ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

01.04.2019 - ಪ್ರವಾದಿಗೆ ಸ್ವಗ್ರಾಮದಲ್ಲಿ ಮರ್ಯಾದೆ ಇಲ್ಲ


ಮೊದಲನೇ ವಾಚನ: ಯೆಶಾಯ 65:17-21

"ನಾನು ಹೊಸ ಆಕಾಶವನ್ನೂ ಹೊಸ ಭೂಮಿಯನ್ನೂ ಸೃಷ್ಟಿಸುವೆನು; ಆಗ, ಮೊದಲಿದ್ದುದ್ದು ಜ್ಞಾಪಕದಲ್ಲಿರದು; ಅದು ಯಾರ ನೆನಪಿಗೂ ಬಾರದು. ನಾನು ಮಾಡುವ ಸೃಷ್ಟಿಯಕಾರ್ಯದಲ್ಲೇ ಸಂತೋಷಿಸಿ, ಎಂದೆಂದಿಗೂ ಆನಂದಿಸಿರಿ: ಹೌದು, ನಾನು ಜೆರುಸಲೇಮನ್ನು ಉಲ್ಲಾಸದ ನಿವಾಸವನ್ನಾಗಿಸುವೆನು; ಅದರ ಜನರನ್ನು ಹರ್ಷಭರಿತನ್ನಾಗಿಸುವೆನು. ನಾನು ಕೂಡ ಜೆರುಸಲೇಮನ್ನು ನೋಡಿ ಆನಂದಿಸುವೆನು, ಅದರ ಜನರನ್ನು ದೃಷ್ಟಿಸಿ ಹರ್ಷಗೊಳ್ಳುವೆನು. ಇನ್ನು ಅಲ್ಲಿ ಅಳುವಾಗಲಿ, ಆಕ್ರೋಶವಾಗಲಿ ಕೇಳಿಬರದು. ಕೆಲವೇ ದಿನ ಬದುಕುವ ಮಗುವಾಗಲಿ, ಆಯುಸ್ಸು ಮುಗಿಯದ ಮುದುಕನಾಗಲಿ ಇನ್ನು ಅಲ್ಲಿರನು. ನೂರು ವರ್ಷ ಬಾಳುವವನ್ನು ಯುವಕ ಎನಿಸಿಕೊಳ್ಳುವನು; ನೂರರೊಳಗೆ ಸಾಯುವ ಪಾಪಿಯು "ಶಾಪಗ್ರಸ್ತ" ಎನಿಸಿಕೊಳ್ಳುವನು. ಜನರು ಅಲ್ಲೇ ಮನೆಮಾಡಿ ನಿವಾಸ ಮಾಡುವರು; ತೋಟ ನೆಟ್ಟು ಅದರ ಫಲವನ್ನು ಅನುಭವಿಸುವರು.

ಕೀರ್ತನೆ: 30:2, 4, 5-6, 11-12, 13

ಶ್ಲೋಕ: ನಿನಗೆನ್ನ ವಂದನೆ ಪ್ರಭೂ, ನನ್ನನ್ನುದ್ಧರಿಸಿದೆ

ಶುಭಸಂದೇಶ: ಯೊವಾನ್ನ 4:43-54
ಎರಡು ದಿನಗಳಾದ ಬಳಿಕ ಯೇಸುಸ್ವಾಮಿ ಸಮಾರಿಯಾದಿಂದ ಗಲಿಲೇಯಕ್ಕೆ ಹೊರಟರು. ಪ್ರವಾದಿಗೆ ಸ್ವಗ್ರಾಮದಲ್ಲಿ ಮರ್ಯಾದೆ ಇಲ್ಲ ಎಂದು ಅವರೇ ಸಾರಿದರು. ಗಲಿಲೇಯವನ್ನು ತಲುಪಿದೊಡನೆ ಜನರು ಅವರನ್ನು ಆದರದಿಂದ ಬರಮಾಡಿಕೊಂಡರು. ಏಕೆಂದರೆ, ಹಬ್ಬಕ್ಕಾಗಿ ಆ ಜನರು ಜೆರುಸಲೇಮಿಗೆ ಹೋಗಿದ್ದಾಗ ಹಬ್ಬದ ಸಮಯದಲ್ಲಿ ಯೇಸು ಮಾಡಿದ್ಧನ್ನೆಲ್ಲಾ ನೋಡಿದ್ದರು. ಯೇಸು ಗಲಿಲೇಯದ ಕಾನಾ ಊರಿಗೆ ಮರಳಿ ಬಂದರು. ಅವರು ಹಿಂದೆ ನೀರನ್ನು ದ್ರಾಕ್ಷಾರಸವನ್ನಾಗಿ ಮಾಡಿದ್ದು ಅಲ್ಲಿಯೇ. ಕಫೆರ್ನವುಮಿನಲ್ಲಿ ರಾಜಸೇವೆಯಲ್ಲಿದ್ದ ಒಬ್ಬ ಅಧಿಕಾರಿಯ ಮಗನಿಗೆ ಕಾಯಿಲೆಯಾಗಿತ್ತು. ಯೇಸು ಜುದೇಯದಿಂದ ಗಲಿಲೇಯಕ್ಕೆ ಬಂದಿರುವುದನ್ನು ಕೇಳಿದ ಆ ಅಧಿಕಾರಿ, ಅವರ ಬಳಿಗೆ ಬಂದು, ಸಾವಿನ ದವಡೆಯಲ್ಲಿರುವ ತನ್ನ ಮಗನನ್ನು ಬಂದು ಬದುಕಿಸಬೇಕೆಂದು ಬೇಡಿಕೊಂಡನು. ಯೇಸು ಅವನಿಗೆ "ಸೂಚಕಕಾರ್ಯಗಳನ್ನು ಅದ್ಬುತಗಳನ್ನು ಕಂಡ ಹೊರತು ನೀವು ನಂಬುವುದಿಲ್ಲವಲ್ಲಾ," ಎಂದರು. ಆದರೂ ಆ ಅಧಿಕಾರಿ, "ನನ್ನ ಮಗನು ಪ್ರಾಣಬಿಡುವ ಮೊದಲೇ ಬನ್ನಿ ಸ್ವಾಮೀ," ಎಂದು ಅಂಗಲಾಚಿದನು. ಆಗ ಯೇಸು, "ಹೋಗು ನಿನ್ನ ಮಗನು ಬದುಕುತ್ತಾನೆ,"  ಎಂದು ಹೇಳಿದರು. ಆ ಅಧಿಕಾರಿ ಯೇಸುವಿನ ಮಾತನ್ನು ನಂಬಿ ಹೊರಟನು ಅವನು ಅರ್ಧ ದಾರಿಯಲ್ಲಿ ಇದ್ದಾಗಲೇ ಆಳುಗಳು ಅವನಿಗೆ ಎದುರಾಗಿ ಬಂದು, "ನಿಮ್ಮ ಮಗ ಬದುಕಿಕೊಂಡ," ಎಂದು ತಿಳಿಸಿದರು. ಎಷ್ಟು ಹೊತ್ತಿಗೆ ತನ್ನ ಮಗ ಚೇತರಿಸಿಕೊಂಡನೆಂದು ಆ ಅಧಿಕಾರಿ ವಿಚಾರಿಸಿದಾಗ, "ನಿನ್ನೆ ಮಧ್ಯಾಹ್ನ ಒಂದು ಗಂಟೆಗೆ ಅವನ ಜ್ವರ ಬಿಟ್ಟಿತು." ಎಂದು ಆಳುಗಳು ಉತ್ತರಕೊಟ್ಟರು. "ನಿನ್ನ ಮಗ ಬದುಕುತ್ತಾನೆ" ಎಂದು ಯೇಸು ಹೇಳಿದ್ದ ಗಳಿಗೆಯಲ್ಲಿಯೇ ತನ್ನ ಮಗ ಬದುಕಿಕೊಂಡನೆಂದು ತಂದೆಗೆ ತಿಳಿಯಿತು. ಅವನೂ ಅವನ ಮನೆಯವರೆಲ್ಲರೂ ಯೇಸುವನ್ನು ವಿಶ್ವಾಸಿಸಿದರು. ಯೇಸು ಜುದೇಯದಿಂದ ಗಲಿಲೇಯಕ್ಕೆ ಬಂದು, ಮಾಡಿದ ಎರಡನೆಯ ಸೂಚಕ ಕಾರ್ಯ ಇದು.

ಮನಸಿಗೊಂದಿಷ್ಟು : ಉನ್ನತ ಹುದ್ದೆಯಲ್ಲಿದ್ದ ಅಧಿಕಾರಿ ತನ್ನ ಪ್ರತಿಷ್ಠೆ ಮರೆತು ಯೇಸುವಿನ ಬಳಿ ಬರುತ್ತಾನೆ.  ಯೇಸು ಅವನ ವಿಶ್ವಾಸವನ್ನು ಪರೀಕ್ಷಿಸಿದರೂ ಅದರಲ್ಲಿ ಗೆದ್ದು ತನ್ನ ಮಗನನ್ನು ಗುಣಪಡಿಸಿಕೊಳ್ಳುತ್ತಾನೆ. ಅದರಲ್ಲೂ ಮಗ ಬದುಕುತ್ತಾನೆ ಎಂಬ ಯೇಸುವಿನ ಮಾತಲ್ಲಿ ವಿಶ್ವಾಸವಿಟ್ಟು ಹೊರಡುತ್ತಾನೆ. ನಮ್ಮ ಪ್ರತಿಷ್ಠೆ, ಅಡಚಣೆಗಳನ್ನು ಬದಿಗೊತ್ತಿ ವಿಶ್ವಾಸವಿಟ್ಟಾಗ ಹಾಗೂ ಯೇಸುವಿನ ಮಾತಲ್ಲಿ ಅಚಲ ವಿಶ್ವಾಸವಿಟ್ಟಾಗ ನಮ್ಮಲ್ಲೂ ಅದ್ಭುತಗಳು ಆಗುತ್ತವೆ.

ಪ್ರಶ್ನೆ :  ನಮ್ಮ ಮನಸು  ಯೇಸುವಿನ ಸ್ವಗ್ರಾಮ. ಅಲ್ಲಿ ಅವರಿಗೆ ಸಂಪೂರ್ಣ ಗೌರವವಿದೆಯೇ?

31.03.2019 - ತಪ್ಪಿ ಹೋಗಿದ್ದ, ಈಗ ಸಿಕ್ಕಿದ್ದಾನೆ

ಮೊದಲನೇ ವಾಚನ: ಯೆಹೋಶುವ 5:9,10-12

ರ್ವೇಶ್ವರಸ್ವಾಮಿ ಯೆಹೋಶುವನಿಗೆ, "ನಾನು ಈಜಿಪ್ಟಿನ ಕಳಂಕವನ್ನುಈದಿನ ನಿಮ್ಮಿಂದ ನಿವಾರಿಸಿಬಿಟ್ಟಿದ್ದೇನೆ," ಎಂದು ಹೇಳಿದ್ದರಿಂದ ಆ ಸ್ಥಳಕ್ಕೆ ಇಂದಿನವರೆಗೂ ಗಿಲ್ಗಾಲ್ ಎಂಬ ಹೆಸರಿಡಲಾಗಿದೆ. ಇಸ್ರಯೇಲರು ಗಿಲ್ಗಾಲಿನಲ್ಲಿ ತಂಗಿದ್ದಾಗ ಮೊದಲನೆಯ ತಿಂಗಳಿನ ಹದಿನಾಲ್ಕನೆಯ ದಿನದ ಸಂಜೆ ಜೆರಿಕೋವಿನ ಬಯಲಿನಲ್ಲಿ ಪಾಸ್ಕಹಬ್ಬವನ್ನಾಚರಿಸಿದರು.  ಮಾರನೆಯ ದಿನದಂದು ಕಾನಾನಿನ ಧಾನ್ಯವನ್ನು ಊಟಕ್ಕೆ ಬಳಸಲು ತೊಡಗಿದರು. ಹುಳಿಯಿಲ್ಲದ ರೊಟ್ಟಿಗಳನ್ನು ಮತ್ತು ಸುಟ್ಟ ತೆನೆಗಳನ್ನು ತಿನ್ನತೊಡಗಿದರು. ಆ ನಾಡಿನ ಹುಟ್ಟುವಳಿಯನ್ನು ಊಟಮಾಡಿದ ಮರುದಿನವೇ ಮನ್ನವು ನಿಂತುಹೋಯಿತು, ಅದು ಅವರಿಗೆ ಮತ್ತೆ ಸಿಕ್ಕಲೇ ಇಲ್ಲ. ಇಸ್ರಯೇಲರು ಆ ವರ್ಷವೆಲ್ಲ ಕಾನಾನ್ ನಾಡಿನ ಉತ್ಪನ್ನವನ್ನೇ ಅನುಭವಿಸಿದರು.

ಕೀರ್ತನೆ: 34:2-3, 4-5, 6-7

ಶ್ಲೋಕ: ಸವಿದು ನೋಡು ಪ್ರಭುವಿನ ಮಾಧುರ್ಯವನ್ನು

ಎರಡನೇ ವಾಚನ: 2 ಕೊರಿಂಥಿಯರಿಗೆ  5:17-21

ಹೋದರರೇ, ಯಾರಾದರೂ ಯೇಸುಕ್ರಿಸ್ತರೊಡನೆ ಒಂದಾದರೆ ಅವನು ನೂತನ ಸೃಷ್ಟಿಯಾಗುತ್ತಾನೆ. ಹಳೆಯದೆಲ್ಲಾ ಅಳಿದು ಹೋಗುತ್ತದೆ. ಹೊಸದಿದೋ, ಜನ್ಮತಳೆದಿದೆ. ಇದೆಲ್ಲಾ ಆಗುವುದು ದೇವರಿಂದ. ದೇವರು ಕ್ರಿಸ್ತಯೇಸುವಿನ ಮುಖಾಂತರ ನಮ್ಮನ್ನು ತಮ್ಮೊಡನೆ ಸಂಧಾನ ಪಡಿಸಿಕೊಂಡಿದ್ದಾರೆ. ಇದಲ್ಲದೆ, ಇತರರನ್ನು ಸಂಧಾನಕ್ಕೆ ತರುವ ಕಾರ್ಯವನ್ನು ನಮಗೆ ವಹಿಸಿದ್ದಾರೆ. ಹೌದು, ದೇವರು ಮಾನವರ ಅಪರಾಧಗಳನ್ನು ಲೆಕ್ಕಿಸದೆ, ಕ್ರಿಸ್ತ ಯೇಸುವಿನಲ್ಲಿ ಇಡೀ ಜಗತ್ತನ್ನೇ ತಮ್ಮೊಡನೆ ಸಂಧಾನಗೊಳಿಸುತ್ತಿದ್ದಾರೆ. ಈ ಸಂಧಾನದ ಸಂದೇಶವನ್ನು ಸಾರುವ ಸೌಭಾಗ್ಯವನ್ನು ಅವರೇ ನಮಗೆ ಕೊಟ್ಟಿದ್ದಾರೆ. ಆದ್ದರಿಂದಲೇ ನಾವು ಕ್ರಿಸ್ತಯೇಸುವಿನ ರಾಯಭಾರಿಗಳು. ದೇವರೇ ನಮ್ಮ ಮುಖಾಂತರ ಕರೆನೀಡುತ್ತಿದ್ದಾರೆ. ಅವರೊಡನೆ ಸಂಧಾನಮಾಡಿಕೊಳ್ಳಿರೆಂದು ಕ್ರಿಸ್ತಯೇಸುವಿನ ಹೆಸರಿನಲ್ಲಿ ನಾವು ನಿಮ್ಮನ್ನು ವಿನಂತಿಸುತ್ತೇವೆ. ಪಾಪವನ್ನೇ ಅರಿಯದ ಕ್ರಿಸ್ತಯೇಸುವನ್ನು ದೇವರು ನಮಗೋಸ್ಕರ ಪಾಪಸ್ವರೂಪಿಯನ್ನಾಗಿಸಿದರು. ಕ್ರಿಸ್ತಯೇಸುವಿನಲ್ಲಿ ನಾವು ದೇವರೊಡನೆ ಸತ್ಸಂಬಂಧವನ್ನು ಪಡೆಯಲೆಂದೇ ಹೀಗೆ ಮಾಡಿದರು.

ಶುಭಸಂದೇಶ: ಲೂಕ 15:1-3, 11-32

ಯೇಸುಸ್ವಾಮಿಯ ಉಪದೇಶವನ್ನು ಕೇಳಲು ಎಲ್ಲಾ ಸಂಕದವರು ಪಾಪಿಗಳು ಬರುತ್ತಿದ್ದರು. ಇದನ್ನು ಕಂಡ ಫರಿಸಾಯರು ಮತ್ತು ಧರ್ಮಶಾಸ್ತ್ರಿಗಳು, ಈ ಮನುಷ್ಯ ಪಾಪಿಗಳನ್ನು ಬರಮಾಡಿಕೊಳ್ಳುತ್ತಾನೆ;  ಅವರೊಡನೆ ಊಟ ಮಾಡುತ್ತಾನೆ." ಎಂದು ಗೊಣಗಿದರು.ಆ ಸಂದರ್ಭದಲ್ಲಿ ಯೇಸು ಈ ಸಾಮತಿಯನ್ನು ಹೇಳಿದರು: "ಒಬ್ಬಾತನಿಗೆ ಇಬ್ಬರು ಮಕ್ಕಳಿದ್ದರು ಅವರಲ್ಲಿ ಕಿರಿಯವನು "ಅಪ್ಪಾ, ಆಸ್ತಿಯಲ್ಲಿ ನನಗೆ ಬರಬೇಕಾದ ಪಾಲನ್ನು ಕೊಟ್ಟುಬಿಡು," ಎಂದು ಕೇಳಿದ. ತಂದೆ ಅವರಿಬ್ಬರಿಗೂ ಆಸ್ತಿಯನ್ನು ಹಂಚ್ಚಿಕೊಟ್ಟ. ಕೆಲವು ದಿವಸಗಳಾದ ಮೇಲೆ ಕಿರಿಯ ಮಗ ತನ್ನ ಆಸ್ತಿಯನ್ನೆಲ್ಲಾ ಮಾರಿ, ಬಂದ ಹಣವನ್ನು ತೆಗೆದುಕೊಂಡು ಮನೆ ಬಿಟ್ಟು ಹೋದ. ದೂರ ದೇಶಕ್ಕೆ ಹೋಗಿ, ದುಂದು ಜೀವನ ನಡೆಸಿ ಹಣವನ್ನೆಲ್ಲಾ ಪೊಲು ಮಾಡಿಬಿಟ್ಟ. ಹೀಗೆ ಅವನು ಎಲ್ಲವನ್ನು ಹಾಳು ಮಾಡಿಕೊಂಡ ಮೇಲೆ ಆ ದೇಶಾದಾದ್ಯಂತ ಘೋರವಾದ ಕ್ಷಾಮ ತಲೆದೋರಿತು. ನಿರ್ಗತಿಕನಾದ ಅವನು ಹೋಗಿ, ಆ ದೇಶದ ನಿವಾಸಿಯೊಬ್ಬನನ್ನು ಆಶ್ರಯಿಸಿದ. ಆತ ಇವನನ್ನು ಹಂದಿ ಮೆಯಿಸಲು ತನ್ನ ರೊಪ್ಪಗಳಿಗೆ ಕಳುಹಿಸಿದ. ಅಲ್ಲಿ ಹಂದಿ ತಿನ್ನುತ್ತಿದ್ದ ಕಾಳುಗಳನ್ನಾದರೂ ತಂದು ಹಸಿವನ್ನು ನೀಗಿಸಿಕೊಳ್ಳಲು ಹಂಬಲಿಸಿದ. ಆದರೆ ಅದನ್ನೂ ಅವನಿಗೆ ಯಾರೂ ಕೊಡಲಿಲ್ಲ. ಆಗ ಅವನಿಗೆ ಬುದ್ಧಿ ಬಂದಿತು. ನನ್ನ ತಂದೆಯ ಮನೆಯಲ್ಲಿ ಎಷ್ಟೋ ಮಂದಿ ಕೂಲಿಯಾಳುಗಳಿಗೆ ತಿಂದು ತೇಗುವಷ್ಟು ಆಹಾರವಿದೆ. ನಾನಾದರೋ ಇಲ್ಲಿ ಹಸಿವಿನಿಂದ ಸಾಯುತ್ತಾ ಇದ್ದೇನೆ. ನಾನು ಇದೀಗಲೇ ಹೊರಟು, ತಂದೆಯ ಬಳಿಗೆ ಹೋಗಿ, "ಅಪ್ಪಾ, ದೇವರಿಗೂ ನಿಮಗೂ ವಿರುದ್ಧವಾಗಿ ಪಾಪಮಾಡಿದ್ದೇನೆ; ನಿಮ್ಮ ಮಗನು ಎನಿಸಿಕೊಳ್ಳುವ ಯೋಗ್ಯತೆಯೂ ನನಗಿಲ್ಲ; ನನ್ನನ್ನು ನಿಮ್ಮ ಮನೆಯ ಕೂಲಿಯಾಳುಗಳಲ್ಲಿ ಒಬ್ಬನನ್ನಾಗಿ ಇಟ್ಟುಕೊಳ್ಳಿ ಎಂದು ಬೇಡಿಕೊಳ್ಳುತ್ತೇನೆ," ಎಂದುಕೊಡ. 
ಅಂತೆಯೇ ಎದ್ದು ತಂದೆಯ ಬಳಿಗೆ ಹೊರಟ. ಮಗನು ಇನ್ನೂ ಅಷ್ಟು ದೂರದಲ್ಲಿ ಇರುವಾಗಲೇ ತಂದೆ ನೋಡಿದ. ಆತನ ಹೃದಯ ಕನಿಕರದಿಂದ ಕರಗಿ ಹೋಯಿತು. ಓಡಿಹೋಗಿ, ಮಗನನ್ನು ಬಿಗಿಯಾಗಿ ತಬ್ಬಿಕೊಂಡು ಮುತ್ತಿಟ್ಟ. ಆದರೂ ಮಗನು, "ಅಪ್ಪಾ, ದೇವರಿಗೂ ನಿಮಗೂ ವಿರುದ್ಧವಾಗಿ ಪಾಪ ಮಾಡಿದ್ದೇನೆ; ನಿಮ್ಮ ಮಗನೆನಸಿಕೊಳ್ಳುವ ಯೋಗ್ಯತೆಯೂ ನನಗಿಲ್ಲ" ಎಂದ. ತಂದೆಯಾದರೋ ಆಳುಗಳನ್ನು ಕರೆದು, ಅತ್ಯುತ್ತಮವಾದ ಅಂಗಿಯನ್ನು ತಕ್ಷಣವೇ ತಂದು ಇವನಿಗೆ ಉಡಿಸಿರಿ. ಬೆರಳಿಗೆ ಉಂಗುರವನ್ನು ತೊಡಿಸಿರಿ, ಕಾಲಿಗೆ ಪಾದರಕ್ಷೆಯನ್ನು ಮೆಟ್ಟಿಸಿರಿ.; ಕೊಬ್ಬಿದ ಕರುವನ್ನು ತಂದು ಕೊಯ್ಯಿರಿ; ಹಬ್ಬ ಮಾಡೋಣ, ಆನಂದಿಸೋಣ, ಏಕೆಂದರೆ, ಈ ನನ್ನ ಮಗ ಸತ್ತು ಹೋಗಿದ್ದ, ಈಗ ಬದುಕಿ ಬಂದಿದ್ದಾನೆ. ತಪ್ಪಿ ಹೋಗಿದ್ದ, ಈಗ ಸಿಕ್ಕಿದ್ದಾನೆ,' ಎಂದು ಹೇಳಿದ. ಒಡನೆಯೇ ಹಬ್ಬದ ಸಡಗರ ತೊಡಗಿತು.
                              ಇತ್ತ ಹೊಲಕ್ಕೆ ಹೋಗಿದ್ದ ಹಿರಿಯ ಮಗ ಹಿಂದಿರುಗಿ ಮನೆಯನ್ನು ಸಮೀಪಿಸುವಾಗ ಗಾನ, ನರ್ತನಗಳ ಶಬ್ದವು ಅವನ ಕಿವಿಗೆ ಬಿತ್ತು. "ಮನೆಯಲ್ಲೇನು ವಿಶೇಷ?' ಎಂದು ಒಬ್ಬ ಆಳನ್ನು ಕರೆದು ವಿಚಾರಿಸಿದ. "ನಿಮ್ಮ ತಮ್ಮ ಬಂದಿದ್ದಾರೆ; ಅವರು ಮರಳಿ ಸುರಕ್ಷಿತವಾಗಿ ಬಂದುದಕ್ಕಾಗಿ ಕೊಬ್ಬಿದ ಕರುವನ್ನು ನಿಮ್ಮ ತಂದೆ ಕೊಯ್ಯಿಸಿದ್ದಾರೆ," ಎಂದು ಆಳು ತಿಳಿಸಿದ. ಇದನ್ನು ಕೇಳಿದ ಹಿರಿಯ ಮಗನಿಗೆ ಸಿಟ್ಟು ಬಂದಿತು. ಮನೆಯೊಳಕ್ಕೆ ಕಾಲಿಡಲೂ ಒಪ್ಪಲಿಲ್ಲ. ತಂದೆಯೇ ಹೊರಗೆ ಬಂದು ಬೇಡಿಕೊಂಡಾಗ ಅವನು, "ನೋಡಿ, ನಾನು ಇಷ್ಟು ವರ್ಷಗಳಿಂದ ನಿಮಗೆ ಗುಲಾಮನಂತೆ ಸೇವೆ ಮಾಡುತ್ತಿದ್ದೇನೆ. ನಿಮ್ಮ ಮಾತನ್ನು ಎಂದೂ ಮೀರಿಲ್ಲ; ಆದರೂ ನಾನು ನನ್ನ ಸ್ನೇಹಿತರೊಡನೆ ಹಬ್ಬಮಾಡಲು ಒಂದು ಆಡುಮರಿಯನ್ನು ಕೂಡ ನೀವು ಕೊಟ್ಟಿಲ್ಲ. ಆದರೆ ನಿಮ್ಮ ಆಸ್ತಿಪಾಸ್ತಿಯನ್ನೆಲ್ಲಾ ವೇಶ್ಯೆಯರಿಗೆ ಸುರಿದು  ಈ ನಿಮ್ಮ ಮಗ ಬಂದುದ್ದೇ ಕೊಬ್ಬಿಸಿದ ಕರುವನ್ನು ಕೊಯ್ಯಿಸಿದ್ಧೀರಿ!' ಎಂದು ವಾದಿಸಿದ. ಆಗ ತಂದೆ ಅವನಿಗೆ, 'ಮಗನೇ, ನೀನು ಯಾವಾಗಲೂ ನನ್ನ ಸಂಗಡ ಇದ್ದೀ; ನನ್ನ ಸರ್ವಸ್ವವೂ ನಿನ್ನದೇ ಆಗಿದೆ. ಈ ನಿನ್ನ ತಮ್ಮ ನಮ್ಮ ಪಾಲಿಗೆ ಸತ್ತುಹೋಗಿದ್ದ. ಈಗ ಬದುಕಿಬಂದಿದ್ದಾನೆ. ತಪ್ಪಿ ಹೋಗಿದ್ದ; ಈಗ ಸಿಕ್ಕಿದ್ಧಾನೆ. ಆದುದರಿಂದ ನಾವು ಹಬ್ಬಮಾಡಿ ಆನಂದಿಸುವುದು ಸಹಜವಲ್ಲವೇ" ಎಂದನು."

ಮನಸಿಗೊಂದಿಷ್ಟು : ಆಗ ತಾನೆ ಅಬ್ರಹಾಂ ಲಿಂಕನ್ ತಮ್ಮದೇ ದೇಶದ ಮೇಲೆ ಯುದ್ಧ ಸಾರಿದ್ದ ದಕ್ಷಿಣ ಪ್ರಾಂತ್ಯದ ಜನರ ಮೇಲೆ ಗೆಲುವು ಸಾಧಿಸಿದ್ದರು. ಸೋತು ಮತ್ತೆ ದೇಶಕ್ಕೆ ಮರಳಿದ ಆ ಜನರನ್ನು ಏನು ಮಾಡುತ್ತೀರಿ ಎಂದು ಕೇಳಲಾಯಿತು. ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬಹುದು ಎಂಬ ಉತ್ತರದ ನಿರೀಕ್ಷೆಯಲ್ಲಿದ್ದವರಿಗೆ ಅಬ್ರಹಾಂ ಲಿಂಕನ್ " ಅವರು ನಮ್ಮಿಂದ ದೂರ ಹೋಗೆ ಇಲ್ಲವೆಂಬಂತೆ ಬರ ಮಾಡಿಕೊಳ್ಳುತೇನೆ" ಎನ್ನುತ್ತಾರೆ.

ಓ ಆತ್ಮಗಳೇ ಈಗೇಕೆ ಚದುರಿ ಹೋಗಿವಿರೇ
ಬೆದರಿ ದಿಕ್ಕೆಟ್ಟ ಕುರಿ ಮಂದೆಯಂತೆ
ಮೂರ್ಖ ಮನಗಳೇ ಈಗೇಕೆ ದೂರಾಗುವಿರೇ
ನೈಜ ಆಳ ಆ ದೇವನ ಪ್ರೀತಿಯಿಂದಲೇ 

ಪ್ರಶ್ನೆ ಓ ಪಾಪದ ಮನವೇ ಮರಳಿ 
            ಬರುವುದೆಂದು ಮತ್ತೆ ದೇವನ ಬಳಿಗೆ?

30.03.2019 - ನನಗೆ ಬೇಕಾದುದು ದೈವಜ್ಞಾನ, ದಹನ ಬಲಿದಾನವಲ್ಲ.

ಮೊದಲನೇ ವಾಚನ: ಹೊಶೇಯ 6:1-6

ಸರ್ವೇಶ್ವರ ಇಂತೆನ್ನುತ್ತಾರೆ; ನನ್ನನ್ನು ಜನರು ಮರೆ ಹೋಗುತ್ತಾ ಹೀಗೆನ್ನುವರು: "ಬನ್ನಿ ಸರ್ವೇಶ್ವರ ಸ್ವಾಮಿಯ ಬಳಿಗೆ ಹಿಂದಿರುಗೋಣ. ಅವರು ನಮ್ಮನ್ನು ಛಿದ್ರಗೊಳಿಸಿದವರು. ಅವರು ನಮ್ಮನ್ನು ಗಾಯಗೊಳಿಸಿದ್ದಾರೆ; ಅವರೇ ನಮ್ಮ ಗಾಯಗಳನ್ನು ಕಟ್ಟಿ ಗುಣಪಡಿಸುವರು. ಒಂದೆರಡು ದಿನಗಳ ನಂತರ ಅವರು ನಮ್ಮನ್ನು ಬದುಕಿಸುವರು. ಮೂರನೆಯ ದಿನದಲ್ಲಿ ಅವರು ನಮ್ಮನ್ನು ಎಬ್ಬಿಸುವರು. ಆಗ ನಾವು ಅವರ ಸನ್ನಿಧಿಯಲ್ಲಿ ಬಾಳುವೆವು. ನಿರಂತರವಾಗಿ ಹುಡುಕಿ ಅವರನ್ನು ಕಂಡುಕೊಳ್ಳೋಣ; ಸರ್ವೇಶ್ವರಸ್ವಾಮಿಯನ್ನು ಅರಿತುಕೊಳ್ಳೋಣ; ಅವರ ಆಗಮನ ಸೂರ್ಯೋದಯದಂತೆ ನಿಶ್ಚಯ. ಭೂಮಿಯನ್ನು ತಣಿಸುವ ಮುಂಗಾರು ಹಿಂಗಾರು ಮಳೆಗಳಂತೆ ಅವರು ನಮ್ಮ ಬಳಿಗೆ ಬಂದೇ ಬರುವರು." ಆದರೆ ಸರ್ವೇಶ್ವರ ಹೇಳುವುದೇನೆಂದರೆ: "ಎಫ್ರಯಿಮೇ, ನಾನು ನಿನ್ನನ್ನು ಹೇಗೆ ತಿದ್ದಲಿ? ಜುದೇಯವೇ, ನಿನ್ನನ್ನು ಹೇಗೆ ಸರಿಪಡಿಸಲಿ? ನಿಮ್ಮ ಭಕ್ತಿ ಪ್ರಾತಃಕಾಲದ ಮೋಡದಂತಿದೆ; ಬೇಗನೆ ಮಾಯವಾಗದ ಇಬ್ಬನಿಯಂತಿದೆ. ಖಂಡ ತುಂಡವಾದ ತೀರ್ಪು ನೀಡುವ, ಕತ್ತಿಯಂತೆ ಹರಿತವಾಗಿ ಮಾತನಾಡುವ ನನ್ನ ಪ್ರವಾದಿಗಳನ್ನು ನಿಮ್ಮ ಬಳಿಗೆ ಕಳುಹಿಸಿದ್ದೇನೆ. ನನ್ನ ನ್ಯಾಯ ದಂಡನೆ ಮಿಂಚಿನಂತೆ ಹೊರಡುವುದು. ನನಗೆ ಬೇಕಾದುದು ಕರುಣೆ, ಬಲಿಯರ್ಪಣೆಯಲ್ಲ; ನನಗೆ ಬೇಕಾದುದು ದೈವಜ್ಞಾನ, ದಹನ ಬಲಿದಾನವಲ್ಲ.

ಕೀರ್ತನೆ: 51:3-4, 18-19, 20-21

ಶ್ಲೋಕ: ನನಗೆ ಬೇಕಾದುದು ಕರುಣೆ, ಬಲಿಯರ್ಪಣೆಯಲ್ಲ

ಶುಭಸಂದೇಶ: ಲೂಕ 18:9-14

ಕೆಲವರು ತಾವೇ ಸತ್ಪುರುಷರು ಎಂದುಕೊಂಡು ಇತರರನ್ನು ತುಚ್ಛವಾಗಿ ಕಾಣುತ್ತಿದ್ದರು. ಅಂಥವರನ್ನು ಉದ್ದೇಶಿಸಿ ಯೇಸುಸ್ವಾಮಿ ಈ ಸಾಮತಿಯನ್ನು ಹೇಳಿದರು:  "ಒಮ್ಮೆ, ಇಬ್ಬರು ಪ್ರಾರ್ಥನೆ ಮಾಡಲು ದೇವಾಲಯಕ್ಕೆ ಹೋದರು. ಇವರಲ್ಲಿ ಒಬ್ಬನು ಫರಿಸಾಯನು, ಇನ್ನೊಬ್ಬನು ಸುಂಕ ವಸೂಲಿಯವನು. ಫರಿಸಾಯನು ಮುಂದೆ ನಿಂತು ತನ್ನಷ್ಟಕ್ಕೆ ಹೀಗೆ ಪ್ರಾರ್ಥನೆ ಮಾಡಿದ: "ಓ ದೇವರೇ, ನಾನು ಇತರರ ಹಾಗೆ ಅಲ್ಲ ಅವರೋ ಕೊಳ್ಳೆಗಾರರು, ಅನ್ಯಾಯಗಾರರು, ವ್ಯಭಿಚಾರಿಗಳು. ನಾನು ಈ ಸುಂಕದವನಂತೆಯೂ ಅಲ್ಲ. ಇದಕ್ಕಾಗಿ ನಿಮಗೆ ಧನ್ಯವಾದವನ್ನು ಸಲ್ಲಿಸುತ್ತೆನೆ;. ನನ್ನ ಆದಾಯದಲ್ಲಿ ಹತ್ತನೆಯ ಒಂದು ಪಾಲನ್ನು ನಿಮಗೆ ಸಲ್ಲಿಸುತ್ತೇನೆ.'  "ಸುಂಕ ವಸೂಲಿಯವನಾದರೋ ದೂರದಲ್ಲೆ ನಿಂತು, ತಲೆಯನ್ನು ಮೇಲಕ್ಕೆ ಎತ್ತದೆ, 'ಓ ದೇವರೇ, ನಾನು ಪಾಪಿ; ನನಗೆ ದಯೆತೋರಿ," ಎನ್ನುತ್ತಾ ಎದೆ ಬಡಿದುಕೊಂಡ. "ದೇವರ ದೃಷ್ಟಿಯಲ್ಲಿ ಪಾಪ ಮುಕ್ತನಾಗಿ ಮನೆಗೆ ತೆರಳಿದವನು ಈ ಸುಂಕ ವಸೂಲಿಯವನು, ಆ ಫರಿಸಾಯನಲ್ಲ. ಎಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ. ಏಕೆಂದರೆ, ತನ್ನನ್ನು ತಾನೇ ಮೇಲಕ್ಕೇರಿಸಿಕೊಳ್ಳುವವನನ್ನ ದೇವರು ಕೆಳಗಿಳಿಸುವರು. ತನ್ನನ್ನು ತಾನೇ ಕೆಳಗಿಳಿಸಿಕೊಳ್ಳುವವನನ್ನು ದೇವರು ಮೇಲಕ್ಕೇರಿಸುವರು," ಎಂದರು ಯೇಸು.

ಮನಸಿಗೊಂದಿಷ್ಟು : ತಪ್ಪು ಕಾರಣಗಳಿಗೆ ದೇವರನ್ನು ವಂದಿಸುವುದಕ್ಕೆ ಒಂದು ಉದಾಹರಣೆಯನ್ನು ಇಂದಿನ ಶುಭಸಂದೇಶದಲ್ಲಿ ಕಾಣಬಹುದು. ನಾವು ಇತರರಿಗಿಂತ ಮೇಲು, ನಮ್ಮ ಜೀವನ, ಪರಿಸ್ಥಿತಿ ಇತರರಿಗಿಂತ ಚೆನ್ನಾಗಿದೆ ಎನ್ನುತ್ತಾ ಅದಕ್ಕಾಗಿ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುವುದು ಅಮಾನವೀಯ. ನಾವು ಅದೆಷ್ಟೇ ಇತರರಿಗಿಂತೆ ಮೇಲು ಅಂದುಕೊಂಡರೂ ದೇವರ ಕಣ್ಣಲ್ಲಿ ನಮ್ಮ ಸ್ಥಾನವೇನು ಎಂಬುದೇ ಅಂತಿಮ. ಆ ’ಅಂತಿಮ’ ಒಪ್ಪಿಗೆಯತ್ತ ನಮ್ಮ ಬಾಳು, ಚಿತ್ತ ಹರಿಯಲಿ.

ಪ್ರಶ್ನೆ : ನಮ್ಮ ಅಂತರಂಗವನ್ನು ಬಲ್ಲ ದೇವರ ಮುಂದೆ ನಾವೆಷ್ಟು ಎತ್ತರ?

29.03.2019 - "ನನಗಿನ್ನು ಬೇಡ ವಿಗ್ರಹಗಳ ಗೊಡವೆ"

ಮೊದಲನೇ ವಾಚನ: ಹೊಶೇಯ 14:1-9

ಸರ್ವೇಶ್ವರ  ಇಂತೆಂದು ನುಡಿಯುತ್ತಾರೆ: ಇಸ್ರಯೇಲೇ, ನಿನ್ನ ಸರ್ವೇಶ್ವರನಾದ ದೇವರ ಬಳಿಗೆ ಹಿಂದಿರುಗು, ನಿನ್ನ ಪಾಪದ್ರೋಹಗಳೇ ನಿನ್ನ ಪತನಕ್ಕೆ ಕಾರಣ. ಆದುದರಿಂದ ಪಶ್ಚಾತಾಪದ ಮಾತುಗಳೊಂದಿಗೆ ದೇವರಿಗೆ ಅಭಿಮುಖವಾಗಿ, "ಪ್ರಭುವೇ, ನಮ್ಮ ಅಪರಾಧಗಳನ್ನು ತೊಡೆದುಹಾಕು. ನಮ್ಮಲ್ಲಿ ಒಳಿತಾದುದನ್ನೇ ಅಂಗೀಕರಿಸು. ನಿನಗೆ ಸ್ತುತಿಬಲಿಯನ್ನು ಸಮರ್ಪಿಸುವೆವು. ಅಸ್ಸೀರಿಯದಿಂದ ನಮಗೆ ರಕ್ಷಣೆ ದೊರಕದು. ನಾವು ಕಾಳಗದ  ಕುದುರೆಗಳ ಮೇಲೆ ಇನ್ನೆಂದೂ ಸವಾರಿ ಮಾಡೆವು. ನಮ್ಮ ಕೈಗಳು ನಿರ್ಮಿಸಿರುವ ವಿಗ್ರಹಗಳನ್ನು ವೀಕ್ಷಿಸಿ, "ನೀವೇ ನಮ್ಮ ದೇವರು" ಎಂದು ಜಪಿಸೆವು. ಓ ದೇವಾ, ದಿಕ್ಕಿಲ್ಲದವರಿಗೆ ಕರುಣೆತೋರಿಸುವವನು ನೀನೇ," ಎಂದ ಹೇಳು. ಸರ್ವೇಶ್ವರ ಇಂತೆನ್ನುತ್ತಾರೆ; ಪರಿಹರಿಸುವೆನು ಜನರ ಭ್ರಷ್ಟತನವನ್ನು, ಪ್ರೀತಿಸುವೆನು ಮನಪೂರ್ವಕವಾಗಿ ಅವರನ್ನು, ತ್ಯಜಿಸಿಬಿಡುವೆನು ಅವರ ಮೇಲಿದ್ದ ಕೋಪವನ್ನು. ಇರುವೆನು ಇಸ್ರಯೇಲಿಗೆ ಇಬ್ಬನಿಯಂತೆ, ಅರಳುವುದು ಆ ನಾಡು ತಾವರೆಯಂತೆ, ಬೇರೂರುವುದು ಲೆಬನೋನಿನ ದೇವದಾರುವೃಕ್ಷದಂತೆ. ಹರಡಿಕೊಳ್ಳುವುದು ಮರದ ರೆಂಬೆಗಳಂತೆ, ಕಂಗೊಳಿಸುವುದು ಚೆಲುವಾದ ಓಲಿವ್ ಮರದಂತೆ. ಅದರ ಪರಿಮಳ ಮನೋಹರ ಲೆಬನೋನಿನ ಲತೆಗಳಂತೆ. ಮರಳಿ ಆಶ್ರಯಿಸುವರು ನನ್ನ ನೆರಳನ್ನು ಆ ಜನತೆ ಆಭಿವೃದ್ಧಿಯಾಗುವರು ಉದ್ಯಾನವನದಂತೆ, ಫಲಪ್ರದವಾಗುವರು ಆ ಜನರು ದ್ರಾಕ್ಷಾಲತೆಯಂತೆ, ಸುಪ್ರಸಿದ್ದ ಅವರ ಕೀರ್ತಿ ಲೆಬನೋನಿನ ದ್ರಾಕ್ಷಾರಸದಂತೆ. ನುಡಿವುದು ಎಫ್ರಯಿಮ್, "ನನಗಿನ್ನು ಬೇಡ ವಿಗ್ರಹಗಳ ಗೊಡವೆ" ಅದಕ್ಕೆ ಒಲಿದು ಕಟಾಕ್ಷಿಸುವವನು ನಾನೇ, ಅದಕ್ಕೆ ಹಚ್ಚ ಹಸಿರಾದ ತುರಾಯಿ ಮರದಂತಿರುವೆ ಅದಕ್ಕೆ ಫಲವನ್ನು ನೀಡುವವನು ನಾನೇ. ಬುದ್ದಿವಂತನು ಈ ಮಾತುಗಳನ್ನು ಗ್ರಹಿಸಿಕೊಳ್ಳಲಿ. ವಿವೇಕಿಯು ಈ ನುಡಿಗಳನ್ನು ಅರ್ಥ ಮಾಡಿಕೊಳ್ಳಲಿ. ಸರ್ವೇಶ್ವರಸ್ವಾಮಿಯ ಮಾರ್ಗಗಳು ನೇರವಾದವುಗಳು. ಸನ್ಮಾರ್ಗಿಗಳು ಅವುಗಳನ್ನು ಕೈಗೊಂಡು ನಡೆಯುವರು. ದುರ್ಮಾರ್ಗಿಗಳು ಅವುಗಳನ್ನು ಕೈಬಿಟ್ಟು ಮುಗ್ಗರಿಸಿ ಬೀಳುವರು.

ಕೀರ್ತನೆ: 81:6-8, 8-9, 10-11, 14, 17
ಶ್ಲೋಕ: ಈಜಿಪ್ಟಿನಿಂದ ಕರೆತಂದ ಸ್ವಾಮಿದೇವನು ನಾನು ನನ್ನ ಜನರೇ ಕಿವಿಗೊಡಿ ನನ್ನ ಬುದ್ಧಿಮಾತಿಗೆ

ಶುಭಸಂದೇಶ: ಮಾರ್ಕ 12:28-34

ಧರ್ಮಶಾಸ್ತ್ರಿ ಒಬ್ಬನು, ಯೇಸುಸ್ವಾಮಿ ಸದ್ದುಕಾಯರಿಗೆ ಸಮರ್ಪಕವಾದ ಉತ್ತರವನ್ನು ಕೊಟ್ಟಿದ್ದನ್ನು ಮೆಚ್ಚಿ, ಅವರ ಬಳಿಗೆ ಬಂದು "ಆಜ್ಞೆಗಳಲ್ಲೆಲ್ಲಾ ಪ್ರಪ್ರಥಮ ಆಜ್ಞೆ ಯಾವುದು?" ಎಂದು ಕೇಳಿದನು. ಯೇಸು ಅವನಿಗೆ ,"ಇಸ್ರಯೇಲ್ ಸಮಾಜವೇ ಕೇಳು; ನಮ್ಮ ದೇವರಾದ ಸರ್ವೇಶ್ವರ ಏಕೈಕ ಸರ್ವೇಶ್ವರ; ನಿನ್ನ ದೇವರಾದ ಸರ್ವೇಶ್ವರನನ್ನು ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಪೂರ್ಣ ಆತ್ಮದಿಂದಲೂ ನಿನ್ನ ಪೂರ್ಣ ಮನಸ್ಸಿನಿಂದಲೂ ನಿನ್ನ ಪೂರ್ಣ ಶಕ್ತಿಯಿಂದಲೂ ಪ್ರೀತಿಸು. ಇದೇ ಪ್ರಪ್ರಥಮ ಆಜ್ಞೆ. ನಿನ್ನನ್ನು ನೀನೇ ಪ್ರೀತಿಸಿಕೊಳ್ಳುವಂತೆ ನಿನ್ನ ನೆರೆಯವನನ್ನೂ ಪ್ರೀತಿಸು. ಇದೇ ಎರಡನೆಯ ಆಜ್ಞೆ ಇವೆರಡು ಆಜ್ಞೆಗಳಿಗಿಂತ ಶ್ರೇಷ್ಟವಾದ ಆಜ್ಞೆ ಬೇರೊಂದೂ ಇಲ್ಲ," ಎಂದರು. ಇದನ್ನು ಕೇಳಿದ ಆ ಧರ್ಮಶಾಸ್ತ್ರಿ " ಬೋಧಕರೇ, ಚೆನ್ನಾಗಿ ಹೇಳಿದಿರಿ. ದೇವರು ಒಬ್ಬರೇ, ಅವರ ಹೊರತು ಬೇರೆ ದೇವರಿಲ್ಲ, ಎಂದು ಹೇಳಿದ್ದು ಸತ್ಯ; ಅವರನ್ನು ನಾವು ಪೂರ್ಣ ಹೃದಯದಿಂದಲೂ ಪೂರ್ಣ ಜ್ಞಾನದಿಂದಲೂ ಪೂರ್ಣ ಶಕ್ತಿಯಿಂದಲೂ ಪ್ರೀತಿಸತಕ್ಕದ್ದು. ಇದಲ್ಲದೆ ನಮ್ಮನ್ನು ನಾವು ಪ್ರೀತಿಸಿಕೊಳ್ಳುವಂತೆಯೇ ನಮ್ಮ ನೆರೆಯವರನ್ನೂ ಪ್ರೀತಿಸತಕ್ಕದ್ದು. ಇವು ಎಲ್ಲಾ ದಹನ ಬಲಿಗಳಿಗಿಂತಲೂ ಯಜ್ಞಯಾಗಾದಿಗಳಿಗಿಂತಲೂ ಎಷ್ಟೋ ಮೇಲಾದುವು," ಎಂದನು. ಅವನ ವಿವೇಕಪೂರ್ಣವಾದ ಉತ್ತರವನ್ನು ಮೆಚ್ಚಿ ಯೇಸು, "ನೀನು ದೇವರ ಸಾಮ್ರಾಜ್ಯದಿಂದ ದೂರವಿಲ್ಲ," ಎಂದರು. ಇದಾದ ಬಳಿಕ ಯೇಸುವನ್ನು ಪ್ರಶ್ನಿಸುವುದಕ್ಕೆ ಯಾರೊಬ್ಬರೂ  ಧೈರ್ಯಗೊಳ್ಳಲಿಲ್ಲ.

ಮನಸಿಗೊಂದಿಷ್ಟು :  ಪೂರ್ಣ ಹೃದಯ, ಆತ್ಮ, ಮನಸ್ಸು, ಶಕ್ತಿಯಿಂದ ದೇವರನ್ನು ಪ್ರೀತಿಸುವಷ್ಟೇ ಮುಖ್ಯ ಪರರನ್ನು ಪ್ರೀತಿಸಿವುದು ಎನ್ನುತ್ತಾರೆ ಯೇಸು. ಅದರಲ್ಲೂ ನಿನನ್ನು ನೀನೇ ಪ್ರೀತಿಸಿಕೊಳ್ಳುವಷ್ಟು ಎಂದು ಸೇರಿಸುತ್ತಾರೆ. ನಾವು ದೇವರು ಪರರು ಎಂಬ ಈ ತ್ರಿಕೋನದಲ್ಲಿ ನಾವು ನಮನ್ನೇ ಪ್ರೀತಿಸಿಕೊಳ್ಳುವಷ್ಟು ದೇವರನ್ನು ಪ್ರೀತಿಸುತ್ತಿದ್ದೇವೆಯೇ? ಇನ್ನೂ ಪರ ಪ್ರೀತಿಯಂತೂ ದೂರದ ಮಾತೆ.

ಪ್ರಶ್ನೆ : ಪ್ರಮುಖ ಈ ಎರಡು ಆಜ್ಞೆಗಳನ್ನು ಪಾಲಿಸುವುದರಲ್ಲಿ ಸ್ವರ್ಗ ಸಾಮ್ರಾಜ್ಯದಿಂಡ ನಾವೆಷ್ಟು ದೂರ ಅಥವಾ ಹತ್ತಿರ? 

28.03.2019 - "ನನ್ನ ಪರವಾಗಿ ಇರದವನು ನನಗೆ ವಿರೋಧಿಯೇ ಸರಿ"

ಮೊದಲನೇ ವಾಚನ: ಯೆರೆಮೀಯ 7:23-28

ನಾನು ನಿಮಗೆ ಕೊಟ್ಟ ಒಂದು ಕಟ್ಟಳೆಯೆಂದರೆ ಇದು - ನನ್ನ ಮಾತಿಗೆ ಕಿವಿಗೊಡಿ, ನಾನು ನಿಮ್ಮ ದೇವರಾಗಿರುತ್ತೇನೆ. ನೀವು ನನ್ನ ಪ್ರಜೆಯಾಗಿರಿ. ನಿಮಗೆ ಹಿತವಾಗುವಂತೆ ನಾನು ವಿಧಿಸುವ ಮಾರ್ಗದಲ್ಲೆ ನಡೆಯಿರಿ. ಆದರೆ ಅವರು ಕೇಳಲಿಲ್ಲ, ಕಿವಿಗೊಡಲಿಲ್ಲ. ತಮ್ಮ ಸ್ವಂತ ಆಲೋಚನೆಗಳನ್ನು ಅನುಸರಿಸಿದರು. ತಮ್ಮ ದುಷ್ಟ ಹೃದಯದ ನಿಮಿತ್ತ ಹಟಮಾರಿಗಳಂತೆ ನಡೆದುಕೊಂಡರು. ಮುಂದೆ ಸಾಗದೆ ಹಿಂದಿರುಗಿಯೇ ಹೋದರು. ನಿಮ್ಮ ಪೂರ್ವಜರು ಈಜಿಪ್ಟ್ ದೇಶದಿಂದ ಹೊರಟ ದಿನ ಮೊದಲುಗೊಂಡು ಈ ದಿನದವರೆಗೂ ನನ್ನ ದಾಸರಾದ ಎಲ್ಲ ಪ್ರವಾದಿಗಳನ್ನು ನಿಮ್ಮವರ ಬಳಿಗೆ ಕಳಿಸುತ್ತಾ ಬಂದಿದ್ದೇನೆ. ದಿನದಿನವೂ ತಡಮಾಡದೆ ಕಳಿಸಿದ್ದೇನೆ ನಿಮ್ಮವರಾದರೋ ನನ್ನ ಮಾತನ್ನು ಕೇಳಲಿಲ್ಲ, ಕಿವಿಗೊಡಲಿಲ್ಲ ನನ್ನ ಆಜ್ಞೆಗೆ ಮಣಿಯಲಿಲ್ಲ, ತಮ್ಮ ಪೂರ್ವಜರಿಗಿಂತಲೂ ಕೆಟ್ಟವರಾಗಿ ನಡೆದುಕೊಂಡರು. ಯೆರೆಮೀಯನೇ, ನೀನು ಈ ಮಾತುಗಳನ್ನು ಅವರಿಗೆ ಹೇಳಿದರೂ ಅವರು ಕಿವಿಗೊಡುವುದಿಲ್ಲ, ಕರೆದರೂ ಅವರು ಓಗೊಡುವುದಿಲ್ಲ. ಆದಕಾರಣ ನೀನು ಅವರಿಗೆ - "ತನ್ನ ದೇವರಾದ ಸರ್ವೇಶ್ವರನ ಮಾತಿಗೆ ಕಿವಿಗೊಡದ, ದಂಡಿಸಿದರೂ ತಿದ್ದಿಕೊಳ್ಳದ ಜನಾಂಗ ಇದುವೇ; ಸತ್ಯವೆಂಬುದು ಅಳಿದುಹೋಗಿದೆ, ಇದರ ಬಾಯಿಂದ ಕಡಿದು ಹೋಗಿದೆ' ಎಂದು ಹೇಳು."

ಕೀರ್ತನೆ: 95:1-2, 6-7, 8-9

ಶ್ಲೋಕ: ಆತನ ಕರೆಗೆ ಕಿವಿಗೊಟ್ಟರೆನಿತೋ ಒಳಿತು, ನೀವಿಂದೇ ಕಲ್ಲಾಗಿಸಿಕೊಳ್ಳದಿರಿ ಹೃದಯವನ್ನು ನಿಮ್ಮ ಪೂರ್ವಜರಂತೆ.

ಶುಭಸಂದೇಶ: ಲೂಕ 11:14-23

ಒಮ್ಮೆ ಯೇಸುಸ್ವಾಮಿ ಒಂದು ಮೂಕ ದೆವ್ವವನ್ನು ಬಿಡಿಸುತ್ತಿದ್ದರು, ಆ ದೆವ್ವ  ಬಿಟ್ಟು ಹೋದಮೇಲೆ ಮೂಕನು ಮಾತನಾಡಿದನು. ಜನರು ಆಶ್ಚರ್ಯಚಕಿತರಾದರು. ಆದರೆ ಅವರಲ್ಲಿ ಕೆಲವರು, "ಇವನು ದೆವ್ವಗಳ ಒಡೆಯನಾದ ಬೆಲ್ಜೆಬೂಲನ ಶಕ್ತಿಯಿಂದ ದೆವ್ವಗಳನ್ನು ಬಿಡಿಸುತ್ತಾನೆ," ಎಂದರು. ಬೇರೆ ಕೆಲವರು ಯೇಸುವನ್ನು ಪರೀಕ್ಷಿಸುವುದಕ್ಕಾಗಿ ಸ್ವರ್ಗದಿಂದ ಒಂದು ಅದ್ಬುತ ಕಾರ್ಯವನ್ನು ಮಾಡಿ ತೋರಿಸುವಂತೆ ಕೇಳಿದರು. ಅವರ ಆಲೋಚನೆಗಳನ್ನು ಅರಿತುಕೊಂಡು ಯೇಸು, "ಅಂತಃಕಲಹದಿಂದ ಒಡೆದು ಹೋಗುವ ಪ್ರತಿಯೊಂದು ರಾಜ್ಯ ನಾಶವಾಗುವುದು. ಕುಟುಂಬ ಕುಟುಂಬಗಳು ಕಚ್ಚಾಡಿ ಹಾಳಾಗುವುವು. ಅಂತೆಯೇ ಸೈತಾನನ ಪಕ್ಷದವರು ಒಬ್ಬರ ವಿರುದ್ಧ ಒಬ್ಬರು ಜಗಳ ಆಡಿದರೆ ಅವನ ರಾಜ್ಯ ಹೇಗೆ ತಾನೆ ಉಳಿದೀತು? ನಾನು ಬೆಲ್ಜೆಬೂಲನ ಶಕ್ತಿಯಿಂದ ದೆವ್ವಗಳನ್ನು ಬಿಡಿಸುವುದಾದರೆ ನಿಮ್ಮವರು ಯಾರ ಶಕ್ತಿಯಿಂದ ಬಿಡಿಸುತ್ತಾರೆ? ಆದ್ದರಿಂದ ನೀವು ಹೇಳುವುದು ತಪ್ಪೆಂದು ನಮ್ಮವರೇ ತೀರ್ಪುಕೊಡುವರು. ನಾನು ದೇವರ ಶಕ್ತಿಯಿಂದ ದೆವ್ವಗಳನ್ನು ಬಿಡಿಸುವುದಾದರೆ ದೇವರ ಸಾಮ್ರಾಜ್ಯ ನಿಮ್ಮಲ್ಲಿಗೆ ಈಗಾಗಲೇ ಬಂದಿದೆ, ಎಂಬುದು ಸ್ಪಷ್ಟ. ಬಲಿಷ್ಟನೊಬ್ಬನು ಸರ್ವಾಯುಧಗಳಿಂದ ಸಜ್ಜಿತನಾಗಿ ತನ್ನ ಮನೆಗೆ ಕಾವಲಿರುವಾಗ ಅವನ ಆಸ್ತಿಯೆಲ್ಲ ಸುರಕ್ಷಿತವಾಗಿರುತ್ತದೆ. ಆದರೆ ಇವನಿಗಿಂತಲೂ ಬಲಿಷ್ಠನು ಎದುರಿಸಿ ಬಂದು ಇವನನ್ನು ಗೆದ್ದಾಗ, ಇವನು ನೆಚ್ಚಿಕೊಂಡಿದ್ದ ಆಯುಧಗಳನ್ನೆಲ್ಲಾ ಅವನು ಕಿತ್ತುಕೊಂಡು, ಸುಲಿಗೆಯನ್ನು ಹಂಚಿಕೊಡುತ್ತಾನೆ. ನನ್ನ ಪರವಾಗಿ ಇರದವನು ನನಗೆ ವಿರೋಧಿಯೇ ಸರಿ. ನನ್ನೊಡನೆ ಶೇಕರಿಸದವನು, ಚದುರಿಸುತ್ತಾನೆ," ಎಂದರು.

ಮನಸಿಗೊಂದಿಷ್ಟು : ಯೇಸುವಿನ ಅನುಯಾಯಿಗಳಿಗೆ ಆಯ್ಕೆಗಳಿಲ್ಲ. ಯೇಸುವಿನ ಪರ ಅಥವಾ ವಿರೋಧವಷ್ಟೇ . ಯೇಸುವಿನ ಪರ ಎಂದರೆ ಯೇಸುವಿನ ಸಂದೇಶವನ್ನು ಪಾಲಿಸುವುದು. ಇಲ್ಲಿ ತಟಸ್ಥ ನಿಲುವಿಗೆ ಜಾಗವಿಲ್ಲ. ಹಸಿದವರನ್ನು ಕಂಡಾಗ ಕನಿಕರ ತೋರುವುದು ಸರಿ, ಅನ್ನವಿಡುವುದು ಕ್ರೈಸ್ತೀಯ ದಾರಿ. ಅದು ಕಠಿಣ ದಾರಿ. ಕ್ರೈಸ್ತತ್ವ ಸುಲಭವಲ್ಲ.

ಪ್ರಶ್ನೆ : ನಾವು ಕ್ರಿಸ್ತನ ಪರವೋ ವಿರುದ್ಧವೋ ತಟಸ್ಥರೋ?

27.03.2019 - ಆಜ್ಞಾವಿಧಿಗಳನ್ನು ಗಮನದಿಂದ ಅನುಸರಿಸಬೇಕು.

ಮೊದಲನೇ ವಾಚನ: ಧರ್ಮೋಪದೇಶಕಾಂಡ  4:1, 5-9

ಮೋಶೆ ಜನರಿಗೆ ಹೀಗೆಂದನು: ಇಸ್ರಯೇಲರೇ, ಕೇಳಿ: ನೀವು ಜೀವದಿಂದುಳಿದು ನಿಮ್ಮ ಪಿತೃಗಳ ದೇವರಾದ ಸರ್ವೇಶ್ವರ ನಿಮಗೆ ಕೊಡುವ ನಾಡನ್ನು ಸೇರಿ ಸ್ವಾಧೀನಮಾಡಿಕೊಳ್ಳಬೇಕಾದರೆ ನಾನು ಈಗ ಬೋಧಿಸುವ ಆಜ್ಞಾವಿಧಿಗಳನ್ನು ಗಮನದಿಂದ ಅನುಸರಿಸಬೇಕು. "ನೀವು ಸ್ವಾಧೀನ ಮಾಡಿಕೊಳ್ಳುವುದಕ್ಕೆ ಹೋಗುವ ನಾಡಿನಲ್ಲಿ ಅನುಸರಿಸಬೇಕಾದ ಆಜ್ಞಾವಿಧಿಗಳನ್ನು ನನ್ನ ದೇವರಾದ  ಸರ್ವೇಶ್ವರ ನನಗೆ ಆಜ್ಞಾಪಿಸಿದಂತೆಯೇ ನಿಮಗೆ ಬೋಧಿಸಿದ್ದೇನೆ. ಇವುಗಳನ್ನು ಕೈಗೊಂಡು ಅನುಸರಿಸಿರಿ. ಅನುಸರಿಸಿದ್ದೇ ಆದರೆ ಅನ್ಯಜನಗಳು ನಿಮ್ಮನ್ನು ಜ್ಞಾನಿಗಳೂ ವಿವೇಕಿಗಳೂ ಎಂದು ತಿಳಿಯುವರು; ಈ ಆಜ್ಞೆಗಳ ಬಗ್ಗೆ ಅವರು ಅರಿತುಕೊಂಡಾಗ, "ಈ ದೊಡ್ಡ ಜನಾಂಗ ಎಂಥಾ ಜ್ಞಾನವಿವೇಕವುಳ್ಳ  ಜನಾಂಗ', ಎಂದು ಮಾತಾಡಿಕೊಳ್ಳುವರು. ನಾವು ಮೊರೆಯಿಡುವಾಗಲೆಲ್ಲಾ ನಮ್ಮ ದೇವರಾದ ಸರ್ವೇಶ್ವರ ನಮಗೆ ಸಮೀಪವಾಗಿರುವಂತೆ ಬೇರೆ ಯಾವ ಜನಾಂಗಕ್ಕೆ, ಅದೆಷ್ಟೇ ದೊಡ್ಡದಾಗಿರಲಿ, ಯಾವ ದೇವರು ಹೀಗೆ ಸಮೀಪವಾಗಿರುತ್ತಾರೆ? ನಾನು ಈ ದಿನ ನಿಮ್ಮ ಮುಂದಿಡುವ ಇಂಥ ನ್ಯಾಯಯುತವಾದ ಆಜ್ಞಾವಿಧಿಗಳನ್ನು ಒಳಗೊಂಡ ಈ ಧರ್ಮಶಾಸ್ತ್ರಕ್ಕೆ ಸಮಾನವಾದುದು ಬೇರೆಯಾವ ಜನಾಂಗಕ್ಕೆ ಉಂಟು? "ಹೀಗಿರುವಲ್ಲಿ, ನೀವು ಬಹಳ ಜಾಗರೂಕತೆಯಿಂದಿರಿ; ನಿಮ್ಮ ಕಣ್ಣುಗಳಿಂದಲೇ ನೋಡಿದ ಘಟನೆಗಳನ್ನು ಎಷ್ಟು ಮಾತ್ರಕ್ಕೂ ಮರೆಯದಿರಿ; ಜೀವಮಾನಪರ್ಯಂತ ಇವುಗಳನ್ನು ನೆನಪಿನಲ್ಲಿಡಿ; ನಿಮ್ಮ ಮಕ್ಕಳಿಗೂ ಮೊಮ್ಮಕ್ಕಳಿಗೂ ತಿಳಿಸುತ್ತಾ ಹೋಗಿ.

ಕೀರ್ತನೆ: 147: 12-13, 15-16, 19-20

ಶ್ಲೋಕ: ಜೆರುಸಲೇಮೇ, ಕೀರ್ತಿಸು ಪ್ರಭುವನು.

ಶುಭಸಂದೇಶ: ಮತ್ತಾಯ 5:17-19

ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು. "ಮೊಶೆಯ ಧರ್ಮಶಾಸ್ತ್ರವನ್ನಾಗಲಿ, ಪ್ರವಾದಿಗಳ ಪ್ರವಚನಗಳನ್ನಾಗಲಿ ರದ್ದುಮಾಡಲು ನಾನು ಬಂದೆನೆಂದು ತಿಳಿಯಬೇಡಿ. ರದ್ದು ಮಾಡಲು ಅಲ್ಲ ಅವುಗಳನ್ನು ಸಿದ್ಧಿಗೆ ತರಲು ಬಂದಿದ್ದೇನೆ. ಭೂಮ್ಯಾಕಾಶಗಳು ಉಳಿದಿರುವ ತನಕ ಧರ್ಮಶಾಸ್ತ್ರವೆಲ್ಲ ನೆರವೇರುವುದೇ ಹೊರತು ಅದರಲ್ಲಿ ಒಂದು ಚಿಕ್ಕ ಅಕ್ಷರವಾಗಲಿ, ಚುಕ್ಕೆಯಾಗಲಿ ನಿರರ್ಥಕವಾಗದೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ. ಹೀಗಿರುವಲ್ಲಿ, ಅದರ ಆಜ್ಞೆಗಳಲ್ಲಿ ಅತಿ ಚಿಕ್ಕದೊಂದನ್ನು ಮೀರುವವನು, ಮೀರುವಂತೆ ಜನರಿಗೆ ಬೋಧಿಸುವವನು, ಸ್ವರ್ಗಸಾಮ್ರಾಜ್ಯದಲ್ಲಿ ಅತ್ಯಲ್ಪನೆಂದು ಪರಿಗಣಿತನಾಗುವನು; ಧರ್ಮಶಾಸ್ತ್ರವನ್ನು ಪಾಲಿಸುವವನು, ಪಾಲಿಸುವಂತೆ ಜನರಿಗೆ ಬೋಧಿಸುವವನು, ಸ್ವರ್ಗಸಾಮ್ರಾಜ್ಯದಲ್ಲಿ ಮಹಾತ್ಮನೆಂದು ಪರಿಗಣಿತನಾಗುವನು.

ಮನಸಿಗೊಂದಿಷ್ಟು : "ಹಿಂದಿನ ಹಾಗೂ ಇಂದಿನ ಸ್ಥಿತಿಗಳ ಬಗ್ಗೆ ಜಗಳವಾಡಿಕೊಂಡಿದ್ದರೆ, ಮುಂದಿನದನ್ನು ಕಳೆದುಕೊಳ್ಳುತ್ತೇವೆ" ಎನ್ನುತ್ತಾರೆ ವಿನ್ಸಟನ್ ಚರ್ಚಿಲ್. ಧರ್ಮಶಾಸ್ತ್ರದ ನಿಜ ಕಾಳಜಿ, ಆಶಯಗಳು ಮಾನವ ನಿರ್ಮಿತ ವಿಧಿ ಆಚರಣೆಗಳಲ್ಲಿ ಕಳೆದು ಹೋಗಬಾರದೆನ್ನುವ ಮಾತನ್ನು ಯೇಸು ಆಡುತ್ತಾರೆ. ದೇವರ ಬಗ್ಗೆಗಿನ ಅಖಂಡ ನಿಷ್ಠೆ ಹಾಗೂ ಪರರ ಬಗೆಗಿನ ಪ್ರೀತಿಗೆ ಧರ್ಮಶಾಸ್ತ್ರದ ತಪ್ಪು ಗ್ರಹಿಕೆಗಳು ಅಡ್ಡಬಾರದೆಂಬ ಆಶಯ ಯೇಸುವಿನದು.

ಪ್ರಶ್ನೆ : ಸ್ವರ್ಗ ಸಾಮ್ರಾಜ್ಯದಲ್ಲಿ ಮಹಾತ್ಮನೆನಿಸಿಕೊಳ್ಳುವಲ್ಲಿ ನಮ್ಮ ಪ್ರಯತ್ನವೆಷ್ಟು? 

26.03.2019

ಮೊದಲನೇ ವಾಚನ: ಅಜರ್ಯ 1:2, 11-20

ಅಜರ್ಯನು ಬೆಂಕಿಯ ನಡುವೆ ನಿಂತುಕೊಂಡು ಗಟ್ಟಿಯಾಗಿ ಕೂಗಿ ಹೀಗೆಂದು ಪ್ರಾರ್ಥನೆ ಮಾಡಿದ: ಪ್ರಭುದೇವಾ,  ನಿಮ್ಮ ನಾಮದ ಪ್ರಯುಕ್ತ ನಮ್ಮನ್ನು ಎಂದೆಂದಿಗೂ ತ್ಯಜಿಸಬೇಡಿ, ನಿಮ್ಮ ಒಡಂಬಡಿಕೆಯನ್ನು ರದ್ದುಗೊಳಿಸಬೇಡಿ. ನಿಮ್ಮ ಮಿತ್ರ ಅಬ್ರಹಾಮನ ನಿಮಿತ್ತ ನಿಮ್ಮ ದಾಸ ಇಸಾಕನ, ನಿಮ್ಮ ಭಕ್ತ ಯಕೋಬನ ಪ್ರಯುಕ್ತ ನಿಮ್ಮ ಕೃಪೆ ನಮ್ಮನ್ನು ಬಿಟ್ಟಗಲದಿರಲಿ. ಇವರಿಗೆ, "ನಿಮ್ಮ ಸಂತಾನವನ್ನು ಆಕಾಶದ ನಕ್ಷತ್ರಗಳಂತೆ ಸಮುದ್ರ ತೀರದ ಮರಳಿನಂತೆ ಸಂಖ್ಯಾವಾಗಿಸುವೆ" ಎಂದು ನೀವು ವಾಗ್ದಾನ ಮಾಡಿದಿರಲ್ಲವೆ? ಒಡೆಯಾ, ಉಳಿದ ರಾಷ್ಟ್ರಗಳಿಗಿಂತ ನಾವು ಕನಿಷ್ಟರಾಗಿಬಿಟ್ಟೆವು, ನಮ್ಮ ಪಾಪಗಳ ಕಾರಣ ಜಗದಲ್ಲಿನ ಹೀನಸ್ಥಿತಿಗೆ ಇಳಿದುಬಿಟ್ಟೆವು. ನಮಗೀಗ ರಾಜರಿಲ್ಲ, ಪ್ರವಾದಿಗಳಿಲ್ಲ, ನಾಯಕರಿಲ್ಲ; ಹೋಮವಿಲ್ಲ, ಬಲಿದಾನವಿಲ್ಲ, ನೈವೇದ್ಯವಿಲ್ಲ, ಧೂಪವಿಲ್ಲ. ಕಾಣಿಯನ್ನರ್ಪಿಸಿ ನಿಮ್ಮ ಕೃಪೆ ಪಡೆಯಲು ಸ್ಥಳವೂ ಇಲ್ಲ; ಆದರೂ ಪಶ್ಚಾತ್ತಾಪದ ಹೃದಯ, ದೀನ ಮನ ನಿಮಗೆ ಅಂಗೀಕೃತವಾಗಲಿ. ಹೋತಹೋರಿಗಳ, ಸಾವಿರಾರು ಕೊಬ್ಬಿದ ಕುರಿಮರಿಗಳ ದಹನಬಲಿದಾನದಂತೆ ನಮ್ಮ ಅಂತರಂಗದ ಬಲಿ ನಿಮಗಿಂದು ಅಂಗೀಕೃತವಾಗಲಿ. ಪೂರ್ಣ ಹೃದಯದಿಂದ ನಾವು ನಿಮ್ಮನ್ನು ಹಿಂಬಾಲಿಸುವಂತೆ ಅನುಗ್ರಹಿಸಿರಿ. ಏಕೆಂದರೆ ನಿಮ್ಮಲ್ಲಿ ನಂಬಿಕೆಯಿಡುವವರಿಗೆ ಆಶಾಭಂಗವಾಗುವುದಿಲ್ಲ. ಪೂರ್ಣ ಹೃದಯದಿಂದ ನಿಮ್ಮನ್ನೀಗ ಹಿಂಬಾಲಿಸುತ್ತೇವೆ ನಿಮ್ಮಲ್ಲಿ ಭಯಭಕ್ತಿಯಯಿಡುತ್ತೇವೆ, ನಿಮ್ಮ ಸನ್ನಿಧಿಯನ್ನು ಮತ್ತೆ ಅರಸುತ್ತೇವೆ. ನಮ್ಮನ್ನು ನಿರಾಶೆಗೊಳಿಸಬೇಡಿ ನಿಮ್ಮ ಸೈರಣೆಗೆ ತಕ್ಕಂತೆ, ನಿಮ್ಮ ಕೃಪಾತಿಶಯದ ಪ್ರಕಾರ ನಮ್ಮ ಸಂಗಡ ವರ್ತಿಸಿ. ಸರ್ವೇಶ್ವರ, ನಿಮ್ಮ ಮಹತ್ಕಾರ್ಯಗಳ ಮೂಲಕ ನಮ್ಮನ್ನು ಬಿಡುಗಡೆಮಾಡಿ ನಿಮ್ಮ ಹೆಸರಿಗೆ ಹೊಸ ಕೀರ್ತಿ ಬರುವಂತೆ ಮಾಡಿ.

ಕೀರ್ತನೆ: 25:4-5, 6-7, 8-9

ಶ್ಲೋಕ: ನೆನಸಿಕೋ ಪ್ರಭೂ, ನಿನ್ನ ನಿರಂತರ ಕರುಣೆಯನು.

ಶುಭಸಂದೇಶ: ಮತ್ತಾಯ 18:21-35

ಪೇತ್ರನು ಯೇಸುವಿನ ಬಳಿಗೆ ಬಂದು, "ಸ್ವಾಮೀ, ನನಗೆ ವಿರುದ್ದ ದ್ರೋಹಮಾಡುತ್ತಾ ಇರುವ ನನ್ನ ಸಹೋದರನನ್ನು ಎಷ್ಟು ಸಲ ಕ್ಷಮಿಸಬೇಕು? ಏಳುಸಲವೇ? ಎಂದು ಕೇಳಿದನು. "ಏಳುಸಲವಲ್ಲ, ಏಳೆಪ್ಪತ್ತುಸಲ ಕ್ಷಮಿಸಬೇಕು ಎಂದು ನಾನು ನಿನಗೆ ಒತ್ತಿ  ಹೇಳುತ್ತೇನೆ" ಎಂದು ಯೇಸು ಉತ್ತರವಿತ್ತರು. ಯೇಸು ತಮ್ಮ ಮಾತನ್ನು ಮುಂದುವರಿಸುತ್ತಾ, "ಸ್ವರ್ಗಸಾಮ್ರಾಜ್ಯಕ್ಕೆ ಈ ಹೋಲಿಕೆ ಅನ್ವಯಿಸುತ್ತದೆ: ಒಬ್ಬ ರಾಜನಿದ್ದ. ಅವನು ತನ್ನ ಸೇವಕರಿಂದ ಲೆಕ್ಕ ಕೇಳಲು ನಿರ್ಧರಿಸಿದ. ಲೆಕ್ಕ ತೆಗೆದುಕೊಳ್ಳಲು ಆರಂಭಿಸಿದಾಗ ಹತ್ತು ಸಾವಿರ ಚಿನ್ನದ ನಾಣ್ಯಗಳನ್ನು ಸಾಲವಾಗಿ ತೆರಬೇಕಾಗಿದ್ದ ಒಬ್ಬನನ್ನು ಅವನ ಸಮ್ಮುಖಕ್ಕೆ ಕರೆತರಲಾಯಿತು. ಆದರೆ ಸಾಲ ತೀರಿಸಲು ಅವನ ಕೈಯಲ್ಲಿ ಹಣವಿರಲಿಲ್ಲ. ಆದುದರಿಂದ ಅವನಿಗಿದ್ದುದೆಲ್ಲವನ್ನು ಮಾತ್ರವಲ್ಲ, ಅವನನ್ನೂ ಅವನ ಮಡದಿ ಮಕ್ಕಳನ್ನೂ ಗುಲಾಮಗಿರಿಗೆ ಮಾರಿ, ಸಾಲ ತೀರಿಸುವಂತೆ ರಾಜ ಆಜ್ಞಾಪಿಸಿದ. ಆಗ ಆ ಸೇವಕನು ರಾಜನ ಕಾಲಿಗೆ ಬಿದ್ದು ಬೇಡಿಕೊಂಡ: 'ಸ್ವಲ್ಪ ಸೈರಿಸಿಕೊಳ್ಳಿ ಸ್ವಾಮೀ, ನಿಮ್ಮ ಸಾಲವನ್ನೆಲ್ಲಾ ತೀರಿಸಿಬಿಡುತ್ತೇನೆ,' ಎಂದು ಅಂಗಲಾಚಿದ. ರಾಜನಿಗೆ ಕನಿಕರ ಉಂಟಾಯಿತು. ಆ ಸೇವಕನನ್ನು ಬಿಡುಗಡೆಮಾಡಿ ಅವನ ಸಾಲವನ್ನು ಮನ್ನಿಸಿಬಿಟ್ಟ. ಆದರೆ ಅದೇ ಸೇವಕ ಹೊರಗೆ ಬಂದದ್ದೇ ತನಗ ಕೇವಲ ನೂರು ಬೆಳ್ಳಿಕಾಸು ಸಾಲ ತೆರಬೇಕಾಗಿದ್ದ  ಒಬ್ಬ ಜೊತೆ ಸೇವಕನನ್ನು ಎದುರುಗೊಂಡ. ಅವನನ್ನು ಹಿಡಿದು, "ನನಗೆ ಕೊಡಬೇಕಾದ ಸಾಲವನ್ನು ಈಗಲೇ ಕೊಟ್ಟು ತೀರಿಸು," ಎಂದು ಕುತ್ತಿಗೆ ಹಿಸುಕಿದ. ಆಗ ಆ ಜೊತೆಗಾರ, 'ಸ್ವಲ್ಪ ಸೈರಿಸಿಕೊ, ಕೊಟ್ಟುಬಿಡುತ್ತೇನೆ," ಎಂದು ಕಾಲಿಗೆ ಬಿದ್ದು ಕೇಳಿಕೊಂಡ. ಆದರೂ ಅವನು ಒಪ್ಪಲಿಲ್ಲ. ಅಷ್ಟು ಮಾತ್ರವಲ್ಲ, ಸಾಲ ತೀರಿಸುವ ತನಕ ಆ ಜೊತೆಗಾರನನ್ನು ಸೆರೆಗೆ  ಹಾಕಿಸಿದ. ಇದೆಲ್ಲವನ್ನು ಕಂಡ ಇತರ ಸೇವಕರು ಬಹಳವಾಗಿ ನೊಂದುಕೊಂಡರು. ರಾಜನ ಬಳಿಗೆ ಹೋಗಿ ನಡೆದುದೆಲ್ಲವನ್ನೂ ವರದಿಮಾಡಿದರು. ರಾಜನು ಅವನನ್ನು ಕರೆಹಿಸಿ, 'ಎಲೋ ನೀಚ, ನೀನು ಬೇಡಿಕೊಂಡಿದ್ದರಿಂದ ಪೂರ್ತಿ ಸಾಲವನ್ನು ನಾನು ಮನ್ನಮಾಡಿದೆ. ನಾನು ನಿನಗೆ ದಯೆ ತೋರಿಸಿದಂತೆ ನೀನೂ ನಿನ್ನ  ಜೊತೆಗಾರನಿಗೆ ದಯೆ ತೋರಿಸಬೇಕಿತ್ತು ಅಲ್ಲವೇ?' ಎಂದು ಸಿಟ್ಟುಗೊಂಡ. ಬಳಿಕ ತನಗೆ ಬರಬೇಕಾಗಿದ್ದ ಸಾಲವನ್ನು  ತೀರಿಸುವವರೆಗೂ ಅವನನ್ನು ಕಠಿಣ ಶಿಕ್ಷೆಗೆ ಗುರಿಪಡಿಸಿದ. ನಿಮ್ಮಲ್ಲಿ ಪ್ರತಿಯೊಬ್ಬನೂ ತನ್ನ ಸೋದರನನ್ನು ಮನಃಪೂರ್ವಕವಾಗಿ ಕ್ಷಮಿಸಬೇಕು, ಇಲ್ಲದಿದ್ದರೆ ಸ್ವರ್ಗದಲ್ಲಿರುವ ನನ್ನ ತಂದೆ ನಿಮಗೆ ಇದರಂತೆಯೇ ಮಾಡುವರು," ಎಂದರು.

ಮನಸಿಗೊಂದಿಷ್ಟು : ಕ್ಷಮೆ ನೀಡಲು ಕಾರಣವೇ ಇಲ್ಲದಿದ್ದಾಗಲೇ ಕ್ಷಮೆಯ ಮಹತ್ವ ಹೆಚ್ಚು ಎನ್ನಲಾಗುತ್ತದೆ.  ಯೇಸು ಶಿಲುಬೆ ಮೇಲೆ ಮಾಡಿದ್ದು ಅದನ್ನೇ. ಹುಲು ಮಾನವರಾದ ನಮಗೇ ಕ್ಷಮೆ ಎಂಬುದು ಸಹಜವಾಗಿ ಬರದೇ ಹೋಗಬಹುದು. ಕ್ಷಮೆ ಎನ್ನುವುದು ಮೊದಲು ಒಂದು ನಿರ್ಧಾರ ಹಾಗೂ ನಂತರ ಅದೊಂದು ಸತತ ಅಭ್ಯಾಸ

ಪ್ರಶ್ನೆ : ಕ್ಷಮಿಸದೆ ನಮ್ಮಲ್ಲೇ ಉಳಿದಿರುವ ಉದಾಹರಣೆಗಳೆಷ್ಟು?

25.03.2019 - ಇಗೋ, ನಾನು ದೇವರ ದಾಸಿ

ಮೊದಲನೇ ವಾಚನ: ಯೆಶಾಯ 7:10-14; 8:10

ಪುನಃ ಸರ್ವೇಶ್ವರಸ್ವಾಮಿ ಆಹಾಜನಿಗೆ ಹೇಳಿದ್ದೇನೆಂದರೆ: "ನಿನ್ನ ದೇವರಾದ ಸರ್ವೇಶ್ವರನಿಂದ ಒಂದು ಗುರುತನ್ನು ಕೇಳಿಕೊ. ಅದು ಪಾತಾಳದಷ್ಟು ಆಳದಲ್ಲೇ ಇರಲಿ, ಆಕಾಶದಷ್ಟು ಎತ್ತರದಲ್ಲೇ ಇರಲಿ, ಕೇಳು" ಎಂದರು. ಅದಕ್ಕೆ ಆಹಾಜನು "ಇಲ್ಲ, ನಾನು ಗುರುತನ್ನು ಕೇಳುವುದಿಲ್ಲ, ಸರ್ವೇಶ್ವರನನ್ನು ಪರೀಕ್ಷಿಸುವುದಿಲ್ಲ," ಎಂದನು. ಆಗ ಯೆಶಾಯನು: "ದಾವೀದ ವಂಶಜರೇ, ಕೇಳಿರಿ, ಮಾನವರನ್ನು ಕೆಣಕಿದ್ದು ಸಾಲದೆಂದು ದೇವರನ್ನೆ ಕೆಣಕುತ್ತಿರುವಿರಾ? ಆಗಲಿ, ಸರ್ವೇಶ್ವರ ನಿಮಗೊಂದು ಗುರುತನ್ನು ಕೊಡುವರು. ಇಗೋ, ಕನ್ಯೆಯೊಬ್ಬಳು ಗರ್ಭತಳೆದು ಪುತ್ರನೊಬ್ಬನನ್ನು ಪ್ರಸವಿಸುವಳು ಇಮ್ಯಾನುವೇಲ್ ಎಂದು ಆತನಿಗೆ ಹೆಸರಿಡುವಳು." ವ್ಯರ್ಥವಾಗುವುದು ನೀವು ಮಾಡಿದ ಸಮಾಲೋಚನೆ: ಕೈಗೂಡದು ನೀವು ಮಾಡಿದ ಪ್ರತಿಜ್ಞೆ; ಕಾರಣ ದೇವನಿರುವನು ನಮ್ಮೊಡನೆ.

ಕೀರ್ತನೆ: 40:7, 8-9, 10, 11

ಶ್ಲೋಕ: ನಾನೋಗೊಡುತ ಇಂತೆಂದೆ: ’ಇಗೋ ನಾನೇ ಬರುತ್ತಿರುವೆ’

ಎರಡನೇ ವಾಚನ: ಹಿಬ್ರಿಯರಿಗೆ 10:4-10

ಹೋತ, ಹೋರಿಗಳ ರಕ್ತದಿಂದ ಪಾಪನಿವಾರಣೆ ಅಸಾಧ್ಯ. ಆದ್ದರಿಂದಲೇ ಭೂಲೋಕಕ್ಕೆ ಬರಲಿದ್ದ ಕ್ರಿಸ್ತ ಯೇಸು ದೇವರಿಗೆ ಇಂತೆಂದರು: "ಬಲಿಯರ್ಪಣೆಗಳೂ ಕಾಣೆಕೆಗಳೂ ನಿಮಗೆ ಬೇಡವಾದವು, ಎಂದೇ ಆಣೆಮಾಡಿ ಕೊಟ್ಟಿರಿ ನನಗೆ ದೇಹವೊಂದನು: ಸರ್ವಾಂಗ ಹೋಮಗಳೂ ಪಾಪಪರಿಹಾರಕ ಬಲಿಗಳೂ ನಿಮಗೆ ತರಲಿಲ್ಲ ತೃಪ್ತಿಯನು. ಆಗ ಇಂತೆಂದೆ ನಾನು: ಗ್ರಂಥದ ಸುರುಳಿಯಲಿ ನನ್ನನ್ನು ಕುರಿತು ಬರೆಯುವಂತೆ, ಓ ದೇವಾ, ಇಗೋ ನಾ ಬಂದೆ ನಿನ್ನ ಚಿತ್ತವನು ನೆರವೇರಿಸಲೆಂದೇ." ಧರ್ಮಶಾಸ್ತ್ರದ ವಿಧಿಗನುಸಾರ ಅರ್ಪಿಸಲಾಗುತ್ತಿದ್ದುವಾದರೂ "ಬಲಿಯರ್ಪಣೆಗಳು, ಕಾಣಿಕೆಗಳು, ದಹನಬಲಿಗಳು ಮತ್ತು ಪಾಪಪರಿಹಾರಕ ಬಲಿಗಳು ನಿಮಗೆ ಬೇಡವಾದವು; ಇವು ಯಾವುವು ನಿಮಗೆ ತರಲಿಲ್ಲ ತೃಪ್ತಿಯನ್ನು," ಎಂದು ಮೊದಲು ಹೇಳುತ್ತಾರೆ ಅನಂತರ, "ಇಗೋ, ನಾ ಬಂದೆ, ನಿಮ್ಮ ಚಿತ್ತವನ್ನು ನೆರವೇರಿಸಲೆಂದೇ," ಎನ್ನುತ್ತಾರೆ. ಹೀಗೆ ಹೊಸದನ್ನು ಸ್ಥಾಪಿಸಲು ಹಳೆಯದನ್ನು ರದ್ದು ಮಾಡಿದ್ದಾರೆ. ಯೇಸುಕ್ರಿಸ್ತರು ಒಮ್ಮೆಗೇ ಎಲ್ಲಾ ಕಾಲಕ್ಕೂ ತಮ್ಮ ದೇಹವನ್ನು ಸಮರ್ಪಿಸಿ, ದೇವರ ಚಿತ್ತವನ್ನು ನೆರವೇರಿಸಿದ್ದರಿಂದಲೇ ನಾವು ಪುನೀತರಾಗಿದ್ದೇವೆ.

ಶುಭಸಂದೇಶ: ಲೂಕ 1:26-38


ಎಲಿಜಬೇತಳು ಗರ್ಭಿಣಿಯಾದ ಆರನೇ ತಿಂಗಳಲ್ಲಿ, ದೇವರು ಗಬ್ರಿಯೇಲ್ ದೂತನನ್ನು ಗಲಿಲೇಯ ಪ್ರಾಂತ್ಯದ ನಜರೇತೆಂಬ ಊರಿನಲ್ಲಿದ್ದ ಒಬ್ಬ ಕನ್ನಿಕೆಯಲ್ಲಿಗೆ ಕಳುಹಿಸಿದರು. ಆಕೆಗೆ ದಾವೀದರಸನ ವಂಶಜನಾದ ಜೋಸೆಫನೊಂದಿಗೆ ನಿಶ್ಚಿತಾರ್ಥವಾಗಿತ್ತು. ಆಕೆಯ ಹೆಸರು ಮರಿಯ. ದೇವದೂತನು ಆಕೆಯ ಬಳಿಗೆ ಬಂದು " ದೈವಾನುಗ್ರಹಭರಿತಳೇ, ನಿನಗೆ ಶುಭವಾಗಲಿ; ಸರ್ವೇಶ್ವರ ನಿನ್ನೊಡನೆ ಇದ್ದಾರೆ!" ಎಂದನು. ಇದನ್ನು ಕೇಳಿದ ಮರಿಯಳು ತಬ್ಬಿಬ್ಬಾದಳು. "ಇದೆಂಥ ಶುಭಾಶಯ" ಎಂದು ಅವಳು ಯೋಚಿಸತೊಡಗಿದಳು ದೂತನು ಆಕೆಗೆ, "ಮರಿಯಾ, ನೀನು ಅಂಜಬೇಕಾಗಿಲ್ಲ; ದೇವರ ಅನುಗ್ರಹ ನಿನಗೆ ಲಭಿಸಿದೆ; ಇಗೋ, ನೀನು ಗರ್ಭವತಿಯಾಗಿ ಒಬ್ಬ ಮಗನನ್ನು ಹೆರುವೆ. ಆತನಿಗೆ 'ಯೇಸು' ಎಂಬ ಹೆಸರಿಡಬೇಕು; ಆತನು ಮಹಾಪುರುಷನಾಗುವನು; ಪರಾತ್ಪರ ದೇವರ ಪುತ್ರ ಎನಿಸಿಕೊಳ್ಳುವನು. ಪಿತಮಹ ದಾವೀದರಸನ ಸಿಂಹಾಸನವನ್ನು ಸರ್ವೇಶ್ವರನಾದ ದೇವರು ಆತನಿಗೆ ಕೊಡುವರು, ಯಕೋಬನ ವಂಶವನ್ನು ಆತನು ಚಿರಕಾಲ ಆಳುವನು; ಆತನ ರಾಜ್ಯಭಾರಕ್ಕೆ ಅಂತ್ಯವೇ ಇರದು," ಎಂದನು. ಅದಕ್ಕೆ ಮರಿಯಳು, "ಇದು ಆಗುವುದಾದರೂ ಹೇಗೆ? ನನಗೆ ಯಾವ ಪುರುಷನ ಸಂಸರ್ಗವೂ ಇಲ್ಲವಲ್ಲಾ?" ಎಂದು ವಿಚಾರಿಸಿದಳು. ದೂತನು ಪ್ರತ್ಯುತ್ತರವಾಗಿ, "ಪವಿತ್ರಾತ್ಮ ನಿನ್ನ ಮೇಲೆ ಬರುವರು; ಪರಾತ್ಪರ ದೇವರ ಶಕ್ತಿ ನಿನ್ನನ್ನು  ಆವರಿಸುವುದು; ಈ ಕಾರಣದಿಂದ, ನಿನ್ನಲ್ಲಿ ಹುಟ್ಟುವ ಆ ಪವಿತ್ರ ಶಿಶು 'ದೇವರ ಪುತ್ರ' ಎನಿಸಿಕೊಳ್ಳುವನು. ನಿನ್ನ ಸಂಬಂಧಿಕಳಾದ ಎಲಿಜಬೇತಳ ವಿಷಯವನ್ನು ಕೇಳು: ಆಕೆ ತನ್ನ ಮುಪ್ಪಿನಲ್ಲೂ ಒಬ್ಬ ಮಗನನ್ನು ಹೆರಲಿದ್ದಾಳೆ; ಬಂಜೆ ಎನಿಸಿಕೊಂಡಿದ್ದ ಆಕೆ ಈಗ ಆರು ತಿಂಗಳ ಗರ್ಭಿಣಿ. ದೇವರಿಗೆ ಅಸಾಧ್ಯವಾದುದು ಯಾವುದೂ ಇಲ್ಲ," ಎಂದನು. ಆಗ ಮರಿಯಳು, "ಇಗೋ, ನಾನು ದೇವರ ದಾಸಿ, ನೀವು ಹೇಳಿದಂತೆ ನನಗಾಗಲಿ," ಎಂದಳು. ದೇವದೂತನು ಆಕೆಯನ್ನು ಬೀಳ್ಕೊಟ್ಟು ಅದೃಶ್ಯನಾದನು.

ಮನಸಿಗೊಂದಿಷ್ಟು ಇಂದಿನ ಶುಭ ದೈವ ರಕ್ಷಣಾ ಯೋಜನೆಯ ಅತ್ಯಂತ ಮಹತ್ವದ ಘಟ್ಟ. ಇಲ್ಲಿ ದೈವ ಯೋಜನೆಯ ಅಗಾಧತೆ, ಅದರಲ್ಲಿನ ಮಹಿಳೆಯ ಮಹತ್ವದ ಪಾತ್ರ, ಸಾಮಾನ್ಯರಿಗೂ ಸಿಗುವ ಅನುಗ್ರಹ ಜೊತೆಗೆ ಮರಿಯಳ  ಪ್ರಾರ್ಥನಾ ಮತ್ತು ಸಮರ್ಪಣಾ ವ್ಯಕ್ತಿತ್ವ ಎಲ್ಲವೂ ತೆರೆದುಕೊಳ್ಳುತ್ತದೆ. ’ನೀವು ಹೇಳಿದಂತೆ’ ಆಗಲಿ ಎಂಬ ಮರಿಯಳ ಆ ಕ್ಷಣದ ಮಾತು ಇಷ್ಟು ಸಾವಿರ ವರ್ಷಗಳ ನಂತರವೂ ಅತ್ಯಂತ ಸುಮಧರ ಮಾತಾಗಿ ಉಳಿದಿದೆ.
  
ಪ್ರಶ್ನೆ : ’ದೇವರಿಗೆ ಅಸಾಧ್ಯವಾದದ್ದು ಯಾವುದೂ ಇಲ್ಲ’ ’ದೇವರ ಚಿತ್ತದಂತೆ ನನಗಾಗಲಿ’ ಎಂಬ ಮಾತುಗಳಿಗೆ ನಾವೆಷ್ಟು ಬದ್ಧ?  

24.03.2019 - " ಹಣ್ಣುಬಿಟ್ಟರೆ ಸರಿ; ಇಲ್ಲದಿದ್ದರೆ ಕಡಿದು ಹಾಕೋಣ"

ಮೊದಲನೇ ವಾಚನ: ವಿಮೋಚನಾಕಾಂಡ 3:1-8, 13-15

ಮೋಶೆ ಮಿದ್ಯಾನರ ಪೂಜಾರಿಯೂ ತನ್ನ ಮಾವನೂ ಆದ ಇತ್ರೋನನ ಮಂದೆಯನ್ನು ಮೇಯಿಸುತ್ತಿದ್ದನು. ಒಮ್ಮೆ ಆ ಮಂದೆಯನ್ನು ಕಾಡಿನ ಹಿಂಬಾಗಕ್ಕೆ ನಡೆಸಿಕೊಂಡು  'ಹೋರೇಬ್' ಎಂಬ ದೇವರ ಬೆಟ್ಟಕ್ಕೆ ಬಂದನು. ಅಲ್ಲಿ ಮುಳ್ಳಿನ ಪೊದೆಯೊಂದರ ಒಳಗೆ ಉರಿಯುವ ಬೆಂಕಿಯಲ್ಲಿ ಸರ್ವೇಶ್ವರನ ದೂತನು ಅವನಿಗೆ ಕಾಣಿಸಿಕೊಂಡನು. ಮೊಶೆ ನೋಡಿದನು. ಆ ಮುಳ್ಳಿನ ಪೊದೆ ಉರಿಯುತ್ತಲೇ ಇತ್ತು; ಆದರೆ ಸುಟ್ಟುಹೋಗದೆ ಇತ್ತು. ಆಗ ಮೋಶೆ, "ಇದೇನು ಆಶ್ಚರ್ಯ! ಪೊದೆ ಸುಟ್ಟುಹೋಗದೆ ಇರುವುದಕ್ಕೆ ಕಾರಣವೇನು? ನಾನು ಹತ್ತಿರ ಹೋಗಿ ತಿಳಿದುಕೊಳ್ಳುತ್ತೇನೆ" ಎಂದುಕೊಂಡನು. ಅದನ್ನು ನೋಡಲು ಅವನು ಮುಂದಕ್ಕೆ ಬರುವುದನ್ನು ಸರ್ವೇಶ್ವರಸ್ವಾಮಿ ಕಂಡರು. ಪೊದೆಯೊಳಗಿಂದ, "ಮೋಶೆ, ಮೋಶೆ," ಎಂದು ದೇವರು ಕರೆದರು. ಅದಕ್ಕವನು, ಇಗೋ, ಇದ್ದೇನೆ," ಎಂದು ಉತ್ತರಕೊಟ್ಟನು. ದೇವರು ಅವನಿಗೆ "ಹತ್ತಿರ ಬರಬೇಡ! ನಿನ್ನ ಕಾಲಿನ ಕೆರಗಳನ್ನು ತೆಗೆದುಹಾಕು; ಏಕೆಂದರೆ ನೀನು ನಿಂತಿರುವ ಸ್ಥಳ ಪವಿತ್ರಭೂಮಿ," ಎಂದು ಹೇಳಿದರು. ಅದೂ ಅಲ್ಲದೆ, "ನಾನು ನಿನ್ನ ತಂದೆಯ ದೇವರು, ಇಸಾಕನ  ದೇವರು ಯಕೋಬನ ದೇವರು," ಎಂದರು. ಆಗ ಮೋಶೆ ದೇವರನ್ನು ದಿಟ್ಟಿಸಿ ನೋಡಲು ಭಯಪಟ್ಟು ಮುಖವನ್ನು ಮುಚ್ಚಿಕೊಂಡನು. ಆಗ ಸರ್ವೇಶ್ವರ, " ಈಜಿಪ್ಟ್ ನಲ್ಲಿರುವ ನನ್ನ ಜನರ ದುರವಸ್ಥೆಯನ್ನು ನಾನು ಕಣ್ಣಾರೆ ನೋಡಿದ್ದೇನೆ ಬಿಟ್ಟೀ ಕೆಲಸ ಮಾಡಿಸಿಕೊಳ್ಳುವವರ ಬಗ್ಗೆ ಅವರು ಇಟ್ಟ ಮೊರೆ ನನಗೆ ಕೇಳಿಸಿದೆ. ಅವರ ಕಷ್ಟದುಃಖವನ್ನೆಲ್ಲಾ ನಾನು ಬಲ್ಲೆ. ಆದಕಾರಣ ಅವರನ್ನು ಈಜಿಪ್ಟಿನವರ ಕೈಯಿಂದ ಬಿಡಿಸುವುದಕ್ಕೂ ಮತ್ತು ಆ ದೇಶದಿಂದ ಹೊರತಂದು ಹಾಲೂ ಜೇನೂ ಹರಿಯುವ ಸವಿಸ್ತಾರವಾದ ಒಳ್ಳೆಯ ನಾಡಿಗೆ, ನಡೆಸಿಕೊಂಡು ಹೋಗುವುದಕ್ಕೂ ಇಳಿದು ಬಂದಿದ್ದೇನೆ, ಎಂದರು. ಮೋಶೆ ದೇವರಿಗೆ, "ನಾನು ಇಸ್ರಯೇಲರ ಬಳಿಗೆ ಹೋಗಿ, 'ನಿಮ್ಮ ಪೂರ್ವಜರ ದೇವರು ನನ್ನನ್ನು ನಿಮ್ಮ ಬಳಿಗೆ ಕಳಿಸಿದ್ದಾರೆ," ಎಂದು ಹೇಳಿದಾಗ ಅವರು ಒಂದು ವೇಳೆ, "ಆತನ ಹೆಸರೇನು?" ಎಂದು ನನ್ನನ್ನು ಕೇಳಿದರೆ ನಾನೇನು ಉತ್ತರ ಕೊಡಬೇಕು?" ಎಂದು ಕೇಳಿದನು. ಆಗ ದೇವರು ಹೀಗೆಂದರು. "ಇರುವವನಾಗಿ ಇರುವವನು ನಾನೇ; ನೀನು ಇಸ್ರಯೇಲರಿಗೆ 'ತಾನಾಗಿ ಇರುವವನು,’ ನನ್ನನ್ನ ನಿಮ್ಮ ಬಳಿಗೆ ಕಳಿಸಿದ್ದಾನೆ ಎಂದು ಹೇಳು," ದೇವರು ಮೋಶೆಗೆ ಮತ್ತೆ ಇಂತೆಂದರು: "ನೀನು ಇಸ್ರಯೇಲರಿಗೆ, "ನಿಮ್ಮ ಪೂರ್ವಜರಾದ ಅಬ್ರಹಾಮ , ಇಸಾಕ ಹಾಗು ಯಕೋಬರ ದೇವರಾಗಿರುವ ಸರ್ವೇಶ್ವರ ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾರೆ" ಎಂದು ಹೇಳು. ಇದು ಸದಾಕಾಲಕ್ಕೂ ನನ್ನ ಹೆಸರು. ಈ ಹೆಸರಿನಿಂದಲೇ ತಲತಲಾಂತರಕ್ಕೂ ನನ್ನನ್ನು ಸ್ಮರಿಸಬೇಕು."

ಕೀರ್ತನೆ: 103:1-4, 6-8, 11
ಶ್ಲೋಕ: ಪ್ರಭು ಸಹನಶೀಲನು, ಪ್ರೀತಿಮಯನು.

ಎರಡನೇ ವಾಚನ: 1 ಕೊರಿಂಥಿಯರಿಗೆ : 10:1-6, 10-12

ಪ್ರಿಯ ಸಹೋದರರೇ, ನಮ್ಮ ಪೂರ್ವಜರಿಗೆ ಸಂಭವಿಸಿದವುಗಳತ್ತ ನಿಮ್ಮ ಗಮನವನ್ನು ಸೆಳೆಯಬೇಕೆಂದಿದ್ದೇನೆ ಅವರೆಲ್ಲರೂ ಮೋಡದ ನೆರಳಿನಲ್ಲಿಯೇ ನಡೆದರು. ಎಲ್ಲರೂ ಸಮುದ್ರವನ್ನು ಸುರಕ್ಷಿತವಾಗಿ ದಾಟಿದರು. ಹೀಗೆ ಅವರು ಮೋಡದಲ್ಲಿಯೂ ಸಮುದ್ರದಲ್ಲಿಯೂ ಸ್ನಾನದೀಕ್ಷೆಯನ್ನು ಪಡೆದು ಮೋಶೆಗೆ ಶಿಷ್ಯರಾದರು. ಎಲ್ಲರೂ ಒಂದೇ ದೈವಿಕ ಪಾನೀಯವನ್ನು ಕುಡಿದರು; ಅದೂ ತಮ್ಮೊಡನೆ ಬರುತ್ತಿದ್ದ ದೈವಿಕ ಬಂಡೆಯಿಂದ ಕುಡಿದರು. ಕ್ರಿಸ್ತಯೇಸುವೇ ಆ ಬಂಡೆ. ಆದರೂ ಅವರಲ್ಲಿ ಬಹುಮಂದಿ ದೇವರ ಮೆಚ್ಚುಗೆಗೆ ಪಾತ್ರರಾಗಲಿಲ್ಲ. ಆದ್ದರಿಂದಲೇ ಮರುಭೂಮಿಯಲ್ಲಿ ಮಡಿದು ಮಣ್ಣುಪಾಲಾದರು. ಈ ಘಟಣೆಗಳು ನಮಗೆ ಎಚ್ಚರಿಕೆ ನೀಡುವ ನಿದರ್ಶನಗಳಾಗಿವೆ. ಅವರಂತೆ ನಾವು ಕೆಟ್ಟದಾದವುಗಳನ್ನು ಆಶಿಸಬಾರದು. ಅವರಲ್ಲಿ ಕೆಲವರು ಗೊಣಗುಟ್ಟಿದರು ಸಂಹಾರಕ ದೂತನಿಂದ ಸಂಹರಿಸಲ್ಪಟ್ಟರು. ನೀವು ಅವರಂತೆ ಗೊಣಗುಟ್ಟವರಾಗಬೇಡಿ. ಇದೆಲ್ಲ ಅವರಿಗೆ ಸಂಭವಿಸಿದುದು ಇತರರಿಗೆ ನಿದರ್ಶನವಾಗಿರಲೆಂದು. ಇವುಗಳನ್ನು ಬರೆದಿಟ್ಟಿರುವುದು, ಯುಗಾಂತ್ಯಕ್ಕೆ ಬಂದಿರುವ ನಮಗೆ ಮುನ್ನೆಚ್ಚರಿಕೆಯಾಗಿರಲೆಂದು. ಆದಕಾರಣ ಸ್ಥಿರವಾಗಿ ನಿಂತಿರುವೆನೆಂದು ಕೊಚ್ಚಿಕೊಳ್ಳುವವನೇ, ಕುಸಿದುಬೀಳದಂತೆ ಎಚ್ಚರಿಕೆಯಿಂದಿರು.

ಶುಭಸಂದೇಶ: ಲೂಕ 13:1-9

ಕೆಲವರು ಯೇಸುಸ್ವಾಮಿಯ ಬಳಿಗೆ ಬಂದು, ಬಲಿಯರ್ಪಿಸುತ್ತಾ ಇದ್ದ ಗಲಿಲೇಯದವರನ್ನು ಪಿಲಾತನು ಕೊಲ್ಲಿಸಿದನೆಂಬ ವಿಷಯವನ್ನು ತಿಳಿಸಿದರು. ಅದಕ್ಕೆ ಯೇಸು, "ಇಂಥಾ ಕೊಲೆಗೆ ಈಡಾದವರು ಇತರ ಎಲ್ಲ ಗಲಿಲೇಯದವರಿಗಂತ ಹೆಚ್ಚು ಪಾಪಿಗಳೆಂದು ಭಾವಿಸುತ್ತೀರೋ,? ಹಾಗೆ ಭಾವಿಸಕೂಡದು. ನೀವು ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿ ದೇವರಿಗೆ ಅಭಿಮುಖರಾಗದೆ ಹೋದರೆ, ಅವರ ಹಾಗೆಯೇ ನೀವೂ ನಾಶವಾಗುವಿರಿ, ಶಿಲೊವಾ ಎಂಬಲ್ಲಿ ಗೋಪುರ ಕುಸಿದು ಬಿದ್ದಾಗ ಹದಿನೆಂಟು ಜನ ಸತ್ತರಲ್ಲವೆ? ಅವರು ಜೆರುಸಲೇಮಿನಲ್ಲಿ ವಾಸವಾಗಿರುವ ಇತರ ಎಲ್ಲಾ ಜನರಿಗಿಂತ ಹೆಚ್ಚು ದೋಷಿಗಳಾಗಿದ್ದರೆಂದು ಭಾವಿಸುತ್ತಿರೋ? ಹಾಗಲ್ಲ, ನೀವು ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿ ದೇವರಿಗೆ ಅಭಿಮುಖರಾಗದಿದ್ದರೆ, ಅವರ ಹಾಗೆಯೇ ನೀವೂ ನಾಶವಾಗುವಿರಿ," ಎಂದರು. ಅನಂತರ ಯೇಸುಸ್ವಾಮಿ ಈ ಸಾಮತಿಯನ್ನು ಹೇಳಿದರು: " ಒಬ್ಬನು ತನ್ನ ದ್ರಾಕ್ಷಿ ತೋಟದಲ್ಲಿ ಒಂದು ಅಂಜೂರದ ಮರವನ್ನು ನೆಡಿಸಿದ್ದ. ಒಮ್ಮೆ ಅವನು ಬಂದು ಅದರಲ್ಲಿ ಹಣ್ಣನ್ನು ಹುಡುಕಲು ಒಂದೂ ಕಾಣಿಸಲಿಲ್ಲ. ತೋಟಗಾರನನ್ನು ಕರೆದು, "ನೋಡು, ಮೂರು ವರ್ಷಗಳಿಂದ ಈ ಮರದಲ್ಲಿ ಹಣ್ಣನ್ನು ‌ಹುಡುಕುತ್ತಾ ಇದ್ದೇನೆ. ಒಂದಾದರೂ ಕಂಡುಬರಲಿಲ್ಲ  ಇನ್ನು ಇದನ್ನು ಕಡಿದು ಹಾಕು. ಭೂಮಿಗೆ ಭಾರವಾಗಿ ಅದರ ಸಾರವನ್ನು ಇದೇಕೆ ವ್ಯರ್ಥ ಮಾಡಬೇಕು?" ಎಂದು ಹೇಳಿದ. ಅದಕ್ಕೆ ತೋಟಗಾರನು, "ಸ್ವಾಮೀ, ಈ ಒಂದು ವರ್ಷ ಇದು ಹಾಗೆಯೇ ಇರಲಿ ಬಿಡಿ. ಅಷ್ಟರಲ್ಲಿ ಸುತ್ತಲೂ ಪಾತಿತೆಗೆದು ಗೊಬ್ಬರ ಹಾಕುತ್ತೇನೆ, ಮುಂದಿನ ವರ್ಷ ಹಣ್ಣುಬಿಟ್ಟರೆ ಸರಿ; ಇಲ್ಲದಿದ್ದರೆ ಕಡಿದು ಹಾಕೋಣ," ಎಂದನು,"

ಮನಸಿಗೊಂದಿಷ್ಟು  : ದೇವರ ನಮಗೆ ವಿಸ್ತರಿಸಿರುವ ಅನುಗ್ರಹ ಹಾಗೂ ಕೃಪೆಯನ್ನು ಅರ್ಥ ಮಾಡಿಕೊಳ್ಳದಿದ್ದರೆ ಅಂಜುರ ಮರಕ್ಕೆ ಸಿಕ್ಕ ಎಚ್ಚರಿಕೆ ನಮಗೂ ಸಿಗುತ್ತದೆ. ದೇವರ ಅನುಗ್ರಹ, ಪ್ರೀತಿಯ ಸಾರವನ್ನು ಉಪಯೋಗಿಸಿಯೂ ಫಲ ಕೊಡದೆ ಹೋದರೆ ನಮ್ಮ ಜೀವನ ವ್ಯರ್ಥವೇ ಸರಿ. ಈ ಲೋಕದ ಲೆಕ್ಕಚಾರದಲ್ಲಿ ನಾವು ಸ್ಥಿರವಾಗಿ ನಿಂತಿರುವೆವು ಎಂದು ಬೆನ್ನು ತಟ್ಟಿಕೊಳ್ಳದೆ ದೇವರ ಎದುರಿನಲ್ಲಿ ನಾವೆಷ್ಟು ಯೋಗ್ಯರು ಎಂಬುದನ್ನು ಯೋಚಿಸೋಣ

ಪ್ರಶ್ನೆ : ದೇವರ ಪ್ರೀತಿ ಅನುಗ್ರಹ ನಮ್ಮಲ್ಲಿ ಎಷ್ಟು ಫಲ ನೀಡಿದೆ ?



 ತಪಸ್ಸು ಕಾಲದಲ್ಲಿನ ಇಲ್ಲಿಯವರೆಗಿನ ಪ್ರಶ್ನೆಗಳು 


 -   ತಪಸ್ಸು ಕಾಲದಲ್ಲಿ ನಮ್ಮ ಅಧ್ಯಾತ್ಮಿಕ ಗುರಿಗಳೇನು?

 -  ಶಿಲುಬೆ ಹೊತ್ತು ಹಿಂಬಾಲಿಸಲು ಸಿದ್ಧವಿದ್ದೇವೆಯೇ

 -  ದೇವರ ಮುಂದೆ ನಾವು ತೋರಬಹುದಾದ ಆಸ್ತಿಗಳಾವುವು

 -  ನಮಗೆ  ದೈವೀಕ ವೈದ್ಯನ ಅವಶ್ಯಕತೆಯಿದೆ ಎಂಬ ಅರಿವು ನಮಗಿದೆಯೇ?

 -  ನಾವಿಂದು ಯಾವುದೆಲ್ಲವುಗಳಿಂದ ಜೀವಿಸುತ್ತಿದ್ದೇವೆ?

 -  ನಮ್ಮ ಜೀವನದಲ್ಲಿ ಹಸಿದವರಿಗೆ ನಾವಾಗೇ ಹೋಗಿ ಊಟವಿತ್ತ ಉದಾಹರಣೆಗಳೆಷ್ಟು

 -  ನಮ್ಮ ಪ್ರಾರ್ಥನೆಯಲ್ಲಿ ನಿರರ್ಥಕ ಪದಗಳೆಷ್ಟುಸ್ವಾರ್ಥ ಬೇಡಿಕೆಗಳೆಷ್ಟು?

 -  ನಮ್ಮ ಹೃದಯವೂ ನೆನೆವೆ ನಗರದಂತಾಗಲು ಸಾಧ್ಯವಿಲ್ಲವೇ?

 -  ನಮಗಾಗಿ ನಾವು ಏನು ಅಪೇಕ್ಷಿಸುತ್ತೇವೆಯೋ ಅದನ್ನು ಇತರರಿಗೂ ಬಯಸುತ್ತಿದ್ದೇವೆಯೇ?

 -  ನಾವು ಮತ್ತೊಬ್ಬರನ್ನು ತುಚ್ಛೀಕರಿಸಿದ ಸಂದರ್ಭಗಳ ಲೆಕ್ಕ ನಮ್ಮಲ್ಲಿದೆಯೇ?   

-ನಾವು ಯೇಸುವಿಗೆ ಸ್ವಂತ ಜನರಾಗಿದ್ದೇವೆಯೇ ಅಥವಾ ಇನ್ನೂ ಅನ್ಯರಾಗೇ ಉಳಿದಿದ್ದೇವೆಯೇ?

-ಯೇಸುವಿನ ಈ ರೂಪಾಂತರದ ಘಟನೆ ನಮ್ಮೊಳಗಿನ ರೂಪಾಂತರಕ್ಕೆ ಸ್ಪೂರ್ತಿಯಾಗಬಲ್ಲದೇ?

                           -ದಾಸನಾಗಿರು’ ಎಂಬ ಯೇಸುವಿನ ವಾಕ್ಯಕ್ಕೆ ನಾವೆಷ್ಟು ಬದ್ಧ?  

- ನಮ್ಮ ಬದುಕಿನ ಅಡಿಪಾಯ ಯಾವುದು? ದೈವ ನಂಬಿಕೆಯೇ? ಲೌಕಿಕ ಗಳಿಕೆಯೇ?


- ದೇವರಿಂದ ನಮ್ಮ ಲೌಕೀಕ ಜೀವನ ಎಷ್ಟು ದೂರಾ ಸಾಗಿದೆ?





 :: 

23.03.2019 - ನಮ್ಮ ಅಪರಾಧಗಳನ್ನು ಅಳಿಸಿಬಿಡಿ

ಮೊದಲನೇ ವಾಚನ: ಮೀಕ 7:14-15, 18-20

ಸರ್ವೇಶ್ವರಾ, ನಿಮ್ಮ ಮಂದೆಗೆ ಸೇರಿದ ಜನರನ್ನು ಕುರಿಗಾಹಿಯಂತೆ ಪರಿಪಾಲಿಸಿರಿ. ನಿಮ್ಮ ಸ್ವಾಸ್ಥ್ಯವಾಗಿ, ಮಂದೆಯಾಗಿ ಇರುವಂಥ ಜನರು, ಸುತ್ತಮುತ್ತಲು ಫಲವತ್ತಾದ ಹಸಿರು ಭೂಮಿಯಿದ್ದರೂ ಮರಳುಗಾಡಿನಲ್ಲಿ ಪ್ರತ್ಯೇಕವಾಗಿ ಜೀವಿಸುತ್ತಿರುವರು. ಪೂರ್ವಕಾಲದಲ್ಲಿದ್ದಂತೆ, ಈಗ ಅವರು ಬಾಷಾನ್ ಮತ್ತು ಗಿಲ್ಯಾದ್ ನಾಡುಗಳಿಗೆ ತೆರಳಿ ಪೋಷಣೆ ಪಡೆಯಲಿ. ಈಜಿಪ್ಟ್ ದೇಶದಿಂದ ನಮ್ಮನ್ನು ಹೊರತಂದ ದಿನಗಳಲ್ಲಿ ನೀವು ಮಾಡಿದ ಮಹತ್ಕಾರ್ಯಗಳನ್ನು ಮರಳಿ ಮಾಡಿತೋರಿಸಿರಿ. ನಿಮ್ಮಂಥ ದೇವರು ಯಾರಿದ್ದಾರೆ? ತಮ್ಮ ಸ್ವಂತ ಜನರಲ್ಲಿ ಅಳಿದುಳಿದವರ ಅಪರಾಧಗಳನ್ನು ಲೆಕ್ಕಿಸದೆ, ಅವರ ದ್ರೋಹಗಳನ್ನು ಕ್ಷಮಿಸುವಂಥ ದೇವರು ಯಾರಿದ್ದಾರೆ? ನೀವು ನಿತ್ಯಕ್ಕೂ ಕೋಪಿಷ್ಠರಾಗಿರದೆ ಕರುಣೆ ತೋರಿಸುವುದರಲ್ಲೇ ಸಂತುಷ್ಟರಾಗುವಿರಿ. ಮತ್ತೊಮ್ಮೆ ನಮಗೆ ದಯೆತೋರಿ. ನಮ್ಮ ಅಪರಾಧಗಳನ್ನು ಅಳಿಸಿಬಿಡಿ; ಅವನ್ನು ತುಳಿದು ಸಮುದ್ರದ ತಳಕ್ಕೆ ತಳ್ಳಿಬಿಡಿ. ಪುರಾತನ ಕಾಲದಲ್ಲಿ ನಮ್ಮ ಪಿತೃಗಳಿಗೆ ಪ್ರಮಾಣಮಾಡಿದಂತೆ ಯಕೋಬ ವಂಶದವರಿಗೆ ನಂಬಿಕಸ್ಥರಾಗಿರಿ. ಅಬ್ರಹಾಮನ ವಂಶದವರಿಗೆ ಪ್ರೀತಿಪರರಾಗಿರಿ.

ಕೀರ್ತನೆ: 103:1-2, 3-4, 9-10, 11-12
ಶ್ಲೋಕ: ಪ್ರಭು ದಯಾಳು, ಕೃಪಾಪುರ್ಣನು ಸಹನಶೀಲನು, ಪ್ರೀತಿಮಯನು.

ಶುಭಸಂದೇಶ: ಲೂಕ 15:1-3, 11-32


ಯೇಸುಸ್ವಾಮಿಯ ಉಪದೇಶವನ್ನು ಕೇಳಲು ಎಲ್ಲಾ ಸುಂಕದವರೂ ಪಾಪಿಗಳೂ ಬರುತ್ತಿದ್ದರು. ಇದನ್ನು ಕಂಡ ಫರಿಸಾಯರು ಮತ್ತು ಧರ್ಮಶಾಸ್ತ್ರಿಗಳು, "ಈ ಮನುಷ್ಯ ಪಾಪಿಗಳನ್ನು ಬರಮಾಡಿಕೊಳ್ಳುತ್ತಾನೆ; ಅವರೊಡನೆ ಊಟಮಾಡುತ್ತಾನೆ," ಎಂದು ಗೊಣಗಿದರು.  ಆ ಸಂದರ್ಭದಲ್ಲಿ ಯೇಸುಸ್ವಾಮಿ ಈ ಸಾಮತಿಯನ್ನು ಹೇಳಿದರು: "ಒಬ್ಬಾತನಿಗೆ ಇಬ್ಬರು ಮಕ್ಕಳಿದ್ದರು. ಅವರಲ್ಲಿ ಕಿರಿಯವನು "ಅಪ್ಪಾ, ಆಸ್ತಿಯಲ್ಲಿ ನನಗೆ ಬರಬೇಕಾದ ಪಾಲನ್ನು ಕೊಟ್ಟುಬಿಡು," ಎಂದು ಕೇಳಿದ. ತಂದೆ ಅವರಿಬ್ಬರಿಗೂ ಆಸ್ತಿಯನ್ನು ಹಂಚಿಕೊಟ್ಟ. ಕೆಲವು ದಿವಸಗಳಾದ ಮೇಲೆ ಕಿರಿಯ ಮಗ ತನ್ನ ಆಸ್ತಿಯನ್ನೆಲ್ಲಾ ಮಾರಿ, ಬಂದ ಹಣವನ್ನು ತೆಗೆದುಕೊಂಡು ಮನೆಬಿಟ್ಟು ಹೋದ, ದೂರದೇಶಕ್ಕೆ ಹೋಗಿ, ದುಂದು ಜೀವನ ನಡೆಸಿ ಹಣವನ್ನೆಲ್ಲಾ ಪೋಲುಮಾಡಿಬಿಟ್ಟ, ಹೀಗೆ ಅವನು ಎಲ್ಲವನ್ನು ಹಾಳುಮಾಡಿಕೊಂಡಮೇಲೆ ಆ ದೇಶದಾದ್ಯಂತ ಘೋರವಾದ ಕ್ಷಾಮ ತಲೆದೋರಿತು. ನಿರ್ಗತಿಕನಾದ ಅವನು ಹೋಗಿ, ಆ ದೇಶದ ನಿವಾಸಿಯೊಬ್ಬನನ್ನು ಆಶ್ರಯಿಸಿದ ಆತ ಇವನನ್ನು ಹಂದಿ ಮೇಯಿಸಲು ತನ್ನ ರೊಪ್ಪಗಳಿಗೆ ಕಳುಹಿಸಿದ. ಅಲ್ಲಿ ಹಂದಿ ತಿನ್ನುತ್ತಿದ್ದ ಕಾಳುಗಳನ್ನಾದರೂ ತಿಂದು ಹಸಿವನ್ನು ನೀಗಿಸಿಕೊಳ್ಳಲು ಹಂಬಲಿಸಿದ. ಆದರೆ ಅದನ್ನೂ ಅವನಿಗೆ ಯಾರೂ ಕೊಡಲಿಲ್ಲ. ಆಗ ಅವನಿಗೆ ಬುದ್ಧಿ ಬಂದಿತು. ನನ್ನ ತಂದೆಯ ಮನೆಯಲ್ಲಿ ಎಷ್ಟೋ ಮಂದಿ ಕೂಲಿಯಾಳುಗಳಿಗೆ ತಿಂದು ತೇಗುವಷ್ಟು ಆಹಾರವಿದೆ. ನಾನಾದರೋ ಇಲ್ಲಿ ಹಸಿವಿನಿಂದ ಸಾಯುತ್ತಾ ಇದ್ದೇನೆ. ನಾನು ಇದೀಗಲೇ ಹೊರಟು, ತಂದೆಯ ಬಳಿಗೆ ಹೋಗಿ, 'ಅಪ್ಪಾ, ದೇವರಿಗೂ ನಿಮಗೂ ವಿರುದ್ಧವಾಗಿ ಪಾಪಮಾಡಿದ್ದೇನೆ; ನಿಮ್ಮ ಮಗನು ಎನಿಸಿಕೊಳ್ಳುವ ಯೋಗ್ಯತೆಯೂ ನನಗಿಲ್ಲ; ನನ್ನನ್ನು ನಿಮ್ಮ ಮನೆಯ ಕೂಲಿಯಾಳುಗಳಲ್ಲಿ ಒಬ್ಬನನ್ನಾಗಿ ಇಟ್ಟುಕೊಳ್ಳಿ ಎಂದು ಬೇಡಿಕೊಳ್ಳುತ್ತೇನೆ,' ಎಂದುಕೊಂಡ. ಅಂತೆಯೇ ಎದ್ದು ತಂದೆಯ ಬಳಿಗೆ ಹೊರಟ. "ಮಗನು ಇನ್ನೂ ಅಷ್ಟುದೂರದಲ್ಲಿ ಇರುವಾಗಲೇ ತಂದೆ ನೋಡಿದ, ಆತನ ಹೃದಯ ಕನಿಕರದಿಂದ ಕರಗಿಹೋಯಿತು. ಓಡಿಹೋಗಿ, ಮಗನನ್ನು ಬಿಗಿಯಾಗಿ ತಬ್ಬಿಕೊಂಡು ಮುತ್ತಿಟ್ಟ. ಆದರೂ ಮಗನು, 'ಅಪ್ಪಾ, ದೇವರಿಗೂ ನಿಮಗೂ ವಿರುದ್ಧವಾಗಿ ಪಾಪಮಾಡಿದ್ದೇನೆ; ನಿಮ್ಮ ಮಗನೆನಿಸಿಕೊಳ್ಳುವ ಯೋಗ್ಯತೆಯೂ ನನಗಿಲ್ಲ' ಎಂದ. ತಂದೆಯಾದರೋ ಆಳುಗಳನ್ನು ಕರೆದು, "ಅತ್ಯುತ್ತಮವಾದ ಅಂಗಿಯನ್ನು ತಕ್ಷಣವೇ ತಂದು ಇವನಿಗೆ ಉಡಿಸಿರಿ, ಬೆರಳಿಗೆ ಉಂಗುರವನ್ನು ತೊಡಿಸಿರಿ, ಕಾಲಿಗೆ ಪಾದರಕ್ಷೆಯನ್ನು ಮೆಟ್ಟಿಸಿರಿ; ಕೊಬ್ಬಿಸಿದ ಕರುವನ್ನು ತಂದು ಕೊಯ್ಯಿರಿ; ಹಬ್ಬಮಾಡೋಣ, ಆನಂದಿಸೋಣ. ಏಕೆಂದರೆ, ಈ ನನ್ನ ಮಗ ಸತ್ತುಹೋಗಿದ್ದ, ಈಗ ಬದುಕಿಬಂದಿದ್ದಾನೆ. ತಪ್ಪಿಹೋಗಿದ್ದ, ಈಗ ಸಿಕ್ಕಿದ್ದಾನೆ," ಎಂದು ಹೇಳಿದ. ಒಡನೆಯೇ ಹಬ್ಬದ ಸಡಗರ ತೊಡಗಿತು, "ಇತ್ತ ಹೊಲಕ್ಕೆ ಹೋಗಿದ್ದ ಹಿರಿಯ ಮಗ ಹಿಂದಿರುಗಿ ಮನೆಯನ್ನು ಸಮೀಪಿಸುವಾಗ ಗಾನ, ನರ್ತನಗಳ ಶಬ್ದವು ಅವನ ಕಿವಿಗೆ ಬಿತ್ತು. "ಮನೆಯಲ್ಲೇನು ವಿಶೇಷ?' ಎಂದು ಒಬ್ಬ ಆಳನ್ನು ಕರೆದು ವಿಚಾರಿಸಿದ. ನಿಮ್ಮ ತಮ್ಮ ಬಂದಿದ್ದಾರೆ; ಅವರು ಮರಳಿ ಸುರಕ್ಷಿತವಾಗಿ ಬಂದುದಕ್ಕಾಗಿ ಕೊಬ್ಬಿಸಿದ ಕರುವನ್ನು ನಿಮ್ಮ ತಂದೆ ಕೊಯ್ಯಿಸಿದ್ದಾರೆ," ಎಂದು ಆಳು ತಿಳಿಸಿದ. "ಇದನ್ನು ಕೇಳಿದ ಹಿರಿಯ ಮಗನಿಗೆ ಸಿಟ್ಟು ಬಂದಿತು. ಮನೆಯೊಳಕ್ಕೆ ಕಾಲಿಡಲೂ ಒಪ್ಪಲಿಲ್ಲ. ತಂದೆಯೇ ಹೊರಗೆ ಬಂದು ಬೇಡಿಕೊಂಡಾಗ ಅವನು, "ನೋಡಿ, ನಾನು ಇಷ್ಟು ವರ್ಷಗಳಿಂದ ನಿಮಗೆ ಗುಲಾಮನಂತೆ ಸೇವೆ ಮಾಡುತ್ತಿದ್ದೇನೆ. ನಿಮ್ಮ ಮಾತನ್ನು ಎಂದಿಗೂ ಮೀರಿಲ್ಲ; ಆದರೂ ನಾನು ನನ್ನ ಸ್ನೇಹಿತರೊಡನೆ ಹಬ್ಬಮಾಡಲು ಒಂದು ಆಡುಮರಿಯನ್ನು ಕೂಡ ನೀವು ಕೊಟ್ಟಿಲ್ಲ. ಆದರೆ ನಿಮ್ಮ ಆಸ್ತಿಪಾಸ್ತಿಯನ್ನೆಲ್ಲಾ ವೇಶ್ಯೆಯರಿಗೆ ಸುರಿದ ಈ ನಿಮ್ಮ ಮಗ ಬಂದದ್ದೇ ಕೊಬ್ಬಿಸಿದ ಕರುವನ್ನು ಕೊಯ್ಯಿಸಿದ್ದೀರಿ!" ಎಂದು ವಾದಿಸಿದ. ಆಗ ತಂದೆ ಅವನಿಗೆ, 'ಮಗನೇ, ನೀನು ಯಾವಾಗಲೂ ನನ್ನ ಸಂಗಡ ಇದ್ದೀ; ನನ್ನ ಸರ್ವಸ್ವವೂ ನಿನ್ನದೇ ಆಗಿದೆ. ಈ ನಿನ್ನ ತಮ್ಮ ನಮ್ಮ ಪಾಲಿಗೆ ಸತ್ತುಹೋಗಿದ್ದ, ಈಗ ಬದುಕಿಬಂದಿದ್ದಾನೆ. ತಪ್ಪಿಹೋಗಿದ್ದ, ಈಗ ಸಿಕ್ಕಿದ್ದಾನೆ.ಆದುದರಿಂದ ನಾವು ಹಬ್ಬಮಾಡಿ ಆನಂದಿಸುವುದು ಸಹಜವಲ್ಲವೆ?' ಎಂದನು."

ಮನಸಿಗೊಂದಿಷ್ಟು : ಮನೆ ಬಿಟ್ಟು ಹೋಗಿದ್ದ ಮಗ ಮತ್ತೆ ಮನೆಗೆ ಮರಳಲು ನಾಚಿಕೆ ಪಡುತ್ತಾನೆ. ಅದನ್ನು ತಿಳಿದ ತಂದೆ "ನೀನು ಎಷ್ಟು ದೂರ ಮತ್ತೆ ಬರಲು ಸಾಧ್ಯವಾಗುತ್ತದೋ ಬಾ ಮಿಕ್ಕ ದೂರ ನಾನೇ ಬಂದು ಕರೆದುಕೊಂಡು ಹೋಗುತ್ತೇನೆ" ಎನ್ನುತ್ತಾನೆ. ನಮ್ಮ ಪಾಪಗಳಿಂದ ದೇವರಿಂದ ದೂರವಾಗುವ ನಾವು ಮತ್ತೆ ಮರಳಲು ಬಯಸಿದಾಗ ದೇವರೇ ಬಂದು ನಮ್ಮನ್ನು ತಮ್ಮ ತೆಕ್ಕೆಗೆ ಸೇರಿಸಿಕೊಳ್ಳುತ್ತಾರೆ. ಮರಳುವ ಮನಸು ನಮ್ಮದಾಗಬೇಕಷ್ಟೆ.

ಪ್ರಶ್ನೆ : ದೇವರಿಂದ ನಮ್ಮ ಲೌಕೀಕ ಜೀವನ ಎಷ್ಟು ದೂರಾ ಸಾಗಿದೆ?

22.03.2019 - ಬೇಡವೆಂದು ಬಿಸಾಡಿದ ಆ ಕಲ್ಲೇ ಪ್ರಮುಖ ಮೂಲೆಗಲ್ಲಾಯಿತು

ಮೊದಲನೇ ವಾಚನ: ಆದಿಕಾಂಡ 37: 3-4,12-13,17-28

ಜೋಸೆಫನು ಯಕೋಬನಿಗೆ ಮುಪ್ಪಿನಲ್ಲಿ ಹುಟ್ಟಿದ ಮಗ. ಎಂದೇ ಯಕೋಬನಿಗೆ ಅವನ ಮೇಲೆ ಮಿಕ್ಕ ಮಕ್ಕಳಿಗಿಂತ ಮಿಗಿಲಾದ ಪ್ರೀತಿ. ಅಲಂಕೃತವಾದ ಒಂದು ನಿಲುವಂಗಿಯನ್ನೂ ಅವನಿಗೆ ಮಾಡಿಸಿಕೊಟ್ಟಿದ್ದ. ತಂದೆ ತನ್ನ ಎಲ್ಲ ಮಕ್ಕಳಿಗಿಂತ ಇವನನ್ನೇ ಹೆಚ್ಚಾಗಿ ಪ್ರೀತಿಸುವುದನ್ನು ಕಂಡು, ಅಣ್ಣಂದಿರು ಆ ಜೋಸೆಫನನ್ನು ಹಗೆಮಾಡಿದರು. ಅವನೊಡನೆ ಸ್ನೇಹ ಭಾವದಿಂದಲೂ ಮಾತಾಡದೆ ಹೋದರು. ಒಮ್ಮೆ ಜೋಸೆಫನ ಅಣ್ಣಂದಿರು ತಂದೆಯ ಆಡುಕುರಿಗಳನ್ನು ಮೇಯಿಸಲು ಶೆಕೆಮಿಗೆ ಹೋಗಿದ್ದರು. ಯಕೋಬನು ಜೋಸೆಫನಿಗೆ, "ನಿನ್ನ ಅಣ್ಣಂದಿರು ಶೆಕೆಮಿನಲ್ಲಿ ಆಡುಕುರಿಗಳನ್ನು ಮೇಯಿಸುತ್ತಿದ್ದಾರೆ, ಅಲ್ಲವೆ? ಅವರ ಬಳಿಗೆ ನಿನ್ನನ್ನು ಕಳಿಸಬೇಕೆಂದಿದ್ದೇನೆ," ಎಂದನು. ಜೋಸೆಫನು ಅವರನ್ನು ಹುಡುಕುತ್ತಾ ಹೋಗಿ, ದೋತಾನಿನಲ್ಲಿ ಅವರನ್ನು ಕಂಡ. ಅಣ್ಣಂದಿರು ಅವನನ್ನು ದೂರದಿಂದಲೇ ನೋಡಿದರು. ಅವನು ತಮ್ಮ ಬಳಿಗೆ ಬರುವಷ್ಟರೊಳಗೆ ಅವನನ್ನು ಕೊಲ್ಲಲ್ಲು ಒಳಸಂಚು ಮಾಡಿಕೊಂಡರು. "ಅಗೋ ಆ ಕನಸುಗಾರ  ಬರುತ್ತಾ ಇದ್ದಾನೆ! ನಾವು ಅವನನ್ನು ಕೊಂದು ಈ ಬಾವಿಯೊಂದರಲ್ಲಿ ಹಾಕಿ ಬಿಡೋಣ. "ಕಾಡುಮೃಗ ಅವನನ್ನು ತಿಂದುಬಿಟ್ಟಿತು"; ಎಂದು ಹೇಳಿದರೆ ಆಯಿತು, ಬನ್ನಿ. ಆಗ ಅವನ ಕನಸುಗಳು ಏನಾಗುತ್ತವೋ ನೋಡೋಣ," ಎಂದು ಒಬ್ಬರಿಗೊಬ್ಬರು ಮಾತಾಡಿಕೊಂಡರು. ರೂಬೇನನು ಈ ಮಾತನ್ನು ಕೇಳಿಸಿಕೊಂಡು, ಅವನನ್ನು ಅವರ ಕೈಯಿಂದ ತಪ್ಪಿಸುವ ಉದ್ದೇಶದಿಂದ, "ನಾವು ಅವನ ಪ್ರಾಣ ತೆಗೆಯಬೇಕಾಗಿಲ್ಲ , ರಕ್ತಪಾತ ಕೂಡದು.  ಕಾಡಿನಲ್ಲಿರುವ ಈ ಬಾವಿ ಒಂದರಲ್ಲಿ ಹಾಕಿ ಬಿಡಿ, ಅವನ ಮೇಲೆ ಕೈ ಹಾಕಬೇಡಿ," ಎಂದು ಅವರಿಗೆ ಹೇಳಿದ. ಅವನನ್ನು ಅವರಿಂದ ತಪ್ಪಿಸಿ ತಂದೆಗೆ ಮತ್ತೆ ಒಪ್ಪಿಸಬೇಕೆಂಬ ಗುರಿ ರೂಬೇನನದಾಗಿತ್ತು.

ಜೋಸೆಫನು ತನ್ನ ಅಣ್ಣಂದಿರ ಹತ್ತಿರಕ್ಕೆ ಬಂದಾಗ ಅವರು ಅವನ ಮೇಲಿದ್ದ ನಿಲುವಂಗಿಯನ್ನು ತೆಗೆದುಬಿಟ್ಟರು. ಅವನನ್ನು ಹಿಡಿದು ಬಾವಿಯೊಳಗೆ ಹಾಕಿದರು. ಆ ಬಾವಿ ನೀರಿಲ್ಲದೆ ಬರಿದಾಗಿತ್ತು. ತರುವಾಯ ಅವರು ಊಟಕ್ಕೆ ಕುಳಿತುಕೊಂಡರು. ಅಷ್ಟರಲ್ಲಿ, ಇಷ್ಮಾಯೇಲರ ಗುಂಪೊಂದು ಗಿಲ್ಯಾದಿನಿಂದ ಬರುವುದು ಅವರ ಕಣ್ಣಿಗೆ ಕಾಣಿಸಿತು. ಇವರು ತಮ್ಮ ಒಂಟೆಗಳ ಮೇಲೆ ಪರಿಮಳ ಪದಾರ್ಥ, ಸುಗಂದ ತೈಲ, ರಸಗಂದ ಇವುಗಳನ್ನು ಹೇರಿಕೊಂಡು, ಈಜಿಪ್ಟಿಗೆ ಪ್ರಯಾಣಮಾಡುತ್ತಿದ್ದರು. ಆಗ ಯೆಹೂದನು ತನ್ನ ಅಣ್ಣತಮ್ಮಂದಿರಿಗೆ, "ನಾವು ನಮ್ಮ ತಮ್ಮನನ್ನು ಕೊಂದು ಆ ಕೊಲೆಯನ್ನು ಮರೆ ಮಾಡಿದರೆ ಪ್ರಯೋಜನವೇನು? ಅವನನ್ನು ಆ ಇಷ್ಮಾಯೇಲರಿಗೆ ಮಾರಿಬಿಡೋಣ, ಬನ್ನಿ; ನಾವು ಅವನ ಮೇಲೆ ಕೈ ಹಾಕಬಾರದು, ಅವನು ನಮ್ಮ ತಮ್ಮನಲ್ಲವೆ?" ರಕ್ತ ಸಂಬಂಧಿಯಲ್ಲವೆ?" ಎಂದು ಹೇಳಿದ. ಅವನ ಆ ಮಾತಿಗೆ ಅಣ್ಣ ತಮ್ಮಂದಿರು ಒಪ್ಪಿದರು. ಅಷ್ಟರಲ್ಲಿ, ಮಿದ್ಯಾನಿನ ವರ್ತಕರು ಹಾದು ಹೋಗುತ್ತಿದ್ದರು. ಅವರು ಜೋಸೆಫನನ್ನು ಬಾವಿಯೊಳಗಿಂದ ಎತ್ತಿ ಈ ಇಷ್ಮಾಯೇಲರಿಗೆ ಇಪ್ಪತ್ತು ಬೆಳ್ಳಿನಾಣ್ಯಗಳಿಗೆ ಮಾರಿ ಬಿಟ್ಟರು. ಇವರು ಅವನನ್ನು ಈಜಿಪ್ಟ್ ದೇಶಕ್ಕೆ ತೆಗೆದುಕೊಂಡು ಹೋದರು.

ಕೀರ್ತನೆ: 105:16-17, 18-19, 20-21
ಶ್ಲೋಕ: ನೆನೆಯಿರಿ ಆತನ ಅದ್ಬುತಗಳನು, ಮಹತ್ಕಾರ್ಯಗಳನು

ಶುಭಸಂದೇಶ: ಮತ್ತಾಯ 21:33-43, 45-46

ಯೇಸುಸ್ವಾಮಿ ಮುಖ್ಯ ಯಾಜಕರಿಗೂ ಪ್ರಜಾ ಪ್ರಮುಖರಿಗೂ ಈ ಸಾಮತಿಯನ್ನು ಹೇಳಿದರು: ಒಬ್ಬ ಯಜಮಾನ ಒಂದು ದ್ರಾಕ್ಷಿತೋಟ ಮಾಡಿಸಿದ. ಅದರ ಸುತ್ತ ಬೇಲಿಯನ್ನು ಹಾಕಿಸಿದ. ದ್ರಾಕ್ಷಾರಸವನ್ನು ತೆಗೆಯಲು ಆಲೆಯನ್ನು ಹೂಡಿಸಿ ಕಾವಲಿಗಾಗಿ ಅಟ್ಟಣೆಯನ್ನು ಕಟ್ಟಿಸಿದ. ಅನಂತರ ಅದನ್ನು ಗೇಣಿದಾರರಿಗೆ ವಹಿಸಿ ಹೊರನಾಡಿಗೆ ಹೊರಟುಹೋದ. ಫಲಕೊಡುವ ಕಾಲ ಹತ್ತಿರವಾದಾಗ, ತನಗೆ ಬರಬೇಕಾದ ಪಾಲನ್ನು ತರುವುದಕ್ಕಾಗಿ ಆಳುಗಳನ್ನು ಗೇಣಿದಾರರ ಬಳಿಗೆ ಕಳುಹಿಸಿದ. ಇವರು ಆ ಆಳುಗಳ ಮೇಲೆ ಬಿದ್ದು ಒಬ್ಬನನ್ನು ಬಡಿದರು, ಇನ್ನೊಬ್ಬನನ್ನು ಕಡಿದರು, ಮತ್ತೊಬ್ಬನ ಮೇಲೆ ಕಲ್ಲುತೂರಿದರು.  ತೋಟದ ಯಜಮಾನ ಮೊದಲಿಗಿಂತಲೂ ಹೆಚ್ಚು ಆಳುಗಳನ್ನು ಕಳುಹಿಸಿದ. ಅವರಿಗೂ ಅದೇ ಗತಿ ಆಯಿತು. ಕಟ್ಟಕಡೆಗೆ ಯಜಮಾನ, "ನನ್ನ ಮಗನಿಗೆ ಇವರು ಮರ್ಯಾದೆ ಕೊಟ್ಟೇಕೊಡುವರು' ಎಂದುಕೊಂಡು ತನ್ನ ಮಗನನ್ನೇ ಕಳುಹಿಸಿದ. ಆದರೆ ಗೇಣಿದಾರರು ಮಗನನ್ನು ಕಂಡೊಡನೇ, "ಈ ತೋಟಕ್ಕೆ ಇವನೇ ಉತ್ತರಾಧಿಕಾರಿ; ಬನ್ನಿ, ಇವನನ್ನು ಮುಗಿಸಿ ಬಿಡೋಣ. ಇವನಿಗೆ ಬರುವ ಸೊತ್ತನ್ನು ನಮ್ಮದಾಗಿಸಿಕೊಳ್ಳೋಣ," ಎಂದು ತಮ್ಮ ತಮ್ಮಲ್ಲೇ ಒಳಸಂಚು ಮಾಡಿಕೊಂಡರು. ಅಂತೆಯೇ ಅವನನ್ನು ಹಿಡಿದು, ತೋಟದಿಂದ ಹೊರಕ್ಕೆ ದಬ್ಬಿಕೊಂಡು ಹೋಗಿ ಕೊಂದು ಹಾಕಿದರು. . "ಈಗ ನೀವೇ ಹೇಳಿ; ತೋಟದ ಯಜಮಾನ ಬಂದಾಗ ಆಗೇಣಿದಾರರಿಗೆ ಏನು ಮಾಡುವನು?" ಎಂದು ಯೇಸು ಕೇಳಿದರು. "ಆ ಕೇಡಿಗರನ್ನು ಕ್ರೂರವಾಗಿ ಸಂಹರಿಸುವನು. ತರುವಾಯ ಕಾಲಕಾಲಕ್ಕೆ ಸರಿಯಾಗಿ ಪಾಲನ್ನು ಸಲ್ಲಿಸುವ ಬೇರೆಯವರಿಗೆ ತೋಟವನ್ನು ಗೇಣಿಗೆ ಕೊಡುವನು," ಎಂದು ಅಲ್ಲಿದ್ದವರು ಉತ್ತರಕೊಟ್ಟರು. ಬಳಿಕ ಯೇಸು ಇಂತೆಂದರು; "ಮನೆ ಕಟ್ಟುವವರು ಬೇಡವೆಂದು ಬಿಸಾಡಿದ ಆ ಕಲ್ಲೇ ಪ್ರಮುಖ ಮೂಲೆಗಲ್ಲಾಯಿತು ಸರ್ವೇಶ್ವರನಿಂದಲೇ ಆದ ಈ ಕಾರ್ಯ ನಮ್ಮ ಕಣ್ಣಿಗೆ ಅದೆಂಥ ಆಶ್ಚರ್ಯ!" ಎಂಬ ವಾಕ್ಯವನ್ನು ನೀವು ಪವಿತ್ರ ಗ್ರಂಥದಲ್ಲಿ ಓದಿಲ್ಲವೆ? ಆದುದರಿಂದ ನಾನು ನಿಮಗೆ ಹೇಳುತ್ತೇನೆ, "ದೇವರ ಸಾಮ್ರಾಜ್ಯವನ್ನು ನಿಮ್ಮಿಂದ ಕಿತ್ತುಕೊಂಡು ತಕ್ಕ ಫಲಕೊಡುವ ಜನತೆಗೆ ನೀಡಲಾಗುವುದು." ಮುಖ್ಯ ಯಾಜಕರೂ ಫರಿಸಾಯರೂ ಸ್ವಾಮಿ ಹೇಳಿದ ಸಾಮತಿಗಳನ್ನು ಕೇಳಿ, 'ಇವನು ನಮ್ಮನ್ನು ಕುರಿತೇ ಹೀಗೆ ಮಾತನಾಡುತ್ತಿದ್ದಾನೆ," ಎಂದು ಅರ್ಥ ಮಾಡಿಕೊಂಡರು. ಯೇಸುವನ್ನು ಹಿಡಿದು ಬಂಧಿಸಲು ಯತ್ನಿಸಿದರು. ಆದರೆ ಜನಸಮೂಹಕ್ಕೆ ಭಯಪಟ್ಟರು. ಏಕೆಂದರೆ ಜನರು ಯೇಸುವನ್ನು ಪ್ರವಾದಿ ಎಂದು ಸನ್ಮಾನಿಸುತ್ತಿದ್ದರು.

ಮನಸಿಗೊಂದಿಷ್ಟು : ಮನುಷ್ಯರ ಮೇಲೆ ದೇವರ ನಂಬಿಕೆ, ಸಹನೆ ಹಾಗೂ ನಂತರ ಕೋಪವನ್ನು ಇಂದಿನ ಶುಭಸಂದೇಶದಲ್ಲಿ ನಾವು ಕಾಣಬಹುದು. ದೇವರು ನಂಬಿಕೆಯಿಂದ ಈ ಬದುಕೆಂಬ ತೋಟವನ್ನು ಕೊಟ್ಟಿದ್ದಾರೆ. ನಮ್ಮೆಲ್ಲಾ ಪಾಪಗಳ ನಡುವೆಯೂ ಸಹನೆಯಿಂದ ಯೇಸು ಕ್ರಿಸ್ತರನ್ನೇ ನಮಗೆ ನೀಡಿದ್ದರೂ ನಾವು ಅವರ ವಿರುದ್ಧವಾಗಿ ನಡೆಯುತ್ತಿದ್ದೇವೆ. ಇನ್ನು ದಂಡನೆಯೊಂದೇ ಮಾರ್ಗ ಎಂಬ ಸ್ಥಿತಿಗೆ ನಮ್ಮನ್ನು ನಾವೇ ತಂದುಕೊಳ್ಳಬಾರದು. ಅದೇ ದೇವರ ಆಸೆ ಕೂಡ.

ಪ್ರಶ್ನೆ : ನಮ್ಮ ಬದುಕಿನ ಅಡಿಪಾಯ ಯಾವುದು? ದೈವ ನಂಬಿಕೆಯೇ? ಲೌಕಿಕ ಗಳಿಕೆಯೇ?

21.03.2019 - ಸರ್ವೇಶ್ವರನಲ್ಲಿ ಭರವಸೆಯಿಟ್ಟವನಾದರೋ ಧನ್ಯ!

ಮೊದಲನೇ ವಾಚನ: ಯೆರೆಮೀಯ 17:5-10

ಇವು ಸರ್ವೇಶ್ವರನ ಮಾತುಗಳು: "ಮಾನವ ಮಾತ್ರದವರಲ್ಲಿ ಭರವಸೆಯಿಟ್ಟು, ನರ ಜನ್ಮದವರನ್ನೇ ತನ್ನ ಭುಜಬಲವೆಂದುಕೊಂಡು ಸರ್ವೇಶ್ವರನನ್ನೇ ತೊರೆಯುವಂಥ ಹೃದಯವುಳ್ಳವನು ಶಾಪಗ್ರಸ್ತನು! ಇಂಥವನು ಅಡವಿಯಲ್ಲಿನ ಜಾಲಿಗಿಡಕ್ಕೆ ಸಮಾನನು. ಶುಭ ಸಂಭವಿಸಿದರೂ ಅದು ಅವನ ಕಣ್ಣಿಗೆ ಕಾಣದು. ಜನರಾರೂ ವಾಸಿಸದ ಚೌಳು ನೆಲದೊಳು, ಬೆಳೆಯಿಲ್ಲದ ಬೆಂಗಾಡಿನೊಳು ವಾಸಿಸುವವನ ಪರಿಸ್ಥಿತಿ ಅವನದು. ಸರ್ವೇಶ್ವರನಲ್ಲಿ ಭರವಸೆಯಿಟ್ಟವನಾದರೋ ಧನ್ಯ! ಅಂಥವನಿಗೆ ಸರ್ವೇಶ್ವರನಿಂದಲೇ ವಿಶ್ವಾಸ. ನೀರರುಗಿನಲೆ ನೆಡಲಾದ, ನದಿಯ ಬದಿಯಲೆ ಬೇರು ಹರಡಿದ ಬಿಸಿಲ ಧಗೆಗೆ ಹೆದರದ, ಬರಗಾಲದಲ್ಲೂ ನಿಶ್ಚಿಂತವಾದ ಹಸಿರೆಲೆ ಬಿಡುವ, ಫಲ ನೀಡುವ ಮರಕ್ಕೆ ಸಮಾನನು ಆತ. ಮಾನವ ಹೃದಯ ಎಲ್ಲಕ್ಕಿಂತ ವಂಚಕ, ಅದಕ್ಕೆ ಅಂಟಿದೆ ಗುಣವಾಗದ ರೋಗ; ಅದರ ಗುಟ್ಟನ್ನು ಅರಿತುಕೊಳ್ಳಬಲ್ಲವರೂ ಇಲ್ಲ. ಸರ್ವೇಶ್ವರನಾದ ನಾನು ಹೃದಯ ಪರಿಶೀಲಕ ಹೌದು, ಅಂತರಿಂದ್ರಿಯಗಳನ್ನು ಪರಿಶೋಧಿಸುವಾತ.

ಕೀರ್ತನೆ: 1:1-2, 3, 4, 6

ಶ್ಲೋಕ: ಪ್ರಭುವಿನಲ್ಲೇ ಭರವಸೆಯಿಟ್ಟು ನಡೆವಾತನು ಧನ್ಯನು

ಶುಭಸಂದೇಶ: ಲೂಕ 16:19-31

ಒಬ್ಬ ಧನಿಕನಿದ್ದ. ಬೆಲೆಬಾಳುವ ಉಡುಗೆ - ತೊಡುಗೆಗಳನ್ನೂ ನಯವಾದ ನಾರು ಮಡಿಗಳನ್ನೂ ಧರಿಸಿಕೊಂಡು ದಿನನಿತ್ಯವೂ ಸುಖ ಭೋಗಗಳಲ್ಲಿ ಮೈಮರೆಯುತ್ತಿದ್ದ. ಅವನ ಮನೆಯ ಬಾಗಿಲಲ್ಲೇ ಲಾಜರನೆಂಬ ಒಬ್ಬ ಭಿಕಾರಿ ಬಿದ್ದಿರುತ್ತಿದ್ದ. ಅವನ ಮೈಯೆಲ್ಲಾ ಹುಣ್ಣು. ಧನಿಕನು ತಿಂದು ಬಿಸಾಡಿದ ಎಂಜಲಿನಿಂದ ಹಸಿವು ನೀಗಿಸಿಕೊಳ್ಳಲು ಅವನು ಹಂಬಲಿಸುತ್ತಿದ್ದ. ಅಷ್ಟು ಮಾತ್ರವಲ್ಲ, ನಾಯಿಗಳು ಬಂದು ಅವನ ಹುಣ್ಣುಗಳನ್ನು ನೆಕ್ಕುತ್ತಿದ್ದವು. "ಒಂದು ದಿನ ಆ ಭಿಕಾರಿ ಸತ್ತುಹೋದ. ದೇವದೂತರು ಅವನನ್ನು ತೆಗೆದುಕೊಂಡು ಹೋಗಿ ಸ್ವರ್ಗ ಸೌಭಾಗ್ಯದಲ್ಲಿದ್ದ ಅಬ್ರಹಾಮನ ಪಕ್ಕದಲ್ಲೇ ಕೂರಿಸಿದರು. ಧನಿಕನು ಕೂಡ ಸತ್ತುಹೋದ, ಅವನ ಶವಸಂಸ್ಕಾರವೂ ಮುಗಿಯಿತು, ಪಾತಾಳದಲ್ಲಿ ಯಾತನೆಪಡುತ್ತಾ ಅವನು ಕಣ್ಣೆತ್ತಿ ನೋಡಿದಾಗ, ದೂರದಲ್ಲಿ ಅಬ್ರಹಾಮನನ್ನೂ ಅವನ ಪಕ್ಕದಲ್ಲೇ ಕುಳಿತಿದ್ದ ಲಾಜರನನ್ನೂ ಕಂಡ. "ಓ ಪಿತಮಹಾ ಅಬ್ರಹಾಮ ಅಬ್ರಹಾಮ, ನನ್ನ ಮೇಲೆ ಕನಿಕರವಿಡು. ಈ ಅಗ್ನಿಜ್ವಾಲೆಯಲ್ಲಿ ಬಾಧೆ ಪಡುತ್ತಿದ್ದೇನೆ; ಲಾಜರನು ತನ್ನ ತುದಿ ಬೆರಳನ್ನು ತಣ್ಣೀರಿನಲ್ಲಿ ಅದ್ದಿ, ನನ್ನ ನಾಲಗೆಗೆ ತಂಪನ್ನುಂಟು ಮಾಡುವಂತೆ ಅವನನ್ನು ಇಲ್ಲಿಗೆ ಕಳುಹಿಸಿಕೊಡು" ಎಂದು ದನಿಯೆತ್ತಿ ಮೊರೆಯಿಟ್ಟ. ಅದಕ್ಕೆ ಅಬ್ರಹಾಮನು, "ಮಗನೇ, ಜೀವಮಾನದಲ್ಲಿ ಬೇಕಾದಷ್ಟು ಸುಖಸಂಪತ್ತನ್ನು ನೀನು ಅನುಭವಿಸಿದೆ;  ಲಾಜರನಾದರೋ ದುಃಖ ದಾರಿದ್ರ್ಯವನ್ನು ಅನುಭವಿಸಿದ ಎಂಬುದನ್ನು ನೆನಪಿಗೆ ತಂದುಕೊ. ಆದರೆ ಈಗ ಅವನು ಇಲ್ಲಿ ಸುಖಪಡುತ್ತಿದ್ದಾನೆ; ನೀನು ಅಲ್ಲಿ ಸಂಕಟಪಡುತ್ತಿರುವೆ. ಅಷ್ಟು ಮಾತ್ರವಲ್ಲ, ನಮಗೂ ನಿಮಗೂ ನಡುವೆ ಅಗಾಧ ಪ್ರಪಾತವು ಚಾಚಿದೆ. ಆದಕಾರಣ ಈ ಕಡೆಯಿಂದ ನಿಮ್ಮ ಬಳಿಗೆ ಬರಬೇಕೆಂದಿದ್ದರೂ ಬರಲಾಗದು; ಆ ಕಡೆಯಿಂದ ನಮ್ಮ ಬಳಿಗೆ ದಾಟಿ ಬರಲೂ ಸಾಧ್ಯವಿಲ್ಲ." ಎಂದ. ಆಗ ಆ ಧನಿಕ, "ಪಿತಮಹ ಅಬ್ರಹಾಮ, ಲಾಜರನನ್ನು ನನ್ನ ತಂದೆಯ ಮನೆಗಾದರೂ ಕಳುಹಿಸು. ನನಗೆ ಐವರು ಸೋದರರಿದ್ದಾರೆ; ಅವರೂ ಈ ಯಾತನಾ ಸ್ಥಳಕ್ಕೆ ಬಾರದಂತೆ ಇವನು ಹೋಗಿ ಎಚ್ಚರಿಕೆ ಕೊಡಲಿ," ಎಂದು ಬೇಡಿಕೊಂಡ ಅದಕ್ಕೆ ಅಬ್ರಹಾಮನು "ಅವನಿಗೆ ಎಚ್ಚರಿಕೆ ಕೊಡಲು ಮೋಶೆ ಮತ್ತು ಪ್ರವಾದಿಗಳ ಗ್ರಂಥಗಳಿವೆ. ಅವುಗಳಿಗೆ ಕಿವಿಗೊಡಲಿ," ಎಂದು ಉತ್ತರಕೊಟ್ಟ. "ಇಲ್ಲ, ಪಿತಾಮಹ ಅಬ್ರಹಾಮ, ಸತ್ತವರ ಕಡೆಯಿಂದ ಒಬ್ಬನು ಅವರ ಬಳಿಗೆ ಹೋದರೆ ಅವರು ಪಾಪಕ್ಕೆ ವಿಮುಖರಾಗುವರು," ಎಂದು ಧನಿಕನು ಮತ್ತೆ ಕೇಳಿಕೊಂಡ. ಅದಕ್ಕೆ ಅಬ್ರಹಾಮನು, "ಮೋಶೆಗೂ ಪ್ರವಾದಿಗಳಿಗೂ ಅವರು ಕಿವಿಗೊಡದಿದ್ದರೆ. ಸತ್ತವರು ಜೀವಂತನಾಗಿ ಎದ್ದು ಬಂದರೂ ಅವರು ನಂಬುವುದಿಲ್ಲ," ಎಂದ."

ಮನಸಿಗೊಂದಿಷ್ಟು : ಚಿಂತಕರ ಪ್ರಕಾರ ಇಂದಿನ ಶುಭಸಂದೇಶದಲ್ಲಿ ಆ ಧನಿಕ ನರಕಕ್ಕೆ ಹೋಗಲು ಕಾರಣ ಅವನು ಮಾಡಿದ ಕ್ರಿಯೆಗಳಿಂದಲ್ಲ. ಬದಲಾಗಿ ಮಾಡದೆ ಹೋದ ಕಾರ್ಯಕ್ಕೆ. ತನ್ನ ಮನೆಯ ಮುಂದೆಯೇ  ಇದ್ದ ಭಿಕಾರಿಯ ಬಗ್ಗೆ ತೋರದ ಕರುಣೆ ಆತನನ್ನು ನರಕಕ್ಕೆ ತಳ್ಳಿತು. ನಮ್ಮೆಲ್ಲಾ ಧಾರ್ಮಿಕ ಕಾರ್ಯ, ಜಪ ,ತಪ, ಆಚರಣೆಯ ನಡುವೆಯೂ ನಮ್ಮಲ್ಲಿ ಪರರ ನೋವಿಗೆ ಸ್ಪಂದಿಸದ ಹೃದಯವಿಲ್ಲದಿದ್ದರೆ ವ್ಯರ್ಥವೇ. ಶುಭ ಸಂದೇಶದ ಮಾತುಗಳಿಗೆ ಗಮನ ಕೊಡದಿದ್ದರೆ ಎಚ್ಚರಿಕೆ ಇಲ್ಲದ ದಂಡನೆ ನಮಗೆ ಕಾದಿದೆ.

ಪ್ರಶ್ನೆ : ನಮ್ಮ ನಡುವಿನ ಲಾಜರರ ಬಗ್ಗೆ ನಮ್ಮ ಧೋರಣೆ ಎಂಥದ್ದು?


ತಪಸ್ಸು ಕಾಲದಲ್ಲಿನ ಇಲ್ಲಿಯವರೆಗಿನ ಪ್ರಶ್ನೆಗಳು 

 -   ತಪಸ್ಸು ಕಾಲದಲ್ಲಿ ನಮ್ಮ ಅಧ್ಯಾತ್ಮಿಕ ಗುರಿಗಳೇನು?

 -  ಶಿಲುಬೆ ಹೊತ್ತು ಹಿಂಬಾಲಿಸಲು ಸಿದ್ಧವಿದ್ದೇವೆಯೇ

 -  ದೇವರ ಮುಂದೆ ನಾವು ತೋರಬಹುದಾದ ಆಸ್ತಿಗಳಾವುವು

 -  ನಮಗೆ  ದೈವೀಕ ವೈದ್ಯನ ಅವಶ್ಯಕತೆಯಿದೆ ಎಂಬ ಅರಿವು ನಮಗಿದೆಯೇ?

 -  ನಾವಿಂದು ಯಾವುದೆಲ್ಲವುಗಳಿಂದ ಜೀವಿಸುತ್ತಿದ್ದೇವೆ?

 -  ನಮ್ಮ ಜೀವನದಲ್ಲಿ ಹಸಿದವರಿಗೆ ನಾವಾಗೇ ಹೋಗಿ ಊಟವಿತ್ತ ಉದಾಹರಣೆಗಳೆಷ್ಟು

 -  ನಮ್ಮ ಪ್ರಾರ್ಥನೆಯಲ್ಲಿ ನಿರರ್ಥಕ ಪದಗಳೆಷ್ಟುಸ್ವಾರ್ಥ ಬೇಡಿಕೆಗಳೆಷ್ಟು?

 -  ನಮ್ಮ ಹೃದಯವೂ ನೆನೆವೆ ನಗರದಂತಾಗಲು ಸಾಧ್ಯವಿಲ್ಲವೇ?

 -  ನಮಗಾಗಿ ನಾವು ಏನು ಅಪೇಕ್ಷಿಸುತ್ತೇವೆಯೋ ಅದನ್ನು ಇತರರಿಗೂ ಬಯಸುತ್ತಿದ್ದೇವೆಯೇ?

 -  ನಾವು ಮತ್ತೊಬ್ಬರನ್ನು ತುಚ್ಛೀಕರಿಸಿದ ಸಂದರ್ಭಗಳ ಲೆಕ್ಕ ನಮ್ಮಲ್ಲಿದೆಯೇ?   

-ನಾವು ಯೇಸುವಿಗೆ ಸ್ವಂತ ಜನರಾಗಿದ್ದೇವೆಯೇ ಅಥವಾ ಇನ್ನೂ ಅನ್ಯರಾಗೇ ಉಳಿದಿದ್ದೇವೆಯೇ?

-ಯೇಸುವಿನ ಈ ರೂಪಾಂತರದ ಘಟನೆ ನಮ್ಮೊಳಗಿನ ರೂಪಾಂತರಕ್ಕೆ ಸ್ಪೂರ್ತಿಯಾಗಬಲ್ಲದೇ?


’ದಾಸನಾಗಿರು’ ಎಂಬ ಯೇಸುವಿನ ವಾಕ್ಯಕ್ಕೆ ನಾವೆಷ್ಟು ಬದ್ಧ?

20.03.2019 - "ಪ್ರಥಮನಾಗಿರಲು ಆಶಿಸುವವನು ನಿಮ್ಮ ದಾಸನಾಗಿರಲಿ"

ಮೊದಲನೇ ವಾಚನ: ಯೆರೆಮೀಯ 18:18-20

ಆಗ ಜನರು, "ಬನ್ನಿ, ಈ ಯೆರೆಮೀಯನ ವಿರುದ್ಧ ಒಳಸಂಚು ಮಾಡೋಣ. ಧರ್ಮೋಪದೇಶಕ್ಕೆ ಯಾಜಕರಿದ್ದಾರೆ. ಮಂತ್ರಾಲೋಚನೆಗೆ ಜ್ಞಾನಿಗಳಿದ್ದಾರೆ. ದೈವೋಕ್ತಿಗೆ ಪ್ರವಾದಿಯ ಕೊರತೆ ಎಂದಿಗೂ ಇಲ್ಲ. ಬನ್ನಿ, ಇವನ ಬಾಯಿ ಬಡಿಯೋಣ. ಇವನ ಯಾವ ಮಾತಿಗೂ ನಾವು ಕಿವಿಗೊಡಬೇಕಾಗಿಲ್ಲ," ಎಂದುಕೊಂಡರು. ಯೆರೆಮೀಯ: "ಸರ್ವೇಶ್ವರಾ, ನನ್ನ ಕಡೆಗೆ ಕಿವಿಗೊಡಿ. ನನ್ನೊಡನೆ ವಾದಿಸುವವರ ಮಾತನ್ನು ಗಮನಿಸಿ ನೋಡಿ. ಮಾಡಿದ ಮೇಲಿಗೆ ಕೇಡಿನ ಪ್ರತಿಫಲವೆ? ನನ್ನ ಪ್ರಾಣ ಹಿಡಿಯಲು ಗುಂಡಿಯನ್ನು ತೋಡಿದ್ದಾರೆ. ಅವರ ಮೇಲೆ ನಿಮಗಿದ್ದ ಕೋಪಾವೇಶವನ್ನು ಶಮನಗೊಳಿಸಲು ನಿಮ್ಮ ಮುಂದೆ ನಿಂತು ನಾನು ವಿನಂತಿಸಿದ್ದನ್ನು ನೆನಪಿಗೆ ತಂದುಕೊಳ್ಳಿ.


ಕೀರ್ತನೆ: 31:5-6, 14, 15-16

ಶ್ಲೋಕ: ಪ್ರಭೂ, ಕಾಪಾಡಲಿ ಎನ್ನನು ನಿನ್ನಂತ ಪ್ರೇಮವು

ಶುಭಸಂದೇಶ: ಮತ್ತಾಯ 20:17-28


ಯೇಸುಸ್ವಾಮಿ ಜೆರುಸಲೇಮಿನತ್ತ ಹೋಗುವಾಗ ದಾರಿಯಲ್ಲಿ, ತಮ್ಮ ಹನ್ನೆರಡು ಮಂದಿ ಶಿಷ್ಯರನ್ನು ಪ್ರತ್ಯೇಕವಾಗಿ ಕರೆದು, "ನೋಡಿ, ನಾವು ಜೆರುಸಲೇಮಿಗೆ ಹೋಗುತ್ತಿದ್ದೇವೆ. ಅಲ್ಲಿ ನರಪುತ್ರನನ್ನು ಮುಖ್ಯ ಯಾಜಕರ ಮತ್ತು ಧರ್ಮಶಾಸ್ತ್ರಿಗಳ ವಶಕ್ಕೆ ಒಪ್ಪಿಸುವರು ಆತನು ಮರಣ ದಂಡನೆಗೆ ಅರ್ಹನೆಂದು ಅವರು ತೀರ್ಮಾನಿಸಿ ಪರಕೀಯರ ಕೈಗೊಪ್ಪಿಸುವರು. ಇವರು ಆತನನ್ನು ಪರಿಹಾಸ್ಯ ಮಾಡುವರು, ಕೊರಡೆಗಳಿಂದ ಹೊಡೆಯುವರು. ಮತ್ತು ಶಿಲುಬೆಗೇರಿಸುವರು. ಅತನಾದರೋ ಮೂರನೇ ದಿನ ಪುನರುತ್ದಾನ ಹೊಂದುವನು," ಎಂದರು. ಆಗ ಜೆಬೆದಾಯನ ಮಕ್ಕಳ ತಾಯಿ ತನ್ನ ಪುತ್ರರ ಸಮೇತ ಯೇಸುಸ್ವಾಮಿಯ ಬಳಿಗೆ ಬಂದಳು. "ತಮ್ಮಿಂದ ನನಗೊಂದು ಉಪಕಾರ ಆಗಬೇಕು," ಎಂದು ಯೇಸುಸ್ವಾಮಿಯ ಪಾದಕ್ಕೆರಗಿದಳು. "ನಿನ್ನ ಕೋರಿಕೆ ಏನು"? ಎಂದರು ಯೇಸು. ಅದಕ್ಕೆ ಅವಳು, "ತಮ್ಮ ಸಾಮ್ರಾಜ್ಯದಲ್ಲಿ, ನನ್ನ ಈ ಇಬ್ಬರು ಮಕ್ಕಳಲ್ಲಿ ಒಬ್ಬನು ತಮ್ಮ ಬಲಗಡೆಯಲ್ಲೂ ಇನ್ನೊಬ್ಬನು ತಮ್ಮ ಎಡಗಡೆಯಲ್ಲೂ ಆಸೀನರಾಗುವಂತೆ ಅಪ್ಪಣೆಯಾಗಬೇಕು," ಎಂದು ಕೋರಿದಳು. ಅದಕ್ಕೆ ಪ್ರತ್ಯುತ್ತರವಾಗಿ ಯೇಸು, "ನೀವು ಕೋರಿಕೊಂಡದ್ದು ಏನೆಂದು ನಿಮಗೇ ತಿಳಿಯದು. ನಾನು ಕುಡಿಯಬೇಕಾದ ಪಾತ್ರೆಯಿಂದ ಕುಡಿಯಲು ನಿಮ್ಮಿಂದ ಆದೀತೇ" ಎಂದು ಪ್ರಶ್ನಿಸಿದರು. "ಹೌದು ಆಗುತ್ತದೆ," ಎಂದು ಅವರು ಮರು ನುಡಿದರು. ಆಗ ಯೇಸು "ನನ್ನ ಪಾತ್ರೆಯಿಂದ ನೀವೇನೋ ಕುಡಿಯುವಿರಿ. ಆದರೆ ನನ್ನ ಬಲಗಡೆಯಲ್ಲಾಗಲೀ ಎಡಗಡೆಯಲ್ಲಾಗಲೀ ಆಸೀನರಾಗುವಂತೆ ಅನುಗ್ರಹಿಸುವುದು ನನ್ನದಲ್ಲ, ಅದು ಯಾರಿಗಾಗಿ ನನ್ನ ಪಿತನಿಂದ ಸಿದ್ಧ ಮಾಡಲಾಗಿದೆಯೋ ಅವರಿಗೇ ಸಿಗುವುದು." ಎಂದು ನುಡಿದರು. ಉಳಿದ ಹತ್ತು ಮಂದಿ ಶಿಷ್ಯರು ಇದನ್ನು ಕೇಳಿದಾಗ ಆ ಇಬ್ಬರು ಸಹೋದರರ ಮೇಲೆ ಸಿಟ್ಟುಗೊಂಡರು. ಯೇಸುವಾದರೋ, ಶಿಷ್ಯರೆಲ್ಲರನ್ನೂ ತಮ್ಮ ಬಳಿಗೆ ಕರೆದು, "ಲೋಕದ ಪ್ರಜಾಧಿಪತಿಗಳು ತಮ್ಮ ಪ್ರಜೆಗಳ ಮೇಲೆ ದರ್ಪದಿಂದ ದೊರೆತನ ಮಾಡುತ್ತಾರೆ; ಜನನಾಯಕರು ಎನ್ನಿಸಿಕೊಳ್ಳುವವರು ಜನರ ಮೇಲೆ ಅಧಿಕಾರ ಪ್ರದರ್ಶನ ಮಾಡುತ್ತಾರೆ. ಇದು ನಿಮಗೆ ಗೊತ್ತು. ನೀವು ಹಾಗಿರಬಾರದು. ನಿಮ್ಮಲ್ಲಿ ಶ್ರೇಷ್ಠನಾಗಿರಲು ಇಚ್ಛಿಸುವವನು ನಿಮಗೆ ಸೇವಕನಾಗಿರಲಿ. ಪ್ರಥಮನಾಗಿರಲು ಆಶಿಸುವವನು ನಿಮ್ಮ ದಾಸನಾಗಿರಲಿ. ಹಾಗೆಯೇ ನರಪುತ್ರನು  ಸೇವೆ ಸೇವೆ ಮಾಡಿಸಿಕೊಳ್ಳುವುದಕ್ಕೆ ಅಲ್ಲ, ಇತರರ ಸೇವೆ ಮಾಡುವುದಕ್ಕೂ ಸರ್ವರ ಉದ್ಧಾರಕ್ಕಾಗಿ ತನ್ನ ಪ್ರಾಣವನ್ನು ಈಡಾಗಿ ಕೊಡುವುದಕ್ಕೂ  ಬಂದಿದ್ದಾನೆ," ಎಂದು ಹೇಳಿದರು.

ಮನಸಿಗೊಂದಿಷ್ಟು : " ಎಲ್ಲರಿಗೂ ಸ್ವರ್ಗ ಬೇಕು, ಆದರೆ ಸಾಯಲು ಯಾರೂ ಸಿದ್ದರಿಲ್ಲ", ಎನ್ನುತ್ತಾನೆ ಚಿಂತಕನೊಬ್ಬ. ತನ್ನ ಮಕ್ಕಳಿಗೆ ಒಳಿತನ್ನು ಬಯಸುವ ಒಬ್ಬ ತಾಯಿಯ ಸಹಜ ಪ್ರೀತಿಯನ್ನು ಇಂದಿನ ಶುಭ ಸಂದೇಶದಲ್ಲಿ ಕಾಣುತ್ತೇವೆ. ಆದರೆ ಅದಕ್ಕೆ ಮೀರಿದ ಉದಾತ್ತವಾದ ಸಂದೇಶ ಕ್ರಿಸ್ತನದು. ಶ್ರೇಷ್ಠನಾಗ ಬಯಸುವವನು ಸೇವಕನಾಗಲಿ, ಪ್ರಥಮನು ದಾಸನಾಗಿರಲಿ ಎನ್ನುತ್ತಾರೆ ಯೇಸು. ಹೇಳುವುದು ಮಾತ್ರವಲ್ಲದೆ ತಾವೇ ಅದರಂತೆ ನಡೆದುಕೊಳ್ಳುತ್ತಿದ್ದಾರೆ. ಸೇವೆಗೆ, ನಮ್ರತೆಗೆ ನಮಗೆ ಇದಕ್ಕಿಂತ ಪ್ರೇರಣೆ ಬೇಕೆ?

ಪ್ರಶ್ನೆ :  ’ದಾಸನಾಗಿರು’ ಎಂಬ ಯೇಸುವಿನ ವಾಕ್ಯಕ್ಕೆ ನಾವೆಷ್ಟು ಬದ್ಧ?