ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

01.08.20 - “ನನಗೆ ಸ್ನಾನಿಕ ಯೊವಾನ್ನನ ತಲೆಯನ್ನು ಒಂದು ತಟ್ಟೆಯಲ್ಲಿ ತರಿಸಿಕೊಡಿ,”

ಪ್ರವಾದಿ ಯೆರೆಮೀಯನ ಗ್ರಂಥ26:11-16, 24

ಯಾಜಕರೂ ಪ್ರವಾದಿಗಳೂ, “ಇವನು ಮರಣದಂಡನೆಗೆ ಪಾತ್ರನು; ನಗರಕ್ಕೆ ಅಹಿತವಾದುದನ್ನು ನುಡಿದಿದ್ದಾನೆ. ಇದನ್ನು ನೀವೇ ಕೇಳಿದ್ದೀರಿ,” ಎಂದು ನಾಯಕರಿಗೂ ಜನರೆಲ್ಲರಿಗೂ ದೂರು ಇತ್ತರು. ಆಗ ಯೆರೆಮೀಯನು, “ನೀವು ಕೇಳಿದ ಮಾತುಗಳನ್ನೆಲ್ಲ, ಅಂದರೆ ಈ ದೇವಾಲಯಕ್ಕೂ ನಗರಕ್ಕೂ ವಿರುದ್ಧವಾದ ಮಾತುಗಳನ್ನು ನುಡಿಯಲು ನನ್ನನ್ನು ಕಳಿಸಿದವರು ಸರ್ವೇಶ್ವರನೇ. ಇದೀಗಲೇ ನೀವು ನಿಮ್ಮ ಮಾರ್ಗಗಳನ್ನೂ ನಡತೆಗಳನ್ನೂ ತಿದ್ದುಕೊಳ್ಳಿ. ನಿಮ್ಮ ದೇವರಾದ ಸರ್ವೇಶ್ವರನ ನುಡಿಗೆ ಕಿವಿಗೊಡಿ. ಆಗ ನಿಮಗೆ ತಿಳಿಸಿದ ಕೇಡು ಒದಗದಂತೆ ಸರ್ವೇಶ್ವರ ತಮ್ಮ ಮನಸ್ಸನ್ನು ಬದಲಾಯಿಸಿಕೊಳ್ಳುವರು. ನಾನೋ ನಿಮ್ಮ ಕೈಯಲ್ಲಿದ್ದೇನೆ. ನಿಮಗೆ ಯಾವುದು ಒಳ್ಳೆಯದು, ಯಾವುದು ನ್ಯಾಯವಾದುದು ಎಂದು ತೋರುತ್ತದೆಯೋ ಅದನ್ನು ನನಗೆ ಮಾಡಿ. ಆದರೆ ಒಂದು ವಿಷಯ ನಿಮಗೆ ಚೆನ್ನಾಗಿ ತಿಳಿದಿರಲಿ - ನೀವು ನನ್ನನ್ನು ಕೊಂದುಹಾಕಿದ್ದೇ ಆದರೆ, ನಿರ್ದೋಷಿಯ ರಕ್ತ ಸುರಿಸಿದ ಅಪರಾಧಕ್ಕೆ ನೀವೂ ಈ ನಗರವೂ ಇದರ ನಿವಾಸಿಗಳೂ ಗುರಿಯಾಗುವಿರಿ. ಏಕೆಂದರೆ ಈ ಮಾತುಗಳನ್ನೆಲ್ಲ ನಿಮ್ಮ ಕಿವಿಗೆ ಮುಟ್ಟಿಸುವಂತೆ ನನ್ನನ್ನು ಕಳಿಸಿದವರು ಸರ್ವೇಶ್ವರ ಎಂಬುದು ಸತ್ಯ,” ಎಂದು ಹೇಳಿದನು. ಇದನ್ನು ಕೇಳಿದ ನಾಯಕರು ಮತ್ತು ಸಕಲ ಜನರು ಯಾಜಕ - ಪ್ರವಾದಿಗಳಿಗೆ, “ಇವನು ಮರಣದಂಡನೆಗೆ ಪಾತ್ರನಲ್ಲ. ಏಕೆಂದರೆ ನಮ್ಮ ದೇವರಾದ ಸರ್ವೇಶ್ವರನ ಹೆಸರಿನಲ್ಲೇ ಇದನ್ನು ನಮಗೆ ನುಡಿದಿದ್ದಾನೆ,” ಎಂದರು. ಇತ್ತ ಯಾಜಕರೂ ಪ್ರವಾದಿಗಳೂ ಯೆರೆಮೀಯನನ್ನು ಜನರ ಕೈಗೆ ಸಿಕ್ಕಿಸಿ ಕೊಲ್ಲಿಸಲು ಸಾಧ್ಯವಾಗಲಿಲ್ಲ. ಏಕೆಂದರೆ ಯೆರೆಮೀಯನಿಗೆ ಶಾಫಾನನ ಮಗ ಅಹೀಕಾಮನ ಸಹಾಯ ದೊರಕಿತ್ತು.

ಕೀರ್ತನೆ: 69:15-16, 30-31, 33-34
ಶ್ಲೋಕ: ಪ್ರೀತಿಮಯ ದೇವಾ, ಸದುತ್ತರ ನೀಡೆನಗೆ

ಶುಭಸಂದೇಶ: ಮತ್ತಾಯ 14:1-12

ಯೇಸುಸ್ವಾಮಿಯ ಸಮಾಚಾರ ಆಗ ಗಲಿಲೇಯ ಪ್ರಾಂತ್ಯಕ್ಕೆ ಸಾಮಂತರಾಜನಾಗಿದ್ದ ಹೆರೋದನ ಕಿವಿಗೆ ಬಿದ್ದಿತು. ಅವನು ತನ್ನ ಪರಿಚಾರಕರಿಗೆ, “ಮಡಿದ ಸ್ನಾನಿಕ ಯೊವಾನ್ನನೇ ಮರಳಿ ಜೀವಂತವಾಗಿ ಬಂದಿದ್ದಾನೆ; ಆದ್ದರಿಂದಲೇ ಮಹತ್ಕಾರ್ಯಗಳನ್ನು ಮಾಡುವ ಶಕ್ತಿ ಇವನಿಗಿದೆ,” ಎಂದನು ಹೆರೋದನು ತನ್ನ ಸಹೋದರ ಫಿಲಿಪ್ಪನ ಧರ್ಮಪತ್ನಿಯಾದ ಹೆರೋದಿಯಳನ್ನು ಇಟ್ಟುಕೊಂಡಿದ್ದನು. ಅವಳ ಪ್ರಯುಕ್ತ ಯೊವಾನ್ನನನ್ನು ಹಿಡಿದು ಬಂಧಿಸಿ ಸೆರೆಯಲ್ಲಿ ಹಾಕಿದ್ದನು. ಏಕೆಂದರೆ ಆತನು, ‘ನಿನ್ನ ಸಹೋದರನ ಧರ್ಮಪತ್ನಿಯನ್ನು ನೀನು ಇಟ್ಟುಕೊಂಡಿರುವುದು ಅಕ್ರಮ,” ಎಂದು ಹೆರೋದನಿಗೆ ಹೇಳುತ್ತಿದ್ದನು. ಯೊವಾನ್ನನನ್ನು ಕೊಲ್ಲಿಸಬೇಕೆಂದಿದ್ದರೂ ಹೆರೋದನು ಜನರಿಗೆ ಹೆದರಿದ್ದನು. ಅವರು ಆತನನ್ನು ಪ್ರವಾದಿಯೆಂದು ಭಾವಿಸಿದ್ದರು. ಹೀಗಿರುವಲ್ಲಿ ಹೆರೋದನ ಹುಟ್ಟುಹಬ್ಬ ಬಂದಿತು. ಹೆರೋದಿಯಳ ಮಗಳು ಆಹ್ವಾನಿತರ ಮುಂದೆ ನರ್ತನಮಾಡಿ ಹೆರೋದನನ್ನು ಮೆಚ್ಚಿಸಿದಳು. ಆಗ ಅವಳು ಏನು ಕೇಳಿದರೂ ಕೊಡುವುದಾಗಿ ಅವನು ಪ್ರಮಾಣಪೂರ್ವಕವಾಗಿ ವಾಗ್ದಾನಮಾಡಿದನು. ಅವಳು ತನ್ನ ತಾಯಿಯ ಸಲಹೆ ಪಡೆದು, “ನನಗೆ ಸ್ನಾನಿಕ ಯೊವಾನ್ನನ ತಲೆಯನ್ನು ಒಂದು ತಟ್ಟೆಯಲ್ಲಿ ತರಿಸಿಕೊಡಿ,” ಎಂದಳು. ಇದನ್ನು ಕೇಳಿ ರಾಜನಿಗೆ ವ್ಯಥೆಯಾಯಿತು. ಆದರೆ ಅತಿಥಿಗಳ ಮುಂದೆ ಮಾಡಿದ ಪ್ರಮಾಣ ಮುರಿಯಲಾಗದೆ ಅವಳ ಇಚ್ಛೆಯನ್ನು ಪೂರೈಸುವಂತೆ ಆಜ್ಞೆಮಾಡಿದನು. ಅದರಂತೆಯೇ ಆಳುಗಳನ್ನು ಕಳುಹಿಸಿ, ಸೆರೆಮನೆಯಲ್ಲಿದ್ದ ಯೊವಾನ್ನನ ತಲೆಯನ್ನು ಕಡಿಸಿದನು;  ಅದನ್ನು ಒಂದು ತಟ್ಟೆಯಲ್ಲಿ ತಂದು ಆ ಹುಡುಗಿಗೆ ಕೊಡಲಾಯಿತು. ಅವಳು ಅದನ್ನು ತನ್ನ ತಾಯಿಯ ಬಳಿಗೆ ತೆಗೆದುಕೊಂಡು ಹೋದಳು.  ಯೊವಾನ್ನನ ಶಿಷ್ಯರು ಶವವನ್ನು ತೆಗೆದು ಕೊಂಡುಹೋಗಿ ಸಮಾಧಿಮಾಡಿದರು. ಅನಂತರ ಹೋಗಿ ಯೇಸುವಿಗೆ ಈ ವಿಷಯವನ್ನು ತಿಳಿಸಿದರು.

31.07.20 - ಅವರ ಅವಿಶ್ವಾಸದ ಕಾರಣ ಯೇಸು ಅದ್ಭುತಕಾರ್ಯಗಳನ್ನು ಅಲ್ಲಿ ಹೆಚ್ಚಾಗಿ ಮಾಡಲಿಲ್ಲ.

ಮೊದಲನೇ ವಾಚನ: ಯೆರೆಮೀಯ 26:1-9


ಯೋಷೀಯನ ಮಗನೂ ಜುದೇಯದ ಅರಸನೂ ಆದ ಯೆಹೋಯಾಕೀಮನ ಆಳ್ವಿಕೆಯ ಆರಂಭದಲ್ಲಿ ಯೆರೆಮೀಯನಿಗೆ ಸರ್ವೇಶ್ವರ ಸ್ವಾಮಿಯಿಂದ ಈ ಅಪ್ಪಣೆ ಆಯಿತು; “ನೀನು ನನ್ನ ದೇವಾಲಯದ ಪ್ರಾಕಾರದಲ್ಲಿ ನಿಂತು, ಆ ಮಂದಿರದಲ್ಲಿ ಆರಾಧಿಸುವುದಕ್ಕೆ ಬರುವ ಜುದೇಯದ ಎಲ್ಲ ಊರಿನವರಿಗೆ ನಾನು ಆಜ್ಞಾಪಿಸುವ ಮಾತುಗಳನ್ನೆಲ್ಲಾ ಹೇಳು, ಒಂದನ್ನೂ ಬಿಡಬೇಡ. ಬಹುಶಃ ಅವರು ಕಿವಿಗೊಟ್ಟು ತಮ್ಮ ತಮ್ಮ ದುರ್ಮಾರ್ಗಗಳಿಂದ ಹಿಂದಿರುಗಬಹುದು. ಹಾಗೆ ಮಾಡಿದ್ದೇ ಆದರೆ, ಅವರ ದುಷ್ಕೃತ್ಯಗಳಿಗೆ ದಂಡನೆಯನ್ನು ವಿಧಿಸಬೇಕೆಂದಿದ್ದ ನನ್ನ ಮನಸ್ಸನ್ನು ಬದಲಾಯಿಸಿಕೊಳ್ಳುವೆನು. “ಅವರಿಗೆ ನೀನು ಹೇಳಬೇಕಾದುದು ಇದು: ‘ಸರ್ವೇಶ್ವರ ಹೀಗೆನ್ನುತ್ತಾರೆ - ನೀವು ನನಗೆ ಕಿವಿಗೊಡದೆ ಹೋದರೆ, ನಾನು ನಿಮ್ಮ ಮುಂದಿಟ್ಟಿರುವ ಧರ್ಮಶಾಸ್ತ್ರದ ಪ್ರಕಾರ ನಡೆಯದೆಹೋದರೆ, ಹಾಗು ನೀವು ಕೇಳದಿದ್ದರೂ ನಿಮ್ಮ ಬಳಿಗೆ ನಾನು ಪದೇಪದೇ ಕಳಿಸುತ್ತಾ ಬಂದಿರುವ ನನ್ನ ದಾಸರಾದ ಪ್ರವಾದಿಗಳ ಮಾತುಗಳನ್ನೂ ಆಲಿಸದೆಹೋದರೆ, 6ಆಗ ನಾನು ಈ ಆಲಯವನ್ನು ಶಿಲೋವಿನ ಗತಿಗೆ ಇಳಿಸುವೆನು. ಈ ನಗರವು ವಿಶ್ವದ ಜನರಿಗೆಲ್ಲ ಶಾಪಗ್ರಸ್ತ ನಗರವಾಗುವಂತೆ ಮಾಡುವೆನು.” ಯೆರೆಮೀಯನು ಸರ್ವೇಶ್ವರನ ಆಲಯದಲ್ಲಿ ಹೀಗೆ ಸಾರುವುದನ್ನು ಯಾಜಕರೂ ಪ್ರವಾದಿಗಳೂ ಜನರೆಲ್ಲರೂ ಕೇಳಿದರು. ಜನರಿಗೆ ತಿಳಿಸಬೇಕೆಂದು ಸರ್ವೇಶ್ವರ ಆಜ್ಞಾಪಿಸಿದ್ದನ್ನೆಲ್ಲ ಯೆರೆಮೀಯನು ನುಡಿದು ಮುಗಿಸಿದ ಮೇಲೆ ಯಾಜಕರೂ ಪ್ರವಾದಿಗಳೂ ಜನರೆಲ್ಲರೂ ಅವನನ್ನು ಸುತ್ತುಗಟ್ಟಿದರು. “ನಿನಗೆ ಖಂಡಿತವಾಗಿ ಮರಣದಂಡನೆಯಾಗಬೇಕು. ನೀನು ‘ಈ ದೇವಾಲಯಕ್ಕೆ ಶಿಲೋವಿನ ಗತಿ ಬರುವುದು, ಈ ನಗರ ಪಾಳುಬಿದ್ದು ನಿರ್ಜನ ಪ್ರದೇಶವಾಗುವುದು,’ ಎಂದು ಸರ್ವೇಶ್ವರನ ಹೆಸರೆತ್ತಿ ಪ್ರವಾದನೆ ಮಾಡಿದ್ದೇಕೆ?” ಎಂದು ಕೂಗಾಡಿದರು. ಆಲಯದಲ್ಲಿದ್ದ ಯೆರೆಮೀಯನನ್ನು ಜನರ ಗುಂಪು ಮುತ್ತಿಕೊಂಡಿತು.

ಕೀರ್ತನೆ: 69:6, 8-10, 14

ಶ್ಲೋಕ: ಪ್ರೀತಿಮಯ ದೇವಾ, ಸದುತ್ತರ ನೀಡೆನಗೆ

ಶುಭಸಂದೇಶ: ಮತ್ತಾಯ13:54-58

ಯೇಸು ತಮ್ಮ ಸ್ವಂತ ಊರಿಗೆ ಮರಳಿ ಬಂದು ಅಲ್ಲಿಯ ಪ್ರಾರ್ಥನಾ ಮಂದಿರದಲ್ಲಿ ಬೋಧನೆಮಾಡಿದರು. ಅದನ್ನು ಕೇಳುತ್ತಿದ್ದ ಜನರು ಆಶ್ಚರ್ಯಚಕಿತರಾಗಿ, “ಈ ಪರಿಜ್ಞಾನ ಇವನಿಗೆಲ್ಲಿಂದ ಬಂತು? ಈ ಮಹತ್ಕಾರ್ಯಗಳನ್ನು ಇವನು ಮಾಡುವುದಾದರೂ ಹೇಗೆ? ಇವನು ಆ ಬಡಗಿಯ ಮಗನಲ್ಲವೇ? ಮರಿಯಳು ಇವನ ತಾಯಲ್ಲವೇ? ಯಕೋಬ, ಜೋಸೆಫ್, ಸಿಮೋನ, ಯೂದ ಇವರು ಇವನ ಸೋದರರಲ್ಲವೇ? ಇವನ ಸೋದರಿಯರೆಲ್ಲಾ ಇಲ್ಲೇ ವಾಸಮಾಡುತ್ತಿಲ್ಲವೇ? ಹಾಗಾದರೆ ಇವನಿಗೆ ಇದೆಲ್ಲಾ ಎಲ್ಲಿಂದ ಬಂತು?” ಎಂದು ಮಾತಾಡಿಕೊಂಡು ಯೇಸುವನ್ನು ತಿರಸ್ಕರಿಸಿದರು.ಅವರಿಗೆ ಯೇಸು, “ಪ್ರವಾದಿಗೆ ಬೇರೆ ಎಲ್ಲಿಯಾದರೂ ಗೌರವ ದೊರಕೀತು; ಆದರೆ ಸ್ವಗ್ರಾಮದಲ್ಲಿ ಹಾಗೂ ಸ್ವಗೃಹದಲ್ಲಿ ಮಾತ್ರ ಗೌರವ ದೊರಕದು,” ಎಂದು ಹೇಳಿದರು. ಅವರ ಅವಿಶ್ವಾಸದ ಕಾರಣ ಯೇಸು ಅದ್ಭುತಕಾರ್ಯಗಳನ್ನು ಅಲ್ಲಿ ಹೆಚ್ಚಾಗಿ ಮಾಡಲಿಲ್ಲ.

30.07.20 - “ಸ್ವರ್ಗಸಾಮ್ರಾಜ್ಯವನ್ನು ಒಂದು ಮೀನು ಬಲೆಗೆ ಹೋಲಿಸಬಹುದು"

ಮೊದಲನೇ ವಾಚನ: ಯೆರೆಮೀಯ 18:1-6

ಸರ್ವೇಶ್ವರ ಸ್ವಾಮಿ ನನಗೆ : “ನೀನೆದ್ದು ಕುಂಬಾರನ ಮನೆಗೆ ಇಳಿದುಹೋಗು, ಅಲ್ಲೇ ನನ್ನ ನುಡಿಯನ್ನು ನಿನಗೆ ಕೇಳಮಾಡುತ್ತೇನೆ,” ಎಂದು ತಿಳಿಸಿದರು. ಅಂತೆಯೇ ನಾನು ಕುಂಬಾರನ ಮನೆಗೆ ಹೋದೆ. ಅಲ್ಲಿ ಆ ಕುಂಬಾರನು ತಿರುಗುತ್ತಿದ್ದ ಚಕ್ರದ ಮೇಲೆ ಕೆಲಸ ಮಾಡುತ್ತಿದ್ದ. ಅವನು ಜೇಡಿ ಮಣ್ಣಿನಿಂದ ಮಾಡುತ್ತಿದ್ದ ಒಂದು ಪಾತ್ರೆ ಕೆಟ್ಟುಹೋಗುತ್ತಿದ್ದಾಗಲೆಲ್ಲ ಅದನ್ನು ಮತ್ತೆ ತನಗೆ ಸರಿತೋಚಿದ ಹಾಗೆ ಹೊಸ ಪಾತ್ರೆಯನ್ನಾಗಿ ಮಾಡುತ್ತಿದ್ದ. ಆಗ ಸರ್ವೇಶ್ವರ ನನಗೆ ಅನುಗ್ರಹಿಸಿದ ಸಂದೇಶ : “ಇಸ್ರಯೇಲಿನ ವಂಶಜರೇ, ಈ ಕುಂಬಾರನು ಮಾಡಿದಂತೆ ನಾನು ನಿಮ್ಮನ್ನು ಮಾಡಕೂಡದೇ? ಇಸ್ರಯೇಲಿನ ಮನೆತನದವರೇ, ಜೇಡಿಮಣ್ಣು ಕುಂಬಾರನ ಕೈಯಲ್ಲಿ ಹೇಗೋ ಹಾಗೆಯೇ ನೀವು ನನ್ನ ಕೈಯಲ್ಲಿ ಇದ್ದೀರಿ. 

ಕೀರ್ತನೆ:146:1-2, 2-4, 5-6

ಶ್ಲೋಕ: ಇಸ್ರಯೇಲ ಕುಲದೇವರು ಯಾರಿಗೆ ಉದ್ದಾರಕನೋ ಅವನೇ ಧನ್ಯನು

ಶುಭಸಂದೇಶ: ಮತ್ತಾಯ 3:47-53


ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಈ ಸಾಮತಿಯನ್ನು ಹೇಳಿದರು: “ಸ್ವರ್ಗಸಾಮ್ರಾಜ್ಯವನ್ನು ಒಂದು ಮೀನು ಬಲೆಗೆ ಹೋಲಿಸಬಹುದು. ಬೆಸ್ತರು ಬಲೆಯನ್ನು ಸಮುದ್ರದಲ್ಲಿ ಬೀಸಿ ಎಲ್ಲಾ ಜಾತಿಯ ಮೀನುಗಳನ್ನು ಹಿಡಿಯುತ್ತಾರೆ. ಬಲೆ ತುಂಬಿದ ಮೇಲೆ ಅದನ್ನು ದಡಕ್ಕೆ ಎಳೆದು, ಕುಳಿತುಕೊಂಡು ಒಳ್ಳೆಯ ಮೀನುಗಳನ್ನು ಮಾತ್ರ ಆರಿಸಿಕೊಂಡು ಬುಟ್ಟಿಗೆ ಹಾಕಿಕೊಳ್ಳುತ್ತಾರೆ; ಕೆಟ್ಟವನ್ನು ಎಸೆದುಬಿಡುತ್ತಾರೆ. ಕಾಲಾಂತ್ಯದಲ್ಲಿ ಇದರಂತೆಯೇ ಆಗುವುದು; ದೇವದೂತರು ಹೊರಟುಬಂದು ದುರ್ಜನರನ್ನು ಸಜ್ಜನರಿಂದ ಬೇರ್ಪಡಿಸುವರು. ದುರ್ಜನರನ್ನು ಅಗ್ನಿಕುಂಡದಲ್ಲಿ ಹಾಕುವರು. ಅಲ್ಲಿ ಅವರು ಕಟಕಟನೆ ಹಲ್ಲುಕಡಿದುಕೊಂಡು ಗೋಳಾಡುವರು.” “ಇದೆಲ್ಲ ನಿಮಗೆ ಅರ್ಥವಾಯಿತೇ?” ಎಂದು ಯೇಸುಸ್ವಾಮಿ ಕೇಳಿದರು. ಶಿಷ್ಯರು “ಅರ್ಥವಾಯಿತು” ಎಂದರು. ಆಗ ಯೇಸು, “ಇಂತಿರಲು, ಸ್ವರ್ಗಸಾಮ್ರಾಜ್ಯದಲ್ಲಿ ಶಿಷ್ಯನಾಗಿರುವ ಪ್ರತಿಯೊಬ್ಬ ಶಾಸ್ತ್ರಜ್ಞನು ಮನೆಯ ಯಜಮಾನ ಇದ್ದ ಹಾಗೆ. ಅವನು ತನ್ನ ಉಗ್ರಾಣದಿಂದ ಹೊಸ ಹಾಗೂ ಹಳೆಯ ವಸ್ತುಗಳನ್ನು ಹೊರಗೆ ತರುತ್ತಾ ಇರುತ್ತಾನೆ,” ಎಂದರು. ಈ ಸಾಮತಿಗಳನ್ನು ಹೇಳಿಯಾದಮೇಲೆ ಯೇಸುಸ್ವಾಮಿ ಅಲ್ಲಿಂದ ಹೊರಟುಹೋದರು.

29.07.20 - "ಪುನರುತ್ಥಾನವೂ ಜೀವವೂ ನಾನೇ"

ಮೊದಲನೇ ವಾಚನ: ಯೆರೆಮೀಯ15:10, 16-21 

ಯೆರೆಮೀಯನು ಈ ಪರಿ ತನ್ನ ಶೋಕವನ್ನು ನಿವೇದಿಸಿಕೊಂಡನು: “ನನ್ನ ಹೆತ್ತತಾಯೇ, ನನ್ನ ಗತಿಯನ್ನು ಏನು ಹೇಳಲಿ! ಜಗದ ಜನರಿಗೆಲ್ಲ ನಾನೊಬ್ಬ ಜಗಳಗಂಟಿಗ, ವ್ಯಾಜ್ಯಗಾರ. ನಾನು ಹಣವನ್ನು ಸಾಲವಾಗಿ ಕೊಟ್ಟವನಲ್ಲ, ಕೊಂಡವನೂ ಅಲ್ಲ. ಆದರೂ ನನ್ನನ್ನು ಎಲ್ಲರು ಶಪಿಸುವವರೇ. ನಿಮ್ಮ ವಚನಗಳು ನನಗೆ ದೊರೆತವು. ಅವುಗಳನ್ನು ಹಾಗೆಯೆ ನುಂಗಿಬಿಟ್ಟೆನು. ನಿಮ್ಮ ನುಡಿಗಳು ನನಗೆ ಹರ್ಷವನ್ನೂ ಹೃದಯಾನಂದವನ್ನೂ ತಂದವು. ಸರ್ವಶಕ್ತರಾದ ದೇವರೇ, ಸರ್ವೇಶ್ವರಾ, ನಾನು ನಿಮ್ಮ ನಾಮಧಾರಿಯಲ್ಲವೆ? ವಿನೋದಗಾರರ ಕೂಟದಲ್ಲಿ ಭಾಗವಹಿಸಿ ನಾನು ಉಲ್ಲಾಸಪಟ್ಟವನಲ್ಲ. ನಿಮ್ಮ ಕೈ ನನ್ನ ಮೇಲೆ ಇದ್ದುದರಿಂದ ನಾನು ಒಬ್ಬಂಟಿಗನಾದೆ. ಕೋಪಾವೇಶದಿಂದ ತುಂಬಿದವನಾದೆ. ನನಗೇಕೆ ನಿರಂತರವಾದ ವೇದನೆ? ಗುಣವಾಗದ ಗಡಸು ಗಾಯ? ನೀರು ಇರುವುದಾಗಿ ತೋರಿಸಿಕೊಳ್ಳುವ ಕಳ್ಳ ತೊರೆಯಾಗಬೇಕೆ ನೀವು ನನಗೆ?” ಅದಕ್ಕೆ ಸರ್ವೇಶ್ವರ : “ನೀನು ನನಗೆ ಅಭಿಮುಖನಾಗಿ ಹಿಂದಿರುಗಿ ಬಂದರೆ ಮರಳಿ ನಿನ್ನನ್ನು ನನ್ನ ಸೇವೆಗೆ ಸೇರಿಸಿಕೊಳ್ಳುವೆನು. ತುಚ್ಛವಾದುದನ್ನು ತೊರೆದು ಅಮೂಲ್ಯವಾದುದನ್ನು ಉಚ್ಚರಿಸುವೆಯಾದರೆ ನೀನು ನನ್ನ ಬಾಯಂತಿರುವೆ. ಜನರು ನಿನ್ನ ಕಡೆಗೆ ತಿರುಗಿಕೊಳ್ಳುವರು. ನೀನು ಅವರ ಕಡೆಗೆ ತಿರುಗದಿರುವೆ. ನಾನು ನಿನ್ನನ್ನು ಆ ಜನರಿಗೆ ದುರ್ಗಮವಾದ ಕಂಚಿನ ಪೌಳಿಗೋಡೆಯನ್ನಾಗಿಸುವೆನು. ನಿನಗೆ ವಿರುದ್ಧ ಅವರು ಯುದ್ಧಮಾಡುವರು. ಆದರೆ ನಿನ್ನನ್ನು ಸೋಲಿಸಲಾಗದು. ನಿನ್ನ ನ್ನು ಉದ್ಧರಿಸಿ ರಕ್ಷಿಸಲು ನಾನೇ ನಿನ್ನೊಂದಿಗಿರುವೆನು. ಇದು ಸರ್ವೇಶ್ವರನಾದ ನನ್ನ ಮಾತು. ನಿನ್ನನ್ನು ದುಷ್ಟರ ಕೈಯಿಂದ ಉದ್ಧರಿಸುವೆನು, ಕ್ರೂರಿಗಳ ಕೈಯಿಂದ ರಕ್ಷಿಸುವೆನು.”

ಕೀರ್ತನೆ: 59:2-3, 4, 10-11, 17, 18
ಶ್ಲೋಕ: ದೇವಾ, ಸಂಕಟದಲ್ಲೆನಗಾದ ಆಶ್ರಯಗಿರಿ ನೀವು

ಶುಭಸಂದೇಶ: ಯೊವಾನ್ನ11:19-27


ಅನೇಕ ಯೆಹೂದ್ಯರು ಮಾರ್ತಳನ್ನೂ ಮರಿಯಳನ್ನೂ ಕಂಡು ಅವರ ಸೋದರನ ಮರಣಕ್ಕಾಗಿ ಸಂತಾಪ ಸೂಚಿಸಲು ಬಂದಿದ್ದರು. ಯೇಸು ಬರುತ್ತಿದ್ದಾರೆಂದು ಕೇಳಿದೊಡನೆ ಮಾರ್ತ ಅವರನ್ನು ಎದುರುಗೊಳ್ಳಲು ಹೋದಳು. ಮರಿಯ ಮನೆಯಲ್ಲೇ ಇದ್ದಳು ಮಾರ್ತ ಯೇಸುವನ್ನು ಕಂಡು, ‘ಪ್ರಭುವೇ, ನೀವು ಇಲ್ಲಿದ್ದಿದ್ದರೆ ನನ್ನ ಸಹೋದರ ಸಾಯುತ್ತಿರಲಿಲ್ಲ. ಈಗಲೂ ದೇವರಲ್ಲಿ ನೀವು ಏನೇ ಕೇಳಿಕೊಂಡರೂ ನಿಮಗವರು ನೀಡುವರೆಂದು ನಾನು ಬಲ್ಲೆ,” ಎಂದಳು. ಯೇಸು, “ನಿನ್ನ ಸಹೋದರನು ಜೀವಂತವಾಗಿ ಏಳುವನು,” ಎಂದರು. “ಅವನು ಅಂತಿಮ ದಿನದ ಪುನರುತ್ಥಾನದಲ್ಲಿ ಜೀವಂತವಾಗಿ ಏಳುವನೆಂದು ನನಗೆ ತಿಳಿದಿದೆ,” ಎಂದಳು ಮಾರ್ತ. ಯೇಸು, ಅವಳಿಗೆ, “ಪುನರುತ್ಥಾನವೂ ಜೀವವೂ ನಾನೇ; ನನ್ನಲ್ಲಿ ವಿಶ್ವಾಸವಿಟ್ಟವನು ಸಾವಿಗೀಡಾದರೂ ಜೀವಿಸುವನು. ಜೀವಿಸುವ ಪ್ರತಿಯೊಬ್ಬನೂ ನನ್ನಲ್ಲಿ ವಿಶ್ವಾಸವಿಟ್ಟನೆಂದರೆ ಅವನೆಂದಿಗೂ ಸಾಯನು. ಇದನ್ನು ನೀನು ವಿಶ್ವಾಸಿಸುತ್ತೀಯಾ?” ಎಂದು ಕೇಳಲು ಅವಳು, ಹೌದು ಪ್ರಭುವೇ, ನೀವೇ ಅಭಿಷಿಕ್ತರಾದ ಲೋಕೋದ್ಧಾರಕ; ದೇವರ ಪುತ್ರ; ಈ ಲೋಕಕ್ಕೆ ಬರಬೇಕಾದವರು - ಎಂದು ನಾನು ವಿಶ್ವಾಸಿಸುತ್ತೇನೆ,” ಎಂದು ಹೇಳಿದಳು.

28.07.20 - "ಕಳೆಗಳನ್ನು ಕಿತ್ತು ಬೆಂಕಿಯಲ್ಲಿ ಸುಟ್ಟುಹಾಕಿದಂತೆ ಕಾಲಾಂತ್ಯದಲ್ಲೂ ನಡೆಯುವುದು"

ಮೊದಲನೇ ವಾಚನ: ಯೆರೆಮೀಯ: 14:17-22  

ಸರ್ವೇಶ್ವರ ಯೆರೆಮೀಯನಿಗೆ ಈ ಮಾತುಗಳನ್ನು ಹೇಳಿದರು: “ನೀನು ನಿನ್ನ ದುಃಖವನ್ನು ಅವರಿಗೆ ಹೀಗೆಂದು ವ್ಯಕ್ತಪಡಿಸು - ‘ರಾತ್ರಿ ಹಗಲು ನನ್ನ ಕಣ್ಣೀರು ಸುರಿಯಲಿ ನಿರಂತರವಾಗಿ ಏಕೆಂದರೆ ನನ್ನ ಜನವೆಂಬ ಯುವತಿ ಗಾಯಗೊಂಡಿದ್ದಾಳೆ ತೀವ್ರವಾಗಿ, ಹೌದು, ಅವಳಿಗೆ ಪೆಟ್ಟುಬಿದ್ದಿದೆ ಗಡುಸಾಗಿ. ಊರುಬಿಟ್ಟು ಹೊರಗೆ ಹೋದರೆ ಅಲ್ಲಿ ಕಾಣಿಸುತ್ತಾರೆ ಖಡ್ಗದಿಂದ ಸತ್ತವರು. ಊರ ಒಳಗೆ ಬಂದರೆ ಅಲ್ಲಿ ಕಾಣಿಸುತ್ತಾರೆ ಕ್ಷಾಮದಿಂದ ನರಳುವವರು. ಅಪರಿಚಿತನಾಡಿಗೆ ಗಡೀಪಾರಾಗಿದ್ದಾರೆ ಪ್ರವಾದಿಗಳು ಮತ್ತು ಯಾಜಕರು’.” “ಸ್ವಾಮೀ, ನೀವು ಜುದೇಯವನ್ನು ಸಂಪೂರ್ಣವಾಗಿ ತ್ಯಜಿಸಿಬಿಟ್ಟಿರೊ? ಸಿಯೋನಿನ ಬಗ್ಗೆ ನಿಮಗೆ ಮನಃಪೂರ್ವಕವಾದ ಅಸಹ್ಯ ಹುಟ್ಟಿದೆಯೊ? ಗುಣವಾಗದಂಥ ಪೆಟ್ಟನ್ನು ನಮಗೆ ಕೊಟ್ಟಿರುವಿರಿ ಏಕೆ? ಸುಖವನ್ನು ನಿರೀಕ್ಷಿಸಿದೆವು, ಸಿಗಲಿಲ್ಲ ನಮಗೆ ಯಾವ ಫಲ. ಸುಕ್ಷೇಮವನ್ನು ಎದುರು ನೋಡಿದೆವು, ಇಗೋ ಬಂದೊದಗಿದೆ ಸಂಕಟ. ಹೇ ಸರ್ವೇಶ್ವರಾ, ಒಪ್ಪಿಕೊಂಡಿದ್ದೇವೆ ನಮ್ಮ ದುಷ್ಟತನವನ್ನು ನಮ್ಮ ಪೂರ್ವಜರು ಎಸಗಿದ ದುರಾಚಾರವನ್ನು ನಾವು ಮಾಡಿದ ಪಾಪ ನಿಮಗೆ ವಿರುದ್ಧವೆಂಬುದನ್ನು. ನಿಮ್ಮ ನಾಮವನ್ನು ಮುಂದಿಟ್ಟು, ನಮಗೆ ಅವಮಾನ ಮಾಡಬೇಡಿ ನಿಮ್ಮ ಮಹಿಮೆಯ ಸಿಂಹಾಸನವನ್ನು ಅಸಡ್ಡೆ ಮಾಡಬೇಡಿ ನಮ್ಮೊಡನೆ ಮಾಡಿದ ಒಡಂಬಡಿಕೆಯನ್ನು ನೆನೆಯಿರಿ. ಅದನ್ನು ಭಂಗಪಡಿಸಬೇಡಿ. ಅನ್ಯಜನಾಂಗಗಳ ಶೂನ್ಯದೇವತೆಗಳಲ್ಲಿ ಮಳೆಸುರಿಸಬಲ್ಲವರುಂಟೆ? ಆಕಾಶವು ತಾನಾಗಿ ಹದಮಳೆಯನ್ನು ಬರಮಾಡಬಲ್ಲುದೆ? ನಮ್ಮ ದೇವರಾದ ಸರ್ವೇಶ್ವರಾ, ವೃಷ್ಟಿದಾತರು ನೀವೇ ನಾವು ನಿರೀಕ್ಷಿಸುತ್ತಿರುವುದು ನಿಮ್ಮನ್ನೇ ಹೌದು, ಇವುಗಳನ್ನೆಲ್ಲ ನಡೆಸುವವರು ನೀವೇ.

ಕೀರ್ತನೆ: 79:8, 9, 11, 13

ಶ್ಲೋಕ: ದೇವಾ, ನೆರವಾಗು ನಿನ್ನ ನಾಮಮಹಿಮೆಯ ನಿಮಿತ್ತ

ಶುಭಸಂದೇಶ: ಮತ್ತಾಯ13:36-43

ಯೇಸುಸ್ವಾಮಿ ಜನರನ್ನು ಬೀಳ್ಕೊಟ್ಟು ಮನೆಗೆ ಬಂದರು. ಶಿಷ್ಯರು ಅವರ ಬಳಿಗೆ ಬಂದು, “ಹೊಲದಲ್ಲಿ ಬಿತ್ತಲಾದ ಕಳೆಗಳ ಸಾಮತಿಯನ್ನು ನಮಗೆ ವಿವರಿಸಿರಿ,” ಎಂದು ಕೇಳಿಕೊಂಡರು. ಅದಕ್ಕೆ ಯೇಸು, “ಒಳ್ಳೆಯ ಗೋದಿಯನ್ನು ಬಿತ್ತುವವನು ಎಂದರೆ ನರಪುತ್ರನು; ಹೊಲವೇ ಈ ಲೋಕ; ಒಳ್ಳೆಯ ಕಾಳುಗಳೇ ಶ್ರೀಸಾಮ್ರಾಜ್ಯದ ಮಕ್ಕಳು; ಕಳೆಗಳೇ ಕೇಡಿಗನ ಮಕ್ಕಳು. ಆ ಕಳೆಗಳನ್ನು ಬಿತ್ತಿದ ವೈರಿಯೇ ಪಿಶಾಚಿ. ಸುಗ್ಗಿಯೇ ಕಾಲಾಂತ್ಯ. ಕೊಯ್ಲುಗಾರರೇ ದೇವದೂತರು. ಕಳೆಗಳನ್ನು ಕಿತ್ತು ಬೆಂಕಿಯಲ್ಲಿ ಸುಟ್ಟುಹಾಕಿದಂತೆ ಕಾಲಾಂತ್ಯದಲ್ಲೂ ನಡೆಯುವುದು. ನರಪುತ್ರನು ತನ್ನ ದೂತರನ್ನು ಕಳುಹಿಸುವನು. ಅವರು ಆತನ ರಾಜ್ಯದಿಂದ ಪಾಪಕ್ಕೆ ಕಾರಣವಾದುದೆಲ್ಲವನ್ನೂ ಮತ್ತು ದುಷ್ಕರ್ಮಿಗಳೆಲ್ಲರನ್ನೂ ಒಟ್ಟುಗೂಡಿಸಿ ಅಗ್ನಿಕುಂಡದಲ್ಲಿ ಹಾಕುವರು; ಅಲ್ಲಿ ಅವರು ಕಟಕಟನೆ ಹಲ್ಲುಕಡಿದುಕೊಂಡು ಗೋಳಾಡುವರು. ಸದ್ಧರ್ಮಿಗಳು ತಮ್ಮ ತಂದೆಯ ಸಾಮ್ರಾಜ್ಯದಲ್ಲಿ ಸೂರ್ಯನಂತೆ ಪ್ರಕಾಶಿಸುವರು. ಕಿವಿಯುಳ್ಳವನು ಕೇಳಿಸಿಕೊಳ್ಳಲಿ!

27.07.20 - ಸಾಮತಿಗಳಲ್ಲೇ ಬೋಧಿಸುವೆನು; ಲೋಕಾದಿಯಿಂದ ರಹಸ್ಯವಾದವುಗಳನ್ನು ಬಯಲುಗೊಳಿಸುವೆನು”

ಮೊದಲನೇ ವಾಚನ: ಯೆರೆಮೀಯ13:1-11

ಸರ್ವೇಶ್ವರ ಸ್ವಾಮಿ ನನಗೆ : “ನೀನು ಹೋಗಿ ನಾರಿನ ನಡುಕಟ್ಟು ಒಂದನ್ನು ಕೊಂಡುಕೊಂಡು ಸೊಂಟಕ್ಕೆ ಬಿಗಿದುಕೊ. ಅದನ್ನು ನೀರಿನಲ್ಲಿ ನೆನೆಸಬೇಡ,” ಎಂದು ಅಪ್ಪಣೆಕೊಟ್ಟರು.  ನಾನು ಅವರ ಮಾತಿನಂತೆ ನಡುಕಟ್ಟನ್ನು ಕೊಂಡುಕೊಂಡು ಸೊಂಟಕ್ಕೆ ಬಿಗಿದುಕೊಂಡೆ. ಆಮೇಲೆ, “ನೀನು ಸೊಂಟಕ್ಕೆ ಬಿಗಿದ ಆ ನಡುಕಟ್ಟನ್ನು ತೆಗೆದುಕೊಂಡು ಯೂಫ್ರೆಟಿಸ್ ನದಿಗೆ ಹೋಗು. ಅದನ್ನು ಅಲ್ಲಿಯ ಬಂಡೆಯ ಸಂದಿನೊಳಗೆ ಬಚ್ಚಿಡು,” ಎಂಬುದಾಗಿ ಸರ್ವೇಶ್ವರ ಸ್ವಾಮಿಯ ಎರಡನೆಯ ಆದೇಶ ನನಗೆ ಬಂದಿತು. 5ಅವರ ಅಪ್ಪಣೆಯ ಮೇರೆಗೆ ನಾನು ಹೋಗಿ ಯೂಫ್ರೆಟಿಸ್ ನದಿಯ ಬಳಿಯಲ್ಲಿ ಅದನ್ನು ಬಚ್ಚಿಟ್ಟೆ. ಬಹು ದಿನಗಳ ಮೇಲೆ ಸರ್ವೇಶ್ವರ ನನಗೆ, “ಹೊರಡು, ಯೂಫ್ರೆಟಿಸ್ ನದಿಗೆ ಹೋಗಿ ಅಲ್ಲಿ ಬಚ್ಚಿಡಬೇಕೆಂದು ನಾನು ಅಪ್ಪಣೆಕೊಟ್ಟ ನಡುಕಟ್ಟನ್ನು ಅಲ್ಲಿಂದ ತೆಗೆ,” ಎಂದು ಹೇಳಿದರು. ಆಗ ನಾನು ಯೂಫ್ರೆಟಿಸ್ ನದಿಗೆ ಹೋಗಿ ಹುಡುಕಿ ನಾನು ಬಚ್ಚಿಟ್ಟ ಸ್ಥಳದಿಂದ ಆ ನಡುಕಟ್ಟನ್ನು ತೆಗೆದೆ. ಆದರೆ ಅದು ಕೆಟ್ಟು ಯಾವ ಕೆಲಸಕ್ಕೂ ಬಾರದ್ದಾಗಿತ್ತು. ಆಗ ಸರ್ವೇಶ್ವರ ನನಗೆ ದಯಪಾಲಿಸಿದ ವಾಕ್ಯವೇನೆಂದರೆ : “ಇದು ಸರ್ವೇಶ್ವರನಾದ ನನ್ನ ನುಡಿ - ಈ ಪ್ರಕಾರವಾಗಿಯೇ ನಾನು ಜುದೇಯದ ದೊಡ್ಡಸ್ತಿಕೆಯನ್ನು ಹಾಗು ಜೆರುಸಲೇಮಿನ ಘನವಾದ ದೊಡ್ಡಸ್ತಿಕೆಯನ್ನು ತೆಗೆದುಬಿಡುವೆನು. ಈ ದುಷ್ಟಜನರು ನನ್ನ ಮಾತುಗಳನ್ನು ಕೇಳಲೊಲ್ಲರು. ತಮ್ಮ ಹೃದಯದ ಒರಟುತನದಂತೆ ನಡೆದುಬರುತ್ತಿದ್ದಾರೆ. ಅನ್ಯದೇವತೆಗಳನ್ನು ಹಿಂಬಾಲಿಸಿ, ಪೂಜಿಸುತ್ತಿದ್ದಾರೆ. ಇವರು ಯಾವ ಕೆಲಸಕ್ಕೂ ಬಾರದ ಈ ನಡುಕಟ್ಟಿಗೆ ಸಾಟಿಯಾಗುವರು. ಇಸ್ರಯೇಲ್ ವಂಶವೆಲ್ಲವು ಹಾಗು ಜುದೇಯ ವಂಶವೆಲ್ಲವು ನನಗೆ ಪ್ರಜೆಯಾಗಿರಲಿ; ನನಗೆ ಕೀರ್ತಿ, ಗೌರವ ತರಲಿ, ನನಗೆ ಆಭರಣವಾಗಿರಲಿ ಎಂದುಕೊಂಡೆ. ನಡುಕ್ಟಟನ್ನು ಸೊಂಟಕ್ಕೆ ಬಿಗಿದುಕೊಳ್ಳುವಂತೆ ಇವರನ್ನು ಬಿಗಿದುಕೊಂಡಿದ್ದೆ. ಆದರೂ ಇವರು ನನಗೆ ಕಿವಿಗೊಡದೆಹೋದರು. ಇದು ಸರ್ವೇಶ್ವರನಾದ ನನ್ನ ನುಡಿ.”

ಕೀರ್ತನೆ: 32:18-19, 20, 21
ಶ್ಲೋಕ: ಜನ್ಮವಿತ್ತ ದೇವರನ್ನು ನೀವು ಸ್ಮರಿಸಲಿಲ್ಲ

ಶುಭಸಂದೇಶ: ಮತ್ತಾಯ13:31-35

ಯೇಸುಸ್ವಾಮಿ ಇನ್ನೊಂದು ಸಾಮತಿಯನ್ನು ಹೇಳಿದರು: “ಸ್ವರ್ಗಸಾಮ್ರಾಜ್ಯ ಒಂದು ಸಾಸಿವೆ ಕಾಳನ್ನು ಹೋಲುತ್ತದೆ; ಈ ಕಾಳನ್ನು ತೆಗೆದುಕೊಂಡು ಹೋಗಿ ರೈತ ತನ್ನ ಹೊಲದಲ್ಲಿ ಬಿತ್ತಿದ. ಕಾಳುಗಳಲ್ಲಿ ಅತಿ ಸಣ್ಣದಾದ ಇದನ್ನು ಬಿತ್ತಿದಾಗ ಎಲ್ಲ ಸಸ್ಯಗಳಿಗಿಂತಲೂ ದೊಡ್ಡದಾಗಿ ಬೆಳೆದು ಮರವಾಗುತ್ತದೆ. ಆಕಾಶದಲ್ಲಿ ಹಾರಾಡುವ ಹಕ್ಕಿಗಳು ಬಂದು ಇದರ ರೆಂಬೆಗಳಲ್ಲಿ ಗೂಡು ಕಟ್ಟಿ ವಾಸಿಸುತ್ತವೆ.” ಯೇಸುಸ್ವಾಮಿ ಮತ್ತೊಂದು ಸಾಮತಿಯನ್ನು ಜನರಿಗೆ ಹೇಳಿದರು: “ಸ್ವರ್ಗಸಾಮ್ರಾಜ್ಯ ಹುದುಗೆಬ್ಬಿಸುವ ಹುಳಿಯನ್ನು ಹೋಲುತ್ತದೆ. ಅದನ್ನು ಒಬ್ಬಾಕೆ ತೆಗೆದುಕೊಂಡು ಮೂರು ಸೇರು ಹಿಟ್ಟಿನಲ್ಲಿ ಕಲಸಿದಳು. ಆ ಹಿಟ್ಟೆಲ್ಲಾ ಹುಳಿಯಾಯಿತು.” ಇದೆಲ್ಲವನ್ನೂ ಯೇಸುಸ್ವಾಮಿ ಜನರಿಗೆ ಸಾಮತಿಗಳ ರೂಪದಲ್ಲಿ ಹೇಳಿದರು. ಸಾಮತಿಗಳಿಲ್ಲದೆ ಅವರಿಗೆ ಏನನ್ನೂ ಬೋಧಿಸಲಿಲ್ಲ. “ಸಾಮತಿಗಳಲ್ಲೇ ಬೋಧಿಸುವೆನು; ಲೋಕಾದಿಯಿಂದ ರಹಸ್ಯವಾದವುಗಳನ್ನು ಬಯಲುಗೊಳಿಸುವೆನು”

26.07.20

ಮೊದಲನೇ ವಾಚನ: ಅರಸರು 3:5, 7-12

ದೇವರಾದ ಸರ್ವೇಶ್ವರ ಆ ರಾತ್ರಿ ಕನಸಿನಲ್ಲಿ ಅವನಿಗೆ ಕಾಣಿಸಿಕೊಂಡರು; “ನಿನಗೆ ಯಾವ ವರಬೇಕು ಕೇಳಿಕೋ,” ಎಂದು ಹೇಳಿದರು. ನನ್ನ ದೇವರಾದ ಸರ್ವೇಶ್ವರಾ, ನನ್ನ ತಂದೆಗೆ ಬದಲಾಗಿ ನಿಮ್ಮಿಂದ ಅರಸನಾಗಿ ನೇಮಕಗೊಂಡಿರುವ ನಿಮ್ಮ ದಾಸನಾದ ನಾನು ಇನ್ನೂ ಚಿಕ್ಕವನು. ವ್ಯವಹಾರಜ್ಞಾನ ಇಲ್ಲದವನು; ನಿಮ್ಮ ದಾಸನಾದ ನಾನು ಅಸಂಖ್ಯಾತ ಮಹಾಜನಾಂಗವಾದ ನಿಮ್ಮ ಸ್ವಕೀಯ ಪ್ರಜೆಯ ಮಧ್ಯೆ ಇದ್ದೇನೆ. ಆದುದರಿಂದ ಅದನ್ನು ಆಳುವುದಕ್ಕೂ ನ್ಯಾಯಾನ್ಯಾಯಗಳನ್ನು ಕಂಡುಹಿಡಿಯುವುದಕ್ಕೂ ನನಗೆ ವಿವೇಕವನ್ನು ದಯಪಾಲಿಸಿರಿ. ಈ ಮಹಾಜನಾಂಗವನ್ನು ಆಳಲು ಯಾರೂ ಸಮರ್ಥರಲ್ಲ,” ಎಂದು ಬೇಡಿಕೊಂಡನು. ಸೊಲೊಮೋನನ ಈ ಬಿನ್ನಹವನ್ನು ಸರ್ವೇಶ್ವರನಾದ ದೇವರು ಮೆಚ್ಚಿದರು. ಅವರು ಆತನಿಗೆ, “ನೀನು ದೀರ್ಘಾಯುಷ್ಯವನ್ನಾಗಲಿ, ಸಿರಿಸಂಪತ್ತನ್ನಾಗಲಿ, ಶತ್ರುವಿನಾಶವನ್ನಾಗಲಿ ಕೇಳಿಕೊಳ್ಳಲಿಲ್ಲ. ನ್ಯಾಯನಿರ್ಣಯಿಸುವುದಕ್ಕೆ ಬೇಕಾದ ವಿವೇಕವನ್ನು ಬೇಡಿಕೊಂಡೆ. ಆದ್ದರಿಂದ ನಿನ್ನ ಬಿನ್ನಹವನ್ನು ನೆರವೇರಿಸಿದ್ದೇನೆ. ನೋಡು, ನಿನಗೆ ಜ್ಞಾನವನ್ನೂ ವಿವೇಕವನ್ನೂ ಅನುಗ್ರಹಿಸಿದ್ದೇನೆ; ನಿನ್ನಂಥ ಜ್ಞಾನಿಯು ಹಿಂದೆ ಇರಲಿಲ್ಲ, ಮುಂದೆಯೂ ಇರುವುದಿಲ್ಲ. ಇದಲ್ಲದೆ, ನೀನು ಕೇಳಿದಂಥದ್ದನ್ನೂ ನಿನಗೆ ಅನುಗ್ರಹಿಸಿದ್ದೇನೆ. ನಿನ್ನ ಜೀವಮಾನದಲ್ಲೆಲ್ಲಾ ಸಿರಿಸಂಪತ್ತಿನಲ್ಲಿಯೂ ಘನತೆ ಗೌರವದಲ್ಲಿಯೂ ನಿನಗೆ ಸಮಾನವಾದ ಅರಸನು ಇನ್ನೊಬ್ಬನಿರುವುದಿಲ್ಲ. ನೀನು ನಿನ್ನ ತಂದೆ ದಾವೀದನಂತೆ ನನ್ನ ಮಾರ್ಗದಲ್ಲೇ ನಡೆದು ನನ್ನ ಆಜ್ಞಾವಿಧಿಗಳನ್ನು ಕೈಗೊಳ್ಳುವುದಾದರೆ ನಿನ್ನ ಆಯುಷ್ಯವನ್ನೂ ಹೆಚ್ಚಿಸುವೆನು,” ಎಂದರು. ಸೊಲೊಮೋನನು ನಿದ್ರೆಯಿಂದ ಎಚ್ಚೆತ್ತಾಗ, ಅದು ಕನಸೆಂದು ತಿಳಿದುಕೊಂಡನು. ಅವನು ಜೆರುಸಲೇಮಿಗೆ ಬಂದನಂತರ ಸರ್ವೇಶ್ವರನ ಒಡಂಬಡಿಕೆಯ ಮಂಜೂಷದ ಮುಂದೆ ನಿಂತು ದಹನಬಲಿಗಳನ್ನೂ ಶಾಂತಿಸಮಾಧಾನದ ಬಲಿಗಳನ್ನೂ ಸಮರ್ಪಿಸಿ, ತನ್ನ ಎಲ್ಲಾ ಪರಿವಾರದವರಿಗೆ ಔತಣವನ್ನು ಏರ್ಪಡಿಸಿದನು.

ಕೀರ್ತನೆ: 119:57, 72, 76-77, 127-128, 129-130
ಶ್ಲೋಕ:  ನಿನ್ನ ಧರ್ಮಶಾಸ್ತ್ರ ಪ್ರಭೂ, ನನಗೆ ಪರಮಪ್ರಿಯ

ಎರಡನೇ ವಾಚನ: ರೋಮನರಿಗೆ 8:28-30

ದೇವರನ್ನು ಪ್ರೀತಿಸುವವರಿಗೂ ದೇವರ ಸಂಕಲ್ಪದ ಮೇರೆಗೆ ಕರೆಹೊಂದಿದವರಿಗೂ ಸಕಲವೂ ಹಿತಕರವಾಗಿ ಪರಿಣಮಿಸುವುದು.ಇದನ್ನು ನಾವು ಚೆನ್ನಾಗಿ ಅರಿತಿದ್ದೇವೆ.ದೇವರು ಯಾರನ್ನು ತಮ್ಮವರೆಂದು ಮೊದಲೇ ಆರಿಸಿಕೊಂಡರೋಅವರನ್ನು ತಮ್ಮ ಪುತ್ರನ ಅನುರೂಪಿಗಳಾಗುವಂತೆ ಆಗಲೇ ನೇಮಿಸಿದರು. ಹೀಗೆ ಅನೇಕ ಸಹೋದರರಲ್ಲಿ ತಮ್ಮ ಪುತ್ರನೇ ಜೇಷ್ಠನಾಗಿರಬೇಕೆಂಬುದು ದೇವರ ನಿರ್ಧಾರವಾಗಿದೆ. ಹೀಗೆ ಯಾರನ್ನು ಮೊದಲೇ ನೇಮಿಸಿದ್ದರೋ ಅವರನ್ನು ಕರೆದಿದ್ದಾರೆ. ಯಾರನ್ನು ಕರೆದಿದ್ದಾರೋ ಅವರನ್ನು ತಮ್ಮೊಡನೆ ಸತ್ಸಂಬಂಧದಲ್ಲಿ ಇರಿಸಿಕೊಂಡಿದ್ದಾರೆ. ಯಾರನ್ನು ತಮ್ಮೊಡನೆ ಸತ್ಸಂಬಂಧದಲ್ಲಿ ಇರಿಸಿಕೊಂಡಿದ್ದಾರೋ ಅವರನ್ನು ಮಹಿಮಾಪದವಿಗೆ ಸೇರಿಸಿಕೊಂಡಿದ್ದಾರೆ.

ಶುಭಸಂದೇಶ: ಮತ್ತಾಯ 13:44-52

“ಸ್ವರ್ಗಸಾಮ್ರಾಜ್ಯವನ್ನು ಹೊಲದಲ್ಲಿ ಹೂಳಿಟ್ಟ ನಿಧಿಗೆ ಹೋಲಿಸಬಹುದು. ಇದನ್ನು ಒಬ್ಬನು ಪತ್ತೆಹಚ್ಚಿ ಅಲ್ಲಿಯೇ ಮುಚ್ಚಿಡುತ್ತಾನೆ. ತನಗಾದ ಸಂತೋಷದಿಂದ ಹೋಗಿ ತನಗೆ ಇದ್ದುಬದ್ದುದೆಲ್ಲವನ್ನೂ ಮಾರಿ ಈ ಹೊಲವನ್ನೇ ಕೊಂಡುಕೊಂಡುಬಿಡುತ್ತಾನೆ. “ಸ್ವರ್ಗಸಾಮ್ರಾಜ್ಯವನ್ನು ಉತ್ತಮವಾದ ಮುತ್ತುರತ್ನಗಳನ್ನು ಹುಡುಕಿಕೊಂಡು ಹೋಗುವ ವರ್ತಕನಿಗೂ ಹೋಲಿಸಬಹುದು. ಅನರ್ಘ್ಯವಾದ ಒಂದು ಮುತ್ತನ್ನು ಕಂಡ ಕೂಡಲೆ ವರ್ತಕ ತನ್ನ ಆಸ್ತಿಪಾಸ್ತಿಯನ್ನು ಮಾರಿ ಆ ಮುತ್ತನ್ನು ಕೊಂಡುಕೊಳ್ಳುತ್ತಾನೆ. “ಸ್ವರ್ಗಸಾಮ್ರಾಜ್ಯವನ್ನು ಒಂದು ಮೀನು ಬಲೆಗೆ ಹೋಲಿಸಬಹುದು. ಬೆಸ್ತರು ಬಲೆಯನ್ನು ಸಮುದ್ರದಲ್ಲಿ ಬೀಸಿ ಎಲ್ಲಾ ಜಾತಿಯ ಮೀನುಗಳನ್ನು ಹಿಡಿಯುತ್ತಾರೆ. 48ಬಲೆ ತುಂಬಿದ ಮೇಲೆ ಅದನ್ನು ದಡಕ್ಕೆ ಎಳೆದು, ಕುಳಿತುಕೊಂಡು ಒಳ್ಳೆಯ ಮೀನುಗಳನ್ನು ಮಾತ್ರ ಆರಿಸಿಕೊಂಡು ಬುಟ್ಟಿಗೆ ಹಾಕಿಕೊಳ್ಳುತ್ತಾರೆ; ಕೆಟ್ಟವನ್ನು ಎಸೆದುಬಿಡುತ್ತಾರೆ.  ಕಾಲಾಂತ್ಯದಲ್ಲಿ ಇದರಂತೆಯೇ ಆಗುವುದು; ದೇವದೂತರು ಹೊರಟುಬಂದು ದುರ್ಜನರನ್ನು ಸಜ್ಜನರಿಂದ ಬೇರ್ಪಡಿಸುವರು. ದುರ್ಜನರನ್ನು ಅಗ್ನಿಕುಂಡದಲ್ಲಿ ಹಾಕುವರು.  ಅಲ್ಲಿ ಅವರು ಕಟಕಟನೆ ಹಲ್ಲುಕಡಿದುಕೊಂಡು ಗೋಳಾಡುವರು.” “ಇದೆಲ್ಲ ನಿಮಗೆ ಅರ್ಥವಾಯಿತೇ?” ಎಂದು ಯೇಸುಸ್ವಾಮಿ ಕೇಳಿದರು. ಶಿಷ್ಯರು “ಅರ್ಥವಾಯಿತು” ಎಂದರು. ಆಗ ಯೇಸು, “ಇಂತಿರಲು, ಸ್ವರ್ಗಸಾಮ್ರಾಜ್ಯದಲ್ಲಿ ಶಿಷ್ಯನಾಗಿರುವ ಪ್ರತಿಯೊಬ್ಬ ಶಾಸ್ತ್ರಜ್ಞನು ಮನೆಯ ಯಜಮಾನ ಇದ್ದ ಹಾಗೆ. ಅವನು ತನ್ನ ಉಗ್ರಾಣದಿಂದ ಹೊಸ ಹಾಗೂ ಹಳೆಯ ವಸ್ತುಗಳನ್ನು ಹೊರಗೆ ತರುತ್ತಾ ಇರುತ್ತಾನೆ,” ಎಂದರು.

25.07.20 - "“ನೀವು ಕೋರಿಕೊಂಡದ್ದು ಏನೆಂದು ನಿಮಗೇ ತಿಳಿಯದು. ನಾನು ಕುಡಿಯಬೇಕಾದ ಪಾತ್ರೆಯಿಂದ ಕುಡಿಯಲು ನಿಮ್ಮಿಂದ ಆದೀತೆ?”

ಮೊದಲನೇ ವಾಚನ: 2 ಕೊರಿಂಥಿಯರಿಗೆ 4:7-15

ಸಹೋದರರೇ, ನಾವು ಇಂಥ ಆಧ್ಯಾತ್ಮಿಕ ಮಾಣಿಕ್ಯವನ್ನು ಪಡೆದಿದ್ದರೂ ಮಣ್ಣಿನ ಮಡಕೆಗಳಂತೆ ಇದ್ದೇವೆ. ಹೀಗೆ, ಈ ಪರಮೋನ್ನತ ಶಕ್ತಿ ನಮಗೆ ಸೇರಿದ್ದಲ್ಲ. ದೇವರಿಗೆ ಸೇರಿದ್ದೆಂದು ವ್ಯಕ್ತವಾಗುತ್ತದೆ. ನಾವು ಇಕ್ಕಟ್ಟುಬಿಕ್ಕಟ್ಟುಗಳಿಗೆ ಒಳಗಾಗಿದ್ದರೂ ನಜ್ಜುಗುಜ್ಜಾಗಲಿಲ್ಲ; ಸಂಶಯ ಸಂದೇಹಗಳಿಗೊಳಗಾದರೂ ನಿರಾಶೆಗೊಳ್ಳಲಿಲ್ಲ.ಶತ್ರುಗಳು ಅನೇಕರಿದ್ದರೂ ಮಿತ್ರನೊಬ್ಬನು ಇಲ್ಲದಿರಲಿಲ್ಲ. ಪ್ರಾಣ ಹಿಂಸೆಗಳಿಗೀಡಾಗಿದ್ದರೂ ಪ್ರಾಣನಷ್ಟವನ್ನು ಅನುಭವಿಸಲಿಲ್ಲ. ಯೇಸುವಿನ ದಿವ್ಯಜೀವವು ನಮ್ಮ ದೇಹದಲ್ಲಿ ಗೋಚರವಾಗುವಂತೆ ಅವರ ಮರಣಯಾತನೆಯನ್ನು ನಿರಂತರವಾಗಿ ಅನುಭವಿಸುತ್ತಾ ಬಾಳುತ್ತಿದ್ದೇವೆ. ಯೇಸುವಿನ ಅಮರ ಜೀವವು ನಮ್ಮ ನಶ್ವರ ಶರೀರದಲ್ಲಿ ಗೋಚರವಾಗುವಂತೆ ಬದುಕಿರುವಾಗಲೇ ನಾವು ಯೇಸುವಿಗೋಸ್ಕರ ಸತತ ಸಾವಿಗೆ ಈಡಾಗಿದ್ದೇವೆ. ಹೀಗೆ ನಮ್ಮಲ್ಲಿ ಸಾವು ಕಾರ್ಯಗತವಾಗುತ್ತಿದ್ದರೆ ನಿಮ್ಮಲ್ಲಿ ಜೀವ ಕಾರ್ಯಗತವಾಗುತ್ತಿದೆ. “ನಾನು ವಿಶ್ವಾಸವಿಟ್ಟೆನು. ಆದ್ದರಿಂದ ಮಾತನಾಡಿದೆನು,” ಎಂದು ಪವಿತ್ರಗ್ರಂಥದಲ್ಲಿ ಬರೆಯಲಾಗಿದೆ. ಇದೇ ಮನೋಭಾವನೆಯಿಂದ ಕೂಡಿರುವ ನಾವು ಮಾತನಾಡಲೇಬೇಕು. ಏಕೆಂದರೆ ನಮಗೆ ವಿಶ್ವಾಸವಿದೆ. ಪ್ರಭು ಯೇಸುವನ್ನು ಪುನರುತ್ಥಾನಗೊಳಿಸಿದ ದೇವರು ನಮ್ಮನ್ನು ಯೇಸುಕ್ರಿಸ್ತರೊಡನೆ ಪುನರುತ್ಥಾನಗೊಳಿಸಿ ತಮ್ಮ ಸಾನ್ನಿಧ್ಯಕ್ಕೆ ಬರಮಾಡಿಕೊಳ್ಳುವರು ಎಂಬುದನ್ನು ನಾವು ಬಲ್ಲೆವು. ಅಂತೆಯೇ ನಿಮ್ಮನ್ನೂ ಬರಮಾಡಿಕೊಳ್ಳುವರು. ಇದೆಲ್ಲವೂ ನಿಮ್ಮ ಒಳಿತಿಗಾಗಿಯೇ. ಹೀಗೆ ಅನೇಕರಲ್ಲಿ ದೇವರ ವರಪ್ರಸಾದವು ಉಕ್ಕಿ ಹರಿಯುವುದು; ಅವರಲ್ಲಿ ಕೃತಜ್ಞತಾಭಾವನೆಯನ್ನು ಹೆಚ್ಚಿಸುವುದು; ಇದರಿಂದಾಗಿ ದೇವರ ಮಹಿಮೆ ಬೆಳಗುವುದು.

ಕೀರ್ತನೆ: 126:1-2, 2-3, 4-5, 6

ಶ್ಲೋಕ: ಅಳುತಳುತಾ ಬಿತ್ತುವವರು ನಲಿನಲಿಯುತಾ ಕೊಯ್ಯುವರು

ಶುಭಸಂದೇಶ: ಮತ್ತಾಯ: 20:20-28


ಜೆಬೆದಾಯನ ಮಕ್ಕಳ ತಾಯಿ ಪುತ್ರರ ಸಮೇತ ಯೇಸುಸ್ವಾಮಿಯ ಬಳಿಗೆ ಬಂದಳು. “ತಮ್ಮಿಂದ ನನಗೊಂದು ಉಪಕಾರ ಆಗಬೇಕು,” ಎಂದು ಸ್ವಾಮಿಯ ಪಾದಕ್ಕೆರಗಿದಳು. “ನಿನ್ನ ಕೋರಿಕೆ ಏನು?” ಎಂದರು ಯೇಸು. ಅದಕ್ಕೆ ಅವಳು, “ತಮ್ಮ ಸಾಮ್ರಾಜ್ಯದಲ್ಲಿ, ನನ್ನ ಈ ಇಬ್ಬರು ಮಕ್ಕಳಲ್ಲಿ ಒಬ್ಬನು ತಮ್ಮ ಬಲಗಡೆಯಲ್ಲೂ ಇನ್ನೊಬ್ಬನು ತಮ್ಮ ಎಡಗಡೆಯಲ್ಲೂ ಆಸೀನರಾಗುವಂತೆ ಅಪ್ಪಣೆಯಾಗಬೇಕು,” ಎಂದು ಕೋರಿದಳು. ಅದಕ್ಕೆ ಪ್ರತ್ಯುತ್ತರವಾಗಿ ಯೇಸು, “ನೀವು ಕೋರಿಕೊಂಡದ್ದು ಏನೆಂದು ನಿಮಗೇ ತಿಳಿಯದು. ನಾನು ಕುಡಿಯಬೇಕಾದ ಪಾತ್ರೆಯಿಂದ ಕುಡಿಯಲು ನಿಮ್ಮಿಂದ ಆದೀತೆ?” ಎಂದು ಪ್ರಶ್ನಿಸಿದರು. “ಹೌದು, ಆಗುತ್ತದೆ,” ಎಂದು ಅವರು ಮರುನುಡಿದರು. ಆಗ ಯೇಸು, “ನನ್ನ ಪಾತ್ರೆಯಿಂದ ನೀವೇನೋ ಕುಡಿಯುವಿರಿ. ಆದರೆ ನನ್ನ ಬಲಗಡೆಯಲ್ಲಾಗಲೀ ಎಡಗಡೆಯಲ್ಲಾಗಲೀ ಆಸೀನರಾಗುವಂತೆ ಅನುಗ್ರಹಿಸುವುದು ನನ್ನದಲ್ಲ. ಅದು ಯಾರಿಗಾಗಿ ನನ್ನ ಪಿತನಿಂದ ಸಿದ್ಧಮಾಡಲಾಗಿದೆಯೋ ಅವರಿಗೇ ಸಿಗುವುದು," ಎಂದು ನುಡಿದರು. ಉಳಿದ ಹತ್ತುಮಂದಿ ಶಿಷ್ಯರು ಇದನ್ನು ಕೇಳಿದಾಗ ಆ ಇಬ್ಬರು ಸಹೋದರರ ಮೇಲೆ ಸಿಟ್ಟುಗೊಂಡರು. ಯೇಸುವಾದರೋ, ಶಿಷ್ಯರೆಲ್ಲರನ್ನೂ ತಮ್ಮ ಬಳಿಗೆ ಕರೆದು, “ಲೋಕದ ಪ್ರಜಾಧಿಪತಿಗಳು ತಮ್ಮ ಪ್ರಜೆಗಳ ಮೇಲೆ ದರ್ಪದಿಂದ ದೊರೆತನ ಮಾಡುತ್ತಾರೆ; ಜನನಾಯಕರು ಎನ್ನಿಸಿಕೊಳ್ಳುವವರು ಜನರ ಮೇಲೆ ಅಧಿಕಾರ ಪ್ರದರ್ಶನಮಾಡುತ್ತಾರೆ. ಇದು ನಿಮಗೆ ಗೊತ್ತು. ನೀವು ಹಾಗಿರಬಾರದು. ನಿಮ್ಮಲ್ಲಿ ಶ್ರೇಷ್ಠನಾಗಿರಲು ಇಚ್ಛಿಸುವವನು ನಿಮಗೆ ಸೇವಕನಾಗಿರಲಿ. ಪ್ರಥಮನಾಗಿರಲು ಆಶಿಸುವವನು ನಿಮ್ಮ ದಾಸನಾಗಿರಲಿ. ಹಾಗೆಯೇ ನರಪುತ್ರನು ಸೇವೆಮಾಡಿಸಿಕೊಳ್ಳುವುದಕ್ಕೆ ಅಲ್ಲ, ಇತರರ ಸೇವೆಮಾಡುವುದಕ್ಕೂ ಸರ್ವರ ಉದ್ಧಾರಕ್ಕಾಗಿ ತನ್ನ ಪ್ರಾಣವನ್ನು ಈಡಾಗಿ ಕೊಡುವುದಕ್ಕೂ ಬಂದಿದ್ದಾನೆ,” ಎಂದು ಹೇಳಿದರು.

24.07.20 - "ಫಲಪ್ರದನಾಗಿ ನೂರರಷ್ಟು, ಅರವತ್ತರಷ್ಟು, ಮೂವತ್ತರಷ್ಟು ಫಲ ಕೊಡುತ್ತಾನೆ"

ಮೊದಲನೇ ವಾಚನ: ಪ್ರವಾದಿ ಯೆರೆಮೀಯನ ಗ್ರಂಥ 3:14-17

ಇದು ಕರ್ತರ ನುಡಿ: “ಭ್ರಷ್ಟರಾದ ಜನರೇ, ನನಗೆ ಅಭಿಮುಖರಾಗಿರಿ, ನಾನು ನಿಮಗೆ ಅಧಿಪತಿ. ನಿಮ್ಮಲ್ಲಿ ಒಂದು ಪಟ್ಟಣಕ್ಕೆ ಒಬ್ಬನಂತೆ, ಗೋತ್ರಕ್ಕೆ ಇಬ್ಬರಂತೆ ಆರಿಸಿ ಸಿಯೋನಿಗೆ ಕರೆತರುವೆನು. ಇದಲ್ಲದೆ ನನ್ನ ಮನಸ್ಸು ಒಪ್ಪುವ ಪಾಲಕರನ್ನು ನಿಮಗೆ ಕೊಡುವೆನು. ಅವರು ನಿಮ್ಮನ್ನು ಜ್ಞಾನವಿವೇಕಗಳಿಂದ ಪೋಷಿಸುವರು. ನೀವು ನಾಡಿನಲ್ಲಿ ಹೆಚ್ಚಿ ಅಭಿವೃದ್ಧಿಯಾದಾಗ, ‘ಸರ್ವೇಶ್ವರನ ಒಡಂಬಡಿಕೆಯ ಮಂಜೂಷವೆಲ್ಲಿ?’ ಎಂದು ಪ್ರಸ್ತಾಪಿಸುವಂತಿಲ್ಲ. ಅದು ಜ್ಞಾಪಕಕ್ಕೆ ಬರುವುದಿಲ್ಲ, ಯಾರೂ ಅದನ್ನು ಸ್ಮರಿಸುವುದಿಲ್ಲ. ಅದು ಇಲ್ಲವಲ್ಲಾ ಎಂದು ದುಃಖಿಸುವುದಿಲ್ಲ. ಹೊಸದೊಂದನ್ನು ಕಲ್ಪಿಸಿಕೊಳ್ಳುವುದಿಲ್ಲ. ಇದು ಸರ್ವೇಶ್ವರನಾದ ನನ್ನ ನುಡಿ. ಆ ಕಾಲ ಬಂದಾಗ ಜೆರುಸಲೇಮನ್ನೇ ‘ಸರ್ವೇಶ್ವರನ ಸಿಂಹಾಸನ’ ಎಂದು ಕರೆಯುವರು. ನನ್ನ ನಾಮಮಹತ್ವದ ಸ್ಥಾನವಾದ ಜೆರುಸಲೇಮಿಗೆ ಸಕಲ ರಾಷ್ಟ್ರಗಳವರು ನೆರೆದುಬರುವರು. ಆಮೇಲೆ ತಮ್ಮ ದುಷ್ಟಹೃದಯದ ನಿಮಿತ್ತ ಹಟಮಾರಿಗಳಂತೆ ನಡೆಯಲಾರರು.

ಕೀರ್ತನೆ: 31:10, 11-12, 13

ಶ್ಲೋಕ: ಪ್ರಭು ನಮ್ಮನ್ನು ಕಾಪಾಡುವರು.

ಶುಭಸಂದೇಶ: ಮತ್ತಾಯ 13:18-23


ಯೇಸುಸ್ವಾಮಿ ತಮ್ಮ ಶಿಷ್ಯರನ್ನುದ್ದೇಶಿಸಿ, “ಈಗ ಬಿತ್ತುವವನ ಸಾಮತಿಯ ಅರ್ಥವನ್ನು ಕೇಳಿ: ಒಬ್ಬನು ಶ್ರೀಸಾಮ್ರಾಜ್ಯದ ಸಂದೇಶವನ್ನು ಕೇಳಿ ಅದನ್ನು ಗ್ರಹಿಸದೆ ಹೋದರೆ, ಕೇಡಿಗನು ಬಂದು ಅವನ ಹೃದಯದಲ್ಲಿ ಬಿತ್ತಿದ್ದ ಬೀಜವನ್ನು ತೆಗೆದೆಸೆಯುತ್ತಾನೆ. ಇವನು ಕಾಲ್ದಾರಿಯಲ್ಲಿ ಬಿದ್ದ ಬೀಜವನ್ನು ಹೋಲುತ್ತಾನೆ. ಬೇರೊಬ್ಬನು ಈ ಸಂದೇಶವನ್ನು ಕೇಳಿದ ಕೂಡಲೇ ಅದನ್ನು ಸಂತೋಷದಿಂದ ಸ್ವೀಕರಿಸುತ್ತಾನೆ. ಆದರೆ ಅದು ತನ್ನಲ್ಲಿ ಬೇರೂರದ ಕಾರಣ ಕೊಂಚಕಾಲ ಮಾತ್ರ ಇದ್ದು, ಸಂದೇಶದ ನಿಮಿತ್ತ ಕಷ್ಟಕೋಟಲೆಗಳು ಬಂದೊದಗಿದಾಗ ಕೂಡಲೇ ಎಡವಿಬೀಳುತ್ತಾನೆ. ಇವನು ಕಲ್ಲು ನೆಲದ ಮೇಲೆ ಬಿದ್ದ ಬೀಜವನ್ನು ಹೋಲುತ್ತಾನೆ. ಇನ್ನೊಬ್ಬನು ಸಂದೇಶವನ್ನೇನೋ ಕೇಳುತ್ತಾನೆ, ಆದರೆ ಪ್ರಾಪಂಚಿಕ ಚಿಂತನೆಗಳು, ಐಶ್ವರ್ಯದ ವ್ಯಾಮೋಹಗಳು ಆ ಸಂದೇಶವನ್ನು ಫಲಬಿಡದಂತೆ ಅದುಮಿಬಿಡುತ್ತವೆ; ಇವನು ಮುಳ್ಳುಪೊದೆಗಳಲ್ಲಿ ಬಿದ್ದ ಬೀಜವನ್ನು ಹೋಲುತ್ತಾನೆ. ಇನ್ನೊಬ್ಬನು ವಾಕ್ಯವನ್ನು ಕೇಳುತ್ತಾನೆ, ಗ್ರಹಿಸಿಕೊಳ್ಳುತ್ತಾನೆ; ಫಲಪ್ರದನಾಗಿ ನೂರರಷ್ಟು, ಅರವತ್ತರಷ್ಟು, ಮೂವತ್ತರಷ್ಟು ಫಲಕೊಡುತ್ತಾನೆ. ಇವನು ಹದವಾದ ಭೂಮಿಯಲ್ಲಿ ಬಿದ್ದ ಬೀಜವನ್ನು ಹೋಲುತ್ತಾನೆ,” ಎಂದರು.

23.07.20 - "ಪ್ರವಾದಿಗಳು ಹಾಗೂ ಸತ್ಪುರುಷರು ನೀವು ನೋಡುವುದನ್ನು ನೋಡುವುದಕ್ಕೂ, ಕೇಳುವುದನ್ನು ಕೇಳುವುದಕ್ಕೂ ಅಪೇಕ್ಷಿಸಿದರು"

ಮೊದಲನೇ ವಾಚನ: ಯೆರೆಮೀಯ 2:1-3, 7-8, 12-13 

ಸರ್ವೇಶ್ವರ ಸ್ವಾಮಿ ನನಗೆ ನೀಡಿದ ಆದೇಶ ಇದು : “ನೀನು ಹೋಗಿ ಜೆರುಸಲೇಮ್ ನಗರಕ್ಕೇ ಕೇಳಿಸುವಂತೆ ಈ ಸಂದೇಶವನ್ನು ಸಾರು: ನೀನು ಯೌವನದಲ್ಲಿ ನನ್ನ ಮೇಲಿಟ್ಟಿದ್ದ ಪ್ರೀತಿಯನ್ನು, ನವ ವಧುವಾಗಿ ನನಗೆ ತೋರಿಸಿದ ಪ್ರೇಮವನ್ನು, ಹಾಗು ಬಿತ್ತನೆಯಿಲ್ಲದ ಅರಣ್ಯಮಾರ್ಗವಾಗಿ ನನ್ನನ್ನು ಹಿಂಬಾಲಿಸಿದಾಗ ಅನುಸರಿಸುತ್ತಿದ್ದ ನಿನ್ನ ಪಾತಿವ್ರತ್ಯವನ್ನು ನನ್ನ ನೆನಪಿನಲ್ಲಿ ಇಟ್ಟುಕೊಂಡಿದ್ದೇನೆ; ಇದು ನಿನ್ನ ಹಿತಕ್ಕಾಗಿಯೇ. “ಎಲೈ ಇಸ್ರಯೇಲ್, ನೀನು ನನಗೆ ಮೀಸಲಾದವಳು, ನನ್ನ ಬೆಳೆಯ ಪ್ರಥಮ ಫಲ. ಯಾರು ಯಾರು ಅದನ್ನು ತಿಂದರೋ ಅವರು ದ್ರೋಹಿಗಳು, ಕೇಡಿಗೆ ಗುರಿಯಾದವರು, ಎನ್ನುತ್ತಾರೆ ಸರ್ವೇಶ್ವರ.” ನಾನು ನಿಮ್ಮನ್ನು ಫಲವತ್ತಾದ ನಾಡಿಗೆ ಕರೆತಂದೆ. ಅದರ ಫಲವನ್ನೂ ಸಾರವನ್ನೂ ಅನುಭವಿಸುವ ಹಾಗೆ ಮಾಡಿದೆ. ಆದರೆ ನೀವು ಒಳನುಗ್ಗಿ ಬಂದು ಆ ನನ್ನ ನಾಡನ್ನು ಹೊಲೆಮಾಡಿದಿರಿ; ಆ ನನ್ನ ಸೊತ್ತನ್ನು ಅಸಹ್ಯಪಡಿಸಿದಿರಿ. ಯಾಜಕರು, ‘ಸರ್ವೇಶ್ವರ ಸ್ವಾಮಿ ಎಲ್ಲಿ? ಎಂದು ವಿಚಾರಿಸಲೇ ಇಲ್ಲ. ಧರ್ಮಶಾಸ್ತ್ರಿಗಳು ನನ್ನನ್ನು ಅರಿತುಕೊಳ್ಳಲಿಲ್ಲ. ಪ್ರಜಾಪಾಲಕರು ನನಗೆ ದ್ರೋಹಮಾಡಿದರು. ಪ್ರವಾದಿಗಳು ಬಾಳ್ ದೇವತೆಯ ಆವೇಶದಿಂದ ಪ್ರವಾದನೆ ಮಾಡಿದರು. ನಿರರ್ಥಕವಾದುವುಗಳನ್ನು ಪೂಜಿಸಿದರು.’ ಆಕಾಶ ಮಂಡಲವೇ, ಇದನ್ನು ಕೇಳಿ ನಿಬ್ಬೆರಗಾಗು; ತತ್ತರಿಸಿ ಹಾಳಾಗು!” ಇದು ಸರ್ವೇಶ್ವರ ಸ್ವಾಮಿಯ ವಾಣಿ. “ನನ್ನ ಜನರು ಇಬ್ಬಗೆಯ ಅಪರಾಧಗಳನ್ನು ಎಸಗಿದ್ದಾರೆ; ಜೀವಜಲದ ಬುಗ್ಗೆಯಾದ ನನ್ನನ್ನೇ ತೊರೆದುಬಿಟ್ಟಿದ್ದಾರೆ! ತೊಟ್ಟಿಗಳನ್ನು, ನೀರುನಿಲ್ಲದ ಬಿರುಕು ತೊಟ್ಟಿಗಳನ್ನು ತಮಗಾಗಿ ಕೊರೆದುಕೊಂಡಿದ್ದಾರೆ!”

ಕೀರ್ತನೆ: 36:6-7, 8-9, 10-11
ಶ್ಲೋಕ: ಪ್ರಭೂ, ನಿನ್ನಲ್ಲಿದೆ ಜೀವದ ಬುಗ್ಗೆ

ಶುಭಸಂದೇಶ: ಮತ್ತಾಯ 13:10-17

ತರುವಾಯ ಶಿಷ್ಯರು ಯೇಸುಸ್ವಾಮಿಯ ಬಳಿಗೆ ಬಂದು, “ನೀವು ಜನರೊಡನೆ ಮಾತನಾಡುವಾಗ ಸಾಮತಿಗಳನ್ನು ಉಪಯೋಗಿಸುತ್ತೀರಿ, ಏಕೆ?” ಎಂದು ಕೇಳಿದರು. ಅದಕ್ಕೆ ಪ್ರತ್ಯುತ್ತರವಾಗಿ ಯೇಸು, “ಸ್ವರ್ಗಸಾಮ್ರಾಜ್ಯದ ರಹಸ್ಯಗಳನ್ನು ಅರಿತುಕೊಳ್ಳುವ ಸದವಕಾಶ ಲಭಿಸಿರುವುದು ನಿಮಗೆ, ಅವರಿಗಲ್ಲ. ಉಳ್ಳವನಿಗೆ ಇನ್ನೂ ಹೆಚ್ಚಾಗಿ ಕೊಡಲಾಗುತ್ತದೆ. ಅವನು ಸಮೃದ್ಧನಾಗುತ್ತಾನೆ. ಇಲ್ಲದವನಿಂದ ಇರುವ ಕಿಂಚಿತ್ತನ್ನೂ ಕಸಿದುಕೊಳ್ಳಲಾಗುತ್ತದೆ. ಅವರೊಡನೆ ಸಾಮತಿ ರೂಪದಲ್ಲಿ ಮಾತನಾಡುವುದಕ್ಕೆ ಕಾರಣ ಇದು: ಅವರು ಕಣ್ಣಾರೆ ನೋಡಿದರೂ ಕಾಣುವುದಿಲ್ಲ; ಕಿವಿಯಾರೆ ಕೇಳಿದರೂ ಕಿವಿಗೊಡುವುದಿಲ್ಲ; ಗ್ರಹಿಸುವುದೂ ಇಲ್ಲ. ಪ್ರವಾದಿ ಯೆಶಾಯನ ಈ ಪ್ರವಚನ ಅವರಲ್ಲಿ ಈಡೇರುತ್ತದೆ. ‘ಕೇಳಿ ಕೇಳಿಯೂ ಗ್ರಹಿಸರು ನೋಡಿ ನೋಡಿಯೂ ಕಾಣರು ಈ ಜನರ ಹೃದಯ ಕಲ್ಲಾಗಿದೆ ಕಿವಿ ಮಂದವಾಗಿದೆ ಕಣ್ಣು ಮಬ್ಬಾಗಿದೆ. ಇಲ್ಲದಿದ್ದರೆ ಇವರ ಕಣ್ಣು ಕಾಣುತ್ತಾ ಕಿವಿ ಕೇಳುತ್ತಾ ಹೃದಯ ಗ್ರಹಿಸುತ್ತಾ ನನ್ನತ್ತ ತಿರುಗುತ್ತಿದ್ದರು; ದೇವರಾದ ನಾನಿವರನು ಸ್ವಸ್ಥಪಡಿಸುತ್ತಿದ್ದೆನು.’ “ನೀವಾದರೋ ಭಾಗ್ಯವಂತರು. ನಿಮ್ಮ ಕಣ್ಣುಗಳು ಕಾಣುತ್ತವೆ, ಕಿವಿಗಳು ಕೇಳುತ್ತವೆ. ಎಷ್ಟೋ ಪ್ರವಾದಿಗಳು ಹಾಗೂ ಸತ್ಪುರುಷರು ನೀವು ನೋಡುವುದನ್ನು ನೋಡುವುದಕ್ಕೂ, ಕೇಳುವುದನ್ನು ಕೇಳುವುದಕ್ಕೂ ಅಪೇಕ್ಷಿಸಿದರು. ಆದರೆ ಅವರು ನೋಡಲೂ ಇಲ್ಲ, ಕೇಳಲೂ ಇಲ್ಲ ಎಂಬುದು ನಿಮಗೆ ತಿಳಿದಿರಲಿ."ಎಂದರು.

22.07.20 - “ಏಕಮ್ಮಾ ಅಳುತ್ತಿರುವೇ? ಏನನ್ನು ಹುಡುಕುತ್ತಿರುವೇ?’

ಮೊದಲನೇ ವಾಚನ: ಪರಮಗೀತೆ  3:1-4  

ಮದುಮಗಳು ಇಂತೆನ್ನುತ್ತಾಳೆ: ನನ್ನ ಪ್ರಾಣಕಾಂತನನ್ನು ರಾತ್ರಿಯೆಲ್ಲಾ ಹುಡುಕಿದೆ ಹಾಸಿಗೆಯ ಮೇಲೆ ಹಾತೊರೆದೆ ಹುಡುಕಿ ಹುಡುಕಿ ಸಿಗಲಾರದೆ ಬೇಸತ್ತೆ. ಎದ್ದು ಊರೆಲ್ಲಾ ಅಲೆದಾಡಿದೆ ಬೀದಿಗಳಲ್ಲಿ, ಚೌಕಗಳಲ್ಲಿ ಹುಡುಕಾಡಿದೆ. ಹುಡುಕಿ ಹುಡುಕಿ ಸಿಗಲಾರದೆ ಬೇಸತ್ತೆ. ಊರಲ್ಲಿ ತಿರುಗುವ ಪಹರೆಯವರ ಕೈಗೆ ಸಿಕ್ಕಿಬಿದ್ದೆ “ನನ್ನ ಪ್ರಾಣಕಾಂತನನ್ನು ಕಂಡಿರಾ?’ ಎಂದು ವಿಚಾರಿಸಿದೆ. ಅವರನ್ನು ಬಿಟ್ಟ ತುಸು ಹೊತ್ತಿನಲ್ಲೆ ನನ್ನ ಪ್ರಾಣಕಾಂತನನ್ನು ಕಂಡುಕೊಂಡೆ.

ಕೀರ್ತನೆ: 63:2, 3-4, 5-6, 8-9

ಶ್ಲೋಕ: ನಿನಗೋಸ್ಕರ ಎನ್ನ ತನು ಸೊರಗಿದೆ, ಮನ ಬಾಯಾರಿದೆ

ಶುಭಸಂದೇಶ: ಯೊವಾನ್ನ20:1-2, 11-18


ಅಂದು ಭಾನುವಾರ, ಮುಂಜಾನೆ. ಇನ್ನೂ ಕತ್ತಲಾಗಿತ್ತು. ಮಗ್ದಲದ ಮರಿಯಳು ಸಮಾಧಿಯ ಬಳಿಗೆ ಬಂದಳು. ಸಮಾಧಿಯ ಬಾಗಿಲಿಗೆ ಮುಚ್ಚಲಾಗಿದ್ದ ಕಲ್ಲು ಅಲ್ಲಿಂದ ತೆಗೆದುಹಾಕಿರುವುದನ್ನು ಕಂಡಳು. ಆಗ ಆಕೆ ಸಿಮೋನ ಪೇತ್ರನ ಮತ್ತು ಯೇಸುವಿಗೆ ಆಪ್ತನಾಗಿದ್ದ ಇನ್ನೊಬ್ಬ ಶಿಷ್ಯನ ಬಳಿಗೆ ಓಡಿಬಂದು, “ಪ್ರಭುವನ್ನು ಸಮಾಧಿಯೊಳಗಿಂದ ತೆಗೆದುಕೊಂಡು ಹೋಗಿಬಿಟ್ಟಿದ್ದಾರೆ; ಅವರನ್ನು ಎಲ್ಲಿ ಇಟ್ಟಿದ್ದಾರೋ ಗೊತ್ತಿಲ್ಲ,” ಎಂದು ಹೇಳಿದಳು. ಮರಿಯಳು ಅಳುತ್ತಾ ಸಮಾಧಿಯ ಹೊರಗೆ ನಿಂತುಕೊಂಡಿದ್ದಳು. ಆಕೆ ಅಳುತ್ತಾ ಸಮಾಧಿಯೊಳಗೆ ಬಗ್ಗಿನೋಡಿದಾಗ ಶ್ವೇತವಸ್ತ್ರಧಾರಿಗಳಾದ ಇಬ್ಬರು ದೇವದೂತರನ್ನು ಅಲ್ಲಿ ಕಂಡಳು. ಯೇಸುವಿನ ಪಾರ್ಥಿವ ಶರೀರವನ್ನು ಇಟ್ಟಿದ್ದ ಸ್ಥಳದಲ್ಲಿ ಒಬ್ಬನು ಅವರ ತಲೆಯಿದ್ದ ಕಡೆಯಲ್ಲೂ ಮತ್ತೊಬ್ಬನು ಕಾಲಿದ್ದ ಕಡೆಯಲ್ಲೂ ಕುಳಿತಿದ್ದರು.ಅವರು ಆಕೆಯನ್ನು, “ಏಕಮ್ಮಾ ಅಳುತ್ತಿರುವೆ?” ಎಂದು ಕೇಳಿದರು. “ನನ್ನ ಪ್ರಭುವನ್ನು ತೆಗೆದುಕೊಂಡು ಹೋಗಿಬಿಟ್ಟಿದ್ದಾರೆ. ಎಲ್ಲಿ ಇಟ್ಟಿದ್ದಾರೋ ತಿಳಿಯದು,” ಎಂದಳು. ಹಾಗೆ ಹೇಳಿ ಹಿಂದಕ್ಕೆ ತಿರುಗಿದಾಗ ಅಲ್ಲೇ ಯೇಸು ನಿಂತಿರುವುದು ಆಕೆಗೆ ಕಾಣಿಸಿತು. ಆದರೆ ಯೇಸುವೇ ಅವರೆಂದು ಆಕೆಗೆ ತಿಳಿಯಲಿಲ್ಲ. ಯೇಸು, “ಏಕಮ್ಮಾ ಅಳುತ್ತಿರುವೇ? ಏನನ್ನು ಹುಡುಕುತ್ತಿರುವೇ?’ ಎಂದು ಕೇಳಿದಾಗಲೂ ಮರಿಯಳು ಅವರು ತೋಟಗಾರನೆಂದು ಭಾವಿಸಿ, “ಅಯ್ಯಾ, ನೀವೇನಾದರೂ ಅವರನ್ನು ಕೊಂಡೊಯ್ದಿದ್ದರೆ ಎಲ್ಲಿ ಇಟ್ಟಿರುವಿರಿ, ಹೇಳಿ; ನಾನು ತೆಗೆದುಕೊಂಡು ಹೋಗುತ್ತೇನೆ,” ಎಂದು ಹೇಳಿದಳು. ಆಗ ಯೇಸು, “ಮರಿಯಾ” ಎಂದು ಹೆಸರಿಡಿದು ಕರೆದರು. ಆಕೆ ಹಿಂದಿರುಗಿ ನೋಡಿ, “ರಬ್ಬೂನಿ” ಎಂದಳು. (ಯೆಹೂದ್ಯರ ಭಾಷೆಯಲ್ಲಿ ಹಾಗೆಂದರೆ “ಗುರುದೇವಾ” ಎಂದರ್ಥ). ಯೇಸು ಆಕೆಗೆ, “ನನ್ನನ್ನು ಹಿಡಿದುಕೊಂಡಿರಬೇಡ, ನಾನು ಇನ್ನೂ ಪಿತನ ಬಳಿಗೆ ಏರಿಹೋಗಿಲ್ಲ. ನೀನು ನನ್ನ ಸಹೋದರರ ಬಳಿಗೆ ಹೋಗಿ ನನ್ನ ಪಿತನೂ ನಿಮ್ಮ ಪಿತನೂ ನನ್ನ ದೇವರೂ ನಿಮ್ಮ ದೇವರೂ ಆಗಿರುವಾತನಲ್ಲಿಗೆ ನಾನು ಏರಿಹೋಗುತ್ತೇನೆಂದು ತಿಳಿಸು,” ಎಂದು ಹೇಳಿದರು. ಮಗ್ದಲದ ಮರಿಯಳು ಶಿಷ್ಯರ ಬಳಿಗೆ ಬಂದು, “ನಾನು ಪ್ರಭುವನ್ನು ಕಂಡೆ. ಅವರು ಹೀಗೆಲ್ಲಾ ಹೇಳಿದರು,” ಎಂದು ತಿಳಿಸಿದಳು.

21.07.20 -" ನನ್ನ ತಂದೆಯ‍ ಚಿತ್ತವನ್ನು ಯಾರು ನೆರವೇರಿಸುತ್ತಾರೋ ಅವರೇ ನನಗೆ ಸಹೋದರ, ಸಹೋದರಿ ಮತ್ತು ತಾಯಿ,”

ಮೊದಲನೇ ವಾಚನ: ಪ್ರವಾದಿ ಮೀಕನ ಗ್ರಂಥ 7:14-15, 18-20

ಸರ್ವೇಶ್ವರಾ, ನಿಮ್ಮ ಮಂದೆಗೆ ಸೇರಿದ ಜನರನ್ನು ಕುರಿಗಾಹಿಯಂತೆ ಪರಿಪಾಲಿಸಿರಿ. ನಿಮ್ಮ ಸ್ವಾಸ್ತ್ಯವಾಗಿ, ಮಂದೆಯಾಗಿ ಇರುವಂಥ ಜನರು, ಸುತ್ತಮುತ್ತಲು ಫಲವತ್ತಾದ ಹಸಿರು ಭೂಮಿಯಿದ್ದರೂ ಮರಳುಗಾಡಿನಲ್ಲಿ ಪ್ರತ್ಯೇಕವಾಗಿ ಜೀವಿಸುತ್ತಿರುವರು. ಪೂರ್ವಕಾಲದಲ್ಲಿದ್ದಂತೆ, ಈಗ ಅವರು ಬಾಷಾನ್ ಮತ್ತು ಗಿಲ್ಯಾದ್ ನಾಡುಗಳಿಗೆ ತೆರಳಿ ಪೋಷಣೆ ಪಡೆಯಲಿ. ಈಜಿಪ್ಟ್ ದೇಶದಿಂದ ನಮ್ಮನ್ನು ಹೊರತಂದ ದಿನಗಳಲ್ಲಿ ನೀವು ಮಾಡಿದ ಮಹತ್ಕಾರ್ಯಗಳನ್ನು ಮರಳಿ ಮಾಡಿತೋರಿಸಿರಿ. ನಿಮ್ಮಂಥ ದೇವರು ಯಾರಿದ್ದಾರೆ? ತಮ್ಮ ಸ್ವಂತ ಜನರಲ್ಲಿ ಅಳಿದುಳಿದವರ ಅಪರಾಧಗಳನ್ನು ಲೆಕ್ಕಿಸದೆ, ಅವರ ದ್ರೋಹಗಳನ್ನು ಕ್ಷಮಿಸುವಂಥ ದೇವರು ಯಾರಿದ್ದಾರೆ? ನೀವು ನಿತ್ಯಕ್ಕೂ ಕೋಪಿಷ್ಠರಾಗಿರದೆ ಕರುಣೆ ತೋರಿಸುವುದರಲ್ಲೇ ಸಂತುಷ್ಟರಾಗುವಿರಿ. ಮತ್ತೊಮ್ಮೆ ನಮಗೆ ದಯೆತೋರಿ. ನಮ್ಮ ಅಪರಾಧಗಳನ್ನು ಅಳಿಸಿಬಿಡಿ; ಅವನ್ನು ತುಳಿದು ಸಮುದ್ರದ ತಳಕ್ಕೆ ತಳ್ಳಿಬಿಡಿ. ಪುರಾತನ ಕಾಲದಲ್ಲಿ ನಮ್ಮ ಪಿತೃಗಳಿಗೆ ಪ್ರಮಾಣಮಾಡಿದಂತೆ ಯಕೋಬ ವಂಶದವರಿಗೆ ನಂಬಿಕಸ್ಥರಾಗಿರಿ. ಅಬ್ರಹಾಮನ ವಂಶದವರಿಗೆ ಪ್ರೀತಿಪರರಾಗಿರಿ.

ಕೀತನೆ: 85:2-4, 5-6, 7-8

ಶ್ಲೋಕ: ತೋರಿಸೆಮಗೆ ಪ್ರಭೂ ಕರುಣೆಯನು

೧. ಪ್ರಭೂ, ತೋರಿಸಿದೆ ಕರುಣೆ ನಿನ್ನ ನಾಡಿಗೆ |
     ಮರಳಿಸಿದೆ ಸುಕ್ಷೇಮವನು ಯಕೋಬ್ಯರಿಗೆ ||
     ಮನ್ನಿಸಿದೆ ನಿನ್ನ ಪ್ರಜೆಯ ದ್ರೋಹವನು |
     ಕ್ಷಮಿಸಿದೆ ನೀ ಅವರ ಪಾಪಗಳೆಲ್ಲವನು ||
     ತೊರೆದುಬಿಟ್ಟೆ ಸ್ವಾಮೀ, ನಿನ್ನ ರೋಷವನು |
     ಆರಿಸಿಬಿಟ್ಟೆ ನಿನ್ನ ಕೋಪಾಗ್ನಿಯನು ||

೨. ಪುನಶ್ಚೇತನಗೊಳಿಸೆಮ್ಮನು ದೇವಾ ಉದ್ಧಾರಕ |
     ತೊರೆದುಬಿಡು ನಮ್ಮ ಬಗ್ಗೆ ನಿನಗಿರುವ ಸಿಟ್ಟುಸಿಡುಕ ||
     ಸದಾಕಾಲಕೂ ನಮ್ಮ ಮೇಲೆ ಸಿಟ್ಟಾಗಿರುವೆಯಾ |
     ತಲಾತಲಾಂತರಗಳಿಗೂ ಕೋಪವನು ಬೆಳೆಸುವೆಯಾ? ||

೩. ನವಜೀವವನು ತುಂಬಿಸಲಾರೆಯಾ ನಮ್ಮಲಿ? |
     ಆಗ ನಿನ್ನ ಜನರು ಆನಂದಿಸುವರು ನಿನ್ನಲಿ ||
     ತೋರಿಸೆಮಗೆ ಪ್ರಭೂ ಕರುಣೆಯನು |
      ಅನುಗ್ರಹಿಸೆಮಗೆ ರಕ್ಷಣೆಯನು ||


ಶುಭಸಂದೇಶ: ಮತ್ತಾಯ12:46-50


ಯೇಸುಸ್ವಾಮಿ ತಮ್ಮನ್ನು ಸುತ್ತುವರಿದಿದ್ದ ಜನರಿಗೆ ಇನ್ನೂ ಬೋಧನೆ ಮಾಡುತ್ತಿದ್ದರು. ಆಗ ಅವರ ತಾಯಿ ಮತ್ತು ಸಹೋದರರು ಬಂದು ಅವರೊಡನೆ ಮಾತನಾಡಬಯಸಿ ಹೊರಗೆ ನಿಂತಿದ್ದರು. “ನಿಮ್ಮ ತಾಯಿ ಮತ್ತು ಸಹೋದರರು ಹೊರಗೆ ನಿಂತಿದ್ದಾರೆ; ನಿಮ್ಮೊಡನೆ ಮಾತನಾಡಬೇಕೆಂದಿದ್ದಾರೆ,” ಎಂದು ಒಬ್ಬನು ತಿಳಿಸಿದನು. ಅದಕ್ಕೆ ಯೇಸು, “ನನ್ನ ತಾಯಿ ಯಾರು? ನನ್ನ ಸಹೋದರರು ಯಾರು?” ಎನ್ನುತ್ತಾ, ತಮ್ಮ ಶಿಷ್ಯರ ಕಡೆಗೆ ಕೈತೋರಿಸಿ, ಇಗೋ ನೋಡು, ನನ್ನ ತಾಯಿ; ನನ್ನ ಸಹೋದರರು; ಸ್ವರ್ಗದಲ್ಲಿರುವ ನನ್ನ ತಂದೆಯ‍ ಚಿತ್ತವನ್ನು ಯಾರು ನೆರವೇರಿಸುತ್ತಾರೋ ಅವರೇ ನನಗೆ ಸಹೋದರ, ಸಹೋದರಿ ಮತ್ತು ತಾಯಿ,” ಎಂದರು.

20.07.2020 - "ಆದರೆ ಸೊಲೊಮೋನನಿಗಿಂತಲೂ ಮೇಲಾದವನು ಇಗೋ, ಇಲ್ಲಿದ್ದಾನೆ."

ಮೊದಲನೇ ವಾಚನ: ಮೀಕ 6:1-4, 6-8

ಸರ್ವೇಶ್ವರ ಹೇಳುವುದನ್ನು ಕೇಳಿರಿ: “ಎದ್ದೇಳು; ಬೆಟ್ಟಗಳ ಸಮ್ಮುಖದಲ್ಲಿ ನಿನ್ನ ವ್ಯಾಜ್ಯ ನಡೆಯಲಿ; ನಿನ್ನ ಧ್ವನಿ ಗುಡ್ಡಗಳಿಗೆ ಕೇಳಿಸಲಿ. “ಬೆಟ್ಟಗಳೇ, ಸರ್ವೇಶ್ವರಸ್ವಾಮಿಯ ಆಪಾದನೆಯನ್ನು ಕೇಳಿರಿ. ಭೂಮಿಯ ಸ್ಥಿರವಾದ ಅಸ್ತಿಭಾರಗಳೇ, ಕಿವಿಗೊಡಿ. ಆ ಸ್ವಾಮಿಗೆ ತನ್ನ ಪ್ರಜೆಯ ಮೇಲೆ ವ್ಯಾಜ್ಯವಿದೆ; ಅವರು ಇಸ್ರಯೇಲಿನ ವಿರುದ್ಧ ವಾದಿಸುವುದನ್ನು ಗಮನಿಸಿರಿ.” ಸರ್ವೇಶ್ವರ ಇಂತೆನ್ನುತ್ತಾರೆ: “ನನ್ನ ಪ್ರಜೆಯೇ, ನಾನು ನಿನಗೇನು ಮಾಡಿದೆ? ಯಾವ ವಿಷಯದಲ್ಲಿ ನಿನಗೆ ಬೇಸರವನ್ನುಂಟುಮಾಡಿದೆ? ಪ್ರಮಾಣವಾಗಿ ಹೇಳು. ಈಜಿಪ್ಟ್ ದೇಶದಿಂದ ನಾನು ನಿನ್ನನ್ನು ಕರೆತಂದೆ; ದಾಸತ್ವದ ಬಂಧನದಿಂದ ನಿನ್ನನ್ನು ಬಿಡುಗಡೆ ಮಾಡಿದೆ. ನಿನಗೆ ಮೋಶೆ, ಆರೋನ್ ಮತ್ತು ಮಿರ್ಯಾಮಳನ್ನು ನಾಯಕರನ್ನಾಗಿ ಕಳುಹಿಸಿದೆ. ನಾನು ಸರ್ವೇಶ್ವರಸ್ವಾಮಿಯ ಸನ್ನಿಧಿಗೆ ಯಾವ ಕಾಣಿಕೆಯೊಂದಿಗೆ ಹೋಗಲಿ? ಮಹೋನ್ನತ ದೇವರಿಗೆ ಹೇಗೆ ಅಡ್ಡಬೀಳಲಿ? ಹೋಮಕ್ಕಾಗಿ, ಒಂದು ವರ್ಷದ ಎಳೆಕರುಗಳನ್ನು ತೆಗೆದುಕೊಂಡುಹೋಗಲೇ? ಸಾವಿರಾರು ಟಗರುಗಳನ್ನೂ ಧಾರಾಕಾರವಾಗಿ ಹರಿಯುವ ತೈಲಪ್ರವಾಹಗಳನ್ನು ನೋಡಿ ಸರ್ವೇಶ್ವರ ಮೆಚ್ಚುವುದುಂಟೆ? ನಾನು ಮಾಡಿದ ದ್ರೋಹಕ್ಕಾಗಿ ನನ್ನ ಚೊಚ್ಚಲುಮಗನನ್ನೇ ಅರ್ಪಿಸಲೇ? ನನ್ನ ಪಾಪಕ್ಕಾಗಿ ನನ್ನ ಕರುಳ ಕುಡಿಯನ್ನೇ ಬಲಿಕೊಡಲೇ? ಇಲ್ಲ ಮನುಜಾ, ನಿನಗೆ ಯಾವುದು ಒಳಿತೆಂದು ಸರ್ವೇಶ್ವರ ಈಗಾಗಲೇ ಸ್ಪಷ್ಟಪಡಿಸಿದ್ದಾರೆ: ನ್ಯಾಯನೀತಿಯ ನಡವಳಿಕೆ, ಕರುಣೆಯಲ್ಲಿ ಅಚಲ ಆಸಕ್ತಿ, ದೇವರ ಮುಂದೆ ನಮ್ರತೆ, ಇಷ್ಟನ್ನೇ ಆ ಸ್ವಾಮಿ ನಿನ್ನಿಂದ ಅಪೇಕ್ಷಿಸುವುದು.

ಕೀರ್ತನೆ: 50:5-6, 8-9, 16-17, 21, 23

ಶ್ಲೋಕ: ಸನ್ಮಾರ್ಗಿಗೆ ತೋರುವೆ ಪರಮ ಜೀವೋದ್ದಾರವನು

ಶುಭಸಂದೇಶ: ಮತ್ತಾಯ12:38-42


ಕೆಲವು ಮಂದಿ ಧರ್ಮಶಾಸ್ತ್ರಿಗಳೂ ಫರಿಸಾಯರೂ ಯೇಸುಸ್ವಾಮಿಯನ್ನು ಉದ್ದೇಶಿಸಿ, “ಬೋಧಕರೇ, ನೀವು ಒಂದು ಸೂಚಕಕಾರ್ಯ ಮಾಡುವುದನ್ನು ನೋಡಬೇಕೆಂದಿದ್ದೇವೆ,” ಎಂದರು. ಅದಕ್ಕೆ ಪ್ರತ್ಯುತ್ತರವಾಗಿ ಯೇಸು ಇಂತೆಂದರು: “ಈ ಕೆಟ್ಟ ಹಾಗೂ ದೈವಭ್ರಷ್ಟ ಪೀಳಿಗೆ ಸೂಚಕಕಾರ್ಯವನ್ನು ಸಂಕೇತವಾಗಿ ಕೋರುತ್ತದೆ. ಪ್ರವಾದಿ ಯೋನನ ಸಂಕೇತವೇ ಹೊರತು ಬೇರೆ ಯಾವ ಸಂಕೇತವೂ ಇದಕ್ಕೆ ದೊರಕದು. ಯೋನನು ಮೂರುದಿನ ಹಗಲು ರಾತ್ರಿ ದೊಡ್ಡ ಮೀನಿನ ಉದರದಲ್ಲಿದ್ದನು. ಅದರಂತೆಯೇ ನರಪುತ್ರನು ಮೂರುದಿನ ಹಗಲು ರಾತ್ರಿ ಭೂಗರ್ಭದಲ್ಲಿರುವನು. ತೀರ್ಪಿನ ದಿನ ನಿನೆವೆ ನಗರದವರು ಈ ಪೀಳಿಗೆಗೆ ಎದುರಾಗಿ ನಿಂತು ಇದನ್ನು ಅಪರಾಧಿಯೆಂದು ಖಂಡಿಸುವರು. ಏಕೆಂದರೆ, ಪ್ರವಾದಿ ಯೋನನ ಬೋಧನೆಯನ್ನು ಕೇಳಿ ಅವರು ಪಾಪಕ್ಕೆ ವಿಮುಖರಾದರು. ಆದರೆ ಪ್ರವಾದಿ ಯೋನನಿಗಿಂತಲೂ ಮೇಲಾದವನು ಇಗೋ, ಇಲ್ಲಿದ್ದಾನೆ.ಅದೇ ತೀರ್ಪಿನ ದಿನ ದಕ್ಷಿಣ ದೇಶದ ರಾಣಿ ಈ ಪೀಳಿಗೆಗೆ ಎದುರಾಗಿ ನಿಂತು ಇದನ್ನು ಅಪರಾಧಿಯೆಂದು ಖಂಡಿಸುವಳು. ಆಕೆ ಸೊಲೊಮೋನನ ಜ್ಞಾನೋಕ್ತಿಗಳನ್ನು ಕೇಳುವುದಕ್ಕಾಗಿ ದೂರ ದೇಶದಿಂದ ಬಂದಳು. ಆದರೆ ಸೊಲೊಮೋನನಿಗಿಂತಲೂ ಮೇಲಾದವನು ಇಗೋ, ಇಲ್ಲಿದ್ದಾನೆ."

19.07.20 - “ಸಾಮತಿಗಳಲ್ಲೇ ಬೋಧಿಸುವೆನು; ಲೋಕಾದಿಯಿಂದ ರಹಸ್ಯವಾದವುಗಳನ್ನು ಬಯಲುಗೊಳಿಸುವೆನು”

ಮೊದಲನೇ ವಾಚನ: ಸುಜ್ಞಾನಗ್ರಂಥ 12:13, 16-19

ಸರ್ವಜನರ ಸುಖ ಕೋರುವ ದೇವರು ನೀವಲ್ಲದೆ ಇನ್ನಾರೂ ಇಲ್ಲ. ನೀವು ವಿಧಿಸಿದ ದಂಡನೆ ಅನ್ಯಾಯವಲ್ಲ ಎಂದು ನೀವು ತೋರಿಸಬೇಕಾಗಿಲ್ಲ. ನಿಮ್ಮ ಶಕ್ತಿಯೇ ನ್ಯಾಯನೀತಿಗೆ ಆಧಾರ ನಿಮ್ಮ ಸಾರ್ವಭೌಮತ್ವವೇ ಎಲ್ಲ ಸಹನೆಗೆ ಮೂಲ ಕಾರಣ. ನೀವು ಸರ್ವಶಕ್ತರೆಂದು ಜನರು ನಂಬದಿರುವಾಗ ನೀವು ಶಕ್ತಿಯನ್ನು ತೋರಿಸುತ್ತೀರಿ; ಅದನು ಬಲ್ಲವರೊಂದಿಗೆ ವರ್ತಿಸುವಾಗ ಅವರ ಉದ್ಧಟತನವನ್ನು ಖಂಡಿಸುತ್ತೀರಿ. ಶಕ್ತಿಯಲ್ಲಿ ನೀವೇ ಸಾರ್ವಭೌಮ ಎಂದೇ, ತೀರ್ಪಿಡುತ್ತೀರಿ ಸಾಮ್ಯತೆಯಿಂದ ನಮ್ಮನ್ನಾಳುತ್ತೀರಿ ಬಹು ತಾಳ್ಮೆಯಿಂದ ನಿಮ್ಮ ಶಕ್ತಿ ನಿಮ್ಮಲ್ಲಿದೆ ಇಚ್ಛಿಸಿದಾಗಲೆಲ್ಲ ಇಂಥ ಕಾರ್ಯಗಳಿಂದ ಸಜ್ಜನನು ಜನಪ್ರಿಯ ನಾಗಿರಲು ಕಲಿಸಿಕೊಟ್ಟಿರುವಿರಿ ಪಾಪಗಳಿಗೆ ಪಶ್ಚಾತ್ತಾಪದ ಅವಕಾಶವಿತ್ತು ನಿಮ್ಮ ಮಕ್ಕಳನು ಭರವಸೆಯುಳ್ಳವರಾಗಿಸಿದಿರಿ.

ಕೀರ್ತನೆ: 86:5-6, 9-10, 15-16

ಶ್ಲೋಕ: ಪ್ರಭೂ, ನೀನು ದಯಾವಂತನು ಕ್ಷಮಿಸುವವನು

ಎರಡನೇ ವಾಚನ: ರೋಮನರಿಗೆ 8:26-2

ಸಹೋದರರೇ, ಪವಿತ್ರಾತ್ಮರು ಸಹ ನಮ್ಮ ದೌರ್ಬಲ್ಯದಲ್ಲಿ ನೆರವು ನೀಡುತ್ತಾರೆ. ಹೇಗೆ ಪ್ರಾರ್ಥಿಸಬೇಕು, ಯಾವುದಕ್ಕಾಗಿ ಪ್ರಾರ್ಥಿಸಬೇಕು ಎಂಬುದನ್ನು ನಾವು ತಿಳಿಯದವರು. ಪವಿತ್ರಾತ್ಮರೇ ಮಾತಿಗೆಟುಕದ ರೀತಿಯಲ್ಲಿ ಆತ್ಮಧ್ವನಿಯಿಂದ ನಮ್ಮ ಪರವಾಗಿ ದೇವರಲ್ಲಿ ವಿಜ್ಞಾಪಿಸುತ್ತಾರೆ. ಅಂತರಂಗಗಳನ್ನು ಈಕ್ಷಿಸುವ ದೇವರು ಪವಿತ್ರಾತ್ಮರ ಇಂಗಿತವೇನೆಂದು ಬಲ್ಲರು. ಏಕೆಂದರೆ, ದೇವರ ಚಿತ್ತದ ಪ್ರಕಾರವೇ ಪವಿತ್ರಾತ್ಮರು ದೇವಜನರಿಗಾಗಿ ಬಿನ್ನವಿಸುತ್ತಾರೆ.




ಶುಭಸಂದೇಶ: ಮತ್ತಾಯ13:24-43


ಯೇಸುಸ್ವಾಮಿ ಜನರಿಗೆ ಈ ಸಾಮತಿಯನ್ನು ಹೇಳಿದರು: “ಸ್ವರ್ಗಸಾಮ್ರಾಜ್ಯವು ತನ್ನ ಹೊಲದಲ್ಲಿ ಒಳ್ಳೆಯ ಗೋದಿಯನ್ನು ಬಿತ್ತಿದ ರೈತನನ್ನು ಹೋಲುತ್ತದೆ. ಒಂದು ರಾತ್ರಿ ಎಲ್ಲರೂ ನಿದ್ರಿಸುತ್ತಿರುವಾಗ, ಅವನ ವೈರಿ ಬಂದು, ಗೋದಿಯ ನಡುವೆ ಕಳೆಗಳನ್ನು ಬಿತ್ತಿ ಹೋದ. ಗೋದಿ ಬೆಳೆದು ತೆನೆಬಿಟ್ಟಾಗ ಕಳೆ ಬೆಳೆದಿರುವುದೂ ಗೋಚರವಾಯಿತು. ಆಗ ಆಳುಗಳು ತಮ್ಮ ಯಜಮಾನನ ಬಳಿಗೆ ಬಂದು, ‘ಸ್ವಾಮೀ, ನಿಮ್ಮ ಹೊಲದಲ್ಲಿ ಬಿತ್ತಿದ್ದು ಉತ್ತಮವಾದ ಗೋದಿ ಅಲ್ಲವೆ? ಜೊತೆಗೆ ಕಳೆಯೂ ಕಾಣಿಸಿಕೊಂಡಿದೆಯಲ್ಲಾ. ಅದೆಲ್ಲಿಂದ ಬಂತು?’ ಎಂದರು. ಯಜಮಾನ, ‘ಇದು ನನ್ನ ವೈರಿ ಮಾಡಿರುವ ಕೆಲಸ,’ ಎಂದ. ‘ಹಾಗಾದರೆ, ಕಳೆಯನ್ನು ಕಿತ್ತುಹಾಕೋಣವೇ’ ಎಂದರು ಆಳುಗಳು. ಅದಕ್ಕೆ ಯಜಮಾನ, ‘ಬೇಡ, ಬೇಡ; ಕಳೆಯನ್ನು ಕೀಳುವಾಗ, ಗೋದಿಯನ್ನೂ ಕಿತ್ತುಬಿಟ್ಟೀರಿ. 30ಸುಗ್ಗಿಯವರೆಗೆ ಎರಡೂ ಒಟ್ಟಿಗೆ ಬೆಳೆಯಲಿ; ಸುಗ್ಗಿಯ ಕಾಲದಲ್ಲಿ ಮೊದಲು ಕಳೆ ಕಿತ್ತು, ಸುಟ್ಟುಹಾಕಲು ಕಟ್ಟಿಡಿ; ಬಳಿಕ ಗೋದಿಯನ್ನು ಒಕ್ಕಣೆಮಾಡಿ ನನ್ನ ಕಣಜಕ್ಕೆ ತುಂಬಿರಿ, ಎಂದು ಕೊಯ್ಲುಗಾರರಿಗೆ ಹೇಳುತ್ತೇನೆ,’ ಎಂದ.” ಯೇಸುಸ್ವಾಮಿ ಇನ್ನೊಂದು ಸಾಮತಿಯನ್ನು ಹೇಳಿದರು: “ಸ್ವರ್ಗಸಾಮ್ರಾಜ್ಯ ಒಂದು ಸಾಸಿವೆ ಕಾಳನ್ನು ಹೋಲುತ್ತದೆ; ಈ ಕಾಳನ್ನು ತೆಗೆದುಕೊಂಡು ಹೋಗಿ ರೈತ ತನ್ನ ಹೊಲದಲ್ಲಿ ಬಿತ್ತಿದ.ಕಾಳುಗಳಲ್ಲಿ ಅತಿ ಸಣ್ಣದಾದ ಇದನ್ನು ಬಿತ್ತಿದಾಗ ಎಲ್ಲ ಸಸ್ಯಗಳಿಗಿಂತಲೂ ದೊಡ್ಡದಾಗಿ ಬೆಳೆದು ಮರವಾಗುತ್ತದೆ. ಆಕಾಶದಲ್ಲಿ ಹಾರಾಡುವ ಹಕ್ಕಿಗಳು ಬಂದು ಇದರ ರೆಂಬೆಗಳಲ್ಲಿ ಗೂಡು ಕಟ್ಟಿ ವಾಸಿಸುತ್ತವೆ.” ಯೇಸುಸ್ವಾಮಿ ಮತ್ತೊಂದು ಸಾಮತಿಯನ್ನು ಜನರಿಗೆ ಹೇಳಿದರು: “ಸ್ವರ್ಗಸಾಮ್ರಾಜ್ಯ ಹುದುಗೆಬ್ಬಿಸುವ ಹುಳಿಯನ್ನು ಹೋಲುತ್ತದೆ. ಅದನ್ನು ಒಬ್ಬಾಕೆ ತೆಗೆದುಕೊಂಡು ಮೂರು ಸೇರು ಹಿಟ್ಟಿನಲ್ಲಿ ಕಲಸಿದಳು. ಆ ಹಿಟ್ಟೆಲ್ಲಾ ಹುಳಿಯಾಯಿತು.” ಇದೆಲ್ಲವನ್ನೂ ಯೇಸುಸ್ವಾಮಿ ಜನರಿಗೆ ಸಾಮತಿಗಳ ರೂಪದಲ್ಲಿ ಹೇಳಿದರು. ಸಾಮತಿಗಳಿಲ್ಲದೆ ಅವರಿಗೆ ಏನನ್ನೂ ಬೋಧಿಸಲಿಲ್ಲ. “ಸಾಮತಿಗಳಲ್ಲೇ ಬೋಧಿಸುವೆನು; ಲೋಕಾದಿಯಿಂದ ರಹಸ್ಯವಾದವುಗಳನ್ನು ಬಯಲುಗೊಳಿಸುವೆನು” ಎಂದು ದೇವರು ಪ್ರವಾದಿಯ ಮುಖಾಂತರ ತಿಳಿಸಿದ್ದ ಪ್ರವಚನವನ್ನು ಯೇಸು ಹೀಗೆ ನೆರವೇರಿಸಿದರು. ಯೇಸುಸ್ವಾಮಿ ಜನರನ್ನು ಬೀಳ್ಕೊಟ್ಟು ಮನೆಗೆ ಬಂದರು. ಶಿಷ್ಯರು ಅವರ ಬಳಿಗೆ ಬಂದು, “ಹೊಲದಲ್ಲಿ ಬಿತ್ತಲಾದ ಕಳೆಗಳ ಸಾಮತಿಯನ್ನು ನಮಗೆ ವಿವರಿಸಿರಿ,” ಎಂದು ಕೇಳಿಕೊಂಡರು. ಅದಕ್ಕೆ ಯೇಸು, “ಒಳ್ಳೆಯ ಗೋದಿಯನ್ನು ಬಿತ್ತುವವನು ಎಂದರೆ ನರಪುತ್ರನು; ಹೊಲವೇ ಈ ಲೋಕ; ಒಳ್ಳೆಯ ಕಾಳುಗಳೇ ಶ್ರೀಸಾಮ್ರಾಜ್ಯದ ಮಕ್ಕಳು; ಕಳೆಗಳೇ ಕೇಡಿಗನ ಮಕ್ಕಳು. ಆ ಕಳೆಗಳನ್ನು ಬಿತ್ತಿದ ವೈರಿಯೇ ಪಿಶಾಚಿ. ಸುಗ್ಗಿಯೇ ಕಾಲಾಂತ್ಯ. ಕೊಯ್ಲುಗಾರರೇ ದೇವದೂತರು. ಕಳೆಗಳನ್ನು ಕಿತ್ತು ಬೆಂಕಿಯಲ್ಲಿ ಸುಟ್ಟುಹಾಕಿದಂತೆ ಕಾಲಾಂತ್ಯದಲ್ಲೂ ನಡೆಯುವುದು. ನರಪುತ್ರನು ತನ್ನ ದೂತರನ್ನು ಕಳುಹಿಸುವನು. ಅವರು ಆತನ ರಾಜ್ಯದಿಂದ ಪಾಪಕ್ಕೆ ಕಾರಣವಾದುದೆಲ್ಲವನ್ನೂ ಮತ್ತು ದುಷ್ಕರ್ಮಿಗಳೆಲ್ಲರನ್ನೂ ಒಟ್ಟುಗೂಡಿಸಿ ಅಗ್ನಿಕುಂಡದಲ್ಲಿ ಹಾಕುವರು; ಅಲ್ಲಿ ಅವರು ಕಟಕಟನೆ ಹಲ್ಲುಕಡಿದುಕೊಂಡು ಗೋಳಾಡುವರು. ಸದ್ದರ್ಮಿಗಳು ತಮ್ಮ ತಂದೆಯ ಸಾಮ್ರಾಜ್ಯದಲ್ಲಿ ಸೂರ್ಯನಂತೆ ಪ್ರಕಾಶಿಸುವರು. ಕಿವಿಯುಳ್ಳವನು ಕೇಳಿಸಿಕೊಳ್ಳಲಿ!" ಎಂದರು.

18.07.20 - "“ಇದಿಗೋ, ನನ್ನ ದಾಸನು, ನನ್ನಿಂದಾಯ್ಕೆಯಾದವನು, ನನಗೆ ಪರಮಪ್ರಿಯನು"

ಮೊದಲನೇ ವಾಚನ: ಪ್ರವಾದಿ ಮೀಕನ ಗ್ರಂಥ 2:1-5 

ತಮ್ಮ ಹಾಸಿಗೆಯಲ್ಲೇ ಕುತಂತ್ರವನ್ನು ಕಲ್ಪಿಸಿಕೊಂಡು ಕೇಡನ್ನು ಬಗೆಯುವವರಿಗೆ ಧಿಕ್ಕಾರ! ಬೆಳಗಾದದ್ದೇ ಅವರು ಕುತಂತ್ರವನ್ನು ಕಾರ್ಯಗತ ಮಾಡುತ್ತಾರೆ. ಆ ಸಾಮರ್ಥ್ಯ ಅವರ ಕೈಯಲ್ಲಿದೆ. ಇತರರ ಹೊಲಗದ್ದೆಗಳನ್ನು ದುರಾಸೆಯಿಂದ ಆಕ್ರಮಿಸಿಕೊಳ್ಳುತ್ತಾರೆ. ಅಂತೆಯೇ ಮನೆಗಳನ್ನು ಅಪಹರಿಸುತ್ತಾರೆ. ಈ ರೀತಿಯಲ್ಲಿ ಮನೆಯನ್ನೂ ಮಾಲೀಕನನ್ನೂ ಸ್ವತ್ತನ್ನೂ ಹಕ್ಕುದಾರನನ್ನೂ ತುಳಿದುಬಿಡುತ್ತಾರೆ. ಆದುದರಿಂದ ಸರ್ವೇಶ್ವರ ಇಂತೆನ್ನುತ್ತಾರೆ: “ಈ ಪೀಳಿಗೆಯ ಮೇಲೆ ನಾನೇ ವಿನಾಶವನ್ನು ಬರಮಾಡುತ್ತೇನೆ. ಆ ಕೇಡಿನಿಂದ ನೀವು ತಲೆತಪ್ಪಿಸಿಕೊಳ್ಳಲಾರಿರಿ. ತಲೆಯೆತ್ತಿ ನಡೆಯಲು ನಿಮಗೆ ಸಾಧ್ಯವಾಗದು. ಕಾಲವು ಅಷ್ಟು ಹದಗೆಟ್ಟಿರುವುದು. ಆ ದಿನದಲ್ಲಿ ಜನರು ನಿಮ್ಮ ಬಗ್ಗೆ ಪರಿಹಾಸ್ಯಮಾಡಿ, ಲಾವಣಿ ಕಟ್ಟುವರು. “ಅಯ್ಯೋ, ಸಂಪೂರ್ಣವಾಗಿ ಸೂರೆಹೋದೆವಲ್ಲಾ. ಸ್ವಾಮಿ ನಮ್ಮ ಜನರ ಸ್ವತ್ತನ್ನು ಪರಾಧೀನ ಮಾಡಿಬಿಟ್ಟಿರಲ್ಲಾ. ಅಕಟಾ, ನಮ್ಮ ಹೊಲಗದ್ದೆಗಳನ್ನು ಕಸಿದುಕೊಂಡು ದೇವದ್ರೋಹಿಗಳಿಗೆ ಹಂಚಿಕೊಟ್ಟರಲ್ಲಾ!” ಎಂದು ರೋದಿಸುವರು. ಹೀಗಿರಲು ನೂಲೆಳೆದು ಭೂಮಿಯನ್ನು ಹಂಚಿಕೊಡಲು ಸ್ವಾಮಿಯ ಸಭೆಯಲ್ಲಿ ಯಾರೂ ಇರುವುದಿಲ್ಲ

ಕೀರ್ತನೆ: 10:1-2, 3-4, 7-8, 14

ಶ್ಲೋಕ: ಪ್ರಭೂ, ದಲಿತನನು ಮರೆದಿರಯ್ಯಾ

ಶುಭಸಂದೇಶ: ಮತ್ತಾಯ 12:14-21


ಫರಿಸಾಯರಾದರೋ ಅಲ್ಲಿಂದ ಹೊರಗೆ ಹೋಗಿ ಯೇಸುವನ್ನು ಕೊಲೆಮಾಡಲು ಒಳಸಂಚು ಹೂಡಿದರು. ತಮಗೆ ವಿರುದ್ಧ ಒಳಸಂಚು ನಡೆಯುತ್ತಿದೆ ಎಂದು ಯೇಸುಸ್ವಾಮಿ ಅರಿತುಕೊಂಡು ಅಲ್ಲಿಂದ ಹೊರಟುಹೋದರು. ಅನೇಕ ಜನರು ಅವರ ಹಿಂದೆಯೇ ಹೋದರು. ಯೇಸು ಅಸ್ವಸ್ಥರಾಗಿದ್ದ ಎಲ್ಲರನ್ನು ಗುಣಪಡಿಸಿದರು ಮತ್ತು ತಮ್ಮ ವಿಷಯವನ್ನು ಯಾರಿಗೂ ತಿಳಿಸಬಾರದೆಂದು ಆಜ್ಞೆಮಾಡಿದರು. ಹೀಗೆ ದೇವರು ಪ್ರವಾದಿ ಯೆಶಾಯನ ಮುಖಾಂತರ ಹೇಳಿದ ಈ ವಚನ ನೆರವೇರಿತು: “ಇದಿಗೋ, ನನ್ನ ದಾಸನು, ನನ್ನಿಂದಾಯ್ಕೆಯಾದವನು, ನನಗೆ ಪರಮಪ್ರಿಯನು, ನನ್ನ ಅಪಾರ ಮೆಚ್ಚುಗೆಗೆ ಪಾತ್ರನು. ನೆಲೆಗೊಳಿಸುವೆ ಇವನಲಿ ಎನ್ನಾತ್ಮವನು; ಸಾರುವನಿವನು ಜಗದಲಿ ನನ್ನ ಧರ್ಮವನು. ವಾದಿಸುವವನಲ್ಲ, ದನಿಯೆತ್ತಿ ಕೂಗುವವನಲ್ಲ, ಹಾದಿ ಬೀದಿಯಲ್ಲಿವನ ಕಂಠ ಮೊರೆಯುವುದಿಲ್ಲ. ಮುರಿದ ಜೊಂಡಿನಂತಹ ದುರ್ಬಲರಿಗೀತ  ದೀನಬಂಧು ನಂದಿಹೋಗುತಿಹ ದೀನದಲಿತರಿಗೆ ಕೃಪಾಸಿಂಧು ನ್ಯಾಯನೀತಿಗೆ ಜಯ ದೊರಕಿಸದೆ ಬಿಡನಿವನು. ನೆಮ್ಮುವರು ಅನ್ಯಜನರೆಲ್ಲರು ಇವನ ನಾಮವನು.”

¤£ÉÆ߮ĪÉÄ


17.07.20 - "ದೇವಾಲಯಕ್ಕಿಂತಲೂ ಶ್ರೇಷ್ಠವಾದವನು ಇಲ್ಲಿದ್ದಾನೆಂಬುದು ನಿಮಗೆ ತಿಳಿದಿರಲಿ"

ಪ್ರವಾದಿ ಯೆಶಾಯನ ಗ್ರಂಥ 38:1-6, 21-22, 7-8


ಹಿಜ್ಕೀಯನು ರೋಗದಿಂದ ಮರಣಾವಸ್ಥೆಯಲ್ಲಿದ್ದನು. ಆಗ ಆಮೋಚನ ಮಗನೂ ಪ್ರವಾದಿಯೂ ಆದ ಯೆಶಾಯನು ಅವನ ಬಳಿಗೆ ಬಂದು, “ನೀನು ಉಳಿಯುವ ಹಾಗಿಲ್ಲ, ಸಾಯಬೇಕಾಗಿದೆ. ಆದುದರಿಂದ ನಿನ್ನ ಸಂಸಾರವನ್ನು ವ್ಯವಸ್ಥೆ ಮಾಡಬೇಕು ಎಂದು ಸರ್ವೇಶ್ವರ ಹೇಳಿದ್ದಾರೆ,” ಎಂದು ತಿಳಿಸಿದನು. ಇದನ್ನು ಕೇಳಿದೊಡನೆ ಹಿಜ್ಕೀಯನು ಗೋಡೆಯ ಕಡೆಗೆ ತಿರುಗಿಕೊಂಡು, “ಸರ್ವೇಶ್ವರಾ, ನಿಮಗೆ ಶ್ರದ್ಧೆಯಿಂದಲೂ, ಪ್ರಾಮಾಣಿಕತೆಯಿಂದಲೂ ಸೇವೆ ಮಾಡಿದ್ದೇನೆ. ನಿಮ್ಮ ದೃಷ್ಟಿಯಲ್ಲಿ ಒಳ್ಳೆಯವನಾಗಿಯೇ ನಡೆದುಕೊಂಡಿದ್ದೇನೆ. ಇದನ್ನು ದಯೆಯಿಂದ ನೆನಪಿಗೆ ತಂದುಕೊಳ್ಳಿ,” ಎಂದು ಬಹಳವಾಗಿ ಕಣ್ಣೀರಿಡುತ್ತಾ ಪ್ರಾರ್ಥನೆ ಮಾಡಿದನು. ಆಗ ಸರ್ವೇಶ್ವರ ಯೆಶಾಯನಿಗೆ, “ನೀನು ಹೋಗಿ ಹಿಜ್ಕೀಯನಿಗೆ ಹೀಗೆಂದು ತಿಳಿಸು: ‘ನಾನು ನಿನ್ನ ಪ್ರಾರ್ಥನೆಯನ್ನು ಕೇಳಿದ್ದೇನೆ, ನಿನ್ನ ಕಣ್ಣೀರನ್ನು ನೋಡಿದ್ದೇನೆ; ಇಗೋ, ನಿನ್ನ ಆಯುಷ್ಯಕ್ಕೆ ಇನ್ನೂ ಹದಿನೈದು ವರ್ಷಗಳನ್ನು ಸೇರಿಸುತ್ತೇನೆ. ನಿನ್ನನ್ನು ಮತ್ತು ಈ ಪಟ್ಟಣವನ್ನು ಅಸ್ಸೀರಿಯದ ಅರಸನ ಕೈಗೆ ಸಿಕ್ಕದಂತೆ ತಪ್ಪಿಸುತ್ತೇನೆ. ಈ ಪಟ್ಟಣವನ್ನು ಉಳಿಸಿ ಕಾಪಾಡುತ್ತೇನೆ’.” ಯೆಶಾಯನು ಹಿಜ್ಕೀಯನಿಗೆ, ಅಂಜೂರದ ಹಣ್ಣುಗಳ ಅಡೆಯನ್ನು ತರಿಸಿ, ‘ನಿನ್ನ ಕರುವಿನ ಮೇಲೆ ಕಟ್ಟು, ಆಗ ನೀನು ಗುಣ ಹೊಂದುವೆ,” ಎಂದು ಹೇಳಲು ಹಿಜ್ಕೀಯನು, “ನಾನು ಗುಣಹೊಂದಿ ಸರ್ವೇಶ್ವರಸ್ವಾಮಿಯ ಆಲಯವನ್ನು ಸೇರುವೆನು ಎಂಬುದಕ್ಕೆ ಗುರುತೇನು?” ಎಂದು ಕೇಳಿದನು. ಅದಕ್ಕೆ ಯೆಶಾಯನು, “ಸರ್ವೇಶ್ವರ ನುಡಿದದ್ದನ್ನು ನೆರವೇರಿಸುವರು ಎಂಬುದಕ್ಕೆ ಈ ಗುರುತನ್ನು ಕಾಣುವೆ: ಇಗೋ, ಅಹಾಜನು ಕಟ್ಟಿಸಿದ ನೆರಳುಗಡಿಯಾರದಲ್ಲಿ ಸೂರ್ಯನ ನೆರಳು ಹತ್ತು ಮೆಟ್ಟಲು ಹಿಂದಕ್ಕೆ ಬರುವಂತೆ ಮಾಡುವರು,” ಎಂದು ತಿಳಿಸಿದನು. ಅಂತೆಯೇ ಮುಂದೆ ಹೋಗಿದ್ದ ನೆರಳು ಹತ್ತು ಮೆಟ್ಟಲು ಹಿಂದಕ್ಕೆ ಬಂದಿತು. 

ಕೀರ್ತನೆ: 38:10, 11, 12, 16

ಶ್ಲೋಕ: ನನ್ನಾತ್ಮವನು ನಾಶಕೂಪದಿಂದ ರಕ್ಷಿಸಿದ್ದು ನಿನ್ನ ಪ್ರೀತಿಯೇ

ಶುಭಸಂದೇಶ: ಮತ್ತಾಯ 12:1-8


ಒಂದು ಸಬ್ಬತ್ ದಿನ ಯೇಸುಸ್ವಾಮಿ ಗೋದಿಯ ಹೊಲಗಳನ್ನು ಹಾದುಹೋಗುತ್ತಿದ್ದರು. ಅವರ ಸಂಗಡವಿದ್ದ ಶಿಷ್ಯರಿಗೆ ಹಸಿವಾಯಿತು. ಅವರು ಗೋದಿಯ ತೆನೆಗಳನ್ನು ಕಿತ್ತು ತಿನ್ನಲಾರಂಭಿಸಿದರು.ಇದನ್ನು ಕಂಡ ಫರಿಸಾಯರು, “ನೋಡು, ನೋಡು, ನಿನ್ನ ಶಿಷ್ಯರು ಸಬ್ಬತ್ ದಿನದಲ್ಲಿ ನಿಷಿದ್ಧವಾದುದನ್ನು ಮಾಡುತ್ತಿದ್ದಾರೆ,” ಎಂದರು. ಅದಕ್ಕೆ ಯೇಸು, “ಹಿಂದೆ ಅರಸ ದಾವೀದನು ಮತ್ತು ಅವನ ಸಂಗಡಿಗರು ಹಸಿದಿದ್ದಾಗ ಏನು ಮಾಡಿದರೆಂದು ನೀವು ಓದಿರಬೇಕಲ್ಲವೆ? ಅವನು ದೇವಮಂದಿರದೊಳಕ್ಕೆ ಹೋಗಿ ಯಾಜಕರ ಹೊರತು ತಾನೇ ಆಗಲಿ, ಸಂಗಡಿಗರೇ ಆಗಲಿ, ತಿನ್ನಬಾರದಾಗಿದ್ದ ನೈವೇದ್ಯದ ರೊಟ್ಟಿಗಳನ್ನೇ ತಿನ್ನಲಿಲ್ಲವೆ? ಇದಲ್ಲದೆ, ಪ್ರತಿಯೊಂದು ಸಬ್ಬತ್ ದಿನವೂ ಯಾಜಕರು ದೇವಾಲಯದಲ್ಲಿ ಸಬ್ಬತ್ ದಿನದ ನಿಯಮಗಳನ್ನು ಉಲ್ಲಂಘಿಸಿಯೂ ನಿರ್ದೋಷಿಗಳಾಗಿದ್ದಾರೆ. ಇದನ್ನು ನೀವು ಮೋಶೆಯ ಧರ್ಮಶಾಸ್ತ್ರದಲ್ಲಿ ಓದಿಲ್ಲವೆ? ದೇವಾಲಯಕ್ಕಿಂತಲೂ ಶ್ರೇಷ್ಠವಾದವನು ಇಲ್ಲಿದ್ದಾನೆಂಬುದು ನಿಮಗೆ ತಿಳಿದಿರಲಿ. ‘ನನಗೆ ಬೇಕಾದುದು ದಯೆ, ಯಜ್ಞ ಬಲಿಯಲ್ಲ’ ಎಂಬ ವಾಕ್ಯದ ಅರ್ಥ ನಿಮಗೆ ತಿಳಿದಿದ್ದರೆ, ನಿರ್ದೋಷಿಗಳನ್ನು ನೀವು ಖಂಡಿಸುತ್ತಿರಲಿಲ್ಲ. ಏಕೆಂದರೆ ನರಪುತ್ರನು ಸಬ್ಬತ್ತಿಗೆ ಒಡೆಯ,” ಎಂದರು.

¤£ÉÆ߮ĪÉÄ

16.07.20 - "ನನ್ನ ನೊಗ ಹಗುರ, ನನ್ನ ಹೊರೆ ಸುಗಮ,”

ಮೊದಲನೇ ವಾಚನ: ಪ್ರವಾದಿ ಯೆಶಾಯನ ಗ್ರಂಥ 26:7-9, 12, 16-19

ನೇರವಾಗಿದೆ ಸಜ್ಜನನ ದಾರಿ ಸುಗಮವಾಗಿದೆ ನಿನ್ನಿಂದ ಆತನ ಹಾದಿ. ನಡೆವೆವು ನಾವು, ಸರ್ವೇಶ್ವರಾ, ನಿನ್ನ ನೀತಿಮಾರ್ಗದೊಳು ಕಾದಿರುವೆವು ನಿನಗಾಗಿ ಭರವಸೆಯಿಟ್ಟು ನಿನ್ನೊಳು ನಿನ್ನ ನಾಮಸ್ಮರಣೆಯ ಬಯಕೆ ನಮ್ಮ ಅಂತರಾತ್ಮದೊಳು. ಹಾರೈಸಿದೆ ಎನ್ನಾತ್ಮ ನಿನ್ನನು ಇರುಳೊಳು ಅರಸಿತೆನ್ನ ಮನ ನಿನ್ನನು ಮುಂಜಾನೆಯೊಳು. ನೀನೀಯುವಾಗ ಜಗಕೆ ನ್ಯಾಯತೀರ್ಪನು ಕಲಿತುಕೊಳ್ಳುವರು ಭೂನಿವಾಸಿಗಳು ನ್ಯಾಯನೀತಿಯನು. ಸರ್ವೇಶ್ವರಾ, ನೀಡೆಮಗೆ ಶಾಂತಿ ಸಮಾಧಾನ ನಮ್ಮ ಸತ್ಕಾರ್ಯಗಳೆಲ್ಲವೂ ನಿನ್ನ ಕೃಪಾಸಾಧನ. ನಿನ್ನಾಶ್ರಯ ಕೋರಿದರು, ಸರ್ವೇಶ್ವರಾ, ಜನ ಇಕ್ಕಟ್ಟಿಗೆ ಸಿಕ್ಕಿದಾಗ ಪ್ರಾರ್ಥನೆ ಗೈದರವರು ನಿನ್ನ ಶಿಕ್ಷೆಗೆ ಗುರಿಯಾದಾಗ. ಹೆರಿಗೆ ಹತ್ತಿರವಾದ ಗರ್ಭಿಣಿ ಚೀರುವಂತೆ ಯಾತನೆಪಡುವ ಬೇನೆಯಿಂದಾಕೆ ಅರಚುವಂತೆ ಮಾಡಿರುವೆ, ಸರ್ವೇಶ್ವರಾ, ನಿನಗಾಗಿ ನಾವು ಮೊರೆಯಿಡುವಂತೆ. ಪ್ರಸವವೇದನೆಪಟ್ಟು ನಾವು ಹಡೆದದ್ದು ಗಾಳಿಯನ್ನೆ ಆಗಲಿಲ್ಲ ಜಗಕೆ ನಮ್ಮಿಂದ ಯಾವ ರಕ್ಷಣೆ ನೀಡಲಿಲ್ಲ ನಾವು ಜನ್ಮ ಲೋಕನಿವಾಸಿಗಳಿಗೆ. ಬದುಕುವರು ನಿಧನರಾದ ನಮ್ಮ ಜನರು ಜೀವದಿಂದೇಳುವುವು ನಮ್ಮವರ ಶವಗಳು. ಎದ್ದು ಹರ್ಷಧ್ವನಿಗೈಯಲಿ ನೆಲದಲಿ ಬಿದ್ದಿರುವವರು. ನೀ ಸುರಿಸುವ ಇಬ್ಬನಿ ಜ್ಯೋತಿರ್ಮಯ, ಆದುದರಿಂದ ಸತ್ತವರು ಪುನರುತ್ಥಾನಹೊಂದುವರು ನೆಲದಿಂದ.

ಕೀರ್ತನೆ: 102:13-14, 15, 16-18, 19-21
ಶ್ಲೋಕ: ದೃಷ್ಟಿಸಿದನು ಪ್ರಭು ತನ್ನ ಉನ್ನತ ಪವಿತ್ರ ಸ್ಥಾನದಿಂದ

ಶುಭಸಂದೇಶ: ಮತ್ತಾಯ 11:28-30


ಆ ಸಮಯದಲ್ಲಿ ಯೇಸುಸ್ವಾಮಿ ಜನಸಮೂಹವನ್ನುದ್ದೇಶಿಸಿ: "ದುಡಿದು, ಭಾರಹೊತ್ತು, ಬಳಲಿ ಬೆಂಡಾಗಿರುವ ಸರ್ವಜನರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ವಿಶ್ರಾಂತಿ  ಕೊಡುತ್ತೇನೆ. ನಾನು ವಿನಯಶೀಲನು, ದೀನಹೃದಯನು; ನನ್ನ ನೊಗಕ್ಕೆ ಹೆಗಲುಕೊಟ್ಟು ನನ್ನಿಂದ ಕಲಿತುಕೊಳ್ಳಿ. ಆಗ ನಿಮಗೆ ವಿಶ್ರಾಂತಿ ಸಿಗುವುದು. ನನ್ನ ನೊಗ ಹಗುರ, ನನ್ನ ಹೊರೆ ಸುಗಮ,” ಎಂದರು.

15.07.20 - "ಜ್ಞಾನಿಗಳಿಗೂ ಮೇಧಾವಿಗಳಿಗೂ ಈ ವಿಷಯಗಳನ್ನು ಮರೆಮಾಡಿ ಮಕ್ಕಳಂಥವರಿಗೆ ನೀವು ಶ್ರುತಪಡಿಸಿದ್ದೀರಿ"

ಮೊದಲನೇ ವಾಚನ: ಪ್ರವಾದಿ ಯೆಶಾಯನ ಗ್ರಂಥ10:5-7, 13-16


ಆಹಾ, ಅಸ್ಸೀರಿಯ ನಾಡೇ, ನೀನು ನನ್ನ ಕೋಪದ ದಂಡಾಯುಧ, ರೋಷದ ದೊಣ್ಣೆ. ಆ ಧರ್ಮಭ್ರಷ್ಟ ಪ್ರಜೆಗೆ ಇದಿರಾಗಿ ಅಸ್ಸೀರಿಯವನ್ನು ಕಳುಹಿಸುತ್ತೇನೆ. ನನ್ನ ಕೋಪಕ್ಕೆ ಗುರಿಯಾದ ಜನರಿಗೆ ವಿರುದ್ಧ ಕಾರ್ಯವನ್ನು ಕೈಗೊಳ್ಳಲು ಆಜ್ಞೆ ಮಾಡುತ್ತೇನೆ. ನನ್ನ ಪ್ರಜೆಯನ್ನು ಸೂರೆಮಾಡಲು, ಕೊಳ್ಳೆಹೊಡೆಯಲು, ಬೀದಿಯ ಕಸದಂತೆ ತುಳಿದುಬಿಡಲು ಅದಕ್ಕೆ ಆಜ್ಞೆಮಾಡುತ್ತೇನೆ. ಆದರೆ ಅಸ್ಸೀರಿಯದ ಆಲೋಚನೆಯೇ ಬೇರೆ. ಅನೇಕಾನೇಕ ಜನಾಂಗಗಳನ್ನು ತಾನೇ ಸಂಹರಿಸಿ ನಿರ್ಮೂಲಮಾಡಬೇಕೆಂಬ ಯೋಜನೆ ಅದರದು. ಅಸ್ಸೀರಿಯದ ಅನಿಸಿಕೆಯಿದು: “ನಾನು ವಿವೇಕಿ, ನನ್ನ ಭುಜಬಲದಿಂದಲೇ ಇದನ್ನು ಮಾಡಿದ್ದೇನೆ. ನನ್ನ ಜ್ಞಾನಶಕ್ತಿಯಿಂದಲೇ ಇದನ್ನು ಸಾಧಿಸಿದ್ದೇನೆ. ನಾಡುಗಳ ಮಧ್ಯೆಯಿರುವ ಎಲ್ಲೆಗಳನ್ನು ಕಿತ್ತು ಹಾಕಿದ್ದೇನೆ. ಅವು ಕೂಡಿಸಿಟ್ಟುಕೊಂಡಿದ್ದ ನಿಧಿನಿಕ್ಷೇಪಗಳನ್ನು ಸೂರೆ ಮಾಡಿದ್ದೇನೆ. ಗದ್ದುಗೆಯ ಮೇಲೆ ಕುಳಿತಿರುವವರನ್ನು ಮಹಾ ವೀರನಂತೆ ಕೆಡವಿ ಬಿಟ್ಟಿದ್ದೇನೆ. ಹಕ್ಕಿಯ ಗೂಡನ್ನು ಕಂಡುಹಿಡಿಯುವಂತೆ ಜನಾಂಗಗಳ ಆಸ್ತಿಪಾಸ್ತಿಯನ್ನು ಹಿಡಿದುಕೊಂಡಿದ್ದೇನೆ. ಹಕ್ಕಿ ಬಿಟ್ಟು ಹೋದ ಮೊಟ್ಟೆಗಳನ್ನು ಒಟ್ಟುಗೂಡಿಸಿಟ್ಟು ಕೊಳ್ಳುವಂತೆ ಸಮಸ್ತ ರಾಷ್ಟ್ರಗಳನ್ನು ಒಟ್ಟುಗೂಡಿಸಿದ್ದೇನೆ. ರೆಕ್ಕೆಯಾಡಿಸಿ ಬೆದರಿಸಲು ಯಾರೂ ಇರಲಿಲ್ಲ. ಕೊಕ್ಕುತೆರೆದು ಕೀಚುಗುಟ್ಟಲು ಯಾರೂ ಕಾಣಲಿಲ್ಲ.” ಕೊಡಲಿ, ಕಡಿಯುವವನನ್ನೇ ಕಡಿಯಲು ನಿಂತೀತೆ? ಗರಗಸ, ಆಡಿಸುವವನನ್ನೇ ಕತ್ತರಿಸಲು ಎದೆಗೊಂಡೀತೆ? ಕೋಲು, ಹಿಡಿದವನನ್ನೇ ಹೊಡೆದಂತಾಯಿತು! ನಿರ್ಜೀವ ದೊಣ್ಣೆ ಸಜೀವ ಮನುಷ್ಯನನ್ನೇ ಬಡಿದಂತಾಯಿತು! ಆದಕಾರಣ, ಒಡೆಯರಾದ ಸೇನಾಧೀಶ್ವರ ಸರ್ವೇಶ್ವರ ಅಸ್ಸೀರಿಯಾದ ಕೊಬ್ಬಿದ ಯೋಧರಿಗೆ ಕ್ಷಯರೋಗವನ್ನು ಬರಮಾಡುವರು. ಅವರ ದೇಹಕ್ಕೆ ಬೆಂಕಿಯಂತೆ ಉರಿಯುವ ಜ್ವರವನ್ನು ಉಂಟುಮಾಡುವರು.

ಕೀರ್ತನೆ: 94:5-6, 7-8, 9-10, 14-15

ಶ್ಲೋಕ: ಕೈಬಿಡನು ಪ್ರಭು ತನ್ನ ಸ್ವಕೀಯರನು

ಶುಭಸಂದೇಶ: ಮತ್ತಾಯ 11:25-27



ಆ ಸಮಯದಲ್ಲಿ ಯೇಸುಸ್ವಾಮಿ, “ಪಿತನೇ, ಪರಲೋಕ ಭೂಲೋಕಗಳ ಒಡೆಯನೇ, ಜ್ಞಾನಿಗಳಿಗೂ ಮೇಧಾವಿಗಳಿಗೂ ಈ ವಿಷಯಗಳನ್ನು ಮರೆಮಾಡಿ ಮಕ್ಕಳಂಥವರಿಗೆ ನೀವು ಶ್ರುತಪಡಿಸಿದ್ದೀರಿ; ಇದಕ್ಕಾಗಿ ನಿಮ್ಮನ್ನು ವಂದಿಸುತ್ತೇನೆ. ಹೌದು, ಪಿತನೇ, ಇದೇ ನಿಮ್ಮ ಸುಪ್ರೀತ ಸಂಕಲ್ಪ. “ನನ್ನ ಪಿತ ಸಮಸ್ತವನ್ನೂ ನನ್ನ ವಶಕ್ಕೆ ಒಪ್ಪಿಸಿದ್ದಾರೆ; ಪುತ್ರನು ಯಾರೆಂಬುದನ್ನು ಪಿತನೇ ಹೊರತು ಬೇರಾರೂ ಅರಿಯರು. ಪಿತನು ಯಾರು ಎಂಬುದನ್ನು ಪುತ್ರನು ಮತ್ತು ಯಾವನಿಗೆ ಪುತ್ರನು ಅವರನ್ನು ಶ್ರುತಪಡಿಸಲು ಇಚ್ಛಿಸುತ್ತಾನೋ, ಅವರೇ ಹೊರತು ಮತ್ತಾರೂ ಅರಿಯರು." ಎಂದು ಹೇಳಿದರು.


14.07.2020 - "ತೀರ್ಪಿನ ದಿನ ಸೊದೋಮಿನ ಗತಿ ನಿನಗಿಂತ ಸಹನೀಯವಾಗಿರುವುದು ಎಂಬುದು ನಿನಗೆ ತಿಳಿದಿರಲಿ,”

ಮೊದಲನೇ ವಾಚನ: ಪ್ರವಾದಿ ಯೆಶಾಯನ ಗ್ರಂಥ 7:1-9

ಅದು ಆಹಾಜನ ಕಾಲ. ಇವನು ಯೋತಾಮನ ಮಗ, ಉಜ್ಜೀಯನ ಮೊಮ್ಮಗ, ಜುದೇಯದ ಅರಸ. ಇವನ ಕಾಲದಲ್ಲಿ ಸಿರಿಯದ ಅರಸ ರೆಚೀನ ಮತ್ತು ರೆಮೆಲ್ಯನ ಮಗನೂ ಇಸ್ರಯೇಲಿನ ಅರಸನೂ ಆದ ಪೆಕಹ ಎಂಬವರು ಜೆರುಸಲೇಮಿನ ಮೇಲೆ ದಂಡೆತ್ತಿಬಂದರು. ಆದರೆ ಅದನ್ನು ಜಯಿಸಲು ಅವರಿಂದಾಗಲಿಲ್ಲ. ಸಿರಿಯರ ಸೈನಿಕರು ಈಗಾಗಲೇ ಇಸ್ರಯೇಲಿನ ಗಡಿಯೊಳಗಿದ್ದಾರೆ ಎಂಬ ಸುದ್ದಿ ಜುದೇಯದ ಅರಸನಿಗೆ ಮುಟ್ಟಿದ್ದೇ ತಡ, ಅವನೂ ಅವನ ಪ್ರಜೆಗಳೆಲ್ಲರೂ ಹೆದರಿದರು. ಬಿರುಗಾಳಿಗೆ ಸಿಕ್ಕಿದ ಗಿಡಮರಗಳಂತೆ ನಡುಗಿದರು. ಆಗ ಸರ್ವೇಶ್ವರಸ್ವಾಮಿ ಯೆಶಾಯನಿಗೆ ಹೀಗೆಂದರು : “ನಿನ್ನ ಮಗ ಶೆಯಾರ್ ಯಾಶೂಬನನ್ನು ಕರೆದುಕೊಂಡು ಆಹಾಜಾರಸನನ್ನು ಕಾಣಲುಹೋಗು. ಅಗಸರ ಹೊಲದ ಮೇಲೆ ಹಾದುಹೋಗುವ ರಾಜಮಾರ್ಗದಲ್ಲಿ ಕೆರೆಯ ಕಾಲುವೆಯ ತುದಿಯ ಬಳಿ ಆತ ನಿನಗೆ ಸಿಕ್ಕುವನು. ಅವನಿಗೆ ಈ ಪ್ರಕಾರ ತಿಳಿಸು : ಜೋಕೆ, ಸುಮ್ಮನಿರು, ಹೆದರಬೇಡ. ರೆಚೀನ, ಸಿರಿಯ ಮತ್ತು ಪೆಕಹ - ಇವರೆಲ್ಲರ ಕೋಪ ಎಷ್ಟು ಉಗ್ರವಾಗಿದ್ದರೂ ಅದು ಹೊಗೆಯಾಡುವ ಎರಡು ಮೋಟುಕೊಳ್ಳಿಗಳಿಗೆ ಸಮಾನ. ಆದ್ದರಿಂದ ಎದೆಗುಂದಬೇಡ. ಸಿರಿಯ, ಇಸ್ರಯೇಲ್, ಅರಸನಾದ ಪೆಕಹನೊಂದಿಗೆ ಸೇರಿ ಒಳಸಂಚು ಮಾಡಿದ್ದಾರೆ. ‘ಜುದೇಯ ನಾಡಿಗೆ ಮುತ್ತಿಗೆ ಹಾಕಿ, ಅದನ್ನು ಬೆದರಿಸಿ ಆಕ್ರಮಿಸಿಕೊಳ್ಳೋಣ; ತೆಬೇಲನ ಮಗನಿಗೆ ಅಲ್ಲಿಯೇ ಪಟ್ಟಕಟ್ಟೋಣ’ ಎಂದು ದುರಾಲೋಚನೆ ಮಾಡಿಕೊಂಡಿದ್ದಾರೆ. “ಆದರೆ ಸ್ವಾಮಿ ಸರ್ವೇಶ್ವರ ಆದ ನಾನು ನಿನಗೆ ಹೇಳುತ್ತೇನೆ: ಈ ಯೋಜನೆ ಕೈಗೂಡುವುದಿಲ್ಲ. ಈ ಒಳಸಂಚು ನೆರವೇರುವುದಿಲ್ಲ. ಕಾರಣ, ರಾಜಧಾನಿಯಾದ ದಮಸ್ಕಸ್ಸಿಗಿಂತ ಸಿರಿಯ ಹೆಚ್ಚಲ್ಲ, ರಾಜನಾದ ರೆಚೀನನಿಗಿಂತ ದಮಸ್ಕಸ್‍ಹೆಚ್ಚಲ್ಲ. ಇಸ್ರಯೇಲಿನ ಬಗ್ಗೆ ಹೇಳುವುದಾದರೆ, ಅದು ಅರವತ್ತೈದು ವರ್ಷದೊಳಗೆ ನುಚ್ಚುನೂರಾಗುವುದು, ಅಖಂಡ ರಾಷ್ಟ್ರವಾಗಿ ಉಳಿಯದು. ಅಂತೆಯೇ, ರಾಜಧಾನಿಯಾದ ಸಮಾರ್ಯಕ್ಕಿಂತ ಇಸ್ರಯೇಲ್ ಹೆಚ್ಚಲ್ಲ. ರಾಜನಾದ ಪೆಕಹನಿಗಿಂತ ಸಮಾರ್ಯ ಹೆಚ್ಚಲ್ಲ. ನಿಮ್ಮ ವಿಶ್ವಾಸ ಸ್ಥಿರವಿಲ್ಲದಿದ್ದರೆ, ನಿಮಗೆ ಸ್ಥಿರತೆ ಇರುವುದಿಲ್ಲ.”

ಕೀರ್ತನೆ: 48:2-3, 3-4, 5-6, 7-8

ಶ್ಲೋಕ: ಸರ್ವಶಕ್ತ ಪ್ರಭುವನು ದೇವನಗರದಲ್ಲಿ ಕಂಡೆವು

ಶುಭಸಂದೇಶ: ಮತ್ತಾಯ11:20-24

ಯಾವ ಪಟ್ಟಣಗಳಲ್ಲಿ ಯೇಸುಸ್ವಾಮಿ ಅದ್ಭುತ ಕಾರ್ಯಗಳನ್ನು ಹೇರಳವಾಗಿ ಮಾಡಿದ್ದರೋ ಆ ಪಟ್ಟಣಗಳ ಜನರೇ ಪಾಪಕ್ಕೆ ವಿಮುಖರಾಗಲಿಲ್ಲ. ಆದ್ದರಿಂದ ಆ ಪಟ್ಟಣಗಳನ್ನು ಯೇಸು ಖಂಡಿಸಿದರು; :ಕೊರಾಜ್ಜಿನ್ ಪಟ್ಟಣವೇ, ನಿನಗೆ ಧಿಕ್ಕಾರ! ಬೆತ್ಸಾಯಿದ ಪಟ್ಟಣವೇ, ನಿನಗೆ ಧಿಕ್ಕಾರ! ನಿಮ್ಮಲ್ಲಿ ಮಾಡಿದ ಅದ್ಭುತಕಾರ್ಯಗಳನ್ನು ಟೈರ್ ಮತ್ತು ಸಿದೋನ್ ಪಟ್ಟಣಗಳಲ್ಲಿ ಮಾಡಿದ್ದರೆ, ಅಲ್ಲಿಯವರು ಎಂದೋ ಗೋಣೀತಟ್ಟನ್ನು ಉಟ್ಟುಕೊಂಡು, ಬೂದಿಯನ್ನು ಬಳಿದುಕೊಂಡು ಪಾಪಕ್ಕೆ ವಿಮುಖರಾಗುತ್ತಿದ್ದರು. ಆದುದರಿಂದ ತೀರ್ಪಿನ ದಿನ ಟೈರ್ ಮತ್ತು ಸಿದೋನಿನ ಗತಿಯು ನಿಮಗಿಂತಲೂ ಮೇಲಾಗಿರುವುದೆಂದು ಒತ್ತಿ ಹೇಳುತ್ತೇನೆ. ಎಲೈ ಕಫೆರ್ನವುಮ್ ಪಟ್ಟಣವೇ, ನೀನು ಸ್ವರ್ಗಕ್ಕೇರುವೆ ಎಂದು ನೆನಸುತ್ತೀಯೋ? ಇಲ್ಲ, ಪಾತಾಳಕ್ಕೆ ಇಳಿಯುವೆ. ನಿನ್ನಲ್ಲಿ ಮಾಡಿದ ಅದ್ಭುತಕಾರ್ಯಗಳನ್ನು ಸೊದೋಮಿನಲ್ಲಿ ಮಾಡಿದ್ದರೆ, ಅದು ಇಂದಿನವರೆಗೂ ಅಳಿಯದೆ ಉಳಿಯುತ್ತಿತ್ತು. ಆದುದರಿಂದ ತೀರ್ಪಿನ ದಿನ ಸೊದೋಮಿನ ಗತಿ ನಿನಗಿಂತ ಸಹನೀಯವಾಗಿರುವುದು ಎಂಬುದು ನಿನಗೆ ತಿಳಿದಿರಲಿ,” ಎಂದರು.

13.07.2020 - "ನಿಮ್ಮನ್ನು ಸ್ವಾಗತಿಸುವವನು ನನ್ನನ್ನು ಸ್ವಾಗತಿಸುತ್ತಾನೆ;"

ಮೊದಲನೇ ವಾಚನ: ಪ್ರವಾದಿ ಯೆಶಾಯನ ಗ್ರಂಥ 1:10-17 


ಸೊದೋಮಿನ ಅಧಿಪತಿಗಳಂತಿರುವವರೇ, ಸರ್ವೇಶ್ವರಸ್ವಾಮಿಯ ಮಾತನ್ನು ಕೇಳಿರಿ. ಗೊಮೋರದ ಪ್ರಜೆಗಳನ್ನು ಹೋಲುವವರೇ, ನಮ್ಮ ದೇವರ ಉಪದೇಶಕ್ಕೆ ಕಿವಿಗೊಡಿ. ಸ್ವಾಮಿ ಇಂತೆನ್ನುತ್ತಾರೆ : “ನೀವು ಅರ್ಪಿಸುವ ಅಸಂಖ್ಯಾತ ಬಲಿದಾನಗಳಿಂದ ನನಗೇನು ಪ್ರಯೋಜನ? ಟಗರುಗಳು, ಸರ್ವಾಂಗಹೋಮ, ಪುಷ್ಟಪಶುಗಳ ಕೊಬ್ಬು ಇವೆಲ್ಲ ನನಗೆ ಬೇಸರ. ಹೋತಹೋರಿಗಳ, ಕುರಿಮರಿಗಳ ರಕ್ತ ನನಗೆ ತಾತ್ಸಾರ. ನನ್ನ ಸನ್ನಿಧಾನಕ್ಕೆ ಬರುವಾಗ ಇದನ್ನೆಲ್ಲ ತರಬೇಕೆಂದು ನಿಮಗೆ ಹೇಳಿದವರಾರು? ನಿಮ್ಮ ನೈವೇದ್ಯಗಳನ್ನು ಇನ್ನು ತರಬೇಡಿ, ಅವು ವ್ಯರ್ಥ. ನಿಮ್ಮ ಧೂಪಾರತಿ ನನಗೆ ಅಸಹ್ಯ. ನೀವು ಆಚರಿಸುವ ಹಬ್ಬ ಹುಣ್ಣಿಮೆ, ಸಬ್ಬತ್ ವಿಶ್ರಾಂತಿ, ನಿಮ್ಮ ಸಭೆಕೂಟಗಳು ನನಗೆ ಬೇಡ. ಅಧರ್ಮದಿಂದ ಕೂಡಿದ ಇಂಥ ಸಮಾರಂಭಗಳು ನನಗೆ ಇಷ್ಟವಿಲ್ಲ. ನಿಮ್ಮ ಹಬ್ಬ ಹುಣ್ಣಿಮೆಗಳು, ಉತ್ಸವ ದಿನಗಳು ನನ್ನ ಮನಕ್ಕೆ ವಿರುದ್ಧ, ಹೊರಲಾಗದ ಭಾರ, ಸಹಿಸಲಾಗದ ಬೇಸರ. ನೀವು ಕೈಯೆತ್ತಿ ಬೇಡುವಾಗ ನಾನು ಕಣ್ಣುಮುಚ್ಚಿಕೊಳ್ಳುವೆನು. ನೀವು ಎಷ್ಟೇ ಪ್ರಾರ್ಥನೆಗಳನ್ನು ಮಾಡಿದರೂ ನಾನು ಕಿವಿಗೊಡೆನು, ಏಕೆಂದರೆ ನಿಮ್ಮ ಕೈಗಳು ರಕ್ತಸಿಕ್ತವಾಗಿವೆ. ತೊಳೆದುಕೊಳ್ಳಿರಿ, ನಿಮ್ಮನ್ನೆ ಶುದ್ಧಮಾಡಿಕೊಳ್ಳಿರಿ. ಕಣ್ಣಿಗೆ ಕಟ್ಟಿದಂತಿರುವ ನಿಮ್ಮ ದುಷ್ಕೃತ್ಯಗಳು ನೀಗಿಹೋಗಲಿ. ಕೇಡನ್ನು ಬಿಟ್ಟು ಒಳಿತನ್ನು ಕೈಗೊಳ್ಳಿರಿ. ನ್ಯಾಯನೀತಿಗಳಲ್ಲಿ ನಿರತರಾಗಿರಿ. ಹಿಂಸಾತ್ಮಕರನ್ನು ತಿದ್ದಿ ಸರಿಪಡಿಸಿರಿ. ಅನಾಥರಿಗೆ ನ್ಯಾಯ ದೊರಕಿಸಿರಿ. ವಿಧವೆಯರ ಪರವಾಗಿ ವಾದಿಸಿರಿ.

ಕೀರ್ತನೆ: 50:8-9, 16-17, 21, 23

ಶ್ಲೋಕ: ಸನ್ಮಾರ್ಗ ಹಿಡಿದವನಿಗೆ ತೋರುವೆ ಪರಮ ಜೀವೋದ್ದಾರವನು

ಶುಭಸಂದೇಶ: ಮತ್ತಾಯ 10:34--11:1

ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು: "ನಾನು ಲೋಕಕ್ಕೆ ಸಮಾಧಾನವನ್ನು ತರಲು ಬಂದೆನೆಂದು ಭಾವಿಸಬೇಡಿ; ಸಮಾಧಾನವನ್ನಲ್ಲ, ಛೇದಿಸುವ ಖಡ್ಗವನ್ನು ತರಲು ಬಂದೆನು. ತಂದೆಗೆ ವಿರುದ್ಧ ಮಗನಿಗೂ, ತಾಯಿಗೆ ವಿರುದ್ದ ಮಗಳಿಗೂ, ಅತ್ತೆಗೆ ವಿರುದ್ದ ಸೊಸೆಗೂ ಭೇದ ಹುಟ್ಟಿಸಲು ಬಂದೆನು; ಒಡಹುಟ್ಟಿದವರೇ ಒಬ್ಬನ ಕಡುವೈರಿಗಳಾಗುವರು. "ನನ್ನನ್ನು ಪ್ರೀತಿಸುವುದಕ್ಕಿಂತ ಹೆಚ್ಚಾಗಿ ತನ್ನ ತಂದೆಯನ್ನು ಅತವಾ ತಾಯಿಯನ್ನು ಪ್ರೀತಿಸುವವನು ನನ್ನವನಾಗಲು ಯೋಗ್ಯನಲ್ಲ. ನನ್ನನ್ನು ಪ್ರೀತಿಸುವುದಕ್ಕಿಂತ ಹೆಚ್ಚಾಗಿ ತನ್ನ ಮಗನನ್ನು ಅಥವಾ ಮಗಳನ್ನು ಪ್ರೀತಿಸುವವನು ನನ್ನವನಾಗಲು ಯೋಗ್ಯನಲ್ಲ. ತನ್ನ ಶಿಲುಬೆಯನ್ನು ಹೊತ್ತು ನನ್ನನ್ನು ಹಿಂಬಾಲಿಸದವನು ನನ್ನವನಾಗಲು ಯೋಗ್ಯನಲ್ಲ. ತನ್ನ ಪ್ರಾಣವನ್ನು ಕಾಪಾಡಿಕೊಳ್ಳುವವನು ಅದನ್ನು ಕಳೆದುಕೊಳ್ಳುತ್ತಾನೆ. ನನಗೋಸ್ಕರವಾಗಿ ತನ್ನ ಪ್ರಾಣವನ್ನು ಕಳೆದುಕೊಳ್ಳುವವನು ಅದನ್ನು ಕಾಪಾಡಿಕೊಳ್ಳುತ್ತಾನೆ. "ನಿಮ್ಮನ್ನು ಸ್ವಾಗತಿಸುವವನು ನನ್ನನ್ನು ಸ್ವಾಗತಿಸುತ್ತಾನೆ; ನನ್ನನ್ನು ಸ್ವಾಗತಿಸುವವನು ನನ್ನನ್ನು ಕಳುಹಿಸಿಕೊಟ್ಟಾತನನ್ನೇ ಸ್ವಾಗತಿಸುತ್ತಾನೆ. ಪ್ರವಾದಿಯನ್ನು ಪ್ರವಾದಿಯೆಂದು ಸ್ವಾಗತಿಸುವವನು ಪ್ರವಾದಿಗೆ ಸಿಗುವ ಪ್ರತಿಫಲವನ್ನು ಪಡೆಯುತ್ತಾನೆ. ಸತ್ಪುರುಷನನ್ನು ಸತ್ಪುರುಷನೆಂದು ಸ್ವಾಗತಿಸುವವನು ಸತ್ಪುರುಷನಿಗೆ ಸಿಗುವ ಪ್ರತಿಫಲವನ್ನು ಪಡೆಯುತ್ತಾನೆ. ಯಾರಾದರೂ ಈ ಚಿಕ್ಕವರಲ್ಲಿ ಒಬ್ಬನಿಗೆ ಅವನು ನನ್ನ ಶಿಷ್ಯನೆಂದು ಕುಡಿಯಲು ಒಂದು ಲೋಟ ತಣ್ಣೀರನ್ನು ಕೊಟ್ಟರೂ ಅದಕ್ಕೆ ತಕ್ಕ ಪ್ರತಿಫಲವನ್ನು ಪಡೆಯದೆ ಹೋಗನೆಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ." ಯೇಸುಸ್ವಾಮಿ ತಮ್ಮ ಹನ್ನೆರಡು ಮಂದಿ ಶಿಷ್ಯರಿಗೆ ಆದೇಶವನ್ನು ಕೊಟ್ಟಾದ ಮೇಲೆ ಅಲ್ಲಿಂದ ಹೊರಟು ಉಪದೇಶ ಮಾಡುವುದಕ್ಕೂ ಬೋಧಿಸುವುದಕ್ಕೂ ಹತ್ತಿರದ ಊರುಗಳಿಗೆ ಹೋದರು.

12.07.2020 - “ಸ್ವರ್ಗಸಾಮ್ರಾಜ್ಯದ ರಹಸ್ಯಗಳನ್ನು ಅರಿತುಕೊಳ್ಳುವ ಸದವಕಾಶ ಲಭಿಸಿರುವುದು ನಿಮಗೆ"

ಮೊದಲನೇ ವಾಚನ: ಪ್ರವಾದಿ ಯೆಶಾಯನ ಗ್ರಂಥ 55:10-11 


ಮಳೆಯೂ ಹಿಮವೂ ಆಕಾಶಮಂಡಲದಿಂದಿಳಿದು ಬಂದು ತೋಯಿಸಿ, ಹಸಿರುಗೊಳಿಸಿ, ಹುಲುಸು ಮಾಡುತ್ತವೆ ಭೂಮಿಯನು. ಬಿತ್ತುವವನಿಗೆ ಬೀಜ, ಉಣ್ಣುವವನಿಗೆ ಆಹಾರ ಒದಗಿಸದೆ, ಹಿಂದಿರುಗಿ ಬರುವುದಿಲ್ಲ ಅವು ಸುಮ್ಮನೆ ಬಂದಲ್ಲಿಗೆ. ಅಂತೆಯೇ, ನನ್ನ ಬಾಯಿಂದ ಹೊರಡುವ ಮಾತು ನನ್ನ ಇಷ್ಟಾರ್ಥವನು ನೆರವೇರಿಸಿದ ಹೊರತು, ನನ್ನ ಉದ್ದೇಶವನು ಕೈಗೂಡಿಸಿದ ಹೊರತು. ನನ್ನ ಬಳಿಗೆ ವ್ಯರ್ಥವಾಗಿ ಹಿಂದಿರುಗದು.

ಕೀರ್ತನೆ: 65:10, 11, 12-13, 14

ಶ್ಲೋಕ: ಕೆಲವು ಬೀಜಗಳು ಭೂಮಿಯಲ್ಲಿ ಬಿದ್ದು ಫಲವನ್ನು ಕೊಟ್ಟವು

ಎರಡನೇ ವಾಚನ: ರೋಮನರಿಗೆ 8:18-23

ಇಂದಿನ ಕಾಲದಲ್ಲಿ ನಾವು ಅನುಭವಿಸುತ್ತಿರುವ ಕಷ್ಟಸಂಕಟಗಳು ಮುಂದೆ ನಮಗೆ ಪ್ರತ್ಯಕ್ಷವಾಗಲಿರುವ ಮಹಿಮೆಯೊಂದಿಗೆ ಹೋಲಿಸುವುದಕ್ಕೂ ಬಾರದವುಗಳೆಂದು ನಾನು ಎಣಿಸುತ್ತೇನೆ. ದೇವರ ಮಕ್ಕಳ ಮಹಿಮೆಯು ಯಾವಾಗ ಪ್ರತ್ಯಕ್ಷವಾದೀತೋ ಎಂದು ಸೃಷ್ಟಿಸಮಸ್ತವು ಬಹು ಉತ್ಸುಕತೆಯಿಂದ ಎದುರು ನೋಡುತ್ತಿದೆ. ಸರ್ವಸೃಷ್ಟಿಯು ನಿರರ್ಥಕತೆಗೆ ಒಳಗಾಯಿತು. ಇದು ಅದರ ಸ್ವಂತ ಇಚ್ಛೆಯಿಂದಲ್ಲ. ದೇವರ ಇಚ್ಛೆಯಿಂದಲೇ ಆಯಿತು. ಆದರೂ ಸೃಷ್ಟಿಗೆ ನಿರೀಕ್ಷೆಯೊಂದಿದೆ. ಅದೇನೆಂದರೆ, ಸೃಷ್ಟಿಯು ಸಹ ವಿನಾಶವಿಧಿಯಿಂದ ಬಿಡುಗಡೆಯಾಗಿ ದೇವರ ಮಕ್ಕಳ ಮಹಿಮಾಯುತ ಸ್ವಾತಂತ್ರ್ಯದಲ್ಲಿ ಪಾಲುಗೊಳ್ಳುತ್ತದೆ, ಎಂಬುದೇ. ಸೃಷ್ಟಿಸಮಸ್ತವು ಇಂದಿನವರೆಗೆ ನರಳುತ್ತಾ ಪ್ರಸವವೇದನೆಪಡುತ್ತಾ ಇದೆ ಎಂಬುದು ನಮಗೆ ತಿಳಿದಿದೆ. ಸೃಷ್ಟಿಮಾತ್ರವಲ್ಲ, ದೇವರ ವರದಾನಗಳಲ್ಲಿ ಪ್ರಥಮಫಲವಾಗಿ ಪವಿತ್ರಾತ್ಮ ಅವರನ್ನೇ ಪಡೆದಿರುವ ನಾವು ಸಹ ನಮ್ಮೊಳಗೇ ನರಳುತ್ತಿದ್ದೇವೆ. ದೇವರ ಮಕ್ಕಳಿಗೆ ದೊರೆಯುವ ಸೌಭಾಗ್ಯವನ್ನೂ ನಮ್ಮ ಸಂಪೂರ್ಣ ವಿಮೋಚನೆಯನ್ನೂ ನಿರೀಕ್ಷಿಸುತ್ತಿದ್ದೇವೆ.

ಶುಭಸಂದೇಶ: ಮತ್ತಾಯ 13:1-23


ಯೇಸುಸ್ವಾಮಿ ಮನೆಯಿಂದ ಹೊರಟು ಸರೋವರದ ತೀರದಲ್ಲಿ ಕುಳಿತರು. 2ಜನರು ತಂಡೋಪತಂಡವಾಗಿ ಕೂಡಿಬಂದುದರಿಂದ ದೋಣಿ ಹತ್ತಿ ಕುಳಿತುಕೊಳ್ಳಬೇಕಾಯಿತು. ಜನರು ದಡದಲ್ಲೇ ನಿಂತರು. ಆಗ ಯೇಸು ಅವರಿಗೆ ಅನೇಕ ವಿಷಯಗಳನ್ನು ಸಾಮತಿಯ ರೂಪದಲ್ಲಿ ಹೇಳಿದರು: “ಒಬ್ಬ ರೈತ ಬಿತ್ತುವುದಕ್ಕೆ ಹೋದ. ಬಿತ್ತನೆ ಮಾಡುತ್ತಿದ್ದಾಗ ಕೆಲವು ಬೀಜಗಳು ಕಾಲ್ದಾರಿಯಲ್ಲಿ ಬಿದ್ದವು. ಬಿದ್ದದ್ದೇ ಹಕ್ಕಿಗಳು ಬಂದು ಆ ಬೀಜವನ್ನು ತಿಂದುಬಿಟ್ಟವು. ಬೇರೆ ಕೆಲವು ಬೀಜಗಳು ಹೆಚ್ಚು ಮಣ್ಣಿಲ್ಲದ ಕಲ್ಲು ನೆಲದ ಮೇಲೆ ಬಿದ್ದವು. ಅಲ್ಲಿ ಮಣ್ಣು ತೆಳ್ಳಗಿದ್ದುದರಿಂದ ಅವು ಬೇಗನೆ ಮೊಳೆತವು. ಆದರೆ ಬಿಸಿಲೇರಿದಾಗ ಬಾಡಿದವು. ಬೇರು ಬಲವಾಗಿಲ್ಲದ ಕಾರಣ ಒಣಗಿಹೋದವು. ಮತ್ತೆ ಕೆಲವು ಬೀಜಗಳು ಮುಳ್ಳುಪೊದೆಗಳ ನಡುವೆ ಬಿದ್ದವು. ಆ ಪೊದೆಗಳು ಸಸ್ಯಗಳ ಸಮೇತ ಬೆಳೆದು, ಅವುಗಳನ್ನು ಅಡಗಿಸಿಬಿಟ್ಟವು. ಇನ್ನೂ ಕೆಲವು ಬೀಜಗಳು ಹದವಾದ ಭೂಮಿಯಲ್ಲಿ ಬಿದ್ದವು. ಅವು ಮೊಳೆತು, ಬೆಳೆದು, ತೆನೆಬಿಟ್ಟವು. ಕೆಲವು ನೂರರಷ್ಟು ಮತ್ತೆ ಕೆಲವು ಅರವತ್ತರಷ್ಟು, ಇನ್ನು ಕೆಲವು ಮೂವತ್ತರಷ್ಟು ಫಸಲನ್ನು ಕೊಟ್ಟವು. ಕೇಳಲು ಕಿವಿಯುಳ್ಳವನು ಕೇಳಿಸಿಕೊಳ್ಳಲಿ,” ಎಂದು ಒತ್ತಿ ಹೇಳಿದರು. ತರುವಾಯ ಶಿಷ್ಯರು ಯೇಸುಸ್ವಾಮಿಯ ಬಳಿಗೆ ಬಂದು, “ನೀವು ಜನರೊಡನೆ ಮಾತನಾಡುವಾಗ ಸಾಮತಿಗಳನ್ನು ಉಪಯೋಗಿಸುತ್ತೀರಿ, ಏಕೆ?” ಎಂದು ಕೇಳಿದರು. ಅದಕ್ಕೆ ಪ್ರತ್ಯುತ್ತರವಾಗಿ ಯೇಸು, “ಸ್ವರ್ಗಸಾಮ್ರಾಜ್ಯದ ರಹಸ್ಯಗಳನ್ನು ಅರಿತುಕೊಳ್ಳುವ ಸದವಕಾಶ ಲಭಿಸಿರುವುದು ನಿಮಗೆ, ಅವರಿಗಲ್ಲ. ಉಳ್ಳವನಿಗೆ ಇನ್ನೂ ಹೆಚ್ಚಾಗಿ ಕೊಡಲಾಗುತ್ತದೆ. ಅವನು ಸಮೃದ್ಧನಾಗುತ್ತಾನೆ. ಇಲ್ಲದವನಿಂದ ಇರುವ ಕಿಂಚಿತ್ತನ್ನೂ ಕಸಿದುಕೊಳ್ಳಲಾಗುತ್ತದೆ. ಅವರೊಡನೆ ಸಾಮತಿ ರೂಪದಲ್ಲಿ ಮಾತನಾಡುವುದಕ್ಕೆ ಕಾರಣ ಇದು: ಅವರು ಕಣ್ಣಾರೆ ನೋಡಿದರೂ ಕಾಣುವುದಿಲ್ಲ; ಕಿವಿಯಾರೆ ಕೇಳಿದರೂ ಕಿವಿಗೊಡುವುದಿಲ್ಲ; ಗ್ರಹಿಸುವುದೂ ಇಲ್ಲ. ಪ್ರವಾದಿ ಯೆಶಾಯನ ಈ ಪ್ರವಚನ ಅವರಲ್ಲಿ ಈಡೇರುತ್ತದೆ. ‘ಕೇಳಿ ಕೇಳಿಯೂ ಗ್ರಹಿಸರು ನೋಡಿ ನೋಡಿಯೂ ಕಾಣರು ಈ ಜನರ ಹೃದಯ ಕಲ್ಲಾಗಿದೆ ಕಿವಿ ಮಂದವಾಗಿದೆ ಕಣ್ಣು ಮಬ್ಬಾಗಿದೆ. ಇಲ್ಲದಿದ್ದರೆ ಇವರ ಕಣ್ಣು ಕಾಣುತ್ತಾ ಕಿವಿ ಕೇಳುತ್ತಾ ಹೃದಯ ಗ್ರಹಿಸುತ್ತಾ ನನ್ನತ್ತ ತಿರುಗುತ್ತಿದ್ದರು; ದೇವರಾದ ನಾನಿವರನು ಸ್ವಸ್ಥಪಡಿಸುತ್ತಿದ್ದೆನು.’ “ನೀವಾದರೋ ಭಾಗ್ಯವಂತರು. ನಿಮ್ಮ ಕಣ್ಣುಗಳು ಕಾಣುತ್ತವೆ, ಕಿವಿಗಳು ಕೇಳುತ್ತವೆ. ಎಷ್ಟೋ ಪ್ರವಾದಿಗಳು ಹಾಗೂ ಸತ್ಪುರುಷರು ನೀವು ನೋಡುವುದನ್ನು ನೋಡುವುದಕ್ಕೂ, ಕೇಳುವುದನ್ನು ಕೇಳುವುದಕ್ಕೂ ಅಪೇಕ್ಷಿಸಿದರು. ಆದರೆ ಅವರು ನೋಡಲೂ ಇಲ್ಲ, ಕೇಳಲೂ ಇಲ್ಲ ಎಂಬುದು ನಿಮಗೆ ತಿಳಿದಿರಲಿ. “ಈಗ ಬಿತ್ತುವವನ ಸಾಮತಿಯ ಅರ್ಥವನ್ನು ಕೇಳಿ:ಒಬ್ಬನು ಶ್ರೀಸಾಮ್ರಾಜ್ಯದ ಸಂದೇಶವನ್ನು ಕೇಳಿ ಅದನ್ನು ಗ್ರಹಿಸದೆಹೋದರೆ, ಕೇಡಿಗನು ಬಂದು ಅವನ ಹೃದಯದಲ್ಲಿ ಬಿತ್ತಿದ್ದ ಬೀಜವನ್ನು ತೆಗೆದೆಸೆಯುತ್ತಾನೆ. ಇವನು ಕಾಲ್ದಾರಿಯಲ್ಲಿ ಬಿದ್ದ ಬೀಜವನ್ನು ಹೋಲುತ್ತಾನೆ. ಬೇರೊಬ್ಬನು ಈ ಸಂದೇಶವನ್ನು ಕೇಳಿದ ಕೂಡಲೇ ಅದನ್ನು ಸಂತೋಷದಿಂದ ಸ್ವೀಕರಿಸುತ್ತಾನೆ. ಆದರೆ ಅದು ತನ್ನಲ್ಲಿ ಬೇರೂರದ ಕಾರಣ ಕೊಂಚಕಾಲ ಮಾತ್ರ ಇದ್ದು, ಸಂದೇಶದ ನಿಮಿತ್ತ ಕಷ್ಟಕೋಟಲೆಗಳು ಬಂದೊದಗಿದಾಗ ಕೂಡಲೇ ಎಡವಿಬೀಳುತ್ತಾನೆ. ಇವನು ಕಲ್ಲು ನೆಲದ ಮೇಲೆ ಬಿದ್ದ ಬೀಜವನ್ನು ಹೋಲುತ್ತಾನೆ. ಇನ್ನೊಬ್ಬನು ಸಂದೇಶವನ್ನೇನೋ ಕೇಳುತ್ತಾನೆ, ಆದರೆ ಪ್ರಾಪಂಚಿಕ ಚಿಂತನೆಗಳು, ಐಶ್ವರ್ಯದ ವ್ಯಾಮೋಹಗಳು ಆ ಸಂದೇಶವನ್ನು ಫಲಬಿಡದಂತೆ ಅದುಮಿಬಿಡುತ್ತವೆ; ಇವನು ಮುಳ್ಳುಪೊದೆಗಳಲ್ಲಿ ಬಿದ್ದ ಬೀಜವನ್ನು ಹೋಲುತ್ತಾನೆ. ಇನ್ನೊಬ್ಬನು ವಾಕ್ಯವನ್ನು ಕೇಳುತ್ತಾನೆ, ಗ್ರಹಿಸಿಕೊಳ್ಳುತ್ತಾನೆ; ಫಲಪ್ರದನಾಗಿ ನೂರರಷ್ಟು, ಅರವತ್ತರಷ್ಟು, ಮೂವತ್ತರಷ್ಟು ಫಲಕೊಡುತ್ತಾನೆ. ಇವನು ಹದವಾದ ಭೂಮಿಯಲ್ಲಿ ಬಿದ್ದ ಬೀಜವನ್ನು ಹೋಲುತ್ತಾನೆ,” ಎಂದರು.

11.07.2020 - "ಅನೇಕ ಗುಬ್ಬಚ್ಚಿಗಳಿಗಿಂತ ನೀವು ಎಷ್ಟೋ ಮೌಲ್ಯವುಳ್ಳವರು"

ಮೊದಲನೇ ವಾಚನ: ಪ್ರವಾದಿ ಯೆಶಾಯನ ಗ್ರಂಥ 6:1-8 

ಅರಸ ಉಜ್ಜೀಯನು ಕಾಲವಾದ ವರ್ಷದಲ್ಲಿ ನನಗೆ ಸರ್ವೇಶ್ವರಸ್ವಾಮಿಯಿಂದ ದರ್ಶನವಾಯಿತು: ಉನ್ನತೋನ್ನತ ಸಿಂಹಾಸನದಲ್ಲಿ ಅವರು ಆಸೀನರಾಗಿದ್ದರು. ಅವರ ಮೇಲುವಸ್ತ್ರ ನೆರಿಗೆ ನೆರಿಗೆಯಾಗಿ ದೇವಾಲಯವನ್ನೆಲ್ಲ ಆವರಿಸಿತ್ತು. 2ಅವರ ಸುತ್ತಲು ಸೆರಾಫಿಯರೆಂಬ ತೇಜಸ್ವಿಗಳು ಇದ್ದರು. ಪ್ರತಿಯೊಬ್ಬರಿಗೂ ಆರಾರು ರೆಕ್ಕೆಗಳಿದ್ದವು. ಎರಡು ರೆಕ್ಕೆಗಳಿಂದ ಅವರ ಮುಖ ಮುಚ್ಚಿತ್ತು. ಇನ್ನೆರಡು ರೆಕ್ಕೆಗಳಿಂದ ಅವರ ಪಾದಗಳು ಮುಚ್ಚಿದ್ದವು. ಮತ್ತೆರಡು ರೆಕ್ಕೆಗಳನ್ನು ಬಡಿಯುತ್ತಾ ನೆಲಸೋಕದೆ ನಿಂತಿದ್ದರು. ಅವರಲ್ಲಿ ಒಬ್ಬನು ಮತ್ತೊಬ್ಬನಿಗೆ : “ಪವಿತ್ರ, ಪವಿತ್ರ, ಪವಿತ್ರ ಸೇನಾಧೀಶ್ವರ ಸರ್ವೇಶ್ವರ ಜಗವೆಲ್ಲ ಆತನ ಪ್ರಭಾವಭರಿತ” ಎಂದು ಕೂಗಿ ಹೇಳಿದನು. ಆ ಶಬ್ದಕ್ಕೆ ದೇವಾಲಯದ ಅಸ್ತಿವಾರವೇ ಕಂಪಿಸಿತು. ಧೂಮವು ಆಲಯವನ್ನೆಲ್ಲ ತುಂಬಿತು. ಆಗ ನಾನು “ಅಯ್ಯೋ, ನನ್ನ ಗತಿಯೇನು? ನನ್ನ ಕಥೆ ಮುಗಿಯಿತು. ಅಶುದ್ಧ ವದನದವನು ನಾನು. ಅಶುದ್ಧ ವದನದವರ ಮಧ್ಯೆ ಬಾಳುವವನು. ನನ್ನ ಕಣ್ಣುಗಳು ರಾಜಾಧಿರಾಜನನ್ನು, ಸೇನಾಧೀಶ್ವರ ಸರ್ವೇಶ್ವರನನ್ನು ಕಂಡೆವಲ್ಲಾ!” ಎಂದು ಕೂಗಿಕೊಂಡೆನು. ಆಗ ಸೆರಾಫಿಯರಲ್ಲಿ - ತೇಜಸ್ವಿಯೊಬ್ಬನು ಬಲಿಪೀಠದಿಂದ, ಉರಿಯುವ ಕೆಂಡವೊಂದನ್ನು ಇಕ್ಕಳದಿಂದ ಹಿಡಿದುಕೊಂಡು ನನ್ನತ್ತ ಹಾರಿಬಂದನು. ಆ ಉರಿಕೆಂಡವನ್ನು ನನ್ನ ಬಾಯಿಗೆ ಮುಟ್ಟಿಸಿ: “ಇದು ನಿನ್ನ ತುಟಿಗಳನ್ನು ತಾಕಿದೆ. ಈಗ ದೋಷ ನೀಗಿತು. ನಿನ್ನ ಪಾಪ ಪರಿಹಾರ ಆಯಿತು,” ಎಂದನು. ಆಗ, “ಯಾರನ್ನು ಕಳುಹಿಸಲಿ? ನಮ್ಮ ಪರವಾಗಿ ಹೋಗುವವರು ಯಾರು?” ಎಂಬ ನುಡಿ ಕೇಳಿಸಿತು. ಅದಕ್ಕೆ ನಾನು, “ಇಗೋ, ನಾನು ಸಿದ್ಧ, ನನ್ನನ್ನು ಕಳುಹಿಸಿ” ಎಂದೆನು.

ಕೀರ್ತನೆ: 93:1, 1-2, 5

ಶ್ಲೋಕ:  ವಹಿಸಿಹನು ಪ್ರಭು ರಾಜ್ಯಾಧಿಕಾರವನು

ಶುಭಸಂದೇಶ: ಮತ್ತಾಯ 10:24-33



ಯೇಸುಸ್ವಾಮಿ ಶಿಷ್ಯರಿಗೆ ಕೊಟ್ಟ ಆದೇಶ ಇದು: "ಗುರುವಿಗಿಂತ ಶಿಷ್ಯನು ಶ್ರೇಷ್ಠನಲ್ಲ; ದಾಸನು ದಣಿಗಿಂತ ದೊಡ್ಡವನಲ್ಲ. ಗುರುವಿನಂತೆ ಶಿಷ್ಯನೂ ದಣಿಯಂತೆ ದಾಸನೂ ಆದರೆ ಸಾಕು. ಮನೆಯ ಯಜಮಾನನನ್ನೇ ‘ಬೆಲ್ಜಬೂಲ್’ ಎಂದು ಕರೆದಿರುವಾಗ ಅವನ ಮನೆಯವರನ್ನು ಇನ್ನೆಷ್ಟು ಅವಹೇಳನ ಮಾಡಲಾರರು?” “ಜನರಿಗೆ ಭಯಪಡಬೇಡಿ. ಮುಚ್ಚುಮರೆ ಆಗಿರುವುದೆಲ್ಲ ಬಟ್ಟಬಯಲಾಗುವುದು. ಗುಟ್ಟಾಗಿ ಇರುವುದೆಲ್ಲ ರಟ್ಟಾಗುವುದು. ನಾನು ಕತ್ತಲಲ್ಲಿ ಹೇಳುವುದನ್ನು ನೀವು ಬೆಳಕಿನಲ್ಲಿ ಪ್ರಚುರಪಡಿಸಿರಿ, ಕಿವಿಮಾತಾಗಿ ಕೇಳಿದ್ದನ್ನು ಮನೆಮಾಳಿಗೆಯ ಮೇಲೆ ನಿಂತು ಸಾರಿರಿ. ದೇಹವನ್ನು ಕೊಂದು ಹಾಕುವವರಿಗೆ ಭಯಪಡಬೇಡಿ; ಏಕೆಂದರೆ, ಅವರಿಂದ ಆತ್ಮವನ್ನು ಕೊಲ್ಲಲು ಆಗದು. ಆದರೆ ದೇಹಾತ್ಮಗಳೆರಡನ್ನೂ ನರಕದಲ್ಲಿ ನಾಶಮಾಡಬಲ್ಲ ದೇವರಿಗೆ ಭಯಪಡಿ. ಒಂದು ಕಾಸಿಗೆ ಎರಡು ಗುಬ್ಬಚ್ಚಿಗಳನ್ನು ಮಾರುವುದಿಲ್ಲವೆ? ಆದರೂ ಅವುಗಳಲ್ಲಿ ಒಂದಾದರೂ ನಿಮ್ಮ ತಂದೆಯ ಅನುಮತಿಯಿಲ್ಲದೆ ನೆಲಕ್ಕೆ ಬೀಳುವುದಿಲ್ಲ. ಅಲ್ಲದೆ ನಿಮ್ಮ ತಲೆಗೂದಲುಗಳು ಸಹ ಎಲ್ಲವೂ ಎಣಿಕೆಯಾಗಿವೆ. ಆದುದರಿಂದ ಭಯಪಡಬೇಡಿ; ಅನೇಕ ಗುಬ್ಬಚ್ಚಿಗಳಿಗಿಂತ ನೀವು ಎಷ್ಟೋ ಮೌಲ್ಯವುಳ್ಳವರು. “ಜನರ ಮುಂದೆ, ತಾನು ನನ್ನವನೆಂದು ಬಹಿರಂಗವಾಗಿ ಒಪ್ಪಿಕೊಳ್ಳುವ ಪ್ರತಿಯೊಬ್ಬನನ್ನು ನಾನು ಸಹ ಸ್ವರ್ಗದಲ್ಲಿರುವ ನನ್ನ ಪಿತನ ಮುಂದೆ ನನ್ನವನೆಂದು ಒಪ್ಪಿಕೊಳ್ಳುತ್ತೇನೆ. ಆದರೆ ಯಾವನಾದರೂ ತಾನು ನನ್ನವನಲ್ಲ ಎಂದು ಜನರ ಮುಂದೆ ಬಹಿರಂಗವಾಗಿ ನಿರಾಕರಿಸಿದರೆ, ಅಂಥವನನ್ನು ನಾನು ಸಹ ಸ್ವರ್ಗದಲ್ಲಿರುವ ನನ್ನ ಪಿತನ ಮುಂದೆ ನನ್ನವನಲ್ಲವೆಂದು ನಿರಾಕರಿಸುತ್ತೇನೆ."

10.07.2020 - "ಏಕೆಂದರೆ ನೀವು ಹೇಳಬೇಕಾದುದ್ದನ್ನು ಅದೇ ಗಳಿಗೆಯಲ್ಲಿ ನಿಮಗೆ ಕಲಿಸಿಕೊಡಲಾಗುವುದು"

ಮೊದಲನೇ ವಾಚನ: ಪ್ರವಾದಿ ಹೋಶೇಯನ ಗ್ರಂಥ 14:2-10 

ಇಸ್ರಯೇಲ್, ನಿನ್ನ ಸರ್ವೇಶ್ವರನಾದ ದೇವರ ಬಳಿಗೆ ಹಿಂದಿರುಗು. ನಿನ್ನ ಪಾಪದ್ರೋಹಗಳೇ ನಿನ್ನ ಪತನಕ್ಕೆ ಕಾರಣ. ಆದುದರಿಂದ ಪಶ್ಚಾತ್ತಾಪದ ಮಾತುಗಳೊಂದಿಗೆ ದೇವರಿಗೆ ಅಭಿಮುಖವಾಗಿ, “ಪ್ರಭುವೇ, ನಮ್ಮ ಅಪರಾಧವನ್ನು ತೊಡೆದುಹಾಕು. ನಮ್ಮಲ್ಲಿ ಒಳಿತಾದುದನ್ನೇ ಅಂಗೀಕರಿಸು. ನಿನಗೆ ಸ್ತುತಿಬಲಿಯನ್ನು ಸಮರ್ಪಿಸುವೆವು. ಅಸ್ಸೀರಿಯದಿಂದ ನಮಗೆ ರಕ್ಷಣೆ ದೊರಕದು. ನಾವು ಕಾಳಗದ ಕುದುರೆಗಳ ಮೇಲೆ ಇನ್ನೆಂದೂ ಸವಾರಿ ಮಾಡೆವು. ನಮ್ಮ ಕೈಗಳು ನಿರ್ಮಿಸಿರುವ ವಿಗ್ರಹಗಳನ್ನು ವೀಕ್ಷಿಸಿ, ‘ನೀವೇ ನಮ್ಮ ದೇವರು’ ಎಂದು ಜಪಿಸೆವು. ಓ ದೇವಾ, ದಿಕ್ಕಿಲ್ಲದವರಿಗೆ ಕರುಣೆತೋರಿಸುವವನು ನೀನೇ,” ಎಂದು ಹೇಳು. ಸರ್ವೇಶ್ವರ ಇಂತೆನ್ನುತ್ತಾರೆ: ಪರಿಹರಿಸುವೆನು ಜನರ ಭ್ರಷ್ಟತನವನು ಪ್ರೀತಿಸುವೆನು ಮನಪೂರ್ವಕವಾಗಿ ಅವರನು ತ್ಯಜಿಸಿಬಿಡುವೆನು ಅವರ ಮೇಲಿದ್ದ ಕೋಪವನು. ಇರುವೆನು ಇಸ್ರಯೇಲಿಗೆ ಇಬ್ಬನಿಯಂತೆ ಅರಳುವುದು ಆ ನಾಡು ತಾವರೆಯಂತೆ ಬೇರೂರುವುದು ಲೆಬನೋನಿನ ದೇವದಾರು ವೃಕ್ಷದಂತೆ. ಹರಡಿಕೊಳ್ಳುವುದದು ಮರದ ರೆಂಬೆಗಳಂತೆ ಕಂಗೊಳಿಸುವುದು ಚೆಲುವಾದ ಓಲಿವ ಮರದಂತೆ ಅದರ ಪರಿಮಳ ಮನೋಹರ ಲೆಬನೋನಿನ ಲತೆಗಳಂತೆ. ಮರಳಿ ಆಶ್ರಯಿಸುವರು ನನ್ನ ನೆರಳನ್ನು ಆ ಜನತೆ ಅಭಿವೃದ್ಧಿಯಾಗುವರು ಉದ್ಯಾನವನದಂತೆ ಫಲಪ್ರದವಾಗುವರು ಆ ಜನರು ದ್ರಾಕ್ಷಾಲತೆಯಂತೆ ಸುಪ್ರಸಿದ್ಧ ಅವರ ಕೀರ್ತಿ ಲೆಬನೋನಿನ ದ್ರಾಕ್ಷಾರಸದಂತೆ. ನುಡಿವುದು ಎಫ್ರಯಿಮ್, “ನನಗಿನ್ನು ಬೇಡ ವಿಗ್ರಹಗಳ ಗೊಡವೆ”. ಅದಕ್ಕೆ ಒಲಿದು ಕಟಾಕ್ಷಿಸುವವನು ನಾನೇ ಅದಕ್ಕೆ ಹಚ್ಚಹಸಿರಾದ ತುರಾಯಿಮರದಂತಿರುವೆ ಅದಕ್ಕೆ ಫಲವನ್ನು ನೀಡುವವನು ನಾನೇ.” ಬುದ್ಧಿವಂತನು ಈ ಮಾತುಗಳನ್ನು ಗ್ರಹಿಸಿಕೊಳ್ಳಲಿ. ವಿವೇಕಿಯು ಈ ನುಡಿಗಳನ್ನು ಅರ್ಥಮಾಡಿ ಕೊಳ್ಳಲಿ. ಸರ್ವೇಶ್ವರಸ್ವಾಮಿಯ ಮಾರ್ಗಗಳು ನೇರವಾದವುಗಳು. ಸನ್ಮಾರ್ಗಿಗಳು ಅವುಗಳನ್ನು ಕೈಗೊಂಡು ನಡೆಯುವರು. ದುರ್ಮಾರ್ಗಿಗಳು ಅವುಗಳನ್ನು ಕೈಬಿಟ್ಟು ಮುಗ್ಗರಿಸಿ ಬೀಳುವರು.

ಕೀರ್ತನೆ: 51:3-4, 8-9, 12-13, 14, 17

ಶ್ಲೋಕ:  ನಿನ್ನ ಸತ್ಯಸಂಧತೆಯನು ಸಾರುವೆ ಮುಕ್ತಕಂಠದಿಂದ

ಶುಭಸಂದೇಶ: ಮತ್ತಾಯ 10:16-23

ಯೇಸುಸ್ವಾಮಿ ಶಿಷ್ಯರ ನಿಯೋಗವನ್ನು ಕಳುಹಿಸುವಾಗ ಅವರಿಗೆ ಕೊಟ್ಟ ಆದೇಶ ಇದು: “ಗಮನಿಸಿರಿ, ತೋಳಗಳ ನಡುವೆ ಕುರಿಗಳನ್ನು ಬಿಟ್ಟಂತೆ ನಾನು ನಿಮ್ಮನ್ನು ಕಳುಹಿಸುತ್ತಿದ್ದೇನೆ. ಆದುದರಿಂದ ಸರ್ಪಗಳಂತೆ ಸೂಕ್ಷ್ಮಬುದ್ಧಿಯುಳ್ಳವರೂ ಪಾರಿವಾಳಗಳಂತೆ ಸರಳಜೀವಿಗಳೂ ಆಗಿರಿ. ಜನರ ಬಗ್ಗೆ ಜಾಗರೂಕರಾಗಿರಿ! ಅವರು ನಿಮ್ಮನ್ನು ನ್ಯಾಯಸ್ಥಾನಗಳಿಗೆ ಹಿಡಿದೊಪ್ಪಿಸುವರು. ಪ್ರಾರ್ಥನಾಮಂದಿರಗಳಲ್ಲಿ ಕೊರಡೆಗಳಿಂದ ಹೊಡೆಯುವರು. ನನ್ನ ನಿಮಿತ್ತ ನಿಮ್ಮನ್ನು ಅಧಿಕಾರಿಗಳ ಮತ್ತು ಅರಸರುಗಳ ಮುಂದೆ ಎಳೆದೊಯ್ಯುವರು. ಅವರ ಹಾಗೂ ಪರಕೀಯರ ಮುಂದೆ ನೀವು ನನಗೆ ಸಾಕ್ಷಿಗಳಾಗುವಿರಿ. ನಿಮ್ಮನ್ನು ಹಿಡಿದೊಪ್ಪಿಸುವಾಗ ಹೇಗೆ ವಾದಿಸುವುದು, ಏನು ಹೇಳುವುದು ಎಂದು ಚಿಂತಾಕ್ರಾಂತರಾಗಬೇಡಿ. ಏಕೆಂದರೆ ನೀವು ಹೇಳಬೇಕಾದುದ್ದನ್ನು ಅದೇ ಗಳಿಗೆಯಲ್ಲಿ ನಿಮಗೆ ಕಲಿಸಿಕೊಡಲಾಗುವುದು. ಆಗ ಮಾತನಾಡುವವರು ನೀವಲ್ಲ, ನಿಮ್ಮ ತಂದೆಯ ಆತ್ಮವೇ ನಿಮ್ಮ ಮುಖಾಂತರ ಮಾತನಾಡುವುದು. ಸಹೋದರನು ಸಹೋದರನನ್ನೇ ತಂದೆಯು ಮಗನನ್ನೇ ಮರಣಕ್ಕೆ ಗುರಿಮಾಡುವರು. ಮಕ್ಕಳು ಹೆತ್ತವರ ಮೇಲೆ ತಿರುಗಿಬಿದ್ದು ಅವರನ್ನು ಕೊಲ್ಲಿಸುವರು. ನೀವು ನನ್ನವರು; ಆದುದರಿಂದಲೇ ನಿಮ್ಮನ್ನು ಎಲ್ಲರೂ ದ್ವೇಷಿಸುವರು. ಆದರೆ ಕೊನೆಯವರೆಗೂ ಸೈರಣೆಯಿಂದಿರುವವನು ಜೀವೋದ್ಧಾರವನ್ನು ಹೊಂದುವನು. ಒಂದು ಊರಿನಲ್ಲಿ ನಿಮ್ಮನ್ನು ಹಿಂಸೆಪಡಿಸಿದರೆ, ಮತ್ತೊಂದು ಊರಿನಲ್ಲಿ ಆಶ್ರಯ ಪಡೆಯಿರಿ. ನರಪುತ್ರನು ಬರುವಷ್ಟರಲ್ಲಿ ನೀವು ಇಸ್ರಯೇಲ್ ಜನರ ಊರುಗಳನ್ನೆಲ್ಲಾ ಸುತ್ತಿ ಮುಗಿಸಿರಲಾರಿರಿ; ಇದು ನಿಶ್ಚಯ.