ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

01.03.2019 - ಇನ್ನು ಮುಂದೆ ಅವರು ಇಬ್ಬರಲ್ಲ, ಒಂದೇ ಶರೀರ.

ಮೊದಲನೇ ವಾಚನ: ಸಿರಾಖನು 6:5-17

ವಿ ನುಡಿ ಹೆಚ್ಚಿಸುವುದು ಸ್ನೇಹಿತರನ್ನು. ಸರಳ ನುಡಿ ಹೆಚ್ಚಿಸುವುದು ಸತ್ಕಾರವನ್ನು. ಸಮಾಧಾನದಿಃದ ವರ್ತಿಸು ಹಲವರೊಡನೆ ಸಲಹೆಗಾರ ಮಾತ್ರ ನಿನಗಿರಲಿ ಸಾವಿರದಲ್ಲೊಬ್ಬನೇ. ಸ್ನೇಹ ಬೆಳೆಸುವ ಮುನ್ನ ವ್ಯಕ್ತಿಯನ್ನು ಪರೀಕ್ಷಿಸು ಯಾರನ್ನೂ ಕೂಡಲೇ ನಂಬಿ ಬಿಡಲು ಅವಸರಪಡದಿರು. ಸ್ನೇಹ ಬೆಳೆಸುವ ಗೆಳೆಯರಿದ್ದಾರೆ ಸಮಯ ಸಾಧಕರಾಗಿ ಕೈಕೊಡುವವರು ನಿನಗೆ ಕಷ್ಟಕಾಲದಲ್ಲಿ. ಇಂದು ಗೆಳೆಯ ನಾಳೆ ಶತ್ರು ಆಗುವವನೂ ಇದ್ದಾನೆ ಇಂಥವನು ನಿನ್ನೊಡನೆ ಜಗಳವಾಡಿ ನಿನ್ನ ಮಾನ ಕಳೆಯುತ್ತಾನೆ. ಸಹವಾಸ ಮಾಡುವವರಿದ್ದಾರೆ ನಿನ್ನ ತಿಂಡಿ ತೀರ್ಥಕ್ಕಾಗಿ ನಿನ್ನ ಸಂಗಡ ಇರುವುದಿಲ್ಲ ಕಷ್ಟದಲ್ಲಿ ಸಹಾಯ ಮಾಡಲಿಕ್ಕಾಗಿ. ನಿನ್ನ ಸುಖದ ದಿನಗಳಲ್ಲಿ ಪ್ರಾಣ ಸ್ನೇಹಿತನಂತಿರುವವನು ನಿನ್ನ ಆಳುಹೋಳುಗಳನ್ನು ಬೆದರಿಸಿ ಕೆಲಸ ಮಾಡಿಸಿಕೊಳ್ಳುವನು. ನಿನ್ನ ದುಃಖದ ದಿನಗಳಲ್ಲಿ ವಿರೋಧಿಯಾಗುವನು ತನ್ನ ಮುಖವನ್ನು ನಿನ್ನಿಂದ ಮರೆಸಿಕೊಳ್ಳುವನು. ನಿನ್ನ ವೈರಿಗಳಿಂದ ಆದಷ್ಟು ದೂರವಿರು ನಿನ್ನ ಸಂಗಡಿಗರ ವಿಷಯದಲ್ಲಿ ಎಚ್ಚರಿಕೆಯಿಂದಿರು ನಂಬಿಗಸ್ಥ ಗೆಳೆಯ, ಸುರಕ್ಷಿತ ಆಶ್ರಯಗಿರಿಯಂತೆ ಅಂಥವನು ಸಿಕ್ಕುವುದು ಸಂಪತ್ತಿನ ನಿಧಿ ಸಿಕ್ಕಿದಂತೆ. ಯಾವುದೂ ಸಾಟಿಯಿಲ್ಲ ನಂಬಿಗಸ್ಥ ಗೆಳೆಯನಿಗೆ ಅಷ್ಟಿಷ್ಟಲ್ಲ. ಅಂಥವನ ಶ್ರೇಷ್ಠತೆ. ನಂಬಿಗಸ್ಥ ಗೆಳೆಯ ಸಂಜೀವಿನಿಯಂತೆ ಸಿಗುವನವನು ದೇವರಿಗೆ ಭಯಪಡುವವನಿಗೆ. ದೇವಭಕ್ತನು ಸ್ನೇಹಿತರನ್ನು ಆಪ್ತನನ್ನಾಗಿಸಿ ಕೊಳ್ಳುವನು, ಏಕೆಂದರೆ ತನ್ನಂತೆಯೇ ಅವನನ್ನು ಕಂಡು ಭಾವಿಸುವರು.

ಕೀರ್ತನೆ: 119:12, 16, 18, 27, 34, 35

ಶ್ಲೋಕ: ಸ್ತುತಿ ಸಲ್ಲಲಿ ಪ್ರಭು ನಿನಗೆ, ನಿನ್ನ ಆಜ್ಞೆಗಳನು ಕಲಿಸು ಎನಗೆ

ಶುಭಸಂದೇಶ: ಮಾರ್ಕ 10:1-12


ವರೆಲ್ಲರೂ ಹಿಂದಿರುಗಿ ಬಂದಾಗ ಉಳಿದ ಶಿಷ್ಯರ ಸುತ್ತಲೂ ಜನರು ದೊಡ್ಡ ಗುಂಪಾಗಿ ನೆರೆದಿರುವುದನ್ನು, ಧರ್ಮಶಾಸ್ತ್ರಿಗಳು ಇವರೊಡನೆ ವಾದಿಸುತ್ತಿರುವುದನ್ನು ಕಂಡರು. ನೆರದಿದ್ದ ಜನರು ಯೇಸುವನ್ನು ಕಂಡೊಡನೆ ಆಶ್ಚರ್ಯಪಟ್ಟು ಓಡಿಬಂದು, ಅವರಿಗೆ ನಮಸ್ಕರಿಸಿದರು. ಅಲ್ಲಿಂದ ಯೇಸುಸ್ವಾಮಿ ಜೋರ್ಡಾನ್ ನದಿಯ ಆಚೆ ಕಡೆಯಿದ್ದ ಜುದೇಯ ಪ್ರಾಂತ್ಯಕ್ಕೆ ಬಂದರು. ಅಲ್ಲಿಯೂ ಜನರು ಗುಂಪುಗುಂಪಾಗಿ ಅವರ ಬಳಿಗೆ ಬಂದರು. ಯೇಸು ಅವರಿಗೂ ಉಪದೇಶ ಮಾಡಿದರು.  ಫರಿಸಾಯರಲ್ಲಿ ಕೆಲವರು, ಅವರನ್ನು ಮಾತಿನಲ್ಲಿ ಸಿಕ್ಕಿಸುವ ಉದ್ದೇಶದಿಂದ "ಗಂಡನು ತನ್ನ ಹೆಂಡತಿಯನ್ನು ಬಿಟ್ಟುಬಿಡುವುದು ಧರ್ಮಸಮ್ಮತವೇ?" ಎಂದು ಕೇಳಿದರು. ಯೇಸು, "ಈ ವಿಷಯವಾಗಿ ಮೋಶೆ ನಿಮಗೆ ಏನೆಂದು ವಿಧಿಸಿದ್ದಾನೆ?" ಎಂದು ಅವರನ್ನೇ ಪುನಃ ಪ್ರಶ್ನಿಸಿದರು. ಅದಕ್ಕೆ ಅವರು "ವಿವಾಹ ವಿಚ್ಛೇದನ ಪತ್ರವನ್ನು ಕೊಟ್ಟು ಹೆಂಡತಿಯನ್ನು ಬಿಟ್ಟುಬಿಡಲು ಮೋಶೆ ಅನುಮತಿ ಇತ್ತಿದ್ದಾನೆ," ಎಂದರು. ಆಗ ಯೇಸು,  "ನಿಮ್ಮ ಹೃದಯ ಕಲ್ಲಾಗಿ ಇದ್ದುದರಿಂದಲೇ ಮೋಶೆ ಈ ನಿಯಮವನ್ನು ಬರೆದಿಟ್ಟನು. ಆದರೆ ಸೃಷ್ಟಿಯ ಆರಂಭದಿಂದಲೇ 'ದೇವರು ಮನುಷ್ಯರನ್ನು ಗಂಡುಹೆಣ್ಣಾಗಿ ನಿರ್ಮಿಸಿದ್ದಾರೆ. ಈ ಕಾರಣದಿಂದ ಗಂಡನು ತಂದೆ ತಾಯಿಗಳನ್ನು ಬಿಟ್ಟು, ತನ್ನ ಹೆಂಡತಿಯನ್ನು ಕೂಡಿಕೊಂಡು ಅವರಿಬ್ಬರೂ ಒಂದಾಗಿ ಬಾಳುವರು' ಎನ್ನುತ್ತದೆ ಪವಿತ್ರಗ್ರಂಥ. ಹೀಗಿರುವಲ್ಲಿ ಇನ್ನು ಮುಂದೆ ಅವರು ಇಬ್ಬರಲ್ಲ, ಒಂದೇ ಶರೀರ. ಆದುದರಿಂದ ದೇವರು ಒಂದುಗೂಡಿಸಿದ್ದನ್ನು ಮನುಷ್ಯನು ಬೇರ್ಪಡಿಸದಿರಲಿ," ಎಂದರು. ಅಂದು ಮನೆಗೆ ಹೋದ ಬಳಿಕ ಶಿಷ್ಯರು ಅದೇ ವಿಷಯವಾಗಿ ಯೇಸುವನ್ನು ವಿಚಾರಿಸಿದರು. ಅದಕ್ಕೆ ಅವರು, "ಹೆಂಡತಿಯನ್ನು ಬಿಟ್ಟು ಬೇರೊಬ್ಬಳನ್ನು ಮದುವೆಯಾಗುವವನು ಆಕೆಗೆ ದ್ರೋಹ ಬಗೆದು ವ್ಯಭಿಚಾರಿಣಿಯಾಗುತ್ತಾನೆ. ಅಂತೆಯೇ ಗಂಡನನ್ನು ಬಿಟ್ಟು ಮತ್ತೊಬ್ಬನನ್ನು ವಿವಾಹವಾಗುವವಳು ವ್ಯಭಿಚಾರಿಣಿಯಾಗುತ್ತಾಳೆ," ಎಂದರು.

28.02.2019 - ಉಪ್ಪೇ ಸಪ್ಪೆಯಾದರೆ...

ಮೊದಲನೇ ವಾಚನ: ಸಿರಾಖನು 5:1-8

ನಿನ್ನ ಆಸ್ತಿಯನ್ನೇ ನೆಚ್ಚಿಕೊಂಡಿರಬೇಡ, ಅದರಲ್ಲೇ ಸಂತುಷ್ಪನಾಗಿರಬೇಡ. ಕೊಚ್ಚಿಕೊಳ್ಳಬೇಡ, ನನ್ನನ್ನು ಕಟ್ಟಿ ಆಳುವವರಾರೆಂದು ಸರ್ವೇಶ್ವರ ನಿನ್ನ ಸೊಕ್ಕನ್ನು ಮುರಿದುಬಿಟ್ಟಾನು! ಪಾಪಮಾಡದ ನನಗೇನಾಯಿತು? ಎಂದುಕೊಳ್ಳಬೇಡ, ಏಕೆಂದರೆ ದೀರ್ಘ ಶಾಂತನು ಸರ್ವೇಶ್ವರ! ಪಾಪಕ್ಕೆ ಪಾಪವನ್ನು ಕೂಡಿಸಿ ಹಾಕಿಕೊಳ್ಳಬೇಡ ದೇವರಿಂದ ಕ್ಷಮೆ ಪಡೆಯುವ ಬಗ್ಗೆ ನಿರ್ಭಯದಿಂದಿರಬೇಡ. ದೇವರು ಕರುಣಾಸಾಗರ ಎಂದು ನೆಪ ಹೇಳಬೇಡ, ಲೆಕ್ಕವಿಲ್ಲದ ಪಾಪ ಮಾಡಿದರೂ ಕ್ಷಮೆ ದೊರಕುವುದೆಂದು ನೆನೆಯಬೇಡ. ದಯೆಯಿದ್ದಂತೆ ಕೋಪವೂ ಆತನಲ್ಲಿದೆ ಪಾಪಿಗಳ ಮೇಲೆ ಆತನ ಕೋಪ ಎರಗಲಿದೆ. ಸರ್ವೇಶ್ವರನಿಗೆ ಅಭಿಮುಖನಾಗಲು ತಡಮಾಡಬೇಡ. 'ಇಂದು, ನಾಳೆ' ಎಂದು ದಿನವನ್ನು ಮುಂದೂಡಬೇಡ. ಸರ್ವೇಶ್ವರನ ಕೋಪ ಎರಗಬಹುದು ದಿಢೀರೆಂದು ನೀ ಹಾಳಾಗಿ ಹೋಗುವೆ ಮುಯ್ಯಿ ತೀರಿಸುವ ದಿನದಂದು. ಮನಸ್ಸಿಡಬೇಡ ಅನ್ಯಾಯದ ಗಳಿಕೆಯಲಿ ಅದರಿಂದ ಯಾವ ಲಾಭವಿರದು ವಿನಾಶದ ದಿನದಲಿ.

ಕೀರ್ತನೆ: 1:1-2, 3, 4, 6

ಶ್ಲೋಕ: ಪ್ರಭುವಿನ ಧರ್ಮಶಾಸ್ತ್ರದಲ್ಲಿ ಹರ್ಷಗೊಳ್ಳುವವನಾರೋ- ಅವನೇ ಧನ್ಯನು.

ಶುಭಸಂದೇಶ: ಮಾರ್ಕ 9:41-50


ಯೇಸು ತಮ್ಮ ಶಿಷ್ಯರಿಗೆ "ನೀವು ಕ್ರಿಸ್ತ ಭಕ್ತರು ಎಂದು ಯಾವನಾದರೂ ನಿಮಗೆ ಕುಡಿಯಲು ಒಂದು ಲೋಟ ನೀರನ್ನು ಕೊಟ್ಟರೂ ಅದಕ್ಕೆ ತಕ್ಕ ಪ್ರತಿಫಲವನ್ನು ಅವನು ತಪ್ಪದೆ ಪಡೆಯುವನು. ಎಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ," ಎಂದರು. ಯೇಸುಸ್ವಾಮಿ ತಮ್ಮ ಬೋಧನೆಯನ್ನು ಮುಂದುವರಿಸುತ್ತಾ, "ನನ್ನಲ್ಲಿ ವಿಶ್ವಾಸ ಇಟ್ಟಿರುವ ಈ ಚಿಕ್ಕವರಲ್ಲಿ ಒಬ್ಬನಿಗೆ ಯಾವನಾದರೂ ಪಾಪಕ್ಕೆ ಕಾರಣವಾದರೆ, ಅಂಥವನ ಕೊರಳಿಗೆ ದೊಡ್ಡ ಬೀಸುಕಲ್ಲನ್ನು ಕಟ್ಟಿ, ಅವನನ್ನು ಸಮುದ್ರದಲ್ಲಿ ದಬ್ಬುವುದೇ ಅವನಿಗೆ ಲೇಸು. ನಿನ್ನ ಕೈ ನಿನಗೆ ಪಾಪಕ್ಕೆ ಕಾರಣವಾದರೆ ಅದನ್ನು ಕತ್ತರಿಸಿ ಹಾಕು; ಎರಡು ಕೈಗಳಿದ್ದು ನರಕದ ಆರದ ಬೆಂಕಿಗೆ ಗುರಿಯಾಗುವುದಕ್ಕಿಂತ ಅಂಗಹೀನನಾಗಿ ಅಮರಜೀವವನ್ನು ಪಡೆಯುವುದೇ ಲೇಸು, ನಿನ್ನ ಕಾಲು ನಿನಗೆ ಪಾಪಕ್ಕೆ ಕಾರಣವಾದರೆ ಅದನ್ನು ಕತ್ತರಿಸಿಹಾಕು; ಎರಡು ಕಾಲುಳ್ಳವನಾಗಿ ನರಕಕ್ಕೆ ತಳ್ಳಿಸಿಕೊಳ್ಳುವುದಕ್ಕಿಂತ  ಕುಂಟನಾಗಿ ಅಮರಜೀವವನ್ನು ಪಡೆಯುವುದೇ ಲೇಸು. ನಿನ್ನ ಕಣ್ಣು ನಿನಗೆ  ಪಾಪಕ್ಕೆ ಕಾರಣವಾದರೆ ಅದನ್ನು ಕಿತ್ತುಹಾಕು; ಎರಡು ಕಣ್ಣುಳ್ಳವನಾಗಿ ನರಕಕ್ಕೆ ತಳ್ಳಿಸಿಕೊಳ್ಳುವುದಕ್ಕಿಂತ  ಒಕ್ಕಣ್ಣನಾಗಿ ದೇವರ ಸಾಮ್ರಾಜ್ಯ ಸೇರುವುದೇ ಲೇಸು. ನರಕದಲ್ಲಿ ಅವರನ್ನು ಕಡಿಯುವ ಹುಳ ಸಾಯದು, ಸುಡುವ ಬೆಂಕಿ ಆರದು. ಊಟಕ್ಕೆ ಉಪ್ಪಿನಂತೆ  ಪ್ರತಿಯೊಬ್ಬನಿಗೆ ಅಗ್ನಿ ಪರೀಕ್ಷೆ ಅವಶ್ಯಕ. ಉಪ್ಪೇನೊ ಪ್ರಯೋಜನಕರ; ಆದರೆ ಉಪ್ಪೇ ಸಪ್ಪೆಯಾದರೆ, ಇನ್ನು ಯಾವುದರಿಂದ ಅದನ್ನು ಪುನಃ ರುಚಿಗೊಳಿಸಲಾದೀತು? ನೀವು ಉಪ್ಪಿನಂತೆ ಒಬ್ಬರಿಗೊಬ್ಬರು ಒಪ್ಪಿಗೆಯಾಗಿ ಸಮಾಧಾನದಿಂದಿರಿ," ಎಂದರು.

ಮನಸಿಗೊಂದಿಷ್ಟು : ಉಪ್ಪು ರುಚಿಗೆ ಮಾತ್ರವಲ್ಲದೆ ಪದಾರ್ಥಗಳು ಕೆಡದಂತೆ ತಡೆಯಲೂ ಬಳಕೆಯಾಗುತಿತ್ತು. ಅಂತೆಯೇ ಈ ಭ್ರಷ್ಟಗೊಂಡ ಲೋಕಕ್ಕೆ ಕ್ರಿಸ್ತನ ಅನುಯಾಯಿಗಳು ರುಚಿ ಮಾತ್ರವಲ್ಲದೆ ಮತ್ತಷ್ಟು ಹಾಳಾಗದಂತೆ ಮಾದರಿಯಾಗಬೇಕೆಂಬುದು ಈ ಹೋಲಿಕೆಯ ಆಶಯ. ತನ್ನ ಸುತ್ತಮುತ್ತಲಿನ ಜನರಿಗೆ ಮಾದರಿಯಾಗಬೇಕಾದವರೇ ಪಾಪದ ಮಾರ್ಗದಲ್ಲಿ ನಡೆಯಬಾರದಲ್ಲವೇ?

ಪ್ರಶ್ನೆ: ನನ್ನ ಪಾಪಕ್ಕೆ ಕಾರಣವಾಗಿ  ನನ್ನನ್ನು ಅಮರ ಜೀವನದಿಂದ ತಪ್ಪಿಸುತ್ತಿರುವುದು ಯಾವುದು?

27.02.2019 - ನಮಗೆ ವಿರೋಧಿ ಅಲ್ಲದವನು ನಮ್ಮ ಪರವಾದಿ

ಮೊದಲನೇ ವಾಚನ: ಸಿರಾಖನು 4:11-19

ಸುಜ್ಞಾನವೆಂಬಾಕೆ ಮಕ್ಕಳನ್ನು ಉನ್ನತಿಗೆ ಏರಿಸುವಳು. ತನ್ನನ್ನು ಅರಸುವವರನ್ನು ತನಗೇ ವಶಮಾಡಿಕೊಳ್ಳುವಳು. ಆಕೆಯನ್ನು ಪ್ರೀತಿಸುವವನು, ಪ್ರೀತಿಸುವುದು ಜೀವವನ್ನೇ ತಡವಿಲ್ಲದೆ ಅಕೆಯನ್ನು ಅರಸುವವನು ಪಡೆವನು ಅಮಿತಾನಂದವನ್ನೇ. ಆಕೆಯನ್ನು ಬಿಗಿಯಾಗಿ ಹಿಡಿದುಕೊಳ್ಳುವವನು ಆಗುವನು ಕೀರ್ತಿವಂತ ಅವನು ಹೋದೆಡೆಯಲ್ಲೆಲ್ಲ ಲಭಿಸುವುದವನಿಗೆ ದೇವರ ಆಶೀರ್ವಾದ. ಆಕೆಗೆ ಸೇವೆಮಾಡುವವನು ಪರಮಪಾವನನನ್ನು ಸೇವೆ ಮಾಡುತ್ತಾನೆ, ಆಕೆಯನ್ನು ಪ್ರೀತಿಸುವವನನ್ನು ಸರ್ವೇಶ್ವರ ಪ್ರೀತಿಸುತ್ತಾನೆ. ಆಕೆಗೆ ಕಿವಿಗೊಡುವವರು ಜನಾಂಗಗಳಿಗೆ ನ್ಯಾಯ ತೀರಿಸುವವರು, ಆಕೆಗೆ ಗಮನಕೊಡುವವರು ಸುರಕ್ಷಿತವಾಗಿ ಬದುಕುವರು. ಆಕೆಯನ್ನು ನೆಚ್ಚಿಕೊಂಡಿರುವವನು ಪಡೆಯುವು ಆಕೆಯನ್ನು ಬಾಧ್ಯವಾಗಿ ಆತನ ಪೀಳಿಗೆಯೂ ಆಕೆಯನ್ನು ಇಟ್ಟುಕೊಳ್ಳುವುದು ತನ್ನ ಸ್ವಾಧೀನವಾಗಿ ಪ್ರಾರಂಭದಲ್ಲಿ ಆಕೆ ಮಾನವರೊಂದಿಗೆ ಅಡ್ಡದಿಡ್ಡ ನಡೆಯುವವಳು; ಅವನಲ್ಲಿ ಅಳುಕು ಅಂಜಿಕೆಗಳನ್ನು ಹುಟ್ಟಿಸುತ್ತಾ ಸಾಗುವಳು; ಆತ್ಮದ ಬಗ್ಗೆ ನಂಬಿಕೆ ಹುಟ್ಟುವ ತನಕ ಶಿಕ್ಷೆಯಿತ್ತು ಬಾಧಿಸುವಳು; ನೀತಿ ನಿಯಮಗಳಿಂದ ಆತನನ್ನು  ಪರೀಕ್ಷಿಸುವಳು. ತದನಂತರ ಅವನನ್ನು ನೇರವಾದ ಮಾರ್ಗಕ್ಕೆ ತಿರುಗಿಸುವಳು ಅವನಲ್ಲಿ ಸಂತೋಷವನ್ನು ಮೂಡಿಸುವಳು ಅವನಿಗೆ ತನ್ನ ಗುಟ್ಟುಗಳನ್ನು ತಿಳಿಸುತ್ತಾ ನಡೆಯುವಳು. ಆಗಲೂ ಅವನು ಅಡ್ಡದಾರಿ ಹಿಡಿದರೆ, ಅವನನ್ನು ತೊರೆದುಬಿಡುವಳು ತಾನು ಮಾಡಿದ್ದನು ತಾನೇ ಉಣ್ಣಲೆಂದು ಕೈಬಿಟ್ಟುಬಿಡುವಳು.

ಕೀರ್ತನೆ: 119:165, 168, 171, 174, 175

ಶ್ಲೋಕ: ಪ್ರಭು ಅತಿ ನೆಮ್ಮದಿಯುಂಟು ನಿನ್ನ ಶಾಸ್ತ್ರಪ್ರಿಯರಿಗೆ

ಶುಭಸಂದೇಶ: ಮಾರ್ಕ 9:38-40

ಯೊವಾನ್ನನು ಯೇಸುಸ್ವಾಮಿಗೆ, "ಗುರುವೇ, ಯಾರೋ ಒಬ್ಬನು ತಮ್ಮ ಹೆಸರಿನಲ್ಲಿ ದೆವ್ವ ಬಿಡಿಸುವುದನ್ನು ಕಂಡೆವು. ಅವನು ನಮ್ಮವನಲ್ಲ ಆದಕಾರಣ ಅವನನ್ನು ತಡೆದೆವು," ಎಂದನು. ಅದಕ್ಕೆ ಯೇಸು, "ಅವನನ್ನು ತಡೆಯಬೇಡಿ , ನನ್ನ ಹೆಸರಿನಲ್ಲಿ ಅದ್ಭುತ ಮಾಡುವವನು ಮರುಕ್ಷಣವೇ ನನ್ನ ವಿಷಯವಾಗಿ ಅಪಪ್ರಚಾರ ಮಾಡನು. ನಮಗೆ ವಿರೋಧಿ ಅಲ್ಲದವನು ನಮ್ಮ ಪರವಾದಿ.



ಮನಸಿಗೊಂದಿಷ್ಟು : ಸ್ವರ್ಗದತ್ತ ತಮ್ಮವರನ್ನು ಕರದುಕೊಂಡು ಹೋಗಲು ದೇವರು ಬಳಸುವ ಮಾರ್ಗ ಹತ್ತಾರು ಎನ್ನುತ್ತಾನೆ ಚಿಂತಕನೊಬ್ಬ. ನಾವು ಬಳಸುವ ಅಧ್ಯಾತ್ಮಿಕ ಮಾರ್ಗ ಮಾತ್ರ ಶ್ರೇಷ್ಟ ಹಾಗೂ ದೇವರ ಕೃಪೆಗೆ ತಾವು ಮಾತ್ರ ಪಾತ್ರರು ಎಂಬ ಅಹಂ ಸಲ್ಲದು ಎಂಬ ಸಂದೇಶ ಇಲ್ಲಿದೆ.

ಪ್ರಶ್ನೆ : ದೈವ ಕೃಪೆ ಎಲ್ಲರಿಗೂ ದೊರಕಲಿ ಎಂಬ ಆಶಯದಲ್ಲಿ ನಾವೆಷ್ಟು ಕ್ರಿಯಾಶೀಲ? 

26.02.2019 - "ನಿಮ್ಮಲ್ಲಿ ಮೊದಲಿಗನಾಗ ಬಯಸುವವನು ಎಲ್ಲರಿಗೂ ಕಡೆಯವನಾಗಿರಲಿ"

ಮೊದಲನೇ ವಾಚನ: ಸಿರಾಖನು 2:1-11

ಗನೇ, ದೇವರ ಸೇವೆಮಾಡಲು ಬಯಸುವಿಯೋ? ಹಾಗಾದರೆ ಶೋಧನೆಗಳನ್ನೆದುರಿಸಲು  ನಿನ್ನಾತ್ಮವನ್ನು ಸಿದ್ಧಪಡಿಸಿಕೊ! ನಿನ್ನ ಹೃದಯದಲ್ಲಿರಲಿ ಪ್ರಾಮಾಣಿಕತೆ, ಸ್ಥಿರತೆ ಕಷ್ಟ ಬಂದಾಗ ನಿನಗಿರದಿರಲಿ ಚಂಚಲತೆ. ಆತನನ್ನು ಸೇರಿಕೊಂಡಿರು; ಬಿಟ್ಟಗಲಬೇಡ ಅಭಿವೃದ್ಧಿ ಹೊಂದುವೆ ಅಂತಿಮ ದಿನ. ನಿನ್ನ ಮೇಲೆ ಬಂದುದೆಲ್ಲವನು ಸ್ವೀಕರಿಸು ಬಡತನ ಬಂದರೂ ದೀರ್ಘಶಾಂತಿಯಿಂದಿರು. ಬಂಗಾರದ ಪರೀಕ್ಷೆ ಯಾಗುವುದು ಬೆಂಕಿಯಲ್ಲಿ ಆತನ ಭಕ್ತರ ಪರೀಕ್ಷೆ ಅವಮಾನದ ಕುಲುಮೆಯಲ್ಲಿ. ಆತನಲ್ಲಿಡು ಭರವಸೆ; ನೆರವೀಯುವನಾತ ನಿನಗೆ, ಸರಿಪಡಿಸಿಕೊ ನಿನ್ನ ನಡತೆಯನು; ನಿರೀಕ್ಷೆಯಿಡು ಆತನಲ್ಲೇ. ದೇವರಲ್ಲಿ ಭಯಭಕ್ತಿಯುಳ್ಳವರೇ, ಆತನ ಕರುಣೆಗಾಗಿ ಕಾದಿರಿ ಸನ್ಮಾರ್ಗವನ್ನು ಬಿಟ್ಟು ತೊಲಗಬೇಡಿ; ಬಿದ್ದು ಹೋದೀರಿ! ದೇವರಿಗೆ ಭಯಪಡುವವರೇ, ಆತನಲ್ಲಿಡಿ ಭರವಸೆ ತಕ್ಕ ಪ್ರತಿಫಲ ದೊರಕುವುದು ನಿಮಗೆ ತಪ್ಪದೆ. ದೇವರಿಗೆ ಭಯಪಡುವವರೇ, ಒಳಿತನ್ನು ನಿರೀಕ್ಷಿಸಿರಿ ನಿತ್ಯ ಸಂತೋಷವನ್ನೂ ಕೃಪೆಯನ್ನೂ ಹಾರೈಸಿರಿ. ಹಿಂದಿನವರನ್ನು ಗಮನಿಸಿರಿ; ತಂದುಕೊಳ್ಳಿರಿ ಲಕ್ಷ್ಯಕೆ ದೇವರನ್ನು ನಂಬಿದವರಿಗೆ ಆಗಿದ್ದುಂಟೆ ನಾಚಿಕೆ? ಭಯಭಕ್ತಿಯಿಂದ ಬಾಳಿದವನನು ಆತ ಕೈಬಿಟ್ಟಿದ್ದುಂಟೆ? ಏಕೆನೆ, ಸರ್ವೇಶ್ವರನು ದಯಾಪೂರಿತನು, ಕನಿಕರವುಳ್ಳವನು ಪಾಪಗಳನ್ನು ಕ್ಷಮಿಸುವವನು, ಕಷ್ಟದಲ್ಲಿ ರಕ್ಷಿಸುವವನು.

ಕೀರ್ತನೆ: 37:3-4, 18-19, 27-28, 39-40

ಶ್ಲೋಕ: ಒಳಿತನು ಮಾಡು ಪ್ರಭುವಿನಲಿ ಭರವಸೆ ಇಟ್ಟು

ಶುಭಸಂದೇಶ: ಮಾರ್ಕ 9:30-37


ಯೇಸುಸ್ವಾಮಿ ಮತ್ತು ಶಿಷ್ಯರು ಹೊರಟು ಗಲಿಲೇಯದ ಮಾರ್ಗವಾಗಿ ಮುಂದಕ್ಕೆ ಪ್ರಯಾಣ ಮಾಡಿದರು. ಇದು ಯಾರಿಗೂ ತಿಳಿಯಬಾರದು ಎಂಬುದು ಯೇಸುವಿನ ಇಚ್ಛೆಯಾಗಿತ್ತು. ಕಾರಣ, ತಮ್ಮ ಶಿಷ್ಯರಿಗೆ ಪ್ರಬೋಧಿಸುವುದರಲ್ಲಿ ಅವರು ನಿರತರಾಗಿದ್ದರು. "ನರಪುತ್ರನನ್ನು ಜನರ ವಶಕ್ಕೆ ಒಪ್ಪಿಸಲಾಗುವುದು. ಅವರು ಆತನನ್ನು ಕೊಲ್ಲುವರು. ಕೊಂದ ಮೂರನೆಯ ದಿನ ಆತನು ಪುನರುತ್ದಾನ ಹೊಂದುವನು." ಎಂದು ಯೇಸು ಅವರಿಗೆ ತಿಳಿಸಿದರು. ಆದರೆ ಯೇಸು ಹೇಳಿದ ಆ ಮಾತುಗಳನ್ನು ಶಿಷ್ಯರು ಅರ್ಥಮಾಡಿಕೊಳ್ಳಲಿಲ್ಲ. ಅವುಗಳ ಬಗ್ಗೆ ಪ್ರಶ್ನಿಸಲು ಸಹ ಅಂಜಿದರು. ಅನಂತರ ಅವರೆಲ್ಲರೂ ಕಫೆರ್ನವುಮಿಗೆ ಬಂದರು. ಮನೆ ಸೇರಿದಾಗ  ಯೇಸುಸ್ವಾಮಿ, "ದಾರಿಯಲ್ಲಿ ಬರುತ್ತಾ ನೀವು ನಿಮ್ಮಲ್ಲೇ ಏನು ಚರ್ಚೆಮಾಡುತ್ತಿದ್ದಿರಿ?" ಎಂದು ಶಿಷ್ಯರನ್ನು ಕೇಳಿದರು. ಅವರು ಮೌನತಾಳಿದರು. ಏಕಂದರೆ, ತಮ್ಮಲ್ಲಿ ಯಾವನು ಅತಿ ಶ್ರೇಷ್ಟನು ಎಂದು ತಮ್ಮ ತಮ್ಮಲ್ಲೇ ವಾದಿಸುತ್ತಾ ಬಂದಿದ್ದರು. ಯೇಸು ಕುಳಿತುಕೊಂಡು, ಹನ್ನೆರಡು ಮಂದಿಯನ್ನು ಕರೆದು, ಅವರಿಗೆ, "ನಿಮ್ಮಲ್ಲಿ ಮೊದಲಿಗನಾಗ ಬಯಸುವವನು ಎಲ್ಲರಿಗೂ ಕಡೆಯವನಾಗಿರಲಿ; ಎಲ್ಲರ ಸೇವೆ ಮಾಡುವವನಾಗಿ ಇರಲಿ," ಎಂದರು. ಅನಂತರ ಯೇಸು, ಒಂದು ಚಿಕ್ಕ ಮಗುವನ್ನು ಕರೆದು ಅವರ ಮಧ್ಯೆ ನಿಲ್ಲಿಸಿ, ಅದನ್ನು ತಬ್ಬಿಕೊಂಡು ತಮ್ಮ ಶಿಷ್ಯರಿಗೆ, "ನನ್ನ ಹೆಸರಿನಲ್ಲಿ ಇಂಥ ಮಗುವೊಂದನ್ನು ಯಾರು ಬರಮಾಡಿಕೊಳ್ಳುತ್ತಾನೋ ಅವನು ನನ್ನನ್ನು ಅಲ್ಲ ನನ್ನನ್ನು ಕಳುಹಿಸಿದಾತನನ್ನೇ ಬರಮಾಡಿಕೊಳ್ಳುತ್ತಾನೆ," ಎಂದರು.

ಮನಸಿಗೊಂದಿಷ್ಟು : ಒಂದು ಮಗು ಯಾವುದೇ ರೀತಿಯಲ್ಲಿ, ಕೋನದಲ್ಲಿ ನೋಡಿದರೂ ಅಸಹಾಯಕ. ಅದಕ್ಕೆ ಬೇಕಾಗಿರುವುದು ನಮ್ಮ ಆರೈಕೆ, ಮುದ್ದು. ಬದಲಿಗೆ ಅದು ನೀಡಬಹುದಾದದ್ದು ಕೇವಲ ಪ್ರೀತಿ ಹಾಗೂ ಆತ್ಮ ತೃಪ್ತಿ. ಒಂದು ಮಗುವಿನಷ್ಟೇ ಅಸಹಾಯಕ ಜನರು, ವರ್ಗ ನಮ್ಮೊಡನೆ ಇದ್ದಾರೆ. ಅವರಿಗೆ ಬೇಕಾಗಿರುವುದು ನಮ್ಮ ಗಮನ, ಪ್ರೀತಿಯಷ್ಟೇ

ಪ್ರಶ್ನೆ : ನಮ್ಮ ಬಾಳಿನಲ್ಲಿ ಕಡೆಯವನಾಗಿರಲು ಬಯಸಿ ಸರಿದು ನಿಂತ ಇತ್ತೀಚಿನ ಉದಾಹರಣೆ ಯಾವುದು?

25.02.2019 - ’ಸುಜ್ಞಾನ' ಎಂಬುದೆಲ್ಲವೂ ಬರುವುದು ಸರ್ವೇಶ್ವರನಿಂದಲೆ’

ಮೊದಲನೇ ವಾಚನ: ಸಿರಾಖನು 1:1-10

ಸುಜ್ಞಾನ' ಎಂಬುದೆಲ್ಲವೂ ಬರುವುದು ಸರ್ವೇಶ್ವರನಿಂದಲೆ ನಿತ್ಯಕ್ಕೂ
ಅದಿರುವುದು ಆತನ ಬಳಿಯಲ್ಲೇ.
ಎಣಿಸಬಲ್ಲವನಾರು ಕಡಲ ಮರಳಿನ ಕಣಗಳನು
ಮಳೆಯ ಹನಿಗಳನು, ಅನಂತಕಾಲದ ದಿನಗಳನು?
ಅಳೆಯಬಲ್ಲವನಾರು ಆಕಾಶದ ಎತ್ತರವನ್ನು, ಭೂಮಿಯ ಉದ್ದಗಲವನು,
ಪಾತಾಳದ ಆಳವನು? ಅಂತೆಯೇ ಸುಜ್ಞಾನದ ನೆಲೆಯನು?
ಸೃಷ್ಟಿಯಾಯಿತು ಸುಜ್ಞಾನ ಸಂಕುಲಕ್ಕೂ ಮೊದಲೇ
ವಿವೇಚನಾಗ್ರಹಿಕೆ ಕಾಲಕ್ಕೆ ಮಂಚೆಯೇ.
ಉನ್ನತ ಸ್ವರ್ಗದ ದೇವರ ವಾಣಿಯೇ ಸುಜ್ಞಾನದ ಮೂಲ
ಆತನ ಶಾಶ್ವತವಾದ ಆಜ್ಞೆಗಳೇ ಅದರ ಮಾರ್ಗ
ಬಯಲಾಯಿತೆ ಸುಜ್ಞಾನದ ಮೂಲ ಯಾರಿಗಾದರೂ?
 ಅರಿತಿರುವರೆ ಅದರ ಭವ್ಯ ಕಲ್ಪನೆಗಳನು ಯಾರಾದರೂ?
ಪ್ರಕಟವಾಯಿತೆ ಸುಜ್ಞಾನದ ಅರಿವು ಯಾರಿಗಾದರೂ?
ಗ್ರಹಿಸಿರುವರೆ ಅದರ ಮಾರ್ಗಗಳನು ಯಾರಾದರೂ?
ಸುಜ್ಞಾನಿ ಒಬ್ಬನಿಹನು; ಆತನು ಅತ್ಯಂತ ಭಯಂಕರನು
ಆತನೇ ಸಿಂಹಾಸನರೂಢನಾಗಿರುವ ಸರ್ವೇಶ್ವರನು.
ಸುಜ್ಞಾನವನ್ನು ನಿರ್ಮಿಸಿದಾಗ ಸರ್ವೇಶ್ವರನೇ
ಅದನ್ನು ವೀಕ್ಷಿಸಿ ತೂಕಮಾಡಿದಾತ ಆತನೇ
ಅದನ್ನು ಸುರಿಸಿದನು ಸಮಸ್ತ ಸೃಷ್ಟಿ ಕಾರ್ಯಗಳ ಮೇಲೆ.
ಸಕಲ ಜೀವಿಗಳಲ್ಲಿ ನೆಲಸಿರುವುದು ಆತನ ಇಚ್ಛೆಯಂತೆ ದಯಪಾಲಿಸಿರುವನದನ್ನು
 ಹೇರಳವಾಗಿ ಆತನನ್ನು ಪ್ರೀತಿಸುವವರಿಗೆ.

ಕೀರ್ತನೆ: 93:1,1-2, 5
ಶ್ಲೋಕ: ವಹಿಸಿಹನು ಪ್ರಭು ರಾಜ್ಯಾಧಿಕಾರವನು

ಶುಭಸಂದೇಶ: ಮಾರ್ಕ 9:14-29



ವರೆಲ್ಲರೂ ಹಿಂದಿರುಗಿ ಬಂದಾಗ ಉಳಿದ ಶಿಷ್ಯರ ಸುತ್ತಲೂ ಜನರು ದೊಡ್ಡ ಗುಂಪಾಗಿ ನೆರೆದಿರುವುದನ್ನು, ಧರ್ಮಶಾಸ್ತ್ರಿಗಳು ಇವರೊಡನೆ ವಾದಿಸುತ್ತಿರುವುದನ್ನು ಕಂಡರು. ನೆರದಿದ್ದ ಜನರು ಯೇಸುವನ್ನು ಕಂಡೊಡನೆ ಆಶ್ಚರ್ಯಪಟ್ಟು ಓಡಿಬಂದು, ಅವರಿಗೆ ನಮಸ್ಕರಿಸಿದರು. ಯೇಸುಸ್ವಾಮಿ, "ನಿಮ್ಮ ವಾಗ್ವಾದ ಏನು?" ಎಂದು ಕೇಳಿದರು. ಆ ಗುಂಪಿನಲ್ಲಿದ್ದ ಒಬ್ಬನು, "ಬೋಧಕರೇ, ನನ್ನ ಮಗನನ್ನು ತಮ್ಮ ಬಳಿಗೆಂದು ಕರೆತಂದೆ. ಅವನಿಗೆ ಒಂದು ಮೂಕ ದೆವ್ವ ಹಿಡಿದಿದೆ. ಅವನ ಮೇಲೆ ಅದು ಬಂದಾಗಲೆಲ್ಲ ಅವನನ್ನು ನೆಲಕ್ಕೆ ಅಪ್ಪಳಿಸುತ್ತದೆ. ಅವನು ನೊರೆಕಾರುತ್ತಾ ಹಲ್ಲು  ಕಡಿದುಕೊಳ್ಳುತ್ತಾನೆ. ಆಗ ಅವನ ದೇಹವೆಲ್ಲಾ ಮರಗಟ್ಟಿದಂತಾಗುತ್ತದೆ.  ಆ  ಬಿಡಿಸಬೇಕೆಂದು ತಮ್ಮ ಶಿಷ್ಯರನ್ನು ಕೇಳಿಕೊಂಡೆ. ಆದರೆ, ಅದು ಅವರಿಂದಾಗಲಿಲ್ಲ," ಎಂದನು. ಇದನ್ನು ಕೇಳಿ ಯೇಸು, "ಅಯ್ಯೋ, ವಿಶ್ವಾಸವಿಲ್ಲದ ಪೀಳಿಗೆಯೇ, ಇನ್ನೆಷ್ಟು ಕಾಲ ನಿಮ್ಮೊದಿಂಗಿರಲಿ! ಇನ್ನೆಷ್ಟು ಕಾಲ ನಿಮ್ಮನ್ನು ಸಹಿಸಿಕೊಳ್ಳಲಿ! ಅವನನ್ನು ನನ್ನ ಬಳಿಗೆ ಕರೆದುಕೊಂಡು ಬನ್ನಿ ಎಂದರು. ಆಗ ಆ ಹುಡುಗನನ್ನು ಯೇಸುವಿನ ಬಳಿಗೆ ಕರೆತಂದರು. ಯೇಸುವನ್ನು ನೋಡಿದಾಕ್ಷಣ ಆ ದೆವ್ವ ಹುಡುಗನನ್ನು ಅಪ್ಪಳಿಸಿ  ಒದ್ದಾಡಿಸಿತು. ಹುಡುಗ ಹೊರಳಾಡುತ್ತಾ ನೊರೆ ಕಾರಿದನು. ಯೇಸು, "ಇವನಿಗೆ ಎಷ್ಟು ದಿನದಿಂದ ಹೀಗಾಗುತ್ತಿದೆ?" ಎಂದು ಹುಡುಗನ ತಂದೆಯನ್ನು ವಿಚಾರಿಸಿದರು ಅದಕ್ಕೆ ಅವನು "ಬಾಲ್ಯದಿಂದಲೇ ಹೀಗಾಗುತ್ತಿದೆ; ಇದಲ್ಲದೆ ದೆವ್ವವು ಇವನನ್ನು ಕೊಲ್ಲಬೇಕೆಂದು ಪದೇ ಪದೇ ಬೆಂಕಿಗೂ ನೀರಿಗೂ ದೂಡಿದೆ; ತಮ್ಮಿಂದ ಏನಾದರೂ ಸಾಧ್ಯವಾದರೆ, ನಮ್ಮ ಮೇಲೆ ದಯವಿಟ್ಟು ಸಹಾಯ ಮಾಡಿ ," ಎಂದು ಯೇಸುವನ್ನು ಬೇಡಿಕೊಂಡನು. ಅದಕ್ಕೆ ಯೇಸು "ಸಾಧ್ಯವಾದರೆ" ಎನ್ನುತ್ತೀಯಲ್ಲಾ? ದೇವರಲ್ಲಿ ವಿಶ್ವಾಸ ಇಡುವವನಿಗೆ ಎಲ್ಲವೂ ಸಾಧ್ಯ!" ಎಂದರು. ಆಗ ಆ ಬಾಲಕನ ತಂದೆ, "ನಾನು ವಿಶ್ವಾಸಿಸುತ್ತೇನೆ, ನನ್ನ ವಿಶ್ವಾಸದಲ್ಲಿ ಕೊರತೆಯಿದ್ದರೆ ನೆರವು ನೀಡಿ," ಎಂದು ಯೇಸುವಿಗೆ ಮೊರೆ ಇಟ್ಟನು. ಜನಸಂದಣಿ ಬೆಳೆಯುತ್ತಿರುವುದನ್ನು ಕಂಡ ಯೇಸು, ಆ ದೆವ್ವವನ್ನು ಗದರಿಸಿ, "ಎಲೈ, ಕಿವುಡು ಮೂಕ ದೆವ್ವವೇ, ಇವನನ್ನು ಬಿಟ್ಟು ತೊಲಗು; ಇನ್ನೆಂದಿಗೂ ಇವನೊಳಗೆ ಪ್ರವೇಶಿಸ ಕೂಡದೆಂದು ನಿನಗೆ ಆಜ್ಞಾಪಿಸುತ್ತೇನೆ," ಎಂದರು. ದೆವ್ವವು ಚೀರುತ್ತಾ, ಹುಡುಗನನ್ನು ವಿಲವಿಲನೆ ಒದ್ದಾಡಿಸಿ, ಕೊನೆಗೆ ಬಿಟ್ಟುಹೋಯಿತು. ಹುಡುಗನು ಶವದಂತಾದನು. ಅಲ್ಲಿದ್ದವರಲ್ಲಿ ಅನೇಕರು 'ಹುಡುಗ ಸತ್ತುಹೋದ,' ಎಂದುಕೊಂಡರು. ಆದರೆ ಯೇಸು ಅವನ ಕೈಹಿಡಿದು ಎತ್ತಲು ಅವನು ಎದ್ದು ನಿಂತನು. ಅಂದು ಯೇಸುಸ್ವಾಮಿ ಮನೆಗೆ ಬಂದಾಗ, ಶಿಷ್ಯರು ಪ್ರತ್ಯಕವಾಗಿ ಅವರ ಬಳಿಗೆ ಬಂದು, "ಆ ದೆವ್ವವನ್ನು ಹೊರಗಟ್ಟಲು ನಮ್ಮಿಂದೇಕೆ ಆಗಲಿಲ್ಲ?"  ಎಂದು ಕೇಳಿದರು. ಅದಕ್ಕೆ ಯೇಸು, ಈ ಬಗೆಯ ದೆವ್ವವನ್ನು ಹೊರಗಟ್ಟಲು ಪ್ರಾರ್ಥನೆಯೇ ಹೊರತು ಬೇರೆ ಮಾರ್ಗವಿಲ್ಲ," ಎಂದರು.

ಮನಸಿಗೊಂದಿಷ್ಟು’ಸಾಧ್ಯವಾದರೇ’ ಎಂಬ ಬಾಲಕನ ತಂದೆಯ ಮೇಲೆಯೇ ಅವನ ಮಗನ ಗುಣಮುಖವು ಅವಲಂಬಿತವಾಗುವಂತ ವಾತಾವರಣವನ್ನು ಯೇಸು ಸೃಷ್ಟಿಸುತ್ತಾರೆ. ’ವಿಶ್ವಾಸಿಸುತ್ತೇನೆ, ವಿಶ್ವಾಸದಲ್ಲಿ ಕೊರತೆಯಿದ್ದರೆ ನೆರವು ನೀಡಿ’ ಎಂಬ ಮಾತೇ ಕೊನೆಗೆ ಆತನ ಮಗನನ್ನು ದೆವ್ವದಿಂದ ಬಿಡುಗಡೆಗೆ ದಾರಿ ಮಾಡಿಕೊಡುತ್ತದೆ.

ಪ್ರಶ್ನೆ : ನಮ್ಮ ವಿಶ್ವಾಸದ ಕೊರತೆಯಲ್ಲಿ ಯೇಸುವಿನ  ನೆರವಿಗಾಗಿ ಬೇಡಿಕೊಂಡಿದ್ದೇವೆಯೇ? 

24.02.2019 - "ನಿಮ್ಮನ್ನು ನಿಂದಿಸುವವರಿಗಾಗಿ ಪ್ರಾರ್ಥಿಸಿರಿ"

ಮೊದಲನೇ ವಾಚನ: 1  ಸಮುವೇಲನು 26:2, 7-9, 12-13, 22-23

ಸೌಲನು ಇಸ್ರಯೇಲರಲ್ಲಿ ಶ್ರೇಷ್ಠರಾದ ಮೂರು ಸಾವಿರ ಮಂದಿ ಸೈನಿಕರನ್ನು ಆರಿಸಿಕೊಂಡು ದಾವೀದನನ್ನು ಹುಡುಕುವುದಕ್ಕಾಗಿ ಜೀಫ್ ಮರುಭೂಮಿಗೆ ಹೋದನು. ದಾವೀದನು ಮತ್ತು ಅಬೀಷೈಯು, ರಾತ್ರಿಯಲ್ಲಿ ಆ ಪಾಳೆಯಕ್ಕೆ ಹೋದಾಗ ಸೌಲನು ಬಂಡಿಗಳ ಗುಂಪಿನ ಮಧ್ಯೆ ಮಲಗಿಕೊಂಡು ನಿದ್ರೆ ಮಾಡುತ್ತಿದ್ದನು. ಅವನ ಭರ್ಜಿಯನ್ನು ಅವನ ತಲೆಯ ಹತ್ತಿರ ನೆಲಕ್ಕೆ ತಿವಿದು ನಿಲ್ಲಿಸಲಾಗಿತ್ತು. ಅಬ್ನೇರನೂ ಸೈನಿಕರೂ ಅವನ ಸುತ್ತಲೂ ಮಲಗಿದ್ದರು. ಅಬೀಷೈಯು ದಾವೀದನಿಗೆ, "ದೇವರು ಈ ದಿನ ನಿನ್ನ ವೈರಿಯನ್ನು ನಿನ್ನ ಕೈಗೆ ಒಪ್ಪಿಸಿಕೊಟ್ಟಿದ್ದಾರೆ; ಅಪ್ಪಣೆಯಾಗಲಿ, ನಾನು ಬರ್ಜಿಯಿಂದ ಒಂದೇ ಪೆಟ್ಟಿನಲ್ಲಿ ಅವನನ್ನು ನೆಲಕ್ಕೆ ಕಚ್ಚಿಕೊಳ್ಳುವಂತೆ ತಿವಿಯುತ್ತೇನೆ. ಎರಡನೆಯ ಸಾರಿ ಹೊಡೆಯುವ ಅವಶ್ಯಕತೆ ಇರುವುದಿಲ್ಲ." ಎಂದು ಹೇಳಿದನು. ಆದರೆ ದಾವೀದನು, "ಅವನನ್ನು ಕೊಲ್ಲಬೇಡ;   ಸರ್ವೇಶರನ ಅಭಿಷಿಕ್ತನಿಗೆ ವಿರೋಧವಾಗಿ ಕೈಯೆತ್ತುವ ಯಾವನೂ ನಿರಪರಾಧಿ ಎಂದು ಎಣಿಸಲ್ಪಡನು," ಎಂದನು. ಸೌಲನ ತಲೆದಿಂಬಿನ ಬಳಿಯಲ್ಲಿದ್ದ ಭರ್ಜಿ ಹಾಗು ತಂಬಿಗೆಗಳನ್ನು ತೆಗೆದುಕೊಂಡು ಹೋದರೂ ಯಾರೂ ಕಾಣಲಿಲ್ಲ; ಯಾರಿಗೂ ಗೊತ್ತಾಗಲಿಲ್ಲ ಯಾರಿಗೂ ಎಚ್ಚರವಾಗಲಿಲ್ಲ. ಏಕೆಂದರೆ ಸರ್ವೇಶ್ವರ ಅವರಿಗೆ ಗಾಢ ನಿದ್ರೆಯನ್ನು ಬರಮಾಡಿದ್ದರು; ಒಬ್ಬರಿಗೂ ಎಚ್ಚರವಿಲ್ಲದೆ ಎಲ್ಲರು ಮೈಮರೆತು ನಿದ್ರೆಯಲ್ಲಿ ಮಗ್ನರಾಗಿದ್ದರು. ದಾವೀದನು ತನಗೂ ಪಾಳೆಯಕ್ಕೂ ತಕ್ಕಷ್ಟು ಅಂತರವಿರುವ ಹಾಗೆ ಸುರಕ್ಷಿತವಾದ ದೂರ ಸ್ಥಳಕ್ಕೆ ಹೋಗಿ ಗುಡ್ಡವನ್ನೇರಿ ತುದಿಯಲ್ಲಿ ನಿಂತನು. ದಾವೀದನು, "ಅರಸರೇ, ಇಗೋ, ನಿಮ್ಮ ಭರ್ಜಿ ಇಲ್ಲಿದೆ; ಸೇವಕರಲ್ಲೊಬ್ಬನು ಬಂದು ತೆಗೆದುಕೊಂಡು ಹೋಗಲಿ.  ಸರ್ವೇಶ್ವರ ಪ್ರತಿಯೊಬ್ಬನಿಗೂ ಅವನವನ ನೀತಿ  ಸತ್ಯತೆಗಳಿಗೆ ಅನುಸಾರ ಫಲವನ್ನು ಕೊಡುವರು. ಅವರು ಈ ದಿನ ನಿಮ್ಮನ್ನು ನನ್ನ ಕೈಗೆ  ಒಪ್ಪಿಸಿಕೊಟ್ಟಿದ್ದರೂ ನೀವು  ಸರ್ವೇಶ್ವರನ ಅಭಿಷಿಕ್ತರೆಂದು ನಾನು ನಿಮ್ಮ ಮೇಲೆ ಕೈ ಹಾಕಲಿಲ್ಲ.

ಕೀರ್ತನೆ: 103:1-2, 3-4, 8-10, 12-13
ಶ್ಲೋಕ: ಪ್ರಭು ದಯಾಳು, ಕೃಪಾಪೂರ್ಣನು.

ಎರಡನೇ ವಾಚನ: 1 ಕೊರಿಂಥಿಯರಿಗೆ 15:45-49

ವಿತ್ರ ಗ್ರಂಥದಲ್ಲಿ ಲಿಖಿತವಾಗಿರುವಂತೆ ಮೊದಲ ಮಾನವನಾದ ಆದಾಮನು ಜೀವ ಪಡೆದ ವ್ಯಕ್ತಿ; ಕಡೆಯ ಆದಾಮನಾದರೋ ಜೀವ ಕೊಡುವ ಆತ್ಮ. ಮೊದಲು ಆದುದು ಆಧ್ಯಾತ್ಮಿಕವಾದುದಲ್ಲ, ಪ್ರಾಕೃತವಾದುದು, ಆನಂತರ ಆದುದು ಆಧ್ಯಾತ್ಮಿಕವಾದುದು. ಮೊದಲನೆಯ ಮಾನವನು ಮಣ್ಣಿನಿಂದಾದವನು; ಮಣ್ಣಿಗೆ ಸಂಬಂದಪಟ್ಟವನು. ಎರಡನೆಯ ಮಾನವನಾದರೋ ಸ್ವರ್ಗದಿಂದ ಬಂದವನು ಮಣ್ಣಿಗೆ ಸಬಂಧಪಟ್ಟವರು ಮಣ್ಣಿನಿಂದ ಆದವನಂತೆಯೇ ಇರುತ್ತಾರೆ. ಸ್ವರ್ಗಕ್ಕೆ ಸಬಂಧಪಟ್ಟವರು ಸ್ವರ್ಗದಿಂದ ಬಂದವನಂತೆಯೇ ಇರುತ್ತಾರೆ. ಮಣ್ಣಿನಿಂದ ಆದವನ ರೂಪವನ್ನು ನಾವು ಧರಿಸಿರುವಂತೆಯೇ ಸ್ವರ್ಗದಿಂದ ಬಂದಾತನ ರೂಪವನ್ನು ಧರಿಸುತ್ತೇವೆ.

ಶುಭಸಂದೇಶ: ಲೂಕ 6:27-38

"ನ್ನನ್ನು ಆಲಿಸುತ್ತಿರುವವರೇ, ನನ್ನ ಮಾತನ್ನು ಕೇಳಿರಿ: ನಿಮ್ಮ ಶತ್ರುಗಳನ್ನು ಪ್ರೀತಿಸಿರಿ, ನಿಮ್ಮನ್ನು ದ್ವೇಷಿಸುವವರನ್ನು ಸತ್ಕರಿಸಿರಿ. ನಿಮ್ಮನ್ನು ಶಪಿಸುವವರನ್ನು ಆಶೀರ್ವದಿಸಿರಿ, ನಿಮ್ಮನ್ನು ನಿಂದಿಸುವವರಿಗಾಗಿ ಪ್ರಾರ್ಥಿಸಿರಿ. ನಿನ್ನ ಒಂದು ಕೆನ್ನೆಗೆ ಹೊಡೆಯುವವನಿಗೆ ಇನ್ನೊಂದು ಕೆನ್ನೆಯನ್ನು ಹೊಡ್ಡು, ನಿನ್ನ ಮೇಲಂಗಿಯನ್ನು ಕಿತ್ತುಕೊಳ್ಳುವವನಿಗೆ ಒಳ ಅಂಗಿಯನ್ನೂ ತೆಗೆಯಲು ಬಿಡು. ಕೇಳಿಕೊಳ್ಳುವ ಪ್ರತಿಯೊಬ್ಬನಿಗೂ ಕೊಡು, ನಿನ್ನ ಸ್ವತ್ತನ್ನು ಕಸಿದುಕೊಳ್ಳುವವನಿಂದ ತಿರುಗಿ ಕೇಳದಿರು. ಅಲ್ಲದೆ, ಇತರರು ನಿಮಗೆ ಏನೇನು ಮಾಡಬೇಕೆಂದು ನೀವು ಅಪೇಕ್ಷಿಸುತ್ತೀರೋ ಅದನ್ನೇ ನೀವು ಅವರಿಗೆ ಮಾಡಿರಿ. ನಿಮ್ಮನ್ನು ಪ್ರೀತಿಸುವವರನ್ನೇ ನೀವು ಪ್ರೀತಿಸಿದರೆ ಅದೇನು ಪುಣ್ಯ? ಪಾಪಿಷ್ಟರು ಸಹ ತಮ್ಮನ್ನು ಪ್ರೀತಿಸುವವರನ್ನು ಪ್ರೀತಿಸುತ್ತಾರಲ್ಲವೆ? ಉಪಕಾರ ಮಾಡಿದವರಿಗೇ ಉಪಕಾರ ಮಾಡಿದರೆ ಅದೇನು ಪುಣ್ಯ? ಪಾಪಿಷ್ಟರು ಸಹ ಹಾಗೆಯೇ ಮಾಡುತ್ತಾರಲ್ಲವೆ? ಸಾಲ ತೀರಿಸುವಂಥ ನಂಬಿಗಸ್ಥನಿಗೇ ಸಾಲಕೊಟ್ಟರೆ ಅದೇನು ಪುಣ್ಯ? ಕೊಟ್ಟಷ್ಟೂ ಬರುತ್ತದೆಂದು ಪಾಪಿಷ್ಟರು ಸಹ ಸಾಲ ಕೊಡುತ್ತಾರಲ್ಲವೆ?" ಆದುದರಿಂದ ನಿಮ್ಮ ಶತ್ರುಗಳನ್ನು ಪ್ರೀತಿಸಿರಿ.  ಅವರಿಗೆ ಒಳಿತನ್ನೇ ಮಾಡಿರಿ. ಪ್ರತಿಯಾಗಿ ಪಡೆಯುವ ಆಶೆಯಿಡದೆ ಸಾಲ ಕೊಡಿ. ಆಗ ನಿಮಗೆ ಮಹತ್ತಾದ ಸಂಭಾವನೆ ದೊರಕುವುದು. ನೀವು ಮಹೋನ್ನತ ದೇವರ ಮಕ್ಕಳಾಗುವಿರಿ. ದೇವರು ದುರ್ಜನರಿಗೂ  ಒಳ್ಳೆಯವರು ಕೃತಘ್ನರಿಗೂ ಒಳ್ಳೆಯವರು. ನಿಮ್ಮ ತಂದೆಯಾದ ದೇವರಂತೆ ನೀವೂ ದಯಾವಂತರಾಗಿರಿ. "ನೀವು ಇತರರ ಬಗ್ಗೆ ತೀರ್ಪುಕೊಡಬೇಡಿ. ಆಗ ದೇವರು ನಿಮ್ಮ ಬಗ್ಗೆ ತೀರ್ಪು ಕೊಡುವುದಿಲ್ಲ; ಪರರನ್ನು ದಂಡನೆಗೆ ಗುರಿಮಾಡಬೇಡಿ, ದೇವರು ನಿಮ್ಮನ್ನೂ ದಂಡನೆಗೆ ಗುರಿಮಾಡುವುದಿಲ್ಲ. ಪರರನ್ನು ಕ್ಷಮಿಸಿರಿ, ದೇವರು ನಿಮ್ಮನ್ನೂ ಕ್ಷಮಿಸುವರು; ಪರರಿಗೆ ಕೊಡಿ, ದೇವರು ನಿಮಗೂ ಕೊಡುವರು; ಅಳತೆಯಲ್ಲಿ ತುಂಬಿ, ಕುಲುಕಿ, ಅದುಮಿ ತುಳುಕುವಂತೆ ಅಳೆದು ನಿಮ್ಮ ಮಡಿಲಿಗೆ ಹಾಕುವರು. ನೀವು ಕೊಟ್ಟ ಅಳತೆಯಲ್ಲೇ ದೇವರು ನಿಮಗೂ ಅಳೆದು ಕೊಡುವರು," ಎಂದರು.

ಮನಸಿಗೊಂದಿಷ್ಟು :  ’ಮಾಡಬೇಡ’ ಎನ್ನುವ ಆದರ್ಶಗಳ ನಡುವೆ ’ಮಾಡು’ ಎನ್ನುವ ಮೌಲ್ಯಗಳನ್ನು ಯೇಸು ನಮಗೆ ನೀಡುತ್ತಿದ್ದಾರೆ. ’ಶತ್ರುಗಳನ್ನು ದ್ವೇಷಿಸಬೇಡಿ’ ಎನ್ನುವುದು ಲೋಕ ರೂಢಿಯಲ್ಲಿ  ಮಾನ್ಯವಾದ ಮೌಲ್ಯವಾದರೆ ’ಅವರನ್ನು ಪ್ರೀತಿಸಿರಿ’ ಎನ್ನುವುದು ಇನ್ನೂ ಎತ್ತರದ ಕ್ರಿಸ್ತನ ಮೌಲ್ಯ. ನಾವು ನಮ್ಮನ್ನು ಹೋಲಿಸಿಕೊಳ್ಳಬೇಕಾದುದು ನಮ್ಮ ನೆರೆಯವನ ಗುಣ ಆದರ್ಶಗಳೊಂದಿಗೆ ಅಲ್ಲ, ದೇವರ ಗುಣ ಮೌಲ್ಯಗಳೊಂದಿಗೆ. ಆಗಾದಾಗ ಮಾನವತೆಯನ್ನು ಪೊರೈಸಿ ದೈವತ್ವದತ್ತ ನಮ್ಮ ಹೆಜ್ಜೆ ಸಾಗುತ್ತದೆ..... 

ಪ್ರಶ್ನೆ : ಸಾಮಾನ್ಯತೆಗಿಂತ ಇನ್ನೆಷ್ಟು ಎತ್ತರಕ್ಕೆ ಏರಬಲ್ಲವು?

23.02.2019 - "ಈತನು ನನ್ನ ಪುತ್ರ ನನಗೆ ಪರಮಪ್ರಿಯನು, ಈತನ ಮಾತಿಗೆ ಕಿವಿಗೊಡಿ"

ಮೊದಲನೇ ವಾಚನ: ಹಿಬ್ರಿಯರಿಗೆ: 11:1-7

ವಿಶ್ವಾಸವೆಂಬುದು ನಾವು ನಿರೀಕ್ಷಿಸುವಂಥವುಗಳು ನಮಗೆ ದೊರೆಯುತ್ತವೆ ಎಂಬ ದೃಢನಂಬಿಕೆ ಹಾಗು ಕಣ್ಣಿಗೆ ಕಾಣದಂಥವುಗಳು ನಿಶ್ಚಯವಾದವು ಎಂಬ ನಿಲುವು ಆಗಿದೆ. ನಮ್ಮ ಪೂರ್ವಜರು ದೈವಸಮ್ಮತಿಯನ್ನು ಪಡೆದದ್ದು ವಿಶ್ವಾಸದಿಂದಲೇ; ವಿಶ್ವವು ದೇವರ ವಾಣಿಯಿಂದ ಉಂಟಾಯಿತು ಎಂಬುದನ್ನು ಮತ್ತು ಗೋಚರವಾದುವುಗಳು ಅಗೋಚರವಾದವುಗಳಿಂದ ಉಂಟಾದವು ಎಂಬುದನ್ನು ವಿಶ್ವಾಸದಿಂದಲೇ ತಿಳಿಯುತ್ತೇವೆ. ವಿಶ್ವಾಸವಿದ್ದುದರಿಂದಲೇ ಹೇಬೆಲನು ಕಾಯಿನನಿಗಿಂತ ಉತ್ತಮವಾದ ಬಲಿಯನ್ನು ದೇವರಿಗೆ ಸಮರ್ಪಿಸಿದನು. ವಿಶ್ವಾಸದಿಂದಲೇ ತಾನು ಸತ್ಪುರುಷನೆಂದು ಸನ್ಮಾನಿತನಾದನು. ಅವನ ಕಾಣಿಕೆ ತಮಗೆ ಸ್ವೀಕೃತವಾಯಿತೆಂದು ದೇವರೇ ಸಾದರಪಡಿಸಿದರು. ಅವನು ಮೃತನಾಗಿದ್ದರೂ ಅವನ ವಿಶ್ವಾಸದ ಮೂಲಕ ಇಂದಿಗೂ ಮಾತನಾಡುತ್ತಿದ್ದಾನೆ. ವಿಶ್ವಾಸವಿದ್ದುದರಿಂದಲೇ ಹನೋಕನು ಮೃತ್ಯುವಿಗೆ ತುತ್ತಾಗದಂತೆ ದೇವರ ಬಳಿಗೆ ಒಯ್ಯಲ್ಪಟ್ಟನು. ದೇವರು ಅತನನ್ನು ಕರೆದುಕೊಂಡಿದ್ದರಿಂದ ಆತನು ಯಾರಿಗೂ ಕಾಣಸಿಗಲಿಲ್ಲ. ಆತನು ಹೀಗೆ ಒಯ್ಯಲ್ಪಡುವುದಕ್ಕೆ ಮುಂಚೆ ದೇವರಿಗೆ ಮೆಚ್ಚುಗೆಯಾಗಿದ್ದನು ಎಂಬುದಕ್ಕೆ ಸಾಕ್ಷ್ಯಾಧಾರವಿದೆ. ವಿಶ್ವಾಸವಿಲ್ಲದೆ ದೇವರ ಮೆಚ್ಚುಗೆಗೆ ಪಾತ್ರರಾಗಲು ಯಾರಿಂದಲೂ ಸಾಧ್ಯವಿಲ್ಲ. ದೇವರ ಬಳಿಗೆ ಸಾಗುವವರು, ಅವರ ಅಸ್ತಿತ್ವವನ್ನು ವಿಶ್ವಾಸಿಸಬೇಕು; ಅವರನ್ನು ಅರಸುವವರಿಗೆ ತಕ್ಕ ಪ್ರತಿಫಲ ಸಿಗುವುದೆಂದು ನಂಬಬೇಕು.  ವಿಶ್ವಾಸವಿದ್ದುದರಿಂದಲೇ ನೋವನು ಕಾಣದೆ ಇದ್ದ ತನ್ನ ಭವಿಷ್ಯದ ಬಗ್ಗೆ ದೇವರಿಂದ ಮುನ್ನೆಚ್ಚರಿಕೆ ಪಡೆದಾಗ ಅದನ್ನು ಲಕ್ಷಕ್ಕೆ ತಂದುಕೊಂಡು  ಕುಟುಂಬವನ್ನು ರಕ್ಷಿಸಿಕೊಳ್ಳಲು ನಾವೆಯೊಂದನ್ನು ನಿರ್ಮಿಸಿದನು. ಇಡೀ ಜಗತ್ತೇ ದಂಡನೆಗೆ ಗುರಿಯಾಯಿತು. ನೋವನಾದರೋ ತನ್ನ ವಿಶ್ವಾಸದ ಫಲವಾಗಿ  ಸತ್ಸಂಬಧಕ್ಕೆ ಭಾಧ್ಯಸ್ಥನಾದನು.

ಕೀರ್ತನೆ: 145: 2-3, 4-5, 10-11

ಶ್ಲೋಕ: ಪ್ರಭು ನಿನ್ನನ್ನು ಸ್ತುತಿಪುದು ಸೃಷ್ಟಿಯೆಲ್ಲವು, ಕೊಂಡಾಡುವುದು ನಿನ್ನ ಭಕ್ತ ಸಮೂಹವು.

ಶುಭಸಂದೇಶ: ಮಾರ್ಕ 9:2-13


ಆರು ದಿನಗಳ ಬಳಿಕ ಪೇತ್ರ, ಯಕೋಬ ಮತ್ತು ಯೊವಾನ್ನ ಇವರನ್ನು ಮಾತ್ರ ತಮ್ಮೊಡನೆ ಕರೆದುಕೊಂಡು ಯೇಸುಸ್ವಾಮಿ ಎತ್ತರವಾದ ಒಂದು ಬೆಟ್ಟಕ್ಕೆ ಹೋದರು. ಅಲ್ಲಿ ಆ ಶಿಷ್ಯರ ಕಣ್ಣೆದುರಿಗೇ ಯೇಸು ರೂಪಾಂತರ ಹೊಂದಿದರು. ಆಗ ಅವರ ಉಡುಪು ಅತ್ಯಂತ ಶುಭ್ರವಾಗಿ ಹೊಳೆಯಿತು. ಜಗದ ಯಾವ ಅಗಸನಿಂದಲೂ ಮಡಿ ಮಾಡಲಾಗದಷ್ಟು ಅದು ಬಿಳುಪಾಗಿತ್ತು. ಮೋಶೆ ಮತ್ತು ಎಲೀಯ ಪ್ರತ್ಯಕ್ಷರಾಗಿ ಯೇಸುವಿನೊಡನೆ ಮಾತನಾಡುತ್ತಿದ್ದುದು ಶಿಷ್ಯರಿಗೆ ಕಾಣಿಸಿತು. ಆಗ ಪೇತ್ರನು ಯೇಸುವಿಗೆ, "ಗುರು ದೇವಾ, ನಾವು ಇಲ್ಲೇ ಇರುವುದು ಒಳ್ಳೆಯದು; ಅಪ್ಪಣೆಯಾಗಲಿ, ಮೂರು ಗುಡಾರಗಳನ್ನು ಕಟ್ಟುವೆವು; ತಮಗೊಂದು ಮೋಶೆಗೊಂದು ಮತ್ತು ಎಲೀಯನಿಗೊಂದು," ಎಂದನು. ಪೇತ್ರನಿಗೆ ತಾನು ಏನು ಹೇಳುತ್ತಿದ್ದೇನೆಂದೇ ತಿಳಿಯಲಿಲ್ಲ. ಶಿಷ್ಯರು ಅಷ್ಟು ಭಯಭ್ರಾಂತರಾಗಿದ್ದರು! ಅಷ್ಟರಲ್ಲಿ ಮೇಘವೊಂದು ಅವರನ್ನು ಆವರಿಸಿತು. ಅದರೊಳಗಿಂದ, "ಈತನು ನನ್ನ ಪುತ್ರ ನನಗೆ ಪರಮಪ್ರಿಯನು, ಈತನ ಮಾತಿಗೆ ಕಿವಿಗೊಡಿ," ಎಂಬ ವಾಣಿ ಕೇಳಿಸಿತು. ತಕ್ಷಣ, ಶಿಷ್ಯರು ಸತ್ತಲು ನೋಡಲು ತಮ್ಮೊಂದಿಗೆ ಯೇಸುವೊಬ್ಬರನ್ನೇ ಹೊರತು ಬೇರೆ ಯಾರನ್ನೂ ಕಾಣಲಿಲ್ಲ.


ಅನಂತರ ಯೇಸು ಮತ್ತು ಅವರ ಶಿಷ್ಯರು ಬೆಟ್ಟದಿಂದ ಇಳಿದು ಬರುವಾಗ, "ನರಪುತ್ರನು ಸತ್ತು ಪುನರುತ್ದಾನಹೊಂದುವ ತನಕ ನೀವು ಕಂಡದ್ದನ್ನು ಯಾರಿಗೂ ಹೇಳಬೇಡಿ," ಎಂದು ಆಜ್ಞಾಪಿಸಿದರು. ಅಂತೆಯೇ ಶಿಷ್ಯರು ಇದನ್ನು ಯಾರಿಗೂ ಹೇಳಲಿಲ್ಲ; ಆದರೂ "ಸತ್ತು ಪುನರುತ್ದಾನ ಹೊಂದುವುದು' ಎಂದರೆ ಏನು? ಎಂದು ತಮ್ಮ ತಮ್ಮೊಳಗೆ ಚರ್ಚಿಸಿಕೊಂಡರು. ಅನಂತರ, "ಎಲೀಯನು ಮೊದಲು ಬರಬೇಕಾದುದು ಅಗತ್ಯವೆಂದು ಶಾಸ್ತ್ರಜ್ಞರು ಹೇಳುತ್ತಾರಲ್ಲಾ, ಅದು ಹೇಗೆ" ಎಂದು ಶಿಷ್ಯರು ಯೇಸುವನ್ನು ಕೇಳಿದರು. ಅದಕ್ಕೆ ಅವರು, "ಎಲೀಯನು ಮೊದಲು ಬಂದು ಎಲ್ಲವನ್ನೂ ಸಜ್ಜುಗೊಳಿಸುವನೆಂಬುದೇನೋ ನಿಜ. ಆದರೂ ನರಪುತ್ರನು ಜನರಿಂದ ತೀವ್ರ ಯಾತನೆಯನ್ನು ಅನುಭವಿಸಿ ಅವರಿಂದ ತಿರಸ್ಕೃತನಾಗಬೇಕು," ಎಂದು ಪವಿತ್ರಗ್ರಂಥದಲ್ಲಿ ಬರೆದಿದೆಯಲ್ಲವೆ; ಇದು ಹೇಗೆ? ಆದರೆ ನಾನು ನಿಮಗೆ ಹೇಳುವುದೇನೆಂದರೆ, 'ಎಲೀಯನು ಬಂದಾಗಿದೆ; ಆತನ ವಿಷಯವಾಗಿ ಮೊದಲೇ ಬರೆದಿರುವಂತೆ ಜನರು ತಮ್ಮ ಇಚ್ಚಾನುಸಾರ ಆತನನ್ನು ಹಿಂಸಿಸಿದ್ದೂ ಆಗಿದೆ," ಎಂದರು.

ಮನಸಿಗೊಂದಿಷ್ಟು : ಅಂದು ಆ ಬೆಟ್ಟದಲ್ಲಿ  ಅದದ್ದು ಯೇಸುವಿಗೆ ಒಂದು ರೀತಿಯ ಅನುಭವವಾದರೆ, ಶಿಷ್ಯರಿಗಾದರೋ ಮತ್ತೊಂದು ರೀತಿಯ ಅನುಭವ. ಅಲ್ಲಿ ಏನಾಗುತ್ತಿದೆ, ಏನಾಯಿತು ಎಂದು ತಿಳಿಯದೆ ಗೊಂದಲದಲ್ಲಿದ್ದರೂ, ಅದು ಅವರ ಮುಂದಿನ ಹೆಜ್ಜೆಗಳಿಗೆ ಒಂದು ಅಸ್ಪಷ್ಟ ಮುನ್ನುಡಿಯಾಯಿತು. ಆ ಗೊಂದಲದ ಅನುಭವವೇ ಮುಂದೆ ಸ್ಪಷ್ಟ ರೂಪವನ್ನು ಪಡೆಯಿತು. ನಮ್ಮ ಬಾಳಿನಲ್ಲೂ ಅದೆಷ್ಟೋ ಬಾರಿ  ನಾವು ಗೊಂದಲಗಳಲ್ಲಿದ್ದರೂ ವಿಶ್ವಾಸ ನಮ್ಮನ್ನು ದಡ ಸೇರಿಸುತ್ತದೆ.

ಪ್ರಶ್ನೆ : ನಮ್ಮ ಅಸ್ಪಷ್ಟ ಕ್ಷಣಗಳಲ್ಲಿ ಕ್ರಿಸ್ತ ನಮಗೆಷ್ಟು ಆಪ್ತ?

22.02.2019 - "ಯೋನ್ನನ ಮಗ ಸಿಮೋನನೇ, ನೀನು ಧನ್ಯ"

ಮೊದಲನೇ ವಾಚನ: 1 ಪೇತ್ರ 5:1-4

ಯೇಸುವಿನ ಮರಣ - ಯಾತನೆಯನ್ನು ಕಣ್ಣಾರೆ ಕಂಡವನೂ ಮುಂದೆ ಪ್ರತ್ಯಕ್ಷವಾಗುವ ಮಹಿಮೆಯಲ್ಲಿ ಭಾಗಿಯಾಗಲಿರುವವನೂ ಸಭಾಪ್ರಮುಖನೂ ಆದ ನಾನು, ನಿಮ್ಮಲ್ಲಿ ಪ್ರಮುಖರಾದ ಇತರರನ್ನು ಪ್ರೋತ್ಸಾಹಿಸಿ ವಿನಂತಿಸುವುದೇನೆಂದರೆ ನನ್ನ ಜೊತೆಹಿರಿಯರೇ, ದೇವರು ನಿಮಗೆ ವಹಿಸಿಕೊಟ್ಟಿರುವ ಮಂದೆಯನ್ನು ಕಾಯಿರಿ. ಕಡ್ಡಾಯದಿಂದಲ್ಲ. ದೇವರ ಚಿತ್ತಾನುಸಾರ ಅಕ್ಕರೆಯಿಂದ ಕಾಯಿರಿ. ದ್ರವ್ಯದ ದುರಾಶೆಯಿಂದಲ್ಲ, ಸೇವಾಸಕ್ತಿಯಿಂದ ಕಾಯಿರಿ. ನಿಮ್ಮ ಪಾಲನೆಗೆ ಒಳಗಾಗಿರುವವರ ಮೇಲೆ ದರ್ಪದಿಂದ ದೊರೆತನಮಾಡದೆ ದೇವರ ಮುಂದೆ ಆದರ್ಶ ಮಾದರಿಗಳಾಗಿರಿ. ಆಗಮಾತ್ರ, ಪ್ರಧಾನ ಕುರಿಗಾಹಿ ಪ್ರತ್ಯಕ್ಷನಾಗುವಾಗ ಮಲಿನವಾಗದ ಮಹಿಮಾನ್ವಿತ ಜಯಮಾಲೆಯನ್ನು ಪಡೆಯುವಿರಿ.

ಕೀರ್ತನೆ: 23:1-3, 4, 5, 6

ಶ್ಲೋಕ: ಪ್ರಭು ಕುರಿಗಾಹಿಯಾಗಿರಲು ನನಗೆ ಕುಂದುಕೊರತೆಗಳೆಲ್ಲಿಯವು ಎನಗೆ?

ಶುಭಸಂದೇಶ: ಮತ್ತಾಯ  16:13-19

ಯೇಸುಸ್ವಾಮಿ 'ಫಿಲಿಪ್ಪನ ಸೆಜರೇಯ' ಎಂಬ ಪ್ರಾಂತ್ಯಕ್ಕೆ ಬಂದರು. ಅಲ್ಲಿ ತಮ್ಮ ಶಿಷ್ಯರನ್ನು ಉದ್ದೇಶಿಸಿ, "ನರಪುತ್ರನನ್ನು ಜನರು ಯಾರೆಂದು ಹೇಳುತ್ತಾರೆ?" ಎಂದು ಕೇಳಿದರು. ಅದಕ್ಕೆ ಶಿಷ್ಯರು, "ಸ್ನಾನಿಕ ಯೊವಾನ್ನ", ಎಂದು ಕೆಲವರು ಹೇಳುತ್ತಾರೆ; ಮತ್ತೆ ಕೆಲವರು, "ಎಲೀಯನು" ಎನ್ನುತ್ತಾರೆ; "ಯೆರೆಮೀಯನು ಅಥವಾ ಪ್ರವಾದಿಗಳಲ್ಲಿ ತಾವೂ ಒಬ್ಬರು," ಎಂಬುದು ಇನ್ನೂ ಕೆಲವರ ಅಭಿಪ್ರಾಯ, ಎಂದು ಉತ್ತರ ಕೊಟ್ಟರು. ಆಗ ಯೇಸು "ಆದರೆ ನೀವು ನನ್ನನ್ನು ಯಾರೆನ್ನುತ್ತೀರಿ?" ಎಂದು ಪ್ರಶ್ನಿಸಿದರು. ಅದಕ್ಕೆ ಪ್ರೇತ್ರನು "ಅಭಿಷಿಕ್ತರಾದ ಲೋಕೋದ್ದಾರಕ ತಾವೇ, ಜೀವಸ್ವರೂಪರಾದ ದೇವರ ಪುತ್ರ ತಾವೇ," ಎಂದನು. ಅದಕ್ಕೆ ಪ್ರತ್ಯುತ್ತರವಾಗಿ ಯೇಸು ಹೀಗೆಂದರು: "ಯೋನ್ನನ ಮಗ ಸಿಮೋನನೇ, ನೀನು ಧನ್ಯ! ಈ ವಿಷಯವನ್ನು ನಿನಗೆ ಶ್ರುತಪಡಿಸಿದ್ದು ನರಮಾನವ ಶಕ್ತಿ ಅಲ್ಲ, ಸ್ವರ್ಗದಲ್ಲಿರುವ ನನ್ನ ಪಿತನೇ. ನಾನು ನಿನಗೆ ಹೇಳುತ್ತೇನೆ,  ಕೇಳು: "ನಿನ್ನ ಹೆಸರು ಪೇತ್ರ; ಈ ಬಂಡೆಯ ಮೇಲೆ ನನ್ನ ಧರ್ಮಸಭೆಯನ್ನು ಕಟ್ಟುವೆನು. ಪಾತಾಳ ಲೋಕದ ಶಕ್ತಿಯು ಅದನ್ನು ಎಂದಿಗೂ ಜಯಿಸಲಾರದು. ಸ್ವರ್ಗಸಾಮ್ರಾಜ್ಯದ ಬೀಗದ ಕೈಗಳನ್ನು ನಿನಗೆ ಕೊಡುವೆನು. ಇಹದಲ್ಲಿ ನೀನು ಏನನ್ನು ಬಂಧಿಸುತ್ತೀಯೋ ಅದನ್ನು ಪರದಲ್ಲಿಯೂ ಬಂಧಿಸಲಾಗುವುದು. ಇಹದಲ್ಲಿ ನೀನು ಏನನ್ನು ಬಿಚ್ಚುತ್ತೀಯೋ ಅದನ್ನು ಪರದಲ್ಲಿಯೂ ಬಿಚ್ಚಲಾಗುವುದು.

ಮನಸಿಗೊಂದಿಷ್ಟು : ಯೇಸುವಿನಿಂದ ಅದೆಷ್ಟೋ ಬಾರಿ ಛೀಮಾರಿ ಹಾಕಿಸಿಕೊಂಡರೂ, ಪೇತ್ರ ಯೇಸುವಿನ ಮೇಲೆ ತನ್ನ ಗಾಢ ವಿಶ್ವಾಸ ಹಾಗೂ ಪ್ರೀತಿ ಬಿಡಲಿಲ್ಲ. ಯೇಸುವಿಗೂ ಪೇತ್ರನೇ ಮಚ್ಚಿನ ಶಿಷ್ಯನಾಗಿದ್ದ. ಇದರ ಪ್ರತೀಕವೆಂಬಂತೆ ಮುಂದೆ ಮೂರು ಸಲ ತಮ್ಮನ್ನು ನಿರಾಕರಿಸುತ್ತನೆಂದು ತಿಳಿದಿದ್ದರೂ  ಯೇಸು ತಮ್ಮ ಧರ್ಮಸಭೆಗೆ ಆತನನ್ನೇ ಅಡಿಪಾಯ ಮಾಡಿಕೊಳ್ಳುತ್ತಾರೆ. ನಮ್ಮ ಕೊರತೆಗಳ ನಡುವೆಯೂ ಯೇಸು ನಮ್ಮನ್ನು ಅಪ್ಪಿಕೊಳ್ಳಬಲ್ಲರು.

ಪ್ರಶ್ನೆ : ಧರ್ಮಸಭೆಯೆಂಬ ಕಟ್ಟಡದ ಸಣ್ಣ ಕಲ್ಲುಗಳಾಗುವಷ್ಟಾದರೂ ಅದರೆಡೆಗೆ  ಪ್ರೀತಿ, ವಿಶ್ವಾಸ ನಮ್ಮಲ್ಲಿದೆಯೇ?

21.02.2019 - ಈ ಪ್ರತಿಜ್ಞೆಗೆ ಮೇಘಗಳಲ್ಲಿ ನಾನಿಟ್ಟಿರುವ ಮಳೆ ಬಿಲ್ಲೇ ಗುರುತು.

ಮೊದಲನೇ ವಾಚನ: ಆದಿಕಾಂಡ 9:1-13

ದೇವರು ನೋಹನನ್ನೂ ಅವರ ಮಕ್ಕಳನ್ನೂ ಆಶೀರ್ವದಿಸಿ ಹೀಗೆಂದರು "ನೀವು ಅಭಿವೃದ್ಧಿಯಾಗಿ ಹೆಚ್ಚು ಮಕ್ಕಳನ್ನು ಪಡೆಯಿರಿ; ಭೂಲೋಕದಲ್ಲೆಲ್ಲ ಹರಡಿಕೊಳ್ಳಿ. ಭೂಮಿಯ ಮೇಲಿರುವ ಎಲ್ಲ ಪ್ರಾಣಿಗಳೂ ಆಕಾಶದ ಎಲ್ಲ ಪಕ್ಷಿಗಳೂ ನೆಲದಮೇಲೆ ಹರಿದಾಡುವ ಎಲ್ಲ ಕ್ರಿಮಿಕೀಟಗಳೂ ಸಮುದ್ರದ ಎಲ್ಲ ಮೀನುಗಳು ನಿಮಗೆ ಹೆದರಿ ಬೆದರುವುವು. ಅವುಗಳನ್ನೆಲ್ಲ ನಿಮ್ಮ ಸ್ವಾಧೀನಕ್ಕೆ ಕೊಟ್ಟಿದ್ದೇನೆ. ಭೂಮಿಯ ಮೇಲೆ ಪೈರುಪಚ್ಚೆಯನ್ನು ಕೊಟ್ಟಂತೆ ಇವುಗಳನ್ನೂ ಕೊಟ್ಟಿದ್ದೇನೆ. ಆದರೆ ಮಾಂಸವನ್ನು ಅದರ ಜೀವಸತ್ವವಾದ ರಕ್ತಸಮೇತ ತಿನ್ನಬಾರದು. ನಿಮ್ಮ ರಕ್ತಸುರಿಸಿ ಪ್ರಾಣತೆಗಿಯುವವರೆಗೆ ಮುಯ್ಯಿ ತೀರಿಸುವೆನು. ಮೃಗವಾಗಿದ್ದರೆ ಅದಕ್ಕೂ, ಮನುಷ್ಯನಾಗಿದ್ದರೆ, ಹತನಾದವನು ಅವನ ಸಹೋದರನಾದುದರಿಃದ ಅವನಿಗೂ ಮುಯ್ಯಿ ತೀರಿಸುವೆನು. "ನಿರ್ಮಿಸಿಹರು ದೇವರು ತಮ್ಮ ಸ್ವರೂಪದಲ್ಲಿ ನರರನ್ನು ಎಂತಲೆ ನರರನ್ನು ಕೊಲ್ಲುವವನು ನರನಿಂದಲೇ ಹತನಾಗುವನು. ನೀವು ಹೆಚ್ಚಿ ಅಭಿವೃಧಿಯಾಗುವಿರಿ, ನಿಮ್ಮ ಸಂಖೆ ಬೆಳೆಯಲಿ ಭೂಮಿಯಲ್ಲಿ." ಇದಲ್ಲದೆ ದೇವರು ನೋಹನಿಗೂ ಅವನ ಮಕ್ಕಳಿಗೂ ಇಂತೆಂದು ಹೇಳಿದರು: "ಕೇಳಿ, ನಾನೂ ನಿಮ್ಮನ್ನೂ ನಿಮ್ಮ ಸಂತತಿಯವರನ್ನೂ ನಿಮ್ಮ ಕೂಡ ನಾವೆಯಿಂದ ಹೊರಟು ಬಂದ ಪ್ರಾಣಿ - ಪಕ್ಷಿ ಮೃಗಾದಿ ಸಕಲ ಭೂಮಿಜಂತುಗಳನ್ನೂ ಕುರಿತು ಒಂದು ಸ್ಥರ ಪ್ರತಿಜ್ಞೆಯನ್ನು ಮಾಡುತ್ತೇನೆ. ಆ ಪ್ರಜ್ಞೆ ಏನೆಂದರೆ - ಇನ್ನು ಮೇಲೆ ನಾನು ಪ್ರಾಣಿಗಳನ್ನೆಲ್ಲಾ ಜಲಪ್ರಳಯದಿಂದ ನಾಶಮಾಡುವುದಿಲ್ಲ; ಇನ್ನು ಮುಂದೆ ಭೂಮಿಯನ್ನು ಹಾಳುಮಾಡುವ ಪ್ರಳಯವು ಬರುವುದೇ ಇಲ್ಲ," ದೇವರು ಮತ್ತೆ ಹೇಳಿದ್ದೇನೆಂದರೆ - "ನಾನು ನಿಮ್ಮನ್ನೂ ನಿಮ್ಮ ಸಂಗಡವಿರುವ ಸಮಸ್ತ ಜೀವರಾಶಿಗಳನ್ನೂ ಕುರಿತು ತಲತಲಾಂತರಗಳಿಗೆ ಮಾಡುವ ಈ ಪ್ರತಿಜ್ಞೆಗೆ ಮೇಘಗಳಲ್ಲಿ ನಾನಿಟ್ಟಿರುವ ಮಳೆಬಿಲ್ಲೇ ಗುರುತು. ನನಗೂ ಭೂಪ್ರಾಣಿಗಳಿಗೂ ಆದ ಒಡಂಬಡಿಕೆಗೆ ಇದೇ ಕುರುಹು.

ಕೀರ್ತನೆ: 102:16-18, 19-21, 29, 23-24

ಶ್ಲೋಕ: ಭೂಲೋಕವನ್ನು ವೀಕ್ಷಿಸಿದನು ಪ್ರಭು ಪರಲೋಕದಿಂದ

 ಶುಭಸಂದೇಶ: ಮಾರ್ಕ 8:27-33


ಯೇಸುಸ್ವಾಮಿ ತಮ್ಮ ಶಿಷ್ಯರ ಸಂಗಡ ಫಿಲಿಪ್ಪನ ಸೆಜರೇಯ ಎಃಬ ಪಟ್ಟಣದ ಪಕ್ಕದಲ್ಲಿರುವ ಹಳ್ಳಿಗಳಿಗೆ ಪ್ರಯಾಣ ಬೆಳೆಸಿದರು. ದಾರಿಯಲ್ಲಿ, "ಜನರು ನನ್ನನ್ನು ಯಾರೆಂದು ಹೇಳುತ್ತಾರೆ?" ಎಂದು ಶಿಷ್ಯರನ್ನು ಕೇಳಿದರು. ಅದಕ್ಕೆ ಶಿಷ್ಯರು, "ಕೆಲವರು ತಮ್ಮನ್ನು 'ಸ್ನಾನಿಕ ಯೊವಾನ್ನ' ಎನ್ನುತ್ತಾರೆ. ಇನ್ನು ಕೆಲವರು 'ಎಲೀಯನು,' ಮತ್ತೆ ಕೆಲವರು ಪ್ರವಾದಿಗಳಲ್ಲಿ ತಾವೂ ಒಬ್ಬರು ಎನ್ನುತ್ತಾರೆ," ಎಂದರು ಆಗ ಯೇಸು, "ಆದರೆ ನೀವು ನನ್ನನ್ನು ಯಾರೆನ್ನುತ್ತೀರಿ?" ಎಂದು ಪ್ರಶ್ನಿಸಿದರು. ಅದಕ್ಕೆ ಪೇತ್ರನು, "ಅಭಿಷಿಕ್ತರಾದ ಲೋಕೋದ್ಧಾರಕ ತಾವೇ" ಎಂದು ಉತ್ತರವಿತ್ತನು. ಆಗ ಯೇಸು, "ಈ ವಿಷಯವನ್ನು ಯಾರಿಗೂ ತಿಳಿಸಬೇಡಿ," ಎಂದು ತಮ್ಮ ಶಿಷ್ಯರಿಗೆ ಕಟ್ಟಪ್ಪಣೆ ಮಾಡಿದರು. ಈ ಘಟಣೆಯ ಬಳಿಕ ಯೇಸುಸ್ವಾಮಿ, "ನರಪುತ್ರನು ಕಠಿಣವಾದ ಯಾತನೆಯನ್ನು ಅನುಭವಿಸಬೇಕಾಗಿದೆ. ಸಭಾಪ್ರಮುಖರಿಂದಲೂ ಪ್ರಧಾನ ಯಾಜಕರಿಂದಲೂ ಧರ್ಮಶಾಸ್ತ್ರಿಗಳಿಂದಲೂ ಆತನು ತಿರಸ್ಕೃತನಾಗಿ ಕೊಲ್ಲಲ್ಪಡುವನು; ಆದರೆ ಮೂರನೇ ದಿನ ಪುನರುತ್ದಾನ ಹೊಂದುವನು." ಎಂದು ತಮ್ಮ ಶಿಷ್ಯರಿಗೆ ಮುಚ್ಚು ಮರೆ ಇಲ್ಲದೆ ಬೋಧಿಸಲಾರಂಭಿಸಿದರು.ಇದನ್ನು ಕೇಳಲಾಗದೆ ಪೇತ್ರನು ಅವರನ್ನು ಪ್ರತ್ಯೇಕವಾಗಿ ಕರೆದು, "ತಾವು ಹೀಗೆಲ್ಲಾ ಹೇಳಬಾರದು," ಎಂದು ಪ್ರತಿಭಟಿಸಿದನು. ಆಗ ಯೇಸು ಹಿಂದಕ್ಕೆ ತಿರುಗಿ, ತಮ್ಮ ಶಿಷ್ಯರನ್ನು ನೋಡಿ ಪೇತ್ರನನ್ನು ಎದರಿಸುತ್ತಾ, "ಸೈತಾನನೇ, ತೊಲಗು ಇಲ್ಲಿಂದ; ನಿನ್ನ ಈ ಆಲೋಚನೆ ಮನುಷ್ಯರದೇ ಹೊರತು ದೇವರದಲ್ಲ," ಎಂದರು.

ಮನಸಿಗೊಂದಿಷ್ಟು : ’ಅಭಿಷಿಕ್ತರಾದ ಲೋಕೋದ್ಧಾರಕ ತಾವೇ’ ಎಂದ ಪೇತ್ರ, ಯೇಸು ಕಠಿಣ ಯಾತನೆಯನ್ನು ಅನುಭವಿಸಬೇಕು ಎಂಬುದನ್ನು ಜೀರ್ಣಿಸಿಕೊಳ್ಳದಾದ. ಯೇಸುವಿನ ಮೇಲಿನ ಆತನ ಪ್ರೀತಿಯಿಂದ ಅದು ಸಹಜವೇ ಆಗಿತ್ತು. ಆದರೆ ದೇವರ ಆಲೋಚನೆ ಅದೆಷ್ಟೇ ಕಠಿಣ ಎನಿಸಿದರೂ ಅದು ಕೊನೆಗೆ ಒಳಿತಿಗಾಗಿಯೇ ಎಂಬ ಸಂದೇಶವನ್ನು ಯೇಸು ಕಟುವಾಗಿಯೇ ನೀಡುತ್ತಾರೆ. ನಮ್ಮ ಬದುಕಿನಲ್ಲಿ ಎಂತಹ  ಪ್ರಳಯ ಬಂದರೂ ಒಂದು ದಿನ ಭರವಸೆಯ ಮಳೆ ಬಿಲ್ಲು ನಮಗಾಗಿ ಕಾದಿದೆ

ಪ್ರಶ್ನೆ: ನೀವು ಯೇಸುವನ್ನು ಯಾರೆನುತ್ತೀರಿ?

20.02.2019 - ಪುನಃ ಅವನ ಕಣ್ಣುಗಳ ಮೇಲೆ ಕೈಯಿಟ್ಟರು.

ಮೊದಲನೇ ವಾಚನ: ಆದಿಕಾಂಡ 8:6-13, 20-22

ನಲವತ್ತು ದಿನಗಳಾದ ಮೇಲೆ ನೋಹನು ತಾನು ಮಾಡಿದ್ದ ನಾವೆಯ ಕಿಟಕಿಯನ್ನು ತೆರೆದು ಕಾಗೆಯೊಂದನ್ನು ಹೊರಕ್ಕೆ ಬಿಟ್ಟನು. ಅದು ಭೂಮಿಯ ಮೇಲಿದ್ದ ನೀರು ಒಣಗುವ ತನಕ ಹೋಗುತ್ತಾ ಬರುತ್ತಾ ಇತ್ತು. ನೀರು ಇಳಿಯಿತೋ ಇಲ್ಲವೋ ಎಂದು ತಿಳಿದುಕೊಳ್ಳಲು ನೋಹನು ಅನಂತರ ಪಾರಿವಾಳವೊಂದನ್ನು ಹೊರಕ್ಕೆ ಬಿಟ್ಟನು.  ಭೂಮಿಯ ಮೇಲೆಲ್ಲ ನೀರು ಇದ್ದುದರಿಂದ, ಕಾಲಿಡುವುದಕ್ಕೆ ಸ್ಥಳ ಕಾಣದೆ ಈ ಪಾರಿವಾಳ ನಾವೆಗೆ ಹಿಂತಿರುಗಿತು. ನೋಹನು ಕೈ ಚಾಚಿ ಅದನ್ನು ಹಿಡಿದುಕೊಂಡು ನಾವೆಯೊಳಗೆ ಹಾಕಿಕೊಂಡನು. ಇನ್ನೂ ಏಳು ದಿವಸ ಕಾದು, ಪಾರಿವಾಳವನ್ನು ಹೊರಕ್ಕೆ ಬಿಟ್ಟನು. ಸಂಜೆ ವೇಳೆಗೆ ಆ ಪಾರಿವಾಳ ಅವನ ಬಳಿಗೆ ಮರಳಿತು; ಆಗ ಇಗೋ! ಅದರ ಬಾಯಲ್ಲಿ ಎಣ್ಣೆಮರದ ಹೊಸ ಚಿಗುರಿತ್ತು. ಇದನ್ನು ನೋಡಿ ನೋಹನು ಭೂಮಿಯ ಮೇಲಿಂದ ನೀರು ಇಳಿದು ಹೋಗಿದೆಯೆಂದು ತಿಳಿದುಕೊಂಡನು. ಮತ್ತೆ ಏಳು ದಿನಗಳಾದ ಮೇಲೆ  ಇನ್ನೊಮ್ಮೆ ಪಾರಿವಾಳವನ್ನು ಹೊರಕ್ಕೆ ಬಿಟ್ಟನು. ಈ ಸಾರಿ ಅದು ಹಿಂತಿರುಗಿ ಬರಲೇ ಇಲ್ಲ. 601ನೆಯ ವರ್ಷದ ಮೊದಲನೆಯ ತಿಂಗಳಿನ ಮೊದಲನೆಯ ದಿನದಂದು ಭೂಮಿಯ ಮೇಲಿದ್ದ ನೀರು ಇಳಿದಿತ್ತು. ನೋಹನು ನಾವೆಯ ಗವಸಣಿಗೆಯನ್ನು ತೆಗೆದು ನೋಡಿದನು. ಇಗೋ, ಭೂಮಿಯ ತೇವ ಆರುತ್ತಿತ್ತು. ನೋಹನು ಸರ್ವೇಶ್ವರ ಸ್ವಾಮಿಗೆ ಒಂದು ಬಲೀಪೀಠವನ್ನು ಕಟ್ಟಿದನು‌. ಶುದ್ಧವಾದ ಎಲ್ಲ ಪ್ರಾಣಿಪಕ್ಷಿಗಳಿಂದ ಆಯ್ದು ಆ ಪೀಠದ ಮೇಲೆ ದಹನ ಬಲಿಯನ್ನು ಅರ್ಪಿಸಿದನು. ಗಮಗಮಿಸುವ ಅದರ ಸುಗಂಧವು ಸ್ವಾಮಿಯನ್ನು ಮುಟ್ಟಿತು. ಅವರು ಮನದಲ್ಲೆ ಹೀಗೆಂದುಕೊಂಡರು; "ಇನ್ನು ಮೇಲೆ ನಾನು ಮನುಷ್ಯರ ನಿಮಿತ್ತ ಭೂಮಿಯನ್ನು ಶಪಿಸುವುದಿಲ್ಲ. ಮನುಷ್ಯರ ಹೃದಯದ ಆಲೋಚನೆ ಚಿಕ್ಕಂದಿನಿಂದಲೇ ಕೆಟ್ಟದು. ಈಗ ಮಾಡಿದಂತೆ ಇನ್ನು ಮೇಲೆ ಎಲ್ಲ ಜೀವಿಗಳನ್ನು ನಾನು ಸಂಹರಿಸುವುದಿಲ್ಲ. ಬಿತ್ತನೆ - ಕೊಯಿಲು, ಚಳಿ - ಬಿಸಿಲು, ಗ್ರೀಷ್ಮ - ಹೇಮಂತ, ಹಗಲು - ಇರುಳು ಈ ಕ್ರಮಕ್ಕೆ ಇರದು ಅಂತ್ಯ ಜಗವಿರುವವರೆಗು."

ಕೀರ್ತನೆ: 116:12-13, 14-15, 18-19

ಶ್ಲೋಕ: ಎತ್ತಿ ಹಿಡಿದೆವೆನು ರಕ್ಷಣೆಯ ಪಾನಪಾತ್ರೆಯನು, ಪ್ರಖ್ಯಾತಪಡಿಸುವೆನು ಪ್ರಭುವಿನ ನಾಮವನ್ನು

ಶುಭಸಂದೇಶ: ಮಾರ್ಕ 8:22-26



ಯೇಸುಸ್ವಾಮಿ ಮತ್ತು ಅವರ ಶಿಷ್ಯರು ಬೆತ್ಸಾಯಿದಕ್ಕೆ ಬಂದರು. ಕೆಲವರು ಯೇಸುವಿನ ಬಳಿಗೆ ಕುರುಡನೊಬ್ಬನನ್ನು ಕರೆತಂದು ಅವನನ್ನು ಮುಟ್ಟಬೇಕಂದು ಬೇಡಿಕೊಂಡರು. ಯೇಸು ಕುರುಡನ ಕೈ ಹಿಡಿದು, ಅವನನ್ನು ಊರ ಹೊರಗೆ ಕರೆದೊಯ್ದರು. ಅವನ ಮೇಲೆ ಕೈಯಿಟ್ಟು, "ನಿನಗೆ ಏನಾದರೂ ಕಾಣುತ್ತಿದೆಯೇ? ಎಂದು ಕೇಳಿದರು. ಆಗ ಅವನು ಕಣ್ಣೆತ್ತಿ ನೋಡಿ, "ನನಗೆ ಮನುಷ್ಯರು ಮರಗಳಂತೆ ಕಾಣಿಸುತ್ತಾರೆ. ಆದರೂ ಅವರು ನಡೆದಾಡುತ್ತಿದ್ದಾರೆ," ಎಂದನು. ಯೇಸು ಪುನಃ ಅವನ ಕಣ್ಣುಗಳ ಮೇಲೆ ಕೈಯಿಟ್ಟರು. ಅವನು ಕಣ್ಣರಳಿಸಿ ನೋಡಿದಾಗ ಪೂರ್ಣ ದೃಷ್ಟಿಯನ್ನು ಹೊಂದಿದ್ದನು. ಎಲ್ಲವೂ ಅವನಿಗೆ ಸ್ಪಷ್ಟವಾಗಿ ಕಾಣಿಸಿತು. ಅನಂತರ ಯೇಸು "ನೀನು ಊರೊಳಗೆ ಹೋಗುವುದೇ ಬೇಡ," ಎಂದು ಅವನಿಗೆ ಆಜ್ಞಾಪಿಸಿ ಮನೆಗೆ ಕಳುಹಿಸಿಬಿಟ್ಟರು.

ಮನಸಿಗೊಂದಿಷ್ಟು : ಇಂದಿನ ಶುಭ ಸಂದೇಶದಲ್ಲಿ ಕುರುಡನ ದೃಷ್ಟಿ ದಾನವು ಎರಡು ಹಂತದಲ್ಲಿ ಆಗುವುದನ್ನು ನಾವು ಕಾಣಬಹುದಾಗಿದೆ. ಜಲಪ್ರಳಯವು ಸಹ ನಿಂತು ಭೂಮಿಯಲ್ಲಿ ಮತ್ತೆ ಚಿಗುರೊಡೆಯಲು ದೇವರು ತಮ್ಮದೇ ಆದ ಸಮಯವನ್ನು ತೆಗೆದುಕೊಳ್ಳುತ್ತಾರೆ. ಕಾದ ಭೂಮಿ ಇನ್ನೆಂದಿಗೂ ಮತ್ತೆ ನಾಶವಾಗುವುದಿಲ್ಲ ಎಂಬ ದೈವ ಭರವಸೆ ಪಡೆದರೆ, ಕುರುಡ ಎಂದೂ ಇರದ ದೃಷ್ಟಿಯನ್ನು ಪಡೆಯುತ್ತಾನೆ.

ಪ್ರಶ್ನೆ : ದೈವ ಕೃಪೆಗಾಗಿ ದೇವರ ಸಮಯಕ್ಕಾಗಿ ಕಾಯುವ ಸಹನೆ ನಮ್ಮಲ್ಲಿದೆಯೇ?

19.02.2019 - ಸರ್ವೇಶ್ವರ ಆಜ್ಞಾಪಿಸಿದಂತೆಯೇ ನೋಹನು ಎಲ್ಲವನ್ನು ಮಾಡಿದನು

ಮೊದಲನೇ ವಾಚನ: ಆದಿಕಾಂಡ 6:5-8;  7:1-5, 10

ಜಗತ್ತಿನಲ್ಲಿ ಮನುಜರ ಕೆಟ್ಟತನವು ಹೆಚ್ಚುತ್ತಲೇ ಇತ್ತು. ಅವರ ಮನದಾಲೋಚನೆಗಳು ಸದಾ ಕೆಟ್ಟದಾಗಿದ್ದವು. ಇದನ್ನು ಕಂಡ ಸರ್ವೇಶ್ವರ ಮನುಜನನ್ನು ಇಲ್ಲಿ ಸೃಷ್ಟಿಮಾಡಿದ್ದಕ್ಕಾಗಿ ವ್ಯಥೆಪಟ್ಟು, "ನಾನು ಸೃಷ್ಟಿಸಿದ ಮಾನವರನ್ನು ಈ ಜಗದಿಂದ ಅಳಿಸಿಬಿಡುತ್ತೇನೆ. ಅವರೊಂದಿಗೆ ಪ್ರಾಣಿಪಕ್ಷಿಗಳನ್ನು, ಕ್ರಿಮಿ ಕೀಟಗಳನ್ನು ಅಳಿಸಿ ಹಾಕುತ್ತೇನೆ. ಅವುಗಳನ್ನು ಉಂಟುಮಾಡಿದ್ದಕ್ಕಾಗಿ ನನಗೆ ದಃಖವಾಗುತ್ತಿದೆ," ಎಂದುಕೊಂಡರು. ಆದರೆ ನೋಹನ ವಿಷಯದಲ್ಲಿ ಸರ್ವೇಶ್ವರಸ್ವಾಮಿಗೆ ಮೆಚ್ಚುಗೆಯಿತ್ತು. ಸರ್ವೇಶ್ವರಸ್ವಾಮಿ ನೋಹನಿಗೆ, "ನೀನೂ ನಿನ್ನ ಮನೆಯವರೆಲ್ಲರೂ ನಾವೆಯನ್ನು ಸೇರಿಕೊಳ್ಳಿರಿ; ಈಗಿನ ಪೀಳಿಗೆಯಲ್ಲಿ ನೀನೊಬ್ಬನೇ ನನ್ನ ದೃಷ್ಟಿಗೆ ಸತ್ಪುರುಷ. ಎಲ್ಲ ಶುದ್ಧ ಪ್ರಾಣಿಗಳಲ್ಲಿ ಏಳೇಳು ಗಂಡುಹೆಣ್ಣುಗಳನ್ನು ಶುದ್ಧವಲ್ಲದ ಪ್ರಾಣಿಗಳಲ್ಲಿ ಎರಡೆರಡು ಗಂಡುಹೆಣ್ಣುಗಳನ್ನೂ ನಿನ್ನೊಂದಿಗೆ ಕರೆದುಕೊ.  ಪಕ್ಷಿಗಳಲ್ಲಿಯೂ ಏಳೇಳು ಗಂಡುಹೆಣ್ಣುಗಳನ್ನು ತೆಗೆದುಕೊ. ಏಳು ದಿನಗಳಾದ ನಂತರ ಭೂಮಿಯ ಮೇಲೆ ನಲವತ್ತು ದಿನ ಹಗಲಿರುಳೆನ್ನದೆ ಮಳೆ ಸುರಿಸುವೆನು; ನಾನು ಸೃಷ್ಟಿ ಮಾಡಿದ ಜೀವರಾಶಿನಳನ್ನೆಲ್ಲ ಭೂಮಿಯಿಂದ ಆಳಿಸಿ ಹಾಕುವೆನು," ಎಂದು ಹೇಳಿದರು. ಸರ್ವೇಶ್ವರ ಆಜ್ಞಾಪಿಸಿದಂತೆಯೇ ನೋಹನು ಎಲ್ಲವನ್ನು ಮಾಡಿದನು. ಏಳು ದಿನಗಳಾದ ಬಳಿಕ ಜಲ ಪ್ರಳಯವಾಗತೊಡಗಿತು.

ಕೀರ್ತನೆ: 29:1, 2, 3-4, 9-10

ಶ್ಲೋಕ: ಅನುಗ್ರಹಿಸಲಿ ಪ್ರಭೂ, ತನ್ನ ಪ್ರಜೆಗೆ ಸುಕ್ಷೇಮವನು.

ಶುಭಸಂದೇಶ: ಮಾರ್ಕ 8:14-21

ಶಿಷ್ಯರು ಬುತ್ತಿಯನ್ನು ಕಟ್ಟಿಕೊಳ್ಳಲು ಮರೆತಿದ್ದರು. ದೋಣಿಯಲ್ಲಿ ಒಂದೇ ಒಂದು ರೊಟ್ಟಿ ಇತ್ತು. ಯೇಸುಸ್ವಾಮಿ ಅವರಿಗೆ, "ಎಚ್ಚರಿಕೆ, ಫರಿಸಾಯರ ಹಾಗೂ ಹೆರೋದನ ಹುಳಿ ಹಿಟ್ಟಿನ ವಿಷಯದಲ್ಲಿ ಜಾಗರೂಕರಾಗಿರಿ," ಎಂದು ಹೇಳಿದರು. ಇದನ್ನು ಕೇಳಿದ  ಶಿಷ್ಯರು, "ನಮ್ಮಲ್ಲಿ ರೊಟ್ಟಿಯಿಲ್ಪದ್ದರಿಂದ ಹೀಗೆ ಹೇಳುತ್ತಿರಬಹುದೇ" ಎಂದು ಚರ್ಚಿಸತೊಡಗಿದರು. ಆ ಚರ್ಚೆಯನ್ನು ಯೇಸು ಗಮನಿಸಿ "ರೊಟ್ಟಿ ಇಲ್ಲವೆಂದು ಚರ್ಚೆ ಏಕೆ? ನಿಮಗೆ ಇನ್ನೂ ಅರಿವಾಗಲಿ, ಗ್ರಹಿಕೆಯಾಗಲಿ ಇಲ್ಲವೇ, ನೀವಿನ್ನೂ ಮಂದಮತಿಗಳಾಗಿರುವಿರೋ? ಕಿವಿಗಳಿದ್ದೂ ಕೇಳಲಾರಿರಾ? ಕಣ್ಣುಗಳಿದ್ದು ನೋಡಲಾರಿರಾ? ನಾನು ಐದು ರೊಟ್ಟಿಗಳಿದ  ಐದುಸಾವಿರ ಜನರನ್ನು ತೃಪ್ತಿಪಡಿಸಿದಾಗ ಉಳಿದ ರೊಟ್ಟಿಯ ತುಂಡುಗಳನ್ನು ಎಷ್ಟು ಬುಟ್ಟಿ ತುಂಬಾ ಒಟ್ಟುಗೂಡಿಸಿದಿರಿ? ನಿಮಗೆ ಜ್ಞಾಪಕವಿಲ್ಲವೇ?" ಎಂದು ಕೇಳಿದರು. "ಹನ್ನೆರಡು ಬುಟ್ಟಿಗಳು" ಎಂದು ಅವರು ಉತ್ತರವಿತ್ತರು. "ಅಲ್ಲದೆ ನಾನು ಏಳು ರೊಟ್ಟಿಗಳಿಂದ ನಾಲ್ಕುಸಾವಿರ ಜನರನ್ನು ತೃಪ್ತಿಪಡಿಸಿದಾಗ ಎಷ್ಟು ಕುಕ್ಕೆ ತಂಬ ರೊಟ್ಟಿಯ ತುಂಡುಗಳನ್ನು ಒಟ್ಟುಗೂಡಿಸಿದಿರಿ?"ಎಂದು ಪನಃ ಅವರನ್ನು ಕೇಳಲು, "ಏಳು ಕುಕ್ಕೆಗಳು," ಎಂದರು. ಆಗ ಯೇಸು, "ಇಷ್ಟಾದರೂ ನಿಮಗಿನ್ನೂ ತಿಳುವಳಿಕೆ ಇಲ್ಲವೆ?" ಎಂದರು.

ಮನಸಿಗೊಂದಿಷ್ಟು : ೪೦೦೦ ಜನರಿಗೆ ಆಹಾರ ಒದಗಿಸಿದನ್ನು ನೋಡಿಯೂ , ಶಿಷ್ಯರು ಮರೆತು ಬಂದ ರೊಟ್ಟಿಗಳ ಬಗ್ಗೆ ಯೋಚಿಸುತ್ತಿದ್ದಾರೆ. ಅದು ಸಹಜವೂ ಆಗಿತ್ತು, ಏಕೆಂದರೆ ಅದು ಅವರ ಮುಂದಿನ ಊಟವಾಗಿತ್ತು. ಆದರೆ ಅವರ ಪೇಚಾಟವನ್ನು ಗಮನಿಸಿದ ಯೇಸು  ಫರಿಸಾಯರ ಅವಿಶ್ವಾಸ ಹಾಗೂ ಹೆರೋದನ ದುಷ್ಟತನವನ್ನು ನೆನಪಿಸುತ್ತಾರೆ. ಅವಿಶ್ವಾಸದಷ್ಟೇ, ದುಷ್ಟತನದಷ್ಟೇ  ಅನವಶ್ಯಕ ಪೇಚಾಟಗಳೂ ನಮ್ಮನ್ನು ದೇವರಿಂದ ದೂರವಾಗಿಸಬಹುದು.     

ಪ್ರಶ್ನೆ : ಕ್ರಿಸ್ತನಿಂದ ನಮ್ಮನ್ನು ದೂರವಾಗಿಸುತ್ತಿರುವ ನಮ್ಮ ಚಿಂತೆ ಪೇಚಾಟಗಳು ಯಾವುವು?

18.02.2019 - ಈ ಪೀಳಿಗೆ ಅದ್ಬುತವನ್ನು ಸಂಕೇತವಾಗಿ ಅಪೇಕ್ಷಿಸುವುದೇಕೆ?

ಮೊದಲನೇ ವಾಚನ: ಆದಿಕಾಂಡ 4:1-15,25 

ಆದಾಮನು ತನ್ನ ಹೆಂಡತಿಯ ಜೊತೆ ಕೂಡಲು ಆಕೆ ಗರ್ಭಿಣಿಯಾಗಿ ಕಾಯಿನನನ್ನು ಹೆತ್ತಳು. "ಸರ್ವೇಶ್ವರ ಸ್ವಾಮಿಯ ಅನುಗ್ರಹದಿಂದ ಒಂದು ಗಂಡು ಮಗುವನ್ನು ಪಡೆದಿದ್ದೇನೆ" ಎಂದಳು. ತರುವಾಯ ಅವನ ತಮ್ಮನಾದ ಹೇಬೆಲನಿಗೆ ಜನ್ಮವಿತ್ತಳು. ಹೇಬೆಲನು ಕುರಿಗಾಹಿಯಾಗಿದ್ದನು;  ಕಾಯಿನನು ವ್ಯವಸಾಯಗಾರನಾದನು. ಕ್ರಮೇಣ ಕಾಯಿನನು ತಾನು ಬೆಳೆಸಿದ ಫಸಲಲ್ಲಿ ಕೆಲವನ್ನು ತಂದು ಸರ್ವೇಶ್ವರ ಸ್ವಾಮಿಗೆ ಸಮರ್ಪಿಸಿದನು. ಅಂತೆಯೇ, ಹೇಬೆಲನು ತನ್ನ ಹಿಂಡಿನಿಂದ ಚೊಚ್ಚಲ ಕುರಿಗಳನ್ನು ಕಾಣಿಕೆಯಾಗಿ ತಂದು ಅವುಗಳ ಕೊಬ್ಬನ್ನು ಸಮರ್ಪಿಸಿದನು. ಸರ್ವೇಶ್ವರ ಹೇಬೆಲನನ್ನೂ ಅವನ ಕಾಣಿಕೆಯನ್ನೂ ಮೆಚ್ಚಿಕೊಂಡರು; ಆದರೆ ಕಾಯಿನನನ್ನೂ ಅವನ ಕಾಣಿಕೆಯನ್ನೂ ಮೆಚ್ಚಲಿಲ್ಲ. ಇದರಿಂದ ಕಾಯಿನನು ಕಡುಗೋಪಗೊಂಡನು; ಅವನ ಮುಖ ಸಿಂಡರಿಸಿತು. ಆಗ ಸರ್ವೇಶ್ವರ ಕಾಯಿನನಿಗೆ, "ಕೋಪವೇಕೆ? ಮೊಗ ಸಿಂಡರಿಸಿದೆ ಏಕೆ? ನೀನು ಒಳಿತನ್ನು ಮಾಡಿದ್ದರೆ ತಲೆ ಎತ್ತುತ್ತಿದ್ದೆ; ಕೆಡುಕನ್ನು ಮಾಡಿದ್ದರಿಂದ ಪಾಪವು ಹೊಸ್ತಿಲಲ್ಲಿ ಹೊಂಚು ಹಾಕುತ್ತಿದೆ; ಅದು ನಿನ್ನನ್ನು ಬಯಸುತ್ತಿದೆ. ನೀನು ಅದನ್ನು ಜಯಿಸಬೇಕು," ಎಂದರು. ಬಳಿಕ ಕಾಯಿನನು ತಮ್ಮ ಹೇಬೆಲನಿಗೆ, "ಹೊಲಕ್ಕೆ ಹೋಗೋಣ ಬಾ" ಎಂದು ಕರೆದನು. ಅವರಿಬ್ಬರೂ ಅಲ್ಲಿಗೆ ಬಂದಾಗ ಕಾಯಿನನು ತಮ್ಮನ ಮೇಲೆ ಬಿದ್ದು ಅವನನ್ನು ಕೊಂದನು.  "ನಿನ್ನ ತಮ್ಮನೆಲ್ಲಿ?" ಎಂದು ಸರ್ವೇಶ್ವರ ಕೇಳಿದಾಗ "ನಾನರಿಯೆ, ನನ್ನ ತಮ್ಮನಿಗೆ ನಾನೇನು ಕಾವಲುಗಾರನೋ?" ಎಂದು ಕಾಯಿನನು ಉತ್ತರ ಕೊಟ್ಟನು. ಆಗ ಸರ್ವೇಶ್ವರ , "ನೀನು ಎಂಥ ಕೃತ್ಯ ಎಸಗಿದೆ? ಪ್ರತಿಕಾರಕ್ಕಾಗಿ ನೆಲದಿಂದ ನಿನ್ನ ತಮ್ಮನ ರಕ್ತ ಕೂಗಿ ನನಗೆ ಮೊರೆಯಿಡುತ್ತಿದೆ. ಕೇಳು ನಿನ್ನ ಕೈ ಸುರಿಸಿದ ನಿನ್ನ ತಮ್ಮನ ರಕ್ತವನ್ನು ಕುಡಿದ ಈ ನೆಲದಿಂದಾಗಿ ನೀನು ಶಾಪಗ್ರಸ್ತನು; ತಿರಸ್ಕೃತನು. ಇದನ್ನು ನೀನು ವ್ಯವಸಾಯ ಮಾಡಿದರೂ, ಇನ್ನು ಮುಂದೆ ಅದು ಫಲ ಕೊಡುವುದಿಲ್ಲ. ನೆಲೆಯಿಲ್ಲದೆ ನೀನು ಲೋಕದಲ್ಲಿ ಅಲೆಮಾರಿಯಾಗಿರಬೇಕು," ಎಂದರು. ಅದಕ್ಕೆ ಕಾಯಿನನು, "ಸರ್ವೇಶ್ವರ, ಈ ಶಿಕ್ಷೆ  ನನ್ನಿಂದ ಸಹಿಸಲಾಗದಷ್ಟು ಕಠಿಣ. ಈ ನಾಡಿನಿಂದ ನನ್ನನ್ನು ದೂರದೂಡುತ್ತಿರುವಿರಿ, ತಮ್ಮ ಸಾನ್ನಿಧ್ಯ ನನಗಿನ್ನು ದೊರಕದು; ನೆಲೆ ಇಲ್ಲದ ನಾನು ಲೋಕದಲ್ಲಿ ಅಲೆಮಾರಿಯಾಗಿರಬೇಕು; ಕಂಡ ಕಂಡವರೆಲ್ಲರು ನನ್ನನ್ನು ಕೊಲ್ಲುವರು," ಎಂದು ಹೇಳಿದನು. ಅದಕ್ಕೆ ಸರ್ವೇಶ್ವರ, "ಇಲ್ಲ, ಕಾಯಿನನ ಪ್ರಾಣವನ್ನು ತೆಗೆದವನಿಗೆ ಏಳ್ಮಡಿ ದಂಡನೆ ಆಗುವುದು," ಎಂದು ಹೇಳಿ, ಅವನನ್ನು ಕಂಡವರು ಕೊಲ್ಲದಂತೆ ಅವನ ಮೇಲೆ ಒಂದು ಗುರುತನ್ನು ಇಟ್ಟರು.  ಕಾಯಿನನು ಸರ್ವೇಶ್ವರ ಸ್ವಾಮಿಯ ಸಾನ್ನಿಧ್ಯದಿಂದ ಹೊರಟು ಹೋಗಿ ಏದೆನ್ ನಾಡಿನ ಪೂರ್ವಕ್ಕಿರುವ "ಅಲೆದಾಡು" ಎಂಬ ನಾಡಿನಲ್ಲಿ ವಾಸಮಾಡಿದನು. ಆದಾಮ್ ಮತ್ತು ಅವನ ಹೆಂಡತಿಗೆ ಮತ್ತೊಂದು ಗಂಡುಮಗು ಆಯಿತು. ಆಕೆ, "ಕಾಯಿನನು ಕೊಂದು ಹಾಕಿದ ಹೇಬೆಲನಿಗೆ ಬದಲಾಗಿ ದೇವರು ನನಗೆ ಬೇರೆ ಸಂತಾನವನ್ನು ಅನುಗ್ರಹಿಸಿದ್ದಾರೆ," ಎಂದುಕೊಂಡು ಅವನಿಗೆ "ಸೇತ್" ಎಂದು ನಾಮಕರಣ ಮಾಡಿದಳು.

ಕೀರ್ತನೆ: 50:1, 8, 16-17, 20-21

ಶ್ಲೋಕ: ದೇವರಿಗೆ ಧನ್ಯವಾದವೇ ನಿನ್ನ ಬಲಿಯರ್ಪಣೆಯಾಗಿರಲಿ

ಶುಭಸಂದೇಶ: ಮಾರ್ಕ 8:11-13


ಫರಿಸಾಯರು ಯೇಸುಸ್ವಾಮಿಯ ಬಳಿಗೆ ಬಂದು, ಅವರೊಡನೆ ತರ್ಕಮಾಡಿ, ಅವರನ್ನು ಪರೀಕ್ಷಿಸುವ ಉದ್ದೇಶದಿಂದ; "ನೀನು ದೇವರಿಂದ ಬಂದವನೆಂಬುದನ್ನು ಸೂಚಿಸಲು ಒಂದು ಅದ್ಬುತವನ್ನು ಮಾಡಿ ತೋರಿಸು. ," ಎಂದು ಕೇಳಿದರು. ಇದನ್ನು ಕೇಳಿ ಯೇಸು, ಮನಸ್ಸಿನಲ್ಲೇ ನೊಂದುಕೊಂಡು, ನಿಟ್ಟುಸಿರಿಟ್ಟು, "ಈ ಪೀಳಿಗೆ ಅದ್ಬುತವನ್ನು ಸಂಕೇತವಾಗಿ ಅಪೇಕ್ಷಿಸುವುದೇಕೆ? ಇದಕ್ಕೆ ಅಂಥ ಯಾವ ಸಂಕೇತವನ್ನು ಕೊಡಲಾಗದು, ಇದು ಖಂಡಿತ," ಎಂದರು. ಅನಂತರ ಯೇಸು ಅವರನ್ನು ಬಿಟ್ಟು, ದೋಣಿಯನ್ನು ಹತ್ತಿ ಸರೋವರದ ಆಚೆ ದಡಕ್ಕೆ ಹೊರಟು ಹೋದರು.

ಮನಸಿಗೊಂದಿಷ್ಟು :
ಹುಡುಕುತ್ತಿಹನೊಬ್ಬ 
’ದೇವರ ಸಂಕೇತವನ್ನು’
ಚಿತ್ತಾರದೊಡನೆ ಬಂದ ಸೂರ್ಯ ಮುಂಜಾನೆ
ಮುಳುಗಿದ ಸಂಜೆ ಅದೇ ಬಣ್ಣಗಳೊಡನೆ,
ಹೊಳೆದವಾ ತಾರೆಗಳು ಬೆಳಕಿನ ಚಪ್ಪರದಡಿ
ಹುಲ್ಲಿನ ದಾಹ ನೀಗಿಸಿತು ಮುತ್ತಿನಿಬ್ಬನಿ,
ಮಳೆಯಿಂದ ಬೆಳೆಯು ಬಳ್ಳಿಯಿಂದ ಗೊಂಚಲು.....

ಹುಡುಕುತ್ತಲೇ ಇರುವನಾತ ಇನ್ನೂ 
’ದೇವರ ಸಂಕೇತವನ್ನು’......

ಪ್ರಶ್ನೆ :  ನನ್ನ ಪ್ರತಿ ಉಸಿರೂ ದೇವರ ಅದ್ಭುತವೇ ಅಲ್ಲವೇ?

17.02.2019 - ತಿಂದು ತೃಪ್ತಿಯಾಗಿರುವವರೇ, ನಿಮಗೆ ಧಿಕ್ಕಾರ!

ಮೊದಲನೇ ವಾಚನ: ಯೆರೆಮೀಯ 17:5-8

ಇವು ಸರ್ವೇಶ್ವರನ ಮಾತುಗಳು: "ಮಾನವ ಮಾತ್ರದವರಲ್ಲಿ ಭರವಸೆಯಿಟ್ಟು ನರ ಜನ್ಮದವರನ್ನೇ ತನ್ನ ಭುಜ ಬಲವೆಂದುಕೊಂಡು ಸರ್ವೇಶ್ವರನನ್ನೇ ತೊರೆಯುವಂಥ ಹೃದಯವುಳ್ಳವನು ಶಾಪಗ್ರಸ್ತನು! ಇಂಥವನು ಅಡವಿಯಲ್ಲಿನ ಜಾಲಿ ಗಿಡಕ್ಕೆ ಸಮಾನನು. ಶುಭ ಸಂಭವಿಸಿದರೂ ಅದು ಅವನ ಕಣ್ಣಿಗೆ ಕಾಣದು. ಜನರಾರೂ ವಾಸಿಸದ ಚೌಳು ನೆಲದೊಳು ಬೆಳೆಯಿಲ್ಲದ ಬೆಂಗಾಡಿನೊಳು ವಾಸಿಸುವವನ ಪರಿಸ್ಥತಿ ಅವನದು. ಸರ್ವೇಶ್ವರನಲ್ಲಿ ಭರವಸೆಯಿಟ್ಟವನಾದರೋ ಧನ್ಯ! ಅಂಥವನಿಗೆ ಸರ್ವೇಶ್ವರನಲ್ಲೇ ವಿಶ್ವಾಸ. ನೀರರುಗಿನಲೆ ನೆಡಲಾದ, ನದಿಯ ಬದಿಯಲೆ ಬೇರು ಹರಡಿದ ಬಿಸಿಲ ಧಗೆಗೆ ಹೆದರದ, ಬರಗಾಲದಲ್ಲೂ ನಿಶ್ಚಿಂತವಾದ ಹಸಿರೆಲೆಬಿಡುವ ಫಲ ನೀಡುವ ಮರಕ್ಕೆ ಸಮಾನನು ಆತ.

ಕೀರ್ತನೆ: 1:1-2, 3, 4, 6

ಶ್ಲೋಕ: ಪ್ರಭುವಿನ ಧರ್ಮಶಾಸ್ತ್ರದಲಿ ಹರ್ಷಗೊಳ್ಳವವನಾರೋ - ಅವನೇ ಧನ್ಯನು

ಎರಡನೇ ವಾಚನ: 1 ಕೊರಿಂಥಿಯರಿಗೆ 15:12, 16-20

ಕ್ರಿಸ್ತಯೇಸು ಮರಣದಿಂದ ಪುನರುತ್ದಾನ ಹೊಂದಿದರು ಎಂದು ನಾವು ಸಾರುತ್ತಿರುವಲ್ಲಿ, ಸತ್ತವರು ಪುನರುತ್ದಾನರಾಗುವುದಿಲ್ಲ ಎಂದು ನಿಮ್ಮಲ್ಲಿ ಕೆಲವರು ವಾದಿಸುವುದು ಹೇಗೆ? ಸತ್ತವರು ಪುನರುತ್ದಾನ ಹೊಂದುವುದಿಲ್ಲ ಎಂದರೆ ಕ್ರಿಸ್ತಯೇಸುವು ಪುನರುತ್ದಾನ ಹೊಂದಲಿಲ್ಲ ಎಂದಂತಾಯಿತು. ಕ್ರಿಸ್ತಯೇಸುವೇ ಪುನರುತ್ದಾನ ಹೊಂದಿಲ್ಲ ಎಂದಮೇಲೆ ನಿಮ್ಮ ವಿಶ್ವಾಸವೇ ನಿರರ್ಥಕ; ಮತ್ತು ನೀವಿನ್ನೂ ನಿಮ್ಮ ಪಾಪಗಳಲ್ಲಿಯೇ ಮುಳುಗಿದ್ದೀರಿ; ಅಷ್ಟೇ  ಅಲ್ಲದೆ, ಕ್ರಿಸ್ತಯೇಸುವಿನಲ್ಲಿ ಮೃತರಾದವರೆಲ್ಲರೂ ವಿನಾಶವಾದರು. ಕ್ರಿಸ್ತಯೇಸುವಿನಲ್ಲಿ ನಮಗಿರುವ ನಂಬಿಕೆ ಕೇವಲ ಬದುಕಿಗೆ ಸೀಮಿತವಾಗಿದ್ದರೆ ಜಗತ್ತಿನಲ್ಲಿ ನಮಗಿಂತ ನಿರ್ಭಾಗ್ಯರು ಬೇರೆ ಯಾರೂ ಇಲ್ಲ. ಕ್ರಿಸ್ತಯೇಸು ಪುನರುತ್ದಾನಹೊಂದಿದ್ದೇನೋ ಸತ್ಯಸ್ಯ ಸತ್ಯ ಅವರ ಪುನರುತ್ದಾನವು , ಸತ್ತವರು ಪುನರುತ್ದಾನ ಹೊಂದುತ್ತಾರೆ ಹೊಂದುತ್ತಾರೆ ಎನ್ನುವುದಕ್ಕೆ ಪ್ರಮಾಣ.

ಶುಭಸಂದೇಶ: ಲೂಕ 6:17, 10-16


ಅನಂತರ ಯೇಸುಸ್ವಾಮಿ ಅವರೊಂದಿಗೆ ಬೆಟ್ಟದಿಂದ ಇಳಿದು, ಸಮತಟ್ಟಾದ ಸ್ಥಳಕ್ಕೆ ಬಂದರು. ಶಿಷ್ಯರ ದೊಡ್ಡ ಗುಂಪು ಅಲ್ಲಿ ನೆರೆದಿತ್ತು. ಜುದೇಯ ಪ್ರಾಂತ್ಯದಿಂದಲೂ ಜೆರುಸಲೇಮ್ ಪಟ್ಟಣದಿಂದಲೂ ಸಮೂದ್ರ ತೀರದ ಟೈರ್  ಹಾಗೂ ಸಿದೋನ್ ಪಟ್ಟಣಗಳಿಂದಲೂ ಜನಸಮೂಹ ಅಲ್ಲಿಗೆ ಬಂದಿತ್ತು. ಯೇಸುಸ್ವಾಮಿ ತಮ್ಮ ಶಿಷ್ಯರ ಕಡೆಗೆ ದೃಷ್ಟಿಸಿ ನೋಡಿ ಹೀಗೆಂದು ಬೋಧಿಸಿದರು: "ದೀನದಲಿತರೇ, ನೀವು ಭಾಗ್ಯವಂತರು! ದೇವರ ಸಾಮ್ರಾಜ್ಯ ನಿಮ್ಮದು. ಈಗ ಹಸಿದಿರುವವರೇ, ನೀವು ಭಾಗ್ಯವಂತರು! ನಿಮಗೆ ಸಂತೃಪ್ತಿಯಾಗುವುದು. ಈಗ ಅತ್ತು ಗೋಳಾಡುವವರೇ, ನೀವು ಭಾಗ್ಯವಂತರು! ನೀವು ನಕ್ಕು ನಲಿದಾಡುವಿರಿ! ನರಪುತ್ರನ ಶಿಷ್ಯರು ನೀವಾದುದರಿಂದ ನಿಮ್ಮನ್ನು ದ್ವೇಷಿಸಿ ಬಹಿಷ್ಕರಿಸಿ, ಧಿಕ್ಕರಿಸಿ, ನಿಮ್ಮ ಹೆಸರೆತ್ತುವುದು ಕೂಡ ಕೇಡೆಂದು ತಿರಸ್ಕರಿಸುವಾಗ ನೀವು ಭಾಗ್ಯವಂತರು! ಈ ಜನರ ಪೂರ್ವಜರು ಪ್ರವಾದಿಗಳನ್ನು ಹೀಗೆಯೇ ತೆಗಳಿದ್ದರು. ಇದೆಲ್ಲಾ ಸಂಭವಿಸುವಾಗ ಹಿಗ್ಗಿ ನಲಿದಾಡುವಿರಿ. ಏಕೆಂದರೆ, ಸ್ವರ್ಗದಲ್ಲಿ ನಿಮಗೆ ಲಭಿಸುವ ಪ್ರತಿಫಲವು ಮಹತ್ತರವಾದುದು, "ಆದರೆ ಧನಿಕರೇ, ನಿಮಗೆ ಧಿಕ್ಕಾರ! ನೀವು ಸುಖಜೀವನವನ್ನು ಅನುಭವಿಸಿ ಆಗಿದೆ. ಈಗ ತಿಂದು ತೃಪ್ತಿಯಾಗಿರುವವರೇ, ನಿಮಗೆ ಧಿಕ್ಕಾರ! ನೀವು ಹಸಿದು ಬಳಲುವಿರಿ. ಈಗ ನಕ್ಕು ನಲಿದಾಡುವವರೇ, ನಿಮಗೆ ಧಿಕ್ಕಾರ! ನೀವು ದುಃಖಿಸಿ ಗೋಳಾಡುವಿರಿ. ಜನರೆಲ್ಲರಿಂದ ಹೊಗಳಿಸಿಕೊಳ್ಳುವಾಗ ನಿಮಗೆ ಧಿಕ್ಕಾರ! ಕಪಟ ಪ್ರವಾದಿಗಳೂ ಈ ಜನರ ಪೂರ್ವಜರಿಂದ ಹೀಗೆಯೇ ಹೊಗಳಿಸಿಕೊಂಡಿದ್ದರು.

16.02.2019 - ನಿಮ್ಮಲ್ಲಿ ಎಷ್ಟು ರೊಟ್ಟಿಗಳಿವೆ?

ಮೊದಲನೇ ವಾಚನ: ಆದಿಕಾಂಡ 3:9-24

ಸರ್ವೇಶ್ವರನಾದ ದೇವರು, "ಎಲ್ಲಿರುತ್ತೀಯಾ?" ಎಂದು ಆದಾಮನನ್ನು ಕೂಗಿ ಕೇಳಿದರು. ಅದಕ್ಕೆ ಅವನು, "ತಾವು ತೋಟದಲ್ಲಿ ಸಂಚರಿಸುವ ಸಪ್ಪಳವು ಕೇಳಿಸಿತು; ಬೆತ್ತಲೆಯಾಗಿದ್ದೇನಲ್ಲಾ ಎಂದು ಹೆದರಿ ಅವಿತುಕೊಂಡೆ," ಎಂದನು. "ನೀನು ಬೆತ್ತಲೆಯಾಗಿರುತ್ತಿಯೆಂದು ನಿನಗೆ ತಿಳಿಸಿದವರು ಯಾರು?" ಎಂದು ಕೇಳಿದರು. ಅದಕ್ಕೆ ಆದಾಮನು, "ನನ್ನ ಜೊತೆಯಲ್ಲಿ ಇರಲು ತಾವು ಕೊಟ್ಟ ಮಹಿಳೆ ಆ ಮರದ ಹಣ್ಣನ್ನು ನನಗೆ ಕೊಟ್ಟಳು; ನಾನು ತಿಂದೆ," ಎಂದನು. ಸರ್ವೇಶ್ವರನಾದ ದೇವರು ಈ ಮಹಿಳೆಯನ್ನು, "ಇದೇನು ನೀನು ಮಾಡಿದ್ದು?" ಎಂದು ಕೇಳಲು ಆಕೆ, "ಸರ್ಪವು ನನ್ನನ್ನು ವಂಚಿಸಿ ತಿನ್ನುವಂತೆ ಮಾಡಿತು. ಎಂದು ಉತ್ತರ ಕೊಟ್ಟಳು. ಆಗ ಸರ್ವೇಶ್ವರನಾದ ದೇವರು ಇಂತೆಂದರು ಸರ್ಪಕ್ಕೆ: "ಈ ಪರಿಯ ಕೃತ್ಯವನ್ನು ನೀನೆಸಗಿದುದರಿಂದ ಶಾಪಗ್ರಸ್ತನಾದೆ ಎಲ್ಲ ಪಶು ಪ್ರಾಣಿಗಳಿಗಿಂತ; ಹರಿದಾಡುವೆ ಹೊಟ್ಟೆಯ ಮೇಲೆ ಇಂದಿನಿಂದ ತಿನ್ನುವೆ ಮಣ್ಣನ್ನೆ ಜೀವಮಾನ ಪರಿಯಂತ. ಹಗೆತನವಿರಿಸುವೆನು ನಿನಗೂ ಈ ಮಹಿಳೆಗೂ ನಿನ್ನ ಸಂತಾನಕ್ಕೂ ಇವಳ ಸಂತಾನಕ್ಕೂ. ಜಜ್ಜುವುದಿವಳ ಸಂತಾನ ನಿನ್ನ ತಲೆಯನ್ನು ಕಚ್ಚುವೆ ನೀನಾ ಸಂತಾನದ ಹಿಮ್ಮಡಿಯನ್ನು." ಬಳಿಕ ಆ ಮಹಿಳೆಗೆ: "ಹೆಚ್ಚಿಸುವೆನು ಪ್ರಸವ ಕಾಲದ ನಿನ್ನ ವೇದನೆಯನ್ನು. ಹೆರುವೆ ನೀನು ಸಂಕಷ್ಟದಿಂದಲೇ ಮಕ್ಕಳನ್ನು. ಆದರೂ ನಿನಗಿರುವುದು ಗಂಡನ ಬಯಕೆ ಒಳಗಾಗುವೆ ನೀನು ಆತನ ಒಡೆತನಕ್ಕೆ" ಆನಂತರ ಆದಾಮನಿಗೆ: "ತಿನ್ನಬಾರದೆಂದು ನಾ ವಿಧಿಸಿದ ಮರದ ಹಣ್ಣನ್ನು ತಂದೆ ನೀನು, ಕೇಳಿ ನಿನ್ನಾ ಮಡದಿಯ ಮಾತನ್ನು. ಇದಕಾರಣ ಹಾಕಿರವೆನು ಶಾಪ ಹೊಲ ನೆಲಕ್ಕೆ ದುಡಿವೆ ನೀನು ಜೀವಮಾನವಿಡೀ ಅದರ ಕೃಷಿಗೆ. ಬೆಳಸುವುದದು ಅತುಳ ಕಳೆಯನ್ನು, ಮುಳ್ಳು ಗಿಡಗಳನ್ನು ತಿನ್ನಬೇಕಾಗುವುದು ನೀನು ಬೈಲಿಗೆ ಬೆಳೆಯನ್ನು ನೀನುತ್ಪತ್ತಿಯಾದ ಮಣ್ಣಿಗೆ ಮರಳಿ ಸೇರುವ ತನಕ ಗಳಿಸಬೇಕು ಕಳವಳವನ್ನು ನೆತ್ತಿ ಬೆವರಿಡುತ. ಮಣ್ಣಿನಿಂದಲೇ ಬಂದವನು ನೀನು ಮರಳಿ ಮಣ್ಣಿಗೆ ಸೇರತಕ್ಕವನು." ಆದಾಮನು ತನ್ನ ಹೆಂಡತಿಗೆ "ಹವ್ವ" ಎಂದು ಹೆಸರಿಟ್ಟನು. ಏಕೆಂದರೆ ಮಾನವ ಕುಲಕ್ಕೆ ಮೂಲ ಮಾತೆ ಆಕೆ. ಸರ್ವೇಶ್ವರನಾದ ದೇವರು, "ಮನುಷ್ಯನು ಈಗ ನಮ್ಮಲ್ಲಿ ಒಬ್ಬರಂತೆ ಒಳಿತು - ಕೆಡುಕುಗಳ ಜ್ಞಾನವನ್ನು ಪಡೆದುಬಿಟ್ಟಿದ್ದಾನೆ. ಇನ್ನು ಅಮರ ಜೀವಿಯಾಗಲು ಜೀವ ವೃಕ್ಷದ ಹಣ್ಣಿಗೆ ಕೈ ಚಾಚಿ ಬಿಡಬಾರದು," ಎಂದುಕೊಂಡರು. ಅವನು ಉತ್ಪತ್ತಿಯಾದ ಭೂಮಿಯನ್ನೇ ವ್ಯವಸಾಯ ಮಾಡಲೆಂದು ಏದೆನ್ ತೋಟದಿಂದ ಹೊರಡಿಸಿ ಬಿಟ್ಟರು. ಅದಲ್ಲದೆ, ಜೀವ ವೃಕ್ಷಕ್ಕೆ ಹೋಗುವ ದಾರಿಯನ್ನು ಕಾಯುವುದಕ್ಕಾಗಿ ಆ ವನದ ಪೂರ್ವದಿಕ್ಕಿನಲ್ಲೆ 'ಕೆರೂಬಿ'ಯರನ್ನೂ ಪ್ರಜ್ವಲಿಸುತ್ತಾ ಎಲ್ಲ ಕಡೆ ಸುತ್ತುವ ಕತ್ತಿಯನ್ನೂ ಇರಿಸಿದರು.

ಕೀರ್ತನೆ: 90:2, 3-4, 5-6, 12-13

ಶ್ಲೋಕ: ಪ್ರಭೂ, ತಲತಲಾಂತರಕೆ ಶ್ರೀನಿವಾಸ ನೀನೆಮಗೆ

ಶುಭಸಂದೇಶ: ಮಾರ್ಕ 8:1-10


ಜನರು ಪುನಃ ದೊಡ್ಡ ಸಂಖ್ಯೆಯಲ್ಲಿ ಬಂದು ನೆರೆದಿದ್ದರು. ಊಟಮಾಡಲು ಅವರಲ್ಲಿ ಅಹಾರವಿರಲಿಲ್ಲ. ಆಗ ಯೇಸುಸ್ವಾಮಿ ಶಿಷ್ಯರನ್ನು ಕರೆದು, "ಈ ಜನರು ಕಳೆದ ಮೂರು ದಿನಗಳಿಂದಲೂ ನನ್ನ ಬಳಿ ಇದ್ಧರೆ: ಊಟಕ್ಕೆ ಇವರಲ್ಲಿ ಏನೂ ಇಲ್ಲ. ಇವರನ್ನು ಕಂಡಾಗ ನನ್ನ ಹೃದಯ ಕರಗುತ್ತದೆ. ಬರೀ ಹೊಟ್ಟೆಯಲ್ಲಿ ಮನೆಗೆ ಕಳುಹಿಸಿದರೆ ದಾರಿಯಲ್ಲಿ ಬಳಲಿ ಬಿದ್ದಾರು. ಕೆಲವರಂತೂ ಬಹು ದೂರದಿಂದ ಬಂದಿದ್ದಾರೆ," ಎಂದರು. ಅದಕ್ಕೆ ಶಿಷ್ಯರು, "ಇಷ್ಟು ದೊಡ್ಡ ಗುಂಪಿಗೆ ಆಗುವಷ್ಟು ರೊಟ್ಟಿಯನ್ನು ಈ ಅಡವಿಯಲ್ಲಿ ನಾವು ತರುವುದಾದರೂ ಎಲ್ಲಿಂದ?" ಎಂದು ಮರುನುಡಿದರು. ಯೇಸು, "ನಿಮ್ಮಲ್ಲಿ ಎಷ್ಟು ರೊಟ್ಟಿಗಳಿವೆ?" ಎಂದು ಕೇಳಲು ಅವರು, "ಏಳು ಇವೆ," ಎಂದರು. ಯೇಸು ಜನರ ಗುಂಪಿಗೆ ನೆಲದ ಮೇಲೆ ಕುಳಿತುಕೊಳ್ಳುವಂತೆ ಆಜ್ಞಾಪಿಸಿದರು. ಆನಂತರ ಆ ಏಳು ರೊಟ್ಟಿಯನ್ನು ತೆಗೆದುಕೊಂಡು ದೇವರಿಗೆ ಸ್ತೋತ್ರ ಸಲ್ಲಿಸಿ, ಅವುಗಳನ್ನು ಮುರಿದು, ಜನರ ಗುಂಪಿಗೆ ಬಡಿಸಲು ಶಿಷ್ಯರಿಗೆ ಕೊಟ್ಟರು. ಅವರು ಬಡಿಸಿದರು. ಅವರಲ್ಲಿ ಕೆಲವು ಸಣ್ಣ ಮೀನುಗಳಿದ್ದವು. ಯೇಸು ಅವುಗಳಿಗಾಗಿಯೂ ದೇವ ಸ್ತುತಿಮಾಡಿ ಅವುಗಳನ್ನು ಹಂಚಬೇಕೆಂದು ಆಜ್ಞಾಪಿಸಿದರು. ಜನರೆಲ್ಲರೂ ಉಂಡು ತೃಪ್ತರಾದರು. ಉಳಿದ ರೊಟ್ಟಿಯ ತುಂಡುಗಳನ್ನು ಒಟ್ಟುಗೂಡಿಸಿದಾಗ ಅವು ಏಳು ಕುಕ್ಕೆಗಳ ತುಂಬ ಆದವು. ಊಟ ಮಾಡಿದವರ ಸಂಖ್ಯೆ ನಾಲ್ಕು ಸಾವಿರ. ಊಟವಾದ ಬಳಿಕ ಯೇಸು ಜನರನ್ನು ಕಳುಹಿಸಿಕೊಟ್ಟು, ವಿಳಂಬ ಮಾಡದೆ ದೋಣಿಯನ್ನು ಹತ್ತಿ , ಶಿಷ್ಯರೊಡನೆ ದಲ್ಮನೂಥ ಎಂಬ ಪ್ರದೇಶಕ್ಕೆ ಹೋದರು.

 ಮನಸ್ಸಿಗೊಂದಿಷ್ಟು :  ಇಡೀ ಲೋಕವನ್ನೇ ಪಡೆದಿದ್ದರೂ  ದೇವರ ಮಾತಿಗೆ ವಿರುದ್ಧವಾಗಿ ನಡೆದು ಆದಾಂ ಏವರು ದೈವ ಕೃಪೆಯ  ಅಗಾಧತೆಯಿಂದ ಪತನದತ್ತ ಹೆಜ್ಜೆ ಹಾಕುತ್ತಾರೆ.  ಇನ್ನೂ, ಊಟ ಒದಗಿಸಲು ಶಿಷ್ಯರಿಗೆ ಕೊರತೆ ಕಂಡರೆ, ಯೇಸು "ನಿಮ್ಮಲ್ಲಿ ಎಷ್ಟು ರೊಟ್ಟಿಗಳಿವೆ? ಎಂಬ  ಪ್ರಶ್ನೆಯಿಂದ ಆ ಕೊರತೆಯನ್ನು ನೀಗಿಸುತ್ತಾರೆ. ಅಲ್ಪತೆಯಿಂದ ಆಗಾಧತೆಯತ್ತ, ಕೊರತೆಯಿಂದ ಕೃಪೆಯೆಡೆಗಿನ ನಮ್ಮ ಪಯಣಕ್ಕೆ ಇದು ಸ್ಫೂರ್ತಿಯಾಗಲಿ. 

ಪ್ರಶ್ನೆ: ನಮ್ಮ ಪ್ರಸ್ತುತ ಜೀವನ ಆಗಾಧತೆಯಿಂದ ಪತನದತ್ತವೇ? ಅಲ್ಪತೆಯಿಂದ  ಅಗಾಧತೆಯೆಡೆಗೆಯೇ?

15.02.2019 - "ಎಪ್ಪಥಾ " ಎಂದರೆ 'ತೆರೆಯಲಿ'

ಮೊದಲನೇ ವಾಚನ: ಆದಿಕಾಂಡ 3:1-8

ಸರ್ವೇಶ್ವರನಾದ ದೇವರು ಉಂಟುಮಾಡಿದ ಭೂಜಂತುಗಳಲ್ಲಿ ಅತಿಯುಕ್ತಿ ಉಳ್ಳದ್ದು ಸರ್ಪ, ಅದು ಮಹಿಳೆಯ ಬಳಿಗೆ ಬಂದು, "ಏನಮ್ಮಾ ತೋಟದಲ್ಲಿರುವ ಯಾವ ಮರದ ಹಣ್ಣನ್ನೂ ತಿನ್ನಕೂಡದು ಎಂದು ದೇವರು ಆಜ್ಞೆ ಮಾಡಿರುವುದು ನಿಜವೋ"? ಎಂದು ಕೇಳಿತು. ಅದಕ್ಕೆ ಅ ಮಹಿಳೆ, "ತೋಟದಲ್ಲಿರುವ ಮರಗಳ ಹಣ್ಣುಗಳನ್ನು ನಾವು ತಿನ್ನಬಹುದು; ಆದರೆ ಅದರ ನಡುವೆಯಿರುವ ಈ ಮರದ ಹಣ್ಣನ್ನು ಮಾತ್ರ ತಿನ್ನಲೂ ಕೂಡದು, ಮುಟ್ಟಲೂ ಕೂಡದು. "ತಿಂದರೆ ಸಾಯುವಿರಿ' ಎಂದು ದೇವರು ಹೇಳಿದ್ದಾರೆ" ಎಂದು ಉತ್ತರ ಕೊಟ್ಟಳು. ಆಗ ಆ ಸರ್ಪ, "ಆ ಮಾತು ನಿಜವಲ್ಲ, ನೀವು ಸಾಯುವುದು ಸುಳ್ಳು ಇದರ ಹಣ್ಣನ್ನು ತಿಂದ ಕೂಡಲೆ ನಿಮ್ಮ ಕಣ್ಣುಗಳು ತೆರೆಯುವುವು. ನೀವು ದೇವರಂತೆ ಆಗಿ ಒಳಿತು - ಕೆಡುಕುಗಳನ್ನರಿತ ಜ್ಞಾನಿಗಳು ಆಗಿಬಿಡುವಿರಿ. ಇದು ದೇವರಿಗೆ ಚೆನ್ನಾಗಿ ಗೊತ್ತುಂಟು," ಎಂದಿತು. ಆಗ ಆ ಮಹಿಳೆ, "ಈ ಮರದ ಹಣ್ಣು ಊಟಕ್ಕೆ ಎಷ್ಟು ಚೆನ್ನಾಗಿದೆ, ನೋಟಕ್ಕೆ ಎಷ್ಟು ರಮಣೀಯವಾಗಿದೆ, ಜ್ಞಾನಾರ್ಜನೆಗೆ ಎಷ್ಟು ಆಕರ್ಷಣೀಯವಾಗಿದೆ" ಎಂದು ತಿಳಿದು, ಅದನ್ನು ತೆಗೆದುಕೊಂಡು ತಿಂದಳು; ಸಂಗಡವಿದ್ದ ಗಂಡನಿಗೂ ಕೊಟ್ಟಳು; ಅವನೂ ತಿಂದನು. ಕೂಡಲೆ ಅವರಿಬ್ಬರ ಕಣ್ಣುಗಳು ತೆರೆದವು. ತಾವು ಬೆತ್ತೆಲೆ ಆಗಿದ್ದೇವೆಂದು ತಿಳಿದು ಅವರು ಅಂಜೂರದ ಎಲೆಗಳನ್ನು ಹೊಲಿದು ಉಟ್ಟುಕೊಂಡರು. ಅಂದು, ಸಂಜೆಯ ತಂಗಾಳಿಯಲ್ಲಿ, ಸರ್ವೇಶ್ವರನಾದ ದೇವರು ತೋಟದೊಳಗೆ ಸಂಚರಿಸುವ ಸಪ್ಪಳವು ಕೇಳಿಸಿತು. ಅವರಿಗೆ ಕಾಣಿಸಿಕೊಳ್ಳಬಾರದೆಂದು ಆದಾಮನೂ ಹವ್ವಳೂ ಹಿಂದೆ ಅವಿತುಕೊಂಡರು.

ಕೀರ್ತನೆ: 32:1-2, 5, 6-7

ಶ್ಲೋಕ: ಯಾರ ದ್ರೋಹ ವಿಮೋಚನೆಯಾಗಿದೆಯೋ ಅವರೇ ಧನ್ಯರು

ಶುಭಸಂದೇಶ: ಮಾರ್ಕ 7:31-37

ಯೇಸುಸ್ವಾಮಿ ಆ ಸ್ಥಳವನ್ನು ಬಿಟ್ಟು ಸಿದೋನಿನ ಮಾರ್ಗವಾಗಿ ದೆಕಪೊಲಿ ಪ್ರದೇಶವನ್ನು ಹಾದು ಗಲಿಲೇಯ ಸರೋವರದ ತೀರಕ್ಕೆ ಹಿಂದಿರುಗಿದರು ಮಾತನಾಡಲಾಗದ ಒಬ್ಬ ಕಿವುಡನನ್ನು ಜನರು ಅವರ ಬಳಿಗೆ ಕರೆತಂದರು. ಅವನ ಮೇಲೆ ಕೈಗಳನ್ನಿಡಬೇಕೆಂದು ಬೇಡಿಕೊಂಡರು. ಯೇಸು ಅವನನ್ನು ಜನರ ಗುಂಪಿನಿಂದ ಪ್ರತ್ಯೇಕವಾಗಿ ಕರೆದೊಯ್ದು, ತಮ್ಮ ಬೆರಳುಗಳನ್ನು ಅವನ ಕಿವಿಯೊಳಗೆ ಇಟ್ಟರು. ತಮ್ಮ ಉಗುಳಿನಿಂದ ಅವನ ನಾಲಿಗೆಯನ್ನು ಮುಟ್ಟಿದರು. ಬಳಿಕ ಸ್ವರ್ಗದತ್ತ ಕಣ್ಣೆತ್ತಿ ನೋಡಿ, ದೀರ್ಘವಾಗಿ ಉಸಿರೆಳೆದು, "ಎಪ್ಪಥಾ " ಎಂದರೆ 'ತೆರೆಯಲಿ'  ಎಂದರು. ತಕ್ಷಣವೇ ಅವನ ಕಿವಿಗಳು ತೆರೆದವು; ನಾಲಿಗೆಯ ಬಿಗಿ ಸಡಿಲಗೊಂಡಿತು; ಅವನು ಸರಾಗವಾಗಿ ಮಾತನಾಡತೊಡಗಿದನು. ಇದನ್ನು ಯಾರಿಗೂ ಹೇಳಕೂಡದೆಂದು ಯೇಸು ಜನರಿಗೆ ಕಟ್ಟಪ್ಪಣೆ ಮಾಡಿದರು. ಆದರೆ ಎಷ್ಟು ಹೇಳಿದರೂ ಕೇಳದೆ ಅವರು ಮತ್ತಷ್ಟು ಆಸಕ್ತಿಯಿಂದ ಈ ಕಾರ್ಯವನ್ನು ಪ್ರಚಾರ ಮಾಡಿದರು. ಎಲ್ಲರೂ ಆಶ್ಚರ್ಯಭರಿತರಾಗಿ, "ಇವರು ಎಲ್ಲಾ ಕಾರ್ಯಗಳನ್ನು ಚೆನ್ನಾಗಿ  ಮಾಡುತ್ತಾರೆ: ಕಿವುಡರು ಕೇಳುವಂತೆಯೂ ಮೂಕರು ಮಾತನಾಡುವಂತೆಯೂ ಮಾಡುತ್ತಾರಲ್ಲಾ!" ಎಂದುಕೊಳ್ಳುತ್ತಿದ್ದರು.

ಮನಸಿಗೊಂದಿಷ್ಟು :  ಇಂದಿನ ಶುಭಸಂದೇಶದಲ್ಲಿ ಮಾತನಾಡಲಾಗದ ಕಿವುಡನಂಥ ಪರಿಸ್ಥಿತಿ ನಮ್ಮಲ್ಲಿ ಎಷ್ಟೋ ಜನರದು. ದೈವ ವಾಕ್ಯಗಳಿಗೆ ಕಿವುಡಾಗಿ, ದೈವ ವಾಕ್ಯವನ್ನು ಯಾವುದೇ ರೀತಿಯಲ್ಲಿ ಸಾರದ ಮೂಕರಂತ ಬಾಳು ನಮ್ಮದು. ಅವನನ್ನಾದರೂ ಜನರು ಯೇಸುವಿನ ಬಳಿಗೆ ಕರೆತಂದರು. ಆದರೆ ನಾವು ನಮ್ಮ ಪಾಪಗಳಿಂದ ದೂರ ದೂರ ಹೋಗುತ್ತಲೇ ಇದ್ದೇವೆ . 

ಪ್ರಶ್ನೆ : ಯೇಸು 'ಎಪ್ಪಾಥಾ' ಎನ್ನಲು ತುದಿಗಾಲಿನಲ್ಲಿದ್ದಾರೆ, ನಾವು ಗುಣಮುಖರಾಗಲು ಸಿದ್ಧವಿದ್ದೇವೆಯೇ?

14.02.2019 - ಅವರಿಬ್ಬರೂ ಒಂದೇ ಒಡಲಾಗಿ ಬಾಳುವರು

ಮೊದಲನೇ ವಾಚನ: ಆದಿಕಾಂಡ 2:18-25

ಆನಂತರ ದೇವರಾದ ಸರ್ವೇಶ್ವರ, "ಮನುಷ್ಯನು ಒಂಟಿಯಾಗಿರುವುದು ಒಳ್ಳೆಯದಲ್ಲ, ಅವನಿಗೆ ಸರಿಬೀಳುವ ಸಹಕಾರಿಯನ್ನು ಸೃಷ್ಟಿ ಮಾಡುವೆನು," ಎಂದರು. ಎಲ್ಲ ಭೂಜಂತುಗಳನ್ನೂ ಆಕಾಶದ ಪಕ್ಷಿಗಳನ್ನೂ ಮಣ್ಣಿನಿಂದ ನಿರ್ಮಿಸಿದ ಅವರು, ಮನುಷ್ಯನು ಇವುಗಳಿಗೆ ಏನೇನು ಹೆಸರಿಡುವನೋ ನೋಡೋಣವೆಂದು ಅವನ ಬಳಿಗೆ ಅವುಗಳನ್ನು ಬರಮಾಡಿದರು ಆ ಮನುಷ್ಯನು ಒಂದೊಂದು ಪ್ರಾಣಿಗೆ ಯಾವ ಯಾವ ಹೆಸರಿಟ್ಟನೋ ಅದೇ ಅವುಗಳಿಗೆ ಹೆನರು ಆಯಿತು. ಹೀಗೆ ಮನುಷ್ಯನು ಎಲ್ಲ ಸಾಕು ಪ್ರಾಣಿಗಳಿಗೂ ಆಕಾಶದ ಪಕ್ಷಿಗಳಿಗೂ ಕಾಡು ಮೃಗಗಳಿಗೂ ಹೆಸರಿಟ್ಟನು; ಆದರೆ ಅವನಿಗೆ ಸರಿಬೀಳುವ ಜೊತೆಗಾತಿ ಅವುಗಳಲ್ಲಿ ಕಾಣಿಸಲಿಲ್ಲ. ಹೀಗಿರುವಲ್ಲಿ ದೇವರಾದ ಸರ್ವೇಶ್ವರ ಆ ಮನುಷ್ಯನಿಗೆ ಗಾಢನಿದ್ರೆಯನ್ನು ಬರಮಾಡಿದರು. ಅವನು ನಿದ್ರಿಸುತ್ತಿರುವಾಗ ಅವನ ಪಕ್ಕೆಯ ಎಲುಬುಗಳಲ್ಲಿ ಒಂದನ್ನು ತೆಗೆದುಕೊಂಡು ಅದರ ಸ್ಥಳವನ್ನು ಮಾಂಸದಿಂದ ಮುಚ್ಚಿದರು. ಆ ಎಲುಬನ್ನು ಮಹಿಳೆಯನ್ನಾಗಿ ಮಾಡಿ ಆಕೆಯನ್ನು ಅವನ ಬಳಿಗೆ ಬರಮಾಡಿದರು. ಅವನು ಆಕೆಯನ್ನು ನೋಡಿ ಹೀಗೆಂದನು: 'ಸರಿ, ನನಗೀಗ ಇವಳು ನನ್ನೆಲುಬಿನ ಎಲುಬು, ನನ್ನೊಡಲಿನ ಒಡಲು; ನರನಿಂದ ಉತ್ಪತ್ತಿಯಾದಿವಳನ್ನು ನಾರಿಯೆಂದೇ ಕರೆವರು." ಈ ಕಾರಣ, ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು; ಅವರಿಬ್ಬರೂ ಒಂದೇ ಒಡಲಾಗಿ ಬಾಳುವರು. ಆ ಸ್ತ್ರಿ ಪುರುಷರಿಬ್ಬರೂ ಬೆತ್ತಲೆ ಆಗಿದ್ದರೂ ನಾಚಿಕೊಳ್ಳಲಿಲ್ಲ.

ಕೀರ್ತನೆ: 128:1-2, 3, 4-5

ಶ್ಲೋಕ: ಧನ್ಯನು ಪ್ರಭುವಿನಲಿ ಭಯಭಕ್ತಿಯುಳ್ಳವನು

ಶುಭಸಂದೇಶ: ಮಾರ್ಕ 7:24-30

ಯೇಸುಸ್ವಾಮಿ ಅಲ್ಲಿಂದ ಹೊರಟು ಟೈರ್ ಹಾಗೂ ಸಿದೋನ್ ಪಟ್ಟಣಗಳ ಸಮೀಪವಿದ್ದ ಪ್ರದೇಶಕ್ಕೆ ಹೋಗಿ ಒಂದು ಮನೆಯಲ್ಲಿ ಇಳಿದುಕೊಂಡರು. ತಾವು ಜನರ ಕಣ್ಣಿಗೆ ಬೀಳಬಾರದೆಂಬುದು ಅವರ ಇಚ್ಛೆಯಾಗಿದ್ದರೂ ಅದು ಸಾಧ್ಯವಾಗಲಿಲ್ಲ. ಹೊರನಾಡಾದ ಸಿರಿಯ ದೇಶದ ಫೆನಿಷ್ಯ ಪ್ರಾಂತ್ಯಕ್ಕೆ ಸೇರಿದ ಗ್ರೀಕ್ ಮಹಿಳೆಯೊಬ್ಬಳು ಅವರ ವಿಷಯವನ್ನು ಕೇಳಿ, ಒಡನೆ ಅಲ್ಲಿಗೆ ಬಂದು ಅವರ ಪಾದಕ್ಕೆರಗಿದಳು ಆಕೆಯ ಚಿಕ್ಕಮಗಳಿಗೆ ದೆವ್ವ ಹಿಡಿದಿತ್ತು. ತನ್ನ ಮಗಳಿಂದ ಪಿಶಾಚಿಯನ್ನು ಹೊರಗಟ್ಟಬೇಕಂದು ಆಕೆ ಯೆಸುವನ್ನು ಬೇಡಿಕೊಂಡಳು. ಆದರೆ ಯೇಸು ಆಕೆಗೆ, "ಮೊದಲು ಮಕ್ಕಳು ತಿಂದು ತೃಪ್ತಿಪಡೆಯಲಿ, ಮಕ್ಕಳ ಅಹಾರವನ್ನು ನಾಯಿಗಳಿಗೆ ಎಸೆಯುವುದು ಸರಯಲ್ಲ," ಎಂದರು. ಅದಕ್ಕೆ ಆಕೆ, "ಅದು ನಿಜ ಸ್ವಾಮೀ; ಆದರೂ ಮಕ್ಕಳು ತಿಂದುಬಿಟ್ಟ ಚೂರುಪಾರುಗಳನ್ನು ಮೇಜಿನ ಕೆಳಗಿರುವ ನಾಯಿಗಳು ತಿನ್ನುತ್ತವಲ್ಲವೆ? ಎಂದಳು. ಆಕೆಯ ಮಾತುಗಳನ್ನು ಕೇಳಿ ಯೇಸು, "ಚೆನ್ನಾಗಿ ಹೇಳಿದೆ, ನಿಶ್ಚಿಂತೆಯಿಂದ ಮನೆಗೆ ಹಿಂದಿರುಗು. ದೆವ್ವ ನಿನ್ನ ಮಗಳನ್ನು ಬಿಟ್ಟು ತೊಲಗಿದೆ," ಎಂದರು. ಆಕೆ ಮನೆಗೆ ಹೋದಾಗ, ಮಗಳು ಹಾಸಿಗೆಯ ಮೇಲೆ ಸುಖವಾಗಿ ಮಲಗಿರುವುದನ್ನು ಕಂಡಳು. ದೆವ್ವ ಅವಳನ್ನು ಬಿಟ್ಟುಹೋಗಿತ್ತು.

ಮನಸಿಗೊಂದಿಷ್ಟು :  ಇಂದಿನ ಶುಭ ಸಂದೇಶದಲ್ಲಿನ ಮಹಿಳೆ ಅಂದಿನ ಅನ್ಯ ಧರ್ಮಿಯ ವಿಶ್ವಾಸಿಗಳ ಪ್ರತೀಕವಾಗಿ ನಿಲ್ಲುತ್ತಾಳೆ. ಜೀವದಾಯಕ ರೊಟ್ಟಿ ಬಳಿಯಲ್ಲೇ ಇದ್ದರೂ  ಕಾಣದಂತಿದ್ದ ದೇವರ ಸ್ವಂತ ಜನರಾದ ಯೆಹೂದ್ಯರ ನಡುವೆ ಚೂರುಪಾರಲ್ಲೇ ಯೇಸುವಿನಿಂದ ಭಾಗ್ಯ ಪಡೆದ ಆ ಮಹಿಳೆ ನಮಗೆ ಆದರ್ಶವಾಗತ್ತಾಳೆ. 

ಪ್ರಶ್ನೆ : ನಮ್ಮದು ವಿಶ್ವಾಸದಿಂದ ಮಗಳನ್ನು ಗುಣಪಡಿಸಿಕೊಂಡ ಮಹಿಳೆಯ ಮನಸೇ ಅಥವಾ  ನಿರಾಸಕ್ತಿಯ ಯಹೂದ್ಯರದೇ?    

13.02.2019 - ಅಂತರಂಗದಿಂದ ಹೊರ ಹೊಮ್ಮುವ ಯೋಚನೆಗಳು ಅವನನ್ನು ಕಲುಷಿತಗೊಳಿಸುತ್ತವೆ.

ಮೊದಲನೇ ವಾಚನ: ಆದಿಕಾಂಡ 2:4-9, 15-17


ಇತಿ, ಪರಲೋಕ  - ಭೋಲೋಕಗಳ ನಿರ್ಮಾಣ ಚರಿತ್ರೆ ದೇವರಾದ ಸರ್ವೇಶ್ವರ ಸ್ವಾಮಿ ಪರಲೋಕ - ಭೂಲೋಕಗಳನ್ನು ಸೃಷ್ಟಿ ಮಾಡಿದಾಗ ಯಾವ ಗಿಡಗಳೂ ಭೂಮಿಯಲ್ಲಿ ಇರಲಿಲ್ಲ ಯಾವ ಬೀಜವೂ ಮೊಳೆತಿರಲಿಲ್ಲ. ಏಕೆಂದರೆ ದೇವರಾದ ಸರ್ವೇಶ್ವರ ಭೂಮಿಯ ಮೇಲೆ ಮಳೆಯನ್ನು ಸುರಿಸಿರಲಿಲ್ಲ ಭೂಮಿಯನ್ನು ವ್ಯವಸಾಯ ಮಾಡಲು ಮನುಷ್ಯನೂ ಇರಲಿಲ್ಲ. ಆದರೂ ಭೂಮಿಯಿಂದ ನೀರು ಉಕ್ಕಿಬಂದು ನೆಲಕ್ಕೆ ನೀರೆರೆಯುತ್ತಿತ್ತು. ಹೀಗಿರಲು, ದೇವರಾದ ಸರ್ವೇಶ್ವರ ನೆಲದ ಮಣ್ಣಿನಿಂದ ಮನುಷ್ಯನನ್ನು ರೂಪಿಸಿ ಅವನ ಮೂಗಿನಲ್ಲಿ ಜೀವಶ್ವಾಸವನ್ನು ಊದಿದರು. ಆಗ ಮನುಷ್ಯನು ಜೀವಾತ್ಮನಾದನು. ಇದಲ್ಲದೆ, ದೇವರಾದ ಸರ್ವೇಶ್ವರ ಪೂರ್ವ ದಿಕ್ಕಿನಲ್ಲಿರುವ ಏದೆನ್ ಪ್ರದೇಶದಲ್ಲಿ ಒಂದು ಉದ್ಯಾನವನವನ್ನು ಮಾಡಿ ತಾವು ರೂಪಿಸಿದ ಮನುಷ್ಯನನ್ನು ಅದರಲ್ಲಿ  ಇರಿಸಿದರು. ನೋಟಕ್ಕೆ ರಮ್ಯವೂ ಊಟಕ್ಕೆ ರುಚಿಕರವೂ ಆದ ನಾನಾ ತರದ ಮರಗಳನ್ನು ದೇವರಾದ ಸರ್ವೇಶ್ವರ ಅಲ್ಲಿ ಬೆಳೆಯ ಮಾಡಿದರು. ಆ ವನದ ಮಧ್ಯದಲ್ಲಿ ಜೀವದಾಯಕ ವೃಕ್ಷವನ್ನು ಹಾಗೂ ಒಳಿತು - ಕೆಡಕುಗಳ ಅರಿವನ್ನು ಮೂಡಿಸುವ ವೃಕ್ಷವನ್ನು ಬೆಳೆಯಿಸಿದರು. ದೇವರಾದ ಸರ್ವೇಶ್ವರ ಆ ಮನುಷ್ಯನನ್ನು ಕರೆದುಕೊಂಡು ಹೋಗಿ ಏದೆನ್ ವನವನ್ನು ಕೃಷಿ ಮಾಡುವುದಕ್ಕೂ ಕಾಯುವುದಕ್ಕೂ ಅದರಲ್ಲಿ ಬಿಟ್ಟರು.ಇದಲ್ಲದೆ ದೇವರಾದ ಸರ್ವೇಶ್ವರ ಆ ಮನು‌ಷ್ಯನಿಗೆ "ನೀನು ಈ ತೋಟದಲ್ಲಿರುವ ಎಲ್ಲ ಮರದ ಹಣ್ಣುಗಳನ್ನು ಯಥೇಚ್ಛವಾಗಿ ತಿನ್ನಬಹುದು ಆದರೆ ಒಳಿತು - ಕೆಡುಕುಗಳ ಅರಿವನ್ನು ಹುಟ್ಟಿಸುವ ಮರದ ಹಣ್ಣನ್ನು ಮಾತ್ರ ತಿನ್ನಬಾರದು; ತಿಂದೆಯಾದರೆ, ಅದೇ ದಿನ ನೀನು ಸತ್ತು ಹೋಗುವೆ," ಎಂದು ವಿಧಿಸಿದರು.

ಕೀರ್ತನೆ: 104:1-2, 27-28, 29-30

ಶ್ಲೋಕ: ಭಜಿಸು ನನ್ನ ಮನವೇ, ಭಜಿಸು, ಪ್ರಭುವನ್ನು

ಶುಭಸಂದೇಶ: ಮಾರ್ಕ 7:14-23

ಆನಂತರ ಯೇಸುಸ್ವಾಮಿ ಜನರ ಗುಂಪನ್ನು ತಮ್ಮ ಬಳಿಗೆ ಕರೆದು, "ನಾನು ಹೇಳುವುದನ್ನು ನೀವೆಲ್ಲರೂ ಕೇಳಿ ಗ್ರಹಿಸಿಕೊಳ್ಳಿ; ಹೊರಗಿನಿಂದ ಮನುಷ್ಯನ ಒಳಗೆ ಹೋಗುವ ಯಾವುದೂ ಅವನನ್ನು ಕಲುಷಿತಗೊಳಿಸುವುದಿಲ್ಲ. ಮನುಷ್ಯನ ಅಂತರಂಗದಿಂದ ಹೊರಬರುವಂತಹುದೇ ಅವನನ್ನು ಕಲುಷಿತಗೊಳಿಸುತ್ತದೆ. (ಕೇಳುವುದಕ್ಕೆ ಕಿವಿಯುಳ್ಳವನು ಕೇಳಲಿ)" ಎಂದರು. ಯೇಸು ಜನರ ಗುಂಪನ್ನು ಬಿಟ್ಟು ಮನೆ ಸೇರಿದ ಬಳಿಕ ಶಿಷ್ಯರು, ಅವರ ಬಳಿಗೆ ಬಂದು ಆ ಸಾಮತಿಯ ಅರ್ಥವೇನೆಂದು ಕೇಳಿದರು. ಅದಕ್ಕೆ ಅವರು "ನೀವು ಕೂಡ ಮಂದಮತಿಗಳೋ? ನಿಮಗೂ ಇದು ಅರ್ಥವಾಗದೋ? ಹೊರಗಿನಿಂದ ಮನುಷ್ಯನ ಒಳಕ್ಕೆ ಹೋಗುವ ಯಾವುದೂ ಅವನನ್ನು ಕಲುಷಿತಗೊಳಿಸುವುದಿಲ್ಲ. ಅವನು ತಿಂದದ್ದು ಅವನ ಹೃದಯವನ್ನು ಹೊಕ್ಕದೆ, ಹೊಟ್ಟೆಯನ್ನು ಮಾತ್ರ ಸೇರಿ, ಬಳಿಕ ದೇಹದಿಂದ ವಿಸರ್ಜಿತವಾಗುತ್ತದೆ. ಆದರೆ ಮನುಷ್ಯನ ಅಂತರಂಗದಿಂದ ಹೊರ ಹೊಮ್ಮುವ ಯೋಚನೆಗಳು ಅವನನ್ನು ಕಲುಷಿತಗೊಳಿಸುತ್ತವೆ. ಮಾನವನ ಹೃದಯಾಂತರಾಳದಿಂದ ದುರಾಲೋಚನೆ, ಅನೈತಿಕತೆ, ಕಳ್ಳತನ, ಕೊಲೆ, ವ್ಯಭಿಚಾರ, ಲೋಭ, ಕೆಡಕುತನ, ಮೋಸ, ಭಂಡತನ, ಅಸೂಯೆ, ಅಪದೂರು, ಅಹಂಕಾರ, ಮೂರ್ಖತನ ಮೊದಲಾದವು ಹೊರಬರುತ್ತದೆ. ಈ ಎಲ್ಲಾ ಕೇಡುಗಳು ಮಾನವನ ಅಂತರಂಗದಿಂದಲೇ ಉದ್ಬವಿಸಿ ಅವನನ್ನು ಅಶುದ್ಧ ಮಾಡುತ್ತವೆ," ಎಂದರು.

ಮನಸಿಗೊಂದಿಷ್ಟು : ನಮ್ಮನ್ನು ಅಶುದ್ಧಗೊಳಿಸುವ ಕಲುಷಿತಗೊಳಿಸುವಂತ  ದೊಡ್ಡ ಪಟ್ಟಿಯನ್ನೇ ಯೇಸು ಇಲ್ಲಿ ನೀಡುತ್ತಾರೆ. ನಾವು ಕಳ್ಳರೇನ್ನಲ್ಲ, ಕೊಲೆಗಾರರಲ್ಲ, ವ್ಯಭಿಚಾರಿಗಳಂತೂ ಅಲ್ಲವೇ ಅಲ್ಲ, ಎಂದು ಸಮಾಧಾನ ಪಡುವಂತಿಲ್ಲ. ಭಂಡತನ, ಅಸೂಯೆ, ಅಹಂಕಾರಗಳೆಂಬ ಬಹಳ ಸಾಮಾನ್ಯವೆನಿಸುವಂತ ತಪ್ಪುಗಳನ್ನೂ ಸಹ ಗಂಭೀರ ಪಾಪಗಳೊಂದಿಗೇ ಸಮೀಕರಿಸುತ್ತಾರೆ. ಈ ಕಾರಣಗಳಿಂದಲೇ ಕ್ರೈಸ್ತ ಮೌಲ್ಯಗಳು ನಿಜಕ್ಕೂ ಬಹು ದೊಡ್ಡ, ಕಷ್ಟವಾದ ಮೌಲ್ಯಗಳೇ ಸರಿ.

ಪ್ರಶ್ನೆ: ನಮ್ಮ ಅಂತರಂಗದಿಂದಮೇಲಿನ ಕೆಡುಕಗಳ ಪಟ್ಟಿಯಲ್ಲಿ ಅದೆಷ್ಟು ಪ್ರತಿಕ್ಷಣ ಯಾವುದೇ ಅಳುಕಿಲ್ಲದೆ ಹೊರ ಬರುತ್ತಿವೆ?

12.02.2019 - ನರಕಲ್ಪಿತ ಕಟ್ಟಳೆಗಳನೆ ದೇವ ವಾಕ್ಯವೆಂದು ಉಪದೇಶಿಸುತ, ಈ ಜನರೆನಗೆ ಮಾಡುವ ಆರಾಧನೆ ವ್ಯರ್ಥ!

 ಮೊದಲನೇ ವಾಚನ: ಆದಿಕಾಂಡ 1:20-2:4


ಆಮೇಲೆ ದೇವರು, "ಹಲವಾರು ಜಲ ಜಂತುಗಳು ನೀರಿನಲ್ಲಿ ತಂಬಿಕೊಳ್ಳಲಿ, ಭೂಮಿ ಆಕಾಶಗಳ ನಡುವೆ ಪಕ್ಷಿಗಳು ಹಾರಾಡಲಿ," ಎಂದರು. ಈ ಪ್ರಕಾರ ದೇವರು ದೊಡ್ಡ ಜಲಚರಗಳನ್ನೂ ನೀರಿನಲ್ಲಿ ತುಂಬಿರುವ ನಾನಾ ವಿಧವಾದ ಜೀವಜಂತುಗಳನ್ನೂ ರೆಕ್ಕೆಗಳುಳ್ಳಸಕಲವಿಧವಾದ ಪಕ್ಷಿಗಳನ್ನೂ ಸೃಷ್ಟಿಮಾಡಿದರು. ದೇವರ ದೃಷ್ಟಿಗೆ ಅದೂ ಚೆನ್ನಾಗಿ ಕಂಡಿತು. ಅವುಗಳಿಗೆ ದೇವರು, "ನೀವು ಅಭಿವೃದ್ಧಿಯಾಗಿ ಹೆಚ್ಚಿರಿ; ಜಲಚರಗಳು ಸಮುದ್ರದ ನೀರಿನಲ್ಲಿ ತುಂಬಿಕೊಳ್ಳಲಿ, ಪಕ್ಷಿಗಳು ಭೂಮಿಯ ಮೇಲೆ ಹೆಚ್ಚಲಿ," ಎಂದುಹೇಳಿ ಆಶೀರ್ವದಿಸಿದರು. ಹೀಗೆ ಬೈಗೂ ಬೆಳಗೂ ಆಗಿ ಐದನೆಯ ದಿನ ಆಯಿತು. ಆ ಬಳಿಕ ದೇವರು, "ಭೂಮಿಯಿಂದ ಎಲ್ಲ ತರದ ಜೀವಜಂತುಗಳು ಸೃಷ್ಟಿಯಾಗಲಿ, ದೊಡ್ಡ - ಚಿಕ್ಕ ಸಾಕುಪ್ರಾಣಿಗಳೂ ಕಾಡು ಮೃಗಗಳೂ ಹುಟ್ಟಲಿ," ಎಂದರು. ಅಂತೆಯೇ ಆಯಿತು. ಎಲ್ಲ ತರದ ದೊಡ್ಡ - ಚಿಕ್ಕ ಕಾಡು ಮೃಗಗಳನ್ನೂ ಸಾಕುಪ್ರಾಣಿಗಳನ್ನೂ ನೆಲದ ಮೇಲೆ ಹರಿದಾಡುವ ಕ್ರಿಮಿಕೀಟಗಳನ್ನೂ ದೇವರು ಸೃಷ್ಟಿಮಾಡಿದರು. ಅವರ ನೋಟಕ್ಕೆ ಅದು ಚೆನ್ನಾಗಿ ಕಂಡಿತು ಅದಾದನಂತರ ದೇವರು, "ನಮ್ಮಂತೆಯೇ ಇರುವ ಹಾಗು ನಮ್ಮನ್ನು ಹೋಲುವ, ಮನುಷ್ಯರನ್ನು ಉಂಟುಮಾಡೋಣ, ಅವರು ಸಮುದ್ರದಲ್ಲಿರುವ ಮೀನುಗಳ ಮೇಲೆಯೂ ಅಂತರಿಕ್ಷದಲ್ಲಿ ಹಾರಾಡುವ ಪಕ್ಷಿಗಳ ಮೇಲೆಯೂ ದೊಡ್ಡ - ಚಿಕ್ಕ ಸಾಕುಪ್ರಾಣಿ ಹಾಗೂ ಕಾಡುಮೃಗಗಳ ಮೇಲೆಯೂ ನೆಲದ ಮೇಲೆ ಹರಿದಾಡುವ ಕ್ರಿಮಿಕೀಟಗಳ ಮೇಲೆಯೂ ದೊರೆತನ ಮಾಡಲಿ," ಎಂದರು. ಹೀಗೆ ದೇವರು; ಸೃಷ್ಟಿಸಿದರು ನರರನ್ನು ತಮ್ಮ ಹೋಲಿಕೆಯಲ್ಲಿ, ಸೃಷ್ಟಿಸಿದರವರನ್ನು ದೇವಾನುರೂಪದಲ್ಲಿ, ಸೃಷ್ಟಿದರವರನ್ನು ಸ್ತ್ರೀಪುರುಷರನ್ನಾಗಿ. ಅವರನ್ನು ದೇವರು ಆಶೀರ್ವಧಿಸಿ, "ನೀವು ಅಭಿವೃದ್ಧಿಯಾಗಿ, ಅನೇಕ  ಮಕ್ಕಳನ್ನು ಪಡೆಯುವಿರಿ; ಭೂಮಿಯಲ್ಲಿ ಹರಡಿಕೊಂಡು ಅದನ್ನು ವಶಪಡಿಸಿಕೊಳ್ಳಿರಿ; ಸಮುದ್ರದ ಮೀನುಗಳ ಮೇಲೆಯೂ ಆಕಾಶದ ಪಕ್ಷಿಗಳ ಮೇಲೆಯೂ ಭೂಮಿಯಲ್ಲಿ ಚಲಿಸುವ ಎಲ್ಲ ಪ್ರಾಣಿಗಳ ಮೇಲೆಯೂ ದೊರೆತನ ಮಾಡಿರಿ. ಇನ್ನೂ, ಭೂಮಿಯಲ್ಲಿರುವ ಎಲ್ಲ ದವಸ ಧಾನ್ಯಗಳನ್ನೂ ಹಣ್ಣುಹಂಪಲುಗಳನ್ನೂ ನಿಮಗೆ ಅಹಾರವಾಗಿ ಕೊಟ್ಟಿದ್ದೇನೆ. ಇದಲ್ಲದೆ, ಭೂಮಿಯ ಮೇಲೆ ತಿರುಗಾಡುವ ದೊಡ್ಡ - ಚಿಕ್ಕ ಮೃಗಗಳಿಗೂ ಆಕಾಶದಲ್ಲಿ ಹಾರಾಡುವ ಪಕ್ಷಿಗಳಿಗೂ ನೆಲದಲ್ಲಿ ಹರಿದಾಡುವ ಕ್ರಿಮಿಕೀಟಗಳಿಗೂ ಹುಲ್ಲು ಸೊಪ್ಪುಗಳನ್ನು ಅಹಾರವಾಗಿ ಕೊಟ್ಟಿದ್ದೇನೆ," ಎಂದು ಹೇಳಿದರು. ಹಾಗೆಯೇ ಅಯಿತು. ತಾವುಸೃಷ್ಟಿಸಿದ ಎಲ್ಲವನ್ನು ದೇವರು ನೋಡಿದರು. ಅವೆಲ್ಲವೂ ಬಹಳ ಚೆನ್ನಾಗಿತ್ತು. ಹೀಗೆ ಬೈಗೂ ಬೆಳಗೂ ಆಗಿ ಆರನೆಯ ದಿನ ಆಯಿತು. ಪರಲೋಕ--ಭೂಲೋಕಗಳೂ ಅವುಗಳಲ್ಲಿ ಇರುವ ಸಮಸ್ತವೂ ಹೀಗೆ ನಿರ್ಮಿತವಾದವು.ದೇವರುತಮ್ಮ ಸೃಷ್ಟಿಕಾರ್ಯವನ್ನು ಮುಗಿಸಿಬಿಟ್ಟು ಏಳನೆಯ ದಿನದಲ್ಲಿ ವಿಶ್ರಮಿಸಿಕೊಂಡರು. ಆ ಏಳನೆಯ ದಿನವು ಪರಿಶುದ್ಧವಾಗಿರಲಿ ಎಂದು ಆಶೀರ್ವದಿಸಿದರು. ತಮ್ಮ ಸೃಷ್ಟಿಕಾರ್ಯವನ್ನೆಲ್ಲ ಮುಗಿಸಿ ಆ ದಿನದಂದು ವಿಶ್ರಮಿಸಿಕೊಂಡ ಕಾರಣ ಹಾಗೆ ಮಾಡಿದರು. ಇತಿ, ಪರಲೋಕ - ಭೂಲೋಕಗಳ ನಿರ್ಮಣ ಚರಿತ್ರೆ.

ಕೀರ್ತನೆ: 8:4-5, 6-7, 8-9

ಶ್ಲೋಕ: ಹರಡಿದೆ ಪ್ರಭೂ, ನಿನ್ನ ಸಿರಿನಾಮ ಜಗದಾದ್ಯಂತ

ಶುಭಸಂದೇಶ: ಮಾರ್ಕ 7:1-13

ಒಮ್ಮೆ ಫರಿಸಾಯರು ಮತ್ತು ಜೆರುಸಲೇಮಿನಿಂದ ಕೆಲವು ಮಂದಿ ಧರ್ಮಶಾಸ್ತ್ರಿಗಳು ಯೇಸುಸ್ವಾಮಿಯ ಬಳಿಗೆ ಬಂದು ಸೇರಿದರು. ಯೇಸುವಿನ ಶಿಷ್ಯರಲ್ಲಿ ಕೆಲವರು ಅಶುದ್ಧ ಕೈಗಳಿಂದ, ಎಂದರೆ ಶುದ್ಧಾಚಾರಕ್ಕೆ ಅನುಗುಣವಾಗಿ ಕೈತೊಳೆದುಕೊಳ್ಳದೆ ಊಟಮಾಡುವುದನ್ನು ಅವರು ನೋಡಿದರು. ಫರಿಸಾಯರು ಇತರ ಯೆಹೂದ್ಯರಂತೆ ಕೈಗಳನ್ನು ವಿಧಿ ಬದ್ಧವಾಗಿ ತೊಳೆಯದೆ ಊಟ ಮಾಡುವುದಿಲ್ಲ. ಇದು ಅವರ ಪೂರ್ವಜರಿಂದ ಬಂದ ಸಂಪ್ರದಾಯ. ಪೇಟೆ ಬೀದಿಗಳಿಗೆ ಹೋಗಿ ಬಂದರೆ ಸ್ನಾನ ಮಾಡಿಯೇ ಊಟಮಾಡುವುದು; ತಂಬಿಗೆ, ಚೆಂಬು, ತಪ್ಪಲೆಗಳನ್ನು ಸೂತ್ರಬದ್ಧವಾಗಿ ತೊಳೆಯುವುದು; ಇವೇ ಮೊದಲಾದ ಅನೇಕ ಆಚಾರಗಳು ಅವರಲ್ಲಿ ರೂಢಿಯಲ್ಲಿದ್ದವು. ಆದುದರಿಂದ ಫರಿಸಾಯರೂ ಧರ್ಮಶಾಸ್ತ್ರಿಗಳೂ, "ನಿನ್ನ ಶಿಷ್ಯರು ಪೂರ್ವಜರಿಂದ ಬಂದ ಆಚಾರಗಳನ್ನೇಕೆ ಅನುಸರಿಸುವುದಿಲ್ಲ? ಅಶುದ್ಧವಾದ ಕೈಗಳಿಂದಲೇ ಅವರು ಊಟ ಮಾಡುತ್ತಿದ್ದಾರಲ್ಲಾ?" ಎಂದು ಯೇಸುವನ್ನು ಕೇಳಿದರು. ಅದಕ್ಕೆ ಯೇಸು, "ಕಪಟಿಗಳೇ, ನಿಮ್ಮ ವಿಷಯದಲ್ಲಿ ಯೆಶಾಯನು ಎಷ್ಟೊಂದು ಚೆನ್ನಾಗಿ ಪ್ರವಾದಿಸಿದ್ದಾನೆ: ಬರಿಯ ಮಾತಿನ ಮನ್ನಣೆಯನೀಯುತ, ಹೃದಯವನ್ನು ದೂರವಿರಿಸುತ, ನರಕಲ್ಪಿತ ಕಟ್ಟಳೆಗಳನೆ ದೇವ ವಾಕ್ಯವೆಂದು ಉಪದೇಶಿಸುತ, ಈ ಜನರೆನಗೆ ಮಾಡುವ ಆರಾಧನೆ ವ್ಯರ್ಥ! ಎಂದರು ದೇವರು.' "ನೀವು ದೇವರ ಆಜ್ಞೆಗಳನ್ನು ತೊರೆದು ಮಾನವ ನಿರ್ಮಿತ ಸಂಪ್ರದಾಯದ ನೆವದಲ್ಲಿ ದೇವರ ಆಜ್ಞೆಗಳನ್ನು ನೀವು ಜಾಣ್ಮೆಯಿಂದ ಬದಿಗೊತ್ತಿರುವುದು ಬಲು ಚೆನ್ನಾಗಿದೆ! "ನಿಮ್ಮ ತಂದೆತಾಯಿಗಳನ್ನು ಗೌರವಿಸಬೇಕು; ತಂದೆಯನ್ನಾಗಲೀ  ತಾಯಿಯನ್ನಾಗಲೀ ದೂಷಿಸುವವನಿಗೆ ಮರಣದಂಡನೆ ಆಗಲೇಬೇಕು." ಎಂಬುದು ಮೋಶೆ ವಿಧಿಸಿದ ಆಜ್ಞೆ, ನೀವಾದರೋ, ಒಬ್ಬನು ತನ್ನ ತಂದೆಗೆ ಅಥವಾ ತಾಯಿಗೆ 'ನನ್ನಿಂದ ನಿಮಗೆ ಸಲ್ಲತಕ್ಕದ್ದು "ಕೊರ್ಬಾನ್" (ಎಂದರೆ ದೇವರಿಗೆ ಮುಡಿಪು) ಎಂದು ಹೆಳಿಬಿಟ್ಟರೆ ಸಾಕು. ಮುಂದೆ ಅವನು ತನ್ನ ತಂದೆತಾಯಿಗಳಿಗೆ ಯಾವ ಸಹಾಯವನ್ನೂ  ಮಾಡುವುದಕ್ಕೆ ನೀವು ಬಿಡುವುದಿಲ್ಲ. ಹೀಗೆ ನೀವು ಬೋಧಿಸುವ ಸಂಪ್ರದಾಯಗಳಿಂದಾಗಿ ದೇವರ ವಾಕ್ಯವನ್ನೇ ನಿರರ್ಥಕಗೊಳಿಸುತ್ತೀರಿ. ಇಂಥಾ ಕೃತ್ಯಗಳು ಇನ್ನೆಷ್ಟೋ!"

ಮನಸಿಗೊಂದಿಷ್ಟು : ನಾವೆಲ್ಲರೂ ನಮಗಾಗಿ ಶ್ರೇಷ್ಟವಾದುದ್ದನ್ನೇ ಬಯಸುತ್ತೇವೆ. ಆದರೆ ಯೇಸು ನಮ್ಮ ಹೃದಯಗಳು ಶ್ರೇಷ್ಟವಾಗಬೇಕೆಂದು ಬಯಸುತ್ತಾರೆ. ಫರಿಸಾಯರ ಮುಂದೆ ಹಾಗೂ ಅವರ ಮಾನವ ಕಲ್ಪಿತ ಆಚರಣೆಗಳ ಸಾಮಾನ್ಯರಲ್ಲಿ ಸಾಮಾನ್ಯರಾಗಿದ್ದ ತಮ್ಮ ಶಿಷ್ಯರನ್ನು ಬಿಟ್ಟುಕೊಡದೆ ಅವರ ಮುಗ್ದತೆಯನ್ನು ಸಮರ್ಥಿಸಿಕೊಳ್ಳುತ್ತಾರೆ.

ಪ್ರಶ್ನೆ :  ನಮ್ಮದು ಆ ಫರಿಸಾಯರಂತೆ ಕೇವಲ ಮಾನವ ಕಲ್ಪಿತ ಆಚರಣೆಗಳಿಗೆ ಕಟ್ಟು ಬಿದ್ದ ಶ್ರೇಷ್ಟತೆಯ ವ್ಯಸನದ ಮನಸೇ ಅಥವಾ ಯೇಸುವನ್ನು ಮೆಚ್ಚಿಸಬಹುದಾದ ದೈವ ಸಂಕಲ್ಪಿತ ನಡಿಗೆಯೇ?