ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

01.07.21 - "ಎದ್ದೇಳು, ನಿನ್ನ ಹಾಸಿಗೆಯನ್ನು ಎತ್ತಿಕೊಂಡು ಮನೆಗೆ ಹೋಗು"

ಮೊದಲನೇ ವಾಚನ: ಆದಿಕಾಂಡ 22:1-19


ಈ ಘಟನೆಗಳಾದ ಬಳಿಕ ದೇವರು ಅಬ್ರಹಾಮನನ್ನು ಪರೀಕ್ಷಿಸುವುದಕ್ಕೋಸ್ಕರ, “ಅಬ್ರಹಾಮನೇ,” ಎಂದು ಕರೆದರು. ಅವನು “ಇಗೋ, ಸಿದ್ಧನಿದ್ದೇನೆ” ಎಂದನು. ಆಗ ದೇವರು, “ನಿನಗೆ ಒಬ್ಬನೇ ಒಬ್ಬನೂ ಮುದ್ದು ಮಗನೂ ಆದ ಇಸಾಕನನ್ನು ಕರೆದುಕೊಂಡು ಮೊರೀಯ ಪ್ರಾಂತಕ್ಕೆ ಹೋಗು. ಅಲ್ಲಿ ನಾನು ತೋರಿಸುವ ಬೆಟ್ಟದ ಮೇಲೆ ಅವನನ್ನು ದಹನ ಬಲಿಯಾಗಿ ಅರ್ಪಿಸು” ಎಂದರು. ಅಬ್ರಹಾಮನು ಮುಂಜಾನೆಯೇ ಎದ್ದು ತನ್ನ ಹೇಸರಗತ್ತೆಗೆ ತಡಿಹಾಕಿಸಿ ಹೋಮಬಲಿಗೆ ಬೇಕಾದ ಕಟ್ಟಿಗೆಯನ್ನು ಸಿಗಿದು ಸಿದ್ಧಮಾಡಿಕೊಂಡು ಸೇವಕರಿಬ್ಬರನ್ನು ಹಾಗೂ ತನ್ನ ಮಗ ಇಸಾಕನನ್ನು ಕರೆದುಕೊಂಡು ದೇವರು ಹೇಳಿದ ಸ್ಥಳಕ್ಕೆ ಹೊರಟನು. ಮೂರನೆಯ ದಿನ ಅಬ್ರಹಾಮನು ಕಣ್ಣೆತ್ತಿ ನೋಡಿದಾಗ ದೂರದಲ್ಲಿ ಆ ಸ್ಥಳ ಕಾಣಿಸಿತು. ಅವನು ತನ್ನ ಸೇವಕರಿಗೆ, “ನೀವು ಇಲ್ಲೇ ಕತ್ತೆಯನ್ನು ನೋಡಿಕೊಂಡಿರಿ; ನಾನೂ ನನ್ನ ಮಗನೂ ಅಲ್ಲಿಗೆ ಹೋಗಿ ದೇವಾರಾಧನೆ ಮಾಡಿಕೊಂಡು ಪುನಃ ಇಲ್ಲಿಗೆ ಬರುತ್ತೇವೆ,” ಎಂದು ಹೇಳಿದನು. ಅಬ್ರಹಾಮನು ದಹನಬಲಿಗೆ ಬೇಕಾದ ಕಟ್ಟಿಗೆಯನ್ನು ತನ್ನ ಮಗ ಇಸಾಕನ ಮೇಲೆ ಹೊರಿಸಿದನು; ಬೆಂಕಿಯನ್ನು ಹಾಗೂ ಕತ್ತಿಯನ್ನು ತನ್ನ ಕೈಯಲ್ಲೇ ತೆಗೆದುಕೊಂಡನು. ಇಬ್ಬರೂ ಅಲ್ಲಿಂದ ಮುಂದಕ್ಕೆ ಹೊರಟರು. ಹೋಗುತ್ತಾ ಇದ್ದಾಗ ಇಸಾಕನು ತಂದೆ ಅಬ್ರಹಾಮನನ್ನು, “ಅಪ್ಪಾ” ಎಂದು ಕರೆದ; “ಏನು ಮಗನೇ?” ಎಂದ ಅಬ್ರಹಾಮ. ಇಸಾಕನು, “ಬೆಂಕಿ-ಕಟ್ಟಿಗೆಯೇನೋ ಇವೆ; ಆದರೆ ದಹನಬಲಿಗೆ ಬೇಕಾದ ಕುರಿಮರಿ ಎಲ್ಲಿ?” ಎಂದು ಕೇಳಿದ. ಅದಕ್ಕೆ ಅಬ್ರಹಾಮನು, “ಬಲಿಗೆ ಬೇಕಾದ ಕುರಿಮರಿಯನ್ನು ದೇವರೇ ಒದಗಿಸುತ್ತಾರೆ, ಮಗನೇ,” ಎಂದು ಉತ್ತರಕೊಟ್ಟ. ಅವರಿಬ್ಬರೂ ಹಾಗೇ ಮುಂದಕ್ಕೆ ಸಾಗಿದರು. ದೇವರು ಹೇಳಿದ ಸ್ಥಳಕ್ಕೆ ಬಂದು ಸೇರಿದಾಗ ಅಬ್ರಹಾಮನು ಅಲ್ಲಿ ಒಂದು ಬಲಿಪೀಠವನ್ನು ಕಟ್ಟಿದ. ಕಟ್ಟಿಗೆಯನ್ನು ಅದರ ಮೇಲೆ ಒಟ್ಟಿ, ಮಗ ಇಸಾಕನ ಕೈಕಾಲುಗಳನ್ನು ಬಿಗಿದು, ಕಟ್ಟಿಗೆಗಳ ಮೇಲೆ ಅವನನ್ನು ಕೆಡವಿದ. ಬಳಿಕ  ಮಗನನ್ನು  ವಧಿಸಲು  ಕೈಚಾಚಿ  ಕತ್ತಿಯನ್ನು  ಎತ್ತಿದ.   ಆದರೆ  ಸರ್ವೇಶ್ವರನ  ದೂತನು  ಆಕಾಶದಿಂದ,  " ಅಬ್ರಹಾಮನೇ,  ಹೇ  ಅಬ್ರಹಾಮನೇ, " ಎಂದು  ಕರೆದನು.   ಅದಕ್ಕೆ  ಅಬ್ರಹಾಮನು,  " ಇಗೋ,  ಸಿದ್ದನಿದ್ದೇನೆ " ಎಂದ.   ದೂತನು  ಅವನಿಗೆ,  " ಹುಡುಗನ  ಮೇಲೆ  ಕೈಯೆತ್ತಬೇಡ,  ಅವನಿಗೆ  ಯಾವ  ಹಾನಿಯನ್ನೂ  ಮಾಡಬೇಡ,  ನೀನು  ನಿನ್ನ  ಒಬ್ಬನೇ  ಮಗನನ್ನು  ನನಗೆ  ಬಲಿಕೊಡಲು  ಹಿಂತೆಗೆಯಲಿಲ್ಲ,  ಎಂತಲೇ,  ನೀನು  ದೇವರಲ್ಲಿ  ಭಯಭಕ್ತಿಯುಳ್ಳವನೆಂದು  ಈಗ  ನನಗೆ  ಚೆನ್ನಾಗಿ ಗೊತ್ತಾಯಿತು, " ಎಂದು  ಹೇಳಿದನು.  ಅಬ್ರಹಾಮನು  ಕಣ್ಣೆತ್ತಿ  ನೋಡಿದ.   ತನ್ನ  ಹಿಂದುಗಡೆ  ಒಂದು  ಟಗರು  ಪೊದೆಯಲ್ಲಿ  ಕೊಂಬುಗಳಿಂದ  ಸಿಕ್ಕಿಕೊಂಡಿತ್ತು.   ಅವನು  ಹೋಗಿ  ಅದನ್ನು  ಹಿಡಿದು  ತಂದು  ತನ್ನ  ಮಗನಿಗೆ  ಬದಲಾಗಿ  ಅದನ್ನು  ದಹನಬಲಿಯನ್ನಾಗಿ  ಅರ್ಪಿಸಿದ.   ಆ  ಸ್ಥಳಕ್ಕೆ  " ಯೆಹೋವ  ಯೀರೆ " ಎಂದು  ಹೆಸರಿಟ್ಟ.   " ಬೆಟ್ಟದ  ಮೇಲೆ  ಸರ್ವೇಶ್ವರಸ್ವಾಮಿಯೇ  ಒದಗಿಸುತ್ತಾರೆ " ಎಂಬ  ಹೇಳಿಕೆ  ಇಂದಿಗೂ  ರೂಢಿಯಲ್ಲಿದೆ.   ಸರ್ವೇಶ್ವರಸ್ವಾಮಿಯ  ದೂತನು  ಆಕಾಶದಿಂದ  ಮತ್ತೊಮ್ಮೆ  ಅಬ್ರಹಾಮನನ್ನು  ಕರೆದು,  " ಸರ್ವೇಶ್ವರನ  ವಾಕ್ಯವನ್ನು  ಕೇಳು :   ನೀನು  ನಿನ್ನ  ಒಬ್ಬನೇ  ಮಗನನ್ನು  ಬಲಿಕೊಡಲು  ಹಿಂತೆಗೆಯದೆ  ಹೋದುದರಿಂದ  ನಾನು  ನಿನ್ನನ್ನು  ತಪ್ಪದೆ  ಆಶೀರ್ವದಿಸುತ್ತೇನೆ,  ನಿನ್ನ  ಸಂತತಿಯನ್ನು  ಹೆಚಿಸಿಯೇ  ಹೆಚ್ಚಿಸುತ್ತೇನೆ,  ಅದನ್ನು  ಆಕಾಶದ  ನಕ್ಷತ್ರಗಳಂತೆಯೂ  ಸಮುದ್ರತೀರದ  ಮರಳಿನಂತೆಯೂ  ಅಸಂಖ್ಯಾವಾಗಿ  ಮಾಡುತ್ತೇನೆ. ಅವರು  ಶತ್ರುಗಳ  ಪಟ್ಟಣಗಳನ್ನು  ಸ್ವಾಧೀನಪಡಿಸಿಕೊಳ್ಳುವರು. ನೀನು  ನನ್ನ  ಮಾತನ್ನು  ಕೇಳಿದ್ದರಿಂದ  ವಿಶ್ವದ  ಎಲ್ಲ  ರಾಷ್ಟ್ರಗಳಿಗೂ  ನಿನ್ನ  ಸಂತತಿಯ  ಮೂಲಕ  ಆಶೀರ್ವಾದವುಂಟಾಗುವುದು  ಎಂಬುದಾಗಿ  ಸರ್ವೇಶ್ವರನೇ  ಆಣೆಯಿಟ್ಟು  ಹೇಳಿದ್ದಾರೆ, " ಎಂದನು.    ತರುವಾಯ  ಅಬ್ರಹಾಮನು  ತನ್ನ  ಸೇವಕರ  ಬಳಿಗೆ  ಮರಳಿ  ಬಂದನು.   ಅವರೆಲ್ಲರೂ  ಜೊತೆಯಾಗಿ  ಬೇರ್ಷೆಬಕ್ಕೆ  ಹೋದರು.   ಅಲ್ಲೇ  ಅಬ್ರಹಾಮನು  ವಾಸಮಾಡುತ್ತಿದ್ದನು.

ಕೀರ್ತನೆ: 116:1-2, 3-4, 5-6, 8-9
ಶ್ಲೋಕ:  ನಡೆವೆನು ನಾನು ಪ್ರಭುವಿನ ಕಣ್ಮುOದೆ.  

ಶುಭಸಂದೇಶ: ಮತ್ತಾಯ 9:1-8

ಯೇಸುಸ್ವಾಮಿ ದೋಣಿ ಹತ್ತಿ ಮರಳಿ ಸರೋವರವನ್ನು ದಾಟಿ ತಮ್ಮ ಸ್ವಂತ ಊರಿಗೆ ಬಂದರು. ಆಗ ಜನರು ಒಬ್ಬ ಪಾಶ್ರ್ವವಾಯು ರೋಗಿಯನ್ನು ಹಾಸಿಗೆಯ ಸಮೇತ ಹೊತ್ತುಕೊಂಡು ಅವರ ಬಳಿಗೆ ತಂದರು. ಯೇಸು ಅವರ ವಿಶ್ವಾಸವನ್ನು ಮೆಚ್ಚಿ, ಆ ಪಾಶ್ರ್ವವಾಯು ರೋಗಿಗೆ, "ಮಗು ಧೈರ್ಯದಿಂದಿರು. ನಿನ್ನ ಪಾಪಗಳನ್ನು ಕ್ಷಮಿಸಲಾಗಿದೆ," ಎಂದರು ಆಗ ಅಲ್ಲಿದ್ದ ಧರ್ಮಶಾಸ್ತ್ರಿಗಳಲ್ಲಿ ಕೆಲವರು, "ಇವನು ದೇವದೂಷಣೆ ಮಾಡುತ್ತಿದ್ದಾನೆ," ಎಂದುಕೊಂಡರು. ಯೇಸು ಅವರ ಆಲೋಚನೆಗಳನ್ನು ಅರಿತುಕೊಂಡು, "ನೀವು ಮನಸ್ಸಿನಲ್ಲೇಕೆ ದುರಾಲೋಚನೆ ಮಾಡುತ್ತಿದ್ದೀರಿ? "ನಿನ್ನ ಪಾಪಗಳನ್ನು ಕ್ಷಮಿಸಲಾಗಿದೆ" ಎನ್ನುವುದು ಸುಲಭವೋ ಅಥವಾ ‘ಎದ್ದು ನಡೆ’ ಎನ್ನುವುದು ಸುಲಭವೋ? ಭೂಲೋಕದಲ್ಲಿ ಪಾಪಗಳನ್ನು ಕ್ಷಮಿಸಲು ನರಪುತ್ರನಿಗೆ ಅಧಿಕಾರ ಉಂಟೆಂದು ಈ ಮೂಲಕ ನಿಮಗೆ ಖಚಿತವಾಗಬೇಕು," ಎಂದು ಹೇಳಿ, ಆ ಪಾಶ್ರ್ವವಾಯು ರೋಗಿಯನ್ನು ನೋಡಿ, "ಎದ್ದೇಳು, ನಿನ್ನ ಹಾಸಿಗೆಯನ್ನು ಎತ್ತಿಕೊಂಡು ಮನೆಗೆ ಹೋಗು" ಎಂದರು. ಅದರಂತೆಯೇ, ಆ ರೋಗಿ ಎದ್ದು ಮನೆಗೆ ಹೊರಟುಹೋದನು. ಇದನ್ನು ಕಂಡ ಜನರು ತಲ್ಲಣಗೊಂಡರು. ಮಾನವನಿಗೆ ಇಂಥ ಅಧಿಕಾರ ಕೊಟ್ಟ ದೇವರನ್ನು ಕೊಂಡಾಡಿದರು.

30.06.21 - ಆಗ ಊರಿಗೆ ಊರೇ ಯೇಸುವನ್ನು ನೋಡಲು ಬಂದಿತು

ಮೊದಲನೇ ವಾಚನ: ಆದಿಕಾಂಡ 21:5, 8-20

ಇಸಾಕನು ಹುಟ್ಟಿದಾಗ ಅಬ್ರಹಾಮನಿಗೆ ನೂರು ವರ್ಷವಾಗಿತ್ತು. ಕ್ರಮೇಣ ಆ ಮಗು ಬೆಳೆದು ಹಾಲು ಕುಡಿಯುವುದನ್ನು ಬಿಟ್ಟಿತು. ಇಸಾಕನು ಮೊಲೆ ಬಿಟ್ಟ ಆ ದಿನದಂದು ಅಬ್ರಹಾಮನು ದೊಡ್ಡ ಔತಣವನ್ನು ಏರ್ಪಡಿಸಿದ್ದನು. ಈಜಿಪ್ಟಿನ ಹಾಗರಳಿಂದ ಅಬ್ರಹಾಮನಿಗೆ ಹುಟ್ಟಿದ ಹುಡುಗನು ತನ್ನ ಮಗ ಇಸಾಕನೊಡನೆ ನಕ್ಕುನಲಿದಾಡುವುದನ್ನು ಸಾರಳು ಕಂಡಳು. ಆಕೆ ಅಬ್ರಹಾಮನಿಗೆ, “ಈ ದಾಸಿಯನ್ನೂ ಅವಳ ಮಗನನ್ನೂ ಮನೆಯಿಂದ ಕಳುಹಿಸಿಬಿಡಿ. ದಾಸಿಯ ಮಗನು ನನ್ನ ಮಗನೊಂದಿಗೆ ಹಕ್ಕು ಬಾಧ್ಯಸ್ಥನಾಗಬಾರದು,” ಎಂದು ಹೇಳಿದಳು. ಈ ಮಾತನ್ನು ಕೇಳಿ ಅಬ್ರಹಾಮನಿಗೆ ಬಹು ದುಃಖವಾಯಿತು. ಕಾರಣ - ಆ ದಾಸಿಯ ಮಗನೂ ಅವನ ಸ್ವಂತ ಮಗನಾಗಿದ್ದನು. ಆದರೆ ದೇವರು, ಅಬ್ರಹಾಮನಿಗೆ, “ನಿನ್ನ ಮಗನ ಹಾಗೂ ದಾಸಿಯ ಬಗ್ಗೆ ನಿನಗೆ ಚಿಂತೆಬೇಡ; ಸಾರಳು ಹೇಳಿದಂತೆಯೇ ಮಾಡು, ಏಕೆಂದರೆ ಇಸಾಕನಿಂದ ಹುಟ್ಟುವವರೇ ನಿನ್ನ ಸಂತತಿ ಎನಿಸಿಕೊಳ್ಳುವರು. ಈ ದಾಸಿಯ ಮಗನು ನಿನ್ನಿಂದ ಹುಟ್ಟಿದವನಾದ್ದರಿಂದ ಅವನಿಂದಲೂ ಒಂದು ರಾಷ್ಟ್ರ ಉತ್ಪತ್ತಿಯಾಗುವಂತೆ ಮಾಡುತ್ತೇನೆ,” ಎಂದು ಹೇಳಿದರು. ಮಾರನೆಯ ದಿನ ಬೆಳಿಗ್ಗೆ ಅಬ್ರಹಾಮನು ಹಾಗರಳಿಗೆ ಬುತ್ತಿಯನ್ನೂ ನೀರಿನ ತಿತ್ತಿಯನ್ನೂ ಕೊಟ್ಟು, ಹೆಗಲ ಮೇಲೆ ಮಗುವನ್ನು ಕೂರಿಸಿ ಕಳುಹಿಸಿಬಿಟ್ಟನು. ಅವಳು ಹೊರಟು ಬೇರ್ಷೆಬದ ಕಾಡಿನಲ್ಲಿ ಅಲೆಯುತ್ತಿದ್ದಳು. ತಿತ್ತಿಯಲ್ಲಿದ್ದ ನೀರು ಮುಗಿದುಹೋಯಿತು. ಮಗು ಸಾಯುವುದನ್ನು ನಾನು ನೋಡಲಾರೆ ಎಂದುಕೊಂಡು, ಅವಳು ಆ ಮಗುವನ್ನು ಒಂದು ಗಿಡದ ನೆರಳಿನಲ್ಲಿ ಬಿಟ್ಟು ಒಂದು ಬಾಣವನ್ನೆಸೆಯುವಷ್ಟು ದೂರ ಹೋಗಿ ಕುಳಿತುಕೊಂಡು ಗಟ್ಟಿಯಾಗಿ ಅತ್ತಳು. ಇತ್ತ ಆ ಹುಡುಗನ ಕೂಗು ದೇವರಿಗೆ ಕೇಳಿಸಿತು. ದೇವದೂತನು ಆಕಾಶದಿಂದ ಹಾಗರಳನ್ನು ಕರೆದು, “ಹಾಗರಳೇ, ನಿನಗೇನು ಆಯಿತು? ಅಂಜಬೇಡ; ಆ ಹುಡುಗನು ಬಿದ್ದು ಇರುವ ಸ್ಥಳದಿಂದಲೇ ಅವನ ಕೂಗು ದೇವರನ್ನು ಮುಟ್ಟಿತು; ನೀನೆದ್ದು ಹೋಗಿ ಅವನನ್ನು ಎತ್ತಿಕೊ; ಅವನನ್ನು ಕೈ ಬಿಡಬೇಡ; ಅವನಿಂದ ಒಂದು ದೊಡ್ಡ ರಾಷ್ಟ್ರ ಉತ್ಪತ್ತಿಯಾಗುವಂತೆ ಮಾಡುತ್ತೇನೆ,” ಎಂದು ಹೇಳಿದನು. ಇದಲ್ಲದೆ ದೇವರು ಅವಳ ಕಣ್ಣನ್ನು ತೆರೆದರು; ನೀರಿನ ಬಾವಿಯೊಂದು ಅವಳಿಗೆ ಕಾಣಿಸಿತು; ತಿತ್ತಿಯಲ್ಲಿ ನೀರನ್ನು ತುಂಬಿಸಿಕೊಂಡು ಹೋಗಿ ಆ ಹುಡುಗನಿಗೆ ಕುಡಿಸಿದಳು. ಹುಡುಗನ ಸಂಗಡ ದೇವರಿದ್ದರು.

ಕೀರ್ತನೆ: 34:6-7, 9-10, 11-12
ಶ್ಲೋಕ: ನಿರ್ಗತಿಕನು ಮೊರೆಯಿಡಲು ಪ್ರಭು ಕಿವಿಗೊಟ್ಟನು. 

ಭಯಭಕುತಿಯುಳ್ಳವರ ಸುತ್ತಲು ಕಾವಲಿದ್ದು I
ಕಾಯುವನು ಪ್ರಭುವಿನ ದೂತನೆ ಬಂದಿಳಿದು II
ಸವಿದು ನೋಡು ಪ್ರಭುವಿನ ಮಾಧುರ್ಯವನು I
ಆತನನು ಆಶ್ರಯಿಸಿಕೊಂಡವನು ಧನ್ಯನು II

ದೇವಜನರೆ, ನಿಮಗಿರಲಿ ಪ್ರಭುವಿನ ಭಯಭಕುತಿ I
ಅಂಥವರಿಗಿರದು ಯಾವ ಕುಂದುಕೊರತೆಯ ಭೀತಿ II
ಯುವ ಕೇಸರಿಗೆ ಇರಬಹುದು ಹಸಿವು, ದಾಹ I
ಪ್ರಭುವನು ಅರಸುವವರಿಗಿರದು ಒಳಿತಿನ ಅಭಾವ II

ಬನ್ನಿ ಮಿತ್ರರೇ, ಆಲಿಸಿರೀ ಮಾತನು I
ಕಲಿಸುವೆನು ನಾ ನಿಮಗೆ ದೇವ ಭಯವನು II
ಎಲೆ ಮಾನವ, ಬಲುದಿನ ಬಾಳಲು ಬಯಸುವೆಯಾ? I
ಆಯುರಾರೋಗ್ಯ ಭಾಗ್ಯವನು ಆಶಿಸುವೆಯಾ? II

ಕಾದಿಡು ನಾಲಿಗೆಯನು ಕೇಡನು ಆಡದಂತೆ I
ಬಿಗಿಯಿಡು ತುಟಿಯನ್ನು ಕುಟಿಲವನು ನುಡಿಯದಂತೆ II

ಶುಭಸಂದೇಶ: ಮತ್ತಾಯ 8:28-34


ಯೇಸುಸ್ವಾಮಿ ಗಲಿಲೇಯ ಸರೋವರವನ್ನು ದಾಟಿ, ಆಚೆಯ ಕಡೆಯಿದ್ದ ಗದರೇನ ಎಂಬ ಪ್ರಾಂತ್ಯಕ್ಕೆ ಬಂದರು. ದೆವ್ವ ಹಿಡಿದಿದ್ದ ಇಬ್ಬರು ಸಮಾಧಿಯ ಗುಹೆಗಳಿಂದ ಹೊರಬಂದು ಅವರಿಗೆ ಎದುರಾದರು. ಅವರಿಬ್ಬರೂ ಮಹಾಕ್ರೂರಿಗಳು. ಈ ಕಾರಣ ಯಾರೂ ಆ ಮಾರ್ಗವಾಗಿ ಹೋಗಲಾಗುತ್ತಿರಲಿಲ್ಲ. ಅವರು ಯೇಸುವನ್ನು ನೋಡಿದೊಡನೆಯೇ "ಓ ದೇವರ ಪುತ್ರನೇ, ನಿಮಗೇಕೆ ನಮ್ಮ ಗೊಡವೆ? ನಿಯಮಿತ ಕಾಲಕ್ಕೆ ಮುಂಚೆಯೇ ನಮ್ಮನ್ನು ಪೀಡಿಸಲು ಬಂದಿರಾ?" ಎಂದು ಕೂಗಿಕೊಂಡರು. ಹಂದಿಗಳ ದೊಡ್ಡ ಹಿಂಡೊಂದು ಅಲ್ಲಿಂದ ಸ್ವಲ್ಪ ದೂರದಲ್ಲೇ ಮೇಯುತ್ತಿತ್ತು. "ನೀವು ನಮ್ಮನ್ನು ಹೊರದೂಡಿದ್ದೇ ಆದರೆ ಆ ಹಂದಿಗಳ ಹಿಂಡಿಗೆ ನಮ್ಮನ್ನು ಕಳುಹಿಸಿಕೊಡಿ," ಎಂದು ಆ ದೆವ್ವಗಳು ಯೇಸುವನ್ನು ಬೇಡಿಕೊಂಡವು. ಯೇಸು, "ಹೋಗಿ" ಎಂದು ಅಪ್ಪಣೆಯಿತ್ತರು. ದೆವ್ವಗಳು ಹೊರಗೆ ಬಂದು ಹಂದಿಗಳ ಹಿಂಡನ್ನು ಹೊಕ್ಕವು. ಆ ಕ್ಷಣವೇ ಆ ಹಿಂಡೆಲ್ಲಾ ಬೆಟ್ಟದ ಕಡಿದಾದ ಬದಿಯಿಂದ ಧಾವಿಸಿ, ಸರೋವರಕ್ಕೆ ಬಿದ್ದು, ನೀರುಪಾಲಾಗಿ ಹೋಯಿತು. ಹಂದಿ ಮೇಯಿಸುತ್ತಿದ್ದವರು ಅಲ್ಲಿಂದ ಪಲಾಯನ ಮಾಡಿ ಊರಿಗೆ ಓಡಿಹೋಗಿ ನಡೆದದ್ದೆಲ್ಲವನ್ನೂ ಮತ್ತು ದೆವ್ವ ಮೆಟ್ಟಿದ್ದವರಿಗೆ ಸಂಭವಿಸಿದ್ದನ್ನೂ ವರದಿಮಾಡಿದರು. ಆಗ ಊರಿಗೆ ಊರೇ ಯೇಸುವನ್ನು ನೋಡಲು ಬಂದಿತು. ಅವರನ್ನು ಕಂಡು ತಮ್ಮ ಆಸುಪಾಸನ್ನು ಬಿಟ್ಟು ಹೋಗಬೇಕೆಂದು ಮನವಿ ಮಾಡಿಕೊಂಡಿತು.

29.06.2021 - "ಸ್ವರ್ಗಸಾಮ್ರಾಜ್ಯದ ಬೀಗದ ಕೈಗಳನ್ನು ನಿನಗೆ ಕೊಡುವೆನು"

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 12:1-11

ಆ ದಿನಗಳಲ್ಲಿ ಅರಸ ಹೆರೋದನು ಕ್ರೈಸ್ತಸಭೆಯ ಸದಸ್ಯರಲ್ಲಿ ಕೆಲವರನ್ನು ಹಿಂಸಿಸಲು ಆರಂಭಿಸಿದನು. ಯೊವಾನ್ನನ ಸಹೋದರ ಯಕೋಬನನ್ನು ಖಡ್ಗದಿಂದ ಕೊಲ್ಲಿಸಿದನು. ಇದರಿಂದ ಯೆಹೂದ್ಯರಿಗೆ ಮೆಚ್ಚುಗೆಯಾಯಿತೆಂದು ತಿಳಿದು ಪೇತ್ರನನ್ನು ಬಂಧಿಸಿದನು. (ಆಗ ಹುಳಿರಹಿತ ರೊಟ್ಟಿಯ ಹಬ್ಬ ನಡೆಯುತ್ತಿತ್ತು). ಪೇತ್ರನನ್ನು ಬಂಧಿಸಿದ ಮೇಲೆ ಸೆರೆಮನೆಯಲ್ಲಿಟ್ಟು ಅವನನ್ನು ಕಾಯಲು ನಾಲ್ಕು ನಾಲ್ಕು ಸೈನಿಕರಿದ್ದ ಚತುರ್ದಳಕ್ಕೆ ವಹಿಸಿದನು. ಪಾಸ್ಕಹಬ್ಬದ ನಂತರ ಪೇತ್ರನನ್ನು ಬಹಿರಂಗ ವಿಚಾರಣೆಗೆ ಗುರಿಪಡಿಸಲು ಉದ್ದೇಶಿಸಿದ್ದನು. ಪೇತ್ರನನ್ನು ಹೀಗೆ ಸೆರೆಯಲ್ಲಿಟ್ಟಿದ್ದಾಗ, ಸಭೆಯು ಅವನಿಗಾಗಿ ಶ್ರದ್ಧೆಯಿಂದ ದೇವರಿಗೆ ಪ್ರಾರ್ಥನೆಮಾಡುತ್ತಿತ್ತು. ಹೆರೋದನು ಪೇತ್ರನನ್ನು ಜನರ ಮುಂದೆ ತರಬೇಕೆಂದಿದ್ದ ಹಿಂದಿನ ರಾತ್ರಿ ಅದು. ಪೇತ್ರನು ಇಬ್ಬರು ಸೈನಿಕರ ನಡುವೆ ನಿದ್ರಿಸುತ್ತಿದ್ದನು. ಅವನನ್ನು ಎರಡು ಸರಪಣಿಗಳಿಂದ ಕಟ್ಟಲಾಗಿತ್ತು. ಪಹರೆಯವರು ಸೆರೆಮನೆಯ ದ್ವಾರದಲ್ಲಿ ಕಾವಲಿದ್ದರು. ಫಕ್ಕನೆ ದೇವದೂತನೊಬ್ಬನು ಕಾಣಿಸಿಕೊಂಡನು. ಆ ಕೋಣೆಯೆಲ್ಲಾ ಪ್ರಕಾಶಮಯವಾಯಿತು. ದೂತನು ಪೇತ್ರನ ಭುಜವನ್ನು ತಟ್ಟಿ, ಎಬ್ಬಿಸಿ, “ಬೇಗನೆ ಏಳು,” ಎಂದನು. ಆ ಕ್ಷಣವೇ ಪೇತ್ರನ ಕೈಗಳಿಗೆ ಕಟ್ಟಿದ್ದ ಸರಪಣಿಗಳು ಕಳಚಿಬಿದ್ದವು. ದೂತನು ಅವನಿಗೆ, “ಬಟ್ಟೆಯನ್ನು ತೊಟ್ಟುಕೋ, ಪಾದರಕ್ಷೆಯನ್ನು ಮೆಟ್ಟಿಕೋ,” ಎಂದನು. ಪೇತ್ರನು ಹಾಗೆಯೇ ಮಾಡಿದನು. ಅನಂತರ ದೂತನು, “ನಿನ್ನ ಮೇಲುಹೊದಿಕೆಯನ್ನು ಹೊದ್ದುಕೊಂಡು ನನ್ನ ಜೊತೆ ಬಾ,” ಎಂದನು. ಪೇತ್ರನು ಸೆರೆಮನೆಯ ಹೊರಕ್ಕೆ ಅವನನ್ನು ಹಿಂಬಾಲಿಸಿ ಹೋದನು. ಅಷ್ಟಾದರೂ ದೂತನು ಮಾಡುತ್ತಿರುವುದು ನಿಜವೆಂದು ಅವನಿಗೆ ಅರಿವಾಗಲಿಲ್ಲ; ತನಗೇನೋ ದರ್ಶನವಾಗುತ್ತಿದೆಯೆಂದೆ ಭಾವಿಸಿದನು. ಅವರು ಮೊದಲನೆಯ ಮತ್ತು ಎರಡನೆಯ ಕಾವಲನ್ನು ದಾಟಿದರು. ಪಟ್ಟಣದ ಕಡೆಯಿದ್ದ ಕಬ್ಬಿಣದ ದ್ವಾರದ ಬಳಿ ಬಂದರು. ಆ ದ್ವಾರ ತನ್ನಷ್ಟಕ್ಕೆ ತಾನೇ ತೆರೆಯಿತು. ಅವರು ಹೊರ ನಡೆದರು. ಬೀದಿಯೊಂದರಲ್ಲಿ ಹಾದುಹೋಗುತ್ತಿರಲು ಒಮ್ಮೆಲೆ ದೂತನು ಪೇತ್ರನನ್ನು ಬಿಟ್ಟು ಅದೃಶ್ಯನಾದನು. ನಡೆದ ಸಂಗತಿ ಏನೆಂದು ಪೇತ್ರನಿಗೆ ಅರಿವಾದಾಗ ಆತನು, “ನಡೆದುದೆಲ್ಲಾ ಸಾಕ್ಷಾತ್ ಸತ್ಯವೆಂದು ಈಗ ನನಗೆ ತಿಳಿಯಿತು. ಪ್ರಭು ತಮ್ಮ ದೂತನನ್ನು ಕಳುಹಿಸಿ ಹೆರೋದನ ಕೈಯಿಂದಲೂ ಯೆಹೂದ್ಯರು ಮಾಡಬೇಕೆಂದಿದ್ದ ಕೇಡಿನಿಂದಲೂ ನನ್ನನ್ನು ಪಾರುಮಾಡಿದ್ದಾರೆ,” ಎಂದುಕೊಂಡನು.

ಕೀರ್ತನೆ: 34:2-3, 4-5, 6-7, 8-9

ಶ್ಲೋಕ: ಭಯಭೀತಿಯಿಂದೆನ್ನನು ಮುಕ್ತನಾಗಿಸಿಹನು

ಎರಡನೇ ವಾಚನ: 2 ತಿಮೊಥೇಯನಿಗೆ 4:6-8, 17-18

ಅತಿ ಪ್ರಿಯನೇ, ನಾನು ಯಜ್ಞಪಶುವಾಗಿ ಅರ್ಪಿತನಾಗುವ ಸಮಯವು ಬಂದಿದೆ. ಈ ಲೋಕದಿಂದ ತೆರಳಬೇಕಾದ ಕಾಲವೂ ಕೂಡಿಬಂದಿದೆ. ಬಾಳಿನ ಸ್ಪರ್ಧೆಯಲ್ಲಿ ಭಾಗವಹಿಸಿದ್ದೇನೆ. ನನ್ನ ಓಟವನ್ನು ಮುಗಿಸಿದ್ದೇನೆ. ವಿಶ್ವಾಸವನ್ನು ಕಾಪಾಡಿಕೊಂಡಿದ್ದೇನೆ. ಇನ್ನು ನನಗೆ ಉಳಿದಿರುವುದು ಒಂದೇ: ಸಜ್ಜನರಿಗೆ ಸಲ್ಲುವಂಥ ಜಯಮಾಲೆ ನನಗೀಗ ಸಿದ್ಧವಾಗಿದೆ. ಅದನ್ನು ನೀತಿವಂತ ನ್ಯಾಯಾಧಿಪತಿಯಾದ ಪ್ರಭು ಆ ದಿನದಂದು ನನಗೆ ಕೊಡುವರು; ನನಗೆ ಮಾತ್ರವಲ್ಲ, ಅವರ ಪ್ರತ್ಯಕ್ಷತೆಯನ್ನು ಪ್ರೀತಿಯಿಂದ ನಿರೀಕ್ಷಿಸುತ್ತಿರುವ ಎಲ್ಲರಿಗೂ ಕೊಡುವರು. ಆದರೆ ಪ್ರಭು ನನಗೆ ಬೆಂಬಲವಾಗಿ ನಿಂತರು. ನಾನು ಶುಭಸಂದೇಶವನ್ನು ಸಂಪೂರ್ಣವಾಗಿ ಸಾರುವಂತೆಯೂ ಅನ್ಯಧರ್ಮೀಯರೆಲ್ಲರು ಅದನ್ನು ಕೇಳುವಂತೆಯೂ ಮಾಡಿದರು. ಅಲ್ಲದೆ, ಸಿಂಹದ ಬಾಯಿಂದಲೂ ನನ್ನನ್ನು ಸಂರಕ್ಷಿಸಿದರು. ಪ್ರಭು ನನ್ನನ್ನು ಸಕಲ ಕೇಡುಗಳಿಂದ ರಕ್ಷಿಸಿ, ತಮ್ಮ ಸ್ವರ್ಗಸಾಮ್ರಾಜ್ಯಕ್ಕೆ ನನ್ನನ್ನು ಸುರಕ್ಷಿತವಾಗಿ ಸೇರಿಸುವರು. ಯುಗಯುಗಾಂತರಕ್ಕೂ ಅವರಿಗೆ ಮಹಿಮೆ ಸಲ್ಲಲಿ, ಆಮೆನ್.

ಶುಭಸಂದೇಶ: ಮತ್ತಾಯ 16:13-19


ಯೇಸುಸ್ವಾಮಿ ‘ಫಿಲಿಪ್ಪನ ಸೆಜರೇಯ’ ಎಂಬ ಪ್ರಾಂತ್ಯಕ್ಕೆ ಬಂದರು. ಅಲ್ಲಿ ತಮ್ಮ ಶಿಷ್ಯರನ್ನು ಉದ್ದೇಶಿಸಿ, “ನರಪುತ್ರನನ್ನು ಜನರು ಯಾರೆಂದು ಹೇಳುತ್ತಾರೆ?” ಎಂದು ಕೇಳಿದರು. ಅದಕ್ಕೆ ಶಿಷ್ಯರು, “ ‘ಸ್ನಾನಿಕ ಯೊವಾನ್ನ’, ಎಂದು ಕೆಲವರು ಹೇಳುತ್ತಾರೆ; ಮತ್ತೆ ಕೆಲವರು ' ಎಲೀಯನು' ಎನ್ನುತ್ತಾರೆ. ‘ಯೆರೆಮೀಯನು ಅಥವಾ ಪ್ರವಾದಿಗಳಲ್ಲಿ ತಾವೂ ಒಬ್ಬರು,’ ಎಂಬುದು ಇನ್ನೂ ಕೆಲವರ ಅಭಿಪ್ರಾಯ,” ಎಂದು ಉತ್ತರಕೊಟ್ಟರು. ಆಗ ಯೇಸು, “ಆದರೆ ನೀವು ನನ್ನನ್ನು ಯಾರೆನ್ನುತ್ತೀರಿ?” ಎಂದು ಪ್ರಶ್ನಿಸಿದರು. ಅದಕ್ಕೆ ಪೇತ್ರನು, “ಅಭಿಷಿಕ್ತರಾದ ಲೋಕೋದ್ಧಾರಕ ತಾವೇ, ಜೀವಸ್ವರೂಪರಾದ ದೇವರ ಪುತ್ರ ತಾವೇ,” ಎಂದನು. ಅದಕ್ಕೆ ಪ್ರತ್ಯುತ್ತರವಾಗಿ ಯೇಸು ಹೀಗೆಂದರು: “ಯೋನ್ನನ ಮಗ ಸಿಮೋನನೇ, ನೀನು ಧನ್ಯ! ಈ ವಿಷಯವನ್ನು ನಿನಗೆ ಶ್ರುತಪಡಿಸಿದ್ದು ನರಮಾನವ ಶಕ್ತಿ ಅಲ್ಲ. ಸ್ವರ್ಗದಲ್ಲಿರುವ ನನ್ನ ಪಿತನೇ. ನಾನು ನಿನಗೆ ಹೇಳುತ್ತೇನೆ, ಕೇಳು: “ನಿನ್ನ ಹೆಸರು ಪೇತ್ರ! ಈ ಬಂಡೆಯ ಮೇಲೆ ನನ್ನ ಧರ್ಮಸಭೆಯನ್ನು ಕಟ್ಟುವೆನು, ಪಾತಾಳಲೋಕದ ಶಕ್ತಿಯು ಅದನ್ನು ಎಂದಿಗೂ ಜಯಿಸಲಾರದು. ಸ್ವರ್ಗಸಾಮ್ರಾಜ್ಯದ ಬೀಗದ ಕೈಗಳನ್ನು ನಿನಗೆ ಕೊಡುವೆನು. ಇಹದಲ್ಲಿ ನೀನು ಏನನ್ನು ಬಂಧಿಸುತ್ತಿಯೋ ಅದನ್ನು ಪರದಲ್ಲಿಯೂ ಬಂಧಿಸಲಾಗುವುದು. ಇಹದಲ್ಲಿ ನೀನು ಏನನ್ನು ಬಿಚ್ಚುತ್ತೀಯೋ ಅದನ್ನು ಪರದಲ್ಲಿಯೂ ಬಿಚ್ಚಲಾಗುವುದು,

28.06.21

ಮೊದಲನೇ ವಾಚನ: ಆದಿಕಾಂಡ 18: 16-33

ಆ ಮನುಷ್ಯರು ಅಲ್ಲಿಂದ ಹೊರಟು ಸೊದೋಮ್ ಕಾಣಿಸುತ್ತಿದ್ದ ಒಂದು ಸ್ಥಳಕ್ಕೆ ಬಂದರು. ಅವರನ್ನು ಸಾಗಕಳುಹಿಸುತ್ತಾ ಅಬ್ರಹಾಮನೂ ಅವರ ಜೊತೆಯಲ್ಲೇ ಅಲ್ಲಿಗೆ ಬಂದನು. ಆಗ ಸರ್ವೇಶ್ವರ ತಮ್ಮೊಳಗೆ ಇಂತೆಂದುಕೊಂಡರು: “ನಾನು ಮಾಡಬೇಕು ಎಂದಿರುವ ಕಾರ್ಯವನ್ನು ಅಬ್ರಹಾಮನಿಂದ ಮರೆಮಾಡುವುದು ಸರಿಯಲ್ಲ. ಅವನಿಂದ ಮಹಾ ಬಲಿಷ್ಠವಾದ ರಾಷ್ಟ್ರವೊಂದು ಹುಟ್ಟಬೇಕಾಗಿದೆ. ಅವನ ಮುಖಾಂತರ ಜಗದ ಎಲ್ಲ ರಾಷ್ಟ್ರಗಳಿಗೆ ನನ್ನ ಆಶೀರ್ವಾದ ದೊರಕಬೇಕಾಗಿದೆ. ಅವನು ತನ್ನ ಪುತ್ರ ಪೌತ್ರರಿಗೆ, ‘ನೀವು ನ್ಯಾಯ ನೀತಿಯನ್ನು ಪಾಲಿಸುತ್ತಾ ಸರ್ವೇಶ್ವರಸ್ವಾಮಿಯ ಮಾರ್ಗದಲ್ಲೇ ನಡೆಯಬೇಕು; ಹಾಗೆ ಮಾಡಿದರೆ ವಾಗ್ದಾನ ಮಾಡಿದುದನ್ನೆಲ್ಲ ಈಡೇರಿಸುವರು,’ ಎಂದು ಬೋಧಿಸಲೆಂದೇ ನಾನು ಅವನನ್ನು ಆರಿಸಿಕೊಂಡಿದ್ದೇನೆ.” ಇದಲ್ಲದೆ ಸರ್ವೇಶ್ವರ, “ಸೊದೋಮ್ ಗೊಮೋರಗಳ ವಿರುದ್ಧ ಎಷ್ಟೋ ಘನತರವಾದ ದೂರುಗಳು ನನಗೆ ಬಂದಿವೆ; ಆ ಊರಿನವರ ಮೇಲೆ ಹೊರಿಸಲಾಗಿರುವ ಪಾಪಕೃತ್ಯವೂ ಘೋರವಾದುದು. ನನಗೆ ಮುಟ್ಟಿರುವ ದೂರಂತೆ ಅವರು ಮಾಡಿದರೋ ಇಲ್ಲವೋ ಎಂದು ನೋಡಿ ತಿಳಿದುಕೊಳ್ಳುತ್ತೇನೆ,” ಎಂದುಕೊಂಡರು. ಆಗ ಆ ಇಬ್ಬರು ಮನುಷ್ಯರು ಅಲ್ಲಿಂದ ಸೊದೋಮಿನ ಕಡೆಗೆ ಹೋದರು. ಆದರೆ ಅಬ್ರಹಾಮನು ಸರ್ವೇಶ್ವರಸ್ವಾಮಿಯ ಸಂಗಡವೇ ಉಳಿದುಕೊಂಡನು. ಅವನು ಅವರ ಹತ್ತಿರಕ್ಕೆ ಬಂದು, “ನೀವು ದುರ್ಜನರ ಸಂಗಡ ಸಜ್ಜನರನ್ನೂ ನಾಶ ಮಾಡುವಿರೋ? ಒಂದು ವೇಳೆ ಆ ಊರೊಳಗೆ ಐವತ್ತು ಮಂದಿ ಸಜ್ಜನರಿದ್ದಾರು. ಅದರಲ್ಲಿ ಐವತ್ತು ಮಂದಿ ಸಜ್ಜನರಿದ್ದರೂ ಆ ಸ್ಥಳವನ್ನು ಉಳಿಸದೆ ನಾಶಮಾಡುವಿರೋ? ಹೀಗೆ ದುಷ್ಟರಿಗೂ ಶಿಷ್ಟರಿಗೂ ಭೇದ ಮಾಡದೆ ದುಷ್ಟರ ಸಂಗಡ ಸಜ್ಜನರನ್ನೂ ಸಂಹರಿಸುವುದು ನಿಮ್ಮಿಂದ ಎಂದಿಗೂ ಆಗಬಾರದು. ಇಡೀ ಜಗತ್ತಿನ ನ್ಯಾಯಾಧಿಪತಿ ಸರಿಯಾಗಿ ನ್ಯಾಯತೀರಿಸಬೇಕಲ್ಲವೆ?” ಎಂದನು. ಅದಕ್ಕೆ ಸರ್ವೇಶ್ವರ, “ಸೊದೋಮಿನಲ್ಲಿ ಐವತ್ತು ಮಂದಿ ಸಜ್ಜನರು ನನಗೆ ಸಿಕ್ಕಿದರೆ ಅವರ ನಿಮಿತ್ತ ಊರನ್ನೆಲ್ಲಾ ಉಳಿಸುತ್ತೇನೆ,” ಎಂದರು. ಆಗ ಅಬ್ರಹಾಮನು “ನಾನಂತೂ ಮಣ್ಣುಬೂದಿ. ಆದರೂ ಸ್ವಾಮಿಯ ಸಂಗಡ ವಾದಿಸುವುದಕ್ಕೆ ಧೈರ್ಯಗೊಂಡಿದ್ದೇನೆ. ಒಂದು ವೇಳೆ ಐವತ್ತು ಮಂದಿ ಸಜ್ಜನರಿಗೆ ಐದು ಮಂದಿ ಕಡಿಮೆಯಾಗಿದ್ದಾರು. ಐದು ಮಂದಿ ಕಡಿಮೆಯಾದುದಕ್ಕೆ ಪಟ್ಟಣವನ್ನೆಲ್ಲ ನಾಶ ಮಾಡುವಿರೋ?” ಎಂದು ಕೇಳಲು ಸರ್ವೇಶ್ವರ, “ಅಲ್ಲಿ ನಲವತ್ತೈದು ಮಂದಿ ಸಿಕ್ಕಿದರೆ ಅದನ್ನು ನಾಶಮಾಡುವುದಿಲ್ಲ” ಎಂದರು. ಅಬ್ರಹಾಮನು ಇನ್ನೂ ಮುಂದುವರೆದು, “ಒಂದು ವೇಳೆ ಅಲ್ಲಿ ನಲವತ್ತು ಮಂದಿ ಸಿಕ್ಕಾರು” ಎನ್ನಲು “ನಲವತ್ತು ಮಂದಿ ಸಿಕ್ಕಿದರೆ ಆ ಪಟ್ಟಣವನ್ನು ನಾಶಮಾಡುವುದಿಲ್ಲ,” ಎಂದರು. ಅಬ್ರಹಾಮನು, “ಸ್ವಾವಿೂ, ಕೋಪಮಾಡಬೇಡಿ; ಇನ್ನೂ ಮಾತಾಡುತ್ತೇನೆ. ಒಂದು ವೇಳೆ ಮೂವತ್ತು ಮಂದಿ ಅಲ್ಲಿ ಸಿಕ್ಕಾರು” ಎನ್ನಲು ಸರ್ವೇಶ್ವರ, “ಅಲ್ಲಿ ಮೂವತ್ತು ಮಂದಿ ಸಿಕ್ಕಿದರೂ ಅದನ್ನು ನಾಶಮಾಡುವುದಿಲ್ಲ” ಎಂದರು. ಅವನು, “ಸ್ವಾಮಿಯ ಸಂಗಡ ಮಾತನಾಡಲು ನಾನು ಇನ್ನೂ ಧೈರ್ಯಗೊಂಡಿದ್ದೇನೆ; ಒಂದು ವೇಳೆ ಇಪ್ಪತ್ತೇ ಮಂದಿ ಅಲ್ಲಿ ಸಿಕ್ಕಾರು,” ಎನ್ನಲು, ಸರ್ವೇಶ್ವರ, “ಇಪ್ಪತ್ತು ಮಂದಿಯಿದ್ದರೆ ಅವರ ನಿಮಿತ್ತ ಅದನ್ನು ಉಳಿಸುತ್ತೇನೆ, ನಾಶಮಾಡುವುದಿಲ್ಲ,” ಎಂದರು. ಅಬ್ರಹಾಮನು, “ಸ್ವಾವಿೂ, ಸಿಟ್ಟುಗೊಳ್ಳಬೇಡಿ; ಇನ್ನು ಒಂದೇ ಒಂದು ಸಾರಿ ಮಾತಾಡುತ್ತೇನೆ; ಒಂದು ವೇಳೆ ಹತ್ತೇ ಮಂದಿ ಸಿಕ್ಕಾರು” ಎನ್ನಲು, ಸರ್ವೇಶ್ವರ, “ಹತ್ತು ಮಂದಿಯ ನಿಮಿತ್ತವೂ ಅದನ್ನು ಉಳಿಸುತ್ತೇನೆ, ನಾಶಮಾಡುವುದಿಲ್ಲ,” ಎಂದರು. ಅನಂತರ ಅಬ್ರಹಾಮನೊಡನೆ ಮಾತಾಡುವುದನ್ನು ಮುಗಿಸಿ ಸರ್ವೇಶ್ವರಸ್ವಾಮಿ ಹೊರಟುಹೋದರು. ಅಬ್ರಹಾಮನು ತನ್ನ ಮನೆಗೆ ಹಿಂದಿರುಗಿದನು.

ಕೀರ್ತನೆ: 103:1-2, 3-4, 8-9, 10-11
ಶ್ಲೋಕ: ಪ್ರಭು ದಯಾಳು, ಕೃಪಾಪೂರ್ಣನು I

ನನ್ನ ಅಂತರಂಗವೇ, ಭಜಿಸು ಆತನನು I
ನೆನೆ ಆತನ ಪರಮಪಾವನ ನಾಮವನು II
ಭಜಿಸು ನನ್ನ ಮನವೇ, ಭಜಿಸು ಪ್ರಭುವನು I
ಮರೆಯದಿರು ಆತನ ಉಪಕಾರಗಳೊಂದನು II

ಮನ್ನಿಸುವನಾತ ನನ್ನ ದೋಷಗಳನು I
ವಾಸಿಮಾಡುವನು ನನ್ನ ರೋಗಗಳನು II
ಉಳಿಸುವನು ಪಾತಾಳದ ಕೂಪದಿಂದ ನನ್ನನು I
ಮುಡಿಸುವನೆನಗೆ ದಯದಾಕ್ಷಿಣ್ಯದ ಮುಕುಟವನು I

ಪ್ರಭು ದಯಾಳು, ಕೃಪಾಪೂರ್ಣನು I
ಸಹನಶೀಲನು, ಪ್ರೀತಿಮಯನು II
ಆತನು ಸದಾ ತಪ್ಪು ಹುಡುಕುವವನಲ್ಲ I
ನಿತ್ಯಕು ಕೋಪ ಇಟ್ಟುಕೊಳ್ಳುವವನಲ್ಲ II

ನಮ್ಮ ಪಾಪಗಳಿಗೆ ತಕ್ಕಂತೆ ಆತ ವರ್ತಿಸಲಿಲ್ಲ I
ನಮ್ಮ ಅಪರಾಧಗಳಿಗೆ ತಕ್ಕಹಾಗೆ ದಂಡಿಸಲಿಲ್ಲ II
ಆಕಾಶಮಂಡಲವು ಭೂಮಿಯಿಂದೆಷ್ಟೋ ಉನ್ನತ I
ದೈವಭಯವುಳ್ಳವರಿಗೆ ಆತನ ಕೃಪೆ ಅಷ್ಟೇ ಸನ್ನುತ II

ಶುಭಸಂದೇಶ: ಮತ್ತಾಯ 8: 18-22

ದೊಡ್ಡ ಜನಸಮೂಹ ತಮ್ಮ ಸುತ್ತಲೂ ನಿಂತಿರುವುದನ್ನು ಯೇಸುಸ್ವಾಮಿ ನೋಡಿದರು. ಸರೋವರದ ಆಚೆಯ ದಡಕ್ಕೆ ಹೋಗಲು ತಮ್ಮ ಶಿಷ್ಯರಿಗೆ ಅಪ್ಪಣೆ ಮಾಡಿದರು. ಆಗ ಒಬ್ಬ ಧರ್ಮಶಾಸ್ತ್ರಿ ಬಂದು, "ಗುರುವೇ, ನೀವು ಎಲ್ಲಿಗೆ ಹೋದರೂ ನಿಮ್ಮನ್ನು ಹಿಂಬಾಲಿಸಿ ಬರುತ್ತೇನೆ," ಎಂದನು. ಅದಕ್ಕೆ ಯೇಸು, "ನರಿಗಳಿಗೆ ಗುಹೆಗಳುಂಟು; ಆಕಾಶದ ಪಕ್ಷಿಗಳಿಗೆ ಗೂಡುಗಳುಂಟು; ಆದರೆ ನರಪುತ್ರನಿಗೆ ತಲೆಯಿಟ್ಟು ಮಲಗಲೂ ಸ್ಥಳ ಇಲ್ಲ," ಎಂದರು. "ನನ್ನನ್ನು "ಸ್ವಾವಿೂ, ಸ್ವಾವಿೂ," ಎನ್ನುವ ಪ್ರತಿಯೊಬ್ಬನೂ ಸ್ವರ್ಗಸಾಮ್ರಾಜ್ಯವನ್ನು ಪ್ರವೇಶಿಸನು. ಸ್ವರ್ಗದಲ್ಲಿರುವ ನನ್ನ ತಂದೆಯ ಚಿತ್ತಾನುಸಾರ ನಡೆಯುವವನು ಮಾತ್ರ ಅದನ್ನು ಪ್ರವೇಶಿಸುವನು. ಅವನಿಗೆ ಯೇಸು, "ಸತ್ತವರೇ ತಮ್ಮ ಸತ್ತವರನ್ನು ಸಮಾಧಿ ಮಾಡಿಕೊಳ್ಳಲಿ; ನೀನು ನನ್ನನ್ನು ಹಿಂಬಾಲಿಸು," ಎಂದರು.

27.06.21 - “ತಲಿಥಾಕೂಮ್” (‘ಮಗಳೇ, ನಿನಗೆ ಹೇಳುತ್ತೇನೆ, ಎದ್ದೇಳು’ )

ಮೊದಲನೇ ವಾಚನ: ಸುಜ್ಞಾನ ಗ್ರಂಥ 1:13-15; 2:23-24


ದೇವರು ಉಂಟುಮಾಡಿಲ್ಲ ಮರಣವನ್ನು ಆತ ನೋಡಿ ಹಿಗ್ಗುವವನಲ್ಲ ಜೀವಿಗಳ ಸಾವನ್ನು. ಅಸ್ತಿತ್ವದಲ್ಲಿರಲೆಂದೇ ದೇವ ಸೃಷ್ಟಿಸಿದನು ಸಮಸ್ತವನ್ನು ಸೃಷ್ಟಿಗಳಲ್ಲಿದೆ ಆರೋಗ್ಯ, ಅವುಗಳಲಿಲ್ಲ ಮಾರಕ ವಿಷಯ ಅಧೋಲೋಕಕ್ಕೆ ಈ ಲೋಕದ ಮೇಲಿಲ್ಲ ಅಧಿಕಾರವು. ಅಂತ್ಯವೆಂಬುದಿಲ್ಲ ನ್ಯಾಯನೀತಿಗೆ. ದೇವರು ಮಾನವನನ್ನು ಸೃಷ್ಟಿಸಿದ್ದು ಅಮರತ್ವಕ್ಕಾಗಿ ಅವನನ್ನು ರಚಿಸಿದ್ದು ತಮ್ಮ ಸ್ವರೂಪಕ್ಕನುಗುಣವಾಗಿ. ಸೈತಾನನ ಮತ್ಸರದಿಂದಲೆ ಮರಣ ಪ್ರವೇಶಿಸಿತು ಲೋಕವನು ಅವನ ಪಕ್ಷಕೆ ಸೇರಿದವರೆಲ್ಲರು ಅನುಭವಿಸುವರು ಅದನು.

ಕೀರ್ತನೆ: 30:1, 3, 4-5, 10-12
ಶ್ಲೋಕ: ನಿನಗೆನ್ನ ವಂದನೆ ಪ್ರಭು, ನನ್ನನುದ್ಧರಿಸಿದೆ. 

ಹೇ ಪ್ರಭು, ಎನ್ನ ದೇವಾ ‘ ಎಂದೆ I
ಹೇ ಪ್ರಭು, ಎನ್ನ ದೇವಾ ‘ ಎಂದೆ I
ನಾ ಮೊರೆಯಿಡೆ, ನೀ ಗುಣಪಡಿಸಿದೆ II

ಭಕ್ತರೇ, ಸಂಕೀರ್ತಿಸಿರಿ ಪ್ರಭುವನು I
ಮಾಡಿರಿ ಆತನ ನಾಮಸ್ಮರಣೆಯನು II
ಆತನ ಕೋಪ ಕ್ಷಣಮಾತ್ರ I
ಆತನ ಕೃಪೆ ಜೀವನ ಪರಿಯಂತ II

ಇರುಳು ಬರಲು ಇರಬಹುದು ಅಳಲು I
ನಲಿವು ಉಲಿವುದು ಹಗಲು ಹರಿಯಲು II
ನಾನಾದರೋ ಉಲ್ಲಾಸದಿಂದಿರುವಾಗಲೂ I
ನನ್ನನು ಅಲ್ಲಾಡಿಸಲಾಗದೆಂದೆ ಯಾರಿಂದಲೂ II

ಎನ್ನ ಗೋಳಾಟವನು ನೀ ಕುಣಿದಾಟವಾಗಿಸಿದೆ I
ಎನ್ನ ಗೋಣಿತಟ್ಟನು ಹರ್ಷಾಭರಣವಾಗಿಸಿದೆ II
ಎಂದೇ ಮೌನವಿರದೆ ಎನ್ನ ಮನವು ನಿನಗೆ ಹಾಡಲಿ ಕೀರ್ತನೆ I
ಹೇ ಪ್ರಭು, ಎನ್ನ ದೇವ, ನಿನಗೆನ್ನ ಅನಂತ ಧನ್ಯ ವಂದನೆ I

ಎರಡನೆಯ ವಾಚನ: 2 ಕೊರಿಂಥಿಯರಿಗೆ  8:7, 9, 13-15

ವಿಶ್ವಾಸ, ವಾಕ್ಚಾತುರ್ಯ, ಜ್ಞಾನ, ಶ್ರದ್ಧೆ, ನಮ್ಮ ಬಗ್ಗೆ ನಿಮಗಿರುವ ಪ್ರೀತಿ - ಈ ಎಲ್ಲಾ ವಿಷಯಗಳಲ್ಲೂ ನೀವು ಸಮೃದ್ಧರಾಗಿದ್ದೀರಿ. ಹಾಗೆಯೇ ಈ ಸೇವಾಕಾರ್ಯದಲ್ಲೂ ಸಮೃದ್ಧರಾಗಿರಿ. ಪ್ರಭು ಯೇಸುಕ್ರಿಸ್ತರ ಕೃಪಾಶಕ್ತಿಯನ್ನು ನೀವು ಬಲ್ಲಿರಿ. ಅವರು ತಮ್ಮ ಬಡತನದಿಂದ ನಿಮ್ಮನ್ನು ಶ್ರೀಮಂತವಾಗಿಸಲೆಂದು, ತಾವು ಶ್ರೀಮಂತರಾಗಿದ್ದರೂ ನಿಮಗೋಸ್ಕರ ಬಡವರಾದರು ಈ ವಿಷಯದಲ್ಲಿ ನನ್ನ ಸಲಹೆ ಏನೆಂದರೆ: ಒಂದು ವರ್ಷಕ್ಕೆ ಹಿಂದೆ ನೀವು ಪ್ರಾರಂಭಿಸಿದ ಈ ಸೇವಾಕಾರ್ಯವನ್ನು ಪೂರೈಸುವುದು ಲೇಸು. ಈ ಕಾರ್ಯವನ್ನು ಮೊದಲು ಆರಂಭಿಸಿದವರು ನೀವೇ. ಆರಂಭಿಸಬೇಕೆಂದು ಸೂಚಿಸಿದವರೂ ನೀವೇ. ಆದ್ದರಿಂದ ಆರಂಭಿಸುವುದರಲ್ಲಿ ಎಷ್ಟು ಆಸಕ್ತರಾಗಿದ್ದಿರೋ, ಅಷ್ಟೇ ಆಸಕ್ತಿಯಿಂದ ನಿಮ್ಮ ನಿಮ್ಮ ಶಕ್ತಿಗನುಸಾರವಾಗಿ ನೀಡಿ ಈ ಯೋಜನೆಯನ್ನು ಪೂರೈಸಿರಿ. ನಿಮ್ಮ ಕೊಡುಗೆಯಿಂದ ಇತರರ ಕಷ್ಟ ಪರಿಹಾರವಾಗಬೇಕು; ಅದರಿಂದ ನಿಮಗೆ ನಷ್ಟವುಂಟಾಗಬೇಕು ಎಂದು ಸಮಾನತೆ ಇರಬೇಕು. ಈ ಕಾಲದಲ್ಲಿ ನಿಮಗೆ ಸಮೃದ್ಧಿಯಾಗಿರುವುದರಿಂದ ಅವರ ಕೊರತೆಯನ್ನು ನೀವು ನೀಗಿಸಬೇಕು. ಮುಂದಕ್ಕೆ ಅವರು ಸಮೃದ್ಧಿಯಿಂದಿರುವಾಗ, ನಿಮ್ಮ ಕೊರತೆಯನ್ನು ಅವರು ನೀಗಿಸುವರು. ಹೀಗೆ ನಿಮ್ಮಲ್ಲಿ ಸಮಾನತೆ ಉಂಟಾಗುವುದು. “ಅತಿಯಾಗಿ ಶೇಖರಿಸಿದವನಿಗೆ ಅಧಿಕವಾಗಲಿಲ್ಲ ಮಿತಿಯಾಗಿ ಶೇಖರಿಸಿದವನಿಗೆ ಕೊರತೆಯಾಗಲಿಲ್ಲ.” ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ.

ಶುಭಸಂದೇಶ: ಮಾರ್ಕ 5:21-43


ಆ ಕಾಲದಲ್ಲಿ ಯೇಸುಸ್ವಾಮಿ ದೋಣಿಯನ್ನೇರಿ ಸರೋವರದ ಈಚೆದಡಕ್ಕೆ ಮರಳಿದರು. ತೀರವನ್ನು ಸೇರಿದೊಡನೆ ಜನರು ದೊಡ್ಡಗುಂಪಾಗಿ ಅವರ ಸುತ್ತಲೂ ನೆರೆದರು. ಪ್ರಾರ್ಥನಾಮಂದಿರದ ಅಧಿಕಾರಿಯೊಬ್ಬನು ಅಲ್ಲಿಗೆ ಬಂದನು. ಅವನ ಹೆಸರು ಯಾಯಿರ. ಅವನು ಯೇಸುವನ್ನು ನೋಡಿದೊಡನೆ ಅವರ ಪಾದಕ್ಕೆರಗಿ, “ನನ್ನ ಪುಟ್ಟ ಮಗಳು ಮರಣಾವಸ್ಥೆಯಲ್ಲಿದ್ದಾಳೆ; ತಾವು ಬಂದು ತಮ್ಮ ಹಸ್ತವನ್ನು ಅವಳ ಮೇಲಿಟ್ಟು, ಅವಳು ಗುಣಹೊಂದಿ ಬದುಕುವಂತೆ ಅನುಗ್ರಹಿಸಬೇಕು,” ಎಂದು ಬಹಳವಾಗಿ ವಿನಂತಿಸಿದನು. ಯೇಸು ಅವನ ಜೊತೆಯಲ್ಲಿ ಹೊರಟರು. ದೊಡ್ಡ ಜನಸ್ತೋಮವು ಯೇಸುವನ್ನು ಮುತ್ತಿಕೊಂಡು ಅವರ ಜೊತೆಯಲ್ಲೇ ಹೊರಟಿತು. ಹನ್ನೆರಡು ವರ್ಷಗಳಿಂದಲೂ ರಕ್ತಸ್ರಾವ ರೋಗದಿಂದ ಬಳಲುತ್ತಿದ್ದ ಮಹಿಳೆಯೊಬ್ಬಳು ಆ ಗುಂಪಿನಲ್ಲಿದ್ದಳು. ಅನೇಕ ವೈದ್ಯರಿಂದ ಚಿಕಿತ್ಸೆ ಪಡೆದಿದ್ದರೂ ಕೈಯಲ್ಲಿದ್ದ ಹಣವನ್ನೆಲ್ಲಾ ವ್ಯಯ ಮಾಡಿದ್ದರೂ ಅವಳ ರೋಗ ಮಾತ್ರ ಉಲ್ಬಣ ಆಗುತ್ತಿತ್ತೇ ಹೊರತು ಸ್ವಲ್ಪವೂ ಗುಣಮುಖ ಆಗುತ್ತಿರಲಿಲ್ಲ. ಯೇಸುವಿನ ವಿಷಯವಾಗಿ ಜನರು ಹೇಳುತ್ತಿದ್ದುದನ್ನು ಆಕೆ ಕೇಳಿ, ಜನರ ಗುಂಪಿನಲ್ಲಿ ಸೇರಿ, ಯೇಸುವನ್ನು ಹಿಂಬಾಲಿಸಿದಳು. “ನಾನು ಅವರ ಉಡುಪನ್ನು ಮುಟ್ಟಿದರೂ ಸಾಕು, ಗುಣಹೊಂದುವೆನು” ಎಂದುಕೊಂಡು ಯೇಸುವಿನ ಉಡುಪನ್ನು ಮುಟ್ಟಿದಳು. ಅದನ್ನು ಮುಟ್ಟಿದಾಕ್ಷಣ ಅವಳ ರಕ್ತಸ್ರಾವ ನಿಂತುಹೋಯಿತು. ಕಾಡುತ್ತಿದ್ದ ವ್ಯಾಧಿಯಿಂದ ತಾನು ಗುಣಹೊಂದಿದ್ದೇನೆಂದು ಆಕೆಗೆ ಅರಿವಾಯಿತು. ಇತ್ತ ಯೇಸು, ರೋಗವನ್ನು ಗುಣಪಡಿಸುವ ಶಕ್ತಿ ತಮ್ಮಿಂದ ಹೊರಹೊಮ್ಮಿದ್ದನ್ನು ತಕ್ಷಣ ತಿಳಿದು, ಸುತ್ತಲಿದ್ದ ಜನರತ್ತ ತಮ್ಮ ದೃಷ್ಟಿಯನ್ನು ಹರಿಸಿ, “ನನ್ನ ಉಡುಪನ್ನು ಮುಟ್ಟಿದವರಾರು?” ಎಂದು ಪ್ರಶ್ನಿಸಿದರು. ಅದಕ್ಕೆ ಶಿಷ್ಯರು, “ತಮ್ಮ ಸುತ್ತಲೂ ಜನರು ಮುತ್ತಿಕೊಂಡಿರುವುದು ತಮಗೆ ತಿಳಿದೇ ಇದೆ. ಆದರೂ ‘ನನ್ನನ್ನು ಮುಟ್ಟಿದವರು ಯಾರು?’ ಎಂದು ಕೇಳುತ್ತೀರಲ್ಲಾ” ಎಂದರು. ಆದರೆ ಯೇಸು ತಮ್ಮನ್ನು ಮುಟ್ಟಿದವರು ಯಾರೆಂದು ಗುರುತಿಸಲು ಸುತ್ತಲೂ ನೋಡುತ್ತಿದ್ದರು. ತನ್ನಲ್ಲಿ ಸಂಭವಿಸಿದ್ದನ್ನು ಅರಿತಿದ್ದ ಆ ಮಹಿಳೆ ಭಯದಿಂದ ನಡುಗುತ್ತಾ ಮುಂದೆ ಬಂದು ಯೇಸುವಿನ ಪಾದಕ್ಕೆ ಎರಗಿ, ಅವರಿಗೆ ನಡೆದ ಸಂಗತಿಯನ್ನು ತಿಳಿಸಿದಳು. ಯೇಸು ಆಕೆಗೆ, “ಮಗಳೇ, ನಿನ್ನ ವಿಶ್ವಾಸ ನಿನ್ನನ್ನು ಗುಣಪಡಿಸಿದೆ; ಸಮಾಧಾನದಿಂದ ಹೋಗು, ವ್ಯಾಧಿಮುಕ್ತಳಾಗಿ ಆರೋಗ್ಯದಿಂದಿರು,” ಎಂದು ಅನುಗ್ರಹಿಸಿದರು. ಯೇಸುಸ್ವಾಮಿ ಇನ್ನೂ ಮಾತನಾಡುತ್ತ ಇರುವಾಗಲೇ ಯಾಯಿರನ ಮನೆಯಿಂದ ಕೆಲವರು ಬಂದು ಅವನಿಗೆ, “ನಿಮ್ಮ ಮಗಳು ತೀರಿಹೋದಳು; ಇನ್ನೇಕೆ ಗುರುವಿಗೆ ತೊಂದರೆ ಕೊಡುತ್ತೀರಿ?” ಎಂದರು. ಅವರು ಹೇಳಿದ ಮಾತುಗಳನ್ನು ಯೇಸು ಕೇಳಿಯೂ ಅವನ್ನು ಲಕ್ಷ್ಯಕ್ಕೆ ತೆಗೆದುಕೊಳ್ಳದೆ ಯಾಯಿರನಿಗೆ, “ಭಯಪಡಬೇಡ, ನಿನ್ನಲ್ಲಿ ವಿಶ್ವಾಸ ಒಂದಿದ್ದರೆ ಸಾಕು,” ಎಂದರು. ಅನಂತರ ಪೇತ್ರ, ಯಕೋಬ ಹಾಗೂ ಅವನ ಸೋದರ ಯೊವಾನ್ನ, ಇವರನ್ನು ಮಾತ್ರ ತಮ್ಮ ಜೊತೆಯಲ್ಲಿ ಕರೆದುಕೊಂಡು ಯಾಯಿರನ ಮನೆಯನ್ನು ತಲುಪಿದರು. ಅಲ್ಲಿ ಜನರ ಗೋಳಾಟ, ಗೊಂದಲದ ದೃಶ್ಯ ಅವರ ಕಣ್ಣಿಗೆ ಬಿತ್ತು. ಯೇಸು ಮನೆಯೊಳಕ್ಕೆ ಹೋಗಿ, “ಏತಕ್ಕೆ ಇಷ್ಟೆಲ್ಲಾ ಗಲಭೆ, ಗೋಳಾಟ? ಬಾಲಕಿ ಸತ್ತಿಲ್ಲ, ನಿದ್ರಿಸುತ್ತಿದ್ದಾಳೆ,” ಎಂದರು. ಇದನ್ನು ಕೇಳಿದ ಜನರು, ಯೇಸುವನ್ನು ಪರಿಹಾಸ್ಯ ಮಾಡಿದರು. ಆದರೆ ಯೇಸು ಎಲ್ಲರನ್ನೂ ಹೊರಗೆ ಕಳುಹಿಸಿ ಬಾಲಕಿಯ ತಂದೆತಾಯಿಯನ್ನು ಮತ್ತು ತಮ್ಮೊಂದಿಗಿದ್ದ ಮೂವರು ಶಿಷ್ಯರನ್ನು ಮಾತ್ರ ಕರೆದುಕೊಂಡು ಆ ಬಾಲಕಿಯನ್ನು ಮಲಗಿಸಿದ್ದ ಕೊಠಡಿಯನ್ನು ಪ್ರವೇಶಿಸಿದರು. ಆಕೆಯ ಕೈಯನ್ನು ಹಿಡಿದು, “ತಲಿಥಾಕೂಮ್” ಎಂದರು. (‘ಮಗಳೇ, ನಿನಗೆ ಹೇಳುತ್ತೇನೆ, ಎದ್ದೇಳು’ ಎಂಬುದು ಆ ಮಾತಿನ ಅರ್ಥ) ಅವಳು ತಟ್ಟನೆ ಎದ್ದು ನಡೆದಾಡತೊಡಗಿದಳು. ಅಲ್ಲಿದ್ದವರೆಲ್ಲರೂ ಆಶ್ಚರ್ಯ ಭರಿತರಾದರು. ಅವಳಿಗೆ ಹನ್ನೆರಡು ವರ್ಷ ವಯಸ್ಸು ಆಗಿತ್ತು. ಈ ವಿಷಯವನ್ನು ಬೇರೆ ಯಾರಿಗೂ ತಿಳಿಸಬಾರದೆಂದು ಯೇಸು ಅವರಿಗೆ ಕಟ್ಟಪ್ಪಣೆ ಮಾಡಿದರು. ಬಾಲಕಿಗೆ ತಿನ್ನಲು ಏನಾದರೂ ಕೊಡುವಂತೆ ತಿಳಿಸಿದರು.

26.06.21

ಮೊದಲನೇ ವಾಚನ: ಆದಿಕಾಂಡ 18: 1-15

ಒಂದು ದಿನ ಅಬ್ರಹಾಮನು ಉರಿಬಿಸಿಲ ವೇಳೆಯಲ್ಲಿ ಮಮ್ರೋತೋಪಿನ ತನ್ನ ಗುಡಾರದ ಬಾಗಿಲಲ್ಲಿ ಕುಳಿತಿದ್ದನು. ಆಗ ಅವನಿಗೆ ಸರ್ವೇಶ್ವರ ಸ್ವಾಮಿಯ ದರ್ಶನವಾಯಿತು. ಅವನು ಕಣ್ಣೆತ್ತಿ ನೋಡಿದಾಗ ಯಾರೋ ಮೂರು ಮಂದಿ ಪುರುಷರು ಹತ್ತಿರದಲ್ಲೇ ನಿಂತಿದ್ದರು. ಅವರನ್ನು ಎದುರುಗೊಳ್ಳಲು ಅಬ್ರಹಾಮನು ಕೂಡಲೆ ಗುಡಾರದ ಬಾಗಿಲಿನಿಂದ ಓಡಿಬಂದು, ತಲೆಬಾಗಿ ನಮಸ್ಕರಿಸಿ, ಸ್ವಾವಿೂ, ದಯವಿರಲಿ, ದಾಸನ ಬಳಿಗೆ ದಯಮಾಡದೆ ಮುಂದೆ ಹೋಗಬೇಡಿ. ನೀರು ತರಿಸಿಕೊಡುತ್ತೇನೆ. ಕಾಲು ತೊಳೆದುಕೊಂಡು ಈ ಮರದ ನೆರಳಿನಲ್ಲಿ ವಿಶ್ರಮಿಸಿಕೊಳ್ಳಿ. ಸ್ವಲ್ಪ ಆಹಾರ ತರುತ್ತೇನೆ. ಊಟವಾದ ಮೇಲೆ ನೀವು ಮುಂದಕ್ಕೆ ಪ್ರಯಾಣ ಮಾಡಬಹುದು. ದಾಸನಿರುವ ಸ್ಥಳದ ಹತ್ತಿರ ಹಾದುಹೋಗುತ್ತಿದ್ದೀರಲ್ಲವೆ?” ಎನ್ನಲು ಅವರು “ನೀನು ಹೇಳಿದಂತೆಯೇ ಆಗಲಿ,” ಎಂದರು. ಆಗ ಅಬ್ರಹಾಮನು ಗುಡಾರದಲ್ಲಿದ್ದ ಸಾರಳ ಬಳಿಗೆ ಓಡಿ ಆಕೆಗೆ, “ಹಸನಾದ ಮೂರು ಸೇರುಹಿಟ್ಟನ್ನು ನಾದಿ, ಬೇಗ ರೊಟ್ಟಿಗಳನ್ನು ಮಾಡು,” ಎಂದನು. ಅನಂತರ ದನಗಳ ಹಟ್ಟಿಗೆ ಓಡಿಹೋಗಿ ಕೊಬ್ಬಿದ ಎಳೇ ಕರುವನ್ನು ತೆಗೆದು ಆಳಿನ ಕೈಗೆ ಕೊಟ್ಟನು. ಆಳು ಬೇಗನೆ ಅಡಿಗೆಮಾಡಿದನು. ತರುವಾಯ ಅಬ್ರಹಾಮನು ಹಾಲು ಮೊಸರನ್ನು ಹಾಗೂ ಅಟ್ಟಮಾಂಸವನ್ನು ತೆಗೆದುಕೊಂಡು ಬಂದು ಆ ಮನುಷ್ಯರಿಗೆ ಬಡಿಸಿದನು. ಅವರು ಮರದ ಕೆಳಗೆ ಊಟಮಾಡಿ ಮುಗಿಸುವವರೆಗೂ ಅವನೇ ಹತ್ತಿರ ನಿಂತು ಉಪಚಾರ ಮಾಡಿದನು. ಬಳಿಕ, “ನಿನ್ನ ಹೆಂಡತಿ ಸಾರಳು ಎಲ್ಲಿ?” ಎಂದು ಆ ಅತಿಥಿಗಳು ವಿಚಾರಿಸಿದಾಗ, “ಅಲ್ಲಿ ಗುಡಾರದಲ್ಲಿದ್ದಾಳೆ,” ಎಂದು ಉತ್ತರಕೊಟ್ಟನು. ಆಗ ಸರ್ವೇಶ್ವರಸ್ವಾಮಿ, “ಬರುವ ವರ್ಷ ಇದೇ ಕಾಲದಲ್ಲಿ ನಾನು ತಪ್ಪದೆ ಮರಳಿ ನಿನ್ನ ಬಳಿಗೆ ಬರುತ್ತೇನೆ; ಬಂದಾಗ ನಿನ್ನ ಹೆಂಡತಿ ಸಾರಳಿಗೆ ಮಗನಿರುತ್ತಾನೆ,” ಎಂದರು. ಈ ಮಾತು ಹಿಂದೆ ಗುಡಾರದ ಬಾಗಿಲಲ್ಲಿ ನಿಂತಿದ್ದ ಸಾರಳ ಕಿವಿಗೆ ಬಿದ್ದಿತು. ಅಬ್ರಹಾಮನು ಮತ್ತು ಸಾರಳು ಬಹುವೃದ್ಧರಾಗಿದ್ದರು; ಸಾರಳಿಗೆ ಮುಟ್ಟು ನಿಂತು ಹೋಗಿತ್ತು. ಎಂತಲೇ ಆಕೆ, “ನನ್ನಂಥ ಮುದುಕಿಗೆ ಸಂಭೋಗ ಸಾಧ್ಯವೆ? ನನ್ನ ಯಜಮಾನರೂ ಮುದುಕರಲ್ಲವೆ?” ಎಂದುಕೊಂಡು ನಕ್ಕಳು. ಅಬ್ರಹಾಮನಿಗೆ, ಸರ್ವೇಶ್ವರ “ಸಾರಳು ತಾನು ಮುದುಕಿಯಾದ ಕಾರಣ ಹೆರಲು ಸಾಧ್ಯವೆ’ ಎಂದು ನಕ್ಕಿದ್ದು ಏಕೆ? ಸರ್ವೇಶ್ವರನಿಗೆ ಅಸಾಧ್ಯವಾದುದು ಯಾವುದು? ನಾನು ಹೇಳಿದಂತೆಯೇ ಬರುವ ವರ್ಷದ ಇದೇ ಕಾಲದಲ್ಲಿ ನಾನು ನಿನ್ನ ಬಳಿಗೆ ಬಂದಾಗ ಸಾರಳಿಗೆ ಮಗನಿರುತ್ತಾನೆ” ಎಂದು ಹೇಳಿದರು. ಆಗ ಸಾರಳು ಭಯದಿಂದ, “ನಾನು ನಗಲಿಲ್ಲ” ಎಂದು ನಿರಾಕರಿಸಿದಳು. ಸರ್ವೇಶ್ವರ, “ಹಾಗನ್ನಬೇಡಮ್ಮಾ, ನೀನು ನಕ್ಕದ್ದು ನಿಜ,” ಎಂದರು.

ಕೀರ್ತನೆ: 1:46-47, 48-49, 50, 53, 54-55
ಶ್ಲೋಕ: ಮರೆಯಲಿಲ್ಲ ಪ್ರಭು ಕರುಣೆತೋರಲು. 

ಆಗ ಹೀಗೆಂದು ಮರಿಯಳು ಹೊಗಳಿದಳು:
“ಎನ್ನ ಮನ ಮಾಡುತ್ತಿದೆ ಸರ್ವೇಶ್ವರನ ಸ್ತುತಿ I
ಉಲ್ಲಾಸಿಸುತ್ತಿದೆ ಮುಕ್ತಿದಾತ ದೇವನಲಿ II
ತನ್ನ ದಾಸಿಯ ದೀನತೆಯನು ನೆನಪಿಗೆ ತಂದುಕೊಂಡನಾತ I

ಧನ್ಯಳೆಂದು ಹೊಗಳುವರೆನ್ನನು ಇಂದಿನಿಂದ ಸರ್ವಜನಾಂಗ II
ಏಕೆನೆ ಮಾಡಿಹನೆನಗೆ ಸರ್ವಶಕ್ತನು ಮಹತ್ಕಾರ್ಯ I
ನಿಜಕ್ಕೂ ಆತನ ನಾಮಧೇಯ ಪರಮಪೂಜ್ಯ II
ಆತನಲ್ಲಿ ಭಯಭಕ್ತಿಯುಳ್ಳವರಿಗೆ I

ಆತನ ಪ್ರೀತಿ ತಲತಲಾಂತರದವರೆಗೆ II
ತೃಪ್ತಿಪಡಿಸಿರುವನಾತ ಹಸಿದವರನು ಮೃಷ್ಟಾನ್ನದಿ I
ಹೊರದೂಡಿರುವನು ಸಿರಿವಂತರನು ಬರೀಗೈಯಲಿ II
ನೆರವಾದನು ತನ್ನ ದಾಸ ಇಸ್ರಯೇಲನಿಗೆ I

ಪೂರ್ವಜರಿಗಿತ್ತ ವಾಗ್ದಾನದ ಮೇರೆಗೆ II
ಮರೆಯಲಿಲ್ಲ ಆತ ಕರುಣೆತೋರಲು ಅಬ್ರಹಾಮನಿಗೆ I
ಅವನ ಸಂತತಿಗೆ, ಯುಗಯುಗಾಂತರದವರೆಗೆ II

ಶುಭಸಂದೇಶ: ಮತ್ತಾಯ 8:5-17

ಯೇಸುಸ್ವಾಮಿ ಕಫೆರ್ನವುಮ್ ಊರಿಗೆ ಬಂದಾಗ ಶತಾಧಿಪತಿಯೊಬ್ಬನು ಅವರನ್ನು ಎದುರುಗೊಂಡನು. “ಪ್ರಭೂ, ನನ್ನ ಸೇವಕ ಮನೆಯಲ್ಲಿ ಪಾಶ್ರ್ವವಾಯು ರೋಗದಿಂದ ಹಾಸಿಗೆ ಹಿಡಿದಿದ್ದಾನೆ. ಬಹಳವಾಗಿ ನರಳುತ್ತಿದ್ದಾನೆ,” ಎಂದು ವಿನಂತಿಸಿದನು. ಯೇಸು, “ನಾನೇ ಬಂದು ಅವನನ್ನು ಗುಣಪಡಿಸುತ್ತೇನೆ,” ಎಂದರು ಅದಕ್ಕೆ ಆ ಶತಾಧಿಪತಿ, “ಪ್ರಭುವೇ, ತಾವು ನನ್ನ ಮನೆಗೆ ಬರುವಷ್ಟು ಯೋಗ್ಯತೆ ನನಗಿಲ್ಲ. ತಾವು ಒಂದೇ ಒಂದು ಮಾತು ಹೇಳಿದರೆ ಸಾಕು, ನನ್ನ ಸೇವಕ ಸ್ವಸ್ಥನಾಗುವನು. ಏಕೆಂದರೆ, ನಾನೂ ಮತ್ತೊಬ್ಬರ ಕೈಕೆಳಗಿರುವವನು. ನನ್ನ ಅಧೀನದಲ್ಲೂ ಸೈನಿಕರಿದ್ದಾರೆ. ಅವರಲ್ಲಿ ಒಬ್ಬನಿಗೆ ನಾನು, ‘ಬಾ’ ಎಂದರೆ ಬರುತ್ತಾನೆ. ಇನ್ನೊಬ್ಬನಿಗೆ, ‘ಹೋಗು’ ಎಂದರೆ ಹೋಗುತ್ತಾನೆ. ಸೇವಕನಿಗೆ, ‘ಇಂಥದ್ದನ್ನು ಮಾಡು’ ಎಂದರೆ ಮಾಡುತ್ತಾನೆ," ಎಂದನು. ಈ ಮಾತನ್ನು ಕೇಳಿದ್ದೇ ಯೇಸುವಿಗೆ ಅತ್ಯಾಶ್ಚರ್ಯವಾಯಿತು. ತಮ್ಮನ್ನು ಹಿಂಬಾಲಿಸಿ ಬರುತ್ತಿದ್ದ ಜನರನ್ನು ನೋಡಿ ಹೀಗೆಂದರು: "ಇಂಥ ಗಾಢ ವಿಶ್ವಾಸವನ್ನು ನಾನು ಇಸ್ರಯೇಲ್ ಜನರಲ್ಲಿ ಕೂಡ ಕಾಣಲಿಲ್ಲವೆಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ. ಪೂರ್ವ ಪಶ್ಚಿಮ ದಿಕ್ಕುಗಳಿಂದ ಅನೇಕ ಜನರು ಬಂದು ಅಬ್ರಹಾಮ, ಇಸಾಕ, ಯಕೋಬರ ಸಮೇತ ಸ್ವರ್ಗಸಾಮ್ರಾಜ್ಯದ ಹಬ್ಬದೂಟದಲ್ಲಿ ಭಾಗಿಗಳಾಗುವರು. ಆದರೆ ಯಾರು ಈ ಸಾಮ್ರಾಜ್ಯಕ್ಕೆ ಬಾಧ್ಯಸ್ಥರೋ ಅವರನ್ನೇ ಹೊರಗೆ ದಬ್ಬಲಾಗುವುದು; ಅಲ್ಲಿ, ಆ ಕಾರ್ಗತ್ತಲಲ್ಲಿ, ಅವರ ಗೋಳಾಟವೇನು! ಹಲ್ಲು ಕಡಿತವೇನು!" ಅನಂತರ ಯೇಸು ಆ ಶತಾಧಿಪತಿಗೆ, "ಇನ್ನು ಮನೆಗೆ ಹೋಗು, ನೀನು ವಿಶ್ವಾಸಿಸಿದಂತೆಯೇ ಆಗುವುದು," ಎಂದರು. ಅದೇ ಕ್ಷಣದಲ್ಲಿ ಅವನ ಸೇವಕನು ಸ್ವಸ್ಥನಾದನು. ತರುವಾಯ ಯೇಸುಸ್ವಾಮಿ ಪೇತ್ರನ ಮನೆಗೆ ಬಂದರು. ಅಲ್ಲಿ ಪೇತ್ರನ ಅತ್ತೆ ಜ್ವರದಿಂದ ಮಲಗಿರುವುದನ್ನು ಕಂಡರು. ಯೇಸು ಆಕೆಯ ಕೈ ಮುಟ್ಟಿದುದೇ ಜ್ವರ ಬಿಟ್ಟುಹೋಯಿತು, ಆಕೆ ಎದ್ದು ಅವರನ್ನು ಸತ್ಕರಿಸಿದಳು.

25.06.21 - "ತಾವು ಒಂದೇ ಒಂದು ಮಾತು ಹೇಳಿದರೆ ಸಾಕು, ನನ್ನ ಸೇವಕ ಸ್ವಸ್ಥನಾಗುವನು"

ಮೊದಲನೇ ವಾಚನ: ಆದಿಕಾಂಡ 17: 1, 9-10, 15-22


ಅಬ್ರಾಮನಿಗೆ ತೊಂಬತ್ತೊಂಬತ್ತು ವರ್ಷಗಳಾಗಿದ್ದಾಗ, ಸರ್ವೇಶ್ವರ ದರ್ಶನವಿತ್ತು ಇಂತೆಂದರು: “ನಾನು ಸರ್ವಶಕ್ತ ಸರ್ವೇಶ್ವರ. ನೀನು ನನ್ನ ಸಮ್ಮುಖದಲ್ಲಿದ್ದು ನಿರ್ದೋಷಿಯಾಗಿ ನಡೆದುಕೊಳ್ಳಬೇಕು. ಇದಲ್ಲದೆ ದೇವರು ಅಬ್ರಹಾಮನಿಗೆ ಹೀಗೆಂದು ಹೇಳಿದರು: “ನೀನು ಕೂಡ ನನ್ನ ಒಡಂಬಡಿಕೆಯನ್ನು ಕೈಗೊಂಡು ನಡೆಯಬೇಕು. ನೀನು ಮಾತ್ರವಲ್ಲ, ನಿನ್ನ ಸಂತತಿಯವರು ತಲತಲಾಂತರಕ್ಕೂ ಅದನ್ನು ಕೈಗೊಂಡು ನಡೆಯಬೇಕು. ನೀನೂ ನಿನ್ನ ಸಂತತಿಯವರೂ ಕೈಗೊಳ್ಳಬೇಕಾದ ನನ್ನ ಒಡಂಬಡಿಕೆ ಇದು: ನಿಮ್ಮಲ್ಲಿ ಪ್ರತಿಯೊಬ್ಬ ಗಂಡಸಿಗೂ ಸುನ್ನತಿಯಾಗಬೇಕು. ದೇವರು ಅಬ್ರಹಾಮನಿಗೆ ಇನ್ನೂ ಹೇಳಿದ್ದು ಏನೆಂದರೆ: “ನೀನು ಇನ್ನು ಮುಂದೆ ನಿನ್ನ ಹೆಂಡತಿಯನ್ನು ಸಾರಯಳು ಎಂದು ಕರೆಯದೆ ಸಾರಳು ಎಂದು ಕರೆಯಬೇಕು. ನಾನು ಆಕೆಯನ್ನು ಆಶೀರ್ವದಿಸಿದ್ದೇನೆ. ಆಕೆ ನಿನಗೊಬ್ಬ ಮಗನನ್ನು ಹೆರುವಳು. ನನ್ನ ಆಶೀರ್ವಾದ ಪಡೆದ ಆಕೆ ರಾಷ್ಟ್ರಗಳಿಗೆ ಮಾತೆಯಾಗುವಳು; ಆಕೆಯಿಂದ ರಾಷ್ಟ್ರಗಳೂ, ರಾಜರುಗಳೂ ಉತ್ಪತ್ತಿಯಾಗುವರು.” ಅಬ್ರಹಾಮನು ಅಡ್ಡಬಿದ್ದು ಸಾಷ್ಟಾಂಗ ಪ್ರಣಾಮ ಮಾಡಿದನು. ಆದರೆ, “ನೂರು ವರ್ಷದವನಿಗೆ ಮಗ ಹುಟ್ಟುವುದುಂಟೆ? ತೊಂಬತ್ತು ವರ್ಷದವಳಾದ ಸಾರಳು ಹೆತ್ತಾಳೆ?” ಎಂದು ಅಬ್ರಹಾಮನು ಮನಸ್ಸಿನಲ್ಲೇ ನೆನೆದು ನಕ್ಕು ದೇವರಿಗೆ, ಅದಕ್ಕೆ ದೇವರು, “ಇಲ್ಲ, ನಿನ್ನ ಹೆಂಡತಿ ಸಾರಳೇ ನಿನಗೊಂದು ಮಗನನ್ನು ಹೆರುವಳು. ಅವನಿಗೆ ಇಸಾಕನೆಂದು ಹೆಸರಿಡಬೇಕು. ನನ್ನ ಒಡಂಬಡಿಕೆಯನ್ನು ಅವನೊಂದಿಗೂ ಅವನ ಸಂತತಿಯೊಂದಿಗೂ ಚಿರವಾದ ಒಡಂಬಡಿಕೆಯಾಗಿ ಸ್ಥಿರಗೊಳಿಸುತ್ತೇನೆ ಇಷ್ಮಾಯೇಲನ ವಿಷಯದಲ್ಲಿ ನೀನು ಮಾಡಿದ ಬಿನ್ನಹವನ್ನು ಕೇಳಿದ್ದೇನೆ. ಅವನನ್ನೂ ಆಶೀರ್ವದಿಸಿದ್ದೇನೆ. ಅವನನ್ನು ಅಭಿವೃದ್ಧಿಮಾಡಿ ಅವನಿಗೆ ಅತ್ಯಧಿಕವಾದ ಸಂತತಿಯನ್ನು ಕೊಡುತ್ತೇನೆ. ಅವನು ಹನ್ನೆರಡು ಮಂದಿ ಅಧಿಪತಿಗಳಿಗೆ ಮೂಲ ಪಿತನಾಗುವನು. ಅವನ ಸಂತತಿಯನ್ನು ದೊಡ್ಡ ರಾಷ್ಟ್ರವನ್ನಾಗಿ ಮಾಡುತ್ತೇನೆ. ಆದರೆ ಆ ನನ್ನ ಒಡಂಬಡಿಕೆಯನ್ನು ಇಸಾಕನಲ್ಲಿಯೇ ಊರ್ಜಿತಗೊಳಿಸುತ್ತೇನೆ. ಬರುವ ವರ್ಷ ಇದೇ ಕಾಲದಲ್ಲಿ ಸಾರಳು ಅವನನ್ನು ಹೆರುವಳು,” ಎಂದರು. ಇಷ್ಟನ್ನು ಮಾತಾಡಿ ಮುಗಿಸಿದ ಮೇಲೆ ದೇವರು ಅಬ್ರಹಾಮನಿಂದ ಅದೃಶ್ಯರಾದರು.

ಕೀರ್ತನೆ: 128:1, 3, 4-5

ಶ್ಲೋಕ: ಧನ್ಯನು, ಪ್ರಭುವಿನಲಿ ಭಯಭಕ್ತಿಯುಳ್ಳವನು I

ಧನ್ಯನು, ಆತನ ಮಾರ್ಗಗಳಲೇ ನಡೆಯುವವನು II
ನಿನ್ನ ಕೈ ಕೆಸರಾದರೆ ಬಾಯಿ ಮೊಸರಾಗುವುದು I
ಧನ್ಯನಾಗುವೆ ನೀನು; ನಿನಗೆ ಶುಭವಾಗುವುದು II ಶ್ಲೋಕ

ಇರುವಳು ನಿನ್ನ ಪತ್ನಿ ಮನೆಯಲ್ಲಿ ಫಲಭರಿತ ದ್ರಾಕ್ಷಾಲತೆಯಂತೆ I
ಕೂರುವರು ನಿನ್ನ ಮಕ್ಕಳು ಊಟದ ಪಂಕ್ತಿಯಲಿ ಓಲಿವ್ ಸಸಿಗಳಂತೆ II ಶ್ಲೋಕ
ಹೊಂದುವನು ಅಂತಹ ಆಶೀರ್ವಾದವನು I
ಪ್ರಭುವಿನಲಿ ಭಯಭಕ್ತಿಯುಳ್ಳವನು II ಶ್ಲೋಕ

ಸಿಯೋನಿನಲ್ಲಿರುವ ಪ್ರಭು ನಿನ್ನನು ಆಶೀರ್ವದಿಸಲಿ I
ಜೆರುಸಲೇಮಿನ ಏಳ್ಗೆಯನು ಕಾಣು ಇಡೀ ಜೀವಮಾನದಲಿ II ಶ್ಲೋಕ

ಶುಭಸಂದೇಶ: ಮತ್ತಾಯ 8:1-4


ಯೇಸುಸ್ವಾಮಿ ಬೆಟ್ಟದಿಂದ ಇಳಿದು ಬಂದಾಗ ಜನರು ಗುಂಪುಗುಂಪಾಗಿ ಅವರನ್ನು ಹಿಂಬಾಲಿಸಿದರು. ಆಗ ಒಬ್ಬ ಕುಷ್ಠರೋಗಿ ಯೇಸುವಿನ ಮುಂದೆ ಬಂದು, ತಲೆಬಾಗಿ, "ಸ್ವಾವಿೂ, ತಾವು ಮನಸ್ಸುಮಾಡಿದರೆ ನನ್ನನ್ನು ಗುಣ ಮಾಡಬಲ್ಲಿರಿ," ಎಂದು ಬೇಡಿದನು. ಯೇಸು ಕೈಚಾಚಿ ಅವನನ್ನು ಮುಟ್ಟಿ, “ಖಂಡಿತವಾಗಿಯೂ ನನಗೆ ಮನಸ್ಸಿದೆ, ಗುಣ ಹೊಂದು,” ಎಂದರು. ತಕ್ಷಣವೇ ಅವನ ಕುಷ್ಠವು ಮಾಯವಾಯಿತು. ಯೇಸು ಅವನಿಗೆ, “ಎಚ್ಚರಿಕೆ, ನೀನು ಗುಣಹೊಂದಿರುವುದನ್ನು ಯಾರಿಗೂ ಹೇಳಕೂಡದು. ಆದರೆ ನೆಟ್ಟಗೆ ಯಾಜಕನ ಬಳಿಗೆ ಹೋಗು; ಅವನು ನಿನ್ನನ್ನು ಪರೀಕ್ಷಿಸಿ ನೋಡಲಿ. ಅನಂತರ ಮೋಶೆ ನಿಯಮಿಸಿರುವ ಪ್ರಕಾರ ಶುದ್ಧೀಕರಣವಿಧಿಯನ್ನು ಅನುಸರಿಸು. ಇದು ಜನರಿಗೆ ಸಾಕ್ಷಿಯಾಗಿರಲಿ,” ಎಂದರು. ಯೇಸುಸ್ವಾಮಿ ಕಫೆರ್ನವುಮ್ ಊರಿಗೆ ಬಂದಾಗ ಶತಾಧಿಪತಿಯೊಬ್ಬನು ಅವರನ್ನು ಎದುರುಗೊಂಡನು. “ಪ್ರಭೂ, ನನ್ನ ಸೇವಕ ಮನೆಯಲ್ಲಿ ಪಾಶ್ರ್ವವಾಯು ರೋಗದಿಂದ ಹಾಸಿಗೆ ಹಿಡಿದಿದ್ದಾನೆ. ಬಹಳವಾಗಿ ನರಳುತ್ತಿದ್ದಾನೆ,” ಎಂದು ವಿನಂತಿಸಿದನು. ಯೇಸು, “ನಾನೇ ಬಂದು ಅವನನ್ನು ಗುಣಪಡಿಸುತ್ತೇನೆ,” ಎಂದರು ಅದಕ್ಕೆ ಆ ಶತಾಧಿಪತಿ, “ಪ್ರಭುವೇ, ತಾವು ನನ್ನ ಮನೆಗೆ ಬರುವಷ್ಟು ಯೋಗ್ಯತೆ ನನಗಿಲ್ಲ. ತಾವು ಒಂದೇ ಒಂದು ಮಾತು ಹೇಳಿದರೆ ಸಾಕು, ನನ್ನ ಸೇವಕ ಸ್ವಸ್ಥನಾಗುವನು.

24.06.2021

ಮೊದಲನೇ ವಾಚನ: ಪ್ರವಾದಿ ಯೆಶಾಯನ ಗ್ರಂಥ 49:1-6

ಕಿವಿಗೊಡಿ ನನ್ನ ದ್ವೀಪನಿವಾಸಿಗಳೇ, ಆಲಿಸಿ ನನ್ನನ್ನು ದೂರದ ಜನಾಂಗಗಳೇ, ಸರ್ವೇಶ್ವರ ಕರೆದನೆನ್ನನ್ನು ಗರ್ಭದಲ್ಲಿದ್ದಾಗಲೇ; ಹೆಸರಿಟ್ಟನೆನಗೆ ನಾನು ತಾಯಿಯ ಉದರದಲ್ಲಿದ್ದಾಗಲೇ. ಮಾಡಿದನು ನನ್ನ ನುಡಿಯನ್ನು ಹರಿತವಾದ ಖಡ್ಗವನ್ನಾಗಿ ಮುಚ್ಚಿಟ್ಟಹನು ನನ್ನನ್ನು ತನ್ನ ಕರದ ನೆರಳಿನಲ್ಲಿ ರೂಪಿಸಿಹನು ನನ್ನನ್ನು ಚೂಪಾದ ಬಾಣವನ್ನಾಗಿ, ಬಚ್ಚಿಟ್ಟಿಹನು ನನ್ನನು ತನ್ನ ಬತ್ತಳಿಕೆಯಲ್ಲಿ. ಆತನೆನಗೆ ಇಂತೆಂದ : “ನೀನೆನ್ನ ದಾಸ; ನನ್ನ ಮಹಿಮೆ ಬೆಳಗಿಸುವ ಇಸ್ರಯೇಲ.” ಇಂತೆಂದುಕೊಂಡೆ ನಾನಾಗ : ವ್ಯರ್ಥವಾಯಿತು ನನ್ನ ಸಾಮರ್ಥ್ಯವೆಲ್ಲ ಶೂನ್ಯವಾಗಿ ಹೋಯಿತು ನನ್ನ ಶಕ್ತಿಯೆಲ್ಲ ನನಗೆ ದೊರಕುವುದು ನ್ಯಾಯ ಸರ್ವೇಶ್ವರನ ಕೈಯಲ್ಲೇ, ನನಗೆ ಬರುವುದು ಬಹುಮಾನ ಆ ದೇವರಿಂದಲೇ. ಯಕೋಬ್ಯರನ್ನು ತನ್ನ ಬಳಿಗೆ ಕರೆತರಲು ಇಸ್ರಯೇಲರನ್ನು ತನ್ನೊಂದಿಗೆ ಸೇರಿಸಿಕೊಳ್ಳಲು ತನ್ನ ದಾಸನನ್ನಾಗಿ ನನ್ನ ರೂಪಿಸಿದನು, ತಾಯ ಗರ್ಭದಲ್ಲಿದ್ದಾಗಲೇ ಮಾಡಿದನಿದನು. ಸನ್ಮಾನ್ಯನು ನಾನು ಸರ್ವೇಶ್ವರನ ದೃಷ್ಟಿಯಲಿ ನನ್ನ ಶಕ್ತಿಸಾಮರ್ಥ್ಯ ಇರುವುದು ಆ ದೇವರಲಿ. ಮತ್ತೆ ಆತ ಇಂತೆಂದನು ನನಗೆ : “ಮಹತ್ಕಾರ್ಯವೇನೂ ಅಲ್ಲ ನನ್ನ ದಾಸನಾದ ನಿನಗೆ ಕುಲಗಳನು ಉದ್ಧರಿಸುವ ಮಾತ್ರಕೆ ಇಸ್ರಯೇಲರಲಿ ರಕ್ಷಿತರಾದವರನ್ನು ಮರಳಿ ಬರಮಾಡುವ ಮಾತ್ರಕೆ. ನೇಮಿಸಿರುವೆನು ನಿನ್ನನ್ನು ಜ್ಯೋತಿಯನ್ನಾಗಿ ಸರ್ವ ಜನಾಂಗಗಳಿಗೆ.

ಕೀರ್ತನೆ: 139:1-3, 13-15
ಶ್ಲೋಕ: ನಿನಗೆ ವಂದನೆ, ನೀ ನನ್ನ ಭಯಭಕ್ತಿಗೆ ಪಾತ್ರ

ಭು, ಪರಿಶೋಧಿಸಿರುವೆ ನೀ ನನ್ನನು I
ಅರಿತುಕೊಂಡಿರುವೆ ಅಂತರಂಗವನು II
ನಾ ಕೂರುವುದೂ ಏಳುವುದೂ ನಿನಗೆ ಗೊತ್ತಿದೆ I
ನನ್ನಾಲೋಚನೆ ದೂರದಿಂದಲೇ ನಿನಗೆ ತಿಳಿದಿದೆ II

ನನ್ನ ನಡೆಯನು, ನಿದ್ರೆಯನು ನೀ ಬಲ್ಲಾತ I
ನನ್ನ ನಡತೆಯೆಲ್ಲವು ನಿನಗೆ ಸುಪರಿಚಿತ II
ನನ್ನ ಅಂತರಂಗವನು ಉಂಟುಮಾಡಿದಾತ ನೀನು I
ತಾಯಗರ್ಭದಲೆ ನನ್ನ ರೂಪಿಸಿದಾತ ನೀನು II

ನಿನಗೆ ವಂದನೆ, ನೀ ನನ್ನ ಭಯಭಕ್ತಿಗೆ ಪಾತ್ರ I
ನಿನ್ನ ಕೃತ್ಯಗಳು ಅದ್ಭುತಕರ ಹಾಗೂ ವಿಚಿತ್ರ I
ನನ್ನ ಬಗ್ಗೆ ನಿನಗಿರುವ ಪೂರ್ಣ ಅರಿವು ಸಮರ್ಥ II
ನನ್ನ ಅಸ್ಥಿಪಂಜರವನು ರೂಪಿಸುವಾಗ I

ತಾಯಗರ್ಭದೊಳು ಅಚ್ಚರದಿ ರಚಿಸುವಾಗ I
ಗುಟ್ಟಾಗಿ ನಾನಲ್ಲಿ ಬೆಳೆಯುತ್ತಿದ್ದಾಗ I
ಮರೆಯಾಗಿರಲಿಲ್ಲ ನಾನು ನಿನಗಾಗ II

ಎರಡನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 13:22-26

ಪೌಲನು ಉಪದೇಶ ಮಾಡುತ್ತಾ ಹೀಗೆಂದನು: "ದೇವರು ಸೌಲನನ್ನು ತ್ಯಜಿಸಿ ದಾವೀದನನ್ನು ಅರಸನನ್ನಾಗಿ ನೇಮಿಸಿದರು. ಇವನ ಬಗ್ಗೆ ದೇವರು, “ಜೆಸ್ಸೆಯನ ಮಗ ದಾವೀದನು ನನಗೆ ಮೆಚ್ಚುಗೆಯಾದ ವ್ಯಕ್ತಿ; ಇವನು ನನ್ನ ಆಶೆ ಆಕಾಂಕ್ಷೆಗಳನ್ನೆಲ್ಲಾ ಪೂರೈಸುವನು,” ಎಂದು ತಮ್ಮ ಒಪ್ಪಿಗೆಯನ್ನು ಸೂಚಿಸಿದರು. ಈ ದಾವೀದನ ಸಂತತಿಯಿಂದಲೇ ದೇವರು ತಮ್ಮ ವಾಗ್ದಾನದ ಪ್ರಕಾರ ಇಸ್ರಯೇಲ್ ಜನರಿಗೆ ಒಬ್ಬ ಉದ್ಧಾರಕನನ್ನು ಕಳುಹಿಸಿದರು. ಇವರೇ ಯೇಸುಸ್ವಾಮಿ. ಇವರ ಆಗಮನಕ್ಕೆ ಸಿದ್ಧತೆಯಾಗಿ, ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿ ದೇವರಿಗೆ ಅಭಿಮುಖರಾಗಿ ಸ್ನಾನದೀಕ್ಷೆಯನ್ನು ಪಡೆಯಬೇಕೆಂದು ಯೊವಾನ್ನನು ಇಸ್ರಯೇಲಿನ ಎಲ್ಲ ಜನರಿಗೆ ಸಾರಿದರು. ಯೊವಾನ್ನನು ತನ್ನ ನಿಯೋಗವನ್ನು ಪೂರೈಸುತ್ತಿದ್ದಂತೆ ಜನರಿಗೆ, ‘ನಾನು ಯಾರೆಂದು ನೀವು ನೆನೆಸುತ್ತೀರಿ? ನೀವು ಎದುರು ನೋಡುತ್ತಿರುವ ವ್ಯಕ್ತಿ ನಾನಲ್ಲ. ನನ್ನ ಅನಂತರ ಒಬ್ಬರು ಬರುವರು; ಅವರ ಪಾದರಕ್ಷೆಗಳನ್ನು ಬಿಚ್ಚುವುದಕ್ಕೂ ನಾನು ಯೋಗ್ಯನಲ್ಲ,’ ಎಂದನು. “ನನ್ನ ಸಹೋದರರೇ, ಅಬ್ರಹಾಮನ ಸಂತತಿಯವರೇ, ಮತ್ತು ದೇವರಲ್ಲಿ ಭಯಭಕ್ತಿ ಉಳ್ಳ ಇನ್ನಿತರರೇ, ಈ ಜೀವೋದ್ಧಾರದ ಸಂದೇಶವನ್ನು ಕಳುಹಿಸಿರುವುದು ನಮಗಾಗಿಯೇ."

ಶುಭಸಂದೇಶ: ಲೂಕ  1:57-66, 80


ದಿನ ತುಂಬಿದಾಗ ಎಲಿಜಬೇತಳು ಗಂಡುಮಗುವಿಗೆ ಜನ್ಮವಿತ್ತಳು. ಸರ್ವೇಶ್ವರ ಆಕೆಗೆ ವಿಶೇಷ ಕೃಪೆ ತೋರಿದ್ದಾರೆಂದು ಅರಿತುಕೊಂಡ ನೆರೆಹೊರೆಯವರೂ ಬಂಧುಬಳಗದವರೂ ಬಂದು ಆಕೆಯೊಡನೆ ಸೇರಿ ಸಂತೋಷಪಟ್ಟರು. ಎಂಟನೆಯ ದಿನ ಮಗುವಿನ ಸುನ್ನತಿಗಾಗಿ ಅವರು ಬಂದು ಅದಕ್ಕೆ, ತಂದೆಯ ಹೆಸರನ್ನು ಅನುಸರಿಸಿ, ಜಕರೀಯನೆಂದು ನಾಮಕರಣ ಮಾಡುವುದರಲ್ಲಿ ಇದ್ದರು. ಆದರೆ ಮಗುವಿನ ತಾಯಿ, “ಇಲ್ಲ, ಅದು ಕೂಡದು, ಅವನಿಗೆ ‘ಯೊವಾನ್ನ’ ಎಂಬ ಹೆಸರಿಡಬೇಕು,” ಎಂದಳು. ಅದಕ್ಕೆ ಅವರು, “ನಿನ್ನ ಬಂಧುಬಳಗದವರಲ್ಲಿ ಯಾರಿಗೂ ಈ ಹೆಸರು ಇಲ್ಲವಲ್ಲಾ,” ಎಂದು ಹೇಳಿ, “ಮಗುವಿಗೆ ಏನು ಹೆಸರಿಡಬೇಕೆನ್ನುತ್ತೀರಿ?” ಎಂದು ಮಗುವಿನ ತಂದೆಗೆ ಸನ್ನೆಮಾಡಿ ಕೇಳಿದರು. ಆಗ ಜಕರೀಯನು ಬರೆಯುವ ಒಂದು ಹಲಗೆಯನ್ನು ತರಿಸಿಕೊಂಡು, ‘ಇವನ ಹೆಸರು ಯೊವಾನ್ನ’ ಎಂದು ಬರೆದನು. ಎಲ್ಲರೂ ಬೆರಗಾದರು. ತಕ್ಷಣವೇ ಅವನಿಗೆ ಬಾಯಿ ಬಂದಿತು; ನಾಲಿಗೆ ಸಡಿಲವಾಯಿತು; ಅವನು ಮಾತನಾಡಲು ಆರಂಭಿಸಿ ದೇವರನ್ನು ಸ್ತುತಿಸಿದನು. ನೆರೆಹೊರೆಯವರೆಲ್ಲರೂ ತಲ್ಲಣಗೊಂಡರು. ಈ ಸಮಾಚಾರ ಜುದೇಯದ ಗುಡ್ಡಗಾಡು ಪ್ರಾಂತ್ಯದಲ್ಲೆಲ್ಲಾ ಹರಡಿತು. ಕೇಳಿದವರೆಲ್ಲರೂ ಈ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಂಡು, ‘ಈ ಮಗು ಮುಂದೆ ಎಂಥವನಾಗುವನೋ!’ ಎಂದುಕೊಂಡರು. ನಿಶ್ಚಯವಾಗಿಯೂ ಸರ್ವೇಶ್ವರನ ಅಭಯ ಹಸ್ತವು ಈ ಮಗುವಿನ ಮೇಲಿತ್ತು. ಬಾಲಕನು ಬೆಳೆದಂತೆ ಆತ್ಮಶಕ್ತಿಯುತನಾದನು. ಇಸ್ರಯೇಲ್ ಜನರಿಗೆ ಬಹಿರಂಗವಾಗಿ ಕಾಣಿಸಿಕೊಳ್ಳುವವರೆಗೂ ಅವನು ಬೆಂಗಾಡಿನಲ್ಲೇ ವಾಸಿಸುತ್ತಿದ್ದನು.

23.06.21 - "ಒಳ್ಳೆಯ ಮರ ಒಳ್ಳೆಯ ಹಣ್ಣನ್ನೂ ಕೆಟ್ಟ ಮರವು ಕೆಟ್ಟ ಹಣ್ಣನ್ನೂ ಕೊಡುತ್ತದೆ"

ಮೊದಲನೇ ವಾಚನ: ಆದಿಕಾಂಡ 15:1-12, 17-18

ಈ ಘಟನೆಗಳೆಲ್ಲ ನಡೆದ ಮೇಲೆ ಅಬ್ರಾಮನಿಗೆ ಒಂದು ದಿವ್ಯ ದರ್ಶನ ಆಯಿತು. ಅದರಲ್ಲಿ ಸರ್ವೇಶ್ವರಸ್ವಾಮಿಯ ಈ ವಾಣಿ ಕೇಳಿಸಿತು: “ಅಬ್ರಾಮನೇ, ಭಯಪಡಬೇಡ, ನಿನ್ನನ್ನು ರಕ್ಷಿಸುವ ಕವಚ ನಾನೇ, ಘನವಾದ ಬಹುಮಾನ ಸಿಗುವುದು ನಿನಗೆ.” ಅದಕ್ಕೆ ಪ್ರತ್ಯುತ್ತರವಾಗಿ ಅಬ್ರಾಮನು - "ಸ್ವಾಮಿ ಸರ್ವೇಶ್ವರಾ, ನನಗೆ ಏನು ಕೊಟ್ಟರೇನು? ನಾನು ಪುತ್ರಸಂತಾನವಿಲ್ಲದವನು. ನನ್ನ ಮನೆ ಮಾರುಗಳಿಗೆ ಉತ್ತರಾಧಿಕಾರಿ ದಮಸ್ಕದ ಎಲೀಯೆಜರನೇ ಹೊರತು ಮತ್ತಾರೂ ಇಲ್ಲ. ನೀವು ನನಗೆ ಮಕ್ಕಳನ್ನು ಕೊಟ್ಟಿಲ್ಲ. ನನ್ನ ಮನೆದಾಸನೇ ನನಗೆ ಉತ್ತರಾಧಿಕಾರಿ,” ಎಂದನು. ಮತ್ತೆ ಸ್ವಾಮಿಯ ವಾಣಿ - “ಇಲ್ಲ, ಅವನು ಉತ್ತರಾಧಿಕಾರಿಯಾಗುವುದಿಲ್ಲ. ನಿನ್ನಿಂದ ಹುಟ್ಟಿದವನೇ ನಿನಗೆ ಉತ್ತರಾಧಿಕಾರಿ ಆಗುತ್ತಾನೆ,” ಎಂದಿತು. ಸರ್ವೇಶ್ವರ ಬಳಿಕ ಅಬ್ರಾಮನನ್ನು ಹೊರಗೆ ಕರೆತಂದು, “ಆಕಾಶದ ಕಡೆಗೆ ನೋಡು. ಆ ನಕ್ಷತ್ರಗಳನ್ನು ನಿನ್ನಿಂದಾದರೆ ಲೆಕ್ಕಿಸು. ನಿನ್ನ ಸಂತಾನವು ಅಷ್ಟು ಅಸಂಖ್ಯಾತವಾಗುವುದು!” ಎಂದರು. ಅಬ್ರಾಮನು ಸರ್ವೇಶ್ವರಸ್ವಾಮಿಯಲ್ಲಿ ವಿಶ್ವಾಸವಿಟ್ಟನು. ಅವರು ಅವನ ವಿಶ್ವಾಸವೇ ಸರಿಯಾದ ಸಂಬಂಧವೆಂದು ಪರಿಗಣಿಸಿದರು. ಸರ್ವೇಶ್ವರ ಬಳಿಕ ಅಬ್ರಾಮನಿಗೆ ಇಂತೆಂದರು: “ಈ ನಾಡನ್ನು ನಿನಗೆ ಸೊತ್ತಾಗಿ ಕೊಡಬೇಕೆಂದು ಬಾಬಿಲೋನಿನಲ್ಲಿರುವ ಊರ್ ಪಟ್ಟಣದಿಂದ ನಿನ್ನನ್ನು ಬರಮಾಡಿದ ಸರ್ವೇಶ್ವರ ನಾನೇ,” ಎಂದರು. ಅದಕ್ಕೆ ಅಬ್ರಾಮನು, “ಸರ್ವೇಶ್ವರಾ, ಇದು ನನ್ನ ಸೊತ್ತು ಎಂದು ತಿಳಿದುಕೊಳ್ಳುವುದು ಹೇಗೆ?” ಎಂದನು. ಸರ್ವೇಶ್ವರ ಪ್ರತ್ಯುತ್ತರವಾಗಿ, “ನೀನು ಮೂರು ವರ್ಷದ ಒಂದು ಕಡಸನ್ನು, ಒಂದು ಆಡನ್ನು, ಒಂದು ಟಗರನ್ನು, ಒಂದು ಬೆಳವಕ್ಕಿಯನ್ನು ಹಾಗು ಒಂದು ಮರಿಪಾರಿವಾಳವನ್ನು ತೆಗೆದುಕೊಂಡು ಬಾ,” ಎಂದರು. ಅಬ್ರಾಮನು ಅವುಗಳನ್ನೆಲ್ಲಾ ತೆಗೆದುಕೊಂಡು ಬಂದು ಆ ಪ್ರಾಣಿಗಳನ್ನು ಕಡಿದು, ಎರಡೆರಡು ಹೋಳು ಮಾಡಿ, ತುಂಡಿಗೆ ತುಂಡನ್ನು ಎದುರಾಗಿಟ್ಟನು. ಪಕ್ಷಿಗಳನ್ನು ಮಾತ್ರ ಕಡಿಯಲಿಲ್ಲ. ಆ ಪ್ರಾಣಿಗಳ ತುಂಡುಗಳ ಮೇಲೆ ರಣಹದ್ದುಗಳು ಎರಗಿದಾಗ ಅಬ್ರಾಮನು ಅವುಗಳನ್ನು ಓಡಿಸಿಬಿಟ್ಟನು. ಹೊತ್ತು ಮುಳುಗುತ್ತಿದ್ದಾಗ ಅಬ್ರಾಮನಿಗೆ ಗಾಢನಿದ್ರೆ ಹತ್ತಿತು. ಭೀಕರವಾದ ಕಾರ್ಗತ್ತಲು ಅವನನ್ನು ಕವಿಯಿತು. ಹೊತ್ತು ಮುಳುಗಿ ಕಾರ್ಗತ್ತಲಾದಾಗ ಇಗೋ, ಹೊಗೆಯಾಡುವ ಒಲೆಯೊಂದು ಹಾಗು ಉರಿಯುವ ದೀವಟಿಗೆಯೊಂದು ಕಾಣಿಸಿಕೊಂಡು ಆ ತುಂಡುಗಳ ನಡುವೆ ಹಾದುಹೋದವು. ಸರ್ವೇಶ್ವರ ಅಂದೇ ಅಬ್ರಾಮನ ಸಂಗಡ ಒಂದು ಒಡಂಬಡಿಕೆಯನ್ನು ಮಾಡಿಕೊಂಡರು: “ಈಜಿಪ್ಟಿನ ನದಿಯಿಂದ ಯೂಫ್ರೆಟಿಸ್ ಮಹಾನದಿಯವರೆಗೆ, ಕೊಡುವೆನು ಈ ನಾಡೆಲ್ಲವನ್ನು ನಿನ್ನ ಸಂತತಿಯವರಿಗೆ,”

ಕೀರ್ತನೆ: 105: 1-2. 3-4. 6-7. 8-9
ಶ್ಲೋಕ: ನೆನಪಿನಲ್ಲಿಡುವನು ಪ್ರಭು ತನ್ನ ವಾಗ್ದಾನವನು

ಸಲ್ಲಿಸಿ ಪ್ರಭುವಿಗೆ ಕೃತಜ್ಞತಾಸ್ತೋತ್ರವನು I
ಮಾಡಿರಿ ಆತನ ನಾಮಸ್ಮರಣೆಯನು I
ಸಾರಿರಿ ಜಗಕೆ ಆತನ ಸತ್ಕಾರ್ಯಗಳನು II ಶ್ಲೋಕ

ಹಾಡಿ ಪಾಡಿ ಹೊಗಳಿರಿ ಪ್ರಭುವನು I
ಧ್ಯಾನಿಸಿ ನೀವು ಆತನ ಪವಾಡಗಳನು II
ಹೆಮ್ಮೆಪಡಿ, ನೆನೆದಾತನ ಶ್ರೀನಾಮ I ಶ್ಲೋಕ

ಹಿಗ್ಗಲಿ ಹೃದಯ, ಕೋರಿ ಆತನ ದರ್ಶನ II
ಅರಸಿರಿ ಪ್ರಭುವನೂ ಆತನ ಶಕ್ತಿಯನೂ I
ಅಪೇಕ್ಷಿಸಿ ನಿತ್ಯವೂ ಆತನ ದರ್ಶನವನು II ಶ್ಲೋಕ

ನೆನೆಯಿರಿ ಆತನದ್ಭುತಗಳನು, ಮಹತ್ಕಾರ್ಯಗಳನು I
ಆತನ ವದನ ವಿಧಿಸಿದಾ ನ್ಯಾಯನಿರ್ಣಯಗಳನು II
ಪ್ರಭು ನಮ್ಮ ದೇವನೆಂಬುದು ಶ್ರುತ I
ಆತನಿತ್ತ ತೀರ್ಪು ಇದೋ ವಿಶ್ವವ್ಯಾಪ್ತ II ಶ್ಲೋಕ

ನೆನಪಿನಲ್ಲಿಡುವನು ಪ್ರಭು ತನ್ನ ವಾಗ್ದಾನವನು I
ಸಾವಿರಾರು ತಲೆಗಳವರೆಗೂ ತನ್ನೊಪ್ಪಂದವನು II
ಅಬ್ರಹಾಮನೊಡನೆ ಮಾಡಿಕೊಂಡ ಒಡಂಬಡಿಕೆಯನು I
ಇಸಾಕನಿಗೆ ಆಣೆಯಿಟ್ಟು ಆತ ಹೇಳಿದುದನು I ಶ್ಲೋಕ

ಶುಭಸಂದೇಶ: ಮತ್ತಾಯ 7:15-20


ಆ ಕಾಲದಲ್ಲಿ ಯೇಸು ತಮ್ಮ ಶಿಷ್ಯರಿಗೆ ಹೀಗೆಂದರು: "ಸುಳ್ಳು ಪ್ರವಾದಿಗಳ ಬಗ್ಗೆ ಎಚ್ಚರಿಕೆಯಿಂದಿರಿ. ಹೊರಗೆ ಕುರಿಯ ವೇಷದಲ್ಲಿ ಬಂದರೂ ಒಳಗೆ ಅವರು ಕಿತ್ತುತಿನ್ನುವ ತೋಳಗಳು. ಅವರ ವರ್ತನೆಯಿಂದ ನೀವು ಅವರನ್ನು ಗುರುತು ಹಚ್ಚುವಿರಿ. ಮುಳ್ಳುಕಳ್ಳಿಯಲ್ಲಿ ದ್ರಾಕ್ಷಿ ಕೊಯ್ಯುವುದುಂಟೇ? ಮದ್ದುಗುಣಿಕೆಯಲ್ಲಿ ಅಂಜೂರ ಕೀಳುವುದುಂಟೇ? ಅದರಂತೆಯೇ ಒಳ್ಳೆಯ ಮರ ಒಳ್ಳೆಯ ಹಣ್ಣನ್ನೂ ಕೆಟ್ಟ ಮರವು ಕೆಟ್ಟ ಹಣ್ಣನ್ನೂ ಕೊಡುತ್ತದೆ. ಒಳ್ಳೆಯ ಮರ ಕೆಟ್ಟ ಹಣ್ಣನ್ನು ಕೊಡಲಾರದು, ಹಾಗೆಯೇ ಕೆಟ್ಟ ಮರ ಒಳ್ಳೆಯ ಹಣ್ಣನ್ನು ಕೊಡಲಾರದು. ಒಳ್ಳೆಯ ಫಲವನ್ನು ಕೊಡದ ಪ್ರತಿಯೊಂದು ಮರವನ್ನೂ ಕಡಿದು ಬೆಂಕಿಯಲ್ಲಿ ಹಾಕಲಾಗುವುದು. ಆದ್ದರಿಂದ ಸುಳ್ಳು ಪ್ರವಾದಿಗಳನ್ನು ಅವರ ನಡತೆಯಿಂದ ಗುರುತುಹಚ್ಚುವಿರಿ."

22.06.21 - "ಅಮರ ಜೀವಕ್ಕೆ ಕೊಂಡೊಯ್ಯುವ ಮಾರ್ಗ ದುರ್ಭರ; ಅದರ ಬಾಗಿಲು ಕಿರಿದು"

ಮೊದಲನೇ ವಾಚನ: ಆದಿಕಾಂಡ 13:2, 5-18

ಅಬ್ರಾಮನು ಈಜಿಪ್ಟನ್ನು ಬಿಟ್ಟು ಕಾನಾನ್ ನಾಡಿನ ದಕ್ಷಿಣ ಪ್ರಾಂತ್ಯಕ್ಕೆ ಬಂದನು. ಈಗ ಅವನಿಗೆ ಪಶುಪ್ರಾಣಿಗಳಿದ್ದವು, ಬೆಳ್ಳಿ ಬಂಗಾರವಿತ್ತು. ಅವನೀಗ ಘನ ಧನವಂತನಾಗಿದ್ದನು. ಅಬ್ರಾಮನ ಜೊತೆಯಲ್ಲಿದ್ದ ಲೋಟನಿಗೆ ಕುರಿಮಂದೆಗಳೂ ದನಕರುಗಳೂ ಗುಡಾರಬಿಡಾರಗಳೂ ಇದ್ದವು. ಈ ಕಾರಣ ಅವರಿಬ್ಬರ ಜೀವನಕ್ಕೆ ಅಲ್ಲಿ ಸ್ಥಳ ಸಾಲದೆ ಹೋಯಿತು. ಇಬ್ಬರಿಗೂ ಪಶುಪ್ರಾಣಿಗಳು ಹೇರಳವಾಗಿದ್ದುದರಿಂದ ಒಂದೇ ಸ್ಥಳದಲ್ಲಿ ವಾಸವಾಗಿರಲು ಆಗಲಿಲ್ಲ. ಅಬ್ರಾಮನ ದನಕಾಯುವವರಿಗೂ ಲೋಟನ ದನಕಾಯುವವರಿಗೂ ಜಗಳ ಬೇರೆ. ಇದೂ ಅಲ್ಲದೆ, ಆ ಕಾಲದಲ್ಲಿ ಕಾನಾನ್ಯರೂ ಪೆರಿಜೀಯರೂ ಅದೇ ನಾಡಿನಲ್ಲಿ ವಾಸವಾಗಿದ್ದರು. ಆದುದರಿಂದ ಅಬ್ರಾಮನು ಲೋಟನಿಗೆ ಹೀಗೆಂದನು: “ನನಗೂ ನಿನಗೂ, ನನ್ನ ದನಕಾಯುವವರಿಗೂ ನಿನ್ನ ದನಕಾಯುವವರಿಗೂ ಜಗಳವಿರಬಾರದು. ನಾವು ಬಳಗದವರು. ನಾಡೆಲ್ಲಾ ನಿನ್ನ ಕಣ್ಮುಂದಿದೆ. ದಯವಿಟ್ಟು ನನ್ನನ್ನು ಬಿಟ್ಟು ಬೇರೆ ಹೋಗು. ನೀನು ಎಡಗಡೆಗೆ ಹೋದರೆ ನಾನು ಬಲಗಡೆಗೆ ಹೋಗುತ್ತೇನೆ. ನೀನು ಬಲಗಡೆಗೆ ಹೋದರೆ ನಾನು ಎಡಗಡೆಗೆ ಹೋಗುತ್ತೇನೆ.” ಲೋಟನು ಕಣ್ಣೆತ್ತಿ ನೋಡಿದನು. ಜೋರ್ಡನ್ ನದಿಯ ಸುತ್ತಲಿನ ಪ್ರದೇಶ ಚೋಗರೂರಿನವರೆಗೂ ಎಲ್ಲೆಲ್ಲೂ ನೀರಾವರಿ ಆಗಿರುವುದು ಕಾಣಿಸಿತು. ಸರ್ವೇಶ್ವರ, ಸೊದೋಮ್ - ಗೊಮೋರ ಪಟ್ಟಣಗಳನ್ನು ವಿನಾಶ ಮಾಡುವುದಕ್ಕೆ ಮುಂಚೆ ಈ ಪ್ರಾಂತ್ಯವು ಸರ್ವೇಶ್ವರನ ಉದ್ಯಾನವನದಂತೆ, ಈಜಿಪ್ಟಿನ ದೇಶದಂತೆ, ನೀರಿನ ಸೌಕರ್ಯ ಪಡೆದಿತ್ತು. ಆದುದರಿಂದ ಲೋಟನು ಜೋರ್ಡನ್ ನದಿಯ ಸುತ್ತಲಿನ ಪ್ರದೇಶವನ್ನು ಆರಿಸಿಕೊಂಡು ಪೂರ್ವ ದಿಕ್ಕಿನ ಕಡೆಗೆ ಹೊರಟನು. ಹೀಗೆ ಅವರಿಬ್ಬರೂ ಬೇರೆ ಬೇರೆ ಆದರು. ಜೋರ್ಡನ್ ನದಿಯ ಸುತ್ತಣ ಊರುಗಳಲ್ಲಿ ವಾಸಮಾಡುತ್ತಾ ಸೊದೋಮ್‍ಗೆ ಸವಿೂಪದಲ್ಲಿ ಗುಡಾರ ಹಾಕಿದನು. ಸೊದೋಮಿನ ಪಟ್ಟಣದವರು ಬಹಳ ದುಷ್ಟರು. ಪ್ರಭುವಿನ ದೃಷ್ಟಿಯಲ್ಲಿ ಕಡುಪಾಪಿಗಳು. ಲೋಟನು ಅಬ್ರಾಮನನ್ನು ಬಿಟ್ಟುಹೋದ ಬಳಿಕ ಸರ್ವೇಶ್ವರಸ್ವಾಮಿ ಅಬ್ರಾಮನಿಗೆ, “ನೀನು ಇರುವ ಸ್ಥಳದಿಂದಲೇ ದಕ್ಷಿಣೋತ್ತರ ಪೂರ್ವ ಪಶ್ಚಿಮಗಳ ಕಡೆಗೆ ಕಣ್ಣೆತ್ತಿ ನೋಡು. ನಿನ್ನ ಕಣ್ಣಿಗೆ ಕಾಣಿಸುವ ಈ ಪ್ರಾಂತ್ಯವನ್ನೆಲ್ಲಾ ನಿನಗೂ ನಿನ್ನ ಸಂತಾನಕ್ಕೂ ಶಾಶ್ವತವಾಗಿ ಕೊಡುತ್ತೇನೆ. ನಿನ್ನ ಸಂತಾನದವರನ್ನು ಭೂಮಿಯ ಧೂಳಿನಷ್ಟು ಅಸಂಖ್ಯಾತರನ್ನಾಗಿ ಮಾಡುತ್ತೇನೆ. ಭೂಮಿಯ ಧೂಳನ್ನು ಲೆಕ್ಕಿಸಲು ಸಾಧ್ಯವಾದಲ್ಲಿ ನಿನ್ನ ಸಂತಾನದವರನ್ನು ಲೆಕ್ಕಿಸಲು ಸಾಧ್ಯವಾದೀತು. ನೀನೆದ್ದು ಈ ನಾಡಿನ ಉದ್ದಗಲಕ್ಕೂ ತಿರುಗಾಡು; ಇದನ್ನು ನಾನು ನಿನಗೆ ಕೊಡುತ್ತೇನೆ,” ಎಂದು ಹೇಳಿದರು ಅಬ್ರಾಮನು ಅಲ್ಲಿಂದ ಹೊರಟು ಅಲ್ಲಲ್ಲಿ ಗುಡಾರ ಹಾಕಿಸಿಕೊಳ್ಳುತ್ತಾ, ಹೆಬ್ರೋನಿನಲ್ಲಿರುವ ಮಮ್ರೆವೃಕ್ಷಗಳ ತೋಪಿಗೆ ಬಂದು ವಾಸಮಾಡಿದನು. ಸರ್ವೇಶ್ವರಸ್ವಾಮಿಗೆ ಅಲ್ಲಿ ಒಂದು ಬಲಿಪೀಠವನ್ನು ಕಟ್ಟಿಸಿದನು.

ಕೀರ್ತನೆ: 15:1-5
ಶ್ಲೋಕ: ಯೋಗ್ಯನಾರು ಪ್ರಭೂ, ನಿನ್ನ ಗುಡಾರದಲಿ ಬಿಡಾರಮಾಡಲು? ಅರ್ಹನಾರು ನಿನ್ನ ಪವಿತ್ರ ಶಿಖರದಲಿ ವಾಸವಾಗಿರಲು?  

ಅಂಥವನಿರಬೇಕು ನಿರ್ದೋಷಿ, ಸನ್ಮಾರ್ಗಿ I
ಸತ್ಯವ ನುಡಿಯಬೇಕು ಹೃತ್ಪೂರ್ವಕವಾಗಿ II
ಚಾಡಿಯನು ಹೇಳನು, ಕೇಡನು ಮಾಡನನ್ಯರಿಗೆ I ಶ್ಲೋಕ

ಗುರಿಮಾಡನವನು ನೆರೆಹೊರೆಯವರನು ನಿಂದೆಗೆ II
ಭ್ರಷ್ಟರನು ಧಿಕ್ಕರಿಸುವನು, ಭಕ್ತರನು ಗೌರವಿಸುವನು I
ನಷ್ಟವಾದರೂ ಕೊಟ್ಟ ಮಾತನು ತಪ್ಪನವನು II ಶ್ಲೋಕ

ಕೊಡುವನು ಕಡವನು, ಬಯಸನು ಬಡ್ಡಿಯನು I
ಎಡವರ ಕೇಡಿಗೆ ಪಡೆಯನು ಲಂಚವನು I
ಕದಲನೆಂದಿಗೂ ಈಪರಿ ನಡೆವವನು II ಶ್ಲೋಕ

ಶುಭಸಂದೇಶ:ಮತ್ತಾಯ 7:6, 12-14

ಆ ಕಾಲದಲ್ಲಿ ಯೇಸು ತಮ್ಮ ಶಿಷ್ಯರಿಗೆ ಹೀಗೆಂದರು: "ಪವಿತ್ರವಾದುದನ್ನು ನಾಯಿಗಳಿಗೆ ಹಾಕಬೇಡಿ - ಅವು ನಿಮ್ಮ ಮೇಲೆ ತಿರುಗಿಬಿದ್ದು ನಿಮ್ಮನ್ನು ಸೀಳಿಬಿಟ್ಟಾವು; ಮುತ್ತುಗಳನ್ನು ಹಂದಿಗಳ ಮುಂದೆ ಚೆಲ್ಲಬೇಡಿ - ಅವು ಆ ಮುತ್ತುಗಳನ್ನು ಕಾಲಿನಿಂದ ತುಳಿದು ಹಾಕಿಯಾವು." "ಜನರು ನಿಮಗೆ ಏನೇನು ಮಾಡಬೇಕೆಂದು ನೀವು ಅಪೇಕ್ಷಿಸುತ್ತೀರೋ, ಅದನ್ನೇ ನೀವು ಅವರಿಗೆ ಮಾಡಿ. ಧರ್ಮಶಾಸ್ತ್ರದ ಹಾಗೂ ಪ್ರವಾದನೆಗಳ ಸಾರ ಇದೇ." "ಕಿರಿದಾದ ಬಾಗಿಲಿನಿಂದಲೇ ಒಳಕ್ಕೆ ಹೋಗಿರಿ. ಏಕೆಂದರೆ ವಿನಾಶಕ್ಕೆ ಒಯ್ಯುವ ಬಾಗಿಲು ಹಿರಿದು; ಅದರ ಮಾರ್ಗ ಸರಾಗ; ಅದನ್ನು ಹಿಡಿಯುವವರು ಅನೇಕರು. ಅಮರ ಜೀವಕ್ಕೆ ಕೊಂಡೊಯ್ಯುವ ಮಾರ್ಗ ದುರ್ಭರ; ಅದರ ಬಾಗಿಲು ಕಿರಿದು; ಅದನ್ನು ಗುರುತಿಸುವವರೋ ಕೆಲವರು."

21.06.21 - "ಎಲೈ ಕಪಟಿಯೇ, ಮೊದಲು ನಿನ್ನ ಕಣ್ಣಿನಲ್ಲಿರುವ ದಿಮ್ಮಿಯನ್ನು ತೆಗೆದು ಹಾಕು"

ಮೊದಲನೇ ವಾಚನ: ಆದಿಕಾಂಡ 12:1-9


ಸರ್ವೇಶ್ವರಸ್ವಾಮಿ ಅಬ್ರಾಮನಿಗೆ ಹೀಗೆಂದರು - “ನೀನು ನಿನ್ನ ಸ್ವಂತ ನಾಡನ್ನೂ ಬಂಧು ಬಳಗದವರನ್ನೂ ತವರು ಮನೆಯನ್ನೂ ಬಿಟ್ಟು ನಾನು ತೋರಿಸುವ ನಾಡಿಗೆ ಹೊರಟು ಹೋಗು. ನಾನು ನಿನ್ನನ್ನು ದೊಡ್ಡ ಜನಾಂಗವಾಗಿ ಮಾಡುತ್ತೇನೆ. ನಿನ್ನನ್ನು ಆಶೀರ್ವದಿಸಿ ನಿನ್ನ ಹೆಸರಿಗೆ ಘನತೆ ಗೌರವವನ್ನು ತರುತ್ತೇನೆ. ನೀನೇ ಆದರ್ಶದ ಆಶೀರ್ವಾದವಾಗಿ ಬೆಳಗುವೆ. “ನಿನ್ನನ್ನು ಹರಸುವವರನು ನಾ ಹರಸುವೆ. ನಿನ್ನನ್ನು ಶಪಿಸುವವರನು ನಾ ಶಪಿಸುವೆ. ಧರೆಯ ಕುಲದವರಿಗೆಲ್ಲ ನಿನ್ನ ಮುಖೇನ ದೊರಕುವುದು ನನ್ನಿಂದ ಆಶೀರ್ವಾದ.” ಸರ್ವೇಶ್ವರ ಹೀಗೆಂದು ಹೇಳಿದಮೇಲೆ ಅಬ್ರಾಮನು ಹೊರಟನು. ಲೋಟನು ಅವನ ಸಂಗಡವೆ ಹೋದನು. ಆ ಹಾರಾನ್ ಪಟ್ಟಣವನ್ನು ಬಿಟ್ಟು ಹೊರಟಾಗ ಅಬ್ರಾಮನಿಗೆ ಎಪ್ಪತ್ತೈದು ವರ್ಷಗಳಾಗಿದ್ದವು. ತನ್ನ ಹೆಂಡತಿ ಸಾರಯಳನ್ನು, ತನ್ನ ತಮ್ಮನ ಮಗನಾದ ಲೋಟನನ್ನು, ತಾನು ಮತ್ತು ಲೋಟನು ಹಾರಾನಿನಲ್ಲಿ ಗಳಿಸಿದ ಆಸ್ತಿ ಪಾಸ್ತಿಯನ್ನು ಹಾಗು ದಾಸದಾಸಿಯರನ್ನು ತೆಗೆದುಕೊಂಡು ಹೋಗಿ ಕಾನಾನ್ ನಾಡನ್ನು ಸೇರಿದನು. ಆ ನಾಡಿನಲ್ಲಿ ಸಂಚರಿಸುತ್ತಾ ಅಬ್ರಾಮನು ಶೆಕೆಮ್ ಪುಣ್ಯಕ್ಷೇತ್ರದಲ್ಲಿರುವ ‘ಮೋರೆ’ ಎಂಬ ವೃಕ್ಷದ ಬಳಿಗೆ ಬಂದನು. ಆ ಕಾಲದಲ್ಲಿ ಕಾನಾನ್ಯರು ಆ ನಾಡಿನಲ್ಲಿ ವಾಸವಾಗಿದ್ದರು. ಅಲ್ಲಿ ಸರ್ವೇಶ್ವರಸ್ವಾಮಿ ಅಬ್ರಾಮನಿಗೆ ದರ್ಶನವಿತ್ತು - “ಈ ನಾಡನ್ನು ನಾನು ನಿನ್ನ ಸಂತಾನಕ್ಕೆ ಕೊಡುತ್ತೇನೆ” ಎಂದು ಹೇಳಿದರು. ತನಗೆ ದರ್ಶನಕೊಟ್ಟ ಸರ್ವೇಶ್ವರನಿಗೆ ಅಬ್ರಾಮನು ಅಲ್ಲಿ ಒಂದು ಬಲಿಪೀಠವನ್ನು ಕಟ್ಟಿಸಿದನು. ಬಳಿಕ ಅವನು ಅಲ್ಲಿಂದ ದಕ್ಷಿಣಕ್ಕೆ ಹೊರಟು ಬೇತೇಲಿಗೆ ಪೂರ್ವಕ್ಕಿರುವ ಗುಡ್ಡಗಾಡಿಗೆ ಬಂದು ಗುಡಾರ ಹಾಕಿ ನೆಲಸಿದನು. ಪಶ್ಚಿಮಕ್ಕೆ ಬೇತೇಲೂ ಪೂರ್ವಕ್ಕೆ ಆಯಿ ಎಂಬ ಊರು ಇದ್ದವು. ಅಲ್ಲೂ ಸರ್ವೇಶ್ವರಸ್ವಾಮಿಗೆ ಒಂದು ಬಲಿಪೀಠವನ್ನು ಕಟ್ಟಿಸಿ ಅವರ ನಾಮಸ್ಮರಣೆ ಮಾಡಿ ಆರಾಧಿಸಿದನು. ತರುವಾಯ ಅಲ್ಲಿಂದ ಮುಂದೆ ಮುಂದಕ್ಕೆ ಸಾಗುತ್ತಾ ಕಾನಾನ್ ನಾಡಿನ ದಕ್ಷಿಣ ಪ್ರಾಂತ್ಯಕ್ಕೆ ಬಂದನು.

ಕೀರ್ತನೆ: 33: 12-13, 18-19, 20, 22
ಶ್ಲೋಕ: ಸ್ವಜನರಾಗಿ ಆತನಾಯ್ದುಕೊಂಡ ಜನತೆ ಧನ್ಯ 

ಭುವನು ದೇವರಾಗಿ ಪಡೆದ ಜನಾಂಗ ಧನ್ಯ I
ಸ್ವಜನರಾಗಿ ಆತನಾಯ್ದುಕೊಂಡ ಜನತೆ ಧನ್ಯ II
ವೀಕ್ಷಿಸುತಿಹನು ಪ್ರಭು ಸಮಸ್ತವನು ಪರದಿಂದ I
ಲಕ್ಷಿಸುತಿಹನು ಮನುಜರನು ಸಿಂಹಾಸನದಿಂದ II ಶ್ಲೋಕ

ಪ್ರಭುವಾದರೋ ಕಟಾಕ್ಷಿಸುವನು ತನಗಂಜಿ ನಡೆದವರನು I
ಲಕ್ಷಿಸುವನು ತನ್ನ ಕೃಪೆಯನು ನಿರೀಕ್ಷಿಸುವವರನು II
ತಪ್ಪಿಸುವನವನು ಪ್ರಾಣವನು ಮರಣದಿಂದ I
ಉಳಿಸುವನು ಜೀವವನು ಕ್ಷಾಮಡಾಮರದಿಂದ II ಶ್ಲೋಕ

ಕಾದಿದೆ ಎನ್ನ ಮನ ಪ್ರಭುವಿಗಾಗಿ I
ಆತನಿಹನು ಎನಗೆ ಗುರಾಣಿಯಾಗಿ II
ನಮ್ಮ ಮೇಲಿರಲಿ ಪ್ರಭು, ನಿನ್ನಚಲ ಪ್ರೀತಿ I
ಕಾದಿಹೆವು ಇದೋ ನಿನ್ನ ನಂಬಿ ಭರವಸದಿ II ಶ್ಲೋಕ

ಶುಭಸಂದೇಶ:ಮತ್ತಾಯ 7:1-5


"ನೀವು ಇತರರ ಬಗ್ಗೆ ತೀರ್ಪುಕೊಡಬೇಡಿ; ಆಗ ದೇವರು ನಿಮ್ಮ ಬಗ್ಗೆ ತೀರ್ಪುಕೊಡುವುದಿಲ್ಲ. ನೀವು ಇತರರ ಬಗ್ಗೆ ಕೊಡುವ ತೀರ್ಪಿಗೆ ಅನುಗುಣವಾಗಿಯೇ ದೇವರು ನಿಮಗೂ ತೀರ್ಪುಕೊಡುವರು. ಇತರರಿಗೆ ನೀವು ಕೊಟ್ಟ ಅಳತೆಯಲ್ಲೇ ದೇವರು ನಿಮಗೂ ಅಳೆದು ಕೊಡುವರು. ನಿನ್ನ ಕಣ್ಣಿನಲ್ಲಿರುವ ದಿಮ್ಮಿಯನ್ನು ನೋಡದೆ ನಿನ್ನ ಸೋದರನ ಕಣ್ಣಿನಲ್ಲಿರುವ ಅಣುವನ್ನು ನೀನು ಗಮನಿಸುವುದೇಕೆ? ನಿನ್ನ ಕಣ್ಣಿನಲ್ಲಿ ಒಂದು ದಿಮ್ಮಿಯೇ ಇರುವಾಗ, "ತಾಳು, ನಿನ್ನ ಕಣ್ಣಿನಲ್ಲಿರುವ ಅಣುವನ್ನು ತೆಗೆದು ಬಿಡುತ್ತೇನೆ," ಎಂದು ನಿನ್ನ ಸೋದರನಿಗೆ ಹೇಗೆ ಹೇಳಬಲ್ಲೆ? ಎಲೈ ಕಪಟಿಯೇ, ಮೊದಲು ನಿನ್ನ ಕಣ್ಣಿನಲ್ಲಿರುವ ದಿಮ್ಮಿಯನ್ನು ತೆಗೆದುಹಾಕು. ಅನಂತರ ನಿನ್ನ ಸೋದರನ ಕಣ್ಣಿನಿಂದ ಅಣುವನ್ನು ತೆಗೆಯಲು ನಿನ್ನ ಕಣ್ಣು ನಿಚ್ಚಳವಾಗಿ ಕಾಣಿಸುವುದು."

20.06.21 - “ಏಕೆ ಇಷ್ಟು ಭಯ? ಇನ್ನೂ ನಿಮಗೆ ವಿಶ್ವಾಸವಿಲ್ಲವೇ?”

ಮೊದಲನೇ ವಾಚನ: ಯೋಬ 38:1, 8-11

ಬಿರುಗಾಳಿಯೊಳಗಿಂದ ಸರ್ವೇಶ್ವರ ಯೋಬನಿಗೆ ಕೊಟ್ಟ ಪ್ರತ್ಯುತ್ತರ ಇದು: “ಭೂಗರ್ಭವನ್ನು ಭೇದಿಸಿಕೊಂಡು ಬಂದ ಸಮುದ್ರವನು ದ್ವಾರಗಳಿಂದ ಬಂಧಿಸಿ ಮುಚ್ಚಿದವನಾರು? ಅದಕ್ಕೆ ಮೋಡಗಳನು ತೊಡಿಸಿ, ಕಾರ್ಗತ್ತಲನು ಉಡಿಸಿದವನು ಯಾರು? ಅದಕ್ಕೆ ಸರಹದ್ದನು ನಿಯಮಿಸಿ ಕದಗಳನೂ ಅಗುಳಿಗಳನೂ ಇಟ್ಟವನಾರು? ‘ಇಲ್ಲಿಯತನಕ ಬರಬಹುದು, ಇದನು ಮೀರಿ ಬರಕೂಡದು’ ‘ಮೊರೆವ ನಿನ್ನ ತೆರೆಗೆ ಇಲ್ಲಿಗೇ ತಡೆ’ ಎಂದು ವಿಧಿಸಿದವನು ನಾನು.

ಕೀರ್ತನೆ: 107: 23-24, 25-26, 28-29, 30-31
ಶ್ಲೋಕ: ಕೃತಜ್ಞತೆಯಿಂದ ಸಲ್ಲಿಸಿರಿ ಪ್ರಭುವಿಗೆ ಸ್ತುತಿಯನು. 

ಹಡಗನು ಹತ್ತಿ ಕಡಲನು ದಾಟಿದರು I
ಸಾಗರ ಹಾಯ್ದು‍ವ್ಯಾಪಾರ ಗೈದರು II
ಕಂಡರು ಪ್ರಭುವಿನ ಪವಾಡಗಳನು I
ಸಮುದ್ರದೊಳಾತನ ಅದ್ಭುತಗಳನು II ಶ್ಲೋಕ

ಬಿರುಗಾಳಿಯೆದ್ದಿತು ಆತನಾಜ್ಞೆಯೊಂದಕ್ಕೆ I
ತರಂಗಗಳು ಭೊರ್ಗರೆದವು ಅದರೊಂದಿಗೆ II
ಗಗನಕ್ಕೇರಿದರು, ಅಗಾಧಕ್ಕಿಳಿದರು I
ಗಂಡಾಂತರಕೆ ಸಿಲುಕಿ ಕರಗಿಹೋದರು II ಶ್ಲೋಕ

ಸಂಕಟದಲಿ ಮೊರೆಯಿಟ್ಟರು ಪ್ರಭುವಿಗೆ I
ಬಿಕ್ಕಟ್ಟಿಂದ ಬಿಡುಗಡೆಯಿತ್ತನು ಅವರಿಗೆ II
ಆ ಬಿರುಗಾಳಿಯನಾತ ಶಾಂತಪಡಿಸಿದ I
ನಿಂತುಹೋಯಿತಾ ಸಮುದ್ರದಲೆಗಳ ಮೊರೆತ II ಶ್ಲೋಕ

ತಂದಿತು ಪ್ರಶಾಂತತೆ ಸಂತಸವನವರಿಗೆ I
ಮುಟ್ಟಿಸಿದನಾತ ಅವರಾಶಿಸಿದ ರೇವಿಗೆ II
ಹೊಗಳಲಿ ಪ್ರಭುವಿನಚಲ ಪ್ರೀತಿಯನು I
ಜನರಿಗಾತ ಎಸಗಿದ ಅತಿಶಯಗಳನು II ಶ್ಲೋಕ

ಎರಡನೆಯ ವಾಚನ: 2 ಕೊರಿಂಥಿಯರಿಗೆ  5:14-17

ಯೇಸುಕ್ರಿಸ್ತರ ಪ್ರೀತಿಯ ಪಾಲನೆಗೆ ನಾವು ಒಳಗಾಗಿದ್ದೇವೆ. ಎಲ್ಲಾ ಮಾನವರಿಗೋಸ್ಕರ ಒಬ್ಬನು ಮರಣಹೊಂದಿದನು. ಆದ್ದರಿಂದ ನಾವೆಲ್ಲರೂ ಆ ಮರಣದಲ್ಲಿ ಪಾಲುಗಾರರು. ಸರ್ವರಿಗೂ ಯೇಸು ಪ್ರಾಣತ್ಯಾಗಮಾಡಿದರು. ಪರಿಣಾಮವಾಗಿ, ಇನ್ನು ಮುಂದೆ ಜೀವಿಸುವವರು ತಮಗಾಗಿ ಜೀವಿಸದೆ, ಸತ್ತು ಪುನರುತ್ಥಾನರಾದ ಯೇಸುವಿಗಾಗಿ ಜೀವಿಸಬೇಕು. ಇನ್ನು ಮುಂದೆ ನಾವು ಯಾರನ್ನೂ ಕೇವಲ ಮಾನವ ದೃಷ್ಟಿಯಿಂದ ಪರಿಗಣಿಸುವುದಿಲ್ಲ. ಒಂದು ಕಾಲದಲ್ಲಿ, ಕ್ರಿಸ್ತಯೇಸುವನ್ನು ನಾವು ಹಾಗೆ ಪರಿಗಣಿಸಿದ್ದುಂಟು. ಆದರೆ ಇನ್ನು ಮುಂದೆ ಹಾಗೆ ಮಾಡುವುದಿಲ್ಲ. ಯಾರಾದರೂ ಯೇಸುಕ್ರಿಸ್ತರೊಡನೆ ಒಂದಾದರೆ ಅವನು ನೂತನ ಸೃಷ್ಟಿಯಾಗುತ್ತಾನೆ. ಹಳೆಯದೆಲ್ಲಾ ಅಳಿದು ಹೋಗುತ್ತದೆ. ಹೊಸದಿದೋ, ಜನ್ಮ ತಳೆದಿದೆ.

ಶುಭಸಂದೇಶ: ಮಾರ್ಕ 4: 35-41


ಆ ದಿನ ಸಾಯಂಕಾಲ ಯೇಸುಸ್ವಾಮಿ ತಮ್ಮ ಶಿಷ್ಯರಿಗೆ, “ಸರೋವರದ ಆಚೆದಡಕ್ಕೆ ಹೋಗೋಣ,” ಎಂದರು. ಆಗ ಶಿಷ್ಯರು ಜನರ ಗುಂಪನ್ನು ಬಿಟ್ಟು ದೋಣಿಯಲ್ಲಿ ಕುಳಿತಿದ್ದ ಯೇಸುವನ್ನು ಹಾಗೆಯೇ ತಮ್ಮ ಜೊತೆಯಲ್ಲಿ ಕರೆದುಕೊಂಡು ಹೊರಟರು. ಆ ದೋಣಿಯ ಸಂಗಡ ಬೇರೆ ದೋಣಿಗಳೂ ಇದ್ದವು. ಸ್ವಲ್ಪ ಮುಂದೆ ಹೋಗುವಷ್ಟರಲ್ಲೇ ದೊಡ್ಡ ಬಿರುಗಾಳಿ ಎದ್ದಿತು. ಅಲೆಗಳು ದೋಣಿಗೆ ಅಪ್ಪಳಿಸತೊಡಗಿದವು. ದೋಣಿಯೊಳಗೆ ನೀರು ನುಗ್ಗಿ ಅದು ತುಂಬಿ ಹೋಗುವುದರಲ್ಲಿತ್ತು. ಯೇಸುವಾದರೋ ದೋಣಿಯ ಹಿಂಭಾಗದಲ್ಲಿ ದಿಂಬನ್ನು ಒರಗಿ ನಿದ್ದೆ ಮಾಡುತ್ತಿದ್ದರು. ಶಿಷ್ಯರು ಅವರನ್ನು ಎಬ್ಬಿಸಿ, “ಗುರುವೇ, ನಾವು ಸಾಯುತ್ತಿದ್ದೇವೆ, ತಮಗೆ ಚಿಂತೆಯೇ ಇಲ್ಲವೆ?” ಎಂದರು. ಆಗ ಯೇಸು ಎಚ್ಚೆತ್ತು,, ಬಿರುಗಾಳಿಯನ್ನು ಗದರಿಸಿದರು. ಸರೋವರಕ್ಕೆ, “ಶಾಂತವಾಗಿರು! ಮೊರೆಯಬೇಡ,” ಎಂದು ಆಜ್ಞಾಪಿಸಿದರು. ತಕ್ಷಣ ಬಿರುಗಾಳಿ ನಿಂತಿತು. ವಾತಾವರಣ ಪ್ರಶಾಂತವಾಯಿತು. ಅನಂತರ ತಮ್ಮ ಶಿಷ್ಯರಿಗೆ, “ಏಕೆ ಇಷ್ಟು ಭಯ? ಇನ್ನೂ ನಿಮಗೆ ವಿಶ್ವಾಸವಿಲ್ಲವೇ?” ಎಂದರು. ಶಿಷ್ಯರಾದರೋ ಭಯಭ್ರಾಂತರಾಗಿ “ಗಾಳಿಯೂ ಸರೋವರವೂ ಇವರು ಹೇಳುವಂತೆ ಕೇಳಬೇಕಾದರೆ ಇವರು ಯಾರಿರಬಹುದು?” ಎಂದು ತಮ್ಮತಮ್ಮೊಳಗೆ ಮಾತಾಡಿಕೊಂಡರು.

19.06.21 - "ನಾಳೆಯ ಚಿಂತೆ ನಿಮಗೆ ಬೇಡ. ನಾಳೆಯ ಚಿಂತೆ ನಾಳೆಗೇ ಇರಲಿ. ಇಂದಿನ ಪಾಡೇ ಇಂದಿಗೆ ಸಾಕು."

ಮೊದಲನೇ ವಾಚನ: 2 ಕೊರಿಂಥಿಯರಿಗೆ 12:1-10

ಹೊಗಳಿಕೊಳ್ಳುವುದು ಹಿತಕರವಲ್ಲ. ಆದರೂ ಹೊಗಳಿಕೊಳ್ಳಬೇಕಾದ್ದು ಅನಿವಾರ್ಯವಾಗಿದೆ. ಆದುದರಿಂದ ಪ್ರಭು ನನಗಿತ್ತ ದರ್ಶನಗಳನ್ನು ಮತ್ತು ಶ್ರುತಪಡಿಸಿದ ಸತ್ಯಗಳನ್ನು ಕುರಿತು ಹೇಳುತ್ತೇನೆ; ಕ್ರೈಸ್ತನಾದ ಒಬ್ಬ ವ್ಯಕ್ತಿಯನ್ನು ನಾನು ಬಲ್ಲೆ. ಅವನು ಹದಿನಾಲ್ಕು ವರ್ಷಗಳಿಗೆ ಹಿಂದೆ ಮಹೋನ್ನತ ಸ್ವರ್ಗಕ್ಕೆ ಒಯ್ಯಲ್ಪಟ್ಟನು. ಹಸಹಿತವಾಗಿಯೋ ದೇಹರಹಿತವಾಗಿಯೋ ಅದನ್ನು ನಾನರಿಯೆ. ದೇವರೊಬ್ಬರೇ ಬಲ್ಲರು. ಅವನು ಪರಂಧಾಮಕ್ಕೆ ಒಯ್ಯಲ್ಪಟ್ಟನೆಂಬುದು ನಿಶ್ಚಯ. ದೇಹಸಹಿತವಾಗಿಯೋ ದೇಹರಹಿತವಾಗಿಯೋ ಅದನ್ನು ನಾನರಿಯೆ. ದೇವರೊಬ್ಬರೇ ಬಲ್ಲರು. ಅಲ್ಲಿ ಅವನಿಗೆ ಕೇಳಿ ಬಂದ ವಿಷಯಗಳು ಮಾನವನ ವರ್ಣನೆಗೆ ಎಟುಕದವು. ಮಾನವನ ನುಡಿಗೆ ನಿಲುಕದವು. ಅವನನ್ನು ಕುರಿತು ನಾನು ಹೆಮ್ಮೆಪಡುತ್ತೇನೆ. ಆದರೆ ನನ್ನನ್ನು ಕುರಿತು ನಾನು ಹೊಗಳಿಕೊಳ್ಳುವುದಿಲ್ಲ. ನನ್ನ ದೌರ್ಬಲ್ಯವೇ ನನ್ನ ಹೊಗಳಿಕೆ. ಹಾಗೇನಾದರೂ ನಾನು ಹೊಗಳಿಕೊಳ್ಳಲು ಆಶಿಸಿದರೆ ಅದೇನು ಹುಚ್ಚುತನವಲ್ಲ. ಏಕೆಂದರೆ, ನಾನು ನುಡಿಯುತ್ತಿರುವುದು ಸತ್ಯವನ್ನೇ. ಆದರೂ ನಾನು ಹಾಗೆ ಹೊಗಳಿಕೊಳ್ಳುವುದಿಲ್ಲ. ಕಾರಣ, ಯಾರೂ ನನ್ನಲ್ಲಿ ಕಾಣುವುದಕ್ಕಿಂತಲೂ ನನ್ನಿಂದ ಕೇಳುವುದಕ್ಕಿಂತಲೂ ಹೆಚ್ಚಾಗಿ ನನ್ನನ್ನು ಪರಿಗಣಿಸಬಾರದು. ನನಗೆ ತಿಳಿಸಲಾದ ಗಹನ ಸತ್ಯಗಳಿಂದ ನಾನು ಉಬ್ಬಿಹೋಗದ ಹಾಗೆ ನನ್ನ ದೇಹದಲ್ಲಿ ಶೂಲದಂತೆ ನಾಟಿರುವ ಬೇನೆಯೊಂದನ್ನು ನನಗೆ ಕೊಡಲಾಯಿತು. ನಾನು ಅಹಂಕಾರಪಡದ ಹಾಗೆ ಇದು ನನ್ನನ್ನು ತಿವಿತಿವಿದು ಸೈತಾನನ ದೂತನಂತೆ ಕಾಡಿಸುತ್ತಿತ್ತು. ಈ ಪೀಡೆ ನನ್ನನ್ನು ಬಿಟ್ಟು ತೊಲಗಲೆಂದು ನಾನು ಮೂರು ಸಾರಿ ಪ್ರಭುವಿನಲ್ಲಿ ಬೇಡಿಕೊಂಡೆ. ಅದಕ್ಕವರು, “ನನ್ನ ಅನುಗ್ರಹವೇ ನಿನಗೆ ಸಾಕು. ನನ್ನ ಶಕ್ತಿ ಪರಿಪಕ್ವವಾಗುವುದು ನಿಶ್ಯಕ್ತಿಯಲ್ಲಿಯೇ,” ಎಂದು ಹೇಳಿದರು. ಕ್ರಿಸ್ತಯೇಸುವಿನ ಶಕ್ತಿ ನನ್ನಲ್ಲಿ ನೆಲಸುವಂತೆ ನನ್ನ ನಿಶ್ಯಕ್ತಿಯನ್ನು ಕುರಿತು ಮತ್ತಷ್ಟು ಹೆಮ್ಮೆಪಡುತ್ತೇನೆ. ದುರ್ಬಲತೆಗಳಲ್ಲೂ ದುರವಸ್ಥೆಗಳಲ್ಲೂ ಮಾನನಷ್ಟದಲ್ಲೂ ಕಷ್ಟಹಿಂಸೆಗಳಲ್ಲೂ, ಆಪತ್ತುವಿಪತ್ತುಗಳಲ್ಲೂ ನಾನು ಕ್ರಿಸ್ತ ಯೇಸುವಿನ ನಿಮಿತ್ತ ಸಂತುಷ್ಟನಾಗಿದ್ದೇನೆ. ನಾನು ಬಲಶಾಲಿಯಾಗಿರುವುದು ಬಲಹೀನನಾಗಿರುವಾಗಲೇ.  

ಕೀರ್ತನೆ: 34:7-8, 9-10, 11-12
ಶ್ಲೋಕ: ಸವಿದು ನೋಡು ಪ್ರಭುವಿನ ಮಾಧುರ್ಯವನು

ಭಯಭಕುತಿಯುಳ್ಳವರ ಸುತ್ತಲು ಕಾವಲಿದ್ದು
ಕಾಯುವನು ಪ್ರಭಿವಿನ ದೂತನೆ ಬಂದಿಳಿದು
ಸವಿದು ನೋಡು ಪ್ರಭುವಿನ ಮಾಧುರ್ಯವನು
ಆತನನು ಆಶ್ರಯಿಸಿಕೊಂಡವನು ಧನ್ಯನು ಶ್ಲೋಕ

ದೇವಜನರೆ, ನಿಮಗಿರಲಿ ಪ್ರಭುವಿನ ಭಯಭಕುತಿ
ಅಂಥವರಿಗಿರದು ಯಾವ ಕುಂದುಕೊರತೆಯ ಭೀತಿ
ಯುವ ಕೇಸರಿಗೆ ಇರಬಹುದು ಹಸಿವು, ದಾಹ
ಪ್ರಭುವನು ಅರಸುವವರಿಗಿರದು ಒಳಿತಿನ ಅಭಾವ. ಶ್ಲೋಕ

ಬನ್ನಿ ಮಿತ್ರರೇ, ಆಲಿಸಿರೀ ಮಾತನು
ಕಲಿಸುವೆನು ನಾ ನಿಮಗೆ ದೇವ ಭಯವನು
ಎಲೈಮಾನವ, ಬಲುದಿನ ಬಾಳಲು ಬಯಸುವೆಯಾ?
ಆಯುರಾರೋಗ್ಯ ಭಾಗ್ಯವನು ಆಶಿಸುವೆಯಾ? ಶ್ಲೋಕ

ಶುಭಸಂದೇಶ: ಮತ್ತಾಯ 6:24-34


ಆ ಕಾಲದಲ್ಲಿ ಯೇಸು ತಮ್ಮ ಶಿಷ್ಯರಿಗೆ ಹೀಗೆಂದರು: ಯಾರೂ ಇಬ್ಬರು ಯಜಮಾನರಿಗೆ ಜೀತಮಾಡಲಾಗದು. ಅವನು ಒಬ್ಬನನ್ನು ದ್ವೇಷಿಸಿ ಇನ್ನೊಬ್ಬನನ್ನು ಪ್ರೀತಿಸುತ್ತಾನೆ; ಅಥವಾ, ಒಬ್ಬನೊಡನೆ ಹೊಂದಿಕೊಂಡು ಇನ್ನೊಬ್ಬನನ್ನು ತಾತ್ಸಾರ ಮಾಡುತ್ತಾನೆ. ದೇವರಿಗೂ ದ್ರವ್ಯಕ್ಕೂ ಒಟ್ಟಿಗೆ ಸೇವೆ ಮಾಡಲು ನಿಮ್ಮಿಂದಾಗದು." "ನಾನು ಹೇಳುವುದನ್ನು ಕೇಳಿ; ‘ಪ್ರಾಣಧಾರಣೆಗೆ ಏನು ಉಣ್ಣುವುದು, ಏನು ಕುಡಿಯುವುದು; ದೇಹರಕ್ಷಣೆಗೆ ಏನು ಹೊದೆಯುವುದು’ ಎಂದು ಚಿಂತೆಮಾಡಬೇಡಿ. ಊಟಕ್ಕಿಂತ ಪ್ರಾಣ, ಉಡುಪಿಗಿಂತ ದೇಹ ಮೇಲಾದುದಲ್ಲವೇ? ಆಕಾಶದಲ್ಲಿ ಹಾರಾಡುವ ಹಕ್ಕಿಗಳನ್ನು ಗಮನಿಸಿ; ಅವು ಬಿತ್ತುವುದಿಲ್ಲ, ಕೊಯ್ಯುವುದಿಲ್ಲ, ಕಣಜಗಳಲ್ಲಿ ಕುಡಿಡುವುದೂ ಇಲ್ಲ. ಆದರೂ ಸ್ವರ್ಗದಲ್ಲಿರುವ ನಿಮ್ಮ ತಂದೆ ಅವುಗಳನ್ನು ಪೋಷಿಸುತ್ತಾರೆ. ಹಕ್ಕಿಗಳಿಗಿಂತ ನೀವು ಎಷ್ಟೋ ಮೇಲಾದವರಲ್ಲವೇ? ಚಿಂತಿಸಿ, ಚಿಂತಿಸಿ ನಿಮ್ಮ ಜೀವನಾವಧಿಯನ್ನು ಕೊಂಚಕಾಲವಾದರೂ ದೀರ್ಘಮಾಡಲು ನಿಮ್ಮಲ್ಲಿ ಯಾರಿಂದಾದೀತು? ಉಡುಗೆತೊಡುಗೆಗಳ ಚಿಂತೆ ನಿಮಗೇಕೆ? ವನಕುಸುಮಗಳು ಬೆಳೆಯುವ ರೀತಿಯನ್ನು ಗಮನಿಸಿ ನೋಡಿ: ಅವು ದುಡಿಯುವುದಿಲ್ಲ, ನೂಲುವುದಿಲ್ಲ. ಆದರೂ ಅರಸ ಸೊಲೊಮೋನನು ತನ್ನ ಸರ್ವವೈಭವದಲ್ಲಿ ಇದ್ದಾಗಲೂ ಈ ಕುಸುಮಗಳಲ್ಲಿ ಒಂದರಷ್ಟೂ ಸುಂದರವಾದ ಉಡುಪನ್ನು ಧರಿಸಿರಲಿಲ್ಲ. ಅಲ್ಪ ವಿಶ್ವಾಸಿಗಳೇ, ಇಂದಿದ್ದು ನಾಳೆ ಒಲೆಪಾಲಾಗುವ ಬಯಲಿನ ಹುಲ್ಲಿಗೆ ದೇವರು ಹೀಗೆ ಉಡಿಸಿದರೆ, ನಿಮಗೆ ಮತ್ತಷ್ಟೂ ಮಾಡಲಾರರೇ? ಆದುದರಿಂದ ತಿನ್ನಲು ಏನು? ಕುಡಿಯಲು ಏನು? ಉಡಲು ಏನು? ಎಂದು ಪೇಚಾಡಬೇಡಿ. ಇವೆಲ್ಲವುಗಳಿಗಾಗಿ ಪರಕೀಯರೂ ಪರದಾಡುತ್ತಾರೆ; ಇವೆಲ್ಲಾ ನಿಮಗೆ ಅವಶ್ಯ ಎಂದು ಸ್ವರ್ಗದಲ್ಲಿರುವ ನಿಮ್ಮ ತಂದೆಗೆ ತಿಳಿದಿದೆ. ನೀವಾದರೋ ಮೊದಲು ದೇವರ ಸಾಮ್ರಾಜ್ಯಕ್ಕಾಗಿ, ಅವರ ಸತ್ಸಂಬಂಧಕ್ಕಾಗಿ ತವಕಪಡಿ. ಇದರೊಂದಿಗೆ ಅವೆಲ್ಲವೂ ನಿಮಗೆ ನೀಡಲಾಗುವುದು. ಆದುದರಿಂದ ನಾಳೆಯ ಚಿಂತೆ ನಿಮಗೆ ಬೇಡ. ನಾಳೆಯ ಚಿಂತೆ ನಾಳೆಗೇ ಇರಲಿ. ಇಂದಿನ ಪಾಡೇ ಇಂದಿಗೆ ಸಾಕು."