ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

01.08.2019 - "ದೇವದೂತರು ಹೊರಟುಬಂದು ದುರ್ಜನರನ್ನು ಸಜ್ಜನರಿಂದ ಬೇರ್ಪಡಿಸುವರು"


 ಮೊದಲನೇ ವಾಚನ: ವಿಮೋಚನಾಕಾಂಡ 40:16-21, 34-38

ಸರ್ವೇಶ್ವರ ಆಜ್ಞಾಪಿಸಿದಂತೆಯೇ ಮೋಶೆ ಎಲ್ಲವನ್ನೂ ಮಾಡಿದನು. ಎರಡನೆಯ ವರ್ಷದ ಮೊದಲನೆಯ ತಿಂಗಳಿನ ಪ್ರಥಮ ದಿನದಲ್ಲಿ ಮೋಶೆ ಗುಡಾರ ಎತ್ತಿಸಿ ಅದರ ಗದ್ದಿಗೇಕಲ್ಲುಗಳನ್ನು ಹಾಕಿ ಕಂಬಗಳನ್ನು ನಿಲ್ಲಿಸಿದನು. ಗಡಾರದ ಮೇಲೆ ಡೇರೆಯ ಬಟ್ಟೆಗಳನ್ನು ಹಾಸಿ ಆ ಡೇರೆಗೆ ಮೇಲು ಹೊದಿಕೆಯನ್ನು ಹಾಕಿದನು. ಸರ್ವೇಶ್ವರ ಆಜ್ಞಾಪಿಸಿದಂತೆಯೇ ಮೋಶೆ ಅದೆಲ್ಲವನ್ನು ಮಾಡಿದನು. ಆಜ್ಞಾಶಾಸನಗಳನ್ನು ಮಂಜೂಷದಲ್ಲಿಟ್ಟು ಮಂಜೂಷಕ್ಕೆ ಗದ್ದಿಗೆಗಳನ್ನು ಕೊಟ್ಟು ಅದರ ಮೇಲೆ ಕೃಪಾಸನವನ್ನಿಟ್ಟು, ಮಂಜೂಷವನ್ನು ಗುಡಾರದೊಳಕ್ಕೆ ತಂದು, ಅದರ ಮುಂದೆ ತೆರೆಯನ್ನು ಇರಿಸಿ, ಸರ್ವೇಶ್ವರ ಆಜ್ಞಾಪಿಸಿದಂತೆಯೇ ಮೋಶೆ ಆಜ್ಞಾಶಾಸನಗಳ ಮಂಜೂಷವನ್ನು ಮರೆಮಾಡಿದನು. ಆಗ ಮೇಘವೊಂದು ದೇವದರ್ಶನದ ಗುಡಾರವನ್ನು  ಮುಚ್ಚಿತು; ಸರ್ವೇಶ್ವರನ ತೇಜಸ್ಸು ಗುಡಾರವನ್ನು ತುಂಬಿತು. ಮೇಘವು ದೇವದರ್ಶನದ ಗುಡಾರದ ಮೇಲೆ ನೆಲೆಯಾಗಿ ಇದ್ದುದರಿಂದಲೂ ಸರ್ವೇಶ್ವರನ ತೇಜಸ್ಸು ಗುಡಾರದೊಳಗೆ ತುಂಬಿದ್ದುದರಿಂದಲೂ ಮೋಶೆ ಬಿಡಾರದಲ್ಲಿ  ಹೋಗಲಾರದೆ ಇದ್ದನು. ಆ ಮೇಘವು ಗುಡಾರವನ್ನು ಬಿಟ್ಟು ಮೇಲಕ್ಕೆ ಹೋದಾಗ ಇಸ್ರಯೇಲರು ಮುಂದಕ್ಕೆ ಪ್ರಯಾಣಮಾಡುತ್ತಿದ್ದರು; ಆ ಮೇಘವು ಬಿಡದೆ ಇರುವಾಗ ಅದು ಬಿಡುವತನಕ ಪ್ರಯಾಣ ಮಾಡದೆ ಇರುತ್ತಿದ್ದರು. ಇಸ್ರಯೇಲರ ಎಲ್ಲಾ ಪ್ರಯಾಣಗಳಲ್ಲಿಯೂ ಅವರ ಕಣ್ಣ ಮುಂದೆ ಹಗಲು ಹೊತ್ತಿನಲ್ಲಿ ಸರ್ವೇಶ್ವರನ ಮೇಘವು ಗುಡಾರದ ಮೇಲೆ ಇತ್ತು; ರಾತ್ರಿ ವೇಳೆಯಲ್ಲಿ ಆ ಮೇಘದೊಳಗೆ ಅಗ್ನಿಯು ಪ್ರಕಾಶಿಸುತ್ತಿತ್ತು.

ಕೀರ್ತನೆ: 84:3, 4, 5-6, 8, 11

ಶ್ಲೋಕ: ಹೇ ಪ್ರಭೂ ನಿನ್ನ ನಿವಾಸಗಳೆನಿತೋ ಸುಂದರ

ಶುಭಸಂದೇಶ: ಮತ್ತಾಯ 13:47-53

ಯೇಸು ತಮ್ಮ ಶಿಷ್ಯರಿಗೆ ಈ ಸಾಮತಿಯನ್ನು ಹೇಳಿದರು:  ಸ್ವರ್ಗಸಾಮ್ರಾಜ್ಯವನ್ನು ಒಂದು ಮೀನುಬಲೆಗೆ ಹೋಲಿಸಬಹುದು. ಬೆಸ್ತರು ಬಲೆಯನ್ನು ಸಮೂದ್ರದಲ್ಲಿ ಬೀಸಿ ಎಲ್ಲಾ ಜಾತಿಯ ಮೀನುಗಳನ್ನು ಹಿಡಿಯುತ್ತಾರೆ. ಬಲೆ ತುಂಬಿದ ಮೇಲೆ ಅದನ್ನು ದಡಕ್ಕೆ ಎಳೆದು, ಕುಳಿತುಕೊಂಡು, ಒಳ್ಳೆಯ ಮೀನುಗಳನ್ನು ಮಾತ್ರ ಆರಿಸಿಕೊಂಡು ಬುಟ್ಟಿಗೆ ಹಾಕಿಕೊಳ್ಳುತ್ತಾರೆ; ಕೆಟ್ಟವನ್ನು ಎಸೆದುಬಿಡುತ್ತಾರೆ. ಕಾಲಾಂತ್ಯದಲ್ಲಿ ಇದರಂತೆಯೇ ಆಗುವುದು; ದೇವದೂತರು ಹೊರಟುಬಂದು ದುರ್ಜನರನ್ನು ಸಜ್ಜನರಿಂದ ಬೇರ್ಪಡಿಸುವರು. ದುರ್ಜನರನ್ನು ಅಗ್ನಿಕುಂಡದಲ್ಲಿ ಹಾಕುವರು. ಅಲ್ಲಿ ಅವರು ಕಟಕಟನೆ ಹಲ್ಲು ಕಡಿದುಕೊಂಡು ಗೋಳಾಡುವರು."  "ಇದೆಲ್ಲ ನಿಮಗೆ ಅರ್ಥವಾಯಿತೇ?" ಎಂದು ಯೇಸುಸ್ವಾಮಿ ಕೇಳಿದರು. ಶಿಷ್ಯರು ಅರ್ಥವಾಯಿತು ಎಂದರು. ಆಗ ಯೇಸು, "ಇಂತಿರಲು, ಸ್ವರ್ಗಸಾಮ್ರಾಜ್ಯದಲ್ಲಿ ಶಿಷ್ಯನಾಗಿರುವ ಪ್ರತಿಯೊಬ್ಬ ಶಾಸ್ತ್ರಜ್ಞನು ಮನೆಯ ಯಜಮಾನ ಇದ್ದ ಹಾಗೆ. ಅವನು ತನ್ನ ಉಗ್ರಾಣದಿಂದ ಹೊಸ ಹಾಗೂ ಹಳೆಯ ವಸ್ತುಗಳನ್ನು ಹೊರಗೆ ತರುತ್ತಾ ಇರುತ್ತಾನೆ," ಎಂದರು. ಈ ಸಾಮತಿಯನ್ನು ಹೇಳಿಯಾದ ಮೇಲೆ ಯೇಸುಸ್ವಾಮಿ ಅಲ್ಲಿಂದ ಹೊರಟು ಹೋದರು.

31.07.2019 - "ಸ್ವರ್ಗಸಾಮ್ರಾಜ್ಯವನ್ನು ಹೊಲದಲ್ಲಿ ಹೂಳಿಟ್ಟ ನಿಧಿಗೆ ಹೋಲಿಸಬಹುದು"

ಮೊದಲನೇ ವಾಚನ: ವಿಮೋಚನಾಕಾಂಡ: 34:29-35


ಮೋಶೆ ಆಜ್ಞಾಶಾಸನಗಳಾದ ಆ ಎರಡು ಕಲ್ಲಿನ ಹಲಗೆಗಳನ್ನು ಕೈಯಲ್ಲಿ ಹಿಡಿದುಕೊಂಡು ಸೀನಾಯಿ ಬೆಟ್ಟದಿಂದ ಇಳಿದು ಬಂದಾಗ ಅವನ ಮುಖ ಪ್ರಕಾಶಮಾನವಾಗಿತ್ತು. ಏಕೆಂದರೆ ಅವನು ಸರ್ವೇಶ್ವರನ ಸಂಗಡ ಸಂಭಾಷಿಸಿದ್ದನು. ಆದರೆ ಅದು ಅವನಿಗೆ ತಿಳಿದಿರಲಿಲ್ಲ.  ಮೋಶೆಯ ಮುಖ ಹೀಗೆ ಪ್ರಕಾಶಮಯವಾಗಿರುವುದನ್ನು ಆರೋನನು ಮತ್ತು ಇಸ್ರಯೇಲರೆಲ್ಲರು ನೋಡಿ ಅವನ ಹತ್ತಿರಕ್ಕೆ ಬರಲು ಭಯಪಟ್ಟರು. ಆದರೆ ಮೋಶೆ ಅವರನ್ನು ಕರೆದನು. ಆಗ ಆರೋನನು ಹಾಗು ಜನ ನಾಯಕರೆಲ್ಲರು ಅವನ ಬಳಿಗೆ ಬಂದರು. ಆಗ ಮೋಶೆ ಅವರ ಸಂಗಡ ಮಾತಾಡಿದನು. ಆನಂತರ ಇಸ್ರಯೇಲರೆಲ್ಲರು ಕೂಡ ಹತ್ತಿರಕ್ಕೆ ಬಂದರು ಮೋಶೆ ತಾನು ಸೀನಾಯಿ ಬೆಟ್ಟದಲ್ಲಿ ಸರ್ವೇಶ್ವರನಿಂದ ಹೊಂದಿದ ಆಜ್ಞೆಗಳನ್ನೆಲ್ಲ ಅವರಿಗೆ ತಿಳಿಸಿದನು. ಅವರೊಡನೆ ಮಾತಾಡಿ ಮುಗಿಸಿದ ಮೇಲೆ ಮೋಶೆ ತನ್ನ ಮುಖದ ಮೇಲೆ ಮುಸುಕು ಹಾಕಿಕೊಂಡನು. ಹೊರಗೆ ಬಂದಾಗ ಸರ್ವೇಶ್ವರ ಆಜ್ಞಾಪಿಸಿದ್ದನ್ನೆಲ್ಲ ಇಸ್ರಯೇಲರಿಗೆ ತಿಳಿಸುತ್ತಿದ್ದನು ಮೋಶೆಯ ಮುಖ ಪ್ರಕಾಶಮಯವಾಗಿರುವುದನ್ನು ಇಸ್ರಯೇಲರು ಗಮನಿಸುತ್ತಿದ್ದರು. ಆದಕಾರಣ ಅವನು ಸರ್ವೇಶ್ವರನ ಸಂಗಡ ಮಾತನಾಡಲು ಹೋಗುವವರೆಗೆ ತನ್ನ ಮಖದ ಮೇಲೆ ಮುಸುಕು ಹಾಕಿಕೊಂಡಿರುತ್ತಿದ್ದನು.

ಕೀರ್ತನೆ: 99:5, 6, 7, 9

ಶ್ಲೋಕ: ಪರಮ ಪವಿತ್ರನು ಆ ನಮ್ಮ ದೇವರು

ಶುಭಸಂದೇಶ: ಮತ್ತಾಯ 13:44-46

ಯೇಸು ತಮ್ಮ ಶಿಷ್ಯರೊಂದಿಗೆ, "ಸ್ವರ್ಗಸಾಮ್ರಾಜ್ಯವನ್ನು ಹೊಲದಲ್ಲಿ ಹೂಳಿಟ್ಟ ನಿಧಿಗೆ ಹೋಲಿಸಬಹುದು. ಇದನ್ನು ಒಬ್ಬನು ಪತ್ತೆಹಚ್ಚಿ ಅಲ್ಲಿಯೇ ಮುಚ್ಚಿಡುತ್ತಾನೆ. ತನಗಾದ ಸಂತೋಷದಿಂದ ಹೋಗಿ ತನಗೆ ಇದ್ದುದೆಲ್ಲವನ್ನೂ ಮಾರಿ ಈ ಹೊಲವನ್ನೇ ಕೊಂಡುಬಿಡುತ್ತಾನೆ. ಸ್ವರ್ಗಸಾಮ್ರಾಜ್ಯವನ್ನು ಉತ್ತಮವಾದ ಮುತ್ತುರತ್ನಗಳನ್ನು ಹುಡುಕಿಕೊಂಡು ಹೋಗುವ ವರ್ತಕನಿಗೂ ಹೋಲಿಸಬಹುದು. ಅನರ್ಘ್ಯವಾದ ಒಂದು ಮುತ್ತನ್ನು ಕಂಡ ಕೂಡಲೆ ವರ್ತಕ ತನ್ನ ಆಸ್ತಿಪಾಸ್ತಿಯನ್ನೆಲ್ಲಾ ಮಾರಿ ಆ ಮುತ್ತನ್ನು ಕೊಂಡುಕೊಳ್ಳುತ್ತಾನೆ," ಎಂದರು.

30.07.19 - "ಸದ್ಧರ್ಮಿಗಳು ತಮ್ಮ ತಂದೆಯ ಸಾಮ್ರಾಜ್ಯದಲ್ಲಿ ಸೂರ್ಯನಂತೆ ಪ್ರಕಾಶಿಸುವರು"

ಮೊದಲನೇ ವಾಚನ: ವಿಮೋಚನಾಕಾಂಡ: 33:7-11, 34:5-9, 28

ಮೋಶೆ ಗುಡಾರವನ್ನು ಪಾಳೆಯದ ಹೊರಗೆ ದೂರದಲ್ಲಿ ಹಾಕಿಸುತ್ತಿದ್ದನು. ಅದಕ್ಕೆ " ದೇವ ದರ್ಶನದ ಗುಡಾರ" ಎಂದು ಹೆಸರಿಟ್ಟನು. ಸರ್ವೇಶ್ವರನಿಂದ ಉತ್ತರವನ್ನು ಬಯಸುತ್ತಿದ್ದವರೆಲ್ಲರು ಪಾಳೆಯದ ಹೊರಗಿದ್ದ ಆ ದೇವ ದರ್ಶನದ ಗುಡಾರಕ್ಕೆ ಹೋಗುತ್ತಿದ್ದರು. ಮೋಶೆ ಗುಡಾರಕ್ಕೆ ಹೋಗುವಾಗಲೆಲ್ಲಾ ಜನರೆಲ್ಲರು ಎದ್ದು ತಮ್ಮ ತಮ್ಮ ಡೇರೆಗಳ ಬಾಗಿಲಲ್ಲಿ ನಿಂತು ಮೋಶೆ ಆ ಗುಡಾರದೊಳಕ್ಕೆ ಹೋಗುವ ತನಕ ಅವನ ಹಿಂದೆ ನೋಡುತ್ತಿದ್ದರು. ಮೋಶೆ ಗುಡಾರದೊಳಕ್ಕೆ ಹೋದ ಕೂಡಲೆ ಮೇಘ ಸ್ತಂಭವೊಂದು ಇಳಿದು ಆ ಗುಡಾರದ ಬಾಗಿಲಲ್ಲಿ ನಿಲ್ಲುತ್ತಿತ್ತು. ಆಗ ಮೋಶೆಯ ಸಂಗಡ ಸರ್ವೇಶ್ವರ ಮಾತಾಡುತ್ತಿದ್ದರು. ಆ ಮೇಘಸ್ತಂಭ ಗುಡಾರದ ಬಾಗಿಲಲ್ಲಿ ನಿಲ್ಲುವುದನ್ನು ಜನರೆಲ್ಲರು ನೋಡಿ, ಎದ್ದುನಿಂತು ತಮ್ಮ ತಮ್ಮ ಡೇರೆಗಳ ಬಾಗಿಲಲ್ಲೇ ಅಡ್ಡ ಬೀಳುತ್ತಿದ್ದರು. ಒಬ್ಬ ಮನುಷ್ಯ ತನ್ನ ಗೆಳೆಯನೊಡನೆ ಹೇಗೆ ಮಾತಾಡುತ್ತಾನೋ ಹಾಗೆಯೇ ಸರ್ವೇಶ್ವರ ಮೋಶೆಯ ಸಂಗಡ ಮುಖಾಮುಖಿಯಾಗಿ ಮಾತಾಡುತ್ತಿದ್ದರು. ತರುವಾಯ ಮೋಶೆ ಪಾಳೆಯಕ್ಕೆ ಮರಳಿ ಬರುತ್ತಿದ್ದನು. ಆದರೆ ನೂನನ ಮಗನಾದ ಯೆಹೋಶುವ ಎಂಬ ಹೆಸರುಳ್ಳ ಯುವಕನೊಬ್ಬನು ಮೋಶೆಯ ಶಿಷ್ಯನಾಗಿ ಆ ಗುಡಾರದಲ್ಲೇ ಇರುತ್ತಿದ್ದನು. ಅದನ್ನು ಬಿಟ್ಟು ಹೋಗುತ್ತಿರಲಿಲ್ಲ. ಸರ್ವೇಶ್ವರ ಸ್ವಾಮಿ ಸೀನಾಯಿ ಬೆಟ್ಟದ ಮೇಲೆ ಮೇಘಾವೃತರಾಗಿ ಇಳಿದು ಬಂದು ಅಲ್ಲಿ ಅವನ ಹತ್ತಿರ ನಿಂತು, "ಸರ್ವೇಶ್ವರ" ಎಂಬ ತಮ್ಮ ನಾಮವನ್ನು ಪ್ರಕಟಿಸಿದರು. ಸರ್ವೇಶ್ವರ ಅವನ ಎದುರಿನಲ್ಲಿ ಹಾದು ಹೋಗುತ್ತಾ ಹೀಗೆಂದು ಪ್ರಕಟಿಸಿದರು: "ಸರ್ವೇಶ್ವರನು ಕರುಣಾಮಯನು, ದಯಾಳು ದೇವರು, ತಟ್ಟನೆ ಸಿಟ್ಟುಗೊಳ್ಳದವನು, ಪ್ರೀತಿಪಾತ್ರನು, ನಂಬಿಗಸ್ತನು. ಸಾವಿರಾರು ತಲೆಗಳವರೆಗೂ ಅಚಲ ಪ್ರೀತಿ ತೋರುವವನು, ದೋಷಾಪರಾಧಗಳನ್ನೂ ಪಾಪಗಳನ್ನೂ ಕ್ಷಮಿಸುವವನು; ಆದರೂ ತಪ್ಪಿತಸ್ಥರನ್ನು ಶಿಕ್ಷಿಸದೆ ಬಿಡದವನು. ಹೆತ್ತವರ ದೋಷ ಪರಿಣಾಮಗಳನ್ನು ಮಕ್ಕಳ ಮೇಲೆ ಮೂರು ನಾಲ್ಕು ತಲೆಗಳವರೆಗೆ ಬರಮಾಡುವವನು." ಕೂಡಲೇ ಮೋಶೆ ನೆಲದಮೇಲೆ ಅಡ್ಡಬಿದ್ದು ನಮಸ್ಕರಿಸಿ, "ಸ್ವಾಮಿ ಸರ್ವೇಶ್ವರಾ, ನಿಮ್ಮ ಅನುಗ್ರಹ ನಮಗೆ ದೊರಕಿತಾದರೆ, ತಾವೇ ನಮ್ಮ ಜೊತೆಯಲ್ಲಿ ಬರಬೇಕು. ನಮ್ಮ ಜನರು ಹಠಮಾರಿಗಳು.  ಆದರೂ ತಾವು ನಮ್ಮ ಪಾಪಗಳನ್ನೂ ಅಧರ್ಮಗಳನ್ನೂ ಕ್ಷಮಿಸಿ ನಿಮ್ಮ ಜನರಾಗುವಂತೆ ನಮ್ಮನ್ನು ಸ್ವೀಕರಿಸಿ," ಎಂದು ಪ್ರಾರ್ಥಿಸಿದನು. ಮೋಶೆ ಆ ಬೆಟ್ಟದಲ್ಲಿ ನಾಲ್ವತ್ತು ದಿನ ಹಗಲಿರುಳು ಅನ್ನ ಪಾನವಿಲ್ಲದೆ ಸರ್ವೇಶ್ವರನ ಸನ್ನಿಧಿಯಲ್ಲಿ ಇದ್ದನು. ಒಡಂಬಡಿಕೆಯ ವಾಕ್ಯಗಳನ್ನು, ಅಂದರೆ ಹತ್ತು ಆಜ್ಞೆಗಳನ್ನು, ಆ ಕಲ್ಲಿನ ಹಲಗೆಗಳ ಮೇಲೆ ಬರೆದನು.

ಕೀರ್ತನೆ: 103:6-7, 8-9, 10-11, 12-13

ಶ್ಲೋಕ: ಪ್ರಭು ದಯಾಳು, ಕೃಪಾಪೂರ್ಣನು

ಶುಭಸಂದೇಶ: ಮತ್ತಾಯ 13:36-43

ಯೇಸುಸ್ವಾಮಿ ಜನರನ್ನು ಬೀಳ್ಕೊಟ್ಟು ಮನೆಗೆ ಬಂದರು. ಶಿಷ್ಯರು ಅವರ ಬಳಿಗೆ ಬಂದು, "ಹೊಲದಲ್ಲಿ ಬಿತ್ತಲಾದ ಕಳೆಗಳ ಸಾಮತಿಯನ್ನು ನಮಗೆ ವಿವರಿಸಿರಿ," ಎಂದು ಕೇಳಿಕೊಂಡರು. ಅದಕ್ಕೆ ಯೇಸು, "ಒಳ್ಳೆಯ ಗೋದಿಯನ್ನು ಬಿತ್ತುವವನು ಎಂದರೆ ನರಪುತ್ರನು; ಹೊಲವೇ ಈ ಲೋಕ; ಒಳ್ಳೆಯ ಕಾಳುಗಳೇ ಶ್ರೀ ಸಾಮ್ರಾಜ್ಯದ ಮಕ್ಕಳು; ಕಳೆಗಳೇ ಕೇಡಿಗನ ಮಕ್ಕಳು. ಆ ಕಳೆಗಳನ್ನು ಬಿತ್ತಿದ ವೈರಿಯೇ ಪಿಶಾಚಿ. ಸುಗ್ಗಿಯೇ ಕಾಲಾಂತ್ಯ, ಕೊಯ್ಲುಗಾರರೇ ದೇವದೂತರು.  ಕಳೆಗಳನ್ನು ಕಿತ್ತು ಬೆಂಕಿಯಲ್ಲಿ ಸುಟ್ಟು ಹಾಕಿದಂತೆಯೇ ಕಾಲಾಂತ್ಯದಲ್ಲೂ ನಡೆಯುವುದು. ನರಪುತ್ರನು ತನ್ನ ದೂತರನ್ನು  ಕಳುಹಿಸುವನು. ಅವರು ಆತನ ರಾಜ್ಯದಿಂದ ಪಾಪಕ್ಕೆ ಕಾರಣವಾದುದೆಲ್ಲವನ್ನೂ ಮತ್ತು ದುಷ್ಕರ್ಮಿಗಳೆಲ್ಲರನ್ನೂ ಒಟ್ಟುಗೂಡಿಸಿ ಅಗ್ನಿಕುಂಡದಲ್ಲಿ ಹಾಕುವರು; ಅಲ್ಲಿ ಅವರು ಕಟಕಟನೆ ಹಲ್ಲು ಕಡಿದುಕೊಂಡು ಗೋಳಾಡುವರು. ಸದ್ಧರ್ಮಿಗಳು ತಮ್ಮ ತಂದೆಯ ಸಾಮ್ರಾಜ್ಯದಲ್ಲಿ ಸೂರ್ಯನಂತೆ ಪ್ರಕಾಶಿಸುವರು. ಕಿವಿಯುಳ್ಳವನು ಕೇಳಿಸಿಕೊಳ್ಳಲಿ!

29.07.19 - "ನೀವೇ ಅಭಿಷಿಕ್ತರಾದ ಲೋಕೋದ್ಧಾರಕ"

ಮೊದಲನೇ ವಾಚನ: 1ಯೊವಾನ್ನ  4:7-16

ಪ್ರಿಯರೇ, ನಾವು ಒಬ್ಬರನ್ನೊಬ್ಬರು ಪ್ರೀತಿಸೋಣ. ಪ್ರೀತಿ ದೇವರಿಂದ ಉಗಮವಾದುದು. ಪ್ರೀತಿಸುವವನು ದೇವರ ಮಗನು. ಅವನು ದೇವರನ್ನು ಬಲ್ಲವನು. ಪ್ರೀತಿಸದವನು ದೇವರನ್ನು ಬಲ್ಲವನಲ್ಲ. ಏಕೆಂದರೆ, ದೇವರು ಪ್ರೀತಿ ಸ್ವರೂಪಿ. ತಮ್ಮ ಏಕೈಕ ಪುತ್ರನ ಮುಖಾಂತರ ನಾವು ಸಜ್ಜೀವವನ್ನು ಪಡೆಯುವಂತೆ ದೇವರು ಅವರನ್ನು ಲೋಕಕ್ಕೆ ಕಳುಹಿಸಿದರು. ನಮ್ಮ ಮೇಲೆ ದೇವರಿಗಿರುವ ಪ್ರೀತಿ ಹೀಗೆ ವ್ಯಕ್ತವಾಯಿತು. ನಾವು ದೇವರನ್ನು ಪ್ರೀತಿಸಿದ್ದರಲ್ಲಿ ಅಲ್ಲ, ಅವರು ನಮ್ಮನ್ನು ಪ್ರೀತಿಸಿ ನಮ್ಮ ಪಾಪ ನಿವಾರಣಾರ್ಥವಾಗಿ ತಮ್ಮ ಪುತ್ರನನ್ನು ಕಳುಹಿಸಿದ್ದರಲ್ಲಿಯೇ ಪ್ರೀತಿಯ ನಿಜ ಗುಣ ತೋರಿ ಬರುತ್ತದೆ. ಪ್ರಿಯರೇ, ದೇವರೇ ನಮ್ಮನ್ನು ಇಷ್ಟಾಗಿ ಪ್ರೀತಿಸಿರುವಲ್ಲಿ ನಾವು ಸಹ ಒಬ್ಬರನ್ನೊಬ್ಬರು ಪ್ರೀತಿಸಬೇಕು. ದೇವರನ್ನು ಯಾರೂ ಎಂದೂ ನೋಡಿಲ್ಲ. ಆದರೂ ನಾವು ಒಬ್ಬರನೊಬ್ಬರು  ಪ್ರೀತಿಸಿದರೆ ದೇವರು ನಮ್ಮಲ್ಲಿ ನೆಲಸಿರುತ್ತಾರೆ.  ಅವರ ಪ್ರೀತಿ ನಮ್ಮಲ್ಲಿ ಸಿದ್ಧಿಗೆ ಬರುತ್ತದೆ. ದೇವರು ನಮಗೆ ತಮ್ಮ ಆತ್ಮವನ್ನು ನೀಡಿರುವುದರಿಂದಲೇ ನಾವು ಅವರಲ್ಲಿಯೂ ಅವರು ನಮ್ಮಲ್ಲಿಯೂ ನೆಲಸಿರುವುದನ್ನು ತಿಳಿದುಕೊಳ್ಳುತ್ತೇವೆ. ಪಿತನು ತಮ್ಮ ಪುತ್ರನನು ಲೋಕೋದ್ಧಾರಕನಾಗಿ ಕಳುಹಿಸಿಕೊಟ್ಟದ್ದನ್ನು ನಾವು ಕಣ್ಣಾರೆ ಕಂಡಿದ್ದೇವೆ. ಇದರ  ವಿಷಯವಾಗಿ ಸಾಕ್ಷಿ ಹೇಳುತ್ತೇವೆ. ಯೇಸುವೇ ದೇವರ ಪುತ್ರನೆಂದು ಯಾವನು ಒಪ್ಪಿಕೊಳ್ಳುತ್ತಾನೋ ಅವನಲ್ಲಿ ದೇವರು ನೆಲಸಿದ್ದಾರೆ; ಅವನೂ ದೇವರಲ್ಲಿ ನೆಲಸಿದ್ದಾನೆ:  ಹೀಗೆ ದೇವರು ನಮ್ಮಲ್ಲಿಟ್ಟಿರುವ ಪ್ರೀತಿ ನಮಗೆ ಗೊತ್ತಿದೆ.  ಅದರಲ್ಲಿ ನಮಗೆ ವಿಶ್ವಾಸವಿದೆ. ದೇವರು ಪ್ರೀತಿಸ್ವರೂಪಿ. ಪ್ರೀತಿಯಲ್ಲಿ ನೆಲಸಿರುವವನು ದೇವರಲ್ಲಿ ನೆಲಸಿದ್ದಾನೆ. ದೇವರೂ  ಅವನಲ್ಲಿ ನೆಲಸಿರುತ್ತಾರೆ.

ಕೀರ್ತನೆ: 33:2-3, 4-5, 6-7, 8-9, 10-11

ಶ್ಲೋಕ: ಪ್ರಭುವನ್ನು ನಾ ಕೊಂಡಾಡುವೆ ಎಲ್ಲ ಕಾಲದೊಳು


ಅನೇಕ ಯೆಹೂದ್ಯರು ಮಾರ್ತಳನ್ನೂ ಮರಿಯಳನ್ನೂ ಕಂಡು ಅವರ ಸೋದರನ ಮರಣಕ್ಕಾಗಿ ಸಂತಾಪ ಸೂಚಿಸಲು ಬಂದಿದ್ದರು.  ಯೇಸು ಬರುತ್ತಿದ್ದಾರೆಂದು ಕೇಳಿದೊಡನೆ ಮಾರ್ತ ಅವರನ್ನು ಎದುರುಗೊಳ್ಳಲು ಹೋದಳು. ಮರಿಯ ಮನೆಯಲ್ಲೇ ಇದ್ದಳು. ಮಾರ್ತ ಯೇಸುವನ್ನು ಕಂಡು, "ಪ್ರಭುವೇ, ನೀವು ಇಲ್ಲಿದ್ದಿದ್ದರೆ ನನ್ನ ಸಹೋದರ ಸಾಯುತ್ತಿರಲಿಲ್ಲ. ಈಗಲೂ ದೇವರಲ್ಲಿ ನೀವು ಏನೇ ಕೇಳಿಕೊಂಡರೂ ನಿಮಗವರು ನೀಡುವರೆಂದು ನಾನು ಬಲ್ಲೆ," ಎಂದಳು. ಯೇಸು, "ನಿನ್ನ ಸಹೋದರನು ಜೀವಂತವಾಗಿ ಏಳುವನು," ಎಂದರು. "ಅವನು ಅಂತಿಮ ದಿನದ ಪುನರುತ್ಥಾನದಲ್ಲಿ ಜೀವಂತವಾಗಿ ಏಳುವನೆಂದು ನನಗೆ ತಿಳಿದಿದೆ," ಎಂದಳು ಮಾರ್ತ. ಯೇಸು, ಅವಳಿಗೆ, " ಪುನರುತ್ಥಾನವೂ ಜೀವವೂ ನಾನೇ; ನನ್ನಲ್ಲಿ ವಿಶ್ವಾಸವಿಟ್ಟವನು ಸಾವಿಗೀಡಾದರೂ ಜೀವಿಸುವನು. ಜೀವಿಸುವ ಪ್ರತಿಯೊಬ್ಬನೂ ನನ್ನಲ್ಲಿ ವಿಶ್ವಾಸವಿಟ್ಟನೆಂದರೆ ಅವನೆಂದಿಗೂ ಸಾಯನು. ಇದನ್ನು ನೀನು ವಿಶ್ವಾಸಿಸುತ್ತೀಯಾ?" ಎಂದು ಕೇಳಲು ಅವಳು,  "ಹೌದು ಪ್ರಭುವೇ, ನೀವೇ ಅಭಿಷಿಕ್ತರಾದ ಲೋಕೋದ್ಧಾರಕ; ದೇವರ ಪುತ್ರ; ಈ ಲೋಕಕ್ಕೆ ಬರಬೇಕಾದವರು - ಎಂದು ನಾನು ವಿಶ್ವಾಸಿಸುತ್ತೇನೆ," ಎಂದು ಹೇಳಿದಳು.

28.07.19 - "ನಿಮ್ಮಲ್ಲಿ ಯಾವ ತಂದೆ ತಾನೇ ತನ್ನ ಮಗ ಮೀನನ್ನು ಕೇಳಿದರೆ ಹಾವನ್ನು ಕೊಡುತ್ತಾನೆ?"

ಮೊದಲನೇ ವಾಚನ: ಆದಿಕಾಂಡ 18:20-32


"ಸೊದೋಮ್ ಗೊಮೋರಗಳ ವಿರುದ್ಧ ಎಷ್ಟೋ ಘನತರವಾದ ದೂರುಗಳು ನನಗೆ ಬಂದಿವೆ; ಆ ಊರಿನವರ ಮೇಲೆ ಹೊರಿಸಲಾಗಿರುವ ಪಾಪ ಕೃತ್ಯವೂ ಘೋರವಾದುದು. ನನಗೆ ಮುಟ್ಟಿರುವ ದೂರುಗಳಂತೆ ಅವರು ಮಾಡಿದರೋ ಇಲ್ಲವೋ ಎಂದು ನೋಡಿ ತಿಳಿದುಕೊಳ್ಳುತ್ತೇನೆ," ಎಂದುಕೊಂಡರು ಸರ್ವೇಶ್ವರ. ಆಗ ಆ ಇಬ್ಬರು ಮನುಷ್ಯರು ಅಲ್ಲಿಂದ ಸೊದೋಮಿನ ಕಡೆಗೆ ಹೋದರು. ಆದರೆ ಅಬ್ರಹಾಮನು ಸರ್ವೇಶ್ವರ ಸ್ವಾಮಿಯ ಸಂಗಡವೇ ಉಳಿದುಕೊಂಡನು. ಅವನು ಅವರ ಹತ್ತಿರಕ್ಕೆ ಬಂದು, "ನೀವು ದುರ್ಜನರ ಸಂಗಡ ಸಜ್ಜನರನ್ನೂ ನಾಶ ಮಾಡುವಿರೋ? ಹೀಗೆ ದುಷ್ಟರಿಗೂ ಶಿಷ್ಟರಿಗೂ ಭೇದ ಮಾಡದೆ ದುಷ್ಟರ ಸಂಗಡ ಸಜ್ಜನರನ್ನೂ ಸಂಹರಿಸುವುದು ನಿಮ್ಮಿಂದ ಎಂದಿಗೂ ಆಗಬಾರದು. ಇಡೀ ಜಗತ್ತಿನ ನ್ಯಾಯಾಧಿಪತಿ ಸರಿಯಾಗಿ ನ್ಯಾಯ ತೀರಿಸಬೇಕಲ್ಲವೆ?" ಎಂದನು. ಅದಕ್ಕೆ ಸರ್ವೇಶ್ವರ, "ಸೊದೋಮಿನಲ್ಲಿ ಐವತ್ತು ಮಂದಿ ಸಜ್ಜನರು ನನಗೆ ಸಿಕ್ಕಿದರೆ ಅವರ ನಿಮಿತ್ತ  ಊರನ್ನೆಲ್ಲಾ ಉಳಿಸುತ್ತೇನೆ," ಎಂದರು. ಆಗ ಅಬ್ರಹಾಮನು "ನಾನಂತು ಮಣ್ಣು ಬೂದಿ. ಆದರೂ ಸ್ವಾಮಿಯ ಸಂಗಡ ವಾದಿಸುವುದಕ್ಕೆ ಧೈರ್ಯಗೊಂಡಿದ್ದೇನೆ. ಒಂದು ವೇಳೆ ಐವತ್ತು ಮಂದಿ ಸಜ್ಜನರಿಗೆ ಐದು ಮಂದಿ ಕಡಿಮೆಯಾಗಿದ್ದಾರು. ಐದು ಮಂದಿ ಕಡಿಮೆಯಾದುದಕ್ಕೆ ಪಟ್ಟಣವನ್ನೆಲ್ಲ ನಾಶ ಮಾಡುವಿರೋ?" ಎಂದು ಕೇಳಲು ಸರ್ವೇಶ್ವರ, "ಅಲ್ಲಿ ನಲವತ್ತೈದು ಮಂದಿ ಸಿಕ್ಕಿದರೆ ಅದನ್ನು ನಾಶ ಮಾಡುವುದಿಲ್ಲ" ಎಂದರು. ಅಬ್ರಹಾಮನು ಇನ್ನೂ ಮುಂದುವರೆದು, "ಒಂದು ವೇಳೆ ಅಲ್ಲಿ ನಲವತ್ತು ಮಂದಿ ಸಿಕ್ಕಾರು" ಎನ್ನಲು "ನಲವತ್ತು ಮಂದಿ ಸಿಕ್ಕಿದರೆ ಆ ಪಟ್ಟಣವನ್ನು ನಾಶಮಾಡುವುದಿಲ್ಲ" ಎಂದರು. ಅಬ್ರಹಾಮನು, "ಸ್ವಾಮೀ, ಕೋಪ ಮಾಡಬೇಡಿ; ಇನ್ನೂ ಮಾತಾಡುತ್ತೇನೆ. ಒಂದು ವೇಳೆ ಮೂವತ್ತು ಮಂದಿ ಅಲ್ಲಿ ಸಿಕ್ಕಾರು" ಎನ್ನಲು ಸರ್ವೇಶ್ವರ, "ಅಲ್ಲಿ ಮೂವತ್ತು ಮಂದಿ ಸಿಕ್ಕರೂ ಅದನ್ನು ನಾಶ ಮಾಡುವುದಿಲ್ಲ," ಎಂದರು. ಅವನು ಸ್ವಾಮಿಯ ಸಂಗಡ ಮಾತನಾಡಲು ನಾನು ಇನ್ನೂ ಧೈರ್ಯಗೊಂಡಿದ್ದೇನೆ; ಒಂದು ವೇಳೆ ಇಪ್ಪತ್ತೇ ಮಂದಿ ಅಲ್ಲಿ ಸಿಕ್ಕಾರು," ಎನ್ನಲು, ಸರ್ವೇಶ್ವರ, "ಇಪ್ಪತ್ತು ಮಂದಿಯಿದ್ದರೆ ಅವರ ನಿಮಿತ್ತ ಅದನ್ನು ಉಳಿಸುತ್ತೇನೆ, ನಾಶ ಮಾಡುವುದಿಲ್ಲ," ಎಂದರು. ಅಬ್ರಹಾಮನು, "ಸ್ವಾಮೀ ಸಿಟ್ಟುಗೊಳ್ಳಬೇಡಿ; ಇನ್ನು ಒಂದೇ ಒಂದು ಸಾರಿ ಮಾತನಾಡುತ್ತೇನೆ; ಒಂದು ವೇಳೆ ಹತ್ತೇ ಮಂದಿ ಸಿಕ್ಕಾರು" ಎನ್ನಲು, ಸರ್ವೇಶ್ವರ, "ಹತ್ತು ಮಂದಿಯ ನಿಮಿತ್ತವೂ ಅದನ್ನು ಉಳಿಸುತ್ತೇನೆ, ನಾಶ ಮಾಡುವುದಿಲ್ಲ," ಎಂದರು.

ಕೀರ್ತನೆ: 138:1-2, 2-3, 6-7, 7-8

ಶ್ಲೋಕ: ಮೊರೆಯಿಟ್ಟಾಗ ದಯಪಾಲಿಸಿದೆ ಸದುತ್ತರವನು

ಎರಡನೇ ವಾಚನ: ಕೊಲೊಸ್ಸೆಯರಿಗೆ 2:12-14

ದೀಕ್ಷಾಸ್ನಾನದಲ್ಲಿ ನೀವು ಅವರೊಂದಿಗೆ ಸಮಾಧಿಯಾದಿರಿ. ಕ್ರಿಸ್ತ ಯೇಸುವನ್ನು ಮೃತರ ಮಧ್ಯದಿಂದ ದೇವರು ತಾವೇ ಎಬ್ಬಿಸಿದರು. ಈ ದೇವರ ಶಕ್ತಿಯಲ್ಲಿ ನೀವು ವಿಶ್ವಾಸವಿಟ್ಟಿರುವುದರಿಂದ ದೀಕ್ಷಾಸ್ನಾನದಲ್ಲಿಯೇ ನಿಮ್ಮನ್ನು ಕ್ರಿಸ್ತಯೇಸುವಿನೊಂದಿಗೆ ಎಬ್ಬಿಸಲಾಯಿತು. ನಿಮ್ಮ ಪಾಪಮಯ ಜೀವನದಿಂದಲೂ ಸುನ್ನತಿ ರಹಿತವಾದ ಸ್ವಭಾವದಿಂದಲೂ ಒಮ್ಮೆ ನೀವು ಮೃತರಾಗಿದ್ದಿರಿ. ಆದರೆ ಈಗ ದೇವರು ಕ್ರಿಸ್ತ ಯೇಸುವಿನೊಂದಿಗೆ ನಿಮ್ಮನ್ನು ಜೀವಂತಗೊಳಿಸಿದ್ದಾರೆ. ಅವರು ನಮ್ಮ ಎಲ್ಲಾ ಪಾಪಗಳನ್ನು ಕ್ಷಮಿಸಿದ್ದಾರೆ. ನಮ್ಮನ್ನು ಬಂಧಿಸಿದ್ದ ಧರ್ಮಶಾಸ್ತ್ರದ ವಿದಿ ನಿಯಮಗಳನ್ನು ಕ್ರಿಸ್ತಯೇಸು ತೊಡೆದು ಹಾಕಿದ್ದಲ್ಲದೆ ಅವುಗಳನ್ನು ಶಿಲುಬೆಗೆ ಜಡಿದು ನಮ್ಮನ್ನು ಬಿಡುಗಡೆ ಮಾಡಿದ್ದಾರೆ.

ಶುಭಸಂದೇಶ: ಲೂಕ 11:1-13
ಒಮ್ಮೆ ಯೇಸುಸ್ವಾಮಿ ಒಂದು ಸ್ಥಳದಲ್ಲಿ ಪ್ರಾರ್ಥನೆ ಮಾಡುತ್ತಾ ಇದ್ದರು. ಅವರ ಪ್ರಾರ್ಥನೆ ಮುಗಿದ ಮೇಲೆ ಶಿಷ್ಯರಲ್ಲಿ ಒಬ್ಬನು, "ಪ್ರಭುವೇ ಯೊವಾನ್ನನು ತನ್ನ ಶಿಷ್ಯರಿಗೆ ಪ್ರಾರ್ಥನೆ ಮಾಡುವುದನ್ನು ಕಲಿಸಿದ ಹಾಗೆ ನಮಗೂ ಕಲಿಸಿಕೊಡಿ," ಎಂದನು. ಅದಕ್ಕೆ ಯೇಸು ಇಂತೆಂದರು, "ನೀವು ಹೀಗೆ ಪ್ರಾರ್ಥನೆ ಮಾಡಬೇಕು: "ತಂದೆಯೇ, ನಿಮ್ಮ ಪವಿತ್ರ ನಾಮ ಪೂಜಿತವಾಗಲಿ; ನಿಮ್ಮ ಸಾಮ್ರಾಜ್ಯ ಬರಲಿ. ನಮಗೆ ಅಗತ್ಯವಾದ ಆಹಾರವನ್ನು ಅನುದಿನವೂ ಕೊಡಿ. ನಮಗೆ ತಪ್ಪು ಮಾಡಿದ ಪ್ರತಿಯೊಬ್ಬನನ್ನು ನಾವು ಕ್ಷಮಿಸುವುದರಿಂದ, ನಮ್ಮ ಪಾಪಗಳನ್ನು ಕ್ಷಮಿಸಿರಿ.ನಮ್ಮನ್ನು ಶೋಧನೆಗೆ ಒಳಪಡಿಸಬೇಡಿ," ಪುನಃ ಯೇಸುಸ್ವಾಮಿ ಶಿಷ್ಯರಿಗೆ, "ನಿಮ್ಮಲ್ಲಿ ಒಬ್ಬನು ತನ್ನ ಸ್ನೇಹಿತನ ಮನೆಗೆ ನಡುರಾತ್ರಿಯಲ್ಲಿ ಹೋಗುತ್ತಾನೆಂದು ಭಾವಿಸೋಣ: ಅವನು, "ಗೆಳೆಯಾ, ನನಗೆ ಮೂರು ರೊಟ್ಟಿಗಳನ್ನು ಸಾಲವಾಗಿ ಕೊಡು. ಪ್ರಯಾಣದಲ್ಲಿದ್ದ ನನ್ನ ಸ್ನೇಹಿತನೊಬ್ಬನು ಅನಿರೀಕ್ಷಿತವಾಗಿ ನನ್ನ ಮನೆಗೆ ಈಗ ತಾನೆ ಬಂದಿದ್ದಾನೆ. ಅವನಿಗೆ ಊಟಕ್ಕಿಡಲು ನನ್ನಲ್ಲಿ ಏನೂ ಇಲ್ಲ." ಎಂದು ಕೇಳಲು, ಈ ಸ್ನೇಹಿತ ಒಳಗಿನಂದಲೇ, "ನನಗೆ ತೊಂದರೆ ಕೊಡಬೇಡ; ಬಾಗಿಲು ಹಾಕಿ ಆಗಿದೆ; ನನ್ನ ಮಕ್ಕಳು ನನ್ನ ಕೂಡ ಮಲಗಿದ್ದಾರೆ; ನಾನು ಎದ್ದು ಬಂದು ಕೊಡುವುದಕ್ಕಾಗುವುದಿಲ್ಲ," ಎಂದು ಉತ್ತರ ಕೊಡುವುದು ಸಹಜವಲ್ಲವೇ? ಆದರೂ, ತನ್ನ ಗೆಳೆಯ ಇವನು ಎಂದು ಎದ್ದು ಬಂದು ಕೊಡದೆ ಇದ್ದರೂ, ನಾಚಿಕೆಪಡದೆ ಕೇಳುತ್ತಲೇ ಇದ್ದಾನಲ್ಲಾ ಎಂಬ ಕಾರಣದಿಂದಾದರೂ ಅವನು ಎದ್ದು ಬಂದು ಕೇಳಿದಷ್ಟನ್ನು ಕೊಡುತ್ತಾನೆಂಬುದು ನಿಜ. ಆದುದರಿಂದ: "ಕೇಳಿರಿ, ನಿಮಗೆ ದೊರಕುವುದು; ಹುಡುಕಿರಿ, ನಿಮಗೆ ಸಿಗುವುದು; ತಟ್ಟಿರಿ, ನಿಮಗೆ ಬಾಗಿಲು ತೆರೆಯಲಾಗುವುದು. ಏಕೆಂದರೆ ಕೇಳಿಕೊಳ್ಳುವ ಪ್ರತಿಯೊಬ್ಬನಿಗೂ ದೊರಕುವುದು; ಹುಡುಕುವವನಿಗೆ ಸಿಗುವುದು; ತಟ್ಟುವವನಿಗೆ ಬಾಗಿಲು ತೆರೆಯಲಾಗುವುದು."ನಿಮ್ಮಲ್ಲಿ ಯಾವ ತಂದೆ ತಾನೇ ತನ್ನ ಮಗ ಮೀನನ್ನು ಕೇಳಿದರೆ ಹಾವನ್ನು ಕೊಡುತ್ತಾನೆ? ಅಥವಾ ಮೊಟ್ಟೆಯನ್ನು ಕೇಳಿದರೆ ಚೇಳನ್ನು ಕೊಡುತ್ತಾನೆ? ಕೆಟ್ಟವರಾದ ನೀವು ನಿಮ್ಮ ಮಕ್ಕಳಿಗೆ ಒಳ್ಳೆಯ ಪದಾರ್ಥಗಳನ್ನು ಕೊಡಬಲ್ಲವರಾದರೆ, ಅದಕಿಂತಲೂ ಹೆಚ್ಚಾಗಿ ಸ್ವರ್ಗದಲ್ಲಿರುವ ನಿಮ್ಮ ತಂದೆ ತಮ್ಮನ್ನು ಕೇಳಿಕೊಳ್ಳುವವರಿಗೆ ಪವಿತ್ರಾತ್ಮ ಅವರನ್ನೇ ಅನುಗ್ರಹಿಸಬಲ್ಲರು! ಎಂದು ನಾನು ನಿಮಗೆ ಹೇಳುತ್ತೇನೆ," ಎಂದರು.


27.07.19 - "ಸರ್ವೇಶ್ವರ ಸ್ವಾಮಿಯ ಆಜ್ಞೆಗಳನ್ನೆಲ್ಲಾ ಅನುಸರಿಸಿ ನಡೆಯುತ್ತೇವೆ"

ಮೊದಲನೇ ವಾಚನ: ವಿಮೋಚನಾಕಾಂಡ 24:3-8

ಮೋಶೆ ಜನರ ಬಳಿಗೆ ಬಂದು ಸರ್ವೇಶ್ವರನ ಎಲ್ಲ ಆಜ್ಞೆಗಳನ್ನೂ, ವಿಧಿವಿಧಾನಗಳನ್ನೂ ವಿವರಿಸಿದನು. ಜನರೆಲ್ಲರು, "ಸರ್ವೇಶ್ವರ ಸ್ವಾಮಿಯ ಆಜ್ಞೆಗಳನ್ನೆಲ್ಲಾ ಅನುಸರಿಸಿ ನಡೆಯುತ್ತೇವೆ," ಎಂದು ಒಕ್ಕೊರಳಿನಿಂದ ಉತ್ತರ ಕೊಟ್ಟರು. ಮೋಶೆ ಸರ್ವೇಶ್ವರನ ಆಜ್ಞೆಗಳನ್ನೆಲ್ಲ ಬರೆದಿಟ್ಟನು. ಬೆಳಗ್ಗೆ ಎದ್ದು ಆ ಬೆಟ್ಟದಡಿಯಲ್ಲಿ ಒಂದು ಬಲಿಪೀಠವನ್ನು ಕಟ್ಟಿಸಿದನು. ಇಸ್ರಯೇಲರ ಹನ್ನೆರಡು ಕುಲಗಳಿಗೆ ಹನ್ನೆರಡು ಕಲ್ಲಿನ ಕಂಬಗಳನ್ನು ಸ್ಥಾಪನೆಮಾಡಿಸಿದನು. ಇಸ್ರಯೇಲರ ಯೌವನಸ್ಥರು ಸರ್ವೇಶ್ವರಸ್ವಾಮಿಗೆ ದಹನ ಬಲಿಗಳನ್ನು ಅರ್ಪಿಸುವಂತೆಯೂ ಅಪ್ಪಣೆಕೊಟ್ಟನು. ಆ ಬಲಿಪಶುಗಳ ರಕ್ತದಲ್ಲಿ ಅರ್ಧವನ್ನು ತೆಗೆದು ಬಟ್ಟಲುಗಳಲ್ಲಿ ತುಂಬಿದನು. ಮಿಕ್ಕ ಅರ್ಧವನ್ನು, ಬಲಿಪೀಠದ ಮೇಲೆ ಪ್ರೋಕ್ಷಿಸಿದನು. ತರುವಾಯ, ನಿಬಂಧನ ಗ್ರಂಥವನ್ನು ತೆಗೆದುಕೊಂಡು ಜನರಿಗೆ ಕೇಳಿಸುವಂತೆ ಓದಿದನು. ಅವರು ಅದನ್ನು ಕೇಳಿದ ಮೇಲೆ, "ಸರ್ವೇಶ್ವರಸ್ವಾಮಿಯ ಆಜ್ಞೆಗಳನ್ನೆಲ್ಲಾ ಅನುಸರಿಸುತ್ತೇವೆ; ಅವುಗಳಿಗೆ ವಿಧೇಯರಾಗಿರುತ್ತೇವೆ," ಎಂದರು. ಆಗ ಮೋಶೆ ಬಟ್ಟಲುಗಳಲ್ಲಿದ್ದ ರಕ್ತವನ್ನು ತೆಗೆದುಕೊಂಡು ಜನರಮೇಲೆ ಚಿಮುಕಿಸಿ, "ಇಗೋ, ಈ ಗ್ರಂಥದಲ್ಲಿ ಹೇಳಿರುವ ಎಲ್ಲ ಆಜ್ಞೆಗಳ ಪ್ರಕಾರ ಸರ್ವೇಶ್ವರ ನಿಮ್ಮ ಸಂಗಡ ಮಾಡಿಕೊಂಡ ಒಡಂಬಡಿಕೆಯನ್ನು ಸ್ಥಿರಪಡಿಸುವ ರಕ್ತ ಇದೇ," ಎಂದನು.

ಕೀರ್ತನೆ: 50:1-2, 5-6, 14-15

ಶ್ಲೋಕ: ಪ್ರಭುವೇ, ನಿತ್ಯ ಜೀವವನ್ನು ಈಯುವ ನುಡಿ ಇರುವುದು ತಮ್ಮಲ್ಲೆ

ಶುಭಸಂದೇಶ: ಮತ್ತಾಯ 13:24-30


ಯೇಸುಸ್ವಾಮಿ ಜನರಿಗೆ ಮತ್ತೊಂದು ಸಾಮತಿಯನ್ನು ಹೇಳಿದರು: "ಸ್ವರ್ಗಸಾಮ್ರಾಜ್ಯವು ತನ್ನ ಹೊಲದಲ್ಲಿ ಒಳ್ಳೆಯ ಗೋದಿಯನ್ನು ಬಿತ್ತಿದ ರೈತನನ್ನು ಹೋಲುತ್ತದೆ. ಒಂದು ರಾತ್ರಿ ಎಲ್ಲರೂ ನಿದ್ರಿಸುತ್ತಿರುವಾಗ, ಅವನ ವೈರಿ ಬಂದು, ಗೋದಿಯ ನಡುವೆ ಕಳೆಗಳನ್ನು ಬಿತ್ತಿಹೋದ. ಗೋದಿ ಬೆಳೆದು ತೆನೆ ಬಿಟ್ಟಾಗ ಕಳೆ ಬೆಳೆದಿರುವುದು ಗೋಚರವಾಯಿತು. ಆಗ ಆಳುಗಳು ತಮ್ಮ ಯಜಮಾನನ ಬಳಿಗೆ ಬಂದು, "ಸ್ವಾಮೀ, ನಿಮ್ಮ ಹೊಲದಲ್ಲಿ ಬಿತ್ತಿದ್ದು ಉತ್ತಮವಾದ ಗೋದಿ ಅಲ್ಲವೆ? ಜೊತೆಗೆ ಕಳೆಯು ಕಾಣಿಸಿಕೊಂಡಿದೆಯಲ್ಲಾ, ಅದೆಲ್ಲಿಂದ ಬಂತು?" ಎಂದರು. ಯಜಮಾನ, "ಇದು ನನ್ನ ವೈರಿ ಮಾಡಿರುವ ಕೆಲಸ," ಎಂದ. 'ಹಾಗಾದರೆ, ಕಳೆಗಳನ್ನು ಕಿತ್ತು ಹಾಕೋಣವೇ?' ಎಂದರು ಆಳುಗಳು. ಅದಕ್ಕೆ ಯಜಮಾನ "ಬೇಡ, ಬೇಡ; ಕಳೆಗಳನ್ನು ಕೀಳುವಾಗ, ಗೋದಿಯನ್ನೂ ಕಿತ್ತು ಬಿಟ್ಟೀರಿ. ಸುಗ್ಗಿಯವರೆಗೆ  ಎರಡೂ ಒಟ್ಟಿಗೆ ಬೆಳೆಯಲಿ; ಸುಗ್ಗಿಯ ಕಾಲದಲ್ಲಿ ಮೊದಲು ಕಳೆ ಕಿತ್ತು, ಸುಟ್ಟು ಹಾಕಲು ಕಟ್ಟಿಡಿ; ಬಳಿಕ ಗೋದಿಯನ್ನು ಒಕ್ಕಣೆಮಾಡಿ ನನ್ನ ಕಣಜಕ್ಕೆ ತುಂಬಿರಿ, ಎಂದು ಕೊಯ್ಲುಗಾರರಿಗೆ ಹೇಳುತ್ತೇನೆ,' ಎಂದ

26.07.19

ಮೊದಲನೇ ವಾಚನ: ವಿಮೋಚನಾಕಾಂಡ 20:1-17


ದೇವರು ಕೊಟ್ಟ ಆಜ್ಞೆಗಳು ಇವು: "ನಾನೇ ನಿನ್ನ ದೇವರಾದ ಸರ್ವೇಶ್ವರ ಗುಲಾಮತನದಲ್ಲಿದ್ದ ನಿನ್ನನ್ನು ಈಜಿಪ್ಟಿನಿಂದ ಬಿಡುಗಡೆ ಮಾಡಿದವನು. ನಾನಲ್ಲದೆ ನಿನಗೆ ಬೇರೆ ದೇವರುಗಳು ಇರಕೂಡದು. ಆಕಾಶದಲ್ಲಾಗಲಿ, ಭೂಮಿಯಲ್ಲಾಗಲಿ, ಭೂಮಿಯ ಕೆಳಗಿನ ನೀರಿನಲ್ಲಾಗಲಿ ಇರುವ ಯಾವುದರ ರೂಪವನ್ನು ಅಥವಾ ವಿಗ್ರಹವನ್ನು ಮಾಡಿಕೊಳ್ಳಬೇಡ. ಅವುಗಳಿಗೆ ಅಡ್ಡಬೀಳಬೇಡ, ಅವುಗಳನ್ನು ಆರಾಧಿಸಬೇಡ. ಏಕೆಂದರೆ ನಾನೇ ನಿನ್ನ ದೇವರಾದ ಸರ್ವೇಶ್ವರ. ನನಗೆ ಸಲ್ಲತಕ್ಕ ಗೌರವವನ್ನು ನಾನು ಮತ್ತೊಬ್ಬನಿಗೆ ಸಲ್ಲಗೊಡಿಸುವುದಿಲ್ಲ. ನನ್ನನ್ನು ದ್ವೇಷಿಸುವವರನ್ನು ದಂಡಿಸುತ್ತೇನೆ; ಅವರ ದೋಷಫಲವನ್ನು ಅವರ ಮಕ್ಕಳ ಮೇಲೆ ಮೂರು ನಾಲ್ಕು ತಲೆಗಳವರೆಗೆ ಬರಮಾಡುತ್ತೇನೆ. ನನ್ನನ್ನು ಪ್ರೀತಿಸಿ, ನನ್ನ ಆಜ್ಞೆಗಳನ್ನು ಕೈಗೊಳ್ಳುವವರಿಗಾದರೋ ಸಾವಿರ ತಲೆಗಳವರೆಗೆ ದಯೆತೋರಿಸುತ್ತೇನೆ. ನಿನ್ನ ದೇವರಾದ ಸರ್ವೇಶ್ವರನ ಹೆಸರನ್ನು ದುರುಪಯೋಗಪಡಿಸಿಕೊಳ್ಳಬೇಡ. ಏಕೆಂದರೆ ಸರ್ವೇಶ್ವರನಾದ ನಾನು ನನ್ನ ಹೆಸರನ್ನು ದುರುಪಯೋಗಪಡಿಸಿಕೊಳ್ಳುವವನನ್ನು ಶಿಕ್ಷಿಸದೆ ಬಿಡುವುದಿಲ್ಲ. ಸಬ್ಬತ್ ದಿನವನ್ನು ದೇವರ ದಿನವೆಂದು ತಿಳಿದು ಪವಿತ್ರವಾಗಿ ಆಚರಿಸು. ಆರು ದಿನಗಳು ದುಡಿದು ನಿನ್ನ ಕೆಲಸವನ್ನೆಲ್ಲ ಮಾಡು. ಏಳನೆಯ ದಿನ ನಿನ್ನ ದೇವರಾದ ಸರ್ವೇಶ್ವರನಿಗೆ ಮೀಸಲಾದ ವಿಶ್ರಾಂತಿ ದಿನ. ಅಂದು ನೀನು ಯಾವ ಕೆಲಸವನ್ನು ಮಾಡಬಾರದು. ನಿನ್ನ ಗಂಡುಹೆಣ್ಣು ಮಕ್ಕಳು, ನಿನ್ನ ಗಂಡುಹೆಣ್ಣು ಆಳುಗಳು, ಪಶುಪ್ರಾಣಿಗಳು ಹಾಗು ನಿನ್ನ ಊರಲ್ಲಿರುವ ಅನ್ಯ ದೇಶದವರು ಯಾವ ಕೆಲಸವನ್ನು ಮಾಡಬಾರದು. ಸರ್ವೇಶ್ವರನಾದ ನಾನು ಆರು ದಿನಗಳಲ್ಲಿ ಭೂಮ್ಯಾಕಾಶಗಳನ್ನೂ ಸಮುದ್ರವನ್ನೂ ಅವುಗಳಲ್ಲಿರುವ ಸಮಸ್ತವನ್ನೂ ಸೃಷ್ಟಿಮಾಡಿ ಏಳನೆಯ ದಿನದಲ್ಲಿ ವಿಶ್ರಮಿಸಿಕೊಂಡೆನು. ಆದುದರಿಂದ ಅದನ್ನು ಸರ್ವೇಶ್ವರನ ವಿಶ್ರಾಂತಿ ದಿನವನ್ನಾಗಿ ಆಶೀರ್ವದಿಸಿ ಪವಿತ್ರಗೊಳಿಸಿದೆನು. ನಿನ್ನ ತಂದೆತಾಯಿಗಳನ್ನು ಗೌರವಿಸು; ಗೌರವಿಸಿದರೆ ನಿನ್ನ ದೇವರೂ ಸರ್ವೇಶ್ವರನೂ ಆದ ನಾನು ನಿನಗೆ ಅನುಗ್ರಹಿಸುವ ನಾಡಿನಲ್ಲಿ ಬಹುಕಾಲ ಬಾಳುವೆ. ಕೊಲೆಮಾಡಬೇಡ, ವ್ಯಭಿಚಾರಮಾಡಬೇಡ, ಕದಿಯಬೇಡ, ನೆರೆಯವನ ವಿರುದ್ಧ ಸುಳ್ಳುಸಾಕ್ಷಿ ಹೇಳಬೇಡ,  ನೆರೆಯವನ ಮನೆಯನ್ನು ಬಯಸಬೇಡ; ಅವನ ಹೆಂಡತಿ, ಗಂಡಾಳು, ಹೆಣ್ಣಾಳು, ಎತ್ತು, ಕತ್ತೆ ಮುಂತಾದ ಯಾವುದನ್ನೂ ಬಯಸಬೇಡ."

ಕೀರ್ತನೆ: 19:8, 9, 10, 11

ಶ್ಲೋಕ: ಪ್ರಭುವೇ, ನಿತ್ಯಜೀವವನ್ನು ಈಯುವ ನುಡಿ ಇರುವುದು ತಮ್ಮಲ್ಲೆ

ಶುಭಸಂದೇಶ: ಮತ್ತಾಯ 13:18-23


ಯೇಸು ತಮ್ಮ ಶಿಷ್ಯರನ್ನುದ್ದೇಶಿಸಿ, "ಈಗ  ಬಿತ್ತುವವನ ಸಾಮತಿಯ ಅರ್ಥವನ್ನು ಕೇಳಿ: ಒಬ್ಬನು ಶ್ರೀ ಸಾಮ್ರಾಜ್ಯದ ಸಂದೇಶವನ್ನು ಕೇಳಿ ಅದನ್ನು ಗ್ರಹಿಸದೆ ಹೋದರೆ, ಕೇಡಿಗನು ಬಂದು ಅವನ ಹೃದಯದಲ್ಲಿ ಬಿತ್ತಿದ್ದ ಬೀಜವನ್ನು ತೆಗೆದೆಸೆಯುತ್ತಾನೆ. ಇವನು ಕಲ್ದಾರಿಯಲ್ಲಿ ಬಿದ್ದ ಬೀಜವನ್ನು ಹೋಲುತ್ತಾನೆ. ಬೇರೊಬ್ಬನು ಈ ಸಂದೇಶವನು ಕೇಳಿದಕೂಡಲೇ ಅದನ್ನು ಸಂತೋಷದಿಂದ ಸ್ವೀಕರಿಸುತ್ತಾನೆ. ಆದರೆ ಅದು ತನ್ನಲ್ಲಿ ಬೇರೂರದ ಕಾರಣ ಕೊಂಚಕಾಲ ಮಾತ್ರ ಇದ್ದು, ಸಂದೇಶದ ನಿಮಿತ್ತ ಕಷ್ಟ ಕೋಟಲೆಗಳು ಬಂದೊದಗಿದ ಕೂಡಲೆ ಎಡವಿ ಬೀಳುತ್ತಾನೆ. ಇವನು ಕಲ್ಲು ನೆಲದ ಮೇಲೆ ಬಿದ್ದ ಬೀಜವನ್ನು ಹೋಲುತ್ತಾನೆ. ಇನ್ನೊಬ್ಬನು ಸಂದೇಶವನ್ನೇನೋ ಕೇಳುತ್ತಾನೆ, ಆದರೆ ಪ್ರಾಪಂಚಿಕ ಚಿಂತನೆಗಳು, ಐಶ್ವರ್ಯದ ವ್ಯಾಮೋಹಗಳು ಆ ಸಂದೇಶವನ್ನು ಫಲಬಿಡದಂತೆ ಅದುಮಿಬಿಡುತ್ತವೆ: ಇವನು ಮುಳ್ಳುಪೊದೆಗಳಲ್ಲಿ ಬಿದ್ದ ಬೀಜವನ್ನು ಹೋಲುತ್ತಾನೆ. ಇನ್ನೊಬ್ಬನು ವಾಕ್ಯವನ್ನು ಕೇಳುತ್ತಾನೆ,  ಗ್ರಹಿಸಿಕೊಳ್ಳುತ್ತಾನೆ; ಫಲಪ್ರದನಾಗಿ ನೂರರಷ್ಟು, ಅರವತ್ತರಷ್ಟು, ಮೂವತ್ತರಷ್ಟು ಫಲ ಕೊಡುತ್ತಾನೆ. ಇವನು ಹದವಾದ ಭೂಮಿಯಲ್ಲಿ ಬಿದ್ದ ಬೀಜವನ್ನು ಹೋಲುತ್ತಾನೆ," ಎಂದರು.

25.07.19 - "ನಿಮ್ಮಲ್ಲಿ ಶ್ರೇಷ್ಟನಾಗಿರಲು ಇಚ್ಛಿಸುವವನು ನಿಮಗೆ ಸೇವಕನಾಗಿರಲಿ"

ಮೊದಲನೇ ವಾಚನ: 2 ಕೊರಿಂಥಿಯರಿಗೆ  4:7-15

ಸಹೋದರರೇ, ನಾವು ಇಂಥ ಆಧ್ಯಾತ್ಮಿಕ ಮಾಣಿಕ್ಯವನ್ನು ಪಡೆದಿದ್ದರೂ ಮಣ್ಣಿನ ಮಡಕೆಗಳಂತೆ ಇದ್ದೇವೆ. ಹೀಗೆ, ಈ ಪರಮೋನ್ನತ ಶಕ್ತಿ ನಮಗೆ ಸೇರಿದ್ದಲ್ಲ, ದೇವರಿಗೆ ಸೇರಿದ್ದೆಂದು ವ್ಯಕ್ತವಾಗುತ್ತದೆ. ನಾವು ಇಕ್ಕಟ್ಟು ಬಿಕ್ಕಟ್ಟುಗಳಿಗೆ ಒಳಗಾಗಿದ್ದರೂ ನಜ್ಜುಗುಜ್ಜಾಗಲಿಲ್ಲ; ಸಂಶಯ ಸಂದೇಹಗಳಿಗೊಳಗಾದರೂ ನಿರಾಶೆಗೊಳ್ಳಲಿಲ್ಲ. ಶತ್ರುಗಳು ಅನೇಕರಿದ್ದರೂ ಮಿತ್ರನೊಬ್ಬನು ಇಲ್ಲದಿರಲಿಲ್ಲ. ಪ್ರಾಣಹಿಂಸೆಗಳಿಗೀಡಾಗಿದ್ದರೂ ಪ್ರಾಣನಷ್ಟವನ್ನು ಅನುಭವಿಸಲಿಲ್ಲ. ಯೇಸುವಿನ ದಿವ್ಯ ಜೀವವು ನಮ್ಮ ದೇಹದಲ್ಲಿ ಗೋಚರವಾಗುವಂತೆ ಅವರ ಮರಣಯಾತನೆಯನ್ನು ನಿರಂತರವಾಗಿ ಅನುಭವಿಸುತ್ತಾ ಬಾಳುತ್ತಿದ್ದೇವೆ. ಯೇಸುವಿನ ಅಮರ ಜೀವವು ನಮ್ಮ ನಶ್ವರ ಶರೀರದಲ್ಲಿ ಗೋಚರವಾಗುವಂತೆ ಬದುಕಿರುವಾಗಲೇ ನಾವು ಯೇಸುವಿಗೋಸ್ಕರ ಸತತ ಸಾವಿಗೆ ಈಡಾಗಿದ್ದೇವೆ. ಹೀಗೆ ನಮ್ಮಲ್ಲಿ ಸಾವು ಕಾರ್ಯಗತವಾಗುತ್ತಿದ್ದರೆ ನಿಮ್ಮಲ್ಲಿ ಜೀವ ಕಾರ್ಯಗತವಾಗುತ್ತಿದೆ. "ನಾನು ವಿಶ್ವಾಸವಿಟ್ಟೆನು. ಆದ್ದರಿಂದ ಮಾತನಾಡಿದೆನು," ಎಂದು ಪವಿತ್ರಗ್ರಂಥದಲ್ಲಿ ಬರೆಯಲಾಗಿದೆ. ಇದೇ ಮನೋಭಾವನೆಯಿಂದ ಕೂಡಿರುವ ನಾವು ಮಾತನಾಡಲೇಬೇಕು. ಏಕೆಂದರೆ ನಮಗೆ ವಿಶ್ವಾಸವಿದೆ. ಪ್ರಭು ಯೇಸುವನ್ನು ಪುನರುತ್ಥಾನಗೊಳಿಸಿದ ದೇವರು ನಮ್ಮನ್ನು ಯೇಸುಕ್ರಿಸ್ತರೊಡನೆ ಪುನರುತ್ಥಾನಗೊಳಿಸಿ ತಮ್ಮ ಸಾನ್ನಿಧ್ಯಕ್ಕೆ ಬರಮಾಡಿಕೊಳ್ಳುವರು ಎಂಬುದನ್ನು ನಾವು ಬಲ್ಲೆವು. ಅಂತೆಯೇ ನಿಮ್ಮನ್ನೂ ಬರಮಾಡಿಕೊಳ್ಳುವರು. ಇದೆಲ್ಲವೂ ನಿಮ್ಮ ಒಳಿತಿಗಾಗಿಯೇ. ಹೀಗೆ ಅನೇಕರಲ್ಲಿ ದೇವರ ವರಪ್ರಸಾದವು ಉಕ್ಕಿ ಹರಿಯುವುದು; ಅವರಲ್ಲಿ ಕೃತಜ್ಞತಾ ಭಾವನೆಯನ್ನು ಹೆಚ್ಚಿಸುವುದು; ಇದರಿಂದಾಗಿ ದೇವರ ಮಹಿಮೆ ಬೆಳಗುವುದು.

ಕೀರ್ತನೆ: 126:1-2, 2-3, 4-5, 6

ಶ್ಲೋಕ: ಅಳುತಳುತಾ ಬಿತ್ತುವವರು ನಲಿನಲಿಯುತಾ ಕೊಯ್ಯುವರು

ಶುಭಸಂದೇಶ: ಮತ್ತಾಯ 20:20-28

ಜೆಬೆದಾಯನ ಮಕ್ಕಳ ತಾಯಿ ತನ್ನ ಪುತ್ರರ ಸಮೇತ ಯೇಸುಸ್ವಾಮಿಯ ಬಳಿಗೆ ಬಂದಳು. "ತಮ್ಮಿಂದ ನನಗೊಂದು ಉಪಕಾರ ಆಗಬೇಕು,"ಎಂದು ಸ್ವಾಮಿಯ ಪಾದಕ್ಕೆರಗಿದಳು. "ನಿನ್ನ ಕೋರಿಕೆ ಏನು?" ಎಂದರು ಯೇಸು. ಅದಕ್ಕೆ ಅವಳು, "ತಮ್ಮ ಸಾಮ್ರಾಜ್ಯದಲ್ಲಿ, ನನ್ನ ಈ ಇಬ್ಬರು ಮಕ್ಕಳಲ್ಲಿ ಒಬ್ಬನು ತಮ್ಮ ಬಲಗಡೆಯಲ್ಲೂ ಇನ್ನೊಬ್ಬನು ತಮ್ಮ ಎಡಗಡೆಯಲ್ಲೂ ಆಸೀನರಾಗುವಂತೆ ಅಪ್ಪಣೆಯಾಗಬೇಕು," ಎಂದು ಕೋರಿದಳು. ಅದಕ್ಕೆ ಪ್ರತ್ಯುತ್ತರವಾಗಿ ಯೇಸು, "ನೀವು ಕೋರಿಕೊಂಡದ್ದು ಏನೆಂದು ನಿಮಗೇ ತಿಳಿಯದು. ನಾನು ಕುಡಿಯಬೇಕಾದ ಪಾತ್ರೆಯಿಂದ ಕುಡಿಯಲು ನಿಮ್ಮಿಂದ ಆದೀತೆ?" ಎಂದು ಪ್ರಶ್ನಿಸಿದರು. "ಹೌದು, ಆಗುತ್ತದೆ," ಎಂದು ಅವರು ಮರುನುಡಿದರು.  ಆಗ ಯೇಸು, "ನನ್ನ ಪಾತ್ರೆಯಿಂದ ನೀವೇನೋ ಕುಡಿಯುವಿರಿ. ಆದರೆ ನನ್ನ ಬಲಗಡೆಯಲ್ಲಾಗಲೀ ಎಡಗಡೆಯಲ್ಲಾಗಲೀ ಆಸೀನರಾಗುವಂತೆ ಅನುಗ್ರಹಿಸುವುದು ನನ್ನದಲ್ಲ. ಅದು ಯಾರಿಗಾಗಿ ನನ್ನ ಪಿತನಿಂದ ಸಿದ್ಧಮಾಡಲಾಗಿದೆಯೋ ಅವರಿಗೇ ಸಿಗುವುದು," ಎಂದು ನುಡಿದರು. ಉಳಿದ ಹತ್ತು ಮಂದಿ ಶಿಷ್ಯರು ಇದನ್ನು ಕೇಳಿದಾಗ ಆ ಇಬ್ಬರು ಸಹೋದರರ ಮೇಲೆ ಸಿಟ್ಟುಗೊಂಡರು. ಯೇಸುವಾದರೋ, ಶಿಷ್ಯರೆಲ್ಲರನ್ನೂ ತಮ್ಮ ಬಳಿಗೆ ಕರೆದು, "ಲೋಕದ ಪ್ರಜಾಧಿಪತಿಗಳು ತಮ್ಮ ಪ್ರಜೆಗಳ ಮೇಲೆ ದರ್ಪದಿಂದ ದೊರೆತನ ಮಾಡುತ್ತಾರೆ; ಜನನಾಯಕರು ಎನ್ನಿಸಿಕೊಳ್ಳುವವರು ಜನರ ಮೇಲೆ ಅಧಿಕಾರ ಪ್ರದರ್ಶನ ಮಾಡುತ್ತಾರೆ. ಇದು ನಿಮಗೆ ಗೊತ್ತು. ನೀವು ಹಾಗಿರಬಾರದು. ನಿಮ್ಮಲ್ಲಿ ಶ್ರೇಷ್ಟನಾಗಿರಲು ಇಚ್ಛಿಸುವವನು ನಿಮಗೆ ಸೇವಕನಾಗಿರಲಿ. ಹಾಗೆಯೇ ನರಪುತ್ರನು ಸೇವೆ ಮಾಡಿಸಿಕೊಳ್ಳುವುದಕ್ಕೆ ಅಲ್ಲ, ಇತರರ ಸೇವೆ ಮಾಡುವುದಕ್ಕೂ ಸರ್ವರ ಉದ್ಧಾರಕ್ಕಾಗಿ ತನ್ನ ಪ್ರಾಣವನ್ನು ಈಡಾಗಿ ಕೊಡುವುದಕ್ಕೂ ಬಂದಿದ್ದಾನೆ," ಎಂದು ಹೇಳಿದರು.

ಮನಸಿಗೊಂದಿಷ್ಟು : ಮನುಷ್ಯರಲ್ಲಿ ಕಂಡು ಬರುವ ವಿವಿಧ ಭಾವನೆಗಳನ್ನು ಇಂದಿನ ಶುಭ ಸಂದೇಶದಲ್ಲಿ ಕಾಣಬಹುದು. ತನ್ನ ಮಕ್ಕಳ ಮೇಲಿನ ತಾಯಿಯ ಪ್ರೀತಿ, ಇತರ ಶಿಷ್ಯರ ಕೋಪ, ಯೇಸುವಿನ ಸಮಾಧಾನದ ಮಾತು ಇಲ್ಲಿದೆ. ವ್ಯಾಮೋಹ, ಕೋಪವೆಂಬ ಮನುಷ್ಯ ಸಹಜ ಭಾವಗಳ ನಡುವೆ ದೇವರ ಚಿತ್ತಕ್ಕೆ ಸಮರ್ಪಣೆ ಹಾಗೂ ವಿನೀತ ಭಾವದ ಗುಣದ ಬಗ್ಗೆ ಯೇಸು ಹೇಳುತ್ತಾರೆ. ನಮ್ಮೆಲ್ಲಾ ಭಾವಗಳ ನಡುವೆ ಕೊನೆಗೆ ಯೇಸುವಿನ ತ್ಯಾಗ ಹಾಗೂ ಸೇವಕನಾಗಿರಬೇಕೆಂಬ ಮಾತೇ ನಮ್ಮಲ್ಲಿ ಪ್ರತಿಧ್ವನಿಸುತ್ತಿರಬೇಕು.

24.07.2019 - "ಕೇಳಲು ಕಿವಿಯುಳ್ಳವನು ಕೇಳಿಸಿಕೊಳ್ಳಲಿ"

ಮೊದಲನೇ ವಾಚನ: ವಿಮೋಚನಾಕಾಂಡ: 16:1-5,9-15 


ಇಸ್ರಯೇಲರ ಸಮಾಜ ಏಲೀಮಿನಿಂದ ಹೊರಟ ಮೇಲೆ, ಏಲೀಮಿಗೂ ಸಿನಾಯಿ ಬೆಟ್ಟಕ್ಕೂ ನಡುವೆಯಿರುವ 'ಸೀನ್'  ಎಂಬ ಮರುಭೂಮಿಗೆ ಬಂದರು. ಈಜಿಪ್ಟನ್ನು ಬಿಟ್ಟು ಬಂದ ಎರಡನೆಯ ತಿಂಗಳಿನ ಹದಿನೈದನೆಯ ದಿನ ಅದು. ಮರುಭೂಮಿಯಲ್ಲಿ ಇಸ್ರಯೇಲರ ಸಮಾಜವೆಲ್ಲ ಮೋಶೆ ಮತ್ತು ಆರೋನರ ವಿರುದ್ಧ ಗೊಣಗುಟ್ಟಿತು.  ಈ ಸಮಾಜವನ್ನೆಲ್ಲ ಹಸಿವೆಯಿಂದ ಸಾಯಬೇಕೆಂದು ಈ ಮರುಭೂಮಿಗೆ ನಮ್ಮನ್ನು ಕರೆದುತಂದಿದ್ದೀರಿ; ನಾವು ಈಜಿಪ್ಟಿನಲ್ಲಿದ್ದಾಗ ಸರ್ವೇಶ್ವರನ ಕೈಯಿಂದಲೆ ಸತ್ತಿದ್ದರೆ ಎಷ್ಟೋ ಲೇಸಾಗಿತ್ತು. ಆಗ ಮಾಂಸಪಾತ್ರೆಗಳ ಪಕ್ಕದಲ್ಲೇ ಕುಳಿತು ಹೊಟ್ಟೇ ತುಂಬ ಊಟ ಮಾಡುತ್ತಿದ್ದೆವು." ಎಂದು ಗೊಣಗಿದರು. ಆಗ ಸರ್ವೇಶ್ವರ ಮೋಶೆಗೆ, "ಇಗೋ ನೋಡು, ಆಕಾಶದಿಂದ ನಿಮಗೋಸ್ಕರ ಆಹಾರವನ್ನು  ಸುರಿಸುವೆನು. ಈ ಜನರು ಪ್ರತಿ ದಿನವು ಹೊರಗೆ ಹೋಗಿ ಆಯಾ ದಿನಕ್ಕೆ ಬೇಕಾದಷ್ಟು ಮಾತ್ರ ಕೂಡಿಸಿಕೊಳ್ಳಬೇಕು. ನನ್ನ ಕಟ್ಟಳೆಯ ಪ್ರಕಾರ ನಡೆಯುವರೋ ಇಲ್ಲವೋ ಎಂದು ಇದರಿಂದ ಪರೀಕ್ಷಿಸಿ ತಿಳಿಯುತ್ತೇನೆ. ಆರನೆಯ ದಿನದಲ್ಲಿ ಮಾತ್ರ ಪ್ರತಿ ದಿನ ಕೂಡಿಸಿದ್ದಕ್ಕಿಂತಲೂ ಎರಡರಷ್ಟು ಕೂಡಿಸಿ ಸಿದ್ದಪಡಿಸಿಕೊಳ್ಳಬೇಕು," ಎಂದು ಹೇಳಿದರು. ಆರೋನನಿಗೆ ಮೋಶೆ, "ನೀನು ಇಸ್ರಯೇಲ್ ಸಮಾಜದ ಬಳಿಗೆ ಹೋಗಿ, ಅವರಿಗೆ, "ಸರ್ವೇಶ್ವರ ನಿಮ್ಮ ಗೊಣಗಾಟವನ್ನು ಕೇಳಿದ್ದಾರೆ. ಆದ್ದರಿಂದ ನೀವೆಲ್ಲರು ಅವರ ಸನ್ನಿಧಿಗೆ ಕೂಡಿ ಬರಬೇಕು, ಎಂದು ಆಜ್ಞಾಪಿಸು." ಎಂದು ಹೇಳಿದನು. ಅಂತೆಯೇ ಆರೋನನು ಇಸ್ರಯೇಲರ ಸಮಾಜಕ್ಕೆಲ್ಲ ಈ ಮಾತುಗಳನ್ನು ತಿಳಿಸುತ್ತಿರುವಾಗ ಆ ಜನರು ಮರುಭೂಮಿಯ ಕಡೆಗೆ ನೋಡಿದರು. ಆಗ ಇಗೋ, ಮೇಘದಲ್ಲಿ ಸರ್ವೇಶ್ವರನ ತೇಜಸ್ಸು ಅವರಿಗೆ ಕಾಣಿಸಿತು: ಸರ್ವೇಶ್ವರ ಮೋಶೆಯ ಸಂಗಡ ಮಾತಾಡಿ ಹೀಗೆಂದರು. "ಇಸ್ರಯೇಲರ ಗೊಣಗಾಟ ನನಗೆ ಕೇಳಿಸಿತು. ಅವರಿಗೆ, " "ಸಂಜೆ ಮಾಂಸವನ್ನೂ ಬೆಳಗ್ಗೆ ಬೇಕಾದಷ್ಟು ರೊಟ್ಟಿಯನ್ನೂ ತಿನ್ನುವಿರಿ; ಇದರಿಂದ ನಾನು ನಿಮ್ಮ ದೇವರಾದ ಸರ್ವೇಶ್ವರ ಎಂದು ನಿಮಗೆ ಗೊತ್ತಾಗುವುದು" ಎಂದು ಹೇಳು,"  ಎಂದರು. ಸಂಜೆಯಾಗುತ್ತಲೆ ಲಾವಕ್ಕಿಗಳು ಬಂದು ಅವರ ಪಾಳೆಯವನ್ನು ಮುಚ್ಚಿಕೊಂಡವು. ಬೆಳಗ್ಗೆ ಪಾಳೆಯದ ಸುತ್ತಲೂ ಮಂಜು ಬಿದ್ದಿತು. ಆ ಮಂಜು ಆರಿ ಹೋದ ನಂತರ ಮರುಭೂಮಿಯ ನೆಲದಲ್ಲಿ ಮಂಜಿನ ಹನಿಗಳಂತೆ ಏನೋ ಸಣ್ಣ ಸಣ್ಣ ರವೆಗಳು ಕಾಣಿಸಿದವು. ಇಸ್ರಯೇಲರು ಅದನ್ನು ಕಂಡು ಇಂಥದೆಂದು ತಿಳಿಯದೆ ಒಬ್ಬರಿಗೊಬ್ಬರು "ಮನ್ನ" ಎಂದರು ಇದೇನಿರಬಹುದೆಂದು ವಿಚಾರಿಸಿದರು. 

ಕೀರ್ತನೆ: 78:18-19, 23-24, 25-26, 27-28 

ಶ್ಲೋಕ: ಅನುಗ್ರಹಿಸಿದನು ಪ್ರಭು, ಸ್ವರ್ಗದ ದವಸಧಾನ್ಯವನು 

ಶುಭಸಂದೇಶ: ಮತ್ತಾಯ 13:1-9 

ಅದೇ ದಿನ ಯೇಸುಸ್ವಾಮಿ ಮನೆಯಿಂದ ಹೊರಟು ಸರೋವರದ ತೀರದಲ್ಲಿ ಕುಳಿತರು. ಜನರು ತಂಡೋಪತಂಡವಾಗಿ ಕೂಡಿ ಬಂದುದರಿಂದ ದೋಣಿ ಹತ್ತಿ ಕುಳಿತುಕೊಳ್ಳಬೇಕಾಯಿತು. ಜನರು ದಡದಲ್ಲೇ ನಿಂತರು. ಆಗ ಯೇಸು ಅವರಿಗೆ ಅನೇಕ ವಿಷಯಗಳನ್ನು ಸಾಮತಿಯ ರೂಪದಲ್ಲಿ ಹೇಳಿದರು. "ಒಬ್ಬ ರೈತ ಬಿತ್ತುವುದಕ್ಕೆ ಹೋದ ಬಿತ್ತನೆ ಮಾಡುತ್ತಿದ್ದಾಗ ಕೆಲವು ಬೀಜಗಳು ಕಾಲ್ದಾರಿಯಲ್ಲಿ ಬಿದ್ದವು‌. ಬಿದ್ದದ್ದೇ ಹಕ್ಕಿಗಳು ಬಂದು ಆ ಬೀಜವನ್ನು ತಿಂದು ಬಿಟ್ಟವು. ಬೇರೆ ಕೆಲವು ಬೀಜಗಳು ಹೆಚ್ಚು ಮಣ್ಣಿಲ್ಲದ ಕಲ್ಲು ನೆಲದ ಮೇಲೆ ಬಿದ್ದವು. ಅಲ್ಲಿ ಮಣ್ಣು ತೆಳ್ಳಗಿದ್ದುದರಿಂದ ಅವು ಬೇಗನೆ ಮೊಳೆತವು. ಆದರೆ ಬಿಸಿಲೇರಿದಾಗ ಬಾಡಿದವು. ಬೇರು ಬಲವಾಗಿಲ್ಲದ ಕಾರಣ ಒಣಗಿಹೋದವು. ಮತ್ತೆ ಕೆಲವು ಬೀಜಗಳು ಮುಳ್ಳುಪೊದೆಗಳ ನಡುವೆ ಬಿದ್ದವು. ಆ ಪೊದೆಗಳು ಸಸ್ಯಗಳ ಸಮೇತ ಬೆಳೆದು, ಅವುಗಳನ್ನು ಅಡಗಿಸಿ ಬಿಟ್ಟವು. ಇನ್ನೂ ಕೆಲವು ಬೀಜಗಳು ಹದವಾದ ಭೂಮಿಯಲ್ಲಿ ಬಿದ್ದವು. ಅವು ಮೊಳೆತು, ಬೆಳೆದು, ತೆನೆಬಿಟ್ಟವು. ಕೆಲವು ನೂರರಷ್ಟು, ಮತ್ತೆ ಕೆಲವು ಅರವತ್ತರಷ್ಟು, ಇನ್ನು ಕೆಲವು ಮೂವತ್ತರಷ್ಟು ಫಸಲನ್ನು ಕೊಟ್ಟವು. ಕೇಳಲು ಕಿವಿಯುಳ್ಳವನು ಕೇಳಿಸಿಕೊಳ್ಳಲಿ," ಎಂದು ಒತ್ತಿ ಹೇಳಿದರು.

ಮನಸಿಗೊಂದಿಷ್ಟು ಒಂದು ಒಳ್ಳೆಯ ಭೂಮಿ ಸ್ವಚ್ಛವಾಗಿಯೂ, ಮೆದುವಾಗಿಯೂ , ಫಲವತ್ತಾಗಿ ಇದ್ದಾಗ ಅದರಲ್ಲಿ ಬಿದ್ದ ಕಾಳು ಅಲ್ಲಿ ತನ್ನ ಸಾರ್ಥಕತೆಯನ್ನು ಪಡೆಯುತ್ತದೆ.  ಆಳವಾಗಿ ಬಿತ್ತಲಾಗಿರುವುದರಿಂದ ಅದಕ್ಕೆ ಹಕ್ಕಿಗಳ ಭಯವಿಲ್ಲ, ಬಿಸಿಲಿನ ತಾಪ ತಟ್ಟುವುದಿಲ್ಲ, ಮುಳ್ಳಿನ ಸಹವಾಸವಿಲ್ಲ. ಒಳ್ಳೆಯ ಫಲ ಅಲ್ಲಿ ಸಾಧ್ಯ. ನಮ್ಮ ಹೃದಯಗಳು ಆ ಫಲವತ್ತಾದ ಭೂಮಿಯಂತಾದಾಗ ಕೇಳುವ ಶುಭ ಸಂದೇಶ  ಫಲ ನೀಡುತ್ತದೆ. ಅಂತೆಯೇ ಶುಭ ಸಂದೇಶವನ್ನು  ಕೇಳುತ್ತಾ ಕೇಳುತ್ತಾ ಹೃದಯ ಮತ್ತಷ್ಟು ಫಲವತ್ತಾಗಿ ಹೋಗುತ್ತದೆ. ಕೇಳಿಸಿಕೊಳ್ಳುವಂಥ ಕಿವಿ, ಸ್ಪಂದಿಸಿ, ಫಲ ನೀಡುವಂತ ಹೃದಯ ನಮ್ಮದಾಗಲಿ.

23.07.2019 - "ನನ್ನ ತಂದೆಯ ಚಿತ್ತವನ್ನು ಯಾರು ನೆರವೇರಿಸುತ್ತಾರೋ ಅವರೇ ನನಗೆ ಸಹೋದರ, ಸಹೋದರಿ ಮತ್ತು ತಾಯಿ"

ಮೊದಲನೇ ವಾಚನ: ವಿಮೋಚನಾಕಾಂಡ 14:21-15:1


ಮೋಶೆ ಸಮುದ್ರದ ಮೇಲೆ ಕೈ ಚಾಚಿದಾಗ ಸರ್ವೇಶ್ವರಸ್ವಾಮಿ ಆ ರಾತ್ರಿಯೆಲ್ಲಾ ಪೂರ್ವದಿಕ್ಕಿನಿಂದ ಬಲವಾದ ಬಿರುಗಾಳಿ ಬೀಸುವಂತೆ ಮಾಡಿ ಸಮುದ್ರ ನೀರನ್ನು ಒಂದು ಕಡೆ ನೂಕಿ ಅದರ ತಳದಲ್ಲಿ ಒಣನೆಲವು ಕಾಣಿಸುವಂತೆ ಮಾಡಿದರು. ನೀರು ಇಬ್ಭಾಗವಾಯಿತು. ಇಸ್ರಯೇಲರು ಸಮುದ್ರ  ಮಧ್ಯದಲ್ಲಿ ಒಣ ನೆಲದಲ್ಲೇ ನಡೆದು ಹೋದರು. ನೀರು ಅವರ ಎಡಗಡೆ ಬಲಗಡೆಗಳಲ್ಲಿ ಗೋಡೆಯಂತೆ ನಿಂತಿತು.  ಈಜಿಪ್ಟಿನವರು, ಅಂದರೆ ಫರೋಹನ ಕುದುರೆಗಳು, ರಥಗಳು, ರಾಹುತರು ಇಸ್ರಯೇಲರನ್ನು ಬೆನ್ನಟ್ಟಿ ಬಂದು ಅವರ ಹಿಂದೆಯೇ ಸಮುದ್ರದೊಳಗೆ ಹೋದರು. ಬೆಳಗಿನ ಜಾವದಲ್ಲಿ ಸರ್ವೇಶ್ವರ ಆ ಅಗ್ನಿಸ್ತಂಭದಿಂದ ಈಜಿಪ್ಟಿನವರ ದಂಡಿನ ಕಡೆಗೆ ನೋಡಿ ಅದನ್ನು ಗಲಿಬಿಲಿಗೊಳಿಸಿ, ಅವರ ರಥಗಳ ಚಕ್ರಗಳಲ್ಲಿ ತೊಡಕು ಉಂಟುಮಾಡಿದರು. ಇದರಿಂದ ಈಜಿಪ್ಟಿನವರು ಬಹುಕಷ್ಟದಿಂದ ಅವುಗಳನ್ನು ಸಾಗಿಸಿಕೊಂಡು ಹೋದರು. ಆಗ ಈಜಿಪ್ಟಿನವರು, "ನಾವು ಇಸ್ರಯೇಲರ ಮುಂದೆ ಗೆಲ್ಲಲಾರೆವು, ಓಡಿ ಹೋಗೋಣ ಬನ್ನಿ; ಸರ್ವೇಶ್ವರನು ಅವರ ಪರವಾಗಿ ನಮಗೆ ವಿರುದ್ದವಾಗಿ ಯುದ್ದ ಮಾಡುತ್ತಿದ್ದಾನೆ," ಎಂದುಕೊಂಡರು. ಅಷ್ಟರಲ್ಲಿ ಸರ್ವೇಶ್ವರ,  " ಸಮುದ್ರದ ಮೇಲೆ ನಿನ್ನ ಕೈ ಚಾಚು; ಆಗ ನೀರು ಮೊದಲಿನಂತೆ ಬಂದು ಈಜಿಪ್ಟಿನವರನ್ನೂ ಅವರ ರಥಗಳನ್ನೂ ರಾಹುತರನ್ನೂ ಮುಳುಗಿಸುವುದು" ಎಂದು ಮೋಶೆಗೆ ಹೇಳಿದರು. ಅಂತೆಯೇ ಮೋಶೆ ಸಮುದ್ರದ ಮೇಲೆ ಕೈ ಚಾಚಿದನು. ಬೆಳಗಾಗುವಾಗಲೇ ಸಮುದ್ರದ ನೀರು ಮೊದಲಿನಂತೆಯೇ ತುಂಬಿಕೊಂಡಿತು. ಈಜಿಪ್ಟಿನವರು ಓಡಿ ಹೋಗುತ್ತಾ ಅದಕ್ಕೆ ಎದುರಾಗಿಯೇ ಬಂದರು. ಹೀಗೆ ಸರ್ವೇಶ್ವರ ಈಜಿಪ್ಟಿನವರನ್ನು ಸಮುದ್ರದೊಳಗೆ ಕೆಡವಿ ಬಿಟ್ಟರು. ನೀರು ಮೊದಲಿನಂತೆ ಬಂದು ಆ ರಥಗಳನ್ನು, ರಾಹುತರನ್ನು ಹಾಗೂ ಅವರ ಹಿಂದೆ ಸಮುದ್ರದೊಳಗೆ ಹೋಗಿದ್ದ ಫರೋಹನ ಸೈನ್ಯದವರೆಲ್ಲರನ್ನೂ ಮುಳುಗಿಸಿತು. ಅವರಲ್ಲಿ ಒಬ್ಬರಾದರೂ ಉಳಿಯಲಿಲ್ಲ. ಇಸ್ರಯೇಲರಾದರೋ, ಸಮುದ್ರದೊಳಗೆ ಒಣ ನೆಲದಲ್ಲೇ ನಡೆದು ಹೋದರು.  ನೀರು ಅವರ ಎಡ ಬಲಗಳಲ್ಲಿ ಗೋಡೆಯಂತೆ ನಿಂತಿತ್ತು. ಆ ದಿನ ಸರ್ವೇಶ್ವರಸ್ವಾಮಿ ಇಸ್ರಯೇಲರನ್ನು ಈಜಿಪ್ಟಿನವರ ಕೈಯಿಂದ ರಕ್ಷಿಸಿದರು. ಈಜಿಪ್ಟಿನವರು ಸತ್ತು ಸಮುದ್ರದ ತೀರದಲ್ಲಿ ಬಿದ್ದಿರುವುದನ್ನು ಇಸ್ರಯೇಲರು ಕಂಡರು.  ಸರ್ವೇಶ್ವರ ಈಜಿಪ್ಟಿನವರಲ್ಲಿ  ಮಾಡಿದ ಈ ಪರಾಕ್ರಮ ಕಾರ್ಯವನ್ನು ಇಸ್ರಯೇಲರು ನೋಡಿ ಸರ್ವೇಶ್ವರನಿಗೆ ಭಯಪಟ್ಟು ಅವರಲ್ಲೂ ಅವರ ದಾಸ ಮೋಶೆಯಲ್ಲೂ ನಂಬಿಕೆ ಇಟ್ಟರು. ಆಗ ಮೋಶೆ ಮತ್ತು ಇಸ್ರಯೇಲರು ಸರ್ವೇಶ್ವರ ಸ್ವಾಮಿಗೆ ಸ್ತೋತ್ರವಾಗಿ ಈ ಕೀರ್ತನೆಯನ್ನು ಹಾಡಿದರು: "ಮಾಡೋಣ ಸರ್ವೇಶ್ವರನ ಗುಣಗಾನ, ಮಹೋನ್ನತ ಆತ ಗಳಿಸಿದ ವಿಜಯ! ಕುದುರೆಗಳನು, ರಾಹುತರನು ಕಡಲಲ್ಲಿ ಕೆಡವಿ ನಾಶ ಮಾಡಿಹನು.

ವಿಮೋಚನಕಾಂಡ: 15: 8-9, 10, 12, 17

ಶ್ಲೋಕ: ಮಾಡೋಣ ಸರ್ವೇಶ್ವರನ ಗುಣಗಾನ

ಶುಭಸಂದೇಶ: ಮತ್ತಾಯ 12:46-50

ಯೇಸುಸ್ವಾಮಿ ತಮ್ಮನ್ನು ಸುತ್ತುವರಿದಿದ್ದ ಜನರಿಗೆ ಇನ್ನೂ ಬೋಧನೆ ಮಾಡುತ್ತಿದ್ದರು ಆಗ ಅವರ ತಾಯಿ ಮತ್ತು ಸಹೋದರರು ಬಂದು ಅವರೊಡನೆ ಮಾತನಾಡ ಬಯಸಿ ಹೊರಗೆ ನಿಂತಿದ್ದರು. "ನಿಮ್ಮ ತಾಯಿ ಮತ್ತು ಸಹೋದರರು ಹೊರಗೆ ನಿಂತಿದ್ದಾರೆ; ನಿಮ್ಮೊಡನೆ ಮಾತನಾಡಬೇಕೆಂದಿದ್ದಾರೆ." ಎಂದು ಒಬ್ಬನು ತಿಳಿಸಿದನು. ಅದಕ್ಕೆ ಯೇಸು, "ನನ್ನ ತಾಯಿ ಯಾರು? ನನ ಸಹೋದರರು ಯಾರು?" ಎನ್ನುತ್ತಾ, ತಮ್ಮ ಶಿಷ್ಯರ ಕಡೆಗೆ ಕೈ ತೋರಿಸಿ, ಇಗೋ ನೋಡು, ನನ್ನ ತಾಯಿ; ನನ್ನ ಸಹೋದರರು; ಸ್ವರ್ಗದಲ್ಲಿರುವ ನನ್ನ ತಂದೆಯ ಚಿತ್ತವನ್ನು ಯಾರು ನೆರವೇರಿಸುತ್ತಾರೋ ಅವರೇ ನನಗೆ ಸಹೋದರ, ಸಹೋದರಿ ಮತ್ತು ತಾಯಿ," ಎಂದರು.

ಮನಸಿಗೊಂದಿಷ್ಟು : ನಮ್ಮ ಅನುಭವಕ್ಕೆ ಬಂದಂತೆ ಎಷ್ಟೋ ಬಾರಿ ನಮ್ಮ ಒಡ ಹುಟ್ಟಿದವರು, ಸಂಬಂಧಿಗಳಿಗಿಂತ  ಒಂದೇ ಮನಸ್ಥಿತಿಯ, ಒಂದೇ ಗುರಿಯ ಗೆಳೆಯರೊಂದಿಗೆ ಹೆಚ್ಚು ಬೆರೆಯುತ್ತೇವೆ. ಅದರಲ್ಲೂ ಒಂದು ಉದಾತ್ತವಾದ ಕಾರ್ಯ, ಕನಸಿನತ್ತ ಹೆಜ್ಜೆ ಹಾಕುವವರು ಅದೇ ಚಿಂತನೆಯ ವ್ಯಕ್ತಿಗಳೊಂದಿಗೆ ಹೆಚ್ಚು ಹತ್ತಿರವಾಗುತ್ತಾರೆ, ಬೆರೆಯುತ್ತಾರೆ. ಇಲ್ಲಿ ಯೇಸು ನಮಗೆ ಅದೇ ರೀತಿಯ ಕರೆಯನ್ನು ನೀಡುತ್ತಿದ್ದಾರೆ. ಅವರ ಮೌಲ್ಯ, ಆಶಯಗಳನ್ನು ಅಪ್ಪಿಕೊಳ್ಳುವವರನ್ನು ತಮ್ಮ ಆಪ್ತರನ್ನಾಗಿಸಿಕೊಳ್ಳುತ್ತಿದ್ದಾರೆ. ಅವರಿಗೆ ಹತ್ತಿರದವರಾಗೋಣ.

22.07.2019 - "ರಬ್ಬೂನಿ"

ಮೊದಲನೇ ವಾಚನ: ಪರಮಗೀತೆ  3:1-4 

ನಲ್ಲೆ: ನನ್ನ ಪ್ರಾಣಕಾಂತನನ್ನು ರಾತ್ರಿಯೆಲ್ಲಾ ಹುಡುಕಿದೆ ಹಾಸಿಗೆಯ ಮೇಲೆ ಹಾತೊರೆದೆ, ಹುಡುಕಿ ಹುಡುಕಿ ಸಿಗಲಾರದೆ ಬೇಸತ್ತೆ ಎದ್ದು ಊರೆಲ್ಲಾ  ಅಲೆದಾಡಿದೆ ಬೀದಿಗಳಲ್ಲಿ, ಚೌಕಗಳಲ್ಲಿ ಹುಡುಕಾಡಿದೆ ಹುಡುಕಿ ಹುಡುಕಿ ಸಿಗಲಾರದೆ ಬೇಸತ್ತೆ. ಊರಲ್ಲಿ ತಿರುಗುವ ಪಹರೆಯವರ ಕೈಗೆ ಸಿಕ್ಕಿಬಿದ್ದ "ನನ್ನ ಪ್ರಾಣಕಾಂತನನ್ನು ಕಂಡಿರಾ?"  ಎಂದು ವಿಚಾರಿಸಿದೆ; ಅವರನ್ನು ಬಿಟ್ಟು ತುಸು ಹೊತ್ತಿನಲ್ಲೇ ನನ್ನ ಪ್ರಾಣಕಾಂತನನ್ನು ಕಂಡುಕೊಂಡೆ. ತಾಯಿಯ ಮನೆಗೆ ಕರೆದೊಯ್ದೆ ಕೈಯ ಬಿಡದೆಯೆ ಕರೆದುಕೊಂಡು ಹೋದೆ.

ಕೀರ್ತನೆ: 63:2, 3-4, 5-6, 8-9

ಶ್ಲೋಕ: ನಿನಗೋಸ್ಕರ ಎನ್ನ ತನು ಸೊರಗಿದೆ, ಮನ ಬಾಯಾರಿದೆ

ಶುಭಸಂದೇಶ: ಯೊವಾನ್ನ  20:1-2, 11-18


ಅಂದು ಭಾನುವಾರ, ಮುಂಜಾನೆ. ಇನ್ನೂ ಕತ್ತಲಾಗಿತ್ತು. ಮಗ್ದಲದ ಮರಿಯಳು ಸಮಾಧಿಯ ಬಳಿಗೆ ಬಂದಳು. ಸಮಾಧಿಯ ಬಾಗಿಲಿಗೆ ಮುಚ್ಚಲಾಗಿದ್ದ ಕಲ್ಲು ಅಲ್ಲಿಂದ ತೆಗೆದು ಹಾಕಿರುವುದನ್ನು ಕಂಡಳು. ಆಗ ಆಕೆ ಸಿಮೋನ ಪೇತ್ರನ ಮತ್ತು ಯೇಸುವಿಗೆ ಆಪ್ತನಾಗಿದ್ದ ಇನ್ನೊಬ್ಬ ಶಿಷ್ಯನ ಬಳಿಗೆ ಓಡಿ ಬಂದು, "ಪ್ರಭುವನ್ನು ಸಮಾಧಿಯೊಳಗಿಂದ ತೆಗೆದುಕೊಂಡು ಹೋಗಿ ಬಿಟ್ಟಿದ್ದಾರೆ; ಅವರನ್ನು ಎಲ್ಲಿ ಇಟ್ಟಿದಾರೋ ಗೊತ್ತಿಲ್ಲ," ಎಂದು ಹೇಳಿದಳು. ಮರಿಯಳು ಅಳುತ್ತಾ ಸಮಾಧಿಯ ಹೊರಗೆ ನಿಂತುಕೊಂಡಿದ್ದಳು. ಆಕೆ ಅಳುತ್ತಾ ಸಮಾಧಿಯೊಳಗೆ ಬಗ್ಗಿ ನೋಡಿದಾಗ ಶ್ವೇತ ವಸ್ತ್ರಧಾರಿಗಳಾದ ಇಬ್ಬರು ದೇವದೂತರನ್ನು ಅಲ್ಲಿ ಕಂಡಳು. ಯೇಸುವಿನ ಪಾರ್ಥಿವ ಶರೀರವನ್ನು ಇಟ್ಟಿದ್ದ ಸ್ಥಳದಲ್ಲಿ, ಒಬ್ಬನು ಅವರ ತಲೆಯಿದ್ದ ಕಡೆಯಲ್ಲೂ ಮತ್ತೊಬ್ಬನು ಕಾಲಿದ್ದ ಕಡೆಯಲ್ಲೂ ಕುಳಿತ್ತಿದ್ದರು. ಅವರು ಆಕೆಯನ್ನು, "ಏಕಮ್ಮಾ ಅಳುತ್ತಿರುವೆ?" ಎಂದು ಕೇಳಿದರು. "ನನ್ನ ಪ್ರಭುವನ್ನು ತೆಗೆದುಕೊಂಡು ಹೋಗಿ ಬಿಟ್ಟಿದಾರೆ. ಎಲ್ಲಿ ಇಟ್ಟಿದ್ದಾರೋ ತಿಳಿಯದು," ಎಂದಳು.  ಹಾಗೆ ಹೇಳಿ ಹಿಂದಕ್ಕೆ ತಿರುಗಿದಾಗ ಅಲ್ಲೇ ಯೇಸು ನಿಂತಿರುವುದು ಆಕೆಗೆ ಕಾಣಿಸಿತು. ಆದರೆ ಯೇಸುವೇ ಅವರೆಂದು ಆಕೆಗೆ ತಿಳಿಯಲಿಲ್ಲ. ಯೇಸು, "ಏಕಮ್ಮಾ ಅಳುತ್ತಿರುವೆ? ಏನನ್ನು ಹುಡುಕುತ್ತಿರುವೆ?" ಎಂದು ಕೇಳಿದಾಗಲೂ ಮರಿಯಳು ಅವರು ತೋಟಗಾರನೆಂದು ಭಾವಿಸಿ, "ಅಯ್ಯಾ, ನೀವೇನಾದರೂ ಅವರನ್ನು ಕೊಂಡೊಯ್ದಿದ್ದರೆ ಎಲ್ಲಿಟ್ಟಿರುವಿರಿ, ಹೇಳಿ; ನಾನು ತೆಗೆದುಕೊಂಡು ಹೋಗುತ್ತೇನೆ," ಎಂದು ಹೇಳಿದಳು. ಆಗ ಯೇಸು, "ಮರಿಯಾ" ಎಂದು ಹೆಸರಿಡಿದು ಕರೆದರು. ಆಕೆ ಹಿಂದಿರುಗಿ ನೋಡಿ, "ರಬ್ಬೂನಿ" ಎಂದಳು. (ಯೆಹೂದ್ಯರ ಭಾಷೆಯಲ್ಲಿ ಹಾಗೆಂದರೆ "ಗುರುದೇವಾ" ಎಂದರ್ಥ) ಯೇಸು ಆಕೆಗೆ, "ನನ್ನನ್ನು ಹಿಡಿದುಕೊಂಡಿರಬೇಡ, ನಾನು ಇನ್ನೂ ಪಿತನ ಬಳಿಗೆ ಏರಿಹೋಗಿಲ್ಲ. ನೀನು ನನ್ನ ಸಹೋದರರ ಬಳಿಗೆ ಹೋಗಿ ನನ್ನ ಪಿತನೂ ನಿಮ್ಮ ಪಿತನೂ ನನ್ನ ದೇವರೂ ನಿಮ್ಮ ದೇವರೂ ಆಗಿರುವಾತನಲ್ಲಿಗೆ ನಾನು ಏರಿ ಹೋಗುತ್ತೇನೆಂದು ತಿಳಿಸು," ಎಂದು ಹೇಳಿದರು. ಮಗ್ದಲದ ಮರಿಯಳು ಶಿಷ್ಯರ ಬಳಿಗೆ ಬಂದು, "ನಾನು ಪ್ರಭುವನ್ನು ಕಂಡೆ: ಅವರು ಹೀಗೆಲ್ಲಾ ಹೇಳಿದರು," ಎಂದು ತಿಳಿಸಿದಳು.

21.07.2019 - "ಮರಿಯಳು ಉತ್ತಮವಾದುದನ್ನೇ ಆರಿಸಿಕೊಂಡಿದ್ದಾಳೆ"

ಮೊದಲನೇ ವಾಚನ ಆದಿಕಾಂಡ 18:1-10


ಒಂದು ದಿನ ಅಬ್ರಹಾಮನು ಉರಿಬಿಸಿಲ ವೇಳೆಯಲ್ಲಿ ಮಮ್ರೋತೋಪಿನ ತನ್ನ ಗುಡಾರದ ಬಾಗಿಲಲ್ಲಿ ಕುಳಿತಿದ್ದನು. ಆಗ ಅವನಿಗೆ ಸರ್ವೇಶ್ವರಸ್ವಾಮಿಯ ದರ್ಶನವಾಯಿತು. ಅವನು ಕಣ್ಣೆತ್ತಿ ನೋಡಿದಾಗ ಯಾರೋ ಮೂರು ಮಂದಿ ಪುರುಷರು ಹತ್ತಿರದಲ್ಲೇ ನಿಂತಿದ್ದರು. ಅವರನ್ನು ಎದುರುಗೊಳ್ಳಲು ಅಬ್ರಹಾಮನು ಕೂಡಲೆ ಗುಡಾರದ ಬಾಗಿಲಿನಿಂದ ಓಡಿಬಂದು, ತಲೆಬಾಗಿ ನಮಸ್ಕರಿಸಿ, "ಸ್ವಾಮೀ, ದಯವಿರಲಿ, ದಾಸನ ಬಳಿಗೆ ದಯ ಮಾಡದೆ ಮುಂದೆ ಹೋಗಬೇಡಿ. ನೀರು ತರಿಸಿಕೊಡುತ್ತೇನೆ, ಕಾಲು ತೊಳೆದುಕೊಂಡು ಈ ಮರದ ನೆರಳಿನಲ್ಲಿ ವಿಶ್ರಮಿಸಿಕೊಳ್ಳಿ. ಸ್ವಲ್ಪ ಆಹಾರ ತರುತ್ತೇನೆ. ಊಟವಾದ ಮೇಲೆ ನೀವು ಮುಂದಕ್ಕೆ ಪ್ರಯಾಣ ಮಾಡಬಹುದು. ದಾಸನಿರುವ ಸ್ಥಳದ ಹತ್ತಿರ ಹಾದು ಹೋಗುತ್ತಿದ್ದೀರಲ್ಲವೆ?" ಎನ್ನಲು ಅವರು "ನೀನು ಹೇಳಿದಂತೆಯೇ ಆಗಲಿ," ಎಂದರು. ಆಗ ಅಬ್ರಹಾಮನು ಗುಡಾರದಲ್ಲಿದ್ದ ಸಾರಾಳ ಬಳಿಗೆ ಓಡಿ ಆಕೆಗೆ, "ಹಸನಾದ ಮೂರು ಸೇರು ಹಿಟ್ಟನ್ನು ನಾದಿ, ಬೇಗ ರೊಟ್ಟಿಗಳನ್ನು ಮಾಡು," ಎಂದನು. ಆನಂತರ ದನಗಳ ಹಟ್ಟಿಗೆ ಓಡಿಹೋಗಿ ಕೊಬ್ಬಿದ್ದ ಎಳೆ ಕರುವನ್ನು ತೆಗೆದು ಅವನ ಆಳಿನ ಕೈಗೆ ಕೊಟ್ಟನು. ಆಳು ಬೇಗನೆ ಅಡಿಗೆ ಮಾಡಿದನು. ತರುವಾಯ ಅಬ್ರಹಾಮನು ಹಾಲು ಮೊಸರನ್ನು ಹಾಗೂ ಅಟ್ಟ ಮಾಂಸವನ್ನು ತೆಗೆದುಕೊಂಡು ಬಂದು ಆ ಮನುಷ್ಯರಿಗೆ ಬಡಿಸಿದನು. ಬಳಿಕ, "ನಿನ್ನ ಹೆಂಡತಿ ಸಾರಾಳು ಎಲ್ಲಿ?" ಎಂದು ಆ ಅತಿಥಿಗಳು ವಿಚಾರಿಸಿದಾಗ, "ಅಲ್ಲಿ ಗುಡಾರದಲ್ಲಿದ್ದಾಳೆ," ಎಂದು ಉತ್ತರಕೊಟ್ಟನು. ಆಗ ಸರ್ವೇಶ್ವರಸ್ವಾಮಿ, "ಬರುವ ವರ್ಷ ಇದೇ ಕಾಲದಲ್ಲಿ ನಾನು ತಪ್ಪದೆ ಮರಳಿ ನಿನ್ನ ಬಳಿಗೆ ಬರುತ್ತೇನೆ; ಬಂದಾಗ ನಿನ್ನ ಹೆಂಡತಿ ಸಾರಾಳಿಗೆ ಮಗನಿರುತ್ತಾನೆ," ಎಂದರು.

ಕೀರ್ತನೆ: 15:2-3, 3-4, 5

ಶ್ಲೋಕ: ಯೋಗ್ಯನಾರು ಪ್ರಭೂ, ನಿನ್ನ ಗುಡಾರದಲ್ಲಿ ಬಿಡಾರ ಮಾಡಲು?

ಎರಡನೇ ವಾಚನ: ಕೊಲೊಸ್ಸೆಯರಿಗೆ 1:24-28

ಸಹೋದರರೇ, ಈಗ ನಿಮಗೋಸ್ಕರ ಸಂಕಟಪಡುವುದರಲ್ಲಿ ನನಗೆ ಸಂತೋಷವಿದೆ. ಕ್ರಿಸ್ತ ಯೇಸು ತಮ್ಮ ಶರೀರವಾದ ಧರ್ಮಸಭೆಗೋಸ್ಕರ ಅನುಭವಿಸಬೇಕಾದ ಯಾತನೆಗಳಲ್ಲಿ ಉಳಿದುದ್ದನ್ನು ನಾನು ನನ್ನ ದೇಹದಲ್ಲಿ ಅನುಭವಿಸಿ ಪೂರ್ಣಗೊಳಿಸುತ್ತಿದ್ದೇನೆ. ದೇವರು ನನ್ನನ್ನು ಧರ್ಮಸಭೆಯ ದಾಸನನ್ನಾಗಿ ನೇಮಿಸಿದ್ದಾರೆ. ನಿಮ್ಮ ಹಿತಕ್ಕಾಗಿ ಒಂದು ಮಹತ್ವದ ಕಾರ್ಯವನ್ನು ನನಗೆ ವಹಿಸಿರುತ್ತಾರೆ. ಯುಗ ಯುಗಾಂತರಗಳಿಂದಲೂ ನಿಗೂಢವಾಗಿದ್ದ ರಹಸ್ಯವನ್ನು, ಅಂದರೆ ತಮ್ಮ ವಾಕ್ಯವನ್ನು, ಈಗ ತಮ್ಮ ಜನರಿಗೆ ದೇವರು ಪ್ರಕಟಿಸಿದ್ದಾರೆ. ಈ ರಹಸ್ಯ ಎಷ್ಟು ಶ್ರೀಮಂತವಾದುದು, ಎಷ್ಟು ಮಹಿಮಾನ್ವಿತವಾದುದು ಎಂಬುದನ್ನು ಎಲ್ಲಾ ಜನಾಂಗಗಳಿಗೂ ತಿಳಿಸಲು ದೇವರು ಇಚ್ಛಸಿದರು. ಕ್ರಿಸ್ತ ಯೇಸು ನಿಮ್ಮಲ್ಲಿದ್ದು ಮುಂದಿನ ಮಹಿಮೆಯ ನಿರೀಕ್ಷೆಗೆ ಆಧಾರವಾಗಿದ್ದಾರೆ ಎಂಬುದೇ ಈ ರಹಸ್ಯ, ನಾವು ಸಾರುತ್ತಲಿರುವುದೂ ಯೇಸುಕ್ರಿಸ್ತರನ್ನೇ. ಎಲ್ಲರಿಗೂ ಪೂರ್ಣಜ್ಞಾನವನ್ನು ಉಪದೇಶಿಸುತ್ತಾ ಪರಿಣತರನ್ನಾಗಿ ಊರ್ಜಿತಗೊಳ್ಳಿಸಲು ಪ್ರಯತ್ನಿಸುತ್ತಿದ್ದೇವೆ.

ಶುಭಸಂದೇಶ: ಲೂಕ 10:38-41

ಯೇಸುಸ್ವಾಮಿ ತಮ್ಮ ಶಿಷ್ಯರೊಡನೆ ಪ್ರಯಾಣ ಮುಂದುವರಿಸಿ ಒಂದು ಹಳ್ಳಿಗೆ ಬಂದರು. ಅಲ್ಲಿ ಮಾರ್ತಳೆಂಬ ಮಹಿಳೆ ಅವರನ್ನು ತಮ್ಮ ಮನೆಗೆ ಆಮಂತ್ರಿಸಿದಳು ಆಕೆಗೆ ಮರಿಯಳೆಂಬ ಸೋದರಿ ಇದ್ದಳು. ಆಕೆ ಪ್ರಭುವಿನ ಸನ್ನಿಧಿಯಲ್ಲಿ ಕುಳಿತುಕೊಂಡು ಅವರ ಬೋಧನೆಯನ್ನು ಆಲಿಸುತ್ತಿದ್ದಳು. ಮಾರ್ತಳಾದರೋ, ಅತಿಥಿ ಸತ್ಕಾರದ ಗಡಿಬಿಡಿಯಲ್ಲಿ ಇದ್ದಳು. ಅವಳು ಬಂದು, "ಪ್ರಭೂ, ನನ್ನ ಸೋದರಿ ಈ ಕೆಲಸವನ್ನೆಲ್ಲಾ ನನ್ನೊಬ್ಬಳಿಗೇ  ಬಿಟ್ಟಿದ್ದಾಳೆ. ನೀವಿದನ್ನು ಗಮನಿಸಬಾರದೇ? ನನಗೆ ಸಹಾಯಮಾಡುವಂತೆ ಅವಳಿಗೆ ಹೇಳಿ," ಎಂದಳು. ಯೇಸು ಆಕೆಗೆ ಪ್ರತ್ಯುತ್ತರವಾಗಿ, "ಮಾರ್ತ, ಮಾರ್ತ, ನೀನು ಅನಾವಶ್ಯ ಚಿಂತೆ ಪೇಚಾಟಿಕೆಗಳಿಗೆ ಒಳಗಾಗಿರುವೆ. ಆದರೆ ಅಗತ್ಯವಾದುದು ಒಂದೇ, ಮರಿಯಳು ಉತ್ತಮವಾದುದನ್ನೇ ಆರಿಸಿಕೊಂಡಿದ್ದಾಳೆ. ಅದನ್ನು ಆಕೆಯಿಂದ ಕಸಿದುಕೊಳ್ಳಲಾಗದು," ಎಂದರು.

20.07.2019 - "ನನಗೆ ಪರಮ ಪ್ರಿಯನು, ನನ್ನ ಅಪಾರ ಮೆಚ್ಚುಗೆಗೆ ಪಾತ್ರನು"

ಮೊದಲನೇ ವಾಚನ: ವಿಮೋಚನಾಕಾಂಡ 12:37-42


ಇಸ್ರಯೇಲರು ರಮ್ಸೇಸ್ ಪಟ್ಟಣದಿಂದ ಹೊರಟು ಸುಕ್ಕೋತಿಗೆ ಬಂದರು. ಅವರಲ್ಲಿ ಮಹಿಳೆಯರನ್ನೂ ಮಕ್ಕಳನ್ನೂ ಬಿಟ್ಟು ಗಂಡಸರ ಸಂಖ್ಯೆಯೇ ಸುಮಾರು ಆರು ಲಕ್ಷವಿತ್ತು. ಅವರೊಂದಿಗೆ ಬಹು ಮಂದಿ ಅನ್ಯದೇಶೀಯರೂ ಹೊರಟು ಬಂದಿದ್ದರು. ಕುರಿ, ದನ ಮುಂತಾದ ಪಶುಪ್ರಾಣಿಗಳು ಬಹಳವಿದ್ದವು. ಈಜಿಪ್ಟ್ ದೇಶದಿಂದ ಅವರು ತಂದಿದ್ದ ಕಣಕದ ಮುದ್ದೆಯಿಂದ ಹುಳಿಯಿಲ್ಲದ ರೊಟ್ಟಿಗಳನ್ನು ಮಾಡಿ ಸುಟ್ಟರು. ಅಲ್ಲಿಂದ ಅವರನ್ನು ಹೊರಡಿಸಿದಾಗ ಸ್ವಲ್ಪವೂ ಸಮಯ ಸಿಕ್ಕದೆ ಕಣಕದಲ್ಲಿ ಹುಳಿಯನ್ನು ಕಲಸಲಿಕ್ಕೂ ಆಗಲಿಲ್ಲ ಹಾಗು ಬೇರೆ ಅಹಾರವನ್ನು ಸಿದ್ಧಪಡಿಸಿಕೊಳ್ಳಲೂ  ಸಾಧ್ಯವಾಗಿರಲಿಲ್ಲ. ಇಸ್ರಯೇಲರು ಈಜಿಪ್ಟ್ ದೇಶದಲ್ಲಿ ನಾನೂರ ಮೂವತ್ತು ವರ್ಷಗಳ ಕಾಲ ವಾಸವಾಗಿದ್ದರು. ಈ ನಾನೂರ ಮೂವತ್ತು ವರ್ಷಗಳು ಕಳೆದ ನಂತರ ಅದೇ ದಿವಸದಲ್ಲಿ ಸರ್ವೇಶ್ವರನ ಪಡೆಗಳೆಲ್ಲವೂ ಈಜಿಪ್ಟ್ ದೇಶವನ್ನು ಬಿಟ್ಟು ಹೊರಟು ಬಂದವು. ಸರ್ವೇಶ್ವರ ಅವರನ್ನು ಈಜಿಪ್ಟ್ ದೇಶದಿಂದ ಹೊರಗೆ ಬರಮಾಡಲು ಜಾಗರೂಕರಾಗಿದ್ದುದ್ದು ಆ ರಾತ್ರಿಯೇ. ಆದುದರಿಂದಲೇ ಇಸ್ರಯೇಲರೆಲ್ಲರು ತಲ ತಲಾಂತಕ್ಕೂ ಸರ್ವೇಶ್ವರನ ಗೌರವಾರ್ಥ ಈ ರಾತ್ರಿಯಲ್ಲೇ ಜಾಗರಣೆಯನ್ನು ಅನುಸರಿಸಬೇಕು.

ಕೀರ್ತನೆ: 136:1, 23-24, 10-12, 13-15

ಶ್ಲೋಕ: ಪ್ರಭುವಿನ ಪ್ರೀತಿ ಶಾಶ್ವತ

ಶುಭಸಂದೇಶ: ಮತ್ತಾಯ 12:14-21

ಫರಿಸಾಯರು ಯೇಸುವನ್ನು ಕೊಲೆ ಮಾಡಲು ಒಳ ಸಂಚು ಹೂಡಿದರು.  ತಮಗೆ ವಿರುದ್ಧ ಒಳ ಸಂಚು ನಡೆಯುತ್ತಿದೆ ಎಂದು ಯೇಸುಸ್ವಾಮಿ ಅರಿತುಕೊಂಡು ಅಲ್ಲಿಂದ ಹೊರಟು ಹೋದರು. ಅನೇಕ ಜನರು ಅವರ ಹಿಂದೆಯೇ ಹೋದರು. ಯೇಸು ಅಸ್ವಸ್ಥರಾಗಿದ್ದ ಎಲ್ಲರನ್ನು ಗುಣಪಡಿಸಿದರು. ಮತ್ತು ತಮ್ಮ ವಿಷಯಗಳನ್ನು ಯಾರಿಗೂ ತಿಳಿಸಬಾರದೆಂದು ಆಜ್ಞೆ ಮಾಡಿದರು. ಹೀಗೆ ದೇವರು ಪ್ರವಾದಿ ಯೆಶಾಯನ ಮುಖಾಂತರ ಹೇಳಿದ ಈ ವಚನ ನೆರವೇರಿತು: "ಇದಿಗೋ, ನನ್ನ ದಾಸನು, ನನ್ನಿಂದಾಯ್ಕೆಯಾದವನು, ನನಗೆ ಪರಮಪ್ರಿಯನು, ನನ್ನ ಅಪಾರ ಮೆಚ್ಚುಗೆಗೆ ಪಾತ್ರನು. ನೆಲೆಗೊಳಿಸುವೆ ಇವನಲಿ ಎನ್ನಾತ್ಮವನು; ಸಾರುವನಿವನು ಜಗದಲಿ ನನ್ನ ಧರ್ಮವನು. ವಾದಿಸುವವನಲ್ಲ, ದನಿಯೆತ್ತಿ ಕೂಗುವವನಲ್ಲ, ಹಾದಿ ಬೀದಿಯಲ್ಲಿವನ ಕಂಠ ಮೊರೆಯುವುದಿಲ್ಲ. ಮುರಿದ ಜೊಂಡಿನಂತಹ ದುರ್ಬಲರಿಗೀತ ದೀನ ಬಂಧು, ನಂದಿ ಹೋಗುತಿಹ ದೀನ ದಲಿತರಿಗೆ ಕೃಪಾಸಿಂಧು, ನ್ಯಾಯ ನೀತಿಗೆ ಜಯ ದೊರಕಿಸದೆ ಬಿಡನಿವನು. ನಂಬುವರು ಅನ್ಯ ಜನರೆಲ್ಲರು ಇವನ ನಾಮವನು."

19.07.2019 - "ನನಗೆ ಬೇಕಾದುದು ದಯೆ, ಯಜ್ಞಬಲಿಯಲ್ಲ"

ಮೊದಲನೇ ವಾಚನ: ವಿಮೋಚನಾಕಾಂಡ  11:10-12:14


ಮೋಶೆ ಮತ್ತು ಆರೋನರು ಫರೋಹನ ಮುಂದೆ ಈ ಸೂಚಕ ಕಾರ್ಯಗಳನ್ನೆಲ್ಲಾ ಮಾಡಿದ್ದರೂ ಸರ್ವೇಶ್ವರ ಫರೋಹನ ಹೃದಯವನ್ನು ಕಲ್ಲಾಗಿಸಿದ್ದರು. ಅವನು ತನ್ನ ದೇಶವನ್ನು ಬಿಟ್ಟು ಹೊರಡುವುದಕ್ಕೆ ಇಸ್ರಯೇಲರಿಗೆ ಅಪ್ಪಣೆ ಕೊಡದೆಹೋದನು. ಈಜಿಪ್ಟ್ ದೇಶದಲ್ಲಿ ಸರ್ವೇಶ್ವರಸ್ವಾಮಿ ಮೋಶೆ ಮತ್ತು ಆರೋನರ ಸಂಗಡ ಮಾತನಾಡಿ ಹೀಗೆಂದರು:  "ಎಲ್ಲ ಮಾಸಗಳಲ್ಲಿ ಇದೇ ನಿಮಗೆ ಆದಿಮಾಸವಾಗಿರಬೇಕು. ಇದೇ ನಿಮಗೆ ಪ್ರತಿ ವರ್ಷದ ಮೊದಲನೆಯ ತಿಂಗಳಾಗಿರಬೇಕು. ಈ ವಿಷಯದಲ್ಲಿ ನೀವು ಇಸ್ರಯೇಲರ ಸಮಾಜಕ್ಕೆಲ್ಲ ಈ ರೀತಿ ಕಟ್ಟಳೆ ಇಡಬೇಕು. "ಈ ತಿಂಗಳ ಹತ್ತನೆಯ ದಿನದಲ್ಲಿ ನಿಮ್ಮ ನಿಮ್ಮ ಗೋತ್ರಗಳ ಪ್ರತಿಯೊಂದು ಮನೆಯವರು ಒಂದೊಂದು ಕುರಿಮರಿಯನ್ನಾಗಲಿ, ಆಡು ಮರಿಯನ್ನಾಗಲಿ ಆರಿಸಿಕೊಳ್ಳಬೇಕು. ಕುಟುಂಬವು ಚಿಕ್ಕದಾಗಿದ್ದು ಒಂದು ಮರಿಯನ್ನು ಪೂರ್ತಿಯಾಗಿ ತಿನ್ನಲಾಗದಿದ್ದರೆ ಹತ್ತಿರದ ನೆರೆಮನೆಯ ಕುಟುಂಬದೊಂದಿಗೆ ಸೇರಿ ಒಬ್ಬೊಬ್ಬನು ಇಷ್ಟಿಷ್ಟು ತಿನ್ನುವನೆಂದು ಲೆಕ್ಕ ಹಾಕಿ ಜನಗಳ ಸಂಖ್ಯಾನುಸಾರ ಮರಿಗಳನ್ನು ಆರಿಸಿಕೊಳ್ಳಲಿ. ಆ ಮರಿಯು ಯಾವ ದೋಷವೂ ಇಲ್ಲದ ಒಂದು ವರ್ಷದ ಗಂಡಾಗಿರಬೇಕು. ಕುರಿಗಳಿಂದಾಗಲಿ ಆಡುಗಳಿಂದಾಗಲಿ ಅದನ್ನು ಆರಿಸಿಕೊಳ್ಳಬಹುದು. ಈ ತಿಂಗಳಿನ ಹದಿನಾಲ್ಕನೆಯ ದಿನದವರೆಗೆ ಅವುಗಳನ್ನು ಇಟ್ಟುಕೊಂಡಿದ್ದು ಆ ದಿನದ ಸಂಜೆ ವೇಳೆಯಲ್ಲಿ ಇಸ್ರಯೇಲ್ ಸಮಾಜದವರೆಲ್ಲರು ತಮ್ಮತಮ್ಮ ಕೂಟಗಳಲ್ಲಿ ಕೊಯ್ಯಬೇಕು. ಅವುಗಳ ರಕ್ತದಲ್ಲಿ ಸ್ವಲ್ಪ ತೆಗೆದು ತಾವು ಆ ಭೋಜನ ಮಾಡುವ ಮನೆಯ ಬಾಗಿಲಿನ ಎರಡು ನಿಲುವು ಕಂಬಗಳಿಗೂ ಮೇಲಿನ ಪಟ್ಟಿಗೂ ಹಚ್ಚಬೇಕು. ಆ ರಾತ್ರಿಯಲ್ಲೇ ಆ ಮಾಂಸವನ್ನು ತಿನ್ನಬೇಕು. ಅದನ್ನು ಬೆಂಕಿಯಲ್ಲಿ ಸುಟ್ಟು ಹುಳಿಯಿಲ್ಲದ ರೊಟ್ಟಿಗಳ ಮತ್ತು ಕಹಿಯಾದ ಪಲ್ಯಗಳ ಸಮೇತ ಊಟ ಮಾಡಬೇಕು. ಅದನ್ನು ಹಸಿಯಾಗಿಯೋ ಅಥವಾ ನೀರಿನಲ್ಲಿ ಬೇಯಿಸಿಯೋ ತಿನ್ನಕೂಡದು. ಅದನ್ನೆಲ್ಲಾ, ತಲೆ ಕಾಲು, ಒಳ ಭಾಗಗಳ ಸಹಿತವಾಗಿ, ಬೆಂಕಿಯಲ್ಲಿ ಸುಟ್ಟೇ ತಿನ್ನಬೇಕು. ಮರುದಿನ ಬೆಳಗಿನ ತನಕ ಅದರಲ್ಲಿ ಸ್ವಲ್ಪವನ್ನಾದರು ಮಿಗಿಸಕೂಡದು. ಬೆಳಗಿನವರೆಗೆ ಮಿಕ್ಕಿದ್ದನ್ನು ಬೆಂಕಿಯಿಂದ ಸುಟ್ಟುಬಿಡಬೇಕು. ಆ ಬೋಜನವನ್ನು ಮಾಡಬೇಕಾದ ಕ್ರಮ ಇದು; ನೀವು ನಡುಕಟ್ಟಿಕೊಂಡು, ಕೆರಮೆಟ್ಟಿಕೊಂಡು ಊರುಗೋಲನ್ನು ಹಿಡಿದುಕೊಂಡು, ಬೇಗಬೇಗನೆ ಊಟಮಾಡಬೇಕು. ಏಕೆಂದರೆ ಅದು ಸರ್ವೇಶ್ವರಸ್ವಾಮಿಗೆ ಆಚರಿಸತಕ್ಕ ಪಾಸ್ಕಹಬ್ಬ. ಆ ರಾತ್ರಿ ನಾನು ಈಜಿಪ್ಟ್ ದೇಶದ ನಡುವೆ ಹಾದು ಹೋಗುವೆನು. ಮನುಷ್ಯರಾಗಿರಲಿ, ಪ್ರಾಣಿಗಳಾಗಿರಲಿ ಚೊಚ್ಚಲಾದುದೆಲ್ಲವನ್ನು ಸಂಹರಿಸುವೆನು. ಈಜಿಪ್ಟ್ ದೇಶದ ಸಮಸ್ತ ದೇವತೆಗಳನ್ನೂ ದಂಡಿಸುವೆನು. ನಾನೇ ಸರ್ವೇಶ್ವರ! ನೀವು ಬಾಗಿಲಿಗೆ ಹಚ್ಚಿದ ಆ ರಕ್ತವು ನೀವಿರುವ ಮನೆಗಳನ್ನು ಸೂಚಿಸುವುದು. ಅದನ್ನು ಕಂಡು ನಿಮಗೆ ಯಾವ ಹಾನಿಯನ್ನು ಮಾಡದೆ ಮುಂದಕ್ಕೆ ದಾಟಿಹೋಗುವೆನು. ನಾನು ಈಜಿಪ್ಟಿನವರನ್ನು ಸಂಹರಿಸುವಾಗ ನಿಮಗೆ ಯಾವ ಕೇಡೂ ಆಗದು.  ಆದಿನವು ನಿಮಗೆ ಸ್ಮರಣೀಯ ದಿನವಾಗಿರುವುದು. ಅಂದು ನೀವು ಸರ್ವೇಶ್ವರನ ಗೌರವಾರ್ಥ ಹಬ್ಬವನ್ನು ಕೊಂಡಾಡಬೇಕು. ಅದನ್ನು ಶಾಶ್ವತ ನಿಯಮವೆಂದು ತಲತಲಾಂತರಕ್ಕೂ ಆಚರಿಸಬೇಕು.

ಕೀರ್ತನೆ: 116:12-13, 15, 16, 17-18

ಶ್ಲೋಕ: ಪ್ರಖ್ಯಾತಪಡಿಸುವೆನು ಪ್ರಭುವಿನ ನಾಮವನು

ಶುಭಸಂದೇಶ: ಮತ್ತಾಯ 12:1-8

ಒಂದು ಸಬ್ಬತ್ ದಿನ ಯೇಸುಸ್ವಾಮಿ ಗೋದಿಯ ಹೊಲಗಳನ್ನು ಹಾದುಹೋಗುತ್ತಿದ್ದರು. ಅವರ ಸಂಗಡವಿದ್ದ ಶಿಷ್ಯರಿಗೆ ಹಸಿವಾಯಿತು. ಅವರು ಗೋದಿಯ ತೆನೆಗಳನ್ನು ಕಿತ್ತು ತಿನ್ನಲಾರಂಭಿಸಿದರು. ಇದನ್ನು ಕಂಡ ಫರಿಸಾಯರು, "ನೋಡು, ನೋಡು, ನಿನ್ನ ಶಿಷ್ಯರು ಸಬ್ಬತ್ ದಿನದಲ್ಲಿ ನಿಷಿದ್ಧವಾದುದನ್ನು ಮಾಡುತ್ತಿದ್ದಾರೆ," ಎಂದರು. ಅದಕ್ಕೆ ಯೇಸು, "ಹಿಂದೆ ಅರಸ ದಾವೀದನು ಮತ್ತು ಅವನ ಸಂಗಡಿಗರು ಹಸಿದಿದ್ದಾಗ ಏನು ಮಾಡಿದರೆಂದು ನೀವು ಓದಿರಬೇಕಲ್ಲವೆ? ಅವನು ದೇವಮಂದಿರದೊಳಕ್ಕೆ ಹೋಗಿ ಯಾಜಕರ ಹೊರತು ತಾನೇ ಆಗಲಿ, ಸಂಗಡಿಗರೇ ಆಗಲಿ, ತಿನ್ನಬಾರದಾಗಿದ್ದ ನೈವೇದ್ಯದ ರೊಟ್ಟಿಗಳನ್ನೇ ತಿನ್ನಲಿಲ್ಲವೆ? ಇದಲ್ಲದೆ, ಪ್ರತಿಯೊಂದು ಸಬ್ಬತ್ ದಿನವೂ ಯಾಜಕರು ದೇವಾಲಯದಲ್ಲಿ ಸಬ್ಬತ್ ದಿನದ ನಿಯಮಗಳನ್ನು ಉಲ್ಲಂಘಿಸಿಯೂ ನಿರ್ದೋಷಿಗಳಾಗಿದ್ದಾರೆ. ಇದನ್ನು ನೀವು ಮೋಶೆಯ ಧರ್ಮಶಾಸ್ತ್ರದಲ್ಲಿ ಓದಿಲ್ಲವೆ?. ದೇವಾಲಯಕ್ಕಿಂತಲೂ ಶ್ರೇಷ್ಟವಾದವನು ಇಲ್ಲಿದ್ದಾನೆಂಬುದು ನಿಮಗೆ ತಿಳಿದಿರಲಿ, "ನನಗೆ ಬೇಕಾದುದು ದಯೆ, ಯಜ್ಞ ಬಲಿಯಲ್ಲ" ಎಂಬ ವಾಕ್ಯದ ಅರ್ಥ ನಿಮಗೆ ತಿಳಿದಿದ್ದರೆ, ನಿರ್ದೋಷಿಗಳನ್ನು ನೀವು ಖಂಡಿಸುತ್ತಿರಲಿಲ್ಲ. ಏಕೆಂದರೆ ನರಪುತ್ರನು ಸಬ್ಬತ್ತಿಗೆ ಒಡೆಯ," ಎಂದರು.

18.07.2019 - "ನನ್ನ ನೊಗ ಹಗುರ, ನನ್ನ ಹೊರೆ ಸುಗಮ,"

ಮೊದಲನೇ ವಾಚನ: ವಿಮೋಚನಾಕಾಂಡ 3:13-20


ಮೋಶೆ ದೇವರಿಗೆ, "ನಾನು ಇಸ್ರಯೇಲರ ಬಳಿಗೆ ಹೋಗಿ, "ನಿಮ್ಮ ಪೂರ್ವಜರ ದೇವರು ನನ್ನನ್ನು ನಿಮ್ಮ ಬಳಿಗೆ ಕಳಿಸಿದ್ದಾರೆ," ಎಂದು ಹೇಳಿದಾಗ ಅವರು ಒಂದು ವೇಳೆ, "ಆತನ ಹೆಸರೇನು?" ಎಂದು ನನ್ನನ್ನು ಕೇಳಿದರೆ ನಾನೇನು ಉತ್ತರ ಕೊಡಬೇಕು?" ಎಂದು ಕೇಳಿದನು. ಆಗ ದೇವರು ಹೀಗೆಂದರು: "ಇರುವವನಾಗಿ ಇರುವವನು ನಾನೇ; ನೀನು ಇಸ್ರಯೇಲರಿಗೆ "ತಾನಾಗಿ ಇರುವವನು, ನನ್ನನ್ನು ನಿಮ್ಮ ಬಳಿಗೆ ಕಳಿಸಿದ್ದಾನೆ" ಎಂದು ಹೇಳು." ದೇವರು ‌ಮೋಶೆಗೆ ಮತ್ತೆ ಇಂತೆದರು: "ನೀನು ಇಸ್ರಯೇಲರಿಗೆ, ನಿಮ್ಮ ಪೂರ್ವಜರಾದ ಅಬ್ರಹಾಮ, ಇಸಾಕ ಹಾಗು ಯಕೋಬರ ದೇವರಾಗಿರುವ ಸರ್ವೇಶ್ವರ ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾರೆ ಎಂದು ಹೇಳು. ಇದು ಸದಾ ಕಾಲಕ್ಕೂ ನನ್ನ ಹೆಸರು. ಈ ಹೆಸರಿನಿಂದಲೇ ತಲತಲಾಂತರಕ್ಕೂ ನನ್ನನ್ನು ಸ್ಮರಿಸಬೇಕು. ನೀನು ಹೋಗಿ ಇಸ್ರಯೇಲರ ಹಿರಿಯರನ್ನು  ಕೂಡಿಸು.  ಅವರಿಗೆ, ನಿಮ್ಮ ಪೂರ್ವಜರ ದೇವರು ಅಂದರೆ ಅಬ್ರಹಾಮ, ಇಸಾಕ ಹಾಗು ಯಕೋಬರ ದೇವರು ಆಗಿರುವ ಸರ್ವೇಶ್ವರ ನನಗೆ ದರ್ಶನಕೊಟ್ಟು ನಿಮ್ಮ ವಿಷಯದಲ್ಲಿ ಹೀಗೆಂದಿದ್ದಾರೆ: ನಿಮ್ಮನ್ನೂ ಈಜಿಪ್ಟ್ ದೇಶದಲ್ಲಿ ನಿಮಗೆ ಸಂಭವಿಸಿದ್ದೆಲ್ಲವನ್ನೂ ನಾನು ಕಣ್ಣಾರೆ ಕಂಡು ತಿಳಿದುಕೊಂಡಿದ್ದೇನೆ. ಈಜಿಪ್ಟಿನಲ್ಲಿ ನಿಮಗುಂಟಾಗಿರುವ ಕಷ್ಟಸಂಕಟಗಳಿಂದ ನಿಮ್ಮನ್ನು ಪಾರುಮಾಡಿ ಹಾಲೂ ಜೇನು ಹರಿಯುವ ನಾಡಿಗೆ, ಅಂದರೆ ಕಾನಾನ್ಯರು, ಹಿತ್ತಿಯರು, ಆಮೋರಿಯರು, ಪೆರಿಜೀಯರು, ಹಿವ್ವಿಯರು ಹಾಗು ಯೆಬೂಸಿಯರು ವಾಸವಾಗಿರುವ ನಾಡಿಗೆ ಬರಮಾಡಬೇಕೆಂದು ತೀರ್ಮಾನಿಸಿದ್ದೇನೆ" ಎಂದು ತಿಳಿಸು. ಅವರು ನಿನ್ನ ಮಾತಿಗೆ ಕಿವಿಗೊಡುವರು. ನೀನು ಮತ್ತು ಇಸ್ರಯೇಲಿನ ಹಿರಿಯರು ಈಜಿಪ್ಟ್ ದೇಶದ ಅರಸನ ಬಳಿಗೆ ಹೋಗಿ ಅವನಿಗೆ, "ಹಿಬ್ರಿಯರ ದೇವರಾಗಿರುವ ಸರ್ವೇಶ್ವರ ನಮಗೆ ಪ್ರತ್ಯಕ್ಷರಾದರು ಆದುದರಿಂದ ನಾವು ಮರುಭೂಮಿಯಲ್ಲಿ ಮೂರು ದಿನ ಪ್ರಯಾಣದಷ್ಟು ದೂರ ಹೋಗಿ ನಮ್ಮ ದೇವರಾದ ಸರ್ವೇಶ್ವರನಿಗೆ ಬಲಿಯೊಪ್ಪಿಸಬೇಕಾಗಿದೆ. ಅಪ್ಪಣೆಯಾಗಬೇಕು" ಎಂದು ಕೇಳಿಕೊಳ್ಳಿ ಆ ಈಜಿಪ್ಟಿನ ಅರಸನು ಎಷ್ಟು ಬಲಾತ್ಕಾರ ಮಾಡಿದರೂ ನಿಮ್ಮನ್ನು ಬಿಡುವುದಿಲ್ಲವೆಂದು ತಿಳಿದಿದ್ದೇನೆ. ಆದಕಾರಣ ನನ್ನ ಭುಜಬಲವನ್ನು ಪ್ರದರ್ಶಿಸುವೆನು. ಅಲ್ಲಿ ಮಹಾತ್ಕಾರ್ಯಗಳನ್ನು ಮಾಡಿ, ಈಜಿಪ್ಟ್ ದೇಶವನ್ನೇ ನಾನಾ ವಿಧವಾಗಿ ಬಾಧಿಸುವೆನು. ಆಮೇಲೆ ಅರಸನು ನಿಮ್ಮನ್ನು ಬಿಡುಗಡೆ ಮಾಡುವನು.

ಕೀರ್ತನೆ: 105:1, 5, 8-9, 24-25 26-27

ಶ್ಲೋಕ: ನೆನಪಿನಲ್ಲಿಡುವನು ಪ್ರಭು ತನ್ನ ವಾಗ್ದಾನವನು

ಶುಭಸಂದೇಶ: ಮತ್ತಾಯ 11: 28-30


ಆ ಸಮಯದಲ್ಲಿ ಯೇಸುಸ್ವಾಮಿ, ಜನಸಮೂಹವನ್ನುದ್ದೇಶಿಸಿ: "ದುಡಿದು, ಭಾರಹೊತ್ತು, ಬಳಲಿ ಬೆಂಡಾಗಿರುವ ಸರ್ವಜನರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ: ನಾನು ನಿಮಗೆ ವಿಶ್ರಾಂತಿ ಕೊಡುತ್ತೇನೆ. ನಾನು ವಿನಯಶೀಲನು, ದೀನಹೃದಯನು: ನನ್ನ ನೊಗಕ್ಕೆ ಹೆಗಲುಕೊಟ್ಟು ನನ್ನಿಂದ ಕಲಿತುಕೊಳ್ಳಿ. ಆಗ ನಿಮಗೆ ವಿಶ್ರಾಂತಿ ಸಿಗುವುದು. ನನ್ನ ನೊಗ ಹಗುರ, ನನ್ನ ಹೊರೆ ಸುಗಮ," ಎಂದರು.

17.07.19 - "ಜ್ಞಾನಿಗಳಿಗೂ ಮೇಧಾವಿಗಳಿಗೂ ಮರೆ ಮಾಡಿ ಮಕ್ಕಳಂಥವರಿಗೆ ನೀವು ಶ್ರುತಪಡಿಸಿದ್ದೀರಿ"


 ಮೊದಲನೇ ವಾಚನ: ವಿಮೋಚನಾಕಾಂಡ 3:1-6, 9-12

ಮೋಶೆ ಮಿದ್ಯಾನರ ಪೂಜಾರಿಯೂ ತನ್ನ ಮಾವನೂ ಆದ ಇತ್ರೋನನ ಮಂದೆಯನ್ನು ಮೇಯಿಸುತ್ತಿದ್ದನು. ಒಮ್ಮೆ ಮಂದೆಯನ್ನು ಕಾಡಿನ ಹಿಂಭಾಗಕ್ಕೆ ನಡೆಸಿಕೊಂಡು "ಹೋರೇಬ್" ಎಂಬ ದೇವರ ಬೆಟ್ಟಕ್ಕೆ ಬಂದನು. ಅಲ್ಲಿ ಮುಳ್ಳಿನ ಪೊದೆಯೊಂದರ ಒಳಗೆ ಉರಿಯುವ ಬೆಂಕಿಯಲ್ಲಿ ಸರ್ವೇಶ್ವರನ ದೂತನು ಅವನಿಗೆ ಕಾಣಿಸಿಕೊಂಡನು. ಮೋಶೆ ನೋಡಿದನು. ಮುಳ್ಳಿನ ಪೊದೆ ಉರಿಯುತ್ತಲೇ ಇತ್ತು; ಆದರೆ ಸುಟ್ಟುಹೋಗದೇ ಇತ್ತು. ಆಗ ಮೋಶೆ, "ಇದೇನು ಆಶ್ಚರ್ಯ! ಪೊದೆ ಸುಟ್ಟು ಹೋಗದೆ ಇರುವುದಕ್ಕೆ ಕಾರಣವೇನು? ನಾನು ಹತ್ತಿರ ಹೋಗಿ  ತಿಳಿದುಕೊಳ್ಳುತ್ತೇನೆ  ಎಂದುಕೊಂಡನು. ಅದನ್ನು ನೋಡಲು ಅವನು ಮುಂದಕ್ಕೆ ಬರುವುದನ್ನು ಸರ್ವೇಶ್ವರಸ್ವಾಮಿ ಕಂಡರು. ಪೊದೆಯೊಳಗಿಂದ, "ಮೋಶೆ, ಮೋಶೆ," ಎಂದು ದೇವರು ಕರೆದರು. ಅದಕ್ಕವನು, "ಇಗೋ, ಇದ್ದೇನೆ," ಎಂದು ಉತ್ತರ ಕೊಟ್ಟನು. ದೇವರು ಅವನಿಗೆ, "ಹತ್ತಿರ ಬರಬೇಡ! ನಿನ್ನ ಕಾಲಿನ ಕೆರಗಳನ್ನು ತೆಗೆದು ಹಾಕು; ಏಕೆಂದರೆ ನೀನು ನಿಂತಿರುವ ಸ್ಥಳ ಪವಿತ್ರ ಭೂಮಿ," ಎಂದು ಹೇಳಿದರು ಅದೂ ಅಲ್ಲದೆ, "ನಾನು ನಿನ್ನ ತಂದೆಯ ದೇವರು, ಅಬ್ರಹಾಮನ ದೇವರು, ಇಸಾಕನ ದೇವರು, ಯಕೋಬನ ದೇವರು," ಎಂದರು. ಆಗ ಮೋಶೆ ದೇವರನ್ನು ದಿಟ್ಟಿಸಿ ನೋಡಲು ಭಯಪಟ್ಟು ಮುಖವನ್ನು ಮುಚ್ಚಿಕೊಂಡನು. ಈಗ ಕೇಳು: "ಇಸ್ರಯೇಲರ ಮೊರೆ ನನಗೆ ಮುಟ್ಟಿದೆ. ಈಜಿಪ್ಟಿನವರು ಅವರಿಗೆ ಕೊಡುತ್ತಿರುವ ಉಪದ್ರವವನ್ನು ನಾನು ನೋಡಿದ್ದೇನೆ. ಆದ್ದರಿಂದ ಹೋಗು, ನನ್ನ ಜನರಾಗಿರುವ ಇಸ್ರಯೇಲರನ್ನು ಈಜಿಪ್ಟ್ ದೇಶದಿಂದ ಹೊರ ತರುವುದಕ್ಕಾಗಿ ನಿನ್ನನ್ನು ಫರೋಹನ ಬಳಿಗೆ ಕಳಿಸುತ್ತಿದ್ದೇನೆ. ನಾನೇ ನಿನ್ನ ಸಂಗಡ ಇರುವೆನು; ನೀನು ನನ್ನ ಜನರನ್ನು ಈಜಿಪ್ಟಿನಿಂದ ಹೊರಗೆ ತಂದಾಗ  ನೀವು ಬೆಟ್ಟದಲ್ಲೇ ದೇವರನ್ನು ಆರಾಧಿಸುವಿರಿ. ನಿನ್ನನ್ನು ಕಳಿಸಿದವನು ನಾನೇ ಎಂಬುದಕ್ಕೆ ಇದೇ ನಿನಗೆ  ಗುರುತಾಗಿ," ಇರುವುದು.

ಕೀರ್ತನೆ: 103:1-2, 3-4, 6-7

ಶ್ಲೋಕ: ಪ್ರಭು ದಯಾಳು, ಕೃಪಾಪೂರ್ಣನು

ಶುಭಸಂದೇಶ: ಮತ್ತಾಯ 11:25-27


ಸಮಯದಲ್ಲಿ ಯೇಸುಸ್ವಾಮಿ, "ಪಿತನೇ, ಪರಲೋಕ ಭೂಲೋಕಗಳ  ಒಡೆಯನೇ, ಜ್ಞಾನಿಗಳಿಗೂ ಮೇಧಾವಿಗಳಿಗೂ ಮರೆ ಮಾಡಿ  ಮಕ್ಕಳಂಥವರಿಗೆ ನೀವು  ಶ್ರುತಪಡಿಸಿದ್ದೀರಿ; ಇದಕ್ಕಾಗಿ ನಿಮ್ಮನ್ನು ವಂದಿಸುತ್ತೇನೆ. ಹೌದು, ಪಿತನೇ, ಇದೇ ನಿಮ್ಮ ಸುಪ್ರೀತ ಸಂಕಲ್ಪ, ನನ್ನ ಪಿತ ಸಮಸ್ತವನ್ನೂ ನನ್ನ  ವಶಕ್ಕೆ ಒಪ್ಪಿಸಿದ್ದಾರೆ; ಪುತ್ರನು ಯಾರೆಂಬುದನ್ನು ಪಿತನೇ ಹೊರತು ಬೇರಾರೂ ಅರಿಯರು. ಪಿತನು ಯಾರು ಎಂಬುದನ್ನು ಪುತ್ರನು ಮತ್ತು ಯಾವನಿಗೆ ಪುತ್ರನು ಅವರನ್ನು ಶ್ರುತಪಡಿಸಲು ಇಚ್ಛಿಸುತ್ತಾನೋ, ಅವರೇ ಹೊರತು ಮತ್ತಾರೂ ಅರಿಯರು" ಎಂದು ಹೇಳಿದರು.