ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

01.05.2020 - "ಅವರ ಅವಿಶ್ವಾಸದ ಕಾರಣ ಯೇಸು ಅದ್ಭುತ ಕಾರ್ಯಗಳನ್ನು ಅಲ್ಲಿ ಹೆಚ್ಚಾಗಿ ಮಾಡಲಿಲ್ಲ"

ಮೊದಲನೇ ವಾಚನ: ಆದಿಕಾಂಡ 1:26-2:3

ದೇವರು, “ನಮ್ಮಂತೆಯೇ ಇರುವ ಹಾಗು ನಮ್ಮನ್ನು ಹೋಲುವ, ಮನುಷ್ಯರನ್ನು ಉಂಟುಮಾಡೋಣ. ಅವರು ಸಮುದ್ರದಲ್ಲಿರುವ ವಿೂನುಗಳ ಮೇಲೆಯೂ ಅಂತರಿಕ್ಷದಲ್ಲಿ ಹಾರಾಡುವ ಪಕ್ಷಿಗಳ ಮೇಲೆಯೂ ದೊಡ್ಡ - ಚಿಕ್ಕ ಸಾಕುಪ್ರಾಣಿ ಹಾಗು ಕಾಡುಮೃಗಗಳ ಮೇಲೆಯೂ ನೆಲದ ಮೇಲೆ ಹರಿದಾಡುವ ಕ್ರಿಮಿಕೀಟಗಳ ಮೇಲೆಯೂ ದೊರೆತನ ಮಾಡಲಿ,” ಎಂದರು. ಹೀಗೆ ದೇವರು: ಸೃಷ್ಟಿಸಿದರು ನರರನ್ನು ತಮ್ಮ ಹೋಲಿಕೆಯಲ್ಲಿ ಸೃಷ್ಟಿಸಿದರವರನ್ನು ದೇವಾನುರೂಪದಲ್ಲಿ ಸೃಷ್ಟಿಸಿದರವರನ್ನು ಸ್ತ್ರೀಪುರುಷರನ್ನಾಗಿ. ಅವರನ್ನು ದೇವರು ಆಶೀರ್ವದಿಸಿ, “ನೀವು ಅಭಿವೃದ್ಧಿಯಾಗಿ, ಅನೇಕ ಮಕ್ಕಳನ್ನು ಪಡೆಯಿರಿ; ಭೂಮಿಯಲ್ಲಿ ಹರಡಿಕೊಂಡು ಅದನ್ನು ವಶಪಡಿಸಿ ಕೊಳ್ಳಿರಿ; ಸಮುದ್ರದ ವಿೂನುಗಳ ಮೇಲೆಯೂ ಆಕಾಶದ ಪಕ್ಷಿಗಳ ಮೇಲೆಯೂ ಭೂಮಿಯಲ್ಲಿ ಚಲಿಸುವ ಎಲ್ಲ ಪ್ರಾಣಿಗಳ ಮೇಲೆಯೂ ದೊರೆತನ ಮಾಡಿರಿ. ಇನ್ನೂ, ಭೂಮಿಯಲ್ಲಿರುವ ಎಲ್ಲ ತರದ ದವಸ ಧಾನ್ಯಗಳನ್ನೂ ಹಣ್ಣು ಹಂಪಲುಗಳನ್ನೂ ನಿಮಗೆ ಆಹಾರವಾಗಿ ಕೊಟ್ಟಿದ್ದೇನೆ. ಇದಲ್ಲದೆ, ಭೂಮಿಯ ಮೇಲೆ ತಿರುಗಾಡುವ ದೊಡ್ಡ - ಚಿಕ್ಕ ಮೃಗಗಳಿಗೂ ಆಕಾಶದಲ್ಲಿ ಹಾರಾಡುವ ಪಕ್ಷಿಗಳಿಗೂ ನೆಲದಲ್ಲಿ ಹರಿದಾಡುವ ಕ್ರಿಮಿ ಕೀಟಗಳಿಗೂ ಹುಲ್ಲು ಸೊಪ್ಪುಗಳನ್ನು ಆಹಾರವಾಗಿ ಕೊಟ್ಟಿದ್ದೇನೆ,” ಎಂದು ಹೇಳಿದರು. ಹಾಗೆಯೇ ಆಯಿತು. ತಾವು ಸೃಷ್ಟಿಸಿದ ಎಲ್ಲವನ್ನು ದೇವರು ನೋಡಿದರು. ಅವೆಲ್ಲವೂ ಬಹಳ ಚೆನ್ನಾಗಿತ್ತು. ಹೀಗೆ ಬೈಗೂ ಬೆಳಗೂ ಆಗಿ ಆರನೆಯ ದಿನ ಆಯಿತು. ಪರಲೋಕ-ಭೂಲೋಕಗಳೂ ಅವುಗಳಲ್ಲಿ ಇರುವ ಸಮಸ್ತವೂ ಹೀಗೆ ನಿರ್ಮಿತವಾದವು. ದೇವರು ತಮ್ಮ ಸೃಷ್ಟಿಕಾರ್ಯವನ್ನು ಮುಗಿಸಿಬಿಟ್ಟು ಏಳನೆಯ ದಿನದಲ್ಲಿ ವಿಶ್ರಮಿಸಿಕೊಂಡರು ಆ ಏಳನೆಯ ದಿನವು ಪರಿಶುದ್ಧವಾಗಿರಲಿ ಎಂದು ಆಶೀರ್ವದಿಸಿದರು. ತಮ್ಮ ಸೃಷ್ಟಿಕಾರ್ಯವನ್ನೆಲ್ಲ ಮುಗಿಸಿ ಆ ದಿನದಂದು ವಿಶ್ರಮಿಸಿಕೊಂಡ ಕಾರಣ ಹಾಗೆ ಮಾಡಿದರು.

ಕೀರ್ತನೆ: 90:2, 3-4, 12-13, 14 ; 16

ಶ್ಲೋಕ: ನಾವು ಕೈಗೊಳ್ಳುವ ಕಾರ್ಯಗಳು ಸಫಲವಾಗಲಿ, ಓ ಪ್ರಭೂ

ಸ್ತುತಿ ಮಾಡಿ ಪ್ರಭುವನು ಸಮಸ್ತ ರಾಷ್ಟ್ರಗಳೇ I
ಆತನನು ಹೊಗಳಿ ಹಾಡಿ ಸರ್ವಜನಾಂಗಗಳೇ II
ನಮ್ಮ ಮೇಲೆ ಆತನಿಗಿರುವ ಪ್ರೀತಿ ಅಚಲ I

ಆತನ ಸತ್ಯಪರತೆ ಇರುವುದು ಅನಂತ ಕಾಲ II

ಶುಭಸಂದೇಶ: ಮತ್ತಾಯ 13:54-58


ಯೇಸು ತಮ್ಮ ಸ್ವಂತ ಊರಿಗೆ ಮರಳಿ ಬಂದು ಅಲ್ಲಿಯ ಪ್ರಾರ್ಥನಾಮಂದಿರದಲ್ಲಿ ಬೋಧನೆ ಮಾಡಿದರು. ಅದನ್ನು ಕೇಳುತ್ತಿದ್ದ ಜನರು ಆಶ್ಚರ್ಯಚಕಿತರಾಗಿ, "ಈ ಪರಿಜ್ಞಾನ ಇವನಿಗೆಲ್ಲಿಂದ ಬಂತು? ಈ ಮಹತ್ಕಾರ್ಯಗಳನ್ನು ಇವನು ಮಾಡುವುದಾದರೂ ಹೇಗೆ? ಇವನು ಆ ಬಡಗಿಯ ಮಗನಲ್ಲವೇ? ಮರಿಯಳು ಇವನ ತಾಯಲ್ಲವೇ? ಯಕೋಬ, ಜೋಸೆಫ್, ಸಿಮೋನ, ಯೂದ ಇವರು ಇವನ ಸೋದರರಲ್ಲವೇ? ಇವನ ಸೋದರಿಯರೆಲ್ಲಾ ಇಲ್ಲೇ ವಾಸಮಾಡುತ್ತಿಲ್ಲವೇ? ಹಾಗಾದರೆ ಇವನಿಗೆ ಇದೆಲ್ಲಾ ಎಲ್ಲಿಂದ ಬಂತು?" ಎಂದು ಮಾತಾಡಿಕೊಂಡು ಯೇಸುವನ್ನು ತಿರಸ್ಕರಿಸಿದರು. ಅವರಿಗೆ ಯೇಸು, "ಪ್ರವಾದಿಗೆ ಬೇರೆ ಎಲ್ಲಿಯಾದರೂ ಗೌರವ ದೊರಕೀತು; ಆದರೆ ಸ್ವಗ್ರಾಮದಲ್ಲಿ ಹಾಗೂ ಸ್ವಗೃಹದಲ್ಲಿ ಮಾತ್ರ ಗೌರವ ದೊರಕದು," ಎಂದು ಹೇಳಿದರು. ಅವರ ಅವಿಶ್ವಾಸದ ಕಾರಣ ಯೇಸು ಅದ್ಭುತ ಕಾರ್ಯಗಳನ್ನು ಅಲ್ಲಿ ಹೆಚ್ಚಾಗಿ ಮಾಡಲಿಲ್ಲ.

30.04.20 - "ನಾನೇ ಸ್ವರ್ಗದಿಂದ ಇಳಿದು ಬಂದ ಜೀವಂತ ರೊಟ್ಟಿ"

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 8:26-4


ಅನಂತರ ದೇವದೂತನು ಫಿಲಿಪ್ಪನಿಗೆ, “ನೀನು ಎದ್ದು ದಕ್ಷಿಣಾಭಿಮುಖವಾಗಿ ಹೋಗು. ಅದು ಜೆರುಸಲೇಮಿನಿಂದ ಗಾಜಕ್ಕೆ ಹೋಗುವ ಅರಣ್ಯಮಾರ್ಗ,” ಎಂದನು. ಅಂತೆಯೇ ಫಿಲಿಪ್ಪನು ಹೊರಟನು. ಆಗ ಇಥಿಯೋಪಿಯದ ಕಂಚುಕಿಯೊಬ್ಬನು ಅದೇ ಮಾರ್ಗವಾಗಿ ಬರುತ್ತಿದ್ದನು. ಅವನು ಆ ದೇಶದ ರಾಣಿ ಕಂದಾಕಿಯ ಕೋಶಾಧಿಕಾರಿ ಹಾಗೂ ಸಚಿವ. ದೇವಾರಾಧನೆಗೆಂದು ಜೆರುಸಲೇಮಿಗೆ ಹೋಗಿ ಹಿಂದಿರುಗುತ್ತಿದ್ದನು. ಅವನು ತನ್ನ ರಥದಲ್ಲಿ ಕುಳಿತು ಯೆಶಾಯನ ಪ್ರವಾದನೆಯನ್ನು ಓದುತ್ತಿದ್ದನು. ಪವಿತ್ರಾತ್ಮರು ಫಿಲಿಪ್ಪನಿಗೆ, “ನೀನು ಮುಂದೆ ಹೋಗಿ ಆ ರಥದ ಜೊತೆಯಲ್ಲೇ ನಡೆ,” ಎಂದು ತಿಳಿಸಿದರು. ಫಿಲಿಪ್ಪನು ಮುಂದಕ್ಕೆ ಧಾವಿಸಿ, ಅವನು ಯೆಶಾಯನ ಪ್ರವಾದನೆಯನ್ನು ಓದುತ್ತಿರುವುದನ್ನು ಕೇಳಿಸಿಕೊಂಡನು. “ನೀವು ಓದುತ್ತಿರುವುದು ಅರ್ಥವಾಗುತ್ತಿದೆಯೇ?” ಎಂದು ಪ್ರಶ್ನಿಸಿದನು. ಆ ಅಧಿಕಾರಿ ಪ್ರತ್ಯುತ್ತರವಾಗಿ, “ಯಾರಾದರೂ ವಿವರಿಸಿದ ಹೊರತು ಇದು ನನಗೆ ಅರ್ಥವಾಗುವುದಾದರೂ ಹೇಗೆ?” ಎಂದನು. ರಥವನ್ನು ಹತ್ತಿ ಕುಳಿತುಕೊಳ್ಳುವಂತೆ ಫಿಲಿಪ್ಪನನ್ನು ಆಹ್ವಾನಿಸಿದನು. ಅವನು ಓದುತ್ತಿದ್ದ ಪ್ರವಾದನೆ ಇದು: “ವಧ್ಯಸ್ಥಾನಕ್ಕೆ ಒಯ್ದ ಕುರಿಯಂತೆ ತುಪ್ಪಟ ಕತ್ತರಿಸುವವನ ಮುಂದಿರುವ ಮೂಕ ಕುರಿಮರಿಯಂತೆ ಆತನು ಬಾಯ್ದೆರೆಯಲಿಲ್ಲ. ಆತನನ್ನು ಅವಮಾನಪಡಿಸಲಾಯಿತು, ನ್ಯಾಯವನ್ನೇ ಆತನಿಗೆ ನಿರಾಕರಿಸಲಾಯಿತು, ಆತನ ಸಂತತಿಯ ಮಾತೇ ಎತ್ತದಂತಾಯಿತು. ಇದಕಾರಣ ಆತನ ಭೌತಿಕ ಜೀವವನ್ನೇ ಮೊಟಕುಗೊಳಿಸಲಾಯಿತು.” ಆ ಅಧಿಕಾರಿ ಫಿಲಿಪ್ಪನಿಗೆ, “ಇಲ್ಲಿ ಪ್ರವಾದಿ ಯಾರನ್ನು ಕುರಿತು ಈ ಮಾತುಗಳನ್ನು ಹೇಳಿದ್ದಾನೆ. ತನ್ನನ್ನು ಕುರಿತೋ ಅಥವಾ ಬೇರೆಯವರನ್ನು ಕುರಿತೋ, ಹೇಳಬಲ್ಲೆಯಾ?” ಎಂದು ಕೇಳಿದನು. ಆಗ ಫಿಲಿಪ್ಪನು ಮರುತ್ತರವಾಗಿ, ಆ ಪ್ರವಾದನೆಯನ್ನೇ ಆಧಾರವಾಗಿ ತೆಗೆದುಕೊಂಡು, ಯೇಸುವಿನ ಶುಭಸಂದೇಶವನ್ನು ಅವನಿಗೆ ಬೋಧಿಸಿದನು. ಅವರು ಪ್ರಯಾಣ ಮಾಡುತ್ತಾ ದಾರಿಯಲ್ಲಿ ನೀರಿದ್ದ ಒಂದು ಸ್ಥಳಕ್ಕೆ ಬಂದರು. ಅದನ್ನು ಕಂಡ ಆ ಅಧಿಕಾರಿ, “ಇಲ್ಲಿ ನೀರಿದೆ. ನಾನು ದೀಕ್ಷಾಸ್ನಾನವನ್ನು ಪಡೆಯಲು ಏನಾದರೂ ಅಭ್ಯಂತರವಿದೆಯೇ” ಎಂದನು. ಫಿಲಿಪ್ಪನು, “ನೀವು ಹೃದಯಪೂರ್ವಕವಾಗಿ ವಿಶ್ವಾಸಿಸುವುದಾದರೆ ದೀಕ್ಷಾಸ್ನಾನವನ್ನು ಪಡೆಯಬಹುದು,” ಎಂದನು. “ಯೇಸುಕ್ರಿಸ್ತ ದೇವರ ಪುತ್ರ ಎಂದು ನಾನು ವಿಶ್ವಾಸಿಸುತ್ತೇನೆ,” ಎಂದು ಅಧಿಕಾರಿ ಪ್ರತ್ಯುತ್ತರವಿತ್ತನು. ಅಧಿಕಾರಿಯ ಆಜ್ಞೆಯಂತೆ ರಥವನ್ನು ಅಲ್ಲಿಯೇ ನಿಲ್ಲಿಸಲಾಯಿತು. ಅವರಿಬ್ಬರೂ ನೀರಿಗೆ ಇಳಿದರು. ಫಿಲಿಪ್ಪನು ಅಧಿಕಾರಿಗೆ ದೀಕ್ಷಾಸ್ನಾನವನ್ನು ಕೊಟ್ಟನು. ಅವರಿಬ್ಬರು ನೀರಿನಿಂದ ಮೇಲಕ್ಕೆ ಬಂದೊಡನೆ ಪ್ರಭುವಿನ ಆತ್ಮವು ಫಿಲಿಪ್ಪನನ್ನು ಅಲ್ಲಿಂದ ಕೊಂಡೊಯ್ಯಿತು. ಆ ಅಧಿಕಾರಿ ಫಿಲಿಪ್ಪನನ್ನು ಪುನಃ ಕಾಣಲಿಲ್ಲ; ಅವನು ಸಂತೋಷಭರಿತನಾಗಿ ಪ್ರಯಾಣವನ್ನು ಮುಂದುವರಿಸಿದನು. ಫಿಲಿಪ್ಪನಾದರೋ ಆಜೋತ್ ಎಂಬಲ್ಲಿ ಕಾಣಿಸಿಕೊಂಡನು. ಅಲ್ಲಿಂದ ಸೆಜರೇಯವನ್ನು ತಲುಪುವವರೆಗೆ ಎಲ್ಲಾ ಊರುಗಳಲ್ಲೂ ಶುಭಸಂದೇಶವನ್ನು ಸಾರುತ್ತಾ ಹೋದನು.

ಕೀರ್ತನೆ: 66:8-9, 16-17, 20

ಶ್ಲೋಕ: ಜಗವೆಲ್ಲ ಮಾಡಲಿ ಜಯಕಾರ ದೇವನಿಗೆ

ಜನಾಂಗಗಳೇ, ನಮಿಸಿರಿ ನಮ್ಮ ದೇವನನು I
ಗಟ್ಟಿಯಾಗಿ ಮಾಡಿರಿ ಅವನ ಗುಣಗಾನವನು II
ನಮ್ಮ ಪ್ರಾಣವನ್ನಾತ ಉಳಿಸಿದನಯ್ಯಾ I
ಕಾಲೆಡವದಂತೆ ಕಾಪಾಡಿದನಯ್ಯಾ II

ಬಂದು ಕೇಳಿರಿ ದೇವನಲಿ ಭಯಭಕ್ತಿಯುಳ್ಳವರೆ I
ದೇವನೆನಗೆ ಮಾಡಿದ ಕಾರ್ಯಗಳ ತಿಳಿಸುವೆ ನಿಮಗೆ II
ದೇವನಿಗೆನ್ನ ಮನ ಸ್ವರವೆತ್ತಿ ಮೊರೆಯಿಟ್ಟಿತು I
ಆತನ ಸ್ತುತಿ ನನ್ನ ಬಾಯಲಿ ತುಳುಕುತ್ತಿತ್ತು II

ಎನ್ನ ಪ್ರಾರ್ಥನೆಯನು ತಿರಸ್ಕರಿಸದ ದೇವನಿಗೆ ಸ್ತುತಿ I
ತನ್ನ ಪ್ರೀತಿಯನೆನಗೆ ನಿರಾಕರಿಸದಾತನಿಗೆ ಸನ್ನುತಿ II

ಶುಭಸಂದೇಶ: ಯೊವಾನ್ನ6:44-51


ಯೆಹೂದ್ಯರಿಗೆ  ಪ್ರತ್ಯುತ್ತರವಾಗಿ ಯೇಸುವು, "ನನ್ನನ್ನು ಕಳುಹಿಸಿಕೊಟ್ಟ ಪಿತನು, ನನ್ನತ್ತ ಸೆಳೆಯದ ಹೊರತು, ಯಾರೂ ನನ್ನ ಬಳಿಗೆ ಬಾರರು. ಬಂದವರನ್ನು ನಾನು ಅಂತಿಮ ದಿನದಂದು ಜೀವಕ್ಕೆ ಎಬ್ಬಿಸುತ್ತೇನೆ. ‘ದೇವರಿಂದಲೇ ಅವರೆಲ್ಲರೂ ಬೋಧನೆ ಪಡೆಯುವರು,’ ಎಂದು ಪ್ರವಾದಿಗಳ ಗ್ರಂಥದಲ್ಲಿ ಬರೆದಿದೆ. ಪಿತನಿಗೆ ಕಿವಿಗೊಟ್ಟು ಅವರಿಂದಲೇ ಕಲಿತುಕೊಂಡ ಪ್ರತಿ ಒಬ್ಬನೂ ನನ್ನ ಬಳಿಗೆ ಬರುತ್ತಾನೆ. ಹಾಗೆಂದ ಮಾತ್ರಕ್ಕೆ ಪಿತನನ್ನು ಯಾರಾದರೂ ಕಣ್ಣಾರೆ ಕಂಡಿದ್ದಾರೆ ಎಂದಲ್ಲ, ದೇವರಿಂದ ಬಂದಿರುವ ಒಬ್ಬನು ಮಾತ್ರ ಪಿತನನ್ನು ಕಂಡಿದ್ದಾನೆ. ವಿಶ್ವಾಸವುಳ್ಳವನಲ್ಲಿ ನಿತ್ಯಜೀವ ಇದೆಯೆಂದು ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ. ಜೀವದಾಯಕ ರೊಟ್ಟಿ ನಾನೇ. ನಿಮ್ಮ ಪೂರ್ವಜರು ಮರಳುಗಾಡಿನಲ್ಲಿ ‘ಮನ್ನಾ’ವನ್ನು ತಿಂದರು; ಆದರೂ ಸಾವಿಗೆ ತುತ್ತಾದರು. ಸ್ವರ್ಗದಿಂದ ಇಳಿದು ಬಂದ ರೊಟ್ಟಿಯಾದರೋ ಹಾಗಲ್ಲ. ಇದನ್ನು ತಿನ್ನುವ ಯಾರಿಗೂ ಸಾವೆಂಬುದು ಇಲ್ಲ. ನಾನೇ ಸ್ವರ್ಗದಿಂದ ಇಳಿದು ಬಂದ ಜೀವಂತ ರೊಟ್ಟಿ. ಈ ರೋಟ್ಟಿಯನ್ನು ತಿಂದವನು ಚಿರಕಾಲ ಬಾಳುತ್ತಾನೆ. ಲೋಕೋದ್ಧಾರಕ್ಕಾಗಿ ನಾನು ಅರ್ಪಿಸುವ ನನ್ನ ಮಾಂಸವೇ ನಾನು ಕೊಡುವ ರೊಟ್ಟಿ,” ಎಂದು ಹೇಳಿದರು.


29.04.2020 - “ಪ್ರತಿಯೊಬ್ಬನೂ ನಿತ್ಯಜೀವವನ್ನು ಪಡೆಯಬೇಕೆಂಬುದೇ ನನ್ನ ಪಿತನ ಸಂಕಲ್ಪ"

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 8:1-8

ಆ ದಿನವೇ ಜೆರುಸಲೇಮಿನ ಧರ್ಮಸಭೆಯ ವಿರುದ್ಧ ಕ್ರೂರ ಹಿಂಸೆ ಪ್ರಾರಂಭವಾಯಿತು. ಪ್ರೇಷಿತರ ಹೊರತು ಇತರ ಭಕ್ತವಿಶ್ವಾಸಿಗಳು ಜುದೇಯ ಮತ್ತು ಸಮಾರಿಯ ಪ್ರಾಂತ್ಯಗಳಲ್ಲೆಲ್ಲಾ ಚದರಿ ಹೋದರು. ಕೆಲವು ಭಕ್ತಾದಿಗಳು ಸ್ತೇಫನನನ್ನು ಸಮಾಧಿಮಾಡಿ ಅವನಿಗಾಗಿ ಅತ್ತು ಗೋಳಾಡಿದರು. ಇತ್ತ ಸೌಲನು ಧರ್ಮಸಭೆಯನ್ನು ನಾಶಪಡಿಸಲು ತೊಡಗಿದನು; ಮನೆಮನೆಗೂ ನುಗ್ಗಿ ಸ್ತ್ರೀಪುರುಷರೆನ್ನದೆ ಭಕ್ತರನ್ನು ಎಳೆದುತಂದು ಸೆರೆಮನೆಗೆ ತಳ್ಳುತ್ತಿದ್ದನು. ಸಮಾರಿಯದಲ್ಲಿ ಶುಭಸಂದೇಶ ಚದರಿ ಹೋದ ಭಕ್ತವಿಶ್ವಾಸಿಗಳು ಎಲ್ಲೆಲ್ಲೂ ಹೋಗಿ ಶುಭಸಂದೇಶವನ್ನು ಸಾರುತ್ತಿದ್ದರು. ಫಿಲಿಪ್ಪನು ಸಮಾರಿಯದ ಪ್ರಮುಖ ಪಟ್ಟಣ ಒಂದಕ್ಕೆ ಹೋಗಿ ಅಲ್ಲಿಯ ಜನರಿಗೆ ಯೇಸುವೇ ಅಭಿಷಿಕ್ತನಾದ ಲೋಕೋದ್ಧಾರಕನೆಂದು ಸಾರಿದನು. ಜನಸಮೂಹವು ಅವನಿಗೆ ಕಿವಿಕೊಟ್ಟಿತು. ಅವನು ಮಾಡಿದ ಅದ್ಭುತಕಾರ್ಯಗಳನ್ನು ಕಣ್ಣಾರೆ ಕಂಡಿತು; ಅವನ ಬೋಧನೆಯನ್ನು ಒಮ್ಮನಸ್ಸಿನಿಂದ ಸ್ವೀಕರಿಸಿತು. ಅನೇಕರನ್ನು ಹಿಡಿದಿದ್ದ ದೆವ್ವಗಳು ಅಬ್ಬರಿಸುತ್ತಾ ಅವರನ್ನು ಬಿಟ್ಟಗಲಿದವು; ಪಾಶ್ರ್ವವಾಯು ಪೀಡಿತರೂ ಕುಂಟರೂ ಸ್ವಸ್ಥರಾದರು. ಇದರಿಂದ ಆ ಪಟ್ಟಣದಲ್ಲಿ ಉಂಟಾದ ಸಂತೋಷಕ್ಕೆ ಎಲ್ಲೆಯೇ ಇರಲಿಲ್ಲ.

ಕೀರ್ತನೆ: 66:1-3, 4-5, 6-7

ಶ್ಲೋಕ: ಜಗವೆಲ್ಲ ಮಾಡಲಿ ಜಯಕಾರ ದೇವನಿಗೆ


ಜಗವೆಲ್ಲ ಮಾಡಲಿ ಜಯಕಾರ ದೇವನಿಗೆ I
ಹಾಡಲಿ ಆತನ ಶ್ರೀನಾಮ ಮಹಿಮೆಗೆ II
ನಿನ್ನ ಕಾರ್ಯಗಳೆನಿತೋ ಚೇತೋಹಾರಿ I
ನಿನ್ನ ಪರಾಕ್ರಮಕೆ ಶತ್ರುಗಳು ಪರಾರಿ II

ಜಗವೆಲ್ಲ ಪೂಜಿಪುದು ನಿನ್ನನು I
ಪೊಗಳಿ ಮಾಳ್ಪುದು ಗುಣಗಾನವನು I
ಕೀರ್ತಿಸುವುದು ನಿನ್ನ ನಾಮವನು” II
ಬನ್ನಿ, ದೇವನತಿಶಯ ಕಾರ್ಯಗಳ ನೋಡಬನ್ನಿ I
ಜನತೆಗಾತ ಮಾಡಿದುದು ಅತ್ಯಾಶ್ಚರ್ಯವೆನ್ನಿ II

ಒಣನೆಲವಾಗಿ ಮಾರ್ಪಡಿಸಿದ ಕಡಲನು I
ಕಾಲು ನಡೆಯಲೇ ದಾಟಿಸಿದ ನದಿಯನು I
ಇದ ನಿಮಿತ್ತ ಪಡೆಯೋಣ ಆನಂದವನು II
ಆತನಾಳ್ವಿಕೆ ಶಕ್ತಿಯುತ, ನಿರಂತರ I
ರಾಷ್ಟ್ರಗಳ ಮೇಲೆ ಅವನ ನೇತ್ರ ಕನಿಕರ I

ಜಂಬ ಕೊಚ್ಚದಿರಲಿ ದಂಗೆಕೋರ II

ಶುಭಸಂದೇಶ: ಯೊವಾನ್ನ 6:35-40


ಆಗ ಯೇಸು, “ನಾನೇ ಜೀವದಾಯಕ ರೊಟ್ಟಿ, ನನ್ನ ಬಳಿ ಬರುವವನಿಗೆ ಹಸಿವೇ ಇರದು; ನನ್ನಲ್ಲಿ ವಿಶ್ವಾಸವಿಡುವವನಿಗೆ ಎಂದಿಗೂ ದಾಹವಾಗದು. ಆದರೆ, ನಾನು ನಿಮಗೆ ಹೇಳಿದಂತೆ, ನೀವು ನನ್ನನ್ನು ನೋಡಿಯೂ ವಿಶ್ವಾಸಿಸದೆ ಇದ್ದೀರಿ. ಪಿತನು ನನಗೆಂದು ಕೊಟ್ಟಿರುವ ಪ್ರತಿಯೊಬ್ಬನೂ ನನ್ನಲ್ಲಿಗೆ ಬರುತ್ತಾನೆ. ನನ್ನಲ್ಲಿಗೆ ಬರುವವನನ್ನು ನಾನೆಂದಿಗೂ ತಳ್ಳಿಬಿಡುವುದಿಲ್ಲ. ನಾನು ಸ್ವರ್ಗದಿಂದ ಇಳಿದು ಬಂದುದು ನನ್ನ ಇಚ್ಛೆಯಂತೆ ನಡೆಯುವುದಕ್ಕಲ್ಲ, ನನ್ನನ್ನು ಕಳುಹಿಸಿದಾತನ ಚಿತ್ತದಂತೆ ನಡೆಯುವುದಕ್ಕೆ. ಅವರ ಚಿತ್ತವೇನೆಂದರೆ: ಅವರು ನನಗೆ ಕೊಟ್ಟವರಲ್ಲಿ ಒಬ್ಬನನ್ನೂ ಕಳೆದುಕೊಳ್ಳದೆ ಅಂತಿಮ ದಿನದಂದು ಅವರೆಲ್ಲರನ್ನೂ ನಾನು ಜೀವಕ್ಕೆ ಎಬ್ಬಿಸಬೇಕು. ಪುತ್ರನನ್ನು ಕಂಡು ಆತನಲ್ಲಿ ವಿಶ್ವಾಸ ಇಡುವ ಪ್ರತಿಯೊಬ್ಬನೂ ನಿತ್ಯಜೀವವನ್ನು ಪಡೆಯಬೇಕೆಂಬುದೇ ನನ್ನ ಪಿತನ ಸಂಕಲ್ಪ. ಅಂಥವನನ್ನು ಅಂತಿಮ ದಿನದಂದು ನಾನು ಜೀವಕ್ಕೆ ಎಬ್ಬಿಸುತ್ತೇನೆ,” ಎಂದು ನುಡಿದರು.

28.04.2020 - “ನಾನೇ ಜೀವದಾಯಕ ರೊಟ್ಟಿ, ನನ್ನ ಬಳಿ ಬರುವವನಿಗೆ ಹಸಿವೇ ಇರದು"

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 7:51-8:1


ಸ್ತೇಫನನು ಮುಂದುವರೆದು, “ಎಷ್ಟು ಹಟಮಾರಿಗಳು ನೀವು; ಎಂಥಾ ಕಠಿಣ ಹೃದಯಿಗಳು ನೀವು; ದೇವರ ಸಂದೇಶಕ್ಕೆ ಎಷ್ಟು ಕಿವುಡರು ನೀವು! ನಿಮ್ಮ ಪೂರ್ವಜರಂತೆ ನೀವು ಸಹ ಪವಿತ್ರಾತ್ಮ ಅವರನ್ನು ಯಾವಾಗಲೂ ಪ್ರತಿಭಟಿಸುತ್ತೀರಿ. ನಿಮ್ಮ ಪೂರ್ವಜರು ಹಿಂಸೆಗೆ ಗುರಿಪಡಿಸದ ಪ್ರವಾದಿ ಯಾರಾದರೂ ಇದ್ದಾರೆಯೆ? ಸತ್ಯಸ್ವರೂಪನು ಬರಲಿದ್ದಾನೆಂದು ಮುಂತಿಳಿಸಿದವರನ್ನು ಅವರು ಕೊಂದುಹಾಕಿದರು. ನೀವಾದರೋ, ಆ ಸತ್ಯಸ್ವರೂಪನನ್ನು ಹಿಡಿದುಕೊಟ್ಟು ಕೊಲೆಮಾಡಿಸಿದಿರಿ. ದೇವದೂತರ ಮೂಲಕ ಧರ್ಮಶಾಸ್ತ್ರವನ್ನು ಪಡೆದ ನೀವೇ ಅದಕ್ಕೆ ಅವಿಧೇಯರಾಗಿ ನಡೆದಿರಿ,” ಎಂದನು. ಸ್ತೇಫನನ ಮಾತುಗಳನ್ನು ಕೇಳಿದ ನ್ಯಾಯಸಭೆಯ ಸದಸ್ಯರು ಅವನ ಮೇಲೆ ಕೋಪೋದ್ರಿಕ್ತರಾದರು. ಕಟಕಟನೆ ಹಲ್ಲುಕಡಿದರು. ಆದರೆ ಸ್ತೇಫನನು ಪವಿತ್ರಾತ್ಮಭರಿತನಾಗಿ ಸ್ವರ್ಗದತ್ತ ಕಣ್ಣೆತ್ತಿನೋಡಿ ದೇವರ ಮಹಿಮೆಯನ್ನೂ ಅವರ ಬಲಪಾಶ್ರ್ವದಲ್ಲಿ ನಿಂತಿರುವ ಯೇಸುವನ್ನೂ ಕಂಡು, “ಇಗೋ, ಆಕಾಶವು ತೆರೆದಿದೆ, ನರಪುತ್ರನು ದೇವರ ಬಲಪಾಶ್ರ್ವದಲ್ಲಿ ನಿಂತಿರುವುದನ್ನು ನಾನು ನೋಡುತ್ತಿದ್ದೇನೆ,” ಎಂದನು. ಇದನ್ನು ಕೇಳಿದ ನ್ಯಾಯಸಭೆಯ ಸದಸ್ಯರು ಆರ್ಭಟಿಸಿದರು; ಕಿವಿಗಳನ್ನು ಮುಚ್ಚಿಕೊಂಡರು; ಭರದಿಂದ ಅವನತ್ತ ಧಾವಿಸಿದರು. ಪಟ್ಟಣದಿಂದ ಹೊರಕ್ಕೆ ದಬ್ಬಿ ಅವನ ಮೇಲೆ ಕಲ್ಲು ತೂರಿದರು. ಸಾಕ್ಷಿಕೊಟ್ಟವರು ತಮ್ಮ ಬಟ್ಟೆಬರೆಗಳನ್ನು ತರುಣ ಸೌಲನ ವಶದಲ್ಲಿ ಇಟ್ಟಿದ್ದರು. ಅವರು ತನ್ನ ಮೇಲೆ ಕಲ್ಲು ಬೀರುತ್ತಿದ್ದಾಗ ಸ್ತೇಫನನು, “ಪ್ರಭು ಯೇಸುವೇ, ನನ್ನಾತ್ಮವನ್ನು ಸ್ವೀಕರಿಸಿ,” ಎಂದು ಪ್ರಾರ್ಥಿಸಿದನು. ಅನಂತರ ಮೊಣಕಾಲೂರಿ, “ಪ್ರಭೂ, ಈ ಪಾಪವನ್ನು ಇವರ ಮೇಲೆ ಹೊರಿಸಬೇಡಿ,” ಎಂದು ಧ್ವನಿಯೆತ್ತಿ ಹೇಳುತ್ತಾ ಪ್ರಾಣಬಿಟ್ಟನು. ಸೌಲನು ಸ್ತೇಫನನ ಕೊಲೆಗೆ ಸಮ್ಮತಿಸಿದ್ದನು. ಆ ದಿನವೇ ಜೆರುಸಲೇಮಿನ ಧರ್ಮಸಭೆಯ ವಿರುದ್ಧ ಕ್ರೂರ ಹಿಂಸೆ ಪ್ರಾರಂಭವಾಯಿತು. 

ಕೀರ್ತನೆ: 31:3-4, 6, 7, 8, 17, 21

ಶ್ಲೋಕ: ನನಗಾಧಾರ ನೀನಲ್ಲವೇ? ನನ್ನಾತ್ಮವನು ನಿನಗೊಪ್ಪಿಸಿರುವೆ


ಬನ್ನಿ, ಕೊಂಡಾಡುವ ಪ್ರಭು ದೇವನನು II
ಘನಪಡಿಸೋಣ ಅವನ ಶ್ರೀನಾಮವನು II
ಬೇಡಿಕೊಳ್ಳಲು ಕೊಟ್ಟನಾತ ಸದುತ್ತರವನು I
ಭಯಭೀತಿಯಿಂದೆನ್ನನು ಮುಕ್ತನಾಗಿಸಿಹನು II

ನಿರ್ಗತಿಕನು ಮೊರೆಯಿಡಲು ಪ್ರಭು ಕಿವಿಗೊಟ್ಟನು I
ಸರ್ವಾಪತ್ತಿನಿಂದವನು ಮುಕ್ತಗೊಂಡನು II

ಭಯಭಕುತಿಯುಳ್ಳವರ ಸುತ್ತಲು ಕಾವಲಿದ್ದು I
ಕಾಯುವನು ಪ್ರಭುವಿನ ದೂತನೆ ಬಂದಿಳಿದು II

ಸವಿದು ನೋಡು ಪ್ರಭುವಿನ ಮಾಧುರ್ಯವನು I
ಆತನನು ಆಶ್ರಯಿಸಿಕೊಂಡವನು ಧನ್ಯನು II

ಕಿವಿಗೊಡುವನು ಪ್ರಭು ಸಜ್ಜನರ ಮೊರೆಗೆ I
ನೆರವೀವನವರ ಕಷ್ಟನಿವಾರಣೆಗೆ II

ದುರ್ಜನರೆಲ್ಲರೂ ತುತ್ತಾಗುವರು ತಮ್ಮ ಕೇಡಿಗೆ I

ಸಜ್ಜನರ ಶತ್ರುಗಳು ಗುರಿಯಾಗುವರು ದಂಡನೆಗೆ II

ಶುಭಸಂದೇಶ: ಯೊವಾನ್ನ 6:30-35

ಆ ಜನರು ಯೇಸುಸ್ವಾಮಿಗೆ, “ನಾವು ನೋಡಿ ನಿಮ್ಮಲ್ಲಿ ವಿಶ್ವಾಸ ಇಡುವಂತೆ ನೀವು ಏನು ಮಾಡುವಿರಿ? ಯಾವ ಸೂಚಕಕಾರ್ಯವನ್ನು ತೋರಿಸುವಿರಿ? ನಮ್ಮ ಪೂರ್ವಜರಿಗೆ ಮರುಭೂಮಿಯಲ್ಲಿ ತಿನ್ನಲು ‘ಮನ್ನಾ’ ಸಿಕ್ಕಿತು, ತಿನ್ನಲು ಅವರಿಗೆ ಸ್ವರ್ಗದಿಂದ ರೊಟ್ಟಿ ದೊರಕಿತು, ಎಂದು ಪವಿತ್ರಗ್ರಂಥವೇ ಹೇಳುತ್ತದೆಯಲ್ಲವೇ?” ಎಂದರು. ಯೇಸು ಅವರಿಗೆ, “ನಿಮಗೆ ಸತ್ಯವಾಗಿ ಹೇಳುತ್ತೇನೆ; ಸ್ವರ್ಗದಿಂದ ನಿಮಗೆ ರೊಟ್ಟಿಯನ್ನು ಕೊಟ್ಟವನು ಮೋಶೆಯಲ್ಲ; ನಿಮಗೆ ಸ್ವರ್ಗದಿಂದ ನಿಜವಾದ ರೊಟ್ಟಿಯನ್ನು ಕೊಡುವವರು ನನ್ನ ಪಿತನೇ. ಏಕೆಂದರೆ, ಸ್ವರ್ಗದಿಂದ ಇಳಿದು ಬಂದು ಲೋಕಕ್ಕೆ ಸಜ್ಜೀವವನ್ನೀಯುವಾತನೇ ದೇವರು ಕೊಡುವ ರೊಟ್ಟಿ,” ಎಂದು ಹೇಳಿದರು. ಅದಕ್ಕೆ ಆ ಜನರು, “ಅಂಥಾ ರೊಟ್ಟಿಯನ್ನೇ ನಮಗೆ ಯಾವಾಗಲೂ ಕೊಡಿ,” ಎಂದು ಕೇಳಿದರು. ಆಗ ಯೇಸು, “ನಾನೇ ಜೀವದಾಯಕ ರೊಟ್ಟಿ, ನನ್ನ ಬಳಿ ಬರುವವನಿಗೆ ಹಸಿವೇ ಇರದು; ನನ್ನಲ್ಲಿ ವಿಶ್ವಾಸವಿಡುವವನಿಗೆ ಎಂದಿಗೂ ದಾಹವಾಗದು.

27.04.2020 - “ದೇವರು ಕಳುಹಿಸಿದಾತನನ್ನು ನೀವು ವಿಶ್ವಾಸಿಸಬೇಕು. ಇದೇ ದೇವರು ಮೆಚ್ಚುವ ಕಾರ್ಯ”

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 6:8:15

ಸ್ತೇಫನನ ಬಂಧನ ಸ್ತೇಫನನು ದೈವಾನುಗ್ರಹದಿಂದಲೂ ಶಕ್ತಿಯಿಂದಲೂ ತುಂಬಿದ್ದನು. ಜನರ ಮಧ್ಯೆ ಅದ್ಭುತಗಳನ್ನೂ ಸೂಚಕಕಾರ್ಯಗಳನ್ನೂ ಮಾಡುತ್ತಿದ್ದನು. ಆದರೆ ಕೆಲವರು ಸ್ತೇಫನನ ವಿರೋಧಿಗಳಾಗಿದ್ದರು. ಇವರು ‘ಬಿಡುಗಡೆ ಹೊಂದಿದವರು’ ಎಂಬವರ ಪ್ರಾರ್ಥನಾ ಮಂದಿರಕ್ಕೆ ಸೇರಿದವರು. ಸಿರೇನ್ ಮತ್ತು ಅಲೆಕ್ಸಾಂಡ್ರಿಯದಿಂದ ಬಂದ ಯೆಹೂದ್ಯರೂ ಇದರ ಸದಸ್ಯರಾಗಿದ್ದರು. ಇವರೊಡನೆ ಸಿಲಿಸಿಯ ಹಾಗೂ ಏಷ್ಯಾದ ಯೆಹೂದ್ಯರೂ ಸೇರಿ ಸ್ತೇಫನನೊಂದಿಗೆ ತರ್ಕ ಮಾಡತೊಡಗಿದರು. ಆದರೆ ಸ್ತೇಫನನ ಮಾತಿನಲ್ಲಿ ಕಂಡುಬಂದ ಜ್ಞಾನವನ್ನೂ ಪವಿತ್ರಾತ್ಮ ಶಕ್ತಿಯನ್ನೂ ಎದುರಿಸಲು ಅವರಿಂದಾಗಲಿಲ್ಲ. ಆದುದರಿಂದ ಕೆಲವರಿಗೆ ಲಂಚಕೊಟ್ಟು ‘ಸ್ತೇಫನನು ಮೋಶೆಯನ್ನೂ ದೇವರನ್ನೂ ದೂಷಿಸುತ್ತಾನೆ; ಇದನ್ನು ನಾವು ಕೇಳಿದ್ದೇವೆ’ ಎಂದು ಹೇಳಿಸಿದರು. ಹೀಗೆ ಜನರನ್ನೂ ಪ್ರಮುಖರನ್ನೂ ನ್ಯಾಯಶಾಸ್ತ್ರಜ್ಞರನ್ನೂ ಪ್ರಚೋದಿಸಿದರು. ಸ್ತೇಫನನನ್ನು ಬಂಧಿಸಿ ನ್ಯಾಯಸಭೆಯ ಮುಂದೆ ಎಳೆದು ತರುವಂತೆ ಮಾಡಿದರು. ಕೆಲವು ಸುಳ್ಳುಸಾಕ್ಷಿಗಳನ್ನು ನೇಮಿಸಿಕೊಂಡು ಅವರಿಂದ, ‘ಇವನು ಯಾವಾಗಲೂ ನಮ್ಮ ಪವಿತ್ರ ದೇವಾಲಯದ ವಿರುದ್ಧ ಹಾಗೂ ಮೋಶೆಯ ಧರ್ಮಶಾಸ್ತ್ರದ ವಿರುದ್ಧ ಮಾತನಾಡುತ್ತಾನೆ. ನಜರೇತಿನ ಆ ಯೇಸು ಈ ಮಹಾದೇವಾಲಯವನ್ನು ನಾಶಗೊಳಿಸುವನೆಂದೂ ಮೋಶೆ ನಮಗೆ ವಿಧಿಸಿದ ಸಂಪ್ರದಾಯಗಳನ್ನು ಬದಲಿಸುವನೆಂದೂ ಇವನು ಹೇಳಿರುತ್ತಾನೆ. ಇದನ್ನು ನಾವು ಕೇಳಿದ್ದೇವೆ,’ ಎಂದು ಹೇಳಿಸಿದರು. ನ್ಯಾಯಸಭೆಯಲ್ಲಿ ಕುಳಿತಿದ್ದವರೆಲ್ಲರೂ ಅವನ ಮುಖವನ್ನೇ ದಿಟ್ಟಿಸಿ ನೋಡಿದರು. ಅದು ದೇವದೂತನ ಮುಖದಂತೆ ಕಂಗೊಳಿಸಿತು.

ಕೀರ್ತನೆ: 119:23, 24, 26, 27, 29, 30

ಶ್ಲೋಕ: ಪ್ರಭುವಿನ ಶಾಸ್ತ್ರಾನುಸಾರ ನಡೆದವರು ಧನ್ಯರು.

ಒಳಸಂಚು ಮಾಡುತ್ತಿದ್ದರು ಒಡೆಯರು ಎನಗೆದುರಾಗಿ I
ದಾಸ ನಾನಿರುವೆ ನಿನ್ನ ಆಜ್ಞೆಗಳಲೆ ಮಗ್ನನಾಗಿ II

ನಿನ್ನಾಜ್ಞೆಯು ಆನಂದದಾಯಕ I
ಅವೇ ನನಗೆ ಮಂತ್ರಾಲೋಚಕ II

ನನ್ನ ಗತನಡತೆಯನು ಕೇಳಿ ಸದುತ್ತರಿಸಿದೆಯಯ್ಯಾ I
ನಿನ್ನ ನಿಬಂಧನೆಗಳನೀಗ ನನಗೆ ಉಪದೇಶಿಸಯ್ಯಾ II

ನಿನ್ನ ನಿಯಮಗಳ ಪಥವನೆನಗೆ ತಿಳಿಯಪಡಿಸಯ್ಯಾ I
ನಿನ್ನ ಅದ್ಭುತಕಾರ್ಯಗಳನು ನಾ ಧ್ಯಾನಿಸುವೆನಯ್ಯಾ II

ಮಿಥ್ಯಮಾರ್ಗವನು ನನಗೆ ದೂರಮಾಡಯ್ಯಾ I
ಧರ್ಮಶಾಸ್ತ್ರವನು ಎನಗೆ ಅನುಗ್ರಹಿಸಯ್ಯಾ II

ಆರಿಸಿಕೊಂಡಿರುವೆನು ನಾನು ಸತ್ಯಮಾರ್ಗವನು I
ಇರಿಸಿಕೊಂಡಿಹೆನು ಕಣ್ಮುಂದೆ ನಿನ್ನ ವಿಧಿಗಳನು

ಶುಭಸಂದೇಶ: ಯೊವಾನ್ನ 6:22-29


ನೆರೆದಿದ್ದ ಜನರು ಮಾರನೆಯ ದಿನವೂ ಸರೋವರದ ಆಚೆ ಕಡೆಯೇ ಉಳಿದಿದ್ದರು. ಹಿಂದಿನ ದಿನ ಅಲ್ಲಿ ಒಂದೇ ಒಂದು ದೋಣಿ ಇದ್ದುದನ್ನು ಅವರು ನೋಡಿದ್ದರು. ಯೇಸುಸ್ವಾಮಿ ಶಿಷ್ಯರೊಡನೆ ದೋಣಿಯನ್ನು ಹತ್ತಲಿಲ್ಲವಾದ್ದರಿಂದ ಶಿಷ್ಯರು ಮಾತ್ರ ಹೊರಟು ಹೋಗಿದ್ದಾರೆಂದು ಅವರಿಗೆ ತಿಳಿದಿತ್ತು. ತಿಬೇರಿಯದಿಂದ ಹೊರಟಿದ್ದ ದೋಣಿಗಳು ಅಷ್ಟು ಹೊತ್ತಿಗೆ ಅಲ್ಲಿಗೆ ಬಂದು ಸೇರಿದವು. ಪ್ರಭುವು ದೇವರಿಗೆ ಸ್ತೋತ್ರವನ್ನು ಸಲ್ಲಿಸಿ, ಜನರಿಗೆ ರೊಟ್ಟಿ ಬಡಿಸಿದ್ದ ಸ್ಥಳ ಅಲ್ಲೇ ಪಕ್ಕದಲ್ಲಿತ್ತು. ಯೇಸು ಆಗಲಿ, ಅವರ ಶಿಷ್ಯರಾಗಲಿ ಇಲ್ಲದ್ದನ್ನು ನೋಡಿ ಜನರು ಆ ದೋಣಿಗಳನ್ನು ಹತ್ತಿ ಯೇಸುವನ್ನು ಹುಡುಕುತ್ತಾ ಕಫೆರ್ನವುಮಿಗೆ ಬಂದರು. ಜನರು ಯೇಸುಸ್ವಾಮಿಯನ್ನು ಸರೋವರದ ಆಚೆದಡದಲ್ಲಿ ಕಂಡೊಡನೆ, “ಗುರುದೇವಾ, ತಾವಿಲ್ಲಿಗೆ ಬಂದುದು ಯಾವಾಗ?” ಎಂದು ಕೇಳಿದರು. ಯೇಸು ಅವರಿಗೆ, “ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ನೀವು ನನ್ನನ್ನು ಹುಡುಕಿಕೊಂಡು ಬಂದದ್ದು ಸೂಚಕಕಾರ್ಯಗಳನ್ನು ನೋಡಿ ಗ್ರಹಿಸಿಕೊಂಡಿದ್ದರಿಂದ ಅಲ್ಲ, ಹೊಟ್ಟೆ ತುಂಬುವಷ್ಟು ರೊಟ್ಟಿ ಸಿಕ್ಕಿದ್ದರಿಂದ. ಅಳಿದುಹೋಗುವ ಆಹಾರಕ್ಕಾಗಿ ದುಡಿಯಬೇಡಿ; ಉಳಿಯುವ ಮತ್ತು ನಿತ್ಯಜೀವವನ್ನು ಈಯುವ ಆಹಾರಕ್ಕಾಗಿ ದುಡಿಯಿರಿ. ಇಂಥ ಆಹಾರವನ್ನು ನಿಮಗೆ ನೀಡುವವನು ನರಪುತ್ರನೇ. ಏಕೆಂದರೆ, ಪಿತನಾದ ದೇವರು ತಮ್ಮ ಅಧಿಕಾರ ಮುದ್ರೆಯನ್ನು ಆತನ ಮೇಲೆ ಒತ್ತಿದ್ದಾರೆ,” ಎಂದು ಉತ್ತರಕೊಟ್ಟರು. ಆಗ ಆ ಜನರು, “ದೇವರು ಮೆಚ್ಚುವ ಕಾರ್ಯಗಳನ್ನು ನಾವು ಮಾಡಬೇಕಾದರೆ, ಏನು ಮಾಡಬೇಕು?” ಎಂದು ಕೇಳಿದರು. ಅದಕ್ಕೆ ಯೇಸು, “ದೇವರು ಕಳುಹಿಸಿದಾತನನ್ನು ನೀವು ವಿಶ್ವಾಸಿಸಬೇಕು. ಇದೇ ಅವರು ಮೆಚ್ಚುವ ಕಾರ್ಯ,” ಎಂದರು.

26.04.2020 - “ಪ್ರಭು ಜೀವಂತರಾಗಿ ಎದ್ದಿರುವುದು ನಿಜ ! "

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 2:14, 22-33

ಆಗ ಪೇತ್ರನು ಇತರ ಹನ್ನೊಂದು ಮಂದಿ ಪ್ರೇಷಿತರೊಡನೆ ಎದ್ದುನಿಂತು, ಜನ ಸಮೂಹವನ್ನು ಉದ್ದೇಶಿಸಿ, ಗಟ್ಟಿಯಾದ ಧ್ವನಿಯಿಂದ ಹೀಗೆಂದು ಪ್ರಬೋಧಿಸಿದನು: “ಯೆಹೂದ್ಯ ಸ್ವಜನರೇ, ಜೆರುಸಲೇಮಿನ ಸಕಲ ನಿವಾಸಿಗಳೇ, ನನಗೆ ಕಿವಿಗೊಡಿ. ಈ ಘಟನೆಯ ಅರ್ಥ ನಿಮಗೆ ಮನದಟ್ಟಾಗಲಿ. ಇಸ್ರಯೇಲ್ ಬಾಂಧವರೇ, ನನ್ನ ಮಾತುಗಳನ್ನು ಆಲಿಸಿರಿ. ನಜರೇತಿನ ಯೇಸುಸ್ವಾಮಿ ದೈವನಿಯಮಿತ ವ್ಯಕ್ತಿ ಎಂಬುದನ್ನು ದೇವರೇ ಅವರ ಮುಖಾಂತರ ನಡೆಸಿದ ಅದ್ಭುತ ಕಾರ್ಯಗಳಿಂದ, ಮಹತ್ಕಾರ್ಯಗಳಿಂದ ಹಾಗೂ ಸೂಚಕಕಾರ್ಯಗಳಿಂದ ನಿಮಗೆ ಸ್ಪಷ್ಟಪಡಿಸಲಾಗಿದೆ. ಇದು ನಿಮಗೆ ತಿಳಿದಿರುವ ವಿಷಯ. ದೇವರು ತಮ್ಮ ಸ್ಥಿರಸಂಕಲ್ಪದಲ್ಲಿ ಹಾಗೂ ಭವಿಷ್ಯತ್ ಜ್ಞಾನದಲ್ಲಿ ಯೇಸು ನಿಮ್ಮ ವಶವಾಗಬೇಕೆಂದು ಈ ಮೊದಲೇ ನಿರ್ಧರಿಸಿದ್ದರು. ನೀವು ಅವರನ್ನು ಪರಕೀಯರ ಕೈಗೊಪ್ಪಿಸಿ, ಶಿಲುಬೆಗೆ ಹಾಕಿಸಿ, ಕೊಲ್ಲಿಸಿದಿರಿ. ಆದರೆ ದೇವರು ಅವರನ್ನು ಮೃತ್ಯುಶೂಲೆಯಿಂದ ಬಿಡಿಸಿ ಎಬ್ಬಿಸಿದರು. ಕಾರಣ - ಅವರನ್ನು ಬಂಧಿಸಿಡುವುದು ಮೃತ್ಯುವಿಗೆ ಅಸಾಧ್ಯವಾಗಿತ್ತು. ಅವರನ್ನು ಕುರಿತು ದಾವೀದನು ಹೀಗೆಂದಿದ್ದಾನೆ: ‘ಪ್ರಭು ಇಹನು ಎನ್ನ ಕಣ್ಮುಂದೆ ಸತತ ನಾ ಹೆದರದಂತೆ ಆತನಿಹನು ಎನ್ನ ಹತ್ತಿರ. ಇದಕಾರಣ ಹರ್ಷಿಸಿತು ಎನ್ನ ಹೃದಯ ತುಳುಕಿತು ಸಂತಸ ಎನ್ನ ನಾಲಗೆಯಿಂದ. ನಂಬಿ ನಿರೀಕ್ಷೆಯಿಂದಿರುವುದು ಎನ್ನ ಮತ್ರ್ಯದೇಹ. ಏಕೆನೆ, ದೂಡಲಾರೆ ಪಾತಾಳಕ್ಕೆ ನೀನೆನ್ನ ಜೀವಾತ್ಮವನು, ಕೊಳೆಯಬಿಡಲಾರೆ ನೀನೊಲಿದಾತನನು. ಅಮರ ಜೀವಮಾರ್ಗವನೆನಗೆ ತೋರ್ಪಡಿಸಿದೆ ನಿನ್ನ ಶ್ರೀ ಸಾನ್ನಿಧ್ಯ ಸಂತಸದಿಂದೆನ್ನ ಭರಿತನಾಗಿಸುವೆ.’ “ಪ್ರಿಯ ಸಹೋದರರೇ, ಪಿತಾಮಹ ದಾವೀದರಸನ ವಿಷಯದಲ್ಲಿ ನಾನು ನಿಮಗೆ ಸ್ಪಷ್ಟವಾಗಿ ಮಾತನಾಡಬೇಕಾಗಿದೆ. ಆತನು ಮೃತನಾದನು; ಆತನನ್ನು ಸಮಾಧಿಮಾಡಲಾಯಿತು. ನಿಮಗೆಲ್ಲರಿಗೆ ತಿಳಿದಿರುವಂತೆ ಆತನ ಸಮಾಧಿ ನಮ್ಮ ಮಧ್ಯೆ ಇಂದಿನವರೆಗೂ ಇದೆ. ಆತನೊಬ್ಬ ಪ್ರವಾದಿಯೂ ಆಗಿದ್ದ. ತನ್ನ ಸಂತತಿಯಲ್ಲೇ ಒಬ್ಬನನ್ನು ಅರಸನನ್ನಾಗಿ ಮಾಡುವುದಾಗಿ ದೇವರು ಮಾಡಿದ್ದ ವಾಗ್ದಾನವನ್ನು ಆತನು ಮರೆತಿರಲಿಲ್ಲ. ಹೀಗಿರುವಲ್ಲಿ ಕ್ರಿಸ್ತಯೇಸುವಿನ ಪುನರುತ್ಥಾನವನ್ನು ಮುಂಚಿತವಾಗಿ ಅರಿತು ಅದರ ವಿಷಯವಾಗಿ ಹೀಗೆಂದು ಪ್ರವಾದನೆ ಮಾಡಿದ: ‘ಆತನನನ್ನು ಪಾತಾಳಕ್ಕೆ ದೂಡಲಿಲ್ಲ; ದೇಹ ಕೊಳೆತುಹೋಗಲು ಬಿಡಲಿಲ್ಲ.’ ಈ ಯೇಸುವನ್ನೇ ದೇವರು ಪುನರುತ್ಥಾನಗೊಳಿಸಿದ್ದಾರೆ; ಈ ಘಟನೆಗೆ ನಾವೆಲ್ಲರೂ ಸಾಕ್ಷಿಗಳಾಗಿದ್ದೇವೆ. ಯೇಸು, ದೇವರ ಬಲಪಾಶ್ರ್ವಕ್ಕೆ ಆರೋಹಿತರಾದರು. ಅವರು ತಮ್ಮ ಪಿತ ವಾಗ್ದಾನ ಮಾಡಿದ ಪವಿತ್ರಾತ್ಮ ಅವರನ್ನು ಪಡೆದು, ನಮ್ಮ ಮೇಲೆ ಸುರಿಸಿದ ಆ ವರವನ್ನೇ ನೀವು ಈಗ ನೋಡುತ್ತಿರುವುದು ಹಾಗೂ ಕೇಳುತ್ತಿರುವುದು.

ಕೀರ್ತನೆ: 16:1-2, 5, 7-8, 9-10, 11

ನೀಡು ದೇವಾ ರಕ್ಷಣೆಯನು I
ನಾ ನಿನಗೆ ಶರಣಾಗತನು II
ನೀನೇ ನನ್ನೊಡೆಯ"ನೆಂದು ನಾ ನುಡಿದೆ I
ನಿನ್ನ ಹೊರತು ನನಗಿಲ್ಲ ಒಳಿತು” ಎಂದೇ II

ನನ್ನ ಸ್ವತ್ತೂ ಸ್ವಾಸ್ತ್ಯವೂ ನೀನೇ I
ನಿನ್ನ ಕೈಯಲ್ಲಿದೆ ಪ್ರಭು, ನನ್ನ ವಿಮೆ I

ಪ್ರಭುವಿಗೆನ್ನ ಧನ್ಯವಾದ - ಆತನೇ ನನಗೆ ಮಾರ್ಗದರ್ಶಕ I
ಅಂಧಕಾರದೊಳೂ ನನ್ನ ಮನಸ್ಸಾಕ್ಷಿಯೆ ನನಗೆ ಬೋಧಕ II
ಇರಿಸಿಕೊಳ್ಳುವೆ ಪ್ರಭುವನು ಸತತ ನನ್ನೆದುರಿಗೆ I
ಆತನಿರಲು ಬಲಕ್ಕೆ ನನಗೆಲ್ಲಿಯದು ಹೆದರಿಕೆ II

ಇದು ಕಾರಣ ಹರ್ಷದಿಂದಿದೆ ಎನ್ನಯ ಹೃದಯ I
ಆನಂದಗೊಂಡಿದೆ ಮನ, ಸುರಕ್ಷಿತವಿದೆ ಕಾಯ II
ಏಕೆನೆ ದೂಡುವುದಿಲ್ಲ ನೀನು ಎನ್ನನು ಅಧೋಲೋಕಕೆ I
ಬಿಟ್ಟುಕೊಡುವುದಿಲ್ಲ ನಿನ್ನ ಭಕ್ತನನು ಪಾತಾಳಕೆ II

ತೋರ್ಪಡಿಸುವೆ ಎನಗೆ ಅಮರ ಜೀವಮಾರ್ಗವನು I

ನಿನ್ನ ಸನ್ನಿಧಿ ಕೊಡುವುದು ಪರಮಾನಂದವನು I

ಶ್ಲೋಕ: ತೋರ್ಪಡಿಸುವೆ ಎನಗೆ ಅಮರ ಜೀವಮಾರ್ಗವನು

ಎರಡನೇ ವಾಚನ: 1 ಪೇತ್ರ 1:17-21

ನೀವು ದೇವರಿಗೆ ಪ್ರಾರ್ಥನೆಮಾಡುವಾಗ, ಅವರನ್ನು “ತಂದೆಯೇ” ಎಂದು ಸಂಬೋಧಿಸುತ್ತೀರಿ. ಅವರು ಪಕ್ಷಪಾತಿ ಅಲ್ಲ. ಎಲ್ಲರಿಗೂ ಅವರವರ ಕೃತ್ಯಗಳಿಗೆ ತಕ್ಕಂತೆ ನ್ಯಾಯತೀರ್ಪು ನೀಡುವವರು. ಆದ್ದರಿಂದ ನಿಮ್ಮ ಇಹಲೋಕದ ಯಾತ್ರೆಯನ್ನು ಭಯಭಕ್ತಿಯಿಂದ ಸಾಗಿಸಿರಿ. ನಿಮ್ಮ ಪೂರ್ವಜರಿಂದ ಪರಂಪರೆಯಾಗಿ ಬಂದಿರುವ ನಿರರ್ಥಕ ನಡವಳಿಕೆಯಿಂದ ನಿಮ್ಮನ್ನು ಬಿಡುಗಡೆಮಾಡಲು ಕೊಡಲಾದ ಬೆಲೆಯು ಎಂಥದ್ದೆಂದು ನಿಮಗೆ ತಿಳಿದಿದೆ. ಅದು ನಶಿಸಿ ಹೋಗುವ ಬೆಳ್ಳಿಬಂಗಾರವಲ್ಲ. ಬದಲಿಗೆ, ಯಾವ ನ್ಯೂನತೆಯೂ ಇಲ್ಲದ, ಯಾವ ಕಳಂಕವೂ ಇಲ್ಲದ ಬಲಿಯ ಕುರಿಮರಿಯಂಥ ಕ್ರಿಸ್ತಯೇಸುವಿನ ಅಮೂಲ್ಯ ರಕ್ತವೇ ಆ ಬೆಲೆ. ವಿಶ್ವಸೃಷ್ಟಿಗೆ ಮೊದಲೇ ಯೇಸುಕ್ರಿಸ್ತರನ್ನು ದೇವರು ಇದಕ್ಕೆಂದು ಗೊತ್ತುಮಾಡಿದ್ದರು. ಈ ಅಂತಿಮ ದಿನಗಳಲ್ಲಿ ನಿಮಗೋಸ್ಕರ ಯೇಸು ಪ್ರತ್ಯಕ್ಷರಾದರು. ಮರಣದಿಂದ ಪುನರುತ್ಥಾನಗೊಳಿಸಿ ಮಹಿಮೆಪಡಿಸಿದ ದೇವರಲ್ಲಿ ನೀವು ವಿಶ್ವಾಸವಿಟ್ಟದ್ದು ಇವರ ಮುಖಾಂತರವೇ. ಹೀಗೆ ನಿಮ್ಮ ವಿಶ್ವಾಸವೂ ನಿರೀಕ್ಷೆಯೂ ದೇವರಲ್ಲೇ ನೆಲೆಗೊಂಡಿವೆ.

ಶುಭಸಂದೇಶ: ಲೂಕ 24:13-35


ಅದೇ ದಿನ ಶಿಷ್ಯರಲ್ಲಿ ಇಬ್ಬರು ಜೆರುಸಲೇಮಿಗೆ ಹನ್ನೊಂದು ಕಿಲೋಮೀಟರಿನಷ್ಟು ದೂರದಲ್ಲಿದ್ದ ಎಮ್ಮಾವು ಎಂಬ ಗ್ರಾಮಕ್ಕೆ ಹೋಗುತ್ತಿದ್ದರು. ಇತ್ತೀಚೆಗೆ ನಡೆದ ವಿಷಯಗಳನ್ನೆಲ್ಲಾ ಕುರಿತು ಅವರು ಸಂಭಾಷಣೆ ಮಾಡುತ್ತಾ ನಡೆಯುತ್ತಿದ್ದರು. ಹೀಗೆ ಮಾತನಾಡಿಕೊಂಡು ಚರ್ಚೆಮಾಡುತ್ತಾ ಹೋಗುತ್ತಿರುವಾಗ, ಯೇಸುಸ್ವಾಮಿಯೇ ಖುದ್ದಾಗಿ ಸಮೀಪಿಸಿ ಅವರ ಜೊತೆ ಸೇರಿಕೊಂಡರು. ಆದರೆ ಇವರಾರೆಂದು ಅವರು ಗುರುತು ಹಚ್ಚಲಿಲ್ಲ. ಕಾರಣ - ಶಿಷ್ಯರಿಗೆ ಕಣ್ಣುಕಟ್ಟಿದಂತಾಗಿತ್ತು. “ನೀವು ತರ್ಕ ಮಾಡಿಕೊಂಡು ಹೋಗುತ್ತಿರುವಿರಲ್ಲಾ, ಏನು ವಿಷಯ?” ಎಂದು ಯೇಸು ಕೇಳಿದರು. ಶಿಷ್ಯರು ಸಪ್ಪೆ ಮುಖಮಾಡಿ ನಿಂತರು. ಆಗ ಅವರಲ್ಲಿ ಒಬ್ಬನಾದ ಕ್ಲೆಯೋಫ, “ಇತ್ತೀಚೆಗೆ ಜೆರುಸಲೇಮಿನಲ್ಲಿ ಜರುಗಿದ ಘಟನೆಗಳನ್ನು ಪಟ್ಟಣಕ್ಕೆ ಪಟ್ಟಣವೇ ತಿಳಿದಿದೆ; ನಿನಗೊಬ್ಬನಿಗೇ ಅವು ತಿಳಿಯದೆ?” ಎಂದನು. “ಏನು ನಡೆಯಿತು?” ಎಂದು ಯೇಸು ಪುನಃ ಕೇಳಿದಾಗ ಆ ಶಿಷ್ಯರಿಬ್ಬರು, “ಇವು ನಜರೇತಿನ ಯೇಸುವಿಗೆ ಸಂಭವಿಸಿದ ಘಟನೆಗಳು. ಅವರು ನಡೆಯಲ್ಲೂ ನುಡಿಯಲ್ಲೂ ದೇವರ ಹಾಗೂ ಸಕಲ ಮಾನವರ ದೃಷ್ಟಿಯಲ್ಲಿ ಪ್ರವಾದಿಯಾಗಿದ್ದರು. ನಮ್ಮ ಮುಖ್ಯ ಯಾಜಕರು ಮತ್ತು ಮುಖಂಡರು ಅವರನ್ನು ಮರಣದಂಡನೆಗೆ ಗುರಿಮಾಡಿಸಿ ಶಿಲುಬೆಗೆ ಜಡಿಸಿದರು. ಇಸ್ರಯೇಲನ್ನು ಬಿಡುಗಡೆ ಮಾಡುವ ಉದ್ಧಾರಕ ಅವರೇ ಎಂದು ನಾವು ನಂಬಿಕೊಂಡಿದ್ದೆವು. ಇಷ್ಟು ಮಾತ್ರವಲ್ಲ, ಇದೆಲ್ಲಾ ಸಂಭವಿಸಿ ಇಂದಿಗೆ ಮೂರುದಿನಗಳು ಆಗಿವೆ. ಆದರೂ ನಮ್ಮಲ್ಲಿ ಕೆಲವು ಮಂದಿ ಮಹಿಳೆಯರು ಮುಂಜಾನೆ ಸಮಾಧಿಯ ಬಳಿಗೆ ಹೋಗಿದ್ದರು. ಅಲ್ಲಿ ಯೇಸುವಿನ ಪಾರ್ಥಿವ ಶರೀರವನ್ನು ಕಾಣಲಿಲ್ಲ. ಹಿಂದಿರುಗಿ ಬಂದು, ‘ನಮಗೆ ದೇವದೂತರು ಪ್ರತ್ಯಕ್ಷರಾದರು; ಇವರು ಯೇಸುಸ್ವಾಮಿ ಸಜೀವದಿಂದ ಇದ್ದಾರೆಂದು ನಮಗೆ ತಿಳಿಸಿದರು,’ ಎಂದು ಹೇಳಿ ನಮ್ಮನ್ನು ದಿಗ್ಭ್ರಾಂತರನ್ನಾಗಿ ಮಾಡಿದರು. ನಮ್ಮ ಸಂಗಡಿಗರಲ್ಲಿ ಕೆಲವರು ಸಮಾಧಿಯ ಬಳಿಗೆ ಹೋಗಿ ನೋಡಿದರು; ಮಹಿಳೆಯರು ಹೇಳಿದ್ದೆಲ್ಲಾ ಸರಿಯಾಗಿತ್ತು. ಆದರೆ ಯೇಸುಸ್ವಾಮಿಯನ್ನು ಮಾತ್ರ ಕಾಣಲಿಲ್ಲ,” ಎಂದರು. ಆಗ ಯೇಸು, “ಎಂಥ ಮತಿಹೀನರು ನೀವು! ಪ್ರವಾದಿಗಳು ಹೇಳಿರುವುದೆಲ್ಲವನ್ನು ನಂಬುವುದರಲ್ಲಿ ಎಷ್ಟು ಮಂದಮತಿಗಳು ನೀವು! ಕ್ರಿಸ್ತನು ಇಂತಹ ಸಂಕಷ್ಟಗಳನ್ನು ಅನುಭವಿಸಿ ತನ್ನ ಮಹಿಮಾಸಿದ್ದಿಯನ್ನು ಪಡೆಯಬೇಕಾಗಿತ್ತು ಅಲ್ಲವೇ?” ಎಂದರು. ಅನಂತರ, ಮೋಶೆ ಹಾಗೂ ಪ್ರವಾದಿಗಳೆಲ್ಲರಿಂದ ಆರಂಭಿಸಿ ಎಲ್ಲಾ ಪವಿತ್ರ ಗ್ರಂಥಗಳಲ್ಲಿ ತಮ್ಮ ವಿಷಯವಾಗಿ ಬರೆದಿರುವುದನ್ನು ಅವರಿಗೆ ವಿವರಿಸಿದರು. ಅಷ್ಟರಲ್ಲಿ ಶಿಷ್ಯರು ತಲುಪಬೇಕಾಗಿದ್ದ ಗ್ರಾಮವು ಸಮೀಪಿಸಿತು. ಯೇಸುಸ್ವಾಮಿ ಇನ್ನೂ ಮುಂದಕ್ಕೆ ಸಾಗುವವರಂತೆ ಕಂಡಿತು. ಆಗ ಶಿಷ್ಯರು, “ಸಂಜೆಯಾಯಿತು, ಕತ್ತಲಾಗುತ್ತ ಬಂದಿತು; ಬಂದು ನಮ್ಮೊಡನೆ ತಂಗಿರಿ,” ಎಂದು ಒತ್ತಾಯಪಡಿಸಿದರು. ಯೇಸು ಅವರೊಡನೆ ತಂಗಲು ಹೋದರು. ಅವರ ಸಂಗಡ ಊಟಕ್ಕೆ ಕುಳಿತಾಗ, ಯೇಸು ರೊಟ್ಟಿಯನ್ನು ತೆಗೆದುಕೊಂಡು, ದೇವರಿಗೆ ಕೃತಜ್ಞತಾ ಸ್ತೋತ್ರ ಸಲ್ಲಿಸಿ, ಅದನ್ನು ಮುರಿದು ಅವರಿಗೆ ಕೊಟ್ಟರು. ಆಗಲೇ ಶಿಷ್ಯರ ಕಣ್ಣುಗಳು ತೆರೆದವು; ಯೇಸುವನ್ನು ಗುರುತುಹಚ್ಚಿದರು. ಆಗ ಯೇಸು ಅವರಿಂದ ಅದೃಶ್ಯರಾದರು. ಶಿಷ್ಯರು ಒಬ್ಬರಿಗೊಬ್ಬರು ಮಾತನಾಡಿಕೊಳ್ಳುತ್ತಾ, “ದಾರಿಯಲ್ಲಿ ಇವರು ನಮ್ಮ ಸಂಗಡ ಮಾತನಾಡುತ್ತಾ ಪವಿತ್ರ ಗ್ರಂಥದ ಅರ್ಥವನ್ನು ನಮಗೆ ವಿವರಿಸುತ್ತಾ ಇದ್ದಾಗ ನಮ್ಮ ಹೃದಯ ಕುತೂಹಲದಿಂದ ಕುದಿಯುತ್ತಾ ಇತ್ತಲ್ಲವೇ?” ಎಂದುಕೊಂಡರು. ಒಡನೇ ಅವರು ಅಲ್ಲಿಂದ ಎದ್ದು ಜೆರುಸಲೇಮಿಗೆ ಹಿಂದಿರುಗಿ ಹೋದರು. ಅಲ್ಲಿ ಹನ್ನೊಂದು ಮಂದಿ ಶಿಷ್ಯರೂ ಅವರ ಸಂಗಡಿಗರೂ ಒಟ್ಟುಗೂಡಿದ್ದರು. “ಪ್ರಭು ಜೀವಂತರಾಗಿ ಎದ್ದಿರುವುದು ನಿಜ ! ಅವರು ಸಿಮೋನನಿಗೆ ಕಾಣಿಸಿಕೊಂಡರು,” ಎಂದು ಅಲ್ಲಿದ್ದವರು ಹೇಳುವುದನ್ನು ಕೇಳಿದರು. ಆಗ ಅವರು ತಾವು ದಾರಿಯಲ್ಲಿ ಕಂಡ ವಿಷಯವನ್ನೂ ರೊಟ್ಟಿ ಮುರಿದು ಕೊಡುವಾಗ ಸ್ವಾಮಿಯನ್ನು ತಾವು ಗುರುತುಹಚ್ಚಿದ ವಿಷಯವನ್ನೂ ಅಲ್ಲಿದ್ದವರಿಗೆ ವರದಿಮಾಡಿದರು.