ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

01.12.2019 - "ನರಪುತ್ರನು ನೀವು ನಿರೀಕ್ಷಿಸದ ಗಳಿಗೆಯಲ್ಲಿ ಬರುವನು."

ಮೊದಲನೇ ವಾಚನ: ಯೆಶಾಯ 2:1-5 

ಜುದೇಯ ಮತ್ತು ಜೆರುಸಲೇಮಿನ ವಿಷಯವಾಗಿ ಆಮೋಚನ ಮಗನಾದ ಯೆಶಾಯನು ಕಂಡ ದರ್ಶನದಲ್ಲಿ ಕೇಳಿಬಂದ ದೈವೋಕ್ತಿ: ಸರ್ವೇಶ್ವರನ ಶ್ರೀ ನಿವಾಸದ ಪರ್ವತವು ಅಂತಿಮ ಕಾಲದಂದು ಪ್ರತಿಷ್ಠೆಗೊಳ್ಳುವುದು. ಗುಡ್ಡಬೆಟ್ಟಗಳಿಗಿಂತ ಎತ್ತರವಾಗಿ ಬೆಳೆದುಬರುವುವು ಅದರತ್ತ ಸಕಲ ರಾಷ್ಟ್ರಗಳು ಜಲಧಾರೆಯಂತೆ ಹರಿದುಬರುವುವು. ದೇಶವಿದೇಶಗಳವರು ಬಂದು ಹೇಳುವರು ಹೀಗೆ: "ಬನ್ನಿ, ಹೋಗೊಣ ಸರ್ವೇಶ್ವರಸ್ವಾಮಿಯ ಪರ್ವತಕ್ಕೆ ಇಸ್ರಯೇಲರ ದೇವರ ಮಂದಿರಕ್ಕೆ. ಬೋಧಿಸುವನಾತ ನಮಗೆ ಆತನ ಮಾರ್ಗಗಳನು. ನಾವು ಹಿಡಿದುನಡೆವಂತೆ ಆತನ ಪಥವನು ಹೊರಡುವುದು ಧರ್ಮಶಾಸ್ತ್ರ ಸಿಯೋನಿನಿಂದ; ಸ್ವಾಮಿಯ ದಿವ್ಯವಾಣಿ ಜೆರುಸಲೇಮಿನಿಂದ. ಬಗೆಹರಿಸುವನು ದೇಶದೇಶಗಳ ವ್ಯಾಜ್ಯವನು. ತೀರಿಸುವನು ರಾಷ್ಟ್ರರಾಷ್ಟ್ರಗಳ ನ್ಯಾಯವನು ಹಾಕುವರವರು ಕುಲುಮೆಗೆ ತಮ್ಮಾಯುಧಗಳನು. ಮಾರ್ಪಡಿಸುವರು ಕತ್ತಿಗಳನು ನೇಗಿಲ ಗುಳಗಳನ್ನಾಗಿ, ಭರ್ಜಿಗಳನು ಕುಡುಗೋಲುಗಳನ್ನಾಗಿ. ಕತ್ತಿಯ ನೆತ್ತರು ಜನಾಂಗ ಜನಾಂಗದೆದುರಿಗೆ; ಯುದ್ಧವಿದ್ಯೆಯ ಕಲಿಕೆ ಅಗತ್ಯವಿರದು ಅವರಿಗೆ, ಯಕೋಬ ಮನೆತನದವರೇ, ಬನ್ನಿ, ಸ್ವಾಮಿಯ ಬೆಳಕಿನಲ್ಲಿ ನಡೆಯೋಣ." 

ಕೀರ್ತನೆ: 122:1-2, 3-4, 4-5, 6-7, 8-9 

ಶ್ಲೋಕ: ಪ್ರಭುವಿನಾಲಾಯಕೆ ಬಾ ಹೋಗೋಣ ಎಂದಾಗ ಆಯಿತೆನಗೆ ಆನಂದ, ಜನರೆನ್ನ ಕರೆದಾಗ 


1. ಪ್ರಭುವಿನಾಲಾಯಕೆ ಬಾ ಹೋಗೋಣ ಎಂದಾಗ |
ಆಯಿತೆನಗೆ ಆನಂದ, ಜನರೆನ್ನ ಕರೆದಾಗ ||
ನಮ್ಮ ಕಾಲುಗಳು ಓ ಜೆರುಸಲೇಮೇ |
ತಲುಪಿವೆ ನಿನ್ನ ಪುರದ್ವಾರಗಳನೇ ||

2. ಕುಲಗಳು ಯಾತ್ರೆಯಾಗಿ ಬರುವುವು ಇಲ್ಲಿಗೆ |
ಮಾಡುವರಿಲ್ಲಿಯೆ ಪ್ರಭುವಿನ ನಾಮಕೀರ್ತನೆ |
ಪಾಲಿಪರಿಂತು ಇಸ್ರಯೇಲರಿಗೆ ವಿಧಿಸಿದಾಜ್ಞೆ ||
ಸ್ಥಾಪಿತವಾಗಿವೆಯಿಲ್ಲಿ ನ್ಯಾಯಪೀಠಗಳು |
ದಾವೀದನ ಮನೆತನದವರ ಸಿಂಹಾಸನಗಳು ||

3. ಜೆರುಸಲೇಮಿನ ಶುಭಕ್ಕಾಗಿ ಮಾಡಿರಿ ಪ್ರಾರ್ಥನೆ |
"ಜೆರುಸಲೇಮ್, ನಿನ್ನಭಿಮಾನಿಗಳಿಗೆ ಪ್ರವರ್ಧನೆ ||
ಶುಭವಿರಲಿ ನಿನ್ನೀ - ಪೌಳಿಗೋಡೆಗಳೊಳಗೆ |
ಸಂರಕ್ಷಣೇ ಇರಲಿ ನಿನ್ನ ಅರಮನೆಯೊಳಗೆ" ||

4. ನನ್ನ ಬಂಧುಬಳಗದವರ ನಿಮಿತ್ತ |
"ನಿನಗೆ ಶುಭವಿರಲಿ" ಎಂಬುದು ನನ್ನ ಮತ ||
ನಮ್ಮ ಸ್ವಾಮಿದೇವರ ಮಂದಿರದ ನಿಮಿತ್ತ |
ಹರಸುವೆ ನಿನ್ನ ಸುಕ್ಷೇಮವನು ಹಾರೈಸುತ ||

ಎರಡನೇ ವಾಚನ: ರೋಮನರಿಗೆ 13:11-14 

ಸಹೋದರರೇ, ಇದೆಂತಹ ಕಾಲವೆಂದು ತಿಳಿದಿರುವ ನೀವು ಇದೆಲ್ಲವನ್ನು ಮಾಡಬೇಕು. ನಿದ್ರೆಯಿಂದ ಎಚ್ಚೆತ್ತುಕೊಳ್ಳುವ ವೇಳೆಯು ಸಮೀಪಿಸಿತು. ನಾವು ಕ್ರಿಸ್ತ ಯೇಸುವನ್ನು ವಿಶ್ವಾಸಿಸಲು ಆರಂಭಿಸಿದಾಗ ಇದ್ದುದಕ್ಕಿಂತಲೂ ಈಗ ನಮ್ಮ ಉದ್ಧಾರವು ಸಮೀಪವಾಗಿದೆ. ಇರುಳು ಬಹುಮಟ್ಟಿಗೆ ಕಳೆಯಿತು, ಹಗಲು ಸಮೀಪಿಸಿತು. ಇನ್ನು ಅಂಧಕಾರಕ್ಕೆ ಅನುಗುಣವಾದ ದುಷ್ಕ್ರತ್ಯಗಳನ್ನು ತ್ಯಜಿಸಿಬಿಡೋಣ. ಬೆಳಕಿಗೆ ಅನುಗುಣವಾದ ಆಯುಧಗಳನ್ನು ಧರಿಸಿಕೊಳ್ಳೋಣ. ದುಂದೌತಣ - ಕುಡಿತನಗಳಲ್ಲಾಗಲೀ, ಕಾಮವಿಲಾಸ - ನಿರ್ಲಜ್ಜಾಕೃತ್ಯಗಳಲ್ಲಾಗಲೀ, ಕಲಹ - ಮತ್ಸರಗಳಲ್ಲಾಗಲೀ ಕಾಲಕಳೆಯದೆ ಬೆಳಕಿನಲ್ಲಿ ಬಾಳುವವರಂತೆ ಸಭ್ಯರಾಗಿ ವರ್ತಿಸೋಣ. ದೇಹದ ದುರಿಚ್ಛೆಗಳಿಗೆ ಬಲಿಯಾಗದೆ ಕ್ರಿಸ್ತಂಬರರಾಗಿರಿ. 

ಶುಭಸಂದೇಶ: ಮತ್ತಾಯ 24:37-44 

ಯೇಸು ತಮ್ಮ ಶಿಷ್ಯರಿಗೆ ಹೀಗೆಂದರು: "ನೋವನ ಕಾಲದಲ್ಲಿ ಆದಂತೆಯೇ ನರಪುತ್ರನು ಬರುವಾಗಲೂ ಆಗುವುದು. ಜಲಪ್ರಳಯಕ್ಕೆ ಹಿಂದಿನ ದಿನಗಳಲ್ಲಿ ನೋವನು ನಾವೆಯನ್ನು ಹತ್ತುವ ದಿನದವರೆಗೆ ಜನರು ತಿನ್ನುತ್ತಲೇ ಇದ್ದರು ಕುಡಿಯುತ್ತಲೇ ಇದ್ದರು; ಮದುವೆ ಮಾಡಿಕೊಡುವುದರಲ್ಲೂ ಮಾಡಿಕೊಡುವುದರಲ್ಲೂ ನಿರತರಾಗಿದ್ದರು. ಜಲಪ್ರಳಯ ಬಂದು ಅವರನ್ನು ಕೊಚ್ಚಿಕೊಂಡು ಹೋಗುವ ತನಕ ಅದರ ಅರಿವೇ ಅವರಿಗಿರಲಿಲ್ಲ. ನರಪುತ್ರನು ಆಗಮಿಸುವಾಗಲೂ ಹಾಗೆಯೇ ನಡೆಯುವುದು. ಆಗ ಹೊಲದಲ್ಲಿದ್ದ ಇಬ್ಬರಲ್ಲಿ ಒಬ್ಬನನ್ನು ತೆಗೆದುಕೊಂಡು ಹೋಗಲಾಗುವುದು. ಇನ್ನೊಬ್ಬನನ್ನು ಬಿಡಲಾಗುವುದು. ಒಂದೆ ಕಲ್ಲಿನಲ್ಲಿ ಬೀಸುತ್ತ ಇರುವ ಇಬ್ಬರು ಮಹಿಳೆಯರಲ್ಲಿ ಒಬ್ಬಳನ್ನು ತೆಗೆದುಕೊಂಡು ಹೋಗಲಾಗುವುದು, ಇನ್ನೊಬ್ಬಳನ್ನು ಬಿಡಲಾಗುವುದು. ನಿಮ್ಮ ಪ್ರಭು ಯಾವ ದಿನ ಬರುತ್ತಾನೆಂದು ನಿಮಗೆ ತಿಳಿಯದು. ಆದ್ದರಿಂದ ಎಚ್ಚರವಾಗಿರಿ. ಕಳ್ಳನು ಬರುವ ಗಳಿಗೆ ಮನೆಯ ಯಾಜಮಾನನಿಗೆ ತಿಳಿದಿದ್ದರೆ ಅವನು ಎಚ್ಚರವಾಗಿದ್ದು ತನ್ನ ಮನೆಗೆ ಕನ್ನಹಾಕಲು ಬಿಡನು ಅಲ್ಲವೆ? ಇದನ್ನು ಚೆನ್ನಾಗಿ ತಿಳಿದುಕೊಂಡು ನೀವು ಸಹ ಸಿದ್ಧರಾಗಿರಿ. ಎಕೆಂದರೆ ನರಪುತ್ರನು ನೀವು ನಿರೀಕ್ಷಿಸದ ಗಳಿಗೆಯಲ್ಲಿ ಬರುವನು.

30.11.2019

ಮೊದಲನೇ ವಾಚನ: ರೋಮನರಿಗೆ 10:9-18 

"ಯೇಸುಸ್ವಾಮಿಯೇ ಪ್ರಭು" ಎಂದು ನೀನು ಬಾಯಿಂದ ನಿವೇದಿಸಿ, ಅವರನ್ನು ದೇವರು ಸಾವಿನಿಂದ ಪುನರುತ್ಥಾನಗೊಳಿಸಿದ್ದಾರೆಂದು ಹೃದಯದಿಂದ ವಿಶ್ವಾಸಿಸಿದರೆ ಜೀವೋದ್ಧಾರವನ್ನು ಹೊಂದುತ್ತೀಯೆ. ಹೌದು, ಹೃದಯಪೂರ್ವಕವಾಗಿ ವಿಶ್ವಾಸಿಸುವವನು ದೇವರೊಡನೆ  ಸತ್ಸಂಬಂಧವನ್ನು ಪಡೆಯುತ್ತಾನೆ; ಬಾಯಿಂದ ನಿವೇದಿಸುವವನು ಜೀವೋದ್ಧಾರ ಹೊಂದುತ್ತಾನೆ. ಏಕೆಂದರೆ, "ಅವರಲ್ಲಿ ವಿಶ್ವಾಸವಿಡುವ ಯಾರಿಗೂ ಆಶಾಭಂಗವಾಗುವುದಿಲ್ಲ," ಎಂದು ಪವಿತ್ರಗ್ರಂಥದಲ್ಲೇ ಹೇಳಲಾಗಿದೆ. ಈ ವಿಷಯದಲ್ಲಿ ಯೆಹೂದ್ಯರು, ಯೆಹೂದ್ಯರಲ್ಲದವರು ಎಂಬ ಭೇದಭಾವವಿಲ್ಲ, ಸರ್ವರಿಗೂ ಒಬ್ಬರೇ ಪ್ರಭು.  ತಮ್ಮನ್ನು ಬೇಡಿಕೊಳ್ಳುವ ಎಲ್ಲರಿಗೂ ಅವರು ಧಾರಾಳವಾಗಿ ವರದಾನವನ್ನು ನೀಡುತ್ತಾರೆ."ಪ್ರಭುವಿನ ನಾಮಸ್ಮರಣೆ ಮಾಡುವ ಪ್ರತಿಯೊಬ್ಬನೂ ಜೀವೊದ್ಧಾರವನ್ನು ಹೊಂದುತ್ತಾನೆ," ಎಂದು ಲಿಖಿತವಾಗಿದೆ. ಪ್ರಭುವಿನಲ್ಲಿ ವಿಶ್ವಾಸವಿಲ್ಲದಿದ್ದರೆ ಅವರ ನಾಮಸ್ಮರಣೆ ಮಾಡುವುದಾದರೂ ಹೇಗೆ?  ಅವರ ವಿಷಯವನ್ನು ಕೇಳದಿದ್ದರೆ ಅವರನ್ನು ವಿಶ್ವಾಸಿಸುವುದಾದರೂ ಹೇಗೆ? ಬೊಧಿಸುವವರು ಇಲ್ಲದಿದ್ದರೆ ಆವರ ವಿಷಯಗಳನ್ನು ಕುರಿತು ಕೇಳುವುದಾದರೂ ಹೇಗೆ? ಬೋಧಿಸುವವರನ್ನು ಕಳುಹಿಸದೆ ಹೋದರೆ, ಅವರು ಶುಭಸಂದೇಶವನ್ನು ಬೋಧಿಸುವುದಾದರೂ ಹೇಗೆ?. "ಶುಭಸಂದೇಶವನ್ನು ತರುವವರ ಬರುವಿಕೆ ಎಷ್ಟೋ ಶುಭದಾಯಕ," ಎಂದು ಪವಿತ್ರಗ್ರಂಥದಲ್ಲೇ ಬರೆಯಲಾಗಿದೆ. ಆದರೂ ಈ ಶುಭಸಂದೇಶವನ್ನು ಎಲ್ಲರೂ ಅಂಗೀಕರಿಸಲಿಲ್ಲ. ಆದುದರಿಂದಲೇ ಯೆಶಾಯನು, "ಪ್ರಭುವೇ, ನಾವು ಸಾರಿದ ಸಂದೇಶವನ್ನು ನಂಬಿದವರು ಯಾರು?" ಎಂದು ಮೊರೆಯಿಟ್ಟಿದ್ದಾನೆ. ಇಂತಿರಲು, ಶುಭಸಂದೇಶವನ್ನು ಆಲಿಸುವುದರಿಂದ ವಿಶ್ವಾಸ ಮೂಡುತ್ತದೆ; ಶುಭಸಂದೇಶ  ಕ್ರಿಸ್ತಯೇಸುವನ್ನು ಬೋಧಿಸುವುದರ ಮೂಲಕ ಪ್ರಕಟವಾಗುತ್ತದೆ. ಈಗ ನನ್ನದೊಂದು ಪ್ರಶ್ನೆ: "ಇಸ್ರಯೇಲರಿಗೆ ಶುಭಸಂದೇಶವನ್ನು ಕೇಳುವ ಸಂದರ್ಭ ಇರಲಿಲ್ಲವೆ?" ನಿಶ್ಚಯವಾಗಿ ಇತ್ತು. ಪವಿತ್ರ ಗ್ರಂಥದಲ್ಲಿ ಹೇಳಿರುವಂತೆ; "ಸಾರುವವರ ಧ್ವನಿ ಜಗದಲ್ಲೆಲ್ಲಾ ಹರಡಿತು ಅವರ ನುಡಿ ಭೂಮಿಯ ತುತ್ತತುದಿಯನ್ನು ಮುಟ್ಟಿತು." 

ಕೀರ್ತನೆ: 19:8, 9, 10, 11 
ಶ್ಲೋಕ: ಅವುಗಳ ನುಡಿಮಾತು ವ್ಯಾಪಿಸಿದೆ ಜಗದಾದ್ಯಂತ 

ಶುಭಸಂದೇಶ: ಮತ್ತಾಯ 4:18-22 

ಯೇಸುಸ್ವಾಮಿ ಗಲೆಲೇಯ ಸರೋವರದ ತೀರದಲ್ಲಿ ನಡೆದು ಹೋಗುತ್ತಿದ್ದರು. ಆಗ ಇಬ್ಬರು ಸಹೋದರರನ್ನು ಕಂಡರು. ಇವರೇ "ಪೇತ್ರ" ಎನಿಸಿಕೊಂಡ ಸಿಮೋನ ಮತ್ತು ಅವನ ಸಹೋದರ ಆಂದ್ರೇಯ. ಬೆಸ್ತರಾದ ಇವರು ಸರೋವರದಲ್ಲಿ ಬಲೆ ಬೀಸುತ್ತಾ ಇದ್ದರು. "ನನ್ನನ್ನು ಹಿಂಬಾಲಿಸಿ ಬನ್ನಿ: ನಿಮ್ಮನ್ನು ಮನುಷ್ಯರನ್ನೇ ಹಿಡಿಯುವವರನ್ನಾಗಿ ಮಾಡುವೆನು," ಎಂದು ಹೇಳಿ ಯೇಸು ಅವರನು ಕರೆದರು. ತಕ್ಷಣವೇ, ಅವರು ತಮ್ಮ ಬಲೆಗಳನ್ನು ಬಿಟ್ಟು ಯೇಸುವನ್ನು  ಹಿಂಬಾಲಿಸಿದರು. ಅಲ್ಲಿಂದ ಮುಂದಕ್ಕೆ ಹೋಗುತ್ತಿದ್ದಾಗ ಯೇಸು ಜೆಬೆದಾಯನ ಮಕ್ಕಳಾದ ಯಕೋಬ ಮತ್ತು  ಯೊವಾನ್ನ ಎಂಬ  ಇನ್ನಿಬ್ಬರು ಸಹೋದರರನ್ನು ಕಂಡರು. ಇವರು ತಮ್ಮ ತಂದೆ ಜೇಬೆದಾಯನೊಡನೆ ದೋಣಿಯಲ್ಲಿ ಬಲೆಗಳನ್ನು ಸರಿಪಡಿಸುತ್ತಿದ್ದರು. ಯೇಸು ಅವರನ್ನೂ ಕರೆದರು. ಕೂಡಲೇ ಅವರು ದೋಣಿಯನ್ನೂ ತಮ್ಮ ತಂದೆಯನ್ನೂ ಬಿಟ್ಟು ಯೇಸುವನ್ನು ಹಿಂಬಾಲಿಸಿದರು.

29.11.2019

ಮೊದಲನೇ ವಾಚನ: ದಾನಿಯೇಲ  7:2-14 

ದಾನಿಯೇಲನು ತಾನು ಕಂಡ ಕನಸಿನ ವಿಷಯವಾಗಿ ಇಂತೆಂದನು: ನಾನು ರಾತ್ರಿ ಕಂಡ ಕನಸಿನಲ್ಲಿ ನಾಲ್ಕು ದಿಕ್ಕುಗಳಿಂದಲೂ ಗಾಳಿ ಮಹಾಸಾಗರದ ಮೇಲೆ ರಭಸವಾಗಿ ಬೀಸಿ ಬಡಿಯುತ್ತಿತ್ತು. ವಿಲಕ್ಷಣವಾದ ನಾಲ್ಕು ದೊಡ್ಡ ಮೃಗಗಳು ಆ ಸಾಗರದಿಂದ ಹೊರಗೆ ಬಂದವು ಮೊದಲು ಕಾಣಿಸಿದ ಮೃಗ ಸಿಂಹದ ಹಾಗಿತ್ತು. ಆದರೆ ಅದಕ್ಕೆ ಹದ್ದಿನಂಥ ರೆಕ್ಕೆಗಳಿದ್ದವು. ನಾನು ನೋಡುತ್ತಿರುವಾಗಲೇ ಆ ರೆಕ್ಕೆಗಳು ಕೀಳಲ್ಪಟ್ಟವು. ಆ ಮೃಗವನ್ನು ನೆಲದಿಂದ ಮೇಲಕ್ಕೆತ್ತಿ ಮನುಷ್ಯನ ಹಾಗೆ ಎರಡು ಕಾಲುಗಳ ಮೇಲೆ ನಿಲ್ಲಿಸಲಾಯಿತು. ಅದಕ್ಕೆ ಮನುಷ್ಯನ ಹೃದಯಕೊಡಲಾಯಿತು. ಬಳಿಕ ಎರಡನೆಯ ಇನ್ನೊಂದು ಮೃಗವನ್ನು ಕಂಡೆ. ಅದು ಕರಡಿಯ ಹಾಗಿತ್ತು. ಒಂದು ಹೆಗಲನ್ನು ಮೇಲಕ್ಕೆ ಎತ್ತಿಕೊಂಡಿತ್ತು. ತನ್ನ ಬಾಯಲ್ಲಿನ ಹಲ್ಲುಗಳ ನಡುವೆ ಮೂರು ಪಕ್ಕೆಲುಬುಗಳನ್ನು ಕಚ್ಚಿಕೊಂಡಿತ್ತು. "ನೀನೆದ್ದು ಬೇಕಾದಷ್ಟು ಮಾಂಸವನ್ನು ತಿನ್ನು," ಎಂದು ಅದಕ್ಕೆ ಹೇಳಲಾಯಿತು. ಆನಂತರ ನಾನು ನೋಡುತ್ತಿರುವಾಗಲೇ ಚಿರತೆಯ ಹಾಗಿದ್ದ ಮತ್ತೊಂದು ಮೃಗ ಕಾಣಿಸಿತು. ಅದರ ಪಕ್ಕೆಗಳಲ್ಲಿ ಪಕ್ಷಿಯ ರೆಕ್ಕೆಗಳಂತಿರುವ ನಾಲ್ಕು ರೆಕ್ಕೆಗಳಿದ್ದವು. ಆ ಮೃಗಕ್ಕೆ ನಾಲ್ಕು ತಲೆಗಳಿದ್ದವು. ಅದಕ್ಕೆ ದೊರೆತನ ಕೊಡಲಾಯಿತು. ಇದಾದ ಬಳಿಕ ಆ ರಾತ್ರಿ ಕನಸಿನಲ್ಲಿ ಕಾಣಿಸಿಕೊಂಡ ನಾಲ್ಕನೇ ಮೃಗ ಭಯಂಕರವಾಗಿತ್ತು, ಹೆದರಿಸುವಂಥದಾಗಿತ್ತು. ಅಧಿಕ ಬಲವುಳ್ಳದ್ದಾಗಿತ್ತು. ಅದಕ್ಕೆ ಕಬ್ಬಿಣದ ದೊಡ್ಡ ಹಲ್ಲುಗಳಿದ್ದವು. ಅದು ತನ್ನ ಬಲಿಯನ್ನು ತುಂಡುತುಂಡಾಗಿಸಿ ಕಬಳಿಸುತ್ತಿತ್ತು. ಮಿಕ್ಕದ್ದನ್ನು ಕಾಲುಗಳಿಂದ ತುಳಿಯುತ್ತಾ ಇತ್ತು. ಅದು ಮುಂಚಿನ  ಮೃಗಗಳಿಗಿಂತ ವಿಲಕ್ಷಣವಾಗಿತ್ತು ಅದಕ್ಕೆ ಹತ್ತು ಕೊಂಬುಗಳಿದ್ದವು. ನಾನು ಆ ಕೊಂಬುಗಳನ್ನು ಗಮನಿಸುತ್ತಿರುವಾಗಲೇ ಅವುಗಳ ನಡುವೆ ಇಗೋ ಇನ್ನೊಂದು ಚಿಕ್ಕ ಕೊಂಬು ಮೊಳೆಯಿತು. ಅದಕ್ಕೆ ಎಡೆಮಾಡಿಕೊಡಲು ಮುಂಚಿನ ಕೊಂಬುಗಳಲ್ಲಿ ಮೂರನ್ನು ಬೇರುಸಹಿತ ಕೀಳಲಾಯಿತು. ಆಶ್ಚರ್ಯವೆಂದರೆ, ಆ ಕೊಂಬಿನಲ್ಲಿ ಮನುಷ್ಯನ ಕಣ್ಣುಗಳಂತಿರುವ ಕಣ್ಣುಗಳಿದ್ದವು. ಬಡಾಯಿ ಕೊಚ್ಚಿಕೊಳ್ಳುವ ಬಾಯೂ ಇತ್ತು. ನಾನು ನೋಡುತ್ತಿದ್ದ ಹಾಗೆ: ಸಿಂಹಾಸನಗಳನ್ನು ಹಾಕಲಾಯಿತು.  ಮಹಾವೃದ್ಧನೊಬ್ಬನು ಆಸೀನನಾದನು. ಆತನ ಉಡುಪು ಬೆಳ್ಳಗಿತ್ತು ಹಿಮದಂತೆ. ಆತನ ಸಿಂಹಾಸನ ಅಗ್ನಿಜ್ವಾಲೆಗಳು. ಧಗಧಗಿಸುವ ಬೆಂಕಿ ಅದರ ಚಕ್ರಗಳು. ಆ ಸಿಂಹಾಸನದ ಸಮ್ಮುಖದಿಂದ ಪ್ರಜ್ವಲ ಪ್ರವಾಹವೊಂದು ಉಕ್ಕಿ ಹರಿದು ಬಂದಿತು. ಲಕ್ಷೋಪಲಕ್ಷ ದೂತರು ಆತನಿಗೆ ಸೇವೆ ಸಲ್ಲಿಸುತ್ತಿದ್ದರು. ಕೋಟ್ಯಾನುಕೋಟಿ ಕಿಂಕರರು ಆತನ ಮುಂದೆ ನಿಂತಿದ್ದರು. ನ್ಯಾಯಸಭೆಯವರು ತೀರ್ಪು ನೀಡಲು ಕುಳಿತುಕೊಂಡರು. ಪಟ್ಟಿ ಪುಸ್ತಕಗಳನ್ನು ತೆರೆಯಲಾಯಿತು. ನಾನು ನೋಡುತ್ತಾ ಇದ್ದೆ: ಆ ಕಿರು ಕೊಂಬು ಬಡಾಯಿಕೊಚ್ಚಿಕೊಂಡ ನಿಮಿತ್ತ ಆ ಕೊಂಬಿನ ಮೃಗವನ್ನು ಕೊಂದು ಅದರ ಹೆಣವನ್ನು ಉರಿಯುವ ಬೆಂಕಿಗೆ ಹಾಕಿ ನಾಶಮಾಡಿದರು. ಮಿಕ್ಕ ಮೃಗಗಳ ದೊರೆತನವನ್ನು ತೆಗೆದುಬಿಟ್ಟರು. ಆದರೆ ಕೆಲವು ಕಾಲದ ಮಟ್ಟಿಗೆ, ತಕ್ಕ ಸಮಯ ಬರುವ ತನಕ, ಅವುಗಳ ಜೀವಾವಧಿಯನ್ನು ಉಳಿಸಿದರು. ನಾನು ಕಂಡ ರಾತ್ರಿಯ ಕನಸಿನಲ್ಲಿ ನರಪುತ್ರನಂತಿರುವವನು ಆಕಾಶದ ಮೇಘಗಳೊಂದಿಗೆ ಬಂದು ಆ ಮಹಾವೃದ್ಧನನ್ನು ಸಮೀಪಿಸಿದನು. ಅವನನ್ನು ಆತನ ಸನ್ನಿಧಿಗೆ ತಂದರು. ಸಕಲ ರಾಷ್ಟ್ರ - ಕುಲ - ಭಾಷೆಗಳವರು ಅವನಿಗೆ ಸೇವೆ ಸಲ್ಲಿಸಲೆಂದು ಅವನಿಗೆ ದೊರೆತನ, ಘನತೆ, ರಾಜ್ಯತ್ವ ಇವುಗಳನ್ನು ಕೊಡಲಾಯಿತು. ಅವನ ಆಳ್ವಿಕೆಗೆ ಅಂತ್ಯವಿಲ್ಲ. ಅದು ಶಾಶ್ವತವಾದುದು, ಅವನ ರಾಜ್ಯ ಎಂದಿಗೂ ಅಳಿಯದು! 

ಅಜರ್ಯ: 1:53-54, 55-56, 57-59 
ಶ್ಲೋಕ: ಸರ್ವೇಶ್ವರನನು ಕೊಂಡಾಡಿ ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸಿ 

ಶುಭಸಂದೇಶ: ಲೂಕ 21:29-33 

ಯೇಸುಸ್ವಾಮಿ ಶಿಷ್ಯರಿಗೆ ಈ ಸಾಮತಿಯನ್ನು ಹೇಳಿದರು; "ಅಂಜೂರದ ಹಾಗೂ ಇತರ ಮರಗಳನ್ನು ಗಮನಿಸಿರಿ. ಅವುಗಳ ಎಲೆಗಳು ಚಿಗುರುತ್ತಲೇ ವಸಂತಕಾಲ ಆರಂಭಿಸಿತೆಂದು ನೀವೇ ಅರಿತುಕೊಳ್ಳುತ್ತೀರಿ. ಅಂತೆಯೇ ಇವೆಲ್ಲವೂ ಸಂಭವಿಸುವುದನ್ನು ನೋಡುವಾಗ ದೇವರ ಸಾಮ್ರಾಜ್ಯವು ಸಮೀಪಿಸಿತೆಂದು ತಿಳಿದುಕೊಳ್ಳಿರಿ. ಇವೆಲ್ಲ ಸಂಭವಿಸುವವರೆಗೆ ಈ ಪೀಳಿಗೆ ಗತಿಸಿ ಹೋಗದೆಂದು ಒತ್ತಿಹೇಳುತ್ತೇನೆ. ಭೂಮ್ಯಾಕಾಶಗಳು ಗತಿಸಿಹೋಗುತ್ತದೆ; ಆದರೆ ನನ ಮಾತುಗಳು ಶಾಶ್ವತವಾಗಿ ಉಳಿಯುತ್ತವೆ.

28.11.2019

ಮೊದಲನೇ ವಾಚನ: ದಾನಿಯೇಲ 6:12-18 

ಆಸ್ಥಾನಕ್ಕೆ ಬಂದು ರಾಜಾಜ್ಞೆಯ ಪ್ರಸ್ತಾಪವನ್ನೆತ್ತಿ, "ರಾಜರೇ, ಯಾರೂ ಮೂವತ್ತು ದಿನಗಳ ತನಕ ತಮಗೆ ಹೊರತು ಬೇರೆ ಯಾವ ದೇವರಿಗಾಗಲಿ ಮನುಷ್ಯನಿಗಾಗಲಿ ಪ್ರಾರ್ಥನೆ ಮಾಡಕೂಡದು. ಮಾಡಿದರೆ ಅಂಥವನನ್ನು ಸಿಂಹಗಳ ಗವಿಯಲ್ಲಿ ಹಾಕಲಾಗುವುದು ಎಂಬ ಶಾಸನಕ್ಕೆ ನೀವು ರುಜುಹಾಕಿದಿರಲ್ಲವೆ?" ಎಂದು ಕೇಳಿದರು. ಅದಕ್ಕೆ ರಾಜನು, "ಹೌದು, ಮೇದ್ಯರ ಹಾಗು ಪರ್ಷಿಯರ ಧರ್ಮವಿಧಿಗಳಂತೆ ಅದು ಸ್ಥಿರವಾದ ನಿಬಂಧನೆ," ಎಂದು ಉತ್ತರಕೊಟ್ಟನು. ಆಗ ಅವರು ರಾಜಸನ್ನಿಧಿಯಲ್ಲಿ, "ರಾಜರೇ, ಜುದೇಯದಿಂದ ಸೆರೆಯಾಳುಗಳಾಗಿ ತಂದವರಲ್ಲಿ ಒಬ್ಬನಾದ  ಆ ದಾನಿಯೇಲನು ನಿಮ್ಮನ್ನಾಗಲಿ, ನಿಮ್ಮ ಹಸ್ತಾಕ್ಷರದ ರುಜುವಿರುವ ಶಾಸನವನ್ನಾಗಲಿ ಮಾನ್ಯಮಾಡುತ್ತಿಲ್ಲ," ಬದಲಿಗೆ ದಿನಕ್ಕೆ ಮೂರಾವರ್ತಿ ಪ್ರಾರ್ಥನೆ ಮಾಡುತ್ತಿದ್ದಾನೆ," ಎಂದು ದೂರಿತ್ತರು. ಆದರೆ ರಾಜನು ಈ ಮಾತುಗಳನ್ನು ಕೇಳಿ ಬಹಳ ವ್ಯಸನಗೊಂಡನು. ದಾನಿಯೇಲನನ್ನು ಈ ಇಕ್ಕಟ್ಟಿನಿಂದ ತಪ್ಪಿಸಲು ಮನಸ್ಸು ಮಾಡಿಕೊಂಡನು. ಆದರೆ ಹೇಗೆ ರಕ್ಷಿಸುವುದೆಂದು ಸೂರ್ಯಾಸ್ತಮದವರೆಗೂ ಆಲೋಚಿಸುತ್ತಾ ಇದ್ದನು. ಇದನ್ನು ಅರಿತುಕೊಂಡ ಆ ಅಧಿಕಾರಿಗಳು ರಾಜಸನ್ನಿಧಿಗೆ ಮತ್ತೆ ಕೂಡಿಬಂದು, "ಪ್ರಭೂ, ರಾಜರು ವಿಧಿಸಿದ ಯಾವ ನಿಬಂಧನೆಯಾಗಲಿ, ಶಾಸನವಾಗಲಿ ರದ್ದಾಗಬಾರದು ಎಂಬ ಧರ್ಮಸೂತ್ರ ಮೇದ್ಯರಲ್ಲೂ ಪರ್ಷಿಯರಲ್ಲೂ ಉಂಟೆಂಬುದು ತಮಗೆ ತಿಳಿದಿರಬೇಕು," ಎಂದರು. ಈ ಕಾರಣ ರಾಜನು ಅಪ್ಪಣೆ ಕೊಡಲೇಬೇಕಾಯಿತು. ಕೂಡಲೆ ಅವರು ದಾನಿಯೇಲನನ್ನು ತಂದು ಸಿಂಹಗಳ ಗವಿಯಲ್ಲಿ ಹಾಕಿಯೇಬಿಟ್ಟರು. ಆಗ ರಾಜನು ದಾನಿಯೇಲನಿಗೆ, "ನೀನು ದಿನನಿತ್ಯವೂ ಆರಾಧಿಸುವ ದೇವರು ನಿನ್ನನ್ನು ಉದ್ಧರಿಸಲಿ!" ಎಂದು ಹರಸಿದನು. ಆ ಆಧಿಕಾರಿಗಳಾದರೋ ಒಂದು ಬಂಡೆಯನ್ನು ತಂದು ಆ ಗವಿಯ ಬಾಯನ್ನು ಮುಚ್ಚಿದರು. ದಾನಿಯೇಲನ ಈ ಗತಿಯನ್ನು ಯಾರೂ ಬದಲಾಯಿಸಲಾಗದಂತೆ ರಾಜನ ಮತ್ತು ಅವನ ಮುಖಂಡರ ಮುದ್ರೆಯನ್ನು ಅದಕ್ಕೆ ಒತ್ತಿ ಮೊಹರು ಮಾಡಲಾಯಿತು. ಬಳಿಕ ರಾಜನು ಅರಮನೆಗೆ ಹಿಂದಿರುಗಿದನು. ಆ ರಾತ್ರಿಯೆಲ್ಲಾ ಉಪವಾಸವಿದ್ದನು.  ವಾದ್ಯವಿನೋದಾವಳಿ ಯಾವುದನ್ನೂ ಹತ್ತಿರಬರಲು ಬಿಡಲಿಲ್ಲ. ನಿದ್ರೆ ಅವನ ಕಣ್ಣುಗಳಿಂದ ಮಾಯವಾಯಿತು. ಮಾರನೆಯ ದಿನ ಬೆಳಗ್ಗೆ ರಾಜನು ಉದಯದಲ್ಲೇ ಎದ್ದು ಸಿಂಹಗಳ ಗವಿಯ ಬಳಿಗೆ ವೇಗವಾಗಿ ಹೋದನು. ದಾನಿಯೇಲನಿದ್ದ ಗವಿಯ ಸಮೀಪಕ್ಕೆ ಬಂದು, ದುಃಖ ಧ್ವನಿಯಿಂದ ದಾನಿಯೇಲನನ್ನು ಕೂಗಿ, "ದಾನಿಯೇಲನೇ, ಜೀವಸ್ವರೂಪನಾದ ದೇವರ ದಾಸನೇ, ನೀನು ದಿನನಿತ್ಯವು ಆರಾಧಿಸುವ ನಿನ್ನ ದೇವರಿಗೆ ನಿನ್ನನ್ನು ಸಿಂಹಗಳಿಂದ ಉದ್ಧರಿಸಲು ಸಾಧ್ಯವಾಯಿತೋ?" ಎಂದು ಕೇಳಿದನು. ಆಗ ದಾನಿಯೇಲನು ರಾಜನಿಗೆ, "ಅರಸರೇ, ಚಿರಂಜೀವಿಯಾಗಿರಿ! ನನ್ನ ದೆವರು ತಮ್ಮ ದೂತನನ್ನು ಕಳಿಸಿ, ಸಿಂಹಗಳ ಬಾಯನ್ನು ಬಂಧಿಸಿದರು. ಅವುಗಳಿಂದ ನನಗೆ ಯಾವ ಹಾನಿಯೂ ಆಗಲಿಲ್ಲ. ಏಕೆಂದರೆ ಆ ದೇವರ ದೃಷ್ಟಿಯಲ್ಲಿ ನಾನು ನಿರ್ಮಲನು.  ರಾಜನಾದ ತಮಗೂ ನಾನು ಯಾವ ದ್ರೋಹವನ್ನು ಮಾಡಲಿಲ್ಲ," ಎಂದು ಹೇಳಿದನು. ರಾಜನು ಇದನ್ನು ಕೇಳಿ ಬಹಳ ಸಂತೋಷಪಟ್ಟನು. ದಾನಿಯೇಲನನು ಗವಿಯೊಳಗಿಂದ ಮೇಲಕ್ಕೆತ್ತಬೇಕೆಂದು ಅಪ್ಪಣೆಮಾಡಿದನು. ಅಂತೆಯೇ ಅವನನ್ನು ಮೇಲಕ್ಕೆತ್ತಲಾಯಿತು. ಆತನು ತನ್ನ ದೇವರಲ್ಲಿ ದೃಢವಾದ ವಿಶ್ವಾಸವಿಟ್ಟ ಕಾರಣ ಅವನಿಗೆ ಯಾವ ಹಾನಿಯೂ ಆಗಿರಲಿಲ್ಲ. ಆನಂತರ ರಾಜನು ಆಜ್ಞಾಪಿಸಲು ದಾನಿಯೇಲನ  ಮೇಲೆ ದೂರು ಹೊರಿಸಿದವರನ್ನು ಮಡದಿಮಕ್ಕಳ ಸಮೇತ ತಂದು ಸಿಂಹಗಳ ಗವಿಯಲ್ಲಿ ಹಾಕಿಬಿಟ್ಟರು ಅವರು ಗವಿಯ ತಳಮುಟ್ಟುವುದರೊಳಗೆ ಸಿಂಹಗಳು ಅವರ ಮೇಲೆ ಹಾರಿ ಅವರ ಎಲುಬುಗಳನ್ನೆಲ್ಲ ಚೂರು ಚೂರು ಮಾಡಿದವು. ಇದಾದಮೇಲೆ ರಾಜ ದಾರ್ಯಾವೆಷನು ಜಗದಲ್ಲಿ ವಾಸಿಸುವ ಸಕಲ ದೇಶ - ಕುಲ - ಭಾಷೆಗಳವರಿಗೆ ಈ ಪ್ರಸಿದ್ಧ ಪತ್ರವನು ಬರೆಯಿಸಿದನು; "ನಿಮಗೆ ಹೆಚ್ಚೆಚ್ಚು ಸುಖಶಾಂತಿ ಲಭಿಸಲಿ!" ನನ್ನ ರಾಜ್ಯದ ಪ್ರಜೆಗಳೆಲ್ಲರಿಗೆ ನಾನು ಆಜ್ಞಾಪಿಸುವುದೇನೆಂದರೆ: ನೀವೆಲ್ಲರು ದಾನಿಯೇಲನ ದೇವರ ಮುಂದೆ ಭಯಭಕ್ತಿಯಿಂದ ನಡೆದುಕೊಳ್ಳತಕ್ಕದ್ದು . ಏಕೆಂದರೆ ಆತನೇ ಜೀವಸ್ವರೂಪನಾದ ಸನಾತನ ದೇವರು! ಆತನ ರಾಜ್ಯ ಎಂದೆಂದಿಗೂ ಅಳಿಯದು. ಆತನ ಆಳ್ವಿಕೆ ಶಾಶ್ವತವಾದುದು ! ಆತ ಉದ್ಧರಿಸುವಂಥವನು, ರಕ್ಷಿಸುವಂಥವನು ಭೂಮ್ಯಾಕಾಶಗಳಲ್ಲಿ ಅದ್ಭುತ ಮಹತ್ವಗಳನ್ನು ನಡೆಸುವಂಥವನು! ಆತನೇ ದಾನಿಯೇಲನನ್ನು ಸಿಂಹಗಳ ಬಾಯಿಂದ ತಪ್ಪಿಸಿದವನು! ಹೀಗೆ ಈ ದಾನಿಯೇಲನು ದಾರ್ಯಾವೆಶನ ಆಳ್ವಿಕೆಯಲ್ಲೂ ಪರ್ಷಿಯಾನಾದ ಸೈರೆಷನ ಆಳ್ವಿಕೆಯಲ್ಲೂ ಪ್ರವರ್ಧಿಸುತ್ತಾ ಬಾಳಿದನು. 

ಅಜರ್ಯ: 46-48, 49-50, 51-52 
ಶ್ಲೋಕ: ಸರ್ವೇಶ್ವರನನ್ನು ಕೊಂಡಾಡಿ, ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸಿರಿ 

ಶುಭಸಂದೇಶ: ಲೂಕ 21:20-28 

ಯೇಸು ಶಿಷ್ಯರಿಗೆ ಹೀಗೆಂದರು: ಜೆರುಸಲೇಮ್ ಪಟ್ಟಣವನ್ನು ಸೈನ್ಯಗಳು ಸುತ್ತುಗಟ್ಟುತ್ತಿರುವುದನ್ನು ನೀವು ಕಾಣುವಾಗ ಅದರ ವಿನಾಶ ಸಮೀಪಿಸಿತೆಂದು ತಿಳಿದುಕೊಳ್ಳಿ. ಆಗ ಜುದೇಯದಲ್ಲಿರುವವರು ಬೆಟ್ಟಗುಡ್ಡಗಳಿಗೆ ಓಡಿಹೋಗಲಿ; ಪಟ್ಟಣದೊಳಗಿರುವವರು ಅಲ್ಲಿಂದ ಹೊರಟುಹೋಗಲಿ; ಹಳ್ಳಿಗಾಡಿನಲ್ಲಿರುವವರು ಪಟ್ಟಣಕ್ಕೆ ಬಾರದಿರಲಿ. ಏಕೆಂದರೆ, ದಂಡನೆಯ ಕಾಲ ಅದು. ಅದನ್ನು ಕುರಿತು ಪವಿತ್ರ ಗ್ರಂಥದಲ್ಲಿ ಬರೆದಿರುವುದೆಲ್ಲಾ ಆಗ ನೆರವೇರಬೇಕು. ಅಯ್ಯೋ, ಆ ದಿನಗಳಲ್ಲಿ ಗರ್ಭಿಣಿಯರ ಮತ್ತು ಹಾಲೂಡಿಸುವ ತಾಯಂದಿರ ಗೋಳೇನು! ಈ ನಾಡು ಮಹಾವಿಪತ್ತಿಗೆ ಈಡಾಗುವುದು. ಈ ಜನತೆ ದೈವಕೋಪಕ್ಕೆ ಗುರಿಯಾಗುವುದು. ಕೆಲವರು ಕತ್ತಿಯ ಬಾಯಿಗೆ ತುತ್ತಾಗುವರು. ಮತ್ತೆ ಕೆಲವರು ಬಂಧಿತರಾಗಿ ದೇಶದೇಶಗಳಿಗೆ ಕೊಂಡೊಯ್ಯಲ್ಪಡುವರು; ಅನ್ಯದೇಶೀಯರು ತಮ್ಮ ಕಾಲಾವಧಿಯ ತನಕ ಜೆರುಸಲೇಮನ್ನು ತುಳಿದುಹಾಕುವರು. "ಸೂರ್ಯ, ಚಂದ್ರ, ನಕ್ಷತ್ರಗಳಲ್ಲಿ ವಿಚಿತ್ರ ಸೂಚನೆಗಳು ಕಾಣಿಸಿಕೊಳ್ಳುವುವೂ; ಮೊರೆಯುವ ತೆರೆಗಳ ಹಾಗೂ ಭೋರ್ಗರೆಯುವ ಸಮುದ್ರದ ನಿಮಿತ್ತ ಭೂಮಿಯಲ್ಲಿ ಜನಾಂಗಗಳು ದಿಕ್ಕುತೋಚದೆ ತತ್ತರಿಸಿಹೋಗುವುವು. ಗ್ರಹಶಕ್ತಿಗಳು ಕದಲುವುದರಿಂದ ಧರೆಯಲ್ಲಿ  ಏನೇನು ಸಂಭವಿಸುವುದೋ ಎಂಬ ಭಯಭೀತಿಯಿಂದ ಮಾನವರು ದಿಗ್ಬ್ರಮೆಗೊಳ್ಳುವರು. ಆಗ ನರಪುತ್ರನು ಮಹಾಶಕ್ತಿಯಿಂದಲೂ ಮಹಿಮಾ ಪ್ರಭಾವದಿಂದಲೂ ಮೇಘಾರೂಢನಾಗಿ ಬರುವುದನ್ನು ಜನರು ನಿರೀಕ್ಷಿಸುತ್ತಾ ತಲೆಯೆತ್ತಿ ನಿಲ್ಲಿರಿ; ಏಕೆಂದರೆ, ನಿಮ್ಮ ಉದ್ಧಾರವು ಸಮೀಪಿಸಿತು."

27.11.2019

ಮೊದಲನೇ ವಾಚನ: ದಾನಿಯೇಲ 5:1-6, 13-14, , 16-17, 23-28 

ಬೇಲ್ಯಚ್ಚರ ಎಂಬ ಅರಸನು ತನ್ನ ರಾಜ್ಯದ ಪ್ರಮುಖರಲ್ಲಿ ಸಾವಿರ ಮಂದಿಯನ್ನು ಸೇರಿಸಿ ಒಂದು ಔತಣವನ್ನು ಏರ್ಪಡಿಸಿದ. ಆ ಸಾವಿರ ಜನರ ಮುಂದೆ ಅವನೂ ದ್ರಾಕ್ಷಾರಸವನ್ನು ಕುಡಿದ. ಹಾಗೆ ಕುಡಿದು ಕೊಂಡಿರುವಾಗ ತಾನೂ ತನ್ನ ಪ್ರಮುಖ ಪತ್ನಿಯರೂ ಉಪಪತ್ನಿಯರೂ ಕುಡಿಯುವುದಕ್ಕಾಗಿ ತನ್ನ ತಂದೆ ನೆಬೂಕದ್ನೆಚ್ಚರನು ಜೆರುಸಲೇಮಿನ ದೇವಾಲಯದ ಗರ್ಭಗುಡಿಯಿಂದ ಸೂರೆಯಾಗಿ ತಂದ ಬಂಗಾರದ ಪೂಜಾ ಪಾತ್ರೆಗಳನ್ನು ತರಿಸಿದ. ರಾಜನೂ ಅವನ ಪ್ರಮುಖರೂ ಪತ್ನಿ - ಉಪಪತ್ನಿಯರೂ ಅವುಗಳಲ್ಲಿ ಕುಡಿದರು. ಕುಡಿದುಕೊಂಡೇ ಬಂಗಾರ, ಬೆಳ್ಳಿ, ಕಂಚು, ಕಬ್ಬಿಣ, ಮರ ಮತ್ತು ಕಲ್ಲಿನ ತಮ್ಮ ದೇವರುಗಳನ್ನು ಆರಾಧಿಸಿದರು. ಅದೇ ಸಮಯದಲ್ಲಿ ಒಬ್ಬ ಮನುಷ್ಯನ ಕೈಬೆರಳುಗಳು ಕಾಣಿಸಿಕೊಂಡು ದೀಪಸ್ತಂಭದ ಎದುರಿಗೆ ಅರಮನೆಯ ಸುಣ್ಣದ ಗೋಡೆಯ ಮೇಲೆ ಬರೆಯಲು ತೊಡಗಿದವು. ಬರೆಯುತ್ತಿದ್ದ ಆ ಕೈಯನ್ನು ರಾಜನು ನೋಡಿದನು. ಅದನ್ನು ಕಂಡದ್ದೇ ಅವನ ಮುಖ ಕಳೆಗುಂದಿತು, ಮನಸು ಕಳವಳಗೊಂಡಿತು, ಸೊಂಟದ ಕೀಲು ಸಡಿಲಗೊಂಡಿತು, ಮೊಣಕಾಲುಗಳು ಒಂದಕ್ಕೊಂದು ಬಡಿದುಕೊಂಡವು. ಅಂತೆಯೇ, ದಾನಿಯೇಲನನ್ನು ರಾಜ ಸನ್ನಿಧಿಗೆ ಬರಮಾಡಲಾಯಿತು. ರಾಜನು ಅವನಿಗೆ: "ರಾಜನಾದ ನನ್ನ ತಂದೆ ಜುದೇಯದಿಂದ ಖೈದಿಯಾಗಿ ತಂದು ಸೆರೆಮಾಡಿದ ಯೆಹೂದ್ಯರಲ್ಲಿ ದಾನಿಯೇಲ್ ಎಂಬುವನು ನೀನೋ? ದೇವರ ಆತ್ಮ ನಿನ್ನಲ್ಲಿ ನೆಲೆಸಿದೆಯೆಂದು ನಾನು ಕೇಳಿದ್ದೇನೆ. ನಿನಗೆ ಪರಮಜ್ಞಾನ, ವಿವೇಕ, ಬುದ್ಧಿ, ತೇಜಸ್ಸು ಇದೆಯೆಂದು ನನಗೆ ತಿಳಿದುಬಂದಿದೆ. ನೀನು ಗೂಡಾರ್ಥಗಳನ್ನು ವಿವರಿಸಬಲ್ಲವನೂ ಎಂಬ ಸಮಾಚಾರ ನನಗೆ ಮುಟ್ಟಿದೆ. ಈ ಬರಹವನ್ನು ಓದಿ, ಇದರ ಅಭಿಪ್ರಾಯವನ್ನು ನನಗೆ ತಿಳಿಸಿದೆಯಾದರೆ ನಿನಗೆ ಕೆನ್ನೀಲಿಯ ರಾಜವಸ್ತ್ರವನ್ನು ಹೊದಿಸಿ. ಕೊರಳಿಗೆ ಚಿನ್ನದ ಹಾರವನ್ನು ಹಾಕಿಸಿ, ನಿನ್ನನ್ನು ರಾಜ್ಯದ ಮೂವರು  ಮುಖ್ಯಾಧಿಕಾರಿಗಳಲ್ಲಿ ಒಬ್ಬನನ್ನಾಗಿ ನೇಮಿಸುವೆನು," ಎಂದು ಹೇಳಿದನು. ಆಗ ದಾನಿಯೇಲನು ರಾಜನಿಗೆ, "ಅರಸರೇ, ನಿಮ್ಮ ದಾನಗಳು ನಿಮಗೇ ಇರಲಿ. ನಿಮ್ಮ ಬಹುಮಾನಗಳು ಮತ್ತೊಬ್ಬನಿಗೆ ದೊರಕಲಿ. ಆದರೆ ನಾನು ಈ ಬರಹವನ್ನು ಓದಿ ಅದರ ಅರ್ಥವನ್ನು ತಮಗೆ ತಿಳಿಸುವೆನು. ಪರಲೋಕದ ಒಡೆಯನಿಗೆ ವಿರುದ್ಧವಾಗಿ ನಿಮ್ಮನ್ನೆ ಹೆಚ್ಚಿಸಿಕೊಂಡಿದ್ದೀರಿ. ದೇವಾಲಯದಿಂದ ಪವಿತ್ರ ಪೂಜಾಪಾತ್ರೆಗಳನ್ನು ಇಲ್ಲಿಗೆ ತಂದಿದ್ದೀರಿ. ನೀವೂ ನಿಮ್ಮ ರಾಜ್ಯದ ಪ್ರಮುಖರೂ ಪತ್ನಿ - ಉಪಪತ್ನಿಯರೂ ಅವುಗಳಲ್ಲಿ ದ್ರಾಕ್ಷಾರಸವನ್ನೂ ಕುಡಿದಿದ್ದೀರಿ. ಬುದ್ದಿ, ಕಣ್ಣು, ಕಿವಿ ಇಲ್ಲದೆ ಬೆಳ್ಳಿಬಂಗಾರಗಳ, ಕಂಚು ಕಬ್ಬಿಣಗಳ, ಮರ ಕಲ್ಲುಗಳ ದೇವರುಗಳನ್ನು ಆರಾಧಿಸಿದ್ದೀರಿ. ನಿಮ್ಮ ಪ್ರಾಣ ಯಾರ ಕೈಯಲ್ಲಿದೆಯೋ ನಿಮ್ಮ ಸ್ಥಿತಿಗತಿಗಳು ಯಾರ ಅಧೀನದಲ್ಲಿದೆಯೋ ಆ ದೇವರನ್ನು ಮಾತ್ರ ಗೌರವಿಸದೆ ಇದ್ದೀರಿ. ಹೀಗಿರಲು, ಆ ಕೈಬೆರಳು ದೇವರ ಸನ್ನಿಧಿಯಿಂದ ಬಂದು ಬರೆದಿದೆ. ಬರೆದಿರುವ ಮಾತುಗಳು ಇವು: "ಮೆನೇ, ಮೆನೇ, ತೆಕೇಲ್, ಉಫರ್ಸಿನ್." ಇದರ ಅರ್ಥ ಹೀಗಿದೆ: "ಮೆನೇ" ಎಂದರೆ, ದೇವರು ನಿನ್ನ ಆಳ್ವಿಕೆಯ ಕಾಲಾವಧಿಯನ್ನು ಲೆಕ್ಕಿಸಿ ಕೊನೆಗಾಣಿಸಿದ್ದಾರೆ. "ತೆಕೇಲ್" ಎಂದರೆ ನಿನ್ನನ್ನು ತಕ್ಕಡಿಯಲ್ಲಿ ಹಾಕಿ ನೋಡಲು ನಿನ್ನ ತೂಕ ಕಡಿಮೆಯಾಗಿ ಕಂಡುಬಂದಿದೆ. "ಉಫರ್ಸಿನ್" ಎಂದರೆ ನಿನ್ನ ರಾಜ್ಯವನ್ನು ವಿಭಾಗಮಾಡಿ ಮೇದ್ಯರಿಗೂ ಪರ್ಷಿಯದವರಿಗೂ ಕೊಡಲಾಗಿದೆ," ಎಂದು ಅರಿಕೆಮಾಡಿದನು. 
  
ಅಜರ್ಯ: 1:40-45 
ಶ್ಲೋಕ: ಸರ್ವೇಶ್ವರನನ್ನು ಕೊಂಡಾಡಿ, ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸಿರಿ 

ಯೇಸು ತಮ್ಮ ಶಿಷ್ಯರಿಗೆ ಹೀಗೆಂದರು: "ಇದೆಲ್ಲಾ ಸಂಭವಿಸುವುದಕ್ಕೆ ಮುಂಚೆ ನಿಮ್ಮನ್ನು ಬಂಧಿಸಿ ಹಿಂಸೆಗೊಳಪಡಿಸುವರು. ಪ್ರಾರ್ಥನಾ ಮಂದಿರಗಳಿಗೂ ಕಾರಾಗೃಹಗಳಿಗೂ ಎಳೆದೊಪ್ಪಿಸುವರು; ನನ್ನ ನಾಮದ ನಿಮಿತ್ತ ನಿಮ್ಮನ್ನು ಅರಸರ ಹಾಗೂ ಅಧಿಪತಿಗಳ ಮುಂದಕ್ಕೆ ಎಳೆಯುವರು. ಶುಭಸಂದೇಶಕ್ಕೆ ಸಾಕ್ಷಿಕೊಡಲು ಇದು ನಿಮಗೆ  ಸದವಕಾಶವಾಗಿರುತ್ತದೆ. ಆಗ ವಾದಿಸುವುದು ಹೇಗೆಂದು ನೀವು ಮುಂಚಿತವಾಗಿ ಚಿಂತಿಸಬೇಕಾಗಿಲ್ಲ; ಇದು ನಿಮಗೆ ಮನದಟ್ಟಾಗಿರಲಿ. ಏಕೆಂದರೆ ನಿಮ್ಮ ವಿರೋಧಿಗಳಾರೂ ಪ್ರತಿಭಟಿಸಲು ಅಥವಾ ವಿರೋಧಿಸಲು ಆಗದಂಥ ವಾಕ್ಚಾತುರ್ಯವನ್ನೂ ಜ್ಞಾನಶಕ್ತಿಯನ್ನೂ ನಿಮಗೆ ಕೊಡುವೆನು. ನಿಮ್ಮ ತಂದೆತಾಯಿಗಳೇ, ಒಡಹುಟ್ಟಿದವರೇ, ಬಂಧುಮಿತ್ರರೇ, ನಿಮ್ಮನ್ನು ಪರಾಧೀನ ಮಾಡುವರು; ಮಾತ್ರವಲ್ಲ, ನಿಮ್ಮಲ್ಲಿ ಕೆಲವರನ್ನು ಕೊಂದು ಹಾಕಿಸುವರು. ನೀವು ನನ್ನವರು ಆದುದರಿಃದಲೇ ಎಲ್ಲರೂ ನಿಮ್ಮನ್ನು ದ್ವೇಷಿಸುವರು ಆದರೂ ನಿಮ್ಮ ತಲೆಕೂದಲೊಂದೂ ನಾಶವಾಗುವುದಿಲ್ಲ. ಸೈರಣೆಯಿಂದಿರಿ, ಸಂರಕ್ಷಣೆಯನ್ನು ಪಡೆಯುವಿರಿ."

26.11.2019

ಮೊದಲನೇ ವಾಚನ: ದಾನಿಯೇಲ 2:31-45 

ರಾಜರೇಕೇಳಿ, ತಾವು ಕಂಡದ್ದು ಒಂದು ಅದ್ಭುತ ಪ್ರತಿಮೆ. ಥಳಥಳನೆ ಹೊಳೆಯುವ ಆ ದೊಡ್ಡ ಪ್ರತಿಮೆ ನಿಮ್ಮೆದುರಿಗೆ ನಿಂತಿತ್ತು. ಭಯಂಕರವಾಗಿ ಕಾಣಿಸುತ್ತಿತ್ತು. ಆ ಪ್ರತಿಮೆಯ ತಲೆ ಅಪ್ಪಟ ಬಂಗಾರದ್ದು. ಎದೆ ತೊಳುಗಳು ಬೆಳ್ಳಿಯವು. ಹೊಟ್ಟೆಸೊಂಟಗಳು ಕಂಚಿನವು. ಕಾಲುಗಳು ಕಬ್ಬಿಣದವು. ಪಾದಗಳು ಕಬ್ಬಿಣ ಮತ್ತು ಮಣ್ಣಿನಿಂದ ಮಾಡಿದವು. ನೀವು ನೋಡುತ್ತಿದ್ದ ಹಾಗೆ ಬೆಟ್ಟದಿಂದ ಒಂದು ಗುಂಡು ಬಂಡೆ, ಯಾವ ಕೈಯೂ ಮುಟ್ಟದೆಯೇ, ಸಿಡಿದುಬಂದು ಆ ಪ್ರತಿಮೆಯ ಕಬ್ಬಿಣ ಮಣ್ಣಿನಿಂದಾದ ಆ ಪಾದಗಳಿಗೆ ಬಡಿದು ಚೂರುಚೂರು ಮಾಡಿಬಿಟ್ಟಿತು. ಆಗ ಕಬ್ಬಿಣ - ಮಣ್ಣು - ಕಂಚು - ಬೆಳ್ಳಿ - ಬಂಗಾರ ಇವುಗಳೆಲ್ಲವೂ ಪುಡಿಪುಡಿಯಾದವು: ಸುಗ್ಗಿಯ ಕಣಗಳ ಹೊಟ್ಟಿನಂತಾದವು. ಗಾಳಿ ಅವುಗಳನ್ನು ತೂರಿಕೊಂಡು ಹೋಯಿತು. ಅವುಗಳಿಗೆ ನೆಲೆಯೇ ಇಲ್ಲವಾಯಿತು. ಪ್ರತಿಮೆಗೆ ಬಡಿದ ಆ ಬಂಡೆ ಮಹಾ ಪರ್ವತವಾಗಿ ಭೂಲೋಕದಲ್ಲೆಲ್ಲಾ ತುಂಬಿಕೊಂಡಿತು. ಅರಸರೇ, ಇದೇ ನೀವು ಕಂಡ ಕನಸು. ಇದರ ಅರ್ಥವನ್ನೂ ತಮ್ಮ  ಸನ್ನಿಧಿಯಲ್ಲಿ ಅರಿಕೆ ಮಾಡುತ್ತೇವೆ. ನೀವು ರಾಜಾಧಿರಾಜರು, ಪರಲೋಕ ದೇವರು ನಿಮಗೆ ರಾಜ್ಯಬಲ, ಪರಾಕ್ರಮ ಹಾಗು ವೈಭವಗಳನ್ನು ದಯಪಾಲಿಸಿದ್ದಾರೆ. ನರಮಾನವರು ವಾಸಿಸುವ ಸಕಲ  ಪ್ರಾಂತ್ಯಗಳಲ್ಲಿ ಆಕಾಶಪಕ್ಷಿಗಳನ್ನೂ ಭೂಜಂತುಗಳನ್ನೂ ನಿಮ್ಮ ಕೈಗೆ ಒಪ್ಪಿಸಿದ್ದಾರೆ. ನಿಮ್ಮ ಕಾಲವಾದ ಮೇಲೆ ನಿಮಗಿಂತ ಬೀಳಾದ ಮತ್ತೊಂದು ರಾಜ್ಯ ತಲೆಯೆತ್ತಿಕೊಳ್ಳುವುದು. ಆನಂತರ ಬೇರೊಂದು ರಾಜ್ಯ ಕಂಚಿನದಾಗಿ ಕಾಣಿಸಿಕೊಂಡು ಭೂಮಂಡಲವನ್ನೆಲ್ಲ ಆಳುವುದು‌. ನಾಲ್ಕನೆಯ ರಾಜ್ಯ ಕಬ್ಬಿಣದಷ್ಟು ಗಟ್ಟಿಗೆ ಕಬ್ಬಿಣದ ಎಲ್ಲ ವಸ್ತುಗಳನ್ನು ಚೂರುಚೂರಾಗಿ ಒಡೆದುಹಾಕುತ್ತದೆ. ಅಂತೆಯೇ ಅದು ಎಲ್ಲರನ್ನು ಚೂರು ಚೂರಾಗಿಸಿ ಧ್ವಂಸ ಮಾಡುವುದು.ಪಾದಗಳಲ್ಲಿ ಹಾಗು ಪಾದಬೆರಳುಗಳಲ್ಲಿ ಒಂದು ಅಂಶ ಕಬ್ಬಿಣ ಮತ್ತೊಂದು ಅಂಶ ಮಣ್ಣು ಆಗಿದ್ದನ್ನು ನೀವು ನೋಡಿದಿರಿ. ಅಂತೆಯೇ ಆ ರಾಜ್ಯವು ಭಿನ್ನಭಿನ್ನವಾಗಿರುವುದು. ಜೇಡಿಮಣ್ಣಿನೊಂದಿಗೆ ಕಬ್ಬಿಣ ಮಿಶ್ರವಾಗಿದ್ದನ್ನು ನೀವು ನೋಡಿದಂತೆ ಆ ರಾಜ್ಯದಲ್ಲಿ ಕಬ್ಬಿಣದ ಬಲ ಸೇರಿರುವುದು. ಕಾಲ್ಬೆರಳು ಒಂದಂಶ ಮಣ್ಣು ಆಗಿದ್ದ ಹಾಗೆ ಆ ರಾಜ್ಯದ ಒಂದಂಶ ಗಟ್ಟಿ ಇನ್ನೊಂದು ಅಂಶ ಬೆಂಡು. ಕಬ್ಬಿಣ ಜೇಡಿಮಣ್ಣಿನೊಂದಿಗೆ ಬೆರೆತಿರುವುದನ್ನು ನೀವು ನೋಡಿದ ಮೇರೆಗೆ ಆ ರಾಜ್ಯಾಂಶಗಳು ಮದುವೆ ಸಂಬಂಧದಿಂದ ಬೆರೆತುಕೊಳ್ಳುವುವು. ಆದರೆ ಕಬ್ಬಿಣ ಮಣ್ಣಿನೊಂದಿಗೆ ಹೇಗೆ ಕಲೆಯುವುದಿಲ್ಲವೋ ಹಾಗೆ ಅವು ಒಂದಕ್ಕೊಂದು ಅಂಟಿಕೊಳ್ಳುವುದಿಲ್ಲ. ಆ ರಾಜರ ಕಾಲದಲ್ಲಿ ಪರಲೋಕ ದೇವರು ಒಂದು ಸಾಮ್ರಾಜ್ಯವನ್ನು ಸ್ಥಾಪಿಸುವರು. ಅದು ಎಂದಿಗೂ ಅಳಿಯದು. ಅದರ ಪ್ರಾಬಲ್ಯವು ಬೇರೆ ರಾಷ್ಪ್ರಕ್ಕೆ ಜಾರಿಹೋಗದು. ರಾಷ್ಪ್ರಗಳನ್ನೆಲ್ಲಾ ಭಂಗಪಡಿಸಿ, ನಿರ್ನಾಮಮಾಡಿ ಆ ಸಾಮ್ರಾಜ್ಯ ಶಾಶ್ವತವಾಗಿ ನಿಲ್ಲುವುದು. ಬೆಟ್ಟದಿಂದ ಒಂದು ಗುಂಡುಬಂಡೆ, ಯಾವ ಕೈಯೂ ಮುಟ್ಟದೆಯೇ, ಸಿಡಿದುಬಂದು ಕಬ್ಬಿಣ - ಕಂಚು - ಮಣ್ಣು - ಬೆಳ್ಳಿ - ಬಂಗಾರ ಇವುಗಳನ್ನು ಚೂರುಚೂರು ಮಾಡಿದ್ದನ್ನು ನೀವು ನೋಡಿದಿರಿ. ಇದರಿಂದ ಪರಲೋಕ ದೇವರು ಮುಂದೆ ನಡೆಯಲಿರುವ ವಿಷಯಗಳನ್ನು ರಾಜರಾದ ತಮಗೆ ತಿಳಿಯಪಡಿಸಿದ್ದಾರೆ. ಆ ಕನಸು ನಿಜವಾದುದು ಅದರ ಅರ್ಥವೂ ನಂಬತಕ್ಕದ್ದು," ಎಂದು ವಿವರಿಸಿದನು. 

ಅಜರ್ಯ: 1:35-39 
ಶ್ಲೋಕ: ಸರ್ವೇಶ್ವರನನ್ನು ಕೊಂಡಾಡಿರಿ, ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸಿರಿ

ಶುಭಸಂದೇಶ: ಲೂಕ 21:5-11 

"ಈ ಮಹಾದೇವಾಲಯವು ಅಂದವಾದ ಕಲ್ಲುಗಳಿಂದಲೂ ಅಮೂಲ್ಯವಾದ ಕೊಡುಗೆಗಳಿಂದಲೂ ಎಷ್ಟು ಅಲಂಕೃತವಾಗಿದೆ!" ಎಂದು ಕೆಲವರು ಮಾತನಾಡುತ್ತಿದ್ದರು. ಆಗ ಯೇಸು, "ಇವುಗಳನ್ನು ನೀವು ನೋಡುತ್ತಿದ್ದೀರಲ್ಲವೆ? ಇಲ್ಲಿ ಕಲ್ಲಿನ ಮೇಲೆ ಕಲ್ಲು ಉಳಿಯದು; ಎಲ್ಲವನ್ನೂ ಕೆಡವಿಹಾಕುವ ಕಾಲವೊಂದು ಬರುವುದು," ಎಂದರು. "ಗುರುವೇ, ಇದು ಸಂಭವಿಸುವುದು ಯಾವಾಗ? ಇದೀಗಲೆ ಸಂಭವಿಸಲಿದೆ ಎಂದು ತಿಳಿಸುವ ಪೂರ್ವಸೂಚನೆ ಯಾವುದು?" ಎಂದು ಕೆಲವರು ಕೇಳಿದರು. ಅದಕ್ಕೆ ಯೇಸುಸ್ವಾಮಿ, "ನೀವು ಮೋಸಹೋಗದಂತೆ ಜಾಗರೂಕರಾಗಿರಿ. ಅನೇಕರು "ನಾನೇ ಆತ, ನಾನೇ ಆತ," ಎನ್ನುತ್ತಾ ನನ್ನ ಹೆಸರನ್ನೇ ಇಟ್ಟುಕೊಂಡು ಬಂದು "ಕಾಲವು ಸಮೀಪಿಸಿಬಿಟ್ಟಿತು," ಎಂದು ಹೇಳುತ್ತಾರೆ. ಅವರನ್ನು ಹಿಂಬಾಲಿಸಬೇಡಿ. ಸಮರ ಸಂಕಲಹಗಳ ಸುದ್ದಿ ಬಂದಾಗ ದಿಗಿಲುಗೊಳ್ಳಬೇಡಿ; ಇವೆಲ್ಲವೂ ಮೊದಲು ಸಂಭವಿಸಲೇಬೇಕು. ಆದರೂ ಆಂತ್ಯವು ಕೂಡಲೇ ಬರುವುದಿಲ್ಲ," ಎಂದರು. ಅದೂ ಅಲ್ಲದೆ ಯೇಸು ಇಂತೆಂದರು: "ಜನಾಂಗಕ್ಕೆ ವಿರುದ್ಧವಾಗಿ ಜನಾಂಗ, ರಾಷ್ಟ್ರಕ್ಕೆ ವಿರುದ್ಧವಾಗಿ ರಾಷ್ಟ್ರ ಯುದ್ಧಕಿಳಿಯುವುವು; ಭೀಕರ ಭೂಕಂಪಗಳಾಗುವುವು; ಕ್ಷಾಮಡಾಮರಗಳು ತಲೆದೋರುವುವು; ಭಯಂಕರ ಘಟನೆಗಳೂ ಬಾಹ್ಯಾಕಾಶದಲ್ಲಿ ಅಪೂರ್ವ ಸೂಚನೆಗಳೂ ಕಾಣಿಸಿಕೊಳ್ಳುವುವು.

25.11.2019

ಮೊದಲನೇ ವಾಚನ: ದಾನಿಯೇಲ  1:1-6, 8-20 

ಜುದೇಯದ ಅರಸ ಯೆಹೋಯಾಕೀಮನ ಆಳ್ವಿಕೆಯ ಮೂರನೆಯ ವರ್ಷದಲ್ಲಿ ಬಾಬಿಲೋನಿನ ರಾಜ ನೆಬೂಕದ್ನೆಚ್ಚರನು ಜೆರುಸಲೇಮಿಗೆ ಬಂದು ಮುತ್ತಿಗೆ ಹಾಕಿದನು.  ಸರ್ವೇಶ್ವರಸ್ವಾಮಿ ಜುದೇಯದ ಅರಸ ಯೆಹೋಯಾಕೀಮನನ್ನು ಅವನ ಕೈವಶವಾಗುವಂತೆ ಮಾಡಿದರು. ಅಃತೆಯೇ ದೇವಾಲಯದ ಆನೇಕ ಪೂಜಾಪಾತ್ರೆಗಳು ಅವನ ಕೈವಶವಾದವು. ನೆಬೂಕದ್ನೆಚ್ಚರನು ಅವುಗಳನ್ನು ಶಿನಾರ್ ದೇಶಕ್ಕೆ ಸಾಗಿಸಿ, ತನ್ನ ದೇವರ ಮಂದಿರಕ್ಕೆ ತಂದು, ಆ ದೇವರ ಭಂಡಾರಕ್ಕೆ ಸೇರಿಸಿಕೊಂಡನು. ಆನಂತರ ಆ ರಾಜನು ತನ್ನ ಕಂಚುಕಿಯರಲ್ಲಿ ಮುಖ್ಯಸ್ಥನಾದ ಅಶ್ಪೇನಜನಿಗೆ, "ನೀನು ಇಸ್ರಯೇಲರಲ್ಲಿ, ಅಂದರೆ ರಾಜವಂಶೀಯರಲ್ಲಿ ಮತ್ತು ಪ್ರಧಾನರಲ್ಲಿ ಕೆಲವು ಯುವಕರನ್ನು ಇಲ್ಲಿಗೆ ಕರೆದು ಬಾ. ಅವರು ಅಂಗದೋಷವಿಲ್ಲದವರಾಗಿರಬೇಕು. ಸುಂದರರು, ಸಮಸ್ತ ಶಾಸ್ತ್ರಜ್ಞರು, ಪಂಡಿತರು, ವಿದ್ಯಾನಿಪುಣರು, ರಾಜಾಲಯದಲ್ಲಿ ಸನ್ನಿಧಿಸೇವೆ ಮಾಡಲು ಸಮರ್ಥರೂ ಆಗಿರಬೇಕು. ಅವರಿಗೆ ಬಾಬಿಲೋನ್ ಪಂಡಿತರ ಭಾಷೆಗಳನ್ನೂ ಶಾಸ್ತ್ರಗಳನ್ನೂ ಕಲಿಸಬೇಕು. " ಎಂದು ಅಪ್ಪಣೆಕೊಟ್ಟನು. ಇದಲ್ಲದೆ, "ಇನ್ನುಮುಂದಕ್ಕೆ ಅವರು ಸನ್ನಿಧಿಸೇವಕರಾಗುವಂತೆ, ನನ್ನ ಭೋಜನ  ಪದಾರ್ಥಗಳನ್ನು ಹಾಗೂ ನಾನು ಕುಡಿಯುವ ದ್ರಾಕ್ಷಾರಸವನ್ನು ಅವರಿಗೆ ಪ್ರತಿದಿನ ಬಡಿಸುವ ಏರ್ಪಾಡುಮಾಡಿ ಅವರನ್ನು ಮೂರುವರ್ಷ ಪೋಷಿಸಬೇಕು" ಎಂದು ಆಜ್ಞಾಪಿಸಿದನು. ಹೀಗೆ ಆರಿಸಿಕೊಂಡ ಯುವಕರಲ್ಲಿ ದಾನಿಯೇಲನು, ಹನನ್ಯನು, ಮಿಶಾಯೇಲನು, ಅಜರ್ಯನು ಎಂಬ ಯೆಹೂದ್ಯರು ಸೇರಿದ್ದರು. ಆದರೆ ದಾನಿಯೇಲನು  ತಾನು ರಾಜನ ಭೋಜನ ಪದಾರ್ಥಗಳನ್ನು ತಿಂದು ಹಾಗೂ ರಾಜನು ಕುಡಿಯುವ ದ್ರಾಕ್ಷಾರಸವನ್ನು ಕುಡಿದು ತನ್ನನ್ನೇ ಅಶುದ್ಧ ಮಾಡಿಕೊಳ್ಳಬಾರದೆಂದು ನಿಶ್ಚಯಿಸಿಕೊಂಡನು. ಕಂಚುಕಿಯರ ನಾಯಕನಿಗೆ, "ಕ್ಷಮಿಸು, ನಾನು ಅಶುದ್ಧನಾಗಲಾರೆ," ಎಂದು  ವಿನಂತಿಸಿದನು.  ಕಂಚುಕಿಯರ ನಾಯಕನು ದಾನಿಯೇಲನ ಮೇಲೆ ಕನಿಕರ ಮತ್ತು ದಯೆ ತೋರುವಂತೆ ದೇವರು ಅನುಗ್ರಹಿಸಿದರು. ಆದುದರಿಂದ ಆ ನಾಯಕನು ದಾನಿಯೇಲನಿಗೆ, "ನಿಮಗೆ ಅನ್ನಪಾನಗಳನ್ನು ಏರ್ಪಡಿಸಿದ ನನ್ನೊಡೆಯನಾದ ರಾಜನು ನಿಮ್ಮಂತೆ ಆಯ್ಕೆಯಾದ ಯುವಕರ ಮುಖಕಿಂತ ನಿಮ್ಮ ಮುಖ ಬಾಡಿರುವುದನ್ನು ನೋಡಿ ನನ್ನ ತಲೆ ತಗ್ಗಿಸಬಹುದೆಂಬ  ಭಯ ನನಗಿದೆ. ಇದಕ್ಕೆ ನೀವು ಕಾರಣವಾಗಬಹುದಲ್ಲವೆ?" ಎಂದು ಹೇಳಿದನು. ದಾನಿಯೇಲನು ತನ್ನನ್ನೂ, ಹನನ್ಯ, ಮಿಶಾಯೇಲ, ಅಜರ್ಯ ಇವರನ್ನೂ ನೋಡಿಕೊಳ್ಳಲು ಆ ನಾಯಕನು ನೇಮಿಸಿದ್ದ ವಿಚಾರಕನ ಬಳಿಗೆ ಬಂದು, "ಅಯ್ಯಾ, ಹತ್ತು ದಿನಗಳ ಮಟ್ಟಿಗೆ ನಮ್ಮನ್ನು ಪರೀಕ್ಷಿಸಿನೋಡು. ಸೇವಕರಾದ ನಮಗೆ ಭೋಜನಕ್ಕೆ ಬದಲಾಗಿ ಕಾಯಿಪಲ್ಯ, ಪಾನಕ್ಕೆ ಬದಲಾಗಿ ನೀರು ಒದಗಿಸಿದರೆ ಸಾಕು. ಆಮೇಲೆ ನಮ್ಮ ಮುಖಗಳನ್ನೂ ರಾಜಭೋಜನ ಉಣ್ಣುವ ಮುಖಗಳನ್ನೂ ಹೋಲಿಸಿನೋಡು. ಆನಂತರ ನಿನಗೆ ತೋಚಿದ ಹಾಗೆ ನಮಗೆ ಮಾಡು," ಎಂದು ಕೇಳಿಕೊಂಡನು. ವಿಚಾರಕನು ಅವರ ಬಿನ್ನಹಕ್ಕೆ ಒಪ್ಪಿ ಹತ್ತುದಿನದವರೆಗೆ ಪರೀಕ್ಷಿಸಿದನು. ಹತ್ತು ದಿನಗಳಾದ ಮೇಲೆ ರಾಜಭೋಜನ ಉಣ್ಣುತ್ತಿದ್ದ ಎಲ್ಲ ಯುವಕರಿಗಿಂತ ಇವರು ಸುಂದರವಾಗಿಯೂ ಪುಷ್ಟರಾಗಿಯೂ ಕಾಣಿಸಿದರು. ಅಂದಿನಿಂದ ವಿಚಾರಕನು ಇವರಿಗೆ ನೇಮಕವಾದ ಭೋಜನ ಪದಾರ್ಥಗಳನ್ನೂ ಕುಡಿಯಬೇಕಾದ ದ್ರಾಕ್ಷಾರಸವನ್ನೂ ತೆಗೆದುಬಿಟ್ಟು ಕಾಯಿಪಲ್ಯಗಳನ್ನೇ ಕೊಡುತ್ತಾ ಬಂದನು. ಹೀಗಿರಲು ದೇವರು ಆ ನಾಲ್ಕು ಮಂದಿ ಯುವಕರಿಗೆ ಸಕಲ ಶಾಸ್ತ್ರಗಳಲ್ಲೂ ವಿದ್ಯೆಗಳಲ್ಲೂ ಜ್ಞಾನ ವಿವೇಕಗಳನ್ನು ದಯಪಾಲಿಸಿದರು. ದಾನಿಯೇಲನು ಸಮಸ್ತ ಸ್ವಪ್ನಗಳನ್ನೂ  ದಿವ್ಯ ದರ್ಶನಗಳನ್ನೂ ಅರ್ಥೈಸುವುದರಲ್ಲಿ ಪ್ರವಿಣನಾದನು. ರಾಜನು ನೇಮಿಸಿದ ಕಾಲವು ಕಳೆಯಿತು. ಆ ಯುವಕರನ್ನು ರಾಜಸನ್ನಿಧಿಗೆ ಕರೆದು ತರುವ ಸಮಯವು ಬಂದಿತು. ಕಂಚುಕಿಯರ ನಾಯಕ ಅವರನ್ನು ನೆಬೂಕದ್ನೆಚ್ಚರನ ಸಮ್ಮುಖಕ್ಕೆ ಕರೆದು ತಂದನು. ರಾಜನು ಅವರ ಸಂಗಡ ಮಾತಾಡುವಾಗ ಅಲ್ಲಿದ್ದ ಯುವಕರಲ್ಲೆಲ್ಲ ದಾನಿಯೇಲನಿಗೆ, ಹನನ್ಯನಿಗೆ, ಮಿಶಾಯೇಲನಿಗೆ, ಅಜರ್ಯನಿಗೆ, ಸಮಾನರು ಯಾರೂ ಕಂಡುಬರಲಿಲ್ಲ. ಆದಕಾರಣ ಆ ನಾಲ್ವರು ಸನ್ನಿಧಿ ಸೇವಕರಾದರು. ಬಳಿಕ ರಾಜನು ಶಾಸ್ತ್ರೀಯ ವಿದ್ಯೆಯ ಎಲ್ಲ ವಿಷಯಗಳಲ್ಲಿ ಅವರನ್ನು ವಿಚಾರ ಮಾಡಿದಾಗ ಸಮಸ್ತ ರಾಜ್ಯದಲ್ಲಿನ ಎಲ್ಲ ಜೋಯಿಸರಿಗಿಂತಲೂ ಮಂತ್ರವಾದಿಗಳಿಗಿಂತಲೂ ಹತ್ತರಷ್ಟು ನಿಪುಣರಾಗಿ ಕಂಡುಬಂದರು. 

ಅಜರ್ಯ: 1:29-33 
ಶ್ಲೋಕ: ಸರ್ವೇಶ್ವರಾ, ನೀವು ಪರಮಪೂಜ್ಯರು, ಎಂದೆಂದಿಗೂ ಮಹೋನ್ನತರು 

ಶುಭಸಂದೇಶ: ಲೂಕ 21:1-4 

"ಒಬ್ಬ ಬಡ ವಿಧವೆ ತಾಮ್ರದ ಚಿಕ್ಕ ನಾಣ್ಯಗಳೆರಡನ್ನು  ಕಾಣಿಕೆಯಾಗಿ ಹಾಕುವುದನ್ನು ಯೇಸು ಕಂಡರು. "ದೇವಾಲಯದ ಕಾಣಿಕೆಯ ಪೆಟ್ಟಿಗೆಯಲ್ಲಿ ಧನವಂತರು ತಮ್ಮ ಕಾಣಿಕೆಗಳನ್ನು ಹಾಕುತ್ತಿದ್ದುದನ್ನು ಯೇಸುಸ್ವಾಮಿ ಗಮನಿಸಿದರು. ಅಷ್ಟರಲ್ಲಿ ಒಬ್ಬ ಬಡ ವಿಧವೆ ಅಲ್ಲಿಗೆ ಬಂದು, ತಾಮ್ರದ ಚಿಕ್ಕ ನಾಣ್ಯಗಳೆರಡನ್ನು ಕಾಣಿಕೆಯಾಗಿ ಹಾಕಿದಳು. ಅದನ್ನು ಕಂಡ ಯೇಸು, "ಈ ಬಡ ವಿಧವೆ ಅವರೆಲ್ಲರಿಗಿಂತಲೂ ಹೆಚ್ಚಾಗಿ ಅರ್ಪಿಸಿದಳೆಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ. ಅವರೆಲ್ಲರು ತಮ್ಮ ಅಪರಿಮಿತ ಐಶ್ವರ್ಯದಿಂದ ಕಾಣಿಕೆಯಿತ್ತರು; ಈಕೆಯಾದರೋ, ತನ್ನ ಕಡುಬಡತನದಲ್ಲೂ ತನಗಿದ್ದ ಜೀವನಾಧಾರವನ್ನೆಲ್ಲಾ ಕೊಟ್ಟುಬಿಟ್ಟಳು," ಎಂದರು.

24.11.2019 - "ಇಂದೇ ನೀನು ನನ್ನೊಡನೆ ಪರಂಧಾಮದಲ್ಲಿರುವೆ"

ಮೊದಲನೇ ವಾಚನ: 2ಸಮುವೇಲ 5:1-3 


ಇಸ್ರಯೇಲರ ಎಲ್ಲ ಕುಲಗಳವರು ಹೆಬ್ರೋನಿನಲ್ಲಿದ್ದ ದಾವೀದನ ಬಳಿಗೆ ಬಂದರು. "ನಾವು ನಿಮ್ಮ ರಕ್ತಸಂಬಂಧಿಗಳು; ಹಿಂದಿನ ದಿವಸಗಳಲ್ಲಿ, ಅಂದರೆ ಸೌಲನ ಆಳ್ವಿಕೆಯಲ್ಲಿ, ಇಸ್ರಯೇಲರ ದಳಪತಿಯಾಗಿ ಹೋಗುತ್ತಾ ಬರುತ್ತಾ ಇದ್ದವರು ನೀವೇ. ನಿಮ್ಮನ್ನು ಕುರಿತು ಸರ್ವೇಶ್ವರಸ್ವಾಮಿ, "ನೀನು ನನ್ನ ಪ್ರಜೆಗಳಾದ ಇಸ್ರಯೇಲರ ನಾಯಕನೂ ಪಾಲಕನೂ ಆಗಿರುವೆ," ಎಂದು ವಾಗ್ದಾನ ಮಾಡಿದ್ದಾರೆ," ಎಂದರು. ಹೆಬ್ರೋನಿನಲ್ಲಿದ್ದ ಅರಸ ದಾವೀದನು ತನ್ನ ಬಳಿಗೆ ಬಂದಿದ್ದ ಇಸ್ರಯೇಲರ ಹಿರಿಯರೊಡನೆ ಅಲ್ಲೇ ಸರ್ವೇಶ್ವರನ ಸನ್ನಿಧಿಯಲ್ಲಿ ಒಪ್ಪಂದ ಮಾಡಿಕೊಂಡನು. ಅವರು ದಾವೀದನನ್ನು ಅಭಿಷೇಕಿಸಿ ಇಸ್ರಯೇಲರ ಅರಸನನ್ನಾಗಿ ಮಾಡಿದರು.


ಕೀರ್ತನೆ: 122:1-2, 3-5 

ಶ್ಲೋಕ: ಪ್ರಭುವಿನಾಲಯಕೆ ಹೋಗೋಣ ಬಾ ಎಂದಾಗ, ಆಯಿತೆನಗೆ ಆನಂದ 

ಎರಡನೇ ವಾಚನ: ಕೊಲೊಸ್ಸೆಯರಿಗೆ 1:11-20 

ಸಹೋದರರೇ, ದೇವರ ಮಹಿಮಾಶಕ್ತಿಯಿಂದ ನೀವು ಬಲಗೊಂಡು ಎಲ್ಲವನ್ನೂ ತಾಳ್ಮೆಯಿಂದಲೂ ಸಮಾಧಾನದಿಂದಲೂ ಸಹಿಸಿಕೊಳ್ಳುವಿರಿ. ಪಿತನಿಗೆ ಹರ್ಷದಿಂದ ಕೃತಜ್ಞತಾಸ್ತುತಿ ಸಲ್ಲಿಸುವಿರಿ. ಏಕೆಂದರೆ, ಬೆಳಕಿನಲ್ಲಿರುವ ದೇವಜನರಿಗೆ ಕಾಯ್ದಿರಿಸಿರುವ ಸ್ವಾಸ್ಥ್ಯದಲ್ಲಿ ಪಾಲುಗಾರರಾಗಲು ನಿಮ್ಮನ್ನು ಯೋಗ್ಯರನ್ನಾಗಿ ಅವರು ಮಾಡಿದ್ದಾರೆ. ದೇವರು ನಮ್ಮನ್ನು ಅಂಧಕಾರದ ಆಡಳಿತದಿಂದ ಬಿಡುಗಡೆಮಾಡಿ ತಮ್ಮ ಪುತ್ರನ ಸಾಮ್ರಾಜ್ಯಕ್ಕೆ ಸುರಕ್ಷಿತವಾಗಿ ತಂದಿದ್ದಾರೆ. ಈ ಪುತ್ರನಲ್ಲಿ ನಮಗೆ ಪಾಪಕ್ಷಮೆ ದೊರಕಿದೆ, ವಿಮಾಚನೆ ಲಭಿಸಿದೆ. ಅದೃಶ್ಯ ದೇವನ ಸದೃಶ್ಯರೂಪನು ಕ್ರಿಸ್ತ, ಸೃಷ್ಟಿಗೆಲ್ಲ ಜೇಷ್ಠಪುತ್ರನಾತ. ಇರಲಿ ಇಹದಲಿ, ಅಶರೀರ ಒಡೆಯರಾಗಲಿ, ಒಡೆತನವಾಗಲಿ, ಅಧಿಕಾರಿಗಳಾಗಲಿ, ಅಧಿಪತ್ಯವಾಗಿರಲಿ, ಅದುದೆಲ್ಲವೂ ಆತನಲಿ. ಆತನಿಂದ, ಆತನಿಗಾಗಿ. ಎಲ್ಲಕ್ಕೂ ಮೊದಲೇ ಇರುವನಾತ, ಸಮಸ್ತಕ್ಕೂ ಆಧಾರಭೂತ. ಸಭೆಯೆಂಬ ಶರೀರಕ್ಕೆ ಶಿರಸ್ಸಾತ, ಆದಿಸಂಭೂತ, ಅಗಲೆಲ್ಲದರಲ್ಲೂ ಅಗ್ರಸ್ಥ, ಸತ್ತವರಿಂದ ಮೊದಲೆದ್ದು ಬಂದನಾತ. ಆ ಸುತನಲ್ಲೇ ಇರಿಸಲು ನಿರ್ಧರಿಸಿದನು ಪಿತದೇವ ತನ್ನ ಸರ್ವ ಸಂಪೂರ್ಣತೆಯನು. ಶಿಲುಬೆಯಿಂದಾತ ಹರಿಸಿದ ರಕುತದಿಂದ ಆಗುತಲಿದೆ ಶಾಂತಿಸಮಾಧಾನ, ನಡೆದಿದೆ ದೇವರೊಡನೆ ಸಂಧಾನ, ಇಹಪರಗಳೆಲ್ಲಕ್ಕೂ ಆತನ ಮುಖೇನ. 

ಶುಭಸಂದೇಶ: ಲೂಕ 23:35-43 


ಶಿಲುಬೆಗೇರಿಸಿದ ಯೇಸುವನ್ನು ಜನರು ನೋಡುತ್ತಾ ನಿಂತಿದ್ದರು. ಅಲ್ಲಿದ್ದ ಮುಖಂಡರು ಯೇಸುವನ್ನು ಮೂದಲಿಸುತ್ತಾ, "ಇವನು ಇತರರನ್ನು ರಕ್ಷಿಸಿದ; ಇವನು ದೇವರಿಂದಲೇ ಅಭಿಷಿಕ್ತನಾದ ಲೋಕೋದ್ಧಾರಕನು ಮತ್ತು ಅವರಿಂದಲೇ ಆಯ್ಕೆಯಾದವನು ಆಗಿದ್ದರೆ ತನ್ನನ್ನು ತಾನೇ ರಕ್ಷಿಸಿಕೊಳ್ಳಲಿ," ಎಂದರು. ಸೈನಿಕರು ಮುಂದೆ ಬಂದು ಹುಳಿರಸವನ್ನು ಅವರತ್ತ ಒಡ್ಡಿ, "ನೀನು ಯೆಹೂದ್ಯರ ಅರಸನಾಗಿದ್ದರೆ ನಿನ್ನನ್ನು ನೀನೇ ರಕ್ಷಿಸಿಕೊ," ಎಂದು ಅಣುಕಿಸುತ್ತಿದ್ದರು. ಯೇಸುವಿನ ಶಿಲುಬೆಯ ಮೇಲ್ಗಡೆ,  " ಇವನು ಯೆಹೂದ್ಯರ ಅರಸ" ಎಂಬ  ಲಿಖಿತವಿತ್ತು. ತೂಗುಹಾಕಿದ್ದ ಅಪರಾಧಿಗಳಲ್ಲಿ ಒಬ್ಬನು, "ನೀನು ಕ್ರಿಸ್ತ ಅಲ್ಲವೆ? ಹಾಗಾದರೆ ನಿನ್ನನ್ನು ನೀನೇ ರಕ್ಷಿಸಿಕೋ , ನಮ್ಮನ್ನೂ ರಕ್ಷಿಸು," ಎಂದು ಹಂಗಿಸಿದನು. ಆದರೆ ಮತ್ತೊಬ್ಬ ಅಪರಾಧಿ ಅವನನ್ನು ಖಂಡಿಸುತ್ತಾ, "ನಿನಗೇ ದೇವರ ಭಯಬೇಡವೆ? ನೀನು ಸಹ ಇದೇ ಶಿಕ್ಷೆಗೆ ಗುರಿಯಾಗಿರುವೆ, ನಮಗೇನೋ ಶಿಕ್ಷೆ ನ್ಯಾಯವಾಗಿದೆ. ನಮ್ಮ ಕೃತ್ಯಕ್ಕೆ ತಕ್ಕ ಫಲ ಸಿಕ್ಕಿದೆ; ಇವರಾದರೋ, ನಿರಪರಾಧಿ!" ಎಂದನು. ಬಳಿಕ ಅವನು, "ಸ್ವಾಮಿ ಯೇಸುವೇ, ನೀವು ರಾಜ್ಯಾಧಿಕಾರದೊಡನೆ ಬರುವಾಗ ನನ್ನನ್ನು ಜ್ಞಾಪಿಸಿಕೊಳ್ಳಿ," ಎಂದು ಬೇಡಿಕೊಂಡನು. ಅವನಿಗೆ ಯೇಸು, "ಇಂದೇ ನೀನು ನನ್ನೊಡನೆ ಪರಂಧಾಮದಲ್ಲಿರುವೆ ಎಂದು ನಿಶ್ಚಯವಾಗಿ ಹೇಳುತ್ತೇನೆ," ಎಂದರು.

23.11.2019

ಮೊದಲನೇ ವಾಚನ: 1 ಮಕ್ಕಬಿಯರು  6:1-13 

ಅರಸ ಅಂತಿಯೋಕನು ಮೆಸಪಟೋಮಿಯದಲ್ಲಿ ಸಂಚಾರಮಾಡುತ್ತಿದ್ದನು. ಪರ್ಷಿಯಾದಲ್ಲಿದ್ದ ಎಲಿಮ ಎಂಬಲ್ಲಿ ಒಂದು ಊರು ಸಿರಿಸಂಪತ್ತು, ಬೆಳ್ಳಿಬಂಗಾರಗಳಿಗೆ ಹೆಸರಾಗಿದೆ. ಅಲ್ಲಿದ್ದ ಒಂದು ದೇವಾಲಯ ಅಪಾರ ನಿಧಿಯುಳ್ಳದ್ದಾಗಿದೆ, ಮೊದಲು ಗ್ರೀಸ್ ದೇಶವನ್ನು  ಆಳುತ್ತಿದ್ದ ಮ್ಯಾಸಿಡೋನಿಯದ ಅರಸ ಫಿಲಿಪ್ಪನ ಮಗ ಅಲೆಕ್ಸಾಂಡರನು ಬಿಟ್ಟುಹೋಗಿದ್ದ ಚಿನ್ನದ ಡಾಲೂ ಕವಚಗಳೂ ಅದರಲ್ಲಿಯೇ ಇವೆ ಎಂಬ ಸಮಾಚಾರವನ್ನು ಅವನು ಕೇಳಿದನು. ಆ ಊರನ್ನು ಹಿಡಿದುಕೊಂಡು ಸುಲಿಗೆ ಮಾಡಬೇಕೆಂಬ ಹವಣಿಕೆಯಿಂದ ಅಲ್ಲಿಗೆ ಬಂದನು. ಆದರೆ ಅವನಿಗೆ ಅದು ಸಾಧ್ಯವಾಗಲಿಲ್ಲ. ಏಕೆಂದರೆ ಈ ಸುದ್ದಿ ಆ ಊರೊಳಗಿದ್ದ ಜನರಿಗೆ ಮುಟ್ಟಲು ಅವರು ಅವನ ಸಂಗಡ ಯುದ್ಧಮಾಡಿದರು. ಅವನು ಬಹುವ್ಯಸನಕ್ರಾಂತನಾಗಿ ಅಲ್ಲಿಂದ ಕಾಲುಕಿತ್ತು, ಬಾಬಿಲೋನಿಗೆ ಹಿಂದಿರುಗಿದನು. ಇದಲ್ಲದೆ ಅಂತಿಯೋಕನು ಪರ್ಷಿಯದಲ್ಲಿದ್ದಾಗ ಒಬ್ಬನು ಬಂದು. ಅವನಿಗೆ ಹೀಗೆಂದು ವರದಿಮಾಡಿದನು. "ಜುದೇಯದ ವಿರುದ್ಧ ಹೋಗಿದ್ದ ಸೈನ್ಯವೆಲ್ಲಾ ಹಿಂದೂಡಲ್ಪಟ್ಟಿತು. ಮಾದಲು ಅಪಾರ ಬಲದೊಂದಿಗೆ ಹೋದ ಲುಸ್ಯನು ನಾಚಿಕೆಗೀಡಾಗಿ ಹಿದಿರುಗಿದನು. ಅವನ ಸೈನ್ಯದವರು ಬಿಟ್ಟುಹೋಗಿದ್ದ ಎಲ್ಲವನ್ನು ಜುದೇಯದವರು ದೋಚಿಕೊಂಡು ಹೋದರು. ಆದುದರಿಂದ ಈಗ ಅವರು ಶಸ್ತ್ರಾಸ್ತ್ರಗಳುಳ್ಳವರಾಗಿ ಪರಾಕ್ರಮದ ವಿಷಯಗಳಲ್ಲಿ ಯಾವ ಕೊರತೆಯೂ ಇಲ್ಲದೆ ಬಲಾಧ್ಯರಾಗಿದ್ದಾರೆ. ಜೆರುಸಲೇಮಿನಲ್ಲಿದ್ದ ಬಲಿಪೀಠದ ಮೇಲೆ ನೀವು ಕಟ್ಟಿಸಿದ್ದ "ವಿನಾಶಕರ ವಿಕಟಮೂರ್ತಿ"ಯನ್ನು ಕೆಡವಿ ಹಾಕಿದ್ದಾರೆ. ದೇವಾಲಯದ ಸುತ್ತಲೂ ಮೊದಲಿನಂತೆ ಎತ್ತರವಾದ ಗೋಡೆಗಳನ್ನು ಕಟ್ಟಿಸಿದ್ದಾರೆ. ನಿಮಗೆ ಸೇರಿದ ಬೆತ್ಸೂರ ಊರನ್ನು ಭದ್ರಗೊಳಿಸಿದ್ದಾರೆ," ಎಂದರು. ಅರಸನು ಈ ಸುದ್ದಿಯನ್ನು ಕೇಳಿ ಆಶ್ಚರ್ಯ ಚಕಿತನಾದನು. ಹಾಗು ಬಹು ಖಿನ್ನನಾದನು. ತಾನು ಹಾರೈಸಿದಂತೆ ಆಗದಿದ್ದುದನ್ನು ಕಂಡು ದುಃಖಕ್ರಾಂತನಾಗಿ ನೊಂದು, ಹಾಸಿಗೆ ಹಿಡಿದನು. ಅವನು ಬಹು ದುಃಖಿತನಾಗಿ ಇನ್ನು ಸಾಯುವುದೇ ಲೇಸೆಂದೆಣಿಸಿ ಅಲ್ಲಿಯೇ ಬಹುದಿನದವರೆಗೆ ನಿಂತುಬಿಟ್ಟನು. ತನ್ನ ಸ್ನೇಹಿತರನ್ನು ಅಲ್ಲಿಗೆ ಕರೆಸಿಕೊಂಡನು. ಅವರಿಗೆ, "ನನ್ನ ಕಣ್ಣಿಗೆ ನಿದ್ರೆಯಿಲ್ಲ; ಚಿಂತೆಯಿಂದ ನನ್ನ ಅಂತರಂಗವು ಕುಂದಿಹೋಗಿದೆ. ನಾನು ನನ್ನ ಅಧಿಕಾರದಲ್ಲಿ ಮೆರೆಯುತ್ತಿದ್ದಾಗ ಜನೋಪಕಾರಿಯೂ ಪ್ರೀತಿಪಾತ್ರನೂ ಆಗಿದ್ದೆ; ಆದರೆ ಈಗ ಎಂತಹ ವಿಪತ್ತಿಗೆ ನಾನು ಗುರಿಯಾದೆ; ಎಂತಹ ಮಹಾ ಪ್ರವಾಹದಲ್ಲಿ ನಾನೀಗ ಸಿಕ್ಕಿಬಿದ್ದಿದ್ದೇನೆ! ಜೆರುಸಲೇಮಿನಲ್ಲಿ ನಾನು ನಡೆಸಿದ ಅತ್ಯಾಚಾರಗಳ ಸ್ಮರಣೆ ನನಗೀಗ ಬರುತ್ತಿದೆ. ಅಲ್ಲಿದ್ದ ಬೆಳ್ಳಿ ಬಂಗಾರದ ಪಾತ್ರೆಗಳನ್ನೆಲ್ಲ ನಾನು ಅಪಹರಿಸಿದೆ. ಕಾರಣವಿಲ್ಲದೆ ಜುದೇಯದ ನಿವಾಸಿಗಳನ್ನು ನಾಶಮಾಡುವುದಕ್ಕೆ ಜನರನ್ನು ಕಳುಹಿಸಿದೆ. ಈ ಕಾರಣದಿಂದಲೇ, ಈಗ ನನ್ನ ಮೇಲೆ ಈ ವಿಪತ್ತು ಬಂದಿದೆ. ಎಂದು ನನಗೀಗ ಗೊತ್ತಾಯಿತು ಅದುದರಿಂದಲೇ ನಾನೀಗ ಚಿಂತಾನುತಾಪದಿಂದ ಪರದೇಶದಲ್ಲಿ ಸಾಯುತ್ತಿದ್ದೇನೆ", ಎಂದು ಹೇಳಿದನು. 

ಕೀರ್ತನೆ: 9:1-3, 5, 16, 18 
ಶ್ಲೋಕ: ಪ್ರಭೂ, ನೀನಿತ್ತ ಮುಕ್ತಿಗಾಗಾ ಆನಂದಗೊಳ್ಳುವೆನು 

ಶುಭಸಂದೇಶ: ಲೂಕ 20:27-40 

ಸತ್ತಮೇಲೆ ಪುನರುತ್ಥಾನ ಇಲ್ಲ ಎಂದು ವಾದಿಸುತ್ತಿದ್ದ ಸದ್ದುಕಾಯರಲ್ಲಿ ಕೆಲವರು ಯೇಸುಸ್ವಾಮಿಯ ಬಳಿಗೆ ಬಂದು ಈ ಪ್ರಶ್ನೆಹಾಕಿದರು: "ಬೋಧಕರೇ, "ಒಬ್ಬನು ಮಕ್ಕಳಿಲ್ಲದೆ ಸತ್ತರೆ, ಅವನ ಹೆಂಡತಿಯನ್ನು ಅವನ ತಮ್ಮನು ಮದುವೆ ಮಾಡಿಕೊಂಡು ಅಣ್ಣನಿಗೆ ಸಂತಾನ ಪಡೆಯಬೇಕು," ಎಂದು ಮೋಶೆ ನಮಗಾಗಿ ಬರೆದಿಟ್ಟಿದ್ದಾನಲ್ಲವೆ? ಒಮ್ಮೆ ಏಳುಮಂದಿ ಅಣ್ಣತಮ್ಮಂದಿರಿದ್ದರು. ಅವರಲ್ಲಿ ಮೊದಲನೆಯವನಿಗೆ ಮದುವೆಯಾಯಿತು; ಆದರೆ ಅವನು ಮಕ್ಕಳಿಲ್ಲದೆ ಮೃತನಾದ. ಅವನ ಹೆಂಡತಿಯನ್ನು ಎರಡನೆಯವನು, ಅನಂತರ ಮೂರನೆಯವನು, ತದನಂತರ ಮಿಕ್ಕವರು, ಹೀಗೆ ಏಳು ಮಂದಿಯೂ ಒಬ್ಬರಾದ ಮೇಲೆ ಒಬ್ಬರು ಮದುವೆಯಾಗಿ ಸಂತಾನ ಇಲ್ಲದೆಯೇ ನಿಧನರಾದರು. ಕಟ್ಟಕಡೆಗೆ ಆ ಮಹಿಳೆಯೂ  ಮರಣ ಹೊಂದಿದಳು. ಹೀಗಿರುವಲ್ಲಿ ಪುನರುತ್ಥಾನದ  ದಿನ ಸತ್ತವರೆಲ್ಲರೂ ಜೀವದಿಂದ ಎದ್ದುಬರುವಾಗ, ಆಕೆ ಯಾರ ಪತ್ನಿಯಾಗುವಳು? ಏಳೂ ಮಂದಿ ಸಹೋದರರೂ ಆಕೆಯನ್ನು ವಿವಾಹ ಆಗಿದ್ದಾರಲ್ಲವೆ?" ಎಂದರು. ಅದಕ್ಕೆ ಯೇಸು, " ಈ ಲೋಕದ ಜೀವನದಲ್ಲಿ ಜನರು ಮದುವೆ ಮಾಡಿಕೊಳ್ಳುತ್ತಾರೆ, ಮದುವೆ ಮಾಡಿಕೊಡುತ್ತಾರೆ. ಅದರೆ ಸತ್ತವರು ಪುನರುತ್ಥಾನ ಹೊಂದಿ ಮರುಲೋಕ ಜೀವನಕ್ಕೆ ಯೋಗ್ಯರಾದಾಗ ಮದುವೆ ಮಾಡಿಕೊಳ್ಳುವುದೂ ಇಲ್ಲ, ಮದುವೆ ಮಾಡಿಕೊಡುವುದೂ ಇಲ್ಲ. ಅವರು ಅಲ್ಲಿ ದೇವದೂತರಿಗೆ ಸಮಾನರಾಗಿರುವರು; ಅವರು ಎಂದಿಗೂ ಸಾಯುವಂತಿಲ್ಲ; ಪುನರುತ್ಥಾನದ  ಫಲವಾಗಿರುವ ಅವರು ದೇವರ ಮಕ್ಕಳಾಗಿರುವರು. ಸತ್ತವರು ಪುನರುತ್ಥಾನ ಹೊಂದುವುದನ್ನು ಮೋಶೆಯ ಗ್ರಂಥದಲ್ಲಿ, ಅಂದರೆ "ಉರಿಯುವ ಪೊದೆ"ಯ ಪ್ರಸ್ತಾಪವಿರುವ ಭಾಗದಲ್ಲಿ ಸ್ವಷ್ಟಪಡಿಸಲಾಗಿದೆ. ಅಲ್ಲಿ ಸರ್ವೇಶ್ವರನನ್ನು, "ಅಬ್ರಹಾಮನ ದೇವರು, ಇಸಾಕನ ದೇವರು, ಯಕೋಬನ ದೇವರು ಆಗಿದ್ದಾರೆ" ಎಂದು ಹೇಳಲಾಗಿದೆ. ಹೀಗಿರುವಲ್ಲಿ ದೇವರು ಜೀವಂತರ ದೇವರೇ ಹೊರತು ಮೃತರ ದೇವರಲ್ಲ; ಅವರ ದೃಷ್ಟಿಯಲ್ಲಿ ಸರ್ವರೂ ಜೀವಂತರು," ಎಂದರು. ಇದನ್ನು ಕೇಳಿದ ಕೆಲವು ಧರ್ಮಶಾಸ್ತ್ರಿಗಳು, "ಬೋಧಕರೇ, ಚೆನ್ನಾಗಿ ಹೇಳಿದಿರಿ," ಎಂದರು. ಮುಂದೆ ಯಾವ ಪ್ರಶ್ನೆ ಕೇಳುವುದಕ್ಕೂ ಅವರಾರು ಧೈರ್ಯಗೊಳ್ಳಲಿಲ್ಲ.

22.11.2019

ಮೊದಲನೇ ವಾಚನ: 1 ಮಕ್ಕಬಿಯರು 4:36-37, 52-59 

ಇತ್ತ ಯೂದನು ಅವನ ಬಂಧುಗಳೂ, "ನಮ್ಮ ಶತ್ರುಗಳಂತೂ ಸೋತುಹೋದರು; ನಾವಿನ್ನು ಪವಿತ್ರಾಲಯವನ್ನು ಶುಚಿಮಾಡುವುದಕ್ಕೆ ಹೋಗೋಣ; ಅದನ್ನು ಹೊಸದಾಗಿ ಪ್ರತಿಷ್ಠಿಸೋಣ," ಎಂದುಕೊಂಡರು. ಸೈನ್ಯವೆಲ್ಲಾ ಮರಳಿ ಕೂಡಿಬರಲು, ಅವರೆಲ್ಲರು ಸಿಯೋನ್ ಗಿರಿಗೆ ಹೋದರು. ಅವರು 148ನೇ ವರ್ಷದ ಒಂಭತ್ತನೆಯ ತಿಂಗಳಾದ ಮಾರ್ಗಶಿರ ಮಾಸದ ಇಪ್ಪತ್ತೈದನೆಯ ದಿವಸ ನಸುಕಿನಲ್ಲಿಯೇ ಎದ್ದು ತಾವು ಹೊಸದಾಗಿ ರಚಿಸಿದ್ದ ದಹನಬಲಿಪೀಠದ ಮೇಲೆ ಧರ್ಮಶಾಸ್ತ್ರಕ್ಕೆ ಸರಿಯಾಗಿ ಬಲಿಯನ್ನು ಅರ್ಪಿಸಿದರು. ಯಾವ ದಿನ ಮತ್ತು ಯಾವ ಗಳಿಗೆಯಲ್ಲಿ ಅನ್ಯರು ಅದನ್ನು ಹೊಲೆಮಾಡಿದ್ದರೋ ಅದೇ ದಿನದ ಗಾಯನ, ವೀಣೆ, ಕಿನ್ನರಿ, ತಾಳಗಳ ಸಂಭ್ರಮದಿಂದ ಅದನ್ನು ಹೊಸದಾಗಿ ಪ್ರತಿಷ್ಠಿಸಿದರು. ಜನರೆಲ್ಲರು ಬೋರಲು ಬಿದ್ದು, ತಮಗೆ ಜಯವನ್ನು ಕೊಟ್ಟ ದೇಶರನ್ನು ಕೊಂಡಾಡಿ ಆರಾಧಿಸಿದರು. ಬಲಿಪೀಠದ ಪ್ರತಿಷ್ಠೆಯ ಹಬ್ಬವನ್ನು ಎಂಟು ದಿನಗಳವರೆಗೆ ಆಚರಿಸಿದರು. ಉಲ್ಲಾಸದಿಂದ ದಹನಬಲಿಗಳನ್ನು ಅರ್ಪಿಸಿದರು.  ವಿಮೋಚನಾ ಮತ್ತು ಕೃತಜ್ಞತಾಸ್ತುತಿಯ ಬಲಿಯನ್ನು ಅರ್ಪಿಸಿದರು ದೇವಾಲಯದ ಮುಂಭಾಗವನ್ನು ಚಿನ್ನದ ಮುಕುಟಗಳಿಂದಲೂ ಸಣ್ಣ ಸಣ್ಣ ಗುಬುಟುಗಳಿಂದಲೂ ಶೃಂಗರಿಸಿ, ಅದರ ಮಹಾದ್ವಾರಗಳನ್ನೂ ಯಾಜಕರ ಕೋಣೆಗಳನ್ನೂ ಪ್ರತಿಷ್ಠಿಸಿ, ಅವುಗಳಿಗೆ ಕದಗಳನ್ನು ಹಚ್ಚಿದರು. ಜನರಲ್ಲಿ ಉತ್ಸಾಹವು ತುಂಬಿತು; ಅನ್ಯ ಜನರಿಂದಾಗಿದ್ದ ಅಪಮಾನವು ದೂರವಾಯಿತು.  ತರುವಾಯ ಯೂದನು, ಅವನ ಬಂಧುಗಳು ಹಾಗು ಇಸ್ರಯೇಲರ ಸಭೆಯೆಲ್ಲವು ಕೂಡಿ, ಬಲಿಪಿಠದ ಪ್ರತಿಷ್ಠಿಯ ದಿನಗಳನ್ನು ಪ್ರತಿವರ್ಷ ಇದೇ ಕಾಲದಲ್ಲಿ ಅಂದರೆ, ಮಾರ್ಗಶಿರ ಮಾಸದ ಇಪ್ಪತ್ತೈದನೆಯ ದಿವಸದಿಂದ ಎಂಟು ದಿನಗಳವರೆಗೆ ಅತಿ ಸಂಭ್ರಮ ಸಂತೋಷದಿಂದ ಆಚರಿಸಬೇಕೆಂದು ಗೊತ್ತುಮಾಡಿದರು. 

1 ಪೂ. ವೃ; 29:10, 11-12 
ಶ್ಲೋಕ: ಹೇ ದೇವಾ, ಹಾಡುವೆವು ಕೀರ್ತನೆ ನಿನ್ನ ನಾಮ ಪ್ರತಿಭೆಗೆ 

ಶುಭಸಂದೇಶ: ಲೂಕ 19:45-48 

ಯೇಸುಸ್ವಾಮಿ ಮಹಾದೇವಾಲಯವನ್ನು ಪ್ರವೇಶಿಸಿದರು. ಅಲ್ಲಿ ಮಾರಾಟ ಮಾಡುತ್ತಿದ್ದವರನ್ನು ಹೊರಗಟ್ಟುತ್ತಾ, "ಪ್ರಾರ್ಥನಾಲಯವೀ ನನ್ನ ಆಲಯ!" ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ; ನೀವಾದರೋ ಇದನ್ನು ಕಳ್ಳಕಾಕರ ಗುಹೆಯನ್ನಾಗಿ ಮಾರ್ಪಡಿಸಿದ್ದೀರಿ," ಎಂದರು. ಪ್ರತಿನಿತ್ಯ ಯೇಸು ದೇವಾಲಯದಲ್ಲಿ ಬೋಧಿಸುತ್ತಿದ್ದರು," ಇತ್ತ ಮುಖ್ಯ ಯಾಜಕರೂ ಧರ್ಮಶಾಸ್ತ್ರಿಗಳೂ ಪ್ರಜಾಪ್ರಮುಖರೂ ಅವರನ್ನು ಕೊಲೆಮಾಡಲು ಹವಣಿಸುತ್ತಿದ್ದರು. ಆದರೆ ಅವರಿಂದ ಏನೂ ಮಾಡಲಾಗಲಿಲ್ಲ. ಏಕೆಂದರೆ, ಜನರೆಲ್ಲರೂ ಯೇಸುವಿನ ಬೋಧನೆಗೆ ಮಾರುಹೋಗಿದ್ದರು. ಅವರ ಬಾಯಿಂದ ಬಂದ ಒಂದೊಂದು ಮಾತನ್ನು ಕೇಳಲು ಆತುರರಾಗಿದ್ದರು.

21.11.2019

ಮೊದಲನೇ ವಾಚನ: 1 ಮಕ್ಕಬಿಯರು 2:15-29 

ಧರ್ಮ ವಿರೋಧ ಕಾರ್ಯಗಳಲ್ಲಿ ತೊಡಗಿದ್ದ ಅರಸನ ಅಧಿಕಾರಿಗಳು ಯಜ್ಞ ಅರ್ಪಿಸುವುದಕ್ಕಾಗಿ ಮೋದೀನ್ ಊರಿಗೆ ಬಂದರು. ಅನೇಕ ಜನ ಇಸ್ರಯೇಲರು ಅದೇ ಎಡೆಗೆ ಬಂದರು.  ಮತ್ತಾತಿಯನು ಅವನ ಮಕ್ಕಳೂ ಅಲ್ಲಿಗೆ ಬಂದರು. ಅರಸನ ಅಧಿಕಾರಿಗಳು ಮತ್ತಾತಿಯನನ್ನು ಉದ್ದೇಶಿಸಿ, "ನೀನು ಈ ಊರಿಗೆ ಮುಖ್ಯಸ್ಥ, ಸನ್ಮಾನಿತ ಹಾಗು ಹಿರಿಯವನು. ನಿನ್ನ ಮಕ್ಕಳ ಹಾಗೂ ಬಂಧು ಬಳಗದವರ ಬೆಂಬಲ ನಿನಗಿದೆ. ಆದುದರಿಂದ ನೀನೇ ಮುಂದಾಳಾಗಿ ನಿಂತು, ಎಲ್ಲ ಜನಾಂಗದವರು ಜುದೇಯದ ನಿವಾಸಿಗಳು ಹಾಗು ಜೆರುಸಲೇಮಿನಲ್ಲಿ ಉಳಿದಿರುವವರು ಮಾಡಿದಂತೆ, ಅರಸನ ಅಪ್ಪಣೆಯ ಮೇರೆಗೆ ನಡೆದುಕೊ; ಆಗ ನೀನು ನಿನ್ನ ಮನೆಯವರೂ ಅರಸನ ಮಿತ್ರರೆಂದು ಪರಿಗಣಿತರಾಗುವಿರಿ; ನಿನಗೂ ನಿನ್ನ ಮಕ್ಕಳಿಗೂ ಬೆಳ್ಳಿ , ಬಂಗಾರ ಮತ್ತಿತರ ಸಂಭಾವನೆಗಳನ್ನು  ಗೌರವಾರ್ಥವಾಗಿ ಕೊಡಲಾಗುವುದು," ಎಂದು ಹೇಳಿದರು. ಆಗ ಮತ್ತಾತಿಯನು ಉದ್ವೇಗದಿಂದ, "ಅರಸನ ಸಾಮ್ರಾಜ್ಯದಲ್ಲಿರುವ ಎಲ್ಲ ಜನಾಂಗಗಳು ಬೇಕಾದರೆ ಆತನ ಮಾತನ್ನು ಕೇಳಲಿ; ಪ್ರತಿಯೊಬ್ಬನು ತನ್ನ ಪೂರ್ವಜರ ಪೂಜಾಕ್ರಮಗಳನ್ನು ತೊರೆದು, ಅರಸನ ಆಜ್ಞೆಯ ಮೇರೆಗೆ ಬೇಕಾದರೆ ನಡೆಯಲಿ; ಆದರೆ ನಾನು, ನನ್ನ ಮಕ್ಕಳು, ನನ್ನ ಬಂಧುಬಳಗದವರು ನಮ್ಮ ಪಿತ್ರುಗಳ ಒಡಂಬಡಿಕೆಯ ಪ್ರಕಾರವೇ ನಡೆಯುತ್ತೇವೆ. ಧರ್ಮಶಾಸ್ತ್ರದ ನಿಬಂಧನೆಗಳನ್ನು ನಾವು ಉಲ್ಲಂಘಿಸಲಾರೆವು. ಇಲ್ಲ, ಎಂದಿಗೂ ಇಲ್ಲ; ಅರಸನ ಮಾತನ್ನು ಕೇಳಿ, ನಾವು ನಮ್ಮ ಆರಾಧನಾ ವಿಧಿಗಳನ್ನು ಬಿಟ್ಟು ಎಡಕ್ಕಾಗಲಿ, ಬಲಕ್ಕಾಗಲಿ ಹೋಗುವುದಿಲ್ಲ," ಎಂದು ಗಟ್ಟಿಯಾಗಿ ಹೇಳಿದನು. ಅವನು ಈ ಮಾತುಗಳನ್ನಾಡಿ ಮುಗಿಸುವಷ್ಟರಲ್ಲಿ ಒಬ್ಬ ಯೆಹೂದ್ಯನು, ಮೋದೀನದ ಒಂದು ಜಗಲಿಯ ಮೇಲೆ ಅರಸನ ಅಪ್ಪಣೆಯ ಮೇರೆಗೆ ಏರ್ಪಡಿಸಲಾಗಿದ್ದ ಯಜ್ಞವನ್ನು ಅರ್ಪಿಸಲು ಅಲ್ಲಿಗೆ ಬಂದು ಎಲ್ಲರ ಮುಂದೆ ನಿಂತನು. ಮತ್ತಾತಿಯನು ಅದನ್ನು ನೋಡಿ ಆವೇಶಪೂರಿತನಾದನು; ಅವನ ಮೈ ನಡುಗಿತು. ನ್ಯಾಯ ಪ್ರಮಾಣಕ್ಕನುಸಾರ ತನ್ನ ಕೋಪವನ್ನು ತೋರಿಸಲು ಓಡಿಹೋಗಿ, ಅದೇ ಜಗಲಿಯ ಮೇಲೆ ಆ ವ್ಯಕ್ತಿಯನ್ನು ಕಡಿದುಹಾಕಿದನು. ಅಂಥ ಯಜ್ಞವನ್ನು ಅರ್ಪಿಸಲು ಜನರನ್ನು ಒತ್ತಾಯಪಡಿಸಿದ್ದ ಅಧಿಕಾರಿಯನ್ನು ಕೂಡ ಕೊಂದು ಹಾಕಿದನು; ಆ ಜಗಲಿಯನ್ನೂ ಕೆಡವಿ ಹಾಕಿದನು. ಸಾಲು ಎಂಬುವನ ಮಗ ಜಿಮ್ರಿ ಎಂಬುವನಿಗೆ ಫಫೀನೆಹಾಸನು ಮಾಡಿದಂತೆಯೇ ಇವನೂ ಧರ್ಮಶಾಸ್ತ್ರದ ಬಗ್ಗೆ ಅಭಿಮಾನವುಳ್ಳವನಾಗಿದ್ದನು. ತರುವಾಯ ಮತ್ತಾತಿಯನು ಊರಲ್ಲೆಲ್ಲಾ ಘಂಟಾಘೋಷವಾಗಿ, "ಧರ್ಮಶಾಸ್ತ್ರದ ಬಗ್ಗೆ ಅಭಿಮಾನವುಳ್ಳವನು, ಒಡಂಬಡಿಕೆಯನ್ನು ಕಾಪಾಡಿಕೊಳ್ಳಲು ಆಶಿಸುವವನು, ನನ್ನ ಹಿಂದೆ ಬರಲಿ," ಎಂದು ಕರೆಕೊಟ್ಟನು. ಆನಂತರ ಅವನೂ ಅವನ ಮಕ್ಕಳೂ ಊರಲ್ಲಿ ತಮಗಿದ್ದುದನ್ನೆಲ್ಲ ಅಲ್ಲೇ ಬಿಟ್ಟು ಗುಡ್ಡಗಳಿಗೆ ಓಡಿಹೋದರು. ಇವರಂತೆಯೇ ನ್ಯಾಯನೀತಿಯನ್ನು ಅರಸುತ್ತಿದ್ದ ಅನೇಕರು ಕಾಡುಸೇರಿ ಅಲ್ಲೇ ಬೀಡುಮಾಡಿದರು. 

ಕೀರ್ತನೆ: 50:1-2, 5-6, 14-15 

ಶ್ಲೋಕ: ಸನ್ಮಾರ್ಗ ಹಿಡಿವವನಿಗೆ ತೋರುವೆ ಪರಮ ಜೀವೋದ್ಧಾರವನು 

ಶುಭಸಂದೇಶ: ಲೂಕ 19:41-44 


ಯೇಸುಸ್ವಾಮಿ ಜೆರುಸಲೇಮ್ ಪಟ್ಟಣಕ್ಕೆ ಇನ್ನೂ ಹತ್ತಿರವಾಗಿ ಬಂದು ಅದನ್ನು ನೋಡಿ, "ಇಂದಾದರೂ ನೀನು ಶಾಂತಿಮಾರ್ಗವನ್ನು ಅರಿತುಕೊಂಡಿದ್ದರೆ ಎಷ್ಟೋ ಚೆನ್ನಾಗಿರುತ್ತಿತ್ತು. ಆದರೆ ಅದು ಈಗ ನಿನ್ನ ಕಣ್ಣಿಗೆ ಮರೆಯಾಗಿದೆ. ಕಾಲವು ಬರುವುದು. ಆಗ ಶತ್ರುಗಳು ನಿನ್ನ ಸುತ್ತಲೂ ಆಳ್ವೇಲಿಯೆಬ್ಬಿಸಿ, ಮುತ್ತಿಗೆ ಹಾಕಿ, ಎಲ್ಲೆಡೆಯೂ ನುಗ್ಗಿ, ನಿನ್ನನ್ನೂ ನಿನ್ನೊಳಗಿನ ಜನರನ್ನೂ ಧ್ವಂಸ ಮಾಡುವರು;, ನಿನ್ನಲ್ಲಿ ಕಲ್ಲಿನ ಮೇಲೆ ಕಲ್ಲು ನಿಲ್ಲದಂತೆ ಮಾಡುವರು. ಏಕೆಂದರೆ, ದೇವರು ನಿನ್ನನ್ನು ಅರಸಿ ಬಂದ ಕಾಲವನ್ನು ನೀನು ಅರಿತುಕೊಳ್ಳದೆ ಹೋದೆ," ಎಂದು ಅದರ ಸಲುವಾಗಿ ಕಣ್ಣೀರಿಟ್ಟರು.

20.11.2019

ಮೊದಲನೇ ವಾಚನ: 2 ಮಕ್ಕಬಿಯರು 7:1, 20-31

ಆ ಕಾಲದಲ್ಲಿ ಏಳು ಮಂದಿ ಸಹೋದರರನ್ನು ಅವರ ತಾಯಿಯೊಂದಿಗೆ, ಅರಸನ ಅಪ್ಪಣೆಯ ಮೇರೆಗೆ ದಸ್ತಗಿರಿ ಮಾಡಲಾಯಿತು. ನಿಷೇಧಿಸಲಾಗಿದ್ದ ಹಂದಿಯ  ಮಾಂಸವನ್ನು ತಿನ್ನಬೇಕೆಂದು ಅವರನ್ನು ಬಲವಂತ ಪಡಿಸಲಾಗಿತ್ತು. ಚಾಟಿಯಿಂದಲೂ ಬಾರುಗಳಿಂದಲೂ ಹೊಡೆದು ಅವರನ್ನು ಬಾಧಿಸಿದರು. ಎಲ್ಲಕ್ಕಿಂತಲೂ ಮಿಗಿಲಾಗಿ ಅವರ ತಾಯಿಯ ವರ್ತನೆ ಅತೀ ಆಶ್ಚರ್ಯಕರವಾಗಿತ್ತು! ಆಕೆ ಚಿರಸ್ಮರಣೆಗೆ ಪಾತ್ರಳಾದವಳು. ಒಂದೇ ದಿನದಲ್ಲಿ ತನ್ನ ಏಳು ಮಕ್ಕಳು ಕಣ್ಮುಂದೆ ಸತ್ತಿದ್ದರೂ ದೇವರಲ್ಲಿ ಅವಳಿಗಿದ್ದ ನಂಬಿಕೆಯ ನಿಮಿತ್ತ ಎಲ್ಲವನ್ನೂ ಧೈರ್ಯದಿಂದ ಸಹಿಸಿಕೊಂಡಳು. ಉದಾತ್ತ ಮನೋಭಾವದಿಂದ ತುಂಬಿದವಳಾಗಿ, ತನ್ನ ಸ್ತ್ರೀಸಹಜವಾದ ಆವೇಶದೊಂದಿಗೆ  ಪೌರುಷತ್ವವನ್ನೂ ಕೂಡಿಸಿ, ಒಬ್ಬೊಬ್ಬನಿಗೂ ಮಾತೃಭಾಷೆಯಲ್ಲಿ: "ನೀವು ಹೇಗೆ ನನ ಉದರದಲ್ಲಿ ಉದ್ಭವಿಸಿದಿರಿ ಎಂಬುದನ್ನು ನಾನು ಅರಿಯೆ. ನಿಮಗೆ ಜೀವವನ್ನೂ ಉಸಿರನ್ನೂ ಕೊಟ್ಟದ್ದು ನಾನಲ್ಲ. ನಿಮ್ಮ ದೇಹದ ಅಂಗಾಂಗಗಳನ್ನು ಜೋಡಿಸಿದ್ದೂ ನಾನಲ್ಲ. ಲೋಕವನ್ನು ಸೃಷ್ಟಿಸಿದವರೇ ಅದನ್ನೆಲ್ಲ ಮಾಡಿದ್ದು. ಅವರೇ ಮಾನವ ಕೋಟೆಯನ್ನು ಉಂಟುಮಾಡಿದವರು. ಸಕಲಕ್ಕೂ ಆದಿಕಾರಣರು ಅವರೇ ಅವರ ಆಜ್ಞೆಗಳನ್ನು ಪಾಲಿಸುವುದಕ್ಕಾಗಿ ನೀವು ಹಿಂಸೆಗೊಳಗಾಗುವುದರಿಂದ, ಅವರು ಕರುಣೆಯಿಂದ ನಿಮಗೆ ಜೀವವನ್ನೂ ಉಸಿರನ್ನೂ ಹಿಂದಕ್ಕೆ ಕೊಡುವರು." ಎಂದು ಹುರಿದುಂಬಿಸಿದಳು. ಇದರಿಂದ ಅಂತಿಯೋಕನಿಗೆ ಅವಮಾನವಾದಂತೆ ತೋರಿತು.  ತನ್ನನ್ನೇ ಅವಳು ಹೀನೈಸುತ್ತಿದ್ದಾಳೆಂಬುದರ ಬಗ್ಗೆ ಸಂಶಯ ಮೂಡಿತು. ಅವಳ ಕೊನೆಯ ಮಗ ಇನ್ನೂ ಉಳಿದಿದ್ದ. ಅಂತಿಯೋಕನು ಅವನನ್ನು ಮಾತುಗಳಿಂದ ಪುಸಲಾಯಿಸಿದನು; ಅವನು ತನ್ನ ಪೂರ್ವಜರ ಆಚಾರಗಳನ್ನು ತೊರೆದು ಬಿಡುವುದಾದರೆ ಅವನನ್ನು ಐಶ್ವರ್ಯವಂತನನ್ನಾಗಿ, ಉನ್ನತ ಪದವಿಯುಳ್ಳವನಾಗಿ ಮಾಡುವುದಾಗಿಯೂ ಅವನನ್ನು ತನ್ನ ಸ್ನೇಹಿತನೆಂದೆಣಿಸಿ ರಾಜ್ಯದ ವ್ಯವಹಾರಗಳ ಮೇಲ್ವಿಚಾರಕನಾಗಿ ನೇಮಿಸುವುದಾಗಿಯೂ ಪ್ರಮಾಣಪೂರ್ವಕವಾಗಿ ವಾಗ್ದಾನ ಮಾಡಿದನು. ಆದರೆ ಆ ಯುವಕನು ಅವನಿಗೆ ಯಾವ ವಿಧದಲ್ಲೂ ಕಿವಿಗೊಡಲಿಲ್ಲ. ಆಗ ಅರಸನು ಆ ತಾಯಿಯನ್ನು ಬಳಿಗೆ ಕರೆಸಿ, ತನ್ನ ಪ್ರಾಣವನ್ನು ಉಳಿಸಿಕೊಳ್ಳುವಂತೆ ಆ ಹುಡುಗನಿಗೆ ಬುದ್ಧಿ ಹೇಳಬೇಕೆಂದು ಒತ್ತಾಯಿಸಿದನು. ಅರಸನು ಬಹಳವಾಗಿ ಒತ್ತಾಯಿಸಿದ ಮೇಲೆ, ತಾಯಿ ಮಗನಿಗೆ ಬುದ್ಧಿ ಹೇಳಿದಳು. ಮಗನ ಮೇಲೆ ಒರಗಿಕೊಂಡು, ಕ್ರೂರಿಯಾದ ಅರಸನನ್ನು ಪರಿಹಾಸ್ಯ ಮಾಡುತ್ತಾ, ಮಾತೃಭಾಷೆಯಲ್ಲೇ ಹೀಗೆಂದಳು: "ಮಗನೇ, ನನ್ನ ಮೇಲೆ ಮರುಕವಾಗಿರು. ಒಂಬತ್ತು ತಿಂಗಳು ನಿನ್ನನ್ನು ನನ್ನ ಉದರದಲ್ಲಿ ಹೊತ್ತೆ. ಮೂರು ವರ್ಷ ಮೊಲೆಯೂಡಿಸಿ ನಿನ್ನನ್ನು ಸಾಕಿಸಲಹಿದೆ. ನಿನ್ನ ಜೀವನದ ಈ ಗಳಿಗೆಯವರೆಗೂ ನಿನ್ನನ್ನು ಪೋಷಿಸಿ ಸಾಕಿದೆ. ನಿನ್ನ ಆರೈಕೆ ಮಾಡಿದೆ. ಮಗನೇ, ಸ್ವರ್ಗವನ್ನೂ ಭೂಮಿಯನ್ನೂ ಅದರಲ್ಲಿರುವುದೆಲ್ಲವನ್ನೂ ನೋಡು, ಏನೂ ಇಲ್ಲದೆ ದೇವರು ಅದೆಲ್ಲವನ್ನೂ ಉಂಟುಮಾಡಿದರು. ಮಾನವ ಕೋಟಿಯು ಸಹ ಆದೇ ರೀತಿ ಉಂಟಾಯಿತು; ಇದನ್ನು ಒಪ್ಪಿಕೋ. ಈ ಕಟುಕನಿಗೆ ನೀನು ಹೆದರಬೇಡ. ನೀನು ನಿನ್ನ ಸಹೋದರರಿಗೆ ಯೋಗ್ಯ ತಮ್ಮನೆಂದು ಸಾಬೀತುಪಡಿಸು. ಸಾವನ್ನು ಅಪ್ಪು. ಹೀಗೆ ದೇವರ ಕರುಣೆಯಿಂದ, ನಿನ್ನ ಸಹೋದರರೊಂದಿಗೆ ನಿನ್ನನ್ನು ನಾನು ಪುನಃ ಪಡೆಯುವಂತಾಗಲಿ!" ಆಕೆ ಇನ್ನೂ ಮಾತಾಡುತ್ತಿರುವಾಗಲೇ, ಆ ಯುವಕನು, "ಏತಕ್ಕಾಗಿ ಇನ್ನೂ ಕಾದಿದ್ದೀರಿ? ನಾನು ಅರಸನ ಆಜ್ಞೆಯನ್ನು ಪಾಲಿಸುವುದಿಲ್ಲ. ಬದಲಿಗೆ ಮೋಶೆಯ ಮುಖಾಂತರ ನಮ್ಮ ಪೂರ್ವಜರಿಗೆ ಕೊಟ್ಟ ನಿಯಮವನ್ನು ಅನುಸರಿಸುತ್ತೇವೆ. ಹಿಬ್ರಿಯರಾದ ನಮ್ಮ ಜನರಿಗೆ ಇಂಥ ದುಷ್ಕೃತ್ಯಗಳನ್ನು ಎಸಗಿರುವ ನೀನು ಖಂಡಿತವಾಗಿಯೂ ದೇವರ ಕೈಯಿಂದ ತಪ್ಪಿಸಿಕೊಳ್ಳುವಂತಿಲ್ಲ," ಎಂದನು.

ಕೀರ್ತನೆ: 17:1, 5-6, 8, 15
ಶ್ಲೋಕ: ಪ್ರಭೂ, ಎಚ್ಚೆತ್ತು ನಿನ್ನ ಮುಖದರ್ಶನದಿಂದ ತೃಪ್ತನಾಗುವೆನು

ಶುಭಸಂದೇಶ: ಲೂಕ 19:11-28

ಯೇಸುಸ್ವಾಮಿ ಈಗ ಜೆರುಸಲೇಮಿಗೆ ಸಮೀಪದಲ್ಲೇ ಇದ್ದರು. ಅವರ ಮಾತುಗಳನ್ನು ಕೇಳುತ್ತಿದ್ದ ಜನರು ದೇವರ ಸಾಮ್ರಾಜ್ಯ ಇದೀಗಲೇ ಪ್ರತ್ಯಕ್ಷವಾಗುವುದೆಂದು ಭಾವಿಸಿದ್ದರು. ಈ ಕಾರಣ ಯೇಸು ಅವರಿಗೆ ಒಂದು ಸಾಮತಿಯನ್ನು ಹೇಳಿದರು: "ಕುಲೀನನೊಬ್ಬ ರಾಜಪದವಿಯನ್ನು ಗಳಿಸಿಬರಲು ದೂರದ ರಾಜಧಾನಿಗೆ ಹೊರಟ. ಹೊರಡುವಾಗ ತನ್ನ ಹತ್ತು ಮಂದಿ ಸೇವಕರನ್ನು ಕರೆದು, ಒಬ್ಬೊಬ್ಬನಿಗೂ ಒಂದರಂತೆ ಹತ್ತು ಚಿನ್ನದ ನಾಣ್ಯಗಳನ್ನು ಕೊಟ್ಟು, "ನಾನು ಬರುವತನಕ ವ್ಯಪಾರ ಮಾಡಿಕೊಂಡಿರಿ," ಎಂದು ಹೇಳಿ ಹೋದ. ಅವನ ನಾಡಿಗರಾದರೋ ಅವನನ್ನು ದ್ವೇಷಿಸುತ್ತಿದ್ದರು. "ಇವನು ನಮಗೆ ರಾಜನಾಗುವುದು ಬೇಡ," ಎಂದು ತಿಳಿಸಲು ಅವನ ಹಿಂದೆಯೇ  ತಮ್ಮ ಪ್ರತಿನಿಧಿಗಳನ್ನು ಕಳುಹಿಸಿದರು. ಆದರೂ ಅವನು ರಾಜಪದವಿಯನ್ನು ಪಡೆದು ಹಿಂದಿರುಗಿ ಬಂದ. ತನ್ನಿಂದ ಹಣಪಡೆದ ಸೇವಕರು ವ್ಯಾಪಾರಮಾಡಿ ಎಷ್ಟೆಷ್ಟು ಲಾಭಗಳಿಸಿದ್ದಾರೆಂದು ತಿಳಿದುಕೊಳ್ಳುವುದಕ್ಕಾಗಿ ಅವರನ್ನು ಕೂಡಲೇ ತನ್ನ ಬಳಿಗೆ ಕರೆತರಲು ಆಜ್ಞಾಪಿಸಿದ. ಮೊದಲನೆಯವನು ಮುಂದೆ ಬಂದು, "ಪ್ರಭುವೇ, ನಿಮ್ಮ ಒಂದು ನಾಣ್ಯದಿಂದ ನಾನು ಹತ್ತು ನಾಣ್ಯಗಳನ್ನು ಸಂಪಾದಿಸಿದ್ದೇನೆ," ಎಂದ. ಅದಕ್ಕೆ ಅವನು, "ಭಲಾ, ನೀನು ಒಳ್ಳೆಯ ಸೇವಕ, ಸ್ವಲ್ಪದರಲ್ಲಿ ನೀನು ಪ್ರಮಾಣಿಕನಾಗಿದ್ದೆ. ಆದ್ದರಿಂದ ಹತ್ತು ಪಟ್ಟಣಗಳಿಗೆ ಅಧಿಪತಿಯಾಗಿರು" ಎಂದ. ಎರಡನೆಯ ಸೇವಕನು ಬಂದು, "ಪ್ರಭುವೇ, ನೀವು ಕೊಟ್ಟ ಒಂದು ನಾಣ್ಯದಿಂದ ಐದು ನಾಣ್ಯಗಳನ್ನು ಸಂಪಾದಿಸಿದ್ದೇನೆ," ಎಂದ. ಅದಕ್ಕೆ ರಾಜ, "ನೀನು ಐದು ಪಟ್ಟಣಗಳಿಗೆ ಅಧಿಪತಿಯಾಗಿರು," ಎಂದ. ಬಳಿಕ ಮತೊಬ್ಬ ಸೇವಕನು ಬಂದು, "ಇಗೋ, ಪ್ರಭುವೇ, ನಿಮ್ಮ ಚಿನ್ನದ ನಾಣ್ಯ; ನಿಮಗೆ ಭಯಪಟ್ಟು ಇದನ್ನು ಬಟ್ಟೆಯಲ್ಲಿ ಭದ್ರವಾಗಿ ಕಟ್ಟಿ ಇಟ್ಟಿದ್ದೆ. ಏಕೆಂದರೆ, ನೀವು ಕಠಿಣ ಮನುಷ್ಯರು; ನೀವು ಕೂಡಿಡದ್ದನ್ನು ಕೊಂಡು ಹೋಗುತ್ತೀರಿ, ಬಿತ್ತದಿದ್ದನ್ನು ಕೊಯಿಲು ಮಾಡುತ್ತೀರಿ," ಎಂದ. ರಾಜ ಅವನನ್ನು ನೋಡಿ, "ಎಲಾ ದುಷ್ಟ  ಸೇವಕನೇ, ನೀನು ಆಡಿದ ಮಾತಿನಿಂದಲೇ ನಿನಗೆ ತೀರ್ಪುಕೊಡುತ್ತೇನೆ. ನಾನು ಕೂಡಿಡದ್ದನ್ನು ಕೊಂಡುಹೋಗುವ, ಬಿತ್ತದ್ದನ್ನು ಕೊಯಿಲುಮಾಡುವ ಕಠಿಣ ಮನುಷ್ಯನೆಂದು ನಿನಗೆ ತಿಳಿದಿತ್ತು ಅಲ್ಲವೆ? ಹಾಗಾದರೆ ನನ್ನ ಹಣವನ್ನೇಕೆ ಬಡ್ಡಿ ಅಂಗಡಿಯಲ್ಲಿ ಹಾಕಿಡಲಿಲ್ಲ? ನಾನು ಬಂದು ಬಡ್ಡಿಸಮೇತ ನನ್ನ ಅಸಲನ್ನು ತೆಗೆದುಕೊಳ್ಳುತ್ತಿದ್ದೆನಲ್ಲಾ," ಎಂದು ಹೇಳಿ ಪರಿಚಾರಕರಿಗೆ, "ಇವನಿಂದ ಆ ಚಿನ್ನದ ನಾಣ್ಯವನ್ನು ಕಿತ್ತು  ಹತ್ತು ನಾಣ್ಯಗಳುಳ್ಳವನಿಗೆ ಕೊಡಿ," ಎಂದ. ಅದಕ್ಕವರು, "ಪ್ರಭುವೇ, ಅವನಲ್ಲಿ ಈಗಾಗಲೇ ಹತ್ತು ನಾಣ್ಯಗಳಿವೆಯಲ್ಲಾ?" ಎಂದರು. ಆಗ ರಾಜ, "ಉಳ್ಳ ಪ್ರತಿಯೊಬ್ಬನಿಗೆ ಇನ್ನೂ ಹೆಚ್ಚಾಗಿ ಕೊಡಲಾಗುತ್ತದೆ; ಇಲ್ಲದವನಿಂದ ಇರುವ ಕಿಂಚಿತ್ತನ್ನೂ ಕಸಿದುಕೊಳ್ಳಲಾಗುತ್ತದೆ, ಇದು ನಿಶ್ಚಯ," ಎಂದ. ಅಲ್ಲದೆ, "ನಾನು ತಮಗೆ ರಾಜನಾಗುವುದು ಬೇಡವೆಂದ ನನ್ನ ಶತ್ರುಗಳನ್ನು ಇಲ್ಲಿಗೆ ಎಳೆದು ತಂದು ನನ್ನ ಮುಂದೆಯೇ ಸಂಹರಿಸಿರಿ," ಎಂದ." ಇದನ್ನೆಲ್ಲಾ ಹೇಳಿ ಆದ ಮೇಲೆ ಯೇಸುಸ್ವಾಮಿ ಅವರೆಲ್ಲರಿಗಂತ ಮುಂದಾಗಿ ನಡೆದು ಜೆರುಸಲೇಮಿನತ್ತ ತೆರಳಿದರು.

19.11.2019 - "ಇಳಿದು ಬಾ; ಈ ದಿನ ನಿನ್ನ ಮನೆಯಲ್ಲಿ ನಾನು ತಂಗಬೇಕು,"

ಮೊದಲನೇ ವಾಚನ: 2 ಮಕ್ಕಬಿಯರು 6:18-31


ಧರ್ಮಶಾಸ್ತ್ರ ಪಂಡಿತರಲ್ಲಿ ಅತೀ ನಿಪುಣನಾದ ಎಲ್ಲಾಜಾರನು ವಯೋವೃದ್ಧನು, ಉಜ್ವಲರೂಪ ಉಳ್ಳವನು ಅವನು ಹಂದಿಮಾಂಸವನ್ನು ತಿನ್ನಲು ಬಲಾತ್ಕಾರದಿಂದ ಬಾಯ್ದೆರೆದು ಮಾಡಿದರು. ಅವನಾದರೋ, ಹೊಲಸಾದ ಜೀವನ ನಡೆಸುವುದಕ್ಕಿಂತ ಮರ್ಯಾದೆಯಿಂದ ಸಾಯುವುದು ಲೇಸೆಂದು ಎಣಿಸಿದನು. ಬಾಯೊಳಗಿಂದ ಆ ಮಾಂಸವನ್ನು ಉಗಿದುಬಿಟ್ಟನು. ಬದುಕುವುದಕ್ಕಿಂತ  ಹೆಚ್ಚಾಗಿ ನಿಷೇಧಿಸಲಾದ ಆಹಾರವನ್ನು ರುಚಿಸಲು ಧೈರ್ಯದಿಂದ ನಿರಾಕರಿಸಿದನು. ಹೀಗೆ, ತಾನೇ ಯಾತನೆಯ ಸ್ಥಳಕ್ಕೆ ಮುನ್ನಡೆದು ಬಂದನು. ನಿಷಿದ್ಧ ಬಲಿ ಭೋಜನದ ಉಸ್ತುವಾರಿ ನೋಡುವಂಥವರು, ಎಲ್ಲಾಜಾರನನ್ನು ಬಹುಕಾಲ ಅರಿತವರಾದ್ದರಿಂದ, ಅವನನ್ನು ರಹಸ್ಯವಾಗಿ ಕೊಂಡೊಯ್ದು ಬೇರೆ ಯಾವುದಾದರೂ ತಿನ್ನಬಹುದಾದ ಮಾಂಸವನ್ನು ಸ್ವೀಕರಿಸಿ, ಅರಸನ ಆಜ್ಞೆಗನುಗುಣವಾಗಿ ಬಲಿ ಭೋಜನ ಆಹಾರವನ್ನು ತಿನ್ನುವಂತೆ ನಟಿಸಬೇಕೆಂದು ಗುಟ್ಟಾಗಿ ಸಲಹೆಕೊಟ್ಟರು. ಹೀಗೆ ಅವರೊಂದಿಗಿದ್ದ ಸ್ನೇಹದ ನಿಮಿತ್ತ, ಅವನನ್ನು ಮರಣಶಿಕ್ಷೆಯಿಂದ ತಪ್ಪಿಸಲು ಕರುಣೆಯ ಒಂದು ದಾರಿಯನ್ನು ತೋರಿಸಿದರು. ಆದರೆ ಅವನು ತನ್ನ ವಯಸ್ಸಿನ ಯೋಗ್ಯತೆಗೆ, ಮುಪ್ಪಿನ ಘನತೆಗೆ, ನೆರೆಕೂದಲಿಗೆ ಸಲ್ಲತಕ್ಕ ಗೌರವಕ್ಕೆ, ಬಾಲ್ಯದಿಂದಲೂ ಕಾಪಾಡಿಕೊಂಡು ಬಂದ ಸನ್ನಡತೆಗೆ ತಕ್ಕಂತೆ, ಎಲ್ಲಕ್ಕಿಂತಲೂ ಹೆಚ್ಚಾಗಿ ದೇವರು ತಾವೇ ನೀಡಿದ ಪವಿತ್ರ ನಿಯಮಕ್ಕೆ ಅನುಗುಣವಾಗಿ, ಉದಾತ್ತ ನಿರ್ಧಾರವನ್ನು ಕೈಗೊಂಡು, ಕೂಡಲೇ ಮೃತ್ಯುಲೋಕಕ್ಕೆ ತನ್ನನ್ನು ಕಳುಹಿಸಿಬಿಡಬೇಕೆಂದು ಕೇಳಿಕೊಂಡನು. "ಇಂಥ ನಟನೆ ವಯೋವೃದ್ಧನಾದ ನನಗೆ ತಕ್ಕುದಲ್ಲ. ತೊಂಭತ್ತು ವರ್ಷದ ವ್ಯಕ್ಕಿಯಾದ ಎಲ್ಲಾಜಾರನೇ ತನ್ನ ಧರ್ಮವನ್ನು ಉಲ್ಲಂಘಿಸಿ, ಪರಕೀಯರ ಪದ್ಧತಿಯನ್ನು ಅನುಸರಿಸಿದ್ದಾನೆಂದು ಹೇಳುತ್ತಾರೆ. ಬದುಕಲು ಸ್ವಲ್ಪಕಾಲಕ್ಕೆ ಈ ರೀತಿ ವರ್ತಿಸುವುದರಿಂದ ಯುವಕರನ್ನು ತಪ್ಪುದಾರಿಗೆ ಎಳೆದಂತಾಗುತ್ತದೆ. ನನ್ನ ಮುಪ್ಪಿಗೆ ಕಳಂಕವನ್ನೂ ನಿಂದೆಯನ್ನೂ ತಂದುಕೊಂಡತಾಗುತ್ತದೆ. ತಾತ್ಕಾಲಿಕವಾಗಿ ನಾನು ನರಮಾನವರ ಶಿಕ್ಷೆಯಿಂದ ಸಧ್ಯಕ್ಕೆ ತಪ್ಪಿಸಿಕೊಂಡರೂ , ಸರ್ವಶಕ್ತ ದೇವರ ಕೈಯಿಂದ  ಜೀವಂತವಾಗಿ ಆಗಲಿ, ಸತ್ತಾಗ ಆಗಲಿ, ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದುದರಿಂದ, ಅವರು ಈಗ ನನ್ನ ಪ್ರಾಣತೆಗೆಯುವುದಕ್ಕೆ ನಾನೇ ಧೈರ್ಯದಿಂದ ಸಮ್ಮತಿಸುವುದರಿಂದ ನನ್ನ ಮುಪ್ಪಿನ ಘನತೆಗೆ ಯೋಗ್ಯನೆಂದು ಸೃಷ್ಟಿಕರಿಸುತ್ತೇನೆ. ಹೀಗೆ ಪೂಜ್ಯ ಹಾಗೂ ಪವಿತ್ರ ನಿಯಮಕ್ಕಾಗಿ ಆಸಕ್ತಿಯಿಂದ ಮತ್ತು ಧಾರಾಳಮನಸ್ಸಿನಿಂದ ಒಳ್ಳೆಯವನಾಗಿ ಹೇಗೆ ಮರಣಹೊಂದಬಹುದು ಎಂಬ ಭವ್ಯ ಆದರ್ಶವನ್ನು ಚಿಕ್ಕವರಿಗೆ ನೀಡಿದಂತಾಗುತ್ತದೆ," ಎಂದನು. ಇಷ್ಟನ್ನು ಹೇಳಿದ ಮೇಲೆ ಅವನು ವಧ್ಯಸ್ಥಾನಕ್ಕೆ ನೆಟ್ಟಗೆ ಹೋದನು. ಸ್ವಲ್ಪಹೊತ್ತಿಗೆ ಮುಂಚೆ ಸ್ನೇಹ ಪರರಾಗಿ ವರ್ತಿಸುತ್ತಿದ್ದ ಆ ಬೆಂಗಾವಲಿನವರು, ಅವನು ಮಾತಾಡಿದ್ದು ಹುಚ್ಚುತನದಿಂದ ಎಂದೆಣಿಸಿ ಅವನ ಮೇಲೆ ತಿರುಗಿಬಿದ್ದರು. ಮರಣದ ಹಂತವನ್ನು ತಲುಪುವವರೆಗೆ  ಅವನನ್ನು ಹೊಡೆದರು. ಆಗ ಎಲ್ಲಾಜಾರನು ನಿಟ್ಟುಸಿರು ಬಿಡುತ್ತಾ, "ನಾನು ಮರಣದಿಂದ ತಪ್ಪಿಸಿಕೊಳ್ಳಬಹುದಾಗಿದ್ದರೂ ಸರ್ವೇಶ್ವರನಲ್ಲಿರುವ ಭಯಭಕ್ತಿಯ ನಿಮಿತ್ತವೇ ಚಾಟಿಯಿಂದಾದ ಈ ದೈಹಿಕ ಯಾತನೆಯನ್ನು ಸಂತೋಷದಿಂದ ಸಹಿಸಿಕೊಳ್ಳುತ್ತೇನೆ; ಹೀಗೆ ಹಿಂಸೆಯನ್ನು ಹೃತ್ಪೂರ್ವಕವಾಗಿ ಅನುಭವಿಸುತ್ತಿದ್ದೇನೆ ಎಂಬುದು ಪರಮ ಪವಿತ್ರ ಜ್ಞಾನಿಯಾದ ಸರ್ವೇಶ್ವರನಿಗೆ ತಿಳಿದಿದೆ," ಎಂದನು. ಹೀಗೆ ಎಲ್ಲಾಜಾರನು ಸಾವನ್ನು ಅಪ್ಪಿದನು; ಅವನ ಮರಣ ಚಿಕ್ಕವರಿಗೆ ಮಾತ್ರವಲ್ಲ, ಜನಾಂಗದ ಬಹುಭಾಗದವರಿಗೆ ಉದಾತ್ತ ಆದರ್ಶವಾಗಿತ್ತು. ಚಿರಸ್ಮರಣೆಯ ಪುಣ್ಯ ದಾಖಲೆಯಾಗಿತ್ತು.

ಕೀರ್ತನೆ: 3:2-3, 4-5, 6-7

ಶ್ಲೋಕ: ಕಾಯ್ದು ಕಾಪಾಡುವನು ಪ್ರಭು ನನ್ನನು

ಶುಭಸಂದೇಶ: ಲೂಕ 19:1-10


ಯೇಸುಸ್ವಾಮಿ ಜೆರಿಕೊ ಪಟ್ಟಣವನ್ನು ಪ್ರವೇಶಿಸಿ ಅದರ ಬೀದಿಗಳಲ್ಲಿ ಹಾದು ಹೋಗುತ್ತಿದ್ದರು. ಅಲ್ಲಿ ಜಕ್ಕಾಯ ಎಂಬುವನಿದ್ದನು ಅವನು ಸುಂಕವಸೂಲಿಯವರ ಮುಖಂಡ ಹಾಗೂ ಧನಾಢ್ಯ ಯೇಸು ಯಾರೆಂದು ನೋಡಬೇಕೆಂಬ ಅಪೇಕ್ಷೆ ಅವನದು. ಆದರೆ ಅವನು ಗಿಡ್ಡವ್ಯಕ್ತಿ. ಜನಜಂಗುಳಿಯ ಮಧ್ಯೆ ಯೇಸುವನ್ನು ನೋಡಲು ಪ್ರಯತ್ನಿಸಿದರೂ ಅವನಿಂದಾಗಲಿಲ್ಲ. ಆದಕಾರಣ ಮುಂದಕ್ಕೆ ಓಡಿಹೋಗಿ ಯೇಸು ಬರುತ್ತಿದ್ದ ಆ ಮಾರ್ಗದಲ್ಲಿ ಒಂದು ಆಲದ ಮರವನ್ನು ಕಂಡು ಅದನ್ನು ಹತ್ತಿದನು. ಯೇಸು ಆ ಸ್ಥಳಕ್ಕೆ ಬಂದು, ತಲೆಯೆತ್ತಿ ನೋಡಿ, "ಜಕ್ಕಾಯಾ, ಒಡನೆ ಇಳಿದು ಬಾ; ಈ ದಿನ ನಿನ್ನ ಮನೆಯಲ್ಲಿ ನಾನು ತಂಗಬೇಕು," ಎಂದರು. ಜಕ್ಕಾಯನು ತಕ್ಷಣವೇ ಇಳಿದು ಬಂದು ಯೇಸುವನ್ನು ಸಂತೋಷದಿಂದ ಸ್ವಾಗತಿಸಿದನು. ಇದನ್ನು ನೋಡಿದವರೆಲ್ಲರು, "ಯೇಸು ಪಾಪಿಷ್ಠನ ಮನೆಗೆ  ಅತಿಥಿಯಾಗಿ ಹೋಗುತ್ತಾನಲ್ಲಾ?" ಎಂದು ಗೊಣಗುಟ್ಟಿದರು, ಜಕ್ಕಾಯನು ನೆರೆದಿದ್ದ ಜನರ ಮುಂದೆ ಎದ್ದುನಿಂತು ಯೇಸುವಿಗೆ, "ಪ್ರಭುವೇ, ನನ ಆಸ್ತಿಪಾಸ್ತಿಯಲ್ಲಿ ಅರ್ಧಭಾಗವನ್ನು  ಬಡಬಗ್ಗರಿಗೆ ಕೊಟ್ಟುಬಿಡುತ್ತೇನೆ. ಯಾರಿಗಾದರೂ ಮೋಸಮಾಡಿ ಅವರಿಂದೇನಾದರೂ ನಾನು ಕಸಿದುಕೊಂಡಿದ್ದರೆ ಅದಕ್ಕೆ ನಾಲ್ಕರಷ್ಟು ಹಿಂದಕ್ಕೆ ಕೊಡುತ್ತೇನೆ," ಎಂದನು. ಆಗ ಯೇಸು, "ಇಂದು ಈ ಮನೆ ಉದ್ಧಾರವಾಯಿತು. ಇವನು ಕೂಡ ಅಬ್ರಹಾಮನ ವಂಶಕ್ಕೆ ಸೇರಿದವನಲ್ಲವೆ? ನರಪುತ್ರನು ಬಂದಿರುವುದು ಪತಿತರನ್ನು ಅರಸಿ ಉದ್ಧರಿಸುವುದಕ್ಕೆ," ಎಂದು ಹೇಳಿದರು.

18.11.2019 - "ನನ್ನಿಂದ ನಿನಗೇನಾಗಬೇಕು?"

ಮೊದಲನೇ ವಾಚನ: 1 ಮಕ್ಕಬಿಯರು 1:10-15, 41-43, 54-57, 62-63


ಈ ಅಧಿಕಾರಿಗಳಿಂದ ವಿಷಲತೆಯ ಬೇರೊಂದು ಚಿಗುರಿಕೊಂಡಿತು. ಇವನೇ ಅಂತಿಯೋಕ ಎಪಿಫನೆಸ್ ಎಂಬುವನು. ಇವನು "ಅಂತಿಯೋಕ" ಎಂಬ ರಾಜನ ಮಗ; ರೋಂ ನಗರದಲ್ಲಿ ಒತ್ತೆಯಾಳಾಗಿ ಬಿದ್ದಿದ್ದ. ಗ್ರೀಕ್ ರಾಜ್ಯದ 137 ರಲ್ಲಿ ಇವನು ಪಟ್ಟಕ್ಕೆ ಬಂದ. ಆ ದಿನಗಳಲ್ಲಿ ಧರ್ಮಶಾಸ್ತ್ರವನ್ನು ಮೀರಿ ನಡೆಯುತ್ತಿದ್ದ ಕೆಲವರು ಇಸ್ರಯೇಲಿನಲ್ಲಿ ತಲೆಯೆತ್ತಿಕೊಂಡರು. ಇವರು, "ನಮ್ಮ ಸುತ್ತಮುತ್ತಲಿನ ಅನ್ಯಜನರ ಸಂಗಡ ಸಂಧಾನ ಮಾಡಿಕೊಳ್ಳೋಣ ಬನ್ನಿ: ನಾವು ಅವರಿಂದ ಬೇರೆಯಾದಾಗಿನಿಂದ  ಬಹಳ ಸಂಕಟಗಳಿಗೆ ಈಡಾಗಿದ್ದೇವೆ," ಎಂದು ಹೇಳುತ್ತಾ ಅನೇಕರನ್ನು ತಪ್ಪುದಾರಿಗೆ ಎಳೆದರು. ಹಲವರಿಗೆ ಈ ಸಲಹೆ ಹಿತಕರವಾಗಿಯೇ  ಕಂಡಿತು. ಕೆಲವು ಮಂದಿ ಅರಸನವರೆಗೂ ಹೋದರು. ಅರಸನೂ ಅವರಿಗೆ ಅನ್ಯಜನರ ಆಚಾರವಿಚಾರಗಳನ್ನು ಅನುಸರಿಸಲು ಅಪ್ಪಣೆಕೊಟ್ಟನು. ಪರಿಣಾಮವಾಗಿ, ಅವರು ಹೋಗಿ ಅನ್ಯಜನರ ಸಂಪ್ರದಾಯದಂತೆ ಜೆರುಸಲೇಮಿನಲ್ಲೆ ಒಂದು ವ್ಯಯಾಮ ಶಾಲೆಯನ್ನು ಕಟ್ಟಿಸಿದರು. ಸುನ್ನತಿ ಚಿಹ್ನೆಗಳನ್ನು ಮರೆಮಾಚಿದರು, ಪವಿತ್ರ ಒಡಂಬಡಿಕೆಯನ್ನು ಮೀರಿದರು, ಅನ್ಯಜನರೊಡನೆ ಮಿಶ್ರವಾದರು, ದುಷ್ಟತನಕ್ಕೆ ದಾಸರಾದರು. ತರುವಾಯ ಅರಸ ಅಂತಿಯೋಕನು, "ಎಲ್ಲರು ಒಂದೇ ಜನಾಂಗದಂತೆ ಬಾಳಬೇಕು; ಪ್ರತಿಯೊಬ್ಬನು ತನ್ನ ಸ್ವಂತ ಧರ್ಮವನ್ನು ಬಿಟ್ಟುಬಿಡಬೇಕು," ಎಂದು ಪ್ರಕಟಿಸಿದನು. ಎಲ್ಲ ಜನಾಂಗದವರು ಅರಸನ ಮಾತಿಗೆ ಓಗೊಟ್ಟಿದ್ದರು. ಇಸ್ರಯೇಲರಲ್ಲಿ ಅನೇಕರು ಅವನ ಪೂಜೆಮಾಡಲು ಒಪ್ಪಿ ಮೂರ್ತಿಗೆ ಬಲಿ ಅರ್ಪಿಸಿದರು; ಸಬ್ಬತ್ ದಿನವನ್ನು ಅಪವಿತ್ರಗೊಳಿಸಿದರು. ಅರಸನು   145ನೇ ವರ್ಷದ ಮಾರ್ಗಶಿರ ಮಾಸದ ಹದಿನೈದನೆಯ ದಿನದಂದು "ವಿನಾಶಕರ ವಿಕಟಮೂರ್ತಿ"ಯನ್ನು ಬಲಿಪೀಠದ ಮೇಲೆ ಸ್ಥಾಪಿಸಿದನು. ಜುದೇಯದ ಊರುಕೇರಿಗಳಲ್ಲಿ ಎಲ್ಲೆಲ್ಲೂ ವಿಗ್ರಹಗಳಿಗೆ ಪೀಠಗಳನ್ನು ನಿರ್ಮಿಸಲಾಯಿತು. ಮನೆಯ ಬಾಗಿಲುಗಳಲ್ಲೂ ಊರುಬೀದಿಗಳಲ್ಲೂ ಧೂಪಾರತಿಗಳನ್ನು ಎತ್ತಿಸಲಾಯಿತು. ಕೈಗೆ ಸಿಕ್ಕಿದ ಧರ್ಮಶಾಸ್ತ್ರ ಗ್ರಂಥಗಳನ್ನು ಹರಿದು ಬೆಂಕಿಗೆ ಹಾಕಲಾಯಿತು. ಯಾರಾರಲ್ಲಿ ಒಡಂಬಡಿಕೆಯ ಗ್ರಂಥವಿತ್ತೋ ಯಾರಾರು ಧರ್ಮಶಾಸ್ತ್ರಕ್ಕೆ ಬದ್ಧರಾಗಿದ್ದರೋ ಅವರನ್ನು ರಾಜಾಜ್ಞೆಯಂತೆ ಮರಣಕ್ಕೆ ಗುರಿಮಾಡಲಾಯಿತು. ಆದರೂ ಇಸ್ರಯೇಲರಲ್ಲಿ ಅನೇಕರು ರಾಜಾಜ್ಞೆಯನ್ನು ಪ್ರತಿಭಟಿಸಿ, ಅಶುದ್ಧ ಆಹಾರವನ್ನು ತಿನ್ನಲು ನಿರಾಕರಿಸಿದರು. ಪವಿತ್ರ ಒಡಂಬಡಿಕೆಯನ್ನು ಮೀರಿ ಅಂಥ ಆಹಾರವನ್ನು ತಿನ್ನುವುದಕ್ಕಿಂತ ಸಾಯುವುದೇ ಲೇಸೆಂದು ಎಣಿಸಿ ಸಾವಿಗೆ ಸಿದ್ಧರಾದರು. ಅಂತೆಯೇ ಹಲವರು ಪ್ರಾಣತ್ಯಾಗ ಮಾಡಿದರು. ಆಗ ಭೀಕರ ಕೋಪಾಗ್ನಿ ಇಸ್ರಯೇಲಿನ ಮೇಲೆ ಉರಿಯುತ್ತಿತು.

ಕೀರ್ತನೆ: 119:53, 61, 134, 150, 155, 158
ಶ್ಲೋಕ: ನಿನ್ನಚಲ ಪ್ರೀತಿಗನುಸಾರ ಚೈತನ್ಯಗೊಳಿಸೆನ್ನನು

ಶುಭಸಂದೇಶ: ಲೂಕ 18:35-43

ಯೇಸುಸ್ವಾಮಿ ಜೆರಿಕೊ ಪಟ್ಟಣವನ್ನು ಸಮೀಪಿಸುತ್ತಿದ್ದಾಗ ಕುರುಡನೊಬ್ಬನು ದಾರಿಯ ಪಕ್ಕದಲ್ಲಿ ಕುಳಿತು ಭಿಕ್ಷೆ ಬೇಡುತ್ತಿದ್ದನು. ಜನಸಂದಣಿಯ ಶಬ್ದವನ್ನು ಆಲಿಸಿ, ಅದೇನೆಂದು ವಿಚಾರಿಸಿದನು. "ನಜರೇತಿನ ಯೇಸು ಈ ಮಾರ್ಗವಾಗಿ ಹೋಗುತ್ತಿದ್ದಾರೆ," ಎಂದು ಅವನಿಗೆ ತಿಳಿಸಲಾಯಿತು. ಕೂಡಲೇ ಅವನು, "ಯೇಸುವೇ, ದಾವೀದ ಕುಲಪುತ್ರರೇ, ನನಗೆ ದಯೆತೋರಿ," ಎಂದು ಗಟ್ಟಿಯಾಗಿ ಕೂಗಿಕೊಂಡನು. ಮುಂದೆ ಹೋಗುತ್ತಿದ್ದವರು, "ಸುಮ್ಮನಿರು" ಎಂದು ಅವನನ್ನು ಗದರಿಸಿದರು. ಅವನಾದರೋ, "ದಾವೀದ ಕುಲಪುತ್ರರೇ, ನನಗೆ ದಯೆತೋರಿ" ಎಂದು ಮತ್ತಷ್ಟು ಗಟ್ಟಿಯಾಗಿ ಕೂಗಿಕೊಂಡನು. ಇದನ್ನು ಕೇಳಿ ಯೇಸು, ಅಲ್ಲೇ ನಿಂತು, ಅವನನ್ನು ತಮ್ಮ ಬಳಿಗೆ ಕರೆದುತರುವಂತೆ ಅಪ್ಪಣೆ ಮಾಡಿದರು. ಅವನು ಹತ್ತಿರಕ್ಕೆ ಬಂದಾಗ, "ನನ್ನಿಂದ ನಿನಗೇನಾಗಬೇಕು?" ಎಂದು ಕೇಳಲು ಅವನು, "ಸ್ವಾಮಿಾ, ನನಗೆ ಕಣ್ಣು ಕಾಣುವಂತೆ ಮಾಡಿ," ಎಂದು ಪ್ರಾರ್ಥಿಸಿದನು. ಯೇಸು ಅವನಿಗೆ, "ದೃಷ್ಟಿಯನ್ನು ಪಡೆ; ನಿನ್ನ ವಿಶ್ವಾಸವೇ ನಿನ್ನನ್ನು ಸ್ವಸ್ಥಮಾಡಿದೆ," ಎಂದರು. ಆ ಕ್ಷಣವೇ ಅವನಿಗೆ ದೃಷ್ಟಿಬಂದಿತು. ದೇವರನ್ನು ಸ್ತುತಿಸುತ್ತಾ ಅವನೂ ಯೇಸುವನ್ನು ಹಿಂಬಾಲಿಸಿದನು. ಇದನ್ನು ನೋಡಿದ ಜನರೆಲ್ಲರೂ ದೇವರನ್ನು ಕೊಂಡಾಡಿದರು.

17.11.2019 - "ಎಲ್ಲರೂ ನಿಮ್ಮನ್ನು ದ್ವೇಷಿಸುವರು. ಆದರೂ ನಿಮ್ಮ ತಲೆ ಕೂದಲೊಂದೂ ನಾಶವಾಗುವುದಿಲ್ಲ"

ಮೊದಲನೇ. ವಾಚನ: ಮಲಾಕಿ 4:1-2

"ಇಗೋ, ಆ ದಿನ ಬರುತ್ತಿದೆ ಒಲೆಯಂತೆ ಉರಿಯುತ್ತಿದೆ. ಎಲ್ಲ ಆಹಂಕಾರಿಗಳು, ದುಷ್ಕರ್ಮಿಗಳು, ಒಣಹುಲ್ಲಿನಂತೆ ಆಗಿಹೋಗಿದ್ದಾರೆ. ಆದ್ದರಿಂದ ಬರಲಿರುವ ಆ ದಿನದಂದು ಸುಟ್ಟು ಭಸ್ಮವಾಗುತ್ತಾರೆ. ಬುಡ ರೆಂಬೆಸಹಿತ ಬೂದಿಯಾಗುತ್ತದೆ," ಎನ್ನುತ್ತಾರೆ ಸೇನಾಧೀಶ್ವರ ಸರ್ವೇಶ್ವರ. ನನ್ನ ನಾಮದಲ್ಲಿ ಭಯಭಕ್ತಿಯಿಂದ ಇರುವ ನಿಮಗಾದರೋ ಜೀವೋದ್ಧಾರಕನೆಂಬ  ಸೂರ್ಯನು ಉದಹಿಸಿ, ಸುಕ್ಷೆಮವನ್ನೀಯುವ ಕಿರಣಗಳನ್ನು ಬೀರುವನು.


ಕೀರ್ತನೆ: 98:5-6, 7-8, 9

ಶ್ಲೋಕ: ಪ್ರಭು ಬರುವನು ಇಹಲೋಕಕೆ ನ್ಯಾಯತೀರಿಸಲು

ಎರಡನೇ ವಾಚನ: 2 ಥೆಸಲೋನಿಯರಿಗೆ 3:7-12

ಸಹೋದರರೇ, ನಾವು ಹೇಗೆ ನಡೆದುಕೊಂಡೆವೋ ಹಾಗೆಯೇ, ನೀವು ಸಹ ನಡೆದುಕೊಳ್ಳಬೇಕೆಂಬುದು ನಿಮಗೆ ತಿಳಿದ ವಿಷಯ. ನಾವು ನಿಮ್ಮ ಬಳಿಯಿದ್ದಾಗ ಸೋಮಾರಿಗಳಾಗಿರಲಿಲ್ಲ ಪುಕ್ಕಟೆಯಾಗಿ ನಾವು ಯಾರ ಅನ್ನವನ್ನೂ ಉಣ್ಣಲಿಲ್ಲ. ನಿಮ್ಮಲ್ಲಿ ಯಾರಿಗೂ ಹೊರೆಯಾಗಬಾರದೆಂದು ಹಗಲಿರುಳೂ ನಾವೇ ಕಷ್ಟಪಟ್ಟು ದುಡಿದಿದ್ದೇವೆ. ನಿಮ್ಮಿಂದ ಪೋಷಣೆ ಪಡೆಯಲು ನಮಗೆ ಹಕ್ಕಿಲ್ಲವೆಂದಲ್ಲ; ನೀವು ನಮ್ಮನ್ನು ಅನುಸರಿಸಿ ನಡೆಯುವಂತೆ, ನಿಮಗೆ ಆದರ್ಶವಾಗಿ ಇರಬೇಕೆಂದೇ ನಾವು ಹೀಗೆ ಮಾಡಿದೆವು. ನಾವು ನಿಮ್ಮೊಡನಿದ್ದಾಗ, "ದುಡಿಯಲೊಲ್ಲದವನು ಉಣಲೂಬಾರದು," ಎಂದು ನಿಮಗೆ ಆಜ್ಞಾಪಿಸಿದ್ದೆವು. ಈಗಲಾದರೋ ನಿಮ್ಮಲ್ಲಿ ಕೆಲವರು ದುಡಿಯದೆ ಮೈಗಳ್ಳರಾಗಿ ಅಲ್ಲಲ್ಲಿ ಅಲೆದಾಡುತ್ತಾ ಹರಟೆಮಲ್ಲರಾಗಿದ್ದಾರೆಂದು ನಮಗೆ ತಿಳಿದು ಬಂದಿದೆ. ಇಂಥವರು ತಮ್ಮ ಜೀವನೋಪಾಯಕ್ಕಾಗಿ ತಾವೇ ದುಡಿದು ಸಂಪಾದಿಸಬೇಕೆಂದು ಪ್ರಭು ಯೇಸುವಿನ ಹೆಸರಿನಲ್ಲಿ ಎಚ್ಚರಿಸಿ ಆಜ್ಞಾಪಿಸುತ್ತೇವೆ.

ಶುಭಸಂದೇಶ: ಲೂಕ 21:5-19


"ಈ ಮಹಾದೇವಾಲಯವು ಆನಂದವಾದ ಕಲ್ಲುಗಳಿಂದಲೂ ಅಮೂಲ್ಯವಾದ ಕೊಡುಗೆಗಳಿಂದಲೂ ಎಷ್ಟು ಆಲಂಕೃತವಾಗಿದೆ!" ಎಂದು ಕೆಲವರು ಮಾತನಾಡುತ್ತಿದ್ದರು. ಆಗ ಯೇಸು, "ಇವುಗಳನ್ನು ನೀವು ನೋಡುತ್ತಿದ್ದೀರಲ್ಲವೆ? ಇಲ್ಲಿ ಕಲ್ಲಿನ ಮೇಲೆ ಕಲ್ಲು ಉಳಿಯದು; ಎಲ್ಲವನ್ನೂ ಕೆಡವಿಹಾಕುವ ಕಾಲವೊಂದು ಬರುವುದು," ಎಂದರು. "ಗುರುವೇ, ಇದು ಸಂಭವಿಸುವುದು ಯಾವಾಗ? ಇದೀಗಲೇ ಸಂಭವಿಸಲಿದೆ ಎಂದು ತಿಳಿಸುವ ಪೂರ್ವಸೂಚನೆ ಯಾವುದು?" ಎಂದು ಕೆಲವರು ಕೇಳಿದರು. ಅದಕ್ಕೆ ಯೇಸುಸ್ವಾಮಿ, "ನೀವು ಮೋಸಹೋಗದಂತೆ ಜಾಗರೂಕರಾಗಿರಿ. "ಅನೇಕರು ನಾನೇ ಆತ, ನಾನೇ ಆತ," ಎನ್ನುತ್ತಾ ನನ್ನ ಹೆಸರನ್ನೇ ಇಟ್ಟುಕೊಂಡು ಬಂದು, "ಕಾಲವು ಸಮೀಪಿಸಿಬಿಟ್ಟಿತು," ಎಂದು ಹೇಳುತ್ತಾರೆ. ಅವರನ್ನು ಹಿಂಬಾಲಿಸಬೇಡಿ. ಸಮರ ಸಂಕಲಹಗಳ ಸುದ್ದಿ ಬಂದಾಗ ದಿಗಿಲುಗೊಳ್ಳಬೇಡಿ; ಇವೆಲ್ಲವೂ ಮೊದಲು ಸಂಭವಿಸಲೇಬೇಕು. ಆದರೂ ಅಂತ್ಯವು ಕೂಡಲೇ ಬರುವುದಿಲ್ಲ," ಎಂದರು. ಅದೂ ಅಲ್ಲದೆ ಯೇಸು ಇಂತೆಂದರು: "ಜನಾಂಗಕ್ಕೆ ವಿರುದ್ಧವಾಗಿ ಜನಾಂಗ, ರಾಷ್ಟ್ರಕ್ಕೆ ವಿರುದ್ಧವಾಗಿ ರಾಷ್ಟ್ರ ಯುದ್ಧಕ್ಕಿಳಿಯುವುವು; ಭೀಕರ ಭೂಕಂಪಗಳಾಗುವುವು; ಕ್ಷಾಮಡಾಮರಗಳು ತಲೆದೋರರುವುವು; ಭಯಂಕರ ಘಟನೆಗಳೂ ಬಾಹ್ಯಾಕಾಶದಲ್ಲಿ ಅಪೂರ್ವ ಸೂಚನೆಗಳೂ ಕಾಣಿಸಿಕೊಳ್ಳುವುವು. ಇದೆಲ್ಲಾ ಸಂಭವಿಸುವುದಕ್ಕೆ ಮುಂಚೆ ನಿಮ್ಮನ್ನು ಬಂಧಿಸಿ ಹಿಂಸೆಗೊಳಪಡಿಸುವರು. ಪ್ರರ್ಥನಾ ಮಂದಿರಗಳಿಗೂ ಕಾರಾಗೃಹಗಳಿಗೂ ಎಳೆದೊಪ್ಪಿಸುವರು; ನನ್ನ ನಾಮದ ನಿಮಿತ್ತ ನಿಮ್ಮನ್ನು ಅರಸರ ಹಾಗೂ ಅಧಿಪತಿಗಳ ಮುಂದಕ್ಕೆ ಎಳೆಯುವರು. ಶುಭಸಂದೇಶಕ್ಕೆ ಸಾಕ್ಷಿಕೊಡಲು ಇದು ನಿಮಗೆ ಸದವಕಾಶವಾಗಿರುತ್ತದೆ. ಆಗ ವಾದಿಸುವುದು ಹೇಗೆಂದು ನೀವು ಮುಂಚಿತವಾಗಿ ಚಿಂತಿಸಬೇಕಾಗಿಲ್ಲ; ಇದು ನಿಮಗೆ ಮನದಟ್ಟಾಗಿರಲಿ. ಏಕೆಂದರೆ ನಿಮ್ಮ ವಿರೋಧಿಗಳಾರೂ ಪ್ರತಿಭಟಿಸಲು ಅಥವಾ ವಿರೋಧಿಸಲು ಆಗದಂಥ ವಾಕ್ಚಾತುರ್ಯವನ್ನೂ ಜ್ಞಾನಶಕ್ತಿಯನ್ನೂ ನಿಮಗೆ ಕೊಡುವೆನು. ನಿಮ್ಮ ತಂದೆತಾಯಿಗಳೇ, ಒಡಹುಟ್ಟಿದವರೇ, ಬಂಧುಮಿತ್ರರೇ, ನಿಮ್ಮನ್ನು ಪರಾಧೀನ ಮಾಡುವರು; ಮಾತ್ರವಲ್ಲ, ನಿಮ್ಮಲ್ಲಿ ಕೆಲವರನ್ನು ಕೊಂದುಹಾಕಿಸುವರು. ನೀವು ನನ್ನವರು ಆದುದರಿಂದಲೇ ಎಲ್ಲರೂ ನಿಮ್ಮನ್ನು ದ್ವೇಷಿಸುವರು. ಆದರೂ ನಿಮ್ಮ ತಲೆ ಕೂದಲೊಂದೂ  ನಾಶವಾಗುವುದಿಲ್ಲ. ಸೈರಣೆಯಿಂದಿರಿ, ಸಂರಕ್ಷಣೆಯನ್ನು ಪಡೆಯುವಿರಿ."

16.11.2019

ಮೊದಲನೇ ವಾಚನ: ಜ್ಞಾನ ಗ್ರಂಥ 18:14-16; 19:6-9

ಸೌಮ್ಯವಾದ ಮೌನ ಸಮಸ್ತವನು ಆವರಿಸಲು ನಡುರಾತ್ರಿ ವೇಗವಾಗಿ ಚಲಿಸಿ ಬಂದಿರಲು, ನಿಮ್ಮ ಸರ್ವಶಕ್ತ ವಾಣಿ ತನ್ನ ರಾಜ ಸಿಂಹಾಸನ ಬಿಟ್ಟು ಪ್ರಬಲ ಯುದ್ಧವೀರನಂತೆ ಸ್ವರ್ಗದಿಂದ ಜಿಗಿದು ನಾಶನಕ್ಕೆ ಗುರಿಯಾದ ನಾಡಿನೊಳಕ್ಕೆ ಬಂದಿತು. ಕಟ್ಟುನಿಟ್ಟಾದ ನಿನ್ನಾಜ್ಞೆಯೆಂಬ ಹದವಾದ ಕತ್ತಿಯನ್ನು ಅದು ಹಿಡಿದು ನಿಂತಿತ್ತು ಎಲ್ಲವನು ಸಾವಿನಿಂದ ತುಂಬಿಸಿ, ನೆಲದ ಮೇಲೆ ನಿಂತಿತ್ತು; ಆದರೂ ಆಗಸವನ್ನೇ ಮುಟ್ಟುತ್ತಿತ್ತು. ನಿಮ್ಮ ದಾಸರು ದೇವಾ, ಹಾನಿಗೀಡಾಗದಂತೆ ತಲೆಬಾಗಿತು ಸಮಗ್ರ ಸೃಷ್ಟಿ ನಿಮ್ಮ ಆಜ್ಞೆಗೆ ಬದಲಾಯಿಸಿಕೊಂಡಿತು ತನ್ನ ಸಹಜ ರೂಪವನೆ. ಪಾಳೆಯಕ್ಕೆ ನೆರಳು ನೀಡಲು ಮೇಘ ಕವಿಯಿತು ಜಲರಾಶಿಯಿದ್ದಲ್ಲಿ ಒಣನೆಲವು ಮೇಲೆದ್ದಿತು ಕೆಂಪು ಸಮುದ್ರದ ನಡುವೆ ಸುರಕ್ಷಿತ ಹೆದ್ದಾರಿ ಕಾಣಿಸಿತು ಮೊರೆಯುತ್ತಿದ್ದ ಅಲೆಗಳ ಮಧ್ಯೆ ಹುಲ್ಲುಗಾವಲುಂಟಾಯಿತು. ಒಂದೇ ಸಮೂಹದಂತೆ ನಿಮ್ಮ ಹಸ್ತಾಶ್ರಯ ಪಡೆದ ಜನರು ನಾನಾ ಅದ್ಭುತ ಕಾರ್ಯಗಳನ್ನು ನೋಡಿ , ಆ  ಸಮುದ್ರವನ್ನೆ ದಾಟಿದರು. ತಮ್ಮನ್ನು ಬಿಡುಗಡೆ ಮಾಡಿದ ನಿಮ್ಮನ್ನು ಹೇ ಸರ್ವೇಶ್ವರ, ಕೊಂಡಾಡಿದರು ಕುರಿಮರಿಗಳಂತೆ ಕುಣಿದಾಡಿದರು, ಬಿಚ್ಚದ ಕುದುರೆಗಳಂತೆ ಓಡಾಡಿದರು.

ಕೀರ್ತನೆ: 105:2-3, 36-37, 42-43
ಶ್ಲೋಕ: ನೆನೆಯಿರಿ ಪ್ರಭುವಿನ ಅದ್ಭುತಗಳನು


ಶುಭಸಂದೇಶ: ಲೂಕ 18:1-8


ನಿರಾಶರಾಗದೆ ನಿರಂತರವಾಗಿ ಪ್ರಾರ್ಥನೆ ಮಾಡಬೇಕು ಎಂಬುದನ್ನು ಕಲಿಸಲು, ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಈ ಸಾಮತಿಯನ್ನು ಹೇಳಿದರು: "ಒಂದು ನಗರದಲ್ಲಿ ಒಬ್ಬ ನ್ಯಾಯಾಧೀಶನಿದ್ದ. ಅವನು ದೇವರಿಗೂ ಭಯಪಡುತ್ತಿರಲಿಲ್ಲ; ಮಾನವರಿಗೂ ಲಕ್ಷ್ಯಕೊಡುತ್ತಿರಲಿಲ್ಲ. ಅದೇ ಊರಿನಲ್ಲಿ ಒಬ್ಬ ವಿಧವೆಯಿದ್ದಳು. ಅವಳು ಪದೇಪದೇ ಅವನ ಬಳಿಗೆ ಬಂದು, "ನನ್ನ ವಿರೋಧಿ ಅನ್ಯಾಯ ಮಾಡಿದ್ದಾನೆ; ನನಗೆ ನ್ಯಾಯ ದೊರಕಿಸಿಕೊಡಿ," ಎಂದು ಹೇಳಿಕೊಳ್ಳುತ್ತಿದ್ದಳು. ಬಹುಕಾಲ ನ್ಯಾಯಾಧೀಶನು ಅವಳಿಗೆ ಕಿವಿಗೊಡಲೇ ಇಲ್ಲ. ಕೊನೆಗೆ ಅವನು, "ನಾನು ದೇವರಿಗೆ ಹೆದರುವವನಲ್ಲ; ಮಾನವರಿಗೆ ಲಕ್ಷ್ಯಕೊಡುವವನೂ ಅಲ್ಲ; ಇಷ್ಟಾದರೂ ಈ ವಿಧವೆಯ ಕಾಟವನ್ನು ತಪ್ಪಿಸಿಕೊಳ್ಳಲು, ಈಕೆಯ ನ್ಯಾಯ ತೀರಿಸಿಬಿಡುತ್ತೇನೆ ಇಲ್ಲವಾದರೆ, ಈಕೆ ಪದೇಪದೇ ಬಂದು ನನ್ನ ತಲೆಕೆಡಿಸಿಬಿಟ್ಟಾಳು," ಎಂದುಕೊಂಡ," ಆನಂತರ ಪ್ರಭು ಯೇಸು, "ಈ ನೀತಿಗೆಟ್ಟ ನ್ಯಾಯಾಧೀಶ ಹೇಳಿಕೊಂಡ ಮಾತುಗಳನ್ನು ಕೇಳಿದಿರಲ್ಲವೇ ಹೀಗಿರುವಲ್ಲಿ ದೇವರು, ತಾವಾಗಿ ಆಯ್ಕೆಮಾಡಿಕೊಂಡ ಜನರು ಹಗಲು ರಾತ್ರಿ ತಮಗೆ ಮೊರೆಯಿಡುವಾಗ ನ್ಯಾಯ ತೀರಿಸದೆ ಹೋಗುವರೆ? ತಡಮಾಡಿಯಾರೆ? ಶೀಘ್ರವಾಗಿ ಅವರಿಗೆ ನ್ಯಾಯ ದೊರಕಿಸಿಕೊಡುವರೆಂದು ನಿಮಗೆ ಹೇಳುತ್ತೇನೆ. ಇಷ್ಟಾದರೂ ನರಪುತ್ರನು ಬರುವಾಗ ಜಗತ್ತಿನಲ್ಲಿ ವಿಶ್ವಾಸವಿರುವುದನ್ನು ಕಾಣುವನೋ?" ಎಂದರು.

15.11.2019

ಮೊದಲನೇ ವಾಚನ: ಜ್ಞಾನ ಗ್ರಂಥ 13:1-9

ದೇವರನ್ನು ಅರಿಯದ ಮನುಜರೆಲ್ಲರು ಮಂದಮತಿಗಳೆಂಬುದು ಸಹಜ. ಕಣ್ಣಿಗೆ ಕಾಣುವ ಚೆಲುವಾದವುಗಳಿಂದ ಇರುವಾತನನು ಅವರರಿಯಲಿಲ್ಲ. ಸೃಷ್ಟಿಯಾದ ವಸ್ತುಗಳನ್ನು ಗಮನಿಸಿ ಸೃಷ್ಟಿಕರ್ತನನು ಗುರುತಿಸಲಿಲ್ಲ. ಬದಲಿಗೆ ಅಗ್ನಿ, ಆವಿ, ವೇಗವಾಯು, ತಾರಾಗಣ, ಭೋರ್ಗರೆವ ಸಾಗರ, ಗಗನದ ಜ್ಯೋರ್ತಿಮಂಡಲ ಇವುಗಳೇ ಜಗವನ್ನಾಳುವ ದೇವರೆಂದುಕೊಂಡರಲ್ಲಾ! ಇವುಗಳಲ್ಲಿನ ಚೆಲುವಿಗೆ ಮಣಿದು ಇವುಗಳನ್ನೇ ದೇವರೆಂದುಕೊಂಡರು. ಗ್ರಹಿಸದೆ ಹೋದರು ಇವುಗಳ ಒಡೆಯ ಇನ್ನೆಷ್ಟು ಮಿಗಿಲಾಗಿರಬೇಕೆಂದು! ಸೌಂದರ್ಯಕ್ಕೆ ಮೂಲವಾದ ಸರ್ವೇಶ್ವರನೇ ನಿರ್ಮಿಸಿಹನು ಇವುಗಳನ್ನು. ಇವುಗಳಲ್ಲಿನ ಗುಣಶಕ್ತಿಗೆ ಅಚ್ಚರಿಗೊಂಡು ಹಾಗೆ ನುಡಿದಿದ್ದರೆ ಇವುಗಳನ್ನು ರೂಪಿಸಿದವನೆಷ್ಟು ಶಕ್ತನೆಂದು ತಿಳಿಯಲಿ ಅವುಗಳಿಂದಲೇ ಸೃಷ್ಟಿವಸ್ತುಗಳ ಸೌಂದರ್ಯ ಮಹತ್ವಗಳಿಂದ ಅವುಗಳ ಸೃಷ್ಟಿಕರ್ತನ ಸಾದೃಶ್ಯ ಸಾಧ್ಯ. ಇಂಥವರ ಮೇಲೆ ಬರುವ ಅಪರಾಧ ಅಂಥ ದೊಡ್ಡದೇನೂ ಅಲ್ಲ, ದೇವರನ್ನು ಹುಡುಕುವ ಆಶೆಯಿಂದಲೇ, ತಪ್ಪುಹಾದಿ  ಹಿಡಿದಿರಬಹುದಲ್ಲಾ. ಸೃಷ್ಟಿಕಾರ್ಯಗಳ ನಡುವೆ ಬಾಳುತ್ತಾ ವಿಚಾರಿಸುತ್ತಾರೆ ಮನಃಪೂರ್ವಕವಾಗಿ ಭ್ರಮೆಗೊಳ್ಳುತ್ತಾರೆ ಅವುಗಳ ಸಹಜವಾದ ಚೆಲುವಿಗೆ ಬೆರಗಾಗಿ. ಹೀಗಿದ್ದರೂ ಇಂಥವರನ್ನೇ ದೋಷಮುಕ್ತರೆನ್ನಲಾದೀತೆ? ಪ್ರಪಂಚವನ್ನೇ ಶೋಧಿಸಿನೋಡುವ ಶಕ್ತಿ ಇವರಲ್ಲಿದ್ದ ಮೇಲೆ ಸೃಷ್ಟಿಗೆ ಒಡೆಯನಾದವನನು ಅರಿತುಕೊಳ್ಳಲು ತಡವಾದುದೇಕೆ?

ಕೀರ್ತನೆ: 19:2-3, 4-5
ಶ್ಲೋಕ: ತಾರಾಮಂಡಲ ತೋರುತಿದೆ ದೇವರ ಸೃಕೃತಿಗಳನು

ಶುಭಸಂದೇಶ: ಲೂಕ 17:26-37

ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು: "ನೋವನ ಕಾಲದಲ್ಲಿ ನಡೆದಂತೆಯೇ ನರಪುತ್ರನು ಬರುವ ಕಾಲದಲ್ಲೂ ನಡೆಯುವುದು. ನೋವನು ನಾವೆಯನ್ನು ಹತ್ತುವ ದಿನದ ತನಕ ಜನರು ತಿನ್ನುತ್ತಾ ಕುಡಿಯುತ್ತಾ ಇದ್ದರು; ಮದುವೆಮಾಡಿಕೊಳ್ಳುತ್ತಾ, ಮಾಡಿಕೊಡುತ್ತಾ ಇದ್ದರು; ಜಲಪ್ರಳಯ ಬಂದು ಎಲ್ಲರನ್ನು ನಾಶಮಾಡಿತು. ಅಂತೆಯೇ, ಲೋತನ ಕಾಲದಲ್ಲೂ ನಡೆಯಿತು. ಜನರು ಅನ್ನಪಾನೀಯಗಳಲ್ಲಿ ಆಸಕ್ತರಾಗಿದ್ದರು; ಲೇವಾದೇವಿಯಲ್ಲಿ ತೊಡಗಿದ್ದರು ನೆಡುವುದರಲ್ಲೂ ನಿರ್ಮಿಸುವುದರಲ್ಲೂ ನಿರತರಾಗಿದ್ದರು. ಲೋತನು ಸೊದೋಮ್ ಊರನ್ನು ಬಿಟ್ಟು ತೆರಳಿದ ದಿನದಂದೇ ಆಕಾಶದಿಂದ ಅಗ್ನಿ ಮತ್ತು ಗಂಧಕದ ಮಳೆ ಸುರಿದು ಎಲ್ಲರನ್ನು ನಾಶಮಾಡಿತು. ನರಪುತ್ರನು ಪ್ರತ್ಯಕ್ಷನಾಗುವ ದಿನದಲ್ಲೂ ಹಾಗೆಯೇ  ನಡೆಯುವುದು. ಆ ದಿನಗಳಲ್ಲಿ ಮಾಳಿಗೆಯ ಮೇಲಿರುವವನು ಮನೆಯಲ್ಲಿರುವ ಸರಕುಸಾಮಗ್ರಿಗಳನ್ನು ತೆಗೆದುಕೊಳ್ಳಲು ಕೆಳಗಿಳಿಯದಿರಲಿ. ಅಂತೆಯೇ, ಹೊಲದಲ್ಲಿರುವವನು ಮನೆಗೆ ಹಿಂದಿರುಗದಿರಲಿ. ಲೋತನ ಪತ್ನಿಗಾದ ಗತಿಯನ್ನು ನೆನಪಿಗೆ ತಂದುಕೊಳ್ಳಿರಿ! ಯಾರು ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಇಚ್ಛಿಸುತ್ತಾನೋ ಅವನು ಅದನ್ನು ಕಳೆದುಕೊಳ್ಳುತ್ತಾನೆ; ಯಾರು ತನ್ನ ಪ್ರಾಣವನ್ನು ಕಳೆದುಕೊಳ್ಳುತ್ತಾನೋ ಅವನು ಅದನ್ನು ರಕ್ಷಿಸಿಕೊಳ್ಳುತ್ತಾನೆ. ಆ ರಾತ್ರಿ ಒಂದೇ ಹಾಸಿಗೆಯಲ್ಲಿ ಇಬ್ಬರು ಮಲಗಿದ್ದರೆ, ಆ ಇಬ್ಬರಲ್ಲಿ ಒಬ್ಬನನ್ನು ತೆಗೆದುಕೊಂಡು ಹೋಗಲಾಗುವುದು; ಒಬ್ಬನನ್ನು ಬಿಡಲಾಗುವುದು. ಒಂದೇ. ಕಲ್ಲಲ್ಲಿ ಬೀಸುತ್ತಿರುವ ಇಬ್ಬರು ಮಹಿಳೆಯರಲ್ಲಿ, ಒಬ್ಬಳನ್ನು ತೆಗೆದುಕೊಂಡು ಹೋಗಲಾಗುವುದು, ಇನ್ನೊಬ್ಬಳನ್ನು ಬಿಡಲಾಗುವುದು. ಹೊಲದಲ್ಲಿದ್ದ ಇಬ್ಬರಲ್ಲಿ, ಒಬ್ಬನನ್ನು ತೆಗೆದುಕೊಂಡು ಹೋಗಲಾಗುವುದು, ಮತ್ತೊಬ್ಬನನ್ನು ಬಿಡಲಾಗುವುದು" ಎಂದರು. "ಸ್ವಾಮಿಾ, ಇದು ಎಲ್ಲಿ ನಡೆಯುವುದು?" ಎಂದು ಶಿಷ್ಯರು ಕೇಳಿದಾಗ, ಯೇಸು, "ಹೆಣವಿದ್ದಲ್ಲಿ ರಣಹದ್ದುಗಳು ಬಂದು ಕೂಡುವುವು," ಎಂದರು.

14.11.19 - "ದೇವರ ಸಾಮ್ರಾಜ್ಯವು ಕಣ್ಣುಗಳಿಗೆ ಕಾಣಿಸುವಂತೆ ಬರುವುದಿಲ್ಲ"

 ಮೊದಲನೇ ವಾಚನ: ಜ್ಞಾನ ಗ್ರಂಥ 7:22-8:1


ಸುಜ್ಞಾನದಲ್ಲಿ ಚುರುಕಾಗಿ ಅರಿಯುವ ಹಾಗೂ ಪವಿತ್ರವಾದ ಚೈತನ್ಯವಿರುವುದು; ಅದು ಅದ್ವಿತೀಯ, ನಾನಾ ವಿಧ, ಅತಿ ಸೂಕ್ಷ್ಮ ಹಾಗು ಚಲಿಸುವಂಥದ್ದು; ಅದು ಸ್ಪಷ್ಟೋಕ್ತಿಯುಳ್ಳದು, ನಿಷ್ಕಳಂಕವಾದುದು, ಸುರಕ್ಷಿತವಾದುದು, ನಿಚ್ಚಳವಾದುದು, ಸತ್ಪರವಾದುದು, ಹದವಾದುದು; ನಿರಾತಂಕವಾದುದು, ಕರುಣಾಮಯಿ, ಮಾನವ ಪ್ರಿಯವಾದುದು; ಸುಸ್ಥಿರ, ನಿಶ್ಚಿತ, ನಿಶ್ಚಿಂತೆಯುಳ್ಳದ್ದು, ಸರ್ವ ಶಕ್ತಿಯುಳ್ಳದ್ದು, ಚುರುಕು, ನಿರ್ಮಲ, ಸೂಕ್ಷ್ಮ, ಎಲ್ಲ ಜೀವಾತ್ಮಗಳಲ್ಲಿ ಸೇರಿಸಿಕೊಳ್ಳುವಂಥದ್ದು, ಸುಜ್ಞಾನ ಎಲ್ಲಾ ಚಲನೆಗಿಂತಲೂ ಚುರುಕು. ಇಡೀ ವಿಶ್ವದಲ್ಲಿ ವ್ಯಾಪಿಸಿಕೊಳ್ಳುವಷ್ಟು ಸ್ವಚ್ಛವಾದುದು. ಆಕೆ ದೇವರ ಶಕ್ತಿಯ ಉಸಿರು, ಸರ್ವಶಕ್ತನ ನಿರ್ಮಲ ಪ್ರವಾಹ. ಎಂದೇ ಆಕೆಯಲ್ಲಿ ಅಶುದ್ಧವಾದುದು ಯಾವುದೂ ಪ್ರವೇಶಿಸುವಂತಿಲ್ಲ. ಸುಜ್ಞಾನವು ಅನಾದಿ, ಪರಂಜ್ಯೋತಿಯ ಪ್ರಕಾಶ; ದೈವ ಪ್ರವೃತ್ತಿಯ ನಿಷ್ಕಳಂಕ ದರ್ಪಣ ದೇವರ ಶ್ರೇಷ್ಟತೆಯ ಪ್ರತಿರೂಪ, ಒಂಟಿಯಾಗಿದ್ದುಕೊಂಡು ಎಲ್ಲವನ್ನು ಆಕೆ ಮಾಡಬಲ್ಲಳು ತನ್ನತನವನ್ನು ಕಳೆದುಕೊಳ್ಳದೆ ಎಲ್ಲವನ್ನು ಹೊಸದಾಗಿಸುವಳು. ಪ್ರತಿಯೊಂದು ಪೀಳಿಗೆಯಲ್ಲೂ ಸಂಚರಿಸಿ, ಸಂತಾತ್ಮಗಳನ್ನು ಹೊಕ್ಕು, ಮಾನವರನ್ನು ದೇವರ ಗೆಳೆಯರನ್ನಾಗಿ, ಪ್ರವಾದಿಗಳನ್ನಾಗಿ ಮಾಡುವಳು. ಸುಜ್ಞಾನಿಯೊಂದಿಗಿರುವಾತನನ್ನೇ ಹೊರತು ಇನ್ನಾರನ್ನೂ  ಪ್ರೀತಿಸುವುದಿಲ್ಲ ದೇವರು. ಸುಜ್ಞಾನ ಸೂರ್ಯನಿಗಿಂತ ಸುಂದರಳು, ಯಾವ ತಾರಾಮಂಡಲಕ್ಕೂ ಮಿಗಿಲಾದವಳು. ಬೆಳಕಿಗೆ ಹೋಲಿಸಿದರೆ ಅದನ್ನೂ ಮೀರುವಳು. ಹಗಲು ಹೋಗಿ ಇರುಳಾಗುವುದು, ಸುಜ್ಞಾನಿಯ ಮುಂದೆ ಕೆಡುಕು ನಿಲ್ಲದು. ಸುಜ್ಞಾನವೆಂಬಾಕೆ ಸಂಪೂರ್ಣ ಶಕ್ತಿಯಿಂದ ಸರಿಯುವಳು ಜಗದ ಒಂದು ಕಡೆಯಿಂದ ಇನ್ನೊಂದು ಕಡೆಯವರೆಗೂ, ಅನುಕೂಲಕರವಾಗಿಯೆ ನಡೆಸುವಳು ಎಲ್ಲವನು.

ಕೀರ್ತನೆ: 119:89, 90, 91, 130, 175

ಶ್ಲೋಕ: ಹೇ ಪ್ರಭೂ, ನಿನ್ನ ವಾಕ್ಯ ಶಾಶ್ವತ ಪರಲೋಕದಲ್ಲಿ ಅದು ಚಿರ ಶಾಶ್ವತ

ಶುಭಸಂದೇಶ: ಲೂಕ 17:20-25

ದೇವರ ಸಾಮ್ರಾಜ್ಯವು ಯಾವಾಗ ಬರುವುದೆಂದು ಫರಿಸಾಯರು ಕೇಳಿದಾಗ ಯೇಸುಸ್ವಾಮಿ ಪ್ರತ್ಯುತ್ತರವಾಗಿ, "ದೇವರ ಸಾಮ್ರಾಜ್ಯವು ಕಣ್ಣುಗಳಿಗೆ ಕಾಣಿಸುವಂತೆ ಬರುವುದಿಲ್ಲ. "ಇಗೋ, ಅದು ಇಲ್ಲಿದೆ ಅಥವಾ ಅಲ್ಲಿದೆ," ಎಂದು ಹೇಳುವಂತಿಲ್ಲ. ಏಕೆಂದರೆ, ದೇವರ ಸಾಮ್ರಾಜ್ಯವು ನಿಮ್ಮೊಳಗೇ ಇದೆ," ಎಂದರು. ಆನಂತರ ಶಿಷ್ಯರನ್ನು ಉದ್ದೇಶಿಸಿ, "ಕಾಲವೊಂದು ಬರುವುದು, ಆಗ ನರಪುತ್ರನೊಂದಿಗೆ ಒಂದು ದಿನವನ್ನಾದರೂ ಕಳೆಯಲು ಹಂಬಲಿಸುವಿರಿ. ಆದರೆ ನಿಮಗದು ಲಭಿಸದು. "ಇಗೋ, ಇಲ್ಲಿದ್ದಾನೆ; ಆಗೋ ಅಲ್ಲಿದ್ದಾನೆ," ಎಂದು ಜನರು ಸುದ್ದಿ ಎಬ್ಬಿಸುವರು. ಅದನ್ನು ನೀವು ನೋಡಲು ಹೋಗಬೇಡಿ; ಅಂಥವರನ್ನು ಹಿಂಬಾಲಿಸಲೂ ಬೇಡಿ. ಆಕಾಶದ ಒಂದು ದಿಕ್ಕಿನಿಂದ ಇನ್ನೊಂದು ದಿಕ್ಕಿನವರೆಗೆ ಮಿನುಗಿ ಹೊಳೆಯುವ ಮಿಂಚಿನಂತೆ ನರಪುತ್ರನು ತಾನು ಬರುವ ಕಾಲದಲ್ಲಿ ಕಾಣಿಸಿಕೊಳ್ಳುವನು. ಆದರೆ ಅದಕ್ಕೆ ಮೊದಲು ಆತನು ತೀವ್ರ ಯಾತನೆಯನ್ನು ಅನುಭವಿಸಿ ಈ ಪೀಳಿಗೆಯಿಂದ ತಿರಸ್ಕೃತನಾಗಬೇಕು," ಎಂದರು.

13.11.2019 - "ಎದ್ದು ಹೋಗು; ನಿನ್ನ ವಿಶ್ವಾಸವೇ ನಿನ್ನನ್ನು ಸ್ವಸ್ಥಪಡಿಸಿದೆ ,"

ಮೊದಲನೇ ವಾಚನ: ಜ್ಞಾನ ಗ್ರಂಥ 6:1-11

ಅರಸುಗಳೇ, ಕೇಳಿ ತಿಳಿದುಕೊಳ್ಳಿ; ಜಗದ ನ್ಯಾಯಮೂರ್ತಿಗಳೇ, ಅರ್ಥಮಾಡಿಕೊಳ್ಳಿ; ಬಹು ಜನಗಳ ಮೇಲೆ ದೊರೆತನ ಮಾಡುವವರೇ, ಆಲಿಸಿ, ಅನೇಕ ರಾಷ್ಪ್ರಗಳ ಮೇಲೆ ಹೆಚ್ಚಳಪಡುವವರೆ, ಕಿವಿಗೊಡಿ: ನಿಮಗೆ ಒಡೆತನ ದೊರೆತದ್ದು ಸರ್ವೇಶ್ವರನಿಂದ, ನಿಮ್ಮ ಪ್ರಭುತ್ವ ಬಂದುದು ಆ ಮಹೋನ್ನತನಿಂದ ನಿಮ್ಮ ಕಾರ್ಯಗಳನ್ನು ಶೋಧಿಸುವವನು ಆತನೇ, ನಿಮ್ಮ ಸಂಕಲ್ಪಗಳನ್ನು ಪರಿಶೀಲಿಸುವವನು ಆತನೇ, ಆತನ ರಾಜ್ಯದ ರಾಯಭಾರಿಗಳು ನೀವೆಲ್ಲ: ಸರಿಯಾಗಿ ನೀವು ನ್ಯಾಯ ತೀರಿಸಲಿಲ್ಲ, ಆತನ ಆಜ್ಞೆಗಳನ್ನು ಪರಿಪಾಲಿಸಲಿಲ್ಲ ಆ ದೇವರ ಸಂಕಲ್ಪದಂತೆ ನಡೆದುಕೊಳ್ಳಲಿಲ್ಲ. ಆತ ನಿಮ್ಮ ಮೇಲೆರಗುವನು ತ್ವರೆಯಾಗಿ, ಭೀಕರವಾಗಿ ಉನ್ನತ ಸ್ಥಾನದಲ್ಲಿರುವ ನಿಮಗೆ ತೀರ್ಪಿಡುವನು ಕ್ರೂರವಾಗಿ. ದೀನರಿಗೆ ದಯಾಪೂರಿತ ಕ್ಷಮೆ ದೊರಕಬಹುದು ಬಲಾಢ್ಯರಿಗಾದರೋ ಕಠಿಣ ಪರಿಕ್ಷೆ ಕಾದಿರುವುದು. ಸರ್ವರಿಗೂ ದೊರೆಯಾದ ಸರ್ವೇಶ್ವರ ಮುಖ ದಾಕ್ಷಿಣ್ಯ ತೋರುವವನಲ್ಲ ದೊಡ್ಡಸ್ತಿಕೆಯನ್ನು ಗಮನಿಸುವವನಲ್ಲ ಹಿರಿದು ಕಿರಿದುಗಳೆರಡನ್ನು ಮಾಡಿದಾತ, ಎಲ್ಲರನ್ನು ಸಮನಾಗಿ ನೋಡಿಕೊಳ್ಳಬಲ್ಲ. ಆದರೂ ಬಲವಂತರಿಗಾಗುವ ಪರೀಕ್ಷೆ ಇರುವುದು ಕಠಿಣತರವಾಗಿಯೇ. ಎಂದೇ ಅರಸುಕುಮಾರರೇ, ನನ್ನೀ ಬೋಧನೆಗಳೆಲ್ಲ ನಿಮಗಾಗಿಯೇ; ಸುಜ್ಞಾನಿಗಳಾಗಿ, ನೀವು ಸನ್ಮಾರ್ಗ ಬಿಡಬಾರದೆಂದೇ ಇದ ನುಡಿದಿರುವೆ. ಶುದ್ಧಾಚಾರಗಳನ್ನು ಶ್ರದ್ಧೆಯಿಂದ ಪಾಲಿಸಿದರೆ ಪರಿಶುದ್ಧರಾಗುವರು ಅವುಗಳಲ್ಲಿ ಸುಶಿಕ್ಷಿತರಾದವರು ಸರಿಯಾಗಿ ಉತ್ತರಿಸಬಲ್ಲರು. ಆದುದರಿಂದ ನನ್ನೀ ನುಡಿಗಳನು ಬಯಸಿರಿ, ಅವುಗಳಿಗಾಗಿ ಹಂಬಲಿಸಿರಿ; ಆಗ ಸುರಕ್ಷಿತರಾಗುವಿರಿ.

ಕೀರ್ತನೆ: 82:3-4, 6-7

ಶ್ಲೋಕ: ಎದ್ದೇಳು ದೇವಾ, ಸ್ಥಾಪಿಸು ನ್ಯಾಯವನು ಧರೆಯೊಳು

ಶುಭಸಂದೇಶ: ಲೂಕ 17:11-19

ಯೇಸುಸ್ವಾಮಿ ಜೆರುಸಲೇಮಿಗೆ ಪ್ರಯಾಣ ಮಾಡುತ್ತಾ ಸಮಾರಿಯ ಹಾಗೂ ಗಲಿಲೇಯ ಗಡಿಗಳ ನಡುವೆ ಹಾದು ಹೋಗುತ್ತಿದ್ದರು. ಒಂದು ಗ್ರಾಮವನ್ನು ಸಮೀಪಿಸಿದಾಗ ಕುಷ್ಟ ರೋಗದಿಂದ ನರಳುತ್ತಿದ್ದ ಹತ್ತು ಮಂದಿ ಅವರಿಗೆ ಎದುರಾಗಿ ಬಂದರು. ದೂರದಲ್ಲೇ ನಿಂತು, "ಯೇಸುವೇ, ಗುರುವೇ, ನಮ್ಮ ಮೇಲೆ ಕರುಣೆಯಿಡಿ," ಎಂದು ಕೂಗಿ ಕೇಳಿಕೊಂಡರು, ಯೇಸು ಅವರನ್ನು ನೋಡಿ, "ನೀವು ಯಾಜಕರ ಬಳಿಗೆ ಹೋಗಿರಿ. ಅವರು ನಿಮ್ಮನ್ನು ಪರೀಕ್ಷಿಸಲಿ," ಎಂದರು. ಅಂತೆಯೇ, ಅವರು ದಾರಿಯಲ್ಲಿ ಹೋಗುತ್ತಿರುವಾಗಲೇ ಗುಣ ಹೊಂದಿದರು. ಅವರಲ್ಲಿ ಒಬ್ಬನು ತಾನು ಗುಣಹೊಂದಿದ್ದನ್ನು ಕಂಡು, ಹರ್ಷೋದ್ಗಾರದಿಂದ ದೇವರನ್ನು ಸ್ತುತಿಸುತ್ತಾ ಹಿಂದಿರುಗಿ ಬಂದನು. ಯೇಸುವಿನ ಪಾದಕ್ಕೆ ಸಾಷ್ಟಾಂಗವೆರಗಿ ಕೃತಜ್ಞತೆಯನ್ನು ಸಲ್ಲಿಸಿದನು. ಇವನೋ ಸಮಾರಿಯದವನು! ಆಗ ಯೇಸು, "ಹತ್ತುಮಂದಿ ಗುಣ ಹೊಂದಿದರಲ್ಲವೆ? ಮಿಕ್ಕ ಒಂಭತ್ತು ಮಂದಿ ಎಲ್ಲಿ?  ದೇವರನ್ನು ಸ್ತುತಿಸುವುದಕ್ಕೆ ಈ ಹೊರನಾಡಿನವನ ಹೊರತು ಬೇರಾರೂ ಬರಲಿಲ್ಲವೇ?" ಎಂದರು. ಆನಂತರ ಆ ಸಮಾರಿಯದವನಿಗೆ, "ಎದ್ದು ಹೋಗು; ನಿನ್ನ ವಿಶ್ವಾಸವೇ ನಿನ್ನನ್ನು ಸ್ವಸ್ಥಪಡಿಸಿದೆ ," ಎಂದು ಹೇಳಿದರು.

12.11.2019 - "ನಾವು ಕೇವಲ ಆಳುಗಳು ನಮ್ಮ ಕರ್ತವ್ಯವನ್ನು ನಾವು ಮಾಡಿದ್ದೇವೆ"

ಮೊದಲನೇ ವಾಚನ: ಜ್ಞಾನಗ್ರಂಥ 2:23-3:9

ದೇವರು ಮಾನವನನ್ನು ಸೃಷ್ಟಿಸಿದ್ದು ಅಮರತ್ವಕ್ಕಾಗಿ ಅವನನ್ನು ರಚಿಸಿದ್ದು ತಮ್ಮ ಸ್ವರೂಪಕ್ಕನುಗುಣವಾಗಿ. ಸೈತಾನನ ಮತ್ಸರದಿಂದಲೇ ಮರಣ ಪ್ರವೇಶಿಸಿತು ಲೋಕವನ್ನು ಅವನ ಪಕ್ಷಕೆ ಸೇರಿದವರೆಲ್ಲರು ಅನುಭವಿಸುವರು ಅದನು. ಸಜ್ಜನರ ಆತ್ಮಗಳಿರುವುವು ದೇವರ ಕೈಯೊಳು, ಅವರನ್ನು ಮುಟ್ಟದು ಮಹಾಯಾತನೆ ಯಾವುದು. ಮಂದಮತಿಯ ಕಣ್ಣಿಗೆ ಸತ್ತವರಂತೆ ಅವರು ಕಾಣಿಸಿಕೊಂಡರು ಅವರು ಗತಿಸಿ ಹೋದುದು ಅವನಿಂದ ತೊಲಗಿದ ಕೆಡಂತಿತ್ತು ಸಜ್ಜನಿರಿಗಾದ ಸಾವು ಮಹಾ ವಿಪತ್ತು ಎಂದವನಿಗೆ ತೋರಿತು ಅವರಾದರೋ ಶಾಂತಿಸಮಾಧಾನದಿಂದ ನೆಮ್ಮದಿಯಾಗಿರುವರು. ಮಾನವನ ದೃಷ್ಟಿಯಲ್ಲಿ ಅವರು ಕಂಡುಬಂದರು ಶಿಕ್ಷಿಸಲ್ಪಟ್ಟವರಂತೆ ಅವರಲ್ಲಾದರೋ ತುಂಬಿತ್ತು ಅಮರತ್ವದ ನಂಬಿಕೆ ನಿರೀಕ್ಷೆ. ಅವರು ಅನುಭವಿಸಿದ ಶಿಕ್ಷೆ ಅಲ್ಪ, ಹೊಂದುವ ಸೌಭಾಗ್ಯ ಅಪಾರ ಶೋಧಿಸಿದ ತರುವಾಯ ದೇವರಿಗೆ ಅವರು ಕಂಡುಬಂದರು ಯೋಗ್ಯಾರ್ಹ. ಶೋಧಿಸಿದರವರನು ಪುಟಕ್ಕಿಟ್ಟ ಚಿನ್ನದಂತೆ. ಅಂಗೀಕೃತರಾದರು ಪೂರ್ಣ ದಹನಬಲಿಯಂತೆ. ಪ್ರಕಾಶಿಸುವರು ದೇವರನು ಸಂದರ್ಶಿಸುವ ಕಾಲದಲಿ ಹೊಳೆಯುವರು ಒಣಹುಲ್ಲಿನೊಳಗಿನ ಕಿಡಿಗಳೋಪಾದಿ, ನ್ನಾಯತೀರಿಸುವರವರು ಜನಾಂಗಗಳಿಗೆ, ದೊರೆತನ ಮಾಡುವರವರು ಜನಗಳ ಮೇಲೆ ದೇವರ ಪ್ರಜೆಗಳಾಗಿರುವರು ಸದಾಕಾಲಕೆ. ಸತ್ಯವನು ಅರಿವರು ದೇವರಲಿ ಭರವಸೆಯಿಡುವರು.

ಕೀರ್ತನೆ: 34:2-3, 16-17, 18-19

ಶ್ಲೋಕ: ಪ್ರಭುವನು ನಾ ಕೊಂಡಾಡುವೆ ಎಲ್ಲ ಕಾಲದೊಳು

ಶುಭಸಂದೇಶ: ಲೂಕ  17:7-10


ಯೇಸುಸ್ವಾಮಿ ತಮ್ಮ ಶಿಷ್ಯರನ್ನುದ್ದೇಶಿಸಿ: "ನಿಮಗೆ ಒಬ್ಬ ಆಳಿದ್ದಾನೆಂದು ಭಾವಿಸೋಣ. ಅವನು ಹೊಲ ಉತ್ತೋ, ಕುರಿ ಮೇಯಿಸಿಯೋ ಮನೆಗೆ ಬರುತ್ತಾನೆ. ಬಂದಾಕ್ಷಣವೇ, "ಬಾ, ನನ್ನೊಂದಿಗೆ ಊಟಮಾಡು," ಎಂದು ನಿಮ್ಮಲ್ಲಿ ಯಾರಾದರೂ ಅವನಿಗೆ ಹೇಳುತ್ತಾರೆಯೇ? ಇಲ್ಲ. ಅದಕ್ಕೆ ಬದಲಾಗಿ "ಊಟ ಸಿದ್ಧಮಾಡು; ನಾನು ಊಟಮಾಡಿ ಮುಗಿಸುವ ತನಕ ನಡುಕಟ್ಟಿಕೊಂಡು ನನಗೆ ಉಪಚಾರ ಮಾಡು. ಆನಂತರ ನೀನು ಊಟ ಮಾಡುವೆಯಂತೆ," ಎಂದು ಹೇಳುತ್ತಾರಲ್ಲವೇ ತಮ್ಮ ಆಜ್ಞೆಯ ಪ್ರಕಾರ ನಡೆದುಕೊಂಡ ಆಳಿಗೆ ಅವರು ಕೃತಜ್ಞತೆ ಸಲ್ಲಿಸುತ್ತಾರೆಯೇ? ಇಲ್ಲ. ಹಾಗೆಯೇ ನೀವು ಸಹ ನಿಮಗೆ ವಿಧಿಸಿದ್ದನ್ನು ಮಾಡಿ ಮುಗಿಸಿದ ನಂತರ, "ನಾವು ಕೇವಲ ಆಳುಗಳು ನಮ್ಮ ಕರ್ತವ್ಯವನ್ನು ನಾವು ಮಾಡಿದ್ದೇವೆ," ಎಂದುಕೊಳ್ಳಿರಿ," ಎಂದರು.

11.11.19 - "ನಿನ್ನ ಸಹೋದರನು ತಪ್ಪು ಮಾಡಿದರೆ ಅವನನ್ನು ಖಂಡಿಸು; ಪಶ್ಚಾತ್ತಾಪಪಟ್ಟರೆ ಕ್ಷಮಿಸಿ ಬಿಡು"

ಮೊದಲನೇ ವಾಚನ: ಜ್ಞಾನ ಗ್ರಂಥ 1:1-7

ಪೊಡವಿಯ ಪಾಲಕರೇ, ನ್ಯಾಯ ನೀತಿಯನ್ನು ಪ್ರೀತಿಸಿರಿ ಯಥಾರ್ಥ ಚಿತ್ತರಾಗಿ ಸರ್ವೇಶ್ವರನನ್ನು ಧ್ಯಾನಿಸಿರಿ ನಿಷ್ಕಪಟ ಮನಸ್ಸಿನಿಂದ ಆತನನ್ನು ಅರಸಿರಿ. ಸರ್ವೇಶ್ವರನು ದರ್ಶನವೀಯುವುದು ತನ್ನಲ್ಲಿ ಅಪನಂಬಿಕೆ ಪಡದವರಿಗೆ ಸರ್ವೇಶ್ವರನನ್ನು ಅರಿತುಕೊಂಡವರು ಅವರನ್ನು ಗುರಿಪಡಿಸರು ಪರೀಕ್ಷೆಗೆ. ದುರಾಲೋಚನೆಗಳು ಮಾನವನನ್ನು ದೂರ ಮಾಡುತ್ತವೆ ದೇವರಿಂದ. ದೇವರನ್ನು ಪರೀಕ್ಷಿಸಲೆತ್ನಿಸುವವನನ್ನು ಹುಚ್ಚನನ್ನಾಗಿಸುತ್ತದೆ ಆತನ ಶಕ್ತಿ ಸಾಮರ್ಥ್ಯ. ಸುಜ್ಞಾನ ಪ್ರವೇಶಿಸದು ಕಪಟಾತ್ಮವನ್ನು ಪಾಪಾಧೀನವಾದ ಹೃದಯದಲ್ಲಿ ಅದು ತಂಗದು. ಸುಶಿಕ್ಷಿತವಾದ ನಿರ್ಮಲ ಆತ್ಮ ಮೋಸದೆಡೆ ನಿಲ್ಲದು ಅವಿವೇಕ ಆಲೋಚನೆಗಳಿಂದದು ಓಡಿಹೋಗುವುದು ಅನ್ಯಾಯವು ಸಮೀಪಿಸಿದಾಗ ಅದು ಅಸಹ್ಯಪಡುವುದು. ಸುಜ್ಞಾನವೆಂಬುದು ಮಾನವನನ್ನು ಸ್ನೇಹಿಸುವ ಚೈತನ್ಯವು ಆದರೆ ದೇವದೂಷಣೆ ಆಡುವವರನ್ನು ಅದು ದಂಡಿಸದೆ ಬಿಡದು. ಏಕೆಂದರೆ ಅಂತರಾಲೋಚನೆಗಳಿಗೆ ದೇವರೇ ಸಾಕ್ಷಿ ಆತ ಹೃದಯಗಳನ್ನೂ ವೀಕ್ಷಿಸುತ್ತಾನೆ ಗಮನಿಸಿ ನಾಲಿಗೆ ಆಡುವುದನ್ನು ಅರ್ಥಮಾಡಿಕೊಳ್ಳುತ್ತಾನೆ ಚೆನ್ನಾಗಿ. ಸರ್ವೇಶ್ವರನ ಚೈತನ್ಯ ವಿಶ್ವವನ್ನು ತುಂಬಿದೆ ಸಮಸ್ತವನ್ನು ಒಟ್ಟಿಗೆ ಹಿಡಿದಿರುವ ಅದಕ್ಕೆ ಪ್ರತಿಯೊಂದೂ ತಿಳಿದಿದೆ.

ಕೀರ್ತನೆ: 139:1-3, 4-6, 7-8, 9-10
ಶ್ಲೋಕ: ನಡೆಸೆನ್ನ ಓ ಪ್ರಭೂ, ಆ ಸನಾತನ ಪಥದಲಿ

ಪ್ರಭೂ, ಪರಿಶೋಧಿಸಿರುವೆ ನೀ ನನ್ನನು|
ಅರಿತುಕೊಂಡಿರುವೆ ಅಂತರಂಗವನು||
ನಾ ಕೂರುವುದೂ ಏಳುವುದೂ ನಿನಗೆ ಗೊತ್ತಿದೆ|
ನನ್ನಾಲೋಚನೆ ದೂರದಿಂದಲೇ ನಿನಗೆ ತಿಳಿದಿದೆ||
ನನ್ನ ನಡೆಯನು, ನಿದ್ರೆಯನು ನೀ ಬಲ್ಲಾತ|
ನನ್ನ ನಡತೆಯಲ್ಲವೂ ನಿನಗೆ ಸುಪರಿಚಿತ||

ಪ್ರಭೂ ನಾ ಮಾತೆತ್ತುವುದಕ್ಕೆ ಮುಂಚಿತವಾಗಿ|
ತಿಳಿದುಹೋಗಿದೆ ಎಲ್ಲ ನಿನಗೆ ಪೂರ್ತಿಯಾಗಿ||
ನನ್ನ ಹಿಂದೆಯೂ ಮುಂದೆಯೂ ನೀನಿರುವೆ|
ಅಭಯ ಹಸ್ತವನು ನನ್ನ ಮೇಲಿರಿಸಿರುವೆ||
ನನ್ನ ಕುರಿತು ನಿನಗಿರುವ ಅರಿವು ಅಗಾಧ|
ನನ್ನ ಬುದ್ಧಿಗದು ಸಿಲುಕದಷ್ಟು ಉನ್ನತ||

ನಾನೆಲ್ಲಿಗೆ ಹೋಗಲು ಸಾಧ್ಯ, ನಿನ್ನಾತ್ಮನಿಂದ ತಪ್ಪಿಸಿಕೊಳ್ಳಲು?|
ನಾನೆಲ್ಲಿಗೆ ಓಡಲು ಸಾಧ್ಯ, ನಿನ್ನ ಸನ್ನಿಧಿಯಿಂದ ಮರೆಯಾಗಲು?||
ಆಕಾಶಕ್ಕೆ ನಾನೇರಿದರೂ ನೀನಿರುವೆ ಅಲ್ಲಿ|
ಪಾತಾಳದಲಿ ನಾ ನಿದ್ರಿಸಿದರೂ ನೀನಿರುವೆ ಅಲ್ಲಿ||

ನಾನರುಣನ ರೆಕ್ಕೆಗಳನ್ನೇರಿ ಹಾರಿದರೂ|
ಸಮುದ್ರ ಕಟ್ಟಕಡೆಗಳಲಿ ನಾ ಸೇರಿದರೂ||
ಅಲ್ಲೂ ನನ್ನ ನಡೆಸುವುದು ನಿನ್ನ ಕೈ|
ನನ್ನ ಹಿಡಿದಿರುವುದು ನಿನ್ನ ಬಲಗೈ||

ಶುಭಸಂದೇಶ: ಲೂಕ 17:1-6

ಯೇಸುಸ್ವಾಮಿ ತಮ್ಮ ಶಿಷ್ಯರನ್ನು ಉದ್ದೇಶಿಸಿ, "ಪಾಪ ಪ್ರಚೋದನೆಗಳು ಬಂದೇ ಬರುತ್ತವೆ. ಆದರೆ ಅವು ಯಾರಿಂದ ಬರುತ್ತವೋ ಅವನಿಗೆ ಧಿಕ್ಕಾರ! ಅಂಥವನು ಈ ಚಿಕ್ಕವರಲ್ಲಿ ಒಬ್ಬನಿಗೆ ಪಾಪಕ್ಕೆ ಕಾರಣನಾಗುವುದಕ್ಕಿಂತ, ಬೀಸುವ ಕಲ್ಲನ್ನು ಕುತ್ತಿಗೆಗೆ ಬಿಗಿಸಿಕೊಂಡು ಸಮುದ್ರದಲ್ಲಿ ದಬ್ಬಿಸಿಕೊಳ್ಳುವುದೇ ಲೇಸು. ನೀವಾದರೋ ಎಚ್ಚರಿಕೆಯಿಂದಿರಿ! "ನಿನ್ನ ಸಹೋದರನು ತಪ್ಪು ಮಾಡಿದರೆ ಅವನನ್ನು ಖಂಡಿಸು; ಪಶ್ಚಾತ್ತಾಪಪಟ್ಟರೆ ಕ್ಷಮಿಸಿಬಿಡು. ಅವನು ದಿನಕ್ಕೆ ಏಳುಸಾರಿ ನಿನಗೆ ವಿರುದ್ಧ ತಪ್ಪು ಮಾಡಿ ಪ್ರತಿಯೊಂದು ಸಾರಿಯೂ ಪಶ್ಚಾತ್ತಾಪಪಟ್ಟು ನಿನ್ನ ಬಳಿಗೆ ಬಂದು, "ಕ್ಷಮಿಸು," ಎಂದು ಕೇಳಿಕೊಂಡರೆ ನೀನು ಅವನನ್ನು ಕ್ಷಮಿಸಲೇಬೇಕು," ಎಂದರು. ಸ್ವಾಮಿಾ, ನಮ್ಮ ವಿಶ್ವಾಸವನ್ನು ಹೆಚ್ಚಿಸಿರಿ," ಎಂದು ಪ್ರೇಷಿತರು ಕೇಳಿಕೊಂಡರು. ಆಗ ಯೇಸುಸ್ವಾಮಿ, "ಸಾಸಿವೆ ಕಾಳಿನಷ್ಟು ವಿಶ್ವಾಸ ನಿಮ್ಮಲ್ಲಿದ್ದು, ನೀವು ಈ ಅತ್ತಿ ಮರಕ್ಕೆ, "ನೀನು ಬೇರು ಸಹಿತ ಕಿತ್ತುಕೊಂಡು ಹೋಗಿ ಸಮುದ್ರದಲ್ಲಿ ನಾಟಿಕೊ," ಎಂದು ಆಜ್ಞಾಪಿಸಿದ್ದೇ ಆದರೆ ಅದು ನಿಮಗೆ ವಿಧೇಯವಾಗಿ ನಡೆದುಕೊಳ್ಳುವುದು.

10.11.2019

ಮೊದಲನೇ ವಾಚನ: 2 ಮಕ್ಕಬಿಯರು 7:1-2, 9-14

ಆ ಕಾಲದಲ್ಲಿ ಏಳು ಮಂದಿ ಸಹೋದರರನ್ನು ಅವರ ತಾಯಿಯೊಂದಿಗೆ, ಅರಸನ ಅಪ್ಪಣೆಯ ಮೇರೆಗೆ ದಸ್ತಗಿರಿ ಮಾಡಲಾಯಿತು. ನಿಷೇಧಿಸಲಾಗಿದ್ದ ಹಂದಿಯ ಮಾಂಸವನ್ನು ತಿನ್ನಬೇಕೆಂದು ಅವರನ್ನು ಬಲವಂತ ಪಡಿಸಲಾಗಿತ್ತು. ಚಾಟಿಯಿಂದಲೂ ಬಾರುಗಳಿಂದಲೂ ಹೊಡೆದು ಅವರನ್ನು ಬಾಧಿಸಿದರು ಅವರಲ್ಲೊಬ್ಬನು ಇತರರ ಪರವಾಗಿ ಮಾತನಾಡುತ್ತಾ, "ನಮ್ಮಿಂದ ನೀವು ಏನನ್ನು ತಿಳಿದುಕೊಳ್ಳಬಯಸುತ್ತೀರಿ? ನಮ್ಮ ಪೂರ್ವಜರ ಧರ್ಮವಿಧಿಗಳನ್ನು ಉಲ್ಲಂಘಿಸುವುದಕ್ಕೆ ಬದಲು, ನಾವು ಸಾಯುವುದಕ್ಕೆ ಸಿದ್ದ" ಎಂದನು. ಎರಡನೆಯವನು ಕೊನೆಯುಸಿರು ಎಳೆಯುತ್ತಿರುವಾಗ ಅರಸನನ್ನು ನೋಡಿ, "ಹೇ ಕಟುಕನೇ, ಇಲ್ಲಿರುವಾಗ ನಮ್ಮ ಜೀವವನ್ನು ತೆಗೆದು ಬಿಡುತ್ತೀಯಾ ಸರಿ; ಆದರೆ ವಿಶ್ವದ ಒಡೆಯರಾದ ದೇವರು, ನಮ್ಮನ್ನು ಅಮರ ಹಾಗೂ ಪುನಶ್ಚೇತನಗೊಳಿಸುವ ಜೀವಕ್ಕೆ ಎಬ್ಬಿಸುತ್ತಾರೆ; ಕಾರಣ, ನಾವು ಅವರ ಆಜ್ಞಾಪಾಲನೆಗಾಗಿ ಪ್ರಾಣಬಿಟ್ಟಿದೇವೆ," ಎಂದನು. ಅವನ ತರುವಾಯ ಅವರು ವಿನೋದಕ್ಕಾಗಿ ಮೂರನೆಯವನನ್ನು ಹಿಡಿದುಕೊಂಡರು. ನಾಲಗೆ ಚಾಚಬೇಕೆಂದು ಹೇಳಿದಾಗ ಅವನು ತಕ್ಷಣವೇ ನಾಲಗೆಯನು ಚಾಚಿದನು; ಧೈರ್ಯದಿಂದ ತನ್ನ ಕೈಗಳನ್ನೂ ಮುಂದಕ್ಕೆ ಒಡ್ಡುತ್ತಾ, "ನಾನು ಇವುಗಳನ್ನು ಪರಲೋಕದಿಂದ ಪಡೆದೆನು. ಅವರ ನಿಯಮಕ್ಕಾಗಿ ಇವುಗಳನ್ನು ತೊರೆಯುತ್ತೇನೆ. ಆದರೆ ಪುನಃ ನಾನು ಅವುಗಳನ್ನು ಪಡೆಯುವೆನು, ಇದು ನನ್ನ ದೃಡನಂಬಿಕೆ!" ಎಂದನು. ತತ್ಪರಿಣಾಮವಾಗಿ, ರಾಜನೂ ಅವನೊಂದಿಗಿದ್ದ ಇತರರೂ ಈ ಯಾವಕನಧೈರ್ಯವನ್ನು ನೋಡಿ ನಿಬ್ಬೆರಗಾದರು; ಅವನು ತನ್ನ ಉಪದ್ರವಗಳನ್ನು ಕಿಂಚಿತ್ತು ಲೆಕ್ಕಿಸಲಿಲ್ಲ. ಅವನು ಸತ್ತಮೇಲೆ, ನಾಲ್ಕನೆಯವನನ್ನು ಸಹ ಅದೇ ಪ್ರಕಾರ ಹಿಂಸಿಸಿ ಉಪದ್ರವಪಡಿಸಿದರು. ಅವನು ಪ್ರಾಣಬಿಡುವಾಗ, "ಮರ್ತ್ಯಮಾನವರ ಕೈಗಳಿಂದ ಸಾವನ್ನು ಅನುಭವಿಸಿ, ದೇವರಿಂದ ಮರಳಿ ಎಬ್ಬಿಸಲ್ಪಡುವೆನೆಂಬ ದೇವದತ್ತ ನಿರೀಕ್ಷೆಯನ್ನು ಎದುರುನೋಡುವುದು ಶ್ರೇಯಸ್ಕರ; ನೀವಾದರೋ ಜೀವಕ್ಕೆ ಪುನಃ ಉತ್ಥಾನವಾಗುವಂತಿಲ್ಲ," ಎಂದನು.

ಕೀರ್ತನೆ: 17:1, 5-6, 8, 15
 ಶ್ಲೋಕ: ಪ್ರಭೂ, ಎಚ್ಚೆತ್ತು ನಿನ್ನ ಮುಖದರ್ಶನದಿಂದ ತೃಪ್ತನಾಗುವೆನು


ಎರಡನೇ ವಾಚನ: 2 ಥೆಸಲೋನಿಯರಿಗೆ 2:16-3:5


ಸಹೋದರರೇ, ನಮ್ಮನ್ನು ಪ್ರೀತಿಸಿ ನಿತ್ಯಾದರಣೆಯನ್ನೂ ಉತ್ತಮ ನಿರೀಕ್ಷೆಯನ್ನೂ ಅನುಗ್ರಹವಾಗಿ ಕೊಟ್ಟಿರುವ ನಮ್ಮ ಪ್ರಭುವಾದ ಯೇಸುಕ್ರಿಸ್ತರು ಹಾಗೂ ಪಿತನಾದ ದೇವರು ನಿಮ್ಮ ಹೃನ್ಮನಗಳನ್ನು ಉತ್ತೇಜನಗೊಳಿಸಲಿ. ಸಕಲ ಸತ್ಕಾರ್ಯಗಳಲ್ಲೂ ಸನ್ನುಡಿಯಲ್ಲು ನಿಮ್ಮನ್ನು ದೃಢಪಡಿಸಲಿ. ಕೊನೆಯದಾಗಿ ಸಹೋದರರೇ, ನಮಗಾಗಿಯೂ ಪ್ರಾರ್ಥನೆಮಾಡಿ; ಪ್ರಭುವಿನ ಸಂದೇಶ ನಿಮ್ಮಲ್ಲಿ ಹಬ್ಬಿಹರಡಿದಂತೆ ಎಲ್ಲೆಲ್ಲಿಯೂ ಪಸರಿಸಿ ಪ್ರಖ್ಯಾತವಾಗಲಿ. ದುಷ್ಟರ ಹಾಗೂ ಕೆಡುಕರ ಬಲೆಗೆ ನಾವು ಬೀಳದಂತೆ ಪ್ರಾರ್ಥಿಸಿರಿ. ಏಕೆಂದರೆ, ವಿಶ್ವಾಸವೆಂಬುದು ಎಲ್ಲರಲ್ಲಿಯೂ ಇರುವುದಿಲ್ಲ. ಪ್ರಭು ವಿಶ್ವಾಸಕ್ಕೆ ಪಾತ್ರರು. ಅವರು ನಿಮ್ಮನ್ನು ಸದೃಢರನ್ನಾಗಿ ಮಾಡಿ ಕೇಡಿನಿಂದ ನಿಮ್ಮನ್ನು ಕಾಪಾಡುವರು. ನಾವು ನಿಮಗಿತ್ತ ಆಜ್ಞೆಗಳನ್ನು ಪಾಲಿಸಿಕೊಂಡು ಬರುತ್ತಿದ್ದೀರಿ; ಇನ್ನು ಮುಂದೆಯೂ ಪಾಲಿಸುತ್ತೀರಿ ಎಂದು ನಿಮ್ಮ ವಿಷಯವಾಗಿ ಪ್ರಭುವಿನಲ್ಲಿ ನಮಗೆ ಭರವಸೆಯಿದೆ. ದೇವರ ಪ್ರೀತಿಯನ್ನೂ ಕ್ರಿಸ್ತ ಯೇಸುವಿನ ಸಹನೆಯನ್ನೂ ನೀವು ಕಲಿತುಕೊಳ್ಳುವಂತೆ, ಪ್ರಭುವೇ ನಿಮ್ಮ ಅಂತರಂಗವನ್ನು ಬೆಳಗಿಸಲಿ.

ಶುಭಸಂದೇಶ: ಲೂಕ 20:27-38

ಸತ್ತಮೇಲೆ ಪುನರುತ್ಥಾನ ಇಲ್ಲ ಎಂದು ವಾದಿಸುತ್ತಿದ್ದ ಸದ್ದುಕಾಯರಲ್ಲಿ ಕೆಲವರು ಯೇಸುಸ್ವಾಮಿಯ ಬಳಿಗೆ ಬಂದು ಈ ಪ್ರಶ್ನೆಹಾಕಿದರು: "ಬೋಧಕರೇ, "ಒಬ್ಬನು ಮಕ್ಕಳಿಲ್ಲದೆ ಸತ್ತರೆ, ಅವನ ಹೆಂಡತಿಯನ್ನು ಅವನ ತಮ್ಮನು ಮದುವೆ ಮಾಡಿಕೊಂಡು ಅಣ್ಣನಿಗೆ ಸಂತಾನ ಪಡೆಯಬೇಕು," ಎಂದು ಮೋಶೆ ನಮಗಾಗಿ ಬರೆದಿಟ್ಟಿದ್ದಾನಲ್ಲವೆ? ಒಮ್ಮೆ ಏಳುಮಂದಿ ಅಣ್ಣತಮ್ಮಂದಿರಿದ್ದರು. ಅವರಲ್ಲಿ ಮೊದಲನೆಯವನಿಗೆ ಮದುವೆಯಾಯಿತು; ಆದರೆ ಅವನು ಮಕ್ಕಳಿಲ್ಲದೆ ಮೃತನಾದ. ಅವನ ಹೆಂಡತಿಯನ್ನು ಎರಡನೆಯವನು, ಆನಂತರ ಮೂರನೆಯವನು, ತದನಂತರ ಮಿಕ್ಕವರು, ಹೀಗೆ ಏಳು ಮಂದಿಯೂ ಒಬ್ಬರಾದ ಮೇಲೆ ಒಬ್ಬರು ಮದುವೆಯಾಗಿ ಸಂತಾನ ಇಲ್ಲದೆಯೇ ನಿಧನರಾದರು. ಕಟ್ಟಕಡೆಗೆ ಆ ಮಹಿಳೆಯೂ ಮರಣ ಹೊಂದಿದಳು. ಹೀಗಿರುವಲ್ಲಿ ಪುನರುತ್ಥಾನದ ದಿನ ಸತ್ತವರೆಲ್ಲರೂ ಜೀವದಿಂದ ಎದ್ದುಬರುವಾಗ, ಆಕೆ ಯಾರ ಪತ್ನಿಯಾಗುವಳು?" ಏಳು ಮಂದಿ ಸಹೋದರರೂ ಆಕೆಯನ್ನು ವಿವಾಹವಾಗಿದ್ದಾರಲ್ಲವೆ?" ಎಂದರು. ಅದಕ್ಕೆ ಯೇಸು, "ಈ ಲೋಕದ ಜೀವನದಲ್ಲಿ ಜನರು ಮದುವೆ ಮಾಡಿಕೊಳ್ಳುತ್ತಾರೆ, ಮದುವೆ ಮಾಡಿಕೊಡುತ್ತಾರೆ. ಆದರೆ ಸತ್ತವರು ಪುನರುತ್ಥಾನ ಹೊಂದಿ ಮರುಲೋಕ ಜೀವನಕ್ಕೆ ಯೋಗ್ಯರಾದಗ ಮದುವೆ ಮಾಡಿಕೊಳ್ಳುವುದೂ ಇಲ್ಲ, ಮದುವೆ ಮಾಡಿಕೊಡುವುದೂ ಇಲ್ಲ. ಅವರು ಅಲ್ಲಿ ದೇವದೂತರಿಗೆ ಸಮಾನರಾಗಿರುವರು; ಪುನರುತ್ಥಾನದ ಫಲವಾಗಿರುವ ಅವರು ದೇವರ ಮಕ್ಕಳಾಗಿರುವರು. ಸತ್ತವರು ಪುನರುತ್ಥಾನ ಹೊಂದುವುದನ್ನು ಮೋಶೆಯ ಗ್ರಂಥದಲ್ಲಿ, ಅಂದರೆ "ಉರಿಯುವ ಪೊದೆ"ಯ ಪ್ರಸ್ತಾಪವಿರುವ ಭಾಗದಲ್ಲಿ ಸ್ಪಷ್ಟಪಡಿಸಲಾಗಿದೆ. ಅಲ್ಲಿ ಸರ್ವೇಶ್ವರನನ್ನು, "ಅಬ್ರಹಾಮನ ದೇವರು, ಇಸಾಕನ ದೇವರು, ಯಕೋಬನ ದೇವರು ಆಗಿದ್ದಾರೆ" ಎಂದು ಹೇಳಲಾಗಿದೆ. ಹೀಗಿರುವಲ್ಲಿ ದೇವರು ಜೀವಂತ ದೇವರೇ ಹೊರತು ಮೃತರ ದೇವರಲ್ಲ; ಅವರ ದೃಷ್ಟಿಯಲ್ಲಿ ಸರ್ವರೂ ಜೀವಂತರು," ಎಂದರು.

09.11-2019 - ಯೇಸು ಹೇಳಿದ್ದು ತಮ್ಮ ದೇಹವೆಂಬ ದೇಗುಲವನ್ನು ಕುರಿತು

ಮೊದಲನೇ ವಾಚನ: ಯೆಜೆಕಿಯೇಲ 47:1-2, 8-9, 12 

ಆ ಮನುಷ್ಯ ನನ್ನನ್ನು ದೇವಸ್ಥಾನದ ಬಾಗಿಲಿಗೆ ಪುನಃ ಕರೆದು ತಂದನು: ಇಗೋ, ದೇವಸ್ಥಾನದ ಹೊಸ್ತಿಲ ಕೆಳಗಿನಿಂದ ನೀರು ಹೊರಟು ಪೂರ್ವದಕಡೆಗೆ ಹರಿಯುತ್ತಿತ್ತು. (ದೇವಸ್ಥಾನ ಪೂರ್ವಾಭಿಮುಖವಾಗಿತ್ತು). ಆ ನೀರು ದೇವಸ್ಥಾನದ ಬಲಗಡೆ ಕೆಳಗಿನಿಂದ ಹೊರಟು ಬಲಿಪೀಠದ ದಕ್ಷಿಣದಲ್ಲಿ ಹರಿಯುತ್ತಿತ್ತು. ಆಗ ಅವನು ಉತ್ತರ ಹೆಬ್ಬಾಗಿಲಿನಿಂದ ದೇವಾಲಯದ ಹೊರಗಿನ ಮಾರ್ಗವಾಗಿ ಸುತ್ತಿಸಿಕೊಂಡು ಪೂರ್ವದ ಹೆಬ್ಬಾಗಿಲಿಗೆ ಕರೆದು ತಂದನು. ಅಲ್ಲಿ ನೋಡಲು ಅದರ ಬಲಗಡೆ ಮೆಲ್ಲಮೆಲ್ಲನೆ ಹರಿಯುವ ನೀರು ಕಾಣಿಸಿತು. ಆಗ ಅವನು ನನಗೆ ಹೀಗೆ ಹೇಳಿದನು:, "ಈ ಪ್ರವಾಹ ಪೂರ್ವಪ್ರಾಂತ್ಯಕ್ಕೆ ಹೊರಟು ಅರಬಾ ಎಂಬ ಕಣಿವೆಗೆ ಇಳಿದು ಲವಣ ಸಮುದ್ರದ ಕಡೆಗೆ ಹರಿಯುವುದು: ದೇವಸ್ಥಾನದಿಂದ ಹೊರಟ ಪ್ರವಾಹವು ಲವಣಸಮುದ್ರಕ್ಕೆ ಸೇರಲು ಅದರ ನೀರು ಸಿಹಿಯಾಗುವುದು. ಈ ತೊರೆ ಎಲ್ಲೆಲ್ಲಿ ಹರಿಯುತ್ತದೋ ಅಲ್ಲಲ್ಲಿ ಗಂಪು ಗುಂಪಾಗಿ ಚಲಿಸುವ ಸಕಲ ವಿಧ ಜಲ ಜಂತುಗಳು ಬದುಕಿ ಬಾಳುವುವು; ಮಿಾನುಗಳು ತಂಡೋಪತಂಡವಾಗಿರುವುವು. ಈ ನೀರು ಸಮುದ್ರಕ್ಕೆ ಬೀಳಲು ಆ ನೀರು ಸಿಹಿಯಾಗುವುದು; ಈ ತೊರೆ ಎಲ್ಲೆಲ್ಲಿ ಹರಿದರೂ ಅಲ್ಲಲ್ಲಿ ಜೀವವುಂಟಾಗುವುದು. ತೊರೆಯ ಎರಡು ದಡಗಳಲ್ಲಿಯೂ ಸಕಲ ಫಲವೃಕ್ಷಗಳು ಬೆಳೆಯುವುವು. ಅವುಗಳ ಎಲೆ ಬಾಡದು, ಹಣ್ಣು ತೀರದು. ತೊರೆಯ ನೀರು ಪವಿತ್ರಾಲಯದೊಳಗಿಂದ ಹೊರಟು ಬಂದ ಕಾರಣ ಅವು ತಿಂಗಳು ತಿಂಗಳಲ್ಲಿಯೂ ಹೊಸ ಹೊಸ ಫಲವನ್ನು ಕೊಡುತ್ತಲಿರುವುವು; ಅವುಗಳ ಹಣ್ಣು ಆಹಾರಕ್ಕೂ, ಸೊಪ್ಪು ಔಷಧಕ್ಕೂ ಅನುಕೂಲಿಸುವುವು." 

ಕೀರ್ತನೆ: 46:3, 4, 5-6, 8, 11 

ಶ್ಲೋಕ: ನದಿಯೊಂದು ಆನಂದಗೊಳಿಸುವುದು ದೇವನಗರವನು ಪುನೀತಗೊಳಿಸುವುದು ಪರಾತ್ಪರನ ನಿವಾಸವನು.  

ಎರಡನೇ ವಾಚನ:  1 ಕೊರಿಂಥಿಯರಿಗೆ 3:9-11, 16-17 

ಸಹೋದರರೇ, ನಾವು ದೇವರ ಸಹ ಕಾರ್ಮಿಕರು. ನೀವು ದೇವರೇ ಸಾಗುವಳಿ ಮಾಡುವ ಹೊಲ; ಅವರೇ ನಿರ್ಮಿಸುತ್ತಿರುವ ಮಂದಿರ. ದೇವರು ನನಗಿತ್ತ ವರದಾನಗಳಿಗೆ ಅನುಸಾರವಾಗಿ ನಾನು ಚತುರ ಶಿಲ್ಪಿಯಂತೆ ಅಸ್ತಿವಾರ ಹಾಕಿದೆ. ಇನ್ನೊಬ್ಬನು ಅದರ ಮೇಲೆ ಕಟ್ಟುತ್ತಿದ್ದಾನೆ. ಆದರೆ ಕಟ್ಟುವ ಪ್ರತಿಯೊಬ್ಬನು ತಾನು ಹೇಗೆ ಕಟ್ಟುತ್ತಿದ್ದೇನೆ ಎಂಬುದರ ಬಗ್ಗೆ ಎಚ್ಚರದಿಂದಿರಲಿ. ಈಗಾಗಲೇ ಅಸ್ತಿವಾರ ಹಾಕಲಾಗಿದೆ. ಯೇಸುಕ್ರಿಸ್ತರೇ ಆ ಅಸ್ತಿವಾರ. ಇದಲ್ಲದೆ, ಬೇರೆ ಅಸ್ತಿವಾರವನ್ನು ಯಾರೂ ಹಾಕಲಾಗದು. ನೀವು ದೇವರ ಆಲಯವಾಗಿದ್ದೀರಿ. ದೇವರ ಆತ್ಮವು ನಿಮ್ಮಲ್ಲಿ ವಾಸಿಸುತ್ತದೆಂದು ನಿಮಗೆ ಚೆನ್ನಾಗಿ ತಿಳಿದಿದೆ. ಯಾವನಾದರೂ ದೇವಾಲಯವನ್ನು ನಾಶಮಾಡಿದರೆ ದೇವರು ಅವನನ್ನು ನಾಶಮಾಡುತ್ತಾರೆ. ದೇವರ ಆಲಯವು ಪವಿತ್ರವಾದುದು. ನೀವೇ ಆ ಆಲಯ.

 ಶುಭಸಂದೇಶ: ಯೊವಾನ್ನ 2:13-22 


ಯೆಹೂದ್ಯರ ಪಾಸ್ಕ ಹಬ್ಬವು ಹತ್ತಿರವಾಗಿದ್ದುದರಿಂದ ಯೇಸುಸ್ವಾಮಿ ಜೆರುಸಲೇಮಿಗೆ ತೆರಳಿದರು. ಅಲ್ಲಿಯ ಮಹಾದೇವಾಲಯದಲ್ಲಿ ದನ, ಕುರಿ ಮತ್ತು ಪಾರಿವಾಳಗಳನ್ನು ಮಾರುವವರು ಮತ್ತು ನಾಣ್ಯ ವಿನಿಮಯ ಮಾಡುವವರು ವ್ಯಾಪಾರಕ್ಕೆ ಕುಳಿತ್ತಿದ್ದರು. ಅದನ್ನು ಕಂಡ ಯೇಸು, ಹಗ್ಗವನ್ನು ಚಾವಟಿಯಂತೆ ಹೆಣೆದು ಅದರಿಂದ ಅವರನೆಲ್ಲಾ ದೇವಾಲಯದಿಂದ ಹೊರಗಟ್ಟಿದರು. ದನ ಕುರಿಗಳನ್ನು ಓಡಿಸಿದರು. ನಾಣ್ಯ ವಿನಿಮಯ ಮಾಡುವವರ ಮೇಜುಗಳನ್ನು ಕೆಡವಿ, ಚಿಲ್ಲರೆ ಹಣವನ್ನು ಚೆಲ್ಲಿದರು. ಪಾರಿವಾಳಗಳನ್ನು ಮಾರುತ್ತಿದ್ದವರಿಗೆ, "ಇವನ್ನು  ಇಲ್ಲಿಂದ ತೆಗೆದುಕೊಂಡು ಹೊರಡಿ. ನನ್ನ ಪಿತನ ಆಲಯವನ್ನು ಸಂತೆಯನ್ನಾಗಿ ಮಾಡಬೇಡಿ," ಎಂದು ಹೇಳಿದರು. "ನಿನ್ನ ಆಲಯದ ಮೇಲಿನ ಅಭಿಮಾನವು ನನ್ನನ್ನು ಬೆಂಕಿಯಂತೆ ದಹಿಸುತ್ತದೆ," ಎಂದು ಪವಿತ್ರ ಗ್ರಂಥದಲ್ಲೇ ಬರೆದಿರುವ ವಾಕ್ಯವು ಶಿಷ್ಯರಿಗೆ ಆಗ ನೆನಪಾಯಿತು. ಯೆಹೂದ್ಯರು, "ಇಷ್ಟೆಲ್ಲಾ ಮಾಡಲು ನಿನಗೆ ಅಧಿಕಾರವಿದೆ ಎಂದು ರುಜುವಾತುಪಡಿಸುವುದಕ್ಕೆ ಯಾವ ಪವಾಡವನ್ನು ಮಾಡಿ ತೋರಿಸಬಲ್ಲೆ?"  ಎಂದು ಯೇಸುವನ್ನು ಪ್ರಶ್ನಿಸಿದರು. ಅದಕ್ಕೆ ಯೇಸು, "ಈ ದೇವಾಲಯವನ್ನು ಕೆಡವಿಬಿಡಿ, ಮೂರು ದಿನಗಳಲ್ಲಿ ಅದನ್ನು ಪುನಃ ಎಬ್ಬಿಸುವೆನು," ಎಂದು ಉತ್ತರಕೊಟ್ಟರು. ಚಕಿತರಾದ ಯೆಹೂದ್ಯರು, "ಈ ದೇವಾಲಯವನ್ನು ಕಟ್ಟಲು ನಲವತ್ತಾರು ವರ್ಷಗಳು ಹಿಡಿದಿವೆ. ನೀನು ಮೂರು ದಿನಗಳಲ್ಲೇ ಅದನ್ನು ಎಬ್ಬಿಸಬಲ್ಲೆಯಾ?" ಎಂದು ಕೇಳಿದರು. ಯೇಸು ಹೇಳಿದ್ದು ತಮ್ಮ ದೇಹವೆಂಬ ದೇಗುಲವನ್ನು ಕುರಿತು. ಅವರು ಸತ್ತು ಪುನರುತ್ಥಾನ ಹೊಂದಿದ ಬಳಿಕ ಶಿಷ್ಯರು ಅವರ ಈ ಮಾತುಗಳನ್ನು ಸ್ಮರಿಸಿಕೊಂಡರು. ಪವಿತ್ರ ಗ್ರಂಥದಲ್ಲೂ ಯೇಸುವಿನ ಮಾತಿನಲ್ಲೂ ಅವರಿಗೆ ಆಗ ವಿಶ್ವಾಸ ಹುಟ್ಟಿತು.