ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

26.08.22 - "ಆದ್ದರಿಂದ ಜಾಗೃತರಾಗಿರಿ! ಏಕೆಂದರೆ ಆ ದಿನವಾಗಲಿ, ಆ ಗಳಿಗೆ ಆಗಲಿ ಯಾವಾಗ ಬರುತ್ತದೆಂದು ನಿಮಗೆ ತಿಳಿಯದು."

ಮೊದಲನೇ ವಾಚನ: 1 ಕೊರಿಂಥಿಯರಿಗೆ 1:17-25

ಯೇಸುಕ್ರಿಸ್ತರು ನನ್ನನ್ನು ಕಳುಹಿಸಿರುವುದು ದೀಕ್ಷಾಸ್ನಾನವನ್ನು ಕೊಡುವುದಕ್ಕಲ್ಲ. ಶುಭಸಂದೇಶವನ್ನು ಸಾರುವುದಕ್ಕೆ ಅದೂ ವಾಕ್ಚಾತುರ್ಯದಿಂದಲ್ಲ. ಹಾಗೆ ಸಾರಿದ್ದೇ ಆದರೆ, ಕ್ರಿಸ್ತಯೇಸುವಿನ ಶಿಲುಬೆಯೇ ನಿರರ್ಥಕವಾದೀತು. ವಿನಾಶಮಾರ್ಗದಲ್ಲಿರುವವರಿಗೆ ಶಿಲುಬೆಯ ಸಂದೇಶ ಹುಚ್ಚು ಸಂಗತಿಯಾಗಿದೆ. ಮುಕ್ತಿಮಾರ್ಗದಲ್ಲಿರುವ ನಮಗಾದರೋ ಅದು ದೈವಶಕ್ತಿಯಾಗಿದೆ. “ಜ್ಞಾನಿಗಳ ಜ್ಞಾನವನ್ನು ನಾಶಮಾಡುವೆನು ಜಾಣರ ಜಾಣತನಕ್ಕೆ ಭಂಗತರುವೆನು” ಎಂದು ಪವಿತ್ರಗ್ರಂಥದಲ್ಲಿ ಇದೆಯಲ್ಲವೇ? ಹೀಗಿರುವಾಗ ಜ್ಞಾನಿಯೆಲ್ಲಿ? ಶಾಸ್ತ್ರಜ್ಞನೆಲ್ಲಿ? ಜಗತ್ತಿನ ತರ್ಕನಿಪುಣನೆಲ್ಲಿ? ಪ್ರಪಂಚದ ಜ್ಞಾನವನ್ನು ದೇವರು ಹುಚ್ಚುತನವಾಗಿಸಿಲ್ಲವೇ? ಲೋಕವು ತನ್ನ ಸ್ವಂತ ಜ್ಞಾನದಿಂದ ದೇವರನ್ನು ಅರಿಯಲಾರದೆ ಹೋಯಿತು. ಇದು ದೈವಸಂಕಲ್ಪವೇ ಸರಿ. ಆದ್ದರಿಂದಲೇ ನಾವು ಸಾರುವ ‘ಹುಚ್ಚುತನ’ವೆಂಬ ಸಂದೇಶದ ಮೂಲಕ ವಿಶ್ವಾಸವುಳ್ಳವರನ್ನು ಉದ್ಧರಿಸುವುದು ದೇವರಿಗೆ ಉಚಿತವೆನಿಸಿತು ಯೆಹೂದ್ಯರು ಸೂಚಕಕಾರ್ಯಗಳನ್ನು ಕೇಳುತ್ತಾರೆ. ಗ್ರೀಕರು ಜ್ಞಾನವನ್ನು ಅರಸುತ್ತಾರೆ.  ನಾವಾದರೋ ಶಿಲುಬೆಗೇರಿಸಲಾದ ಕ್ರಿಸ್ತಯೇಸುವನ್ನು ಪ್ರಚುರಪಡಿಸುತ್ತೇವೆ. ಯೆಹೂದ್ಯರಿಗೆ ಇದು ಅಸಹ್ಯವಾಗಿದೆ; ಅನ್ಯಜನರಿಗೆ ಹಾಸ್ಯಾಸ್ಪದವಾಗಿದೆ.  ಆದರೆ ಯೆಹೂದ್ಯರಾಗಿರಲಿ, ಗ್ರೀಕರಾಗಿರಲಿ, ದೇವರಿಂದ ಕರೆಹೊಂದಿದ್ದರೆ ಅಂಥವರಿಗೆ ಯೇಸುಕ್ರಿಸ್ತರು ದೇವರ ಶಕ್ತಿಯಾಗಿದ್ದಾರೆ ಹಾಗೂ ದೇವರ ಜ್ಞಾನವಾಗಿದ್ದಾರೆ.  ‘ದೇವರ ಹುಚ್ಚುತನ’ ಎಂಬುದು ಮಾನವ ಜ್ಞಾನಕ್ಕಿಂತಲೂ ಶ್ರೇಷ್ಠವಾದುದು. ‘ದೇವರ ದೌರ್ಬಲ್ಯ’ ಎಂಬುದು ಮಾನವ ಶಕ್ತಿಗಿಂತಲೂ ಪ್ರಬಲವಾದುದು.

ಕೀರ್ತನೆ: 33:1-2, 4-5, 10, 11

ಶ್ಲೋಕ: ಅಚಲ ಪ್ರೀತಿಯಿಂದ ಪ್ರಭು ಜಗವನು ತುಂಬಿಹನು

ಶುಭಸಂದೇಶ: ಮತ್ತಾಯ 25:1-13


ಯೇಸು ತಮ್ಮ ಶಿಷ್ಯರಿಗೆ ಹೀಗೆಂದರು: “ಆ ದಿನಗಳಲ್ಲಿ ಸ್ವರ್ಗಸಾಮ್ರಾಜ್ಯ ಹೇಗಿರುವುದು ಎನ್ನುವುದಕ್ಕೆ ಈ ಸಾಮತಿಯನ್ನು ಕೊಡಬಹುದು: ಹತ್ತುಮಂದಿ ಕನ್ಯೆಯರು ದೀಪಾರತಿ ಹಿಡಿದು ಮದುವಣಿಗನನ್ನು ಎದುರುಗೊಳ್ಳಲು ಹೋದರು. ಅವರಲ್ಲಿ ಐವರು ವಿವೇಕಿಗಳು, ಐವರು ಅವಿವೇಕಿಗಳು. ಅವಿವೇಕಿಗಳು ದೀಪಗಳನ್ನು ತೆಗೆದುಕೊಂಡರೇ ಹೊರತು ಜೊತೆಗೆ ಎಣ್ಣೆಯನ್ನು ತೆಗೆದುಕೊಳ್ಳಲಿಲ್ಲ. ವಿವೇಕಿಗಳಾದರೋ ದೀಪಗಳ ಜೊತೆಗೆ ಬುಡ್ಡಿಗಳಲ್ಲಿ ಎಣ್ಣೆಯನ್ನೂ ತೆಗೆದುಕೊಂಡರು. ಮದುವಣಿಗ ಬರುವುದು ತಡವಾಯಿತು. ಅವರೆಲ್ಲರೂ ತೂಕಡಿಸುತ್ತಾ ಹಾಗೇ ನಿದ್ರೆಹೋದರು. “ನಡುರಾತ್ರಿಯ ವೇಳೆ. ‘ಇಗೋ, ಮದುವಣಿಗ ಬರುತ್ತಿದ್ದಾನೆ; ಬನ್ನಿ, ಆತನನ್ನು ಎದುರುಗೊಳ್ಳಿ,’ ಎಂಬ ಕೂಗು ಕೇಳಿಸಿತು. ಕನ್ಯೆಯರೆಲ್ಲರೂ ಎದ್ದರು. ತಮ್ಮತಮ್ಮ ದೀಪದ ಬತ್ತಿಯನ್ನು ಸರಿಮಾಡಿದರು. ಅವಿವೇಕಿಗಳು, ‘ನಮ್ಮ ದೀಪಗಳು ಆರಿಹೋಗುತ್ತಾ ಇವೆ; ನಿಮ್ಮ ಎಣ್ಣೆಯಲ್ಲಿ ನಮಗೂ ಕೊಂಚ ಕೊಡಿ,’ ಎಂದು ವಿವೇಕಿಗಳನ್ನು ಕೇಳಿಕೊಂಡರು. ಅದಕ್ಕೆ ಅವರು, ‘ನಿಮಗೆ ಕೊಟ್ಟರೆ ನಮಗೂ ನಿಮಗೂ ಸಾಲದೆಹೋದೀತು, ನೀವು ಅಂಗಡಿಗೆ ಹೋಗಿ ಕೊಂಡುಕೊಂಡರೆ ಒಳ್ಳೆಯದು,’ ಎಂದರು.  ಅಂತೆಯೇ ಅವರು ಎಣ್ಣೆಯನ್ನು ಕೊಂಡುಕೊಳ್ಳಲು ಹೋದಾಗ ಮದುವಣಿಗನು ಬಂದೇಬಿಟ್ಟನು. ಸಿದ್ಧರಾಗಿದ್ದವರು ಅವನ ಸಂಗಡ ವಿವಾಹ ಮಹೋತ್ಸವಕ್ಕೆ ಹೋದರು. ಕಲ್ಯಾಣಮಂಟಪದ ಬಾಗಿಲುಗಳನ್ನು ಮುಚ್ಚಲಾಯಿತು.  ಉಳಿದ ಕನ್ಯೆಯರು ಅನಂತರ ಬಂದರು. ‘ಸ್ವಾಮೀ, ಸ್ವಾಮೀ, ನಮಗೆ ಬಾಗಿಲು ತೆರೆಯಿರಿ,’ ಎಂದು ಕೂಗಿಕೊಂಡರು.  ಅದಕ್ಕೆ ಉತ್ತರವಾಗಿ ಆ ಮದುವಣಿಗ, ‘ಅದಾಗದು, ನೀವು ಯಾರೋ ನನಗೆ ಗೊತ್ತಿಲ್ಲ,’ ಎಂದುಬಿಟ್ಟ.  ಆದ್ದರಿಂದ ಜಾಗೃತರಾಗಿರಿ! ಏಕೆಂದರೆ ಆ ದಿನವಾಗಲಿ, ಆ ಗಳಿಗೆ ಆಗಲಿ ಯಾವಾಗ ಬರುತ್ತದೆಂದು ನಿಮಗೆ ತಿಳಿಯದು."

No comments:

Post a Comment