ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

Showing posts with label ಸಂತ ಸ್ಮರಣೆ. Show all posts
Showing posts with label ಸಂತ ಸ್ಮರಣೆ. Show all posts

18.10.22 - ಸಂತ ಸ್ಮರಣೆ - ಸಂತ ಲೂಕ - St.Luke


ಹೊಸ ಒಡಂಬಡಿಕೆಯ  ಬಹುದೊಡ್ಡ ಭಾಗವನ್ನು ಬರೆದವನು ಸಂತ ಲೂಕ. "ನಮ್ಮ ಪ್ರಿಯ ವೈದ್ಯನಾದ ಲೂಕ ಎಂಬ ಸಂತ ಪೌಲನ ಮಾತಿನ ಮೂಲಕ ಲೂಕನ ಪರಿಚಯವಾಗುತ್ತದೆ.

(ಕೊಲೊಸ್ಸೆ 04:14). ಲೂಕ ಗ್ರೀಕ್ ಮೂಲದವ, ಅನ್ಯಮತಸ್ಥನಾಗಿದ್ದ ಎನ್ನಲಾಗಿದೆ. ಅಂತಿಯೋಕ್ಯ ಅವನ ಜನ್ಮಸ್ಥಳ ಎಂದೂ ಹೇಳಲಾಗಿದೆ.  ಸಂತ ಪೌಲ ತನ್ನ ಎರಡನೇ ಧರ್ಮಪ್ರಸಾರ ಪ್ರಯಾಣದಲ್ಲಿ ಅನಾರೋಗ್ಯದ ಸಂದರ್ಭದಲ್ಲಿ ಈ ವೈದ್ಯನನ್ನು ಬೇಟಿಯಾದ. ಈ ಬೇಟಿಯ ನಂತರ  ಲೂಕನನ್ನು 51ರಲ್ಲಿ ಟ್ರೊವಾಸ್ ಎಂಬ ಸ್ಥಳದಲ್ಲಿ ಕ್ರೈಸ್ತಧರ್ಮಕ್ಕೆ ಮಾನಸಾಂತ ರಿಸಿದ ಎಂಬ ನಂಬಿಕೆಯಿದೆ.

ಪ್ರೇಷಿತರ ಕಾರ್ಯಕಲಾಪಗಳಲ್ಲಿ ಉಲ್ಲೇಖವಾಗಿರುವ ಪೌಲನ ಎರಡನೇ ಧರ್ಮಪ್ರಸಾರ ಪ್ರಯಾಣದಲ್ಲಿ ಲೂಕನು ಅವನನ್ನು ಭೇಟಿಯಾಗಿ ಅವರೊಂದಿಗೆ ಫಿಲಿಪ್ಪಿಯಲ್ಲಿ ಕೆಲವು ವರ್ಷ ಇರುತ್ತಾನೆ. ಪೌಲ ಮೂರನೇ ಧರ್ಮಪ್ರಸಾರ ಪ್ರಯಾಣ ಆರಂಭಿಸಿದಾಗ ಅವರೊಂದಿಗೆ ಜೆರುಸಲೇಮಿಗೆ ಬಂದು ಸೆಜರೀಯದಲ್ಲಿ ಪೌಲ್ ಬಂಧನ ಕ್ಕೊಳಗಾದಾಗ ಅವನೊಂದಿಗೆ ಇರುತ್ತಾನೆ. ಈ ಎರಡು ವರ್ಷಗಳ ಕಾಲದಲ್ಲಿ, ಯೇಸುವನ್ನು ಕಂಡಿದ್ದ, ಅವರೊಂದಿಗೆ ಒಡನಾಡಿದ್ದ ಜನರನ್ನು ಕಂಡು, ಅವರನ್ನು ಸಂದರ್ಶಿಸಿ ಏಸುವಿನ ಬಗ್ಗೆ ಸಾಕಷ್ಟು ಮಾಹಿತಿ ಕಲೆಹಾಕಿರಬೇಕು. ಪೌಲ್ ರೋಮ್ ಗೆ ಬೆಳೆಸಿದ ಅಪಾಯಕಾರಿ ಪ್ರಯಾಣದಲ್ಲೂ ಲೂಕ ಅವನೊಂದಿಗೆ ಇರುತ್ತಾನೆ. ಕ್ರಿ.ಶ. 61 ರಲ್ಲಿ ಪೌಲ ರೋಮ್ನಲ್ಲಿ ಬಂಧಿತನಾದಾಗಲೂ ಎಲ್ಲರೂ ಪೌಲನನ್ನು ತೊರೆದಾಗ ಲೂಕ ಮಾತ್ರ ಅವನನ್ನು ಬಿಟ್ಟು ಹೋಗುವುದಿಲ್ಲ. "ಲೂಕ ಮಾತ್ರ ನನ್ನ ಜೊತೆಯಿದ್ದಾನೆ ಎಂದು ಪೌಲನೇ ಹೇಳುತ್ತಾನೆ" ಎಂದು ಪೌಲನೇ ಹೇಳುತ್ತಾನೆ. (2ತಿಮೋಥಿ4:11).

 ಲೂಕ ಅನ್ಯಮತಸ್ಥನಾಗಿದ್ದರಿಂದಲೋ ಏನೋ ಅನ್ಯಜನರೊಂದಿಗೆ ದುಡಿದು ಪೌಲನನ್ನು ಸೇರಿಕೊಂಡಿರಬೇಕು. ತನ್ನ ಶುಭಸಂದೇಶವನ್ನು ಅನ್ಯಜನರಿಗೆ ಗ್ರೀಕ್ ಭಾಷೆಯಲ್ಲಿ ಉತ್ತಮ ಶೈಲಿ ಮತ್ತು ನಾಜೂಕಾದ ರೀತಿಯಲ್ಲಿ ಬರೆಯುತ್ತಾರೆ. ಈತ ಪೌಲನಿಂದ ಎಷ್ಟು ಪ್ರಭಾವಗೊಂಡಿದ್ದ ಎಂದರೆ ಸಂತ ಜೆರೋಂ ಮತ್ತು ಜಾನ್ ಕ್ರಿಸಾಸ್ಟಮ್ ಲೂಕನ ಶುಭ ಸಂದೇಶವನ್ನು 'ಸಂತ ಪೌಲರ ಶುಭ ಸಂದೇಶ' ಎಂದು ಕರೆಯುತ್ತಾರೆ.

ಲೂಕ ಶುಭ ಸಂದೇಶ ಬರೆಯುವಷ್ಟರಲ್ಲಿ ಮತ್ತಾಯ ಮತ್ತು ಮಾರ್ಕನ ಶುಭಸಂದೇಶ ಈಗಾಗಲೇ ಚಾಲ್ತಿಯಲ್ಲಿತ್ತು. ಹಲವು ಜನರ ಅನುಭವ, ಮಾತೆ ಮೇರಿಯದೇ ಅನುಭವ ಈ ಶುಭಸಂದೇಶದಲ್ಲಿದೆ ಎನ್ನಲಾಗಿದೆ. ಸಂತ ಲೂಕ ಮಾತೆ ಮೇರಿಯ ಭಾವಚಿತ್ರ ಚಿತ್ರಸಿದ್ದ ಎಂಬ ಪ್ರತೀತಿಯೂ ಇದೆ. ಲೂಕನ ಈ ವಿಶಿಷ್ಟ ಬರವಣಿಗೆ ಮತ್ತು ಅನುಭವವನ್ನು ಅವನ ಶುಭಸಂದೇಶದಲ್ಲಿಯೇ ಕಾಣಬಹುದು‌.

ಲೂಕನ ಶುಭ ಸಂದೇಶದಲ್ಲಿ ಹೆಚ್ಚುವರಿಯಾಗಿ ಆರು ಪವಾಡಗಳು ಮತ್ತು 15 ಸಾಮತಿಗಳ ಉಲ್ಲೇಖವಿದೆ. ಬಡವರು ಮತ್ತು ಸಾಮಾಜಿಕ ಕಾಳಜಿ ಯಿರುವ ಲೂಕನಲ್ಲಿ ಲಾಜರ್ ಮತ್ತು ಶ್ರೀಮಂತನ ಕಥೆ ಬರುತ್ತದೆ. ದೇವ ಮಾತೆಯ ಸಾಮಾಜಿಕ ನ್ಯಾಯದ 'ಸ್ತುತಿಗೀತೆ' ಬರುತ್ತದೆ. ಲೂಕ ಮಹಿಳೆಯರ ಬಗ್ಗೆ ವಿಶೇಷ ಕಾಳಜಿ ಇದ್ದುದ್ದರಿಂದ ಮಾತೆಮೇರಿ,ಎಲಿಜಬೆತ್

ಇವರ ಉಲ್ಲೇಖವಿದೆ. 'ನಮೋ ಮರಿಯಾ ವರಪ್ರಸಾದ ಪೂರ್ಣೆ' ಎಂಬ ಘೋಷಣೆ ಇದೆ. ದೇವರ ಕ್ಷಮೆ ಮತ್ತು ಪ್ರೀತಿಯ ಬಗ್ಗೆ ಲೂಕನದು ಅಪಾರ ನಂಬಿಕೆ. ಇಲ್ಲಿ ದುಂದುಗಾರ ಮಗನ ಬಗ್ಗೆ ಬರುತ್ತದೆ. ಸಿಮೋನ್ ಮನೆಯಲ್ಲಿ ಯೇಸುವಿನ ಪಾದ ಅಂಭ್ಯಂಜಿಸಿದ ಮಹಿಳೆಯ ಬಗ್ಗೆ ಬರೆಯುತ್ತಾರೆ.

 ಲೂಕನ ಮರಣದ ಬಗ್ಗೆ ನಮಗೆ ಸಾಕಷ್ಟು ಮಾಹಿತಿ ಇಲ್ಲ. ಪೌಲನು ಸಾವಿನ ನಂತರ ಲೂಕ ಏನು ಮಾಡಿದ, ಎಲ್ಲಿದ್ದ ಎಂಬುದರ ಬಗ್ಗೆ ಖಚಿತ ಮಾಹಿತಿ ಇಲ್ಲ. ಕೆಲವು ಬರಹಗಾರರು, ಲೂಕ  ಕೂಡ ರಕ್ತಸಾಕ್ಷಿಯಾದ ಎಂದರೆ, ಇನ್ನೂ ಕೆಲವರು ಆತ ಗ್ರೀಸ್ ನಲ್ಲಿ ಗಾ ಪ್ರದೇಶದಲ್ಲಿ ಬೋಧಿಸಿದ ಎನ್ನುತ್ತಾರೆ. ಮೊದಲ ಪರಂಪರೆಯ ಪ್ರಕಾರ ಲೂಕ ಗ್ರೀಸ್ ನಲ್ಲಿದ್ದು ತನ್ನ ಶುಭಸಂದೇಶ ಬರೆದ ನಂತರ 84ರಲ್ಲಿ ತೀರಿಕೊಂಡ. ಇನ್ನೊಂದು ಪರಂಪರೆಯ ಪ್ರಕಾರ ಲೂಕ ಡಾಲ್ ಮೇಷಿಯಾದಲ್ಲಿ (ಯುಗೋಸ್ಲಾವಿಯಾ) ಬೋಧನೆ ಮಾಡಿದ ನಂತರ ಗ್ರೀಸ್ನಲ್ಲಿ ರಕ್ತ ಸಾಕ್ಷಿಯಾದ. ಅವನ ಅವಶೇಷಗಳನ್ನು 360ರಲ್ಲಿ ಕಾನ್ಸ್ಟಾಂಟಿನೋಪಲ್ ಗೆ ತರಲಾಯಿತು.

 ಲೂಕನ ಚಿತ್ರ ಒಂದು ಎತ್ತು ಮತ್ತು ಕರುವಿನ ಜೊತೆಗೂಡಿ ಇರುತ್ತದೆ. ಕ್ರಿಸ್ತ ಬಲಿಯರ್ಪಣೆಯಾದ ಸಂಕೇತವಿದು. ಲೂಕ ವೈದ್ಯರುಗಳ ಪಾಲಕ.

11.10.22 - ಸಂತ 23ನೇ ಜಾನ್ St. 23rd John

"ಧರ್ಮಸಭೆಯ ಬಾಗಿಲುಗಳನ್ನು ತೆರೆಯಿರಿ, ಹೊರಗಿನಿಂದ ಹೊಸಗಾಳಿ ಬೀಸಲಿ" ಎಂದು ಸಾಂಕೇತಿಕವಾಗಿ ವ್ಯಾಟಿಕನ್ ಸಭಾಂಗಣದ ಕಿಟಕಿಯನ್ನು ತೆರೆದ, ಪ್ರಗತಿಪರ ಜಗದ್ಗುರು ಆಂಜೆಲೋ ಗುಯ್ ಸೆಪ್ಪೆ ರೋಸ್ ಕಾಲಿ. ಎರಡನೇ ವ್ಯಾಟಿಕನ್ ಸಮ್ಮೇಳನವನ್ನು ಆಯೋಜಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.

ಸಾಮಾನ್ಯ ರೈತ ಕುಟುಂಬದ ಮಗನಾಗಿ, ಇಟಲಿಯ ಬೆಗಾ೯ಮೊ ಬಾಲ್ಯದಿಂದಲೇ ತನ್ನ ಸರಳತೆ ಮತ್ತು ನೇರನುಡಿಗೆ ಹೆಸರುವಾಸಿ. ದೂರದೃಷ್ಟಿ ಇವರ ಹುಟ್ಟುಗುಣ. ಈ ದೂರ ದೃಷ್ಟಿಯಿಂದಲೇ ಸೆಮಿನಾರಿಗೆ ಸೇರಿ 1904ರಲ್ಲಿ ಧರ್ಮಗುರುಗಳಾದರು. ಧರ್ಮಗುರು ದೀಕ್ಷೆ ಪಡೆದ ಕೂಡಲೇ ಧರ್ಮಶಾಸನ ಕಲಿಯಲು ರೋಮ್ಗೆ ತೆರಳಿದರು. ನಂತರ ತಮ್ಮ ಧರ್ಮಾಧ್ಯಕ್ಷರ ಕಾರ್ಯದರ್ಶಿಯಾಗಿ, ಸೆಮಿನರಿಯಲ್ಲಿ ಚರ್ಚ್ ಇತಿಹಾಸದ ಉಪನ್ಯಾಸಕರಾಗಿ, ಧರ್ಮಕ್ಷೇತ್ರದ ಪ್ರಗತಿಪರ ಪ್ರಕಾಶಕರಾಗಿ ದುಡಿದರು.

ಮೊದಲ ಮಹಾಯುದ್ಧದಲ್ಲಿ ಗಾಯಾಳುಗಳನ್ನು ಸಾಗಿಸುವ ಕೈ ಮಂಚವನ್ನು ಹೊರುವ ಕೆಲಸವೊಂದನ್ನು ಬಿಟ್ಟರೆ ಅಂಥಾ ರೋಚಕ ಘಟನೆಗಳಾವುದನ್ನೂ ಇವರ ಬದುಕಿನಲ್ಲಿ ಕಾಣಲು ಸಾಧ್ಯವಿಲ್ಲ. ಆದರೆ ದೂರದೃಷ್ಟಿಯ ಚಿಂತಕ ಮತ್ತು ವಿನ್ಯಾಸಕ, ಪ್ರಬುದ್ಧ ರಾಜಕೀಯ ಪ್ರಜ್ಞೆವುಳ್ಳ ಸಂಧಾನಕಾರ. ಆಡಳಿತದೊಳಕ್ಕೆ ಎಲ್ಲರನ್ನೂ ಕೂಡಿಸಿಕೊಂಡು ಧರ್ಮಸಭೆಯ ನಿರ್ಧಾರಗಳನ್ನು, ನಿರ್ದೇಶನಗಳನ್ನು ಸ್ಪಷ್ಟವಾಗಿ ರೂಪಿಸಬಲ್ಲ ಗುಣಗಳ ಮೊತ್ತವೇ ಇವರಲ್ಲಿತ್ತು.

1921ರಲ್ಲಿ ವಿಶ್ವಾಸ ಪ್ರಸಾರ ಸಂಸ್ಥೆಗೆ (Propagation of Faith) ರಾಷ್ಟ್ರೀಯ ನಿರ್ದೇಶಕರಾಗಿ ನೇಮಕವಾಗುವುದರಿಂದಿಗೆ ಇವರಿಗೆ ರೋಮ್ ಮತ್ತು ವ್ಯಾಟಿಕನ್ ಜೊತೆಗೆ ನಿಕಟ ಸಂಬಂಧ ಪ್ರಾರಂಭವಾಯಿತು. ಧರ್ಮಸಭೆಯ ಒಳ ಆಡಳಿತ ನೈಪುಣ್ಯತೆ ಅರಿವಾಯಿತು. ಈ ಎಲ್ಲಾ ಗುಣಗಳು ಇವರನ್ನು ರಾಜತಾಂತ್ರಿಕ ಹುದ್ದೆಗಳಿಗೆ ಕರೆದೊಯ್ದವು. 1925 ಇವರು ಬಲ್ಗೇರಿಯಾಗೆ ರೋಮ್ ರಾಯಭಾರಿಯಾದರು. ಅನಂತರ ಟರ್ಕಿ ಮತ್ತು ಫ್ರಾನ್ಸ್ ರಾಷ್ಟ್ರಗಳಿಗೆ (1944- 1953) ರಾಯಭಾರಿಯಾಗಿ ಕೆಲಸ ಮಾಡಿದರು. ಅದು ಭೀಕರ ಮಹಾಯುದ್ಧಗಳ ಕಾಲ. ಈ ಸಂದರ್ಭದಲ್ಲಿ ಎಲ್ಲರೂ ಯುದ್ಧ, ವಿನಾಶ, ಗೆಲುವಿನ ಬಗೆಗೆ ಯೋಚಿಸುತ್ತಿದ್ದಾಗ ಇವರು ಸಂಧಾನದ ಬಗ್ಗೆ ಯೋಚಿಸುತ್ತಿದ್ದರು.

ಈ ರಾಯಬಾರಿ ಕೆಲಸ ಇವರನ್ನು ಅನೇಕ ಸಂಧಾನ ಕಾರ್ಯಗಳಿಗೆ ಒಯ್ಯಿತು. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಸಾಂಪ್ರದಾಯಿಕ ಧರ್ಮಸಭೆಯ (Orthodox Church) ನಾಯಕರೊಂದಿಗೆ ಒಳ್ಳೆಯ ಸಂಪರ್ಕವೇರ್ಪಡಿಸಿ ಕೊಂಡರು. ಟರ್ಕಿಯ ಜರ್ಮನಿ ರಾಯಭಾರಿಯ ಸಹಾಯದಿಂದ 24,000 ಯೆಹೂದ್ಯರು ನಿರ್ನಾಮವಾಗುವುದನ್ನು ತಡೆದು ಅವರ ಬಿಡುಗಡೆಗೆ ಕಾರಣರಾದರು.

1953ರಲ್ಲಿ ಕಾರ್ಡಿನಲ್ಲಾಗಿ ನೇಮಕಗೊಂಡು ವೆನಿಸ್ ನ ಅಧಿಪತಿಯಾಗಿ ನೇಮಕಗೊಂಡರು. ಕೊನೆಯ ಹುದ್ದೆಯೆಂಬಂತೆ 78ವರ್ಷ ವಾಗಲು ಒಂದು ತಿಂಗಳಿರುವಾಗ ಜಗದ್ಗುರುಗಳಾಗಿ ಚುನಾಯಿತರಾದರು. ಜಗದ್ಗುರುಗಳಾಗಿ ತಮ್ಮ ತಂದೆಯ ಹೆಸರು ಮತ್ತು ಎರಡು ಪ್ರಧಾನಾಲಯ ಗಳ (ಸಂತ ಸ್ನಾನಿಕ ಯೊವಾನ್ನ ಶುಭಸಂದೇಶ ಕರ್ತೃ ಹಾಗೂ ಪ್ರೇಷಿತ ಸಂತ ಯೊವಾನ್ನ) ಸಂತರ ಹೆಸರುಗಳನ್ನು ತಮ್ಮ ಹೆಸರಿಗೆ ಸೇರಿಸಿಕೊಂಡರು.

ಜಗದ್ಗುರುಗಳಾದ ಮೇಲೆ ರಾಜತಾಂತ್ರಿಕ ಕಾರ್ಯ ಇನ್ನಷ್ಟು ಶಕ್ತಿ ಪಡೆಯಿತು. 1962ರಲ್ಲಿ ಕ್ಯೂಬಾದ ಕ್ಷಿಪಣಿಗಳ ಸಮಸ್ಯೆಯನ್ನು ಬಗೆಹರಿಸಿದರು. ಕಾರ್ಡಿನಲರ ಆಯ್ಕೆಯನ್ನು ಅಂತರ್ರಾಷ್ಟ್ರೀಯ ವ್ಯಾಪ್ತಿಯ ಒಯ್ದರು. ಧರ್ಮಸಭೆಗೆ ಹೊಸಗಾಳಿ ಬೀಸಲು ಸಾಂಪ್ರದಾಯಿಕ ಕಿಟಕಿ-ಬಾಗಿಲುಗಳನ್ನು ತೆಗೆದುಹಾಕಿ ಹೊಸ ಅವಮಾನಕ್ಕೆ ಕಾರಣರಾದರು.

ಅವರು ಅಂದು ತೆರೆದ ಬಾಗಿಲು, ಕಿಟಕಿಗಳು ಮತ್ತೆಂದೂ ಮುಚ್ಚಲ್ಪಡದೆ, ಅತ್ಯಂತ ಮಹತ್ವ ಹಾಗೂ ಪ್ರಗತಿಪರದ ಕಾರ್ಯಗಳು ಇಂದಿಗೂ ಮುನ್ನೆಡೆಯುತ್ತಿದ್ದರೆ ಅದಕ್ಕೆ ಈ ಜಗದ್ಗುರು ಸಂತರೇ ಕಾರಣ.

ಇವರ ಎರಡು ಪ್ರಖ್ಯಾತ ಸುತ್ತೋಲೆ ಎಂದರೆ ತಾಯಿ ಮತ್ತು ಶಿಕ್ಷಕಿ (1961) ಭುವಿಯಲ್ಲಿ ಶಾಂತಿ (1960) ಇವರು ಜಗದ್ಗುರುಗಳಾದಾಗ ಸ್ವೀಕರಿಸಿದ ಧ್ಯೇಯವಾಕ್ಯವೆಂದರೆ ವಿಜಯತೆ ಮತ್ತು ಶಾಂತಿ (Obedentia Et Pax).

08.08.22 - ಸಂತ ಸ್ಮರಣೆ - ಸಂತ ಡೊಮಿನಿಕ್ - St.Dominic

 ಸಂತ ಡೊಮಿನಿಕ್ St.Dominic🙏


ಒಂದು ಕನಸು ಮತ್ತು ಒಂದು ದೃಶ್ಯ. ಪಾಪದಿಂದ ಉರಿಯುತ್ತಿದ್ದ ಈ ಲೋಕದ ಮೇಲೆ ದೇವರ ಮಹಾನ್ ಕೋಪ. ಆದರೆ ಮಾತೆ ಮರಿಯ ದೇವರಲ್ಲಿ ಪ್ರಾರ್ಥಿಸಿ ಭೂಮಿಯ ಮೇಲಿನ ಇಬ್ಬರು ವ್ಯಕ್ತಿಗಳ ಕಡೆಗೆ ಬೆರಳು ಮಾಡಿ ತೋರಿಸುತ್ತಾರೆ. ಮಾರನೆಯ ದಿನ ಈ ವ್ಯಕ್ತಿ ದೇವಾಲಯದಲ್ಲಿ ಚಿಂದಿಬಟ್ಟೆ ಹುಟ್ಟಿದ ಇನ್ನೊಬ್ಬ ವ್ಯಕ್ತಿಯನ್ನು ಕಾಣುತ್ತಾನೆ. 

ತಾನು ಕನಸಿನಲ್ಲಿ ಕಂಡಿದ್ದು ಇದೇ ವ್ಯಕ್ತಿ. ಆತನ ಬಳಿಗೆ ಹೋಗಿದ್ದೇ ಆ ವ್ಯಕ್ತಿಯನ್ನು ಅಪ್ಪಿಕೊಂಡು ಹೇಳುತ್ತಾನೆ:"ನೀನು ನನ್ನ ಸಂಗಾತಿ, ನನ್ನ ಜೊತೆ ನಡೆಯಬೇಕು. ನಾವಿಬ್ಬರೂ ಒಟ್ಟಿಗಿದ್ದರೆ ಜಗತ್ತಿನ ಯಾವ ಶಕ್ತಿಯೂ ನಮ್ಮನ್ನು ಎದುರಿಸಲಾರದು." ಹೀಗೆ ಹೇಳಿದ ವ್ಯಕ್ತಿಯೇ ಸಂತ ಡೊಮಿನಿಕ್. ಚಿಂದಿ ಬಟ್ಟೆಲ್ಲಿದ್ದವರು ಅಸಿಸ್ಸಿಯ ಸಂತ ಫ್ರಾನ್ಸಿಸ್. ಸಮಕಾಲೀನ ಸಂಗಾತಿಗಳಾದ ಈ ಇಬ್ಬರು ಸಂತರು ವಿಶ್ವದಲ್ಲೇ ಪ್ರಖ್ಯಾತವಾದ 'ಡೊಮಿನಿಕನ್ಸ್' ಮತ್ತು 'ಫ್ರಾನ್ಸಿಸ್ಕನ್ಸ್' ಎಂಬ ಪ್ರಸಿದ್ಧ ಧಾರ್ಮಿಕ ಸಭೆಗಳ ಸ್ಥಾಪಕರಾಗಿ ವಿಶ್ವವಿಖ್ಯಾತರಾದರು.

ಸ್ಪಾನಿಷ್ ಭಾಷೆಯಲ್ಲಿ 'ಡೊಮಿಂಗೊ' ಎಂದರೆ 'ನಾನು ದೇವರಿಗೆ ಸೇರಿದವನು' ಎಂದರ್ಥ. ಈ 'ಡೊಮಿಂಗೋ ಮತ್ತಾರೂ ಅಲ್ಲ, ಶ್ರೀಮಂತ ಕುಲಿನ ಪೆಲಿಕ್ಸ್ ದೆ ಗುಸ್ ಮಾನ್ ಮತ್ತು ಜೋವಾನ್ ಆಫ್ ಆಜಾ ಇವರ ಪುತ್ರ ಡೊಮಿನಿಕ್. 1170 ರಲ್ಲಿ ಸ್ಪೇನ್ ದೇಶದ ಕಾಸ್ಟಿಲ್ಲೆ ಎಂಬಲ್ಲಿ ಹುಟ್ಟಿದ ಡೊಮಿನಿಕ್ ಅಗಸ್ಟಿನಿಯನ್ ನ ಫ್ರೈಯರ್ಸ ಎಂಬ ಸಭೆ ಸೇರಿ ಧರ್ಮಗುರುವಾಗುತ್ತಾರೆ.

ಇಷ್ಟಾದರೂ ಅವರಿಗೆ ನಿಜವಾದ ಆಧ್ಯಾತ್ಮ ಸೆಳೆತ ಬಂದದ್ದು 1203ರಲ್ಲಿ. ಒಮ್ಮೆ ತನ್ನ ಧರ್ಮಾಧ್ಯಕ್ಷ ಡಿಯೇಗೋ ಇವರ ಜೊತೆ ಡೆನ್ ಮಾರ್ಕ್ ಗೆ ಪ್ರಯಾಣ ಮಾಡುತ್ತಿದ್ದಾಗ 'ಆಲ್ಬಿಜೆನ್ಸಸ್' ಎಂಬ ಒಂದು ಪಾಷಂಡಿ ಸಂಪ್ರದಾಯ ವಿರೋಧಿ ಪಂಥದ ಪರಿಚಯವಾಗುತ್ತದೆ. ಈ ಆಲ್ಬಿಜೆನ್ಸ್ ಎರಡು ತತ್ವಗಳನ್ನು ನಂಬಿದ್ದರು. ಅದು ಒಳಿತು ಮತ್ತು ಕೆಡುಕು. ಆತ್ಮ ಒಳಿತು ಮತ್ತು ದೇಹ ಕೆಡುಕಾದ್ದರಿಂದ ದೇಹಕ್ಕೆ ಸಂಬಂಧಪಟ್ಟ ಎಲ್ಲವನ್ನೂ ಅವರು ತಿರಸ್ಕರಿಸುತ್ತಿದ್ದರು, ಇಲ್ಲವೇ ನಿರ್ಲಕ್ಷಿಸುತ್ತಿದ್ದಾರು. ದೇಹ ಕೆಡುಕು ಎನಿಸಿಬಿಟ್ಟಿದ್ದರಿಂದ ಅವರು ಸಂತಾನವೃದ್ಧಿಗೆ ಮುಂದಾಗುತ್ತಿರಲಿಲ್ಲ. 

ಜೊತೆಗೆ ಆದಷ್ಟು ಕಡಿಮೆ ಅನ್ನ ಪಾನೀಯಗಳನ್ನು ಸ್ವೀಕರಿಸುತ್ತಿದ್ದರು. ಈ ತತ್ವದ ಆಧಾರದ ಮೇಲೆ ದೇಹ ಮತ್ತು ಆತ್ಮದ ನಡುವೆ ನಿರಂತರ ಸಂಘರ್ಷವಿರುತ್ತಿತ್ತು. ಈ ಕಾರಣದಿಂದ ಅವರು ದೇವರು ಮನುಷ್ಯರಾದದ್ದುನ್ನು ಮತ್ತು ಧರ್ಮಸಭೆಯ ಸಂಸ್ಕಾರಗಳನ್ನು ನಂಬುತ್ತಿರಲಿಲ್ಲ. ಇದೆಲ್ಲದರ ಪರಿಣಾಮವಾಗಿ, ಈ ಆಲ್ಬಿಜೆನ್ಸ್ ಪಂಥದವರು ಕಠಿಣ ವೃತ ಮತ್ತು ತಪಸ್ಸಿನ ಜೀವನ ಶೈಲಿ ಅಳವಡಿಸಿಕೊಂಡಿದ್ದರಿಂದ ಬಹಳಷ್ಟು ಸಾಮಾನ್ಯ ಜನ ಇವೆರೆಡೆಗೆ ಆಕರ್ಷಿತರಾಗಿದ್ದರು. ಈ ಪಂಥ ಪ್ರಸಿದ್ಧ ವಾಗುತ್ತಾ ಬಂತು.

ಈ ಪಂಥದ ತತ್ವ ಮತ್ತು ಸಿದ್ಧಾಂತಗಳ ವಿರುದ್ಧ ಜನರಿಗೆ ತಿಳುವಳಿಕೆ ನೀಡಿ ಹೊರಹೋದವರನ್ನು ಮತ್ತೆ ಧರ್ಮಕ್ಕೆ ಸೆಳೆಯಲು ಜಗದ್ಗುರು ಮೂರನೇ ಇನ್ನೊಸೆಂಟ್ ಒಂದು ವಿಶೇಷ ಬೋಧಕ ಮಾರ್ಗವನ್ನು ಸ್ಥಾಪಿಸುತ್ತಾರೆ. ಜಗದ್ಗುರುಗಳ ಈ ಆದೇಶವನ್ನು ಗಂಭೀರವಾಗಿ ತೆಗೆದುಕೊಂಡ ಡೊಮಿನಿಕ್ ಮತ್ತು ಅವರ ಧರ್ಮಾಧ್ಯಕ್ಷರು ಈ ಪಾಷಂಡಿ ಪಂಥವನ್ನು ಎದುರಿಸಲು ಅವರದೇ ತತ್ವ ಅನುಸರಿಸಿ ಕಠಿಣ ತಪಸ್ಸಿನ ಜೀವನ ನಡೆಸುವುದರಿಂದ ಮಾತ್ರ ಸಾಧ್ಯ ಎಂಬ ನಿಲುವಿಗೆ ಬರುತ್ತಾರೆ. ಕಾರಣ ಈ ಪಂಥದ ಗುರುಗಳು ಕಠಿಣ ಜೀವನ ನಡೆಸುತ್ತಿದ್ದರೆ ಕಥೋಲಿಕ ಗುರುಗಳನ್ನು ಐಷಾರಾಮ ಜೀವನವಾಗಿತ್ತು. ಬೋಧನೆ ಮತ್ತು ಪಾಲನಾ ಕಾರ್ಯಕ್ಕೆ ಕುದುರೆಗಳ ಮೇಲೆ ಸಾಗುತ್ತಿದ್ದುದಲ್ಲದೆ, ಸಾಕಷ್ಟು ಸೇವಕರು ಮತ್ತು ನೌಕರವರ್ಗ ಹೊಂದಿದ್ದು, ಅತಿಥಿ ಗೃಹಗಳಲ್ಲೇ ಅವರು ಬಿಡಾರ ಹೂಡುತ್ತಿದ್ದರು.

ಹೀಗೆ ಕಥೋಲಿಕ ಗುರುಗಳಿಗೆ ಹೊಸ ಜೀವನ ಶೈಲಿ ಅಳವಡಿಸಿ ಹಿನ್ನಲೆಯಲ್ಲಿ ಸ್ವತಃ ತಾವೇ ಬೋಧನೆ ಮಾಡಲು ಪ್ರಾರಂಭಿಸುತ್ತಾರೆ ಡೊಮಿನಿಕ್. ತಮ್ಮ ಹೊಸತನದ ಬೋಧನೆ ಪರಿಣಾಮಕಾರಿಯಾಗಿ ಅನೇಕರು ಮತ್ತೆ ಕಥೋಲಿಕ ಧರ್ಮಕ್ಕೆ ಬರುತ್ತಾರೆ. ಹೀಗೆ ಆ ಪಂಥದಿಂದ ಹೊರಬಂದ ಮಹಿಳೆಯರಿಗಾಗಿ ಡೊಮಿನಿಕ್ ಒಂದು ಕನ್ಯಾ ಸ್ತ್ರೀ ಮಠವನ್ನು ಸ್ಥಾಪಿಸುತ್ತಾರೆ. 1215 ರಲ್ಲಿ ಟೂಲೌಸ್ ಎಂಬ ಊರಿನಲ್ಲಿ ಧರ್ಮಕ್ಷೇತ್ರಗಳ ಬೋಧಕರು(Diocesan Preachers) ಎಂಬ ಬೋಧಕ ಗುರುಗಳ ಸಭೆಯನ್ನು ಪ್ರಾರಂಭಿಸುತ್ತಾರೆ. ಈ ಗುರುಗಳಿಗೆ ತಪಸ್ಸು, ದೈವ ಶಾಸ್ತ್ರದಲ್ಲಿ ನೈಪುಣ್ಯತೆ ಮತ್ತು ನೈತಿಕ ಜೀವನ ಮಾದರಿಯನ್ನಾಗಿಡುತ್ತಾರೆ. ಮುಂದೆ ಈ ಸಭೆ 'ಡೊಮಿನಿಕನ್ ಧಾರ್ಮಿಕ ಸಭೆ' ಎಂದು ಹೊಸದಾಗಿ ನಾಮಕರಣ ಗೊಳ್ಳುತ್ತದೆ.

1221, ಆಗಸ್ಟ್ 6ರಂದು ಸಂತ ಡೊಮಿನಿಕ್ ತಮ್ಮ ಅಂತಿಮ ಯಾತ್ರೆ ಕೈಗೊಳ್ಳುವ ಸಂದರ್ಭದಲ್ಲಿ ಡೊಮಿನಿಕನ್ ಸಭೆ ಬಹಳಷ್ಟು ಪ್ರಸಿದ್ಧಿ ಪಡೆದು ಇಟಲಿ, ಫ್ರಾನ್ಸ್, ಇಂಗ್ಲೆಂಡ್, ಪೋಲೆಂಡ್, ಸ್ಪೇನ್ ಮುಂತಾದ ರಾಷ್ಟ್ರಗಳಲ್ಲಿ ಪ್ರಬಲವಾಗಿ ಹಬ್ಬಿತ್ತು. ಸಂತ ಡೊಮಿನಿಕ್ ರ ಆಕರ್ಷಕ ವ್ಯಕ್ತಿತ್ವ, ಸತ್ಯದ ಪ್ರೇಮ, ಕರ್ತವ್ಯಪ್ರಜ್ಞೆ, ಜಪಸರದ ಬಗೆಗಿನ ವಿಶೇಷ ಭಕ್ತಿ, ಪಾಪಿಯೆನಿಸಿಕೊಂಡವನ ಮೇಲೆ ಆದರದ ಪ್ರೀತಿ, ಅವರ ಪರಿಶುದ್ಧತೆಗೆ ಮತ್ತು ಬೋಧನೆಗೆ ಸೂಕ್ಷ್ಮ ವೇದಿಕೆಯನ್ನು ಒದಗಿಸಿತ್ತು.

1234,ಜುಲೈ 3ರಂದು ಸಂತ ಡೊಮಿನಿಕ್ ರ ಕಾರ್ಯವನ್ನು ಹತ್ತಿರದಿಂದ ಕಂಡಿದ್ದ ಜಗದ್ಗುರು 9ನೇ ಗ್ರೆಗೊರಿ ಇವರನ್ನು ಸಂತ ಪದವಿಗೆ ಏರಿದರು. ಈ ಸಮಯದಲ್ಲಿ ಉದ್ಘೋಷ ಮಾಡಿದ ಜಗದ್ಗುರು "ಸಂತ ಪೇತ್ರ ಮತ್ತು ಪೌಲರಿಗಿಂತ ಕಡಿಮೆ ಪರಿಶುದ್ಧತೆಯನ್ನು ಇವರಲ್ಲಿ ನಾನು ಕಂಡಿಲ್ಲ" ಎಂದರು. ಡೊಮಿನಿಕ್ ಕರಿಗೋ ಫ್ರಾನ್ಸಿಸ್ಕರಿಗೂ ಇಂದಿಗೂ ವಿಶೇಷ ನಂಟಿದೆ. ಇಬ್ಬರೂ ಸಂತರ ಹಬ್ಬಗಳಲ್ಲಿ ಒಟ್ಟಿಗೆ ಸೇರಿ ಪೂಜೆ ಅರ್ಪಿಸುವ ರೂಢಿ ಹಲವು ಕಡೆಯಿದೆ.