ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

01.10.2018

ಸಾಧಾರಣ ಕಾಲದ 26ನೇ - ಸೋಮವಾರ

ಮೊದಲನೇ ವಾಚನ: ಯೋಬ 1:6-22

ಒಮ್ಮೆ ಸ್ವರ್ಗನಿವಾಸಿಗಳು ಸರ್ವೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ಓಲಗಿಸಿದ್ದರು. ಸೈತಾನನೂ ಅಲ್ಲಿಗೆ ಬಂದನು. ಸರ್ವೇಶ್ವರ ಸೈತಾನನ್ನು ನೋಡಿ, "ಎಲ್ಲಿಂದ ಬಂದೆ?" ಎಂದು ಕೇಳಿದರು. ಅದಕ್ಕೆ ಅವನು, "ಭೂಲೋಕದಲ್ಲಿ ಗಸ್ತುತಿರುಗಿ ಬಂದಿದ್ದೇನೆ" ಎಂದನು. ಆಗ ಸರ್ವೇಶ್ವರ, "ನನ್ನ ದಾಸ ಯೋಬನನ್ನು ಗಮನಿಸಿದೆಯಾ? ಆತನು ದೋಷರಹಿತ, ಸತ್ಯವಂತ, ದೇವರಲ್ಲಿ ಭಯಭಕ್ತಿಯುಳ್ಳವನು, ಕೆಟ್ಟದ್ದನ್ನು ತೊರೆದು ಬಾಳುವವನು. ಆತನಿಗೆ ಸರಿಸಮಾನನು ಭೂಲೋಕದಲ್ಲಿ ಎಲ್ಲಿಯೂಸಿಗನು, ಎಂದು ಹೇಳಿದರು. ಅದಕ್ಕೆ ಸೈತಾನನು ಹೀಗೆ ಹೇಳಿದನು: "ಲಾಭವಿಲ್ಲದೆ ಯೋಬನು ನಿಮ್ಮಲ್ಲಿ ಭಯಭಕ್ತಿ ಇಟ್ಟಿದ್ದಾನೆಯೇ? ನೀವು ಆತನಿಗೂ ಆತನ ಎಲ್ಲ ಆಸ್ತಿ ಪಾಸ್ತಿಗೂ ಬೇಲಿ ಹಾಕಿ ಭದ್ರ ಪಡಿಸಿದ್ದೀರಲ್ಲವೇ ಆತನು ಕೈ ಹಾಕಿದ ಕೆಲಸ ಸಫಲವಾಗುವಂತೆ ಮಾಡಿದ್ದೀರಲ್ಲವೇ? ಎಂದೇ ಅವನ ಸಿರಿ ಸಂಪತ್ತು ಈ ನಾಡಿನಲ್ಲಿ ಬೆಳೆಯುತ್ತಾ ಬಂದಿದೆ. ಆದರೆ ನೀವು ಕೈಹಾಕಿ ಆತನ ಸೊತ್ತನ್ನೆಲ್ಲಾ ಅಳಿಸಿಬಿಡಿ, ಆಗ ಆತನು ನಿಮ್ಮನ್ನು ಮುಖಾಮುಖಿಯಾಗಿ ನಿಂದಿಸುತ್ತಾನೋ ಇಲ್ಲವೋ ಎಂದು ನೋಡುವಿರಂತೆ!" ಎಂದನು. ಸರ್ವೇಶ್ವರ ಸೈತಾನನಿಗೆ, "ನೋಡು, ಆತನ ಆಸ್ತಿಪಾಸ್ತಿಯೆಲ್ಲ ನಿನ್ನ ಕೈವಶಕ್ಕೆ ಬಿಟ್ಟಿದ್ದೇನೆ. ಆತನ ಮೈಮೇಲೆ ಮಾತ್ರ ಕೈಹಾಕಬೇಡ", ಎಂದು ಅಪ್ಪಣೆಕೊಟ್ಟರು. ಕೂಡಲೆ ಸೈತಾನನು ಸರ್ವೇಶ್ವರ ಸನ್ನಿಧಾನದಿಂದ ಹೊರಟುಹೋದನು. ಇದಾದ ಬಳಿಕ ಯೋಬನ ಪುತ್ರಪುತ್ರಿಯರು ತಮ್ಮ ಹಿರಿಯಣ್ಣನ ಮನೆಯಲ್ಲಿ ಔತಣ ಮಾಡುತ್ತಿದ್ದರು. ಆಗ ದೇವದೂತನೊಬ್ಬನು ಯೋಬನ ಬಳಿಗೆ ಬಂದು, "ನಿಮ್ಮ ಎತ್ತುಗಳು ಉಳುತ್ತಾ ಇದ್ದವು; ಕತ್ತೆಗಳು ಹತ್ತಿರದಲ್ಲೆ ಮೆಯುತ್ತಾ ಇದ್ದವು. ಅಷ್ಟರಲ್ಲಿ, ಶೆಬದವರು ಬಂದು, ಮೇಲೆ ಬಿದ್ದು, ಅವುಗಳನ್ನು ಹೊಡೆದು ಕೊಂಡು ಹೋದರು. ಕೂಲಿ ಆಳುಗಳನ್ನು ಕತ್ತಿಯಿಂದ ಕೊಂದುಹಾಕಿದರು. ನಾನೊಬ್ಬನೇ ತಲೆತಪ್ಪಿಸಿಕೊಂಡು ಈ ಸುದ್ದಿಯನ್ನು ನಿಮಗೆ ಮುಟ್ಟಿಸಲು ಓಡಿ ಬಂದೆ. " ಎಂದನು. ಅವನು ಮಾತಾಡಿ ಮುಗಿಸುವಷ್ಟರಲ್ಲೇ ಮತ್ತೊಬ್ಬನು ಬಂದು, "ದೇವರು ಆಕಾಶದಿಂದ ಬೆಂಕಿ ಸುರಿಸಿದರು. ಅದು ಕುರಿಗಳನ್ನೂ, ಕೂಲಿ ಆಳುಗಳನ್ನೂ ಸುಟ್ಟು ಭಸ್ಮ ಮಾಡಿತು.  ನಾನೊಬ್ಬನೇ ತಲೆತಪ್ಪಿಸಿಕೊಂಡು ಈ ಸುದ್ದಿಯನ್ನು ನಿಮಗೆ ಮುಟ್ಟಿಸಲು ಓಡಿ ಬಂದೆ," ಎಂದನು. ಅಷ್ಟರಲ್ಲಿ ಇನ್ನೊಬ್ಬನು ಬಂದು "ಕಸ್ದೀಯರು ಮೂರು ಗುಂಪುಗಳಾಗಿ ಬಂದು, ಮೇಲೆ ಬಿದ್ದು, ಒಂಟೆಗಳನ್ನು ಹೊಡೆದುಕೊಂಡು ಹೋದರು. ಅಲ್ಲದೆ ಆ ಕೂಲಿ ಅಳುಗಳನ್ನು ಕತ್ತಿಯಿಂದ ಸಂಹರಿಸಿದರು. ನಾನೊಬ್ಬನೇ ತಲೆತಪ್ಪಿಸಿಕೊಂಡು ಈ ಸುದ್ದಿಯೊಂದಿಗೆ ನಿಮ್ಮ ಬಳಿಗೆ ಓಡಿ ಬಂದೆ," ಎಂದನು. ಅವನು ವರದಿ ಮಾಡುತ್ತಿದ್ಧಾಗಲೇ ಬೇರೊಬ್ಬನು ಬಂದು "ನಿಮ್ಮ ಪುತ್ರ ಪುತ್ರಿಯರಿಯರು ಹಿರಿಯಣ್ಣನ ಮನೆಯಲ್ಲಿ ಔತಣದಲ್ಲಿದ್ದರು. ಆಗ ತಟ್ಟನೆ ಅರಣ್ಯ ಕಡೆಯಿಂದ ಬಿರುಗಾಳಿ ಎದ್ದಿತು; ನಾಲ್ಕು ಕಡೆಯಿಂದಲೂ ಮನೆಗೆ ಬಡಿಯಿತು. ಮನೆ ಕುಸಿದುಬಿತ್ತು ಯುವಕ ಯುವತಿಯರೆಲ್ಲ ಸತ್ತುಹೋದರು. ನಾನೊಬ್ಬನೇ ತಲೆತಪ್ಪಿಸಿಕೊಂಡು ಈ ಸುದ್ಧಿಯನ್ನು ನಿಮಗೆ ತಂದಿದ್ದೇನೆ"ಎಂದು ತಿಳಿಸಿದನು. ಆಗ ಯೋಬನು ಎದ್ದು ನಿಂತು, ದುಃಖವನ್ನು ತಾಳಲಾರದೆ ತನ್ನ ಮೇಲಂಗಿಯನ್ನು ಹರಿದುಬಿಟ್ಟ, ತಲೆಯನ್ನು ಬೋಳಿಸಿಕೊಂಡು ನೆಲದ ಮೇಲೆ ಬಿದ್ದು, ದೇವರಿಗೆ ಸಾಷ್ಟಾಂಗವೆರಗಿ; ಬರಿಗೈಯಲ್ಲಿ ಬಂದೆ ನಾನು ತಾಯಗರ್ಭದಿಂದ ಬರಿಗೈಯಲ್ಲಿ ಹಿಂತಿರುಗುವೆ ನಾನು ಇಲ್ಲಿಂದ ಸರ್ವೇಶ್ವರ ಕೊಟ್ಟ ಸರ್ವೇಶ್ವರ ತೆಗೆದುಕೊಂಡ ಆತನ ನಾಮಕ್ಕೆ ಸ್ತುತಿಸ್ತೋತ್ರ! ಎಂದನು. ಈ ಎಲ್ಲ ವಿಪತ್ತು ಬಂದೊದಗಿದರೂ ಯೋಬನು ಪಾಪ ಮಾಡಲಿಲ್ಲ ದೇವರ ಮೇಲೆ ತಪ್ಪು ಹೊರಿಸಲಿಲ್ಲ.

ಕೀರ್ತನೆ: 17:1bcd, 2-3, 6-7
ಶ್ಲೋಕ: ಮೊರೆಯಿಡುವೆ ದೇವಾ ಕಿವಿಗೊಟ್ಟು ಆಲಿಸಯ್ಯ

ಶುಭಸಂದೇಶ: ಲೂಕ 9:46-50

ಒಮ್ಮೆ ತಮ್ಮಲ್ಲಿ ಅತಿ ಶ್ರೇಷ್ಠನು ಯಾರೆಂಬ ವಾದ ಶಿಷ್ಯರಲ್ಲಿ ಎದ್ದಿತು. ಅವರ  ಮನಸ್ಸಿನ ಆಲೋಚನೆಗಳನ್ನು ಅರಿತ ಯೇಸು, ಒಂದು ಚಿಕ್ಕ ಮಗುವನ್ನು ತಂದು ತಮ್ಮ ಪಕ್ಕದಲ್ಲಿ ನಿಲ್ಲಿಸಿಕೊಂಡು, "ಯಾವನು ನನ್ನ ಹೆಸರಿನಲ್ಲಿ ಈ ಮಗುವನ್ನು ಸ್ವೀಕರಿಸುತ್ತಾನೋ ಅವನು ನನ್ನನ್ನೇ ಸ್ವೀಕರಿಸುತ್ತಾನೆ; ಯಾವನು ನನ್ನನ್ನು ಸ್ವೀಕರಿಸುತ್ತಾನೋ ಅವನು ನನ್ನನ್ನು ಕಳುಹಿಸಿದಾತನನ್ನೇ ಸ್ವೀಕರಿಸುತ್ತಾನೆ. ನಿಮ್ಮೆಲ್ಲರಲ್ಲಿ ಅತ್ಯಲ್ಪನಾದವನೇ ಅತ್ಯುತ್ತಮನು," ಎಂದರು. ಆಗ ಯೊವಾನ್ನನು ಯೇಸುವಿಗೆ, "ಗುರುವೇ, ಯಾವನೋ ಒಬ್ಬನು ತಮ್ಮ ಹೆಸರಿನಲ್ಲಿ ದೆವ್ವ ಬಿಡಿಸುವುದನ್ನು ಕಂಡೆವು. ಅವನು ನಮ್ಮವನಲ್ಲದ ಕಾರಣ ಅವನನ್ನು ತಡೆದೆವು," ಎಂದನು. ಅದಕ್ಕೆ ಯೇಸು, "ಅವನನ್ನು ತಡೆಯಬೇಡಿ, ನಿಮ್ಮ ವಿರೋಧಿ ಅಲ್ಲದವನು ನಿಮ್ಮ ಪರವಾಧಿ," ಎಂದು ಉತ್ತರಕೊಟ್ಟರು.

30.09.2018

ವರ್ಷದ ಇಪ್ಪತ್ತಾರನೆಯ ಭಾನುವಾರ

ಮೊದಲನೆಯ ವಾಚನ
ಸಂಖ್ಯಾಕಾಂಡದಿಂದ ವಾಚನ                                                                            11:25-29

ಸರ್ವೇಶ್ವರ ಅನುಗ್ರಹದಿಂದ ಅವರ ಜನರೆಲ್ಲರೂ
ಆತ್ಮಶಕ್ತಿಯನ್ನು ಹೊಂದಿ ಪ್ರವಾದಿಸುವವರಾದರೆ ಎಷ್ಟೋ ಒಳ್ಳೆಯದು.
ಮೋಶೆ ಜನರ ಹಿರಿಯರಲ್ಲಿ ಎಪ್ಪತ್ತು ಮಂದಿಯನ್ನು ಕೂಡಿಸಿ ದೇವದರ್ಶನದ ಗುಡಾರದ ಸುತ್ತಲೂ ನಿಲ್ಲಿಸಿದನು. ಆಗ ಸರ್ವೇಶ್ವರ ಮೇಘದಲ್ಲಿ ಇಳಿದು ಬಂದು ಅವನೊಡನೆ ಮಾತಾಡಿ ಅವನಿಗೆ ಅನುಗ್ರಹಿಸಲಾಗಿದ್ದ ಆತ್ಮಶಕ್ತಿಯಲ್ಲಿ ಕಿಂಚಿತ್ತನ್ನು ಆ ಎಪ್ಪತ್ತು ಮಂದಿ ಹಿರಿಯರಿಗೂ ಹಂಚಿದರು. ಆ ಶಕ್ತಿ ಅವರ ಮೇಲೆ ಇಳಿದುಬಂದಾಗ ಅವರು ಪರವಶರಾಗಿ ಪ್ರವಾದಿಸಿದರು. ಅಂಥ ಅನುಭವ ಅವರಿಗೆ ಮತ್ತೆ ಬರಲಿಲ್ಲ. ಎಲ್ದಾದ್ ಮತ್ತು ಮೇದಾದ್ ಎಂಬ ಹಿರಿಯರಿಬ್ಬರೂ ಪಾಳೆಯದೊಳಗೆ ಉಳಿದುಕೊಂಡಿದ್ದರು. ಅವರ ಹೆಸರು ಲಿಖಿತವಾಗಿದ್ದರೂ ಅವರು ದೇವದರ್ಶನದ ಗುಡಾರಕ್ಕೆ ಹೊರಟು ಬಂದಿರಲಿಲ್ಲ. ಆ ಆತ್ಮಶಕ್ತಿ ಅವರ ಮೇಲೂ ಇಳಿದುಬಂದುದರಿಂದ ಅವರು ಕೂಡ ಪಾಳೆಯದಲ್ಲೇ ಪರವಶರಾಗಿ ಪ್ರವಾದಿಸಿದರು. ಆಗ ಒಬ್ಬ ಯುವಕ ಮೋಶೆಯ ಬಳಿಗೆ ಓಡಿಬಂದು, ಎಲ್ದಾದ್ ಮತ್ತು ಮೇದಾದರು ಪಾಳೆಯದಲ್ಲೆ ಪರವಶರಾಗಿ ಪ್ರವಾದಿಸುತ್ತಿದ್ದಾರೆ, ಎಂದು ತಿಳಿಸಿದನು. ಚಿಕ್ಕಂದಿನಿಂದ ಮೋಶೆಗೆ ಶಿಷ್ಯನಾಗಿದ್ದ ಹಾಗೂ ನೂನನ ಮಗನಾಗಿದ್ದ ಯೆಹೋಶುವನು ಮೋಶೆ, ನನ್ನ ಗೌರವ ಕಾಪಾಡಲು ನಿನಗೇಕೆ ಅಸೂಯೆ? ಸರ್ವೇಶ್ವರನ ಅನುಗ್ರಹದಿಂದ ಅವರ ಜನರೆಲ್ಲರೂ ಆತ್ಮಶಕ್ತಿಯನ್ನು ಹೊಂದಿ ಪ್ರವಾದಿಸುವವರಾದರೆ ಎಷ್ಟೋ ಒಳ್ಳೆಯದು! ಎಂದನು.
ದೇವರ ವಾಕ್ಯವಿದು.

ಕೀರ್ತನೆ  : 19:8, 10,12-13,14

ಶ್ಲೋಕ : ಪ್ರಭುವಿನ ನಿಯಮ ನೀತಿಬದ್ಧ; ಮನಸ್ಸಿಗದು ಒಸಗೆ |

ಎರಡನೆಯ ವಾಚನ
ಸಂತ ಯಕೋಬನು ಬರೆದ ಪತ್ರದಿಂದ ವಾಚನ                                                5:1-6

ನಿಮ್ಮ ಐಶ್ವರ್ಯ ನಾಶವಾಗಿದೆ.
ಐಶ್ವರ್ಯವಂತರೇ, ಕೇಳಿ: ನಿಮಗೆ ಬರಲಿರುವ ಮಹಾಕಷ್ಟಗಳಿಗಾಗಿ ಕಣ್ಣೀರಿಡಿ, ಗೋಳಾಡಿರಿ. ನಿಮ್ಮ ಐಶ್ವರ್ಯ ನಾಶವಾಗಿದೆ. ನಿಮ್ಮ ಬೆಲೆಬಾಳುವ ಬಟ್ಟೆಗಳಿಗೆ ನುಸಿ ಹತ್ತಿದೆ. ನಿಮ್ಮ ಬೆಳ್ಳಿಬಂಗಾರಕ್ಕೆ ತುಕ್ಕುಹಿಡಿದಿದೆ. ಆ ತುಕ್ಕೇ ನಿಮಗೆ ವಿರುದ್ಧ ಸಾಕ್ಷಿಯಾಗಿ ನಿಮ್ಮನ್ನು ಬೆಂಕಿಯಂತೆ ದಹಿಸಿಬಿಡುತ್ತದೆ. ಅಂತ್ಯಕಾಲಕ್ಕಾಗಿ ನೀವು ಬೆಂಕಿಯನ್ನೇ ಶೇಖರಿಸಿಟ್ಟುಕೊಂಡಿದ್ದೀರಿ. ನಿಮ್ಮ ಹೊಲಗಳಲ್ಲಿ ದುಡಿದ ಆಳುಗಳ ಕೂಲಿಯನ್ನು ಮೋಸದಿಂದ ಹಿಡಿದಿಟ್ಟುಕೊಂಡಿದ್ದೀರಿ. ನೀವು ಕೊಡದ ಕೂಲಿಯೇ ನಿಮಗೆ ವಿರುದ್ಧವಾಗಿ ಕೂಗಿಕೊಳ್ಳುತ್ತಿದೆ. ಕೂಲಿಯಾಳುಗಳ ಗೋಳಾಟ ಸ್ವರ್ಗಸೇನಾಧೀಶ್ವರನಾದ ಪ್ರಭುವಿನ ಕಿವಿಗೂ ಬಿದ್ದಿದೆ. ಲೋಕದಲ್ಲಿ ನೀವು ಸುಖಭೋಗಿಗಳಾಗಿ ವಿಲಾಸ ಜೀವನ ನಡೆಸಿದ್ದೀರಿ. ವಧೆಯ ದಿನಕ್ಕಾಗಿ ಪಶುಗಳಂತೆ ನಿಮ್ಮನ್ನೇ ಕೊಬ್ಬಿಸಿಕೊಂಡಿದ್ದೀರಿ. ನಿಮ್ಮನ್ನು ವಿರೋಧಿಸಿದ ಸಜ್ಜನನನ್ನು ಖಂಡಿಸಿ ಕೊಲೆಮಾಡಿಸಿದ್ದೀರಿ.
- ದೇವರ ವಾಕ್ಯವಿದು.

ಘೋಷಣೆ                                                                                               ಯೊವಾನ್ನ 8:12
          ಅಲ್ಲೆಲೂಯ, ಅಲ್ಲೆಲೂಯ !
          ನಾನೇ ಜಗಜ್ಜ್ಯೋತಿ, ನನ್ನನ್ನು ಹಿಂಬಾಲಿಸುವವನು
          ಕತ್ತಲಲ್ಲಿ ನಡೆಯುವುದಿಲ್ಲ.
          ಜೀವದಾಯಕ ಜ್ಯೋತಿ ಅವನಲ್ಲಿರುತ್ತದೆ.
          ಅಲ್ಲೆಲೂಯ !

ಶುಭಸಂದೇಶ
ಸಂತ ಮಾರ್ಕನು ಬರೆದ ಶುಭಸಂದೇಶದಿಂದ ವಾಚನ                                9:38-43, 45, 47-48
ನಮಗೆ ವಿರೋಧಿ ಅಲ್ಲದವನು ನಮ್ಮ ಪರವಾದಿ.
ಯೊವಾನ್ನನು ಯೇಸುಸ್ವಾಮಿಗೆ, ಗುರುವೇ, ಯಾರೋ ಒಬ್ಬನು ತಮ್ಮ ಹೆಸರಿನಲ್ಲಿ ದೆವ್ವ ಬಿಡಿಸುವುದನ್ನು ಕಂಡೆವು. ಅವನು ನಮ್ಮವನಲ್ಲ. ಆದಕಾರಣ ಅವನನ್ನು ತಡೆದೆವು, ಎಂದನು. ಅದಕ್ಕೆ ಯೇಸು, ಅವನನ್ನು ತಡೆಯಬೇಡಿ, ನನ್ನ ಹೆಸರಿನಲ್ಲಿ ಅದ್ಭುತ ಮಾಡುವವನು ಮರುಕ್ಷಣವೇ ನನ್ನ ವಿಷಯವಾಗಿ ಅಪಪ್ರಚಾರ ಮಾಡನು. ನಮಗೆ ವಿರೋಧಿ ಅಲ್ಲದವನು ನಮ್ಮ ಪರವಾದಿ. ನೀವು ಕ್ರಿಸ್ತಭಕ್ತರು ಎಂದು ಯಾವನಾದರೂ ನಿಮಗೆ ಕುಡಿಯಲು ಒಂದು ಲೋಟ ನೀರನ್ನು ಕೊಟ್ಟರೂ ಅದಕ್ಕೆ ತಕ್ಕ ಪ್ರತಿಫಲವನ್ನು ಅವನು ತಪ್ಪದೆ ಪಡೆಯುವನು ಎಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ, ಎಂದರು. ಯೇಸುಸ್ವಾಮಿ ತಮ್ಮ ಬೋಧನೆಯನ್ನು ಮುಂದುವರಿಸುತ್ತಾ, ನನ್ನಲ್ಲಿ ವಿಶ್ವಾಸವಿಟ್ಟಿರುವ ಈ ಚಿಕ್ಕವರಲ್ಲಿ ಒಬ್ಬನಿಗೆ ಯಾವನಾದರೂ ಪಾಪಕ್ಕೆ ಕಾರಣನಾದರೆ, ಅಂಥವನ ಕೊರಳಿಗೆ ದೊಡ್ಡ ಬೀಸುಕಲ್ಲನ್ನು ಕಟ್ಟಿ, ಅವನನ್ನು ಸಮುದ್ರದಲ್ಲಿ ದಬ್ಬುವುದೇ ಅವನಿಗೆ ಲೇಸು. ನಿನ್ನ ಕೈ ನಿನಗೆ ಪಾಪಕ್ಕೆ ಕಾರಣವಾದರೆ ಅದನ್ನು ಕತ್ತರಿಸಿ ಹಾಕು; ನಿನ್ನ ಕಾಲು ನಿನಗೆ ಪಾಪಕ್ಕೆ ಕಾರಣವಾದರೆ ಅದನ್ನು ಕತ್ತರಿಸಿಹಾಕು. ನಿನ್ನ ಕಣ್ಣು ನಿನಗೆ ಪಾಪಕ್ಕೆ ಕಾರಣವಾದರೆ ಅದನ್ನು ಕಿತ್ತುಹಾಕು. ಎರಡು ಕಣ್ಣುಳ್ಳವನಾಗಿ ನರಕಕ್ಕೆ ತಳ್ಳಿಸಿಕೊಳ್ಳುವುದಕ್ಕಿಂತ ಒಕ್ಕಣ್ಣನಾಗಿ ದೇವರ ಸಾಮ್ರಾಜ್ಯ ಸೇರುವುದೇ ಲೇಸು. ನರಕದಲ್ಲಿ ಅವರನ್ನು ಕಡಿಯುವ ಹುಳ ಸಾಯದು, ಸುಡುವ ಬೆಂಕಿ ಆರದು, ಎಂದರು.
ಪ್ರಭು ಕ್ರಿಸ್ತ ಶುಭಸಂದೇಶವಿದು

ಚಿಂತನೆ : ಪಾಪ ಮಾಡಿದವನಿಗಿಂತ ಪಾಪಕ್ಕೆ ಕಾರಣವಾದುದರ ಬಗ್ಗೆ ಇಂದಿನ ಶುಭಸಂದೇಶ ಬಹಳ ಕಠಿಣವಾದ ನಿಲುವನ್ನು ತೆಗೆದುಕೊಳ್ಳುತ್ತದೆ. ಟಿನ್ನಿಸ್ ಆಟದಲ್ಲಿ ಒಬ್ಬ ಆಟಗಾರನ ಸೋಲು ಗೆಲುವಿಗೆ ಅವನ ಉತ್ತಮ ಆಟ ಹೇಗೆ ಕಾರಣವಾಗಬಲ್ಲದೋ, ಅವನು ಆಟದಲ್ಲಿ ಮಾಡಿದ Forced errors ಹಾಗೂ unforced errors ಕೂಡ ಅಷ್ಟೇ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಎದುರಾಳಿಯ ಉತ್ತಮ ಆಟದಿಂದ ನಾವು ಮಾಡಬಹುದಾದ ತಪ್ಪುಗಳು forced errorsಗಳಾದರೆ, ನಮ್ಮದೇ ತಪ್ಪುಗಳು unforced errors ಆಗುತ್ತದೆ. ಆದಷ್ಟು ಕಡಿಮೆ ತಪ್ಪುಗಳನ್ನು ಮಾಡುವ ಆಟಗಾರ ಆ ಪಂದ್ಯವನ್ನು ಗೆಲ್ಲುವುದು ಸಹಜ. 

ಅಂತೆಯೇ ನಮ್ಮ ಜೀವನದಲ್ಲಿ ನಮ್ಮ ಪಾಪಗಳಿಗೆ ಸಹಾ ಬಾಹಿರ ವಿಷಯಗಳು ಎಷ್ಟು ಕಾರಣವೋ, ನಮ್ಮದೇ ದೌರ್ಬಲ್ಯಗಳೂ ಅಷ್ಟೇ ಕಾರಣವಾಗಬಲ್ಲದು. ಈ ಕಾರಣವಾಗುವ ಅಂಶಗಳತ್ತ ಗಮನಕೊಟ್ಟು ಅದನ್ನು ದೂರವಿರಿಸಿಕೊಳ್ಳಬೇಕೆಂಬ ಸಂದೇಶ ನಮಗಿದೆ. ನಮ್ಮ ಪಾಪಗಳಿಗೆ ಕಾರಣವಾಗುವ forced ಹಾಗೂ unforced ಕಾರಣಗಳ ಬಗ್ಗೆ ಧ್ಯಾನಿಸೋಣ, ಸರಿಪಡಿಸಿಕೊಳ್ಳೋಣ -  ಪ್ರಮಇ

29.09.2018

ಸಾಧಾರಣ ಕಾಲದ 25ನೇ - ಶನಿವಾರ

ಸಂತರಾದ ಮಿಖಾಯೇಲ್, ಗಬ್ರಿಯೇಲ್, ರಫಯೇಲ್ (ಪ್ರಧಾನ ದೂತರು)

ಮೊದಲನೇ ವಾಚನ: ದಾನಿಯೇಲನು: 7: 9-10, 13-14 (ಪ್ರಕಟನೆ: 12: 7-12)

ನಾನು ನೋಡುತ್ತಿದ್ದ ಹಾಗೆ ಸಿಂಹಾಸನಗಳನ್ನು ಹಾಕಲಾಯಿತು. ಮಹಾ ವೃದ್ಧನೊಬ್ಬನು ಆಸೀನನಾದನು. ಆತನ ಉಡುಪು ಬೆಳ್ಳಗಿತ್ತು ಹಿಮದಂತೆ, ಆತನ ತಲೆಗೂದಲಿತ್ತು ನಿರ್ಮಲವಾದ ಬಿಳಿಯ ಉಣ್ಣೆಯಂತೆ. ಆತನ ಸಿಂಹಾಸನ ಅಗ್ನಿಜ್ವಾಲೆಗಳು. ಧಗಧಗಿಸುವ ಬೆಂಕಿ ಅದರ ಚಕ್ರಗಳು. ಆ ಸಿಂಹಾಸನದ ಸಮ್ಮುಖದಿಂದ ಪ್ರಜ್ವಲ ಪ್ರವಾಹವೊಂದು ಉಕ್ಕಿ ಹರಿದು ಬಂದಿತು. ಲಕ್ಷೋಪಲಕ್ಷ ದೂತರು ಆತನಿಗೆ ಸೇವೆ ಸಲ್ಲಿಸುತ್ತಿದ್ದರು. ಕೋಟ್ಯಾನು ಕೋಟಿ ಕಿಂಕರರು ಆತನ ಮುಂದೆ ನಿಂತಿದ್ದರು. ನ್ಯಾಯ ಸಭೆಯವರು ತೀರ್ಪು ನೀಡಲು ಕುಳಿತುಕೊಂಡರು. ಪಟ್ಟಿ ಪುಸ್ತಗಳನ್ನು ತೆರೆಯಲಾಯಿತು. ನಾನು ಕಂಡ ರಾತ್ರಿಯ ಕನಸಿನಲ್ಲು ನರಪುತ್ರನಂತಿರುವವನು ಆಕಾಶದ ಮೇಘಗಳೊಂದಿಗೆ ಬಂದು ಆ ಮಹಾ ವೃದ್ದರನ್ನು ಸಮೀಪಿಸಿದನು. ಅವನನ್ನು ಆತನ ಸನ್ನಿಧಿಗೆ ತಂದರು. ಸಕಲ ರಾಷ್ಟ್ರ-ಕುಲ-ಭಾಷೆಗಳವರು ಅವನಿಗೆ ಸೇವೆಸಲ್ಲಿಸಲೆಂದು ಅವನಿಗೆ ದೊರೆತನ ಘನತೆ, ರಾಜ್ಯತ್ವ ಇವುಗಳನ್ನು ಕೊಡಲಾಯಿತು. ಅವನ ಆಳ್ವಿಕೆಗೆ ಅಂತ್ಯವಿಲ್ಲ, ಅದು ಶಾಶ್ವತವಾದುದು, ಅವನ ರಾಜ್ಯ ಎಂದಿಗೂ ಅಳಿಯದು!

ಕೀರ್ತನೆ: 138: 1-2ಎಬಿ, 2ಸಿಡಿಇ-3, 4-5
ಶ್ಲೋಕ: ಹೃದಯ ಪೂರ್ವಕ ವಂದನೆ ಪ್ರಭು ನಿನಗೆ ದೇವರುಗಳೆದುರಿಗೆ ನನ್ನ ಕೀರ್ತನೆ ನಿನಗೆ.

ಶುಭಸಂದೇಶ: ಯೊವಾನ್ನ: 1: 47-50

ತಮ್ಮ ಬಳಿಗೆ ಬರುತ್ತಿದ್ದ ನತಾನಿಯೇಲನನ್ನು ಕಂಡ ಯೇಸು, "ಇಗೋ ನೋಡಿ, ನಿಜವಾದ ಇಸ್ರಯೇಲನು, ಈತನಲ್ಲಿ ಕಪಟವಿಲ್ಲ," ಎಂದು ನುಡಿದರು. ನತಾನಿಯೇಲನು, "ನನ್ನ ಪರಿಚಯ ನಿಮಗೆ ಹೇಗಾಯಿತು?" ಎಂದು ಕೇಳಲು ಯೇಸು, "ಫಿಲಿಪ್ಪನು ನಿನ್ನನ್ನು ಕರೆಯುವ ಮೊದಲೇ ನೀನು ಅಂಜೂರದ ಮರದಡಿ ಇದ್ದಾಗ ನಾನು ನಿನ್ನನ್ನು ಕಂಡೆ," ಎಂದು ಉತ್ತರ ಕೊಟ್ಟರು. ಅದಕ್ಕೆ ನತಾನಿಯೇಲನು "ಗುರುದೇವ, ದೇವರ ಪುತ್ರ ನೀವೇ; ಇಸ್ರಯೇಲರ ಅರಸ ನೀವೇ," ಎಂದನು. ಆಗ ಯೇಸು, "ಅಂಜೂರದ ಮರದಡಿಯಲ್ಲಿ ನಿನ್ನನ್ನು ಕಂಡೆ ಎಂದು ನಾನು ಹೇಳಿದ ಮಾತ್ರಕ್ಕೆ ಇಷ್ಟೊಂದು ವಿಶ್ವಾಸವೇ? ಇದಕ್ಕೂ ಮಿಗಿಲಾದವುಗಳನ್ನು ನೀನು ಕಾಣುವೆ," ಎಂದು ನುಡಿದರು. ತಮ್ಮ ಮಾತನ್ನು ಮುಂದುವರಿಸುತ್ತಾ, "ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ಸ್ವರ್ಗವು ತೆರೆದಿರುವುದನ್ನು ನರಪುತ್ರನ ಮುಖಾಂತರ ದೇವದೂತರು ಏರುವುದನ್ನೂ ಇಳಿಯುವುದನ್ನೂ ನೀವು ಕಾಣುವಿರಿ," ಎಂದು ಹೇಳಿದರು.

28.09.2018

ಸಾಧಾರಣ ಕಾಲದ 25ನೇ - ಶುಕ್ರವಾರ

ಮೊದಲನೇ ವಾಚನ: ಉಪದೇಶಕ: 3: 1-11

ಪ್ರತಿಯೊಂದು ಕಾರ್ಯಕ್ಕೂ ನಿಗದಿಯಾದ ಕಾಲವಿದೆ. ಜಗತ್ತಿನಲ್ಲಿ ನಡೆಯುವ ಒಂದೊಂದು ಕೆಲಸಕ್ಕೂ ಸೂಕ್ತ ಸಮಯವಿದೆ. ಹುಟ್ಟುವ ಸಮಯ, ಸಾಯುವ ಸಮಯ, ನೆಡುವ ಸಮಯ, ನೆಟ್ಟದ್ದನ್ನು ಕೀಳುವ ಸಮಯ, ಕೊಲ್ಲುವ ಸಮಯ, ಗುಣಪಡಿಸುವ ಸಮಯ, ಕೆಡವಿಬಿಡುವ ಸಮಯ, ಕಟ್ಟಿಎಬ್ಬಿಸುವ ಸಮಯ, ಅಳುವ ಸಮಯ, ನಗುವ ಸಮಯ, ಗೋಳಾಡುವ ಸಮಯ, ಕುಣಿದಾಡುವ ಸಮಯ, ಕಲ್ಲುಗಳನ್ನು ಬಿಸಾಡುವ ಸಮಯ, ಕಲ್ಲುಗಳನ್ನು ಕೂಡಿಸಿಡುವ ಸಮಯ, ಆಲಿಂಗನ ಮಾಡುವ ಸಮಯ, ಆಲಿಂಗನ ಮಾಡದ ಸಮಯ, ಗಳಿಸುವ ಸಮಯ, ಕಳೆದುಕೊಳ್ಳುವ ಸಮಯ, ಕಾಪಾಡುವ ಸಮಯ, ಬಿಸಾಡುವ ಸಮಯ, ಹರಿಯುವ ಸಮಯ, ಹೊಲಿಯುವ ಸಮಯ, ಸುಮ್ಮನಿರುವ ಸಮಯ, ಮಾತಾಡುವ ಸಮಯ, ಪ್ರೀತಿಸುವ ಸಮಯ, ದ್ವೇಷಿಸುವ ಸಮಯ, ಯುದ್ದ ಮಾಡುವ ಸಮಯ, ಸಮಾಧಾನ ಮಾಡುವ ಸಮಯ. ಹೀಗೆ ಒಂದೊಂದು ಕೆಲಸಕ್ಕೂ ತಕ್ಕ ಸಮಯವುಂಟು. ಕಷ್ಟ ಪಟ್ಟುಮಾಡುವ ದುಡಿಮೆಯಿಂದ ಒಬ್ಬನಿಗೆ ಸಿಗುವ ಲಾಭವಾದರೂ ಏನು? ನರಮಾನವರ ಕರ್ತವ್ಯವೆಂದು ದೇವರು ವಿಧಿಸಿರುವ ದುಡಿಮೆಯನ್ನು ನಾನು ಗಮನಿಸಿದ್ದೇನೆ. ಒಂದೊಂದು ವಸ್ತುವನ್ನೂ ಸಮಯಕ್ಕೆ ತಕ್ಕಂತೆ ಸುಂದರವಾಗಿ ನಿರ್ಮಿಸಿದ್ದಾರೆ ದೇವರು. ಇದಲ್ಲದೇ, ಮನುಷ್ಯನ ಹೃದಯದಲ್ಲಿ ಅಮರತ್ವದ ಪ್ರತಿಯನ್ನು ಮೂಡಿಸಿದ್ದಾರೆ.

ಕೀರ್ತನೆ: 144: 1ಬಿ, 2ಎಬಿಸಿ, 3-4
ಶ್ಲೋಕ: ಸ್ತುತಿಸ್ತೋತ್ರ ಪ್ರಭುವಿಗೆ ನನ್ನ ಆಶ್ರಯ ದುರ್ಗಕೆ.

ಶುಭಸಂದೇಶ: ಲೂಕ: 9: 18-22

ಒಮ್ಮೆ ಯೇಸುಸ್ವಾಮಿ ಏಕಾಂಗಿಯಾಗಿ ಪ್ರಾರ್ಥನೆ ಮಾಡುತ್ತಿದ್ದಾಗ ಶಿಷ್ಯರು ಸಮೀಪದಲ್ಲೇ ಇದ್ದರು. "ಜನಸಾಮಾನ್ಯರು ನನ್ನನ್ನು ಯಾರೆನ್ನುತ್ತಾರೆ?" ಎಂದು ಯೇಸು ಅವರನ್ನು ಪ್ರಶ್ನಿಸಿದರು. ಅದಕ್ಕೆ ಅವರು, "ಹಲವರು ತಮ್ಮನ್ನು ’ಸ್ನಾನಿಕ ಯೊವಾನ್ನ’ ಎನ್ನುತ್ತಾರೆ; ಕೆಲವರು ’ಎಲೀಯನು’ ಎನ್ನುತ್ತಾರೆ; ಮತ್ತೆ ಕೆಲವರು ’ ಪ್ರಾಚೀನ ಪ್ರವಾದಿಗಳಲ್ಲಿ ಒಬ್ಬನು ಮರಳಿ ಜೀವಂತನಾಗಿದ್ದಾನೆ’ ಎನ್ನುತ್ತಾರೆ," ಎಂದು ಉತ್ತರವಿತ್ತರು. ಆಗ ಯೇಸು, "ಆದರೆ ನೀವು ನನ್ನನ್ನು ಯಾರೆನ್ನುತ್ತೀರಿ?" ಎಂದು ಪುನಃ ಪ್ರಶ್ನಿಸಿದರು. ಅದಕ್ಕೆ ಪೇತ್ರನು, "ದೇವರಿಂದ ಅಭಿಷಿಕ್ತರಾದ ಲೋಕೋದ್ದಾರಕ ತಾವೇ" ಎಂದು ಉತ್ತರ ಕೊಟ್ಟನು. ಈ ವಿಷಯವನ್ನು ಯಾರಿಗೂ ತಿಳಿಸಬಾರದೆಂದು ಯೇಸು ಶಿಷ್ಯರನ್ನು ಆಜ್ಞಾಪೂರ್ವಕವಾಗಿ ಎಚ್ಚರಿಸಿದರು. ಇದಲ್ಲದೆ, "ನರಪುತ್ರನು ಕಠಿಣವಾದ ಯಾತನೆಯನ್ನು ಅನುಭವಿಸಬೇಕಾಗಿದೆ. ಸಭಾ ಪ್ರಮುಖರಿಂದಲೂ ಮುಖ್ಯ ಯಾಜಕರಿಂದಲೂ ಧರ್ಮಶಾಸ್ತ್ರಿಗಳಿಂದಲೂ ಆತನು ತಿರಸ್ಕೃತನಾಗಿ ಕೊಲ್ಲಲ್ಪಡುವನು. ಆದರೆ ಮೂರನೆ ದಿನ ಆತನು ಪುನರುತ್ಥಾನ ಹೊಂದುವನು," ಎಂದು ಅವರಿಗೆ ತಿಳಿಸಿದರು.

ಚಿಂತನೆ : ಇಂದಿನ ಮೊದಲ ವಾಚನ ಸಮಯದ ಬಗ್ಗೆ ಮಾತನಾಡುತ್ತದೆ. ಹುಟ್ಟುವ, ಸಾಯುವ ಸಮಯವೂ ನಿಗದಿಯಾಗಿದ್ದೂ, ಅದರ ನಡುವಿನ ಎಲ್ಲಕ್ಕೂ ದೇವರು ಸಮಯವನ್ನು ನಿಗದಿಪಡಿಸಿದ್ದಾರೆ ಎನ್ನುವ ವಿಷಯವೇ ದೇವರ ಅಗಾಧತೆಗೆ ಸಾಕ್ಷಿಯಾಗಿದೆ. ಅಂತಹ ತಕ್ಕ ಸಮಯವು ಬರುವ ತನಕ ತಾವೇ ಅಭಿಷಿಕ್ತರಾದ ಲೋಕೋದ್ಧಾರಕ ಎಂಬುದನ್ನು ಯಾರಿಗೂ ತಿಳಿಸಬಾರದೆಂದು ಯೇಸು ಆಜ್ಞಾಪಿಸುತ್ತಾರೆ. ಅಂತೆಯೇ  ದೇವರ ಸಮಯವೆಂಬ ಚಿತ್ತಕ್ಕೆ ನಾವೆಲ್ಲರೂ ತಲೆಬಾಗಲೇ ಬೇಕಾಗುತ್ತದೆ.

27.09.2018

ಸಾಧಾರಣ ಕಾಲದ 25ನೇ - ಗುರುವಾರ

ಮೊದಲನೇ ವಾಚನ: ಉಪದೇಶಕ: 1: 2-11

ಉಪದೇಶಕನು ಹೇಳುವುದನ್ನು ಕೇಳಿ: ವ್ಯರ್ಥಗಳಲ್ಲಿ ವ್ಯರ್ಥ, ವ್ಯರ್ಥವೇ ವ್ಯರ್ಥ, ಎಲ್ಲವೂ ವ್ಯರ್ಥ! ಈ ಲೋಕದಲ್ಲಿ ಮನುಷ್ಯನು ಪಡುವ ಎಲ್ಲಾ ಪ್ರಯಾಸದಿಂದ ಅವನಿಗೆ ದೊರಕುವ ಲಾಭವಾದರೂ ಏನು? ಒಂದು ಸಂತತಿ ಗತಿಸುತ್ತದೆ, ಮತ್ತೊಂದು ಸಂತತಿ ಬರುತ್ತದೆ, ಭೂಮಿಯಾದರೋ ಶಾಶ್ವತವಾಗಿ ನಿಲ್ಲುತ್ತದೆ. ಸೂರ್ಯನು ಮೂಡುತ್ತಾನೆ, ಸೂರ್ಯನು ಮುಳುಗುತ್ತಾನೆ, ತಾನು ಹೊರಟ ಸ್ಥಳಕ್ಕೆ ಮರಳಿ ಓಡುತ್ತಾನೆ. ಗಾಳಿ ದಕ್ಷಿಣಕ್ಕೆ ಬೀಸುತ್ತದೆ, ಉತ್ತರದ ಕಡೆಗೆ ತಿರುಗುತ್ತದೆ, ಸುತ್ತುತ್ತಾ ಸುತ್ತುತ್ತಾ ಹೋಗಿ ಹಿಂತಿರುಗಿ ಬರುತ್ತದೆ. ನದಿಗಳು ಹರಿದು ಸಮುದ್ರವನ್ನು ಸೇರುತ್ತದೆ, ಆದರೂ ಸಮುದ್ರವು ತುಂಬುವುದಿಲ್ಲ, ಅವು ಎಲ್ಲಿಂದ ಹರಿದು ಬರುತ್ತವೋ ಅಲ್ಲಿಗೆ ಹಿಂತಿರುಗಿ ಹೋಗುತ್ತವೆ. ಮನುಷ್ಯನಿಂದ ವಿವರಿಸಲಾಗದಷ್ಟು ಎಲ್ಲವೂ ನೀರಸ. ಎಷ್ಟು ನೋಡಿದರು ಕಣ್ಣಿಗೆ ತೃಪ್ತಿಯಿಲ್ಲ. ಎಷ್ಟು ಕೇಳಿದರೂ ಕಿವಿಗೆ ದಣಿವಿಲ್ಲ. ಇದ್ದದ್ದೇ ಇರುತ್ತದೆ. ನಡೆದದ್ದೇ ನಡೆಯುತ್ತದೆ. ಲೋಕದಲ್ಲಿ ಹೊಸದೇನೂ ಇಲ್ಲ. ಇಗೋ, ಹೊಸದು ಎನಿಸಿಕೊಳ್ಳುವ ವಸ್ತು ಇದ್ದರೂ ಅದು ನಮಗಿಂತ ಮುಂಚೆಯೇ ಪುರಾತನ ಕಾಲದಲ್ಲೇ ಇದ್ದುದು. ಹಿಂದಿನ ಕಾಲದವರ ಜ್ಞಾಪಕವು ಇಂದಿನವರಿಗಿಲ್ಲ. ಮುಂದಿನ ಕಾಲದವರ ಜ್ಞಾಪಕವು ಅವರಿಗಿಂತ ಮುಂದೆ ಬರುವವರಿಗೆ ಇರುವುದಿಲ್ಲ.

ಕೀರ್ತನೆ: 98: 3-4, 5-6, 12-13, 14, 17ಬಿಸಿ
ಶ್ಲೋಕ: ಪ್ರಭೂ, ತಲತಲಾಂತರಕ್ಕೆ ಶ್ರೀನಿವಾಸ ನೀನೆಮಗೆ.

ಶುಭಸಂದೇಶ: ಲೂಕ: 9: 7-9

ನಡೆಯುತ್ತಿದ್ದ ಎಲ್ಲ ಸಂಗತಿಗಳು ಸಾಮಂತ ರಾಜ ಹೆರೋದನ ಕಿವಿಗೆ ಬಿದ್ದುವು. ಅವನ ಮನಸ್ಸು ಕಳವಳಗೊಂಡಿತ್ತು. ಏಕೆಂದರೆ, ’ಯೊವಾನ್ನನು ಮರಳಿ ಜೀವಂತನಾಗಿ ಎದ್ದಿದ್ದಾನೆ’ ಎಂದು ಕೆಲವರು, ’ಎಲೀಯನು ಪುನಃ ಕಾಣಿಸಿಕೊಂಡಿದ್ದಾನೆ’ ಎಂದು ಇನ್ನು ಕೆಲವರೂ, ’ಪ್ರಾಚೀನ ಪ್ರವಾದಿಗಳಲ್ಲಿ ಒಬ್ಬನು ಮರಳಿ ಜೀವಂತನಾಗಿದ್ದಾನೆ,’ ಎಂದು ಮತ್ತೆ ಕೆಲವರೂ ಹೇಳುತ್ತಿದ್ದರು. ಹೆರೋದನಾದರೋ, ’ಯೊವಾನ್ನನೇ! ಅವನನ್ನು ನಾನೇ ಶಿರಚ್ಛೇದನ ಮಾಡಿಸಿದೆನಲ್ಲಾ! ಮತ್ತೆ ಇವನಾರು? ಇವನ ಬಗ್ಗೆ ಇಂಥಾ ವಿಷಯಗಳನ್ನೆಲ್ಲಾ ಕೇಳುತ್ತಾ ಇರುವೆನಲ್ಲಾ! ಎಂದುಕೊಂಡು, ಯೇಸುವನ್ನು ನೋಡಲು ಅವಕಾಶ ಹುಡುಕುತ್ತಿದ್ದನು.

ಚಿಂತನೆ :  ಸ್ನಾನಿಕ ಯೊವಾನ್ನನೇ ಮರಳಿ ಬಂದನೆಂಬ ಭಯ ಒಂದು ಕಡೆಯಾದರೆ, ಮಾಡುತ್ತಿರುವ ಸೂಚಕ ಕಾರ್ಯಗಳಿಂದ ಕ್ರಿಸ್ತನನ್ನು ನೋಡುವ ಕೂತೂಹಲ ಹೆರೋದನದು. ಕೊನೆಗೆ ಬಂಧಿಸಿ ತನ್ನ ಬಳಿಗೆ ಯೇಸುವನ್ನು ಕರೆ ತಂದಾಗಲೂ ಹೆರೋದನ ಮನಸ್ಸು ಮರುಗದೆ ಕೇಳಿದ್ದು ಸೂಚಕ ಕಾರ್ಯವನ್ನೇ. ಯೇಸುವಿನ ಬಗೆಗಿನ ಅವನ ದೃಷ್ಟಿಕೋನ ಬಹಳ ಸೀಮಿತವಾದದ್ದು. ಕ್ರಿಸ್ತನೆಡೆಗೆ ನಮ್ಮ ದೃಷ್ಟಿಕೋನದ ಬಗ್ಗೆ ಪ್ರಶ್ನಿಸಿಕೊಳ್ಳೋಣ!  

26.09.2018

ಸಾಧಾರಣ ಕಾಲದ 25ನೇ ಬುಧವಾರ

ಮೊದಲನೇ ವಾಚನ: ಜ್ಞಾನೋಕ್ತಿಗಳು: 30: 5-9

ದೇವರ ಒಂದೊಂದು ಮಾತೂ ಪರಿಶುದ್ದ; ಆತನೇ ಶರಣರ ಖೇಡ್ಯ; ಆತನ ಮಾತುಗಳಿಗೆ ಯಾವುದನ್ನೂ ಸೇರಿಸಬೇಡ, ಇಲ್ಲವಾದರೆ ಆತ ನಿನ್ನನ್ನು ಖಂಡಿಸಿಯಾನು, ನೀನು ಸುಳ್ಳುಗಾರನಾಗಿ ತೋರಿ ಬಂದೀಯೆ! ನಿನ್ನಿಂದ ಎರಡು ವರಗಳನ್ನು ಬೇಡಿಕೊಂಡಿದ್ದೇನೆ: ನಿರಾಕರಿಸಬೇಡ, ನಾನು ಸಾಯುವುದರೊಳಗೆ ಅವುಗಳನ್ನು ಅನುಗ್ರಹಿಸು: ಕಪಟವಾದುದನ್ನು, ಮಿಥ್ಯವಾದುದನ್ನು ನನ್ನಿಂದ ತೊಲಗಿಸು; ನನಗೆ ಬಡತನ ಬೇಡ, ಐಶ್ವರ್ಯವೂ ಬೇಡ, ಸಾಕಷ್ಟು ಆಹಾರವನ್ನು ಮಾತ್ರ ನೀಡು. ಎಲ್ಲವೂ ಇದ್ದರೆ "ಸರ್ವೇಶ್ವರನು ಯಾರು?" ಎಂದು ನಿನ್ನನ್ನೇ ನಾನು ತಿರಸ್ಕರಿಸೇನು. ಬಡವನಾದರೆ ಕಳ್ಳತನ ಮಾಡಿ ನನ್ನ ದೇವರಾದ ನಿನ್ನ ಹೆಸರಿಗೆ ಅಪಕೀರ್ತಿ ತಂದೇನು. 

ಕೀರ್ತನೆ: 119: 29, 72, 89, 101, 104, 163
ಶ್ಲೋಕ: ನಿನ್ನ ವಾಕ್ಯ ನನ್ನ ಕಾಲಿನ ನಡೆಗೆ ಕೈದೀಪ.

ಶುಭಸಂದೇಶ: ಲೂಕ: 9:1-6


ಯೇಸುಸ್ವಾಮಿ ಹನ್ನೆರಡು ಮಂದಿ ಪ್ರೇಷಿತರನ್ನು ಒಟ್ಟಿಗೆ ಕರೆದು ಎಲ್ಲ ದೆವ್ವಗಳನ್ನು ಬಿಡಿಸಲೂ ರೋಗ ನಿವಾರಣೆಮಾಡಲೂ ಅವರಿಗೆ ಶಕ್ತಿಯನ್ನು ಮತ್ತು ಅಧಿಕಾರವನ್ನು ಕೊಟ್ಟರು. ಅನಂತರ ದೇವರ ಸಾಮ್ರಾಜ್ಯವನ್ನು ಕುರಿತು ಬೋಧಿಸಿಸುವುದಕ್ಕೂ ರೋಗಿಗಳನ್ನು ಗುಣಪಡಿಸುವುದಕ್ಕೂ ಅವರನ್ನು ಕಳುಹಿಸಿದರು. ಕಳುಹಿಸುವಾಗ ಅವರಿಗೆ ಇಂತೆಂದರು, "ಪ್ರಯಾಣಕ್ಕೆಂದು ಏನನ್ನೂ ತೆಗೆದುಕೊಳ್ಳಬೇಡಿ; ದಂಡ, ಜೋಳಿಗೆ, ಬುತ್ತಿ ಅಥವಾ ಹಣ ಯಾವುದೂ ಬೇಡ. ಎರಡು ಅಂಗಿಗಳು ಬೇಕಾಗಿಲ್ಲ. ಯಾವ ಮನೆಯವರು ನಿಮ್ಮನ್ನು ಬರಮಾಡಿಕೊಳ್ಳುತ್ತಾರೋ ಆ ಮನೆಯಲ್ಲೇ ತಂಗಿರಿ. ಅಲ್ಲಿಂದಲೇ ಮುಂದಕ್ಕೆ ಸಾಗಿರಿ. ಯಾವ ಊರಿನವರಾದರೂ ನಿಮ್ಮನ್ನು ಸ್ವಾಗತಿಸದೆ ಹೋದಲ್ಲಿ, ನೀವು ಆ ಊರನ್ನು ಬಿಟ್ಟು ಹೋಗುವಾಗ ನಿಮ್ಮ ಪಾದಕ್ಕೆ ಹತ್ತಿದ ಧೂಳನ್ನು ಕೂಡ ಝಾಡಿಸಿಬಿಡಿ. ಅದು ಅವರ ವಿರುದ್ದ ಸಾಕ್ಷಿಯಾಗಿರಲಿ," ಎಂದರು. ಪ್ರೇಷಿತರು ಹೊರಟು ಹಳ್ಳಿಹಳ್ಳಿಗೂ ಹೋಗಿ ಎಲ್ಲ ಕಡೆ ಶುಭಸಂದೇಶವನ್ನು ಬೋಧಿಸಿದರು; ರೋಗಿಗಳನ್ನು ಗುಣಪಡಿಸಿದರು.

ಚಿಂತನೆ : ಇಂದಿನ ಶುಭಸಂದೇಶದಲ್ಲಿನ ವೈರುದ್ಧ್ಯವನ್ನು ಗಮನಿಸಬಹುದು. ಬರಿಗೈ ದಾಸರಾದ ಯೇಸು ಮತ್ತು ಶಿಷ್ಯರು ದೇವರ ವಾಕ್ಯವನ್ನು ಸಾರಲು, ರೋಗಿಗಳನ್ನು ಗುಣಪಡಿಸಲು ಹೊರಡುತ್ತಾರೆ. ಕೇವಲ ದೈವ ಸಹಾಯ ಹಾಗೂ ಸೇವೆಯನ್ನು ನೆಚ್ಚಿಕೊಂಡ ಅವರಿಗೆ ಊರುಗಳಲ್ಲಿ ಸ್ವಾಗತ ಸಿಗಬಹುದೆಂಬ ಎಂಬ ಖಾತ್ರಿಯೂ ಇಲ್ಲ, ಆದರೂ ಪರಸೇವೆಯೆಡೆಗೆ ಅವರ ಚಿತ್ತ. ಅದೇ ಇಡೀ ರಾಜ್ಯವನ್ನೇ ಹೊಂದಿರುವ, ಎಲ್ಲಿ ಹೋದರೂ ಸ್ವಾಗತ, ಮನ್ನಣೆ ಸಿಗಬಹುದಾದ ರಾಜ, ತನಗೆ ತನ್ನ ಅಧಿಕಾರಕ್ಕೆ ಪ್ರತಿಸ್ಪರ್ಧಿಯೊಬ್ಬ ಹುಟ್ಟಿಕೊಂಡಿದಾನಲ್ಲ ಎಂದು ಚಿಂತಾಕ್ರಾಂತನಾಗಿದ್ದಾನೆ. 

ನಮ್ಮದು ಶಿಷ್ಯರ ಚಿತ್ತವೋ, ರಾಜನ ಚಿಂತೆಯೋ?

25.09.2018

ಸಾಧಾರಣ ಕಾಲದ 25ನೇ - ಮಂಗಳವಾರ

ಮೊದಲನೇ ವಾಚನ: ಜ್ಞಾನೋಕ್ತಿಗಳು: 21: 1-6, 10-13


ರಾಜನ ಹೃದಯ ಸರ್ವೇಶ್ವರನ ಕೈಯಲ್ಲಿ; ತಿರುಗಿಸಬಲ್ಲ ಆತ ಅದನ್ನು ನೀರಿನ ಕಾಲುವೆಯ ಪರಿ. ಮಾನವರ ನಡವಳಿಕೆ ಅವರವರ ನೋಟಕ್ಕೆ ನೇರ; ಅವರ ಅಂತರಂಗವನ್ನು ವೀಕ್ಷಿಸ ಬಲ್ಲವನೋ ಸರ್ವೇಶ್ವರ. ನ್ಯಾಯ ನೀತಿಗಳು ಬಲಿಯರ್ಪಣೆಗಿಂತ ಶ್ರೇಷ್ಟ; ಸರ್ವೇಶ್ವರನಿಗೆ ಅವು ಬಲು ಇಷ್ಟ. ಗರ್ವದ ನೋಟ, ಉಬ್ಬಿದ ಎದೆ, ಇವು ದುರುಳರೊಳು ಕಾಣುವ ಪಾಪದ ಕಿಡಿಗಳು. ಶ್ರಮ ಜೀವಿಗಳ ಯೋಜನೆಯಿಂದ ಸಮೃದ್ಧಿ; ತಾಳ್ಮೆಯಿಲ್ಲದೆ ತ್ವರೆಯಿಂದ ಅಧೋಗತಿ. ಹಬೆಯಂತೆ ನಾಪತ್ತೆ ಸುಳ್ಳಿನಿಂಡ ಸಿಕ್ಕಿದ ಸಂಪತ್ತು; ಮೃತ್ಯುಪಾಶದಂತೆ ಅದೊಂದು ವಿಪತ್ತು. ದುರಾತ್ಮನ ಮನಸ್ಸು ಕೇಡಿನ ಮೇಲೆ; ದಯೆತೋರಿಸನಾತ ನೆರೆಯವನ ಮೇಲೆ. ಕುಚ್ಚೊದ್ಯನಿಗೆ ದಂಡನೆಯಾದರೆ ಮುಗ್ದನಿಗೆ ಜ್ಞಾನಗಳಿಕೆ; ಜ್ಞಾನಿಗೆ ಶಿಕ್ಷೆಯಾದರೆ ತಾನೇ ಹೊಂದುವನು ತಿಳುವಳಿಕೆ. ಸತ್ಯಸ್ವರೂಪನ ದೃಷ್ಠಿ ದುಷ್ಟರ ಮನೆಯಮೇಲೆ; ಆ ದುರುಳರನ್ನು ದಬ್ಬಿ ಬಿಡುವನು ಕೇಡಿಗೆ. ಬಡವನ ಮೊರೆಗೆ ಕಿವಿ ಮುಚ್ಚಿಕೊಳ್ಳುವವನೇ, ನೀನೇ ಮೊರೆಯಿಡುವಾಗ ಉತ್ತರ ಕೊಡುವವರಾರು ನಿನಗೆ?" 

ಕೀರ್ತನೆ: 119: 1, 27, 30, 34, 35, 44
ಶ್ಲೋಕ: ಎನ್ನ ನಡೆಸು ಪ್ರಭೂ, ನಿನ್ನ ಆಜ್ಞಾ ಮಾರ್ಗದಲಿ.

ಶುಭಸಂದೇಶ: ಲೂಕ: 8: 19-21

ಯೇಸುಸ್ವಾಮಿಯ ತಾಯಿ ಹಾಗು ಸಹೋದರರು ಯೇಸು ಇದ್ದೆಡೆಗೆ ಬಂದರು. ಆದರೆ ಜನ ಸಂದಣಿಯ ನಿಮಿತ್ತ ಹತ್ತಿರಕ್ಕೆ ಬರಲಾಗಲಿಲ್ಲ. ಯೇಸುವಿಗೆ, "ನಿಮ್ಮ ತಾಯಿ  ಮತ್ತು ಸಹೋದರರು ನಿಮ್ಮನ್ನು ಕಾಣಬೇಕೆಂದು ಹೊರಗೆ ನಿಂತಿದ್ದಾರೆ," ಎಂದು ತಿಳಿಸಲಾಯಿತು. ಅದಕ್ಕೆ ಯೇಸು, "ದೇವರ ವಾಕ್ಯವನ್ನು ಕೇಳಿ ಅದರಂತೆ ನಡೆಯುವವರೇ ನನಗೆ ತಾಯಿ ಮತ್ತು ಅಣ್ಣತಮ್ಮಂದಿರು," ಎಂದರು.


ಚಿಂತನೆ : ತಮ್ಮ ತಾಯಿ ತಮ್ಮನ್ನು ನೋಡಲು ಬಂದಿದ್ದಾರೆ ಎಂಬ ಸಮಾಚಾರ ದೊರೆತಾಗ ಯೇಸು ಹೇಳಿದ ಮಾತು ನಮಗೆ ಕಠಿಣವಾಗಿ ತೋರಬಹುದು . ಆದರೆ ದೇವರ ವಾಕ್ಯ ಹಾಗು ಕಾರ್ಯಕ್ಕಿಂತ  ದೊಡ್ಡದು ತಮಗೆ ಯಾವುದೂ  ಇಲ್ಲ ಎಂಬುದನ್ನು ಬಾಲಕನಾಗಿದ್ದಾಗಲಿಂದಲೇ ತೋರುತ್ತಾ ಬಂದ ಯೇಸುವಿನ ಈ  ಮಾತು ದೇವಮಾತೆಗೆ  ಆಶ್ಚರ್ಯ ತಂದ್ದಿದಿರಲಾರದು. ದೇವರ ವಾಕ್ಯದಂತೆ ನಾವು ನಡೆದರೆ ಮಾತೆಯಷ್ಟೇ ನಾವು ಕೂಡ  ಕ್ರಿಸ್ತನಿಗೆ ಹತ್ತಿರವಾಗಬಹು ದೆಂಬ ಸಂದೇಶ ನಮಗೆ ಇಂದು ಕಾಣ ಸಿಗುತ್ತದೆ.

24.09.2018

ಸಾಧಾರಣ ಕಾಲದ 25ನೇ - ಸೋಮವಾರ

ಮೊದಲನೇ ವಾಚನ: ಜ್ಞಾನೋಕ್ತಿಗಳು: 3: 27-34

ನಿನ್ನ ಕೈಲಾದಾಗ ಉಪಕಾರ ಮಾಡು. ಕೇಳುವವರಿಗೆ ಅದನ್ನು ನಿರಾಕರಿಸಬೇಡ. ನೆರೆಯವನಿಗೆ ನೀಡಲು ಇದೀಗಲೇ ನಿನ್ನಲ್ಲಿರುವಾಗ, "ಹೋಗಿ ಬಾ, ನಾಳೆ ಕೊಡುತ್ತೇನೆ" ಎನ್ನಬೇಡ. ಕೇಡನ್ನು ಬಗೆಯಬೇಡ ನೆರೆಯವನಿಗೆ, ಪಕ್ಕದಲ್ಲೇ ನಂಬಿಕೆಯಿಂದ ವಾಸಿಸುವವನಿಗೆ. ನಿನಗೆ ಕೇಡು ಮಾಡದವನ ಸಂಗಡ ಕಾರಣವಿಲ್ಲದೆ ಜಗಳವಾಡ ಬೇಡ. ಹಿಂಸಾತ್ಮಕನನ್ನು ನೋಡಿ ಹೊಟ್ಟೆಕಿಚ್ಚು ಪಡಬೇಡ, ಅವನ ನಡತೆಯನ್ನು ಎಷ್ಟು ಮಾತ್ರಕ್ಕೂ ಅನುಸರಿಸ ಬೇಡ. ವಕ್ರ ಬುದ್ದಿಯವನು ಸರ್ವೇಶ್ವರನಿಗೆ ಅಸಹ್ಯನು, ಸತ್ಯಸಂಧರು ಆತನಿಗೆ ಪ್ರೀತಿ ಪಾತ್ರರು. ದುರುಳರ ಮನೆಯನ್ನು ಸರ್ವೇಶ್ವರ ಶಪಿಸುವನು; ನೀತಿವಂತರ ನಿವಾಸವನ್ನು ಆತ ಆಶೀರ್ವವದಿಸುವನು. ಅಪಹಾಸ್ಯ ಮಾಡುವವರನ್ನು ಆತ ಅಪಹಾಸ್ಯ ಮಾಡುವನು; ನಮ್ರರಿಗಾದರೋ ಕೃಪಾರ್ಶೀವಾದವನು ಅನುಗ್ರಹಿಸುವನು.

ಕೀರ್ತನೆ: 15: 2-3ಎ, 3ಬಿಸಿ-4ಎಬಿ, 5
ಶ್ಲೋಕ: ಅರ್ಹನಾರು ಪ್ರಭೂ, ನಿನ್ನ ಪವಿತ್ರ ಶಿಖರದಲಿ ವಾಸವಾಗಿರಲು?

ಶುಭಸಂದೇಶ: ಲೂಕ: 8: 16-18
"ದೀಪವನ್ನು ಹಚ್ಚಿ ಯಾರೂ ಅದನ್ನು ಪಾತ್ರೆಯಿಂದ ಮುಚ್ಚಿಡುವುದಿಲ್ಲ; ಮಂಚದ ಕೆಳಗೆ ಬಚ್ಚಿಡುವುದಿಲ್ಲ. ಮನೆಯೊಳಕ್ಕೆ ಬರುವವರಿಗೆ ಬೆಳಕು ಕಾಣಿಸುವಂತೆ ಅದನ್ನು ದೀಪಸ್ಥಂಭದ ಮೇಲಿಡುತ್ತಾರೆ. ಬಟ್ಟಬಯಲಾಗದ ಮುಚ್ಚುಮರೆಯಿಲ್ಲ; ಬೆಳಕಿಗೆ ಬಾರದ ಹಾಗೂ ರಟ್ಟಾಗದ ಗುಟ್ಟಿಲ್ಲ. "ಆದ್ದರಿಂದ ನೀವು ಕಿವಿಕೊಡುವಾಗ ಎಚ್ಚರಿಕೆಯಿಂದಿರಿ; ಏಕೆಂದರೆ, ಉಳ್ಳವನಿಗೆ ಇನ್ನೂ ಹೆಚ್ಚಾಗಿ ಕೊಡಲಾಗುತ್ತದೆ, ಇಲ್ಲದವನಿಂದ ತನಗಿದೆ ಎಂದುಕೊಳ್ಳುವ ಕಿಂಚಿತ್ತನ್ನೂ ಕಸಿದುಕೊಳ್ಳಲಾಗುತ್ತದೆ," ಎಂದರು ಯೇಸುಸ್ವಾಮಿ.



ಚಿಂತನೆ: ಶುಭ ಸಂದೇಶವನ್ನು ನಮ್ಮದೇ ಆದ ರೀತಿಯಲ್ಲಿ ಸಾರುವ ಅವಕಾಶ, ಪ್ರತಿಭೆಗಳಿದ್ದರೂ ಸುಮ್ಮನಿರುವ ನಮ್ಮಂಥವರನ್ನು ಇಂದಿನ ಶುಭ ಸಂದೇಶ ಎಚ್ಚರಿಸುತ್ತಿದೆ. ದೀಪ ಮುಚ್ಚಿಟ್ಟುಕೊಂಡರೆ ಕ್ರಮೇಣ ಅದೂ ಆರಿಹೋಗುತ್ತದೆ ಎಂಬ ಅರ್ಥವನ್ನು ಕೊನೆಯ ಸಾಲಿನಲ್ಲಿ ಕಾಣಬಹುದು. ನಾವು ದೇವರಿಂದ ವರ ಪಡೆದವರು ಎಂದು ಬೀಗುವುದಕ್ಕಿಂತ ವರವು ಮಿಕ್ಕವರಿಗೂ ಸಿಗುವಂಥಹ ಪ್ರಯತ್ನ ನಮ್ಮದಾಗಬೇಕುಜ್ಞಾನೋಕ್ತಿಗಳು ಸಹಾ ನಿಟ್ಟಿನಲ್ಲಿ ಒಂದಷ್ಟು ಮಾರ್ಗಗಳನ್ನು ಸೂಚಿಸುತ್ತದೆ

23.09.2018

ವರ್ಷದ ಇಪ್ಪತ್ತೈದನೆಯ ಭಾನುವಾರ
ವರ್ಷ – B

ಮೊದಲನೆಯ ವಾಚನ

 ಸುಜ್ಞಾನ ಗ್ರಂಥದಿಂದ ವಾಚನ    - 2:12, 17-20
ಅವಮಾನಕರ ಮರಣಶಿಕ್ಷೆಯನ್ನು ಅವನಿಗೆ ವಿಧಿಸೋಣ
ನೀತಿವಂತನಿಗಾಗಿ ಹೊಂಚುಹಾಕೋಣ ಬಲೆಯೊಡ್ಡಿ 
ಅವನು ನಮಗೊಂದು ಪೀಡೆ, ನಮ್ಮ ನಡತೆಗೆ ಅಡ್ಡಿ
ಆರೋಪಿಸುತ್ತಾನೆ ಧರ್ಮಕ್ಕೆ ವಿರುದ್ಧ ಪಾಪಕಟ್ಟಿಕೊಂಡೆವೆಂದು
ದೂಷಿಸುತ್ತಾನೆ ಸಂಪ್ರದಾಯದ ವಿರುದ್ಧ ಪಾಪ ಮಾಡಿದೆವೆಂದು.
ಅವನ ಮಾತುಗಳೇ ಸತ್ಯವೇನೋ ನೋಡೋಣ
ಅವನ ಜೀವಾಂತ್ಯದ ಗತಿ ಏನೆಂದು ಪರೀಕ್ಷಿಸೋಣ.
ನೀತಿವಂತ ದೇವಕುಮಾರನಾಗಿದ್ದರೆ ದೇವರು ಅವನಿಗೆ ನೆರವಾಗಬೇಕು
ಶತ್ರುಗಳ ಕೈಯಿಂದ ಅವನನ್ನು ತಪ್ಪಿಸಿ ಕಾಪಾಡಬೇಕು.
ಅಂಥವನನ್ನು ಹಿಂಸಿಸಿ, ಪೀಡಿಸಿ, ಪರೀಕ್ಷಿಸೋಣ
ಅವನಲ್ಲಿ ಸೌಜನ್ಯ ಎಷ್ಟಿದೆಯೆಂದು ತಿಳಿಯೋಣ
ಅನ್ಯಾಯದೆದುರು ತಾಳ್ಮೆಯೆಷ್ಟಿದೆಯೆಂದು ಶೋಧಿಸೋಣ;
ಅವಮಾನಕರ ಮರಣಶಿಕ್ಷೆಯನ್ನು ಅವನಿಗೆ ವಿಧಿಸೋಣ
ದೇವರು ರಕ್ಷಿಸುತ್ತಾನೆ’ ಎಂದಾಗಿತ್ತಲ್ಲವೇ ಅವನ ವಾದ?

- ದೇವರ ವಾಕ್ಯವಿದು.

ಕೀರ್ತನೆ : 54:1-4, 7.4
ಶ್ಲೋಕ : ದೇವನೆನಗೆ ಜೀವಪೋಷಕನು

ಎರಡನೆಯ ವಾಚನ
ಸಂತ ಯಕೋಬನು ಬರೆದ ಪತ್ರದಿಂದ ವಾಚನ : 3:16 - 4:3 
“ಸಮಾಧಾನಪಡಿಸುವವರು ಸಮಾಧಾನವೆಂಬ ಬೀಜವನ್ನೇ ಬಿತ್ತಿ ದೇವರೊಡನೆ ಸತ್ಸಂಬಂಧವೆಂಬ ಫಲವನ್ನು ಕೊಯ್ಯುತ್ತಾರೆ.”
ಸಹೋದರರೇ, ಮರ್ಮಮತ್ಸರವೂ ಸ್ವಾರ್ಥಾಭಿಲಾಶೆಯೂ ಇರುವ ಕಡೆಗಳಲ್ಲೆಲ್ಲಾ ನಾನಾ ವಿಧವಾದ ಅಕ್ರಮಗಳೂ ದುಶ್ಚಟಗಳು ಇರುತ್ತವೆ. ದೇವರಿಂದ ಬರುವ ಜ್ಞಾನವಾದರೋ ಮೊಟ್ಟಮೊದಲನೆಯದಾಗಿ ಪವಿತ್ರವಾದುದು. ಅದು ಶಾಂತಿಸಮಾಧಾನವುಳ್ಳದ್ದು, ಸಹನೆ ಸಂಯಮವುಳ್ಳದ್ದು, ನ್ಯಾಯಸಮ್ಮತವಾದದ್ದು, ದಯೆದಾಕ್ಷಿಣ್ಯಗಳಿಂದಲೂ ಸತ್ಕಾರ್ಯಗಳಿಂದಲೂ ಫಲಭರಿತವಾದದ್ದು, ವಂಚನೆಯಾಗಲಿ, ಚಂಚಲತೆಯಾಗಲಿ ಅದರಲ್ಲಿ ಇರುವುದಿಲ್ಲ. ಸಮಾಧಾನಪಡಿಸುವವರು ಸಮಾಧಾನವೆಂಬ ಬೀಜವನ್ನು ಬಿತ್ತಿ ದೇವರೊಡನೆ ಸತ್ಸಂಬಂಧವೆಂಬ ಫಲವನ್ನು ಕೊಯ್ಯುತ್ತಾರೆ. ನಿಮ್ಮಲ್ಲಿ ಕಲಹ ಕಾದಾಟಗಳು ಉಂಟಾಗುವುದು ಹೇಗೆ? ನಿಮ್ಮ ಇಂದ್ರಿಯಗಳಲ್ಲಿ ಗೊಂದಲವೆಬ್ಬಿಸುವ ದುರಿಚ್ಛೆಗಳಿಂದಲ್ಲವೇ? ಪರರ ಆಸ್ತಿಪಾಸ್ತಿಗಳನ್ನು ಬಯಸುತ್ತೀರಿ; ಅವುಗಳು ಸಿಗದೆ ಇದ್ದಾಗ, ನೀವು ಕೊಲೆ ಮಾಡಲೂ ಹಿಂಜರಿಯುವುದಿಲ್ಲ. ದುರಾಶೆಗಳಿಗೆ ಬಲಿಯಾಗುತ್ತೀರಿ; ಅವುಗಳು ಈಡೇರದಾಗ ಜಗಳವಾಡುತ್ತೀರಿ, ಕಾದಾಡುತ್ತೀರಿ. ನಿಮಗೆ ಬೇಕಾದುದು ನಿಮ್ಮಲ್ಲಿಲ್ಲ. ಏಕೆಂದರೆ, ನೀವು ಅದಕ್ಕಾಗಿ ಬೇಡಿಕೊಳ್ಳಲಿಲ್ಲ. ಬೇಡಿಕೊಂಡರೂ ನಿಮಗದು ದೊರಕುವುದಿಲ್ಲ. ಏಕೆಂದರೆ, ನಿಮ್ಮ ಬೇಡಿಕೆ ದುರುದ್ದೇಶದಿಂದ ಕೂಡಿರುತ್ತದೆ. ಭೋಗಾಭಿಲಾಶೆಗಳ ಈಡೇರಿಕೆ ನಿಮ್ಮ ಗುರಿಯಾಗಿರುತ್ತದೆ.
- ದೇವರ ವಾಕ್ಯವಿದು.

ಘೋಷಣೆ :  
ಅಲ್ಲೆಲೂಯ ಅಲ್ಲೆಲೂಯ !
ಸರ್ವೇಶ್ವರನ ನಾಮದಲಿ ಬರುವ ಅರಸನಿಗೆ ಜಯವಾಗಲಿ !
ಶಾಂತಿ ಸ್ವರ್ಗದಲಿ, ಮಹಿಮೆ ಮಹೋನ್ನತದಲಿ !
ಅಲ್ಲೆಲೂಯ !

ಶುಭಸಂದೇಶ

ಸಂತ ಮಾರ್ಕನು ಬರೆದ ಶುಭಸಂದೇಶದಿಂದ ವಾಚನ : 9 :30-37
“ನಿಮ್ಮಲ್ಲಿ ಮೊದಲಿಗನಾಗಲು ಬಯಸುವವನು ಎಲ್ಲರಿಗೂ ಕಡೆಯವನಾಗಿರಲಿ.”
ಯೇಸುಸ್ವಾಮಿ ಮತ್ತು ಶಿಷ್ಯರು ಹೊರಟು ಗಲಿಲೇಯದ ಮಾರ್ಗವಾಗಿ ಮುಂದಕ್ಕೆ ಪ್ರಯಾಣ ಮಾಡಿದರು. ಇದು ಯಾರಿಗೂ ತಿಳಿಯಬಾರದು ಎಂಬುದು ಯೇಸುವಿನ ಇಚ್ಛೆಯಾಗಿತ್ತು. ಕಾರಣ, ತಮ್ಮ ಶಿಷ್ಯರಿಗೆ ಪ್ರಬೋಧಿಸುವುದರಲ್ಲಿ ಅವರು ನಿರತರಾಗಿದ್ದರು. “ನರಪುತ್ರನನ್ನು ಜನರ ವಶಕ್ಕೆ ಒಪ್ಪಿಸಲಾಗುವುದು. ಅವರು ಆತನನ್ನು ಕೊಲ್ಲುವರು. ಕೊಂದ ಮೂರನೆಯ ದಿನ ಆತನು ಪುನರುತ್ಥಾನ ಹೊಂದುವನು.” ಎಂದು ಯೇಸು ಅವರಿಗೆ ತಿಳಿಸಿದರು. ಆದರೆ ಯೇಸು ಹೇಳಿದ ಈ ಮಾತುಗಳನ್ನು ಶಿಷ್ಯರು ಅರ್ಥಮಾಡಿಕೊಳ್ಳಲಿಲ್ಲ. ಅವುಗಳ ಬಗ್ಗೆ ಪ್ರಶ್ನಿಸಲು ಸಹ ಅಂಜಿದರು. ಆನಂತರ ಅವರೆಲ್ಲರೂ ಕಫೆರ್ನವುಮಿಗೆ ಬಂದರು. ಮನೆ ಸೇರಿದಾಗ ಯೇಸುಸ್ವಾಮಿ, “ದಾರಿಯಲ್ಲಿ ಬರುತ್ತಾ ನೀವು ನಿಮ್ಮಲ್ಲೇ ಏನು ಚರ್ಚೆಮಾಡುತ್ತಿದ್ದಿರಿ?” ಎಂದು ಶಿಷ್ಯರನ್ನು ಕೇಳಿದರು. ಅವರು ಮೌನ ತಾಳಿದರು. ಏಕೆಂದರೆ, ತಮ್ಮಲ್ಲಿ ಯಾವನು ಅತಿ ಶ್ರೇಷ್ಠನು ಎಂದು ತಮ್ಮ ತಮ್ಮಲ್ಲೇ ವಾದಿಸುತ್ತಾ ಬಂದಿದ್ದರು. ಯೇಸು ಕುಳಿತುಕೊಂಡು, ಹನ್ನೆರಡು ಮಂದಿಯನ್ನೂ ಕರೆದು, ಅವರಿಗೆ, “ನಿಮ್ಮಲ್ಲಿ ಮೊದಲಿಗನಾಗ ಬಯಸುವವನು ಎಲ್ಲರಿಗೂ ಕಡೆಯವನಾಗಿರಲಿ; ಎಲ್ಲರ ಸೇವೆ ಮಾಡುವವನಾಗಿರಲಿ,” ಎಂದರು. ಆನಂತರ ಯೇಸು, ಒಂದು ಚಿಕ್ಕ ಮಗುವನ್ನು ಕರೆದು ನಡುವೆ ನಿಲ್ಲಿಸಿ, ಅದನ್ನು ತಬ್ಬಿಕೊಂಡು ತಮ್ಮ ಶಿಷ್ಯರಿಗೆ, “ನನ್ನ ಹೆಸರಿನಲ್ಲಿ ಇಂಥ ಮಗುವೊಂದನ್ನು ಯಾರು ಬರಮಾಡಿಕೊಳ್ಳುತ್ತಾನೋ ಅವನು ನನ್ನನ್ನೇ ಬರಮಾಡಿಕೊಳ್ಳುತ್ತಾನೆ; ಯಾರು ನನ್ನನ್ನು ಬರಮಾಡಿಕೊಳ್ಳುತ್ತಾನೋ ಅವನು ನನ್ನನ್ನು ಅಲ್ಲ, ನನ್ನನ್ನು ಕಳುಹಿಸಿದಾತನನ್ನೇ ಬರಮಾಡಿಕೊಳ್ಳುತ್ತಾನೆ,” ಎಂದರು.
-ಪ್ರಭು ಕ್ರಿಸ್ತರ ಶುಭಸಂದೇಶವಿದು.

ಚಿಂತನೆ : ಒಂದು ಸಣ್ಣ ಮಗು ಎಷ್ಟು ಮುದ್ದೋ, ಮುಗ್ದವೋ, ಪಾಪರಹಿತವೋ ಅಷ್ಟೇ ಅಸಹಾಯಕವೂ ಹೌದು. ಅದಕ್ಕೆ ಲಾಲನೆ, ಪಾಲನೆ, ನಮ್ಮ ಗಮನ ಎಲ್ಲವೂ ಬೇಕು. ಈ ಸಮಾಜದಲ್ಲೂ ಮಕ್ಕಳಂತೆ ಅಸಹಾಯಕರೂ, ಬಡವರು, ನಮ್ಮ ಸಹಾಯವನ್ನು ಮತ್ತೆ ಮರಳಿಸಲು ಸಾಧ್ಯವಾಗದವರು, ಯಾವುದೇ ಪ್ರಭಾವವಿಲ್ಲದವರು ಇರುತ್ತಾರೆ. ಇಂಥಹ ಜನರಿಗೆ ನಾವು ಬೆನ್ನು ತೋರಿಸದೇ ಅವರನ್ನು ಬರಮಾಡಿಕೊಳ್ಳುವ ಮನಸ್ಸುಳ್ಳವರಾಗಬೇಕೆಂಬ ಸಂದೇಶ ಇಂದಿನ ಶುಭಸಂದೇಶದಲ್ಲಿದೆ. ಇತರರಿಗಿಂತ ತಾನು ಶ್ರೇಷ್ಠ, ಮೊದಲಿಗ ಎಂಬ ಮನಸ್ಸು ನಮ್ಮನ್ನು ದೀನತೆಯಿಂದ ದೂರಕ್ಕೆ ಕರೆದ್ಯೊಯ್ಯುತ್ತದೆ ಎಂಬದನ್ನು ನೆನಪಿನಲ್ಲಿಟ್ಟುಕೊಳ್ಳೋಣ.   

22.09.2018

ಸಾಧಾರಣ ಕಾಲದ 24ನೇ - ಶನಿವಾರ

ಮೊದಲನೇ ವಾಚನ: 1 ಕೊರಿಂಥಿಯರಿಗೆ: 15: 35-37, 42-49

ಸತ್ತವರನ್ನು ಮರಳಿ ಜೀವಂತರಾಗಿಸುವುದು ಹೇಗೆ ಸಾಧ್ಯ? ಅವರ ದೇಹಾಕೃತಿ ಹೇಗಿರುತ್ತದೆ? ಎಂದು ಯಾರಾದರು ಕೇಳಿಯಾರು. ಮತಿಹೀನನೇ, ನೀನು ಬಿತ್ತಿದ ಬೀಜ ಸಾಯದಿದ್ದರೆ ಅದು ಜೀವ ತಾಳುವುದುಂಟೆ? ಇಲ್ಲ. ನೀನು ಬಿತ್ತುವುದು ಗೋಧಿಯನ್ನು ಅಥವಾ ಇನ್ನಾವುದೋ ಕಾಳನ್ನೋ; ಮುಂದಕ್ಕೆ ಬೆಳೆಯಲಿರುವ ಇಡೀ ಗಿಡವನ್ನಲ್ಲ. ಸತ್ತವರ ಪುನರುತ್ಥಾನವು ಹಾಗೆಯೇ. ಬಿತ್ತುವಂಥದ್ದು ಅಳಿದು ಹೋಗುವಂಥದ್ದು ಪುನರುತ್ಥಾನವಾಗುವಂಥದ್ದು ಅಮರವಾದುದು. ಬಿತ್ತಿದ್ದು ಬಲಹೀನವಾದುದು; ಪುನರುತ್ಥಾನ ಹೊಂದುವಂಥದ್ದು ಬಲಿಷ್ಠವಾದುದು. ಬಿತ್ತಿದ್ದು ಕುರೂಪಿಯಾದುದು; ಪುನರುತ್ಥಾನ ಹೊಂದುವುದು ಕೋಮಲವಾದುದು. ಬಿತ್ತಿದ್ದು ಭೌತಿಕ ದೇಹ; ಪುನರುತ್ಥಾನ ಹೊಂದುವಂಥದ್ದು ಆಧ್ಯಾತ್ಮಿಕ ದೇಹ. ಭೌತಿಕ ದೇಹ ಇರುವುದು ಸತ್ಯವಾದರೆ ಆಧ್ಯಾತ್ಮಿಕ ದೇಹ ಇರುವುದು ಸತ್ಯ. ಪವಿತ್ರಗ್ರಂಥದಲ್ಲಿ ಲಿಖಿತವಾಗಿರುವಂತೆ ಮೊದಲ ಮಾನವನಾದ ಆದಾಮನು ಜೀವ ಪಡೆದ ವ್ಯಕ್ತಿ; ಕಡೆಯ ಆದಾಮನಾದರೋ ಜೀವ ಕೊಡುವ ಆತ್ಮ. ಮೊದಲು ಆದುದು ಆಧ್ಯಾತ್ಮಿಕವಾದುದಲ್ಲ, ಪ್ರಾಕೃತವಾದುದು. ಅನಂತರ ಆದುದು ಆಧ್ಯಾತ್ಮಿಕವಾದುದು. ಮೊದಲನೇಯ ಮಾನವನು ಮಣ್ಣಿನಿಂದಾದವನು; ಮಣ್ಣಿಗೆ ಸಂಬಂಧಪಟ್ಟವನು. ಎರಡನೇಯ ಮಾನವರಾದರೋ ಸ್ವರ್ಗದಿಂದ ಬಂದವರು. ಮಣ್ಣಿಗೆ ಸಂಬಂಧಪಟ್ಟವರು ಮಣ್ಣಿನಿಂದ ಆದವನಂತೆಯೇ ಇರುತ್ತಾರೆ. ಸ್ವರ್ಗಕ್ಕೆ ಸಂಬಂಧಪಟ್ಟವರು ಸ್ವರ್ಗದಿಂದ ಬಂದವನಂತೆಯೇ ಇರುತ್ತಾರೆ. ಮಣ್ಣಿನಿಂದ ಆದವನ ರೂಪವನ್ನು ನಾವು ಧರಿಸಿರುವಂತೆಯೇ ಸ್ವರ್ಗದಿಂದ ಬಂದಾತನ ರೂಪವನ್ನು ಧರಿಸುತ್ತೇವೆ. 

ಕೀರ್ತನೆ: 56: 10ಸಿ-12, 13-14
ಶ್ಲೋಕ: ನಿನ್ನ ಮುಂದೆ ಜೀವನ ಜ್ಯೋತಿಯಲಿ ನಾ ನಡೆಯ ಮಾಡಿರುವೆ.

ಶುಭಸಂದೇಶ: ಲೂಕ: 8: 4-15

ಜನರು ಊರೂರುಗಳಿಂದ ಹೊರಟು ಯೇಸುಸ್ವಾಮಿಯ ಬಳಿಗೆ ಬಂದರು ಜನಸಮೂಹವು ಹೆಚ್ಚುತ್ತಿದ್ದಂತೆ ಯೇಸು ಈ ಸಾಮತಿಯನ್ನು ಹೇಳಿದರು: "ಒಬ್ಬ ರೈತನು ಬಿತ್ತುವುದಕ್ಕೆ ಹೋದನು. ಬಿತ್ತನೆ ಮಾಡುತ್ತಿದ್ದಾಗ ಕೆಲವು ಬೀಜಗಳು ಕಾಲ್ದಾರಿಯಲ್ಲಿ ಬಿದ್ದವು. ಅವು ಕಾಲ್ತುಳಿತ್ತಕ್ಕೆ ಸಿಕ್ಕಿಹೋದವು. ಅವುಗಳನ್ನು ಆಕಾಶದ ಪಕ್ಷಿಗಳು ತಿಂದು ಬಿಟ್ಟವು. ಮತ್ತೆ ಕೆಲವು ಜೀಜಗಳು ಕಲ್ಲು ಭೂಮಿಯ ಮೇಲೆ ಬಿದ್ದವು. ಅವು ಮೊಳೆತಾಗಲೂ ತೇವವಿಲ್ಲದ ಕಾರಣ ಒಣಗಿ ಹೋದವು. ಇನ್ನೂ ಕೆಲವು ಮುಳ್ಳು ಪೊದೆಗಳ ನಡುವೆ ಬಿದ್ದವು. ಮುಳ್ಳು ಪೊದೆಗಳು ಅವುಗಳೊಡನೆ ಬೆಳೆದು ಸಸಿಗಳನ್ನು ಅದುಮಿಬಿಟ್ಟವು. ಇನ್ನೂ ಕೆಲವು ಬೀಜಗಳು ಹದವಾದ ಭೂಮಿಯಲ್ಲಿ ಬಿದ್ದವು. ಅವು ಬೆಳೆದು ನೂರ್ಮಡಿ ಫಸಲನ್ನು ಕೊಟ್ಟವು." ಈ ಸಾಮತಿಯನ್ನು ಮುಗಿಸಿದ ಮೇಲೆ ಯೇಸು, "ಕೇಳುವುದಕ್ಕೆ ಕಿವಿಯುಳ್ಳವನು ಕೇಳಿಸಿಕೊಳ್ಳಲಿ," ಎಂದು ಒತ್ತಿ ಹೇಳಿದರು. ಶಿಷ್ಯರು, ’ಈ ಸಾಮತಿಯ ಅರ್ಥವೇನು?’ ಎಂದು ಕೇಳಿದಾಗ ಯೇಸು ಇಂತೆಂದರು: "ದೇವರ ಸಾಮ್ರಾಜ್ಯದ ರಹಸ್ಯಗಳನ್ನು ಅರಿತುಕೊಳ್ಳುವ ಸದವಕಾಶವನ್ನು ನಿಮಗೆ ಕೊಡಲಾಗಿದೆ. ಬೇರೆಯವರಿಗಾದರೋ ಅವು ಸಾಮತಿಗಳ ರೂಪದಲ್ಲಿ ಮರೆಯಾಗಿದೆ. ಅವರು ಕಣ್ಣಾರೆ ನೋಡಿದರು ಕಾಣರು, ಕಿವಿಯಾರೆ ಕೇಳಿದರೂ ಗ್ರಹಿಸರು." "ಸಾಮತಿಯ ಅರ್ಥ ಹೀಗಿದೆ: ಜೀಜ ಎಂದರೆ ದೇವರ ವಾಕ್ಯ. ಕಾಲ್ದಾರಿಯಲಿ ಬಿದ್ದ ಬೀಜಗಳು ಎಂದರೆ ಆ ವಾಕ್ಯವನ್ನು ಕೇಳಿದವರು. ಆದರೆ ಅವರು ವಿಶ್ವಾಸಿಸಿ ಜೀವೋದ್ಧಾರವನ್ನು ಪಡೆಯದಂತೆ ಪಿಶಾಚಿ ಬಂದು ಆ ವಾಕ್ಯವನ್ನು ಅವರ ಹೃದಯದಿಂದ ಕೂಡಲೇ ತೆಗೆದು ಬಿಡುತ್ತದೆ. ಕಲ್ಲು ಭೂಮಿಯ ಮೇಲೆ ಬಿದ್ದ ಬೀಜಗಳು ಎಂದರೆ ದೇವರ ವಾಕ್ಯವನ್ನು ಕೇಳಿ ಸಂತೋಷದಿಂದ ಸ್ವೀಕರಿಸಿದವರು; ಅದು ಅವರಲ್ಲಿ ಬೇರೂರದ ಕಾರಣ ಅವರು ಸ್ವಲ್ಪ ಕಾಲ ವಿಶ್ವಾಸಿಸುತ್ತಾರೆ; ಶೋಧನೆಯ ಸಮಯದಲ್ಲಿ ಅದನ್ನು ತೊರೆದು ಬಿಡುತ್ತಾರೆ. ಮುಳ್ಳು ಪೊದೆಗಳ ನಡುವೆ ಬಿದ್ದ ಬೀಜಗಳು ಎಂದರೆ ದೇವರ ವಾಕ್ಯವನ್ನು ಕೇಳಿದ ಇನ್ನಿತರರು. ಆದರೆ ಕಾಲಕ್ರಮೇಣ ಬಾಳಿನ ಬವಣೆಗಳು, ಐಶ್ವರ್ಯದ ವ್ಯಾಮೋಹಗಳು ಹಾಗೂ ಸುಖ ಭೋಗಗಳು ಇವರನ್ನು ಅದುಮಿ ಬಿಡುತ್ತವೆ; ಇವರ ಫಲ ಪಕ್ವವಾಗುವುದಿಲ್ಲ. ಹದವಾದ ಭೂಮಿಯ ಮೇಲೆ ಬಿದ್ದ ಬೀಜಗಳು ಎಂದರೆ ದೇವರ ವಾಕ್ಯವನ್ನು ಕೇಳಿ ಅದನ್ನು ಸದ್ಗುಣಶೀಲ ಹಾಗು ಸಾತ್ವಿಕವಾದ ಹೃದಯದಲ್ಲಿಟ್ಟು ಸಹನೆಯಿಂದ ಫಲ ತರುವವರು.

21.09.2018

ಸಾಧಾರಣ ಕಾಲದ 24ನೇ - ಶುಕ್ರವಾರ

ಮೊದಲನೇ ವಾಚನ: ಎಫೆಸಿಯರಿಗೆ: 4: 1-7, 11-13

ಪ್ರಭುವಿನ ಸೇವೆಯ ನಿಮಿತ್ತ ಸೆರೆಯಾಳಾಗಿರುವ ನಾನು ನಿಮ್ಮಲ್ಲಿ ಭಿನ್ನವಿಸುವುದು ಏನೆಂದರೆ: ದೇವರ ಕರೆಗೆ ಅನುಗುಣವಾಗಿ ಯೋಗ್ಯ ಬಾಳುವೆ ನಡೆಸಿರಿ. ಯಾವಾಗಲೂ, ದೀನದಯಾಳತೆ, ವಿನಯಶೀಲತೆ ಹಾಗು ಶಾಂತಿ ಸಮಾಧಾನವುಳ್ಳವರಾಗಿರಿ. ಪರಸ್ಪರ ಪ್ರೀತಿಯಿಂದಲೂ ಸಹನೆಯಿಂದಲೂ ವರ್ತಿಸಿರಿ. ಪವಿತ್ರಾತ್ಮರಿಂದ ಉಂಟಾಗುವ ಐಕ್ಯತೆಯನ್ನು ಕಾಪಾಡಿಕೊಳ್ಳಲು ಆಸಕ್ತರಾಗಿರಿ. ಅದು ನಿಮ್ಮನ್ನು ಸಮಾಧಾನದಲ್ಲಿ ಬಂಧಿಸುವುದು. ನೀವೆಲ್ಲರೂ ಒಂದೇ ಶರೀರಕ್ಕೆ ಸೇರಿದವರು; ಒಬ್ಬರೇ ಪವಿತ್ರಾತ್ಮರನ್ನು ಪಡೆದವರು; ಒಂದೇ ನಿರೀಕ್ಷೆಗಾಗಿ ಕರೆ ಹೊಂದಿದವರು. ನಮ್ಮೆಲ್ಲರಿಗೂ ಪ್ರಭು ಒಬ್ಬರೇ; ವಿಶ್ವಾಸವೂ ಒಂದೇ; ದೀಕ್ಷಾಸ್ನಾನವೂ ಒಂದೇ. ದೇವರು ಒಬ್ಬರೇ, ಸರ್ವರ ತಂದೆಯೂ ಅವರೇ; ಸರ್ವಶ್ರೇಷ್ಟರೂ ಅವರೇ. ಸರ್ವರ ಮೂಲಕ ಕಾರ್ಯ ನಿರ್ವಹಿಸುವವರೂ ಅವರೇ ಮತ್ತು ಆ ಸಮಸ್ತರಲ್ಲಿ ವಾಸಿಸುವವರೂ ಅವರೇ, ಆದರೂ ನಮ್ಮಲ್ಲಿ ಪ್ರತಿಯೊಬ್ಬನು ಕ್ರಿಸ್ತ ಯೇಸು ಅನುಗ್ರಹಿಸಿದ ಪ್ರಕಾರವೇ ವರಗಳನ್ನು ಪಡೆದಿದ್ದಾನೆ. ಎಂತಲೇ ಪವಿತ್ರಗ್ರಂಥದಲ್ಲಿ ಹೀಗಿದೆ: ಈ ವ್ಯಕ್ತಿ ನರ ಮಾನವರಿಗೆ ವರದಾನಗಳನ್ನಿತ್ತರು. ಕೆಲವರನ್ನು ಪ್ರೇಷಿತರನ್ನಾಗಿಯೂ ಕೆಲವರನ್ನು ಸಭಾ ಪಾಲಕರನ್ನಾಗಿಯೂ ಮತ್ತು ಬೋಧಕರನ್ನಾಗಿಯೂ ನೇಮಿಸಿದರು. ದೇವ ಜನರನ್ನು ಪರಿಣತರನ್ನಾಗಿಸಿ ದೇವರ ಸೇವೆಗೆ ಸಿದ್ದಗೊಳಿಸಲೆಂದು ಮತ್ತು ಯೇಸು ಕ್ರಿಸ್ತರ ದೇಹವಾದ ಧರ್ಮಸಭೆ ಅಭಿವೃದ್ದಿ ಹೊಂದಲೆಂದು ಈ ವರಗಳನ್ನು ಅವರಿಗೆ ನೀಡಿದರು. ಹೀಗೆ ನಾವೆಲ್ಲರೂ ಒಂದೇ ವಿಶ್ವಾಸದಿಂದಲೂ ದೇವರ ಪುತ್ರನನ್ನು ಕುರಿತ ಜ್ಞಾನದಿಂದಲೂ ಐಕ್ಯಮತ್ಯವನ್ನು ಮತ್ತು ಪರಿಪಕ್ವತೆಯನ್ನು ಪಡೆಯುತ್ತೇವೆ. ಜ್ಞಾನಾರ್ಜನೆಯನ್ನು ಪಡೆದವರಾಗಿ, ಕ್ರಿಸ್ತ ಯೇಸುವಿನ ಪರಿಪೂರ್ಣತೆಯ ಮಟ್ಟವನ್ನು ಮುಟ್ಟುತ್ತೇವೆ.

ಕೀರ್ತನೆ: 19: 2-3, 4-5
ಶ್ಲೋಕ: ಅವುಗಳ ನುಡಿಮಾತು ವ್ಯಾಪಿಸಿದೆ ಜಗದಾದ್ಯಂತ.

ಶುಭಸಂದೇಶ: ಮತ್ತಾಯ: 9: -9-13

ಯೇಸುಸ್ವಾಮಿ ಆ ಸ್ಥಳವನ್ನು ಬಿಟ್ಟು ಮುಂದಕ್ಕೆ ಹೋಗುತ್ತಿದ್ದಾಗ ಮತ್ತಾಯ ಎಂಬುವನನ್ನು ಕಂಡರು. ಅವನು ಸುಂಕ ವಸೂಲಿಗಾಗಿ ಉಕ್ಕಡದಲ್ಲಿ ಕುಳಿತ್ತಿದ್ದನು. "ನನ್ನನ್ನು ಹಿಂಬಾಲಿಸು," ಎಂದು ಹೇಳಿ ಯೇಸು ಅವನನ್ನು ಕರೆದರು. ಮತ್ತಾಯನು ಎದ್ದು ಅವರನ್ನು ಹಿಂಬಾಲಿಸಿದನು. ಇದಾದ ಮೇಲೆ ಯೇಸುಸ್ವಾಮಿ ಮತ್ತಾಯನ ಮನೆಯಲ್ಲಿ ಊಟಕ್ಕೆ ಕುಳಿತ್ತಿದ್ದರು. ಬಹುಮಂದಿ ಸುಂಕದವರೂ ಪಾಪಿಷ್ಟರೂ ಅಲ್ಲಿಗೆ ಬಂದರು. ಯೇಸು ಮತ್ತು ಅವರ ಶಿಷ್ಯರು ಕುಳಿತ್ತಿದ್ದ ಪಂಕ್ತಿಯಲ್ಲೇ ಇವರೂ ಊಟಕ್ಕೆ ಕುಳಿತರು. ಫರಿಸಾಯರು ಇದನ್ನು ಕಂಡದ್ದೇ ಯೇಸುವಿನ ಶಿಷ್ಯರನ್ನುದ್ದೇಶಿಸಿ, "ನಿಮ್ಮ ಗುರು ಇಂತಹ ಬಹಿಷ್ಕೃತ ಜನರ ಜೊತೆಯಲ್ಲಿ ಊಟ ಮಾಡುವುದೇ?" ಎಂದು ಆಕ್ಷೇಪಿಸಿದರು. ಇದನ್ನು ಕೇಳಿಸಿಕೊಂಡ ಯೇಸು, "ವೈದ್ಯನ ಅವಶ್ಯಕತೆ ಇರುವುದು ರೋಗಿಗಳಿಗೆ; ಆರೋಗ್ಯವಂತರಿಗಲ್ಲ. ನೀವು ಹೋಗಿ, ’ನನಗೆ ಬೇಕಾದುದು ದಯೆ ಯಜ್ಞ ಬಲಿಯಲ್ಲ’ ಎಂದು ಪವಿತ್ರಗ್ರಂಥದಲ್ಲಿ ಬರೆದಿರುವ ವಾಕ್ಯದ ಅರ್ಥವನ್ನು ಕಲಿತುಕೊಳ್ಳಿ. ನಾನು ಕರೆಯಲು ಬಂದಿರುವುದು ಧರ್ಮಿಷ್ಟರನ್ನಲ್ಲ, ಪಾಪಿಷ್ಟರನ್ನು," ಎಂದರು.

20.09.2018

 ಮೊದಲನೇ ವಾಚನ: 1 ಕೊರಿಂಥಿಯರಿಗೆ  15:1-11

ಪ್ರಿಯ ಸಹೋದರರೇ, ನಾನು ನಿಮಗೆ ಬೋಧಿಸಿದ ಶುಭಸಂದೇಶವನ್ನು ನೆನಪಿಗೆ ತಂದುಕೊಳ್ಳಿರಿ.  ನೀವು ಅದನ್ನು ಸ್ವೀಕರಿಸಿದ್ದೀರಿ. ಅದರಲ್ಲಿ ನೆಲೆಯಾಗಿ ನಿಂತಿದ್ದೀರಿ. ನಾನು ನಿಮಗೆ ಶುಭಸಂದೇಶವೆಂದು ತಿಳಿಸಿದ ಸಂಗತಿಯನ್ನು ದೃಡವಾಗಿ ವಿಶ್ವಾಸಿಸಿದರೆ ನೀವು ಜೀವೋದ್ದಾರವನ್ನು ಪಡೆಯುವಿರಿ. ಇಲ್ಲವಾದರೆ ನಿಮ್ಮ ವಿಶ್ವಾಸ ನಿರರ್ಥಕವಾದೀತು. ನಾನು ಪಡೆದುಕೊಂಡದ್ದನ್ನು ಮುಖ್ಯವಾದುದು ಎಂದೆಣಿಸಿ ನಿಮಗೆ ಒಪ್ಪಿಸಿದ್ದೇನೆ. ಅದು ಯಾವುದೆಂದರೆ, ಪವಿತ್ರಗ್ರಂಥದಲ್ಲಿ ಹೇಳಿರುವ ಪ್ರಕಾರ ಕ್ರಿಸ್ತ ಯೇಸು ನಮ್ಮ ಪಾಪಗಳ ಪರಿಹಾರಕ್ಕಾಗಿ ಪ್ರಾಣತ್ಯಾಗ ಮಾಡಿದರು. ಅವರನ್ನು ಭೂಸ್ಥಾಪನೆ ಮಾಡಲಾಯಿತು. ಅದೇ  ಗ್ರಂಥದ ಪ್ರಕಾರ ಮೂರನೆಯ ದಿನ ಅವರು ಪುನರುತ್ದಾನ ಹೊಂದಿದರು. ಆನಂತರಕೇಫನಿಗೂ ಹನ್ನೆರಡು ಮಂದಿಗೂ ಕಾಣಿಸಿಕೊಂಡರು. ತರುವಾಯ ಒಂದೇ ಸಮಯದಲ್ಲಿ ಐನೂರಕ್ಕೂ ಹೆಚ್ಚಿನ ಮಂದಿ ಸಹೋದರರಿಗೆ ಪ್ರತ್ಯಕ್ಷರಾದರು. ಅವರಲ್ಲಿ ಕೆಲವರು ಸತ್ತುಹೋಗಿದ್ದರೂ ಬಹು ಮಂದಿ ಇಂದಿಗೂ ಬದುಕಿದ್ದಾರೆ. ಅದಾದ ಮೇಲೆ ಯಕೋಬನಿಗೂ ಆನಂತರ ಪ್ರೇಷಿತರೆಲ್ಲರಿಗೂ ಕಾಣಿಸಿಕೊಂಡರು. ಕಟ್ಟಕಡೆಗೆ ದಿನ ತುಂಬುವ ಮೊದಲು ಹುಟ್ಟಿದವನಂತಿರುವ ನನಗೂ ಕಾಣಿಸಿಕೊಂಡರು. ನಾನಾದರೋ ಪ್ರೇಷಿತರಲ್ಲಿ ಕನಿಷ್ಠನು, ಪ್ರೇಷಿತನೆಂಬ ಹೆಸರಿಗೂ ಅಪಾತ್ರನು. ಏಕೆಂದರೆ, ನಾನು ದೇವರ ಸಭೆಯನ್ನು ಹಿಂಸಿಸಿದೆನು. ನಾನು ಈಗ ಈ ಸ್ಥಿತಿಯಲ್ಲಿ ಇರುವುದು ದೇವರ ಅನಗ್ರಹದಿಃದಲೇ. ಅವರ ಅನುಗ್ರಹ ನನ್ನಲ್ಲಿ ವ್ಯರ್ಥವಾಗಲಿಲ್ಲ. ನಾನು ಅವರೆಲ್ಲರಿಗಿಂತಲೂ ಹೆಚ್ಚು ಶ್ರಮಪಟ್ಟು ಸೇವೆಮಾಡಿದ್ದೇನೆ. ಅದನ್ನು ಮಾಡಿದವನು ನಾನಲ್ಲ, ನನ್ನಲ್ಲಿರುವ ದೇವರ ಅನುಗ್ರಹವೇ, ನಾನಾದರೇನು, ಅವರಾದರೇನು? ನಾವು ಸಾರುವ ಸಂದೇಶ ಒಂದೇ ಅದನ್ನು ನೀವು ನಂಬಿದ್ದೀರಿ.

ಕೀರ್ತನೆ: 118:1b-2, 16ab-17, 28
ಶ್ಲೋಕ: ಸಲ್ಲಿಸಿ ಪ್ರಭುವಿಗೆ ಧನ್ಯವಾದ, ಆತ ಒಳ್ಳೆಯವ

ಶುಭಸಂದೇಶ: ಲೂಕ 7:36-50

ಒಬ್ಬ ಫರಿಸಾಯನು ಯೇಸುಸ್ವಾಮಿಯನ್ನು ಊಟಕ್ಕೆ ಆಹ್ವಾನಿಸಿದನು. ಯೇಸು ಅವನ ಮನೆಗೆ ಹೋಗಿ ಊಟಕ್ಕೆ ಕುಳಿತರು. ಅದೇ ಊರಿನಲ್ಲಿ ಪತಿತೆಯೊಬ್ಬಳು ಇದ್ದಳು. ಆಕೆ, ಫರಿಸಾಯನ ಮನೆಯಲ್ಲಿ ಯೇಸು ಊಟಕ್ಕೆ ಕುಳಿತಿದ್ದಾರೆಂದು ಕೇಳಿ ಬಂದು ಅಮೃತಶಿಲೆಯ ಭರಣಿ ತುಂಬ ಸುಗಂಧ ತೈಲವನ್ನು ತೆಗೆದುಕೊಂಡು ಅಲ್ಲಿಗೆ ಬಂದಳು. ಅವಳು ಯೇಸುವಿನ ಹಿಂಬದಿಯಲ್ಲಿ ಅಳುತ್ತಾ ನಿಂತು, ತನ್ನ ಕಂಬನಿಯಿಂದ ಅವರ ಪಾದಗಳನ್ನು ತೊಳೆದು ತಲೆಗೂದಲಿನಿಂದ ಒರಸಿ, ಆ ಪಾದಗಳಿಗೆ ಮುತ್ತಿಟ್ಟು, ಸುಗಂಧ ತೈಲವನ್ನು ಹಚ್ಚಿದಳು. ಯೇಸುವನ್ನು ಆಹ್ವಾನಿಸಿದ ಫರಿಸಾಯನು ಇದನ್ನು ನೋಡಿ, 'ಇವನು ನಿಜವಾಗಿಯೂ ಪ್ರವಾದಿಯಾಗಿದ್ದರೆ ತನ್ನನ್ನು ಮುಟ್ಟುತ್ತಿರುವ ಇವಳು ಯಾರು, ಎಂಥಾ ಪತಿತಳು, ಎಂದು ತಿಳಿದುಕೊಳ್ಳುತ್ತಿದ್ದನು' ಎಂದು ತನ್ನೊಳಗೇ ಅಂದುಕೊಂಡನು. ಅದಕ್ಕೆ ಯೇಸು, "ಸಿಮೋನ್, ನಾನು ನಿನಗೆ ಹೇಳಬೇಕಾದ ವಿಷಯ ಒಂದಿದೆ," ಎಂದರು. ಸಿಮೋನನು, "ಅದೇನು ಹೇಳಿ ಗುರುವೇ", ಎಂದನು. ಆಗ ಯೇಸು, "ಒಬ್ಬ ಸಾಲಿಗನಿಗೆ ಇಬ್ಬರು ಸಾಲಗಾರರಿದ್ದರು. ಒಬ್ಬನು ಐನೂರು, ಇನ್ನೊಬ್ಬನು ಐವತ್ತು ಬೆಳ್ಳಿ ನಾಣ್ಯಗಳನ್ನು ಅವನಿಗೆಸಾಲ ಕೊಡಬೇಕಾಗಿತ್ತು. ಆ ಇಬ್ಬರಿಗೂ ಸಾಲ ತೀರಿಸಲು ಸಾಧ್ಯವಾಗಲಿಲ್ಲ. ಸಾಲಿಗನು ಇಬ್ಬರ ಸಾಲವನ್ನು ಮನ್ನ ಮಾಡಿದನು. ಈಗ ಹೇಳು, ಈ ಇಬ್ಬರಲ್ಲಿ "ಯಾರಿಗೆ ಆ ಸಾಲಿಗನ ಮೇಲೆ ಹೆಚ್ಚು ಪ್ರೀತಿ?" ಎಂದು ಕೇಳಿದರು. ಅದಕ್ಕೆ ಸಿಮೋನನು, "ಯಾರು ಹೆಚ್ಚು ಸಾಲದಿಂದ ಬಿಡುಗಡೆ ಹೊಂದಿದ್ದಾನೋ ಅವನೇ ಎಂದು ತೋರುತ್ತದೆ," ಎಂದನು.  "ಸರಿಯಾಗಿ ಹೇಳಿದೆ," ಎಃದರು ಯೇಸು.ಆನಂತರ ಆ ಮಹಿಳೆಯ ಕಡೆ ತಿರುಗಿ ಸಿಮೋನನಿಗೆ, "ಈಕೆಯನ್ನು ನೋಡಿದೆಯಾ? ನಾನು ನಿನ್ನ ಮನೆಗೆ ಬಂದಾಗ ನೀನು ನನ್ನ ಕಾಲಿಗೆ ನೀರು ಕೊಡಲಿಲ್ಲ; ಈಕೆಯಾದರೋ ನನ್ನ ಪಾದಗಳನ್ನು ತನ್ನ ಕಣೀರಿನಿಂದ ತೊಳೆದು ತಲೆಕೂದಲಿನಿಂದ ಒರೆಸಿರುವಳು. ನೀನು ನನಗೆ ಮುತ್ತಿಟ್ಟು ಸ್ವಾಗತಿಸಲಿಲ್ಲ; ಆದರೆ ಆಕೆ ಒಳಗೆ ಬಂದಾಗಿನಿಂದ ನನ್ನ ಪಾದಗಳಿಗೆ  ಮುತ್ತಿಡುವುದನ್ನು ನಿಲ್ಲಿಸಿಲ್ಲ; ನನ್ನ ತಲೆಗೆ ನೀನು ಎಣ್ಣೆ ಹಚ್ಚಲಿಲ್ಲ; ಈಕೆಯೋ ನನ್ನ ಪಾದಗಳಿಗೆ ಸುಗಂಧ ತೈಲವನ್ನು ಹಚ್ಚಿರುವಳು. ಆದ್ದರಿಂದ ನಾನು ನಿನಗೆ ಹೇಳುವುದೇನೆಂದರೆ, ಈಕೆ ಮಾಡಿದ ಪಾಪಗಳು ಅಪಾರವಾದರೂ ಅವನ್ನು ಕ್ಷಮಿಸಲಾಗಿದೆ;  ಇದಕ್ಕೆ ಈಕೆ ತೋರಿಸಿರುವ ಅಧಿಕವಾದ ಪ್ರೀತಿಯೇ ಸಾಕ್ಷಿ. ಕಡಿಮೆ ಕ್ಷಮೆ ಪಡೆದವನು ಕಡಿಮೆ ಪ್ರೀತಿ ತೋರಿಸುತ್ತಾನೆ," ಎಂದರು. ಆನಂತರ ಯೇಸು ಆ ಮಹಿಳೆಗೆ : ನಿನ್ನ ಪಾಪಗಳನ್ನು ಕ್ಷಮಿಸಲಾಗಿದೆ," ಎಂದರು. ಜೊತೆಯಲ್ಲಿ ಊಟಕ್ಕೆ ಕುಳಿತಿದ್ದವರು ಇದನ್ನು ಕೇಳಿ, "ಪಾಪಗಳನ್ನು ಕೂಡ ಕ್ಷಮಿಸುವ ಈತ ಯಾರು?" ಎಂದು ತಮ್ಮತಮ್ಮಲ್ಲೇ ಹೇಳಿಕೊಂಡರು. ಯೇಸು ಆಕೆಗೆ, "ನಿನ್ನ ವಿಶ್ವಾಸ ನಿನ್ನನ್ನು ಉದ್ಧಾರ ಮಾಡಿದೆ; ಸಮಾಧಾನದಿಂದ ಹೋಗು," ಎಂದರು.


19.09.2018

ಸಾಧಾರಣ ಕಾಲದ 24ನೇ ವಾರ   

ಮೊದಲನೇ ವಾಚನ: 1 ಕೊರಿಂಥಿಯರಿಗೆ  12:31-13:13

ಶ್ರೇಷ್ಠವಾದ ವರಗಳನ್ನು ನೀವು ಶ್ರದ್ಧಾಪೂರ್ವಕವಾಗಿ ಅಪೇಕ್ಷಿಸಿರಿ. ನಾನು ನಿಮಗೆ ಇನ್ನೂ ಸರ್ವೋತ್ತಮವಾದ ಮಾರ್ಗವನ್ನು ತೋರಿಸುತ್ತೇನೆ: ಸುರನರರ ನುಡಿಗಳ ನಾನಾಡಬಲ್ಲೆನಾದರೂ ಪರಮ ಪ್ರೀತಿಯೊಂದೆನಗಿಲ್ಲದಿರಲು ನಾ ಕೇವಲ ಗಣಗಣಿಸುವ ಘಂಟೆ, ಝುಣಝುಣಿಸುವ ಜಾಗಟೆ. ಪ್ರವಾದನೆಯ ವರವೆನಗಿರಬಹುದು, ಇರಬಹುದು ನಿಗೂಢ ರಹಸ್ಯಗಳರಿವು ಎಲ್ಲದರ ಪರಿಜ್ಞಾನ, ಪರ್ವತವನೇ ಕದಲಿಪ ವಿಶ್ವಾಸ, ಪ್ರೀತಿಯೊಂದಿಲ್ಲದಿರೆ ನಾ ಶೂನ್ಯ ಸಮಾನ. ನನಗಿರುವುದೆಲ್ಲವನು ನಾ ದಾನಮಾಡೆ ದೇಹವನ್ನೇ ಸಜೀವ ದಹಿಸಲು ನೀಡೆ. ನಾನಾಗಿರೆ ಪರಮ ಪ್ರೀತಿ ವಿಹೀನ, ಏನದು ಜೀವನ, ನನಗೇನದು ಪ್ರಯೋಜನ? ಸಹನೆ ಸೈರಣೆ, ದಯೆದಾಕ್ಷಿಣ್ಯ ಪ್ರೀತಿಯಲ್ಲಿವೆ. ಎಡೆಯಿಲ್ಲ ಅದರಲಿ ಗರ್ವಕ್ಕೆ, ಮರ್ಮಕ್ಕೆ, ಮೆರೆತಕ್ಕೆ, ಮತ್ಸರಕ್ಕೆ, ಸಿಡುಕಿಗೆ, ಸೊಕ್ಕಿಗೆ, ಸ್ವಾರ್ಥಕ್ಕೆ, ಸೇಡುಗಳೆಣಿಕೆಗೆ. ನಲಿಯದು ಪ್ರೀತಿ ಅನೀತಿಯಲಿ ನಲಿಯದಿರದದು ಸತ್ಯದ ಜಯದಲಿ, ನಂಬುವುದೆಲ್ಲವನು, ನಿರೀಕ್ಷಿಸುವುದೆಲ್ಲವನು, ಸಹಿಸಿಕೊಳ್ಳುವುದು ಸಮಸ್ತವನು ಪ್ರೀತಿಯದೆಂದೂ ಅರಿಯದು ಸೋಲನು. ಅಳಿದುಹೋಗುವುವು ಭವಿಷ್ಯವಾಣಿ ಗತಿಸಿಹೋಗುವುದು ಬಹುಭಾಷಾ ಶಕ್ತಿ ಹೋಗುವುವು ನಶಿಸಿ ಜ್ಞಾನ, ಬುದ್ಧಿ, ಆದರೆ ಅಮರವಾದುದು ಪರಮ ಪ್ರೀತಿ. ಅಪೂರ್ವವಾದುದು ನಮ್ಮಾ ಅರಿವೆಲ್ಲ ಪೂರ್ಣವಾದುದಲ್ಲ ಪ್ರವಾದನವದೆಲ್ಲ. ಪರಿಪೂರ್ಣತೆ ಪ್ರಾಪ್ತವಾಗಲು ಇಲ್ಲವಾಗುವುದು ಅಪೂರ್ಣತೆಯೆಲ್ಲ. ಬಾಲಕ ನಾನಾಗಿರೆ ಆಡಿದೆ, ಮಾತಾಡಿದೆ, ಚಿಂತಿಸಿದೆ, ಸುಖದುಃಖಗಳ ಸವಿದೆ ಬಾಲಕನಂತೆ. ಬಲಿತು ಬೆಳೆದು ಮನುಜನಾದುದೆ ಬಾಲಿಶವಾದುದೆಲ್ಲವನ್ನು ಬದಿಗೊತ್ತಿದೆ. ನಾವೀಗ ಕಾಂಬುದು ದರ್ಪಣದ ಬಿಂಬವನು ಮುಸುಕಾಗಿ ತರುವಾಯ ಕಾಂಬೆವು ದೇವರನು ಮುಖಾಮುಖಿಯಾಗಿ. ಈಗಿರುವುದೆನ್ನ ಅರಿವು ತುಂಡುತುಂಡಾಗಿ ನಂತರ ದೇವರನ್ನೆ ಅರಿತಂತೆ ಈ ಮೂರಲಿ ನಾನರಿವೆನು ಅಖಂಡವಾಗಿ ನಿಲ್ಲುವುವು ನಂಬಿಕೆ, ನಿರೀಕ್ಷೆ, ಪ್ರೀತಿ ನೆಲೆಯಾಗಿ; ಈ ಮೂರರಲಿ ಪ್ರೀತಿಯೇ ಪರಮೋನ್ನತ ಎಂಬುದ ನೀನರಿ.

ಕೀರ್ತನೆ: 33:2-3, 4-5, 12, 22
ಶ್ಲೋಕ: ಸ್ವಜನರಾಗಿ ಪ್ರಭು ಆಯ್ದುಕೊಂಡ ಜನತೆ ಧನ್ಯ.

ಶುಭಸಂದೇಶ: ಲೂಕ  7:31-35

ಯೇಸುಸ್ವಾಮಿ ತಮ್ಮ ಬೋಧನೆಯನ್ನು ಮುಂದುವರಿಸುತ್ತಾ, "ಈ ಕಾಲದ ಜನರನ್ನು ಯಾರಿಗೆ ಹೋಲಿಸಲಿ? ಇವರು ಯಾರನ್ನು ಹೋಲುತ್ತಾರೆ? ಪೇಟೆಬೀದಿಗಳಲ್ಲಿ ಕುಳಿತು, 'ನಾವು ಕೊಳಲನೂದಲು ನೀವು ಕುಣಿದಾಡಲಿಲ್ಲ; ನಾವು ಶೋಕಗೀತೆಗಳ ಹಾಡಲು ನೀವು ಕಣ್ಣೀರಿಡಲಿಲ್ಲ' ಎಂದು ಒಬ್ಬರಿಗೊಬ್ಬರು ಕೂಗಾಡುವ ಮಕ್ಕಳನ್ನು ಹೋಲುತ್ತಾರೆ. ಸ್ನಾನಿಕ ಯೊವಾನ್ನನು ಬಂದಾಗ  ಅನ್ನ ಅಹಾರವನ್ನು ಸೇವಿಸಲಿಲ್ಲ, ದ್ರಾಕ್ಷಾರಸವನ್ನು ಮುಟ್ಟಲಿಲ್ಲ; ನೀವು "ಅವನಿಗೆ ದೆವ್ವ ಹಿಡಿದಿದೆ," ಎಂದು ಹೇಳಿದಿರಿ; ನರಪುತ್ರನು ಬಂದಾಗ ಅನ್ನ ಪಾನೀಯಗಳನ್ನು ಸೇವಿಸಿದನು; ನೀವು, 'ಇವನೊಬ್ಬ ಹೊಟ್ಟೆಬಾಕ, ಕುಡುಕ, ಸುಂಕದವರ ಹಾಗೂ ಪಾಪಿಷ್ಠರ ಗೆಳೆಯ, ಎನ್ನುತ್ತೀರಿ. ಆದರೆ ದೈವಜ್ಞಾನವೇ ನಿಜವಾದ ಜ್ಞಾನವೆಂದು ಅದನ್ನು ಅಂಗೀಕರಿಸುವ ಎಲ್ಲರೂ ಸಮರ್ಥಿಸುತ್ತಾರೆ," ಎಂದರು.

18.09.2018

ಮೊದಲನೇ ವಾಚನ: 1 ಕೊರಿಂಥಿಯರಿಗೆ  12:12-14, 27-31

ದೇಹ ಒಂದೇ; ಅಂಗಗಳು ಹಲವು . ಆ ಅಂಗಗಳು ಅನೇಕವಿದ್ದರೂ ಅವು ಸೇರಿ ಒಂದೇ ದೇಹವಾಗುತ್ತದೆ. ಅಂತೆಯೇ ಕ್ರಿಸ್ತಯೇಸು. ಯೆಹೂದ್ಯರಾಗಿರಲಿ, ಗ್ರೀಕರಾಗಿರಲಿ, ಪರತಂತ್ರರಾಗಿರಲಿ, ಸ್ವತಂತ್ರರಾಗಿರಲಿ - ನಾವೆಲ್ಲರೂ ಒಂದೇ ದೇಹವಾಗುವಂತೆ ಒಂದೇ ಆತ್ಮದಿಂದ ದೀಕ್ಷಸ್ನಾನ ಹೊಂದಿದ್ದೇವೆ. ಒಂದೇ ಆತ್ಮವನ್ನು ನಮ್ಮೆಲ್ಲರಿಗೂ ಪಾನವಾಗಿ ಕೊಡಲಾಗಿದೆ. ದೇಹವು ಏಕ ಅಂಗದಿಂದ ಅಲ್ಲ, ಅನೇಕ ಅಂಗಗಳಿಂದ ಕೂಡಿದೆ. ನೀವೆಲ್ಲರೂ ಕ್ರಿಸ್ತಯೇಸುವಿನ ದೇಹ ಆಗಿದ್ದೀರಿ; ಪ್ರತಿಯೊಬ್ಬನೂ ಈ ದೇಹದ ಅಂಗವಾಗಿದ್ದಾನೆ. ದೇವರು ತಮ್ಮ ಸಭೆಯಲ್ಲಿ, ಮೊದಲನೆಯದಾಗಿ ಪ್ರೇಷಿತರನ್ನು, ಎರಡನೆಯದಾಗಿ ಪ್ರವಾದಿಗಳನ್ನು, ಮೂರನೆಯದಾಗಿ ಬೋಧಕರನ್ನು ನೇಮಿಸಿದ್ದಾರೆ. ಅನಂತರ ಪವಾಡಗಳನ್ನು, ಎಸಗುವವರನ್ನು ರೋಗಗಳನ್ನು ಗುಣಪಡಿಸುವವರನ್ನು. ಪರೋಪಕಾರಿಗಳನ್ನು, ಪರಿಪಾಲಕರನ್ನು, ಬಹುಭಾಷಾ ಪಂಡಿತರನ್ನು ನೇಮಿಸಿದ್ದಾರೆ. ಎಲ್ಲರೂ ಪ್ರೇಷಿತರಲ್ಲ, ಎಲ್ಲರೂ ಪ್ರವಾದಿಗಳಲ್ಲ, ಎಲ್ಲರೂ ಭೋಧಕರಲ್ಲ,  ಎಲ್ಲರೂ ಪವಾಡಪುರುಷರಲ್ಲ, ಎಲ್ಲರೂ ರೋಗಗಳನ್ನು ಗುಣಪಡಿಸುವವರಲ್ಲ, ಎಲ್ಲರೂ ಪರೋಪಕಾರಿಗಳಲ್ಲ, ಎಲ್ಲರೂ ಪರಿಪಾಲಕರಲ್ಲ, ಎಲ್ಲರೂ ಬಹುಭಾಷಾಪಂಡಿತರಲ್ಲ, ಅಥವಾ ಎಲ್ಲರೂ ಆ ಭಾಷೆಗಳನ್ನು ವಿವರಿಸಿ ಹೇಳುವವರಲ್ಲ, ಶ್ರೇಷ್ಠವಾದ ವರಗಳನ್ನು ನೀವು ಶ್ರದ್ಧಾಪೂರ್ವಕವಾಗಿ ಅಪೇಕ್ಷಿಸಿರಿ. ನಾನು ನಿಮಗೆ ಇನ್ನೂ ಸರ್ವೋತ್ತಮವಾದ ಮಾರ್ಗವನ್ನು ತೋರಿಸುತ್ತೇನೆ.

ಕೀರ್ತನೆ: 100:1-2, 3, 4, 5
ಶ್ಲೋಕ: ಪ್ರಭುವಿನ ಜನ, ಆತನೇ ಮೇಯಿಸುವ ಕುರಿಗಳು ನಾವು.

ಶುಭಸಂದೇಶ: ಲೂಕ 7:11-17

ಇದಾದನಂತರ ಯೇಸುಸ್ವಾಮಿ ನಾಯಿನ್ ಎಂಬ ಊರಿಗೆ ಹೊರಟರು. ಅವರೊಂದಿಗೆ ಶಿಷ್ಯರೂ ಅನೇಕ ಜನರೂ ಹೊರಟರು. ಊರಬಾಗಿಲನ್ನು ಸಮೀಪಿಸಿದಾಗ, ಒಂದು ಶವಯಾತ್ರೆಯನ್ನು ಅವರು ಎದುರುಗೊಂಡರು. ಆ ಸತ್ತವನು ತನ್ನ ತಾಯಿಗೆ ಒಬ್ಬನೇ ಮಗ. ಆಕೆಯೋ ವಿಧವೆ. ಜನರ ದೊಡ್ಡ ಗುಂಪೊಂದು ಆಕೆಯೊಡನೆ ಬರುತ್ತಿತ್ತು. ಪ್ರಭು ಯೇಸು ಆಕೆಯನ್ನು ಕಂಡದ್ದೇ ಕನಿಕರಗೊಂಡು , "ಅಳಬೇಡ" ಎಂದು ಹೇಳಿ, ಚಟ್ಟದ ಹತ್ತಿರಕ್ಕೆ ಬಂದು, ಅದನ್ನು ಮುಟ್ಟಿದರು. ಹೊತ್ತುಕೊಂಡು ಹೋಗುತ್ತಿದ್ದವರು ಹಾಗೆಯೇ ನಿಂತರು. ಆಗ ಯೇಸು, "ಯುವಕನೇ ನಾನು ನಿನಗೆ ಹೇಳುತ್ತೇನೆ, ಎದ್ದೇಳು," ಎಂದರು. ಸತ್ತವನು ಎದ್ದು ಕುಳಿತು ಮಾತನಾಡಲಾರಂಭಿಸಿದನು. ಯೇಸು ಆ ಮಗನನ್ನು ತಾಯಿಗೆ ಒಪ್ಪಿಸಿದರು. ಎಲ್ಲರೂ ಭಯಭ್ರಾಂತರಾದರು. "ಮಹಾಪ್ರವಾದಿಯೊಬ್ಬನು ನಮ್ಮಲ್ಲೇ ಉದಯಿಸಿದ್ದಾನೆ; ದೇವರು ತಮ್ಮ ಜನರನ್ನು ರಕ್ಷಿಸಲು ಬಂದಿದ್ದಾರೆ," ಎಂದು ದೇವರನ್ನು ಕೊಂಡಾಡಿದರು. ಯೇಸುವಿನ ಈ ಸಮಾಚಾರ ಜುದೇಯ ನಾಡಿನಲ್ಲೆಲ್ಲಾ ಹಾಗೂ ಸುತ್ತಮುತ್ತಲಿನ ಪ್ರಾಂತ್ಯದಲ್ಲೆಲ್ಲಾ ಹರಡಿತು.