03.10.2026 - II ಪಿತನೇ, ಭೂಸ್ವರ್ಗಗಳ ಒಡೆಯನೇ, ಈ ವಿಷಯಗಳನ್ನು ಜ್ಞಾನಿಗಳಿಗೂ ಮೇಧಾವಿಗಳಿಗೂ ಮರೆಮಾಡಿ, ಮಕ್ಕಳಂಥವರಿಗೆ ನೀವು ಶ್ರುತಪಡಿಸಿದ್ದೀರಿII

ಮೊದಲನೇ ವಾಚನ: ಯೋಬನ ಗ್ರಂಥ  42:1-3, 5-6, 12-16 


ಯೋಬನು ಸರ್ವೇಶ್ವರಸ್ವಾಮಿಗೆ ಕೊಟ್ಟ ಉತ್ತರ ಇದು: “ತಾವು ಎಲ್ಲಾ ಕಾರ್ಯಗಳನು ನಡೆಸಲು‍ ಶಕ್ತರೆಂದು ನಾನು ಬಲ್ಲೆ ಯಾವ ಯೋಜನೆಯು ನಿಮಗೆ ಅಸಾಧ್ಯವಿಲ್ಲವೆಂದು ನಾನು ಅರಿತಿರುವೆ. ‘ಅಜ್ಞಾನದ ಮಾತುಗಳನ್ನಾಡುವ ನೀನು ಯಾರು?’ ‘ಸತ್ಯಾಲೋಚನೆಗಳನು ಮಂಕುಮಾಡುವ ನೀನಾರು?’ ಈ ನಿಮ್ಮ ನುಡಿಯಂತೆ ಅರ್ಥಹೀನ ಮಾತುಗಳನು ನಾನಾಡಿದೆ ನನ್ನ ಬುದ್ಧಿಗೆಟುಕದ ಪವಾಡಗಳನ್ನು ಟೀಕಿಸಿದೆ. ಈವರೆಗೆ ನಿಮ್ಮನು ಕುರಿತು ನಾನು ಕೇಳಿದ್ದು ಬೇರೆಯವರಿಂದ ಈಗಲಾದರೊ ನಿಮ್ಮನು ಕಂಡಿದ್ದೇನೆ ನನ್ನ ಕಣ್ಣುಗಳಿಂದ. ಆದುದರಿಂದ ನಾನು ಹೇಳಿದ್ದೆಲ್ಲಕ್ಕಾಗಿ ವಿಷಾದಿಸುತ್ತೇನೆ ಬೂದಿಯಲು, ಧೂಳಿನಲು ಕುಳಿತು ಪಶ್ಚಾತ್ತಾಪಪಡುತ್ತೇನೆ.” ಸರ್ವೇಶ್ವರ ಯೋಬನ ಮೊದಲನೆಯ ಸ್ಥಿತಿಗಿಂತಲೂ ಅವನ ಕಡೆಯ ಸ್ಥಿತಿಯನ್ನು ಹೀಗೆ ಅಧಿಕಗೊಳಿಸಿ ಆಶೀರ್ವದಿಸಿದರು.  ಅವನಿಗೆ ಹದಿನಾಲ್ಕು ಸಾವಿರ ಕುರಿಗಳು, ಆರು ಸಾವಿರ ಒಂಟೆಗಳು, ಒಂದು ಸಾವಿರ ಜೋಡಿ ಎತ್ತುಗಳು, ಒಂದು ಸಾವಿರ ಕತ್ತೆಗಳು ದೊರಕಿದವು.  ಅಲ್ಲದೆ ಏಳು ಮಂದಿ ಗಂಡುಮಕ್ಕಳು, ಮೂರು ಮಂದಿ ಹೆಣ್ಣುಮಕ್ಕಳು ಹುಟ್ಟಿದರು. ಮೊದಲನೆಯವಳಿಗೆ ಯೆಮೀಮ, ಎರಡನೆಯವಳಿಗೆ ಕೆಚೀಯ, ಮೂರನೆಯವಳಿಗೆ ಕೆರೆನ್ಹಪ್ಪೂಕ್ ಎಂದು ಹೆಸರಿಟ್ಟನು.  ಯೋಬನ ಮಕ್ಕಳಷ್ಟು ಸುಂದರವಾದ ಹೆಣ್ಣುಗಳು ಆ ನಾಡಿನಲ್ಲೆಲ್ಲೂ ಸಿಕ್ಕುತ್ತಿರಲಿಲ್ಲ. ಅವರ ತಂದೆ, ಅವರ ಅಣ್ಣತಮ್ಮಂದಿರಿಗೆ ಕೊಟ್ಟ ಹಾಗೆ ಅವರಿಗೂ ಸೊತ್ತನ್ನು ಹಂಚಿದನು.  ತರುವಾಯ ಯೋಬನು ನೂರನಾಲ್ವತ್ತು ವರ್ಷ ಬಾಳಿದನು. ನಾಲ್ಕು ತಲೆಮಾರು ತನಕ ಮಕ್ಕಳನ್ನೂ ಮೊಮ್ಮಕ್ಕಳನ್ನೂ ಕಂಡನು. ಹಣ್ಣು ಹಣ್ಣು ಮುದುಕನಾಗಿ ಸತ್ತನು.  

ಕೀರ್ತನೆ: 119:66, 71, 75, 91, 125, 130 

ಶ್ಲೋಕ: ಪ್ರಭೂ, ತೋರು ನಿನ್ನ ಮುಖದರ್ಶನ ಈ ದಾಸನಿಗೆ

1.  ಸುಜ್ಞಾನ ವಿವೇಕಗಳನು ಕಲಿಸೆನಗೆ|
ನಿನ್ನಾಜ್ಞೆಗಳಲಿ ನನಗಿದೆ ನಂಬಿಕೆ||
ಕಷ್ಟಾನುಭವವು  ಆಯಿತೆನಗೆ ಹಿತಕರ|
ಅದು ತಂದಿತು ನಿನ್ನ ನಿಬಂಧನೆಗಳೆಚ್ಚರ||
ಶ್ಲೋಕ

2.  ನಾ ಬಲ್ಲೆ ಪ್ರಭೂ, ನಿನ್ನ ವಿಧಿಗಳು ನೀತಿಯುತವೆಂದು|
ಕಷ್ಟಕ್ಕೆ ನನ್ನನು ಗುರಿಪಡಿಸಿರುವುದು ಉಚಿತವೆಂದು||
ನಿನ್ನ ವಿಧಿಗನುಸಾರ ಅವು ಇಂದಿಗೂ ಉಳಿದಿವೆ|
ಏಕೆನೆ, ಸರ್ವವೂ ಮಾಡುತಿವೆ ನಿನಗೆ ಸೇವೆ||
ಶ್ಲೋಕ

3.  ನಿನ್ನ ದಾಸ ನಾನು,ದಯಪಾಲಿಸು ಎನಗೆ|
ನಿನ್ನ ಕಟ್ಟಳೆಗಳನು ಅರಿವ ತಿಳುವಳಿಕೆ||
ತರುವುದು ನಿನ್ನ ವಾಕ್ಯೋಪದೇಶ|
ಸರಳ ಜನರಿಗೆ ಜ್ಞಾನಪ್ರಕಾಶ||
ಶ್ಲೋಕ

ಘೋಷಣೆ
(ಕೀರ್ತನೆ 111:7,8)
ಅಲ್ಲೆಲೂಯ, ಅಲ್ಲೆಲೂಯ!
ಸುಸ್ಥಿರವಾದವು  ಆತನ   ನಿಯಮನಿಬಂಧನೆಗಳು | ಯುಗಯುಗಾಂತರಕು  ದೃಢವಾಗಿರುವುವು ||
ಅಲ್ಲೆಲೂಯ!

ಶುಭಸಂದೇಶ: ಲೂಕ 10:17-24 


"ನಿಮ್ಮ ಹೆಸರುಗಳು ಸ್ವರ್ಗದಲ್ಲಿ ಲಿಖಿತವಾಗಿದೆ ಎಂದು ಸಂತೋಷ ಪಡಿ," ಕಳುಹಿಸಲಾಗಿದ್ದ ಎಪ್ಪತ್ತೆರಡು ಮಂದಿ ಸಂತೋಷಭರಿತರಾಗಿ ಹಿಂದಿರುಗಿ ಬಂದು, “ಸ್ವಾಮೀ, ನಿಮ್ಮ ಹೆಸರಿನಲ್ಲಿ ಆಜ್ಞೆಮಾಡಿದಾಗ ದೆವ್ವಗಳು ಕೂಡ ನಮಗೆ ಅಧೀನವಾಗುತ್ತವೆ,” ಎಂದು ವರದಿಮಾಡಿದರು.  ಅದಕ್ಕೆ ಯೇಸು, “ಸೈತಾನನು ಆಕಾಶದಿಂದ ಸಿಡಿಲಿನಂತೆ ಬೀಳುವುದನ್ನು ಕಂಡೆನು.  ಇಗೋ, ಸರ್ಪಗಳನ್ನು ಹಾಗೂ ಚೇಳುಗಳನ್ನು ತುಳಿಯುವುದಕ್ಕೂ ಶತ್ರುವಿನ ಸಮಸ್ತ ಶಕ್ತಿಯನ್ನು ಜಯಿಸುವುದಕ್ಕೂ ನಿಮಗೆ ಅಧಿಕಾರ ಕೊಟ್ಟಿದ್ದೇನೆ. ಯಾವುದೂ ನಿಮಗೆ ಹಾನಿಮಾಡದು.  ಆದರೂ ದೆವ್ವಗಳು ನಿಮಗೆ ಅಧೀನವಾಗಿವೆಯೆಂದು ಸಂತೋಷಪಡುವುದಕ್ಕಿಂತ ನಿಮ್ಮ ಹೆಸರುಗಳು ಸ್ವರ್ಗದಲ್ಲಿ ಲಿಖಿತವಾಗಿವೆ ಎಂದು ಸಂತೋಷಪಡಿ,” ಎಂದು ಹೇಳಿದರು. ಅದೇ ಗಳಿಗೆಯಲ್ಲಿ ಯೇಸುಸ್ವಾಮಿ ಪವಿತ್ರಾತ್ಮರಿಂದ ಹರ್ಷಾವೇಶಗೊಂಡು, “ಪಿತನೇ, ಭೂಸ್ವರ್ಗಗಳ ಒಡೆಯನೇ, ಈ ವಿಷಯಗಳನ್ನು ಜ್ಞಾನಿಗಳಿಗೂ ಮೇಧಾವಿಗಳಿಗೂ ಮರೆಮಾಡಿ, ಮಕ್ಕಳಂಥವರಿಗೆ ನೀವು ಶ್ರುತಪಡಿಸಿದ್ದೀರಿ; ಇದಕ್ಕಾಗಿ ನಿಮ್ಮನ್ನು ವಂದಿಸುತ್ತೇನೆ. ಹೌದು ಪಿತನೇ, ಇದೇ ನಿಮ್ಮ ಸುಪ್ರೀತ ಸಂಕಲ್ಪ.  ನನ್ನ ಪಿತ ಸಮಸ್ತವನ್ನೂ ನನ್ನ ವಶಕ್ಕೆ ಒಪ್ಪಿಸಿದ್ದಾರೆ. ಪುತ್ರನು ಯಾರೆಂದು ಪಿತನ ಹೊರತು ಬೇರಾರೂ ಅರಿಯರು. ಪಿತನು ಯಾರೆಂದು ಪುತ್ರನು ಮತ್ತು ಯಾರಿಗೆ ಪುತ್ರನು ಅವರನ್ನು ಶ್ರುತಪಡಿಸಲು ಇಚ್ಛಿಸುತ್ತಾನೋ ಅವನೇ ಹೊರತು ಮತ್ತಾರೂ ಅರಿಯರು,” ಎಂದು ಹೇಳಿದರು.  ಅನಂತರ ಯೇಸು ಶಿಷ್ಯರ ಕಡೆ ತಿರುಗಿ, ಅವರಿಗೆ ಪ್ರತ್ಯೇಕವಾಗಿ, “ನೀವು ಕಾಣುವುದನ್ನು ಕಾಣುವ ಕಣ್ಣುಗಳು ಭಾಗ್ಯವುಳ್ಳವು.  ಏಕೆಂದರೆ, ಎಷ್ಟೋ ಪ್ರವಾದಿಗಳು ಹಾಗೂ ಅರಸರು ನೀವು ನೋಡುವುದನ್ನು ನೋಡುವುದಕ್ಕೂ, ನೀವು ಕೇಳುವುದನ್ನು ಕೇಳುವುದಕ್ಕೂ ಆಶಿಸಿದರು. ಆದರೂ ಅದನ್ನು ಅವರು ನೋಡಲೂ ಇಲ್ಲ, ಕಾಣಲೂ ಇಲ್ಲ ಎಂದು ನಿಮಗೆ ಹೇಳುತ್ತೇನೆ,” ಎಂದರು.

02.10.2026 - IIಶುಕ್ರವಾರII ನನ್ನನ್ನು ಅಲಕ್ಷ್ಯ ಮಾಡುವವನಾದರೋ ನನ್ನನ್ನು ಕಳುಹಿಸಿದಾತನನ್ನೇ ಅಲಕ್ಷ್ಯ ಮಾಡುತ್ತಾನೆ


 ಮೊದಲನೇ ವಾಚನ: ಯೋಬ 38:1, 12-21, 40:3-5



ಬಿರುಗಾಳಿಯೊಳಗಿಂದ ಸರ್ವೇಶ್ವರ ಯೋಬನಿಗೆ ಕೊಟ್ಟ ಪ್ರತ್ಯುತ್ತರ ಇದು.  "ನಿನ್ನ ಜೀವಮಾನದಲ್ಲಿ ಎಂದಾದರೂ 'ಅರುಣೋದಯವಾಗಲಿ' ಎಂದು ಆಜ್ಞಾಪಿಸಿರುವೆಯಾ? 'ಧರಣಿಯ ಅಂಚುಗಳನ್ನು ಹಿಡಿದು ದುರುಳರನ್ನು ಅದರೊಳಗಿಂದ ಒದರಿಬಿಡು' ಎಂದು ಅದಕ್ಕೆ ಅಪ್ಪಣೆಮಾಡಿದೆಯಾ? ಮುದ್ರೆ ಒತ್ತಿದ ಜೇಡಿ ಮಣ್ಣಿನಂತೆ ಭೂಮಿ ರೂಪ ತಾಳುತ್ತದೆ. ಅದು ನೆರಿಗೆ ಕಟ್ಟಿದ ಉಡಿಗೆಯಂತೆ ಕಾಣಿಸುತ್ತದೆ. ದುರುಳರಿಂದ ಬೆಳಕನ್ನು ಹಿಂತೆಗೆದುಕೊಳ್ಳಲಾಗುವುದು. ಅವರು ಎತ್ತಿದ ಕೈಯನ್ನು ಮುರಿಯಲಾಗುವುದು. ನಿನೆಂದಾದರೂ ಸಮುದ್ರದ ಬುಗ್ಗೆಗಳೊಳಗೆ ಸೇರಿದ್ದೆಯೋ? ಸಾಗರದ ತಳಹದಿಯಲ್ಲಿ ತಿರುಗಾಡಿರುವೆಯೋ? ಮರಣದ ದ್ವಾರಗಳು ನಿನಗೆ ಗೋಚರವಾಗಿರುವುವೋ? ಘೋರಾಂಧಕಾರದ ಕದಗಳನ್ನು ನೀನು ಕಂಡಿರುವೆಯೋ? ಭೂವಿಸ್ತಾರವನ್ನು ಗ್ರಹಿಸಿರುವೆಯೋ? ಇದೆಲ್ಲವೂ ನಿನಗೆ ತಿಳಿದಿದ್ದರೆ ಹೇಳು, ನೋಡೋಣ! ಬೆಳಕಿನ ನಿವಾಸಕ್ಕೆ ಹೋಗುವ ಮಾರ್ಗವೆಲ್ಲಿ? ಕತ್ತಲು ವಾಸಮಾಡುವ ಸ್ಥಳವೆಲ್ಲಿ? ನೀವು ಅವುಗಳನ್ನು ಅವುಗಳ ಪ್ರಾಂತ್ಯಕ್ಕೆ ಕರೆದೊಯ್ಯಬಲ್ಲೆಯಾ? ಅವುಗಳ ನಿವಾಸಕ್ಕೆ ಹಾದಿಯನ್ನು ಕಂಡು ಹಿಡಿಯಬಲ್ಲೆಯಾ? ಇದನ್ನು ಬಲ್ಲೆಯಾದರೆ ನೀನು ಆಗಲೇ ಹುಟ್ಟಿದ್ಧಿರಬೇಕು ಮತ್ತು ಈಗ ಬಹಳ ವೃದ್ಧನಾಗಿರಬೇಕು!" ಆಗ ಯೋಬನು ಸರ್ವೇಶ್ವರಸ್ವಾಮಿಗೆ ಇಂತೆಂದನು; "ಅಯ್ಯೋ, ನಾನು ಅಲ್ಪನೇ ಸರಿ ತಮಗೇನು ಪ್ರತ್ಯುತ್ತರ ಹೇಳಲಿ? ಬಾಯಿಯ ಮೇಲೆ ಕೈಯಿಡುವೆ ಮೌನತಾಳಿ. ಒಮ್ಮೆ ಮಾತಾಡಿದೆ, ಮತ್ತೆ ಮಾತಾಡೆನು ಹೌದು, ಇನ್ನೊಮ್ಮೆ ಮಾತಾಡಿದೆ, ಹೆಚ್ಚು ಮಾತಾಡೆನು.

ಕೀರ್ತನೆ: 139:1-3, 7-8, 9-10, 13, 14ab

ಶ್ಲೋಕ: ಪ್ರಭೂ ನಡೆಸೆನ್ನನು ಆ ಸನಾತನ ಪಥದಲಿ.

1.  ಪ್ರಭೂ, ಪರಿಶೋಧಿಸಿರುವೆ ನೀ ನನ್ನನು, ಅರಿತುಕೊಂಡಿರುವೆ ಅಂತರಂಗವನು|
ನಾ ಕೂರುವುದು ಏಳುವುದೂ ನಿನಗೆ ಗೊತ್ತಿದೆ||
ನನ್ನಾಲೋಚನೆ ದೂರದಿಂದಲೇ ನಿನಗೆ ತಿಳಿದಿದೆ||
ನನ್ನ ನಡೆಯನು, ನಿದ್ರೆಯನು ನೀ ಬಲ್ಲಾತ|
ನನ್ನ ನಡತೆಯೆಲ್ಲವು ನಿನಗೆ ಸುಪರಿಚಿತ||
ಶ್ಲೋಕ

2.  ನಾನೆಲ್ಲಿಗೆ ಹೋಗಲು ಸಾಧ್ಯ, ನಿನ್ನಾತ್ಮನಿಂದ ತಪ್ಪಿಸಿಕೊಳ್ಳಲು?|
ನಾನೆಲ್ಲಿಗೆ ಓಡಲು ಸಾಧ್ಯ, ನಿನ್ನ ಸನ್ನಿಧಿಯಿಂದ ಮರೆಯಾಗಲು?||
ಆಕಾಶಕೆ ನಾನೇರಿದರೂ ನೀನಿರುವೆ ಅಲ್ಲಿ|
ಪಾತಾಳದಲಿ ನಾ ನಿದ್ರಿಸಿದರೂ ನೀನಿರುವೆ ಅಲ್ಲಿ||
ಶ್ಲೋಕ

3.  ನಾನರುಣನ ರೆಕ್ಕೆಗಳನೇರಿ ಹಾರಿದರೂ|
ಸಮುದ್ರ ಕಟ್ಟಕಡೆಗಳಲಿ ನಾ ಸೇರಿದರೂ||
ಅಲ್ಲೂ ನನ್ನ ನಡೆಸುವುದು ನಿನ್ನ ಬಲಗೈ|
ನನ್ನ ಹಿಡಿದಿರುವುದು ನಿನ್ನ ಬಲಗೈ||
ಶ್ಲೋಕ

4.  ನನ್ನ ಅಂತರಂಗವನು ಉಂಟುಮಾಡಿದಾತ ನೀನು|
ತಾಯಗರ್ಭದಲೆ ನನ್ನ ರೂಪಿಸಿದಾತ ನೀನು||
ನಿನಗೆ ವಂದನೆ, ನೀ ನನ್ನ ಭಯಭಕ್ತಿಗೆ ಪಾತ್ರ|
ನಿನ್ನ ಕೃತ್ಯಗಳು ಅದ್ಭುತಕರ ಹಾಗೂ ವಿಚಿತ್ರ||
ಶ್ಲೋಕ

ಘೋಷಣೆ   ಕೀರ್ತನೆ 95:8

ಅಲ್ಲೆಲೂಯ, ಅಲ್ಲೆಲೂಯ!
ಪ್ರಭುವಿನ  ಕರೆಗೆ  ಕಿವಿಗೊಟ್ಟರೆನಿತೋ  ಒಳಿತು  ನೀವಿಂದೇ | ಕಲ್ಲಾಗಿಸಿಕೊಳ್ಳದಿರಿ ಹೃದಯವನು  ನಿಮ್ಮ  ಪೂರ್ವಜರಂತೆ ||
ಅಲ್ಲೆಲೂಯ!


ಶುಭ ಸಂದೇಶ : ಲೂಕ 10:13-16


"ಕೊರಾಜ್ಜಿನ್ ಪಟ್ಟಣವೇ, ನಿನಗೆ ಧಿಕ್ಕಾರ! ಬೆತ್ಸಾಯಿದ ಪಟ್ಟಣವೇ, ನಿನಗೆ ಧಿಕ್ಕಾರ ನಿಮ್ಮಲ್ಲಿ ಮಾಡಿದ ಅದ್ಬುತ ಕಾರ್ಯಗಳನ್ನು ಟೈರ್ ಮತ್ತು ಸಿದೋನ್ ಪಟ್ಟಣಗಳಲ್ಲಿ ಮಾಡಿದ್ದರೆ, ಅಲ್ಲಿಯವರು ಎಂದೋ ಗೋಣಿತಟ್ಟನ್ನು ಉಟ್ಟುಕೊಂಡು, ಬೂದಿಯನ್ನು ಬಳೆದುಕೊಂಡು ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗುತ್ತಿದ್ದರು. ಆದುದರಿಂದ ತೀರ್ಪಿನ ದಿನ ಟೈರ್ ಮತ್ತು ಸಿದೋನಿನ ಗತಿಯು ನಿಮಗಿಂತಲೂ ಸಹನೀಯವಾಗಿರುವುದು. ಎಲೈ ಕಫೆರ್ನವುಮ್ ಪಟ್ಟಣವೇ. ನೀನು ಸ್ವರ್ಗಕ್ಕೆರುವೆ," ಎಂದು ನೆನಸುತ್ತಿಯೋ? ಇಲ್ಲ, ಪಾತಾಳಕ್ಕೆ ಇಳಿಯುವೆ,"  ಎಂದರು ಯೇಸುಸ್ವಾಮಿ. ಆನಂತರ ತಮ್ಮ ಶಿಷ್ಯರನ್ನು ಉದ್ದೇಶಿಸಿ, "ನಿಮ್ಮನ್ನು ಆಲಿಸುವನು ನನ್ನನ್ನೇ ಆಲಿಸುತ್ತಾನೆ: ನಿಮ್ಮನ್ನು ಅಲಕ್ಷ್ಯ ಮಾಡುವವನು ನನ್ನನ್ನೆ ಅಲಕ್ಷ್ಯ ಮಾಡುತ್ತಾನೆ ನನ್ನನ್ನು ಅಲಕ್ಷ್ಯ ಮಾಡುವವನಾದರೋ ನನ್ನನ್ನು ಕಳುಹಿಸಿದಾತನನ್ನೇ ಅಲಕ್ಷ್ಯ ಮಾಡುತ್ತಾನೆ," ಎಂದರು.

01.10.2026 - IIಗುರುವಾರII - ತೀರ್ಪಿನ ದಿನ ಈ ಊರಿನ ಗತಿ ಸೊದೋಮ್ ಊರಿನ ಗತಿಗಿಂತಲೂ ಕಠಿಣವಾಗಿರುವುದೆಂದು ನಾನು ನಿಮಗೆ ಹೇಳುತ್ತೇನೆ

ಮೊದಲನೆಯ ವಾಚನ : ಯೋಬನ ಗ್ರಂಥದಿಂದ ಇಂದಿನ ವಾಚನ 19:21-27

ಆಗ ಯೋಬನು ಇಂತೆಂದನು:  ಕರುಣೆ ತೋರಿ ಗೆಳೆಯರೇ, ಕರುಣೆ ತೋರಿ ನನಗೆ!  ಏಕೆಂದರೆ ದೇವರ ಕೈ ನನ್ನನು ದಂಡಿಸಿದೆ.  ದೇವರಂತೆ ನೀವೂ ನನ್ನನು ದಂಡಿಸುವುದೇಕೆ?  ನನ್ನನ್ನು ಈ ದುಸ್ಥಿತಿಗೆ ಬರಮಾಡಿದ್ದೀರಿ, ಇದು ಸಾಲದೆ ನಿಮಗೆ?  ನನ್ನ ಮಾತುಗಳನ್ನು ಬರೆದಿಟ್ಟರೆ ಎಷ್ಟೋ ಮೇಲು!  ಸುರುಳಿಯಲಿ ಅದು ಲಿಖಿತವಾದರೆ ಎಷ್ಟೋ ಲೇಸು!  ಕಬ್ಬಿಣದ ಉಳಿಯಿಂದ ಬಂಡೆಯ ಮೇಲೆ ಕೆತ್ತಿ, ಸೀಸೆ ಎರೆದು ಶಾಶ್ವತ ಶಾಸನವಾಗಿಸಿದ್ದರೆ ಎಷೋ ಒಳಿತು.  ನಾನಂತು ಬಲ್ಲೆ, ನನ್ನ ಉದ್ಧಾರಕ ಜೀವಸ್ವರೂಪನೆಂದು ಕಡೆಯ ದಿನದಂದು ಧರೆಗಾತ ಇಳಿದುಬರುವನೆಂದು.  ನನ್ನ ಚರ್ಮ ಹೀಗೆ ಬಿರಿದು ಹಾಳಾದರೂ ದೇಹಧಾರಿಯಾಗಿಯೇ ನಾನು ನೋಡುವೆನು ದೇವರನು.  ಕಣ್ಣಾರೆ ಆತನನ್ನು ಕಾಣುವೆನು ಮತ್ತೊಬ್ಬನಾಗಲ್ಲ, ನಾನಾಗೇ ನೋಡುವೆನು ಹಂಬಲಿಕೆಯಿಂದ ಕುಂದಿದೆ ನನ್ನ ಅಂತರಂಗವು.

ಪ್ರಭುವಿನ ವಾಕ್ಯ

ಕೀರ್ತನೆ  27:7-9,13-14

ಶ್ಲೋಕ:  ಪ್ರಭುವಿನೊಳಿತನು ನಾ ಕಾಣುವೆ ಜೀವಲೋಕದೊಳು.

ಪ್ರಭೂ, ನಿನಗೆ ಮೊರೆಯಿಡುವೆನು|
ಕರುಣಿಸೆನಗೆ ಸದುತ್ತರವನು||
ಅರಸನ್ನ ಮುಖದರ್ಶನವನು, ಎಂದೆ ನೀನು|
ಅರಸುವೆನು ಅದನೆ, ಎಂದು ಮರುನುಡಿದೆ ನಾನು||

ವಿಮುಖನಾಗಬೇಡ ಪ್ರಭೂ, ಕೋಪದಿಂದೆನ್ನ ತಳ್ಳಬೇಡಯ್ಯಾ|
ರಕ್ಷಕದೇವಾ, ಎನಗೆ ಸಹಾಯಕಾ, ದಾಸನ ಕೈಬಿಡಬೇಡಯ್ಯಾ||
ಪ್ರಭುವಿನೊಳಿತನು ನಾ ಕಾಣುವೆ ಜೀವಲೋಕದೊಳು|
ನಾನಿಟ್ಟಿರುವೆ ನಂಬಿಕೆ ನೀರಿಕ್ಷೆ ಅದರೊಳು||

ಪ್ರಭುವನು  ಎದುರುನೋಡುತ್ತಿರು  ಮನವೇ|
ಧೈರ್ಯದಿಂದ  ನಿರೀಕ್ಷಿಸುತ್ತಿರು ಎದೆಗುಂದದೆ||

ಘೋಷಣೆ  ಕೀರ್ತನೆ 27:11 :
ಬೋಧಿಸೆನಗೆ  ಪ್ರಭೂ,  ನಿನ್ನ  ಮಾರ್ಗವನು | ಶತ್ರುರಹಿತ  ಹಾದಿಯಲಿ  ನಡೆಸು  ಎನ್ನನು ||
ಅಲ್ಲೆಲೂಯ!

ಶುಭಸಂದೇಶ : ಲೂಕನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 10:1-12


ಆ ಕಾಲದಲ್ಲಿ ಯೇಸು ಇನ್ನೂ ಎಪ್ಪತ್ತೆರಡು ಮಂದಿಯನ್ನು ನೇಮಿಸಿ ಅವರನ್ನು ಇಬ್ಬಿಬ್ಬರನ್ನಾಗಿ ತಾವೇ ಹೋಗಲಿದ್ದ ಊರುಗಳಿಗೂ ಸ್ಥಳಗಳಿಗೂ ಮುಂದಾಗಿ ಕಳಿಸಿದರು. ಕಳುಹಿಸುವಾಗ ಅವರಿಗೆ ಹೇಳಿದ್ದೇನೆಂದರೆ, “ಬೆಳೆಯೇನೋ ಹೇರಳವಾಗಿದೆ; ಕೊಯ್ಲುಗಾರರೊ ವಿರಳ. ಆದುದರಿಂದ ಕೊಯ್ಲಿಗೆ ಆಳುಗಳನ್ನು ಕಳುಹಿಸುವಂತೆ ಬೆಳೆಯ ಯಜಮಾನನನ್ನು ಬೇಡಿಕೊಳ್ಳಿ. ಹೋಗಿರಿ, ತೋಳಗಳ ನಡುವೆ ಕುರಿಮರಿಗಳನ್ನು ಬಿಟ್ಟಂತೆ ನಾನು ನಿಮ್ಮನ್ನು ಕಳುಹಿಸುತ್ತೇನೆ. ಹಣದ ಚೀಲವನ್ನಾಗಲಿ, ಜೋಳಿಗೆಯನ್ನಾಗಲಿ, ಪಾದರಕ್ಷೆಗಳನ್ನಾಗಲಿ ತೆಗೆದುಕೊಂಡು ಹೋಗದಿರಿ. ದಾರಿಯಲ್ಲಿ ಯಾರಿಗೂ ವಂದನೋಪಚಾರಗಳನ್ನು ಮಾಡಿಕೊಂಡಿರಬೇಡಿ. ನೀವು ಯಾವ ಮನೆಗೆ ಹೋದರೂ, ‘ಈ ಮನೆಗೆ ಶಾಂತಿ,’ ಎಂದು ಆಶೀರ್ವಾದ ಮಾಡಿ. ಶಾಂತಿಪ್ರಿಯನು ಅಲ್ಲಿದ್ದರೆ ನಿಮ್ಮ ಆಶೀರ್ವಾದವು ಅವನ ಮೇಲೆ ನೆಲೆಸುವುದು. ಇಲ್ಲವಾದರೆ, ಅದು ನಿಮಗೆ ಹಿಂದಿರುಗುವುದು. ಮನೆಯಿಂದ ಮನೆಗೆ ಹೋಗದೆ ಆ ಮನೆಯಲ್ಲೇ ತಂಗಿದ್ದು, ಅಲ್ಲಿಯವರು ಕೊಡುವ ಅನ್ನ ಪಾನೀಯಗಳನ್ನು ಸೇವಿಸಿರಿ. ದುಡಿಮೆಗಾರನು ಕೂಲಿಗೆ ಬಾಧ್ಯನು. “ನೀವು ಯಾವ ಊರಿಗೆ ಹೋದರೂ ಜನರು ನಿಮ್ಮನ್ನು ಸ್ವಾಗತಿಸಿದಾಗ, ಅವರು ಬಡಿಸಿದ್ದನ್ನು ಭುಜಿಸಿರಿ. ಅಲ್ಲಿರುವ ರೋಗಿಗಳನ್ನು ಗುಣಪಡಿಸಿರಿ. ‘ದೇವರ ಸಾಮ್ರಾಜ್ಯ ನಿಮ್ಮನ್ನು ಸಮೀಪಿಸಿದೆ,’ ಎಂದು ತಿಳಿಸಿರಿ. ಆದರೆ ನೀವು ಹೋಗುವ ಊರಿನ ಜನರು ನಿಮ್ಮನ್ನು ಸ್ವಾಗತಿಸದೆ ಹೋದರೆ, ರಸ್ತೆಗಳಿಗೆ ಹೋಗಿ, ‘ನಮ್ಮ ಪಾದಗಳಿಗೆ ಅಂಟಿರುವ ನಿಮ್ಮ ಊರಿನ ಧೂಳನ್ನು ಕೂಡ ನಿಮಗೆ ವಿರುದ್ಧವಾಗಿ ಒದರಿಬಿಡುತ್ತೇವೆ. ಆದರೂ ದೇವರ ಸಾಮ್ರಾಜ್ಯ ಸಮೀಪಿಸಿದೆ ಎಂಬುದನ್ನು ಮಾತ್ರ ನೀವು ಗಮನದಲ್ಲಿಡಿ,’ ಎಂದು ತಿಳಿಸಿರಿ. ತೀರ್ಪಿನ ದಿನ ಈ ಊರಿನ ಗತಿ ಸೊದೋಮ್ ಊರಿನ ಗತಿಗಿಂತಲೂ ಕಠಿಣವಾಗಿರುವುದೆಂದು ನಾನು ನಿಮಗೆ ಹೇಳುತ್ತೇನೆ."

ಪ್ರಭುಕ್ರಿಸ್ತರ ಶುಭಸಂದೇಶ

03.10.2026 - II ಪಿತನೇ, ಭೂಸ್ವರ್ಗಗಳ ಒಡೆಯನೇ, ಈ ವಿಷಯಗಳನ್ನು ಜ್ಞಾನಿಗಳಿಗೂ ಮೇಧಾವಿಗಳಿಗೂ ಮರೆಮಾಡಿ, ಮಕ್ಕಳಂಥವರಿಗೆ ನೀವು ಶ್ರುತಪಡಿಸಿದ್ದೀರಿII

ಮೊದಲನೇ ವಾಚನ: ಯೋಬನ ಗ್ರಂಥ  42:1-3, 5-6, 12-16  ಯೋಬನು ಸರ್ವೇಶ್ವರಸ್ವಾಮಿಗೆ ಕೊಟ್ಟ ಉತ್ತರ ಇದು: “ತಾವು ಎಲ್ಲಾ ಕಾರ್ಯಗಳನು ನಡೆಸಲು‍ ಶಕ್ತರೆಂದು ನಾನು ಬಲ್ಲೆ ಯಾವ...