ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

02.06.21 - "ದೇವರು ಜೀವಿತರ ದೇವರೇ ಹೊರತು ಮೃತರ ದೇವರಲ್ಲ"

ಮೊದಲನೇ ವಾಚನ: ತೊಬೀತ 3:1-11, 16-17

ಆಗ ನಾನು ವ್ಯಸನಾಕ್ರಾಂತನಾದೆ. ನಿಟ್ಟುಸಿರಿಟ್ಟೆ. ಅತ್ತು ಪ್ರಲಾಪಿಸುತ್ತಾ ಹೀಗೆಂದು ಪ್ರಾರ್ಥನೆ ಮಾಡಿದೆ: ಹೇ ಸರ್ವೇಶ್ವರಾ, ನೀನು ನ್ಯಾಯಸ್ವರೂಪಿ: ಜಗತ್ತಿಗೆಲ್ಲ ನ್ಯಾಯಾಧಿಪತಿ: ನಿನ್ನ ಕಾರ್ಯಗಳೆಲ್ಲ ನ್ಯಾಯಸಮ್ಮತ ನಿನ್ನ ಮಾರ್ಗಗಳೆಲ್ಲ ಸತ್ಯ ಹಾಗೂ ದಯಾಪೂರಿತ. ಸರ್ವೇಶ್ವರಾ, ತಂದುಕೊ ನನ್ನನ್ನೀಗ ನೆನಪಿಗೆ ಕರುಣೆ ತೋರೆನಗೆ. ದಂಡಿಸಬೇಡ ನನ್ನ ಪಾಪಗಳಿಗಾಗಿ ಅರಿಯದೆ ಮಾಡಿದ ತಪ್ಪು ನೆಪ್ಪುಗಳಿಗಾಗಿ ನನ್ನ ಪೂರ್ವಜರ ಪಾಪದೋಷಗಳಿಗಾಗಿ. ನಿನ್ನ ಕಟ್ಟಳೆಗಳನ್ನು ಮೀರಿದೆವು ನಿನಗೆ ದ್ರೋಹವೆಸಗಿ ಪಾಪಮಾಡಿದೆವು; ಎಂದೇ ನಮ್ಮನ್ನೊಪ್ಪಿಸಿದೆ ಸೂರೆಗೆ, ಸೆರೆಗೆ, ಸಾವಿಗೆ ಚದರಿಸಿದೆ ಅನ್ಯಜನಾಂಗಗಳ ಈ ನಾಡಿಗೆ ಗುರಿಪಡಿಸಿದೆ ಇಲ್ಲಿನವರ ನಿಂದೆಪರಿಹಾಸ್ಯಕೆ. ನಿನ್ನ ನಿರ್ಣಯಗಳೆಲ್ಲ ನ್ಯಾಯಯುತ ನನಗೂ ಪೂರ್ವಜರಿಗೂ ನೀನಿತ್ತ ಶಿಕ್ಷೆ ಸೂಕ್ತ ಪಾಲಿಸಲಿಲ್ಲ ನಾವು ನಿನ್ನ ಆಜ್ಞೆಗಳನು ಕೈಗೊಳ್ಳಲಿಲ್ಲ ನಿನ್ನ ಸನ್ಮಾರ್ಗಗಳನು. ನಡೆಸೆನ್ನನೀಗ ನಿನ್ನ ಚಿತ್ತದ ಪ್ರಕಾರ ಬೇಕಾದರೆ ತೆಗೆದುಬಿಡು ಎನ್ನ ಪ್ರಾಣ. ಆಗ ತೆರಳುವೆ ನಾ ಜಗದಿಂದ ಮರೆಯಾಗಿ ಮರಳುವೆ ಧರೆಗೆ ಮಣ್ಣಾಗಿ. ಆಪಾದನೆಗಳನ್ನು ಕೇಳಿ ಸಾಕಾಗಿದೆ ದುಃಖಸಾಗರದಲ್ಲಿ ನಾ ಮುಳುಗಿರುವೆ. ನನಗೆ ಜೀವಕ್ಕಿಂತ ಸಾವೇ ಮೇಲಾಗಿದೆ. ಹೇ ಸರ್ವೇಶ್ವರಾ, ನೀಡೆನಗೆ ವಿಮೋಚನೆ ನಾನು ಸೇರಮಾಡು ಅಮರ ನಿವಾಸಕೆ. ಓ ಸರ್ವೇಶ್ವರಾ, ವಿಮುಖನಾಗಬೇಡ ನನಗೆ. ಈ ಜೀವನದ ಕಷ್ಟಸಂಕಟಗಳ ಸಹಿಸುವುದಕ್ಕಿಂತ ಕ್ರೂರನಿಂದೆ ದೂಷಣೆಗಳ ಕೇಳುವುದಕ್ಕಿಂತ ಸಾವೇ ಲೇಸು ನನಗೆ ಈ ಎಲ್ಲಕ್ಕಿಂತ. ಮೇದ್ಯ ನಾಡಿನ ಎಕ್‍ಬತಾನ ಎಂಬ ನಗರದಲ್ಲಿ ರಾಗುಯೇಲನ ಮಗಳು ಸಾರಾ ಎಂಬಾಕೆ ಇದ್ದಳು. ಅದೇ ದಿನದಂದು ಸಾರಳಿಗೆ ತನ್ನ ತಂದೆಯ ಸೇವಕಿಯೊಬ್ಬಳಿಂದ ಅಕಸ್ಮಾತ್ತಾಗಿ ನಿಂದೆ ದೂಷಣೆಗಳನ್ನು ಕೇಳಿಸಿಕೊಂಡಳು. ಸಾರಳಿಗೆ ಏಳುಸಾರಿ ವಿವಾಹವಾಗಿತ್ತು. ದೆವ್ವಗಳಲ್ಲೆಲ್ಲ ಅತೀ ದುಷ್ಟನಾದ ಆಸ್ಮೋದೇಯುಸ್ ಆಕೆಯ ಏಳು ಗಂಡಂದಿರನ್ನು ಒಬ್ಬರಾದ ಮೇಲೆ ಒಬ್ಬರನ್ನು ಆಕೆಯೊಂದಿಗೆ ಕೂಡಿ ಬಾಳುವುದಕ್ಕೆ ಮುಂಚೆಯೆ, ಕೊಂದುಹಾಕಿದ್ದನು. ಒಂದು ಬಾರಿ ಆ ಸೇವಕಿ ಸಾರಾಳಿಗೆ, “ಗಂಡಂದಿರ ಕೊಲೆಗಡುಕಿ ನೀನು; ಈಗಾಗಲೇ ಏಳು ಮಂದಿಯನ್ನು ಮದುವೆ ಆದೆ; ಒಬ್ಬನಿಂದಲೂ ಮಕ್ಕಳನ್ನು ಪಡೆಯದಷ್ಟು ನತದೃಷ್ಟಳು; ಗಂಡಂದಿರನ್ನು ಕಳೆದುಕೊಂಡ ಕೋಪವನ್ನು ನಮ್ಮ ಮೇಲೆ ಏಕೆ ಕಾರುತ್ತೀಯೆ? ಬೇಕಾದರೆ ಹೋಗಿ ಸತ್ತ ಗಂಡಂದಿರೊಂದಿಗೆ ಸೇರಿಕೊ. ನನ್ನ ಕಣ್ಣಿಗೆ ಎಂದೂ ನಿನ್ನ ಮಗ ಬೀಳದಿರಲಿ,” ಎಂದು ಶಪಿಸಿದಳು. ಇದನ್ನು ಕೇಳಿ, ಸಾರಳಿಗೆ ತೀವ್ರ ದುಃಖ ಉಂಟಾಯಿತು. ಆಕೆ ಅತ್ತು ಪ್ರಲಾಪಿಸಿದಳು. ಕುತ್ತಿಗೆಗೆ ನೇಣುಹಾಕಿಕೊಳ್ಳಲು ತಂದೆಯ ಕೊಠಡಿಗೆ ಹೋದಳು. ಆದರೆ ಆಕೆಗೆ ಒಂದು ಯೋಚನೆ ಹೊಳೆಯಿತು. ಬಹುಶಃ ಅವರು ನನ್ನ ತಂದೆಯನ್ನು ದೂಷಿಸಬಹುದು: “ನಿನ್ನ ಅಚ್ಚು ಮೆಚ್ಚಿನ ಮಗಳೊಬ್ಬಳೇ ದುಃಖದಿಂದ ನೇಣು ಹಾಕಿಕೊಂಡಳು” ಎಂದು ಜರೆಯಬಹುದು. ಇಂಥ ಚುಚ್ಚುಮಾತನ್ನು ಕೇಳಿದೊಡನೆ ನನ್ನ ವಯೋವೃದ್ಧ ತಂದೆ ಮೃತ್ಯುಲೋಕವನ್ನು ಸೇರಬಹುದು. ಆದುದರಿಂದ ನಾನೀಗ ನೇಣುಹಾಕಿಕೊಳ್ಳದಿರುವುದು ಲೇಸು. ಬದಲಿಗೆ ಸರ್ವೇಶ್ವರನೇ ಮರಣವನ್ನು ಕೊಡಲೆಂದು ಪ್ರಾರ್ಥಿಸುವೆ. ಆಗ ಇಂಥ ದೂಷಣೆಗಳನ್ನು ಕೇಳಲು ಅವಕಾಶ ಇರದು ಎಂದುಕೊಂಡಳು. ಅಂತೆಯೇ ಸಾರಳು ಕಿಟಕಿಯ ಬಳಿ ನಿಂತು ಕೈಗಳನ್ನು ಮೇಲಕ್ಕೆತ್ತಿ ಹೀಗೆಂದು ಪ್ರಾರ್ಥಿಸಿದಳು: ಕರುಣಾಳು ದೇವಾ, ನಿನಗೆ ಸ್ತುತಿಸ್ತೋತ್ರ ನಿನ್ನ ನಾಮ ಎಂದೆಂದಿಗೂ ಪೂಜಿತ ಸೃಷ್ಟಿಸಮಸ್ತವು ನಿನ್ನನು ಸ್ತುತಿಸಲಿ ಸತತ. ತೊಬೀತನ ಮತ್ತು ಸಾರಳ ಪ್ರಾರ್ಥನೆ ಮಹಿಮಾನ್ವಿತ ದೇವರ ಸನ್ನಿಧಿಗೆ ಮುಟ್ಟಿತು. ಅವರಿಬ್ಬರನ್ನೂ ಗುಣಪಡಿಸಲು ದೇವರು ರಫಯೇಲ್ ಎಂಬವನನ್ನು ಕಳುಹಿಸಿದರು. ತೊಬೀತನು ತನ್ನ ಕಣ್ಣುಗಳಿಂದ ದೇವರ ಜ್ಯೋತಿಯನ್ನು ನೋಡಲು ಸಾಧ್ಯವಾಗುವಂತೆ ಅವನ ಕಣ್ಣುಗಳ ಮಚ್ಚೆಗಳನ್ನು ತೆಗೆಯಬೇಕಾಗಿತ್ತು. ರಾಗುಯೇಲನ ಮಗಳು ಸಾರಳನ್ನು ತೊಬೀತನ ಮಗ ತೊಬಿಯಾಸನಿಗೆ ವಿವಾಹ ಮಾಡಿಕೊಡಬೇಕಾಗಿತ್ತು. ಮಾತ್ರವಲ್ಲ, ದೆವ್ವಗಳಲ್ಲೆಲ್ಲ ಅತೀ ದುಷ್ಟನಾದ ಆಸ್ಮೋದೇಯುಸ್ ದೆವ್ವವನ್ನು ಆಕೆಯಿಂದ ತೊಲಗಿಸಬೇಕಾಗಿತ್ತು. ಸಾರಳನ್ನು ಮದುವೆಯಾಗಲು ಬೇರೆಯವರಿಗಿಂತಲೂ ತೊಬಿಯಾಸನಿಗೆ ಹಕ್ಕುಬಾಧ್ಯತೆ ಇತ್ತು. ತೊಬೀತನು ಹೊರಾಂಗಣದಿಂದ ಮನೆಯೊಳಕ್ಕೆ ಹೋದನು. ಅದೇ ಸಮಯದಲ್ಲಿ ರಾಗುಯೇಲನ ಮಗಳಾದ ಸಾರಳು ಮಹಡಿಯ ಕೊಠಡಿಯಿಂದ ಇಳಿದು ಬಂದಳು.

ಕೀರ್ತನೆ 25: 2-3. 4-5 6-7, 8-9
ಶ್ಲೋಕ: ಇಟ್ಟಿರುವೆ ಭರವಸೆ ನಿನ್ನಲೆ ದೇವಾ ಸನ್ನುತ

ಎತ್ತಿರುವೆ ಪ್ರಭೂ, ಹೃನ್ಮನಗಳನು ನಿನ್ನತ್ತ
ಇಟ್ಟಿರುವೆ ಭರವಸೆ ನಿನ್ನಲೆ ದೇವಾ ಸನ್ನುತ
ಆಗಲಿ ಆಶಾಭಂಗ ನಿನ್ನೆದುರಾಳಿಗಳಿಗೆ
ಹಾಗಾಗದಿರಲಿ ನಿನ್ನ ನಿರೀಕ್ಷಿಸುವವರಿಗೆ. ಶ್ಲೋಕ

ನಿನ್ನ ಮಾರ್ಗವನು ಪ್ರಭು ನನಗೆ ತೋರಿಸು
ನೀನೊಪ್ಪುವ ಪಥದಲಿ ನಾ ನಡೆಯ ಕಲಿಸು
ಸನ್ಮಾರ್ಗದಲಿ ಮುನ್ನಡೆಸೆನ್ನ ದೇವಾ, ಮುಕ್ತಿದಾತ
ಕಲಿಸೆನಗೆ, ನಿನಗಾಗಿ ಕಾದಿರುವೆ ಸತತ. ಶ್ಲೋಕ

ನೆನೆಸಿಕೋ ಪ್ರಭು, ನಿನ್ನ ನಿರಂತರ ಕರುಣೆಯನು
ಆದಿಯಿಂದ ನೀ ತೋರಿದಚಲ ಪ್ರೀತಿಯನು
ಯೌವನದೆನ್ನ ಪಾಪ ಪ್ರವೃತ್ತಿಗಳ ಮನದಲ್ಲಿಟ್ಟುಕೊಳ್ಳಬೇಡ
ನಿನ್ನೊಲುಮೆ ನಲ್ಮೆಗಳ ನಿಮಿತ್ತ ಪ್ರಭು, ನನ್ನ ನೆನೆಯದಿರಬೇಡ. ಶ್ಲೋಕ

ಸತ್ಯಸ್ವರೂಪನು, ದಯಾವಂತನು ಪ್ರಭು
ದಾರಿತಪ್ಪಿದವರಿಗೆ ಬೋಧಕನು ವಿಭು
ದೀನರನು ನಡೆಸುವನು ತನ್ನ ವಿಧಿಗನುಸಾರ
ದಲಿತರಿಗೆ ಕಲಿಸುವನು ತನ್ನ ಧರ್ಮಾಚಾರ. ಶ್ಲೋಕ

ಶುಭಸಂದೇಶ: ಮಾರ್ಕ 12: 18-27


ಅನಂತರ ಸದ್ದುಕಾಯರು ಯೇಸುಸ್ವಾಮಿಯ ಬಳಿಗೆ ಬಂದರು. ಸತ್ತಮೇಲೆ ಪುನರುತ್ಥಾನ ಇಲ್ಲವೆಂಬುದು ಇವರ ಅಭಿಮತ. ಇವರು ಯೇಸುವನ್ನು, “ಬೋಧಕರೇ, ಒಬ್ಬನು ಮಕ್ಕಳಿಲ್ಲದೆ ಸತ್ತರೆ, ಅವನ ಹೆಂಡತಿಯನ್ನು ಅವನ ತಮ್ಮನು ಮದುವೆ ಮಾಡಿಕೊಂಡು ಅಣ್ಣನಿಗೆ ಸಂತಾನ ಪಡೆಯಬೇಕು,’ ಎಂದು ಮೋಶೆ ನಮಗಾಗಿ ಬರೆದಿಟ್ಟಿದ್ದಾನಲ್ಲವೇ? ಒಮ್ಮೆ ಏಳುಮಂದಿ ಅಣ್ಣತಮ್ಮಂದಿರಿದ್ದರು. ಅವರಲ್ಲಿ ಮೊದಲನೆಯವನಿಗೆ ವಿವಾಹವಾಯಿತು. ಅವನು ಮಕ್ಕಳಿಲ್ಲದೆ ಮೃತನಾದುದರಿಂದ ಎರಡನೆಯವನು ಅವನ ಹೆಂಡತಿಯನ್ನು ಮದುವೆಮಾಡಿಕೊಂಡು, ಸಂತಾನವಿಲ್ಲದೆ ಸಾವನ್ನಪ್ಪಿದ. ಮೂರನೆಯವನಿಗೂ ಇದೇ ಗತಿಯಾಯಿತು. ಅನಂತರ, ಉಳಿದವರೂ ಒಬ್ಬರ ಬಳಿಕ ಇನ್ನೊಬ್ಬರು ಆಕೆಯನ್ನು ಮದುವೆ ಮಾಡಿಕೊಂಡು, ಸಂತಾನವಿಲ್ಲದೆ ಸತ್ತುಹೋದರು. ಕಡೆಗೆ ಆ ಸ್ತ್ರೀಯೂ ಮರಣ ಹೊಂದಿದಳು. ಆಗ ಹೇಳಿ, ಪುನರುತ್ಥಾನದ ದಿನದಲ್ಲಿ, ಆಕೆ ಯಾರ ಹೆಂಡತಿ ಎನಿಸಿಕೊಳ್ಳುವಳು? ಏಳು ಮಂದಿ ಸಹೋದರರೂ ಆಕೆಯನ್ನು ವಿವಾಹವಾಗಿದ್ದರಲ್ಲವೇ?” ಎಂದು ಪ್ರಶ್ನಿಸಿದರು. ಅದಕ್ಕೆ ಯೇಸು, “ನಿಮ್ಮದು ಎಂಥಾ ತಪ್ಪು ಅಭಿಪ್ರಾಯ! ಪವಿತ್ರಗ್ರಂಥವನ್ನು ಆಗಲಿ, ದೇವರ ಶಕ್ತಿಯನ್ನಾಗಲೀ ನೀವು ಅರ್ಥಮಾಡಿಕೊಂಡಿಲ್ಲ. ಸತ್ತವರು ಪುನರುತ್ಥಾನವಾದ ಮೇಲೆ ಮದುವೆ ಮಾಡಿಕೊಳ್ಳುವುದೂ ಇಲ್ಲ, ಮದುವೆ ಮಾಡಿಕೊಡುವುದೂ ಇಲ್ಲ. ಅವರು ಸ್ವರ್ಗದ ದೇವದೂತರಂತೆ ಇರುತ್ತಾರೆ. ಇದಲ್ಲದೆ ಸತ್ತವರು ಪುನರುತ್ಥಾನವಾಗುವ ವಿಷಯದಲ್ಲಿ ಹೇಳುವುದಾದರೆ: ‘ನಾನು ಅಬ್ರಹಾಮನಿಗೆ ದೇವರು, ಇಸಾಕನಿಗೆ ದೇವರು, ಯಕೋಬನಿಗೆ ದೇವರು’ ಎಂದು ದೇವರು ಮೋಶೆಗೆ ಹೇಳಿದ್ದನ್ನು ಮೋಶೆಯ ಗ್ರಂಥದಲ್ಲಿ ‘ಉರಿಯುವ ಪೊದೆ’ಯ ಪ್ರಸ್ತಾಪವಿರುವ ಭಾಗದಲ್ಲಿ, ನೀವು ಓದಿರಬೇಕಲ್ಲವೆ? ದೇವರು ಜೀವಿತರ ದೇವರೇ ಹೊರತು ಮೃತರ ದೇವರಲ್ಲ, ನಿಮ್ಮ ಅಭಿಪ್ರಾಯ ತೀರಾ ತಪ್ಪಾಗಿದೆ,” ಎಂದರು.

01.06.21

ಮೊದಲನೇ ವಾಚನ: ತೊಬೀತ 2: 9-14

ಅದೇ ರಾತ್ರಿ ಸ್ನಾನಮಾಡಿಕೊಂಡು ನನ್ನ ಅಂಗಳದ ಗೋಡೆಯ ಪಕ್ಕದಲ್ಲೇ ಮಲಗಿಕೊಂಡೆ. ಸೆಕೆಯಾಗಿದ್ದರಿಂದ ಮುಖವನ್ನು ಮುಚ್ಚಿಕೊಳ್ಳಲಿಲ್ಲ. ತಲೆಯ ಮೇಲ್ಭಾಗದ ಗೋಡೆಯಲ್ಲಿ ಗುಬ್ಬಚ್ಚಿಗಳಿದ್ದವೆಂದು ನನಗೆ ತಿಳಿದಿರಲಿಲ್ಲ. ಅವುಗಳ ಬಿಸಿಬಿಸಿ ಪಿಚ್ಚಿಕೆಗಳು ಕಣ್ಣುಗಳಿಗೆ ಬಿದ್ದವು. ಕಣ್ಣುಗಳ ಮೇಲೆ ಬಿಳಿಮಚ್ಚೆಗಳು ಉಂಟಾದವು. ಚಿಕಿತ್ಸೆಗಾಗಿ ವೈದ್ಯರ ಬಳಿಗೆ ಹೋದೆ. ಮುಲಾಮುಗಳಿಂದ ಅದನ್ನು ಗುಣಪಡಿಸಲು ಅವರು ಪ್ರಯತ್ನಿಸಿದಷ್ಟೂ ನನ್ನ ದೃಷ್ಟಿ ಕಡಿಮೆಯಾಯಿತು. ಕೊನೆಗೆ ನಾನು ಸಂಪೂರ್ಣವಾಗಿ ಕುರುಡನಾದೆ. ನಾಲ್ಕು ವರ್ಷಗಳ ಕಾಲ ದೃಷ್ಟಿಯಿಲ್ಲದೆ ಇದ್ದೆ. ನನ್ನ ಬಂಧುಬಳಗದವರೆಲ್ಲ ನನ್ನ ಬಗ್ಗೆ ಅನುಕಂಪ ತಾಳಿದ್ದರು. ಅಹೀಕರನು ಎಲಾಮಿಯಸಿಗೆ ಹೋಗುವತನಕ ಎರಡು ವರ್ಷಕಾಲ ನನಗೆ ಜೀವನಾಂಶವನ್ನು ಒದಗಿಸಿ ಕೊಟ್ಟನು. ಅಹೀಕರನು ಹೊರಟುಹೋದ ತರುವಾಯ ನನ್ನ ಪತ್ನಿ ಅನ್ನಾ ದುಡಿಯಬೇಕಾಗಿ ಬಂತು. ಅವಳು ಉಣ್ಣೆಯಿಂದ ನೂಲುತೆಗೆದು ಬಟ್ಟೆಯನ್ನು ನೇಯುತ್ತಿದ್ದಳು. ಕ್ರಯಮಾಡಿದವರಿಗೆ ಬಟ್ಟೆಯನ್ನು ತಲುಪಿಸಿ ಅವರಿಂದ ಹಣಪಡೆಯುತ್ತಿದ್ದಳು. ಡಿಸ್ಪ್ರೋಸ್ ತಿಂಗಳ ಏಳನೆಯ ದಿನದಂದು ತಾನೇ ನೆಯ್ದ ಬಟ್ಟೆಯ ತುಂಡೊಂದನ್ನು ಗೊತ್ತುಮಾಡಿದವರಿಗೆ ಕೊಟ್ಟಳು. ಅವರು ಅದಕ್ಕೆ ಪೂರ್ತಿ ಹಣವನ್ನು ಪಾವತಿ ಮಾಡಿದ್ದಲ್ಲದೆ ಊಟಕ್ಕೆಂದು ಒಂದು ಮೇಕೆಯನ್ನು ಸಹ ಕೊಡುಗೆಯಾಗಿ ಕೊಟ್ಟರು. ಆ ಮೇಕೆ ಮನೆಗೆ ಬಂದಾಗ ಅರಚಲು ಆರಂಭಿಸಿತು. ಆಗ ನನ್ನಾಕೆಯನ್ನು ಕರೆದು, “ಈ ಮೇಕೆ ಎಲ್ಲಿಂದ ಬಂತು? ಇದು ಕದ್ದು ತಂದ ಮೇಕೆಯಲ್ಲ ತಾನೇ? ಕದ್ದವಸ್ತುವನ್ನು ತಿನ್ನಲು ನಮಗೆ ಹಕ್ಕಿಲ್ಲ. ಇದನ್ನು ಮಾಲೀಕರಿಗೆ ಹಿಂದಿರುಗಿಸು,” ಎಂದು ಹೇಳಿದೆ. ಆದರೆ ಆಕೆ, “ಇಲ್ಲ, ನನ್ನ ಕೂಲಿಗಿಂತ ಹೆಚ್ಚಾಗಿ ಇದನ್ನು ಕೊಡುಗೆಯಾಗಿ ನನಗೆ ಕೊಟ್ಟರು,” ಎಂದು ಹೇಳಿದಳು. ನಾನು ಆಕೆಯನ್ನು ನಂಬಲಿಲ್ಲ. ಮಾಲೀಕರಿಗೆ ಅದನ್ನು ಹಿಂದಿರುಗಿಸಬೇಕೆಂದು ಒತ್ತಾಯ ಮಾಡಿದೆ. ಅವಳ ನಡತೆಯ ವಿಷಯದಲ್ಲಿ ನನಗೆ ತೀವ್ರ ನಾಚಿಕೆಯಾಯಿತು. ಅದಕ್ಕವಳು, “ನಿನ್ನ ದಾನಧರ್ಮ ಏನಾಯಿತು? ನಿನ್ನ ಸತ್ಕಾರ್ಯಗಳಿಂದ ಏನು ಬಂತು? ಅವುಗಳಿಂದ ನಿನಗೆ ಲಭಿಸಿದ ಪ್ರತಿಫಲ ಎಲ್ಲರಿಗೂ ಗೊತ್ತಾದ ವಿಷಯ!” ಎಂದು ಜರೆದಳು.

ಕೀರ್ತನೆ: 112: 1-2, 7-9
ಶ್ಲೋಕ: ಪ್ರಭುವಿನಲಿ ಭರವಸೆಯಿಟ್ಟ ಆ ಮನವು ಅಸ್ಥಿರವಲ್ಲ

ಪ್ರಭುವಿನಲಿ ಭಯಭಕ್ತಿ ಉಳ್ಳವನು ಧನ್ಯನು
ಆತನಾಜ್ಞೆಗಳಲಿ ಹಿಗ್ಗುವವನು ಭಾಗ್ಯನು
ಬಲಿಷ್ಠವಾಗುವುದು ಜಗದೊಳು ಅವನ ಸಂತಾನ
ಸಜ್ಜನರ ಸಂತತಿ ಪಡೆವುದು ಆಶೀರ್ವಚನ. ಶ್ಲೋಕ

ಅಶುಭವಾರ್ತೆಯ ಭಯಭೀತಿ ಯಾವುದೂ ಅವನಿಗಿಲ್ಲ
ಪ್ರಭುವಿನಲಿ ಭರವಸೆಯಿಟ್ಟ ಆ ಮನವು ಅಸ್ಥಿರವಲ್ಲ
ದೃಢವಿದೆ ಅವನ ಮನ, ಎದೆಗುಂದನವನು
ಕಾಣುವನು ದುರುಳರಿಗಾಗುವ ದಂಡನೆಯನು. ಶ್ಲೋಕ

ಉದಾರತೆಯಿಂದ ಕೊಡುವನು ಬಡವರಿಗೆ
ಫಲಿಸುವುದು ಅವನಾ ನೀತಿ ಸದಾಕಾಲಕೆ
ಮಹಿಮೆತರುವ ಕೋಡುಮೂಡುವುದು ಅವನಿಗೆ. ಶ್ಲೋಕ

ಶುಭಸಂದೇಶ: ಮಾರ್ಕ 12: 13-17

ಆಮೇಲೆ ಅವರು ಯೇಸುಸ್ವಾಮಿಯನ್ನು ಮಾತಿನಲ್ಲೇ ಸಿಕ್ಕಿಸುವ ಉದ್ದೇಶದಿಂದ ಕೆಲವು ಫರಿಸಾಯರನ್ನೂ ಹೆರೋದನ ಪಕ್ಷದ ಕೆಲವರನ್ನೂ ಅವರ ಬಳಿಗೆ ಕಳುಹಿಸಿದರು. ಇವರು ಬಂದು, “ಬೋಧಕರೇ, ತಾವು ಸತ್ಯವಂತರು, ಸ್ಥಾನಮಾನಕ್ಕೆ ಮಣಿಯದವರು, ಮುಖದಾಕ್ಷಿಣ್ಯಕ್ಕೆ ಎಡೆಕೊಡದವರು, ಸತ್ಯಕ್ಕನುಸಾರ ದೈವಮಾರ್ಗವನ್ನು ಬೋಧಿಸುವವರು ಎಂದು ನಾವು ಬಲ್ಲೆವು. ಹೀಗಿರುವಲ್ಲಿ ರೋಮ್ ಚಕ್ರಾಧಿಪತಿಗೆ ತೆರಿಗೆ ಕೊಡುವುದು ಧರ್ಮಸಮ್ಮತವೋ, ಅಲ್ಲವೋ? ನಾವದನ್ನು ಕೊಡಬೇಕೋ, ಬೇಡವೋ?” ಎಂದು ಕೇಳಿದರು. ಅವರ ಕಪಟತನವನ್ನು ಯೇಸು ಗ್ರಹಿಸಿ, “ನೀವು ನನ್ನನ್ನು ಪರೀಕ್ಷಿಸುವುದೇಕೆ? ಒಂದು ನಾಣ್ಯವನ್ನು ತನ್ನಿ, ಅದನ್ನು ನೋಡೋಣ,” ಎಂದರು. ಅವರೊಂದು ನಾಣ್ಯವನ್ನು ತಂದರು. “ಇದರ ಮೇಲಿರುವುದು ಯಾರ ಮುದ್ರೆ? ಯಾರ ಲಿಪಿ?” ಎಂದು ಯೇಸು ಕೇಳಿದರು. ಅದಕ್ಕೆ ಅವರು “ಅವು ರೋಮ್ ಚಕ್ರವರ್ತಿಯವು,” ಎಂದರು. ಆಗ ಯೇಸು, “ಹಾಗಾದರೆ ಚಕ್ರವರ್ತಿಗೆ ಸಲ್ಲತಕ್ಕದ್ದನ್ನು ಚಕ್ರವರ್ತಿಗೂ ದೇವರಿಗೆ ಸಲ್ಲತಕ್ಕದ್ದನ್ನು ದೇವರಿಗೂ ಸಲ್ಲಿಸಿರಿ,” ಎಂದರು. ಇದನ್ನು ಕೇಳಿದ್ದೇ ಆ ಜನರು ಯೇಸುವಿನ ಬಗ್ಗೆ ಅತ್ಯಾಶ್ಚರ್ಯಪಟ್ಟರು.

31.05.21 - “ಸ್ತ್ರೀಯರಲ್ಲೆಲ್ಲಾ ಧನ್ಯಳು ನೀನು; ನಿನ್ನ ಕರುಳ ಕುಡಿಯೂ ಧನ್ಯ!"

 ಮೊದಲನೇ ವಾಚನ: ಜೆಫನ್ಯ 3: 14-18

ಹರ್ಷಧ್ವನಿಗೈ, ಸಿಯೋನ್ ಕುವರಿಯೇ ಘೋಷಿಸು, ಇಸ್ರಯೇಲ್ ದೇಶವೇ, ಹೃತ್ಪೂರ್ವಕವಾಗಿ ಸಂತೋಷಿಸು, ಜೆರುಸಲೇಮ್ ನಗರವೇ. ತಪ್ಪಿಸಿಹನು ಸರ್ವೇಶ ನಿನಗೆ ವಿಧಿಸಿರುವ ದಂಡನೆಗಳನು ತಳ್ಳಿ ಹೊರಗಟ್ಟಿಹನು ನಿನ್ನ ಶತ್ರುಗಳನು ಇಸ್ರಯೇಲಿನ ರಾಜನಾದ ಸರ್ವೇಶ ಇಹನು ನಿನ್ನ ಮಧ್ಯೆ ನೀನಿರುವೆ ಇನ್ನೆಂದಿಗೂ ಕೇಡಿಗಂಜದೆ. ಜೆರುಸಲೇಮಿಗೆ ಈ ಪರಿ ಹೇಳುವರು ಆ ದಿನದೊಳು: “ಅಂಜಬೇಡ ಸಿಯೋನ್, ಸೋತು ಜೋಲುಬೀಳದಿರಲಿ ನಿನ್ನ ಕೈಗಳು.” ಪ್ರಸನ್ನವಾಗಿಹನು ದೇವ, ಸರ್ವೇಶ ನಿನ್ನ ಮಧ್ಯೆ ಕೊಡುವನಾ ಶೂರ ನಿನಗೆ ರಕ್ಷಣೆ ಹರ್ಷಾನಂದಗೊಳ್ಳುವನು ನಿನ್ನ ವಿಷಯದಲಿ ಪುನಶ್ಚೇತನಗೊಳಿಸುವನು ನಿನ್ನನು ಪ್ರಶಾಂತ ಪ್ರೀತಿಯಲಿ ಗಾನಗೀತೆಗಳಿಂದ ತೋಷಿಸುವನು ನಿನ್ನಲಿ ಹಬ್ಬಹುಣ್ಣಿಮೆಗಳ ತರದಲಿ. ತಡೆದುಬಿಡುವನು ಸರ್ವವಿನಾಶವನು ದೂರಮಾಡುವನು ನಿನ್ನಿಂದ ನಿಂದೆ ಅಪಮಾನವನು.

ಯೆಶಾಯ 12: 2-6

ಶ್ಲೋಕ: ಹಾಡಿರಿ  ಮಾಡಿರಿ ಭಜನ, ಇಸ್ರಯೇಲಿನಾ ಸ್ವಾಮಿ ಪರಮ ಪಾವನ

ದೇವರೇ ಉದ್ಧಾರಕನೆನಗೆ ಆತನಲ್ಲಿದೆ ನನಗೆ ನಿರ್ಭೀತ ನಂಬಿಕೆ. 
ದೇವಾದಿದೇವನೇ ಎನಗೆ ಶಕ್ತಿ 
ಆತನೆನ್ನ ಕೀರ್ತನೆಯ ವ್ಯಕ್ತಿ ತಂದಿಹನಾತ ಎನಗೆ ಮುಕ್ತಿ.”
ಉದ್ಧರಿಸುವಾ ಒರತೆಗಳಿಂದ ಸೇದುವಿರಿ ನೀರನು ಹರುಷದಿಂದ. //  ಶ್ಲೋಕ

“ಸಲ್ಲಿಸಿರಿ ಸರ್ವೇಶ್ವರನಿಗೆ ಕೃತಜ್ಞತೆಯನು 
ಸ್ಮರಿಸಿರಿ ಆತನ ಶ್ರೀನಾಮವನು 
ಸಾರಿರಿ ಜನತೆಗೆ ಆತನ ಕಾರ್ಯಗಳನು 
ಘೋಷಿಸಿರಿ ಆತನ ನಾಮ ಘನತೆಯನು. //  ಶ್ಲೋಕ

ಹಾಡಿರಿ ಸರ್ವೇಶ್ವರನಿಗೆ ಸ್ತುತಿಯನು 
ಎಸಗಿಹನಾತ ಮಹಿಮಾ ಕಾರ್ಯಗಳನು 
ತಿಳಿಸಿರಿ ಜಗದಾದ್ಯಂತಕೆ ಈ ವಿಷಯವನು.
ಸಿಯೋನಿನ ನಿವಾಸಿಗಳೇ, ಹಾಡಿರಿ, ಮಾಡಿರಿ ಭಜನ 
ನಿಮ್ಮ ಮಧ್ಯೆಯಿರುವ ಆ ಘನವಂತನ 
ಇಸ್ರಯೇಲಿನಾ ಸ್ವಾಮಿ ಪರಮಪಾವನ.” //  ಶ್ಲೋಕ

ಶುಭಸಂದೇಶ: ಲೂಕ 1: 39-56


ಇದಾದ ಕೆಲವು ದಿನಗಳಲ್ಲೇ ಮರಿಯಳು ಪ್ರಯಾಣಹೊರಟು ಜುದೇಯದ ಗುಡ್ಡಗಾಡಿನಲ್ಲಿರುವ ಒಂದು ಊರಿಗೆ ತ್ವರೆಯಾಗಿ ಬಂದಳು. ಅಲ್ಲಿ ಜಕರೀಯನ ಮನೆಗೆ ಹೋಗಿ ಎಲಿಜಬೇತಳನ್ನು ವಂದಿಸಿದಳು. ಮರಿಯಳ ವಂದನೆಯನ್ನು ಎಲಿಜಬೇತಳು ಕೇಳಿದ್ದೇ ತಡ, ಆಕೆಯ ಗರ್ಭದಲ್ಲಿದ್ದ ಶಿಶು ನಲಿದಾಡಿತು; ಎಲಿಜಬೇತಳು ಪವಿತ್ರಾತ್ಮಭರಿತಳಾಗಿ ಹರ್ಷೋದ್ಗಾರದಿಂದ ಹೀಗೆಂದಳು: “ಸ್ತ್ರೀಯರಲ್ಲೆಲ್ಲಾ ಧನ್ಯಳು ನೀನು; ನಿನ್ನ ಕರುಳ ಕುಡಿಯೂ ಧನ್ಯ! ನನ್ನ ಪ್ರಭುವಿನ ತಾಯಿ ನೀನು; ನನ್ನ ಬಳಿಗೆ ಬಂದುದು ಅದೆಂಥ ಭಾಗ್ಯ! ನಿನ್ನ ವಂದನೆಯ ದನಿ ನನ್ನ ಕಿವಿ ತಾಕಿದೊಡನೆ ನಲಿದಾಡಿತು ಆನಂದದಿಂದ, ನನ್ನ ಕರುಳ ಕುಡಿ! ನಂಬಿ ಧನ್ಯಳಾದೆ ನೀನು, ದೇವರಿಂದ ಬಂದ ವಾರ್ತೆ ನೆರವೇರಿಯೇ ತೀರುವುದೆಂದು.” ಮರಿಯಳ ಸ್ತುತಿಗೀತೆ ಆಗ ಹೀಗೆಂದು ಮರಿಯಳು ಹೊಗಳಿದಳು: “ಎನ್ನ ಮನ ಮಾಡುತ್ತಿದೆ ಸರ್ವೇಶ್ವರನ ಸ್ತುತಿ ! ಉಲ್ಲಾಸಿಸುತ್ತಿದೆ ಮುಕ್ತಿದಾತ ದೇವನಲಿ !! ತನ್ನ ದಾಸಿಯ ದೀನತೆಯನು ನೆನಪಿಗೆ ತಂದುಕೊಂಡನಾತ ! ಧನ್ಯಳೆಂದು ಹೊಗಳುವರೆನ್ನನು ಇಂದಿನಿಂದ ಸರ್ವ ಜನಾಂಗ !! ಏಕೆನೆ ಮಾಡಿಹನೆನಗೆ ಸರ್ವಶಕ್ತನು ಮಹತ್ಕಾರ್ಯ ! ನಿಜಕ್ಕೂ ಆತನ ನಾಮಧೇಯ ಪರಮಪೂಜ್ಯ !! ಆತನಲ್ಲಿ ಭಯಭಕ್ತಿಯುಳ್ಳವರಿಗೆ ! ಆತನ ಪ್ರೀತಿ ತಲತಲಾಂತರದವರೆಗೆ !! ಗರ್ವಹೃದಯಿಗಳನಾತ ಚದರಿಸಿರುವನು ! ಪ್ರದರ್ಶಿಸಿರುವನು ತನ್ನ ಬಾಹುಬಲವನು !! ಇಳಿಸಿಹನು ಗದ್ದುಗೆಯಿಂದ ಘನಾಧಿಪತಿಗಳನು ! ಏರಿಸಿರುವನು ಉನ್ನತಿಗೆ ದೀನದಲಿತರನು !! ತೃಪ್ತಿಪಡಿಸಿರುವನಾತ ಹಸಿದವರನು ಮೃಷ್ಟಾನ್ನದಿ ! ಹೊರದೂಡಿರುವನು ಸಿರಿವಂತರನು ಬರೀಗೈಯಲಿ !! ನೆರವಾದನು ತನ್ನ ದಾಸ ಇಸ್ರಯೇಲನಿಗೆ ! ಪೂರ್ವಜರಿಗಿತ್ತ ವಾಗ್ದಾನದ ಮೇರೆಗೆ !! ಮರೆಯಲಿಲ್ಲ ಆತ ಕರುಣೆತೋರಲು ಅಬ್ರಹಾಮನಿಗೆ ! ಅವನ ಸಂತತಿಗೆ, ಯುಗಯುಗಾಂತರದವರೆಗೆ !! ಮರಿಯಳು ಸುಮಾರು ಮೂರು ತಿಂಗಳು ಎಲಿಜಬೇತಳೊಡನೆ ತಂಗಿದ್ದು ತನ್ನ ಮನೆಗೆ ಹಿಂದಿರುಗಿದಳು.

30.05.21 - "ಇಗೋ, ಲೋಕಾಂತ್ಯದವರೆಗೂ ಸದಾ ನಾನು ನಿಮ್ಮೊಡನೆ ಇರುತ್ತೇನೆ"

ಮೊದಲನೇ ವಾಚನ: ಧರ್ಮೋಪದೇಶಕಾಂಡ 4: 32-34, 39-40

“ದೇವರು ಮಾನವರನ್ನು ಸೃಷ್ಟಿಸಿ ಭೂಮಿಯ ಮೇಲಿರಿಸಿದ ದಿನ ಮೊದಲ್ಗೊಂಡು ಇಂದಿನವರೆಗೆ, ಒಂದು ದಿಕ್ಕಿನಿಂದ ಮತ್ತೊಂದು ದಿಕ್ಕಿನವರೆಗೆ, ಅಂಥ ಅದ್ಭುತಕಾರ್ಯ ನಡೆದದ್ದುಂಟೇ? ಅಂಥ ಸುದ್ದಿಯನ್ನಾದರೂ ಕೇಳಿದ್ದುಂಟೇ? ನೀವೇ ವಿಚಾರಿಸಿಕೊಳ್ಳಿ. ದೇವರು ಅಗ್ನಿಜ್ವಾಲೆಯೊಳಗಿಂದ ಮಾತಾಡಿದ ಸ್ವರ ಕೇಳಿಸಿತಲ್ಲವೆ? ಬೇರೆ ಯಾವ ಜನರಾದರು ದೇವರ ಸ್ವರ ಕೇಳಿ ಬದುಕಿದ್ದುಂಟೇ? ಬೇರೆ ಯಾವ ದೇವರು ತಾನೆ ಪರಿಶೋಧನೆ, ಪವಾಡ, ಮಹತ್ಕಾರ್ಯ, ಯುದ್ಧ, ಭುಜಪರಾಕ್ರಮ, ಶಿಕ್ಷಾಹಸ್ತ, ಭಯಂಕರಕಾರ್ಯ ಇವುಗಳನ್ನು ಪ್ರಯೋಗಿಸಿ ಒಂದು ಜನಾಂಗವನ್ನು ಮತ್ತೊಂದು ಜನಾಂಗದ ಕೈಯಿಂದ ತಪ್ಪಿಸಲು ಪ್ರಯತ್ನಿಸಿದ್ದಾರೆ? ನಿಮ್ಮ ದೇವರಾದ ಸರ್ವೇಶ್ವರ ಸ್ವಾಮಿಯಾದರೊ ಈಜಿಪ್ಟಿನಲ್ಲಿ ನಿಮ್ಮ ಪರವಾಗಿ, ಇದನ್ನೆಲ್ಲ ನಿಮ್ಮ ಕಣ್ಮುಂದೆಯೇ, ನಡೆಸಿದರಲ್ಲವೆ? ನೀವು ಇದನ್ನೆಲ್ಲಾ ಆಲೋಚಿಸಿ, ಮೇಲೆ ಆಕಾಶದಲ್ಲಾಗಲಿ, ಕೆಳಗೆ ಭೂಮಿಯಲ್ಲಾಗಲಿ ಸರ್ವೇಶ್ವರಸ್ವಾಮಿ ಒಬ್ಬರೇ ದೇವರು, ಬೇರೆಯಾದ ದೇವರೂ ಇಲ್ಲವೆಂಬುದನ್ನು ಈಗ ಗ್ರಹಿಸಿಕೊಂಡು ಜ್ಞಾಪಕದಲ್ಲಿ ಇಡಬೇಕು. ನಾನು ಇಂದು ನಿಮಗೆ ತಿಳಿಸಿದ ಅವರ ಆಜ್ಞಾವಿಧಿಗಳನ್ನು ಅನುಸರಿಸಿ ನಡೆಯಿರಿ. ಆಗ ನಿಮಗೂ ನಿಮ್ಮ ಸಂತತಿಗೂ ಶುಭವುಂಟಾಗುವುದು; ನಿಮ್ಮ ದೇವರಾದ ಸರ್ವೇಶ್ವರ ನಿಮಗೆ ಶಾಶ್ವತವಾಗಿ ಕೊಡುವ ನಾಡಿನಲ್ಲಿ ನೀವು ದೀರ್ಘಕಾಲ ಬಾಳುವಿರಿ.”

ಕೀರ್ತನೆ: 33:4-6, 9, 18-20, 21-22
ಶ್ಲೋಕ: ಪ್ರಭುವನು ದೇವರಾಗಿ ಪಡೆದ ಜನಾಂಗ ಧನ್ಯ. 

ಸತ್ಯವಾದುದು ಆತನ ಪವಿತ್ರ ವಾಕ್ಯ, 
ಸ್ತುತ್ಯವಾದುದು ಆತನ ಪುನೀತ ಕಾರ್ಯ
ಸತ್ಯಸಂಧನು, ನ್ಯಾಯಪ್ರಿಯನು ಆತನು
ಅಚಲ ಪ್ರೀತಿಯಿಂದ ಜಗವನು ತುಂಬಿಹನು//  ಶ್ಲೋಕ

ಸೃಷ್ಟಿಯಾಯಿತು ಗಗನಮಂಡಲ ಆತನ ನುಡಿಯೊಂದಕೆ 
ರೂಪುಗೊಂಡಿತು ತಾರಾಮಂಡಲ ಅವನುಸಿರು ಮಾತ್ರಕೆ
ಸೃಷ್ಟಿಯಾಯಿತು ಆತನ ನುಡಿ ಮಾತ್ರಕೆ
ಸ್ಥಾಪನೆಯಾಯಿತು ಅವನ ಆಣತಿಯೊಂದಕೆ//  ಶ್ಲೋಕ

ಪ್ರಭುವಾದರೋ ಕಟಾಕ್ಷಿಸುವನು ತನಗಂಜಿ ನಡೆವವರನು 
ಲಕ್ಷಿಸುವನು ತನ್ನ ಕೃಪೆಯನು ನಿರೀಕ್ಷಿಸುವವರನು 
ತಪ್ಪಿಸುವನವರ ಪ್ರಾಣವನು ಮರಣದಿಂದ 
ಉಳಿಸುವನು ಜೀವವನು ಕ್ಷಾಮಡಾಮರದಿಂದ//  ಶ್ಲೋಕ

ನೆಮ್ಮದಿಯಿಂದಿದೆ ಎನ್ನ ಮನ ಆತನಲಿ, 
ನಂಬಿರುವೆವು ಅತನ ಶ್ರೀ ನಾಮದಲಿ
 ನಮ್ಮ ಮೇಲಿರಲಿ ಪ್ರಭೂ, ನಿನ್ನಚಲ ಪ್ರೀತಿ
 ಕಾದಿಹೆವು ಇದೋ ನಿನ್ನ ನಂಬಿ ಭರವಸಡಿ//  ಶ್ಲೋಕ

ಎರಡನೇ ವಾಚನ: ರೋಮನರಿಗೆ 8: 14-17

ಯಾರು ಯಾರು ದೇವರ ಆತ್ಮನಿಗೆ ಮಣಿದು ನಡೆಯುತ್ತಾರೋ ಅವರು ದೇವರ ಮಕ್ಕಳು. ದೇವರು ನಿಮಗೆ ದಯಪಾಲಿಸಿರುವ ಆತ್ಮ ನಿಮ್ಮನ್ನು ಮತ್ತೊಮ್ಮೆ ಗುಲಾಮರನ್ನಾಗಿಯೂ ಭಯಭೀತರನ್ನಾಗಿಯೂ ಮಾಡುವುದಿಲ್ಲ. ಬದಲಿಗೆ, ನಿಮ್ಮನ್ನು ದೇವರ ಮಕ್ಕಳನ್ನಾಗಿಸುತ್ತದೆ. ಆ ಆತ್ಮದ ಮೂಲಕವೇ ನಾವು ದೇವರನ್ನು, “ಅಪ್ಪಾ, ತಂದೆಯೇ” ಎಂದು ಕರೆಯುತ್ತೇವೆ. ನಾವು ದೇವರ ಮಕ್ಕಳೆಂಬುದಕ್ಕೆ ದೇವರ ಆತ್ಮ ನಮ್ಮ ಅಂತರಾತ್ಮದೊಂದಿಗೆ ಸಾಕ್ಷಿ ನುಡಿಯುತ್ತಾರೆ. ನಾವು ಮಕ್ಕಳಾಗಿದ್ದರೆ, ಹಕ್ಕುಬಾಧ್ಯತೆ ಉಳ್ಳವರು. ಹೌದು, ದೇವರ ಸೌಭಾಗ್ಯಕ್ಕೆ ಬಾಧ್ಯಸ್ಥರು; ಕ್ರಿಸ್ತಯೇಸುವಿನೊಡನೆ ಸಹಬಾಧ್ಯಸ್ಥರು. ಕ್ರಿಸ್ತಯೇಸುವಿನ ಯಾತನೆಯಲ್ಲೂ ನಾವು ಪಾಲುಗಾರರಾಗಬೇಕು. ಆಗ ಅವರ ಮಹಿಮೆಯಲ್ಲೂ ಪಾಲುಗಾರರಾಗುತ್ತೇವೆ.

ಶುಭಸಂದೇಶ: ಮತ್ತಾಯ 28: 16-20


ಹನ್ನೊಂದು ಮಂದಿ ಶಿಷ್ಯರು ಗಲಿಲೇಯಕ್ಕೆ ಹೋದರು. ಯೇಸು ಸೂಚಿಸಿದ್ದ ಬೆಟ್ಟಕ್ಕೆ ಬಂದರು. ಅಲ್ಲಿ ಯೇಸುಸ್ವಾಮಿಯನ್ನು ಕಂಡು ಅವರನ್ನು ಪೂಜಿಸಿದರು. ಆದರೆ ಕೆಲವರು ಸಂದೇಹಪಟ್ಟರು. ಆಗ ಯೇಸು ಹತ್ತಿರಕ್ಕೆ ಬಂದು ಮಾತಾಡಿದರು: “ಭೂಮಿಯಲ್ಲೂ ಸ್ವರ್ಗದಲ್ಲೂ ಸರ್ವಾಧಿಕಾರವನ್ನು ನನಗೆ ಕೊಡಲಾಗಿದೆ. ಆದ್ದರಿಂದ ನೀವು ಹೋಗಿ, ಸಕಲ ದೇಶಗಳ ಜನರನ್ನು ನನ್ನ ಶಿಷ್ಯರನ್ನಾಗಿ ಮಾಡಿರಿ; ಪಿತ, ಸುತ, ಮತ್ತು ಪವಿತ್ರಾತ್ಮ ನಾಮದಲ್ಲಿ ಅವರಿಗೆ ದೀಕ್ಷಾಸ್ನಾನ ಮಾಡಿಸಿರಿ. ನಾನು ನಿಮಗೆ ಆಜ್ಞಾಪಿಸಿದ ಸಕಲವನ್ನೂ ಅನುಸರಿಸುವಂತೆ ಅವರಿಗೆ ಬೋಧಿಸಿರಿ. ಇಗೋ, ಲೋಕಾಂತ್ಯದವರೆಗೂ ಸದಾ ನಾನು ನಿಮ್ಮೊಡನೆ ಇರುತ್ತೇನೆ,” ಎಂದರು.

29.05.21- "ವಿನಾಶದಿಂದ ನನ್ನನ್ನು ರಕ್ಷಿಸಿದಿರಿ ಕಷ್ಟಕಾಲದಲ್ಲಿ ಎನ್ನನ್ನು ಕಾಪಾಡಿದಿರಿ ಎಂದೇ ಕೃತಜ್ಞತಾಸ್ತುತಿ ಸಲ್ಲಿಸುವೆ"

 ಮೊದಲನೇ ವಾಚನ: ಸಿರಾಖ 51:12-20

ವಿನಾಶದಿಂದ ನನ್ನನ್ನು ರಕ್ಷಿಸಿದಿರಿ ಕಷ್ಟಕಾಲದಲ್ಲಿ ಎನ್ನನ್ನು ಕಾಪಾಡಿದಿರಿ ಎಂದೇ ಕೃತಜ್ಞತಾಸ್ತುತಿ ಸಲ್ಲಿಸುವೆ; ನಿಮ್ಮ ನಾಮವನ್ನು ಸರ್ವೇಶ್ವರಾ, ಕೊಂಡಾಡುವೆ. ಸುಜ್ಞಾನದ ಅನ್ವೇಷಣೆ ನಾನಿನ್ನೂ ಎಳೆಯವನಾಗಿದ್ದಾಗ, ದೇಶಾಂತರ ಹೋಗುವುದಕ್ಕೆ ಮುನ್ನ ಬಹಿರಂಗ ಪ್ರಾರ್ಥನೆಯಲ್ಲಿ ಜ್ಞಾನವನ್ನರಸಿದೆನಯ್ಯಾ. ಮಹಾಮಂದಿರದ ಎದುರಿನಲ್ಲಿ ನಾನದನ್ನು ಕೇಳಿಕೊಂಡೆ ಕಡೆಯವರೆಗೂ ಅದನ್ನು ಹುಡುಕಿದೆ. ದ್ರಾಕ್ಷಿ ಹೂಬಿಡುವ ಕಾಲದಿಂದ ಫಲಬಿಡುವ ತನಕ ಜ್ಞಾನದಲ್ಲಿ ಆನಂದಿಸಿತು ನನ್ನ ಹೃದಯ ಸರಳತೆಯಲ್ಲೇ ನಡೆಯಿತು ನನ್ನ ಪಾದ ನಾನದನ್ನು ಅರಸುತ್ತಾ ಬಂದೆ ಯೌವನದಿಂದ. ನನ್ನ ಕಿವಿಯನ್ನು ಕೊಂಚ ಬಾಗಿಸಿ, ಅದನ್ನು ಸ್ವೀಕರಿಸಿದೆ ಅದರಿಂದ ಒಳ್ಳೆಯ ಶಿಕ್ಷಣವನ್ನು ಪಡೆದುಕೊಂಡೆ. ಆದುದರಿಂದ ನಾ ಮುಂದುವರಿದೆ ಸುಜ್ಞಾನ ನೀಡುವಾತನನ್ನು ನಾ ಕೊಂಡಾಡುವೆ. ಅದನ್ನು ಅಭ್ಯಾಸಿಸಲು ನಿಶ್ಚಯಮಾಡಿದೆ ಒಳಿತನ್ನು ಕುರಿತು ಆಸಕ್ತನಾದೆ ನಾನೆಂದಿಗೂ ಆಶಾಭಂಗಪಡೆ. ಹೋರಾಡಿತು ನನ್ನಾತ್ಮ ಅದನ್ನು ಗಳಿಸಲು ನಿಷ್ಠೆಯಿಂದಿದ್ದೆ ನನ್ನ ಕಾರ್ಯಕಷ್ಟದೊಳು ನನ್ನ ಕೈಯೆತ್ತಿದೆ ಆಕಾಶದ ಕಡೆಗೆ ನನ್ನ ಅಜ್ಞಾನಕ್ಕಾಗಿ ನಾನೇ ಹಲುಬಿಕೊಂಡೆ. ಇಚ್ಛೆಯಿಂದ ನಾನದರ ಮೇಲೆ ಮನಸ್ಸಿಟ್ಟೆ ನಿರ್ಮಲತೆಯಲ್ಲಿ ಅದನ್ನು ಕಂಡುಕೊಂಡೆ ಮೊದಲಿನಿಂದಲೇ ಅದರೊಂದಿಗೆ ಸೇರುವ ಬುದ್ಧಿಯನ್ನು ಪಡೆದೆ ಇನ್ನು ನಾನೆಂದಿಗೂ ಅದನ್ನು ಕೈಬಿಡಲಾರೆ.

ಕೀರ್ತನೆ: 19:7-9, 10

ಶ್ಲೋಕ: ಪ್ರಭುವೇ, ನಿತ್ಯ ಜೀವವನ್ನು ಈಯುವ ನುಡಿ ಇರುವುದು ತಮ್ಮಲ್ಲೇ. 

ಶುಭಸಂದೇಶ: ಮಾರ್ಕ 11: 27-33

ಯೇಸು ಮತ್ತು ಶಿಷ್ಯರು ಪುನಃ ಜೆರುಸಲೇಮಿಗೆ ಬಂದರು. ಯೇಸು ದೇವಾಲಯದ ಆವರಣದಲ್ಲಿ ತಿರುಗಾಡುತ್ತಿದ್ದಾಗ ಮುಖ್ಯ ಯಾಜಕರು, ಧರ್ಮಶಾಸ್ತ್ರಿಗಳು ಮತ್ತು ಸಭಾಪ್ರಮುಖರು ಅವರ ಬಳಿಗೆ ಬಂದು “ಇದನ್ನೆಲ್ಲಾ ನೀನು ಯಾವ ಅಧಿಕಾರದಿಂದ ಮಾಡುತ್ತಿರುವೆ? ನಿನಗೆ ಈ ಅಧಿಕಾರವನ್ನು ಕೊಟ್ಟವರು ಯಾರು?” ಎಂದು ಕೇಳಿದರು. ಅದಕ್ಕೆ ಯೇಸು, “ನಾನೂ ನಿಮಗೆ ಒಂದು ಪ್ರಶ್ನೆ ಹಾಕುತ್ತೇನೆ; ಅದಕ್ಕೆ ಉತ್ತರ ಕೊಡಿ. ಆಗ ಯಾವ ಅಧಿಕಾರದಿಂದ ನಾನು ಇದೆಲ್ಲವನ್ನು ಮಾಡುತ್ತೇನೆಂದು ನಿಮಗೆ ಹೇಳುತ್ತೇನೆ. ಸ್ನಾನದೀಕ್ಷೆ ಕೊಡುವ ಅಧಿಕಾರ ಯೊವಾನ್ನನಿಗೆ ಎಲ್ಲಿಂದ ಬಂದಿತು? ದೇವರಿಂದಲೋ? ಮನುಷ್ಯರಿಂದಲೋ? ಉತ್ತರಕೊಡಿ,” ಎಂದರು. ಇದನ್ನು ಕೇಳಿದ ಅವರು ತಮ್ಮ ತಮ್ಮೊಳಗೇ ತರ್ಕ ಮಾಡುತ್ತಾ, “ದೇವರಿಂದ ಬಂದಿತೆಂದು ಹೇಳಿದರೆ, ‘ಹಾಗಾದರೆ ನೀವೇಕೆ ಅವನನ್ನು ನಂಬಲಿಲ್ಲ?’ ಎಂದು ಕೇಳುವನು. ‘ಮನುಷ್ಯರಿಂದ ಬಂದಿತು’ ಎಂದು ಹೇಳೋಣ ಎಂದರೆ ಅದೂ ಆಗದು,” ಎಂದುಕೊಂಡರು. ಯೊವಾನ್ನನು ನಿಜವಾದ ಪ್ರವಾದಿಯೆಂದು ಸರ್ವರು ನಂಬಿದ್ದರಿಂದ ಅವರಿಗೆ ಜನರ ಭಯವಿತ್ತು. ಆದುದರಿಂದ ಅವರು, “ನಮಗೆ ಗೊತ್ತಿಲ್ಲ” ಎಂದು ಉತ್ತರಕೊಟ್ಟರು. ಅದಕ್ಕೆ ಯೇಸು, “ಹಾಗಾದರೆ ನಾನೂ ಕೂಡ ಯಾವ ಅಧಿಕಾರದಿಂದ ಇದನ್ನೆಲ್ಲಾ ಮಾಡುತ್ತೇನೆಂದು ನಿಮಗೆ ಹೇಳುವುದಿಲ್ಲ,” ಎಂದರು.

28.05.21 - "ನೀವು ಪ್ರಾರ್ಥನೆಯಲ್ಲಿ ಏನೆಂದು ಬೇಡಿಕೊಳ್ಳುತ್ತೀರೋ, ಅದನ್ನೆಲ್ಲಾ ಪಡೆದಾಯಿತೆಂದು ವಿಶ್ವಾಸಿಸಿರಿ"

ಮೊದಲನೇ ವಾಚನ: ಸಿರಾಖ 44:1, 9-13

ಪೂರ್ವಜರ ಸ್ತುತಿ ವಂದನೆ ಸಲ್ಲಿಸೋಣ ನಾವೀಗ ಪ್ರಸಿದ್ಧ ಪುರುಷರಿಗೆ ನಮ್ಮನ್ನು ಪಡೆದ ನಮ್ಮ ಕುಲದ ಮೂಲಪಿತೃಗಳಿಗೆ. ಇನ್ನು ಕೆಲವರು ಯಾವ ಸ್ಮಾರಕವೂ ಇಲ್ಲದೆ ಎಂದೂ ಇಲ್ಲದ್ದವರಂತೆ ಗತಿಸಿಹೋದರು ಹುಟ್ಟಲಿಲ್ಲವೇನೋ ಎಂಬಂತೆ ಕಣ್ಮರೆಯಾಗಿ ಹೋದರು ಅವರ ನಂತರ ಅವರ ಮಕ್ಕಳು ಸಹ ಅವರಂತೆ ಹೋಗಿಬಿಟ್ಟರು. ಆದರೆ ಅವರು ದಯಾಳುಗಳಾಗಿದ್ದರು ಮರೆತು ಹೋಗಲಿಲ್ಲ ಅವರ ಸತ್ಕಾರ್ಯಗಳು. ಒಳ್ಳೆಯ ಸೊತ್ತು ಸದಾ ಉಳಿಯುವುದು ಅವರ ಪೀಳಿಗೆಯಲ್ಲಿ ಅವರ ಮಕ್ಕಳು ಸ್ಥಿರವಾಗಿರುವರು ಒಡಂಬಡಿಕೆಯ ಅನುಸರಣೆಯಲ್ಲಿ. ಅವರ ಸಂತಾನ ಸ್ಥಿರವಾಗಿರುವುದು ಒಡಂಬಡಿಕೆಯ ಪಾಲನೆಯಲ್ಲಿ ಅವರ ಮಕ್ಕಳೂ ಸಹ ನೆಲೆಯಾಗಿ ನಿಲ್ಲುವರು ಅದರ ಅನ್ವೇಷಣೆಯಲ್ಲಿ. ಉಳಿಯುವುದು ಅವರ ಸಂತಾನ ಎಂದೆಂದಿಗು ಅವರ ಗೌರವ ಅಳಿಸಿಹೋಗದು.

ಕೀರ್ತನೆ: 149:1-2, 3-4, 5-6, 9

ಶ್ಲೋಕ: ಪ್ರೀತಿಸುತ್ತಾನೆ ಪ್ರಭು ತನ್ನ ಪ್ರಜೆಯನು. 

ಶುಭಸಂದೇಶ: ಮಾರ್ಕ 11: 11-26


ಯೇಸು ಜೆರುಸಲೇಮನ್ನು ಸೇರಿ ಮಹಾದೇವಾಲಯವನ್ನು ಪ್ರವೇಶಿಸಿದರು. ಅಲ್ಲಿ ನಡೆಯುತ್ತಿದ್ದ ಎಲ್ಲವನ್ನೂ ನೋಡುವಷ್ಟರಲ್ಲಿ ಕತ್ತಲಾಗುತ್ತಾ ಬಂದಿತು; ಆದುದರಿಂದ ಹನ್ನೆರಡು ಮಂದಿ ಶಿಷ್ಯರನ್ನು ಕರೆದುಕೊಂಡು, ಅವರು ಬೆಥಾನಿಯಕ್ಕೆ ಹೊರಟುಹೋದರು. ಮರುದಿನ ಅವರೆಲ್ಲರೂ ಬೆಥಾನಿಯದಿಂದ ಜೆರುಸಲೇಮಿಗೆ ಬರುತ್ತಿದ್ದಾಗ ಯೇಸುಸ್ವಾಮಿಗೆ ಹಸಿವಾಯಿತು. ದೂರದಲ್ಲಿ ಎಲೆ ತುಂಬಿದ ಅಂಜೂರದ ಮರವೊಂದು ಕಣ್ಣಿಗೆ ಬಿದ್ದಿತು. ಅದರಲ್ಲಿ ಹಣ್ಣೇನಾದರೂ ಸಿಕ್ಕೀತೆಂದು ಅಲ್ಲಿಗೆ ಹೋದರು. ಹತ್ತಿರಕ್ಕೆ ಬಂದಾಗ ಅದರಲ್ಲಿ ಬರೀ ಎಲೆಗಳೇ ಹೊರತು ಇನ್ನೇನೂ ಕಾಣಲಿಲ್ಲ. ಅದು ಅಂಜೂರದ ಹಣ್ಣಿನ ಕಾಲವಾಗಿರಲಿಲ್ಲ. ಯೇಸು ಆ ಮರಕ್ಕೆ, “ಇನ್ನು ಮುಂದೆ ನಿನ್ನ ಹಣ್ಣನ್ನು ಯಾರೂ ಎಂದಿಗೂ ತಿನ್ನದಂತಾಗಲಿ,” ಎಂದರು. ಶಿಷ್ಯರು ಈ ಮಾತುಗಳನ್ನು ಕೇಳಿಸಿಕೊಂಡರು. ತರುವಾಯ ಅವರು ಜೆರುಸಲೇಮಿಗೆ ಬಂದರು. ಯೇಸುಸ್ವಾಮಿ ಮಹಾದೇವಾಲಯಕ್ಕೆ ಹೋಗಿ, ಅಲ್ಲಿ ಮಾರುತ್ತಿದ್ದವರನ್ನೂ ಕೊಳ್ಳುತ್ತಿದ್ದವರನ್ನೂ ಹೊರಗಟ್ಟತೊಡಗಿದರು; ನಾಣ್ಯ ವಿನಿಮಯ ಮಾಡುತ್ತಿದ್ದ ವ್ಯಾಪಾರಿಗಳ ಮೇಜುಗಳನ್ನು ಕೆಡವಿದರು; ಪಾರಿವಾಳಗಳನ್ನು ಮಾರುತ್ತಿದ್ದವರ ಮಣೆಗಳನ್ನು ಉರುಳಿಸಿದರು. ಹೊರೆಹೊತ್ತುಕೊಂಡು ದೇವಾಲಯದ ಮೂಲಕ ಹಾದು ಹೋಗುವವರನ್ನು ತಡೆದರು. “ ‘ಸರ್ವಜನಾಂಗಗಳಿಗೂ ಪ್ರಾರ್ಥನಾಲಯ ನನ್ನೀ ಆಲಯ ಎಂದು ಪವಿತ್ರಗ್ರಂಥದಲ್ಲಿ ಬರೆದಿದೆ ಅಲ್ಲವೇ? ನೀವು ಅದನ್ನು ಕಳ್ಳಕಾಕರ ಗುಹೆಯನ್ನಾಗಿ ಮಾಡಿದ್ದೀರಿ,” ಎಂದು ಯೇಸು ಅವರಿಗೆ ಬುದ್ಧಿಹೇಳಿದರು. ಮುಖ್ಯ ಯಾಜಕರೂ ಧರ್ಮಶಾಸ್ತ್ರಿಗಳೂ ನಡೆದ ಈ ಸಂಗತಿಯನ್ನು ಕೇಳಿ ಯೇಸುವನ್ನು ಕೊಲ್ಲಿಸುವ ಮಾರ್ಗವನ್ನು ಹುಡುಕ ತೊಡಗಿದರು. ಏಕೆಂದರೆ, ಯೇಸುವನ್ನು ಕಂಡರೆ ಅವರಿಗೆ ಭಯವಿತ್ತು. ಕಾರಣ - ಜನರೆಲ್ಲರೂ ಅವರ ಬೋಧನೆಗೆ ಮಾರುಹೋಗಿದ್ದರು. ಸೂರ್ಯಾಸ್ತಮದ ಬಳಿಕ ಯೇಸು ಮತ್ತು ಶಿಷ್ಯರು ಪಟ್ಟಣದಿಂದ ಹೊರಗೆ ಹೋದರು. ಬೆಳಿಗ್ಗೆ ಅವರೆಲ್ಲರೂ ಅದೇ ಮಾರ್ಗವಾಗಿ ಹಿಂದಿರುಗುವಾಗ ಅಂಜೂರದ ಮರವು ಬೇರುಸಹಿತ ಒಣಗಿಹೋಗಿರುವುದನ್ನು ಕಂಡರು. ಪೇತ್ರನು ಹಿಂದಿನ ದಿನ ನಡೆದುದನ್ನು ಸ್ಮರಿಸಿಕೊಂಡು, ಯೇಸುಸ್ವಾಮಿಗೆ, “ಗುರುವೇ, ತಾವು ಶಪಿಸಿದ ಆ ಅಂಜೂರದ ಮರ ಈಗ ಒಣಗಿ ಹೋಗಿದೆ,” ಎಂದನು. ಅದಕ್ಕೆ ಯೇಸು, “ನಿಮಗೆ ದೇವರಲ್ಲಿ ವಿಶ್ವಾಸವಿರಲಿ, ಆಗ ಯಾವನಾದರೂ ಈ ಬೆಟ್ಟಕ್ಕೆ, ‘ನೀನು ಇಲ್ಲಿಂದ ಕಿತ್ತುಕೊಂಡು ಹೋಗಿ ಸಮುದ್ರದಲ್ಲಿ ಬೀಳು!’ ಎಂದು ಹೇಳಿ, ಮನಸ್ಸಿನಲ್ಲಿ ಸಂದೇಹಪಡದೆ, ಅದು ಸಂಭವಿಸುವುದೆಂದು ವಿಶ್ವಾಸಿಸಿದರೆ, ನಾನು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ, ಅವನು ಹೇಳಿದಂತೆಯೇ ಆಗುವುದು. ಆದುದರಿಂದ ನೀವು ಪ್ರಾರ್ಥನೆಯಲ್ಲಿ ಏನೆಂದು ಬೇಡಿಕೊಳ್ಳುತ್ತೀರೋ, ಅದನ್ನೆಲ್ಲಾ ಪಡೆದಾಯಿತೆಂದು ವಿಶ್ವಾಸಿಸಿರಿ; ಅದು ಲಭಿಸುವುದು ನಿಶ್ಚಯವೆಂದು ನಿಮಗೆ ಹೇಳುತ್ತೇನೆ. ಇದಲ್ಲದೆ, ನೀವು ಪ್ರಾರ್ಥನೆ ಮಾಡುವಾಗಲೆಲ್ಲ, ಯಾರಿಗಾದರೂ ವಿರೋಧವಾಗಿ ನಿಮ್ಮ ಮನಸ್ಸಿನಲ್ಲಿ ಏನಾದರೂ ಇದ್ದರೆ, ಅದನ್ನು ಕ್ಷಮಿಸಿಬಿಡಿ, ಆಗ ಸ್ವರ್ಗದಲ್ಲಿರುವ ನಿಮ್ಮ ತಂದೆಯು ಸಹ ನಿಮ್ಮ ತಪ್ಪುಗಳನ್ನು ಕ್ಷಮಿಸಿ ಬಿಡುವರು.”

27.05.21

ಮೊದಲನೇ ವಾಚನ: ಸಿರಾಖ 42: 15-25

ಸರ್ವೇಶ್ವರನ ಕೆಲಸಗಳನ್ನು ಕುರಿತು ಈಗ ನೆನಪು ಮಾಡಿಕೊಡುತ್ತೇನೆ: ನಾನು ಕಂಡ ಸಂಗತಿಗಳನ್ನು ವಿವರಿಸುತ್ತೇನೆ: ಸರ್ವೇಶ್ವರನ ವಾಣಿಯ ಪ್ರಕಾರ ಆತನ ಕಾರ್ಯ ನೆರವೇರಿದೆ ಸೃಷ್ಟಿಸಮಸ್ತವೂ ಆತನ ಆಜ್ಞೆಗಳನ್ನು ಅನುಸರಿಸುತ್ತವೆ. ಪ್ರಕಾಶಕೊಡುವ ಸೂರ್ಯ ಎಲ್ಲವನ್ನು ದೃಷ್ಟಿಸುವನು ಸರ್ವೇಶ್ವರನ ಕೆಲಸ ಆತನ ಮಹಿಮೆಯಿಂದ ತುಂಬಿರುವುದು. ಸರ್ವೇಶ್ವರನ ಮಹತ್ಕಾರ್ಯಗಳನ್ನು ವಿವರಿಸುವ ಶಕ್ತಿಯನ್ನು ಆತ ಕೊಟ್ಟಿಲ್ಲ ತನ್ನ ದೇವದೂತರಿಗೂ. ಎಲ್ಲವೂ ತನ್ನ ಮಹಿಮೆಯಲ್ಲೇ ನೆಲೆಗೊಂಡಿರುವಂತೆ ಸ್ಥಾಪಿಸಿದವ ಸರ್ವಶಕ್ತನಾದ ಸರ್ವೇಶ್ವರನೇ. ಮಹೋನ್ನತ ಸರ್ವೇಶ್ವರ ತಿಳಿದಿರುವನು ಸರ್ವಜ್ಞಾನವನು, ಯುಗದ ಲಕ್ಷಣವನು; ಎಂದೇ ಪರಿಶೋಧಿಸಿಹನು ಪ್ರಪಾತವನು, ಹೃದಯವನು; ಬಲ್ಲನಾತನು ಅವುಗಳ ತಂತ್ರಕುತಂತ್ರಗಳನು. ಪ್ರಕಟಪಡಿಸುವನು ಹಿಂದೆ ನಡೆದವುಗಳನು ಮುಂದೆ ನಡೆಯುವಂಥವುಗಳನು ಶ್ರುತಪಡಿಸಬಲ್ಲನಾತನು ಗುಪ್ತವಾದುವುಗಳ ಸುಳಿವನು. ಯಾವ ಕಲ್ಪನೆಯೂ ಆತನಿಂದ ತಪ್ಪಿಸಿಕೊಳ್ಳದು ಯಾವ ಮಾತೂ ಆತನಿಗೆ ಮರೆಯಾಗಿರದು. ಯುಗಯುಗಾಂತರಕ್ಕೂ ಇರುವಾತನವನು ತನ್ನ ಜ್ಞಾನದ ಮಹತ್ಕಾರ್ಯಗಳನು ಕ್ರಮಪಡಿಸಿದರುವನು ಅದಕ್ಕೆ ಯಾವುದನ್ನು ಕೂಡಿಸಲಿಲ್ಲ, ಯಾವುದನ್ನು ಅದರಿಂದ ಕಳೆದಿಲ್ಲ ಸಲಹೆಗಾರನ ಅಗತ್ಯವೂ ಆತನಿಗಿರಲಿಲ್ಲ. ಆಹಾ, ಆತನ ಕಾರ್ಯಗಳು ಎಷ್ಟು ಅಪೇಕ್ಷಣೀಯ! ಆತನ ಕೆಲಸಗಳು ಎಷ್ಟು ತೇಜೋಮಯ! ಇವೆಲ್ಲವು ಅವುಗಳ ಪ್ರಯೋಜನಕ್ಕನುಸಾರ ಜೀವಿಸುತ್ತವೆ ನಿತ್ಯಕ್ಕೂ ಉಳಿಯುತ್ತವೆ, ಆತನಿಗೆ ವಿಧೇಯವಾಗಿರುತ್ತವೆ. ಎಲ್ಲ ಸಂಗತಿಗಳಿರುವುವು ದ್ವಂದ್ವವಾಗಿ ಒಂದು ಇನ್ನೊಂದಕ್ಕೆ ಎದುರಾಗಿ ಆತ ಯಾವುದನ್ನೂ ಮಾಡಿಲ್ಲ ಅಪೂರ್ಣವಾಗಿ. ವೈಶಿಷ್ಟ್ಯತೆಯಲ್ಲಿ ಒಂದು ಪರಿಪೂರ್ಣಗೊಳ್ಳುತ್ತದೆ ಇನ್ನೊಂದರಿಂದ. ಆತನ ಮಹಿಮೆಯನ್ನು ಪೂರ್ತಿಯಾಗಿ ಗ್ರಹಿಸಲು ಯಾರಿಂದ ಸಾಧ್ಯ?

ಕೀರ್ತನೆ: 33: 2-3, 4-5, 6-7, 8-9
ಶ್ಲೋಕ: ಸೃಷ್ಟಿಯಾಯಿತು ಗಗನಮಂಡಲ ಆತನ ನುಡಿಯೊಂದಕೆ. 

ಶುಭಸಂದೇಶ: ಮಾರ್ಕ 10: 46-52

ಯೇಸುಸ್ವಾಮಿ ಮತ್ತು ಅವರ ಶಿಷ್ಯರು ಜೆರಿಕೊ ಪಟ್ಟಣವನ್ನು ತಲುಪಿದರು. ಅಲ್ಲಿಂದ ಹೊರಡುವಾಗ ಜನರ ದೊಡ್ಡಗುಂಪು ಅವರನ್ನು ಹಿಂಬಾಲಿಸಿತು. ಕುರುಡು ಭಿಕ್ಷುಗಾರನಾದ, ತಿಮಾಯನ ಮಗ ಬಾರ್‍ತಿಮಾಯನು ದಾರಿಯ ಮಗ್ಗುಲಲ್ಲಿ ಕುಳಿತಿದ್ದನು. ಆ ಮಾರ್ಗವಾಗಿ ಹೋಗುತ್ತಿರುವಾತನು ನಜರೇತಿನ ಯೇಸು ಎಂದು ಕೇಳಿದೊಡನೆಯೇ, ಅವನು, “ಯೇಸುವೇ, ದಾವೀದ ಕುಲಪುತ್ರರೇ, ನನಗೆ ದಯೆತೋರಿ,” ಎಂದು ಗಟ್ಟಿಯಾಗಿ ಕೂಗಿಕೊಂಡನು. ಅನೇಕರು ‘ಸುಮ್ಮನಿರು’ ಎಂದು ಅವನನ್ನು ಗದರಿಸಿದರು. ಅವನಾದರೋ, “ದಾವೀದ ಕುಲಪುತ್ರರೇ, ನನಗೆ ದಯೆತೋರಿ,” ಎಂದು ಇನ್ನಷ್ಟು ಗಟ್ಟಿಯಾಗಿ ಕೂಗಿಕೊಂಡನು. ಇದನ್ನು ಕೇಳಿ ಯೇಸು ಅಲ್ಲೇ ನಿಂತು, “ಅವನನ್ನು ಕರೆದುಕೊಂಡು ಬನ್ನಿ,” ಎಂದು ಅಪ್ಪಣೆಮಾಡಿದರು. ಅವರು ಹೋಗಿ, “ಏಳು, ಭಯಪಡಬೇಡ, ಯೇಸು ನಿನ್ನನ್ನು ಕರೆಯುತ್ತಿದಾರೆ,” ಎಂದು ಹೇಳಿದರು. ಅವನು ತನ್ನ ಮೇಲುಹೊದಿಕೆಯನ್ನು ಅಲ್ಲೇ ಬಿಟ್ಟು ತಟ್ಟನೆ ಎದ್ದು, ಯೇಸುವಿನ ಬಳಿಗೆ ಬಂದನು. ಯೇಸು, “ನನ್ನಿಂದ ನಿನಗೆ ಏನಾಗಬೇಕು?” ಎಂದು ಕೇಳಿದರು. ಅದಕ್ಕೆ ಅವನು, “ಗುರುದೇವಾ! ನನಗೆ ಕಣ್ಣು ಕಾಣುವಂತೆ ಮಾಡಿ,” ಎಂದು ಪ್ರಾರ್ಥಿಸಿದನು. ಯೇಸು ಅವನಿಗೆ, “ಹೋಗು, ನಿನ್ನ ವಿಶ್ವಾಸವೇ ನಿನ್ನನ್ನು ಸ್ವಸ್ಥಮಾಡಿದೆ,” ಎಂದರು. ಆ ಕ್ಷಣವೇ ಅವನಿಗೆ ದೃಷ್ಟಿ ಬಂದಿತು. ಅವನೂ ಯೇಸುವನ್ನು ಹಿಂಬಾಲಿಸಿ ಹಿಂದೆ ಹೋದನು.

26.05.21

ಮೊದಲನೇ ವಾಚನ: ಸಿರಾಖ 36: 1-2, 5-6, 11-17

ಇಸ್ರಯೇಲಿಗಾಗಿ ಪ್ರಾರ್ಥನೆ ಎಲ್ಲರ ದೇವರಾದ ಒಡೆಯಾ, ನಮ್ಮನು ಕರುಣಿಸು, ಕಟಾಕ್ಷಿಸು ಎಲ್ಲ ಜನಾಂಗಗಳಲ್ಲು ನಿನ್ನ ಭಯಭಕ್ತಿಯನು ಹುಟ್ಟಿಸು. ಇಸ್ರಯೇಲಿಗಾಗಿ ಪ್ರಾರ್ಥನೆ ಎಲ್ಲರ ದೇವರಾದ ಒಡೆಯಾ, ನಮ್ಮನು ಕರುಣಿಸು, ಕಟಾಕ್ಷಿಸು ಎಲ್ಲ ಜನಾಂಗಗಳಲ್ಲು ನಿನ್ನ ಭಯಭಕ್ತಿಯನು ಹುಟ್ಟಿಸು. ಸರ್ವೇಶ್ವರಾ ನೀನೊಬ್ಬನೇ ಹೊರತು ಬೇರೆ ದೇವರಿಲ್ಲ ನಾವು ನಿನ್ನನು ಅರಿತುಕೊಂಡಂತೆ ಅರಿತುಕೊಳ್ಳಲಿ ಅವರೆಲ್ಲ. ಹೊಸ ಹೊಸ ಸೂಚಕಕಾರ್ಯಗಳನ್ನು ತೋರಿಸು ತರತರದ ಅದ್ಭುತಕಾರ್ಯಗಳನ್ನು ನಡೆಸು ನಿನ್ನ ಹಸ್ತದ, ನಿನ್ನ ಭುಜಬಲದ ಶಕ್ತಿಯನ್ನು ಪ್ರದರ್ಶಿಸು. ಒಟ್ಟುಗೂಡಿಸು ಯಕೋಬನ ಕುಲಗಳನ್ನೆಲ್ಲಾ ಮೊದಲಿನಂತೆ ಸ್ವಾಸ್ತ್ಯವಾಗಿ ತೆಗೆದುಕೊ ಅವರನ್ನೆಲ್ಲಾ. ಸರ್ವೇಶ್ವರಾ, ಕರುಣಿಸು ನಿನ್ನ ಹೆಸರಿನಿಂದ ಕರೆಯಲಾಗುವ ಜನರನು ಚೊಚ್ಚಲು ಮಗನಿಗೆ ಹೋಲಿಸಿದ ಇಸ್ರಯೇಲನು. ದಯೆತೋರು ನಿನ್ನ ಪವಿತ್ರಾಲಯವಿರುವ ಪಟ್ಟಣದ ಮೇಲೆ ಹೌದು, ನಿನ್ನ ವಾಸಸ್ಥಾನವಾಗಿರುವ ಜೆರುಸಲೇಮಿನ ಮೇಲೆ. ಸಿಯೋನ್ ನಗರ ತುಂಬಿರಲಿ ನಿನ್ನ ಪರಾಕ್ರಮ ಕೃತ್ಯಗಳ ಸುದ್ದಿಯಿಂದ ನಿನ್ನ ಜನರು ಬೆಳಗಲಿ ನಿನ್ನ ಮಹಿಮಾ ಪ್ರಭಾವದಿಂದ. ಆದಿಯಲ್ಲೇ ಸೃಷ್ಟಿಯಾದವರಿಗೆ ನಿನ್ನ ಕುರಿತ ಸಾಕ್ಷಿ ದೊರಕಲಿ ನಿನ್ನ ಪ್ರವಾದಿಗಳು ನುಡಿದದ್ದೆಲ್ಲ ಈಡೇರಲಿ. ನಿನ್ನನು ನಿರೀಕ್ಷಿಸಿದವರಿಗೆ ಪ್ರತಿಫಲ ದೊರಕಲಿ ಜನರು ನಿನ್ನ ಪ್ರವಾದಿಗಳಲಿ ಭರವಸೆಯಿಡಲಿ. ನಿನ್ನ ಜನರನು ಆರೋನನು ಆಶೀರ್ವದಿಸಿದಂತೆ ಸರ್ವೇಶ್ವರಾ, ನಿನಗೆ ಸೇರಲಿ ಮೊರೆಯಿಡುವವರ ಪ್ರಾರ್ಥನೆ. ಆಗ ಭೂನಿವಾಸಿಗಳೆಲ್ಲ ಅರಿಯುವರು ನೀ ಸರ್ವೇಶ್ವರನೆಂದು ನೀನೇ ಸರ್ವಯುಗಗಳ ದೇವರೆಂದು.

ಕೀರ್ತನೆ: 79:8, 9, 11, 13 ಸಿರಾಖ 36:1
ಶ್ಲೋಕ: ಪ್ರಭು ನಮ್ಮನ್ನು ಕರುಣಿಸು, ಕಟಾಕ್ಷಿಸು. 

ಶುಭಸಂದೇಶ: ಮಾರ್ಕ 10: 32-45

ಜೆರುಸಲೇಮಿಗೆ ಪ್ರಯಾಣ ಮಾಡುತ್ತ ಇದ್ದಾಗ ಯೇಸುಸ್ವಾಮಿ ಎಲ್ಲರಿಗಿಂತ ಮುಂದೆ ನಡೆಯುತ್ತಿದ್ದರು. ಅದನ್ನು ನೋಡಿ ಶಿಷ್ಯರು ಆಶ್ಚರ್ಯಪಟ್ಟರು. ಅವರ ಹಿಂದೆ ಬರುತ್ತಿದ್ದವರು ದಿಗಿಲುಗೊಂಡರು. ಆಗ ಯೇಸು ಹನ್ನೆರಡು ಮಂದಿ ಶಿಷ್ಯರನ್ನು ತಮ್ಮ ಬಳಿಗೆ ಕರೆದು, ತಮಗೆ ಸಂಭವಿಸಲಿರುವ ವಿಷಯಗಳನ್ನು ಮತ್ತೊಮ್ಮೆ ಅವರಿಗೆ ಹೇಳತೊಡಗಿದರು: “ನೋಡಿ, ನಾವು ಜೆರುಸಲೇಮಿಗೆ ಹೋಗುತ್ತಿದ್ದೇವೆ. ಅಲ್ಲಿ ನರಪುತ್ರನನ್ನು ಮುಖ್ಯ ಯಾಜಕರ ಮತ್ತು ಧರ್ಮಶಾಸ್ತ್ರಿಗಳ ವಶಕ್ಕೆ ಒಪ್ಪಿಸುವರು. ಆತನು ಮರಣದಂಡನೆಗೆ ಅರ್ಹನೆಂದು ಅವರು ತೀರ್ಮಾನಿಸಿ, ಪರಕೀಯರ ಕೈಗೊಪ್ಪಿಸುವರು. ಇವರು ಆತನನ್ನು ಪರಿಹಾಸ್ಯ ಮಾಡುವರು; ಆತನ ಮೇಲೆ ಉಗುಳುವರು; ಕೊರಡೆಯಿಂದ ಹೊಡೆಯುವರು; ಅನಂತರ ಕೊಂದುಹಾಕುವರು. ಆತನಾದರೋ ಮೂರು ದಿನದ ಮೇಲೆ ಪುನರುತ್ಥಾನ ಹೊಂದುವನು,” ಎಂದರು. ಜೆಬೆದಾಯನ ಮಕ್ಕಳಾದ ಯಕೋಬ ಮತ್ತು ಯೊವಾನ್ನ ಯೇಸುವಿನ ಬಳಿಗೆ ಬಂದು, “ಗುರುವೇ, ನಮ್ಮದೊಂದು ಬಿನ್ನಹವಿದೆ, ಅದನ್ನು ನಡೆಸಿಕೊಡಬೇಕು,” ಎಂದು ವಿಜ್ಞಾಪಿಸಿಕೊಂಡರು “ನನ್ನಿಂದ ನಿಮಗೇನಾಗಬೇಕು?” ಎಂದು ಯೇಸು ಕೇಳಿದರು. “ತಮ್ಮ ಮಹಿಮಾಸ್ಥಾನದಲ್ಲಿ ನಮ್ಮಲ್ಲಿ ಒಬ್ಬನು ತಮ್ಮ ಬಲಗಡೆಯಲ್ಲೂ ಇನ್ನೊಬ್ಬನು ಎಡಗಡೆಯಲ್ಲೂ ಆಸೀನರಾಗುವಂತೆ ಅನುಗ್ರಹಿಸಬೇಕು,” ಎಂದು ತಮ್ಮ ಬಯಕೆಯನ್ನು ತೋಡಿಕೊಂಡರು. ಅದಕ್ಕೆ ಯೇಸು, “ನೀವು ಕೋರಿಕೊಂಡದ್ದು ಏನೆಂದು ನಿಮಗೇ ತಿಳಿಯದು. ನಾನು ಕುಡಿಯಲಿರುವ ಪಾತ್ರೆಯಿಂದ ಕುಡಿಯಲು ನಿಮ್ಮಿಂದಾದೀತೆ? ನಾನು ಪಡೆಯಲಿರುವ ಸ್ನಾನವನ್ನು ಪಡೆಯಲು ನಿಮ್ಮಿಂದ ಆದೀತೆ?” ಎಂದು ಪ್ರಶ್ನಿಸಿದರು. “ಹೌದು ಆಗುತ್ತದೆ,” ಎಂದು ಅವರು ಮರು ನುಡಿದರು. ಆಗ ಯೇಸು, “ನಾನು ಕುಡಿಯುವ ಪಾತ್ರೆಯಿಂದ ನೀವೂ ಕುಡಿಯುವಿರಿ; ನಾನು ಪಡೆಯಲಿರುವ ಸ್ನಾನವನ್ನು ನೀವು ಪಡೆಯುವಿರಿ. ಆದರೆ ನನ್ನ ಬಲಗಡೆಯಲ್ಲಾಗಲೀ ಎಡಗಡೆಯಲ್ಲಾಗಲೀ ಆಸೀನರಾಗುವಂತೆ ಅನುಗ್ರಹಿಸುವುದು ನನ್ನದಲ್ಲ. ಅದು ಯಾರಿಗಾಗಿ ಸಿದ್ಧಮಾಡಲಾಗಿದೆಯೋ ಅವರಿಗೇ ಸಿಗುವುದು,” ಎಂದು ನುಡಿದರು. ಉಳಿದ ಹತ್ತು ಮಂದಿ ಶಿಷ್ಯರು ಇದನ್ನು ಕೇಳಿದಾಗ ಯಕೋಬ, ಯೊವಾನ್ನರ ಮೇಲೆ ಸಿಟ್ಟುಗೊಂಡರು. ಆಗ ಯೇಸು ಶಿಷ್ಯರೆಲ್ಲರನ್ನು ತನ್ನ ಬಳಿಗೆ ಕರೆದು, “ಪ್ರಜಾಧಿಪತಿಗಳು ಎನಿಸಿಕೊಳ್ಳುವವರು ಪ್ರಜೆಗಳ ಮೇಲೆ ದರ್ಪದಿಂದ ದೊರೆತನ ಮಾಡುತ್ತಾರೆ; ಜನನಾಯಕರು ಎನಿಸಿಕೊಳ್ಳುವವರು ಜನರ ಮೇಲೆ ಅಧಿಕಾರ ಪ್ರದರ್ಶನ ಮಾಡುತ್ತಾರೆ; ಇದು ನಿಮಗೆ ಗೊತ್ತು. ಆದರೆ ನೀವು ಹಾಗಿರಬಾರದು. ನಿಮ್ಮಲ್ಲಿ ಶ್ರೇಷ್ಟನಾಗಿರಲು ಇಚ್ಛಿಸುವವನು ನಿಮ್ಮ ಸೇವಕನಾಗಿರಲಿ; ಪ್ರಥಮನಾಗಿರಲು ಆಶಿಸುವವನು ಎಲ್ಲರ ದಾಸನಾಗಿರಲಿ. ನರಪುತ್ರನು ಸಹ ಸೇವೆ ಮಾಡಿಸಿಕೊಳ್ಳುವುದಕ್ಕೆ ಅಲ್ಲ, ಇತರರ ಸೇವೆ ಮಾಡುವುದಕ್ಕೂ ಸರ್ವರ ಉದ್ಧಾರಕ್ಕಾಗಿ ತನ್ನ ಪ್ರಾಣವನ್ನು ಈಡಾಗಿ ಕೊಡುವುದಕ್ಕೂ ಬಂದಿದ್ದಾನೆ,” ಎಂದು ಬೋಧಿಸಿದರು.

25.05.21

ಮೊದಲನೇ ವಾಚನ: ಸಿರಾಖ 35: 1-2

ಧರ್ಮಶಾಸ್ತ್ರ - ಬಲಿಯರ್ಪಣೆ ಧರ್ಮಶಾಸ್ತ್ರವನ್ನು ಅನುಸರಿಸು ವವನು ಕಾಣಿಕೆಗಳನು ಹೆಚ್ಚಾಗಿ ಅರ್ಪಿಸಿದವನಂತೆ ಆಜ್ಞೆಗಳನ್ನು ಕೈಗೊಳ್ಳುವವನು ಶಾಂತಿ ಸಮಾಧಾನದ ಬಲಿಯರ್ಪಿಸಿದವನಂತೆ. ಪ್ರತ್ಯುಪಕಾರ ಮಾಡುವವನು ಗೋದಿಹಿಟ್ಟನ್ನು ನೈವೇದ್ಯ ಮಾಡಿದವನಂತೆ ದಾನಧರ್ಮ ಮಾಡುವವನು ಸ್ತುತಿಬಲಿಯನ್ನು ಅರ್ಪಿಸಿದವನಂತೆ. ದುಷ್ಟತನವನು ಬಿಟ್ಟುಬಿಡುವುದು, ಸರ್ವೇಶ್ವರನಿಗೆ ಸುಪ್ರೀತ ಅಧರ್ಮವನು ಬಿಟ್ಟುಬಿಡುವುದು ಪಾಪಕ್ಕೆ ಪ್ರಾಯಶ್ಚಿತ್ತ. ಸರ್ವೇಶ್ವರನ ಸನ್ನಿಧಿಯನು ಸೇರಬಾರದು ಬರಿಗೈಯಿಂದ, ಇವುಗಳನ್ನೆಲ್ಲ ಮಾಡಬೇಕಾಗಿದೆ ಆತನ ಆಜ್ಞೆಯ ನಿಮಿತ್ತ. ಸರ್ವೇಶ್ವರನ ಸನ್ನಿಧಿಯನು ಸೇರಬಾರದು ಬರಿಗೈಯಿಂದ, ಇವುಗಳನ್ನೆಲ್ಲ ಮಾಡಬೇಕಾಗಿದೆ ಆತನ ಆಜ್ಞೆಯ ನಿಮಿತ್ತ. ನೀತಿವಂತನ ಅರ್ಪಣೆ ಒಂದು ಅಲಂಕಾರ ಯಜ್ಞವೇದಿಕೆ ಅದರ ಸುವಾಸನೆ ಏರುವುದು ಮಹೋನ್ನತನ ಸನ್ನಿಧಿಗೆ. ಸಮರ್ಪಕವಾಗಿರುವುದು ನೀತಿವಂತ ನೀಡುವ ಬಲಿಕಾಣಿಕೆ ಮರೆತುಹೋಗುವುದಿಲ್ಲ ಅದರ ಸ್ಮರಣೆ. ಉದಾರದೃಷ್ಟಿಯಿಂದ ಸರ್ವೇಶ್ವರನನು ಮಹಿಮೆಪಡಿಸು ಕಡಿಮೆಮಾಡಬೇಡ ನಿನ್ನ ಕೈಯ ಪ್ರಥಮ ಫಲಗಳನು. ಕಾಣಿಕೆ ಕೊಡುವಾಗಲೆಲ್ಲ ಹಸನ್ಮುಖಿಯಾಗಿರು ಸಂತೋಷದಿಂದ ದಶಮಾಂಶವನು ಸಲ್ಲಿಸು. ಮಹೋನ್ನತನು ನಿನಗೆ ಕೊಟ್ಟ ಪ್ರಮಾಣಕ್ಕೆ ಕೊಡು ನಿನ್ನ ಕೈ ಗಳಿಸಿದ ಪ್ರಮಾಣಕ್ಕೆ ಸರಿಯಾಗಿ ಒಳ್ಳೇ ದೃಷ್ಟಿಯಿಂದ ಕೊಡು. ಏಕೆಂದರೆ ಸರ್ವೇಶ್ವರ ಪ್ರತಿಫಲ ನೀಡುವನು ಏಳ್ಮಡಿಯಾಗಿ ನಿನಗೆ ಕೊಡುವನು. ದೈವನೀತಿ ಲಂಚದೋಪಾದಿ ಕಾಣಿಕೆ ತರಬೇಡ, ಆತನು ಅವುಗಳನ್ನು ಅಂಗೀಕರಿಸುವುದಿಲ್ಲ ಅಕ್ರಮವಾದ ಬಲಿಯ ಮೇಲೆ ಮನಸ್ಸಿಡಬೇಡ, ಆತ ನ್ಯಾಯಾಧೀಶ, ಆತನಲ್ಲಿ ಮುಖದಾಕ್ಷಿಣ್ಯವಿಲ್ಲ.
ಕೀರ್ತನೆ: 50: 5-6, 7-8, 14, 23
ಶ್ಲೋಕ: ಸನ್ಮಾರ್ಗ ಹಿಡಿದವನಿಗೆ ತೋರುವೆ ಪರಮ ಜೀವೋದ್ದಾರವನು. 

ಶುಭಸಂದೇಶ: ಮಾರ್ಕ 10: 28-31

ಆಗ ಪೇತ್ರನು ಮುಂದೆ ಬಂದು, “ನೋಡಿ, ನಾವು ಎಲ್ಲವನ್ನೂ ಬಿಟ್ಟುಬಿಟ್ಟು ನಿಮ್ಮನ್ನು ಹಿಂಬಾಲಿಸಿದ್ದೇವಲ್ಲ,” ಎಂದನು. ಆಗ ಯೇಸು, “ನಾನು ನಿಶ್ಚಯವಾಗಿ ಹೇಳುತ್ತೇನೆ: ಯಾರಾದರೂ ನನ್ನ ನಿಮಿತ್ತ ಹಾಗೂ ಶುಭಸಂದೇಶದ ನಿಮಿತ್ತ ಮನೆಯನ್ನಾಗಲಿ, ಅಣ್ಣತಮ್ಮಂದಿರನ್ನಾಗಲಿ, ಅಕ್ಕತಂಗಿಯರನ್ನಾಗಲಿ, ತಾಯಿಯನ್ನಾಗಲಿ, ತಂದೆಯನ್ನಾಗಲಿ, ಮಕ್ಕಳನ್ನಾಗಲಿ, ಹೊಲಗದ್ದೆಗಳನ್ನಾಗಲಿ ತ್ಯಜಿಸುತ್ತಾನೋ ಅವನು, ಈ ಕಾಲದಲ್ಲೇ ಮನೆ, ಅಣ್ಣತಮ್ಮ, ಅಕ್ಕತಂಗಿ, ತಾಯಿ, ಮಕ್ಕಳು, ಹೊಲಗದ್ದೆ ಇವೆಲ್ಲವನ್ನೂ ನೂರ್ಮಡಿಯಷ್ಟು ಪಡೆಯುವನು. ಇವುಗಳೊಂದಿಗೆ ಹಿಂಸೆಯನ್ನೂ ಅನುಭವಿಸಬೇಕಾಗುವುದು; ಅದಲ್ಲದೆ ಮುಂದಿನ ಲೋಕದಲ್ಲಿ ಅಮರ ಜೀವವನ್ನು ಪಡೆಯುವನು. “ಆದರೆ ಮೊದಲನೆಯವರಲ್ಲಿ ಅನೇಕರು ಕಡೆಯವರಾಗುವರು; ಕಡೆಯವರಲ್ಲಿ ಅನೇಕರು ಮೊದಲಿನವರಾಗುವರು,” ಎಂದರು.


24.05.21

ಮೊದಲನೇ ವಾಚನ: ಸಿರಾಖ 17: 24-29

ತನ್ನಲ್ಲಿಗೆ ಬರಗೊಡಿಸುವನು ಪಶ್ಚಾತ್ತಾಪ ಪಡುವವನನ್ನು ಸಂತೈಸುವನು ತಾಳ್ಮೆಗೆಡುತ್ತಿರುವವರನ್ನು. ಸರ್ವೇಶ್ವರನ ಕಡೆ ತಿರುಗಿಕೊಂಡು, ಪಾಪವನ್ನು ತೊರೆದುಬಿಡು; ಆತನನ್ನು ಪ್ರಾರ್ಥಿಸಿ, ಅಪರಾಧಗಳ ಅಡ್ಡಿಯನ್ನು ಕಡಿಮೆಮಾಡು. ಮಹೋನ್ನತನ ಕಡೆ ಹಿಂದಿರುಗಿ, ಅಧರ್ಮವನ್ನು ಬಿಡು ಅಸಹ್ಯ ಕೃತ್ಯಗಳನ್ನು ಸಂಪೂರ್ಣವಾಗಿ ಹಗೆಮಾಡು. ಜೀವಿಸುತ್ತಾ ಮಹೋನ್ನತನಿಗೆ ಉಪಕಾರ ಸ್ತುತಿಮಾಡುವವರನ್ನು ಬಿಟ್ಟರೆ ಪಾತಾಳದಲ್ಲಿ ಆತನಿಗೆ ಸ್ತುತಿಹಾಡುವವರಾರಿದ್ದಾರೆ? ಕೃತಜ್ಞತಾಸ್ತುತಿ ಇರುವುದಿಲ್ಲ ಜೀವಿಸದೆ ಇದ್ದವನಲ್ಲಿ ಅಂತೆಯೇ ಅದು ಲಯವಾಗುತ್ತದೆ ಮೃತರಾದವರಲ್ಲಿ ಸರ್ವೇಶ್ವರನ ಸ್ತುತಿಗೈವನು ಜೀವಂತನು ಹಾಗು ಆರೋಗ್ಯಶಾಲಿ. ನಮ್ಮ ದೇವರಾದ ಸರ್ವೇಶ್ವರನ ಕೃಪೆ ಎಷ್ಟು ಘನವಾದುದು ಶುದ್ಧರಾಗಿ ಆತನ ಕಡೆ ತಿರುಗುವವರ ಮೇಲೆ ಆತನ ಕನಿಕರ ಎಷ್ಟು ವಿಶೇಷವಾದುದು !

ಕೀರ್ತನೆ: 32: 1-2, 5, 6-7
ಶ್ಲೋಕ: ಯಾರ ದ್ರೋಹ ವಿಮೋಚನೆಯಾಗಿದೆಯೋ ಅವರೇ ಧನ್ಯರು. 

ಶುಭಸಂದೇಶ: ಮಾರ್ಕ 10: 17-27

ಅಲ್ಲಿಂದ ಯೇಸುಸ್ವಾಮಿ ಪ್ರಯಾಣವನ್ನು ಮುಂದುವರಿಸಿದರು. ದಾರಿಯಲ್ಲಿ ಒಬ್ಬನು ಅವರ ಬಳಿಗೆ ಓಡಿಬಂದು ಮೊಣಕಾಲೂರಿ, “ಒಳ್ಳೆಯ ಗುರುವೇ, ಅಮರಜೀವವು ನನಗೆ ಪ್ರಾಪ್ತಿಯಾಗಬೇಕಾದರೆ ನಾನೇನು ಮಾಡಬೇಕು?” ಎಂದು ಕೇಳಿದನು. “ನೀನು ನನ್ನನ್ನು ಒಳ್ಳೆಯವನೆಂದು ಕರೆಯುವುದೇಕೆ? ದೇವರೊಬ್ಬರನ್ನು ಬಿಟ್ಟರೆ ಬೇರೆ ಯಾರೂ ಒಳ್ಳೆಯವರಲ್ಲ. ದೈವಾಜ್ಞೆಗಳು ನಿನಗೆ ತಿಳಿದೇ ಇವೆ: ನರಹತ್ಯೆ ಮಾಡಬೇಡ, ವ್ಯಭಿಚಾರ ಮಾಡಬೇಡ, ಕದಿಯಬೇಡ, ಸುಳ್ಳುಸಾಕ್ಷಿ ಹೇಳಬೇಡ, ಮೋಸ ಮಾಡಬೇಡ, ನಿನ್ನ ತಂದೆತಾಯಿಗಳನ್ನು ಗೌರವಿಸು,” ಎಂದು ಯೇಸು ಉತ್ತರವಿತ್ತರು. ಅದಕ್ಕೆ ಅವನು, “ಗುರುದೇವಾ, ನಾನು ಬಾಲ್ಯದಿಂದಲೇ ಇವೆಲ್ಲವನ್ನೂ ಅನುಸರಿಸಿಕೊಂಡು ಬಂದಿದ್ದೇನೆ,” ಎಂದು ಹೇಳಿದನು. ಆಗ ಯೇಸು ಅವನನ್ನು ಮಮತೆಯಿಂದ ಈಕ್ಷಿಸಿ, “ನೀನು ಮಾಡಬೇಕಾದ ಕಾರ್ಯವೊಂದು ಬಾಕಿಯಿದೆ. ಹೋಗು, ನಿನ್ನ ಆಸ್ತಿಪಾಸ್ತಿಯನ್ನೆಲ್ಲಾ ಮಾರಿ, ಬಡಬಗ್ಗರಿಗೆ ದಾನಮಾಡು; ಸ್ವರ್ಗದಲ್ಲಿ ನಿನಗೆ ಸಂಪತ್ತು ಇರುತ್ತದೆ. ನೀನು ಬಂದು ನನ್ನನ್ನು ಹಿಂಬಾಲಿಸು,” ಎಂದರು. ಯೇಸುವಿನ ಈ ಮಾತನ್ನು ಕೇಳುತ್ತಲೇ ಅವನ ಮುಖ ಪೆಚ್ಚಾಯಿತು. ಅವನು ಖಿನ್ನಮನಸ್ಕನಾಗಿ ಅಲ್ಲಿಂದ ಹೊರಟು ಹೋದನು. ಏಕೆಂದರೆ ಅವನಿಗೆ ಅಪಾರ ಆಸ್ತಿಯಿತ್ತು ಆಗ ಯೇಸುಸ್ವಾಮಿ ಸುತ್ತಲೂ ನೋಡಿ, ತಮ್ಮ ಶಿಷ್ಯರನ್ನು ಉದ್ದೇಶಿಸಿ, “ಐಶ್ವರ್ಯವುಳ್ಳವರಿಗೆ ದೇವರ ಸಾಮ್ರಾಜ್ಯವನ್ನು ಪ್ರವೇಶಿಸುವುದು ಎಷ್ಟೊಂದು ಕಷ್ಟ!” ಎಂದರು. ಅವರ ಈ ಮಾತನ್ನು ಕೇಳಿದ ಶಿಷ್ಯರು ಬೆರಗಾದರು. ಯೇಸು ಪುನಃ ಅವರಿಗೆ, “ಮಕ್ಕಳೇ, ದೇವರ ಸಾಮ್ರಾಜ್ಯವನ್ನು ಸೇರುವುದು ಎಷ್ಟು ಕಷ್ಟ! ಐಶ್ವರ್ಯವಂತನು ದೇವರ ಸಾಮ್ರಾಜ್ಯವನ್ನು ಸೇರುವುದಕ್ಕಿಂತಲೂ ಒಂಟೆಯ ಸೂಜಿಗಣ್ಣಲ್ಲಿ ನುಸುಳುವುದು ಸುಲಭ,” ಎಂದರು. ಇದನ್ನು ಕೇಳಿದ ಮೇಲಂತೂ ಶಿಷ್ಯರಿಗೆ ಅಪರಿಮಿತ ಆಶ್ಚರ್ಯವಾಯಿತು. “ಹಾಗಾದರೆ ಯಾರು ತಾನೇ ಜೀವೋದ್ಧಾರ ಹೊಂದಲು ಸಾಧ್ಯ?” ಎಂದು ತಮ್ಮ ತಮ್ಮೊಳಗೇ ಮಾತನಾಡಿಕೊಂಡರು. ಯೇಸು ಅವರನ್ನು ನಿಟ್ಟಿಸಿ ನೋಡಿ, “ಮನುಷ್ಯರಿಗೆ ಇದು ಅಸಾಧ್ಯ, ದೇವರಿಗಲ್ಲ. ದೇವರಿಗೆ ಎಲ್ಲವೂ ಸಾಧ್ಯ,” ಎಂದರು.

23.05.21 - "ನಿಮಗೆ ಶಾಂತಿ, ಪಿತನು ನನ್ನನ್ನು ಕಳುಹಿಸಿದಂತೆಯೇ ನಾನೂ ನಿಮ್ಮನ್ನು ಕಳುಹಿಸುತ್ತೇನೆ,”

ಪಂಚಾಶತ್ತಮ ಮಹೋತ್ಸವ

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 2:1-11


ಪಂಚಾಶತ್ತಮ ಹಬ್ಬದ ದಿನ ಭಕ್ತವಿಶ್ವಾಸಿಗಳೆಲ್ಲರೂ ಒಂದು ಸ್ಥಳದಲ್ಲಿ ಸಭೆಸೇರಿದ್ದರು. ಫಕ್ಕನೆ ಬಲವಾದ ಬಿರುಗಾಳಿ ಬೀಸುತ್ತಿದೆಯೋ ಎಂಬಂತೆ ಶಬ್ದವೊಂದು ಆಕಾಶದಿಂದ ಕೇಳಿಬಂತು. ಅದು ಅವರು ಕುಳಿತಿದ್ದ ಮನೆಯಲ್ಲೆಲ್ಲಾ ಮಾರ್ದನಿಸಿತು. ಅಲ್ಲದೆ ಅಗ್ನಿಜ್ವಾಲೆಗಳು ಕೆನ್ನಾಲಿಗೆಯಂತೆ ಕಾಣಿಸಿಕೊಂಡವು. ಅವು ವಿಂಗಡ ವಿಂಗಡವಾಗಿ ಪ್ರತಿಯೊಬ್ಬರ ಮೇಲೂ ನೆಲೆಸಿದವು. ಅವರೆಲ್ಲರೂ ಪವಿತ್ರಾತ್ಮಭರಿತರಾದರು. ಆ ಆತ್ಮಪ್ರೇರಣೆಯಿಂದ ಬೇರೆ ಬೇರೆ ಭಾಷೆಗಳಲ್ಲಿ ಮಾತನಾಡತೊಡಗಿದರು. ಅದೇ ಸಮಯದಲ್ಲಿ ವಿಶ್ವದ ಎಲ್ಲಾ ದೇಶಗಳಿಂದ ಧರ್ಮನಿಷ್ಠ ಯೆಹೂದ್ಯರು ಜೆರುಸಲೇಮಿಗೆ ಬಂದು ತಂಗಿದರು. ಆ ಶಬ್ದವನ್ನು ಕೇಳಿದ್ದೇ, ಜನರ ದೊಡ್ಡ ಗುಂಪು ಸೇರಿತು. ಭಕ್ತಾದಿಗಳು ಮಾತನಾಡುತ್ತಿದ್ದುದನ್ನು ತಮ್ಮ ತಮ್ಮ ಭಾಷೆಗಳಲ್ಲೇ ಕೇಳಿದ ಜನರು ದಿಗ್ಭ್ರಮೆಗೊಂಡರು. ಅವರೆಲ್ಲರೂ ವಿಸ್ಮಿತರಾಗಿ, “ಹೀಗೆ ಮಾತನಾಡುವ ಇವರೆಲ್ಲಾ ಗಲಿಲೇಯದವರಲ್ಲವೇ? ನಮ್ಮಲ್ಲಿ ಪ್ರತಿಯೊಬ್ಬನೂ ಇವರು ಮಾತನಾಡುತ್ತಿರುವುದನ್ನು ತನ್ನ ತನ್ನ ಮಾತೃಭಾಷೆಯಲ್ಲೇ ಕೇಳುತ್ತಿರುವುದು ಹೇಗೆ? ನಮ್ಮಲ್ಲಿ ಪಾರ್ಥಿಯರು, ಮೀಡಿಯರು ಮತ್ತು ಎಲಾಮಿನವರೂ, ಮೆಸಪೊಟೇಮಿಯ, ಜುದೇಯ ಮತ್ತು ಕಪ್ಪದೋಸಿಯದವರೂ ಇದ್ದಾರೆ. ಪೊಂತ ಮತ್ತು ಏಷ್ಯದವರೂ, ಫ್ರಿಜಿಯ ಮತ್ತು ಪಾಂಫಿಲಿಯದವರೂ ಇದ್ದಾರೆ. ಈಜಿಪ್ಟ್ ಮತ್ತು ಸಿರೇನಿನ ಬಳಿಯಲ್ಲಿರುವ ಲಿಬಿಯ ಪ್ರಾಂತ್ಯದವರೂ ಸೇರಿದ್ದಾರೆ. ಅದಲ್ಲದೆ ನಮ್ಮಲ್ಲಿ ಕೆಲವರು ರೋಮ್ನಿಂದ ಬಂದಿದ್ದಾರೆ. ಯೆಹೂದ್ಯರೂ ಯೆಹೂದ್ಯ ಧರ್ಮಾವಲಂಬಿಗಳೂ ಆದ ಅನ್ಯರೂ, ಕ್ರೇಟ್ ಮತ್ತು ಅರೇಬಿಯದವರೂ ಇಲ್ಲಿದ್ದಾರೆ. ದೇವರ ಮಹತ್ಕಾರ್ಯಗಳನ್ನು ಕುರಿತು ಇವರು ಮಾತನಾಡುತ್ತಿರುವುದನ್ನು ನಾವೆಲ್ಲರೂ ನಮ್ಮ ನಮ್ಮ ಭಾಷೆಗಳಲ್ಲೇ ಕೇಳುತ್ತಿದ್ದೇವಲ್ಲಾ!” ಎಂದು ಅಚ್ಚರಿಯನ್ನು ವ್ಯಕ್ತಪಡಿಸಿದರು.

ಕೀರ್ತನೆ: 104:1, 24, 29-30, 31, 34

ಶ್ಲೋಕ: ನೀ ಉಸಿರನ್ನೂದಲು ಹೊಸದಾಗುವುವು, ಪುನಶ್ಚೇತನಗೊಳುವುದು ಜಗವೆಲ್ಲವು

ಎರಡನೇ ವಾಚನ: 1 ಕೊರಿಂಥಿಯರಿಗೆ 12:3-7, 12-13

ಸಹೊದರರೇ, ಇಷ್ಟುಮಾತ್ರ ನಿಮಗೆ ಸ್ಪಷ್ಟವಾಗಿ ತಿಳಿದಿರಲಿ; ಪವಿತ್ರಾತ್ಮ ಪ್ರೇರಣೆಯಿಂದ ಮಾತನಾಡುವ ಯಾವಾತನೂ, “ಯೇಸುವಿಗೆ ಧಿಕ್ಕಾರ!” ಎನ್ನಲಾರನು. ಅಂತೆಯೇ, ಪವಿತ್ರಾತ್ಮ ಪ್ರೇರಣೆಯಿಂದಲ್ಲದೆ ಯಾವಾತನೂ, “ಯೇಸುವೇ ಪ್ರಭು,” ಎಂದು ಒಪ್ಪಿಕೊಳ್ಳಲಾರನು. ವರದಾನಗಳು ವಿಧವಿಧವಾಗಿವೆ; ಅವುಗಳನ್ನು ಕೊಡುವ ಪವಿತ್ರಾತ್ಮ ಒಬ್ಬರೇ. ಸೇವೆಗಳು ವಿಧವಿಧವಾಗಿವೆ; ಅವುಗಳನ್ನು ಸ್ವೀಕರಿಸುವ ಪ್ರಭುವು ಒಬ್ಬರೇ. ಶಕ್ತಿಸಾಮರ್ಥ್ಯವು ನಾನಾ ವಿಧ; ಅವುಗಳನ್ನು ಎಲ್ಲರಲ್ಲೂ ಸಾಧಿಸುವ ದೇವರು ಒಬ್ಬರೇ. ಪ್ರತಿಯೊಬ್ಬನಲ್ಲಿ ಕಂಡುಬರುವ ಪವಿತ್ರಾತ್ಮರ ವರದಾನಗಳನ್ನು ಸರ್ವರ ಒಳಿತಿಗಾಗಿಯೇ ಕೊಡಲಾಗಿದೆ. ದೇಹ ಒಂದೇ; ಅಂಗಗಳು ಹಲವು. ಆ ಅಂಗಗಳು ಅನೇಕವಿದ್ದರೂ ಅವು ಸೇರಿ ಒಂದೇ ದೇಹವಾಗುತ್ತದೆ. ಅಂತೆಯೇ ಕ್ರಿಸ್ತಯೇಸು. ಯೆಹೂದ್ಯರಾಗಿರಲಿ, ಗ್ರೀಕರಾಗಿರಲಿ, ಪರತಂತ್ರರಾಗಿರಲಿ, ಸ್ವತಂತ್ರರಾಗಿರಲಿ-ನಾವೆಲ್ಲರೂ ಒಂದೇ ದೇಹವಾಗುವಂತೆ ಒಂದೇ ಆತ್ಮದಿಂದ ದೀಕ್ಷಾಸ್ನಾನ ಹೊಂದಿದ್ದೇವೆ. ಒಂದೇ ಆತ್ಮವನ್ನು ನಮ್ಮೆಲ್ಲರಿಗೂ ಪಾನವಾಗಿ ಕೊಡಲಾಗಿದೆ.

ಶುಭಸಂದೇಶ ಯೊವಾನ್ನ 20:19-23

ಅದೇ ಭಾನುವಾರ ಸಂಜೆ ಶಿಷ್ಯರು ಒಂದು ಮನೆಯಲ್ಲಿ ಕೂಡಿದ್ದರು. ಯೆಹೂದ್ಯರಿಗೆ ಅಂಜಿ ಮನೆಯ ಬಾಗಿಲುಗಳನ್ನು ಮುಚ್ಚಿಕೊಂಡು ಒಳಗೇ ಇದ್ದರು. ಆಗ ಯೇಸು ಬಂದು ಅವರ ನಡುವೆ ನಿಂತರು. “ನಿಮಗೆ ಶಾಂತಿ” ಎಂದು ಹೇಳಿ ತಮ್ಮ ಕೈಗಳನ್ನು ಮತ್ತು ಪಕ್ಕೆಗಳನ್ನು ತೋರಿಸಿದರು. ಪ್ರಭುವನ್ನು ಕಂಡು ಶಿಷ್ಯರಿಗೆ ಮಹದಾನಂದವಾಯಿತು. ಯೇಸು ಪುನಃ, “ನಿಮಗೆ ಶಾಂತಿ, ಪಿತನು ನನ್ನನ್ನು ಕಳುಹಿಸಿದಂತೆಯೇ ನಾನೂ ನಿಮ್ಮನ್ನು ಕಳುಹಿಸುತ್ತೇನೆ,” ಎಂದರು. ಅನಂತರ ಅವರ ಮೇಲೆ ಉಸಿರೂದಿ, “ಪವಿತ್ರಾತ್ಮರನ್ನು ಸ್ವೀಕರಿಸಿರಿ. ಯಾರ ಪಾಪಗಳನ್ನು ನೀವು ಕ್ಷಮಿಸುತ್ತೀರೋ, ಅವರಿಗೆ ಅವನ್ನು ಕ್ಷಮಿಸಲಾಗುವುದು. ಯಾರ ಪಾಪಗಳನ್ನು ನೀವು ಕ್ಷಮಿಸದೇ ಉಳಿಸುತ್ತೀರೋ, ಅವರಿಗೆ ಕ್ಷಮಿಸದೆ ಉಳಿಸಲಾಗುವುದು,” ಎಂದು ನುಡಿದರು.

22.05.21 - "ಯೇಸು ಮಾಡಿದ ಕಾರ್ಯಗಳು ಇನ್ನೂ ಎಷ್ಟೋ ಇವೆ..."

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 28:16-20, 30-31


ನಾವು ರೋಮ್ ನಗರಕ್ಕೆ ಆಗಮಿಸಿದ ಮೇಲೆ, ತನ್ನನ್ನು ಕಾಯುತ್ತಿದ್ದ ಒಬ್ಬ ಸೈನಿಕನೊಂದಿಗೆ ಪ್ರತ್ಯೇಕವಾಗಿರಲು ಪೌಲನಿಗೆ ಅಪ್ಪಣೆ ಕೊಡಲಾಯಿತು. ಮೂರು ದಿನಗಳ ನಂತರ ಪೌಲನು ಸ್ಥಳೀಯ ಯೆಹೂದ್ಯ ಮುಖಂಡರು ತನ್ನ ಬಳಿಗೆ ಬರುವಂತೆ ಹೇಳಿಕಳುಹಿಸಿದನು. ಅವರು ಬಂದಾಗ, “ನನ್ನ ಸೋದರ ಇಸ್ರಯೇಲರೇ, ನಾನು ನಮ್ಮ ಜನರಿಗೆ ವಿರೋಧವಾಗಿಯಾಗಲಿ, ನಮ್ಮ ಪೂರ್ವಜರಿಂದ ಬಂದ ಸಂಪ್ರದಾಯಗಳಿಗೆ ವಿರೋಧವಾಗಿಯಾಗಲಿ, ಏನನ್ನೂ ಮಾಡಿಲ್ಲ; ಆದರೂ ಜೆರುಸಲೇಮಿನಲ್ಲಿ ನನ್ನನ್ನು ಕೈದಿಯನ್ನಾಗಿಸಿ ರೋಮನರ ಕೈಗೆ ಒಪ್ಪಿಸಲಾಯಿತು. ಇವರು ನನ್ನನ್ನು ವಿಚಾರಣೆಗೆ ಒಳಪಡಿಸಿದರು. ಮರಣದಂಡನೆಗೆ ಗುರಿಮಾಡುವಂಥ ಅಪರಾಧ ಏನನ್ನೂ ನನ್ನಲ್ಲಿ ಕಾಣಲಿಲ್ಲ. ಈ ಕಾರಣ ನನ್ನನ್ನು ಬಿಡುಗಡೆ ಮಾಡಬೇಕೆಂದಿದ್ದರು. ಆದರೆ ಯೆಹೂದ್ಯರು ಇದನ್ನು ಪ್ರತಿಭಟಿಸಿದರು. ಆಗ ನಾನು ಚಕ್ರವರ್ತಿಗೇ ಅಪೀಲುಮಾಡಬೇಕಾಯಿತು. ನನ್ನ ಸ್ವದೇಶೀಯರ ಮೇಲೆ ದೋಷಾರೋಪಣೆ ಮಾಡಬೇಕೆಂದು ನಾನು ಹಾಗೆ ಮಾಡಲಿಲ್ಲ. ಈ ಕಾರಣದಿಂದಲೇ ನಿಮ್ಮನ್ನು ನೋಡಿ ಮಾತನಾಡಲು ಬಯಸಿದೆ. ಇಸ್ರಯೇಲ್ ಜನತೆ ಯಾರ ನಿರೀಕ್ಷೆಯಲ್ಲಿ ಇದೆಯೋ, ಅವರ ನಿಮಿತ್ತವೇ ನಾನು ಹೀಗೆ ಸರಪಣಿಗಳಿಂದ ಬಂಧಿತನಾಗಿದ್ದೇನೆ,” ಎಂದನು. ಪೌಲನು ತಾನು ಬಾಡಿಗೆಗೆ ತೆಗೆದುಕೊಂಡಿದ್ದ ಮನೆಯಲ್ಲಿ ಎರಡು ವರ್ಷಗಳವರೆಗೆ ವಾಸವಾಗಿದ್ದನು. ತನ್ನನ್ನು ನೋಡಲು ಬಂದವರನ್ನೆಲ್ಲಾ ಆದರದಿಂದ ಬರಮಾಡಿಕೊಳ್ಳುತ್ತಿದ್ದನು. ಭಯಭೀತಿಯಿಲ್ಲದೆ ಹಾಗೂ ಅಡ್ಡಿಆತಂಕವಿಲ್ಲದೆ ದೇವರ ಸಾಮ್ರಾಜ್ಯವನ್ನು ಕುರಿತು ಪ್ರಬೋಧಿಸುತ್ತಿದ್ದನು; ಸ್ವಾಮಿ ಯೇಸುಕ್ರಿಸ್ತರ ವಿಷಯವಾಗಿ ಉಪದೇಶಿಸುತ್ತಿದ್ದನು.

ಕೀರ್ತನೆ: 11:4, 5, 7
ಶ್ಲೋಕ: ಪ್ರಭೂ, ಸತ್ಪುರುಷನು ಸೇರುವನು ನಿಮ್ಮ ಸನ್ನಿಧಿಯನು

ಶುಭಸಂದೇಶ: ಯೊವಾನ್ನ 21:20-25


ಪೇತ್ರನು ಹಿಂದಿರುಗಿ ನೋಡಿದಾಗ, ಯೇಸುವಿನ ಆಪ್ತನಾಗಿದ್ದ ಶಿಷ್ಯನು ಹಿಂದೆ ಬರುವುದನ್ನು ಕಂಡನು. (ಭೋಜನದ ಸಮಯದಲ್ಲಿ ಯೇಸುವಿನ ಪಕ್ಕದಲ್ಲೇ ಒರಗಿ, “ಪ್ರಭುವೇ, ನಿಮ್ಮನ್ನು ಹಿಡಿದುಕೊಡುವಂಥ ಸ್ವಾಮಿ ದ್ರೋಹಿ ಯಾರು?” ಎಂದು ಕೇಳಿದವನೇ ಅವನು.) ಇವನನ್ನು ಕಂಡು ಪೇತ್ರನು, “ಪ್ರಭೂ, ಇವನ ವಿಷಯವೇನು?” ಎಂದು ಯೇಸುವನ್ನು ಕೇಳಿದನು. ಅದಕ್ಕೆ ಯೇಸು, “ನಾನು ಬರುವ ತನಕ ಅವನು ಹಾಗೆಯೇ ಇರಬೇಕೆಂಬುದು ನನ್ನ ಬಯಕೆ; ಆದರೆ ಅದರಿಂದ ನಿನಗೇನಾಗಬೇಕು? ನೀನು ಅಂತೂ ನನ್ನನ್ನು ಹಿಂಬಾಲಿಸಿ ಬಾ,” ಎಂದರು. ಇದರಿಂದಾಗಿ ಆ ಶಿಷ್ಯನಿಗೆ ಸಾವಿಲ್ಲವೆಂಬ ವದಂತಿ ಸೋದರರಲ್ಲಿ ಹಬ್ಬಿತು. ಯೇಸು, ‘ನಾನು ಬರುವ ತನಕ ಅವನು ಹಾಗೆಯೇ ಇರಬೇಕೆಂಬುದು ನನ್ನ ಬಯಕೆಯಾದರೆ ಅದರಿಂದ ನಿನಗೇನಾಗಬೇಕು?’ ಎಂದು ಹೇಳಿದರೇ ಹೊರತು ಅವನಿಗೆ ಸಾವಿಲ್ಲವೆಂದು ಹೇಳಲಿಲ್ಲ. ಇವುಗಳಿಗೆ ಆ ಶಿಷ್ಯನೇ ಸಾಕ್ಷಿ. ಇದನ್ನೆಲ್ಲಾ ಬರೆದಿಟ್ಟವನೂ ಅವನೇ. ಅವನ ಸಾಕ್ಷಿ ಸತ್ಯವಾದುದೆಂದು ನಾವು ಬಲ್ಲೆವು. ಯೇಸು ಮಾಡಿದ ಕಾರ್ಯಗಳು ಇನ್ನೂ ಎಷ್ಟೋ ಇವೆ. ಅವನ್ನೆಲ್ಲಾ ಒಂದೊಂದಾಗಿ ಬರೆಯಲು ಹೋದರೆ, ಬರೆಯಬೇಕಾದ ಗ್ರಂಥಗಳನ್ನು ಬಹುಶಃ ಲೋಕವೇ ಹಿಡಿಸಲಾರದೆಂದು ನೆನಸುತ್ತೇನೆ.

21.05.21 - “ನನ್ನ ಕುರಿಮರಿಗಳನ್ನು ಮೇಯಿಸು, ನನ್ನ ಕುರಿಗಳನ್ನು ಮೇಯಿಸು"

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 25:13-21


ಕೆಲವು ದಿನಗಳಾದ ನಂತರ ರಾಜ ಅಗ್ರಿಪ್ಪನು ಬೆರ್ನಿಸಳೊಂದಿಗೆ ಫೆಸ್ತನನ್ನು ಅಭಿನಂದಿಸಲು ಸೆಜರೇಯಕ್ಕೆ ಬಂದನು. ಅವರು ಹಲವು ದಿನಗಳವರೆಗೆ ಅಲ್ಲೇ ತಂಗಿದ್ದರು. ಫೆಸ್ತನು ಪೌಲನ ವಿಷಯವನ್ನು ಅವನ ಮುಂದೆ ಪ್ರಸ್ತಾಪಿಸುತ್ತಾ, “ಫೆಲಿಕ್ಸನು ಕೈದಿಯಾಗಿ ಬಿಟ್ಟುಹೋದ ಒಬ್ಬ ವ್ಯಕ್ತಿ ಇಲ್ಲಿದ್ದಾನೆ. ನಾನು ಜೆರುಸಲೇಮಿಗೆ ಹೋಗಿದ್ದಾಗ ಯೆಹೂದ್ಯರ ಮುಖ್ಯ ಯಾಜಕರೂ ಪ್ರಮುಖರೂ ಅವನ ವಿರುದ್ಧ ಆಪಾದನೆಗಳನ್ನು ತಂದರು. ಅವನಿಗೆ ದಂಡನೆ ವಿಧಿಸುವಂತೆ ಕೇಳಿಕೊಂಡರು. ನಾನು ಅವರಿಗೆ, ‘ಆಪಾದಿತನೂ ಆಪಾದಿಸುವವರೂ ಮುಖಾಮುಖಿಯಾಗಿ ನಿಲ್ಲಬೇಕು ; ತನ್ನ ಮೇಲೆ ಹೊರಿಸಲಾದ ಆಪಾದನೆಗಳ ವಿರುದ್ಧ ವಾದಿಸಲು ಆಪಾದಿತನಿಗೆ ಅವಕಾಶ ಕೊಡಬೇಕು. ಹಾಗೆ ಮಾಡದೆ ಅವರ ಕೈಗೊಪ್ಪಿಸುವುದು ರೋಮನರ ಪದ್ಧತಿಯಲ್ಲ,’ ಎಂದು ಹೇಳಿದೆ. ಆದುದರಿಂದ ಅವರು ನನ್ನೊಡನೆ ಇಲ್ಲಿಗೆ ಬಂದರು. ನಾನು ತಡಮಾಡದೆ ಮರುದಿನವೇ ನ್ಯಾಯಸ್ಥಾನದಲ್ಲಿ ಕುಳಿತು ಅವನನ್ನು ನನ್ನ ಮುಂದೆ ತರುವಂತೆ ಆಜ್ಞೆಮಾಡಿದೆ. ಆಪಾದಿಸಿದವರು ಅವನ ವಿರುದ್ಧ ಎದ್ದುನಿಂತು ಮಾತನಾಡಿದಾಗ ನಾನು ಭಾವಿಸಿದಂತಹ ಅಪರಾಧವೊಂದನ್ನೂ ಅವನ ಮೇಲೆ ಹೊರಿಸಲಿಲ್ಲ. ಅವನೊಡನೆ ಅವರಿಗಿದ್ದ ವಾದವಿವಾದ ಅವರ ಧರ್ಮಾಚರಣೆಗಳಿಗೆ ಸಂಬಂಧಪಟ್ಟಿತ್ತು. ಯೇಸು ಎಂಬ ಒಬ್ಬ ವ್ಯಕ್ತಿಯನ್ನು ಕುರಿತೂ ವಿವಾದ ಇತ್ತು. ಯೇಸು ಸತ್ತಿದ್ದರೂ ಜೀವಂತನಾಗಿದ್ದಾನೆಂದು ಪೌಲನು ಸಾಧಿಸುತ್ತಿದ್ದನು. ಈ ವಿಷಯಗಳ ಬಗ್ಗೆ ಹೇಗೆ ವಿಚಾರಣೆಮಾಡುವುದೆಂದು ನನಗೆ ತೋಚಲಿಲ್ಲ. ಆದುದರಿಂದ, ‘ನೀನು ಜೆರುಸಲೇಮಿಗೆ ಹೋಗಿ, ಅಲ್ಲಿ ಈ ವಿಷಯಗಳ ಬಗ್ಗೆ ವಿಚಾರಣೆಗೆ ಒಳಗಾಗಲು ಇಷ್ಟಪಡುತ್ತೀಯಾ?’ ಎಂದು ಪೌಲನನ್ನು ಕೇಳಿದೆ. ಅದಕ್ಕೆ ಅವನು, ‘ಚಕ್ರವರ್ತಿಯೇ ನನ್ನ ವಾದವನ್ನು ತೀರ್ಮಾನಿಸಲಿ. ಅಲ್ಲಿಯವರೆಗೆ ನನಗೆ ರಕ್ಷಣೆ ಬೇಕು,’ ಎಂದು ವಿನಂತಿಸಿದ. ಅಂತೆಯೇ ಅವನನ್ನು ಚಕ್ರವರ್ತಿಯ ಬಳಿಗೆ ಕಳುಹಿಸಲಾಗುವ ತನಕ ಕಾವಲಿನಲ್ಲಿ ಇಡಬೇಕೆಂದು ಆಜ್ಞೆಮಾಡಿದೆ,” ಎಂದನು. 

ಕೀರ್ತನೆ: 103:1-2, 11-12, 19-20

ಶ್ಲೋಕ: ಸ್ಥಾಪಿಸಿಹನು ಪ್ರಭು ಸ್ವರ್ಗದೊಳು ಸಿಂಹಾಸನವನು

ಭಜಿಸು ನನ್ನ ಮನವೇ, ಭಜಿಸು ಪ್ರಭುವನು I
ನನ್ನ ಅಂತರಂಗವೇ, ಭಜಿಸು ಆತನನು I
ನೆನೆ ಆತನ ಪರಮಪಾವನ ನಾಮವನು II
ಭಜಿಸು ನನ್ನ ಮನವೇ, ಭಜಿಸು ಪ್ರಭುವನು I
ಮರೆಯದಿರು ಆತನ ಉಪಕಾರಗಳೊಂದನು II

ಆಕಾಶಮಂಡಲವು ಭೂಮಿಯಿಂದೆಷ್ಟೋ ಉನ್ನತ I
ದೈವಭಯವುಳ್ಳವರಿಗೆ ಆತನ ಕೃಪೆ ಅಷ್ಟೇ ಸನ್ನುತ II
ಪಡುವಣದಿಂದ ಮೂಡಣವೆಷ್ಟೋ ದೂರ I
ದೂಡಿದನಾತ ನಮ್ಮ ಪಾಪಗಳನು ಅಷ್ಟು ದೂರ II

ಸ್ಥಾಪಿಸಿಹನು ಪ್ರಭು ಸ್ವರ್ಗದೊಳು ಸಿಂಹಾಸನವನು I
ಎಲ್ಲದರ ಮೇಲೆ ನಡೆಸುತಿಹನು ರಾಜ್ಯಾಡಳಿತವನು II
ಭಜಿಸಿರಿ ಪ್ರಭುವನು ದೇವದೂತರುಗಳೇ 
ಆತನ ಆಣತಿ ಪಾಲಿಪ ಪರಾಕ್ರಮಿಗಳೇ I

ಶುಭಸಂದೇಶ: ಯೊವಾನ್ನ 21:15-19


ಊಟವಾದ ಮೇಲೆ ಯೇಸು ಸಿಮೋನ ಪೇತ್ರನನ್ನು ನೋಡಿ, ಯೊವಾನ್ನನ ಮಗನಾದ ಸಿಮೋನನೇ, ಇವರಿಗಿಂತಲೂ ಹೆಚ್ಚಾಗಿ ನೀನು ನನ್ನನ್ನು ಪ್ರೀತಿಸುತ್ತೀಯಾ?” ಎಂದು ಕೇಳಿದರು. ಅದಕ್ಕೆ ಪೇತ್ರನು, “ಹೌದು ಪ್ರಭೂ, ನಾನು ನಿಮ್ಮನ್ನು ಪ್ರೀತಿಸುತ್ತೇನೆಂದು ನೀವೇ ಬಲ್ಲಿರಿ,” ಎಂದನು. ಯೇಸು ಅವನಿಗೆ, “ನನ್ನ ಕುರಿಮರಿಗಳನ್ನು ಮೇಯಿಸು,” ಎಂದರು. ಯೇಸು ಎರಡನೆಯ ಬಾರಿ, “ಯೊವಾನ್ನನ ಮಗನಾದ ಸಿಮೋನನೇ, ನೀನು ನನ್ನನ್ನು ಪ್ರೀತಿಸುತ್ತೀಯಾ?” ಎಂದು ಕೇಳಲು, “ಹೌದು ಪ್ರಭುವೇ, ನಾನು ನಿಮ್ಮನ್ನು ಪ್ರೀತಿಸುತ್ತೇನೆಂದು ನೀವೇ ಬಲ್ಲಿರಿ,” ಎಂದು ಮರುನುಡಿದನು. ಯೇಸು ಅವನಿಗೆ, “ನನ್ನ ಕುರಿಗಳನ್ನು ಕಾಯಿ,” ಎಂದರು. ಮೂರನೇ ಬಾರಿಯೂ ಯೇಸು, “ಯೊವಾನ್ನನ ಮಗನಾದ ಸಿಮೋನನೇ, ನೀನು ನನ್ನನ್ನು ಪ್ರೀತಿಸುತ್ತೀಯಾ?” ಎಂದು ಕೇಳಿದರು. “ನೀನು ನನ್ನನ್ನು ಪ್ರೀತಿಸುತ್ತೀಯಾ?” ಎಂದು ಯೇಸು ಮೂರನೇ ಬಾರಿ ಕೇಳಿದ್ದನ್ನು ಕಂಡು ಪೇತ್ರನು ನೊಂದುಕೊಂಡನು. “ಪ್ರಭುವೇ, ನಿಮಗೆ ಎಲ್ಲವು ತಿಳಿದೇ ಇದೆ. ನಾನು ನಿಮ್ಮನ್ನು ಪ್ರೀತಿಸುತ್ತೇನೆ ಎಂದೂ ನಿಮಗೆ ತಿಳಿದಿದೆ,” ಎಂದು ಹೇಳಿದನು. ಅದಕ್ಕೆ ಯೇಸು, “ನನ್ನ ಕುರಿಗಳನ್ನು ಮೇಯಿಸು; ನಾನು ನಿನಗೆ ಸತ್ಯವಾಗಿ ಹೇಳುತ್ತೇನೆ, ಕೇಳು: ತಾರುಣ್ಯದಲ್ಲಿ ನೀನೇ ನಡುಕಟ್ಟಿಕೊಂಡು ಇಷ್ಟಬಂದ ಕಡೆ ನಡೆದೆ. ವೃದ್ಧಾಪ್ಯದಲ್ಲಾದರೋ ನೀನು ಕೈಚಾಚುವೆ. ಬೇರೊಬ್ಬನು ನಿನ್ನ ನಡುಕಟ್ಟಿ ನಿನಗಿಷ್ಟವಿಲ್ಲದ ಕಡೆ ನಿನ್ನನ್ನು ನಡೆಸಿಕೊಂಡು ಹೋಗುವನು,” ಎಂದು ನುಡಿದರು. ಪೇತ್ರನು ಎಂಥ ಸಾವಿನಿಂದ ದೇವರ ಮಹಿಮೆಯನ್ನು ಬೆಳಗಿಸಲಿದ್ದಾನೆಂದು ಸೂಚಿಸಿ ಹಾಗೆ ಹೇಳಿದರು. ಇದಾದ ಮೇಲೆ ಯೇಸು ಪೇತ್ರನಿಗೆ, “ನೀನು ನನ್ನನ್ನು ಹಿಂಬಾಲಿಸಿ ಬಾ,” ಎಂದರು.

20.05.21 - "ಪಿತನೇ, ಇವರೆಲ್ಲಾ ಒಂದಾಗಿರಲಿ"

 ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು  22:30; 23:6-11



ಯೆಹೂದ್ಯರು ಪೌಲನ ವಿರುದ್ಧ ತಂದ ಆಪಾದನೆ ಏನೆಂದು ಖಚಿತವಾಗಿ ತಿಳಿದುಕೊಳ್ಳಲು ಸಹಸ್ರಾಧಿಪತಿ ಅಪೇಕ್ಷಿಸಿದನು. ಮಾರನೆಯ ದಿನ ಪೌಲನನ್ನು ಬಿಡುಗಡೆ ಮಾಡಿದನು. ಮುಖ್ಯಯಾಜಕರು ಮತ್ತು ನ್ಯಾಯಸಭೆಯ ಪ್ರಮುಖರು ಕೂಡುವಂತೆ ಆಜ್ಞಾಪಿಸಿದನು. ಪೌಲನನ್ನು ಕರೆದುಕೊಂಡು ಹೋಗಿ ಆ ಸಭೆಯ ಮುಂದೆ ನಿಲ್ಲಿಸಿದನು. ಸಭೆ ಸೇರಿದ್ದವರಲ್ಲಿ ಕೆಲವರು ಸದ್ದುಕಾಯ ಪಂಥದವರು ಮತ್ತೆ ಕೆಲವರು ಫರಿಸಾಯ ಪಂಥದವರು. ಇದನ್ನು ಗಮನಿಸಿದ ಪೌಲನು, “ಸಹೋದರರೇ, ನಾನೊಬ್ಬ ಫರಿಸಾಯ, ಫರಿಸಾಯರ ವಂಶಜ. ಸತ್ತವರು ಪುನರುತ್ಥಾನ ಹೊಂದುತ್ತಾರೆ ಎಂಬ ನಮ್ಮ ನಿರೀಕ್ಷೆಯ ನಿಮಿತ್ತ ನಾನು ಇಲ್ಲಿ ವಿಚಾರಣೆಗೆ ಗುರಿಯಾಗಿದ್ದೇನೆ,” ಎಂದು ಧ್ವನಿಯೆತ್ತಿ ಸಭೆಯಲ್ಲಿ ಹೇಳಿದನು. ಅವನು ಹೀಗೆ ಹೇಳಿದಾಕ್ಷಣವೇ, ಫರಿಸಾಯರ ಮತ್ತು ಸದ್ದುಕಾಯರ ನಡುವೆ ವಾಗ್ವಾದ ಉಂಟಾಯಿತು. ಸಭೆಯಲ್ಲಿ ಭಿನ್ನಭೇದವುಂಟಾಯಿತು. ಏಕೆಂದರೆ, ಸದ್ದುಕಾಯರು ಪುನರುತ್ಥಾನವಾಗಲಿ, ದೇವದೂತರಾಗಲಿ, ದೇಹರಹಿತ ಆತ್ಮವಾಗಲಿ ಇದೆಯೆಂದು ಒಪ್ಪುವುದಿಲ್ಲ. ಆದರೆ ಫರಿಸಾಯರು ಇವೆಲ್ಲಾ ಇವೆಯೆಂದು ನಂಬುತ್ತಾರೆ. ಆಗ ಅಲ್ಲಿ ದೊಡ್ಡ ಕೂಗಾಟವೆದ್ದಿತು. ಫರಿಸಾಯ ಪಂಥಕ್ಕೆ ಸೇರಿದ ಕೆಲವು ಧರ್ಮಶಾಸ್ತ್ರಿಗಳು ಎದ್ದು ನಿಂತು, “ಈ ಮನುಷ್ಯನಲ್ಲಿ ನಮಗೆ ಯಾವ ದೋಷವೂ ಕಾಣುವುದಿಲ್ಲ. ಒಂದು ಆತ್ಮವೋ ಅಥವಾ ಒಬ್ಬ ದೂತನೋ ಇವನೊಡನೆ ಮಾತನಾಡಿದ್ದರೂ ಮಾತನಾಡಿರಬಹುದು,” ಎಂದು ವಾದಿಸಿದರು. ಈ ವಾಗ್ವಾದ ವಿಕೋಪಕ್ಕೆ ಹೋದುದರಿಂದ ಪೌಲನನ್ನು ಅವರು ಖಂಡತುಂಡಾಗಿಸಬಹುದೆಂದು ಸಹಸ್ರಾಧಿಪತಿ ಹೆದರಿದನು. ಅವನು ಸೈನಿಕರನ್ನು ಕಳುಹಿಸಿ ಪೌಲನನ್ನು ಸಭೆಯ ಮಧ್ಯದಿಂದ ಎತ್ತಿಕೊಂಡು ಕೋಟೆಗೆ ತರುವಂತೆ ಆಜ್ಞಾಪಿಸಿದನು. ಪ್ರಭು ಅದೇ ರಾತ್ರಿ ಪೌಲನಿಗೆ ಹತ್ತಿರದಲ್ಲೇ ಕಾಣಿಸಿಕೊಂಡು, “ಧೈರ್ಯದಿಂದಿರು, ನೀನು ಜೆರುಸಲೇಮಿನಲ್ಲಿ ನನಗೆ ಸಾಕ್ಷಿಕೊಟ್ಟಂತೆ ರೋಮಿನಲ್ಲೂ ನನಗೆ ಸಾಕ್ಷಿಕೊಡಬೇಕಾಗಿದೆ,” ಎಂದರು.

ಕೀರ್ತನೆ: 16:1-2, 5, 7-8, 9-10, 11

ಶ್ಲೋಕ: ನೀಡು ದೇವಾ ರಕ್ಷಣೆಯನು ನಾ ನಿನಗೆ ಶರಣಾಗತನು


ನೀಡು ದೇವಾ ರಕ್ಷಣೆಯನು I
ನಾ ನಿನಗೆ ಶರಣಾಗತನು II
ನೀನೇ ನನ್ನೊಡೆಯ"ನೆಂದು ನಾ ನುಡಿದೆ I
ನಿನ್ನ ಹೊರತು ನನಗಿಲ್ಲ ಒಳಿತು” ಎಂದೇ II

ನನ್ನ ಸ್ವತ್ತೂ ಸ್ವಾಸ್ತ್ಯವೂ ನೀನೇ I
ನಿನ್ನ ಕೈಯಲ್ಲಿದೆ ಪ್ರಭುನನ್ನ ವಿಮೆ II

ಪ್ರಭುವಿಗೆನ್ನ ಧನ್ಯವಾದ - ಆತನೇ ನನಗೆ ಮಾರ್ಗದರ್ಶಕ I
ಅಂಧಕಾರದೊಳೂ ನನ್ನ ಮನಸ್ಸಾಕ್ಷಿಯೆ ನನಗೆ ಬೋಧಕ II
ಇರಿಸಿಕೊಳ್ಳುವೆ ಪ್ರಭುವನು ಸತತ ನನ್ನೆದುರಿಗೆ I
ಆತನಿರಲು ಬಲಕ್ಕೆ ನನಗೆಲ್ಲಿಯದು ಹೆದರಿಕೆ II

ಇದು ಕಾರಣ ಹರ್ಷದಿಂದಿದೆ ಎನ್ನಯ ಹೃದಯ I
ಆನಂದಗೊಂಡಿದೆ ಮನಸುರಕ್ಷಿತವಿದೆ ಕಾಯ II
ಏಕೆನೆ ದೂಡುವುದಿಲ್ಲ ನೀನು ಎನ್ನನು ಅಧೋಲೋಕಕೆ I
ಬಿಟ್ಟುಕೊಡುವುದಿಲ್ಲ ನಿನ್ನ  ಭಕ್ತನನು ಪಾತಾಳಕೆ II

ತೋರ್ಪಡಿಸುವೆ ಎನಗೆ ಅಮರ ಜೀವಮಾರ್ಗವನು I
ನಿನ್ನ ಸನ್ನಿಧಿ ಕೊಡುವುದು ಪರಮಾನಂದವನು I
ನಿನ್ನ ಬಲಗೈ ನೀಡುವುದು ನಿತ್ಯಭಾಗ್ಯವನು II

ಶುಭಸಂದೇಶ: ಯೊವಾನ್ನ 17:20-26


ಯೇಸುಸ್ವಾಮಿ ಆಕಾಶದತ್ತ ಕಣ್ಣೆತ್ತಿ ಹೀಗೆಂದು ಪ್ರಾರ್ಥಿಸಿದರು: “ಇವರಿಗಾಗಿ ಮಾತ್ರವಲ್ಲ, ಇವರ ಮಾತನ್ನು ಕೇಳಿ ನನ್ನಲ್ಲಿ ವಿಶ್ವಾಸವಿಡುವವರಿಗಾಗಿಯೂ ಪ್ರಾರ್ಥಿಸುತ್ತೇನೆ. ಪಿತನೇ, ಇವರೆಲ್ಲಾ ಒಂದಾಗಿರಲಿ. ನೀವು ನನ್ನಲ್ಲಿ, ನಾನು ನಿಮ್ಮಲ್ಲಿ ಇರುವಂತೆಯೇ ಇವರೂ ನಮ್ಮಲ್ಲಿ ಒಂದಾಗಿರಲಿ. ಹೀಗೆ, ನನ್ನನ್ನು ಕಳುಹಿಸಿದವರು ನೀವೇ ಎಂದು ಲೋಕವು ವಿಶ್ವಾಸಿಸುವಂತಾಗಲಿ. ನಾವು ಒಂದಾಗಿರುವಂತೆ ಇವರೂ ಒಂದಾಗಿರಲೆಂದು ನೀವು ನನಗಿತ್ತ ಮಹಿಮೆಯನ್ನು ನಾನು ಇವರಿಗೆ ಕೊಟ್ಟಿದ್ದೇನೆ. ನಾನು ಇವರಲ್ಲಿಯೂ ನೀವು ನನ್ನಲ್ಲಿಯೂ ಇದ್ದು, ಇವರ ಐಕ್ಯಮತ್ಯವು ಪೂರ್ಣಸಿದ್ಧಿಗೆ ಬರಲಿ. ಆಗ ನೀವೇ ನನ್ನನ್ನು ಕಳುಹಿಸಿರುವಿರಿ ಎಂದೂ ನನ್ನನ್ನು ಪ್ರೀತಿಸಿದಂತೆಯೇ ಇವರನ್ನು ನೀವು ಪ್ರೀತಿಸಿರುವಿರಿ ಎಂದೂ ಲೋಕಕ್ಕೆ ಮನವರಿಕೆ ಆಗುವುದು. ಪಿತನೇ, ಇವರನ್ನು ನೀವು ನನಗೆ ಕೊಟ್ಟಿರುವಿರಿ. ಜಗತ್ತು ಉಂಟಾಗುವ ಮೊದಲೇ ನೀವು ನನ್ನನ್ನು ಪ್ರೀತಿಸಿ ನನಗಿತ್ತ ಮಹಿಮೆಯನ್ನು ಇವರೂ ಕಾಣುವಂತೆ ನಾನಿದ್ದಲ್ಲಿ ಇವರೂ ಇರಬೇಕೆಂದು ಆಶಿಸುತ್ತೇನೆ. ನೀತಿಸ್ವರೂಪಿಯಾದ ಪಿತನೇ, ಲೋಕವು ನಿಮ್ಮನ್ನು ಅರಿತುಕೊಳ್ಳಲಿಲ್ಲ. ಆದರೆ ನಾನು ಅರಿತಿದ್ದೇನೆ. ನನ್ನನ್ನು ಕಳುಹಿಸಿದವರು ನೀವೆಂದು ಇವರು ತಿಳಿದುಕೊಂಡಿದ್ದಾರೆ. ನಿಮ್ಮ ನಾಮವನ್ನು ನಾನು ಇವರಿಗೆ ತಿಳಿಯಪಡಿಸಿದ್ದೇನೆ; ಇನ್ನೂ ತಿಳಿಯಪಡಿಸುತ್ತೇನೆ. ಹೀಗೆ ನೀವು ನನ್ನಲ್ಲಿಟ್ಟ ಪ್ರೀತಿಯು ಇವರಲ್ಲಿಯೂ ಇರುವಂತಾಗುವುದು; ನಾನೂ ಅವರಲ್ಲಿ ಇರುವಂತಾಗುವುದು.”

19.05.21 - "ನಾನು ಲೋಕಕ್ಕೆ ಸೇರಿದವನಲ್ಲ. ಅಂತೆಯೇ, ಇವರೂ ಲೋಕಕ್ಕೆ ಸೇರಿದವರಲ್ಲ"

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು  20:28-38

ಪೌಲನು ಎಫೆಸದ ಸಭೆಯ ಹಿರಿಯರನ್ನು ಉದ್ದೇಶಿಸಿ ಮಾತನಾಡುತ್ತಾ ಹೀಗೆಂದನು: "ನೀವು ನಿಮ್ಮ ವಿಷಯದಲ್ಲಿ ಹಾಗೂ ಪವಿತ್ರಾತ್ಮ ನಿಮ್ಮ ಪಾಲನೆಗೆ ವಹಿಸಿರುವ ಮಂದೆಯ ವಿಷಯದಲ್ಲಿ ಜಾಗರೂಕರಾಗಿರಿ. ಪ್ರಭು ತಮ್ಮ ಸ್ವಂತ ರಕ್ತ ಸುರಿಸಿ ಸಂಪಾದಿಸಿದ ಧರ್ಮಸಭೆಗೆ ಉತ್ತಮ ಕುರಿಗಾಹಿಗಳಾಗಿರಿ. ನಾನು ಹೋದ ಬಳಿಕ ಕ್ರೂರವಾದ ತೋಳಗಳು ನಿಮ್ಮ ಮಧ್ಯೆ ನುಗ್ಗುವುವು ಎಂದು ನಾನು ಬಲ್ಲೆ. ಅವು ಮಂದೆಗೆ ಹಾನಿಮಾಡದೆ ಬಿಡವು. ಇದಲ್ಲದೆ ನಿಮ್ಮಲ್ಲೇ ಕೆಲವರು ಎದ್ದು ಭಕ್ತವಿಶ್ವಾಸಿಗಳನ್ನು ತಮ್ಮ ಕಡೆ ಸೆಳೆದುಕೊಳ್ಳಲು ಅಸತ್ಯವಾದವುಗಳನ್ನು ಹೇಳುವರು. ಆದುದರಿಂದ ಎಚ್ಚರಿಕೆ! ನಾನು ಮೂರು ವರ್ಷಗಳ ಕಾಲ ಹಗಲಿರುಳು ಕಣ್ಣೀರಿಡುತ್ತಾ ಪ್ರತಿಯೊಬ್ಬನಿಗೂ ಬುದ್ಧಿ ಹೇಳಿದ್ದೇನೆಂಬುದನ್ನು ಮರೆಯಬೇಡಿ. “ಈಗ ನಿಮ್ಮನ್ನು ದೇವರ ಕೈಗೂ, ಅವರ ಅನುಗ್ರಹ ಸಂದೇಶಕ್ಕೂ ಒಪ್ಪಿಸಿಕೊಡುತ್ತೇನೆ. ಅದು ನಿಮ್ಮನ್ನು ಅಭಿವೃದ್ಧಿಗೊಳಿಸಬಲ್ಲದು. ಮಾತ್ರವಲ್ಲ, ಪಾವನ ಪುರುಷರ ಬಾಧ್ಯತೆಯಲ್ಲಿ ಭಾಗಿಗಳಾಗುವಂತೆ ಮಾಡಬಲ್ಲದು. ನಾನು ಯಾರ ಬೆಳ್ಳಿ ಬಂಗಾರಕ್ಕೂ ಬಟ್ಟೆಬರೆಗೂ ಆಶೆಪಟ್ಟವನಲ್ಲ. ನನ್ನ ಹಾಗೂ ನನ್ನ ಸಂಗಡಿಗರ ಅವಶ್ಯಕತೆಗಳನ್ನು ನೀಗಿಸಲು ಈ ಕೈಗಳೇ ದುಡಿದಿವೆಯೆಂಬುದು ನಿಮ್ಮೆಲ್ಲರಿಗೂ ತಿಳಿದಿದೆ. ಹೀಗೆ ಕಷ್ಟಪಟ್ಟು ದುಡಿದು, ದುರ್ಬಲರಿಗೆ ನೆರವಾಗಬೇಕೆಂದು ನಾನು ನಿಮಗೆ ಹಲವಾರು ವಿಧದಲ್ಲಿ ತೋರಿಸಿಕೊಟ್ಟಿದ್ದೇನೆ. ‘ಕೊಳ್ಳುವ ಕೈಗಿಂತ ಕೊಡುವ ಕೈ ಧನ್ಯವಾದುದು’ ಎಂಬ ಯೇಸುಸ್ವಾಮಿಯ ಮಾತುಗಳನ್ನು ನೆನಪಿನಲ್ಲಿಡಿ.” ಇಷ್ಟು ಹೇಳಿದ ಮೇಲೆ ಪೌಲನು ಅವರೆಲ್ಲರ ಸಂಗಡ ಮೊಣಕಾಲೂರಿ ಪ್ರಾರ್ಥನೆ ಮಾಡಿದನು. ಅನಂತರ ಅವರು ಅವನನ್ನು ತಬ್ಬಿಕೊಂಡು ಮುದ್ದಿಟ್ಟು ಬೀಳ್ಕೊಟ್ಟರು. ಅವರ ಕಣ್ಣಲ್ಲಾದರೋ ನೀರು ಧಾರಾಕಾರವಾಗಿ ಹರಿಯುತ್ತಿತ್ತು. ‘ಇನ್ನೆಂದೂ ನೀವು ನನ್ನ ಮುಖವನ್ನು ಕಾಣಲಾರಿರಿ,’ ಎಂಬ ಅವನ ಮಾತು ಅವರನ್ನು ಅತೀವ ದುಃಖಕ್ಕೆ ಈಡುಮಾಡಿತ್ತು. ಅವರು ಹಡಗಿನವರೆಗೂ ಹೋಗಿ ಅವನನ್ನು ಬೀಳ್ಕೊಟ್ಟರು.

ಕೀರ್ತನೆ: 68:29-30, 33-35, 35-36

ಶ್ಲೋಕ: ಭೂರಾಜ್ಯಗಳೇ, ಸ್ತುತಿಸಿರಿ ದೇವರನು!


ವಸತಿಯಾಯಿತದು ನಿನ್ನ ಜನಮಂದೆಗೆ I
ಆಸ್ಥೆಯಿಂದೊದಗಿಸಿದೆ ದೀನ ದಲಿತರಿಗೆ II
ಹೊರಡಿಸಿದನು ಪ್ರಭು ಶುಭವಾರ್ತೆಯೊಂದನು I
ಹರಡಿತು ಜನಸ್ತೋಮ ಆ ಸಂದೇಶವನು II
ನಮ್ಮ ದೇವರು ಜೀವೋದ್ಧಾರಕ ದೇವರು ಹೌದು I
ಸಾವಿಂದ ತಪ್ಪಿಸುವ ಶಕ್ತಿಸ್ವಾಮಿ ದೇವರದು II
ಸಂಹರಿಸುವನಾತನು ಶತ್ರುಗಳಾ ಶಿರಸ್ಸನು I
ನಸುಕುವನು ದುರ್ಮಾರ್ಗಿಗಳ ಕೇಶ ಕಿರೀಟವನು II

ಶುಭಸಂದೇಶ: ಯೊವಾನ್ನ 17:11-19

ಯೇಸುಸ್ವಾಮಿ ಆಕಾಶದತ್ತ ಕಣ್ಣೇತ್ತಿ ಹೀಗೆಂದು ಪ್ರಾರ್ಥಿಸಿದರು:  ಪವಿತ್ರ ಪಿತನೇ, ನಾವು ಒಂದಾಗಿರುವಂತೆ ನೀವು ನನಗೆ ಕೊಟ್ಟಿರುವ ಇವರೂ ಒಂದಾಗಿರುವ ಹಾಗೆ ನಿಮ್ಮ ನಾಮದ ಶಕ್ತಿಯಿಂದ ಇವರನ್ನು ಸುರಕ್ಷಿತವಾಗಿರಿಸಿರಿ. ನಾನು ಇವರೊಡನೆ ಇದ್ದಾಗ ಇವರನ್ನು ಕಾಪಾಡಿದೆನು. ನೀವಿತ್ತ ಇವರನ್ನು ನಿಮ್ಮ ನಾಮದ ಶಕ್ತಿಯಿಂದ ಸುರಕ್ಷಿತವಾಗಿ ನೋಡಿಕೊಂಡು ಬಂದೆನು. ಪವಿತ್ರಗ್ರಂಥದ ಮಾತು ನೆರವೇರುವಂತೆ ವಿನಾಶಕ್ಕೆ ಗುರಿಯಾಗಬೇಕಿದ್ದ ಒಬ್ಬನನ್ನು ಬಿಟ್ಟರೆ, ಇವರಲ್ಲಿ ಬೇರೆ ಯಾರೂ ನಾಶವಾಗಲಿಲ್ಲ. ಈಗ ನಾನು ನಿಮ್ಮ ಬಳಿಗೆ ಬರುತ್ತಿದ್ದೇನೆ. ನನ್ನ ಆನಂದವು ಅವರ ಹೃದಯದಲ್ಲಿ ತುಂಬಿ ತುಳುಕುವಂತೆ ಈ ಲೋಕದಲ್ಲಿರುವಾಗಲೇ ಇವುಗಳನ್ನು ಹೇಳುತ್ತಿದ್ದೇನೆ. ನಿಮ್ಮ ಸಂದೇಶವನ್ನು ಇವರಿಗೆ ತಿಳಿಸಿದ್ದೇನೆ. ನಾನು ಲೋಕಕ್ಕೆ ಸೇರಿದವನಲ್ಲ. ಅಂತೆಯೇ, ಇವರೂ ಲೋಕಕ್ಕೆ ಸೇರಿದವರಲ್ಲ. ಈ ಕಾರಣ, ಲೋಕಕ್ಕೆ ಇವರ ಮೇಲೆ ದ್ವೇಷವಿದೆ. ಇವರನ್ನು ಲೋಕದಿಂದ ತೆಗೆದುಬಿಡಬೇಕೆಂದು ನಾನು ನಿಮ್ಮನ್ನು ಕೇಳಿಕೊಳ್ಳುತ್ತಿಲ್ಲ. ಆದರೆ ಕೇಡಿಗನಿಂದ ಇವರನ್ನು ಕಾಪಾಡಬೇಕೆಂದು ಕೇಳಿಕೊಳ್ಳುತ್ತೇನೆ. ನಾನು ಲೋಕಕ್ಕೆ ಹೇಗೆ ಸೇರಿದವನಲ್ಲವೋ ಹಾಗೆಯೇ ಇವರೂ ಲೋಕಕ್ಕೆ ಸೇರಿದವರಲ್ಲ. ಇವರನ್ನು ಸತ್ಯಸಂಧರನ್ನಾಗಿಸಿ ನಿಮ್ಮ ಸೇವೆಗೆ ಮೀಸಲಾಗಿಡಿ. ನಿಮ್ಮ ಮಾತೇ ಸತ್ಯ. ನೀವು ನನ್ನನ್ನು ಲೋಕಕ್ಕೆ ಕಳಿಸಿದಂತೆ ನಾನು ಇವರನ್ನು ಲೋಕಕ್ಕೆ ಕಳಿಸಿದ್ದೇನೆ. ಸತ್ಯಸಂಧರಾಗಿ ಇವರು ನಿಮ್ಮ ಸೇವೆಗೆ ಮೀಸಲಾಗಬೇಕೆಂದು ನನ್ನನ್ನು ನಾನೇ ಮೀಸಲಾಗಿಸಿಕೊಂಡಿದ್ದೇನೆ.