ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

01.10.21

ಮೊದಲನೆಯ ವಾಚನ: ಯೆಶಾಯ 66:10-14

"ಜೆರುಸಲೇಮನ್ನು ಪ್ರೀತಿಸುವವರೇ, ನೀವೆಲ್ಲರೂ ಆನಂದಿಸಿರಿ ಆಕೆಯೊಂದಿಗೆ, ಹರ್ಷಗೊಳ್ಳಿರಿ ಆಕೆಯ ಬಗ್ಗೆ. ಆಕೆಯ ನಿಮಿತ್ತ ದುಃಖಿಸುವವರೇ, ' ಸಾಂತ್ವನ ನೀಡುವ ಆಕೆಯ ಸ್ತನ್ಯದಿಂದ ತೃಪ್ತಿಗೊಳ್ಳುವೆವು, ' ಹೌದು ಆಕೆಯ ಸಿರಿಸಮೃದ್ದಿಯನ್ನು ಹೀರುತ್ತಾ ಹಿಗ್ಗುವೆವು, ಎಂದು ನೀವೆಲ್ಲರು ಉಲ್ಲಾಸಪಡಿ ಆಕೆಯೊಂದಿಗೆ." ಸರ್ವೇಶ್ವರಸ್ವಾಮಿ ಹೀಗೆನ್ನುತ್ತಾರೆ: "ಇಗೋ, ಆಕೆಗೆ ಹರಿಯಮಾಡುವೆನು ಸುಖಶಾಂತಿಯನು ನದಿಯಂತೆ ನೀಡುವೆ ರಾಷ್ಟ್ರಗಳ ವೈಭವವನ್ನು ತುಂಬಿತುಳುಕುವ ತೊರೆಯಂತೆ ನೀವಿರುವಿರಿ ಹಾಲುಕುಡಿವ ಹಸುಳೆಯಂತೆ ಎತ್ತಿಕೊಳ್ಳಲಾಗುವುದು ನಿಮ್ಮನ್ನು ತಾಯ ಕಂಕುಳಲಿ ನಲಿದಾಡುವಿರಿ ನೀವು ಆಕೆಯ ಮಡಿಲಲಿ. ನಾನೇ ನಿಮ್ಮನ್ನು ಸಂತೈಸುವೆನು ತಾಯಿಯಂತೆ ಸಾಂತ್ವನ ದೊರಕುವುದು ನಿಮಗೆ ಜೆರುಸಲೇಮಿನಲೆ. ಇದನ್ನು ಕಂಡಾಗ ನಿಮ್ಮೆದೆ ಸಂತಸದಿಂದ ಉಬ್ಬುವುದು ಚಿಗುರುವುದು ಹಸಿಹುಲ್ಲಂತೆ ನಿಮ್ಮೆಲುಬು. 'ಸರ್ವೇಶ್ವರನ ಕೃಪಾಹಸ್ತ ತನ್ನ ಭಕ್ತರ ಮೇಲೆ ಆತನ ರೋಷಾವೇಶ ಶತ್ರುಗಳ ಮೇಲೆ ' ಎಂಬುವುದು ವ್ಯಕ್ತವಾಗುವುದು ನಿಮಗೆ.

ಕೀರ್ತನೆ 131:1-3
ಶ್ಲೋಕ: ಹೇ ಪ್ರಭೂ, ನನ್ನಾತ್ಮವನ್ನು ನಿಮ್ಮ ಕೃಪೆ ಶಾಂತಿಯಿಂದ ರಕ್ಷಿಸಿರಿ.

ಹಮ್ಮಿಲ್ಲ ಪ್ರಭೂ, ನನ್ನೆದೆಯೊಳು|
ನನಗಿಲ್ಲ ಸೊಕ್ಕಿನ ಕಣ್ಣುಗಳು||
ಶಕ್ತಿಮಿರಿದ ಕಾರ್ಯಕ್ಕೆ ನಾ ಕೈ ಹಾಕಿಲ್ಲ|
ಅಸಾಧ್ಯವಾದುದನು ನಾ ಕೈಗೊಂಡಿಲ್ಲ||

ಎಂದೇ ನನ್ನಾತ್ಮ ಸಮಾಧಾನದಿಂದಿದೆ|
ಮೌನದಿಂದಿದೆ ತಾಯ್ಮಡಿಲಾ ಕೂಸಂತೆ|
ನೆಮ್ಮದಿಯಿಂದಿದೆ ತಾಯ್ಮಡಿಲಾ ಶಿಶುವಂತೆ||

ಇಸ್ರಯೇಲೇ, ಪ್ರಭುವಿನಲಿ ನಂಬಿಕೆಯಿಂದಿರು|
ಇಂದಿಗೂ ಎಂದೆಂದಿಗೂ ಭರವಸೆಯಿಂದಿರು||

ಎರಡನೆಯ ವಾಚನ: ಹಿಬ್ರಿರಿಯರಿಗೆ  1:2-3

ಇತ್ತೀಚಿನ ಅಂತಿಮ ದಿನಗಳಲ್ಲಿ ಅವರು ತಮ್ಮ ಪುತ್ರನ ಮುಖೇನ ನಮ್ಮೊಡನೆ ಮಾತನಾಡಿದ್ದಾರೆ. ದೇವರು ಇಡೀ ವಿಶ್ವವನ್ನು ಉಂಟುಮಾಡಿದ್ದು ಇವರ ಮುಖಾಂತರವೇ, ಸಮಸ್ತಕ್ಕೂ ಬಾಧ್ಯನನ್ನಾಗಿ ನೇಮಿಸಿರುವುದು ಇವರನ್ನೇ. ಇವರೇ ದೇವರ ಮಹಿಮೆಯ ತೇಜಸ್ಸು, ಇವರೇ ದೈವತ್ವದ ಪಡಿಯಚ್ಚು, ತಮ್ಮ ಶಕ್ತಿಯುತ ವಾಕ್ಯದಿಂದ ಇವರೇ ಸಮಸ್ಥಕ್ಕೂ ಆಧಾರ, ನಮ್ಮ ಪಾಪಗಳನ್ನು ತೊಡೆದುಹಾಕಿ, ಸ್ವರ್ಗದಲ್ಲಿ ಮಹೋನ್ನತ ದೇವರ ಬಲಪಾರ್ಶ್ವದಲ್ಲಿ ಆಸೀನನಾಗಿರುವವರೂ ಇವರೇ.

ಶುಭಸಂದೇಶ ವಾಚನ: ಮತ್ತಾಯ 18:1-5

ಆ ಕಾಲದಲ್ಲಿ ಶಿಷ್ಯರು ಯೇಸುವಿನ ಬಳಿಗೆ ಬಂದು, " ಸ್ವರ್ಗಸಾಮ್ರಾಜ್ಯದಲ್ಲಿ ಎಲ್ಲರಿಗಿಂತಲೂ ದೊಡ್ಡವನು ಯಾರು? " ಎಂದು ಕೇಳಿದರು. ಯೇಸು ಒಂದು ಚಿಕ್ಕ ಮಗುವನ್ನು ತಮ್ಮ ಹತ್ತಿರಕ್ಕೆ ಕರೆದು, ಅದನ್ನು ಶಿಷ್ಯರ ನಡುವೆ ನಿಲ್ಲಿಸಿ ಹೀಗೆಂದರು: "ನೀವು ಪರಿವರ್ತನೆ ಹೊಂದಿ ಮಕ್ಕಳಂತೆ ಆಗದಿದ್ದರೆ ಸ್ವರ್ಗ ಸಾಮ್ರಾಜ್ಯವನ್ನು ಸೇರಲಾರಿರಿ, ಎಂದು ನಿಶ್ಚಯವಾಗಿ ಹೇಳುತ್ತೇನೆ. ಈ ಮಗುವಿನಂತೆ ನಮ್ರಭಾವವುಳ್ಳವನೇ ಸ್ವರ್ಗಸಾಮ್ರಾಜ್ಯದಲ್ಲಿ ಎಲ್ಲರಿಗಿಂತ ದೊಡ್ಡವನು. ನನ್ನ ಹೆಸರಿನಲ್ಲಿ ಇಂತಹ ಮಗುವೊಂದನ್ನು ಸ್ವೀಕರಿಸುವವನು ನನ್ನನ್ನೇ ಸ್ವೀಕರಿಸುತ್ತಾನೆ."

30.09.21

ಮೊದಲನೆಯ ವಾಚನ: ನೆಹೆಮಿಯ 8:1-12

ತಮ್ಮತಮ್ಮ ಪಟ್ಟಣಗಲಲ್ಲಿ ವಾಸಿಸುತ್ತಿದ್ದ ಇಸ್ರಯೇಲ್ ಸರ್ವಸಮೂಹದವರು ಏಳನೆಯ ತಿಂಗಳಲ್ಲಿ ನೀರುಬಾಗಿಲಿನ ಮುಂದಿನ ಬಯಲಿನಲ್ಲಿ ಒಟ್ಟಿಗೆ ಸೇರಿದರು. ಸರ್ವೇಶ್ವರ ಮೋಶೆಯ ಮುಖಾಂತರ ಇಸ್ರಯೇಲರಿಗೆ ಕೊಟ್ಟ ಧರ್ಮಶಾಸ್ತ್ರದ ಗ್ರಂಥವನ್ನು ತೆಗೆದುಕೊಂಡು ಬರಬೇಕೆಂದು ಧರ್ಮೋಪದೇಶಕನಾದ ಎಜ್ರನನ್ನು ಕೇಳಿಕೊಂಡರು. ಯಾಜಕ ಎಜ್ರನು, ಗ್ರಹಿಸಿಕೊಳ್ಳಲು ಶಕ್ತರಾದ ಸ್ತ್ರೀಪುರುಷರು ನೆರೆದಿದ್ದ ಸಮೂಹದವರ ಮುಂದೆ, ಏಳನೆಯ ತಿಂಗಳಿನ ಪ್ರಥಮ ದಿನದಲ್ಲಿ, ಆ ಧರ್ಮಶಾಸ್ತ್ರವನ್ನು ತಂದು ಬೆಳಗಿನಿಂದ ಮಧ್ಯಾಹ್ನದವರೆಗೂ ಓದಿದನು. ಆ ನೀರು ಬಾಗಿಲಿನ ಮುಂದಣ ಬಯಲಿನಲ್ಲಿ ಕೂಡಿಬಂದಿದ್ದ ಸ್ತ್ರೀಪುರುಷರಲ್ಲಿ ಗ್ರಹಿಸಲು ಶಕ್ತರಾದವರೆಲ್ಲರೂ ಧರ್ಮಶಾಸ್ತ್ರ ಪಾರಾಯಣವನ್ನು ಆಲಿಸುತ್ತಿದ್ದರು. ಧರ್ಮೋಪದೇಶಕ ಎಜ್ರನು ಪಾರಾಯಣಕ್ಕಾಗಿ ಮಾಡಲಾಗಿದ್ದ ಮರದ ಪೀಠದ ಮೇಲೆ ನಿಂತನು. ಜನಸಮೂಹಕ್ಕಿಂತಲೂ ಎತ್ತರವಾದ ಸ್ಥಳದಲ್ಲಿ ನಿಂತಿದ್ದ ಎಜ್ರನು ಪರಾತ್ಪರ ದೇವರಾದ ಸರ್ವೇಶ್ವರನನ್ನು ಸ್ತುತಿಸಿದಾಗ ಸರ್ವಜನರೂ ತಮ್ಮ ಕೈಗಳನ್ನೆತ್ತಿ ' ಆಮೆನ್, ಆಮೆನ್ ' ಎಂದು ಹೇಳಿ ನೆಲದ ಮಟ್ಟಿಗೂ ತಲೆಬಾಗಿ ಸರ್ವೇಶ್ವರನನ್ನು ಆರಾಧಿಸಿದರು. ಆಮೇಲೆ ಲೇವಿಯರು ಧರ್ಮಶಾಸ್ತ್ರವನ್ನು ಜನರು ಗ್ರಹಿಸುವಂತೆ ಮಾಡಿದರು. ಜನರು ಎದ್ದುನಿಂತ ನಂತರ ಅವರು ದೇವರ ಧರ್ಮಶಾಸ್ತ್ರವನ್ನು ಸ್ಪಷ್ಟವಾಗಿ ಓದುತ್ತಾ ಅದರ ತಾತ್ಪರ್ಯವನ್ನು ವಿವರಿಸಿದರು. ಜನರು ಚೆನ್ನಾಗಿ ಗ್ರಹಿಸಿಕೊಂಡರು. ಜನರೆಲ್ಲರೂ ಧರ್ಮೋಪದೇಶದ ವಾಕ್ಯಗಳನ್ನು ಕೇಳುತ್ತಾ ಕಣ್ಣೀರಿಡುತ್ತಿದ್ದರು. ರಾಜ್ಯಪಾಲ ನೆಹೆಮಿಯನು, ಧರ್ಮೋಪದೇಶಮಾಡುವ ಯಾಜಕ ಎಜ್ರನು ಹಾಗು ಜನರನ್ನು ಸಂಬೋಧಿಸುತ್ತಿದ್ದ ಲೇವಿಯರು ಜನರಿಗೆ, " ಈ ದಿನ ನಿಮ್ಮ ದೇವರಾದ ಸರ್ವೇಶ್ವರನಿಗೆ ಪರಿಶುದ್ಧ ದಿನ! ಆದುದರಿಂದ ನೀವು ದುಃಖಿಸುತ್ತಾ ಅಳುತ್ತಾ ಇರಬೇಡಿ, " ಎಂದು ಹೇಳಿದರು. ಇದಲ್ಲದೆ, ಎಜ್ರನು ಅವರಿಗೆ, " ಹೋಗಿ ಮೃಷ್ಟಾನ್ನವನ್ನೂ ಮಧುರಪಾನವನ್ನೂ ತೆಗೆದುಕೊಳ್ಳಿ, ತಮಗಾಗಿ ಏನೂ ಸಿದ್ಧಮಾಡದವರಿಗೆ ಒಂದು ಪಾಲನ್ನು ಕಳುಹಿಸಿರಿ. ಈ ದಿನ ನಮ್ಮ ಸರ್ವೇಶ್ವರನಿಗೆ ಪ್ರತಿಷ್ಠಿತ ದಿನ! ವ್ಯಸನಪಡಬೇಡಿ, ಸರ್ವೇಶ್ವರನ ಆನಂದವೇ ನಿಮ್ಮ ಆಶ್ರಯವಾಗಿದೆ, " ಎಂದನು. ಲೇವಿಯರು ಕೂಡ, " ಸುಮ್ಮನಿರಿ, ಇದು ದೇವರ ದಿವಸ, ದುಃಖಿಸಬೇಡಿ, " ಎಂದು ಹೇಳಿ ಜನರನ್ನು ಸಂತೈಸಿದರು. ತಮಗೆ ತಿಳಿಯಪಡಿಸಿದ ಮಾತುಗಳನ್ನು ಜನರೆಲ್ಲರೂ ಗಮನಿಸಿ, ಹೋಗಿ ಅನ್ನಪಾನಗಳನ್ನು ತೆಗೆದುಕೊಂಡು ಏನೂ ಇಲ್ಲದವರಿಗೆ ಪಾಲುಗಳನ್ನು ಕಳುಹಿಸಿ, ಬಹಳವಾಗಿ ಸಂತೋಷಪಟ್ಟರು.

ಕೀರ್ತನೆ 19:7-10
ಶ್ಲೋಕ: ಪ್ರಭುವಿನ ನಿಯಮ ನೀತಿಬದ್ದ, ಮನಸ್ಸಿಗದು ಹರ್ಷಾನಂದ.

ಪ್ರಭುವಿನ ಆಜ್ಞೆ ಪರಿಪೂರ್ಣ, ಜೀವನಕದು ನವಚೇತನ|
ನಂಬಲರ್ಹ ಪ್ರಭುವಿನ ಶಾಸನ, ಮುಗ್ದರಿಗದು ಸುಜ್ಞಾನ||
ಪ್ರಭುವಿನ ನಿಯಮ ನೀತಿಬದ್ದ, ಮನಸ್ಸಿಗದು ಹರ್ಷಾನಂದ|
ಪ್ರಭುವಿನ ಕಟ್ಟಳೆ ಪರಿಶುದ್ದ, ಕಣ್ಣಿಗದು ದೀವಿಗೆ||

ಪ್ರಭುವಿನ ಭೀತಿ ಪವಿತ್ರ, ಅದೆಂದಿಗೂ ಶಾಶ್ವತ|
ಪ್ರಭುವಿನ ತೀರ್ಪು ಯಥಾರ್ಥ, ಪರಿಪೂರ್ಣ ನ್ಯಾಯಯುತ||
ಅಪೇಕ್ಷಣೀಯವಾದುವವು ಚಿನ್ನ ಅಪರಂಜಿಗಿಂತ|
ಅತಿಮಧುರವಾದುವವು ಅಪ್ಪಟ ಜೇನುತುಪ್ಪಕ್ಕಿಂತ||

ಶುಭಸಂದೇಶ: ಲೂಕ 10:1-12

ಆ ಕಾಲದಲ್ಲಿ ಯೇಸು ಇನ್ನೂ ಎಪ್ಪತ್ತೆರಡು ಮಂದಿಯನ್ನು ನೇಮಿಸಿ ಅವರನ್ನು ಇಬ್ಬಿಬ್ಬರನ್ನಾಗಿ ತಾವೇ ಹೋಗಲಿದ್ದ ಊರುಗಳಿಗೂ ಸ್ಥಳಗಳಿಗೂ ಮುಂದಾಗಿ ಕಳಿಸಿದರು. ಕಳುಹಿಸುವಾಗ ಅವರಿಗೆ ಹೇಳಿದ್ದೇನೆಂದರೆ, " ಬೆಳೆಯೇನೋ ಹೇರಳವಾಗಿದೆ, ಕೊಯ್ಲುಗಾರರೊ ವಿರಳ. ಆದುದರಿಂದ ಕೊಯ್ಲಿಗೆ ಆಳುಗಳನ್ನು ಕಳುಹಿಸುವಂತೆ ಬೆಳೆಯ ಯಜಮಾನನನ್ನು ಬೇಡಿಕೊಳ್ಳಿ. ಹೋಗಿರಿ, ತೋಳಗಳ ನಡುವೆ ಕುರಿಮರಿಗಳನ್ನು ಬಿಟ್ಟಂತೆ ನಾನು ನಿಮ್ಮನ್ನು ಕಳುಹಿಸುತ್ತೇನೆ. ಹಣದ ಚೀಲವನ್ನಾಗಲಿ, ಜೋಳಿಗೆಯನ್ನಾಗಲಿ, ಪಾದರಕ್ಷೆಗಳನ್ನಾಗಲಿ ತೆಗೆದುಕೊಂಡು ಹೋಗದಿರಿ. ದಾರಿಯಲ್ಲಿ ಯಾರಿಗೂ ವಂದನೋಪಚಾರಗಳನ್ನು ಮಾಡಿಕೊಂಡಿರಬೇಡಿ. ನೀವು ಯಾವ ಮನೆಗೆ ಹೋದರೂ, ' ಈ ಮನೆಗೆ ಶಾಂತಿ, ' ಎಂದು ಆಶೀರ್ವಾದಮಾಡಿ. ಶಾಂತಿಪ್ರಿಯನು ಅಲ್ಲಿದ್ದರೆ ನಿಮ್ಮ ಆಶೀರ್ವಾದವು ಅವನ ಮೇಲೆ ನೆಲೆಸುವುದು. ಇಲ್ಲವಾದರೆ, ಅದು ನಿಮಗೆ ಹಿಂದಿರುಗುವುದು. ಮನೆಯಿಂದ ಮನೆಗೆ ಹೋಗದೆ ಆ ಮನೆಯಲ್ಲೇ ತಂಗಿದ್ದು, ಅಲ್ಲಿಯವರು ಕೊಡುವ ಅನ್ನಪಾನೀಯಗಳನ್ನು ಸೇವಿಸಿರಿ. ದುಡಿಮೆಗಾರನು ಕೂಲಿಗೆ ಬಾಧ್ಯನು. ನೀವು ಯಾವ ಊರಿಗೆ ಹೋದರೂ ಜನರು ನಿಮ್ಮನ್ನು ಸ್ವಾಗತಿಸಿದಾಗ, ಅವರು ಬಡಿಸಿದ್ದನ್ನು ಭುಜಿಸಿರಿ. ಅಲ್ಲಿರುವ ರೋಗಿಗಳನ್ನು ಗುಣಪಡಿಸಿರಿ. ' ದೇವರ ಸಾಮ್ರಾಜ್ಯ ನಿಮ್ಮನ್ನು ಸಮೀಪಿಸಿದೆ, ' ಎಂದು ತಿಳಿಸಿರಿ. ಆದರೆ ನೀವು ಹೋಗುವ ಊರಿನ ಜನರು ನಿಮ್ಮನ್ನು ಸ್ವಾಗತಿಸದೆ ಹೋದರೆ, ರಸ್ತೆಗಳಿಗೆ ಹೋಗಿ, ' ನಮ್ಮ ಪಾದಗಳಿಗೆ ಅಂಟಿರುವ ನಿಮ್ಮ ಊರಿನ ಧೂಳನ್ನು ಕೂಡ ನಿಮಗೆ ವಿರುದ್ದವಾಗಿ ಒದರಿಬಿಡುತ್ತೇವೆ. ಆದರೂ ದೇವರ ಸಾಮ್ರಾಜ್ಯ ಸಮೀಪಿಸಿದೆ ಎಂಬುದನ್ನು ಮಾತ್ರ ನೀವು ಗಮನದಲ್ಲಿಡಿ ' ಎಂದು ತಿಳಿಸಿರಿ. ತೀರ್ಪಿನ ದಿನ ಈ ಊರಿನ ಗತಿ ಸೊದೋಮ್ ಊರಿನ ಗತಿಗಿಂತಲೂ ಕಠಿಣವಾಗಿರುವುದೆಂದು ನಾನು ನಿಮಗೆ ಹೇಳುತ್ತೇನೆ.

29.09.21

ಮೊದಲನೆಯ ವಾಚನ: ದಾನಿಯೇಲ 7:9-10, 13-14

ನಾನು ನೋಡುತ್ತಿದ್ದ ಹಾಗೆ ಸಿಂಹಾಸನಗಳನ್ನು ಹಾಕಲಾಯಿತು. ಮಹಾವೃದ್ಧನೊಬ್ಬನು ಆಸೀನನಾದನು. ಆತನ ಉಡುಪು ಬೆಳ್ಳಗಿತ್ತು ಹಿಮದಂತೆ. ಆತನ ತಲೆಗೂದಲಿತ್ತು ನಿರ್ಮಲವಾದ ಬಿಳಿಯ ಉಣ್ಣೆಯಂತೆ. ಆತನ ಸಿಂಹಾಸನ ಅಗ್ನಿಜ್ವಾಲೆಯಂತೆ ಧಗಧಗಿಸುವ ಬೆಂಕಿ ಅದರ ಚಕ್ರಗಳು. ಆ ಸಿಂಹಾಸನದ ಸಮ್ಮುಖದಲ್ಲಿ ಪ್ರಜ್ವಲ ಪ್ರವಾಹವೊಂದು ಉಕ್ಕಿ ಹರಿದು ಬಂದಿತು. ಲಕ್ಷೋಪಲಕ್ಷ ದೂತರು ಆತನಿಗೆ ಸೇವೆಸಲ್ಲಿಸುತ್ತಿದ್ದರು. ಕೋಟ್ಯಾನುಕೋಟಿ ಕಿಂಕರರು ಆತನ ಮುಂದೆ ನಿಂತಿದ್ದರು. ನ್ಯಾಯಸಭೆಯವರು ತೀರ್ಪುನೀಡಲು ಕುಳಿತುಕೊಂಡರು. ಪಟ್ಟಿ ಪುಸ್ತಕಗಳನ್ನು ತೆರೆಯಲಾಯಿತು. ನಾನು ಕಂಡ ರಾತ್ರಿಯ ಕನಸಿನಲ್ಲಿ ನರಪುತ್ರನಂತಿರುವವನು ಆಕಾಶದ ಮೇಘಗಳೊಂದಿಗೆ ಬಂದು ಆ ಮಹಾವೃದ್ದನನ್ನು ಸಮೀಪಿಸಿದನು. ಅವನನ್ನು ಆತನ ಸನ್ನಿಧಿಗೆ ತಂದರು. ಸಕಲ ರಾಷ್ಟ್ರ -- ಕುಲ -- ಭಾಷೆಗಳವರು ಅವನಿಗೆ ಸೇವೆ ಸಲ್ಲಿಸಲೆಂದು ಅವನಿಗೆ ದೊರೆತನ, ಘನತೆ, ರಾಜ್ಯತ್ವ ಇವುಗಳನ್ನು ಕೊಡಲಾಯಿತು. ಅವನ ಆಳ್ವಿಕೆಗೆ ಅಂತ್ಯವಿಲ್ಲ, ಅದು ಶಾಶ್ವತವಾದುದು, ಅವನ ರಾಜ್ಯ ಎಂದಿಗೂ ಅಳಿಯದು!

ಕೀರ್ತನೆ 138:1-5
ಶ್ಲೋಕ: ಹೃದಯಪೂರ್ವಕ ವಂದನೆ ಪ್ರಭೂ ನಿನಗೆ, ದೇವರುಗಳೆದುರಿಗೆ ನನ್ನ ಕೀರ್ತನೆ ನಿನಗೆ.

ಹೃದಯಪೂರ್ವಕ ವಂದನೆ ಪ್ರಭೂ ನಿನಗೆ|
ದೇವರುಗಳೆದುರಿಗೆ ನನ್ನ ಕೀರ್ತನೆ ನಿನಗೆ|
ಪೊಗಳುವೆ ನಿನ್ನ ನಾಮವನು ತಲೆಬಾಗಿ ನಿನ್ನ ಪವಿತ್ರಾಲಯದತ್ತ||

ಪೊಗಳುವೆ ನಿನ್ನ ಪ್ರೀತಿ ಸತ್ಯತೆಗಳ, ನಾಮ ನುಡಿಗಳ ಮಹತ್ವದ ಪ್ರಯುಕ್ತ|
ಮೊರೆಯಿಟ್ಟಾಗ ದಯಪಾಲಿಸಿದೆ ಸದುತ್ತರವನು||

ನಿನ್ನ ಗುಣಗಾನ ಮಾಳ್ವರು ಪ್ರಭೂ, ಭೂರಾಜರೆಲ್ಲರು|
ಏಕೆನೆ, ನೀ ಉಸುರಿದೆ ನುಡಿಗಳನು ಕೇಳ್ವರವರೆಲ್ಲರು||
ಪ್ರಭುವಿನ ಮಹಿಮೆಯು ಮಹೋನ್ನತ ಎನ್ನುವರು|
ಆತನ ಮಾರ್ಗಗಳನು ಹಾಡಿ ಹರಸುವರು||

ಶುಭಸಂದೇಶ: ಯೊವಾನ್ನ 1:47-51

ಆ ಕಾಲದಲ್ಲಿ ತಮ್ಮ ಬಳಿಗೆ ಬರುತ್ತಿದ್ದ ನತಾನಿಯೇಲನನ್ನು ಕಂಡು ಯೇಸು " ಇಗೋ, ನೋಡಿ ನಿಜವಾದ ಇಸ್ರಯೇಲನು ಈತನಲ್ಲಿ ಕಪಟವಿಲ್ಲ, " ಎಂದು ನುಡಿದರು. ನತಾನಿಯೇಲನು " ನನ್ನ ಪರಿಚಯ ನಿಮಗೆ ಹೇಗಾಯಿತು? " ಎಂದು ಕೇಳಲು ಯೇಸು " ಫಿಲಿಪ್ಪನು ನಿನ್ನನ್ನು ಕರೆಯುವ ಮೊದಲೇ ನೀನು ಅಂಜೂರದ ಮರದಡಿ ಇದ್ದಾಗ ನಾನು ನಿನ್ನನ್ನು ಕಂಡೆ, " ಎಂದು ಉತ್ತರ ಕೊಟ್ಟರು. ಅದಕ್ಕೆ ನತಾನಿಯೇಲನು " ಗುರುದೇವಾ, ದೇವರ ಪುತ್ರ ನೀವೇ, ಇಸ್ರಯೇಲರ ಅರಸ ನೀವೇ, " ಎಂದನು. ಆಗ ಯೇಸು ಅಂಜೂರದ ಮರದಡಿಯಲ್ಲಿ ನಿನ್ನನ್ನು ಕಂಡೆ ಎಂದು ನಾನು ಹೇಳಿದ ಮಾತ್ರಕ್ಕೆ ಇಷ್ಟೊಂದು ವಿಶ್ವಾಸವೆ? ಇದಕ್ಕೂ ಮಿಗಿಲಾದವುಗಳನ್ನು ನೀನು ಕಾಣುವೆ, " ಎಂದು ನುಡಿದರು. ತಮ್ಮ ಮಾತನ್ನು ಮುಂದುವರೆಸುತ್ತಾ, " ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ. ಸ್ವರ್ಗವು ತೆರೆದಿರುವುದನ್ನೂ ನರಪುತ್ರನ ಮುಖಾಂತರ ದೇವದೂತರು ಏರುವುದನ್ನೂ ಇಳಿಯುವುದನ್ನೂ ನೀವು ಕಾಣುವಿರಿ, " ಎಂದು ಹೇಳಿದರು.

28.09.21

ಮೊದಲನೆಯ ವಾಚನ: ಜೆಕರ್ಯ 8:20-23

ಸೇನಾಧೀಶ್ವರ ಸರ್ವೇಶ್ವರ ಇಂತೆನ್ನುತ್ತಾರೆ: ಇನ್ನು ಮುಂದೆ ಜನಾಂಗಗಳೂ ಹಲವು ನಗರ ನಿವಾಸಿಗಳೂ ಜೆರುಸಲೇಮಿಗೆ ಬರುವರು. ' ಸೇನಾಧೀಶ್ವರ ಸರ್ವೇಶ್ವರಸ್ವಾಮಿಯನ್ನು ಆರಾಧಿಸಲು, ಅವರ ಆಶೀರ್ವಾದವನ್ನು ಬೇಡಲು ದೇವಾಲಯಕ್ಕೆ ಹೋಗುತ್ತಿದ್ದೇವೆ. ನಮ್ಮೊಡನೆ ಬನ್ನಿ, ಹೋಗೋಣ ' ಎಂದು ಒಂದು ಊರಿನವರು ಮತ್ತೊಂದೂರಿನವರಿಗೆ ಹೇಳುವರು. ನಾನಾ ದೇಶಗಳಿಂದ, ಪ್ರಬಲ ರಾಷ್ಟ್ರಗಳಿಂದ ಸೇನಾಧೀಶ್ವರ ಸರ್ವೇಶ್ವರಸ್ವಾಮಿಯನ್ನು ಆರಾಧಿಸಿ, ಅವರ ಆಶೀರ್ವಾದವನ್ನು ಕೋರಲು ಜನರು ಜೆರುಸಲೇಮಿಗೆ ಬರುವರು. ಆ ದಿನದಲ್ಲಿ ವಿವಿಧ ಭಾಷೆಗಳನ್ನಾಡುವ ರಾಷ್ಟ್ರಗಳಿಂದ ಹತ್ತು ಹತ್ತು ಮಂದಿ ಬಂದು ಯೆಹೂದ್ಯನೊಬ್ಬನ ಸೆರಗನ್ನು ಹಿಡಿದುಕೊಂಡು, ' ನಾವೂ ನಿಮ್ಮೊಂದಿಗೆ ಬರುತ್ತೇವೆ. ಏಕೆಂದರೆ ದೇವರು ನಿಮ್ಮೊಡನೆ ಇದ್ದಾರೆ ಎಂಬ ಸುಧ್ಧಿಯನ್ನು ಕೇಳಿದ್ದೇವೆ ' ಎಂದು ಹೇಳುವರು. ಇದು ಸೇನಾಧೀಶ್ವರ ಸರ್ವೇಶ್ವರಸ್ವಾಮಿಯ ನುಡಿ.

ಕೀರ್ತನೆ 87:1-7
ಶ್ಲೋಕ: ದೇವರು ನಮ್ಮೊಡನೆ ಇದ್ದಾರೆ.

ಪವಿತ್ರ ಪರ್ವತದಲಿ ಕರ್ತನು ಸ್ಥಾಪಿಸಿಹನು ತನ್ನ ನಗರವನು|
ಯಕೋಬ ವಂಶದ ಸಕಲ ನಿವಾಸಿಗಳಿಗಿಂತ|
ಸಿಯೋನ್ ದ್ವಾರಗಳು ಆತನಿಗೆ ಸುಪ್ರೀತ||
ದೈವ ಶ್ರೀನಗರವೇ, ಕೇಳು ಇವನ್ನು|
ನಿನ್ನ ಕುರಿತ ಅತಿಶಯೋಕ್ತಿಗಳನು: ||

" ನನಗೆ ಮಣಿಯುವ ರಾಷ್ಟ್ರಗಳಲಿ|
ಈಜಿಪ್ಟ್, ಬಾಬೆಲ್ ದೇಶಗಳನ್ನು ಲೆಕ್ಕಿಸುವೆ||
ಜೆರುಸಲೇಮಿನ ನಿವಾಸಿಗಳಲಿ ಫಿಲಿಷ್ಟಿಯ, ಟೈರ್, ಎಥಿಯೋಪಿಯ ಜನ ಸೇರಿವೆ||
ಸಕಲ ಜನಾಂಗಗಳ ಜನನಿ ಸಿಯೋನ್ ನಗರವೇ|
ಅದನು ಸ್ಥಾಪಿಸಿದವ ಪರಾತ್ಪರ ಪ್ರಭುವೇ"||

ಪ್ರಭು ಪಟ್ಟಿಮಾಡುವಾಗ ಸಕಲ ಜಾತಿಜನಾಂಗಗಳನು|
ನಿನ್ನ ಜನಾಂಗವೆಂದೇ ಪರಿಗಣಿಸುವನು ಪ್ರತಿಯೊಂದನು||
ಗಾಯಕ ನರ್ತಕರೂ ಹಾಡುವರೀ ಹಾಡ|
ನಮ್ಮೆಲ್ಲರ ಜೀವದೊರೆತೆ ನೀನೇ ನೋಡ||

ಶುಭಸಂದೇಶ: ಲೂಕ 9:51-56

ಆ ಕಾಲದಲ್ಲಿ ಸ್ವರ್ಗರೋಹಣವಾಗುವ ದಿನಗಳು ಸಮೀಪಿಸಲು ಯೇಸು ಜೆರುಸಲೇಮಿಗೆ ಅಭಿಮುಖವಾಗಿ ಹೊರಡಲು ನಿರ್ಧರಿಸಿದರು. ಅಲ್ಲದೆ ತಮಗೆ ಮುಂದಾಗಿ ದೂತರನ್ನು ಕಳುಹಿಸಿದರು. ಇವರು ಹೊರಟು ಯೇಸುವಿಗೆ ಬೇಕಾದುದನ್ನು ಸಿದ್ದಮಾಡಲು ಸಮಾರಿಯದ ಒಂದು ಹಳ್ಳಿಗೆ ಬಂದರು. ಯೇಸು ಜೆರುಸಲೇಮಿಗೆ ಹೋಗುತ್ತಿದ್ದ ಕಾರಣ ಅವರನ್ನು ಅಲ್ಲಿಯ ಜನರು ಬರಗೊಳಿಸಲಿಲ್ಲ. ಇದನ್ನು ಕಂಡು ಶಿಷ್ಯರಾದ ಯಕೋಬ ಮತ್ತು ಯೊವಾನ್ನ, " ಪ್ರಭೂ, ಆಕಾಶದಿಂದ ಅಗ್ನಿಮಳೆ ಸುರಿದು ಇವರನ್ನು ನಾಶಮಾಡಲಿ ಎಂದು ನಾವು ಆಜ್ಞೆಮಾಡಬಹುದಲ್ಲವೇ ? " ಎಂದರು. ಯೇಸು ಅವರ ಕಡೆ ತಿರುಗಿ, " ನೀವು ಎಂಥ ಸ್ವಭಾವಿಗಳೆಂದು ನಿಮಗೇ ತಿಳಿಯದು. ನರಪುತ್ರನು ಬಂದಿರುವುದು ಮಾನವ ಜೀವಿಗಳ ವಿನಾಶಕ್ಕೆ ಅಲ್ಲ, ಉದ್ಧಾರಕ್ಕೆ, " ಎಂದು ಅವರನ್ನು ಖಂಡಿಸಿದರು. ಅನಂತರ ಯೇಸು ಮತ್ತು ಶಿಷ್ಯರು ಬೇರೆ ಹಳ್ಳಿಗೆ ಹೋದರು.

27.09.21 - " ಯಾವನು ನನ್ನ ಹೆಸರಿನಲ್ಲಿ ಈ ಮಗುವನ್ನು ಸ್ವೀಕರಿಸುತ್ತಾನೋ ಅವನು ನನ್ನನ್ನೇ ಸ್ವೀಕರಿಸುತ್ತಾನೆ,"

ಮೊದಲನೆಯ ವಾಚನ: ಜೆಕರ್ಯ 8:1-8


ಸೇನಾಧೀಶ್ವರ ಸರ್ವೇಶ್ವರ ಜೆಕರ್ಯನಿಗೆ ಪುನಃ ಕೊಟ್ಟ ಸಂದೇಶವಿದು : " ಸಿಯೋನಿನ ವಿಷಯದಲ್ಲಿ ನನಗೆ ತುಂಬಾ ಅಭಿಮಾನವಿದೆ. ಅದರ ಶತ್ರುಗಳ ವಿಷಯದಲ್ಲಿ ಅಧಿಕ ರೋಷವಿದೆ. " ಸರ್ವೇಶ್ವರ ಇಂತೆನ್ನುತ್ತಾರೆ : " ಸಿಯೋನಿಗೆ ಹಿಂದಿರುಗುವೆನು. ಜೆರುಸಲೇಮಿನ ನಡುವೆ ವಾಸಮಾಡುವೆನು. ಆಗ ಜೆರುಸಲೇಮ್ ' ನಿಷ್ಠಾವಂತ ನಗರ ' ಎನಿಸಿಕೊಳ್ಳುವುದು. ಅದಕ್ಕೆ ಸೇನಾಧೀಶ್ವರ ಸರ್ವೇಶ್ವರನ ಪರ್ವತ, ಪವಿತ್ರ ಪರ್ವತ ಎಂಬ ಹೆಸರು ಬರುವುದು. ಸೇನಾಧೀಶ್ವರ ಸರ್ವೇಶ್ವರ ಹೀಗೆನ್ನುತ್ತಾರೆ : " ಮುದುಕರು, ಮುದುಕಿಯರು ಮತ್ತೆ ಜೆರುಸಲೇಮಿನ ಚೌಕಗಳಲ್ಲಿ ಕುಳಿತುಕೊಳ್ಳುವರು. ವೃದ್ಧಾಪ್ಯದ ಪ್ರಯುಕ್ತ ಒಬ್ಬೊಬ್ಬರ ಕೈಯಲ್ಲಿ ಊರುಗೋಲು ಇರುವುದು. ಪಟ್ಟಣದ ಹಾದಿಬೀದಿಗಳಲ್ಲಿ ಮಕ್ಕಳು ತುಂಬಿಕೊಂಡಿರುವರು. " ಸೇನಾಧೀಶ್ವರ ಸರ್ವೇಶ್ವರ ಹೀಗೆನ್ನುತ್ತಾರೆ : ಅಳಿದುಳಿದಿರುವ ಜನರಿಗೆ ಇಂಥ ಪರಿಸ್ಥಿತಿ ಅತಿಶಯವಾಗಿ ಕಾಣಬಹುದು. ಆದರೆ ನನಗೆ ಅದೇನೂ ಅತಿಶಯವಲ್ಲ. " ಇದು ಸರ್ವೇಶ್ವರನ ನುಡಿ. ಸೇನಾಧೀಶ್ವರ ಸರ್ವೇಶ್ವರ ಇಂತೆನ್ನುತ್ತಾರೆ. " ಇಗೋ, ನಾನು ನನ್ನ ಜನರನ್ನು ಪೂರ್ವ ಪಶ್ಚಿಮ ನಾಡುಗಳಿಂದ ಬಿಡುಗಡೆಮಾಡಿ, ಇಲ್ಲಿಗೆ ಬರಮಾಡುವೆನು. ಅವರು ಜೆರುಸಲೇಮಿನಲ್ಲೇ ವಾಸವಾಗಿರುವರು. ನಾನು ಅವರಿಗೆ ದೇವರಾಗಿರುವೆನು, ಅವರು ನನಗೆ ಸತ್ಸಂಬಂಧವುಳ್ಳ, ಸದ್ಧರ್ಮದ ಪ್ರಜೆಗಳಾಗಿರುವರು."

ಕೀರ್ತನೆ 102:15-17, 18-20, 21, 22, 28
ಶ್ಲೋಕ: ಪುನರುದ್ಧರಿಸುವನು ಪ್ರಭು ಸಿಯೋನನು.

ಹೆದರುವುವು ಪ್ರಭುವೆಂಬ ನಿನ್ನ ನಾಮಕೆ ಜನಾಂಗಗಳು|
ಭಯಪಡುವರು ನಿನ್ನ ಪ್ರತಾಪಕೆ ಭೂ ರಾಜರುಗಳು||
ಏಕೆನೆ ಪುನರುದ್ಧರಿಸುವನು ಸಿಯೋನನು|
ಪ್ರತ್ಯಕ್ಷ ಮಾಡುವನಾತ ತನ್ನ ಮಹಿಮೆಯನು||
ತಿರಸ್ಕರಿಸನಾತ ನಿರ್ಗತಿಕರ ಮೊರೆಯನು|
ನೆರವೇರಿಸದೆ ಬಿಡನು ಅವರ ಕೋರಿಕೆಯನು||

ಮುಂದಣ ಸಂತತಿಗದು ಶಾಸನವಾಗಿರಲಿ|
ಮುಂದೆ ಹುಟ್ಟುವ ಪ್ರಜೆ ಪ್ರಭುವನು ಹೊಗಳಲಿ||
ಭೂಲೋಕವನು ವೀಕ್ಷಿಸಿದನು ಪ್ರಭು ಪರಲೋಕದಿಂದ|
ದೃಷ್ಟಿಸಿದನು ತನ್ನ ಉನ್ನತ ಪವಿತ್ರಸ್ಥಾನದಿಂದ||
ಆಲಿಸಿದಾತನು ಬಂಧಿತರ ಗೋಳಾಟವನು|
ಬಿಡಿಸಿಹನು ಮರಣತೀರ್ಪಿಗೆ ಗುರಿಯಾದವರನು||

ಬಾಳುವರು ನಿನ್ನ ದಾಸರ ಮಕ್ಕಳು ಸುರಕ್ಷಿತವಾಗಿ|
ಇರುವುದವರ ಸಂತತಿ ನಿನ್ನ ಸಮ್ಮುಖದಲಿ ಸ್ಥಿರವಾಗಿ||
ಹೀಗೆ ಪ್ರಭುವಿನಾರಾಧನೆ ಸಲ್ಲಿಸಲು|
ಜನಾಂಗಗಳೂ ರಾಜ್ಯಗಳೂ ಕೂಡಿರಲು||
ಹೊಗಳಲಾಗುವುದು ಪ್ರಭುವಿನ ನಾಮ ಸಿಯೋನಿನಲಿ|
ಆತನ ಗುಣಗಾನವಿರುವುದು ಜೆರುಸಲೇಮಿನನಲಿ||

ಶುಭಸಂದೇಶ: ಲೂಕ 9:46-50

ಆ ಕಾಲದಲ್ಲಿ ತಮ್ಮಲ್ಲಿ ಅತಿ ಶ್ರೇಷ್ಠನು ಯಾರೆಂಬ ವಾದ ಶಿಷ್ಯರಲ್ಲಿ ಎದ್ದಿತು. ಅವರ ಮನಸ್ಸಿನ ಆಲೋಚನೆಗಳನ್ನು ಅರಿತ ಯೇಸು, ಒಂದು ಚಿಕ್ಕ ಮಗುವನ್ನು ತಂದು ತಮ್ಮ ಪಕ್ಕದಲ್ಲಿ ನಿಲ್ಲಿಸಿಕೊಂಡು, " ಯಾವನು ನನ್ನ ಹೆಸರಿನಲ್ಲಿ ಈ ಮಗುವನ್ನು ಸ್ವೀಕರಿಸುತ್ತಾನೋ ಅವನು ನನ್ನನ್ನೇ ಸ್ವೀಕರಿಸುತ್ತಾನೆ, ಯಾವನು ನನ್ನನ್ನು ಸ್ವೀಕರಿಸುತ್ತಾನೋ ಅವನು ನನ್ನನ್ನು ಕಳುಹಿಸಿದಾತನನ್ನೇ ಸ್ವೀಕರಿಸುತ್ತಾನೆ. ನಿಮ್ಮೆಲ್ಲರಲ್ಲಿ ಅತ್ಯಲ್ಪನಾದವನೇ ಅತ್ಯುತ್ತಮನು, " ಎಂದರು. ಆಗ ಯೊವಾನ್ನನು ಯೇಸುವಿಗೆ, " ಗುರುವೇ, ಯಾವನೋ ಒಬ್ಬನು ತಮ್ಮ ಹೆಸರಿನಲ್ಲಿ ದೆವ್ವಬಿಡಿಸುವುದನ್ನು ಕಂಡೆವು. ಅವನು ನಮ್ಮವನಲ್ಲದ ಕಾರಣ ಅವನನ್ನು ತಡೆದೆವು, " ಎಂದನು. ಅದಕ್ಕೆ ಯೇಸು, " ಅವನನ್ನು ತಡೆಯಬೇಡಿ, ನಿಮ್ಮ ವಿರೋಧಿ ಅಲ್ಲದವನು ನಿಮ್ಮ ಪರವಾದಿ, " ಎಂದು ಉತ್ತರ ಕೊಟ್ಟರು.

26.09.21

ಮೊದಲನೆಯ ವಾಚನ: ಸಂಖ್ಯಾಕಾಂಡ 11:25-29

ಮೋಶೆ ಜನರ ಹಿರಿಯರಲ್ಲಿ ಎಪ್ಪತ್ತು ಮಂದಿಯನ್ನು ಕೂಡಿಸಿ ದೇವದರ್ಶನದ ಗುಡಾರದ ಸುತ್ತಲೂ ನಿಲ್ಲಿಸಿದನು ಆಗ ಸರ್ವೇಶ್ವರ ಮೇಘದಲ್ಲಿ ಇಳಿದು ಬಂದು ಅವನೊಡನೆ ಮಾತಾಡಿ ಅವನಿಗೆ ಅನುಗ್ರಹಿಸಲಾಗಿದ್ದ ಆತ್ಮಶಕ್ತಿಯಲ್ಲಿ ಕಿಂಚತ್ತನ್ನು ಆ ಎಪ್ಪತ್ತು ಮಂದಿ ಹಿರಿಯರಿಗೂ ಹಂಚಿದರು. ಆ ಶಕ್ತಿ ಅವರ ಮೇಲೆ ಇಳಿದುಬಂದಾಗ ಅವರು ಪರವಶರಾಗಿ ಪ್ರವಾದಿಸಿದರು. ಅಂಥ ಅನುಭವ ಅವರಿಗೆ ಮತ್ತೆ ಬರಲಿಲ್ಲ. ಎಲ್ಲಾದ್ ಮತ್ತು ಮೇದಾದ್ ಎಂಬ ಹಿರಿಯರಿಬ್ಬರೂ ಪಾಳೆಯದೊಳಗೆ ಉಳಿದುಕೊಂಡಿದ್ದರು. ಅವರ ಹೆಸರು ಲಿಖಿತವಾದಗಿದ್ದರೂ ಅವರು ದೇವದರ್ಶನದ ಗುಡಾರಕ್ಕೆ ಹೊರಟು ಬಂದಿರಲಿಲ್ಲ. ಆ ಆತ್ಮಶಕ್ತಿ ಅವರ ಮೇಲೂ ಇಳಿದುಬಂದುದರಿಂದ ಅವರು ಕೂಡ ಪಾಳೆಯದಲ್ಲೇ ಪರವಶರಾಗಿ ಪ್ರವಾದಿಸಿದರು. ಆಗ ಒಬ್ಬ ಯುವಕ ಮೋಶೆಯ ಬಳಿಗೆ ಓಡಿಬಂದು, " ಎಲ್ದಾದ್ ಮತ್ತು ಮೇದಾದರು ಪಾಳೆಯದಲ್ಲೇ ಪರವಶರಾಗಿ ಪ್ರವಾದಿಸುತ್ತಿದ್ದಾರೆ, " ಎಂದು ತಿಳಿಸಿದನು. ಚಿಕ್ಕಂದಿನಿಂದ ಮೋಶೆಗೆ ಶಿಷ್ಯನಾಗಿದ್ದ ಹಾಗೂ ನೂನನ ಮಗನಾಗಿದ್ದ ಯೆಹೋಶುವನು ಮೋಶೆಗೆ, " ಗುರುವೇ, ಅವರಿಗೆ ಅದು ಬೇಡವೆನ್ನಬೇಕು " ಎಂದು ವಿನಂತಿಸಿದನು. ಅದಕ್ಕೆ ಮೋಶೆ, " ನನ್ನ ಗೌರವ ಕಾಪಾಡಲು ನಿನಗೇಕೆ ಅಸೂಯೆ ? ಸರ್ವೇಶ್ವರನ ಅನುಗ್ರಹದಿಂದ ಅವರ ಜನರೆಲ್ಲರೂ ಆತ್ಮಶಕ್ತಿಯನ್ನು ಹೊಂದಿ ಪ್ರವಾದಿಸುವವರಾದರೆ ಎಷ್ಟೋ ಒಳ್ಳೆಯದು ! " ಎಂದನು.

ಕೀರ್ತನೆ 19:7, 9, 11-12, 13
ಶ್ಲೋಕ: ಪ್ರಭುವಿನ ನಿಯಮ ನೀತಿಬದ್ದ, ಮನಸ್ಸಿಗದು ಒಸಗೆ

ಪ್ರಭುವಿನ ಆಜ್ಞೆ ಪರಿಪೂರ್ಣ, ಜೀವನಕದು ನವಚೇತನ|
ನಂಬಲರ್ಹ ಪ್ರಭುವಿನ ಶಾಸನ, ಮುಗ್ದರಿಗದು ಸುಜ್ಞಾನ||
ಪ್ರಭುವಿನ ಭೀತಿ ಪವಿತ್ರ, ಅದೆಂದಿಗೂ ಶಾಶ್ವತ|
ಪ್ರಭುವಿನ ತೀರ್ಪು ಯಥಾರ್ಥ, ಪರಿಪೂರ್ಣ ನ್ಯಾಯಯುತ||

ತನ್ನ ತಪ್ಪನ್ನು ತಾನರಿತುಕೊಳ್ಳುವವನಾರಯ್ಯಾ?|
ಗುಪ್ತವಾದ ಪಾಪಗಳಿಂದೆನ್ನ ಮುಕ್ತಗೊಳಿಸಯ್ಯಾ||
ಜಾಗೃತಗೊಳ್ಳುವನು ನಿನ್ನ ದಾಸನು ಅವುಗಳಿಂದ|
ಸಂಭಾವಿತನಾಗುವನು ಅವುಗಳ ಪಾಲನೆಯಿಂದ||

ಕಾಪಾಡೆನ್ನನು ಬೇಕುಬೇಕೆಂದು ಪಾಪಮಾಡದಂತೆ|
ಕಾದಿಡು, ಅಂಥ ಪಾಪಕೆ ನಾ ದಾಸನಾಗದಂತೆ|
ನಿರ್ದೋಷಿಯಾಗುವನು, ಆ ದ್ರೋಹಕ್ಕೊಳಗಾಗದಂತೆ||

ಎರಡನೆಯ ವಾಚನ: ಯಕೋಬ 5:1-6

ಐಶ್ವರ್ಯವಂತರೇ, ಕೇಳಿ: ನಿಮಗೆ ಬರಲಿರುವ ಮಹಾಕಷ್ಟಗಳಿಗಾಗಿ ಕಣ್ಣೀರಿಡಿ, ಗೋಳಾಡಿರಿ. ನಿಮ್ಮ ಐಶ್ವರ್ಯ ನಾಶವಾಗಿದೆ. ನಿಮ್ಮ ಬೆಲೆಬಾಳುವ ಬಟ್ಟೆಗಳಿಗೆ ನುಸಿಹತ್ತಿದೆ. ನಿಮ್ಮ ಬೆಳ್ಳಿಬಂಗಾರಕ್ಕೆ ತುಕ್ಕುಹಿಡಿದಿದೆ. ಆ ತುಕ್ಕೇ ನಿಮಗೆ ವಿರುದ್ಧ ಸಾಕ್ಷಿಯಾಗಿ ನಿಮ್ಮನ್ನು ಬೆಂಕಿಯಂತೆ ದಹಿಸಿಬಿಡುತ್ತದೆ. ಅಂತ್ಯಕಾಲಕ್ಕಾಗಿ ನೀವು ಬೆಂಕಿಯನ್ನೇ ಶೇಕರಿಸಿಟ್ಟುಕೊಂಡಿದ್ದೀರಿ. ನಿಮ್ಮ ಹೊಲಗಳಲ್ಲಿ ದುಡಿದ ಆಳುಗಳ ಕೂಲಿಯನ್ನು ಮೋಸದಿಂದ ಹಿಡಿದಿಟ್ಟುಕೊಂಡಿದ್ದೀರಿ. ನೀವು ಕೊಡದ ಕೂಲಿಯೇ ನಿಮಗೆ ವಿರುದ್ದವಾಗಿ ಕೂಗಿಕೊಳ್ಳುತ್ತಿದೆ. ಕೂಲಿಯಾಳುಗಳ ಗೋಳಾಟ ಸ್ವರ್ಗಸೇನಾಧೀಶ್ವರನಾದ ಪ್ರಭುವಿನ ಕಿವಿಗೂ ಬಿದ್ದಿದೆ. ಲೋಕದಲ್ಲಿ ನೀವು ಸುಖಭೋಗಿಗಳಾಗಿ ವಿಲಾಸ ಜೀವನ ನಡೆಸಿದ್ದೀರಿ. ವಧೆಯ ದಿನಕ್ಕಾಗಿ ಪಶುಗಳಂತೆ ನಿಮ್ಮನ್ನೇ ಕೊಬ್ಬಿಸಿಕೊಂಡಿದ್ದೀರಿ. ನಿಮ್ಮನ್ನು ವಿರೋಧಿಸಿದ ಸಜ್ಜನನನ್ನು ಖಂಡಿಸಿ ಕೊಲೆಮಾಡಿಸಿದ್ದೀರಿ.

ಶುಭಸಂದೇಶ: ಮಾರ್ಕ 9:38-43, 45, 47-48

ಆ ಕಾಲದಲ್ಲಿ ಯೊವಾನ್ನನು ಯೇಸುವಿಗೆ, " ಗುರುವೇ, ಯಾರೋ ಒಬ್ಬನು ತಮ್ಮ ಹೆಸರಿನಲ್ಲಿ ದೆವ್ವಬಿಡಿಸುವುದನ್ನು ಕಂಡೆವು. ಅವನು ನಮ್ಮವನಲ್ಲ, ಆದಕಾರಣ ಅವನನ್ನು ತಡೆದೆವು, " ಎಂದನು. ಅದಕ್ಕೆ ಯೇಸು, " ಅವನನ್ನು ತಡೆಯಬೇಡಿ, ನನ್ನ ಹೆಸರಿನಲ್ಲಿ ಅದ್ಬುತ ಮಾಡುವವನು ಮರುಕ್ಷಣವೇ ನನ್ನ ವಿಷಯವಾಗಿ ಅಪಪ್ರಚಾರ ಮಾಡನು. ನಮಗೆ ವಿರೋಧಿ ಅಲ್ಲದವನು ನಮ್ಮ ಪರವಾದಿ. ನೀವು ಕ್ರಿಸ್ತಭಕ್ತರು ಎಂದು ಯಾವನಾದರೂ ನಿಮಗೆ ಕುಡಿಯಲು ಒಂದು ಲೋಟ ನೀರನ್ನು ಕೊಟ್ಟರೂ ಅದಕ್ಕೆ ತಕ್ಕ ಪ್ರತಿಫಲವನ್ನು ಅವನು ತಪ್ಪದೆ ಪಡೆಯುವನು ಎಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ, ಎಂದರು. ಯೇಸು ತಮ್ಮ ಬೋಧನೆಯನ್ನು ಮುಂದುವರಿಸುತ್ತಾ, " ನನ್ನಲ್ಲಿ ವಿಶ್ವಾಸವಿಟ್ಟಿರುವ ಈ ಚಿಕ್ಕವನಲ್ಲಿ ಒಬ್ಬನಿಗೆ ಯಾವನಾದರೂ ಪಾಪಕ್ಕೆ ಕಾರಣನಾದರೆ, ಅಂಥವನ ಕೊರಳಿಗೆ ದೊಡ್ಡ ಬೀಸುಕಲ್ಲನ್ನು ಕಟ್ಟಿ, ಅವನನ್ನು ಸಮುದ್ರದಲ್ಲಿ ದಬ್ಬುವುದೇ ಅವನಿಗೆ ಲೇಸು. ನಿನ್ನ ಕೈ ನಿನಗೆ ಪಾಪಕ್ಕೆ ಕಾರಣವಾದರೆ ಅದನ್ನು ಕತ್ತರಿಸಿ ಹಾಕು, ನಿನ್ನ ಕಾಲು ನಿನಗೆ ಪಾಪಕ್ಕೆ ಕಾರಣವಾದರೆ ಅದನ್ನು ಕತ್ತರಿಸಿಹಾಕು. ನಿನ್ನ ಕಣ್ಣು ನಿನಗೆ ಪಾಪಕ್ಕೆ ಕಾರಣವಾದರೆ ಅದನ್ನು ಕಿತ್ತುಹಾಕು. ಎರಡು ಕಣ್ಣುಳ್ಳವನಾಗಿ ನರಕಕ್ಕೆ ತಳ್ಳಿಸಿಕೊಳ್ಳುವುದಕ್ಕಿಂತ ಒಕ್ಕಣ್ಣನಾಗಿ ದೇವರ ಸಾಮ್ರಾಜ್ಯ ಸೇರುವುದೇ ಲೇಸು. ನರಕದಲ್ಲಿ ಅವರನ್ನು ಕಡಿಯುವ ಹುಳ ಸಾಯದು, ಸುಡುವ ಬೆಂಕಿ ಆರದು, " ಎಂದರು.

25.09.21 - " ಈ ನನ್ನ ಮಾತು ನಿಮ್ಮ ಕಿವಿಗೆ ಇಳಿಯಲಿ. ಅದೇನೆಂದರೆ : ನರಪುತ್ರನು ಜನರ ವಶಕ್ಕೆ ಒಪ್ಪಿಸಲ್ಪಡಲಿದ್ದಾನೆ, "

ಮೊದಲನೆಯ ವಾಚನ: ಜೆಕರ್ಯ 2:1-5, 10, 11

ಜೆಕರ್ಯನಾದ ನನಗೆ ಮತ್ತೊಂದು ದರ್ಶನವಾಯಿತು. ಕೈಯಲ್ಲಿ ಅಳತೆನೂಲನ್ನು ಹಿಡಿದುಕೊಂಡಿದ್ದ ಒಬ್ಬನು ಕಾಣಿಸಿಕೊಂಡ. " ಎಲ್ಲಿಗೆ ಹೋಗುತ್ತಿರುವೆ? " ಎಂದು ನಾನು ಅವನನ್ನು ಕೇಳಿದಾಗ, ಅವನು : " ಜೆರುಸಲೇಮಿನ ಉದ್ದ -- ಅಗಲ ಎಷ್ಟಿದೆಯೆಂದು ಅಳೆಯಲು ಹೋಗುತ್ತಿದ್ದೇನೆ, " ಎಂದು ಉತ್ತರ ಕೊಟ್ಟನು. ಆಗ ಸೂತ್ರಧಾರಿಯಾದ ದೂತನು ಮುಂದೆ ಬರುತ್ತಿರಲು, ಇನ್ನೊಬ್ಬ ದೂತನು ಆತನನ್ನು ಎದರುಗೊಂಡು, ಅಳೆಯಲು ಹೋಗುತ್ತಿರುವ ಆ ಯುವಕನಿಗೆ ಓಡಿಹೋಗಿ ಈ ಮಾತನ್ನು ತಿಳಿಸು : ' ಜೆರುಸಲೇಮಿನಲ್ಲಿ ಜನರ ಮತ್ತು ದನಕರುಗಳ ಸಂಖ್ಯೆ ಆಪಾರವಾಗುವುದು. ಅದು ಪೌಳಿಗೋಡೆಗಳಿಲ್ಲದ ಊರಕೇರಿಗಳಂತೆ ಹರಡಿಕೊಳ್ಳುವುದು. ನಾನೇ ಅಂದರ ಸುತ್ತಮುತ್ತಲು ಅಗ್ನಿಪ್ರಾಕಾರವಾಗಿ, ಅದರೊಳಗಿನ ವೈಭವವಾಗಿರುವೆನು. ಇದು ಸರ್ವೇಶ್ವರಸ್ವಾಮಿಯ ನುಡಿ, ' ಎಂದ. " ಸರ್ವೇಶ್ವರ ಇಂತೆನ್ನುತ್ತಾರೆ : " ಎಲೈ ಸಿಯೋನ್ ನಗರವೇ, ಸಂತೋಷಪಡು, ಜಯಕಾರ ಮಾಡು, ಇಗೋ, ನಾನೇ ಬಂದು ನಿನ್ನ ಮಧ್ಯೆ ವಾಸಿಸುವೆನು! "ಆ ದಿನದಂದು ಹಲವಾರು ರಾಷ್ಟ್ರಗಳು ಸರ್ವೇಶ್ವರಸ್ವಾಮಿಯನ್ನು ಆಶ್ರಯಿಸಿಕೊಳ್ಳುವರು. ಅವರು ಆ ಸ್ವಾಮಿಯ ಜನರಾಗುವರು. ಸ್ವಾಮಿ ಅವರ ಮಧ್ಯೆ ವಾಸಿಸುವರು. ಸೇನಾಧೀಶ್ವರರಾದ ಆ ಸ್ವಾಮಿಯೇ ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾರೆ ಎಂಬುದು ಆಗ ನಿಮಗೆ ಗೊತ್ತಾಗುವುದು. ಪವಿತ್ರ ಭೂಮಿಯಲ್ಲಿ ಜುದೇಯ ನಾಡನ್ನು ಸ್ವಾಮಿ ತಮ್ಮ ಸೊತ್ತಾಗಿ ಮಾಡಿಕೊಳ್ಳುವರು. ಜೆರುಸಲೇಮನ್ನು ತಮಗಾಗಿ ಮರಳಿ ಆರಿಸಿಕೊಳ್ಳುವರು.

ಯೆರೆಮಿಯ 31:10-13
ಶ್ಲೋಕ: ಕುರಿಮಂದೆಯನ್ನು ಕಾಯುವ ಕುರುಬನಂತೆ | ಪ್ರಭು ನಮ್ಮನ್ನು ಕಾಪಾಡುವರು||

ರಾಷ್ಟ್ರಗಳೇ, ಸರ್ವೇಶ್ವರನ ವಾಕ್ಯವನ್ನು ಕೇಳಿರಿ|
ದೂರದ ದ್ವೀಪಗಳಲ್ಲೂ ಅದನ್ನು ಸಾರಿರಿ||
ಇಸ್ರಯೇಲರನ್ನು ಚದುರಿಸಿದಾತ|
ಕುರಿಮಂದೆಯನ್ನು ಕಾಯುವ ಕುರುಬನಂತೆ|
ಅವರನ್ನು ಕೂಡಿಸಿ ಕಾಪಾಡುವನೆಂದು ಪ್ರಕಟಿಸಿರಿ||

ಸರ್ವೇಶ್ವರ ಯಕೋಬರ ವಿಮೋಚಕ|
ಅವರನ್ನು ಅವರಿಗಿಂತ ಬಲಿಷ್ಠರ ಕೈಯಿಂದ ಬಿಡಿಸಿದಾತ||
ಅವರು ಬಂದು ಹಾಡುವರು ಸಿಯೋನ್ ಶಿಖರದಲಿ|
ಸರ್ವೇಶ್ವರನ ಈ ವರದಾನಗಳನ್ನು ಅನುಭವಿಸಲಿಕ್ಕಾಗಿ|
ಬರುವರು ಪ್ರವಾಹ ಪ್ರವಾಹವಾಗಿ||

ಆಗ ನಾಟ್ಯಮಾಡಿ ನಲಿವಳು ಯುವತಿ|
ಹರ್ಷಿಸುವರು ಯುವಕರು ಮುದುಕರು ಜೊತೆಯಾಗಿ||
ಅವರ ದುಃಖವನು ಸಂತೋಷವಾಗಿಸುವೆನು|
ವ್ಯಸನ ತೊರೆದು ಆನಂದಿಸುವಂತೆ ಅವರನು ಸಂತೈಸುವೆನು||

ಶುಭಸಂದೇಶ: ಲೂಕ 9:43-45

ಆ ಕಾಲದಲ್ಲಿ ಯೇಸು ಮಾಡಿದ ಸಕಲ ಮಹತ್ಕಾರ್ಯಗಹನ್ನು ಕುರಿತು ಜನರೆಲ್ಲರೂ ಸೊಜಿಗ ಪಡುತ್ತಿರುವಲ್ಲಿ, ಶಿಷ್ಯರಿಗೆ, " ಈ ನನ್ನ ಮಾತು ನಿಮ್ಮ ಕಿವಿಗೆ ಇಳಿಯಲಿ. ಅದೇನೆಂದರೆ : ನರಪುತ್ರನು ಜನರ ವಶಕ್ಕೆ ಒಪ್ಪಿಸಲ್ಪಡಲಿದ್ದಾನೆ, " ಎಂದರು. ಯೇಸು ಹೇಳಿದ ಈ ಮಾತನ್ನು ಶಿಷ್ಯರು ಗ್ರಹಿಸಿಕೊಳ್ಳಲಿಲ್ಲ, ಒಗಟಿನ ಹಾಗೆ ಇದ್ದುದರಿಂದ ಅರ್ಥಮಾಡಿಕೊಳ್ಳಲಿಲ್ಲ. ಅದನ್ನು ಕುರಿತು ಯೇಸುವನ್ನು ಕೇಳುವುದಕ್ಕೂ ಅವರು ಅಂಜಿದರು.

24.09.21

ಮೊದಲನೆಯ ವಾಚನ: ಹಗ್ಗಾಯ 2:1-9

ಅದೇ ವರ್ಷದ ಏಳನೇ ತಿಂಗಳಿನ ಇಪ್ಪತ್ತೊಂದನೆಯ ದಿನದಲ್ಲಿ ಪ್ರವಾದಿ ಹಗ್ಗಾಯನ ಮೂಲಕ ಸರ್ವೇಶ್ವರ ಈ ಸಂದೇಶವನ್ನು ದಯಪಾಲಿಸಿದರು : ಶೆಯಲ್ತೀಯೇಲನ ಮಗನೂ ಜುದೇಯ ನಾಡಿನ ಅಧಿಪತಿಯೂ ಆದ ಜೆರುಬ್ಬಾಬೆಲನಿಗೆ ಮತ್ತು ಮಹಾಯಾಜಕ ಯೆಹೋಶುವನಿಗೆ ಮತ್ತು ಅಳಿದುಳಿದ ಜನರೆಲ್ಲರಿಗೆ ಹೀಗೆ ತಿಳಿಸು -- " ಈ ದೇವಾಲಯದ ಪೂರ್ವ ವೈಭವವನ್ನು ನೋಡಿದವರು ನಿಮ್ಮಲ್ಲಿ ಎಷ್ಟು ಮಂದಿ ಉಳಿದಿದ್ದೀರಿ ? ಇದರ ಈಗಿನ ಸ್ಥಿತಿ ನಿಮಗೆ ಹೇಗೆ ತೋರುತ್ತದೆ ? ನಿಮ್ಮ ದೃಷ್ಟಿಗೆ ಏನೂ ಇಲ್ಲದಂತೆ ಕಾಣಿಸುತ್ತದಲ್ಲವೇ ? ಸರ್ವೇಶ್ವರನಾದ ನಾನು ಹೇಳುವುದನ್ನು ಕೇಳಿ : ಜೆರುಬ್ಬಾಬೆಲನೇ, ಈಗ ಧೈರ್ಯದಿಂದಿರು. ಯೆಹೋಚಾದಾಕನ ಮಗನೂ ಮಹಾಯಾಜಕನೂ ಆದ ಯೆಹೋಶುವನೇ, ಎದೆಗುಂದಬೇಡ. ನಾಡಿನ ಜನರೇ, ನೀವೆಲ್ಲರು ಧೈರ್ಯದಿಂದ ಕೆಲಸ ಮಾಡಿ. ಇದು ಸೇನಾಧೀಶ್ವರ ಸರ್ವೇಶ್ವರನಾದ ನನ್ನ ನುಡಿ. ನಾನು ನಿಮ್ಮೊಡನೆ ಇದ್ದೇನೆ. ನೀವು ಈಜಿಪ್ಟ್ ದೇಶದಿಂದ ಹೊರಟುಬಂದಾಗ ನಾನು ನಿಮಗೆ ಪ್ರಮಾಣವಾಗಿ ಕೊಟ್ಟ ಮಾತನ್ನು ನೆರವೇರಿಸುವೆನು. ನನ್ನ ಆತ್ಮವು ನಿಮ್ಮಲ್ಲಿ ನೆಲೆಗೊಂಡಿದೆ, ಭಯಪಡದಿರಿ. ಸ್ವಲ್ಪಕಾಲದಲ್ಲೇ ಮತ್ತೊಮ್ಮೆ ಭೂಮ್ಯಾಕಾಶಗಳನ್ನೂ ಸಮುದ್ರವನ್ನೂ ಮರುಭೂಮಿಯನ್ನೂ ಅದರಿಸುವೆನು. ಸಕಲ ಜನಾಂಗಗಳನ್ನು ನಡುಗಿಸುವೆನು. ಆಗ ಎಲ್ಲ ರಾಷ್ಟ್ರಗಳ ಸಿರಿಸಂಪತ್ತು ಇಲ್ಲಿಗೆ ಬರುವುದು. ಈ ಆಲಯವನ್ನು ವೈಭವದಿಂದ ತುಂಬಿಸುವೆನು. ಇದು ಸರ್ವಶಕ್ತ ಸರ್ವೇಶ್ವರನ ನುಡಿ. ಬೆಳ್ಳಿ ನನ್ನದು, ಬಂಗಾರವೆಲ್ಲ ನನ್ನದು. ಈ ಆಲಯದ ಮುಂದಿನ ವೈಭವವು ಹಿಂದಿನ ವೈಭವಕ್ಕಿಂತ ಶ್ರೇಷ್ಠವಾಗಿರುವುದು. ಈ ಸ್ಥಳದಲ್ಲಿ ಶಾಂತಿ ಸಮೃದ್ದಿಯನ್ನು ಅನುಗ್ರಹಿಸುವೆನು. ಇದು ಸೇನಾಧೀಶ್ವರ ಸರ್ವೇಶ್ವರಸ್ವಾಮಿಯ ನುಡಿ."

ಕೀರ್ತನೆ 43:1-4
ಶ್ಲೋಕ: ಸ್ತುತಿಸುವೆ ನಾನಾತನನು, ಮುಕ್ತಿದಾತ ಪರಮಾತ್ಮ ಆತನೆನಗೆ.

ನಿರ್ಣಯಿಸು ನನ್ನ ನ್ಯಾಯವನು ಓ ದೇವಾ|
ವಾದಿಸು ಆ ಭಕ್ತಹೀನ ಜನತೆಯ ವಿರುದ್ಧ|
ಬಿಡಿಸೆನ್ನನು ವಂಚಕರಿಂದ ಅಧರ್ಮಿಗಳಿಂದ||

ನನಗೆ ಕೋಟೆ ನೀನಲವೆ? ನನ್ನ ಕೈಬಿಟ್ಟಿರುವೆ ಏಕೆ?|
ಶತ್ರು ಬಾಧೆಯಿಂದ ಭಿಕಾರಿಯಂತೆ ನಾನಲೆಯಬೇಕೆ?||
ಕಳುಹಿಸು ನಿನ್ನ ಜ್ಯೋತಿಯನು, ನಿನ್ನ ಸತ್ಯವನು, ನನ್ನ ನಡೆಸಲಿಕೆ|
ಸೇರಿಸೆನ್ನನು ನಿನ್ನ ಪವಿತ್ರ ಪರ್ವತಕೆ, ನಿನ್ನಯ ನಿವಾಸಕ್ಕೆ||

ಬರುವೆನಾಗ ನಿನ್ನ ಬಲಿಪೀಠದ ಬಳಿಗೆ|
ನನ್ನಾನಂದ ನಿಧಿಯಾಗಿ ನಿನ್ನ ಸನ್ನಿಧಿಗೆ|
ವೀಣೆ ನುಡಿಸಿ ದೇವಾ, ನಿನ್ನ ಸ್ತುತಿಸಲಿಕೆ||

ಶುಭಸಂದೇಶ: ಲೂಕ 9:18-22

ಆ ಕಾಲದಲ್ಲಿ ಒಮ್ಮೆ ಯೇಸು ಏಕಾಂಗಿಯಾಗಿ ಪ್ರಾರ್ಥನೆಮಾಡುತ್ತಿದ್ದಾಗ ಶಿಷ್ಯರು ಸಮೀಪದಲ್ಲೇ ಇದ್ದರು. " ಜನಸಾಮಾನ್ಯರು ನನ್ನನ್ನು ಯಾರೆನ್ನುತ್ತಾರೆ? " ಎಂದು ಯೇಸು ಅವರನ್ನು ಪ್ರಶ್ನಿಸಿದರು. ಅದಕ್ಕೆ ಅವರು, " ಹಲವರು ತಮ್ಮನ್ನು ' ಸ್ನಾನಿಕ ಯೊವಾನ್ನ ' ಎನ್ನುತ್ತಾರೆ, ಕೆಲವರು ' ಎಲೀಯನು ' ಎನ್ನುತ್ತಾರೆ, ಮತ್ತೆ ಕೆಲವರು ' ಪ್ರಾಚೀನ ಪ್ರವಾದಿಗಳಲ್ಲಿ ಒಬ್ಬನು ಮರಳಿ ಜೀವಂತನಾಗಿದ್ದಾನೆ ' ಎನ್ನುತ್ತಾರೆ, " ಎಂದು ಉತ್ತರವಿತ್ತರು. ಆಗ ಯೇಸು, " ಆದರೆ ನೀವು ನನ್ನನ್ನು ಯಾರೆನ್ನುತ್ತೀರಿ? " ಎಂದು ಪುನಃ ಪ್ರಶ್ನಿಸಿದರು. ಅದಕ್ಕೆ ಪೇತ್ರನು, " ದೇವರಿಂದ ಅಭಿಷಿಕ್ತರಾದ ಲೋಕೋದ್ಧಾರಕ ತಾವೇ " ಎಂದು ಉತ್ತರ ಕೊಟ್ಟನು. ಈ ವಿಷಯವನ್ನು ಯಾರಿಗೂ ತಿಳಿಸಬಾರದೆಂದು ಯೇಸು ಶಿಷ್ಯರನ್ನು ಆಜ್ಞಾಪೂರ್ವಕವಾಗಿ ಎಚ್ಚರಿಸಿದರು. ಇದಲ್ಲದೆ, " ನರಪುತ್ರನು ಕಠಿಣವಾದ ಯಾತನೆಯನ್ನು ಅನುಭವಿಸಬೇಕಾಗಿದೆ. ಸಭಾಪ್ರಮುಖರಿಂದಲೂ ಮುಖ್ಯಯಾಜಕರಿಂದಲೂ ಧರ್ಮಶಾಸ್ತ್ರಿಗಳಿಂದಲೂ ಆತನು ತಿರಸ್ಕ್ರತನಾಗಿ ಕೊಲ್ಲಲ್ಪಡುವನು. ಆದರೆ ಮೂರನೇ ದಿನ ಆತನು ಪುನರುತ್ಥಾನ ಹೊಂದುವನು, " ಎಂದು ಅವರಿಗೆ ತಿಳಿಸಿದರು.

23.09.21

ಮೊದಲನೆಯ ವಾಚನ: ಹಗ್ಗಾಯ 1:1-8

ಪರ್ಷಿಯಾದ ಚಕ್ರವರ್ತಿಯಾದ ಡೇರಿಯಸ್ ಅವನ ಆಳ್ವಿಕೆಯ ಎರಡನೇ ವರ್ಷದ ಆರನೇ ತಿಂಗಳ ಮೊದಲನೆಯ ದಿನದಂದು ಪ್ರವಾದಿ ಹಗ್ಗಾಯನ ಮುಖಾಂತರ ಸರ್ವೇಶ್ವರಸ್ವಾಮಿ ನೀಡಿದ ದೈವೋಕ್ತಿ: ಅದು ಶೆಯಲ್ತಿಯೇಲನ ಮಗನೂ ಜುದೇಯ ನಾಡಿನ ದೇಶಾಧಿಪತಿಯೂ ಆದ ಜೆರುಬ್ಬಾಬೆಲನನ್ನು ಮತ್ತು ಯೆಹೋಚಾದಾಕನ ಮಗನೂ ಮಹಾಯಾಜಕನೂ ಆದ ಯೆಹೋಶುವನನ್ನು ಉದ್ದೇಶಿಸಿ ಕೊಡಲಾದ ಸಂದೇಶವಾಗಿತ್ತು. ಸೇನಾಧೀಶ್ವರರಾದ ಸರ್ವೇಶ್ವರ ಇಂತೆನ್ನುತ್ತಾರೆ : "ಮಹಾದೇವಾಲಮವನ್ನು ಪುನಃ ಕಟ್ಟುವುದಕ್ಕೆ ಸಮಯ ಇನ್ನೂ ಬಂದಿಲ್ಲ ಎಂದುಕೊಳ್ಳುತ್ತಾರೆ ಈ ಜನರು. " ಆಗ ಪ್ರವಾದಿ ಹಗ್ಗಾಯನ ಮುಖಾಂತರ ಸರ್ವೇಶ್ವರ ಕೊಟ್ಟ ಸಂದೇಶವೇನೆಂದರೆ : " ನನ್ನ ಆಲಯ ಹಾಳುಬಿದ್ದಿರುವಾಗ ನೀವು ಸೊಗಸಾದ ಹಲಗೆ ಹೊದಿಸಿದ ಮನೆಗಳಲ್ಲಿ ವಾಸಿಸುವುದು ಸರಿಯೋ ? ನಮಗೆ ಒದಗಿರುವ ಪರಿಸ್ಥಿತಿಯನ್ನು ಆಲೋಚಿಸಿ ನೋಡಿ. ನೀವು ಬಿತ್ತಿದ ಬೀಜ ಬಹಳ, ಪಡೆದ ಫಲ ವಿರಳ, ತಿನ್ನುತ್ತೀರಿ, ಆದರೆ ತೃಪ್ಪಿಯಿಲ್ಲ, ಕುಡಿಯುತ್ತೀರಿ, ಆದರೆ ದಾಹ ನೀಗುವುದಿಲ್ಲ. ಹೊದೆಯುತ್ತೀರಿ, ಆದರೆ ಚಳಿ ಹೋಗುವುದಿಲ್ಲ. ದುಡಿಮೆಗಾರನ ದುಡ್ಡಿನ ಚೀಲ ತೂತಿನ ಚೀಲ, " ಸೇನಾಧೀಶ್ವರ ಸರ್ವೇಶ್ವರ ಹೇಳುವುದನ್ನು ಕೇಳಿ : " ನಿಮಗೆ ಒದಗಿರುವ ಪರಿಸ್ಥಿತಿಯನ್ನು ಕುರಿತು ಆಲೋಚಿಸಿ ನೋಡಿ. ಮಲೆನಾಡಿಗೆ ಹೋಗಿ ಮರವನ್ನು ತಂದು ನನ್ನ ಆಲಯವನ್ನು ಕಟ್ಟಿರಿ. ಆಗ ನಾನು ಪ್ರಸನ್ನನಾಗುವೆನು. ನನ್ನ ಮಹಿಮೆಯನ್ನು ಪ್ರಕಟಿಸುವೆನು, " ಎಂದು ನುಡಿಯುತ್ತಾರೆ ಸ್ವಾಮಿ.

ಕೀರ್ತನೆ 149:1-2, 3-4, 5-6, 9
ಶ್ಲೋಕ: ಪ್ರೀತಿಸುತ್ತಾನೆ ಪ್ರಭು ತನ್ನ ಪ್ರಜೆಯನು.

ಹಾಡಿರಿ ಪ್ರಭುವಿಗೆ ನೂತನ ಕೀರ್ತನೆಯನು|
ಭಕ್ತರ ಸಭೆಯಲಿ ಸ್ತುತಿ ಮಾಡಿರಿ ಆತನನು||
ಆನಂದಿಸಲಿ ತಮ್ಮ ಸೃಷ್ಟಿಕರ್ತನಲಿ ಇಸ್ರಯೇಲರು|
ತಮ್ಮಾ ರಾಜನಿಗೆ ಜಯಕಾರ ಮಾಡಲಿ ಸಿಯೋನಿನವರು||

ಆತನ ನಾಮವನು ಕೀರ್ತಿಸಲಿ ಕುಣಿತದಿಂದ|
ಆತನನು ಭಜಿಸಲಿ ತಮಟೆ ಕಿನ್ನರಿಗಳಿಂದ||
ಪ್ರೀತಿಸುತ್ತಾನೆ ಪ್ರಭು ತನ್ನ ಪ್ರಜೆಯನು|
ಜಯಶೀಲರನ್ನಾಗಿಸುತ್ತಾನೆ ದೀನದಲಿತರನು||

ಹಿಗ್ಗಲಿ ಭಕ್ತಾದಿಗಳು ದೂರೆತ ವಿಜಯದಲಿ|
ಜಯಕಾರ ಮಾಡಲಿ ತಮ್ಮತಮ್ಮ ಶಿಬಿರಗಳಲಿ||
ಇರಲಿ ಪ್ರಭುವಿನ ಸ್ತೋತ್ರ ಅವರ ಬಾಯಲಿ|
ಇದು ತರಲಿ ಭಕ್ತರೆಲ್ಲರಿಗೆ ಗೌರವವನು||

ಶುಭಸಂದೇಶ: ಲೂಕ 9:7-9

ಆ ಕಾಲದಲ್ಲಿ, ನಡೆಯುತ್ತಿದ್ದ ಎಲ್ಲ ಸಂಗತಿಗಳು ಸಾಮಂತ ರಾಜ ಹೆರೋದನ ಕಿವಿಗೆ ಬಿದ್ದುವು. ಅವನ ಮನಸ್ಸು ಕಳವಳಗೊಂಡಿತ್ತು. ಏಕೆಂದರೆ, ' ಯೊವಾನ್ನನು ಮರಳಿ ಜೀವಂತನಾಗಿ ಎದ್ದಿದ್ದಾನೆ ' ಎಂದು ಕೆಲವರೂ, ' ಎಲೀಯನು ಪುನಃ ಕಾಣಿಸಿಕೊಂಡಿದ್ದಾನೆ ' ಎಂದು ಕೆಲವರೂ, ' ಪ್ರಾಚೀನ ಪ್ರವಾದಿಗಳಲ್ಲಿ ಒಬ್ಬನು ಮರಳಿ ಜೀವಂತನಾಗಿದ್ದಾನೆ ' ಎಂದು ಮತ್ತೆ ಕೆಲವರೂ ಹೇಳುತ್ತಿದ್ದರು. ಹೆರೋದನಾದರೋ, ' ಯೊವಾನ್ನನೇ ? ಅವನನ್ನು ನಾನೇ ಶಿರಚ್ಛೇದನ ಮಾಡಿಸಿದೆನಲ್ಲಾ ! ಮತ್ತೆ ಇವನಾರು ? ಇವನ ಬಗ್ಗೆ ಇಂಥಾ ವಿಷಯಗಳನ್ನೆಲ್ಲ ಕೇಳುತ್ತಾ ಇರುವೆನಲ್ಲಾ ! ' ಎಂದುಕೊಂಡು, ಯೇಸುವನ್ನು ನೋಡಲು ಅವಕಾಶ ಹುಡುಕುತ್ತಿದ್ದನು.

22.09.21

ಮೊದಲನೆಯ ವಾಚನ: ಎಜ್ರ 9:5-9

ನಾನು ಎಜ್ರನು ಸಂಧ್ಯಾನೈವೇದ್ಯ ಸಮರ್ಪಣೆಯ ನಂತರ ದೇಹದಂಡನೆ ಮಾಡುವುದನ್ನು ಬಿಟ್ಟು ಹರಿದ ಬಟ್ಟೆವಸ್ತ್ರಗಳಿಂದ ಕೂಡಿದವನಾಗಿಯೇ ಮೊಣಕಾಲೂರಿ, ನನ್ನ ದೇವರಾದ ಸರ್ವೇಶ್ವರನ ಕಡೆಗೆ ಕೈಗಳನ್ನೆತ್ತಿ ಹೀಗೆಂದು ಪ್ರಾರ್ಥಿಸಿದೆ: " ನನ್ನ ದೇವರೇ, ನಾನು ಮನಗುಂದಿದವನು ಆಗಿದ್ದೇನೆ, ನಿಮ್ಮ ಕಡೆಗೆ ಮುಖವನ್ನು ಎತ್ತುವುದಕ್ಕೆ ನಾಚಿಕೊಳುತ್ತೇನೆ. ನನ್ನ ದೇವರೇ, ನಮ್ಮ ಪಾಪಗಳು ನಮ್ಮ ತಲೆಮೀರಿ ಬೆಳೆದಿವೆ, ನಮ್ಮ ಅಪರಾಧ ಆಕಾಶವನ್ನು ಮುಟ್ಟುವಷ್ಟು ದೊಡ್ಡದಾಗಿದೆ! ನಾವು ನಮ್ಮ ಪಿತೃಗಳ ಕಾಲದಿಂದ ಇಂದಿನವರೆಗೂ ಮಹಾಪರಾಧಿಗಳೇ, ನಮ್ಮ ಪಾಪಗಳ ನಿಮಿತ್ತ ನಾವೂ ನಮ್ಮ ಅರಸರೂ ಯಾಜಕರೂ ಅನ್ಯದೇಶಗಳ ರಾಜರ ಕೈಗೆ ಸಿಕ್ಕಿಬಿದ್ದೆವು. ಈಗಿರುವಂತೆ, ಕತ್ತಿಗೂ ಸೆರೆಗೂ ಸುಲಿಗೆಗೂ ಅಪಮಾನಕ್ಕೂ ಗುರಿಯಾದೆವು. ಆದರೂ ನಮ್ಮ ದೇವರಾದ ಸರ್ವೇಶ್ವರಾ, ಒಂದು ಕ್ಷಣ ನಮಗೆ ನೀವು ಪ್ರಸನ್ನರಾಗಿ,. ನಮ್ಮಲ್ಲಿ ಸ್ವಲ್ಪ ಜನರನ್ನಾದರೂ ರಕ್ಷಣೆಗಾಗಿ ಉಳಿಸಿ, ತಮ್ಮ ಪರಿಶುದ್ಧ ಸ್ಥಳದಲ್ಲಿ ಮೊಳೆಯುವಂತೆ, ನಮ್ಮನ್ನು ನೆಲೆಗೊಳಿಸಿ, ನಮ್ಮ ಕಣ್ಣುಗಳನ್ನು ಬೆಳಗಿಸಿ, ನಮ್ಮ ದಾಸತ್ವದಲ್ಲಿ ನಮಗೆ ಸ್ವಲ್ಪ ಮಟ್ಟಿಗೆ ನವಜೀವನವನ್ನು ಅನುಗ್ರಹಿಸಿದಿರಿ. ನಾವು ಗುಲಾಮರಾದರೂ ನಮ್ಮ ದೇವರು ನಮ್ಮ ದಾಸತ್ವದಲ್ಲಿ ನಮ್ಮನ್ನು ಕೈಬಿಡಲಿಲ್ಲ, ಹಾಳುಬಿದ್ದ ನಮ್ಮ ದೇವಾಲಯವನ್ನು ಪುನಃ ಕಟ್ಟಿ ಭದ್ರಪಡಿಸುವುದಕ್ಕಾಗಿ, ನಮಗೆ ನವಜೀವನ ಪ್ರಾಪ್ತವಾಗುವಂತೆ ಹಾಗು ಜದೇಯದಲ್ಲೂ ಜೆರುಸಲೇಮಿನಲ್ಲೂ ನಮಗೆ ಅಭಯಾಶ್ರಯ ಸಿಗುವಂತೆ, ಪರ್ಷಿಯ ರಾಜರ ಮುಂದೆ ನಮಗೆ ಕೃಪೆಯನ್ನು ಅನುಗ್ರಹಿಸಿದ್ದೀರಿ.

ತೊಬೀತ 13:2, 4, 6, 7, 8
ಶ್ಲೋಕ: ನಿತ್ಯಕ್ಕೂ ದೇವರಿ ಶ್ರೀನಾಮ ಪೂಜಿತವಾಗಲಿ.

ಶಿಕ್ಷಿಸುವವನೂ ಕ್ಷಮಿಸುವವನೂ ಆತನೇ|
ಪಾತಾಳಕ್ಕಿಳಿಸುವವನೂ ಮೇಲಕ್ಕೆತ್ತುವವನೂ ಆತನೇ|
ಆತನ ಕೈಯಿಂದ ತಪ್ಪಿಸಿಕೊಳ್ಳುವವನು ಯಾವನಿದ್ದಾನೆ?||

ಅಲ್ಲೂ ತೋರ್ಪಡಿಸಿರುವನು ತನ್ನ ಪ್ರಭೆಯನು|
ಗುಣಗಾನ ಮಾಡಿರಿ, ಸರ್ವಜೀವಿಗಳ ಮುಂದೆ ಆತನನು||
ಆತನೇ ನಮ್ಮ ಸರ್ವೇಶ್ವರ, ಆತನೇ ನಮ್ಮ ದೇವ|
ಆತನೇ ನಮ್ಮ ತಂದೆ, ಆತನೇ ನಮ್ಮ ದೇವ ಅನವರತ||

ಸ್ತುತಿಸಿರಿ ಸತ್ಯಸ್ವರೂಪಿಯಾದ ಸರ್ವೇಶ್ವರನು|
ಯುಗಯುಗಾಂತರಕ್ಕೂ ಆಳುವ ಅರಸನನು||
ನಾನಾತನ ಭಕ್ತನು, ಗಡಿಪಾರದ ಈ ನಾಡಿನಲೂ|
ಆತನ ಶಕ್ತಿ ಸಾಮರ್ಥ್ಯವನು ಸಾರುವೆನು ದುಷ್ಟರ ಈ ರಾಷ್ಟ್ರರಲೂ||

ಪಾಪತ್ಮರೇ, ಹಿಂದಿರುಗಿ ಬನ್ನಿರಿ|
ಆತನಿಗೆ ನ್ಯಾಯವಾದುದನ್ನೆ ಮಾಡಿರಿ|
ಕಟಾಕ್ಷಿಸಿಯಾನು ನಿಮಗೆ ಕೃಪೆತೋರಿ||

ಶುಭಸಂದೇಶ: ಲೂಕ 9:1-6

ಆ ಕಾಲದಲ್ಲಿ ಯೇಸು ಹನ್ನೆರಡು ಮಂದಿ ಪ್ರೇಷಿತರನ್ನು ಒಟ್ಟಿಗೆ ಕರೆದು ಎಲ್ಲ ದೆವ್ವಗಳನ್ನು ಬಿಡಿಸಲೂ ರೋಗ ನಿವಾರಣೆಮಾಡಲೂ ಅವರಿಗೆ ಶಕ್ತಿಯನ್ನು ಮತ್ತು ಅಧಿಕಾರವನ್ನು ಕೊಟ್ಟರು. ಅನಂತರ ದೇವರ ಸಾಮ್ರಾಜ್ಯವನ್ನು ಕುರಿತು ಬೋಧಿಸುವುದಕ್ಕೂ ರೋಗಿಗಳನ್ನು ಗುಣಪಡಿಸುವುದಕ್ಕೂ ಅವರನ್ನು ಕಳುಹಿಸಿದರು. ಕಳುಹಿಸುವಾಗ ಅವರಿಗೆ ಇಂತೆಂದರು: " ಪ್ರಯಾಣಕ್ಕೆಂದು ಏನನ್ನೂ ತೆಗೆದುಕೊಳ್ಳಬೇಡಿ, ದಂಡ, ಜೋಳಿಗೆ, ಬುತ್ತಿ ಅಥವಾ ಹಣ ಯಾವುದೂ ಬೇಡ. ಎರಡು ಅಂಗಿಗಳೂ ಬೇಕಾಗಿಲ್ಲ. ಯಾವ ಮನೆಯವರು ನಿಮ್ಮನ್ನು ಬರಮಾಡಿಕೊಳ್ಳುತ್ತಾರೋ ಆ ಮನೆಯಲ್ಲೇ ತಂಗಿರಿ. ಅಲ್ಲಿಂದಲೇ ಮುಂದಕ್ಕೆ ಸಾಗಿರಿ. ಯಾವ ಊರಿನವರಾದರೂ ನಿಮ್ಮನ್ನು ಸ್ವಾಗತಿಸದೆ ಹೋದಲ್ಲಿ, ನೀವು ಆ ಊರನ್ನು ಬಿಟ್ಟುಹೋಗುವಾಗ ನಿಮ್ಮ ಪಾದಕ್ಕೆ ಹತ್ತಿದ ಧೂಳನ್ನು ಕೂಡ ಝಾಡಿಸಿಬಿಡಿ. ಅದು ಅವರ ವಿರುದ್ಧ ಸಾಕ್ಷಿಯಾಗಿರಲಿ, " ಎಂದರು. ಪ್ರೇಷಿತರು ಹೊರಟು ಹಳ್ಳಿಹಳ್ಳಿಗೂ ಹೋಗಿ ಎಲ್ಲ ಕಡೆ ಶುಭಸಂದೇಶವನ್ನು ಬೋಧಿಸಿದರು, ರೋಗಿಗಳನ್ನು ಗುಣಪಡಿಸಿದರು.

21.09.21

ಮೊದಲನೆಯ ವಾಚನ: ಎಫೆಸಿಯರಿಗೆ 4:1-7, 11-13

ಪ್ರಭುವಿನ ಸೇವೆಯ ನಿಮಿತ್ತ ಸೆರೆಯಾಳಾಗಿರುವ ನಾನು ನಿಮ್ಮಲ್ಲಿ ಬಿನ್ನವಿಸುವುದು ಏನೆಂದರೆ: ದೇವರ ಕರೆಗೆ ಅನುಗುಣವಾಗಿ ಯೋಗ್ಯ ಬಾಳುವೆ ನಡೆಸಿರಿ. ಯಾವಾಗಲೂ ದೀನದಯಾಳತೆ, ವಿನಯಶೀಲತೆ ಹಾಗೂ ಶಾಂತಿಸಮಾಧಾನವುಳ್ಳವರಾಗಿರಿ. ಪರಸ್ಪರ ಪ್ರೀತಿಯಿಂದಲೂ ಸಹನೆಯಿಂದಲೂ ವರ್ತಿಸಿರಿ. ಪವಿತ್ರಾತ್ಮರಿಂದ ಉಂಟಾಗುವ ಐಕ್ಯತೆಯನ್ನು ಕಾಪಾಡಿಕೊಳ್ಳಲು ಆಸಕ್ತರಾಗಿರಿ. ಅದು ನಿಮ್ಮನ್ನು ಸಮಾಧಾನದಲ್ಲಿ ಬಂಧಿಸುವುದು. ನೀವೆಲ್ಲರೂ ಒಂದೇ ಶರೀರಕ್ಕೆ ಸೇರಿದವರು, ಒಬ್ಬರೇ ಪವಿತ್ರಾತ್ಮರನ್ನು ಪಡೆದವರು, ಒಂದೇ ನಿರೀಕ್ಷೆಗಾಗಿ ಕರೆಹೊಂದಿದವರು. ನಮ್ಮೆಲ್ಲರಿಗೂ ಪ್ರಭೂ ಒಬ್ಬರೇ, ವಿಶ್ವಾಸವೂ ಒಂದೇ, ದೀಕ್ಷಾಸ್ನಾನವೂ ಒಂದೇ. ದೇವರು ಒಬ್ಬರೇ, ಸರ್ವರ ತಂದೆಯೂ ಅವರೇ, ಸರ್ವಶ್ರೇಷ್ಠರೂ ಅವರೇ, ಸರ್ವರ ಮೂಲಕ ಕಾರ್ಯ ನಿರ್ವಹಿಸುವವರೂ ಅವರೇ ಮತ್ತು ಸಮಸ್ತರಲ್ಲಿ ವಾಸಿಸುವವರೂ ಅವರೇ. ಆದರೂ ನಮ್ಮಲ್ಲಿ ಪ್ರತಿಯೊಬ್ಬನೂ ಕ್ರಿಸ್ತ ಯೇಸು ಅನುಗ್ರಹಿಸುವ ಪ್ರಕಾರವೇ ವರಗಳನ್ನು ಪಡೆದಿದ್ದಾನೆ. ಈ ವ್ಯಕ್ತಿ ನರಮಾನವರಿಗೆ ವರದಾನಗಳನಿತ್ತರು. ಕೆಲವರನ್ನು ಪ್ರೇಷಿತರನ್ನಾಗಿಯೂ, ಕೆಲವರನ್ನು ಸಭಾಪಾಲಕರನ್ನಾಗಿಯೂ ಮತ್ತು ಬೋಧಕರನ್ನಾಗಿಯೂ ನೇಮಿಸಿದರು. ದೇವಜನರನ್ನು ಪರಿಣತರನ್ನಾಗಿಸಿ ದೇವರ ಸೇವೆಗೆ ಸಿದ್ಧಗೊಳಿಸಲೆಂದು ಮತ್ತು ಯೇಸುಕ್ರಿಸ್ತರ ದೇಹವಾದ ಧರ್ಮಸಭೆ ಅಭಿವೃದ್ಧಿ ಹೊಂದಲೆಂದು ಈ ವರಗಳನ್ನು ಅವರಿಗೆ ನೀಡಿದರು. ಹೀಗೆ ನಾವೆಲ್ಲರೂ ಒಂದೇ ವಿಶ್ವಾಸದಿಂದಲೂ ದೇವರ ಪುತ್ರನನ್ನು ಕುರಿತ ಜ್ಞಾನದಿಂದಲೂ ಐಕಮತ್ಯವನ್ನು ಮತ್ತು ಪರಿಪಕ್ವತೆಯನ್ನು ಪಡೆಯುತ್ತೇವೆ. ಜ್ಞಾನಾರ್ಜನೆಯನ್ನು ಪಡೆದವರಾಗಿ, ಕ್ರಿಸ್ತ ಯೇಸುವಿನ ಪರಿಪೂರ್ಣತೆಯ ಮಟ್ಟವನ್ನು ಮುಟ್ಟುತ್ತೇವೆ.

ಕೀರ್ತನೆ 19:1-4
ಶ್ಲೋಕ: ಅವುಗಳ ನುಡಿಮಾತು ವ್ಯಾಪಿಸಿದೆ ಜಗದಾದ್ಯಂತ.

ಆಕಾಶಮಂಡಲ ಸಾರುತ್ತಿದೆ ದೇವರ ಮಹಿಮೆಯನು|
ತಾರಮಂಡಲ ತೋರುತಿದೆ ದೇವರ ಕೈಕೃತಿಗಳನು||
ದಿನವು ಮರುದಿನಕೆ ಮಾಡುತಿದೆ ಈ ಪ್ರಕಟನೆಯನು|
ರಾತ್ರಿ ಮರುರಾತ್ರಿಗೆ ನೀಡುತಿದೆ ಈ ಪ್ರಚಾರವನು||

ಅವುಗಳಿಗೆ ಮಾತಿಲ್ಲ, ಅವುಗಳಿಗೆ ಶಬ್ದವಿಲ್ಲ|
ಅವುಗಳ ಸ್ವರವಂತೂ ಕೇಳಿ ಬರುವುದಿಲ್ಲ||
ಆದರೂ ಅವುಗಳ ಧ್ವನಿರೇಖೆ ಹರಡಿದೆ ಬುವಿಯಾದ್ಯಂತ|
ಅವುಗಳ ನುಡಿಮಾತು ವ್ಯಾಪಿಸಿದೆ ಜಗದಾದ್ಯಂತ||

ಶುಭಸಂದೇಶ: ಮತ್ತಾಯ 9:9-13

ಯೇಸು ಆ ಸ್ಥಳವನ್ನು ಬಿಟ್ಟು ಮುಂದಕ್ಕೆ ಹೋಗುತ್ತಿದ್ದಾಗ ಮತ್ತಾಯ ಎಂಬವನನ್ನು ಕಂಡರು. ಅವನು ಸುಂಕ ವಸೂಲಿಗಾಗಿ ಉಕ್ಕಡದಲ್ಲಿ ಕುಳಿತಿದ್ದನು. " ನನ್ನನ್ನು ಹಿಂಬಾಲಿಸು, " ಎಂದು ಹೇಳಿ ಯೇಸು ಅವನನ್ನು ಕರೆದರು. ಮತ್ತಾಯನು ಎದ್ದು ಅವರನ್ನು ಹಿಂಬಾಲಿಸಿದನು. ಇದಾದ ಮೇಲೆ ಯೇಸು ಮತ್ತಾಯನ ಮನೆಯಲ್ಲಿ ಊಟಕ್ಕೆ ಕುಳಿತಿದ್ದರು. ಬಹುಮಂದಿ ' ಸುಂಕದವರೂ ' ' ಪಾಪಿಷ್ಠರೂ ' ಅಲ್ಲಿಗೆ ಬಂದರು. ಯೇಸು ಮತ್ತು ಅವರ ಶಿಷ್ಯರು ಕುಳಿತಿದ್ದ ಪಂಕ್ತಿಯಲ್ಲೇ ಇವರೂ ಊಟಕ್ಕೆ ಕುಳಿತರು. ಫರಿಸಾಯರು ಇದನ್ನು ಕಂಡದ್ದೇ ಯೇಸುವಿನ ಶಿಷ್ಯರನ್ನು ಉದ್ದೇಶಿಸಿ, " ನಿಮ್ಮ ಗುರು ಇಂತಹ ಬಹಿಷ್ಕ್ರತ ಜನರ ಜೊತೆಯಲ್ಲಿ ಊಟಮಾಡುವುದೇಕೇ? " ಎಂದು ಆಕ್ಷೇಪಿಸಿದರು. ಇದನ್ನು ಕೇಳಿಸಿಕೊಂಡ ಯೇಸು, " ವೈದ್ಯನ ಅವಶ್ಯಕತೆ ಇರುವುದು ರೋಗಿಗಳಿಗೆ, ಆರೋಗ್ಯವಂತರಿಗಲ್ಲ. ನೀವು ಹೋಗಿ, ' ನನಗೆ ಬೇಕಾದುದು ದಯೆ, ಯಜ್ಞಬಲಿಯಲ್ಲ ' ಎಂದು ಪವಿತ್ರ ಗ್ರಂಥದಲ್ಲಿ ಬರೆದಿರುವ ವಾಕ್ಯದ ಅರ್ಥವನ್ನು ಕಲಿತುಕೊಳ್ಳಿ. ನಾನು ಕರೆಯಲು ಬಂದಿರುವುದು ಧರ್ಮಿಷ್ಠರನ್ನಲ್ಲ, ಪಾಪಿಷ್ಠರನ್ನು, " ಎಂದರು.

20.09.21

ಮೊದಲನೆಯ ವಾಚನ: ಎಜ್ರ 1:1-6

ಸೈರಸನು ಪರ್ಷಿಯ ದೇಶದ ಅರಸ. ಆತನ ಆಳ್ವಿಕೆಯ ಮೊದಲನೆಯ ವರ್ಷದಲ್ಲಿ ಸರ್ವೇಶ್ವರಸ್ವಾಮಿ ತಾವು ಯೆರೆಮೀಯನ ಮುಖಾಂತರ ಹೇಳಿಸಿದ ವಾಕ್ಯವನ್ನು ನೆರವೇರಿಸಿದರು. ಅದಕ್ಕಾಗಿಯೇ ಅರಸ ಸೈರಸನನ್ನು ಪ್ರೇರೇಪಿಸಿ ಅವನ ರಾಜ್ಯದಲ್ಲೆಲ್ಲಾ ಡಂಗುರ ಹಾಗು ಪತ್ರಗಳ ಮೂಲಕ ಹೀಗೆ ಪ್ರಕಟಿಸುವಂತೆ ಮಾಡಿದರು: " ಪರ್ಷಿಯ ರಾಜನಾದ ಸೈರಸೆಂಬ ನನ್ನ ಮಾತನ್ನು ಕೇಳಿರಿ: ಪರಲೋಕ ದೇವರಾದ ಸರ್ವೇಶ್ವರ ಭೂಲೋಕದ ಎಲ್ಲ ರಾಜ್ಯಗಳನ್ನು ನನಗೆ ಕೊಟ್ಟಿದ್ದಾರೆ, ' ನನಗಾಗಿ ಜುದೇಯ ನಾಡಿನ ಜೆರುಸಲೇಮಿನಲ್ಲಿ ಒಂದು ಆಲಯವನ್ನು ಕಟ್ಟಿಸಬೇಕು ' ಎಂದು ಅವರು ಆಜ್ಞಾಪಿಸಿದ್ದಾರೆ. ನಿಮ್ಮಲ್ಲಿ ಯಾರು ಅವರ ಪ್ರಜೆಗಳಾಗಿರುತ್ತಾರೋ ಅಂಥವರು ಜುದೇಯ ನಾಡಿನ ಜೆರುಸಲೇಮಿನಲ್ಲಿ ಹೋಗಿ ಅಲ್ಲಿ ವಾಸಿಸುತ್ತಿರುವ ಇಸ್ರಯೇಲ್ ದೇವರಾದ ಸರ್ವೇಶ್ವರನಿಗೆ, ಒಂದು ದೇವಾಲಯವನ್ನು ಕಟ್ಟಲಿ, ಅವರ ಸಂಗಡ ಅವರ ದೇವರಿರಲಿ! ಸೆರೆಯಾಳುಗಳಾಗಿ ಅಳಿದುಳಿದವರು ಯಾವ ಯಾವ ಊರುಗಳಲ್ಲಿ ಪ್ರವಾಸಿಗಳಾಗಿರುತ್ತಾರೋ ಆ ಊರಿನ ಜನರು ಜೆರುಸಲೇಮಿನ ದೇವಾಲಯಕ್ಕಾಗಿ ಕಾಣಿಕೆಗಳನ್ನಲ್ಲದೆ ಬೆಳ್ಳಿಬಂಗಾರ, ಸರಕುಸಾಮಗ್ರಿ, ಪ್ರಾಣಿಪಶು, ಇವುಗಳನ್ನು ಕೊಟ್ಟು ಅವರಿಗೆ ಸಹಾಯ ಮಾಡಲಿ, " ಎಂದು ಪ್ರಚುರಪಡಿಸಿದನು. ಈ ಪ್ರಕಟನೆಯನ್ನು ಕೇಳಿ, ಯೆಹೂದ ಮತ್ತು ಬೆನ್ಯಾಮಿನ್ ಗೋತ್ರಕ್ಕೆ ಸೇರಿದ ಮುಖ್ಯಸ್ಥರು, ಯಾಜಕರು, ಲೇವಿಯರು ಹಾಗು ದೈವಪ್ರೇರಿತರಾದ ಎಲ್ಲರೂ ಜೆರುಸಲೇಮಿನಲ್ಲಿ ಸರ್ವೇಶ್ವರನಿಗೆ ಪುನಃ ಆಲಯಕಟ್ಟುವುದಕ್ಕಾಗಿ ಹೊರಟರು. ಅವರ ನೆರೆಯವರೆಲ್ಲರು ಕೊಡುಗೆಗಳನ್ನು ಕೊಟ್ಟರು, ಬೆಳ್ಳಿ ಸಾಮಾನುಗಳು, ಬಂಗಾರದ ಆಭರಣಗಳು, ಪಶುಪ್ರಾಣಿಗಳು, ಶ್ರೇಷ್ಠವಸ್ತುಗಳು, ಇತ್ಯಾದಿಗಳನ್ನು ನೀಡಿ ಸಹಕರಿಸಿದರು.

ಕೀರ್ತನೆ 126:1-3, 5-6
ಶ್ಲೋಕ: ಪ್ರಭು ನಮಗೆ ಮಹತ್ಕಾರ್ಯ ಮಾಡಿದುದು ಖಚಿತ ||

ಸೆರೆಯಿಂದೆಮ್ಮನು ಪ್ರಭು ಸಿಯೋನಿಗೆ ಮರಳಿಸಿದಾಗ|
ಅದೊಂದು ಕನಸು ಕಂಡಂಡಿತ್ತು ನಮಗೆ ಆವಾಗ|
ಉಕ್ಕಿತಾಗ ಮುಖತುಂಬ ನಗು, ಬಾಯ್ತುಂಬ ಹರ್ಷಗೀತೆ||

ಎಂಥ ಮಹತ್ಕಾರ್ಯವೆಸಗಿದನಾ ಪ್ರಭು ಇವರ ಪರತೆ|
ಇಂತೆಂದು ಆಡಿಕೊಂಡರು ತಂತಮ್ಮೊಳಗೆ ಅನ್ಯಜನತೆ||
ಪ್ರಭು ನಮಗೆ ಮಹತ್ಕಾರ್ಯ ಮಾಡಿದುದು ಖಚಿತ|
ಎಂತಲೇ ನಾವಾನಂದಭರಿತರಾಗುವುದು ಉಚಿತ||

ಅಳುತಳುತಾ ಬಿತ್ತುವವರು|
ನಲಿನಲಿಯುತ್ತಾ ಕೊಯ್ಯುವರು||
ದುಃಖಿಸುತ್ತಾ ಬೀಜಬಿತ್ತಲು ಹೋದವನು|
ಹರ್ಷಿಸುತ್ತಾ ಕೊಯ್ದುತರುವನು ತೆನೆಗಳನು||

ಶುಭಸಂದೇಶ: ಲೂಕ 8:16-18

ಆ ಕಾಲದಲ್ಲಿ ಯೇಸು ತಮ್ಮ ಶಿಷ್ಯರಿಗೆ ಹೀಗೆಂದರು: " ದೀಪವನ್ನು ಹಚ್ಚಿ ಯಾರೂ ಅದನ್ನು ಪಾತ್ರೆಯಿಂದ ಮುಚ್ಚಿಡುವುದಿಲ್ಲ, ಮಂಚದ ಕೆಳಗೆ ಬಚ್ಚಿಡುವುದಿಲ್ಲ. ಮನೆಯೊಳಕ್ಕೆ ಬರುವವರಿಗೆ ಬೆಳಕು ಕಾಣಿಸುವಂತೆ ಅದನ್ನು ದೀಪಸ್ತಂಭದ ಮೇಲಿಡುತ್ತಾರೆ. ಬಟ್ಟಬಯಲಾಗದ ಮುಚ್ಚುಮರೆಯಿಲ್ಲ, ಬೆಳಕಿಗೆ ಬಾರದ ಹಾಗೂ ರಟ್ಟಾಗದ ಗುಟ್ಟಿಲ್ಲ. ಆದ್ದರಿಂದ ನೀವು ಕಿವಿಗೊಡುವಾಗ ಎಚ್ಚರಿಕೆಯಿಂದಿರಿ, ಏಕೆಂದರೆ, ಉಳ್ಳವನಿಗೆ ಇನ್ನೂ ಹೆಚ್ಚಾಗಿ ಕೊಡಲಾಗುತ್ತದೆ, ಇಲ್ಲದವನಿಂದ ತನಗಿದೆ ಎಂದುಕೊಳ್ಳುವ ಕಿಂಚಿತ್ತನ್ನೂ ಕಸಿದುಕೊಳ್ಳಲಾಗುತ್ತದೆ."

19.09.21 - "ನನ್ನ ಹೆಸರಿನಲ್ಲಿ ಇಂಥ ಮಗುವೊಂದನ್ನು ಯಾರು ಬರಮಾಡಿಕೊಳ್ಳುತ್ತಾನೋ ಅವನು ನನ್ನನ್ನೇ ಬರಮಾಡಿಕೊಳ್ಳುತ್ತಾನೆ"

ಮೊದಲನೆಯ ವಾಚನ: ಸುಜ್ಞಾನ 2:12, 17-20

ನೀತಿವಂತನಿಗಾಗಿ ಹೊಂಚುಹಾಕೋಣ ಬಲೆಯೊಡ್ಡಿ ಅವನು ನಮಗೊಂದು ಪೀಡೆ, ನಮ್ಮ ನಡತೆಗೆ ಅಡ್ಡಿ ಆರೋಪಿಸುತ್ತಾನೆ ಧರ್ಮಕ್ಕೆ ವಿರುದ್ಧ ಪಾಪಕಟ್ಟಿಕೊಂಡೆವೆಂದು ದೂಷಿಸುತ್ತಾನೆ ಸಂಪ್ರದಾಯಕ ವಿರುದ್ಧ ಪಾಪ ಮಾಡಿದೆವೆಂದು. ಅವನ ಮಾತುಗಳೇ ಸತ್ಯವೇನೋ ನೋಡೋಣ ಅವನ ಜೀವಾಂತ್ಯದ ಗತಿ ಏನೆಂದು ಪರೀಕ್ಷಿಸೋಣ. ನೀತಿವಂತ ದೇವಕುಮಾರನಾಗಿದ್ದರೆ ದೇವರು ಅವನಿಗೆ ನೆರವಾಗಬೇಕು ಶತ್ರುಗಳ ಕೈಯಿಂದ ಅವನನ್ನು ತಪ್ಪಿಸಿ ಕಾಪಾಡಬೇಕು. ಅಂಥವನನ್ನು ಹಿಂಸಿಸಿ, ಪೀಡಿಸಿ, ಪರೀಕ್ಷಿಸೋಣ. ಅವನಲ್ಲಿ ಸೌಜನ್ಯ ಎಷ್ಟಿದೆಯೆಂದು ತಿಳಿಯೋಣ ಅನ್ಯಾಯದೆದುರು ತಾಳ್ಮೆಯೆಷ್ಟಿದೆಯೆಂದು ಶೋಧಿಸೋಣ, ಅವಮಾನಕರ ಮರಣಶಿಕ್ಷೆಯನ್ನು ಅವನಿಗೆ ವಿಧಿಸೋಣ ' ದೇವರು ರಕ್ಷಿಸುತ್ತಾನೆ ' ಎಂದಾಗಿತ್ತಲ್ಲವೇ ಅವನ ವಾದ ? 

ಕೀರ್ತನೆ 54:1-4, 7
ಶ್ಲೋಕ: ನನಗಿದೋ ದೇವನೇ ಸಹಾಯಕನು| ಅತನೆನಗೆ ಜೀವಪೋಷಕನು||

ರಕ್ಷಿಸೆನ್ನನು ದೇವಾ, ನಿನ್ನ ನಾಮ ಶಕ್ತಿಯಿಂದ|
ನ್ಯಾಯದೊರಕಿಸೆನಗೆ ನಿನ್ನ ಪರಾಕ್ರಮದಿಂದ||
ನನ್ನ ಪ್ರಾರ್ಥನೆಮನು ಆಲಿಸಯ್ಯಾ|
ನನ್ನ ಮಾತುಗಳಿಗೆ ಕಿವಿಗೊಡು ದೇವಾ||

ಗರ್ವಿಗಳು ನಿಂತಿಹರು ನನಗೆದುರಾಗಿ|
ಕ್ರೂರಿಗಳು ಕಾದಿಹರೆನ್ನ ಕೊಲೆಗಾಗಿ|
ಅವರಲಿಲ್ಲ ಮಾನ್ಯತೆ ದೇವರಿಗಾಗಿ||

ನನಗಿದೋ ದೇವನೇ ಸಹಾಯಕನು|
ಆತನೆನಗೆ ಜೀವಪೋಷಕನು||
ಎಂತಲೇ ಸ್ವಂತ ಇಚ್ಛೆಯಿಂದ ಬಲಿಯನರ್ಪಿಸುವೆ ನಿನಗೆ|
ಧನ್ಯವಾದ ಪ್ರಭೂ, ನಿನ್ನ ಸರ್ವೋತ್ತಮ ನಾಮಕೆ||

ಎರಡನೆಯ ವಾಚನ: ಯಕೋಬ: 3:16-4:3

ಸಹೋದರರೇ, ಮರ್ಮಮತ್ಸರವೂ ಸ್ವಾರ್ಥಭಿಲಾಶೆಯೂ ಇರುವ ಕಡೆಗಳಲ್ಲೆಲ್ಲಾ ನಾನಾವಿಧವಾದ ಅಕ್ರಮಗಳೂ ದುಶ್ಚಟಗಳೂ ಇರುತ್ತವೆ. ದೇವರಿಂದ ಬರುವ ಜ್ಞಾನವಾದರೋ ಮೊಟ್ಟಮೊದಲನೆಯದಾಗಿ ಪವಿತ್ರವಾದದು. ಅದು ಶಾಂತಿಸಮಾಧಾನವುಳ್ಳದ್ದು, ಸಹನೆ ಸಂಯಮವುಳ್ಳದ್ದು, ನ್ಯಾಯಸಮ್ಮತವಾದದ್ದು, ದಯೆದಾಕ್ಷಿಣ್ಯಗಳಿಂದಲೂ ಸತ್ಕಾರ್ಯಗಳಿಂದಲೂ ಫಲಭರಿತವಾದದ್ದು. ವಂಚನೆಯಾಗಲಿ, ಚಂಚಲತೆಯಾಗಲಿ ಅದರಲ್ಲಿ ಇರುವುದಿಲ್ಲ. ಸಮಾಧಾನಪಡಿಸುವವರು ಸಮಾಧಾನವೆಂಬ ಬೀಜವನ್ನು ಬಿತ್ತಿ ದೇವರೊಡನೆ ಸತ್ಸಂಬಂಧವೆಂಬ ಫಲವನ್ನು ಕೊಯ್ಯುತ್ತಾರೆ. ನಿಮ್ಮಲ್ಲಿ ಕಲಹ ಕಾದಾಟಗಳು ಉಂಟಾಗುವುದು ಹೇಗೆ ? ನಿಮ್ಮ ಇಂದ್ರಿಯಗಳಲ್ಲಿ ಗೊಂಲವೆಬ್ಬಿಸುವ ದುರಿಚ್ಛೆಗಳಿಂದಲ್ಲವೇ ? ಪರರ ಆಸ್ತಿಪಾಸ್ತಿಗಳನ್ನು ಬಯಸುತ್ತೀರಿ, ಅವುಗಳು ಸಿಗದೆ ಇದ್ದಾಗ, ನೀವು ಕೊಲೆಮಾಡಲೂ ಹಿಂಜರಿಯುವುದಿಲ್ಲ. ದುರಾಶೆಗಳಿಗೆ ಬಲಿಯಾಗುತ್ತೀರಿ, ಅವುಗಳು ಈಡೇರದಾಗ ಜಗಳವಾಡುತ್ತೀರಿ, ಕಾದಾಡುತ್ತೀರಿ. ನಿಮಗೆ ಬೇಕಾದುದು ನಿಮ್ಮಲ್ಲಿಲ್ಲ. ಏಕೆಂದರೆ, ನೀವು ಅದಕ್ಕಾಗಿ ಬೇಡಿಕೊಳ್ಳಲಿಲ್ಲ, ಬೇಡಿಕೊಂಡರೂ ನಿಮಗದು ದೊರಕುವುದಿಲ್ಲ. ಏಕೆಂದರೆ, ನಿಮ್ಮ ಬೇಡಿಕೆ ದುರುದ್ದೇಶದಿಂದ ಕೂಡಿರುತ್ತದೆ. ಭೋಗಾಭಿಲಾಶೆಗಳ ಈಡೇರಿಕೆ ನಿಮ್ಮ ಗುರಿಯಾಗಿರುತ್ತದೆ.

ಶುಭಸಂದೇಶ ವಾಚನ: ಮಾರ್ಕ 9:30-37



ಆ ಕಾಲದಲ್ಲಿ ಯೇಸು ಮತ್ತು ಶಿಷ್ಯರು ಹೊರಟು ಗಲಿಲೇಯದ ಮಾರ್ಗವಾಗಿ ಮುಂದಕ್ಕೆ ಪ್ರಯಾಣ ಮಾಡಿದರು. ಇದು ಯಾರಿಗೂ ತಿಳಿಯಬಾರದು ಎಂಬುದು ಯೇಸುವಿನ ಇಚ್ಛೆಯಾಗಿತ್ತು. ಕಾರಣ, ತಮ್ಮ ಶಿಷ್ಯರಿಗೆ ಪ್ರಬೋಧಿಸುವುದರಲ್ಲಿ ಅವರು ನಿರುತರಾಗಿದ್ದರು. " ನರಪುತ್ರನನ್ನು ಜನರ ವಶಕ್ಕೆ ಒಪ್ಪಿಸಲಾಗುವುದು. ಅವರು ಆತನನ್ನು ಕೊಲ್ಲುವರು. ಕೊಂದ ಮೂರನೆಯ ದಿನ ಆತನು ಪುನರುತ್ಥಾನ ಹೊಂದುವನು, " ಎಂದು ಯೇಸು ಅವರಿಗೆ ತಿಳಿಸಿದರು. ಆದರೆ ಯೇಸು ಹೇಳಿದ ಈ ಮಾತುಗಳನ್ನು ಶಿಷ್ಯರು ಅರ್ಥಮಾಡಿಕೊಳ್ಳಲಿಲ್ಲ. ಅವುಗಳ ಬಗ್ಗೆ ಪ್ರಶ್ನಿಸಲು ಸಹ ಅಂಜಿದರು. ಅನಂತರ ಅವರೆಲ್ಲರೂ ಕಫೆರ್ನವುಮಿಗೆ ಬಂದರು. ಮನೆ ಸೇರಿದಾಗ ಯೇಸು, " ದಾರಿಯಲ್ಲಿ ಬರುತ್ತಾ ನೀವು ನಿಮ್ಮಲ್ಲೇ ಏನು ಚರ್ಚೆಮಾಡುತ್ತಿದ್ದಿರಿ? " ಎಂದು ಶಿಷ್ಯರನ್ನು ಕೇಳಿದರು. ಅವರು ಮೌನ ತಾಳಿದರು. ಏಕೆಂದರೆ, ತಮ್ಮಲ್ಲಿ ಯಾವನು ಅತಿ ಶ್ರೇಷ್ಠನು ಎಂದು ತಮ್ಮತಮ್ಮಲ್ಲೇ ವಾದಿಸುತ್ತಾ ಬಂದಿದ್ದರು. ಯೇಸು ಕುಳಿತುಕೊಂಡು, ಹನ್ನೆರಡು ಮಂದಿಯನ್ನೂ ಕರೆದು, ಅವರಿಗೆ, " ನಿಮ್ಮಲ್ಲಿ ಮೊದಲಿಗನಾಗ ಬಯಸುವವನು ಎಲ್ಲರಿಗೂ ಕಡೆಯವನಾಗಿರಲಿ, ಎಲ್ಲರ ಸೇವೆ ಮಾಡುವವನಾಗಿರಲಿ, " ಎಂದರು. ಅನಂತರ ಯೇಸು, ಒಂದು ಚಿಕ್ಕ ಮಗುವನ್ನು ಕರೆದು ನಡುವೆ ನಿಲ್ಲಿಸಿ, ಅದನ್ನು ತಬ್ಬಿಕೊಂಡು ತಮ್ಮ ಶಿಷ್ಯರಿಗೆ, " ನನ್ನ ಹೆಸರಿನಲ್ಲಿ ಇಂಥ ಮಗುವೊಂದನ್ನು ಯಾರು ಬರಮಾಡಿಕೊಳ್ಳುತ್ತಾನೋ ಅವನು ನನ್ನನ್ನೇ ಬರಮಾಡಿಕೊಳ್ಳುತ್ತಾನೆ, ಯಾರು ನನ್ನನ್ನು ಬರಮಾಡಿಕೊಳ್ಳುತ್ತಾನೋ ಅವನು ನನ್ನನ್ನು ಅಲ್ಲ, ನನ್ನನ್ನು ಕಳುಹಿಸಿದಾತನನ್ನೇ ಬರಮಾಡಿಕೊಳ್ಳುತ್ತಾನೆ, " ಎಂದರು.

18.09.21 - "ಕೇಳುವುದಕ್ಕೆ ಕಿವಿಯುಳ್ಳವನು ಕೇಳಿಸಿಕೊಳ್ಳಲಿ, "ಎಂದು ಒತ್ತಿ ಹೇಳಿದರು

ಮೊದಲನೇ ವಾಚನ: 1ತಿಮೊಥೇಯನಿಗೆ 6:13-16


ಅತಿ ಪ್ರಿಯನೇ, ಸಕಲ ಸೃಷ್ಟಿಗೂ ಜೀವದಾತರಾದ ದೇವರ ಸನ್ನಿಧಿಯಲ್ಲಿ, ಪೊಂತಿಯ ಪಿಲಾತನ ಮುಂದೆ ಸೂಕ್ತ ಸಾಕ್ಷಿ ನೀಡಿದ ಪ್ರಭು ಯೇಸುವಿನ ಸನ್ನಿಧಿಯಲ್ಲಿ ನಾನು ಆಜ್ಞಾಪಿಸಿಸುವುದೇನೆಂದರೆ: ನಮ್ಮ ಪ್ರಭು ಯೇಸುಕ್ರಿಸ್ತರು ಪ್ರತ್ಯಕ್ಷರಾಗುವ ತನಕ ಯಾವ ದೋಷಾರೋಪಣೆಗೂ ಎಡೆಗೊಡದೆ ಈ ಕಟ್ಟಳೆಗಳೆಲ್ಲವನ್ನೂ ಪ್ರಾಮಾಣಿಕತೆಯಿಂದ ಅನುಸರಿಸು: ಸೂಕ್ತಕಾಲದಲ್ಲಿ ಕ್ರಿಸ್ತ ಯೇಸುವಿನು ಪ್ರತ್ಯಕ್ಷಪಡಿಸುವನು ಪರಮ ದೇವನು. ಆ ದೇವನು ಪರಮಾನಂದನು, ಏಕಾಧಿಪತಿ, ರಾಜಾಧಿರಾಜನು ಒಡೆಯರಿಗೆಲ್ಲಾ ಒಡೆಯನು, ಅಮರನು ಅಗಮ್ಯ ಜ್ಯೋತಿಯಲಿ ವಾಸಿಸುವವನು. ಆತನನು ಕಂಡವರಾರೂ ಇಲ್ಲ, ಕಾಣಬಲ್ಲವರಾರೂ ಇಲ್ಲ. ಆತನೊಬ್ಬನಿಗೆ ಮಹಿಮೆಯೂ ಗೌರವವೂ ಪ್ರಭುತ್ವವೂ ಸಲ್ಲಲಿ ಎಂದೆಂದಿಗೂ, ಆಮೆನ್.

ಕೀರ್ತನೆ 100:1-2, 3, 4, 5
ಶ್ಲೋಕ: ಹಾಡುತ, ಪಾಡುತ, ಬನ್ನಿ ಪ್ರಭುವಿನ ಸನ್ನಿಧಿಗೆ.

ಭೂನಿವಾಸಿಗಳೇ, ಜಯಘೋಷಮಾಡಿ ಪ್ರಭುವಿಗೆ|
ಅತಿ ಸಂತೋಷದಿಂದ ಸೇವೆಮಾಡಿ ಆತನಿಗೆ|
ಹಾಡುತ, ಪಾಡುತ, ಬನ್ನಿ ಆತನ ಸನ್ನಿಧಿಗೆ||

ಪ್ರಭುವೇ ದೇವರೆಂಬುದನು ಮರೆತುಬಿಡಬೇಡಿ ನೀವು|
ನಮ್ಮ ಸೃಷ್ಟಿಕರ್ತ ಆತನು, ಆತನವರು ನಾವು|
ಆತನ ಜನ ಆತನೇ ಮೇಯಿಸುವ ಕುರಿಗಳು ನಾವು||

ಆತನ ಗೃಹದ್ವಾರವನು ಪ್ರವೇಶಿಸಿ ಧನ್ಯವಾದಗಳೊಂದಿಗೆ|
ಆತನ ಆವರಣದಲಿ ನಿಲ್ಲಿರಿ ಸ್ತುತಿಸ್ತೋತ್ರಗಳೊಂದಿಗೆ|
ಆತನ ನಾಮವನು ಕೊಂಡಾಡಿ ಉಪಕಾರಸ್ಮರಣೆಯೊಂದಿಗೆ||

ಹೌದು ಪ್ರಭುವೆನಿತೋ ಒಳ್ಳೆಯವನು|
ಇರುವುದು ಆತನ ಪ್ರೀತಿ ಯುಗಯುಗಕೂ|
ಆತನ ಸತ್ಯತೆ ತಲತಲಾಂತರಕು||

ಶುಭಸಂದೇಶ:  ಲೂಕ 8:4-15


ಜನರು ಊರುರುಗಳಿಂದ ಹೊರಟು ಯೇಸುವಿನ ಬಳಿಗೆ ಬಂದರು. ಜನಸಮೂಹವು ಹೆಚ್ಚುತ್ತಿದ್ದಂತೆ ಯೇಸು ಈ ಸಾಮತಿಯನ್ನು ಹೇಳಿದರು: " ಒಬ್ಬ ರೈತನು ಬಿತ್ತುವುದಕ್ಕೆ ಹೋದನು. ಬಿತ್ತನೆ ಮಾಡುತ್ತಿದ್ದಾಗ ಕೆಲವು ಬೀಜಗಳು ಕಾಲ್ದಾರಿಯಲ್ಲಿ ಬಿದ್ದವು. ಅವು ಕಾಲುತುಳಿತಕ್ಕೆ ಸಿಕ್ಕಿ ಹೋದವು. ಅವುಗಳನ್ನು ಆಕಾಶದ ಪಕ್ಷಿಗಳು ತಿಂದುಬಿಟ್ಟನು. ಮತ್ತೆ ಕೆಲವು ಬೀಜಗಳು ಕಲ್ಲುಭೂಮಿಯ ಮೇಲೆ ಬಿದ್ದವು. ಅವು ಮೊಳೆತಾಗಲೂ ತೇವವಿಲ್ಲದ ಕಾರಣ ಒಣಗಿ ಹೋದವು. ಇನ್ನೂ ಕೆಲವು ಮುಳ್ಳು ಪೂದೆಗಳ ನಡುವೆ ಬಿದ್ದವು. ಮುಳ್ಳುಪೊದೆಗಳು ಅವುಗಳೊಡನೆ ಬೆಳೆದು ಸಸಿಗಳನ್ನು ಅದುಮಿಬಿಟ್ಟವು. ಇನ್ನೂ ಕೆಲವು ಬೀಜಗಳು ಹದವಾದ ಭೂಮಿಯಲ್ಲಿ ಬಿದ್ದವು. ಅವು ಬೆಳೆದು ನೂರ್ಮಡಿ ಫಸಲನ್ನು ಕೊಟ್ಟವು, " ಈ ಸಾಮತಿಯನ್ನು ಮುಗಿಸಿದ ಮೇಲೆ ಯೇಸು, " ಕೇಳುವುದಕ್ಕೆ ಕಿವಿಯುಳ್ಳವನು ಕೇಳಿಸಿಕೊಳ್ಳಲಿ, "ಎಂದು ಒತ್ತಿ ಹೇಳಿದರು. ಶಿಷ್ಯರು, 'ಈ ಸಾಮತಿಯ ಅರ್ಥವೇನು?' ಎಂದು ಕೇಳಿದಾಗ, ಯೇಸು ಇಂತೆಂದರು: " ದೇವರ ಸಾಮ್ರಾಜ್ಯದ ರಹಸ್ಯಗಳನ್ನು ಅರಿತುಕೊಳ್ಳುವ ಸದವಕಾಶವನ್ನು ನಿಮಗೆ ಕೊಡಲಾಗಿದೆ. ಬೇರೆಯವರಿಗಾದರೋ ಅವು ಸಾಮತಿಗಳ ರೂಪದಲ್ಲಿ ಮರೆಯಾಗಿವೆ. ಅವರು ಕಣ್ಣಾರೆ ನೋಡಿದರೂ ಕಾಣರು, ಕಿವಿಯಾರೆ ಕೇಳಿದರೂ ಗ್ರಹಿಸರು. ಸಾಮತಿಯ ಅರ್ಥ ಹೀಗಿದೆ: ಬೀಜ ಎಂದರೆ ದೇವರ ವಾಕ್ಯ. ಕಾಲ್ದಾರಿಯಲ್ಲಿ ಬಿದ್ದ ಬೀಜಗಳು ಎಂದರೆ ಆ ವಾಕ್ಯವನ್ನು ಕೇಳಿದವರು, ಆದರೆ ಅವರು ವಿಶ್ವಾಸಿಸಿ ಜೀವೋದ್ಧಾರವನ್ನು ಪಡೆಯದಂತೆ ಪಿಶಾಚಿ ಬಂದು ಆ ವಾಕ್ಯವನ್ನು ಅವರ ಹೃದಯದಿಂದ ಕೂಡಲೇ ತೆಗೆದುಬಿಡುತ್ತದೆ. ಕಲ್ಲುಭೂಮಿಯ ಮೇಲೆ ಬಿದ್ದ ಬೀಜಗಳು ಎಂದರೆ ದೇವರ ವಾಕ್ಯವನ್ನು ಕೇಳಿ ಸಂತೋಷದಿಂದ ಸ್ವೀಕರಿಸಿದವರು, ಅದು ಅವರಲ್ಲಿ ಬೇರೂರದ ಕಾರಣ ಅವರು ಸ್ವಲ್ಪ ಕಾಲ ವಿಶ್ವಾಸಿಸುತ್ತಾರೆ, ಶೋಧನೆಯ ಸಮಯದಲ್ಲಿ ಅದನ್ನು ತೊರೆದುಬಿಡುತ್ತಾರೆ. ಮುಳ್ಳುಪೊದೆಗಳ ನಡುವೆ ಬಿದ್ದ ಬೀಜಗಳು ಎಂದರೆ ದೇವರ ವಾಕ್ಯವನ್ನು ಕೇಳಿದ ಇನ್ನಿತರರು. ಆದರೆ ಕಾಲ ಕ್ರಮೇಣ ಬಾಳಿನ ಬವಣೆಗಳು, ಐಶ್ವರ್ಯದ ವ್ಯಾಮೋಹಗಳು ಹಾಗೂ ಸುಖಭೋಗಗಳು ಇವರನ್ನು ಅದುಮಿ ಬಿಡುತ್ತವೆ, ಇವರ ಫಲ ಪಕ್ವವಾಗುವುದಿಲ್ಲ. ಹದವಾದ ಭೂಮಿಯ ಮೇಲೆ ಬಿದ್ದ ಬೀಜಗಳು ಎಂದರೆ ದೇವರ ವಾಕ್ಯವನ್ನು ಕೇಳಿ ಅದನ್ನು ಸದ್ಗುಣಶೀಲ ಹಾಗೂ ಸಾತ್ವಿಕವಾದ ಹೃದಯದಲ್ಲಿಟ್ಟು ಸಹನೆಯಿಂದ ಫಲತರುವವರು, " ಎಂದರು.

17.09.21 - "ಸತ್ಸಂಬಂದ, ಭಕ್ತಿ, ವಿಶ್ವಾಸ, ಪ್ರೀತಿ, ಸ್ಥಿರಚಿತ್ತ, ಸಾತ್ವಿಕತೆ - ಇವೇ ಮೊದಲಾದ ಸದ್ಗುಣಗಳನ್ನು ಸಂಪಾದಿಸಲು ಪ್ರಯತ್ನಿಸು"

ಮೊದಲನೇ ವಾಚನ: 1ತಿಮೊಥೇಯನಿಗೆ  6:2-12

ಅತಿ ಪ್ರಿಯನೆ, ಈ ವಿಷಯಗಳ ಬಗ್ಗೆ ಆಜ್ಞಾಪೂರ್ವಕವಾಗಿ ಬೋಧಿಸು. ಯಾರಾದರೂ ನಮ್ಮ ಧಾರ್ಮಿಕ ಉಪದೇಶವನ್ನು ಅನುಸರಿಸದೆ, ಪ್ರಭು ಯೇಸುಕ್ರಿಸ್ತರ ನೈಜ ಬೋಧನೆಯನ್ನು ಒಪ್ಪಿಕೊಳ್ಳದೆ, ಭಿನ್ನ ಬೋಧನೆಯನ್ನು ಮಾಡುವುದಾದರೆ, ಅಂಥವನು ಆಹಂಭಾವಿ ಹಾಗೂ ಅಜ್ಞಾನಿಯೇ ಸರಿ. ಅಂಥವನಿಗೆ ಒಣ ವಾಗ್ವಾದಗಳಲ್ಲಿ ಮತ್ತು ಬರಡು ಮಾತುಗಳಲ್ಲಿ ಬಲು ಹಂಬಲ. ಇವುಗಳು ಅಸೂಯೆ, ಕಲಹ, ದೂಷಣೆ, ಅನುಮಾನ ಮತ್ತು ಕಚ್ಚಾಟಗಳಿಗೆ  ಎಡೆಕೊಡುತ್ತವೆ. ಮತಿಗೆಟ್ಟ ಅಂಥವರಲ್ಲಿ ಸತ್ಯವೆಂಬುದು ಇರದು. ಧಾರ್ಮಿಕ ಸೇವೆಯು ಧನಗಳಿಕೆಯ  ಸಾಧನವೆಂದೇ ಇವರ ನಂಬಿಕೆ. ಇರುವುದರಲ್ಲೇ ಸಂತೃಪ್ತನಾಗಿರುವವನು ಭಕ್ತಿಯಲ್ಲಿ ನಿಜಕ್ಕೂ ಶ್ರೀಮಂತನಾಗಿರುತ್ತಾನೆ. ಹುಟ್ಟಿದಾಗ ನಾವು ಈ ಲೋಕಕ್ಕೆ ಏನನ್ನೂ ತರಲಿಲ್ಲ; ಸಾಯುವಾಗ ಏನನ್ನೂ ಕೊಂಡೊಯ್ಯುವುದಿಲ್ಲ. ನಮಗೆ ಊಟ, ಬಟ್ಟೆ ಇದ್ದರೆ ಅಷ್ಟೇ ಸಾಕು. ಐಶ್ವರ್ಯವಂತರಾಗಬೇಕೆಂದು ಆಶಿಸುವವರು ಅನೇಕ ಪ್ರಲೋಭನೆಗಳಿಗೆ ಒಳಗಾಗುತ್ತಾರೆ. ನಿರರ್ಥಕವೂ ಹಾನಿಕರವೂ ಆದ ಆಶಾಪಾಶಾಗಳಲ್ಲಿ ಸಿಕ್ಕಿಬೀಳುತ್ತಾರೆ. ಇಂಥ ದುರಾಶೆಗಳು ಮನುಷ್ಯರನ್ನು ಕೇಡಿಗೂ  ವಿನಾಶಕ್ಕೂ ಒಯ್ಯುತ್ತವೆ. ಹಣದ ವ್ಯಾಮೋಹವೇ ಎಲ್ಲಾ ಕೇಡುಗಳಿಗೂ ಮೂಲ. ಹಣದ ವ್ಯಾಮೋಹದಿಂದಲೇ ಹಲವರು ವಿಶ್ವಾಸದಿಂದ ದೂರ ಸರಿದು, ತಮ್ಮ ಹೃದಯಗಳನ್ನು ಹಲತರದ ತಿವಿತಗಳಿಗೆ ಗುರಿಮಾಡುತ್ತಾರೆ. ದೇವರ ಭಕ್ತನಾದ ನೀನು ಈ ಎಲ್ಲಾ ಕೇಡುಗಳಿಂದ ದೂರವಿರು. ದೇವರೊಡನೆ ಸತ್ಸಂಬಂದ, ಭಕ್ತಿ, ವಿಶ್ವಾಸ, ಪ್ರೀತಿ, ಸ್ಥಿರಚಿತ್ತ, ಸಾತ್ವಿಕತೆ - ಇವೇ ಮೊದಲಾದ ಸದ್ಗುಣಗಳನ್ನು ಸಂಪಾದಿಸಲು ಪ್ರಯತ್ನಿಸು. ನಿತ್ಯಜೀವವೆಂಬ ಬಹುಮಾನವನ್ನು ಗಳಿಸಲು ವಿಶ್ವಾಸವೆಂಬ ಪಂದ್ಯದಲ್ಲಿ ಉತ್ತಮ ಓಟಗಾರನಾಗಿ ಓಡು. ಇದಕ್ಕಾಗಿಯೇ ದೇವರು ನಿನ್ನನ್ನು ಆರಿಸಿಕೊಂಡರೆಂಬುದನ್ನು ಮರೆಯಬೇಡ. ಈ ಗುರಿಯನ್ನು ಮುಂದಿಟ್ಟುಕೊಂಡೇ ನೀನು ಅನೇಕರ ಮುಂದೆ ವಿಶ್ವಾಸಪ್ರಮಾಣ ಮಾಡಿರುವೆ.

ಕೀರ್ತನೆ: 49:6-7, 8-10, 17-18, 19-20
ಶ್ಲೋಕ: ಪಾರಮಾರ್ಥಿಕವಾಗಿ ಬಡವರು ಭಾಗ್ಯವಂತರು

ಅವರ ಭರವಸೆ ಸಿರಿಸಂಪತ್ತಿನಲಿ I
ಅವರ ಹಿರಿಮೆ ಅಧಿಕಾಸ್ತಿಪಾಸ್ತಿಯಲಿ II
ತನ್ನನು ತಾನೇ ಮುಕ್ತಗೊಳಿಸಿಕೊಳ್ಳುವ ಜೀವಾತ್ಮನಿಲ್ಲ I
ದೇವರಿಗೆ ಈಡುಕೊಟ್ಟು ಪ್ರಾಣ ಉಳಿಸಿಕೊಳ್ಳಬಲ್ಲ ನರನಿಲ್ಲ II

ಪ್ರಾಣಕೆ ತೆರಬೇಕಾದ ಈಡು ಅಮೂಲ್ಯ I
ಅದಕೆ ಸಾಕಷ್ಟು ತೆರಲು ಯಾರಿಗೂ ಅಸಾಧ್ಯ II
ಸಮಾಧಿಗಿಳಿಯದೆ ಸದಾ ಬಾಳುವ ಬಯಕೆ I
ಮಾನವ ಶಕ್ತಿಗೆ ಮೀರಿದುದು ಆ ಗಳಿಕೆ II

ಬುದ್ಧಿಜೀವಿಗಳೂ ಸಾಯುವುದು ಖಂಡಿತ I
ಮೂರ್ಖ, ಮಂದಗತಿಗಳ ಅಳಿವೂ ನಿಶ್ಚಿತ I
ಅವರ ಸೊತ್ತು ಪರರ ಪಾಲು, ಇದೂ ಖಚಿತ II

ಸಾಯುವಾಗ ಏನನೂ ಕೊಂಡು ಹೋಗುವುದಿಲ್ಲ I
ಘನತೆ ಅವನ ಬೆನ್ನು ಹತ್ತಿ ಹೋಗುವಂತಿಲ್ಲ II
ಸಿರಿಬಂದಾಗ ಕೊರತೆಯಿರದು ಹೊಗಳಿಕೆಗೆ I
ಆತ್ಮಸ್ತುತಿ, ಮುಖಸ್ತುತಿ, ಇವುಗಳ ಮೆರೆತಕೆ II

ಸೇರದಿರನಾತ ಪಿತೃಗಳಧೋಗತಿಯನು I
ಅವಿವೇಕಿ ಕಾಣನು ಎಂದಿಗೂ ಪರಂಜ್ಯೋತಿಯನು II
ನೆಲೆಯಾಗಿರನು ಪಟ್ಟಪದವಿಯಲಿ I
ನಾಶವಾಗುವನು ಪಶುಪ್ರಾಣಿಗಳ ಪರಿ II

ಶುಭಸಂದೇಶ: ಲೂಕ 8:1-3


ಯೇಸುಸ್ವಾಮಿ ದೇವರ ಸಾಮ್ರಾಜ್ಯದ ಶುಭಸಂದೇಶವನ್ನು ಸಾರುತ್ತಾ ಪಟ್ಟಣಗಳಲ್ಲೂ ಹಳ್ಳಿಗಳಲ್ಲೂ ಸಂಚಾರ ಮಾಡಿದರು. ಹನ್ನೆರಡು ಮಂದಿ ಶಿಷ್ಯರೂ ಅವರೊಡನೆ ಇದ್ದರು. ದೆವ್ವಗಳ ಕಾಟದಿಂದಲೂ ರೋಗರುಜಿನಗಳಿಂದಲೂ ಬಿಡುಗಡೆ ಹೊಂದಿದ್ದ ಕೆಲವು ಮಹಿಳೆಯರು ಅವರ ಜೊತೆಯಲ್ಲಿದ್ದರು. ಅವರಾರೆಂದರೆ: ಏಳು ದೆವ್ವಗಳಿಂದ ವಿಮುಕ್ತಳಾಗಿದ್ದ ಮಗ್ದಲದ ಮರಿಯಳು, ಹೆರೋದನ ಅರಮನೆಯ ಮೇಲ್ವಿಚಾರಕನಾಗಿದ್ದ ಕೂಜನ ಪತ್ನಿ ಯೊವಾನ್ನಳು, ಅಲ್ಲದೆ ಸುಸಾನ್ನಳು, ಮತ್ತಿತರ ಅನೇಕರು. ಇವರು ತಮ್ಮ ಆಸ್ತಿಪಾಸ್ತಿಯನ್ನು ವೆಚ್ಚಮಾಡಿ ಯೇಸುವಿಗೂ ಅವರ ಶಿಷ್ಯರಿಗೂ ಉಪಚಾರ ಮಾಡುತ್ತಿದ್ದರು.

16.09.21 - "ನಿನ್ನ ವಿಶ್ವಾಸ ನಿನ್ನನ್ನು ಉದ್ಧಾರ ಮಾಡಿದೆ"

 ಮೊದಲನೇ ವಾಚನ: 1 ತಿಮೊಥೇಯನಿಗೆ 4:12-16



ಅತಿ ಪ್ರಿಯನೇ, ನೀನಿನ್ನೂ ಯುವಕನೆಂದು ನಿನ್ನನ್ನು ತಾತ್ಸಾರ ಮಾಡುವುದಕ್ಕೆ ಯಾರಿಗೂ ಅವಕಾಶ ಕೊಡಬೇಡ. ನಿನ್ನ ನಡೆನುಡಿ, ಪ್ರೀತಿವಿಶ್ವಾಸ ಹಾಗೂ ಪರಿಶುದ್ಧತೆಯ ವಿಷಯದಲ್ಲಿ ವಿಶ್ವಾಸಿಗಳೆಲ್ಲರಿಗೂ ನೀನೇ ಆದರ್ಶಪ್ರಾಯನಾಗಿರು. ನಾನು ಬರುವವರೆಗೂ ಪವಿತ್ರಗ್ರಂಥವನ್ನು ಪಠಿಸುವುದರಲ್ಲಿಯೂ ಪ್ರಬೋಧಿಸುವುದರಲ್ಲೂ ಉಪದೇಶಿಸುವುದರಲ್ಲೂ ಆಸಕ್ತನಾಗಿರು. ನಿನ್ನಲ್ಲಿರುವ ವರದಾನವನ್ನು ಅಲಕ್ಷಿಸಬೇಡ. ಸಭೆಯ ಹಿರಿಯರು ನಿನ್ನ ಮೇಲೆ ದೈವವಾಕ್ಯದ ಉಚ್ಚಾರದೊಂದಿಗೆ ಹಸ್ತ ನಿಕ್ಷೇಪಮಾಡಿದಾಗ ಈ ವರವು ನಿನಗೆ ಲಭಿಸಿತಲ್ಲವೇ? ನಿನ್ನ ಆಧ್ಯಾತ್ಮಿಕ ಪ್ರಗತಿ ಎಲ್ಲರಿಗೂ ಗೋಚರವಾಗುವಂತೆ ಈ ಕಾರ್ಯಸಾಧನೆಗಳಲ್ಲಿ ನಿರತನಾಗಿರು; ಇವುಗಳಲ್ಲೇ ಮಗ್ನನಾಗಿರು. ಇದರಿಃದ ನಿನ್ನ ಮತ್ತು ನಿನ್ನ ಉಪದೇಶವನ್ನು ಕೇಳುವವರ ಜೀವೋದ್ಧಾರವನ್ನು ಸಾಧಿಸುವೆ.

ಕೀರ್ತನೆ: 111:7-8, 8, 9, 10
ಶ್ಲೋಕ: ಮಹತ್ತಾದವು ಪ್ರಭುವಿನ ಕಾರ್ಯಗಳು

ನೀತಿ ಸತ್ಯತೆಯುಳ್ಳವು ಆತನ ಸತ್ಕಾರ್ಯಗಳು I
ಸುಸ್ಥಿರವಾದವು ಆತನ ನಿಯಮ ನಿಬಂಧನೆಗಳು II
ಯುಗಯುಗಾಂತರಕು ದೃಢವಾಗಿರುವುವು I
ಸತ್ಯನೀತಿಗಳು ಅವುಗಳಿಗೆ ಅಡಿಪಾಯವು II

ವಿಮೋಚನೆಯನಿತ್ತಿಹನು ಪ್ರಭು ತನ್ನ ಪ್ರಜೆಗೆ I
ಸ್ಥಿರಸ್ಥಾಪಿತವಾಗಿಹುದು ಆತನ ಒಡಂಬಡಿಕೆ I
ಪರಿಶುದ್ಧ, ಪರಮಪೂಜ್ಯ ಆತನ ನಾಮಾಂಕೆ II

ಸುಜ್ಞಾನಕ್ಕೆ ಮೂಲವು ದೈವಭಯವು I
ಅದರ ಪಾಲನೆಯು ವಿವೇಕತನವು I
ಪ್ರಭುವಿಗೆ ಸ್ತೋತ್ರ ಸದಾಕಾಲವು II

ಶುಭಸಂದೇಶ: ಲೂಕ 7:36-50


ಒಬ್ಬ ಫರಿಸಾಯನು ಯೇಸುಸ್ವಾಮಿಯನ್ನು ಊಟಕ್ಕೆ ಆಹ್ವಾನಿಸಿದನು. ಯೇಸು ಅವನ ಮನೆಗೆ ಹೋಗಿ ಊಟಕ್ಕೆ ಕುಳಿತರು.  ಅದೇ ಊರಿನಲ್ಲಿ ಪತಿತೆಯೊಬ್ಬಳು ಇದ್ದಳು, ಆಕೆ, ಫರಿಸಾಯನ ಮನೆಯಲ್ಲಿ ಯೇಸು ಊಟಕ್ಕೆ ಕುಳಿತ್ತಿದ್ದಾರೆಂದು ಕೇಳಿ ಬಂದು ಅಮೃತಶಿಲೆಯ ಭರಣಿ ತುಂಬ ಸುಗಂಧ ತೈಲವನ್ನು ತೆಗೆದುಕೊಂಡು ಅಲ್ಲಿಗೆ ಬಂದಳು. ಅವಳು ಯೇಸುವಿನ ಹಿಂಬದಿಯಲ್ಲಿ ಅಳುತ್ತಾ ನಿಂತು, ತನ್ನ ಕಂಬನಿಯಿಂದ ಅವರ ಪಾದಗಳನ್ನು ತೊಳೆದು ತಲೆಕೂದಲಿನಿಂದ ಒರಸಿ, ಆ ಪಾದಗಳಿಗೆ ಮುತ್ತಿಟ್ಟು,  ಸುಗಂಧ ತೈಲವನ್ನು ಹಚ್ಚಿದಳು ಯೇಸುವನ್ನು ಆಹ್ವಾನಿಸಿದ ಫರಿಸಾಯನು ಇದನ್ನು ನೋಡಿ, "ಇವನು ನಿಜವಾಗಿಯೂ ಪ್ರವಾದಿಯಾಗಿದ್ದರೆ ತನ್ನನ್ನು ಮುಟ್ಟುತ್ತಿರುವ ಇವಳು ಯಾರು, ಎಂಥಾ ಪತಿತಳು ಎಂದು ತಿದುಕೊಳ್ಳುತ್ತಿದ್ದನು" ಎಂದು ತನ್ನೊಳಗೆ ಅಂದುಕೊಂಡನು. ಅದಕ್ಕೆ ಯೇಸು,  "ಒಬ್ಬ ಸಾಲಿಗನಿಗೆ ಇಬ್ಬರು ಸಾಲಗಾರರಿದ್ದರು. ಒಬ್ಬನು ಐನೂರು, ಇನ್ನೊಬ್ಬನು ಐವತ್ತು ಬೆಳ್ಳಿ ನಾಣ್ಯಗಳನ್ನು ಅವನಿಗೆ ಸಾಲ ಕೊಡಬೇಕಾಗಿತ್ತು ಆ ಇಬ್ಬರಿಗೂ ಸಾಲ ತೀರಿಸಲು ಸಾಧ್ಯವಾಗಲಿಲ್ಲ. ಸಾಲಿಗನು ಇಬ್ಬರ ಸಾಲವನ್ನೂ ಮನ್ನ ಮಾಡಿದನು. ಈಗ ಹೇಳು, ಈ ಇಬ್ಬರಲ್ಲಿ ಯಾರಿಗೆ ಆ ಸಾಲಿಗನ ಮೇಲೆ ಹೆಚ್ಚು ಪ್ರೀತಿ?" ಎಂದು ಕೇಳಿದರು. ಅದಕ್ಕೆ ಸಿಮೋನನು, "ಯಾರು ಹೆಚ್ಚು ಸಾಲದಿಂದ ಬಿಡುಗಡೆ ಹೊಂದಿದ್ದಾನೋ ಅವನೇ ಎಂದು ತೋರುತ್ತದೆ," ಎಂದನು. "ಸರಿಯಾಗಿ ಹೇಳಿದೆ," ಎಂದರು ಯೇಸು. ಅನಂತರ ಆ ಮಹಿಳೆಯ ಕಡೆ ತಿರುಗಿ ಸಿಮೋನನಿಗೆ, "ಈಕೆಯನ್ನು ನೋಡಿದೆಯಾ ನಾನು ನಿನ್ನ ಮನೆಗೆ ಬಂದಾಗ ನೀನು ನನ್ನ ಕಾಲಿಗೆ ನೀರು ಕೊಡಲಿಲ್ಲ; ಈಕೆಯಾದರೋ ನನ್ನ ಪಾದಗಳನ್ನು ತನ್ನ ಕಣ್ಣೀರಿನಿಂದ ತೊಳೆದು ತಲೆಗೂದಲಿನಿಂದ ಒರೆಸಿದಳು. ನೀನು ನನಗೆ ಮುತ್ತಿಟ್ಟು ಸ್ವಾಗತಿಸಲಿಲ್ಲ; ಆದರೆ ಈಕೆ ಒಳಗೆ ಬಂದಾಗಿನಿಂದ ನನ್ನ ಪಾದಗಳಿಗೆ  ಮುತ್ತಿಡುವುದನ್ನು ನಿಲ್ಲಿಸಿಲ್ಲ; ನನ್ನ ತಲೆಗೆ ನೀನು ಎಣ್ಣೆ ಹಚ್ಚಲಿಲ್ಲ ಈಕೆಯೋ ನನ್ನ ಪಾದಗಳಿಗೆ ಸುಗಂಧ ತೈಲವನ್ನು ಹಚ್ಚಿರುವಳು. ಆದ್ದರಿಂದ ನಾನು ನಿನಗೆ ಹೇಳುವುದೇನೆಂದರೆ, ಈಕೆ ಮಾಡಿದ ಪಾಪಗಳು ಅಪಾರವಾದರು ಅವನ್ನು ಕ್ಷಮಿಸಲಾಗಿವೆ; ಇದಕ್ಕೆ ಈಕೆ ತೋರಿಸಿರುವ ಅಧಿಕವಾದ ಪ್ರೀತಿಯೇ ಸಾಕ್ಷಿ. ಕಡಿಮೆ ಕ್ಷಮೆಪಡೆದವನು ಕಡಿಮೆ ಪ್ರೀತಿ ತೋರಿಸುತ್ತಾನೆ," ಎಂದರು. ಆನಂತರ ಯೇಸು ಆ ಮಹಿಳೆಗೆ: "ನಿನ್ನ  ಪಾಪಗಳನ್ನು ಕ್ಷಮಿಸಲಾಗಿದೆ," ಎಂದರು. ಜೊತೆಯಲ್ಲಿ ಊಟಕ್ಕೆ ಕುಳಿತಿದ್ದವರು ಇದನ್ನು ಕೇಳಿ, "ಪಾಪಗಳನ್ನು ಕೂಡ ಕ್ಷಮಿಸುವ ಈತ ಯಾರು?" ಎಂದು ತಮ್ಮತಮ್ಮಲ್ಲೇ ಹೇಳಿಕೊಂಡರು. ಯೇಸು ಆಕೆಗೆ, "ನಿನ್ನ ವಿಶ್ವಾಸ ನಿನ್ನನ್ನು ಉದ್ಧಾರಮಾಡಿದೆ; ಸಮಾಧಾನದಿಂದ ಹೋಗು," ಎಂದರು.

15.09.21- "ದೈವಜ್ಞಾನವೇ ನಿಜವಾದ ಜ್ಞಾನ"

 ಮೊದಲನೇ ವಾಚನ: 1ತಿಮೊಥೇಯನಿಗೆ  3:14-16


ಪ್ರಿಯ ಸಹೋದರನೇ, ನಾನು ನಿನ್ನ ಬಳಿಗೆ ಬೇಗನೆ ಬರುವೆನೆಂಬ ನಿರೀಕ್ಷೆಯಿಂದಲೇ ಈ ಪತ್ರವನ್ನು ಬರೆಯುತ್ತಿದ್ದೇನೆ.  ಒಂದು ವೇಳೆ ನಾನು ಬರುವುದು ತಡವಾದರೆ, ಹೇಗೆ ನಡೆದುಕೊಳ್ಳಬೇಕು ಎಂಬುದು ನಿನಗೆ ತಿಳಿಯಲೆಂದು ಇದನ್ನು ಬರೆದಿದ್ದೇನೆ. ಸಭೆಯು ಸತ್ಯಕ್ಕೆ ಸ್ತಂಭವೂ ಅಸ್ತಿವಾರವೂ ಆಗಿದೆ. ನಿಜವಾಗಿಯೂ ನಮ್ಮ ಧರ್ಮದ ನಿಗೂಢಾರ್ಥ ಶ್ರೇಷ್ಟವಾದುದ್ದು ಎಂಬುದು ನಿಸ್ಸಂದೇಹವಾದ ವಿಷಯ. "ನರಮಾನವ ರೂಪದಲ್ಲಿ ಪ್ರತ್ಯಕ್ಷನಾಗಿ ದೇವರಿಗೆ ಪ್ರಿಯನೆಂದು ಪವಿತ್ರಾತ್ಮನಿಂದ ಪ್ರಕಟಿತನಾಗೆ ದೇವದೂತರಿಗೆ ಪ್ರದರ್ಶಿತನಾಗಿ, ಅನ್ಯಜನರಿಗೆ ಪ್ರಬೋದಿತನಾಗಿ ಜಗದಲ್ಲೆಲ್ಲೂ ವಿಶ್ವಾಸಪಡೆದವನಾಗಿ ಸ್ವರ್ಗಕ್ಕೇರಿದಾತ ಮಹಿಮಾನ್ವಿತ ಯೇಸುಕ್ರಿಸ್ತ."

ಕೀರ್ತನೆ: 111:1-2, 3-4, 5-6
ಶ್ಲೋಕ: ಮಹತ್ತಾದವು ಪ್ರಭುವಿನ ಕಾರ್ಯಗಳು

ಶುಭಸಂದೇಶ : ಲೂಕ 7:31-35


ಯೇಸುಸ್ವಾಮಿ ತಮ್ಮ ಬೋಧನೆಯನ್ನು ಮುಂದುವರಿಸುತ್ತಾ, ಈ ಕಾಲದ ಜನರನ್ನು ಯಾರಿಗೆ ಹೋಲಿಸಲಿ?  ಇವರು ಯಾರನ್ನು ಹೋಲುತ್ತಾರೆ? ಪೇಟೆಬೀದಿಗಳಲ್ಲಿ ಕುಳಿತು, "ನಾವು ಕೊಳಲನೂದಲು ನೀವು ಕುಣಿದಾಡಲಿಲ್ಲ; ನಾವು ಶೋಕಗೀತೆಗಳ ಹಾಡಲು ನೀವು ಕಣ್ಣೀರಿಡಲಿಲ್ಲ" ಎಂದು ಒಬ್ಬರಿಗೊಬ್ಬರು ಕೂಗಾಡುವ ಮಕ್ಕಳನ್ನು ಹೋಲುತ್ತಾರೆ. ಸ್ನಾನಿಕ ಯೊವಾನ್ನನು ಬಂದಾಗ ಅನ್ನ ಆಹಾರವನ್ನು ಸೇವಿಸಲಿಲ್ಲ, ದ್ರಾಕ್ಷಾರಸವನ್ನು ಮುಟ್ಟಲಿಲ್ಲ; ನೀವು, "ಅವನಿಗೆ ದೆವ್ವ ಹಿಡಿದಿದೆ," ಎಂದು ಹೇಳಿದಿರಿ; ನರಪುತ್ರನು ಬಂದಾಗ ಅನ್ನ ಪಾನೀಯಗಳನ್ನು ಸೇವಿಸಿದನು; ನೀವು, "ಇವನೊಬ್ಬ ಹೊಟ್ಟೆಬಾಕ, ಕುಡುಕ, ಸುಂಕದವರ ಹಾಗೂ ಪಾಪಿಷ್ಠರ ಗೆಳೆಯ," ಎನ್ನುತ್ತೀರಿ. ಆದರೆ ದೈವಜ್ಞಾನವೇ ನಿಜವಾದ ಜ್ಞಾನವೆಂದು ಅದನ್ನು ಅಂಗೀಕರಿಸುವ ಎಲ್ಲರೂ ಸಮರ್ಥಿಸುತ್ತಾರೆ," ಎಂದರು.

14.09.21 - "ದೇವರು ಲೋಕವನ್ನು ಎಷ್ಟಾಗಿ ಪ್ರೀತಿಸಿದರೆಂದರೆ ತಮ್ಮ ಏಕೈಕ ಪುತ್ರನನ್ನೇ ಧಾರೆಯೆರೆದರು"

 ಮೊದಲನೇ ವಾಚನ: ಸಂಖ್ಯಾಕಾಂಡ - 21:4-9



ಇಸ್ರಯೇಲರು ಹೋರ್ ಬೆಟ್ಟದಿಂದ ಹೊರಟು ಎದೋಮ್ಯರ ನಾಡನ್ನು ಸುತ್ತಿಕೊಂಡು ಹೋಗುವುದಕ್ಕೆ ಕೆಂಪು ಕಡಲಿನ ಮಾರ್ಗವಾಗಿ ಪ್ರಯಾಣ ಮಾಡಿದರು. ಈ ಮಾರ್ಗದ ಆಯಾಸದಿಂದವರಿಗೆ ಬೇಸರವಾಯಿತು. ಆಗ ಅವರು ದೇವರಿಗೂ ಮೋಶೆಗೂ ವಿರುದ್ಧ ಮಾತನಾಡತೊಡಗಿದರು: "ನೀವು ನಮ್ಮನ್ನು ಈ ಮರಳುಗಾಡಿನಲ್ಲಿ ಕೊಲ್ಲಬೇಕೆಂದು ಈಜಿಪ್ಟ್ ದೇಶದಿಂದ ಕರೆದುಕೊಂಡು ಬಂದಿರೋ? ಇಲ್ಲಿ ಆಹಾರವಿಲ್ಲ, ನೀರೂ ಇಲ್ಲ; ಈ ನಿಸ್ಸಾರವಾದ ಆಹಾರವನ್ನು ತಿಂದು ತಿಂದು ನಮಗೆ ಬೇಸರವಾಗಿದೆ,", ಎಂದು ಹೇಳತೊಡಗಿದರು. ಅದಕ್ಕೆ ಸರ್ವೇಶ್ವರ ವಿಷಸರ್ಪಗಳನ್ನು ಅವರ ನಡುವೆ ಬರಮಾಡಿದರು. ಅವು ಆ ಜನರನ್ನು ಕಚ್ಚಿದವು. ಬಹು ಜನ ಸತ್ತುಹೋದರು. ಆಗ ಜನರು ಮೋಶೆಯ ಬಳಿಗೆ ಬಂದು, "ನಾವು ನಿಮಗೂ ಸರ್ವೇಶ್ವರನಿಗೂ ವಿರುದ್ಧ ಮಾತಾಡಿ ದೋಷಿಗಳಾದೆವು. ಈ ಸರ್ಪಗಳು ನಮ್ಮನ್ನು ಬಿಟ್ಟು ತೊಲಗುವಂತೆ ಸರ್ವೇಶ್ವರನನ್ನು ಪ್ರಾರ್ಥಿಸಿ," ಎಂದು ಬೇಡಿಕೊಂಡರು. ಮೋಶೆ ಜನರ ಪರವಾಗಿ ಪ್ರಾರ್ಥಿಸಿದನು. ಸರ್ವೇಶ್ವರ ಅವನಿಗೆ, ನೀನು ಕಂಚಿನಿಂದ ವಿಷಸರ್ಪದ ಆಕಾರವನ್ನು ಮಾಡಿಸಿ, ಧ್ವಜ ಸ್ತಂಭದ ಮೇಲೆ ಎತ್ತಿ ನಿಲ್ಲಿಸು. ಸರ್ಪಗಳಿಂದ ಗಾಯಗೊಂಡ ಪ್ರತಿಯೊಬ್ಬನು ಅದನ್ನು ನೋಡಿ ಬದುಕಿಕೊಳ್ಳುವನು," ಎಂದು ಆಜ್ಞಾಪಿಸಿದರು. ಅಂತೆಯೇ ಮೋಶೆ ಕಂಚಿನಂದ ಸರ್ಪದ ಆಕಾರವನ್ನು ಮಾಡಿಸಿ ಧ್ವಜ ಸ್ತಂಭದ ಮೇಲೆ ಇಡಿಸಿದನು. ಸರ್ಪಗಳಿಂದ ಗಾಯಗೊಂಡವರಲ್ಲಿ ಯಾರು ಯಾರು ಆ ಕಂಚಿನ  ಸರ್ಪವನ್ನು ಲಕ್ಷ್ಯವಿಟ್ಟು ನೋಡಿದರೋ ಅವರೆಲ್ಲರೂ ಬದುಕಿಕೊಂಡರು.

ಕೀರ್ತನೆ: 78:1-2, 34-38
ಶ್ಲೋಕ: ಮರೆಯದಿರು ಪ್ರಭುವಿನ ಮಹತ್ಕಾರ್ಯಗಳನು

ನನ್ನ ಜನರೇ, ಕಿವಿಗೊಡಿ ನನ್ನ ಬೋಧನೆಗೆ|
ಗಮನಕೊಡಿ ನಾ ಹೇಳುವ ಮಾತುಗಳಿಗೆ||
ಸಾಮತಿಯೊಂದಿಗೆ ಬೋಧನೆಯನಾರಂಭಿಸುವೆನು|
ಹೊರಪಡಿಸುವೆನು ಪೂರ್ವಕಾಲದ ಗೂಢಾರ್ಥಗಳನು||

ಆತನನು ನೆನಸಿಕೊಂಡರವರು ವಧೆಯಾಗುವಾಗ|
ಪರಿತಾಪಗೊಂಡು ದೇವರಿಗೆ ಅಭಿಮುಖರಾದಾಗ||
ನೆನೆದರಾಗ ದೇವರೇ ತಮಗಾಶ್ರಯದುರ್ಗವೆಂದು|
ಆ ಪರಾತ್ಪರ ದೇವರೇ ತಮಗೆ ಉದ್ಧಾರಕನೆಂದು||

ಆದರೆ ಅವರ ನಾಲಿಗೆಯಾಡಿತು ಅಸತ್ಯ|
ಅವರ ಬಾಯಿ ಮಾಡಿತು ಕೇವಲ ಮುಖಸ್ತುತಿಯ||
ನೆಲೆಯಾಗಿರಲಿಲ್ಲ ಅವರ ಹೃದಯ ಆತನಲಿ|
ಬದ್ದರಾಗಿರಲಿಲ್ಲ ಆತನ ನಿಬಂಧನೆಗಳಲಿ||

ಆದರೂ ಕ್ಷಮಿಸಿದನವರನು ಆ ದಯಾಳು, ನಾಶಮಾಡದೆ|
ಕೋಪವ ತಾಳಿಕೊಂಡನು, ಹಲವು ವೇಳೆ ಉದ್ರೇಕಗೊಳ್ಳದೆ||

ಎರಡನೇ ವಾಚನ: ಫಿಲಿಪ್ಪಿಯರಿಗೆ 2:6-11

ಜೀವಸ್ವರೂಪಿ ತಾನಾಗಿದ್ದರೂ ನಿರುತ ದೇವರಿಗೆ ಸಮನಾದ ಆ ಸಿರಿ ಪದವಿಯನಾತ ಹಿಡಿದಿಟ್ಟುಕೊಳ್ಳಲಿಲ್ಲ ಬಿಡಲೊಲ್ಲೆನೆನುತ. ತನ್ನನ್ನೇ ಬರಿದು ಮಾಡಿಕೊಂಡು ದಾಸನ ರೂಪವನು ಧರಿಸಿಕೊಂಡು ಮನುಜನಾಕಾರದಲಿ ಕಾಣಿಸಿಕೊಂಡು ನರಮಾನವರಿಗೆ ಸರಿಸಮನಾದ. ತನ್ನನೇ ಆತ ತಗ್ಗಿಸಿಕೊಂಡು ವಿಧೇಯನಾಗಿ ನಡೆದುಕೊಂಡು ಮರಣಪರಿಯಂತ, ಹೌದೌದು, ಶಿಲುಬೆಯ ಮರಣಪರಿಯಂತ ವಿಧೇಯನಾದ. ಎಂತಲೇ ಪರಮೋನ್ನತ ಸ್ಥಾನಕ್ಕೇರಿಸಿದನಾತನನು ಇತ್ತನು ಹೆಸರುಗಳೊಳುತ್ತಮ ಹೆಸರನು ದೇವ ಪರಮನು, ಯೇಸುವಿನ ಹೆಸರಿಗೆಂದೇ ಮೊಣಕಾಲೂರಿ ಮಣಿವರು ಸ್ವರ್ಗವಾಸಿಗಳು, ಭೂನಿವಾಸಿಗಳು, ಪಾತಾಳ ಜೀವರಾಶಿಗಳು,  "ಕ್ರಿಸ್ತ ಯೇಸುವೇ ಪ್ರಭು", ಎಂದೆಲ್ಲರಿಗೆ ಅರಿಕೆ ಮಾಡುವರು ಪಿತ ದೇವನ ಮಹಿಮೆಯನ್ನು ಈ ಪರಿ ಹೊಗಳಿ ಸಾರುವರವರು.

ಶುಭಸಂದೇಶ: ಯೊವಾನ್ನ 3:13-17



ಯೇಸು ನಿಕೊದೇಮನಿಗೆ ಇಂತೆಂದರು: "ಸ್ವರ್ಗಲೋಕದಿಂದಲೇ ಇಳಿದುಬಂದ ನರಪುತ್ರನೇ ಹೊರತು ಬೇರೆ ಯಾರೂ ಸ್ವರ್ಗಕ್ಕೆ ಏರಿಹೋದವರಿಲ್ಲ. ಮೋಶೆ ಮರುಭೂಮಿಯಲ್ಲಿ ಸರ್ಪವನ್ನು ಮೇಲಕ್ಕೆ ಏರಿಸಿದನು. ಅಂತೆಯೇ ನರಪುತ್ರನಲ್ಲಿ ವಿಶ್ವಾಸವಿಟ್ಟವರೆಲ್ಲರೂ ನಿತ್ಯಜೀವವನ್ನು ಪಡೆಯುವಂತೆ ನರಪುತ್ರನನ್ನು ಸಹ ಮೇಲಕ್ಕೆ ಏರಿಸಬೇಕು. ದೇವರು ಲೋಕವನ್ನು ಎಷ್ಟಾಗಿ ಪ್ರೀತಿಸಿದರೆಂದರೆ ತಮ್ಮ ಏಕೈಕ ಪುತ್ರನನ್ನೇ ಧಾರೆಯೆರೆದರು; ಆತನಲ್ಲಿ ವಿಶ್ವಾಸವಿಟ್ಟ ಯಾರೂ ನಾಶವಾಗದೆ ಎಲ್ಲರೂ ನಿತ್ಯ ಜೀವವನ್ನು ಪಡೆಯಬೇಕೆಂಬುದೇ ದೇವರ ಉದ್ದೇಶ. ದೇವವರು ತಮ್ಮ ಪುತ್ರನನ್ನು ಈ ಲೋಕಕ್ಕೆ ಕಳುಹಿಸಿದ್ದು ಲೋಕವನ್ನು ತೀರ್ಪಿಗೆ ಗುರಿ ಮಾಡಲೆಂದಲ್ಲ; ಪುತ್ರನ ಮುಖಾಂತರ ಲೋಕ ಉದ್ಧಾರವಾಗಲೆಂದು.

11.09.21 - "ನೀವು ನನ್ನನ್ನು ‘ಸ್ವಾಮೀ ಸ್ವಾಮೀ,’ ಎಂದು ಕರೆಯುತ್ತೀರಿ; ಆದರೆ ನನ್ನ ಮಾತಿನಂತೆ ನಡೆಯುವುದಿಲ್ಲವೇಕೆ?"

 ಮೊದಲನೇ ವಾಚನ : 1 ತಿಮೋಥಿ 1:15-17

ಕ್ರಿಸ್ತಯೇಸು, ಪಾಪಿಗಳ ಉದ್ಧಾರಕ್ಕಾಗಿ ಈ ಲೋಕಕ್ಕೆ ಬಂದರು ಎನ್ನುವ ಮಾತು ಸತ್ಯವಾದುದು, ನಂಬಲರ್ಹವಾದುದು ಹಾಗೂ ಎಲ್ಲರ ಅಂಗೀಕಾರಕ್ಕೆ ಯೋಗ್ಯವಾದುದು. ಅಂಥ ಪಾಪಿಗಳಲ್ಲಿ ನಾನೇ ಪ್ರಮುಖನು. 
ಇದರಿಂದಾಗಿ, ಮುಂದೆ ವಿಶ್ವಾಸಿಗಳಾಗಿ ನಿತ್ಯಜೀವ ಪಡೆಯುವವರಿಗೆ ಆದರ್ಶ ದೊರಕುವಂತೆ ಕ್ರಿಸ್ತಯೇಸು ನನಗೆ ಪೂರ್ಣ ಸಹನೆ ತೋರಿದರು. ಇದು ದೇವರ ಕರುಣೆಯೇ ಸರಿ. ಸರ್ವಯುಗಗಳ ಅರಸರೂ ಅಮರರೂ ಅಗೋಚರರೂ ಆಗಿರುವ ಏಕೈಕ ದೇವರಿಗೆ ಯುಗಯುಗಾಂತರಕ್ಕೆ ಗೌರವವೂ ಮಹಿಮೆಯೂ ಸಲ್ಲಲಿ! ಆಮೆನ್.



 ಕೀರ್ತನೆ: 113: 1-7
 ಶ್ಲೋಕ: ಪ್ರಭುವಿನ ಸಿರಿನಾಮವು ಇಂದಿಗೂ ಎಂದೆಂದಿಗೂ ಪೂಜ್ಯ

ಪ್ರಭುವಿನ ದಾಸರೇ, ಸ್ತುತಿಮಾಡಿ I
ಪ್ರಭುವಿನ ನಾಮ ಸ್ತುತಿಯನು ಮಾಡಿ II
ಪ್ರಭುವಿನ ಸಿರಿನಾಮವು ಪೂಜ್ಯ I
ಇಂದಿಗೂ ಎಂದೆಂದಿಗೂ ಪೂಜ್ಯ II

ಪ್ರಭುವಿನಾ ಸಿರಿನಾಮವು ಸ್ತುತ್ಯ I
ಪೂರ್ವ ಪಶ್ಚಿಮದವರೆಗೂ ಸ್ತುತ್ಯ II
ಸಕಲ ಜಾತಿಜನಾಂಗಗಳಲಿ ಪ್ರಭು ಶ್ರೇಷ್ಠ I
ಆತನ ಮಹಿಮೆ ಗಗನಕ್ಕಿಂತಲೂ ಉತ್ಕೃಷ್ಟ II
ನಮ್ಮ ಪ್ರಭು ದೇವನಂತೆ ಯಾರು ಸಮರ್ಥ I
ಉನ್ನತದಲಿ ಆಸನಾರೂಢನು ಆತ I
ಇಹಪರಗಳನು ವೀಕ್ಷಿಸಲಾತ ಶಕ್ತ II
ದೀನರನು ಎಬ್ಬಿಸುವನು ಧೂಳಿನಿಂದ I
ಬಡವರನು ಎತ್ತುವನು ತಿಪ್ಪೆಯಿಂದ II

ಶುಭಸಂದೇಶ: ಲೂಕ  6:43-49

ಒಳ್ಳೆಯ ಮರವು ಕೆಟ್ಟ ಫಲವನ್ನು ಕೊಡುವುದಿಲ್ಲ; ಕೆಟ್ಟ ಮರವು ಒಳ್ಳೆಯ ಫಲವನ್ನು ಕೊಡುವುದಿಲ್ಲ. 
ಪ್ರತಿಯೊಂದು ಮರದ ಗುಣವನ್ನು ಅದರ ಹಣ್ಣಿನಿಂದ ಗುರುತಿಸಬಹುದು. ಮುಳ್ಳುಗಿಡದಲ್ಲಿ ಅಂಜೂರ ಕೀಳುವಂತಿಲ್ಲ. ಮುಳ್ಳು ಕಳ್ಳಿಯಲ್ಲಿ ದ್ರಾಕ್ಷಿ ಕೊಯ್ಯುವಂತಿಲ್ಲ. ಒಳ್ಳೆಯವನು ತನ್ನ ಹೃದಯವೆಂಬ ಬೊಕ್ಕಸದಿಂದ ಒಳ್ಳೆಯದನ್ನೇ ಹೊರತರುತ್ತಾನೆ. ಕೆಟ್ಟವನು ಕೆಟ್ಟ ಬೊಕ್ಕಸದಿಂದ ಕೆಟ್ಟದ್ದನ್ನೇ ಹೊರತರುತ್ತಾನೆ. ಹೃದಯದಲ್ಲಿ ತುಂಬಿರುವುದೇ ಬಾಯಿಮಾತಾಗಿ ತುಳುಕುತ್ತದೆ. “ನೀವು ನನ್ನನ್ನು ‘ಸ್ವಾಮೀ ಸ್ವಾಮೀ,’ ಎಂದು ಕರೆಯುತ್ತೀರಿ; ಆದರೆ ನನ್ನ ಮಾತಿನಂತೆ ನಡೆಯುವುದಿಲ್ಲವೇಕೆ? ನನ್ನ ಬಳಿಗೆ ಬಂದು ನನ್ನ ಮಾತನ್ನು ಕೇಳಿ, ಅದರಂತೆ ನಡೆಯುವ ಪ್ರತಿಯೊಬ್ಬನೂ ಎಂಥವನಿಗೆ ಸಮಾನನೆಂದು ನಿಮಗೆ ಹೇಳುತ್ತೇನೆ ಕೇಳಿ: ಆಳವಾಗಿ ಅಡಿಪಾಯ ತೆಗೆದು, ಬಂಡೆಕಲ್ಲಿನ ಮೇಲೆ ಅಸ್ತಿವಾರ ಹಾಕಿ, ಮನೆಕಟ್ಟಿದವನಿಗೆ ಅವನು ಸಮಾನನು; ಹುಚ್ಚು ಹೊಳೆ ಬಂದು ಪ್ರವಾಹವು ಆ ಮನೆಗೆ ಅಪ್ಪಳಿಸಿದರೂ ಅದು ಕದಲಲಿಲ್ಲ. ಕಾರಣ - ಆ ಮನೆಯನ್ನು ಸುಭದ್ರವಾಗಿ ಕಟ್ಟಲಾಗಿತ್ತು. ನನ್ನ ಮಾತನ್ನು ಕೇಳಿಯೂ ಅದರಂತೆ ನಡೆಯದವನು ಅಸ್ತಿವಾರವೇ ಇಲ್ಲದೆ ಬರಿಯ ಮಣ್ಣಿನ ಮೇಲೆ ಮನೆ ಕಟ್ಟಿದವನಿಗೆ ಸಮಾನನು. ಆ ಮನೆಗೆ ಪ್ರವಾಹವು ಅಪ್ಪಳಿಸಿದಾಗ ಒಡನೆಯೇ ಅದು ಕುಸಿದು ಬಿತ್ತು. ಆ ಮನೆಗೆ ಒದಗಿದ ಪತನವೋ ವಿಪರೀತ!” ಎಂದರು.

13.09.21 - "ಇಂಥ ಗಾಢ ವಿಶ್ವಾಸವನ್ನು ನಾನು ಇಸ್ರಯೇಲ್ ಜನರಲ್ಲೂ ಕಾಣಲಿಲ್ಲವೆಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ"

 ಮೊದಲನೇ ವಾಚನ: 1 ತಿಮೊಥೇಯನಿಗೆ 2:1-8



ಮೊತ್ತ ಮೊದಲು ಮಾನವರೆಲ್ಲರಿಗೋಸ್ಕರ ದೇವರಿಗೆ ವಿಜ್ಞಾಪನೆ, ಪ್ರಾರ್ಥನೆ, ಬಿನ್ನಹ  ಹಾಗೂ ಕೃತಜ್ಞತಾಸ್ತುತಿಗಳನ್ನು ಸಲ್ಲಿಸಬೇಕೆಂದು ಕೇಳಿಕೊಳ್ಳುತ್ತೇನೆ. ನಾವು ದೈವಭಕ್ತಿಯುಳ್ಳವರಾಗಿ ಮತ್ತು ಗೌರವಯುತವಾಗಿ ಶಾಂತಿ ಸಮಾಧಾನದಿಂದಲೂ ನೆಮ್ಮದಿಯಿಂದಲೂ ಜೀವಿಸಲು ಅನುಕೂಲವಾಗುವಂತೆ ಅರಸರಿಗಾಗಿಯೂ ಎಲ್ಲಾ ಅಧಿಕಾರಿಗಳಿಗಾಗಿಯೂ ಪ್ರಾರ್ಥಿಸಬೇಕು. ಹೀಗೆ ಮಾಡುವುದು ಒಳ್ಳೆಯದು, ನಮ್ಮ ಉದ್ಧಾರಕರಾದ ದೇವರಿಗೆ ಮೆಚ್ಚುಗೆಯಾದುದು. ಎಲ್ಲಾ ಮಾನವರೂ ಸತ್ಯವನ್ನರಿತು ಜೀವೋದ್ಧಾರ ಪಡೆಯಬೇಕೆಂಬುದೇ ದೈವೇಚ್ಛೆ, ದೇವರು ಒಬ್ಬರೇ,  ಅವರೇ ಮಾನವರಾಗಿರುವ ಕ್ರಿಸ್ತಯೇಸು. ಇವರು ಎಲ್ಲರ ಉದ್ಧಾರಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದರು. ಸರ್ವರೂ ಉದ್ಧಾರವಾಗಬೇಕೆಂಬ ದೈವೇಚ್ಛೆಗೆ ಸೂಕ್ತ ಸಮಯದಲ್ಲಿ ಸಾಕ್ಷಿ ನೀಡಿದರು.  ವಿಶ್ವಾಸ ಮತ್ತು ಸತ್ಯದ ಸಂದೇಶವನ್ನು ಸಾರುವುದಕ್ಕಾಗಿಯೇ ದೇವರು ನನ್ನನ್ನು ಪ್ರೇಷಿತನನ್ನಾಗಿಯೂ ಯೆಹೂದ್ಯೇತರರಿಗೆ ಬೋಧಕನನ್ನಾಗಿಯೂ ನೇಮಕಮಾಡಿದರು.  ನಾನು ಹೇಳುತ್ತಿರುವುದು ಸುಳ್ಳಲ್ಲ, ಸತ್ಯಸ್ಯ ಸತ್ಯ. ಪ್ರಾರ್ಥನೆ ಮಾಡುವ ಸ್ಥಳಗಳಲ್ಲೆಲ್ಲಾ ಪುರುಷರು ಕೋಪತಾಪವಿಲ್ಲದೆ, ಕೋಲಾಹಲವಿಲ್ಲದೆ ಕರಗಳನ್ನೆತ್ತಿ ಭಕ್ತಿಪೂರ್ವಕವಾಗಿ ಪ್ರಾರ್ಥಿಸಬೇಕು ಎಂಬುದೇ ನನ್ನ ಅಪೇಕ್ಷೆ.

ಕೀರ್ತನೆ: 28:2, 7, 8-9
ಶ್ಲೋಕ: ಪ್ರಭುವಿಗೆನ್ನ ಕೃತಜ್ಞತಾ ವಂದನೆ. 

ನಿನ್ನ ಪರಿಶುದ್ಧಾಲಯದತ್ತ ಕೈಯೆತ್ತಿ ಮುಗಿವೆನು I
ಕರುಣೆಯಿಂದಾಲಿಸು ಪ್ರಭು, ನನ್ನಾರ್ತ ಮನವಿಯನು II
ಪ್ರಭುವೇ ಶಕ್ತಿ, ಎನಗೆ ರಕ್ಷೆ, ಎನ್ನೆದೆಯ ನಂಬುಗೆ I
ಎನ್ನ ಮನಃಪೂರ್ವಕ ಕೀರ್ತನೆ, ಆತನಿತ್ತ ನೆರವಿಗೆ II

ಪ್ರಭುವೆ ತನ್ನ ಪ್ರಜೆಯ ಪ್ರಾಬಲ್ಯವು I
ತನ್ನಭಿಷಿಕ್ತನಿಗೆ ಆಶ್ರಯ ದುರ್ಗವು II
ರಕ್ಷಿಸು ನಿನ್ನ ಪ್ರಜೆಯನು, ಆಶೀರ್ವದಿಸು ನಿನ್ನ ಜನರನು I
ಕುರಿಗಾಹಿ ನೀನಾಗಿರು ಪ್ರಭೂ, ಹೊತ್ತು ಸಾಗಿಸು ಅವರನು II

ಶುಭಸಂದೇಶ: ಲೂಕ 7:1-10


ಜನರಿಗೆ ಮನಮುಟ್ಟುವಂತೆ ಬೋಧನೆ ಮಾಡಿದ ನಂತರ ಯೇಸುಸ್ವಾಮಿ ಕಫೆರ್ನವುಮ್ ಎಂಬ ಊರಿಗೆ ಬಂದರು. ಅಲ್ಲಿ ರೋಮ್ ಶತಾಧಿಪತಿಯೊಬ್ಬನ ನೆಚ್ಚಿನ ಸೇವಕನು ಕಾಯಿಲೆಯಿಂದ ಸಾಯುವುದರಲ್ಲಿದ್ದನು. ಶತಾಧಿಪತಿ ಯೇಸುವಿನ ವಿಷಯವನ್ನು ಕೇಳೆ ಅವರ ಬಳಿಗೆ ಯೆಹೂದ್ಯ ಪ್ರಮುಖರನ್ನು ಕಳುಹಿಸಿ, ತನ್ನ ಸೇವಕರನ್ನು ಗುಣಪಡಿಸಲು ಬರಬೇಕೆಂದು ಮನವಿ ಮಾಡಿಕೊಂಡನು. ಅವರು ಯೇಸುವಿನ ಬಳಿಗೆ ಬಂದು, "ಆ ಶತಾಧಿಪತಿ ನಿಮ್ಮ ಉಪಕಾರಕ್ಕೆ ಆರ್ಹನು. ನಮ್ಮ ಜನರ ಮೆಲೆ ಅವನಿಗೆ ಪ್ರೀತಿ ಇದೆ; ಅಲ್ಲದೆ  ನಮ್ಮ ಪ್ರಾರ್ಥನಾ ಮಂದಿರವನ್ನು ಕಟ್ಟಿಸಿಕೊಟ್ಟವನೂ ಅವನೇ," ಎಂದು ಬಹಳವಾಗಿ ವಿನಂತಿಸಿದರು. ಯೇಸು ಅವರ ಸಂಗಡವೇ ಹೊರಟರು. ಮನೆಯಿಂದ ಸ್ವಲ್ಪ ದೂರವಿರುವಾಗಲೇ ಶತಾಧಿಪತಿ ತನ್ನ ಗೆಳೆಯರ ಮುಖಾಂತರ, "ಪ್ರಭುವೇ, ಇಷ್ಟು ಶ್ರಮ ತೆಗೆದುಕೊಳ್ಳಬೇಡಿ; ತಾವು ನನ್ನ ಮನೆಗೆ ಬರುವಷ್ಟು  ಯೋಗ್ಯತೆ ನನಗಿಲ್ಲ. ನಾನೇ ತಮ್ಮಲ್ಲಿಗೆ ಬರೋಣವೆಂದರೆ ಆ ಯೋಗ್ಯತೆಯೂ ನನಗಿಲ್ಲ. ತಾವು ಒಂದು ಮಾತು ಹೇಳಿದರೆ ಸಾಕು, ನನ್ನ ಸೇವಕ ಸ್ವಸ್ಥನಾಗುವನು. ಏಕೆಂದರೆ, ನಾನೂ ಮತ್ತೊಬ್ಬರ ಕೈ ಕೆಳಗಿರುವವನು; ನನ್ನ ಅಧೀನದಲ್ಲೂ ಸೈನಿಕರಿದ್ದಾರೆ. ಅವರಲ್ಲಿ ಒಬ್ಬನಿಗೆ ನಾನು "ಬಾ, ಎಂದರೆ ಬರುತ್ತಾನೆ. ಇನ್ನೊಬ್ಬನಿಗೆ "ಹೋಗು," ಎಂದರೆ ಹೋಗುತ್ತಾನೆ. ಸೇವಕನಿಗೆ "ಇಂಥದ್ದನ್ನು ಮಾಡು," ಎಂದರೆ ಮಾಡುತ್ತಾನೆ," ಎಂದು ಹೇಳಿ ಕಳುಹಿಸಿದನು. ಅವನ ಈ ಮಾತುಗಳನ್ನು ಕೇಳಿದಾಗ ಯೇಸುವಿಗೆ ಆಶ್ಚರ್ಯವಾಯಿತು. ತಮ್ಮ ಹಿಂದೆ ಬರುತ್ತಿದ್ದ ಜನರ ಗುಂಪಿನ ಕಡೆ ತಿರುಗಿ ನೋಡಿ, "ಇಂಥ ಗಾಢ ವಿಶ್ವಾಸವನ್ನು  ನಾನು ಇಸ್ರಯೇಲ್ ಜನರಲ್ಲೂ ಕಾಣಲಿಲ್ಲವೆಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ," ಎಂದರು. ಇತ್ತ ಶತಾಧಿಪತಿಯ ಕಡೆಯಿಂದ ಬಂದವರು ಮನೆಗೆ ಹಿಂದಿರುಗಿದಾಗ ಕಾಯಿಲೆ ಬಿದ್ದಿದ್ದ ಆ ಸೇವಕನು ಸ್ವಸ್ಥವಾಗಿದ್ದುದನ್ನು ಕಂಡರು.

12.09.21

ಮೊದಲನೇ ವಾಚನ : ಯೆಶಾಯ 50:5-9

ತೆರೆದಿಹನು ಸ್ವಾಮಿ ಸರ್ವೇಶ್ವರ ನನ್ನ ಕಿವಿಯನ್ನು ಎಂದೇ ವಿಮುಖನಾಗಲಿಲ್ಲ ನಾನು, ಪ್ರತಿಭಟಿಸಲಿಲ್ಲ ಆತನನ್ನು, ಬೆನ್ನುಕೊಟ್ಟೆನು ಹೊಡೆಯುವವನಿಗೆ ಗಡ್ಡ ಒಡ್ಡಿದೆನು ಅದನ್ನು ಕೀಳುವವರಿಗೆ ಮುಖ ಮರೆಮಾಡಲಿಲ್ಲ ಉಗುಳುಬುಗಳಿಗೆ. ನೆರವಾಗಿಹನು.ನನಗೆ ಸ್ವಾಮಿ ಸರ್ವೇಶ್ವರ ಎಂದೇ ತಲೆತಗ್ಗಿಸಲಿಲ್ಲ ನಾನು ನಾಚಿಕೆಯಿಂದ ಗಟ್ಟಿಮಾಡಿಕೊಂಡೆ ಮುಖವನ್ನು ಕಗ್ಗಲ್ಲಿನ ಹಾಗೆ ಆಶಾಬಂಗಪಡಲಾರೆನೆಂದು ಗೊತ್ತು ನನಗೆ. ನನ್ನ ಪರ ತೀರ್ಪುಕೊಡುವವನು ಇಹನು ಹತ್ತಿರದಲ್ಲೆ. ನನಗೆ ಪ್ರತಿಕಕ್ಷಿ ಯಾರೇ ಬರಲಿ ಮುಂದಕ್ಕೆ. ನನ್ನೊಡನೆ ವ್ಯಾಜ್ಯಮಾಡಬಲ್ಲವನಾರೇ ನಿಲ್ಲಲಿ ನ್ಯಾಯಕ್ಕೆ ಇಗೋ, ಸ್ವಾಮಿ ಸರ್ವೇಶ್ವರ ನಿಂತಿಹರು ನನಗೆ ನೆರವಾಗಿ ನಿರ್ಣಯಿಸುವವನು ಯಾರು ನನ್ನನ್ನು ಅಪರಾಧಿಯಾಗೀ ನುಸಿತಿಂದ ವಸ್ತ್ರದಂತೆ ಅಳಿದು ಹೋಗುವವರು ಜೀರ್ಣವಾಗಿ. 

 ಕೀರ್ತನೆ: 116:1-2, 3-4, 5-6, 8-9 
 ಶ್ಲೋಕ: ನಡೆವೆನು ನಾನು ಪ್ರಭುವಿನ ಕಣ್ಮುಂದೆ ಅಂತೆಯೇ ಬಾಳುವೆ ಜೀವಲೋಕದೊಳಿದ್ದೇ.

ನನಗಿದೆ ಪ್ರಭುವಿನಲ್ಲಿ ಪ್ರೀತಿ I
ಆಲಿಸಿಹನಾತ ನನ್ನ ವಿನಂತಿ II
ಆತನೆನ್ನ ಮೊರೆಗೆ ಕಿವಿಗೊಟ್ಟ ನಿಮಿತ್ತ I
ವಿಜ್ಞಾಪಿಸುವೆ ಜೀವಮಾನ ಪರಿಯಂತ II

ಸುತ್ತುಕೊಂಡಿದ್ದವೆನ್ನನು ಮೃತ್ಯುಪಾಶಗಳು I
ಬಿಗಿಹಿಡಿದಿದ್ದವು ಪಾತಾಳ ವೇದನೆಗಳು I
ಬಂದೊದಗಿದ್ದವೆನಗೆ ಕಷ್ಟಸಂಕಟಗಳು II

ಕೂಗಿ ಕರೆದೆನಾಗ ಪ್ರಭುವಿನ ಸಿರಿ ನಾಮವನು I
“ಪ್ರಭು, ಉಳಿಸೆನ್ನ ಪ್ರಾಣವನು” ಎಂದು ಬೇಡಿದೆನು II
ಪ್ರಭು ಕೃಪಾಳು, ನ್ಯಾಯಪ್ರಿಯನು I
ಕರುಣಾಮಯನು, ನಮ್ಮ ದೇವನು II

ಕಾಪಾಡುವನು ಪ್ರಭು ಸರಳ ಜೀವಿಗಳನು I
ರಕ್ಷಿಸಿದನು ಕುಗ್ಗಿದವನಾಗಿದ್ದ ಎನ್ನನು II
ತಪ್ಪಿಸಿಹನು ಮರಣಕೆ ನಾನೀಡಾಗದಂತೆ I
ಸಂತೈಸಿಹನು ಕಂಬನಿಯ ನಾ ಸುರಿಸದಂತೆ I

ಕಾಪಾಡಿಹನು ಕಾಲೆಡವಿ ನಾ ಬೀಳದಂತೆ II
ಎಂದೇ ನಡೆವೆನು ನಾನು ಪ್ರಭುವಿನ ಕಣ್ಮುಂದೆ I
ಅಂತೆಯೇ ಬಾಳುವೆ ಜೀವಲೋಕದೊಳಿದ್ದೇ I

ಎರಡನೇ ವಾಚನ: ಯಕೋಬ 2:14-18 

ಸಹೋದರರೇ, ಒಬ್ಬನು ತನಗೆ ವಿಶ್ವಾಸ ಇದೆಯೆಂದು ಕೊಚ್ಚಿಕೊಂಡು ಅದನ್ನು ಕಾರ್ಯತಃ ವ್ಯಕ್ತಪಡಿಸದಿದ್ದರೆ ಅದರಿಂದ ಪ್ರಯೋಜನ ಏನು? ಅಂಥ ವಿಶ್ವಾಸ ಅವನನ್ನು ಉದ್ಧಾರ ಮಾಡಬಲ್ಲುದೇ? ಒಂದು ವೇಳೆ ಒಬ್ಬ ಸಹೋದರನಾಗಲಿ, ಸಹೋದರಿಯಾಗಲಿ ದಿನನಿತ್ಯ ಊಟಬಟ್ಟೆಗಿಲ್ಲದೆ ಇರುವಾಗ, ನಿಮ್ಮಲ್ಲಿ ಯಾರಾದರೂ ಅವರಿಗೆ ಅಗತ್ಯವಾದುದನ್ನು ನೀಡದೆ, "ಹೋಗು, ಸುಖವಾಗಿ ಬಾಳು, ಚಳಿ ಕಾಯಿಸಿಕೊ, ಹೊಟ್ಟೆ ತುಂಬಾ ತಿನ್ನು," ಎಂದು ಬರೀ ಬಾಯಿಮಾತಿನಲ್ಲಿ ಉಪಚರಿಸಿದರೆ ಅದರಿಂದಾದ ಪ್ರಯೋಜನವೇನು? ಸತ್ಕ್ರಿಯೆಗಳಿಲ್ಲದ ವಿಶ್ವಾಸ ಸತ್ತ ವಿಶ್ವಾಸವೇ ಸರಿ. ಒಬ್ಬನು, "ನಿನ್ನಲ್ಲಿ ವಿಶ್ವಾಸವಿದೆ, ನನ್ನಲ್ಲಿ ಸತ್ಕ್ರಿಯೆಗಳಿವೆ" ಎನ್ನಬಹುದು. ಅಂಥವನಿಗೆ, "ಸತ್ಕ್ರಿಯೆಗಳಿಲ್ಲದ ನಿನ್ನ ವಿಶ್ವಾಸವನ್ನು ನನಗೆ ತೋರಿಸು; ನನ್ನ ಸತ್ಕಾರ್ಯಗಳ ಮೂಲಕ ನನ್ನ ವಿಶ್ವಾಸವನ್ನು ನಿನಗೆ ವ್ಯಕ್ತಪಡಿಸುತ್ತೇನೆ," ಎಂದು ಉತ್ತರಿಸಬಹುದು. 

 ಶುಭಸಂದೇಶ: ಮಾರ್ಕ  8:27-35 

ಯೇಸುಸ್ವಾಮಿ ತನ್ನ ಶಿಷ್ಯರ ಸಂಗಡ ಫಿಲಿಪ್ಪನ ಸೆಜರೇಯ ಎಂಬ ಪಟ್ಟಣದ ಪಕ್ಕದಲ್ಲಿರುವ ಹಳ್ಳಿಗಳಿಗೆ ಪ್ರಯಾಣ ಬೆಳೆಸಿದರು. ದಾರಿಯಲ್ಲಿ, "ಜನರು ನನ್ನನ್ನು ಯಾರೆಂದು ಹೇಳುತ್ತಾರೆ?" ಎಂದು ಶಿಷ್ಯರನ್ನು ಕೇಳಿದರು. ಅದಕ್ಕೆ ಶಿಷ್ಯರು, "ಕೆಲವರು ತಮ್ಮನ್ನು "ಸ್ನಾನಿಕ  ಯೊವಾನ್ನ' ಎನ್ನುತ್ತಾರೆ. ಇನ್ನು ಕೆಲವರು "ಎಲಿಯನು," ಮತ್ತೆ ಕೆಲವರು ಪ್ರವಾದಿಗಳಲ್ಲಿ ತಾವೂ ಒಬ್ಬರು ಎನ್ನುತ್ತಾರೆ," ಎಂದರು. ಆಗ ಯೇಸು, "ಆದರೆ ನೀವು ನನ್ನನ್ನು ಯಾರೆನ್ನುತ್ತೀರಿ?" ಎಂದು ಪ್ರಶ್ನಿಸಿದರು. ಅದಕ್ಕೆ ಪೇತ್ರನು, "ಅಭಿಷಿಕ್ತರಾದ ಲೋಕೋದ್ಧಾರಕ ತಾವೇ" ಎಂದು ಉತ್ತರವಿತ್ತನು. ಆಗ ಯೇಸು, "ಈ ವಿಷಯವನ್ನು ಯಾರಿಗೂ ತಿಳಿಸಬೇಡಿ," ಎಂದು ತಮ್ಮ ಶಿಷ್ಯರಿಗೆ ಕಟ್ಟಪ್ಪಣೆ ಮಾಡಿದರು. ಈ ಘಟನೆಯ ಬಳಿಕ ಯೇಸುಸ್ವಾಮಿ, "ನರಪುತ್ರನು ಕಠಿಣವಾದ ಯಾತನೆಯನ್ನು ಅನುಭವಿಸಬೇಕಾಗಿದೆ. ಸಭಾ ಪ್ರಮುಖರಿಂದಲೂ ಪ್ರಧಾನ ಯಾಜಕರಿಂದಲೂ ಧರ್ಮಶಾಸ್ತ್ರಿಗಳಿಂದಲೂ ಆತನು ತಿರಸ್ಕೃತನಾಗಿ ಕೊಲ್ಲಲ್ಪಡುವನು; ಆದರೆ ಮೂರನೇ ದಿನ ಪುನರುತ್ದಾನ ಹೊಂದುವನು," ಎಂದು ತಮ್ಮ ಶಿಷ್ಯರಿಗೆ ಮುಚ್ಚು ಮರೆಯಿಲ್ಲದೆ ಬೋಧಿಸಲಾರಂಭಿಸಿದರು. ಇದನ್ನು ಕೇಳಲಾಗದೇ  ಪೇತ್ರನು ಅವರನ್ನು ಪ್ರತ್ಯೇಕವಾಗಿ ಕರೆದು, " ನೀವು ಹೀಗೆಲ್ಲಾ ಹೇಳಬಾರದು," ಎಂದು ಪ್ರತಿಭಟಿಸಿದನು. ಆಗ ಯೇಸು ಹಿಂದಕ್ಕೆ ತಿರುಗಿ, ತಮ್ಮ ಶಿಷ್ಯರನ್ನು ನೋಡಿ, ಪೇತ್ರನನ್ನು ಗದರಿಸುತ್ತಾ, "ಸೈತಾನನೇ, ತೊಲಗು ಇಲ್ಲಿಂದ; ನಿನ್ನ ಈ ಆಲೋಚನೆ ಮನುಷ್ಯರದೇ ಹೊರತು ದೇವರದಲ್ಲ," ಎಂದರು. ಆನಂತರ ಯೇಸುಸ್ವಾಮಿ ತಮ್ಮ ಶಿಷ್ಯರನ್ನೂ ಜನರ ಗುಂಪನ್ನೂ ಒಟ್ಟಾಗಿ ತಮ್ಮ ಬಳಿಗೆ ಕರೆದು, "ಯಾರಿಗಾದರೂ ನನ್ನನ್ನು ಹಿಂಬಾಲಿಸಲು ಮನಸ್ಸಿದ್ದರೆ, ಅವನು ತನ್ನನ್ನು ತಾನೇ ಪರಿತ್ಯಜಿಸಿ, ತನ್ನ ಶಿಲುಬೆಯನ್ನು ತಾನೇ ಹೊತ್ತುಕೊಂಡು ನನ್ನನ್ನು ಹಿಂಬಾಲಿಸಲಿ; ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಹಾತೊರೆಯುವವನು ಅದನ್ನು ಕಳೆದುಕೊಳ್ಳುವನು. ಆದರೆ ನನ್ನ ನಿಮಿತ್ತ ಹಾಗೂ ಶುಭಸಂದೇಶದ ನಿಮಿತ್ತ ತನ್ನ ಪ್ರಾಣವನ್ನು ಕಳೆದುಕೊಳ್ಳುವವನು ಅದನ್ನು ನಿತ್ಯಕ್ಕೂ ಉಳಿಸಿಕೊಳ್ಳುವನು.