ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

17.03.2010 - ಪಿತ ಮತ್ತು ಸುತ

ಸಂತ ಯೊವಾನ್ನನು ಬರೆದ ಶುಭಸಂದೇಶದಿಂದ ವಾಚನ  - 5: 17-30

"ಸಜ್ಜನರು ಸಜ್ಜೀವಕ್ಕಾಗಿ ಪುನರುತ್ಥಾನರಾಗುವರು,ದುರ್ಜನರು ದಂಡನಾತೀರ್ಪಿಗಾಗಿ ಪುನರುತ್ಥಾನರಾಗುವರು"

ಯೆಹೂದ್ಯರ ಆಕ್ಷೇಪಣೆಗೆ ಉತ್ತರವಾಗಿ ಯೇಸು, “ನನ್ನ ಪಿತನ ಸತತವೂ ಕಾರ್ಯನಿರತರು. ಅವರಂತೆಯೇ ನಾನು ಸದಾ ಕಾರ್ಯ ನಿರತನಾಗಿದ್ದೇನೆ,” ಎಂದು ನುಡಿದರು. ಯೇಸು ಸಬ್ಬತ್ತಿನ ನಿಯಮವನ್ನು ಮುರಿದುದೇ ಅಲ್ಲದೆ, ದೇವರನ್ನು ತನ್ನ ಪಿತನೆಂದು ಹೇಳಿಕೊಳ್ಳುತ್ತಾ, ತನ್ನನ್ನೇ ದೇವರಿಗೆ ಸರಿಸಮಮಾಡಿಕೊಳ್ಳುತ್ತಿದ್ದಾನೆಂದು ಯೆಹೂದ್ಯರು ಅವರನ್ನು ಕೊಲ್ಲಲ್ಲು ಮತ್ತಷ್ಟು ಹವಣಿಸಿದರು. ಯೇಸುಸ್ವಾಮಿ ಅವರನ್ನು ಉದ್ದೇಶಿಸಿ ಹೀಗೆಂದರು : ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ಪುತ್ರನು ತನ್ನಷ್ಟಕ್ಕೆ ತಾನೇ ಏನೂ ಮಾಡಲಾರನು; ಪಿತನು ಮಾಡುವುದನ್ನು ಕಂಡು ತಾನೂ ಹಾಗೆಯೇ ಮಾಡುತ್ತಾನೆ.ಪಿತನು ಮಾಡುವುದನ್ನೇ ಪುತ್ರನೂ ಮಾಡುತ್ತಾನೆ. ಪುತ್ರನೆಂದರೆ ಪಿತನಿಗೆ ಪ್ರೀತಿ. ಆದುದರಿಂದ ತಾವು ಮಾಡುವುದನ್ನೆಲ್ಲಾ ಪುತ್ರನಿಗೆ ತೋರಿಸುತ್ತಾರೆ. ಇದಲ್ಲದೆ ಇನ್ನೂ ಎಷ್ಟೋ ಮಿಗಿಲಾದ ಕಾರ್ಯಗಳನ್ನು ಪುತ್ರನಿಗೆ ತೋರಿಸುತ್ತಾರೆ. ಅವುಗಳನ್ನು ಕಂಡು ನೀವು ಬೆರಗಾಗುವಿರಿ. ಪಿತನು ಸತ್ತವರನ್ನು ಎಬ್ಬಿಸಿ ಅವರಿಗೆ ಜೀವವನ್ನು ಕೊಡುವಂತೆ ಪುತ್ರನೂ ತನಗೆ ಬೇಕಾದವರಿಗೆ ಜೀವವನ್ನು ಕೊಡುತ್ತಾನೆ. ಅಲ್ಲದೆ, ಪಿತನು ಯಾರನ್ನೂ ತೀರ್ಪಿಗೆ ಗುರಿ ಮಾಡುವುದಿಲ್ಲ.ತೀರ್ಪು ಕೊಡುವ ಅಧಿಕಾರವನ್ನು ಅವರು ಪುತ್ರನಿಗೆ ಕೊಟ್ಟಿದಾರೆ. ಏಕೆಂದರೆ, ತಮ್ಮನ್ನು ಗೌರವಿಸುವಂತೆಯೇ ಜನರೆಲ್ಲರು ಪುತ್ರನನ್ನು ಗೌರವಿಸಬೇಕೆಂಬುದು ಅವರ ಬಯಕೆ. ಪುತ್ರನನ್ನು ಗೌರವಿಸದವನು ಆತನನ್ನು ಕಳುಹಿಸಿದ ಪಿತನನ್ನೂ ಗೌರವಿಸುವುದಿಲ್ಲ. 

ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ನನ್ನ ಮಾತಿಗೆ ಕಿವಿಗೊಟ್ಟು ನನ್ನನು ಕಳುಹಿಸಿದ ಆತನಲ್ಲಿ ವಿಶ್ವಾಸವಿಡುವವನು ನಿತ್ಯ ಜೀವವನ್ನು ಪಡೆದಿರುಯುತ್ತಾನೆ. ಅವನು ಖಂಡನೆಗೆ ಗುರಿಯಾಗನು; ಅವನು ಈಗಾಗಲೇ ಸಾವನ್ನು ದಾಟಿ ಜೀವವನ್ನು ಸೇರಿರುತ್ತಾನೆ. ಸತ್ಯವಾಗಿ ನಿಮಗೆ ಹೇಳುತ್ತೇನೆ; ಸತ್ತವರು ದೇವರ ಪುತ್ರನ ಧ್ವನಿಯನ್ನು ಕೇಳುವ ಕಾಲ ಬರುವುದು; ಈಗಾಗಲೇ ಬಂದಿದೆ; ಈ ಧ್ವನಿಯನ್ನು ಕೇಳುವವರು ಜೀವಿಸುವರು. ಪಿತನು ತಾವೇ ಸ್ವಯಂ ಜೀವ ಮೂಲವಾಗಿರುವಂತೆ ಪುತ್ರನು ಸಹಾ ಸ್ವಯಂ ಜೀವ  ಮೂಲವಾಗಿರುವಂತೆ ಕರುಣಿಸಿದ್ದಾರೆ. ಅದೂ ಅಲ್ಲದೆ, ಆತನು ನರಪುತ್ರನಾಗಿರುವ ಕಾರಣ ತೀರ್ಪನ್ನು ಕೊಡುವ ಹಕ್ಕು ಆತನಿಗೇ ದಯಪಾಲಿಸಿದ್ದಾರೆ. ಇದನ್ನು ಕೇಳಿ ನೀವು ಬೆರಗಾಗುವುದು ಬೇಡ. ಸತ್ತು ಸಮಾಧಿಯಲ್ಲಿರುವವರೆಲ್ಲರೂ ಅತನ ಧ್ವನಿಯನ್ನು ಕೇಳುವ ಕಾಲ ಬರುವುದು. ಹಾಗೆ ಕೇಳಿದವರೆಲ್ಲಾ ಸಮಾಧಿಯನ್ನು ಬಿಟ್ಟು ಎದ್ದು ಬರುವರು; ಸಜ್ಜನರು ಸಜ್ಜೀವಕ್ಕಾಗಿ ಪುನರುತ್ಥಾನರಾಗುವರು,ದುರ್ಜನರು ದಂಡನಾತೀರ್ಪಿಗಾಗಿ ಪುನರುತ್ಥಾನರಾಗುವರು. ನನ್ನಷ್ಟಕ್ಕೆ ನಾನೇ ಏನೂ ಮಾಡಲಾರೆ. ಪಿತನು ನನಗೆ ತಿಳಿಸಿದ ಪ್ರಕಾರ ನಾನು ತೀರ್ಪು ಕೊಡುತ್ತೇನೆ. ಈ ನನ್ನ ತೀರ್ಪು ನ್ಯಾಯಬದ್ಧ ಆದುದು. ಏಕೆಂದರೆ ನಾನು ನನ್ನ ಸ್ವಂತ ಇಚ್ಛೆಯನ್ನು ನೆರವೇರಿಸದೆ ಪಿತನ ಚಿತ್ತವನ್ನೇ ನೆರವೇರಿಸಲು ಆಶಿಸುತ್ತೇನೆ.

16.03.10 - ಸಬ್ಬತ್ತ್ ಹಾಗೂ ಸತ್ಕಾರ್ಯ

ಸಂತ ಯೊವಾನ್ನನು ಬರೆದ ಶುಭಸಂದೇಶದಿಂದ ವಾಚನ - 5: 1-3, 5-16

“ಎದ್ದು ನಿಲ್ಲು, ನಿನ್ನ ಹಾಸಿಗೆಯನ್ನು  ಸುತ್ತಿಕೊಂಡು ನಡೆ

ಇದಾದ ಮೇಲೆ ಯೆಹೂದ್ಯರ ಹಬ್ಬ ಬಂದಿತು. ಯೇಸುಸ್ವಾಮಿ ಜೆರುಸಲೇಮಿಗೆ ತೆರಳಿದರು. ಅಲ್ಲಿ, ‘ಕುರಿಬಾಗಿಲು’ ಎಂಬ ಸ್ಥಳದ ಬಳಿ ಐದು ಮಂಟಪಗಳಿಂದ ಕೂಡಿದ ಒಂದು ಕೊಳವಿದೆ. ಅದನ್ನು ಹಿಬ್ರಿಯ ಭಾಷೆಯಲ್ಲಿ ‘ಬೆತ್ಸಥ’ ಎಂದು ಕರೆಯುತ್ತಾರೆ. ಕುರುಡರು, ಕುಂಟರು, ಪಾರ್ಶ್ವವಾಯು ಪೀಡಿತರು ಮೊದಲಾದ ಅನೇಕ ರೋಗಿಗಳು ಆ ಮಂಟಪಗಳಲ್ಲಿ ಬಿದ್ದುಕೊಳ್ಳುತ್ತಾ ಇದ್ದರು. ಮೂವತ್ತೆಂಟು ವರ್ಷ ಕಾಯಿಲೆಗಳಿಂದ ನರಳುತ್ತಿದ್ದ ಒಬ್ಬ ರೋಗಿ ಅಲ್ಲಿ ಮಲಗಿದ್ದನು. ಯೇಸು ಅವನನ್ನು ನೋಡಿ, ದೀರ್ಘ ಕಾಲದಿಂದ ಅವನು ಹಾಗೆ ಬಿದ್ದುಕೊಂಡಿರುವುದನ್ನು ತಿಳಿದು, ”ನಿನಗೆ ಗುಣಹೊಂದಲು ಮನಸ್ಸಿದೆಯೇ?” ಕೇಳಿದರು. “ಸ್ವಾಮಿ, ನೀರು ಉಕ್ಕಿದ್ದಾಗ ನನ್ನನ್ನು ಕೊಳಕ್ಕಿಳಿಸಲು ಸಹಾಯಕರು ಇರುವುದಿಲ್ಲ; ನಾನು ಹೋಗುವಷ್ಟರಲ್ಲೇ ಯಾರಾದರೂ ಇಳಿದುಬಿಡುತ್ತಾರೆ” ಎಂದು ಉತ್ತರಿಸಿದ ಆ ರೋಗಿ. ಯೇಸು ಅವನಿಗೆ, “ಎದ್ದು ನಿಲ್ಲು, ನಿನ್ನ ಹಾಸಿಗೆಯನ್ನು  ಸುತ್ತಿಕೊಂಡು ನಡೆ” ಎಂದರು. ಆ ಕ್ಷಣವೇ ಅವನು ಗುಣಹೊಂದಿ ತನ್ನ ಹಾಸಿಗೆಯನ್ನು ಸುತ್ತಿಕೊಂಡು ನಡೆಯತೊಡಗಿದನು.

ಅದು ಸಬ್ಬತ್ತಿನ ದಿನವಾಗಿತ್ತು. ಆದುದರಿಂದ ಯೆಹೂದ್ಯ ಅಧಿಕಾರಿಗಳು ಗುಣ ಹೊಂದಿದ ಆ ಮನುಷ್ಯನಿಗೆ “ಇಂದು ಸಬ್ಬತ್ತಿನ ದಿನ. ನೀನು ಹಾಸಿಗೆಯನ್ನು ಎತ್ತಿಕೊಂಡು ನಡೆಯುವುದು ನಿಷಿದ್ಧ,” ಎಂದು ಹೇಳಿದರು. ಅದಕ್ಕೆ ಅವನು: “ನನ್ನನ್ನು ಗುಣಪಡಿಸಿದವರೇ, ‘ನಿನ್ನ ಹಾಸಿಗೆಯನ್ನು ಎತ್ತಿಕೊಂಡು ನಡೆ’, ಎಂದು ಹೇಳಿದರು,” ಎಂದು ಉತ್ತರಕೊಟ್ಟನು. ಅಧಿಕಾರಿಗಳು, “ಅದನ್ನು ಎತ್ತಿಕೊಂಡು ನಡೆ ಎಂದ ಅವನು ಯಾರು?” ಎಂದು ಪ್ರಶ್ನಿಸಿದರು. ತನ್ನನ್ನು ಗುಣಪಡಿಸಿದವರು ಯಾರೆಂದು ಅವನಿಗೆ ತಿಳಿದಿರಲಿಲ್ಲ; ಅಲ್ಲದೆ ಜನಸಂದಣೆಂii ನಿಮಿತ್ತ  ಯೇಸು ಆಗಲೇ ಮರೆಯಾಗಿಬಿಟ್ಟಿದರು. ಅನಂತರ ದೇವಾಲಯದಲ್ಲಿ ಯೇಸು ಮನುಷ್ಯನನ್ನು ಕಂಡು,” ನೋಡು ನೀನು ಗುಣಹೊಂದಿರುವೆ; ಇನ್ನು ಮೇಲೆ ಪಾಪ ಮಾಡುವುದನ್ನು ಬಿಟ್ಟುಬಿಡು. ಇಲ್ಲದಿದ್ದರೆ ನಿನ್ನ ಗತಿ ಇನ್ನಷ್ಟು ಚಿಂತಾಜನಕವಾದೀತು.” ಎಂದರು. ಆ ಮನುಷ್ಯ ಯೆಹೂದ್ಯರ ಬಳಿಗೆ ಹೋಗಿ, “ನನ್ನನ್ನು ಗುಣಪಡಿಸಿದವರು ಯೇಸುವೇ,” ಎಂದು ತಿಳಿಸಿದನು. ಯೇಸು ಇದನ್ನು  ಸಬ್ಬತ್ತ್ ದಿನದಲ್ಲಿ ಮಾಡಿದ್ದರಿಂದ ಯೆಹೂದ್ಯರು ಅವರಿಗೆ ಕಿರುಕುಳ ಕೊಡಲು ತೊಡಗಿದರು.

12.03.10 - ಎರಡು ಆಜ್ಞೆಗಳು

ಸಂತ ಮಾರ್ಕನು ಬರೆದ ಶುಭ ಸಂದೇಶದಿಂದ ವಾಚನ - 12:28-34

"ಅವರನ್ನು ನಾವು ಪೂರ್ಣ ಹೃದಯದಿಂದಲೂ ಪೂರ್ಣ ಜ್ಞಾನದಿಂದಲೂ ಪೂರ್ಣ ಶಕ್ತಿಯಿಂದಲೂ ಪ್ರೀತಿಸತಕ್ಕದ್ದು"

ಧರ್ಮ ಶಾಸ್ತ್ರಿ ಒಬ್ಬನು, ಯೇಸುಸ್ವಾಮಿ ಸದ್ದುಕಾಯರಿಗೆ ಸಮರ್ಪಕವಾದ ಉತ್ತರವನ್ನು ಕೊಟ್ಟಿದ್ದನು ಮೆಚ್ಚಿ, ಅವರ ಬಳಿಗೆ ಬಂದು,"ಆಜ್ಞೆಗಳಲ್ಲೆಲ್ಲಾ ಪ್ರಪ್ರಥಮ ಆಜ್ಞೆ ಯಾವುದು?"ಎಂದು ಕೇಳಿದನು. ಯೇಸು ಅವನಿಗೆ, "ಇಸ್ರಯೇಲ್ ಸಮಾಜವೇ ಕೇಳು : ನಮ್ಮ ದೇವರಾದ ಸರ್ವೇಶ್ವರ ಏಕೈಕ ಸರ್ವೇಶ್ವರ; ನಿನ್ನ ದೇವರಾದ ಸರ್ವೇಶ್ವರನನ್ನು ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಪೂರ್ಣ ಆತ್ಮದಿಂದಲೂ ನಿನ್ನ ಪೂರ್ಣ ಮನಸ್ಸಿನಿಂದಲೂ ನಿನ್ನ ಪೂರ್ಣ ಶಕ್ತಿಯಿಂದಲೂ ಪ್ರೀತಿಸು. ಇದೇ ಪ್ರಪ್ರಥಮ ಆಜ್ಞೆ. ನಿನ್ನನ್ನು ನೀನೇ ಪ್ರೀತಿಸಿಕೊಳ್ಳುವಂತೆ ನಿನ್ನ ನೆರೆಯವರನ್ನೂ ಪ್ರೀತಿಸು. ಇದೇ ಎರಡನೇಯ ಆಜ್ಞೆ .ಇವರೆಡು ಆಜ್ಞೆಗಳಿಗಿಂತ ಶ್ರೇಷ್ಠವಾದ ಆಜ್ಞೆ ಬೇರೊಂದೂ ಇಲ್ಲ," ಎಂದರು. ಇದನ್ನು ಕೇಳಿದ ಆ ಧರ್ಮಶಾಸ್ತ್ರಿ "ಬೋಧಕರೇ ಚೆನ್ನಾಗಿ ಹೇಳಿದಿರಿ, ದೇವರು ಒಬ್ಬರೇ, ಅವರ ಹೊರತು ಬೇರೆ ದೇವರಿಲ್ಲ, ಎಂದು ನೀವು ಹೇಳಿದ್ದು ಸತ್ಯ; ಅವರನ್ನು ನಾವು ಪೂರ್ಣ ಹೃದಯದಿಂದಲೂ ಪೂರ್ಣ ಜ್ಞಾನದಿಂದಲೂ ಪೂರ್ಣ ಶಕ್ತಿಯಿಂದಲೂ ಪ್ರೀತಿಸತಕ್ಕದ್ದು. ಇವು ಎಲ್ಲಾ ದಹನ ಬಲಿಗಳಿಗಿಂತಲೂ ಯಜ್ಞ ಯುಗಾದಿಗಿಂತಲೂ ಎಷ್ಟೋ ಮೇಲಾದವು." ಎಂದನು. ಅವನ ವಿವೇಕಪೂರ್ಣವಾದ ಉತ್ತರವನ್ನು ಮೆಚ್ಚಿ ಯೇಸು," ನೀನು ದೇವರ ಸಾಮ್ರಾಜ್ಯ್ಸದಿಂದ ದೂರವಿಲ್ಲ." ಎಂದರು. ಇದಾದ ಬಳಿಕ ಯೇಸುವನ್ನು ಪ್ರಶ್ನಿಸುವುದಕ್ಕೆ ಯಾರೊಬ್ಬರೂ ಧೈರ್ಯಗೊಳ್ಳಲಿಲ್ಲ.

11.03.10 - ಶೇಖರಿಸದವನು ಚದುರಿಸುತ್ತಾನೆ

ಸಂತ ಲೂಕನು ಬರೆದ ಶುಭ ಸಂದೇಶದಿಂದ ವಾಚನ - 11:14-23

"ನನ್ನ ಪರವಾಗಿ ಇರದವನು ನನಗೆ ವಿರೋಧಿಯೇ ಸರಿ"

ಒಮ್ಮೆ ಯೇಸುಸ್ವಾಮಿ ಒಂದು ಮೂಕ ದೆವ್ವವನ್ನು ಬಿಡಿಸುತ್ತಿದ್ದರು.ಆ ದೆವ್ವ ಬಿಟ್ಟು ಹೋದ ಮೇಲೆ ಮೂಕನು ಮಾತನಾಡಿದನು.
ಜನರು ಆಶ್ಚರ್ಯಚಕಿತರಾದರು. ಆದರೆ ಅವರಲ್ಲಿ ಕೆಲವರು," ಇವನು ದೆವ್ವಗಳ ಒಡೆಯನಾದ ಬೆಲ್ಜೆಬೂಲನ ಶಕ್ತಿಯಿಂದ ದೆವ್ವಗಳನ್ನು ಬಿಡಿಸುತ್ತಾನೆ" ಎಂದರು. ಬೇರೆ ಕೆಲವರು ಯೇಸುವನ್ನು ಪರೀಕ್ಷಿಸುವುದಕ್ಕಾಗಿ ಸ್ವರ್ಗದಿಂದ ಒಂದು ಅದ್ಭುತಕಾರ್ಯವನ್ನು ಮಾಡಿ ತೋರಿಸುವಂತೆ ಕೇಳಿದರು.ಅವರ ಅಲೋಚನೆಗಳನ್ನು ಅರಿತುಕೊಂಡ ಯೇಸು," ಅಂತ:ಕಲಹದಿಂದ ಒಡೆದು ಹೋಗಿರುವ ಪ್ರತಿಯೊಂದು ರಾಜ್ಯನಾಶವಾಗುವುದು; ಕುಟುಂಬ ಕುಟುಂಬಗಳು ಕಚ್ಚಾಡಿ ಹಾಳಾಗುವುವು.ಅಂತೆಯೇ ಸೈತಾನನ ಪಕ್ಷದವರು ಒಬ್ಬರ ವಿರುದ್ಧ ಒಬ್ಬರು ಜಗಳ ಆಡಿದರೆ ಅವನ ರಾಜ್ಯ ಹೇಗೆ ತಾನೆ ಉಳಿದೀತು. ನಾನು ಬೆಲ್ಜಬೂಲನ ಶಕ್ತಿಯಿಂದ ದೆವ್ವಗಳನ್ನು ಬಿಡಿಸುವುದಾದರೆ ನಿಮ್ಮವರು ಯಾವ ಶಕ್ತಿಯಿಂದ ಬಿಡಿಸುತ್ತಾರೆ. ಆದರಿಂದ ನೀವು ಹೇಳುವುದು ತಪ್ಪೆಂದು ನಿಮ್ಮವರೇ ತೀರ್ಪುಕೊಡುವರು. ನಾನು ದೇವರ ಶಕ್ತಿಯಿಂದ ದೆವ್ವಗಳನ್ನು ಬಿಡಿಸುವುದಾದರೆ ಸಾಮ್ರಾಜ್ಯ ಈಗಲೇ ನಿಮ್ಮಲ್ಲಿಗೆ ಈಗಾಗಲೇ ಬಂದಿದೆ ಎಂಬುದು ಸ್ಪಷ್ಟ.ಬಲಿಷ್ಠನೊಬ್ಬನು ಸರ್ವಾಯುಧಗಳಿಂದ ಸಜ್ಜಿತನಾಗಿ ತನ್ನ ಮನೆಗೆ ಕಾವಲಿರುವಾಗ ಅವನ ಆಸ್ತಿಯೆಲ್ಲಾ ಸುರಕ್ಷಿತವಾಗಿರುತ್ತದೆ.ಆದರೆ ಇವನಿಗಿಂತಲೂ ಬಲಿಷ್ಠನು ಎದುರಿಸಿ ಬಂದು ಇವನನ್ನು ಗೆದ್ದಾಗ, ಇವನು ನೆಚ್ಚಿಕೊಂಡಿದ್ದ ಆಯುಧಗಳನ್ನೆಲ್ಲಾ ಅವನು ಕಿತ್ತುಕೊಂಡು,ಸುಲಿಗೆಯನ್ನು ಹಂಚಿಕೊಡುತ್ತಾನೆ. ನನ್ನ ಪರವಾಗಿ ಇರದವನು ನನಗೆ ವಿರೋಧಿಯೇ ಸರಿ.ನನ್ನೊಡನೆ ಶೇಖರಿಸದವನು ಚದುರಿಸುತ್ತಾನೆ." ಎಂದರು.

10.03.10 - ಧರ್ಮಶಾಸ್ತ್ರದ ಮಹತ್ವ

ಸಂತ ಮತ್ತಾಯನು ಬರೆದ ಶುಭ ಸಂದೇಶದಿಂದ ವಾಚನ - 5:17-19

"ಧರ್ಮಶಾಸ್ತ್ರದ ಅಕ್ಷರವಾಗಲಿ ಚುಕ್ಕೆಯಾಗಲಿ ನಿರರ್ಥಕವಾಗದೆಂದು"

ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು : ಮೋಶೆಯ ಧರ್ಮಶಾಸ್ತ್ರವನ್ನಾಗಲಿ, ಪ್ರವಾದಿಗಳ ಪ್ರವಚನವನ್ನಾಗಲಿ ರದ್ದು ಮಾಡಲು ನಾನು ಬಂದೆನೆಂದು ತಿಳಿಯಬೇಡಿ ರದ್ದು ಮಾಡಲು ಅಲ್ಲ ಅವುಗಲನ್ನು ಸಿದ್ಧಿಗೆ ತರಲು ಬಂದಿದ್ದೇನೆ. ಭೂಮ್ಯಾಕಾಶಗಳು ಉಳಿದಿರುವ ತನಕ ಧರ್ಮಶಾಸ್ತ್ರವೆಲ್ಲ ನೆರೆವೇರುವುದೇ ಹೊರತು ಅದರಲ್ಲಿ ಒಂದು ಚಿಕ್ಕ ಅಕ್ಷರವಾಗಲಿ ಚುಕ್ಕೆಯಾಗಲಿ ನಿರರ್ಥಕವಾಗದೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.ಹೀಗಿರುವಲ್ಲಿ, ಅದರ ಆಜ್ಞೆಗಳಲ್ಲಿ ಅತಿ ಚಿಕ್ಕದೊಂದನ್ನು ಮೀರುವವನು,ಮೀರುವಂತೆ ಜನರಿಗೆ ಬೋಧಿಸುವವನು ಸ್ವರ್ಗಸಾಮ್ರಾಜ್ಯದಲ್ಲಿ ಅತ್ಯಲ್ಪನೆಂದು ಪರಿಗಣಿತನಾಗುವನು. ಧರ್ಮಶಾಸ್ತ್ರವನ್ನು ಪಾಲಿಸುವವನು,ಪಾಲಿಸುವಂತೆ ಜನರಿಗೆ ಬೋಧಿಸುವವನು,ಸ್ವರ್ಗಸಾಮ್ರಾಜ್ಯದಲ್ಲಿ ಮಹಾತ್ಮನೆಂದು ಪರಿಗಣಿತನಾಗುವನು.

03.03.10 - ಶ್ರೇಷ್ಠತೆ ಹಾಗೂ ಸೇವೆ

ಸಂತ ಮತ್ತಾಯನು ಬರೆದ ಶುಭ ಸಂದೇಶದಿಂದ ವಾಚನ - 20:17-28

"ಪ್ರಥಮನಾಗಿರಲು ಆಶಿಸುವವನು ನಿಮ್ಮ ದಾಸನಾಗಿರಲಿ"

ಯೇಸುಸ್ವಾಮಿ ಜೆರುಸಲೇಮಿನತ್ತ ಹೋಗುವಾಗ ದಾರಿಯಲ್ಲಿ,ತಮ್ಮ ಹನ್ನೆರಡು ಮಂದಿ ಶಿಷ್ಯರನ್ನು ಪ್ರತ್ಯೇಕವಾಗಿ ಕರೆದು, ನೋಡಿ , ನಾವು ಜೆರುಸಲೇಮಿಗೆ ಹೋಗುತ್ತಿದ್ದೇವೆ. ಅಲ್ಲಿ ನರಪುತ್ರನನ್ನು ಮುಖ್ಯ ಯಾಜಕರ ಮತ್ತು ಧರ್ಮಶಾಸ್ತ್ರಿಗಳ ವಶಕ್ಕೆ ಒಪ್ಪಿಸುವರು. ಆತನು ಮರಣ ದಂಡನೆಗೆ ಅರ್ಹನೆಂದು ಅವರು ತೀರ್ಮಾನಿಸಿ ಪರಕೀಯರ ಕೈಗೊಪ್ಪಿಸುವರು. ಇವರು ಆತನನ್ನು ಪರಿಹಾಸ್ಯ ಮಾಡುವರು, ಕೊರಡೆಗಳಿಂದ ಹೊಡೆಯುವರು ಮತ್ತು ಶಿಲುಬೆಗೇರಿಸುವರು. ಆತನಾದರೋ ಮೂರನೇ ದಿನ ಪುನರುತ್ಥಾನ ಹೊಂದುವನು,"ಎಂದರು. ಆಗ ಜೆಬುದಾಯನು ಮಕ್ಕಳ ತಾಯಿ ತನ್ನ ಪುತ್ರರ ಸಮೇತ ಯೇಸುಸ್ವಾಮಿಯ ಬಳಿಗೆ ಬಂದಳು. "ತಮ್ಮಿಂದ ನನಗೊಂದು ಉಪಕಾರ ಆಗಬೇಕು," ಎಂದು ಸ್ವಾಮಿಯ ಪಾದಕ್ಕೆರಗಿದಳು. "ನಿನ್ನ ಕೋರಿಕೆ ಏನು?" ಎಂದರು ಯೇಸು. ಅದಕ್ಕೆ ಅವಳು,"ತಮ್ಮ ಸಾಮ್ರಾಜ್ಯ್ಸದಲ್ಲಿ ನನ್ನ ಈ ಇಬ್ಬರು ಮಕ್ಕಳಲ್ಲಿ ಒಬ್ಬನು ತಮ್ಮ ಬಲಗಡೆಯಲ್ಲೂ ಇನ್ನೊಬ್ಬನು ತಮ್ಮ ಎಡಗಡೆಯಲ್ಲೂ ಅಸೀನರಾಗುವಂತೆ ಅಪ್ಪಣೆಯಾಗಬೇಕು," ಎಂದು ಕೋರಿದಳು.ಅದಕ್ಕೆ ಪ್ರತ್ಯುತ್ತರವಾಗಿ ಯೇಸು, " ನೀವು ಕೋರಿಕೊಂಡದ್ದು ಏನೆಂದು ನಿಮಗೇ ತಿಳಿಯದು. ನಾನು ಕುಡಿಯುವ ಪಾತ್ರೆಯಿಂದ ಕುಡಿಯಲು ನಿಮ್ಮಿಂದ ಆದೀತೆ?" ಎಂದು ಪ್ರಶ್ನಿಸಿದರು. "ಹೌದು,ಆಗುತ್ತದೆ," ಎಂದು ಅವರು ಮರು ನುಡಿದರು. ಆಗ ಯೇಸು,"ನನ್ನ ಪಾತ್ರೆಯಿಂದ ನೀವೇನೋ ಕುಡಿಯುವಿರಿ.ಆದರೆ ನನ್ನ ಬಲಗಡೆಯಲ್ಲಾಗಲೀ ಎಡಗಡೆಯಲ್ಲಾಗಲಿ ಅಸೀನರಾಗುವಂತೆ ಅನುಗ್ರಹಿಸುವುದು ನನ್ನದಲ್ಲ.ಅದು ಯಾರಿಗಾಗಿ ನನ್ನ ಪಿತನಿಂದ ಸಿದ್ಧಮಾಡಲಾಗಿದೆಯೋ ಅವರಿಗೇ ಸಿಗುವುದು." ಎಂದು ನುಡಿದರು.


ಉಳಿದ ಹತ್ತು ಮಂದಿ ಶಿಷ್ಯರು ಇದನ್ನು ಕೇಳಿದಾಗ ಆ ಇಬ್ಬರು ಸಹೋದರರ ಮೇಲೆ ಸಿಟ್ಟುಗೊಂಡರು. ಯೇಸುವಾದರೋ,ಶಿಷ್ಯರೆಲ್ಲರನ್ನೂ ತಮ್ಮ ಬಳಿಗೆ ಕರೆದು "ಲೋಕದ ಪ್ರಜಾಧಿಪತಿಗಳು ತಮ್ಮ ಪ್ರಜೆಗಳ ಮೇಲೆ ದರ್ಪದಿಂದ ದೊರೆತನ ಮಾಡುತ್ತಾರೆ; ಜನನಾಯಕರು ಎನ್ನಿಸಿಕೊಳ್ಳುವವರು ಜನರ ಮೇಲೆ ಅಧಿಕಾರ ಪ್ರದರ್ಶನ ಮಾಡುತ್ತಾರೆ.ಇದು ನಿಮಗೆ ಗೊತ್ತು.ನೀವು ಹಾಗಿರಬಾರದು.ನಿಮ್ಮಲ್ಲಿ ಶ್ರೇಷ್ಠನಾಗಿರಲು ಇಚ್ಛಿಸುವವನು ನಿಮಗೆ ಸೇವಕನಾಗಿರಲಿ. ಪ್ರಥಮನಾಗಿರಲು ಆಶಿಸುವವನು ನಿಮ್ಮ ದಾಸನಾಗಿರಲಿ.ಹಾಗೆಯೇ ನರಪುತ್ರನು ಸೇವೆ ಮಾಡಿಸಿಕೊಳ್ಳುವುದಕ್ಕೆ ಅಲ್ಲ,ಇತರರ ಸೇವೆ ಮಾಡುವುದಕ್ಕೂ ಸರ್ವರ ಉದ್ಧಾರಕ್ಕಾಗಿ ತನ್ನ ಪ್ರಾಣವನ್ನು ಈಡಾಗಿ ಕೊಡುವುದಕ್ಕೂ ಬಂದಿದ್ದಾನೆ," ಎಂದು ಹೇಳಿದರು.

02.03.10 - ನುಡಿದಂತೆ ನಡೆ

ಸಂತ ಮತ್ತಾಯನು ಬರೆದ ಶುಭ ಸಂದೇಶದಿಂದ ವಾಚನ - 23:1-12

"ತನ್ನನ್ನು ತಾನೇ ತಗ್ಗಿಸಿಕೊಳ್ಳುವವನನ್ನು ದೇವರು ಮೇಲಕ್ಕೇರಿಸುವರು"

ಜನಸಮೂಹವನ್ನೂ ತಮ್ಮ ಶಿಷ್ಯರನ್ನು ಉದ್ದೇಶಿಸಿ ಯೇಸುಸ್ವಾಮಿ ಇಂತೆಂದರು:ಧರ್ಮಶಾಸ್ತ್ರಿಗಳೂ ಫರಿಸಾಯರು ಮೋಶೆಯ ಸ್ಥಾನದಲ್ಲಿ ಇದ್ದಾರೆ. ಆದುದರಿಂದ ನಿಮಗೆ ಉಪದೇಶಿಸುವುದನ್ನೆಲ್ಲಾ ಆಲಿಸಿರಿ ಹಾಗೂ ಪಾಲಿಸಿರಿ.ಆದರೆ ಅವರ ನಡತೆಯನ್ನು ಅನುಸರಿಸಬೇಡಿ. ಏಕೆಂದರೆ ಅವರು ನುಡಿದಂತೆ ನಡೆಯುವುದಿಲ್ಲ. ಭಾರವಾದ ಹಾಗೂ ಹೊರಲಾಗದ ಹೊರೆಗಳನ್ನು ಕಟ್ಟಿ ಮಾನವರ ಹೆಗಲ ಮೇಲೆ ಹೇರುತ್ತಾರೆ.ತಾವಾದರೋ ಅವನ್ನು ಕಿರುಬೆರಳಿನಿಂದಲೂ ಮುಟ್ಟಲೊಲ್ಲರು.ತಾವು ಕೈಗೊಳ್ಳುವ ಕಾರ್ಯಗಳನ್ನೆಲ್ಲಾಜನರು ನೋಡಲೆಂದೇ ಮಾಡುತ್ತಾರೆ.ತಮ್ಮ ಧಾರ್ಮಿಕ ಹಣೆಪಟ್ಟಿಗಳನ್ನು ಅಗಲ ಮಾಡಿಕೊಳ್ಳುತ್ತಾರೆ.ಮೇಲಂಗಿಯ ಗೊಂಡೆಗಳನ್ನು ಉದ್ದುದ್ದ ಮಾಡಿಕೊಳ್ಳುತ್ತಾರೆ. ಔತಣಕೂಟಗಳಲ್ಲಿ ಶ್ರೇಷ್ಠ ಸ್ಥಾನಮಾನಗಳನ್ನೂ ಪ್ರಾರ್ಥನಾ ಮಂದಿರಗಳಲ್ಲಿ ಉನ್ನತ ಆಸನಗಳನ್ನು ಪೇಟೆ ಬೀದಿಗಳಲ್ಲಿ ವಂದನೋಪಚಾರಗಳನ್ನೂ ಅವರು ಅಪೇಕ್ಷಿಸುತ್ತಾರೆ. ಅದು ಮಾತ್ರವಲ್ಲ, ’ಗುರುವೇ’ ಎಂದು ಕರೆಸಿಕೊಳ್ಳಲು ಇಚ್ಛ್ಹಿಸುತ್ತಾರೆ. ಹಾಗೆ ಕರೆಸಿಕೊಳ್ಳುವುದು ನಿಮಗೆ ಬೇಡ.ನಿಮಗಿರುವ ಗುರುವು ಒಬ್ಬರೇ ಮತ್ತು ನೀವೆಲ್ಲರೂ ಸಹೋದರರು. ಇಹದಲ್ಲಿ ನೀವು ಯಾರನ್ನೂ ’ಪಿತನೇ’ ಎಂದು ಸಂಬೋಧಿಸಬೇಡಿ. ಏಕೆಂದರೆ ನಿಮ್ಮ ಪಿತ ಒಬ್ಬರೇ.ಅವರು ಸ್ವರ್ಗದಲ್ಲಿದ್ದಾರೆ.ಒಡೆಯ ಎಂದು ಕರೆಸಿಕೊಳ್ಳಬೇಡಿ: ಏಕೆಂದರೆ ನಿಮಗಿರುವ ಒಡೆಯ ಒಬ್ಬನೇ, ’ಆತನೇ ಕ್ರಿಸ್ತ.’ ನಿಮ್ಮಲ್ಲಿ ಶ್ರೇಷ್ಠನು ಯಾರೋ ಅವನು ನಿಮ್ಮ ಸೇವಕನಾಗಿರಬೇಕು.ತನ್ನನ್ನು ತಾನೇ ಮೇಲಕ್ಕೇರಿಸಿಕೊಳ್ಳುವ ಪ್ರತಿಯೊಬ್ಬನನ್ನೂ ದೇವರು ಕೆಳಗಿಳಿಸುವರು.ತನ್ನನ್ನು ತಾನೇ ತಗ್ಗಿಸಿಕೊಳ್ಳುವವನನ್ನು ದೇವರು ಮೇಲಕ್ಕೇರಿಸುವರು.

01.03.2010 - ಕ್ಷಮಿಸಿರಿ,ದೇವರು ನಿಮ್ಮನ್ನೂ ಕ್ಷಮಿಸುವರು

ಸಂತ ಲೂಕ ಬರೆದ ಶುಭಸಂದೇಶದಿಂದ ವಾಚನ - 6: 36-38


ಇತರರ ಬಗ್ಗೆ ತೀರ್ಪು ಕೊಡಬೇಡಿ,ಆಗ ದೇವರು ನಿಮ್ಮ ಬಗ್ಗೆ ತೀರ್ಪು ಕೊಡುವುದಿಲ್ಲ;

ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು: ನಿಮ್ಮ ತಂದೆಯಾದ ದೇವರಂತೆ ನೀವೂ ದಯಾವಂತರಾಗಿರಿ.ನೀವು ಇತರರ ಬಗ್ಗೆ ತೀರ್ಪು ಕೊಡಬೇಡಿ,ಆಗ ದೇವರು ನಿಮ್ಮ ಬಗ್ಗೆ ತೀರ್ಪು ಕೊಡುವುದಿಲ್ಲ;ಪರರನ್ನು ದಂಡನೆಗೆ ಗುರಿ ಮಾಡಬೇಡಿ, ದೇವರು ನಿಮ್ಮನ್ನೂ ದಂಡನೆಗೆ ಗುರಿ ಮಾಡುವುದಿಲ್ಲ.ಪರರನ್ನು ಕ್ಷಮಿಸಿರಿ,ದೇವರು ನಿಮ್ಮನ್ನೂ ಕ್ಷಮಿಸುವರು;ಪರರಿಗೆ ಕೊಡಿ, ದೇವರು ನಿಮಗೂ ಕೊಡುವರು;ಅಳತೆಯಲ್ಲಿ ತುಂಬಿ,ಕುಲುಕಿ,ಅದುಮಿ ತುಳುಕುವಂತೆ ಅಳೆದು ನಿಮ್ಮ ಮಡಿಲಿಗೆ ಹಾಕುವರು. ನೀವು ಕೊಟ್ಟ ಅಳತೆಯಲ್ಲೇ ದೇವರು ನಿಮಗೂ ಅಳೆದುಕೊಡುವರು,” ಎಂದರು.