ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

16.08.23 - "ಎಲ್ಲಿ ಇಬ್ಬರು, ಮೂವರು ನನ್ನ ನಾಮದಲ್ಲಿ ಸೇರಿರುತ್ತಾರೋ, ಅಲ್ಲಿ ನಾನು ಅವರ ಮಧ್ಯೆ ಇರುತ್ತೇನೆ"

ಮೊದಲನೇ ವಾಚನ:ಧರ್ಮೋಪದೇಶಕಾಂಡ 34:1-12

ಮೋಶೆ ಮೋವಾಬ್ಯರ ಬಯಲು ನಾಡಿನಿಂದ ಜೆರಿಕೋ ಪಟ್ಟಣಕ್ಕೆ ಎದುರಾಗಿರುವ ನೆಬೋ ಪರ್ವತಕ್ಕೆ ಹೋಗಿ, ಪಿಸ್ಗಾ ಎಂಬ ಬೆಟ್ಟದ ಶಿಖರವನ್ನು ಹತ್ತಿದನು. ಆಗ ಸರ್ವೇಶ್ವರ ಕಾನಾನ್ ನಾಡೆಲ್ಲವನ್ನು ಅಂದರೆ, ದಾನ್ ಪಟ್ಟಣದವರೆಗಿದ್ದ ಗಿಲ್ಯಾದ್ ಪ್ರಾಂತ್ಯ, ನಫ್ತಾಲಿ ಪ್ರದೇಶ, ಎಫ್ರಯಿಮ್ ಮನಸ್ಸೆ ಕುಲಗಳವರ ಪ್ರಾಂತ್ಯ, ಪಶ್ಚಿಮ ಸಮುದ್ರದವರೆಗಿದ್ದ ಜುದೇಯನಾಡು, ದಕ್ಷಿಣ ಪ್ರದೇಶ, ಜೋಗರೂರಿನ ತನಕ ಇದ್ದ ಜೆರಿಕೋ ಎಂಬ ಖರ್ಜೂರಗಳ ಪಟ್ಟಣದ ಸುತ್ತಲಿನ ಬಯಲು, ಇದನ್ನೆಲ್ಲಾ ಅವನಿಗೆ ತೋರಿಸಿದರು. ಆನಂತರ, "ನಾನು ಅಬ್ರಹಾಮ್, ಇಸಾಕ್, ಯಕೋಬರಿಗೆ ಪ್ರಮಾಣಮಾಡಿ ಅವರ ಸಂತತಿಯವರಿಗೆ ಕೊಡುವೆನೆಂದು ವಾಗ್ದಾನ ಮಾಡಿದ ನಾಡು ಇದೇ; ಇದನ್ನು ನಿನಗೆ ಪ್ರತ್ಯಕ್ಷವಾಗಿ ತೋರಿಸಿದ್ದೇನೆ. ಆದರೆ ನೀನು ನದಿದಾಟಿ ಅಲ್ಲಿಗೆ ಹೋಗಕೂಡದು," ಎಂದು ಹೇಳಿದರು. ಸರ್ವೇಶ್ವರನ ಮಾತಿನಂತೆ ಅವರ ದಾಸ ಮೋಶೆ ಅಲ್ಲೇ ಮೋವಾಬ್ಯರ ದೇಶದಲ್ಲಿ ಮೃತನಾದನು.  ಮೋವಾಬ್ಯರ ದೇಶದಲ್ಲಿ ಬೇತ್ಪೆ ಗೋರಿಗೆ ಎದುರಾಗಿರುವ ಕಣಿವೆಯಲ್ಲಿ ಅವನ ದೇಹವನ್ನು ಸಮಾಧಿಮಾಡಿದರು. ಅವನ ಸಮಾಧಿ ಎಲ್ಲಿದೆಯೆಂದು ಇಂದಿನವರೆಗೆ ಯಾರಿಗೂ ತಿಳಿಯದು. ಮೋಶೆ ಸಾಯುವಾಗ ನೂರಿಪ್ಪತ್ತು ವರ್ಷದವನಾಗಿದ್ದನು. ಅವನ ಕಣ್ಣು ಮೊಬ್ಬಾಗಲಿಲ್ಲ, ಅವನ ಜೀವಕಳೆ ಕುಂದಿಹೋಗಿರಲಿಲ್ಲ. ಮೋವಾಬ್ಯರ ಬಯಲಿನಲ್ಲಿ ಇಸ್ರಯೇಲರು ಮೋಶೆಗಾಗಿ ಮೂವತ್ತು ದಿನ ದುಃಖಿಸಿದರು. ಅಲ್ಲಿಗೆ ಮೋಶೆಯ ಸಂತಾಪದ ದಿನಗಳು ಮುಗಿದವು. ಮೋಶೆ ನೂನನ ಮಗನಾದ ಯೆಹೋಶುವನ ಮೇಲೆ ಹಸ್ತಕ್ಷೇಪಮಾಡಿದ್ದರಿಂದ ಅವನು ಜ್ಞಾನವರಸಂಪನ್ನನಾದನು. ಸರ್ವೇಶ್ವರ ಮೋಶೆಗೆ ಕೊಟ್ಟ ಆಜ್ಞೆಗೆ ಅನುಸಾರ ಇಸ್ರಯೇಲರು ಯೆಹೋಶುವನ ಮಾತಿನ ಪ್ರಕಾರ ನಡೆದರು. ಸರ್ವೇಶ್ವರ ಮೋಶೆಯ ಸಂಗಡ ಮುಖಾಮುಖಿಯಾಗಿ ಮಾತಾಡಿದರು. ಈಜಿಪ್ಟ್ ದೇಶದಲ್ಲಿ ಫರೋಹನ ಮುಂದೆ ಹಾಗು ಅವನ ಪ್ರಜಾಪರಿವಾರದವರ ಮುಂದೆ ಅವನು ವಿಧವಿಧವಾಗಿ ಪವಾಡಗಳನ್ನೂ ಮಹತ್ಕಾರ್ಯಗಳನ್ನೂ ನಡೆಸಿದನು; ಸರ್ವೇಶ್ವರ ಅವನನ್ನು ಅದಕ್ಕಾಗಿಯೇ ಕಳುಹಿಸಿದರು. ಇಸ್ರಯೇಲರ ಕಣ್ಮುಂದೆ ವಿಷೇಷ ಭುಜಪರಾಕ್ರಮವನ್ನೂ ಆಶ್ಚರ್ಯಕರವಾದ ಕಾರ್ಯಗಳನ್ನೂ ನಡೆಸಿದನು. ಇಂಥವನಿಗೆ ಸಮಾನನಾದ ಮತ್ತೊಬ್ಬ ಪ್ರವಾದಿ ಈಚೆಗೆ ಇಸ್ರಯೇಲರಲ್ಲಿ ಹುಟ್ಟಲೇ ಇಲ್ಲ.

ಕೀರ್ತನೆ: 66:1-3, 5, 8, 16-17
ಶ್ಲೋಕ: ನಮ್ಮ ಪ್ರಾಣವನ್ನು ಉಳಿಸಿದ ದೇವನಿಗೆ ಸ್ತೋತ್ರ

ಶುಭಸಂದೇಶ: ಮತ್ತಾಯ 18:15-20


ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೇಳಿದ್ದೇನೆಂದರೆ "ನಿನ್ನ ಸೋದರನು ನಿನಗೆ ಅಪರಾಧ ಮಾಡಿದರೆ, ನೀನು ಹೋಗಿ ನೀವಿಬ್ಬರೆ ಇರುವಾಗ, ಅವನ ತಪ್ಪನ್ನು ಮನಗಾಣಿಸು. ಅವನು ನಿನಗೆ ಕಿವಿಗೊಟ್ಟರೆ ಅವನ ಸೋದರತ್ವವನ್ನು ನೀನು ಮತ್ತೆ ಗಳಿಸಿಕೊಂಡಂತಾಗುವುದು. ಒಂದು ವೇಳೆ, ಅವನು ನಿನಗೆ ಕಿವಿಗೊಡದೆ ಹೋದರೆ ಒಬ್ಬಿಬ್ಬರನ್ನು ನಿನ್ನ ಸಂಗಡ ಕರೆದುಕೊಂಡು ಹೋಗು; ಹೀಗೆ ಇಬ್ಬರು ಅಥವಾ ಮೂವರು ಸಾಕ್ಷಿಗಳ  ಸಮ್ಮುಖದಲ್ಲಿ ಪ್ರತಿಯೊಂದು ಮಾತೂ ಇತ್ಯಾರ್ಥವಾಗಲಿ. ಅವರಿಗೂ ಅವನು ಕಿವಿಗೊಡದೆ ಹೋದಲ್ಲಿ ಧರ್ಮಸಭೆಗೆ ತಿಳಿಸು. ಧರ್ಮಸಭೆಗೂ ಅವನು ಕಿವಿಗೊಡದೆ ಹೋದರೆ ಅವನನ್ನು ಧರ್ಮಭ್ರಷ್ಟನೆಂದು ಹಾಗೂ ಬಹಿಷ್ಕ್ರತನೆಂದು ಪರಿಗಣಿಸು. ನೀವು ಇಹದಲ್ಲಿ ಏನನ್ನು ಬಂಧಿಸುತ್ತೀರೋ ಅದು ಪರದಲ್ಲೂ ಬಂಧಿಸಲಾಗುವುದು; ನೀವು ಇಹದಲ್ಲಿ ಏನನ್ನು ಬಿಚ್ಚುತ್ತೀರೋ ಅದು ಪರದಲ್ಲೂ ಬಿಚ್ಚಲಾಗುವುದು. ಎಂದು ನಿಮಗೆ ಕಚಿತವಾಗಿ ಹೇಳುತ್ತೇನೆ. ಇನ್ನೂ ನಾನು ನಿಮಗೆ  ಹೇಳುವುದು ಏನೆಂದರೆ: ನಿಮ್ಮಲ್ಲಿಬ್ಬರು ತಾವು ಬೇಡಿಕೊಳ್ಳುವ ಯಾವುದಾದರೊಂದು ವಿಷಯವಾಗಿ ಇಹಲೋಕದಲ್ಲಿ ಒಮ್ಮನಸ್ಸುಳ್ಳವರಾಗಿದ್ದರೆ, ಅದು ಸ್ವರ್ಗದಲ್ಲಿರುವ ನನ್ನ ತಂದೆಯಿಂದ ಅವರಿಗೆ ಕೈಗೂಡುತ್ತದೆ. ಎಲ್ಲಿ ಇಬ್ಬರು, ಮೂವರು ನನ್ನ ನಾಮದಲ್ಲಿ ಸೇರಿರುತ್ತಾರೋ, ಅಲ್ಲಿ ನಾನು ಅವರ ಮಧ್ಯೆ ಇರುತ್ತೇನೆ.

15.08.23 - “ಎನ್ನ ಮನ ಮಾಡುತ್ತಿದೆ ಸರ್ವೇಶ್ವರನ ಸ್ತುತಿ ಉಲ್ಲಾಸಿಸುತ್ತಿದೆ ಮುಕ್ತಿದಾತ ದೇವನಲಿ"

 ಮೊದಲನೇ ವಾಚನ: ಪ್ರಕಟನಾ ಗ್ರಂಥ 11:19; 12:1-6, 10



ಸ್ವರ್ಗದಲ್ಲಿನ ದೇವಾಲಯವು ತೆರೆಯಿತು. ದೇವರ ಒಡಂಬಡಿಕೆಯ  ಮಂಜೂಷವು ಅಲ್ಲಿರುವುದು ಕಾಣಿಸಿತು. ಆಕಾಶದಲ್ಲಿ ಚಿಹ್ನೆಯೊಂದು ಕಾಣಿಸಿಕೊಂಡಿತು. ಮಹಿಳೆಯೊಬ್ಬಳು ಸೂರ್ಯಭೂಷಿತಳಾಗಿದ್ದಳು. ಆಕೆಯ ಪಾದದಡಿ ಚಂದ್ರನಿದ್ದನು. ತಲೆಯ ಮೇಲೆ ಹನ್ನೆರಡು ನಕ್ಷತ್ರ ಖಚಿತವಾದ ಕಿರೀಟವಿತ್ತು. ಆಕೆ ತುಂಬು ಗರ್ಭಿಣಿ, ಪ್ರಸವ ವೇದನೆಯಿಂದ ನರಳುತ್ತಿದ್ದಳು. ಆಕಾಶದಲ್ಲಿ ಮತ್ತೊಂದು ಚಿಹ್ನೆ ಕಾಣಿಸಿಕೊಂಡಿತು. ಅಲ್ಲಿ ಕೆಂಪು ಘಟಸರ್ಪವೊಂದು ಇತ್ತು. ಅದಕ್ಕೆ ಏಳು ತಲೆಗಳಿದ್ದವು, ಹತ್ತು ಕೊಂಬುಗಳಿದ್ದವು; ಅದರ ಏಳು ತಲೆಗಳ ಮೇಲೆ ಏಳು ಮುಕುಟಗಳಿದ್ದವು. ಅದು ತನ್ನ ಬಾಲದಿಂದ ಮೂರನೆಯ ಒಂದು ಭಾಗದಷ್ಟು ನಕ್ಷತ್ರಗಳನ್ನು ಆಕಾಶದಿಂದ ಸೆಳೆದೆಳೆದು ಅವುಗಳನ್ನು ಭೂಮಿಗೆ ಎಸೆಯಿತು. ಮಗು ಹುಟ್ಟಿದ ಕೂಡಲೇ  ಅದನ್ನು ನುಂಗಿಬಿಡಬೇಕೆಂದು ಘಟಸರ್ಪವು ಆ ತುಂಬು ಗರ್ಭಿಣಿಯ ಬಳಿಯಲ್ಲಿಯೇ ಕಾಯ್ದುಕೊಂಡಿತ್ತು. ಸರ್ವಜನಾಂಗಗಳನ್ನು ಕಬ್ಬಿಣದ ದಂಡದಿಂದ ಆಳಬಲ್ಲಂಥ ಒಂದು ಗಂಡುಮಗುವಿಗೆ  ಆಕೆ ಜನ್ಮವಿತ್ತಳು. ಆದರೆ, ಆ ಮಗುವನ್ನು ಸಿOಹಾಸನದಲ್ಲಿದ್ದ ದೇವರ ಬಳಿಗೆ ಕೊಂಡೊಯ್ಯಲಾಯಿತು. ಆ ಮಹಿಳೆ ಅರಣ್ಯಕ್ಕೆ ಓಡಿ ಹೋದಳು. ಅಲ್ಲಿ ಸಾವಿರದ ಇನ್ನೂರ ಅರವತ್ತು ದಿನಗಳ ಕಾಲ ಆಕೆಗೆ ಶುಶ್ರೂಷೆಯಾಗಬೇಕೆಂದು ದೇವರೇ ಆ ಸ್ಥಳವನ್ನು ಸಜ್ಜುಗೊಳಿಸಿದ್ದರು. ಸ್ವರ್ಗದಿಂದ ಬಂದ ಮಹಾ ಶಬ್ದವನ್ನು ನಾನು ಕೇಳಿಸಿಕೊಂಡೆ. ಅದು ಇಂತೆಂದಿತು: "ಇಗೋ, ನಮ್ಮ ದೇವನಿತ್ತ ಜೀವೋದ್ಧಾರ ಸಿದ್ಧಿಸಿದೆ ಆತನ ಶಕ್ತಿ, ಸಾಮ್ರಾಜ್ಯಗಳು ಕಂಗೊಳಿಸುತ್ತಿವೆ. ಆತನ ಕ್ರಿಸ್ತಾಧಿಪತ್ಯ ಸ್ಥಾಪಿತವಾಗಿದೆ.

ಕೀರ್ತನೆ: 45:10, 11, 12, 16

ಶ್ಲೋಕ: ಪಟ್ಟದ ರಾಣಿಯು ನಿಂತಿಹಳು ನಿನ್ನ ಬಲಪಾರ್ಶ್ವದಲ್ಲಿ, ಓಫಿರ್ ನಾಡಿನ ಚಿನ್ನಾಭರಣಗಳಿಂದ ಭೂಷಿತಳಾಗಿ

ಎರಡನೇ ವಾಚನ: 1 ಕೊರಿಂಥಿಯರಿಗೆ 15:20-27

ಕ್ರಿಸ್ತ ಯೇಸು ಪುನರುತ್ದಾನ ಹೊಂದಿದ್ದೇನೋ ಸತ್ಯಸ್ಯ ಸತ್ಯ. ಅವರ ಪುನರುತ್ದಾನವು, ಸತ್ತವರು ಪುನರುತ್ದಾನ ಹೊಂದುತ್ತಾರೆ ಎನ್ನುವುದಕ್ಕೆ ಪ್ರಮಾಣ. ಒಬ್ಬ ಮನುಷ್ಯನಿಂದ ಸಾವು ಸಂಭವಿಸಿದಂತೆಯೇ ಒಬ್ಬ ಮನುಷ್ಯನಿಂದಲೇ ಸತ್ತವರಿಗೆ ಪುನರುತ್ದಾನವು ಪರಿಣಮಿಸಿತು. ಆದಾಮನ ಸಂಬಂಧದಿಂದ ಎಲ್ಲರೂ ಸಾವಿಗೀಡಾದಂತೆ ಕ್ರಿಸ್ತಯೇಸುವಿನ ಸಂಬಂಧದಿಂದ ಎಲ್ಲರೂ ಜೀವಂತರಾಗಿ ಏಳುತ್ತಾರೆ. ಈ ಭಾಗ್ಯವನ್ನು ಒಬ್ಬೊಬ್ಬನೂ ಕ್ರಮಬದ್ಧ ರೀತಿಯಲ್ಲಿ ಪಡೆಯುತ್ತಾನೆ. ಪ್ರಪ್ರಥಮ ಫಲವಾಗಿ ಕ್ರಿಸ್ತಯೇಸುವೇ ಜೀವಂತರಾದರು. ಆನಂತರ, ಕ್ರಿಸ್ತಯೇಸುವಿಗೆ ಸೇರಿದವರು ಯೇಸು ಪುನರಾಗಮಿಸುವಾಗ ಜೀವಂತರಾಗುತ್ತಾರೆ. ಅಂತ್ಯ ಬರುವುದು ಆನಂತರವೇ. ಆಗ ಯೇಸು ಎಲ್ಲಾ ಅಧಿಪತ್ಯವನ್ನೂ ಅಧಿಕಾರವನ್ನೂ ಶಕ್ತಿಯನ್ನೂ ನಿರ್ಮೂಲಮಾಡಿ ತಂದೆಯಾದ ದೇವರಿಗೆ ಸಾಮ್ರಾಜ್ಯವನ್ನು ಒಪ್ಪಿಸಿಕೊಡುವರು.  ಶತ್ರುಗಳೆಲ್ಲರನ್ನು ತಮ ಪಾದಪೀಠವಾಗಿಸಿಕೊಳ್ಳುವ ತನಕ ಅವರು ರಾಜ್ಯವಾಳಬೇಕಾಗಿದೆ.  ಕಟ್ಟಕಡೆಗೆ ನಿರ್ಮೂಲವಾಗುವ ಶತ್ರುವೆಂದರೆ ಮೃತ್ಯುವೇ. "ದೇವರು ಎಲ್ಲವನ್ನು ಆಧೀನಪಡಿಸಿ, ಅತನ ಪಾದಪೀಠವನ್ನಾಗಿಸಿದ್ದಾರೆ," ಎಂದು ಲಿಖಿತವಾಗಿದೆ. "ಎಲ್ಲವನ್ನೂ ಅಧೀನಪಡಿಸಿಕೊಳ್ಳಲಾಗಿದೆ," ಎಂದು ಹೇಳುವಾಗ, ಹಾಗೆ ಅಧೀನಪಡಿಸಿದ ದೇವರು ಅದರಲ್ಲಿ ಸೇರಲಿಲ್ಲ ಎಂಬುದು ಸುಸ್ಪಷ್ಟವಾಗಿದೆ.

ಶುಭಸಂದೇಶ: ಲೂಕ 1:39-56

ಮರಿಯಳು ಪ್ರಯಾಣಹೊರಟು  ಜುದೇಯದ ಗುಡ್ಡಗಾಡಿನಲ್ಲಿರುವ ಒಂದು ಊರಿಗೆ ತ್ವರೆಯಾಗಿ ಬಂದಳು. ಅಲ್ಲಿ ಜಕರೀಯನ ಮನೆಗೆ ಹೋಗಿ ಎಲಿಜಬೇತಳನ್ನು ವಂದಿಸಿದಳು. ಮರಿಯಳ ವಂದನೆಯನ್ನು ಎಲಿಜಬೇತಳು ಕೇಳಿದ್ದೇ ತಡ, ಆಕೆಯ ಗರ್ಭದಲ್ಲಿದ್ದ ಶಿಶು ನಲಿದಾಡಿತು; ಎಲಿಜಬೇತಳು ಪವಿತ್ರಾತ್ಮಭರಿತಳಾಗಿ ಹರ್ಷೋದ್ಗಾರದಿಂದ  ಹೀಗೆಂದಳು: "ಸ್ತ್ರೀಯರಲ್ಲೆಲ್ಲಾ ಧನ್ಯಳು ನೀನು; ನಿನ್ನ ಕರುಳ ಕುಡಿಯೂ ಧನ್ಯ!ನನ್ನ ಪ್ರಭುವಿನ ತಾಯಿ ನೀನು; ನನ ಬಳಿಗೆ ಬಂದುದು ಅದೆಂಥ ಭಾಗ್ಯ! ನಿನ್ನ ವಂದನೆಯ ದನಿ ನನ ಕಿವಿ ತಾಕಿದೊಡನೆ ನಲಿದಾಡಿತು ಆನಂದದಿಂದ, ನನ್ನ ಕರುಳ ಕುಡಿ! ನಂಬಿ ಧನ್ಯಳಾದೆ ನೀನು, ದೇವರಿಂದ ಬಂದ ವಾರ್ತೆ ನೆರವೇರಿಯೇ ತೀರುವುದೆಂದು," ಆಗ ಮರಿಯಳು ಹೀಗೆಂದು ಹೊಗಳಿದಳು: "ಎನ್ನ ಮನ ಮಾಡುತ್ತಿದೆ ಸರ್ವೇಶ್ವರನ ಸ್ತುತಿ; ಉಲ್ಲಾಸಿಸುತ್ತಿದೆ ಮುಕ್ತಿದಾತ ದೇವನಲಿ ತನ್ನ ದಾಸಿಯ ದೀನತೆಯನ್ನು ನೆನಪಿಗೆ ತಂದುಕೊಂಡನಾತ   ಧನ್ಯಳೆಂದು ಹೊಗಳುವರೆನ್ನನು ಇಂದಿನಿಂದ ಸರ್ವಜನಾಂಗ ಏಕೆನೆ ಮಾಡಿಹನೆನಗೆ ಸರ್ವಶಕ್ತನು ಮಹತ್ಕಾರ್ಯ ನಿಜಕ್ಕೂ ಆತನ ನಾಮಧೇಯ ಪರಮಪೂಜ್ಯ; ಆತನಲ್ಲಿ ಭಯಭಕ್ತಿಯುಳ್ಳವರಿಗೆ ಆತನ ಪ್ರೀತಿ ತಲತಲಾಂತರದವರೆಗೆ, ಗರ್ವ ಹೃದಯಿಗಳನಾತ  ಚದರಿಸಿರುವನು ಪ್ರದರ್ಶಿಸಿರುವನು ತನ್ನ ಬಾಹುಬಲವನು ಇಳಿಸಿಹನು ಗದ್ದುಗೆಯಿಂದ ಘನಾಧಿಪತಿಗಳನು ಏರಿಸಿರುವನು ಉನ್ನತಿಗೆ ದೀನದಲಿತರನು. ತೃಪ್ತಿಪಡಿಸಿರುವನಾತ ಹಸಿದವರನು ಮೃಷ್ಟಾನ್ನದಿ, ಹೊರದೂಡಿರುವನು ಸಸಿರಿವಂತರನು ಬರೀಗೈಯಲಿ ನೆರವಾದನು ತನ್ನ ದಾಸ ಇಸ್ರಯೇಲರಿಗೆ  ಪೂರ್ವಜರಿಗಿತ್ತ ವಾಗ್ದಾನದ ಮೇರೆಗೆ ಮರೆಯಲಿಲ್ಲ ಆತ ಕರುಣೆತೋರಲು ಅಬ್ರಹಾಮನಿಗೆ ಅವನ ಸಂತತಿಗೆ, ಯುಗಯುಗಾಂತರದವರೆಗೆ," ಮರಿಯಳು ಸುಮಾರು ಮೂರು ತಿಂಗಳು ಎಲಿಜಬೇತಳೊಡನೆ ತಂಗಿದ್ದು ತನ್ನ ಮನೆಗೆ ಹಿಂದಿರುಗಿದಳು.

14.08.23 - "ನೀನು ಸರೋವರಕ್ಕೆ ಹೋಗಿ ಗಾಳ ಹಾಕು...."

ಮೊದಲನೇ ವಾಚನ: ಧರ್ಮೋಪದೇಶಕಾಂಡ 10:12-22

"ಆದುದರಿಂದ ಇಸ್ರಯೇಲರೇ, ನೀವು ನಿಮ್ಮ ದೇವರಾದ ಸರ್ವೇಶ್ವರನಲ್ಲಿ ಭಯಭಕ್ತಿ ಉಳ್ಳವರಾಗಿರಬೇಕು; ಎಲ್ಲ ವಿಷಯಗಳಲ್ಲೂ ಅವರು ಹೇಳುವ ಮಾರ್ಗದಲ್ಲೇ ನಡೆಯಬೇಕು; ಅವರನ್ನು ಪ್ರೀತಿಸುತ್ತಾ ಸಂಪೂರ್ಣವಾದ ಹೃದಯದಿಂದಲೂ  ಮನಸ್ಸಿನಿಂದಲೂ ಸೇವೆಮಾಡಬೇಕು; ನಾನು ನಿಮ್ಮ ಒಳಿತಿಗಾಗಿ ಈಗ ಬೋಧಿಸುವ ಅವರ ಆಜ್ಞಾವಿಧಿಗಳನ್ನು ಅನುಸರಿಸುತ್ತಾ ಬರಬೇಕು.  ಇಷ್ಟನ್ನೇ ಹೊರತು, ನಿಮ್ಮ ದೇವರಾದ ಸರ್ವೇಶ್ವರ ನಿಮ್ಮಿಂದ ಬೇರೇನನ್ನು ಕೇಳಿಕೊಳ್ಳುವುದಿಲ್ಲ. ಇಗೋ ಕೇಳಿ; ಉನ್ನತೋನ್ನತವಾದ ಆಕಾಶಮಂಡಲವು, ಭೂಮಿಯು ಹಾಗು ಅದರಲ್ಲಿರುವ ಎಲ್ಲವು ನಿಮ್ಮ ದೇವರಾದ ಸರ್ವೇಶ್ವರಸ್ವಾಮಿಯವೇ. ಆದರೂ ಅವರು ನಿಮ್ಮ ಪಿತೃಗಳಲ್ಲಿ ಇಷ್ಟವುಳ್ಳವರಾಗಿ ಅವರನ್ನು ಪ್ರೀತಿಸಿದರು. ಈಗ ನಿಮ್ಮ ಅನುಭವಕ್ಕೆ ಬಂದಿರುವಂತೆ, ಅವರ ತರುವಾಯ ಅವರ ಸಂತತಿಯವರಾದ ನಿಮ್ಮನ್ನೇ ಎಲ್ಲ ಜನಾಂಗಗಳಿಂದ ಆರಿಸಿಕೊಂಡರು.  ಆದುದರಿಂದ ಅವರ ಆಜ್ಞೆಗೆ ಮಣಿಯದ ನಿಮ್ಮ ದುಷ್ಟಸ್ವಭಾವವನ್ನು ಬಿಟ್ಟು ಬಿಟ್ಟು ನಿಮ್ಮ ಹೃದಯದಲ್ಲೇ ಸುನ್ನತಿ ಮಾಡಿಕೊಳ್ಳಿ. ನಿಮ್ಮ ದೇವರಾದ ಸರ್ವೇಶ್ವರ ದೇವಾದಿದೇವರು. ಸರ್ವೇಶ್ವರಾಧಿ  ಸರ್ವೇಶ್ವರ. ಅವರು ಪರಮ ದೇವರೂ ಪರಾಕ್ರಮಿಯೂ ಭಯಂಕರವೂ ಆಗಿದ್ದಾರೆ. ಅವರು ಮುಖದಾಕ್ಷಿಣ್ಯ ನೋಡುವವರಲ್ಲ. ಲಂಚ ತೆಗೆದುಕೊಳ್ಳುವವರಲ್ಲ. ಅನಾಥರಿಗೆ ಮತ್ತು ವಿಧವೆಯರಿಗೆ ನ್ಯಾಯದೊರಕಿಸುತ್ತಾರೆ; ಪರದೇಶಿಗಳಾದವರಿಗೆ ಪ್ರೀತಿಯಿಂದ ಅನ್ನವಸ್ತ್ರಗಳನ್ನು ನೀಡುತ್ತಾರೆ. ಈಜಿಪ್ಟ್ ದೇಶದಲ್ಲಿ ನೀವೇ ಪರದೇಶಿಗಳಾಗಿ ಇದ್ದುದನ್ನು ಜ್ಞಾಪಿಸಿಕೊಂಡು ಪರದೇಶದವರಲ್ಲಿ ಪ್ರೀತಿಯಿಡಿ. ನಿಮ್ಮ ದೇವರಾದ ಸರ್ವೇಶ್ವರನಲ್ಲಿ ಭಯಭಕ್ತಿಯುಳ್ಳವರಾಗಿ ಅವರಿಗೇ ಸೇವೆ ಸಲ್ಲಿಸಿ. ಅವರನ್ನು ಹೊಂದಿಕೊಂಡು ಅವರ ಹೆಸರಿನ ಮೇಲೆಯೇ ಪ್ರಮಾಣಮಾಡಬೇಕು. ಅವರೊಬ್ಬರೇ ನಿಮ್ಮ ಸ್ತುತಿಸ್ತೋತ್ರಕ್ಕೆ ಪಾತ್ರರು; ಅಲರು ನಿಮ್ಮ ದೇವರು; ನೀವು ನೋಡಿದ ಆ ಮಹಾಭಯಂಕರವಾದ ಮಹತ್ಕಾರ್ಯಗಳನ್ನು ನಿಮ್ಮ ಪರವಾಗಿ ನಡೆಸಿದವರು ಅವರೇ. ನಿಮ್ಮ ಪಿತೃಗಳು, ಎಪ್ಪತ್ತುಮಂದಿ ಮಾತ್ರ, ಈಜಿಪ್ಟ್ ದೇಶಕ್ಕೆ ಹೋದರು; ಈಗಲಾದರೋ ನಿಮ್ಮ ದೇವರಾದ ಸರ್ವೇಶ್ವರ ನಿಮ್ಮನ್ನು ಆಕಾಶದ ನಕ್ಷತ್ರಗಳಷ್ಟು ಅಂಸಖ್ಯರಾಗುವಂತೆ ಮಾಡಿದ್ದಾರೆ.

ಕೀರ್ತನೆ: 147:12-13, 14-15, 19-20

ಶ್ಲೋಕ: ಜೆರುಸಲೇಮೇ,, ಕೀರ್ತಿಸು ಪ್ರಭುವನು

ಶುಭಸಂದೇಶ: ಮತ್ತಾಯ 17:22-27


ಶಿಷ್ಯರೆಲ್ಲರು ಒಮ್ಮೆ ಗಲಿಲೇಯದಲ್ಲಿ ಒಟ್ಟಿಗೆ ಸೇರಿದ್ದರು. ಆಗ ಯೇಸು ಅವರಿಗೆ, "ನರಪುತ್ರನನ್ನು ಜನರ ವಶಕ್ಕೆ ಒಪ್ಪಿಸಲಾಗುವುದು; ಅವರು ಆತನನ್ನು ಕೊಲ್ಲುವರು. ಆದರೆ ಮೂರನೆಯ ದಿನ ಆತನನು ಪುನರುತ್ದಾನಗೊಳಿಸಲಾಗುವುದು," ಎಂದರು. ಅದನ್ನು ಕೇಳಿ ಶಿಷ್ಯರು ತುಂಬಾ ವ್ಯಥೆಗೊಂಡರು. ಯೇಸು ಮತ್ತು ಶಿಷ್ಯರು ಕಫೆರ್ನವುಮಿಗೆ ಹೋದರು.  ದೇವಾಲಯದ ತೆರಿಗೆಯನ್ನು ವಸೂಲಿ ಮಾಡುತ್ತಿದ್ದವರು ಪೇತ್ರನ ಬಳಿಗೆ ಬಂದು, "ನಿಮ್ಮ ಗುರು ತೆರಿಗೆ ಕಟ್ಟುವುದಿಲ್ಲವೇ?" ಎಂದು ವಿಚಾರಿಸಿದರು. ಅದಕ್ಕೆ ಪೇತ್ರನು, "ಹೌದು, ಕಟ್ಟುತ್ತಾರೆ," ಎಂದು ಉತ್ತರವಿತ್ತನು. ಬಳಿಕ ಮನೆಗೆ ಬಂದಾಗ, ಅವನು ಮಾತೆತ್ತುವುದಕ್ಕೆ ಮೊದಲೇ ಯೇಸು "ಸಿಮೋನಾ, ನಿನಗೆ ಏನನ್ನಿಸುತ್ತದೆ? ಇಹಲೋಕದ ರಾಜರು ಕಂದಾಯವನ್ನಾಗಲಿ, ತೆರಿಗೆಯನ್ನಾಗಲಿ ಯಾರಿಂದ ವಸೂಲಿಮಾಡುತ್ತಾರೆ? ತಮ್ಮ ಪುತ್ರರಿಂದಲೋ ಅಥವಾ ಪರರಿಂದಲೋ?" ಎಂದು ಕೇಳಿದರು. "ಪರರಿಂದಲೇ," ಎಂದು ಪೇತ್ರನು ಉತ್ತರಕೊಟ್ಟನು. ಯೇಸು, "ಹಾಗಾದರೆ, ಪುತ್ರರು ತೆರಿಗೆ ಕಟ್ಟಬೇಕಾಗಿಲ್ಲ ತಾನೇ? ಆದರೂ, ನಾವೂ ಇವರಿಗೆ ಅಡ್ಡಿಯಾಡಬಾರದು. ಎಂದೇ ನೀನು ಸರೋವರಕ್ಕೆ ಹೋಗಿ ಗಾಳ ಹಾಕು. ಮೊದಲು ಸಿಕ್ಕುವ ಮೀನನ್ನು ಎತ್ತಿಕೊಂಡು ಅದರ ಬಾಯಿ ತೆರೆದು ನೋಡು. ಅದರಲ್ಲಿ ಒಂದು ಬೆಳ್ಳಿ ನಾಣ್ಯ ದೊರಕುವುದು. ಅದನ್ನು ತಂದು ನನ್ನ ಮತ್ತು ನಿನ್ನ ಪರವಾಗಿ ಅವರಿಗೆ ಕೊಡು," ಎಂದರು.

13.08.23 - "ದೋಣಿಯಲ್ಲಿದ್ದವರು “ನೀವು ನಿಜವಾಗಿಯೂ ದೇವರ ಪುತ್ರ!” ಎಂದು ಹೇಳಿ ಯೇಸುವನ್ನು ಆರಾಧಿಸಿದರು."

 ಮೊದಲನೇ ವಾಚನ: 1 ಅರಸುಗಳು 19:9, 11-13

ಎಲೀಯನು ಪ್ರಯಾಣಮಾಡಿ ದೇವಗಿರಿಯಾದ ಹೋರೇಬನ್ನು ಮುಟ್ಟಿ ಅಲ್ಲಿನ ಒಂದು ಗವಿಯಲ್ಲಿ ಇಳಿದುಕೊಂಡನು. ಆಗ “ನೀನು ಹೊರಗೆ ಬಂದು ಬೆಟ್ಟದ ಮೇಲೆ ಸರ್ವೇಶ್ವರನ ಮುಂದೆ ನಿಲ್ಲು,” ಎಂದು ವಾಣಿಯಾಯಿತು; ಆಹಾ! ಸರ್ವೇಶ್ವರ ಅಲ್ಲೇ ಹಾದುಹೋದರು, ಅವರ ಮುಂದೆ ಪರ್ವತಗಳನ್ನು ಭೇದಿಸಿ ಬಂಡೆಗಳನ್ನು ಪುಡಿಪುಡಿಮಾಡುವಂಥ ದೊಡ್ಡ ಬಿರುಗಾಳಿ ಬೀಸಿತು; ಸರ್ವೇಶ್ವರ ಅದರಲ್ಲಿ ಇರಲಿಲ್ಲ. ತರುವಾಯ ಭೂಕಂಪವುಂಟಾಯಿತು; ಅದರಲ್ಲೂ ಅವರಿರಲಿಲ್ಲ.  ಭೂಕಂಪವಾದನಂತರ ಸಿಡಿಲು ಉಂಟಾಯಿತು; ಅದರಲ್ಲಿಯೂ ಸರ್ವೇಶ್ವರ ಇರಲಿಲ್ಲ. ಕಡೆಗೊಂದು ಮೆಲುದನಿ!  ಅದನ್ನು ಕೇಳಿದ ಕೂಡಲೆ ಎಲೀಯನು ತನ್ನ ಕಂಬಳಿಯಿಂದ ಮುಖವನ್ನು ಮುಚ್ಚಿಕೊಂಡು ಹೋಗಿ ಗವಿಯ ದ್ವಾರದಲ್ಲಿ ನಿಂತನು. 

ಕೀರ್ತನೆ: 85:9, 10, 11-12, 13-14

ಶ್ಲೋಕ: ತೋರಿಸೆಮಗೆ ಪ್ರಭೂ, ಕರುಣೆಯನು

ಎರಡನೇ ವಾಚನ: ರೋಮನರಿಗೆ 9:1-5

ನನ್ನ ಜನರಾದ ಯೆಹೂದ್ಯರ ವಿಷಯವಾಗಿ ನನಗೆ ಅತೀವ ದುಃಖವೂ ನಿರಂತರ ಮನೋವೇದನೆಯೂ ಉಂಟಾಗುತ್ತಿದೆ.  ಇದು ಸುಳ್ಳಲ್ಲ, ಕ್ರಿಸ್ತಯೇಸುವಿನಲ್ಲಿ ಸತ್ಯವಾಗಿಯೇ ಹೇಳುತ್ತಿದ್ದೇನೆ. ಪವಿತ್ರಾತ್ಮಾಧೀನವಾಗಿರುವ ನನ್ನ ಮನಸ್ಸೇ ಇದಕ್ಕೆ ಸಾಕ್ಷಿಯಾಗಿದೆ. 3ಸ್ವದೇಶಿಯರೂ ರಕ್ತಸಂಬಂಧಿಕರೂ ಆದ ನನ್ನ ಸಹೋದರರ ಪರವಾಗಿ ನಾನು ಕ್ರಿಸ್ತಯೇಸುವಿನಿಂದ ಬಹಿಷ್ಕೃತನಾಗಿ ಶಾಪಗ್ರಸ್ತನಾಗಲು ಸಹ ಸಿದ್ಧನಿದ್ದೇನೆ.  ಅವರೇ ಇಸ್ರಯೇಲರು. ದೇವರೇ ಇವರನ್ನು ಮಕ್ಕಳನ್ನಾಗಿ ಆರಿಸಿಕೊಂಡರು; ಇವರಿಗೆ ತಮ್ಮ ಮಹಿಮೆಯನ್ನು ವ್ಯಕ್ತಪಡಿಸಿದರು; ಇವರೊಡನೆ ಒಡಂಬಡಿಕೆಯನ್ನು ಮಾಡಿಕೊಂಡರು; ಇವರಿಗೆ ಧರ್ಮಶಾಸ್ತ್ರವನ್ನೂ ಸಭಾರಾಧನೆಯನ್ನೂ ವಾಗ್ದಾನಗಳನ್ನೂ ದಯಪಾಲಿಸಿದರು.  ಅಬ್ರಹಾಮ್, ಇಸಾಕ್ ಮತ್ತು ಯಕೋಬ ಎಂಬ ಪಿತಾಮಹರೂ ಸಹ ಇವರಿಗೆ ಸೇರಿದವರೇ. ಶಾರೀರಿಕವಾಗಿ ಕ್ರಿಸ್ತಯೇಸುವೂ ಇವರ ವಂಶದಲ್ಲಿ ಹುಟ್ಟಿದವರೇ. ಸಕಲಕ್ಕೂ ಒಡೆಯರಾದ ದೇವರಿಗೆ ನಿರಂತರ ಸ್ತುತಿಸ್ತೋತ್ರ ಸಲ್ಲಲಿ, ಆಮೆನ್.

ಶುಭಸಂದೇಶ: ಮತ್ತಾಯ 14:22-33


ಯೇಸುಸ್ವಾಮಿ ತಾವು ಜನರ ಗುಂಪನ್ನು ಕಳುಹಿಸಿಬಿಡುವಷ್ಟರಲ್ಲಿ, ಶಿಷ್ಯರು ದೋಣಿ ಹತ್ತಿ ತಮಗಿಂತ ಮುಂದಾಗಿ ಹೋಗಬೇಕೆಂದು ಆಜ್ಞಾಪಿಸಿದರು.  ಜನರನ್ನು ಬೀಳ್ಕೊಟ್ಟ ಬಳಿಕ ಪ್ರಾರ್ಥನೆಮಾಡಲು ಯೇಸು ಒಬ್ಬರೇ ಬೆಟ್ಟಕ್ಕೆ ಹೋದರು. ಕತ್ತಲೆ ಕವಿದಾಗ ಅವರು ಅಲ್ಲಿ ಒಬ್ಬಂಟಿಗರಾಗಿದ್ದರು.  ಅಷ್ಟರಲ್ಲಿ ದೋಣಿ ದಡದಿಂದ ಬಹುದೂರ ಸಾಗಿತ್ತು. ಎದುರುಗಾಳಿ ಬೀಸಿ ಅದು ಅಲೆಗಳ ಬಡಿತಕ್ಕೆ ಸಿಕ್ಕಿಕೊಂಡಿತ್ತು.  ಆಗ ರಾತ್ರಿಯ ಕಡೇ ಜಾವದ ಸಮಯ. ಯೇಸು ಸರೋವರದ ಮೇಲೆ ನಡೆದುಕೊಂಡೇ ಶಿಷ್ಯರ ಬಳಿಗೆ ಬಂದರು.  ಹೀಗೆ ಸರೋವರದ ಮೇಲೆ ನಡೆದು ಬರುತ್ತಿದ್ದ ಯೇಸುವನ್ನು ನೋಡಿದಾಗ ಶಿಷ್ಯರು ಭಯಭ್ರಾಂತರಾದರು. ದಿಗಿಲುಗೊಂಡು, “ಭೂತ, ಭೂತ!” ಎಂದು ಚೀರಿದರು.  ತಕ್ಷಣವೇ ಯೇಸು, “ಭಯಪಡಬೇಡಿ, ನಾನೇ ಬೇರೆ ಯಾರೂ ಅಲ್ಲ, ಧೈರ್ಯದಿಂದಿರಿ,” ಎಂದು ಅವರೊಡನೆ ಮಾತನಾಡಿದರು.  ಆಗ ಪೇತ್ರನು, “ಸ್ವಾಮೀ, ನೀವೇ ಆದರೆ ನಾನೂ ನೀರಿನ ಮೇಲೆ ನಡೆದು ನಿಮ್ಮ ಬಳಿಗೆ ಬರುವಂತೆ ಆಜ್ಞಾಪಿಸಿ,” ಎಂದನು. ಯೇಸು, “ಬಾ” ಎಂದು ಕರೆಯಲು ಪೇತ್ರನು ದೋಣಿಯನ್ನು ಬಿಟ್ಟು ನೀರಿನ ಮೇಲೆ ನಡೆಯುತ್ತಾ ಯೇಸುವಿನತ್ತ ಬಂದನು.  ಆದರೆ ಬಲವಾದ ಗಾಳಿ ಬೀಸುತ್ತಿರುವುದನ್ನು ಕಂಡು ಹೆದರಿದನು. ಹಾಗೆಯೇ ಮುಳುಗಿಹೋಗಲಾರಂಭಿಸಿದನು. ಆಗ, “ಸ್ವಾಮೀ, ಕಾಪಾಡಿ, ಕಾಪಾಡಿ,” ಎಂದು ಕೂಗಿಕೊಂಡನು.  ಆ ಕ್ಷಣವೇ ಯೇಸು ಕೈಚಾಚಿ ಅವನನ್ನು ಹಿಡಿದುಕೊಂಡು, “ಅಲ್ಪವಿಶ್ವಾಸಿಯೇ, ಏಕೆ ಸಂದೇಹಪಟ್ಟೆ?” ಎಂದರು.  ಅನಂತರ ಅವರಿಬ್ಬರೂ ದೋಣಿಯನ್ನು ಹತ್ತಿದರು. ಕೂಡಲೇ ಗಾಳಿ ನಿಂತುಹೋಯಿತು.  ದೋಣಿಯಲ್ಲಿದ್ದವರು, “ನೀವು ನಿಜವಾಗಿಯೂ ದೇವರ ಪುತ್ರ!” ಎಂದು ಹೇಳಿ ಯೇಸುವನ್ನು ಆರಾಧಿಸಿದರು.

12.08.23

ಮೊದಲನೇ ವಾಚನ: ಧರ್ಮೋಪದೇಶಕಾ೦ಡ 6: 4-13

“ಇಸ್ರಯೇಲ್ ಜನಾಂಗವೇ ಕೇಳು: ನಿನ್ನ ದೇವರಾದ ಸರ್ವೇಶ್ವರಸ್ವಾಮಿ ಒಬ್ಬರೇ ದೇವರು. ನಿನ್ನ ಪೂರ್ಣಹೃದಯದಿಂದ, ಪೂರ್ಣಪ್ರಾಣದಿಂದ, ಪೂರ್ಣಶಕ್ತಿಯಿಂದ ನಿನ್ನ ದೇವರಾದ ಸರ್ವೇಶ್ವರನನ್ನು ಪ್ರೀತಿಸು. ಈ ದಿನ ನಾನು ನಿನಗೆ ತಿಳಿಸುವ ಮಾತುಗಳು ನಿಮ್ಮ ಹೃದಯದಲ್ಲಿ ನಾಟಿರಲಿ. ಇವುಗಳನ್ನು ನಿನ್ನ ಮಕ್ಕಳಿಗೆ ಮನದಟ್ಟಾಗಿಸು; ಮನೆಯಲ್ಲಿರುವಾಗಲು, ಪ್ರಯಾಣದಲ್ಲಿರುವಾಗಲು, ಮಲಗುವಾಗಲು, ಏಳುವಾಗಲು ಇವುಗಳನ್ನು ಕುರಿತು ಪಾಠಹೇಳು. ಜ್ಞಾಪಕಾರ್ಥವಾಗಿ ಅವುಗಳನ್ನು ನಿನ್ನ ಕೈಗೆ ಕಟ್ಟಿಕೊ; ಜ್ಞಾಪಕ ಪಟ್ಟಿಯಂತೆ ಹಣೆಗೆ ತೊಟ್ಟುಕೊ. ನಿನ್ನ ಮನೆ ಬಾಗಿಲಿನ ನಿಲುವುಪಟ್ಟಿಗಳಲ್ಲೂ ತಲೆಬಾಗಿಲಿನ ಮೇಲೂ ಅವುಗಳನ್ನು ಬರೆ. “ನಿನ್ನ ಪಿತೃಗಳಾದ ಅಬ್ರಹಾಮ್, ಇಸಾಕ್, ಯಕೋಬರಿಗೆ ನಿನ್ನ ದೇವರಾದ ಸರ್ವೇಶ್ವರ ಪ್ರಮಾಣಮಾಡಿದ ನಾಡಿಗೆ ನಿನ್ನನ್ನು ಸೇರಿಸಿದಾಗ, ನೀನು ಕಟ್ಟದ ಸುಂದರವಾದ ದೊಡ್ಡ ಪಟ್ಟಣಗಳನ್ನು, ನೀನು ಕೂಡಿಸದ ಉತ್ತಮೋತ್ತಮ ವಸ್ತುಗಳಿಂದ ತುಂಬಿದ ಮನೆಗಳನ್ನು, ನೀನು ತೋಡದ ನೀರುಗುಂಡಿಗಳನ್ನು, ನೀನು ಬೆಳಸದ ದ್ರಾಕ್ಷಿತೋಟಗಳನ್ನು ಹಾಗು ಎಣ್ಣೆಮರಗಳನ್ನು ಅನುಭವಿಸುತ್ತಾ ತೃಪ್ತನಾಗಿ ಇರುವೆ. ಈಜಿಪ್ಟ್ ದೇಶದಲ್ಲಿ ಗುಲಾಮನಾಗಿದ್ದ ನಿನ್ನನ್ನು ಬಿಡುಗಡೆ ಮಾಡಿದ ಸರ್ವೇಶ್ವರನನ್ನು ಆಗ ಮರೆತುಬಿಡದಂತೆ ಎಚ್ಚರಿಕೆಯಿಂದಿರು. ನಿನ್ನ ದೇವರಾದ ಸರ್ವೇಶ್ವರನಲ್ಲಿ ಭಯಭಕ್ತಿಯುಳ್ಳವನಾಗಿರು; ಅವರಿಗೇ ಸೇವೆಮಾಡು; ಅವರ ಹೆಸರು ಹೇಳಿ ಪ್ರಮಾಣಮಾಡು.

ಕೀರ್ತನೆ: 18:1-3, 46, 50, 51
ಶ್ಲೋಕ: ಪ್ರಭುವೇ, ನೀನೇ  ಬಲವು,ನನಗಿದೆ ನಿನ್ನಲೇ ಒಲವು. 

ಪ್ರಭೂ, ನೀನೇ ನನ್ನ ಬಲವು ನನಗಿದೆ ನಿನ್ನಲ್ಲೇ ಒಲವು
ಪ್ರಭುವೇ ನನ್ನ ಕಲ್ಲುಕೋಟೆ, ನನಗೆ ವಿಮೋಚಕ
ಆತನೇ ನನ್ನ ದೇವ, ನನ್ನಾಶ್ರಯದುರ್ಗ
ಆತನೆನಗೆ ಗುರಾಣಿ, ಗಿರಿ, ರಕ್ಷಣಾ ಶೃಂಗ

ಪ್ರಭು ಸ್ತುತ್ಯಾರ್ಹನು
ಶತ್ರುಗಳಿಂದ ಕಾಪಾಡುವರು ನಾನವಗೆ ಮೊರೆಯಿಡಲು
ಸರ್ವೇಶ್ವರನು ಚೈತನ್ಯ ಸ್ವರೂಪನು
ನನ್ನುದ್ಧಾರಕನಾದವನಿಗೆ ಸ್ತುತಿಸ್ತೋತ್ರ
ನನ್ನ ರಕ್ಷಿಸುವ ದೇವರಿಗೆ ಜಯಕಾರ

ತಾನೇ ನೇಮಿಸಿದ ಅರಸನಿಗೆ ಆತನೀವನು ವಿಶೇಷ ರಕ್ಷಣೆ
ಅನುಗ್ರಹಿಸುವನಾತ ಅನಂತಾನಂತ ಕೃಪೆ
ತಾನಭಿಷೇಕಿಸಿದ ದಾವೀದನಿಗೆ, ಆತನ ಸಂತತಿಗೆ

ಶುಭಸಂದೇಶ: ಮತ್ತಾಯ 17:14-21

ಜನರ ಗುಂಪು ಇದ್ದಲ್ಲಿಗೆ ಅವರೆಲ್ಲರು ಮರಳಿಬಂದರು. ಆಗ ಒಬ್ಬನು ಯೇಸುಸ್ವಾಮಿಯ ಬಳಿಗೆ ಬಂದು, "ಪ್ರಭೂ, ನನ್ನ ಮಗನ ಮೇಲೆ ಕನಿಕರವಿಡಿ, ಅವನು ಮೂರ್ಛಾರೋಗಿ, ಅವನ ಕಷ್ಟ ಹೇಳತೀರದು, ಆಗಾಗ ಬೆಂಕಿಯಲ್ಲೋ ನೀರಿನಲ್ಲೋ ಬಿದ್ದು ಬಿಡುತ್ತಾನೆ. ಅವನನ್ನು ತಮ್ಮ ಶಿಷ್ಯರ ಬಳಿಗೆ ಕರೆದುಕೊಂಡು ಬಂದೆ. ಆದರೆ ಅವನನ್ನು ಗುಣಪಡಿಸಲು ಅವರಿಂದಾಗಲಿಲ್ಲ," ಎಂದು ಮೊಣಕಾಲೂರಿ ಯಾಚಿಸಿದನು. ಅದಕ್ಕೆ ಯೇಸು, "ಅಯ್ಯೋ ವಿಶ್ವಾಸವಿಲ್ಲದ ವಕ್ರ ಪೀಳಿಗೆಯೇ, ಇನ್ನೆಷ್ಟುಕಾಲ ನಾನು ನಿಮ್ಮೊಂದಿಗಿರಲಿ? ಇನ್ನೆಷ್ಟು ಕಾಲ ನಿಮ್ಮನ್ನು ಸಹಿಸಿಕೊಳ್ಳಲಿ?" ಎಂದು ಹೇಳಿ, "ಆ ಹುಡುಗನನ್ನು ಇಲ್ಲಿ ನನ್ನ ಬಳಿಗೆ ಕರೆದುಕೊಂಡು ಬನ್ನಿ," ಎಂದರು. ಅನಂತರ ಆ ಹುಡುಗನಲ್ಲಿದ್ದ ದೆವ್ವವನ್ನು ಅವರು ಗದರಿಸಿದೊಡನೆಯೇ, ಅದು ಅವನನ್ನು ಬಿಟ್ಟು ಹೋಯಿತು. ಅವನು ತಕ್ಷಣವೇ ಸ್ವಸ್ಥನಾದನು. ತರುವಾಯ ಶಿಷ್ಯರು ಪ್ರತ್ಯೇಕವಾಗಿ ಯೇಸುವಿನ ಬಳಿಗೆ ಬಂದು, "ಆ ದೆವ್ವವನ್ನು ಬಿಡಿಸಲು ನಮ್ಮಿಂದಾಗಲಿಲ್ಲವಲ್ಲ, ಅದೇಕೆ?" ಎಂದು ಕೇಳಿದರು. ಅದಕ್ಕೆ ಪ್ರತ್ಯುತ್ತರವಾಗಿ ಯೇಸು, "ನಿಮ್ಮ ಅಲ್ಪವಿಶ್ವಾಸವೇ ಅದಕ್ಕೆ ಕಾರಣ. ನಾನು ನಿಶ್ಚಯವಾಗಿ ಹೇಳುತ್ತೇನೆ: ನಿಮಗೆ ಸಾಸಿವೆ ಕಾಳಿನಷ್ಟು ವಿಶ್ವಾಸವಾದರೂ ಇದ್ದಲ್ಲಿ, ಈ ಬೆಟ್ಟಕ್ಕೆ ಇಲ್ಲಿಂದ ಆ ಸ್ಥಳಕ್ಕೆ ಹೋಗು, ಎಂದು ಹೇಳಿದರೆ ಅದು ಹೋಗುತ್ತದೆ. ನಿಮ್ಮಿಂದ ಅಸಾಧ್ಯವಾದುದು ಒಂದೂ ಇರದು. (ಈ ಬಗೆಯ ದೆವ್ವಗಳನ್ನು ಹೊರಗಟ್ಟಲು ಪ್ರಾರ್ಥನೆ ಮತ್ತು ಉಪವಾಸ ಮಾಡುವುದನ್ನು ಬಿಟ್ಟು ಬೇರೆ ಮಾರ್ಗವಿಲ್ಲ)," ಎಂದರು.

11.08.23 - "ಪ್ರಪಂಚವನ್ನೆಲ್ಲಾ ಗೆದ್ದುಕೊಂಡರೂ ಒಬ್ಬನು ತನ್ನ ಪ್ರಾಣವನ್ನೇ ಕಳೆದುಕೊಂಡರೆ ...."

ಮೊದಲನೇ ವಾಚನ: ಧರ್ಮೋಪದೇಶಕಾಂಡ 4:32-40

ಮೋಶೆಯು ಜನರಿಗೆ ಹೇಳಿದ್ದೇನೆಂದರೆ, "ದೇವರು ಮಾನವರನ್ನು ಸೃಷ್ಟಿಸಿ ಭೂಮಿಯ ಮೇಲಿರಿಸಿದ ದಿನ ಮೊದಲ್ಗೊಂಡು ಇಂದಿನವರೆಗೆ, ಒಂದು ದಿಕ್ಕಿನಿಂದ ಮತ್ತೊಂದು ದಿಕ್ಕಿನವರೆಗೆ, ಅಂಥ ಅದ್ಭುತ ಕಾರ್ಯ ನಡೆದುದ್ದುಂಟೇ? ಅಂಥ ಸುದ್ಧಿಯನ್ನಾದರೂ ಕೇಳಿದ್ದುಂಟೇ? ನೀವೇ ವಿಚಾರಿಸಿಕೊಳ್ಳಿ, ದೇವರು ಅಗ್ನಿ ಜ್ವಾಲೆಯೊಳಗಿಂದ ಮಾತಾಡಿದ ಸ್ವರ ಕೇಳಿಸಿತಲ್ಲವೇ? ಬೇರೆ ಯಾವ ಜನರಾದರು ದೇವರ ಸ್ವರ ಕೇಳಿ ಬದುಕಿದ್ದುಂಟೇ? ಬೇರೆ ಯಾವ ದೇವರು ತಾನೆ ಪರಿಶೋಧನೆ, ಪವಾಡ, ಮಹತ್ಕಾರ್ಯ, ಯುದ್ಧ, ಭುಜಪರಾಕ್ರಮ, ಶಿಕ್ಷಾಹಸ್ತ, ಭಯಂಕರ ಕಾರ್ಯ ಇವುಗಳನ್ನು ಪ್ರಯೋಗಿಸಿ ಒಂದು ಜನಾಂಗವನ್ನು ಮತ್ತೊಂದು ಜನಾಂಗದ ಕೈಯಿಂದ ತಪ್ಪಿಸಲು ಪ್ರಯತ್ನಿಸಿದ್ದಾರೆ? ನಿಮ್ಮ ದೇವರಾದ ಸರ್ವೇಶ್ವರ ಸ್ವಾಮಿಯಾದರೋ ಈಜಿಪ್ಟಿನಲ್ಲಿ ನಿಮ್ಮ ಪರವಾಗಿ, ಇದನ್ನೆಲ್ಲಾ ನಿಮ್ಮ ಕಣ್ಮುಂದೆಯೇ, ನಡೆಸಿದರಲ್ಲವೆ? ಸರ್ವೇಶ್ವರ ಸ್ವಾಮಿಯೊಬ್ಬರೇ ದೇವರು, ಬೇರೆ ದೇವರೇ ಇಲ್ಲವೆಂದು ನೀವು ಅರಿತುಕೊಳ್ಳುವುದಕ್ಕಾಗಿ ಇದನ್ನೆಲ್ಲಾ ನಿಮಗೆ ಮಾತ್ರ ತೋರಿಸಲಾಗಿದೆ. ನೀವು ಕಲಿತುಕೊಳ್ಳಬೇಕೆಂದೇ ಸರ್ವೇಶ್ವರ ಆಕಾಶದಿಂದ ತಮ್ಮ ಸ್ವರ ನಿಮಗೆ ಕೇಳಿಸುವ ಹಾಗೆ ಮಾಡಿದರು. ತಾವಿದ್ದ ಮಹಾ ಅಗ್ನಿಜ್ವಾಲೆಯನ್ನು ಭೂಮಿಯ ಮೇಲೆ ನೀವು ನೋಡುವಂತೆ ಮಾಡಿದರು; ಆ ಅಗ್ನಿಜ್ವಾಲೆಯ ಒಳಗಿಂದ  ಅವರು ಆಡಿದ ಮಾತುಗಳನ್ನು ನೀವು ಕೇಳಿದಿರಿ. ನಿಮ್ಮ ಪಿತೃಗಳನ್ನು ಪ್ರೀತಿಸಿ, ತರುವಾಯ ಅವರ ಸಂತತಿಯಾದ ನಿಮ್ಮನ್ನೂ ಆರಿಸಿಕೊಂಡರು. ಈಗ ನಮಗೆ ತಿಳಿದಿರುವಂತೆ ನಿಮಗಿಂತ ದೊಡ್ಡವೂ ಬಲಿಷ್ಠವೂ ಆದ ಜನಾಂಗಗಳನ್ನು ಹೊರಡಿಸಿ ಅವರ ನಾಡಲ್ಲೇ ನಿಮ್ಮನ್ನು ಸೇರಿಸಿ, ಆ ನಾಡನ್ನು ನಿಮಗೇ ಸ್ವಂತ ನಾಡನ್ನಾಗಿ ಕೊಡಲು ಸಂಕಲ್ಪಿಸಿದ್ದಾರೆ. ತಾವೇ ನಿಮ್ಮೊಂದಿಗಿದ್ದು, ತಮ್ಮ ಅಪಾರ ಸಾಮರ್ಥ್ಯದಿಂದ ನಿಮ್ಮನ್ನು ಈಜಿಪ್ಟ್ ದೇಶದಿಂದ ಕರೆದು ತಂದಿದ್ದಾರೆ. ನೀವು ಇದನ್ನೆಲ್ಲಾ ಆಲೋಚಿಸಿ, ಮೇಲೆ ಆಕಾಶದಲ್ಲಾಗಲಿ, ಕೆಳಗೆ ಭೂಮಿಯಲ್ಲಾಗಲಿ ಸರ್ವೇಶ್ವರಸ್ವಾಮಿಯೊಬ್ಬರೇ ದೇವರು, ಬೇರೆ ಯಾವ ದೇವರೂ ಇಲ್ಲವೆಂಬುದನ್ನು ಈಗ ಗ್ರಹಿಸಿಕೊಂಡು ಜ್ಞಾಪಕದಲ್ಲಿ ಇಡಬೇಕು. ನಾನು ಇಂದು ನಿಮಗೆ ತಿಳಿಸಿದ ಅವರ ಆಜ್ಞಾವಿಧಿಗಳನ್ನು ಅನುಸರಿಸಿ ನಡೆಯಿರಿ. ಆಗ ನಿಮಗೂ ನಿಮ್ಮ ಸಂತತಿಗೂ ಶುಭವುಂಟಾಗುವುದು; ನಿಮ್ಮ ದೇವರಾದ ಸರ್ವೇಶ್ವರ ನಿಮಗೆ ಶಾಶ್ವತವಾಗಿ ಕೊಡುವ ನಾಡಿನಲ್ಲಿ ನೀವು ದೀರ್ಘಕಾಲ ಬಾಳುವಿರಿ.

ಕೀರ್ತನೆ: 77:12-13, 14-15, 16, 20

ಶ್ಲೋಕ: ಧ್ಯಾನಿಸುವೆ ನಾ ನಿನ್ನ ಕಾರ್ಯಗಳನೆಲ್ಲ

ಶುಭಸಂದೇಶ: ಮತ್ತಾಯ 16:24-28

ಯೇಸು ತಮ್ಮ ಶಿಷ್ಯರಿಗೆ ಹೀಗೆಂದರು: "ಯಾರಿಗಾದರೂ ನನ್ನನ್ನು ಹಿಂಬಾಲಿಸಲು ಮನಸ್ಸಿದ್ದರೆ, ಅವನು ತನ್ನನ್ನು ತಾನೇ ಪರಿತ್ಯಜಿಸಲಿ. ತನ್ನ ಶಿಲುಬೆಯನ್ನು ತಾನೇ ಹೊತ್ತುಕೊಂಡು ನನ್ನನ್ನು ಹಿಂಬಾಲಿಸಲಿ. ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಹಾತೊರೆಯುವವನು ಅದನ್ನು ಕಳೆದುಕೊಳ್ಳುವನು. ಆದರೆ ನನ್ನ ನಿಮಿತ್ತ ತನ್ನ ಪ್ರಾಣವನ್ನು ಕಳೆದುಕೊಳ್ಳುವವನು ಅದನ್ನು ಕಂಡುಕೊಳ್ಳುವನು. ಪ್ರಪಂಚವನ್ನೆಲ್ಲಾ ಗೆದ್ದುಕೊಂಡರೂ ಒಬ್ಬನು ತನ್ನ ಪ್ರಾಣವನ್ನೇ ಕಳೆದುಕೊಂಡರೆ ಅದರಿಂದ ಅವನಿಗೆ ದೊರಕುವ ಲಾಭವೇನು? ಅಥವಾ ಮನುಷ್ಯನು ತನ್ನ ಪ್ರಾಣಕ್ಕೆ ಈಡಾಗಿ ಏನನ್ನು ತಾನೇ ಕೊಡಬಲ್ಲನು? ನರಪುತ್ರನು ತನ್ನ ಪಿತನ ಪ್ರಭಾವದೊಡನೆ ತನ್ನ ದೂತರ ಸಮೇತ ಬರಲಿದ್ದಾನೆ. ಆಗ ಪ್ರತಿಯೊಬ್ಬ ಮಾನವನಿಗೆ ಅವನವನ ಕೃತ್ಯಕ್ಕೆ ತಕ್ಕ ಪ್ರತಿಫಲ ಕೊಡುವನು. ಇಲ್ಲಿರುವವರಲ್ಲಿ ಕೆಲವರು ನರಪುತ್ರನು ತನ್ನ ಸಾಮ್ರಾಜ್ಯದಲ್ಲಿ ಪ್ರತ್ಯಕ್ಷನಾಗುವುದನ್ನು ಕಾಣುವುದಕ್ಕೆ ಮುನ್ನ ಸಾವನ್ನು ಸವಿಯುವುದಿಲ್ಲ ಎಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ.

10.08.23 - "ನನ್ನ ಸೇವೆ ಮಾಡುವವನು ನನ್ನ ಪಿತನಿಂದ ಸನ್ಮಾನ ಹೊಂದುತ್ತಾನೆ,”

ಮೊದಲನೇ ವಾಚನ: 2 ಕೊರಿಂಥಿಯರಿಗೆ 9:6-10

ಸಹೋದರರೇ ವಿರಳವಾಗಿ ಬಿತ್ತುವವನು ವಿರಳವಾಗಿ ಕೊಯ್ಯುತ್ತಾನೆ ಹೇರಳವಾಗಿ ಬಿತ್ತುವವನು ಹೇರಳವಾಗಿ ಕೊಯ್ಯುತ್ತಾನೆ. ಇದು ನಿಮಗೆ ತಿಳಿದಿರಲಿ ಪ್ರತಿಯೊಬ್ಬನೂ ತನ್ನ ಮನಸ್ಸಿನಲ್ಲಿ ನಿಶ್ಚಯಿಸಿಕೊಂಡಷ್ಟು ನೀಡಲಿ. ಒಲ್ಲದ ಮನಸ್ಸಿನಿಂದಾಗಲಿ ಬಲಾತ್ಕಾರದಿಂದಾಗಲಿ ಕೊಡುವುದು ಬೇಡ. ನಗುನಗುತ್ತಾ ನೀಡುವಾತನನ್ನು ದೇವರು ಪ್ರೀತಿಸುತ್ತಾರೆ.  ಸಕಲ ವಿಧವಾದ ವರದಾನಗಳನ್ನು ನಿಮಗೆ ಯಥೇಚ್ಛವಾಗಿ ನೀಡಬಲ್ಲ ಶಕ್ತಿ ದೇವರಿಗಿದೆ. ನೀವು ಸದಾ ಸಮೃದ್ಧಿಯಿಂದಿರುವಿರಿ. ಹೀಗೆ ಸಕಲ ಸತ್ಕಾರ್ಯಗಳಿಗೆ ಹೃತ್ಪೂರ್ವಕವಾಗಿ ನೆರವಾಗುವಿರಿ. “ದೀನದಲಿತರಿಗೆ ಧಾರಾಳವಾಗಿ ನೀಡುವನು; ಅನವರತ ಇರುವುದು ಅವನ ದಾನಧರ್ಮದ ಫಲವು,” ಎಂದು ಪವಿತ್ರಗ್ರಂಥದಲ್ಲಿ ಬರೆದಿದೆ. ಬಿತ್ತುವವನಿಗೆ ಬೀಜವನ್ನೂ ಉಣ್ಣುವವನಿಗೆ ಊಟವನ್ನೂ ಒದಗಿಸುವ ದೇವರು, ಬಿತ್ತನೆಗೆ ಬೇಕಾದ ಬೀಜವನ್ನು ನಿಮಗೂ ಕೊಟ್ಟು ಅದನ್ನು ಬೆಳೆಸುವರು. ನಿಮ್ಮ ದಾನಧರ್ಮದ ಫಲಗಳು ಸಮೃದ್ಧಿಗೊಳ್ಳುವಂತೆ ಮಾಡುವರು.

ಕೀರ್ತನೆ                       112:1-2, 5-9

ಶ್ಲೋಕ:   ದಯೆತೋರಿ  ಧನಸಹಾಯ  ಮಾಡುವವನು  ಭಾಗ್ಯವಂತ.

1.  ಪ್ರಭುವಿನಲಿ  ಭಯಭಕ್ತಿಯುಳ್ಳವನು  ಧನ್ಯನು|
ಆತನಾಜ್ಞೆಗಳಲಿ  ಹಿಗ್ಗುವವನು  ಭಾಗ್ಯನು||
ಬಲಿಷ್ಠವಾಗುವುದು  ಜಗದೊಳು  ಅವನ  ಸಂತಾನ|
ಸಜ್ಜನರ  ಸಂತತಿ  ಪಡೆವುದು  ಆಶೀರ್ವಚನ||

ಶ್ಲೋಕ

2.  ದಯೆತೋರಿ  ಧನಸಹಾಯ  ಮಾಡುವವನು  ಭಾಗ್ಯವಂತ|
ನ್ಯಾಯದಿಂದ  ವ್ಯವಹರಿಸುವಂಥಾ  ಮನುಜನು  ಭಾಗ್ಯವಂತ||
ಅಚಲನಾಗಿರುವನು  ನೀತಿವಂತನು|
ಮರೆಯಲಾರರು  ಎಂದಿಗೂ  ಆತನನು||

ಶ್ಲೋಕ

3.  ಅಶುಭವಾರ್ತೆಯ  ಭಯಭೀತಿ  ಯಾವುದೂ  ಅವನಿಗಿಲ್ಲ|
ಪ್ರಭುವಿನಲಿ  ಭರವಸೆಯಿಟ್ಟ  ಆ  ಭನವು  ಅಸ್ಥಿರವಲ್ಲ||
ದೃಢವಿದೆ  ಅವನ  ಮನ,  ಎದೆಗುಂದನವನು|
ಕಾಣುವನು  ದುರಳರಿಗಾಗುವ  ದಂಡನೆಯನು||

ಶ್ಲೋಕ

4.  ಉದಾರತೆಯಿಂದ  ಕೊಡುವನು  ಬಡವರಿಗೆ|
ಫಲಿಸುವುದು  ಅವನಾ  ನೀತಿ  ಸದಾಕಾಲಕೆ|
ಮಹಿಮೆತರುವ  ಕೋಡು  ಮೂಡುವುದು  ಅವನಿಗೆ||

ಶ್ಲೋಕ

ಘೋಷಣೆ

ಅಲ್ಲೆಲೂಯ, ಅಲ್ಲೆಲೂಯ!
ನಾನೇ  ಜಗಜ್ಯೋತಿ,  ನನ್ನನ್ನು  ಹಿಂಬಾಲಿಸುವವನು  ಕತ್ತಲಲ್ಲಿ  ನಡೆಯುವುದಿಲ್ಲ,  ಜೀವದಾಯಕ  ಜ್ಯೋತಿ  ಅವನಲ್ಲಿರುತ್ತದೆ,,
ಅಲ್ಲೆಲೂಯ!

ಶ್ಲೋಕ: ದಯೆತೋರಿ ಧನಸಹಾಯ ಮಡುವವನು ಭಾಗ್ಯವಂತ

ಶುಭಸಂದೇಶ: ಯೊವಾನ್ನ 12:24-26


ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು: "ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ; ಗೋದಿಯ ಕಾಳು ಭೂಮಿಯಲ್ಲಿ ಬಿದ್ದು ಸಾಯದಿದ್ದರೆ ಅದು ಒಂಟಿಯಾಗಿ ಉಳಿಯುತ್ತದೆ; ಅದು ಸತ್ತರೆ ಮಾತ್ರ ಸಮೃದ್ಧಿಯಾದ ಫಲವನ್ನು ಕೊಡುತ್ತದೆ.  ತನ್ನ ಪ್ರಾಣವನ್ನು ಪ್ರೀತಿಸುವವನು ಅದನ್ನು ಕಳೆದುಕೊಳ್ಳುತ್ತಾನೆ. ತನ್ನ ಪ್ರಾಣವನ್ನು ಈ ಲೋಕದಲ್ಲಿ ದ್ವೇಷಿಸುವವನು ಅದನ್ನು ನಿತ್ಯಜೀವಕ್ಕಾಗಿ ಕಾಯ್ದಿರಿಸಿಕೊಳ್ಳುತ್ತಾನೆ. ನನ್ನ ಸೇವೆ ಮಾಡಬೇಕೆಂದಿರುವವನು ನನ್ನನ್ನು ಹಿಂಬಾಲಿಸಲಿ. ಆಗ ನಾನಿರುವಲ್ಲಿಯೇ ನನ್ನ ಸೇವಕನೂ ಇರುತ್ತಾನೆ. ನನ್ನ ಸೇವೆ ಮಾಡುವವನು ನನ್ನ ಪಿತನಿಂದ ಸನ್ಮಾನ ಹೊಂದುತ್ತಾನೆ,” ಎಂದರು.

ಪೂಜಾರ್ಪಣೆ 



ಸಂತ ಸ್ಮರಣೆ - ಸಂತ ಲಾರೆನ್ಸ್ 

3ನೇ ಶತಮಾನದ ಸಂತ ಲಾರೆನ್ಸ್ ಬಡವರ ಸೇವೆಗಾಗಿ ನೇಮಿಸಲ್ಪಟ್ಟ 7 ಉಪಯಾಜಕರಲ್ಲಿ ಒಬ್ಬರಾಗಿದ್ದರು. ಕ್ರೈಸ್ತರ ಮೇಲೆ ಭೀಕರ ಚಿತ್ರಹಿಂಸೆ ಪ್ರಾರಂಭವಾದಾಗ ಜಗದ್ಗುರು ಸಂತ ಸಿಕ್ಸ್ ತಸ್ ಮತ್ತು ನಾಲ್ವರು ಉಪಯಾಜರು ಮರಣದಂಡನೆಗೆ ಒಳಗಾಗುತ್ತಾರೆ. ಮರಣದಂಡನೆಗೆ ಅವರು ನಡೆಯುತ್ತಿರುವಾಗ ಲಾರೆನ್ಸ್ ಎದುರು ಬಂದು "ತಂದೆಯೇ, ನಿಮ್ಮ ಉಪಾಸಕನನ್ನು ಬಿಟ್ಟು, ನೀವೆಲ್ಲಿಗೆ ಹೋಗುತ್ತಿದ್ದೀರಿ?" ಎಂದು ಕೇಳಿದಾಗ, ಜಗದ್ಗುರು ಸಿಕ್ಸ್ ತಸ್ "ನಿನ್ನ ಬಿಟ್ಟು ಹೋಗುತ್ತಿಲ್ಲ ಮಗು, ಇನ್ನೂ ಮೂರು ದಿನಗಳಲ್ಲಿ ನೀನು ನನ್ನನ್ನು ಹಿಂಬಾಲಿಸುವೆ" ಎಂದರು.

 ಈ ಮೂರು ದಿನಗಳು ಲಾರೆನ್ಸರ ಬದುಕಿನ ಶ್ರೇಷ್ಠ ದಿನಗಳಾದವು. ರೋಮ್ ಸೈನ್ಯದ ದಂಡನಾಯಕ ಕ್ರೈಸ್ತ ದೇವಾಲಯಗಳಲ್ಲಿ ಬಹಳಷ್ಟು ಚಿನ್ನ-ಬೆಳ್ಳಿ ಅಪಾರವಾದ ಸಂಪತ್ತು ಇರುವುದೆಂದು ತಿಳಿದು ಸಂತ ಲಾರೆನ್ಸಾ ರನ್ನು ಕರೆದು, ನೀವು ಚಿನ್ನದ ಬಟ್ಟಲುಗಳಲ್ಲಿ ಪೂಜೆ ಅರ್ಪಿಸುತ್ತಿರಂತೆ, ರಕ್ತವನ್ನು ಬೆಳ್ಳಿಯ ಪಾತ್ರೆಗಳಲ್ಲಿ ಕುಡಿಯುತ್ತಿರಂತೆ, ಪೂಜೆಯಲ್ಲಿ ಚಿನ್ನದ ಮೇಣದಬತ್ತಿಯ ಸ್ತಂಭಗಳನ್ನು ಇಡುತ್ತಿದ್ದಂತೆ, ನಿಮ್ಮ ಧರ್ಮದ ಸಿದ್ಧಾಂತವೇ ಹೇಳುತ್ತದೆ: 'ಸೀಜರನಿಗೆ ಸೇರಿದ್ದನ್ನು ಸೀಜರನಿಗೆ ಒಪ್ಪಿಸಿ' ಎಂದು. ನಿಮ್ಮ ದೇವರು ಭೂಮಿಗೆ ಬಂದಾಗ ಇದನ್ನೆಲ್ಲಾ ತರಲಿಲ್ಲ. ದೇವರ ವಾಕ್ಯವನ್ನು ಮಾತ್ರ ತಂದ. ಆದ್ದರಿಂದ ಎಲ್ಲವನ್ನೂ ನನಗೆ ತಂದು ಒಪ್ಪಿಸು"  ಎನ್ನುತ್ತಾನೆ.

 ಮೂರು ದಿನಗಳ ಕಾಲಾವಕಾಶ ಕೇಳಿದ ಸಂತ ಲಾರೆನ್ಸ್ ತನ್ನ ವಶದಲ್ಲಿದ್ದ ಎಲ್ಲಾ ಹಣವನ್ನು ಬಡಬಗ್ಗರಿಗೆ ಹಂಚುತ್ತಾರೆ. ಇದು ಸಾಲದು ಎಂಬಂತೆ ಚಿನ್ನದ ಪೂಜಾಪಾತ್ರೆಗಳನ್ನು ಮಾರಿ ಬಡವರಿಗೆ ಹಂಚುತ್ತಾರೆ. ಮೂರು ದಿನಗಳ ನಂತರ ಕುರುಡರು, ಕುಂಟರು, ಅಂಗವಿಕಲರು, ನಿರ್ಗತಿಕರು ಮತ್ತು ಬಡವರನ್ನು ಒಟ್ಟಿಗೆ ನಿಲ್ಲಿಸಿ ದಂಡನಾಯಕನ ಆಗಮನಕ್ಕೆ ಕಾಯುತ್ತಾರೆ. ದಂಡನಾಯಕ ಬಂದಾಗ ಎದುರಿಗಿದ್ದವರನ್ನು ತೋರಿಸಿ "ಇಗೋ ನಮ್ಮ ಚರ್ಚಿನ ಆಸ್ತಿ" ಎನ್ನುತ್ತಾರೆ. ಕೋಪೋದ್ರಿಕ್ತನಾದ ದಂಡನಾಯಕ ಅವರಿಗೆ ಮರಣದಂಡನೆ ವಿಧಿಸುತ್ತಾನೆ. ಅದು ಸಾಧಾರಣ ಮರಣ ದಂಡನೆ ಅಲ್ಲ. ದೊಡ್ಡ ಬಾಣಲೆಯ ಉರಿಯುವ ಕೆಂಡಗಳ ಮೇಲೆ ಲಾರೆನ್ಸ್ ನನ್ನು ಮಲಗಿಸಿ ಜೀವ ತೆಗೆಯುವುದು. ಹೀಗೆ ಸ್ವಲ್ಪ ಸ್ವಲ್ಪವೇ ಬೆಂದು ಸಾಯುವ ಗಳಿಗೆಯಲ್ಲಿ ಲಾರೆನ್ಸ್ ಹೇಳಿದರಂತೆ: "Assum est; Versa, et Manduca". ಅಂದರೆ "ಚೆನ್ನಾಗಿ ಬಂದಿದೆ, ಒಮ್ಮೆ ತಿರುಗಿಸಿ ನಂತರ ತಿನ್ನಿ". ಸಂತ ಅಂಬ್ರೋಸ್ ಈ ಘಟನೆಯನ್ನು ದಾಖಲಿಸಿದ್ದಾರೆ.

 ಸಂತ ಲಾರೆನ್ಸರ ಬಗೆಗೆ ನಮಗೆ ತಿಳಿದಿರುವುದು ಬಹಳ ಕಡಿಮೆ. ಜಗದ್ಗುರು ಸಂತ ಸಿಕ್ಸ್ ತುಸ್ ನಂತರ ರೋಮ್ ಚಕ್ರವರ್ತಿ ವಲೇರಿಯನ್ 258 ರಲ್ಲಿ ಲಾರೆನ್ಸ್ ಮತ್ತು ಇತರ ಇಬ್ಬರು ಉಪನ್ಯಾಸಕರನ್ನು ಮರಣದಂಡನೆಗೆ ಗುರಿಮಾಡಿದ್ದಷ್ಟೇ ಇತಿಹಾಸದಿಂದ ನಾವು ತಿಳಿದಿರುವುದು. ಸಂತ ಡಮಸಸ್, ಅಂಬ್ರೋಸ್ ಮತ್ತು ಅಗಸ್ಟಿನ್ ರು ತಮ್ಮ ಬರಹಗಳಲ್ಲಿ ಸಂತ ಲಾರೆನ್ಸರ ಬಗ್ಗೆ ಸಾಕಷ್ಟು ವಿವರಗಳನ್ನು ಉಲ್ಲೇಖಿಸುತ್ತಾರೆ.

ಸಂತ ಲಾರೆನ್ಸರ ಸಮಾಧಿಯ ಮೇಲೆ ಕಟ್ಟಲಾದ ದೇವಾಲಯ ರೋಮ್ನ ಏಳು ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿತ್ತು. ಇಂದಿಗೂ ರೋಮ್ ನಗರಕ್ಕೆ ಹೋಗುವ ಭಕ್ತಾದಿಗಳಿಗೆ ಇದೊಂದು ಪುಣ್ಯಕ್ಷೇತ್ರವಾಗಿದೆ.


09.08.23 - "ತಾಯೀ, ನಿನ್ನ ವಿಶ್ವಾಸ ಅಚಲವಾದುದು. ನಿನ್ನ ಕೋರಿಕೆ ನೆರವೇರಲಿ"

ಮೊದಲನೆಯ ವಾಚನ: ಸಂಖ್ಯಾಕಾಂಡ 13:1-12, 25 -- 14:1, 26-29, 34-35


ಸರ್ವೇಶ್ವರಸ್ವಾಮಿ ಮೋಶೆಗೆ: "ನಾನು ಇಸ್ರಯೇಲರಿಗೆ ಕೊಡಲಿರುವ ಕಾನಾನ್ ನಾಡನ್ನು ಸಂಚರಿಸಿ ನೋಡಿಬರಲು ಒಂದೊಂದು ಕುಲದಿಂದ ಒಬ್ಬೊಬ್ಬ ಮುಖ್ಯಸ್ಥನನ್ನು ಕಳಿಸು " ಎಂದು ಆಜ್ಞಾಪಿಸಿದರು. ನಾಲ್ವತ್ತು ದಿವಸ ಆ ನಾಡನ್ನು ಸಂಚರಿಸಿ ನೋಡಿ ಆದಮೇಲೆ ಅವರು ಹಿಂದುರುಗಿ ಬಂದರು. ಪಾರಾನ್ ಮರುಭೂಮಿಯ ಕಾದೇಶಿನಲ್ಲಿದ್ದ ಮೋಶೆ, ಆರೋನ್ ಹಾಗೂ ಇಸ್ರಯೇಲ್ ಜನಸಮೂಹದ ಬಳಿಗೆ ಬಂದು ಅವರಿಗೆ ಸಮಾಚಾರವನ್ನು ತಿಳಿಸಿ ಆ ನಾಡಿನ ಹಣ್ಣುಗಳನ್ನು ತೋರಿಸಿದರು. ಮೋಶೆಗೆ, " ನೀವು ನಮ್ಮನ್ನು ಕಳಿಸಿದ ನಾಡಿಗೆ ಹೋಗಿದ್ದೆವು. ಅದು ಹಾಲು -- ಜೇನು ಹರಿಯುವಂಥ ನಾಡು. ಅಲ್ಲಿನ ಹಣ್ಣುಹಂಪಲಗಳು ಇಂಥವು. ಅಂತೆಯೇ ಆ ನಾಡಿನ ನಿವಾಸಿಗಳು ಬಲಿಷ್ಠರು. ಅವರಿರುವ ಪಟ್ಟಣಗಳು ದೊಡ್ಡವು, ಅವು ಕೋಟೆ ಕೊತ್ತಲುಗಳಿಂದ ಕೂಡಿವೆ. ಅದೂ ಅಲ್ಲದೆ ಅಲ್ಲಿ ' ಅನಕಿಮ್ ' ವಂಶಸ್ಥರನ್ನು ಕಂಡೆವು. ಹಾಗೂ ಅಮೋರಿಯರು ಮತ್ತು ಸಮುದ್ರತೀರದಲ್ಲಿ ಹಾಗೂ ಜೋರ್ಡನ್ ನದಿಯ ಪರಿಸರದಲ್ಲಿ ಕಾನಾನ್ಯರು ವಾಶವಾಗಿದ್ದಾರೆ, " ಎಂದು ವರದಿ ಮಾಡಿದರು. ಮೋಶೆಗೆ ವಿರುದ್ಧ ಗೊಣಗುಟ್ಟುತ್ತಿದ್ದವರನ್ನು ಕಾಲೇಬನು ಸಮಾಧಾನಗೊಳಿಸುತ್ತಾ, " ನಾವು ಧೈರ್ಯದಿಂದ ಆ ಮಲೆನಾಡಿಗೆ ಹೋಗಿ ಅದನ್ನು ಸ್ವಾಧೀನ ಪಡಿಸಿಕೊಳ್ಳೋಣ. ಅದನ್ನು ಜಯಿಸಲು ನಿಮ್ಮಿಂದ ಸಾಧ್ಯ, " ಎಂದನು. ಆದರೆ ಅವನ ಜೊತೆಯಲ್ಲಿ ಹೋಗಿದ್ದವರು, " ಆ ಜನರು ನಮಗಿಂತ ಬಲಿಷ್ಠರು ! ಅವರ ಮೇಲೆ ಜಯ ಸಾಧಿಸಲು ನಮಗೆ ಶಕ್ತಿ ಸಾಲದು, " ಎಂದರು. ಅದಲ್ಲದೆ ತಾವು ಸಂಚರಿಸಿ ನೋಡಿ ಬಂದ ನಾಡಿನ ವಿಷಯವಾಗಿ ಇಸ್ರಯೇಲರಿಗೆ ಅಶುಭ ಸಮಾಚಾರವನ್ನೇ ಹೇಳುವವರಾದರು. ನಾವು ಸಂಚಾರಮಾಡಿ ನೋಡಿ ಬಂದ ನಾಡು ತನ್ನಲ್ಲಿ ವಾಸಿಸುವವರನ್ನೇ ಕಬಳಿಸುವಂತಿದೆ. ನಾವು ಅಲ್ಲಿ ನೋಡಿದ ಜನರೆಲ್ಲರು ಬಹು ಎತ್ತರವಾದ ವ್ಯಕ್ತಿಗಳು. ಅಲ್ಲಿ ' ನೆಫೀಲಿಯರನ್ನು ' ಅಂದರೆ ನೆಫೀಲಿಯನ ವಂಶದವರಾದ ' ಅನಕಿಮ್' ರನ್ನು ನೋಡಿದೆವು. ಅವರ ಮುಂದೆ ನಾವು ಮಿಡತೆಗಳಂತೆ ಇದ್ದೆವು. ಅವರಿಗೂ ನಾವು ಹಾಗೆಯೆ ಕಾಣಿಸಿಕೊಂಡೆವು " ಎಂದರು. ಜನರೆಲ್ಲರೂ ಈ ವರದಿಯನ್ನು ಕೇಳಿ ಗಟ್ಟಿಯಾಗಿ ಗೋಳಿಟ್ಟರು. ರಾತ್ರಿಯೆಲ್ಲಾ ಅಳುತ್ತಿದ್ದರು. ಸರ್ವೇಶ್ವರ ಮೋಶೆ ಮತ್ತು ಆರೋನರಿಗೆ : " ನನಗೆ ವಿರೋಧವಾಗಿ ಗೊಣಗುಟ್ಟುವ ಈ ದುಷ್ಟ ಸಮೂಹದವರನ್ನು ನಾನು ಎಷ್ಟು ಕಾಲ ಸಹಿಸಲಿ! ಈ ಇಸ್ರಯೇಲರು ನನಗೆ ವಿರುದ್ಧ ಗೊಣಗುಟ್ಟುವ ಮಾತುಗಳು ನನಗೆ ಕೇಳಿಸಿವೆ. ನೀವು ಅವರಿಗೆ ಹೀಗೆ ಹೇಳಬೇಕು : " ಸರ್ವೇಶ್ವರ ಹೇಳುವುದೇನೆಂದರೆ -- ನನ್ನ ಜೀವದಾಣೆ, ನೀವು ನನಗೆ ಕೇಳಿಸುವಂತೆ ಆಡಿಕೊಂಡ ಪ್ರಕಾರವೇ ನಾನು ಮಾಡುತ್ತೇನೆ. ನಿಮ್ಮ ಶವಗಳು ಈ ಮರುಭೂಮಿಯಲ್ಲೇ ಬೀಳುವುವು. ನೀವು ನನಗೆ ವಿರೋಧವಾಗಿ ಗೊಣಗಿದ್ದರಿಂದ ನಿಮ್ಮಲ್ಲಿ ಎಣಿಕೆಯಾದವರೆಲ್ಲರೂ ಅಂದರೆ, ಇಪ್ಪತ್ತು ವರ್ಷ ಮತ್ತು ಮೇಲ್ಪಟ್ಟ ವಯಸ್ಸುಳ್ಳವರೆಲ್ಲರೂ ಮರುಭೂಮಿಯಲ್ಲೇ ಸಾಯುವರು. ನೀವು ಆ ನಾಡನ್ನು ನಾಲ್ವತ್ತು ದಿನಗಳು ಸಂಚರಿಸಿ ನೋಡಿದಿರಿ. ಅಂತೆಯೇ ಒಂದು ದಿನಕ್ಕೆ ಒಂದು ವರ್ಷದ ಮೇರೆಗೆ ನಾಲ್ವತ್ತು ವರ್ಷ ನಿಮ್ಮ ಪಾಪದ ಫಲವನ್ನು ಅನುಭವಿಸುವಿರಿ, ನಾನು ಕೈಬಿಟ್ಟವರ ಗತಿ ಎಂಥದೆಂದು ತಿಳಿದುಕೊಳ್ಳುವಿರಿ. ಇದು ಸರ್ವೇಶ್ವರನೆಂಬ ನಾನೇ ಹೇಳಿದ ಮಾತು. ನನಗೆ ವಿರೋಧವಾಗಿ ಒಟ್ಟು ಕೂಡಿಕೊಂಡಿರುವ ಈ ದುಷ್ಟ ಸಮೂಹದವರೆಲ್ಲರಿಗೆ ಈ ಮಾತಿನ ಮೇರೆಗೆ ಮಾಡಿಯೇ ತೀರುವೆನು. ಮರುಭೂಮಿಯಲ್ಲೇ ಅವರೆಲ್ಲರೂ ಸಾಯಬೇಕು, " ಎಂದರು.

ಕೀರ್ತನೆ 106:6-7, 13-14, 21-22, 23
ಶ್ಲೋಕ: ಮರೆಯಬೇಡೆನ್ನನು ಪ್ರಭೂ, ನಿನ್ನ ಪ್ರಜೆಗೆ ದಯೆತೋರುವಾಗ.

ನಮ್ಮ ಪಿತೃಗಳಂತೆಯೇ ಪಾಪಿಗಳು ನಾವು
ಅಕ್ರಮಗೈದೆವು, ಅಪರಾಧಿಗಳಾದೆವು
ಗ್ರಹಿಸಲಿಲ್ಲಾ ಪಿತೃಗಳು ನಿನ್ನದ್ಭುತಗಳನು ಈಜಿಪ್ಟಿನಲಿ
ಸ್ಮರಿಸಲಿಲ್ಲವರು ನಿನ್ನಚಲ ಪ್ರೇಮಾತಿಶಯಗಳನು

ಆದರೆ ಮರೆತರು ಬೇಗನೇ ಆತನ ಸತ್ಕಾರ್ಯಗಳನು
ಕಾಯದೆ ಹೋದರು ಆತನಾ ಸಂಕಲ್ಪ ಸಾಧನೆಯನು
ಆಶಾಪಾಶಗಳಿಗೆ ಈಡಾದರು ಅಡವಿಯೊಳು
ದೇವನೆನೇ ಪರಿಶೋಧಿಸಿದರು ಅರಣ್ಯದೊಳು

ಮರೆತುಬಿಟ್ಟರವರು ತಮ್ಮ ಮುಕ್ತಿದಾತ ದೇವನನು
ಈಜಿಪ್ಟಿನಲ್ಲಾತ ಎಸಗಿದ ಮಹತ್ಕಾರ್ಯಗಳನು
ಹಾಮ ನಾಡಿನಲಿ ಮಾಡಿದ ಅದ್ಭುತಗಳನು
ಕೆಂಗಡಲ ಬಳಿ ನಡೆದ ಘೋರ ಕೃತ್ಯಗಳನು

ಎಂತಲೇ ' ಸಂಹರಿಸುವೆ ' ಎನ್ನಲು ಪ್ರಭು ಅವರನು
ಆಪ್ತ ಮೋಶೆಯು ಮಧ್ಯಸ್ಥನಾಗಿ ಬಂದನು
ಸಂಹರಿಸದಂತೆ ಶಮನಗೊಳಿಸಿದನಾ ಕೋಪವನು

ಶುಭಸಂದೇಶ: ಮತ್ತಾಯ 15:21-28


ಆ ಕಾಲದಲ್ಲಿ ಯೇಸು ಟೈರ್ ಹಾಗು ಸಿದೋನ್ ಪ್ರಾಂತ್ಯಕ್ಕೆ ಹೋದರು. ಅಲ್ಲಿ ವಾಸವಾಗಿದ್ದ ಕಾನಾನ್ ನಾಡಿನ ಮಹಿಳೆ ಒಬ್ಬಳು ಅವರ ಬಳಿಗೆ ಬಂದಳು " ಪ್ರಭೂ, ದಾವೀದ ಕುಲಪುತ್ರರೇ, ನನಗೆ ದಯೆತೋರಿ, ನನ್ನ ಮಗಳಿಗೆ ದೆವ್ವಹಿಡಿದು ಬಹಳ ಸಂಕಟ ಪಡುತ್ತಿದ್ದಾಳೆ, " ಎಂದು ಕೂಗಿಕೊಂಡಳು. ಯೇಸು ಆಕೆಗೆ ಒಂದು ಮಾತನ್ನೂ ಹೇಳಲಿಲ್ಲ. ಶಿಷ್ಯರು ಹತ್ತಿರಕ್ಕೆ ಬಂದು " ಇವಳನ್ನು ಕಳಿಸಿ ಬಿಡಿ, ಒಂದೇ ಸಮನೆ ಗೋಳಿಡುತ್ತಾ, ನಮ್ಮನ್ನು ಬೆಂಬತ್ತಿ ಬರುತ್ತಿದ್ದಾಳೆ, " ಎಂದು ಕೇಳಿಕೊಂಡರು. ಆಗ ಯೇಸು, " ನನ್ನನ್ನು ಕಳಿಸಿರುವುದು ತಪ್ಪಿಹೋದ ಕುರಿಗಳಂತಿರುವ ಇಸ್ರಯೇಲ್ ಜನಾಂಗದವರ ಬಳಿಗೆ ಮಾತ್ರ, " ಎಂದರು. ಆದರೂ ಆಕೆ ಯೇಸುವಿಗೆ ಅಡ್ಡಬಿದ್ದು, " ಪ್ರಭೂ, ಸಹಾಯ ಮಾಡಿ, " ಎಂದು ಯಾಚಿಸಿದಳು. ಅದಕ್ಕೆ ಯೇಸು, " ಮಕ್ಕಳ ಆಹಾರವನ್ನು ತೆಗೆದು ನಾಯಿಮರಿಗಳಿಗೆ ಎಸೆಯುವುದು ಸರಿಯಲ್ಲ, " ಎಂದರು. ಆಗ ಆಕೆ, " ಅದು ನಿಜ ಪ್ರಭೂ, ನಾಯಿಗಳಾದರೋ ತಮ್ಮ ಯಜಮಾನನ ಮೇಜಿನಿಂದ ಕೆಳಕ್ಕೆ ಬೀಹುವ ಚೂರುಪಾರುನ್ನು ತಿನ್ನುತ್ತವೆ, ಅಲ್ಲವೇ? ಎಂದು ಉತ್ತರ ಕೊಟ್ಟಳು. ಆಗ ಯೇಸು, " ತಾಯೀ, ನಿನ್ನ ವಿಶ್ವಾಸ ಅಚಲವಾದುದು. ನಿನ್ನ ಕೋರಿಕೆ ನೆರವೇರಲಿ, " ಎಂದರು. ಅದೇ ಕ್ಷಣದಲ್ಲಿ ಆಕೆಯ ಮಗಳು ಗುಣಹೊಂದಿದಳು.

08.08.23

ಮೊದಲನೆಯ ವಾಚನ: ಸಂಖ್ಯಾಕಾಂಡ12:1-13

ಮೋಶೆ ಕೂಷ್ ನಾಡಿನ ಮಹಿಳೆಯೊಬ್ಬಳನ್ನು ಮದುವೆ ಮಾಡಿಕೊಂಡಿದ್ದನು. ಈ ಕಾರಣ ಮಿರ್ಯಾಮಳು ಮತ್ತು ಆರೋನನು ಅವನಿಗೆ ವಿರುದ್ಧ ಮಾತಾಡತೊಡಗಿದರು. ಸರ್ವೇಶ್ವರ ಮೋಶೆಯ ಮುಖಾಂತರ ಮಾತ್ರ ಮಾತಾಡಿದ್ದಾರೋ? ನಮ್ಮ ಮುಖಾಂತರ ಮಾತಾಡಲಿಲ್ಲವೋ? " ಎಂದು ಹೇಳತೊಡಗಿದರು. ಅವರು ಆಡಿದ ಮಾತು ಸರ್ವೇಶ್ವರನಿಗೆ ಮುಟ್ಟಿತು. ಮೋಶೆ ಸಾಧು ಮನುಷ್ಯ. ನರಮಾನವರಲ್ಲೆಲ್ಲಾ ಅತ್ಯಂತ ಸಾಧು. ಹೀಗಿರಲಾಗಿ ಸರ್ವೇಶ್ವರ ತಟ್ಟನೆ ಮೋಶೆ, ಆರೋನ್ ಹಾಗೂ ಮಿರ್ಯಾಮರಿಗೆ, " ನೀವು ಮೂವರು ದೇವದರ್ಶನದ ಗುಡಾರಕ್ಕೆ ಬರಬೇಕು, " ಎಂದು ಆಜ್ಞಾಪಿಸಿದರು. ಅವರು ಬಂದಾಗ ಸರ್ವೇಶ್ವರ ಮೇಘಸ್ತಂಭದಲ್ಲಿ ಇಳಿದು ಬಂದು ದೇವದರ್ಶನದ ಗುಡಾರದ ಬಾಗಿಲಲ್ಲಿ ನಿಂತು ಆರೋನ್ ಹಾಗೂ ಮಿರ್ಯಾಮಳನ್ನು ಹತ್ತಿರಕ್ಕೆ ಕರೆದರು. ಅವರು ಸಮೀಪಿಸಿದಾಗ, " ನನ್ನ ಮಾತಿಗೆ ಕಿವಿಗೊಡಿ ನಿಮ್ಮಲ್ಲಿ ಪ್ರವಾದಿಯಿದ್ದರೆ ಅವನಿಗೆ ಕಾಣಿಸಿಕೊಳ್ಳುವೆ ಜ್ಞಾನದೃಷ್ಟಿಯಲ್ಲಿ, ಇಲ್ಲವೆ ಅವನ ಸಂಗಡ ಮಾತಾಡುವೆ ಸ್ವಪ್ನದಲ್ಲಿ. ನನ್ನ ದಾಸನಾದ ಮೋಶೆ ಅಂಥವನಲ್ಲ, ಅವನೇ ನಂಬಿಗಸ್ತ ನನ್ನ ಮನೆಯಲ್ಲೆಲ್ಲಾ. ನಾನವನ ಸಂಗಡ ಮಾತಾಡುವುದು ನಿಗೂಢವಾಗಿ ಅಲ್ಲ. ಮುಖಾಮುಖಿಯಾಗಿ, ಸ್ಪಷ್ಟವಾಗಿ, ಒಗಟಾಗಿಯಲ್ಲ. ಸರ್ವೇಶ್ವರನ ಸ್ವರೂಪವನ್ನೇ ಕಂಡವನಾತ! ಇಂತಿರಳು ನನ್ನ ದಾಸ ಮೋಶೆಗೆ ವಿರುದ್ಧ ಮಾತನಾಡಲು ನೀವೇಕೆ ಭಯಪಡಲಿಲ್ಲಾ? " ಎಂದು ಹೇಳಿ ಕೋಪದಿಂದ ಹೊರಟುಹೋದರು. ಆ ಮೇಘವು ದೇವದರ್ಶನದ ಗುಡಾರದಿಂದ ಅದೃಶ್ಯವಾದದ್ದೇ ಇಗೋ, ಮಿರ್ಯಾಮಳ ಚರ್ಮ ಹಿಮದಂತೆ ಬಿಳಿಚಿಕೊಂಡಿತ್ತು. ಆಕೆಗೆ ತೊನ್ನು ಹತ್ತಿತ್ತು. ಆರೋನನು ಆಕೆಯನ್ನು ನೋಡಿ ಆಕೆಗೆ ತೊನ್ನು ಪ್ರಾಪ್ತವಾಯಿತೆಂದು ತಿಳಿದುಕೊಂಡೆವು. ಆಗ ಆರೋನನು ಮೋಶೆಗೆ, " ಅಯ್ಯಾ, ನಾವು ಮುರ್ಖರಾಗಿ ನಡೆದು ಪಾಪ ಕಟ್ಟಿಕೊಂಡೆವು. ಈ ಪಾಪದ ಫಲವನ್ನು ನಾವು ಅನುಭವಿಸುವಂತೆ ಮಾಡಬೇಡ, ಇದು ನನ್ನ ವಿನಂತಿ. ಅರ್ಧ ಮಾಂಸ ಕೊಳೆತುಹೋಗಿ ಹುಟ್ಟಿದ ಶಿಶುವಿನ ಶವದಂತೆ ಈಕೆ ಆಗುವುದು ಬೇಡ, " ಎಂದು ಕೇಳಿಕೊಂಡನು. ಆಗ ಮೋಶೆ ಸರ್ವೇಶ್ವರನಿಗೆ " ಹೇ ದೇವಾ, ಆಕೆಯನ್ನು ಗುಣಪಡಿಬೇಕೆಂದು ಬೇಡಿಕೊಳ್ಳುತ್ತೇನೆ, " ಎಂದು ಮೊರೆಯಿಟ್ಟನು.

ಕೀರ್ತನೆ 51:1-5, 10-11,
ಶ್ಲೋಕ: ಕೃಪಾಳುದೇವಾ, ಅಳಿಸೆನ್ನ ದೋಷವನು.

ಕೃಪಾಳುದೇವಾ, ಕರುಣೆಸೆನ್ನನು
ಕರುಣಾನಿಧಿ, ಅಳಿಸೆನ್ನ ದೋಷವನು
ತೊಳೆ ಪೂರ್ತಿಯಾಗಿ ಪಾಪದಿಂದೆನ್ನನು
ದೋಷ ಪರಿಹರಿಸಿ ಶುದ್ದಗೊಳಿಸೆನ್ನನು

ಒಪ್ಪಿಕೊಂಡೆನಿದೊ, ನಾನೇ ಅಪರಾಧಿ
ಕಟ್ಟಿದಂತಿದೆ ಕಣ್ಗೆ ಪಾಪ ದಿನವಿಡಿ
ಹೌದು ದೇವಾ, ನಿನಗೆ ದ್ರೋಹವೆಸಗಿದೆ
ನಿನ್ನ ಕಣ್ಗೆ ಕೆಟ್ಟದುದನೆ ಮಾಡಿದೆ

ನಿನ್ನ ನಿರ್ಣಯವು ನ್ಯಾಯಯುತ
ನೀ ನೀಡುವ ತೀರ್ಪು ನಿರ್ಲಿಪ್ತ
ನಾ ಜನಿಸಿದೆ ಪಾಪಪಂಗದಲೇ
ದ್ರೋಹಿ ನಾ ಮಾತೃಗರ್ಭದಿಂದಲೇ

ಶುದ್ದ ಹೃದಯವನು ದೇವಾ, ನಿರ್ಮಿಸು
ಆಂತರಂಗವನು ಚೇತನಗೊಳಿಸು
ತಳ್ಳಬೇಡೆನ್ನನು ದೇವಾ, ನಿನ್ನ ಸನ್ನಿಧಿಯಿಂದ
ದೂಡಬೇಡ ನಿನ್ನ ಪವಿತ್ರಾತ್ಮನನು ನನ್ನಿಂದ

ಶುಭಸಂದೇಶ: ಮತ್ತಾಯ 14:22-36

ಆ ಕಾಲದಲ್ಲಿ ಯೇಸು ತಾವು ಜನರ ಗುಂಪನ್ನು ಕಳಿಸಿಬಿಡುವಷ್ಟರಲ್ಲಿ, ಶಿಷ್ಯರು ದೋಣಿ ಹತ್ತಿ ತಮಗಿಂತ ಮುಂದಾಗಿ ಸರೋವರದ ಆಚೆಯ ದಡಕ್ಕೆ ಹೋಗಬೇಕೆಂದು ಆಜ್ಞಾಪಿಸಿದರು. ಜನರನ್ನು ಬೀಳ್ಕೊಟ್ಟ ಬಳಿಕ ಪ್ರಾರ್ಥನೆಮಾಡಲು ಯೇಸು ಒಬ್ಬರೇ ಬೆಟ್ಟಕ್ಕೆ ಹೋದರು. ಕತ್ತಲೆ ಕವಿದಾಗ ಅವರು ಅಲ್ಲಿ ಒಬ್ಬಂಟಿಗರಾಗಿದ್ದರು. ಅಷ್ಟರಲ್ಲಿ ದೋಣಿ ದಡದಿಂದ ಬಹುದೂರ ಸಾಗಿತ್ತು. ಎದುರುಗಾಳಿ ಬೀಸಿ ಅದು ಅಲೆಗಳ ಬಡಿತಕ್ಕೆ ಸಿಕ್ಕಿಕೊಂಡಿತ್ತು. ಆಗ ರಾತ್ರಿಯ ಕಡೇ ಜಾವದ ಸಮಯ. ಯೇಸು ಸರೋವರದ ಮೇಲೆ ನಡೆದುಕೊಂಡೇ ಶಿಷ್ಯರ ಬಳಿಗೆ ಬಂದರು. ಹೀಗೆ ಸರೋವರದ ಮೇಲೆ ನಡೆದು ಬರುತ್ತಿದ್ದ ಯೇಸುವನ್ನು ನೋಡಿದಾಗ ಶಿಷ್ಯರು ಭಯಭ್ರಾಂತರಾದರು. ದಿಗಿಲುಗೊಂಡು, " ಭೂತ, ಭೂತ ! " ಎಂದು ಚೀರಿದರು. ತಕ್ಷಣವೇ ಯೇಸು, " ಭಯಪಡಬೇಡಿ, ನಾನೇ. ಬೇರೆ ಯಾರೂ ಅಲ್ಲ, ಧೈರ್ಯದಿಂದಿರಿ, " ಎಂದು ಅವರೊಡನೆ ಮಾತನಾಡಿದರು. ಆಗ ಪೇತ್ರನು, " ಸ್ವಾಮಿ, ನೀವೇ ಆದರೆ ನಾನೂ ನೀರಿನ ಮೇಲೆ ನಡೆದು ನಿಮ್ಮ ಬಳಿಗೆ ಬರುವಂತೆ ಆಜ್ಞಾಪಿಸಿ, " ಎಂದನು. ಯೇಸು, " ಬಾ" ಎಂದು ಕರೆಯಲು ಪೇತ್ರನು ದೋಣಿಯನ್ನು ಬಿಟ್ಟು ನೀರಿನ ಮೇಲೆ ನಡೆಯುತ್ತಾ ಯೇಸುವಿನತ್ತ ಬಂದನು. ಆದರೆ ಬಲವಾದ ಗಾಳಿ ಬೀಸುತ್ತಿರುವುದನ್ನು ಕಂಡು ಹೆದರಿದನು. ಹಾಗೆಯೇ ಮುಳುಗಿ ಹೋಗಲಾರಂಭಿಸಿದನು. ಆಗ, " ಸ್ವಾಮಿ, ಕಾಪಾಡಿ, ಕಾಪಾಡಿ, " ಎಂದು ಕೂಗಿಕೊಂಡನು. ಆ ಕ್ಷಣವೇ ಯೇಸು ಕೈಚಾಚಿ ಅವನನ್ನು ಹಿಡಿದುಕೊಂಡು, " ಅಲ್ಪ ವಿಶ್ವಾಸಿಯೇ, ಏಕೆ ಸಂದೇಹ ಪಟ್ಟೆ ? " ಎಂದರು. ಅನಂತರ ಅವರಿಬ್ಬರೂ ದೋಣಿಯನ್ನು ಹತ್ತಿದರು. ಕೂಡಲೇ ಗಾಳಿ ನಿಂತುಹೋಯಿತು. ದೋಣಿಯಲ್ಲಿದ್ದವರು " ನೀವು ನಿಜವಾಗಿಯೂ ದೇವರ ಪುತ್ರ! " ಎಂದು ಹೇಳಿ ಯೇಸುವನ್ನು ಆರಾಧಿಸಿದರು. ಅವರೆಲ್ಲರೂ ಸರೋವರವನ್ನು ದಾಟಿ ಗೆನೆಸರೇತ್ ಊರಿನ ದಡ ಸೇರಿದರು. ಈ ಊರಿನವರು ಯೇಸುವನ್ನು ಗುರುತು ಹಚ್ಚಿದ್ದೇ ತಡ ಸುತ್ತಮುತ್ತಲಿನ ಊರುಗಳಿಗೆಲ್ಲಾ ಹೇಳಿಕಳುಹಿಸಿದರು. ರೋಗರುಜಿನಗಳಿಂದ ನರಳುತ್ತಿದ್ದವರನ್ನು ಕರೆದುಕೊಂಡು ಬಂದರು. ಇವರು, " ನಿಮ್ಮ ಉಡುಪಿನ ಅಂಚನ್ನಾದರೂ ಮುಟ್ಟಲು ಅಪ್ಪಣೆಯಾದರೆ ಸಾಕು, " ಎಂದು ಯೇಸುವನ್ನು ಬೇಡಿಕೊಂಡರು. ಹಾಗೆ ಮುಟ್ಟಿದವರೆಲ್ಲರೂ ಗುಣಹೊಂದಿದರು.

07.08.23

 ಮೊದಲನೇ ವಾಚನ: ಸಂಖ್ಯಾಕಾಂಡ 11:4-15

ಇಸ್ರಯೇಲರೊಡನೆ ಪ್ರಯಾಣಮಾಡುತ್ತಿದ್ದ ಅನ್ಯಜನರು ಮಾಂಸಕ್ಕಾಗಿ ಹಂಬಲಿಸಿದರು. ಇಸ್ರಯೇಲರು ಕೂಡ, ಕಣ್ಣೀರಿಡುತ್ತಾ : " ಅಯ್ಯೋ, ನಮಗೆ ಮಾಂಸ ಕೊಡುವವರಾರು ? ಈಜಿಪ್ಟ್ ದೇಶದಲ್ಲಿ ನಾವು ಬಿಟ್ಟಿಯಾಗಿ ತಿನ್ನುತ್ತಿದ್ದ ಮೀನು, ಸೌತೆಕಾಯಿ, ಕರ್ಬೂಜ, ಉಳ್ಳಿಗಡ್ಡೆ, ನೀರುಳ್ಳಿ, ಬೆಳ್ಳುಳ್ಳಿ ಇವೆಲ್ಲಾ ನೆನಪಿಗೆ ಬರುತ್ತವೆ. ಇಲ್ಲಿಯಾದರೋ ನಮ್ಮ ಜೀವ ಬತ್ತಿ ಹೋಯಿತು. ಈ ' ಮನ್ನ ' ವನ್ನು ಬಿಟ್ಟರೆ ನಮಗೆ ಇನ್ನೇನು ಗತಿಯಿಲ್ಲ, " ಎಂದು ನಿಷ್ಠುರವಾಗಿ ಮಾತನಾಡಿಕೊಳ್ಳುತ್ತಿದ್ದರು. ಆ ' ಮನ್ನ ' ಕೊತ್ತಂಬರಿ ಬೀಜದಂತಿತ್ತು, ಗುಗ್ಗುಲದಂತೆ ಕಾಣಿಸುತ್ತಿತ್ತು. ಜನರು ಹೊರಗೆ ಹೋಗಿ ಅದನ್ನು ಕೂಡಿಸಿಕೊಂಡು ಬಂದು ಬೀಸುವ ಕಲ್ಲುಗಳಿಂದ ಬೀಸಿ, ಇಲ್ಲವೆ ಒರಳಲ್ಲಿ ಕುಟ್ಟಿ ಮಡಿಕೆಗಳಲ್ಲಿ ಬೇಯಿಸಿ ರೊಟ್ಟಿಗಳನ್ನು ಮಾಡಿಕೊಳ್ಳುತ್ತಿದ್ದರು. ಅದರ ರುಚಿ ಎಣ್ಣೆ ಬೆರಸಿ ಮಾಡಿದ ತಿಂಡಿಯಂತೆ ಇರುತ್ತಿತ್ತು. ರಾತ್ರಿಯಲ್ಲಿ ಮಂಜು ಪಾಳೆಯದ ಮೇಲೆ ಬೀಳುತ್ತಿದ್ದಾಗ ಅದರೊಂದಿಗೆ ' ಮನ್ನ ' ವೂ ಬೀಳುತ್ತಿತ್ತು. ಎಲ್ಲ ಕುಟುಂಬದವರು ತಮ್ಮ ತಮ್ಮ ಡೇರೆಗಳ ಬಾಗಿಲುಗಳಲ್ಲಿ ನಿಂತು ನಿಷ್ಠುರವಾಗಿ ಮಾತನಾಡಿಕೊಳ್ಳುತ್ತಿದ್ದದ್ದು ಮೋಶೆಗೆ ಕೇಳಿಸಿತು. ಆಗ ಸರ್ವೇಶ್ವರನ ಕೋಪ ಉಕ್ಕೇರಿತು, ಮೋಶೆಗೆ ಇದನ್ನು ಸಹಿಸಲಾಗಲಿಲ್ಲ. ಆತ ಸರ್ವೇಶ್ವರನಿಗೆ " ನಿಮ್ಮ ದಾಸನಾದ ನನಗೇಕೆ ಈ ಜನರನ್ನು ಕರೆದೊಯ್ಯುವ ಭಾರವನ್ನು ಹಾಕಿದಿರಿ. ನಿಮ್ಮ ದಯೆಗೆ ನಾನು ಆಯೋಗ್ಯನಾದೆನೇ ? ' ಮೊಲೆಕೂಸನ್ನು ಎತ್ತಿಕೊಂಡು ಹೋಗುವವಳಂತೆ ಈ ಜನರನ್ನು ತೋಳತೆಕ್ಕೆಯಲ್ಲಿರಿಸಿ ಅವರ ಪೂರ್ವಜರಿಗೆ ನಾನು ಪ್ರಮಾಣ ಮಾಡಿದ ನಾಡಿಗೆ ಒತ್ತಿ ' ಎಂದು ಹೇಳುತ್ತೀರಲ್ಲವೇ ? ನಾನು ಇವರಿಗೆ ಹೆತ್ತ ತಾಯಿಯೋ ? ಇವರು ನಿಷ್ಠುರವಾಗಿ ಮಾತನಾಡುತ್ತ ನನ್ನ ಬಳಿಗೆ ಬಂದು ತಿನ್ನಲ್ಲಿಕ್ಕೆ ನಮಗೆ ಮಾಂಸವನ್ನು ಕೊಡು ಎಂದು ಕೇಳುತ್ತಿದ್ದಾರಲ್ಲ. ಇಷ್ಟು ಜನಕ್ಕೆ ಬೇಕಾದ ಮಾಂಸ ನನಗೆಲ್ಲಿ ದೊರಕೀತು ? ಇಷ್ಟು ಜನರ ಭಾರವನ್ನು ನಾನೋಬ್ಬನೇ ಹೊರುವುದು ಅಸಾಧ್ಯ. ಅದು ನನ್ನ ಶಕ್ತಿಗೆ ಮೀರಿದ ಕೆಲಸ. ನೀವು ಹೀಗೆ ಮಾಡುವುದಕ್ಕಿಂತಲೂ ನನ್ನನ್ನು ಈ ಕೂಡಲೆ ಕೊಂದುಹಾಕಿದರೆ ಉಪಕಾರವಾದೀತು. ನನಗೆ ಆಗುತ್ತಿರುವ ಸಂಕಟವನ್ನು ಸಹಿಸಲಾರೆ, " ಎಂದನು.

ಕೀರ್ತನೆ: 81:11-16
ಶ್ಲೋಕ: ಬಲಪ್ರದನಾದ ದೇವನಿಗೆ ಮಾಡಿರಿ ಜಯಕಾರವನು. 

ಶುಭಸಂದೇಶ: ಮತ್ತಾಯ 14:13-21

ಈ ಸಮಾಚಾರವನ್ನು ಕೇಳಿದ ಯೇಸುಸ್ವಾಮಿ ಆ ಸ್ಥಳವನ್ನು ಬಿಟ್ಟು, ದೋಣಿಹತ್ತಿ ನಿರ್ಜನ ಪ್ರದೇಶಕ್ಕೆ ಒಬ್ಬಂಟಿಗರಾಗಿ ಹೊರಟರು. ಇದನ್ನು ತಿಳಿದುಕೊಂಡ ಜನರು ಊರೂರುಗಳಿಂದ ಹೊರಟು ಗುಂಪುಗುಂಪಾಗಿ ಅವರ ಹಿಂದೆಯೇ ಕಾಲ್ದಾರಿಯಲ್ಲಿ ನಡೆದುಹೋದರು. ಯೇಸು ದೋಣಿಯಿಂದ ಇಳಿದಾಗ, ದೊಡ್ಡ ಜನಸಮೂಹ ಆಗಲೇ ಅಲ್ಲಿ ಸೇರಿತ್ತು. ಆ ಸಮೂಹವನ್ನು ಕಂಡು ಅವರ ಮನ ಕರಗಿತು; ಅವರಲ್ಲಿ ಅಸ್ವಸ್ಥರಾಗಿದ್ದವರನ್ನು ಗುಣಪಡಿಸಿದರು. ಸಂಜೆಯಾದಾಗ, ಶಿಷ್ಯರು ಯೇಸುವಿನ ಬಳಿಗೆ ಬಂದು, "ಇದು ನಿರ್ಜನ ಪ್ರದೇಶ. ಈಗಾಗಲೇ ಹೊತ್ತು ಮೀರಿಹೋಗಿದೆ. ಜನಸಮೂಹವನ್ನು ಕಳುಹಿಸಿಬಿಡಿ, ಹಳ್ಳಿಪಳ್ಳಿಗಳಿಗೆ ಹೋಗಿ ಅವರಿಗೆ ಬೇಕಾದ ತಿಂಡಿತಿನಿಸುಗಳನ್ನು ಕೊಂಡುಕೊಳ್ಳಲಿ." ಎಂದರು. ಅದಕ್ಕೆ ಯೇಸು, “ಅವರು ಹೋಗಬೇಕಾಗಿಲ್ಲ, ನೀವೇ ಅವರಿಗೆ ಊಟಕ್ಕೆ ಏನಾದರೂ ಕೊಡಿ,” ಎಂದರು. ಶಿಷ್ಯರು ಪ್ರತ್ಯುತ್ತರವಾಗಿ, "ನಮ್ಮ ಬಳಿ ಐದೇ ಐದು ರೊಟ್ಟಿ ಮತ್ತು ಎರಡು ಮೀನುಗಳು ಮಾತ್ರ ಇವೆ," ಎಂದರು. ಯೇಸು, "ಅವನ್ನು ಇಲ್ಲಿಗೆ ತನ್ನಿ," ಎಂದು ಹೇಳಿ, ಜನರೆಲ್ಲರೂ ಹುಲ್ಲಿನ ಮೇಲೆ ಕುಳಿತುಕೊಳ್ಳುವಂತೆ ಅಪ್ಪಣೆಮಾಡಿದರು. ಬಳಿಕ ಆ ಐದು ರೊಟ್ಟಿಗಳನ್ನೂ ಎರಡು ಮೀನುಗಳನ್ನೂ ತೆಗೆದುಕೊಂಡು, ಸ್ವರ್ಗದತ್ತ ಕಣ್ಣೆತ್ತಿನೋಡಿ, ದೇವರಿಗೆ ಸ್ತೋತ್ರ ಸಲ್ಲಿಸಿದರು. ತರುವಾಯ ರೊಟ್ಟಿಗಳನ್ನು ಮುರಿದು ಶಿಷ್ಯರಿಗೆ ಕೊಟ್ಟರು. ಶಿಷ್ಯರು ಜನರಿಗೆ ಹಂಚಿದರು. ಎಲ್ಲರೂ ಹೊಟ್ಟೆತುಂಬ ತಿಂದು ತೃಪ್ತರಾದರು. ಉಳಿದಿದ್ದ ತುಂಡುಗಳನ್ನು ಒಟ್ಟುಗೂಡಿಸಿದಾಗ ಅವು ಹನ್ನೆರಡು ಬುಟ್ಟಿಗಳ ತುಂಬ ಆದುವು. ಊಟ ಮಾಡಿದವರಲ್ಲಿ ಹೆಂಗಸರು, ಮಕ್ಕಳನ್ನು ಬಿಟ್ಟರೆ, ಗಂಡಸರೇ ಸುಮಾರು ಐದು ಸಾವಿರ ಇದ್ದರು.

06.08.23 - "ಅವರ ಮುಖ ಸೂರ್ಯನಂತೆ ಪ್ರಕಾಶಿಸಿತು"

ಮೊದಲನೇ ವಾಚನ: ದಾನಿಯೇಲ 7:9-10, 13-14

ನಾನು ನೋಡುತ್ತಿದ್ದ ಹಾಗೆ: ಸಿಂಹಾಸನಗಳನ್ನು ಹಾಕಲಾಯಿತು. ಮಹಾವೃದ್ಧನೊಬ್ಬನು ಆಸೀನನಾದನು. ಆತನ ಉಡುಪು ಬೆಳ್ಳಗಿತ್ತು ಹಿಮದಂತೆ. ಆತನ ತಲೆಗೂದಲಿತ್ತು ನಿರ್ಮಲವಾದ ಬಿಳಿಯ ಉಣ್ಣೆಯಂತೆ. ಆತನ ಸಿಂಹಾಸನ ಅಗ್ನಿಜ್ವಾಲೆಗಳು. ಧಗಧಗಿಸುವ ಬೆಂಕಿ ಅದರ ಚಕ್ರಗಳು.  ಆ ಸಿಂಹಾಸನದ ಸಮ್ಮುಖದಿಂದ ಪ್ರಜ್ವಲ ಪ್ರವಾಹವೊಂದು ಉಕ್ಕಿ ಹರಿದುಬಂದಿತು. ಲಕ್ಷೋಪಲಕ್ಷ ದೂತರು ಆತನಿಗೆ ಸೇವೆಸಲ್ಲಿಸುತ್ತಿದ್ದರು. ಕೋಟ್ಯಾನುಕೋಟಿ ಕಿಂಕರರು ಆತನ ಮುಂದೆ ನಿಂತಿದ್ದರು. ನ್ಯಾಯಸಭೆಯವರು ತೀರ್ಪುನೀಡಲು ಕುಳಿತುಕೊಂಡರು. ಪಟ್ಟಿಪುಸ್ತಕಗಳನ್ನು ತೆರೆಯಲಾಯಿತು. ನಾನು ಕಂಡ ರಾತ್ರಿಯ ಕನಸಿನಲ್ಲಿ ನರಪುತ್ರನಂತಿರುವವನು ಆಕಾಶದ ಮೇಘಗಳೊಂದಿಗೆ ಬಂದು ಆ ಮಹಾವೃದ್ಧನನ್ನು ಸಮೀಪಿಸಿದನು. ಅವನನ್ನು ಆತನ ಸನ್ನಿಧಿಗೆ ತಂದರು. ಸಕಲ ರಾಷ್ಟ್ರ-ಕುಲ-ಭಾಷೆಗಳವರು ಅವನಿಗೆ ಸೇವೆ ಸಲ್ಲಿಸಲೆಂದು ಅವನಿಗೆ ದೊರೆತನ, ಘನತೆ, ರಾಜ್ಯತ್ವ ಇವುಗಳನ್ನು ಕೊಡಲಾಯಿತು. ಅವನ ಆಳ್ವಿಕೆಗೆ ಅಂತ್ಯವಿಲ್ಲ, ಅದು ಶಾಶ್ವತವಾದುದು, ಅವನ ರಾಜ್ಯ ಎಂದಿಗೂ ಅಳಿಯದು!

ಕೀರ್ತನೆ: 97:1-2, 5-6, 9
ಶ್ಲೋಕ: ಪ್ರಭುವೇ, ಸರ್ವಾಧಿಕಾರಿ ನೀನು ಲೋಕಕ್ಕೆಲ್ಲಾ

ಇದೆ ಪ್ರಭುವಿನ ಕೈಯಲ್ಲಿ ರಾಜ್ಯಾಧಿಕಾರ
ಉಲ್ಲಾಷಿಸಲಿ ಧರಣಿಮಂಡಲದಾದ್ಯಂತ
ಸಂತೋಷಿಸಲಿ ಕಡಲಿನ ದ್ವೀಪಗಳೆಲ್ಲ
ಇವೆ ಮುಗಿಲೂ ಕಾರ್ಮುಗಿಲೂ ಆತನ ಸುತ್ತಲೂ
ನ್ಯಾಯನೀತಿ ಆತನ ಗದ್ದುಗೆಯಸ್ತಿವಾರಗಳು

ಸಾರ್ವಭೌಮನಾದ ಪ್ರಭುವಿನ ಮುಂದೆ
ಕರಗುತ್ತಿವೆ ಬೆಟ್ಟಗುಡ್ಡಗಳು ಮೇಣದಂತೆ
ಘೋಷಿಸುತ್ತಿದೆ ಗಗನಮಂಡಲ ಆತನ ನೀತಿಯನು
ಕಾಣುತ್ತವೆ ಸಕಲ ಜನಾಂಗ ಆತನ ಮಹಿಮೆಯನು

ಸರ್ವಾಧಿಕಾರಿ ನೀನು ಲೋಕಕ್ಕೆಲ್ಲಾ
ಮಹೋನ್ನತನು ನೀನು ದೇವರುಗಳಿಗೆಲ್ಲಾ


ಎರಡನೇ ವಾಚನ: ಪೇತ್ರ 1:16-19

ನಮ್ಮ ಪ್ರಭು ಯೇಸುಕ್ರಿಸ್ತರ ಶಕ್ತಿಸಾಮರ್ಥ್ಯವನ್ನು ಮತ್ತು ಅವರ ಪುನರಾಗಮನವನ್ನು ನಿಮಗೆ ತಿಳಿಯಪಡಿಸುವಾಗ ಚಮತ್ಕಾರದಿಂದ ಕಲ್ಪಿಸಿದ ಕಟ್ಟುಕತೆಗಳನ್ನು ಆಧರಿಸಿ ನಾವು ಮಾತನಾಡಲಿಲ್ಲ. ನಾವೇ ಅವರ ಮಹತ್ತನ್ನು ಕಣ್ಣಾರೆಕಂಡು ಅದನ್ನು ತಿಳಿಯಪಡಿಸಿದ್ದೇವೆ.  ತಂದೆಯಾದ ದೇವರಿಂದ ಅವರು ಗೌರವವನ್ನೂ ಮಹಿಮೆಯನ್ನೂ ಪಡೆದಾಗ, “ಈತನು ನನ್ನ ಪುತ್ರ, ನನಗೆ ಪ್ರಿಯನಾದವನು; ನನ್ನ ಅಪಾರ ಮೆಚ್ಚುಗೆಗೆ ಪಾತ್ರನು,” ಎಂದು ಅವರನ್ನು ಕುರಿತೇ ವಾಣಿಯೊಂದು ಮಹೋನ್ನತ ವೈಭವದಿಂದ ಕೇಳಿಬಂದಿತು.  ಆಗ ನಾವು ಆ ಪುನೀತ ಪರ್ವತದ ಮೇಲೆ ಅವರೊಡನೆ ಇದ್ದೆವು. ಸ್ವರ್ಗದಿಂದ ಆ ವಾಣಿಯನ್ನು ನಾವು ಕೇಳಿದೆವು. ಆದ್ದರಿಂದ ಪ್ರವಾದನೆಯ ಸಂದೇಶವು ನಮಗೆ ಮತ್ತಷ್ಟು ಖಚಿತವಾಗಿ ಗೊತ್ತಾಗಿದೆ. ಇದನ್ನು ನೀವು ಕತ್ತಲಲ್ಲಿ ಬೆಳಗುವ ದೀಪವೆಂದು ಪರಿಗಣಿಸಿ ಲಕ್ಷ್ಯಕೊಟ್ಟರೆ ಒಳ್ಳೆಯದು. ನಿಮ್ಮ ಹೃದಯದಲ್ಲಿ ಬೆಳಕು ಹರಿದು ಅರುಣೋದಯದ ನಕ್ಷತ್ರವು ಮೂಡುವವರೆಗೂ ಈ ದೀಪವು ಬೆಳಗುತ್ತಿರುತ್ತದೆ.

ಶುಭಸಂದೇಶ: ಮತ್ತಾಯ 17:1-9


ಪೇತ್ರ, ಯಕೋಬ ಮತ್ತು ಆತನ ಸಹೋದರ ಯೊವಾನ್ನ ಇವರನ್ನು ಯೇಸುಸ್ವಾಮಿ ಪ್ರತ್ಯೇಕವಾಗಿ ತಮ್ಮೊಡನೆ ಕರೆದುಕೊಂಡು ಎತ್ತರವಾದ ಒಂದು ಬೆಟ್ಟಕ್ಕೆ ಹೋದರು. ಅಲ್ಲಿ ಆ ಶಿಷ್ಯರ ಕಣ್ಣೆದುರಿಗೇ ಸ್ವಾಮಿ ರೂಪಾಂತರ ಹೊಂದಿದರು, ಅವರ ಮುಖ ಸೂರ್ಯನಂತೆ ಪ್ರಕಾಶಿಸಿತು. ಅವರ ಉಡುಪು ಬೆಳಕಿನಂತೆ ಪ್ರಜ್ವಲಿಸಿತು. ಇದ್ದಕ್ಕಿದ್ದ ಹಾಗೆ ಮೋಶೆ ಮತ್ತು ಎಲೀಯ ಪ್ರತ್ಯಕ್ಷರಾಗಿ ಯೇಸುವಿನೊಡನೆ ಮಾತನಾಡುತ್ತಿದ್ದುದು ಅವರಿಗೆ ಕಾಣಿಸಿತು. ಆಗ ಪೇತ್ರನು ಯೇಸುವಿಗೆ, “ಪ್ರಭೂ, ನಾವು ಇಲ್ಲೇ ಇರುವುದು ಎಷ್ಟು ಒಳ್ಳೆಯದು! ಅಪ್ಪಣೆಯಾದರೆ ಇಲ್ಲಿ ಮೂರು ಗುಡಾರಗಳನ್ನು ಕಟ್ಟುವೆನು. ತಮಗೊಂದು, ಮೋಶೆಗೊಂದು, ಎಲೀಯನಿಗೊಂದು,” ಎಂದನು. ಪೇತ್ರ ಇನ್ನೂ ಮಾತನಾಡುತ್ತಿರುವಾಗಲೇ ಪ್ರಕಾಶಮಾನವಾದ ಮೇಘವೊಂದು ಅವರನ್ನು ಆವರಿಸಿತು; ಆ ಮೇಘದಿಂದ ಒಂದು ವಾಣಿ, ‘ಈತನು ನನ್ನ ಪುತ್ರ, ನನಗೆ ಪರಮಪ್ರಿಯನು, ನನ್ನ ಅಪಾರ ಮೆಚ್ಚುಗೆಗೆ ಪಾತ್ರನು. ಈತನ ಮಾತಿಗೆ ಕಿವಿಗೊಡಿ,” ಎಂದಿತು. ಶಿಷ್ಯರು ಈ ವಾಣಿಯನ್ನು ಕೇಳಿ ಭಯಭ್ರಾಂತರಾದರು; ಬೋರಲು ಬಿದ್ದರು. ಆಗ ಯೇಸು ಅವರ ಹತ್ತಿರಕ್ಕೆ ಬಂದು ಅವರನ್ನು ಮುಟ್ಟಿ, “ಏಳಿ, ಭಯಪಡಬೇಡಿ,” ಎಂದರು. ಅವರು ಕಣ್ಣೆತ್ತಿ ನೋಡಿದಾಗ ಯೇಸುವನ್ನು ಬಿಟ್ಟು ಮತ್ತೆ ಯಾರನ್ನೂ ಕಾಣಲಿಲ್ಲ. ಅವರೆಲ್ಲರು ಬೆಟ್ಟದಿಂದ ಇಳಿದುಬರುವಾಗ ಯೇಸು, “ನರಪುತ್ರನು ಸತ್ತು ಪುನರುತ್ಥಾನ ಹೊಂದುವ ತನಕ ನೀವು ಕಂಡ ಈ ದರ್ಶನವನ್ನು ಯಾರಿಗೂ ಹೇಳಬೇಡಿ,” ಎಂದು ಆಜ್ಞಾಪಿಸಿದರು. 

05.08.23 - "ಮಹತ್ಕಾರ್ಯಗಳನ್ನು ಮಾಡುವ ಶಕ್ತಿ ಇವನಿಗಿದೆ,"

ಮೊದಲನೆಯ ವಾಚನ: ಯಾಜಕಕಾಂಡ 25:1, 8-17

ಇಸ್ರಯೇಲರಿಗೆ ಹೀಗೆ ಆಜ್ಞಾಪಿಸಬೇಕೆಂದು ಸರ್ವೇಶ್ವರಸ್ವಾಮಿ ಮೋಶೆಗೆ ಸೀನಾಯಿ ಬೆಟ್ಟದಲ್ಲಿ ಹೇಳಿದರು: “ಅದಲ್ಲದೆ, ಏಳುವರ್ಷಕ್ಕೆ ಒಂದರಂತೆ ಏಳು ಸಬ್ಬತ್ ವರ್ಷಗಳನ್ನು ಎಣಿಸಬೇಕು. ಆ ಏಳು ಸಬ್ಬತ್ ಸಂವತ್ಸರಗಳ ಕಾಲ, ಅಂದರೆ ನಾಲ್ವತ್ತೊಂಬತ್ತು ವರ್ಷಗಳು ಕಳೆದ ಮೇಲೆ ಏಳನೆಯ ತಿಂಗಳಿನ ಹತ್ತನೆಯ ದಿವಸ ನಿಮ್ಮ ನಾಡಿನಲ್ಲೆಲ್ಲಾ ಕೊಂಬೂದಿಸಬೇಕು. ನೀವು ಆ ಐವತ್ತನೆಯ ವರ್ಷವನ್ನು ದೇವರಿಗೆ ವಿೂಸಲಾದ ವರ್ಷವೆಂದು ಭಾವಿಸಬೇಕು. ಆ ವರ್ಷ ನಾಡಿನ ನಿವಾಸಿಗಳೆಲ್ಲರಿಗೂ ಬಿಡುಗಡೆಯಾಯಿತೆಂದು ಸಾರಬೇಕು. ಅದು ‘ಜೂಬಿಲಿ’ ಸಂವತ್ಸರವಾದುದರಿಂದ ನೀವೆಲ್ಲರು ನಿಮ್ಮ ನಿಮ್ಮ ಸ್ವಂತ ಭೂಮಿಗಳಿಗೂ ಹಾಗು ಸ್ವಜನರ ಬಳಿಗೂ ಹೋಗಿ ಇರಬಹುದು. ಆ ಐವತ್ತನೆಯ ವರ್ಷದಲ್ಲಿ, ಅಂದರೆ ‘ಜೂಬಿಲಿ’ ಸಂವತ್ಸರದಲ್ಲಿ ನೀವು ಬಿತ್ತನೆ ಮಾಡಬಾರದು; ತಾನಾಗಿ ಬೆಳೆದ ಫಸಲನ್ನು ಕೂಡಿಸಿಟ್ಟುಕೊಳ್ಳಬಾರದು; ನೀವು ಕೃಷಿಮಾಡದೆ ಬಿಟ್ಟ ದ್ರಾಕ್ಷಿತೋಟದ ಹಣ್ಣನ್ನು ಸಂಗ್ರಹಿಸಬಾರದು. ಅದು ಜೂಬಿಲಿ ವರ್ಷವಾದುದರಿಂದ ನೀವು ಅದನ್ನು ವಿೂಸಲಾದದ್ದೆಂದು ಭಾವಿಸಬೇಕು. ಹೊಲದಲ್ಲಿ ತಾನಾಗಿ ಬೆಳೆದದ್ದನ್ನು ಊಟಮಾಡಬಹುದು. ಜೂಬಿಲಿ ವರ್ಷದಲ್ಲಿ ನಿಮ್ಮ ನಿಮ್ಮ ಸ್ವಂತ ಭೂಮಿಗಳು ಮರಳಿ ನಿಮ್ಮ ವಶಕ್ಕೆ ಬರುವುವು. ನೀವು ಸ್ಥಿರಸೊತ್ತನ್ನು ಸ್ವದೇಶದವರೊಡನೆ ಕ್ರಯ-ವಿಕ್ರಯ ಮಾಡುವಾಗ ಇದರ ವಿಷಯದಲ್ಲಿ ಅನ್ಯಾಯ ಮಾಡಬಾರದು. ಕಳೆದ ಜೂಬಿಲಿ ವರ್ಷದಿಂದ ಇಷ್ಟು ವರ್ಷ ಆಯಿತೆಂದು ಲೆಕ್ಕಿಸಿ ಸ್ವದೇಶದವನಿಂದ ಕ್ರಯಕ್ಕೆ ತೆಗೆದುಕೊಳ್ಳಬೇಕು; ಅಂತೆಯೇ ಮಾರುವವನು ಇಷ್ಟು ವರ್ಷಗಳ ಬೆಳೆಯಾಯಿತೆಂದು ಲೆಕ್ಕಿಸಿ ಕ್ರಯಕ್ಕೆ ಕೊಡಬೇಕು. ಮುಂದಣ ಜೂಬಿಲಿ ಸಂವತ್ಸರದ ತನಕ ಹೆಚ್ಚು ವರ್ಷಗಳಾದರೆ ಭೂಮಿಯ ಕ್ರಯವನ್ನು ಹೆಚ್ಚಿಸಬೇಕು; ಕಡಿಮೆಯಾದರೆ ತಗ್ಗಿಸಬೇಕು. ಏಕೆಂದರೆ ಮಾರುವವನು ಭೂಮಿಯನ್ನಲ್ಲ, ಬೆಳೆಗಳನ್ನು ಲೆಕ್ಕಿಸಿ ಮಾರುತ್ತಾನಷ್ಟೆ. ಆದುದರಿಂದ ನೀವು ಒಬ್ಬರಿಗೊಬ್ಬರು ಅನ್ಯಾಯ ಮಾಡಬಾರದು. ನಿಮ್ಮ ದೇವರಲ್ಲಿ ಭಯಭಕ್ತಿ ಉಳ್ಳವರಾಗಿರಬೇಕು. ನಾನು ನಿಮ್ಮ ದೇವರಾದ ಸರ್ವೇಶ್ವರ.

ಕೀರ್ತನೆ 67:1-2, 4, 6-7
ಶ್ಲೋಕ: ನಿನ್ನ ಕೀರ್ತಸಲಿ ದೇವಾ, ಜನರೆಲ್ಲರೂ.

ಹರಸು ದೇವಾ, ನಮ್ಮನಾಶೀರ್ವದಿಸು
ನಿನ್ನ ಮುಖ ಕಾಂತಿಯಿಂದೆಮ್ಮನು ಬೆಳಗಿಸು
ಪ್ರಸಿದ್ಧವಾಗಲಿ ನಿನ್ನ ಸನ್ಮಾರ್ಗ ಜಗದೊಳೆಲ್ಲಾ
ಜೀವೋದ್ಧಾರಗೊಳಿಸುವ ನಿನ್ನ ಶಕ್ತಿ ಜನತಿಗೆಲ್ಲಾ

ನ್ಯಾಯದ ಪ್ರಕಾರ ತೀರ್ಪಿಡುತಿ ಜನತೆಗೆ
ಆದರ್ಶನೀಡುತಿ ಜಗದ ರಾಷ್ಟ್ರಗಳಿಗೆ
ಹರ್ಷಾನಂದವಾಗಲಿ ಜನಾಂಗಗಳಿಗೆ. 

ಇತ್ತನೆಮ್ಮ ದೇವನು ಆಶೀರ್ವಾದವನು
ಕೊಟ್ಟಿತೆಮ್ಮ ಭೂಮಿಯು ಸಂತುಷ್ಟ ಬೆಳೆಯನು.
ನಮ್ಮೆಲ್ಲರನು ದೇವನು ಹರಸಲಿ
ಎಲ್ಲೆಡೆ ಆತನ ಭಯಭಕ್ತಿಯಿರಲಿ.

ಶುಭಸಂದೇಶ ವಾಚನ: ಮತ್ತಾಯ 14:1-12


ಯೇಸುಸ್ವಾಮಿಯ ಸಮಾಚಾರ ಆಗ ಗಲಿಲೇಯ ಪ್ರಾಂತ್ಯಕ್ಕೆ ಸಾಮಂತ ರಾಜನಾಗಿದ್ದ ಹೆರೋದನ ಕಿವಿಗೆ ಬಿದ್ದಿತು. ಅವನು ತನ್ನ ಪರಿಚಾರಕರಿಗೆ, "ಮಡಿದ ಸ್ನಾನಿಕ ಯೊವಾನ್ನನೇ ಮರಳಿ ಜೀವಂತನಾಗಿ ಬಂದಿದ್ದಾನೆ; ಆದ್ದರಿಂದಲೇ ಮಹತ್ಕಾರ್ಯಗಳನ್ನು ಮಾಡುವ ಶಕ್ತಿ ಇವನಿಗಿದೆ," ಎಂದನು. ಹೆರೋದನು ತನ್ನ ಸಹೋದರ ಫಿಲಿಪ್ಪನ ಧರ್ಮಪತ್ನಿಯಾದ ಹೆರೋದಿಯಳನ್ನು ಇಟ್ಟುಕೊಂಡಿದ್ದನು. ಅವಳ ಪ್ರಯುಕ್ತ ಯೊವಾನ್ನನನ್ನು ಹಿಡಿದು ಬಂಧಿಸಿ ಸೆರೆಯಲ್ಲಿ ಹಾಕಿದ್ದನು. ಏಕೆಂದರೆ ಆತನು, "ನಿನ್ನ ಸಹೋದರನ ಧರ್ಮಪತ್ನಿಯನ್ನು ನೀನು ಇಟ್ಟುಕೊಂಡಿರುವುದು ಅಕ್ರಮ," ಎಂದು ಹೆರೋದನಿಗೆ ಹೇಳುತ್ತಿದ್ದನು. ಯೊವಾನ್ನನನ್ನು ಕೊಲ್ಲಿಸಬೇಕೆಂದಿದ್ದರೂ ಹೆರೋದನು ಜನರಿಗೆ ಹೆದರಿದ್ದನು. ಅವರು ಆತನನ್ನು ಪ್ರವಾದಿಯೆಂದು ಭಾವಿಸಿದ್ದರು. ಹೀಗಿರುವಲ್ಲಿ ಹೆರೋದನ ಹುಟ್ಟುಹಬ್ಬ ಬಂದಿತು. ಹೆರೋದಿಯಳ ಮಗಳು ಆಹ್ವಾನಿತರ ಮುಂದೆ ನರ್ತನಮಾಡಿ ಹೆರೋದನನ್ನು ಮೆಚ್ಚಿಸಿದಳು. ಆಗ ಅವಳು ಏನು ಕೇಳಿದರೂ ಕೊಡುವುದಾಗಿ ಅವನು ಪ್ರಮಾಣಪೂರ್ವಕವಾಗಿ ವಾಗ್ದಾನ ಮಾಡಿದನು. ಅವಳು ತನ್ನ ತಾಯಿಯ ಸಲಹೆ ಪಡೆದು, "ನನಗೆ ಸ್ನಾನಿಕ ಯೊವಾನ್ನನ ತಲೆಯನ್ನು ಒಂದು ತಟ್ಟೆಯಲ್ಲಿ ತರಿಸಿಕೊಡಿ," ಎಂದಳು. ಇದನ್ನು ಕೇಳಿ ರಾಜನಿಗೆ ವ್ಯಥೆಯಾಯಿತು. ಆದರೆ ಅತಿಥಿಗಳ ಮುಂದೆ ಮಾಡಿದ ಪ್ರಮಾಣವನ್ನು ಮುರಿಯಲಾಗದೆ ಅವಳ ಇಚ್ಛೆಯನ್ನು ಪೂರೈಸುವಂತೆ ಆಜ್ಞೆಮಾಡಿದನು. ಅದರಂತೆಯೇ ಆಳುಗಳನ್ನು ಕಳುಹಿಸಿ, ಸೆರೆಮನೆಯಲ್ಲಿದ್ದ ಯೊವಾನ್ನನ ತಲೆಯನ್ನು ಕಡಿಸಿದನು; ಅದನ್ನು ಒಂದು ತಟ್ಟೆಯಲ್ಲಿ ತಂದು ಆ ಹುಡುಗಿಗೆ ಕೊಡಲಾಯಿತು. ಅವಳು ಅದನ್ನು ತನ್ನ ತಾಯಿಯ ಬಳಿಗೆ ತೆಗೆದುಕೊಂಡು ಹೋದಳು. ಯೊವಾನ್ನನ ಶಿಷ್ಯರು ಶವವನ್ನು ತೆಗೆದುಕೊಂಡು ಹೋಗಿ ಸಮಾಧಿಮಾಡಿದರು. ಅನಂತರ ಹೋಗಿ ಯೇಸುವಿಗೆ ಈ ವಿಷಯವನ್ನು ತಿಳಿಸಿದರು.

04.08.23 - "ಅವರ ಅವಿಶ್ವಾಸದ ಕಾರಣ ಯೇಸು ಅದ್ಬುತಕಾರ್ಯಗಳನ್ನು ಅಲ್ಲಿ ಹೆಚ್ಚಾಗಿ ಮಾಡಲಿಲ್ಲ"

ಮೊದಲನೆಯ ವಾಚನ: ಯಾಜಕಕಾಂಡ 23:1, 4-11, 15-16, 27, 34-38

ಇಸ್ರಯೇಲರಿಗೆ ಈ ಪ್ರಕಾರ ಆಜ್ಞಾಪಿಸಬೇಕೆಂದು ಸರ್ವೇಶ್ವರಸ್ವಾಮಿ ಮೋಶೆಗೆ ಹೇಳಿದರು. " ಸರ್ವೇಶ್ವರನಿಂದ ನೇಮಕವಾದ ಹಬ್ಬದ ದಿನಗಳನ್ನು ನಿಯಮಿತ ಕಾಲದಲ್ಲಿ ಪ್ರಕಟಿಸಬೇಕು : ಮೊದಲನೆಯ ತಿಂಗಳಿನ ಹದಿನಾಲ್ಕನೆಯ ದಿನದ ಸಂಜೆ ವೇಳೆಯಲ್ಲಿ ಸರ್ವೇಶ್ವರ ನೇಮಿಸಿದ ಪಾಸ್ಕಹಬ್ಬವಾಗಬೇಕು. ಅದೇ ತಿಂಗಳಿನ ಹದಿನೈದನೆಯ ದಿನದಲ್ಲಿ ಹುಳಿಯಿಲ್ಲದ ರೊಟ್ಟಿಯನ್ನು ತಿನ್ನುವ ಹಬ್ಬವನ್ನು ಸರ್ವೇಶ್ವರನ ಗೌರವಾರ್ಥ ಆಚರಿಸಬೇಕು. ಅಂದು ಮೊದಲ್ಗೊಂಡು ಏಳು ದಿನಗಳಲ್ಲೂ ನೀವು ಸರ್ವೇಶ್ವರನಿಗೆ ದಹನಬಲಿಗಳನ್ನು ಸಮರ್ಪಿಸಬೇಕು. ಏಳನೆಯ ದಿನ ದೇವಾರಾಧನೆಗಾಗಿ ಸಭೆಸೇರಬೇಕು. ಆ ದಿನ ಯಾವ ದುಡಿಮೆಯನ್ನೂ ಮಾಡಬಾರದು. ಆ ಏಳು ದಿನಗಳಲ್ಲೂ ನೀವು ಸರ್ವೇಶ್ವರನಿಗೆ ದಹನಬಲಿಗಳನ್ನು ಸಮರ್ಪಿಸಬೇಕು. ಏಳನೆಯ ದಿನ ದೇವಾರಾಧನೆಗಾಗಿ ಸಭೆಸೇರಬೇಕು. ಅಂದು ಯಾವ ದುಡಿಮೆಯನ್ನೂ ಕೈಗೊಳ್ಳಬಾರದು." ಮೋಶೆಯ ಮುಖಾಂತರ ಇಸ್ರಯೇಲರಿಗೆ ಸರ್ವೇಶ್ವರ ಹೀಗೆ ಆಜ್ಞಾಪಿಸಿದರು : " ನಾನು ನಿಮಗೆ ಕೊಡುವ ನಾಡನ್ನು ನೀವು ಸೇರಿದ ನಂತರ ಅಲ್ಲಿನ (ಜವೆಗೋದಿ) ಪೈರನ್ನು ಕೊಯ್ಯುವಾಗ ಪ್ರಥಮ ಫಲದ ಸಿವುಡನ್ನು ಯಾಜಕನ ಬಳಿ ತಂದೊಪ್ಪಿಸಬೇಕು. ನೀವು ಅಂಗೀಕೃತರಾಗುವಂತೆ ಯಾಜಕನು ಅದನ್ನು ಸರ್ವೇಶ್ವರನ ಸನ್ನಿಧಿಯಲ್ಲಿ ನೈವೇದ್ಯವಾಗಿ ಆರತಿ ಎತ್ತಬೇಕು. ಸಬ್ಬತ್ ದಿನದ ಮಾರನೆಯ ದಿನ ಮೊದಲ್ಗೊಂಡು, ಅಂದರೆ ಆ ಪ್ರಥಮ ಸಿವುಡನ್ನು ನೈವೇದ್ಯವಾಗಿ ಆರತಿ ಎತ್ತಿದ ದಿನ ಮೊದಲ್ಗೊಂಡು, ಪೂರ್ಣವಾಗಿ ಏಳು ವಾರಗಳು ಮುಗಿಯುವಂತೆ, ಐವತ್ತು ದಿನಗಳನ್ನು ಎಣಿಸಬೇಕು. ಏಳನೆಯ ಸಬ್ಬತ್ ದಿನದ ಮರುದಿನದಲ್ಲಿ ಸರ್ವೇಶ್ವರನಿಗೆ ಹೊಸ ಬೆಳೆಯ ನೈವೇದ್ಯವನ್ನು ಸಮರ್ಪಿಸಬೇಕು. ಪೂರ್ಣವಾಗಿ ಉಪವಾಸ ಮಾಡಬೇಕು. ಸರ್ವೇಶ್ವರನ ಸನ್ನಿಧಿಯಲ್ಲಿ ದಹನ ಬಲಿದಾನಮಾಡಬೇಕು. ಏಳನೆಯ ತಿಂಗಳಿನ ಹದಿನೈದನೆಯ ದಿನ ಮೊದಲ್ಗೊಂಡು ಏಳು ದಿನಗಳವರೆಗೆ ಪರ್ಣಕುಟೀರಗಳ ಜಾತ್ರೆಯನ್ನು ಸರ್ವೇಶ್ವರನ ಗೌರವಾರ್ಥ ಆಚರಿಸಬೇಕು. ಮೊದಲನೆಯ ದಿನ ದೇವಾರಧನೆಗಾಗಿ ಸಭೆ ಸೇರಬೇಕು, ಯಾವ ದುಡಿಮೆಯನ್ನೂ ಕೈಗೊಳ್ಳಬಾರದು. ಆ ಏಳು ದಿನಗಳಲ್ಲೂ ನೀವು ಸರ್ವೇಶ್ವರನ ಸನ್ನಿಧಿಯಲ್ಲಿ ದಹನ ಬಲಿದಾನ ಮಾಡಿಬೇಕು. ಎಂಟನೆಯ ದಿನದಂದು ದೇವಾರಧನೆಗಾಗಿ ಸಭೆಸೇರಬೇಕು. ಸರ್ವೇಶ್ವರನ ಸನ್ನಿಧಿಯಲ್ಲಿ ದಹನ ಬಲಿದಾನ ಮಾಡಬೇಕು. ಅದು ಸಭೆಸೇರುವ ದಿನವಾದುದರಿಂದ ಅಂದು ಎಲ್ಲ ದುಡಿಮೆಯನ್ನು ನಿಲ್ಲಿಸಬೇಕು. ಸರ್ವೇಶ್ವರ ನೇಮಿಸಿರುವ ಸಬ್ಬತ್ ದಿನಗಳನ್ನು ಮತ್ತು ಮೇಲೆ ಹೇಳಿದ ಸ್ವಾಮಿಯ ಹಬ್ಬದ ದಿನಗಳನ್ನು ನೀವು ಆಚರಿಸಬೇಕು. ಆ ದಿನಗಳಲ್ಲಿ ನೀವು ದೇವಾರಾಧನೆಗಾಗಿ ಸಭೆಸೇರುವಂತೆ ಜನರಿಗೆ ಪ್ರಕಟಿಸಬೇಕು. ಸರ್ವೇಶ್ವರನಿಗೆ ಒಪ್ಪಿಸಬೇಕಾದ ಕಪ್ಪಕಾಣಿಕೆಗಳನ್ನೂ ಹರಕೆಗಳನ್ನೂ ಸಲ್ಲಿಸಬೇಕಲ್ಲದೆ ಮೇಲೆ ಸೂಚಿಸಿರುವ ಹಬ್ಬಗಳಲ್ಲಿ ಆಯಾ ದಿನಕ್ಕೆ ನೇಮಿಸಿರುವ ಪ್ರಕಾರ ದಹನಬಲಿ, ನೈವೇದ್ಯದ್ರವ್ಯ, ಶಾಂತಿಸಮಾಧಾನ ಬಲಿ, ಪಾನದ್ರವ್ಯ ಇವುಗಳನ್ನು ತಂದು ಸರ್ವೇಶ್ವರನ ಸನ್ನಿಧಿಯಲ್ಲಿ ಹೋಮಮಾಡಬೇಕು."

ಕೀರ್ತನೆ 81:2-3, 4-5, 9-10
ಶ್ಲೋಕ: ಹಾಡಿರಿ ಶುಭಗೀತೆಯನು ಬಲಪ್ರಧನಾದ ದೇವನಿಗೆ.

ಆರಂಭಿಸಿ ಸಂಗೀತವನು ಬಾರಿಸಿ ಮೃದಂಗವನು,
ನುಡಿಸಿರಿ ಮಧುರ ವೀಣೆಯನು ಸ್ವರಮಂಡಲವನು,,
ಊದಿರಿ ಕೊಂಬನು ಅಮವಾಸ್ಯೆಯಲಿ,
ಉತ್ಸವ ದಿನವಾದ ಪೂರ್ಣಿಮೆಯಲಿ,,

ದೇವರಿತ್ತ ನಿಯಮವದು ಯಕೋಬ್ಯರಿಗೆ,
ಕೊಟ್ಟ ಕಟ್ಟಳೆಯದು ಇಸ್ರಯೇಲರಿಗೆ,,
ಈಜಿಪ್ಟಿರಿಗೆದುರಾಗಿ ತೆರಳಿದಂದು,
ಜೋಸೆಫ್ಯರಿಗಾತ ವಿಧಿಸಿದಾಜ್ಞೆಯನು,,

ಇರಬಾರದು ಅನ್ಯದೇವತೆಗಳು ನಿಮ್ಮಲ್ಲಿ,
ಪರದೇವತೆಗಳ ಪೂಜೆ ಕೂಡದು ನಿಮ್ಮಲ್ಲಿ,
ತೆರೆಯಿರಿ ನಿಮ್ಮ ಬಾಯನು,
ತುಂಬಿಸಿ ತೃಪ್ತಿಪಡಿಸುವೆ ನಾನದನು,,

ಶುಭಸಂದೇಶ ವಾಚನ: ಮತ್ತಾಯ 13:54-58


ಆ ಕಾಲದಲ್ಲಿ ಯೇಸು ತಮ್ಮ ಸ್ವಂತ ಊರಿಗೆ ಮರಳಿ ಬಂದು ಅಲ್ಲಿಯ ಪ್ರಾರ್ಥನಾಮಂದಿರದಲ್ಲಿ ಬೋದನೆ ಮಾಡಿದರು. ಅದನ್ನು ಕೇಳುತ್ತಿದ್ದ ಜನರು ಆಶ್ಚರ್ಯಚಕಿತರಾಗಿ, " ಈ ಪರಿಜ್ಞಾನ ಇವನಿಗೆಲ್ಲಿಂದ ಬಂತು ? ಈ ಮಹತ್ಕಾರ್ಯಗಳನ್ನು ಇವನು ಮಾಡುವುದಾದರೂ ಹೇಗೆ ? ಇವನು ಆ ಬಡಗಿಯ ಮಗನಲ್ಲವೇ ? ಮರಿಯಳು ಇವನ ತಾಯಲ್ಲವೇ ? ಯಕೋಬ, ಜೋಸೆಫ್, ಸಿಮೋನ, ಯೂದ ಇವರು ಇವನ ಸೋದರರಲ್ಲವೇ ? ಇವನ ಸಹೋದರಿಯರು ಇಲ್ಲಿಯೇ ವಾಸಮಾಡುತ್ತಿಲ್ಲವೇ ? ಹಾಗಾದರೆ ಇವನಿಗೆ ಇದೆಲ್ಲಾ ಎಲ್ಲಿಂದ ಬಂತು ? " ಎಂದು ಮಾತಾಡಿಕೊಂಡು ಯೇಸುವನ್ನು ತಿರಸ್ಕರಿಸಿದರು. ಅವರಿಗೆ ಯೇಸು, " ಪ್ರವಾದಿಗೆ ಬೇರೆ ಎಲ್ಲಿಯಾದರೂ ಗೌರವ ದೊರಕೀತು, ಆದರೆ ಸ್ವಗ್ರಾಮದಲ್ಲಿ ಹಾಗೂ ಸ್ವಗೃಹದಲ್ಲಿ ಮಾತ್ರ ಗೌರವ ದೊರಕದು, " ಎಂದು ಹೇಳಿದರು. ಅವರ ಅವಿಶ್ವಾಸದ ಕಾರಣ ಯೇಸು ಅದ್ಬುತಕಾರ್ಯಗಳನ್ನು ಅಲ್ಲಿ ಹೆಚ್ಚಾಗಿ ಮಾಡಲಿಲ್ಲ.

03.08.23 - "ನೀವೇ ಅಭಿಷಿಕ್ತರಾದ ಲೋಕೋದ್ಧಾರಕ"

ಮೊದಲನೇ ವಾಚನ: ವಿಮೋಚನಾಕಾಂಡ 40:16-21, 34-38

ಸರ್ವೇಶ್ವರ ಆಜ್ಞಾಪಿಸಿದಂತೆಯೇ ಮೋಶೆ ಎಲ್ಲವನ್ನೂ ಮಾಡಿದನು. ಎರಡನೆಯ ವರ್ಷದ ಮೊದಲನೆಯ ತಿಂಗಳಿನ ಪ್ರಥಮ ದಿನದಲ್ಲಿ ಮೋಶೆ ಗುಡಾರ ಎತ್ತಿಸಿ ಅದರ ಗದ್ದಿಗೇಕಲ್ಲುಗಳನ್ನು ಹಾಕಿ ಕಂಬಗಳನ್ನು ನಿಲ್ಲಿಸಿದನು. ಗಡಾರದ ಮೇಲೆ ಡೇರೆಯ ಬಟ್ಟೆಗಳನ್ನು ಹಾಸಿ ಆ ಡೇರೆಗೆ ಮೇಲು ಹೊದಿಕೆಯನ್ನು ಹಾಕಿದನು. ಸರ್ವೇಶ್ವರ ಆಜ್ಞಾಪಿಸಿದಂತೆಯೇ ಮೋಶೆ ಅದೆಲ್ಲವನ್ನು ಮಾಡಿದನು. ಆಜ್ಞಾಶಾಸನಗಳನ್ನು ಮಂಜೂಷದಲ್ಲಿಟ್ಟು ಮಂಜೂಷಕ್ಕೆ ಗದ್ದಿಗೆಗಳನ್ನು ಕೊಟ್ಟು ಅದರ ಮೇಲೆ ಕೃಪಾಸನವನ್ನಿಟ್ಟುಮಂಜೂಷವನ್ನು ಗುಡಾರದೊಳಕ್ಕೆ ತಂದುಅದರ ಮುಂದೆ ತೆರೆಯನ್ನು ಇರಿಸಿಸರ್ವೇಶ್ವರ ಆಜ್ಞಾಪಿಸಿದಂತೆಯೇ ಮೋಶೆ ಆಜ್ಞಾಶಾಸನಗಳ ಮಂಜೂಷವನ್ನು ಮರೆಮಾಡಿದನು. ಆಗ ಮೇಘವೊಂದು ದೇವದರ್ಶನದ ಗುಡಾರವನ್ನು  ಮುಚ್ಚಿತುಸರ್ವೇಶ್ವರನ ತೇಜಸ್ಸು ಗುಡಾರವನ್ನು ತುಂಬಿತು. ಮೇಘವು ದೇವದರ್ಶನದ ಗುಡಾರದ ಮೇಲೆ ನೆಲೆಯಾಗಿ ಇದ್ದುದರಿಂದಲೂ ಸರ್ವೇಶ್ವರನ ತೇಜಸ್ಸು ಗುಡಾರದೊಳಗೆ ತುಂಬಿದ್ದುದರಿಂದಲೂ ಮೋಶೆ ಬಿಡಾರದಲ್ಲಿ  ಹೋಗಲಾರದೆ ಇದ್ದನು. ಆ ಮೇಘವು ಗುಡಾರವನ್ನು ಬಿಟ್ಟು ಮೇಲಕ್ಕೆ ಹೋದಾಗ ಇಸ್ರಯೇಲರು ಮುಂದಕ್ಕೆ ಪ್ರಯಾಣಮಾಡುತ್ತಿದ್ದರುಆ ಮೇಘವು ಬಿಡದೆ ಇರುವಾಗ ಅದು ಬಿಡುವತನಕ ಪ್ರಯಾಣ ಮಾಡದೆ ಇರುತ್ತಿದ್ದರು. ಇಸ್ರಯೇಲರ ಎಲ್ಲಾ ಪ್ರಯಾಣಗಳಲ್ಲಿಯೂ ಅವರ ಕಣ್ಣ ಮುಂದೆ ಹಗಲು ಹೊತ್ತಿನಲ್ಲಿ ಸರ್ವೇಶ್ವರನ ಮೇಘವು ಗುಡಾರದ ಮೇಲೆ ಇತ್ತುರಾತ್ರಿ ವೇಳೆಯಲ್ಲಿ ಆ ಮೇಘದೊಳಗೆ ಅಗ್ನಿಯು ಪ್ರಕಾಶಿಸುತ್ತಿತ್ತು. ಆ ಮೇಘದೊಳಗೆ ಅಗ್ನಿಯು ಪ್ರಕಾಶಿಸುತ್ತಿತ್ತು.

ಕೀರ್ತನೆ: 84:3, 4, 5-6, 8, 11
ಶ್ಲೋಕ: ಹೇ ಪ್ರಭೂ ನಿನ್ನ ನಿವಾಸಗಳೆನಿತೋ ಸುಂದರ


ಅನೇಕ ಯೆಹೂದ್ಯರು ಮಾರ್ತಳನ್ನೂ ಮರಿಯಳನ್ನೂ ಕಂಡು ಅವರ ಸೋದರನ ಮರಣಕ್ಕಾಗಿ ಸಂತಾಪ ಸೂಚಿಸಲು ಬಂದಿದ್ದರು.  ಯೇಸು ಬರುತ್ತಿದ್ದಾರೆಂದು ಕೇಳಿದೊಡನೆ ಮಾರ್ತ ಅವರನ್ನು ಎದುರುಗೊಳ್ಳಲು ಹೋದಳು. ಮರಿಯ ಮನೆಯಲ್ಲೇ ಇದ್ದಳು. ಮಾರ್ತ ಯೇಸುವನ್ನು ಕಂಡು, "ಪ್ರಭುವೇ, ನೀವು ಇಲ್ಲಿದ್ದಿದ್ದರೆ ನನ್ನ ಸಹೋದರ ಸಾಯುತ್ತಿರಲಿಲ್ಲ. ಈಗಲೂ ದೇವರಲ್ಲಿ ನೀವು ಏನೇ ಕೇಳಿಕೊಂಡರೂ ನಿಮಗವರು ನೀಡುವರೆಂದು ನಾನು ಬಲ್ಲೆ," ಎಂದಳು. ಯೇಸು, "ನಿನ್ನ ಸಹೋದರನು ಜೀವಂತವಾಗಿ ಏಳುವನು," ಎಂದರು. "ಅವನು ಅಂತಿಮ ದಿನದ ಪುನರುತ್ಥಾನದಲ್ಲಿ ಜೀವಂತವಾಗಿ ಏಳುವನೆಂದು ನನಗೆ ತಿಳಿದಿದೆ," ಎಂದಳು ಮಾರ್ತ. ಯೇಸು, ಅವಳಿಗೆ, " ಪುನರುತ್ಥಾನವೂ ಜೀವವೂ ನಾನೇ; ನನ್ನಲ್ಲಿ ವಿಶ್ವಾಸವಿಟ್ಟವನು ಸಾವಿಗೀಡಾದರೂ ಜೀವಿಸುವನು. ಜೀವಿಸುವ ಪ್ರತಿಯೊಬ್ಬನೂ ನನ್ನಲ್ಲಿ ವಿಶ್ವಾಸವಿಟ್ಟನೆಂದರೆ ಅವನೆಂದಿಗೂ ಸಾಯನು. ಇದನ್ನು ನೀನು ವಿಶ್ವಾಸಿಸುತ್ತೀಯಾ?" ಎಂದು ಕೇಳಲು ಅವಳು,  "ಹೌದು ಪ್ರಭುವೇ, ನೀವೇ ಅಭಿಷಿಕ್ತರಾದ ಲೋಕೋದ್ಧಾರಕ; ದೇವರ ಪುತ್ರ; ಈ ಲೋಕಕ್ಕೆ ಬರಬೇಕಾದವರು - ಎಂದು ನಾನು ವಿಶ್ವಾಸಿಸುತ್ತೇನೆ," ಎಂದು ಹೇಳಿದಳು.

02.08.23

ಮೊದಲನೆಯ ವಾಚನ: ವಿಮೋಚನಕಾಂಡ 34:29-35


ಮೋಶೆ ಆಜ್ಞಾಶಾಸನಗಳಾದ ಆ ಎರಡು ಕಲ್ಲಿನ ಹಲಗೆಗಳನ್ನು ಕೈಯಲ್ಲಿ ಹಿಡಿದುಕೊಂಡು ಸೀನಾಯಿ ಬೆಟ್ಟದಿಂದ ಇಳಿದು ಬಂದಾಗ ಅವನ ಮುಖ ಪ್ರಕಾಶಮಾನವಾಗಿತ್ತು. ಏಕೆಂದರೆ ಅವನು ಸರ್ವೇಶ್ವರನ ಸಂಗಡ ಸಂಭಾಷಿಸಿದ್ದನು. ಆದರೆ ಅದು ಅವನಿಗೆ ತಿಳಿದಿರಲಿಲ್ಲ. ಮೋಶೆಯ ಮುಖ ಹೀಗೆ ಪ್ರಕಾಶವಾಗಿರುವುದನ್ನು ಆರೋನನು ಮತ್ತು ಇಸ್ರಯೇಲರೆಲ್ಲರು ನೋಡಿ ಅವನ ಹತ್ತಿರಕ್ಕೆ ಬರಲು ಭಯಪಟ್ಟರು. ಆದರೆ ಮೋಶೆ ಅವರನ್ನು ಕರೆದನು. ಆಗ ಆರೋನನು ಹಾಗು ಜನನಾಯಕರೆಲ್ಲರು ಅವನ ಬಳಿಗೆ ಬಂದರು. ಆಗ ಮೋಶೆ ಅವರ ಸಂಗಡ ಮಾತಾಡಿದನು. ಅನಂತರ ಇಸ್ರಯೇಲರೆಲ್ಲರು ಕೂಡ ಹತ್ತಿರಕ್ಕೆ ಬಂದರು. ಮೋಶೆ ತಾನು ಸೀನಾಯಿ ಬೆಟ್ಟದಲ್ಲಿ ಸರ್ವೇಶ್ವರನಿಂದ ಹೊಂದಿದ ಆಜ್ಞೆಗಳನ್ನೆಲ್ಲ ಅವರಿಗೆ ತಿಳಿಸಿದನು. ಅವರೊಡನೆ ಮಾತಾಡಿ ಮುಗಿಸಿದ ಮೇಲೆ ಮೋಶೆ ತನ್ನ ಮುಖದ ಮೇಲೆ ಮುಸುಕು ಹಾಕಿಕೊಂಡನು. ಸರ್ವೇಶ್ವರನ ಸಂಗಡ ಮಾತಾಡಬೇಕೆಂದು ಅವರ ಸನ್ನಿಧಿಗೆ ಹೋಗುವಾಗಲೆಲ್ಲ ಅಲ್ಲಿಂದ ಹೊರಗೆ ಬರುವ ತನಕ ಅವನು ಆ ಮುಸುಕನ್ನು ತೆಗೆದಿಡುತ್ತಿದ್ದನು. ಹೊರಗೆ ಬಂದಾಗ ಸರ್ವೇಶ್ವರ ಆಜ್ಞಾಪಿಸಿದ್ದನ್ನೆಲ್ಲ ಇಸ್ರಯೇಲರಿಗೆ ತಿಳಿಸುತ್ತಿದ್ದನು. ಮೋಶೆಯ ಮುಖ ಪ್ರಕಾಶಮಾನವಾಗಿರುವುದನ್ನು ಇಸ್ರಯೇಲರು ಗಮನಿಸುತ್ತಿದ್ದರು. ಆದಕಾರಣ ಅವನು ಸರ್ವೇಶ್ವರನ ಸಂಗಡ ಮಾತಾಡಲು ಹೋಗುವವರೆಗೆ ತನ್ನ ಮುಖದ ಮೇಲೆ ಮುಸುಕು ಹಾಕಿಕೊಂಡಿರುತ್ತಿದ್ದನು.

ಕೀರ್ತನೆ 99:5, 6, 7, 9
ಶ್ಲೋಕ: ಪರಮ ಪಾವನನು ನಮ್ಮೀಸ್ವಾಮಿ ದೇವನು

ಪರಮ ಪಾವನನು ನಮ್ಮೀಸ್ವಾಮಿ ದೇವನು
ಹೊಗಳಿರಿ, ಆತನ ಪಾದಪೀಠಕೆ ಅಡ್ಡಬೀಳಿರಿ ನೀವೆಲ್ಲರು
ಪ್ರಭುವಿನ ಯಾಜಕರು, ಮೋಶೆ ಮತ್ತು ಆರೋನನು
ಸಮುವೇಲನು ಸಹ ಆತನ ಶರಣರಲಿ ಒಬ್ಬನು.

ಪ್ರಾರ್ಥಿಸಲು ಇವರು, ಪ್ರಭುವು ಸದುತ್ತರಿಸಿದನು
ಮೇಘಸ್ತಂಭದಲಿದ್ದು ಅವರೊಡನೆ ಮಾತಾಡಿದನು
ಕೈಗೊಂಡರು ಅವರು ಆತನಿತ್ತ ವಿಧಿನಿಯಮಗಳನು.

ಘನಪಡಿಸಿರೆಮ್ಮ ಸ್ವಾಮಿ ದೇವನನು
ಶ್ರೀಪರ್ವತದಲಿ ವಂದಿಸಿ ಆತನನು
ಪರಮಪವಿತ್ರನು ಆ ನಮ್ಮ ದೇವನು.

ಶುಭಸಂದೇಶ: ಮತ್ತಾಯ 13: 44-46

"ಸ್ವರ್ಗಸಾಮ್ರಾಜ್ಯವನ್ನು ಹೊಲದಲ್ಲಿ ಹೂಳಿಟ್ಟ ನಿಧಿಗೆ ಹೋಲಿಸಬಹುದು. ಇದನ್ನು ಒಬ್ಬನು ಪತ್ತೆಹಚ್ಚಿ ಅಲ್ಲಿಯೇ ಮುಚ್ಚಿಡುತ್ತಾನೆ. ತನಗಾದ ಸಂತೋಷದಿಂದ ಹೋಗಿ ತನಗೆ ಇದ್ದುಬದ್ದುದೆಲ್ಲವನ್ನೂ ಮಾರಿ ಈ ಹೊಲವನ್ನೇ ಕೊಂಡು ಕೊಂಡುಬಿಡುತ್ತಾನೆ. "ಸ್ವರ್ಗಸಾಮ್ರಾಜ್ಯವನ್ನು ಉತ್ತಮವಾದ ಮುತ್ತುರತ್ನಗಳನ್ನು ಹುಡುಕಿಕೊಂಡು ಹೋಗುವ ವರ್ತಕನಿಗೂ ಹೋಲಿಸಬಹುದು. ಅನಘ್ರ್ಯವಾದ ಒಂದು ಮುತ್ತನ್ನು ಕಂಡ ಕೂಡಲೆ ವರ್ತಕ ತನ್ನ ಆಸ್ತಿಪಾಸ್ತಿಯನ್ನೆಲ್ಲಾ ಮಾರಿ ಆ ಮುತ್ತನ್ನು ಕೊಂಡುಕೊಳ್ಳುತ್ತಾನೆ.


31.07.23 - ಸಾಸಿವೆ - ಕಾಳುಗಳಲ್ಲಿ ಅತಿ ಸಣ್ಣದಾದ ಇದನ್ನು ಬಿತ್ತಿದಾಗ ಎಲ್ಲ ಸಸ್ಯಗಳಿಗಿಂತಲೂ ದೊಡ್ಡದಾಗಿ ಬೆಳೆದು ಮರವಾಗುತ್ತದೆ.

ಮೊದಲನೇ ವಾಚನ: ವಿಮೋಚನಾಕಾಂಡ 32:15-24, 30-34


ಮೋಶೆ ಆಜ್ಞಾಶಾಸನಗಳಿದ್ದ ಆ ಎರಡು ಕಲ್ಲಿನ ಹಲಗೆಗಳನ್ನು ಕೈಯಲ್ಲಿ ಹಿಡಿದುಕೊಂಡು ಬೆಟ್ಟದಿಂದ ಇಳಿದುಬಂದನು. ಆ ಹಲಗೆಗಳ ಎರಡು ಪಕ್ಕಗಳಲ್ಲೂ ಅಕ್ಷರಗಳು ಬರೆದಿದ್ದವು. ಇಕ್ಕಡೆಗಳಲ್ಲೂ ಬರಹವಿತ್ತು. ಆ ಶಿಲಾಶಾಸನಗಳು ದೇವರ ಕೆಲಸವೇ ಆಗಿದ್ದವು. ಅವುಗಳಲ್ಲಿ ಬರೆದದ್ದು ದೇವರು ಕೆತ್ತಿದ್ದ ಅಕ್ಷರಗಳೇ ಆಗಿದ್ದವು. ಇತ್ತ ಇಸ್ರಯೇಲರು ಕೇಕೆ ಹಾಕುತ್ತಾ ಕೂಗಾಡುತ್ತಿದ್ದುದನ್ನು ಯೆಹೋಶುವನು ಕೇಳಿ ಮೋಶೆಗೆ, “ಪಾಳೆಯದ ಕಡೆಯಿಂದ ಕಾಳಗದ ಧ್ವನಿ ಕೇಳಿಸುತ್ತಿದೆ,” ಎಂದು ಹೇಳಿದನು. ಅದಕ್ಕೆ ಮೋಶೆ: “ನನಗೆ ಕೇಳಿಸುವುದು ವಿಜಯಗೀತೆಯಲ್ಲ ಅದು ಅಪಜಯದ ಶೋಕಗೀತೆಯೂ ಅಲ್ಲ ಕೇಳಿಸುತ್ತಿದೆ ನನಗೆ ಸಂಗೀತಶ್ಲೋಕ” ಮೋಶೆ ಪಾಳೆಯದ ಹತ್ತಿರಕ್ಕೆ ಬಂದು ಆ ಹೋರಿಕರುವನ್ನೂ ಜನರ ಕುಣಿದಾಟವನ್ನೂ ಕಂಡಾಗ ಕಡುಕೋಪಗೊಂಡನು. ಕೈಯಲ್ಲಿದ್ದ ಶಿಲಾಶಾಸನಗಳನ್ನು ಬೆಟ್ಟದ ಬುಡಕ್ಕೆ ಬಿಸಾಡಿ ಒಡೆದುಹಾಕಿಬಿಟ್ಟನು. ಜನರು ಮಾಡಿಸಿಕೊಂಡಿದ್ದ ಆ ಹೋರಿಕರುವನ್ನು ತೆಗೆದು ಬೆಂಕಿಯಿಂದ ಸುಟ್ಟು, ಅರೆದು, ಪುಡಿಪುಡಿ ಮಾಡಿ, ನೀರಿನಲ್ಲಿ ಕಲಸಿ, ಇಸ್ರಯೇಲರಿಗೆ ಆ ನೀರನ್ನು ಕುಡಿಸಿದನು. ಅಲ್ಲದೆ, ಆರೋನನನ್ನು ಉದ್ದೇಶಿಸಿ, “ನೀನು ಈ ಜನರಿಂದ ಮಹಾಪಾಪವನ್ನು ಮಾಡಿಸಿರುವೆ. ಹೀಗೆ ಮಾಡಿಸಲು ಇವರು ನಿನಗೇನು ಮಾಡಿದರು,” ಎಂದು ವಿಚಾರಿಸಿದನು. ಅದಕ್ಕೆ ಆರೋನನು, “ಒಡೆಯಾ, ಕೋಪಗೊಳ್ಳಬೇಡಿ. ಈ ಜನರು ಎಂಥ ಹಟಮಾರಿಗಳೆಂದು ನೀವೇ ಬಲ್ಲಿರಿ. ಅವರು ನನ್ನ ಬಳಿಗೆ ಬಂದು, ‘ನಮ್ಮನ್ನು ಮುನ್ನಡೆಸಿಕೊಂಡು ಹೋಗಲು ನಮಗೊಬ್ಬ ದೇವರನ್ನು ಮಾಡಿಸಿಕೊಡು. ಈಜಿಪ್ಟಿನಿಂದ ನಮ್ಮನ್ನು ಕರೆದುಕೊಂಡು ಬಂದ ಮೋಶೆ ಏನಾದನೋ ಗೊತ್ತಿಲ್ಲ’, ಎಂದರು. ಅದಕ್ಕೆ ನಾನು, ‘ಯಾರಲ್ಲಿ ಚಿನ್ನದ ಒಡವೆ ಇದೆಯೋ ಅವರೆಲ್ಲರು ಅದನ್ನು ತೆಗೆದು ನನಗೆ ಕೊಡಬೇಕು,’ ಎಂದೆ, ಅವರು ಹಾಗೆಯೇ ಕೊಟ್ಟರು. ನಾನು ಆ ಚಿನ್ನವನ್ನು ಬೆಂಕಿಯಲ್ಲಿ ಹಾಕಿದಾಗ ಈ ಹೋರಿಕರು ಹೊರಗೆ ಬಂತು,” ಎಂದನು. ಮೋಶೆ ಆ ಲೇವಿಯರಿಗೆ, “ಈ ದಿನ ನಿಮ್ಮಲ್ಲಿ ಪ್ರತಿಯೊಬ್ಬನು ಮಗನನ್ನಾದರೂ ಅಣ್ಣತಮ್ಮಂದಿರನ್ನಾದರೂ ಲಕ್ಷ್ಯಕ್ಕೆ ತೆಗೆದುಕೊಳ್ಳದೆ ನಿಮ್ಮನ್ನೇ ಸರ್ವೇಶ್ವರನ ಸೇವೆಗೆ ಪ್ರತಿಷ್ಠಾಪಿಸಿಕೊಂಡಿದ್ದೀರಿ. ಆದ್ದರಿಂದ ಅವರು ಈ ದಿನ ನಿಮ್ಮನ್ನು ಆಶೀರ್ವದಿಸಿರುವರು,” ಎಂದು ಹೇಳಿದನು. ಮರುದಿನ ಮೋಶೆ ಜನರಿಗೆ, “ನೀವು ಮಹಾಪಾಪವನ್ನು ಮಾಡಿದಿರಿ. ಆದರೂ ನಾನು ಬೆಟ್ಟಹತ್ತಿ ಸರ್ವೇಶ್ವರನ ಸನ್ನಿಧಿಗೆ ಹೋಗುವೆನು, ಬಹುಶಃ ನೀವು ಮಾಡಿದ ಪಾಪಕೃತ್ಯಕ್ಕೆ ಕ್ಷಮಾಪಣೆ ನನ್ನ ಮುಖಾಂತರ ದೊರಕೀತು,” ಎಂದು ಹೇಳಿದನು. ಅಂತೆಯೇ ಮೋಶೆ ಸರ್ವೇಶ್ವರನ ಬಳಿಗೆ ಮರಳಿ ಬಂದು, “ಅಕಟಕಟಾ, ಚಿನ್ನದಿಂದ ದೇವರನ್ನು ಮಾಡಿಕೊಂಡು ಈ ಜನರು ಮಹಾಪಾಪವನ್ನು ಕಟ್ಟಿಕೊಂಡಿದ್ದಾರೆ! ಆದರೂ ಕರುಣೆಯಿಟ್ಟು ಅವರ ಪಾಪವನ್ನು ಕ್ಷಮಿಸಿಬಿಡಿ. ಇಲ್ಲವಾದರೆ ನೀವು ಬರೆದಿರುವ (ಜೀವಿತರ) ಪಟ್ಟಿಯಿಂದ ನನ್ನ ಹೆಸರನ್ನು ಅಳಿಸಿಬಿಡಿಯೆಂದು ಕೇಳಿಕೊಳ್ಳುತ್ತೇನೆ,” ಎಂದು ಪ್ರಾರ್ಥಿಸಿದನು. ಅದಕ್ಕೆ ಸರ್ವೇಶ್ವರ, “ಯಾರ್ಯಾರು ನನ್ನ ಮಾತನ್ನು ವಿೂರಿ ಪಾಪಮಾಡಿದರೋ ಅವರ ಹೆಸರುಗಳನ್ನೇ ನನ್ನಲ್ಲಿರುವ ಪಟ್ಟಿಯಿಂದ ಅಳಿಸಿ ಬಿಡುತ್ತೇನೆ. ನೀನಾದರೋ ಇಲ್ಲಿಂದ ಹೊರಟು ನಾನು ನಿನಗೆ ಹೇಳಿದ ನಾಡಿಗೆ ಈ ಜನರನ್ನು ನಡೆಸಿಕೊಂಡು ಹೋಗು. ನನ್ನ ದೂತನು ನಿನ್ನ ಮುಂದುಗಡೆ ನಡೆಯುವನು. ಆದರೂ ನಾನು ಅವರನ್ನು ದಂಡಿಸುವ ದಿನದಂದು ಅವರ ಪಾಪಕ್ಕೆ ತಕ್ಕಂತೆ ದಂಡಿಸುವೆನು.” ಇಸ್ರಯೇಲರು ಆರೋನನ ಕೈಯಿಂದ ಆ ಹೋರಿಕರುವನ್ನು ಮಾಡಿಸಿದ್ದರಿಂದ ಸರ್ವೇಶ್ವರ ಅವರನ್ನು ದಂಡಿಸಿದರು.

ಕೀರ್ತನೆ: 106:19-23
ಶ್ಲೋಕ: ಪ್ರಭು ದಯಾಪೂರಿತ, ತೋರಿ ಅತನಿಗೆ ನಿಮ್ಮ ಕೃತಜ್ಞತಾ ಸ್ತ್ರೋತ.

ಹೋರೇಬಿನಲಿ ಮಾಡಿದರು ಬಸವನನು
ಆರಾಧಿಸಿದರು ಆ ಎರಕದ ಶಿಲೆಯನು
ಈಪರಿ ತೊರೆದುಬಿಟ್ಟರು ತಮ್ಮ ಮಹಿಮಾ ದೇವರನು
ಆರಿಸಿಕೊಂಡರು ಹುಲ್ಲುತಿನ್ನುವ ಬಸವನ ವಿಗ್ರಹವನು.

ಮರೆತುಬಿಟ್ಟರವರು ತಮ್ಮ ಮುಕ್ತಿದಾತ ದೇವನನು
ಈಜಿಪ್ಟಿನಲ್ಲಾತ ಎಸಗಿದ ಮಹತ್ಕಾರ್ಯಗಳನು.
ಹಾಮನಾಡಿನಲಿ ಮಾಡಿದ ಅದ್ಭುತಗಳನು
ಕೆಂಗಡಬಳಿ ನಡೆದ ಘೋರ ಕೃತ್ಯಗಳನು.

ಎಂತಲೇ ‘ಸಂಹರಿಸುವೆ’ ಎನ್ನಲು ಪ್ರಭು ಅವರನು
ಆಪ್ತ ಮೋಶೆಯು ಮಧ್ಯಸ್ಥನಾಗಿ ಬಂದನು
ಸಂಹರಿಸದಂತೆ ಶಮನಗೊಳಿಸಿದನಾ ಕೋಪವನು.

ಶುಭಸಂದೇಶ: ಮತ್ತಾಯ 13:31-35




ಯೇಸುಸ್ವಾಮಿ ಇನ್ನೊಂದು ಸಾಮತಿಯನ್ನು ಹೇಳಿದರು: "ಸ್ವರ್ಗಸಾಮ್ರಾಜ್ಯ ಒಂದು ಸಾಸಿವೆ ಕಾಳನ್ನು ಹೋಲುತ್ತದೆ; ಈ ಕಾಳನ್ನು ತೆಗೆದುಕೊಂಡುಹೋಗಿ ರೈತ ತನ್ನ ಹೊಲದಲ್ಲಿ ಬಿತ್ತಿದ. ಕಾಳುಗಳಲ್ಲಿ ಅತಿ ಸಣ್ಣದಾದ ಇದನ್ನು ಬಿತ್ತಿದಾಗ ಎಲ್ಲ ಸಸ್ಯಗಳಿಗಿಂತಲೂ ದೊಡ್ಡದಾಗಿ ಬೆಳೆದು ಮರವಾಗುತ್ತದೆ. ಆಕಾಶದಲ್ಲಿ ಹಾರಾಡುವ ಹಕ್ಕಿಗಳು ಬಂದು ಇದರ ರೆಂಬೆಗಳಲ್ಲಿ ಗೂಡುಕಟ್ಟಿ ವಾಸಿಸುತ್ತವೆ." ಯೇಸುಸ್ವಾಮಿ ಮತ್ತೊಂದು ಸಾಮತಿಯನ್ನು ಜನರಿಗೆ ಹೇಳಿದರು: "ಸ್ವರ್ಗಸಾಮ್ರಾಜ್ಯ ಹುದುಗೆಬ್ಬಿಸುವ ಹುಳಿಯನ್ನು ಹೋಲುತ್ತದೆ. ಅದನ್ನು ಒಬ್ಬಾಕೆ ತೆಗೆದುಕೊಂಡು ಮೂರು ಸೇರು ಹಿಟ್ಟಿನಲ್ಲಿ ಕಲಸಿದಳು. ಆ ಹಿಟ್ಟೆಲ್ಲಾ ಹುಳಿಯಾಯಿತು." ಸಾಮತಿಗಳ ಸುರಿಮಳೆಯೇಕೆ? ಇದೆಲ್ಲವನ್ನೂ ಯೇಸುಸ್ವಾಮಿ ಜನರಿಗೆ ಸಾಮತಿಗಳ ರೂಪದಲ್ಲಿ ಹೇಳಿದರು. ಸಾಮತಿಗಳಿಲ್ಲದೆ ಅವರಿಗೆ ಏನನ್ನೂ ಬೋಧಿಸಲಿಲ್ಲ. “ಸಾಮತಿಗಳಲ್ಲೇ ಬೋಧಿಸುವೆನು; ಲೋಕಾದಿಯಿಂದ ರಹಸ್ಯವಾದವುಗಳನ್ನು ಬಯಲುಗೊಳಿಸುವೆನು" ಎಂದು ದೇವರು ಪ್ರವಾದಿಯ ಮುಖಾಂತರ ತಿಳಿಸಿದ್ದ ಪ್ರವಚನವನ್ನು ಯೇಸು ಹೀಗೆ ನೆರವೇರಿಸಿದರು.

01.08.23 - "ಸದ್ಧರ್ಮಿಗಳು ತಮ್ಮ ತಂದೆಯ ಸಾಮ್ರಾಜ್ಯದಲ್ಲಿ ಸೂರ್ಯನಂತೆ ಪ್ರಕಾಶಿಸುವರು"

ಮೊದಲನೇ ವಾಚನ: ವಿಮೋಚನಾಕಾಂಡ: 33:7-11, 34:5-9, 28

ಮೋಶೆ ಗುಡಾರವನ್ನು ಪಾಳೆಯದ ಹೊರಗೆ ದೂರದಲ್ಲಿ ಹಾಕಿಸುತ್ತಿದ್ದನು. ಅದಕ್ಕೆ " ದೇವ ದರ್ಶನದ ಗುಡಾರ" ಎಂದು ಹೆಸರಿಟ್ಟನು. ಸರ್ವೇಶ್ವರನಿಂದ ಉತ್ತರವನ್ನು ಬಯಸುತ್ತಿದ್ದವರೆಲ್ಲರು ಪಾಳೆಯದ ಹೊರಗಿದ್ದ ಆ ದೇವ ದರ್ಶನದ ಗುಡಾರಕ್ಕೆ ಹೋಗುತ್ತಿದ್ದರು. ಮೋಶೆ ಗುಡಾರಕ್ಕೆ ಹೋಗುವಾಗಲೆಲ್ಲಾ ಜನರೆಲ್ಲರು ಎದ್ದು ತಮ್ಮ ತಮ್ಮ ಡೇರೆಗಳ ಬಾಗಿಲಲ್ಲಿ ನಿಂತು ಮೋಶೆ ಆ ಗುಡಾರದೊಳಕ್ಕೆ ಹೋಗುವ ತನಕ ಅವನ ಹಿಂದೆ ನೋಡುತ್ತಿದ್ದರು. ಮೋಶೆ ಗುಡಾರದೊಳಕ್ಕೆ ಹೋದ ಕೂಡಲೆ ಮೇಘ ಸ್ತಂಭವೊಂದು ಇಳಿದು ಆ ಗುಡಾರದ ಬಾಗಿಲಲ್ಲಿ ನಿಲ್ಲುತ್ತಿತ್ತು. ಆಗ ಮೋಶೆಯ ಸಂಗಡ ಸರ್ವೇಶ್ವರ ಮಾತಾಡುತ್ತಿದ್ದರು. ಆ ಮೇಘಸ್ತಂಭ ಗುಡಾರದ ಬಾಗಿಲಲ್ಲಿ ನಿಲ್ಲುವುದನ್ನು ಜನರೆಲ್ಲರು ನೋಡಿ, ಎದ್ದುನಿಂತು ತಮ್ಮ ತಮ್ಮ ಡೇರೆಗಳ ಬಾಗಿಲಲ್ಲೇ ಅಡ್ಡ ಬೀಳುತ್ತಿದ್ದರು. ಒಬ್ಬ ಮನುಷ್ಯ ತನ್ನ ಗೆಳೆಯನೊಡನೆ ಹೇಗೆ ಮಾತಾಡುತ್ತಾನೋ ಹಾಗೆಯೇ ಸರ್ವೇಶ್ವರ ಮೋಶೆಯ ಸಂಗಡ ಮುಖಾಮುಖಿಯಾಗಿ ಮಾತಾಡುತ್ತಿದ್ದರು. ತರುವಾಯ ಮೋಶೆ ಪಾಳೆಯಕ್ಕೆ ಮರಳಿ ಬರುತ್ತಿದ್ದನು. ಆದರೆ ನೂನನ ಮಗನಾದ ಯೆಹೋಶುವ ಎಂಬ ಹೆಸರುಳ್ಳ ಯುವಕನೊಬ್ಬನು ಮೋಶೆಯ ಶಿಷ್ಯನಾಗಿ ಆ ಗುಡಾರದಲ್ಲೇ ಇರುತ್ತಿದ್ದನು. ಅದನ್ನು ಬಿಟ್ಟು ಹೋಗುತ್ತಿರಲಿಲ್ಲ. ಸರ್ವೇಶ್ವರ ಸ್ವಾಮಿ ಸೀನಾಯಿ ಬೆಟ್ಟದ ಮೇಲೆ ಮೇಘಾವೃತರಾಗಿ ಇಳಿದು ಬಂದು ಅಲ್ಲಿ ಅವನ ಹತ್ತಿರ ನಿಂತು, "ಸರ್ವೇಶ್ವರ" ಎಂಬ ತಮ್ಮ ನಾಮವನ್ನು ಪ್ರಕಟಿಸಿದರು. ಸರ್ವೇಶ್ವರ ಅವನ ಎದುರಿನಲ್ಲಿ ಹಾದು ಹೋಗುತ್ತಾ ಹೀಗೆಂದು ಪ್ರಕಟಿಸಿದರು: "ಸರ್ವೇಶ್ವರನು ಕರುಣಾಮಯನು, ದಯಾಳು ದೇವರು, ತಟ್ಟನೆ ಸಿಟ್ಟುಗೊಳ್ಳದವನು, ಪ್ರೀತಿಪಾತ್ರನು, ನಂಬಿಗಸ್ತನು. ಸಾವಿರಾರು ತಲೆಗಳವರೆಗೂ ಅಚಲ ಪ್ರೀತಿ ತೋರುವವನು, ದೋಷಾಪರಾಧಗಳನ್ನೂ ಪಾಪಗಳನ್ನೂ ಕ್ಷಮಿಸುವವನು; ಆದರೂ ತಪ್ಪಿತಸ್ಥರನ್ನು ಶಿಕ್ಷಿಸದೆ ಬಿಡದವನು. ಹೆತ್ತವರ ದೋಷ ಪರಿಣಾಮಗಳನ್ನು ಮಕ್ಕಳ ಮೇಲೆ ಮೂರು ನಾಲ್ಕು ತಲೆಗಳವರೆಗೆ ಬರಮಾಡುವವನು." ಕೂಡಲೇ ಮೋಶೆ ನೆಲದಮೇಲೆ ಅಡ್ಡಬಿದ್ದು ನಮಸ್ಕರಿಸಿ, "ಸ್ವಾಮಿ ಸರ್ವೇಶ್ವರಾ, ನಿಮ್ಮ ಅನುಗ್ರಹ ನಮಗೆ ದೊರಕಿತಾದರೆ, ತಾವೇ ನಮ್ಮ ಜೊತೆಯಲ್ಲಿ ಬರಬೇಕು. ನಮ್ಮ ಜನರು ಹಠಮಾರಿಗಳು.  ಆದರೂ ತಾವು ನಮ್ಮ ಪಾಪಗಳನ್ನೂ ಅಧರ್ಮಗಳನ್ನೂ ಕ್ಷಮಿಸಿ ನಿಮ್ಮ ಜನರಾಗುವಂತೆ ನಮ್ಮನ್ನು ಸ್ವೀಕರಿಸಿ," ಎಂದು ಪ್ರಾರ್ಥಿಸಿದನು. ಮೋಶೆ ಆ ಬೆಟ್ಟದಲ್ಲಿ ನಾಲ್ವತ್ತು ದಿನ ಹಗಲಿರುಳು ಅನ್ನ ಪಾನವಿಲ್ಲದೆ ಸರ್ವೇಶ್ವರನ ಸನ್ನಿಧಿಯಲ್ಲಿ ಇದ್ದನು. ಒಡಂಬಡಿಕೆಯ ವಾಕ್ಯಗಳನ್ನು, ಅಂದರೆ ಹತ್ತು ಆಜ್ಞೆಗಳನ್ನು, ಆ ಕಲ್ಲಿನ ಹಲಗೆಗಳ ಮೇಲೆ ಬರೆದನು.

ಕೀರ್ತನೆ: 103:6-7, 8-9, 10-11, 12-13
ಶ್ಲೋಕ: ಪ್ರಭು ದಯಾಳು, ಕೃಪಾಪೂರ್ಣನು

ಸಾಧಿಸುವನು ಪ್ರಭು ನ್ಯಾಯನೀತಿಯನು
ದೊರಕಿಸುವನು ಶೋಷಿತರಿಗೆ ನ್ಯಾಯವನು
ತೋರಿಸಿದಾತ ತನ್ನ ಮಾರ್ಗವನು ಮೋಶೆಗೆ
ತನ್ನ ಮಹತ್ಕಾರ್ಯಗಳನು ಇಸ್ರಯೇಲರಿಗೆ.

ಪ್ರಭು ದಯಾಳು, ಕೃಪಾಪೂರ್ಣನು
ಸಹನಶೀಲನು, ಪ್ರೀತಿಮಯನು
ಆತನು ಸದಾ ತಪ್ಪು ಹುಡುಕುವವನಲ್ಲ
ನಿತ್ಯಕು ಕೋಪ ಇಟ್ಟುಕೊಳ್ಳುವವನಲ್ಲ.

ನಮ್ಮ ಪಾಪಗಳಿಗೆ ತಕ್ಕಂತೆ ಆತ ವರ್ತಿಸಲಿಲ್ಲ
ನಮ್ಮ ಅಪರಾಧಗಳಿಗೆ ತಕ್ಕಹಾಗೆ ದಂಡಿಸಲಿಲ್ಲ
ಆಕಾಶಮಂಡಲವು ಭೂಮಿಯಿಂದೆಷ್ಟೋ ಉನ್ನತ
ದೈವಭಯವುಳ್ಳವರಿಗೆ ಆತನ ಕೃಪೆ ಅಷ್ಟೇ ಸನ್ನುತ.

ಪಡುವಣದಿಂದ ಮೂಡಣವೆಷ್ಟೋ ದೂರ
ದೂಡಿದನಾತ ನಮ್ಮ ಪಾಪಗಳನು ಅಷ್ಟು ದೂರ
ತಂದೆ ಕರುಣೆ ತೋರಿಸುವಂತೆ ಮಕ್ಕಳಿಗೆ
ತಂದೆ ಕರುಣೆ ತೋರಿಸುವಂತೆ ಮಕ್ಕಳಿಗೆ
ಕನಿಕರಿಸುವನಾತ ತನಗೆ ಅಂಜುವವರಿಗೆ.

ಶುಭಸಂದೇಶ: ಮತ್ತಾಯ 13:36-43

ಯೇಸುಸ್ವಾಮಿ ಜನರನ್ನು ಬೀಳ್ಕೊಟ್ಟು ಮನೆಗೆ ಬಂದರು. ಶಿಷ್ಯರು ಅವರ ಬಳಿಗೆ ಬಂದು, "ಹೊಲದಲ್ಲಿ ಬಿತ್ತಲಾದ ಕಳೆಗಳ ಸಾಮತಿಯನ್ನು ನಮಗೆ ವಿವರಿಸಿರಿ," ಎಂದು ಕೇಳಿಕೊಂಡರು. ಅದಕ್ಕೆ ಯೇಸು, "ಒಳ್ಳೆಯ ಗೋದಿಯನ್ನು ಬಿತ್ತುವವನು ಎಂದರೆ ನರಪುತ್ರನು; ಹೊಲವೇ ಈ ಲೋಕ; ಒಳ್ಳೆಯ ಕಾಳುಗಳೇ ಶ್ರೀ ಸಾಮ್ರಾಜ್ಯದ ಮಕ್ಕಳು; ಕಳೆಗಳೇ ಕೇಡಿಗನ ಮಕ್ಕಳು. ಆ ಕಳೆಗಳನ್ನು ಬಿತ್ತಿದ ವೈರಿಯೇ ಪಿಶಾಚಿ. ಸುಗ್ಗಿಯೇ ಕಾಲಾಂತ್ಯ, ಕೊಯ್ಲುಗಾರರೇ ದೇವದೂತರು.  ಕಳೆಗಳನ್ನು ಕಿತ್ತು ಬೆಂಕಿಯಲ್ಲಿ ಸುಟ್ಟು ಹಾಕಿದಂತೆಯೇ ಕಾಲಾಂತ್ಯದಲ್ಲೂ ನಡೆಯುವುದು. ನರಪುತ್ರನು ತನ್ನ ದೂತರನ್ನು  ಕಳುಹಿಸುವನು. ಅವರು ಆತನ ರಾಜ್ಯದಿಂದ ಪಾಪಕ್ಕೆ ಕಾರಣವಾದುದೆಲ್ಲವನ್ನೂ ಮತ್ತು ದುಷ್ಕರ್ಮಿಗಳೆಲ್ಲರನ್ನೂ ಒಟ್ಟುಗೂಡಿಸಿ ಅಗ್ನಿಕುಂಡದಲ್ಲಿ ಹಾಕುವರು; ಅಲ್ಲಿ ಅವರು ಕಟಕಟನೆ ಹಲ್ಲು ಕಡಿದುಕೊಂಡು ಗೋಳಾಡುವರು. ಸದ್ಧರ್ಮಿಗಳು ತಮ್ಮ ತಂದೆಯ ಸಾಮ್ರಾಜ್ಯದಲ್ಲಿ ಸೂರ್ಯನಂತೆ ಪ್ರಕಾಶಿಸುವರು. ಕಿವಿಯುಳ್ಳವನು ಕೇಳಿಸಿಕೊಳ್ಳಲಿ!

30.07.23

ಮೊದಲನೇ ವಾಚನ: ಅರಸರು 3:5, 7-12

ದೇವರಾದ ಸರ್ವೇಶ್ವರ ಆ ರಾತ್ರಿ ಕನಸಿನಲ್ಲಿ ಅವನಿಗೆ ಕಾಣಿಸಿಕೊಂಡರು; “ನಿನಗೆ ಯಾವ ವರಬೇಕು ಕೇಳಿಕೋ,” ಎಂದು ಹೇಳಿದರು. ನನ್ನ ದೇವರಾದ ಸರ್ವೇಶ್ವರಾ, ನನ್ನ ತಂದೆಗೆ ಬದಲಾಗಿ ನಿಮ್ಮಿಂದ ಅರಸನಾಗಿ ನೇಮಕಗೊಂಡಿರುವ ನಿಮ್ಮ ದಾಸನಾದ ನಾನು ಇನ್ನೂ ಚಿಕ್ಕವನು. ವ್ಯವಹಾರಜ್ಞಾನ ಇಲ್ಲದವನು; ನಿಮ್ಮ ದಾಸನಾದ ನಾನು ಅಸಂಖ್ಯಾತ ಮಹಾಜನಾಂಗವಾದ ನಿಮ್ಮ ಸ್ವಕೀಯ ಪ್ರಜೆಯ ಮಧ್ಯೆ ಇದ್ದೇನೆ. ಆದುದರಿಂದ ಅದನ್ನು ಆಳುವುದಕ್ಕೂ ನ್ಯಾಯಾನ್ಯಾಯಗಳನ್ನು ಕಂಡುಹಿಡಿಯುವುದಕ್ಕೂ ನನಗೆ ವಿವೇಕವನ್ನು ದಯಪಾಲಿಸಿರಿ. ಈ ಮಹಾಜನಾಂಗವನ್ನು ಆಳಲು ಯಾರೂ ಸಮರ್ಥರಲ್ಲ,” ಎಂದು ಬೇಡಿಕೊಂಡನು. ಸೊಲೊಮೋನನ ಈ ಬಿನ್ನಹವನ್ನು ಸರ್ವೇಶ್ವರನಾದ ದೇವರು ಮೆಚ್ಚಿದರು. ಅವರು ಆತನಿಗೆ, “ನೀನು ದೀರ್ಘಾಯುಷ್ಯವನ್ನಾಗಲಿ, ಸಿರಿಸಂಪತ್ತನ್ನಾಗಲಿ, ಶತ್ರುವಿನಾಶವನ್ನಾಗಲಿ ಕೇಳಿಕೊಳ್ಳಲಿಲ್ಲ. ನ್ಯಾಯನಿರ್ಣಯಿಸುವುದಕ್ಕೆ ಬೇಕಾದ ವಿವೇಕವನ್ನು ಬೇಡಿಕೊಂಡೆ. ಆದ್ದರಿಂದ ನಿನ್ನ ಬಿನ್ನಹವನ್ನು ನೆರವೇರಿಸಿದ್ದೇನೆ. ನೋಡು, ನಿನಗೆ ಜ್ಞಾನವನ್ನೂ ವಿವೇಕವನ್ನೂ ಅನುಗ್ರಹಿಸಿದ್ದೇನೆ; ನಿನ್ನಂಥ ಜ್ಞಾನಿಯು ಹಿಂದೆ ಇರಲಿಲ್ಲ, ಮುಂದೆಯೂ ಇರುವುದಿಲ್ಲ. ಇದಲ್ಲದೆ, ನೀನು ಕೇಳಿದಂಥದ್ದನ್ನೂ ನಿನಗೆ ಅನುಗ್ರಹಿಸಿದ್ದೇನೆ. ನಿನ್ನ ಜೀವಮಾನದಲ್ಲೆಲ್ಲಾ ಸಿರಿಸಂಪತ್ತಿನಲ್ಲಿಯೂ ಘನತೆ ಗೌರವದಲ್ಲಿಯೂ ನಿನಗೆ ಸಮಾನವಾದ ಅರಸನು ಇನ್ನೊಬ್ಬನಿರುವುದಿಲ್ಲ. ನೀನು ನಿನ್ನ ತಂದೆ ದಾವೀದನಂತೆ ನನ್ನ ಮಾರ್ಗದಲ್ಲೇ ನಡೆದು ನನ್ನ ಆಜ್ಞಾವಿಧಿಗಳನ್ನು ಕೈಗೊಳ್ಳುವುದಾದರೆ ನಿನ್ನ ಆಯುಷ್ಯವನ್ನೂ ಹೆಚ್ಚಿಸುವೆನು,” ಎಂದರು. ಸೊಲೊಮೋನನು ನಿದ್ರೆಯಿಂದ ಎಚ್ಚೆತ್ತಾಗ, ಅದು ಕನಸೆಂದು ತಿಳಿದುಕೊಂಡನು. ಅವನು ಜೆರುಸಲೇಮಿಗೆ ಬಂದನಂತರ ಸರ್ವೇಶ್ವರನ ಒಡಂಬಡಿಕೆಯ ಮಂಜೂಷದ ಮುಂದೆ ನಿಂತು ದಹನಬಲಿಗಳನ್ನೂ ಶಾಂತಿಸಮಾಧಾನದ ಬಲಿಗಳನ್ನೂ ಸಮರ್ಪಿಸಿ, ತನ್ನ ಎಲ್ಲಾ ಪರಿವಾರದವರಿಗೆ ಔತಣವನ್ನು ಏರ್ಪಡಿಸಿದನು.

ಕೀರ್ತನೆ: 119:57, 72, 76-77, 127-128, 129-130
ಶ್ಲೋಕ:  ನಿನ್ನ ಧರ್ಮಶಾಸ್ತ್ರ ಪ್ರಭೂ, ನನಗೆ ಪರಮಪ್ರಿಯ

ಎರಡನೇ ವಾಚನ: ರೋಮನರಿಗೆ 8:28-30

ದೇವರನ್ನು ಪ್ರೀತಿಸುವವರಿಗೂ ದೇವರ ಸಂಕಲ್ಪದ ಮೇರೆಗೆ ಕರೆಹೊಂದಿದವರಿಗೂ ಸಕಲವೂ ಹಿತಕರವಾಗಿ ಪರಿಣಮಿಸುವುದು.ಇದನ್ನು ನಾವು ಚೆನ್ನಾಗಿ ಅರಿತಿದ್ದೇವೆ.ದೇವರು ಯಾರನ್ನು ತಮ್ಮವರೆಂದು ಮೊದಲೇ ಆರಿಸಿಕೊಂಡರೋಅವರನ್ನು ತಮ್ಮ ಪುತ್ರನ ಅನುರೂಪಿಗಳಾಗುವಂತೆ ಆಗಲೇ ನೇಮಿಸಿದರು. ಹೀಗೆ ಅನೇಕ ಸಹೋದರರಲ್ಲಿ ತಮ್ಮ ಪುತ್ರನೇ ಜೇಷ್ಠನಾಗಿರಬೇಕೆಂಬುದು ದೇವರ ನಿರ್ಧಾರವಾಗಿದೆ. ಹೀಗೆ ಯಾರನ್ನು ಮೊದಲೇ ನೇಮಿಸಿದ್ದರೋ ಅವರನ್ನು ಕರೆದಿದ್ದಾರೆ. ಯಾರನ್ನು ಕರೆದಿದ್ದಾರೋ ಅವರನ್ನು ತಮ್ಮೊಡನೆ ಸತ್ಸಂಬಂಧದಲ್ಲಿ ಇರಿಸಿಕೊಂಡಿದ್ದಾರೆ. ಯಾರನ್ನು ತಮ್ಮೊಡನೆ ಸತ್ಸಂಬಂಧದಲ್ಲಿ ಇರಿಸಿಕೊಂಡಿದ್ದಾರೋ ಅವರನ್ನು ಮಹಿಮಾಪದವಿಗೆ ಸೇರಿಸಿಕೊಂಡಿದ್ದಾರೆ.

ಶುಭಸಂದೇಶ: ಮತ್ತಾಯ 13:44-52

“ಸ್ವರ್ಗಸಾಮ್ರಾಜ್ಯವನ್ನು ಹೊಲದಲ್ಲಿ ಹೂಳಿಟ್ಟ ನಿಧಿಗೆ ಹೋಲಿಸಬಹುದು. ಇದನ್ನು ಒಬ್ಬನು ಪತ್ತೆಹಚ್ಚಿ ಅಲ್ಲಿಯೇ ಮುಚ್ಚಿಡುತ್ತಾನೆ. ತನಗಾದ ಸಂತೋಷದಿಂದ ಹೋಗಿ ತನಗೆ ಇದ್ದುಬದ್ದುದೆಲ್ಲವನ್ನೂ ಮಾರಿ ಈ ಹೊಲವನ್ನೇ ಕೊಂಡುಕೊಂಡುಬಿಡುತ್ತಾನೆ. “ಸ್ವರ್ಗಸಾಮ್ರಾಜ್ಯವನ್ನು ಉತ್ತಮವಾದ ಮುತ್ತುರತ್ನಗಳನ್ನು ಹುಡುಕಿಕೊಂಡು ಹೋಗುವ ವರ್ತಕನಿಗೂ ಹೋಲಿಸಬಹುದು. ಅನರ್ಘ್ಯವಾದ ಒಂದು ಮುತ್ತನ್ನು ಕಂಡ ಕೂಡಲೆ ವರ್ತಕ ತನ್ನ ಆಸ್ತಿಪಾಸ್ತಿಯನ್ನು ಮಾರಿ ಆ ಮುತ್ತನ್ನು ಕೊಂಡುಕೊಳ್ಳುತ್ತಾನೆ. “ಸ್ವರ್ಗಸಾಮ್ರಾಜ್ಯವನ್ನು ಒಂದು ಮೀನು ಬಲೆಗೆ ಹೋಲಿಸಬಹುದು. ಬೆಸ್ತರು ಬಲೆಯನ್ನು ಸಮುದ್ರದಲ್ಲಿ ಬೀಸಿ ಎಲ್ಲಾ ಜಾತಿಯ ಮೀನುಗಳನ್ನು ಹಿಡಿಯುತ್ತಾರೆ. 48ಬಲೆ ತುಂಬಿದ ಮೇಲೆ ಅದನ್ನು ದಡಕ್ಕೆ ಎಳೆದು, ಕುಳಿತುಕೊಂಡು ಒಳ್ಳೆಯ ಮೀನುಗಳನ್ನು ಮಾತ್ರ ಆರಿಸಿಕೊಂಡು ಬುಟ್ಟಿಗೆ ಹಾಕಿಕೊಳ್ಳುತ್ತಾರೆ; ಕೆಟ್ಟವನ್ನು ಎಸೆದುಬಿಡುತ್ತಾರೆ.  ಕಾಲಾಂತ್ಯದಲ್ಲಿ ಇದರಂತೆಯೇ ಆಗುವುದು; ದೇವದೂತರು ಹೊರಟುಬಂದು ದುರ್ಜನರನ್ನು ಸಜ್ಜನರಿಂದ ಬೇರ್ಪಡಿಸುವರು. ದುರ್ಜನರನ್ನು ಅಗ್ನಿಕುಂಡದಲ್ಲಿ ಹಾಕುವರು.  ಅಲ್ಲಿ ಅವರು ಕಟಕಟನೆ ಹಲ್ಲುಕಡಿದುಕೊಂಡು ಗೋಳಾಡುವರು.” “ಇದೆಲ್ಲ ನಿಮಗೆ ಅರ್ಥವಾಯಿತೇ?” ಎಂದು ಯೇಸುಸ್ವಾಮಿ ಕೇಳಿದರು. ಶಿಷ್ಯರು “ಅರ್ಥವಾಯಿತು” ಎಂದರು. ಆಗ ಯೇಸು, “ಇಂತಿರಲು, ಸ್ವರ್ಗಸಾಮ್ರಾಜ್ಯದಲ್ಲಿ ಶಿಷ್ಯನಾಗಿರುವ ಪ್ರತಿಯೊಬ್ಬ ಶಾಸ್ತ್ರಜ್ಞನು ಮನೆಯ ಯಜಮಾನ ಇದ್ದ ಹಾಗೆ. ಅವನು ತನ್ನ ಉಗ್ರಾಣದಿಂದ ಹೊಸ ಹಾಗೂ ಹಳೆಯ ವಸ್ತುಗಳನ್ನು ಹೊರಗೆ ತರುತ್ತಾ ಇರುತ್ತಾನೆ,” ಎಂದರು.