ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

31.08.22 - “ನೀವು ದೇವರ ಪುತ್ರ”

ಮೊದಲನೇ ವಾಚನ: ೧ ಕೊರಿಂಥಿಯರಿಗೆ 3:1-9

ಪ್ರಿಯ ಸಹೋದರರೇ, ದೇವರ ಆತ್ಮವನ್ನು ಪಡೆದವರೊಡನೆ ಮಾತನಾಡಿದಂತೆ ನಿಮ್ಮೊಡನೆ ನಾವು ಮಾತನಾಡಲಿಲ್ಲ. ಲೌಕಿಕರು ನೀವು; ಕ್ರಿಸ್ತಯೇಸುವಿನಲ್ಲಿ ಹಸುಗೂಸುಗಳು ನೀವು ಎಂದು ಭಾವಿಸಿ ನಿಮ್ಮೊಡನೆ ಮಾತನಾಡಬೇಕಾಯಿತು.  ನಾನು ನಿಮಗೆ ಹಾಲೂಡಿಸಿದೆನು; ಗಟ್ಟಿ ಆಹಾರವನ್ನು ಕೊಡಲಿಲ್ಲ. ಏಕೆಂದರೆ, ಅದನ್ನು ಜೀರ್ಣಿಸಿಕೊಳ್ಳಲು ನಿಮಗೆ ಶಕ್ತಿ ಇರಲಿಲ್ಲ. ಇಂದಿಗೂ ನೀವು ಶಕ್ತರಲ್ಲ. ನೀವು ಇನ್ನೂ ಲೌಕಿಕರಂತೆ ಬಾಳುತ್ತಿದ್ದೀರಿ. ನಿಮ್ಮ ನಡುವೆ ದ್ವೇಷ-ಅಸೂಯೆ, ವಾದ-ವಿವಾದಗಳು ಪ್ರಬಲವಾಗಿದ್ದು ನೀವಿನ್ನೂ ಪ್ರಾಣಿಗಳಂತೆ, ಸಾಧಾರಣ ಮನುಷ್ಯರಂತೆ ವರ್ತಿಸುತ್ತಿದ್ದೀರಲ್ಲವೆ? ಒಬ್ಬನು, ನಾನು ಪೌಲನ ಕಡೆಯವನು; ಇನ್ನೊಬ್ಬನು, ನಾನು ಅಪೊಲೋಸನ ಕಡೆಯವನು, ಎಂದು ನಿಮ್ಮೊಳಗೆ ಕಿತ್ತಾಡುವ ನೀವು ಕೇವಲ ನರಪ್ರಾಣಿಗಳಲ್ಲದೆ ಮತ್ತೇನು? ಅಪೊಲೋಸನು ಯಾರು? ಪೌಲನು ಯಾರು? ನಿಮ್ಮನ್ನು ವಿಶ್ವಾಸಕ್ಕೆ ಕರೆತಂದ ದಾಸರು ನಾವಲ್ಲವೇ? ನಮ್ಮಲ್ಲಿ ಪ್ರತಿಯೊಬ್ಬನು ಪ್ರಭು ನಿಯಮಿಸುವ ಕಾರ್ಯವನ್ನು ನಿರ್ವಹಿಸುತ್ತೇವೆ. ನಾನು ಸಸಿಯನ್ನು ನೆಟ್ಟೆನು; ಅಪೊಲೋಸನು ನೀರೆರೆದನು; ಆದರೆ ಅದನ್ನು ಬೆಳೆಸಿದವರು ದೇವರು. ಆದ್ದರಿಂದ ನೆಡುವವನಾಗಲಿ, ನೀರೆರೆಯುವವನಾಗಲಿ ಪ್ರಮುಖನಲ್ಲ; ಬೆಳವಣಿಗೆ ನೀಡುವ ದೇವರೇ ದೊಡ್ಡವರು. ನೆಡುವವನೂ ನೀರೆರೆಯುವವನೂ ಇಬ್ಬರೂ ಅಗತ್ಯವಾಗಿ ಬೇಕಾದವರೇ. ಅವನವನ ದುಡಿಮೆಗೆ ತಕ್ಕ ಹಾಗೆ ಪ್ರತಿಯೊಬ್ಬನೂ ಸಂಭಾವನೆ ಪಡೆಯುತ್ತಾನೆ. ನಾವು ದೇವರ ಸಹಕಾರ್ಮಿಕರು. ನೀವು ದೇವರೆ ಸಾಗುವಳಿಮಾಡುವ ಹೊಲ; ಅವರೆ ನಿರ್ಮಿಸುತ್ತಿರುವ ಮಂದಿರ.

ಕೀರ್ತನೆ: 33:12-13, 14-15, 20-21

ಶ್ಲೋಕ: ಸ್ವಜನರಾಗಿ ಪ್ರಭು ಆಯ್ದುಕೊಂಡ ಜನತೆ ಧನ್ಯ

ಶುಭಸಂದೇಶ: ಲೂಕ 4:38-44

ಪ್ರಾರ್ಥನಾಮಂದಿರದಿಂದ ಹೊರಟ ಯೇಸುಸ್ವಾಮಿ ಸಿಮೋನನ ಮನೆಗೆ ಬಂದರು. ಆ ಸಿಮೋನನ ಅತ್ತೆ ವಿಷಮಜ್ವರದಿಂದ ನರಳುತ್ತಿದ್ದಳು. ಅಲ್ಲಿದ್ದವರು ಅವಳ ಪರವಾಗಿ ಯೇಸುವಿನಲ್ಲಿ ಮೊರೆಯಿಟ್ಟರು. ಯೇಸು ಆಕೆಯ ಬಳಿ ನಿಂತು, ಬಾಗಿ, ಜ್ವರಕ್ಕೆ ಬಿಟ್ಟುಹೋಗೆಂದು ಆಜ್ಞಾಪಿಸಿದರು; ಅದು ಬಿಟ್ಟುಹೋಯಿತು. ಆ ಕ್ಷಣವೇ ಆಕೆ ಎದ್ದು ಅವರೆಲ್ಲರನ್ನು ಸತ್ಕರಿಸಿದಳು. ಸಂಜೆಯಾಗುತ್ತಿದ್ದಂತೆ ಜನರು ತಮ್ಮ ಮನೆಯಲ್ಲಿ ವಿಧವಿಧವಾದ ಕಾಯಿಲೆಯಿಂದ ನರಳುತ್ತಿದ್ದವರನ್ನೆಲ್ಲಾ ಯೇಸುಸ್ವಾಮಿಯ ಬಳಿಗೆ ಕರೆತಂದರು. ಯೇಸು ಪ್ರತಿಯೊಬ್ಬನ ಮೇಲೆ ತಮ್ಮ ಕೈಯಿಟ್ಟು ಗುಣಪಡಿಸಿದರು.  ಅನೇಕರ ಮೈಮೇಲಿದ್ದ ದೆವ್ವಗಳು ಸಹ, “ನೀವು ದೇವರ ಪುತ್ರ,” ಎಂದು ಬೊಬ್ಬೆಹಾಕುತ್ತಾ ಬಿಟ್ಟುಹೋದುವು. ಇವರೇ ‘ಕ್ರಿಸ್ತ’ ಎಂದು ಅವುಗಳು ತಿಳಿದಿದ್ದರಿಂದ ಯೇಸು ಅವುಗಳನ್ನು ಗದರಿಸಿ ಮಾತೆತ್ತಲು ಬಿಡಲಿಲ್ಲ. ಬೆಳಗಾಗುತ್ತಲೇ, ಯೇಸುಸ್ವಾಮಿ ಅಲ್ಲಿಂದ ಹೊರಟು ನಿರ್ಜನ ಸ್ಥಳಕ್ಕೆ ಹೋದರು. ಜನಸಮೂಹವು ಅವರನ್ನು ಹುಡುಕಿಕೊಂಡು ಅಲ್ಲಿಗೂ ಬಂದಿತು; ತಮ್ಮನ್ನು ಬಿಟ್ಟುಹೋಗಬಾರದೆಂದು ಜನರು ತಡೆಗಟ್ಟಲು ಯತ್ನಿಸಿದರು.  ಅವರಿಗೆ ಯೇಸು, “ದೇವರ ಸಾಮ್ರಾಜ್ಯದ ಶುಭಸಂದೇಶವನ್ನು ಬೇರೆ ಬೇರೆ ಊರುಗಳಿಗೂ ನಾನು ಬೋಧಿಸಬೇಕಾಗಿದೆ. ನನ್ನನ್ನು ಕಳುಹಿಸಿರುವುದು ಅದಕ್ಕಾಗಿಯೇ,” ಎಂದರು.  ಬಳಿಕ ಜುದೇಯ ಪ್ರಾಂತ್ಯದ ಪ್ರಾರ್ಥನಾಮಂದಿರಗಳಲ್ಲಿ ಯೇಸು ಬೋಧಿಸುತ್ತಿದ್ದರು.

30.08.22 - “ಎಂಥಾ ಮಾತುಗಳಿವು! ಅಧಿಕಾರದಿಂದಲೂ ಶಕ್ತಿಯಿಂದಲೂ ದೆವ್ವಗಳಿಗೆ ಕೂಡ ಆಜ್ಞೆ ಮಾಡುತ್ತಾನೆ"

ಮೊದಲನೇ ವಾಚನ: 1 ಕೊರಿಂಥಿಯರಿಗೆ 2:10-16

ಸಹೋದರರೇ, ನಮಗಾದರೋ ದೇವರು ಪವಿತ್ರಾತ್ಮ ಅವರ ಮುಖಾಂತರ ಇವುಗಳನ್ನು ಪ್ರಕಟಿಸಿದ್ದಾರೆ. ಸಕಲವನ್ನು ಹಾಗೂ ದೇವರ ಅಂತರಾಳವನ್ನು ಅವಲೋಕಿಸುವವರು ಈ ಪವಿತ್ರಾತ್ಮರೇ.  ಮಾನವನ ಆಲೋಚನೆಗಳನ್ನು ಅವನ ಅಂತರಾತ್ಮವಲ್ಲದೆ ಮತ್ತಾರು ಬಲ್ಲರು? ಅಂತೆಯೇ, ದೇವರ ಆಲೋಚನೆಗಳನ್ನು ಪವಿತ್ರಾತ್ಮರಲ್ಲದೆ ಬೇರೆ ಯಾರೂ ಅರಿಯಲಾರರು.  ನಾವಾದರೋ ಪ್ರಾಪಂಚಿಕ ಆತ್ಮವನ್ನು ಹೊಂದಿದವರಲ್ಲ. ದೇವರು ನಮಗೆ ದಯಪಾಲಿಸಿರುವ ವರಪ್ರಸಾದಗಳನ್ನು ಅರಿತುಕೊಳ್ಳುವಂತೆ ಮಾಡುವ ಪಾರಮಾರ್ಥಿಕ ಆತ್ಮವನ್ನು ಪಡೆದಿದ್ದೇವೆ. ನಾವು ಇವುಗಳನ್ನು ಮಾನವ ಜ್ಞಾನ ಪ್ರೇರೇಪಿಸಿದ ಮಾತುಗಳಿಂದ ಹೇಳುವುದಿಲ್ಲ. ದೇವರ ಆತ್ಮದಿಂದ ಪ್ರೇರಿತವಾದ ಮಾತುಗಳಿಂದ ಹೇಳುತ್ತೇವೆ. ಹೀಗೆ ಆಧ್ಯಾತ್ಮಿಕ ಸತ್ಯಗಳನ್ನು, ಆಧ್ಯಾತ್ಮಿಕ ವ್ಯಕ್ತಿಗಳಿಗೆ ವಿವರಿಸುತ್ತೇವೆ.  ಭೌತಿಕ ಮನುಷ್ಯನು ದೇವರ ಆತ್ಮದ ವರಗಳನ್ನು ನಿರಾಕರಿಸುತ್ತಾನೆ. ಅವು ಅವನಿಗೆ ಹುಚ್ಚುತನವಾಗಿ ತೋರುತ್ತವೆ. ಅವುಗಳನ್ನು ಗ್ರಹಿಸಲು ಅವನಿಂದಾಗದು. ಏಕೆಂದರೆ, ಆಧ್ಯಾತ್ಮಿಕ ವಿವೇಚನೆಯಿಂದ ಮಾತ್ರ ಅವುಗಳನ್ನು ಅರಿಯಲು ಸಾಧ್ಯ.  ದೇವರ ಆತ್ಮವನ್ನು ಹೊಂದಿದವನು ಎಲ್ಲವನ್ನೂ ವಿಚಾರಣೆಮಾಡಿ ತಿಳಿದುಕೊಳ್ಳುತ್ತಾನೆ. ಅವನನ್ನು ಯಾರೂ ವಿಚಾರಣೆಗೆ ಗುರಿಮಾಡಲಾಗದು.  “ಪ್ರಭುವಿನ ಮನಸ್ಸನ್ನರಿತವರಾರು? ಪ್ರಭುವಿಗೆ ಉಪದೇಶಿಸುವವರಾರು?” ಎಂದು ಲಿಖಿತವಾಗಿದೆ. ನಾವಾದರೋ, ಕ್ರಿಸ್ತಯೇಸುವಿನ ಮನೋಭಾವನೆಯುಳ್ಳವರು.

ಕೀರ್ತನೆ: 145:8-9, 10-11, 12-13, 13-14
ಶ್ಲೋಕ: ಪ್ರಭುವಿನ ಮಾರ್ಗ ಧರ್ಮಸಮ್ಮತ

ಶುಭಸಂದೇಶ: ಲೂಕ 4:31-37


ಬಳಿಕ ಯೇಸುಸ್ವಾಮಿ ಗಲಿಲೇಯ ಪ್ರಾಂತ್ಯದ ಕಫೆರ್ನವುಮ್ ಎಂಬ ಊರಿಗೆ ಬಂದು ಸಬ್ಬತ್ದಿನ ಅಲ್ಲಿನ ಜನರಿಗೆ ಬೋಧಿಸುತ್ತಿದ್ದರು.  ಅವರು ಅಧಿಕಾರವಾಣಿಯಿಂದ ಉಪದೇಶಿಸುತ್ತಿದ್ದುದನ್ನು ಕೇಳಿ ಜನರೆಲ್ಲರೂ ಬೆರಗಾದರು. ದುಷ್ಟ ದೆವ್ವ ಹಿಡಿದಿದ್ದ ಒಬ್ಬನು ಆ ಪ್ರಾರ್ಥನಾಮಂದಿರದಲ್ಲಿ ಇದ್ದನು.  ಅವನು, “ನಜರೇತಿನ ಯೇಸುವೇ, ನಿಮಗೇಕೆ ನಮ್ಮ ಗೊಡವೆ? ನೀವು ನಮ್ಮ ವಿನಾಶಕ್ಕಾಗಿ ಬಂದವರೇನು? ನೀವು ಯಾರೆಂದು ನನಗೆ ಗೊತ್ತು; ದೇವರಿಂದ ಬಂದ ಪರಮಪೂಜ್ಯರು ನೀವು,” ಎಂದು ಗಟ್ಟಿಯಾಗಿ ಕಿರುಚಿದನು.  ಆದರೆ ಯೇಸು ಅವನನ್ನು ಗದರಿಸಿ, “ಸುಮ್ಮನಿರು, ಇವನನ್ನು ಬಿಟ್ಟು ತೊಲಗು,” ಎಂದು ದೆವ್ವಕ್ಕೆ ಆಜ್ಞಾಪಿಸಿದರು. ಆ ದೆವ್ವ ಎಲ್ಲರ ಎದುರಿಗೇ ಅವನನ್ನು ಕೆಡವಿ, ಯಾವ ಕೆಡುಕನ್ನೂ ಮಾಡದೆ ಅವನನ್ನು ಬಿಟ್ಟು ಹೋಯಿತು.  ಜನರೆಲ್ಲರೂ ಆಶ್ಚರ್ಯಚಕಿತರಾದರು. “ಎಂಥಾ ಮಾತುಗಳಿವು! ಅಧಿಕಾರದಿಂದಲೂ ಶಕ್ತಿಯಿಂದಲೂ ದೆವ್ವಗಳಿಗೆ ಕೂಡ ಆಜ್ಞೆಮಾಡುತ್ತಾನೆ; ಅವು ಕೂಡ ಈತ ಹೇಳಿದ ಹಾಗೆ ಕೇಳುತ್ತವಲ್ಲಾ!” ಎಂದು ತಮ್ಮತಮ್ಮೊಳಗೇ ಮಾತನಾಡಿಕೊಂಡರು. ಯೇಸುವಿನ ಸಮಾಚಾರ ಆ ಪ್ರಾಂತ್ಯದಲ್ಲೆಲ್ಲಾ ಹಬ್ಬಿ ಹರಡಿತು.

29.08.22 - ಪಹರೆಯವನು ಸೆರೆಮನೆಗೆ ಹೋಗಿ ಯೊವಾನ್ನನ ತಲೆಯನ್ನು ಕತ್ತರಿಸಿ, ಅದನ್ನು ತಟ್ಟೆಯಲ್ಲಿ ಇಟ್ಟು ಹುಡುಗಿಗೆ ತಂದುಕೊಟ್ಟನು.

ಮೊದಲನೇ ವಾಚನ: ಪ್ರವಾದಿ ಯೆರೆಮೀಯನ ಗ್ರಂಥ 1:17-19

ಸರ್ವೇಶ್ವರಸ್ವಾಮಿ ನನಗೆ ಹೀಗೆಂದರು: ನೀನು ಎದ್ದು ನಡುಕಟ್ಟಿಕೊ, ನಾನು ಆಜ್ಞಾಪಿಸುವುದನ್ನೆಲ್ಲ ಅವರಿಗೆ ತಿಳಿಸು, ಅವರಿಗೆ ಹೆದರಬೇಡ; ಹೆದರಿದರೆ ನಾನೂ ನಿನ್ನನ್ನು ಅವರ ಮುಂದೆ ಹೆದರಿಸುವೆನು.  ನಾನು ಹೇಳುವುದನ್ನು ಗಮನದಿಂದ ಕೇಳು - ಈ ದಿನ ನಿನ್ನನ್ನು ಜುದೇಯದ ಅರಸರು, ಅಧಿಪತಿಗಳು, ಯಾಜಕರು, ಜನಸಾಮಾನ್ಯರು, ಹೀಗೆ ನಾಡಿನವರೆಲ್ಲರನ್ನು ಎದುರಿಸತಕ್ಕವನನ್ನಾಗಿ ಮಾಡಿದ್ದೇನೆ; ಕೋಟೆಕೊತ್ತಲಗಳಿಂದ ಸುಸಜ್ಜಿತ ನಗರವನ್ನಾಗಿಯೂ ಕಬ್ಬಿಣದ ಕಂಬವನ್ನಾಗಿಯೂ ತಾಮ್ರದ ಪೌಳಿಗೋಡೆಯನ್ನಾಗಿಯೂ ನಿನ್ನನ್ನು ಸ್ಥಾಪಿಸಿದ್ದೇನೆ.  ನಿನಗೆ ವಿರುದ್ಧವಾಗಿ ಅವರು ಯುದ್ಧಮಾಡುವರು; ಆದರೆ ನಿನ್ನನ್ನು ಸೋಲಿಸಲಾಗುವುದಿಲ್ಲ. ನಿನ್ನನ್ನು ಕಾಪಾಡಲು ನಾನೇ ನಿನ್ನೊಂದಿಗಿರುವೆನು. ಇದು ಸರ್ವೇಶ್ವರನಾದ ನನ್ನ ನುಡಿ".

ಕೀರ್ತನೆ: 71:1-2, 3-4, 5-6, 15, 17

ಶ್ಲೋಕ: ವರ್ಣಿಸುವೆನು ದಿನವೆಲ್ಲ ನಿನ್ನ ನ್ಯಾಯನೀತಿಯನು

ಶುಭಸಂದೇಶ: ಮಾರ್ಕ  6:17-29


ಹೆರೋದನು ತಾನು ಇಟ್ಟುಕೊಂಡಿದ್ದ ಹೆರೋದಿಯಳ ನಿಮಿತ್ತ ಯೊವಾನ್ನನನ್ನು ಸೆರೆಹಿಡಿಸಿ ಬಂಧನದಲ್ಲಿರಿಸಿದ್ದನು. ಹೆರೋದಿಯಳು ಹೆರೋದನ ಸಹೋದರ ಫಿಲಿಪ್ಪನ ಧರ್ಮಪತ್ನಿ. ಆದರೂ ಹೆರೋದನು ಆಕೆಯನ್ನು ಹೆಂಡತಿಯಾಗಿ ಇಟ್ಟುಕೊಂಡಿದ್ದನು.  ಈ ಕಾರಣ ಯೊವಾನ್ನನು, “ನಿನ್ನ ಸಹೋದರನ ಪತ್ನಿಯನ್ನು ನೀನು ಇಟ್ಟುಕೊಂಡಿರುವುದು ನ್ಯಾಯವಲ್ಲ,” ಎಂದು ಪದೇಪದೇ ಅವನನ್ನು ಎಚ್ಚರಿಸುತ್ತಿದ್ದನು.  ಇದರ ನಿಮಿತ್ತ ಹೆರೋದಿಯಳು ಯೊವಾನ್ನನ ಮೇಲೆ ಹಗೆಯಿಟ್ಟು ಆತನನ್ನು ಕೊಲ್ಲಿಸಬೇಕು ಎಂದಿದ್ದಳು. ಆದರೆ ತನ್ನ ಸೇಡನ್ನು ತೀರಿಸಿಕೊಳ್ಳಲು ಅವಳಿಂದಾಗಿರಲಿಲ್ಲ.  ಏಕೆಂದರೆ, ಯೊವಾನ್ನನು ಸಂತನು ಹಾಗೂ ಸತ್ಪುರುಷನು ಎಂದು ಹೆರೋದನು ಅರಿತು, ಆತನಿಗೆ ಭಯಪಟ್ಟು ಯಾವ ಅಪಾಯವೂ ಆತನಿಗೆ ಬಾರದಂತೆ ನೋಡಿಕೊಳ್ಳುತ್ತಿದ್ದನು. ಯೊವಾನ್ನನು ಹೇಳುತ್ತಿದ್ದ ಮಾತುಗಳನ್ನು ಕೇಳಿದಾಗಲೆಲ್ಲಾ ಹೆರೋದನ ಮನಸ್ಸು ಅಲ್ಲೋಲಕಲ್ಲೋಲವಾಗುತ್ತಿತ್ತು. ಆದರೂ ಆತನ ಮಾತುಗಳನು ಕಿವಿಗೊಟ್ಟು ಕೇಳುತ್ತಿದ್ದನು. ಕಡೆಗೊಮ್ಮೆ, ಹೆರೋದಿಯಳಿಗೆ ಅನುಕೂಲವಾದ ಸಂದರ್ಭ ಒದಗಿತು. ಹೆರೋದನು ತನ್ನ ಹುಟ್ಟುಹಬ್ಬದ ದಿನಾಚರಣೆಯಂದು, ಆಸ್ಥಾನಿಕರಿಗೂ ಸೇನಾಧಿಪತಿಗಳಿಗೂ ಗಲಿಲೇಯ ಪ್ರಾಂತ್ಯದ ಪ್ರಮುಖರಿಗೂ ಔತಣಕೂಟವನ್ನು ಏರ್ಪಡಿಸಿದನು.  ಆ ಸಮಾರಂಭದಲ್ಲಿ ಹೆರೋದಿಯಳ ಮಗಳು ಔತಣ ಶಾಲೆಗೆ ಬಂದು ನರ್ತನಮಾಡಿದಳು. ಹೆರೋದನೂ ಅವನ ಜೊತೆಯಲ್ಲಿ ಭೋಜನಕ್ಕೆ ಕುಳಿತಿದ್ದ ಅತಿಥಿಗಳೂ ಅದನ್ನು ಬಹಳವಾಗಿ ಮೆಚ್ಚಿಕೊಂಡರು.  ಆಗ ಅರಸ ಹೆರೋದನು ಅವಳಿಗೆ, “ನಿನಗೆ ಏನುಬೇಕಾದರೂ ಕೇಳು, ಕೊಡುತ್ತೇನೆ” ಎಂದನು. “ನೀನು ಏನು ಕೇಳಿಕೊಂಡರೂ ಸರಿ, ನನ್ನ ರಾಜ್ಯದಲ್ಲಿ ಅರ್ಧವನ್ನು ಕೇಳಿಕೊಂಡರೂ ಅದನ್ನು ನಿನಗೆ ಕೊಡುತ್ತೇನೆ,” ಎಂದು ಪ್ರಮಾಣ ಮಾಡಿದನು.  ಅವಳು ತನ್ನ ತಾಯಿಯ ಬಳಿಗೆ ಹೋಗಿ, “ಅಮ್ಮಾ, ನಾನು ಏನನ್ನು ಕೇಳಿಕೊಳ್ಳಲಿ?” ಎಂದು ವಿಚಾರಿಸಿದಳು. “ಸ್ನಾನಿಕ ಯೊವಾನ್ನನ ತಲೆಯನ್ನು ಕೇಳು,” ಎಂದು ಆಕೆ ಮಗಳನ್ನು ಪ್ರೇರೇಪಿಸಿದಳು.  ಕೂಡಲೆ ಅವಳು ಅರಸನ ಬಳಿಗೆ ಧಾವಿಸಿ, “ಸ್ನಾನಿಕ ಯೊವಾನ್ನನ ತಲೆಯನ್ನು ಇದೀಗಲೇ ಒಂದು ತಟ್ಟೆಯಲ್ಲಿ ತರಿಸಿಕೊಡಿ; ಇದೇ ನನ್ನ ಬೇಡಿಕೆ,” ಎಂದು ಕೇಳಿಕೊಂಡಳು. ಅರಸನಿಗೆ ಅತೀವ ದುಃಖವಾಯಿತು. ಆದರೂ ಅತಿಥಿಗಳೆಲ್ಲರ ಮುಂದೆ ತಾನು ಮಾಡಿದ ಪ್ರಮಾಣದ ನಿಮಿತ್ತ ಅವಳ ಕೋರಿಕೆಯನ್ನು ನಿರಾಕರಿಸಲಾಗಲಿಲ್ಲ.  ಆದುದರಿಂದ ಅವನು ಒಬ್ಬ ಪಹರೆಯವನನ್ನು ಕರೆದು, ಕೂಡಲೇ ಯೊವಾನ್ನನ ತಲೆಯನ್ನು ತರಬೇಕೆಂದು ಅವನಿಗೆ ಆಜ್ಞೆಮಾಡಿ ಕಳುಹಿಸಿದನು.  ಪಹರೆಯವನು ಸೆರೆಮನೆಗೆ ಹೋಗಿ ಯೊವಾನ್ನನ ತಲೆಯನ್ನು ಕತ್ತರಿಸಿ, ಅದನ್ನು ತಟ್ಟೆಯಲ್ಲಿ ಇಟ್ಟು ಹುಡುಗಿಗೆ ತಂದುಕೊಟ್ಟನು. ಅವಳು ಅದನ್ನು ತನ್ನ ತಾಯಿಗೆ ಕೊಟ್ಟಳು. ಇದನ್ನು ಕೇಳಿದ ಯೊವಾನ್ನನ ಶಿಷ್ಯರು ಅಲ್ಲಿಗೆ ಬಂದು ಶವವನ್ನು ತೆಗೆದುಕೊಂಡು ಹೋಗಿ ಸಮಾಧಿಮಾಡಿದರು.


28.08.22 - "ಮದುವೆಯ ಔತಣಕ್ಕೆ ನಿನ್ನನ್ನು ಯಾರಾದರೂ ಆಹ್ವಾನಿಸಿದಾಗ ಪ್ರಧಾನ ಆಸನದಲ್ಲಿ ಹೋಗಿ ಕುಳಿತುಕೊಳ್ಳಬೇಡ"

ಮೊದಲನೇ ವಾಚನ: ಸಿರಾಖ 3:17-18, 20, 28-29


ಮಗನೇ, ಕರ್ತವ್ಯ ನಿರ್ವಹಣೆಯಲ್ಲಿ ವಿನಯದಿಂದ ವರ್ತಿಸುವೆಯಾದರೆ, ದೇವರ ಯ್ಯೋಗ್ಯರಾದವರ ಪ್ರೀತಿಗೆ ನೀನೂ ಪಾತ್ರನಾಗುವೆ. ನೀನು ದೊಡ್ಡವನಾಗೀರುವಷ್ಟು ನಿನ್ನನ್ನೇ ತಗ್ಗಿಸಿಕೊಂಡೆಯಾದರೆ ದೇವರ ಸನ್ನಿಧಿಯಲ್ಲಿ ನಿಮಗೆ ಗಿಟ್ಟುವುದು ಕರುಣೆ, ಅಪೂರ್ವವಾದುದು ದೇವರ ಬಲ ದೀನರಿಂದ ಆತನಿಗೆ ಸಲ್ಲುವುದು ಘನಮಾನ. ಖಂಡನೆಯಿಂದ ಗುಣವಾಗದು ಗರ್ವಿಗೆ ದುಷ್ಟತನದ ಬಳ್ಳಿ ಬೇರೂರಿದೆ ಅವನಲ್ಲೇ,  ವಿವೇಕ ಮನಸ್ಸುಳ್ಳವರು ಪಾಠ ಕಲಿಯುವರು ಸಾಮತಿಗಳಂದ ಲಕ್ಷವಿಟ್ಟು ಕೇಳುವನು ಜ್ಞಾನಿ ಹೆಬ್ಬಯಕೆಯಿಂದ.

ಕೀರ್ತನೆ: 68:4-5, 6-7, 10-11

ಶ್ಲೋಕ: ದೇವಾ ಆಸ್ಥೆಯಿಂದೊದಗಿಸಿದೆ ದೀನದಲಿತರಿಗೆ

ಎರಡನೇ ವಾಚನ: ಹಿಬ್ರಿಯರಿಗೆ 12:18-19, 22-24

ನೀವು ಇಸ್ರಯೇಲರಂತೆ ಮುಟ್ಟಬಹುದಾದ ಸೀನಾಯ್ ಬೆಟ್ಟಕ್ಕೆ ಬಂದಿಲ್ಲ. ಅಲ್ಲಿ ಬೆಂಕಿ ಧಗಧಗಿಸುತ್ತಿತ್ತು. ಕಾರ್ಗತ್ತಲು ಕವಿದಿತ್ತು; ಮೋಡದ ಮಬ್ಬು ಮುಸುಕಿತ್ತು; ಬಿರುಗಾಳಿ ಬೀಸುತ್ತಿತ್ತು. ಕಹಳೆಗಳು ಮೊಳಗುತ್ತಿದ್ದವು. ಆಗ ಧ್ವನಿಯೊಂದು ಕೇಳಿಬಂತು. ಅದನ್ನು ಕೇಳಿದವರು, ಇನ್ನೆಂದಿಗೂ ಆ ಧ್ವನಿ ತಮ್ಮೊಂದಿಗೆ ಮಾತನಾಡುವುದೇ ಬೇಡವೆಂದು ಕೇಳಿಕೊಂಡರು. ಆದರೆ ನೀವು ಬಂದಿರುವುದು ಸಿಯೋನ್ ಬೆಟ್ಟಕ್ಕೆ; ಜೀವಂತ ದೇವರ ನಗರಕ್ಕೆ; ಸ್ವರ್ಗೀಯ ಜೆರುಸಲೇಮಿಗೆ;  ಅಸಂಖ್ಯಾತ ದೇವದೂತರು ಕೂಡಿರುವ ಉತ್ಸವ ಕೂಟಕ್ಕೆ; ಸ್ವರ್ಗದಲ್ಲಿ ದಾಖಲೆಯಾಗಿರುವ ಜ್ಯೇಷ್ಠಪುತ್ರನ ಸಭೆಗೆ; ನೀವು  ಬಂದಿರುವುದು ಸಕಲ ಮಾನವರ ನ್ಯಾಯ ಮೂರ್ತಿಯಾದ ದೇವರ ಸನ್ನಿಧಿಗೆ; ಸಿದ್ಧಿಗೆ ಬಂದ ಸತ್ಪುರುಷರ ಆತ್ಮಗಳ ಸಮೂಹಕ್ಕೆ; ಹೊಸ ಒಡಂಬಡಿಕೆಯ ಮಧ್ಯಸ್ಥರಾದ ಯೇಸುಸ್ವಾಮಿಯ ಬಳಿಗೆ, ಹೇಬೆಲನ ರಕ್ತಕಿಂತಲೂ ಅಮೋಘವಾಗಿ ಮೊರೆಯಿಡುವ ಪ್ರೋಕ್ಷಣಾ ರಕ್ತದ ಬಳಿಗೆ ನೀವು ಬಂದಿದ್ದೀರಿ.

ಶುಭಸಂದೇಶ: ಲೂಕ 14:7-14


ಅಂದು ಸಬ್ಬತ್ ದಿನ. ಯೇಸುಸ್ವಾಮಿ ಒಬ್ಬ ಪ್ರಮುಖ ಫರಿಸಾಯನ ಮನೆಗೆ ಊಟಕ್ಕೆ ಹೋದರು. ಎಲ್ಲರ ಕಣ್ಣು ಅವರ ಮೇಲಿತ್ತು. ಅಲ್ಲದೆ, ಅಲ್ಲಿಗೆ ಬಂದಿದ್ದ ಅತಿಥಿಗಳು ಪಂಕ್ತಿಯಲ್ಲಿ ಉತ್ತಮ ಸ್ಥಾನಗಳನ್ನು ಆರಿಸಿಕೊಳ್ಳುತ್ತಿದ್ದರು. ಇದನ್ನು ಗಮನಿಸಿದ ಯೇಸು ಸಾಮತಿ ರೂಪದಲ್ಲಿ ಹೀಗೆಂದರು: "ಮದುವೆಯ ಔತಣಕ್ಕೆ ನಿನ್ನನ್ನು ಯಾರಾದರೂ ಆಹ್ವಾನಿಸಿದಾಗ ಪ್ರಧಾನ ಆಸನದಲ್ಲಿ ಹೋಗಿ ಕುಳಿತುಕೊಳ್ಳಬೇಡ. ಏಕೆಂದರೆ, ನಿನಗಿಂತ ಗೌರವಸ್ಥನನ್ನು ಆಹ್ವಾನಿಸಿರಬಹುದು. ನಿಮ್ಮಿಬ್ಬರನ್ನು ಕರೆದಾತ ನಿನ್ನ ಹತ್ತಿರ ಬಂದು, "ಇವನಿಗೆ ನಿನ್ನ ಸ್ಥಳವನ್ನು ಬಿಟ್ಟುಕೊಡು," ಎನ್ನಬಹುದು. ಆಗ ನೀನು ನಾಚಿಕೆಪಟ್ಟುಕೊಂಡು ಕಡೆಯ ಸ್ಥಾನದಲ್ಲಿ ಹೋಗಿ ಕುಳಿತುಕೊಳ್ಳಬೇಕಾಗಬಹುದು. ಅದಕ್ಕೆ ಬದಲಾಗಿ ನಿನ್ನನ್ನು ಆಹ್ವಾನಿಸಿದಾಗ ಕಡೆಯ ಸ್ಥಾನದಲ್ಲಿ ಹೋಗಿ ಕುಳಿತುಕೋ. ಕರೆದವನು ಬಂದು, "ಗೆಳೆಯಾ, ಮೇಲೆ ಬಾ" ಎಂದು ಹೇಳುವನು. ಆಗ ಜೊತೆಗೆ ಕುಳಿತಿರುವ ಅತಿಥಿಗಳೆಲ್ಲರ ಮುಂದೆ ನಿನಗೆ ಗೌರವ ಸಿಗುವುದು. ಅಂತೆಯೇ, ತನ್ನನ್ನು ತಾನೇ ಮೇಲಕ್ಕೆ ಏರಿಸಿಕೊಳ್ಳುವವನನ್ನು ದೇವರು ಕೆಳಗಿಳಿಸುವರು; ತನ್ನನ್ನು ತಾನೇ ತಗ್ಗಿಸಿಕೊಳ್ಳುವವನನ್ನು ದೇವರು ಮೇಲಕ್ಕೇರಿಸುವರು," ಎಂದರು. ಆನಂತರ ತಮ್ಮನ್ನು ಊಟಕ್ಕೆ ಆಮಂತ್ರಿಸಿದವನನ್ನು ನೋಡಿ ಯೇಸುಸ್ವಾಮಿ, "ನೀನು ಊಟ ಆಥವಾ ಔತಣವನ್ನು ಏರ್ಪಡಿಸುವಾಗ ನಿನ್ನ ಸ್ನೇಹಹಿತರನ್ನಾಗಲಿ, ಸೋದರರನ್ನಾಗಲಿ ಕರೆಯಬೇಡ. ಏಕೆಂದರೆ, ಅವರು ನಿನ್ನನ್ನು ಪ್ರತಿಯಾಗಿ ಕರೆದು ಮುಯ್ಯಿ ತೀರಿಸಿಬಿಡಬಹುದು. ಆದ್ದರಿಂದ ಔತಣವನ್ನು ಏರ್ಪಡಿಸುವಾಗ ದರಿದ್ರರು, ಅಂಗವಿಕಲರು, ಕುಂಟರು, ಕುರುಡರು ಇಂಥವರನ್ನು ಕರೆ; ಆಗ ನೀನು ಧನ್ಯನಾಗುವೆ. ಏಕೆಂದರೆ, ಅವರು ನಿನಗೆ ಪ್ರತಿಯಾಗಿ ಏನು ಮಾಡಲೂ ಇಲ್ಲದವರು. ಸತ್ಪುರುಷರು ಪುನರುತ್ದಾನ ಹೊಂದುವಾಗ ದೇವರೇ ನಿನಗೆ ಸಲ್ಲಬೇಕಾದುದನ್ನು ಸಲ್ಲಿಸುವರು," ಎಂದರು.

27.08.22

ಮೊದಲನೇ ವಾಚನ: 1 ಕೊರಿಂಥಿಯರಿಗೆ 1:26-31

ಸಹೋದರರೇ, ನಿಮ್ಮನ್ನು ದೇವರು ಕರೆದಾಗ ನೀವು ಹೇಗಿದ್ದಿರಿ ಎಂದು ಜ್ಞಾಪಿಸಿಕೊಳ್ಳಿ. ಲೋಕದ ಎಣಿಕೆಯಲ್ಲಿ ನಿಮ್ಮೊಳಗೆ ಜ್ಞಾನಿಗಳು ಅನೇಕರಿಲ್ಲ, ಪರಾಕ್ರಮಿಗಳು ಅನೇಕರಿಲ್ಲ, ಕುಲೀನರು ಅನೇಕರಿಲ್ಲ, ಜ್ಞಾನಿಗಳನ್ನು ನಾಚಿಕೆಗೀಡು ಮಾಡಲು ದೇವರು ಲೋಕದ ದೃಷ್ಟಿಯಲ್ಲಿ ಮೂರ್ಖರನ್ನು ಆರಿಸಿಕೊಂಡರು; ಅಂತೆಯೇ ಬಲಿಷ್ಠರನ್ನು ಲಜ್ಜೆಗೀಡುಮಾಡಲು ಲೋಕದ ದೃಷ್ಟಿಯಲ್ಲಿ ಬಲಹೀನರನ್ನು ಆರಿಸಿಕೊಂಡರು. ಲೋಕದ ದೃಷ್ಟಿಯಲ್ಲಿ ಗಣ್ಯವಾದುದನ್ನು ನಿರ್ನಾಮಗೊಳಿಸಲು ಗಣನೆಗೆ ಬಾರದುದನ್ನು, ಕೀಳಾದುದನ್ನು, ಬೀಳಾದುದನ್ನು ಆರಿಸಿಕೊಂಡರು. ಯಾವ ಮಾನವನೂ ತಮ್ಮ ಸಮ್ಮುಖದಲ್ಲಿ ಅಹಂಕಾರಪಡದಂತೆ ದೇವರು ಹೀಗೆ ಮಾಡಿದರು. ಅವರ ಕೃಪೆಯಿಂದಲೇ ನೀವು ಕ್ರಿಸ್ತಯೇಸುವಿನಲ್ಲಿ ಬಾಳುತ್ತಾ ಇದ್ದೀರಿ; ಅವರ ಕೃಪೆಯಿಂದಲೇ ಕ್ರಿಸ್ತಯೇಸು ನಮಗೆ ಜ್ಞಾನಮೂಲವಾಗಿದ್ದಾರೆ. ದೇವರಿಂದ ನಮಗೆ ದೊರಕುವ ಸತ್ಸಂಬಂದ,  ಪಾವನತೆ ಹಾಗು ವಿಮೋಚನೆ ಆ ಕ್ರಿಸ್ತಯೇಸುವಿನಿಂದಲೇ. ಆದ್ದರಿಂದ ಪವಿತ್ರಗ್ರಂಥದಲ್ಲಿ ಹೇಳಿರುವಂತೆ: "ಹೆಚ್ಚಳಪಡುವವನು ಪ್ರಭುವಿನಲ್ಲಿ ಹೆಚ್ಚಳಪಡಲಿ."

ಕೀರ್ತನೆ: 33:12-13, 18-19, 20-21
 ಶ್ಲೋಕ: ಸ್ವಜನರಾಗಿ ಪ್ರಭು ಆಯ್ದುಕೊಂಡ ಜನತೆ ಧನ್ಯ

ಶುಭಸಂದೇಶ: ಮತ್ತಾಯ 25:14-30

 "ಅದೂ ಅಲ್ಲದೆ ಆ ದಿನಗಳಲ್ಲಿ ಸ್ವರ್ಗಸಾಮ್ರಾಜ್ಯ ಇಂತಿರುವುದು: ಒಬ್ಬಾತ ಪ್ರವಾಸ ಹೊರಡಲಿದ್ದ, ತನ್ನ ಸೇವಕರನ್ನು ಕರೆದು ಅವರ ವಶಕ್ಕೆ ತನ್ನ ಆಸ್ತಿಯನ್ನ ಒಪ್ಪಿಸಿದ. ಒಬ್ಬನಿಗೆ ಐದು ತಲೆಂತು, ಇನ್ನೊಬ್ಬನಿಗೆ ಎರಡು, ಮತ್ತೊಬ್ಬನಿಗೆ ಒಂದು -- ಹೀಗೆ ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ವಹಿಸಿಕೊಟ್ಟು ಹೊರಟುಹೋದ. ಐದು ತಲೆಂತು ಪಡೆದ ಸೇವಕ ಒಡನೇ ಹೋಗಿ ಆ ಮೊತ್ತದಿಂದ ವ್ಯಾಪಾರಮಾಡಿ ಇನ್ನೂ ಐದನ್ನು ಸಂಪಾದಿಸಿದ. ಎರಡು ಪಡೆದವನೂ ಹಾಗೆಯೇ ಮಾಡಿ ಇನ್ನೂ ಎರಡನ್ನು ಸಂಪಾದಿಸಿದ. ಒಂದು ತಲೆಂತು ಪಡೆದವನು ಮಾತ್ರ, ಅದನ್ನು ತೆಗೆದುಕೊಂಡು ಹೋಗಿ ಭೂಮಿ ಅಗೆದು, ಅದರಲ್ಲಿ ತನ್ನ ಧಣಿಯ ಆ ಹಣವನ್ನು ಹೂತಿಟ್ಟ. ಬಹಳ ಕಾಲವಾದ ಬಳಿಕ ಆ ಧಣಿ ಹಿಂದಿರುಗಿ ಬಂದ. ಸೇವಕರಿಂದ ಲೆಕ್ಕಚಾರ ಕೇಳಿದ. ಐದು ತಲೆಂತು ಪಡೆದವನು ಇನ್ನೂ ಐದು ತಲೆಂತುಗಳನ್ನು ಮುಂದೆ ತಂದು, "ಒಡೆಯಾ, ನೀವು ನನ್ನ ವಶಕ್ಕೆ ಐದು ತಲೆಂತು ಒಪ್ಪಿಸಿದಿರಿ. ಇಗೋ ನೋಡಿ, ಮತ್ತೆ ಐದು ಸಂಪಾದಿಸಿದ್ದೇನೆ," ಎಂದ. ಅದಕ್ಕೆ ಅ ಧಣಿ, 'ಭಲಾ, ನೆಚ್ಚಿನ ಸೇವಕ, ನೀನು ಪ್ರಮಾಣಿಕ. ಈ ಚಿಕ್ಕ ಕಾರ್ಯದಲ್ಲಿ ಪ್ರಾಮಾಣಿಕನಾಗಿದ್ದ ನಿನಗೆ ದೊಡ್ಡ ಜವಾಬ್ದಾರಿಯನ್ನೇ ವಹಿಸುತ್ತೇನೆ. ಬಾ, ನಿನ್ನ ಧಣಿಯ ಸೌಭಾಗ್ಯದಲ್ಲಿ ಭಾಗಿಯಾಗು," ಎಂದ ಎರಡು ತಲೆಂತು ಪಡೆದವನು ಮುಂದೆ ಬಂದು, "ಒಡೆಯಾ, ನೀವು ನನ್ನ ವಶಕ್ಕೆ ಎರಡು ತಲೆಂತುಗಳನ್ನು  ಒಪ್ಪಿಸಿದಿರಿ. ಇಗೋ ನೋಡಿ, ಇನ್ನೂ ಎರಡು ತಲೆಂತುಗಳನ್ನು ಸಂಪಾದಿಸಿದ್ದೇನೆ," ಎಂದ. ಧಣಿ ಅವನಿಗೂ, 'ಭಲಾ,  ನೆಚ್ಚಿನ ಸೇವಕ, ನೀನು ಪ್ರಾಮಾಣಿಕ. ಈ ಚಿಕ್ಕ ಕಾರ್ಯದಲ್ಲಿ ಪ್ರಾಮಾಣಿಕನಾಗಿದ್ದ ನಿನಗೂ ದೊಡ್ಡ ಜವಾಬ್ದಾರಿಯನ್ನೇ ವಹಿಸುತ್ತೇನೆ. ಬಾ, ನಿನ್ನ ಧಣಿಯ ಸೌಭಾಗ್ಯದಲ್ಲಿ ನೀನೂ ಭಾಗಿಯಾಗು," ಎಂದ. ತರುವಾಯ ಒಂದು ತಲೆಂತು ಪಡೆದವನೂ ಮುಂದೆ ಬಂದು: "ಒಡೆಯಾ, ನಿಮ್ಮ ಮನಸ್ಸು ಕಠಿಣ ಎಂಬುದನ್ನು ನಾನು ಬಲ್ಲೆ, ನೀವು ಬಿತ್ತದ ಎಡೆಯಲ್ಲಿ ಕೊಯ್ಲು ಮಾಡುವವರು; ನೀವು ತೂರದ ಎಡೆಯಲ್ಲಿ ರಾಶಿಮಾಡುವವರು; ಆದುದ್ದರಿಂದ ನಾನು ಭಯಪಟ್ಟೆ; ಹೋಗಿ ನಿಮ್ಮ ತಲೆಂತನ್ನು ಭೂಮಿಯಲ್ಲಿ ಹೂತಿಟ್ಟೆ, ಇಗೋ, ಸ್ವೀಕರಿಸಿ, ನಿಮ್ಮದು ನಿಮಗೆ ಸೇರಿದೆ,' ಎಂದ.  "ಆಗ ಧಣಿ ಅವನಿಗೆ, 'ಎಲವೋ ಮೈಗಳ್ಳನಾದ ದುಷ್ಟ ಸೇವಕ, ನಾನು ಬಿತ್ತದ ಎಡೆಯಲ್ಲಿ ಕೊಯ್ಲು ಮಾಡುವವನು; ನಾನು ತೂರದ ಎಡೆಯಲ್ಲಿ ರಾಶಿ ಮಾಡುವವನು ಎಂದು ನಿನಗೆ ಗೊತ್ತಿತ್ತಲ್ಲವೆ? ಹಾಗಾದರೆ  ನನ್ನ ಹಣವನ್ನು ನೀನು ಬಡ್ಡಿ ಅಂಗಡಿಯಲ್ಲಿ ಹಾಕಿಡಬೇಕಿತ್ತು; ನಾನು ಬಂದು ಬಡ್ಡಿಸಮೇತ ನನ್ನ ಅಸಲನ್ನು ಪಡೆಯುತ್ತಿದ್ದೆ', ಎಂದ. ಆನಂತರ ಪರಿಚಾರಕರಿಗೆ, 'ಇವನಿಂದ ಆ ತಲೆಂತು ನಾಣ್ಯವನ್ನು ಕಿತ್ತು ಹತ್ತು ತಲೆಂತು ಇರುವವನಿಗೆ ಕೊಡಿ. ಉಳ್ಳ ಪ್ರತಿಯೊಬ್ಬನಿಗೆ ಇನ್ನೂ ಹೆಚ್ಚಾಗಿ ಕೊಡಲಾಗುತ್ತದೆ. ಅವನು ಸಮೃದ್ಧನಾಗುತ್ತಾನೆ. ಇಲ್ಲದವನಿಂದ ಇರುವ ಕಿಂಚಿತ್ತನ್ನೂ ಕಸಿದುಕೊಳ್ಳಲಾಗುತ್ತದೆ. ಅಪ್ರಯೋಜಕನಾದ ಈ ಸೇವಕನನ್ನು ಹೊರಗಿನ ಕಗ್ಗತ್ತಲೆಗೆ ದಬ್ಬಿರಿ. ಅಲ್ಲಿ ಕಟಕಟನೆ ಹಲ್ಲುಕಡಿದುಕೊಂಡು ಗೋಳಾಡಬೇಕಾಗುವುದು.' ಎಂದು ಹೇಳಿದ.

26.08.22 - "ಆದ್ದರಿಂದ ಜಾಗೃತರಾಗಿರಿ! ಏಕೆಂದರೆ ಆ ದಿನವಾಗಲಿ, ಆ ಗಳಿಗೆ ಆಗಲಿ ಯಾವಾಗ ಬರುತ್ತದೆಂದು ನಿಮಗೆ ತಿಳಿಯದು."

ಮೊದಲನೇ ವಾಚನ: 1 ಕೊರಿಂಥಿಯರಿಗೆ 1:17-25

ಯೇಸುಕ್ರಿಸ್ತರು ನನ್ನನ್ನು ಕಳುಹಿಸಿರುವುದು ದೀಕ್ಷಾಸ್ನಾನವನ್ನು ಕೊಡುವುದಕ್ಕಲ್ಲ. ಶುಭಸಂದೇಶವನ್ನು ಸಾರುವುದಕ್ಕೆ ಅದೂ ವಾಕ್ಚಾತುರ್ಯದಿಂದಲ್ಲ. ಹಾಗೆ ಸಾರಿದ್ದೇ ಆದರೆ, ಕ್ರಿಸ್ತಯೇಸುವಿನ ಶಿಲುಬೆಯೇ ನಿರರ್ಥಕವಾದೀತು. ವಿನಾಶಮಾರ್ಗದಲ್ಲಿರುವವರಿಗೆ ಶಿಲುಬೆಯ ಸಂದೇಶ ಹುಚ್ಚು ಸಂಗತಿಯಾಗಿದೆ. ಮುಕ್ತಿಮಾರ್ಗದಲ್ಲಿರುವ ನಮಗಾದರೋ ಅದು ದೈವಶಕ್ತಿಯಾಗಿದೆ. “ಜ್ಞಾನಿಗಳ ಜ್ಞಾನವನ್ನು ನಾಶಮಾಡುವೆನು ಜಾಣರ ಜಾಣತನಕ್ಕೆ ಭಂಗತರುವೆನು” ಎಂದು ಪವಿತ್ರಗ್ರಂಥದಲ್ಲಿ ಇದೆಯಲ್ಲವೇ? ಹೀಗಿರುವಾಗ ಜ್ಞಾನಿಯೆಲ್ಲಿ? ಶಾಸ್ತ್ರಜ್ಞನೆಲ್ಲಿ? ಜಗತ್ತಿನ ತರ್ಕನಿಪುಣನೆಲ್ಲಿ? ಪ್ರಪಂಚದ ಜ್ಞಾನವನ್ನು ದೇವರು ಹುಚ್ಚುತನವಾಗಿಸಿಲ್ಲವೇ? ಲೋಕವು ತನ್ನ ಸ್ವಂತ ಜ್ಞಾನದಿಂದ ದೇವರನ್ನು ಅರಿಯಲಾರದೆ ಹೋಯಿತು. ಇದು ದೈವಸಂಕಲ್ಪವೇ ಸರಿ. ಆದ್ದರಿಂದಲೇ ನಾವು ಸಾರುವ ‘ಹುಚ್ಚುತನ’ವೆಂಬ ಸಂದೇಶದ ಮೂಲಕ ವಿಶ್ವಾಸವುಳ್ಳವರನ್ನು ಉದ್ಧರಿಸುವುದು ದೇವರಿಗೆ ಉಚಿತವೆನಿಸಿತು ಯೆಹೂದ್ಯರು ಸೂಚಕಕಾರ್ಯಗಳನ್ನು ಕೇಳುತ್ತಾರೆ. ಗ್ರೀಕರು ಜ್ಞಾನವನ್ನು ಅರಸುತ್ತಾರೆ.  ನಾವಾದರೋ ಶಿಲುಬೆಗೇರಿಸಲಾದ ಕ್ರಿಸ್ತಯೇಸುವನ್ನು ಪ್ರಚುರಪಡಿಸುತ್ತೇವೆ. ಯೆಹೂದ್ಯರಿಗೆ ಇದು ಅಸಹ್ಯವಾಗಿದೆ; ಅನ್ಯಜನರಿಗೆ ಹಾಸ್ಯಾಸ್ಪದವಾಗಿದೆ.  ಆದರೆ ಯೆಹೂದ್ಯರಾಗಿರಲಿ, ಗ್ರೀಕರಾಗಿರಲಿ, ದೇವರಿಂದ ಕರೆಹೊಂದಿದ್ದರೆ ಅಂಥವರಿಗೆ ಯೇಸುಕ್ರಿಸ್ತರು ದೇವರ ಶಕ್ತಿಯಾಗಿದ್ದಾರೆ ಹಾಗೂ ದೇವರ ಜ್ಞಾನವಾಗಿದ್ದಾರೆ.  ‘ದೇವರ ಹುಚ್ಚುತನ’ ಎಂಬುದು ಮಾನವ ಜ್ಞಾನಕ್ಕಿಂತಲೂ ಶ್ರೇಷ್ಠವಾದುದು. ‘ದೇವರ ದೌರ್ಬಲ್ಯ’ ಎಂಬುದು ಮಾನವ ಶಕ್ತಿಗಿಂತಲೂ ಪ್ರಬಲವಾದುದು.

ಕೀರ್ತನೆ: 33:1-2, 4-5, 10, 11

ಶ್ಲೋಕ: ಅಚಲ ಪ್ರೀತಿಯಿಂದ ಪ್ರಭು ಜಗವನು ತುಂಬಿಹನು

ಶುಭಸಂದೇಶ: ಮತ್ತಾಯ 25:1-13


ಯೇಸು ತಮ್ಮ ಶಿಷ್ಯರಿಗೆ ಹೀಗೆಂದರು: “ಆ ದಿನಗಳಲ್ಲಿ ಸ್ವರ್ಗಸಾಮ್ರಾಜ್ಯ ಹೇಗಿರುವುದು ಎನ್ನುವುದಕ್ಕೆ ಈ ಸಾಮತಿಯನ್ನು ಕೊಡಬಹುದು: ಹತ್ತುಮಂದಿ ಕನ್ಯೆಯರು ದೀಪಾರತಿ ಹಿಡಿದು ಮದುವಣಿಗನನ್ನು ಎದುರುಗೊಳ್ಳಲು ಹೋದರು. ಅವರಲ್ಲಿ ಐವರು ವಿವೇಕಿಗಳು, ಐವರು ಅವಿವೇಕಿಗಳು. ಅವಿವೇಕಿಗಳು ದೀಪಗಳನ್ನು ತೆಗೆದುಕೊಂಡರೇ ಹೊರತು ಜೊತೆಗೆ ಎಣ್ಣೆಯನ್ನು ತೆಗೆದುಕೊಳ್ಳಲಿಲ್ಲ. ವಿವೇಕಿಗಳಾದರೋ ದೀಪಗಳ ಜೊತೆಗೆ ಬುಡ್ಡಿಗಳಲ್ಲಿ ಎಣ್ಣೆಯನ್ನೂ ತೆಗೆದುಕೊಂಡರು. ಮದುವಣಿಗ ಬರುವುದು ತಡವಾಯಿತು. ಅವರೆಲ್ಲರೂ ತೂಕಡಿಸುತ್ತಾ ಹಾಗೇ ನಿದ್ರೆಹೋದರು. “ನಡುರಾತ್ರಿಯ ವೇಳೆ. ‘ಇಗೋ, ಮದುವಣಿಗ ಬರುತ್ತಿದ್ದಾನೆ; ಬನ್ನಿ, ಆತನನ್ನು ಎದುರುಗೊಳ್ಳಿ,’ ಎಂಬ ಕೂಗು ಕೇಳಿಸಿತು. ಕನ್ಯೆಯರೆಲ್ಲರೂ ಎದ್ದರು. ತಮ್ಮತಮ್ಮ ದೀಪದ ಬತ್ತಿಯನ್ನು ಸರಿಮಾಡಿದರು. ಅವಿವೇಕಿಗಳು, ‘ನಮ್ಮ ದೀಪಗಳು ಆರಿಹೋಗುತ್ತಾ ಇವೆ; ನಿಮ್ಮ ಎಣ್ಣೆಯಲ್ಲಿ ನಮಗೂ ಕೊಂಚ ಕೊಡಿ,’ ಎಂದು ವಿವೇಕಿಗಳನ್ನು ಕೇಳಿಕೊಂಡರು. ಅದಕ್ಕೆ ಅವರು, ‘ನಿಮಗೆ ಕೊಟ್ಟರೆ ನಮಗೂ ನಿಮಗೂ ಸಾಲದೆಹೋದೀತು, ನೀವು ಅಂಗಡಿಗೆ ಹೋಗಿ ಕೊಂಡುಕೊಂಡರೆ ಒಳ್ಳೆಯದು,’ ಎಂದರು.  ಅಂತೆಯೇ ಅವರು ಎಣ್ಣೆಯನ್ನು ಕೊಂಡುಕೊಳ್ಳಲು ಹೋದಾಗ ಮದುವಣಿಗನು ಬಂದೇಬಿಟ್ಟನು. ಸಿದ್ಧರಾಗಿದ್ದವರು ಅವನ ಸಂಗಡ ವಿವಾಹ ಮಹೋತ್ಸವಕ್ಕೆ ಹೋದರು. ಕಲ್ಯಾಣಮಂಟಪದ ಬಾಗಿಲುಗಳನ್ನು ಮುಚ್ಚಲಾಯಿತು.  ಉಳಿದ ಕನ್ಯೆಯರು ಅನಂತರ ಬಂದರು. ‘ಸ್ವಾಮೀ, ಸ್ವಾಮೀ, ನಮಗೆ ಬಾಗಿಲು ತೆರೆಯಿರಿ,’ ಎಂದು ಕೂಗಿಕೊಂಡರು.  ಅದಕ್ಕೆ ಉತ್ತರವಾಗಿ ಆ ಮದುವಣಿಗ, ‘ಅದಾಗದು, ನೀವು ಯಾರೋ ನನಗೆ ಗೊತ್ತಿಲ್ಲ,’ ಎಂದುಬಿಟ್ಟ.  ಆದ್ದರಿಂದ ಜಾಗೃತರಾಗಿರಿ! ಏಕೆಂದರೆ ಆ ದಿನವಾಗಲಿ, ಆ ಗಳಿಗೆ ಆಗಲಿ ಯಾವಾಗ ಬರುತ್ತದೆಂದು ನಿಮಗೆ ತಿಳಿಯದು."

25.08.22 - "ಕುಡುಕರ ಸಂಗಡ ತಿಂದು ಕುಡಿಯಲಾರಂಭಿಸಿದರೆ, ಅವನು ನಿರೀಕ್ಷಿಸದ ದಿನದಲ್ಲಿ, ತಿಳಿಯದ ಗಳಿಗೆಯಲ್ಲಿ, ಯಜಮಾನನು ಬರುವನು. "

ಮೊದಲನೇ ವಾಚನ: 1 ಕೊರಿಂಥಿಯರಿಗೆ 1:1-9

ಕ್ರಿಸ್ತಯೇಸುವಿನಲ್ಲಿ ಪುನೀತರಾಗಿ ದೇವಜನರಾಗಲು ಕರೆಹೊಂದಿರುವ ಕೊರಿಂಥದ ಶ್ರೀಸಭೆಯವರಿಗೂ ಹಾಗೂ ಪ್ರಭು ಯೇಸುಕ್ರಿಸ್ತರನ್ನು ಎಲ್ಲೆಡೆಯೂ ನಾಮಸ್ಮರಣೆ ಮಾಡುವ ಸರ್ವಜನರಿಗೂ - ದೇವರಚಿತ್ತಾನುಸಾರ ಕ್ರಿಸ್ತಯೇಸುವಿನ ಪ್ರೇಷಿತನಾಗಲು ಕರೆಹೊಂದಿದ ಪೌಲನಾದ ನಾನು ಸಹೋದರ ಸೊಸ್ಥೆನನೊಂದಿಗೆ ಸೇರಿ ಬರೆಯುವ ಪತ್ರ. ಯೇಸುಕ್ರಿಸ್ತರು ನಮಗೂ ಸಮಸ್ತ ದೇವಜನರಿಗೂ ಪ್ರಭುವಾಗಿದ್ದಾರೆ. ನಮ್ಮ ತಂದೆಯಾದ ದೇವರಿಂದಲೂ ಪ್ರಭುವಾದ ಯೇಸುಕ್ರಿಸ್ತರಿಂದಲೂ ನಿಮಗೆ ಅನುಗ್ರಹ ಮತ್ತು ಶಾಂತಿಸಮಾಧಾನ ಲಭಿಸಲಿ! ಕ್ರಿಸ್ತಯೇಸುವಿನಲ್ಲಿ ನಿಮಗೆ ಕೊಡಲಾಗಿರುವ ದೇವಾನುಗ್ರಹದ ಸಲುವಾಗಿ ನಾನು ನಿಮಗೋಸ್ಕರ ನನ್ನ ದೇವರಿಗೆ ಸತತವಾಗಿ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಏಕೆಂದರೆ, ಕ್ರಿಸ್ತಯೇಸುವಿನಲ್ಲಿ ನೀವು ಎಲ್ಲ ದೃಷ್ಟಿಯಿಂದಲೂ ಶ್ರೀಮಂತರು, ಜ್ಞಾನಸಂಪನ್ನರು ಮತ್ತು ವಾಕ್ಚತುರರು ಆಗಿದ್ದೀರಿ. 6ಇದಲ್ಲದೆ, ಕ್ರಿಸ್ತಯೇಸುವನ್ನು ಕುರಿತ ಸಾಕ್ಷ್ಯವು ನಿಮ್ಮಲ್ಲಿ ನೆಲೆಗೊಂಡಿದೆ. ಇದರಿಂದಾಗಿ ನಮ್ಮ ಪ್ರಭು ಯೇಸುಕ್ರಿಸ್ತರು ಪ್ರತ್ಯಕ್ಷವಾಗುವುದನ್ನೇ ಎದುರುನೋಡುತ್ತಿರುವ ನಿಮಗೆ ಯಾವ ಕೃಪಾಶೀರ್ವಾದಗಳ ಕೊರತೆಯು ಇಲ್ಲ. ನಮ್ಮ ಪ್ರಭು ಯೇಸುಕ್ರಿಸ್ತರ ದಿನದಂದು ನೀವು ನಿರ್ದೋಷಿಗಳಾಗಿರುವಂತೆ ಆ ದೇವರೇ, ನಿಮ್ಮನ್ನು ಕಡೆಯವರೆಗೂ ಸ್ಥಿರವಾಗಿ ಕಾಪಾಡುವರು. ತಮ್ಮ ಪುತ್ರನೂ ನಮ್ಮ ಪ್ರಭುವೂ ಆದ ಯೇಸುಕ್ರಿಸ್ತರ ಅನ್ಯೋನ್ಯತೆಗೆ ನಿಮ್ಮನ್ನು ಕರೆದಿರುವ ದೇವರು ನಿಜಕ್ಕೂ ವಿಶ್ವಾಸಪಾತ್ರರು.

ಕೀರ್ತನೆ: 145:2-3, 4-5, 6-7

ಶ್ಲೋಕ: ದೇವಾ, ಮಾಡುವೆ ನಿನ್ನ ನಾಮಕ್ಕೆ ನಮನ ಯುಗಯುಗಾಂತರಕೂ

ಶುಭಸಂದೇಶ: ಮತ್ತಾಯ 24:42-51 


ಯೇಸು ತಮ್ಮ ಶಿಷ್ಯರಿಗೆ ಹೀಗೆಂದರು: "ಎಚ್ಚರಿಕೆಯಿಂದಿರಿ, ನಿಮ್ಮ ಪ್ರಭು ಯಾವ ದಿನ ಬರುತ್ತಾನೆಂದು ನಿಮಗೆ ತಿಳಿಯದು, ಆದ್ದರಿಂದ ಎಚ್ಚರವಾಗಿರಿ.  ಕಳ್ಳನು ಬರುವ ಗಳಿಗೆ ಮನೆಯ ಯಜಮಾನನಿಗೆ ತಿಳಿದಿದ್ದರೆ ಅವನು ಎಚ್ಚರವಾಗಿದ್ದು ತನ್ನ ಮನೆಗೆ ಕನ್ನಹಾಕಲು ಬಿಡನು, ಅಲ್ಲವೆ?  ಇದನ್ನು ಚೆನ್ನಾಗಿ ತಿಳಿದುಕೊಂಡು ನೀವು ಸಹ ಸಿದ್ಧರಾಗಿರಿ. ಏಕೆಂದರೆ ನರಪುತ್ರನು ನೀವು ನಿರೀಕ್ಷಿಸದ ಗಳಿಗೆಯಲ್ಲಿ ಬರುವನು. “ಪ್ರಾಮಾಣಿಕನೂ ವಿವೇಕಿಆದ ಮೇಸ್ತ್ರಿ ಯಾರು? ಕಾಲಕಾಲಕ್ಕೆ ಸರಿಯಾಗಿ ಕೂಲಿ ಆಳುಗಳಿಗೆ ದವಸಧಾನ್ಯಗಳನ್ನು ಅಳೆದುಕೊಟ್ಟು ತನ್ನ ಮನೆಯ ಮೇಲ್ವಿಚಾರಣೆಯನ್ನು ನೋಡಿಕೊಳ್ಳಲು ಯಜಮಾನನಿಂದ ನೇಮಕಗೊಂಡವನು. ಯಜಮಾನನು ಮನೆಗೆ ಹಿಂದಿರುಗಿಬಂದಾಗ ಆ ಮೇಸ್ತ್ರಿ ತನ್ನ ಕರ್ತವ್ಯವನ್ನು ನಿಷ್ಠೆಯಿಂದ ನೆರವೇರಿಸುತ್ತಿದ್ದರೆ ಅವನು ಧನ್ಯನು.  ಅಂಥವನನ್ನು ಯಜಮಾನನು ತನ್ನ ಎಲ್ಲಾ ಆಸ್ತಿಪಾಸ್ತಿಗೆ ಆಡಳಿತಗಾರನನ್ನಾಗಿ ನೇಮಿಸುತ್ತಾನೆಂಬುದು ನಿಶ್ಚಯ.  ಆದರೆ ಆ ಮೇಸ್ತ್ರಿ ದುಷ್ಟನಾಗಿದ್ದು ‘ನನ್ನ ಯಜಮಾನ ತಡಮಾಡುವನು’ ಎಂದು ನೆನಸಿಕೊಂಡು,  ತನ್ನ ಜೊತೆಯ ಸೇವಕರನ್ನು ಹೊಡೆಯತೊಡಗಿದರೆ, ಕುಡುಕರ ಸಂಗಡ ತಿಂದು ಕುಡಿಯಲಾರಂಭಿಸಿದರೆ,  ಅವನು ನಿರೀಕ್ಷಿಸದ ದಿನದಲ್ಲಿ, ತಿಳಿಯದ ಗಳಿಗೆಯಲ್ಲಿ, ಯಜಮಾನನು ಬರುವನು.  ಅವನನ್ನು ಚಿತ್ರಹಿಂಸೆಗೂ ಕಪಟಿಗಳ ದುರ್ಗತಿಗೂ ಗುರಿಮಾಡುವನು. ಅಲ್ಲಿರುವವರೊಡನೆ ಕಟಕಟನೆ ಹಲ್ಲುಕಡಿದುಕೊಂಡು ಗೋಳಾಡಬೇಕಾಗುವುದು."

24.08.22 - “ಗುರುದೇವಾ’ ದೇವರ ಪುತ್ರ ನೀವೇ; ಇಸ್ರಯೇಲರ ಅರಸ ನೀವೇ,”

 ಮೊದಲನೇ ವಾಚನ: ಪ್ರಕಟನೆ 21:9-14

ದೇವದೂತರುಗಳಲ್ಲಿ  ಒಬ್ಬನು ಬಂದು, ನನ್ನೊಡನೆ ಮಾತನಾಡಿ ಇಂತೆಂದನು: “ಇಲ್ಲಿಗೆ ಬಾ, ಯಜ್ಞದ ಕುರಿಮರಿಗೆ ಸತಿಯಾಗಲಿರುವ ಮದುವಣಗಿತ್ತಿಯನ್ನು ನಿನಗೆ ತೋರಿಸುತ್ತೇನೆ,” ಎಂದನು.  ಆಗ ನಾನು ಪವಿತ್ರಾತ್ಮವಶನಾದೆ. ಆ ದೇವದೂತನು ನನ್ನನ್ನು ಎತ್ತರವಾದ ಬೆಟ್ಟದ ಮೇಲೆ ಕೊಂಡೊಯ್ದನು. ಅಲ್ಲಿ ನನಗೆ ಪವಿತ್ರನಗರವಾದ ಜೆರುಸಲೇಮನ್ನು ತೋರಿಸಿದನು. ಅದು ಸ್ವರ್ಗದಲ್ಲಿರುವ ದೇವರ ಬಳಿಯಿಂದ ಕೆಳಗಿಳಿದು ಬರುತ್ತಿತ್ತು;  ದೇವರ ತೇಜಸ್ಸಿನಿಂದ ಕೂಡಿತ್ತು; ಅಮೂಲ್ಯ ರತ್ನದಂತೆ ಹೊಳೆಯುತ್ತಿತ್ತು; ಸ್ವಚ್ಛವಾದ ಸ್ಫಟಿಕದಂತೆ ಶುಭ್ರವಾಗಿತ್ತು.  ಆ ನಗರದ ಸುತ್ತಲೂ ಎತ್ತರವಾದ ಕೋಟೆಯಿತ್ತು. ಅದಕ್ಕೆ ಹನ್ನೆರಡು ಹೆಬ್ಬಾಗಿಲುಗಳಿದ್ದವು. ಆ ಬಾಗಿಲುಗಳಿಗೆ ಹನ್ನೆರಡು ಮಂದಿ ದೇವದೂತರುಗಳು ಕಾವಲಿದ್ದರು. ಆ ಬಾಗಿಲುಗಳ ಮೇಲೆ ಇಸ್ರಯೇಲಿನ ಹನ್ನೆರಡು ಕುಲಗಳ ಹೆಸರುಗಳನ್ನು ಬರೆದಿತ್ತು.  ಪೂರ್ವದಿಕ್ಕಿನಲ್ಲಿ ಮೂರು ಬಾಗಿಲುಗಳು, ಉತ್ತರ ದಿಕ್ಕಿನಲ್ಲಿ ಮೂರು ಬಾಗಿಲುಗಳು, ದಕ್ಷಿಣ ದಿಕ್ಕಿನಲ್ಲಿ ಮೂರು ಬಾಗಿಲುಗಳು ಮತ್ತು ಪಶ್ಚಿಮ ದಿಕ್ಕಿನಲ್ಲಿ ಮೂರು ಬಾಗಿಲುಗಳು ಇದ್ದವು.  ಆ ನಗರದ ಕೋಟೆಗೆ ಹನ್ನೆರಡು ಅಸ್ತಿವಾರಗಳಿದ್ದವು. ಅವುಗಳ ಮೇಲೆ ಹನ್ನೆರಡು ಹೆಸರುಗಳಿದ್ದವು. ಯಜ್ಞದ ಕುರಿಮರಿಯ ಹನ್ನೆರಡು ಪ್ರೇಷಿತರ ಹೆಸರುಗಳು ಅವು.

ಕೀರ್ತನೆ: 145:10-11, 12-13, 17-18

ಶ್ಲೋಕ: ಪ್ರಭೂ, ಭಕ್ತಸಮೂಹವು ಪ್ರಸಿದ್ಧಪಡಿಸುವುದು ನಿನ್ನ ರಾಜ್ಯದ ಮಹತ್ವವನು

ಶುಭಸಂದೇಶ: ಯೊವಾನ್ನ 1:45-51


ಫಿಲಿಪ್ಪನು ನತಾನಿಯೇಲನನ್ನು ಕಂಡು, “ಧರ್ಮಶಾಸ್ತ್ರದಲ್ಲಿ ಮೋಶೆ ಉಲ್ಲೇಖಿಸಿದ ಮತ್ತು ಪ್ರವಾದಿಗಳು ಪ್ರವಚನ ಮಾಡಿದ ವ್ಯಕ್ತಿಯು ನಮಗೆ ಸಿಕ್ಕಿದ್ದಾರೆ. ಇವರೇ ಜೋಸೆಫನ ಮಗನಾದ ನಜರೇತ್ ಊರಿನ ಯೇಸು,” ಎಂದು ಹೇಳಿದನು.  ಅದಕ್ಕೆ ನತಾನಿಯೇಲನು, “ಏನು? ನಜರೇತಿನಿಂದ ಒಳ್ಳೆಯದೇನಾದರೂ ಬರುವುದು ಉಂಟೆ?” ಎಂದು ಕೇಳಲು, “ಬಂದು ನೀನೇ ನೋಡು,” ಎಂದು ಫಿಲಿಪ್ಪನು ಉತ್ತರಕೊಟ್ಟನು.  ತಮ್ಮ ಬಳಿಗೆ ಬರುತ್ತಿದ್ದ ನತಾನಿಯೇಲನನ್ನು ಕಂಡ ಯೇಸು, “ಇಗೋ ನೋಡಿ, ನಿಜವಾದ ಇಸ್ರಯೇಲನು, ಈತನಲ್ಲಿ ಕಪಟವಿಲ್ಲ,” ಎಂದು ನುಡಿದರು.  ನತಾನಿಯೇಲನು, “ನನ್ನ ಪರಿಚಯ ನಿಮಗೆ ಹೇಗಾಯಿತು?” ಎಂದು ಕೇಳಲು ಯೇಸು, “ಫಿಲಿಪ್ಪನು ನಿನ್ನನ್ನು ಕರೆಯುವ ಮೊದಲೇ ನೀನು ಅಂಜೂರದ ಮರದಡಿ ಇದ್ದಾಗ ನಾನು ನಿನ್ನನ್ನು ಕಂಡೆ,” ಎಂದು ಉತ್ತರಕೊಟ್ಟರು.  ಅದಕ್ಕೆ ನತಾನಿಯೇಲನು, “ಗುರುದೇವಾ’ ದೇವರ ಪುತ್ರ ನೀವೇ; ಇಸ್ರಯೇಲರ ಅರಸ ನೀವೇ,” ಎಂದನು.  ಆಗ ಯೇಸು, “ಅಂಜೂರದ ಮರದಡಿಯಲ್ಲಿ ನಿನ್ನನ್ನು ಕಂಡೆ ಎಂದು ನಾನು ಹೇಳಿದ ಮಾತ್ರಕ್ಕೆ ಇಷ್ಟೊಂದು ವಿಶ್ವಾಸವೆ? ಇದಕ್ಕೂ ಮಿಗಿಲಾದವುಗಳನ್ನು ನೀನು ಕಾಣುವೆ,” ಎಂದು ನುಡಿದರು. ತಮ್ಮ ಮಾತನ್ನು ಮುಂದುವರೆಸುತ್ತಾ, “ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ. ಸ್ವರ್ಗವು ತೆರೆದಿರುವುದನ್ನೂ ನರಪುತ್ರನ ಮುಖಾಂತರ ದೇವದೂತರು ಏರುವುದನ್ನೂ ಇಳಿಯುವುದನ್ನೂ ನೀವು ಕಾಣುವಿರಿ,” ಎಂದು ಹೇಳಿದರು.

23.08.22 - "ನೀವು ನಿಮ್ಮ ತಟ್ಟೆ ಲೋಟಗಳ ಹೊರ ಭಾಗಗಳನ್ನೇನೋ ಶುಚಿ ಮಾಡುತ್ತೀರಿ; ಆದರೆ ಅವುಗಳ ಒಳಭಾಗ ಕೊಳೆ ಹಾಗೂ ಲೋಭದ ಗಳಿಕೆಗಳಿಂದ ತುಂಬಿ ಹೋಗಿದೆ."

ಮೊದಲನೇ ವಾಚನ: 2 ಥೆಸಲೋನಿಯರಿಗೆ 2:1-3, 14-16

ಸಹೋದರರೇ, ನಮ್ಮ ಪ್ರಭು ಯೇಸುಕ್ರಿಸ್ತರ ಪುನರಾಗಮನವನ್ನು ಮತ್ತು ನಾವು ಅವರ ಸನ್ನಿಧಿಯಲ್ಲಿ ಒಂದಾಗಿ ಸೇರುವ ವಿಷಯವನ್ನು ಕುರಿತು ನಿಮ್ಮಲ್ಲಿ ನಾವು ವಿನಂತಿಸುವುದೇನೆಂದರೆ: ಪ್ರಭುವಿನ ದಿನವು ಬಂದೇ ಬಿಟ್ಟಿತೆಂದು ಪ್ರವಾದನೆಯಿಂದಾಗಲಿ, ಪ್ರವಚನದಿಂದಾಗಲಿ ಅಥವಾ ನಮ್ಮ ಪತ್ರದಿಂದಾಗಲಿ ತಿಳಿದುಬಂದಿದೆಯೆಂದು ಯಾರಾದರೂ ಹೇಳಿದರೆ, ಒಮ್ಮೆಗೇ ನೀವು ತಬ್ಬಿಬ್ಬಾಗಿ, ತಳಮಳಗೊಳ್ಳದಿರಿ. ನಿಮ್ಮನ್ನು ಯಾರೂ ಯಾವ ರೀತಿಯಲ್ಲೂ ವಂಚಿಸದಿರಲಿ. ಆ ದಿನವು ಬರುವುದಕ್ಕೆ ಮುಂಚೆ ದೇವರಿಗೆ ವಿರುದ್ಧವಾದ ‘ಅಂತಿಮ ಪ್ರತಿಭಟನೆ’ ಉಂಟಾಗುವುದು. ‘ಪಾಪ ಪುರುಷನಾದ’ ಅಧರ್ಮಿ ತಲೆ ಎತ್ತಿಕೊಳ್ಳುವನು. ಹೀಗೆ ಉದ್ಧಾರಹೊಂದಿ ನಮ್ಮ ಪ್ರಭು ಯೇಸುಕ್ರಿಸ್ತರ ಮಹಿಮೆಯಲ್ಲಿ ನೀವು ಸಹ ಪಾಲುಗೊಳ್ಳುವಂತೆ, ನಾವು ಸಾರಿದ ಶುಭಸಂದೇಶದ ಮೂಲಕ ದೇವರು ನಿಮ್ಮನ್ನು ಕರೆದಿದ್ದಾರೆ.  ಆದ್ದರಿಂದ ಸಹೋದರರೇ, ನಾವು ನಿಮಗೆ ಬಾಯಿಮಾತಿನಿಂದಾಗಲಿ, ಪತ್ರದ ಮೂಲವಾಗಲಿ ಬೋಧಿಸಿರುವ ಸತ್ಸಂಪ್ರದಾಯಗಳನ್ನು ಪ್ರಾಮಾಣಿಕವಾಗಿ ಪಾಲಿಸುತ್ತಾ ಸ್ಥಿರವಾಗಿ ನಿಲ್ಲಿರಿ ನಮ್ಮನ್ನು ಪ್ರೀತಿಸಿ ನಿತ್ಯಾದರಣೆಯನ್ನೂ ಉತ್ತಮ ನಿರೀಕ್ಷೆಯನ್ನೂ ಅನುಗ್ರಹವಾಗಿ ಕೊಟ್ಟಿರುವ ನಮ್ಮ ಪ್ರಭುವಾದ ಯೇಸುಕ್ರಿಸ್ತರು ಹಾಗೂ ಪಿತನಾದ ದೇವರು ನಿಮ್ಮ ಹೃನ್ಮನಗಳನ್ನು ಉತ್ತೇಜನಗೊಳಿಸಲಿ.  ಸಕಲ ಸತ್ಕಾರ್ಯಗಳಲ್ಲೂ ಸನ್ನುಡಿಯಲ್ಲೂ ನಿಮ್ಮನ್ನು ದೃಢಪಡಿಸಲಿ.

ಕೀರ್ತನೆ: 96:10, 11-12, 13

ಶ್ಲೋಕ: ಪ್ರಭು ಧರಗೆ ನ್ಯಾಯತೀರಿಸಲು ಬಂದೇಬರುವನು ಖರೆಯಾಗಿ

ಶುಭಸಂದೇಶ: ಮತ್ತಾಯ 23:23-26


ಯೇಸುಸ್ವಾಮಿ ತಮ್ಮ ಶಿಷ್ಯರನ್ನೂ ಜನಸಮೂಹವನ್ನೂ ಉದ್ದೇಶಿಸಿ, "ಕಪಟ ಧರ್ಮಶಾಸ್ತ್ರಿಗಳೇ, ಫರಿಸಾಯರೇ, ನಿಮಗೆ ಧಿಕ್ಕಾರ! ನೀವು ಪುದೀನ, ಸದಾಪ, ಜೀರಿಗೆ ಮುಂತಾದವುಗಳ ದಶಾಂಶವನ್ನು ದೇವರಿಗೆ ಸಲ್ಲಿಸುತ್ತೀರಿ. ಆದರೆ ಧರ್ಮಶಾಸ್ತ್ರದಲ್ಲಿ ಪ್ರಮುಖವಾದ ನ್ಯಾಯನೀತಿ, ದಯೆದಾಕ್ಷಿಣ್ಯ, ಪ್ರಾಮಾಣಿಕತೆ ಇವುಗಳನ್ನು ಬದಿಗೊತ್ತಿದ್ದೀರಿ. ನೀವು ಅವುಗಳನ್ನು ಅಲಕ್ಷ್ಯಮಾಡಬೇಕೆಂದು ಅಲ್ಲ, ಆದರೆ ಇವುಗಳನ್ನೂ ಅನುಷ್ಠಾನಕ್ಕೆ ತರಲೇಬೇಕಿತ್ತು.  ಅಂಧ ನಿರ್ದೇಶಕರೇ, ನೀವು ಸೊಳ್ಳೆಯನ್ನೇನೋ ಸೋಸುತ್ತೀರಿ, ಆದರೆ ಒಂಟೆಯನ್ನೇ ನುಂಗಿಬಿಡುತ್ತೀರಿ.  ಕಪಟ ಧರ್ಮಶಾಸ್ತ್ರಿಗಳೇ ಮತ್ತು ಫರಿಸಾಯರೇ, ನಿಮಗೆ ಧಿಕ್ಕಾರ! ನೀವು ನಿಮ್ಮ ತಟ್ಟೆಲೋಟಗಳ ಹೊರ ಭಾಗಗಳನ್ನೇನೋ ಶುಚಿ ಮಾಡುತ್ತೀರಿ; ಆದರೆ ಅವುಗಳ ಒಳಭಾಗ ಕೊಳೆ ಹಾಗೂ ಲೋಭದ ಗಳಿಕೆಗಳಿಂದ ತುಂಬಿ ಹೋಗಿದೆ.  ಕುರುಡ ಫರಿಸಾಯನೇ, ಮೊತ್ತಮೊದಲು ತಟ್ಟೆಲೋಟಗಳ ಒಳಭಾಗವನ್ನು ತೊಳೆ, ಆಗ ಅವುಗಳ ಹೊರ ಭಾಗವೂ ಶುಚಿಯಾಗುವುದು." ಎಂದರು.

22.08.22

ಮೊದಲನೇ ವಾಚನ:  2 ಥೆಸಲೋನಿಯರಿಗೆ 1:1:5, 11-12

ನಮ್ಮ ಪುತನಾದ ದೇವರ ಹಾಗೂ ಪ್ರಭುವಾದ ಯೇಸುಕ್ರಿಸ್ತರ ಅನ್ಯೋನ್ಯತೆಯಲ್ಲಿರುವ ಥೆಸಲೋನಿಕದ ಸಭೆಯವರಿಗೆ - ಪೌಲ, ಸಿಲ್ವಾನ ಹಾಗೂ ತಿಮೊಥೇಯರು ಬರೆಯುವ ಪತ್ರ. ತಂದೆಯಾದ ದೇವರ ಮತ್ತು ಪ್ರಭುವಾದ ಯೇಸುಕ್ರಿಸ್ತರ ಅನುಗ್ರಹವೂ ಶಾಂತಿ ಸಮಾಧಾನವೂ ನಿಮಗೆ ಲಭಿಸಲಿ! ಸಹೋದರರೇ, ನಿಮಗಾಗಿ ನಾವು ಯಾವಾಗಲೂ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸಲು ಬದ್ದರಾಗಿದ್ದೇವೆ; ಹಾಗೆ ಸಲ್ಲಿಸುವುದು ಯುಕ್ತವೂ ಹೌದು. ಏಕೆಂದರೆ, ನಿಮ್ಮ ವಿಶ್ವಾಸವು ಪ್ರವರ್ಧಿಸುತ್ತಾ ಇದೆ. ನಿಮ್ಮಲ್ಲಿರುವ ಪರಸ್ಪರ ಪ್ರೀತಿ ಹೆಚ್ಚುತ್ತಿದೆ. ಯಾವಾಗಲೂ ಸಹನೆಯಿಂದಲೂ ಸ್ಥಿರ ವಿಶ್ವಾಸದಿಂದಲೂ ನಿಮಗೆ ಬಂದೊದಗಿರುವ ಕಷ್ಟ ಸಂಕಟಗಳನ್ನೂ ಚಿತ್ರ ಹಿಂಸೆಗಳನ್ನು ಅನುಭವಿಸುತ್ತಿದ್ದೀರಿ. ಅದಕ್ಕಾಗಿ ದೇವರ ಸಭೆಗಳಲ್ಲಿ ನಿಮ್ಮನ್ನು ಕುರಿತು ನಾವು ಹೆಮ್ಮೆಯಿಂದ ಮಾತನಾಡುತ್ತೇವೆ. ನೀವು ಅನುಭವಿಸುತ್ತಿರುವುದೆಲ್ಲಾ ದೇವರ ಸಾಮ್ರಾಜ್ಯಕ್ಕಾಗಿ. ಈ ಕಷ್ಟಾನುಭವಗಳ ಮೂಲಕ ದೇವರು ನಿಮ್ಮನ್ನು ತಮ್ಮ ಸಾಮ್ರಾಜ್ಯಕ್ಕೆ ಅರ್ಹರನ್ನಾಗಿ ಮಾಡುತ್ತಾರೆ. ಇವುಗಳಲ್ಲಿ ನೀವು ತೋರಿಸುವ ಸಹನೆ ಹಾಗು ವಿಶ್ವಾಸ ಇವುಗಳೇ ದೇವರು ನ್ಯಾಯವಾದ ತೀರ್ಪು ಮಾಡುತ್ತಾರೆಂಬುದಕ್ಕೆ ಸ್ಪಷ್ಟ ನಿದರ್ಶನಗಳು. ಇದಕ್ಕಾಗಿ ನಿಮಗೋಸ್ಕರ ನಾವು ಸದಾ ಪ್ರಾರ್ಥಿಸುತ್ತೇವೆ. ದೇವರೇ ನೀಡಿರುವ ಕರೆಗೆ ನೀವು ಯೋಗ್ಯರಾಗಿ ಬಾಳುವಂತಾಗಲಿ; ದೇವರ ಮಹಿಮಾ ಶಕ್ತಿಯಿಂದ ನಿಮ್ಮ ಶುಭಾಕಾಂಕ್ಷೆಗಳು ಮತ್ತು ವಿಶ್ವಾಸ ಪ್ರೇರಿತ ಕಾರ್ಯಗಳು ಪೂರ್ಣವಾಗಲಿ. ಹೀಗೆ ನಿಮ್ಮ  ಮುಖಾಂತರ ಪ್ರಭು ಯೇಸುವಿನ ನಾಮಕ್ಕೂ ಮತ್ತು ಅವರಲ್ಲಿ ನಿಮಗೂ ಮಹಿಮೆಯುಂಟಾಗಲಿ. ನಮ್ಮ ದೇವರ ಹಾಗು ಪ್ರಭು ಯೇಸುಕ್ರಿಸ್ತರ ಅನುಗ್ರಹದಿಂದ ಇದು ನೆರವೇರಲಿ.

ಕೀರ್ತನೆ: 96: 1-2ಎ, 2ಬಿ-3, 4-5
ಶ್ಲೋಕ: ಪ್ರಭುವಿಗೆ ಹಾಡಿರಿ, ಆತನ ನಾಮವನು ಕೊಂಡಾಡಿರಿ.

ಶುಭಸಂದೇಶ: ಮತ್ತಾಯ: 23: 13-22 

"ಕಪಟ ಧರ್ಮಶಾಸ್ತ್ರಿಗಳೇ ಮತ್ತು ಫರಿಸಾಯರೇ, ನಿಮಗೆ ಧಿಕ್ಕಾರ! ಸ್ವರ್ಗಸಾಮ್ರಾಜ್ಯದ ದ್ವಾರಗಳನ್ನು ಮಾನವರಿಗೆ ಮುಚ್ಚಿದ್ದೀರಿ. ನೀವು ಪ್ರವೇಶಿಸುವುದಿಲ್ಲ, ಒಳಕ್ಕೆ ಪ್ರವೇಶಿಸಲು ಯತ್ನಿಸುವವರನ್ನೂ ಬಿಡುವುದಿಲ್ಲ. ಕಪಟ ಧರ್ಮಶಾಸ್ತ್ರಿಗಳೇ, ಫರಿಸಾಯರೇ, ನಿಮಗೆ ಧಿಕ್ಕಾರ! (ವಿಧವೆಯರ ಮನೆಮಾರುಗಳನ್ನು ನೀವು ನುಂಗಿ ಬಿಡುತ್ತೀರಿ. ನಟನೆಗಾಗಿ ಉದ್ದುದ್ದ ಜಪತಪಗಳನ್ನು ಮಾಡುತ್ತೀರಿ, ನೀವು ಅತೀ ಕಠಿಣವಾದ ದಂಡನೆಗೆ ಗುರಿಯಾಗುವಿರಿ). ಕಪಟ ಧರ್ಮಶಾಸ್ತ್ರಿಗಳೇ ಮತ್ತು ಫರಿಸಾಯರೇ, ನಿಮಗೆ ಧಿಕ್ಕಾರ! ಕೇವಲ ಒಬ್ಬ ವ್ಯಕ್ತಿಯನ್ನು ಮತಾಂತರಿಸಿಕೊಳ್ಳುವುದಕ್ಕಾಗೆ ಜಲ ನೆಲಗಳನ್ನು ಸುತ್ತಿ ಬರುತ್ತೀರಿ. ಮತಾಂತರಗೊಂಡ ಬಳಿಕವಾದರೋ ಅವನು ನಿಮಗಿಂತಲೂ ಇಮ್ಮಡಿ ನರಕಕ್ಕೆ ಗುರಿಯಾಗುವಂತೆ ಮಾಡುತ್ತೀರಿ. "ಕುರುಡ ಮಾರ್ಗದರ್ಶಕರೇ, ನಿಮಗೆ ಧಿಕ್ಕಾರ! ಒಬ್ಬನು ದೇವಾಲಯದ ಮೇಲೆ ಆಣೆಯಿಟ್ಟರೆ ಅವನು ಅದಕ್ಕೇನು ಬದ್ದನಲ್ಲ. ದೇವಾಲಯದ ಚಿನ್ನದ ಮೇಲೆ ಆಣೆಯಿಟ್ಟರೋ, ಅವನು ಅದನ್ನು ನಡೆಸಿಯೇ ತೀರಬೇಕು ಎನ್ನುತ್ತೀರಿ. ದೃಷ್ಠಿಗೆಟ್ಟ ಮತಿ ಭ್ರಷ್ಟರೇ, ಯಾವುದು ಶ್ರೇಷ್ಠ? ಚಿನ್ನವೋ, ಚಿನ್ನವನ್ನು ಪಾವನಗೊಳಿಸುವ ದೇವಾಲಯವೋ? ಅಂತೆಯೇ, ಒಬ್ಬನು ಬಳಿಪೀಠದ ಮೇಲೆ ಆಣೆಯಿಟ್ಟರೆ ಅದಕ್ಕೇನು ಬದ್ದನಲ್ಲ. ಬಲಿಪೀಠದ ಮೇಲಿರುವ ಕಾಣಿಕೆಗಳ ಮೇಲೆ ಆಣೆಯಿಟ್ಟರೋ, ಅದನ್ನು ಅವನು ನಡೆಸಿಯೇ ತೀರಬೇಕು ಎನ್ನುತ್ತೀರಿ. ದೃಷ್ಠಿ ಹೀನರೇ! ಯಾವುದು ಶ್ರೇಷ್ಠ? ಕಾಣಿಕೆಯೋ ಕಾಣಿಕೆಯನ್ನು ಪಾವನಗೊಳಿಸುವ ಬಲಿಪೀಠವೋ? ಬಲಿಪೀಠದ ಮೇಲೆ ಆಣೆಯಿಡುವವನು ಬಲಿಪೀಠದ ಮೇಲೆ ಮಾತ್ರವಲ್ಲ, ಅದರ ಮೇಲಿರುವ ಪ್ರತಿಯೊಂದು ಕಾಣಿಕೆಯ ಮೇಲೂ ಆಣೆಯಿಡುತ್ತಾನೆ. ದೇವಾಲಯದ ಮೇಲೆ ಆಣೆಯಿಡುವವನು ಅದರ ಮೇಲೆ ಮಾತ್ರವಲ್ಲ, ಅದರಲ್ಲಿ ನೆಲೆಸುವ ದೇವರ ಮೇಲೂ ಆಣೆಯಿಡುತ್ತಾನೆ. ಹಾಗೆಯೇ, ಸ್ವರ್ಗದ ಮೇಲೆ ಆಣೆಯಿಡುವವನು ದೇವರ ಸಿಂಹಾಸನಸ ಮೇಲೂ ಅದರಲ್ಲಿ ಆಸೀನರಾಗಿರುವವರ ಮೇಲೂ ಆಣೆಯಿಡುತ್ತಾನೆ. 

21.08.22 - " ಕಡೆಯವರಲ್ಲಿ ಕೆಲವರು ಮೊದಲಿಗರಾಗುವರು. ಮೊದಲಗರಲ್ಲಿ ಕೆಲವರು ಕಡೆಯವರಾಗುವರು,"

ಮೊದಲನೇ ವಾಚನ: ಯೆಶಾಯ 66:18-21

ಸರ್ವೇಶ್ವರ ಸ್ವಾಮಿ ಹೀಗೆನ್ನುತ್ತಾರೆ: "ಸಮಸ್ತ ರಾಷ್ಟ್ರಗಳನ್ನೂ ಸಕಲ ಭಾಷೆಯವರನ್ನೂ ಒಟ್ಟಿಗೆ ಬರ ಮಾಡುವೆನು. ಅವರು ಬಂದು ನನ್ನ ಮಹಿಮೆಯ ಪ್ರಕಾಶವನ್ನು ಕಾಣುವರು. ಅವರ ಮಧ್ಯೆ ಒಂದು ಸೂಚಕ ಕಾರ್ಯವನ್ನು ಮಾಡುವೆನು. ಅವರಲ್ಲಿ ಅಳಿದುಳಿದವರನ್ನು ನನ್ನ ಸುದ್ಧಿಯನ್ನು ಕೇಳದೆಯೂ ನನ್ನ ಮಹಿಮೆಯನ್ನು ಕಾಣದೆಯೂ ಇರುವವರ ಬಳಿಗೆ ಕಳಿಸುವೆನು. ತಾರ್ಷೀರ್ಷ್, ಲಿಬಿಯಾ, ಧನುರ್ಧಾರಿಗಳಾದ ಲೂದಿಯಾ, ತೂಬಲ್, ಗ್ರೀಸ್ ಎಂಬ ನಾಡುಗಳಿಗೂ ದೂರದ ದ್ವೀಪ ನಿವಾಸಿಗಳ ಬಳಿಗೂ ಕಳಿಸುವೆನು. ಈ ಅನ್ಯ ಜನಾಂಗಗಳಿಗೆ ನಿಮ್ಮ ಸಹೋದರರನ್ನು ಕರೆದು ತರುವರು. ಇಸ್ರಯೇಲರು ನನ್ನ ಆಲಯಕ್ಕೆ ಶುದ್ಧ ಪಾತ್ರೆಗಳಲ್ಲಿ ನೈವೇದ್ಯವನ್ನು ತೆಗೆದುಕೊಂಡು ಬರುವಂತೆ,  ಅವರನ್ನು ಕುದುರೆ, ತೇರು, ಪಲ್ಲಕ್ಕಿ, ಹೇಸರಗತ್ತೆ, ಒಂಟೆ, ಇವುಗಳ ಮೇಲೆ ಏರಿಸಿಕೊಂಡು ಜೆರುಸಲೇಮೆಂಬನನ್ನ ಪವಿತ್ರ ಪರ್ವತಕ್ಕೆ ಕರೆದು ತರುವರು. ನಾನು ಅವರಲ್ಲಿ ಕೆಲವರನ್ನು ಯಾಜಕರನ್ನಾಗಿಯೂ ಲೇವಿಯರನ್ನಾಗಿಯೂ ಆರಿಸಿಕೊಳ್ಳುವೆನು" ಇದು ಸರ್ವೇಶ್ವರಸ್ವಾಮಿರ ನುಡಿ.

ಕೀರ್ತನೆ: 117:1,2

ಶ್ಲೋಕ: ವಿಶ್ವದ ಎಲ್ಲೆಡೆಗಳಿಗೂ ಹೋಗಿ ಜಗತ್ತಿಗೆಲ್ಲಾ ಶುಭಸಂದೇಶವನ್ನು ಪ್ರಬೋಧಿಸಿರಿ

ಸ್ತುತಿ ಮಾಡಿ  ಪ್ರಭುವನು  ಸಮಸ್ತ  ರಾಷ್ಟ್ರಗಳೇ|
ಆತನನು  ಹೊಗಳಿ  ಹಾಡಿ  ಸರ್ವ  ಜನಾಂಗಗಳೇ||

ಶ್ಲೋಕ

ನಮ್ಮ  ಮೇಲೆ  ಆತನಿಗಿರುವ  ಪ್ರೀತಿ  ಅಚಲ|
ಆತನ  ಸತ್ಯಪರತೆ  ಇರುವುದು  ಅನಂತ  ಕಾಲ||

ಶ್ಲೋಕ

ಎರಡನೇ ವಾಚನ: ಹಿಬ್ರಿಯರಿಗೆ 12:5-7, 11-13

ಸಹೋದರರೇ, ಮಕ್ಕಳಿಗೆ ಹೇಳುವಂತೆ ದೇವರು ನಿಮಗೆ ಹೇಳಿರುವ ಎಚ್ಚರಿಕೆಯ ಮಾತನ್ನು ನೀವು ಮರೆತುಬಿಟ್ಟಿರೋ? "ಸುಕುಮಾರ, ಸರ್ವೇಶ್ವರ ಕೊಡುವ ಶಿಕ್ಷೆಯನ್ನು ತಾತ್ಸಾರ ಮಾಡದಿರು ಅವರು ನಿನ್ನನ್ನು ದಂಡಿಸುವಾಗ ಧೈರ್ಯಗೆಡದಿರು ಸರ್ವೇಶ್ವರ ತಾವು ಪ್ರೀತಿಸುವವನನ್ನು ಶಿಕ್ಷಿಸುವರು; ತಮಗೆ ಮಗನೆಂದು ಬರಮಾಡಿಕೊಳ್ಳುವವನನ್ನು ದಂಡಿಸುವರು.  ಶಿಸ್ತಿಗಾಗಿ ಶಿಕ್ಷೆಯನ್ನು ಸಹಿಸಿಕೊಳ್ಳಬೇಕು. ದೇವರು ನಿಮ್ಮನ್ನು ಮಕ್ಕಳಂತೆ ನೋಡಿಕೊಳ್ಳುತ್ತಾರೆ. ತಂದೆಯಿಂದ ಶಿಕ್ಷೆಯನ್ನು ಪಡೆಯದ ಮಗನಿದ್ದಾನೆಯೇ? ಯಾವ ಶಿಕ್ಷೆಯಾದರೂ ತಕ್ಷಣಕ್ಕೆ ಸಿಹಿಯಾಗಿರದೆ ಕಹಿಯಾಗಿಯೇ ಇರುತ್ತದೆ. ಹೀಗೆ ಶಿಸ್ತಿನ ಕ್ರಮಕ್ಕೆ ಒಳಗಾದವರು ಮುಂದಕ್ಕೆ ನ್ಯಾಯನೀತಿಯನ್ನೂ ಶಾಂತಿಸಮಾಧಾನವನ್ನು ಪ್ರತಿಫಲವಾಗಿ ಪಡೆಯುತ್ತಾರೆ. ಆದ್ದರಿಂದ, ಜೋತುಬೀಳುವ ನಿಮ್ಮ ಕೈಗಳನ್ನ ಮೇಲೆತ್ತಿ, ಕುಸಿದುಬೀಳುವ ನಿಮ್ಮ ಮೊಣಕಾಲುಗಳನ್ನು ಚೇತರಿಸಿಕೊಳ್ಳಿ ನೀವು ಹಿಡಿದಿರುವ ಹಾದಿಯನ್ನು ಸರಿಪಡಿಸಿಕೊಳ್ಳಿ, ಆಗ ಕುಂಟುವ ಕಾಲು ಉಳುಕದೆ ವಾಸಿಯಾಗುತ್ತದೆ.

ಶುಭಸಂದೇಶ: ಲೂಕ 13:22-30


ಯೇಸುಸ್ವಾಮಿ ಊರೂರುಗಳಲ್ಲೂ ಹಳ್ಳಿ ಹಳ್ಳಿಗಳಲ್ಲೂ ಉಪದೇಶ ಮಾಡಿಕೊಂಡು ಜೆರುಸಲೇಮಿನತ್ತ ಪ್ರಯಾಣ ಮಾಡುತ್ತಿದ್ದರು. ಆಗ ಒಬ್ಬನು, ಸ್ವಾಮೀ, ಜೀವೋದ್ಧಾರ ಹೊಂದುವವರು ಕೆಲವರು ಮಾತ್ರವೋ?" ಎಂದು ವಿಚಾರಿಸಿದನು. ಆಗ ಯೇಸು ಜನರಿಗೆ, "ಇಕ್ಕಟ್ಟಾದ ಬಾಗಿಲಿನಿಂದಲೇ ಒಳ ಹೋಗಲು  ಸರ್ವ ಪ್ರಯತ್ನ ಮಾಡಿ. ಏಕೆಂದರೆ, ಅನೇಕರು ಒಳಕ್ಕೆ ಹೋಗಲು ಖಂಡಿತವಾಗಿ ಪ್ರಯತ್ನಿಸುವರು; ಆದರೆ ಆದು ಅವರಿಂದಾಗದು ಮನೆಯ ಯಜಮಾನನು ಎದ್ದು ಬಾಗಿಲನ್ನು ಮುಚ್ಚಿದ ಮೇಲೆ ನೀವು ಹೊರಗಡೆ ನಿಲ್ಲಬೇಕಾಗುವುದು. ಬಾಗಿಲನ್ನು ತಟ್ಟುತ್ತಾ,  "ಸ್ವಾಮೀ ನಮಗೆ ಬಾಗಿಲನ್ನು ತೆರೆಯಿರಿ,"  ಎಂದು ನೀವು ಕೇಳುವಿರಿ. ಅದಕ್ಕೆ ಅವನು, "ನೀವು ಎಲ್ಲಿಯವರೋ ನಾನು ಅರಿಯೆ" ಎನ್ನುವನು. ಆಗ ನೀವು, "ನಿಮ್ಮೊಂದಿಗೆ ನಾವು ಊಟ ಮಾಡಿದ್ದೇವೆ, ಪಾನ ಮಾಡಿದ್ದೇವೆ; ನೀವು ನಮ್ಮ ಬೀದಿಗಳಲ್ಲಿ ಉಪದೇಶ ಮಾಡಿದ್ದೀರಿ," ಎಂದು ಹೇಳಲಾರಂಭಿಸುವಿರಿ. ಆದರೆ ಅವನು ಪುನಃ, "ನೀವು ಎಲ್ಲಿಯವರೋ ನಾನರಿಯೆ. ಆಕ್ರಮಿಗಳೇ, ಎಲ್ಲರೂ ನನ್ನಿಂದ ತೊಲಗಿರಿ," ಎಂದು ಸ್ಪಷ್ಟವಾಗಿ ನುಡಿಯುವೆನು. ಅಬ್ರಹಾಮ, ಇಸಾಕ, ಯಕೋಬ ಮತ್ತು ಎಲ್ಲಾ ಪ್ರವಾದಿಗಳು ದೇವರ ಸಾಮ್ರಾಜ್ಯದಲ್ಲಿ ಇರುವುದನ್ನೂ ನಿಮ್ಮನ್ನು ಮಾತ್ರ ಹೊರಗೆ ಹಾಕಿರುವುದನ್ನೂ ನೋಡುವಾಗ ನಿಮಗಾಗುವ ಗೋಳಾಟವೇನು! ಹಲ್ಲು ಕಡಿತವೇನು!! ಚತುರ್ದಿಕ್ಕುಗಳಿಂದಲೂ ಜನರು ಬಂದು, ದೇವರ ಸಾಮ್ರಾಜ್ಯದ  ಹಬ್ಬದೂಟದಲ್ಲಿ ಭಾಗಿಗಳಾಗುವರು. ಇಗೋ, ಕಡೆಯವರಲ್ಲಿ ಕೆಲವರು ಮೊದಲಿಗರಾಗುವರು. ಮೊದಲಗರಲ್ಲಿ ಕೆಲವರು ಕಡೆಯವರಾಗುವರು," ಎಂದರು.

20.08.22 - "ಅವರು ನುಡಿದಂತೆ ನಡೆಯುವುದಿಲ್ಲ"

ಮೊದನೇ ವಾಚನ: ಪ್ರವಾದಿ ಯೆಜೆಕಿಯೇಲನ ಗ್ರಂಥ 43:1-7

ಆಮೇಲೆ ಆ ಪುರುಷ ನನ್ನನ್ನು ಪೂರ್ವದ ಬಾಗಿಲಿಗೆ ಬರಮಾಡಿದನು. ಆಗ ಇಗೋ, ಇಸ್ರಯೇಲಿನ ದೇವರ ತೇಜಸ್ಸು ಪೂರ್ವಮಾರ್ಗವಾಗಿ ಬಂದಿತು. ಅವರ ಧ್ವನಿ ಜಲಪ್ರವಾಹದ ಘೋಷದಂತಿತ್ತು. ಅವರ ತೇಜಸ್ಸಿನಿಂದ ಭೂಮಿ ಬೆಳಗಿತು. ಮೊದಲು ನನಗೆ ಕಂಡುಬಂದ ತೇಜಸ್ಸಿನಂತೆ ಅದು ಕಾಣಿಸಿತು. ಪಟ್ಟಣವನ್ನು ಹಾಳುಮಾಡಲು ನಾನು ಬಂದಾಗ ಎಂಥದನ್ನು ಕಂಡೆನೋ ಅಂಥದನ್ನೇ ಕಂಡೆನು. ಕೆಬಾರ್ ನದಿಯ ಹತ್ತಿರ ನನಗಾದ ಅದ್ಭುತ ದರ್ಶನದಂಥ ದರ್ಶನ ಈಗಲೂ ನನಗಾಯಿತು; ಅದನ್ನು ನೋಡಿ ಅಡ್ಡಬಿದ್ದೆ. ಆಗ ಸರ್ವೇಶ್ವರನ ತೇಜಸ್ಸು ಪೂರ್ವಬಾಗಿಲ ಮಾರ್ಗವಾಗಿ ದೇವಸ್ಥಾನವನ್ನು ಪ್ರವೇಶಿಸಿತು. ದೇವರಾತ್ಮ ನನ್ನನ್ನು ಎತ್ತಿ ಒಳಗಿನ ಪ್ರಾಕಾರಕ್ಕೆ ತಂದಿತು. ಆಗ ಏನಾಶ್ಚರ್ಯ! ಸರ್ವೇಶ್ವರನ ತೇಜಸ್ಸು ದೇವಸ್ಥಾನವನ್ನು ತುಂಬಿಕೊಂಡಿತ್ತು. ದೇವಸ್ಥಾನದೊಳಗಿಂದ ನನ್ನನ್ನು ಸಂಬೋಧಿಸಿ ನುಡಿಯುವವನ ಶಬ್ದ ನನ್ನ ಕಿವಿಗೆ ಬಿದ್ದಿತು; ಆ ಪುರುಷ ನನ್ನ ಪಕ್ಕದಲ್ಲೇ ನಿಂತಿದ್ದನು. ನುಡಿಯುವಾತನು ನನಗೆ ಹೀಗೆ ಹೇಳಿದನು: “ನರಪುತ್ರನೇ, ಇದು ನನ್ನ ಸಿಂಹಾಸನಸ್ಥಾನ, ನನ್ನ ಪಾದಸನ್ನಿಧಿ. ಇಲ್ಲಿ ನಾನು ಇಸ್ರಯೇಲರ ಮಧ್ಯೆ ಸದಾ ವಾಸಿಸುವೆನು."

ಕೀರ್ತನೆ: 85:9-10, 11-12, 13-14
ಶ್ಲೋಕ: ಪ್ರಭುವಿನ ಮಹಿಮೆ ನಾಡಿನಲ್ಲಿರುವುದು ನಿರುತ

ಶುಭಸಂದೇಶ: ಮತ್ತಾಯ 23:1-12

ಬಳಿಕ ಜನಸಮೂಹವನ್ನೂ ತಮ್ಮ ಶಿಷ್ಯರನ್ನೂ ಉದ್ದೇಶಿಸಿ ಯೇಸುಸ್ವಾಮಿ ಇಂತೆಂದರು: “ಧರ್ಮಶಾಸ್ತ್ರಿಗಳೂ ಫರಿಸಾಯರೂ ಮೋಶೆಯ ಸ್ಥಾನದಲ್ಲಿ ಇದ್ದಾರೆ. ಆದುದರಿಂದ ಅವರು ನಿಮಗೆ ಉಪದೇಶಿಸುವುದನ್ನೆಲ್ಲಾ ಆಲಿಸಿರಿ ಹಾಗೂ ಪಾಲಿಸಿರಿ. ಆದರೆ ಅವರ ನಡತೆಯನ್ನು ಅನುಸರಿಸಬೇಡಿ. ಏಕೆಂದರೆ ಅವರು ನುಡಿದಂತೆ ನಡೆಯುವುದಿಲ್ಲ. ಭಾರವಾದ ಹಾಗೂ ಹೊರಲಾಗದ ಹೊರೆಗಳನ್ನು ಕಟ್ಟಿ ಮಾನವರ ಹೆಗಲ ಮೇಲೆ ಹೇರುತ್ತಾರೆ. ತಾವಾದರೋ ಅವನ್ನು ಕಿರುಬೆರಳಿನಿಂದಲೂ ಮುಟ್ಟಲೊಲ್ಲರು. ತಾವು ಕೈಗೊಳ್ಳುವ ಕಾರ್ಯಗಳನ್ನೆಲ್ಲಾ ಜನರು ನೋಡಲೆಂದೇ ಮಾಡುತ್ತಾರೆ. ತಮ್ಮ ಧಾರ್ಮಿಕ ಹಣೆಪಟ್ಟಿಗಳನ್ನು ಅಗಲ ಮಾಡಿಕೊಳ್ಳುತ್ತಾರೆ. ಮೇಲಂಗಿಯ ಗೊಂಡೆಗಳನ್ನು ಉದ್ದುದ್ದ ಮಾಡಿಕೊಳ್ಳುತ್ತಾರೆ. ಔತಣಕೂಟಗಳಲ್ಲಿ ಶ್ರೇಷ್ಠ ಸ್ಥಾನಮಾನಗಳನ್ನೂ ಪ್ರಾರ್ಥನಾಮಂದಿರಗಳಲ್ಲಿ ಉನ್ನತ ಆಸನಗಳನ್ನೂ ಪೇಟೆಬೀದಿಗಳಲ್ಲಿ ವಂದನೋಪಚಾರಗಳನ್ನೂ ಅವರು ಅಪೇಕ್ಷಿಸುತ್ತಾರೆ. ಅದು ಮಾತ್ರವಲ್ಲ, ‘ಗುರುವೇ’ ಎಂದು ಕರೆಸಿಕೊಳ್ಳಲು ಇಚ್ಛಿಸುತ್ತಾರೆ. 8ಹಾಗೆ ಕರೆಸಿಕೊಳ್ಳುವುದು ನಿಮಗೆ ಬೇಡ. ನಿಮಗಿರುವ ಗುರುವು ಒಬ್ಬರೇ ಮತ್ತು ನೀವೆಲ್ಲರೂ ಸಹೋದರರು. ಇಹದಲ್ಲಿ ನೀವು ಯಾರನ್ನೂ ‘ಪಿತನೇ’ ಎಂದು ಸಂಬೋಧಿಸಬೇಡಿ. ಏಕೆಂದರೆ ನಿಮ್ಮ ಪಿತ ಒಬ್ಬರೇ. ಅವರು ಸ್ವರ್ಗದಲ್ಲಿದ್ದಾರೆ.  ಒಡೆಯ ಎಂದೂ ಕರೆಯಿಸಿಕೊಳ್ಳಬೇಡಿ; ಏಕೆಂದರೆ ನಿಮಗಿರುವ ಒಡೆಯ ಒಬ್ಬನೇ, ‘ಆತನೇ ಕ್ರಿಸ್ತ.’ ನಿಮ್ಮಲ್ಲಿ ಶ್ರೇಷ್ಠನು ಯಾರೋ ಅವನು ನಿಮ್ಮ ಸೇವಕನಾಗಿರಬೇಕು.  ತನ್ನನ್ನು ತಾನೇ ಮೇಲಕ್ಕೇರಿಸಿಕೊಳ್ಳುವ ಪ್ರತಿಯೊಬ್ಬನನ್ನೂ ದೇವರು ಕೆಳಗಿಳಿಸುವರು.  ತನ್ನನ್ನು ತಾನೇ ತಗ್ಗಿಸಿಕೊಳ್ಳುವವನನ್ನು ದೇವರು ಮೇಲಕ್ಕೇರಿಸುವರು.

18.08.22 - “ಹೀಗೆ, ಆಹ್ವಾನಿತರು ಅನೇಕರಾದರೂ ಆರಿಸಲಾದವರು ಕೆಲವರು ಮಾತ್ರ”

 ಮೊದಲನೇ ವಾಚನ: ಪ್ರವಾದಿ ಯೆಜೆಕಿಯೇಲನ ಗ್ರಂಥ 36:23-28

ಜನಾಂಗಗಳಲ್ಲಿ ಅಪಕೀರ್ತಿಗೆ ಗುರಿಯಾದ, ಅಂದರೆ ನೀವು ಜನಾಂಗಗಳ ನಡುವೆ ಅಪಕೀರ್ತಿಗೆ ಗುರಿಮಾಡಿದ ನನ್ನ ಶ್ರೀನಾಮದ ಗೌರವವನ್ನು ನಾನು ಕಾಪಾಡಿಕೊಳ್ಳುವೆನು. ಹೀಗೆ ನಾನು ಅವುಗಳ ಕಣ್ಣೆದುರಿಗೆ, ನಿಮ್ಮ ರಕ್ಷಣೆಯ ಮೂಲಕ ನನ್ನ ಗೌರವವನ್ನು ಕಾಪಾಡಿಕೊಳ್ಳುವೆನು. ಆಗ ನಾನೇ ಸರ್ವೇಶ್ವರ ಎಂದು ಅವುಗಳಿಗೆ ನಿಶ್ಚಿತವಾಗುವುದು. ಇದು ಸರ್ವೇಶ್ವರನಾದ ದೇವರ ನುಡಿ.  ನಾನು ನಿಮ್ಮನ್ನು ಜನಾಂಗಗಳಿಂದ ಬಿಡಿಸಿ, ಸಕಲ ದೇಶಗಳಿಂದ ಒಟ್ಟುಗೂಡಿಸಿ, ಸ್ವದೇಶಕ್ಕೆ ಬರಮಾಡುವೆನು. ನಾನು ನಿಮ್ಮ ಮೇಲೆ ನಿರ್ಮಲೋದಕವನ್ನು ಪ್ರೋಕ್ಷಿಸುವೆನು, ನೀವು ನಿರ್ಮಲರಾಗುವಿರಿ; ನಿಮ್ಮ ಸಮಸ್ತ ವಿಗ್ರಹಗಳಿಂದಲೂ ಸಕಲ ವಿಧವಾದ ಹೊಲಸಿನಿಂದಲೂ ನಿಮ್ಮನ್ನು ಶುದ್ಧಿಮಾಡುವೆನು.  ನಾನು ನಿಮಗೆ ಹೊಸ ಮನಸ್ಸನ್ನು ಕೊಟ್ಟು, ನಿಮ್ಮಲ್ಲಿ ನನ್ನ ಸ್ವಭಾವವನ್ನು ಹುಟ್ಟಿಸುವೆನು. ಕಲ್ಲಾದ ಹೃದಯವನ್ನು ನಿಮ್ಮೊಳಗಿಂದ ತೆಗೆದು, ಮೃದುವಾದ ಹೃದಯವನ್ನು ನಿಮಗೆ ದಯಪಾಲಿಸುವೆನು.  ನನ್ನ ಆತ್ಮವನ್ನು ನಿಮ್ಮಲ್ಲಿ ನೆಲೆಸಿರುವಂತೆ ಅನುಗ್ರಹಿಸಿ, ನೀವು ನನ್ನ ನಿಯಮಗಳನ್ನು ಅನುಸರಿಸುವ ಹಾಗೆ ಮಾಡುವೆನು. ನೀವು ನನ್ನ ವಿಧಿಗಳನ್ನು ಕೈಗೊಂಡು ಆಚರಿಸುವಿರಿ.  ನಾನು ನಿಮ್ಮ ಪಿತೃಗಳಿಗೆ ಅನುಗ್ರಹಿಸಿದ ನಾಡಿನಲ್ಲಿ ನೀವು ವಾಸಿಸುವಿರಿ. ನೀವು ನನಗೆ ಪ್ರಜೆಯಾಗಿರುವಿರಿ, ನಾನು ನಿಮಗೆ ದೇವರಾಗಿರುವೆನು.

ಕೀರ್ತನೆ: 51:12-13, 14-15, 18-19

ಶ್ಲೋಕ: ಹಿಸ್ಸೋಪಿನಿಂದ ನೀ ಚಿಮುಕಿಸೆ ನಾ ಶುದ್ಧನಾಗುವೆ

ಜೀವೋದ್ಧಾರವನು  ಮರಳಿ  ಸವಿಯುವಂತೆ  ಮಾಡು|
ವಿಧೇಯನಾಗಿ  ನಡೆವ  ಸಿದ್ಧ  ಮನಸ್ಸನು  ನೀಡು||
ಬೋಧಿಸುವೆನಾಗ  ನಿನ್ನ  ಮಾರ್ಗವನು  ದುರುಳರಿಗೆ|
ತಿರುಗಿಕೊಳ್ವರಾಗ  ದ್ರೋಹಿಗಳು  ನಿನ್ನ  ಕಡೆಗೆ||

ತಪ್ಪಿಸೆನ್ನನು  ಸ್ವಾಮಿದೇವಾ,  ರಕ್ತಾಪರಾಧದಿಂದ|
ನಿನ್ನ  ಸತ್ಯಸಂಧತೆಯನು  ಸಾರುವೆ  ಮುಕ್ತಕಂಠದಿಂದ||
ತೆರೆವಂತೆ  ಮಾಡು  ಪ್ರಭೂ, ನನ್ನ  ತುಟಿಗಳನು|
ಸಾರುವುದೆನ್ನ  ಬಾಯಿ  ನಿನ್ನ  ನುಡಿಗಳನು||

ಬಲಿಯರ್ಪಣೆಯಲಿ  ನಿನಗೊಲವಿಲ್ಲ|
ದಹನಬಲಿಯಿತ್ತರೂ  ನಿನಗೆ  ಬೇಕಿಲ್ಲ||
ಮುರಿದ  ಮನವೇ  ದೇವನೊಲಿವ  ಯಜ್ಞವು|
ನೊಂದ  ಬೆಂದ  ಮನವನಾತ  ಒಲ್ಲೆಯೆನನು||

ಘೋಷಣೆ                     ಕೀರ್ತನೆ  27:11

ಅಲ್ಲೆಲೂಯ, ಅಲ್ಲೆಲೂಯ!
ಬೋಧಿಸೆನಗೆ  ಪ್ರಭೂ,  ನಿನ್ನ  ಮಾರ್ಗವನು,  ಶತ್ರುರಹಿತ  ಹಾದಿಯಲಿ  ನಡೆಸು  ಎನ್ನನು,,
ಅಲ್ಲೆಲೂಯ!

ಶುಭಸಂದೇಶ: ಮತ್ತಾಯ 22:1-14

ಯೇಸುಸ್ವಾಮಿ ಯಾಜಕರು ಫರಿಸಾಯರನ್ನುದ್ದೇಶಿಸಿ ಈ  ಸಾಮತಿಯನ್ನು ಹೇಳಿದರು: “ಸ್ವರ್ಗಸಾಮ್ರಾಜ್ಯ ಇಂತಿದೆ; ರಾಜನೊಬ್ಬ ತನ್ನ ಕುಮಾರನ ವಿವಾಹ ಮಹೋತ್ಸವವನ್ನು ಏರ್ಪಡಿಸಿದ. ಅದಕ್ಕೆ ಆಹ್ವಾನಿತರಾಗಿದ್ದವರನ್ನು ಕರೆಯಲು ಸೇವಕರನ್ನು ಕಳುಹಿಸಿದ. ಆದರೆ ಅವರು ಬರಲು ಒಪ್ಪಲಿಲ್ಲ. ಪುನಃ ಬೇರೆ ಸೇವಕರನ್ನು ಅಟ್ಟಿದ. ‘ಔತಣ ಸಿದ್ಧವಾಗಿದೆ. ಕೊಬ್ಬಿನ ಮಾಂಸದ ಅಡಿಗೆಯನ್ನು ಮಾಡಿಸಿದ್ದೇನೆ. ಎಲ್ಲವೂ ಅಣಿಯಾಗಿದೆ. ಉತ್ಸವಕ್ಕೆ ಬೇಗ ಬನ್ನಿ’ ಎಂದು ಆಹ್ವಾನಿತರಿಗೆ ತಿಳಿಸುವಂತೆ ಹೇಳಿಕಳುಹಿಸಿದ. ಆದರೂ ಆಹ್ವಾನಿತರು ಅಲಕ್ಷ್ಯಮಾಡಿದರು. ಒಬ್ಬ ತೋಟಕ್ಕೆ ಹೊರಟುಬಿಟ್ಟ, ಇನ್ನೊಬ್ಬ ವ್ಯಾಪಾರಕ್ಕೆ ಹೊರಟುಹೋದ. ಉಳಿದವರು, ಕರೆಯಲು ಬಂದ ಆಳುಗಳನ್ನೇ ನಿಂದಿಸಿ, ಬಡಿದು, ಕೊಂದುಹಾಕಿದರು. ರಾಜನಿಗೆ ಕಡುಗೋಪ ಬಂದಿತು. ತನ್ನ ಸೈನಿಕರನ್ನು ಕಳುಹಿಸಿ ಆ ಕೊಲೆಗಾರರನ್ನು ಸಂಹರಿಸಿದ. ಅವರ ಊರನ್ನು ಸುಟ್ಟುಹಾಕಿಸಿದ. ಅನಂತರ ತನ್ನ ಸೇವಕರಿಗೆ, ‘ವಿವಾಹ ಮಹೋತ್ಸವವೇನೋ ಸಿದ್ಧವಾಗಿದೆ; ಆಹ್ವಾನಿತರೋ ಅಯೋಗ್ಯರು. ನೀವು ಹೆದ್ದಾರಿಗಳಿಗೆ ಹೋಗಿ ಕಂಡಕಂಡವರನ್ನೆಲ್ಲಾ ಉತ್ಸವಕ್ಕೆ ಕರೆಯಿರಿ’ ಎಂದ. ಅಂತೆಯೇ ಅವರು ಹೋಗಿ ಯೋಗ್ಯರು, ಅಯೋಗ್ಯರೆನ್ನದೆ ಕಂಡವರನ್ನೆಲ್ಲಾ ಒಟ್ಟುಗೂಡಿಸಿ ಕರೆದುತಂದರು. ವಿವಾಹ ಮಂಟಪ ಅತಿಥಿಗಳಿಂದ ತುಂಬಿಹೋಯಿತು. “ಆಮೇಲೆ ರಾಜನು ಅತಿಥಿಗಳನ್ನು ನೋಡಲುಬಂದ. ಅಲ್ಲಿ ವಿವಾಹಕ್ಕೆ ತಕ್ಕ ವಸ್ತ್ರವನ್ನು ಧರಿಸದೆ ಬಂದಿದ್ದ ಒಬ್ಬನನ್ನು ಕಂಡ. ‘ಏನಯ್ಯ, ಸಮಾರಂಭಕ್ಕೆ ತಕ್ಕ ಉಡುಪಿಲ್ಲದೆ ಒಳಗೆ ಹೇಗೆ ಬಂದೆ?’ ಎಂದು ಅವನನ್ನು ಕೇಳಿದ. ಅದಕ್ಕೆ ಅವನು ಮೌನತಳೆದ. ಆಗ ರಾಜನು ಪರಿಚಾರಕರಿಗೆ, ‘ಇವನ ಕೈಕಾಲುಗಳನ್ನು ಕಟ್ಟಿ ಹೊರಗಿನ ಕತ್ತಲೆಗೆ ದಬ್ಬಿರಿ; ಅಲ್ಲಿರುವವರೊಡನೆ ಹಲ್ಲುಕಡಿದು ಗೋಳಾಡಲಿ,’ ಎಂದು ಹೇಳಿದ. “ಹೀಗೆ, ಆಹ್ವಾನಿತರು ಅನೇಕರಾದರೂ ಆರಿಸಲಾದವರು ಕೆಲವರು ಮಾತ್ರ,” ಎಂದರು ಸ್ವಾಮಿ.

ಪೂಜಾರ್ಪಣೆ 



ಸಂತ ಸ್ಮರಣೆ  - ಸಂತ ಹೆಲೆನಾ St.Helen

 ಕ್ರೈಸ್ತ ಧರ್ಮಕ್ಕೆ ಒಂದು ಅದ್ಭುತ ತಿರುವನ್ನು ಕೊಟ್ಟು ಅದು ಒಂದು ರಾಷ್ಟ್ರದ ಧರ್ಮವಷ್ಟೇ ಆಗದೇ ವಿಶ್ವಕ್ಕೆ ವ್ಯಾಪಿಸಿದ ಕೀರ್ತಿ ಹೇಗೆ ಪ್ರೇಷಿತರಿಗೆ ಸಲ್ಲಬೇಕೋ ಹಾಗೆಯೇ ಅರಸ ಕಾನ್ ಸ್ಟಾಂಟೈನ್ ಗೂ ಸಲ್ಲಬೇಕು. ಈ ಕಾನ್ ಸ್ಟಾಂಟೈನ್ ಮಹಾರಾಜನ ತಾಯಿಯೇ ಹೆಲೆನಾ. ಏಷ್ಯಾದ ಬಡ ಕುಟುಂಬ ಒಂದರಿಂದ ಬಂದ ಹೆಲೆನಾ ಕಾನ್ ಸ್ಟಾಂಟಿಯುಸ್ ಕ್ಲೋರುಸ್ ಎಂಬ ಸೈನ್ಯಾಧಿಕಾರಿಯನ್ನು ಮದುವೆ ಯಾದಳು. 21 ವರ್ಷಗಳ ನಂತರ ಅವಳ ಅದೃಷ್ಟವೋ ದುರಾದೃಷ್ಟವೋ ಸೈನ್ಯಾಧಿಕಾರಿ ಕ್ಲೋರೋಸ್ ಅರಸನಾದ. ಇದರ ಬೆನ್ನಲ್ಲೇ ರಾಜತಾಂತ್ರಿಕ ಕಾರಣಗಳಿಗಾಗಿ ಹೆಲೆನಾ ಗೆ ವಿಚ್ಛೇದನ ನೀಡಿದ. ಒಬ್ಬನೇ ಮಗ ಕಾನ್ ಸ್ಟಾಂಟೈನ್ ತನ್ನ ತಾಯಿಗೆ ನಿಷ್ಠನಾಗಿದ್ದ ಅವಳನ್ನು ಗಾಢವಾಗಿ ಪ್ರೀತಿಸುತ್ತಿದ್ದ. ತನ್ನ ತಂದೆಯ ನಂತರ ಸಿಂಹಾಸನ ಏರಿದಾಗ ಕಾನ್ ಸ್ಟಾಂಟೈನ್  ತನ್ನ ತಾಯಿಗೆ ಮಹಾರಾಣಿಯ ಪಟ್ಟ ಕಟ್ಟಿದ. 

 313 ರಲ್ಲಿ ಮಾಕ್ಸೆಂತಿಯುಸ್ ವಿರುದ್ಧ ಕಾನ್ ಸ್ಟಾಂಟೈನ್ ಜಯಶಾಲಿಯಾದ ನಂತರ ಹೆಲೆನಾ ಕೂಡ ಕ್ರೈಸ್ತ ಧರ್ಮದ ದೀಕ್ಷೆ ಸ್ವೀಕರಿಸಿದರು. ಮಹಾರಾಣಿ ಪಟ್ಟ, ಆಕೆಯ ಧಾರ್ಮಿಕ ಕಾಳಜಿ ಮತ್ತು ವಿಶ್ವಾಸದ ಕಾರಣ ಕ್ರೈಸ್ತ ಧರ್ಮ ವ್ಯಾಪಕವಾಗಿ ಹಬ್ಬಲು ಆಕೆ ಕಾರಣಳಾದಳು. ಯುರೋಪ್ ನಲ್ಲಿ ಅನೇಕ ಚರ್ಚುಗಳನ್ನು ಸ್ಥಾಪಿಸಿ, ತನ್ನ 75ನೇ ವಯಸ್ಸಿನಲ್ಲಿ ಆಕೆಯ ಪವಿತ್ರ ನಾಡಿಗೆ ಪ್ರಯಾಣಿಸಿ ಬೆತ್ಲೆಹೆಮಿನಲ್ಲಿ ಯೇಸು ಹುಟ್ಟಿದ ಸ್ಥಳದ ಪಕ್ಕ ಮತ್ತು ಜೆರುಸಲೇಮಿನಲ್ಲಿ ಯೇಸು ಸ್ವರ್ಗಾರೋಹಣವಾದ ಸ್ಥಳದ ಹತ್ತಿರ ದೇವಾಲಯಗಳನ್ನು ಕಟ್ಟಿಸಿದರು.

 ತನ್ನ ಮಗ ಕಂಡದ್ದಲ್ಲ, ತಾನೇ 'ನಿಜವಾದ ಶಿಲುಬೆ'ಯನ್ನು ಕಂಡ ನಂತರ ಹೆಲೆನಾ ತನ್ನ ರೋಮ್ ನ ಅರಮನೆಯನ್ನು ಸಾಂತಾ ಕ್ರೂಸ್ ದೇವಾಲಯವನ್ನಾಗಿ ಪರಿವರ್ತಿಸಿದಳು. ಸಂತ ಹೆಲೆನಾ ಮರಣಶಯ್ಯೆಯಲ್ಲಿರು ವವರ ಮತ್ತು ಸೂಜಿ ಮತ್ತು ಮೊಳೆಗಳನ್ನು ತಯಾರಿಸುವವರ ಪಾಲಕಿ ಎಂದು ವಿಶ್ವಾಸಿಸಲಾಗಿದೆ


19.08.22 - "ಸಮಸ್ತ ಧರ್ಮಶಾಸ್ತ್ರಕ್ಕೂ ಪ್ರವಾದಿಗಳ ಪ್ರವಚನಕ್ಕೂ ಈ ಎರಡು ಆಜ್ಞೆಗಳೇ ಆಧಾರ,”

 ಮೊದಲನೇ ವಾಚನ: ಪ್ರವಾದಿ ಯೆಜೆಕಿಯೇಲನ ಗ್ರಂಥ 37:1-14

ನಾನು ಸರ್ವೇಶ್ವರನ ಹಸ್ತಸ್ಪರ್ಶದಿಂದ ಪರವಶನಾಗಿದ್ದೆ. ಆಗ ಅವರು ತಮ್ಮ ಆತ್ಮದ ಮೂಲಕ ನನ್ನನ್ನು ಒಯ್ದು, ಎಲುಬುಗಳಿಂದ ತುಂಬಿದ್ದ ಒಂದು ಕಣಿವೆಯಲ್ಲಿ ಇಳಿಸಿದರು. 2ನಾನು ಎಲುಬುಗಳ ಮಧ್ಯೆ ಆ ಕಣಿವೆಯನ್ನು ಬಳಸಿಕೊಂಡು ಬರುವಂತೆ ಮಾಡಿದರು. ಇಗೋ, ಕಣಿವೆಯ ಮೇಲೆಲ್ಲಾ ಬಹಳವಾಗಿ ಒಣಗಿದ ಎಲುಬುಗಳು ಲೆಕ್ಕವಿಲ್ಲದಷ್ಟು ಬಿದ್ದಿದ್ದವು. ಸರ್ವೇಶ್ವರ ನನ್ನನ್ನು - “ನರಪುತ್ರನೇ, ಈ ಎಲುಬುಗಳಿಗೆ ಜೀವ ಬರಬಹುದೇ?” ಎಂದು ಕೇಳಿದರು. ನಾನು “ಸರ್ವೇಶ್ವರರಾದ ದೇವರೇ, ನೀವೇ ಬಲ್ಲಿರಿ,” ಎಂದು ಉತ್ತರಕೊಟ್ಟೆ. ಆಗ ಅವರು ನನಗೆ ಹೀಗೆ ಅಪ್ಪಣೆಮಾಡಿದರು: “ನೀನು ಆ ಎಲುಬುಗಳಿಗೇ ಪ್ರವಾದಿಸಿ ಅವಕ್ಕೆ ಈ ದೈವೋಕ್ತಿಯನ್ನು ನುಡಿ: ಒಣ ಎಲುಬುಗಳೇ, ಸರ್ವೇಶ್ವರನ ವಾಣಿಯನ್ನು ಕೇಳಿ: ಸರ್ವೇಶ್ವರನಾದ ದೇವರು ನಿಮಗೆ ಹೀಗೆ ಹೇಳುತ್ತಾರೆ - ಇಗೋ, ನಾನು ನಿಮ್ಮೊಳಗೆ ಶ್ವಾಸವನ್ನು ಊದುವೆನು; ನೀವು ಬದುಕುವಿರಿ. ನಾನು ನಿಮ್ಮ ಮೇಲೆ ನರಗಳನ್ನು ಹಬ್ಬಿಸಿ, ಮಾಂಸವನ್ನು ಹರಡಿ, ಚರ್ಮವನ್ನು ಹೊದಿಸಿ, ನಿಮ್ಮಲ್ಲಿ ಶ್ವಾಸವನ್ನು ತುಂಬುವೆನು; ಆಗ ನೀವು ಬದುಕಿ ನಾನೇ ಸರ್ವೇಶ್ವರ ಎಂದು ತಿಳಿದುಕೊಳ್ಳುವಿರಿ.” ನನಗೆ ಅಪ್ಪಣೆಯಾದಂತೆ ನಾನು ಈ ದೈವೋಕ್ತಿಯನ್ನು ನುಡಿದೆ. ನಾನು ಮಾತಾಡುತ್ತಿರುವಾಗ ಒಂದು ಶಬ್ದ ಕೇಳಿಸಿತು. ಇಗೋ, ಟಕಟಕ ಎನ್ನುತ್ತಾ ಎಲುಬು ಎಲುಬಿಗೆ, ಜೋಡನೆಯಾದವು. ನಾನು ನೋಡುತ್ತಿರಲು ಏನಾಶ್ಚರ್ಯ! ಅವುಗಳ ಮೇಲೆ ನರಗಳು ಹಬ್ಬಿಕೊಂಡವು, ಮಾಂಸವು ಹರಡಿಕೊಂಡಿತು, ಚರ್ಮವು ಮೇಲುಹೊದಿಕೆಯಾಯಿತು; ಶ್ವಾಸ ಮಾತ್ರ ಇರಲಿಲ್ಲ. ಆಗ ಸರ್ವೇಶ್ವರ ನನಗೆ - “ನರಪುತ್ರನೇ, ನೀನು ಶ್ವಾಸಕ್ಕೆ ನುಡಿ; ಶ್ವಾಸವೇ, ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ನೀನು ಚತುರ್ದಿಕ್ಕುಗಳಿಂದ ಬೀಸಿ ಹತ ಶರೀರಗಳು ಬದುಕುವಂತೆ ಅವುಗಳ ಮೇಲೆ ಸುಳಿ, ಎಂಬುದಾಗಿ ಶ್ವಾಸಕ್ಕೆ ನುಡಿ,” ಎಂದು ಅಪ್ಪಣೆಕೊಟ್ಟರು. ನಾನು ಅವರ ಅಪ್ಪಣೆಯಂತೆ ನುಡಿದೆ. ಇಗೋ, ಶ್ವಾಸವು ಅವುಗಳಲ್ಲಿ ಹೊಕ್ಕಿತು. ಅವು ಬದುಕಿದವು, ಕಾಲೂರಿ ನಿಂತವು, ಅತ್ಯಂತ ದೊಡ್ಡ ಸೈನ್ಯವಾದವು. ಆಮೇಲೆ ಸರ್ವೇಶ್ವರ ನನಗೆ ಹೀಗೆ ಹೇಳಿದರು: “ನರಪುತ್ರನೇ, ಈ ಎಲುಬುಗಳೇ ಇಸ್ರಯೇಲಿನ ಪೂರ್ಣವಂಶ; ಇಗೋ, ಆ ವಂಶೀಯರು, ‘ಅಯ್ಯೋ, ನಮ್ಮ ಎಲುಬುಗಳು ಒಣಗಿಹೋದವು, ನಮ್ಮ ನಿರೀಕ್ಷೆ ಹಾಳಾಯಿತು; ನಾವು ಬುಡನಾಶವಾದೆವು,’ ಎಂದುಕೊಳ್ಳುತ್ತಿದ್ದಾರೆ. ಆದಕಾರಣ ನೀನು ಈ ದೈವೋಕ್ತಿಯನ್ನು ಅವರಿಗೆ ನುಡಿ: ‘ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ನನ್ನ ಜನರೇ, ನೋಡಿ: ನಾನು ನಿಮ್ಮ ಗೋರಿಗಳನ್ನು ತೆರೆದು, ಅವುಗಳೊಳಗಿಂದ ನಿಮ್ಮನ್ನು ಎಬ್ಬಿಸಿ, ಇಸ್ರಯೇಲ್ ನಾಡಿಗೆ ಸೇರಮಾಡುವೆನು. ನನ್ನ ಜನರೇ, ನಾನು ನಿಮ್ಮ ಗೋರಿಗಳನ್ನು ತೆರೆದು, ಅವುಗಳೊಳಗಿಂದ ನಿಮ್ಮನ್ನು ಎಬ್ಬಿಸಿದಾಗ, ನಾನೇ ಸರ್ವೇಶ್ವರ ಎಂದು ನಿಮಗೆ ದೃಢವಾಗುವುದು. ನಾನು ನನ್ನ ಶ್ವಾಸವನ್ನು ನಿಮ್ಮಲ್ಲಿ ಊದಿ, ನಿಮ್ಮನ್ನು ಬದುಕಿಸಿ, ನಿಮ್ಮ ದೇಶದಲ್ಲಿ ನೆಲೆಗೊಳಿಸುವೆನು. ಆಗ ಸರ್ವೇಶ್ವರನಾದ ನಾನೇ ಇದನ್ನು ನುಡಿದು ನಡೆಸಿದ್ದೇನೆ ಎಂದು ತಿಳಿದುಕೊಳ್ಳುವಿರಿ; ಇದು ಸರ್ವೇಶ್ವರನ ಸಂಕಲ್ಪ’.”

ಕೀರ್ತನೆ: 107:2-3, 4-5, 6-7, 8-9

ಶ್ಲೋಕ: ಕೃತಜ್ಞತೆಯಿಂದ ಸಲ್ಲಿಸಿರಿ ಪ್ರಭುವಿಗೆ ಸ್ತುತಿಯನು

ಶುಭಸಂದೇಶ: ಮತ್ತಾಯ 22:34-40


ಯೇಸುಸ್ವಾಮಿ ಸದ್ದುಕಾಯರನ್ನು ಸದ್ದೆತ್ತದಂತೆ ಮಾಡಿದರೆಂಬ ಸಮಾಚಾರ ಫರಿಸಾಯರಿಗೆ ಮುಟ್ಟಿತು. ಅವರು ಒಟ್ಟಾಗಿ ಸ್ವಾಮಿಯ ಬಳಿಗೆ ಬಂದರು. ಅವರಲ್ಲಿ ಒಬ್ಬ ಧರ್ಮೋಪದೇಶಕನು ಯೇಸುವನ್ನು ಪರೀಕ್ಷಿಸುವ ಸಲುವಾಗಿ, ಹೀಗೆಂದು ಪ್ರಶ್ನಿಸಿದನು: “ಬೋಧಕರೇ, ಧರ್ಮಶಾಸ್ತ್ರದಲ್ಲಿ ಪ್ರಮುಖವಾದ ಆಜ್ಞೆ ಯಾವುದು?” ಅದಕ್ಕೆ ಪ್ರತ್ಯುತ್ತರವಾಗಿ ಯೇಸು, “ ‘ನಿನ್ನ ಸರ್ವೇಶ್ವರನಾದ ದೇವರನ್ನು ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಪೂರ್ಣ ಆತ್ಮದಿಂದಲೂ ನಿನ್ನ ಪೂರ್ಣ ಮನಸ್ಸಿನಿಂದಲೂ ಪ್ರೀತಿಸು.’ ಇದೇ ಪ್ರಮುಖ ಹಾಗೂ ಪ್ರಥಮ ಆಜ್ಞೆ. ಇದಕ್ಕೆ ಸರಿಹೊಂದುವ ಎರಡನೇ ಆಜ್ಞೆ ಯಾವುದೆಂದರೆ, ‘ನಿನ್ನನ್ನು ನೀನೇ ಪ್ರೀತಿಸಿಕೊಳ್ಳುವಂತೆ ನಿನ್ನ ನೆರೆಯವನನ್ನೂ ಪ್ರೀತಿಸು.’ ಸಮಸ್ತ ಧರ್ಮಶಾಸ್ತ್ರಕ್ಕೂ ಪ್ರವಾದಿಗಳ ಪ್ರವಚನಕ್ಕೂ ಈ ಎರಡು ಆಜ್ಞೆಗಳೇ ಆಧಾರ,” ಎಂದರು.


17.08.22 - "ನನ್ನ ಔದಾರ್ಯವನ್ನು ಕಂಡು ನಿನಗೇಕೆ ಹೊಟ್ಟೆಯುರಿ?"

 ಮೊದಲನೇ ವಾಚನ: ಪ್ರವಾದಿ ಯೆಜೆಕಿಯೇಲನ ಗ್ರಂಥ 34:1-11

ಸರ್ವೇಶ್ವರಸ್ವಾಮಿ ಈ ವಾಣಿಯನ್ನು ನನಗೆ ದಯಪಾಲಿಸಿದರು. “ನರಪುತ್ರನೇ, ಇಸ್ರಯೇಲೆಂಬ ಮಂದೆಯ ಕುರುಬರಿಗೆ ವಿರುದ್ಧ ಈ ದೈವೋಕ್ತಿಯನ್ನು ಪ್ರವಚನ ರೂಪವಾಗಿ ನುಡಿ - ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ಅಯ್ಯೋ ಸ್ವಂತ ಹೊಟ್ಟೆ ಹೊರೆದುಕೊಳ್ಳುವ ಇಸ್ರಯೇಲಿನ ಕುರುಬರಿಗೆ ಧಿಕ್ಕಾರ! ಕುರಿಗಳ ಹೊಟ್ಟೆ ಗಮನಿಸುವುದು ಕುರುಬರ ಧರ್ಮವಲ್ಲವೆ? ನೀವು ಅವುಗಳ ಹಾಲನ್ನು ಕುಡಿಯುತ್ತೀರಿ, ಉಣ್ಣೆಯ ಹೊದಿಕೆಯನ್ನು ಹೊದಿಯುತ್ತೀರಿ. ಕೊಬ್ಬಿದ ಕುರಿಗಳನ್ನು ಕಡಿಯುತ್ತೀರಿ; ಆದರೆ ಕುರಿಗಳನ್ನು ಮೇಯಿಸುವುದಿಲ್ಲ. ಹೌದು, ದುರ್ಬಲವಾದವುಗಳನ್ನು ನೀವು ಬಲಗೊಳಿಸಲಿಲ್ಲ, ರೋಗದವುಗಳನ್ನು ಸ್ವಸ್ಥಮಾಡಲಿಲ್ಲ, ಮುರಿದ ಅಂಗಗಳನ್ನು ಕಟ್ಟಲಿಲ್ಲ, ದಾರಿತಪ್ಪಿದವುಗಳನ್ನು ಮಂದೆಗೆ ಸೇರಿಸಲಿಲ್ಲ, ತಪ್ಪಿಸಿಕೊಂಡವುಗಳನ್ನು ಹುಡುಕಲಿಲ್ಲ; ಅವುಗಳನ್ನು ಹಿಂಸೆ, ಬಲಾತ್ಕಾರಗಳಿಂದ ಆಳುತ್ತಾ ಬಂದಿದ್ದೀರಿ. ಕುರಿಗಾಹಿಗಳು ಇರಲಿಲ್ಲವಾದುದರಿಂದ ಅವು ಚದುರಿಹೋದುವು; ದಿಕ್ಕಾಪಾಲಾಗಿ ಕಾಡಿನ ಸಕಲ ಮೃಗಗಳಿಗೆ ತುತ್ತಾದವು; 6ನನ್ನ ಕುರಿಗಳು ಮಲೆನಾಡಿನಲ್ಲೆಲ್ಲಾ ಎತ್ತರವಾದ ಪ್ರತಿಯೊಂದು ಬೆಟ್ಟದ ಮೇಲೆ ಅಲೆದಾಡಿದವು; ಹೌದು, ನನ್ನ ಕುರಿಗಳು ಭೂಮಂಡಲದಲ್ಲೆಲ್ಲಾ ಚದರಿಹೋದವು; ಯಾರೂ ಅವುಗಳ ಹಿಂದೆ ಹೋಗಿ ಹುಡುಕಲಿಲ್ಲ. “ಕುರುಬರೇ, ಸರ್ವೇಶ್ವರನ ಮಾತನ್ನು ಕೇಳಿರಿ; ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ಅಯ್ಯೋ, ನನ್ನ ಕುರಿಗಳು ಕೊಳ್ಳೆಯಾದವು, ಕಾಡಿನ ಸಕಲಮೃಗಗಳಿಗೆ ತುತ್ತಾದವು; ಕುರುಬರೇ ಇರಲಿಲ್ಲ. ನನ್ನ ಕುರುಬರು ನನ್ನ ಕುರಿಗಳನ್ನು ಹುಡುಕಲಿಲ್ಲ; ಅವರು ಸ್ವಂತ ಹೊಟ್ಟೆಪಾಡನ್ನು ನೋಡಿಕೊಂಡರೇ ಹೊರತು, ನನ್ನ ಕುರಿಗಳ ಹೊಟ್ಟೆಯನ್ನು ನೋಡಲೇ ಇಲ್ಲ. ಆದಕಾರಣ ಕುರುಬರೇ, ಸರ್ವೇಶ್ವರನ ವಾಕ್ಯವನ್ನು ಕೇಳಿರಿ;  ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ಅಕಟಾ! ನನ್ನ ಜೀವದಾಣೆ, ನಾನು ಆ ಕುರಿಗಾಹಿಗಳಿಗೆ ವಿರುದ್ಧನಾಗಿದ್ದೇನೆ; ಅವರು ನನ್ನ ಕುರಿಗಳ ಲೆಕ್ಕವನ್ನು ನನಗೆ ಒಪ್ಪಿಸಬೇಕು; ನನ್ನ ಕುರಿ ಮೇಯಿಸುವ ಕೆಲಸದಿಂದ ಅವರನ್ನು ತೆಗೆದುಬಿಡುವೆನು; ಆ ಕುರುಬರು ಇನ್ನು ಸ್ವಂತ ಹೊಟ್ಟೆಯನ್ನು ತುಂಬಿಸಿಕೊಳ್ಳರು; ನನ್ನ ಕುರಿಗಳು ಆಹಾರವಾಗಿ ಅವರ ಬಾಯಿಗೆ ಬೀಳದಂತೆ ಅವುಗಳನ್ನು ರಕ್ಷಿಸುವೆನು. “ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ಆಹಾ, ನಾನೇ ನನ್ನ ಕುರಿಗಳನ್ನು ಹಿಂಬಾಲಿಸಿ ಹುಡುಕುವೆನು. 
ಕೀರ್ತನೆ: 123:1-3, 3-4, 5, 6

ಶ್ಲೋಕ: ಪ್ರಭು ಕುರಿಗಾಹಿಯಾಗಿರಲು ನನಗೆ, ಕುಂದುಕೊರತೆಗಳೆಲ್ಲಿಯವು ಎನಗೆ?

ಶುಭಸಂದೇಶ: ಮತ್ತಾಯ 20:1-16


ಯೇಸು ತಮ್ಮ ಶಿಷ್ಯರಿಗೆ ಈ ಸಾಮತಿ ಹೇಳಿದರು, “ಸ್ವರ್ಗಸಾಮ್ರಾಜ್ಯವು ಹೀಗಿದೆ: ಒಬ್ಬ ಯಜಮಾನನಿಗೆ ಒಂದು ದ್ರಾಕ್ಷಿತೋಟವಿತ್ತು. ಅದರಲ್ಲಿ ಕೆಲಸ ಮಾಡುವುದಕ್ಕೆ ಕೂಲಿಗಾರರನ್ನು ಗೊತ್ತುಮಾಡಲು ಅವನು ಬೆಳಗಿನ ಜಾವದಲ್ಲೇ ಹೊರಟ. ಆಳಿಗೆ ಒಂದು ಬೆಳ್ಳಿ ನಾಣ್ಯದಂತೆ ದಿನಕೂಲಿಯನ್ನು ಮಾತಾಡಿ ತೋಟಕ್ಕೆ ಕಳುಹಿಸಿದ. ಸುಮಾರು ಬೆಳಿಗ್ಗೆ ಒಂಭತ್ತು ಗಂಟೆಗೆ ಅವನು ಪುನಃ ಸಂತೆಬೀದಿಯ ಕಡೆ ಹೋದ. ಕೆಲಸವಿಲ್ಲದೆ ಸುಮ್ಮನೆ ನಿಂತುಕೊಂಡಿದ್ದ ಕೆಲವು ಕೂಲಿಗಾರರನ್ನು ಅಲ್ಲಿ ಕಂಡ.  ನೀವೂ ನನ್ನ ದ್ರಾಕ್ಷಿತೋಟಕ್ಕೆ ಹೋಗಿರಿ; ನ್ಯಾಯವಾದ ಕೂಲಿಯನ್ನು ನಿಮಗೆ ಕೊಡುತ್ತೇನೆ,’ ಎಂದ. ಅವರೂ ಹೋದರು. 5ಬಳಿಕ ಸುಮಾರು ಹನ್ನೆರಡು ಗಂಟೆಗೊಮ್ಮೆ, ಮತ್ತೆ ಮೂರು ಗಂಟೆಗೊಮ್ಮೆ ಹೋಗಿ ಇನ್ನೂ ಕೆಲವರನ್ನು ಕೆಲಸಕ್ಕೆ ಕಳುಹಿಸಿದ. ಐದು ಗಂಟೆಗೆ ಹೋದಾಗಲೂ ಬೇರೆ ಕೆಲವರು ಅಲ್ಲಿ ನಿಂತಿರುವುದನ್ನು ಕಂಡು, ‘ದಿನವಿಡೀ ಕೆಲಸಮಾಡದೆ ಸುಮ್ಮನೆ ಇಲ್ಲಿ ನಿಂತಿದ್ದೀರಲ್ಲಾ, ಏಕೆ?’ ಎಂದು ಕೇಳಿದ. ಅದಕ್ಕೆ ಅವರು, ‘ನಮ್ಮನ್ನು ಯಾರೂ ಕೂಲಿಗೆ ಕರೆಯಲಿಲ್ಲ,’ ಎಂದರು. ‘ಹಾಗಾದರೆ ನೀವೂ ಕೂಡ ನನ್ನ ದ್ರಾಕ್ಷಿತೋಟಕ್ಕೆ ಹೋಗಿ ಕೆಲಸಮಾಡಿ,’ ಎಂದು ಹೇಳಿ ಅವರನ್ನೂ ಕಳುಹಿಸಿದ. “ಸಂಜೆಯಾಯಿತು, ತೋಟದ ಯಜಮಾನ ತನ್ನ ಮೇಸ್ತ್ರಿಗೆ, ‘ಕೂಲಿಯಾಳುಗಳನ್ನು ಕರೆದು, ಕೊನೆಗೆ ಬಂದವರಿಂದ ಆರಂಭಿಸಿ ಮೊದಲು ಬಂದವರ ತನಕ ಕೂಲಿಕೊಡು,’ ಎಂದ. ಅದರಂತೆ ಐದು ಗಂಟೆಗೆ ಗೊತ್ತುಮಾಡಿದವರು ಬಂದಾಗ ಒಬ್ಬೊಬ್ಬನಿಗೆ ಒಂದೊಂದು ಬೆಳ್ಳಿನಾಣ್ಯ ಸಿಕ್ಕಿತು.  ಮೊತ್ತಮೊದಲು ಗೊತ್ತುಮಾಡಿದವರು ತಮ್ಮ ಸರದಿ ಬಂದಾಗ, ತಮಗೆ ಹೆಚ್ಚು ಸಿಗುವುದೆಂದು ಭಾವಿಸಿದರು. ಆದರೆ ಅವರಿಗೂ ಒಂದೊಂದೇ ಬೆಳ್ಳಿನಾಣ್ಯ ದೊರಕಿತು.  ಅದನ್ನು ತೆಗೆದುಕೊಂಡಾಗ ಅವರು ದಣಿಯ ವಿರುದ್ಧ ಗೊಣಗಲಾರಂಭಿಸಿದರು.  ‘ಕಡೇಹೊತ್ತಿನಲ್ಲಿ ಬಂದ ಇವರು ಒಂದೇ ಒಂದು ಗಂಟೆ ಕೆಲಸಮಾಡಿದ್ದಾರೆ, ಬಿಸಿಲಲ್ಲಿ ಬೆಂದು, ದಿನವೆಲ್ಲಾ ದುಡಿದ ನಮ್ಮನ್ನು ಇವರಿಗೆ ಸರಿಸಮಮಾಡಿದ್ದೀರಲ್ಲಾ!’ ಎಂದರು.  ಅದಕ್ಕೆ ಯಜಮಾನ ಅವರಲ್ಲಿ ಒಬ್ಬನಿಗೆ, ‘ಅಯ್ಯಾ, ನಿನಗೆ ನಾನು ಅನ್ಯಾಯಮಾಡಿಲ್ಲ. ದಿನಕ್ಕೊಂದು ಬೆಳ್ಳಿನಾಣ್ಯದಂತೆ ನೀನು ನನ್ನೊಡನೆ ಒಪ್ಪಂದಮಾಡಿಕೊಳ್ಳಲಿಲ್ಲವೆ?  ನಿನ್ನ ಕೂಲಿ ಏನೋ ಅದನ್ನು ತೆಗೆದುಕೊಂಡು ಹೋಗು. ನಿನಗೆ ಕೊಟ್ಟಷ್ಟನ್ನು ಈ ಕಟ್ಟಕಡೆಯವನಿಗೂ ಕೊಡುವುದು ನನ್ನ ಇಷ್ಟ.  ನನ್ನದನ್ನು ನನ್ನಿಷ್ಟಾನುಸಾರ ಕೊಡುವ ಹಕ್ಕು ನನಗಿಲ್ಲವೆ? ನನ್ನ ಔದಾರ್ಯವನ್ನು ಕಂಡು ನಿನಗೇಕೆ ಹೊಟ್ಟೆಯುರಿ?’ ಎಂದ.  ಹೀಗೆ, ಕಡೆಯವರು ಮೊದಲಿನವರಾಗುವರು; ಮೊದಲಿನವರು ಕಡೆಯವರಾಗುವರು,” ಎಂದು ಯೇಸು ಬೋಧಿಸಿದರು.

16.08.22 - "ಆದರೆ ಮೊದಲಿನವರಲ್ಲಿ ಅನೇಕರು ಕಡೆಯವರಾಗುವರು; ಕಡೆಯವರಲ್ಲಿ ಅನೇಕರು ಮೊದಲಿನವರಾಗುವರು"

 ಮೊದಲನೇ ವಾಚನ: ಪ್ರವಾದಿ ಯೆಜೆಕಿಯೇಲನ ಗ್ರಂಥ 28:1-10

ಸರ್ವೇಶ್ವರ ಈ ವಾಣಿಯನ್ನು ನನಗೆ ದಯಪಾಲಿಸಿದರು - “ನರಪುತ್ರನೇ, ನೀನು ಟೈರ್ ನಗರದ ರಾಜನಿಗೆ ಹೀಗೆ ನುಡಿ; ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ನೀನು ಗರ್ವದಿಂದ ‘ಆಹಾ, ನಾನೆ ದೇವರು, ಸಮುದ್ರ ಮಧ್ಯೆ ದೇವರ ಆಸನವನ್ನೇ ಆಲಂಕರಿಸಿದ್ದೇನೆ’, ಎಂದುಕೊಂಡೆ. ನೀನು ನಿನ್ನ ದೇವರಿಗೆ ಸಮನಾಗಿಸಿಕೊಂಡೆಯೋ? ನೀನು ಎಂದಿಗೂ ದೇವರಲ್ಲ, ನೀನೊಬ್ಬ ನರಪ್ರಾಣಿಯಷ್ಟೆ. ನೀನು ದಾನಿಯೇಲನಿಗಿಂತಲೂ ಬುದ್ಧಿವಂತನೋ? ಹಾಗಾದರೆ ನಿನಗೆ ಮರೆಯಾದ ರಹಸ್ಯ ಯಾವುದೂ ಇಲ್ಲ! ನಿನ್ನ ಜ್ಞಾನ ವಿವೇಕಿಗಳಿಂದ ಐಶ್ವರ್ಯವನ್ನು ಗಳಿಸಿ, ನಿನ್ನ ಬೊಕ್ಕಸಗಳಲ್ಲಿ ಬೆಳ್ಳಿಬಂಗಾರವನ್ನು ತುಂಬಿಸಿ ಕೊಂಡಿರುವೆ. ನಿನ್ನ ಅಧಿಕ ಜ್ಞಾನದಿಂದ ಹಾಗು ವ್ಯಾಪಾರದಿಂದ ಸಿರಿಸಂಪತ್ತನ್ನು ವೃದ್ಧಿಮಾಡಿಕೊಂಡಿರುವೆ. ಆದುದರಿಂದ ನಿನ್ನ ಮನಸ್ಸು ನಿನ್ನ ಆಸ್ತಿಯ ನಿಮಿತ್ತ ಉಬ್ಬಿಹೋಗಿದೆ. ಹೀಗಿರಲು ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ-ನೀನು ನಿನ್ನನ್ನೆ ದೇವರಿಗೆ ಸಮನಾಗಿಸಿಕೊಂಡಿರುವೆ. ಆದುದರಿಂದ ನಾನು ಅತಿಭಯಂಕರ ಜನಾಂಗದವರಾದ ಮ್ಲೇಚ್ಛರನ್ನು ನಿನ್ನ ಮೇಲೆ ಬೀಳಮಾಡುವೆನು; ಅವರು ನಿನ್ನ ಜ್ಞಾನದ ಸೊಬಗಿನ ಮೇಲೆ ಕತ್ತಿ ಹಿರಿದು, ನಿನ್ನ ಹೊಳಪನ್ನು ಹೊಲಸು ಮಾಡುವರು. ನಿನ್ನನ್ನು ಪಾತಾಳಕ್ಕೆ ತಳ್ಳಿಬಿಡುವರು; ಸಮುದ್ರಮಧ್ಯೆ ಹತರಾದವರ ಗತಿ ನಿನಗೆ ಸಂಭವಿಸುವುದು. ನಿನ್ನನ್ನು ಸಂಹರಿಸುವವನೆದುರಿಗೆ ನಿಂತು, ‘ನಾನು ದೇವರು’ ಎಂದು ಹೇಳಬಲ್ಲೆಯಾ? ಹತಿಸುವವನ ಕೈಗೆ ನೀನು ಎಂದಿಗೂ ದೇವರಲ್ಲ, ನರಪ್ರಾಣಿಯೇ! ನೀನು ಅನ್ಯರ ಕೈಯಿಂದ ಸುನ್ನತಿಹೀನರ ಮರಣಕ್ಕೆ ಗುರಿಯಾಗುವೆ; ನಾನೇ ನುಡಿದಿದ್ದೇನೆ, ಇದು ಸರ್ವೇಶ್ವರನಾದ ದೇವರ ಸಂಕಲ್ಪ.”

ಕೀರ್ತನೆ: 32:26-27, 28, 30, 35-36

ಶ್ಲೋಕ: ಬದುಕಿಸುವವನು, ಕೊಲ್ಲುವವನು ನಾನೇ

ಶುಭಸಂದೇಶ: ಮತ್ತಾಯ 19:23-30


ಆಗ ಯೇಸುಸ್ವಾಮಿ ತಮ್ಮ ಶಿಷ್ಯರನ್ನು ಉದ್ದೇಶಿಸಿ, “ಐಶ್ವರ್ಯವಂತನು ಸ್ವರ್ಗಸಾಮ್ರಾಜ್ಯವನ್ನು ಪ್ರವೇಶಿಸುವುದು ಕಷ್ಟವೆಂದು ನಿಮಗೆ ಒತ್ತಿ ಹೇಳುತ್ತೇನೆ. ಐಶ್ವರ್ಯವಂತನು ದೇವರ ಸಾಮ್ರಾಜ್ಯವನ್ನು ಪ್ರವೇಶಿಸುವುದಕ್ಕಿಂತಲೂ ಒಂಟೆಯು ಸೂಜಿಯ ಕಣ್ಣಿನಲ್ಲಿ ನುಸುಳುವುದು ಸುಲಭ ಎಂಬುದು ನಿಜ,” ಎಂದರು. ಇದನ್ನು ಕೇಳಿದ ಮೇಲಂತೂ ಶಿಷ್ಯರು ಬೆಬ್ಬೆರಗಾದರು. “ಹಾಗಾದರೆ, ಯಾರು ತಾನೆ ಜೀವೋದ್ಧಾರ ಹೊಂದಲು ಸಾಧ್ಯ?” ಎಂದುಕೊಂಡರು. ಯೇಸು ಅವರನ್ನು ನಿಟ್ಟಿಸಿ ನೋಡುತ್ತಾ, “ಮನುಷ್ಯರಿಗಿದು ಅಸಾಧ್ಯ; ಆದರೆ ದೇವರಿಗೆ ಎಲ್ಲವೂ ಸಾಧ್ಯ,” ಎಂದರು. ಪರಿತ್ಯಾಗಕ್ಕೆ ನೂರ್ಮಡಿ ಪ್ರತಿಫಲ ಪೇತ್ರನು ಆಗ ಮುಂದೆ ಬಂದು, “ನೋಡಿ, ನಾವು ಎಲ್ಲವನ್ನು ಬಿಟ್ಟುಬಿಟ್ಟು ತಮ್ಮನ್ನು ಹಿಂಬಾಲಿಸಿದ್ದೇವೆ. ನಮಗೇನು ದೊರಕುತ್ತದೆ?” ಎಂದು ಕೇಳಿದನು.  ಅದಕ್ಕೆ ಯೇಸು, “ನಿಮಗೆ ಸತ್ಯವಾಗಿ ಹೇಳುತ್ತೇನೆ: ಹೊಸ ಸೃಷ್ಟಿಯಲ್ಲಿ ನರಪುತ್ರನು ತನ್ನ ಮಹಿಮಾನ್ವಿತ ಸಿಂಹಾಸನದ ಮೇಲೆ ಆಸೀನನಾಗುವಾಗ, ನನ್ನನ್ನು ಹಿಂಬಾಲಿಸಿರುವ ನೀವು ಕೂಡ, ಇಸ್ರಯೇಲಿನ ಹನ್ನೆರಡು ಗೋತ್ರಗಳಿಗೆ ನ್ಯಾಯಾಧಿಪತಿಗಳಾಗಿ ಹನ್ನೆರಡು ಸಿಂಹಾಸನಗಳ ಮೇಲೆ ಆಸೀನರಾಗುವಿರಿ. ನನ್ನ ನಾಮದ ನಿಮಿತ್ತ ಮನೆಮಠವನ್ನಾಗಲಿ, ಅಣ್ಣತಮ್ಮಂದಿರನ್ನಾಗಲಿ, ಅಕ್ಕತಂಗಿಯರನ್ನಾಗಲಿ, ತಂದೆ ತಾಯಿಯರನ್ನಾಗಲಿ, ಮಕ್ಕಳು ಮರಿಗಳನ್ನಾಗಲಿ, ಹೊಲಗದ್ದೆಗಳನ್ನಾಗಲಿ ತ್ಯಜಿಸುವ ಪ್ರತಿಯೊಬ್ಬನೂ ನೂರ್ಮಡಿಯಷ್ಟು ಪಡೆಯುವನು; ಮಾತ್ರವಲ್ಲ, ಅಮರಜೀವಕ್ಕೆ ಬಾಧ್ಯಸ್ಥನಾಗುವನು. ಆದರೆ ಮೊದಲಿನವರಲ್ಲಿ ಅನೇಕರು ಕಡೆಯವರಾಗುವರು; ಕಡೆಯವರಲ್ಲಿ ಅನೇಕರು ಮೊದಲಿನವರಾಗುವರು.


15.08.22 - “ಎನ್ನ ಮನ ಮಾಡುತ್ತಿದೆ ಸರ್ವೇಶ್ವರನ ಸ್ತುತಿ ಉಲ್ಲಾಸಿಸುತ್ತಿದೆ ಮುಕ್ತಿದಾತ ದೇವನಲಿ"

ಮೊದಲನೇ ವಾಚನ: ಪ್ರಕಟನೆ 11:19; 12:1-6, 10

ಸ್ವರ್ಗದಲ್ಲಿನ ದೇವಾಲಯವು ತೆರೆಯಿತು. ದೇವರ ಒಡಂಬಡಿಕೆಯ ಮಂಜೂಷವು ಅಲ್ಲಿರುವುದು ಕಾಣಿಸಿತು; ಇದಲ್ಲದೆ ಮಿಂಚುಗಳು, ಗುಡುಗು, ಗರ್ಜನೆಗಳು ಉಂಟಾದವು. ಭೂಕಂಪವೂ ಆಯಿತು. ಜೋರಾದ ಆಲಿಕಲ್ಲಿನ ಮಳೆ ಸುರಿಯಿತು. ಆಕಾಶದಲ್ಲಿ ಚಿಹ್ನೆಯೊಂದು ಕಾಣಿಸಿಕೊಂಡಿತು. ಮಹಿಳೆಯೊಬ್ಬಳು ಸೂರ್ಯಭೂಷಿತಳಾಗಿದ್ದಳು. ಆಕೆಯ ಪಾದದಡಿ ಚಂದ್ರನಿದ್ದನು. ತಲೆಯ ಮೇಲೆ ಹನ್ನೆರಡು ನಕ್ಷತ್ರ ಖಚಿತವಾದ ಕಿರೀಟವಿತ್ತು. ಆಕೆ ತುಂಬು ಗರ್ಭಿಣಿ, ಪ್ರಸವವೇದನೆಯಿಂದ ನರಳುತ್ತಿದ್ದಳು. ಆಕಾಶದಲ್ಲಿ ಮತ್ತೊಂದು ಚಿಹ್ನೆ ಕಾಣಿಸಿಕೊಂಡಿತು. ಅಲ್ಲಿ ಕೆಂಪು ಘಟಸರ್ಪವೊಂದು ಇತ್ತು. ಅದಕ್ಕೆ ಏಳು ತಲೆಗಳಿದ್ದವು, ಹತ್ತು ಕೊಂಬುಗಳಿದ್ದವು; ಅದರ ಏಳು ತಲೆಗಳ ಮೇಲೆ ಏಳು ಮುಕುಟಗಳಿದ್ದವು. ಅದು ತನ್ನ ಬಾಲದಿಂದ ಮೂರನೆಯ ಒಂದು ಭಾಗದಷ್ಟು ನಕ್ಷತ್ರಗಳನ್ನು ಆಕಾಶದಿಂದ ಸೆಳೆದೆಳೆದು ಅವುಗಳನ್ನು ಭೂಮಿಗೆ ಎಸೆಯಿತು. ಮಗು ಹುಟ್ಟಿದ ಕೂಡಲೇ ಅದನ್ನು ನುಂಗಿ ಬಿಡಬೇಕೆಂದು ಘಟಸರ್ಪವು ಆ ತುಂಬು ಗರ್ಭಿಣಿಯ ಬಳಿಯಲ್ಲಿಯೇ ಕಾಯ್ದುಕೊಂಡಿತು. ಸರ್ವಜನಾಂಗಗಳನ್ನು ಕಬ್ಬಿಣದ ದಂಡದಿಂದ ಆಳಬಲ್ಲಂಥ ಒಂದು ಗಂಡುಮಗುವಿಗೆ ಆಕೆ ಜನ್ಮವಿತ್ತಳು. ಆದರೆ, ಆ ಮಗುವನ್ನು ಸಿಂಹಾಸನದಲ್ಲಿದ್ದ ದೇವರ ಬಳಿಗೆ ಕೊಂಡೊಯ್ಯಲಾಯಿತು. ಆ ಮಹಿಳೆ ಅರಣ್ಯಕ್ಕೆ ಓಡಿಹೋದಳು. ಅಲ್ಲಿ ಸಾವಿರದ ಇನ್ನೂರ ಅರವತ್ತು ದಿನಗಳ ಕಾಲ ಆಕೆಗೆ ಶುಶ್ರೂಷೆಯಾಗಬೇಕೆಂದು ದೇವರೇ ಆ ಸ್ಥಳವನ್ನು ಸಜ್ಜುಗೊಳಿಸಿದ್ದರು. ಸ್ವರ್ಗದಿಂದ ಬಂದ ಮಹಾಶಬ್ದವನ್ನು ನಾನು ಕೇಳಿಸಿಕೊಂಡೆ. ಅದು ಇಂತೆಂದಿತು: “ಇಗೋ, ನಮ್ಮ ದೇವನಿತ್ತ ಜೀವೋದ್ಧಾರ ಸಿದ್ಧಿಸಿದೆ. ಆತನ ಶಕ್ತಿ, ಸಾಮ್ರಾಜ್ಯಗಳು ಕಂಗೊಳಿಸುತ್ತಿವೆ. ಆತನ ಕ್ರಿಸ್ತಾಧಿಪತ್ಯ ಸ್ಥಾಪಿತವಾಗಿದೆ. ನಮ್ಮ ಸೋದರರನು ದೂರಿದವನನ್ನು ದಬ್ಬಲಾಗಿದೆ. ಹಗಲಿರುಳು ನಮ್ಮ ದೇವರೆದುರು ದೂರಿತ್ತಿದ್ದವನನ್ನು ತಳ್ಳಲಾಗಿದೆ.

ಕೀರ್ತನೆ: 45:10, 11, 12, 16

ಶ್ಲೋಕ: ಪಟ್ಟದ ರಾಣಿಯು ನಿಂತಿಹಳು ನಿನ್ನ ಬಲಪಾರ್ಶ್ವದಲಿ, ಓಫಿರ್ ನಾಡಿನ  ಚಿನ್ನಾಭರಣಗಳಿಂದ ಭೂಷಿತಳಾಗಿ.

ಎರಡನೇ ವಾಚನ: 1 ಕೊರಿಂಥಿಯರಿಗೆ 15:20-27

ಕ್ರಿಸ್ತಯೇಸು ಪುನರುತ್ಥಾನಹೊಂದಿದ್ದೇನೋ ಸತ್ಯಸ್ಯ ಸತ್ಯ. ಅವರ ಪುನರುತ್ಥಾನವು, ಸತ್ತವರು ಪುನರುತ್ಥಾನ ಹೊಂದುತ್ತಾರೆ ಎನ್ನುವುದಕ್ಕೆ ಪ್ರಮಾಣ.  ಒಬ್ಬ ಮನುಷ್ಯನಿಂದ ಸಾವು ಸಂಭವಿಸಿದಂತೆಯೇ ಒಬ್ಬ ಮನುಷ್ಯನಿಂದಲೇ ಸತ್ತವರಿಗೆ ಪುನರುತ್ಥಾನವು ಪರಿಣಮಿಸಿತು.  ಆದಾಮನ ಸಂಬಂಧದಿಂದ ಎಲ್ಲರೂ ಸಾವಿಗೀಡಾದಂತೆ ಕ್ರಿಸ್ತಯೇಸುವಿನ ಸಂಬಂಧದಿಂದ ಎಲ್ಲರೂ ಜೀವಂತರಾಗಿ ಏಳುತ್ತಾರೆ.  ಈ ಭಾಗ್ಯವನ್ನು ಒಬ್ಬೊಬ್ಬನೂ ಕ್ರಮಬದ್ಧ ರೀತಿಯಲ್ಲಿ ಪಡೆಯತ್ತಾನೆ. ಪ್ರಪ್ರಥಮ ಫಲವಾಗಿ ಕ್ರಿಸ್ತಯೇಸುವೇ ಜೀವಂತರಾದರು. ಅನಂತರ, ಕ್ರಿಸ್ತಯೇಸುವಿಗೆ ಸೇರಿದವರು ಯೇಸು ಪುನರಾಗಮಿಸುವಾಗ ಜೀವಂತರಾಗುತ್ತಾರೆ.  ಅಂತ್ಯ ಬರುವುದು ಅನಂತರವೇ. ಆಗ ಯೇಸು ಎಲ್ಲಾ ಆಧಿಪತ್ಯವನ್ನೂ ಅಧಿಕಾರವನ್ನೂ ಶಕ್ತಿಯನ್ನೂ ನಿರ್ಮೂಲಮಾಡಿ ತಂದೆಯಾದ ದೇವರಿಗೆ ಸಾಮ್ರಾಜ್ಯವನ್ನು ಒಪ್ಪಿಸಿಕೊಡುವರು.  ಶತ್ರುಗಳೆಲ್ಲರನ್ನು ತಮ್ಮ ಪಾದಪೀಠವಾಗಿಸಿಕೊಳ್ಳುವ ತನಕ ಅವರು ರಾಜ್ಯವಾಳಬೇಕಾಗಿದೆ.  ಕಟ್ಟಕಡೆಗೆ ನಿರ್ಮೂಲವಾಗುವ ಶತ್ರುವೆಂದರೆ ಮೃತ್ಯುವೇ. “ದೇವರು ಎಲ್ಲವನ್ನು ಅಧೀನಪಡಿಸಿ ಆತನ ಪಾದಪೀಠವನ್ನಾಗಿಸಿದ್ದಾರೆ,” ಎಂದು ಲಿಖಿತವಾಗಿದೆ. “ಎಲ್ಲವನ್ನೂ ಅಧೀನಪಡಿಸಲಾಗಿದೆ,” ಎಂದು ಹೇಳುವಾಗ, ಹಾಗೆ ಅಧೀನಪಡಿಸಿದ ದೇವರು ಅದರಲ್ಲಿ ಸೇರಲಿಲ್ಲ ಎಂಬುದು ಸುಸ್ಪಷ್ಟವಾಗಿದೆ.

ಶುಭಸಂದೇಶ: ಲೂಕ 1:39-56


ಮರಿಯಳು ಪ್ರಯಾಣಹೊರಟು ಜುದೇಯದ ಗುಡ್ಡಗಾಡಿನಲ್ಲಿರುವ ಒಂದು ಊರಿಗೆ ತ್ವರೆಯಾಗಿ ಬಂದಳು.  ಅಲ್ಲಿ ಜಕರೀಯನ ಮನೆಗೆ ಹೋಗಿ ಎಲಿಜಬೇತಳನ್ನು ವಂದಿಸಿದಳು.  ಮರಿಯಳ ವಂದನೆಯನ್ನು ಎಲಿಜಬೇತಳು ಕೇಳಿದ್ದೇ ತಡ, ಆಕೆಯ ಗರ್ಭದಲ್ಲಿ ಶಿಶು ನಲಿದಾಡಿತು; ಎಲಿಜಬೇತಳೂ ಪವಿತ್ರಾತ್ಮಭರಿತಳಾಗಿ,  ಹರ್ಷೋದ್ಗಾರದಿಂದ ಹೀಗೆಂದಳು: “ಸ್ತ್ರೀಯರಲ್ಲೆಲ್ಲಾ ಧನ್ಯಳು ನೀನು; ನಿನ್ನ ಕರುಳ ಕುಡಿಯೂ ಧನ್ಯ! ನನ್ನ ಪ್ರಭುವಿನ ತಾಯಿ ನೀನು; ನನ್ನ ಬಳಿಗೆ ಬಂದುದು ಅದೆಂಥ ಭಾಗ್ಯ! ನಿನ್ನ ವಂದನೆಯ ದನಿ ನನ್ನ ಕಿವಿ ತಾಕಿದೊಡನೆ ನಲಿದಾಡಿತು ಆನಂದದಿಂದ, ನನ್ನ ಕರುಳ ಕುಡಿ! ನಂಬಿ ಧನ್ಯಳಾದೆ ನೀನು, ದೇವರಿಂದ ಬಂದ ವಾರ್ತೆ ನೆರವೇರಿಯೇ ತೀರುವುದೆಂದು.” ಆಗ ಹೀಗೆಂದು ಮರಿಯಳು ಹೊಗಳಿದಳು: “ಎನ್ನ ಮನ ಮಾಡುತ್ತಿದೆ ಸರ್ವೇಶ್ವರನ ಸ್ತುತಿ ಉಲ್ಲಾಸಿಸುತ್ತಿದೆ ಮುಕ್ತಿದಾತ ದೇವನಲಿ ತನ್ನ ದಾಸಿಯ ದೀನತೆಯನು ನೆನಪಿಗೆ ತಂದುಕೊಂಡನಾತ ಧನ್ಯಳೆಂದು ಹೊಗಳುವರೆನ್ನನು ಇಂದಿನಿಂದ ಸರ್ವಜನಾಂಗ ಏಕೆನೆ ಮಾಡಿಹನೆನಗೆ ಸರ್ವಶಕ್ತನು ಮಹತ್ಕಾರ್ಯ ನಿಜಕ್ಕೂ ಆತನ ನಾಮಧೇಯ ಪರಮಪೂಜ್ಯ ಆತನಲ್ಲಿ ಭಯಭಕ್ತಿಯುಳ್ಳವರಿಗೆ ಆತನ ಪ್ರೀತಿ ತಲತಲಾಂತರದವರೆಗೆ ಗರ್ವ ಹೃದಯಿಗಳನಾತ ಚದರಿಸಿರುವನು ಪ್ರದರ್ಶಿಸಿರುವನು ತನ್ನ ಬಾಹುಬಲವನು ಇಳಿಸಿಹನು ಗದ್ದುಗೆಯಿಂದ ಘನಾಧಿಪತಿಗಳನು ಏರಿಸಿರುವನು ಉನ್ನತಿಗೆ ದೀನದಲಿತರನು ತೃಪ್ತಿಪಡಿಸಿರುವನಾತ ಹಸಿದವರನು ಮೃಷ್ಟಾನ್ನದಿ ಹೊರದೂಡಿರುವನು ಸಿರಿವಂತರನು ಬರೀಗೈಯಲಿ ನೆರವಾದನು ತನ್ನ ದಾಸ ಇಸ್ರಯೇಲನಿಗೆ ಪೂರ್ವಜರಿಗಿತ್ತ ವಾಗ್ದಾನದ ಮೇರೆಗೆ ಮರೆಯಲಿಲ್ಲ ಆತ ಕರುಣೆತೋರಲು ಅಬ್ರಹಾಮನಿಗೆ ಅವನ ಸಂತತಿಗೆ, ಯುಗಯುಗಾಂತರದವರೆಗೆ ಮರಿಯಳು ಸುಮಾರು ಮೂರು ತಿಂಗಳು ಎಲಿಜಬೇತಳೊಡನೆ ತಂಗಿದ್ದು ತನ್ನ ಮನೆಗೆ ಹಿಂದಿರುಗಿದಳು.

14.08.22 - "ನಾನು ಬಂದಿರುವುದು ಜಗತ್ತಿನಲ್ಲಿ ಬೆಂಕಿಯನ್ನು ಹೊತ್ತಿಸಲು"

ಮೊದಲನೇ ವಾಚನ: ಯೆರೆಮೀಯ 38:4-6, 8-10

ಪದಾಧಿಕಾರಿಗಳು ಅರಸನ ಬಳಿಗೆ ಬಂದು, "ಒಡೆಯಾ, ಈ ಯೆರೆಮೀಯನಿಗೆ ಮರಣ ದಂಡನೆಯಾಗಬೇಕು. ಇವನು ನಗರದಲ್ಲಿರುವ ಸೈನಿಕರಿಗೂ ಇಂಥ ಭವಿಷ್ಯವನ್ನು ನುಡಿಯುತ್ತಾ  ಅವರು ಎದೆಗುಂದುವಂತೆ ಮಾಡುತ್ತಿದ್ದಾನೆ. ಅವನು ಹಾರೈಸುವುದು ಜನರ ಕ್ಷೇಮವನ್ನಲ್ಲ ಹಾನಿಯನ್ನೇ," ಎಂದು ದೂರಿತ್ತನು. ಅದಕ್ಕೆ ಅರಸ ಚಿದ್ಕೀಯನು, "ಇಗೋ, ಯೆರೆಮೀಯನು ನಿಮ್ಮ ಕೈಯಲ್ಲಿದ್ದಾನೆ. ಅರಸನು ನಿಮಗೆ ಅಡ್ಡಬಂದು ಏನೂ ಮಾಡಬಲ್ಲವನಲ್ಲ," ಎಂದನು. ಅವರು ಯೆರೆಮೀಯನನ್ನು ಹಿಡಿದು   ಕಾರಾಗೃಹದ ಅಂಗಳದಲ್ಲಿದ್ದ ರಾಜವಂಶೀಯನಾದ ಮಲ್ಕೀಯನ ಬಾವಿಯೊಳಗೆ ಹಗ್ಗಗಳಿಂದ ಇಳಿಸಿ ಅಲ್ಲೇ ಬಿಟ್ಟುಬಿಟ್ಟರು ಆ ಬಾವಿಯಲ್ಲಿ ನೀರಿರಲಿಲ್ಲ. ಕೆಸರಿತ್ತು. ಯೆರೆಮೀಯನು ಅದರೊಳಗೆ ಹೂತುಕೊಂಡನು. ಇದನ್ನು ತಿಳಿದುಕೊಂಡ ಅರಮನೆಯ ಕಂಚುಕಿಯು ಅರಮನೆಯಿಂದ ಹೊರಟು, ಬೆನ್ಯಾಮೀನಿನ ಬಾಗಿಲಿನಲ್ಲಿ ಕುಳಿತುಕೊಂಡಿದ್ದ ಅರಸನ ಬಳಿಗೆ ಬಂದು, "ನನ್ನೊಡೆಯಾ, ಅರಸರೇ, ಈ ಜನರು ಪ್ರವಾದಿ ಯೆರೆಮೀಯನಿಗೆ ಮಾಡಿರುವುದೆಲ್ಲಾ ದುಷ್ಟ ಕಾರ್ಯವೇ ಸರಿ. ಅವನನು ಬಾವಿಯಲ್ಲಿ ಹಾಕಿದ್ದಾರೆ. ಆಹಾರವಿಲ್ಲದೆ ಅವನು ಬಿದ್ದಲ್ಲೇ ಸಾಯುವುದು ಖಚಿತ. ಏಕೆಂದರೆ ನಗರದಲ್ಲಿ ರೊಟ್ಟಿಯಲ್ಲಾ ತೀರಿಹೋಗದೆ," ಎಂದು ಅರಿಕೆ ಮಾಡಿದನು . ಇದನ್ನು ಕೇಳಿದ ಅರಸನು ಸುಡಾನಿನ ಎಬೆದ್ಮೆಲೆಕನಿಗೆ, "ನೀನು ಇಲ್ಲಿಂದ ಮೂವತ್ತು ಮಂದಿ ಆಳುಗಳನ್ನು ಕರೆದುಕೊಂಡು ಹೋಗಿ ಪ್ರವಾದಿ ಯೆರೆಮೀಯನು ಸಾಯುವ ಮೊದಲೇ, ಅವನನ್ನು ಬಾವಿಯಿಂದ ಎತ್ತಿಸು," ಎಂದು ಅಪ್ಪಣೆಕೊಟ್ಟನು.

ಕೀರ್ತನೆ: 40:2, 3, 4, 18

ಶ್ಲೋಕ: ನನಗೊತ್ತಾಸೆ ಮಾಡಲು ಪ್ರಭೂ, ಬೇಗ ಬಾ

ಎರಡನೇ ವಾಚನ: ಹಿಬ್ರಿಯರಿಗೆ 12:1-4

ಆದಕಾರಣ ಇಷ್ಟುಮಂದಿ ಸಾಕ್ಷಿಗಳು ದೊಡ್ಡ ಮೇಘದಂತೆ ನಮ್ಮ ಸುತ್ತಲೂ ಆವರಿಸಿರುವಾಗ, ನಮಗೆ ಅಡ್ಡಿಯಾಗಬಲ್ಲ ಹೊರೆಯನ್ನೂ ಅಂಟಿಕೊಳ್ಳುವ ಪಾಪವನ್ನೂ ತೆಗೆದುಹಾಕಿ, ನಮಗಾಗಿ ನೇಮಿಸಿರುವ ಓಟದ ಸ್ಪರ್ಧೆಯಲ್ಲಿ ನಾವು ಸ್ಥಿರಚಿತ್ತದಿಂದ ಭಾಗವಹಿಸೋಣ. ವಿಶ್ವಾಸವನ್ನು ಹುಟ್ಟಿಸುವ ಮತ್ತು ಅದನ್ನು ಪರಿಪೂರ್ಣಗೊಳಿಸುವ ಯೇಸುಸ್ವಾಮಿಯನ್ನು ಗುರಿಯಾಗಿಟ್ಟು ಓಡೋಣ. ಅವರು ತಮ್ಮ ಮುಂದಿಡಲಾದ ಸೌಭಾಗ್ಯವನ್ನು ಗಳಿಸಲು ನಿಂದೆ ಅವಮಾನಗಳನ್ನು ಲೆಕ್ಕಿಸದೆ ಶಿಲುಬೆಯ ಮರಣವನ್ನು ಸಹಿಸಿಕೊಂಡರು. ಈಗಲಾದರೋ ದೇವರ ಸಿಂಹಾಸನದ ಬಲಗಡೆ ಆಸೀನರಾಗಿದ್ದಾರೆ. ಪಾಪಿಗಳಿಂದ ತಮಗುಂಟಾದ ಕಠಿಣ ವಿರೋಧವನ್ನು ಯೇಸುಸ್ವಾಮಿ ಹೇಗೆ ಸಹಿಸಿಕೊಂಡರೆಂಬುದನ್ನು ಮನಸ್ಸಿನಲ್ಲಿಡಿ. ಆಗ ನೀವು ಬೇಸತ್ತು ಎದೆಗುಂದಲಾರಿರಿ.  ಪಾಪದ ವಿರುದ್ಧ ನೀವು ಕೈಗೊಂಡ ಹೋರಾಟದಲ್ಲಿ ನಿಮ್ಮ ರಕ್ತವನ್ನೇ ಸುರಿಸುವ ಸ್ಥಿತಿಗೆ ನೀವಿನ್ನೂ ಬಂದಿಲ್ಲ.

 ಶುಭಸಂದೇಶ: ಲೂಕ 12:49-53


ಯೇಸು ತಮ್ಮ ಶಿಷ್ಯರಿಗೆ ಹೇಳಿದ್ದೇನೆಂದರೆ, "ನಾನು ಬಂದಿರುವುದು ಜಗತ್ತಿನಲ್ಲಿ ಬೆಂಕಿಯನ್ನು ಹೊತ್ತಿಸಲು. ಅದು ಈಗಾಗಲೇ ಉರಿಯುತ್ತಿರಬೇಕೆಂಬುದೇ ನನ್ನ ಬಯಕೆ. ಆದರೆ ನಾನು ಪಡೆಯಬೇಕಾದ ಶ್ರಮಾಸ್ನಾನ ಒಂದುಂಟು. ಅದು ಈಡೇರುವ ತನಕನನಗೆ ನೆಮ್ಮದಿಯಿಲ್ಲ. ನಾನು ಲೋಕಕ್ಕೆ ಸಮಾಧಾನವನ್ನು ತರಲು ಬಂದೆ ಎಂದು ಭಾವಿಸುತ್ತೀರೋ? ಇಲ್ಲ. ಭಿನ್ನಭೇದಗಳನ್ನು ಉಂಟುಮಾಡಲು ಬಂದೆನೆಂದು ನಿಮಗೆ ಒತ್ತಿ ಹೇಳುತ್ತೇನೆ. ಹೇಗೆಂದರೆ, ಒಂದೇ ಮನೆಯಲ್ಲಿರುವ ಐವರಲ್ಲಿ,  ಇಬ್ಬರಿಗೆ ವಿರುದ್ಧ ಮೂವರು ಮೂವರಿಗೆ ವಿರುದ್ಧ ಇಬ್ಬರು ವಿಭಾಗವಾಗುವರು. ಮಗನಿಗೆ ವಿರುದ್ಧವಾಗಿ ತಂದೆ, ಮಗಳಿಗೆ, ವಿರುದ್ಧವಾಗಿ ತಾಯಿ, ಸೊಸೆಗೆ ವಿರುದ್ಧವಾಗಿ ಅತ್ತೆ, ಪರಸ್ಪರ ವಿರೋಧವಾಗಿ ವಿಂಗಡಿಸಿ ಹೋಗುವರು."

13.08.22

ಮೊದಲನೇ ವಾಚನ: ಯೆಜೆಕಿಯೇಲ: 18: 1-10, 13, 30-32

ಸರ್ವೇಶ್ವರ ನನಗೆ ಅನುಗ್ರಹಿಸಿದ ವಾಣಿ: "ಹೆತ್ತವರು ತಿಂದರು ಹುಳಿ ದ್ರಾಕ್ಷಿಯನ್ನು; ಚಳಿತು ಹೋದವು ಅವರ ಮಕ್ಕಳ ಹಲ್ಲುಗಳು" ಎಂಬ ಗಾದೆಯನ್ನು ನೀವು ಇಸ್ರಯೇಲ್ ನಾಡನ್ನು ಕುರಿತು ಹೇಳುವುದೇಕೆ? ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ನನ್ನ ಜೀವದಾಣೆ, ನೀವು ಈ ಗಾದೆಯನ್ನು ಇಸ್ರಯೇಲಿನಲ್ಲಿ ಇನ್ನು ಎತ್ತ ಬೇಕಾಗುವುದಿಲ್ಲ. ಇಗೋ, ಸಕಲ ನರ ಪ್ರಾಣಿಗಳು ನನ್ನವೇ; ತಂದೆಯೇನು, ಮಗನೇನು, ನರಪ್ರಾಣಿಗಳೆಲ್ಲವೂ ನನ್ನಧೀನದಲ್ಲಿವೆ; ಪಾಪ ಮಾಡುವ ಪ್ರಾಣಿಯೇ ಸಾಯುವನು. ಒಬ್ಬನು ಸದ್ಧರ್ಮಿಯಾಗಿಯಾಗಿ ನ್ಯಾಯ ನೀತಿಗಳನ್ನು ನಡೆಸಿ, ಗುಡ್ಡಗಳ ಮೇಲೆ ಯಜ್ಞಶೇಷವನ್ನು ತಿನ್ನದೆ, ಇಸ್ರಯೇಲ್ ವಂಶದವರ ವಿಗ್ರಹಗಳ ಕಡೆಗೆ ಕಣ್ಣೆತ್ತದೆ, ನೆರೆಯವನ ಹೆಂಡತಿಯನ್ನು ಕೆಡಿಸದೆ, ಮುಟ್ಟಿನ ಹೆಂಗಸನ್ನು ಕೂಡದೆ, ಯಾರನ್ನೂ ಹಿಂಸಿಸದೆ, ಸಾಲ ಮಾಡಿದವನ ಒತ್ತೆಯನ್ನು ಬಿಗಿಯಿಡಿಯದೆ, ಯಾರ ಸೊತ್ತನ್ನೂ ಅಪಹರಿಸದೆ, ಹಸಿದವನಿಗೆ ಅನ್ನವಿಕ್ಕಿ, ಬೆತ್ತಲೆ ಇರುವವನಿಗೆ ಹೊದಿಕೆಯನ್ನು ಹೊದಿಸಿ; ಸಾಲಕ್ಕೆ ಬಡ್ಡಿ ತೆಗೆಯದೆ, ಲಾಭಕ್ಕೆ ಹಣ ಕೊಡದೆ, ಅನ್ಯಾಯಕ್ಕೆ ಕೈ ಹಾಕದೆ, ವಾದಿ ಪ್ರತಿವಾದಿಗಳಿಗೆ ಸರಿಯಾಗಿ ನ್ಯಾಯ ತೀರಿಸಿ, ನನ್ನ ನಿಯಮಗಳನ್ನು ಅನುಸರಿಸಿ, ನನ್ನ ವಿಧಿಗಳನ್ನು ಕೈಕೊಂಡು, ಸತ್ಯ ಪರನಾಗಿಯೇ ನಡೆದರೆ, ಇಂಥವನು ಸದ್ದರ್ಮಿ. ಆದುದರಿಂದ ಅವನು ಜೀವಿಸುವುದು ನಿಶ್ಚಯ. ಇದು ಸರ್ವೇಶ್ವರನಾದ ದೇವರ ನುಡಿ: ಇಂಥವನು ಪಡೆದ ಮಗನು, ಈಗ ಹೇಳಿದ ದುಷ್ಕೃತ್ಯಗಳಲ್ಲಿ ಯಾವುದನ್ನಾದರೂ ನಡೆಸಿ, ಅಸಹ್ಯ ಕಾರ್ಯವನ್ನು ಮಾಡಿ, ಸಾಲಕ್ಕೆ ಬಡ್ಡಿ ತೆಗೆದು, ಲಾಭಕ್ಕೆ ಹಣ ಕೊಟ್ಟು, ಹಿಂಸಾಚಾರಿಯೂ, ರಕ್ತ ಸುರಿಸುವವನೂ ಆಗಿದ್ದರೆ, ಜೀವಿಸುವನೇ? ಖಂಡಿತ ಜೀವಿಸನು; ಈ ದುರಾಚಾರಗಳನ್ನೆಲ್ಲಾ ನಡೆಸಿದನ್ನಲ್ಲವೇ? ಅವನು ಸಾಯುವುದು ನಿಶ್ಚಯ; ತನ್ನ ಮರಣಕ್ಕೆ ತಾನೇ ಕಾರಣ. ಹೀಗಿರಲು ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ಇಸ್ರಯೇಲ್ ವಂಶದವರೇ, ನಿಮ್ಮ ನಿಮ್ಮ ನಡತೆಗೆ ತಕ್ಕ ಹಾಗೆ ನಾನು ನಿಮಗೆ ತೀರ್ಪು ನೀಡುವೆನು; ಅಧರ್ಮವು ನಿಮ್ಮನ್ನು ನಾಶ ಮಾಡದಂತೆ ಪಾಪಕ್ಕೆ ವಿಮುಖರಾಗಿರಿ; ನಿಮ್ಮ ಅಪರಾಧಗಳನ್ನೆಲ್ಲಾ ತೊರೆದುಬಿಡಿ. ನೀವು ಮಾಡುತ್ತಾ ಬಂದಿರುವ ಅಪರಾಧಗಳನ್ನೆಲ್ಲಾ ನಿಮ್ಮಿಂದ ತೊಲಗಿಸಿ ಬಿಟ್ಟು ನಿಮ್ಮ ಹೃದಯವನ್ನೂ ಸ್ವಭಾವವನ್ನೂ ನೂತನ ಮಾಡಿಕೊಳ್ಳಿ: ಇಸ್ರಯೇಲ್ ವಂಶದವರೇ ನೀವು ಏಕೆ ಸಾಯಬೇಕು? ಯಾರ ಸಾವಿನಲ್ಲೂ ನನಗೆ ಸಂತೋಷವಿಲ್ಲ; ಪಾಪಕ್ಕೆ ವಿಮುಖರಾಗಿ ಜೀವಿಸಿರಿ; ಇದು ಸರ್ವೇಶ್ವರನಾದ ದೇವರ ನುಡಿ".

ಕೀರ್ತನೆ: 51: 12-13, 14-15, 18-19
ಶ್ಲೋಕ: ವಿಧೇಯನಾಗಿ ನಡೆವ ಸಿದ್ದ ಮನಸ್ಸನು ನೀಡು ಪ್ರಭು.

ಶುಭಸಂದೇಶ: ಮತ್ತಾಯ: 19:13-15




ಅನಂತರ ಕೆಲವರು ಚಿಕ್ಕ ಮಕ್ಕಳನ್ನು ಯೇಸುಸ್ವಾಮಿಯ ಬಳಿಗೆ ತಂದರು. ಅವುಗಳ ಮೇಲೆ ಕೈಯಿಟ್ಟು ಪ್ರಾರ್ಥನೆ ಮಾಡಬೇಕೆಂದು ಕೇಳಿಕೊಂಡರು. ಶಿಷ್ಯರು ಅವರನ್ನು ಗದರಿಸಿದರು. ಆಗ ಯೇಸು, "ಚಿಕ್ಕ ಮಕ್ಕಳನ್ನು ನನ್ನ ಬಳಿಗೆ ಬರಲು ಬಿಡಿ; ಅವುಗಳನ್ನು ತಡೆಯಬೇಡಿ. ಸ್ವರ್ಗಸಾಮ್ರಾಜ್ಯ ಇಂಥವರದೇ," ಎಂದರು. ತರುವಾಯ ಆ ಮಕ್ಕಳ ಮೇಲೆ ಕೈಯಿಟ್ಟು ಆಶೀರ್ವದಿಸಿದರು. ಬಳಿಕ ಅಲ್ಲಿಂದ ಹೊರಟು ಹೋದರು. 


12.08.22 - "ಇನ್ನು ಮುಂದೆ ಅವರು ಇಬ್ಬರಲ್ಲ, ಒಂದೇ ಶರೀರವಾಗಿರುವರು"

 ಮೊದಲನೇ ವಾಚನ: ಪ್ರವಾದಿ ಯೆಜೆಕಿಯೇಲನ ಗ್ರಂಥ 16:1-15, 60, 63

ಆಮೇಲೆ ಸರ್ವೇಶ್ವರ ನನಗೆ ದಯಪಾಲಿಸಿದ ವಾಣಿ - “ನರಪುತ್ರನೇ, ನೀನು ಜೆರುಸಲೇಮಿಗೆ ಅದರ ಅಸಹ್ಯಕಾರ್ಯಗಳನ್ನು ತಿಳಿಯಪಡಿಸಿ ಹೀಗೆ ನುಡಿ - ಸರ್ವೇಶ್ವರ ದೇವರು ಜೆರುಸಲೇಮೆಂಬಾಕೆಗೆ ಈ ಮಾತನ್ನು ಹೇಳಿ ಕಳುಹಿಸಿದ್ದಾರೆ: “ನೀನು ಹುಟ್ಟಿದ್ದು ಕಾನಾನ್ ದೇಶದಲ್ಲಿ, ಅದೇ ನಿನ್ನ ಜನ್ಮಭೂಮಿ. ನಿನ್ನ ತಂದೆ ಅಮೋರಿಯನು, ನಿನ್ನ ತಾಯಿ ಹಿತ್ತಿಯಳು. ನಿನ್ನ ಜನನವನ್ನು ಕುರಿತು ಏನು ಹೇಳಲಿ! ನೀನು ಹುಟ್ಟಿದ ದಿನದಂದು ಯಾರೂ ನಿನ್ನ ಹೊಕ್ಕಳು ಕೊಯ್ದು ಕಟ್ಟಲಿಲ್ಲ. ನಿನ್ನನ್ನು ನೀರಿನಿಂದ ತೊಳೆದು ಶುಚಿಮಾಡಲಿಲ್ಲ, ನಿನಗೆ ಉಪ್ಪನ್ನು ಸ್ವಲ್ಪವು ಸವರಲಿಲ್ಲ, ನಿನ್ನನ್ನು ಬಟ್ಟೆಯಲ್ಲಿ ಸುತ್ತಲೇ ಇಲ್ಲ. ನಿನ್ನನ್ನು ಕಟಾಕ್ಷಿಸಿ, ಕರುಣಿಸಿ ಯಾರೂ ನಿನಗೆ ಇಂಥಾ ಸಹಾಯ ಮಾಡಲಿಲ್ಲ; ನಿನ್ನ ಜನನ ದಿವಸದಲ್ಲಿ ನೀನು ಹೇಸಿಗೆಯಾಗಿದ್ದೆ, ನಿನ್ನನ್ನು ಬಯಲಿನಲ್ಲಿ ಬಿಸಾಡಿಬಿಟ್ಟರು. “ನಾನು ಹಾದುಹೋಗುತ್ತಾ, ನಿನ್ನ ರಕ್ತದಲ್ಲೇ ಹೊರಳಾಡುತ್ತಿದ್ದ ನಿನ್ನನ್ನು ನೋಡಿ, ‘ನೀನು ರಕ್ತದಿಂದ ಅಶುದ್ಧವಾಗಿದ್ದರೂ ಬದುಕು’ ಎಂದು ಹೇಳಿದೆ; ಹೌದು, ‘ನೀನು ರಕ್ತದಿಂದ ಅಶುದ್ಧವಾಗಿದ್ದರೂ ಬದುಕು’ ಎಂದು ಹೇಳಿ ಬದುಕಿಸಿದೆ. ಭೂಮಿಯಲ್ಲಿ ಮೊಳಕೆಯನ್ನೋ ಎಂಬಂತೆ ನಾನು ನಿನ್ನನ್ನು ಬೆಳೆಯಿಸಿದೆ; ನೀನು ಬಲಿತು ಪ್ರಾಯ ತುಂಬಿ ಅತಿ ಸುಂದರಿಯಾದೆ; ನಿನಗೆ ಸ್ತನಗಳು ಮೂಡಿದವು. ನಿನ್ನ ಕೂದಲು ಉದ್ದವಾಯಿತು; ಆದರೆ ನೀನು ಬಟ್ಟೆಯಿಲ್ಲದೆ ಬೆತ್ತಲೆಯಾಗಿದ್ದೆ. “ನಾನು ಪುನಃ ಹಾದುಹೋಗುತ್ತಾ ನಿನ್ನನ್ನು ನೋಡಲು ಇಗೋ, ನೀನು ಮದುವೆಗೆ ಸಿದ್ಧಳಾಗಿದ್ದೆ; ಆಗ ನಾನು ನನ್ನ ಹೊದಿಕೆಯ ಸೆರಗನ್ನು ನಿನಗೆ ಹೊದಿಸಿ, ನಿನ್ನ ಮಾನವನ್ನು ಕಾಪಾಡಿದೆ; ಇದಲ್ಲದೆ ನಾನು ನಿನಗೆ ಮಾತುಕೊಟ್ಟು ಒಡಂಬಡಿಕೆ ಮಾಡಿಕೊಂಡೆ. ಆದ್ದರಿಂದ ನೀನು ನನ್ನವಳಾದೆ; ಇದು ಸರ್ವೇಶ್ವರನಾದ ದೇವರ ನುಡಿ. “ಆಗ ನಾನು ನೀರಿನಲ್ಲಿ ನಿನಗೆ ಸ್ನಾನ ಮಾಡಿಸಿ, ನಿನ್ನ ಮೇಲಿನ ರಕ್ತವನ್ನು ತೊಳೆದುಬಿಟ್ಟು, ನಿನಗೆ ತೈಲವನ್ನು ಹಚ್ಚಿದೆ.  ಇದಲ್ಲದೆ ಕಸೂತಿಯ ಬಟ್ಟೆಯನ್ನು ನಿನಗೆ ತೊಡಿಸಿ, ಕಡಲು ಹಂದಿಯ ತೊಗಲಿನ ಕೆರಗಳನ್ನು ನಿನ್ನ ಕಾಲಿಗೆ ಮೆಟ್ಟಿಸಿ, ನಯವಾದ ನಾರುಮಡಿಯನ್ನು ನಿನಗೆ ಉಡಿಸಿ, ರೇಷ್ಮೆಯ ಹೊದಿಕೆಯನ್ನು ನಿನಗೆ ಹೊದಿಸಿದೆ.  ಮತ್ತು ನಾನು ನಿನ್ನ ಕೈಗಳಿಗೆ ಬಳೆಗಳನ್ನು,  ಕೊರಳಿಗೆ ಮಾಲೆಯನ್ನು, ಮೂಗಿಗೆ ಮೂಗುತಿಯನ್ನು, ಶಿರಸ್ಸಿಗೆ ಸುಂದರ ಕಿರೀಟವನ್ನು ಇಟ್ಟು, ನಿನ್ನನ್ನು ಆಭರಣಗಳಿಂದ ಸಿಂಗರಿಸಿದೆ.  ನಿನ್ನ ಒಡವೆಗಳು ಬೆಳ್ಳಿಬಂಗಾರದವು; ನಿನ್ನ ಉಡುಪು ನಯವಾದ ನಾರುಮಡಿ, ರೇಷ್ಮೆಯ ಹೊದಿಕೆ, ಕಸೂತಿಯ ವಸ್ತ್ರ; ನಿನ್ನ ಆಹಾರವು ಗೋದಿಹಿಟ್ಟು, ಜೇನುತುಪ್ಪ ಮತ್ತು ಎಣ್ಣೆ; ನಿನ್ನ ಲಾವಣ್ಯವು ಅತಿ ಮನೋಹರ; ನೀನು ಹೀಗೆ ವೃದ್ಧಿಗೊಂಡು ರಾಣಿಯಾದೆ.  ನಾನು ನಿನಗೆ ಅನುಗ್ರಹಿಸಿದ ನಿನ್ನ ವೈಭವದಿಂದ ನಿನ್ನ ಸೌಂದರ್ಯ ಪರಿಪೂರ್ಣವಾಯಿತು; ನಿನ್ನ ಚೆಲುವು ಜನಾಂಗಗಳಲ್ಲಿ ಪ್ರಸಿದ್ಧವಾಯಿತು; ಇದು ಸರ್ವೇಶ್ವರನಾದ ದೇವರ ನುಡಿ. “ಆದರೆ ನೀನು ನಿನ್ನ ಸೌಂದರ್ಯವನ್ನೇ ನೆಚ್ಚಿಕೊಂಡೆ, ‘ನಾನು ಪ್ರಸಿದ್ಧಳಾದೆ’ ಎಂದು ಉಬ್ಬಿಕೊಂಡು ಸೂಳೆತನ ಮಾಡಿದೆ; ಹಾದುಹೋಗುವ ಪ್ರತಿಯೊಬ್ಬನ ಸಂಗಡ ಮಿತಿಮೀರಿ ಹಾದರಮಾಡಿದೆ. ಒಬ್ಬೊಬ್ಬನಿಗೂ ಒಳಗಾದೆ. ಆದರೂ ನಾನು ನಿನ್ನ ಯೌವನಕಾಲದಲ್ಲಿ ನಿನ್ನೊಂದಿಗೆ ಮಾಡಿಕೊಂಡ ಒಡಂಬಡಿಕೆಯನ್ನು ನೆನಪಿಗೆ ತಂದುಕೊಂಡು ನಿನ್ನೊಂದಿಗೆ ಶಾಶ್ವತವಾದ ಒಡಂಬಡಿಕೆಯನ್ನು ಮಾಡಿಕೊಂಡು ದೃಢೀಕರಿಸುವೆನು. ನಾನು ನಿನ್ನ ದುಷ್ಕೃತ್ಯಗಳನ್ನೆಲ್ಲಾ ಕ್ಷಮಿಸಿಬಿಟ್ಟ ಮೇಲೆ, ನೀನು ಅವುಗಳನ್ನು ನೆನಪಿಗೆ ತಂದು ನಾಚಿಕೆಪಟ್ಟು, ನಿನಗಾದ ಅವಮಾನದ ನಿಮಿತ್ತ ಇನ್ನು ಬಾಯಿ ತೆರೆಯದಿರುವೆ.” ಇದು ಸರ್ವೇಶ್ವರನಾದ ದೇವರ ನುಡಿ.

ಕೀರ್ತನೆ: 12:2-3, 4, 5-6

ಶ್ಲೋಕ: ನಿನಗಿತ್ತು ಎನ್ನ ಮೇಲೆ ಕೋಪ ಮನ; ಆದರೆ ಆದೀಗ ಆಗಿದೆ ಶಮನ

ಶುಭಸಂದೇಶ: ಮತ್ತಾಯ 19:3-12

ಫರಿಸಾಯರಲ್ಲಿ ಕೆಲವರು ಯೇಸುವಿನ ಬಳಿಗೆ ಬಂದು ಅವರನ್ನು ಮಾತಿನಲ್ಲಿ ಸಿಕ್ಕಿಸುವ ಉದ್ದೇಶದಿಂದ, “ಯಾವುದಾದರೂ ಕಾರಣದಿಂದ ಗಂಡನು ತನ್ನ ಹೆಂಡತಿಯನ್ನು ಬಿಟ್ಟುಬಿಡುವುದು ಧರ್ಮಸಮ್ಮತವೋ?” ಎಂದು ಕೇಳಿದರು. ಅದಕ್ಕೆ ಪ್ರತ್ಯುತ್ತರವಾಗಿ ಯೇಸು, “ಸೃಷ್ಟಿಕರ್ತ ಆದಿಯಿಂದಲೇ ಅವರನ್ನು ಗಂಡುಹೆಣ್ಣಾಗಿ ಉಂಟುಮಾಡಿದರು ಎಂದೂ, ‘ಈ ಕಾರಣದಿಂದಲೇ ಗಂಡನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಕೂಡಿಕೊಂಡು ಅವರಿಬ್ಬರೂ ಒಂದಾಗಿ ಬಾಳುವರು’ ಎಂದೂ ಹೇಳಿದ್ದಾರೆಂಬುದಾಗಿ ನೀವು ಪವಿತ್ರಗ್ರಂಥದಲ್ಲಿ ಓದಿಲ್ಲವೇ? ಹೀಗಿರುವಲ್ಲಿ, ಇನ್ನು ಮುಂದೆ ಅವರು ಇಬ್ಬರಲ್ಲ, ಒಂದೇ ಶರೀರವಾಗಿರುವರು. ಈ ನಿಮಿತ್ತ ದೇವರು ಒಂದುಗೂಡಿಸಿದ್ದನ್ನು ಮನುಷ್ಯನು ಬೇರ್ಪಡಿಸದೆ ಇರಲಿ,” ಎಂದರು. "ಹಾಗಾದರೆ ವಿವಾಹ ವಿಚ್ಛೇದನ ಪತ್ರವನ್ನು ಕೊಟ್ಟು ಹೆಂಡತಿಯನ್ನು ಬಿಟ್ಟುಬಿಡಬಹುದೆಂದು ಮೋಶೆಯು ನಿಯಮಿಸಿದ್ದು ಏಕೆ?” ಎಂದು ಫರಿಸಾಯರು ಮರುಪ್ರಶ್ನೆ ಹಾಕಿದರು. “ನಿಮ್ಮ ಹೆಂಡತಿಯನ್ನು ನೀವು ಬಿಟ್ಟುಬಿಡಬಹುದೆಂದು ಮೋಶೆ ಅನುಮತಿ ಇತ್ತದ್ದು ನಿಮ್ಮ ಹೃದಯ ಕಾಠಿಣ್ಯದ ನಿಮಿತ್ತದಿಂದಲೇ. ಆದರೆ ಅದು ಆದಿಯಿಂದಲೇ ಹಾಗಿರಲಿಲ್ಲ. ನಾನು ನಿಮಗೆ ಹೇಳುವುದನ್ನು ಕೇಳಿ; ತನ್ನ ಹೆಂಡತಿಯನ್ನು ಅವಳ ದುರ್ನಡತೆಯ ಕಾರಣದಿಂದಲ್ಲದೆ ಬಿಟ್ಟುಬಿಟ್ಟು ಮತ್ತೊಬ್ಬಳನ್ನು ಮದುವೆ ಮಾಡಿಕೊಳ್ಳುವ ಪ್ರತಿಯೊಬ್ಬನೂ ವ್ಯಭಿಚಾರಿಯಾಗುತ್ತಾನೆ.” ಶಿಷ್ಯರು ಆಗ, “ಸತಿಪತಿಯರ ಸಂಬಂಧ ಈ ರೀತಿ ಇರುವುದಾದರೆ, ಮದುವೆಮಾಡಿಕೊಳ್ಳದಿರುವುದೇ ಲೇಸು,” ಎಂದರು.  ಅದಕ್ಕೆ ಯೇಸು, “ಇದನ್ನು ಅಂಗೀಕರಿಸಲು ಎಲ್ಲರಿಂದಲೂ ಸಾಧ್ಯವಿಲ್ಲ; ಯಾರಿಗೆ ಅನುಗ್ರಹಿಸಲಾಗಿದೆಯೋ ಅವರಿಂದ ಮಾತ್ರ ಸಾಧ್ಯ. ತಾಯಿಯ ಉದರದಿಂದಲೇ ನಪುಂಸಕರಾಗಿ ಹುಟ್ಟಿದವರಿದ್ದಾರೆ; ಜನರಿಂದ ನಪುಂಸಕರಾದವರು ಕೂಡ ಇದ್ದಾರೆ; ಸ್ವರ್ಗಸಾಮ್ರಾಜ್ಯದ ನಿಮಿತ್ತ ಅವಿವಾಹಿತರಾಗಿ ಇರುವವರೂ ಇದ್ದಾರೆ; ಇದನ್ನು ಅಂಗೀಕರಿಸಬಲ್ಲವನು ಅಂಗೀಕರಿಸಲಿ,” ಎಂದರು.