ಮೊದಲನೇ ವಾಚನ: 1 ಅರಸರುಗಳು: 18: 41-46
ಅನಂತರ ಎಲೀಯನು ಆಹಾಬನಿಗೆ, "ನೀನು ಮೇಲೆ ಹೋಗಿ ಅನ್ನಪಾನಗಳನ್ನು ತೆಗೆದುಕೋ; ದೊಡ್ಡ ಮಳೆಯ ಶಬ್ದವು ಕೇಳಿಸುತ್ತದೆ," ಎಂದನು. ಆಹಾಬನು ಅನ್ನಪಾನಗಳನ್ನು ತೆಗೆದುಕೊಳ್ಳಲು ಹೋದಾಗ, ಎಲೀಯನು ಕರ್ಮೆಲ್ಲಿನ ತುದಿಗೆ ಹೋಗಿ, ಅಲ್ಲಿ ನೆಲದ ಮೇಲೆ ಬಿದ್ದುಕೊಂಡು ಮೊಣಕಾಲಿನ ಮಧ್ಯೆ ತಲೆಯನ್ನಿಟ್ಟನು. ಅವನು ತನ್ನ ಸೇವಕನಿಗೆ, "ನೀನು ಮೇಲೆ ಹೋಗಿ ಸಮುದ್ರದ ಕಡೆಗೆ ನೋಡು," ಎಂದು ಆಜ್ಞಾಪಿಸಿದನು. ಸೇವಕನು ಹೋಗಿ ನೋಡಿ ಬ೦ದು ಏನೂ ತೋರುವುದಿಲ್ಲವೆ೦ದು ಹೇಳಿದನು. ಹೀಗೆ ಅವನನ್ನು ಏಳು ಸಾರಿ ಕಳುಹಿಸಿದನು. ಏಳನೆಯ ಸಾರಿ ಆ ಸೇವಕನು, "ಅಂಗೈಯಷ್ಟು ಚಿಕ್ಕದಾದ ಮೋಡವು ಸಮುದ್ರದಿ೦ದ ಏರಿ ಬರುತ್ತಲಿದೆ," ಎಂದು ತಿಳಿಸಿದನು. ಆಗ ಎಲೀಯನು ಅವನಿಗೆ, "ನೀನು ಹೋಗಿ ಆಹಾಬನಿಗೆ, ’ಬೇಗನೆ ರಥವನ್ನು ಹೂಡಿಸಿಕೊಂಡು, ಮಳೆಯು ನಿನ್ನನ್ನು ತಡೆಯದಂತೆ ಬೆಟ್ಟವನ್ನಿಳಿದು ಹೋಗು.’ ಎಂದು ಹೇಳು," ಎಂದನು. ತುಸು ಹೊತ್ತಿನಲ್ಲಿಯೇ ಆಕಾಶವು ಕಾರ್ಮೋಡ ಗಾಳಿಗಳಿ೦ದ ತುಂಬಿ ದೊಡ್ಡ ಮಳೆ ಪ್ರಾರಂಭವಾಯಿತು. ಅಹಾಬನು ರಥದಲ್ಲಿ ಕುಳಿತುಕೊಂಡು ಜೆಸ್ರೀಲಿಗೆ ಹೋದನು. ಸರ್ವೇಶ್ವರನ ಹಸ್ತ ಎಲೀಯನ ಸಂಗಡ ಇದ್ದುದ್ದರಿ೦ದ ಅವನು ನಡು ಕಟ್ಟಿಕೊಂಡು ಆಹಾಬನ ಮುಂದೆ ಓಡುತ್ತಾ ಜೆಸ್ರೀಲನ್ನು ಸೇರಿದನು.
ಕೀರ್ತನೆ: 65:10, 11, 12-13
ಶ್ಲೋಕ: ಪ್ರಭುವೇ, ಸಿಯೋನಿನಲ್ಲಿ ಸಲ್ಲತಕ್ಕವು ನಿನಗೆ ಸ್ತುತಿ ಸ್ತೋತ್ರಗಳು
ಶುಭಸ೦ದೇಶ: ಮತ್ತಾಯ: 5: 20-26
"ಧರ್ಮಶಾಸ್ತ್ರಿಗಳ ಹಾಗು ಫರಿಸಾಯರ ಧರ್ಮನಿಷ್ಠೆಗಿಂತ ನಿಮ್ಮ ಧರ್ಮನಿಷ್ಠೆ ಉತ್ತಮವಾಗದ ಹೊರತು ನೀವು ಸ್ವರ್ಗಸಾಮ್ರಾಜ್ಯವನ್ನು ಪ್ರವೇಶಿಸಲಾರಿರಿ ಎಂಬುದು ನಿಶ್ಚಯ. ’ನರಹತ್ಯೆ ಮಾಡಬೇಡ; ನರಹತ್ಯೆ ಮಾಡುವವನು ನ್ಯಾಯ ತೀರ್ಪಿಗೆ ಗುರಿಯಾಗುವನು’ ಎಂದು ಪೂರ್ವಿಕರಿಗೆ ಹೇಳಿದನ್ನು ನೀವು ಕೇಳಿದ್ದೀರಿ. ಆದರೆ ನಾನೀಗ ನಿಮಗೆ ಹೇಳುತ್ತೇನೆ, ಕೇಳಿ: ತನ್ನ ಸೋದರನ ಮೇಲೆ ಕೋಪಗೊಳ್ಳುವ ಪ್ರತಿಯೊಬ್ಬನೂ ನ್ಯಾಯ ತೀರ್ಪಿಗೆ ಈಡಾಗುವನು; ತನ್ನ ಸೋದರನನ್ನು ತುಚ್ಛಿಕರಿಸುವವನು ನ್ಯಾಯಸಭೆಯ ವಿಚಾರಣೆಗೆ ಒಳಗಾಗುವನು. ’ಮೂರ್ಖ’ ಎಂದು ಮೂದಲಿಸುವವನು ನರಕ್ಕಾಗ್ನಿಗೆ ಗುರಿಯಾಗುವನು. ಆದ ಕಾರಣ ಬಲಿಪೀಠದ ಮುಂದೆ ದೇವರಿಗೆ ಕಾಣಿಕೆಯನ್ನು ಅರ್ಪಿಸಲಿರುವಾಗ, ನಿನ್ನ ಸೋದರನಿಗೆ ನಿನ್ನ ಮೇಲೆ ಏನೋ ಮನಸ್ತಾಪವಿದೆ ಎಂಬುದು ನಿನ್ನ ನೆನಪಿಗೆ ಬಂದರೆ, ನಿನ್ನ ಆ ಕಾಣಿಕೆಯನ್ನು ಆ ಬಲಿಪೀಠದ ಮುಂದೆಯೇ ಇಟ್ಟುಬಿಡು. ಮೊದಲು ಹೋಗಿ ನಿನ್ನ ಸೋದರನೊಡನೆ ಸಮಧಾನ ಮಾಡಿಕೋ, ಅನ೦ತರ ಬ೦ದು ನಿನ್ನ ಕಾಣಿಕೆಯನ್ನು ಒಪ್ಪಿಸು. ನಿನ್ನ ಎದುರಾಳಿ ನಿನ್ನನ್ನು ನ್ಯಾಯಸ್ಥಾನಕ್ಕೆ ಎಳೆಯುವಾಗ ಮಾರ್ಗ ಮಧ್ಯದಲ್ಲೇ ಅವನೊಡನೆ ಬೇಗ ಸಂಧಾನ ಮಾಡಿಕೋ. ಇಲ್ಲದಿದ್ದರೆ, ಅವನು ನಿನ್ನನ್ನು ನ್ಯಾಯಾಧಿಪತಿಗೆ ಒಪ್ಪಿಸಬಹುದು. ನ್ಯಾಯಧಿಪತಿ ನಿನ್ನನ್ನ್ನು ಪೋಲಿಸರ ವಶಕ್ಕೆ ಬಿಡಬಹುದು. ಅನಂತರ ನಿನಗೆ ಸೆರೆವಾಸ ಪ್ರಾಪ್ತವಾದೀತು! ಅಲ್ಲಿ೦ದ ನೀನು ಹೊರಗೆ ಬರಬೇಕಾದರೆ ಬಿಡಿಕಾಸನ್ನೂ ಬಿಡದೆ ಎಲ್ಲವನ್ನೂ ತೆರಬೇಕಾಗುವುದು. ಇದನ್ನು ನೆನಪಿನಲ್ಲಿಡು" ಎಂದು ಯೇಸುಸ್ವಾಮಿ ಹೇಳಿದರು.
No comments:
Post a Comment