ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

01.10.20 - “ನೀವು ಯಾವ ಊರಿಗೆ ಹೋದರೂ ಜನರು ನಿಮ್ಮನ್ನು ಸ್ವಾಗತಿಸಿದಾಗ, ಅವರು ಬಡಿಸಿದ್ದನ್ನು ಭುಜಿಸಿರಿ. ಅಲ್ಲಿರುವ ರೋಗಿಗಳನ್ನು ಗುಣಪಡಿಸಿರಿ"

ಮೊದಲನೇ ವಾಚನ: ಯೋಬನ ಗ್ರಂಥ  19:21-27


ಆಗ ಯೋಬನು ಇಂತೆಂದನು: ಕರುಣೆ ತೋರಿ ಗೆಳೆಯರೇ, ಕರುಣೆ ತೋರಿ ನನಗೆ! ಏಕೆಂದರೆ ದೇವರ ಕೈ ನನ್ನನು ದಂಡಿಸಿದೆ. ದೇವರಂತೆ ನೀವೂ ನನ್ನನು ದಂಡಿಸುವುದೇಕೆ? ನನ್ನನ್ನು ಛಿನ್ನಪನ್ನವಾಗಿಸಿದ್ದೀರಿ, ಇದು ಸಾಲದೆ ನಿಮಗೆ? ನನ್ನ ಮಾತುಗಳನು ಬರೆದಿಟ್ಟರೆ ಎಷ್ಟೋ ಮೇಲು! ಸುರುಳಿಯಲಿ ಅದು ಲಿಖಿತವಾದರೆ ಎಷ್ಟೋ ಲೇಸು! ಕಬ್ಬಿಣದ ಉಳಿಯಿಂದ ಬಂಡೆಯ ಮೇಲೆ ಕೆತ್ತಿ, ಸೀಸೆ ಎರೆದು ಶಾಶ್ವತ ಶಾಸನವಾಗಿಸಿದ್ದರೆ ಎಷ್ಟೋ ಒಳಿತು. ನಾನಂತು ಬಲ್ಲೆ, ನನ್ನ ಉದ್ಧಾರಕ ಜೀವಸ್ವರೂಪನೆಂದು ಕಡೆಯ ದಿನದಂದು ಧರೆಗಾತ ಇಳಿದುಬರುವನೆಂದು. ನನ್ನ ಚರ್ಮ ಹೀಗೆ ಬಿರಿದು ಹಾಳಾದರೂ ದೇಹಧಾರಿಯಾಗಿಯೇ ನಾನು ನೋಡುವೆನು ದೇವರನು. ಕಣ್ಣಾರೆ ಆತನನ್ನು ಕಾಣುವೆನು ಮತ್ತೊಬ್ಬನಾಗಲ್ಲ, ನಾನಾಗೇ ನೋಡುವೆನು. ಹಂಬಲಿಕೆಯಿಂದ ಕುಂದಿದೆ ನನ್ನ ಅಂತರಂಗವು.

ಕೀರ್ತನೆ: 27:7-8, 8-9, 13-14

ಶ್ಲೋಕ: ಪ್ರಭುವಿನೊಳಿತನು ನಾ ಕಾಣುವೆ ಜೀವಲೋಕದೊಳು 

ಶುಭಸಂದೇಶ: ಲೂಕ 10:1-12

ಯೇಸುಸ್ವಾಮಿ ಇನ್ನೂ ಎಪ್ಪತ್ತೆರಡು ಮಂದಿಯನ್ನು ನೇಮಿಸಿ ಅವರನ್ನು ಇಬ್ಬಿಬ್ಬರನ್ನಾಗಿ ತಾವೇ ಹೋಗಲಿದ್ದ ಊರುಗಳಿಗೂ ಸ್ಥಳಗಳಿಗೂ ಮುಂದಾಗಿ ಕಳಿಸಿದರು. ಕಳುಹಿಸುವಾಗ ಅವರಿಗೆ ಹೇಳಿದ್ದೇನೆಂದರೆ, “ಬೆಳೆಯೇನೋ ಹೇರಳವಾಗಿದೆ; ಕೊಯ್ಲುಗಾರರೊ ವಿರಳ. ಆದುದರಿಂದ ಕೊಯ್ಲಿಗೆ ಆಳುಗಳನ್ನು ಕಳುಹಿಸುವಂತೆ ಬೆಳೆಯ ಯಜಮಾನನನ್ನು ಬೇಡಿಕೊಳ್ಳಿ. ಹೋಗಿರಿ, ತೋಳಗಳ ನಡುವೆ ಕುರಿಮರಿಗಳನ್ನು ಬಿಟ್ಟಂತೆ ನಾನು ನಿಮ್ಮನ್ನು ಕಳುಹಿಸುತ್ತೇನೆ. ಹಣದ ಚೀಲವನ್ನಾಗಲಿ, ಜೋಳಿಗೆಯನ್ನಾಗಲಿ, ಪಾದರಕ್ಷೆಗಳನ್ನಾಗಲಿ ತೆಗೆದುಕೊಂಡು ಹೋಗದಿರಿ. ದಾರಿಯಲ್ಲಿ ಯಾರಿಗೂ ವಂದನೋಪಚಾರಗಳನ್ನು ಮಾಡಿಕೊಂಡಿರಬೇಡಿ. ನೀವು ಯಾವ ಮನೆಗೆ ಹೋದರೂ, ‘ಈ ಮನೆಗೆ ಶಾಂತಿ,’ ಎಂದು ಆಶೀರ್ವಾದ ಮಾಡಿ. ಶಾಂತಿಪ್ರಿಯನು ಅಲ್ಲಿದ್ದರೆ ನಿಮ್ಮ ಆಶೀರ್ವಾದವು ಅವನ ಮೇಲೆ ನೆಲೆಸುವುದು. ಇಲ್ಲವಾದರೆ, ಅದು ನಿಮಗೆ ಹಿಂದಿರುಗುವುದು. ಮನೆಯಿಂದ ಮನೆಗೆ ಹೋಗದೆ ಆ ಮನೆಯಲ್ಲೇ ತಂಗಿದ್ದು, ಅಲ್ಲಿಯವರು ಕೊಡುವ ಅನ್ನಪಾನೀಯಗಳನ್ನು ಸೇವಿಸಿರಿ. ದುಡಿಮೆಗಾರನು ಕೂಲಿಗೆ ಬಾಧ್ಯನು. “ನೀವು ಯಾವ ಊರಿಗೆ ಹೋದರೂ ಜನರು ನಿಮ್ಮನ್ನು ಸ್ವಾಗತಿಸಿದಾಗ, ಅವರು ಬಡಿಸಿದ್ದನ್ನು ಭುಜಿಸಿರಿ. ಅಲ್ಲಿರುವ ರೋಗಿಗಳನ್ನು ಗುಣಪಡಿಸಿರಿ. ‘ದೇವರ ಸಾಮ್ರಾಜ್ಯ ನಿಮ್ಮನ್ನು ಸಮೀಪಿಸಿದೆ,’ ಎಂದು ತಿಳಿಸಿರಿ. ಆದರೆ ನೀವು ಹೋಗುವ ಊರಿನ ಜನರು ನಿಮ್ಮನ್ನು ಸ್ವಾಗತಿಸದೆ ಹೋದರೆ, ರಸ್ತೆಗಳಿಗೆ ಹೋಗಿ, ‘ನಮ್ಮ ಪಾದಗಳಿಗೆ ಅಂಟಿರುವ ನಿಮ್ಮ ಊರಿನ ಧೂಳನ್ನು ಕೂಡ ನಿಮಗೆ ವಿರುದ್ಧವಾಗಿ ಒದರಿಬಿಡುತ್ತೇವೆ. ಆದರೂ ದೇವರ ಸಾಮ್ರಾಜ್ಯ ಸಮೀಪಿಸಿದೆ ಎಂಬುದನ್ನು ಮಾತ್ರ ನೀವು ಗಮನದಲ್ಲಿಡಿ,’ ಎಂದು ತಿಳಿಸಿರಿ.  ತೀರ್ಪಿನ ದಿನ ಈ ಊರಿನ ಗತಿ ಸೊದೋಮ್ ಊರಿನ ಗತಿಗಿಂತಲೂ ಕಠಿಣವಾಗಿರುವುದೆಂದು ನಾನು ನಿಮಗೆ ಹೇಳುತ್ತೇನೆ.


30.09.20

ಮೊದಲನೇ ವಾಚನ: ಯೋಬ 9:1-12, 14-16

ಯೋಬನು ಉತ್ತರಿಸುತ್ತಾ ಹೀಗೆಂದನು: “ಹೌದು, ನೀನು ಹೇಳುವುದು ಸರಿಯೆಂದು ನನಗೆ ಗೊತ್ತು: ನರಮಾನವ ದೇವರ ಮುಂದೆ ಸತ್ಯವಂತನಾಗಿರುವುದೆಂತು? ಯಾರಾದರೂ ಆತನೊಡನೆ ವಾದಿಸಲು ಇಷ್ಟಪಟ್ಟರೂ ಆತನ ಸಹಸ್ರ ಪ್ರಶ್ನೆಗಳೊಂದಕ್ಕೂ ಉತ್ತರಿಸಲಾಗದು. ದೇವರ ಹೃದಯ ಧೀಮಂತ, ಅವರ ಶಕ್ತಿ ಅತುಳ ಆತನನ್ನು ಪ್ರತಿಭಟಿಸಿ ಜಯಗಳಿಸಿದವನಿಲ್ಲ. ಆತ ಪರ್ವತಗಳನ್ನೇ ಸರಿಸುತ್ತಾನೆ ಅರಿಯದಂತೆ ಅವುಗಳನ್ನು ಉರುಳಿಸುತ್ತಾನೆ ಸಿಟ್ಟುಗೊಂಡಂತೆ. ಅದರ ಸ್ಥಾನದಿಂದ ಭೂಮಿಯನೆ ಕದಲಿಸುತ್ತಾನೆ ಅದರ ಸ್ತಂಭಗಳು ನಡುಗುವಂತೆ ಮಾಡುತ್ತಾನೆ. ಆತ ಆಜ್ಞೆ ಮಾಡಿದ್ದೇ ಆದರೆ ಸೂರ್ಯನು ಉದಯಿಸನು ಮುದ್ರೆ ಹಾಕಿದ್ದೇ ಆದರೆ ನಕ್ಷತ್ರವೂ ಮಿನುಗದು. ಆಕಾಶಮಂಡಲವನ್ನು ಹರಡಿದವನು ದೇವರೇ ಕಡಲಿನ ತರಂಗಗಳನ್ನು ಮೆಟ್ಟಿದವನು ಆತನೊಬ್ಬನೇ. ದಕ್ಷಿಣದ ನಕ್ಷತ್ರಗ್ರಹಗಳನೂ ಸಪ್ತರ್ಷಿಮಂಡಲವನೂ ಮೃಗಶಿರವನೂ ಕೃತ್ತಿಕೆಯನೂ ನಿರ್ಮಿಸಿದವನು ಆತನೇ. ಅಪ್ರತಿಮ ಮಹಾಕಾರ್ಯಗಳನ್ನು ಎಸಗಿರುವನು ಅಸಂಖ್ಯ ಅದ್ಭುತಕರ ಪವಾಡಗಳನ್ನು ಮಾಡಿರುವನು. ಇಗೋ, ಪಕ್ಕದಲ್ಲೇ ಆತ ದಾಟಿಹೋದರೂ ಕಾಣಿಸನು ನನ್ನ ಮುಂದುಗಡೆಯೇ ಹಾದುಹೋದರೂ ತಿಳಿಯದು. ಕಿತ್ತುಕೊಂಡು ಹೋಗುವ ಆತನಿಗೆ ಅಡ್ಡಿಮಾಡುವವರಾರು? ‘ಏನು ಮಾಡುತ್ತಿರುವೆ?’ ಎಂದು ಆತನನ್ನು ಕೇಳುವವರಾರು? ದೇವರೊಂದಿಗೆ ವಾದಿಸಲು ನಾನು ಅಶಕ್ತನು ಆತನಿಗೆ ತಕ್ಕ ಉತ್ತರ ಕೊಡಲು ನಾನೆಷ್ಟರವನು! ನಾನು ಸತ್ಯವಂತನಾಗಿದ್ದರೂ ವಾದಿಸಲಾರೆನು ನನ್ನ ನ್ಯಾಯಾಧೀಶನಲ್ಲಿ ದಯೆಯನು ಕೋರುವೆನು. ನಾನು ಕರೆದಾಗ ಓಗೊಟ್ಟಿದ್ದರೂ ನನ್ನ ವಿಜ್ಞಾಪನೆಯನ್ನು ಆಲಿಸುವನೆಂದು ನಂಬುತ್ತಿರಲಿಲ್ಲ.

ಕೀರ್ತನೆ: 88:10-11, 12-13, 14-15

ಶ್ಲೋಕ: ಓ ಪ್ರಭೂ, ನನ್ನ ಕೂಗು ನಿನ್ನ ಕಿವಿಗೆ ಬೀಳಲಿ.  

ಶುಭಸಂದೇಶ: ಲೂಕ 9:57-62

ಯೇಸುಸ್ವಾಮಿ ತಮ್ಮ ಶಿಷ್ಯರೊಂದಿಗೆ ದಾರಿಯಲ್ಲಿ ಹೋಗುತ್ತಿದ್ದಾಗ ಒಬ್ಬನು ಯೇಸುವಿಗೆ, “ನೀವು ಎಲ್ಲಿಗೆ ಹೋದರೂ ನಿಮ್ಮನ್ನು ಹಿಂಬಾಲಿಸುತ್ತೇನೆ,” ಎಂದನು.  ಯೇಸು ಅವನಿಗೆ, “ನರಿಗಳಿಗೆ ಗುಹೆಗಳುಂಟು; ಆಕಾಶದ ಪಕ್ಷಿಗಳಿಗೆ ಗೂಡುಗಳುಂಟು; ಆದರೆ ನರಪುತ್ರನಿಗೆ ತಲೆಯಿಡುವುದಕ್ಕೂ ಸ್ಥಳವಿಲ್ಲ,” ಎಂದರು.  ಇನ್ನೊಬ್ಬನಿಗೆ ಯೇಸು, “ನನ್ನನ್ನು ಹಿಂಬಾಲಿಸು,” ಎಂದು ಹೇಳಿದಾಗ ಅವನು, “ಸ್ವಾಮೀ, ಮೊದಲು ನನ್ನ ತಂದೆಯ ಉತ್ತರಕ್ರಿಯೆಗಳನ್ನು ಮುಗಿಸುವ ತನಕ ಸಮಯಕೊಡಿ,” ಎಂದನು.  ಅವನಿಗೆ ಯೇಸು, “ಸತ್ತವರೇ ತಮ್ಮ ಸತ್ತವರನ್ನು ಸಮಾಧಿಮಾಡಿಕೊಳ್ಳಲಿ; ನೀನಾದರೋ, ಹೋಗು, ದೇವರ ಸಾಮ್ರಾಜ್ಯವನ್ನು ಪ್ರಚಾರಮಾಡು,” ಎಂದು ಹೇಳಿದರು.  ಮತ್ತೊಬ್ಬನು, “ನಿಮ್ಮನ್ನು ಹಿಂಬಾಲಿಸುತ್ತೇನೆ ಪ್ರಭೂ, ಆದರೆ ಮೊದಲು ಮನೆಯವರನ್ನು ಬೀಳ್ಕೊಟ್ಟು ಬರಲು ಅಪ್ಪಣೆ ಆಗಬೇಕು,” ಎಂದನು. 62ಯೇಸು ಅವನನ್ನು ನೋಡಿ, “ನೇಗಿಲಿಗೆ ಕೈಹಾಕಿ ಹಿಂದಕ್ಕೆ ನೋಡುವವನು ದೇವರ ಸಾಮ್ರಾಜ್ಯಕ್ಕೆ ತಕ್ಕವನಲ್ಲ,” ಎಂದರು.

29.09.20 - " ಇದಕ್ಕೂ ಮಿಗಿಲಾದವುಗಳನ್ನು ನೀನು ಕಾಣುವೆ,”

ಮೊದಲನೇ ವಾಚನ: ದಾನಿಯೇಲನು 7:9-10, 13-14

ನಾನು ನೋಡುತ್ತಿದ್ದ ಹಾಗೆ: ಸಿಂಹಾಸನಗಳನ್ನು ಹಾಕಲಾಯಿತು. ಮಹಾವೃದ್ಧನೊಬ್ಬನು ಆಸೀನನಾದನು. ಆತನ ಉಡುಪು ಬೆಳ್ಳಗಿತ್ತು ಹಿಮದಂತೆ. ಆತನ ತಲೆಗೂದಲಿತ್ತು ನಿರ್ಮಲವಾದ ಬಿಳಿಯ ಉಣ್ಣೆಯಂತೆ. ಆತನ ಸಿಂಹಾಸನ ಅಗ್ನಿಜ್ವಾಲೆಗಳು. ಧಗಧಗಿಸುವ ಬೆಂಕಿ ಅದರ ಚಕ್ರಗಳು.  ಆ ಸಿಂಹಾಸನದ ಸಮ್ಮುಖದಿಂದ ಪ್ರಜ್ವಲ ಪ್ರವಾಹವೊಂದು ಉಕ್ಕಿ ಹರಿದುಬಂದಿತು. ಲಕ್ಷೋಪಲಕ್ಷ ದೂತರು ಆತನಿಗೆ ಸೇವೆಸಲ್ಲಿಸುತ್ತಿದ್ದರು. ಕೋಟ್ಯಾನುಕೋಟಿ ಕಿಂಕರರು ಆತನ ಮುಂದೆ ನಿಂತಿದ್ದರು. ನ್ಯಾಯಸಭೆಯವರು ತೀರ್ಪುನೀಡಲು ಕುಳಿತುಕೊಂಡರು. ಪಟ್ಟಿಪುಸ್ತಕಗಳನ್ನು ತೆರೆಯಲಾಯಿತು. ನಾನು ಕಂಡ ರಾತ್ರಿಯ ಕನಸಿನಲ್ಲಿ ನರಪುತ್ರನಂತಿರುವವನು ಆಕಾಶದ ಮೇಘಗಳೊಂದಿಗೆ ಬಂದು ಆ ಮಹಾವೃದ್ಧನನ್ನು ಸಮೀಪಿಸಿದನು. ಅವನನ್ನು ಆತನ ಸನ್ನಿಧಿಗೆ ತಂದರು.  ಸಕಲ ರಾಷ್ಟ್ರ-ಕುಲ-ಭಾಷೆಗಳವರು ಅವನಿಗೆ ಸೇವೆ ಸಲ್ಲಿಸಲೆಂದು ಅವನಿಗೆ ದೊರೆತನ, ಘನತೆ, ರಾಜ್ಯತ್ವ ಇವುಗಳನ್ನು ಕೊಡಲಾಯಿತು. ಅವನ ಆಳ್ವಿಕೆಗೆ ಅಂತ್ಯವಿಲ್ಲ, ಅದು ಶಾಶ್ವತವಾದುದು, ಅವನ ರಾಜ್ಯ ಎಂದಿಗೂ ಅಳಿಯದು!

ಕೀರ್ತನೆ: 138:1-2, 2-3, 4-5

ಶ್ಲೋಕ: ಹೃದಯಪೂರ್ವಕ ವಂದನೆ ಪ್ರಭೂ ನಿನಗೆ, ದೇವರುಗಳೆದುರಿಗೆ ನನ್ನ ಕೀರ್ತನೆ ನಿನಗೆ. 

ಶುಭಸಂದೇಶ: ಯೋವಾನ್ನ 1:47-51


ತಮ್ಮ ಬಳಿಗೆ ಬರುತ್ತಿದ್ದ ನತಾನಿಯೇಲನನ್ನು ಕಂಡ ಯೇಸು, “ಇಗೋ ನೋಡಿ, ನಿಜವಾದ ಇಸ್ರಯೇಲನು, ಈತನಲ್ಲಿ ಕಪಟವಿಲ್ಲ,” ಎಂದು ನುಡಿದರು.  ನತಾನಿಯೇಲನು, “ನನ್ನ ಪರಿಚಯ ನಿಮಗೆ ಹೇಗಾಯಿತು?” ಎಂದು ಕೇಳಲು ಯೇಸು, “ಫಿಲಿಪ್ಪನು ನಿನ್ನನ್ನು ಕರೆಯುವ ಮೊದಲೇ ನೀನು ಅಂಜೂರದ ಮರದಡಿ ಇದ್ದಾಗ ನಾನು ನಿನ್ನನ್ನು ಕಂಡೆ,” ಎಂದು ಉತ್ತರಕೊಟ್ಟರು.  ಅದಕ್ಕೆ ನತಾನಿಯೇಲನು, “ಗುರುದೇವಾ’ ದೇವರ ಪುತ್ರ ನೀವೇ; ಇಸ್ರಯೇಲರ ಅರಸ ನೀವೇ,” ಎಂದನು.  ಆಗ ಯೇಸು, “ಅಂಜೂರದ ಮರದಡಿಯಲ್ಲಿ ನಿನ್ನನ್ನು ಕಂಡೆ ಎಂದು ನಾನು ಹೇಳಿದ ಮಾತ್ರಕ್ಕೆ ಇಷ್ಟೊಂದು ವಿಶ್ವಾಸವೆ? ಇದಕ್ಕೂ ಮಿಗಿಲಾದವುಗಳನ್ನು ನೀನು ಕಾಣುವೆ,” ಎಂದು ನುಡಿದರು.  ತಮ್ಮ ಮಾತನ್ನು ಮುಂದುವರೆಸುತ್ತಾ, “ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ. ಸ್ವರ್ಗವು ತೆರೆದಿರುವುದನ್ನೂ ನರಪುತ್ರನ ಮುಖಾಂತರ ದೇವದೂತರು ಏರುವುದನ್ನೂ ಇಳಿಯುವುದನ್ನೂ ನೀವು ಕಾಣುವಿರಿ,” ಎಂದು ಹೇಳಿದರು.

28.09.20 - "ಯಾವನು ನನ್ನ ಹೆಸರಿನಲ್ಲಿ ಈ ಮಗುವನ್ನು ಸ್ವೀಕರಿಸುತ್ತಾನೋ ಅವನು ನನ್ನನ್ನೇ ಸ್ವೀಕರಿಸುತ್ತಾನೆ;"

ಮೊದಲನೇ ವಾಚನ: ಯೋಬ 1:6-22

ಒಮ್ಮೆ ಸ್ವರ್ಗನಿವಾಸಿಗಳು ಸರ್ವೇಶ್ವರಸ್ವಾಮಿಯ ಸನ್ನಿಧಿಯಲ್ಲಿ ಓಲಗಿಸಿದ್ದರು. ಸೈತಾನನೂ ಅಲ್ಲಿಗೆ ಬಂದನು.  ಸರ್ವೇಶ್ವರ ಸೈತಾನನನ್ನು ನೋಡಿ, “ಎಲ್ಲಿಂದ ಬಂದೆ?” ಎಂದು ಕೇಳಿದರು. ಅದಕ್ಕೆ ಅವನು, “ಭೂಲೋಕದಲ್ಲಿ ಗಸ್ತುತಿರುಗಿ ಬಂದಿದ್ದೇನೆ” ಎಂದನು.  ಆಗ ಸರ್ವೇಶ್ವರ, “ನನ್ನ ದಾಸ ಯೋಬನನ್ನು ಗಮನಿಸಿದೆಯಾ? ಆತನು ದೋಷರಹಿತ, ಸತ್ಯವಂತ, ದೇವರಲ್ಲಿ ಭಯಭಕ್ತಿಯುಳ್ಳವನು, ಕೆಟ್ಟದ್ದನ್ನು ತೊರೆದು ಬಾಳುವವನು. ಆತನಿಗೆ ಸರಿಸಮಾನನು ಭೂಲೋಕದಲ್ಲಿ ಎಲ್ಲಿಯೂ ಸಿಗನು,” ಎಂದು ಹೇಳಿದರು.  ಅದಕ್ಕೆ ಸೈತಾನನು ಹೀಗೆ ಎಂದನು : “ಲಾಭವಿಲ್ಲದೆ ಯೋಬನು ನಿಮ್ಮಲ್ಲಿ ಭಯಭಕ್ತಿ ಇಟ್ಟಿದ್ದಾನೆಯೇ?  ನೀವು ಆತನಿಗೂ ಆತನ ಎಲ್ಲ ಆಸ್ತಿಪಾಸ್ತಿಗೂ ಬೇಲಿ ಹಾಕಿ ಭದ್ರಪಡಿಸಿದ್ದೀರಲ್ಲವೇ? ಆತನು ಕೈ ಹಾಕಿದ ಕೆಲಸ ಸಫಲವಾಗುವಂತೆ ಮಾಡಿದ್ದೀರಲ್ಲವೆ? ಎಂದೇ ಆತನ ಸಿರಿಸಂಪತ್ತು ಈ ನಾಡಿನಲ್ಲಿ ಬೆಳೆಯುತ್ತಾ ಬಂದಿದೆ.  ಆದರೆ ನೀವು ಕೈಹಾಕಿ ಆತನ ಸೊತ್ತನ್ನೆಲ್ಲಾ ಅಳಿಸಿಬಿಡಿ. ಆಗ ಆತನು ನಿಮ್ಮನ್ನು ಮುಖಾಮುಖಿಯಾಗಿ ನಿಂದಿಸುತ್ತಾನೋ ಇಲ್ಲವೋ ಎಂದು ನೋಡುವಿರಂತೆ!” ಎಂದನು. ಸರ್ವೇಶ್ವರ ಸೈತಾನನಿಗೆ, “ನೋಡು, ಆತನ ಆಸ್ತಿಪಾಸ್ತಿಯೆಲ್ಲ ನಿನ್ನ ಕೈವಶಕ್ಕೆ ಬಿಟ್ಟಿದ್ದೇನೆ. ಆತನ ಮೈಮೇಲೆ ಮಾತ್ರ ಕೈಹಾಕಬೇಡ,” ಎಂದು ಅಪ್ಪಣೆಕೊಟ್ಟರು. ಕೂಡಲೆ ಸೈತಾನನು ಸರ್ವೇಶ್ವರರ ಸನ್ನಿಧಾನದಿಂದ ಹೊರಟುಹೋದನು. ಯೋಬನ ಆಸ್ತಿಪಾಸ್ತಿಯ ಅಳಿವು, ಪುತ್ರಪುತ್ರಿಯರ ಮರಣ ಇದಾದ ಬಳಿಕ ಯೋಬನ ಪುತ್ರಪುತ್ರಿಯರು ತಮ್ಮ ಹಿರಿಯಣ್ಣನ ಮನೆಯಲ್ಲಿ ಔತಣಮಾಡುತ್ತಿದ್ದರು.  ಆಗ ದೇವದೂತನೊಬ್ಬನು ಯೋಬನ ಬಳಿಗೆ ಬಂದು, “ನಿಮ್ಮ ಎತ್ತುಗಳು ಉಳುತ್ತಾ ಇದ್ದವು; ಕತ್ತೆಗಳು ಹತ್ತಿರದಲ್ಲೆ ಮೇಯುತ್ತಾ ಇದ್ದವು. ಅಷ್ಟರಲ್ಲಿ, ಶೆಬದವರು ಬಂದು, ಮೇಲೆ ಬಿದ್ದು, ಅವುಗಳನ್ನು ಹೊಡೆದುಕೊಂಡು ಹೋದರು. ಕೂಲಿ ಆಳುಗಳನ್ನು ಕತ್ತಿಯಿಂದ ಕೊಂದುಹಾಕಿದರು. ನಾನೊಬ್ಬನೇ ತಲೆತಪ್ಪಿಸಿಕೊಂಡು ಈ ಸುದ್ದಿಯನ್ನು ನಿಮಗೆ ಮುಟ್ಟಿಸಲು ಓಡಿಬಂದೆ,” ಎಂದನು. ಅವನು ಮಾತಾಡಿ ಮುಗಿಸುವಷ್ಟರಲ್ಲೇ ಮತ್ತೊಬ್ಬನು ಬಂದು, “ದೇವರು ಆಕಾಶದಿಂದ ಬೆಂಕಿ ಸುರಿಸಿದರು. ಅದು ಕುರಿಗಳನ್ನೂ, ಕೂಲಿ ಆಳುಗಳನ್ನೂ ಸುಟ್ಟು ಭಸ್ಮಮಾಡಿತು. ನಾನೊಬ್ಬನೇ ತಲೆತಪ್ಪಿಸಿಕೊಂಡು ಈ ಸುದ್ದಿಯನ್ನು ನಿಮಗೆ ಮುಟ್ಟಿಸಲು ಓಡಿಬಂದೆ,” ಎಂದನು. ಅಷ್ಟರಲ್ಲಿ ಇನ್ನೊಬ್ಬನು ಬಂದು, “ಕಸ್ದೀಯರು ಮೂರು ಗುಂಪುಗಳಾಗಿ ಬಂದು, ಮೇಲೆ ಬಿದ್ದು, ಒಂಟೆಗಳನ್ನು ಹೊಡೆದುಕೊಂಡುಹೋದರು. ಅಲ್ಲದೆ ಆ ಕೂಲಿ ಆಳುಗಳನ್ನು ಕತ್ತಿಯಿಂದ ಸಂಹರಿಸಿದರು. ನಾನೊಬ್ಬನೇ ತಲೆತಪ್ಪಿಸಿಕೊಂಡು ಈ ಸುದ್ದಿಯೊಂದಿಗೆ ನಿಮ್ಮ ಬಳಿಗೆ ಓಡಿಬಂದೆ,” ಎಂದನು. ಅವನು ವರದಿಮಾಡುತ್ತಿದ್ದಾಗಲೇ ಬೇರೊಬ್ಬನು ಬಂದು, “ನಿಮ್ಮ ಪುತ್ರಪುತ್ರಿಯರು ಹಿರಿಯಣ್ಣನ ಮನೆಯಲ್ಲಿ ಔತಣದಲ್ಲಿದ್ದರು.  ಆಗ ತಟ್ಟನೆ ಅರಣ್ಯ ಕಡೆಯಿಂದ ಬಿರುಗಾಳಿ ಎದ್ದಿತು; ನಾಲ್ಕು ಕಡೆಯಿಂದಲೂ ಮನೆಗೆ ಬಡಿಯಿತು. ಮನೆ ಕುಸಿದುಬಿತ್ತು. ಯುವಕಯುವತಿಯರೆಲ್ಲ ಸತ್ತುಹೋದರು. ನಾನೊಬ್ಬನೇ ತಲೆತಪ್ಪಿಸಿಕೊಂಡು ಈ ಸುದ್ದಿಯನ್ನು ನಿಮಗೆ ತಂದಿದ್ದೇನೆ,” ಎಂದು ತಿಳಿಸಿದನು. ಆಗ ಯೋಬನು ಎದ್ದು ನಿಂತು, ದುಃಖವನ್ನು ತಾಳಲಾರದೆ ತನ್ನ ಮೇಲಂಗಿಯನ್ನು ಹರಿದುಬಿಟ್ಟ, ತಲೆಯನ್ನು ಬೋಳಿಸಿಕೊಂಡ, ನೆಲದ ಮೇಲೆ ಬಿದ್ದು, ದೇವರಿಗೆ ಸಾಷ್ಟಾಂಗವೆರಗಿ: ಬರಿಗೈಯಲ್ಲಿ ಬಂದೆ ನಾನು ತಾಯಗರ್ಭದಿಂದ ಬರಿಗೈಯಲ್ಲಿ ಹಿಂತಿರುಗುವೆ ನಾನು ಇಲ್ಲಿಂದ ಸರ್ವೇಶ್ವರ ಕೊಟ್ಟ ಸರ್ವೇಶ್ವರ ತೆಗೆದುಕೊಂಡ ಆತನ ನಾಮಕ್ಕೆ ಸ್ತುತಿಸ್ತೋತ್ರ! ಎಂದನು. ಈ ಎಲ್ಲ ವಿಪತ್ತು ಬಂದೊದಗಿದರೂ ಯೋಬನು ಪಾಪಮಾಡಲಿಲ್ಲ. ದೇವರ ಮೇಲೆ ತಪ್ಪುಹೊರಿಸಲಿಲ್ಲ.

ಕೀರ್ತನೆ: 17:1, 2-3, 6-7

ಶ್ಲೋಕ: ಪುನರುದ್ಧರಿಸುವನು ಪ್ರಭು ಸಿಯೋನನು  

ಶುಭಸಂದೇಶ: ಲೂಕ 9:46-50

ಒಮ್ಮೆ, ತಮ್ಮಲ್ಲಿ ಅತಿ ಶ್ರೇಷ್ಠನು ಯಾರೆಂಬ ವಾದ ಶಿಷ್ಯರಲ್ಲಿ ಎದ್ದಿತು.  ಅವರ ಮನಸ್ಸಿನ ಆಲೋಚನೆಗಳನ್ನು ಅರಿತ ಯೇಸು, ಒಂದು ಚಿಕ್ಕ ಮಗುವನ್ನು ತಂದು ತಮ್ಮ ಪಕ್ಕದಲ್ಲಿ ನಿಲ್ಲಿಸಿಕೊಂಡು,  “ಯಾವನು ನನ್ನ ಹೆಸರಿನಲ್ಲಿ ಈ ಮಗುವನ್ನು ಸ್ವೀಕರಿಸುತ್ತಾನೋ ಅವನು ನನ್ನನ್ನೇ ಸ್ವೀಕರಿಸುತ್ತಾನೆ; ಯಾವನು ನನ್ನನ್ನು ಸ್ವೀಕರಿಸುತ್ತಾನೋ ಅವನು ನನ್ನನ್ನು ಕಳುಹಿಸಿದಾತನನ್ನೇ ಸ್ವೀಕರಿಸುತ್ತಾನೆ. ನಿಮ್ಮೆಲ್ಲರಲ್ಲಿ ಅತ್ಯಲ್ಪನಾದವನೇ ಅತ್ಯುತ್ತಮನು,” ಎಂದರು. ಆಗ ಯೊವಾನ್ನನು ಯೇಸುವಿಗೆ, “ಗುರುವೇ, ಯಾವನೋ ಒಬ್ಬನು ತಮ್ಮ ಹೆಸರಿನಲ್ಲಿ ದೆವ್ವ ಬಿಡಿಸುವುದನ್ನು ಕಂಡೆವು. ಅವನು ನಮ್ಮವನಲ್ಲದ ಕಾರಣ ಅವನನ್ನು ತಡೆದೆವು,” ಎಂದನು.  ಅದಕ್ಕೆ ಯೇಸು, “ಅವನನ್ನು ತಡೆಯಬೇಡಿ, ನಿಮ್ಮ ವಿರೋಧಿ ಅಲ್ಲದವನು ನಿಮ್ಮ ಪರವಾದಿ,” ಎಂದು ಉತ್ತರಕೊಟ್ಟರು.

27.09.20 - ಸ್ನಾನಿಕ ಯೊವಾನ್ನನು ಧರ್ಮಮಾರ್ಗವನ್ನು ತೋರಿಸಲು

ಮೊದಲನೇ ವಾಚನ:  ಯೆಜೆಕಿಯೇಲ 18:25-28


ಕರ್ತರು ಇಂತೆನ್ನುತ್ತಾರೆ: ನೀವು, ‘ಸರ್ವೇಶ್ವರನ ಕ್ರಮ ಸರಿಯಲ್ಲ’ ಎಂದು ಹೇಳುತ್ತಿದ್ದೀರಿ; ಇಸ್ರಯೇಲ್ ವಂಶದವರೇ, ನನ್ನ ಕ್ರಮವು ಸರಿಯಲ್ಲವೆ? ನಿಮ್ಮ ಕ್ರಮವೇ ಸರಿಯಲ್ಲವಷ್ಟೆ.  ಶಿಷ್ಟನು ತನ್ನ ಶಿಷ್ಟತನವನ್ನು ಬಿಟ್ಟು ಅಧರ್ಮದಿಂದಲೇ ಸಾಯಬೇಕಾಯಿತು.  ದುಷ್ಟನು ತಾನು ಮಾಡುತ್ತಿದ್ದ ದುಷ್ಟತನವನ್ನು ಬಿಟ್ಟು, ನ್ಯಾಯನೀತಿಗಳನ್ನು ನಡೆಸಿದರೆ, ತನ್ನ ಪ್ರಾಣವನ್ನು ಉಳಿಸಿಕೊಳ್ಳುವನು.  ಅವನು ಯೋಚಿಸಿ, ತಾನು ಮಾಡುತ್ತಿದ್ದ ಅಪರಾಧಗಳನ್ನೆಲ್ಲಾ ಬಿಟ್ಟದ್ದರಿಂದ ಸಾಯನು, ಖಂಡಿತ ಜೀವಿಸುವನು."

ಕೀರ್ತನೆ: 25:4-5, 6-7, 8-9

ಶ್ಲೋಕ: ನೆನಸಿಕೋ ಪ್ರಭೂ,  ನಿನ್ನ ನಿರಂತರ ಕರುಣೆಯನು 

ಎರಡನೇ ವಾಚನ: ಫಿಲಿಪ್ಪಿಯರಿಗೆ 2:1-11

ಸಹೋದರರೇ, ಕ್ರಿಸ್ತ ಯೇಸುವಿನಲ್ಲಿ ನಿಮಗೆ ಉತ್ಸಾಹ, ಉತ್ತೇಜನ, ಪ್ರೀತಿ, ಪ್ರೇರಣೆ, ಪವಿತ್ರಾತ್ಮ ಅವರ ಅನ್ಯೋನ್ಯತೆ, ದೀನದಯಾಳತೆ ಇರುವುದಾದರೆ ಐಕಮತ್ಯದಿಂದ ಬಾಳಿರಿ.  ಒಂದೇ ಮನಸ್ಸು, ಒಂದೇ ಪ್ರೀತಿ ಇರಲಿ. ನಿಮ್ಮ ಗುರಿ ಧ್ಯೇಯಗಳು ಒಂದೇ ಆಗಿರಲಿ. ಆಗ ನನ್ನ ಸಂತೋಷವು ಸಂಪೂರ್ಣಗೊಳ್ಳುವುದು. ಸ್ವಾರ್ಥಸಾಧನೆಗಾಗಲಿ, ಡಂಭಾಚಾರಕ್ಕಾಗಲಿ ಏನನ್ನೂ ಮಾಡಬೇಡಿ. ಪರಸ್ಪರ ನಮ್ರತೆಯಿಂದ ನಡೆದುಕೊಳ್ಳಿ; ಇತರರು ನಿಮಗಿಂತಲೂ ಶ್ರೇಷ್ಠರೆಂದು ಪರಿಗಣಿಸಿರಿ. ಸ್ವಹಿತವನ್ನೇ ಗಮನಿಸದೆ ಪರರ ಹಿತವನ್ನೂ ಬಯಸಿರಿ. ಕ್ರಿಸ್ತಯೇಸುವಿನಲ್ಲಿರುವ ಮನೋಭಾವ ನಿಮ್ಮಲ್ಲೂ ನೆಲಸಿರಲಿ: ದೇವಸ್ವರೂಪಿ ತಾನಾಗಿದ್ದರೂ ನಿರುತ ದೇವರಿಗೆ ಸಮನಾದ ಆ ಸಿರಿ  ಪದವಿಯನಾತ ಹಿಡಿದಿಟ್ಟುಕೊಳ್ಳಲಿಲ್ಲ ಬಿಡಲೊಲ್ಲೆನೆನುತ. ತನ್ನನ್ನೇ ಬರಿದುಮಾಡಿಕೊಂಡು ದಾಸನ ರೂಪವನು ಧರಿಸಿಕೊಂಡು ಮನುಜನಾಕಾರದಲಿ ಕಾಣಿಸಿಕೊಂಡು ನರಮಾನವರಿಗೆ ಸರಿಸಮನಾದ. ತನ್ನನ್ನೇ ಆತ ತಗ್ಗಿಸಿಕೊಂಡು ವಿಧೇಯನಾಗಿ ನಡೆದುಕೊಂಡು ಮರಣಪರಿಯಂತ ಹೌದೌದು, ಶಿಲುಬೆಯ ಮರಣಪರಿಯಂತ ವಿಧೇಯನಾದ. ಎಂತಲೇ ಪರಮೋನ್ನತ ಸ್ಥಾನಕ್ಕೇರಿಸಿದನಾತನನು ಇತ್ತನು ಹೆಸರುಗಳೊಳುತ್ತಮ ಹೆಸರನು ದೇವಪರಮನು. ಯೇಸುವಿನ ಹೆಸರಿಗೆಂದೇ ಮೊಣಕಾಲೂರಿ ಮಣಿವರು ಸ್ವರ್ಗವಾಸಿಗಳು, ಭೂನಿವಾಸಿಗಳು, ಪಾತಾಳ ಜೀವರಾಶಿಗಳು. ‘ಕ್ರಿಸ್ತಯೇಸುವೇ ಪ್ರಭು' ಎಂದೆಲ್ಲರಿಗೆ ಅರಿಕೆ ಮಾಡುವರು ಪಿತದೇವನ ಮಹಿಮೆಯನು ಈ ಪರಿ ಹೊಗಳಿ ಸಾರುವರವರು.

ಶುಭಸಂದೇಶ: ಮತ್ತಾಯ 21:28-32


ಯೇಸುಸ್ವಾಮಿ ಮುಖ್ಯಯಾಜಕರಿಗೂ ಪ್ರಜಾಪ್ರಮುಖರಿಗೂ  “ಈ ಬಗ್ಗೆ ನಿಮಗೇನು ಅನಿಸುತ್ತದೆ? ಒಬ್ಬಾತನಿಗೆ ಇಬ್ಬರು ಮಕ್ಕಳಿದ್ದರು. ಒಮ್ಮೆ ಆತ ಮೊದಲನೆಯ ಮಗನ ಹತ್ತಿರ ಬಂದು, ‘ಮಗನೇ, ಈ ಹೊತ್ತು ದ್ರಾಕ್ಷಿತೋಟಕ್ಕೆ ಹೋಗಿ ಕೆಲಸಮಾಡು’ ಎಂದ.  ಅದಕ್ಕೆ ಅವನು, ‘ನಾನು ಹೋಗುವುದಿಲ್ಲ’ ಎಂದು ಉತ್ತರವಿತ್ತ. ಆದರೂ ಅನಂತರ ಪಶ್ಚಾತ್ತಾಪಪಟ್ಟು ಅವನು ತೋಟಕ್ಕೆ ಹೋದ.  ತಂದೆ ಎರಡನೆಯ ಮಗನ ಹತ್ತಿರ ಹೋಗಿ ಅಂತೆಯೇ ತೋಟಕ್ಕೆ ಹೋಗಲು ಹೇಳಿದ. ಅವನು, ‘ಇಗೋ, ಹೋಗುತ್ತೇನಪ್ಪಾ’, ಎಂದು ಹೇಳಿದ. ಆದರೆ ಹೋಗಲೇ ಇಲ್ಲ.  ಇವರಿಬ್ಬರಲ್ಲಿ ತಂದೆಯ ಇಷ್ಟದಂತೆ ನಡೆದವನು ಯಾರು?” ಎಂದು ಯೇಸು ಕೇಳಿದರು. “ಮೊದಲನೆಯ ಮಗನೇ,” ಎಂದು ಉತ್ತರಿಸಿದರು ಅವರು. ಆಗ ಯೇಸುಸ್ವಾಮಿ, “ಸುಂಕದವರೂ ವೇಶ್ಯೆಯರೂ ನಿಮಗಿಂತ ಮೊದಲೇ ದೇವರಸಾಮ್ರಾಜ್ಯವನ್ನು ಪ್ರವೇಶಿಸುವರು ಎಂದು ನಿಮಗೆ ಸ್ಪಷ್ಟವಾಗಿ ಹೇಳುತ್ತೇನೆ.  ಸ್ನಾನಿಕ ಯೊವಾನ್ನನು ಧರ್ಮಮಾರ್ಗವನ್ನು ತೋರಿಸಲು ಬಂದನು. ನೀವು ಆತನನ್ನು ನಂಬಲಿಲ್ಲ. ಆದರೆ ಸುಂಕದವರೂ ವೇಶ್ಯೆಯರೂ ಆತನನ್ನು ನಂಬಿದರು. ಇದನ್ನು ಕಂಡ ಮೇಲೂ ನೀವು ಪಶ್ಚಾತ್ತಾಪಪಡಲಿಲ್ಲ, ಯೊವಾನ್ನನನ್ನು ನಂಬಲೂ ಇಲ್ಲ.



26.09.20 - “ಈ ನನ್ನ ಮಾತು ನಿಮ್ಮ ಕಿವಿಗೆ ಇಳಿಯಲಿ"

ಮೊದಲನೇ ವಾಚನ:  ಉಪದೇಶ 11:9--12:8

ಯುವಕನೇ, ಯೌವನದಲ್ಲಿ ಆನಂದಿಸು. ಯೌವನ ದಿನಗಳಲ್ಲಿ ಹೃತ್ಪೂರ್ವಕವಾಗಿ ಸಂತೋಷಿಸು. ಮನಸ್ಸಿಗೆ ತಕ್ಕಂತೆಯೂ ಕಣ್ಣಿಗೆ ಸರಿಬೀಳುವ ಹಾಗೆಯೂ ನಡೆದುಕೊ. ಆದರೆ ಈ ಎಲ್ಲ ವಿಷಯಗಳಲ್ಲಿ ದೇವರು ನಿನ್ನನ್ನು ನ್ಯಾಯ ವಿಚಾರಣೆಗೆ ಗುರಿಮಾಡುವರೆಂಬುದನ್ನು ಮನದಲ್ಲಿಡು. ನಿನ್ನ ಹೃದಯದಿಂದ ವ್ಯಥೆಯನ್ನೂ ನಿನ್ನ ದೇಹದಿಂದ ಯಾತನೆಯನ್ನೂ ದೂರಮಾಡು. ಯೌವನವೂ ಪ್ರಾಯವೂ ಬೇಗ ಮಾಯವಾಗುವುವು. ಆದುದರಿಂದ ಯೌವನದಲ್ಲಿ ನಿನ್ನ ಸೃಷ್ಟಿಕರ್ತನನ್ನು ಸ್ಮರಿಸಿಕೊ. ಕಷ್ಟಕರವಾದ ದಿನಗಳು ಬರುವುದಕ್ಕೆ ಮುನ್ನ, ಜೀವನ ಬೇಸರವಾಗಿದೆ ಎಂದು ನೀನು ಹೇಳುವುದಕ್ಕೆ ಮುಂಚೆ ಆತನನ್ನು ಸ್ಮರಿಸು. ಆ ಕಷ್ಟಕರವಾದ ದಿನಗಳಲ್ಲಿ ಸೂರ್ಯಚಂದ್ರನಕ್ಷತ್ರಗಳೂ ನಿನಗೆ ಮೊಬ್ಬಾಗುವುವು. ಮಳೆಯಾದ ಮೇಲೂ ಮೋಡಗಳು ಮತ್ತೆ ಬರುವುವು; ಬಲಿಷ್ಠವಾಗಿದ್ದ ನಿನ್ನ ಕಾಲುಗಳು ಬಗ್ಗುವುವು; ಹಲ್ಲುಗಳು ಉದುರಿ ಅಗಿಯುವ ಕೆಲಸ ನಿಲ್ಲುವುದು; ಕಿಟಕಿಗಳಂಥ ಕಣ್ಣುಗಳು ಮಂಕಾಗುವುವು. ಕಿವಿಗಳು ಮಂದವಾಗಿ ಹಾದಿಬೀದಿಗಳ ಶಬ್ದವು ಕೇಳಿಸವು. ಬೀಸುವ ಶಬ್ದವು ತಗ್ಗಿ ಹಕ್ಕಿಯ ಶಬ್ದಗಳಷ್ಟು ಕಿರಿಯದಾಗುವುದು; ಬೀಸುವವರ ಹಾಡೆಲ್ಲಾ ಕುಗ್ಗಿ ಹೋಗುವುದು; ದಾರಿಯಲ್ಲಿ ನಡೆವುದು ಅಪಾಯಕರವಾಗಿರುವುದು; ಹೂ ಬಿಟ್ಟ ಬಾದಾಮಿ ಮರದಂತೆ ತಲೆಗೂದಲು ನರೆತುಬಿಡುವುದು, ಮಿಡತೆಯು ಕೂಡ ಭಾರವಾಗುವುದು; ಆಸೆ ಕುಂದಿಹೋಗುವುದು. ನಿನ್ನ ನಿತ್ಯಗೃಹಕ್ಕೆ ತೆರಳಿರುವೆ, ಗೋಳಾಟದವರು ಬೀದಿಯಲ್ಲಿ ಕಾಣಿಸಿಕೊಳ್ಳುವರು, ಬೆಳ್ಳಿಯ ಸರ ಕಿತ್ತುಹೋಗುವುದು, ಚಿನ್ನದಬಟ್ಟಲು ಜಜ್ಜಿ ಹೋಗುವುದು; ಮಡಕೆ ಬುಗ್ಗೆಯ ಹತ್ತಿರವೆ ಒಡೆಯುವುದು, ಬಾವಿಯ ರಾಟೆ ಮುರಿಯುವುದು. ಮಣ್ಣಿನ ದೇಹ ತನ್ನ ಭೂಮಿಗೆ ಸೇರಿ ಹೋಗುವುದು; ಆತ್ಮವು ತನ್ನನ್ನು ದಯಪಾಲಿಸಿದ ದೇವರ ಬಳಿಗೆ ಸೇರುವುದು, (ಇಷ್ಟರೊಳಗೆ ನಿನ್ನ ಸೃಷ್ಟಿಕರ್ತನನ್ನು ಸ್ಮರಿಸದಿರಬೇಡ). “ವ್ಯರ್ಥವೇ ವ್ಯರ್ಥ ! ಸಮಸ್ತವೂ ವ್ಯರ್ಥ!!” ಎನ್ನುತ್ತಾನೆ ಉಪದೇಶಕ.

ಕೀರ್ತನೆ: 90:3-4, 5-6, 12-13, 14, 17

ಶ್ಲೋಕ: ಪ್ರಭೂ, ತಲತಲಾಂತರಕ್ಕೂ ಶ್ರೀನಿವಾಸ ನಿನೆಮಗೆ 

ಶುಭಸಂದೇಶ: ಲುಕ 9:43-45


ಯೇಸುಸ್ವಾಮಿ ಮಾಡಿದ ಸಕಲ ಮಹತ್ಕಾರ್ಯಗಳನ್ನು ಕುರಿತು ಜನರೆಲ್ಲರೂ ಸೋಜಿಗಪಡುತ್ತಿರುವಲ್ಲಿ, ಶಿಷ್ಯರಿಗೆ,  “ಈ ನನ್ನ ಮಾತು ನಿಮ್ಮ ಕಿವಿಗೆ ಇಳಿಯಲಿ. ಅದೇನೆಂದರೆ: “ನರಪುತ್ರನು ಜನರ ವಶಕ್ಕೆ ಒಪ್ಪಿಸಲ್ಪಡಲಿದ್ದಾನೆ,” ಎಂದರು.  ಯೇಸು ಹೇಳಿದ ಈ ಮಾತನ್ನು ಶಿಷ್ಯರು ಗ್ರಹಿಸಿಕೊಳ್ಳಲಿಲ್ಲ; ಒಗಟಿನ ಹಾಗೆ ಇದ್ದುದರಿಂದ ಅರ್ಥಮಾಡಿಕೊಳ್ಳಲಿಲ್ಲ. ಅದನ್ನು ಕುರಿತು ಯೇಸುವನ್ನು ಕೇಳುವುದಕ್ಕೂ ಅವರು ಅಂಜಿದರು.

25.09.20 - “ದೇವರಿಂದ ಅಭಿಷಿಕ್ತರಾದ ಲೋಕೋದ್ಧಾರಕ ತಾವೇ"

ಮೊದಲನೇ ವಾಚನ: ಉಪದೇಶ 3:1-11

ಪ್ರತಿಯೊಂದು ಕಾಲಕ್ಕೂ ನಿಗದಿಯಾದ ಕಾಲವಿದೆ. ಜಗತ್ತಿನಲ್ಲಿ ನಡೆಯುವ ಒಂದೊಂದು ಕೆಲಸಕ್ಕೂ ಸೂಕ್ತ ಸಮಯವಿದೆ: ಹುಟ್ಟುವ ಸಮಯ, ಸಾಯುವ ಸಮಯ ನೆಡುವ ಸಮಯ, ನೆಟ್ಟದ್ದನ್ನು ಕೀಳುವ ಸಮಯ. ಕೊಲ್ಲುವ ಸಮಯ, ಗುಣಪಡಿಸುವ ಸಮಯ ಕೆಡವಿಬಿಡುವ ಸಮಯ, ಕಟ್ಟಿ ಎಬ್ಬಿಸುವ ಸಮಯ. ಅಳುವ ಸಮಯ, ನಗುವ ಸಮಯ, ಗೋಳಾಡುವ ಸಮಯ, ಕುಣಿದಾಡುವ ಸಮಯ. ಕಲ್ಲುಗಳನ್ನು ಬಿಸಾಡುವ ಸಮಯ, ಕಲ್ಲುಗಳನ್ನು ಕೂಡಿಸಿಡುವ ಸಮಯ ಆಲಿಂಗನ ಮಾಡುವ ಸಮಯ, ಆಲಿಂಗನ ಮಾಡದ ಸಮಯ. ಗಳಿಸುವ ಸಮಯ, ಕಳೆದುಕೊಳ್ಳುವ ಸಮಯ ಕಾಪಾಡುವ ಸಮಯ, ಬಿಸಾಡುವ ಸಮಯ. ಹರಿಯುವ ಸಮಯ, ಹೊಲಿಯುವ ಸಮಯ ಸುಮ್ಮನಿರುವ ಸಮಯ, ಮಾತಾಡುವ ಸಮಯ. ಪ್ರೀತಿಸುವ ಸಮಯ, ದ್ವೇಷಿಸುವ ಸಮಯ ಯುದ್ಧಮಾಡುವ ಸಮಯ, ಸಮಾಧಾನಮಾಡುವ ಸಮಯ. ಹೀಗೆ ಒಂದೊಂದು ಕೆಲಸಕ್ಕೂ ತಕ್ಕ ಸಮಯವುಂಟು. ಕಷ್ಟಪಟ್ಟು ಮಾಡುವ ದುಡಿಮೆಯಿಂದ ಒಬ್ಬನಿಗೆ ಸಿಗುವ ಲಾಭವಾದರೂ ಏನು?  ನರಮಾನವರ ಕರ್ತವ್ಯವೆಂದು ದೇವರು ವಿಧಿಸಿರುವ ದುಡಿಮೆಯನ್ನು ನಾನು ಗಮನಿಸಿದ್ದೇನೆ.  ಒಂದೊಂದು ವಸ್ತುವನ್ನೂ ಸಮಯಕ್ಕೆ ತಕ್ಕಂತೆ ಸುಂದರವಾಗಿ ನಿರ್ಮಿಸಿದ್ದಾರೆ ದೇವರು. ಇದಲ್ಲದೆ, ಮನುಷ್ಯನ ಹೃದಯದಲ್ಲಿ ಅಮರತ್ವದ ಪ್ರತಿಯನ್ನು ಮೂಡಿಸಿದ್ದಾರೆ. 

ಕೀರ್ತನೆ: 144:1-2, 3-4

ಶ್ಲೋಕ: ಸ್ತುತಿಸ್ತೋತ್ರ ಪ್ರಭುವಿಗೆ, ನನ್ನ ಆಶ್ರಯ ದುರ್ಗಕೆ 

ಶುಭಸಂದೇಶ: ಲೂಕ 9:18-22


ಒಮ್ಮೆ ಯೇಸುಸ್ವಾಮಿ ಏಕಾಂಗಿಯಾಗಿ ಪ್ರಾರ್ಥನೆ ಮಾಡುತ್ತಿದ್ದಾಗ ಶಿಷ್ಯರು ಸಮೀಪದಲ್ಲೇ ಇದ್ದರು. “ಜನಸಾಮಾನ್ಯರು ನನ್ನನ್ನು ಯಾರೆನ್ನುತ್ತಾರೆ?” ಎಂದು ಯೇಸು ಅವರನ್ನು ಪ್ರಶ್ನಿಸಿದರು.  ಅದಕ್ಕೆ ಅವರು, “ಹಲವರು ತಮ್ಮನ್ನು ‘ಸ್ನಾನಿಕ ಯೊವಾನ್ನ’ ಎನ್ನುತ್ತಾರೆ; ಕೆಲವರು ‘ಎಲೀಯನು’ ಎನ್ನುತ್ತಾರೆ; ಮತ್ತೆ ಕೆಲವರು ‘ಪ್ರಾಚೀನ ಪ್ರವಾದಿಗಳಲ್ಲಿ ಒಬ್ಬನು ಮರಳಿ ಜೀವಂತನಾಗಿದ್ದಾನೆ’ ಎನ್ನುತ್ತಾರೆ,” ಎಂದು ಉತ್ತರವಿತ್ತರು. ಆಗ ಯೇಸು, “ಆದರೆ ನೀವು ನನ್ನನ್ನು ಯಾರೆನ್ನುತ್ತೀರಿ?” ಎಂದು ಪುನಃ ಪ್ರಶ್ನಿಸಿದರು. ಅದಕ್ಕೆ ಪೇತ್ರನು, “ದೇವರಿಂದ ಅಭಿಷಿಕ್ತರಾದ ಲೋಕೋದ್ಧಾರಕ ತಾವೇ" ಎಂದು ಉತ್ತರ ಕೊಟ್ಟನು.  ಈ ವಿಷಯವನ್ನು ಯಾರಿಗೂ ತಿಳಿಸಬಾರದೆಂದು ಯೇಸು ಶಿಷ್ಯರನ್ನು ಆಜ್ಞಾಪೂರ್ವಕವಾಗಿ ಎಚ್ಚರಿಸಿದರು. ಇದಲ್ಲದೆ, “ನರಪುತ್ರನು ಕಠಿಣವಾದ ಯಾತನೆಯನ್ನು ಅನುಭವಿಸಬೇಕಾಗಿದೆ. ಸಭಾಪ್ರಮುಖರಿಂದಲೂ ಮುಖ್ಯಯಾಜಕರಿಂದಲೂ ಧರ್ಮಶಾಸ್ತ್ರಿಗಳಿಂದಲೂ ಆತನು ತಿರಸ್ಕೃತನಾಗಿ ಕೊಲ್ಲಲ್ಪಡುವನು. ಆದರೆ ಮೂರನೇ ದಿನ ಆತನು ಪುನರುತ್ಥಾನ ಹೊಂದುವನು," ಎಂದು ಅವರಿಗೆ ತಿಳಿಸಿದರು.

24.09.20 - ‘ಯೊವಾನ್ನನು ಮರಳಿ ಜೀವಂತನಾಗಿ ಎದ್ದಿದ್ದಾನೆ’

ಮೊದಲನೇ ವಾಚನ: ಉಪದೇಶಕ 1:2-11


ಉಪದೇಶಕನು ಹೇಳುವುದನ್ನು ಕೇಳಿ: ವ್ಯರ್ಥಗಳಲ್ಲಿ ವ್ಯರ್ಥ, ವ್ಯರ್ಥವೇ ವ್ಯರ್ಥ, ಎಲ್ಲವೂ ವ್ಯರ್ಥ! ಈ ಲೋಕದಲ್ಲಿ ಮನುಷ್ಯನು ಪಡುವ ಎಲ್ಲಾ ಪ್ರಯಾಸದಿಂದ ಅವನಿಗೆ ದೊರಕುವ ಲಾಭವಾದರೂ ಏನು? ಒಂದು ಸಂತತಿ ಗತಿಸುತ್ತದೆ, ಮತ್ತೊಂದು ಸಂತತಿ ಬರುತ್ತದೆ, ಭೂಮಿಯಾದರೋ ಶಾಶ್ವತವಾಗಿ ನಿಲ್ಲುತ್ತದೆ. ಸೂರ್ಯನು ಮೂಡುತ್ತಾನೆ, ಸೂರ್ಯನು ಮುಳುಗುತ್ತಾನೆ, ತಾನು ಹೊರಟ ಸ್ಥಳಕ್ಕೆ ಮರಳಿ ಓಡುತ್ತಾನೆ. ಗಾಳಿ ದಕ್ಷಿಣಕ್ಕೆ ಬೀಸುತ್ತದೆ, ಉತ್ತರದ ಕಡೆಗೆ ತಿರುಗುತ್ತದೆ, ಸುತ್ತುತ್ತಾ ಸುತ್ತುತ್ತಾ ಹೋಗಿ ಹಿಂತಿರುಗಿ ಬರುತ್ತದೆ. ನದಿಗಳು ಹರಿದು ಸಮುದ್ರವನ್ನು ಸೇರುತ್ತವೆ, ಆದರೂ ಸಮುದ್ರವು ತುಂಬುವುದಿಲ್ಲ. ಅವು ಎಲ್ಲಿಂದ ಹರಿದು ಬರುತ್ತವೋ ಅಲ್ಲಿಗೆ ಹಿಂತಿರುಗಿ ಹೋಗುತ್ತವೆ. ಮನುಷ್ಯನಿಂದ ವಿವರಿಸಲಾಗದಷ್ಟು ಎಲ್ಲವೂ ನೀರಸ. ಎಷ್ಟು ನೋಡಿದರೂ ಕಣ್ಣಿಗೆ ತೃಪ್ತಿಯಿಲ್ಲ. ಎಷ್ಟು ಕೇಳಿದರೂ ಕಿವಿಗೆ ದಣಿವಿಲ್ಲ. ಇದ್ದದ್ದೇ ಇರುತ್ತದೆ, ನಡೆದದ್ದೇ ನಡೆಯುತ್ತದೆ. ಲೋಕದಲ್ಲಿ ಹೊಸದೇನೂ ಇಲ್ಲ.  ಇಗೋ, ಹೊಸದು ಎನಿಸುಕೊಳ್ಳುವ ವಸ್ತು ಇದ್ದರೂ ಅದು ನಮಗಿಂತ ಮುಂಚೆಯೇ ಪುರಾತನ ಕಾಲದಲ್ಲೇ ಇದ್ದುದು. ಹಿಂದಿನ ಕಾಲದವರ ಜ್ಞಾಪಕವು ಇಂದಿನವರಿಗಿಲ್ಲ. ಮುಂದಿನ ಕಾಲದವರ ಜ್ಞಾಪಕವು ಅವರಿಗಿಂತ ಮುಂದೆ ಬರುವವರಿಗೆ ಇರುವುದಿಲ್ಲ.

ಕೀರ್ತನೆ: 90:3-4, 5-6, 12-13, 14, 17

ಶ್ಲೋಕ: ಪ್ರಭೂ, ತಲತಲಾಂತರಕೂ ಶ್ರೀನಿವಾಸ ನೀನೆಮಗೆ 

ಶುಭಸಂದೇಶ: ಲೂಕ 9:7-9

ನಡೆಯುತ್ತಿದ್ದ ಎಲ್ಲ ಸಂಗತಿಗಳು ಸಾಮಂತರಾಜ ಹೆರೋದನ ಕಿವಿಗೆ ಬಿದ್ದುವು. ಅವನ ಮನಸ್ಸು ಕಳವಳಗೊಂಡಿತ್ತು. ಏಕೆಂದರೆ, ‘ಯೊವಾನ್ನನು ಮರಳಿ ಜೀವಂತನಾಗಿ ಎದ್ದಿದ್ದಾನೆ’ ಎಂದು ಕೆಲವರೂ ‘ಎಲೀಯನು ಪುನಃ ಕಾಣಿಸಿಕೊಂಡಿದ್ದಾನೆ’, ಎಂದು ಇನ್ನು ಕೆಲವರೂ ‘ಪ್ರಾಚೀನ ಪ್ರವಾದಿಗಳಲ್ಲಿ ಒಬ್ಬನು ಮರಳಿ ಜೀವಂತನಾಗಿದ್ದಾನೆ,’ ಎಂದು ಮತ್ತೆ ಕೆಲವರೂ ಹೇಳುತ್ತಿದ್ದರು. ಹೆರೋದನಾದರೋ, ‘ಯೊವಾನ್ನನೇ! ಅವನನ್ನು ನಾನೇ ಶಿರಚ್ಛೇದನ ಮಾಡಿಸಿದೆನಲ್ಲಾ; ಮತ್ತೆ ಇವನಾರು? ಇವನ ಬಗ್ಗೆ ಇಂಥಾ ವಿಷಯಗಳನ್ನೆಲ್ಲ ಕೇಳುತ್ತಾ ಇರುವೆನಲ್ಲಾ!’ ಎಂದುಕೊಂಡು, ಯೇಸುವನ್ನು ನೋಡಲು ಅವಕಾಶ ಹುಡುಕುತ್ತಿದ್ದನು. 

23.09.20 - "ನಿಮ್ಮನ್ನು ಸ್ವಾಗತಿಸದೆ ಹೋದಲ್ಲಿ, ನೀವು ಆ ಊರನ್ನು ಬಿಟ್ಟುಹೋಗುವಾಗ ನಿಮ್ಮ ಪಾದಕ್ಕೆ ಹತ್ತಿದ ಧೂಳನ್ನು ಕೂಡ ಝಾಡಿಸಿ ಬಿಡಿ"

ಮೊದಲನೇ ವಾಚನ: ಜ್ಞಾನೋಕ್ತಿಗಳು 30:5-9

ದೇವರ ಒಂದೊಂದು ಮಾತೂ ಪರಿಶುದ್ಧ; ಆತನೇ ಶರಣರ ಖೇಡ್ಯ; ಆತನ ಮಾತುಗಳಿಗೆ ಯಾವುದನ್ನೂ ಸೇರಿಸಬೇಡ, ಇಲ್ಲವಾದರೆ ಆತ ನಿನ್ನನ್ನು ಖಂಡಿಸಿಯಾನು, ನೀನು ಸುಳ್ಳುಗಾರನಾಗಿ ತೋರಿ ಬಂದೀಯೆ! ನಿನ್ನಿಂದ ಎರಡು ವರಗಳನ್ನು ಬೇಡಿಕೊಂಡಿದ್ದೇನೆ: ನಿರಾಕರಿಸಬೇಡ, ನಾನು ಸಾಯುವುದರೊಳಗೆ ಅವುಗಳನ್ನು ಅನುಗ್ರಹಿಸು: ಕಪಟವಾದುದನ್ನು, ಮಿಥ್ಯವಾದುದನ್ನು ನನ್ನಿಂದ ತೊಲಗಿಸು; ನನಗೆ ಬಡತನ ಬೇಡ, ಐಶ್ವರ್ಯವೂ ಬೇಡ, ಸಾಕಷ್ಟು ಆಹಾರವನ್ನು ಮಾತ್ರ ನೀಡು. ಎಲ್ಲವೂ ಇದ್ದರೆ “ಸರ್ವೇಶ್ವರನು ಯಾರು?” ಎಂದು ನಿನ್ನನ್ನೆ ನಾನು ತಿರಸ್ಕರಿಸೇನು. ಬಡವನಾದರೆ ಕಳ್ಳತನ ಮಾಡಿ ನನ್ನ ದೇವರಾದ ನಿನ್ನ ಹೆಸರಿಗೆ ಅಪಕೀರ್ತಿ ತಂದೇನು.

ಕೀರ್ತನೆ: 119:29, 72, 89, 101, 104, 163

ಶ್ಲೋಕ: ನಿನ್ನ ವಾಕ್ಯ ನನ್ನ ಕಾಲಿನ ನಡೆಗೆ ಕೈದೀಪ 

ಶುಭಸಂದೇಶ: ಲೂಕ 9:1-6 

ಯೇಸುಸ್ವಾಮಿ ಹನ್ನೆರಡು ಮಂದಿ ಪ್ರೇಷಿತರನ್ನು ಒಟ್ಟಿಗೆ ಕರೆದು ಎಲ್ಲ ದೆವ್ವಗಳನ್ನು ಬಿಡಿಸಲೂ ರೋಗ ನಿವಾರಣೆಮಾಡಲೂ ಅವರಿಗೆಶಕ್ತಿಯನ್ನು ಮತ್ತು ಅಧಿಕಾರವನ್ನು ಕೊಟ್ಟರು. ಅನಂತರ ದೇವರ ಸಾಮ್ರಾಜ್ಯವನ್ನು ಕುರಿತು ಬೋಧಿಸುವುದಕ್ಕೂ ರೋಗಿಗಳನ್ನು ಗುಣಪಡಿಸುವುದಕ್ಕೂ ಅವರನ್ನು ಕಳುಹಿಸಿದರು. ಕಳುಹಿಸುವಾಗ ಅವರಿಗೆ ಇಂತೆಂದರು, “ಪ್ರಯಾಣಕ್ಕೆಂದು ಏನನ್ನೂ ತೆಗೆದುಕೊಳ್ಳಬೇಡಿ; ದಂಡ, ಜೋಳಿಗೆ, ಬುತ್ತಿ ಅಥವಾ ಹಣ ಯಾವುದೂ ಬೇಲೂಡ. ಎರಡು ಅಂಗಿಗಳೂ ಬೇಕಾಗಿಲ್ಲ. ಯಾವ ಮನೆಯವರು ನಿಮ್ಮನ್ನು ಬರಮಾಡಿಕೊಳ್ಳುತ್ತಾರೋ ಆ ಮನೆಯಲ್ಲೇ ತಂಗಿರಿ. ಅಲ್ಲಿಂದಲೇ ಮುಂದಕ್ಕೆ ಸಾಗಿರಿ. ಯಾವ ಊರಿನವರಾದರೂ ನಿಮ್ಮನ್ನು ಸ್ವಾಗತಿಸದೆ ಹೋದಲ್ಲಿ, ನೀವು ಆ ಊರನ್ನು ಬಿಟ್ಟುಹೋಗುವಾಗ ನಿಮ್ಮ ಪಾದಕ್ಕೆ ಹತ್ತಿದ ಧೂಳನ್ನು ಕೂಡ ಝಾಡಿಸಿಬಿಡಿ. ಅದು ಅವರ ವಿರುದ್ಧ ಸಾಕ್ಷಿಯಾಗಿರಲಿ,” ಎಂದರು. ಪ್ರೇಷಿತರು ಹೊರಟು ಹಳ್ಳಿಹಳ್ಳಿಗೂ ಹೋಗಿ ಎಲ್ಲ ಕಡೆ ಶುಭಸಂದೇಶವನ್ನು ಬೋಧಿಸಿದರು; ರೋಗಿಗಳನ್ನು ಗುಣಪಡಿಸಿದರು.

22.09.20 - “ದೇವರ ವಾಕ್ಯವನ್ನು ಕೇಳಿ ಅದರಂತೆ ನಡೆಯುವವರೇ ನನಗೆ ತಾಯಿ ಮತ್ತು ಅಣ್ಣತಮ್ಮಂದಿರು,”

ಮೊದಲನೇ ವಾಚನ: ಜ್ಞಾನೋಕ್ತಿಗಳು  21:1-6, 10-13

ರಾಜನ ಹೃದಯ ಸರ್ವೇಶ್ವರನ ಕೈಯಲ್ಲಿ; ತಿರುಗಿಸಬಲ್ಲ ಆತ ಅದನ್ನು ನೀರಿನ ಕಾಲುವೆಯ ಪರಿ. ಮಾನವರ ನಡವಳಿಕೆ ಅವರವರ ನೋಟಕ್ಕೆ ನೇರ; ಅವರ ಅಂತರಂಗವನ್ನು ವೀಕ್ಷಿಸಬಲ್ಲವನೋ ಸರ್ವೇಶ್ವರ. ನ್ಯಾಯನೀತಿಗಳು ಬಲಿಯರ್ಪಣೆಗಿಂತ ಶ್ರೇಷ್ಠ; ಸರ್ವೇಶ್ವರನಿಗೆ ಅವು ಬಲು ಇಷ್ಟ. ಗರ್ವದ ನೋಟ, ಉಬ್ಬಿದ ಎದೆ, ಇವು ದುರುಳರೊಳು ಕಾಣುವ ಪಾಪದ ಕಿಡಿಗಳು. ಶ್ರಮಜೀವಿಗಳ ಯೋಜನೆಯಿಂದ ಸಮೃದ್ಧಿ; ತಾಳ್ಮೆಯಿಲ್ಲದ ತ್ವರೆಯಿಂದ ಅಧೋಗತಿ. ಹಬೆಯಂತೆ ನಾಪತ್ತೆ ಸುಳ್ಳಿನಿಂದ ಸಿಕ್ಕಿದ ಸಂಪತ್ತು; ಮೃತ್ಯುಪಾಶದಂತೆ ಅದೊಂದು ವಿಪತ್ತು. ದುರಾತ್ಮನ ಮನಸ್ಸು ಕೇಡಿನ ಮೇಲೆ; ದಯೆತೋರಿಸನಾತ ನೆರೆಯವನ ಮೇಲೆ. ಕುಚೋದ್ಯನಿಗೆ ದಂಡನೆಯಾದರೆ ಮುಗ್ಧನಿಗೆ ಜ್ಞಾನಗಳಿಕೆ; ಜ್ಞಾನಿಗೆ ಶಿಕ್ಷೆಯಾದರೆ ತಾನೆ ಹೊಂದುವನು ತಿಳುವಳಿಕೆ. ಸತ್ಯಸ್ವರೂಪನ ದೃಷ್ಟಿ ದುಷ್ಟರ ಮನೆಯ ಮೇಲೆ; ಆ ದುರುಳರನ್ನು ದಬ್ಬಿಬಿಡುವನು ಕೇಡಿಗೆ. ಬಡವನ ಮೊರೆಗೆ ಕಿವಿ ಮುಚ್ಚಿಕೊಳ್ಳುವವನೇ, ನೀನೇ ಮೊರೆಯಿಡುವಾಗ ಉತ್ತರಕೊಡುವವರಾರು ನಿನಗೆ?

ಕೀರ್ತನೆ: 119:1, 27, 30, 34, 35, 44

ಶ್ಲೋಕ: ಎನ್ನ ನಡೆಸು ಪ್ರಭೂ, ನಿನ್ನ ಆಜ್ಞಮಾರ್ಗದಲಿ 

ಶುಭಸಂದೇಶ: ಲೂಕ 8:19-21


ಯೇಸುಸ್ವಾಮಿಯ ತಾಯಿ ಹಾಗೂ ಸಹೋದರರು ಯೇಸು ಇದ್ದೆಡೆಗೆ ಬಂದರು. ಆದರೆ ಜನಸಂದಣಿಯ ನಿಮಿತ್ತ ಹತ್ತಿರಕ್ಕೆ ಬರಲಾಗಲಿಲ್ಲ.  ಯೇಸುವಿಗೆ, “ನಿಮ್ಮ ತಾಯಿಯು ಮತ್ತು ಸಹೋದರರು ನಿಮ್ಮನ್ನು ಕಾಣಬೇಕೆಂದು ಹೊರಗೆ ನಿಂತಿದ್ದಾರೆ,” ಎಂದು ತಿಳಿಸಲಾಯಿತು.  ಅದಕ್ಕೆ ಯೇಸು, “ದೇವರ ವಾಕ್ಯವನ್ನು ಕೇಳಿ ಅದರಂತೆ ನಡೆಯುವವರೇ ನನಗೆ ತಾಯಿ ಮತ್ತು ಅಣ್ಣತಮ್ಮಂದಿರು,” ಎಂದರು.

21.09.20 - “ವೈದ್ಯನ ಅವಶ್ಯಕತೆ ಇರುವುದು ರೋಗಿಗಳಿಗೆ; ಆರೋಗ್ಯವಂತರಿಗಲ್ಲ"

ಮೊದಲನೇ ವಾಚನ: ಎಫೆಸಿಯರಿಗೆ 4:1-7, 11-13 

ಪ್ರಭುವಿನ ಸೇವೆಯ ನಿಮಿತ್ತ ಸೆರೆಯಾಳಾಗಿ ಇರುವ ನಾನು ನಿಮ್ಮಲ್ಲಿ ಬಿನ್ನವಿಸುವುದು ಏನೆಂದರೆ: ದೇವರ ಕರೆಗೆ ಅನುಗುಣವಾಗಿ ಯೋಗ್ಯ ಬಾಳುವೆ ನಡೆಸಿರಿ.  ಯಾವಾಗಲೂ ದೀನದಯಾಳತೆ, ವಿನಯಶೀಲತೆ ಹಾಗೂ ಶಾಂತಿಸಮಾಧಾನವುಳ್ಳವರಾಗಿರಿ. ಪರಸ್ಪರ ಪ್ರೀತಿಯಿಂದಲೂ ಸಹನೆಯಿಂದಲೂ ವರ್ತಿಸಿರಿ. ಪವಿತ್ರಾತ್ಮರಿಂದ ಉಂಟಾಗುವ ಐಕ್ಯತೆಯನ್ನು ಕಾಪಾಡಿಕೊಳ್ಳಲು ಆಸಕ್ತರಾಗಿರಿ. ಅದು ನಿಮ್ಮನ್ನು ಸಮಾಧಾನದಲ್ಲಿ ಬಂಧಿಸುವುದು. ನೀವೆಲ್ಲರೂ ಒಂದೇ ಶರೀರಕ್ಕೆ ಸೇರಿದವರು; ಒಬ್ಬರೇ ಪವಿತ್ರಾತ್ಮರನ್ನು ಪಡೆದವರು; ಒಂದೇ ನಿರೀಕ್ಷೆಗಾಗಿ ಕರೆಹೊಂದಿದವರು. ನಮ್ಮೆಲ್ಲರಿಗೂ ಪ್ರಭು ಒಬ್ಬರೇ; ವಿಶ್ವಾಸವೂ ಒಂದೇ; ದೀಕ್ಷಾಸ್ನಾನವೂ ಒಂದೇ. ದೇವರು ಒಬ್ಬರೇ, ಸರ್ವರ ತಂದೆಯು ಅವರೇ; ಸರ್ವಶ್ರೇಷ್ಠರೂ ಅವರೇ; ಸರ್ವರ ಮೂಲಕ ಕಾರ್ಯ ನಿರ್ವಹಿಸುವವರೂ ಅವರೇ ಮತ್ತು ಸಮಸ್ತರಲ್ಲಿ ವಾಸಿಸುವವರೂ ಅವರೇ. ಆದರೂ ನಮ್ಮಲ್ಲಿ ಪ್ರತಿಯೊಬ್ಬನೂ ಕ್ರಿಸ್ತಯೇಸು ಅನುಗ್ರಹಿಸುವ ಪ್ರಕಾರವೇ ವರಗಳನ್ನು ಪಡೆದಿದ್ದಾನೆ. ಈ ವ್ಯಕ್ತಿ ನರಮಾನವರಿಗೆ ವರದಾನಗಳನ್ನಿತ್ತರು. ಕೆಲವರನ್ನು ಪ್ರೇಷಿತರನ್ನಾಗಿಯೂ ಕೆಲವರನ್ನು ಸಭಾಪಾಲಕರನ್ನಾಗಿಯೂ ಮತ್ತು ಬೋಧಕರನ್ನಾಗಿಯೂ ನೇಮಿಸಿದರು.  ದೇವಜನರನ್ನು ಪರಿಣಿತರನ್ನಾಗಿಸಿ ದೇವರ ಸೇವೆಗೆ ಸಿದ್ಧಗೊಳಿಸಲೆಂದು ಮತ್ತು ಯೇಸುಕ್ರಿಸ್ತರ ದೇಹವಾದ ಧರ್ಮಸಭೆ ಅಭಿವೃದ್ಧಿಹೊಂದಲೆಂದು ಈ ವರಗಳನ್ನು ಅವರಿಗೆ ನೀಡಿದರು.  ಹೀಗೆ ನಾವೆಲ್ಲರೂ ಒಂದೇ ವಿಶ್ವಾಸದಿಂದಲೂ ದೇವರ ಪುತ್ರನನ್ನು ಕುರಿತ ಜ್ಞಾನದಿಂದಲೂ ಐಕಮತ್ಯವನ್ನು ಮತ್ತು ಪರಿಪಕ್ವತೆಯನ್ನು ಪಡೆಯುತ್ತೇವೆ. ಜ್ಞಾನಾರ್ಜನೆಯನ್ನು ಪಡೆದವರಾಗಿ, ಕ್ರಿಸ್ತಯೇಸುವಿನ ಪರಿಪೂರ್ಣತೆಯ ಮಟ್ಟವನ್ನು ಮುಟ್ಟುತ್ತೇವೆ. 

ಕೀರ್ತನೆ: 19:2-3, 4-5

ಶ್ಲೋಕ: ಅವುಗಳ ನುಡಿಮಾತು ವ್ಯಾಪಿಸಿದೆ ಜಗದಾದ್ಯಂತ 

ಶುಭಸಂದೇಶ: ಮತ್ತಾಯ 9:9-13


ಯೇಸುಸ್ವಾಮಿ ಆ ಸ್ಥಳವನ್ನು ಬಿಟ್ಟು ಮುಂದಕ್ಕೆ ಹೋಗುತ್ತಿದ್ದಾಗ ಮತ್ತಾಯ ಎಂಬವನನ್ನು ಕಂಡರು. ಅವನು ಸುಂಕ ವಸೂಲಿಗಾಗಿ ಉಕ್ಕಡದಲ್ಲಿ ಕುಳಿತಿದ್ದನು. “ನನ್ನನ್ನು ಹಿಂಬಾಲಿಸು,” ಎಂದು ಹೇಳಿ ಯೇಸು ಅವನನ್ನು ಕರೆದರು. ಮತ್ತಾಯನು ಎದ್ದು ಅವರನ್ನು ಹಿಂಬಾಲಿಸಿದನು. ಇದಾದ ಮೇಲೆ ಯೇಸುಸ್ವಾಮಿ ಮತ್ತಾಯನ ಮನೆಯಲ್ಲಿ ಊಟಕ್ಕೆ ಕುಳಿತಿದ್ದರು. ಬಹುಮಂದಿ ‘ಸುಂಕದವರೂ’ ‘ಪಾಪಿಷ್ಠರೂ’ ಅಲ್ಲಿಗೆ ಬಂದರು. ಯೇಸು ಮತ್ತು ಅವರ ಶಿಷ್ಯರು ಕುಳಿತಿದ್ದ ಪಂಕ್ತಿಯಲ್ಲೇ ಇವರೂ ಊಟಕ್ಕೆ ಕುಳಿತರು.  ಫರಿಸಾಯರು ಇದನ್ನು ಕಂಡದ್ದೇ ಯೇಸುವಿನ ಶಿಷ್ಯರನ್ನು ಉದ್ದೇಶಿಸಿ, “ನಿಮ್ಮ ಗುರು ಇಂತಹ ಬಹಿಷ್ಕೃತ ಜನರ ಜೊತೆಯಲ್ಲಿ ಊಟಮಾಡುವುದೇ?’ ಎಂದು ಆಕ್ಷೇಪಿಸಿದರು.  ಇದನ್ನು ಕೇಳಿಸಿಕೊಂಡ ಯೇಸು, “ವೈದ್ಯನ ಅವಶ್ಯಕತೆ ಇರುವುದು ರೋಗಿಗಳಿಗೆ; ಆರೋಗ್ಯವಂತರಿಗಲ್ಲ.  ನೀವು ಹೋಗಿ, ನನಗೆ ಬೇಕಾದುದು ದಯೆ, ಯಜ್ಞಬಲಿಯಲ್ಲ’ ಎಂದು ಪವಿತ್ರಗ್ರಂಥದಲ್ಲಿ ಬರೆದಿರುವ ವಾಕ್ಯದ ಅರ್ಥವನ್ನು ಕಲಿತುಕೊಳ್ಳಿ. ನಾನು ಕರೆಯಲು ಬಂದಿರುವುದು ಧರ್ಮಿಷ್ಠರನ್ನಲ್ಲ, ಪಾಪಿಷ್ಠರನ್ನು,” ಎಂದರು.

20.09.20 - "ಕಡೆಯವರು ಮೊದಲಿನವರಾಗುವರು; ಮೊದಲಿನವರು ಕಡೆಯವರಾಗುವರು"

ಮೊದಲನೇ ವಾಚನ: ಯೆಶಾಯ 55:6-9

ಅರಸಿರಿ ಸರ್ವೇಶ್ವರನನು ಆತ ದೊರಕುವ ವೇಳೆಯಲಿ ವಿನಂತಿಸಿರಿ ಆತನಿರುವಾಗಲೆ ಸಮೀಪದಲಿ. ಬಿಟ್ಟುಬಿಡಲಿ ದುಷ್ಟನು ತನ್ನ ದುರ್ಮಾರ್ಗವನು ತೊರೆದುಬಿಡಲಿ ದುರುಳನು ದುರಾಲೋಚನೆಗಳನು. ಹಿಂದಿರುಗಿ ಬರಲಿ ಸರ್ವೇಶ್ವರನ ಬಳಿಗೆ ಕರುಣೆ ತೋರುವನು ಆತನು ಅವನಿಗೆ. ಆಶ್ರಯಪಡೆಯಲಿ ಅವನು ನಮ್ಮ ದೇವರಿಂದ ಕ್ಷಮಿಸುವನಾತನು ಮಹಾಕೃಪೆಯಿಂದ. “ನನ್ನ ಆಲೋಚನೆಗಳು ನಿಮ್ಮ ಆಲೋಚನೆಗಳಂಥಲ್ಲ ನನ್ನ ಮಾರ್ಗಗಳು ನಿಮ್ಮ ಮಾರ್ಗಗಳಂಥಲ್ಲ” ಎಂದಿಹನು ಸರ್ವೇಶ್ವರ. “ಎಷ್ಟೋ ಉನ್ನತ ಆಕಾಶವು ಭೂಮಿಯಿಂದ ಅಷ್ಟೂ ಉನ್ನತ ನನ್ನ ಮಾರ್ಗ ನಿಮ್ಮ ಮಾರ್ಗಗಳಿಗಿಂತ, ನನ್ನ ಆಲೋಚನೆಗಳು ನಿಮ್ಮ ಆಲೋಚನೆಗಳಿಗಿಂತ.

ಕೀರ್ತನೆ:145:2-3, 8-9, 17-18

ಶ್ಲೋಕ: ಹತ್ತಿರ ಇಹನು ಪ್ರಭು ಕರೆಯುವವರೆಲ್ಲರಿಗೆ 

ಎರಡನೇ ವಾಚನ: ಫಿಲಿಪ್ಪಿಯರಿಗೆ 1:20-24, 27


ಸಹೋದರರೇ, ನನ್ನ ಕರ್ತವ್ಯಪಾಲನೆಯಲ್ಲಿ ನಾಚುವಂಥ ಸಂದರ್ಭವು ನನಗೆಂದಿಗೂ ಬರದೆಂದು ಬಲ್ಲೆ; ನಾನು ಬದುಕಿದರೂ ಸರಿ, ಸತ್ತರೂ ಸರಿ; ನನ್ನ ದೇಹದ ಮೂಲಕ ಕ್ರಿಸ್ತಯೇಸುವಿಗೆ ಎಂದಿನಂತೆ ಈಗಲೂ ಮಹಿಮೆ ಉಂಟಾಗಬೇಕೆಂಬುದೇ ನನ್ನ ಉತ್ಕಟ ಆಕಾಂಕ್ಷೆ ಹಾಗೂ ನಿರೀಕ್ಷೆ.  ನನಗಂತೂ ಬದುಕುವುದೆಂದರೆ ಕ್ರಿಸ್ತಯೇಸುವೇ; ಸಾಯುವುದು ಲಾಭವೇ.  ದೈಹಿಕವಾಗಿ ಬದುಕುವುದು ಫಲಪ್ರದವಾಗಿದ್ದರೆ, ನಾನು ಬದುಕುವುದು ಉತ್ತಮವೋ ಅಥವಾ ಸಾಯುವುದು ಸೂಕ್ತವೋ ನನಗೆ ತಿಳಿಯದು.  ಉಭಯ ಸಂಕಟಕ್ಕೆ ಸಿಲುಕಿದ್ದೇನೆ. ಒಂದು ಕಡೆ, ಈ ಬದುಕನ್ನು ತೊರೆದು ಕ್ರಿಸ್ತಯೇಸುವಿನೊಡನೆ ಒಂದಾಗಿರಬೇಕೆಂಬುದೇ ನನ್ನ ಬಯಕೆ. ಇದು ಎಷ್ಟೋ ಮೇಲಾದುದು.  ಮತ್ತೊಂದು ಕಡೆ, ನಿಮಗೋಸ್ಕರ ಇಹದಲ್ಲಿದ್ದು ಜೀವಿಸುವುದು ಅತ್ಯವಶ್ಯಕವಾಗಿದೆ. ಅದೇನೇ ಇರಲಿ, ನೀವು ಮಾತ್ರ ಕ್ರಿಸ್ತಯೇಸುವಿನ ಶುಭಸಂದೇಶಕ್ಕೆ ಯೋಗ್ಯರಾಗಿ ನಡೆದುಕೊಳ್ಳಿರಿ. ನಾನು ನಿಮ್ಮಲ್ಲಿಗೆ ಬಂದರೂ ಸರಿ, ಬಾರದಿದ್ದರೂ ಸರಿ, ಇದು ಮುಖ್ಯವಲ್ಲ. ಶುಭಸಂದೇಶವು ನೀಡುವ ವಿಶ್ವಾಸಕ್ಕಾಗಿ ನೀವು ಒಮ್ಮನಸ್ಸಿನಿಂದ, ಕೆಚ್ಚಿನಿಂದ ಹೋರಾಡುವುದೇ ಮುಖ್ಯ. ಇದು ನನಗೆ ತಿಳಿದುಬಂದರೆ ಅಷ್ಟೇ ಸಾಕು.

ಶುಭಸಂದೇಶ: ಮತ್ತಾಯ 20:1-16


ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು: “ಸ್ವರ್ಗಸಾಮ್ರಾಜ್ಯವು ಹೀಗಿದೆ: ಒಬ್ಬ ಯಜಮಾನನಿಗೆ ಒಂದು ದ್ರಾಕ್ಷಿತೋಟವಿತ್ತು. ಅದರಲ್ಲಿ ಕೆಲಸ ಮಾಡುವುದಕ್ಕೆ ಕೂಲಿಗಾರರನ್ನು ಗೊತ್ತುಮಾಡಲು ಅವನು ಬೆಳಗಿನ ಜಾವದಲ್ಲೇ ಹೊರಟ. ಆಳಿಗೆ ಒಂದು ಬೆಳ್ಳಿ ನಾಣ್ಯದಂತೆ ದಿನಕೂಲಿಯನ್ನು ಮಾತಾಡಿ ತೋಟಕ್ಕೆ ಕಳುಹಿಸಿದ. ಸುಮಾರು ಬೆಳಿಗ್ಗೆ ಒಂಭತ್ತು ಗಂಟೆಗೆ ಅವನು ಪುನಃ ಸಂತೆಬೀದಿಯ ಕಡೆ ಹೋದ. ಕೆಲಸವಿಲ್ಲದೆ ಸುಮ್ಮನೆ ನಿಂತುಕೊಂಡಿದ್ದ ಕೆಲವು ಕೂಲಿಗಾರರನ್ನು ಅಲ್ಲಿ ಕಂಡ. ನೀವೂ ನನ್ನ ದ್ರಾಕ್ಷಿತೋಟಕ್ಕೆ ಹೋಗಿರಿ; ನ್ಯಾಯವಾದ ಕೂಲಿಯನ್ನು ನಿಮಗೆ ಕೊಡುತ್ತೇನೆ,’ ಎಂದ. ಅವರೂ ಹೋದರು. ಬಳಿಕ ಸುಮಾರು ಹನ್ನೆರಡು ಗಂಟೆಗೊಮ್ಮೆ, ಮತ್ತೆ ಮೂರು ಗಂಟೆಗೊಮ್ಮೆ ಹೋಗಿ ಇನ್ನೂ ಕೆಲವರನ್ನು ಕೆಲಸಕ್ಕೆ ಕಳುಹಿಸಿದ. ಐದು ಗಂಟೆಗೆ ಹೋದಾಗಲೂ ಬೇರೆ ಕೆಲವರು ಅಲ್ಲಿ ನಿಂತಿರುವುದನ್ನು ಕಂಡು, ‘ದಿನವಿಡೀ ಕೆಲಸಮಾಡದೆ ಸುಮ್ಮನೆ ಇಲ್ಲಿ ನಿಂತಿದ್ದೀರಲ್ಲಾ, ಏಕೆ?’ ಎಂದು ಕೇಳಿದ. ಅದಕ್ಕೆ ಅವರು, ‘ನಮ್ಮನ್ನು ಯಾರೂ ಕೂಲಿಗೆ ಕರೆಯಲಿಲ್ಲ,’ ಎಂದರು. ‘ಹಾಗಾದರೆ ನೀವೂ ಕೂಡ ನನ್ನ ದ್ರಾಕ್ಷಿತೋಟಕ್ಕೆ ಹೋಗಿ ಕೆಲಸಮಾಡಿ,’ ಎಂದು ಹೇಳಿ ಅವರನ್ನೂ ಕಳುಹಿಸಿದ. “ಸಂಜೆಯಾಯಿತು, ತೋಟದ ಯಜಮಾನ ತನ್ನ ಮೇಸ್ತ್ರಿಗೆ, ‘ಕೂಲಿಯಾಳುಗಳನ್ನು ಕರೆದು, ಕೊನೆಗೆ ಬಂದವರಿಂದ ಆರಂಭಿಸಿ ಮೊದಲು ಬಂದವರ ತನಕ ಕೂಲಿಕೊಡು,’ ಎಂದ. ಅದರಂತೆ ಐದು ಗಂಟೆಗೆ ಗೊತ್ತುಮಾಡಿದವರು ಬಂದಾಗ ಒಬ್ಬೊಬ್ಬನಿಗೆ ಒಂದೊಂದು ಬೆಳ್ಳಿನಾಣ್ಯ ಸಿಕ್ಕಿತು.  ಮೊತ್ತಮೊದಲು ಗೊತ್ತುಮಾಡಿದವರು ತಮ್ಮ ಸರದಿ ಬಂದಾಗ, ತಮಗೆ ಹೆಚ್ಚು ಸಿಗುವುದೆಂದು ಭಾವಿಸಿದರು. ಆದರೆ ಅವರಿಗೂ ಒಂದೊಂದೇ ಬೆಳ್ಳಿನಾಣ್ಯ ದೊರಕಿತು.  ಅದನ್ನು ತೆಗೆದುಕೊಂಡಾಗ ಅವರು ದಣಿಯ ವಿರುದ್ಧ ಗೊಣಗಲಾರಂಭಿಸಿದರು.  ‘ಕಡೇಹೊತ್ತಿನಲ್ಲಿ ಬಂದ ಇವರು ಒಂದೇ ಒಂದು ಗಂಟೆ ಕೆಲಸಮಾಡಿದ್ದಾರೆ, ಬಿಸಿಲಲ್ಲಿ ಬೆಂದು, ದಿನವೆಲ್ಲಾ ದುಡಿದ ನಮ್ಮನ್ನು ಇವರಿಗೆ ಸರಿಸಮಮಾಡಿದ್ದೀರಲ್ಲಾ!’ ಎಂದರು.  ಅದಕ್ಕೆ ಯಜಮಾನ ಅವರಲ್ಲಿ ಒಬ್ಬನಿಗೆ, ‘ಅಯ್ಯಾ, ನಿನಗೆ ನಾನು ಅನ್ಯಾಯಮಾಡಿಲ್ಲ. ದಿನಕ್ಕೊಂದು ಬೆಳ್ಳಿನಾಣ್ಯದಂತೆ ನೀನು ನನ್ನೊಡನೆ ಒಪ್ಪಂದಮಾಡಿಕೊಳ್ಳಲಿಲ್ಲವೆ?  ನಿನ್ನ ಕೂಲಿ ಏನೋ ಅದನ್ನು ತೆಗೆದುಕೊಂಡು ಹೋಗು. ನಿನಗೆ ಕೊಟ್ಟಷ್ಟನ್ನು ಈ ಕಟ್ಟಕಡೆಯವನಿಗೂ ಕೊಡುವುದು ನನ್ನ ಇಷ್ಟ.  ನನ್ನದನ್ನು ನನ್ನಿಷ್ಟಾನುಸಾರ ಕೊಡುವ ಹಕ್ಕು ನನಗಿಲ್ಲವೆ? ನನ್ನ ಔದಾರ್ಯವನ್ನು ಕಂಡು ನಿನಗೇಕೆ ಹೊಟ್ಟೆಯುರಿ?’ ಎಂದ.  ಹೀಗೆ, ಕಡೆಯವರು ಮೊದಲಿನವರಾಗುವರು; ಮೊದಲಿನವರು ಕಡೆಯವರಾಗುವರು.”

19.09.20

ಮೊದಲನೇ ವಾಚನ: 1 ಕೊರಿಂಥಿಯರಿಗೆ 15:35-37, 42-49

ಸಹೋದರರೇ, ಸತ್ತವರನ್ನು ಮರಳಿ ಜೀವಂತರಾಗಿಸುವುದು ಹೇಗೆ ಸಾಧ್ಯ? ಅವರ ದೇಹಾಕೃತಿ ಹೇಗಿರುತ್ತದೆ? ಎಂದು ಯಾರಾದರೂ ಕೇಳಿಯಾರು.  ಮತಿಹೀನನೇ, ನೀನು ಬಿತ್ತಿದ ಬೀಜ ಸಾಯದಿದ್ದರೆ ಅದು ಜೀವ ತಾಳುವುದುಂಟೆ? ಇಲ್ಲ.  ನೀನು ಬಿತ್ತುವುದು ಗೋದಿಯನ್ನು ಅಥವಾ ಇನ್ನಾವುದೋ ಕಾಳನ್ನು; ಮುಂದಕ್ಕೆ ಬೆಳೆಯಲಿರುವ ಇಡೀ ಗಿಡವನ್ನಲ್ಲ. ಸತ್ತವರ ಪುನರುತ್ಥಾನವೂ ಹಾಗೆಯೇ. ಬಿತ್ತುವಂಥದ್ದು ಅಳಿದುಹೋಗುವಂಥದ್ದು. ಪುನರುತ್ಥಾನವಾಗುವಂಥದ್ದು ಅಮರವಾದುದು. ಬಿತ್ತಿದ್ದು ಬಲಹೀನವಾದುದು; ಪುನರುತ್ಥಾನಹೊಂದುವಂಥದ್ದು, ಬಲಿಷ್ಠವಾದುದು.  ಬಿತ್ತಿದ್ದು ಕುರೂಪಿಯಾದುದು; ಪುನರುತ್ಥಾನಹೊಂದುವುದು ಕೋಮಲವಾದುದು.  ಬಿತ್ತಿದ್ದು ಭೌತಿಕ ದೇಹ; ಪುನರುತ್ಥಾನ ಹೊಂದುವಂಥದ್ದು ಆಧ್ಯಾತ್ಮಿಕ ದೇಹ. ಭೌತಿಕ ದೇಹ ಇರುವುದು ಸತ್ಯವಾದರೆ ಆಧ್ಯಾತ್ಮಿಕ ದೇಹ ಇರುವುದೂ ಸತ್ಯ.  ಪವಿತ್ರಗ್ರಂಥದಲ್ಲಿ ಲಿಖಿತವಾಗಿರುವಂತೆ ಮೊದಲ ಮಾನವನಾದ ಆದಾಮನು ಜೀವ ಪಡೆದ ವ್ಯಕ್ತಿ; ಕಡೆಯ ಆದಾಮನಾದರೋ ಜೀವ ಕೊಡುವ ಆತ್ಮ.  ಮೊದಲು ಆದುದು ಆಧ್ಯಾತ್ಮಿಕವಾದುದಲ್ಲ, ಪ್ರಾಕೃತವಾದುದು. ಅನಂತರ ಆದುದು ಆಧ್ಯಾತ್ಮಿಕವಾದುದು.  ಮೊದಲನೆಯ ಮಾನವನು ಮಣ್ಣಿನಿಂದಾದವನು; ಮಣ್ಣಿಗೆ ಸಂಬಂಧಪಟ್ಟವನು. ಎರಡನೆಯ ಮಾನವನಾದರೋ ಸ್ವರ್ಗದಿಂದ ಬಂದವನು.  ಮಣ್ಣಿಗೆ ಸಂಬಂಧಪಟ್ಟವರು ಮಣ್ಣಿನಿಂದ ಆದವನಂತೆಯೇ ಇರುತ್ತಾರೆ. ಸ್ವರ್ಗಕ್ಕೆ ಸಂಬಂಧಪಟ್ಟವರು ಸ್ವರ್ಗದಿಂದ ಬಂದವನಂತೆಯೇ ಇರುತ್ತಾರೆ.  ಮಣ್ಣಿನಿಂದ ಆದವನ ರೂಪವನ್ನು ನಾವು ಧರಿಸಿರುವಂತೆಯೇ ಸ್ವರ್ಗದಿಂದ ಬಂದಾತನ ರೂಪವನ್ನು ಧರಿಸುತ್ತೇವೆ. 

ಕೀರ್ತನೆ 56:10-12, 13-14

ಶ್ಲೋಕ: ನಿನ್ನ ಮುಂದೆ ಜೀವನ್ ಜ್ಯೋತಿಯಲಿ ನಾ ನಡೆಯ ಮಾಡಿರುವೆ 

ಶುಭಸಂದೇಶ: ಲುಕ 8:4-15

ಜನರು ಊರೂರುಗಳಿಂದ ಹೊರಟು ಯೇಸುಸ್ವಾಮಿಯ ಬಳಿಗೆ ಬಂದರು. ಜನಸಮೂಹವು ಹೆಚ್ಚುತ್ತಿದ್ದಂತೆ ಯೇಸು ಈ ಸಾಮತಿಯನ್ನು ಹೇಳಿದರು:  “ಒಬ್ಬ ರೈತನು ಬಿತ್ತುವುದಕ್ಕೆ ಹೋದನು. ಬಿತ್ತನೆ ಮಾಡುತ್ತಿದ್ದಾಗ ಕೆಲವು ಬೀಜಗಳು ಕಾಲ್ದಾರಿಯಲ್ಲಿ ಬಿದ್ದವು. ಅವು ಕಾಲ್ತುಳಿತಕ್ಕೆ ಸಿಕ್ಕಿಹೋದವು. ಅವುಗಳನ್ನು ಆಕಾಶದ ಪಕ್ಷಿಗಳು ತಿಂದುಬಿಟ್ಟವು.  ಮತ್ತೆ ಕೆಲವು ಬೀಜಗಳು ಕಲ್ಲುಭೂಮಿಯ ಮೇಲೆ ಬಿದ್ದವು. ಅವು ಮೊಳೆತಾಗಲೂ ತೇವವಿಲ್ಲದ ಕಾರಣ ಒಣಗಿಹೋದವು.  ಇನ್ನೂ ಕೆಲವು ಮುಳ್ಳು ಪೊದೆಗಳ ನಡುವೆ ಬಿದ್ದವು. ಮುಳ್ಳುಪೊದೆಗಳು ಅವುಗಳೊಡನೆ ಬೆಳೆದು ಸಸಿಗಳನ್ನು ಅದುಮಿಬಿಟ್ಟವು. ಇನ್ನೂ ಕೆಲವು ಬೀಜಗಳು ಹದವಾದ ಭೂಮಿಯಲ್ಲಿ ಬಿದ್ದವು. ಅವು ಬೆಳೆದು ನೂರ್ಮಡಿ ಫಸಲನ್ನು ಕೊಟ್ಟವು.” ಈ ಸಾಮತಿಯನ್ನು ಮುಗಿಸಿದ ಮೇಲೆ ಯೇಸು, “ಕೇಳುವುದಕ್ಕೆ ಕಿವಿಯುಳ್ಳವನು ಕೇಳಿಸಿಕೊಳ್ಳಲಿ,” ಎಂದು ಒತ್ತಿ ಹೇಳಿದರು. ಶಿಷ್ಯರು, ‘ಈ ಸಾಮತಿಯ ಅರ್ಥವೇನು?’ ಎಂದು ಕೇಳಿದಾಗ, ಯೇಸು ಇಂತೆಂದರು:  ದೇವರ ಸಾಮ್ರಾಜ್ಯದ ರಹಸ್ಯಗಳನ್ನು ಅರಿತುಕೊಳ್ಳುವ ಸದವಕಾಶವನ್ನು ನಿಮಗೆ ಕೊಡಲಾಗಿದೆ. ಬೇರೆಯವರಿಗಾದರೋ ಅವು ಸಾಮತಿಗಳ ರೂಪದಲ್ಲಿ ಮರೆಯಾಗಿವೆ. ಅವರು ಕಣ್ಣಾರೆ ನೋಡಿದರೂ ಕಾಣರು, ಕಿವಿಯಾರೆ ಕೇಳಿದರೂ ಗ್ರಹಿಸರು.” “ಸಾಮತಿಯ ಅರ್ಥ ಹೀಗಿದೆ: ಬೀಜ ಎಂದರೆ ದೇವರ ವಾಕ್ಯ.  ಕಾಲ್ದಾರಿಯಲ್ಲಿ ಬಿದ್ದ ಬೀಜಗಳು ಎಂದರೆ ಆ ವಾಕ್ಯವನ್ನು ಕೇಳಿದವರು. ಆದರೆ ಅವರು ವಿಶ್ವಾಸಿಸಿ ಜೀವೋದ್ಧಾರವನ್ನು ಪಡೆಯದಂತೆ ಪಿಶಾಚಿ ಬಂದು ಆ ವಾಕ್ಯವನ್ನು ಅವರ ಹೃದಯದಿಂದ ಕೂಡಲೇ ತೆಗೆದುಬಿಡುತ್ತದೆ.  ಕಲ್ಲುಭೂಮಿಯ ಮೇಲೆ ಬಿದ್ದ ಬೀಜಗಳು ಎಂದರೆ ದೇವರ ವಾಕ್ಯವನ್ನು ಕೇಳಿ ಸಂತೋಷದಿಂದ ಸ್ವೀಕರಿಸಿದವರು; ಅದು ಅವರಲ್ಲಿ ಬೇರೂರದ ಕಾರಣ ಅವರು ಸ್ವಲ್ಪಕಾಲ ವಿಶ್ವಾಸಿಸುತ್ತಾರೆ; ಶೋಧನೆಯ ಸಮಯದಲ್ಲಿ ಅದನ್ನು ತೊರೆದುಬಿಡುತ್ತಾರೆ.  ಮುಳ್ಳು ಪೊದೆಗಳ ನಡುವೆ ಬಿದ್ದ ಬೀಜಗಳು ಎಂದರೆ ದೇವರ ವಾಕ್ಯವನ್ನು ಕೇಳಿದ ಇನ್ನಿತರರು. ಆದರೆ ಕಾಲಕ್ರಮೇಣ ಬಾಳಿನ ಬವಣೆಗಳು, ಐಶ್ವರ್ಯದ ವ್ಯಾಮೋಹಗಳು ಹಾಗೂ ಸುಖಭೋಗಗಳು ಇವರನ್ನು ಅದುಮಿಬಿಡುತ್ತವೆ; ಇವರ ಫಲ ಪಕ್ವವಾಗುವುದಿಲ್ಲ.  ಹದವಾದ ಭೂಮಿಯ ಮೇಲೆ ಬಿದ್ದ ಬೀಜಗಳು ಎಂದರೆ ದೇವರ ವಾಕ್ಯವನ್ನು ಕೇಳಿ ಅದನ್ನು ಸದ್ಗುಣಶೀಲ ಹಾಗೂ ಸಾತ್ವಿಕವಾದ ಹೃದಯದಲ್ಲಿಟ್ಟು ಸಹನೆಯಿಂದ ಫಲ ತರುವವರು.” ಎಂದರು. 

18.9.20 - ಯೇಸುಸ್ವಾಮಿ ದೇವರ ಸಾಮ್ರಾಜ್ಯದ ಶುಭಸಂದೇಶವನ್ನು ಸಾರುತ್ತಾ ಪಟ್ಟಣಗಳಲ್ಲೂ ಹಳ್ಳಿಗಳಲ್ಲೂ ಸಂಚಾರ ಮಾಡಿದರು.

 ಮೊದಲನೇ ವಾಚನ: 1 ಕೊರಿಂಥಿಯರಿಗೆ 15:12-20


ಕ್ರಿಸ್ತಯೇಸು ಮರಣದಿಂದ ಪುನರುತ್ಥಾನ ಹೊಂದಿದರು ಎಂದು ನಾವು ಸಾರುತ್ತಿರುವಲ್ಲಿ, ಸತ್ತವರು ಪುನರುತ್ಥಾನರಾಗುವುದಿಲ್ಲ ಎಂದು ನಿಮ್ಮಲ್ಲಿ ಕೆಲವರು ವಾದಿಸುವುದು ಹೇಗೆ? ಸತ್ತವರಿಗೆ ಪುನರುತ್ಥಾನ ಇಲ್ಲವೆಂಬುದು ನಿಜವಾದರೆ ಕ್ರಿಸ್ತಯೇಸು ಪುನರುತ್ಥಾನ ಹೊಂದಲಿಲ್ಲ ಎಂದ ಹಾಗಾಯಿತು.  ಕ್ರಿಸ್ತಯೇಸು ಪುನರುತ್ಥಾನರಾಗಲಿಲ್ಲ ಎಂದರೆ ನಮ್ಮ ಬೋಧನೆ ಬರಿದು; ನಿಮ್ಮ ವಿಶ್ವಾಸವೂ ಬರಿದು.  ಸತ್ತವರು ಪುನರುತ್ಥಾನ ಹೊಂದುವುದಿಲ್ಲ ಎಂಬುದು ನಿಜವಾದರೆ ದೇವರು ಕ್ರಿಸ್ತಯೇಸುವನ್ನು ಪುನರುತ್ಥಾನಗೊಳಿಸಿಲ್ಲ ಎಂದಂತಾಯಿತು. ದೇವರು ಕ್ರಿಸ್ತಯೇಸುವನ್ನು ಸಾವಿನಿಂದ ಪುನರುತ್ಥಾನಗೊಳಿಸಿದ್ದಾರೆ ಎಂದು ಸಾಕ್ಷಿ ಹೇಳಿದ ನಾವು ಆಗ ದೇವರ ಬಗ್ಗೆಯೇ ಸುಳ್ಳುಸಾಕ್ಷಿ ಹೇಳಿದಂತಾಯಿತು. ಸತ್ತವರು ಪುನರುತ್ಥಾನ ಹೊಂದುವುದಿಲ್ಲ ಎಂದರೆ ಕ್ರಿಸ್ತಯೇಸುವು ಪುನರುತ್ಥಾನ ಹೊಂದಲಿಲ್ಲ ಎಂದಂತಾಯಿತು.  ಕ್ರಿಸ್ತಯೇಸುವೇ ಪುನರುತ್ಥಾನ ಹೊಂದಿಲ್ಲ ಎಂದಮೇಲೆ ನಿಮ್ಮ ವಿಶ್ವಾಸವೇ ನಿರರ್ಥಕ; ಮತ್ತು ನೀವಿನ್ನೂ ನಿಮ್ಮ ಪಾಪಗಳಲ್ಲಿಯೇ ಮುಳುಗಿದ್ದೀರಿ; ಅಷ್ಟೇ ಅಲ್ಲದೆ, ಕ್ರಿಸ್ತಯೇಸುವಿನಲ್ಲಿ ಮೃತರಾದವರೆಲ್ಲರೂ ವಿನಾಶವಾದರು. ಕ್ರಿಸ್ತಯೇಸುವಿನಲ್ಲಿ ನಮಗಿರುವ ನಂಬಿಕೆ ಕೇವಲ ಬದುಕಿಗೆ ಸೀಮಿತವಾಗಿದ್ದರೆ ಜಗತ್ತಿನಲ್ಲಿ ನಮಗಿಂತ ನಿರ್ಭಾಗ್ಯರು ಬೇರೆ ಯಾರೂ ಇಲ್ಲ. ಕ್ರಿಸ್ತಯೇಸು ಪುನರುತ್ಥಾನಹೊಂದಿದ್ದೇನೋ ಸತ್ಯಸ್ಯ ಸತ್ಯ. ಅವರ ಪುನರುತ್ಥಾನವು, ಸತ್ತವರು ಪುನರುತ್ಥಾನ ಹೊಂದುತ್ತಾರೆ ಎನ್ನುವುದಕ್ಕೆ ಪ್ರಮಾಣ. 

ಕೀರ್ತನೆ: 17:1, 6-7, 8, 15

ಶ್ಲೋಕ: ಪ್ರಭೂ, ನಿನ್ನ ಮಖದರ್ಶನದಿಂದ ನಾನು ಎಚ್ಚತ್ತು ತೃಪ್ತನಾಗುವೇನು. 

ಶುಭಸಂದೇಶ: ಲೂಕ 8:1-3


ಯೇಸುಸ್ವಾಮಿ ದೇವರ ಸಾಮ್ರಾಜ್ಯದ ಶುಭಸಂದೇಶವನ್ನು ಸಾರುತ್ತಾ ಪಟ್ಟಣಗಳಲ್ಲೂ ಹಳ್ಳಿಗಳಲ್ಲೂ ಸಂಚಾರಮಾಡಿದರು. ಹನ್ನೆರಡು ಮಂದಿ ಶಿಷ್ಯರೂ ಅವರೊಡನೆ ಇದ್ದರು.  ದೆವ್ವಗಳ ಕಾಟದಿಂದಲೂ ರೋಗರುಜಿನಗಳಿಂದಲೂ ಬಿಡುಗಡೆ ಹೊಂದಿದ್ದ ಕೆಲವು ಮಹಿಳೆಯರು ಅವರ ಜೊತೆಯಲ್ಲಿದ್ದರು. ಅವರಾರೆಂದರೆ: ಏಳು ದೆವ್ವಗಳಿಂದ ವಿಮುಕ್ತಳಾಗಿದ್ದ ಮಗ್ದಲದ ಮರಿಯಳು,  ಹೆರೋದನ ಅರಮನೆಯ ಮೇಲ್ವಿಚಾರಕನಾಗಿದ್ದ ಕೂಜನ ಪತ್ನಿ ಯೊವಾನ್ನಳು, ಅಲ್ಲದೆ ಸುಸಾನ್ನಳು, ಮತ್ತಿತರ ಅನೇಕರು. ಇವರು ತಮ್ಮ ಆಸ್ತಿಪಾಸ್ತಿಯನ್ನು ವೆಚ್ಚಮಾಡಿ ಯೇಸುವಿಗೂ ಅವರ ಶಿಷ್ಯರಿಗೂ ಉಪಚಾರ ಮಾಡುತ್ತಿದ್ದರು.

17.09.20 - "ಈಕೆ ಮಾಡಿದ ಪಾಪಗಳು ಅಪಾರವಾದರೂ ಅವನ್ನು ಕ್ಷಮಿಸಲಾಗಿವೆ; ಇದಕ್ಕೆ ಈಕೆ ತೋರಿಸಿರುವ ಅಧಿಕವಾದ ಪ್ರೀತಿಯೇ ಸಾಕ್ಷಿ"

 ಮೊದಲನೇ ವಾಚನ: 1 ಕೊರಿಂಥಿಯರಿಗೆ 15:1-11

ಪ್ರಿಯ ಸಹೋದರರೇ, ನಾನು ನಿಮಗೆ ಬೋಧಿಸಿದ ಶುಭಸಂದೇಶವನ್ನು ನೆನಪಿಗೆ ತಂದುಕೊಳ್ಳಿರಿ. ನೀವು ಅದನ್ನು ಸ್ವೀಕರಿಸಿದ್ದೀರಿ. ಅದರಲ್ಲಿ ನೆಲೆಯಾಗಿ ನಿಂತಿದ್ದೀರಿ.  ನಾನು ನಿಮಗೆ ಶುಭಸಂದೇಶವೆಂದು ತಿಳಿಸಿದ ಸಂಗತಿಯನ್ನು ದೃಢವಾಗಿ ವಿಶ್ವಾಸಿಸಿದರೆ ನೀವು ಜೀವೋದ್ಧಾರವನ್ನು ಪಡೆಯುವಿರಿ. ಇಲ್ಲವಾದರೆ ನಿಮ್ಮ ವಿಶ್ವಾಸ ನಿರರ್ಥಕವಾದೀತು. ನಾನು ಪಡೆದುಕೊಂಡದ್ದನ್ನು ಮುಖ್ಯವಾದುದು ಎಂದೆಣಿಸಿ ನಿಮಗೆ ಒಪ್ಪಿಸಿದ್ದೇನೆ. ಅದು ಯಾವುದೆಂದರೆ, ಪವಿತ್ರಗ್ರಂಥದಲ್ಲಿ ಹೇಳಿರುವ ಪ್ರಕಾರ ಕ್ರಿಸ್ತಯೇಸು ನಮ್ಮ ಪಾಪಗಳ ಪರಿಹಾರಕ್ಕಾಗಿ ಪ್ರಾಣತ್ಯಾಗ ಮಾಡಿದರು.  ಅವರನ್ನು ಭೂಸ್ಥಾಪನೆ ಮಾಡಲಾಯಿತು. ಅದೇ ಗ್ರಂಥದ ಪ್ರಕಾರ ಮೂರನೆಯ ದಿನ ಅವರು ಪುನರುತ್ಥಾನ ಹೊಂದಿದರು.  ಅನಂತರ ಕೇಫನಿಗೂ ಹನ್ನೆರಡು ಮಂದಿಗೂ ಕಾಣಿಸಿಕೊಂಡರು.  ತರುವಾಯ ಒಂದೇ ಸಮಯದಲ್ಲಿ ಐನೂರಕ್ಕೂ ಹೆಚ್ಚಿನ ಮಂದಿ ಸಹೋದರರಿಗೆ ಪ್ರತ್ಯಕ್ಷರಾದರು. ಅವರಲ್ಲಿ ಕೆಲವರು ಸತ್ತುಹೋಗಿದ್ದರೂ ಬಹುಮಂದಿ ಇಂದಿಗೂ ಬದುಕಿದ್ದಾರೆ.  ಅದಾದ ಮೇಲೆ ಯಕೋಬನಿಗೂ ಅನಂತರ ಪ್ರೇಷಿತರೆಲ್ಲರಿಗೂ ಕಾಣಿಸಿಕೊಂಡರು. ಕಟ್ಟಕಡೆಗೆ ದಿನತುಂಬುವ ಮೊದಲೇ ಹುಟ್ಟಿದವನಂತಿರುವ ನನಗೂ ಕಾಣಿಸಿಕೊಂಡರು. ನಾನಾದರೋ ಪ್ರೇಷಿತರಲ್ಲಿ ಕನಿಷ್ಠನು, ಪ್ರೇಷಿತನೆಂಬ ಹೆಸರಿಗೂ ಅಪಾತ್ರನು. ಏಕೆಂದರೆ, ನಾನು ದೇವರ ಸಭೆಯನ್ನು ಹಿಂಸಿಸಿದೆನು.  ನಾನು ಈಗ ಈ ಸ್ಥಿತಿಯಲ್ಲಿ ಇರುವುದು ದೇವರ ಅನುಗ್ರಹದಿಂದಲೇ. ಅವರ ಅನುಗ್ರಹ ನನ್ನಲ್ಲಿ ವ್ಯರ್ಥವಾಗಲಿಲ್ಲ. ನಾನು ಅವರೆಲ್ಲರಿಗಿಂತಲೂ ಹೆಚ್ಚು ಶ್ರಮಪಟ್ಟು ಸೇವೆಮಾಡಿದ್ದೇನೆ. ಅದನ್ನು ಮಾಡಿದವನು ನಾನಲ್ಲ, ನನ್ನಲ್ಲಿರುವ ದೇವರ ಅನುಗ್ರಹವೇ.  ನಾನಾದರೇನು, ಅವರಾದರೇನು? ನಾವು ಸಾರುವ ಸಂದೇಶ ಒಂದೇ ಅದನ್ನು ನೀವು ನಂಬಿದ್ದೀರಿ.

ಕೀರ್ತನೆ: 118:1-2, 16-17, 28

ಶ್ಲೋಕ: ಸಲ್ಲಿಸಿ ಪ್ರಭುವಿಗೆ ಧನ್ಯವಾದ, ಆತ ಒಳ್ಳೆಯವ 

ಶುಭಸಂದೇಶ: ಲೂಕ 7:36-50


ಒಬ್ಬ ಫರಿಸಾಯನು ಯೇಸುಸ್ವಾಮಿಯನ್ನು ಊಟಕ್ಕೆ ಆಹ್ವಾನಿಸಿದನು. ಯೇಸು ಅವನ ಮನೆಗೆ ಹೋಗಿ ಊಟಕ್ಕೆ ಕುಳಿತರು.  ಅದೇ ಊರಿನಲ್ಲಿ ಪತಿತೆಯೊಬ್ಬಳು ಇದ್ದಳು. ಆಕೆ, ಫರಿಸಾಯನ ಮನೆಯಲ್ಲಿ ಯೇಸು ಊಟಕ್ಕೆ ಕುಳಿತಿದ್ದಾರೆಂದು ಕೇಳಿ ಒಂದು ಅಮೃತಶಿಲೆಯ ಭರಣಿ ತುಂಬ ಸುಗಂಧ ತೈಲವನ್ನು ತೆಗೆದುಕೊಂಡು ಅಲ್ಲಿಗೆ ಬಂದಳು.  ಅವಳು ಯೇಸುವಿನ ಹಿಂಬದಿಯಲ್ಲಿ ಅಳುತ್ತಾನಿಂತು, ತನ್ನ ಕಂಬನಿಯಿಂದ ಅವರ ಪಾದಗಳನ್ನು ತೊಳೆದು ತಲೆಕೂದಲಿನಿಂದ ಒರಸಿ, ಆ ಪಾದಗಳಿಗೆ ಮುತ್ತಿಟ್ಟು, ಸುಗಂಧ ತೈಲವನ್ನುಹಚ್ಚಿದಳು.  ಯೇಸುವನ್ನು ಆಹ್ವಾನಿಸಿದ ಫರಿಸಾಯನು ಇದನ್ನು ನೋಡಿ, ‘ಇವನು ನಿಜವಾಗಿಯೂ ಪ್ರವಾದಿಯಾಗಿದ್ದರೆ ತನ್ನನ್ನು ಮುಟ್ಟುತ್ತಿರುವ ಇವಳು ಯಾರು, ಎಂಥಾ ಪತಿತಳು, ಎಂದು ತಿಳಿದುಕೊಳ್ಳುತ್ತಿದ್ದನು’ ಎಂದು ತನ್ನೊಳಗೇ ಅಂದುಕೊಂಡನು.  ಅದಕ್ಕೆ ಯೇಸು, “ಸಿಮೋನ್, ನಾನು ನಿನಗೆ ಹೇಳಬೇಕಾದ ವಿಷಯ ಒಂದಿದೆ,” ಎಂದರು. ಸಿಮೋನನು, “ಅದೇನು ಹೇಳಿ ಗುರುವೇ,” ಎಂದನು.  ಆಗ ಯೇಸು, “ಒಬ್ಬ ಸಾಲಿಗನಿಗೆ ಇಬ್ಬರು ಸಾಲಗಾರರಿದ್ದರು. ಒಬ್ಬನು ಐನೂರು, ಇನ್ನೊಬ್ಬನು ಐವತ್ತು ಬೆಳ್ಳಿ ನಾಣ್ಯಗಳನ್ನು ಅವನಿಗೆ ಸಾಲ ಕೊಡಬೇಕಾಗಿತ್ತು.  ಆ ಇಬ್ಬರಿಗೂ ಸಾಲ ತೀರಿಸಲು ಸಾಧ್ಯವಾಗಲಿಲ್ಲ. ಸಾಲಿಗನು ಇಬ್ಬರ ಸಾಲವನ್ನು ಮನ್ನಾ ಮಾಡಿದನು. ಈಗ ಹೇಳು, ಈ ಇಬ್ಬರಲ್ಲಿ “ಯಾರಿಗೆ ಆ ಸಾಲಿಗನ ಮೇಲೆ ಹೆಚ್ಚು ಪ್ರೀತಿ?” ಎಂದು ಕೇಳಿದರು.  ಅದಕ್ಕೆ ಸಿಮೋನನು, “ಯಾರು ಹೆಚ್ಚು ಸಾಲದಿಂದ ಬಿಡುಗಡೆ ಹೊಂದಿದ್ದಾನೋ ಅವನೇ ಎಂದು ತೋರುತ್ತದೆ,” ಎಂದನು. “ಸರಿಯಾಗಿ ಹೇಳಿದೆ,” ಎಂದರು ಯೇಸು.  ಅನಂತರ ಆ ಮಹಿಳೆಯ ಕಡೆ ತಿರುಗಿ ಸಿಮೋನನಿಗೆ, “ಈಕೆಯನ್ನು ನೋಡಿದೆಯಾ? ನಾನು ನಿನ್ನ ಮನೆಗೆ ಬಂದಾಗ ನೀನು ನನ್ನ ಕಾಲಿಗೆ ನೀರು ಕೊಡಲಿಲ್ಲ; ಈಕೆಯಾದರೋ ನನ್ನ ಪಾದಗಳನ್ನು ತನ್ನ ಕಣ್ಣೀರಿನಿಂದ ತೊಳೆದು ತಲೆಗೂದಲಿನಿಂದ ಒರಸಿರುವಳು.  ನೀನು ನನಗೆ ಮುತ್ತಿಟ್ಟು ಸ್ವಾಗತಿಸಲಿಲ್ಲ; ಆದರೆ ಈಕೆ ಒಳಗೆ ಬಂದಾಗಿನಿಂದ ನನ್ನ ಪಾದಗಳಿಗೆ ಮುತ್ತಿಡುವುದನ್ನು ನಿಲ್ಲಿಸಿಲ್ಲ;  ನನ್ನ ತಲೆಗೆ ನೀನು ಎಣ್ಣೆ ಹಚ್ಚಲಿಲ್ಲ; ಈಕೆಯೋ ನನ್ನ ಪಾದಗಳಿಗೆ ಸುಗಂಧ ತೈಲವನ್ನು ಹಚ್ಚಿರುವಳು.  ಆದ್ದರಿಂದ ನಾನು ನಿಮಗೆ ಹೇಳುವುದೇನೆಂದರೆ, ಈಕೆ ಮಾಡಿದ ಪಾಪಗಳು ಅಪಾರವಾದರೂ ಅವನ್ನು ಕ್ಷಮಿಸಲಾಗಿವೆ; ಇದಕ್ಕೆ ಈಕೆ ತೋರಿಸಿರುವ ಅಧಿಕವಾದ ಪ್ರೀತಿಯೇ ಸಾಕ್ಷಿ. ಕಡಿಮೆ ಕ್ಷಮೆ ಪಡೆದವನು ಕಡಿಮೆ ಪ್ರೀತಿ ತೋರಿಸುತ್ತಾನೆ,” ಎಂದರು.  ಅನಂತರ ಯೇಸು ಆ ಮಹಿಳೆಗೆ: “ನಿನ್ನ ಪಾಪಗಳನ್ನು ಕ್ಷಮಿಸಲಾಗಿದೆ,” ಎಂದರು.  ಜೊತೆಯಲ್ಲಿ ಊಟಕ್ಕೆ ಕುಳಿತಿದ್ದವರು ಇದನ್ನು ಕೇಳಿ, “ಪಾಪಗಳನ್ನು ಕೂಡ ಕ್ಷಮಿಸುವ ಈತ ಯಾರು?” ಎಂದು ತಮ್ಮತಮ್ಮಲ್ಲೇ ಹೇಳಿಕೊಂಡರು.  ಯೇಸು ಆಕೆಗೆ, “ನಿನ್ನ ವಿಶ್ವಾಸ ನಿನ್ನನ್ನು ಉದ್ಧಾರಮಾಡಿದೆ; ಸಮಾಧಾನದಿಂದ ಹೋಗು,” ಎಂದರು.

16.09.20 - "ಆದರೆ ದೈವಜ್ಞಾನವೇ ನಿಜವಾದ ಜ್ಞಾನವೆಂದು ಅದನ್ನು ಅಂಗೀಕರಿಸುವ ಎಲ್ಲರೂ ಸಮರ್ಥಿಸುತ್ತಾರೆ,”

ಮೊದಲನೇ ವಾಚನ: 1 ಕೊರಿ0ಥಿಯರಿಗೆ: 12:31--13:13

ಶ್ರೇಷ್ಠವಾದ ವರಗಳನ್ನು ನೀವು ಶ್ರದ್ಧಾಪೂರ್ವಕವಾಗಿ ಅಪೇಕ್ಷಿಸಿರಿ. ನಾನು ನಿಮಗೆ ಇನ್ನೂ ಸರ್ವೋತ್ತಮವಾದ ಮಾರ್ಗವನ್ನು ತೋರಿಸುತ್ತೇನೆ: ಸುರನರರ ನುಡಿಗಳ ನಾನಾಡಬಲ್ಲೆ ನಾದರೂ ಪರಮ ಪ್ರೀತಿಯೊಂದೆನಗಿಲ್ಲದಿರಲು ನಾ ಕೇವಲ ಗಣಗಣಿಸುವ ಘಂಟೆ, ಝಣಝಣಿಸುವ ಜಾಗಟೆ. ಪ್ರವಾದನೆಯ ವರವೆನಗಿರಬಹುದು ಇರಬಹುದು ನಿಗೂಢ ರಹಸ್ಯಗಳರಿವು ಎಲ್ಲದರ ಪರಿಜ್ಞಾನ, ಪರ್ವತವನೇ ಕದಲಿಪ ವಿಶ್ವಾಸ ಪ್ರೀತಿಯೊಂದಿಲ್ಲದಿರೆ ನಾ ಶೂನ್ಯಸಮಾನ. ನನಗಿರುವುದೆಲ್ಲವನು ನಾ ದಾನಮಾಡೆ ದೇಹವನೆ ಸಜೀವ ದಹಿಸಲು ನೀಡೆ ನಾನಾಗಿರೆ ಪರಮ ಪ್ರೀತಿ ವಿಹೀನ ಏನದು ಜೀವನ, ನನಗೇನದು ಪ್ರಯೋಜನ? ಸಹನೆ ಸೈರಣೆ, ದಯೆದಾಕ್ಷಿಣ್ಯ ಪ್ರೀತಿಯಲ್ಲಿವೆ. ಎಡೆಯಿಲ್ಲ ಅದರಲಿ ಗರ್ವಕೆ, ಮರ್ಮಕೆ, ಮೆರೆತಕೆ, ಮತ್ಸರಕೆ, ಸಿಡುಕಿಗೆ, ಸೊಕ್ಕಿಗೆ, ಸ್ವಾರ್ಥಕೆ, ಸೇಡುಗಳೆಣಿಕೆಗೆ. ನಲಿಯದು ಪ್ರೀತಿ ಅನೀತಿಯಲಿ ನಲಿಯದಿರದದು ಸತ್ಯದ ಜಯದಲಿ. ನಂಬುವುದೆಲ್ಲವನು, ನಿರೀಕ್ಷಿಸುವುದೆಲ್ಲವನು, ಸಹಿಸಿಕೊಳ್ಳುವುದು ಸಮಸ್ತವನು ಪ್ರೀತಿಯದೆಂದೂ ಅರಿಯದು ಸೋಲನು. ಅಳಿದುಹೋಗುವುವು ಭವಿಷ್ಯವಾಣಿ ಗತಿಸಿಹೋಗುವುದು ಬಹುಭಾಷಾ ಶಕ್ತಿ ಹೋಗುವುವು ನಶಿಸಿ ಜ್ಞಾನ, ಬುದ್ಧಿ. ಆದರೆ ಅಮರವಾದುದು ಪರಮ ಪ್ರೀತಿ. ಅಪೂರ್ವವಾದುದು ನಮ್ಮಾ ಅರಿವೆಲ್ಲ ಪೂರ್ಣವಾದುದಲ್ಲ ಪ್ರವಾದನವದೆಲ್ಲ; ಪರಿಪೂರ್ಣತೆ ಪ್ರಾಪ್ತವಾಗಲು ಇಲ್ಲವಾಗುವುದು ಅಪೂರ್ಣತೆಯೆಲ್ಲ. ಬಾಲಕ ನಾನಾಗಿರೆ ಆಡಿದೆ, ಮಾತಾಡಿದೆ, ಚಿಂತಿಸಿದೆ, ಸುಖದುಃಖಗಳ ಸವಿದೆ ಬಾಲಕನಂತೆ. ಬಲಿತು ಬೆಳೆದು ಮನುಜನಾದುದೆ ಬಾಲಿಶವಾದುದೆಲ್ಲವನು ಬದಿಗೊತ್ತಿದೆ. ನಾವೀಗ ಕಾಂಬುದು ದರ್ಪಣದ ಬಿಂಬವನು ಮುಸುಕಾಗಿ ತರುವಾಯ ಕಾಂಬೆವು ದೇವರನು ಮುಖಾಮುಖಿಯಾಗಿ. ಈಗಿರುವುದೆನ್ನ ಅರಿವು ತುಂಡುತುಂಡಾಗಿ ನಂತರ ದೇವನೆನ್ನ ಅರಿತಂತೆ ಈ ಮೂರಲಿ ನಾನರಿವೆನು ಅಖಂಡವಾಗಿ ನಿಲ್ಲುವುವು ನಂಬಿಕೆ, ನಿರೀಕ್ಷೆ, ಪ್ರೀತಿ ನೆಲೆಯಾಗಿ; ಈ ಮೂರರಲಿ ಪ್ರೀತಿಯೇ ಪರಮೋನ್ನತ ವೆಂಬುದ ನೀನರಿ.

ಕೀರ್ತನೆ: 33:2-3, 4-5, 12, 22

ಶ್ಲೋಕ: ಸ್ವಜನರಾಗಿ ಪ್ರಭು ಆಯ್ದುಕೊಂಡ ಜನತೆ ಧನ್ಯ

ಶುಭಸಂದೇಶ: ಲೂಕ 7:31-35



ಯೇಸುಸ್ವಾಮಿ ತಮ್ಮ ಬೋಧನೆಯನ್ನು ಮುಂದುವರಿಸುತ್ತಾ, “ಈ ಕಾಲದ ಜನರನ್ನು ಯಾರಿಗೆ ಹೋಲಿಸಲಿ? ಇವರು ಯಾರನ್ನು ಹೋಲುತ್ತಾರೆ?  ಪೇಟೆಬೀದಿಯಲ್ಲಿ ಕುಳಿತು, ‘ನಾವು ಕೊಳಲನೂದಲು ನೀವು ಕುಣಿದಾಡಲಿಲ್ಲ; ನಾವು ಶೋಕಗೀತೆಗಳ ಹಾಡಲು ನೀವು ಕಣ್ಣೀರಿಡಲಿಲ್ಲ.’ ಎಂದು ಒಬ್ಬರಿಗೊಬ್ಬರು ಕೂಗಾಡುವ ಮಕ್ಕಳನ್ನು ಹೋಲುತ್ತಾರೆ.  ಸ್ನಾನಿಕ ಯೊವಾನ್ನನು ಬಂದಾಗ ಅನ್ನ ಆಹಾರವನ್ನು ಸೇವಿಸಲಿಲ್ಲ, ದ್ರಾಕ್ಷಾರಸವನ್ನು ಮುಟ್ಟಲಿಲ್ಲ; ನೀವು, ‘ಅವನಿಗೆ ದೆವ್ವ ಹಿಡಿದಿದೆ’ ಎಂದು ಹೇಳಿದಿರಿ;  ನರಪುತ್ರನು ಬಂದಾಗ ಅನ್ನ ಪಾನೀಯಗಳನ್ನು ಸೇವಿಸಿದನು; ನೀವು, ‘ಇವನೊಬ್ಬ ಹೊಟ್ಟೆಬಾಕ, ಕುಡುಕ, ಸುಂಕದವರ ಹಾಗೂ ಪಾಪಿಷ್ಠರ ಗೆಳೆಯ,’ ಎನ್ನುತ್ತೀರಿ.  ಆದರೆ ದೈವಜ್ಞಾನವೇ ನಿಜವಾದ ಜ್ಞಾನವೆಂದು ಅದನ್ನು ಅಂಗೀಕರಿಸುವ ಎಲ್ಲರೂ ಸಮರ್ಥಿಸುತ್ತಾರೆ,” ಎಂದರು.

15.09.20 - “ಮಹಾಪ್ರವಾದಿಯೊಬ್ಬನು ನಮ್ಮಲ್ಲೇ ಉದಯಿಸಿದ್ದಾನೆ; ದೇವರು ತಮ್ಮ ಜನರನ್ನು ರಕ್ಷಿಸಲು ಬಂದಿದ್ದಾರೆ,”

ಮೊದಲನೇ ವಾಚನ: 1 ಕೊರಿಂಥಿಯರಿಗೆ  12:12-14, 27-31

ದೇಹ ಒಂದೇ; ಅಂಗಗಳು ಹಲವು. ಆ ಅಂಗಗಳು ಅನೇಕವಿದ್ದರೂ ಅವು ಸೇರಿ ಒಂದೇ ದೇಹವಾಗುತ್ತದೆ. ಅಂತೆಯೇ ಕ್ರಿಸ್ತಯೇಸು. ಯೆಹೂದ್ಯರಾಗಿರಲಿ, ಗ್ರೀಕರಾಗಿರಲಿ, ಪರತಂತ್ರರಾಗಿರಲಿ, ಸ್ವತಂತ್ರರಾಗಿರಲಿ - ನಾವೆಲ್ಲರೂ ಒಂದೇ ದೇಹವಾಗುವಂತೆ ಒಂದೇ ಆತ್ಮದಿಂದ ದೀಕ್ಷಾಸ್ನಾನ ಹೊಂದಿದ್ದೇವೆ. ಒಂದೇ ಆತ್ಮವನ್ನು ನಮ್ಮೆಲ್ಲರಿಗೂ ಪಾನವಾಗಿ ಕೊಡಲಾಗಿದೆ. ದೇಹವು ಏಕ ಅಂಗದಿಂದ ಅಲ್ಲ, ಅನೇಕ ಅಂಗಗಳಿಂದ ಕೂಡಿದೆ. ನೀವೆಲ್ಲರೂ ಕ್ರಿಸ್ತಯೇಸುವಿನ ದೇಹ ಆಗಿದ್ದೀರಿ; ಪ್ರತಿಯೊಬ್ಬನೂ ಈ ದೇಹದ ಅಂಗವಾಗಿದ್ದಾನೆ. ದೇವರು ತಮ್ಮ ಸಭೆಯಲ್ಲಿ, ಮೊದಲನೆಯದಾಗಿ ಪ್ರೇಷಿತರನ್ನು, ಎರಡನೆಯದಾಗಿ ಪ್ರವಾದಿಗಳನ್ನು, ಮೂರನೆಯದಾಗಿ ಬೋಧಕರನ್ನು ನೇಮಿಸಿದ್ದಾರೆ. ಅನಂತರ ಪವಾಡಗಳನ್ನು ಎಸಗುವವರನ್ನು, ರೋಗಗಳನ್ನು ಗುಣಪಡಿಸುವವರನ್ನು, ಪರೋಪಕಾರಿಗಳನ್ನು, ಪರಿಪಾಲಕರನ್ನು, ಬಹುಭಾಷಾ ಪಂಡಿತರನ್ನು ನೇಮಿಸಿದ್ದಾರೆ. ಎಲ್ಲರೂ ಪ್ರೇಷಿತರಲ್ಲ, ಎಲ್ಲರೂ ಪ್ರವಾದಿಗಳಲ್ಲ, ಎಲ್ಲರೂ ಬೋಧಕರಲ್ಲ, ಎಲ್ಲರೂ ಪವಾಡಪುರುಷರಲ್ಲ, ಎಲ್ಲರೂ ರೋಗಗಳನ್ನು ಗುಣಪಡಿಸುವವರಲ್ಲ, ಎಲ್ಲರೂ ಪರೋಪಕಾರಿಗಳಲ್ಲ, ಎಲ್ಲರೂ ಪರಿಪಾಲಕರಲ್ಲ, ಎಲ್ಲರೂ ಬಹುಭಾಷಾಪಂಡಿತರಲ್ಲ, ಅಥವಾ ಎಲ್ಲರೂ ಆ ಭಾಷೆಗಳನ್ನು ವಿವರಿಸಿ ಹೇಳುವವರಲ್ಲ. ಶ್ರೇಷ್ಠವಾದ ವರಗಳನ್ನು ನೀವು ಶ್ರದ್ಧಾಪೂರ್ವಕವಾಗಿ ಅಪೇಕ್ಷಿಸಿರಿ. 

ಕೀರ್ತನೆ: 100:1-2, 3, 4, 5

ಶ್ಲೋಕ: ಪ್ರಭುವಿನ ಜನ, ಆತನೇ ಮೇಯಿಸುವ ಕುರಿಗಳು ನಾವು

ಶುಭಸಂದೇಶ: ಲೂಕ 7:11-17


ಯೇಸುಸ್ವಾಮಿ ನಾಯಿನ್ ಎಂಬ ಊರಿಗೆ ಹೊರಟರು. ಅವರೊಂದಿಗೆ ಶಿಷ್ಯರೂ ಅನೇಕ ಜನರೂ ಹೊರಟರು. ಊರಬಾಗಿಲನ್ನು ಸಮೀಪಿಸಿದಾಗ, ಒಂದು ಶವಯಾತ್ರೆಯನ್ನು ಅವರು ಎದುರುಗೊಂಡರು. ಆ ಸತ್ತವನು ತನ್ನ ತಾಯಿಗೆ ಒಬ್ಬನೇ ಮಗ. ಆಕೆಯೋ ವಿಧವೆ. ಜನರ ದೊಡ್ಡ ಗುಂಪೊಂದು ಆಕೆಯೊಡನೆ ಬರುತ್ತಿತ್ತು. ಪ್ರಭು ಯೇಸು ಆಕೆಯನ್ನು ಕಂಡದ್ದೇ ಕನಿಕರಗೊಂಡು, ‘ಅಳಬೇಡ’ ಎಂದು ಹೇಳಿ, ಚಟ್ಟದ ಹತ್ತಿರಕ್ಕೆ ಬಂದು, ಅದನ್ನು ಮುಟ್ಟಿದರು. ಹೊತ್ತುಕೊಂಡು ಹೋಗುತ್ತಿದ್ದವರು ಹಾಗೆಯೇ ನಿಂತರು. ಆಗ ಯೇಸು, “ಯುವಕನೇ, ನಾನು ನಿನಗೆ ಹೇಳುತ್ತೇನೆ, ಎದ್ದೇಳು,” ಎಂದರು. ಸತ್ತವನು ಎದ್ದು ಕುಳಿತು ಮಾತನಾಡಲಾರಂಭಿಸಿದನು. ಯೇಸು ಆ ಮಗನನ್ನು ತಾಯಿಗೆ ಒಪ್ಪಿಸಿದರು. ಎಲ್ಲರೂ ಭಯಭ್ರಾಂತರಾದರು. “ಮಹಾಪ್ರವಾದಿಯೊಬ್ಬನು ನಮ್ಮಲ್ಲೇ ಉದಯಿಸಿದ್ದಾನೆ; ದೇವರು ತಮ್ಮ ಜನರನ್ನು ರಕ್ಷಿಸಲು ಬಂದಿದ್ದಾರೆ,” ಎಂದು ದೇವರನ್ನು ಕೊಂಡಾಡಿದರು. ಯೇಸುವಿನ ಈ ಸಮಾಚಾರ ಜುದೇಯ ನಾಡಿನಲ್ಲೆಲ್ಲಾ ಹಾಗೂ ಸುತ್ತಮುತ್ತಲಿನ ಪ್ರಾಂತ್ಯದಲ್ಲೆಲ್ಲಾ ಹರಡಿತು. 

14.09.20 - "ದೇವರು ಲೋಕವನ್ನು ಎಷ್ಟಾಗಿ ಪ್ರೀತಿಸಿದರೆಂದರೆ ತಮ್ಮ ಏಕೈಕ ಪುತ್ರನನ್ನೇ ಧಾರೆಯೆರೆದರು"

ಮೊದಲನೇ ವಾಚನ: ಸಂಖ್ಯಾಕಾಂಡ 21:4-9


ಇಸ್ರಯೇಲರು ಹೋರ್ ಬೆಟ್ಟದಿಂದ ಹೊರಟು ಎದೋಮ್ಯರ ನಾಡನ್ನು ಸುತ್ತಿಕೊಂಡು ಹೋಗುವುದಕ್ಕೆ ಕೆಂಪುಕಡಲಿನ ಮಾರ್ಗವಾಗಿ ಪ್ರಯಾಣ ಮಾಡಿದರು. ಈ ಮಾರ್ಗದ ಆಯಾಸದಿಂದ ಅವರಿಗೆ ಬೇಸರವಾಯಿತು. 5ಆಗ ಅವರು ದೇವರಿಗೂ ಮೋಶೆಗೂ ವಿರುದ್ಧ ಮಾತಾಡತೊಡಗಿದರು: “ನೀವು ನಮ್ಮನ್ನು ಈ ಮರಳುಗಾಡಿನಲ್ಲಿ ಕೊಲ್ಲಬೇಕೆಂದು ಈಜಿಪ್ಟ್ ದೇಶದಿಂದ ಕರೆದುಕೊಂಡು ಬಂದಿರೋ? ಇಲ್ಲಿ ಆಹಾರವಿಲ್ಲ, ನೀರೂ ಇಲ್ಲ; ಈ ನಿಸ್ಸಾರವಾದ ಆಹಾರವನ್ನು ತಿಂದು ತಿಂದು ನಮಗೆ ಬೇಸರವಾಗಿದೆ,” ಎಂದು ಹೇಳತೊಡಗಿದರು.  ಅದಕ್ಕೆ ಸರ್ವೇಶ್ವರ ವಿಷಸರ್ಪಗಳನ್ನು ಅವರ ನಡುವೆ ಬರಮಾಡಿದರು. ಅವು ಆ ಜನರನ್ನು ಕಚ್ಚಿದವು. ಬಹುಜನ ಸತ್ತುಹೋದರು. ಆಗ ಜನರು ಮೋಶೆಯ ಬಳಿಗೆ ಬಂದು, “ನಾವು ನಿಮಗೂ ಸರ್ವೇಶ್ವರನಿಗೂ ವಿರುದ್ಧ ಮಾತಾಡಿ ದೋಷಿಗಳಾದೆವು. ಈ ಸರ್ಪಗಳು ನಮ್ಮನ್ನು ಬಿಟ್ಟು ತೊಲಗುವಂತೆ ಸರ್ವೇಶ್ವರನನ್ನು ಪ್ರಾರ್ಥಿಸಿ,” ಎಂದು ಬೇಡಿಕೊಂಡರು. ಮೋಶೆ ಜನರ ಪರವಾಗಿ ಪ್ರಾರ್ಥಿಸಿದನು. ಸರ್ವೇಶ್ವರ ಅವನಿಗೆ, “ನೀನು ಕಂಚಿನಿಂದ ವಿಷಸರ್ಪದ ಆಕಾರವನ್ನು ಮಾಡಿಸಿ, ಧ್ವಜಸ್ತಂಭದ ಮೇಲೆ ಎತ್ತಿ ನಿಲ್ಲಿಸು. ಸರ್ಪಗಳಿಂದ ಗಾಯಗೊಂಡ ಪ್ರತಿ ಒಬ್ಬನು ಅದನ್ನು ನೋಡಿ ಬದುಕಿಕೊಳ್ಳುವನು,” ಎಂದು ಆಜ್ಞಾಪಿಸಿದರು. ಅಂತೆಯೇ ಮೋಶೆ ಕಂಚಿನಿಂದ ಸರ್ಪದ ಆಕಾರವನ್ನು ಮಾಡಿಸಿ ಧ್ವಜಸ್ತಂಭದ ಮೇಲೆ ಇಡಿಸಿದನು. ಸರ್ಪಗಳಿಂದ ಗಾಯಗೊಂಡವರಲ್ಲಿ ಯಾರು ಯಾರು ಆ ಕಂಚಿನ ಸರ್ಪವನ್ನು ಲಕ್ಷ್ಯವಿಟ್ಟು ನೋಡಿದರೋ ಅವರೆಲ್ಲರೂ ಬದುಕಿಕೊಂಡರು.

ಕೀರ್ತನೆ: 78:1-2, 34-35, 36-37, 38

ಶ್ಲೋಕ: ಮರೆಯದಿರು ಪ್ರಭುವಿನ ಮಹತ್ಕಾರ್ಯಗಳನು

ಎರಡನೇ ವಾಚನ: ಫಿಲಿಪ್ಪಿಯರಿಗೆ 2:6-11

ದೇವಸ್ವರೂಪಿ ತಾನಾಗಿದ್ದರೂ ನಿರುತ ದೇವರಿಗೆ ಸಮನಾದ ಆ ಸಿರಿ ಪದವಿಯನಾತ ಹಿಡಿದಿಟ್ಟುಕೊಳ್ಳಲಿಲ್ಲ ಬಿಡಲೊಲ್ಲೆನೆನುತ. ತನ್ನನೇ ಬರಿದು ಮಾಡಿಕೊಂಡು ದಾಸನ ರೂಪವನು ಧರಿಸಿಕೊಂಡು ಮನುಜನಾಕಾರದಲಿ ಕಾಣಿಸಿಕೊಂಡು ನರಮಾನವರಿಗೆ ಸರಿಸಮನಾದ. ತನ್ನನೇ ಆತ ತಗ್ಗಿಸಿಕೊಂಡು ವಿಧೇಯನಾಗಿ ನಡೆದುಕೊಂಡು ಮರಣಪರಿಯಂತ, ಹೌದೌದು, ಶಿಲುಬೆಯ ಮರಣಪರಿಯಂತ ವಿಧೇಯನಾದ. ಎಂತಲೇ ಪರಮೋನ್ನತ ಸ್ಥಾನಕ್ಕೇರಿಸಿದನಾತನನು ಇತ್ತನು ಹೆಸರುಗಳೊಳುತ್ತಮ ಹೆಸರನು ದೇವಪರಮನು. ಯೇಸುವಿನ ಹೆಸರಿಗೆಂದೇ ಮೊಣಕಾಲೂರಿ ಮಣಿವರು ಸ್ವರ್ಗವಾಸಿಗಳು, ಭೂನಿವಾಸಿಗಳು, ಪಾತಾಳ ಜೀವರಾಶಿಗಳು. ‘ಕ್ರಿಸ್ತ ಯೇಸುವೇ ಪ್ರಭು’ ಎಂದೆಲ್ಲರಿಗೆ ಅರಿಕೆ ಮಾಡುವರು ಪಿತದೇವನ ಮಹಿಮೆಯನು ಈ ಪರಿ ಹೊಗಳಿ ಸಾರುವರವರು.

ಶುಭಸಂದೇಶ: ಯೊವಾನ್ನ3:13-17


ಯೇಸು ನಿಕೊದೇಮನಿಗೆ ಇಂತೆಂದರು: "ಸ್ವರ್ಗಲೋಕದಿಂದಲೇ ಇಳಿದುಬಂದ ನರಪುತ್ರನೇ ಹೊರತು ಬೇರೆ ಯಾರೂ ಸ್ವರ್ಗಕ್ಕೆ ಏರಿಹೋದವರಿಲ್ಲ. ಮೋಶೆ ಮರುಭೂಮಿಯಲ್ಲಿ ಸರ್ಪವನ್ನು ಮೇಲಕ್ಕೆ ಏರಿಸಿದನು.  ಅಂತೆಯೇ ನರಪುತ್ರನಲ್ಲಿ ವಿಶ್ವಾಸವಿಟ್ಟವರೆಲ್ಲರೂ ನಿತ್ಯಜೀವವನ್ನು ಪಡೆಯುವಂತೆ ನರಪುತ್ರನನ್ನು ಸಹ ಮೇಲಕ್ಕೆ ಏರಿಸಬೇಕು.  ದೇವರು ಲೋಕವನ್ನು ಎಷ್ಟಾಗಿ ಪ್ರೀತಿಸಿದರೆಂದರೆ ತಮ್ಮ ಏಕೈಕ ಪುತ್ರನನ್ನೇ ಧಾರೆಯೆರೆದರು; ಆತನಲ್ಲಿ ವಿಶ್ವಾಸವಿಟ್ಟ ಯಾರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂಬುದೇ ದೇವರ ಉದ್ದೇಶ. ದೇವರು ತಮ್ಮ ಪುತ್ರನನ್ನು ಈ ಲೋಕಕ್ಕೆ ಕಳುಹಿಸಿದ್ದು ಲೋಕವನ್ನು ತೀರ್ಪಿಗೆ ಗುರಿಮಾಡಲೆಂದಲ್ಲ; ಪುತ್ರನ ಮುಖಾಂತರ ಲೋಕ ಉದ್ಧಾರವಾಗಲೆಂದು."

13.09.20 - "ಪ್ರತಿಯೊಬ್ಬನೂ ತನ್ನ ಸೋದರನನ್ನು ಮನಃಪೂರ್ವಕವಾಗಿ ಕ್ಷಮಿಸಬೇಕು. ಇಲ್ಲದಿದ್ದರೆ ಸ್ವರ್ಗದಲ್ಲಿರುವ ನನ್ನ ತಂದೆ ನಿಮಗೆ ಇದರಂತೆಯೇ ಮಾಡುವರು,” ಎಂದರು.

ಮೊದಲನೇ ವಾಚನ: ಸಿರಾಖನು 27:30--28:7

ಸಿಟ್ಟು ಸಿಡುಕು ಸಿಟ್ಟುಸಿಡುಕುಗಳು ಹೇಯವಾದವುಗಳು ಅವೆರಡೂ ಇರುವುವು ಪಾಪಾತ್ಮನೊಳು. ಪ್ರತೀಕಾರ ಮಾಡುವವನು ಸರ್ವೇಶ್ವರನಿಂದ ಪ್ರತೀಕಾರ ಹೊಂದುವನು ಅವನ ಪಾಪಗಳನ್ನು ಸರ್ವೇಶ್ವರ ಸದಾ ಮನಸ್ಸಿನಲ್ಲಿ ಇಟ್ಟುಕೊಳ್ಳುವರು. ಕ್ಷಮೆನೀಡು ನಿನ್ನ ನೆರೆಯವನು ಮಾಡಿದ ತಪ್ಪಿಗೆ ನೀನು ಪ್ರಾರ್ಥಿಸುವಾಗ ಕ್ಷಮೆ ದೊರಕುವುದು ನಿನ್ನ ಪಾಪಗಳಿಗೆ. ನೆರೆಯವನ ಮೇಲೆ ಮುನಿಸಿಟ್ಟುಕೊಂಡರೆ ದೇವರಿಂದ ಕ್ಷಮೆಹೊಂದಲು ಆದೀತೆ? ತನ್ನಂಥ ಮನುಷ್ಯನ ಮೇಲೆ ಅವನಿಗೆ ಕರುಣೆಯಿಲ್ಲದಿರೆ ಬೇಡಿಕೊಂಡರೆ ಪಾಪಮನ್ನಣೆ ಪಡೆಯುವನೆ? ಕೇವಲ ನರಮಾನವನಾದವನು ಇಂಥ ಸಿಡುಕಿಟ್ಟುಕೊಂಡರೆ ಇವನ ಪಾಪಗಳಿಗೆ ದೋಷಪರಿಹಾರ ಮಾಡುವವರು ಯಾರಿದ್ದಾರೆ? ನಿನ್ನ ಅಂತ್ಯಕಾಲವನ್ನು ಸ್ಮರಿಸಿಕೊಂಡು ಹಗೆತನವನು ತೊರೆದುಬಿಡು ಸಾವು ಮರಣಗಳನ್ನು ನೆನೆದು ದೇವರ ಆಜ್ಞೆಗಳನ್ನು ಪಾಲನೆಮಾಡು. ದೇವರ ಆಜ್ಞೆಗಳನ್ನು ಸ್ಮರಿಸಿಕೊಂಡು ನೆರೆಯವನ ಮೇಲೆ ಮುನಿಸಬೇಡ ಮಹೋನ್ನತನ ಒಡಂಬಡಿಕೆಯನ್ನು ನೆನಸಿ ಕೊಂಡು ತಪ್ಪು ನೆಪ್ಪುಗಳನ್ನು ವೀಕ್ಷಿಸಬೇಡ.

ಕೀರ್ತನೆ: 103:1-2, 3-4, 9-10, 11-12

ಶ್ಲೋಕ: ಪ್ರಭು ದಯಾಳು, ಕೃಪಾಪೂರ್ಣನು, ನಿತ್ಯಕು ಕೋಪ ಇಟ್ಟುಕೊಳ್ಳುವವನಲ್ಲ

ಎರಡನೇ ವಾಚನ: ರೋಮನರಿಗೆ14:7-9

ಸಹೋದರರೇ, ನಮ್ಮಲ್ಲಿ ಯಾರೂ ತನಗಾಗಿಯೇ ಬದುಕುವುದಿಲ್ಲ; ತನಗಾಗಿಯೇ ಸಾಯುವುದಿಲ್ಲ. ನಾವು ಬದುಕಿದರೂ ಪ್ರಭುವಿಗಾಗಿಯೇ; ಸತ್ತರೂ ಅವರಿಗಾಗಿಯೇ. ನಾವು ಬದುಕಿದರೂ ಸತ್ತರೂ ಪ್ರಭುವಿಗೆ ಸೇರಿದವರು. ಏಕೆಂದರೆ, ಸತ್ತವರಿಗೂ ಬದುಕುವವರಿಗೂ ಪ್ರಭುವಾಗಬೇಕೆಂಬ ಉದ್ದೇಶದಿಂದಲೇ ಕ್ರಿಸ್ತಯೇಸು ಸತ್ತು ಜೀವಂತರಾದದ್ದು. 


ಶುಭಸಂದೇಶ: ಮತ್ತಾಯ18:21-35


ಅನಂತರ ಪೇತ್ರನು ಯೇಸುವಿನ ಬಳಿಗೆ ಬಂದು, “ಸ್ವಾಮೀ, ನನಗೆ ವಿರುದ್ಧ ದ್ರೋಹಮಾಡುತ್ತಾ ಇರುವ ನನ್ನ ಸಹೋದರನನ್ನು ಎಷ್ಟು ಸಲ ಕ್ಷಮಿಸಬೇಕು? ಏಳುಸಲವೇ?” ಎಂದು ಕೇಳಿದನು.  “ಏಳುಸಲವಲ್ಲ, ಏಳೆಪ್ಪತ್ತುಸಲ ಕ್ಷಮಿಸಬೇಕು ಎಂದು ನಾನು ನಿನಗೆ ಒತ್ತಿ ಹೇಳುತ್ತೇನೆ,” ಎಂದು ಯೇಸು ಉತ್ತರವಿತ್ತರು. ಯೇಸು ತಮ್ಮ ಮಾತನ್ನು ಮುಂದುವರಿಸುತ್ತಾ, “ಸ್ವರ್ಗಸಾಮ್ರಾಜ್ಯಕ್ಕೆ ಈ ಹೋಲಿಕೆ ಅನ್ವಯಿಸುತ್ತದೆ: ಒಬ್ಬ ರಾಜನಿದ್ದ. ಅವನು ತನ್ನ ಸೇವಕರಿಂದ ಲೆಕ್ಕ ಕೇಳಲು ನಿರ್ಧರಿಸಿದ.  ಲೆಕ್ಕ ತೆಗೆದುಕೊಳ್ಳಲು ಆರಂಭಿಸಿದಾಗ ಹತ್ತು ಸಾವಿರ ‘ಚಿನ್ನದ ನಾಣ್ಯ’ಗಳನ್ನು ಸಾಲವಾಗಿ ತೆರಬೇಕಾಗಿದ್ದ ಒಬ್ಬನನ್ನು ಅವನ ಸಮ್ಮುಖಕ್ಕೆ ಕರೆತರಲಾಯಿತು.  ಆದರೆ ಸಾಲ ತೀರಿಸಲು ಅವನ ಕೈಯಲ್ಲಿ ಹಣವಿರಲಿಲ್ಲ. ಆದುದರಿಂದ ಅವನಿಗಿದ್ದುದೆಲ್ಲವನ್ನು ಮಾತ್ರವಲ್ಲ, ಅವನನ್ನೂ ಅವನ ಮಡದಿ ಮಕ್ಕಳನ್ನೂ ಗುಲಾಮಗಿರಿಗೆ ಮಾರಿ, ಸಾಲ ತೀರಿಸುವಂತೆ ರಾಜ ಆಜ್ಞಾಪಿಸಿದ.  ಆಗ ಆ ಸೇವಕ ರಾಜನ ಕಾಲಿಗೆ ಬಿದ್ದು ಬೇಡಿಕೊಂಡ: ‘ಸ್ವಲ್ಪ ಸೈರಿಸಿಕೊಳ್ಳಿ ಸ್ವಾಮೀ, ನಿಮ್ಮ ಸಾಲವನ್ನೆಲ್ಲಾ ತೀರಿಸಿಬಿಡುತ್ತೇನೆ,’ ಎಂದು ಅಂಗಲಾಚಿದ.  ರಾಜನಿಗೆ ಕನಿಕರ ಉಂಟಾಯಿತು. ಆ ಸೇವಕನನ್ನು ಬಿಡುಗಡೆಮಾಡಿ ಅವನ ಸಾಲವನ್ನು ಮನ್ನಿಸಿಬಿಟ್ಟ. “ಆದರೆ ಅದೇ ಸೇವಕ ಹೊರಗೆಬಂದದ್ದೇ ತನಗೆ ಕೇವಲ ನೂರು ‘ಬೆಳ್ಳಿಕಾಸು’ ಸಾಲ ತೆರಬೇಕಾಗಿದ್ದ ಒಬ್ಬ ಜೊತೆ ಸೇವಕನನ್ನು ಎದುರುಗೊಂಡ.  ಅವನನ್ನು ಹಿಡಿದು, ‘ನನಗೆ ಕೊಡಬೇಕಾದ ಸಾಲವನ್ನು ಈಗಲೇ ಕೊಟ್ಟು ತೀರಿಸು,’ ಎಂದು ಕುತ್ತಿಗೆ ಹಿಸುಕಿದ. ಆಗ ಆ ಜೊತೆಗಾರ, ‘ಸ್ವಲ್ಪ ಸೈರಿಸಿಕೊ, ಕೊಟ್ಟುಬಿಡುತ್ತೇನೆ,’ ಎಂದು ಕಾಲಿಗೆ ಬಿದ್ದು ಕೇಳಿಕೊಂಡ.  ಆದರೂ ಅವನು ಒಪ್ಪಲಿಲ್ಲ. ಅಷ್ಟುಮಾತ್ರವಲ್ಲ, ಸಾಲ ತೀರಿಸುವ ತನಕ ಆ ಜೊತೆಗಾರನನ್ನು ಸೆರೆಗೆ ಹಾಕಿಸಿದ.  ಇದೆಲ್ಲವನ್ನು ಕಂಡ ಇತರ ಸೇವಕರು ಬಹಳವಾಗಿ ನೊಂದುಕೊಂಡರು. ರಾಜನ ಬಳಿಗೆ ಹೋಗಿ ನಡೆದುದೆಲ್ಲವನ್ನೂ ವರದಿಮಾಡಿದರು.  ರಾಜನು ಅವನನ್ನು ಕರೆಯಿಸಿ, ‘ಎಲೋ ನೀಚ, ನೀನು ಬೇಡಿಕೊಂಡಿದ್ದರಿಂದ ಪೂರ್ತಿ ಸಾಲವನ್ನು ನಾನು ಮನ್ನಾಮಾಡಿದೆ.  ನಾನು ನಿನಗೆ ದಯೆತೋರಿಸಿದಂತೆ ನೀನೂ ನಿನ್ನ ಜೊತೆಗಾರನಿಗೆ ದಯೆತೋರಿಸಬೇಕಿತ್ತು ಅಲ್ಲವೇ?’ ಎಂದು ಸಿಟ್ಟುಗೊಂಡ.  ಬಳಿಕ ತನಗೆ ಬರಬೇಕಾಗಿದ್ದ ಸಾಲವನ್ನು ತೀರಿಸುವವರೆಗೂ ಅವನನ್ನು ಕಠಿಣ ಶಿಕ್ಷೆಗೆ ಗುರಿಪಡಿಸಿದ. “ನಿಮ್ಮಲ್ಲಿ ಪ್ರತಿಯೊಬ್ಬನೂ ತನ್ನ ಸೋದರನನ್ನು ಮನಃಪೂರ್ವಕವಾಗಿ ಕ್ಷಮಿಸಬೇಕು. ಇಲ್ಲದಿದ್ದರೆ ಸ್ವರ್ಗದಲ್ಲಿರುವ ನನ್ನ ತಂದೆ ನಿಮಗೆ ಇದರಂತೆಯೇ ಮಾಡುವರು,” ಎಂದರು.


12.09.2020 - “ಒಳ್ಳೆಯ ಮರವು ಕೆಟ್ಟ ಫಲವನ್ನು ಕೊಡುವುದಿಲ್ಲ; ಕೆಟ್ಟ ಮರವು ಒಳ್ಳೆಯ ಫಲವನ್ನು ಕೊಡುವುದಿಲ್ಲ"

ಮೊದಲನೇ ವಾಚನ: 1 ಕೊರಿಂಥಿಯರಿಗೆ 10:14-22

ಪ್ರಿಯರೇ, ವಿಗ್ರಹಾರಾಧನೆಯನ್ನು ತೊರೆದುಬಿಡಿ. ನೀವು ಅರಿತವರೆಂದು ತಿಳಿದೇ ಇದನ್ನು ಹೇಳುತ್ತಿದ್ಧೇನೆ. ನನ್ನ ಮಾತುಗಳನ್ನು ನೀವೇ ಪರಿಶೀಲಿಸಿನೋಡಿ.  ನಾವು ದೇವರಿಗೆ ಕೃತಜ್ಞತಾಸ್ತೋತ್ರವನ್ನು ಸಲ್ಲಿಸಿ ಪಾನಪಾತ್ರೆಯಿಂದ ಕುಡಿಯುವಾಗ ಕ್ರಿಸ್ತಯೇಸುವಿನ ರಕ್ತದಲ್ಲಿ ಪಾಲುಗೊಳ್ಳುತ್ತೇವಲ್ಲವೇ? ರೊಟ್ಟಿಯನ್ನು ಮುರಿದು ತಿನ್ನುವಾಗ ಕ್ರಿಸ್ತಯೇಸುವಿನ ಶರೀರದಲ್ಲಿ ಪಾಲುಗೊಳ್ಳುತ್ತೇವಲ್ಲವೇ?  ರೊಟ್ಟಿ ಒಂದೇ; ಆದ್ದರಿಂದ ನಾವು ಅನೇಕರಿದ್ದರೂ ಒಂದೇ ಶರೀರವಾಗುತ್ತೇವೆ. ಏಕೆಂದರೆ ನಾವೆಲ್ಲರೂ ಆ ಒಂದೇ ರೊಟ್ಟಿಯಲ್ಲಿ ಭಾಗಿಗಳಾಗುತ್ತೇವೆ. ಇಸ್ರಯೇಲರ ಪದ್ಧತಿಯನ್ನು ಗಮನಿಸಿರಿ: ಬಲಿಯಾಗಿ ಅರ್ಪಿತವಾದುದನ್ನು ಭುಜಿಸುವವರು ಬಲಿಪೀಠದ ಸೇವೆಯಲ್ಲಿ ಭಾಗಿಯಾಗುತ್ತಾರಷ್ಟೆ.  ಹೀಗೆ ನಾನು ಹೇಳುವಾಗ ವಿಗ್ರಹಕ್ಕೆ ನೈವೇದ್ಯಮಾಡಿದ ಪದಾರ್ಥವು ವಾಸ್ತವವಾದುದು ಅಥವಾ ವಿಗ್ರಹವೇ ವಾಸ್ತವವಾದುದು ಎಂದು ಅರ್ಥವೇ?  ಯಾವುದೂ ಅಲ್ಲ. ನಾನು ಹೇಳುವುದೇನೆಂದರೆ : ಅನ್ಯಜನರು ಬಲಿಯನ್ನು ದೆವ್ವಗಳಿಗೆ ಅರ್ಪಿಸುತ್ತಾರೆ ಹೊರತು ದೇವರಿಗಲ್ಲ. ಹೀಗೆ ನೀವು ದೆವ್ವಗಳೊಂದಿಗೆ ಭಾಗಿಯಾಗುವುದನ್ನು ನಾನೆಂದಿಗೂ ಇಷ್ಟಪಡುವುದಿಲ್ಲ.  ನೀವು ಪ್ರಭುವಿನ ಪಾತ್ರೆಯಿಂದ ಹಾಗೂ ದೆವ್ವಗಳ ಪಾತ್ರೆಯಿಂದ ಕುಡಿಯಲಾಗದು. ಪ್ರಭುವಿನ ಪಂಕ್ತಿಯಲ್ಲೂ ಅಂತೆಯೇ ದೆವ್ವಗಳ ಪಂಕ್ತಿಯಲ್ಲೂ ಊಟಮಾಡಲಾಗದು.  ನಾವು ಪ್ರಭುವನ್ನು ಅಸೂಯೆಗೆಬ್ಬಿಸಬಹುದೇ? ಅವರಿಗಿಂತ ನಾವು ಬಲಾಢ್ಯರೇ?

ಕೀರ್ತನೆ: 116:12-13, 17-18

ಶ್ಲೋಕ: ಅರ್ಪಿಸುವೆ ಪ್ರಭೂ ನಾ ನಿನಗೆ ಕೃತಜ್ಞತಾಬಲಿಗಳನು

ಶುಭಸಂದೇಶ: 6:43-49


ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದು ಹೇಳಿದರು: “ಒಳ್ಳೆಯ ಮರವು ಕೆಟ್ಟ ಫಲವನ್ನು ಕೊಡುವುದಿಲ್ಲ; ಕೆಟ್ಟ ಮರವು ಒಳ್ಳೆಯ ಫಲವನ್ನು ಕೊಡುವುದಿಲ್ಲ.  ಪ್ರತಿಯೊಂದು ಮರದ ಗುಣವನ್ನು ಅದರ ಹಣ್ಣಿನಿಂದ ಗುರುತಿಸಬಹುದು. ಮುಳ್ಳುಗಿಡದಲ್ಲಿ ಅಂಜೂರ ಕೀಳುವಂತಿಲ್ಲ. ಮುಳ್ಳು ಕಳ್ಳಿಯಲ್ಲಿ ದ್ರಾಕ್ಷಿ ಕೊಯ್ಯುವಂತಿಲ್ಲ.  ಒಳ್ಳೆಯವನು ತನ್ನ ಹೃದಯವೆಂಬ ಬೊಕ್ಕಸದಿಂದ ಒಳ್ಳೆಯದನ್ನೇ ಹೊರತರುತ್ತಾನೆ. ಕೆಟ್ಟವನು ಕೆಟ್ಟ ಬೊಕ್ಕಸದಿಂದ ಕೆಟ್ಟದ್ದನ್ನೇ ಹೊರತರುತ್ತಾನೆ. ಹೃದಯದಲ್ಲಿ ತುಂಬಿರುವುದೇ ಬಾಯಿಮಾತಾಗಿ ತುಳುಕುತ್ತದೆ. “ನೀವು ನನ್ನನ್ನು ‘ಸ್ವಾಮೀ ಸ್ವಾಮೀ,’ ಎಂದು ಕರೆಯುತ್ತೀರಿ; ಆದರೆ ನನ್ನ ಮಾತಿನಂತೆ ನಡೆಯುವುದಿಲ್ಲವೇಕೆ?  ನನ್ನ ಬಳಿಗೆ ಬಂದು ನನ್ನ ಮಾತನ್ನು ಕೇಳಿ, ಅದರಂತೆ ನಡೆಯುವ ಪ್ರತಿಯೊಬ್ಬನೂ ಎಂಥವನಿಗೆ ಸಮಾನನೆಂದು ನಿಮಗೆ ಹೇಳುತ್ತೇನೆ ಕೇಳಿ:  ಆಳವಾಗಿ ಅಡಿಪಾಯ ತೆಗೆದು, ಬಂಡೆಕಲ್ಲಿನ ಮೇಲೆ ಅಸ್ತಿವಾರ ಹಾಕಿ, ಮನೆಕಟ್ಟಿದವನಿಗೆ ಅವನು ಸಮಾನನು; ಹುಚ್ಚು ಹೊಳೆ ಬಂದು ಪ್ರವಾಹವು ಆ ಮನೆಗೆ ಅಪ್ಪಳಿಸಿದರೂ ಅದು ಕದಲಲಿಲ್ಲ. ಕಾರಣ - ಆ ಮನೆಯನ್ನು ಸುಭದ್ರವಾಗಿ ಕಟ್ಟಲಾಗಿತ್ತು.  ನನ್ನ ಮಾತನ್ನು ಕೇಳಿಯೂ ಅದರಂತೆ ನಡೆಯದವನು ಅಸ್ತಿವಾರವೇ ಇಲ್ಲದೆ ಬರಿಯ ಮಣ್ಣಿನ ಮೇಲೆ ಮನೆ ಕಟ್ಟಿದವನಿಗೆ ಸಮಾನನು. ಆ ಮನೆಗೆ ಪ್ರವಾಹವು ಅಪ್ಪಳಿಸಿದಾಗ ಒಡನೆಯೇ ಅದು ಕುಸಿದು ಬಿತ್ತು. ಆ ಮನೆಗೆ ಒದಗಿದ ಪತನವೋ ವಿಪರೀತ!” ಎಂದರು.

11.09.2020 - ಶುಭಸಂದೇಶವನ್ನು ನಾನು ಸಾರುತ್ತಿದ್ದೇನೆಂದು ಕೊಚ್ಚಿಕೊಳ್ಳುವುದಕ್ಕೂ ನನಗೆ ಆಸ್ಪದವಿಲ್ಲ. ಏಕೆಂದರೆ, ಸಾರಲೇಬೇಕೆಂಬ ಕರ್ತವ್ಯಕ್ಕೆ ನಾನು ಬದ್ಧನಾಗಿದ್ದೇನೆ.

ಮೊದಲನೇ ವಾಚನ: 1 ಕೊರಿಂಥಿಯರಿಗೆ 9:16-19, 22-27

ಸಹೋದರರೇ, ಶುಭಸಂದೇಶವನ್ನು ನಾನು ಸಾರುತ್ತಿದ್ದೇನೆಂದು ಕೊಚ್ಚಿಕೊಳ್ಳುವುದಕ್ಕೂ ನನಗೆ ಆಸ್ಪದವಿಲ್ಲ. ಏಕೆಂದರೆ, ಸಾರಲೇಬೇಕೆಂಬ ಕರ್ತವ್ಯಕ್ಕೆ ನಾನು ಬದ್ಧನಾಗಿದ್ದೇನೆ. ಸಾರದಿದ್ದರೆ ನನಗೆ ಧಿಕ್ಕಾರವಿರಲಿ!  ನಾನು ಸ್ವಂತ ಇಷ್ಟದಿಂದ ಈ ಕಾರ್ಯವನ್ನು ಕೈಗೊಂಡಿದ್ದರೆ ತಕ್ಕ ಸಂಭಾವನೆ ಇರುತ್ತಿತ್ತು. ಆದರೆ ಈ ಕರ್ತವ್ಯವನ್ನು ನನಗೆ ವಹಿಸಲಾಗಿದೆ. ಆದ್ದರಿಂದ ಕರ್ತವ್ಯಬದ್ಧನಾಗಿ ಮಾಡುತ್ತಿದ್ದೇನೆ.  ಹಾಗಾದರೆ ನನಗೆ ಸಿಗುವ ಸಂಭಾವನೆಯಾದರೂ ವಿಶ್ವಾಸದಲ್ಲಿ ದುರ್ಬಲರನ್ನು ಗಳಿಸಿಕೊಳ್ಳಲು ನಾನೂ ದುರ್ಬಲನಂತಾದೆ. ಹೇಗಾದರೂ ಸರಿ, ಕೆಲವರನ್ನಾದರೂ ಉದ್ಧರಿಸಲು ಎಲ್ಲರಿಗೂ ಎಲ್ಲವೂ ಆದೆ.  ಶುಭಸಂದೇಶದ ಸೌಭಾಗ್ಯದಲ್ಲಿ ಪಾಲುಗೊಳ್ಳಲೆಂದು ಇದೆಲ್ಲವನ್ನು ಶುಭಸಂದೇಶಕ್ಕಾಗಿಯೇ ಮಾಡುತ್ತೇನೆ,  ನಿಮಗೆ ತಿಳಿದಿರುವಂತೆ ಕ್ರೀಡಾಂಗಣದಲ್ಲಿ ಅನೇಕರು ಓಟದ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ. ಆದರೆ ಪ್ರಥಮ ಬಹುಮಾನ ದೊರಕುವುದು ಒಬ್ಬನಿಗೆ ಮಾತ್ರ. ಅಂತೆಯೇ ಬಹುಮಾನವನ್ನು ಪಡೆದುಕೊಳ್ಳಲು ನೀವೂ ಓಡಿ.  ಕ್ರೀಡಾಪಟುಗಳೆಲ್ಲರೂ ತಮ್ಮನ್ನು ಹತೋಟಿಯಲ್ಲಿಟ್ಟುಕೊಳ್ಳುತ್ತಾರೆ. ಅಳಿದುಹೋಗುವ ಪದಕದ ಗಳಿಕೆಗಾಗಿ ಪ್ರಯತ್ನ ಮಾಡುತ್ತಾರೆ. ನಾವಾದರೋ ಅಮರ ಪದಕದ ಗಳಿಕೆಗಾಗಿ ಶ್ರಮಿಸುತ್ತೇವೆ.  ನಾನಾದರೋ ಗೊತ್ತು ಗುರಿಯಿಲ್ಲದವನಂತೆ ಓಡುವುದಿಲ್ಲ, ಗಾಳಿಯೊಡನೆ ಗುದ್ದಾಡುವವನಂತೆ ಹೋರಾಡುವುದಿಲ್ಲ.  ಇತರರಿಗೆ ಕರೆಕೊಟ್ಟ ಮೇಲೆ ನಾನೇ ಅಯೋಗ್ಯನಾಗದಂತೆ, ನನ್ನ ದೇಹವನ್ನು ದಂಡಿಸಿ, ನನ್ನನ್ನೇ ನಾನು ಹತೋಟಿಯಲ್ಲಿಟ್ಟುಕೊಳ್ಳುತ್ತೇನೆ.

ಕೀರ್ತನೆ: 84:3, 4, 5-6, 8, 12

ಶ್ಲೋಕ: ಸ್ವರ್ಗಸೇನಾಧೀಶ್ವರಾ, ನಿನ್ನ ನಿವಾಸಗಳೆನಿತೋ ಸುಂದರ

ಶುಭಸಂದೇಶ: ಲೂಕ 6:39-42


ಯೇಸುಸ್ವಾಮಿ ಶಿಷ್ಯರಿಗೆ ಈ ಸಾಮತಿಯನ್ನೂ ಹೇಳಿದರು: “ಕುರುಡನು ಕುರುಡನಿಗೆ ದಾರಿ ತೋರಿಸಲಾದೀತೆ? ಇಬ್ಬರೂ ಹಳ್ಳದಲ್ಲಿ ಬೀಳುವುದಿಲ್ಲವೆ?  ಗುರುವಿಗಿಂತ ಶಿಷ್ಯನು ಶ್ರೇಷ್ಠನಲ್ಲ; ಆದರೂ ಪೂರ್ಣ ಶಿಕ್ಷಣ ಪಡೆದ ಪ್ರತಿಯೊಬ್ಬನೂ ಗುರುವಿನಂತೆ ಆಗುವನು. “ನಿನ್ನ ಕಣ್ಣಿನಲ್ಲಿರುವ ದಿಮ್ಮಿಯನ್ನು ನೋಡದೆ, ಸೋದರನ ಕಣ್ಣಿನಲ್ಲಿರುವ ಅಣುವನ್ನು ಗಮನಿಸುವುದೇಕೆ? ನಿನ್ನ ಕಣ್ಣಿನಲ್ಲಿರುವ ದಿಮ್ಮಿಯನ್ನೇ ಕಾಣಲಾರದ ನೀನು, ‘ತಮ್ಮಾ ತಾಳು, ನಿನ್ನ ಕಣ್ಣಿನಲ್ಲಿರುವ ಅಣುವನ್ನು ತೆಗೆದುಬಿಡುತ್ತೇನೆ,’ ಎಂದು ಸೋದರನಿಗೆ ಹೇಗೆ ಹೇಳಬಲ್ಲೆ? ಎಲೈ ಕಪಟಿಯೇ, ಮೊದಲು ನಿನ್ನ ಕಣ್ಣಿನಲ್ಲಿರುವ ದಿಮ್ಮಿಯನ್ನು ತೆಗೆದುಹಾಕು, ಅನಂತರ ನಿನ್ನ ಸೋದರನ ಕಣ್ಣಿನಲ್ಲಿರುವ ಅಣುವನ್ನು ತೆಗೆದುಹಾಕಲು ನಿನಗೆ ಕಣ್ಣು ನಿಚ್ಚಳವಾಗಿ ಕಾಣಿಸುವುದು."

10.09.20 - ಕೇಳಿಕೊಳ್ಳುವ ಪ್ರತಿಯೊಬ್ಬನಿಗೂ ಕೊಡು ನಿನ್ನ ಸೊತ್ತನ್ನು ಕಸಿದುಕೊಳ್ಳುವವನಿಂದ ತಿರುಗಿ ಕೇಳದಿರು.

ಮೊದಲನೇ ವಾಚನ: 1 ಕೊರಿಂಥಿಯರಿಗೆ 8:1-7, 11-13

ವಿಗ್ರಹಗಳಿಗೆ ನೈವೇದ್ಯಮಾಡಿದ ಆಹಾರಪದಾರ್ಥಗಳ ವಿಷಯವಾಗಿ ನಾನು ಹೇಳುವುದೇನೆಂದರೆ: “ನಮಗೆಲ್ಲರಿಗೂ ಜ್ಞಾನೋದಯವಾಗಿದೆ” ಎಂದು ಹೇಳಿಕೊಳ್ಳುತ್ತೀರಿ. ಜ್ಞಾನವು ನಮ್ಮನ್ನು ಅಹಂಕಾರಿಗಳನ್ನಾಗಿ ಮಾಡುತ್ತದೆ. ಪ್ರೀತಿಯಾದರೋ ಭಕ್ತಿಯನ್ನು ವೃದ್ಧಿಗೊಳಿಸುತ್ತದೆ. ಯಾರಾದರೂ ತಾನು ಬಲ್ಲವನೆಂದು ಕೊಚ್ಚಿಕೊಳ್ಳುವುದಾದರೆ ತಾನು ತಿಳಿಯಬೇಕಾದುದನ್ನು ಅವನು ಸರಿಯಾಗಿ ತಿಳಿದಿರುವುದಿಲ್ಲ. ಆದರೆ ದೇವರನ್ನು ಪ್ರೀತಿಸುವವನನ್ನು ದೇವರು ಗುರುತಿಸುತ್ತಾರೆ. ವಿಗ್ರಹಗಳಿಗೆ ನೈವೇದ್ಯಮಾಡಿದ ಪದಾರ್ಥಗಳನ್ನು ತಿನ್ನುವ ಬಗ್ಗೆ ನನ್ನ ಅಭಿಪ್ರಾಯ ಹೀಗಿದೆ: ವಿಗ್ರಹಗಳಿಗೆ ನಿಜವಾದ ಅಸ್ತಿತ್ವವಿಲ್ಲ. ದೇವರು ಒಬ್ಬರೇ ಹೊರತು ಬೇರೆ ದೇವರಿಲ್ಲ. ಇದು ನಮಗೆ ತಿಳಿದ ವಿಷಯ. “ದೇವರುಗಳು” ಎನಿಸಿಕೊಳ್ಳುವವರು ಇಹಪರಗಳಲ್ಲಿ ಇರಬಹುದು; ಅಂಥ ಹಲವಾರು “ದೇವರು"ಗಳನ್ನೂ “ಪ್ರಭು"ಗಳನ್ನೂ ಪೂಜಿಸುವುದುಂಟು. ಆದರೆ ನಮಗೆ ಒಬ್ಬರೇ ದೇವರು. ಅವರು ನಮ್ಮ ಪರಮ ಪಿತ; ಎಲ್ಲ ಸೃಷ್ಟಿಗೂ ಮೂಲಕರ್ತ, ನಾವಿರುವುದು ಅವರಿಗಾಗಿಯೇ. ನಮಗೆ ಒಬ್ಬರೇ ಪ್ರಭು; ಅವರೇ ಯೇಸುಕ್ರಿಸ್ತ. ಅವರ ಮುಖಾಂತರವೇ ಸಮಸ್ತವೂ ಉಂಟಾಯಿತು. ಅವರ ಮುಖಾಂತರವೇ ನಾವು ಜೀವಿಸುತ್ತೇವೆ. ಆದರೆ ಎಲ್ಲರಿಗೂ ಇದರ ಅರಿವಿಲ್ಲ. ಕೆಲವರು ಸಾಂಪ್ರದಾಯಕವಾಗಿ ಬಂದ ವಿಗ್ರಹಾರಾಧನೆಯಲ್ಲಿ ಭಾಗವಹಿಸಿ, ವಿಗ್ರಹಕ್ಕೆ ಅರ್ಪಿತವಾದ ನೈವೇದ್ಯಪದಾರ್ಥವನ್ನು ತಿನ್ನುತ್ತಾರೆ. ಆದರೆ ಅವರ ಮನಸ್ಸಾಕ್ಷಿ ದುರ್ಬಲವಾಗಿರುವುದರಿಂದ ತಾವು ಕಲುಷಿತರಾದೆವೆಂದು ಭಾವಿಸಿಕೊಳ್ಳುತ್ತಾರೆ. ಈ ನಿನ್ನ ಅರಿವಿನಿಂದ ದುರ್ಬಲ ಸೋದರನು ನಾಶಕ್ಕೆ ಗುರಿಯಾಗುತ್ತಾನೆ. ಯೇಸುಕ್ರಿಸ್ತರು ಅವನಿಗಾಗಿಯೂ ಪ್ರಾಣತ್ಯಾಗ ಮಾಡಲಿಲ್ಲವೇ?  ಹೀಗೆ ನೀವು ನಿಮ್ಮ ಸಹೋದರರ ದುರ್ಬಲ ಮನಸ್ಸಾಕ್ಷಿಯನ್ನು ನೋಯಿಸಿ, ಅವರ ವಿರುದ್ಧ ಪಾಪ ಕಟ್ಟಿಕೊಳ್ಳುವುದರಿಂದ ಯೇಸುಕ್ರಿಸ್ತರ ವಿರುದ್ಧವೇ ಪಾಪಮಾಡುತ್ತೀರಿ.  ನಾನು ತಿನ್ನುವ ಆಹಾರ ನನ್ನ ಸಹೋದರನ ವಿಶ್ವಾಸಕ್ಕೆ ಅಡ್ಡಿಯಾಗುವುದಾದರೆ ಎಂದಿಗೂ ನಾನದನ್ನು ತಿನ್ನಲಾರೆ, ಅವನ ವಿಶ್ವಾಸಕ್ಕೆ ಅಡ್ಡಿಯನ್ನು ತರಲಾರೆ.

ಕೀರ್ತನೆ: 139:1-3, 13-14, 23-24

ಶ್ಲೋಕ: ನಡೆಸೆನ್ನನು ಪ್ರಭೂ, ಆ ಸನಾತನ ಪಥದಲಿ

ಶುಭಸಂದೇಶ: ಲೂಕ 6:27-38


ಯೇಸು ತಮ್ಮ ಶಿಷ್ಯರಿಗೆ ಹೀಗೆಂದರು: “ನನ್ನನ್ನು ಆಲಿಸುತ್ತಿರುವವರೇ, ನನ್ನ ಮಾತನ್ನು ಕೇಳಿರಿ: ‘ನಿಮ್ಮ ಶತ್ರುಗಳನ್ನು ಪ್ರೀತಿಸಿರಿ, ನಿಮ್ಮನ್ನು ದ್ವೇಷಿಸುವವರನ್ನು ಸತ್ಕರಿಸಿರಿ. ನಿಮ್ಮನ್ನು ಶಪಿಸುವವರನ್ನು ಆಶೀರ್ವದಿಸಿರಿ, ನಿಮ್ಮನ್ನು ನಿಂದಿಸುವವರಿಗಾಗಿ ಪ್ರಾರ್ಥಿಸಿರಿ. ನಿನ್ನ ಒಂದು ಕೆನ್ನೆಗೆ ಹೊಡೆಯುವವನಿಗೆ ಇನ್ನೊಂದು ಕೆನ್ನೆಯನ್ನು ಒಡ್ಡು, ನಿನ್ನ ಮೇಲಂಗಿಯನ್ನು ಕಿತ್ತುಕೊಳ್ಳುವವನಿಗೆ ಒಳ ಅಂಗಿಯನ್ನೂ ತೆಗೆದುಕೊಳ್ಳಲು ಬಿಡು. ಕೇಳಿಕೊಳ್ಳುವ ಪ್ರತಿಯೊಬ್ಬನಿಗೂ ಕೊಡು ನಿನ್ನ ಸೊತ್ತನ್ನು ಕಸಿದುಕೊಳ್ಳುವವನಿಂದ ತಿರುಗಿ ಕೇಳದಿರು. ಅಲ್ಲದೆ, ಇತರರು ನಿಮಗೆ ಏನೇನು ಮಾಡಬೇಕೆಂದು ನೀವು ಅಪೇಕ್ಷಿಸುತ್ತೀರೋ ಅದನ್ನೇ ನೀವು ಅವರಿಗೆ ಮಾಡಿರಿ. ನಿಮ್ಮನ್ನು ಪ್ರೀತಿಸುವವರನ್ನೇ ನೀವು ಪ್ರೀತಿಸಿದರೆ ಅದೇನು ಪುಣ್ಯ? ಪಾಪಿಷ್ಠರು ಸಹ ತಮ್ಮನ್ನು ಪ್ರೀತಿಸುವವರನ್ನು ಪ್ರೀತಿಸುತ್ತಾರಲ್ಲವೆ? ಉಪಕಾರ ಮಾಡಿದವರಿಗೇ ಉಪಕಾರ ಮಾಡಿದರೆ ಅದೇನು ಪುಣ್ಯ? ಪಾಪಿಷ್ಠರು ಸಹ ಹಾಗೆಯೇ ಮಾಡುತ್ತಾರಲ್ಲವೆ? ಸಾಲತೀರಿಸುವಂಥ ನಂಬಿಗಸ್ಥರಿಗೇ ಸಾಲಕೊಟ್ಟರೆ ಅದೇನು ಪುಣ್ಯ? ಕೊಟ್ಟಷ್ಟೂ ಬರುತ್ತದೆಂದು ಪಾಪಿಷ್ಠರು ಸಹ ಸಾಲ ಕೊಡುತ್ತಾರಲ್ಲವೆ?’ “ಆದುದರಿಂದ ನಿಮ್ಮ ಶತ್ರುಗಳನ್ನು ಪ್ರೀತಿಸಿರಿ. ಅವನಿಗೆ ಒಳಿತನ್ನೇ ಮಾಡಿರಿ. ಪ್ರತಿಯಾಗಿ ಪಡೆಯುವ ಆಶೆಯಿಡದೆ ಸಾಲಕೊಡಿ. ಆಗ ನಿಮಗೆ ಮಹತ್ತಾದ ಸಂಭಾವನೆ ದೊರಕುವುದು. ನೀವು ಮಹೋನ್ನತ ದೇವರ ಮಕ್ಕಳಾಗುವಿರಿ. ದೇವರು ದುರ್ಜನರಿಗೂ ಒಳ್ಳೆಯವರು, ಕೃತಘ್ನರಿಗೂ ಒಳ್ಳೆಯವರು.  ನಿಮ್ಮ ತಂದೆಯಾದ ದೇವರಂತೆ ನೀವೂ ದಯಾವಂತರಾಗಿರಿ. “ನೀವು ಇತರರ ಬಗ್ಗೆ ತೀರ್ಪು ಕೊಡಬೇಡಿ. ಆಗ ದೇವರು ನಿಮ್ಮ ಬಗ್ಗೆ ತೀರ್ಪು ಕೊಡುವುದಿಲ್ಲ; ಪರರನ್ನು ದಂಡನೆಗೆ ಗುರಿಮಾಡಬೇಡಿ, ದೇವರು ನಿಮ್ಮನ್ನೂ ದಂಡನೆಗೆ ಗುರಿಮಾಡುವುದಿಲ್ಲ.  ಪರರನ್ನು ಕ್ಷಮಿಸಿರಿ, ದೇವರು ನಿಮ್ಮನ್ನೂ ಕ್ಷಮಿಸುವರು; ಪರರಿಗೆ ಕೊಡಿ, ದೇವರು ನಿಮಗೂ ಕೊಡುವರು; ಅಳತೆಯಲ್ಲಿ ತುಂಬಿ, ಕುಲುಕಿ, ಅದುಮಿ ತುಳುಕುವಂತೆ ಅಳೆದು ನಿಮ್ಮ ಮಡಿಲಿಗೆ ಹಾಕುವರು. ನೀವು ಕೊಟ್ಟ ಅಳತೆಯಲ್ಲೇ ದೇವರು ನಿಮಗೂ ಅಳೆದುಕೊಡುವರು,” ಎಂದರು.

09.09.20 - “ಆದರೆ ಧನಿಕರೇ, ನಿಮಗೆ ಧಿಕ್ಕಾರ! ನೀವು ಸುಖಜೀವನವನ್ನು ಅನುಭವಿಸಿ ಆಗಿದೆ"

ಮೊದಲನೇ ವಾಚನ: 1 ಕೊರಿಂಥಿಯರಿಗೆ 7:25-31

ಸಹೋದರರೇ, ಅವಿವಾಹಿತರ ಬಗ್ಗೆ ಪ್ರಭುವಿನಿಂದ ಬಂದ ಕಟ್ಟಳೆ ಯಾವುದೂ ನನ್ನಲ್ಲಿಲ್ಲ. ಪ್ರಭುವಿನ ಕೃಪೆಯಿಂದ ನಂಬಿಕೆಗೆ ಅರ್ಹನಾದ ವ್ಯಕ್ತಿಯಂತೆ ನನ್ನ ಅಭಿಪ್ರಾಯಗಳನ್ನು ನಿಮ್ಮ ಮುಂದೆ ಇಡುತ್ತೇನೆ. 26ಇಂದಿನ ಸಂದಿಗ್ಧ ಪರಿಸ್ಥಿತಿಯಲ್ಲಿ ಒಬ್ಬನು ತಾನು ಇದ್ದ ಸ್ಥಿತಿಯಲ್ಲೇ ಇರುವುದು ಉತ್ತಮವೆಂದು ಭಾವಿಸುತ್ತೇನೆ.  ನಿನಗೆ ವಿವಾಹವಾಗಿದೆಯೋ? ವಿವಾಹ ವಿಚ್ಛೇದನಕ್ಕೆ ಯತ್ನಿಸಬೇಡ. ನೀನು ಅವಿವಾಹಿತನೋ? ವಿವಾಹವಾಗಲು ಅವಸರಪಡಬೇಡ. ಹಾಗೇನಾದರೂ ನೀನು ವಿವಾಹ ಮಾಡಿಕೊಂಡರೆ ಅದು ಪಾಪವಲ್ಲ. ಅಂತೆಯೇ, ಅವಿವಾಹಿತ ಸ್ತ್ರೀಯೊಬ್ಬಳು ವಿವಾಹ ಮಾಡಿಕೊಂಡರೆ ಅದು ಪಾಪವಲ್ಲ. ಆದರೆ ದಂಪತಿಗಳಿಗೆ ತಾಪತ್ರಯಗಳು ಅನೇಕ. ಇವುಗಳು ನಿಮ್ಮನ್ನು ಬಾಧಿಸದಿರಲೆಂಬುದೇ ನನ್ನ ಹಾರೈಕೆ. ಪ್ರಿಯ ಸಹೋದರರೇ, ನನ್ನ ಅಭಿಪ್ರಾಯ ಇದು: ಉಳಿದಿರುವ ಕಾಲವು ಕೊಂಚ ಮಾತ್ರ. ಆದ್ದರಿಂದ ಮದುವೆಯಾದವರು ಮದುವೆಯಾಗದವರೋ ಎಂಬಂತೆ ನಡೆದುಕೊಳ್ಳಲಿ.  ದುಃಖಿತರು ದುಃಖವಿಲ್ಲದವರಂತೆ, ಸಂತೋಷಭರಿತರು ಸಂತೋಷರಹಿತರಂತೆ ಹಾಗು ಕೊಂಡುಕೊಳ್ಳುವವರು ಕೊಂಡದ್ದು ತಮ್ಮದಲ್ಲವೋ ಎಂಬಂತೆ ನಡೆದುಕೊಳ್ಳಲಿ.  ಲೋಕದ ವ್ಯವಹಾರದಲ್ಲಿ ಇರುವವರು ಅದರಲ್ಲಿಯೇ ತಲ್ಲೀನರಾಗದಿರಲಿ. ಏಕೆಂದರೆ, ಲೋಕದ ರೂಪರೇಷೆಗಳು ಗತಿಸಿಹೋಗುತ್ತವೆ.

ಕೀರ್ತನೆ: 45:11-12, 14-15, 16-17

ಶ್ಲೋಕ: ಎಲೇ ಕುವರಿಯೇ ಕೇಳು, ಎನ್ನ ಮೊರೆಗೆ ಕಿವಿಗೊಡು

ಶುಭಸಂದೇಶ: ಲೂಕ 6:20-26


ಯೇಸುಸ್ವಾಮಿ ತಮ್ಮ ಶಿಷ್ಯರ ಕಡೆಗೆ ದೃಷ್ಟಿಸಿ ನೋಡಿ ಹೀಗೆಂದು ಬೋಧಿಸಿದರು: “ದೀನದಲಿತರೇ, ನೀವು ಭಾಗ್ಯವಂತರು! ದೇವರ ಸಾಮ್ರಾಜ್ಯ ನಿಮ್ಮದು. ಈಗ ಹಸಿದಿರುವವರೇ, ನೀವು ಭಾಗ್ಯವಂತರು! ನಿಮಗೆ ಸಂತೃಪ್ತಿಯಾಗುವುದು. ಈಗ ಅತ್ತು ಗೋಳಾಡುವವರೇ, ನೀವು ಭಾಗ್ಯವಂತರು! ನೀವು ನಕ್ಕುನಲಿದಾಡುವಿರಿ! ನರಪುತ್ರನ ಶಿಷ್ಯರು ನೀವಾದುದರಿಂದ ನಿಮ್ಮನ್ನು ದ್ವೇಷಿಸಿ, ಬಹಿಷ್ಕರಿಸಿ, ಧಿಕ್ಕರಿಸಿ, ನಿಮ್ಮ ಹೆಸರೆತ್ತುವುದು ಕೂಡ ಕೇಡೆಂದು ತಿರಸ್ಕರಿಸುವಾಗ ನೀವು ಭಾಗ್ಯವಂತರು! ಈ ಜನರ ಪೂರ್ವಜರು ಪ್ರವಾದಿಗಳನ್ನು ಹೀಗೆಯೇ ತೆಗಳಿದ್ದರು. ಇದೆಲ್ಲಾ ಸಂಭವಿಸುವಾಗ ಹಿಗ್ಗಿ ನಲಿದಾಡಿರಿ. ಏಕೆಂದರೆ, ಸ್ವರ್ಗದಲ್ಲಿ ನಿಮಗೆ ಲಭಿಸುವ ಪ್ರತಿಫಲವು ಮಹತ್ತರವಾದುದು. “ಆದರೆ ಧನಿಕರೇ, ನಿಮಗೆ ಧಿಕ್ಕಾರ! ನೀವು ಸುಖಜೀವನವನ್ನು ಅನುಭವಿಸಿ ಆಗಿದೆ. ಈಗ ತಿಂದು ತೃಪ್ತಿಯಾಗಿರುವವರೇ, ನಿಮಗೆ ಧಿಕ್ಕಾರ! ನೀವು ಹಸಿದು ಬಳಲುವಿರಿ. ಈಗ ನಕ್ಕುನಲಿದಾಡುವವರೇ, ನಿಮಗೆ ಧಿಕ್ಕಾರ! ನೀವು ದುಃಖಿಸಿ ಗೋಳಾಡುವಿರಿ. ಜನರೆಲ್ಲರಿಂದ ಹೊಗಳಿಸಿಕೊಳ್ಳುವಾಗ ನಿಮಗೆ ಧಿಕ್ಕಾರ! ಕಪಟ ಪ್ರವಾದಿಗಳೂ ಈ ಜನರ ಪೂರ್ವಜರಿಂದ ಹೀಗೆಯೇ ಹೊಗಳಿಸಿಕೊಂಡಿದ್ದರು. 








08.09.20 - “ಇಗೋ, ಕನ್ಯೆಯೊಬ್ಬಳು ಗರ್ಭತಳೆದು ಪುತ್ರನೊಬ್ಬನನ್ನು ಪ್ರಸವಿಸುವಳು ‘ಇಮ್ಮಾನುವೇಲ್’ ಎಂದು ಆತನಿಗೆ ಹೆಸರಿಡುವರು”

ಮೊದಲನೇ ವಾಚನ: ಮೀಕ 5:1-4

ಸಿಯೋನ್ ನಗರಿಯೇ, ನಿನ್ನ ಸೇನಾವ್ಯೂಹಗಳನ್ನು ಒಟ್ಟುಗೂಡಿಸು. ಇಗೋ, ಶತ್ರುಗಳು ನಮಗೆ ಮುತ್ತಿಗೆಹಾಕಿದ್ದಾರೆ. ಅವರು ಇಸ್ರಯೇಲಿನ ಅಧಿಪತಿಯ ಕೆನ್ನೆಗೆ ಕೋಲಿನಿಂದ ಹೊಡೆಯುವರು! ಎಫ್ರಾತದ ಬೆತ್ಲೆಹೇಮೇ, ಜುದೇಯದ ಕುಲಗಳಲ್ಲಿ ನೀನು ಅತಿಚಿಕ್ಕವಳಾಗಿದ್ದರೂ ಇಸ್ರಯೇಲನ್ನು ಆಳತಕ್ಕವನು ನಿನ್ನಿಂದಲೇ ಉದಯಿಸುವನು. ಆತನ ಗೋತ್ರದ ಮೂಲ ಪುರಾತನವಾದುದು, ಅನಾದಿಕಾಲದಿಂದ ಬಂದುದು. ಇಂತಿರಲು ದಿನತುಂಬಿದವಳು ಹೆರುವವರೆಗೂ ಸರ್ವೇಶ್ವರ ತನ್ನ ಜನರನ್ನು ಶತ್ರುಗಳ ವಶಕ್ಕೆ ಬಿಟ್ಟುಬಿಡುವರು. ಅನಂತರ ಅಳಿದುಳಿದ ಸಹೋದರರು ಬಂದು ಇಸ್ರಯೇಲ್ ಜನರೊಂದಿಗೆ ಸೇರಿಕೊಳ್ಳುವರು. ಆತನು ಸರ್ವೇಶ್ವರನಿಂದ ಬರುವ ಶಕ್ತಿಯಿಂದಲೂ ಆ ಸ್ವಾಮಿ ದೇವರ ನಾಮದ ಪ್ರಭಾವದಿಂದಲೂ ತನ್ನ ಜನರನ್ನು ಪರಿಪಾಲಿಸುವನು. ಆ ಜನರು ಸುರಕ್ಷಿತವಾಗಿ ಬಾಳುವರು. ಆತನು ಜಗದ ಕಟ್ಟಕಡೆಯವರೆಗೂ ಪ್ರಬಲನಾಗಿರುವನು.

ಕೀರ್ತನೆ: 13:6, 6

ಶ್ಲೋಕ: ಹಿರಿಹಿಗ್ಗುವುದು ನನ್ನ ದೇವರಲಿ ನನ್ನಾತ್ಮ

ಶುಭಸಂದೇಶ: ಮತ್ತಾಯ 1:1-16, 18-23


ಅಬ್ರಹಾಮನ ಮನೆತನಕ್ಕೆ ಸೇರಿದ ದಾವೀದ ಕುಲದ ಯೇಸುಕ್ರಿಸ್ತರ ವಂಶಾವಳಿ: ಅಬ್ರಹಾಮನಿಗೆ ಇಸಾಕನು, ಇಸಾಕನಿಗೆ ಯಕೋಬನು, ಯಕೋಬನಿಗೆ ಯೂದ ಹಾಗೂ ಆತನ ಸಹೋದರರು ಹುಟ್ಟಿದರು. ಯೂದನಿಗೆ ತಾಮರ ಎಂಬವಳಿಂದ, ಪೆರಸ್ ಹಾಗೂ ಜೆರಹನ್ ಹುಟ್ಟಿದರು. ಪೆರಸನಿಗೆ ಹೆಸ್ರೋನ್, ಹೆಸ್ರೋನನಿಗೆ ರಾಮ್, ರಾಮನಿಗೆ ಅಮ್ಮಿನದಾಬ್, ಅಮ್ಮಿನದಾಬನಿಗೆ ನಹಸ್ಸೋನ್, ನಹಸ್ಸೋನನಿಗೆ ಸಲ್ಮೋನ್, 5ಸಲ್ಮೋನನಿಗೆ ರಹಾಬ್ ಎಂಬವಳಿಂದ ಬೋವಜ್, ಬೋವಜನಿಗೆ ರೂತ್ ಎಂಬವಳಿಂದ ಓಬೇದ್, ಓಬೇದನಿಗೆ ಜೆಸ್ಸೆಯ, ಜೆಸ್ಸೆಯನಿಗೆ ದಾವೀದರಸನು ಹುಟ್ಟಿದರು. ದಾವೀದನಿಗೆ ಊರಿಯನ ಹೆಂಡತಿಯಿಂದ ಸೊಲೊಮೋನ್, ಸೊಲೊಮೋನನಿಗೆ ರೆಹಬ್ಬಾಮ, ರೆಹಬ್ಬಾಮನಿಗೆ ಅಬೀಯ, ಅಬೀಯನಿಗೆ ಆಸನ್ ಹುಟ್ಟಿದರು. ಆಸನನಿಗೆ ಯೋಸೆಫಾತ್, ಯೋಸೆಫಾತನಿಗೆ ಯೆಹೋರಾಮ್, ಯೆಹೋರಾಮನಿಗೆ ಉಜ್ಜೀಯ ಹುಟ್ಟಿದರು. ಉಜ್ಜೀಯನಿಗೆ ಯೋತಾಮ್, ಯೋತಾಮನಿಗೆ ಅಹಾಜ್, ಅಹಾಜನಿಗೆ ಹಿಜ್ಕೀಯನು ಹುಟ್ಟಿದರು. ಹಿಜ್ಕೀಯನಿಗೆ ಮನಸ್ಸೆ, ಮನಸ್ಸೆಗೆ ಆಮೋನ್,  ಆಮೋನನಿಗೆ ಯೋಷೀಯ ಹುಟ್ಟಿದರು. ಯೋಷೀಯನಿಗೆ ಯೆಕೊನ್ಯ ಮತ್ತು ಅವನ ಸಹೋದರರು ಹುಟ್ಟಿದರು. ಈ ಸಮಯದಲ್ಲೇ ಇಸ್ರಯೇಲರನ್ನು ಬಾಬಿಲೋನಿಗೆ ಸೆರೆ ಒಯ್ದದ್ದು. ಬಾಬಿಲೋನಿಗೆ ಸೆರೆಹೋದ ದಾಸ್ಯದಿನಗಳು ಮುಗಿದ ಮೇಲೆ ಯೆಕೊನ್ಯನಿಗೆ ಸಲಥಿಯೇಲ್, ಸಲಥಿಯೇಲನಿಗೆ ಜೆರುಬಾಬೆಲ್,  ಜೆರುಬಾಬೆಲನಿಗೆ ಅಬೀಹೂದ್, ಅಬೀಹೂದನಿಗೆ ಎಲ್ಯಕೀಮ್. ಎಲ್ಯಕೀಮನಿಗೆ ಅಜೋರ್ ಹುಟ್ಟಿದರು.  ಅಜೋರನಿಗೆ ಸದೋಕ್, ಸದೋಕನಿಗೆ ಅಖೀಮ್, ಅಖೀಮನಿಗೆ ಎಲಿಹೂದ್,  ಎಲಿಹೂದನಿಗೆ ಎಲಿಯಾಜರ್, ಎಲಿಯಾಜರನಿಗೆ ಮತ್ತಾನ್, ಮತ್ತಾನನಿಗೆ ಯಕೋಬ್ ಹುಟ್ಟಿದರು. ಯಕೋಬನಿಗೆ ಮರಿಯಳ ಪತಿಯಾದ ಜೋಸೆಫನು ಹುಟ್ಟಿದನು. ಈ ಮರಿಯಳಿಂದಲೇ “ಕ್ರಿಸ್ತ” ಎಂದು ಕರೆಯಲಾಗುವ ಯೇಸುಸ್ವಾಮಿ ಹುಟ್ಟಿದ್ದು; ಕ್ರಿಸ್ತಯೇಸುವಿನ ಜನನದ ಪ್ರಕರಣ: ಯೇಸುವಿನ ತಾಯಿ ಮರಿಯಳಿಗೂ ಜೋಸೆಫನಿಗೂ ನಿಶ್ಚಿತಾರ್ಥವಾಗಿತ್ತು. ಅವರಿಬ್ಬರೂ ಕೂಡಿ ಬಾಳುವುದಕ್ಕೆ ಮುಂಚೆಯೇ ಮರಿಯಳು ಗರ್ಭವತಿಯಾಗಿರುವುದು ತಿಳಿದುಬಂತು. ಆಕೆ ಗರ್ಭ ಧರಿಸಿದ್ದು ಪವಿತ್ರಾತ್ಮ ಪ್ರಭಾವದಿಂದ. ಆಕೆಯ ಪತಿ ಜೋಸೆಫನು ನೀತಿವಂತನು. ಮರಿಯಳನ್ನು ಅವಮಾನಕ್ಕೆ ಗುರಿಮಾಡುವ ಉದ್ದೇಶ ಅವನದಲ್ಲವಾದ್ದರಿಂದ ಯಾರಿಗೂ ತಿಳಿಯದ ಹಾಗೆ ನಿಶ್ಚಿತಾರ್ಥವನ್ನು ಮುರಿದುಬಿಡಬೇಕೆಂದಿದ್ದನು.  ಆತನು ಈ ಕುರಿತು ಆಲೋಚಿಸುತ್ತಿದ್ದಂತೆ, ದೇವದೂತನು ಕನಸಿನಲ್ಲಿ ಕಾಣಿಸಿಕೊಂಡು, “ದಾವೀದ ವಂಶದ ಜೋಸೆಫನೇ, ಮರಿಯಳನ್ನು ನಿನ್ನ ಪತ್ನಿಯನ್ನಾಗಿ ಸ್ವೀಕರಿಸಲು ಅಂಜಬೇಡ. ಆಕೆ ಗರ್ಭಧರಿಸಿರುವುದು ಪವಿತ್ರಾತ್ಮ ಪ್ರಭಾವದಿಂದಲೇ.  ಆಕೆ ಒಬ್ಬ ಮಗನನ್ನು ಹೆರುವಳು. ಆತನಿಗೆ ನೀನು ‘ಯೇಸು’ ಎಂಬ ಹೆಸರಿಡಬೇಕು. ಏಕೆಂದರೆ ತನ್ನ ಜನರನ್ನು ಅವರ ಪಾಪಗಳಿಂದ ರಕ್ಷಿಸಿ ಉದ್ಧಾರಮಾಡುವವನು ಆತನೇ,” ಎಂದನು. “ಇಗೋ, ಕನ್ಯೆಯೊಬ್ಬಳು ಗರ್ಭತಳೆದು ಪುತ್ರನೊಬ್ಬನನ್ನು ಪ್ರಸವಿಸುವಳು ‘ಇಮ್ಮಾನುವೇಲ್’ ಎಂದು ಆತನಿಗೆ ಹೆಸರಿಡುವರು” ಎಂಬುದಾಗಿ ಪ್ರವಾದಿಯ ಮುಖಾಂತರ ಸರ್ವೇಶ್ವರ ಹೇಳಿದ ಪ್ರವಚನ ನೆರವೇರುವಂತೆ ಇದೆಲ್ಲಾ ಸಂಭವಿಸಿತು.  “ಇಮ್ಮಾನುವೇಲ್” ಎಂದರೆ, “ದೇವರು ನಮ್ಮೊಡನೆ ಇದ್ದಾರೆ” ಎಂದು ಅರ್ಥ.

ಮರಿಯಮ್ಮನವರ ಗೀತೆಗಳು


                                            



 

07.09.20 - “ನಿನ್ನ ಕೈಯನ್ನು ಚಾಚು,” ಎಂದರು. ಅವನು ಚಾಚಿದ. ಕೈ ಸ್ವಸ್ಥವಾಯಿತು.

ಮೊದಲನೇ ವಾಚನ: 1 ಕೊರಿಂಥಿಯರಿಗೆ 5:1-8 

ಸಹೋದರರೇ,  ದುರ್ನಡತೆ ನಿಮ್ಮಲ್ಲಿದೆಯೆಂಬುದಾಗಿ ವರದಿ ಬಂದಿದೆ. ನಿಮ್ಮಲ್ಲಿ ಒಬ್ಬನು ತನ್ನ ತಂದೆಯ ಪತ್ನಿಯನ್ನೇ ಇಟ್ಟುಕೊಂಡಿದ್ದಾನಂತೆ. ಹೀಗಿರಲು, ನೀವು ಸೊಕ್ಕಿನಿಂದ ಮೆರೆಯಲು ಕಾರಣವಾದರೂ ಎಲ್ಲಿದೆ? ಬದಲಿಗೆ, ನೀವು ವ್ಯಸನಪಟ್ಟು ಅವನನ್ನು ನಿಮ್ಮ ಸಭಾಕೂಟದಿಂದ ಬಹಿಷ್ಕರಿಸಬೇಕಾಗಿತ್ತಲ್ಲವೆ? ನಾನು ಶಾರೀರಿಕವಾಗಿ ನಿಮ್ಮಿಂದ ದೂರವಿದ್ದರೂ ಆತ್ಮಿಕವಾಗಿ ನಿಮ್ಮ ಹತ್ತಿರವಿದ್ದೇನೆ. ನಿಮ್ಮ ಸಂಗಡವೇ ಇರುವವನಂತೆ ಅವನಿಗೆ ಏನುಮಾಡಬೇಕೆಂದು ಈಗಾಗಲೇ ತೀರ್ಮಾನಿಸಿದ್ದೇನೆ. ಅದೇನೆಂದರೆ: ನೀವು ಸಭೆಸೇರಿ, ಪ್ರಭು ಯೇಸುವಿನ ಶಕ್ತಿಯ ಆಧಾರದ ಮೇಲೆ ಅವನನ್ನು ಸೈತಾನನಿಗೆ ಒಪ್ಪಿಸಿಬಿಡಬೇಕು. ನಾನು ಆತ್ಮಿಕವಾಗಿ ನಿಮ್ಮ ಮಧ್ಯೆಯಿರುತ್ತೇನೆ. ಅವನ ದೇಹವು ದಂಡನೆಗೊಳಗಾದರೂ ಅವನ ಆತ್ಮ ಪ್ರಭು ಯೇಸುವಿನ ದಿನದಂದು ಉದ್ಧಾರವಾಗುವಂತೆ ಹೀಗೆ ಮಾಡಬೇಕು. ನೀವು ಜಂಬ ಕೊಚ್ಚಿಕೊಳ್ಳುವುದು ತರವಲ್ಲ. ಒಂದಿಷ್ಟು ಹುಳಿ, ಹಿಟ್ಟನ್ನೆಲ್ಲಾ ಹುದುಗೆಬ್ಬಿಸುತ್ತದೆಂಬುದನ್ನು ನೀವು ಚೆನ್ನಾಗಿ ಬಲ್ಲಿರಿ. ನೀವು ಹುಳಿಯಿಲ್ಲದ ಕಣಕವಾಗಿದ್ದೀರಿ. ಅಪ್ಪಟ ರೊಟ್ಟಿಯಾಗುವಂತೆ ಹುಳಿಯನ್ನು ತೆಗೆದುಹಾಕಿರಿ. ಏಕೆಂದರೆ, ಪಾಸ್ಕ ಯಜ್ಞದ ಕುರಿಮರಿಯಾದ ಕ್ರಿಸ್ತಯೇಸು ಬಲಿಯಾಗಿದ್ದಾರೆ. ಆದಕಾರಣ ನಾವು ದುಷ್ಟತನ, ಕೆಡುಕುತನವೆಂಬ ಹುಳಿಹಿಟ್ಟನ್ನು ವರ್ಜಿಸೋಣ. ಪರಿಶುದ್ಧತೆ ಮತ್ತು ಸತ್ಯತೆ ಎಂಬ ಹುಳಿಯಿಲ್ಲದ ಹೊಸರೊಟ್ಟಿಯನ್ನು ತಿಂದು ಪಾಸ್ಕಹಬ್ಬವನ್ನು ಆಚರಿಸೋಣ.

ಕೀರ್ತನೆ: 5:5-6, 7, 12

ಶ್ಲೋಕ: ಸತ್ಯಪಥದಲಿ ನಡೆಸೆನ್ನನು ದೇವಾ

ಶುಭಸಂದೇಶ: ಲೂಕ 6:6-11

ಒಂದು ಸಬ್ಬತ್ ದಿನ ಯೇಸುಸ್ವಾಮಿ ಪ್ರಾರ್ಥನಾಮಂದಿರಕ್ಕೆ ಹೋಗಿ ಉಪದೇಶಮಾಡುತ್ತಿದ್ದರು. ಅಲ್ಲಿ ಬಲಗೈ ಬತ್ತಿಹೋಗಿದ್ದ ಒಬ್ಬಾತ ಇದ್ದನು. ಅವನನ್ನು ಸಬ್ಬತ್ದಿನದಲ್ಲಿ ಸ್ವಸ್ಥಪಡಿಸಿದ್ದೇ ಆದರೆ ಯೇಸುವಿನ ವಿರುದ್ಧ ತಪ್ಪು ಹೊರಿಸಬಹುದೆಂಬ ಉದ್ದೇಶದಿಂದ ಧರ್ಮಶಾಸ್ತ್ರಿಗಳು ಮತ್ತು ಫರಿಸಾಯರು ಹೊಂಚುಹಾಕಿ ನೋಡುತ್ತಿದ್ದರು. ಯೇಸು ಅವರ ಆಲೋಚನೆಗಳನ್ನರಿತು ಬತ್ತಿದ ಕೈ ಉಳ್ಳವನಿಗೆ, “ಬಂದು ಇಲ್ಲಿ ನಿಲ್ಲು,” ಎಂದರು. ಅವನು ಎದ್ದುಬಂದು ನಿಂತನು. ಆಗ ಯೇಸು ಅವರಿಗೆ, “ನಾನು ನಿಮಗೊಂದು ಪ್ರಶ್ನೆ ಹಾಕುತ್ತೇನೆ: ಸಬ್ಬತ್ತ್ ದಿನದಲ್ಲಿ ಏನು ಮಾಡುವುದು ಧರ್ಮ? ಒಳಿತನ್ನೋ ಅಥವಾ ಕೆಡುಕನ್ನೋ? ಒಬ್ಬನ ಪ್ರಾಣವನ್ನು ಉಳಿಸುವುದೋ ಅಥವಾ ಅಳಿಸುವುದೋ?” ಎಂದರು. ಅನಂತರ ಸುತ್ತಲೂ ಇದ್ದವರೆಲ್ಲರನ್ನು ದಿಟ್ಟಿಸಿ ನೋಡಿ ಬತ್ತಿದ ಕೈಯುಳ್ಳವನ ಕಡೆಗೆ ತಿರುಗಿ, “ನಿನ್ನ ಕೈಯನ್ನು ಚಾಚು,” ಎಂದರು. ಅವನು ಚಾಚಿದ. ಕೈ ಸ್ವಸ್ಥವಾಯಿತು. ಅವರಾದರೋ ಕ್ರೋಧಭರಿತರಾಗಿ, ಯೇಸುವಿಗೆ ಏನಾದರೂ ಮಾಡಬೇಕೆಂದು ತಮ್ಮತಮ್ಮೊಳಗೆ ಸಂಚುಮಾಡಿದರು.


ಸಂತ ಮರಿಯಮ್ಮನವರ ಗೀತೆಗಳು - ಚಿಗುರು ಬಳಗ