ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

23.08.22 - "ನೀವು ನಿಮ್ಮ ತಟ್ಟೆ ಲೋಟಗಳ ಹೊರ ಭಾಗಗಳನ್ನೇನೋ ಶುಚಿ ಮಾಡುತ್ತೀರಿ; ಆದರೆ ಅವುಗಳ ಒಳಭಾಗ ಕೊಳೆ ಹಾಗೂ ಲೋಭದ ಗಳಿಕೆಗಳಿಂದ ತುಂಬಿ ಹೋಗಿದೆ."

ಮೊದಲನೇ ವಾಚನ: 2 ಥೆಸಲೋನಿಯರಿಗೆ 2:1-3, 14-16

ಸಹೋದರರೇ, ನಮ್ಮ ಪ್ರಭು ಯೇಸುಕ್ರಿಸ್ತರ ಪುನರಾಗಮನವನ್ನು ಮತ್ತು ನಾವು ಅವರ ಸನ್ನಿಧಿಯಲ್ಲಿ ಒಂದಾಗಿ ಸೇರುವ ವಿಷಯವನ್ನು ಕುರಿತು ನಿಮ್ಮಲ್ಲಿ ನಾವು ವಿನಂತಿಸುವುದೇನೆಂದರೆ: ಪ್ರಭುವಿನ ದಿನವು ಬಂದೇ ಬಿಟ್ಟಿತೆಂದು ಪ್ರವಾದನೆಯಿಂದಾಗಲಿ, ಪ್ರವಚನದಿಂದಾಗಲಿ ಅಥವಾ ನಮ್ಮ ಪತ್ರದಿಂದಾಗಲಿ ತಿಳಿದುಬಂದಿದೆಯೆಂದು ಯಾರಾದರೂ ಹೇಳಿದರೆ, ಒಮ್ಮೆಗೇ ನೀವು ತಬ್ಬಿಬ್ಬಾಗಿ, ತಳಮಳಗೊಳ್ಳದಿರಿ. ನಿಮ್ಮನ್ನು ಯಾರೂ ಯಾವ ರೀತಿಯಲ್ಲೂ ವಂಚಿಸದಿರಲಿ. ಆ ದಿನವು ಬರುವುದಕ್ಕೆ ಮುಂಚೆ ದೇವರಿಗೆ ವಿರುದ್ಧವಾದ ‘ಅಂತಿಮ ಪ್ರತಿಭಟನೆ’ ಉಂಟಾಗುವುದು. ‘ಪಾಪ ಪುರುಷನಾದ’ ಅಧರ್ಮಿ ತಲೆ ಎತ್ತಿಕೊಳ್ಳುವನು. ಹೀಗೆ ಉದ್ಧಾರಹೊಂದಿ ನಮ್ಮ ಪ್ರಭು ಯೇಸುಕ್ರಿಸ್ತರ ಮಹಿಮೆಯಲ್ಲಿ ನೀವು ಸಹ ಪಾಲುಗೊಳ್ಳುವಂತೆ, ನಾವು ಸಾರಿದ ಶುಭಸಂದೇಶದ ಮೂಲಕ ದೇವರು ನಿಮ್ಮನ್ನು ಕರೆದಿದ್ದಾರೆ.  ಆದ್ದರಿಂದ ಸಹೋದರರೇ, ನಾವು ನಿಮಗೆ ಬಾಯಿಮಾತಿನಿಂದಾಗಲಿ, ಪತ್ರದ ಮೂಲವಾಗಲಿ ಬೋಧಿಸಿರುವ ಸತ್ಸಂಪ್ರದಾಯಗಳನ್ನು ಪ್ರಾಮಾಣಿಕವಾಗಿ ಪಾಲಿಸುತ್ತಾ ಸ್ಥಿರವಾಗಿ ನಿಲ್ಲಿರಿ ನಮ್ಮನ್ನು ಪ್ರೀತಿಸಿ ನಿತ್ಯಾದರಣೆಯನ್ನೂ ಉತ್ತಮ ನಿರೀಕ್ಷೆಯನ್ನೂ ಅನುಗ್ರಹವಾಗಿ ಕೊಟ್ಟಿರುವ ನಮ್ಮ ಪ್ರಭುವಾದ ಯೇಸುಕ್ರಿಸ್ತರು ಹಾಗೂ ಪಿತನಾದ ದೇವರು ನಿಮ್ಮ ಹೃನ್ಮನಗಳನ್ನು ಉತ್ತೇಜನಗೊಳಿಸಲಿ.  ಸಕಲ ಸತ್ಕಾರ್ಯಗಳಲ್ಲೂ ಸನ್ನುಡಿಯಲ್ಲೂ ನಿಮ್ಮನ್ನು ದೃಢಪಡಿಸಲಿ.

ಕೀರ್ತನೆ: 96:10, 11-12, 13

ಶ್ಲೋಕ: ಪ್ರಭು ಧರಗೆ ನ್ಯಾಯತೀರಿಸಲು ಬಂದೇಬರುವನು ಖರೆಯಾಗಿ

ಶುಭಸಂದೇಶ: ಮತ್ತಾಯ 23:23-26


ಯೇಸುಸ್ವಾಮಿ ತಮ್ಮ ಶಿಷ್ಯರನ್ನೂ ಜನಸಮೂಹವನ್ನೂ ಉದ್ದೇಶಿಸಿ, "ಕಪಟ ಧರ್ಮಶಾಸ್ತ್ರಿಗಳೇ, ಫರಿಸಾಯರೇ, ನಿಮಗೆ ಧಿಕ್ಕಾರ! ನೀವು ಪುದೀನ, ಸದಾಪ, ಜೀರಿಗೆ ಮುಂತಾದವುಗಳ ದಶಾಂಶವನ್ನು ದೇವರಿಗೆ ಸಲ್ಲಿಸುತ್ತೀರಿ. ಆದರೆ ಧರ್ಮಶಾಸ್ತ್ರದಲ್ಲಿ ಪ್ರಮುಖವಾದ ನ್ಯಾಯನೀತಿ, ದಯೆದಾಕ್ಷಿಣ್ಯ, ಪ್ರಾಮಾಣಿಕತೆ ಇವುಗಳನ್ನು ಬದಿಗೊತ್ತಿದ್ದೀರಿ. ನೀವು ಅವುಗಳನ್ನು ಅಲಕ್ಷ್ಯಮಾಡಬೇಕೆಂದು ಅಲ್ಲ, ಆದರೆ ಇವುಗಳನ್ನೂ ಅನುಷ್ಠಾನಕ್ಕೆ ತರಲೇಬೇಕಿತ್ತು.  ಅಂಧ ನಿರ್ದೇಶಕರೇ, ನೀವು ಸೊಳ್ಳೆಯನ್ನೇನೋ ಸೋಸುತ್ತೀರಿ, ಆದರೆ ಒಂಟೆಯನ್ನೇ ನುಂಗಿಬಿಡುತ್ತೀರಿ.  ಕಪಟ ಧರ್ಮಶಾಸ್ತ್ರಿಗಳೇ ಮತ್ತು ಫರಿಸಾಯರೇ, ನಿಮಗೆ ಧಿಕ್ಕಾರ! ನೀವು ನಿಮ್ಮ ತಟ್ಟೆಲೋಟಗಳ ಹೊರ ಭಾಗಗಳನ್ನೇನೋ ಶುಚಿ ಮಾಡುತ್ತೀರಿ; ಆದರೆ ಅವುಗಳ ಒಳಭಾಗ ಕೊಳೆ ಹಾಗೂ ಲೋಭದ ಗಳಿಕೆಗಳಿಂದ ತುಂಬಿ ಹೋಗಿದೆ.  ಕುರುಡ ಫರಿಸಾಯನೇ, ಮೊತ್ತಮೊದಲು ತಟ್ಟೆಲೋಟಗಳ ಒಳಭಾಗವನ್ನು ತೊಳೆ, ಆಗ ಅವುಗಳ ಹೊರ ಭಾಗವೂ ಶುಚಿಯಾಗುವುದು." ಎಂದರು.

No comments:

Post a Comment