ಮೊದಲನೇ ವಾಚನ: 2 ಅರಸುಗಳು 17:5-8, 13-15, 18
ಅಸ್ಸೀರಿಯದ ಅರಸನು ದೇಶವನ್ನೆಲ್ಲಾ ಸ್ವಾಧೀನ ಮಾಡಿಕೊಂಡು ಸಮಾರಿಯಕ್ಕೆ ಬಂದು ಮೂರು ವರ್ಷಗಳವರೆಗೂ ಅದಕ್ಕೆ ಮುತ್ತಿಗೆ ಹಾಕಿದನು. ಅದು ಹೋಶೇಯನ ಆಳ್ವಿಕೆಯ ಒಂಬತ್ತನೆಯ ವರ್ಷದಲ್ಲಿ ಅವನ ಸ್ವಾಧೀನವಾಯಿತು. ಅವನು ಎಲ್ಲಾ ಇಸ್ರಯೇಲರನ್ನು ಅಸ್ಸೀರಿಯ ದೇಶಕ್ಕೆ ಒಯ್ದು ಹಲಹು ಎಂಬ ಪ್ರಾಂತ್ಯದಲ್ಲಿ, ಹಾಬೋರ್ ನದಿಯಿರುವ ಗೋಜಾನ್ ಪ್ರಾಂತ್ಯದಲ್ಲಿ ಹಾಗು ಮೇದ್ಯರ ಪಟ್ಟಣಗಳಲ್ಲಿ ಇರಿಸಿದನು. ಇಸ್ರಯೇಲರ ಈ ದುರ್ಗತಿಗೆ ಅವರ ದುರ್ನಡತೆಯೇ ಕಾರಣ: ಹೇಗೆಂದರೆ, ಅವರು ತಮ್ಮನ್ನು ಈಜಿಪ್ಟಿನ ಅರಸನಾದ ಫರೋಹನ ಕೈಯಿಂದ ಬಿಡಿಸಿ ಅವನ ರಾಜ್ಯದಿಂದ ಹೊರ ತಂದು ದೇವರಾದ ಸರ್ವೇಶ್ವರನಿಗೆ ವಿರುದ್ಧ ಪಾಪ ಮಾಡಿ ಅನ್ಯದೇವತೆಗಳನ್ನು ಪೂಜಿಸಿದರು. ತಮ್ಮ ನಾಡಿನಿಂದ ಸರ್ವೇಶ್ವರ ಹೊರಡಿಸಿ ಬಿಟ್ಟಿದ್ದ ಜನಾಂಗಗಳ ಮತ್ತು ಇಸ್ರಯೇಲ್ ರಾಜರ ದುರಾಚಾರಗಳನ್ನು ಅವರು ಅನುಸರಿಸಿದರು. ದರ್ಶಿನಿಗಳೆನಿಸಿಕೊಂಡ ತಮ್ಮ ಪ್ರವಾದಿಗಳ ಮುಖಾಂತರ ಸರ್ವೇಶ್ವರ ಇಸ್ರಯೇಲ ಯೆಹೂದ್ಯರಿಗೆ, "ನೀವು ನಿಮ್ಮ ದುರಾಚಾರವನ್ನು ಬಿಟ್ಟು ನಾನು ನಿಮ್ಮ ಪೂರ್ವಜರಿಗೂ ನನ್ನ ದಾಸರಾದ ಪ್ರವಾದಿಗಳ ಮುಖಾಂತರ ನಿಮಗೂ ಕೊಟ್ಟಂಥ ನನ್ನ ಎಲ್ಲಾ ಆಜ್ಞಾನಿಯಮ ವಿಧಿಗಳನ್ನು ಕೈಗೊಂಡು ನಡೆಯಿರಿ," ಎಂದು ಖಂಡಿತವಾಗಿ ಹೇಳಿದರು. ಆದರೆ ಅವರು, ದೇವರಾದ ಸರ್ವೇಶ್ವರನನ್ನು ನಂಬದೆ, ಅವರ ಆಜ್ಞೆಗಳಿಗೆ ಮಣಿಯದೆಯಿದ್ದ ತಮ್ಮ ಹಿರಿಯರಂತೆ, ಕಿವಿಗೊಡದೆ ಹೋದರು. ಸರ್ವೇಶ್ವರ ತಮ್ಮ ಪೂರ್ವಜರಿಗೆ ಕೊಟ್ಟ ವಿಧಿ ನಿಬಂಧನೆಗಳನ್ನೂ ತಮಗೆ ಹೇಳಿಸಿದ ಬುದ್ಧಿ ವಾಕ್ಯಗಳನ್ನೂ ತಿರಸ್ಕರಿಸಿ, ಮಿಥ್ಯಾ ದೇವತೆಗಳನ್ನು ಪೂಜಿಸಿ ನಿಸ್ಸಾರ್ಥಕರಾದರು. ಸುತ್ತಣ ಜನಾಂಗಗಳನ್ನು ಅನುಸರಿಸಬಾರದೆಂದು ಸರ್ವೇಶ್ವರ ಆಜ್ಞಾಪಿಸಿದರೂ ಕೇಳದೆ ಜನಾಂಗಗಳನ್ನೇ ಅನುಸರಿಸಿದರು. ಈ ಪ್ರಕಾರ ನಡೆದುದರಿಂದ ಸರ್ವೇಶ್ವರ ಅವರ ಮೇಲೆ ಕಡುಕೋಪಗೊಂಡು ಯೆಹೂದ ಕುಲದವರ ಹೊರತು, ಉಳಿದ ಎಲ್ಲಾ ಕುಲಗಳವರನ್ನು ತಮ್ಮ ಸನ್ನಿಧಿಯಿಂದ ತಳ್ಳಿಬಿಟ್ಟರು.

ಕೀರ್ತನೆ: 60:3, 4-5, 12-13
ಶ್ಲೋಕ: ಪ್ರಭೂ, ನಿನಗೆ ಪ್ರಿಯವಾದ ನಮ್ಮ ಮೊರೆಯನಾಲಿಸು.
ಶುಭಸಂದೇಶ: ಮತ್ತಾಯ 7:1-5
"ನೀವು ಇತರರ ಬಗ್ಗೆ ತೀರ್ಪುಕೊಡಬೇಡಿ; ಆಗ ದೇವರು ನಿಮ್ಮ ಬಗ್ಗೆ ತೀರ್ಪುಕೊಡುವುದಿಲ್ಲ. ನೀವು ಇತರರ ಬಗ್ಗೆ ಕೊಡುವ ತೀರ್ಪಿಗೆ ಅನುಗುಣವಾಗಿಯೇ ದೇವರು ನಿಮಗೂ ತೀರ್ಪುಕೊಡುವರು. ಇತರರಿಗೆ ನೀವು ಕೊಟ್ಟ ಅಳತೆಯಲ್ಲೇ ದೇವರು ನಿಮಗೂ ಅಳೆದು ಕೊಡುವರು. ನಿನ್ನ ಕಣ್ಣಿನಲ್ಲಿರುವ ದಿಮ್ಮಿಯನ್ನು ನೋಡದೆ ನಿನ್ನ ಸೋದರನ ಕಣ್ಣಿನಲ್ಲಿರುವ ಅಣುವನ್ನು ನೀನು ಗಮನಿಸುವುದೇಕೆ? ನಿನ್ನ ಕಣ್ಣಿನಲ್ಲಿ ಒಂದು ದಿಮ್ಮಿಯೇ ಇರುವಾಗ, "ತಾಳು, ನಿನ್ನ ಕಣ್ಣಿನಲ್ಲಿರುವ ಅಣುವನ್ನು ತೆಗೆದು ಬಿಡುತ್ತೇನೆ," ಎಂದು ನಿನ್ನ ಸೋದರನಿಗೆ ಹೇಗೆ ಹೇಳಬಲ್ಲೆ? ಎಲೈ ಕಪಟಿಯೇ, ಮೊದಲು ನಿನ್ನ ಕಣ್ಣಿನಲ್ಲಿರುವ ದಿಮ್ಮಿಯನ್ನು ತೆಗೆದುಹಾಕು. ಆನಂತರ ನಿನ್ನ ಸೋದರನ ಕಣ್ಣಿನಿಂದ ಅಣುವನ್ನು ತೆಗೆಯಲು ನಿನ್ನ ಕಣ್ಣು ನಿಚ್ಚಳವಾಗಿ ಕಾಣಿಸುವುದು.
No comments:
Post a Comment