ಮೊದಲನೇ ವಾಚನ: 1 ಅರಸುಗಳು 19:9, 11-16
ಎಲೀಯನು ದೇವಗಿರಿಯಾದ ಹೋರೇಬನ್ನು ಮುಟ್ಟಿ ಅಲ್ಲಿನ ಒಂದು ಗವಿಯಲ್ಲಿ ಇಳಿದುಕೊಂಡನು. ಆಗ "ನೀನು ಹೊರಗೆ ಬಂದು ಬೆಟ್ಟದ ಮೇಲೆ ಸರ್ವೇಶ್ವರನ ಮುಂದೆ ನಿಲ್ಲು." ಎಂದು ವಾಣಿಯಾಯಿತು; ಆಹಾ! ಸರ್ವೇಶ್ವರ ಅಲ್ಲೇ ಹಾದುಹೋದರು, ಅವರ ಮುಂದೆ ಪರ್ವತಗಳನ್ನು ಭೇದಿಸಿ ಬಂಡೆಗಳನ್ನು ಪುಡಿ ಮಾಡುವಂಥ ದೊಡ್ಡ ಬಿರುಗಾಳಿ ಬೀಸಿತು; ಸರ್ವೇಶ್ವರ ಅದರಲ್ಲಿ ಇರಲಿಲ್ಲ. ತರುವಾಯ ಭೂಕಂಪವುಂಟಾಯಿತು; ಅದರಲ್ಲೂ ಅವರಿರಲಿಲ್ಲ. ಭೂಕಂಪವಾದ ನಂತರ ಸಿಡಿಲು ಉಂಟಾಯಿತು; ಅದರಲ್ಲಿಯೂ ಸರ್ವೇಶ್ವರ ಇರಲಿಲ್ಲ. ಕಡೆಗೊಂದು ಮೆಲುದನಿ! ಅದನ್ನು ಕೇಳಿದ ಕೂಡಲೇ ಎಲೀಯನು ತನ್ನ ಕಂಬಳಿಯಿಂದ ಮುಖವನ್ನು ಮುಚ್ಚಿಕೊಂಡು ಹೋಗಿ ಗವಿಯ ದ್ವಾರದಲ್ಲಿ ನಿಂತನು. ಆಗ, "ಎಲೀಯನೇ, ನೀನು ಇಲ್ಲೇನು ಮಾಡುತ್ತಿರುವೆ?" ಎಂಬ ವಾಣಿ ಕೇಳಿಸಿತು. ಅದಕ್ಕೆ ಅವನು, "ಸೇನಾಧೀಶ್ವರಾದ ಸರ್ವೇಶ್ವರ, ಇಸ್ರಯೇಲರು ನಿಮ್ಮ ನಿಬಂಧನೆಯನ್ನು ಮೀರಿದ್ದಾರೆ; ಬಲಿಪೀಠಗಳನ್ನು ಕೆಡವಿಹಾಕಿದ್ದಾರೆ; ಪ್ರವಾದಿಗಳನ್ನು ಕತ್ತಿಯಿಂದ ಸಂಹರಿಸಿದ್ದಾರೆ; ನಾನೊಬ್ಬನೇ ಉಳಿದು ನಿಮ್ಮ ಗೌರವವನ್ನು ಕಾಪಾಡುವುದರಲ್ಲಿ ಆಸಕ್ತನಾಗಿದ್ದೆನು; ಆದರೆ ಅವರು ನನ್ನ ಪ್ರಾಣವನ್ನೂ ತೆಗೆಯಬೇಕೆಂದಿದ್ದಾರೆ," ಎಂದು ಉತ್ತರ ಕೊಟ್ಟನು. ಆಗ ಸರ್ವೇಶ್ವರ, "ನೀನು ಬಂದ ದಾರಿಯಲ್ಲೇ ಹಿಂದಿರುಗಿ ದಮಸ್ಕದ ಮರುಭೂಮಿಗೆ ಹೋಗು; ಅಲ್ಲಿಂದ ಪಟ್ಟಣದೊಳಗೆ ಹೋಗಿ ಹಜಾಯೇಲನನ್ನು ಸಿರಿಯಾದವರ ಅರಸನನ್ನಾಗಿ ಅಭಿಷೇಕಿಸು. ಅಬೇಲ್ ಮಹೋಲದವನೂ ಶಾಫಾಟನ ಮಗನೂ ಆದ ಎಲೀಷನನ್ನು ನಿನ್ನ ಉತ್ತರಾಧಿಕಾರಿಯಾದ ಪ್ರವಾದಿಯನ್ನಾಗಿ ಅಭಿಷೇಕಿಸು," ಎಂದು ಹೇಳಿದನು.
ಕೀರ್ತನೆ: 27:7-8, 9, 13-14
ಶ್ಲೋಕ: ನಿಮ್ಮ ಮುಖ ದರುಶನವನು ಪ್ರಭೂ ಅರಸುವೆನು.
ಶುಭಸ೦ದೇಶ: ಮತ್ತಾಯ: 5: 27-32
ಯೇಸು ತಮ್ಮ ಶಿಷ್ಯರಿಗೆ ಹೀಗೆಂದರು: "ವ್ಯಭಿಚಾರ ಮಾಡಕೂಡದು ಎಂಬ ನಿಯಮವನ್ನು ನೀವು ಕೇಳಿದ್ದೀರಿ; ಆದರೆ ನಾನು ಹೇಳುತ್ತೇನೆ, ಕೆಳಿ: ಪರಸ್ತ್ರೀಯನ್ನು ಕಾಮದೃಷ್ಟಿಯಿಂದ ನೋಡುವ ಪ್ರತಿಯೊಬ್ಬನೂ ತನ್ನ ಹೃದಯದಲ್ಲಿ ಆಕೆಯೊಡನೆ ಆಗಲೇ ವ್ಯಭಿಚಾರ ಮಾಡಿದವನೇ ಆಗುತ್ತಾನೆ. ನಿನ್ನ ಬಲಗಣ್ಣು ನಿನಗೆ ಪಾಪಕ್ಕೆ ಕಾರಣವಾದರೆ ಅದನ್ನು ಕಿತ್ತೆಸೆದುಬಿಡು; ನಿನ್ನ ಇಡೀ ದೇಹ ನರಕಕ್ಕೆ ತುತ್ತಾಗುವುದಕ್ಕಿಂತ ನಿನ್ನ ಒಂದು ಅಂಗ ನಾಶವಾಗುವುದೇ ಲೇಸು. ನಿನ್ನ ಬಲಗೈ ನಿನಗೆ ಪಾಪಕ್ಕೆ ಕಾರಣವಾದರೆ ಅದನ್ನು ಕತ್ತರಿಸಿ ಬಿಸಾಡಿಬಿಡು; ನಿನ್ನ ಇಡೀ ದೇಹ ನರಕದ ಪಾಲಾಗುವುದಕ್ಕಿಂತ ಒಂದು ಅವಯವ ನಾಶವಾಗುವುದು ಎಷ್ಟೋ ಮೇಲು. ಇದಲ್ಲದೇ, ’ತನ್ನ ಹೆಂಡತಿಯನ್ನು ಬಿಟ್ಟು ಬಿಡುವವನು ವಿವಾಹ ವಿಚ್ಛೇದನ ಪತ್ರವನ್ನು ಅವಳಿಗೆ ಕೊಡಲಿ,’ ಎಂದು ವಿಧಿಸಲಾಗಿದೆ. ಅದರೆ ನಾನೀಗ ನಿಮಗೆ ಹೇಳುತ್ತೇನೆ, ಕೇಳಿ: ತನ್ನ ಹೆಂಡತಿಯ ದುರ್ನಡತೆಯ ಕಾರಣದಿಂದಲ್ಲದೇ, ಅವಳನ್ನು ಬಿಟ್ಟು ಬಿಡುವವನು ಅವಳು ವ್ಯಭಿಚಾರಿಣಿಯಾಗುವುದಕ್ಕೆ ಕಾರಣನಾಗುತ್ತಾನೆ; ಅಲ್ಲದೆ ಗಂಡ ಬಿಟ್ಟವಳನ್ನು ಮದುವೆಯಾಗುವವನು ಕೂಡ ವ್ಯಭಿಚಾರಿಯಾಗುತ್ತಾನೆ."
No comments:
Post a Comment