ ಆದೇಶ ಇದು: “ಗಮನಿಸಿರಿ, ತೋಳಗಳ ನಡುವೆ ಕುರಿಗಳನ್ನು ಬಿಟ್ಟಂತೆ ನಾನು ನಿಮ್ಮನ್ನು ಕಳುಹಿಸುತ್ತಿದ್ದೇನೆ. ಆದುದರಿಂದ ಸರ್ಪಗಳಂತೆ ಸೂಕ್ಷ್ಮಬುದ್ಧಿಯುಳ್ಳವರೂ ಪಾರಿವಾಳಗಳಂತೆ ಸರಳಜೀವಿಗಳೂ ಆಗಿರಿ. ಜನರ ಬಗ್ಗೆ ಜಾಗರೂಕರಾಗಿರಿ! ಅವರು ನಿಮ್ಮನ್ನು ನ್ಯಾಯಸ್ಥಾನಗಳಿಗೆ ಹಿಡಿದೊಪ್ಪಿಸುವರು. ಪ್ರಾರ್ಥನಾಮಂದಿರಗಳಲ್ಲಿ ಕೊರಡೆಗಳಿಂದ ಹೊಡೆಯುವರು. ನನ್ನ ನಿಮಿತ್ತ ನಿಮ್ಮನ್ನು ಅಧಿಕಾರಿಗಳ ಮತ್ತು ಅರಸರುಗಳ ಮುಂದೆ ಎಳೆದೊಯ್ಯುವರು. ಅವರ ಹಾಗೂ ಪರಕೀಯರ ಮುಂದೆ ನೀವು ನನಗೆ ಸಾಕ್ಷಿಗಳಾಗುವಿರಿ. ನಿಮ್ಮನ್ನು ಹಿಡಿದೊಪ್ಪಿಸುವಾಗ ಹೇಗೆ ವಾದಿಸುವುದು, ಏನು ಹೇಳುವುದು ಎಂದು ಚಿಂತಾಕ್ರಾಂತರಾಗಬೇಡಿ. ಏಕೆಂದರೆ ನೀವು ಹೇಳಬೇಕಾದುದ್ದನ್ನು ಅದೇ ಗಳಿಗೆಯಲ್ಲಿ ನಿಮಗೆ ಕಲಿಸಿಕೊಡಲಾಗುವುದು. ಆಗ ಮಾತನಾಡುವವರು ನೀವಲ್ಲ, ನಿಮ್ಮ ತಂದೆಯ ಆತ್ಮವೇ ನಿಮ್ಮ ಮುಖಾಂತರ ಮಾತನಾಡುವುದು. ಸಹೋದರನು ಸಹೋದರನನ್ನೇ ತಂದೆಯು ಮಗನನ್ನೇ ಮರಣಕ್ಕೆ ಗುರಿಮಾಡುವರು. ಮಕ್ಕಳು ಹೆತ್ತವರ ಮೇಲೆ ತಿರುಗಿಬಿದ್ದು ಅವರನ್ನು ಕೊಲ್ಲಿಸುವರು. ನೀವು ನನ್ನವರು; ಆದುದರಿಂದಲೇ ನಿಮ್ಮನ್ನು ಎಲ್ಲರೂ ದ್ವೇಷಿಸುವರು. ಆದರೆ ಕೊನೆಯವರೆಗೂ ಸೈರಣೆಯಿಂದಿರುವವನು ಜೀವೋದ್ಧಾರವನ್ನು ಹೊಂದುವನು. ಒಂದು ಊರಿನಲ್ಲಿ ನಿಮ್ಮನ್ನು ಹಿಂಸೆಪಡಿಸಿದರೆ, ಮತ್ತೊಂದು ಊರಿನಲ್ಲಿ ಆಶ್ರಯ ಪಡೆಯಿರಿ. ನರಪುತ್ರನು ಬರುವಷ್ಟರಲ್ಲಿ ನೀವು ಇಸ್ರಯೇಲ್ ಜನರ ಊರುಗಳನ್ನೆಲ್ಲಾ ಸುತ್ತಿ ಮುಗಿಸಿರಲಾರಿರಿ; ಇದು ನಿಶ್ಚಯ.



09.07.2020 - "ಬೋಧನೆಮಾಡಿರಿ. ರೋಗಿಗಳನ್ನು ಗುಣಪಡಿಸಿರಿ, ಸತ್ತವರನ್ನು ಮತ್ತೆ ಬದುಕಿಸಿರಿ"

ಮೊದಲನೇ ವಾಚನ: ಪ್ರವಾದಿ ಹೋಶೇಯನ ಗ್ರಂಥ 11:1, 3-4, 8-9 

ಸರ್ವೇಶ್ವರ ಇಂತೆನ್ನುತ್ತಾರೆ: “ಪ್ರೀತಿಸಿದೆನು ಇಸ್ರಯೇಲನ್ನು ಅದರ ಬಾಲ್ಯಾವಸ್ಥೆಯಿಂದ; ಕರೆದೆನು ನನ್ನ ಆ ಪುತ್ರನನು ಈಜಿಪ್ಟಿನಿಂದ. ಎಫ್ರಯಿಮಿಗೆ ಅಂಬೆಗಾಲಿಡಲು ಕಲಿಸಿದವನು ನಾನೇ ಅದನ್ನು ಕೈಗಳಲ್ಲಿ ಎತ್ತಿಕೊಂಡು ಆಡಿಸಿದವನು ನಾನೇ ಆ ಜನರನ್ನು ಸ್ವಸ್ಥಮಾಡಿದವನೂ ನಾನೇ; ಆದರೆ ಅರಿತುಕೊಳ್ಳದೆಹೋದರು ಈ ವಿಷಯವನೇ. ಬೆಳೆಸಿದೆನು ಅವರನ್ನು ಕರುಣೆಯ ಕಟ್ಟುಗಳಲಿ, ಪ್ರೀತಿಯ ಬಂಧನದಲಿ ಸುಧಾರಿಸಿದೆ ಅವರ ಹೆಗಲಿಗೆ ಬಿಗಿದಿದ್ದ ನೊಗವನ್ನು ಬಿಚ್ಚಿ ಊಟ ಬಡಿಸಿದೆ ಅವರಿಗೆ ನೆಲಸಮ ಬಗ್ಗಿ. “ಹೇಗೆ ತ್ಯಜಿಸಲಿ ಎಫ್ರಯಿಮೇ, ನಿನ್ನನು ಹೇಗೆ ಕೈಬಿಡಲಿ ಇಸ್ರಯೇಲೇ, ನಿನ್ನನು. ಹೇಗೆ ಈಡುಮಾಡಲಿ ದುರ್ಗತಿಗೆ ನಿನ್ನನು ಅದ್ಮದಂತೆ, ಹೇಗೆ ನಾಶಮಾಡಲಿ ನಿನ್ನನು ಚೆಬೋಯೀಮನಂತೆ? ತಡೆಹಿಡಿಯುವೆನು ನನ್ನ ಉಗ್ರಕೋಪವನು ನಾಶಪಡಿಸಲಾರೆ ಮರಳಿ ಎಫ್ರಯಿಮನು. ನರಮಾನವನಲ್ಲ, ದೇವರು ನಾನು ನಿಮ್ಮಲ್ಲಿ ನೆಲೆಯಾಗಿರುವ ಸದಮಲಸ್ವಾಮಿಯು! ನನ್ನದಲ್ಲ ನಾಶಮಾಡುವ ರೋಷವು.

ಕೀರ್ತನೆ: 80:2, 3, 15-16

ಶ್ಲೋಕ:  ದೇವರೇ, ಬೆಳಗಲಿ ನಿನ್ನ ಮುಖಕಾಂತಿ, ಪಡೆವೆವು ರಕ್ಷಣೆಯನು

ಶುಭಸಂದೇಶ:  ಮತ್ತಾಯ 10:7-15


ಹನ್ನೆರಡು ಮಂದಿಯ ನಿಯೋಗವನ್ನು ಕಳುಹಿಸುವಾಗ ಯೇಸುಸ್ವಾಮಿ ಅವರಿಗೆ ಕೊಟ್ಟ ಆದೇಶ ಇದು: "ಪರಕೀಯರತ್ತ ಹೋಗಲೇಬೇಡಿ; ಸಮಾರಿಯದವರ ಯಾವ ಊರಿಗೂ ಕಾಲಿಡಬೇಡಿ. ಅದಕ್ಕೆ ಬದಲು ತಪ್ಪಿಹೋದ ಕುರಿಗಳಂತೆ ಇರುವ ಇಸ್ರಯೇಲ್ ಜನರ ಬಳಿಗೆ ಹೋಗಿರಿ; ಹೋಗುತ್ತಾ, ‘ಸ್ವರ್ಗಸಾಮ್ರಾಜ್ಯವು ಸಮೀಪಿಸಿದೆ’ ಎಂದು ಬೋಧನೆಮಾಡಿರಿ. ರೋಗಿಗಳನ್ನು ಗುಣಪಡಿಸಿರಿ, ಸತ್ತವರನ್ನು ಮತ್ತೆ ಬದುಕಿಸಿರಿ, ಕುಷ್ಠರೋಗಿಗಳನ್ನು ಸ್ವಸ್ಥಮಾಡಿರಿ. ದೆವ್ವಗಳನ್ನು ಬಿಡಿಸಿರಿ, ಉಚಿತವಾಗಿ ಪಡೆದಿರುವಿರಿ, ಉಚಿತವಾಗಿ ಕೊಡಿ. ಜೇಬಿನಲ್ಲಿ ಚಿನ್ನ, ಬೆಳ್ಳಿ, ತಾಮ್ರವನ್ನಾಗಲಿ, ಪ್ರಯಾಣಕ್ಕೆಂದು ಜೋಳಿಗೆಯನ್ನಾಗಲಿ, ಎರಡು ಅಂಗಿಗಳನ್ನಾಗಲಿ, ಕಾಲಿಗೆ ಕೆರವನ್ನಾಗಲಿ, ಕೈಗೆ ದಂಡವನ್ನಾಗಲಿ ತೆಗೆದುಕೊಳ್ಳಬೇಡಿ. ಏಕೆಂದರೆ, ದುಡಿಮೆಗಾರನು ಜೀವನಾಧಾರಕ್ಕೆ ಬಾಧ್ಯನು. “ನೀವು ಒಂದು ಪಟ್ಟಣಕ್ಕಾಗಲಿ, ಹಳ್ಳಿಗಾಗಲಿ ಹೋದಾಗ, ಅಲ್ಲಿ ನಿಮ್ಮನ್ನು ಬರಮಾಡಿಕೊಳ್ಳಲು ಯೋಗ್ಯನು ಯಾರೆಂದು ಕಂಡುಹಿಡಿಯಿರಿ. ಅಲ್ಲಿಂದ ಮುಂದಕ್ಕೆ ಸಾಗುವವರೆಗೂ ಅವನಲ್ಲೇ ತಂಗಿರಿ. ನೀವು ಒಂದು ಮನೆಗೆ ಹೋದಾಗ, “ಈ ಮನೆಗೆ ಶುಭವಾಗಲಿ!” ಎಂದು ಹರಸಿರಿ. ಆ ಮನೆಯವರು ನಿಮ್ಮನ್ನು ಸ್ವಾಗತಿಸಿದರೆ, ನಿಮ್ಮ ಆಶೀರ್ವಾದ ಅವರ ಮೇಲೆ ನೆಲಸಲಿ. ನಿಮ್ಮನ್ನು ಸ್ವಾಗತಿಸದೆಹೋದರೆ, ನಿಮ್ಮ ಆಶೀರ್ವಾದ ನಿಮಗೇ ಹಿಂದಿರುಗಲಿ. ಒಂದು ಮನೆಯೇ ಆಗಲಿ, ಊರೇ ಆಗಲಿ, ನಿಮ್ಮನ್ನು ಸ್ವಾಗತಿಸದೆ ಅಥವಾ ನಿಮಗೆ ಕಿವಿಗೊಡದೆಹೋದರೆ, ಆ ಮನೆಯನ್ನು ಅಥವಾ ಊರನ್ನು ಬಿಟ್ಟು ಮುಂದಕ್ಕೆ ಹೋಗಿರಿ. ಹೋಗುವಾಗ ನಿಮ್ಮ ಪಾದಗಳಿಗೆ ಅಂಟಿರುವ ದೂಳನ್ನೂ ಝಾಡಿಸಿಬಿಡಿ. ತೀರ್ಪಿನ ದಿನ ಆ ಊರಿನ ಗತಿ ಸೊದೋಮ್ ಮತ್ತು ಗೊಮೋರ ಊರುಗಳ ಗತಿಗಿಂತ ಕಠಿಣವಾಗಿರುವುದೆಂದು ನಾನು ನಿಮಗೆ ಒತ್ತಿ ಹೇಳುತ್ತೇನೆ.

08.07.2020 - "ಸ್ವರ್ಗಸಾಮ್ರಾಜ್ಯವು ಸಮೀಪಿಸಿದೆ’ ಎಂದು ಬೋಧನೆ ಮಾಡಿರಿ."

ಮೊದಲನೇ ವಾಚನ: ಪ್ರವಾದಿ ಹೋಶೇಯನ ಗ್ರಂಥ 10:1-3, 7-8, 12

ಇಸ್ರಯೇಲ್ ಸೊಂಪಾಗಿ ಬೆಳೆದ ದ್ರಾಕ್ಷಾಲತೆ, ಫಲಭರಿತ ದ್ರಾಕ್ಷಾಬಳ್ಳಿ, ಅದರ ಫಲ ಹೆಚ್ಚಿದಂತೆಲ್ಲ ಬಲಿಪೀಠಗಳು ಹೆಚ್ಚಿಕೊಂಡಿವೆ. ಆ ನಾಡು ಅಭಿವೃದ್ಧಿಯಾದಂತೆಲ್ಲ, ಹೆಚ್ಚು ಸುಂದರವಾದ ವಿಗ್ರಹಸ್ತಂಭಗಳು ನಿರ್ಮಿತವಾಗಿವೆ. ಅವರದು ವಂಚನೆಯ ಮನಸ್ಸು. ಈಗ ಅವರು ತಮ್ಮ ಪಾಪಕ್ಕೆ ತಕ್ಕ ದಂಡನೆಯನ್ನು ಅನುಭವಿಸಲೇಬೇಕು. ಸರ್ವೇಶ್ವರಸ್ವಾಮಿ ಅವರ ಯಜ್ಞವೇದಿಗಳನ್ನು ಕೆಡವುವರು. ಅವರ ಪೂಜಾಸ್ತಂಭಗಳನ್ನು ಒಡೆದುಹಾಕುವರು. “ನಮಗೆ ರಾಜನೇ ಇಲ್ಲ. ನಾವು ಸರ್ವೇಶ್ವರನಲ್ಲಿ ಭಯಭಕ್ತಿಯುಳ್ಳವರಲ್ಲ. ನಮಗೆ ರಾಜನಿದ್ದರೂ ಅವನು ನಮಗೆ ಏನು ತಾನೇ ಮಾಡಿಯಾನು?” ಎಂದು ಆ ಜನರು ಆಡಿಕೊಳ್ಳುತ್ತಾರೆ. ಸಮಾರ್ಯದ ರಾಜನು ಪ್ರವಾಹದಲ್ಲಿ ಕೊಚ್ಚಿಕೊಂಡುಹೋಗುವ ಕಡ್ಡಿಯಂತೆ ಕಣ್ಮರೆ ಆಗುವನು. ಇಸ್ರಯೇಲಿನ ಪಾಪಕ್ಕೆ ಆಸ್ಪದ ಆಗಿದ್ದ ಆವೆನಿನ ಪೂಜಾಸ್ಥಾನಗಳು ನಾಶವಾಗುವುವು. ಪಾಳುಬಿದ್ದ ಬಲಿಪೀಠಗಳ ಮೇಲೆ ಮುಳ್ಳುಕಳ್ಳಿಗಳು ಹುಟ್ಟಿಕೊಳ್ಳುವುವು. ಅಲ್ಲಿನ ಜನರು: ‘ಪರ್ವತವೇ, ನಮ್ಮನ್ನು ತುಳಿದುಬಿಡಿ; ಗುಡ್ಡಗಳೇ ನಮ್ಮನ್ನು ನುಂಗಿಬಿಡಿ’ ಎಂದು ಕೂಗಿಕೊಳ್ಳುವರು.” ನಾನು ಇಂತೆಂದೆ: “ಪಾಳುಬಿದ್ದ ನೆಲವನ್ನು ಉತ್ತು ಹದಮಾಡಿರಿ; ನೀತಿಯ ಬೀಜವನ್ನು ಬಿತ್ತಿರಿ; ಪ್ರೀತಿಯ ಫಲವನ್ನು ಕೊಯ್ಯಿರಿ. ಸಮಯವು ಸನ್ನಿಹಿತವಾಗಿದೆ. ಸರ್ವೇಶ್ವರ ಆಗಮಿಸಿ ನಿಮ್ಮ ಮೇಲೆ ನೀತಿಯನ್ನು ಮಳೆಗರೆಯುವಂತೆ ಅವರಿಗೆ ಶರಣು ಹೋಗಬೇಕು.
ಕೀರ್ತನೆ: 105:2-3, 4-5, 6-7

ಶ್ಲೋಕ:  ಅಪೇಕ್ಷಿಸಿ ನಿತ್ಯವೂ ಪ್ರಭುವಿನ ದರ್ಶನವನು

ಶುಭಸಂದೇಶ: ಮತ್ತಾಯ 10:1-7


ಯೇಸುಸ್ವಾಮಿ ತಮ್ಮ ಹನ್ನೆರಡುಮಂದಿ ಶಿಷ್ಯರನ್ನು ಒಟ್ಟಿಗೆ ಕರೆದು, ಎಲ್ಲ ರೋಗರುಜಿನಗಳನ್ನು ಗುಣಪಡಿಸುವುದಕ್ಕೂ ದೆವ್ವಗಳನ್ನು ಬಿಡಿಸುವುದಕ್ಕೂ ಅವರಿಗೆ ಅಧಿಕಾರವನ್ನು ಕೊಟ್ಟರು. ಆ ಹನ್ನೆರಡುಮಂದಿ ಪ್ರೇಷಿತರ ಹೆಸರುಗಳು ಇವು; ಮೊದಲನೆಯವನು ಪೇತ್ರ ಎನಿಸಿಕೊಂಡ ಸಿಮೋನ ಮತ್ತು ಅವನ ಸಹೋದರ ಅಂದ್ರೆಯ; ಜೆಬೆದಾಯನ ಮಗ ಯಕೋಬ ಮತ್ತು ಅವನ ಸಹೋದರ ಯೊವಾನ್ನ; ಫಿಲಿಪ್ಪ ಮತ್ತು ಬಾರ್ತೊಲೊಮಾಯ; ತೋಮ ಮತ್ತು ಸುಂಕ ವಸೂಲಿಗಾರ ಮತ್ತಾಯ; ಅಲ್ಫಾಯನ ಮಗ ಯಕೋಬ ಮತ್ತು ತದ್ದಾಯ; ದೇಶಾಭಿಮಾನಿ ಎಂದು ಕರೆಯಲಾದ ಸಿಮೋನ ಮತ್ತು ಗುರುದ್ರೋಹಿ ಆಗಲಿದ್ದ ಯೂದ ಇಸ್ಕರಿಯೋತ. ಆ ಹನ್ನೆರಡುಮಂದಿಯ ನಿಯೋಗವನ್ನು ಕಳುಹಿಸುವಾಗ ಯೇಸುಸ್ವಾಮಿ ಅವರಿಗೆ ಕೊಟ್ಟ ಆದೇಶ ಇದು: “ಪರಕೀಯರತ್ತ ಹೋಗಲೇಬೇಡಿ; ಸಮಾರಿಯದವರ ಯಾವ ಊರಿಗೂ ಕಾಲಿಡಬೇಡಿ. ಅದಕ್ಕೆ ಬದಲು ತಪ್ಪಿಹೋದ ಕುರಿಗಳಂತೆ ಇರುವ ಇಸ್ರಯೇಲ್ ಜನರ ಬಳಿಗೆ ಹೋಗಿರಿ; ಹೋಗುತ್ತಾ, ‘ಸ್ವರ್ಗಸಾಮ್ರಾಜ್ಯವು ಸಮೀಪಿಸಿದೆ’ ಎಂದು ಬೋಧನೆ ಮಾಡಿರಿ."






07.07.2020 - “ಬೆಳೆಯೇನೋ ಹೇರಳ; ಕೊಯಿಲುಗಾರರೋ ವಿರಳ"

ಮೊದಲನೇ ವಾಚನ: ಪ್ರವಾದಿ ಹೋಶೇಯನ ಗ್ರಂಥ 8:4-7, 11-13

“ಅವರು ನನ್ನ ಅನುಮತಿ ಇಲ್ಲದೆ ಅರಸರನ್ನು ನೇಮಿಸಿಕೊಂಡಿದ್ದಾರೆ. ನನಗೆ ತಿಳಿಯದಂತೆ ಅಧಿಪತಿಗಳನ್ನು ಮಾಡಿಕೊಂಡಿದ್ದಾರೆ. ಬೆಳ್ಳಿಬಂಗಾರದ ವಿಗ್ರಹಗಳನ್ನು ನಿರ್ಮಿಸಿಕೊಂಡಿದ್ದಾರೆ. ಅವರು ಮಾಡಿರುವುದೆಲ್ಲ ಅವರ ನಾಶಕ್ಕಾಗಿಯೇ. ಸಮಾರಿಯವೇ, ನೀನು ನಿರ್ಮಿಸಿಕೊಂಡಿರುವ ಬಸವನನ್ನು ಧಿಕ್ಕರಿಸಿದ್ದೇನೆ. ನನ್ನ ಕೋಪಾಗ್ನಿ ನಿನ್ನ ಮೇಲೆ ಉರಿದುಬರುತ್ತಿದೆ. ಈ ಜನರು ನಿರ್ಮಲರಾಗುವುದಕ್ಕೆ ಇನ್ನೆಷ್ಟುಕಾಲ ಹಿಡಿಯುವುದೋ? ಆ ಬಸವ ಇಸ್ರಯೇಲಿನ ಕೈಕೆಲಸವೇ. ಶಿಲ್ಪಿ ಕೊಟ್ಟ ರೂಪವದು; ಅದು ದೇವರಲ್ಲ. ಸಮಾರ್ಯದ ಬಸವನು ನುಚ್ಚುನೂರಾಗುವನು. ಇವರು ಗಾಳಿಯನ್ನು ಬಿತ್ತುತ್ತಾರೆ; ಬಿರುಗಾಳಿಯನ್ನು ಕೊಯ್ಯುತ್ತಾರೆ. ಅವರ ಪೈರು ತೆನೆಗೆ ಬಾರದು. ಕಾಳು ಮೊಳೆತರೂ ಕೂಳು ದೊರಕದು. ಒಂದು ವೇಳೆ ದೊರಕಿದರೂ ಅನ್ಯಜನರು ಅದನ್ನು ಕಬಳಿಸಿಬಿಡುವರು. “ಎಫ್ರಯಿಮ್ ಪಾಪಪರಿಹಾರಕ್ಕಾಗಿ ಬಲಿಪೀಠಗಳನ್ನು ಕಟ್ಟಿದೆ. ಆ ಬಲಿಪೀಠಗಳೇ ಅದರ ಪಾಪಕ್ಕೆ ಕಾರಣವಾಗಿ ಪರಿಣಮಿಸಿವೆ. ನಾನು ನನ್ನ ಧರ್ಮವನ್ನು ಲಕ್ಷಾಂತರ ವಿಧಿಗಳ ರೂಪದಲ್ಲಿ ಬರೆದುಕೊಟ್ಟರೂ ಅವುಗಳು ತನಗೆ ಪರಕೀಯವೆಂದು ಭಾವಿಸುತ್ತದೆ. ಎಫ್ರಯಿಮಿನವರು ಬಲಿಪಶುಗಳನ್ನು ನನಗೆ ನೈವೇದ್ಯವಾಗಿ ವಧಿಸುತ್ತಾರೆ, ವಧಿಸಿದ್ದನ್ನು ಭುಜಿಸುತ್ತಾರೆ. ಆದರೆ ಆ ಬಲಿಗಳನ್ನು ನಾನು ಮೆಚ್ಚುವುದಿಲ್ಲ. ಅವರ ಅಧರ್ಮವನ್ನು ನೆನಪಿಗೆ ತಂದುಕೊಂಡು ಅವರ ಪಾಪಕ್ಕೆ ತಕ್ಕ ದಂಡನೆಯನ್ನು ವಿಧಿಸುವೆನು. ಆ ಜನರು ಈಜಿಪ್ಟಿಗೆ ಹಿಂದಿರುಗಬೇಕಾಗುವುದು."

ಕೀರ್ತನೆ: 115:3-4, 5-6, 7-8, 9-10

ಶ್ಲೋಕ:  ಪ್ರಭುವಿನಲ್ಲಿದೆ ಭರವಸೆ ಇಸ್ರಯೇಲ್ ಜನರಿಗೆ

ಶುಭಸಂದೇಶ: ಮತ್ತಾಯ 9:32-38


ಕುರುಡರು ಹೊರಟು ಹೋಗುತ್ತಿದ್ದ ಹಾಗೆ, ದೆವ್ವ ಹಿಡಿದಿದ್ದ ಒಬ್ಬ ಮೂಕನನ್ನು ಕೆಲವರು ಯೇಸುಸ್ವಾಮಿಯ ಬಳಿಗೆ ಕರೆತಂದರು. ದೆವ್ವ ಬಿಡಿಸಿದ ಮೇಲೆ ಆ ಮೂಕನಿಗೆ ಮಾತು ಬಂದಿತು. ಜನರೆಲ್ಲರೂ ಆಶ್ಚರ್ಯಚಕಿತರಾದರು. “ಇಂತಹ ಕಾರ್ಯವನ್ನು ನಾವು ಇಸ್ರಯೇಲಿನಲ್ಲಿ ಕಂಡದ್ದೇ ಇಲ್ಲ!” ಎಂದುಕೊಂಡರು. ಆದರೆ ಫರಿಸಾಯರು, “ಇವನು ದೆವ್ವಗಳೊಡೆಯನ ಶಕ್ತಿಯಿಂದಲೇ ದೆವ್ವಗಳನ್ನು ಬಿಡಿಸುತ್ತಾನೆ,” ಎಂದರು. ಯೇಸುಸ್ವಾಮಿ, ಊರೂರುಗಳಲ್ಲೂ ಹಳ್ಳಿ ಹಳ್ಳಿಗಳಲ್ಲೂ ಸಂಚಾರ ಮಾಡುತ್ತಾ ಅಲ್ಲಿಯ ಪ್ರಾರ್ಥನಾಮಂದಿರಗಳಲ್ಲಿ ಬೋಧಿಸಿದರು. ಶ್ರೀಸಾಮ್ರಾಜ್ಯದ ಶುಭಸಂದೇಶವನ್ನು ಸಾರಿದರು. ಎಲ್ಲಾತರದ ರೋಗರುಜಿನಗಳನ್ನು ಗುಣಪಡಿಸಿದರು. ಆ ಜನಸಮೂಹವನ್ನು ಕಂಡಾಗ ಅವರ ಮನ ಕರಗಿತು. ಏಕೆಂದರೆ, ಕುರುಬನಿಲ್ಲದ ಕುರಿಗಳಂತೆ ಅವರು ತೊಳಲಿದ್ದರು ಹಾಗೂ ಬಳಲಿದ್ದರು. ಆದುದರಿಂದ ಯೇಸು ತಮ್ಮ ಶಿಷ್ಯರಿಗೆ, “ಬೆಳೆಯೇನೋ ಹೇರಳ; ಕೊಯಿಲುಗಾರರೋ ವಿರಳ; ಈ ಕಾರಣ ತನ್ನ ಕೊಯಿಲಿಗೆ ಆಳುಗಳನ್ನು ಕಳುಹಿಸುವಂತೆ ಬೆಳೆಯ ಯಜಮಾನನನ್ನು ಪ್ರಾರ್ಥಿಸಿರಿ,” ಎಂದರು.

06.07.2020 - "ಮಗಳೇ, ಹೆದರಬೇಡ; ನಿನ್ನ ವಿಶ್ವಾಸ ನಿನ್ನನ್ನು ಗುಣಪಡಿಸಿದೆ,"

ಮೊದಲನೇ ವಾಚನ: ಹೊಶೇಯ 2:16, 17-18, 21-22

ಸರ್ವೇಶ್ವರ ಇಂತೆನ್ನುತ್ತಾರೆ: ಆ ದಿನಗಳಲ್ಲಿ ನೀನು ನನ್ನನ್ನು ‘ಬಾಳ್‍ದೇವತೆ’ ಎಂದು ಕರೆಯದೆ ‘ನನ್ನ ಪತಿ’ ಎಂದು ಕರೆಯುವೆ. ಬಾಳ್‍ದೇವತೆಗಳ ಹೆಸರುಗಳನ್ನು ನಿನ್ನ ಬಾಯಿಂದ ತೊಲಗಿಸುವೆನು; ಇನ್ನೆಂದಿಗೂ ಅವುಗಳನ್ನು ನೀನು ಉಚ್ಚರಿಸದಂತೆ ಮಾಡುವೆನು. ಆ ದಿನಗಳಲ್ಲಿ ನನ್ನ ಜನರಿಗೆ ಹಾನಿ ಮಾಡದಂತೆ ಕಾಡಿನ ಮೃಗಗಳೊಂದಿಗೂ, ಆಕಾಶದ ಪಕ್ಷಿಗಳೊಂದಿಗೂ, ನೆಲದ ಮೇಲೆ ಹರಿದಾಡುವ ಕ್ರಿಮಿಕೀಟಗಳೊಂದಿಗೂ ಒಪ್ಪಂದ ಮಾಡಿಕೊಳ್ಳುವೆನು. ಬಿಲ್ಲುಬಾಣ, ಕತ್ತಿಕಠಾರಿಗಳು ಅವರ ನಾಡಿನಲ್ಲಿ ಇಲ್ಲದಂತೆ ಮಾಡುವೆನು; ನನ್ನ ಜನರು ಸುರಕ್ಷಿತವಾಗಿ ನೆಲಸುವಂತೆ ಮಾಡುವೆನು. ಸರ್ವೇಶ್ವರ ಇಂತೆನ್ನುತ್ತಾರೆ: ಆ ದಿನದಂದು ಪ್ರೀತಿಸುವೆನು ನಿನ್ನನು; ಆಲಿಸುವೆನು ಆಗಸದ ಮೊರೆಯನು. ಆಗಸವು ಆಲಿಸುವುದು ಭೂಮಿಯ ಮೊರೆಯನು ಇವು ಆಲಿಸುವುವು ಇಸ್ರಯೇಲಿನ ಮೊರೆಯನು.

ಕೀರ್ತನೆ: 145:2-3, 4-5, 6-7, 8-9

ಶ್ಲೋಕ: ಪ್ರಭು ದಯಾನಿಧಿ, ಕೃಪಾಸಾಗರನು

ಶುಭಸಂದೇಶ: ಮತ್ತಾಯ 9:18-26


ಯೇಸುಸ್ವಾಮಿ ಹೀಗೆ ಬೋಧಿಸುತ್ತಿರುವಾಗಲೇ ಯೆಹೂದ್ಯ ಅಧಿಕಾರಿಯೊಬ್ಬನು ಅಲ್ಲಿಗೆ ಬಂದನು. ಅವನು ಯೇಸುವಿನ ಮುಂದೆ ಮೊಣಕಾಲೂರಿ, "ನನ್ನ ಮಗಳು ಈಗ ತಾನೆ ಸತ್ತುಹೋದಳು. ಆದರೂ ತಾವು ದಯಮಾಡಿಸಿ ತಮ್ಮ ಹಸ್ತವನ್ನು ಆಕೆಯ ಮೇಲಿಡಬೇಕು. ಅವಳು ಮರಳಿ ಬದುಕುವಳು," ಎಂದು ಬೇಡಿಕೊಂಡನು. ಯೇಸು ಎದ್ದು ಅವನ ಹಿಂದೆ ಹೊರಟರು. ಶಿಷ್ಯರೂ ಹಿಂಬಾಲಿಸಿ ಹೋದರು. ಹೋಗುತ್ತಿದ್ದಾಗ, ಹನ್ನೆರಡು ವರ್ಷಗಳಿಂದ ರಕ್ತಸ್ರಾವ ರೋಗದಿಂದ ಬಹಳವಾಗಿ ನರಳುತ್ತಿದ್ದ ಒಬ್ಬ ಮಹಿಳೆ ಹಿಂಬದಿಯಿಂದ ಬಂದು ಯೇಸುಸ್ವಾಮಿಯ ಉಡುಪಿನ ಅಂಚನ್ನು ಮುಟ್ಟಿದಳು. "ನಾನು ಅವರ ಉಡುಪನ್ನು ಮುಟ್ಟಿದರೂ ಸಾಕು, ಗುಣಹೊಂದುವೆನು" ಎಂದುಕೊಂಡಿದ್ದಳು ಆಕೆ. ಯೇಸು ಹಿಂದಿರುಗಿ ಆಕೆಯನ್ನು ನೋಡಿ, "ಮಗಳೇ, ಹೆದರಬೇಡ; ನಿನ್ನ ವಿಶ್ವಾಸ ನಿನ್ನನ್ನು ಗುಣಪಡಿಸಿದೆ," ಎಂದರು. ಆ ಕ್ಷಣದಲ್ಲೇ ಆಕೆ ವ್ಯಾಧಿಯಿಂದ ಮುಕ್ತಳಾದಳು. ಯೇಸು ಆ ಅಧಿಕಾರಿಯ ಮನೆಯನ್ನು ತಲುಪಿದರು. ಅಲ್ಲಿ ವಾದ್ಯಗಾರರನ್ನೂ ಗದ್ದಲ ಮಾಡುತ್ತಿದ್ದ ಜನಜಂಗುಳಿಯನ್ನೂ ಕಂಡು, "ಎಲ್ಲರೂ ಇಲ್ಲಿಂದ ಹೊರಡಿರಿ, ಬಾಲಕಿ ಸತ್ತಿಲ್ಲ; ನಿದ್ರಿಸುತ್ತಿದ್ದಾಳೆ" ಎಂದರು. ಜನರು ನಕ್ಕು ಅವರನ್ನು ಪರಿಹಾಸ್ಯ ಮಾಡಿದರು. ಆದರೂ ಜನರ ಗುಂಪನ್ನು ಹೊರಗೆ ಕಳುಹಿಸಿ, ಯೇಸು ಕೊಠಡಿಯೊಳಕ್ಕೆ ಹೋಗಿ, ಬಾಲಕಿಯ ಕೈಹಿಡಿದು ಎಬ್ಬಿಸಿದರು. ಆಕೆ ಎದ್ದಳು. ಈ ಸಮಾಚಾರ ಆ ನಾಡಿನಲ್ಲೆಲ್ಲಾ ಹಬ್ಬಿ ಹರಡಿತು. 

05.07.2020 - "ನನ್ನ ನೊಗ ಹಗುರ, ನನ್ನ ಹೊರೆ ಸುಗಮ,"

ಮೊದಲನೇ ವಾಚನ: ಜೆಕರ್ಯ 9:9-10

ಸಂತೋಷಿಸಿರಿ, ಆನಂದಿಸಿರಿ, ಸಿಯೋನಿನ ನಿವಾಸಿಗಳೇ, ಹರ್ಷೋದ್ಗಾರ ಮಾಡಿರಿ, ಜೆರುಸಲೇಮಿನ ಜನಗಳೇ. ಇಗೋ, ಬರುತಿಹನು ನಿಮ್ಮ ಅರಸನು ನ್ಯಾಯವಂತನು, ಜಯಶೀಲನು ಆತನು ವಿನಮ್ರನು, ಹೇಸರಗತ್ತೆಯನ್ನೇರಿ ಸಾಗಿಬರುತಿಹನು. ಕಿತ್ತುಹಾಕುವೆನು ಎಫ್ರಯಿಮಿನ ರಥಬಲವನು ನಿಶ್ಯೇಷಮಾಡುವೆನು ಜೆರುಸಲೇಮಿನ ಅಶ್ವಬಲವನು ಮುರಿಯಲಾಗುವುದು ಯುದ್ಧದ ಬಿಲ್ಲುಗಳನು. ಘೋಷಿಸುವೆನು ಶಾಂತಿಯನು ರಾಷ್ಟ್ರಗಳಿಗೆ ಆತನ ರಾಜ್ಯಭಾರ ಸಮುದ್ರದಿಂದ ಸಮುದ್ರದವರೆಗೆ ಯೂಫ್ರೆಟಿಸ್ ನದಿಯಿಂದ ಭುವಿಯ ಕಟ್ಟಕಡೆಯವರೆಗೆ.

ಕೀರ್ತನೆ: 145:1-2, 8-9, 10-11, 13-14

ಶ್ಲೋಕ: ದೇವಾ, ಯುಗಯುಗಾಂತರಕ್ಕೂ ನಿನ್ನ ನಾಮಕ್ಕೆ ನಮನ

ಎರಡನೇ ವಾಚನ: ರೋಮನರಿಗೆ 8:9, 11-13

ನಿಮ್ಮಲ್ಲಿ ನಿಜವಾಗಿಯೂ ದೇವರ ಆತ್ಮವು ನೆಲಸಿದ್ದರೆ ನೀವು ಶರೀರ ಸ್ವಭಾವಕ್ಕೆ ಅನುಸಾರವಾಗಿ ಜೀವಿಸದೆ ಪವಿತ್ರಾತ್ಮ ಅವರ ಚಿತ್ತಕ್ಕೆ ಅನುಸಾರವಾಗಿ ಜೀವಿಸುತ್ತೀರಿ. ಯಾರಲ್ಲಿ ಕ್ರಿಸ್ತಯೇಸುವಿನ ಆತ್ಮ ಇಲ್ಲವೋ ಅಂಥವನು ಕ್ರಿಸ್ತಯೇಸುವಿಗೆ ಸೇರಿದವನಲ್ಲ. ಯೇಸುವನ್ನು ಮರಣದಿಂದ ಎಬ್ಬಿಸಿದ ದೇವರ ಆತ್ಮ ನಿಮ್ಮಲ್ಲಿ ನೆಲೆಗೊಂಡಿರಲಿ. ಆಗ ಕ್ರಿಸ್ತಯೇಸುವನ್ನು ಮರಣದಿಂದ ಎಬ್ಬಿಸಿದ ದೇವರು ನಿಮ್ಮಲ್ಲಿ ನೆಲೆಗೊಂಡಿರುವ ಆತ್ಮನ ಮುಖಾಂತರ ನಿಮ್ಮ ನಶ್ವರ ದೇಹಗಳಿಗೂ ಜೀವವನ್ನೀಯುವರು. ಆದ್ದರಿಂದ ಸಹೋದರರೇ, ನಾವು ಶರೀರ ಸ್ವಭಾವದ ಹಂಗಿನಲ್ಲಿಲ್ಲ. ಅದರ ಆಶಾಪಾಶಗಳಿಗೆ ಅನುಗುಣವಾಗಿ ಬಾಳುವ ಹಂಗಿನಲ್ಲೂ ಇಲ್ಲ. ನೀವು ಶರೀರ ಸ್ವಭಾವಕ್ಕೆ ಅನುಸಾರವಾಗಿ ಬಾಳಿದರೆ ಖಂಡಿತವಾಗಿ ಸಾಯುವಿರಿ. ಪವಿತ್ರಾತ್ಮ ಅವರ ನೆರವಿನಿಂದ ದೈಹಿಕ ದುರಭ್ಯಾಸಗಳನ್ನು ದಮನಮಾಡಿದರೆ ಜೀವಿಸುವಿರಿ.

ಶುಭಸಂದೇಶ: ಮತ್ತಾಯ 11:25-30


ಆ ಸಮಯದಲ್ಲಿ ಯೇಸುಸ್ವಾಮಿ, "ಪಿತನೇ, ಪರಲೋಕ ಭೂಲೋಕಗಳ ಒಡೆಯನೇ, ಜ್ಞಾನಿಗಳಿಗೂ ಮೇಧಾವಿಗಳಿಗೂ ಈ ವಿಷಯಗಳನ್ನು ಮರೆಮಾಡಿ ಮಕ್ಕಳಂಥವರಿಗೆ ನೀವು ಶ್ರುತಪಡಿಸಿದ್ದೀರಿ; ಇದಕ್ಕಾಗಿ ನಿಮ್ಮನ್ನು ವಂದಿಸುತ್ತೇನೆ. ಹೌದು, ಪಿತನೇ, ಇದೇ ನಿಮ್ಮ ಸುಪ್ರೀತ ಸಂಕಲ್ಪ. "ನನ್ನ ಪಿತ ಸಮಸ್ತವನ್ನೂ ನನ್ನ ವಶಕ್ಕೆ ಒಪ್ಪಿಸಿದ್ದಾರೆ; ಪುತ್ರನು ಯಾರೆಂಬುದನ್ನು ಪಿತನೇ ಹೊರತು ಬೇರಾರೂ ಅರಿಯರು. ಪಿತನು ಯಾರು ಎಂಬುದನ್ನು ಪುತ್ರನು ಮತ್ತು ಯಾವನಿಗೆ ಪುತ್ರನು ಅವರನ್ನು ಶ್ರುತಪಡಿಸಲು ಇಚ್ಛಿಸುತ್ತಾನೋ, ಅವರೇ ಹೊರತು ಮತ್ತಾರೂ ಅರಿಯರು. ಶ್ರಮಜೀವಿಗಳಿಗೆ ವಿಶ್ರಾಂತಿದಾತ "ದುಡಿದು, ಭಾರಹೊತ್ತು, ಬಳಲಿ ಬೆಂಡಾಗಿರುವ ಸರ್ವಜನರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ವಿಶ್ರಾಂತಿಕೊಡುತ್ತೇನೆ. ನಾನು ವಿನಯಶೀಲನು, ದೀನಹೃದಯನು; ನನ್ನ ನೊಗಕ್ಕೆ ಹೆಗಲುಕೊಟ್ಟು ನನ್ನಿಂದ ಕಲಿತುಕೊಳ್ಳಿ. ಆಗ ನಿಮಗೆ ವಿಶ್ರಾಂತಿ ಸಿಗುವುದು. ನನ್ನ ನೊಗ ಹಗುರ, ನನ್ನ ಹೊರೆ ಸುಗಮ," ಎಂದರು.

04.07.2020 - "ಮದುವಣಿಗನು ಜೊತೆಯಲ್ಲಿ ಇರುವಷ್ಟು ಕಾಲ ಅವನ ಆಪ್ತರು ದುಃಖಪಡುವುದುಂಟೇ? "

ಮೊದಲನೇ ವಾಚನ: ಆಮೋಸ 9:11-15


ಸರ್ವೇಶ್ವರ ಇಂತೆನ್ನುತ್ತಾರೆ: “ದಿನ ಬರಲಿದೆ. ಅಂದು ಬಿದ್ದುಹೋಗಿರುವ ದಾವೀದನ ಗುಡಾರವನ್ನು ಮರಳಿ ಎಬ್ಬಿಸುವೆನು. ಅದರ ಬಿರುಕುಗಳನ್ನು ಮುಚ್ಚುವೆನು. ಹಾಳಾದುದ್ದನ್ನು ಎತ್ತಿ ನಿಲ್ಲಿಸುವೆನು. ಮೊದಲು ಇದ್ದಂತೆಯೇ ಪುನಃ ನಿರ್ಮಿಸುವೆನು. ಹೀಗೆ ನನ್ನ ಜನರು ಎದೋಮಿನ ಮಿಕ್ಕ ಭಾಗವನ್ನೂ ಸರ್ವೇಶ್ವರನ ಪ್ರಜೆ ಎನ್ನಿಸಿಕೊಂಡ ಸಕಲ ಜನಾಂಗಗಳನ್ನೂ ಸ್ವಾಧೀನಪಡಿಸಿಕೊಳ್ಳುವರು.” ಈ ಕಾರ್ಯವನ್ನು ಸಾಧಿಸುವಂಥ ಸರ್ವೇಶ್ವರಸ್ವಾಮಿಯ ನುಡಿಯಿದು: ಕಾಲ ಬರುವುದು: ಆಗ – ಹೊಸಬಿತ್ತನೆಯಾಗುವುದು ಕೊಯ್ಯುವವನ ಹಿಂದೆಯೆ; ಹೊಸ ಫಸಲು ಸಿದ್ಧವಾಗುವುದು ದ್ರಾಕ್ಷೆ ತುಳಿಯುವವನ ಮುಂದೆಯೆ. ಸುರಿಸುವುವು ದ್ರಾಕ್ಷಾರಸವನು ಬೆಟ್ಟಗಳು ಕರಗುವಂತಿರುವುವು ಅದರಿಂದ ಎಲ್ಲ ಗುಡ್ಡಗಳು. ಸನಾತನ ಸೌಭಾಗ್ಯಕ್ಕೆ ಮರಳಿಸುವೆನು ನನ್ನ ಜನರಾದ ಇಸ್ರಯೇಲರನು. ವಾಸಮಾಡುವರವರು ಪಾಳುಬಿದ್ದ ಪಟ್ಟಣಗಳನು ಮತ್ತೆ ಕಟ್ಟಿಕೊಂಡು. ಕುಡಿಯುವರು ಸಮೃದ್ಧಿಯಾಗಿ ದ್ರಾಕ್ಷಾತೋಟಗಳನು ಮಾಡಿಕೊಂಡು. ತಿನ್ನುವರು ಯಥೇಚ್ಛವಾಗಿ ಫಲವೃಕ್ಷಗಳನು ಬೆಳೆಸಿಕೊಂಡು. ಬೇರೂರಿಸುವೆನು ಅವರನು ಸ್ವಂತನಾಡಲಿ ಕೀಳರಾರೂ ಅವರನು ಅಲ್ಲಿಂದ ಮರಳಿ.” ಇದು ನಿನ್ನ ದೇವರಾದ ಸರ್ವೇಶ್ವರನ ನುಡಿ.

ಕೀರ್ತನೆ: 85:9, 10, 11-12, 13-14

ಶ್ಲೋಕ: ಭಯಭಕ್ತಿಯುಳ್ಳವರಿಗಾತನ ರಕ್ಷಣೆ ಸನ್ನಿಹಿತ

ಶುಭಸಂದೇಶ: ಮತ್ತಾಯ 9:14-17

ಯೊವಾನ್ನನ ಶಿಷ್ಯರು ಯೇಸುಸ್ವಾಮಿಯ ಬಳಿಗೆ ಬಂದರು. “ನಾವೂ ಫರಿಸಾಯರೂ ಉಪವಾಸ ವ್ರತವನ್ನು ಕೈಗೊಳ್ಳುತ್ತೇವೆ. ಆದರೆ ನಿಮ್ಮ ಶಿಷ್ಯರು ಏಕೆ ಹಾಗೆ ಮಾಡುವುದಿಲ್ಲ?" ಎಂದು ಪ್ರಶ್ನೆ ಹಾಕಿದರು. ಅದಕ್ಕೆ ಯೇಸು, "ಮದುವಣಿಗನು ಜೊತೆಯಲ್ಲಿ ಇರುವಷ್ಟು ಕಾಲ ಅವನ ಆಪ್ತರು ದುಃಖಪಡುವುದುಂಟೇ? ಮದುವಣಿಗನು ಅವರಿಂದ ಅಗಲಬೇಕಾಗುವ ಕಾಲವು ಬರುವುದು; ಆಗ ಅವರು ಉಪವಾಸ ಮಾಡುವರು. "ಹಳೆಯ ಅಂಗಿಗೆ ಹೊಸ ಬಟ್ಟೆಯ ತೇಪೆಯನ್ನು ಯಾರೂ ಹಾಕುವುದಿಲ್ಲ. ಏಕೆಂದರೆ ಹೊಸ ತೇಪೆಯು ಹಳೆಯ ಅಂಗಿಯನ್ನು ಹಿಂಜುವುದರಿಂದ ಹರಕು ಹೆಚ್ಚಾಗುತ್ತದೆ. ಅಂತೆಯೇ ಹಳೆಯ ಬುದ್ದಲಿಗಳಲ್ಲಿ ಹೊಸ ಮದ್ಯವನ್ನು ತುಂಬಿಡುವುದಿಲ್ಲ. ತುಂಬಿಟ್ಟರೆ ಬುದ್ದಲಿಗಳು ಬಿರಿಯುತ್ತವೆ, ಮದ್ಯವು ಚೆಲ್ಲಿ ಹೋಗುತ್ತದೆ; ಬುದ್ದಲಿಗಳೂ ಹಾಳಾಗುತ್ತವೆ. ಹೊಸ ಮದ್ಯವನ್ನು ಹೊಸ ಬುದ್ದಲಿಗಳಲ್ಲೇ ತುಂಬಿಡುತ್ತಾರೆ. ಆಗ ಎರಡೂ ಉಳಿಯುತ್ತವೆ," ಎಂದರು. 

02.07.2020 - "ನಿನ್ನ ಪಾಪಗಳನ್ನು ಕ್ಷಮಿಸಲಾಗಿದೆ" ಎನ್ನುವುದು ಸುಲಭವೋ ಅಥವಾ ‘ಎದ್ದು ನಡೆ’ ಎನ್ನುವುದು ಸುಲಭವೋ?"

ಮೊದಲನೇ ವಾಚನ: ಆಮೋಸ 07:10-17

ತರುವಾಯ ಬೇತೇಲಿನ ಯಾಜಕನಾದ ಅಮಚ್ಯನು ಇಸ್ರಯೇಲಿನ ಅರಸ ಯಾರೊಬ್ಬಾಮನಿಗೆ ಹೀಗೆಂದು ಹೇಳಿಕಳುಹಿಸಿದನು: “ಆಮೋಸನು ನಿನಗೆ ವಿರುದ್ಧವಾಗಿ ಇಸ್ರಯೇಲರಲ್ಲಿ ಒಳಸಂಚು ಹೂಡಿದ್ದಾನೆ. ಅವನ ಮಾತುಗಳನ್ನು ನಾಡು ಸಹಿಸಲಾರದು. ಏಕೆಂದರೆ, “ಯಾರೊಬ್ಬಾಮನು ಖಡ್ಗದಿಂದ ಹತನಾಗುವನು. ಇಸ್ರಯೇಲ್ ಸ್ವಂತ ನಾಡಿನಿಂದ ಪರದೇಶಕ್ಕೆ ಒಯ್ಯಲ್ಪಡುವುದು ಖಂಡಿತ ಎಂದು ಅವನು ನುಡಿದಿದ್ದಾನೆ.” ಆ ಬಳಿಕ ಅಮಚ್ಯನು ಆಮೋಸನಿಗೆ, “ಕಣಿ ಹೇಳುವವನೇ, ತೊಲಗು, ಜುದೇಯ ನಾಡಿಗೆ ಓಡಿ ಹೋಗು; ಅಲ್ಲಿ ಪ್ರವಾದನೆ ಮಾಡಿ ಹೊಟ್ಟೆ ಹೊರೆದುಕೊ. ಬೇತೇಲಿನಲ್ಲಿ ಇನ್ನು ಪ್ರವಾದನೆ ಮಾಡಬೇಡ. ಇದು ರಾಜನ ಗರ್ಭಗುಡಿ, ರಾಜ್ಯದ ಪವಿತ್ರಾಲಯ,” ಎಂದನು. ಅದಕ್ಕೆ ಆಮೋಸನು ಪ್ರತ್ಯುತ್ತರವಾಗಿ: “ನಾನು ಪ್ರವಾದಿಯಲ್ಲ, ಪ್ರವಾದಿಯ ಮಗನೂ ಅಲ್ಲ. ನಾನೊಬ್ಬ ಗೊಲ್ಲ, ಅತ್ತಿಹಣ್ಣನ್ನು ಕೀಳುವವನು. ಮಂದೆ ಕಾಯುವುದರಿಂದ ಸರ್ವೇಶ್ವರ ನನ್ನನ್ನು ಬಿಡಿಸಿದರು. ನೀನು ಹೋಗಿ ನನ್ನ ಜನರಾದ ಇಸ್ರಯೇಲರಿಗೆ ಪ್ರವಾದನೆ ಮಾಡು’ ಎಂದು ಹೇಳಿ ಕಳುಹಿಸಿದರು. “ಆದ್ದರಿಂದ ಆ ಸರ್ವೇಶ್ವರಸ್ವಾಮಿಯ ವಾಕ್ಯವನ್ನು ಗಮನಿಸು: ‘ಇಸ್ರಯೇಲಿಗೆ ವಿರುದ್ಧ ಪ್ರವಾದನೆ ಮಾಡಬೇಡ; ಇಸಾಕನ ಮನೆತನದ ವಿರುದ್ಧ ಮಾತೆತ್ತಬೇಡ; ಎಂದು ನೀನು ಹೇಳುತ್ತೀಯಲ್ಲವೆ? ನೀನು ಹೀಗೆ ಹೇಳಿದ್ದರಿಂದ ಸರ್ವೇಶ್ವರ ಇಂತೆನ್ನುತ್ತಾರೆ: ‘ನಿನ್ನ ಹೆಂಡತಿ ಈ ಪಟ್ಟಣದಲ್ಲಿ ವೇಶ್ಯೆಯಾಗುವಳು. ನಿನ್ನ ಪುತ್ರ ಪುತ್ರಿಯರು ಕತ್ತಿಗೆ ತುತ್ತಾಗುವರು. ನಿನ್ನ ನಾಡನ್ನು ಶತ್ರುಗಳು ವಶಪಡಿಸಿಕೊಂಡು ಹಂಚಿಕೊಳ್ಳುವರು. ನೀನು ಸಹ ಅಪವಿತ್ರವಾದ ನಾಡಿನಲ್ಲಿ ಸಾಯುವೆ. ಇಸ್ರಯೇಲರು ಖಂಡಿತವಾಗಿ ಸ್ವಂತ ನಾಡಿನಿಂದ ಪರದೇಶಕ್ಕೆ ಸೆರೆಯಾಗಿ ಹೋಗುವರು’,” ಎಂದು ಹೇಳಿದನು.

ಕೀರ್ತನೆ: 19:8, 9, 10, 11

ಶ್ಲೋಕ: ಪ್ರಭುವಿನ ತೀರ್ಪು ಯಥಾರ್ಥ, ನ್ಯಾಯಯುತ

ಶುಭಸಂದೇಶ: ಮತ್ತಾಯ 9:1-8


ಯೇಸುಸ್ವಾಮಿ ದೋಣಿ ಹತ್ತಿ ಮರಳಿ ಸರೋವರವನ್ನು ದಾಟಿ ತಮ್ಮ ಸ್ವಂತ ಊರಿಗೆ ಬಂದರು. ಆಗ ಜನರು ಒಬ್ಬ ಪಾಶ್ರ್ವವಾಯು ರೋಗಿಯನ್ನು ಹಾಸಿಗೆಯ ಸಮೇತ ಹೊತ್ತುಕೊಂಡು ಅವರ ಬಳಿಗೆ ತಂದರು. ಯೇಸು ಅವರ ವಿಶ್ವಾಸವನ್ನು ಮೆಚ್ಚಿ, ಆ ಪಾಶ್ರ್ವವಾಯು ರೋಗಿಗೆ, "ಮಗು ಧೈರ್ಯದಿಂದಿರು. ನಿನ್ನ ಪಾಪಗಳನ್ನು ಕ್ಷಮಿಸಲಾಗಿದೆ," ಎಂದರು ಆಗ ಅಲ್ಲಿದ್ದ ಧರ್ಮಶಾಸ್ತ್ರಿಗಳಲ್ಲಿ ಕೆಲವರು, "ಇವನು ದೇವದೂಷಣೆ ಮಾಡುತ್ತಿದ್ದಾನೆ," ಎಂದುಕೊಂಡರು. ಯೇಸು ಅವರ ಆಲೋಚನೆಗಳನ್ನು ಅರಿತುಕೊಂಡು, "ನೀವು ಮನಸ್ಸಿನಲ್ಲೇಕೆ ದುರಾಲೋಚನೆ ಮಾಡುತ್ತಿದ್ದೀರಿ? "ನಿನ್ನ ಪಾಪಗಳನ್ನು ಕ್ಷಮಿಸಲಾಗಿದೆ" ಎನ್ನುವುದು ಸುಲಭವೋ ಅಥವಾ ‘ಎದ್ದು ನಡೆ’ ಎನ್ನುವುದು ಸುಲಭವೋ? ಭೂಲೋಕದಲ್ಲಿ ಪಾಪಗಳನ್ನು ಕ್ಷಮಿಸಲು ನರಪುತ್ರನಿಗೆ ಅಧಿಕಾರ ಉಂಟೆಂದು ಈ ಮೂಲಕ ನಿಮಗೆ ಖಚಿತವಾಗಬೇಕು," ಎಂದು ಹೇಳಿ, ಆ ಪಾಶ್ರ್ವವಾಯು ರೋಗಿಯನ್ನು ನೋಡಿ, "ಎದ್ದೇಳು, ನಿನ್ನ ಹಾಸಿಗೆಯನ್ನು ಎತ್ತಿಕೊಂಡು ಮನೆಗೆ ಹೋಗು" ಎಂದರು. ಅದರಂತೆಯೇ, ಆ ರೋಗಿ ಎದ್ದು ಮನೆಗೆ ಹೊರಟುಹೋದನು. ಇದನ್ನು ಕಂಡ ಜನರು ತಲ್ಲಣಗೊಂಡರು. ಮಾನವನಿಗೆ ಇಂಥ ಅಧಿಕಾರ ಕೊಟ್ಟ ದೇವರನ್ನು ಕೊಂಡಾಡಿದರು. 

30.06.2020 - "ಎದ್ದು ನಿಂತು ಸುಂಟರಗಾಳಿಯನ್ನೂ ಸರೋವರವನ್ನೂ ಗದರಿಸಿದರು"

ಮೊದಲನೇ ವಾಚನ: ಪ್ರವಾದಿ ಆಮೋಸನ ಗ್ರಂಥ 3:1-8; 4:11-12

ಇಸ್ರಯೇಲಿನ ಜನರೇ, ಕಿವಿಗೊಡಿ. ಈಜಿಪ್ಟ್ ದೇಶದಿಂದ ನಿಮ್ಮನ್ನು ಬಿಡುಗಡೆಮಾಡಿ ಕರೆತಂದ ಸರ್ವೆಶ್ವರ ನಿಮ್ಮ ವಿರುದ್ಧವಾಗಿ ನುಡಿಯುವ ಮಾತುಗಳನ್ನು ಆಲಿಸಿರಿ: “ಜಗದ ಜನಾಂಗಗಳಲ್ಲಿ ನನಗೆ ಆಪ್ತರಾದವರೆಂದರೆ ನೀವು. ಆದಕಾರಣ ನೀವು ಮಾಡಿರುವ ಎಲ್ಲಾ ಪಾಪಗಳಿಗೆ ತಕ್ಕ ಪ್ರಾಯಶ್ಚಿತ್ತವನ್ನು ಸವಿಯುವಂತೆ ಮಾಡುವೆನು.” ಗೊತ್ತುಗುರಿಯಿಲ್ಲದೆ ಯಾರಾದರಿಬ್ಬರು ಜೊತೆಯಾಗಿ ಪ್ರಯಾಣಮಾಡುವುದುಂಟೆ? ಬೇಟೆ ಕಂಡಾಗಲ್ಲದೆ ಸಿಂಹವು ಕಾಡಿನಲ್ಲಿ ಗರ್ಜಿಸುವುದುಂಟೆ? ಏನನ್ನೂ ಹಿಡಿಯದೆ ಯುವಸಿಂಹವು ಗುಹೆಯಲ್ಲೆ ಗುರುಗುಟ್ಟುವುದುಂಟೆ? ಕಾಳಿಲ್ಲದೆ ಪಕ್ಷಿ ಬಲೆಗೆ ಬೀಳುವುದುಂಟೆ? ಏನೂ ಸಿಕ್ಕಿಕೊಳ್ಳದೆ ಬೋನು ಮೇಲಕ್ಕೆ ಏರುವುದುಂಟೆ? ರಣಕಹಳೆ ಮೊಳಗಲು ಜನರು ಬೆದರದೆ ಇರುವುದುಂಟೆ? ಸರ್ವೇಶ್ವರನಿಂದಲ್ಲದೆ ಪಟ್ಟಣಕ್ಕೆ ಕೇಡು ತಟ್ಟುವುದುಂಟೆ? ತನ್ನ ಪರಿಚಾರಕರಾದ ಪ್ರವಾದಿಗಳಿಗೆ ತನ್ನ ಯೋಜನೆಯನ್ನು ತಿಳಿಸದೆ ಸ್ವಾಮಿ ಸರ್ವೇಶ್ವರ ಏನೂ ಮಾಡುವುದಿಲ್ಲ. ಸಿಂಹದ ಗರ್ಜನೆಯನ್ನು ಕೇಳಿ ಹೆದರದಿರುವವರು ಯಾರು? ಸ್ವಾಮಿ ಸರ್ವೇಶ್ವರನ ನುಡಿಯನ್ನು ಕೇಳಿ ಪ್ರವಾದನೆಮಾಡದಿರುವವರು ಯಾರು?.” “ಒಮ್ಮೆ ಸೊದೋಮ್ ಮತ್ತು ಗೊಮೋರಾ ಪಟ್ಟಣಗಳನ್ನು ಕೆಡವಿದಂತೆ ನಾನು ನಿಮ್ಮ ಪಟ್ಟಣಪಾಳೆಯಗಳನ್ನು ಕೆಡವಿದೆನು, ಉರಿಯುವ ಬೆಂಕಿಯಿಂದ ಎಳೆದ ಕೊಳ್ಳಿಯಂತೆ ನೀವು ಇದ್ದೀರಿ. ಆದರೂ ನೀವು ನನ್ನ ಬಳಿಗೆ ಹಿಂದಿರುಗಲಿಲ್ಲ,” ಎನ್ನುತ್ತಾರೆ ಸರ್ವೇಶ್ವರ. ಆದುದರಿಂದ ಇಸ್ರಯೇಲಿನ ಜನರೇ, ನಿಮ್ಮನ್ನು ದಂಡಿಸಿಯೇ ತೀರುವೆನು. ಓ ಇಸ್ರಯೇಲರೇ, ನ್ಯಾಯತೀರ್ಪನ್ನು ಕೊಡಲು ಬರಲಿರುವ ನಿಮ್ಮ ದೇವರನ್ನು ಎದುರಗೊಳ್ಳಲು ಸಿದ್ಧಮಾಡಿಕೊಳ್ಳಿ," ಎನ್ನುತ್ತಾರೆ ಸರ್ವೇಶ್ವರ.

ಕೀರ್ತನೆ: 5:4-6, 6-7, 8

ಶ್ಲೋಕ: ಪ್ರಭೂ, ಸತ್ಯಪಥದಲಿ ನಡೆಸೆನ್ನನು

ಶುಭಸಂದೇಶ: ಮತ್ತಾಯ 8:23-27


ಆಮೇಲೆ ಯೇಸುಸ್ವಾಮಿ ದೋಣಿಯನ್ನು ಹತ್ತಿದರು. ಶಿಷ್ಯರೂ ಹತ್ತಿ ಅವರ ಸಂಗಡಹೋದರು. ಇದ್ದಕ್ಕಿದ್ದ ಹಾಗೆ ಸರೋವರದಲ್ಲಿ ರಭಸವಾದ ಬಿರುಗಾಳಿ ಎದ್ದಿತು. ದೋಣಿ ಅಲೆಗಳಿಂದ ಮುಳುಗಿಹೋಗುವುದರಲ್ಲಿತ್ತು. ಯೇಸುವಾದರೋ ನಿದ್ರಾವಶರಾಗಿದ್ದರು. ಶಿಷ್ಯರು ಹತ್ತಿರಕ್ಕೆ ಬಂದು ಅವರನ್ನು ಎಬ್ಬಿಸಿ, “ಸ್ವಾಮೀ, ಕಾಪಾಡಿ. ನಾವು ನೀರುಪಾಲಾಗುತ್ತಿದ್ದೇವೆ,” ಎಂದರು. ಅದಕ್ಕೆ ಯೇಸು, “ಅಲ್ಪವಿಶ್ವಾಸಿಗಳೇ, ನಿಮಗೇಕೆ ಇಷ್ಟು ಭಯ?” ಎಂದರು. ಅನಂತರ ಎದ್ದು ನಿಂತು ಸುಂಟರಗಾಳಿಯನ್ನೂ ಸರೋವರವನ್ನೂ ಗದರಿಸಿದರು. ಆಗ ವಾತಾವರಣ ಪ್ರಶಾಂತವಾಯಿತು. ಶಿಷ್ಯರು ನಿಬ್ಬೆರಗಾದರು. “ಗಾಳಿಯೂ ಸರೋವರವೂ ಇವರು ಹೇಳಿದ್ದಂತೆ ಕೇಳಬೇಕಾದರೆ ಇವರೆಂತಹ ವ್ಯಕ್ತಿಯಾಗಿರಬೇಕು!” ಎಂದುಕೊಂಡರು.

28.06.2020 - "ನನಗೋಸ್ಕರವಾಗಿ ತನ್ನ ಪ್ರಾಣವನ್ನು ಕಳೆದುಕೊಳ್ಳುವವನು ಅದನ್ನು ಕಾಪಾಡಿಕೊಳ್ಳುತ್ತಾನೆ."

ಮೊದಲನೇ ವಾಚನ: 2 ಅರಸುಗಳು 4:8-11, 14-16

ಒಂದು ಸಾರಿ ಎಲೀಷನು ಶೂನೇಮಿಗೆ ಹೋದನು. ಅಲ್ಲಿ ಒಬ್ಬ ಶ್ರೀಮಂತ ಮಹಿಳೆ ಇದ್ದಳು. ಆಕೆ ಅವನನ್ನು ತನ್ನ ಮನೆಯಲ್ಲಿ ಊಟಮಾಡಬೇಕೆಂದು ಒತ್ತಾಯಪಡಿಸಿದಳು. ಅಂದಿನಿಂದ ಅವನು ಆ ಮಾರ್ಗವಾಗಿ ಹೋಗುವಾಗಲೆಲ್ಲಾ ಆ ಮನೆಯಲ್ಲೇ ಊಟಮಾಡುತ್ತಿದ್ದನು. ಆ ಮಹಿಳೆ ತನ್ನ ಗಂಡನಿಗೆ, “ಯಾವಾಗಲೂ ಈ ದಾರಿಯಿಂದ ಹೋಗುತ್ತಾ ಬರುತ್ತಾ ಇರುವ ಆ ವ್ಯಕ್ತಿ ಒಬ್ಬ ಸಂತನು ಹಾಗು ದೈವಪುರುಷನು ಆಗಿರುತ್ತಾನೆಂದು ನನಗೆ ಗೊತ್ತಾಯಿತು. ಆದುದರಿಂದ ನಾವು ಅವನಿಗಾಗಿ ಮಾಳಿಗೆಯ ಮೇಲೆ ಒಂದು ಸಣ್ಣ ಕೋಣೆಯನ್ನು ಕಟ್ಟಿಸೋಣ. ಅದರಲ್ಲಿ ಒಂದು ಮಂಚ, ಮೇಜು, ಕುರ್ಚಿ, ದೀಪಸ್ತಂಭ ಇವುಗಳನ್ನು ಇಡೋಣ; ಅವನು ಇಲ್ಲಿಗೆ ಬಂದಾಗೆಲ್ಲಾ ಅದರಲ್ಲಿ ವಾಸಮಾಡಲಿ,” ಎಂದು ಹೇಳಿದಳು. ಒಂದು ದಿನ ಎಲೀಷನು ಅಲ್ಲಿಗೆ ಬಂದು ಆ ಕೋಣೆಯೊಳಗೆ ಪ್ರವೇಶಿಸಿ ದಣಿವಾರಿಸಿಕೊಂಡನು. ಆಮೇಲೆ ಎಲೀಷನು ಗೇಹಜಿಯನ್ನು, “ನಾವು ಆಕೆಗೆ ಯಾವ ಉಪಕಾರ ಮಾಡಬಹುದು?” ಎಂದು ಕೇಳಿದನು. ಅವನು, “ಆಕೆಗೆ ಮಗನಿಲ್ಲ, ಗಂಡನು ಮುದುಕನಾಗಿದ್ದಾನೆ,” ಎಂದನು. ಇದನ್ನು ಕೇಳಿ ಎಲೀಷನು ಆ ಮಹಿಳೆಯನ್ನು ಕರೆಯಬೇಕೆಂದು ಆಜ್ಞಾಪಿಸಿದನು. ಅವನು ಹೋಗಿ ಕರೆದನು. ಆಕೆ ಬಂದು ಬಾಗಿಲಿನ ಹತ್ತಿರ ನಿಂತಳು. ಎಲೀಷನು ಆಕೆಗೆ, “ನೀನು ಬರುವ ವರ್ಷ ಇದೇ ಕಾಲದಲ್ಲಿ ಒಬ್ಬ ಮಗನನ್ನು ಅಪ್ಪಿಕೊಂಡಿರುವೆ,” ಎಂದನು. 

ಕೀರ್ತನೆ: 89:2-3, 16-17, 18-19

ಶ್ಲೋಕ: ಪ್ರಭೂ, ಕೀರ್ತಿಸುವೆನು ಸದಾ ನಿನ್ನಚಲ ಪ್ರೀತಿಯನು

ಎರಡನೇ ವಾಚನ: ರೋಮನರಿಗೆ 6:3-4, 8-11

ಕ್ರಿಸ್ತಯೇಸುವಿನವರಾಗಲು ದೀಕ್ಷಾಸ್ನಾನ ಹೊಂದಿರುವ ನಾವು, ಅವರ ಮರಣದಲ್ಲಿ ಪಾಲುಗಾರರಾಗಲು ದೀಕ್ಷಾಸ್ನಾನ ಪಡೆದೆವು ಎಂಬುದು ನಿಮಗೆ ತಿಳಿಯದೆ? ಹೀಗಿರಲಾಗಿ, ದೀಕ್ಷಾಸ್ನಾನ ಮಾಡಿಸಿಕೊಂಡಾಗ ಅವರ ಮರಣದಲ್ಲಿ ಪಾಲುಗಾರರಾದ ನಮಗೆ ಅವರೊಡನೆ ಸಮಾಧಿಯೂ ಆಯಿತು. ಆದುದರಿಂದ ತಂದೆಯ ಮಹಿಮಾಶಕ್ತಿಯಿಂದ ಕ್ರಿಸ್ತಯೇಸು ಮರಣದಿಂದ ಪುನರುತ್ಥಾನ ಹೊಂದಿದಂತೆಯೇ ನಾವು ಸಹ ಹೊಸಜೀವವನ್ನು ಹೊಂದಿ ಬಾಳುತ್ತೇವೆ. ಕ್ರಿಸ್ತಯೇಸುವಿನೊಂದಿಗೆ ನಾವು ಮರಣ ಹೊಂದಿದ್ದರೆ ಅವರೊಡನೆ ನಾವೂ ಜೀವಿಸುತ್ತೇವೆ; ಇದೇ ನಮ್ಮ ವಿಶ್ವಾಸ. ಯೇಸುಕ್ರಿಸ್ತರನ್ನು ಮರಣದಿಂದ ಎಬ್ಬಿಸಲಾಯಿತು ಎಂಬುದನ್ನು ನಾವು ಬಲ್ಲೆವು. ಆದ್ದರಿಂದ ಅವರು ಇನ್ನು ಎಂದಿಗೂ ಸಾಯುವುದಿಲ್ಲ; ಸಾವಿಗೆ ಅವರ ಮೇಲೆ ಯಾವ ಅಧಿಕಾರವೂ ಇಲ್ಲ. ಏಕೆಂದರೆ, ಅವರು ಪಾಪದ ಪಾಲಿಗೆ ಒಂದೇ ಸಾರಿಗೆ ಮಾತ್ರವಲ್ಲ, ಎಂದೆಂದಿಗೂ ಸತ್ತವರು. ಅವರು ಈಗ ಜೀವಿಸುವುದು ದೇವರಿಗಾಗಿಯೇ. ಅಂತೆಯೇ ನೀವೂ ಸಹ ಪಾಪದ ಪಾಲಿಗೆ ಸತ್ತವರೆಂದೂ ದೇವರಿಗಾಗಿ ಮಾತ್ರ ಯೇಸುಕ್ರಿಸ್ತರಲ್ಲಿ ಜೀವಿಸುವವರೆಂದೂ ಪರಿಗಣಿಸಿರಿ.

ಶುಭಸಂದೇಶ:  ಮತ್ತಾಯ 10:37-42


ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು: “ನನ್ನನ್ನು ಪ್ರೀತಿಸುವುದಕ್ಕಿಂತ ಹೆಚ್ಚಾಗಿ ತನ್ನ ತಂದೆಯನ್ನು ಅಥವಾ ತಾಯಿಯನ್ನು ಪ್ರೀತಿಸುವವನು ನನ್ನವನಾಗಲು ಯೋಗ್ಯನಲ್ಲ. ನನ್ನನ್ನು ಪ್ರೀತಿಸುವುದಕ್ಕಿಂತ ಹೆಚ್ಚಾಗಿ ತನ್ನ ಮಗನನ್ನು ಅಥವಾ ಮಗಳನ್ನು ಪ್ರೀತಿಸುವವನು ನನ್ನವನಾಗಲು ಯೋಗ್ಯನಲ್ಲ. ತನ್ನ ಶಿಲುಬೆಯನ್ನು ಹೊತ್ತು ನನ್ನನ್ನು ಹಿಂಬಾಲಿಸದವನು ನನ್ನವನಾಗಲು ಯೋಗ್ಯನಲ್ಲ. ತನ್ನ ಪ್ರಾಣವನ್ನು ಕಾಪಾಡಿಕೊಳ್ಳುವವನು ಅದನ್ನು ಕಳೆದುಕೊಳ್ಳುತ್ತಾನೆ. ನನಗೋಸ್ಕರವಾಗಿ ತನ್ನ ಪ್ರಾಣವನ್ನು ಕಳೆದುಕೊಳ್ಳುವವನು ಅದನ್ನು ಕಾಪಾಡಿಕೊಳ್ಳುತ್ತಾನೆ. “ನಿಮ್ಮನ್ನು ಸ್ವಾಗತಿಸುವವನು ನನ್ನನ್ನು ಸ್ವಾಗತಿಸುತ್ತಾನೆ; ನನ್ನನ್ನು ಸ್ವಾಗತಿಸುವವನು ನನ್ನನ್ನು ಕಳುಹಿಸಿಕೊಟ್ಟಾತನನ್ನೇ ಸ್ವಾಗತಿಸುತ್ತಾನೆ. ಪ್ರವಾದಿಯನ್ನು ಪ್ರವಾದಿಯೆಂದು ಸ್ವಾಗತಿಸುವವನು ಪ್ರವಾದಿಗೆ ಸಿಗುವ ಪ್ರತಿಫಲವನ್ನು ಪಡೆಯುತ್ತಾನೆ. ಸತ್ಪುರುಷನನ್ನು ಸತ್ಪುರುಷನೆಂದು ಸ್ವಾಗತಿಸುವವನು ಸತ್ಪುರುಷನಿಗೆ ಸಿಗುವ ಪ್ರತಿಫಲವನ್ನು ಪಡೆಯುತ್ತಾನೆ. ಯಾರಾದರೂ ಈ ಚಿಕ್ಕವರಲ್ಲಿ ಒಬ್ಬನಿಗೆ ಅವನು ನನ್ನ ಶಿಷ್ಯನೆಂದು ಕುಡಿಯಲು ಒಂದು ಲೋಟ ತಣ್ಣೀರನ್ನು ಕೊಟ್ಟರೂ ಅದಕ್ಕೆ ತಕ್ಕ ಪ್ರತಿಫಲವನ್ನು ಪಡೆಯದೆಹೋಗನೆಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ.”

27.06.2020 - "ನೀನು ವಿಶ್ವಾಸಿಸಿದಂತೆಯೇ ಆಗುವುದು,”

ಮೊದಲನೇ ವಾಚನ: ಪ್ರಲಾಪಗಳು  2:2, 10-14, 18-19


ಸ್ವಾಮಿ ಯಕೋಬಿನ ನಿವಾಸಿಗಳನ್ನು ನಾಶಪಡಿಸಿಹನು, ರೌದ್ರದಿಂದ ಯೆಹೂದ ಕೋಟೆಗಳನ್ನು ನೆಲಸಮವಾಗಿಸಿಹನು, ರಾಜ್ಯವನ್ನೂ ಅದರ ಪಾಲಕರನ್ನೂ ನೀಚಸ್ಥಿತಿಗೆ ಇಳಿಸಿಹನು. ತಲೆಯ ಮೇಲೆ ಧೂಳನ್ನು ತೂರಿಕೊಂಡು ಗೋಣಿತಟ್ಟನ್ನು ಸೊಂಟಕ್ಕೆ ಸುತ್ತಿಕೊಂಡು ಕುಕ್ಕರಿಸಿಹರು ಸಿಯೋನ್ ನಗರಿಯ ಪ್ರಮುಖರು ತಲೆ ತಗ್ಗಿಸಿಹರು ಜೆರುಸಲೇಮಿನ ಯುವತಿಯರು. ಕಂಬನಿಗರೆದು ಇಂಗಿಹೋಗಿದೆ ಕಣ್ಣು ಕುದಿಯುತ್ತಿದೆ ನನ್ನೊಳಗೆ ಕರುಳು! ನನ್ನ ಜನತೆಯೆಂಬ ಯುವತಿ ಹಾಳಾಗಿ ಮಕ್ಕಳು ಹಾದಿಬೀದಿಗಳಲ್ಲಿ ಮೂರ್ಛೆಹೋಗಿ ನನ್ನ ಕರುಳು ಕರಗಿಹೋಗಿದೆ ನೀರಾಗಿ. ‘ಅಮ್ಮಾ ತಿನ್ನಲಿಕ್ಕಿಲ್ಲವೆ? ಕುಡಿಯಲಿಕ್ಕಿಲ್ಲವೆ? ಎನ್ನುತ ಮಕ್ಕಳು ಮೂರ್ಛೆಗೊಂಡಿವೆ. ಗಾಯಗೊಂಡವರಂತೆ ನಗರದ ಚೌಕಗಳೊಳು ಪ್ರಾಣಬಿಡುತ್ತಿವೆಯಲ್ಲಾ ತಾಯಿಯ ಎದೆಯ ಮೇಲೆ ಆ ಹಸುಳೆಗಳು. ಎಲೌ ಜೆರುಸಲೇಮ್ ಯುವತಿಯೇ, ನಿನಗೆ ಏನು ಹೇಳಲಿ? ನಿನ್ನನ್ನು ಯಾವುದಕ್ಕೆ ಹೋಲಿಸಲಿ? ಸಿಯೋನ್ ಕನ್ಯೆಯೇ, ನಿನ್ನನ್ನು ಹೇಗೆ ಸಂತೈಸಲಿ? ಸಂತೈಸುವ ಸಾಮತಿಯನ್ನು ಎಲ್ಲಿಂದ ತರಲಿ? ನಿನಗೊದಗಿರುವ ನಾಶ ಸಾಗರದಂತೆ ಅಪಾರ ನಿನ್ನನ್ನು ಸ್ವಸ್ಥಗೊಳಿಸಲು ಯಾರಿಂದ ತಾನೆ ಸಾಧ್ಯ? ನಿನ್ನ ಪ್ರವಾದಿಗಳು ಕಂಡ ದರ್ಶನದಲ್ಲಿ ಸಾರವಿಲ್ಲ, ಅರ್ಥವಿಲ್ಲ. ನಿನ್ನ ದೋಷಗಳನ್ನು ಬೈಲಿಗೆಳೆಯಲು ಅವರಿಂದಾಗಲಿಲ್ಲ. ಈ ಕಾರಣ, ನಿನ್ನ ದುರವಸ್ಥೆಯನ್ನು ತಡೆಗಟ್ಟಲಾಗಲಿಲ್ಲ. ನಿನ್ನ ಬಗ್ಗೆ ಅವರು ನುಡಿದ ದೈವೋಕ್ತಿಗಳು ವ್ಯರ್ಥವಾದುವು, ನೀನು ಗಡಿಪಾರಾಗಿ ಹೋಗಲು ಅವು ಆಸ್ಪದವಾದುವು. ನಿನ್ನ ಜನರು ಮೊರೆಯಿಡಲಿ ಮನಃಪೂರ್ವಕವಾಗಿ ಸಿಯೋನ್ ನಗರದ ಕೋಟೆಗೆ ಕೋಟೆಯೇ ಕಣ್ಣೀರಿಡಲಿ. ಹಗಲಿರುಳು ಕಂಬನಿ ಹರಿಯಲಿ ತೊರೆಯಂತೆ ನಿಮ್ಮ ನೇತ್ರಗಳಿಂದ ಸುರಿಯಲಿ ಒಂದೇ ಸಮನೆ. ರಾತ್ರಿಯ ಒಂದೊಂದು ಜಾವದಲ್ಲೂ ಎದ್ದು ಗೋಳಾಡಿರಿ. ನಿಮ್ಮ ಹೃದಯ ಕರಗಿ, ನೀರಾಗಿ ಸ್ವಾಮಿಯ ಮುಂದೆ ಹರಿಯಲಿ. ನಿಮ್ಮ ಮಕ್ಕಳ ಪ್ರಾಣವನ್ನು ಉಳಿಸಬೇಕೆಂದು ಕೈ ಮುಗಿದು ಪ್ರಾರ್ಥನೆಮಾಡಿ. ಹಸಿವಿನಿಂದ ಅವು ಮೂರ್ಛೆಹೋಗಿವೆ, ಬೀದಿಯ ಮೂಲೆಮೂಲೆಗಳಲ್ಲಿ. 

ಕೀರ್ತನೆ: 74:1-2, 3-5, 6-7, 20-21

ಶ್ಲೋಕ: ನೀ ಮರೆತುಬಿಡಬೇಡ ನಿನ್ನ ದೀನದಲಿತರನು ಒಮ್ಮೆಗೆ

ಶುಭಸಂದೇಶ: ಮತ್ತಾಯ 8:5-17

ಯೇಸುಸ್ವಾಮಿ ಕಫೆರ್ನವುಮ್ ಊರಿಗೆ ಬಂದಾಗ ಶತಾಧಿಪತಿಯೊಬ್ಬನು ಅವರನ್ನು ಎದುರುಗೊಂಡನು. “ಪ್ರಭೂ, ನನ್ನ ಸೇವಕ ಮನೆಯಲ್ಲಿ ಪಾರ್ಶ್ವವಾಯು ರೋಗದಿಂದ ಹಾಸಿಗೆ ಹಿಡಿದಿದ್ದಾನೆ. ಬಹಳವಾಗಿ ನರಳುತ್ತಿದ್ದಾನೆ,” ಎಂದು ವಿನಂತಿಸಿದನು. ಯೇಸು, “ನಾನೇ ಬಂದು ಅವನನ್ನು ಗುಣಪಡಿಸುತ್ತೇನೆ,” ಎಂದರು. ಅದಕ್ಕೆ ಆ ಶತಾಧಿಪತಿ, “ಪ್ರಭುವೇ, ತಾವು ನನ್ನ ಮನೆಗೆ ಬರುವಷ್ಟು ಯೋಗ್ಯತೆ ನನಗಿಲ್ಲ. ತಾವು ಒಂದೇ ಒಂದು ಮಾತು ಹೇಳಿದರೆ ಸಾಕು, ನನ್ನ ಸೇವಕ ಸ್ವಸ್ಥನಾಗುವನು. ಏಕೆಂದರೆ, ನಾನೂ ಮತ್ತೊಬ್ಬರ ಕೈಕೆಳಗಿರುವವನು. ನನ್ನ ಅಧೀನದಲ್ಲೂ ಸೈನಿಕರಿದ್ದಾರೆ. ಅವರಲ್ಲಿ ಒಬ್ಬನಿಗೆ ನಾನು, ‘ಬಾ’ ಎಂದರೆ ಬರುತ್ತಾನೆ. ಇನ್ನೊಬ್ಬನಿಗೆ, ‘ಹೋಗು’ ಎಂದರೆ ಹೋಗುತ್ತಾನೆ. ಸೇವಕನಿಗೆ, ‘ಇಂಥದ್ದನ್ನು ಮಾಡು’ ಎಂದರೆ ಮಾಡುತ್ತಾನೆ,” ಎಂದನು. ಈ ಮಾತನ್ನು ಕೇಳಿದ್ದೇ ಯೇಸುವಿಗೆ ಅತ್ಯಾಶ್ಚರ್ಯವಾಯಿತು. ತಮ್ಮನ್ನು ಹಿಂಬಾಲಿಸಿ ಬರುತ್ತಿದ್ದ ಜನರನ್ನು ನೋಡಿ ಹೀಗೆಂದರು: “ಇಂಥ ಗಾಢ ವಿಶ್ವಾಸವನ್ನು ನಾನು ಇಸ್ರಯೇಲ್ ಜನರಲ್ಲಿ ಕೂಡ ಕಾಣಲಿಲ್ಲವೆಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ. ಪೂರ್ವ. ಪಶ್ಚಿಮ ದಿಕ್ಕುಗಳಿಂದ ಅನೇಕ ಜನರು ಬಂದು ಅಬ್ರಹಾಮ, ಇಸಾಕ, ಯಕೋಬರ ಸಮೇತ ಸ್ವರ್ಗಸಾಮ್ರಾಜ್ಯದ ಹಬ್ಬದೂಟದಲ್ಲಿ ಭಾಗಿಗಳಾಗುವರು. ಆದರೆ ಯಾರು ಈ ಸಾಮ್ರಾಜ್ಯಕ್ಕೆ ಬಾಧ್ಯಸ್ಥರೋ ಅವರನ್ನೇ ಹೊರಗೆ ದಬ್ಬಲಾಗುವುದು; ಅಲ್ಲಿ, ಆ ಕಾರ್ಗತ್ತಲಲ್ಲಿ, ಅವರ ಗೋಳಾಟವೇನು! ಹಲ್ಲು ಕಡಿತವೇನು!” ಅನಂತರ ಯೇಸು ಆ ಶತಾಧಿಪತಿಗೆ, “ಇನ್ನು ಮನೆಗೆ ಹೋಗು, ನೀನು ವಿಶ್ವಾಸಿಸಿದಂತೆಯೇ ಆಗುವುದು,” ಎಂದರು. ಅದೇ ಕ್ಷಣದಲ್ಲಿ ಅವನ ಸೇವಕನು ಸ್ವಸ್ಥನಾದನು. ತರುವಾಯ ಯೇಸುಸ್ವಾಮಿ ಪೇತ್ರನ ಮನೆಗೆ ಬಂದರು. ಅಲ್ಲಿ ಪೇತ್ರನ ಅತ್ತೆ ಜ್ವರದಿಂದ ಮಲಗಿರುವುದನ್ನು ಕಂಡರು. ಯೇಸು ಆಕೆಯ ಕೈಮುಟ್ಟಿದುದೇ ಜ್ವರ ಬಿಟ್ಟುಹೋಯಿತು, ಆಕೆ ಎದ್ದು ಅವರನ್ನು ಸತ್ಕರಿಸಿದಳು. ಸಂಜೆಯಾಯಿತು, ದೆವ್ವ ಹಿಡಿದ ಅನೇಕರನ್ನು ಯೇಸುವಿನ ಬಳಿಗೆ ಕರೆತರಲಾಯಿತು. ಯೇಸು ತಮ್ಮ ಒಂದು ಮಾತಿನಿಂದಲೇ ದೆವ್ವಗಳನ್ನು ಬಿಡಿಸಿದರು. ಮಾತ್ರವಲ್ಲ, ರೋಗಪೀಡಿತರೆಲ್ಲರನ್ನೂ ಗುಣಪಡಿಸಿದರು. ಹೀಗೆ, “ನಮ್ಮ ದುರ್ಬಲತೆಗಳನ್ನು ವಹಿಸಿಕೊಂಡನು; ನಮ್ಮ ರೋಗರುಜಿನಗಳನ್ನು ಆತನೇ ಪರಿಹರಿಸಿದನು,” ಎಂಬ ಯೆಶಾಯನ ಪ್ರವಾದನೆ ಈಡೇರಿತು.

26.06.2020 - “ಖಂಡಿತವಾಗಿಯೂ ನನಗೆ ಮನಸ್ಸಿದೆ, ಗುಣಹೊಂದು,”

ಮೊದಲನೇ ವಾಚನ: 2 ಅರಸುಗಳು 25:1-12

ಚಿದ್ಕೀಯನು ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನ ವಿರುದ್ಧ ದಂಗೆ ಎದ್ದನು. ಇವನು ಚಿದ್ಕೀಯನ ಆಳ್ವಿಕೆಯ ಒಂಬತ್ತನೆಯ ವರ್ಷದ ಹತ್ತನೆಯ ತಿಂಗಳಿನ ಹತ್ತನೆಯ ದಿನ ಸರ್ವಸೈನ್ಯ ಸಮೇತ ಜೆರುಸಲೇಮಿಗೆ ಬಂದನು. ಅಲ್ಲಿ ಪಾಳೆಯ ಮಾಡಿಕೊಂಡು ಅದರ ಸುತ್ತಲು ಮಣ್ಣಿನ ದಿಬ್ಬವನ್ನು ಎಬ್ಬಿಸಿದನು. ಚಿದ್ಕೀಯನ ಆಳ್ವಿಕೆಯ ಹನ್ನೊಂದನೆಯ ವರ್ಷದಲ್ಲಿ ಅದಕ್ಕೆ ಮುತ್ತಿಗೆ ಹಾಕಿದನು. ಘೋರಕ್ಷಾಮದ ಕಾರಣ ನಗರದವರಿಗೆ ಆಹಾರ ಸಿಕ್ಕದೆ ಹೋಯಿತು. ನಗರಕ್ಕೆ ಮುತ್ತಿಗೆಹಾಕಿದ್ದ ಬಾಬಿಲೋನಿಯರು ಹನ್ನೊಂದನೆಯ ತಿಂಗಳಿನ ಒಂಬತ್ತನೆಯ ದಿವಸ ಪೌಳಿಗೋಡೆಯಲ್ಲಿ ಒಂದು ದ್ವಾರವನ್ನು ಮಾಡಿದರು. ಒಳಗಿದ್ದ ಅರಸನೂ ಅವನ ಎಲ್ಲ ಸೈನಿಕರೂ ಅದೇ ರಾತ್ರಿ, ಅರಸನ ತೋಟದ ಬಳಿಯಿದ್ದ ಬಾಗಿಲಿನ ಮೂಲಕ, ನಗರದಿಂದ ಓಡಿಹೋದರು. ಆ ಬಾಗಿಲು ಎರಡು ಗೋಡೆಗಳ ಮಧ್ಯೆಯಿತ್ತು. ಅರಸನು ಅರಾಬಾ ಎಂಬ ಕಣಿವೆ ಪ್ರದೇಶದ ಮಾರ್ಗವಾಗಿ ಓಡಿಹೋದನು. ಬಾಬಿಲೋನಿಯದ ಸೈನಿಕರು ಅವನನ್ನು ಹಿಂದಟ್ಟಿ ಜೆರಿಕೋವಿನ ಬಯಲಿನಲ್ಲಿ ಹಿಡಿದರು. ಅಷ್ಟರಲ್ಲಿ ಅವನ ಸೈನಿಕರೆಲ್ಲರು ಅವನನ್ನು ಬಿಟ್ಟು ಚದರಿಹೋಗಿದ್ದರು. ಅನಂತರ ಬಾಬಿಲೋನಿಯರು ಅವನನ್ನು ರಿಬ್ಲದಲ್ಲಿದ್ದ ತಮ್ಮ ಅರಸನ ಬಳಿಗೆ ಎಳೆದು ತಂದು ಅವನಿಗೆ ಶಿಕ್ಷೆಯನ್ನು ವಿಧಿಸಿದರು. ಇವನ ಇಬ್ಬರು ಮಕ್ಕಳನ್ನು ಅವನ ಕಣ್ಣೆದುರಿಗೇ ವಧಿಸಿ, ಅವನಿಗೆ ಬೇಡಿಹಾಕಿ ಎರಡು ಕಣ್ಣುಗಳನ್ನೂ ಕಿತ್ತು ಬಾಬಿಲೋನಿಗೆ ತೆಗೆದುಕೊಂಡು ಹೋದರು. ಐದನೆಯ ತಿಂಗಳಿನ ಏಳನೆಯ ದಿನ, ಅಂದರೆ ಬಾಬಿಲೋನಿನ ಅರಸ ನೆಬೂಕದ್ನೆಚ್ಚರನ ಆಳ್ವಿಕೆಯ ಹತ್ತೊಂಬತ್ತನೆಯ ವರ್ಷದಲ್ಲಿ, ಬಾಬಿಲೋನಿನ ಅರಸನ ಸೇವಕನೂ ರಕ್ಷಾದಳದ ಅಧಿಪತಿಯೂ ಆಗಿದ್ದ ನೆಬೂಜರದಾನ್ ಎಂಬವನು ಜೆರುಸಲೇಮಿಗೆ ಬಂದನು. ಸರ್ವೇಶ್ವರನ ಆಲಯವನ್ನೂ ಅರಮನೆಯನ್ನೂ ಜೆರುಸಲೇಮಿನ ಎಲ್ಲ ದೊಡ್ಡ ಮನೆಗಳನ್ನೂ ಸುಟ್ಟುಬಿಟ್ಟನು. ಅವನ ಜೊತೆಯಲ್ಲಿ ಬಂದಿದ್ದ ಬಾಬಿಲೋನಿಯದ ಸೈನ್ಯದವರು ಜೆರುಸಲೇಮಿನ ಸುತ್ತುಗೋಡೆಗಳನ್ನೆಲ್ಲ ಕೆಡವಿದರು. ರಕ್ಷಾದಳದ ಅಧಿಪತಿಯಾದ ನೆಬೂಜರದಾನನು ನಗರದಲ್ಲಿ ಉಳಿದವರನ್ನು, ಮೊದಲೇ ಬಾಬಿಲೋನಿನ ಅರಸನಿಗೆ ಮರೆಹೊಕ್ಕವರನ್ನು ಹಾಗು ಬೇರೆ ಜನರೆಲ್ಲರನ್ನು ಸೆರೆಗೆ ಒಯ್ದನು. ಹೊಲಗಳನ್ನು ಮತ್ತು ದ್ರಾಕ್ಷೀತೋಟಗಳನ್ನು ಮಾಡುವುದಕ್ಕಾಗಿ ನಾಡಿನ ಜನರಲ್ಲಿ ಕೇವಲ ದರಿದ್ರರನ್ನು ಮಾತ್ರ ಬಿಟ್ಟುಹೋದನು.

ಕೀರ್ತನೆ: 137:1-2, 3, 4-5, 6

ಶ್ಲೋಕ: ಜೆರುಸಲೇಮನು ನಾ ಸ್ಮರಣೆಮಾಡದಿದ್ದಲಿ, ಸೇದಿಹೋಗಲಿ ನಾಲಿಗೆ ನನ್ನ ಬಾಯಲಿ

ಶುಭಸಂದೇಶ: ಮತ್ತಾಯ 8:1-4


ಯೇಸುಸ್ವಾಮಿ ಬೆಟ್ಟದಿಂದ ಇಳಿದುಬಂದಾಗ ಜನರು ಗುಂಪುಗುಂಪಾಗಿ ಅವರನ್ನು ಹಿಂಬಾಲಿಸಿದರು. ಆಗ ಒಬ್ಬ ಕುಷ್ಠರೋಗಿ ಯೇಸುವಿನ ಮುಂದೆ ಬಂದು, ತಲೆಬಾಗಿ, “ಸ್ವಾಮೀ, ತಾವು ಮನಸ್ಸುಮಾಡಿದರೆ ನನ್ನನ್ನು ಗುಣಮಾಡಬಲ್ಲಿರಿ,” ಎಂದು ಬೇಡಿದನು. ಯೇಸು ಕೈಚಾಚಿ ಅವನನ್ನು ಮುಟ್ಟಿ, “ಖಂಡಿತವಾಗಿಯೂ ನನಗೆ ಮನಸ್ಸಿದೆ, ಗುಣಹೊಂದು,” ಎಂದರು. ತಕ್ಷಣವೇ ಅವನ ಕುಷ್ಠವು ಮಾಯವಾಯಿತು. ಯೇಸು ಅವನಿಗೆ, “ಎಚ್ಚರಿಕೆ, ನೀನು ಗುಣಹೊಂದಿರುವುದನ್ನು ಯಾರಿಗೂ ಹೇಳಕೂಡದು. ಆದರೆ ನೆಟ್ಟಗೆ ಯಾಜಕನ ಬಳಿಗೆ ಹೋಗು; ಅವನು ನಿನ್ನನ್ನು ಪರೀಕ್ಷಿಸಿನೋಡಲಿ. ಅನಂತರ ಮೋಶೆ ನಿಯಮಿಸಿರುವ ಪ್ರಕಾರ ಶುದ್ಧೀಕರಣವಿಧಿಯನ್ನು ಅನುಸರಿಸು. ಇದು ಜನರಿಗೆ ಸಾಕ್ಷಿಯಾಗಿರಲಿ,” ಎಂದರು.