ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

16.04.14 - ಪವಿತ್ರ ವಾರದ ಬುಧವಾರ

ಶುಭ ಸಂದೇಶ
ಮತ್ತಾಯ: 26: 14-25

ಇದಾದ ಮೇಲೆ, ಹನ್ನೆರೆಡು ಮಂದಿ ಶಿಷ್ಯರಲ್ಲಿ ಒಬ್ಬನಾದ ಇಸ್ಕರಿಯೋತಿನ ಯೂದ ಎಂಬಾತ ಮುಖ್ಯ ಯಾಜಕರ ಬಳಿಗೆ ಹೋದನು. "ನಿಮಗೆ ನಾನು ಯೇಸುವನ್ನು ಹಿಡಿದುಕೊಟ್ಟರೆ ನನಗೇನು ಕೊಡುವಿರಿ?" ಎಂದು ಅವರನ್ನು ವಿಚಾರಿಸಿದನು. ಅವರೋ, ಅವನಿಗೆ ಮೂವತ್ತು ಬೆಳ್ಳಿ ನಾಣ್ಯಗಳನ್ನು ನಿಗದಿ ಮಾಡಿ ಕೊಟ್ಟರು. ಆ ಗಳಿಗೆಯಿಂದ ಯೇಸುವನ್ನು ಹಿಡಿದೊಪ್ಪಿಸಲು
ಅವನು ಸಂದರ್ಭ ಕಾಯುತ್ತಾ ಇದ್ದನು. 

ಅಂದು ಹುಳಿರಹಿತ ತೊಟ್ಟಿಯ ಹಬ್ಬದ ಮೊದಲನೆಯ ದಿನ. ಶಿಷ್ಯರು ಯೇಸುಸ್ವಾಮಿಯ ಬಳಿಗೆ ಬಂದು, " ತಮಗೆ ಪಾಸ್ಕ ಭೋಜನವನ್ನು ನಾವು ಎಲ್ಲಿ ಸಿದ್ಧಪಡಿಸಬೇಕೆನ್ನುತ್ತೀರಿ? ಎಂದು ಕೇಳಿದರು. ಅದಕ್ಕೆ ಅವರು "ಪಟ್ಟಣದಲ್ಲಿ ನಾನು ಸೂಚಿಸುವಂಥವನ ಬಳಿಗೆ ಹೋಗಿರಿ, ’ನನ್ನ ಕಾಲ ಸಮೀಪಿಸಿತು, ಪಾಸ್ಕವನ್ನು ನನ್ನ ಶಿಷ್ಯರ ಸಮೇತ ನಿನ್ನ ಮನೆಯಲ್ಲಿಯೇ ಆಚರಿಸಬೇಕೆಂದಿದ್ದೇನೆ ; ಇದನ್ನು ನಮ್ಮ ಗುರುವೇ ಹೇಳಿ ಕಳುಹಿಸಿದ್ದಾರೆ ಎಂದು ಅವನಿಗೆ ತಿಳಿಸಿರಿ" ಎಂದರು. ಯೇಸು ಸೂಚಿಸಿದಂತೆಯೇ ಶಿಷ್ಯರು ಹೋಗಿ ಪಾಸ್ಕ ಭೋಜನವನ್ನು ತಯಾರಿಸಿದರು. 

ಸಂಜೆಯಾಯಿತು.ಯೇಸುಸ್ವಾಮಿ ಹನ್ನೆರೆಡು ಮಂದಿ ಶಿಷ್ಯರ ಸಂಗಡ ಊಟಕ್ಕೆ ಕುಳಿತರು.ವರೆಲ್ಲರೂ ಊಟ ಮಾಡುತ್ತಿದ್ದಾಗ ಯೇಸು " ನಿಮ್ಮಲ್ಲೇ ಒಬ್ಬನು ನನಗೆ ದ್ರೋಹ ಬಗೆಯುತ್ತಾನೆ, ಎಂದು ನಿಮಗೆ ಖಂಡಿತವಾಗಿ ಹೇಳುತ್ತೇನೆ," ಎಂದರು. ಶಿಷ್ಯರು ಬಹಳ ಕಳವಳಗೊಂಡರು. ಒಬ್ಬರಾದ ಮೇಲೊಬ್ಬರು, " ಸ್ವಾಮೀ ನಾನೋ? ನಾನೋ? ಎಂದು ಕೇಳ ತೊಡಗಿದರು.ಅದಕ್ಕೆ ಪ್ರತ್ತ್ಯುತ್ತರವಾಗಿ ಯೇಸು, " ಊಟದ ಬಟ್ಟಲಲ್ಲಿ ನನ್ನೊಡನೆ ಕೈ ಅದ್ದಿ  ಉಣ್ಣುವವನೇ ನನಗೆ ದ್ರೋಹ ಬಗೆಯುತ್ತಾನೆ. ನರಪುತ್ರನೇನೋ ಪವಿತ್ರ ಗ್ರಂಥದಲ್ಲಿ ಬರೆದಿರುವ ಪ್ರಕಾರ ಹೊರಟು ಹೋಗುತ್ತಾನೆ, ನಿಜ. ಆದರೆ ಆಯ್ಯೋ ನರಪುತ್ರನಿಗೆ ದ್ರೋಹ ಬಗೆಯುವವನ ದುರ್ಗತಿಯನ್ನು ಏನೆಂದು ಹೇಳಲಿ! ಅವನು ಹುಟ್ಟದೇ ಇದ್ದಿದ್ದರೆ ಎಷ್ಟೋ ಚೆನ್ನಾಗಿತ್ತು!" ಎಂದರು. ಗುರುದ್ರೋಹಿಯಾದ ಯೂದನು ಆಗ " ಗುರುವೇ, ಅವನು ನಾನಲ್ಲ ತಾನೇ?" ಎಂದನು. ಅದಕ್ಕೆ ಯೇಸು, " ಅದು ನಿನ್ನ ಬಾಯಿಂದಲೇ ಬಂದಿದೆ" ಎಂದರು.

15.04.14 - ಪವಿತ್ರ ವಾರದ ಮಂಗಳವಾರ

ಶುಭ ಸಂದೇಶ

ಯೊವಾನ್ನ 13:21-33, 36-38 

ಇದೆಲ್ಲವನ್ನು ಹೇಳಿ ಆದ ಮೇಲೆ ಯೇಸುಸ್ವಾಮಿ ಮನಸ್ಸಿನಲ್ಲಿ ಬಹಳವಾಗಿ ನೊಂದುಕೊಂಡರು. ಅವರು, " ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ನಿಮ್ಮೊಲ್ಲೊಬ್ಬನು ದ್ರೋಹ ಬಗೆದು ನನ್ನನು ಹಿಡಿದೊಪ್ಪಿಸುವನು, " ಎಂದು ಸ್ಪಷ್ಟವಾಗಿ ಹೇಳಿದರು. ಯೇಸು ಯಾರನ್ನು ಕುರಿತು ಹಾಗೆಂದರೆಂದು ತಿಳಿಯದೆ ಶಿಷ್ಯರು ಒಬ್ಬರನೊಬ್ಬರು ಸಂಶಯದಿಂದ ನೋಡುವವರಾದರು.

ಯೇಸುವಿನ ಪಕ್ಕದಲ್ಲೇ ಒರಗಿ ಕುಳಿತಿದ್ದ ಅವರ ಆಪ್ತ ಶಿಷ್ಯನಿಗೆ, ಸಿಮೋನ ಪೇತ್ರನು, "ಯಾರನ್ನು ಕುರಿತು ಹಾಗೆ ಕೇಳುತ್ತಿದ್ದಾರೆಂದು ಕೇಳು" ಎಂದು ಸನ್ನೆ ಮಾಡಿದನು.ಆಗ ಆ ಶಿಷ್ಯನು, ಯೇಸುವಿನ ಮಗ್ಗುಲಿಗೆ ಸರಿದು ,"ಅಂತವನು ಯಾರು ಪ್ರಭೂ?" ಎಂದು ಕೇಳಿದನು. ಯೇಸು "ನಾನು ರೊಟ್ಟಿಯ ತುಂಡನ್ನು ಬಟ್ಟಲಿನಲ್ಲಿ ಅದ್ದಿ ಅದನ್ನು ಯಾರಿಗೆ ಕೊಡುತ್ತೇನೋ ಅವನೇ," ಎಂದು ಹೇಳಿ ರೊಟ್ಟಿಯ ತುಂಡನ್ನು ಅದ್ದಿ ಸಿಮೋನನ ಮಗ ಇಸ್ಕರಿಯೋತಿನ ಯೂದನಿಗೆ ಕೊಟ್ಟರು. ಯೂದನು ಅದನ್ನು ತೆಗೆದುಕೊಂಡದ್ದೇ ತಡ, ಸೈತಾನನು ಅವನನ್ನು ಹೊಕ್ಕನು. ಆಗ ಯೇಸು, " ನೀನು ಮಾಡಬೇಕೆಂದಿರುವುದನ್ನು ಬೇಗನೆ ಮಾಡಿ ಮುಗಿಸು, " ಎಂದರು. ಊಟಕ್ಕೆ ಕುಳಿತಿದ್ದ ಶಿಷ್ಯರಿಗೆ, ಯೇಸು ಹಾಗೇಕೆ ಹೇಳಿದರೆಂದು ಅರ್ಥವಾಗಲಿಲ್ಲ. ಯೂದನ ವಶದಲ್ಲಿ ಹಣದ ಚೀಲವಿದ್ದುದರಿಂದ, ’ಹಬ್ಬಕ್ಕೆ ನಮಗೆ ಬೇಕಾದುದನ್ನು ಕೊಂಡು ಬಾ," ಎಂದೋ, ಬಡವರಿಗೆ ಏನಾದರು ಕೊಡು’ ಎಂದೋ, ಯೇಸು ಹೇಳಿರಬೇಕೆಂದು ಕೆಲವು ಶಿಷ್ಯರು ಭಾವಿಸಿದರು. ಆ ರೊಟ್ಟಿಯ ತುಂಡನ್ನು ತೆಗೆದುಕೊಂಡ ಕೂಡಲೇ ಯೂದನು ಎದ್ದು ಹೊರಟು ಹೋದನು. 

ಆಗ ರಾತ್ರಿಯಾಗಿತ್ತು. ಯೂದನು ಹೊರಟು ಹೋದ ಮೇಲೆ ಯೇಸುಸ್ವಾಮಿ ಹೀಗೆಂದರು: " ಈಗ ನರಪುತ್ರನ ಮಹಿಮೆ ಪ್ರಕಟವಾಗುವುದು. ಆತನಲ್ಲಿ ದೇವರ ಮಹಿಮೆಯೂ ಪ್ರಕಟವಾಗುವುದು.ದೇವರ ಮಹಿಮೆ ಆತನಲ್ಲಿ ಪ್ರಕಟವಾದರೆ,ದೇವರೇ ನರಪುತ್ರನ ಮಹಿಮೆಯನ್ನು ತಮ್ಮಲ್ಲಿ ಪ್ರಕಟಪಡಿಸುವರು. ತಕ್ಷಣವೇ ಪ್ರಕಟಪಡಿಸುವರು. ಪ್ರಿಯ ಮಕ್ಕಳೇ, ಇನ್ನು ತುಸು ಕಾಲ ಮಾತ್ರ ನಾನು ನಿಮ್ಮೊಡನೆ ಇರುತ್ತೇನೆ, ಆಮೇಲೆ ನೀವು ನನ್ನನು ಹುಡುಕುವಿರಿ.ಆದರೆ ನಾನು ಹೋಗುವಲ್ಲಿಗೆ ನೀವು ಬರಲಾರಿರಿ ಎಂದು ನಾನು ಯೆಹೂದ್ಯರಿಗೆ ಹೇಳಿದಂತೆಯೇ ನಿಮಗೂ ಹೇಳುತ್ತೇನೆ ಎಂದರು . ಆಗ ಸಿಮೋನ ಪೇತ್ರನು," ಪ್ರಭುವೇ ನೀವೂ ಹೋಗಿವುದಾದರೂ ಎಲ್ಲಿಗೆ?" ಎಂದು ಕೇಳಿದನು. " ನಾನು ಹೋಗುವಲ್ಲಿಗೆ ನೀನು ಈಗ ಬರಲಾರೆ. ಅನಂತರ ಬರುವೆ," ಎಂದು ಯೇಸು ಉತ್ತರ ಕೊಡಲು ಪೇತ್ರನು, "ಈಗಲೇ ನಿಮ್ಮ ಹಿಂದೆ ಬರಲು ಏಕಾಗದು? ಪ್ರಭೂ, ನಿಮಗಾಗಿ ಪ್ರಾಣವನ್ನು ಕೊಡಲೂ ಸಿದ್ಧನಿದ್ದೇನೆ," ಎಂದನು ಆಗ ಯೇಸು," ನನಗಾಗಿ ಪ್ರಾಣವನ್ನು ಕೊಡಲೂ ಸಿದ್ಧನಿರುವೆಯಾ? ನಾನು ನಿನಗೆ ನಿಜವಾಗಿ ಹೇಳುತ್ತೇನೆ ಕೇಳು; ನೀನು ನನ್ನನ್ನು ಅರಿಯನೆಂದು ಮೂರು ಬಾರಿ ತಿರಸ್ಕರಿಸುವ ತನಕ ನಾಳೆ ಮುಂಜಾನೆ ಕೋಳಿ ಕೂಗುವುದಿಲ್ಲ." ಎಂದು ನುಡಿದರು.

14.04.14 - ಪವಿತ್ರ ವಾರದ ಸೋಮವಾರ

ಮೊದಲನೆಯ ವಾಚನ
ಯೆಶಾಯ 42: 1-7

ಇಗೋ, ನನ್ನ ದಾಸನು! ನನ್ನ ಆಧಾರ ಪಡೆದವನು.ನನ್ನಿಂದ ಆಯ್ಕೆಯಾದವನು ನನಗೆ ಪರಮ ಪ್ರಿಯನು ನೆಲೆಗೊಳಿಸಿರುವೆ ಇವನಲ್ಲಿ ನನ್ನ ಆತ್ಮವನ್ನು. ಅನ್ಯರಾಷ್ಟ್ರಗಳಿಗೆ ಸಾರುವನಿವನು ಸದ್ಧರ್ಮವನ್ನು. ಆತ ಕೂಗಾಡುವಂಥವನಲ್ಲ, ಕಿರಿಚಾಡುವಂಥವನಲ್ಲ, ಹಾದಿ ಬೀದಿಗಳಲ್ಲಿ ವನ ಧ್ವನಿ ಕೇಳಿಸುವುದೇ ಇಲ್ಲ. ಮುರಿಯುವುದಿಲ್ಲ ಆತ. ಜಜ್ಜಿದ ದಂಟನ್ನು ನಂದಿಸುವುದಿಲ್ಲ ಆತ.ಕೆಳೆಗುಂದಿದ ದೀಪವನು ತಪ್ಪದೆ ಸಿದ್ಧಿಗೆ ತರುವನಾತ ಸದ್ಧರ್ಮವನು. ಎದುರು ನೋಡುವುವು ದ್ವೀಪ-ದ್ವೀಪಾಂತರಗಳು ಅತನ ಧರ್ಮಶಾಸ್ತ್ರವನು. ಆಕಾಶಮಂಡಲವನ್ನುಂಟು ಮಾಡಿ ಹರಡಿದ ದೇವರು, ಭೂಮಂಡಲವನ್ನೂ ಅದರಲ್ಲಿ ಬೆಳೆದುದೆಲ್ಲವನ್ನೂ ವೃದ್ಧಿಗೊಳಿಸುವವವನು, ಭೂನಿವಾಸಿಗಳಿಗೆ ಜೀವವನ್ನು ಭೂಚರರಿಗೆ ಜೀವಾತ್ಮವನ್ನೂ ಅನುಗ್ರಹಿಸುವ ಸರ್ವೇಶ್ವರ ಇಂತೆನ್ನುತಿಹನು: ಸರ್ವಶ್ವರ ಸ್ವಾಮಿಯಾದ ನಾನು ಕೈ ಹಿಡಿದು ಕಾದಿರಿಸುವೆನು ನಿನ್ನನು, ಕರೆದಿಹೆನು ನಿನ್ನನು ಸಧರ್ಮ ಸಾಧನೆಗಾಗಿ ಇತ್ತಿರುವೆನು ನಿನ್ನನು ರಾಷ್ಟ್ರಗಳಿಗೆ ಬೆಳಕಾಗಿ. ಕೊಡುವೆ ನೀನು ಕಣ್ಣನ್ನು ಕುರುಡರಿಗೆ, ತರುವೆ ಬಂಧಿಗಳನ್ನು ಸೆರೆಯಿಂದ ಹೊರಗೆ ಕತ್ತಲೆಯ ಕಾರಗೃಹದಿಂದ ಅವರನ್ನು ಬೆಳಕಿಗೆ.
   

ಶುಭ ಸಂದೇಶ
ಯೊವಾನ್ನ 12:1-11 


ಪಾಸ್ಕ ಹಬ್ಬಕ್ಕೆ ಇನ್ನೂ ಆರು ದಿನಗಳಿರುವಾಗ ಯೇಸುಸ್ವಾಮಿ ಬೆಥಾನಿಯಕ್ಕೆ ಬಂದರು. ಅವರು ಲಾಜರನನ್ನು ಸಾವಿನಿಂದ ಜೀವಕ್ಕೆ ಎಬ್ಬಿಸಿದ ಊರದು. ಯೇಸುವಿಗೆ ಅಲ್ಲಿ ಒಂದು ಔತಣವನ್ನು ಏರ್ಪಡಿಸಲಾಗಿತ್ತು.ಮಾರ್ತಳು ಬಡಿಸುತ್ತಿದ್ದಳು. ಯೇಸುವಿನೊಡನೆ ಪಂಕ್ತಿಯಲ್ಲಿ ಊಟಕ್ಕೆ ಕುಳಿತ್ತಿದ್ದವರಲ್ಲಿ ಲಾಜರನೂ ಒಬ್ಬ. ಆಗ ಮರಿಯಳು ಸುಮಾರು ಅರ್ಧ ಲೀಟರಿನಷ್ಟು, ಅತ್ಯಂತ ಬೆಲೆ ಬಾಳುವ ಅಚ್ಚ ಜಟಾಮಾಂಸಿ ಸುಗಂಧ ತೈಲವನ್ನು ತಂದು ಯೇಸುವಿನ ಪಾದಗಳಿಗೆ ಹಚ್ಚಿ ತನ್ನ ತಲೆಗೂದಲಿನಿಂದ ಆ ಪಾದಗಳನ್ನು ಒರೆಸಿದಳು. ತೈಲದ ಸುವಾಸನೆ ಮನೆಯಲ್ಲೆಲ್ಲಾ ಹರಡಿತು. ಯೇಸುವನ್ನು ಹಿಡಿದುಕೊಡಲಿದ್ದ ಹಾಗೂ ಶಿಷ್ಯರಲ್ಲಿ ಒಬ್ಬನಾಗಿದ್ದ ಇಸ್ಕರಿಯೋತಿನ ಯೂದನು, " ಈ ಸುಗಂಧ ತೈಲವನ್ನು ಮುನ್ನೂರು ದಿನಾರಿ ನಾಣ್ಯಗಳಿಗ ಮಾರಿ, ಬಂದ ಹಣವನ್ನು ಬಡ ಬಗ್ಗರಿಗೆ ಕೊಡಬಹುದಿತ್ತಲ್ಲಾ?" ಎಂದನು. ಬಡವರ ಹಿತಚಿಂತನೆಯಿಂದೇನೂ ಅವನು ಹೀಗೆ ಹೇಳಲಿಲ್ಲ. ತನ್ನ ವಶದಲ್ಲಿ ಇಡಲಾಗಿದ್ದ ಹಣದ ಚೀಲದಿಂದ ಸ್ವಂತ ಉಪಯೋಗಕ್ಕಾಗಿ ಬಳಸುತ್ತಿದ್ದ ಕಳ್ಳ ಅವನು. ಆಗ ಯೇಸು. " ಆಕೆಯ ಗೊಡವೆ ನಿನಗೆ ಬೇಡ. ನನ್ನ ಶವ ಸಂಸ್ಕಾರದ ದಿನಕ್ಕಾಗಿ ಆಕೆ ಅದನ್ನು ಇಟ್ಟುಕೊಳ್ಳಲಿ. ಬಡ ಬಗ್ಗರು ನಿಮ್ಮ ಬಳಿಯಲ್ಲಿ ಯಾವಗಲೂ ಇರುತ್ತಾರೆ. ಆದರೆ ನಾನು ಯಾವಾಗಲೂ ನಿಮ್ಮ ಬಳಿ ಇರುವುದಿಲ್ಲ," ಎಂದರು. ಯೇಸುಸ್ವಾಮಿ ಅಲ್ಲಿರುವುದನ್ನು ಕೇಳಿ ಯೆಹೂದ್ಯರ ಒಂದು ದೊಡ್ಡ ಗುಂಪು ಬಂದಿತು.