ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

19-06-2018

ಮೊದಲನೇ ವಾಚನ: 1 ಅರಸುಗಳು: 21: 17-29

ಆಗ ತಿಷ್ಬೀಯನಾದ ಎಲೀಯನಿಗೆ ಸರ್ವೇಶ್ವರನ ವಾಣಿವುಂಟಾಯಿತು. "ನೀನು ಹೋಗಿ ಸಮಾರಿಯದಲ್ಲಿ ವಾಸಿಸುವ ಇಸ್ರಯೇಲ್ ಅರಸನನ್ನು ಕಾಣು; ಅವನು ಈಗ ನಾಬೋತನ ದ್ರಾಕ್ಷಿ ತೋಟವನ್ನು ಸ್ವಾಧೀನ ಮಾಡಿಕೊಳ್ಳುವುದಕ್ಕಾಗಿ ಅಲ್ಲಿಗೆ ಹೋಗಿದ್ದಾನೆ. ಅವನಿಗೆ, ’ನೀನು ಕೊಲೆ ಮಾಡಿ, ಸೊತ್ತನ್ನು ಸಂಪಾದಿಸಿಕೊಂಡೆಯಲ್ಲವೇ? ಬಾಯಿಗಳು ನಾಬೋತನ ರಕ್ತವನ್ನು ನೆಕ್ಕಿದ ಸ್ಥಳದಲ್ಲೇ ನಿನ್ನ ರಕ್ತವನ್ನೂ ನೆಕ್ಕುವುವು, ಎನ್ನುತ್ತಾರೆ ಸರ್ವೇಶ್ವರ ಎಂದು ಹೇಳು." ಅಹಾಬನು ಎಲೀಯನನ್ನು ನೋಡಿ, "ಎಲೈ ವೈರಿಯೇ, ನೀನು ನನ್ನನ್ನು ಕಂಡು ಹಿಡಿದೆಯಾ?" ಎಂದು ಕೇಳಿದನು. ಅವನು, "ಹೌದು, ಕಂಡು ಹಿಡಿದೆ, ನೀನು ನಿನ್ನನ್ನು ಪಾಪಕ್ಕೆ ಮಾರಿಬಿಟ್ಟು, ಸರ್ವೇಶ್ವರ ದೃಷ್ಠಿಯಲ್ಲಿ ದ್ರೋಹಿಯಾದೆ. ಸರ್ವೇಶ್ವರ ನಿನ್ನನ್ನು ಕುರಿತು ,’ನಾನು ನಿನ್ನ ಮೈಮೇಲೆ ಕೇಡನ್ನು ಬರಮಾಡಿ, ನಿನ್ನನ್ನು ಕಸದಂತೆ ತೆಗೆದು ಹಾಕುವೆನು; ನಿನ್ನ ಸಂತಾನದ ಗಂಡಸರಲ್ಲಿ ಸ್ವತಂತ್ರರಾಗಲಿ, ಪರತಂತ್ರರಾಗಲಿ ಎಲ್ಲರನ್ನೂ ಇಸ್ರಯೇಲರ ಮಧ್ಯೆಯಿಂದ ಕಡಿದುಬಿಡುವೆನು. ನೀನು ಇಸ್ರಯೇಲರನ್ನು ಪಾಪಕ್ಕೆ ಪ್ರೇರಿಸಿ, ನನಗೆ ಕೋಪವನ್ನೆಬ್ಬಿಸಿದ್ದರಿಂದ ನೆಬಾಟನ ಮಗ ಯಾರೊಬ್ಬಾಮನ ಮನೆಗೂ ಅಹೀಯನ ಮಗ ಬಾಷನ ಮನೆಗೂ ಆದ ಗತಿ ನಿನ್ನ ಮನೆಗೂ ಆಗುವುದು.’ ಎನ್ನುತ್ತಾರೆ. ಇದಲ್ಲದೆ ಈಜೆಬೆಲಳನ್ನು ಕುರಿತು ಅವರು, ’ನಾಯಿಗಳು ಜೆಸ್ರೀಲ್ ಪಟ್ಟಣದ ಗೋಡೆಯ ಬಳಿಯಲ್ಲಿ ಆಕೆಯ ಶವವನ್ನು ತಿನ್ನುವುವು; ಅಹಾಬನ ಮನೆಯವರಲ್ಲಿ ಊರೊಳಗೆ ಸಾಯುವಂಥವರನ್ನು ನಾಯಿಗಳು ಅಡವಿಯಲ್ಲಿ ಸಾಯುವಂಥವರನ್ನು ಪಕ್ಷಿಗಳೂ ತಿಂದುಬಿಡುವುವು’ ಎಂದು ಹೇಳುತ್ತಾರೆ." ಎಂದನು. ಹೆಂಡತಿ ಈಜೆಬೆಲಳಿಂದ ಪ್ರಚೋದಿತನಾಗಿ ಸರ್ವೇಶ್ವರನ ದೃಷ್ಥಿಯಲ್ಲಿ ಕೆಟ್ಟದ್ದನ್ನು ಮಾಡುವುದಕ್ಕೆ ತನ್ನನ್ನೇ ಮಾರಿಬಿಟ್ಟ ಅಹಾಬನಂಥ ದುಷ್ಟನು ಇನ್ನೊಬ್ಬನಿರಲಿಲ್ಲ. ಸರ್ವೇಶ್ವರ ಇಸ್ರಯೇಲರ ನಾಡಿನಿಂದ ಓಡಿಸಿಬಿಟ್ಟ ಅಮೋರಿಯರಂತೆ ವಿಗ್ರಹಗಳನ್ನು ಪೂಜಿಸಿದ ಅಹಾಬನ ನಡತೆ ಬಹಳ ಅಸಹ್ಯವಾಗಿತ್ತು. ಅಹಾಬನು ಎಲೀಯನ ಮಾತುಗಳನ್ನು ಕೇಳಿ ತನ್ನ ಬಟ್ಟೆಯನ್ನು ದುಃಖದಿಂದ ಹರಿಸು ಕೊಂಡನು; ಹಗಲಿರುಳು ಮೈಮೇಲೆ ಗೋಣಿತಟ್ಟನ್ನು ಹಾಕಿಕೊಂಡು ಉಪವಾಸ ಮಾಡುತ್ತಾ ದೀನ ಮನಸ್ಸಿನಿಂದ ವರ್ತಿಸಿದನು. ಆದುದರಿಂದ ಸರ್ವೇಶ್ವರ ತಿಷ್ಬೀಯನಾದ ಎಲೀಯನಿಗೆ, "ಅಹಾಬನು ನನ್ನ ಮುಂದೆ ತನ್ನನ್ನೇ ತಗ್ಗಿಸಿಕೊಂಡದ್ದನ್ನು ನೋಡಿದಿಯಲ್ಲವೇ? ಅವನು ಹೀಗೆ ತನ್ನನ್ನು ತಗ್ಗಿಸಿಕೊಂಡದ್ದರಿಂದ ನಾನು ಮುಂತಿಳಿಸಿದ ಕೇಡನ್ನು ಅವನ ಜೀವಮಾನದಲ್ಲಿ ಬರಗೊಡುವುದಿಲ್ಲ. ಅವನ ಮಗನ ಕಾಲದಲ್ಲಿ ಅವನ ಮನೆಯವರ ಮೇಲೆ ಬರಮಾಡುವೆನು," ಎಂದು ಹೇಳಿದರು.


ಕೀರ್ತನೆ: 51: 3-4, 5-6, 11,16

ಶ್ಲೋಕ: ಕೃಪಾಳು ದೇವಾ, ಕರುಣಿಸಿನ್ನೆನು ನಿನಗೆ ದ್ರೋಹವೆಸಗಿದೆ.


ಶುಭಸ೦ದೇಶ: ಮತ್ತಾಯ: 5: 43-48


’ಮಿತ್ರರನ್ನು ಪ್ರೀತಿಸು, ಶತ್ರುವನ್ನು ದ್ವೇಷಿಸು’ ಎಂದು ಹೇಳಿರುವುದು ನಿಮಗೆ ತಿಳಿದೇ ಇದೆ. ನಾನು ಹೇಳುವುದನ್ನು  ಗಮನಿಸಿರಿ: ನಿಮ್ಮ ಶತ್ರುಗಳನ್ನು ಪ್ರೀತಿಸಿರಿ; ನಿಮ್ಮನ್ನು ಪೀಡಿಸುವವರಿಗಾಗಿ ಪ್ರಾರ್ಥಿಸಿರಿ. ಇದರಿಂದ ಸ್ವರ್ಗದಲ್ಲಿರುವ ನಿಮ್ಮ ತಂದೆಗೆ ನೀವು ಮಕ್ಕಳಾಗುವಿರಿ. ಅವರು ಸಜ್ಜನರ ಮೇಲೂ ದುರ್ಜನರ ಮೇಲೂ ತಮ್ಮ ಸೂರ್ಯನು ಉದಯಿಸುವಂತೆ ಮಾಡುತ್ತಾರೆ; ನೀತಿವಂತರ ಮೇಲೂ ಅನೀತಿವಂತರ ಮೇಲೂ ಮಳೆಗರೆಯುತ್ತಾರೆ. ನಿಮ್ಮನ್ನು ಪ್ರೀತಿಸುವವರನ್ನು ಮಾತ್ರ ನೀವು ಪ್ರೀತಿಸಿದರೆ ಅದರಿಂದೇನು ಫಲ? ಸುಂಕವಸೂಲಿ ಮಾಡುವವರೂ ಹಾಗೆ ಮಾಡುವುದಿಲ್ಲವೆ? ನಿಮ್ಮ ಮಿತ್ರರನ್ನುಮಾತ್ರ ನೀವು ಗೌರವಿಸಿದರೆ ಅದರಲ್ಲೇನು ವಿಶೇಷ? ಅನ್ಯ ಜನರೂ ಹಾಗೆ ಮಾಡುತ್ತಾರಲ್ಲವೇ? ಆದುದರಿಂದ ಸ್ವರ್ಗದಲ್ಲಿರುವ ನಿಮ್ಮ ತಂದೆ ಪರಿಪೂರ್ಣರಾಗಿರುವಂತೆ ನೀವೂ ಪರಿಪೂರ್ಣರಾಗಿರಿ" ಎಂದು ಯೇಸುಸ್ವಾಮಿ ಹೇಳಿದರು.

No comments:

Post a Comment