19.10.2026 - IIಸೋಮವಾರIIಎಲವೋ ಮೂರ್ಖ, ಇದೇ ರಾತ್ರಿ ನೀನು ಸಾಯಬೇಕಾಗಿದೆ, ನಿನಗಾಗಿ ಸಿದ್ಧಮಾಡಿಟ್ಟಿರುವುದೆಲ್ಲ ಯಾರ ಪಾಲಾಗುವುದು

ಮೊದಲನೇ ವಾಚನ: ಎಫೆಸಿಯರಿಗೆ 2:1-10 


ಸಹೋದರರೇ, ನಿಮ್ಮ ಅಪರಾಧಗಳ ಹಾಗೂ ಪಾಪಗಳ ದೆಸೆಯಿಂದ ಹಿಂದೊಮ್ಮೆ ನೀವು ಆಧ್ಯಾತ್ಮಿಕವಾಗಿ ಮೃತರಾಗಿದ್ದಿರಿ. ಆಗ ನೀವು ಲೋಕದ ರೀತಿನೀತಿಗಳನ್ನು ಅನುಸರಿಸಿ ಬಾಳಿದಿರಿ. ವಾಯುಮಂಡಲದಲ್ಲಿನ ಅಶರೀರ ಶಕ್ತಿಗಳ ಅಧಿಪತಿಗೆ ಅಧೀನರಾಗಿದ್ದಿರಿ. ದುಷ್ಕರ್ಮಿಗಳನ್ನು ಪ್ರಚೋದಿಸುತ್ತಲಿರುವ ದುರಾತ್ಮನಿಗೆ ವಿಧೇಯರಾಗಿದ್ದಿರಿ. ವಾಸ್ತವವಾಗಿ ಹಿಂದೊಮ್ಮೆ ನಾವೆಲ್ಲರು ಸಹ ಹಾಗೆಯೇ ಇದ್ದೆವು. ಶಾರೀರಿಕ ಆಶೆಆಮಿಷಗಳಿಗೆ ತುತ್ತಾಗಿದ್ದೆವು; ಮಾನಸಿಕ ಹಾಗೂ ಶಾರೀರಿಕ ದುರಿಚ್ಛೆಗಳನ್ನೇ ಈಡೇರಿಸುತ್ತಾ ಬಂದೆವು. ಸ್ವಭಾವತಃ ನಾವು ಸಹ ಇತರರಂತೆಯೇ ದೈವಕೋಪಕ್ಕೆ ಗುರಿಯಾಗಿದ್ದೆವು. ಆದರೆ ಕರುಣಾಮಯ ದೇವರು ನಮ್ಮನ್ನು ಅಪಾರವಾಗಿ ಪ್ರೀತಿಸಿ,ನಮ್ಮ ಅಪರಾಧಗಳ ನಿಮಿತ್ತ ಆಧ್ಯಾತ್ಮಿಕವಾಗಿ ಮೃತರಾಗಿದ್ದ ನಮ್ಮನ್ನು ಕ್ರಿಸ್ತಯೇಸುವಿನೊಡನೆ ಜೀವಂತರನ್ನಾಗಿ ಮಾಡಿದರು. (ದೈವಾನುಗ್ರಹದಿಂದಲೇ ನೀವೀಗ ಜೀವೋದ್ಧಾರ ಹೊಂದಿದ್ದೀರಿ). ಯೇಸುಕ್ರಿಸ್ತರೊಡನೆ ನಮ್ಮನ್ನೂ ಎಬ್ಬಿಸಿ, ಸ್ವರ್ಗಲೋಕದಲ್ಲಿ ಅವರ ಸನ್ನಿಧಿಯಲ್ಲಿಯೇ ಮಂಡಿಸುವ ಅವಕಾಶ ಮಾಡಿಕೊಟ್ಟರು. ದೇವರು ಯೇಸುಕ್ರಿಸ್ತರಲ್ಲಿ ನಮಗೆ ತೋರಿದ ದಯೆಯ ಮೂಲಕ ತಮ್ಮ ಅನುಗ್ರಹದ ಶ್ರೀಮಂತಿಕೆಯನ್ನು ಮುಂದಣ ಯುಗಗಳಲ್ಲಿ ತಿಳಿಯಪಡಿಸುವುದೇ ಅವರ ಉದ್ದೇಶವಾಗಿತ್ತು. ದೈವಾನುಗ್ರಹದಿಂದಲೇ ನೀವು ವಿಶ್ವಾಸದ ಮೂಲಕ ಜೀವೋದ್ಧಾರ ಹೊಂದಿದ್ದೀರಿ. ಇದು ನಿಮ್ಮ ಪ್ರಯತ್ನದ ಫಲವಲ್ಲ; ದೇವರಿತ್ತ ವರಪ್ರಸಾದ. ಇದು ಮಾನವರ ಪುಣ್ಯಕಾರ್ಯಗಳ ಪರಿಣಾಮವೂ ಅಲ್ಲ. ಆದುದರಿಂದ ಯಾರೂ ಹೆಮ್ಮೆಪಡಲು ಆಸ್ಪದವಿಲ್ಲ.  ನಾವಾದರೋ ದೇವರ ಕಲಾಕೃತಿಗಳು. ಕ್ರಿಸ್ತಯೇಸುವಿನಲ್ಲಿ ನಾವು ಸತ್ಕಾರ್ಯಗಳನ್ನು ಮಾಡುತ್ತಾ ಬಾಳಬೇಕೆಂದು ತಾವು ಮೊದಲೇ ನಿರ್ಣಯಿಸಿದ್ದಂತೆ ದೇವರು ನಮ್ಮನ್ನು ಸೃಷ್ಟಿಸಿದ್ದಾರೆ. 

ಕೀರ್ತನೆ: 100:2, 3, 4, 5 

ಶ್ಲೋಕ: ಪ್ರಭುವಿನ ಜನ, ಆತನೇ ಮೇಯಿಸುವ ಕುರಿಗಳು ನಾವು. 

1.  ಭೂನಿವಾಸಿಗಳೇ, ಜಯಘೋಷಮಾಡಿ ಪ್ರಭುವಿಗೆ|
ಅತಿ ಸಂತೋಷದಿಂದ ಸೇವೆಮಾಡಿ ಆತನಿಗೆ|
ಹಾಡುತ, ಪಾಡುತ, ಬನ್ನಿ ಆತನ ಸನ್ನಿಧಿಗೆ||
ಶ್ಲೋಕ

2.  ಪ್ರಭುವೇ ದೇವರೆಂಬುದನು ಮರೆತುಬಿಡಬೇಡಿ ನೀವು|
ನಮ್ಮ ಸೃಷ್ಟಿಕರ್ತ ಆತನು, ಆತನವರು ನಾವು|
ಆತನ ಜನ, ಆತನೇ ಮೇಯಿಸುವ ಕುರಿಗಳು ನಾವು||
ಶ್ಲೋಕ

3.  ಆತನ ಗೃಹದ್ವಾರವನು ಪ್ರವೇಶಿಸಿ ಧನ್ಯವಾದಗಳೊಂದಿಗೆ|
ಆತನ ನಾಮವನ್ನು ಕೊಂಡಾಡಿ ಉಪಕಾರಸ್ಮರಣೆಯೊಂದಿಗೆ||
ಶ್ಲೋಕ

ಘೋಷಣೆ
(ಲೂಕ 8-15)
ಅಲ್ಲೆಲೂಯ, ಅಲ್ಲೆಲೂಯ!
ದೇವರ  ವಾಕ್ಯವನ್ನು  ಕೇಳಿ  ಅದನ್ನು  ಸದ್ಗುಣ  ಹಾಗೂ ಸಾತ್ವಿಕವಾದ  ಹೃದಯದಲ್ಲಿಟ್ಟು | ಸಹನೆಯಿಂದ  ಫರತರುವರು  ಧನ್ಯರು ||
ಅಲ್ಲೆಲೂಯ!


ಶುಭಸಂದೇಶ: ಲೂಕ 12:13-21 

ಜನಸಮೂಹದಿಂದ ಒಬ್ಬನು, “ಬೋಧಕರೇ, ನಮ್ಮ ಪಿತ್ರಾರ್ಜಿತ ಸೊತ್ತನ್ನು ನನಗೆ ಭಾಗಮಾಡಿಕೊಡುವಂತೆ ನನ್ನ ಸೋದರನಿಗೆ ಹೇಳಿ,” ಎಂದು ಕೇಳಿಕೊಂಡನು.  ಅದಕ್ಕೆ ಯೇಸು, “ಏನಯ್ಯಾ, ನಿಮ್ಮಿಬ್ಬರ ನ್ಯಾಯತೀರಿಸುವುದಕ್ಕೂ ನಿಮ್ಮ ಸ್ವತ್ತನ್ನು ಭಾಗಮಾಡಿಕೊಡುವುದಕ್ಕೂ ನನ್ನನ್ನು ನೇಮಿಸಿದವರು ಯಾರು?” ಎಂದು ಮರುಪ್ರಶ್ನೆ ಹಾಕಿದರು.  ಅನಂತರ ಜನರನ್ನುದ್ದೇಶಿಸಿ, “ಎಚ್ಚರಿಕೆ, ಯಾವ ವಿಧವಾದ ಲೋಭಕ್ಕೂ ಒಳಗಾಗದಂತೆ ಜಾಗರೂಕರಾಗಿರಿ. ಏಕೆಂದರೆ, ಒಬ್ಬನಿಗೆ ಎಷ್ಟೇ ಸಿರಿಸಂಪತ್ತಿರಲಿ, ಅವನ ನಿಜವಾದ ಜೀವನ ಅದನ್ನು ಅವಲಂಬಿಸಿಲ್ಲ,” ಎಂದು ಹೇಳಿದರು. ಅನಂತರ ಅವರಿಗೆ ಈ ಸಾಮತಿಯನ್ನು ಹೇಳಿದರು: “ಒಬ್ಬ ಧನಿಕನಿದ್ದ. ಅವನ ಭೂಮಿ ಒಮ್ಮೆ ಸಮೃದ್ಧಿಯಾದ ಬೆಳೆ ಕೊಟ್ಟಿತು.  ಆಗ ಅವನು, ‘ನನ್ನ ಬೆಳೆಯನ್ನೆಲ್ಲಾ ತುಂಬಿಡಲು ಸ್ಥಳವಿಲ್ಲವಲ್ಲಾ, ಏನು ಮಾಡಲಿ?’ ಎಂದು ತನ್ನಲ್ಲೇ ಆಲೋಚಿಸುತ್ತಾ,  ‘ಹೌದು, ಹೀಗೆ ಮಾಡುತ್ತೇನೆ: ಇರುವ ಕಣಜಗಳನ್ನು ಕಿತ್ತುಹಾಕಿಸಿ, ಇನ್ನೂ ದೊಡ್ಡವುಗಳನ್ನು ಕಟ್ಟಿಸುತ್ತೇನೆ. ಅಲ್ಲಿ ನನ್ನ ಎಲ್ಲಾ ದವಸಧಾನ್ಯಗಳನ್ನೂ ಸರಕುಸಾಮಗ್ರಿಗಳನ್ನೂ ತುಂಬಿಸಿಡುತ್ತೇನೆ.  ಅಲ್ಲದೆ, “ಎಲೈ ಮನವೇ, ಅನೇಕ ವರ್ಷಗಳಿಗೆ ಬೇಕಾದಷ್ಟು ಸರಕು ಬಿದ್ದಿದೆ, ಆರಾಮವಾಗಿರು. ತಿನ್ನು, ಕುಡಿ, ಸುಖಪಡು ಎಂದು ಹೇಳಿಕೊಳ್ಳುತ್ತೇನೆ",’ ಎಂದುಕೊಂಡ.  ಆಗ ದೇವರು, ‘ಎಲವೋ ಮೂರ್ಖ, ಇದೇ ರಾತ್ರಿ ನೀನು ಸಾಯಬೇಕಾಗಿದೆ, ನಿನಗಾಗಿ ಸಿದ್ಧಮಾಡಿಟ್ಟಿರುವುದೆಲ್ಲ ಯಾರ ಪಾಲಾಗುವುದು?’ ಎಂದರು.  “ತನಗೋಸ್ಕರ ಸಂಪತ್ತನ್ನು ಶೇಖರಿಸಿ ಇಟ್ಟುಕೊಂಡು ದೇವರ ದೃಷ್ಟಿಯಲ್ಲಿ ಧನಿಕನಲ್ಲದವನು ಇವನಿಗೆ ಸಮಾನನು,” ಎಂದರು ಯೇಸು. 

18.10.2026 - II29ನೇ ಭಾನುವಾರ IIಚಕ್ರವರ್ತಿಗೆ ಸಲ್ಲತಕ್ಕದ್ದನ್ನು ಚಕ್ರವರ್ತಿಗೂ ದೇವರಿಗೆ ಸಲ್ಲತಕ್ಕದ್ದನ್ನು ದೇವರಿಗೂ ಸಲ್ಲಿಸಿರಿ


 

ಮೊದಲನೇ ವಾಚನ: ಪ್ರವಾದಿ ಯೆಶಾಯನ ಗ್ರಂಥ 45:1, 4-6 


ಇಂತೆಂದರು ಸರ್ವೇಶ್ವರ ತಾನು ಅಭಿಷೇಕಿಸಿದ ಕೋರೆಷನಿಗೆ “ರಾಷ್ಟ್ರಗಳನ್ನು ನೀ ಸದೆಬಡಿಯುವಂತೆ ರಾಜಮಹಾರಾಜರನು ನಿಶ್ಯಸ್ತ್ರರನ್ನಾಗಿ ಮಾಡುವಂತೆ ಮುಚ್ಚಲಾಗದ ಹಾಗೆ ಬಾಗಿಲು ಹೆಬ್ಬಾಗಿಲುಗಳನು ತೆರೆಯುವಂತೆ ನಾನಿನ್ನ ಕೈಹಿಡಿದು ನಡೆಸುವೆನು ಮುಂದೆ. ನನ್ನ ಸೇವಕನಾದ ಯಕೋಬನ ನಿಮಿತ್ತ ನಾನು ಆರಿಸಿಕೊಂಡ ಇಸ್ರಯೇಲಿನ ನಿಮಿತ್ತ ನನ್ನ ಅರಿವೇ ಇಲ್ಲದ ನಿನ್ನನು ಹೆಸರುಹಿಡಿದು ಕರೆದಿರುವೆನು, ಬಿರುದಿತ್ತು ಸನ್ಮಾನಿಸಿರುವೆನು. ಸರ್ವೇಶ್ವರ ನಾನಲ್ಲದೆ ಬೇರಾರು ಅಲ್ಲ ನನ್ನ ಹೊರತು ಯಾವ ದೇವರು ಇಲ್ಲ. ನೀನು ನನ್ನನು ಅರಿಯದವನಾಗಿರುವೆ ಆದರೂ ನಿನ್ನನ್ನು ಶಸ್ತ್ರಧಾರಿಯಾಗಿಸುವೆ. ಇದ ಕಂಡು ತಿಳಿಯುವರೆಲ್ಲರು ಪೂರ್ವದಿಂದ ಪಶ್ಚಿಮದವರೆಗು: ನನ್ನ ವಿನಾ ದೇವರಾರು ಇಲ್ಲವೆಂದು ನಾನೇ ಸರ್ವೇಶ್ವರ ಮತ್ತಾರು ಅಲ್ಲವೆಂದು;

ಕೀರ್ತನೆ: 96:1, 3, 4-5, 7-8, 9-10 

ಶ್ಲೋಕ: ಶಕ್ತಿಸಾಮರ್ಥ್ಯ ಪ್ರಭುವಿನದೆ ಎಂದು ಜಗದ ರಾಷ್ಟ್ರಗಳು ಘಣಪಡಿಸಲಿ 

1.  ಹೊಸ ಗೀತೆಯನು ಹಾಡಿರಿ ಪ್ರಭುವಿಗೆ|
ವಿಶ್ವವೆಲ್ಲವೂ ಹಾಡಲಿ ಆತನಿಗೆ||
ಪ್ರಸಿದ್ಧಪಡಿಸಿರಿ ಆತನ ಘನತೆಯನು ರಾಷ್ಟ್ರಗಳಿಗೆ|
ಆತನದ್ಬುತ ಕಾರ್ಯಗಳನು ಸಕಲ ಜನಾಂಗಗಳಿಗೆ||
ಶ್ಲೋಕ

2.  ಏಕೆನೆ ಮಹಾತ್ಮನು ಪ್ರಭು ಬಲು ಸ್ತುತ್ಯಾರ್ಹನು|
ಸಕಲ ದೇವರಿಗಿಂತಲೂ ಘನ ಗಂಭೀರನು||
ಶೂನ್ಯ ಪ್ರತಿಮೆಗಳು ಅನ್ಯ ರಾಷ್ಟ್ರಗಳ ದೇವರುಗಳೆಲ್ಲ|
ಪ್ರಭುವಿನಿಂದಲೇ ಉಂಟಾಯಿತು ಆಕಾಶ ಮಂಡಲವೆಲ್ಲ||
ಶ್ಲೋಕ

3.  ಶಕ್ತಿ ಸಾಮರ್ಥ್ಯ ಪ್ರಭುವಿನದೆ ಎಂದು|
ಜಗದ ರಾಷ್ಟ್ರಗಳು ಘನಪಡಿಸಲಿ ಆತನನು ಎಂದೆಂದೂ||
ಆತನ ನಾಮಕೆ ತನ್ನಿ ಘನತೆ ಗೌರವವನು|
ಆತನ ಮಂದಿರಕೆ ಬನ್ನಿ ಕಾಣಿಕೆ ಹೊತ್ತು||
ಶ್ಲೋಕ

4.  ಪ್ರಭುವಿಗೆ ಮಣಿಯಿರಿ ಪವಿತ್ರ ವಸ್ತ್ರಧಾರಿಗಳಂತೆ|
ಅಂಜಿಕೆಯಿಂದ ನಡುಗಲಿ ಜಗವಿಡೀ ಆತನ ಮುಂದೆ||
ಪ್ರಭು ರಾಜನೆಂದು ಸಾರಿರಿ ರಾಷ್ಟ್ರಗಳಿಗೆ|
ನ್ಯಾಯವಾದ ತೀರ್ಪು ಕೊಡುವನು ಜನಾಂಗಕೆ||
ಶ್ಲೋಕ

ಎರಡನೇ ವಾಚನ: 1 ಥೆಸೆಲೋನಿಯರಿಗೆ  1:1-5 


ಪಿತನಾದ ದೇವರ ಹಾಗೂ ಪ್ರಭುವಾದ ಯೇಸುಕ್ರಿಸ್ತರ ಅನ್ಯೋನ್ಯತೆಯಲ್ಲಿರುವ ಥೆಸಲೋನಿಕದ ಸಭೆಯವರಿಗೆ - ಪೌಲ, ಸಿಲ್ವಾನ ಹಾಗೂ ತಿಮೊಥೇಯ ಇವರು ಬರೆಯುವ ಪತ್ರ. ದೈವಾನುಗ್ರಹವೂ ಶಾಂತಿಸಮಾಧಾನವೂ ನಿಮಗೆ ಲಭಿಸಲಿ! ನಾವು ಪ್ರಾರ್ಥಿಸುವಾಗಲೆಲ್ಲಾ ನಿಮ್ಮನ್ನು ಸ್ಮರಿಸುತ್ತಾ, ನಿಮ್ಮೆಲ್ಲರಿಗಾಗಿ ದೇವರಿಗೆ ನಿರಂತರ ಕೃತಜ್ಞತೆಯನ್ನು ಸಲ್ಲಿಸುತ್ತೇವೆ. ವಿಶ್ವಾಸಭರಿತವಾದ ನಿಮ್ಮ ಕಾರ್ಯವನ್ನೂ ಪ್ರೀತಿಪೂರಿತವಾದ ನಿಮ್ಮ ದುಡಿಮೆಯನ್ನೂ ಪ್ರಭು ಯೇಸುವಿನಲ್ಲಿ ನೀವಿಟ್ಟಿರುವ ಅಚಲ ನಿರೀಕ್ಷೆಯನ್ನೂ ತಂದೆಯಾದ ದೇವರ ಸನ್ನಿಧಿಯಲ್ಲಿ ಜ್ಞಾಪಿಸಿಕೊಳ್ಳುತ್ತೇವೆ. ಸಹೋದರರೇ, ನೀವು ದೇವರಿಗೆ ಪ್ರಿಯರು; ದೇವರಿಂದಲೇ ಆಯ್ಕೆಗೊಂಡವರು ಎಂದು ನಾವು ಬಲ್ಲೆವು. ನಮ್ಮ ಶುಭಸಂದೇಶ ಕೇವಲ ಬಾಯಿಮಾತಿನದಲ್ಲ; ಅದು ಶಕ್ತಿಪೂರ್ಣವಾಗಿ ಪವಿತ್ರಾತ್ಮರ ಸಮೇತವಾಗಿ ಪೂರ್ಣ ಪ್ರಮಾಣದಿಂದ ಬಂದದ್ದು. ನಾವು ನಿಮ್ಮ ನಡುವೆಯಿದ್ದಾಗ, ನಿಮಗೋಸ್ಕರ ಹೇಗೆ ವರ್ತಿಸಿದೆವು ಎಂದು ನೀವೇ ಬಲ್ಲಿರಿ. 

ಶುಭಸಂದೇಶ: ಮತ್ತಾಯ 22:15-21 


ಫರಿಸಾಯರು ಒಟ್ಟುಗೂಡಿ ಯೇಸುವನ್ನು ಹೇಗೆ ಮಾತಿನಲ್ಲಿ ಸಿಕ್ಕಿಸುವುದೆಂದು ಸಮಾಲೋಚನೆ ಮಾಡಿಕೊಂಡರು.  ತಮ್ಮ ಶಿಷ್ಯರನ್ನು ಹೆರೋದನ ಪಕ್ಷದ ಕೆಲವರ ಸಮೇತ ಸ್ವಾಮಿಯ ಬಳಿಗೆ ಕಳುಹಿಸಿದರು. ಇವರು ಬಂದು, “ಬೋಧಕರೇ, ತಾವು ಸತ್ಯವಂತರು, ಸತ್ಯಕ್ಕನುಸಾರ ದೈವಮಾರ್ಗವನ್ನು ಬೋಧಿಸುವವರು, ಮುಖದಾಕ್ಷಿಣ್ಯಕ್ಕೆ ಎಡೆಕೊಡದವರು; ಎಂದೇ, ಸ್ಥಾನಮಾನಗಳಿಗೆ ಮಣಿಯದವರು. ಇದೆಲ್ಲಾ ನಮಗೆ ಚೆನ್ನಾಗಿ ಗೊತ್ತಿದೆ.  ಹೀಗಿರುವಲ್ಲಿ ರೋಮ್ ಚಕ್ರಾಧಿಪತಿಗೆ ತೆರಿಗೆಕೊಡುವುದು ಧರ್ಮಸಮ್ಮತವೋ ಅಲ್ಲವೋ, ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸುವಿರಾ?” ಎಂದು ಕೇಳಿದರು.  ಯೇಸು ಅವರ ಕುತಂತ್ರವನ್ನು ಅರಿತುಕೊಂಡು, “ಕಪಟಿಗಳೇ, ನನ್ನನ್ನೇಕೆ ಪರೀಕ್ಷಿಸುತ್ತೀರಿ?  ತೆರಿಗೆಗೆಂದು ಕೊಡಬೇಕಾದ ನಾಣ್ಯವನ್ನು ತೋರಿಸಿ,” ಎಂದರು. ಅವರೊಂದು ನಾಣ್ಯವನ್ನು ತಂದುಕೊಟ್ಟರು. ಆಗ ಯೇಸು, “ಇದರಲ್ಲಿರುವುದು ಯಾರ ಮುದ್ರೆ? ಯಾರ ಲಿಪಿ?” ಎಂದು ಕೇಳಿದರು.  ಅದಕ್ಕೆ ಅವರು, “ರೋಮ್ ಚಕ್ರವರ್ತಿಯವು,” ಎಂದರು. “ಹಾಗಾದರೆ, ಚಕ್ರವರ್ತಿಗೆ ಸಲ್ಲತಕ್ಕದ್ದನ್ನು ಚಕ್ರವರ್ತಿಗೂ ದೇವರಿಗೆ ಸಲ್ಲತಕ್ಕದ್ದನ್ನು ದೇವರಿಗೂ ಸಲ್ಲಿಸಿರಿ,” ಎಂದು ಯೇಸು ಉತ್ತರಕೊಟ್ಟರು.

17.10.2026 - IIಶನಿವಾರIIಪವಿತ್ರಾತ್ಮ ಅವರನ್ನು ದೂಷಿಸುವವನಿಗೆ ಕ್ಷಮೆಯೇ ದೊರಕದು.

  ಮೊದಲನೇ ವಾಚನ: ಎಫೆಸಿಯರಿಗೆ 1:15-23 

ಪ್ರಭು ಯೇಸುವಿನಲ್ಲಿ ನೀವಿಟ್ಟಿರುವ ವಿಶ್ವಾಸ ಹಾಗೂ ದೇವಜನರೆಲ್ಲರ ಮೇಲೆ ನಿಮಗಿರುವ ಪ್ರೀತಿಯನ್ನು ಕುರಿತು ಕೇಳಿದ್ದೇನೆ. ಅಂದಿನಿಂದ ನಿಮ್ಮ ಸಲುವಾಗಿ ದೇವರಿಗೆ ಸದಾ ಕೃತಜ್ಞತಾಸ್ತುತಿ ಸಲ್ಲಿಸಿ, ನನ್ನ ಪ್ರಾರ್ಥನೆಯಲ್ಲಿ ನಿಮ್ಮನ್ನು ಸ್ಮರಿಸಿಕೊಳ್ಳುತ್ತಿದ್ದೇನೆ.  ನಮ್ಮ ಪ್ರಭು ಯೇಸುಕ್ರಿಸ್ತರ ದೇವರೂ ಮಹಿಮಾನ್ವಿತ ತಂದೆಯೂ ಆದವರು, ನಿಮಗೆ ಜ್ಞಾನವನ್ನೂ ವಿವೇಚನೆಯನ್ನೂ ನೀಡುವ ಆತ್ಮವನ್ನು ದಯಪಾಲಿಸಲಿ; ತಮ್ಮನ್ನು ಸಂಪೂರ್ಣವಾಗಿ ಅರಿತುಕೊಳ್ಳುವ ವರವನ್ನು ಈಯಲಿ, ಎಂದು ಪ್ರಾರ್ಥಿಸುತ್ತೇನೆ.  ದೇವರು ನಿಮ್ಮ ಮನೋನೇತ್ರಗಳನ್ನು ತೆರೆಯಲಿ; ಅವರ ಬೆಳಕು ನಿಮಗೆ ಕಾಣುವಂತೆ ಆಗಲಿ. ಹೀಗೆ, ಅವರು ಕರೆದಿರುವ ಜನರಿಗೆ ಲಭಿಸುವ ಭರವಸೆಯ ಭಾಗ್ಯ ಎಂಥದ್ದೆಂದೂ ದೇವಜನರಿಗೆ ಕಾಯ್ದಿರಿಸಿರುವ ಸ್ವಾಸ್ತ್ಯ ಸಂಪತ್ತು ಎಂಥದ್ದೆಂದೂ ನೀವು ಅರಿತುಕೊಳ್ಳಬೇಕು.  ಕ್ರೈಸ್ತವಿಶ್ವಾಸಿಗಳಾದ ನಮ್ಮಲ್ಲಿ ದೇವರು ಸಾಧಿಸಿರುವ ಮಹತ್ಕಾರ್ಯಗಳು ಎಷ್ಟು ಶಕ್ತಿಯುತವಾದುವು ಎಂಬುದು ನಿಮಗೆ ಮನದಟ್ಟಾಗಬೇಕು. ಈ ಮಹಿಮಾಶಕ್ತಿಯಿಂದಲೇ ದೇವರು ಯೇಸುಕ್ರಿಸ್ತರನ್ನು ಮರಣದಿಂದ ಎಬ್ಬಿಸಿದರು; ಸಕಲ ಅಧಿಕಾರ, ಆಧಿಪತ್ಯ, ಪ್ರಭಾವ ಮತ್ತು ಪ್ರಭುತ್ವ ಇವೆಲ್ಲವುಗಳ ಮೇಲೆ ಯೆಸುಕ್ರಿಸ್ತರೇ ಆಡಳಿತ ನಡೆಸುವಂತೆ ಸ್ವರ್ಗಲೋಕದಲ್ಲಿ ಅವರನ್ನು ತಮ್ಮ ಬಲಗಡೆಯಲ್ಲಿ ಆಸೀನರಾಗಿಸಿದ್ದಾರೆ. ಹೀಗೆ ಇಹದಲ್ಲೂ ಪರದಲ್ಲೂ ಕೀರ್ತಿ ಗಳಿಸಿದವರೆಲ್ಲರಿಗಿಂತಲೂ ಯೇಸುಕ್ರಿಸ್ತರ ಮಹಿಮೆಯೇ ಸರ್ವಶ್ರೇಷ್ಠವಾದುದು.  ದೇವರು ಸಮಸ್ತವನ್ನು ಯೇಸುಕ್ರಿಸ್ತರ ಪಾದದಡಿಯಲ್ಲಿರಿಸಿ, ಅವರನ್ನು ಧರ್ಮಸಭೆಯ ಶಿರಸ್ಸನ್ನಾಗಿ ನೇಮಿಸಿದ್ದಾರೆ.  ಧರ್ಮಸಭೆಯೇ ಯೇಸುಕ್ರಿಸ್ತರ ದೇಹ. ಎಲ್ಲವನ್ನೂ ಎಲ್ಲಾ ವಿಧದಲ್ಲೂ ಪೂರೈಸುವಾತನಿಂದ ಅದು ಪರಿಪೂರ್ಣ ಉಳ್ಳದ್ದಾಗಿದೆ. 

 ಕೀರ್ತನೆ: 8:2-3, 4-5, 6-7 

ಶ್ಲೋಕ: ಒಡೆಯನಾಗಿಸಿದೆ ಪ್ರಭೂ ಮಾನವನನು ನಿನ್ನಯ ಕರಕೃತಿಗಳಿಗೆ  

1.  ಪ್ರಭೂ, ಓ ನಮ್ಮ ಪ್ರಭೂ, ಎನಿತು ಮಹಿಮಾನ್ವಿತ|
ಹರಡಿದೆ ನಿನ್ನ ಸಿರಿನಾಮ ಜಗದಾದ್ಯಂತ||
ಬೆಳಗಿದೆ ನಿನ್ನ ವೈಭವ ಗಗನಾದ್ಯಂತ|
ವಿರೋಧಿಗಳ ಬಾಯನು ಮುಚ್ಚಿಸಿದೆ|
ಬಾಲಬಾಲೆಯರ ಬಾಯಿಂದಲೇ||
ಶ್ಲೋಕ

2.  ಆಕಾಶಮಂಡಲ ನಿನ್ನ ಕೈಕೆಲಸವಯ್ಯಾ|
ಚಂದ್ರ ನಕ್ಷತ್ರಗಳು ನಿನ್ನ ರಚನೆಗಳಯ್ಯಾ||
ಇಂತಿರಲು ಮನುಜನು ಎಷ್ಟರವನು ನೀನವನನು ರಕ್ಷಿಸಲು?|
ಏತರದವನು ನರಮಾನವನು ನೀನವನನು ಪರಾಮರಿಸಲು?||
ಶ್ಲೋಕ

3.  ಆದರೆ ದೇವದೂತರಿಗಿಂತ ಕಿಂಚತ್ತೇ ಕೀಳಾಗಿಸಿದೆ ಮನುಜನನು|
ಮುಡಿಸಿದೆ ಮುಕುಟವಾಗವನಿಗೆ||
ಘನ ಮಾನವನು, ಸಿರಿ ಹಿರಿಮೆಯನು|
ಒಡೆಯನಾಗಿಸಿದೆ ನಿನ್ನಯ ಕರಕೃತಿಗಳಿಗೆ|
ಒಳಪಡಿಸಿದೆ ಸಕಲವನು ಅವನ ಪಾದದಡಿಗೆ||
ಶ್ಲೋಕ

ಘೋಷಣೆ

(ಮತ್ತಾಯ 11: 25)
ಅಲ್ಲೆಲೂಯ, ಅಲ್ಲೆಲೂಯ.
ಪಿತನೇ, ಪರಲೋಕ ಭೂಲೋಕಗಳ ಒಡೆಯನೇ, ಜ್ಞಾನಿಗಳಿಗೂ ಮೇಧಾವಿಗಳಿಗೂ ಈ ವಿಷಯವನ್ನು ಮರೆಮಾಡಿ | ಮಕ್ಕಳಂಥವರಿಗೆ ನೀವು ಶ್ರುತಪಡಿಸಿದ್ದೀರಿ, ಇದಕ್ಕಾಗಿ ನಿಮ್ಮನ್ನು ವಂದಿಸುತ್ತೇನೆ ||
ಅಲ್ಲೆಲೂಯ.

ಶುಭಸಂದೇಶ: ಲೂಕ 12:8-12 


“ಯಾವನು ಜನರ ಮುಂದೆ ಬಹಿರಂಗವಾಗಿ ತಾನು ನನ್ನವನೆಂದು ಒಪ್ಪಿಕೊಳ್ಳುತ್ತಾನೋ, ಅವನನ್ನು ನರಪುತ್ರನು ಸಹ ದೇವದೂತರ ಮುಂದೆ ತನ್ನವನೆಂದು ಒಪ್ಪಿಕೊಳ್ಳುವನು. ಆದರೆ ಯಾವನು ತಾನು ನನ್ನವನಲ್ಲ ಎಂದು ಜನರ ಮುಂದೆ ಬಹಿರಂಗವಾಗಿ ನಿರಾಕರಿಸುತ್ತಾನೋ, ಅವನನ್ನು ದೇವದೂತರ ಮುಂದೆ ನಿರಾಕರಿಸಲಾಗುವುದೆಂಬುದು ನಿಶ್ಚಯ. “ಯಾವನಾದರೂ ನರಪುತ್ರನ ವಿರುದ್ಧ ಮಾತನಾಡಿದರೆ ಅವನಿಗೆ ಕ್ಷಮೆ ದೊರಕಬಹುದು. ಆದರೆ ಪವಿತ್ರಾತ್ಮ ಅವರನ್ನು ದೂಷಿಸುವವನಿಗೆ ಕ್ಷಮೆಯೇ ದೊರಕದು. “ಪ್ರಾರ್ಥನಾಮಂದಿರಗಳಿಗೆ ಮತ್ತು ನ್ಯಾಯಾಧಿಪತಿಗಳ ಹಾಗೂ ದೇಶಾಧಿಕಾರಿಗಳ ಮುಂದೆ ನಿಮ್ಮನ್ನು ಎಳೆದೊಯ್ಯುವಾಗ ಹೇಗೆ ವಾದಿಸುವುದು, ಏನು ಹೇಳುವುದು ಎಂದು ಚಿಂತಾಕ್ರಾಂತರಾಗಬೇಡಿ. ಏಕೆಂದರೆ, ನೀವು ಹೇಳತಕ್ಕದ್ದನ್ನು ಪವಿತ್ರಾತ್ಮ ಅದೇ ಗಳಿಗೆಯಲ್ಲಿ ನಿಮಗೆ ಕಲಿಸಿಕೊಡುವರು,” ಎಂದರು. 

16.10.2026 - IIಶುಕ್ರವಾರ IIನಿಮ್ಮ ತಲೆಗೂದಲುಗಳು ಸಹ ಎಲ್ಲವೂ ಎಣಿಕೆಯಾಗಿವೆ. ಭಯಪಡಬೇಡಿ

 

ಮೊದಲನೆಯ ವಾಚನ: ರೋಮನರಿಗೆ 4:1-8



ಸಹೋದರರೇ, ವಂಶಾನುಕ್ರಮವಾಗಿ ನಮ್ಮ ಮೂಲಪಿತನಾದ ಅಬ್ರಹಾಮನ ಅನುಭವವನ್ನು ಕುರಿತು ಏನು ಹೇಳೋಣ? ಆತನು ತನ್ನ ಸತ್ಕಾರ್ಯಗಳಿಂದ ದೇವರೊಡನೆ ಸತ್ಸಂಬಂಧವನ್ನು ಹೊಂದಿದ್ದರೆ ಆಗ ಹೊಗಳಿಕೊಳ್ಳುವುದಕ್ಕೆ ಆತನಿಗೆ ಆಸ್ಪದವಿರುತ್ತಿತ್ತು, ಆದರೆ ಅದು ದೇವರ ಸಾನ್ನಿಧ್ಯದಲ್ಲಿ ಅಲ್ಲ. ಏಕೆಂದರೆ, ಪವಿತ್ರ ಗ್ರಂಥದಲ್ಲಿ ಹೀಗೆ ಹೇಳಿದೆ: " ಅಬ್ರಹಾಮನು ದೇವರಲ್ಲಿ ವಿಶ್ವಾಸವಿಟ್ಟನು, ಆತನು ತಮ್ಮ ಸತ್ಸಂಬಂಧದಲ್ಲಿ ಇರುವುದಾಗಿ ದೇವರು ಪರಿಗಣಿಸಿದರು." ದುಡಿಯುವವನಿಗೆ ದೊರಕುವ ಕೂಲಿ ಉಚಿತ ದಾನವಲ್ಲ, ಅದು ಕಷ್ಟಾರ್ಜಿತ ಸಂಪಾದನೆ. ಆದರೆ ಸತ್ಕಾರ್ಯಸಂಪಾದನೆ ಇಲ್ಲದಿದ್ದರೂ ಯಾರೂ ಅಧರ್ಮಿಗಳನ್ನು ಸದ್ಧರ್ಮಿಗಳನ್ನಾಗಿಸುವ ದೇವರಲ್ಲಿ ವಿಶ್ವಾಸವಿಡುತ್ತಾರೋ ಅಂಥವರ ವಿಶ್ವಾಸವನ್ನು ದೇವರು ಅಂಗೀಕರಿಸಿ, ತಮ್ಮೊಡನೆ ಸತ್ಸಂಬಂಧದಲ್ಲಿ ಇರಿಸಿಕೊಳ್ಳುತ್ತಾರೆ. ಅಂತೆಯೇ ಸತ್ಕಾರ್ಯಸಂಪಾದನೆ ಇಲ್ಲದಿದ್ದರೂ ಯಾರು ದೇವರೊಡನೆ ಸತ್ಸಂಬಂಧದಲ್ಲಿ ಇರುತ್ತಾರೋ ಅಂಥವರು ಭಾಗ್ಯವಂತರು ! ಇದನ್ನು ಕುರಿತು ದಾವೀದನು ಹೀಗೆನ್ನುತ್ತಾನೆ: " ಯಾರ ಅಪರಾಧಗಳು ಪರಿಹರಿಸಲಾಗಿವೆಯೋ, ಯಾರ ಪಾಪಗಳು ಕ್ಷಮಿಸಲಾಗಿವೆಯೋ ಅವರು ಭಾಗ್ಯವಂತರು ! ಯಾರ ಪಾಪವನ್ನು ಸರ್ವೇಶ್ವರ ಲೆಕ್ಕಿಸುವುದಿಲ್ಲವೋ ಆತನು ಭಾಗ್ಯವಂತನು!"

ಕೀರ್ತನೆ 32:1-2, 5, 11

ಶ್ಲೋಕ: ನೀನೇ ನನಗೆ ಮರೆಯು, ಆಪತ್ತಿನಲಾಸರೆಯು.

ಯಾರ ಪಾಪ ಪರಿಹಾರವಾಗಿದೆಯೋ|
ಯಾರ ದ್ರೋಹ ವಿಮೋಚನೆಯಾಗಿದೆಯೋ ಅವರೇ ಧನ್ಯರು||
ಯಾರಪರಾಧವನು ಪ್ರಭು ಎಣಿಸಿಲ್ಲವೋ|
ಯಾರಂತರಂಗದಲಿ ಕುತಂತ್ರವಿಲ್ಲವೋ ಅವರೇ ಧನ್ಯರು||

ಆಗ ನಾ ನಿವೇದಿಸಿದೆ ನಿನಗೆ ನನ್ನ ಪಾಪವನು|
ಮರೆಮಾಡಲಿಲ್ಲ ನಿನ್ನಿಂದ ನನ್ನ ದ್ರೋಹವನು||
ಪ್ರಭು ಮುಂದೆ ನನ್ನ ತಪ್ಪುಗಳನ್ನೊಪ್ಪಿಕೊಳ್ವೆ ಎಂದೆನು|
ಆಗ ನೀ ಪರಿಹರಿಸಿದೆ ನನ್ನ ಪಾಪದೋಷವನು||

ಸಜ್ಜನರೇ, ಸಂತೋಷಿಸಿರಿ, ಉಲ್ಲಾಸಿಸಿರಿ ಪ್ರಭುವಿನಲಿ|
ಯಥಾರ್ಥಚಿತರೇ, ಜಯಕಾರಮಾಡಿ ಆತನ ವಿಷಯದಲಿ||

ಶುಭಸಂದೇಶ: ಲೂಕ 12:1-7


ಆ ಕಾಲದಲ್ಲಿ ಸಾವಿರಾರು ಜನರು ಒಬ್ಬರನ್ನೊಬ್ಬರು ಒತ್ತರಿಸುತ್ತಾ ಕಿಕ್ಕಿರಿದು ನೆರೆದಿದ್ದರು. ಯೇಸು ಮೊದಲು ಶಿಷ್ಯರನ್ನು ಉದ್ದೇಶಿಸಿ, " ಫರಿಸಾಯರ ಹುಳಿಹಿಟ್ಟಿನ ಬಗ್ಗೆ, ಅಂದರೆ ಅವರ ಕಪಟತನದ ಬಗ್ಗೆ, ಎಚ್ಚರಿಕೆಯಿಂದಿರಿ. ಮುಚ್ಚುಮರೆಯಾಗಿರುವುದೆಲ್ಲಾ ಬಟ್ಟಬಯಲಾಗುವುದು, ಗುಟ್ಟಾಗಿರುವುದೆಲ್ಲಾ ರಟ್ಟಾಗುವುದು. ನೀವು ಕತ್ತಲಲ್ಲಿ ಹೇಳಿದ್ದೆಲ್ಲವನ್ನು ಬೆಳಕಿನಲ್ಲಿ ಕೇಳಲಾಗುವುದು, ಒಳಕೋಣೆಗಳಲ್ಲಿ ಕಿವಿಮಾತಾಗಿ ನೀವು ಹೇಳಿದ್ದೆಲ್ಲವನ್ನು ಮನೆಮಾಳಿಗೆಗಳ ಮೇಲಿಂದ ಸಾರಲಾಗುವುದು. ಗೆಳೆಯರೇ, ನನ್ನ ಮಾತಿಗೆ ಕಿವಿಗೊಡಿ : ದೇಹವನ್ನು ಕೊಂದುಹಾಕುವವರಿಗೆ ಭಯಪಡಬೇಡಿ. ಕೊಂದುಹಾಕಿದ ಮೇಲೆ ಹೆಚ್ಚೇನು ಮಾಡಲು ಅವರಿಂದಾಗದು. ನೀವು ಯಾರಿಗೆ ಭಯಪಡಬೇಕೆಂದು ಹೇಳುತ್ತೇನೆ, ಕೇಳಿ : ಸತ್ತ ಮೇಲೆ ನರಕದೊಳಕ್ಕೆ ದಬ್ಬಲು ಅಧಿಕಾರವುಳ್ಳಾತನಿಗೆ ಭಯಪಡಿ. ಹೌದು, ಆತನಿಗೆ ಭಯಪಡಿರೆಂದು ನಿಮಗೆ ಒತ್ತಿ ಹೇಳುತ್ತೇನೆ. ಎರಡು ಕಾಸಿಗೆ ಐದು ಗುಬ್ಬಚ್ಚಿಗಳನ್ನು ಮಾರುವುದಿಲ್ಲವೇ? ಆದರೂ ಅವುಗಳಲ್ಲಿ ಒಂದನ್ನೂ ದೇವರು ಮರೆಯುವುದಿಲ್ಲ. ಅಷ್ಟು ಮಾತ್ರವಲ್ಲ, ನಿಮ್ಮ ತಲೆಗೂದಲುಗಳು ಸಹ ಎಲ್ಲವೂ ಎಣಿಕೆಯಾಗಿವೆ. ಭಯಪಡಬೇಡಿ, ಅನೇಕ ಗುಬ್ಬಚ್ಚಿಗಳಿಗಿಂತ ನೀವು ಎಷ್ಟೋ ಮೌಲ್ಯವುಳ್ಳವರು, " ಎಂದರು.

15.10.2026 - II ಗುರುವಾರII ಶಾಸ್ತ್ರಜ್ಞರೇ, ನಿಮಗೆ ಧಿಕ್ಕಾರ! ನಿಮ್ಮ ಪಿತೃಗಳು ಕೊಂದುಹಾಕಿದ ಪ್ರವಾದಿಗಳಿಗೆ ನೀವು ಅಂದದ ಗೋರಿಗಳನ್ನು ನಿರ್ಮಿಸುತ್ತೀರಿ

 ಮೊದಲನೇ ವಾಚನ: ಎಫೆಸಿಯರಿಗೆ 1:3-10


ಕ್ರಿಸ್ತಯೇಸುವಿನಲ್ಲಿ ವಿಶ್ವಾಸವಿಟ್ಟಿರುವ ಎಫೆಸದ ದೇವಜನರಿಗೆ - ದೇವರ ಚಿತ್ತಾನುಸಾರ ಕ್ರಿಸ್ತ ಯೇಸುವಿನ ಪ್ರೇಷಿತನಾಗಿ ನೇಮಕಗೊಂಡ ಪೌಲನು ಬರೆಯುವ ಪತ್ರ. ಪಿತನಾದ ದೇವರ ಮತ್ತು ಪ್ರಭುವಾದ ಯೇಸುಕ್ರಿಸ್ತರ ಅನುಗ್ರಹವೂ ಶಾಂತಿ ಸಮಾಧಾನವೂ ನಿಮಗೆ ಲಭಿಸಲಿ! ನಮ್ಮ ಪ್ರಭು ಯೇಸುಕ್ರಿಸ್ತರ ಪಿತನಾದ ದೇವರಿಗೆ ಸ್ತುತಿ ಸಲ್ಲಲಿ! ಪಿತದೇವರು ಸ್ವರ್ಗಲೋಕದಿಂದ ಎಲ್ಲಾ ಬಗೆಯ ಆಧ್ಯಾತ್ಮಿಕ ಆಶೀರ್ವಾದಗಳನ್ನು ಕ್ರಿಸ್ತಯೇಸುವಿನಲ್ಲಿ ನಮಗೆ ಅನುಗ್ರಹಿಸಿದ್ದಾರೆ. ಜಗತ್ತು ಸೃಷ್ಟಿಯಾಗುವ ಮೊದಲೇ ದೇವರು ಕ್ರಿಸ್ತಯೇಸುವಿನಲ್ಲಿ ನಮ್ಮನ್ನು ತಮ್ಮವರನ್ನಾಗಿ ಆರಿಸಿಕೊಂಡರು. ಹೀಗೆ ಅವರ ಸನ್ನಿಧಿಯಲ್ಲಿ ನಾವು ನಿಷ್ಕಳಂಕರೂ ನಿರ್ದೋಷಿಗಳೂ ಆಗಿರಬೇಕೆಂದು ಇಚ್ಛಿಸಿದರು. ನಮ್ಮ ಮೇಲಿನ ಪ್ರೀತಿಯಿಂದಾಗಿ ದೇವರು ಯೇಸುಕ್ರಿಸ್ತರ ಮೂಲಕ ನಮ್ಮನ್ನು ತಮ್ಮ ಮಕ್ಕಳನ್ನಾಗಿಸಿಕೊಳ್ಳಲು ಆಗಲೇ ನಿರ್ಧರಿಸಿದ್ದರು. ಇದು ಅವರ ಸಂಕಲ್ಪ ಹಾಗೂ ಚಿತ್ತವಾಗಿತ್ತು. ತಮ್ಮ ಪ್ರೀತಿಯ ಪುತ್ರನಲ್ಲೇ ಅವರು ನಮಗೆ ಉಚಿತವಾಗಿ ಅನುಗ್ರಹಿಸಿರುವ ಅತಿಶಯ ವರಪ್ರಸಾದಕ್ಕಾಗಿ ಅವರಿಗೆ ಸ್ತುತಿಸಲ್ಲಿಸೋಣ. ಯೇಸುಕ್ರಿಸ್ತರು ಸುರಿಸಿದ ರಕ್ತಧಾರೆಯ ಮೂಲಕ ನಮಗೆ ಪಾಪಕ್ಷಮೆ ದೊರಕಿತು; ವಿಮೋಚನೆಯೂ ಲಭಿಸಿತು. ಇದು ದೇವರ ಅನುಗ್ರಹದ ಶ್ರೀಮಂತಿಕೆಯೇ ಸರಿ. ಇದನ್ನು ನಮ್ಮ ಮೇಲೆ ಅವರು ಯಥೇಚ್ಛವಾಗಿ ಸುರಿಸಿದ್ದಾರೆ. ದೇವರು ಸಮಗ್ರ ಜ್ಞಾನ-ವಿವೇಕಗಳಿಂದ ತಮ್ಮ ರಹಸ್ಯ ಯೋಜನೆಯನ್ನು ನಮಗೆ ತಿಳಿಯಪಡಿಸಿದ್ದಾರೆ. ಮೊದಲೇ ನಿರ್ಧರಿಸಿದ್ದಂತೆ ಅದನ್ನು ಯೇಸುಕ್ರಿಸ್ತರ ಮೂಲಕ ಪರಿಪೂರ್ಣಗೊಳಿಸಬೇಕೆಂಬುದು ಅವರ ಸಂಕಲ್ಪವಾಗಿತ್ತು. ಕಾಲವು ಸಂಪೂರ್ಣಗೊಂಡಾಗ ಇಹಪರಗಳಲ್ಲಿರುವ ಸಮಸ್ತವನ್ನು ಕ್ರಿಸ್ತಯೇಸುವಿನಲ್ಲಿ ಒಂದುಗೂಡಿಸುವುದೇ ಈ ಯೋಜನೆಯ ಇಂಗಿತ. 

ಕೀರ್ತನೆ:  98:1, 2-3, 3-4, 5-6

ಶ್ಲೋಕ: ಪ್ರಕಟಿಸಿಹನು ಪ್ರಭು ತನ್ನ ಮುಕ್ತಿ ವಿಧಾನವನು  

1.  ಹಾಡಿರಿ ಪ್ರಭುವಿಗೆ ಹೊಸ ಗೀತೆಯೊಂದನು|
ಎಸಗಿಹನಾತನು ಪವಾಡ ಕಾರ್ಯಗಳನು||
ಆತನ ಬಲಗೈ ಗಳಿಸಿತಾತನಿಗೆ ಗೆಲುವನು||
ಶ್ಲೋಕ

2.  ಪ್ರಕಟಿಸಿಹನು ಪ್ರಭು ತನ್ನ ಮುಕ್ತಿವಿಧಾನವನು|
ರಾಷ್ಟ್ರಗಳಿಗೆ ತೋರಿಸಿಹನು ಜೀವೋದ್ಧಾರಕಾ ಶಕ್ತಿಯನು||
ಸ್ಮರಿಸಿಕೊಂಡನು ಪ್ರಭು ತನ್ನ ಪ್ರೀತಿಯನು|
ಇಸ್ರಯೇಲ್ ಕುಲದ ಬಗ್ಗೆ ತನ್ನ ಸತ್ಯತೆಯನು||
ಶ್ಲೋಕ

3.  ಕಂಡುಬಂದಿತು ಜಗದ ಎಲ್ಲೆ ಎಲ್ಲೆಗೆ|
ನಮ್ಮ ದೇವ ವಾಧಿಸಿದ ಜಯಗಳಿಕೆ||
ಭೂ ನಿವಾಸಿಗಳೇ, ಮಾಡಿರಿ ಜಯಕಾರ ಪ್ರಭುವಿಗೆ|
ಮುದದಿ ಹಾಡಿರಿ, ಮಾಡಿರಿ ಸುಮಧುರ ಭಜನೆ||
ಶ್ಲೋಕ

4.  ಪ್ರಭುವನ್ನು ಸ್ತುತಿಸಿರಿ ಕಿನ್ನರಿಯೊಂದಿಗೆ|
ಭಜಿಸಿರಿ ಆತನನು ವಾದ್ಯಮೇಳದೊಂದಿಗೆ||
ಊದಿರಿ ಕೊಂಬನು, ತುತ್ತೂರಿಯನು|
ಉದ್ಘೋಷಿಸಿರಿ ಪ್ರಭು ರಾಜನನು||
ಶ್ಲೋಕ

ಘೋಷಣೆ
(ಕೀರ್ತನೆ 148: 13, 14)
ಅಲ್ಲೆಲೂಯ, ಅಲ್ಲೆಲೂಯ.
ಹೊಗಳಲಿ  ಇವರೆಲ್ಲರೂ  ಪ್ರಭುವಿನ  ನಾಮವನು| ಕೋಡುಮೂಡಿಸಿಹನು  ಪ್ರಭು  ತನ್ನ  ಪ್ರಜೆಗೆ ||
ಅಲ್ಲೆಲೂಯ.

ಶುಭಸಂದೇಶ: ಲೂಕ 11:47-54


ಯೇಸು ಧರ್ಮಶಾಸ್ತ್ರಜ್ಞರನ್ನುದ್ದೇಶಿಸಿ ಹೀಗೆಂದರು: "ಶಾಸ್ತ್ರಜ್ಞರೇ, ನಿಮಗೆ ಧಿಕ್ಕಾರ! ನಿಮ್ಮ ಪಿತೃಗಳು ಕೊಂದುಹಾಕಿದ ಪ್ರವಾದಿಗಳಿಗೆ ನೀವು ಅಂದದ ಗೋರಿಗಳನ್ನು ನಿರ್ಮಿಸುತ್ತೀರಿ. ನಿಮ್ಮ ಪಿತೃಗಳ ಕೃತ್ಯಗಳನ್ನು ನೀವು ಅನುಮೋದಿಸುತ್ತೀರಿ ಎಂಬುದಕ್ಕೆ ಇದೇ ಸಾಕ್ಷಿ. ಏಕೆಂದರೆ, ಪ್ರವಾದಿಗಳನ್ನು ಕೊಂದವರು ಅವರಾದರೆ, ಗೋರಿ ನಿರ್ಮಿಸುತ್ತಿರುವವರು ನೀವು. ಈ ಕಾರಣದಿಂದಲೇ ‘ದೇವರ ಜ್ಞಾನವು’ ಹೇಳಿರುವುದೇನೆಂದರೆ - ‘ನಾನು ಅವರ ಬಳಿಗೆ ಪ್ರವಾದಿಗಳನ್ನೂ ಪ್ರೇಷಿತರನ್ನೂ ಕಳುಹಿಸುವೆನು; ಅವರಲ್ಲಿ ಕೆಲವರನ್ನು ಕೊಲೆಮಾಡುವರು; ಕೆಲವರನ್ನು ಚಿತ್ರಹಿಂಸೆಪಡಿಸುವರು.  ಲೋಕಾದಿಯಿಂದ ಸುರಿಸಲಾದ ಎಲ್ಲಾ ಪ್ರವಾದಿಗಳ ರಕ್ತಕ್ಕೂ ಅಂದರೆ, ಹೇಬೆಲನ ರಕ್ತ ಮೊದಲ್ಗೊಂಡು, ಬಲಿಪೀಠಕ್ಕೂ ದೇವಾಲಯಕ್ಕೂ ನಡುವೆ ಹತನಾದ ಜಕರೀಯನ ರಕ್ತದವರೆಗೂ ಈ ಪೀಳಿಗೆಯವರು ಲೆಕ್ಕಕೊಡಬೇಕಾಗುವುದು.’ ಹೌದು, ಈ ಪೀಳಿಗೆಯವರೇ ಲೆಕ್ಕಕೊಡಬೇಕಾಗುವುದೆಂದು ನಿಮಗೆ ಸ್ಪಷ್ಟವಾಗಿ ಹೇಳುತ್ತೇನೆ.  ಧರ್ಮಶಾಸ್ತ್ರಜ್ಞರೇ, ನಿಮಗೆ ಧಿಕ್ಕಾರ! ಜ್ಞಾನವೆಂಬ ಮಂದಿರದ ಬೀಗದ ಕೈಯನ್ನು ನಿಮ್ಮಲ್ಲೇ ಇಟ್ಟುಕೊಂಡಿದ್ದೀರಿ. ನೀವು ಒಳಕ್ಕೆ ಪ್ರವೇಶಿಸುವುದಿಲ್ಲ; ಪ್ರವೇಶಿಸಲು ಯತ್ನಿಸುವವರನ್ನೂ ತಡೆಗಟ್ಟುತ್ತೀರಿ,” ಎಂದರು. ಬಳಿಕ ಯೇಸು ಅಲ್ಲಿಂದ ಹೊರಗೆ ಬಂದಾಗ ಧರ್ಮಶಾಸ್ತ್ರಿಗಳೂ ಫರಿಸಾಯರೂ ಅವರನ್ನು ಉಗ್ರವಾಗಿ ಪ್ರತಿಭಟಿಸಲಾರಂಭಿಸಿದರು. ಹಲವಾರು ವಿಷಯಗಳನ್ನು ಕುರಿತು ಮಾತಾಡುವಂತೆ ಕೆಣಕಿ, ಅವರ ಮಾತಿನಲ್ಲಿ ಏನಾದರೂ ತಪ್ಪು ಕಂಡು ಹಿಡಿಯಲೇಬೇಕೆಂದು ಹೊಂಚು ಹಾಕುತ್ತಿದ್ದರು.

14.10.2026 - IIಬುಧವಾರIIನೀವು ನೆಲಸಮವಾದ ಸಮಾಧಿಗಳಂತೆ ಇದ್ದೀರಿ. ಸಮಾಧಿಗಳೆಂದು ತಿಳಿಯದೆಯೆ ಜನರು ಅವುಗಳ ಮೇಲೆ ನಡೆದಾಡುತ್ತಾರೆ

ಮೊದಲನೇ ವಾಚನ: ಗಲಾತ್ಯರಿಗೆ 5:18-25

ಸಹೋದರರೇ, ನೀವು ಪವಿತ್ರಾತ್ಮ ನಡೆಸುವ ಮಾರ್ಗದಲ್ಲಿ ನಡೆಯುವವರಾದರೆ, ಧರ್ಮಶಾಸ್ತ್ರದ ವಿಧಿನಿಯಮಗಳಿಗೆ ನೀವು ಅಧೀನರಲ್ಲ. ದೈಹಿಕ ವ್ಯಾಮೋಹದ ದುಷ್ಪರಿಣಾಮಗಳು ತಿಳಿದೇ ಇವೆ: ಹಾದರ, ಅಶುದ್ಧತೆ, ಕಾಮುಕತನ, ವಿಗ್ರಹಾರಾಧನೆ, ಮಾಟಮಂತ್ರ, ಹಗೆತನ, ಜಗಳ, ಹೊಟ್ಟೆಕಿಚ್ಚು, ಕ್ರೋಧ, ಸ್ವಾರ್ಥಭೇದ, ಪಕ್ಷಪಾತ, ಮತ್ಸರ, ಕುಡಿಕತನ, ದುಂದೌತಣ - ಇತ್ಯಾದಿಗಳು. ಇಂಥ ಕೃತ್ಯಗಳನ್ನು ಮಾಡುವವರು ದೇವರ ಸಾಮ್ರಾಜ್ಯಕ್ಕೆ ಬಾಧ್ಯರಲ್ಲ ಎಂದು ಈಗಾಗಲೇ ನಿಮ್ಮನ್ನು ಎಚ್ಚರಿಸಿದ್ದೇನೆ; ಈಗಲೂ ಎಚ್ಚರಿಸುತ್ತೇನೆ. ಪವಿತ್ರಾತ್ಮದತ್ತವಾದ ಸತ್ಫಲಗಳು ಯಾವುವೆಂದರೆ: ಪ್ರೀತಿ, ಆನಂದ, ಶಾಂತಿಸಮಾಧಾನ, ಸಹನೆ, ದಯೆ, ಸದ್ಗುಣ, ಪ್ರಾಮಾಣಿಕತೆ, ಸೌಭಾಗ್ಯ, ಸಂಯಮ - ಇಂಥವುಗಳೇ. ಇವುಗಳನ್ನು ಯಾವ ಧರ್ಮಶಾಸ್ತ್ರವೂ ಆಕ್ಷೇಪಿಸುವುದಿಲ್ಲ. ಕ್ರಿಸ್ತಯೇಸುವಿಗೆ ಸೇರಿದ ಎಲ್ಲರೂ ತಮ್ಮ ದೈಹಿಕ ವ್ಯಾಮೋಹವನ್ನು ಅದರ ಆಶಾಪಾಶಗಳ ಹಾಗೂ ದುರಿಚ್ಛೆಗಳ ಸಮೇತ ಶಿಲುಬೆಗೆ ಜಡಿದುಬಿಟ್ಟಿದ್ದಾರೆ. ಪವಿತ್ರಾತ್ಮ ನಮ್ಮ ಜೀವಾಳವಾಗಿದ್ದರೆ, ಅವರೇ ನಮ್ಮ ಜೀವನದ ಮಾರ್ಗದರ್ಶಿಯೂ ಆಗಿರಬೇಕು.

ಕೀರ್ತನೆ: 1:1-2, 3, 4, 6

ಶ್ಲೋಕ:  ನಾನೇ  ಜಗಜ್ಯೋತಿ,  ನನ್ನನ್ನು  ಹಿಂಬಾಲಿಸುವವನು  ಕತ್ತಲಲ್ಲಿ  ನಡೆಯುವುದಿಲ್ಲ.

1.  ದುರ್ಜನರ ಆಲೋಚನೆಯಂತೆ ನಡೆಯದೆ|
ಪಾಪಾತ್ಮರ ಪಂಥದಲಿ ಕಲೂರದೆ||
ಧರ್ಮನಿಂದಕರ ಕೂಟದಲಿ ಕೂರದೆ|
ಪ್ರಭುವಿನ ಧರ್ಮಶಾಸ್ತ್ರದದಲಿ ಹರ್ಷಗೊಳ್ಳುವವನಾರೋ ಅವನೇ ಧನ್ಯನು|
ಹಗಲಿರುಳೆನ್ನದೆ ಅದನೇ ಧ್ಯಾನಿಸುತ್ತಿರುವವನಾರೋ  ಅವನೇ ಧನ್ಯನು||
ಶ್ಲೋಕ

2.  ನದಿಯ ಬದಿಯಲೇ ಬೆಳೆದಿಹ ಮರದಂತೆ|
ಸಕಾಲಕೆ ಫಲವೀವ ವೃಕ್ಷದಂತೆ||
ಎಲೆ ಬಾಡದೆ ಪಸಿರಿರುವ   ತರುವಂತೆ|
ಸಿಗುವುದು ಅವನ ಕಾರ್ಯಗಳಿಗೆ ಸಫಲತೆ||
ಶ್ಲೋಕ

3.  ದುರುಳರಾದರೋ ತೂರಿಹೋಗುವರು|
ಬಿರುಗಾಳಿಗೆ ತರಗೆಲೆಯಾಗುವರು||
ಸಜ್ಜನರ ಮಾರ್ಗಕ್ಕಿದೆ ಪ್ರಭುವಿನ ಪಾಲನ|
ದುರ್ಜನರ ಮಾರ್ಗಕ್ಕಿದೆ ಸಂಪೂರ್ಣ ವಿನಾಶನ||
ಶ್ಲೋಕ

ಘೋಷಣೆ
(ಕೀರ್ತನೆ 145: 14)
ಅಲ್ಲೆಲೂಯ, ಅಲ್ಲೆಲೂಯ.
ನುಡಿಯಲಿ  ಪ್ರಭು  ಸದಾ  ಪ್ರಾಮಾಣಿಕನು| ನಡೆಯಲಿ  ಆತನು  ಸದಾ  ಪ್ರೀತಿಮಯನು||
ಅಲ್ಲೆಲೂಯ.

ಶುಭಸಂದೇಶ: ಲೂಕ 11:42-46

ಯೇಸುಸ್ವಾಮಿ ಫರಿಸಾಯರನ್ನುದ್ದೇಶಿಸಿ ಹೀಗೆಂದರು: “ಫರಿಸಾಯರೇ, ನಿಮಗೆ ಧಿಕ್ಕಾರ! ನೀವು ಪುದಿನ, ಸದಾಪು ಮುಂತಾದ ಪಲ್ಯಗಳಲ್ಲೂ ಹತ್ತರಲ್ಲಿ ಒಂದು ಪಾಲು ಸಲ್ಲಿಸುತ್ತೀರಿ, ಸರಿ. ಆದರೆ ನ್ಯಾಯನೀತಿಯನ್ನೂ ದೇವರ ಪ್ರೀತಿಯನ್ನೂ ಬದಿಗೊತ್ತಿದ್ದೀರಿ. ನೀವು ಅವುಗಳನ್ನು ಅಲಕ್ಷ್ಯಮಾಡದೆ, ಇವುಗಳನ್ನು ಅನುಷ್ಠಾನಕ್ಕೆ ತರಬೇಕಾಗಿತ್ತು. “ಫರಿಸಾಯರೇ ನಿಮಗೆ ಧಿಕ್ಕಾರ! ಪ್ರಾರ್ಥನಾ ಮಂದಿರಗಳಲ್ಲಿ ಪ್ರಧಾನ ಆಸನಗಳನ್ನೂ ಪೇಟೆಬೀದಿಗಳಲ್ಲಿ ವಂದನೋಪಚಾರಗಳನ್ನೂ ಅಪೇಕ್ಷಿಸುತ್ತೀರಿ. ಅಯ್ಯೋ, ನಿಮಗೆ ಧಿಕ್ಕಾರ! ನೀವು ನೆಲಸಮವಾದ ಸಮಾಧಿಗಳಂತೆ ಇದ್ದೀರಿ. ಸಮಾಧಿಗಳೆಂದು ತಿಳಿಯದೆಯೆ ಜನರು ಅವುಗಳ ಮೇಲೆ ನಡೆದಾಡುತ್ತಾರೆ,” ಎಂದರು. ಇದನ್ನು ಕೇಳಿದ ಒಬ್ಬ ಧರ್ಮಶಾಸ್ತ್ರಜ್ಞನು, “ಬೋಧಕರೇ, ನೀವು ಹೀಗೆ ಮಾತನಾಡುವುದರಿಂದ ನಮ್ಮನ್ನೂ ಖಂಡಿಸಿದಂತಾಯಿತು,” ಎಂದನು. ಅದಕ್ಕೆ ಯೇಸು, “ಶಾಸ್ತ್ರಜ್ಞರೇ, ನಿಮಗೂ ಧಿಕ್ಕಾರ! ಹೊರಲಾಗದ ಹೊರೆಗಳನ್ನು ನೀವು ಜನರ ಮೇಲೆ ಹೇರುತ್ತೀರಿ; ನೀವಾದರೋ ನಿಮ್ಮ ಕಿರುಬೆರಳಿನಿಂದ ಕೂಡ ಅವುಗಳನ್ನು ಮುಟ್ಟುವುದಿಲ್ಲ," ಎಂದರು.  

13.10.2026 - ನಿಮ್ಮ ತಟ್ಟೆ, ಲೋಟಗಳಲ್ಲಿ ಇರುವುದನ್ನು ಮೊಟ್ಟ ಮೊದಲು ದಾನಮಾಡಿರಿ.

  ಮೊದಲನೇ ವಾಚನ: ಗಲಾತ್ಯರಿಗೆ 5:1-6

ಹೌದು ಪ್ರಿಯ ಸಹೋದರರೇ, ನಾವು ಮುಕ್ತ ಸ್ವಾತಂತ್ರ್ಯದಿಂದ ಬಾಳಬೇಕೆಂದು ಕ್ರಿಸ್ತಯೇಸು ನಮ್ಮನ್ನು ಬಿಡುಗಡೆಮಾಡಿದರು. ಆದ್ದರಿಂದ ದೃಢವಾಗಿರಿ. ಗುಲಾಮಗಿರಿಯ ನೊಗಕ್ಕೆ ಪುನಃ ಕೊರಳನ್ನು ಒಡ್ಡದಿರಿ. ಪೌಲನಾದ ನಾನು ಹೇಳುವುದನ್ನು ಕೇಳಿ: ನೀವು ಸುನ್ನತಿ ಮಾಡಿಸಿಕೊಂಡರೆ ಕ್ರಿಸ್ತಯೇಸುವಿನಿಂದ ನಿಮಗೆ ಯಾವ ಪ್ರಯೋಜನವೂ ಆಗುವುದಿಲ್ಲ. ಸುನ್ನತಿಮಾಡಿಸಿಕೊಳ್ಳುವ ಪ್ರತಿಯೊಬ್ಬನೂ ಇಡೀ ಧರ್ಮಶಾಸ್ತ್ರದ ವಿಧಿನಿಯಮಗಳನ್ನು ಅನುಸರಿಸಲು ಬದ್ಧನಾಗಿದ್ದಾನೆ ಎಂದು ಪುನಃ ನಿಮಗೆ ನಾನು ಒತ್ತಿ ಹೇಳುತ್ತೇನೆ. ಧರ್ಮಶಾಸ್ತ್ರದ ವಿಧಿನಿಯಮಗಳನ್ನು ಅನುಸರಿಸುವುದರ ಮೂಲಕವೇ ದೇವರೊಡನೆ ಸತ್ಸಂಬಂಧ ಪಡೆಯಬೇಕೆಂದಿರುವ ನೀವು ಕ್ರಿಸ್ತಯೇಸುವಿನಿಂದ ಬೇರ್ಪಟ್ಟಿದ್ದೀರಿ. ದೈವಾನುಗ್ರಹದಿಂದ ದೂರವಾಗಿದ್ದೀರಿ. ನಾವಾದರೋ ಪವಿತ್ರಾತ್ಮರ ಮುಖಾಂತರ ವಿಶ್ವಾಸದಿಂದ ದೇವರೊಂದಿಗೆ ಸತ್ಸಂಬಂಧವನ್ನು ಹೊಂದುತ್ತೇವೆಂಬ ನಿರೀಕ್ಷೆ ಉಳ್ಳವರಾಗಿದ್ದೇವೆ; ಈ ನಿರೀಕ್ಷೆ ಸಫಲವಾಗುವುದನ್ನು ಎದುರುನೋಡುತ್ತಿದ್ದೇವೆ. ಕ್ರಿಸ್ತಯೇಸುವಿನಲ್ಲಿ ಬಾಳುವವರಿಗೆ ಸುನ್ನತಿ ಮಾಡಿಸಿಕೊಳ್ಳುವುದೋ ಅಥವಾ ಮಾಡಿಸಿಕೊಳ್ಳದಿರುವುದೋ ಮುಖ್ಯವಲ್ಲ. ಪ್ರೀತಿಯಿಂದ ಕಾರ್ಯ ಎಸಗುವ ವಿಶ್ವಾಸವೇ ಪ್ರಮುಖವಾದುದು.

ಕೀರ್ತನೆ: 119:41, 43, 44, 45, 47, 48

ಶ್ಲೋಕ: ದೊರಕಲಿ ಪ್ರಭೂ ನನಗೆ, ನಿನ್ನ ಕರುಣೆ. 


ಶ್ಲೋಕ:   ದೊರಕಲಿ  ಪ್ರಭೂ  ನನಗೆ,  ನಿನ್ನ  ಕರುಣೆ.

1. ದೊರಕಲಿ ಪ್ರಭೂ ನನಗೆ ನಿನ್ನ ಕರುಣೆ|
ನೀನು ವಾಗ್ದಾನ ಮಾಡಿದ ರಕ್ಷಣೆ||
ತೆಗೆಯಬೇಡ ನನ್ನ ಬಾಯಿಂದ ಸತ್ಯವನು|
ನಂಬಿಕೊಂಡಿರುವೆ ನಿನ್ನ ನ್ಯಾಯವಿಧಿಯನು||
ಶ್ಲೋಕ

2.  ಸತತ ನಿನ್ನ ಧರ್ಮಶಾಸ್ತ್ರವನು ಕೈಗೊಳ್ಳುವೆ|
ಯುಗಯುಗಾಂತರಕು ಅದನು ಪರಿಪಾಲಿಸುವೆ||
ನಿನ್ನ ನಿಯಮದಂತೆ ಬಾಳಲು ಯತ್ನಿಸಿದೆ|
ಎಂತಲೇ ಆತಂಕವಿಲ್ಲದೆ ನಡೆದೆ||
ಶ್ಲೋಕ

3.  ನಿನ್ನ ಆಜ್ಞೆಗಳಲಿದೆ ನನಗಾನಂದ|
ಅವುಗಳ ಮೇಲೆಯೇ ನನಗಭಿಮಾನ||
ನಾ ಕೈಯೊಡ್ಡಿ ಕೇಳುವುದು ನಿನ್ನ ಆಜ್ಞೆಗಳನೇ|
ನನಗೆ ಪ್ರಿಯ, ಧ್ಯಾನರ್ಹ, ನಿನ್ನ  ನಿಬಂಧನೆ||
ಶ್ಲೋಕ

ಘೋಷಣೆ
(ಕೀರ್ತನೆ 130:5)
ಅಲ್ಲೆಲೂಯ, ಅಲ್ಲೆಲೂಯ!
ಪ್ರಭುವಿಗಾಗಿ  ಎನ್ನ  ಮನ  ಕಾದಿದೆ | ಆತನ  ವಾಕ್ಯದಲಿ  ನಂಬಿಕೆ  ನನಗಿದೆ ||
ಅಲ್ಲೆಲೂಯ!

ಶುಭಸಂದೇಶ: ಲೂಕ 11:37-41


ಯೇಸುಸ್ವಾಮಿ ತಮ್ಮ ಬೋಧನೆಯನ್ನು ಮುಗಿಸಿದಾಗ, ಫರಿಸಾಯನೊಬ್ಬನು ಅವರನ್ನು ಊಟಕ್ಕೆ ಆಮಂತ್ರಿಸಿದನು. ಯೇಸು ಒಳಕ್ಕೆ ಹೋಗಿ ಊಟಕ್ಕೆ ಕುಳಿತುಕೊಂಡರು. ಊಟಕ್ಕೆ ಮುಂಚೆ ಅವರು ಕೈ ತೊಳೆಯದೆಹೋದುದನ್ನು ಕಂಡು ಫರಿಸಾಯನು ಚಕಿತನಾದನು. ಆಗ ಯೇಸು, “ಫರಿಸಾಯರಾದ ನೀವು ಲೋಟ ಹಾಗೂ ಊಟದ ತಟ್ಟೆಗಳ ಹೊರಭಾಗವನ್ನು ಶುಚಿಮಾಡುತ್ತೀರಿ; ಆದರೆ ನಿಮ್ಮ ಒಳಭಾಗವು ಲೋಭದಿಂದಲೂ ಕೆಡುಕಿನಿಂದಲೂ ತುಂಬಿದೆ. ಮೂರ್ಖರೇ, ಹೊರಭಾಗವನ್ನು ಮಾಡಿದಾತನು ಒಳಭಾಗವನ್ನೂ ಮಾಡಲಿಲ್ಲವೇ? ನಿಮ್ಮ ತಟ್ಟೆ, ಲೋಟಗಳಲ್ಲಿ ಇರುವುದನ್ನು ಮೊಟ್ಟಮೊದಲು ದಾನಮಾಡಿರಿ. ಆಗ ಸಮಸ್ತವು ನಿಮಗೆ ಶುದ್ಧಿಯಾಗಿರುವುದು.

19.10.2026 - IIಸೋಮವಾರIIಎಲವೋ ಮೂರ್ಖ, ಇದೇ ರಾತ್ರಿ ನೀನು ಸಾಯಬೇಕಾಗಿದೆ, ನಿನಗಾಗಿ ಸಿದ್ಧಮಾಡಿಟ್ಟಿರುವುದೆಲ್ಲ ಯಾರ ಪಾಲಾಗುವುದು

ಮೊದಲನೇ ವಾಚನ: ಎಫೆಸಿಯರಿಗೆ 2:1-10  ಸಹೋದರರೇ, ನಿಮ್ಮ ಅಪರಾಧಗಳ ಹಾಗೂ ಪಾಪಗಳ ದೆಸೆಯಿಂದ ಹಿಂದೊಮ್ಮೆ ನೀವು ಆಧ್ಯಾತ್ಮಿಕವಾಗಿ ಮೃತರಾಗಿದ್ದಿರಿ. ಆಗ ನೀವು ಲೋಕದ ರೀತಿನೀತ...