ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

01.12.2018


ಸಾಧಾರಣ ಕಾಲದ 34ನೇ ಶನಿವಾರ

ಮೊದಲನೇ ವಾಚನ: ಪ್ರಕಟನೆ  22:1-7

ಬಳಿಕ ಆ ದೇವದೂತನು ಜೀವಜಲದ ನದಿಯನ್ನು ನನಗೆ ತೋರಿಸಿದನು. ಅದು ಸ್ಫಟಿಕದಂತೆ ಮಿನುಗುತ್ತಿತ್ತು. ಅದು ದೇವರ ಹಾಗೂ ಯಜ್ಞದ ಕುರಿಮರಿಯ ಸಿಂಹಾಸನದಲ್ಲಿ ಉಗಮಿಸಿ, ನಗರದ ಹೆದ್ದಾರಿಯ ಮಧ್ಯದಲ್ಲಿ ಹರಿಯುತ್ತಿತ್ತು ಆ ನದಿಯ ಎರಡು ದಡಗಳಲ್ಲೂ ಜೀವವೃಕ್ಷವಿತ್ತು. ಅದು ವರ್ಷದಲ್ಲಿ ಹನ್ನೆರಡು ಸಾರಿ ಫಲ ಕೊಡುವಂಥದ್ದು; ಪ್ರತೀ ತಿಂಗಳೂ ಫಸಲನ್ನೀಯುವಂಥದ್ದು. ಆ ವೃಕ್ಷದ ಎಲೆಗಳನ್ನು ರಾಷ್ಟ್ರಗಳಿಗೆ ಸಿದ್ದೌಷಧಿಯನ್ನಾಗಿ ಉಪಯೋಗಿಸಲಾಗುವುದು. ಶಾಪಗ್ರಸ್ತವಾದುದು ಯಾವುದು ಆ ನಗರದಲ್ಲಿ ಇರದು. ದೇವರ ಮತ್ತು ಯಜ್ಞದ ಕುರಿಮರಿಯ ಸಿಂಹಾಸನವು ಅಲ್ಲಿರುವುದು. ಸದಾ ಯಾಜಕ ಸೇವೆ ಸಲ್ಲಿಸುವ ಅವರ ದಾಸರಿಗೆ ಅದರ ಮುಖದರ್ಶನವಾಗುವುದು. ಆ ಹೆಸರು ಆ ದಾಸರ ಹಣೆಗಳ ಮೇಲೆ ಲಿಖಿತವಾಗಿರುವುದು . ರಾತ್ರಿ ಎಂಬುದೇ ಇಲ್ಲಿ ಇರದು; ದೀಪದ ಇಲ್ಲವೇ ಸೂರ್ಯನ ಬೆಳಕಿನ ಅವಶ್ಯಕತೆಯೂ ಇರದು; ದೇವರಾದ ಪ್ರಭುವೇ ಅವರಿಗೆ ಬೆಳಕಾಗಿರುವರು. ಯುಗಯುಗಾಂತರಕ್ಕೂ ಅವರು ರಾಜ್ಯವಾಳುವರು. ಆನಂತರ ಆ ದೇವದೂತನು ನನಗೆ, "ಈ ಮಾತುಗಳು, ಸತ್ಯವಾದುವು, ನಂಬಲರ್ಹವಾದುವು. ಪ್ರವಾದಿಗಳಿಗೆ ಆತ್ಮ ಪ್ರೇರಣೆಯನ್ನೀಯುವ ದೇವರಾದ ಪ್ರಭುವೇ ಬೇಗನೆ ಸಂಭವಿಸಲಿರುವುವುಗಳನ್ನು ತಮ್ಮ ದಾಸರಿಗೆ ತಿಳಿಸಲು ತಮ್ಮ ದೂತರನ್ನೇ ಕಳಿಸಿದ್ದಾರೆ,  "ಯೇಸುಸ್ವಾಮಿ ನುಡಿಯುವುದನ್ನು ಕೇಳು: 'ಇಗೋ, ನಾನು ಬೇಗನೆ ಬರುತ್ತೇನೆ," ಈ ಪುಸ್ತಕದಲ್ಲಿ ಬರೆದಿರುವ ಪ್ರವಾದನಾ  ವಾಕ್ಯಗಳನ್ನು ಕೈಗೊಂಡು ನಡೆಯುವವನು ಧನ್ಯನು!" ಎಂದು ಹೇಳಿದನು.

ಕೀರ್ತನೆ: 95:1-2, 3-5, 6-7ab
ಶ್ಲೋಕ: ಪ್ರಭು ಯೇಸುವೇ, ಬನ್ನಿ.

ಶುಭಸಂದೇಶ: ಲೂಕ 21:34-36

"ಮಿತಿಮೀರಿದ ಭೋಜನದಿಂದಾಗಲೀ, ಕುಡಿತ ದಿಂದಾಗಲೀ, ಲೌಕಿಕ ಚಿಂತೆಗಳಿಂದಾಗಲೀ ಮಂದಮತಗಳಾಗಬೇಡಿ. ಆ ದಿನವು ಅನಿರಿಕ್ಷಿತ ಉರುಳಿನಂತೆ ನಿಮ್ಮನ್ನು ಸಿಕ್ಕಿಸೀತು, ಜಾಗರೂಕರಾಗಿರಿ! ಜಗತ್ತಿನ ಎಲ್ಲಾ ನಿವಾಸಿಗಳೂ ಅದಕ್ಕೆ ಸಿದ್ದರಾಗಿರಬೇಕು. ಬಂದೊದಗಲಿರುವ ಇವೆಲ್ಲವುಗಳಿಂದ ಪಾರಾಗಿ ನರಪುತ್ರನ ಮಂದೆ ನಿಲ್ಲಲ್ಲು ನೀವು ಶಕ್ತರಾಗುವಂತೆ ನಿರಂತರವಾಗಿ ಪ್ರಾರ್ಥನೆ ಮಾಡುತ್ತಾ ಎಚ್ಚರಿಕೆಯಿಂದಿರಿ," ಎಂದರು ಯೇಸುಸ್ವಾಮಿ.

30.11.2018


 ಮೊದಲನೇ ವಾಚನ: ರೋಮನ್ನರಿಗೆ  10: 9-18

"ಯೇಸುಸ್ವಾಮಿಯೇ ಪ್ರಭು" ಎಂದು ನೀನು ಬಾಯಿಂದ ನಿವೇದಿಸಿ, ಅವರನ್ನು ದೇವರು ಸಾವಿನಿಂದ ಪುನರುತ್ದಾನಗೊಳಿಸಿದ್ದಾರೆಂದು ಹೃದಯದಿಂದ ವಿಶ್ವಾಸಿಸಿದರೆ ಜೀವೋದ್ಧಾರವನ್ನು ಹೊಂದುತ್ತೀಯೆ. ಹೌದು, ಹೃದಯಪೂರ್ವಕವಾಗಿ ವಿಶ್ವಾಸಿಸುವವನು ದೇವರೊಡನೆ ಸತ್ಸಂಬಂದವನ್ನು ಪಡೆಯುತ್ತಾನೆ; ಬಾಯಿಂದ ನಿವೇದಿಸುವವನು ಜೀವೋದ್ಧಾರ ಹೊಂದುತ್ತಾನೆ. ಏಕೆಂದರೆ, "ಅವರಲ್ಲಿ ವಿಶ್ವಾಸ ಇಡುವ ಯಾರಿಗೂ ಆಶಾಭಂಗವಾಗುವುದಿಲ್ಲ." ಎಂದು ಪವಿತ್ರಗ್ರಂಥದಲ್ಲೇ ಹೇಳಲಾಗಿದೆ. ಈ ವಿಷಯದಲ್ಲಿ ಯೆಹೂದ್ಯರು, ಯೆಹೂದ್ಯರಲ್ಲದವರು ಎಂಬ ಭೇದಭಾವವಿಲ್ಲ, ಸರ್ವರಿಗೂ ಒಬ್ಬರೇ ಪ್ರಭು. ತಮ್ಮನ್ನು ಬೇಡಿಕೊಳ್ಳುವ ಎಲ್ಲರಿಗೂ ಅವರು ಧಾರಾಳವಾಗಿ ವರದಾನವನ್ನು ನೀಡುತ್ತಾರೆ. "ಪ್ರಭುವಿನ ನಾಮಸ್ಮರಣೆ ಮಾಡುವ ಪ್ರತಿಯೊಬ್ಬನೂ ಜೀವೋದ್ಧಾರವನ್ನು ಹೊಂದುತ್ತಾನೆ," ಎಂದು ಲಿಖಿತವಾಗಿದೆ. ಪ್ರಭುವಿನಲ್ಲಿ ವಿಶ್ವಾಸವಿಲ್ಲದಿದ್ದರೆ ಅವರ ನಾಮಸ್ಮರಣೆ ಮಾಡುವುದಾದರೂ ಹೇಗೆ? ಅವರ ವಿಷಯವನ್ನು ಕುರಿತು ಕೇಳದಿದ್ದರೆ ಅವರನ್ನು ವಿಶ್ವಾಸಿಸುವುದಾದರೂ ಹೇಗೆ? ಭೋಧಿಸುವವರು ಇಲ್ಲದಿದ್ದರೆ ಅವರ ವಿಷಯಗಳನ್ನು ಕುರಿತು ಕೇಳುವುದಾದರೂ ಹೇಗೆ? ಭೋಧಿಸುವವರನ್ನು ಕಳುಹಿಸದೆ ಹೋದರೆ, ಅವರು ಶುಭಸಂದೇಶವನ್ನು ಭೋಧಿಸುವುದಾದರೂ ಹೇಗೆ? "ಶುಭಸಂದೇಶವನ್ನು ತರುವವರ ಬರುವಿಕೆ ಎಷ್ಟೋ ಶುಭದಾಯಕ," ಎಂದು ಪವಿತ್ರ ಗ್ರಂಥದಲ್ಲೇ ಬರೆಯಲಾಗಿದೆ. ಆದರೂ ಈ ಶುಭಸಂದೇಶವನ್ನು ಎಲ್ಲರೂ ಅಃಗೀಕರಿಸಲಿಲ್ಲ. ಆದ್ದರಿಂದಲೇ ಯೆಶಾಯನು, "ಪ್ರಭುವೇ, ನಾವು ಸಾರಿದ ಸಂದೇಶವನ್ನು ನಂಬಿದವರು ಯಾರು?"  ಎಂದು ಮೊರೆಯಿಟ್ಟಿದ್ದಾನೆ. ಇಂತಿರಲು, ಶುಭಸಂದೇಶವನ್ನು ಆಲಿಸುವುದರಿಂದ ವಿಶ್ವಾಸ ಮೂಡುತ್ತದೆ. ಶುಭಸಂದೇಶ ಕ್ರಿಸ್ತಯೇಸುವನ್ನು ಭೋಧಿಸುವುದರ ಮೂಲಕ ಪ್ರಕಟವಾಗುತ್ತದೆ. ಈಗ ನನ್ನದೊಂದು ಪ್ರಶ್ನೆ; "ಇಸ್ರಯೇಲರಿಗೆ ಶುಭಸಂದೇಶವನ್ನು ಕೇಳುವ ಸಂದರ್ಭ ಇರಲಿಲ್ಲವೇ?" ನಿಶ್ಚಯವಾಗಿ ಇತ್ತು. ಪವಿತ್ರ ಗ್ರಂಥದಲ್ಲಿ ಹೇಳಿರುವಂತೆ: "ಸಾರುವವರ ಧ್ವನಿ ಜಗದಲ್ಲೆಲ್ಲಾ ಹರಡಿತು ಅವರ ನುಡಿ ಭೂಮಿಯ ತುತ್ತತುದಿಯನ್ನು ಮುಟ್ಟಿತು,"

ಕೀರ್ತನೆ: 19:2-3, 4-5
ಶ್ಲೋಕ: ಅವುಗಳ ನುಡಿಮಾತು ವ್ಯಾಪಿಸಿದೆ ಜಗದಾದ್ಯಂತ.

ಶುಭಸಂದೇಶ: ಮತ್ತಾಯ  4:18-22

ಯೇಸುಸ್ವಾಮಿ ಗಲಿಲೇಯ ಸರೋವರದ ತೀರದಲ್ಲಿ ನಡೆದು ಹೋಗುತ್ತಿದ್ದರು ಆಗ ಇಬ್ಬರು ಸಹೋದರರನ್ನು ಕಂಡರು. ಇವರೇ 'ಪೇತ್ರ' ಎನಿಸಿಕೊಂಡ ಸಿಮೋನ ಮತ್ತು ಅವನ ಸಹೋದರ ಆಂದ್ರೆಯ. ಬೆಸ್ತರಾದ ಇವರು ಸರೋವರದಲ್ಲಿ ಬಲೆ ಬೀಸುತ್ತಾ ಇದ್ದರು. "ನನ್ನನ್ನು ಹಿಂಬಾಲಿಸಿ ಬನ್ನಿ. ನಿಮ್ಮನ್ನು ಮನುಷ್ಯರನ್ನೇ ಹಿಡಿಯುವವರನ್ನಾಗಿ ಮಾಡುವೆನು," ಎಂದು ಹೇಳಿ ಯೇಸು ಅವರನ್ನು ಕರೆದರು. ತಕ್ಷಣವೇ, ಅವರು ತಮ್ಮ ಬಲೆಗಳನ್ನು ಬಿಟ್ಟು ಯೇಸುವನ್ನು ಹಿಂಬಾಲಿಸಿದರು. ಅಲ್ಲಿಂದ ಮುಂದಕ್ಕೆ ಹೋಗುತ್ತಿದ್ದಾಗ ಯೇಸು ಜೆಬೆದಾಯನ ಮಕ್ಕಳಾದ ಯಕೋಬ ಮತ್ತು ಯೊವಾನ್ನ ಎಂಬ ಇನ್ನಿಬ್ಬರು ಸಹೋದರರನ್ನು ಕಂಡರು. ಇವರು ತಮ್ಮ ತಂದೆ ಜೆಬೆದಾಯನೊಡನೆ ದೋಣಿಯಲ್ಲಿ ಬಲೆಗಳನ್ನು ಸರಿಪಡಿಸುತ್ತಿದ್ದರು. ಯೇಸು ಇವರನ್ನೂ ಕರೆದರು. ಕೂಡಲೇ ಅವರು ದೋಣಿಯನ್ನೂ ತಮ್ಮ ತಂದೆಯನ್ನೂ ಬಿಟ್ಟು ಯೇಸುವನ್ನು ಹಿಂಬಾಲಿಸಿದರು.

29.11.2018


 ಮೊದಲನೇ ವಾಚನ: ಪ್ರಕಟನೆ 18:1-2, 21-23; 19:1-3, 9

ಇವುಗಳಾದ ಬಳಿಕ ನಾನು ಮತ್ತೂ ಒಂದು ದಿವ್ಯದರ್ಶನವನ್ನು ಕಂಡೆ. ಸ್ವರ್ಗದಿಂದ ಮತ್ತೊಬ್ಬ ದೇವದೂತನು ಇಳಿದು ಬಂದನು. ಅವನು ವಿಶೇಷ ಅಧಿಕಾರ ಪಡೆದಿದ್ದನು. ಅವನ ತೇಜಸ್ಸು ಭೂಮಿಯನ್ನು ಬೆಳಗಿತು. ಅವನು ಗಟ್ಟಿಯಾದ ಧ್ವನಿಯಿಂದ ಇಂತೆಂದನು; "ಪತನ  ಹೊಂದಿದಳು ಪತನ ಹೊಂದಿದಳು ಬಾಬಿಲೋನ್ ಮಹಾನಗರಿ ಪತನ ಹೊಂದಿದಳು ದೆವ್ವ ದುರಾತ್ಮಗಳಿಗೆ ಬೀಡಾದಳು, ಅಶುದ್ಧ ಪ್ರಾಣಿ ಪಕ್ಷಿಗಳಿಗೆ ಗೂಡಾದಳು. ಆಗ ಒಬ್ಬ  ಬಲಿಷ್ಠ ದೇವದೂತನು ಬೀಸುವ ಕಲ್ಲಿನಂತಿದ್ದ ಒಂದು ದೊಡ್ಡ ಕಲ್ಲನ್ನು ಎತ್ತಿ ಸಮುದ್ರಕ್ಕೆ ಎಸೆದು ಹೀಗೆಂದನು: "ಬಾಬಿಲೋನ್ ಮಹಾನಗರವನ್ನು ಈ ಪರಿಯಾಗಿ ಎತ್ತೆಸೆಯಲಾಗುವುದು. ಅವಳಿದ್ದ ಎಡೆಯು ಯಾರಿಗೂ ಕಾಣಸಿಗದಂತಾಗುವುದು.  "ಎಲೈ ಬಾಬಿಲೋನೇ, ಕಿನ್ನರಿಗಾರರ, ಸಂಗೀತಗಾರರ, ಕೊಳಲ ನುಡಿಸುವವರ,  ತುತೂರಿಯನೂದುವವರ ಮಧುರ ಗಾನವು ಕೇಳಿ ಬರದು ನಿನ್ನಲಿ ಮತ್ತೆಂದೂ, ಕುಶಲಕರ್ಮಿಗಳಾರೂ ಕಾಣಸಿಗರು ಇನ್ನೆಂದೂ, ಬೀಸುವ ಕಲ್ಲಿನ ಶಬ್ದವೇ ಇರದು ನಿನ್ನಲ್ಲಿ ಎಂದೆಂದೂ! "ಉರಿಯುವ ದೀಪದ ಬೆಳಕು ಹೊಳೆಯದು ನಿನ್ನಲ್ಲಿ, ವಧುವರರ ಇನಿದನಿ ಕೇಳದು ನಿನ್ನಲ್ಲಿ. ಇದ್ದರು ನಿನ್ನ ವರ್ತಕರು ಇಳೆಗೆ ಧನವಂತರಾಗಿ ಬಿದ್ದವು ರಾಷ್ಟ್ರಗಳು ನಿನ್ನ ಜಾಲಕ್ಕೆ ವಂಚಿತರಾಗಿ. ಇದಾದ ಬಳಿಕ ನಾನು ಮತ್ತೊಂದು ದಿವ್ಯ ದರ್ಶನವನ್ನು ಕಂಡೆ. ಸ್ವರ್ಗದಿಂದ ಬಂದ ಒಂದು ಮಹಾಶಬ್ದವನ್ನು ಆಲಿಸಿದೆ. ಅದು ದೊಡ್ಡ ಜನ ಸಮೂಹದ ಆರ್ಭಟದಂತಿತ್ತು. "ಅಲ್ಲೆಲೂಯ! ಜೀವೊದ್ಧಾರವೂ ಪ್ರಭಾವವೂ ಶಕ್ತಿಯೂ ನಮ್ಮ ದೇವರಲ್ಲುಂಟು. ಆತನ ನ್ಯಾಯ ತೀರ್ಪು ಸತ್ಯವಾದುದು, ನೀತಿ ಬದ್ಧವಾದುದು. ಇತ್ತಿರುವಾನಾತ ತೀರ್ಪನು ಮಹಾ ವೇಶ್ಯಯ ವಿರುದ್ಧ ಪೃಥ್ವಿಯನ್ನೆ ಹೊಲಸೆಬ್ಬಿಸಿದ ವ್ಯಭಿಚಾರಿಯ ವಿರುದ್ಧ. ತನ್ನ ದಾಸರ ರಕ್ತಪಾತದ   ಸೇಡನ್ನು ತೀರಿಸಿಹನಾತ," ಎಂದು ಜನಸಮೂಹವು ಘೋಷಿಸಿತು ಅವರು ಮತ್ತೊಮ್ಮ, "ಅಲ್ಲೆಲೂಯ! ಅವಳ ದಹನದಿಂದ ಹೊಗೆ ಸತತ ಮೇಲೇರುತಿಹುದು ಒಂದೇ ಸಮನೇ" ಎಂದು ಕೂಗಿದರು.

ಕೀರ್ತನೆ: 100:1b-2, 3, 4, 5
ಶ್ಲೋಕ:  ಯಜ್ಞದ ಕುರಿಮರಿಯ ವಿವಾಹದ ಔತಣಕ್ಕೆ ಆಹ್ವಾನಿತರು ಭಾಗ್ಯವಂತರು.

ಶುಭಸಂದೇಶ: ಲೂಕ  21:20-28

"ಜೆರುಸಲೇಮ್ ಪಟ್ಟಣವನ್ನು ಸೈನ್ಯಗಳು ಸುತ್ತುಗಟ್ಟುತ್ತಿರುವುದನ್ನು ನೀವು ಕಾಣುವಾಗ ಅದರ ವಿನಾಶ ಸಮೀಪಿಸಿತೆಂದು ತಿಳಿದುಕೊಳ್ಳಿ. ಆಗ ಜುದೇಯದಲ್ಲಿರುವವರು ಬೆಟ್ಟಗುಡ್ಡಗಳಿಗೆ ಓಡಿಹೋಗಲಿ; ಪಟ್ಟಣದೊಳಗಿರುವವರು ಅಲ್ಲಿಂದ ಹೊರಟು ಹೋಗಲಿ; ಹಳ್ಳಿಗಾಡಿನಲ್ಲಿರುವವರು ಪಟ್ಟಣಕ್ಕೆ ಬಾರದಿರಲಿ. ಏಕೆಂದರೆ ದಂಡನೆಯ ಕಾಲ ಅದು. ಅದನ್ನು ಕುರಿತು ಪವಿತ್ರ ಗ್ರಂಥದಲ್ಲಿ ಬರೆದಿರುವುದೆಲ್ಲಾ ಆಗ ನೆರವೇರಬೇಕು. ಅಯ್ಯೋ, ಆ ದಿನಗಳಲ್ಲಿ ಗರ್ಭಿಣಿಯರ ಮತ್ತು ಹಾಲೂಡಿಸುವ ತಾಯಂದಿರ ಗೋಳೇನು! ಈ ನಾಡು ಮಹಾವಿಪತ್ತಿಗೆ ಈಡಾಗುವುದು. ಈ ಜನತೆ ದೈವಕೋಪಕ್ಕೆ ಗುರಿಯಾಗುವುದು. ಕೆಲವರು ಕತ್ತಿಯ ಬಾಯಾಗೆ ತುತ್ತಾಗುವರು. ಮತ್ತೆ ಕೆಲವರು ಬಂಧಿತರಾಗಿ ದೇಶ ದೇಶಗಳಿಗೆ ಕೊಂಡೊಯ್ಯಲ್ಪಡುವರು; ಅನ್ಯ ದೇಶೀಯರು ತಮ್ಮ ಕಾಲಾವಧಿಯ ತನಕ ಜೆರುಸಲೇಮನ್ನು ತುಳಿದು ಹಾಕುವರು. ಸೂರ್ಯ, ಚಂದ್ರ, ನಕ್ಷತ್ರಗಳಲ್ಲಿ ವಿಚಿತ್ರ ಸೂಚನೆಗಳು ಕಾಣಿಸಿಕೊಳ್ಳುವುವು; ಮೊರೆಯುವ ತೆರೆಗಳ ಹಾಗೂ ಭೋರ್ಗರೆಯುವ ಸಮುದ್ರದ ನಿಮಿತ್ತ ಭೂಮಿಯಲ್ಲಿ ಜನಾಂಗಗಳು ದಿಕ್ಕು ತೋಚದೆ ತತ್ತರಿಸಿಹೋಗುವುವು. ಗ್ರಹಶಕ್ತಿಗಳು ಕದಲುವುದರಿಂದ ಧರೆಯಲ್ಲಿ ಏನೇನು ಸಂಭವಿಸುವುದೋ ಎಂಬ ಭಯಭೀತಿಯಿಂದ ಮಾನವರು ದಿಗ್ಬ್ರಮೆಗೊಳ್ಳುವರು. ಆಗ ನರಪುತ್ರನು ಮಹಾಶಕ್ತಿಯಿಂದಲೂ ಮಹಿಮಾ ಪ್ರಭಾವದಿಂದಲೂ ಮೇಘಾರೂಢನಾಗಿ ಬರುವುದನ್ನು ಜನರು ಕಾಣುವರು. ಇವೆಲ್ಲವೂ ಸಂಭವಿಸಲು ತೊಡಗುವಾಗ ನೀವು ನಿರೀಕ್ಷಿಸುತ್ತಾ ತಲೆಯೆತ್ತಿ ನಿಲ್ಲಿರಿ; ಏಕೆಂದರೆ, ನಿಮ್ಮ ಉದ್ದಾರವು ಸಮೀಪಿಸಿತು," ಎಂದರು ಯೇಸುಸ್ವಾಮಿ.

28.11.2018


ಸಾಧಾರಣ ಕಾಲದ 34ನೇ ಬುಧವಾರ

ಮೊದಲನೇ ವಾಚನ: ಪ್ರಕಟಣೆ 15:1-4

ಸ್ವರ್ಗದಲ್ಲಿ ಮತ್ತೊಂದು ಚಿಹ್ನೆಯನ್ನು ಕಂಡೆ. ಅದು ಅತ್ಯಾಶ್ಚರ್ಯಕರವಾಗಿ ಇತ್ತು. ಏಳು ದೇವದೂತರ ಕೈಯಲ್ಲಿ ಏಳು ವಿಪತ್ತುಗಳು ಇದ್ದವು. ಇವು ಅಂತಿಮವಾಗಿ ಬಂದೆರಗುವ ವಿಪತ್ತುಗಳು. ಏಕೆಂದರೆಅವುಗಳೊಡನೆ ದೇವರ ಕೋಪಾಗ್ನಿ ಪೂರ್ತಿಯಾಗಿ ಬಂದೆರಗುವುದು. ಇದಲ್ಲದೆ, ಗಾಜಿನ ಸಮುದ್ರದಂತಿದ್ದ ಒಂದು ವಸ್ತು ಕಾಣಿಸಿತು; ಅದು ಬೆಂಕಿಯಿಂದ ಕೂಡಿತ್ತು. ಮೃಗದ ವಿರುದ್ಧ ಅದರ ವಿಗ್ರಹದ ವಿರುದ್ಧ ಹಾಗೂ ಅದರ ಹೆಸರನ್ನು ಸೂಚಿಸುವ ಸಂಖ್ಯೆಯ ವಿರುದ್ಧ  ಜಯಗಳಿಸಿದವರನ್ನು ಸಹ ಕಂಡೆ. ಅವರು ಗಾಜಿನ ಸಮುದ್ರದ ಬಳಿ ನಿಂತಿದ್ದರು; ಕೈಗಳಲ್ಲಿ ದೇವರಿತ್ತ ಕಿನ್ನರಿಗಳಿದ್ದವು. ಅವರು ದೇವರ ದಾಸನಾದ ಮೋಶೆಯ ಗೀತೆಯನ್ನೂ ಯಜ್ಞದ ಕುರಿಮರಿಯ ಗೀತೆಯನ್ನು ಹಾಡುತ್ತಿದ್ದರು. ಅದು ಯಾವುದೆಂದರೆ: "ಹೇ ದೇವಾ, ಹೇ ಪ್ರಭೂ, ನೀ ಸರ್ವಶಕ್ತ! ಏನು ಘನ, ಏನು ಅದ್ಬುತ, ನಿನ್ನ ಸತ್ಕಾರ್ಯ! ರಾಷ್ಟ್ರಗಳಿಗೆಲ್ಲಾ ನೀ ರಾಜಾಧಿರಾಜ ನಿಜವಾದುದು, ಋಜುವಾದುದು ನಿನ್ನ ಸನ್ಮಾರ್ಗ ಹೇ ಪ್ರಭೂ, ನಿನಗಂಜದವರಾರು? ನಿನ್ನ ನಾಮಸ್ತುತಿ ಮಾಡದವರಾರು? ಪರಮಪವಿತ್ರ ನೀನಲ್ಲದಿನ್ನಾರು? ಪ್ರಕಟವಾಗಿದೆ ನನ್ನ ನೀತಿಯುತ ಕಾರ್ಯಗಳು ಬಂದೆರಗಲಿವೆ ನಿನಗೆ  ಸಕಲ ಜನಾಂಗಗಳೂ,"

ಕೀರ್ತನೆ:981, 2-3ab, 7-8, 9
ಶ್ಲೋಕ: ಹೇ ದೇವಾ, ಹೇ ಪ್ರಭೂ, ನೀ ಸರ್ವಶಕ್ತ! ಏನು ಘನ, ಏನು ಅದ್ಭುತ, ನಿನ್ನ ಸತ್ಕಾರ್ಯ!

ಶುಭಸಂದೇಶ:ಲೂಕ 21:12-19

"ಇದೆಲ್ಲಾ ಸಂಭವಿಸುವುದಕ್ಕೆ ಮುಂಚೆ ನಿಮ್ಮನ್ನು ಬಂಧಿಸಿ ಹಿಂಸೆಗೊಳಪಡಿಸುವರು. ಪ್ರಾರ್ಥನಾ ಮಂದಿರಗಳಿಗೂ ಕಾರಾಗೃಹಗಳಿಗೂ ಎಳೆದೊಪ್ಪಿಸುವರು; ನನ್ನ ನಾಮದ ನಿಮಿತ್ತ ನಿಮ್ಮನ್ನು ಅರಸರ ಹಾಗೂ ಅಧಿಪತಿಗಳ ಮುಂದಕ್ಕೆ ಎಳೆಯುವರು. ಶುಭಸಂದೇಶಕ್ಕೆ ಸಾಕ್ಷಿಕೊಡಲು ಇದು ನಿಮಗೆ ಸದವಕಾಶವಾಗಿರುತ್ತದೆ. ಆಗ ವಾದಿಸುವುದು ಹೇಗೆಂದು ನೀವು ಮುಂಚಿತವಾಗಿ ಚಿಂತಿಸಬೇಕಾಗಿಲ್ಲ; ಇದು ನಿಮಗೆ ಮನದಟ್ಟಾಗಿರಲಿ. ಏಕೆಂದರೆ ನಿಮ್ಮ ವಿರೋಧಿಗಳಾರೂ ಪ್ರತಿಭಟಿಸಲು ಅಥವಾ ವಿರೋಧಿಸಲು ಆಗದಂಥ ವಾಕ್ಚಾತುರ್ಯವನ್ನೂ ಜ್ಞಾನಶಕ್ತಿಯನ್ನೂ ನಿಮಗೆ ಕೊಡುವೆನು. ನಿಮ್ಮ ತಂದೆ ತಾಯಿಗಳೇ, ಒಡಹುಟ್ಟಿದವರೇ, ಬಂಧು ಮಿತ್ರರೇ, ನಿಮ್ಮನ್ನು ಪರಾಧೀನ ಮಾಡುವರು; ಮಾತ್ರವಲ್ಲ, ನಿಮ್ಮಲ್ಲಿ ಕೆಲವರನ್ನು ಕೊಂದು ಹಾಕಿಸುವರು. ನೀವು ನನ್ನವರು ಆದುದರಿಂದಲೇ ಎಲ್ಲರೂ ನಿಮ್ಮನ್ನು ದ್ವೇಷಿಸುವರು. ಆದರೂ ನಿಮ್ಮ ತಲೆ ಕೂದಲೊಂದು ನಾಶವಾಗುವುದಿಲ್ಲ. ಸೈರಣೆಯಿಂದಿರಿ, ಸಂರಕ್ಷಣೆಯನ್ನು ಪಡೆಯುವಿರಿ," ಎಂದರು ಯೇಸುಸ್ವಾಮಿ.

27.11.2018

ಸಾಧಾರಣ ಕಾಲದ ೩೪ನೇ ಮಂಗಳವಾರ

ಮೊದಲನೇ ವಾಚನ: ಪ್ರಕಟನೆ 14:14-19 

ಅನಂತರ ನನ್ನ ಕಣ್ಣಿಗೆ ಒಂದು ಬಿಳಿಯ ಮೋಡ ಕಾಣಿಸಿತು. ಆ ಮೋಡದ ಮೇಲೆ ನರಪುತ್ರನಂಥ ವ್ಯಕ್ತಿಯೊಬ್ಬನು ಕುಳಿತಿದ್ದನು. ಆತನ ತಲೆಯ ಮೇಲೆ ಚಿನ್ನದ ಕಿರೀಟವಿತ್ತು; ಕೈಯಲ್ಲಿ ಹರಿತವಾದ ಕುಡುಗೋಲಿತ್ತು. ಇನ್ನೊಬ್ಬ ದೇವದೂತನು ದೇವಮಂದಿರದಿಂದ ಹೊರಗೆ ಬಂದನು. ಈತನು ಮೋಡದ ಮೇಲೆ ಕುಳಿತಿದ್ದ ಅವನನ್ನು ಉದ್ದೇಶಿಸಿ, "ಭೂಮಿಯ ಫಸಲು ಮಾಗಿದೆ, ಕೊಯ್ಲಿನ ಕಾಲ ಬಂದಿದೆ. ನಿನ್ನ ಕುಡುಗೋಲನ್ನು ತೆಗೆದು ಕೊಯಿಲು ಮಾಡಲು ಆರಂಬಿಸು", ಎಂದು ಗಟ್ಟಿಯಾಗಿ ಕೂಗಿ ಹೇಳಿದನು. ಆಗ ಮೋಡದ ಮೇಲೆ ಕುಳಿತಿದ್ದವನು ತನ್ನ ಕುಡುಗೋಲನ್ನು ಭೂಮಿಯ ಮೇಲೆ ಬೀಸಿದನು. ಭೂಮಿಯ ಕೊಯಿಲು ಮುಗಿಯಿತು. ಮಗದೊಬ್ಬ ದೇವದೂತನು ಸ್ವರ್ಗದ ದೇವಮಂದಿರದಿಂದ ಹೊರಗೆ ಬಂದನು. ಆತನ ಕೈಯಲ್ಲೂ ಹರಿತವಾದ ಕುಡುಗೋಲು ಇತ್ತು ಬೆಂಕಿಯ ಮೇಲೆ ಅಧಿಕಾರ ಪಡೆದಿದ್ದ ಒಬ್ಬ ದೇವದೂತನು, ಆಗ ಬಲಿಪೀಠದ ಬಳಿಯಿಂದ ಬಂದನು. ಈತ ಕೈಯಲ್ಲಿ ಹರಿತವಾದ ಕುಡುಗೋಲನ್ನು ಹಿಡಿದಿದ್ದ ದೇವದೂತನನ್ನು ಉದ್ದೇಶಿಸಿ, "ನಿನ್ನ ಹರಿತವಾದ ಕುಡುಗೋಲನ್ನು ಕಳುಹಿಸು, ಭೂಮಿಯ ದ್ರಾಕ್ಷಾಫಲಗಳು ಪೂರ್ಣವಾಗಿ ಮಾಗಿವೆ; ಆ ಗೊಂಚಲುಗಳನ್ನು ಕೊಯ್ಯಬೇಕಾಗಿದೆ", ಎಂದು ಕೂಗಿ ಹೇಳಿದನು. ಆ ದೇವದೂತನು ತನ್ನ ಕುಡುಗೋಲನ್ನು ಭೂಮಿಯ ಮೇಲೆ ಬೀಸಿ ದ್ರಾಕ್ಷಿಯ ಗೊಂಚಲುಗಳನ್ನು ಕೊಯ್ದನು; ಅವುಗಳನ್ನು ದೇವರ ರೋಷವೆಂಬ ದ್ರಾಕ್ಷಿಯ ದೊಡ್ಡ ಆಲೆಗೆ ಎಸೆದನು. 

ಕೀರ್ತನೆ: 96:10, 11-12, 13 
ಶ್ಲೋಕ: ಪ್ರಭು ನ್ಯಾಯತೀರಿಸಲು ಧರೆಗೆ ಬಂದೇ ಬರುವನು ಖರೆಯಾಗಿ.  

ಶುಭಸಂದೇಶ: ಲೂಕ 21:5-11 

"ಈ ಮಹಾದೇವಾಲಯವು ಅಂದವಾದ ಕಲ್ಲುಗಳಿಂದಲೂ ಅಮೂಲ್ಶವಾದ ಕೊಡುಗೆಗಳಿಂದಲೂ ಎಷ್ಟು ಅಲಂಕೃತವಾಗಿದೆ!" ಎಂದು ಕೆಲವರು ಮಾತನಾಡುತ್ತಿದ್ದರು. ಆಗ ಯೇಸು, "ಇವುಗಳನ್ನು ನೀವು ನೋಡುತ್ತಿದ್ದೀರಲ್ಲವೆ? ಇಲ್ಲಿ ಕಲ್ಲಿನ ಮೇಲೆ ಕಲ್ಲು ಉಳಿಯದು; ಎಲ್ಲವನ್ನೂ ಕೆಡವಿಹಾಕುವ ಕಾಲವೊಂದು ಬರುವುದು," ಎಂದರು. "ಗುರುವೇ, ಇದು ಸಂಭವಿಸುವುದು ಯಾವಾಗ? ಇದೀಗಲೇ ಸಂಭವಿಸಲಿದೆ ಎಂದು ತಿಳಿಸುವ ಪೂರ್ವಸೂಚನೆ ಯಾವುದು?" ಎಂದು ಕೆಲವರು ಕೇಳಿದರು. ಅದಕ್ಕೆ ಯೇಸುಸ್ವಾಮಿ, "ನೀವು ಮೋಸಹೋಗದಂತೆ ಜಾಗರೂಕರಾಗಿರಿ. ಅನೇಕರು"ನಾನೇ ಆತ, ನಾನೇ ಆತ," ಎನ್ನುತ್ತಾ ನನ್ನ ಹೆಸರನ್ನೇ ಇಟ್ಟುಕೊಂಡು ಬಂದು, "ಕಾಲವು ಸಮೀಪಿಸಿಬಿಟ್ಟಿತು," ಎಂದು ಹೇಳುತ್ತಾರೆ. ಅವರನ್ನು ಹಿಂಬಾಲಿಸಬೇಡಿ. ಸಮರ ಸಂಕಲಹಗಳ ಸುದ್ಧಿ ಬಂದಾಗ ದಿಗಿಲುಗೊಳ್ಳಬೇಡಿ; ಇವೆಲ್ಲವೂ ಮೊದಲು ಸಂಭವಿಸಲೇಬೇಕು. ಆದರೂ ಅಂತ್ಯವು ಕೂಡಲೇ ಬರುವುದಿಲ್ಲ," ಎಂದರು. ಅದೂ ಅಲ್ಲದೆ ಯೇಸು ಇಂತೆಂದರು: "ಜನಾಂಗಕ್ಕೆ ವಿರುದ್ಧವಾಗಿ ಜನಾಂಗ, ರಾಷ್ಟ್ರಕ್ಕೆ ವಿರುದ್ಧವಾಗಿ ರಾಷ್ಟ್ರ ಯುದ್ಧಕ್ಕಿಳಿಯುವುವು; ಭೀಕರ ಭೂಕಂಪಗಳಾಗುವುವು; ಕ್ಷಾಮಡಾಮರಗಳು ತಲೆದೋರುವುವು; ಭಯಂಕರ ಘಟನೆಗಳೂ ಬಾಹ್ಯಾಕಾಶದಲ್ಲಿ ಅಪೂರ್ವ ಸೂಚನೆಗಳೂ ಕಾಣಿಸಿಕೊಳ್ಳುವುವು.

26.11.2018

ಸಾಧಾರಣ ಕಾಲದ ೩೪ನೇ ಸೋಮವಾರ

ಮೊದಲನೇ ವಾಚನ: ಪ್ರಕಟನೆ 14:1-3, 4-5 

ಅನಂತರ ಸಿಯೋನ್ ಬೆಟ್ಟದ ಮೇಲೆ ಯಜ್ಞದ ಕುರಿಮರಿಯಾದಾತನು. ನಿಂತಿರುವುದನ್ನು ಕಂಡೆ. ಆತನ ಸಂಗಡ ಒಂದು ಲಕ್ಷದ ನಲವತ್ತನಾಲ್ಕು ಸಾವಿರ ಮಂದಿ ಇದ್ದರು. ಇವರು ತಮ್ಮ ಹಣೆಯ ಮೇಲೆ ಯಜ್ಞದ ಕುರಿಮರಿಯ ಮತ್ತು ಆತನ ಪಿತನ ನಾಮಾಂಕಿತವನ್ನು ಬರೆಸಿಕೊಂಡಿದ್ದರು. ಇದಲ್ಲದೆ, ಸ್ವರ್ಗದಿಂದ ಮಹಾಧ್ವನಿಯೊಂದು ಕೇಳಿಸಿತು. ಅದು ಭೋರ್ಗರೆಯುವ ಜಲ ಪ್ರವಾಹದಂತೆಯೂ ದೊಡ್ಡ ಗುಡುಗಿನ ಗರ್ಜನೆಯಂತೆಯೂ ಇತ್ತು. ನಾವು ಕೇಳಿದಂಥ ದ್ವನಿ ಕಿನ್ನರಿಯನ್ನು ನುಡಿಸುತ್ತಿರುವ ವಾದ್ಯಗಾರರ ಸ್ವರದಂತಿತ್ತು. ಒಂದು ಲಕ್ಷದ ನಲವತ್ತನಾಲ್ಕು ಸಾವಿರ ಜನರು ಸಿಂಹಾಸನದ ಸಾನ್ನಿಧ್ಯದಲ್ಲಿಯೂ ನಾಲ್ಕು ಜೀವಿಗಳ ಮುಂದೆಯೂ ಸಭಾಪ್ರಮುಖರ ಎದುರಿನಲ್ಲಿಯೂ ನಿಂತು ಒಂದು ಹೊಸಗೀತೆಯನ್ನು ಹಾಡುತ್ತಿದ್ದರು. ಇಡೀ ಮಾನವಕುಲದವರಲ್ಲಿ ವಿಮೋಚನೆಯನ್ನು ಹೊಂದಿದವರು ಇವರೇ,  ಇವರನ್ನುಳಿದು ಬೇರೆ ಯಾರಿಂದಲೂ ಆ ಹಾಡನ್ನು ಕಲಿಯಲಾಗಲಿಲ್ಲ. ಇವರು ಸ್ತ್ರೀಸಂಸರ್ಗದಿಂದ ಮಲಿನರಾಗದವರು; ಕನ್ಯೆಯರಂತೆ ಕಳಂಕರಹಿತರು; ಇವರು ಯಜ್ಞದ ಕುರಿಮರಿ ಹೋದಡೆಯಲ್ಲೆಲ್ಲಾ ಹಿಂಬಾಲಿಸುವವರು; ದೇವರಿಗೂ ಯಜ್ಞದ ಕುರಿಮರಿಗೂ ಅರ್ಪಿತವಾದ ಪ್ರಥಮ ಫಲದಂತೆ ಮಾನವಕುಲದವರಲ್ಲಿ ವಿಮೋಚನೆಯನ್ನು ಹೊಂದಿದವರು ಇವರು. ಸುಳ್ಳ ಮಾತು ಅವರ ಬಾಯಿಂದ ಬರುವುದಿಲ್ಲ ;  ಅವರು ನಿರ್ದೋಷಿಗಳು. 

ಕೀರ್ತನೆ: 24:1bc-2, 3-4ab, 5-6 
ಶ್ಲೋಕ: ಇಂಥವರೇ ದೇವರ ದರ್ಶನಾಭ್ಯರ್ಥಿಗಳು. 

ಶುಭಸಂದೇಶ: ಲೂಕ 21:1-4 

ದೇವಾಲಯದ ಕಾಣಿಕೆಯ ಪೆಟ್ಟಿಗೆಯಲ್ಲಿ ಧನವಂತರು ತಮ್ಮ ಕಾಣಿಕೆಗಳನ್ನು ಹಾಕುತ್ತಿದ್ದುದನ್ನು ಯೇಸುಸ್ವಾಮಿ ಗಮನಿಸಿದರು. ಅಷ್ಟರಲ್ಲಿ ಒಬ್ಬ ಬಡವಿಧವೆ ಅಲ್ಲಿಗೆ ಬಂದು, ತಾಮ್ರದ ಚಿಕ್ಕ ನಾಣ್ಯಗಳೆರಡನ್ನು ಕಾಣಿಕೆಯಾಗಿ ಹಾಕಿದಳು. ಅದನ್ನು ಕಂಡು ಯೇಸು, "ಈ ಬಡವಿಧವೆ ಅವರೆಲ್ಲರಿಗಿಂತಲೂ ಹೆಚ್ಚಾಗಿ ಅರ್ಪಿಸಿದಳೆಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ. ಅವರೆಲ್ಲರು ತಮ್ಮ ಅಪರಮಿತ ಐಶ್ವರ್ಯದಿಂದ ಕಾಣಿಕಯಿತ್ತರು; ಈಕೆಯಾದರೋ, ತನ್ನ ಕಡುಬಡತನದಲ್ಲೂ ತನಗಿದ್ದ ಜೀವನಾಧಾರವನ್ನೆಲ್ಲಾ ಕೊಟ್ಟುಬಿಟ್ಟಳು," ಎಂದರು.

25.11.2018

ಸಾಧಾರಣ ಕಾಲದ ೩೪ನೇ ಭಾನುವಾರ

ಮೊದಲನೇ ವಾಚನ : ದಾನಿಯೇಲ 7:13-14 

ನಾನು ಕಂಡರಾತ್ರಿಯ ಕನಸ್ಸಿನಲ್ಲಿ ನರಪುತ್ರ-ನಂತಿರುವವನು ಆಕಾಶದ ಮೇಘಗಳೊಂದಿಗೆ ಬಂದು ಆ ಮಹಾವೃದ್ಧನನ್ನು ಸಮೀಪಿಸಿದನು. ಅವನನ್ನು ಆತನ ಸನ್ನಿಧಿಗೆ ತಂದರು. ಸಕಲ ರಾಷ್ಟ್ರ-ಕುಲ-ಭಾಷೆಗಳವರು. ಅವನಿಗೆ ಸೇವೆ ಸಲ್ಲಿಸಲೆಂದು ಅವನಿಗೆ ದೊರೆತನ, ಘನತೆ, ರಾಜ್ಯತ್ವ ಇವುಗಳನ್ನು ಕೊಡಲಾಯಿತು. ಅವನ ಆಳ್ವಿಕೆಗೆ ಅಂತ್ಯವಿಲ್ಲ, ಅದು ಶಾಶ್ವತವಾದುದು,  ಅವನ ರಾಜ್ಯ ಎಂದಿಗೂ ಅಳಿಯದು! 

ಕೀರ್ತನೆ:93:3, 1-2, 5 
ಶ್ಲೋಕ: ವಹಿಸಿಹನು ಪ್ರಭು ರಾಜ್ಯಾಧಿಕಾರವನು. 

ಎರಡನೇ ವಾಚನ: ಪ್ರಕಟನೆ 1:5-8 

ನಂಬಲರ್ಹವಾದ ಸಾಕ್ಷಿಯೂ ಮೃತ್ಯು-ವಿನಿಂದ ಪುನರುತ್ದಾನ ಹೊಂದಿದವರಲ್ಲಿ ಪ್ರಪ್ರಥಮರೂ ಭೂರಾಜರ ಒಡೆಯರೂ ಆದ ಯೇಸುಕ್ರಿಸ್ತರಿಂದಲೂ ನಿಮಗೆ ಕೃಪಾಶೀರ್ವಾದವೂ ಶಾಂತಿಸಮಾಧಾನವೂ ಲಭಿಸಲಿ! ನಮ್ಮನ್ನು ಪ್ರೀತಿಸುವವರೂ ತಮ್ಮ ರಕ್ತದಿಂದ ನಮ್ಮ ಪಾಪಗಳನ್ನು ತೊಳೆದವರೂ ತಮ್ಮ ಪಿತನಾದ ದೇವರ ಸೇವೆಗೆ ನಮ್ಮನ್ನು ದೈವೀರಾಜ್ಯದ ಯಾಜಕರನ್ನಾಗಿ ಮಾಡಿದವರೂ ಆದ ಯೇಸುಕ್ರಿಸ್ತರಿಗೆ ಮಹಿಮೆ ಮತ್ತು ಅಧಿಪತ್ಯ ಯುಗಯುಗಾಂತರಕ್ಕೂ ಸಲ್ಲಲಿ! ಆಮೆನ್, ಇಗೋ ನೋಡು, ಮೇಘಾರೂಢನಾಗಿ ಬರುತಿಹನು ಪ್ರತಿಯೊಂದು ಕಣ್ಣೂ ಕಾಣುವುದು ಆತನನ್ನು, ಆತನನ್ನು ಇರಿದವರೂ ವೀಕ್ಷಿಸುವರು, ಗೋಳಾಡುವರಾತನನ್ನು ಕಂಡು ಲೋಕದ ಜನರೆಲ್ಲರು ಹೌದು, ಅದರಂತೆಯೇ ಆಗುವುದು, ಆಮೆನ್. "ಅ'ಕಾರವೂ, 'ಳ' ಕಾರವೂ ನಾನೇ. ವರ್ತಮಾನಕಾಲದಲ್ಲಿ, 'ಇರುವಾತನೂ' ಭೂತಕಾಲದಲ್ಲಿ 'ಇದ್ಧಾತನೂ' ಭವಿಷ್ಯತ್ಕಾಲದಲ್ಲಿ 'ಬರುವಾತನೂ' ಸರ್ವಶಕ್ತನೂ ನಾನೇ" ಎಂದು ಪ್ರಭು ದೇವರು ನುಡಿಯುತ್ತಾರೆ. 

ಶುಭಸಂದೇಶ ಯೊವಾನ್ನ  18:33-37 

ಆಗ ಪಿಲಾತನು ಅರಮನೆಯೊಳಗೆ ಹೋಗಿ ಯೇಸುಸ್ವಾಮಿಯನ್ನು ಕರೆಯಿಸಿ, "ನೀನು ಯೆಹೂದ್ಯರ ಅರಸನೋ?" ಎಂದು ಕೇಳಿದನು. ಅದಕ್ಕೆ ಯೇಸು, "ನೀವಾಗಿಯೇ ಇದನ್ನು ಹೇಳುತ್ತಿರುವಿರೋ ಅಥವಾ ಬೇರೆ ಯಾರಾದರೂ ನನ್ನನ್ನು ಕುರಿತು ಹೀಗೆ ಹೇಳಿದರೋ?" ಎನ್ನಲು ಪಿಲಾತನು, "ನಾನೇನು ಯೆಹೂದ್ಯನೇ? ನಿನ್ನ ಸ್ವಂತ ಜನರು ಮತ್ತು ಮುಖ್ಯಯಾಜಕರು ನಿನ್ನನ್ನು ನನ್ನ ಕೈಗೆ ಒಪ್ಪಿಸಿದ್ದಾರೆ ನೀನು ಏನು ಮಾಡಿದ್ದೀಯ?" ಎಂದು ಕೇಳಿದನು. ಅದಕ್ಕೆ ಯೇಸು, "ನನ್ನ ಸಾಮ್ರಾಜ್ಯ ಈ ಲೋಕದ್ದಲ್ಲ, ನನ್ನ ಸಾಮ್ರಾಜ್ಯ ಈ ಲೋಕದ್ದಾಗಿದ್ದರೆ, ಯೆಹೂದ್ಯರ ಕೈಗೆ ನಾನು ಬೀಳದಂತೆ ನನ್ನ ಅನುಯಾಯಿಗಳು ಕಾದಾಡುತ್ತಿದ್ದರು. ನಿಜವಾಗಿಯೂ ನನ್ನ ಸಾಮ್ರಾಜ್ಯ ಇಹಲೋಕದ್ದಲ್ಲ." ಎಂದರು. ಪಿಲಾತನು, "ಹಾಗಾದರೆ ನೀನೊಬ್ಬ ಅರಸನೋ?" ಎಂದು ಕೇಳಲು ಯೇಸು,' "ಅರಸ, ಎನ್ನುವುದು ನೀವು ಹೇಳುವ ಮಾತು. ಸತ್ಯವನ್ನು ಕುರಿತು ಸಾಕ್ಷಿ ಹೇಳುವುದು ನನ್ನ ಕೆಲಸ. ಅದಕ್ಕಾಗಿಯೇ ನಾನು ಹುಟ್ಟಿದುದು. ಅದಕ್ಕಾಗಿಯೇ ನಾನು ಜಗತ್ತಿಗೆ ಬಂದುದು. ಸತ್ಯಪರರೆಲ್ಲರೂ ನನ್ನ ಮಾತಿಗೆ ಕಿವಿಗೊಡುತ್ತಾರೆ," ಎಂದು ಹೇಳಿದರು.

24.11.2018

ಸಾಧಾರಣ ಕಾಲದ 33ನೇ ಶನಿವಾರ  

ಮೊದಲನೇ ವಾಚನ: ಪ್ರಕಟನೆ 11:4-12 

ಲೋಕಾಧಿಪತಿಯಾದ ದೇವರ ಸಾನ್ನಿಧ್ಯದಲ್ಲಿರುವ ಎರಡು ಓಲಿವ್ ಮರಗಳು ಮತ್ತು ಎರಡು ದೀಪಸ್ತಂಭಗಳು ಇವರೇ. ಯಾವನಾದರೂ ಇವರಿಗೆ ಕೇಡು ಬಗೆದರೆ ಇವರ ಬಾಯಿಯಿಂದ ಬೆಂಕಿ ಹೊರಟು ಇವರ ಶತ್ರುಗಳನ್ನು ದಹಿಸಿಬಿಡುತ್ತದೆ. ಇವರಿಗೆ ಕೇಡು ಬಗೆಯಬೇಕೆಂದಿರುವವನು ಹೀಗೆಯೇ ಹತನಾಗುತ್ತಾನೆ. ತಾವು ಪ್ರವಾದನೆ ಮಾಡುವ ದಿನಗಳಲ್ಲಿ ಮಳೆಬಾರದಂತೆ ಆಕಾಶವನ್ನು ಮುಚ್ಚಿಬಿಡುವ ಸಾಮರ್ಥ್ಯ ಇವರಿಗಿದೆ. ಇದಲ್ಲದೆ, ಇವರಿಗೆ ಇಷ್ಟ ಬಂದಾಗಲೆಲ್ಲಾ ನೀರನ್ನು ರಕ್ತವನ್ನಾಗಿ ಪರಿವರ್ತಿಸುವ ಹಾಗು ಸಕಲ ವಿಧವಾದ ಉಪದ್ರವಗಳಿಂದ ಜಗತ್ತನ್ನು ಪೀಡಿಸುವ ಅಧಿಕಾರ ಇವರಿಗೆ ಇರುತ್ತದೆ. ಇವರ ಸಾಕ್ಷ್ಯ ನೀಡಿಕೆ ಮುಗಿದನಂತರ ಪಾತಾಳಕೂಪದಿಂದ ಮೃಗವೊಂದು ಮೇಲೇರಿ ಬರುತ್ತದೆ; ಅದು ಇವರೊಡನೆ ಯುದ್ದಮಾಡಿ, ಜಯಗಳಿಸಿ, ಇವರನ್ನು ಕೊಂದುಹಾಕುತ್ತದೆ. ಈ ಸಾಕ್ಷಿಗಳ ಶವಗಳು ಆ ಮಹಾನಗರದ ಬೀದಿ ಪಾಲಾಗುವುವು. ಆ ನಗರವನ್ನು ಸೊದೋಮ್ ಇಲ್ಲವೆ ಈಜಿಪ್ಪ್ ಎಂದು ಸೂಚ್ಯವಾಗಿ ಕರೆಯಲಾಗಿದೆ. ಈ ಸಾಕ್ಷಿಗಳ ಪ್ರಭುವನ್ನು ಸಹ ಇಲ್ಲಿಯೇ ಶಿಲುಬೆಗೇರಿಸಲಾಯಿತು. ಸಕಲ ದೇಶ, ಭಾಷೆ, ಕುಲ, ಗೋತ್ರಗಳ ಜನರು ಈ ಸಾಕ್ಷಿಗಳ ಶವಗಳನ್ನು ಮೂರುವರೆ ದಿನಗಳ ತನಕ ದಿಟ್ಟಿಸಿ ನೋಡುವರು; ಅವುಗಳನ್ನು ಸಮಾಧಿ ಮಾಡಲು ಬಿಡಲೊಲ್ಲರು. ಭೂ ನಿವಾಸಿಗಳನ್ನು ಪೀಡಿಸಿದ್ದ ಆ ಇಬ್ಬರು ಪ್ರವಾದಿಗಳು ಸತ್ತದ್ದಕ್ಕಾಗಿ ಲೋಕದ ಜನರು ಸಂತೋಷದಿಂದ ಸಂಭ್ರಮಿಸುವರು. ಒಬ್ಬರಿಗೊಬ್ಬರು ಬಹುಮಾನಗಳನ್ನು ಹಂಚಿಕೊಳ್ಳುವರು. ಮೂರುವರೆ  ದಿನಗಳಾದ ಮೇಲೆ ದೇವರಿಂದ ಜೀವದಾಯಕ ಉಸಿರು ಬಂದು ಆ ಶವಗಳನ್ನು ಹೊಕ್ಕಾಗ ಅವರು ಎದ್ದು ನಿಂತರು. ಇದನ್ನು ಕಂಡವರೆಲ್ಲರೂ ಭಯದಿಂದ ನಡುಗಿದರು. ಆನಂತರ ಆ ಪ್ರವಾದಿಗಳಿಗೆ, "ಮೇಲೇರಿ ಬನ್ನಿ," ಎಂದು ಸ್ವರ್ಗದಿಂದ ಒಂದು ಮಹಾವಾಣಿ ತಿಳಿಸಿತು. ಶತ್ರುಗಳು ಅವರನ್ನು ನೋಡುತ್ತಿದ್ದಂತೆಯೇ ಅವರು ಮೇಘಾರೂಢರಾಗಿ ಸ್ವರ್ಗಕ್ಕೇರಿದರು. 

ಕೀರ್ತನೆ:144:1, 2, 9-10 
ಶ್ಲೋಕ: ಸ್ತುತಿಸ್ತೋತ್ರ ಪ್ರಭುವಿಗೆ, ನನ್ನಾಶ್ರಯದುರ್ಗಕೆ. 

ಶುಭಸಂದೇಶ: ಲೂಕ 20: 27-40 

ಅನಂತರ,  ಸತ್ತಮೇಲೆ ಪುನರುತ್ದಾನ ಇಲ್ಲ ಎಂದು ವಾದಿಸುತ್ತಿದ್ದ ಸದ್ದುಕಾಯರಲ್ಲಿ ಕೆಲವರು ಯೇಸುಸ್ವಾಮಿಯ ಬಳಿಗೆ ಬಂದು ಈ ಪ್ರಶ್ನೆ ಹಾಕಿದರು: "ಭೋದಕರೇ, ಒಬ್ಬನು ಮಕ್ಕಳಿಲ್ಲದೆ ಸತ್ತರೆ, ಅವನ ಹೆಂಡತಿಯನ್ನು ಅವನ ತಮ್ಮನು ಮದುವೆ ಮಾಡಿಕೊಂಡು ಅಣ್ಣನಿಗೆ ಸಂತಾನ ಪಡೆಯಬೇಕು," ಎಂದು ಮೋಶೆ ನಮಗಾಗಿ ಬರೆದಿಟ್ಟಿದ್ದಾನಲ್ಲವೆ? ಒಮ್ಮೆ ಏಳುಮಂದಿ ಅಣ್ಣತಮ್ಮಂದಿರಿದ್ದರು. ಅವರಲ್ಲಿ ಮೊದಲನೆಯವನಿಗೆ ಮದುವೆಯಾಯಿತು; ಆದರೆ ಅವನು ಮಕ್ಕಳಿಲ್ಲದೆ ಮೃತನಾದ. ಅವನ ಹೆಂಡತಿಯನ್ನು ಎರಡನೆಯವನು, ಆನಂತರ ಮೂರನೆಯವನು, ತದನಂತರ ಮಿಕ್ಕವರು, ಹೀಗೆ ಏಳು ಮಂದಿಯೂ ಒಬ್ಬರಾದ ಮೇಲೆ ಒಬ್ಬರು ಮದುವೆಯಾಗಿ ಸಂತಾನ ಇಲ್ಲದೆಯೇ ನಿಧನರಾದರು. ಕಟ್ಟಕಡೆಗೆ ಆ ಮಹಿಳೆಯೂ ಮರಣಹೊಂದಿದಳು. ಹೀಗಿರುವಲ್ಲಿ ಪುನರುತ್ದಾನದ ದಿನ ಸತ್ತವರೆಲ್ಲರೂ ಜೀವದಿಂದ ಎದ್ದುಬರುವಾಗ, ಆಕೆ ಯಾರ ಪತ್ನಿಯಾಗುವಳು? ಏಳು ಮಂದಿ ಸಹೋದರರು ಆಕೆಯನ್ನು ವಿವಾಹ ಆಗಿದ್ದರಲ್ಲವೇ?" ಎಂದರು. ಅದಕ್ಕೆ ಯೇಸು, "ಈ ಲೋಕದ ಜೀವನದಲ್ಲಿ ಜನರು ಮದುವೆ ಮಾಡಿಕೊಳ್ಳುತ್ತಾರೆ, ಮದುವೆ ಮಾಡಿಕೊಡುತ್ತಾರೆ, ಆದರೆ ಸತ್ತವರು ಪುನರುತ್ದಾನ ಹೊಂದಿ ಮರುಲೋಕ ಜೀವಕ್ಕೆ ಯೋಗ್ಯರಾದಗ ಮದುವೆ ಮಾಡಿಕೊಳ್ಳುವುದೂ ಇಲ್ಲ, ಮದುವೆ ಮಾಡಿಕೊಡುವುದೂ ಇಲ್ಲ. ಅವರು ಅಲ್ಲಿ ದೇವದೂತರಿಗೆ ಸಮಾನರಾಗಿರುವರು; ಅವರು ಎಂದಿಗೂ ಸಾಯುವಂತಿಲ್ಲ; ಪುನರುತ್ದಾನದ ಫಲ ಆಗಿರುವ ಅವರು ದೇವರ ಮಕ್ಕಳಾಗಿರುವರು. ಸತ್ತವರು ಪುನರುತ್ಥಾನ ಹೊಂದುವುದನ್ನು ಮೋಶೆಯ ಗ್ರಂಥದಲ್ಲಿ, ಅಂದರೆ ’ಉರಿಯುವ ಪೂದೆ'ಯ ಪ್ರಸ್ತಾಪವಿರುವ ಭಾಗದಲ್ಲಿ ಸ್ಪಷ್ಟ ಪಡಿಸಲಾಗಿದೆ. ಅಲ್ಲಿ ಸರ್ವೇಶ್ವರನನ್ನು, 'ಅಬ್ರಹಾಮನ ದೇವರು, ಇಸಾಕನ ದೇವರು, ಯಕೊಬನ ದೇವರು ಆಗಿದ್ದಾರೆ' ಎಂದು ಹೇಳಲಾಗಿದೆ. "ಹೀಗಿರುವಲ್ಲಿ ದೇವರು ಜೀವಂತರ ದೇವರೆ ಹೊರತು ಮೃತರ ದೇವರಲ್ಲ ಅವರ ದೃಷ್ಟಿಯಲ್ಲಿ ಸರ್ವರೂ ಜೀವಂತರು," ಎಂದರು. ಇದನ್ನು ಕೇಳಿದ ಕೆಲವು ಧರ್ಮಶಾಸ್ತ್ರಿಗಳು,  "ಭೋದಕರೇ, ಚೆನ್ನಾಗಿ ಹೇಳಿದಿರಿ, ಎಂದರು. ಮುಂದೆ ಯಾವ ಪ್ರಶ್ನೆ ಕೇಳುವುದಕ್ಕೂ ಅವರಾರು ಧೈರ್ಯಗೊಳ್ಳಲಿಲ್ಲ.

23.11.2018

ಸಾಧಾರಣ ಕಾಲದ 33ನೇ ಶುಕ್ರವಾರ  

ಮೊದಲನೇ ವಾಚನ: ಪ್ರಕಟನೆ  10:8-11 

ಸ್ವರ್ಗದಿಂದ ನನಗೆ ಕೇಳಿಸಿದ್ದ ದ್ವನಿ ಮತ್ತೊಮ್ಮೆ ನನ್ನೊಡನೆ ಮಾತನಾಡಿ, ಸಮುದ್ರದ ಮೇಲೆಯೂ ಭೂಮಿಯ ಮೇಲೆಯೂ ಕಾಲಿಟ್ಟು ನಿಂತಿರುವ ದೇವದೂತನ ಬಳಿಗೆ ಹೋಗು, ಆತನ ಕೈಯಲ್ಲಿರುವ ತೆರೆದ ಸುರುಳಿಯನ್ನು ತೆಗೆದುಕೋ," ಎಂದು ತಿಳಿಸಿತು. ನಾನು ಆ ದೇವದೂತನ ಬಳಿಗೆ ಹೋಗಿ, "ಆ ಚಿಕ್ಕ ಸುರುಳಿಯನ್ನು ನನಗೆ ಕೊಡು," ಎಂದು ಕೇಳಿದೆ ಅವನು, "ತೆಗೆದುಕೋ, ಇದನ್ನು ತಿನ್ನು. ಇದು ನಿನ್ನ ಹೊಟ್ಟೆಯಲ್ಲಿ ಕಹಿಯಾಗಿಯೂ ನಿನ್ನ ಬಾಯಲ್ಲಿ ಜೇನುತುಪ್ಪದಂತೆ ಸಿಹಿಯಾಗಿಯೂ ಇರುತ್ತದೆ," ಎಂದನು. ಅಂತೆಯೇ, ನಾನು ಆ ಚಿಕ್ಕ ಸುರುಳಿಯನ್ನು ದೇವದೂತನ ಕೈಯಿಂದ ತೆಗೆದುಕೊಂಡು ತಿಂದೆ. ಅದು ನನ್ನ ಬಾಯಿಯಲ್ಲಿ ಜೇನುತುಪ್ಪದಂತೆ ಸಿಹಿಯಾಗಿತ್ತು. ಆದರೆ ಅದನ್ನು ತಿಂದಮೇಲೆ ನನ್ನ ಹೊಟ್ಟೆಯೆಲ್ಲಾ ಕಹಿಯಾಯಿತು. ಅನಂತರ, ದೇವದೂತನು ನನಗೆ, "ನೀನು ಇನ್ನೂ ಅನೇಕ ಜನರ, ಜನಾಂಗಗಳ, ಭಾಷೆಗಳನ್ನಾಡುವವರ ಹಾಗು ಅರಸರಾದವರ ವಿರುದ್ಧ ಪ್ರವಾದನೆಯನ್ನು ಸಾರಬೇಕು," ಎಂದು ಆಜ್ಞಾಪಿಸಿದನು. 

ಕೀರ್ತನೆ: 119:14, 24, 72, 103, 111, 131
ಶ್ಲೋಕ: ನಿನ್ನ ನುಡಿ ಎನಿತೊ ರುಚಿ ನನ್ನ ನಾಲಿಗೆಗೆ. 

 ಶುಭಸಂದೇಶ: ಲೂಕ 19: 45-48 

ಆನಂತರ ಯೇಸುಸ್ವಾಮಿ ಮಹಾದೇವಾಲಯವನ್ನು ಪ್ರವೇಶಿಸಿದರು. ಅಲ್ಲಿ ಮಾರಾಟ ಮಾಡುತ್ತಿದ್ದವರನ್ನು ಹೊರಗಟ್ಟುತ್ತಾ, "ಪ್ರಾರ್ಥನಾಲಯವೀ ನನ್ನ ಆಲಯ!" ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ; ನೀವಾದರೋ ಇದನ್ನು ಕಳ್ಳಕಾಕರ ಗುಹೆಯನ್ನಾಗಿ ಮಾರ್ಪಡಿಸಿದ್ದೀರಿ," ಎಂದರು. ಪ್ರತಿನಿತ್ಯ ಯೇಸು ದೇವಾಲಯದಲ್ಲಿ ಭೋಧಿಸುತ್ತಿದ್ದರು. ಇತ್ತ ಮುಖ್ಯ ಯಾಜಕರೂ ಧರ್ಮಶಾಸ್ತ್ರಿಗಳೂ ಪ್ರಜಾಪ್ರಮುಖರೂ ಅವರನ್ನು ಕೊಲೆಮಾಡಲು ಹವಣಿಸುತ್ತಿದ್ದರು. ಆದರೆ ಅವರಿಂದ ಏನೂ ಮಾಡಲಾಗಲಿಲ್ಲ. ಏಕೆಂದರೆ, ಜನರೆಲ್ಲರೂ ಯೇಸುವಿನ ಭೋಧನೆಗೆ ಮಾರುಹೋಗಿದ್ದರು. ಅವರ ಬಾಯಿಯಿಂದ ಬಂದ ಒಂದೊಂದು ಮಾತನ್ನೂ ಕೇಳಲು ಆತುರರಾಗಿದ್ದರು.

22.11.2018

ಸಾಧಾರಣ ಕಾಲದ 33ನೇ ಗುರುವಾರ  

ಮೊದಲನೇ ವಾಚನ: ಪ್ರಕಟನೆ  5:1-10 

ನಾನು ಈ ದೃಶ್ಯವನ್ನು ಸಹ ಕಂಡೆ: ಸಿಂಹಾಸನದಲ್ಲಿ ಆಸೀನರಾಗಿರುವವರ ಬಲಗೈಯಲ್ಲಿ ಒಂದು ಸುರುಳಿ ಇತ್ತು. ಅದರ ಒಳಭಾಗದಲ್ಲೂ ಹೊರಭಾಗದಲ್ಲೂ ಬರೆಯಲಾಗಿತ್ತು. ಅದನ್ನು ಏಳು ಮುದ್ರೆಗಳಿಂದ ಮುದ್ರಿಸಲಾಗಿತ್ತು.  ಬಲಿಷ್ಠ ದೇವದೂತನೊಬ್ಬನು ಮಹಾಶಬ್ದದಿಂದ, "ಈ ಮುದ್ರೆಗಳನ್ನು ಒಡೆದು ಸುರುಳಿಯನ್ನು ಬಿಚ್ಚಲು ಯೋಗ್ಯನು ಯಾರು?" ಎಂದು ಪ್ರಕಟಿಸಿದನು. ಸ್ವರ್ಗದಲ್ಲಾಗಲಿ, ಭೂಮಿಯಲ್ಲಾಗಲಿ, ಪಾತಾಳದಲ್ಲಾಗಲಿ, ಆ ಸುರುಳಿಯನ್ನು ಬಿಚ್ಚುವುದಕ್ಕೂ ಇಲ್ಲವೆ ಅದನ್ನು ಬಿಚ್ಚಿನೋಡುವುದಕ್ಕೂ ಯಾರಿಂದಲೂ ಸಾಧ್ಯವಾಗಲಿಲ್ಲ. ಆ ಸುರುಳಿಯನ್ನು ಬಿಚ್ಚಲೂ ನೋಡಲೂ ಯೋಗ್ಯನು ಒಬ್ಬನೂ ಇಲ್ಲವಲ್ಲ ಎಂದು  ನಾನು ಬಹುವಾಗಿ ದುಃಖಿಸಿದೆ. ಆಗ ಸಭಾ ಪ್ರಮುಖರಲ್ಲಿ ಒಬ್ಬರು ನನಗೆ, "ದುಃಖಿಸಬೇಡ, ಇಗೋ ಯೂದಕುಲದ ಸಿಂಹವೂ ದಾವೀದನ ವಂಶಜರೂ ಆದ ಒಬ್ಬರು ಜಯಗಳಿಸಿದ್ದಾರೆ. ಅವರು ಆ ಏಳು ಮುದ್ರೆಗಳನ್ನು ಒಡೆದು ಈ ಸುರುಳಿಗಳನ್ನು ಬಿಚ್ಚಬಲ್ಲರು", ಎಂದು ಹೇಳಿದರು. ಸಿಂಹಾಸನವೂ ನಾಲ್ಕು ಜೀವಿಗಳೂ ಇದ್ದ ಸ್ಥಳಕ್ಕೂ ಮತ್ತು ಸಭಾಪ್ರಮುಖರಿದ್ದ ಸ್ಥಳಕ್ಕೂ ನಡುವೆ ಒಂದು ಕುರಿಮರಿ ನಿಂತಿರುವುದನ್ನು ಕಂಡೆ. ಅದು ಈಗಾಗಲೇ ಬಲಿಗೋಸ್ಕರ ವಧೆಯಾಗಿದ್ದಂತೆ ಕಾಣುತ್ತಿತ್ತು. ಆ ಕುರಿಮರಿಗೆ ಏಳು ಕೊಂಬುಗಳೂ ಏಳು ಕಣ್ಣುಗಳೂ ಇದ್ದವು. ಇಡೀ ಜಗತ್ತಿಗೆ ಕಳುಹಿಸಲಾದ ದೇವರ ಸಪ್ತ ಆತ್ಮಗಳೇ ಅವು. ಆ ಯಜ್ಞದ ಕುರಿಮರಿಯಾದವರು ಮುಂದೆ ಬಂದು ಸಿಂಹಾಸನದಲ್ಲಿ ಆಸೀನರಾಗಿದ್ದವರು ಬಲಗೈಯಲ್ಲಿದ್ದ ಸುರುಳಿಯನ್ನು ತಗೆದುಕೊಂಡರು. ಸುರುಳಿಯನ್ನು ತೆಗೆದುಕೊಂಡಾಗ, ನಾಲ್ಕು ಜೀವಿಗಳೂ ಇಪ್ಪತ್ನಾಲ್ಕು ಮಂದಿ ಸಭಾಪ್ರಮುಖರೂ ಆ ಯಜ್ಞದ ಕುರಿಮರಿಯ ಪಾದಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡಿದರು.  ಸಭಾಪ್ರಮುಖರ ಕೈಗಳಲ್ಲಿ ಕಿನ್ನರಿಯೂ ಚಿನ್ನದ ಧೂಪಾರತಿಗಳೂ ಇದ್ದವು. ಆ ಧೂಪರತಿಗಳಲ್ಲಿ ದೇವಜನರ ಪ್ರಾರ್ಥನೆಯೆಂಬ ಧೂಪವು ತುಂಬಿತ್ತು. ಅವರು ಈ ಹೊಸ ಗೀತೆಯನ್ನು ಹಾಡುತ್ತಿದ್ದರು: "ಸುರುಳಿಯನ್ನು ಸ್ವೀಕರಿಸಲು ನೀ ಯೋಗ್ಯನು ಅವರ ಮುದ್ರೆಗಳನ್ನು ಮುರಿಯಲು ನೀ ಶಕ್ತನು. ಸಮರ್ಪಿಸಿಕೊಂಡಿರುವೆ ನಿನ್ನನೇ ನೀ ಬಲಿಯರ್ಪಣೆಯಾಗಿ ಸಕಲ ದೇಶ, ಭಾಷೆ ಕುಲಗೋತ್ರಗಳಿಂದ ಕೊಂಡುಕೊಂಡಿರುವೆ ಮಾನವರು ನಿನ್ನ ರಕ್ತದಿಂದ ಏರ್ಪಡಿಸಿದೆ ನೀ ಅವರನು ನಮ್ಮ ದೇವರಿಗೋಸ್ಕರ ರಾಜವಂಶವಾಗಿ, ಯಾಜಕವರ್ಗವಾಗಿ, ಆಳುವವರು ಸಮಸ್ತ ಭುವಿಯ ಮೇಲೆ." 

ಕೀರ್ತನೆ:149:1b-2, 3-4, 5-6a, 9b 
ಶ್ಲೋಕ: ಏರ್ಪಡಿಸಿದೆ ನೀ ಅವರನ್ನು ನಮ್ಮ ದೇವರಿಗೋಸ್ಕರ ರಾಜವಂಶವಾಗಿ, ಯಾಜಕ ವರ್ಗವಾಗಿ. 

ಶುಭಸಂದೇಶ: ಲೂಕ 19:41-44 

ಯೇಸುಸ್ವಾಮಿ ಜೆರುಸಲೇಮ್ ಪಟ್ಟಣಕ್ಕೆ ಇನ್ನೂ ಹತ್ತಿರವಾಗಿ ಬಂದು ಅದನ್ನು ನೋಡಿ, "ಇಂದಾದರೂ ನೀನು ಶಾಂತಿಮಾರ್ಗವನ್ನು ಅರಿತುಕೊಂಡಿದ್ದರೆ ಎಷ್ಟೋ ಚೆನ್ನಾಗಿರುತ್ತಿತ್ತು ಆದರೆ ಅದು ಈಗ ನಿನ್ನ ಕಣ್ಣಿಗೆ ಮರೆಯಾಗಿದೆ. ಕಾಲವು ಬರುವುದು. ಆಗ ಶತ್ರುಗಳು ನಿನ್ನ ಸುತ್ತಲೂ ಆಳ್ವೇಲಿಯೆಬ್ಬಿಸಿ, ಮುತ್ತಿಗೆ ಹಾಕಿ, ಎಲ್ಲೆಡೆಯೂ ನುಗ್ಗಿ, ನಿನ್ನನ್ನು ನಿನ್ನೊಳಗಿನ ಜನರನ್ನೂ ದ್ವಂಸಮಾಡುವರು; ನಿನ್ನಲ್ಲಿ ಕಲ್ಲಿನ ಮೇಲೆ ಕಲ್ಲು ನಿಲ್ಲದಂತೆ ಮಾಡುವರು. ಏಕೆಂದರೆ, ದೇವರು ನಿನ್ನನ್ನು ಅರಸಿ ಬಂದ ಕಾಲವನ್ನು ನೀನು ಅರಿತುಕೊಳ್ಳದೆ ಹೋದೆ," ಎಂದು ಅದರ ಸಲುವಾಗಿ ಕಣ್ಣೀರಿಟ್ಟರು.

21.11.2018

ಸಾಧಾರಣ ಕಾಲದ 33ನೇ ಬುಧವಾರ  

ಮೊದಲನೇ ವಾಚನ: ಪ್ರಕಟನೆ 4:1-11 


ಇದಾದ ಬಳಿಕ ಮತ್ತೊಂದು ದಿವ್ಯ ದರ್ಶನವನ್ನು ಕಂಡೆ. ಸ್ವರ್ಗದ ಬಾಗಿಲು ತೆರೆದಿತ್ತು. ಮೊದಲು ನನ್ನೊಡನೆ ಮಾತನಾಡಿದ ತುತೂರಿಯಂಥ ನಾದವು ನನಗೆ ಕೇಳಿಸಿತು. ಅದು, "ಮೇಲೆ ಬಾ, ಮುಂದೆ ಸಂಭವಿಸಲಿರುವ ಘಟನೆಗಳನ್ನು ನಿನಗೆ ತೋರಿಸುವೆನು," ಎಂದು ಹೇಳಿತು. ಕೂಡಲೇ, ನಾನು ದೇವರಾತ್ಮವಶನಾದೆ. ಆಗ ಸ್ವರ್ಗದಲ್ಲಿ ಒಂದು ಸಿಂಹಾಸನ ಇರುವುದನ್ನೂ ಕಂಡೆ. ಅವರ ಮುಖ ಸೂರ್ಯಕಾಂತ ಮತ್ತು ಪದ್ಮರಾಗ ಹರಳುಗಳಂತೆ ಹೊಳೆಯುತ್ತಿತ್ತು. ಸಿಂಹಾಸನದ ಸುತ್ತಲೂ ಮರಕದಂತೆ ಹೊಳೆಯುವ ಮುಗಲುಬಿಲ್ಲೊಂದು ಹೊಳೆಯುತ್ತಿತ್ತು. "ಈ ಸಿಂಹಾಸನದ ಸುತ್ತಲೂ ಇಪ್ಪತ್ನಾಲ್ಕು ಪೀಠಗಳು ಇದ್ದವು. ಶ್ವೇತವಸ್ತ್ರಧಾರಿಗಳಾದ ಇಪ್ಪತ್ನಾಲ್ಕು ಮಂದಿ ಸಭಾಪ್ರಮುಖರು ಆ ಪೀಠಗಳಲ್ಲಿ ಕುಳಿತಿದ್ದರು. ಅವರು ತಮ್ಮ ತಲೆಗಳ ಮೇಲೆ ಚಿನ್ನದ ಕಿರೀಟಗಳನ್ನು ಧರಿಸಿದ್ದರು ಸಿಂಹಾಸನದಿಂದ ಮಿಂಚು, ಗುಡುಗು, ಗರ್ಜನೆಗಳು ಹೊರ ಹೊಮ್ಮುತ್ತಿದ್ದವು. ಆ ಸಿಂಹಾಸನದ ಮುಂದೆ ದೇವರ ಸಪ್ತ ಆತ್ಮಗಳನ್ನು ಸೂಚಿಸುವ ಸಪ್ತದೀಪಗಳು ಬೆಳಗುತ್ತಿದ್ದವು. ಇದಲ್ಲದೆ, ಸಿಂಹಾಸನದ ಮುಂದೆ ಸ್ಪಟಿಕದಂಥ ಗಾಜಿನ ಸಮುದ್ರವೊಂದು ಇದ್ದಂತೆ ಕಂಡು ಬಂದಿತು. ಸಿಂಹಾಸನದ ಸುತ್ತಲೂ ಅದರ ನಾಲ್ಕು ಪಾರ್ಶ್ವಗಳಲ್ಲಿ ನಾಲ್ಕು ಜೀವಿಗಳು ಇದ್ದವು. ಅವುಗಳಿಗೆ ಮುಂದೆಯೂ ಹಿಂದೆಯೂ ಅನೇಕ ಕಣ್ಣುಗಳಿದ್ದವು. ಮೊದಲನೆಯ ಜೀವಿ ಸಿಂಹದಂತೆ ಇತ್ತು. ಎರಡನೆಯ ಜೀವಿ ಹೋರಿಯಂತಿತ್ತು. ಮುರನೆಯ ಜೀವಿಯ ಮುಖವು ಮನುಷ್ಯನ ಮುಖದಂತಿತ್ತು. ಮತ್ತು ನಾಲ್ಕನೆಯ ಜೀವಿಯು ಹಾರುತ್ತಿರುವ ಗರುಡ ಪಕ್ಷಿಯಂತಿತ್ತು. ಆ ನಾಲ್ಕು ಜೀವಿಗಳಲ್ಲಿ ಪ್ರತಿಯೊಂದಕ್ಕೂ ಆರು ರೆಕ್ಕೆಗಳಿದ್ದವು. ಅವುಗಳ ಸುತ್ತಲು ಮತ್ತು ಒಳಗು ಅನೇಕ ಕಣ್ಣುಗಳಿದ್ದವು. ಆ ಜೀವಿಗಳು ಹಗಲಿರುಳೂ: "ಪರಿಶುದ್ದರು, ಪರಿಶುದ್ದರು, ಪರಿಶುದ್ದರು! ಸರ್ವಶಕ್ತರಾದ ಪ್ರಭು ದೇವರು ವರ್ತಮಾನಕಾಲದಲ್ಲಿ ಇರುವವರೂ ಭೂತಕಾಲದಲ್ಲಿ ಇದ್ದವರೂ ಭವಿಷ್ಯತ್ ಕಾಲದಲ್ಲಿ ಬರುವವರೂ ಆಗಿದ್ದಾರೆ," ಎಂದು ಹಾಡುತ್ತಿದ್ದವು. ಯುಗಯುಗಾಂತರಕ್ಕೂ ಜೀವಿಸುವ ಹಾಗೂ ಸಿಂಹಾಸನಾರೂಢರಾಗಿರುವ ವ್ಯಕ್ತಿಗೆ ಆ ಜೀವಿಗಳು ಘನತೆ, ಗೌರವ ಮತ್ತು ಕೃತಜ್ಞತಾಸ್ತುತಿಗಳನ್ನು ಸಲ್ಲಿಸುತ್ತಿದ್ದವು. ಆ ಇಪ್ಪತ್ನಾಲ್ಕು ಸಭಾ ಪ್ರಮುಖರು ತಮ್ಮ ಕಿರೀಟಗಳನ್ನು ತೆಗೆದು ಬದಿಗಿಟ್ಟು, ಸರ್ವಕಾಲಕ್ಕೂ ಜೀವಿಸುವ ಹಾಗೂ ಸಿಂಹಾಸನದಲ್ಲಿ ಆಸೀನರಾಗಿದ್ದ ವ್ಯಕ್ತಿಯ  ಪಾದಗಳಿಗೆ ಅಡ್ಡಬಿದ್ದು ಯುಗಯುಗಾಂತರಗಳಲ್ಲಿಯೂ ಜೀವಿಸುವವರನ್ನು ಆರಾಧಿಸುತ್ತಾ: ನೀನೆಮ್ಮ ಪ್ರಭು ಹೇ ದೇವಾ, ಘನಮಾನ ಶಕ್ತಿಸನ್ಮಾನಗಳಿಗೆ ಸಮಸ್ತವನ್ನು ನೀ ಸೃಷ್ಟಿಸಿದಾತ ಇರುವುದೆಲ್ಲವು ಜೀವಿಪುದೆಲ್ಲವು ನಿನ್ನ ಚಿತ್ತದಿಂದ," ಎಂದು ಹಾಡುತ್ತಿದ್ದರು. 

ಕೀರ್ತನೆ: 150:1b-2, 3-4, 5-6 
ಶ್ಲೋಕ: ಪರಿಶುದ್ಧರು, ಪರಿಶುದ್ಧರು, ಪರಿಶುದ್ಧರು! ಸರ್ವಶಕ್ತರಾದ ದೇವರು. 

 ಶುಭಸಂದೇಶ: ಲೂಕ 19:11-28 

ಯೇಸುಸ್ವಾಮಿ ಈಗ ಜೆರುಸಲೇಮಿಗೆ ಸಮೀಪದಲ್ಲೇ ಇದ್ದರು. ಅವರ ಮಾತುಗಳನ್ನು ಕೇಳುತ್ತಿದ್ದ ಜನರು ದೇವರ ಸಾಮ್ರಾಜ್ಯ ಇದೀಗಲೇ ಪ್ರತ್ಯಕ್ಷವಾಗುವುದೆಂದು ಭಾವಿಸಿದ್ದರು. ಈ ಕಾರಣ ಯೇಸು ಅವರಿಗೆ ಒಂದು ಸಾಮತಿಯನ್ನು ಹೇಳಿದರು: "ಕುಲೀನನೊಬ್ಬ ರಾಜಪದವಿಯನ್ನು ಗಳಿಸಿಬರಲು ದೂರದ ರಾಜಧಾನಿಗೆ ಹೊರಟ. ಹೊರಡುವಾಗ ತನ್ನ ಹತ್ತು ಮಂದಿ ಸೇವಕರನ್ನು ಕರೆದು, ಒಬ್ಬೊಬ್ಬರಿಗೂ ಒಂದರಂತೆ ಹತ್ತು ಚಿನ್ನದ ನಾಣ್ಯಗಳನ್ನು ಕೊಟ್ಟು, "ನಾನು ಬರುವತನಕ ವ್ಯಾಪಾರ ಮಾಡಿಕೊಂಡಿರಿ," ಎಂದು ಹೇಳಿ ಹೋದ. ಅವನ ನಾಡಿಗರಾದರೋ ಅವನನ್ನು ದ್ವೇಷಿಸುತ್ತಿದ್ದರು. "ಇವನು ನಮಗೆ ರಾಜನಾಗುವುದು ಬೇಡ," ಎಂದು ತಿಳಿಸಲು ಅವನ ಹಿಂದೆಯೇ ತಮ್ಮ ಪ್ರತಿನಿಧಿಗಳನ್ನು ಕಳುಹಿಸಿದರು. "ಆದರೂ ಅವನು ರಾಜಪದವಿಯನ್ನು ಪಡೆದು ಹಿಂದಿರುಗಿ ಬಂದ. ತನ್ನಿಂದ ಹಣಪಡೆದ ಸೇವಕರು ವ್ಯಾಪಾರಮಾಡಿ ಎಷ್ಟೆಷ್ಟು ಲಾಭಗಳಿಸಿದ್ದಾರೆಂದು ತಿಳಿದುಕೊಳ್ಳುವುದಕ್ಕಾಗಿ ಅವರನ್ನು ಕೂಡಲೇ ತನ್ನ ಬಳಿಗೆ ಕರೆತರಲು ಆಜ್ಞಾಪಿಸಿದ. ಮೊದಲನೆಯವನು ಮುಂದೆ ಬಂದು, "ಪ್ರಭುವೇ, ನಿಮ್ಮ ಒಂದು ನಾಣ್ಯದಿಂದ ನಾನು ಹತ್ತು ನಾಣ್ಯಗಳನ್ನು ಸಂಪಾದಿಸಿದ್ದೇನೆ," ಎಂದ. ಅದಕ್ಕೆ ಅವನು, "ಭಲಾ, ನೀನು ಒಳ್ಳೆಯ ಸೇವಕ, ಸ್ವಲ್ಪದರಲ್ಲಿ ನೀನು ಪ್ರಮಾಣಿಕನಾಗಿದ್ದೆ. ಆದ್ದರಿಂದ ಹತ್ತು ಪಟ್ಟಣಗಳಿಗೆ ಅಧಿಪತಿಯಾಗಿರು" ಎಂದ. ಎರಡನೆಯ ಸೇವಕನು ಬಂದು, "ಪ್ರಭುವೇ, ನೀವು ಕೊಟ್ಟ ಒಂದು ನಾಣ್ಯದಿಂದ ಐದು ನಾಣ್ಯಗಳನ್ನು ಸಂಪಾದಿಸಿದ್ದೇನೆ," ಎಂದ. ಅದಕ್ಕೆ ರಾಜ, "ನೀನು ಐದು ಪಟ್ಟಣಗಳಿಗೆ ಅಧಿಪತಿಯಾಗಿರು," ಎಂದ. "ಬಳಿಕ ಮತ್ತೊಬ ಸೇವಕನು ಬಂದು, "ಇಗೋ, ಪ್ರಭುವೇ, ನಿಮ್ಮ ಚಿನ್ನದ ನಾಣ್ಯ; ನಿಮಗೆ ಭಯಪಟ್ಟು ಇದನ್ನು ಬುಟ್ಟಿಯಲ್ಲಿ ಭದ್ರವಾಗಿ ಕಟ್ಟಿ ಇಟ್ಟಿದ್ದೆ. ಏಕೆಂದರೆ,  ನೀವು ಕಠಿಣ ಮನುಷ್ಯರು, ನೀವು ಕೂಡಿಡದ್ದನ್ನು ಕೊಂಡು ಹೋಗುತ್ತೀರಿ, ಬಿತ್ತದಿದ್ದನ್ನು ಕೊಯಿಲು ಮಾಡುತ್ತೀರಿ," ಎಂದ. ರಾಜ ಆವನನ್ನು ನೋಡಿ, ಎಲಾ ದುಷ್ಟ ಸೇವಕನೇ, ನೀನು ಆಡಿದ ಮಾತಿನಿಂದಲೇ ನಿನಗೆ ತೀರ್ಪುಕೊಡುತ್ತೇನೆ. ನಾನು ಕೂಡಿಡದ್ದನ್ನು ಕೊಂಡುಹೋಗುವ, ಬಿತ್ತದಿದ್ದನ್ನು ಕೊಯಿಲುಮಾಡುವ ಕಠಿಣ ಮನುಷ್ಯನೆಂದು ನಿನಗೆ ತಿಳಿದಿತ್ತು ಅಲ್ಲವೇ? ಹಾಗಾದರೆ ನನ್ನ ಹಣವನ್ನೇಕೆ ಬಡ್ಡಿ ಅಂಗಡಿಯಲ್ಲಿ ಹಾಕಿಡಲಿಲ್ಲ? ನಾನು ಬಂದು ಬಡ್ಡಿಸಮೇತ ನನ್ನ ಅಸಲನ್ನು ತೆಗೆದುಕೊಳ್ಳುತ್ತಿದ್ದೆನಲ್ಲಾ," ಎಂದು ಹೇಳಿ ಪರಿಚಾರಕರಿಗೆ, "ಇವನಿಂದ ಆ ಚಿನ್ನದ ನಾಣ್ಯವನ್ನು ಕಿತ್ತು ಹತ್ತು ನಾಣ್ಯಗಳುಳ್ಳವನಿಗೆ ಕೊಡಿ," ಎಂದ. ಅದಕ್ಕವರು, "ಪ್ರಭುವೇ, ಅವನಲ್ಲಿ ಈಗಾಗಲೇ ಹತ್ತು ನಾಣ್ಯಗಳಿವೆಯಲ್ಲಾ?"ಎಂದರು. ಆಗ ರಾಜ, "ಉಳ್ಳ ಪ್ರತಿಯೊಬ್ಬನಿಗೆ ಇನ್ನೂ ಹೆಚ್ಚಾಗಿ ಕೊಡಲಾಗುತ್ತೆದೆ; ಇಲ್ಲದವನಿಂದ ಇರುವ ಕಿಂಚಿತ್ತನ್ನೂ ಕಸಿದುಕೊಳ್ಳಲಾಗುತ್ತದೆ, ಇದು ನಿಶ್ಚಯ," ಎಂದ. "ಅಲ್ಲದೆ, "ನಾನು ತಮಗೆ ರಾಜನಾಗುವುದು ಬೇಡವೆಂದ ನನ್ನ ಶತ್ರುಗಳನ್ನು ಇಲ್ಲಿಗೆ ಎಳೆದು ತಂದು ನನ್ನ ಮುಂದೆಯೇ ಸಂಹರಿಸಿರಿ," ಎಂದ." ಇದನ್ನೆಲ್ಲಾ ಹೇಳಿದ ಮೇಲೆ ಯೇಸುಸ್ವಾಮಿ ಅವರೆಲ್ಲರಿಗಿಂತ ಮುಂದಾಗಿ ನಡೆದು ಜೆರುಸಲೇಮಿನತ್ತ ತೆರಳಿದರು.

20.11.2018

ಸಾಧಾರಣ ಕಾಲದ 33ನೇ ಮಂಗಳವಾರ  

ಮೊದಲನೇ ವಾಚನ: ಪ್ರಕಟನೆ 3: 1-6, 14-22 

"ಸಾರ್ದಿಸ್ ನಲ್ಲಿರುವ ಶ್ರೀಸಭೆಗೆ ಹೀಗೆ ಬರೆ: ದೇವರ ಸಪ್ತ ಆತ್ಮಗಳನ್ನೂ ಸಪ್ತ ನಕ್ಷತ್ರಗಳನ್ನೂ ಹೊಂದಿರುವಾತನು ನೀಡುವ ಸಂದೇಶವಿದು: ನಿನ್ನ ಕೃತ್ಯಗಳನ್ನು ನಾನು ಬಲ್ಲೆ. ಹೆಸರಿಗೆ ಮಾತ್ರ ನೀನು ಜೀವಂತವಾಗಿರುವೆ. ಆದರೆ ವಾಸ್ತವವಾಗಿ ನೀನು ಸತ್ತಂತೆಯೇ ಸರಿ. ಎಚ್ಚೆತ್ತು ನಿನ್ನಲ್ಲಿ ಉಳಿದಿರುವುಗಳನ್ನು ಉತ್ತೇಜನಗೊಳಿಸು; ಅವು ಸಾವಿನ ದವಡೆಯಲ್ಲಿವೆ. ನನ್ನ ದೇವರ ದೃಷ್ಟಿಯಲ್ಲಿ ನಿನ್ನ ಕೃತ್ಯಗಳು ಯಾವುವೂ ಸಮಗ್ರವಾಗಿರುವುದು ನನಗೆ ಕಂಡುಬಂದಿಲ್ಲ. ನಿನಗೆ ಕೊಡಲಾದ ಭೋಧನೆಯನ್ನೂ ಅದನ್ನು ನೀನು ಕೇಳಿದ ರೀತಿಯನ್ನೂ ನೆನಪಿಗೆ ತಂದುಕೋ. ಅದರಂತೆ ನಡೆದು ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖನಾಗು. ನೀನು ಎಚ್ಚೆತ್ತುಕೊಳ್ಳದಿದ್ದರೆ ನಾನು ಕಳ್ಳನು ಬರುವಂತೆ ಬರುತ್ತೇನೆ. ನಾನು ಯಾವ ಗಳಿಗೆಯಲ್ಲಿ ನಿನ್ನ ಮೇಲೆ ದಾಳಿ ಮಾಡುತ್ತೇನೆಂದೇ  ನಿನಗೆ ತಿಳಿಯದು. ಆದರೂ ತಮ್ಮ ಉಡುಪನ್ನು ಮಲಿನಮಾಡಿಕೊಳ್ಳದ ಕೆಲವರು ಸಾರ್ದಿಸಿನಲ್ಲಿ ಇದ್ದಾರೆ. ಅಂಥವರು ಯೋಗ್ಯರಾಗಿರುವುದರಿಂದ ಶ್ವೇತಾಂಬರರಾಗಿ ನನ್ನೊಡನೆ ನಡೆದಾಡುವರು. ಜಯಹೊಂದುವವನು ಹೀಗೆ ಶ್ವೇತಾಂಬರನಾಗುವನು. ಜೀವಬಾಧ್ಯರ ಪಟ್ಟಿಯಿಂದ ಅವನ ಹೆಸರನ್ನು ನಾನು ಅಳಿಸಿಹಾಕುವುದಿಲ್ಲ. ನನ್ನ ಪಿತನ ಸಾನ್ನಿಧ್ಯದಲ್ಲಿಯೂ ಅವರ ದೂತರ ಮುಂದೆಯೂ ಅವನು ನನ್ನವನೆಂದು ನಾನು ಒಪ್ಪಿಕೊಳ್ಳುತ್ತೇನೆ. "ಸಭೆಗಳಿಗೆ ದೇವರಾತ್ಮ ಹೇಳುವುದನ್ನು ಕಿವಿವುಳ್ಳವನು ಕೇಳಲಿ. "ಲಪೊದಿಕೀಯದಲ್ಲಿರುವ ಶ್ರೀಸಭೆಯ ದೂತನಿಗೆ ಹೀಗೆ ಬರೆ: ವಿಶ್ವಾಸಪಾತ್ರನೂ ಸತ್ಯ ಸಾಕ್ಷಿಯೂ ದೇವರ ಸೃಷ್ಟಿಗೆ ಮೂಲಾಧಾರನೂ ಆದ "ಆಮೆನ್" ಎಂಬಾತನು ನೀಡುವ ಸಂದೇಶವಿದು: ನಿನ್ನ ಕೃತ್ಯಗಳನ್ನು ನಾನು ಬಲ್ಲೆ. ನೀನು ತಣ್ಣಗೂ ಇಲ್ಲ. ಬಿಸಿಯಾಗೂ ಇಲ್ಲ. ನೀನು ತಣ್ಣಗಾಗಲಿ, ಬಿಸಿಯಾಗಲಿ ಇದ್ದಿದ್ದರೆ ಚೆನ್ನಾಗಿತ್ತು. ನೀನು ತಣ್ಣಗೂ ಇಲ್ಲದೆ ಬಿಸಿಯಾಗೂ ಇಲ್ಲದೆ ಉಗುರು ಬೆಚ್ಚಗೆ ಇರುವುದರಿಂದ ನಾನು ನಿನ್ನನ್ನು ನನ್ನ ಬಾಯೊಳಗಿನಿಂದ ಕಕ್ಕುತ್ತೇನೆ. ನೀನು ನಿನ್ನ ವಿಷಯವಾಗಿ, "ನಾನು ಐಶ್ವರ್ಯವಂತನು, ಸಿರಿ ಸಂಪತ್ತುಳ್ಳವನು, ಯಾವ ಕೊರತೆಯೂ ಇಲ್ಲದವನು" ಎಂದು ಹೇಳಿಕೊಳ್ಳುತ್ತಿರುವೆ. ಆದರೆ ನೀನು ನಿರ್ಭಾಗ್ಯನು, ದುರವಸ್ಥೆಯಲ್ಲಿರುವವನು, ದರಿದ್ರನು ಕುರುಡನು ಮತ್ತು ಬಟ್ಟೆಬರೆ ಇಲ್ಲದೆ ಬೆತ್ತಲೆಯಾಗಿರುವವನು ಎಂಬುದು ನಿನಗೆ ತಿಳಿಯದು. ಈಗ ನನ್ನ ಬುದ್ಧಿ ಮಾತುಗಳನ್ನು ಕೇಳು. ನೀನು ಐಶ್ವರ್ಯವಂತನಾಗುವಂತೆ ಬೆಂಕಿಯಲ್ಲಿ ಪುಟವಿಟ್ಟ ಚಿನ್ನವನ್ನು ನನ್ನಿಂದ ಕೊಂಡುಕೋ. ಲಜ್ಜಾಸ್ಪದವಾದ ನಿನ್ನ ಬೆತ್ತಲೆಯನ್ನು ಮುಚ್ಚಿಕೊಳ್ಳಲು ಶ್ವೇತವಸ್ತ್ರವನ್ನು ನನ್ನಿಂದ ಕ್ರಯಕ್ಕೆ ಕೊಂಡುಕೊಂಡು ಅವುಗಳನ್ನು ಧರಿಸಿಕೋ. ನಿನಗೆ ಕಣ್ಣುಕಾಣಿಸುವಂತೆ ಲೇಪನವನ್ನು ನನ್ನಿಂದ ಬೆಲೆಗೆ ತೆಗೆದುಕೊಂಡು ನಿನ್ನ ಕಣ್ಣುಗಳಿಗೆ ಹಚ್ಚಿಕೋ. ನನ್ನ ಪ್ರೀತಿಪಾತ್ರರನ್ನು ನಾನು ಖಂಡಿಸುತ್ತೇನೆ ಮತ್ತು ದಂಡಿಸುತ್ತೇನೆ. ಆದುದರಿಂದ ಉತ್ಸಾಹದಿಂದಿರು, ದೇವರಿಗೆ ಅಭಿಮುಖನಾಗಿರು. ಇಗೋ, ಬಾಗಿಲ ಬಳಿ ನಿಂತು ತಟ್ಟುತ್ತಾ ಇದ್ದೇನೆ. ಯಾವನಾದರೂ ನನ್ನ ಸ್ವರವನ್ನು ಕೇಳಿಸಿ ಕೊಂಡು ಬಾಗಿಲನ್ನು ತೆರೆದರೆ ನಾನು ಮನೆಯೊಳಗೆ ಪ್ರವೇಶಿಸುತ್ತೇನೆ. ಅವನ ಸಂಗಡ ಊಟ ಮಾಡುತ್ತೇನೆ. ನಾನು ಜಯಗಳಿಸಿ ನನ್ನ ತಂದೆಯೊಡನೆ ಅವರ ಸಿಂಹಾಸನದಲ್ಲಿ ಕುಳಿತುಕೊಂಡಿದ್ದೇನೆ. ಅದೇ ಪ್ರಕಾರ ಜಯಹೊಂದಿದವನಿಗೆ ನನ್ನೊಡನೆ ನನ್ನ ಸಿಂಹಾಸನದಲ್ಲಿ ಕುಳಿತುಕೊಳ್ಳುವ ಹಕ್ಕನ್ನು ನಾನು ಕೊಡುತ್ತೇನೆ. "ಸಭೆಗಳಿಗೆ ದೇವರಾತ್ಮ ಹೇಳುವುದನ್ನು ಕಿವಿಯುಳ್ಳವನು ಕೇಳಲಿ!" 

ಕೀರ್ತನೆ: 15: 2-3a, 3bc-4ab, 5 
ಶ್ಲೋಕ: ಜಯಹೊಂದಿದವನಿಗೆ ನನ್ನೊಡನೆ ಸಿಂಹಾಸನದಲ್ಲಿ ಕುಳಿತುಕೊಳ್ಳುವ ಹಕ್ಕನ್ನು ನಾನು ಕೊಡುತ್ತೇನೆ. 

 ಶುಭಸಂದೇಶ: ಲೂಕ 19:1-10 

ಯೇಸುಸ್ವಾಮಿ ಜೆರಿಕೊ ಪಟ್ಟಣವನ್ನು ಪ್ರವೇಶಿಸಿ ಅದರ ಬೀದಿಗಳಲ್ಲಿ ಹಾದು ಹೋಗುತ್ತಿದ್ದರು. ಅಲ್ಲಿ ಜಕ್ಕಾಯ ಎಂಬುವನಿದ್ದನು. ಅವನು ಸುಂಕವಸೂಲಿಯವರ ಮುಖಂಡ ಹಾಗೂ ಧನಾಢ್ಯ. ಯೇಸು ಯಾರೆಂದು ನೋಡಬೇಕೆಂಬ ಅಪೇಕ್ಷೆ ಅವನದು. ಆದರೆ ಅವನು ಗಿಡ್ಡ ವ್ಯಕ್ತಿ. ಜನಜಂಗುಳಿಯ ಮಧ್ಯೆ ಯೇಸುವನ್ನು ನೋಡಲು ಪ್ರಯತ್ನಿಸಿದರೂ ಅವನಿಂದಾಗಲಿಲ್ಲ. ಆದಕಾರಣ ಮುಂದಕ್ಕೆ ಓಡಿಹೋಗಿ ಯೇಸು ಬರುತ್ತಿದ್ದ ಆ ಮಾರ್ಗದಲ್ಲಿ ಒಂದು ಆಲದ ಮರವನ್ನು ಕಂಡು, ಅದನ್ನು ಹತ್ತಿದನು. ಯೇಸು ಆ ಸ್ಥಳಕ್ಕೆ ಬಂದು, ತಲೆಯೆತ್ತಿ ನೋಡಿ, "ಜಕ್ಕಾಯಾ, ಒಡನೆ ಇಳಿದು ಬಾ; ಈ ದಿನ ನಿನ್ನ ಮನೆಯಲ್ಲಿ ನಾನು ತಂಗಬೇಕು," ಎಂದರು. ಜಕ್ಕಾಯನು ತಕ್ಷಣವೇ ಇಳಿದು ಬಂದು ಯೇಸುವನ್ನು ಸಂತೋಷದಿಂದ ಸ್ವಾಗತಿಸಿದನು. ಇದನ್ನು ನೋಡಿದವರೆಲ್ಲರು, "ಯೇಸು ಪಾಪಿಷ್ಠನ ಮನೆಗೆ ಅತಿಥಿಯಾಗಿ ಹೋಗುತ್ತಾನಲ್ಲಾ?" ಎಂದು ಗೊಣಗುಟ್ಟಿದರು. ಜಕ್ಕಾಯನು ನೆರೆದಿದ್ದ ಜನರ ಮುಂದೆ ಎದ್ದುನಿಂತು ಯೇಸುವಿಗೆ, "ಪ್ರಭುವೇ, ನನ್ನ ಆಸ್ತಿಪಾಸ್ತಿಯಲ್ಲಿ ಅರ್ಧಭಾಗವನ್ನು ಬಡಬಗ್ಗರಿಗೆ ಕೊಟ್ಟುಬಿಡುತ್ತೇನೆ, ಯಾರಿಗಾದರೂ ಮೋಸಮಾಡಿ ಅವರಿಂದೇನಾದರೂ ನಾನು ಕಸಿದುಕೊಂಡಿದ್ದರೆ ಅದಕ್ಕೆ ನಾಲ್ಕರಷ್ಟು ಹಿಂದಕ್ಕೆ ಕೊಡುತ್ತೇನೆ," ಎಂದನು. ಆಗ ಯೇಸು, "ಇಂದು ಈ ಮನೆ ಉದ್ಧಾರವಾಯಿತು. ಇವನು ಕೂಡ ಅಬ್ರಹಾಮನ ವಂಶಕ್ಕೆ ಸೇರಿದವನಲ್ಲವೇ? ನರಪುತ್ರನು ಬಂದುರುವುದು ಪತಿತರನ್ನು ಅರಸಿ ಉದ್ದರಿಸುವುದಕ್ಕೆ," ಎಂದು ಹೇಳಿದರು.

19.11.2018

ಸಾಧಾರಣ ಕಾಲದ 33ನೇ ಸೋಮವಾರ  

ಮೊದಲನೇ ವಾಚನ: ಪ್ರಕಟನೆ  1:1-4; 2:1-5 

ದೇವರು ಯೇಸುಕ್ರಿಸ್ತರಿಗಿತ್ತ ಪ್ರಕಟನೆ ಇದು. ಅತಿ ಶೀಘ್ರದಲ್ಲಿಯೇ ಸಂಭವಿಸಲಿರುವ ಘಟನೆಗಳನ್ನು ತಮ್ಮ ದಾಸರಿಗೆ ತಿಳಿಯಪಡಿಸುವುದಕ್ಕಾಗಿ ಕ್ರಿಸ್ತಯೇಸುವಿಗೆ ಈ ಪ್ರಕಟನೆಯನ್ನು ದೇವರು ದಯಪಾಲಿಸಿದರು. ಕ್ರಿಸ್ತಯೇಸು ತಮ್ಮ ದೂತರನ್ನು ಕಳುಹಿಸಿ ತಮ್ಮ ದಾಸನಾದ ಯೊವಾನ್ನನಿಗೆ ಇವುಗಳನ್ನು ಪ್ರಕಟಿಸಿದರು. ಯೊವಾನ್ನನು ದೇವರ ಸಂದೇಶಕ್ಕೂ ಕ್ರಿಸ್ತೇಸು ತಿಳಿಸಿದ ಸತ್ಯಕ್ಕೂ ಸಾಕ್ಷಾತ್ ಸಾಕ್ಷಿಯಾಗಿದ್ದಾನೆ. ಈ ಪ್ರವಾದನಾ ಸಂದೇಶವನ್ನು ಓದುವವನು ಧನ್ಯನು; ಓದಿದ್ದನ್ನು ಕೇಳಿಸಿಕೊಳ್ಳುವವರೂ ಧನ್ಯರು ಮತ್ತು ಈ ಪ್ರವಾದನೆಯಲ್ಲಿ ಲಿಖಿತವಾಗಿರುವುದನ್ನು ಕೈಗೊಂಡು ನಡೆಯುವವರು ಸಹ ಧನ್ಯರು! ಏಕೆಂದರೆ, ಕಾಲ ಸನ್ನಿಹಿತವಾಯಿತು. ಏಷ್ಯಾಸೀಮೆಯಲ್ಲಿರುವ ಏಳು ಸಭೆಗಳಿಗೆ ಯೊವಾನ್ನನೆಂಬ ನಾನುಬರೆಯುವುದೇನೆಂದರೆ: ವರ್ತಮಾನಕಾಲದಲ್ಲಿ "ಇರುವಾತನೂ," ಭೂತಕಾಲದಲ್ಲಿ "ಇದ್ದಾತನೂ," ಭವಿಷ್ಯತ್ಕಾಲದಲ್ಲಿ "ಬರುವಾತನೂ" ಆದ ದೇವರಿಂದ ನಿಮಗೆ ಕೃಪಾಶೀರ್ವಾದವೂ ಶಾಂತಿಸಮಾಧಾನವೂ ಲಭಿಸಲಿ! "ಎಫೆಸದಲ್ಲಿರುವ ಶ್ರೀಸಭೆಯ ದೂತನಿಗೆ ಹೀಗೆ ಬರೆ: ಏಳು ನಕ್ಷತ್ರಗಳನ್ನು ತನ್ನ ಬಲಗೈಯಲ್ಲಿ ಹಿಡಿದಿರುವಾತನೂ ಏಳು ಚಿನ್ನದ ದೀಪಸ್ತಂಬಗಳ ನಡುವೆ ನಡೆದಾಡುವಾತನೂ ನೀಡುವ ಸಂದೇಶವಿದು: ನಾನು ನಿನ್ನ ಸುಕೃತ್ಯಗಳನ್ನು ಬಲ್ಲೆ. ನಿನ್ನ ಶ್ರಮಜೀವನವನ್ನು ಅರಿತು ಇದ್ದೇನೆ. ನಿನ್ನ ಸಹನಾಶಕ್ತಿಯನ್ನು ಮನಗಂಡಿದ್ದೇನೆ. ದುರ್ಜನರನ್ನು ನೀನು ಸಹಿಸಲಾರೆ ಎಂಬುದು ನನಗೆ ಗೊತ್ತು ಪ್ರೇಷಿತರಲ್ಲದಿದ್ದರೂ ಪ್ರೇಷಿತರೆಂದು ಹೇಳಿಕೊಳ್ಳುವವರನ್ನು ನೀನು ಪರಿಶೋಧಿಸಿರುವೆ. ಅವರು ಸುಳ್ಳುಗಾರರೆಂಬುದನ್ನು ಕಂಡುಹಿಡಿದಿರುವೆ. ಹೌದು, ಸಹಾನಶಕ್ತ ನಿನಗಿದೆ. ಬೇಸರಗೊಳ್ಳದೆ ನನ್ನ ಹೆಸರಿನ ನಿಮಿತ್ತ ನೀನು ಕಷ್ಟಸಂಕಟಗಳನ್ನು ತಾಳಿಕೊಂಡೆ. ಆದರೂ ನಿನ್ನ ಮೇಲೆ ಹೊರಿಸಬೇಕಾದ ಆಪಾದನೆ ಬಂದಿದೆ: ಮೊದಲಿ ನಿನಗೆ ನನ್ನ ಮೇಲಿದ್ದ ಪೀತಿ ಈಗಿಲ್ಲ. ಆದುದರಿಂದ ನೀನು ಹೇಗೆ ಪತನಹೊಂದಿದೆ ಎಂಬುದನ್ನು ಜ್ಞಾಪಿಸಿಕೋ. ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖನಾಗು. ನೀನು ಮೊದಲು ಮಾಡಿದ ಸುಕೃತ್ಯಗಳನ್ನು ಸಾಧಿಸು. ನೀನು ಪಾಪಕ್ಕೆ ವಿಮುಖನಾಗದೆ ಹೋದರೆ, ನಾನು ನಿನ್ನ ಬಳಿಗೆ ಬಂದು ನಿನ್ನ ದೀಪಸ್ತಂಭವನ್ನು ಅದರ ಸ್ಥಳದಿಂದ ತೆಗೆದು ಹಾಕುತ್ತೇನೆ. 

ಕೀರ್ತನೆ: 1:1-2, 3, 4, 6 
ಶ್ಲೋಕ: ಯಾರು ಜಯಹೊಂದುತ್ತಾನೋ ಅವನು ಸೌಭಾಗ್ಯ ಪಡೆಯುತ್ತಾನೆ. 

ಶುಭಸಂದೇಶ: ಲೂಕ 18:35-43 

 ಯೇಸುಸ್ವಾಮಿ ಜೆರಿಕೊ ಪಟ್ಟಣವನ್ನು ಸಮೀಪಿಸುತ್ತಿದ್ದಾಗ ಕುರುಡನೊಬ್ಬನು ದಾರಿಯ ಪಕ್ಕದಲ್ಲಿ ಕುಳಿತು ಭಿಕ್ಷೆ ಬೇಡುತ್ತಿದ್ದನು. ಜನಸಂದಣಿಯ ಶಬ್ದವನ್ನು ಆಲಿಸಿ, ಅದೇನೆಂದು ವಿಚಾರಿಸಿದನು. "ನಜರೇತಿನ ಯೇಸು ಈ ಮಾರ್ಗವಾಗಿ ಹೋಗುತ್ತಿದ್ದಾರೆ," ಎಂದು ಅವನಿಗೆ ತಿಳಸಲಾಯಿತು. ಕೂಡಲೆ ಅವನು, "ಯೇಸುವೇ, ದಾವೀದ ಕುಲಪುತ್ರರೇ, ನನಗೆ ದಯೆತೋರಿ," ಎಂದು ಗಟ್ಟಿಯಾಗಿ ಕೂಗಿಕೊಂಡನು. ಮುಂದೆ ಹೋಗುತ್ತಿದ್ದವರು, "ಸುಮ್ಮನಿರು" ಎಂದು ಅವನನ್ನು ಗದರಿಸಿದರು. ಅವನಾದರೋ, "ದಾವೀದ ಕುಲಪುತ್ರರೇ, ನನಗೆ ದಯೆತೋರಿ" ಎಂದು ಮತ್ತಷ್ಟು ಗಟ್ಟಿಯಾಗಿ ಕೂಗಿಕೊಂಡನು. ಇದನ್ನು ಕೇಳಿ ಯೇಸು, ಅಲ್ಲೇ ನಿಂತು, ಅವನನ್ನು ತಮ್ಮ ಬಳಿಗೆ ಕರೆದುತರುವಂತೆ ಅಪ್ಪಣೆಮಾಡಿದರು.ಅವನು ಹತ್ತಿರಕ್ಕೆ ಬಂದಾಗ, "ನನ್ನಿಂದ ನಿನಗೇನಾಗಬೇಕು?" ಎಂದು ಕೇಳಲು ಅವನು, "ಸ್ವಾಮೀ ನನಗೆ ಕಣ್ಣು ಕಾಣುವಂತೆ ಮಾಡಿ," ಎಂದು ಪ್ರಾರ್ಥಿಸಿದನು. ಯೇಸು ಅವನಿಗೆ, "ದೃಷ್ಟಿಯನ್ನು ಪಡೆ: ನಿನ್ನ ವಿಶ್ವಾಸವೇ ನಿನ್ನನ್ನು ಸ್ವಸ್ಥಮಾಡಿದೆ," ಎಂದರು. ಆ ಕ್ಷಣವೇ ಅವನಿಗೆ ದೃಷ್ಟಿಬಂದಿತು. ದೇವರನ್ನು ಸ್ತುತಿಸುತ್ತಾ ಅವನೂ ಯೇಸುವನ್ನು ಹಿಂಬಾಲಿಸಿದನು. ಇದನ್ನು ನೋಡಿದ ಜನರೆಲ್ಲರೂ ದೇವರನ್ನು ಕೊಂಡಾಡಿದರು.

18.11.2018

ಸಾಧಾರಣ ಕಾಲದ 33ನೇ ಭಾನುವಾರ  



ಮೊದಲನೇ ವಾಚನ: ದಾನಿಯೇಲ 12:1-3 

"ಆ ಕಾಲದಲ್ಲಿ ನಿನ್ನ ಜನರ ಪಕ್ಷ ವಹಿಸುವ ಮಹಾದೂತನಾದ ಮಿಕಾಯೇಲನು ಕಾಣಿಸಿಕೊಳ್ಳುವನು. ಮೊತ್ತ ಮೊದಲು, ಮಾನವ ಜನಾಂಗ ಉಂಟಾದಂದಿನಿಂದ ಅಂದಿನವರೆಗೆ ಸಂಭವಿಸದ ಘೋರ ಸಂಕಟ ಉಂಟಾಗುವುದು. ಆಗ ನಿನ್ನ ಜನರಲ್ಲಿ ಯಾರ ಯಾರ ಹೆಸರುಗಳು ಜೀವ ಭಾದ್ಯರ ಪಟ್ಟಿಯಲ್ಲಿ ಇರುವುದೋ ಅವರೆಲ್ಲರು ಜೀವೋದ್ಧಾರವನ್ನು ಪಡೆಯುವರು. ಸತ್ತ ಧೂಳಿನ ಮಣ್ಣಿನಲ್ಲಿ 'ದೀರ್ಘನಿದ್ರೆ' ಮಾಡುತ್ತಿರುವ ಅನೇಕರು ಏಳುವರು, ಎಚ್ಚೆತ್ತವರಲ್ಲಿ ಕೆಲವರು ನಿತ್ಯ ಜೀವವನ್ನು ಅನುಭವಿಸುವರು; ಕೆಲವರು ತಿರಸ್ಕೃತರಾಗಿ ನಿತ್ಯ ನಿಂದನೆಗೆ ಗುರಿಯಾಗುವರು. ಬುದ್ಧಿವಂತರು ತೇಜೋಮಯವಾದ ಆಕಾಶಮಂಡಲದಂತೆ ಪ್ರಕಾಶಿಸುವರು. ಜನರನ್ನು ಸದ್ಧರ್ಮಿಗಳನ್ನಾಗಿ ಮಾಡುವವರು ಯುಗಯುಗಾಂತರಕ್ಕೂ ನಕ್ಷತ್ರಗಳಂತೆ ಹೊಳೆಯುವರು."

-ಪ್ರಭುವಿನ ವಾಕ್ಯ

 ಕೀರ್ತನೆ: 16:5, 8, 9-10, 11 
 ಶ್ಲೋಕ: ನೀಡು ದೇವಾ ರಕ್ಷಣೆಯನು, ನಾ ನಿನಗೆ ಶರಣಾಗತನು. 

ಎರಡನೇ ವಾಚನ: ಹಿಬ್ರಿಯರಿಗೆ  10: 11-14, 18 

ಪ್ರತಿಯೊಬ್ಬ ಯಾಜಕನು ಅನುದಿನವೂ ತನ್ನ ಸೇವೆಯನ್ನು ನಿರ್ವಹಿಸುತ್ತಾನೆ. ಆದರೆ ಇವುಗಳಿಂದ ಎಂದಿಗೂ ಪಾಪ ನಿವಾರಣೆ ಆಗದು. ಕ್ರಿಸ್ತ ಯೇಸು ಪಾಪ ನಿವಾರಣೆಗೆಂದು ಎಲ್ಲಾ ಕಾಲಕ್ಕೂ ಏಕೈಕ ಬಲಿಯನ್ನು ಅರ್ಪಿಸಿ ದೇವರ ಬಲಪಾರ್ಶ್ವದಲ್ಲಿ ಆಸೀನರಾಗಿದ್ದಾರೆ. ಅವರ ಶತ್ರುಗಳು ತಮ್ಮ ಕಾಲಡಿಗೆ ಬರುವತನಕ ಅಲ್ಲೇ ಕಾದಿರುತ್ತಾರೆ. ತಾವು ಪುನೀತಗೊಳಿಸಿದವರನ್ನು ಒಂದೇ ಒಂದು ಬಲಿಯರ್ಪಣೆಯಿಂದ ಯೇಸು ನಿರಂತರ ಸಿದ್ಧಿಗೆ ತಂದಿದ್ದಾರೆ. ಪಾಪ ಕ್ಷಮಾಪಣೆಯಾದ ಬಳಿಕ ಪಾಪ ಪರಿಹಾರಕ ಬಲಿಯ ಅವಶ್ಯಕತೆ ಇಲ್ಲ. 

-ಪ್ರಭುವಿನ ವಾಕ್ಯ


ಶುಭಸಂದೇಶ: ಮಾರ್ಕ 13:24-32 

"ಆ ದಿನಗಳಲ್ಲಿ ಈ ಸಂಕಷ್ಟಗಳು ಮುಗಿದ ಬಳಿಕ ಸೂರ್ಯನು ಅಂಧಕಾರಮಯನಾಗುವನು; ಚಂದ್ರನು ಕಾಂತಿಹೀನನಾಗುವನು; ಅಂತರಿಕ್ಷದಿಂದ ನಕ್ಷತ್ರಗಳು ಬೀಳುವುವು; ಗ್ರಹಶಕ್ತಿಗಳು ಕಂಪಿಸುವುವು. ಆಗ ನರಪುತ್ರನು ಮಹಾಶಕ್ತಿಯಿಂದಲೂ ಮಹಿಮೆಯಿಂದಲೂ ಮೇಘಾರೂಢನಾಗಿ ಬರುವುದನ್ನು ಜನರು ಕಾಣುವರು. ಆತನು ದೇವದೂತರನ್ನು ಜಗತ್ತಿನ ನಾಲ್ಕು ದಿಕ್ಕುಗಳಿಗೂ ಕಳುಹಿಸಿ, ತಾನು ಆರಿಸಿಕೊಂಡವರನ್ನು ವಿಶ್ವದ ಅಷ್ಟ ದಿಕ್ಕುಗಳಿಂದಲೂ ಒಟ್ಟುಗೂಡಿಸುವನು. "ಅಂಜೂರದ ಮರದಿಂದ ಒಂದು ಪಾಠವನ್ನು ಕಲಿತುಕೊಳ್ಳಿ. ಅದರ ಎಳೆ ರೆಂಬೆಗಳಲ್ಲಿ ಎಲೆಗಳು ಚಿಗುರುವಾಗ ವಸಂತಕಾಲ ಸಮೀಪಿಸಿತು ಎಂದು ಅರಿತುಕೊಳ್ಳುತ್ತೀರಿ. ಅಂತೆಯೇ ಇವೆಲ್ಲವೂ ಸಂಭವಿಸುವುದನ್ನು ನೋಡುವಾಗ ನರಪುತ್ರನು ಸಮೀಪಿಸಿದ್ದಾನೆ, ಹೊಸ್ತಿಲಲ್ಲೇ ಇದ್ದಾನೆಂದು ತಿಳಿದುಕೊಳ್ಳಿ. ಇವೆಲ್ಲವು ಸಂಭವಿಸುವುದಕ್ಕೆ ಮುಂಚೆ ಈ ಪೀಳಿಗೆ ಗತಿಸಿ ಹೋಗುವುದೆಂದು ಒತ್ತಿ ಹೇಳುತ್ತೇನೆ. ಭೂಮ್ಯಾಕಾಶಗಳು ಗತಿಸಿಹೋಗುವುವು, ಆದರೆ ನನ್ನ ಮಾತುಗಳು ಶಾಶ್ವತವಾಗಿ ಉಳಿಯುವುವು. "ಆ ದಿನವಾಗಲಿ, ಆ ಗಳಿಗೆಯಾಗಲಿ, ಯಾವಾಗ ಬರುವುದೆಂದು ಪಿತನ ಹೊರತು ಮತ್ತಾರೂ ಅರಿಯರು. ಸ್ವರ್ಗದಲ್ಲಿರುವ ದೂತರೇ ಆಗಲಿ, ಪುತ್ರನೇ ಆಗಲಿ, ಅದನ್ನು ಅರಿಯರು."

17.11.2018

ಸಾಧಾರಣ ಕಾಲದ 32ನೇ ಶನಿವಾರ  

ಮೊದಲನೇ ವಾಚನ: 3ಯೊವಾನ್ನ  1:5-8 

ಪ್ರಿಯನೇ, ಸಹೋದರನಿಗೆ - ಮುಖ್ಯವಾಗಿ ಅಪರಿಚಿತರಿಗೆ ಸತ್ಕಾರ್ಯವನ್ನು ಮಾಡುವುದರಲ್ಲಿ ನೀನು ತುಂಬಾ ನಿಷ್ಠಾವಂತನು. ಇಲ್ಲಿಯ ಸಭೆಯ ಮುಂದೆ ಅವರೇ ನಿನ್ನ ಪ್ರೀತ್ಯಾದರವನ್ನು ಪ್ರಶಂಶಿಸಿದ್ದಾರೆ. ಅವರು ತಮ್ಮ ಸಂಚಾರವನ್ನು ಇನ್ನೂ ಮುಂದುವರಿಸುವಂತೆ ದೇವರು ಮೆಚ್ಚುವ ರೀತಿಯಲ್ಲಿ ನೀನು ನೆರವಾಗಬೇಕು. ಅವರು ಈ ಸಂಚಾರವನ್ನು ಕೈಗೊಂಡಿರುವುದು ಕ್ರಿಸ್ತಯೇಸುವಿನ ಸೇವೆಗಾಗಿಯೆ. ಅನ್ಯಧರ್ಮಿಯರಿಂದ ಅವರು ಯಾವ ಸಹಾಯವನ್ನೂ ಸ್ವೀಕರಿಸುವುದಿಲ್ಲ. ಆದ್ದರಿಂದ, ಇಂಥವರಿಗೆ ನಾವು ನೆರವಾಗಲೇಬೇಕು. ಹೀಗೆ ಸತ್ಯಕ್ಕಾಗಿ ದುಡಿಯುವವರೊಂದಿಗೆ ನಾವು ಸಹಕರಿಸಬೇಕು. 

ಕೀರ್ತನೆ: 112:1-2, 3-4, 5-6.
ಶ್ಲೋಕ: ಪ್ರಭುವಿನಲ್ಲಿ ಭಯಭಕ್ತಿಯುಳ್ಳವನು ಧನ್ಯನು. 

ಶುಭಸಂದೇಶ: ಲೂಕ 18:1-8 

ನಿರಾಶರಾಗದೆ ನಿರಂತರವಾಗಿ ಪ್ರಾರ್ಥನೆ ಮಾಡಬೇಕು ಎಂಬುದನ್ನು ಕಲಿಸಲು, ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಈ ಸಾಮತಿಯನ್ನು ಹೇಳಿದರು: "ಒಂದು ನಗರದಲ್ಲಿ ಒಬ್ಬ ನ್ಯಾಯಾಧೀಶನಿದ್ದ. ಅವನು ದೇವರಿಗೂ ಭಯಪಡುತ್ತಿರಲಿಲ್ಲ; ಮಾನವರಿಗೂ ಲಕ್ಷ್ಯಕೊಡುತ್ತಿರಲಿಲ್ಲ. ಅದೇ ಊರಿನಲ್ಲಿ ಒಬ್ಬ ವಿಧವೆಯಿದ್ದಳು. ಅವಳು ಪದೇಪದೇ ಅವನ ಬಳಿಗೆ ಬಂದು, ನನ್ನ ವಿರೋಧಿ ಅನ್ಯಾಯ ಮಾಡಿದ್ದಾನೆ; ನನಗೆ ನ್ಯಾಯ‌ ದೊರಕಿಸಿಕೊಡಿ," ಎಂದು ಕೇಳಿಕೊಳ್ಳುತ್ತಿದ್ದಳು ಬಹುಕಾಲ ನ್ಯಯಾಧೀಶನು ಅವಳಿಗೆ ಕಿವಿಗೊಡಲೇ ಇಲ್ಲ. ಕೊನೆಗೆ ಅವನು, "ನಾನುದೇವರಿಗೆ ಹೆದರುವವನಲ್ಲ; ಮಾನವರಿಗೆ ಲಕ್ಷ್ಯಕೊಡುವವನೂ ಅಲ್ಲ; ಇಷ್ಟಾದರೂ ಈ ವಿಧವೆಯ ಕಾಟವನ್ನು ತಪ್ಪಿಸಿಕೊಳ್ಳಲು, ಈಕೆಯ ನ್ಯಾಯ ತೀರಿಸಿಬಿಡುತ್ತೇನೆ. ಇಲ್ಲವಾದರೆ, ಈಕೆ ಪದೇಪದೇ ಬಂದುನನ್ನ ತಲೆಕೆಡಿಸಿಬಿಟ್ಟಾಳು," ಎಂದುಕೊಂಡ." ಅನಂತರ ಪ್ರಭು ಯೇಸು, "ಈ ನೀತಿಕೆಟ್ಟ ನ್ಯಾಯಾಧೀಶ ಹೇಳಿಕೊಂಡ ಮಾತುಗಳನ್ನು ಕೇಳಿದಿರಲ್ಲವೆ? ಹೀಗಿರುವಲ್ಲಿ ದೇವರು, ತಾವಾಗಿ ಆಯ್ಕೆಮಾಡಿಕೊಂಡ ಜನರು ಹಗಲು ರಾತ್ರಿ ತಮಗೆ ಮೊರೆಯಿಡುವಾಗ ನ್ಯಾಯ ತೀರಿಸದೆ ಹೋಗುವರೇ? ತಡಮಾಡಿಯಾರೇ? ಶೀಘ್ರವಾಗಿ ಅವರಿಗೆ ನ್ಯಾಯ ದೊರಕಿಸಿಕೊಡುವರೆಂದು ನಿಮಗೆ ಹೇಳುತ್ತೇನೆ. ಇಷ್ಟಾದರೂ ನರಪುತ್ರನು ಬರುವಾಗ ಜಗತ್ತಿನಲ್ಲಿ ವಿಶ್ವಾಸ ಇರುವುದನ್ನು ಕಾಣುವನೋ?" ಎಂದರು.

16.11.2018

ಸಾಧಾರಣ ಕಾಲದ 32ನೇ ಶುಕ್ರವಾರ  

ಮೊದಲನೇ ವಾಚನ: 2  ಯೊವಾನ್ನ  1:4-9 

ನಿನ್ನ ಮಕ್ಕಳಲ್ಲಿ ಕೆಲವರು ಪಿತನು ವಿಧಿಸಿದಂತೆ ಸತ್ಯಸಂಧರಾಗಿ ನಡೆಯುವುದನ್ನು ಕಂಡು ನನಗಾದ ಆನಂದ ಅಷ್ಟಿಷ್ಟಲ್ಲ. ಶ್ರೀಮಾತೆಯೇ, ನಾನು ಮಾಡುವ ಬಿನ್ನಹವಿದು: ನಾವು ಒಬ್ಬರನ್ನೊಬ್ಬರು ಪ್ರೀತಿಸಬೇಕು ಇದು ಮೊತ್ತಮೊದಲಿನಿಂದಲೂ ನಮಗೆ ಕೊಡಲಾದ ಆಜ್ಞೆಯೇ ಹೊರತು ಹೊಸದೇನೂ ಅಲ್ಲ. ದೇವರ ಆಜ್ಞೆಗಳನ್ನು ಅನುಸರಿಸಿ ನಡೆಯುವುದೇ ಪ್ರೀತಿ. ಪ್ರೀತಿ ಮಾರ್ಗದಲ್ಲಿ ನಡೆಯಬೇಕೆಂಬುದೇ ನೀವು ಮೊತ್ತ ಮೊದಲಿನಿಂದಲೂ ಕೇಳಿರುವ ಆಜ್ಞೆ, ಅನೇಕ ಮಂದಿ ವಂಚಕರು ಲೋಕದಲ್ಲಿ ತಲೆದೋರಿದ್ದಾರೆ. ಯೇಸುಕ್ರಿಸ್ತರು ಮನುಷ್ಯರಾಗಿ ಬಂದರೆಂಬುದನ್ನು ಇವರು ಒಪ್ಪಿಕೊಳ್ಳುವುದಿಲ್ಲ. ಇಂಥವನು ವಂಚಕನೂ ಕ್ರಿಸ್ತವಿರೋಧಿಯೂ ಹೌದು. ನಿಮ್ಮ ದುಡಿಮೆಯ ಫಲವನ್ನು ಕಳೆದುಕೊಳ್ಳದೆ ಅದನ್ನು ಪೂರ್ಣವಾಗಿ ಪಡೆಯುವಂತೆ ನೀವು ಎಚ್ಚರಿಕೆ ವಹಿಸಬೇಕು. ಕ್ರಿಸ್ತಯೇಸುವಿನ ಉಪದೇಶದಲ್ಲಿ ನೆಲಸದೆ ಅದರ ಎಲ್ಲೆಮೀರಿ ನಡೆಯುವವನಲ್ಲಿ ದೇವರು ಇರುವುದಿಲ್ಲ. ಆ ಉಪದೇಶದಲ್ಲಿ ನೆಲಸಿರುವವನಲ್ಲಿ ಪಿತ ಮತ್ತು ಪುತ್ರ ಇಬ್ಬರೂ ಇರುತ್ತಾರೆ. 

ಕೀರ್ತನೆ: 119:1, 2, 10, 11, 17, 18 
 ಶ್ಲೋಕ: ಪ್ರಭುವಿನ ಶಾಸ್ತ್ರಾನುಸಾರ ನಡೆಯುವವರು ಧನ್ಯರು. 

ಶುಭಸಂದೇಶ: ಲೂಕ 17:26-37 

ನೊವನ ಕಾಲದಲ್ಲಿ ನಡೆದಂತೆಯೇ ನರಪುತ್ರನು ಬರುವ ಕಾಲದಲ್ಲೂ ನಡೆಯುವುದು. ನೊವನು ನಾವೆಯನ್ನು ಹತ್ತುವ ದಿನದ ತನಕಜನರು ತಿನ್ನುತ್ತಾ ಕುಡಿಯುತ್ತಾ ಇದ್ದರು; ಮದುವೆ ಮಾಡಿಕೊಳ್ಳುತ್ತಾ, ಮಾಡಿಕೊಡುತ್ತಾ ಇದ್ದರು; ಜಲಪ್ರಳಯ ಬಂದು ಎಲ್ಲರನ್ನು ನಾಶಮಾಡಿತು. ಅಂತೆಯೇ, ಲೋತನ ಕಾಲದಲ್ಲೂ ನಡೆಯಿತು. ಜನರು ಅನ್ನಪಾನೀಯಗಳಲ್ಲಿ ಆಸಕ್ತರಾಗಿದ್ದರು; ಲೇವಾದೇವಿಯಲ್ಲಿ ತೊಡಗಿದ್ದರು. ನೆಡುವುದರಲ್ಲೂ ನಿರ್ಮಿಸುವುದರಲ್ಲೂ ನಿರತರಾಗಿದ್ದರು. ಲೋತನು ಸೊದೋಮ್ ಊರನ್ನು ಬಿಟ್ಟು ತೆರಳಿದ ದಿನದಂದೇ ಆಕಾಶದಿಂದ ಅಗ್ನಿ ಮತ್ತು ಗಂಧಕದ ಮಳೆ ಸುರಿದು ಎಲ್ಲರನ್ನು ನಾಶಮಾಡಿತು. ನರಪುತ್ರನು ಪ್ರತ್ಯಕ್ಷನಾಗುವದಿನದಲ್ಲೂ ಹಾಗೆಯೇ ನಡೆಯುವುದು. ಆ ದಿನದಲ್ಲಿ ಮಾಳಿಗೆಯ ಮೇಲಿರುವವನು ಮನೆಯಲ್ಲಿರುವ ಸರಕುಸಾಮಗ್ರಿಗಳನ್ನು ತೆಗೆದುಕೊಳ್ಳಲು ಕೆಳಗಿಳಿಯದಿರಲಿ. ಅಂತೆಯೇ, ಹೊಲದಲ್ಲಿರುವವನು ಮನೆಗೆ ಹಿಂದಿರುಗದಿರಲಿ. ಲೋತನ ಪತ್ನಿಗಾದ ಗತಿಯನ್ನು ನೆನಪಿಗೆ ತಂದುಕೊಳ್ಳಿರಿ! ಯಾರು ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಇಚ್ಚಿಸುತ್ತಾನೋ ಅವನು ಅದನ್ನು ಕಳೆದುಕೊಳ್ಳುತ್ತಾನೆ; ಯಾರು ತನ್ನ ಪ್ರಾಣವನ್ನು ಕಳೆದುಕೊಳ್ಳುತ್ತಾನೋ ಅವನು ಅದನ್ನು ರಕ್ಷಿಸಿಕೊಳ್ಳುತ್ತಾನೆ. ಆ ರಾತ್ರಿ ಒಂದೇ ಹಾಸಿಗೆಯಲ್ಲಿ ಇಬ್ಬರು ಮಲಗಿದ್ದರೆ, ಆ ಇಬ್ಬರಲ್ಲಿ ಒಬ್ಬನನ್ನು ತೆಗೆದುಕೊಂಡು ಹೋಗಲಾಗುವುದು; ಒಬ್ಬನನ್ನು ಬಿಡಲಾಗುವುದು. ಎಂದರು. "ಸ್ವಾಮೀ, ಇದು ಎಲ್ಲಿ ನಡೆಯುವುದು?" ಎಂದು ಶಿಷ್ಯರು ಕೇಳಿದಾಗ, ಯೇಸು, "ಹೆಣವಿದ್ದಲ್ಲಿ ರಣಹದ್ದುಗಳು ಬಂದು ಕೂಡುವುವು," ಎಂದರು.

15.11.2018

ಸಾಧಾರಣ ಕಾಲದ 32ನೇ ಗುರುವಾರ  

ಮೊದಲನೇ ವಾಚನ: ಫಿಲೆಮೋನ 1:7-20 

ಸಹೋದರನೇ, ನಿನ್ನ ಪ್ರೀತಿಯನ್ನು ನೆನೆದು ನಾನು ಆನಂದವನ್ನೂ ಆದರಣೆಯನ್ನೂ ಪಡೆಯುತ್ತಿದ್ದೇನೆ. ದೇವಜನರೆಲ್ಲರ ಹೃದಯಗಳನ್ನು ನೀನು ಉಲ್ಲಾಸಪಡಿಸುತ್ತಿರುವೆ. ಆದಕಾರಣ ನೀನು ಮಾಡಬೇಕಾದುದನ್ನು ಮಾಡು ಎಂದು ಆಜ್ಞಾಪಿಸಲು ಕ್ರಿಸ್ತಯೇಸುವಿನಲ್ಲಿ ನನಗೆ ಧೈರ್ಯ ಮತ್ತು ಅಧಿಕಾರಗಳಿವೆ. ಆದರೂ ನಿನ್ನ ಮೆಲಿನ ಪ್ರೀತಿಯ ನಿಮಿತ್ತ ನಾನು ನಿನ್ನಲ್ಲಿ ವಿನಂತಿಸುತ್ತೇನೆ: ವೃದ್ಧ ಪ್ರಾಯನೂ ಮತ್ತು ಕ್ರಿಸ್ತಯೇಸುವಿಗೋಸ್ಕರ ಈಗ ಸೆರೆಯಾಳೂ ಆಗಿರುವ ಪೌಲನೆಂಬ ನಾನು ಒನೇಸಿಮನ ಪರವಾಗಿ ನಿನ್ನಲ್ಲಿ ವಿಜ್ಞಾಪಿಸುತ್ತೇನೆ. ಇವನು ಯೇಸುವಿನಲ್ಲಿ ನನ್ನ ಸ್ವಂತ ಮಗನಂತಿದ್ದಾನೆ. ಸೆರೆಮನೆಯಲ್ಲೇ ನಾನು ಅವನನ್ನು ಆಧ್ಯಾತ್ಮಿಕವಾಗಿ ಪಡೆದೆನು. ನಿನಗೂ ನನಗೂ ಪ್ರಯೋಜಕನಾಗಿದ್ದಾನೆ. ನನಗಂತೂ ಇವನು ಪ್ರಾಣದಂತಿದ್ದರೂ ಈಗ ನಿನ್ನ ಬಳಿ ಕಳುಹಿಸುತ್ತಿದ್ದೇನೆ. ಶುಭಸಂದೇಶಕ್ಕೋಸ್ಕರ ನಾನು ಸೆರೆಮನೆಯಲ್ಲಿರುವಾಗ ನಿನ್ನ ಬದಲಾಗಿ ನನಗೆ ಸಹಾಯಮಾಡಲು ಇವನನ್ನು ಇಲ್ಲಿಯೇ ಉಳಿಸಿಕೊಳ್ಳಲು ಇಷ್ಟವಿತ್ತು. ಆದರೆ ನನಗೆ ಸಹಾಯವಾಗಲೆಂದು ನಿನ್ನನ್ನು ಖಡ್ಡಾಯಪಡಿಸಲು ನನಗಂತೂ ಇಷ್ಟವಿಲ್ಲ. ನಿನಗಾಗಿಯೇ ನಿನ್ನ ಸ್ವಂತ ಇಚ್ಛೆಯಿಂದ ಹಾಗೆ ಮಾಡಬೇಕೆಂಬುದು ನನ್ನ ಅಪೇಕ್ಷೆ. ಆದ್ದರಿಂದ ನಿನ್ನ ಒಪ್ಪಿಗೆಯಿಲ್ಲದೆ ನಾನು ಏನನ್ನೂ ಮಾಡುತ್ತಿಲ್ಲ. ಸ್ವಲ್ಪಕಾಲ ಒನೇಸಿಮನು ನಿನ್ನಿಂದ ದೂರವಿದ್ದುದಕ್ಕೆ ಕಾರಣ  ಆತನು ಸದಾಕಾಲ ನಿನ್ನವನಾಗುವುದಕ್ಕೋ ಏನೋ, ಈಗ ಅವನು ನಿನ್ನ ಬಳಿಗೆ  ಬರುತ್ತಿರುವುದು ಕೇವಲ ಗುಲಾಮನಂತೆ ಅಲ್ಲ, ಅದಕ್ಕಿಂತಲೂ ಬಹಳ ಮೇಲಾದವನಂತೆ, ಕ್ರಿಸ್ತಯೇಸುವಿನಲ್ಲಿ ಪ್ರಿಯ ಸಹೋದರನಂತೆ, ಅವನೆಂದರೆ ನನಗೆಷ್ಟೋ ಪ್ರೀತಿ. ಹಾಗಾದರೆ ನಿನ್ನ ಸೇವಕನೂ ನಮ್ಮ  ಪ್ರಭುವಿನಲ್ಲಿ ನಿನ್ನ ಪ್ರಿಯ ಸಹೋದರನೂ ಆಗಿರುವ ಅವನ ಬಗ್ಗೆ ನಿನಗೆ ಮತ್ತಷ್ಟು ಪ್ರೀತಿ ಇರಬೇಕಲ್ಲವೇ? ಆದ್ದರಿಂದ ಕ್ರಿಸ್ತಯೇಸುವಿನಲ್ಲಿ ನಿನಗೂ ನನಗೂ ಅನ್ಯೋನ್ಯತೆ ಇದೆಯೆಂದು ನೀನು ಪರಿಗಣಿಸುವುದಾದರೆ ನನ್ನನ್ನು ಹೇಗೆ ಸ್ವಾಗತಿಸುತ್ತಿದ್ದೆಯೋ ಹಾಗೆಯೇ ಇವನನ್ನು ಸ್ವಾಗತಿಸು. ಇವನು ನಿನಗೇನಾದರೂ ಅನ್ಯಾಯ ಮಾಡಿದ್ದಾದರೆ, ಅಥವಾ ಇವನಿಂದ ನಿನಗೇನಾದರೂ ಸಲ್ಲಿಸಬೇಕಾದ ಬಾಕಿಯಿದ್ದರೆ, ಅದೆಲ್ಲವನ್ನೂ ನನ್ನ ಲೆಕ್ಕಕ್ಕೆಹಾಕು. ಅದನ್ನು ಪೌಲನೆಂಬ ನಾನೇ ಕೊಟ್ಟು ತೀರಿಸುತ್ತೇನೆ ಎಂದು ನನ್ನ ಹಸ್ತಾಕ್ಷರದಲ್ಲೇ ಬರೆದು ಕೊಡುತ್ತಿದ್ದೇನೆ. ಆದರೆ ಈಗ ನೀನು ಏನಾಗಿದ್ದೀಯೋ ಅದು ನನ್ನಿಂದಲೇ. ಹೀಗೆ ನೀನೇ ನನಗೆ ಸಾಲಗಾರನಾಗಿದ್ದೀ ಎಂದು ನಾನು ಹೇಳಬೇಕಾಗಿಲ್ಲ. ಹೌದು, ಪ್ರಿಯ ಸಹೋದರನೇ, ಪ್ರಭುವಿನ ಹೆಸರಿನಲ್ಲಿ ಇದೊಂದು ಉಪಕಾರವನ್ನು ನನಗೆ ಮಾಡಿಕೊಡು: ಕ್ರಿಸ್ತಯೇಸುವಿನಲ್ಲಿ ನನ್ನ ಹೃದಯ ಆನಂದಿಸುವಂತೆ ಮಾಡು. 

ಕೀರ್ತನೆ: 146:7, 8-9a, 9bc-10 
ಶ್ಲೋಕ: ಇಸ್ರಯೇಲ ಕುಲದೇವರು ಯಾರಿಗೆ ಉದ್ಧಾರಕನೋ ಅವನೇ ಧನ್ಯನು. 

ಶುಭಸಂದೇಶ: ಲೂಕ 17:20-25 


ದೇವರ ಸಾಮ್ರಾಜ್ಯವು ಯಾವಾಗ ಬರುವುದೆಂದು ಫರಿಸಾಯರು ಕೇಳಿದಾಗ ಯೇಸುಸ್ವಾಮಿ ಪ್ರತ್ಯುತ್ತರವಾಗಿ , "ದೇವರ ಸಾಮ್ರಾಜ್ಯವು ಕಣ್ಣುಗಳಿಗೆ ಕಾಣಿಸುವಂತೆ ಬರುವುದಿಲ್ಲ. "ಇಗೋ, ಅದು ಇಲ್ಲಿದೆ ಅಥವಾ ಅಲ್ಲಿದೆ," ಎಂದು ಹೇಳುವಂತಿಲ್ಲ. ಏಕೆಂದರೆ ದೇವರ ಸಾಮ್ರಾಜ್ಯವು ನಿಮ್ಮೊಳಗೇ ಇದೆ," ಎಂದರು. ಆನಂತರ ಶಿಷ್ಯರನ್ನು ಉದ್ದೇಶಿಸಿ, "ಕಾಲ ಒಂದು ಬರುವುದು, ಆಗ ನರಪುತ್ರನೊಂದಿಗೆ ಒಂದು ದಿನವನ್ನಾದರೂ ಕಳೆಯಲು ಹಂಬಲಿಸುವಿರಿ. ಆದರೆ ನಿಮಗದು ಲಭಿಸದು. "ಇಗೋ ಇಲ್ಲಿದ್ದಾನೆ;  ಅಗೋ ಅಲ್ಲಿದ್ದಾನೆ," ಎಂದು ಜನರು ಸುದ್ಧಿ ಎಬ್ಬಿಸುವರು. ಅದನ್ನು ನೀವು ನೋಡಲು ಹೋಗಬೇಡಿ; ಅಂಥವರನ್ನು ಹಿಂಬಾಲಿಸಲೂ ಬೇಡಿ ಆಕಾಶದ ಒಂದು ದಿಕ್ಕಿನಿಂದ ಇನ್ನೊಂದು ದಿಕ್ಕಿನವರೆಗೆ ಮಿನುಗಿ ಹೊಳೆಯುವ ಮಿಂಚಿನಂತೆ ನರಪುತ್ರನು ತಾನು ಬರುವ ಕಾಲದಲ್ಲಿ ಕಾಣಿಸಿಕೊಳ್ಳುವನು. ಆದರೆ ಅದಕ್ಕೆಮೊದಲು ಆತನು ತೀವ್ರ ಯಾತನೆಯನ್ನು ಅನುಭವಿಸಿ ಈ ಪೀಳಿಗೆಯಿಂದ ತಿರಸ್ಕೃತನಾಗಬೇಕು," ಎಂದರು.