ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

02.02.22 - “ನಿನ್ನ ಮಾತು ಸರ್ವೇಶ್ವರಾ, ನೆರವೇರಿತಿಂದು ಇನ್ನು ತೆರಳಬಿಡು ಶಾಂತಿಯಿಂದ ನಿನ್ನ ದಾಸನಾದ ಎನ್ನನ್ನು"

ಮೊದಲನೆಯ ವಾಚನ - ಮಲಾಕಿ 3: 1-4

ಸೇನಾಧೀಶ್ವರ ಸರ್ವೇಶ್ವರ ಹೇಳುವುದನ್ನು ಕೇಳಿ: “ನಾನು ನನ್ನ ದೂತನನ್ನು ಮುಂದಾಗಿ ಕಳುಹಿಸುತ್ತೇನೆ. ನಾನು ಬರಲು ಮಾರ್ಗವನ್ನು ಆತನು ಸಿದ್ಧಗೊಳಿಸುವನು. ನೀವು ಎದುರು ನೋಡುತ್ತಿರುವ ಸರ್ವೇಶ್ವರ ಇದ್ದಕ್ಕಿದ್ದಂತೆ ತಮ್ಮ ಆಲಯಕ್ಕೆ ಬರುವರು. ಇಗೋ, ನಿಮಗೆ ಪ್ರಿಯನಾದ ದೂತನು ಬರುವನು. ನನ್ನ ಒಡಂಬಡಿಕೆಯನ್ನು ನಿಮಗೆ ಪ್ರಕಟಿಸುವನು.” “ಆದರೆ ಆತನು ಬರುವಾಗ ಆತನನ್ನು ಎದುರುಗೊಳ್ಳಬಲ್ಲವನು ಯಾರು? ಆತನ ದರ್ಶನವನ್ನು ಪಡೆದು ಬದುಕಬಲ್ಲವನು ಯಾರು? ಆತನು ಅಕ್ಕಸಾಲಿಗನ ಕುಲುಮೆಯ ಬೆಂಕಿಗೂ ಅಗಸನ ಚೌಳಿಗೂ ಸಮಾನನು. ಬೆಳ್ಳಿಯನ್ನು ಶುದ್ಧೀಕರಿಸುವ ಅಕ್ಕಸಾಲಿಗನಂತೆ ಲೇವಿಯ ವಂಶದವರನ್ನು ಶುದ್ಧಗೊಳಿಸುವನು; ಬೆಳ್ಳಿಬಂಗಾರದಂತೆ ಶುದ್ಧೀಕರಿಸುವನು. ಆಗ ಅವರು ಯೋಗ್ಯವಾದ ಕಾಣಿಕೆಗಳನ್ನು ಸರ್ವೇಶ್ವರಸ್ವಾಮಿಗೆ ತಂದೊಪ್ಪಿಸುವರು. ಪೂರ್ವದಿನಗಳಲ್ಲಿ, ಪುರಾತನ ಕಾಲದಲ್ಲಿ ಇದ್ದಂತೆ ಜೂದಾ ಮತ್ತು ಜೆರುಸಲೇಮಿನ ಜನರ ಕಾಣಿಕೆಗಳು ಆ ಸ್ವಾಮಿಗೆ ಮೆಚ್ಚುಗೆಯಾಗಿರುವುವು.”
ಪ್ರಭುವಿನ ವಾಕ್ಯ

ಕೀರ್ತನೆ: 24: 7-10
ಶ್ಲೋಕ: ಯಾರಿವನು ಮಹಿಮಾವಂತ ರಾಜಾಧಿರಾಜನು? ಇವನೇ ಪ್ರಭು.

ಆಗಮಿಸುತಿಹನಿದೋ ಮಹಿಮಾವಂತ ರಾಜಾಧಿರಾಜನು I
ತೆರೆದು ಸ್ವಾಗತಿಸಲಿ ಕದಗಳು, ಸನಾತನ ದ್ವಾರಗಳು II

ಯಾರಿವನು ಮಹಿಮಾವಂತ ರಾಜಾಧಿರಾಜನು? I
ಇವನೇ ಪ್ರಭು, ಯುದ್ಧವೀರನು, ಶಕ್ತಿಸಮರ್ಥನು! II

ಆಗಮಿಸುತಿಹನಿದೋ ಮಹಿಮಾವಂತ ರಾಜಾಧಿರಾಜನು I
ತೆರೆದು ಸ್ವಾಗತಿಸಲಿ ಕದಗಳು, ಸನಾತನ ದ್ವಾರಗಳು II

ಯಾರಿವನು ಮಹಿಮಾವಂತ ರಾಜಾಧಿರಾಜನು? I
ಇವನೇ ಸೇನಾಧೀಶ್ವರನು, ಮಹಿಮಾರಾಜನು II

ಎರಡನೆಯ ವಾಚನ - ಹಿಬ್ರಿಯರಿಗೆ 2: 14-18

ಇದಲ್ಲದೆ, ಮಕ್ಕಳು ರಕ್ತಮಾಂಸಧಾರಿಗಳಾಗಿರುವುದರಿಂದ ಯೇಸುವು ಅವರಂತೆ ರಕ್ತಮಾಂಸಧಾರಿಯಾದರು. ಹೀಗೆ ಮರಣಾಧಿಕಾರಿಯಾಗಿದ್ದ ಸೈತಾನನನ್ನು ತಮ್ಮ ಮರಣದಿಂದಲೇ ಸೋಲಿಸಲು ಮತ್ತು ಮರಣಭಯದ ನಿಮಿತ್ತ ತಮ್ಮ ಜೀವನದುದ್ದಕ್ಕೂ ದಾಸ್ಯದಲ್ಲಿದ್ದವರನ್ನು ಬಿಡುಗಡೆಮಾಡಲು ಅವರು ಮನುಷ್ಯರಾದರು. ಅವರು ಉದ್ಧಾರ ಮಾಡಬಂದುದು ಖಂಡಿತವಾಗಿ ದೇವದೂತರನ್ನಲ್ಲ, ಅಬ್ರಹಾಮನ ಸಂತತಿಯನ್ನು. ಆದಕಾರಣ, ಎಲ್ಲದರಲ್ಲೂ ತಮ್ಮ ಸಹೋದರರಿಗೆ ಸಮಾನರಾಗಬೇಕಾಗಿತ್ತು; ಜನರ ಪಾಪನಿವಾರಣೆಗಾಗಿ ದೇವರ ಕಾರ್ಯಗಳನ್ನು ನಿರ್ವಹಿಸುವ ದಯಾಮಯನೂ ನಂಬಿಕಸ್ಥನೂ ಆದ ಪ್ರಧಾನ ಯಾಜಕನಾಗಬೇಕಾಗಿತ್ತು. ಸ್ವತಃ ತಾವೇ ಶೋಧನೆಗೊಳಗಾಗಿ ಯಾತನೆಯನ್ನು ಅನುಭವಿಸಿದ್ದರಿಂದ ಶೋಧನೆಗೊಳಗಾಗುವವರಿಗೆ ನೆರವಾಗಲು ಯೇಸು ಸಮರ್ಥರಾದರು.
ಪ್ರಭುವಿನ ವಾಕ್ಯ

ಶುಭಸಂದೇಶ - ಲೂಕ 2: 22-40 


ಮೋಶೆಯ ನಿಯಮದ ಪ್ರಕಾರ ಸೂತಕ ದಿನಗಳು ಮುಗಿದು ಶುದ್ಧೀಕರಣ ದಿನ ಬಂದಾಗ, ತಂದೆತಾಯಿಗಳು ಆ ಮಗುವನ್ನು ಎತ್ತಿಕೊಂಡು ಜೆರುಸಲೇಮಿಗೆ ಹೋದರು. ಏಕೆಂದರೆ, ‘ಮೊದಲು ಜನಿಸಿದ ಪ್ರತಿಯೊಂದು ಗಂಡು ಮಗುವನ್ನು ಸರ್ವೇಶ್ವರನಿಗೆ ಸಮರ್ಪಿಸಬೇಕಾಗಿತ್ತು. ಅಲ್ಲದೆ, ಧರ್ಮಶಾಸ್ತ್ರದಲ್ಲೇ ಉಲ್ಲೇಖಿಸಿರುವಂತೆ ಒಂದು ಜೋಡಿ ಬೆಳವಹಕ್ಕಿಗಳನ್ನಾಗಲಿ, ಎರಡು ಪಾರಿವಾಳದ ಮರಿಗಳನ್ನಾಗಲಿ, ಬಲಿಯನ್ನಾಗಿ ಅರ್ಪಿಸಬೇಕಾಗಿತ್ತು. ಆಗ ಜೆರುಸಲೇಮಿನಲ್ಲಿ ಸಿಮೆಯೋನನೆಂಬ ಒಬ್ಬನು ವಾಸವಾಗಿದ್ದನು. ಸತ್ಪುರುಷನೂ ದೈವಭಕ್ತನೂ ಆದ ಇವನು, ಇಸ್ರಯೇಲ್ ಜನತೆಯ ಉದ್ಧಾರಕ ಯಾವಾಗ ಬರುವನೋ ಎಂದು ನಿರೀಕ್ಷಿಸುತ್ತಾ ಇದ್ದನು. ಪವಿತ್ರಾತ್ಮ ಇವನಲ್ಲಿ ನೆಲೆಸಿದ್ದರು. ಸರ್ವೇಶ್ವರ ಕಳುಹಿಸಲಿರುವ ಅಭಿಷಿಕ್ತನಾದ ಲೋಕೋದ್ಧಾರಕನ ದರ್ಶನವಾಗುವವರೆಗೆ ತನಗೆ ಸಾವಿಲ್ಲವೆಂದು ಪವಿತ್ರಾತ್ಮರಿಂದಲೇ ಆಶ್ವಾಸನೆ ಪಡೆದಿದ್ದನು. ಆ ಪವಿತ್ರಾತ್ಮರಿಂದ ಪ್ರೇರಿತನಾಗಿ ಅವನು ಮಹಾದೇವಾಲಯಕ್ಕೆ ಬಂದನು. ಧರ್ಮ ಶಾಸ್ತ್ರದ ವಿಧಿಯನ್ನು ಪೂರೈಸಲು ಬಾಲಯೇಸುವನ್ನು ತಂದೆತಾಯಿಗಳು ದೇವಾಲಯಕ್ಕೆ ತಂದಾಗ, ಸಿಮೆಯೋನನು ಆ ಮಗುವನ್ನು ತನ್ನ ಕೈಗಳಲ್ಲಿ ಎತ್ತಿಕೊಂಡು ದೇವರನ್ನು ಹೀಗೆಂದು ಸ್ತುತಿಸಿದನು:
“ನಿನ್ನ ಮಾತು ಸರ್ವೇಶ್ವರಾ, ನೆರವೇರಿತಿಂದು
ಇನ್ನು ತೆರಳಬಿಡು ಶಾಂತಿಯಿಂದ ನಿನ್ನ ದಾಸನಾದ ಎನ್ನನ್ನು.
ನೀನಿತ್ತ ಉದ್ಧಾರಕನನು ನಾ ಕಂಡೆ ಕಣ್ಣಾರೆ
ಜನರೆಲ್ಲರ ಸಮ್ಮುಖದಲ್ಲಿ ನೀನೀತನನು ಪ್ರತ್ಯಕ್ಷ ಮಾಡಿರುವೆ.
ಈತ ಅನ್ಯಜನರನ್ನು ಬೆಳಗಿಸುವ ಜ್ಯೋತಿ
ನಿನ್ನ ಜನ ಇಸ್ರಯೇಲರಿಗೆ ತರುವನು ಕೀರ್ತಿ.”
ಮಗುವಿನ ವಿಷಯವಾಗಿ ಹೇಳಿದ ಈ ಮಾತುಗಳನ್ನು ಕೇಳಿ ತಂದೆತಾಯಿಗಳು ಆಶ್ಚರ್ಯಪಟ್ಟರು. ಅವರನ್ನು ಸಿಮೆಯೋನನು ಆಶೀರ್ವದಿಸಿದನು. ತಾಯಿ ಮರಿಯಳಿಗೆ, “ಇಗೋ, ಈ ಮಗು ಇಸ್ರಯೇಲರಲ್ಲಿ ಅನೇಕರ ಉನ್ನತಿಗೂ ಅನೇಕರ ಅವನತಿಗೂ ಕಾರಣನಾಗುವನು. ಅನೇಕರು ಪ್ರತಿಭಟಿಸುವ ದೈವಸಂಕೇತವಾಗುವನು. ಇದರಿಂದ ಅನೇಕರ ಹೃದಯದಾಳದ ಭಾವನೆಗಳು ಬಯಲಾಗುವುವು. ನಿನ್ನ ವಿಷಯದಲ್ಲಿ ಹೇಳುವುದಾದರೆ, ದುಃಖವೆಂಬ ಅಲಗೊಂದು ನಿನ್ನ ಅಂತರಂಗವನ್ನು ಸೀಳುವುದು,” ಎಂದು ಹೇಳಿದನು. ಇದಲ್ಲದೆ ಅಲ್ಲಿ ಅಶೇರನ ವಂಶಕ್ಕೆ ಸೇರಿದ ಫನುವೇಲನ ಮಗಳಾದ ಅನ್ನಳೆಂಬ ಪ್ರವಾದಿನಿಯಿದ್ದಳು. ಅವಳು ಮುದಿಪ್ರಾಯದವಳು, ಮದುವೆಯಾಗಿ ಏಳು ವರ್ಷ ಮಾತ್ರ ಗಂಡನೊಡನೆ ಬಾಳಿ ವಿಧವೆಯಾದವಳು. ಅವಳಿಗೆ ಸುಮಾರು ಎಂಬತ್ತನಾಲ್ಕು ವರ್ಷ ವಯಸ್ಸು. ಮಹಾದೇವಾಲಯವನ್ನು ಬಿಟ್ಟು ಅವಳು ಎಲ್ಲಿಗೂ ಹೋಗುತ್ತಿರಲಿಲ್ಲ; ಹಗಲಿರುಳು ಉಪವಾಸ ಪ್ರಾರ್ಥನೆಗಳಿಂದ ದೇವಾರಾಧನೆಯಲ್ಲಿ ನಿರತಳಾಗಿದ್ದಳು. ಅವಳು ಅದೇ ಸಂದರ್ಭದಲ್ಲಿ ಅಲ್ಲಿಗೆ ಬಂದು, ದೇವರಿಗೆ ಕೃತಜ್ಞತಾಸ್ತುತಿ ಸಲ್ಲಿಸಿ, ಜೆರುಸಲೇಮಿನ ವಿಮೋಚನೆಯನ್ನು ಎದುರು ನೋಡುತ್ತಿದ್ದ ಅಲ್ಲಿಯವರಿಗೆಲ್ಲಾ ಆ ಶಿಶುವಿನ ವಿಷಯವಾಗಿ ಹೇಳತೊಡಗಿದಳು. ಸರ್ವೇಶ್ವರನ ಧರ್ಮಶಾಸ್ತ್ರಕ್ಕನುಸಾರ ಎಲ್ಲ ವಿಧಿಗಳನ್ನು ನೆರವೇರಿಸಿದ ಮೇಲೆ ಜೋಸೆಫ್ ಮತ್ತು ಮರಿಯಳು ಗಲಿಲೇಯ ಪ್ರಾಂತ್ಯದಲ್ಲಿದ್ದ ತಮ್ಮ ಸ್ವಗ್ರಾಮವಾದ ನಜರೇತಿಗೆ ಹಿಂದಿರುಗಿದರು. ಬಾಲಕ ಯೇಸು ಬೆಳೆದಂತೆ ಶಕ್ತರೂ ಜ್ಞಾನ ಸಂಪೂರ್ಣರೂ ಆದರು. ಇದಲ್ಲದೆ ದೈವಾನುಗ್ರಹ ಅವರ ಮೇಲಿತ್ತು.

ಪ್ರಭುವಿನ ಶುಭಸಂದೇಶ

01.02.22

ಮೊದಲನೇ ವಾಚನ: 2 ಸಮುವೇಲ 18:9-10, 14, 24-25, 30-19:3

ಅಬ್ಷಾಲೋಮನು ದಾವೀದನ ಸೇವಕರ ಕೈಗೆ ಸಿಕ್ಕಿದನು. ಅದು ಹೇಗೆಂದರೆ, ಅವನು ಹತ್ತಿದ್ದ ಹೇಸರಗತ್ತೆ ಒಂದು ದೊಡ್ಡ ಓಕ್‍ಮರದ ಕೆಳಗೆ ಹಾದುಹೋಗುವಾಗ ಅವನ ತಲೆ ನಿಬಿಡವಾದ ಅದರ ಕೊಂಬೆಗಳಲ್ಲಿ ಸಿಕ್ಕಿಕೊಂಡಿತು; ಆ ಹೇಸರಗತ್ತೆ ಅವನ ಕೆಳಗಿನಿಂದ ಓಡಿಹೋಯಿತು. ಅವನು ಭೂಮಿಗೂ ಆಕಾಶಕ್ಕೂ ಮಧ್ಯೆ ನೇತಾಡಬೇಕಾಯಿತು. ಇದನ್ನು ನೋಡಿದ ಒಬ್ಬ ವ್ಯಕ್ತಿ ಯೋವಾಬನಿಗೆ, “ನೋಡಿ, ಆ ಓಕ್‍ಮರದಲ್ಲಿ ಅಬ್ಷಾಲೋಮನು ನೇತಾಡುತ್ತಿರುವುದನ್ನು ಕಂಡೆ,” ಎಂದು ಹೇಳಿದನು. ಆಗ ಯೋವಾಬನು, “ಇಲ್ಲಿ ನಿಂತು ನಿನ್ನೊಡನೆ ಸಮಯ ಕಳೆಯಲಾರೆ,” ಎಂದು ಹೇಳಿ ಕೂಡಲೆ ಕೈಯಲ್ಲಿ ಮೂರು ಈಟಿಗಳನ್ನು ತೆಗೆದುಕೊಂಡು ಹೋಗಿ ಅಬ್ಷಾಲೋಮನ ಎದೆಗೆ ತಿವಿದನು. ದಾವೀದನು ಎರಡು ಬಾಗಿಲುಗಳ ಮಧ್ಯೆ ಕುಳಿತುಕೊಂಡಿದ್ದನು. ಅಷ್ಟರಲ್ಲಿ ಕಾವಲುಗಾರನು ಗೋಪುರದ ಮಾಳಿಗೆಯನ್ನು ಹತ್ತಿ ಪಾಗಾರದ ಬಳಿಯಲ್ಲಿ ನಿಂತು ನೋಡಲು ಒಂಟಿಗನಾಗಿ ಬರುವ ಒಬ್ಬ ವ್ಯಕ್ತಿಯನ್ನು ಕಂಡನು. ಅವನು ಕೂಡಲೆ ದಾವೀದನಿಗೆ ತಿಳಿಸಿದನು. ದಾವೀದನು, “ಅವನು ಒಬ್ಬನಾಗಿ ಇದ್ದರೆ ಸಮಾಚಾರ ತರುವವನಾಗಿರಬಹುದು,” ಎಂದನು. ಆ ವ್ಯಕ್ತಿ ಬರಬರುತ್ತಾ ಸಮೀಪವಾದನು. ಆಗ ಅರಸನು, “ನೀನು ಇತ್ತ ನಿಲ್ಲು,” ಎಂದು ಆಜ್ಞಾಪಿಸಿದನು; ಅವನು ಅಂತೆಯೇ ನಿಂತನು. ಅಷ್ಟರಲ್ಲಿ ಆ ಕೂಷ್ಯನೂ ಬಂದು, “ನನ್ನ ಒಡೆಯರಾದ ಅರಸರಿಗೆ ಶುಭವರ್ತಮಾನ ತಂದಿದ್ದೇನೆ; ಸರ್ವೇಶ್ವರಸ್ವಾಮಿ ನಿಮಗೆ ವಿರುದ್ಧ ಬಂಡೆದ್ದವರೆಲ್ಲರಿಗೂ ಮುಯ್ಯಿತೀರಿಸಿದ್ದಾರೆ,” ಎಂದನು. ಅರಸನು ಅವನನ್ನು, “ಆ ಯುವಕ ಅಬ್ಷಾಲೋಮನು ಸುರಕ್ಷಿತನಾಗಿದ್ದಾನೆಯೋ?” ಎಂದು ಕೇಳಿದನು. ಅವನು, “ನನ್ನ ಒಡೆಯರಾದ ಅರಸರ ಶತ್ರುಗಳಿಗೂ, ಅವರಿಗೆ ಕೇಡು ಮಾಡುವುದಕ್ಕೆ ನಿಂತವರೆಲ್ಲರಿಗೂ ಆ ಯುವಕನಿಗಾದ ಗತಿಯೇ ಆಗಲಿ!” ಎಂದು ಉತ್ತರಕೊಟ್ಟನು. ಇದನ್ನು ಕೇಳಿದ್ದೇ ಅರಸನ ಎದೆಯೊಡೆಯಿತು. ಅವನು, “ನನ್ನ ಮಗನೇ, ಅಬ್ಷಾಲೋಮನೇ, ನನ್ನ ಮಗನೇ, ನನ್ನ ಮಗನಾದ ಅಬ್ಷಾಲೋಮನೇ, ನಿನಗೆ ಬದಲಾಗಿ ನಾನು ಸತ್ತಿದ್ದರೆ ಎಷ್ಟೋ ಒಳ್ಳೆಯದಾಗುತ್ತಿತ್ತು! ಅಬ್ಷಾಲೋಮನೇ, ನನ್ನ ಮಗನೇ, ಮಗನೇ,” ಎಂದು ಕೂಗಿ ಗೋಳಿಡುತ್ತಾ ಹೆಬ್ಬಾಗಿಲಿನ ಮೇಲಿದ್ದ ಕೋಣೆಗೆ ಹೋದನು. ಅರಸನು ಅಬ್ಷಾಲೋಮನಿಗಾಗಿ ಅಳುತ್ತಾ ಗೋಳಾಡುತ್ತಾ ಇದ್ದಾನೆಂಬ ಸಮಾಚಾರ ಯೋವಾಬನಿಗೆ ಮುಟ್ಟಿತು. ಅರಸನು ಮಗನಿಗಾಗಿ ಪ್ರಲಾಪಿಸುತ್ತಿದ್ದಾನೆಂಬುದು ಎಲ್ಲ ಜನರಿಗೂ ಗೊತ್ತಾಗಿ ಅವರ ಜಯಘೋಷ ಗೋಳಾಟವಾಗಿ ಮಾರ್ಪಟ್ಟಿತು. ಜನರು ಆ ದಿನದ ಯುದ್ಧದಲ್ಲಿ ಸೋತು ಓಡಿಬಂದಿರುವವರೋ ಎಂಬಂತೆ, ನಾಚಿಕೆಯಿಂದ ಕಳ್ಳತನವಾಗಿ ಊರನ್ನು ಹೊಕ್ಕರು.

ಕೀರ್ತನೆ: 86:1-2, 3-4, 5-6
ಶ್ಲೋಕ: ಹೇ ಪ್ರಭೂ, ನೀಡೆನಗೆ ಸದುತ್ತರವನು

ಹೇ ಪ್ರಭೂ, ನೀಡೆನಗೆ ಸದುತ್ತರವನು|
ಕಿವಿಗೊಡು, ದೀನನು, ದಲಿತನು ನಾನು||
ಕಾಪಾಡು ಪ್ರಭೂ, ನಾ ನಿನ್ನ ಭಕ್ತನು|
ಉದ್ಧರಿಸು ನಿನ್ನ ನಂಬಿದ ದಾಸನನು||

ನೀನೆನಗೆ ದೇವನು, ಕರುಣಿಸೆನ್ನನು|
ದಿನವೆಲ್ಲ ಪ್ರಭು, ನಿನಗೆ ಮೊರೆಯಿಡುವೆನು||
ನಿನ್ನ ದಾಸನಿಗೆ ನೀಡು ಮನದಾನಂದವನು|
ನಿನಗೆ ಅಭಿಮುಖವಾಗಿಸಿರುವೆ ಎನ್ನಾತ್ಮವನು||

ಪ್ರಭೂ, ನೀನು ದಯಾವಂತನು, ಕ್ಷಮಿಸುವವನೂ|
ಮೊರೆಯಿಡುವವರಿಗೆ ನೀನು ಕೃಪಾಪೂರ್ಣನು||
ಕಿವಿಗೊಡು ಪ್ರಭು, ನನ್ನ ಪ್ರಾರ್ಥನೆಗೆ|
ನನ್ನ ವಿಜ್ಞಾಪನೆಗಳ ಕೋರಿಕೆಗೆ||

ಅಲ್ಲೆಲೂಯ, ಅಲ್ಲೆಲೂಯ!
ಬೋಧಿಸೆನಗೆ ಪ್ರಭು, ನಿನ್ನ ಮಾರ್ಗವನು |
ಶತ್ರು ರಹಿತ ಹಾದಿಯಲಿ ನಡೆಸು ಎನ್ನನು ||
ಅಲ್ಲೆಲೂಯ!

ಶುಭಸಂದೇಶ: ಮಾರ್ಕ 5:21-43

ಯೇಸುಸ್ವಾಮಿ ದೋಣಿಯನ್ನೇರಿ ಸರೋವರದ ಈಚೆದಡಕ್ಕೆ ಮರಳಿದರು. ತೀರವನ್ನು ಸೇರಿದೊಡನೆ ಜನರು ದೊಡ್ಡಗುಂಪಾಗಿ ಅವರ ಸುತ್ತಲೂ ನೆರೆದರು. ಪ್ರಾರ್ಥನಾಮಂದಿರದ ಅಧಿಕಾರಿಯೊಬ್ಬನು ಅಲ್ಲಿಗೆ ಬಂದನು. ಅವನ ಹೆಸರು ಯಾಯೀರ. ಅವನು ಯೇಸುವನ್ನು ನೋಡಿದೊಡನೆ ಅವರ ಪಾದಕ್ಕೆರಗಿ, “ನನ್ನ ಪುಟ್ಟ ಮಗಳು ಮರಣಾವಸ್ಥೆಯಲ್ಲಿದ್ದಾಳೆ; ತಾವು ಬಂದು ತಮ್ಮ ಹಸ್ತವನ್ನು ಅವಳ ಮೇಲಿಟ್ಟು, ಅವಳು ಗುಣಹೊಂದಿ ಬದುಕುವಂತೆ ಅನುಗ್ರಹಿಸಬೇಕು,” ಎಂದು ಬಹಳವಾಗಿ ವಿನಂತಿಸಿದನು. ಯೇಸು ಅವನ ಜೊತೆಯಲ್ಲಿ ಹೊರಟರು. ದೊಡ್ಡ ಜನಸ್ತೋಮವು ಯೇಸುವನ್ನು ಮುತ್ತಿಕೊಂಡು ಅವರ ಜೊತೆಯಲ್ಲೇ ಹೊರಟಿತು. ಹನ್ನೆರಡು ವರ್ಷಗಳಿಂದಲೂ ರಕ್ತಸ್ರಾವ ರೋಗದಿಂದ ಬಳಲುತ್ತಿದ್ದ ಮಹಿಳೆಯೊಬ್ಬಳು ಆ ಗುಂಪಿನಲ್ಲಿದ್ದಳು. ಅನೇಕ ವೈದ್ಯರಿಂದ ಚಿಕಿತ್ಸೆ ಪಡೆದಿದ್ದರೂ ಕೈಯಲ್ಲಿದ್ದ ಹಣವನ್ನೆಲ್ಲಾ ವ್ಯಯ ಮಾಡಿದ್ದರೂ ಅವಳ ರೋಗ ಮಾತ್ರ ಉಲ್ಬಣ ಆಗುತ್ತಿತ್ತೇ ಹೊರತು ಸ್ವಲ್ಪವೂ ಗುಣಮುಖ ಆಗುತ್ತಿರಲಿಲ್ಲ. ಯೇಸುವಿನ ವಿಷಯವಾಗಿ ಜನರು ಹೇಳುತ್ತಿದ್ದುದನ್ನು ಆಕೆ ಕೇಳಿ, ಜನರ ಗುಂಪಿನಲ್ಲಿ ಸೇರಿ, ಯೇಸುವನ್ನು ಹಿಂಬಾಲಿಸಿದಳು. “ನಾನು ಅವರ ಉಡುಪನ್ನು ಮುಟ್ಟಿದರೂ ಸಾಕು, ಗುಣಹೊಂದುವೆನು” ಎಂದುಕೊಂಡು ಯೇಸುವಿನ ಉಡುಪನ್ನು ಮುಟ್ಟಿದಳು. ಅದನ್ನು ಮುಟ್ಟಿದಾಕ್ಷಣ ಅವಳ ರಕ್ತಸ್ರಾವ ನಿಂತುಹೋಯಿತು. ಕಾಡುತ್ತಿದ್ದ ವ್ಯಾಧಿಯಿಂದ ತಾನು ಗುಣಹೊಂದಿದ್ದೇನೆಂದು ಆಕೆಗೆ ಅರಿವಾಯಿತು. ಇತ್ತ ಯೇಸು, ರೋಗವನ್ನು ಗುಣಪಡಿಸುವ ಶಕ್ತಿ ತಮ್ಮಿಂದ ಹೊರಹೊಮ್ಮಿದ್ದನ್ನು ತಕ್ಷಣ ತಿಳಿದು, ಸುತ್ತಲಿದ್ದ ಜನರತ್ತ ತಮ್ಮ ದೃಷ್ಟಿಯನ್ನು ಹರಿಸಿ, “ನನ್ನ ಉಡುಪನ್ನು ಮುಟ್ಟಿದವರಾರು?” ಎಂದು ಪ್ರಶ್ನಿಸಿದರು. ಅದಕ್ಕೆ ಶಿಷ್ಯರು, “ತಮ್ಮ ಸುತ್ತಲೂ ಜನರು ಮುತ್ತಿಕೊಂಡಿರುವುದು ತಮಗೆ ತಿಳಿದೇ ಇದೆ. ಆದರೂ ‘ನನ್ನನ್ನು ಮುಟ್ಟಿದವರು ಯಾರು?’ ಎಂದು ಕೇಳುತ್ತೀರಲ್ಲಾ” ಎಂದರು. ಆದರೆ ಯೇಸು ತಮ್ಮನ್ನು ಮುಟ್ಟಿದವರು ಯಾರೆಂದು ಗುರುತಿಸಲು ಸುತ್ತಲೂ ನೋಡುತ್ತಿದ್ದರು. ತನ್ನಲ್ಲಿ ಸಂಭವಿಸಿದ್ದನ್ನು ಅರಿತಿದ್ದ ಆ ಮಹಿಳೆ ಭಯದಿಂದ ನಡುಗುತ್ತಾ ಮುಂದೆ ಬಂದು ಯೇಸುವಿನ ಪಾದಕ್ಕೆ ಎರಗಿ, ಅವರಿಗೆ ನಡೆದ ಸಂಗತಿಯನ್ನು ತಿಳಿಸಿದಳು. ಯೇಸು ಆಕೆಗೆ, “ಮಗಳೇ, ನಿನ್ನ ವಿಶ್ವಾಸ ನಿನ್ನನ್ನು ಗುಣಪಡಿಸಿದೆ; ಸಮಾಧಾನದಿಂದ ಹೋಗು, ವ್ಯಾಧಿಮುಕ್ತಳಾಗಿ ಆರೋಗ್ಯದಿಂದಿರು,” ಎಂದು ಅನುಗ್ರಹಿಸಿದರು. ಯೇಸುಸ್ವಾಮಿ ಇನ್ನೂ ಮಾತನಾಡುತ್ತ ಇರುವಾಗಲೇ ಯಾಯಿರನ ಮನೆಯಿಂದ ಕೆಲವರು ಬಂದು ಅವನಿಗೆ, “ನಿಮ್ಮ ಮಗಳು ತೀರಿಹೋದಳು; ಇನ್ನೇಕೆ ಗುರುವಿಗೆ ತೊಂದರೆ ಕೊಡುತ್ತೀರಿ?” ಎಂದರು. ಅವರು ಹೇಳಿದ ಮಾತುಗಳನ್ನು ಯೇಸು ಕೇಳಿಯೂ ಅವನ್ನು ಲಕ್ಷ್ಯಕ್ಕೆ ತೆಗೆದುಕೊಳ್ಳದೆ ಯಾಯಿರನಿಗೆ, “ಭಯಪಡಬೇಡ, ನಿನ್ನಲ್ಲಿ ವಿಶ್ವಾಸ ಒಂದಿದ್ದರೆ ಸಾಕು,” ಎಂದರು. ಅನಂತರ ಪೇತ್ರ, ಯಕೋಬ ಹಾಗೂ ಅವನ ಸೋದರ ಯೊವಾನ್ನ, ಇವರನ್ನು ಮಾತ್ರ ತಮ್ಮ ಜೊತೆಯಲ್ಲಿ ಕರೆದುಕೊಂಡು ಯಾಯಿರನ ಮನೆಯನ್ನು ತಲುಪಿದರು. ಅಲ್ಲಿ ಜನರ ಗೋಳಾಟ, ಗೊಂದಲದ ದೃಶ್ಯ ಅವರ ಕಣ್ಣಿಗೆ ಬಿತ್ತು. ಯೇಸು ಮನೆಯೊಳಕ್ಕೆ ಹೋಗಿ, “ಏತಕ್ಕೆ ಇಷ್ಟೆಲ್ಲಾ ಗಲಭೆ, ಗೋಳಾಟ? ಬಾಲಕಿ ಸತ್ತಿಲ್ಲ, ನಿದ್ರಿಸುತ್ತಿದ್ದಾಳೆ,” ಎಂದರು. ಇದನ್ನು ಕೇಳಿದ ಜನರು, ಯೇಸುವನ್ನು ಪರಿಹಾಸ್ಯ ಮಾಡಿದರು. ಆದರೆ ಯೇಸು ಎಲ್ಲರನ್ನೂ ಹೊರಗೆ ಕಳುಹಿಸಿ ಬಾಲಕಿಯ ತಂದೆತಾಯಿಯನ್ನು ಮತ್ತು ತಮ್ಮೊಂದಿಗಿದ್ದ ಮೂವರು ಶಿಷ್ಯರನ್ನು ಮಾತ್ರ ಕರೆದುಕೊಂಡು ಆ ಬಾಲಕಿಯನ್ನು ಮಲಗಿಸಿದ್ದ ಕೊಠಡಿಯನ್ನು ಪ್ರವೇಶಿಸಿದರು. ಆಕೆಯ ಕೈಯನ್ನು ಹಿಡಿದು, “ತಲಿಥಾಕೂಮ್” ಎಂದರು. (‘ಮಗಳೇ, ನಿನಗೆ ಹೇಳುತ್ತೇನೆ, ಎದ್ದೇಳು’ ಎಂಬುದು ಆ ಮಾತಿನ ಅರ್ಥ) ಅವಳು ತಟ್ಟನೆ ಎದ್ದು ನಡೆದಾಡತೊಡಗಿದಳು. ಅಲ್ಲಿದ್ದವರೆಲ್ಲರೂ ಆಶ್ಚರ್ಯ ಭರಿತರಾದರು. ಅವಳಿಗೆ ಹನ್ನೆರಡು ವರ್ಷ ವಯಸ್ಸು ಆಗಿತ್ತು. ಈ ವಿಷಯವನ್ನು ಬೇರೆ ಯಾರಿಗೂ ತಿಳಿಸಬಾರದೆಂದು ಯೇಸು ಅವರಿಗೆ ಕಟ್ಟಪ್ಪಣೆ ಮಾಡಿದರು. ಬಾಲಕಿಗೆ ತಿನ್ನಲು ಏನಾದರೂ ಕೊಡುವಂತೆ ತಿಳಿಸಿದರು.

31.01.22 - “ನನ್ನನ್ನು ನಿಮ್ಮ ಜೊತೆಯಲ್ಲೇ ಕರೆದುಕೊಂಡು ಹೋಗಿ,”

ಮೊದಲನೇ ವಾಚನ: 2 ಸಮುವೇಲ 15:13-14, 30; 16:15-13

ಇಸ್ರಯೇಲರ ಮನಸ್ಸು ಅಬ್ಷಾಲೋಮನ ಕಡೆಗೆ ತಿರುಗಿಕೊಂಡಿತೆಂಬ ವರ್ತಮಾನ ದಾವೀದನಿಗೆ ಮುಟ್ಟಿತು. ಆಗ ಅವನು ಜೆರುಸಲೇಮಿನಲ್ಲಿದ್ದ ತನ್ನ ಸೇವಕರಿಗೆ, “ಏಳಿ, ಓಡಿ ಹೋಗೋಣ; ಇಲ್ಲೇ ಇದ್ದರೆ ನಾವು ಅಬ್ಷಾಲೋಮನ ಕೈಯಿಂದ ತಪ್ಪಿಸಿಕೊಳ್ಳಲಾರೆವು. ಬೇಗ ಹೊರಡೋಣ; ಅವನು ಅಕಸ್ಮಾತ್ತಾಗಿ ನಮ್ಮ ಮೇಲೆ ಬಿದ್ದು ನಮಗೆ ದುರ್ಗತಿಯನ್ನುಂಟು ಮಾಡಿ ಪಟ್ಟಣದವರನ್ನೆಲ್ಲಾ ಕತ್ತಿಯಿಂದ ಸಂಹರಿಸಾನು,” ಎಂದು ಹೇಳಿದನು. ದಾವೀದನು, ಮುಖವನ್ನು ಮರೆಮಾಚಿಕೊಂಡು ಅಳುತ್ತಾ, ಬರಿಗಾಲಿನಿಂದ ಎಣ್ಣೇ ಮರಗಳ ಗುಡ್ಡವನ್ನೇರಿದನು. ಅವನ ಜೊತೆಯಲ್ಲಿದ್ದ ಜನರೂ ಮೋರೆಮುಚ್ಚಿಕೊಂಡು ಅಳುತ್ತಾ ಏರಿದರು. ಅರಸನಾದ ದಾವೀದನು ಬಹುರೀಮಿಗೆ ಬಂದಾಗ ಸೌಲನ ವಂಶದವನೂ ಗೇರನ ಮಗನೂ ಆದ ಶಿಮ್ಮಿ ಎಂಬವನು ದಾವೀದನನ್ನು ಶಪಿಸುತ್ತಾ ಆ ಊರಿನಿಂದ ಹೊರಗೆ ಬಂದನು. ಅವನು ದಾವೀದನ, ಅವನ ಎಲ್ಲ ಸೇವಕರ, ಎಡಬಲದಲ್ಲಿದ್ದ ಸೈನಿಕರ ಹಾಗು ಶೂರರ ಕಡೆಗೆ ಕಲ್ಲೆಸೆಯತೊಡಗಿದನು. ಅಲ್ಲದೆ, ಅವನು ದಾವೀದನನ್ನು ಶಪಿಸುತ್ತಾ, “ನಡೆ, ಕೊಲೆಗಾರನೇ, ನೀಚನೇ, ನಡೆ; ಸೌಲನ ರಾಜ್ಯವನ್ನು ಕಬಳಿಸಿಕೊಂಡು, ಅವನ ಮನೆಯವರನ್ನು ಕೊಂದದ್ದಕ್ಕಾಗಿ ಸರ್ವೇಶ್ವರ ನಿನಗೆ ಮುಯ್ಯಿ ತೀರಿಸಿದ್ದಾರೆ. ಅವರು, ರಾಜ್ಯವನ್ನು ನಿನ್ನ ಮಗ ಅಬ್ಷಾಲೋಮನಿಗೆ ಕೊಟ್ಟುಬಿಟ್ಟರು. ಕೊಲೆಗಾರನೇ, ಇಗೋ, ನಿನಗೆ ಈಗ ತಕ್ಕ ಆಪತ್ತು ಬಂದಿದೆ,” ಎಂದನು. ಆಗ ಚೆರೂಯಳ ಮಗ ಅಬೀಷೈಯು ಅರಸನಿಗೆ, “ಈ ಸತ್ತನಾಯಿ ಅರಸನಾದ ನನ್ನ ಒಡೆಯರನ್ನು ಶಪಿಸುವುದೇನು? ಅಪ್ಪಣೆಯಾಗಲಿ, ನಾನು ಅವನಿರುವಲ್ಲಿಗೇ ಹೋಗಿ, ಅವನ ತಲೆ ಹಾರಿಸಿಕೊಂಡು ಬರುತ್ತೇನೆ,” ಎಂದನು. ಅದಕ್ಕೆ ಅರಸನು, “ಚೆರೂಯಳ ಮಕ್ಕಳೇ, ನನಗೆ ನಿಮ್ಮ ಗೊಡವೆಯೇ ಬೇಡ; ಬಿಡಿ, ಅವನು ಶಪಿಸಲಿ; ದಾವೀದನನ್ನು ಶಪಿಸೆಂದು ಸರ್ವೇಶ್ವರಸ್ವಾಮಿಯೇ ಅವನಿಗೆ ಆಜ್ಞಾಪಿಸಿದ ಮೇಲೆ ‘ನೀನು ಹೀಗೇಕೆ ಮಾಡಿದೆ’ ಎಂದು ಅವನನ್ನು ಯಾರು ಕೇಳಲಾದೀತು?” ಎಂದು ಉತ್ತರಕೊಟ್ಟನು. ಇದಲ್ಲದೆ ಅವನು ಅಬೀಷೈಗೂ ತನ್ನ ಎಲ್ಲಾ ಸೇವಕರಿಗೂ, “ನೋಡಿ, ನನ್ನಿಂದ ಹುಟ್ಟಿದ ನನ್ನ ಮಗನೇ ನನ್ನ ಪ್ರಾಣವನ್ನು ತೆಗೆಯಬೇಕೆಂದಿರುವಲ್ಲಿ ಈ ಬೆನ್ಯಾವಿೂನ್ಯನು ಹೀಗೆ ಮಾಡುವುದು ಯಾವ ಲೆಕ್ಕ? ಬಿಡಿ, ಅವನು ಶಪಿಸಲಿ; ಹೀಗೆ ಮಾಡಬೇಕೆಂದು ಸರ್ವೇಶ್ವರನೇ ಅವನಿಗೆ ಆಜ್ಞಾಪಿಸಿದ್ದಾರೆ. ಬಹುಶಃ ಸರ್ವೇಶ್ವರ ನನ್ನ ಕಷ್ಟವನ್ನು ನೋಡಿ ಈ ದಿನ ಶಾಪಕ್ಕೆ ಬದಲಾಗಿ ನನಗೆ ಶುಭವನ್ನು ಅನುಗ್ರಹಿಸಿಯಾರು,” ಎಂದು ಹೇಳಿದನು. ದಾವೀದನೂ ಅವನ ಜನರೂ ದಾರಿಹಿಡಿದು ಹೋಗುವಾಗ ಶಿಮ್ಮಿಯು ಶಪಿಸುತ್ತಾ ಕಲ್ಲುಮಣ್ಣು ತೂರುತ್ತಾ, ಗುಡ್ಡದ ಓರೆಯಲ್ಲಿ ಸಮಾನಾಂತರದಲ್ಲೇ ನಡೆಯುತ್ತಿದ್ದನು.

ಕೀರ್ತನೆ: 3:2-3, 4-5, 6-7
ಶ್ಲೋಕ: ಎದ್ದೇಳು ದೇವಾ, ಕಾಪಾಡ ಬಾ ಪ್ರಭುವೇ

ಶುಭಸಂದೇಶ: ಮಾರ್ಕ 5:1-20

ಅವರೆಲ್ಲರು ಗಲಿಲೇಯ ಸರೋವರವನ್ನು ದಾಟಿ ಆಚೆಯ ಕಡೆಯಲ್ಲಿದ್ದ ಗೆರಸೇನರ ಪ್ರಾಂತ್ಯವನ್ನು ಸೇರಿದರು. ಯೇಸುಸ್ವಾಮಿ ದೋಣಿಯಿಂದ ಇಳಿಯುತ್ತಲೇ, ದೆವ್ವ ಹಿಡಿದಿದ್ದ ಒಬ್ಬನು ಸಮಾಧಿಯ ಗುಹೆಯೊಳಗಿಂದ ಅವರ ಎದುರಿಗೆ ಬಂದನು. ಸಮಾಧಿಯ ಗುಹೆಗಳೇ ಅವನಿಗೆ ವಾಸ ಸ್ಥಳವಾಗಿದ್ದವು. ಅವನನ್ನು ಬಂಧಿಸಲು ಯಾರಿಂದಲೂ ಆಗುತ್ತಿರಲಿಲ್ಲ; ಸಂಕೋಲೆಯಿಂದ ಬಂಧಿಸುವುದೂ ಅಸಾಧ್ಯವಾಗಿತ್ತು. ಸರಪಳಿ ಸಂಕೋಲೆಗಳಿಂದ ಅವನನ್ನು ಕಟ್ಟಿದಾಗ ಅವುಗಳನ್ನು ತುಂಡು ತುಂಡು ಮಾಡುತ್ತಿದ್ದನು. ಅವನನ್ನು ಹತೋಟಿಗೆ ತರುವ ಸಾಮರ್ಥ್ಯ  ಯಾರಿಗೂ ಇರಲಿಲ್ಲ. ಹಗಲಿರುಳೆನ್ನದೆ ಸಮಾಧಿಯ ಗುಹೆಗಳಲ್ಲಿಯೂ ಬೆಟ್ಟಗುಡ್ಡಗಳಲ್ಲಿಯೂ ಅವನು ಅಲೆದಾಡುತ್ತಾ ಅರಚಾಡುತ್ತಾ ಕಲ್ಲುಗಳಿಂದ ತನ್ನನ್ನು ತಾನೇ ಚಚ್ಚಿಕೊಳ್ಳುತ್ತಾ ಇದ್ದನು. ದೂರದಲ್ಲಿ ಬರುತ್ತಿದ್ದ ಯೇಸುಸ್ವಾಮಿಯನ್ನು ಕಂಡು, ಅವನು ಓಡಿಬಂದು ಅವರಿಗೆ ಸಾಷ್ಟಾಂಗವೆರಗಿ, “ಸ್ವಾಮಿ ಯೇಸುವೇ, ಪರಮೋನ್ನತ ದೇವರ ಪುತ್ರರೇ, ನಿಮಗೇಕೆ ನನ್ನ ಗೊಡವೆ? ದೇವರಾಣೆ, ನನ್ನನ್ನು ಪೀಡಿಸಬೇಡಿ, ನಿಮ್ಮನ್ನು ಬೇಡಿಕೊಳ್ಳುತ್ತೇನೆ,” ಎಂದು ಅಬ್ಬರಿಸಿದನು. ಕಾರಣ - ಅವನನ್ನು ಬಿಟ್ಟು ತೊಲಗಬೇಕೆಂದು ಯೇಸು ದೆವ್ವಕ್ಕೆ ಈ ಮೊದಲೇ ಕಟ್ಟಪ್ಪಣೆ ಮಾಡಿದ್ದರು. “ನಿನ್ನ ಹೆಸರೇನು?” ಎಂದು ಯೇಸು ಅವನನ್ನು ಕೇಳಲು, “ನನ್ನ ಹೆಸರು ‘ಗಣ’; ಏಕೆಂದರೆ ನಾವು ಬಹುಮಂದಿ ಇದ್ದೇವೆ,” ಎಂದನು. ಅಲ್ಲದೆ, “ನಮ್ಮನ್ನು ಆ ಪ್ರಾಂತ್ಯದಿಂದ ಹೊರಗಟ್ಟಬೇಡಿ,” ಎಂದು ಯೇಸುವನ್ನು ಬಹಳವಾಗಿ ಬೇಡಿಕೊಂಡನು. ಸಮೀಪದಲ್ಲೇ ಹಂದಿಗಳ ದೊಡ್ಡ ಹಿಂಡೊಂದು ಬೆಟ್ಟದ ತಪ್ಪಲಲ್ಲಿ ಮೇಯುತ್ತಿತ್ತು. ಆ ದೆವ್ವಗಳು, “ನಾವು ಆ ಹಂದಿಗಳೊಳಗೆ ಸೇರಿಕೊಳ್ಳುವಂತೆ ನಮ್ಮನ್ನು ಕಳುಹಿಸಿಕೊಡಿ,” ಎಂದು ಯೇಸುವನ್ನು ಬೇಡಿಕೊಂಡವು. ಅವರು ಹಾಗೆಯೆ ಅಪ್ಪಣೆ ಮಾಡಿದರು. ಕೂಡಲೇ ದೆವ್ವಗಳು ಆ ವ್ಯಕ್ತಿಯಿಂದ ಹೊರಬಂದು ಹಂದಿಗಳೊಳಗೆ ಹೊಕ್ಕವು.

ಇದರ ಪರಿಣಾಮವಾಗಿ ಎರಡು ಸಾವಿರ ಹಂದಿಗಳಿದ್ದ ಆ ಹಿಂಡು, ಬೆಟ್ಟದ ಕಡಿದಾದ ಬದಿಯಿಂದ ಸರೋವರದತ್ತ ಧಾವಿಸಿ, ಅದರಲ್ಲಿ ಬಿದ್ದು ಮುಳುಗಿ ಹೋಯಿತು. ಹಂದಿಗಳನ್ನು ಮೇಯಿಸುತ್ತಿದ್ದವರು ಓಡಿ ಹೋಗಿ ಊರುಕೇರಿಗಳಲ್ಲಿ ಈ ವಿಷಯವನ್ನು ತಿಳಿಸಿದರು. ನಡೆದ ಸಂಗತಿ ಏನೆಂಬುದನ್ನು ನೋಡಲು ಜನರು ಹೊರಟು, ಯೇಸುಸ್ವಾಮಿಯ ಬಳಿಗೆ ಬಂದರು. ದೆವ್ವಗಣದಿಂದ ಪೀಡಿತನಾಗಿದ್ದವನು ಈಗ ಬಟ್ಟೆಯನ್ನು ತೊಟ್ಟುಕೊಂಡು, ಸ್ವಸ್ಥಬುದ್ಧಿಯುಳ್ಳವನಾಗಿ ಕುಳಿತಿರುವುದನ್ನು ಕಂಡು ಅವರೆಲ್ಲರೂ ಗಾಬರಿಗೊಂಡರು. ನಡೆದುದನ್ನು ಕಣ್ಣಾರೆ ನೋಡಿದವರು ದೆವ್ವ ಹಿಡಿದಿದ್ದವನು ಸ್ವಸ್ಥನಾದ ವಿಧವನ್ನು ಮತ್ತು ಹಂದಿಗಳಿಗಾದ ಗತಿಯನ್ನು ಅವರಿಗೆ ವಿವರಿಸಿದರು. ಇದನ್ನು ಕೇಳಿದ ಜನರು ಯೇಸುವಿಗೆ, ತಮ್ಮ ಪ್ರಾಂತ್ಯವನ್ನು ಬಿಟ್ಟು ಹೋಗಬೇಕೆಂದು ಮನವಿಮಾಡಿಕೊಂಡರು. ಯೇಸು ದೋಣಿಯನ್ನು ಹತ್ತುತ್ತಿದ್ದಾಗ ದೆವ್ವ ಹಿಡಿದಿದ್ದವನು, “ನನ್ನನ್ನು ನಿಮ್ಮ ಜೊತೆಯಲ್ಲೇ ಕರೆದುಕೊಂಡು ಹೋಗಿ,” ಎಂದು ಬಿನ್ನವಿಸಿಕೊಂಡನು. ಯೇಸು ಅದಕ್ಕೊಪ್ಪದೆ, “ನೀನು ನಿನ್ನ ಮನೆಗೂ ನಿನ್ನ ಸ್ವಜನರ ಬಳಿಗೂ ಹೋಗು. ಸರ್ವೇಶ್ವರ ನಿನಗೆ ಎಂಥಾ ಉಪಕಾರ ಮಾಡಿದ್ದಾರೆ, ಎಷ್ಟು ಕರುಣೆ ತೋರಿಸಿದ್ದಾರೆ, ಎಂದು ಅವರಿಗೆ ವಿವರಿಸು,” ಎಂದರು. ಅಂತೆಯೇ ಅವನು ಹೊರಟು ಹೋಗಿ, ಯೇಸು ತನಗೆ ಮಾಡಿದ ಮಹಾದುಪಕಾರವನ್ನು ದೆಕಪೊಲಿ ಎಂಬ ನಾಡಿನಲ್ಲಿ ಪ್ರಕಟಿಸಿದನು. ಕೇಳಿದವರೆಲ್ಲರೂ ಆಶ್ಚರ್ಯ ಚಕಿತರಾದರು. 

30.01.22 - "ಯಾವ ಪ್ರವಾದಿಯು ಸ್ವಗ್ರಾಮದಲ್ಲಿ ಸನ್ಮಾನಿತನಲ್ಲ"

ಮೊದಲನೇ ವಾಚನಯೆರೆಮೀಯ 1: 4-5, 17-19


ಸರ್ವೇಶ್ವರಸ್ವಾಮಿ  ವಾಣಿಯನ್ನು ನನಗೆ ದಯಪಾಲಿಸಿದರು: "ನಿನ್ನನ್ನು ತಾಯಿಯ  ಗರ್ಭದಲ್ಲಿ ರೂಪಿಸುವುದಕ್ಕೆ ಮುಂಚೆಯೇ ನಿನ್ನನ್ನು ನಾನು ತಿಳಿದಿದ್ದೆನೀನು ಉದರದಿಂದ ಹೊರ ಬರುವುದಕ್ಕೆ ಮೊದಲೇ ನಿನ್ನನ್ನು ಪವಿತ್ರೀಕರಿಸಿದ್ದೆನಿನ್ನನ್ನು ರಾಷ್ಟ್ರಗಳಿಗೆ ಪ್ರವಾದಿಯನ್ನಾಗಿ ನೇಮಿಸಿದ್ದೇನೆನೀನು ಎದ್ದು ನಡುಕಟ್ಟಿಕೊನಾನು ಆಜ್ಞಾಪಿಸುವುದನ್ನೆಲ್ಲ ಅವರಿಗೆ ತಿಳಿಸುಅವರಿಗೆ ಹೆದರಬೇಡಹೆದರಿದರೆ ನಾನೂ ನಿನ್ನನ್ನು ಅವರ ಮುಂದೆ ಹೆದರಿಸುವೆನುನಾನು ಹೇಳುವುದನ್ನು ಗಮನದಿಂದ ಕೇಳು ದಿನ ನಿನ್ನನ್ನು ಜುದೇಯದ ಅರಸರುಅಧಿಪತಿಗಳುಯಾಜಕರುಜನ ಸಾಮಾನ್ಯರುಹೀಗೆ ನಾಡಿನವರೆಲ್ಲರನ್ನು ಎದುರಿಸತಕ್ಕವನನ್ನಾಗಿ ಮಾಡಿದ್ದೇನೆಕೋಟೆ ಕೊತ್ತಲಗಳಿಂದ ಸುಸಜ್ಜಿತ ನಗವನ್ನಾಗಿಯೂ ಕಬ್ಬಿಣದ ಕಂಬವನ್ನಾಗಿಯೂ ತಾಮ್ರದ ಪೌಳಿಗೋಡೆಯನ್ನಾಗಿಯೂ ನಿನ್ನನ್ನು ಸ್ಥಾಪಿಸಿದ್ದೇನೆನಿನಗೆ ವಿರುದ್ಧವಾಗಿ ಅವರು ಯುದ್ಧಮಾಡುವರುಆದರೆ ನಿನ್ನನ್ನು ಸೋಲಿಸಲಾಗುವುದಿಲ್ಲನಿನ್ನನ್ನು ಕಾಪಾಡಲು ನಾನೇ ನಿನ್ನೊಂದಿಗಿರುವೆನುಇದು ಸರ್ವೇಶ್ವರನಾದ ನನ್ನ ನುಡಿ.

ಕೀರ್ತನೆ: 71:1-2, 3-4, 5-6, 15-17
ಶ್ಲೋಕವರ್ಣಿಸುವೆನು ದಿನವೆಲ್ಲ ನನ್ನ ನ್ಯಾಯನೀತಿಯನ್ನು.

ಎರಡನೇ ವಾಚನ: 1 ಕೊರಿಂಥಿಯರಿಗೆ 12:31-13:13

ಶ್ರೇಷ್ಠವಾದ ವರಗಳನ್ನು ನೀವು ಶ್ರದ್ಧಪೂರ್ವಕವಾಗಿ ಅಪೇಕ್ಷಿಸಿರಿನಾನು ನಿಮಗೆ ಇನ್ನೂ ಸರ್ವೋತ್ತಮವಾದ ಮಾರ್ಗವನ್ನು ತೋರಿಸುತ್ತೇನೆಸುರನರರ ನುಡಿಗಳ ನಾನಾಡಬಲ್ಲೆನಾದರೂ ಪರಮ ಪ್ರಿತಿಯೊಂದೆನಗಿಲ್ಲದಿರಲು ನಾ ಕೇವಲ ಗಣಗಣಿಸುವ ಘಂಟೆಝಣಝಣಿಸುವ ಜಾಗಟೆಪ್ರವಾದನೆಯ ವರವೆನಗಿರಬಹುದುಇರಬಹುದು ನಿಗೂಢ ರಹಸ್ಯಗಳರಿವು ಎಲ್ಲದರ ಪರಿಜ್ಞಾನಪರ್ವತವನ್ನೇ ಕದಲಿಸುವ ವಿಶ್ವಾಸ ಪ್ರೀತಿಯೊಂದಿಲ್ಲದಿರೆ ನಾ ಶೂನ್ಯ ಸಮಾನನನಗಿರುವುದೆಲ್ಲವನು ನಾ ದಾನಮಾಡೆದೇಹವನೇ ಸಜೀವ ದಹಿಸಲು ನೀಡೆನಾನಾಗಿರೆ ಪರಮ ಪೀತಿ ವಿಹೀನ ಏನದು ಜೀವನನನಗೇನದು ಪ್ರಯೋಜನಸಹನೆ ಸೈರಣೆದಯೆದಾಕ್ಷಿಣ್ಯ ಪ್ರೀತಿಯಲ್ಲಿವೆಎಡೆಯಿಲ್ಲ ಅದರಲಿ ಗರ್ವಕೆಮರ್ಮಕೆಮೆರತಕೆಸಿಡುಕಿಗೆಸೊಕ್ಕಿಗೆಸ್ವಾರ್ಥಕೆಸೇಡುಗಳೆಣಿಕೆಗೆನಲಿಯದು ಪ್ರೀತಿ ಅನೀತಿಯಲಿನಲಿಯದಿರದದು ಸತ್ಯದಜಯದಲಿನಂಬುವುದೆಲ್ಲವನುನಿರೀಕ್ಷಿಸುವುದೆಲ್ಲವನುಸಹಿಸಿಕೊಳ್ಳುವುದು ಸಮಸ್ತವನು ಪ್ರೀತಿಯದೆಂದೂ ಅರಿಯದು ಸೋಲನುಅಳಿದುಹೋಗುವುವು ಭವಿಷ್ಯವಾಣಿಗತಿಸಿಹೋಗುವುದು ಬಹುಭಾಷಾ ಶಕ್ತಿ ಹೋಗುವುವು ನಶಿಸಿ ಜ್ಞಾನಬುದ್ಧಿಆದರೆ ಅಮರವಾದುದು ಪರಮ ಪ್ರೀತಿಅಪೂರ್ವವಾದುದು ನಮ್ಮಾಅರಿವೆಲ್ಲಪೂರ್ಣವಾದುದಲ್ಲ ಪ್ರವಾದನವದೆಲ್ಲಪರಿಪೂರ್ಣತೆ ಪ್ರಾಪ್ತವಾಗಲು ಇಲ್ಲವಾಗುವುದು ಅಪೂರ್ಣತೆಯೆಲ್ಲಬಾಲಕ ನಾನಾಗಿರೆ ಆಡಿದೆಮಾತಾಡಿದೆಚಿಂತಿಸಿದೆಸುಖದುಃಖಗಳ ಸವಿದೆ ಬಾಲಕನಂತೆಬಲಿತು ಬೆಳೆದು ಮನುಜನಾದುದೆ ಬಾಲಿಶವಾದುದೆಲ್ಲವನು ಬದಿಗೊತ್ತಿದೆನಾವೀಗ ಕಾಂಬುದು ದರ್ಪಣದ ಬಿಂಬವನು ಮಾಸುಕಾಗಿ ತರುವಾಯ ಕಾಂಬೆವು ದೇವರನು ಮುಖಾಮುಖಿಯಾಗಿಈಗಿರುವುದೆನ್ನ ಅರಿವು ತುಂಡುತುಂಡಾಗಿ ನಂತರ ದೇವನೆನ್ನ ಅರಿತಂತೆ  ಮೂರಲಿ ನಾನರಿವೆನು ಅಖಂಡವಾಗಿನಿಲ್ಲುವುವು ನಂಬಿಕೆನಿರೀಕ್ಷೆಪ್ರೀತಿ ನೆಲೆಯಾಗಿ ಮೂರಲಿ ಪ್ರೀತಿಯೇ ಪರಮೋನ್ನತವೆಂಬುದ ನೀನರಿ.

ಶುಭಸಂದೇಶಲೂಕ 4:21-30

ಆಗ ಯೇಸು, "ನೀವು  ಪವಿತ್ರ ವಾಕ್ಯವನ್ನು ಕೇಳುತ್ತಿದ್ದ ಹಾಗೆಯೇ ಅದು ಇಂದು ನೆರವೇರಿತು," ಎಂದು ವಿವರಿಸಲಾರಂಭಿಸಿದರುಎಲ್ಲರೂ ಅವರನ್ನು ಬಹುವಾಗಿ ಮೆಚ್ಚಿಕೊಂಡರುಅವರ ಬಾಯಿಂದ ಬಂದ ಮಧುರ ಮಾತುಗಳನ್ನು ಕೇಳಿ ಅಚ್ಚರಿಗೊಂಡರು. "ಇವನು ಜೋಸೆಫನ ಮಗನಲ್ಲವೆ?" ಎಂದು ಮಾತನಾಡಿಕೊಂಡರುಆನಂತರ ಯೇಸು ಅವರಿಗೆ, "ವೈದ್ಯನೇಮೊದಲು ನಿನ್ನನ್ನು ನೀನು ಗುಣಪಡಿಸಿಕೊ",  ಎಂಬ ಗಾದೆಯನ್ನು ನೀವು ನಿಸ್ಸಂದೇಹವಾಗಿ  ನನಗೆ ಅನ್ವಯಿಸುವಿರಿಅಲ್ಲದೆ, "ಕಫೆರ್ನವುಮಿನಲ್ಲಿ ನೀನು ಎಂತೆಥ ಮಹತ್ಕಾರ್ಯಗಳನ್ನು ಮಾಡಿದೆ ಎಂದು ನಾವು ಕೇಳಿದ್ದೇವೆಅಂಥವುಗಳನ್ನು  ನಿನ್ನ ಸ್ವಂತ ಊರಿನಲ್ಲೂ ಮಾಡು," ಎಂದೂ ಹೇಳುವಿರಿಆದರೆ ಯಾವ ಪ್ರವಾದಿಯು ಸ್ವಗ್ರಾಮದಲ್ಲಿ ಸನ್ಮಾನಿತನಲ್ಲ ಎಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆಹಿಂದೆ ನಡೆದ ಒಂದು ಸಂಗತಿಯನ್ನು ಕೇಳಿಎಲೀಯನ ಕಾಲದಲ್ಲಿ ಮೂರು ವರ್ಷ ಆರು ತಿಂಗಳು ಮಳೆ ಬಾರದೆ ದೇಶದಲ್ಲೆಲ್ಲಾ ದೊಡ್ಡ ಕ್ಷಾಮ ಬಂದೊದಗಿತುಆಗ ಇಸ್ರಯೇಲ್ ನಾಡಿನಲ್ಲಿ ಎಷ್ಟೋ ಮಂದಿ ವಿಧವೆಯರಿದ್ದರುಅವರಾರ ಬಳಿಗೂ ದೇವರು ಎಲೀಯನನ್ನು ಕಳಿಸಲಿಲ್ಲಸಿದೋನ್ ದೇಶಕ್ಕೆ ಸೇರಿದ ಸರೆಪ್ತ ಊರಿನ ಒಬ್ಬ ವಿಧವೆಯ ಬಳಿಗೆ ಮಾತ್ರ ಕಳಿಸಿದರುಅಂತೆಯೇಎಲೀಷನೆಂಬ ಪ್ರವಾದಿಯ ಕಾಲದಲ್ಲಿ ಇಸ್ರಯೇಲ್ ನಾಡಿನಲ್ಲಿ ಅನೇಕ ಕುಷ್ಟರೋಗಿಗಳು ಇದ್ದರುಅವರಲ್ಲಿ ಸಿರಿಯ ದೇಶದ ನಾಮನನು ಬಿಟ್ಟು ಮಿಕ್ಕ ಯಾರೂ ಗುಣಮುಖರಾಗಲಿಲ್ಲ," ಎಂದು ಹೇಳಿದರುಇದನ್ನು ಕೇಳಿಪ್ರಾರ್ಥನಾಮಂದಿರದಲ್ಲಿ ಇದ್ದ ಎಲ್ಲರೂ ಕಡುಗೋಪಗೊಂಡರುಯೇಸುವನ್ನು  ಊರ ಹೊರಕ್ಕೆ ಎಳೆದುಕೊಂಡುತಮ್ಮ ಊರಿದ್ದ ಗುಡ್ಡದ ತುದಿಗೆ ಕೊಂಡೊಯ್ದುಅಲ್ಲಿಂದ ಅವರನ್ನು ಕೆಳಕ್ಕೆ ದಬ್ಬಬೇಕೆಂದಿದ್ದರುಯೇಸುವಾದರೋಅವರ ನಡುವೆಯೇ ನಡೆದುತಮ್ಮ ದಾರಿ ಹಿಡಿದುಹೋದರು.

ಮನಸ್ಸಿಗೊಂದಿಷ್ಟು : ಕ್ರಿಸ್ತನ ಬೋಧನೆಯನ್ನು ಕೇಳಿ , ಮೆಚ್ಚಿಕೊಂಡಿದ್ದ ಸ್ವಗ್ರಾಮದ ಜನರು , ದೈವ ಅನುಗ್ರಹವು ಅನ್ಯ ಜನರಿಗೂ ದೊರಕುತ್ತದೆ ಎಂಬ ಕ್ರಿಸ್ತನ ಮಾತಿಗೆ ಸಿಟ್ಟಾಗುತ್ತಾರೆ. ಯೇಸುವಿನ ಕಠಿಣ ಮಾತುಗಳು ಅವರಿಗೆ ರುಚಿಸದೆ   ಹೋಗುತ್ತದೆ. ನಮ್ಮ ಬಾಳಿನ ಕಥೆಯೂ . ನಾವು ಮಾತ್ರ ಒಳ್ಳೆಯವರು, ದೇವರ ಅನುಗ್ರಹ ನಮ್ಮ ಮೇಲೆ  ಹೆಚ್ಚು ಎಂಬ ಭಾವನೆ , ಸಣ್ಣ ಅಹಂಕಾರದಲ್ಲೇ ನಾವು ಬದುಕಿರುತ್ತಿದ್ದೇವೆ.  ಇದರ ನಡುವೆ ನಮ್ಮ ಅಂತರಂಗವನ್ನು ಪರಿವರ್ತಿಸಬಲ್ಲ ದೇವರ ಕಠಿಣ ಮಾತುಗಳಿಗೂ ನಾವು ಕಿವಿಯಾಗಬೇಕಾದುದು ಅಗತ್ಯ, ಅನಿವಾರ್ಯ. 

ಪ್ರಶ್ನೆ : ದೇವರ ಎಚ್ಚರಿಕೆಯ ಮಾತುಗಳು ನಮ್ಮನ್ನು ತಲುಪವಷ್ಟು ನಮ್ಮ ಕಿವಿ, ಹೃದಯವನ್ನು ನಾವು ಮುಕ್ತವಾಗಿಸಿಕೊಂಡಿದ್ದೇವೆಯೇ ? 

29.01.21 - "ಏಕೆ ಇಷ್ಟು ಭಯ? ಇನ್ನೂ ನಿಮಗೆ ವಿಶ್ವಾಸವಿಲ್ಲವೇ?”

ಮೊದಲನೇಯ ವಾಚನ : 2 ಸಮುವೇಲ 12:1-7, 10-17


ಸರ್ವೇಶ್ವರ ಸ್ವಾಮಿ ನಾತಾನನನ್ನು ದಾವೀದನ ಬಳಿಗೆ ಕಳುಹಿಸಿದರು. ಅವನು ದಾವೀದನ ಬಳಿಗೆ ಬಂದು ಹೀಗೆಂದು ಹೇಳಿದನು "ಒಂದು ಊರಲ್ಲಿ ಇಬ್ಬರು ವ್ಯಕ್ತಿಗಳಿದ್ದರು. ಒಬ್ಬನು ಐಶ್ವರ್ಯವಂತ, ಇನ್ನೊಬ್ಬನು ಬಡವ. ಐಶ್ವರ್ಯವಂತನಿಗೆ ಬಹಳ ಕುರಿ ದನಗಳಿದ್ದವು. ಬಡವನಿಗೆ ಕುರಿಮರಿಯ ಹೊರತು ಬೇರೇನೂ ಇರಲಿಲ್ಲ. ಅದೂ ಕೊಂಡುತಂದದ್ದು. ಅದನ್ನು ಅಕ್ಕರೆಯಿಂದ ಸಾಕುತ್ತಿದ್ದ. ಅದು ದೊಡ್ಡದಾಗುವವರೆಗೂ ಮಗುವಿನಂತೆ ಬೆಳೆಯುತ್ತಿತ್ತು. ಅವರೊಡನೆ ರೊಟ್ಟಿ ತಿನ್ನುತ್ತಾ ಅವನ ಪಾತ್ರೆಯಲ್ಲಿ ನೀರು ಕುಡಿಯುತ್ತಾ ಇತ್ತು. ಅವನ ಎದೆಯ ಮೇಲೆ ಒರಗಿಕೊಂಡು ನಿದ್ರೆ ಮಾಡುತ್ತಿತ್ತು. ಒಂದು ದಿನ ಐಶ್ವರ್ಯವಂತನ ಮನೆಗೆ ಒಬ್ಬ ಪ್ರಯಾಣಿಕ ಬಂದ. ಆಗ ತನ್ನ ಕುರಿ ದನಗಳಿಂದ ಏನನ್ನೂ ಕೊಲ್ಲಲು ಐಶ್ವರ್ಯವಂತನಿಗೆ ಮನಸ್ಸಿಲ್ಲದೆ ಹೋಯಿತು. ಆ ಬಡವನ ಕುರಿಮರಿಯನ್ನು ಹಿಡಿದುಕೊಂಡು ಅತಿಥಿಗೋಸ್ಕರ ಅಡಿಗೆ ಮಾಡಿಸಿದ”. ಇದನ್ನು ಕೇಳಿದ್ದೇ ದಾವೀದನು ಆ ವ್ಯಕ್ತಿಯ ಮೇಲೆ ಕಡು ಕೋಪಗೊಂಡು ನಾತಾನನಿಗೆ “ಸರ್ವೇಶ್ವರನಾಣೆ ಆ ವ್ಯಕ್ತಿ ಸಾಯಲೇಬೇಕು, ಅವನು ಕರುಣೆಯಿಲ್ಲದೆ ಹೀಗೆ ಮಾಡಿದ್ದರಿಂದ ಆ ಕುರಿಮರಿಗಾಗಿ ನಾಲ್ಕರಷ್ಟು ಹಿಂದಕ್ಕೆ ಕೊಡಲೇಬೇಕು” ಎಂದನು.
ಆಗ ನಾತಾನನು ದಾವೀದನನ್ನು ದಿಟ್ಟಿಸಿ, “ ಆ ಮನುಷ್ಯ ನೀನೇ. ಇಸ್ರಯೇಲರ ದೇವರಾದ ಸರ್ವೇಶ್ವರ ನಿನಗೆ ಹೇಳುವುದು ಇದು: ’ನಿನ್ನನ್ನು ಅಭಿಷೇಕಿಸಿ ಇಸ್ರಯೇಲರ ಅರಸನನ್ನಾಗಿ ಮಾಡಿದವನೂ ನಾನು: ಸೌಲನಕೈಗೆ ಸಿಕ್ಕದಂತೆ ತಪ್ಪಿಸಿದವನು ನಾನೇ. ನೀನು ನನ್ನ ಆಜ್ಞೆಯನ್ನು ತಿರಸ್ಕರಿಸಿದೆ; ಹಾಗೂ ಹಿತ್ತಿಯನಾದ ಊರೀಯನನ್ನು ಅಮ್ಮೋನಿಯರ ಕತ್ತಿಯಿಂದ ಕೊಲ್ಲಿಸಿ ಅವನ ಹೆಂಡತಿಯರನ್ನು ನಿನ್ನ ಹೆಂಡತಿಯಾಗಿ ತೆಗೆದುಕೊಂಡೆ. ಆದ್ದರಿಂದ ಕತ್ತಿ ನಿನ್ನ ಮನೆಯನ್ನು ಬಿಟ್ಟು ತೊಲಗುವುದಿಲ್ಲ ಸರ್ವೇಶ್ವರನಾದ ನನ್ನ ಮಾತನ್ನು ಕೇಳು: ನಿನ್ನ ಮನೆಯವರಿಂದಲೇ ನಿನಗೆ ಕೇಡು ಉಂಟಾಗುವಂತೆ ಮಾಡುವೆನು, ನಿನ್ನ ಹೆಂಡತಿಯರನ್ನು ನಿನ್ನೆದುರಿನಲ್ಲೇ ಮತ್ತೊಬ್ಬನಿಗೆ ಕೊಡುವೆನು. ಅವನು ಹಗಲಲ್ಲೇ ಅವರ ಕೂಡ ಮಲಗುವನು. ನೀನು ಅದನ್ನು ಗುಪ್ತವಾಗಿ ಮಾಡಿದೆ, ನಾನು ಹೇಳುವ ಮಾತಾದರೂ ಇಸ್ರಯೇಲರ ಮುಂದೆ ಬಹಿರಂಗವಾಗಿ ನೆರವೇರುವುದು,” ಎಂದು ಹೇಳಿದನು. ಆಗ ದಾವೀದನು ನಾತಾನನಿಗೆ “ನಾನು ಸರ್ವೇಶ್ವರನಿಗೆ ವಿರುದ್ಧ ಪಾಪ ಮಾಡಿದ್ದೇನೆ,” ಎಂದು ಹೇಳಿದನು. ನಾತಾನನು ಅವನಿಗೆ “ಸರ್ವೇಶ್ವರ ನಿನ್ನ ಪಾಪವನ್ನು ಕ್ಷಮಿಸಿದ್ದಾರೆ; ನೀನು ಸಾಯುವುದಿಲ್ಲ, ಆದರೂ ನೀನು ಈ ಕೃತ್ಯದಿಂದ ಸರ್ವೇಶ್ವರನ ವೈರಿಗಳು ಅವರನ್ನು ಬಹಳವಾಗಿ ನಿಂದಿಸುವುದಕ್ಕೆ ಆಸ್ಪದ ಕೊಟ್ಟೆ. ಆದುದರಿಂದ ನಿನ್ನಿಂದ ಹುಟ್ಟಲಿರುವ ಮಗು ಸತ್ತು ಹೋಗುವುದು,” ಎಂದು ಹೇಳಿ ಮನೆಗೆ ಹೊರಟು ಹೋದನು. ಊರೀಯನ ಹೆಂಡತಿಯಲ್ಲಿ ಹುಟ್ಟಿದ ಮಗು ಸರ್ವೇಶ್ವರನ ಶಿಕ್ಷೆಯಿಂದ ಬಹು ಅಸ್ವಸ್ಥವಾಗಿತ್ತು. ಆದುದರಿಂದ ದಾವೀದನು ಮಗುವಿಗಾಗಿ ದೇವರನ್ನು ಪ್ರಾರ್ಥಿಸುತ್ತಾ, ಉಪವಾಸ ಮಾಡುತ್ತಾ ಒಳಕೋಣೆಯಲ್ಲಿ ನೆಲದ ಮೇಲೆಯೇ ಬಿದ್ದುಕೊಂಡು ರಾತ್ರಿ ಕಳೆಯುತ್ತಿದ್ದ. ಆಸ್ಥಾನದ ಅಧಿಕಾರಿಗಳು ಅವನನ್ನು ಎಬ್ಬಿಸುವುದಕ್ಕೆ ಹೋದರು. ಆದರೆ ಅವನು ಏಳಲೂ ಇಲ್ಲ, ಅವರೊಡನೆ ಆಹಾರ ತೆಗೆದುಕೊಳ್ಳಲೂ ಇಲ್ಲ.

ಕೀರ್ತನೆ : 51:12-13,14-15,16-17
ಶ್ಲೋಕ : ಶುದ್ಧ ಹೃದಯವನ್ನು ದೇವಾ, ನಿರ್ಮಿಸು

ಶುಭಸಂದೇಶ : ಮಾರ್ಕ - 4:35-41

 ದಿನ ಸಾಯಂಕಾಲ ಯೇಸುಸ್ವಾಮಿ ತಮ್ಮ ಶಿಷ್ಯರಿಗೆ “ಸರೋವರದ ಆಚೆ ದಡಕ್ಕೆ ಹೋಗೋಣ” ಎಂದರು. ಆಗ ಶಿಷ್ಯರು ಜನರ ಗುಂಪನ್ನು ಬಿಟ್ಟು ದೋಣಿಯಲ್ಲಿ ಕುಳಿತಿದ್ದ ಯೇಸುವನ್ನು ಹಾಗೆಯೇ ತಮ್ಮ ಜೊತೆಯಲ್ಲಿ ಕರೆದುಕೊಂಡು ಹೊರಟರು. ಆ ದೋಣಿಯ  ಸಂಗಡ ಬೇರೆ ದೋಣಿಗಳೂ ಇದ್ದವುಸ್ವಲ್ಪ ಮುಂದೆ ಹೋಗುವಷ್ಟರಲ್ಲಿ ಬಿರುಗಾಳಿ ಎದ್ದಿತು. ಅಲೆಗಳು ದೋಣಿಗೆ ಅಪ್ಪಳಿಸತೊಡಗಿದವು. ದೋಣಿಯೊಳಗೆ ನೀರು ನುಗ್ಗಿ ಅದು ತುಂಬಿ ಹೋಗುವುದರಲ್ಲಿತ್ತು. ಯೇಸುವಾದರೋ  ದೋಣಿಯ ಹಿಂಭಾಗದಲ್ಲಿ ದಿಂಬನ್ನು ಒರಗಿ ನಿದ್ದೆ ಮಾಡುತ್ತಿದ್ದರು. ಶಿಷ್ಯರು ಅವರನ್ನು ಎಬ್ಬಿಸಿ’ ಗುರುವೇನಾವು ಸಾಯುತ್ತಿದ್ದೇವೆತಮಗೆ ಚಿಂತೆ ಇಲ್ಲವೇ?” ಎಂದರು. ಆಗ ಯೇಸು ಎಚ್ಚೆತ್ತುಬಿರುಗಾಳಿಯನ್ನು ಗದರಿಸಿದರುಸರೋವರಕ್ಕೆ  ಶಾಂತವಾಗಿರುಮೊರೆಯಬೇಡ,” ಎಂದು ಆಜ್ಞಾಪಿಸಿದರುತಕ್ಷಣ ಬಿರುಗಾಳಿ ನಿಂತಿತುವಾತಾವರಣ ಶಾಂತವಾಯಿತುಅನಂತರ ತಮ್ಮ ಶಿಷ್ಯರಿಗೆ  ಏಕೆ ಇಷ್ಟು ಭಯಇನ್ನೂ ನಿಮಗೆ ವಿಶ್ವಾಸವಿಲ್ಲವೇ?” ಎಂದರುಶಿಷ್ಯರಾದರೋ ಭಯಭ್ರಾಂತರಾಗಿ ಗಾಳಿಯೂ ಸರೋವರವೂ ಇವರು ಹೇಳಿದಂತೆ ಕೇಳಬೇಕಾದರೆ ಇವರು ಯಾರಿರಬಹುದು?” ಎಂದು ತಮ್ಮತಮ್ಮೊಳಗೆ ಮಾತಾಡಿಕೊಂಡರು.

28.01.22 - “ದೇವರ ಸಾಮ್ರಾಜ್ಯವನ್ನು ಯಾವುದಕ್ಕೆ ಹೋಲಿಸೋಣ?"

ಮೊದಲನೇಯ ವಾಚನ : 2 ಸಮುವೇಲ 11:1-4, 5-10, 13-17

ರಾಜರು ಸಾಮಾನ್ಯವಾಗಿ ಯುದ್ಧಕ್ಕೆ ಹೊರಡುವ ವಸಂತಕಾಲ ಅದು. ದಾವೀದನು ಯೋವಾಬನನ್ನು, ತನ್ನ ಸೇವಕರನ್ನು ಹಾಗೂ ಎಲ್ಲ ಇಸ್ರಯೇಲರನ್ನು ಯುದ್ಧಕ್ಕೆ ಕಳುಹಿಸಿದನು. ಇವರು ಹೋಗಿ ಅಮ್ಮೋನಿಯರ ಪ್ರಾಂತ್ಯಗಳನ್ನು ಹಾಳು ಮಾಡಿ ರಬ್ಬಕ್ಕೆ ಮುತ್ತಿಗೆ ಹಾಕಿದರು. ದಾವೀದನು ಜೆರುಸಲೇಮಿನಲ್ಲೇ ಇದ್ದನು. ಒಂದು ದಿನ ಸಂಜೆ ಹೊತ್ತಿನಲ್ಲಿ ದಾವೀದನು ಮಂಚದಿಂದೆದ್ದು ಅರಮನೆಯ ಮಾಳಿಗೆಯ ಮೇಲೆ ತಿರುಗಾಡುತ್ತಿದ್ದನು. ಆಗ ಅಲ್ಲಿಂದ ಸುಂದರಿಯಾದ ಒಬ್ಬ ಸ್ತ್ರೀ ಸ್ನಾನ ಮಾಡುವುದನ್ನು ಕಂಡನು. ಕೂಡಲೇ ದಾವೀದನು ಒಬ್ಬನನ್ನು ಕರೆದು ಆ ಸ್ತ್ರೀ ಯಾರೆಂದು ಕೇಳಿದನು. ಅವನು ಆಕೆ “ ಎಲೀಯಾಮನ ಮಗಳೂ ಹಿತ್ತಿಯನಾದ ಉರೀಯನ ಹೆಂಡತಿಯು ಆದ ಬತ್ಷೆಬೆ,” ಎಂದು ಉತ್ತರಕೊಟ್ಟನು. ಆಕೆ ಆಗತಾನೆ ಋತು ಸ್ನಾನ ಮಾಡಿ ಕೊಂಡಿದ್ದಳು. ಆಕೆಯನ್ನು ಕರೆದು ತರುವಂತೆ ದಾವೀದನು ದೂತರನ್ನು ಕಳುಹಿಸಿದನು. ಆಕೆ ಬಂದಳು. ದಾವೀದನು ಆಕೆಯನ್ನು ಕೂಡಿದನು. ಆನಂತರ ಆಕೆ ತನ್ನ ಮನೆಗೆ ಹೋದಳು. ಮುಂದೆ ತಾನು ಗರ್ಭಧರಿಸಿದ್ದು ಗೊತ್ತಾದಾಗ ಆಕೆ ದಾವೀದನಿಗೆ ಸಮಾಚಾರ ಕಳುಹಿಸಿದಳು. ಒಡನೆ ದಾವೀದನು ದೂತರ ಮುಖಾಂತರ ಯೋವಾಬನಿಗೆ “ ಹಿತ್ತೀಯನಾದ ಊರೀಯನನ್ನು ನನ್ನ ಬಳಿಗೆ ಕಳುಹಿಸು” ಎಂದು ಆಜ್ಞಾಪಿಸಿದನು. ಅವನು ಅಂತೆಯೇ ಮಾಡಿದನು. ಊರೀಯನು ಬಂದಾಗ ’ಯೋವಾಬನು, ಸೈನ್ಯದವರು ಹೇಗಿರುತ್ತಾರೆ? ಯುದ್ಧವು ಹೇಗೆ ನಡೆಯುತ್ತಿದೆ” ಎಂದು ವಿಚಾರಿಸಿದನು. ಅನಂತರ ಅವನಿಗೆ “ನೀನು ಮನೆಗೆ ಹೋಗಿ ಕೈಕಾಲು ತೊಳೆದುಕೋ,” ಎಂದು ಹೇಳಿದನು. ಊರೀಯನು ಅರಮನೆಯಿಂದ ಹೊರಟ ಕೂಡಲೇ ಅವನ ಹಿಂದೆಯೇ ಅರಸನ ಭೋಜನ ಪದಾರ್ಥಗಳೂ ಹೋದವು. ಆದರೆ ಊರೀಯನು ಮನೆಗೆ ಹೋಗದೆ ಅರಸರ ಸೇವಕರೊಡನೆ ಅರಮನೆಯ ಬಾಗಿಲಲ್ಲೇ ಮಲಗಿಕೊಂಡನು. ಊರೀಯನು ತನ್ನ ಮನೆಗೆ ಹೋಗಲಿಲ್ಲ ಎಂಬ ವರ್ತಮಾನ ದಾವೀದನಿಗೆ ಮುಟ್ಟಿತು. ಆಗ ದಾವೀದನು ಊರೀಯನಿಗೆ, “ನೀನು ದೀರ್ಘ ಪ್ರಯಾಣ ಮಾಡಿ ಬಂದಿರುವೆಯಲ್ಲ , ಏಕೆ ಮನೆಗೆ ಹೋಗಲಿಲ್ಲ”? ಎಂದನು. ಮರುದಿನ ದಾವೀದನು ಅವನನ್ನು ಅನ್ನಪಾನ ತೆಗೆದುಕೊಳ್ಳಬೇಕೆಂದು ತನ್ನ ಮನೆಗೆ ಕರೆದುಕೊಂಡು ಹೋಗಿ ಕುಡಿಸಿ ಮತ್ತನನ್ನಾಗಿ ಮಾಡಿದನು. ಆದರೆ ಆ ರಾತ್ರಿಯೂ ಅವನು ಹೋಗಿ ತನ್ನ ಯಜಮಾನನ ಸೇವಕರ ಹತ್ತಿರ ಹಾಸಿಗೆ ಹಾಸಿ ಮಲಗಿಕೊಂಡನೆ ಹೊರತು ತನ್ನ ಮನೆಗೆ ಹೋಗಲಿಲ್ಲ. ಮರುದಿನ ಬೆಳಿಗ್ಗೆ ದಾವೀದನು ಯೋವಾಬನಿಗೆ ಒಂದು ಪತ್ರ ಬರೆದು ಅದನ್ನು ಊರೀಯನ ಕೈಯಲ್ಲಿ ಕೊಟ್ಟೂ ಕಳುಹಿಸಿದನು. ಅದರಲ್ಲಿ ಹೀಗೆ ಬರೆಯಲಾಗಿತ್ತು “ ಊರೀಯನು ಗಾಯಗೊಂಡು ಸಾಯುವಂತೆ ಅವನನ್ನು ಘೋರ ಯುದ್ಧ ನಡೆಯುತ್ತಿರುವ ಕಡೆ, ಮುಂಭಾಗದಲ್ಲಿ ನಿಲ್ಲಿಸಿ ನೀವು ಹಿಂದಕ್ಕೆ ಸರಿದುಕೊಳ್ಳಿ.” ಯೋವಾಬನು ಪಟ್ಟಣಕ್ಕೆ ಮುತ್ತಿಗೆ ಹಾಕುವಾಗ ಶತ್ರು ಸೈನಿಕರು ಎಲ್ಲಿ ಪ್ರಬಲರಾಗಿರುತ್ತಾರೆಂದು ಗೊತ್ತು ಮಾಡಿಕೊಂಡು ಊರೀಯನನ್ನು ಅಲ್ಲಿಗೆ ಕಳುಹಿಸಿದನು. ಆ ಊರಿನ ಜನರು ಹೊರಗೆ ಬಂದು ಯೋವಾಬನ ಸೈನ್ಯದೊಡನೆ ಹೋರಾಡಿದರು. ದಾವೀದನ ಸೇವಕರಲ್ಲಿ ಕೆಲವರು ಸತ್ತರು. ಹಿತ್ತಿಯನಾದ ಊರೀಯನೂ ಮಡಿದನು.

ಶುಭಸಂದೇಶ : ಮಾರ್ಕ 4:26-34


ಯೇಸು ಸ್ವಾಮಿ ಉಪದೇಶವನ್ನು ಮುಂದುವರಿಸಿ, “ದೇವರ ಸಾಮ್ರಾಜ್ಯವನ್ನು ಯಾವುದಕ್ಕೆ ಹೋಲಿಸೋಣ? ಅದಕ್ಕಾಗಿ ಯಾವ ಸಾಮತಿಯನ್ನು ಉಪಯೋಗಿಸೋಣ? ಭೂಮಿಯಲ್ಲಿರುವ ಕಾಳುಗಳಲ್ಲಿ ಅತಿ ಚಿಕ್ಕದಾಗಿರುವ ಸಾಸಿವೆ ಕಾಳಿಗೂ ಅದನ್ನು ಹೋಲಿಸಬಹುದು. ಸಾಸಿವೆ ಕಾಳು ಚಿಕ್ಕದಾಗಿದ್ದರೂ ಬಿತ್ತನೆಯ ತರುವಾಯ ಮೊಳೆತು ಎಲ್ಲಾ ಕಾಯಿಪಲ್ಯದ ಸಸಿಗಳಿಗಿಂತಲೂ ದೊಡ್ಡದಾಗಿ ಬೆಳೆಯುತ್ತದೆ. ಹಕ್ಕಿಗಳು ಬಂದು ಅದರ ನೆರಳಿನಲ್ಲಿ ಗೂಡುಕಟ್ಟಿ ವಾಸಿಸುವಷ್ಟು ದೊಡ್ಡದಾದ ರಂಬೆಗಳನ್ನು ಅದು ತಳೆಯುತ್ತದೆ,” ಎಂದರು. ಯೇಸುಸ್ವಾಮಿ ಈ ಬಗೆಯ ಸಾಮತಿಗಳನ್ನು ಉಪಯೋಗಿಸಿ ಜನರಿಗೆ ದೇವರ ಸಂದೇಶವನ್ನು ಅವರವರ ತಿಳುವಳಿಕೆಗೆ ತಕ್ಕಂತೆ ಉಪದೇಶಿಸುತ್ತಿದ್ದರು. ಸಾಮತಿಗಳನ್ನು ಉಪಯೋಗಿಸದೆ ಅವರು ಬೋಧಿಸುತ್ತಿರಲಿಲ್ಲ. ಅದರೆ ತಮ್ಮ ಆಪ್ತ ಶಿಷ್ಯರೊಡನೆ ಪ್ರತ್ಯೇಕವಾಗಿದ್ದಾಗ ಅವರಿಗೆ ಎಲ್ಲವನ್ನು ವಿವರಿಸಿ ಹೇಳುತ್ತಿದ್ದರು.

27.01.22 - "ಬೆಳಕಿಗೆ ಬಾರದ ಮುಚ್ಚು ಮರೆಯಿಲ್ಲ, ರಟ್ಟಾಗದ ಗುಟ್ಟಿಲ್ಲ"

ಮೊದಲನೇಯ ವಾಚನ : 2 ಸಮುವೇಲ 7:18-19, 24-29

ಬಳಿಕ ದಾವೀದನು ಸರ್ವೇಶ್ವರನ ಸನ್ನಿಧಿಗೆ ಹೋಗಿ ಅಲ್ಲಿ ಕುಳಿತುಕೊಂಡು, “ಹೇ ಸರ್ವೇಶ್ವರಾ, ಸರ್ವೇಶ್ವರಾ, ತಾವು ನನ್ನನ್ನು ಇಷ್ಟು ಮುಂದಕ್ಕೆ ತರಲು ನಾನೆಷ್ಟರವನು! ನನ್ನ ಕುಟುಂಬ ಎಷ್ಟರದು! ಸರ್ವೇಶ್ವರಾ, ಸರ್ವೇಶ್ವರಾ, ಇದೂ ಸಾಲದೆಂದೆಣಿಸಿ, ನಿಮ್ಮ ದಾಸನ ಬಹು ಮುಂದಿನ ಸಂತಾನದ ವಿಷಯದಲ್ಲೂ ತಾವು ವಾಗ್ದಾನ ಮಾಡಿರುವಿರಿ. ಸರ್ವೇಶ್ವರಾ, ಸರ್ವೇಶ್ವರಾ, ತಾವು ಹೀಗೆ ವರ್ತಿಸುವುದು ನರಮಾನವರಿಗೆ ಎಂಥಾ ಭಾಗ್ಯ! ಇಸ್ರಯೇಲರು ಸದಾಕಾಲ ನಿಮ್ಮ ಪ್ರಜೆಗಳಾಗಿರಬೇಕೆಂದು ನಿರ್ಣಯಿಸಿದಿರಿ; ಸರ್ವೇಶ್ವರಾ, ತಾವಾದಿರಿ ಅವರಿಗೆ ದೇವರು! “ದೇವರೇ, ಸರ್ವೇಶ್ವರಾ, ತಾವು ತಮ್ಮ ದಾಸನನ್ನೂ ಅವನ ಕುಟುಂಬವನ್ನೂ ಕುರಿತು ಮಾಡಿದ ವಾಗ್ದಾನವನ್ನು ನೆರವೇರಿಸಿರಿ. ಅದು ಸದಾ ಸ್ಥಿರವಾಗಿರಲಿ. ‘ಸರ್ವಶಕ್ತರಾದ ಸರ್ವೇಶ್ವರ, ಇಸ್ರಯೇಲರ ದೇವರು,’ ಎಂಬ ತಮ್ಮ ನಾಮಧೇಯಗಳಿಗೆ ಸದಾಕಾಲವೂ ಮಹಿಮೆ ಉಂಟಾಗಲಿ! ತಮ್ಮ ದಾಸ ದಾವೀದನ ಮನೆತನವು ನಿಮ್ಮ ಸನ್ನಿಧಿಯಲ್ಲಿ ಸ್ಥಿರವಾಗಿರಲಿ. ಸರ್ವಶಕ್ತರಾದ ಸರ್ವೇಶ್ವರಾ, ಇಸ್ರಯೇಲ್ ದೇವರೇ, ತಾವು ತಮ್ಮ ದಾಸನಿಗೆ, ‘ನಾನು ನಿನಗೊಂದು ಮನೆತನವನ್ನು ಕಟ್ಟುವೆನು’ ಎಂದು ವಾಗ್ದಾನ ಮಾಡಿದ್ದೀರಿ. ಆದುದರಿಂದಲೇ ಈ ಪ್ರಕಾರ ನಿಮ್ಮನ್ನು ಪ್ರಾರ್ಥಿಸುವುದಕ್ಕೆ ಧೈರ್ಯಗೊಂಡೆ. ಸರ್ವೇಶ್ವರಾ, ಸರ್ವೇಶ್ವರಾ, ನೀವು ನಮ್ಮ ದೇವರು; ನಿಮ್ಮ ವಾಕ್ಯ ಸತ್ಯವಾದದ್ದು; ತಮ್ಮ ದಾಸನಾದ ನನಗೆ ಇಂಥ ಶ್ರೇಷ್ಟ ವಾಗ್ದಾನ ಮಾಡಿದ್ದೀರಿ. ನಿಮ್ಮ ದಾಸನ ಮನೆತನವನ್ನು ಆಶೀರ್ವದಿಸಿರಿ; ಸದಾಕಾಲ ನಿಮ್ಮ ಅನುಗ್ರಹ ಅದರ ಮೇಲಿರಲಿ. ಸರ್ವೇಶ್ವರಾ, ಸರ್ವೇಶ್ವರಾ, ವಾಗ್ದಾನ ಮಾಡಿದವರು ತಾವೇ. ತಮ್ಮ ಆಶೀರ್ವಾದದಿಂದ ತಮ್ಮ ದಾಸನಾದ ನನ್ನ ಮನೆತನದಲ್ಲಿ ನಿತ್ಯ ಸೌಭಾಗ್ಯ ನೆಲಸಿರಲಿ!” ಎಂದನು.

ಕೀರ್ತನೆ: 132:1-2, 3-5, 11, 12, 13-14
ಶ್ಲೋಕ : ದಾವೀದರಸನ ಸಿಂಹಾಸನವನ್ನು ದೇವರು ಆತನಿಗೆ ಕೊಡುವರು

ಶುಭಸಂದೇಶ: ಮಾರ್ಕ 4:21-25


ಯೇಸುಸ್ವಾಮಿ ತಮ್ಮ ಬೋಧನೆಯನ್ನು ಮುಂದುವರಿಸುತ್ತಾ, “ಯಾರಾದರೂ ಉರಿಯುವ ದೀಪವನ್ನು ತಂದು ಬಟ್ಟಲ ಒಳಗಾಗಲಿ, ಮಂಚದ ಕೆಳಗಾಗಲಿ ಇಡುವುದುಂಟೇ? ನಿಶ್ಚಯವಾಗಿಯೂ ಇಲ್ಲ. ಅದನ್ನು ದೀಪಸ್ತಂಭದ ಮೇಲೆ ಇಡುತ್ತಾರೆ. ಬೆಳಕಿಗೆ ಬಾರದ ಮುಚ್ಚು ಮರೆಯಿಲ್ಲ, ರಟ್ಟಾಗದ ಗುಟ್ಟಿಲ್ಲ. ಕೇಳುವುದಕ್ಕೆ ಕಿವಿಯುಳ್ಳವನು ಕೇಳಿಸಿಕೊಳ್ಳಲಿ. “ನೀವು ಕೇಳುವುದನ್ನು ಎಚ್ಚರಿಕೆಯಿಂದ ಗಮನಿಸಿರಿ; ಇತರರಿಗೆ ನೀವು ಕೊಟ್ಟ ಅಳತೆಯಲ್ಲೇ ದೇವರು ನಿಮಗೂ ಅಳೆದು ಕೊಡುವರು; ಇನ್ನೂ ಅಧಿಕವಾಗಿ ಕೊಡುವರು. ಉಳ್ಳವನಿಗೆ ಇನ್ನೂ ಹೆಚ್ಚಾಗಿ ಕೊಡಲಾಗುತ್ತದೆ. ಇಲ್ಲದವನಿಂದ ಇರುವ ಕಿಂಚಿತ್ತನ್ನೂ ಕಸಿದುಕೊಳ್ಳಲಾಗುತ್ತದೆ,” ಎಂದರು.

26.01.22 - “ಬೆಳೆಯೇನೋ ಹೇರಳವಾಗಿದೆ; ಕೊಯ್ಲುಗಾರರೊ ವಿರಳ. ಆದುದರಿಂದ ಕೊಯ್ಲಿಗೆ ಆಳುಗಳನ್ನು ಕಳುಹಿಸುವಂತೆ ಬೆಳೆಯ ಯಜಮಾನನನ್ನು ಬೇಡಿಕೊಳ್ಳಿ"

ಮೊದಲನೇ ವಾಚನ: 2 ತಿಮೊಥೇಯನಿಗೆ 1:1-8


ನನ್ನ ಪ್ರೀತಿಯ ಪುತ್ರ ತಿಮೊಥೇಯನಿಗೆ ಪೌಲನು ಬರೆಯುವ ಪತ್ರ. ಕ್ರಿಸ್ತಯೇಸುವಿನಲ್ಲಿರುವವರಿಗೆ ಲಭಿಸುವ ಅಮರ ಜೀವದ ವಾಗ್ದಾನವನ್ನು ಸಾರಲು ದೈವಚಿತ್ತಾನುಸಾರ ಪ್ರೇಷಿತನಾದ ನಾನು ತಿಳಿಸುವುದೇನೆಂದರೆ: ಪಿತನಾಗಿರುವ ದೇವರೂ ಒಡೆಯರಾದ ಕ್ರಿಸ್ತಯೇಸುವೂ ನಿನಗೆ ಕೃಪೆಯನ್ನೂ ಕರುಣೆಯನ್ನೂ ಶಾಂತಿಯನ್ನೂ ಅನುಗ್ರಹಿಸಲಿ! ನಾನು ಹಗಲಿರುಳೂ ನನ್ನ ಪ್ರಾರ್ಥನೆಯಲ್ಲಿ ತಪ್ಪದೆ ನಿನ್ನನ್ನು ಸ್ಮರಿಸಿಕೊಳ್ಳುತ್ತೇನೆ. ನನ್ನ ಪೂರ್ವಿಕರ ಹಾಗೆ ಶುದ್ಧಮನಸ್ಸಾಕ್ಷಿಯಿಂದ ನನ್ನ ಆರಾಧ್ಯ ದೇವರಿಗೆ ನಿನ್ನ ವಿಷಯವಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಅಂದು ನೀನು ಸುರಿಸಿದ ಕಣ್ಣೀರನ್ನು ನಾನು ಇನ್ನೂ ಮರೆತಿಲ್ಲ. ನಿನ್ನನ್ನು ಪುನಃ ನೋಡಿ ಆನಂದ ಪಡಬೇಕೆಂದು ಹಂಬಲಿಸುತ್ತಿದ್ದೇನೆ. ನಿನ್ನ ದೃಢವಿಶ್ವಾಸವು ನನ್ನ ನೆನಪಿನಲ್ಲಿದೆ. ನಿನ್ನ ಅಜ್ಜಿ ಲೋವಿಯಳಲ್ಲೂ ತಾಯಿ ಯೂನಿಸಳಲ್ಲೂ ನೆಲೆಗೊಂಡಿದ್ದ ವಿಶ್ವಾಸ ಈಗ ನಿನ್ನಲ್ಲೂ ಪೂರ್ಣವಾಗಿ ನೆಲೆಗೊಂಡಿದೆಯೆಂದು ನಾನು ನಂಬಿದ್ದೇನೆ. ನಾನು ನಿನ್ನ ಮೇಲೆ ಹಸ್ತ ನಿಕ್ಷೇಪಮಾಡಿ ಪ್ರಾರ್ಥಿಸಿದಾಗ ನೀನು ಪಡೆದಂಥ ವರದಾನವನ್ನು ಪುನಃ ಪ್ರಜ್ವಲಿಸುವಂತೆ ಮಾಡಬೇಕೆಂದು ನಿನಗೆ ಜ್ಞಾಫಿಸುತ್ತೇನೆ. ದೇವರು ನಮಗೆ ಪ್ರದಾನಮಾಡಿರುವ ಪವಿತ್ರಾತ್ಮ ನಮ್ಮನ್ನು ಹೇಡಿಗಳನ್ನಾಗಿ ಮಾಡುವುದಿಲ್ಲ; ನಮ್ಮಲ್ಲಿ ದೈವೀಶಕ್ತಿ, ಪ್ರೀತಿ ಹಾಗೂ ಸಂಯಮಗಳು ಪ್ರವರ್ಧಿಸುವಂತೆ ಮಾಡುತ್ತಾರೆ. ಆದ್ದರಿಂದ ಕ್ರಿಸ್ತಯೇಸುವಿಗೆ ಸಾಕ್ಷಿ ಆಗಿರಲು ನಾಚಬೇಡ. ಅವರಿಗಾಗಿ ಬಂಧಿಯಾಗಿರುವ ನನ್ನ ವಿಷಯದಲ್ಲೂ ನಾಚಬೇಡ. ದೇವರ ಶಕ್ತಿಯನ್ನು ಆಶ್ರಯಿಸಿ ನನ್ನೊಡನೆ ಶುಭಸಂದೇಶಕ್ಕೋಸ್ಕರ ನಿನ್ನ ಪಾಲಿನ ಶ್ರಮವನ್ನು ಅನುಭವಿಸು.

ಕೀರ್ತನೆ: 96: 1-3, 7-8, 10. v .3

ಶ್ಲೋಕ: ಪ್ರಸಿದ್ಧಪಡಿಸಿರಿ ಆತನ ಘನತೆಯನ್ನು ರಾಷ್ಟ್ರಗಳಿಗೆ, ಆತನದ್ಭುತಾಕಾರ್ಯಗಳನು ಸಕಲ ಜನಾಂಗಗಳಿಗೆ 

ಶುಭಸಂದೇಶ: ಲೂಕ 10: 1- 9


ಆ ಕಾಲದಲ್ಲಿ ಯೇಸುಸ್ವಾಮಿ ಇನ್ನೂ ಎಪ್ಪತ್ತೆರಡು ಮಂದಿಯನ್ನು ನೇಮಿಸಿ ಅವರನ್ನು ಇಬ್ಬಿಬ್ಬರನ್ನಾಗಿ ತಾವೇ ಹೋಗಲಿದ್ದ ಊರುಗಳಿಗೂ ಸ್ಥಳಗಳಿಗೂ ಮುಂದಾಗಿ ಕಳಿಸಿದರು. ಕಳುಹಿಸುವಾಗ ಅವರಿಗೆ ಹೇಳಿದ್ದೇನೆಂದರೆ, “ಬೆಳೆಯೇನೋ ಹೇರಳವಾಗಿದೆ; ಕೊಯ್ಲುಗಾರರೊ ವಿರಳ. ಆದುದರಿಂದ ಕೊಯ್ಲಿಗೆ ಆಳುಗಳನ್ನು ಕಳುಹಿಸುವಂತೆ ಬೆಳೆಯ ಯಜಮಾನನನ್ನು ಬೇಡಿಕೊಳ್ಳಿ. ಹೋಗಿರಿ, ತೋಳಗಳ ನಡುವೆ ಕುರಿಮರಿಗಳನ್ನು ಬಿಟ್ಟಂತೆ ನಾನು ನಿಮ್ಮನ್ನು ಕಳುಹಿಸುತ್ತೇನೆ. ಹಣದ ಚೀಲವನ್ನಾಗಲಿ, ಜೋಳಿಗೆಯನ್ನಾಗಲಿ, ಪಾದರಕ್ಷೆಗಳನ್ನಾಗಲಿ ತೆಗೆದುಕೊಂಡು ಹೋಗದಿರಿ. ದಾರಿಯಲ್ಲಿ ಯಾರಿಗೂ ವಂದನೋಪಚಾರಗಳನ್ನು ಮಾಡಿಕೊಂಡಿರಬೇಡಿ. ನೀವು ಯಾವ ಮನೆಗೆ ಹೋದರೂ, ‘ಈ ಮನೆಗೆ ಶಾಂತಿ,’ ಎಂದು ಆಶೀರ್ವಾದ ಮಾಡಿ, ಶಾಂತಿಪ್ರಿಯನು ಅಲ್ಲಿದ್ದರೆ ನಿಮ್ಮ ಆಶೀರ್ವಾದವು ಅವನ ಮೇಲೆ ನೆಲೆಸುವುದು. ಇಲ್ಲವಾದರೆ, ಅದು ನಿಮಗೆ ಹಿಂದಿರುಗುವುದು. ಮನೆಯಿಂದ ಮನೆಗೆ ಹೋಗದೆ ಆ ಮನೆಯಲ್ಲೇ ತಂಗಿದ್ದು, ಅಲ್ಲಿಯವರು ಕೊಡುವ ಅನ್ನಪಾನೀಯಗಳನ್ನು ಸೇವಿಸಿರಿ. ದುಡಿಮೆಗಾರನು ಕೂಲಿಗೆ ಬಾಧ್ಯನು. “ನೀವು ಯಾವ ಊರಿಗೆ ಹೋದರೂ ಜನರು ನಿಮ್ಮನ್ನು ಸ್ವಾಗತಿಸಿದಾಗ, ಅವರು ಬಡಿಸಿದ್ದನ್ನು ಭುಜಿಸಿರಿ. ಅಲ್ಲಿರುವ ರೋಗಿಗಳನ್ನು ಗುಣಪಡಿಸಿರಿ. ‘ದೇವರ ಸಾಮ್ರಾಜ್ಯ ನಿಮ್ಮನ್ನು ಸಮೀಪಿಸಿದೆ,’ ಎಂದು ತಿಳಿಸಿರಿ.

25.01.22 - "ನೀವು ವಿಶ್ವದ ಎಲ್ಲೆಡೆಗಳಿಗೂ ಹೋಗಿ, ಜಗತ್ತಿಗೆಲ್ಲಾ ಶುಭಸಂದೇಶವನ್ನು ಪ್ರಬೋಧಿಸಿರಿ"

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 22:3-16

ಪೌಲನು ಜನರುನ್ನುದ್ದೇಶಿಸಿ ಹೀಗೆಂದನು: “ನಾನೊಬ್ಬ ಯೆಹೂದ್ಯನು, ಸಿಲಿಸಿಯದ ತಾರ್ಸ ಎಂಬಲ್ಲಿ ಹುಟ್ಟಿದವನು. ಆದರೆ, ಇದೇ ಜೆರುಸಲೇಮಿನಲ್ಲಿ ಬೆಳೆದವನು. ಗಮಲಿಯೇಲನ ಪಾದಸನ್ನಿಧಿಯಲ್ಲಿ ನಮ್ಮ ಪೂರ್ವಜರ ಧರ್ಮಶಾಸ್ತ್ರವನ್ನು ಕಟ್ಟುನಿಟ್ಟಾಗಿ ಕಲಿತವನು. ಇಲ್ಲಿ ಇಂದು ನೆರೆದಿರುವ ನೀವೆಲ್ಲರೂ ದೈವಾಭಿಮಾನಿಗಳಾಗಿರುವಂತೆಯೇ ನಾನು ದೈವಾಭಿಮಾನಿಯಾಗಿದ್ದೆ. ಕ್ರಿಸ್ತ ಮಾರ್ಗವನ್ನು ಅನುಸರಿಸುವವರನ್ನು, ಸ್ತ್ರೀ ಪುರುಷರೆನ್ನದೆ ಬಂಧಿಸಿ, ಅವರನ್ನು ಸೆರೆಮನೆಗೆ ತಳ್ಳಿದೆ. ಅವರನ್ನು ಮರಣ ಪರಿಯಂತರ ಪೀಡಿಸಿ ಹಿಂಸಿಸಿದೆ. ಇದಕ್ಕೆ ಪ್ರಧಾನ ಯಾಜಕರು ಮತ್ತು ಪ್ರಮುಖರ ಇಡೀ ಸಭೆಯೇ ಸಾಕ್ಷಿ. ನಾನು ಅವರಿಂದಲೇ ದಮಸ್ಕಸಿನಲ್ಲಿರುವ ಯೆಹೂದ್ಯ ಬಾಂಧವರಿಗೆ ಪತ್ರಗಳನ್ನು ಪಡೆದು, ಆ ಪಟ್ಟಣಕ್ಕೆ ಹೊರಟೆ. ಅಲ್ಲಿಂದ ಕ್ರೈಸ್ತರನ್ನು ಬಂಧಿಸಿ, ಜೆರುಸಲೇಮಿಗೆ ತಂದು ಶಿಕ್ಷಿಸಬೇಕೆಂಬುದೇ ನನ್ನ ಉದ್ದೇಶವಾಗಿತ್ತು. “ಹೀಗೆ ಪ್ರಯಾಣ ಮಾಡುತ್ತಾ ದಮಸ್ಕಸನ್ನು ಸವಿೂಪಿಸಿದೆ. ಆಗ ಸುಮಾರು ನಡು ಮಧ್ಯಾಹ್ನ. ಇದ್ದಕ್ಕಿದ್ದಂತೆ ಆಕಾಶದಿಂದ ಮಹಾ ಬೆಳಕೊಂದು ನನ್ನ ಸುತ್ತಲೂ ಮಿಂಚಿತು. ನಾನು ನೆಲಕ್ಕುರುಳಿದೆ. ಆಗ ‘ಸೌಲನೇ, ಸೌಲನೇ, ನನ್ನನ್ನೇಕೆ ಹಿಂಸಿಸುತ್ತಿರುವೆ?’ ಎಂಬ ವಾಣಿ ಕೇಳಿಸಿತು. ನಾನು ‘ಪ್ರಭೂ, ನೀವಾರು?’ ಎಂದು ಕೇಳಿದೆ. ‘ನೀನು ಹಿಂಸೆಪಡಿಸುತ್ತಿರುವ ನಜರೇತಿನ ಯೇಸುವೇ ನಾನು,’ ಎಂದರು ಅವರು. ನನ್ನೊಡನೆ ಇದ್ದವರಿಗೆ ಬೆಳಕೇನೋ ಕಾಣಿಸಿತು, ಆದರೆ ನನ್ನೊಡನೆ ಮಾತಾಡುತ್ತಿದ್ದ ವಾಣಿ ಅವರಿಗೆ ಕೇಳಿಸಲಿಲ್ಲ. ‘ನಾನೇನು ಮಾಡಬೇಕು ಪ್ರಭೂ?’ ಎಂದು ಕೇಳಿದೆ. ಅದಕ್ಕೆ ಪ್ರಭು, ‘ಏಳು, ದಮಸ್ಕಸಿಗೆ ಹೋಗು, ನೀನು ಏನು ಮಾಡಬೇಕೆಂದು ನಿಶ್ಚಯಿಸಲಾಗಿದೆಯೋ ಅದೆಲ್ಲವನ್ನೂ ನಿನಗೆ ತಿಳಿಸಲಾಗುವುದು,’ ಎಂದು ಹೇಳಿದರು. ಬೆಳಕಿನ ಪ್ರಕಾಶದ ನಿಮಿತ್ತ ನಾನು ದೃಷ್ಟಿಹೀನನಾದೆ. ಜೊತೆಯಲ್ಲಿದ್ದವರು ನನ್ನನ್ನು ದಮಸ್ಕಸಿಗೆ ಕೈ ಹಿಡಿದು ನಡೆಸಿಕೊಂಡು ಹೋದರು. “ದಮಸ್ಕಸಿನಲ್ಲಿ ಅನನೀಯ ಎಂಬ ಒಬ್ಬ ವ್ಯಕ್ತಿ ಇದ್ದನು. ಅವನು ಧರ್ಮಶಾಸ್ತ್ರಕ್ಕೆ ಪ್ರಾಮಾಣಿಕನಾಗಿ ಬಾಳಿದವನು. ಆ ಊರಿನ ಸಮಸ್ತ ಯೆಹೂದ್ಯರಿಂದ ಸನ್ಮಾನಿತನು. ಅವನು ಬಂದು ನನ್ನ ಬಳಿ ನಿಂತು, ‘ಸಹೋದರ ಸೌಲನೇ, ದೃಷ್ಟಿಯನ್ನು ಪಡೆ,’ ಎಂದನು. ಆ ಕ್ಷಣವೇ ನಾನು ದೃಷ್ಟಿ ಪಡೆದು ಅವನನ್ನು ನೋಡಿದೆ. ಆಗ ಅವನು, ‘ನಮ್ಮ ಪೂರ್ವಜರ ದೇವರು ತಮ್ಮ ಚಿತ್ತವನ್ನು ನೀನು ಅರಿಯಬೇಕೆಂದು, ತಮ್ಮ ಸತ್ಯ ಸ್ವರೂಪಿಯನ್ನು ನೀನು ನೋಡಬೇಕೆಂದು, ತಮ್ಮ ಕಂಠಸ್ವರವನ್ನು ನೀನು ಕೇಳಬೇಕೆಂದು ನಿನ್ನನ್ನು ಆರಿಸಿಕೊಂಡಿದ್ದಾರೆ. ನೀನು ಕಂಡು ಕೇಳಿದ ವಿಷಯಗಳಿಗೆ ನೀನೇ ಎಲ್ಲ ಜನರಿಗೆ ಅವರ ಪರವಾಗಿ ಸಾಕ್ಷಿಯಾಗಬೇಕು. ಇನ್ನು ತಡಮಾಡುವುದೇಕೆ? ಏಳು, ಅವರ ನಾಮವನ್ನು ಜಪಿಸಿ, ದೀಕ್ಷಾಸ್ನಾನವನ್ನು ಪಡೆದು ನಿನ್ನ ಪಾಪಗಳನ್ನು ತೊಳೆದುಕೊ,’ ಎಂದನು.

ಕೀರ್ತನೆ: 117:1-2
ಶ್ಲೋಕ: ನೀವು ವಿಶ್ವದ ಎಲ್ಲೆಡೆಗಳಿಗೂ ಹೋಗಿ, ಜಗತ್ತಿಗೆಲ್ಲಾ ಶುಭಸಂದೇಶ ಪ್ರಬೋಧಿಸಿರಿ.

ಸ್ತುತಿ ಮಾಡಿ ಪ್ರಭುವನು ಸಮಸ್ತ ರಾಷ್ಟ್ರಗಳೆ |
ಆತನನು ಹೊಗಲಿ ಹಾಡಿ ಸರ್ವಜನಾಂಗಗಳೇ||

ನಮ್ಮ ಮೇಲೆ ಆತನಿಗಿರುವ ಪ್ರೀತಿ ಅಚಲ|
ಆತನ ಸತ್ಯಪರತೆ ಇರುವುದು ಅನಂತ ಕಾಲ||

ಅಲ್ಲೆಲೂಯ, ಅಲ್ಲೆಲೂಯ!

ನೀವು ನನ್ನನ್ನು ಆರಿಸಿಕೊಳ್ಳಲಿಲ್ಲ ನಾನೇ ನಿಮ್ಮನ್ನು ಆರಿಸಿಕೊಂಡಿದ್ದೇನೆ | ನೀವು ಲೋಕಕ್ಕೆ ಹೋಗಬೇಕು ಸಫಲರಾಗಬೇಕು; ಆ ಫಲ ಶಾಶ್ವತವಾಗಿರಬೇಕೆಂದೇ ನಿಮ್ಮನ್ನು ನೇಮಿಸಿದ್ದೇನೆ ||
ಅಲ್ಲೆಲೂಯ!

ಶುಭಸಂದೇಶ: ಮಾರ್ಕ 16:15-18


ಯೇಸು ತಮ್ಮ ಶಿಷ್ಯರಿಗೆ ಹೀಗೆಂದರು: ‘ನೀವು ವಿಶ್ವದ ಎಲ್ಲೆಡೆಗಳಿಗೂ ಹೋಗಿ, ಜಗತ್ತಿಗೆಲ್ಲಾ ಶುಭಸಂದೇಶವನ್ನು ಪ್ರಬೋಧಿಸಿರಿ. ವಿಶ್ವಾಸವಿಟ್ಟು ದೀಕ್ಷಾಸ್ನಾನ ಪಡೆಯುವವನು ಜೀವೋದ್ಧಾರ ಹೊಂದುವನು. ವಿಶ್ವಾಸಿಸದೆ ಇರುವವನು ಖಂಡನೆಗೆ ಗುರಿಯಾಗುವನು. ವಿಶ್ವಾಸಿಸುವುದರಿಂದ ಈ ಅದ್ಭುತ ಕಾರ್ಯಗಳು ಆಗುವುವು. ಅವರು ನನ್ನ ಹೆಸರಿನಲ್ಲಿ ದೆವ್ವಗಳನ್ನು ಬಿಡಿಸುವರು; ಹೊಸ ಭಾಷೆಗಳಲ್ಲಿ ಮಾತಾಡುವರು; ಕೈಗಳಿಂದ ಸರ್ಪಗಳನ್ನು ಎತ್ತಿದರೂ ವಿಷ ಪದಾರ್ಥಗಳನ್ನೇನಾದರೂ ಕುಡಿದರೂ ಯಾವ ಹಾನಿಯೂ ಅವರಿಗಾಗದು. ಅವರು ರೋಗಿಗಳ ಮೇಲೆ ಕೈ ಇಟ್ಟರೆ ರೋಗಿಗಳು ಗುಣ ಹೊಂದುವರು.”

24.01.22 - "ಪವಿತ್ರಾತ್ಮ ಅವರನ್ನು ದೂಷಿಸುವವನಿಗೆ ಮಾತ್ರ ಕ್ಷಮೆ ದೊರಕದು"

ಮೊದಲನೇ ವಾಚನ: 2 ಸಮುವೇಲ 5:1-7, 10
ನಂತರ ಇಸ್ರಯೇಲರ ಎಲ್ಲ ಕುಲಗಳವರು ಹೆಬ್ರೋನಿನಲ್ಲಿದ್ದ ದಾವೀದನ ಬಳಿಗೆ ಬಂದರು. “ನಾವು ನಿಮ್ಮ ರಕ್ತಸಂಬಂಧಿಗಳು; ಹಿಂದಿನ ದಿವಸಗಳಲ್ಲಿ, ಅಂದರೆ ಸೌಲನ ಆಳ್ವಿಕೆಯಲ್ಲಿ, ಇಸ್ರಯೇಲರ ದಳಪತಿಯಾಗಿ ಹೋಗುತ್ತಾ ಬರುತ್ತಾ ಇದ್ದವರು ನೀವೇ. ನಿಮ್ಮನ್ನು ಕುರಿತು ಸರ್ವೇಶ್ವರಸ್ವಾಮಿ, ‘ನೀನು ನನ್ನ ಪ್ರಜೆಗಳಾದ ಇಸ್ರಯೇಲರ ನಾಯಕನೂ ಪಾಲಕನೂ ಆಗಿರುವೆ,’ ಎಂದು ವಾಗ್ದಾನಮಾಡಿದ್ದಾರೆ,” ಎಂದರು. ಹೆಬ್ರೋನಿನಲ್ಲಿದ್ದ ಅರಸ ದಾವೀದನು ತನ್ನ ಬಳಿಗೆ ಬಂದಿದ್ದ ಇಸ್ರಯೇಲರ ಹಿರಿಯರೊಡನೆ ಅಲ್ಲೇ ಸರ್ವೇಶ್ವರನ ಸನ್ನಿಧಿಯಲ್ಲಿ ಒಪ್ಪಂದಮಾಡಿಕೊಂಡನು. ಅವರು ದಾವೀದನನ್ನು ಅಭಿಷೇಕಿಸಿ ಇಸ್ರಯೇಲರ ಅರಸನನ್ನಾಗಿ ಮಾಡಿದರು. ದಾವೀದನು ಮೂವತ್ತು ವರ್ಷದವನಾಗಿದ್ದಾಗ ಅರಸನಾಗಿ ನಾಲ್ವತ್ತು ವರ್ಷ ಆಳಿದನು. ಅವನು ಹೆಬ್ರೋನಿನಲ್ಲಿದ್ದುಕೊಂಡು ಯೆಹೂದ ಕುಲ ಒಂದನ್ನೇ ಆಳಿದ್ದು ಏಳು ವರ್ಷ ಆರು ತಿಂಗಳು; ಜೆರುಸಲೇಮಿನಲ್ಲಿದ್ದುಕೊಂಡು ಯೆಹೂದ್ಯರನ್ನು ಹಾಗು ಇಸ್ರಯೇಲರನ್ನು ಆಳಿದ್ದು ಮೂವತ್ತ ಮೂರು ವರ್ಷ. ದಾವೀದನು ತನ್ನ ಜನರನ್ನು ಕರೆದುಕೊಂಡು ಜೆರುಸಲೇಮಿನ ಮೇಲೆ ದಾಳಿ ಮಾಡಲು ಹೊರಟನು. ನಾಡಿನ ಮೂಲನಿವಾಸಿಗಳಾದ ಯೆಬೂಸಿಯರು ಅಲ್ಲಿದ್ದರು. ಅವರು ದಾವೀದನು ಒಳಿಗೆ ಬರಲಾರನೆಂದು ನೆನೆಸಿ ಅವನಿಗೆ, “ನೀನು ಒಳಗೆ ಬರಕೂಡದು; ಬಂದರೆ ಕುರುಡರು, ಕುಂಟರು ಇವರೇ ನಿನ್ನನ್ನು ಅಟ್ಟಿಬಿಡುವರು,” ಎಂದು ಹೇಳಿದರು. ಆದರೂ ಅವನು, ಈಗ ‘ದಾವೀದ ನಗರ’ ಎನಿಸಿಕೊಳ್ಳುವ ಸಿಯೋನ್ ಕೋಟೆಯನ್ನು ಸ್ವಾಧೀನಪಡಿಸಿಕೊಂಡನು. ಸೇನಾಧೀಶ್ವರ ಹಾಗು ಸರ್ವೇಶ್ವರರಾದ ದೇವರು ಅವನೊಂದಿಗೆ ಇದ್ದರು. ಆದ್ದರಿಂದ ಅವನು ಅಭಿವೃದ್ದಿ ಹೊಂದುತ್ತಾ ಬಂದನು.

ಕೀರ್ತನೆ: 89:20, 21-22, 25-26

ಶ್ಲೋಕ: ನನ್ನ ಪ್ರೀತಿ ಸತ್ಯತೆಗಳು ಇರುವುವು ಅವನೊಂದಿಗೆ.

ಶುಭಸಂದೇಶ: ಮಾರ್ಕ 3:22-30

ಜೆರುಸಲೇಮಿನಿಂದ ಬಂದಿದ್ದ ಧರ್ಮಶಾಸ್ತ್ರಿಗಳು, “ಇವನನ್ನು ಬೆಲ್ಜೆಬೂಲನು ಹಿಡಿದಿದ್ದಾನೆ; ದೆವ್ವಗಳ ಒಡೆಯನ ಶಕ್ತಿಯಿಂದಲೇ ಇವನು ದೆವ್ವಬಿಡಿಸುತ್ತಾನೆ,” ಎನ್ನುತ್ತಿದ್ದರು. ಆಗ ಯೇಸು ಅವರನ್ನು ತಮ್ಮ ಹತ್ತಿರಕ್ಕೆ ಕರೆದು ಸಾಮತಿಗಳ ಮೂಲಕ ಮಾತನಾಡತೊಡಗಿದರು: “ಸೈತಾನನು ಸೈತಾನನನ್ನು ಹೊರದೂಡುವುದು ಹೇಗೆ ತಾನೇ ಸಾಧ್ಯ? ಒಂದು ರಾಜ್ಯದ ಪ್ರಜೆಗಳು ತಮ್ಮತಮ್ಮೊಳಗೆ ಕಚ್ಚಾಡುವುದಾದರೆ ಆ ರಾಜ್ಯ ಉಳಿಯದು. ಒಂದು ಕುಟುಂಬದ ಸದಸ್ಯರು ತಮ್ಮ ತಮ್ಮೊಳಗೆ ಕಚ್ಚಾಡುವುದಾದರೆ ಆ ಕುಟುಂಬ ಬಾಳದು. ಅದರಂತೆಯೇ ಸೈತಾನನ ಪಕ್ಷದವರು ಪರಸ್ಪರ ವಿರೋಧಿಗಳಾದರೆ ಅವನ ರಾಜ್ಯ ಉಳಿಯದು; ಅದು ಅಳಿದು ಹೋಗುವುದು. ಒಬ್ಬನು ಬಲಿಷ್ಠನ ಮನೆಯನ್ನು ನುಗ್ಗಿ ಅವನನ್ನು ಕಟ್ಟಿಹಾಕದೆ ಅವನ ಸೊತ್ತನ್ನು ಸೂರೆಮಾಡಲಾಗದು. ಮೊದಲು ಅವನನ್ನು ಕಟ್ಟಬೇಕು. ಬಳಿಕ ಅವನ ಮನೆಯನ್ನು ಕೊಳ್ಳೆಹೊಡಯಬೇಕು. ನಿಶ್ಚಯವಾಗಿ ನಿಮಗೆ ಹೇಳುತ್ತೇನೆ; ಮನುಷ್ಯರು ಮಾಡುವ ಎಲ್ಲಾ ಪಾಪಗಳಿಗೂ ಆಡುವ ಎಲ್ಲಾ ದೇವದೂಷಣೆಗಳಿಗೂ ಕ್ಷಮೆ ದೊರಕಬಹುದು. ಆದರೆ ಪವಿತ್ರಾತ್ಮ ಅವರನ್ನು ದೂಷಿಸುವವನಿಗೆ ಮಾತ್ರ ಕ್ಷಮೆ ದೊರಕದು. ಅಂಥವನ ಪಾಪ ಶಾಶ್ವತವಾದುದು,” ಎಂದರು. (ದೆವ್ವ ಹಿಡಿದಿದೆ ಎಂದು ತಮ್ಮನ್ನು ಕೆಲವರು ನಿಂದಿಸುತ್ತಿದ್ದುದರಿಂದ ಯೇಸು ಹೀಗೆ ಹೇಳಿದರು).

23.01.22 - "ಗೌಣವೆಂದೆಣಿಸಲಾಗುವ ಅಂಗಗಳಿಗೂ ವಿಶೇಷ ಘನತೆಯನ್ನು ಇತ್ತಿದ್ದಾರೆ"

 ಮೊದಲನೇ ವಾಚನ: ನೆಹೆಮೀಯ 8:2-4, 5-6, 8-10

ಯಾಜಕ ಎಜ್ರನು, ಗ್ರಹಿಸಿಕೊಳ್ಳಲು ಶಕ್ತರಾದ ಸ್ತ್ರೀ ಪುರುಷರು ನೆರೆದಿದ್ದಸಮೂಹದವರ ಮುಂದೆ, ಏಳನೆಯ ತಿಂಗಳಿನ ಪ್ರಥಮ ದಿನದಲ್ಲಿ, ಆ ಧರ್ಮಶಾಸ್ತ್ರವನ್ನು ತಂದು ಬೆಳಗಿನಿಂದ ಮಧ್ಯಾಹ್ನದವರೆಗೂ ಓದಿದನು. ಆ ನೀರುಬಾಗಿಲಿನ ಮಂದಣ ಬಯಲಿನಲ್ಲಿ ಕೂಡಿಬಂದಿದ್ದ ಸ್ತ್ರೀಷುರುಷರಲ್ಲಿ ಗ್ರಹಿಸಲು  ಶಕ್ತರಾದವರೆಲ್ಲರೂ ಧರ್ಮಶಾಸ್ತ್ರ ಪಾರಾಯಣವನ್ನು ಆಲಿಸುತ್ತಿದ್ದರು. ಧರ್ಮೋಪದೇಶಕ ಎಜ್ರನು ಪಾರಾಯಣಕ್ಕಾಗಿ ಮಾಡಲಾಗಿದ್ದ ಮರದ ಪೀಠದ ಮೇಲೆ ನಿಂತನು. ಅವನ ಬಲಗಡೆಯಲ್ಲಿ ಮತ್ತಿತ್ಯ, ಶೆಮ, ಅನಾಯ, ಊರೀಯ, ಹಿಲ್ಕೀಯ, ಮಾಸೇಯ, ಎಂಬುವರು ಇದ್ದರು. ಎಡಗಡೆಯಲ್ಲಿ ಪೆದಾಯ, ಮೀಷಾಯೇಲ್, ಮಲ್ಕೀಯ, ಹಾಷುಮ್,  ಹಷ್ಬದ್ದಾನ, ಜೆಕರ್ಯ, ಮೆಷುಲ್ಲಾಮ್ ಎಂಬುವರು ನಿಂತಿದ್ದರು. ಜನ ಸಮುಮೂಹಕಿಂತಲೂ ಎತ್ತರವಾದ ಸ್ಥಳದಲ್ಲಿ ನಿಂತಿದ್ದ ಎಜ್ರನು ಜನರ ಸಮಕ್ಷಮದಲ್ಲಿ ಗ್ರಂಥವನ್ನು ತೆರೆದ ಕೂಡಲೆ, ಎಲ್ಲರು ಎದ್ದುನಿಂತರು. ಎಜ್ರನು  ಪರಾತ್ಪರ ದೇವರಾದ ಸರ್ವೇಶ್ವರನನ್ನು ಸ್ತುತಿಸಿದಾಗ ಸರ್ವಜನರೂ ತಮ್ಮ ಕೈಗಳನ್ನೆತ್ತಿ "ಆಮೆನ್, ಆಮೆನ್" ಎಂದು ಹೇಳಿ ನೆಲದ ಮಟ್ಟಿಗೂ ತಲೆಬಾಗಿ ಸರ್ವೇಶ್ವರನನ್ನು ಆರಾಧಿಸಿದರು. ಜನರು ಎದ್ದುನಿಂತನಂತರ ಅವರು ದೇವರ ಧರ್ಮಶಾಸ್ತ್ರವನ್ನು ಸ್ಪಷ್ಟವಾಗಿ ಓದುತ್ತಾಅದರ ತಾತ್ಪರ್ಯವನ್ನು ವಿವರಿಸಿದರು. ಜನರು ಚೆನ್ನಾಗಿ ಗ್ರಹಿಸಿಕೊಂಡರು. ಜನರೆಲ್ಲರು ಧರ್ಮೋಪದೇಶ ವಾಕ್ಯಗಳನ್ನು ಕೇಳುತ್ತಾ ಕಣ್ಣೀರಿಡುತ್ತಿದ್ದರು. ರಾಜ್ಯಪಾಲ ನೆಹೆಮೀಯನು, ಧರ್ಮೋಪದೇಶ ಮಾಡುವ ಮೂಲಕ ಯಾಜಕ ಎಜ್ರನು ಹಾಗು ಜನರನ್ನು ಸಂಭೋಧಿಸುತ್ತಿದ್ದ ಲೇವಿಯರು ಜನರಿಗೆ, "ಈ ದಿನ ನಿಮ್ಮ ದೇವರಾದ ಸರ್ವೇಶ್ವರನಿಗೆ ಪರಿಶುದ್ಧ ದಿನ! ಆದುದರಿಂದ ನೀವು ದುಃಖಿಸುತ್ತಾ ಅಳುತ್ತಾ ಇರಬೇಡಿ. " ಎಂದು ಹೇಳಿದರು.ಇದಲ್ಲದೆ, ಎಜ್ರನು ಅವರಿಗೆ , "ಹೋಗಿ ಮೃಷ್ಟಾನ್ನವನ್ನೂ ಮಧುರಪಾನವನ್ನೂ ತೆಗೆದುಕೊಳ್ಳಿ ತಮಗಾಗಿ ಏನೂ ಸಿದ್ದಮಾಡದವರಿಗೆ ಒಂದು ಪಾಲನ್ನು ಕಳುಹಿಸಿರಿ. ಈ ದಿನ ನಮ್ಮ  ಸರ್ವೇಶ್ವರನಿಗೆ ಪ್ರತಿಷ್ಠಿತದಿನ! ವ್ಯಸನಪಡಬೇಡಿ; ಸರ್ವೇಶ್ವರನ ಆನಂದವೇ ನಿಮ್ಮ ಅಶ್ರಯವಾಗಿದೆ," ಎಂದನು.

ಕೀರ್ತನೆ:19:8, 9, 10, 15
ಶ್ಲೋಕ: ಪ್ರಭೂ, ನೀವು ಹೇಳಿರುವ ಮಾತುಗಳೇ ಆತ್ಮ ಮತ್ತು ಜೀವ

ಎರಡನೇ ವಾಚನ: 1 ಕೊರಿಂಥಿಯರಿಗೆ 12:12-30

ದೇಹವು ಒಂದೇ; ಅಂಗಗಳು ಹಲವು. ಆ ಅಂಗಗಳು ಅನೇಕವಿದ್ದರೂ ಅವು ಸೇರಿ ಒಂದೇ ದೇಹವಾಗುತ್ತದೆ. ಅಂತೆಯೇ ಕ್ರಿಸ್ತಯೇಸು, ಯೆಹೂದ್ಯರಾಗಿರಲಿ, ಗ್ರೀಕರಾಗಿರಲಿ, ಪರತಂತ್ರರಾಗಿರಲಿ, ಸ್ವತಂತ್ರರಾಗಿರಲಿ ನಾವೆಲ್ಲರೂ ಒಂದೇ ದೇಹವಾಗುವಂತೆ ಒಂದೇ ಅತ್ಮದಿಂದ ದೀಕ್ಷಸ್ನಾನ ಹೊಂದಿದ್ದೇವೆ. ಒಂದೇ ಆತ್ಮವನ್ನು ನಮ್ಮೆಲ್ಲರಿಗೂ ಪಾನವಾಗಿ ಕೊಡಲಾಗಿದೆ. ದೇಹವು ಏಕ ಅಂಗದಿಂದ ಅಲ್ಲ, ಅನೇಕ ಅಂಗಗಳಿಂದ ಕೂಡಿದೆ. ಎಂದಾದರೂ ಕಾಲು, "ನಾನು ಕೈ ಅಲ್ಲ, ಈ ಕಾರಣ ನಾನು ದೇಹಕ್ಕೆ ಸೇರಿಲ್ಲ," ಎಂದು ಹೇಳಿದ್ದಾದರೆ ಅದು ದೇಹದ ಅಂಗವಾಗಿರುವುದು ತಪ್ಪೀತೆ? ಅಥವಾ ಕಿವಿ, "ನಾನು ಕಣ್ಣಲ್ಲ, ಈ ಕಾರಣ ನಾನು ದೇಹಕ್ಕೆ ಸೇರಿಲ್ಲ," ಎಂದು ಹೇಳಿದ್ದಾದರೆಅದು ದೇಹದ ಅಂಗವಾಗಿರುವುದು ತಪ್ಪಿತೆ? ದೇಹವಿಡೀ ಕಣ್ಣೇ ಆದರೆಅದು ಕೇಳುವ ಬಗ್ಗೆ ಹೇಗೆ? ಅಥವಾ ಅದುಇಡೀ ಕಿವಿಯೇ ಆದರೆ, ಮೂಸಲು ಮೂಗು ಎಲ್ಲಿ? ಸದ್ಯ, ದೇವರು ತಮ್ಮ ಚಿತ್ತಾನುಸಾರ, ಪ್ರತಿಯೊಂದು ಅಂಗವನ್ನು ಸರಿಯಾಗಿ ಜೋಡಿಸಿದ್ದಾರೆ. ಅವೆಲ್ಲವೂ ಒಂದೇ ಅಂಗವಾಗಿದ್ದರೆ ಆಗ ದೇಹವೆಲ್ಲಿ? ಹೀಗೆ ಅಂಗಗಳು ಅನೇಕವಾಗಿದ್ದರೂ ದೇಹ ಮಾತ್ರ ಏಕ. ಹೀಗಿರಲಾಗಿ, "ನಿನ್ನ ಅವಶ್ಯಕತೆ ನನಗಿಲ್ಲ," ಎಂದು ಕೈಗೆ, ಕಣ್ಣು ಹೇಳಲಾಗದು; ಅಂತೆಯೇ, "ನಿನ್ನ ಅವಶ್ಯಕತೆ ನನಗಿಲ್ಲ," ಎಂದು ಕಾಲುಗಳಿಗೆ, ತಲೆ ಹೇಳಲಾಗದು. ಅಷ್ಟು ಮಾತ್ರವಲ್ಲ, ಬಲಹೀನವಾಗಿ ತೋರುವ ಅಂಗಗಳೂ ನಮಗೆ ಬೇಕೇಬೇಕು. ಅಲ್ಪವೆಂದೆಣಿಸುವ ಅಂಗಗಳನ್ನು ಅಧಿಕವಾಗಿ ಮಾನ್ಯಮಾಡುತ್ತೇವೆ. ಗೋಪ್ಯವಾಗಿಡತಕ್ಕವುಗಳನ್ನು ಶೀಲದಿಂದ ಸಂರಕ್ಷಿಸುತ್ತೇವೆ. ಬಾಹ್ಯ ಅಂಗಗಳಿಗೆ ಇಂಥ ಸಂರಕ್ಷಣೆ ಅಗತ್ಯವಿರುವುದಿಲ್ಲ. ದೇಹವನ್ನು ನಿರ್ಮಿಸಿದ ದೇವರು ಗೌಣವೆಂದೆಣಿಸಲಾಗುವ ಅಂಗಗಳಿಗೂ ವಿಶೇಷ ಘನತೆಯನ್ನು ಇತ್ತಿದ್ದಾರೆ. ದೇಹದಲ್ಲಿ ಭಿನ್ನಭೇದವಿಲ್ಲದೆ ಅಂಗಗಳು ಒಂದಕ್ಕೊಂದರ ಹಿತವನ್ನು ಗಮನಿಸುವಂತೆ ಮಾಡಿದ್ದಾರೆ. ಒಂದು ಅಂಗಕ್ಕೆ ನೋವಾದರೆ, ಎಲ್ಲಾ ಅಂಗಗಳೂ ಅದರೊಂದಿಗೆ ನೋವನ್ನು ಅನುಭವಿಸುತ್ತವೆ. ಒಂದು ಅಂಗಕ್ಕೆ ನಲಿವಾದರೆ, ಮಿಕ್ಕೆಲ್ಲಾ ಅಂಗಗಳು ಅದರೊಡನೆ ಸೇರಿ ನಲಿದಾಡುತ್ತವೆ. ನೀವೆಲ್ಲರೂ ಕ್ರಿಸ್ತಯೇಸುವಿನ ದೇಹ ಆಗಿದ್ದೀರಿ; ಪ್ರತಿಯೊಬ್ಬನೂ ಈ ದೇಹದ ಅಂಗವಾಗಿದ್ದಾನೆ. ದೇವರು ತಮ್ಮ ಸಭೆಯಲ್ಲಿ, ಮೊದಲನೆಯದಾಗಿ ಪ್ರೇಷಿತರನ್ನು, ಎರಡನೆಯದಾಗಿ ಪ್ರವಾದಿಗಳನ್ನು, ಮೂರನೆಯದಾಗಿ ಭೋಧಕರನ್ನು ನೇಮಿಸಿದ್ದಾರೆ. ಅನಂತರ ಪವಾಡಗಳನ್ನು ಎಸಗುವವರನ್ನು ರೋಗಗಳನ್ನು ಗುಣಪಡಿಸುವವರನ್ನು, ಪರೋಪಕಾರಿಗಳನ್ನು, ಪರಿಪಾಲಕರನ್ನು, ಬಹುಭಾಷಾ ಪಂಡಿತರನ್ನು ನೇಮಿಸಿದ್ದಾರೆ. ಎಲ್ಲರೂ ಪ್ರೇಷಿತರಲ್ಲ, ಎಲ್ಲರೂ ಪ್ರವಾದಿಗಳಲ್ಲ, ಎಲ್ಲರೂ ಭೋಧಕರಲ್ಲ, ಎಲ್ಲರೂ ಪವಾಡಪುರುಷರಲ್ಲ, ಎಲ್ಲರೂ ರೋಗಗಳನ್ನು ಗುಣಪಡಿಸುವವರಲ್ಲ, ಎಲ್ಲರೂ ಪರೋಪಕಾರಿಗಳಲ್ಲ, ಎಲ್ಲರೂ ಪರಪಾಲಕರಲ್ಲ, ಎಲ್ಲರೂ ಬಹುಭಾಷಾಪಂಡಿತರಲ್ಲ, ಅಥಾವಾ ಎಲ್ಲರೂ ಆ ಭಾಷೆಗಳನ್ನು ವಿವರಿಸಿ ಹೇಳುವವರಲ್ಲ.

ಶುಭಸಂದೇಶ: ಲೂಕ 1:1-4; 4:14-21

ನ್ಮಾನ್ಯ ಥೆಯೊಫಿಲನೇ, ನಮ್ಮ ಮದ್ಯೆ ನೆರವೇರಿರುವ ಘಟನೆಗಳ ವರದಿಯನ್ನು ಬರೆದಿಡಲು ಹಲವರು ಪ್ರಯತ್ನಿಸಿದ್ದಾರೆ. ಪ್ರಾರಂಭದಿಂದ ಕಣ್ಣಾರೆ ಕಂಡು ಶುಭಸಂದೇಶವನ್ನು ಸಾರಿದವರಿಂದಲೇ ನಾವು ಕೇಳಿದ ಘಟನೆಗಳವು. ನಾನು ಅಮೂಲಾಗ್ರವಾಗಿ ವಿಚಾರಿಸಿದ ಅವೆಲ್ಲವನ್ನು ನಿನಗೋಸ್ಕರ ಕ್ರಮಬದ್ದವಾಗಿ ಬರೆಯುವುದು ಉಚಿತವೆಂದು ನನಗೂ ತೋರಿತು. ನಿನಗೆ ಉಪದೇಶಿಸಲಾಗಿರುವ ವಿಷಯಗಳು ಸತ್ಯವಾದುವೆಂದು ಇದರಿಂದ ನಿನಗೆ ಮನದಟ್ಟಾಗುವುದು. ಯೇಸುಸ್ವಾಮಿ ಪವಿತ್ರಾತ್ಮ ಶಕ್ತಿಯಿಂದ ಕೂಡಿ ಗಲಿಲೇಯಕ್ಕೆ ಮರಳಿಬಂದರು. ಅವರ ವಿಷಯ ಸುತ್ತಮುತ್ತೆಲ್ಲಾ ಹರಡಿತು. ಅಲ್ಲಿನ ಪ್ರಾರ್ಥನಾ ಮಂದಿರಗಳಲ್ಲಿ ಅವರು ಭೋಧಿಸುತ್ತಾ ಬಂದರು. ಎಲ್ಲರೂ ಅವರನ್ನು ಹೊಗಳುವವರೇ! ಯೇಸುಸ್ವಾಮಿ ತಾವು ಬೆಳೆದ ಊರಾದ ನಜರೇತಿಗೆ ಬಂದರು. ವಾಡಿಕೆಯ ಪ್ರಕಾರ ಸಬ್ಬತ್ ದಿನ ಪ್ರಾರ್ಥನಾಮಂದಿರಕ್ಕೆ ಹೋದರು. ಅಲ್ಲಿ ಪವಿತ್ರ ಗ್ರಂಥವನ್ನು ಓದುವುದಕ್ಕೆ ಅವರು ಎದ್ದು ನಿಂತಾಗ, ಪ್ರವಾದಿ ಯೆಶಾಯನ ಗ್ರಂಥದ ಸುರುಳಿಯನ್ನು ಅವರ ಕೈಗೆ ಕೊಟ್ಟರು. ಅದನ್ನು ಬಿಚ್ಚಿದಾಗ ಈ ಕೆಳಗಿನ ವಚನಗಳು ಯೇಸುವಿನ ಕಣ್ಣಿಗೆ ಬಿದ್ದವು; "ದೇವರಾತ್ಮ ನನ್ನ ಮೇಲಿದೆ, ದೀನದಲಿತರಿಗೆ ಶುಭಸಂದೇಶವನ್ನು ಭೋಧಿಸಲೆಂದು ಅವರೆನ್ನನು ಅಭಿಷೇಕಿಸಿದ್ದಾರೆ; ಬಂಧಿತರಿಗೆ ಬಿಡುಗಡೆಯನ್ನು, ಅಂಧರಿಗೆ ದೃಷ್ಟಿದಾನವನ್ನು ಪ್ರಕಟಿಸಲೂ ಶೋಷಿತರಿಗೆ ಸ್ವಾತಂತ್ರ್ಯ ನೀಡಲೂ ದೇವರು ತಮ್ಮ ಜನತೆಯನ್ನು ಉದ್ಧರಿಸುವ ಕಾಲ ಬಂತೆಂದು ಸಾರಲೂ ಅವರು ನನ್ನನ್ನು ಕಳುಹಿಸಿದ್ದಾರೆ." ಈ ವಾಕ್ಯವನ್ನು ಓದಿ, ಸುರುಳಿಯನ್ನು ಸುತ್ತಿ, ಪ್ರಾರ್ಥನಾಮಂದಿರದ ಸೇವಕನ ಕೈಗಿತ್ತು, ಯೇಸು ಕುಳಿತುಕೊಂಡರು. ಅಲ್ಲಿದ್ದ ಎಲ್ಲರ ಕಣ್ಣುಗಳು ಅವರ ಮೇಲೆಯೇ ನಾಟಿದ್ದವು. ಆಗ ಯೇಸು, "ನೀವು ಈ ಪವಿತ್ರ ವಾಕ್ಯವನ್ನು ಕೇಳುತ್ತಿದ್ದ ಹಾಗೆಯೇ ಅದು ಇಂದು ನೆರವೇರಿತು," ಎಂದು ವಿವರಿಸಲಾರಂಭಿಸಿದರು.

22.01.22

ಮೊದಲನೆಯ ವಾಚನ: ಸಮುವೇಲ 1:1-4, 11-12, 17, 19, 23-27

ಸೌಲನು ಸತ್ತನಂತರ ಸಂಭವಿಸಿದ ಘಟನೆಗಳು: ದಾವೀದನು ಅಮಾಲೇಕ್ಯರನ್ನು ಸದೆಬಡಿದು ಬಂದು ಚಿಕ್ಲಗಿನಲ್ಲಿ ಎರಡು ದಿವಸ ತಂಗಿದ್ದನು. ಮೂರನೆಯ ದಿನ ಸೌಲನ ಪಾಳೆಯದಿಂದ ಒಬ್ಬ ವ್ಯಕ್ತಿ ದಾವೀದನ ಬಳಿಗೆ ಬಂದು ನೆಲದ ಮಟ್ಟಿಗೂ ಬಾಗಿ ನಮಸ್ಕರಿಸಿದನು. ಅವನು ಸಂತಾಪದಿಂದ ತನ್ನ ಬಟ್ಟೆಗಳನ್ನು ಹರಿದುಕೊಂಡು ತಲೆಯ ಮೇಲೆ ಮಣ್ಣು ಹಾಕಿಕೊಂಡಿದ್ದನು. ದಾವೀದನು ಅವನನ್ನು ನೋಡಿ, " ನೀನು ಎಲ್ಲಿಂದ ಬಂದೆ? " ಎಂದು ಕೇಳಿದನು. ಅವನು, " ನಾನು ಇಸ್ರಯೇಲರ ಪಾಳೆಯದಿಂದ ತಪ್ಪಿಸಿಕೊಂಡು ಬಂದೆ, " ಎಂದು ಉತ್ತರ ಕೊಟ್ಟನು. ಆಗ ದಾವೀದನು, " ಏನಾಯಿತೆಂದು ತಿಳಿಸು, " ಎನ್ನಲು ಆ ವ್ಯಕ್ತಿ, " ಇಸ್ರಯೇಲರು ರಣರಂಗದಿಂದ ಓಡಿಹೋದರು; ಅನೇಕರು ಮಡಿದರು. ಸೌಲನೂ ಅವನ ಮಗ ಯೋನಾತಾನನೂ ಮರಣಹೊಂದಿದರು, " ಎಂದು ತಿಳಿಸಿದನು. ಸೌಲನು, ಅವನ ಮಗ ಯೋನಾತಾನನು ಹಾಗು ಸರ್ವೇಶ್ವರನ ಪ್ರಜೆಗಳಾದ ಇಸ್ರಯೇಲರು ಕತ್ತಿಯಿಂದ ಮೃತರಾದದ್ದಕ್ಕಾಗಿ ದಾವೀದನೂ ಅವನ ಜನರೂ ದುಃಖದಿಂದ ತಮ್ಮ ಬಟ್ಟೆಗಳನ್ನು ಹರಿದುಕೊಂಡು ಗೋಳಾಡಿದರು. ಸಾಯಂಕಾಲದವರೆಗೆ ಉಪವಾಸಮಾಡಿದರು. ದಾವೀದನು ಸೌಲ -- ಯೋನಾತಾನರ ಮೇಲೆ ಒಂದು ಶೋಕಗೀತೆಯನ್ನು ರಚಿಸಿದನು: ಮಣ್ಣುಪಾಲಾಗಿದೆ, ಓ ಇಸ್ರಯೇಲರೇ, ನಿಮ್ಮ ವೈಭವ ಆ ಗುಡ್ಡಗಳ ಮೇಲೆ ನೀವು ಮಡಿದದ್ದು ಹೇಗೆ, ಓ ಯುದ್ಧವೀರರೇ? ಸೌಮ್ಯರು, ಅತಿಪ್ರಿಯರು, ಆ ಸೌಲ -- ಯೋನಾತಾನರು ಬಾಳಿನಲು, ಸಾವಿನಲು ಬಿಟ್ಟಗಲದವರು. ಹದ್ದಿಗಿಂತ ಅಧಿಕ ವೇಗ ಅವರದು, ಸಿಂಹಕ್ಕಿಂತ ಹೆಚ್ಚಿನ ಶಕ್ತಿ ಅವರದು! ಸೌಲನಿಗಾಗಿ ಅತ್ತು ಪ್ರಲಾಪಿಸಿರಿ ಇಸ್ರಯೇಲಿನ ಮಹಿಳೆಯರೇ, ಉಲ್ಲಾಸಕರ ರಕ್ತಾಂಬರಗಳ ಉಡಿಸಿದವನು ಅವನೇ ಅಲ್ಲವೆ ನಿಮಗೆ? ಅವುಗಳ ಮೇಲೆ ಸುವರ್ಣಾಂಬರಗಳ ತೊಡಿಸಿದವನು ಆತನೇ ಅಲ್ಲವೆ ನಿಮಗೆ? ಯುದ್ದವೀರರೇ, ಹೇಗೆ ಮಡಿದು ಹೋದಿರಿ ರಣರಂಗದಲಿ? ಯೋನಾತಾನನು ಹತನಾಗಿ ಬಿದ್ದಿಹನಲ್ಲಾ ಬೆಟ್ಟಗುಡ್ಡದಲಿ! ಯೋನಾತಾನನೇ, ಸಹೋದರನೇ, ಮನೋಹರನೇ, ನಿನ್ನ ಮರಣ ತಂದಿದೆ ಅತೀವ ಸಂಕಟ ನನಗೆ. ನನ್ನ ಮೇಲೆ ನಿನಗಿದ್ದ ಪ್ರೀತಿ ಅದೆಷ್ಟು ಆಶ್ಚರ್ಯಕರ! ಸತಿಪ್ರೇಮಕ್ಕಿಂತಲೂ ಅದು ಅಮೋಘಕರ! ಅಯ್ಯೋ, ಆ ಪರಾಕ್ರಮಶಾಲಿಗಳು ಹೇಗೆ ಹತರಾದರು! ಯುದ್ಧಾಯುಧಗಳು ಹೇಗೆ ಹಾಳಾದವು!

ಕೀರ್ತನೆ 80:1-2, 4-6 
ಶ್ಲೋಕ: ಬೆಳಗಲಿ ನಿನ್ನ ಮುಖಕಾಂತಿ, ಪಡೆವೆವು ರಕ್ಷಣೆಯನು.

ಕಿವಿಗೊಟ್ಟು ಆಲಿಸೋ, ಇಸ್ರಯೇಲರ ಮೇಷಪಾಲನೇ|
ಜೋಸೆಫನ ವಂಶಜರನು ಕುರಿಹಿಂಡಂತೆ ಕರೆತಂದವನೇ|
ವಿರಾಜಿಸು ಕೆರೂಬಿಯರ ಮಧ್ಯೆ ಆಸೀನನಾದವನೇ|
ಶೋಭಿಸು ಎಫ್ರೆಯಿಮ್, ಬೆನ್ಯಮಿನ್, ಮನಸ್ಸೆ ಕುಲಗಳ ಮುಂದೆ|
ತೋರ್ಪಡಿಸು ನಿನ್ನ ಶೌರ್ಯವನು, ಬಂದು ಜಯಪ್ರದನಾಗು ನಮಗೆ||

ಸ್ವಾಮಿದೇವನೇ, ಸರ್ವಶಕ್ತನೇ|
ಅದೆನಿತು ಕಾಲ ನೀ ಮುನಿದಿರುವೆ?|
ನಿನ್ನವರ ಮೊರೆಯನಾಲಿಸದಿರುವೆ?||
ರೋದನವನೆ ಅವರಿಗೆ ಅನ್ನವಾಗಿಸಿದೆ|
ಹರಿಯುವ ಕಂಬನಿಯನೆ ಪಾನವಾಗಿಸಿದೆ|
ನೆರೆಯವರಿಗೆ ನಮ್ಮನ್ನು ಕಲಹಕಾರಣವಾಗಿಸಿದೆ|
ಶತ್ರುಗಳ ಅಪಹಾಸ್ಯಕ್ಕೆ ನಮ್ಮನ್ನು ಗುರಿಪಡಿಸಿದೆ||

ಶುಭಸಂದೇಶ ವಾಚನ: ಮಾರ್ಕ 3:20-21

ಆ ಕಾಲದಲ್ಲಿ ಯೇಸು ಮನೆಗೆ ಹೋದಾಗ ಜನರು ಮರಳಿ ಗುಂಪುಗುಂಪಾಗಿ ಬಂದರು. ಯೇಸುವಿಗೂ ಶಿಷ್ಯರಿಗೂ ಊಟಮಾಡಲು ಕೂಡ ಬಿಡುವಿಲ್ಲದೆ ಹೋಯಿತು. " ಈತನಿಗೆ ಹುಚ್ಚು ಹಿಡಿದಿದೆ, " ಎಂದು ಜನರು ಮಾತನಾಡಿಕೊಳ್ಳುತ್ತಿದ್ದರು. ಆದ್ದರಿಂದ ಯೇಸುವಿನ ಬಂಧುಗಳು ಯೇಸುವನ್ನು ಹಿಡಿದುತರಲು ಹೊರಟರು.

21.01.22 - "ಯೇಸು ಹನ್ನೆರಡು ಮಂದಿಯನ್ನು ಆಯ್ದುಕೊಂಡು, ‘ಪ್ರೇಷಿತರು’ ಎಂದು ಅವರಿಗೆ ಹೆಸರಿಟ್ಟರು."

ಮೊದಲನೇ ವಾಚನ: 1 ಸಮುವೇಲ 24:2-21

ಸೌಲನು ಇಸ್ರಯೇಲರಲ್ಲಿ ಶ್ರೇಷ್ಠರಾದ ಮೂರು ಸಾವಿರ ಮಂದಿ ಸೈನಿಕರನ್ನು ಆರಿಸಿಕೊಂಡು ಕಾಡು ಗುರಿಬಂಡೆಗಳಲ್ಲಿದ್ದ ದಾವೀದನನ್ನೂ ಅವನ ಜನರನ್ನೂ ಹುಡುಕುವುದಕ್ಕಾಗಿ ಹೊರಟನು. ಮಾರ್ಗದಲ್ಲಿ ಕುರಿ ಹಟ್ಟಿಗಳ ಬಳಿಯಲ್ಲಿ ಒಂದು ಗವಿಯನ್ನು ಕಂಡು ಶೌಚಕ್ಕಾಗಿ ಅದರೊಳಗೆ ಪ್ರವೇಶಿಸಿದನು. ದಾವೀದನೂ ಅವನ ಜನರೂ ಅದೇ ಗವಿಯ ಹಿಂಗಡೆಯಲ್ಲಿ ಅಡಗಿಕೊಂಡಿದ್ದರು. ಜನರು ದಾವೀದನಿಗೆ, “ನಿನ್ನ ಶತ್ರುವನ್ನು ನಿನ್ನ ಕೈಗೆ ಒಪ್ಪಿಸಿಕೊಡುವೆನು; ಆಗ ನೀನು ಅವನನ್ನು ನಿನ್ನ ಇಷ್ಟಾನುಸಾರ ನಡೆಸಬಹುದು,’ ಎಂದು ಸರ್ವೇಶ್ವರ ನಿನಗೆ ಹೇಳಿದ ಮಾತು ನೆರವೇರುವ ಸುದಿನವಿದು,” ಎಂದರು. ಅವನೆದ್ದು ಮೆಲ್ಲಗೆ ಹೋಗಿ ಸೌಲನ ನಿಲುವಂಗಿಯ ಮೂಲೆಯನ್ನು ಕತ್ತರಿಸಿಕೊಂಡನು. ಅನಂತರದಲ್ಲೇ ಸೌಲನ ನಿಲುವಂಗಿಯ ಮೂಲೆಯನ್ನು ಕತ್ತರಿಸಿದ್ದಕ್ಕಾಗಿ ಅವನ ಮನಸ್ಸಾಕ್ಷಿ ಅವನನ್ನು ಹಂಗಿಸತೊಡಗಿತು. ಅವನು ತನ್ನ ಜನರಿಗೆ, “ಆತ ಸರ್ವೇಶ್ವರನಿಂದ ಅಭಿಷಿಕ್ತನು ಹಾಗು ಆತನು ನನ್ನ ಒಡೆಯನು ಆಗಿದ್ದಾರೆ; ನಾನು ನಿಮ್ಮ ಮಾತು ಕೇಳಿ ಸರ್ವೇಶ್ವರನ ಅಭಿಷಿಕ್ತನ ವಿರೋಧವಾಗಿ ಕೈಯೆತ್ತದಂತೆ ಆ ಸರ್ವೇಶ್ವರನೇ ನನಗೆ ಅಡ್ಡಿಮಾಡಲಿ,” ಎಂದನು. ಅವನು ತನ್ನ ಜನರಿಗೆ, “ಆತ ಸರ್ವೇಶ್ವರನಿಂದ ಅಭಿಷಿಕ್ತನು ಹಾಗು ಆತನು ನನ್ನ ಒಡೆಯನು ಆಗಿದ್ದಾರೆ; ನಾನು ನಿಮ್ಮ ಮಾತು ಕೇಳಿ ಸರ್ವೇಶ್ವರನ ಅಭಿಷಿಕ್ತನ ವಿರೋಧವಾಗಿ ಕೈಯೆತ್ತದಂತೆ ಆ ಸರ್ವೇಶ್ವರನೇ ನನಗೆ ಅಡ್ಡಿಮಾಡಲಿ,” ಎಂದನು. ಹೀಗೆ ಸೌಲನಿಗೆ ವಿರುದ್ಧ ತನ್ನ ಜನರು ದಂಗೆಯೇಳದಂತೆ ತಡೆದನು. ಸೌಲನು ಗವಿಯಿಂದ ಹೊರಗೆ ಬಂದು ಸ್ವಲ್ಪ ಮುಂದೆ ಹೋದ ಮೇಲೆ ದಾವೀದನೂ ಹೊರಗೆ ಬಂದು, “ಅರಸರೇ, ನನ್ನ ಒಡೆಯರೇ,” ಎಂದು ಅವನನ್ನು ಕೂಗಿದನು. ಸೌಲನು ಹಿಂದಿರುಗಿ ನೋಡಿದನು. ಆಗ ಅವನಿಗೆ ಸಾಷ್ಟಾಂಗ ನಮಸ್ಕಾರ ಮಾಡಿ, “ನಿಮಗೆ ನಾನು ಕೇಡು ಮಾಡಬೇಕೆಂದಿದ್ದೇನೆಂದು ಹೇಳುವವರ ಮಾತಿಗೆ ನೀವು ಕಿವಿಗೊಡಬೇಡಿ. ಇಂದು ಈ ಗವಿಯಲ್ಲಿ ಸರ್ವೇಶ್ವರ ನಿಮ್ಮನ್ನು ನನ್ನ ಕೈಗೆ ಒಪ್ಪಿಸಿಕೊಟ್ಟಿದ್ದರೆಂಬುದು ಈಗ ನಿಮಗೆ ಗೊತ್ತಾಗಿರಬೇಕು. ನಿಮ್ಮನ್ನು ಕೊಂದುಬಿಡಬೇಕೆಂದು ಕೆಲವರು ನನಗೆ ಹೇಳಿದರು. ಆದರೆ ನಾನು ಅವರಿಗೆ, ‘ಸರ್ವೇಶ್ವರನಿಂದ ಅಭಿಷಿಕ್ತರಾದ ನನ್ನ ಒಡೆಯರ ಮೇಲೆ ಕೈಯೆತ್ತುವುದಿಲ್ಲ,’ ಎಂದು ಹೇಳಿ ನಿಮ್ಮನ್ನು ಉಳಿಸಿದೆ. ನೀವು ನನ್ನ ತಂದೆ; ಇಗೋ ನೋಡಿ! ನನ್ನ ಕೈಯಲ್ಲಿ ನಿಮ್ಮ ನಿಲುವಂಗಿಯ ತುಂಡು ಇದೆ; ನಾನು ನಿಮ್ಮನ್ನು ಕೊಲ್ಲದೆ ನಿಮ್ಮ ನಿಲುವಂಗಿಯ ಮೂಲೆಯನ್ನು ಕತ್ತರಿಸಿಕೊಂಡೆನಷ್ಟೆ. ಇದರಿಂದ ನನ್ನಲ್ಲಿ ಯಾವ ದೋಷವೂ ಅಪರಾಧವೂ ಇರುವುದಿಲ್ಲ; ನಾನು ನಿಮಗೆ ವಿರೋಧವಾಗಿ ದ್ರೋಹ ಮಾಡಲಿಲ್ಲ ಎಂದು ತಿಳಿದುಕೊಳ್ಳಿ; ಆದರೂ ನೀವು ನನ್ನ ಪ್ರಾಣಕ್ಕೆ ಹೊಂಚು ಹಾಕುತ್ತಿರುವಿರಲ್ಲವೆ? ಸರ್ವೇಶ್ವರನೇ ನಮ್ಮ ಉಭಯರ ವ್ಯಾಜ್ಯವನ್ನು ತೀರಿಸಲಿ; ಅವರೇ ನನಗಾಗಿ ನಿಮಗೆ ಮುಯ್ಯಿಸಲ್ಲಿಸಲಿ; ನಾನಂತೂ ನಿಮಗೆ ವಿರೋಧವಾಗಿ ಕೈಯೆತ್ತುವುದಿಲ್ಲ. ಇಸ್ರಯೇಲರಲ್ಲಿ ‘ಕೆಟ್ಟವರಿಂದಲೇ ಕೇಡು’ ಎಂಬುದಾಗಿ ಹಿರಿಯರಿಂದ ಬಂದ ಗಾದೆಯುಂಟು. ನಾನು ನಿಮಗೆ ವಿರೋಧವಾಗಿ ಕೈಯೆತ್ತುವುದಿಲ್ಲ. ಇಸ್ರಯೇಲರ ಅರಸರೇ, ಯಾರನ್ನು ಹಿಂದಟ್ಟಿ ಹೊರಟಿದ್ದೀರಿ? ಯಾರನ್ನು ಹಿಡಿಯಬೇಕೆಂದಿರುತ್ತೀರಿ? ಸತ್ತ ನಾಯಿಯನ್ನೇ? ಒಂದು ಬಡ ಸೊಳ್ಳೆಯನ್ನೇ? ಸರ್ವೇಶ್ವರ ನ್ಯಾಯಾಧಿಪತಿಯಾಗಿ ನಮ್ಮಿಬ್ಬರ ವ್ಯಾಜ್ಯವನ್ನು ತೀರಿಸಲಿ; ಅವರೇ ನೋಡಿ ನನ್ನ ಪರವಾಗಿ ವಾದಿಸಿ ನನ್ನನ್ನು ನಿಮ್ಮ ಕೈಯಿಂದ ತಪ್ಪಿಸಲಿ,” ಎಂದು ಹೇಳಿದನು.  ದಾವೀದನ ಮಾತುಗಳು ಮುಗಿದನಂತರ ಸೌಲನು, “ದಾವೀದನೇ, ನನ್ನ ಮಗನೇ, ಇದು ನಿಜವಾಗಿಯೂ ನಿನ್ನ ಸ್ವರವೇ?” ಎಂದು ಗಟ್ಟಿಯಾಗಿ ಅತ್ತನು. ಇದಲ್ಲದೆ ಅವನು ದಾವೀದನಿಗೆ, “ನೀನು ನನಗಿಂತ ನೀತಿವಂತ; ನಾನು ನಿನಗೆ ಕೇಡು ಮಾಡಿದರೂ ನೀನು ನನಗೆ ಒಳ್ಳೆಯದನ್ನೇ ಮಾಡಿದೆ. ಸರ್ವೇಶ್ವರ ನನ್ನನ್ನು ನಿನ್ನ ಕೈಗೆ ಒಪ್ಪಿಸಿಕೊಟ್ಟರೂ ನೀನು ನನ್ನನ್ನು ಕೊಲ್ಲಲಿಲ್ಲ. ಇದರಿಂದ ನೀನು ನನಗೆ ಹಿತವನ್ನೇ ಮಾಡುವಂಥವನೆಂಬುದು ಈ ದಿನ ಖಚಿತವಾಯಿತು. ಯಾವನಾದರೂ ತನ್ನ ಕೈಗೆ ಸಿಕ್ಕಿದ ವೈರಿಯನ್ನು ಸುಕ್ಷೇಮದಿಂದ ಕಳುಹಿಸಿಬಿಡುತ್ತಾನೆಯೇ? ನೀನು ಈ ದಿನ ನನಗೆ ಮಾಡಿದ ಉಪಕಾರಕ್ಕಾಗಿ ಸರ್ವೇಶ್ವರ ನಿನಗೆ ಪ್ರತ್ಯುಪಕಾರ ಮಾಡಲಿ. ಕೇಳು; ನೀನು ಹೇಗೂ ಅರಸನಾಗುವೆಯೆಂದೂ ಇಸ್ರಯೇಲ್ ರಾಜ್ಯ ನಿನ್ನ ಆಳ್ವಿಕೆಯಲ್ಲಿ ಸ್ಥಿರವಾಗುವುದೆಂದೂ ಬಲ್ಲೆ. ಹೀಗಿರುವುದರಿಂದ ನೀನು ನನ್ನ ಸಂತಾನವನ್ನು ನಿರ್ಮೂಲಮಾಡುವುದು ಇಲ್ಲವೆಂದೂ ನಮ್ಮ ಕುಲದಿಂದ ನನ್ನ ಹೆಸರನ್ನು ತೆಗೆದುಹಾಕುವುದಿಲ್ಲವೆಂದೂ ಸರ್ವೇಶ್ವರನ ಹೆಸರಿನಲ್ಲಿ ಪ್ರಮಾಣ ಮಾಡು,” ಎಂದು ಬೇಡಿಕೊಂಡನು. ಹಾಗೆಯೇ ದಾವೀದನು ಪ್ರಮಾಣ ಮಾಡಿದನು.

ಕೀರ್ತನೆ: 57:2, 3-4, 6, 11
ಶ್ಲೋಕ: ಕರುಣಿಸೆನ್ನನು, ಕರುಣಿಸು, ದೇವನೇ 

ಶುಭಸಂದೇಶ: ಮಾರ್ಕ 3:13-19

ಯೇಸುಸ್ವಾಮಿ ಬೆಟ್ಟವನ್ನೇರಿ, ತಮಗೆ ಒಪ್ಪಿಗೆಯಾದವರನ್ನು ಕರೆದರು. ಅವರು ಹತ್ತಿರಕ್ಕೆ ಬಂದರು. ಯೇಸು ಹನ್ನೆರಡು ಮಂದಿಯನ್ನು ಆಯ್ದುಕೊಂಡು, ‘ಪ್ರೇಷಿತರು’ ಎಂದು ಅವರಿಗೆ ಹೆಸರಿಟ್ಟರು. “ನನ್ನ ಜೊತೆಯಲ್ಲಿ ಇರಲು ನಿಮ್ಮನ್ನು ಆರಿಸಿಕೊಂಡಿದ್ದೇನೆ. ಶುಭಸಂದೇಶವನ್ನು ಸಾರಲು ನಿಮ್ಮನ್ನು ಕಳುಹಿಸುತ್ತೇನೆ. ದೆವ್ವಗಳನ್ನು ಬಿಡಿಸುವ ಅಧಿಕಾರವನ್ನು ನಿಮಗೆ ಕೊಡುತ್ತೇನೆ”, ಎಂದು ಅವರಿಗೆ ಹೇಳಿದರು. ಹೀಗೆ ನೇಮಕಗೊಂಡ ಹನ್ನೆರಡು ಮಂದಿ ಯಾರೆಂದರೆ: ಸಿಮೋನ (ಯೇಸು ಈತನಿಗೆ ‘ಪೇತ್ರ’ ಎಂದು ಹೆಸರಿಟ್ಟರು). ಜೆಬೆದಾಯನ ಮಗ ಯಕೋಬ ಮತ್ತು ಅವನ ಸಹೋದರ ಯೊವಾನ್ನ (ಯೇಸು ಇವರಿಬ್ಬರಿಗೆ ‘ಬೊವನೆರ್ಗೆಸ್’ ಎಂದರೆ ‘ಸಿಡಿಲಮರಿಗಳು’ ಎಂಬ ಹೆಸರನ್ನಿಟ್ಟರು). ಅಂದ್ರೆಯ, ಫಿಲಿಪ್ಪ, ಬಾರ್ತಲೊಮಾಯ, ಮತ್ತಾಯ, ತೋಮ, ಅಲ್ಫಾಯನ ಮಗ ಯಕೋಬ, ತದ್ದಾಯ, ದೇಶಾಭಿಮಾನಿ ಆದ ಸಿಮೋನ ಮತ್ತು ಮುಂದೆ ಗುರುದ್ರೋಹಿಯಾಗಲಿದ್ದ ಯೂದ ಇಸ್ಕರಿಯೋತ