ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

19.08.22 - "ಸಮಸ್ತ ಧರ್ಮಶಾಸ್ತ್ರಕ್ಕೂ ಪ್ರವಾದಿಗಳ ಪ್ರವಚನಕ್ಕೂ ಈ ಎರಡು ಆಜ್ಞೆಗಳೇ ಆಧಾರ,”

 ಮೊದಲನೇ ವಾಚನ: ಪ್ರವಾದಿ ಯೆಜೆಕಿಯೇಲನ ಗ್ರಂಥ 37:1-14

ನಾನು ಸರ್ವೇಶ್ವರನ ಹಸ್ತಸ್ಪರ್ಶದಿಂದ ಪರವಶನಾಗಿದ್ದೆ. ಆಗ ಅವರು ತಮ್ಮ ಆತ್ಮದ ಮೂಲಕ ನನ್ನನ್ನು ಒಯ್ದು, ಎಲುಬುಗಳಿಂದ ತುಂಬಿದ್ದ ಒಂದು ಕಣಿವೆಯಲ್ಲಿ ಇಳಿಸಿದರು. 2ನಾನು ಎಲುಬುಗಳ ಮಧ್ಯೆ ಆ ಕಣಿವೆಯನ್ನು ಬಳಸಿಕೊಂಡು ಬರುವಂತೆ ಮಾಡಿದರು. ಇಗೋ, ಕಣಿವೆಯ ಮೇಲೆಲ್ಲಾ ಬಹಳವಾಗಿ ಒಣಗಿದ ಎಲುಬುಗಳು ಲೆಕ್ಕವಿಲ್ಲದಷ್ಟು ಬಿದ್ದಿದ್ದವು. ಸರ್ವೇಶ್ವರ ನನ್ನನ್ನು - “ನರಪುತ್ರನೇ, ಈ ಎಲುಬುಗಳಿಗೆ ಜೀವ ಬರಬಹುದೇ?” ಎಂದು ಕೇಳಿದರು. ನಾನು “ಸರ್ವೇಶ್ವರರಾದ ದೇವರೇ, ನೀವೇ ಬಲ್ಲಿರಿ,” ಎಂದು ಉತ್ತರಕೊಟ್ಟೆ. ಆಗ ಅವರು ನನಗೆ ಹೀಗೆ ಅಪ್ಪಣೆಮಾಡಿದರು: “ನೀನು ಆ ಎಲುಬುಗಳಿಗೇ ಪ್ರವಾದಿಸಿ ಅವಕ್ಕೆ ಈ ದೈವೋಕ್ತಿಯನ್ನು ನುಡಿ: ಒಣ ಎಲುಬುಗಳೇ, ಸರ್ವೇಶ್ವರನ ವಾಣಿಯನ್ನು ಕೇಳಿ: ಸರ್ವೇಶ್ವರನಾದ ದೇವರು ನಿಮಗೆ ಹೀಗೆ ಹೇಳುತ್ತಾರೆ - ಇಗೋ, ನಾನು ನಿಮ್ಮೊಳಗೆ ಶ್ವಾಸವನ್ನು ಊದುವೆನು; ನೀವು ಬದುಕುವಿರಿ. ನಾನು ನಿಮ್ಮ ಮೇಲೆ ನರಗಳನ್ನು ಹಬ್ಬಿಸಿ, ಮಾಂಸವನ್ನು ಹರಡಿ, ಚರ್ಮವನ್ನು ಹೊದಿಸಿ, ನಿಮ್ಮಲ್ಲಿ ಶ್ವಾಸವನ್ನು ತುಂಬುವೆನು; ಆಗ ನೀವು ಬದುಕಿ ನಾನೇ ಸರ್ವೇಶ್ವರ ಎಂದು ತಿಳಿದುಕೊಳ್ಳುವಿರಿ.” ನನಗೆ ಅಪ್ಪಣೆಯಾದಂತೆ ನಾನು ಈ ದೈವೋಕ್ತಿಯನ್ನು ನುಡಿದೆ. ನಾನು ಮಾತಾಡುತ್ತಿರುವಾಗ ಒಂದು ಶಬ್ದ ಕೇಳಿಸಿತು. ಇಗೋ, ಟಕಟಕ ಎನ್ನುತ್ತಾ ಎಲುಬು ಎಲುಬಿಗೆ, ಜೋಡನೆಯಾದವು. ನಾನು ನೋಡುತ್ತಿರಲು ಏನಾಶ್ಚರ್ಯ! ಅವುಗಳ ಮೇಲೆ ನರಗಳು ಹಬ್ಬಿಕೊಂಡವು, ಮಾಂಸವು ಹರಡಿಕೊಂಡಿತು, ಚರ್ಮವು ಮೇಲುಹೊದಿಕೆಯಾಯಿತು; ಶ್ವಾಸ ಮಾತ್ರ ಇರಲಿಲ್ಲ. ಆಗ ಸರ್ವೇಶ್ವರ ನನಗೆ - “ನರಪುತ್ರನೇ, ನೀನು ಶ್ವಾಸಕ್ಕೆ ನುಡಿ; ಶ್ವಾಸವೇ, ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ನೀನು ಚತುರ್ದಿಕ್ಕುಗಳಿಂದ ಬೀಸಿ ಹತ ಶರೀರಗಳು ಬದುಕುವಂತೆ ಅವುಗಳ ಮೇಲೆ ಸುಳಿ, ಎಂಬುದಾಗಿ ಶ್ವಾಸಕ್ಕೆ ನುಡಿ,” ಎಂದು ಅಪ್ಪಣೆಕೊಟ್ಟರು. ನಾನು ಅವರ ಅಪ್ಪಣೆಯಂತೆ ನುಡಿದೆ. ಇಗೋ, ಶ್ವಾಸವು ಅವುಗಳಲ್ಲಿ ಹೊಕ್ಕಿತು. ಅವು ಬದುಕಿದವು, ಕಾಲೂರಿ ನಿಂತವು, ಅತ್ಯಂತ ದೊಡ್ಡ ಸೈನ್ಯವಾದವು. ಆಮೇಲೆ ಸರ್ವೇಶ್ವರ ನನಗೆ ಹೀಗೆ ಹೇಳಿದರು: “ನರಪುತ್ರನೇ, ಈ ಎಲುಬುಗಳೇ ಇಸ್ರಯೇಲಿನ ಪೂರ್ಣವಂಶ; ಇಗೋ, ಆ ವಂಶೀಯರು, ‘ಅಯ್ಯೋ, ನಮ್ಮ ಎಲುಬುಗಳು ಒಣಗಿಹೋದವು, ನಮ್ಮ ನಿರೀಕ್ಷೆ ಹಾಳಾಯಿತು; ನಾವು ಬುಡನಾಶವಾದೆವು,’ ಎಂದುಕೊಳ್ಳುತ್ತಿದ್ದಾರೆ. ಆದಕಾರಣ ನೀನು ಈ ದೈವೋಕ್ತಿಯನ್ನು ಅವರಿಗೆ ನುಡಿ: ‘ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ನನ್ನ ಜನರೇ, ನೋಡಿ: ನಾನು ನಿಮ್ಮ ಗೋರಿಗಳನ್ನು ತೆರೆದು, ಅವುಗಳೊಳಗಿಂದ ನಿಮ್ಮನ್ನು ಎಬ್ಬಿಸಿ, ಇಸ್ರಯೇಲ್ ನಾಡಿಗೆ ಸೇರಮಾಡುವೆನು. ನನ್ನ ಜನರೇ, ನಾನು ನಿಮ್ಮ ಗೋರಿಗಳನ್ನು ತೆರೆದು, ಅವುಗಳೊಳಗಿಂದ ನಿಮ್ಮನ್ನು ಎಬ್ಬಿಸಿದಾಗ, ನಾನೇ ಸರ್ವೇಶ್ವರ ಎಂದು ನಿಮಗೆ ದೃಢವಾಗುವುದು. ನಾನು ನನ್ನ ಶ್ವಾಸವನ್ನು ನಿಮ್ಮಲ್ಲಿ ಊದಿ, ನಿಮ್ಮನ್ನು ಬದುಕಿಸಿ, ನಿಮ್ಮ ದೇಶದಲ್ಲಿ ನೆಲೆಗೊಳಿಸುವೆನು. ಆಗ ಸರ್ವೇಶ್ವರನಾದ ನಾನೇ ಇದನ್ನು ನುಡಿದು ನಡೆಸಿದ್ದೇನೆ ಎಂದು ತಿಳಿದುಕೊಳ್ಳುವಿರಿ; ಇದು ಸರ್ವೇಶ್ವರನ ಸಂಕಲ್ಪ’.”

ಕೀರ್ತನೆ: 107:2-3, 4-5, 6-7, 8-9

ಶ್ಲೋಕ: ಕೃತಜ್ಞತೆಯಿಂದ ಸಲ್ಲಿಸಿರಿ ಪ್ರಭುವಿಗೆ ಸ್ತುತಿಯನು

ಶುಭಸಂದೇಶ: ಮತ್ತಾಯ 22:34-40


ಯೇಸುಸ್ವಾಮಿ ಸದ್ದುಕಾಯರನ್ನು ಸದ್ದೆತ್ತದಂತೆ ಮಾಡಿದರೆಂಬ ಸಮಾಚಾರ ಫರಿಸಾಯರಿಗೆ ಮುಟ್ಟಿತು. ಅವರು ಒಟ್ಟಾಗಿ ಸ್ವಾಮಿಯ ಬಳಿಗೆ ಬಂದರು. ಅವರಲ್ಲಿ ಒಬ್ಬ ಧರ್ಮೋಪದೇಶಕನು ಯೇಸುವನ್ನು ಪರೀಕ್ಷಿಸುವ ಸಲುವಾಗಿ, ಹೀಗೆಂದು ಪ್ರಶ್ನಿಸಿದನು: “ಬೋಧಕರೇ, ಧರ್ಮಶಾಸ್ತ್ರದಲ್ಲಿ ಪ್ರಮುಖವಾದ ಆಜ್ಞೆ ಯಾವುದು?” ಅದಕ್ಕೆ ಪ್ರತ್ಯುತ್ತರವಾಗಿ ಯೇಸು, “ ‘ನಿನ್ನ ಸರ್ವೇಶ್ವರನಾದ ದೇವರನ್ನು ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಪೂರ್ಣ ಆತ್ಮದಿಂದಲೂ ನಿನ್ನ ಪೂರ್ಣ ಮನಸ್ಸಿನಿಂದಲೂ ಪ್ರೀತಿಸು.’ ಇದೇ ಪ್ರಮುಖ ಹಾಗೂ ಪ್ರಥಮ ಆಜ್ಞೆ. ಇದಕ್ಕೆ ಸರಿಹೊಂದುವ ಎರಡನೇ ಆಜ್ಞೆ ಯಾವುದೆಂದರೆ, ‘ನಿನ್ನನ್ನು ನೀನೇ ಪ್ರೀತಿಸಿಕೊಳ್ಳುವಂತೆ ನಿನ್ನ ನೆರೆಯವನನ್ನೂ ಪ್ರೀತಿಸು.’ ಸಮಸ್ತ ಧರ್ಮಶಾಸ್ತ್ರಕ್ಕೂ ಪ್ರವಾದಿಗಳ ಪ್ರವಚನಕ್ಕೂ ಈ ಎರಡು ಆಜ್ಞೆಗಳೇ ಆಧಾರ,” ಎಂದರು.


No comments:

Post a Comment