0105.2026 - ಇವನು ಆ ಬಡಗಿಯ ಮಗನಲ್ಲವೇ?

ಮೊದಲನೆಯ ವಾಚನ: ಆದಿಕಾಂಡದಿಂದ ಇಂದಿನ ವಾಚನ 1:26-2:3


ದೇವರು, "ನಮ್ಮಂತೆಯೇ ಇರುವ ಹಾಗೂ ನಮ್ಮನ್ನು ಹೋಲುವ ಮನುಷ್ಯರನ್ನು ಉಂಟುಮಾಡೋಣ. ಅವರು ಸಮುದ್ರದಲ್ಲಿರುವ ಮೀನುಗಳ ಮೇಲೆಯೂ ಅಂತರಿಕ್ಷದಲ್ಲಿ ಹಾರಾಡುವ ಪಕ್ಷಿಗಳ ಮೇಲೆಯೂ ದೊಡ್ಡ- ಚಿಕ್ಕ ಸಾಕುಪ್ರಾಣಿ ಹಾಗೂ ಕಾಡು ಮೃಗಗಳ ಮೇಲೆಯೂ ನೆಲದ ಮೇಲೆ ಹರಿದಾಡುವ ಕ್ರಿಮಿಕೀಟಗಳ ಮೇಲೆಯೂ ದೊರೆತನ ಮಾಡಲಿ, "ಎಂದರು. ಹೀಗೆ ದೇವರು: ಸೃಷ್ಟಿಸಿದರು ನರರನ್ನು ತಮ್ಮ ಹೋಲಿಕೆಯಲ್ಲಿ ಸೃಷ್ಟಿಸಿದರವರನ್ನು ದೇವಾನುರೂಪದಲ್ಲಿ ಸೃಷ್ಟಿಸಿದರವರನ್ನು ಸ್ತ್ರೀಪುರುಷರನ್ನಾಗಿ. ಅವರನ್ನು ದೇವರು ಆಶೀರ್ವದಿಸಿ, "ನೀವು ಅಭಿವೃದ್ಧಿಯಾಗಿ, ಅನೇಕ ಮಕ್ಕಳನ್ನು ಪಡೆಯಿರಿ; ಭೂಮಿಯಲ್ಲಿ ಹರಡಿಕೊಂಡು ಅದನ್ನು ವಶಪಡಿಸಿ ಕೊಳ್ಳಿರಿ; ಸಮುದ್ರದ ಮೀನುಗಳ ಮೇಲೆಯೂ ಆಕಾಶದ ಪಕ್ಷಿಗಳ ಮೇಲೆಯೂ ಭೂಮಿಯಲ್ಲಿ ಚಲಿಸುವ ಎಲ್ಲ ಪ್ರಾಣಿಗಳ ಮೇಲೆಯೂ ದೊರೆತನ ಮಾಡಿರಿ. ಇನ್ನೂ ಭೂಮಿಯಲ್ಲಿರುವ ಎಲ್ಲ ತರದ ದವಸ ಧಾನ್ಯಗಳನ್ನೂ ಹಣ್ಣು ಹಂಪಲುಗಳನ್ನೂ ನಿಮಗೆ ಆಹಾರವಾಗಿ ಕೊಟ್ಟಿದ್ದೇನೆ. ಇದಲ್ಲದೆ, ಭೂಮಿಯ ಮೇಲೆ ತಿರುಗಾಡುವ ದೊಡ್ಡ ಚಿಕ್ಕ ಮೃಗಗಳಿಗೂ ಆಕಾಶದಲ್ಲಿ ಹಾರಾಡುವ ಪಕ್ಷಿಗಳಿಗೂ ನೆಲದಲ್ಲಿ ಹರಿದಾಡುವ ಕ್ರಿಮಿಕೀಟಗಳಿಗೂ ಹುಲ್ಲು ಸೊಪ್ಪುಗಳನ್ನು ಆಹಾರವಾಗಿ ಕೊಟ್ಟಿದ್ದೇನೆ " ಎಂದು ಹೇಳಿದರು. ಹಾಗೆಯೇ ಆಯಿತು. ತಾವು ಸೃಷ್ಟಿಸಿದ ಎಲ್ಲವನ್ನು ದೇವರು ನೋಡಿದರು. ಅವೆಲ್ಲವೂ ಬಹಳ ಚೆನ್ನಾಗಿತ್ತು. ಪರಲೋಕ - ಭೂಲೋಕಗಳೂ ಅವುಗಳಲ್ಲಿ ಇರುವ ಸಮಸ್ತವೂ ಹೀಗೆ ನಿರ್ಮಿತವಾದವು. ದೇವರು ತಮ್ಮ ಸೃಷ್ಟಿಕಾರ್ಯವನ್ನು ಮುಗಿಸಿಬಿಟ್ಟು ಏಳನೆಯ ದಿನದಲ್ಲಿ ವಿಶ್ರಮಿಸಿಕೊಂಡರು. ಆ ಏಳನೆಯ ದಿನವು ಪರಿಶುದ್ದವಾಗಿರಲಿ ಎಂದು ಆಶೀರ್ವದಿಸಿದರು. ತಮ್ಮ ಸೃಷ್ಟಿಕಾರ್ಯವನ್ನೆಲ್ಲಾ ಮುಗಿಸಿ, ಆ ದಿನದಂದು ವಿಶ್ರಮಿಸಿಕೊಂಡ ಕಾರಣ ಹಾಗೆ ಮಾಡಿದರು.

ಕೀರ್ತನೆ 90:2,3-4,12-13,14,17
ಶ್ಲೋಕ: ನಾವು ಕೈಗೊಳ್ಳುವ ಕಾರ್ಯಗಳು ಸಫಲವಾಗಲಿ, ಓ ಪ್ರಭೂ!

ಬೆಟ್ಟಗಳು ಹುಟ್ಟುವುದಕ್ಕೆ ಮುಂಚಿನಿಂದ|
ಭೂದೇಶಗಳು ಆಗುವುದಕ್ಕೆ ಮೊದಲಿನಿಂದ|
ನೀನೆಮಗೆ ದೇವರು ಯುಗಯುಗಗಳಿಂದ||

ಇಳೆಯ ಮಾನವರನು ನೀ ಮಣ್ಣುಪಾಲಾಗಿಸುತಿಹೆ|
"ನರಪುತ್ರರೇ, ಮರಳಿ ಮಣ್ಣಿಗೆ ಸೇರಿರಿ" ಎನ್ನುತಿಹೆ||
ನಿನ್ನ ದೃಷ್ಟಿಯಲ್ಲಿ ಪ್ರಭೂ, ಸಹಸ್ರ ವರುಷ|
ಇರುಳಿನೊಂದು ಜಾವ, ಗತಿಸಿಹೋದ ಒಂದು ದಿವಸ||

ಜೀವನಾವಧಿಯನು ಲೆಕ್ಕಿಸುವುದನ್ನು ನಮಗೆ ಕಲಿಸು|
ಈ ಪರಿಜ್ಞಾನವುಳ್ಳಂಥ ಹೃದಯವನು ನೀ ಕರುಣಿಸು||
ಪ್ರಭೂ, ತಿರುಗಿ ಬಾ, ಕೋಪವೆಷ್ಟರ ತನಕ|
ನಿನ್ನ ಸೇವಕರ ಮೇಲಿರಲಿ ಮರುಕ||

ಉದಯದಲೆ ತೋಯಿಸೆಮ್ಮನು ನಿನ್ನ ಕೃಪೆಯಿಂದ|
ಹರ್ಷಿಸಿ ಆನಂದಿಸುವೆವು ಆಗ ದಿನದಾದ್ಯಂತ||
ಪ್ರಕಟವಾಗಲಿ ನಿನ್ನ ರಕ್ಷಾಕಾರ್ಯ ಭಕ್ತರಿಗೆ|
ನಿನ್ನ ಮಹಿಮಾಶಕ್ತಿ ಅವರ ಸಂತಾನಕೆ||

ಘೋಷಣೆ (ಕೀರ್ತನೆ 68:20)
ಅಲ್ಲೆಲೂಯ, ಅಲ್ಲೆಲೂಯ!
ನಮ್ಮ ದೇವರು ಜೀವೋದ್ಧಾರಕ ದೇವರು ಹೌದು | ಸಾವಿಂದ ತಪ್ಪಿಸುವ ಶಕ್ತಿ, ಸ್ವಾಮಿ ದೇವರದು||
ಅಲ್ಲೆಲೂಯ!

ಶುಭಸಂದೇಶ: ಮತ್ತಾಯನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 13:54-58


ಆ ಕಾಲದಲ್ಲಿ ಯೇಸು ತಮ್ಮ ಸ್ವಂತ ಊರಿಗೆ ಮರಳಿ ಬಂದು ಅಲ್ಲಿಯ ಪ್ರಾರ್ಥನಾಮಂದಿರದಲ್ಲಿ ಬೋಧನೆ ಮಾಡಿದರು. ಅದನ್ನು ಕೇಳುತ್ತಿದ್ದ ಜನರು ಆಶ್ಚರ್ಯಚಕಿತರಾಗಿ, "ಈ ಪರಿಜ್ಞಾನ ಇವನಿಗೆಲ್ಲಿಂದ ಬಂತು? ಈ ಮಹತ್ಕಾರ್ಯಗಳನ್ನು ಇವನು ಮಾಡುವುದಾದರೂ ಹೇಗೆ? ಇವನು ಆ ಬಡಗಿಯ ಮಗನಲ್ಲವೇ? ಮರಿಯಳು ಇವನ ತಾಯಲ್ಲವೇ? ಯಕೋಬ, ಜೋಸೆಫ್, ಸಿಮೋನ, ಯೂದ ಇವರು ಇವನ ಸೋದರರಲ್ಲವೇ? ಇವನ ಸೋದರಿಯರೆಲ್ಲಾ ಇಲ್ಲೇ ವಾಸಮಾಡುತ್ತಿಲ್ಲವೇ? ಹಾಗಾದರೆ ಇವನಿಗೆ ಇದೆಲ್ಲಾ ಎಲ್ಲಿಂದ ಬಂತು? " ಎಂದು ಮಾತನಾಡಿಕೊಂಡು ಯೇಸುವನ್ನು ತಿರಸ್ಕರಿಸಿದರು. ಅವರಿಗೆ ಯೇಸು, "ಪ್ರವಾದಿಗೆ ಬೇರೆ ಎಲ್ಲಿಯಾದರೂ ಗೌರವ ದೊರಕೀತು; ಆದರೆ ಸ್ವಗ್ರಾಮದಲ್ಲಿ ಹಾಗೂ ಸ್ವಗೃಹದಲ್ಲಿ ಮಾತ್ರ ದೊರಕದು, "ಎಂದು ಹೇಳಿದರು. ಅವರ ಅವಿಶ್ವಾಸದ ಕಾರಣ ಯೇಸು ಅದ್ಭುತ ಕಾರ್ಯಗಳನ್ನು ಅಲ್ಲಿ ಹೆಚ್ಚಾಗಿ ಮಾಡಲಿಲ್ಲ. 

30.04.2026 - ಲೋಕೋದ್ಧಾರಕ್ಕಾಗಿ ನಾನು ಅರ್ಪಿಸುವ ನನ್ನ ಮಾಂಸವೇ ನಾನು ಕೊಡುವ ರೊಟ್ಟಿ

ಪ್ರೇಷಿತರ ಕಾರ್ಯಕಲಾಪಗಳಿಂದ ಇಂದಿನ ವಾಚನ 13: 13-25


ಪೌಲ ಮತ್ತು ಸಂಗಡಿಗರು ಪಾಫೂಸಿನಿಂದ ನೌಕಾಯಾನ ಮಾಡಿ ಪಾಂಫೀಲಿಯದ ಪೆರ್ಗ ಎಂಬಲ್ಲಿಗೆ ಬಂದರು.  ಮಾರ್ಕನೆನಿಸಿಕೊಂಡ ಯೊವಾನ್ನನು ಅವರನ್ನು ಅಲ್ಲೇ ಬಿಟ್ಟು ಜೆರುಸಲೇಮಿಗೆ ಹಿಂದಿರುಗಿದನು.  ಉಳಿದವರು ಪೆರ್ಗದಿಂದ ಹೊರಟು ಪಿಸಿದಿಯ ಸೀಮೆಗೆ ಸೇರಿದ ಅಂತಿಯೋಕ್ಯಕ್ಕೆ ಬಂದರು.  ಸಬ್ಬತ್ ದಿನದಲ್ಲಿ ಪ್ರಾರ್ಥನಾಮಂದಿರಕ್ಕೆ ಹೋಗಿ ಕುಳಿತುಕೊಂಡರು.  ಧರ್ಮಶಾಸ್ತ್ರ ಮತ್ತು ಪವಾದಿಗಳ ಗ್ರಂಥಗಳಿಂದ ವಾಚನವಾದ ನಂತರ ಪ್ರಾರ್ಥನಾಮಂದಿರದ ಅಧಿಕಾರಿಗಳು ಅವರಿಗೆ, "ಸಹೋದರರೇ, ಜನರಿಗೆ ಉಪಯುಕ್ತವಾದ ಹಿತೋಕ್ತಿ ಏನಾದರೂ ಇದ್ದರೆ ಉಪದೇಶಮಾಡಿ,"  ಎಂದು ಕೇಳಿಕೊಂಡರು.  ಆಗ ಪೌಲನು ಎದ್ದುನಿಂತು ಜನರಿಗೆ ನಿಶ್ಯಬ್ದವಾಗಿರುವಂತೆ ಕೈಸನ್ನೆ ಮಾಡಿ, ಹೀಗೆಂದು ಉಪದೇಶ ಮಾಡಲಾರಂಭಿಸಿದನು:  "ಇಸ್ರಯೇಲ್ ಬಾಂಧವರೇ, ಹಾಗು ನಿಜ ದೇವರಲ್ಲಿ ಭಯಭಕ್ತಿಯುಳ್ಳ ಇನ್ನಿತರರೇ,  ಕೇಳಿ: ಇಸ್ರಯೇಲ್ ಜನರ ದೇವರು ನಮ್ಮ ಪೂರ್ವಜರನ್ನು ಆರಿಸಿಕೊಂಡರು.  ಈಜಿಪ್ಟಿನಲ್ಲಿ ಪರಕೀಯರಾಗಿ ವಾಸಿಸುತ್ತಿದ್ದ ನಮ್ಮ ಜನರನ್ನು ಪ್ರಬಲ ಜನಾಂಗವನ್ನಾಗಿ ಮಾಡಿದರು.  ತಮ್ಮ ಮಹಾಶಕ್ತಿಯನ್ನು ಪ್ರಯೋಗಿಸಿ ಅವರನ್ನು ಈಜಿಪ್ಟಿನಿಂದ ಹೊರಗೆ ತಂದರು.  ಬೆಂಗಾಡಿನಲ್ಲಿ ಸುಮಾರು ನಾಲ್ವತ್ತು ವರ್ಷಗಳ ಕಾಲ ಅವರನ್ನು ಕಾಪಾಡಿದರು.  ಕಾನಾನ್ ನಾಡಿನ ಏಳು ಜನಾಂಗಗಳನ್ನು ನಾಶಮಾಡಿ ನಮ್ಮ ಜನರಿಗೆ ಆ ನಾಡನ್ನು ಸ್ವಾಸ್ಥ್ಯವಾಗಿ ಕೊಟ್ಟರು.  ಹೀಗೆ ಸುಮಾರು ನಾನೂರ ಐವತ್ತು ವರ್ಷಗಳು ಕಳೆದವು.  ಅನಂತರ ಪ್ರವಾದಿ ಸಮುವೇಲನ ಕಾಲದವರೆಗೆ ದೇವರು ಅವರಿಗೆ ನ್ಯಾಯಾಧಿಪತಿಗಳನ್ನು  ಕಳುಹಿಸಿದರು.  ತಮಗೆ ಅರಸನು ಬೇಕೆಂದು ಕೇಳಿಕೊಂಡಾಗ ದೇವರು ಬೆನ್ಯಮೀನ ಗೋತ್ರದ ಕೀಷನ ಮಗ ಸೌಲನನ್ನು ನೇಮಿಸಿದರು.  ಇವನು ನಲ್ವತ್ತು ವರ್ಷ ಆಳಿದನು.  ಅನಂತರ ದೇವರು ಸೌಲನನ್ನು ತ್ಯಜಿಸಿ ದಾವೀದನನ್ನು ಅರಸನನ್ನಾಗಿ ನೇಮಿಸಿದರು. ಇವನ ಬಗ್ಗೆ ದೇವರು, "ಜೆಸ್ಸೆಯನ ಮಗ ದಾವೀದನು ನನಗೆ ಮೆಚ್ಚುಗೆಯಾದ ವ್ಯಕ್ತಿ;  ಇವನು ನನ್ನ ಆಶೆ ಆಕಾಂಕ್ಷೆಗಳನ್ನೆಲ್ಲಾ ಪೂರೈಸುವನು,"  ಎಂದು ತಮ್ಮ ಒಪ್ಪಿಗೆಯನ್ನು ಸೂಚಿಸಿದರು.  ಈ ದಾವೀದನ ಸಂತತಿಯಿಂದಲೇ ದೇವರು ತಮ್ಮ ವಾಗ್ದಾನದ ಪ್ರಕಾರ ಇಸ್ರಯೇಲ್ ಜನರಿಗೆ ಒಬ್ಬ ಉದ್ಧಾರಕನನ್ನು ಕಳುಹಿಸಿದರು.  ಇವರೇ ಯೇಸು.  ಇವರ ಆಗಮನಕ್ಕೆ ಸಿದ್ಧತೆಯಾಗಿ,  ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿ ದೇವರಿಗೆ ಅಭಿಮುಖರಾಗಿ ಸ್ನಾನದೀಕ್ಷೆಯನ್ನು ಪಡೆಯಬೇಕೆಂದು ಯೊವಾನ್ನನು ಇಸ್ರಯೇಲಿನ ಎಲ್ಲ ಜನರಿಗೆ ಸಾರಿದನು.  ಯೊವಾನ್ನನು ತನ್ನ ನಿಯೋಗವನ್ನು ಪೂರೈಸುತ್ತಿದಂತೆ ಜನರಿಗೆ, "ನಾನು ಯಾರೆಂದು ನೀವು ನೆನೆಸುತ್ತೀರಿ?  ನೀವು ಎದುರು ನೋಡುತ್ತಿರುವ ವ್ಯಕ್ತಿ ನಾನಲ್ಲ.  ನನ್ನ ಅನಂತರ ಒಬ್ಬರು ಬರುವರು; ಅವರ ಪಾದರಕ್ಷೆಗಳನ್ನು ಬಿಚ್ಚುವುದಕ್ಕೂ ನಾನು ಯೋಗ್ಯನಲ್ಲ'," ಎಂದನು.

ಕೀರ್ತನೆ:

89: 1-2, 20-21, 24, 26, v. l

ಶ್ಲೋಕ:  ಪ್ರಭೂ, ಕೀರ್ತಿಸುವೆನು ಸದಾ ನಿನ್ನ ಅಚಲ ಪ್ರೀತಿಯನು.


1.  ಪ್ರಭೂ, ಕೀರ್ತಿಸುವೆನು ಸದಾ ನಿನ್ನ ಅಚಲ ಪ್ರೀತಿಯನು|

ಸಾರುವೆನು ತಲೆತಲಾಂತರಕು ನಿನ್ನ ಸತ್ಯತೆಯನು||

ನಿನ್ನಚಲ ಪ್ರೀತಿ ಪ್ರಭೂ, ನನಗೆ ಶಾಶ್ವತ ಸಿದ್ದ|

ನಿನ್ನ ಸತ್ಯತೆ ಆಗಸದಂತೆ ಸ್ಥಿರ ಸ್ಥಾಪಿತ||

ಶ್ಲೋಕ


2.  ನನ್ನ ದಾಸ ದಾವೀದನನು ಗುರುತಿಸಿರುವೆ|

ಪವಿತ್ರ ತೈಲದಿಂದವನನು ಅಭಿಷೇಕಿಸಿರುವೆ||

ನನ್ನ ಕೈಯ ಆಸರೆ ಅವನಿಗಿದೆ ಸತತ|

ನನ್ನ ಭುಜಬಲವು ಅವನಿಗೆ ಶಕ್ತಿಯುತ||

ಶ್ಲೋಕ


3.  ನನ್ನ ಪ್ರೀತಿ ಸತ್ಯತೆಗಳು ಇರುವುದು ಅವನೊಂದಿಗೆ|

ನನ್ನ ನಾಮ ನಿಮಿತ್ತ ಕೋಡು ಮೂಡುವುದವನಿಗೆ||

ನನಗೆ ಪಿತ, ದೈವ, ದುರ್ಗ, ಉದ್ಧಾರಕ ನೀನು|

ಇಂತೆಂದೇ ನನ್ನನ್ನು ಸಂಬೋಧಿಸುವನವನು||

ಶ್ಲೋಕ


ಘೋಷಣೆ

ಅಲ್ಲೆಲೂಯ, ಅಲ್ಲೆಲೂಯ!

ಪ್ರಭು ಕ್ರಿಸ್ತರೇ, ನೀವೇ ನಂಬಲರ್ಹವಾದ ಸಾಕ್ಷಿಯೂ, ಮೃತ್ಯುವಿನಿಂದ ಪುನರುತ್ಥಾನ ಹೊಂದಿದವರಲ್ಲಿ ಪ್ರಪ್ರಥಮರೂ | ನಮ್ಮನ್ನು ಪ್ರೀತಿಸುವವರೂ, ನಿಮ್ಮ ರಕ್ತದಿಂದ ನಮ್ಮ ಪಾಪಗಳನ್ನು ತೊಳೆದವರೂ ಆಗಿದ್ದೀರಿ. 

ಅಲ್ಲೆಲೂಯ!

ಯೊವಾನ್ನನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 13: 16-20



ಆ ಕಾಲದಲ್ಲಿ ಯೇಸು ತಮ್ಮ ಶಿಷ್ಯರಿಗೆ ಹೀಗೆಂದರು:  "ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ;  ಧಣಿಗಿಂತ ದಾಸನು ದೊಡ್ಡವನಲ್ಲ.  ಅಂತೆಯೇ ಕಳುಹಿಸಲಾದವನು ಕಳುಹಿಸುವವನಿಗಿಂತ ಶ್ರೇಷ್ಠನಲ್ಲ.  ಇದನ್ನೆಲ್ಲಾ ಅರ್ಥಮಾಡಿಕೊಂಡು ಅದರಂತೆ ನಡೆದರೆ, ನೀವು ಧನ್ಯರು! ನಾನು ನಿಮ್ಮೆಲ್ಲರನ್ನೂ ಕುರಿತು ಹೀಗೆ ಹೇಳುತ್ತಾ ಇಲ್ಲ.  ಯಾರನ್ನು ನಾನು ಆರಿಸಿಕೊಂಡಿದ್ದೇನೆಂಬುದು ನನಗೆ ಗೊತ್ತು.  ಆದರೆ  "ನನ್ನೊಡನೆ ಉಂಡವನೇ ನನಗೆ ದ್ರೋಹ ಬಗೆದನು" ಎಂಬುದಾಗಿ ಪವಿತ್ರ  ಗ್ರಂಥದಲ್ಲಿ ಬರೆದಿದೆ.  ಆ ಮಾತು ಈಡೇರಬೇಕಾಗಿದೆ.  ಅದು ಈಡೇರುವಾಗ  "ಇರುವಾತನು ನಾನೇ"  ಎಂದು ನೀವು ವಿಶ್ವಾಸಿಸುವಂತೆ ಅದು ಈಡೇರುವುದಕ್ಕೆ ಮುಂಚೆಯೇ ನಿಮಗೆ ಹೇಳುತ್ತಿದ್ದೇನೆ.  ನಾನು ಕಳುಹಿಸಿದಾತನನ್ನು ಬರಮಾಡಿಕೊಳ್ಳುವವನು ನನ್ನನ್ನೇ ಬರಮಾಡಿಕೊಳ್ಳುತ್ತಾನೆ.  ನನ್ನನ್ನು ಬರಮಾಡಿಕೊಳ್ಳುವವನು ನನ್ನನ್ನು ಕಳುಹಿಸಿದಾತನನ್ನೇ ಬರಮಾಡಿಕೊಳ್ಳುತ್ತಾನೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ."

29.04.2026 - ನನ್ನಲ್ಲಿ ವಿಶ್ವಾಸವಿಡುವವನು ನನ್ನಲ್ಲಿ ಅಲ್ಲ, ನನ್ನನ್ನು ಕಳುಹಿಸಿದಾತನಲ್ಲೇ ವಿಶ್ವಾಸವಿಡುತ್ತಾನೆ.

 ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 12:24--13:5


ದೇವರ ಶುಭಸಂದೇಶವಾದರೋ ಹಬ್ಬಿ ಹರಡತೊಡಗಿತು. ಬಾರ್ನಬ ಮತ್ತು ಸೌಲನು ತಮ್ಮ ಧರ್ಮಕಾರ್ಯವನ್ನು ಮುಗಿಸಿಕೊಂಡು ಮಾರ್ಕ ಎಂದು ಹೆಸರುಗೊಂಡ ಯೊವಾನ್ನನೊಂದಿಗೆ ಜೆರುಸಲೇಮಿನಿಂದ ಹಿಂದಿರುಗಿದರು. ಅಂತಿಯೋಕ್ಯದ ಧರ್ಮಸಭೆಯಲ್ಲಿ ಕೆಲವು ಪ್ರವಾದಿಗಳೂ ಬೋಧಕರೂ ಇದ್ದರು. ಅವರಾರೆಂದರೆ: ಬಾರ್ನಬ, ಕಾಳನೆಂದು ಕರೆಯಲಾದ ಸಿಮೆಯೋನ್, ಸಿರೇನಿನ ಲೂಸಿಯಸ್, ಸಾಮಂತ ಹೆರೋದನ ಬಾಲ್ಯಸ್ನೇಹಿತ ಮೆನಹೇನ ಮತ್ತು ಸೌಲ ಒಂದು ದಿನ ಅವರು ದೇವಾರಾಧನೆಯಲ್ಲೂ ಉಪವಾಸ ವ್ರತದಲ್ಲೂ ನಿರತರಾಗಿದ್ದಾಗ ಪವಿತ್ರಾತ್ಮ, “ಬಾರ್ನಬ ಮತ್ತು ಸೌಲರನ್ನು ನಾನು ಯಾವ ಕಾರ್ಯಕ್ಕಾಗಿ ಕರೆದಿದ್ದೇನೋ ಆ ಕಾರ್ಯಕ್ಕಾಗಿ ವಿೂಸಲಾಗಿಡಿ,” ಎಂದರು. ಅಂತೆಯೇ ಅವರು ಉಪವಾಸವಿದ್ದು, ಪ್ರಾರ್ಥನೆ ಮಾಡಿ, ಇವರಿಬ್ಬರ ಮೇಲೆ ಹಸ್ತನಿಕ್ಷೇಪಮಾಡಿ ಕಳುಹಿಸಿಕೊಟ್ಟರು. ಸೈಪ್ರಸ್ ದ್ವೀಪದಲ್ಲಿ ಧರ್ಮಪ್ರಚಾರ ಹೀಗೆ ಪವಿತ್ರಾತ್ಮ ಅವರೇ ಕಳುಹಿಸಿದ ಬಾರ್ನಬ ಮತ್ತು ಸೌಲ ಸೆಲೂಸಿಯಾಕ್ಕೆ ಹೋದರು. ಅಲ್ಲಿಂದ ಸೈಪ್ರಸ್ ದ್ವೀಪಕ್ಕೆ ನೌಕಾಯಾನ ಮಾಡಿದರು. ಅವರು ಸಲವಿೂಸ್ ಎಂಬ ಸ್ಥಳಕ್ಕೆ ಬಂದಾಗ ಯೆಹೂದ್ಯರ ಪ್ರಾರ್ಥನಾ ಮಂದಿರಗಳಿಗೆ ಹೋಗಿ ಶುಭಸಂದೇಶವನ್ನು ಸಾರಿದರು. ಮಾರ್ಕನೆನಿಸಿಕೊಂಡ ಯೊವಾನ್ನ ಅವರ ಸಂಗಡವಿದ್ದು ಅವರಿಗೆ ನೆರವಾಗುತ್ತಿದ್ದನು.

ಕೀರ್ತನೆ: 67:2-3, 5, 6, 8
ಶ್ಲೋಕ: ನಿನ್ನ ಕೀರ್ತಿಸಲಿ ದೇವಾ, ಜನರು, ಸಂಕೀರ್ತಿಸಲಿ ಅವರೆಲ್ಲರೂ

ಪ್ರಸಿದ್ಧವಾಗಲಿ ನಿನ್ನ ಸನ್ಮಾರ್ಗ ಜಗದೊಳೆಲ್ಲಾ /
ಜೀವೋದ್ಧಾರಗೊಳಿಸುವ ನಿನ್ನ ಶಕ್ತಿ ಜನತಿಗೆಲ್ಲ //
ನಿನ್ನ ಕೀರ್ತಿಸಲಿ ದೇವಾಜನರು /ಸಂಕೀರ್ತಿಸಲಿ ಅವರೆಲ್ಲರೂ //

ನಿನ್ನ ಕೀರ್ತಿಸಲಿ ದೇವಾಜನರು / 
ಸಂಕೀರ್ತಿಸಲಿ ಅವರೆಲ್ಲರೂ //

ಇತ್ತನೆಮ್ಮ ದೇವನು ಆಶೀರ್ವಾದವನು /
ಕೊಟ್ಟಿತೆಮ್ಮ ಭೂಮಿಯು ಸಂತುಷ್ಟ ಬೆಳೆಯನು //

ಶುಭ ಸಂದೇಶ : ಯೊವಾನ್ನ 12:44-50

ಯೇಸು ಸ್ವಾಮಿ ಗಟ್ಟಿಯಾಗಿ ಕೂಗಿ ಇಂತೆಂದರು : “ನನ್ನಲ್ಲಿ ವಿಶ್ವಾಸವಿಡುವವನು ನನ್ನಲ್ಲಿ ಅಲ್ಲ, ನನ್ನನ್ನು ಕಳುಹಿಸಿದಾತನಲ್ಲೇ ವಿಶ್ವಾಸವಿಡುತ್ತಾನೆ. ನನ್ನನ್ನು ಕಾಣುವವನು ನನ್ನನ್ನು ಕಳುಹಿಸಿದಾತನನ್ನೇ ಕಾಣುತ್ತಾನೆ. ನನ್ನಲ್ಲಿ ವಿಶ್ವಾಸವಿಡುವವನು ಅಂಧಕಾರದಲ್ಲಿ ಉಳಿಯಬಾರದೆಂದು ನಾನೇ ಜಗಜ್ಯೋತಿಯಾಗಿ ಬಂದಿದ್ದೇನೆ. ಯಾವನಾದರೂ ನನ್ನ ಮಾತನ್ನು ಕೇಳಿಯೂ ಅದರಂತೆ ನಡೆಯದೆಹೋದರೆ ಅಂಥವನಿಗೆ ತೀರ್ಪುಕೊಡುವವನು ನಾನಲ್ಲ. ನಾನು ಬಂದುದು ಲೋಕದ ಉದ್ಧಾರಕ್ಕಾಗಿ, ತೀರ್ಪುಕೊಡುವುದಕ್ಕಾಗಿ ಅಲ್ಲ. ನನ್ನನ್ನು ನಿರಾಕರಿಸಿ ನನ್ನ ಮಾತುಗಳನ್ನು ಅಂಗೀಕರಿಸದೆ ಹೋದವನಿಗೆ ತೀರ್ಪುಕೊಡುವಂಥದ್ದು ಒಂದು ಇದೆ. ಅದು ಯಾವುದೆಂದರೆ ನಾನು ಆಡಿದ ಮಾತೇ. ಅಂತಿಮ ದಿನದಂದು ಅದೇ ಅವನಿಗೆ ತೀರ್ಪುಕೊಡುವುದು. ಏಕೆಂದರೆ, ನನ್ನಷ್ಟಕ್ಕೆ ನಾನೇ ಇದನ್ನೆಲ್ಲಾ ಮಾತನಾಡುತ್ತಿಲ್ಲ. ನನ್ನನ್ನು ಕಳುಹಿಸಿದ ಪಿತನೇ, ನಾನು ಏನು ಹೇಳಬೇಕು, ಯಾವ ಮಾತನ್ನು ಆಡಬೇಕು ಎಂದು ನನಗೆ ಆಜ್ಞೆಮಾಡಿದ್ದಾರೆ. ಅವರ ಆಜ್ಞೆಯೇ ನಿತ್ಯಜೀವದಾಯಕ ಎಂದು ನಾನು ಬಲ್ಲೆ. ಆದ್ದರಿಂದಲೇ ಪಿತನು ಹೇಳಿದಂತೆಯೇ ನಾನು ಮಾತನಾಡುತ್ತೇನೆ.”

28.04.2026 - "ನಿಮಗೆ ಸತ್ಯವಾಗಿ ಹೇಳುತ್ತೇನೆ ; ಸ್ವರ್ಗದಿಂದ ನಿಮಗೆ ರೊಟ್ಟಿಯನ್ನು ಕೊಟ್ಟವನು ಮೋಶೆಯಲ್ಲ

 ಮೊದಲನೇ ವಾಚನ: ಪ್ರೇಷಿತರಕಾರ್ಯಕಲಾಪಗಳು 11:19-26


ಸ್ತೇಫನನು ಕೊಲೆಯಾದ ಮೊದಲ್ಗೊಂಡು ಉಂಟಾದ ಹಿಂಸಾಚಾರದ ನಿಮಿತ್ತ ಭಕ್ತಾದಿಗಳು ಚದರಿಹೋದರು. ಅವರಲ್ಲಿ ಕೆಲವರು ಫೆನಿಷ್ಯ, ಸೈಪ್ರಸ್, ಅಂತಿಯೋಕ್ಯದವರೆಗೂ ಹೋಗಿ ಶುಭಸಂದೇಶವನ್ನು ಸಾರಿದರು. ಆದರೆ ಇದನ್ನು ಸಾರಿದ್ದು ಯೆಹೂದ್ಯರಿಗೆ ಮಾತ್ರ. ಸೈಪ್ರಸ್ ಮತ್ತು ಸಿರೇನಿನ ಕೆಲವು ಭಕ್ತರಾದರೋ ಅಂತಿಯೋಕ್ಯಕ್ಕೆ ಹೋಗಿ ಪ್ರಭು ಯೇಸುವಿನ ಶುಭಸಂದೇಶವನ್ನು ಗ್ರೀಕರಿಗೂ ಸಾರಿದರು. ಪ್ರಭುವಿನ ಶಕ್ತಿ ಅವರೊಡನೆ ಇತ್ತು. ಜನರು ಬಹುಸಂಖ್ಯೆಯಲ್ಲಿ ಪ್ರಭುವಿನಲ್ಲಿ ವಿಶ್ವಾಸವಿಟ್ಟು ಅವರ ಭಕ್ತರಾದರು. ಈ ಸಮಾಚಾರ ಜೆರುಸಲೇಮಿನ ಧರ್ಮಸಭೆಗೆ ತಲುಪಿತು. ಬಾರ್ನಬನನ್ನು ಅಂತಿಯೋಕ್ಯಕ್ಕೆ ಅವರು ಕಳುಹಿಸಿದರು. ಬಾರ್ನಬನು ಅಲ್ಲಿಗೆ ಬಂದು ದೇವರ ಕೃಪಾಕಾರ್ಯವನ್ನು ಕಂಡು ಸಂತೋಷಪಟ್ಟನು. ಪ್ರಭುವಿಗೆ ದೃಢಮನಸ್ಸಿನಿಂದ ಪ್ರಾಮಾಣಿಕರಾಗಿರುವಂತೆ ಪ್ರೋತ್ಸಾಹಿಸಿದನು. ಬಾರ್ನಬನು ಸತ್ಪುರುಷನು, ಪವಿತ್ರಾತ್ಮಭರಿತನು ಹಾಗೂ ಅಗಾಧ ವಿಶ್ವಾಸವುಳ್ಳವನು. ಅನೇಕ ಜನರು ಪ್ರಭುವಿನ ಅನುಯಾಯಿಗಳಾದರು. ಅನಂತರ ಬಾರ್ನಬನು ಸೌಲನನ್ನು ಹುಡುಕಿಕೊಂಡು ತಾರ್ಸಕ್ಕೆ ಹೋದನು.  ಅವನನ್ನು ಅಲ್ಲಿ ಕಂಡು ಅಂತಿಯೋಕ್ಯಕ್ಕೆ ಕರೆದುಕೊಂಡು ಬಂದನು. ಅವರಿಬ್ಬರೂ ಬಂದು ವರ್ಷವಿಡೀ ಧರ್ಮಸಭೆಯೊಂದಿಗೆ ಇದ್ದು ಬಹುಜನರಿಗೆ ಉಪದೇಶ ಮಾಡಿದರು. ಭಕ್ತಾದಿಗಳನ್ನು ಮೊದಲಬಾರಿಗೆ ‘ಕ್ರೈಸ್ತರು’ ಎಂದು ಕರೆದದ್ದು - ಅಂತಿಯೋಕ್ಯದಲ್ಲೇ.

ಕೀರ್ತನೆ: 87:1-3, 4-5, 6-7
ಶ್ಲೋಕ: ಸ್ತುತಿಮಾಡಿ ಪ್ರಭುವನು ಸಮಸ್ತ ರಾಷ್ಟ್ರಗಳೇ

ಪವಿತ್ರ ಪರ್ವತದಲಿ ಕರ್ತನು I
ಸ್ಥಾಪಿಸಿಹನು ತನ್ನ ನಗರವನು II
ಯಕೋಬ ವಂಶದ ಸಕಲ ನಿವಾಸಿಗಳಿಗಿಂತ I
ಸಿಯೋನ್ ದ್ವಾರಗಳು ಆತನಿಗೆ ಸುಪ್ರೀತ II
ದೈವ ಶ್ರೀನಗರವೇಕೇಳು ಇವನ್ನು I
ನಿನ್ನ ಕುರಿತ ಅತಿಶಯೋಕ್ತಿಗಳನು : II

ನನಗೆ ಮಣಿಯುವ ರಾಷ್ಟ್ರಗಳಲಿ I
ಈಜಿಪ್ಟ್ಬಾಬೆಲ್ ದೇಶಗಳನು ಲೆಕ್ಕಿಸುವೆ II
ಜೆರುಸಲೇಮಿನ ನಿವಾಸಿಗಳಲಿ I
ಪಿಲಿಷ್ಟಿಯಟೈರ್ಎಥಿಯೋಪಿಯ ಜನ ಸೇರಿವೆ II
ಸಕಲ ಜನಾಂಗಗಳ ಜನನಿ ಸಿಯೋನ್ ನಗರವೇ I
ಅದನು ಸ್ಥಾಪಿಸಿದವ ಪರಾತ್ಪರ ಪ್ರಭುವೇ” II

ಪ್ರಭು ಪಟ್ಟಿಮಾಡುವಾಗ ಸಕಲ ಜಾತಿಜನಾಂಗಗಳನು I
ನಿನ್ನ ಜನಾಂಗವೆಂದೇ ಪರಿಗಣಿಸುವನು ಪ್ರತಿಯೊಂದನು II
ಗಾಯಕ ನರ್ತಕರೂ ಹಾಡುವರೀ ಹಾಡ I

ನಮ್ಮೆಲ್ಲರ ಜೀವದೊರೆತೆ ನೀನೇ ನೋಡ” II

ಯೊವಾನ್ನ 10:22-30


ಅದು ಚಳಿಗಾಲವಾಗಿತ್ತು. ಜೆರುಸಲೇಮಿನಲ್ಲಿ ಮಹಾದೇವಾಲಯದ ಪ್ರತಿಷ್ಠಾಪನೆಯ ಹಬ್ಬಾಚರಣೆ ನಡೆಯುತ್ತಿತ್ತು. ಯೇಸು ಸ್ವಾಮಿ ಆ ದೇವಾಲಯದ ಆವರಣದಲ್ಲಿದ್ದ ಸೊಲೊಮೋನನ ಮಂಟಪದಲ್ಲಿ ತಿರುಗಾಡುತ್ತಿದ್ದರು. ಯೆಹೂದ್ಯರು ಅವರನ್ನು ಸುತ್ತುವರಿದು, “ಇನ್ನೆಷ್ಟುಕಾಲ ನಮ್ಮನ್ನು ಸಂಶಯದಲ್ಲಿರಿಸುವೆ?ನೀನೇ ಅಭಿಷಿಕ್ತನಾದ ಲೋಕೋದ್ಧಾರಕ ಆಗಿದ್ದರೆ ನಮಗೆ ಸ್ಪಷ್ಟವಾಗಿ ಹೇಳು,” ಎಂದರು. ಯೇಸು ಪ್ರತ್ಯುತ್ತರವಾಗಿ, “ನಾನು ನಿಮಗೆ ಹೇಳಿಯಾಯಿತು. ಆದರೂ ನೀವು ನಂಬುತ್ತಿಲ್ಲ. ನನ್ನ ಪಿತನ ಹೆಸರಿನಲ್ಲಿ ನಾನು ಮಾಡುವ ಕಾರ್ಯಗಳೇ ನನ್ನ ಪರವಾಗಿ ಸಾಕ್ಷಿಕೊಡುತ್ತವೆ. ಆದರೂ ನಿಮಗೆ ನಂಬಿಕೆಯೆಂಬುದಿಲ್ಲ. ಕಾರಣ, ನೀವು ನನ್ನ ಕುರಿಗಳಲ್ಲ. ನನ್ನ ಕುರಿಗಳಾದರೋ ನನ್ನ ಸ್ವರವನ್ನು ಗುರುತಿಸುತ್ತವೆ. ನಾನು ಅವನ್ನು ಬಲ್ಲೆನು. ಅವು ನನ್ನನ್ನು ಹಿಂಬಾಲಿಸುತ್ತವೆ. ನಾನು ಅವುಗಳಿಗೆ ನಿತ್ಯಜೀವವನ್ನು ಕೊಡುತ್ತೇನೆ. ಅವು ಎಂದಿಗೂ ನಾಶ ಆಗುವುದಿಲ್ಲ. ನನ್ನ ಕೈಯಿಂದ ಅವನ್ನು ಯಾರೂ ಕಸಿದುಕೊಳ್ಳಲಾರರು, ಅವನ್ನು ನನಗೆ ಕೊಟ್ಟ ಪಿತ ಸರ್ವಶ್ರೇಷ್ಠರು. ಪಿತನ ಕೈಯಿಂದ ಅವನ್ನು ಯಾರೂ ಕಸಿದುಕೊಳ್ಳಲಾರರು. ನಾನೂ ಪಿತನೂ ಒಂದೇ ಆಗಿದ್ದೇವೆ,” ಎಂದರು.

27.04.2026 - ನಾನೇ ಬಾಗಿಲು, ನನ್ನ ಮೂಲಕ ಒಳಹೋಗುವವನು ಸುರಕ್ಷಿತನಾಗಿರುತ್ತಾನೆ

ಮೊದಲನೇ ವಾಚನ: ಪ್ರೇಷಿತರಕಾರ್ಯಕಲಾಪಗಳು 11:1-18


ಅನ್ಯಧರ್ಮದವರೂ ಸಹ ದೈವವಾಕ್ಯವನ್ನು ಸ್ವೀಕರಿಸಿದರೆಂಬ ಸುದ್ದಿ ಜುದೇಯದಲ್ಲಿದ್ದ ಪ್ರೇಷಿತರಿಗೂ ವಿಶ್ವಾಸಿಗಳಿಗೂ ಮುಟ್ಟಿತು. ಪೇತ್ರನು ಜೆರುಸಲೇಮಿಗೆ ಹೋದಾಗ ಅನ್ಯಧರ್ಮದವರಿಗೆ ಸುನ್ನತಿಯಾಗಬೇಕು ಎನ್ನುತ್ತಿದ್ದ ಪಂಗಡದವರು ಮುಂದೆ ಬಂದು, “ನೀನು ಸುನ್ನತಿಯಿಲ್ಲದ ಅನ್ಯಧರ್ಮದವರ ಮನೆಗೆ ಭೇಟಿಕೊಟ್ಟು ಅವರೊಡನೆ ಊಟ ಮಾಡಿದ್ದೇಕೆ?” ಎಂದು ಆಕ್ಷೇಪಿಸಿದರು. ಅದಕ್ಕೆ ಪೇತ್ರನು ನಡೆದ ವೃತ್ತಾಂತವನ್ನು ಆಮೂಲಾಗ್ರವಾಗಿ ಅವರಿಗೆ ವಿವರಿಸಿದನು: “ಜೊಪ್ಪ ಪಟ್ಟಣದಲ್ಲಿ ನಾನು ಧ್ಯಾನಪರವಶನಾಗಿದ್ದಾಗ ದರ್ಶನವೊಂದನ್ನು ಕಂಡೆ. ಸ್ವರ್ಗದಿಂದ ದೊಡ್ಡ ದುಪ್ಪಟಿಯಂಥ ವಸ್ತು ಒಂದು ಕೆಳಕ್ಕೆ ಇಳಿಯಿತು. ಅದರ ನಾಲ್ಕು ಮೂಲೆಗಳನ್ನು ಹಿಡಿದು ಕೆಳಕ್ಕೆ ಇಳಿಬಿಡಲಾಗಿತ್ತು. ಅದು ಬಂದು ನನ್ನ ಪಕ್ಕದಲ್ಲೇ ನಿಂತಿತು. ಅದನ್ನು ಗಮನಿಸಿ ನೋಡಿದಾಗ ಅದರಲ್ಲಿ ಪ್ರಾಣಿಗಳೂ ಕಾಡುಮೃಗಗಳೂ ಹರಿದಾಡುವ ಕ್ರಿಮಿಕೀಟಗಳೂ ಹಾರಾಡುವ ಪಕ್ಷಿಗಳೂ ಕಂಡುಬಂದವು. ಆಗ, ‘ಪೇತ್ರ, ಏಳು, ಕೊಯ್ದು ತಿನ್ನು’ ಎಂಬ ವಾಣಿ ನನಗೆ ಕೇಳಿಸಿತು. ಅದಕ್ಕೆ ನಾನು, ‘ಬೇಡವೇ ಬೇಡ ಸ್ವಾಮಿ, ಅಶುದ್ಧ ಹಾಗು ಅಸ್ಪೃಶ್ಯವಾದುದು ಯಾವುದೂ ನನ್ನ ಬಾಯನ್ನು ಎಂದೂ ಹೊಕ್ಕಿಲ್ಲ,’ ಎಂದೆ. ಮತ್ತೊಮ್ಮೆ ಆ ವಾಣಿ ಸ್ವರ್ಗಲೋಕದಿಂದ, ‘ದೇವರೇ ಶುದ್ಧಿಕರಿಸಿರುವ ಏನನ್ನೂ ನೀನು ಅಶುದ್ಧವೆನ್ನಬೇಡ,’ ಎಂದು ಉತ್ತರಿಸಿತು. ಹೀಗೆ ಮೂರು ಬಾರಿ ನಡೆದ ಮೇಲೆ, ಅವೆಲ್ಲವನ್ನೂ ಒಟ್ಟಿಗೆ ಸ್ವರ್ಗಕ್ಕೆ ಮರಳಿ ಎಳೆದುಕೊಳ್ಳಲಾಯಿತು. ಅದೇ ಸಮಯಕ್ಕೆ ಸರಿಯಾಗಿ, ಸೆಜರೇಯದಿಂದ ಕಳುಹಿಸಲಾದ ಮೂರು ಮಂದಿ ನನ್ನನ್ನು ಹುಡುಕಿಕೊಂಡು, ನಾನು ತಂಗಿದ್ದ ಮನೆಗೆ ಬಂದರು. ನಾನು ಸಂಕೋಚ ಪಡದೆ ಅವರೊಡನೆ ಹೋಗಬೇಕೆಂದು ಪವಿತ್ರಾತ್ಮ ತಿಳಿಸಿದರು. ಜೊಪ್ಪದ ಈ ಆರು ಮಂದಿ ಭಕ್ತರೂ ನನ್ನೊಡನೆ ಸೆಜರೇಯಕ್ಕೆ ಬಂದರು. ನಾವೆಲ್ಲರೂ ಕೊರ್ನೇಲಿಯನ ಮನೆಯನ್ನು ಪ್ರವೇಶಿಸಿದೆವು. ಅವನು, “ನನ್ನ ಮನೆಯಲ್ಲೇ ದೂತನೊಬ್ಬನು ಕಾಣಿಸಿಕೊಂಡು, ‘ಈಗಲೇ ಯಾರನ್ನಾದರೂ ಜೊಪ್ಪಕ್ಕೆ ಕಳುಹಿಸಿ ಪೇತ್ರ ಎಂದು ಕರೆಯಲಾಗುವ ಸಿಮೋನನನ್ನು ಬರಹೇಳು. ಅವನು ನೀನೂ ನಿನ್ನ ಕುಟುಂಬದವರೆಲ್ಲರೂ ಪಡೆಯಬಹುದಾದಂಥ ಜೀವೋದ್ಧಾರದ ಸಂದೇಶವನ್ನು ನೀಡುವನು,’ ಎಂದು ತಿಳಿಸಿದನು” ಎಂದು ನಮಗೆ ಹೇಳಿದನು. ನಾನು ಉಪದೇಶ ಮಾಡಲು ಪ್ರಾರಂಭಿಸಿದ ಕೂಡಲೇ ನಮ್ಮ ಮೇಲೆ ಇಳಿದಂತೆ ಅವರ ಮೇಲೂ ಪವಿತ್ರಾತ್ಮ ಇಳಿದು ಬಂದರು. ಆಗ ನನಗೆ, ‘ಯೊವಾನ್ನನು ನೀರಿನಿಂದ ಸ್ನಾನದೀಕ್ಷೆಯನ್ನು ಕೊಟ್ಟನು. ನೀವಾದರೋ ಪವಿತ್ರಾತ್ಮ ಅವರಿಂದ ದೀಕ್ಷಾಸ್ನಾನವನ್ನು ಪಡೆಯುವಿರಿ,’ ಎಂಬ ಪ್ರಭುವಿನ ಮಾತುಗಳು ನೆನಪಿಗೆ ಬಂದವು. ನಾನುಪ್ರಭು ಯೇಸುಕ್ರಿಸ್ತರನ್ನು ವಿಶ್ವಾಸಿಸಿದಾಗ ನಮಗೆ ಕೊಟ್ಟ ವರವನ್ನೇ ದೇವರು ಆ ಅನ್ಯ ಧರ್ಮದವರಿಗೂ ಕೊಟ್ಟಿರುವರು. ಹೀಗಿರುವಲ್ಲಿ ದೇವರನ್ನು ತಡೆಗಟ್ಟಲು ನಾನಾರು?” ಎಂದನು. ಈ ಮಾತುಗಳನ್ನು ಕೇಳಿದ ಮೇಲೆ ಅವರು ತಮ್ಮ ಆಕ್ಷೇಪಣೆಯನ್ನು ನಿಲ್ಲಿಸಿದರು, ಮಾತ್ರವಲ್ಲ, ‘ಅನ್ಯ ಧರ್ಮದವರೂ ಪಶ್ಚಾತ್ತಾಪಪಟ್ಟು ನವ ಜೀವ ಪಡೆಯುವ ಸದವಕಾಶವನ್ನು ದೇವರು ದಯಪಾಲಿಸಿದ್ದಾರಲ್ಲಾ!’ ಎಂದು ದೈವ ಸ್ತುತಿ ಮಾಡಿದರು.

ಕೀರ್ತನೆ: 42:2-3; 43:3-4
ಶ್ಲೋಕ: ಜೀವಂತ ದೇವನಿಗಾಗಿ ದಾಹದಿಂದಿದೆ ಎನ್ನ ಮನ,
ನಾ ತೆರಳಿ ಪಡೆವುದೆಂತು ಆ ದೇವನ ಮುಖದರ್ಶನ

ಜೀವಂತ ದೇವನಿಗಾಗಿ ದಾಹದಿಂದಿದೆ ಎನ್ನ ಮನ /
ನಾ ತೆರಳಿ ಪಡೆವುದೆಂತು ಆ ದೇವನ ಮುಖದರ್ಶನ? //
“ಎಲ್ಲಿನಿನ್ನ ದೇವನೆಲ್ಲಿ?” ಎಂದು ಜನ  ಜರೆಯುತಿರಲು /
ಕಂಬನಿಯೆ ನನಗನ್ನಪಾನವಾಗಿಹುದು  ಹಗಲಿರುಳು //

ಕಳುಹಿಸು ನಿನ್ನ ಜ್ಯೋತಿಯನು
ನಿನ್ನ ಸತ್ಯವನ್ನು ನನ್ನ ನಡೆಸಲಿಕೆ /
ಸೇರಿಸಲೆನ್ನನು ನಿನ್ನ ಪವಿತ್ರ ಪರ್ವತಕೆ
ನಿನ್ನಯ ನಿವಾಸಕೆ //
ಬರುವೆನಾಗ ನಿನ್ನ ಬಲಿಪೀಠದ ಬಳಿಗೆ /
ನನ್ನಾನಂದ ನಿಧಿಯಾದ ನಿನ್ನ ಸನ್ನಿಧಿಗೆ /
ವೀಣೆ ನುಡಿಸಿ ದೇವಾನಿನ್ನ ಸ್ತುತಿಸಲಿಕೆ //

ಯೊವಾನ್ನ 10:1-10


ಆ ಕಾಲದಲ್ಲಿ ಯೇಸು ತಮ್ಮ ಶಿಷ್ಯರಿಗೆ ಹೀಗೆಂದರು: “ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ಕುರಿಹಟ್ಟಿಗೆ ಬಾಗಿಲ ಮೂಲಕ ಬರದೆ ಗೋಡೆ ಹತ್ತಿ ಬರುವವನು ಕಳ್ಳ ಹಾಗೂ ಕೊಳ್ಳೆಗಾರ. ಬಾಗಿಲ ಮೂಲಕ ಬರುವವನು ಕುರಿಗಾಹಿ. ಕಾವಲುಗಾರನು ಅವನಿಗೆ ಬಾಗಿಲು ತೆರೆಯುತ್ತಾನೆ. ಕುರಿಗಳು ಅವನ ಸ್ವರವನ್ನು ಕೇಳುತ್ತವೆ. ಅವನು ತನ್ನ ಕುರಿಗಳನ್ನು ಹೆಸರಿಟ್ಟು ಕರೆದು ಹೊರಗೆ ಬಿಡುತ್ತಾನೆ. ತನ್ನ ಕುರಿಗಳನ್ನೆಲ್ಲಾ ಹೊರಗೆ ಬಿಟ್ಟ ನಂತರ ಅವನು ಅವುಗಳ ಮುಂದೆ ಹೋಗುತ್ತಾನೆ. ಕುರಿಗಳು ಅವನ ಹಿಂದೆ ಹೋಗುತ್ತವೆ. ಏಕೆಂದರೆ ಅವುಗಳಿಗೆ ಅವನ ಸ್ವರ ಗೊತ್ತು. ಅಪರಿಚಿತನನ್ನು ಅವು ಹಿಂಬಾಲಿಸುವುದಿಲ್ಲ; ಅವನಿಂದ ದೂರ ಓಡಿಹೋಗುತ್ತವೆ. ಅಪರಿಚಿತರ ಸ್ವರವನ್ನು ಅವು ಗುರುತಿಸುವುದಿಲ್ಲ.” ಯೇಸುಸ್ವಾಮಿ ಹೇಳಿದ ಈ ಸಾಮತಿಯನ್ನು ಕೇಳಿದವರು ಅರ್ಥಮಾಡಿಕೊಳ್ಳಲಿಲ್ಲ. ಆದುದರಿಂದ ಯೇಸುಸ್ವಾಮಿ, “ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ಕುರಿಗಳಿಗೆ ನಾನೇ ಬಾಗಿಲು. ನನಗಿಂತ ಮೊದಲು ಬಂದವರೆಲ್ಲರು ಕಳ್ಳರು ಹಾಗೂ ಕೊಳ್ಳೆಗಾರರು, ಕುರಿಗಳು ಅವರಿಗೆ ಕಿವಿಗೊಡಲಿಲ್ಲ. ಹೌದು, ನಾನೇ ಬಾಗಿಲು, ನನ್ನ ಮೂಲಕ ಒಳಹೋಗುವವನು ಸುರಕ್ಷಿತನಾಗಿರುತ್ತಾನೆ. ಅವನು ಒಳಗೆ ಹೋಗುತ್ತಾನೆ, ಹೊರಗೆ ಬರುತ್ತಾನೆ; ಮೇವನ್ನು ಕಂಡುಕೊಳ್ಳುತ್ತಾನೆ. ಕಳ್ಳನು ಬರುವುದು ಕಳ್ಳತನಕ್ಕಾಗಿ, ಕೊಲ್ಲುವುದಕ್ಕಾಗಿ ಮತ್ತು ನಾಶಮಾಡುವುದಕ್ಕಾಗಿ ಮಾತ್ರ, ನಾನು ಬಂದದ್ದಾದರೋ ಜೀವನೀಡಲು, ಯಥೇಚ್ಛವಾಗಿ ನೀಡಲು. ಎಂದರು.

26.04.2026 - “ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ಕುರಿಗಳಿಗೆ ನಾನೇ ಬಾಗಿಲು. ನನಗಿಂತ ಮೊದಲು ಬಂದವರೆಲ್ಲರು ಕಳ್ಳರು ಹಾಗೂ ಕೊಳ್ಳೆಗಾರರು

 ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 2:14, 36-41



ಆಗ ಪೇತ್ರನು ಇತರ ಹನ್ನೊಂದು ಮಂದಿ ಪ್ರೇಷಿತರೊಡನೆ ಎದ್ದುನಿಂತು, ಜನಸಮೂಹವನ್ನು ಉದ್ದೇಶಿಸಿ, ಗಟ್ಟಿಯಾದ ಧ್ವನಿಯಿಂದ ಹೀಗೆಂದು ಪ್ರಬೋಧಿಸಿದನು: “ಯೆಹೂದ್ಯ ಸ್ವಜನರೇ, ಜೆರುಸಲೇಮಿನ ಸಕಲ ನಿವಾಸಿಗಳೇ, ನನಗೆ ಕಿವಿಗೊಡಿ. ಈ ಘಟನೆಯ ಅರ್ಥ ನಿಮಗೆ ಮನದಟ್ಟಾಗಲಿ. “ಇಸ್ರಯೇಲಿನ ಜನರೆಲ್ಲರಿಗೆ ಇದು ನಿಸ್ಸಂದೇಹವಾಗಿ ತಿಳಿದಿರಲಿ: ನೀವು ಶಿಲುಬೆಗೇರಿಸಿದ ಈ ಯೇಸುಸ್ವಾಮಿಯನ್ನೇ ದೇವರು ಪ್ರಭುವನ್ನಾಗಿಯೂ ಅಭಿಷಿಕ್ತ ಲೋಕೋದ್ಧಾರಕನನ್ನಾಗಿಯೂ ನೇಮಿಸಿದ್ದಾರೆ.” ಇದನ್ನು ಕೇಳಿದ ಆ ಜನರ ಹೃದಯದಲ್ಲಿ ಅಲಗು ನೆಟ್ಟಂತಾಯಿತು. ಅವರು ಪ್ರೇಷಿತರನ್ನು ಉದ್ದೇಶಿಸಿ, “ಸಹೋದರರೇ, ಈಗ ನಾವು ಮಾಡಬೇಕಾದುದು ಏನು?” ಎಂದು ಕೇಳಿದರು.  ಅದಕ್ಕೆ ಪೇತ್ರನು, “ನಿಮ್ಮಲ್ಲಿ ಪ್ರತಿ ಒಬ್ಬನೂ ಪಶ್ಚಾತ್ತಾಪಪಟ್ಟು, ಪಾಪಕ್ಕೆ ವಿಮುಖನಾಗಿ ದೇವರಿಗೆ ಅಭಿಮುಖನಾಗಲಿ; ಯೇಸುಕ್ರಿಸ್ತರ ನಾಮದಲ್ಲಿ ದೀಕ್ಷಾಸ್ನಾನವನ್ನು ಪಡೆಯಲಿ. ಇದರಿಂದ ನೀವು ಪಾಪಕ್ಷಮೆಯನ್ನು ಪಡೆಯುವಿರಿ; ದೇವರ ವರವಾದ ಪವಿತ್ರಾತ್ಮರನ್ನು ಹೊಂದುವಿರಿ. ಈ ವಾಗ್ದಾನವನ್ನು ನಿಮಗೆ ಮಾತ್ರವಲ್ಲ, ನಿಮ್ಮ ಸಂತತಿಗೂ ದೂರ ಇರುವ ಎಲ್ಲರಿಗೂ ಮತ್ತು ಸರ್ವೇಶ್ವರನಾದ ದೇವರು ತಮ್ಮತ್ತ ಆಹ್ವಾನಿಸುವ ಪ್ರತಿಯೊಬ್ಬನಿಗೂ ಮಾಡಲಾಗಿದೆ,” ಎಂದನು. ಪೇತ್ರನು ಅವರಿಗೆ ಹಲವಾರು ವಿಧದಲ್ಲಿ ಮನವಿಮಾಡಿದನು. ‘ಈ ದುಷ್ಟ ಪೀಳಿಗೆಯಿಂದ ನಿಮ್ಮನ್ನು ಸಂರಕ್ಷಿಸಿಕೊಳ್ಳಿ,’ ಎಂದು ಎಚ್ಚರಿಸಿದನು. ಅವನ ಬೋಧನೆಯನ್ನು ಅಂಗೀಕರಿಸಿದ ಅನೇಕರು ದೀಕ್ಷಾಸ್ನಾನ ಪಡೆದರು. ಅಂದೇ ಸುಮಾರು ಮೂರು ಸಾವಿರ ಜನರು ಸಭೆಯನ್ನು ಸೇರಿಕೊಂಡರು. 

ಕೀರ್ತನೆ: 23:1-3, 3-4, 5, 6

ಶ್ಲೋಕ: ಪ್ರಭು ಕುರಿಗಾಹಿಯಾಗಿರಲು ನನಗೆ, ಕುಂದುಕೊರತೆಗಳೆಲ್ಲಿಯವು ಎನಗೆ?


ಪ್ರಭು ಕುರಿಗಾಹಿಯಾಗಿರಲು ನನಗೆ I
ಕುಂದುಕೊರತೆಗಳೆಲ್ಲಿಯವು ಎನಗೆII
ಹಸಿರುಗಾವಲುಗಳಲೆನ್ನ ತಂಗಿಸುವನು I
ತಿಳಿಕೊಳಗಳ ಬಳಿಗೆನ್ನ ಕರೆದೊಯ್ಯುವನು II
ಪುನಶ್ಚೇತನಗೊಳಿಸುವನು ನನ್ನ ಪ್ರಾಣವನಾತ I

ಸನ್ಮಾರ್ಗದಲಿ ನಡೆಸುವನು ತನ್ನ ನಾಮನಿಮಿತ್ತ II

ಪುನಶ್ಚೇತನಗೊಳಿಸುವನು ನನ್ನ ಪ್ರಾಣವನಾತ I
ಸನ್ಮಾರ್ಗದಲಿ ನಡೆಸುವನು ತನ್ನ ನಾಮನಿಮಿತ್ತ II
ಕಾರ್ಗತ್ತಲ ಕಣಿವೆಯಲಿ ನಾ ನಡೆವಾಗಲುಅಂಜೆನು ಕೇಡಿಗೆ I
ನಿನ್ನ ಕುರಿಗೋಲುಊರುಗೋಲುಧೈರ್ಯವನು ತರುವುದೆನಗೆ I

ಕಾಣೆನೆಂದಿಗೂ ನಾ ದಿಗಿಲನುನೀನಿರಲು ನನ್ನೊಂದಿಗೆ II


ಸಜ್ಜುಗೊಳಿಸುವೆ ನೀ ಶತ್ರುಗಳ ಕಣ್ಮುಂದೆಯೆ ನನಗೌತಣವನು I
ಹಚ್ಚುವೆ ತಲೆಗೆ ತೈಲವನುತುಂಬಿತುಳುಕಿಸುವೆ ಪಾನಪಾತ್ರೆಯನು II
ಶುಭಶಾಂತಿಯಿಂದ ನಾ ಬಾಳುವೆ ಜೀವಮಾನವೆಲ್ಲ I
ದೇವಮಂದಿರದಲಿ ನಾ ವಾಸಿಸುವೆ ಚಿರಕಾಲವೆಲ್ಲ 


ಎರಡನೇ ವಾಚನ: 1 ಪೇತ್ರನು 2:20-25

ನೀವು ತಪ್ಪುಮಾಡಿ, ಶಿಕ್ಷೆಗೆ ಗುರಿಯಾದಾಗ ತಾಳ್ಮೆಯಿಂದಿದ್ದರೆ ಅದೇನೂ ದೊಡ್ಡ ಕಾರ್ಯವಲ್ಲ. ಆದರೆ ಒಳ್ಳೆಯದನ್ನು ಮಾಡಿಯೂ ಬರುವ ಹಿಂಸೆಬಾಧೆಗಳನ್ನು ತಾಳ್ಮೆಯಿಂದ ಸಹಿಸಿಕೊಂಡರೆ, ದೇವರು ನಿಮ್ಮನ್ನು ಮೆಚ್ಚುತ್ತಾರೆ. ನೀವು ಹೀಗೆ ಜೀವಿಸಬೇಕೆಂದೇ ದೇವರು ನಿಮ್ಮನ್ನು ಕರೆದಿದ್ದಾರೆ. ಕ್ರಿಸ್ತಯೇಸು ಸಹ ನಿಮಗಾಗಿ ಹಿಂಸೆಬಾಧೆಯನ್ನು ಅನುಭವಿಸಿದರು; ತಮ್ಮ ಹೆಜ್ಜೆಯ ಜಾಡನ್ನೇ ನೀವು ಅನುಸರಿಸುವಂತೆ ನಿಮಗೊಂದು ಆದರ್ಶವನ್ನು ಬಿಟ್ಟುಹೋದರು. ಅವರು ಯಾವ ಪಾಪವನ್ನೂ ಮಾಡಲಿಲ್ಲ. ಅವರ ಬಾಯಿಂದ ಅಬದ್ಧವಾದ ಮಾತೊಂದೂ ಕೇಳಿಬರಲಿಲ್ಲ. ಅವರು, ಅವಮಾನಪಡಿಸಿದವರನ್ನು ಪ್ರತಿಯಾಗಿ ಅವಮಾನಪಡಿಸಲಿಲ್ಲ. ಅವರು ಯಾತನೆಯನ್ನು ಅನುಭವಿಸುವಾಗಲೂ ಯಾರಿಗೂ ಬೆದರಿಕೆ ಹಾಕಲಿಲ್ಲ. ಬದಲಿಗೆ, ಸತ್ಯಸ್ವರೂಪರೂ ನ್ಯಾಯಾಧಿಪತಿಯೂ ಆದ ದೇವರಿಗೆ ತಮ್ಮನ್ನೇ ಒಪ್ಪಿಸಿಕೊಂಡರು. ನಾವು ಪಾಪದ ಪಾಲಿಗೆ ಸತ್ತು, ಸತ್ಯಕ್ಕೋಸ್ಕರ ಜೀವಿಸುವಂತೆ ಕ್ರಿಸ್ತಯೇಸು ತಮ್ಮ ದೇಹದಲ್ಲಿ ನಮ್ಮ ಪಾಪಗಳನ್ನು ಹೊತ್ತು ಶಿಲುಬೆಯ ಮರವನ್ನೇರಿದರು. ಅವರ ಗಾಯಗಳಿಂದ ನೀವು ಗುಣಹೊಂದಿದಿರಿ. ನೀವು ದಾರಿತಪ್ಪಿದ ಕುರಿಗಳಂತೆ ಅಲೆಯುತ್ತಿದ್ದಿರಿ. ಈಗಲಾದರೋ ನಿಮ್ಮ ಆತ್ಮಗಳನ್ನು ಕಾಯುವ ಕುರಿಗಾಹಿಯೂ ಸಂರಕ್ಷಕನೂ ಆದಾತನ ಬಳಿಗೆ ಮರಳಿದ್ದೀರಿ.

ಶುಭಸಂದೇಶ: ಯೊವಾನ್ನ 10:1-10


“ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ಕುರಿ ಹಟ್ಟಿಗೆ ಬಾಗಿಲ ಮೂಲಕ ಬರದೆ ಗೋಡೆ ಹತ್ತಿಬರುವವನು ಕಳ್ಳ ಹಾಗೂ ಕೊಳ್ಳೆಗಾರ. ಬಾಗಿಲ ಮೂಲಕ ಬರುವವನು ಕುರಿಗಾಹಿ. ಕಾವಲುಗಾರನು ಅವನಿಗೆ ಬಾಗಿಲು ತೆರೆಯುತ್ತಾನೆ. ಕುರಿಗಳು ಅವನ ಸ್ವರವನ್ನು ಕೇಳುತ್ತವೆ. ಅವನು ತನ್ನ ಕುರಿಗಳನ್ನು ಹೆಸರಿಟ್ಟು ಕರೆದು ಹೊರಗೆ ಬಿಡುತ್ತಾನೆ. ತನ್ನ ಕುರಿಗಳನ್ನೆಲ್ಲಾ ಹೊರಗೆ ಬಿಟ್ಟ ನಂತರ ಅವುಗಳ ಮುಂದೆ ಹೋಗುತ್ತಾನೆ. ಕುರಿಗಳು ಅವನ ಹಿಂದೆ ಹೋಗುತ್ತವೆ. ಏಕೆಂದರೆ ಅವುಗಳಿಗೆ ಅವನ ಸ್ವರ ಗೊತ್ತು. ಅಪರಿಚಿತನನ್ನು ಅವು ಹಿಂಬಾಲಿಸುವುದಿಲ್ಲ; ಅವನಿಂದ ದೂರ ಓಡಿಹೋಗುತ್ತವೆ. ಅಪರಿಚಿತರ ಸ್ವರವನ್ನು ಅವು ಗುರುತಿಸುವುದಿಲ್ಲ. ಯೇಸು ಸ್ವಾಮಿ ಹೇಳಿದ ಈ ಸಾಮತಿಯನ್ನು ಕೇಳಿದವರು ಅರ್ಥ ಮಾಡಿಕೊಳ್ಳಲಿಲ್ಲ. ಆದುದರಿಂದ ಯೇಸು ಸ್ವಾಮಿ, “ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ಕುರಿಗಳಿಗೆ ನಾನೇ ಬಾಗಿಲು. ನನಗಿಂತ ಮೊದಲು ಬಂದವರೆಲ್ಲರು ಕಳ್ಳರು ಹಾಗೂ ಕೊಳ್ಳೆಗಾರರು. ಕುರಿಗಳು ಅವರಿಗೆ ಕಿವಿಗೊಡಲಿಲ್ಲ. ಹೌದು, ನಾನೇ ಬಾಗಿಲು, ನನ್ನ ಮೂಲಕ ಒಳಹೋಗುವವನು ಸುರಕ್ಷಿತನಾಗಿರುತ್ತಾನೆ. ಅವನು ಒಳಗೆ ಹೋಗುತ್ತಾನೆ, ಹೊರಗೆ ಬರುತ್ತಾನೆ; ಮೇವನ್ನು ಕಂಡುಕೊಳ್ಳುತ್ತಾನೆ. ಕಳ್ಳನು ಬರುವುದು ಕಳ್ಳತನಕ್ಕಾಗಿ, ಕೊಲ್ಲುವುದಕ್ಕಾಗಿ ಮತ್ತು ನಾಶಮಾಡುವುದಕ್ಕಾಗಿ ಮಾತ್ರ. ನಾನು ಬಂದದ್ದಾದರೋ ಜೀವನೀಡಲು, ಯಥೇಚ್ಛವಾಗಿ ನೀಡಲು.

24.04.2026 - ನನ್ನ ಮಾಂಸವೇ ನಿಜವಾದ ಆಹಾರ; ನನ್ನ ರಕ್ತವೇ ನಿಜವಾದ ಪಾನ

 ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 9:1-20





ಇತ್ತ ಸೌಲನು ಯೇಸುಸ್ವಾಮಿಯ ಅನುಯಾಯಿಗಳಿಗೆ ಬೆದರಿಕೆ ಹಾಕುತ್ತಾ ಅವರನ್ನು ಸಂಹರಿಸಬೇಕೆಂದಿದ್ದನು. ಈ ಹೊಸಮಾರ್ಗವನ್ನು ಅವಲಂಭಿಸುವವರು ಹೆಂಗಸರೇ ಆಗಿರಲಿ ಗಂಡಸರೇ ಆಗಿರಲಿ, ದಮಸ್ಕಸಿನಲ್ಲಿದ್ದರೆ ಅವರನ್ನು ಬಂಧಿಸಿ ಜೆರುಸಲೇಮಿಗೆ ಎಳೆದು ತರಬೇಕೆಂದಿದ್ದನು. ಇದಕ್ಕೆ ಬೇಕಾದ ಪತ್ರಗಳನ್ನು ಕೇಳುವುದಕ್ಕಾಗಿ ಪ್ರಧಾನ ಯಾಜಕನ ಬಳಿಗೆ ಹೋದನು. ದಮಸ್ಕಸಿನಲ್ಲಿರುವ ಪ್ರಾರ್ಥನಾ ಮಂದಿರದ ಅಧಿಕಾರಿಗಳಿಗೆ ತೋರಿಸಲು ಆ ಪತ್ರಗಳನ್ನು ಪಡೆದನು. ಅವನು ಅಲ್ಲಿಂದ ಪ್ರಯಾಣ ಮಾಡುತ್ತಾ ದಮಸ್ಕಸ್ ಪಟ್ಟಣವನ್ನು ಸಮೀಪಿಸಿದನು. ಇದ್ದಕ್ಕಿದ್ದಂತೆ ಆಕಾಶದಿಂದ ಬೆಳಕೊಂದು ಮಿಂಚಿ ಅವನ ಸುತ್ತಲೂ ಆವರಿಸಿತು. ಅವನು ನೆಲಕ್ಕುರುಳಿದನು. "ಸೌಲನೇ, ಸೌಲನೇ, ನನ್ನನ್ನೇಕೆ  ಹಿಂಸಿಸುತ್ತಿರುವೆ?" ಎಂಬ ವಾಣಿ ಅವನಿಗೆ ಕೇಳಿಸಿತು. ಆಗ ಅವನು, "ಪ್ರಭು, ನೀವಾರು?" ಎಂದನು. "ನೀನು ಹಿಂಸೆಪಡಿಸುತ್ತಿರುವ  ಯೇಸುವೇ ನಾನು. ನೀನೆದ್ದು ಪಟ್ಟಣಕ್ಕೆ ಹೋಗು, ಏನು ಮಾಡಬೇಕೆಂದು ನಿನಗೆ ಅಲ್ಲಿ ತಿಳಿಸಲಾಗುವುದು." ಎಂದು ಆ ವಾಣಿ ಹೇಳಿತು. ಸೌಲನೊಡನೆ ಪ್ರಯಾಣ ಮಾಡುತ್ತಿದ್ದವರಿಗೆ ಆ ವಾಣಿ ಕೇಳಿಸಿತ್ತೇ ಹೊರತು, ಯಾರೂ ಕಾಣಿಸಲಿಲ್ಲ. ಅವರು ಸ್ತಬ್ಧರಾದರು. ಸೌಲನು ಮೇಲಕ್ಕೆದ್ದು ಕಣ್ಣರಳಿಸಿ ನೋಡಿದರೂ ಅವನಿಗೇನು ಕಾಣಿಸಲಿಲ್ಲ. ಆದುದರಿಂದ ಸಂಗಡಿಗರು ಅವನ ಕೈಹಿಡಿದು ದಮಸ್ಕಸ್ ಪಟ್ಟಣಕ್ಕೆ ಕರೆದುಕೊಂಡು ಹೋದರು. ಮೂರು ದಿನಗಳವರೆಗೂ ಅವನಿಗೆ ಕಣ್ಣು ಕಾಣಿಸಲಿಲ್ಲ. ಅಲ್ಲದೆ ಅದುವರೆಗೂ ಅವನು ಅನ್ನಪಾನಗಳನ್ನು ಮುಟ್ಟಲಿಲ್ಲ. ದಮಸ್ಕಸಿನಲ್ಲಿ ಅನನೀಯ ಎಂಬ ಶಿಷ್ಯನಿದ್ದನು. ಪ್ರಭು ಅವನಿಗೆ ದರ್ಶನವಿತ್ತು,  "ಅನನೀಯಾ"  ಎಂದು ಕರೆಯಲು ಅವನು, "ಸ್ವಾಮೀ, ಅಪ್ಪಣೆಯಾಗಲಿ," ಎಂದನು. ಪ್ರಭು ಅವನಿಗೆ, "ನೀನೆದ್ದು "ನೇರಬೀದಿ" ಎಂಬ ಹಾದಿಗೆ ಹೋಗು; ತಾರ್ಸದ ಸೌಲ ಎಂಬ ವ್ಯಕ್ತಿಗಾಗಿ ಯೂದನ ಮನೆಯಲ್ಲಿ ವಿಚಾರಿಸು. ಆ ಸೌಲನು ಪ್ರಾರ್ಥನೆಯಲ್ಲಿರುವುದನ್ನು ಕಾಣುವೆ. ಅಲ್ಲದೆ ಅನನೀಯ ಎಂಬುವನು ತನ್ನ ಬಳಿಗೆ ಬಂದು ತಾನು ಮರಳಿ ದೃಷ್ಟಿಯನ್ನು ಪಡೆಯುವಂತೆ ತನ್ನ ಮೇಲೆ ಹಸ್ತನಿಕ್ಷೇಪ ಮಾಡುವುದನ್ನು ದರ್ಶನದಲ್ಲಿ ಕಂಡಿದ್ದಾನೆ," ಎಂದರು. ಅನನೀಯ ಪ್ರತ್ಯುತ್ತರವಾಗಿ, "ಪ್ರಭೂ ಈ ಮನುಷ್ಯ ಜೆರುಸಲೇಮಿನಲ್ಲಿ ತಮ್ಮ ಭಕ್ತರಿಗೆ ಎಷ್ಟು ಕೇಡು ಮಾಡಿದ್ದಾನೆಂಬುದನ್ನು ಅನೇಕರ ಬಾಯಿಂದ ಕೇಳಿದ್ದೇನೆ. ಅಷ್ಟು ಮಾತ್ರವಲ್ಲ, ತಮ್ಮ ನಾಮಸ್ಮರಣೆ ಮಾಡುವವರೆಲ್ಲರನ್ನು ಬಂಧಿಸಲು ಮುಖ್ಯಯಾಜಕರಿಂದ ಅಧಿಕಾರವನ್ನು ಪಡೆದು ಇಲ್ಲಿಗೆ ಬಂದಿದ್ದಾನೆ," ಎಂದನು. ಪ್ರಭು ಅವನಿಗೆ, "ನೀನು ಹೋಗು, ನನ್ನ ನಾಮವನ್ನು ಅನ್ಯಧರ್ಮದವರಿಗೂ ಅರಸರಿಗೂ ಇಸ್ತ್ರಯೇಲಿನ ಜನರಿಗೂ ಪ್ರಕಟಿಸಲು ನಾನು ಆರಿಸಿಕೊಂಡಿರುವ ಸಾಧನ ಅವನು. ಅವನು ನನ್ನ ನಾಮದ ನಿಮಿತ ಎಷ್ಟು ಕಷ್ಟಕಾರ್ಪಣ್ಯಗಳನ್ನು ಅನುಭವಿಸಬೇಕೆಂಬುದನ್ನು ನಾನೇ ಅವನಿಗೆ ತೋರಿಸುತ್ತೇನೆ," ಎಂದರು. ಅಂತೆಯೇ ಅನನೀಯನು ಹೊರಟು ಆ ಮನೆಗೆ ಹೋದನು. ಸೌಲನ ಮೇಲೆ ಹಸ್ತನಿಕ್ಷೇಪ ಮಾಡಿ, "ಸಹೋದರ ಸೌಲನೇ, ಪ್ರಭು ನನ್ನನ್ನು ನಿನ್ನ ಬಳಿಗೆ ಕಳುಹಿಸಿದ್ದಾರೆ," ಎಂದನು. ಆ ಕ್ಷಣವೇ ಸೌಲನ ಕಣ್ಣುಗಳಿಂದ ಪರೆಯೊಂದು ಕಳಚಿಬಿದ್ದಿತು. ಅವನಿಗೆ ಪುನಃ ಕಣ್ಣುಗಳು ಕಾಣತೊಡಗಿದವು. ಎದ್ದು ದೀಕ್ಷಾಸ್ನಾನವನ್ನು  ಪಡೆದನು. ತರುವಾಯ ಊಟಮಾಡಿದ ಮೇಲೆ ಅವನಿಗೆ ತ್ರಾಣ ಬಂದಿತು. ಸೌಲನು ಕೆಲವು ದಿನಗಳವರೆಗೆ ದಮಸ್ಕಸಿನಲ್ಲಿ ಭಕ್ತವಿಶ್ವಾಸಿಗಳೊಡನೆ ಇದ್ದನು. ಆನಂತರ ಸೌಲನು ತಡಮಾಡದೆ ಯೆಹೂದ್ಯರ ಪ್ರಾರ್ಥನಾಮಂದಿರಗಳಿಗೆ ಹೋಗಿ ಯೇಸುವೇ ದೇವರ ಪುತ್ರ ಎಂದು ಭೊಧಿಸಲು ಪ್ರಾರಂಭಿಸಿದನು.

ಕೀರ್ತನೆ: 117:1, 2
ಶ್ಲೋಕ: ಸ್ತುತಿಮಾಡಿ ಪ್ರಭುವನ್ನು ಸಮಸ್ತ ರಾಷ್ಟ್ರಗಳೇ

ಸ್ತುತಿ ಮಾಡಿ ಪ್ರಭುವನು ಸಮಸ್ತ ರಾಷ್ಟ್ರಗಳೇ I
ಆತನನು ಹೊಗಳಿ ಹಾಡಿ ಸರ್ವಜನಾಂಗಗಳೇ II

ನಮ್ಮ ಮೇಲೆ ಆತನಿಗಿರುವ ಪ್ರೀತಿ ಅಚಲ I
ಆತನ ಸತ್ಯಪರತೆ ಇರುವುದು ಅನಂತ ಕಾಲ II

ಶುಭಸಂದೇಶ :ಯೊವಾನ್ನ 6:52-59

ಅಷ್ಟಕ್ಕೆ ಆ ಯೆಹೂದ್ಯರಲ್ಲಿ ತೀವ್ರ ವಾಗ್ವಾದ ಉಂಟಾಯಿತು. "ಈತನು ತನ್ನ ಮಾಂಸವನ್ನು ತಿನ್ನಲು ಹೇಗೆ ಕೊಟ್ಟಾನು?" ಎಂದು ಕೇಳತೊಡಗಿದರು. ಅದಕ್ಕೆ ಯೇಸು, "ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ನೀವು ನರಪುತ್ರನ ಮಾಂಸವನ್ನು ತಿನ್ನದೆ, ಆತನ ರಕ್ತವನ್ನು ಕುಡಿಯದೆ ಹೋದರೆ ನಿಮ್ಮಲ್ಲಿ ಜೀವ ಇರುವುದಿಲ್ಲ. ನನ್ನ ಮಾಂಸವನ್ನು ತಿಂದು ನನ್ನ ರಕ್ತವನ್ನು ಕುಡಿಯುವವನಲ್ಲಿ ನಿತ್ಯಜೀವ ಇರುತ್ತದೆ ಅಲ್ಲದೆ ಅಂತಿಮ ದಿನದಂದು ನಾನು ಅವನನ್ನು ಜೀವಕ್ಕೆ ಎಬ್ಬಿಸುತ್ತೇನೆ. ನನ್ನ ಮಾಂಸವೇ ನಿಜವಾದ ಆಹಾರ; ನನ್ನ ರಕ್ತವೇ ನಿಜವಾದ ಪಾನ. ನನ್ನ ಮಾಂಸವನ್ನು ತಿಂದು,  ನನ್ನ ರಕ್ತವನ್ನು ಕುಡಿಯುವವನು ನನ್ನಲ್ಲಿ ನೆಲಸಿರುತ್ತಾನೆ ನಾನು ಅವನಲ್ಲಿ ನೆಲಸಿರುತ್ತೇನೆ. ಜೀವಸ್ವರೂಪಿ ಆದ ಪಿತನು ನನ್ನನ್ನು ಕಳುಹಿಸಿಕೊಟ್ಟಿರುವರು.  ನಾನು ಅವರಿಂದಲೇ ಜೀವಿಸುತ್ತೇನೆ. ಅಂತೆಯೇ ನನ್ನನ್ನು ಭುಜಿಸುವವರು ನನ್ನಿಂದಲೇ ಜೀವಿಸುತ್ತಾನೆ. ಸ್ವರ್ಗದಿಂದ ಇಳಿದು ಬಂದ ರೊಟ್ಟಿ ಇದೇ ನಿಮ್ಮ ಪೂರ್ವಜರು  "ಮನ್ನ"ವನ್ನು ತಿಂದರೂ ಸಾವಿಗೆ ತುತ್ತಾದರು. ಇದು ಹಾಗಲ್ಲ, ಈ ರೊಟ್ಟಿಯನ್ನು ತಿನ್ನುವವನು ಚಿರಕಾಲ ಬಾಳುವನು," ಎಂದು ಹೇಳಿದರು. ಕಫೆರ್ನವುಮಿನ ಪ್ರಾರ್ಥನಾಮಂದಿರದಲ್ಲಿ ಯೇಸು ಭೋದನೆ ಮಾಡುತ್ತಿದ್ದಾಗ ಆಡಿದ ಮಾತುಗಳಿವು.

ಮನಸಿಗೊಂದಿಷ್ಟು : ಶುಭಸಂದೇಶದ ಅತ್ಯಂತ ಹೃದಯಸ್ಪರ್ಶಿ ಘಟನೆ, ರೂಪಾಂತರವನ್ನು ಇಂದಿನ ವಾಚನದಲ್ಲಿ ಕಾಣುತ್ತೇವೆ. ಕ್ರೈಸ್ತ ತತ್ವಗಳನ್ನು ನಿರ್ನಾಮ ಮಾಡಲು ದಮಸ್ಕಸ್ ಗೆ ಹೊರಟ ಸೌಲನನ್ನು ಯೇಸು ತಮ್ಮ ಪ್ರೀತಿಯಲ್ಲಿ ಬಂಧಿಸುತ್ತಾರೆ. ಅವನು ನೋಡುತ್ತಿದ್ದ ಲೋಕವನ್ನು ಕುರುಡಾಗಿಸಿ ತಮ್ಮ ಬೆಳಕನ್ನು ನೀಡುತ್ತಾರೆ. ನಮ್ಮದೇ ಹಾದಿಯಲ್ಲಿ ನಡೆಯುತ್ತಿರುವ ನಮಗೂ ಆ ರೂಪಾಂತರದ ಭಾಗ್ಯ ದೊರೆಯುವಂತಾಗಲಿ

ಪ್ರಶ್ನೆ : ಕ್ಷಣಾರ್ಧದಲ್ಲಿ ಎಲ್ಲವನ್ನೂ ತ್ಯಜಿಸಿದ ಸೌಲ ನಮಗೆ ಸ್ಪೂರ್ತಿಯೇ?

23.04.2026 - ನಾನೇ ಸ್ವರ್ಗದಿಂದ ಇಳಿದು ಬಂದ ಜೀವಂತ ರೊಟ್ಟಿ

  ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 8:26-40

ಅನಂತರ ದೇವದೂತನು ಫಿಲಿಪ್ಪನಿಗೆ, “ನೀನು ಎದ್ದು ದಕ್ಷಿಣಾಭಿಮುಖವಾಗಿ ಹೋಗು. ಅದು ಜೆರುಸಲೇಮಿನಿಂದ ಗಾಜಕ್ಕೆ ಹೋಗುವ ಅರಣ್ಯಮಾರ್ಗ,” ಎಂದನು. ಅಂತೆಯೇ ಫಿಲಿಪ್ಪನು ಹೊರಟನು. ಆಗ ಇಥಿಯೋಪಿಯದ ಕಂಚುಕಿಯೊಬ್ಬನು ಅದೇ ಮಾರ್ಗವಾಗಿ ಬರುತ್ತಿದ್ದನು. ಅವನು ಆ ದೇಶದ ರಾಣಿ ಕಂದಾಕಿಯ ಕೋಶಾಧಿಕಾರಿ ಹಾಗೂ ಸಚಿವ. ದೇವಾರಾಧನೆಗೆಂದು ಜೆರುಸಲೇಮಿಗೆ ಹೋಗಿ ಹಿಂದಿರುಗುತ್ತಿದ್ದನು. ಅವನು ತನ್ನ ರಥದಲ್ಲಿ ಕುಳಿತು ಯೆಶಾಯನ ಪ್ರವಾದನೆಯನ್ನು ಓದುತ್ತಿದ್ದನು. ಪವಿತ್ರಾತ್ಮರು ಫಿಲಿಪ್ಪನಿಗೆ, “ನೀನು ಮುಂದೆ ಹೋಗಿ ಆ ರಥದ ಜೊತೆಯಲ್ಲೇ ನಡೆ,” ಎಂದು ತಿಳಿಸಿದರು. ಫಿಲಿಪ್ಪನು ಮುಂದಕ್ಕೆ ಧಾವಿಸಿ, ಅವನು ಯೆಶಾಯನ ಪ್ರವಾದನೆಯನ್ನು ಓದುತ್ತಿರುವುದನ್ನು ಕೇಳಿಸಿಕೊಂಡನು. “ನೀವು ಓದುತ್ತಿರುವುದು ಅರ್ಥವಾಗುತ್ತಿದೆಯೇ?” ಎಂದು ಪ್ರಶ್ನಿಸಿದನು. ಆ ಅಧಿಕಾರಿ ಪ್ರತ್ಯುತ್ತರವಾಗಿ, “ಯಾರಾದರೂ ವಿವರಿಸಿದ ಹೊರತು ಇದು ನನಗೆ ಅರ್ಥವಾಗುವುದಾದರೂ ಹೇಗೆ?” ಎಂದನು. ರಥವನ್ನು ಹತ್ತಿ ಕುಳಿತುಕೊಳ್ಳುವಂತೆ ಫಿಲಿಪ್ಪನನ್ನು ಆಹ್ವಾನಿಸಿದನು. ಅವನು ಓದುತ್ತಿದ್ದ ಪ್ರವಾದನೆ ಇದು: “ವಧ್ಯಸ್ಥಾನಕ್ಕೆ ಒಯ್ದ ಕುರಿಯಂತೆ ತುಪ್ಪಟ ಕತ್ತರಿಸುವವನ ಮುಂದಿರುವ ಮೂಕ ಕುರಿಮರಿಯಂತೆ ಆತನು ಬಾಯ್ದೆರೆಯಲಿಲ್ಲ. ಆತನನ್ನು ಅವಮಾನಪಡಿಸಲಾಯಿತು, ನ್ಯಾಯವನ್ನೇ ಆತನಿಗೆ ನಿರಾಕರಿಸಲಾಯಿತು, ಆತನ ಸಂತತಿಯ ಮಾತೇ ಎತ್ತದಂತಾಯಿತು. ಇದಕಾರಣ ಆತನ ಭೌತಿಕ ಜೀವವನ್ನೇ ಮೊಟಕುಗೊಳಿಸಲಾಯಿತು.” ಆ ಅಧಿಕಾರಿ ಫಿಲಿಪ್ಪನಿಗೆ, “ಇಲ್ಲಿ ಪ್ರವಾದಿ ಯಾರನ್ನು ಕುರಿತು ಈ ಮಾತುಗಳನ್ನು ಹೇಳಿದ್ದಾನೆ. ತನ್ನನ್ನು ಕುರಿತೋ ಅಥವಾ ಬೇರೆಯವರನ್ನು ಕುರಿತೋ, ಹೇಳಬಲ್ಲೆಯಾ?” ಎಂದು ಕೇಳಿದನು. ಆಗ ಫಿಲಿಪ್ಪನು ಮರುತ್ತರವಾಗಿ, ಆ ಪ್ರವಾದನೆಯನ್ನೇ ಆಧಾರವಾಗಿ ತೆಗೆದುಕೊಂಡು, ಯೇಸುವಿನ ಶುಭಸಂದೇಶವನ್ನು ಅವನಿಗೆ ಬೋಧಿಸಿದನು. ಅವರು ಪ್ರಯಾಣ ಮಾಡುತ್ತಾ ದಾರಿಯಲ್ಲಿ ನೀರಿದ್ದ ಒಂದು ಸ್ಥಳಕ್ಕೆ ಬಂದರು. ಅದನ್ನು ಕಂಡ ಆ ಅಧಿಕಾರಿ, “ಇಲ್ಲಿ ನೀರಿದೆ. ನಾನು ದೀಕ್ಷಾಸ್ನಾನವನ್ನು ಪಡೆಯಲು ಏನಾದರೂ ಅಭ್ಯಂತರವಿದೆಯೇ” ಎಂದನು. ಫಿಲಿಪ್ಪನು, “ನೀವು ಹೃದಯಪೂರ್ವಕವಾಗಿ ವಿಶ್ವಾಸಿಸುವುದಾದರೆ ದೀಕ್ಷಾಸ್ನಾನವನ್ನು ಪಡೆಯಬಹುದು,” ಎಂದನು. “ಯೇಸುಕ್ರಿಸ್ತ ದೇವರ ಪುತ್ರ ಎಂದು ನಾನು ವಿಶ್ವಾಸಿಸುತ್ತೇನೆ,” ಎಂದು ಅಧಿಕಾರಿ ಪ್ರತ್ಯುತ್ತರವಿತ್ತನು. ಅಧಿಕಾರಿಯ ಆಜ್ಞೆಯಂತೆ ರಥವನ್ನು ಅಲ್ಲಿಯೇ ನಿಲ್ಲಿಸಲಾಯಿತು. ಅವರಿಬ್ಬರೂ ನೀರಿಗೆ ಇಳಿದರು. ಫಿಲಿಪ್ಪನು ಅಧಿಕಾರಿಗೆ ದೀಕ್ಷಾಸ್ನಾನವನ್ನು ಕೊಟ್ಟನು. ಅವರಿಬ್ಬರು ನೀರಿನಿಂದ ಮೇಲಕ್ಕೆ ಬಂದೊಡನೆ ಪ್ರಭುವಿನ ಆತ್ಮವು ಫಿಲಿಪ್ಪನನ್ನು ಅಲ್ಲಿಂದ ಕೊಂಡೊಯ್ಯಿತು. ಆ ಅಧಿಕಾರಿ ಫಿಲಿಪ್ಪನನ್ನು ಪುನಃ ಕಾಣಲಿಲ್ಲ; ಅವನು ಸಂತೋಷಭರಿತನಾಗಿ ಪ್ರಯಾಣವನ್ನು ಮುಂದುವರಿಸಿದನು. ಫಿಲಿಪ್ಪನಾದರೋ ಆಜೋತ್ ಎಂಬಲ್ಲಿ ಕಾಣಿಸಿಕೊಂಡನು. ಅಲ್ಲಿಂದ ಸೆಜರೇಯವನ್ನು ತಲುಪುವವರೆಗೆ ಎಲ್ಲಾ ಊರುಗಳಲ್ಲೂ ಶುಭಸಂದೇಶವನ್ನು ಸಾರುತ್ತಾ ಹೋದನು.

ಕೀರ್ತನೆ: 66:8-9, 16-17, 20
ಶ್ಲೋಕ: ಜಗವೆಲ್ಲ ಮಾಡಲಿ ಜಯಕಾರ ದೇವನಿಗೆ

ಜನಾಂಗಗಳೇನಮಿಸಿರಿ ನಮ್ಮ ದೇವನನು I
ಗಟ್ಟಿಯಾಗಿ ಮಾಡಿರಿ ಅವನ ಗುಣಗಾನವನು II
ನಮ್ಮ ಪ್ರಾಣವನ್ನಾತ ಉಳಿಸಿದನಯ್ಯಾ I
ಕಾಲೆಡವದಂತೆ ಕಾಪಾಡಿದನಯ್ಯಾ II

ಬಂದು ಕೇಳಿರಿ ದೇವನಲಿ ಭಯಭಕ್ತಿಯುಳ್ಳವರೆ I
ದೇವನೆನಗೆ ಮಾಡಿದ ಕಾರ್ಯಗಳ ತಿಳಿಸುವೆ ನಿಮಗೆ II
ದೇವನಿಗೆನ್ನ ಮನ ಸ್ವರವೆತ್ತಿ ಮೊರೆಯಿಟ್ಟಿತು I
ಆತನ ಸ್ತುತಿ ನನ್ನ ಬಾಯಲಿ ತುಳುಕುತ್ತಿತ್ತು II

ಎನ್ನ ಪ್ರಾರ್ಥನೆಯನು ತಿರಸ್ಕರಿಸದ ದೇವನಿಗೆ ಸ್ತುತಿ I
ತನ್ನ ಪ್ರೀತಿಯನೆನಗೆ ನಿರಾಕರಿಸದಾತನಿಗೆ ಸನ್ನುತಿ II

ಶುಭಸಂದೇಶ: ಯೊವಾನ್ನ6:44-51


ಯೆಹೂದ್ಯರಿಗೆ  ಪ್ರತ್ಯುತ್ತರವಾಗಿ ಯೇಸುವು, "ನನ್ನನ್ನು ಕಳುಹಿಸಿಕೊಟ್ಟ ಪಿತನು, ನನ್ನತ್ತ ಸೆಳೆಯದ ಹೊರತು, ಯಾರೂ ನನ್ನ ಬಳಿಗೆ ಬಾರರು. ಬಂದವರನ್ನು ನಾನು ಅಂತಿಮ ದಿನದಂದು ಜೀವಕ್ಕೆ ಎಬ್ಬಿಸುತ್ತೇನೆ. ‘ದೇವರಿಂದಲೇ ಅವರೆಲ್ಲರೂ ಬೋಧನೆ ಪಡೆಯುವರು,’ ಎಂದು ಪ್ರವಾದಿಗಳ ಗ್ರಂಥದಲ್ಲಿ ಬರೆದಿದೆ. ಪಿತನಿಗೆ ಕಿವಿಗೊಟ್ಟು ಅವರಿಂದಲೇ ಕಲಿತುಕೊಂಡ ಪ್ರತಿ ಒಬ್ಬನೂ ನನ್ನ ಬಳಿಗೆ ಬರುತ್ತಾನೆ. ಹಾಗೆಂದ ಮಾತ್ರಕ್ಕೆ ಪಿತನನ್ನು ಯಾರಾದರೂ ಕಣ್ಣಾರೆ ಕಂಡಿದ್ದಾರೆ ಎಂದಲ್ಲ, ದೇವರಿಂದ ಬಂದಿರುವ ಒಬ್ಬನು ಮಾತ್ರ ಪಿತನನ್ನು ಕಂಡಿದ್ದಾನೆ. ವಿಶ್ವಾಸವುಳ್ಳವನಲ್ಲಿ ನಿತ್ಯಜೀವ ಇದೆಯೆಂದು ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ. ಜೀವದಾಯಕ ರೊಟ್ಟಿ ನಾನೇ. ನಿಮ್ಮ ಪೂರ್ವಜರು ಮರಳುಗಾಡಿನಲ್ಲಿ ‘ಮನ್ನಾ’ವನ್ನು ತಿಂದರು; ಆದರೂ ಸಾವಿಗೆ ತುತ್ತಾದರು. ಸ್ವರ್ಗದಿಂದ ಇಳಿದು ಬಂದ ರೊಟ್ಟಿಯಾದರೋ ಹಾಗಲ್ಲ. ಇದನ್ನು ತಿನ್ನುವ ಯಾರಿಗೂ ಸಾವೆಂಬುದು ಇಲ್ಲ. ನಾನೇ ಸ್ವರ್ಗದಿಂದ ಇಳಿದು ಬಂದ ಜೀವಂತ ರೊಟ್ಟಿ. ಈ ರೋಟ್ಟಿಯನ್ನು ತಿಂದವನು ಚಿರಕಾಲ ಬಾಳುತ್ತಾನೆ. ಲೋಕೋದ್ಧಾರಕ್ಕಾಗಿ ನಾನು ಅರ್ಪಿಸುವ ನನ್ನ ಮಾಂಸವೇ ನಾನು ಕೊಡುವ ರೊಟ್ಟಿ,” ಎಂದು ಹೇಳಿದರು.

22.04.2026 - ಪುತ್ರನನ್ನು ಕಂಡು ಆತನಲ್ಲಿ ವಿಶ್ವಾಸ ಇಡುವ ಪ್ರತಿಯೊಬ್ಬನೂ ನಿತ್ಯಜೀವವನ್ನು ಪಡೆಯಬೇಕೆಂಬುದೇ ನನ್ನ ಪಿತನ ಸಂಕಲ್ಪ

 ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 8:1-8

ಆ ದಿನವೇ ಜೆರುಸಲೇಮಿನ ಧರ್ಮಸಭೆಯ ವಿರುದ್ಧ ಕ್ರೂರ ಹಿಂಸೆ ಪ್ರಾರಂಭವಾಯಿತು. ಪ್ರೇಷಿತರ ಹೊರತು ಇತರ ಭಕ್ತವಿಶ್ವಾಸಿಗಳು ಜುದೇಯ ಮತ್ತು ಸಮಾರಿಯ ಪ್ರಾಂತ್ಯಗಳಲ್ಲೆಲ್ಲಾ ಚದರಿ ಹೋದರು. ಕೆಲವು ಭಕ್ತಾದಿಗಳು ಸ್ತೇಫನನನ್ನು ಸಮಾಧಿಮಾಡಿ ಅವನಿಗಾಗಿ ಅತ್ತು ಗೋಳಾಡಿದರು. ಇತ್ತ ಸೌಲನು ಧರ್ಮಸಭೆಯನ್ನು ನಾಶಪಡಿಸಲು ತೊಡಗಿದನು; ಮನೆಮನೆಗೂ ನುಗ್ಗಿ ಸ್ತ್ರೀಪುರುಷರೆನ್ನದೆ ಭಕ್ತರನ್ನು ಎಳೆದುತಂದು ಸೆರೆಮನೆಗೆ ತಳ್ಳುತ್ತಿದ್ದನು. ಸಮಾರಿಯದಲ್ಲಿ ಶುಭಸಂದೇಶ ಚದರಿ ಹೋದ ಭಕ್ತವಿಶ್ವಾಸಿಗಳು ಎಲ್ಲೆಲ್ಲೂ ಹೋಗಿ ಶುಭಸಂದೇಶವನ್ನು ಸಾರುತ್ತಿದ್ದರು. ಫಿಲಿಪ್ಪನು ಸಮಾರಿಯದ ಪ್ರಮುಖ ಪಟ್ಟಣ ಒಂದಕ್ಕೆ ಹೋಗಿ ಅಲ್ಲಿಯ ಜನರಿಗೆ ಯೇಸುವೇ ಅಭಿಷಿಕ್ತನಾದ ಲೋಕೋದ್ಧಾರಕನೆಂದು ಸಾರಿದನು. ಜನಸಮೂಹವು ಅವನಿಗೆ ಕಿವಿಕೊಟ್ಟಿತು. ಅವನು ಮಾಡಿದ ಅದ್ಭುತಕಾರ್ಯಗಳನ್ನು ಕಣ್ಣಾರೆ ಕಂಡಿತು; ಅವನ ಬೋಧನೆಯನ್ನು ಒಮ್ಮನಸ್ಸಿನಿಂದ ಸ್ವೀಕರಿಸಿತು. ಅನೇಕರನ್ನು ಹಿಡಿದಿದ್ದ ದೆವ್ವಗಳು ಅಬ್ಬರಿಸುತ್ತಾ ಅವರನ್ನು ಬಿಟ್ಟಗಲಿದವು; ಪಾಶ್ರ್ವವಾಯು ಪೀಡಿತರೂ ಕುಂಟರೂ ಸ್ವಸ್ಥರಾದರು. ಇದರಿಂದ ಆ ಪಟ್ಟಣದಲ್ಲಿ ಉಂಟಾದ ಸಂತೋಷಕ್ಕೆ ಎಲ್ಲೆಯೇ ಇರಲಿಲ್ಲ.

ಕೀರ್ತನೆ: 66:1-3, 4-5, 6-7
ಶ್ಲೋಕ: ಜಗವೆಲ್ಲ ಮಾಡಲಿ ಜಯಕಾರ ದೇವನಿಗೆ

ಜಗವೆಲ್ಲ ಮಾಡಲಿ ಜಯಕಾರ ದೇವನಿಗೆ I
ಹಾಡಲಿ ಆತನ ಶ್ರೀನಾಮ ಮಹಿಮೆಗೆ II
ನಿನ್ನ ಕಾರ್ಯಗಳೆನಿತೋ ಚೇತೋಹಾರಿ I
ನಿನ್ನ ಪರಾಕ್ರಮಕೆ ಶತ್ರುಗಳು ಪರಾರಿ II

ಜಗವೆಲ್ಲ ಪೂಜಿಪುದು ನಿನ್ನನು I
ಪೊಗಳಿ ಮಾಳ್ಪುದು ಗುಣಗಾನವನು I
ಕೀರ್ತಿಸುವುದು ನಿನ್ನ ನಾಮವನು” II
ಬನ್ನಿದೇವನತಿಶಯ ಕಾರ್ಯಗಳ ನೋಡಬನ್ನಿ I
ಜನತೆಗಾತ ಮಾಡಿದುದು ಅತ್ಯಾಶ್ಚರ್ಯವೆನ್ನಿ II

ಒಣನೆಲವಾಗಿ ಮಾರ್ಪಡಿಸಿದ ಕಡಲನು I
ಕಾಲು ನಡೆಯಲೇ ದಾಟಿಸಿದ ನದಿಯನು I
ಇದ ನಿಮಿತ್ತ ಪಡೆಯೋಣ ಆನಂದವನು II
ಆತನಾಳ್ವಿಕೆ ಶಕ್ತಿಯುತನಿರಂತರ I
ರಾಷ್ಟ್ರಗಳ ಮೇಲೆ ಅವನ ನೇತ್ರ ಕನಿಕರ I

ಜಂಬ ಕೊಚ್ಚದಿರಲಿ ದಂಗೆಕೋರ II

ಶುಭಸಂದೇಶ: ಯೊವಾನ್ನ 6:35-40


ಆಗ ಯೇಸು, “ನಾನೇ ಜೀವದಾಯಕ ರೊಟ್ಟಿ, ನನ್ನ ಬಳಿ ಬರುವವನಿಗೆ ಹಸಿವೇ ಇರದು; ನನ್ನಲ್ಲಿ ವಿಶ್ವಾಸವಿಡುವವನಿಗೆ ಎಂದಿಗೂ ದಾಹವಾಗದು. ಆದರೆ, ನಾನು ನಿಮಗೆ ಹೇಳಿದಂತೆ, ನೀವು ನನ್ನನ್ನು ನೋಡಿಯೂ ವಿಶ್ವಾಸಿಸದೆ ಇದ್ದೀರಿ. ಪಿತನು ನನಗೆಂದು ಕೊಟ್ಟಿರುವ ಪ್ರತಿಯೊಬ್ಬನೂ ನನ್ನಲ್ಲಿಗೆ ಬರುತ್ತಾನೆ. ನನ್ನಲ್ಲಿಗೆ ಬರುವವನನ್ನು ನಾನೆಂದಿಗೂ ತಳ್ಳಿಬಿಡುವುದಿಲ್ಲ. ನಾನು ಸ್ವರ್ಗದಿಂದ ಇಳಿದು ಬಂದುದು ನನ್ನ ಇಚ್ಛೆಯಂತೆ ನಡೆಯುವುದಕ್ಕಲ್ಲ, ನನ್ನನ್ನು ಕಳುಹಿಸಿದಾತನ ಚಿತ್ತದಂತೆ ನಡೆಯುವುದಕ್ಕೆ. ಅವರ ಚಿತ್ತವೇನೆಂದರೆ: ಅವರು ನನಗೆ ಕೊಟ್ಟವರಲ್ಲಿ ಒಬ್ಬನನ್ನೂ ಕಳೆದುಕೊಳ್ಳದೆ ಅಂತಿಮ ದಿನದಂದು ಅವರೆಲ್ಲರನ್ನೂ ನಾನು ಜೀವಕ್ಕೆ ಎಬ್ಬಿಸಬೇಕು. ಪುತ್ರನನ್ನು ಕಂಡು ಆತನಲ್ಲಿ ವಿಶ್ವಾಸ ಇಡುವ ಪ್ರತಿಯೊಬ್ಬನೂ ನಿತ್ಯಜೀವವನ್ನು ಪಡೆಯಬೇಕೆಂಬುದೇ ನನ್ನ ಪಿತನ ಸಂಕಲ್ಪ. ಅಂಥವನನ್ನು ಅಂತಿಮ ದಿನದಂದು ನಾನು ಜೀವಕ್ಕೆ ಎಬ್ಬಿಸುತ್ತೇನೆ,” ಎಂದು ನುಡಿದರು.

21.04.2026 - ನಾನೇ ಜೀವದಾಯಕ ರೊಟ್ಟಿ, ನನ್ನ ಬಳಿ ಬರುವವನಿಗೆ ಹಸಿವೇ ಇರದು

 ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 7:51-8:1



ಸ್ತೇಫನನು ಮುಂದುವರೆದು, “ಎಷ್ಟು ಹಟಮಾರಿಗಳು ನೀವು; ಎಂಥಾ ಕಠಿಣ ಹೃದಯಿಗಳು ನೀವು; ದೇವರ ಸಂದೇಶಕ್ಕೆ ಎಷ್ಟು ಕಿವುಡರು ನೀವು! ನಿಮ್ಮ ಪೂರ್ವಜರಂತೆ ನೀವು ಸಹ ಪವಿತ್ರಾತ್ಮ ಅವರನ್ನು ಯಾವಾಗಲೂ ಪ್ರತಿಭಟಿಸುತ್ತೀರಿ. ನಿಮ್ಮ ಪೂರ್ವಜರು ಹಿಂಸೆಗೆ ಗುರಿಪಡಿಸದ ಪ್ರವಾದಿ ಯಾರಾದರೂ ಇದ್ದಾರೆಯೆ? ಸತ್ಯಸ್ವರೂಪನು ಬರಲಿದ್ದಾನೆಂದು ಮುಂತಿಳಿಸಿದವರನ್ನು ಅವರು ಕೊಂದುಹಾಕಿದರು. ನೀವಾದರೋ, ಆ ಸತ್ಯಸ್ವರೂಪನನ್ನು ಹಿಡಿದುಕೊಟ್ಟು ಕೊಲೆಮಾಡಿಸಿದಿರಿ. ದೇವದೂತರ ಮೂಲಕ ಧರ್ಮಶಾಸ್ತ್ರವನ್ನು ಪಡೆದ ನೀವೇ ಅದಕ್ಕೆ ಅವಿಧೇಯರಾಗಿ ನಡೆದಿರಿ,” ಎಂದನು. ಸ್ತೇಫನನ ಮಾತುಗಳನ್ನು ಕೇಳಿದ ನ್ಯಾಯಸಭೆಯ ಸದಸ್ಯರು ಅವನ ಮೇಲೆ ಕೋಪೋದ್ರಿಕ್ತರಾದರು. ಕಟಕಟನೆ ಹಲ್ಲುಕಡಿದರು. ಆದರೆ ಸ್ತೇಫನನು ಪವಿತ್ರಾತ್ಮಭರಿತನಾಗಿ ಸ್ವರ್ಗದತ್ತ ಕಣ್ಣೆತ್ತಿನೋಡಿ ದೇವರ ಮಹಿಮೆಯನ್ನೂ ಅವರ ಬಲಪಾಶ್ರ್ವದಲ್ಲಿ ನಿಂತಿರುವ ಯೇಸುವನ್ನೂ ಕಂಡು, “ಇಗೋ, ಆಕಾಶವು ತೆರೆದಿದೆ, ನರಪುತ್ರನು ದೇವರ ಬಲಪಾಶ್ರ್ವದಲ್ಲಿ ನಿಂತಿರುವುದನ್ನು ನಾನು ನೋಡುತ್ತಿದ್ದೇನೆ,” ಎಂದನು. ಇದನ್ನು ಕೇಳಿದ ನ್ಯಾಯಸಭೆಯ ಸದಸ್ಯರು ಆರ್ಭಟಿಸಿದರು; ಕಿವಿಗಳನ್ನು ಮುಚ್ಚಿಕೊಂಡರು; ಭರದಿಂದ ಅವನತ್ತ ಧಾವಿಸಿದರು. ಪಟ್ಟಣದಿಂದ ಹೊರಕ್ಕೆ ದಬ್ಬಿ ಅವನ ಮೇಲೆ ಕಲ್ಲು ತೂರಿದರು. ಸಾಕ್ಷಿಕೊಟ್ಟವರು ತಮ್ಮ ಬಟ್ಟೆಬರೆಗಳನ್ನು ತರುಣ ಸೌಲನ ವಶದಲ್ಲಿ ಇಟ್ಟಿದ್ದರು. ಅವರು ತನ್ನ ಮೇಲೆ ಕಲ್ಲು ಬೀರುತ್ತಿದ್ದಾಗ ಸ್ತೇಫನನು, “ಪ್ರಭು ಯೇಸುವೇ, ನನ್ನಾತ್ಮವನ್ನು ಸ್ವೀಕರಿಸಿ,” ಎಂದು ಪ್ರಾರ್ಥಿಸಿದನು. ಅನಂತರ ಮೊಣಕಾಲೂರಿ, “ಪ್ರಭೂ, ಈ ಪಾಪವನ್ನು ಇವರ ಮೇಲೆ ಹೊರಿಸಬೇಡಿ,” ಎಂದು ಧ್ವನಿಯೆತ್ತಿ ಹೇಳುತ್ತಾ ಪ್ರಾಣಬಿಟ್ಟನು. ಸೌಲನು ಸ್ತೇಫನನ ಕೊಲೆಗೆ ಸಮ್ಮತಿಸಿದ್ದನು. ಆ ದಿನವೇ ಜೆರುಸಲೇಮಿನ ಧರ್ಮಸಭೆಯ ವಿರುದ್ಧ ಕ್ರೂರ ಹಿಂಸೆ ಪ್ರಾರಂಭವಾಯಿತು. 

ಕೀರ್ತನೆ: 31:3-4, 6, 7, 8, 17, 21
ಶ್ಲೋಕ: ನನಗಾಧಾರ ನೀನಲ್ಲವೇ? ನನ್ನಾತ್ಮವನು ನಿನಗೊಪ್ಪಿಸಿರುವೆ

ಬನ್ನಿಕೊಂಡಾಡುವ ಪ್ರಭು ದೇವನನು II
ಘನಪಡಿಸೋಣ ಅವನ ಶ್ರೀನಾಮವನು II
ಬೇಡಿಕೊಳ್ಳಲು ಕೊಟ್ಟನಾತ ಸದುತ್ತರವನು I
ಭಯಭೀತಿಯಿಂದೆನ್ನನು ಮುಕ್ತನಾಗಿಸಿಹನು II

ನಿರ್ಗತಿಕನು ಮೊರೆಯಿಡಲು ಪ್ರಭು ಕಿವಿಗೊಟ್ಟನು I
ಸರ್ವಾಪತ್ತಿನಿಂದವನು ಮುಕ್ತಗೊಂಡನು II

ಭಯಭಕುತಿಯುಳ್ಳವರ ಸುತ್ತಲು ಕಾವಲಿದ್ದು I
ಕಾಯುವನು ಪ್ರಭುವಿನ ದೂತನೆ ಬಂದಿಳಿದು II

ಸವಿದು ನೋಡು ಪ್ರಭುವಿನ ಮಾಧುರ್ಯವನು I
ಆತನನು ಆಶ್ರಯಿಸಿಕೊಂಡವನು ಧನ್ಯನು II

ಕಿವಿಗೊಡುವನು ಪ್ರಭು ಸಜ್ಜನರ ಮೊರೆಗೆ I
ನೆರವೀವನವರ ಕಷ್ಟನಿವಾರಣೆಗೆ II

ದುರ್ಜನರೆಲ್ಲರೂ ತುತ್ತಾಗುವರು ತಮ್ಮ ಕೇಡಿಗೆ I
ಸಜ್ಜನರ ಶತ್ರುಗಳು ಗುರಿಯಾಗುವರು ದಂಡನೆಗೆ II

ಶುಭಸಂದೇಶ: ಯೊವಾನ್ನ 6:30-35


ಆ ಜನರು ಯೇಸುಸ್ವಾಮಿಗೆ, “ನಾವು ನೋಡಿ ನಿಮ್ಮಲ್ಲಿ ವಿಶ್ವಾಸ ಇಡುವಂತೆ ನೀವು ಏನು ಮಾಡುವಿರಿ? ಯಾವ ಸೂಚಕಕಾರ್ಯವನ್ನು ತೋರಿಸುವಿರಿ? ನಮ್ಮ ಪೂರ್ವಜರಿಗೆ ಮರುಭೂಮಿಯಲ್ಲಿ ತಿನ್ನಲು ‘ಮನ್ನಾ’ ಸಿಕ್ಕಿತು, ತಿನ್ನಲು ಅವರಿಗೆ ಸ್ವರ್ಗದಿಂದ ರೊಟ್ಟಿ ದೊರಕಿತು, ಎಂದು ಪವಿತ್ರಗ್ರಂಥವೇ ಹೇಳುತ್ತದೆಯಲ್ಲವೇ?” ಎಂದರು. ಯೇಸು ಅವರಿಗೆ, “ನಿಮಗೆ ಸತ್ಯವಾಗಿ ಹೇಳುತ್ತೇನೆ; ಸ್ವರ್ಗದಿಂದ ನಿಮಗೆ ರೊಟ್ಟಿಯನ್ನು ಕೊಟ್ಟವನು ಮೋಶೆಯಲ್ಲ; ನಿಮಗೆ ಸ್ವರ್ಗದಿಂದ ನಿಜವಾದ ರೊಟ್ಟಿಯನ್ನು ಕೊಡುವವರು ನನ್ನ ಪಿತನೇ. ಏಕೆಂದರೆ, ಸ್ವರ್ಗದಿಂದ ಇಳಿದು ಬಂದು ಲೋಕಕ್ಕೆ ಸಜ್ಜೀವವನ್ನೀಯುವಾತನೇ ದೇವರು ಕೊಡುವ ರೊಟ್ಟಿ,” ಎಂದು ಹೇಳಿದರು. ಅದಕ್ಕೆ ಆ ಜನರು, “ಅಂಥಾ ರೊಟ್ಟಿಯನ್ನೇ ನಮಗೆ ಯಾವಾಗಲೂ ಕೊಡಿ,” ಎಂದು ಕೇಳಿದರು. ಆಗ ಯೇಸು, “ನಾನೇ ಜೀವದಾಯಕ ರೊಟ್ಟಿ, ನನ್ನ ಬಳಿ ಬರುವವನಿಗೆ ಹಸಿವೇ ಇರದು; ನನ್ನಲ್ಲಿ ವಿಶ್ವಾಸವಿಡುವವನಿಗೆ ಎಂದಿಗೂ ದಾಹವಾಗದು.

17.05.2026 - ಭೂಮಿಯಲ್ಲೂ ಸ್ವರ್ಗದಲ್ಲೂ ಸರ್ವಾಧಿಕಾರವನ್ನು ನನಗೆ ಕೊಡಲಾಗಿದೆ. ಆದ್ದರಿಂದ ನೀವು ಹೋಗಿ, ಸಕಲ ದೇಶಗಳ ಜನರನ್ನು ನನ್ನ ಶಿಷ್ಯರನ್ನಾಗಿ ಮಾಡಿರಿ

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 1:1-11 ಸನ್ಮಾನ್ಯ ಥೆಯೊಫಿಲನೇ, ಯೇಸುಸ್ವಾಮಿ ಸ್ವರ್ಗಕ್ಕೆ ಆರೋಹಣವಾದ ದಿನದವರೆಗೆ ಮಾಡಿದ ಕಾರ್ಯಗಳನ್ನೂ ನೀಡಿದ ಬೋಧನೆಗಳನ್ನೂ ಕ...