ಮೊದಲನೇ ವಾಚನ: ಪ್ರಲಾಪಗಳು 2:2, 10-14, 18-19
ಸ್ವಾಮಿ ಯಕೋಬಿನ ನಿವಾಸಗಳನ್ನು ನಾಶಪಡಿಸಿಹನು, ರೌದ್ರದಿಂದ ಯೆಹೂದ ಕೋಟೆಗಳನ್ನು ನೆಲಮವಾಗಿಸಿಹನು, ರಾಜ್ಯವನ್ನೂ ಅದರ ಪಾಲಕರನ್ನೂ ನೀಚಸ್ಥಿತಿಗೆ ಇಳಿಸಿಹನು. ತಲೆಯಮೇಲೆ ಧೂಳನ್ನು ತೂರಿಕೊಂಡು ಗೋಣಿತಟ್ಟನ್ನು ಸೊಂಟಕ್ಕೆ ಸುತ್ತಿಕೊಂಡು ಕುಕ್ಕರಿಸಿಹರು. ಸಿಯೋನ್ ನಗರಿಯ ಪ್ರಮುಖರು ತಲೆ ತಗ್ಗಿಸಿಹರು ಜೆರುಸಲೇಮಿನ ಯುವತಿಯರು. ಕಂಬನಿಗರೆದು ಇಂಗಿಹೋಗಿದೆ ಕಣ್ಣು ಕುದಿಯುತ್ತಿದೆ ನನ್ನೊಳಗೆ ಕರುಳು! ನನ್ನ ಜನತೆಯೆಂಬ ಯುವತಿ ಹಾಳಾಗಿ ಮಕ್ಕಳು ಹಾದಿಬೀದಿಗಳಲ್ಲಿ ಮೂರ್ಛೆ ಹೋಗಿ ನನ್ನ ಕರುಳು ಕರಗಿಹೋಗಿದೆ ನೀರಾಗಿ. 'ಅಮ್ಮಾ ತಿನ್ನಲಿಕ್ಕಿಲ್ಲವೇ? ಕುಡಿಯಲಿಕ್ಕಿಲ್ಲವೇ' ಎನ್ನುತ ಮಕ್ಕಳು ಮೂರ್ಛೆಗೊಂಡಿವೆ. ಗಾಯಗೊಂಡವರಂತೆ ನಗರದ ಚೌಕಗಳೊಳು ಪ್ರಾಣಬಿಡುತ್ತಿವೆಯಲ್ಲಾ ತಾಯಿಯ ಎದೆಯಮೇಲೆ ಆ ಹಸುಳೆಗಳು. ಎಲೈ ಜೆರುಸಲೇಮ್ ಯುವತಿಯೇ ನಿನಗೆ ಏನು ಹೇಳಲಿ? ನಿನ್ನನ್ನು ಯಾವುದಕ್ಕೆ ಹೋಲಿಸಲಿ? ಸಿಯೋನ್ ಕನ್ಯೆಯೇ, ನಿನ್ನನ್ನು ಹೇಗೆ ಸಂತೈಸಲಿ? ಸಂತೈಸುವ ಸಾಮತಿಯನ್ನು ಎಲ್ಲಿಂದ ತರಲಿ? ನಿನಗೊದಗಿರುವ ನಾಶ ಸಾಗರದಂತೆ ಅಪಾರ ನಿನ್ನನ್ನು ಸ್ವಸ್ಥಗೊಳಿಸಲು ಯಾರಿಂದ ತಾನೆ ಸಾಧ್ಯ? ನಿನ್ನ ಜನರು ಮೊರೆಯಿಡಲಿ ಮನಃಪೂರ್ವಕವಾಗಿ ಸಿಯೋನ್ ನಗರದ ಕೋಟೆಗೆ ಕೋಟೆಯೇ ಕಣ್ಣೀರಿಡಲಿ. ಹಗಲಿರುಳು ಕಂಬನಿ ಹರಿಯಲಿ ತೊರೆಯಂತೆ ನಿಮ್ಮ ನೇತ್ರಗಳಿಂದ ಸುರಿಯಲಿ ಒಂದೇ ಸಮನೆ. ರಾತ್ರಿಯ ಒಂದೊಂದು ಜಾವದಲ್ಲೂ ಎದ್ದು ಗೋಳಾಡಿರಿ. ನಿಮ್ಮ ಹೃದಯ ಕರಗಿ, ನೀರಾಗಿ ಸ್ವಾಮಿಯ ಮುಂದೆ ಹರಿಯಲಿ. ನಿಮ್ಮ ಮಕ್ಕಳ ಪ್ರಾಣವನ್ನು ಉಳಿಸಬೇಕೆಂದು ಕೈ ಮುಗಿದು ಪ್ರಾರ್ಥನೆ ಮಾಡಿ. ಹಸಿವಿನಿಂದ ಅವು ಮೂರ್ಛೆ ಹೋಗಿವೆ, ಬೀದಿಯ ಮೂಲೆಮೂಲೆಗಳಲ್ಲಿ.
ಕೀರ್ತನೆ: 74:1b-2, 3-5, 6-7, 20-21
ಶ್ಲೋಕ : ನೀ ಮರೆತುಬಿಡಬೇಡ ನಿನ್ನ ದೀನ ದಲಿತರನು ಒಮ್ಮೆಗೆ.
ಶುಭಸಂದೇಶ ಮತ್ತಾಯ 8:5-17
ಯೇಸುಸ್ವಾಮಿ ಕಫರ್ನವುಮ್ ಊರಿಗೆ ಬಂದಾಗ ಶತಾಧಿಪತಿಯೊಬ್ಬನು ಅವರನು ಎದುರುಗೊಂಡನು. "ಪ್ರಭೂ, ನನ್ನ ಸೇವಕ ಮನೆಯಲ್ಲಿ ಪಾರ್ಶ್ವವಾಯು ರೋಗದಂದ ಹಾಸಿಗೆ ಹಿಡಿದಿದ್ದಾನೆ ಬಹಾಳವಾಗಿ ನರಳುತ್ತಿದ್ದಾನೆ," ಎಂದು ವಿನಂತಿಸಿದನು. ಯೇಸು, "ನಾನೇ ಬಂದು ಅವನನ್ನು ಗುಣಪಡಿಸುತ್ತೇನೆ," ಎಂದರು. ಅದಕ್ಕೆ ಆ ಶತಾಧಿಪತಿ, "ಪ್ರಭುವೇ, ತಾವು ನನ್ನ ಮನೆಗೆ ಬರುವಷ್ಟು ಯೋಗ್ಯತೆ ನನಗಿಲ್ಲ. ತಾವು ಒಂದೇ ಒಂದು ಮಾತು ಹೇಳಿದರೆ ಸಾಕು, ನನ್ನ ಸೇವಕ ಸ್ವಸ್ಥನಾಗುವನು. ಏಕಂದರೆ, ನಾನು ಮತ್ತೊಬ್ಬರ ಕೈಕೆಳಗಿರುವವನು, ನನ್ನ ಅಧೀನದಲ್ಲೂ ಸೈನಿಕರಿದ್ದಾರೆ, ಅವರಲ್ಲಿ ಒಬ್ಬನಿಗೆ ನಾನು, "ಬಾ" ಎಂದರೆ ಬರುತ್ತಾನೆ ಇನ್ನೊಬ್ಬನಿಗೆ "ಹೋಗು" ಎಂದರೆ ಹೋಗುತ್ತಾನೆ. ಸೇವಕನಿಗೆ, "ಇಂತಿದ್ದನ್ನು ಮಾಡು" ಎಂದರೆ ಮಾಡುತ್ತಾನೆ, ಎಂದನು. ಈ ಮಾತನ್ನು ಕೇಳಿದ್ದೇ ಯೇಸುವಿಗೆ ಅತ್ಯಶ್ಚರ್ಯವಾಯಿತು. ತಮ್ಮನ್ನು ಹಿಂಬಾಲಿಸಿ ಬರುತ್ತಿದ್ದ ಜನರನ್ನು ನೋಡಿ ಹೀಗೆಂದರು: "ಇಂತಹ ಗಾಢ ವಿಶ್ವಾಸವನ್ನು ನಾನು ಇಸ್ರಯೇಲ್ ಜನರಲ್ಲಿ ಕೂಡ ಕಾಣಲಿಲ್ಲವೆಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ. ಪೂರ್ವ ಪಶ್ಚಿಮ ದಿಕ್ಕುಗಳಿಂದ ಅನೇಕ ಜನರು ಬಂದು ಅಬ್ರಹಾಮ, ಇಸಾಕ, ಯಕೋಬರ ಸಮೇತ ಸ್ವರ್ಗಸಾಮ್ರಾಜ್ಯದ ಹಬ್ಬದೂಟದಲ್ಲಿ ಭಾಗಿಗಳಾಗುವರು. ಆದರೆ ಯಾರು ಈ ಸಾಮ್ರಾಜ್ಯಕ್ಕೆ ಬಾಧ್ಯಸ್ಥರೋ ಅವರನ್ನೇ ಹೊರಗೆ ದಬ್ಬಲಾಗುವುದು; ಅಲ್ಲಿ, ಆ ಕಾರ್ಗತ್ತಲಲ್ಲಿ, ಅವರ ಗೋಳಾಟವೇನು! ಹಲ್ಲು ಕಡಿತವೇನು!" ಆನಂತರ ಯೇಸು ಆ ಶತಾಧಿಪತಿಗೆ, "ಇನ್ನು ಮನೆಗೆ ಹೋಗು, ನೀನು ವಿಶ್ವಾಸಿಸಿದಂತೆಯೇ ಆಗುವುದು,"ಎಂದರು. ಅದೇ ಕ್ಷಣದಲ್ಲಿ ಅವನ ಸೇವಕನು ಸ್ವಸ್ಥನಾದನು. ತರುವಾಯ ಯೇಸುಸ್ವಾಮಿ ಪೇತ್ರನ ಮನೆಗೆ ಬಂದರು. ಅಲ್ಲಿ ಪೇತ್ರನ ಅತ್ತೆ ಜ್ವರದಿಂದ ಮಲಗಿರುವುದನ್ನು ಕಂಡರು. ಯೇಸು ಆಕೆಯ ಕೈ ಮುಟ್ಟಿದುದ್ದೇ ಜ್ವರ ಬಿಟ್ಟುಹೋಯಿತು, ಆಕೆ ಎದ್ದು ಅವರನ್ನು ಸತ್ಕರಿಸಿದಳು. ಸಂಜೆಯಾಯಿತು ದೆವ್ವ ಹಿಡಿದಿದ್ದ ಅನೇಕರನ್ನು ಯೇಸುವಿನ ಬಳಿಗೆ ಕರೆತರಲಾಯಿತು. ಯೇಸು ತಮ್ಮ ಒಂದು ಮಾತಿನಿಂದಲೇ ದೆವ್ವಗಳನ್ನು ಬಿಡಿಸಿದರು. ಮಾತ್ರವಲ್ಲ, ರೋಗಪೀಡಿತರೆಲ್ಲರನ್ನೂ ಗುಣಪಡಿಸಿದರು. ಹೀಗೆ, "ನಮ್ಮ ದುರ್ಬಲತೆಗಳನ್ನುವಹಿಸಿಕೊಂಡನು," ಎಂಬ ಯೆಶಾಯನ ಪ್ರವಾದನೆ ಈಡೇರಿತು.
No comments:
Post a Comment