ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

30.09.22

ಮೊದಲನೇ ವಾಚನ: ಯೋಬ 38:1, 12-21, 40:3-5

ಬಿರುಗಾಳಿಯೊಳಗಿಂದ ಸರ್ವೇಶ್ವರ ಯೋಬನಿಗೆ ಕೊಟ್ಟ ಪ್ರತ್ಯುತ್ತರ ಇದು.  "ನಿನ್ನ ಜೀವಮಾನದಲ್ಲಿ ಎಂದಾದರೂ 'ಅರುಣೋದಯವಾಗಲಿ' ಎಂದು ಆಜ್ಞಾಪಿಸಿರುವೆಯಾ? 'ಧರಣಿಯ ಅಂಚುಗಳನ್ನು ಹಿಡಿದು ದುರುಳರನ್ನು ಅದರೊಳಗಿಂದ ಒದರಿಬಿಡು' ಎಂದು ಅದಕ್ಕೆ ಅಪ್ಪಣೆಮಾಡಿದೆಯಾ? ಮುದ್ರೆ ಒತ್ತಿದ ಜೇಡಿ ಮಣ್ಣಿನಂತೆ ಭೂಮಿ ರೂಪ ತಾಳುತ್ತದೆ. ಅದು ನೆರಿಗೆ ಕಟ್ಟಿದ ಉಡಿಗೆಯಂತೆ ಕಾಣಿಸುತ್ತದೆ. ದುರುಳರಿಂದ ಬೆಳಕನ್ನು ಹಿಂತೆಗೆದುಕೊಳ್ಳಲಾಗುವುದು. ಅವರು ಎತ್ತಿದ ಕೈಯನ್ನು ಮುರಿಯಲಾಗುವುದು. ನಿನೆಂದಾದರೂ ಸಮುದ್ರದ ಬುಗ್ಗೆಗಳೊಳಗೆ ಸೇರಿದ್ದೆಯೋ? ಸಾಗರದ ತಳಹದಿಯಲ್ಲಿ ತಿರುಗಾಡಿರುವೆಯೋ? ಮರಣದ ದ್ವಾರಗಳು ನಿನಗೆ ಗೋಚರವಾಗಿರುವುವೋ? ಘೋರಾಂಧಕಾರದ ಕದಗಳನ್ನು ನೀನು ಕಂಡಿರುವೆಯೋ? ಭೂವಿಸ್ತಾರವನ್ನು ಗ್ರಹಿಸಿರುವೆಯೋ? ಇದೆಲ್ಲವೂ ನಿನಗೆ ತಿಳಿದಿದ್ದರೆ ಹೇಳು, ನೋಡೋಣ! ಬೆಳಕಿನ ನಿವಾಸಕ್ಕೆ ಹೋಗುವ ಮಾರ್ಗವೆಲ್ಲಿ? ಕತ್ತಲು ವಾಸಮಾಡುವ ಸ್ಥಳವೆಲ್ಲಿ? ನೀವು ಅವುಗಳನ್ನು ಅವುಗಳ ಪ್ರಾಂತ್ಯಕ್ಕೆ ಕರೆದೊಯ್ಯಬಲ್ಲೆಯಾ? ಅವುಗಳ ನಿವಾಸಕ್ಕೆ ಹಾದಿಯನ್ನು ಕಂಡು ಹಿಡಿಯಬಲ್ಲೆಯಾ? ಇದನ್ನು ಬಲ್ಲೆಯಾದರೆ ನೀನು ಆಗಲೇ ಹುಟ್ಟಿದ್ಧಿರಬೇಕು ಮತ್ತು ಈಗ ಬಹಳ ವೃದ್ಧನಾಗಿರಬೇಕು!" ಆಗ ಯೋಬನು ಸರ್ವೇಶ್ವರಸ್ವಾಮಿಗೆ ಇಂತೆಂದನು; "ಅಯ್ಯೋ, ನಾನು ಅಲ್ಪನೇ ಸರಿ ತಮಗೇನು ಪ್ರತ್ಯುತ್ತರ ಹೇಳಲಿ? ಬಾಯಿಯ ಮೇಲೆ ಕೈಯಿಡುವೆ ಮೌನತಾಳಿ. ಒಮ್ಮೆ ಮಾತಾಡಿದೆ, ಮತ್ತೆ ಮಾತಾಡೆನು ಹೌದು, ಇನ್ನೊಮ್ಮೆ ಮಾತಾಡಿದೆ, ಹೆಚ್ಚು ಮಾತಾಡೆನು.

 ಕೀರ್ತನೆ: 139:1-3, 7-8, 9-10, 13, 14ab
 ಶ್ಲೋಕ: ಪ್ರಭೂ ನಡೆಸೆನ್ನನು ಆ ಸನಾತನ ಪಥದಲಿ.

ಶುಭ ಸಂದೇಶ : ಲೂಕ 10:13-16

"ಕೊರಾಜ್ಜಿನ್ ಪಟ್ಟಣವೇ, ನಿನಗೆ ಧಿಕ್ಕಾರ! ಬೆತ್ಸಾಯಿದ ಪಟ್ಟಣವೇ, ನಿನಗೆ ಧಿಕ್ಕಾರ ನಿಮ್ಮಲ್ಲಿ ಮಾಡಿದ ಅದ್ಬುತ ಕಾರ್ಯಗಳನ್ನು ಟೈರ್ ಮತ್ತು ಸಿದೋನ್ ಪಟ್ಟಣಗಳಲ್ಲಿ ಮಾಡಿದ್ದರೆ, ಅಲ್ಲಿಯವರು ಎಂದೋ ಗೋಣಿತಟ್ಟನ್ನು ಉಟ್ಟುಕೊಂಡು, ಬೂದಿಯನ್ನು ಬಳೆದುಕೊಂಡು ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗುತ್ತಿದ್ದರು. ಆದುದರಿಂದ ತೀರ್ಪಿನ ದಿನ ಟೈರ್ ಮತ್ತು ಸಿದೋನಿನ ಗತಿಯು ನಿಮಗಿಂತಲೂ ಸಹನೀಯವಾಗಿರುವುದು. ಎಲೈ ಕಫೆರ್ನವುಮ್ ಪಟ್ಟಣವೇ. ನೀನು ಸ್ವರ್ಗಕ್ಕೆರುವೆ," ಎಂದು ನೆನಸುತ್ತಿಯೋ? ಇಲ್ಲ, ಪಾತಾಳಕ್ಕೆ ಇಳಿಯುವೆ,"  ಎಂದರು ಯೇಸುಸ್ವಾಮಿ. ಆನಂತರ ತಮ್ಮ ಶಿಷ್ಯರನ್ನು ಉದ್ದೇಶಿಸಿ, "ನಿಮ್ಮನ್ನು ಆಲಿಸುವನು ನನ್ನನ್ನೇ ಆಲಿಸುತ್ತಾನೆ: ನಿಮ್ಮನ್ನು ಅಲಕ್ಷ್ಯ ಮಾಡುವವನು ನನ್ನನ್ನೆ ಅಲಕ್ಷ್ಯ ಮಾಡುತ್ತಾನೆ ನನ್ನನ್ನು ಅಲಕ್ಷ್ಯ ಮಾಡುವವನಾದರೋ ನನ್ನನ್ನು ಕಳುಹಿಸಿದಾತನನ್ನೇ ಅಲಕ್ಷ್ಯ ಮಾಡುತ್ತಾನೆ," ಎಂದರು.

29.09.22 - " ಇದಕ್ಕೂ ಮಿಗಿಲಾದವುಗಳನ್ನು ನೀನು ಕಾಣುವೆ,”

ಮೊದಲನೇ ವಾಚನ: ದಾನಿಯೇಲನು 7:9-10, 13-14

ನಾನು ನೋಡುತ್ತಿದ್ದ ಹಾಗೆ: ಸಿಂಹಾಸನಗಳನ್ನು ಹಾಕಲಾಯಿತು. ಮಹಾವೃದ್ಧನೊಬ್ಬನು ಆಸೀನನಾದನು. ಆತನ ಉಡುಪು ಬೆಳ್ಳಗಿತ್ತು ಹಿಮದಂತೆ. ಆತನ ತಲೆಗೂದಲಿತ್ತು ನಿರ್ಮಲವಾದ ಬಿಳಿಯ ಉಣ್ಣೆಯಂತೆ. ಆತನ ಸಿಂಹಾಸನ ಅಗ್ನಿಜ್ವಾಲೆಗಳು. ಧಗಧಗಿಸುವ ಬೆಂಕಿ ಅದರ ಚಕ್ರಗಳು.  ಆ ಸಿಂಹಾಸನದ ಸಮ್ಮುಖದಿಂದ ಪ್ರಜ್ವಲ ಪ್ರವಾಹವೊಂದು ಉಕ್ಕಿ ಹರಿದುಬಂದಿತು. ಲಕ್ಷೋಪಲಕ್ಷ ದೂತರು ಆತನಿಗೆ ಸೇವೆಸಲ್ಲಿಸುತ್ತಿದ್ದರು. ಕೋಟ್ಯಾನುಕೋಟಿ ಕಿಂಕರರು ಆತನ ಮುಂದೆ ನಿಂತಿದ್ದರು. ನ್ಯಾಯಸಭೆಯವರು ತೀರ್ಪುನೀಡಲು ಕುಳಿತುಕೊಂಡರು. ಪಟ್ಟಿಪುಸ್ತಕಗಳನ್ನು ತೆರೆಯಲಾಯಿತು. ನಾನು ಕಂಡ ರಾತ್ರಿಯ ಕನಸಿನಲ್ಲಿ ನರಪುತ್ರನಂತಿರುವವನು ಆಕಾಶದ ಮೇಘಗಳೊಂದಿಗೆ ಬಂದು ಆ ಮಹಾವೃದ್ಧನನ್ನು ಸಮೀಪಿಸಿದನು. ಅವನನ್ನು ಆತನ ಸನ್ನಿಧಿಗೆ ತಂದರು.  ಸಕಲ ರಾಷ್ಟ್ರ-ಕುಲ-ಭಾಷೆಗಳವರು ಅವನಿಗೆ ಸೇವೆ ಸಲ್ಲಿಸಲೆಂದು ಅವನಿಗೆ ದೊರೆತನ, ಘನತೆ, ರಾಜ್ಯತ್ವ ಇವುಗಳನ್ನು ಕೊಡಲಾಯಿತು. ಅವನ ಆಳ್ವಿಕೆಗೆ ಅಂತ್ಯವಿಲ್ಲ, ಅದು ಶಾಶ್ವತವಾದುದು, ಅವನ ರಾಜ್ಯ ಎಂದಿಗೂ ಅಳಿಯದು!

ಕೀರ್ತನೆ: 138:1-2, 2-3, 4-5

ಶ್ಲೋಕ: ಹೃದಯಪೂರ್ವಕ ವಂದನೆ ಪ್ರಭೂ ನಿನಗೆ, ದೇವರುಗಳೆದುರಿಗೆ ನನ್ನ ಕೀರ್ತನೆ ನಿನಗೆ. 

ಶುಭಸಂದೇಶ: ಯೋವಾನ್ನ 1:47-51


ತಮ್ಮ ಬಳಿಗೆ ಬರುತ್ತಿದ್ದ ನತಾನಿಯೇಲನನ್ನು ಕಂಡ ಯೇಸು, “ಇಗೋ ನೋಡಿ, ನಿಜವಾದ ಇಸ್ರಯೇಲನು, ಈತನಲ್ಲಿ ಕಪಟವಿಲ್ಲ,” ಎಂದು ನುಡಿದರು.  ನತಾನಿಯೇಲನು, “ನನ್ನ ಪರಿಚಯ ನಿಮಗೆ ಹೇಗಾಯಿತು?” ಎಂದು ಕೇಳಲು ಯೇಸು, “ಫಿಲಿಪ್ಪನು ನಿನ್ನನ್ನು ಕರೆಯುವ ಮೊದಲೇ ನೀನು ಅಂಜೂರದ ಮರದಡಿ ಇದ್ದಾಗ ನಾನು ನಿನ್ನನ್ನು ಕಂಡೆ,” ಎಂದು ಉತ್ತರಕೊಟ್ಟರು.  ಅದಕ್ಕೆ ನತಾನಿಯೇಲನು, “ಗುರುದೇವಾ’ ದೇವರ ಪುತ್ರ ನೀವೇ; ಇಸ್ರಯೇಲರ ಅರಸ ನೀವೇ,” ಎಂದನು.  ಆಗ ಯೇಸು, “ಅಂಜೂರದ ಮರದಡಿಯಲ್ಲಿ ನಿನ್ನನ್ನು ಕಂಡೆ ಎಂದು ನಾನು ಹೇಳಿದ ಮಾತ್ರಕ್ಕೆ ಇಷ್ಟೊಂದು ವಿಶ್ವಾಸವೆ? ಇದಕ್ಕೂ ಮಿಗಿಲಾದವುಗಳನ್ನು ನೀನು ಕಾಣುವೆ,” ಎಂದು ನುಡಿದರು.  ತಮ್ಮ ಮಾತನ್ನು ಮುಂದುವರೆಸುತ್ತಾ, “ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ. ಸ್ವರ್ಗವು ತೆರೆದಿರುವುದನ್ನೂ ನರಪುತ್ರನ ಮುಖಾಂತರ ದೇವದೂತರು ಏರುವುದನ್ನೂ ಇಳಿಯುವುದನ್ನೂ ನೀವು ಕಾಣುವಿರಿ,” ಎಂದು ಹೇಳಿದರು.

28.09.22

ಮೊದಲನೇ ವಾಚನ: ಯೋಬ 9:1-12, 14-16

ಯೋಬನು ಉತ್ತರಿಸುತ್ತಾ ಹೀಗೆಂದನು: “ಹೌದು, ನೀನು ಹೇಳುವುದು ಸರಿಯೆಂದು ನನಗೆ ಗೊತ್ತು: ನರಮಾನವ ದೇವರ ಮುಂದೆ ಸತ್ಯವಂತನಾಗಿರುವುದೆಂತು? ಯಾರಾದರೂ ಆತನೊಡನೆ ವಾದಿಸಲು ಇಷ್ಟಪಟ್ಟರೂ ಆತನ ಸಹಸ್ರ ಪ್ರಶ್ನೆಗಳೊಂದಕ್ಕೂ ಉತ್ತರಿಸಲಾಗದು. ದೇವರ ಹೃದಯ ಧೀಮಂತ, ಅವರ ಶಕ್ತಿ ಅತುಳ ಆತನನ್ನು ಪ್ರತಿಭಟಿಸಿ ಜಯಗಳಿಸಿದವನಿಲ್ಲ. ಆತ ಪರ್ವತಗಳನ್ನೇ ಸರಿಸುತ್ತಾನೆ ಅರಿಯದಂತೆ ಅವುಗಳನ್ನು ಉರುಳಿಸುತ್ತಾನೆ ಸಿಟ್ಟುಗೊಂಡಂತೆ. ಅದರ ಸ್ಥಾನದಿಂದ ಭೂಮಿಯನೆ ಕದಲಿಸುತ್ತಾನೆ ಅದರ ಸ್ತಂಭಗಳು ನಡುಗುವಂತೆ ಮಾಡುತ್ತಾನೆ. ಆತ ಆಜ್ಞೆ ಮಾಡಿದ್ದೇ ಆದರೆ ಸೂರ್ಯನು ಉದಯಿಸನು ಮುದ್ರೆ ಹಾಕಿದ್ದೇ ಆದರೆ ನಕ್ಷತ್ರವೂ ಮಿನುಗದು. ಆಕಾಶಮಂಡಲವನ್ನು ಹರಡಿದವನು ದೇವರೇ ಕಡಲಿನ ತರಂಗಗಳನ್ನು ಮೆಟ್ಟಿದವನು ಆತನೊಬ್ಬನೇ. ದಕ್ಷಿಣದ ನಕ್ಷತ್ರಗ್ರಹಗಳನೂ ಸಪ್ತರ್ಷಿಮಂಡಲವನೂ ಮೃಗಶಿರವನೂ ಕೃತ್ತಿಕೆಯನೂ ನಿರ್ಮಿಸಿದವನು ಆತನೇ. ಅಪ್ರತಿಮ ಮಹಾಕಾರ್ಯಗಳನ್ನು ಎಸಗಿರುವನು ಅಸಂಖ್ಯ ಅದ್ಭುತಕರ ಪವಾಡಗಳನ್ನು ಮಾಡಿರುವನು. ಇಗೋ, ಪಕ್ಕದಲ್ಲೇ ಆತ ದಾಟಿಹೋದರೂ ಕಾಣಿಸನು ನನ್ನ ಮುಂದುಗಡೆಯೇ ಹಾದುಹೋದರೂ ತಿಳಿಯದು. ಕಿತ್ತುಕೊಂಡು ಹೋಗುವ ಆತನಿಗೆ ಅಡ್ಡಿಮಾಡುವವರಾರು? ‘ಏನು ಮಾಡುತ್ತಿರುವೆ?’ ಎಂದು ಆತನನ್ನು ಕೇಳುವವರಾರು? ದೇವರೊಂದಿಗೆ ವಾದಿಸಲು ನಾನು ಅಶಕ್ತನು ಆತನಿಗೆ ತಕ್ಕ ಉತ್ತರ ಕೊಡಲು ನಾನೆಷ್ಟರವನು! ನಾನು ಸತ್ಯವಂತನಾಗಿದ್ದರೂ ವಾದಿಸಲಾರೆನು ನನ್ನ ನ್ಯಾಯಾಧೀಶನಲ್ಲಿ ದಯೆಯನು ಕೋರುವೆನು. ನಾನು ಕರೆದಾಗ ಓಗೊಟ್ಟಿದ್ದರೂ ನನ್ನ ವಿಜ್ಞಾಪನೆಯನ್ನು ಆಲಿಸುವನೆಂದು ನಂಬುತ್ತಿರಲಿಲ್ಲ.

ಕೀರ್ತನೆ: 88:10-11, 12-13, 14-15

ಶ್ಲೋಕ: ಓ ಪ್ರಭೂ, ನನ್ನ ಕೂಗು ನಿನ್ನ ಕಿವಿಗೆ ಬೀಳಲಿ.  

ಶುಭಸಂದೇಶ: ಲೂಕ 9:57-62

ಯೇಸುಸ್ವಾಮಿ ತಮ್ಮ ಶಿಷ್ಯರೊಂದಿಗೆ ದಾರಿಯಲ್ಲಿ ಹೋಗುತ್ತಿದ್ದಾಗ ಒಬ್ಬನು ಯೇಸುವಿಗೆ, “ನೀವು ಎಲ್ಲಿಗೆ ಹೋದರೂ ನಿಮ್ಮನ್ನು ಹಿಂಬಾಲಿಸುತ್ತೇನೆ,” ಎಂದನು.  ಯೇಸು ಅವನಿಗೆ, “ನರಿಗಳಿಗೆ ಗುಹೆಗಳುಂಟು; ಆಕಾಶದ ಪಕ್ಷಿಗಳಿಗೆ ಗೂಡುಗಳುಂಟು; ಆದರೆ ನರಪುತ್ರನಿಗೆ ತಲೆಯಿಡುವುದಕ್ಕೂ ಸ್ಥಳವಿಲ್ಲ,” ಎಂದರು.  ಇನ್ನೊಬ್ಬನಿಗೆ ಯೇಸು, “ನನ್ನನ್ನು ಹಿಂಬಾಲಿಸು,” ಎಂದು ಹೇಳಿದಾಗ ಅವನು, “ಸ್ವಾಮೀ, ಮೊದಲು ನನ್ನ ತಂದೆಯ ಉತ್ತರಕ್ರಿಯೆಗಳನ್ನು ಮುಗಿಸುವ ತನಕ ಸಮಯಕೊಡಿ,” ಎಂದನು.  ಅವನಿಗೆ ಯೇಸು, “ಸತ್ತವರೇ ತಮ್ಮ ಸತ್ತವರನ್ನು ಸಮಾಧಿಮಾಡಿಕೊಳ್ಳಲಿ; ನೀನಾದರೋ, ಹೋಗು, ದೇವರ ಸಾಮ್ರಾಜ್ಯವನ್ನು ಪ್ರಚಾರಮಾಡು,” ಎಂದು ಹೇಳಿದರು.  ಮತ್ತೊಬ್ಬನು, “ನಿಮ್ಮನ್ನು ಹಿಂಬಾಲಿಸುತ್ತೇನೆ ಪ್ರಭೂ, ಆದರೆ ಮೊದಲು ಮನೆಯವರನ್ನು ಬೀಳ್ಕೊಟ್ಟು ಬರಲು ಅಪ್ಪಣೆ ಆಗಬೇಕು,” ಎಂದನು. 62ಯೇಸು ಅವನನ್ನು ನೋಡಿ, “ನೇಗಿಲಿಗೆ ಕೈಹಾಕಿ ಹಿಂದಕ್ಕೆ ನೋಡುವವನು ದೇವರ ಸಾಮ್ರಾಜ್ಯಕ್ಕೆ ತಕ್ಕವನಲ್ಲ,” ಎಂದರು.

27.09.22

ಮೊದಲನೇ ವಾಚನ: ಯೋಬ: 3:1-3, 11-17, 20-23

ಕೊನೆಗೆ ಯೋಬನೇ ಬಾಯ್ದೆರೆದು ತನ್ನ ಹುಟ್ಟು ದಿನವನ್ನು ಹೀಗೆಂದು ಶಪಿಸಿದ: "ಹಾಳಾಗಿ ಹೋಗಲಿ ನಾ ಹುಟ್ಟಿದ ದಿನವು "ಗಂಡು ಮಗುವನ್ನು ಗರ್ಭ ಧರಿಸಿದೆ" ಎಂದಾ ಇರುಳು! ಹುಟ್ಟುವಾಗಲೇ ನಾನೇಕೆ ಸಾಯಲಿಲ್ಲ? ಉದರದಿಂದ ಬಂದೊಡನೆ ನಾನೇಕೆ ಮಡಿಯಲಿಲ್ಲ? ತಾಯಿಯ ಮಡಿಲು ನನ್ನನು ಹೊತ್ತುದೇಕೆ? ಆ ತಾಯ್ಮೊಲೆಗಳು  ನನಗೆ ಕುಡಿಯ ಕೊಟ್ಟುದೇಕೆ? ಆಗ ಸತ್ತಿದ್ದರೆ  ನಾನೀಗ ಮೌನವಾಗಿ ಮಲಗಿರುತ್ತಿದ್ದೆ. ಕಣ್ಮುಚ್ಚಿ ಪ್ರಶಾಂತವಾಗಿ ನಿದ್ರಿಸುತ್ತಿದ್ದೆ. ಪಾಳು ಪೊಡವಿಯಲ್ಲಿ ನೆಲಮಾಳಿಗೆಯನ್ನು ನಿರ್ಮಿಸಿಕೊಂಡಿದ್ದ ರಾಜ-ಮಂತ್ರಿಗಳೊಡನೆ ನಾನಿರುತ್ತಿದ್ದೆ.  ಮನೆಗಳಲ್ಲಿ ತಮಗಾಗಿ ಬೆಳ್ಳಿ ಬಂಗಾರಗಳನ್ನು ತುಂಬಿಸಿಕೊಂಡಿದ್ದ ಅಧಿಪತಿಗಳೊಡನೆ ನಾನು ಶ್ರಮಿಸುತ್ತಿದ್ದೆ. ಗರ್ಭಸ್ರಾವವಾಗಿ ಬಿದ್ದು ಹೂಳಿಟ್ಟ ಪಿಂಡದಂತೆ ಬೆಳಕನ್ನೇ ಕಾಣದೇ  ಸತ್ತುಹೋದ ಕೂಸುಗಳಂತೆ ಪ್ರಾಯಶಃ ಜನ್ಮವೇ ಇಲ್ಲದವನಾಗಿ ನಾನಿರುತ್ತಿದ್ದೆ. ದಣಿದವರಿಗೆ ದೊರಕುವುದು ಆ ಕೂಪದಲಿ ವಿಶ್ರಾಂತಿ, ಅಣಗುವುದಲ್ಲಿ ದುರುಳರು ಕೊಡುವ ಹಾವಳಿ. ಕಷ್ಟದಲ್ಲಿರುವವನಿಗೆ ಏತಕ್ಕೆ ಬೆಳಕು? ದುಃಖ ಪೀಡಿತನಿಗೆ ಏತಕ್ಕೆ ಬದುಕು? ಎಷ್ಟು ಅಗೆದರೂ ದೊರಕದು ಅಂಥವರಿಗೆ ನಿಧಿ ನಿಕ್ಷೇಪ ಅದಕಿಂತ ಮಿಗಿಲಾಗಿ ಬಯಸಿದರೂ ಬಾರದು ಮರಣ. ಅವರು ಸಮಾಧಿಗೆ ಸೇರುವಾಗ ಆಗುವುದು ಅವರಿಗೆ ಅಮಿತಾನಂದ. ಬೆಳಕು ಏತಕೆ ದಾರಿ ಮುಚ್ಚಿರುವವನಿಗೆ? ತನ್ನ ಸುತ್ತಲೂ ದೇವರೆ ಬೇಲಿ ಹಾಕಿರುವವನಿಗೆ?"

ಕೀರ್ತನೆ: 88:2-3, 4-5, 6, 7-8
ಶ್ಲೋಕ  ಪ್ರಭೂ, ನನ್ನ ಕೂಗು ನಿನ್ನ ಕಿವಿಗೆ ಬೀಳಲಿ.

ಶುಭಸಂದೇಶ: ಲೂಕ  9:51-56 

ತಾವು ಸ್ವರ್ಗಾರೋಹಣವಾಗುವ ದಿನಗಳು ಸಮೀಪಿಸಲು ಯೇಸುಸ್ವಾಮಿ ಜೆರುಸಲೇಮಿಗೆ ಅಭಿಮುಖವಾಗಿ ಹೊರಡಲು ನಿರ್ಧರಿಸಿದರು. ಅಲ್ಲದೆ ತಮಗೆ ಮುಂದಾಗಿ ದೂತರನ್ನು ಕಳುಹಿಸಿದರು. ಇವರು ಹೊರಟು ಯೇಸುವಿಗೆ ಬೇಕಾದದುದನ್ನು ಸಿದ್ದಮಾಡಲು ಸಮಾರಿಯದ ಒಂದು ಹಳ್ಳಿಗೆ ಬಂದರು. ಯೇಸು ಜೆರುಸಲೇಮಿಗೆ ಹೋಗುತ್ತಿದ್ದ ಕಾರಣ ಅವರನ್ನು ಅಲ್ಲಿಯ ಜನರು ಬರಗೊಳಿಸಲಿಲ್ಲ. ಇದನ್ನು ಕಂಡು ಶಿಷ್ಯರಾದ ಯಕೋಬ ಮತ್ತು ಯೊವಾನ್ನ, "ಆಕಾಶದಿಂದ ಅಗ್ನಿಮಳೆ ಸುರಿದು ಇವರನ್ನು ನಾಶ ಮಾಡಲಿ ಎಂದು ನೀವು ಆಜ್ಞೆ ಮಾಡಬಹುದಲ್ಲವೆ?" ಎಂದರು. ಯೇಸು ಅವರ ಕಡೇ ತಿರುಗಿ "ನೀವು ಎಂಥ ಸ್ವಭಾವಿಗಳೆಂದು ನಿಮಗೇ ತಿಳಿಯದು. ನರಪುತ್ರನು ಬಂದಿರುವುದು ಮಾನವ ಜೀವಿಗಳ ವಿನಾಶಕ್ಕೆ ಅಲ್ಲ, ಉದ್ಧಾರಕ್ಕೆ" ಎಂದು ಅವರನ್ನು ಖಂಡಿಸಿದರು. ಆನಂತರ ಯೇಸು ಮತ್ತು ಶಿಷ್ಯರು ಬೇರೆ ಹಳ್ಳಿಗೆ ಹೋದರು.

ಚಿಂತನೆ : ಮನ್ನಣೆಯ ಆಸೆ ಎಂಬುದು ಸ್ವತಃ: ಮನುಷ್ಯನಷ್ಟೇ  ಪುರಾತನ. ಜೆರುಸಲೇಮಿನ ಮಾರ್ಗದಲ್ಲಿ ತಿರಸ್ಕಾರಕ್ಕೆ ಒಳಗಾದಾಗ ಸಹಜವೆಂಬಂತೆ  'ಸಿಡಿಲಮರಿ'ಗಳಾದ ಯಕೋಬ ಯೋವಾನ್ನರು ಕೋಪಗೊಳ್ಳುತ್ತಾರೆ. ಕ್ರಿಸ್ತನದು ಮಾತ್ರ ಎಂದಿನ ಸಂಯಮ. ಇದು ಒಂದು ರೀತಿಯಲ್ಲಿ ಮುಂದಿನ ದಿನಗಳಿಗಾಗಿ ಸಿದ್ಧತೆಯೂ ಹೌದು. ಇದಕ್ಕಿಂತ ಘೋರ ತಿರಸ್ಕಾರ ಜೆರುಸಲೇಮಿನಲ್ಲಿ ಕಂಡರು ಯೇಸು. ಯೇಸುವಿನ  ಸ್ವರ್ಗಾರೋಹಣ ನಂತರ ಇದೇ ಶಿಷ್ಯರು ಅನುಭವಿಸಿದ್ದೂ ತಿರಸ್ಕಾರವೇ. ಆದರೆ ಇಂದಿನ ಘಟನೆಯಲ್ಲಿ ಅರಿತ ಪಾಠ ಮುಂದೆ ಅವರಿಗೆ ಉಪಯೋಗಕ್ಕೆ ಬಂದಿರಬಹುದು. ಮಾನವನ ತಿರಸ್ಕಾರಕ್ಕೆ ಕುಗ್ಗದೆ ದೇವರ ಅಪ್ಪುಗೆಗಾಗಿ ಹಂಬಲಿಸೋಣ 

26.09.22 - "ಯಾವನು ನನ್ನ ಹೆಸರಿನಲ್ಲಿ ಈ ಮಗುವನ್ನು ಸ್ವೀಕರಿಸುತ್ತಾನೋ ಅವನು ನನ್ನನ್ನೇ ಸ್ವೀಕರಿಸುತ್ತಾನೆ;"

ಮೊದಲನೇ ವಾಚನ: ಯೋಬ 1:6-22

ಒಮ್ಮೆ ಸ್ವರ್ಗನಿವಾಸಿಗಳು ಸರ್ವೇಶ್ವರಸ್ವಾಮಿಯ ಸನ್ನಿಧಿಯಲ್ಲಿ ಓಲಗಿಸಿದ್ದರು. ಸೈತಾನನೂ ಅಲ್ಲಿಗೆ ಬಂದನು.  ಸರ್ವೇಶ್ವರ ಸೈತಾನನನ್ನು ನೋಡಿ, “ಎಲ್ಲಿಂದ ಬಂದೆ?” ಎಂದು ಕೇಳಿದರು. ಅದಕ್ಕೆ ಅವನು, “ಭೂಲೋಕದಲ್ಲಿ ಗಸ್ತುತಿರುಗಿ ಬಂದಿದ್ದೇನೆ” ಎಂದನು.  ಆಗ ಸರ್ವೇಶ್ವರ, “ನನ್ನ ದಾಸ ಯೋಬನನ್ನು ಗಮನಿಸಿದೆಯಾ? ಆತನು ದೋಷರಹಿತ, ಸತ್ಯವಂತ, ದೇವರಲ್ಲಿ ಭಯಭಕ್ತಿಯುಳ್ಳವನು, ಕೆಟ್ಟದ್ದನ್ನು ತೊರೆದು ಬಾಳುವವನು. ಆತನಿಗೆ ಸರಿಸಮಾನನು ಭೂಲೋಕದಲ್ಲಿ ಎಲ್ಲಿಯೂ ಸಿಗನು,” ಎಂದು ಹೇಳಿದರು.  ಅದಕ್ಕೆ ಸೈತಾನನು ಹೀಗೆ ಎಂದನು : “ಲಾಭವಿಲ್ಲದೆ ಯೋಬನು ನಿಮ್ಮಲ್ಲಿ ಭಯಭಕ್ತಿ ಇಟ್ಟಿದ್ದಾನೆಯೇ?  ನೀವು ಆತನಿಗೂ ಆತನ ಎಲ್ಲ ಆಸ್ತಿಪಾಸ್ತಿಗೂ ಬೇಲಿ ಹಾಕಿ ಭದ್ರಪಡಿಸಿದ್ದೀರಲ್ಲವೇ? ಆತನು ಕೈ ಹಾಕಿದ ಕೆಲಸ ಸಫಲವಾಗುವಂತೆ ಮಾಡಿದ್ದೀರಲ್ಲವೆ? ಎಂದೇ ಆತನ ಸಿರಿಸಂಪತ್ತು ಈ ನಾಡಿನಲ್ಲಿ ಬೆಳೆಯುತ್ತಾ ಬಂದಿದೆ.  ಆದರೆ ನೀವು ಕೈಹಾಕಿ ಆತನ ಸೊತ್ತನ್ನೆಲ್ಲಾ ಅಳಿಸಿಬಿಡಿ. ಆಗ ಆತನು ನಿಮ್ಮನ್ನು ಮುಖಾಮುಖಿಯಾಗಿ ನಿಂದಿಸುತ್ತಾನೋ ಇಲ್ಲವೋ ಎಂದು ನೋಡುವಿರಂತೆ!” ಎಂದನು. ಸರ್ವೇಶ್ವರ ಸೈತಾನನಿಗೆ, “ನೋಡು, ಆತನ ಆಸ್ತಿಪಾಸ್ತಿಯೆಲ್ಲ ನಿನ್ನ ಕೈವಶಕ್ಕೆ ಬಿಟ್ಟಿದ್ದೇನೆ. ಆತನ ಮೈಮೇಲೆ ಮಾತ್ರ ಕೈಹಾಕಬೇಡ,” ಎಂದು ಅಪ್ಪಣೆಕೊಟ್ಟರು. ಕೂಡಲೆ ಸೈತಾನನು ಸರ್ವೇಶ್ವರರ ಸನ್ನಿಧಾನದಿಂದ ಹೊರಟುಹೋದನು. ಯೋಬನ ಆಸ್ತಿಪಾಸ್ತಿಯ ಅಳಿವು, ಪುತ್ರಪುತ್ರಿಯರ ಮರಣ ಇದಾದ ಬಳಿಕ ಯೋಬನ ಪುತ್ರಪುತ್ರಿಯರು ತಮ್ಮ ಹಿರಿಯಣ್ಣನ ಮನೆಯಲ್ಲಿ ಔತಣಮಾಡುತ್ತಿದ್ದರು.  ಆಗ ದೇವದೂತನೊಬ್ಬನು ಯೋಬನ ಬಳಿಗೆ ಬಂದು, “ನಿಮ್ಮ ಎತ್ತುಗಳು ಉಳುತ್ತಾ ಇದ್ದವು; ಕತ್ತೆಗಳು ಹತ್ತಿರದಲ್ಲೆ ಮೇಯುತ್ತಾ ಇದ್ದವು. ಅಷ್ಟರಲ್ಲಿ, ಶೆಬದವರು ಬಂದು, ಮೇಲೆ ಬಿದ್ದು, ಅವುಗಳನ್ನು ಹೊಡೆದುಕೊಂಡು ಹೋದರು. ಕೂಲಿ ಆಳುಗಳನ್ನು ಕತ್ತಿಯಿಂದ ಕೊಂದುಹಾಕಿದರು. ನಾನೊಬ್ಬನೇ ತಲೆತಪ್ಪಿಸಿಕೊಂಡು ಈ ಸುದ್ದಿಯನ್ನು ನಿಮಗೆ ಮುಟ್ಟಿಸಲು ಓಡಿಬಂದೆ,” ಎಂದನು. ಅವನು ಮಾತಾಡಿ ಮುಗಿಸುವಷ್ಟರಲ್ಲೇ ಮತ್ತೊಬ್ಬನು ಬಂದು, “ದೇವರು ಆಕಾಶದಿಂದ ಬೆಂಕಿ ಸುರಿಸಿದರು. ಅದು ಕುರಿಗಳನ್ನೂ, ಕೂಲಿ ಆಳುಗಳನ್ನೂ ಸುಟ್ಟು ಭಸ್ಮಮಾಡಿತು. ನಾನೊಬ್ಬನೇ ತಲೆತಪ್ಪಿಸಿಕೊಂಡು ಈ ಸುದ್ದಿಯನ್ನು ನಿಮಗೆ ಮುಟ್ಟಿಸಲು ಓಡಿಬಂದೆ,” ಎಂದನು. ಅಷ್ಟರಲ್ಲಿ ಇನ್ನೊಬ್ಬನು ಬಂದು, “ಕಸ್ದೀಯರು ಮೂರು ಗುಂಪುಗಳಾಗಿ ಬಂದು, ಮೇಲೆ ಬಿದ್ದು, ಒಂಟೆಗಳನ್ನು ಹೊಡೆದುಕೊಂಡುಹೋದರು. ಅಲ್ಲದೆ ಆ ಕೂಲಿ ಆಳುಗಳನ್ನು ಕತ್ತಿಯಿಂದ ಸಂಹರಿಸಿದರು. ನಾನೊಬ್ಬನೇ ತಲೆತಪ್ಪಿಸಿಕೊಂಡು ಈ ಸುದ್ದಿಯೊಂದಿಗೆ ನಿಮ್ಮ ಬಳಿಗೆ ಓಡಿಬಂದೆ,” ಎಂದನು. ಅವನು ವರದಿಮಾಡುತ್ತಿದ್ದಾಗಲೇ ಬೇರೊಬ್ಬನು ಬಂದು, “ನಿಮ್ಮ ಪುತ್ರಪುತ್ರಿಯರು ಹಿರಿಯಣ್ಣನ ಮನೆಯಲ್ಲಿ ಔತಣದಲ್ಲಿದ್ದರು.  ಆಗ ತಟ್ಟನೆ ಅರಣ್ಯ ಕಡೆಯಿಂದ ಬಿರುಗಾಳಿ ಎದ್ದಿತು; ನಾಲ್ಕು ಕಡೆಯಿಂದಲೂ ಮನೆಗೆ ಬಡಿಯಿತು. ಮನೆ ಕುಸಿದುಬಿತ್ತು. ಯುವಕಯುವತಿಯರೆಲ್ಲ ಸತ್ತುಹೋದರು. ನಾನೊಬ್ಬನೇ ತಲೆತಪ್ಪಿಸಿಕೊಂಡು ಈ ಸುದ್ದಿಯನ್ನು ನಿಮಗೆ ತಂದಿದ್ದೇನೆ,” ಎಂದು ತಿಳಿಸಿದನು. ಆಗ ಯೋಬನು ಎದ್ದು ನಿಂತು, ದುಃಖವನ್ನು ತಾಳಲಾರದೆ ತನ್ನ ಮೇಲಂಗಿಯನ್ನು ಹರಿದುಬಿಟ್ಟ, ತಲೆಯನ್ನು ಬೋಳಿಸಿಕೊಂಡ, ನೆಲದ ಮೇಲೆ ಬಿದ್ದು, ದೇವರಿಗೆ ಸಾಷ್ಟಾಂಗವೆರಗಿ: ಬರಿಗೈಯಲ್ಲಿ ಬಂದೆ ನಾನು ತಾಯಗರ್ಭದಿಂದ ಬರಿಗೈಯಲ್ಲಿ ಹಿಂತಿರುಗುವೆ ನಾನು ಇಲ್ಲಿಂದ ಸರ್ವೇಶ್ವರ ಕೊಟ್ಟ ಸರ್ವೇಶ್ವರ ತೆಗೆದುಕೊಂಡ ಆತನ ನಾಮಕ್ಕೆ ಸ್ತುತಿಸ್ತೋತ್ರ! ಎಂದನು. ಈ ಎಲ್ಲ ವಿಪತ್ತು ಬಂದೊದಗಿದರೂ ಯೋಬನು ಪಾಪಮಾಡಲಿಲ್ಲ. ದೇವರ ಮೇಲೆ ತಪ್ಪುಹೊರಿಸಲಿಲ್ಲ.

ಕೀರ್ತನೆ: 17:1, 2-3, 6-7

ಶ್ಲೋಕ: ಪುನರುದ್ಧರಿಸುವನು ಪ್ರಭು ಸಿಯೋನನು  

ಶುಭಸಂದೇಶ: ಲೂಕ 9:46-50

ಒಮ್ಮೆ, ತಮ್ಮಲ್ಲಿ ಅತಿ ಶ್ರೇಷ್ಠನು ಯಾರೆಂಬ ವಾದ ಶಿಷ್ಯರಲ್ಲಿ ಎದ್ದಿತು.  ಅವರ ಮನಸ್ಸಿನ ಆಲೋಚನೆಗಳನ್ನು ಅರಿತ ಯೇಸು, ಒಂದು ಚಿಕ್ಕ ಮಗುವನ್ನು ತಂದು ತಮ್ಮ ಪಕ್ಕದಲ್ಲಿ ನಿಲ್ಲಿಸಿಕೊಂಡು,  “ಯಾವನು ನನ್ನ ಹೆಸರಿನಲ್ಲಿ ಈ ಮಗುವನ್ನು ಸ್ವೀಕರಿಸುತ್ತಾನೋ ಅವನು ನನ್ನನ್ನೇ ಸ್ವೀಕರಿಸುತ್ತಾನೆ; ಯಾವನು ನನ್ನನ್ನು ಸ್ವೀಕರಿಸುತ್ತಾನೋ ಅವನು ನನ್ನನ್ನು ಕಳುಹಿಸಿದಾತನನ್ನೇ ಸ್ವೀಕರಿಸುತ್ತಾನೆ. ನಿಮ್ಮೆಲ್ಲರಲ್ಲಿ ಅತ್ಯಲ್ಪನಾದವನೇ ಅತ್ಯುತ್ತಮನು,” ಎಂದರು. ಆಗ ಯೊವಾನ್ನನು ಯೇಸುವಿಗೆ, “ಗುರುವೇ, ಯಾವನೋ ಒಬ್ಬನು ತಮ್ಮ ಹೆಸರಿನಲ್ಲಿ ದೆವ್ವ ಬಿಡಿಸುವುದನ್ನು ಕಂಡೆವು. ಅವನು ನಮ್ಮವನಲ್ಲದ ಕಾರಣ ಅವನನ್ನು ತಡೆದೆವು,” ಎಂದನು.  ಅದಕ್ಕೆ ಯೇಸು, “ಅವನನ್ನು ತಡೆಯಬೇಡಿ, ನಿಮ್ಮ ವಿರೋಧಿ ಅಲ್ಲದವನು ನಿಮ್ಮ ಪರವಾದಿ,” ಎಂದು ಉತ್ತರಕೊಟ್ಟರು.

25.09.22 - ಮನವೇ, ವಂದಿಸು ಪ್ರಭುವನು

ಮೊದಲನೇ ವಾಚನ: ಆಮೋಸ 6:1, 4-7

ಇಸ್ರಯೇಲಿನ ಜನರು ನಿಮ್ಮ ಸಹಾಯ ಕೋರಿ ನಿಮ್ಮನ್ನು ಹುಡುಕಿಕೊಂಡು ಬರುವಷ್ಟು ಪ್ರತಿಭಾವಂತರಾಗಿರುವವರೇ, ನಿಮಗೆ ಧಿಕ್ಕಾರ! ದಂತದ ಮಂಚಗಳ ಮೇಲೆ ಮಲಗುವ ಜನರೇ, ನಿಮಗೆ ಧಿಕ್ಕಾರ! ಸುಖಾಸನಗಳಲ್ಲೂ ಸುಪ್ಪತ್ತಿಗೆಯ ಮೇಲೂ ಹಾಯಾಗಿ ಒರಗಿಕೊಂಡಿರುವವರೇ, ನಿಮಗೆ ಧಿಕ್ಕಾರ! ಮಂದೆಯ ಕುರಿಮರಿಗಳನ್ನು, ಕೊಟ್ಟಿಗೆಯ ಕರುಗಳನ್ನು ಕೊಂದುತಿನ್ನುವವರೇ, ನಿಮಗೆ ಧಿಕ್ಕಾರ! ವೀಣೆಯನ್ನು ನುಡಿಸುತ್ತಾ ಮನಸ್ಸು ಬಂದಂತೆ ಹಾಡುವವರೇ ದಾವೀದನಂತೆ ಹೊಸ ವಾದ್ಯಸಂಗೀತಗಳನ್ನು ರಚಿಸುವವರೇ, ನಿಮಗೆ ಧಿಕ್ಕಾರ! ಬೋಗುಣಿಬಟ್ಟಲುಗಳಲ್ಲಿ ದ್ರಾಕ್ಷಾರಸವನ್ನು ಕುಡಿಯುವವರೇ, ಅತ್ಯುತ್ತಮ ಸುಂಗಧ ತೈಲಗಳನ್ನು ಲೇಪಿಸಿಕೊಳ್ಳುವವರೇ, ನಿಮಗೆ ಧಿಕ್ಕಾರ! ಏಕೆಂದರೆ ನೀವು ಜೋಸೆಫನ ವಂಶದವರ ವಿನಾಶದ ಬಗ್ಗೆ  ನಿಶ್ಚಿಂತರಾಗಿದ್ದೀರಿ. ಆದುದರಿಂದ ಗಡೀಪಾರಾಗುವವರಲ್ಲಿ ನೀವೇ ಮೊದಲಿಗರಾಗುವಿರಿ. ಆಗ ನಿಮ್ಮ ಸುಖಾಸನಗಳು ಮತ್ತು ಆಮೋದ ಪ್ರಮೋದಗಳು ಗತಿಸಿಹೋಗುವುವು.

ಕೀರ್ತನೆ: 146:7, 8-9, 9-10
ಶ್ಲೋಕ: ಮನವೇ, ವಂದಿಸು ಪ್ರಭುವನು

ಎರಡನೇ ವಾಚನ: 1ತಿಮೋಥೇಯನಿಗೆ 6:11-16

ಪ್ರಿಯನೇ, ದೇವರ ಭಕ್ತನಾದ ನೀನು ಈ ಎಲ್ಲಾ ಕೇಡುಗಳಿಂದ ದೂರವಿರು. ದೇವರೊಡನೆ ಸತ್ಸಂಬಂಧ, ಭಕ್ತಿ, ವಿಶ್ವಾಸ, ಪ್ರೀತಿ, ಸ್ಥಿರಚಿತ್ತ, ಸಾತ್ವಿಕತೆ - ಇವೇ ಮೊದಲಾದ ಸದ್ಗುಣಗಳನ್ನು ಸಂಪಾದಿಸಲು ಪ್ರಯತ್ನಿಸು. ನಿತ್ಯಜೀವವೆಂಬ ಬಹುಮಾನವನ್ನು ಗಳಿಸಲು ವಿಶ್ವಾಸವೆಂಬ ಪಂದ್ಯದಲ್ಲಿ ಉತ್ತಮ ಓಟಗಾರನಾಗಿ ಓಡು. ಇದಕ್ಕಾಗಿಯೇ ದೇವರು ನಿನ್ನನ್ನು ಆರಿಸಿಕೊಂಡರೆಂಬುದನ್ನು ಮರೆಯ ಬೇಡ. ಈ ಗುರಿಯನ್ನು ಮುಂದಿಟ್ಟುಕೊಂಡೇ ನೀನು ಅನೇಕರ ಮುಂದೆ ವಿಶ್ವಾಸ ಪ್ರಮಾಣ ಮಾಡಿರುವೆ. ಸಕಲ ಸೃಷ್ಟಿಗೂ ಜೀವದಾತರಾದ ದೇವರ ಸನ್ನಿಧಿಯಲ್ಲಿ ನಾನು ಆಜ್ಞಾಪಿಸುವುದೇನೆಂದರೆ: ನಮ್ಮ ಪ್ರಭು ಯೇಸುಕ್ರಿಸ್ತರು ಪ್ರತ್ಯಕ್ಷರಾಗುವ ತನಕ ಯಾವ ದೋಷಾರೋಪಣೆಗೂ ಎಡೆಗೊಡದೆ ಈ ಕಟ್ಟಳೆಗಳೆಲ್ಲವನ್ನೂ ಪ್ರಮಾಣಿಕತೆಯಿಂದ ಅನುಸರಿಸು: ಸೂಕ್ತಕಾಲದಲ್ಲಿ ಕ್ರಿಸ್ತ ಯೇಸುವನ್ನು ಪ್ರತ್ಯಕ್ಷಪಡಿಸುವನು ಪರಮ ದೇವನು. ಆ ದೇವನು ಪರಮಾನಂದನು ಏಕಾಧಿಪತಿ, ರಾಜಾಧಿರಾಜನು ಒಡೆಯರಿಗೆಲ್ಲಾ ಒಡೆಯನು, ಅಮರನು ಅಗಮ್ಯ ಜ್ಯೋತಿಯಲ್ಲಿ ವಾಸಿಸುವವನು. ಆತನನು ಕಂಡವರಾರೂ ಇಲ್ಲ. ಕಾಣಬಲ್ಲವರಾರೂ ಇಲ್ಲ. ಆತನೊಬ್ಬನಿಗೆ ಮಹಿಮೆಯೂ ಗೌರವವೂ ಪ್ರಭುತ್ವವೂ ಸಲ್ಲಲಿ ಎಂದೆಂದಿಗೂ, ಆಮೆನ್.

ಶುಭಸಂದೇಶ: ಲೂಕ 16:19-31

ಯೇಸು ಫರಿಸಾಯರಿಗೆ ಈ ಸಾಮತಿಯನ್ನು ಹೇಳಿದರು: "ಒಬ್ಬ ಧನಿಕನಿದ್ದ. ಬೆಲೆಬಾಳುವ ಉಡುಗೆ - ತೊಡುಗೆಗಳನ್ನೂ  ನಯವಾದ ನಾರುಮಡಿಗೆಗಳನ್ನೂ ಧರಿಸಿಕೊಂಡು ದಿನನಿತ್ಯವೂ ಸುಖಭೋಗಗಳಲ್ಲಿ ಮೈಮರಿಯುತ್ತಿದ್ದ. ಅವನ ಮನೆಯ ಬಾಗಿಲಲ್ಲೇ ಲಾಜರನೆಂಬ ಒಬ್ಬ ಭಿಕಾರಿ ಬಿದ್ದಿರುತ್ತಿದ್ದ. ಅವನ ಮೈಯೆಲ್ಲಾ ಹುಣ್ಣು. ಧನಿಕನು ತಿಂದು ಬಿಸಾಡಿದ ಎಂಜಲಿನಿಂದ ಹಸಿವು ನೀಗಿಸಿಕೊಳ್ಳಲು ಅವನು ಹಂಬಲಿಸುತ್ತಿದ್ದ. ಅಷ್ಟು ಮಾತ್ರವಲ್ಲ, ನಾಯಿಗಳು ಬಂದು ಅವನ ಹುಣ್ಣುಗಳನ್ನು ನೆಕ್ಕುತ್ತಿದ್ದವು. ಒಂದು ದಿನ ಆ ಭಿಕಾರಿ ಸತ್ತುಹೋದ. ದೇವದೂತರು ಅವನನ್ನು ತೆಗೆದುಕೊಂಡು ಹೋಗಿ ಸ್ವರ್ಗಸೌಭಾಗ್ಯದಲ್ಲಿದ್ದ ಅಬ್ರಹಾಮನ ಪಕ್ಕದಲ್ಲೇ ಕೂರಿಸಿದರು. ಧನಿಕನು ಕೂಡ ಸತ್ತುಹೋದ. ಅವನ ಶವಸಂಸ್ಕಾರವೂ ಮುಗಿಯಿತು. ಪಾತಾಳದಲ್ಲಿ ಯಾತನೆಪಡುತ್ತಾ ಅವನು ಕಣ್ಣೆತ್ತಿ ನೋಡಿದಾಗ, ದೂರದಲ್ಲಿ ಅಬ್ರಹಾಮನನ್ನೂ ಅವನ ಪಕ್ಕದಲ್ಲೇ ಕುಳಿತ್ತಿದ್ದ ಲಾಜರನನ್ನೂ ಕಂಡ. "ಓ ಪಿತಮಹ ಅಬ್ರಹಾಮ, ನನ್ನ ಮೇಲೆ ಕನಿಕರವಿಡು. ಈ ಅಗ್ನಿಜ್ವಾಲೆಯಲ್ಲಿ ಬಾಧೆಪಡುತ್ತಿದ್ದೇನೆ; ಲಾಜರನು ತನ್ನ ತುದಿ ಬೆರಳನ್ನು ತಣ್ಣೀರಿನಲ್ಲಿ ಅದ್ದಿ, ನನ್ನ ನಾಲಿಗೆಗೆ  ತಂಪನ್ನುಂಟುಮಾಡುವಂತೆ ಅವನನ್ನು ಇಲ್ಲೆಗೆ ಕಳುಹಿಸಿಕೊಡು" ಎಂದು ದನಿಯೆತ್ತಿ ಮೊರೆಯಿಟ್ಟ. ಅದಕ್ಕೆ ಅಬ್ರಹಾಮನು, "ಮಗನೇ, ಜೀವಮಾನದಲ್ಲಿ ಬೇಕಾದಷ್ಟು ಸುಖಸಂಪತ್ತನ್ನು ನೀನು ಅನುಭವಿಸಿದೆ; ಲಾಜರನಾದರೋ ದುಃಖ ದಾರಿದ್ರ್ಯವನ್ನು ಅನುಭವಿಸಿದ ಎಂಬುದನ್ನು ನೆನಪಿಗೆ ತಂದುಕೊ. ಆದರೆ ಈಗ ಅವನು ಇಲ್ಲಿ ಸುಖಪಡುತ್ತಿದ್ದಾನೆ; ನೀನು ಅಲ್ಲಿ ಸಂಕಟಪಡುತ್ತಿರುವೆ. ಅಷ್ಟೇ ಮಾತ್ರವಲ್ಲ, ನಮಗೂ ನಿಮಗೂ ನಡುವೆ ಅಗಾಧ ಪ್ರಪಾತವು ಚಾಚಿದೆ. ಆದಕಾರಣ ಈ ಕಡೆಯಿಂದ ನಿಮ್ಮ ಬಳಿಗೆ ಬರಬೇಕೆಂದಿದ್ದರೂ ಬರಲಾಗದು; ಆ ಕಡೆಯಿಂದ ನಮ್ಮ ಬಳಿಗೆ ದಾಟಿಬರಲೂ ಸಾಧ್ಯವಿಲ್ಲ," ಎಂದ. ಆಗ ಆ ಧನಿಕ, "ಪಿತಮಹ ಆಬ್ರಹಾಮ, ಲಾಜರನನ್ನು ನನ್ನ ತಂದೆಯ ಮನೆಗಾದರೂ ಕಳುಹಿಸು. ನನಗೆ ಐವರು ಸೋದರರಿದ್ದಾರೆ; ಅವರೂ ಈ ಯಾತನಾಸ್ಥಳಕ್ಕೆ ಬಾರದಂತೆ ಇವನು ಹೋಗಿ ಎಚ್ಚರಿಕೆಕೊಡಲಿ," ಎಂದು ಬೇಡಿಕೊಂಡ. ಅದಕ್ಕೆ ಅಬ್ರಹಾಮನು, "ಅವರಿಗೆ ಎಚ್ಚರಿಕೆ ಕೊಡಲು ಮೋಶೆ ಮತ್ತು ಪ್ರವಾದಿಗಳ ಗ್ರಂಥಗಳಿವೆ. ಅವುಗಳಿಗೆ ಕಿವಿಗೊಡಲಿ," ಎಂದು ಉತ್ತರಕೊಟ್ಟ. "ಇಲ್ಲ ಪಿತಾಮಹ ಅಬ್ರಹಾಮ, ಸತ್ತವರ ಕಡೆಯಿಂದ ಒಬ್ಬನು ಅವರ ಬಳಿಗೆ ಹೋದರೆ ಅವರು ಪಾಪಕ್ಕೆ ವಿಮುಖರಾಗುವರು," ಎಂದು ಧನಿಕನು ಮತ್ತೆ ಕೇಳಿಕೊಂಡ. ಅದಕ್ಕೆ ಅಬ್ರಹಾಮನು, ಮೋಶೆಗೂ ಪ್ರವಾದಿಗಳಿಗೂ ಅವರು ಕಿವಿಗೊಡದಿದ್ದರೆ, ಸತ್ತವನು ಜೀವಂತವಾಗಿ ಎದ್ದುಬಂದರೂ ಅವರು ನಂಬುವುದಿಲ್ಲ," ಎಂದರು."

24.09.22 - “ಈ ನನ್ನ ಮಾತು ನಿಮ್ಮ ಕಿವಿಗೆ ಇಳಿಯಲಿ"

ಮೊದಲನೇ ವಾಚನ:  ಉಪದೇಶ 11:9--12:8

ಯುವಕನೇ, ಯೌವನದಲ್ಲಿ ಆನಂದಿಸು. ಯೌವನ ದಿನಗಳಲ್ಲಿ ಹೃತ್ಪೂರ್ವಕವಾಗಿ ಸಂತೋಷಿಸು. ಮನಸ್ಸಿಗೆ ತಕ್ಕಂತೆಯೂ ಕಣ್ಣಿಗೆ ಸರಿಬೀಳುವ ಹಾಗೆಯೂ ನಡೆದುಕೊ. ಆದರೆ ಈ ಎಲ್ಲ ವಿಷಯಗಳಲ್ಲಿ ದೇವರು ನಿನ್ನನ್ನು ನ್ಯಾಯ ವಿಚಾರಣೆಗೆ ಗುರಿಮಾಡುವರೆಂಬುದನ್ನು ಮನದಲ್ಲಿಡು. ನಿನ್ನ ಹೃದಯದಿಂದ ವ್ಯಥೆಯನ್ನೂ ನಿನ್ನ ದೇಹದಿಂದ ಯಾತನೆಯನ್ನೂ ದೂರಮಾಡು. ಯೌವನವೂ ಪ್ರಾಯವೂ ಬೇಗ ಮಾಯವಾಗುವುವು. ಆದುದರಿಂದ ಯೌವನದಲ್ಲಿ ನಿನ್ನ ಸೃಷ್ಟಿಕರ್ತನನ್ನು ಸ್ಮರಿಸಿಕೊ. ಕಷ್ಟಕರವಾದ ದಿನಗಳು ಬರುವುದಕ್ಕೆ ಮುನ್ನ, ಜೀವನ ಬೇಸರವಾಗಿದೆ ಎಂದು ನೀನು ಹೇಳುವುದಕ್ಕೆ ಮುಂಚೆ ಆತನನ್ನು ಸ್ಮರಿಸು. ಆ ಕಷ್ಟಕರವಾದ ದಿನಗಳಲ್ಲಿ ಸೂರ್ಯಚಂದ್ರನಕ್ಷತ್ರಗಳೂ ನಿನಗೆ ಮೊಬ್ಬಾಗುವುವು. ಮಳೆಯಾದ ಮೇಲೂ ಮೋಡಗಳು ಮತ್ತೆ ಬರುವುವು; ಬಲಿಷ್ಠವಾಗಿದ್ದ ನಿನ್ನ ಕಾಲುಗಳು ಬಗ್ಗುವುವು; ಹಲ್ಲುಗಳು ಉದುರಿ ಅಗಿಯುವ ಕೆಲಸ ನಿಲ್ಲುವುದು; ಕಿಟಕಿಗಳಂಥ ಕಣ್ಣುಗಳು ಮಂಕಾಗುವುವು. ಕಿವಿಗಳು ಮಂದವಾಗಿ ಹಾದಿಬೀದಿಗಳ ಶಬ್ದವು ಕೇಳಿಸವು. ಬೀಸುವ ಶಬ್ದವು ತಗ್ಗಿ ಹಕ್ಕಿಯ ಶಬ್ದಗಳಷ್ಟು ಕಿರಿಯದಾಗುವುದು; ಬೀಸುವವರ ಹಾಡೆಲ್ಲಾ ಕುಗ್ಗಿ ಹೋಗುವುದು; ದಾರಿಯಲ್ಲಿ ನಡೆವುದು ಅಪಾಯಕರವಾಗಿರುವುದು; ಹೂ ಬಿಟ್ಟ ಬಾದಾಮಿ ಮರದಂತೆ ತಲೆಗೂದಲು ನರೆತುಬಿಡುವುದು, ಮಿಡತೆಯು ಕೂಡ ಭಾರವಾಗುವುದು; ಆಸೆ ಕುಂದಿಹೋಗುವುದು. ನಿನ್ನ ನಿತ್ಯಗೃಹಕ್ಕೆ ತೆರಳಿರುವೆ, ಗೋಳಾಟದವರು ಬೀದಿಯಲ್ಲಿ ಕಾಣಿಸಿಕೊಳ್ಳುವರು, ಬೆಳ್ಳಿಯ ಸರ ಕಿತ್ತುಹೋಗುವುದು, ಚಿನ್ನದಬಟ್ಟಲು ಜಜ್ಜಿ ಹೋಗುವುದು; ಮಡಕೆ ಬುಗ್ಗೆಯ ಹತ್ತಿರವೆ ಒಡೆಯುವುದು, ಬಾವಿಯ ರಾಟೆ ಮುರಿಯುವುದು. ಮಣ್ಣಿನ ದೇಹ ತನ್ನ ಭೂಮಿಗೆ ಸೇರಿ ಹೋಗುವುದು; ಆತ್ಮವು ತನ್ನನ್ನು ದಯಪಾಲಿಸಿದ ದೇವರ ಬಳಿಗೆ ಸೇರುವುದು, (ಇಷ್ಟರೊಳಗೆ ನಿನ್ನ ಸೃಷ್ಟಿಕರ್ತನನ್ನು ಸ್ಮರಿಸದಿರಬೇಡ). “ವ್ಯರ್ಥವೇ ವ್ಯರ್ಥ ! ಸಮಸ್ತವೂ ವ್ಯರ್ಥ!!” ಎನ್ನುತ್ತಾನೆ ಉಪದೇಶಕ.

ಕೀರ್ತನೆ: 90:3-4, 5-6, 12-13, 14, 17

ಶ್ಲೋಕ: ಪ್ರಭೂ, ತಲತಲಾಂತರಕ್ಕೂ ಶ್ರೀನಿವಾಸ ನಿನೆಮಗೆ 

ಶುಭಸಂದೇಶ: ಲುಕ 9:43-45


ಯೇಸುಸ್ವಾಮಿ ಮಾಡಿದ ಸಕಲ ಮಹತ್ಕಾರ್ಯಗಳನ್ನು ಕುರಿತು ಜನರೆಲ್ಲರೂ ಸೋಜಿಗಪಡುತ್ತಿರುವಲ್ಲಿ, ಶಿಷ್ಯರಿಗೆ,  “ಈ ನನ್ನ ಮಾತು ನಿಮ್ಮ ಕಿವಿಗೆ ಇಳಿಯಲಿ. ಅದೇನೆಂದರೆ: “ನರಪುತ್ರನು ಜನರ ವಶಕ್ಕೆ ಒಪ್ಪಿಸಲ್ಪಡಲಿದ್ದಾನೆ,” ಎಂದರು.  ಯೇಸು ಹೇಳಿದ ಈ ಮಾತನ್ನು ಶಿಷ್ಯರು ಗ್ರಹಿಸಿಕೊಳ್ಳಲಿಲ್ಲ; ಒಗಟಿನ ಹಾಗೆ ಇದ್ದುದರಿಂದ ಅರ್ಥಮಾಡಿಕೊಳ್ಳಲಿಲ್ಲ. ಅದನ್ನು ಕುರಿತು ಯೇಸುವನ್ನು ಕೇಳುವುದಕ್ಕೂ ಅವರು ಅಂಜಿದರು.

23.09.22 - “ದೇವರಿಂದ ಅಭಿಷಿಕ್ತರಾದ ಲೋಕೋದ್ಧಾರಕ ತಾವೇ"

ಮೊದಲನೇ ವಾಚನ: ಉಪದೇಶ 3:1-11

ಪ್ರತಿಯೊಂದು ಕಾಲಕ್ಕೂ ನಿಗದಿಯಾದ ಕಾಲವಿದೆ. ಜಗತ್ತಿನಲ್ಲಿ ನಡೆಯುವ ಒಂದೊಂದು ಕೆಲಸಕ್ಕೂ ಸೂಕ್ತ ಸಮಯವಿದೆ: ಹುಟ್ಟುವ ಸಮಯ, ಸಾಯುವ ಸಮಯ ನೆಡುವ ಸಮಯ, ನೆಟ್ಟದ್ದನ್ನು ಕೀಳುವ ಸಮಯ. ಕೊಲ್ಲುವ ಸಮಯ, ಗುಣಪಡಿಸುವ ಸಮಯ ಕೆಡವಿಬಿಡುವ ಸಮಯ, ಕಟ್ಟಿ ಎಬ್ಬಿಸುವ ಸಮಯ. ಅಳುವ ಸಮಯ, ನಗುವ ಸಮಯ, ಗೋಳಾಡುವ ಸಮಯ, ಕುಣಿದಾಡುವ ಸಮಯ. ಕಲ್ಲುಗಳನ್ನು ಬಿಸಾಡುವ ಸಮಯ, ಕಲ್ಲುಗಳನ್ನು ಕೂಡಿಸಿಡುವ ಸಮಯ ಆಲಿಂಗನ ಮಾಡುವ ಸಮಯ, ಆಲಿಂಗನ ಮಾಡದ ಸಮಯ. ಗಳಿಸುವ ಸಮಯ, ಕಳೆದುಕೊಳ್ಳುವ ಸಮಯ ಕಾಪಾಡುವ ಸಮಯ, ಬಿಸಾಡುವ ಸಮಯ. ಹರಿಯುವ ಸಮಯ, ಹೊಲಿಯುವ ಸಮಯ ಸುಮ್ಮನಿರುವ ಸಮಯ, ಮಾತಾಡುವ ಸಮಯ. ಪ್ರೀತಿಸುವ ಸಮಯ, ದ್ವೇಷಿಸುವ ಸಮಯ ಯುದ್ಧಮಾಡುವ ಸಮಯ, ಸಮಾಧಾನಮಾಡುವ ಸಮಯ. ಹೀಗೆ ಒಂದೊಂದು ಕೆಲಸಕ್ಕೂ ತಕ್ಕ ಸಮಯವುಂಟು. ಕಷ್ಟಪಟ್ಟು ಮಾಡುವ ದುಡಿಮೆಯಿಂದ ಒಬ್ಬನಿಗೆ ಸಿಗುವ ಲಾಭವಾದರೂ ಏನು?  ನರಮಾನವರ ಕರ್ತವ್ಯವೆಂದು ದೇವರು ವಿಧಿಸಿರುವ ದುಡಿಮೆಯನ್ನು ನಾನು ಗಮನಿಸಿದ್ದೇನೆ.  ಒಂದೊಂದು ವಸ್ತುವನ್ನೂ ಸಮಯಕ್ಕೆ ತಕ್ಕಂತೆ ಸುಂದರವಾಗಿ ನಿರ್ಮಿಸಿದ್ದಾರೆ ದೇವರು. ಇದಲ್ಲದೆ, ಮನುಷ್ಯನ ಹೃದಯದಲ್ಲಿ ಅಮರತ್ವದ ಪ್ರತಿಯನ್ನು ಮೂಡಿಸಿದ್ದಾರೆ. 

ಕೀರ್ತನೆ: 144:1-2, 3-4

ಶ್ಲೋಕ: ಸ್ತುತಿಸ್ತೋತ್ರ ಪ್ರಭುವಿಗೆ, ನನ್ನ ಆಶ್ರಯ ದುರ್ಗಕೆ 

ಶುಭಸಂದೇಶ: ಲೂಕ 9:18-22


ಒಮ್ಮೆ ಯೇಸುಸ್ವಾಮಿ ಏಕಾಂಗಿಯಾಗಿ ಪ್ರಾರ್ಥನೆ ಮಾಡುತ್ತಿದ್ದಾಗ ಶಿಷ್ಯರು ಸಮೀಪದಲ್ಲೇ ಇದ್ದರು. “ಜನಸಾಮಾನ್ಯರು ನನ್ನನ್ನು ಯಾರೆನ್ನುತ್ತಾರೆ?” ಎಂದು ಯೇಸು ಅವರನ್ನು ಪ್ರಶ್ನಿಸಿದರು.  ಅದಕ್ಕೆ ಅವರು, “ಹಲವರು ತಮ್ಮನ್ನು ‘ಸ್ನಾನಿಕ ಯೊವಾನ್ನ’ ಎನ್ನುತ್ತಾರೆ; ಕೆಲವರು ‘ಎಲೀಯನು’ ಎನ್ನುತ್ತಾರೆ; ಮತ್ತೆ ಕೆಲವರು ‘ಪ್ರಾಚೀನ ಪ್ರವಾದಿಗಳಲ್ಲಿ ಒಬ್ಬನು ಮರಳಿ ಜೀವಂತನಾಗಿದ್ದಾನೆ’ ಎನ್ನುತ್ತಾರೆ,” ಎಂದು ಉತ್ತರವಿತ್ತರು. ಆಗ ಯೇಸು, “ಆದರೆ ನೀವು ನನ್ನನ್ನು ಯಾರೆನ್ನುತ್ತೀರಿ?” ಎಂದು ಪುನಃ ಪ್ರಶ್ನಿಸಿದರು. ಅದಕ್ಕೆ ಪೇತ್ರನು, “ದೇವರಿಂದ ಅಭಿಷಿಕ್ತರಾದ ಲೋಕೋದ್ಧಾರಕ ತಾವೇ" ಎಂದು ಉತ್ತರ ಕೊಟ್ಟನು.  ಈ ವಿಷಯವನ್ನು ಯಾರಿಗೂ ತಿಳಿಸಬಾರದೆಂದು ಯೇಸು ಶಿಷ್ಯರನ್ನು ಆಜ್ಞಾಪೂರ್ವಕವಾಗಿ ಎಚ್ಚರಿಸಿದರು. ಇದಲ್ಲದೆ, “ನರಪುತ್ರನು ಕಠಿಣವಾದ ಯಾತನೆಯನ್ನು ಅನುಭವಿಸಬೇಕಾಗಿದೆ. ಸಭಾಪ್ರಮುಖರಿಂದಲೂ ಮುಖ್ಯಯಾಜಕರಿಂದಲೂ ಧರ್ಮಶಾಸ್ತ್ರಿಗಳಿಂದಲೂ ಆತನು ತಿರಸ್ಕೃತನಾಗಿ ಕೊಲ್ಲಲ್ಪಡುವನು. ಆದರೆ ಮೂರನೇ ದಿನ ಆತನು ಪುನರುತ್ಥಾನ ಹೊಂದುವನು," ಎಂದು ಅವರಿಗೆ ತಿಳಿಸಿದರು.

22.09.22 - ‘ಯೊವಾನ್ನನು ಮರಳಿ ಜೀವಂತನಾಗಿ ಎದ್ದಿದ್ದಾನೆ’

ಮೊದಲನೇ ವಾಚನ: ಉಪದೇಶಕ 1:2-11


ಉಪದೇಶಕನು ಹೇಳುವುದನ್ನು ಕೇಳಿ: ವ್ಯರ್ಥಗಳಲ್ಲಿ ವ್ಯರ್ಥ, ವ್ಯರ್ಥವೇ ವ್ಯರ್ಥ, ಎಲ್ಲವೂ ವ್ಯರ್ಥ! ಈ ಲೋಕದಲ್ಲಿ ಮನುಷ್ಯನು ಪಡುವ ಎಲ್ಲಾ ಪ್ರಯಾಸದಿಂದ ಅವನಿಗೆ ದೊರಕುವ ಲಾಭವಾದರೂ ಏನು? ಒಂದು ಸಂತತಿ ಗತಿಸುತ್ತದೆ, ಮತ್ತೊಂದು ಸಂತತಿ ಬರುತ್ತದೆ, ಭೂಮಿಯಾದರೋ ಶಾಶ್ವತವಾಗಿ ನಿಲ್ಲುತ್ತದೆ. ಸೂರ್ಯನು ಮೂಡುತ್ತಾನೆ, ಸೂರ್ಯನು ಮುಳುಗುತ್ತಾನೆ, ತಾನು ಹೊರಟ ಸ್ಥಳಕ್ಕೆ ಮರಳಿ ಓಡುತ್ತಾನೆ. ಗಾಳಿ ದಕ್ಷಿಣಕ್ಕೆ ಬೀಸುತ್ತದೆ, ಉತ್ತರದ ಕಡೆಗೆ ತಿರುಗುತ್ತದೆ, ಸುತ್ತುತ್ತಾ ಸುತ್ತುತ್ತಾ ಹೋಗಿ ಹಿಂತಿರುಗಿ ಬರುತ್ತದೆ. ನದಿಗಳು ಹರಿದು ಸಮುದ್ರವನ್ನು ಸೇರುತ್ತವೆ, ಆದರೂ ಸಮುದ್ರವು ತುಂಬುವುದಿಲ್ಲ. ಅವು ಎಲ್ಲಿಂದ ಹರಿದು ಬರುತ್ತವೋ ಅಲ್ಲಿಗೆ ಹಿಂತಿರುಗಿ ಹೋಗುತ್ತವೆ. ಮನುಷ್ಯನಿಂದ ವಿವರಿಸಲಾಗದಷ್ಟು ಎಲ್ಲವೂ ನೀರಸ. ಎಷ್ಟು ನೋಡಿದರೂ ಕಣ್ಣಿಗೆ ತೃಪ್ತಿಯಿಲ್ಲ. ಎಷ್ಟು ಕೇಳಿದರೂ ಕಿವಿಗೆ ದಣಿವಿಲ್ಲ. ಇದ್ದದ್ದೇ ಇರುತ್ತದೆ, ನಡೆದದ್ದೇ ನಡೆಯುತ್ತದೆ. ಲೋಕದಲ್ಲಿ ಹೊಸದೇನೂ ಇಲ್ಲ.  ಇಗೋ, ಹೊಸದು ಎನಿಸುಕೊಳ್ಳುವ ವಸ್ತು ಇದ್ದರೂ ಅದು ನಮಗಿಂತ ಮುಂಚೆಯೇ ಪುರಾತನ ಕಾಲದಲ್ಲೇ ಇದ್ದುದು. ಹಿಂದಿನ ಕಾಲದವರ ಜ್ಞಾಪಕವು ಇಂದಿನವರಿಗಿಲ್ಲ. ಮುಂದಿನ ಕಾಲದವರ ಜ್ಞಾಪಕವು ಅವರಿಗಿಂತ ಮುಂದೆ ಬರುವವರಿಗೆ ಇರುವುದಿಲ್ಲ.

ಕೀರ್ತನೆ: 90:3-4, 5-6, 12-13, 14, 17

ಶ್ಲೋಕ: ಪ್ರಭೂ, ತಲತಲಾಂತರಕೂ ಶ್ರೀನಿವಾಸ ನೀನೆಮಗೆ 

ಶುಭಸಂದೇಶ: ಲೂಕ 9:7-9

ನಡೆಯುತ್ತಿದ್ದ ಎಲ್ಲ ಸಂಗತಿಗಳು ಸಾಮಂತರಾಜ ಹೆರೋದನ ಕಿವಿಗೆ ಬಿದ್ದುವು. ಅವನ ಮನಸ್ಸು ಕಳವಳಗೊಂಡಿತ್ತು. ಏಕೆಂದರೆ, ‘ಯೊವಾನ್ನನು ಮರಳಿ ಜೀವಂತನಾಗಿ ಎದ್ದಿದ್ದಾನೆ’ ಎಂದು ಕೆಲವರೂ ‘ಎಲೀಯನು ಪುನಃ ಕಾಣಿಸಿಕೊಂಡಿದ್ದಾನೆ’, ಎಂದು ಇನ್ನು ಕೆಲವರೂ ‘ಪ್ರಾಚೀನ ಪ್ರವಾದಿಗಳಲ್ಲಿ ಒಬ್ಬನು ಮರಳಿ ಜೀವಂತನಾಗಿದ್ದಾನೆ,’ ಎಂದು ಮತ್ತೆ ಕೆಲವರೂ ಹೇಳುತ್ತಿದ್ದರು. ಹೆರೋದನಾದರೋ, ‘ಯೊವಾನ್ನನೇ! ಅವನನ್ನು ನಾನೇ ಶಿರಚ್ಛೇದನ ಮಾಡಿಸಿದೆನಲ್ಲಾ; ಮತ್ತೆ ಇವನಾರು? ಇವನ ಬಗ್ಗೆ ಇಂಥಾ ವಿಷಯಗಳನ್ನೆಲ್ಲ ಕೇಳುತ್ತಾ ಇರುವೆನಲ್ಲಾ!’ ಎಂದುಕೊಂಡು, ಯೇಸುವನ್ನು ನೋಡಲು ಅವಕಾಶ ಹುಡುಕುತ್ತಿದ್ದನು. 

21.09.22 - "ವೈದ್ಯನ ಅವಶ್ಯಕತೆ ಇರುವುದು ರೋಗಿಗಳಿಗೆ; ಆರೋಗ್ಯವಂತರಿಗಲ್ಲ"

ಮೊದಲನೇ ವಾಚನ: ಎಫೆಸಿಯರಿಗೆ 4:1-7, 11-13


ಪ್ರಭುವಿನ ಸೇವೆಯ ನಿಮಿತ್ತ ಸೆರೆಯಾಳಾಗಿರುವ ನಾನು ನಿಮ್ಮಲ್ಲಿ ಬಿನ್ನವಿಸುವುದು ಏನೆಂದರೆ: ದೇವರ ಕರೆಗೆ ಅನುಗುಣವಾಗಿ ಯೋಗ್ಯ ಬಾಳುವೆ ನಡೆಸಿರಿ. ಯಾವಾಗಲು ದೀನದಯಾಳತೆ, ವಿನಯಶೀಲತೆ ಹಾಗೂ ಶಾಂತಿಸಮಾಧಾನವುಳ್ಳವರಾಗಿರಿ. ಪರಸ್ಪರ ಪ್ರೀತಿಯಿಂದಲೂ ಸಹನೆಯಿಂದಲೂ ವರ್ತಿಸಿರಿ. ಪವಿತ್ರಾತ್ಮರಿಂದ ಉಂಟಾಗುವ ಐಕ್ಯತೆಯನ್ನು ಕಾಪಾಡಿಕೊಳ್ಳಲು ಆಸಕ್ತರಾಗಿರಿ. ಅದು ನಿಮ್ಮನ್ನು ಸಮಾಧಾನದಲ್ಲಿ ಬಂಧಿಸುವುದು. ನೀವೆಲ್ಲರೂ ಒಂದೇ ಶರೀರಕ್ಕೆ ಸೇರಿದವರು; ಒಬ್ಬರೇ ಪವಿತ್ರಾತ್ಮರನ್ನು ಪಡೆದವರು; ಒಂದೇ ನಿರೀಕ್ಷೆಗಾಗಿ ಕರೆಹೊಂದಿದವರು. ನಮ್ಮೆಲ್ಲರಿಗೂ ಪ್ರಭೂ ಒಬ್ಬರೇ; ವಿಶ್ವಾಸವೂ ಒಂದೇ; ದೀಕ್ಷಾಸ್ನಾನವೂ ಒಂದೇ, ದೇವರೂ ಒಬ್ಬರೇ, ಸರ್ವರ ತಂದೆಯೂ ಇವರೇ; ಸರ್ವಶ್ರೇಷ್ಟರೂ ಅವರೇ; ಸರ್ವರ ಮುಲಕ ಕಾರ್ಯ ನಿರ್ವಹಿಸುವವರೂ ಅವರೇ ಮತ್ತು ಸಮಸ್ತರಲ್ಲಿ ವಾಸಿಸುವವರೂ ಅವರೇ. ಆದರೂ ನಮ್ಮಲ್ಲಿ ಪ್ರತಿಯೊಬ್ಬನೂ ಕ್ರಿಸ್ತ ಯೇಸು ಅನುಗ್ರಹಿಸಿರುವ ಪ್ರಕಾರವೇ ವರಗಳನ್ನು ಪಡೆದಿದ್ದಾನೆ. ಎಂತಲೇ ಪವಿತ್ರಗ್ರಂಥದಲ್ಲಿ ಹೀಗಿದೆ: ಈ ವೆಕ್ತಿ ನರಮಾನವರಿಗೆ ವರದಾನಗಳನ್ನಿತ್ತರು. ಕೆಲವರನ್ನು ಪ್ರೇಷಿತರನ್ನಾಗಿಯೂ ಕೆಲವರನ್ನು ಸಭಾಪಾಲಕರನ್ನಾಗಿಯೂ ಮತ್ತು ಬೋಧಕರನ್ನಾಗಿಯೂ ನೇಮಿಸಿದರು. ದೇವಜನರನ್ನು ಪರಿಣತರನ್ನಾಗಿಸಿ ದೇವರ ಸೇವೆಗೆ ಸಿದ್ಧಗೊಳಿಸಲೆಂದು ಮತ್ತು ಯೇಸುಕ್ರಿಸ್ತರದೇಹವಾದ ಧರ್ಮಸಭೆ ಅಭಿವೃದ್ಧಿ ಹೊಂದಲೆಂದು ಈ ವರಗಳನ್ನು ಅವರಿಗೆ ನೀಡಿದರು. ಹೀಗೆ ನಾವೆಲ್ಲರೂ ಒಂದೇ ವಿಶ್ವಾಸದಿಂದಲೂ ದೇವರ ಪುತ್ರನನ್ನು ಕುರಿತ ಜ್ಞಾನದಿಂದಲೂ ಐಕ್ಯಮತ್ಯವನ್ನು ಮತ್ತು ಪರಿಪಕ್ವತೆಯನ್ನು ಪಡೆಯುತ್ತೇವೆ. ಜ್ಞಾನಾರ್ಜನೆಯನ್ನು ಪಡೆದವರಾಗಿ, ಕ್ರಿಸ್ತ ಯೇಸುವಿನ ಪರಿಪೂರ್ಣತೆಯ ಮಟ್ಟವನ್ನು ಮುಟ್ಟುತ್ತೇವೆ.

ಕೀರ್ತನೆ: 19:2-3, 4-5

ಶ್ಲೋಕ: ಅವುಗಳ ನುಡಿಮಾತು ವ್ಯಾಪಿಸಿದೆ ಜಗದಾದ್ಯಂತ

ಶುಭಸಂದೇಶ: ಮತ್ತಾಯ  9:9-13

ಯೇಸುಸ್ವಾಮಿ ಆ ಸ್ಥಳವನ್ನು ಬಿಟ್ಟು ಮುಂದಕ್ಕೆ ಹೋಗುತ್ತಿದ್ದಾಗ ಮತ್ತಾಯ ಎಂಬುವನನ್ನು ಕಂಡರು. ಅವನು ಸಂಕ ವಸೂಲಿಗಾಗಿ ಉಕ್ಕಡದಲ್ಲಿ ಕುಳಿತ್ತಿದ್ದನು. "ನನ್ನನ್ನು ಹಿಂಬಾಲಿಸು," ಎಂದು ಹೇಳಿ ಯೇಸು ಅವನನ್ನು ಕರೆದರು. ಮತ್ತಾಯನು ಎದ್ದು ಅವರನ್ನು ಹಿಂಬಾಲಿಸಿದನು. ಇದಾದ ಮೇಲೆ ಯೇಸುಸ್ವಾಮಿ ಮತ್ತಾಯನ ಮನೆಯಲ್ಲಿ ಊಟಕ್ಕೆ ಕುಳಿತಿದ್ದರು. ಬಹುಮಂದಿ ಸುಂಕದವರೂ ಪಾಪಿಷ್ಠರು ಅಲ್ಲಿಗೆ ಬಂದರು. ಯೇಸು ಮತ್ತು ಅವರ ಶಿಷ್ಯರು ಕುಳಿತಿದ್ದ ಪಂಕ್ತಿಯಲ್ಲೇ ಇವರೂ ಊಟಕ್ಕೆ ಕುಳಿತರು. ಫರಿಸಾಯರು ಇದನ್ನು ಕಂಡದ್ದೇ ಯೇಸುವಿನ ಶಿಷ್ಯರನ್ನುದ್ದೇಶಿಸಿ, "ನಿಮ್ಮ ಗುರು ಇಂತಹ ಬಹಿಷ್ಕ್ರತ ಜನರ ಜೊತೆಯಲ್ಲಿ ಊಟ ಮಾಡುವುದೇ?" ಎಂದು ಆಕ್ಷೇಪಿಸಿದರು. ಇದನ್ನು ಕೇಳಿಸಿಕೊಂಡ ಯೇಸು, "ವೈದ್ಯನ ಅವಶ್ಯಕತೆ ಇರುವುದು ರೋಗಿಗಳಿಗೆ; ಆರೋಗ್ಯವಂತರಿಗಲ್ಲ. ನೀವು ಹೋಗಿ, "ನನಗೆ ಬೇಕಾದುದು ದಯೆ, ಯಜ್ಞಬಲಿಯಲ್ಲ" ಎಂದು ಪವಿತ್ರಗ್ರಂಥದಲ್ಲಿ ಬರೆದಿರುವ ವಾಕ್ಯದ ಅರ್ಥವನ್ನು ಕಲಿತುಕೊಳ್ಳಿ. ನಾನು ಕರೆಯಲು ಬಂದಿರುವುದು ಧರ್ಮಿಷ್ಠರನ್ನಲ್ಲ, ಪಾಪಿಷ್ಠರನ್ನು," ಎಂದರು.

20.09.22 - “ದೇವರ ವಾಕ್ಯವನ್ನು ಕೇಳಿ ಅದರಂತೆ ನಡೆಯುವವರೇ ನನಗೆ ತಾಯಿ ಮತ್ತು ಅಣ್ಣತಮ್ಮಂದಿರು,”

ಮೊದಲನೇ ವಾಚನ: ಜ್ಞಾನೋಕ್ತಿಗಳು  21:1-6, 10-13

ರಾಜನ ಹೃದಯ ಸರ್ವೇಶ್ವರನ ಕೈಯಲ್ಲಿ; ತಿರುಗಿಸಬಲ್ಲ ಆತ ಅದನ್ನು ನೀರಿನ ಕಾಲುವೆಯ ಪರಿ. ಮಾನವರ ನಡವಳಿಕೆ ಅವರವರ ನೋಟಕ್ಕೆ ನೇರ; ಅವರ ಅಂತರಂಗವನ್ನು ವೀಕ್ಷಿಸಬಲ್ಲವನೋ ಸರ್ವೇಶ್ವರ. ನ್ಯಾಯನೀತಿಗಳು ಬಲಿಯರ್ಪಣೆಗಿಂತ ಶ್ರೇಷ್ಠ; ಸರ್ವೇಶ್ವರನಿಗೆ ಅವು ಬಲು ಇಷ್ಟ. ಗರ್ವದ ನೋಟ, ಉಬ್ಬಿದ ಎದೆ, ಇವು ದುರುಳರೊಳು ಕಾಣುವ ಪಾಪದ ಕಿಡಿಗಳು. ಶ್ರಮಜೀವಿಗಳ ಯೋಜನೆಯಿಂದ ಸಮೃದ್ಧಿ; ತಾಳ್ಮೆಯಿಲ್ಲದ ತ್ವರೆಯಿಂದ ಅಧೋಗತಿ. ಹಬೆಯಂತೆ ನಾಪತ್ತೆ ಸುಳ್ಳಿನಿಂದ ಸಿಕ್ಕಿದ ಸಂಪತ್ತು; ಮೃತ್ಯುಪಾಶದಂತೆ ಅದೊಂದು ವಿಪತ್ತು. ದುರಾತ್ಮನ ಮನಸ್ಸು ಕೇಡಿನ ಮೇಲೆ; ದಯೆತೋರಿಸನಾತ ನೆರೆಯವನ ಮೇಲೆ. ಕುಚೋದ್ಯನಿಗೆ ದಂಡನೆಯಾದರೆ ಮುಗ್ಧನಿಗೆ ಜ್ಞಾನಗಳಿಕೆ; ಜ್ಞಾನಿಗೆ ಶಿಕ್ಷೆಯಾದರೆ ತಾನೆ ಹೊಂದುವನು ತಿಳುವಳಿಕೆ. ಸತ್ಯಸ್ವರೂಪನ ದೃಷ್ಟಿ ದುಷ್ಟರ ಮನೆಯ ಮೇಲೆ; ಆ ದುರುಳರನ್ನು ದಬ್ಬಿಬಿಡುವನು ಕೇಡಿಗೆ. ಬಡವನ ಮೊರೆಗೆ ಕಿವಿ ಮುಚ್ಚಿಕೊಳ್ಳುವವನೇ, ನೀನೇ ಮೊರೆಯಿಡುವಾಗ ಉತ್ತರಕೊಡುವವರಾರು ನಿನಗೆ?

ಕೀರ್ತನೆ: 119:1, 27, 30, 34, 35, 44

ಶ್ಲೋಕ: ಎನ್ನ ನಡೆಸು ಪ್ರಭೂ, ನಿನ್ನ ಆಜ್ಞಮಾರ್ಗದಲಿ 

ಶುಭಸಂದೇಶ: ಲೂಕ 8:19-21


ಯೇಸುಸ್ವಾಮಿಯ ತಾಯಿ ಹಾಗೂ ಸಹೋದರರು ಯೇಸು ಇದ್ದೆಡೆಗೆ ಬಂದರು. ಆದರೆ ಜನಸಂದಣಿಯ ನಿಮಿತ್ತ ಹತ್ತಿರಕ್ಕೆ ಬರಲಾಗಲಿಲ್ಲ.  ಯೇಸುವಿಗೆ, “ನಿಮ್ಮ ತಾಯಿಯು ಮತ್ತು ಸಹೋದರರು ನಿಮ್ಮನ್ನು ಕಾಣಬೇಕೆಂದು ಹೊರಗೆ ನಿಂತಿದ್ದಾರೆ,” ಎಂದು ತಿಳಿಸಲಾಯಿತು.  ಅದಕ್ಕೆ ಯೇಸು, “ದೇವರ ವಾಕ್ಯವನ್ನು ಕೇಳಿ ಅದರಂತೆ ನಡೆಯುವವರೇ ನನಗೆ ತಾಯಿ ಮತ್ತು ಅಣ್ಣತಮ್ಮಂದಿರು,” ಎಂದರು.

19.09.22

ಮೊದಲನೇ ವಾಚನ: ಜ್ಞಾನೋಕ್ತಿಗಳು: 3: 27-34

ನಿನ್ನ ಕೈಲಾದಾಗ ಉಪಕಾರ ಮಾಡು. ಕೇಳುವವರಿಗೆ ಅದನ್ನು ನಿರಾಕರಿಸಬೇಡ. ನೆರೆಯವನಿಗೆ ನೀಡಲು ಇದೀಗಲೇ ನಿನ್ನಲ್ಲಿರುವಾಗ, "ಹೋಗಿ ಬಾ, ನಾಳೆ ಕೊಡುತ್ತೇನೆ" ಎನ್ನಬೇಡ. ಕೇಡನ್ನು ಬಗೆಯಬೇಡ ನೆರೆಯವನಿಗೆ, ಪಕ್ಕದಲ್ಲೇ ನಂಬಿಕೆಯಿಂದ ವಾಸಿಸುವವನಿಗೆ. ನಿನಗೆ ಕೇಡು ಮಾಡದವನ ಸಂಗಡ ಕಾರಣವಿಲ್ಲದೆ ಜಗಳವಾಡ ಬೇಡ. ಹಿಂಸಾತ್ಮಕನನ್ನು ನೋಡಿ ಹೊಟ್ಟೆಕಿಚ್ಚು ಪಡಬೇಡ, ಅವನ ನಡತೆಯನ್ನು ಎಷ್ಟು ಮಾತ್ರಕ್ಕೂ ಅನುಸರಿಸ ಬೇಡ. ವಕ್ರ ಬುದ್ದಿಯವನು ಸರ್ವೇಶ್ವರನಿಗೆ ಅಸಹ್ಯನು, ಸತ್ಯಸಂಧರು ಆತನಿಗೆ ಪ್ರೀತಿ ಪಾತ್ರರು. ದುರುಳರ ಮನೆಯನ್ನು ಸರ್ವೇಶ್ವರ ಶಪಿಸುವನು; ನೀತಿವಂತರ ನಿವಾಸವನ್ನು ಆತ ಆಶೀರ್ವವದಿಸುವನು. ಅಪಹಾಸ್ಯ ಮಾಡುವವರನ್ನು ಆತ ಅಪಹಾಸ್ಯ ಮಾಡುವನು; ನಮ್ರರಿಗಾದರೋ ಕೃಪಾರ್ಶೀವಾದವನು ಅನುಗ್ರಹಿಸುವನು.

ಕೀರ್ತನೆ: 15: 2-3ಎ, 3ಬಿಸಿ-4ಎಬಿ, 5
ಶ್ಲೋಕ: ಅರ್ಹನಾರು ಪ್ರಭೂ, ನಿನ್ನ ಪವಿತ್ರ ಶಿಖರದಲಿ ವಾಸವಾಗಿರಲು?

ಶುಭಸಂದೇಶ: ಲೂಕ: 8: 16-18
"ದೀಪವನ್ನು ಹಚ್ಚಿ ಯಾರೂ ಅದನ್ನು ಪಾತ್ರೆಯಿಂದ ಮುಚ್ಚಿಡುವುದಿಲ್ಲ; ಮಂಚದ ಕೆಳಗೆ ಬಚ್ಚಿಡುವುದಿಲ್ಲ. ಮನೆಯೊಳಕ್ಕೆ ಬರುವವರಿಗೆ ಬೆಳಕು ಕಾಣಿಸುವಂತೆ ಅದನ್ನು ದೀಪಸ್ಥಂಭದ ಮೇಲಿಡುತ್ತಾರೆ. ಬಟ್ಟಬಯಲಾಗದ ಮುಚ್ಚುಮರೆಯಿಲ್ಲ; ಬೆಳಕಿಗೆ ಬಾರದ ಹಾಗೂ ರಟ್ಟಾಗದ ಗುಟ್ಟಿಲ್ಲ. "ಆದ್ದರಿಂದ ನೀವು ಕಿವಿಕೊಡುವಾಗ ಎಚ್ಚರಿಕೆಯಿಂದಿರಿ; ಏಕೆಂದರೆ, ಉಳ್ಳವನಿಗೆ ಇನ್ನೂ ಹೆಚ್ಚಾಗಿ ಕೊಡಲಾಗುತ್ತದೆ, ಇಲ್ಲದವನಿಂದ ತನಗಿದೆ ಎಂದುಕೊಳ್ಳುವ ಕಿಂಚಿತ್ತನ್ನೂ ಕಸಿದುಕೊಳ್ಳಲಾಗುತ್ತದೆ," ಎಂದರು ಯೇಸುಸ್ವಾಮಿ.



ಚಿಂತನೆ: ಶುಭ ಸಂದೇಶವನ್ನು ನಮ್ಮದೇ ಆದ ರೀತಿಯಲ್ಲಿ ಸಾರುವ ಅವಕಾಶಪ್ರತಿಭೆಗಳಿದ್ದರೂ ಸುಮ್ಮನಿರುವ ನಮ್ಮಂಥವರನ್ನು ಇಂದಿನ ಶುಭ ಸಂದೇಶ ಎಚ್ಚರಿಸುತ್ತಿದೆದೀಪ ಮುಚ್ಚಿಟ್ಟುಕೊಂಡರೆ ಕ್ರಮೇಣ ಅದೂ ಆರಿಹೋಗುತ್ತದೆ ಎಂಬ ಅರ್ಥವನ್ನು ಕೊನೆಯ ಸಾಲಿನಲ್ಲಿ ಕಾಣಬಹುದುನಾವು ದೇವರಿಂದ ವರ ಪಡೆದವರು ಎಂದು ಬೀಗುವುದಕ್ಕಿಂತ  ವರವು ಮಿಕ್ಕವರಿಗೂ ಸಿಗುವಂಥಹ ಪ್ರಯತ್ನ ನಮ್ಮದಾಗಬೇಕುಜ್ಞಾನೋಕ್ತಿಗಳು ಸಹಾ  ನಿಟ್ಟಿನಲ್ಲಿ ಒಂದಷ್ಟು ಮಾರ್ಗಗಳನ್ನು ಸೂಚಿಸುತ್ತದೆ

18.09.22 - "ದೇವರಿಗೂ ದ್ರವ್ಯಕ್ಕೂ ಒಟ್ಟಿಗೆ ಸೇವೆಮಾಡಲು ನಿಮ್ಮಿಂದಾಗದು,"

ಮೊದಲನೇ ವಾಚನ: ಆಮೋಸ 8:4-7

ದಿಕ್ಕಿಲ್ಲದವರನ್ನು ತುಳಿದುಬಿಡುವವರೇ, ನಾಡಿನಬಡವರನ್ನು ನಿರ್ಮೂಲ ಮಾಡುವವರೇ,  ಕೇಳಿ, "ದವಸಧಾನ್ಯಗಳನ್ನು ಮಾರಬೇಕಲ್ಲ, ಈ ಅಮಾವಾಸ್ಯೆ ತೀರುವುದು ಯಾವಾಗ? ಗೋದಿಯ ವ್ಯಾಪಾರ ಮಾಡಬೇಕಾಗಿದೆ. ಸಬ್ಬತ್ ದಿನ ಕಳೆಯುವುದು ಯಾವಾಗ? ಕೊಳಗವನ್ನು ಕಿರಿದು ಮಾಡೋಣ. ತೊಲವನ್ನು ಹಿರಿದು ಮಾಡೋಣ, ಕಳ್ಳತಕ್ಕಡಿಯನ್ನು ಬಳಸೋಣ, ಬಡವರನ್ನು ಬೆಳ್ಳಿಗೆ, ದಿಕ್ಕಿಲ್ಲದವರನ್ನು ಒಂದು ಜೊತೆ ಕೆರಕ್ಕೆ ಕೊಂಡುಕೊಳ್ಳೋಣ ಗೋದಿಯ ನುಚ್ಚುನುಸಿಯನ್ನೂ ಬಿಡದಂತೆ ಮಾರಿಬಿಡೋಣ," ಎಂದುಕೊಳ್ಳುತ್ತೀರಿ ಅಲ್ಲವೆ?  ಯಕೋಬನ ಮಹಿಮಾನ್ವಿತ ಸರ್ವೇಶ್ವರ ಆಣೆಯಿಟ್ಟು ಹೇಳುವುದೇನೆಂದರೆ; ಖಂಡಿತವಾಗಿ ಅವರ ದುಷ್ಕ್ರತ್ಯಗಳಲ್ಲಿ ಯಾವುದನ್ನೂ ಎಂದಿಗೂ ನಾನು ಮರೆಯಲಾರೆ".

ಕೀರ್ತನೆ: 113:1-2, 4-6, 7-8

ಶ್ಲೋಕ: ಪ್ರಭುವಿನ ದಾಸರೇ, ಪ್ರಭುವಿನ ನಾಮಸ್ತುತಿಯನು ಮಾಡಿರಿ

ಎರಡನೇ ವಾಚನ: 1 ತಿಮೊಥೇಯನಿಗೆ 2:1-8

ಮೊತ್ತಮೊದಲು ಮಾನವರೆಲ್ಲರಿಗೋಸ್ಕರ ದೇವರಿಗೆ ವಿಜ್ಞಾಪನೆ, ಪ್ರಾರ್ಥನೆ, ಬಿನ್ನಹ ಹಾಗೂ ಕೃತಜ್ಞತಾಸ್ತುತಿಗಳನ್ನು ಸಲ್ಲಿಸಬೇಕೆಂದು ಕೇಳಿಕೊಳ್ಳುತ್ತೇನೆ. ನಾವು ದೈವಭಕ್ತಿಯುಳ್ಳವರಾಗಿ ಮತ್ತು ಗೌರವಯುತರಾಗಿ ಶಾಂತಿ ಸಮಾಧಾನದಿಂದಲೂ ನೆಮ್ಮದಿಯಿಂದಲೂ ಜೀವಿಸಲು ಅನುಕೂಲವಾಗುವಂತೆ ಅರಸರಿಗಾಗಿಯೂ ಎಲ್ಲಾ ಅಧಿಕಾರಿಗಳಿಗಾಗಿಯೂ ಪ್ರಾರ್ಥಿಸಬೇಕು. ಹೀಗೆ ಮಾಡುವುದು ಒಳ್ಳೆಯದು, ನಮ್ಮ ಉದ್ಧಾರಕರಾದ ದೇವರಿಗೆ ಮೆಚ್ಚುಗೆಯಾದುದು. ಎಲ್ಲಾ ಮಾನವರೂ ಸತ್ಯವನ್ನರಿತು ಜೀವೋದ್ಧಾರ ಪಡೆಯಬೇಕೆಂಬುದೇ ದೈವೇಚ್ಛೆ, ದೇವರು ಒಬ್ಬರೇ; ದೇವರನ್ನೂ ಮಾನವರನ್ನೂ ಒಂದುಗೂಡಿಸುವ ಮಧ್ಯಸ್ಥರೂ ಒಬ್ಬರೇ ಅವರೇ ಮಾನವರಾಗಿರುವ ಕ್ರಿಸ್ತ ಯೇಸು. ಇವರು ಎಲ್ಲರ ಉದ್ಧಾರಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದರು. ಸರ್ವರೂ ಉದ್ಧಾರವಾಗಬೇಕೆಂಬ ದೈವೇಚ್ಛೆಗೆ ಸೂಕ್ತ ಸಮಯದಲ್ಲಿ ಸಾಕ್ಷಿ ನೀಡಿದರು. ವಿಶ್ವಾಸ ಮತ್ತು ಸತ್ಯದ ಸಂದೇಶವನ್ನು ಸಾರುವುದಕ್ಕಾಗಿಯೇ ದೇವರು ನನ್ನನ್ನು ಪ್ರೇಷಿತನನ್ನಾಗಿಯೂ ಯೆಹೂದ್ಯೇತರಿಗೆ ಬೋಧಕನನ್ನಾಗಿಯೂ ನೇಮಕಮಾಡಿದರು. ನಾನು ಹೇಳುತ್ತಿರುವುದು ಸುಳ್ಳಲ್ಲ, ಸತ್ಯಸ್ಯ ಸತ್ಯ. ಪ್ರಾರ್ಥನೆ ಮಾಡುವ ಸ್ಥಳಗಳಲ್ಲೆಲ್ಲಾ ಪುರುಷರು ಕೋಪತಾಪವಿಲ್ಲದೆ, ಕೋಲಾಹಲವಿಲ್ಲದೆ ಕರಗಳನೆತ್ತಿ ಭಕ್ತಿಪೂರ್ವಕವಾಗಿ ಪ್ರಾರ್ಥಿಸಬೇಕು ಎಂಬುದೇ ನನ್ನ ಅಪೇಕ್ಷೆ.

 ಶುಭಸಂದೇಶ: ಲೂಕ 16:1-13

ಯೇಸುಸ್ವಾಮಿ ತಮ್ಮ ಶಿಷ್ಯರನ್ನು ಉದ್ದೇಶಿಸಿ ಇಂತೆಂದರು: "ಒಬ್ಬ ಧನಿಕನಿದ್ದ. ಅವನ ವ್ಯವಹಾರಗಳನ್ನು ನೋಡಿಕೊಳ್ಳಲು ಒಬ್ಬ ಮೇಸ್ತ್ರಿಯಿದ್ದ. ಇವನು ಧನಿಕನ ಆಸ್ತಿಯನ್ನು ಹಾಳುಮಾಡುತ್ತಿದ್ದಾನೆಂದು ದೂರು ಬಂದಿತು. ಧನಿಕನು ಅವನನ್ನು ಕರೆದು, "ಏನಿದು, ನಿನ್ನ ವಿಷಯವಾಗಿ ನಾನು ಹೀಗೆಲ್ಲ ಕೇಳುತ್ತಾ ಇದ್ದೇನೆ? ನಿನ್ನ ಕೆಲಸದ ಲೆಕ್ಕಾಚಾರವನ್ನು ಒಪ್ಪಿಸಿಬಿಡು. ಇನ್ನು ನೀನು ಮೇಸ್ತ್ರಿ ಆಗಿರಲು ಆಗದು," ಎಂದ. ಆಗ ಮೇಸ್ತ್ರಿ "ಈಗ ಏನು ಮಾಡಲಿ? ಯಜಮಾನನು ನನ್ನನ್ನು ಕೆಲಸದಿಂದ ತೆಗೆದು ಬಿಡುತ್ತಾನಲ್ಲಾ; ಅಗೆಯಲು ಶಕ್ತಿ ಸಾಲದು; ಭಿಕ್ಷೆ ಬೇಡಲು ನನಗೆ ನಾಚಿಕೆ," ಎಂದು ಚಿಂತಕ್ರಾಂತನಾದ. ಮರುಕ್ಷಣ, "ಸರಿ, ಕೆಲಸದಿಂದ ನನ್ನನ್ನು ತೆಗೆದುಹಾಕಿದ ಮೇಲೆ, ಜನರು ನನ್ನನ್ನು ತಮ್ಮ ಮನೆಗೆ ಸೇರಿಸಿಕೊಳ್ಳುವಂತೆ ನಾನು ಏನು ಮಾಡಬೇಕೆಂದು ಈಗ ಗೊತ್ತಾಯಿತು," ಎಂದುಕೊಂಡ. ಯಜಮಾನನ ಸಾಲಗಾರರನ್ನು ಒಬ್ಬೊಬ್ಬರನ್ನಾಗಿ ಬರಮಾಡಿಕೊಂಡು,  "ನೀನು ನನ್ನ ಯಜಮಾನನಿಗೆ ತೀರಿಸಬೇಕಾದ ಸಾಲ ಎಷ್ಟು?" ಎಂದು ಮೊದಲನೆಯವನನ್ನು ಕೇಳಿದ. ಅವನು, "ನೂರು ಬುದ್ದಲಿ ಎಣ್ಣೆ," ಎಂದ. ಅದಕ್ಕೆ ಮೇಸ್ತ್ರಿ, "ಇಗೋ, ನಿನ್ನ ಪತ್ರ, ಕುಳಿತುಕೊಂಡು "ಐವತ್ತು" ಎಂದು ಬೇಗನೆ ಬರೆ," ಎಂದ. ಬಳಿಕ ಇನ್ನೊಬ್ಬನನ್ನು ಕರೆದು, "ನೀನೆಷ್ಟು ಸಾಲ ತೀರಿಸಬೇಕು?" ಎಂದು ಕೇಳಿದ. ಅವನು "ನೂರು ಖಂಡುಗ ಗೋದಿ" ಎಂದಾಗ  "ಇಗೋ ನಿನ್ನ ಪತ್ರ, "ಎಂಬತ್ತು" ಎಂದು ಬರೆ", ಎಂದ ಈ ಅಪ್ರಮಾಣಿಕ ಮೇಸ್ತ್ರಿ ಮಾಡಿದ ಮುಂದಾಲೋಚನೆಯನ್ನು ಅವನ ಯಜಮಾನ ಪ್ರಶಂಸಿಸಿದ. ಏಕೆಂದರೆ, ತಮ್ಮತಮ್ಮ ವ್ಯವಹಾರಗಳಲ್ಲಿ ಲೌಕಿಕ ಜನರು ಬೆಳಕಿನ ರಾಜ್ಯದ ಜನರಿಗಿಂತ ಜಾಣರು. ನಾನು ಹೇಳುವುದನ್ನು ಗಮನಿಸಿರಿ; ಲೌಕಿಕ ಆಸ್ತಿಪಾಸ್ತಿಯಿಂದ ಗೆಳೆಯರನ್ನು ಗಳಿಸಿಕೊಳ್ಳಿರಿ. ಅದು ವ್ಯಯವಾಗಿ ಹೋದಾಗ ನಿಮ್ಮನ್ನು ಅಮರ ನಿವಾಸಕ್ಕೆ ಸ್ವಾಗತಿಸಲಾಗುವುದು. ಸಣ್ಣ ವಿಷಯಗಳಲ್ಲಿ ಪ್ರಾಮಾಣಿಕನಾಗಿ ನಡೆದುಕೊಳ್ಳುವವನು ದೊಡ್ಡ ವಿಷಯಗಳಲ್ಲೂ ಪ್ರಾಮಾಣೆಕನಾಗಿ ನಡೆದುಕೊಳ್ಳುತ್ತಾನೆ. ಸಣ್ಣ ವಿಷಯಗಳಲ್ಲಿ ದ್ರೋಹ ಮಾಡುವವನು ದೋಡ್ಡ ವಿಷಯಗಳಲ್ಲೂ ದ್ರೋಹ ಮಾಡುತ್ತಾನೆ. ಲೌಕಿಕ ಆಸ್ತಿಪಾಸ್ತಿಗಳ ವಿಷಯದಲ್ಲಿ ನೀವು ಪ್ರಾಮಾಣಿಕರಾಗಿ ನಡೆದುಕೊಳ್ಳದೆ ಹೋದರೆ, ನಿಮ್ಮನ್ನು ನಂಬಿ ನೈಜ ಸಂಪತ್ತನ್ನು ನಿಮ್ಮ ವಶಕ್ಕೆ ಕೊಡುವವರಾರು? ಇನ್ನೊಬ್ಬರಿಗೆ ಸೇರಿದ ವಸ್ತುಗಳ ವಿಷಯದಲ್ಲಿ ನೀವು ಪ್ರಾಮಾಣಿಕರಾಗಿ ನಡೆದುಕೊಳ್ಳದೆ ಹೋದರೆ, ನಿಮ್ಮ ಸ್ವಂತಕ್ಕೆ ಏನನ್ನಾದರೂ ಕೊಡುವವರಾರು? ಯಾವನೂ ಇಬ್ಬರು ಯಜಮಾನರಿಗೆ ಸೇವೆ ಮಾಡಲಾಗದು; ಅವನು ಒಬ್ಬನನ್ನು ದ್ವೇಶಿಸಿ, ಇನ್ನೊಬ್ಬನನ್ನು ಪ್ರೀತಿಸುತ್ತಾನೆ; ಅಥವಾ ಒಬ್ಬನೊಡನೆ ಹೊಂದಿಕೊಂಡು ಇನ್ನೊಬ್ಬನನ್ನು ತಾತ್ಸಾರ ಮಾಡುತ್ತಾನೆ. ದೇವರಿಗೂ ದ್ರವ್ಯಕ್ಕೂ ಒಟ್ಟಿಗೆ ಸೇವೆಮಾಡಲು ನಿಮ್ಮಿಂದಾಗದು," ಎಂದರು.

17.09.22

ಮೊದಲನೇ ವಾಚನ: 1 ಕೊರಿಂಥಿಯರಿಗೆ 15:35-37, 42-49

ಸಹೋದರರೇ, ಸತ್ತವರನ್ನು ಮರಳಿ ಜೀವಂತರಾಗಿಸುವುದು ಹೇಗೆ ಸಾಧ್ಯ? ಅವರ ದೇಹಾಕೃತಿ ಹೇಗಿರುತ್ತದೆ? ಎಂದು ಯಾರಾದರೂ ಕೇಳಿಯಾರು.  ಮತಿಹೀನನೇ, ನೀನು ಬಿತ್ತಿದ ಬೀಜ ಸಾಯದಿದ್ದರೆ ಅದು ಜೀವ ತಾಳುವುದುಂಟೆ? ಇಲ್ಲ.  ನೀನು ಬಿತ್ತುವುದು ಗೋದಿಯನ್ನು ಅಥವಾ ಇನ್ನಾವುದೋ ಕಾಳನ್ನು; ಮುಂದಕ್ಕೆ ಬೆಳೆಯಲಿರುವ ಇಡೀ ಗಿಡವನ್ನಲ್ಲ. ಸತ್ತವರ ಪುನರುತ್ಥಾನವೂ ಹಾಗೆಯೇ. ಬಿತ್ತುವಂಥದ್ದು ಅಳಿದುಹೋಗುವಂಥದ್ದು. ಪುನರುತ್ಥಾನವಾಗುವಂಥದ್ದು ಅಮರವಾದುದು. ಬಿತ್ತಿದ್ದು ಬಲಹೀನವಾದುದು; ಪುನರುತ್ಥಾನಹೊಂದುವಂಥದ್ದು, ಬಲಿಷ್ಠವಾದುದು.  ಬಿತ್ತಿದ್ದು ಕುರೂಪಿಯಾದುದು; ಪುನರುತ್ಥಾನಹೊಂದುವುದು ಕೋಮಲವಾದುದು.  ಬಿತ್ತಿದ್ದು ಭೌತಿಕ ದೇಹ; ಪುನರುತ್ಥಾನ ಹೊಂದುವಂಥದ್ದು ಆಧ್ಯಾತ್ಮಿಕ ದೇಹ. ಭೌತಿಕ ದೇಹ ಇರುವುದು ಸತ್ಯವಾದರೆ ಆಧ್ಯಾತ್ಮಿಕ ದೇಹ ಇರುವುದೂ ಸತ್ಯ.  ಪವಿತ್ರಗ್ರಂಥದಲ್ಲಿ ಲಿಖಿತವಾಗಿರುವಂತೆ ಮೊದಲ ಮಾನವನಾದ ಆದಾಮನು ಜೀವ ಪಡೆದ ವ್ಯಕ್ತಿ; ಕಡೆಯ ಆದಾಮನಾದರೋ ಜೀವ ಕೊಡುವ ಆತ್ಮ.  ಮೊದಲು ಆದುದು ಆಧ್ಯಾತ್ಮಿಕವಾದುದಲ್ಲ, ಪ್ರಾಕೃತವಾದುದು. ಅನಂತರ ಆದುದು ಆಧ್ಯಾತ್ಮಿಕವಾದುದು.  ಮೊದಲನೆಯ ಮಾನವನು ಮಣ್ಣಿನಿಂದಾದವನು; ಮಣ್ಣಿಗೆ ಸಂಬಂಧಪಟ್ಟವನು. ಎರಡನೆಯ ಮಾನವನಾದರೋ ಸ್ವರ್ಗದಿಂದ ಬಂದವನು.  ಮಣ್ಣಿಗೆ ಸಂಬಂಧಪಟ್ಟವರು ಮಣ್ಣಿನಿಂದ ಆದವನಂತೆಯೇ ಇರುತ್ತಾರೆ. ಸ್ವರ್ಗಕ್ಕೆ ಸಂಬಂಧಪಟ್ಟವರು ಸ್ವರ್ಗದಿಂದ ಬಂದವನಂತೆಯೇ ಇರುತ್ತಾರೆ.  ಮಣ್ಣಿನಿಂದ ಆದವನ ರೂಪವನ್ನು ನಾವು ಧರಿಸಿರುವಂತೆಯೇ ಸ್ವರ್ಗದಿಂದ ಬಂದಾತನ ರೂಪವನ್ನು ಧರಿಸುತ್ತೇವೆ. 

ಕೀರ್ತನೆ 56:10-12, 13-14
ಶ್ಲೋಕ: ನಿನ್ನ ಮುಂದೆ ಜೀವನ್ ಜ್ಯೋತಿಯಲಿ ನಾ ನಡೆಯ ಮಾಡಿರುವೆ

ಶುಭಸಂದೇಶ: ಲುಕ 8:4-15

ಜನರು ಊರೂರುಗಳಿಂದ ಹೊರಟು ಯೇಸುಸ್ವಾಮಿಯ ಬಳಿಗೆ ಬಂದರು. ಜನಸಮೂಹವು ಹೆಚ್ಚುತ್ತಿದ್ದಂತೆ ಯೇಸು ಈ ಸಾಮತಿಯನ್ನು ಹೇಳಿದರು:  “ಒಬ್ಬ ರೈತನು ಬಿತ್ತುವುದಕ್ಕೆ ಹೋದನು. ಬಿತ್ತನೆ ಮಾಡುತ್ತಿದ್ದಾಗ ಕೆಲವು ಬೀಜಗಳು ಕಾಲ್ದಾರಿಯಲ್ಲಿ ಬಿದ್ದವು. ಅವು ಕಾಲ್ತುಳಿತಕ್ಕೆ ಸಿಕ್ಕಿಹೋದವು. ಅವುಗಳನ್ನು ಆಕಾಶದ ಪಕ್ಷಿಗಳು ತಿಂದುಬಿಟ್ಟವು.  ಮತ್ತೆ ಕೆಲವು ಬೀಜಗಳು ಕಲ್ಲುಭೂಮಿಯ ಮೇಲೆ ಬಿದ್ದವು. ಅವು ಮೊಳೆತಾಗಲೂ ತೇವವಿಲ್ಲದ ಕಾರಣ ಒಣಗಿಹೋದವು.  ಇನ್ನೂ ಕೆಲವು ಮುಳ್ಳು ಪೊದೆಗಳ ನಡುವೆ ಬಿದ್ದವು. ಮುಳ್ಳುಪೊದೆಗಳು ಅವುಗಳೊಡನೆ ಬೆಳೆದು ಸಸಿಗಳನ್ನು ಅದುಮಿಬಿಟ್ಟವು. ಇನ್ನೂ ಕೆಲವು ಬೀಜಗಳು ಹದವಾದ ಭೂಮಿಯಲ್ಲಿ ಬಿದ್ದವು. ಅವು ಬೆಳೆದು ನೂರ್ಮಡಿ ಫಸಲನ್ನು ಕೊಟ್ಟವು.” ಈ ಸಾಮತಿಯನ್ನು ಮುಗಿಸಿದ ಮೇಲೆ ಯೇಸು, “ಕೇಳುವುದಕ್ಕೆ ಕಿವಿಯುಳ್ಳವನು ಕೇಳಿಸಿಕೊಳ್ಳಲಿ,” ಎಂದು ಒತ್ತಿ ಹೇಳಿದರು. ಶಿಷ್ಯರು, ‘ಈ ಸಾಮತಿಯ ಅರ್ಥವೇನು?’ ಎಂದು ಕೇಳಿದಾಗ, ಯೇಸು ಇಂತೆಂದರು:  ದೇವರ ಸಾಮ್ರಾಜ್ಯದ ರಹಸ್ಯಗಳನ್ನು ಅರಿತುಕೊಳ್ಳುವ ಸದವಕಾಶವನ್ನು ನಿಮಗೆ ಕೊಡಲಾಗಿದೆ. ಬೇರೆಯವರಿಗಾದರೋ ಅವು ಸಾಮತಿಗಳ ರೂಪದಲ್ಲಿ ಮರೆಯಾಗಿವೆ. ಅವರು ಕಣ್ಣಾರೆ ನೋಡಿದರೂ ಕಾಣರು, ಕಿವಿಯಾರೆ ಕೇಳಿದರೂ ಗ್ರಹಿಸರು.” “ಸಾಮತಿಯ ಅರ್ಥ ಹೀಗಿದೆ: ಬೀಜ ಎಂದರೆ ದೇವರ ವಾಕ್ಯ.  ಕಾಲ್ದಾರಿಯಲ್ಲಿ ಬಿದ್ದ ಬೀಜಗಳು ಎಂದರೆ ಆ ವಾಕ್ಯವನ್ನು ಕೇಳಿದವರು. ಆದರೆ ಅವರು ವಿಶ್ವಾಸಿಸಿ ಜೀವೋದ್ಧಾರವನ್ನು ಪಡೆಯದಂತೆ ಪಿಶಾಚಿ ಬಂದು ಆ ವಾಕ್ಯವನ್ನು ಅವರ ಹೃದಯದಿಂದ ಕೂಡಲೇ ತೆಗೆದುಬಿಡುತ್ತದೆ.  ಕಲ್ಲುಭೂಮಿಯ ಮೇಲೆ ಬಿದ್ದ ಬೀಜಗಳು ಎಂದರೆ ದೇವರ ವಾಕ್ಯವನ್ನು ಕೇಳಿ ಸಂತೋಷದಿಂದ ಸ್ವೀಕರಿಸಿದವರು; ಅದು ಅವರಲ್ಲಿ ಬೇರೂರದ ಕಾರಣ ಅವರು ಸ್ವಲ್ಪಕಾಲ ವಿಶ್ವಾಸಿಸುತ್ತಾರೆ; ಶೋಧನೆಯ ಸಮಯದಲ್ಲಿ ಅದನ್ನು ತೊರೆದುಬಿಡುತ್ತಾರೆ.  ಮುಳ್ಳು ಪೊದೆಗಳ ನಡುವೆ ಬಿದ್ದ ಬೀಜಗಳು ಎಂದರೆ ದೇವರ ವಾಕ್ಯವನ್ನು ಕೇಳಿದ ಇನ್ನಿತರರು. ಆದರೆ ಕಾಲಕ್ರಮೇಣ ಬಾಳಿನ ಬವಣೆಗಳು, ಐಶ್ವರ್ಯದ ವ್ಯಾಮೋಹಗಳು ಹಾಗೂ ಸುಖಭೋಗಗಳು ಇವರನ್ನು ಅದುಮಿಬಿಡುತ್ತವೆ; ಇವರ ಫಲ ಪಕ್ವವಾಗುವುದಿಲ್ಲ.  ಹದವಾದ ಭೂಮಿಯ ಮೇಲೆ ಬಿದ್ದ ಬೀಜಗಳು ಎಂದರೆ ದೇವರ ವಾಕ್ಯವನ್ನು ಕೇಳಿ ಅದನ್ನು ಸದ್ಗುಣಶೀಲ ಹಾಗೂ ಸಾತ್ವಿಕವಾದ ಹೃದಯದಲ್ಲಿಟ್ಟು ಸಹನೆಯಿಂದ ಫಲ ತರುವವರು.” ಎಂದರು. 

16.09.22 - ಯೇಸುಸ್ವಾಮಿ ದೇವರ ಸಾಮ್ರಾಜ್ಯದ ಶುಭಸಂದೇಶವನ್ನು ಸಾರುತ್ತಾ ಪಟ್ಟಣಗಳಲ್ಲೂ ಹಳ್ಳಿಗಳಲ್ಲೂ ಸಂಚಾರ ಮಾಡಿದರು.

 ಮೊದಲನೇ ವಾಚನ: 1 ಕೊರಿಂಥಿಯರಿಗೆ 15:12-20


ಕ್ರಿಸ್ತಯೇಸು ಮರಣದಿಂದ ಪುನರುತ್ಥಾನ ಹೊಂದಿದರು ಎಂದು ನಾವು ಸಾರುತ್ತಿರುವಲ್ಲಿ, ಸತ್ತವರು ಪುನರುತ್ಥಾನರಾಗುವುದಿಲ್ಲ ಎಂದು ನಿಮ್ಮಲ್ಲಿ ಕೆಲವರು ವಾದಿಸುವುದು ಹೇಗೆ? ಸತ್ತವರಿಗೆ ಪುನರುತ್ಥಾನ ಇಲ್ಲವೆಂಬುದು ನಿಜವಾದರೆ ಕ್ರಿಸ್ತಯೇಸು ಪುನರುತ್ಥಾನ ಹೊಂದಲಿಲ್ಲ ಎಂದ ಹಾಗಾಯಿತು. ಕ್ರಿಸ್ತಯೇಸು ಪುನರುತ್ಥಾನರಾಗಲಿಲ್ಲ ಎಂದರೆ ನಮ್ಮ ಬೋಧನೆ ಬರಿದು; ನಿಮ್ಮ ವಿಶ್ವಾಸವೂ ಬರಿದು. ಸತ್ತವರು ಪುನರುತ್ಥಾನ ಹೊಂದುವುದಿಲ್ಲ ಎಂಬುದು ನಿಜವಾದರೆ ದೇವರು ಕ್ರಿಸ್ತಯೇಸುವನ್ನು ಪುನರುತ್ಥಾನಗೊಳಿಸಿಲ್ಲ ಎಂದಂತಾಯಿತು. ದೇವರು ಕ್ರಿಸ್ತಯೇಸುವನ್ನು ಸಾವಿನಿಂದ ಪುನರುತ್ಥಾನಗೊಳಿಸಿದ್ದಾರೆ ಎಂದು ಸಾಕ್ಷಿ ಹೇಳಿದ ನಾವು ಆಗ ದೇವರ ಬಗ್ಗೆಯೇ ಸುಳ್ಳುಸಾಕ್ಷಿ ಹೇಳಿದಂತಾಯಿತು. ಸತ್ತವರು ಪುನರುತ್ಥಾನ ಹೊಂದುವುದಿಲ್ಲ ಎಂದರೆ ಕ್ರಿಸ್ತಯೇಸುವು ಪುನರುತ್ಥಾನ ಹೊಂದಲಿಲ್ಲ ಎಂದಂತಾಯಿತು. ಕ್ರಿಸ್ತಯೇಸುವೇ ಪುನರುತ್ಥಾನ ಹೊಂದಿಲ್ಲ ಎಂದಮೇಲೆ ನಿಮ್ಮ ವಿಶ್ವಾಸವೇ ನಿರರ್ಥಕ; ಮತ್ತು ನೀವಿನ್ನೂ ನಿಮ್ಮ ಪಾಪಗಳಲ್ಲಿಯೇ ಮುಳುಗಿದ್ದೀರಿ; ಅಷ್ಟೇ ಅಲ್ಲದೆ, ಕ್ರಿಸ್ತಯೇಸುವಿನಲ್ಲಿ ಮೃತರಾದವರೆಲ್ಲರೂ ವಿನಾಶವಾದರು. ಕ್ರಿಸ್ತಯೇಸುವಿನಲ್ಲಿ ನಮಗಿರುವ ನಂಬಿಕೆ ಕೇವಲ ಬದುಕಿಗೆ ಸೀಮಿತವಾಗಿದ್ದರೆ ಜಗತ್ತಿನಲ್ಲಿ ನಮಗಿಂತ ನಿರ್ಭಾಗ್ಯರು ಬೇರೆ ಯಾರೂ ಇಲ್ಲ. ಕ್ರಿಸ್ತಯೇಸು ಪುನರುತ್ಥಾನಹೊಂದಿದ್ದೇನೋ ಸತ್ಯಸ್ಯ ಸತ್ಯ. ಅವರ ಪುನರುತ್ಥಾನವು, ಸತ್ತವರು ಪುನರುತ್ಥಾನ ಹೊಂದುತ್ತಾರೆ ಎನ್ನುವುದಕ್ಕೆ ಪ್ರಮಾಣ.

ಕೀರ್ತನೆ: 17:1, 6-7, 8, 15

ಶ್ಲೋಕ: ಪ್ರಭೂ, ನಿನ್ನ ಮಖದರ್ಶನದಿಂದ ನಾನು ಎಚ್ಚತ್ತು ತೃಪ್ತನಾಗುವೇನು. 

ಶುಭಸಂದೇಶ: ಲೂಕ 8:1-3


ಯೇಸುಸ್ವಾಮಿ ದೇವರ ಸಾಮ್ರಾಜ್ಯದ ಶುಭಸಂದೇಶವನ್ನು ಸಾರುತ್ತಾ ಪಟ್ಟಣಗಳಲ್ಲೂ ಹಳ್ಳಿಗಳಲ್ಲೂ ಸಂಚಾರಮಾಡಿದರು. ಹನ್ನೆರಡು ಮಂದಿ ಶಿಷ್ಯರೂ ಅವರೊಡನೆ ಇದ್ದರು.  ದೆವ್ವಗಳ ಕಾಟದಿಂದಲೂ ರೋಗರುಜಿನಗಳಿಂದಲೂ ಬಿಡುಗಡೆ ಹೊಂದಿದ್ದ ಕೆಲವು ಮಹಿಳೆಯರು ಅವರ ಜೊತೆಯಲ್ಲಿದ್ದರು. ಅವರಾರೆಂದರೆ: ಏಳು ದೆವ್ವಗಳಿಂದ ವಿಮುಕ್ತಳಾಗಿದ್ದ ಮಗ್ದಲದ ಮರಿಯಳು,  ಹೆರೋದನ ಅರಮನೆಯ ಮೇಲ್ವಿಚಾರಕನಾಗಿದ್ದ ಕೂಜನ ಪತ್ನಿ ಯೊವಾನ್ನಳು, ಅಲ್ಲದೆ ಸುಸಾನ್ನಳು, ಮತ್ತಿತರ ಅನೇಕರು. ಇವರು ತಮ್ಮ ಆಸ್ತಿಪಾಸ್ತಿಯನ್ನು ವೆಚ್ಚಮಾಡಿ ಯೇಸುವಿಗೂ ಅವರ ಶಿಷ್ಯರಿಗೂ ಉಪಚಾರ ಮಾಡುತ್ತಿದ್ದರು.

15.09.22 - "ಈಕೆ ಮಾಡಿದ ಪಾಪಗಳು ಅಪಾರವಾದರೂ ಅವನ್ನು ಕ್ಷಮಿಸಲಾಗಿವೆ; ಇದಕ್ಕೆ ಈಕೆ ತೋರಿಸಿರುವ ಅಧಿಕವಾದ ಪ್ರೀತಿಯೇ ಸಾಕ್ಷಿ"

 ಮೊದಲನೇ ವಾಚನ: 1 ಕೊರಿಂಥಿಯರಿಗೆ 15:1-11

ಪ್ರಿಯ ಸಹೋದರರೇ, ನಾನು ನಿಮಗೆ ಬೋಧಿಸಿದ ಶುಭಸಂದೇಶವನ್ನು ನೆನಪಿಗೆ ತಂದುಕೊಳ್ಳಿರಿ. ನೀವು ಅದನ್ನು ಸ್ವೀಕರಿಸಿದ್ದೀರಿ. ಅದರಲ್ಲಿ ನೆಲೆಯಾಗಿ ನಿಂತಿದ್ದೀರಿ.  ನಾನು ನಿಮಗೆ ಶುಭಸಂದೇಶವೆಂದು ತಿಳಿಸಿದ ಸಂಗತಿಯನ್ನು ದೃಢವಾಗಿ ವಿಶ್ವಾಸಿಸಿದರೆ ನೀವು ಜೀವೋದ್ಧಾರವನ್ನು ಪಡೆಯುವಿರಿ. ಇಲ್ಲವಾದರೆ ನಿಮ್ಮ ವಿಶ್ವಾಸ ನಿರರ್ಥಕವಾದೀತು. ನಾನು ಪಡೆದುಕೊಂಡದ್ದನ್ನು ಮುಖ್ಯವಾದುದು ಎಂದೆಣಿಸಿ ನಿಮಗೆ ಒಪ್ಪಿಸಿದ್ದೇನೆ. ಅದು ಯಾವುದೆಂದರೆ, ಪವಿತ್ರಗ್ರಂಥದಲ್ಲಿ ಹೇಳಿರುವ ಪ್ರಕಾರ ಕ್ರಿಸ್ತಯೇಸು ನಮ್ಮ ಪಾಪಗಳ ಪರಿಹಾರಕ್ಕಾಗಿ ಪ್ರಾಣತ್ಯಾಗ ಮಾಡಿದರು.  ಅವರನ್ನು ಭೂಸ್ಥಾಪನೆ ಮಾಡಲಾಯಿತು. ಅದೇ ಗ್ರಂಥದ ಪ್ರಕಾರ ಮೂರನೆಯ ದಿನ ಅವರು ಪುನರುತ್ಥಾನ ಹೊಂದಿದರು.  ಅನಂತರ ಕೇಫನಿಗೂ ಹನ್ನೆರಡು ಮಂದಿಗೂ ಕಾಣಿಸಿಕೊಂಡರು.  ತರುವಾಯ ಒಂದೇ ಸಮಯದಲ್ಲಿ ಐನೂರಕ್ಕೂ ಹೆಚ್ಚಿನ ಮಂದಿ ಸಹೋದರರಿಗೆ ಪ್ರತ್ಯಕ್ಷರಾದರು. ಅವರಲ್ಲಿ ಕೆಲವರು ಸತ್ತುಹೋಗಿದ್ದರೂ ಬಹುಮಂದಿ ಇಂದಿಗೂ ಬದುಕಿದ್ದಾರೆ.  ಅದಾದ ಮೇಲೆ ಯಕೋಬನಿಗೂ ಅನಂತರ ಪ್ರೇಷಿತರೆಲ್ಲರಿಗೂ ಕಾಣಿಸಿಕೊಂಡರು. ಕಟ್ಟಕಡೆಗೆ ದಿನತುಂಬುವ ಮೊದಲೇ ಹುಟ್ಟಿದವನಂತಿರುವ ನನಗೂ ಕಾಣಿಸಿಕೊಂಡರು. ನಾನಾದರೋ ಪ್ರೇಷಿತರಲ್ಲಿ ಕನಿಷ್ಠನು, ಪ್ರೇಷಿತನೆಂಬ ಹೆಸರಿಗೂ ಅಪಾತ್ರನು. ಏಕೆಂದರೆ, ನಾನು ದೇವರ ಸಭೆಯನ್ನು ಹಿಂಸಿಸಿದೆನು.  ನಾನು ಈಗ ಈ ಸ್ಥಿತಿಯಲ್ಲಿ ಇರುವುದು ದೇವರ ಅನುಗ್ರಹದಿಂದಲೇ. ಅವರ ಅನುಗ್ರಹ ನನ್ನಲ್ಲಿ ವ್ಯರ್ಥವಾಗಲಿಲ್ಲ. ನಾನು ಅವರೆಲ್ಲರಿಗಿಂತಲೂ ಹೆಚ್ಚು ಶ್ರಮಪಟ್ಟು ಸೇವೆಮಾಡಿದ್ದೇನೆ. ಅದನ್ನು ಮಾಡಿದವನು ನಾನಲ್ಲ, ನನ್ನಲ್ಲಿರುವ ದೇವರ ಅನುಗ್ರಹವೇ.  ನಾನಾದರೇನು, ಅವರಾದರೇನು? ನಾವು ಸಾರುವ ಸಂದೇಶ ಒಂದೇ ಅದನ್ನು ನೀವು ನಂಬಿದ್ದೀರಿ.

ಕೀರ್ತನೆ: 118:1-2, 16-17, 28

ಶ್ಲೋಕ: ಸಲ್ಲಿಸಿ ಪ್ರಭುವಿಗೆ ಧನ್ಯವಾದ, ಆತ ಒಳ್ಳೆಯವ 

ಶುಭಸಂದೇಶ: ಲೂಕ 7:36-50


ಒಬ್ಬ ಫರಿಸಾಯನು ಯೇಸುಸ್ವಾಮಿಯನ್ನು ಊಟಕ್ಕೆ ಆಹ್ವಾನಿಸಿದನು. ಯೇಸು ಅವನ ಮನೆಗೆ ಹೋಗಿ ಊಟಕ್ಕೆ ಕುಳಿತರು.  ಅದೇ ಊರಿನಲ್ಲಿ ಪತಿತೆಯೊಬ್ಬಳು ಇದ್ದಳು. ಆಕೆ, ಫರಿಸಾಯನ ಮನೆಯಲ್ಲಿ ಯೇಸು ಊಟಕ್ಕೆ ಕುಳಿತಿದ್ದಾರೆಂದು ಕೇಳಿ ಒಂದು ಅಮೃತಶಿಲೆಯ ಭರಣಿ ತುಂಬ ಸುಗಂಧ ತೈಲವನ್ನು ತೆಗೆದುಕೊಂಡು ಅಲ್ಲಿಗೆ ಬಂದಳು.  ಅವಳು ಯೇಸುವಿನ ಹಿಂಬದಿಯಲ್ಲಿ ಅಳುತ್ತಾನಿಂತು, ತನ್ನ ಕಂಬನಿಯಿಂದ ಅವರ ಪಾದಗಳನ್ನು ತೊಳೆದು ತಲೆಕೂದಲಿನಿಂದ ಒರಸಿ, ಆ ಪಾದಗಳಿಗೆ ಮುತ್ತಿಟ್ಟು, ಸುಗಂಧ ತೈಲವನ್ನುಹಚ್ಚಿದಳು.  ಯೇಸುವನ್ನು ಆಹ್ವಾನಿಸಿದ ಫರಿಸಾಯನು ಇದನ್ನು ನೋಡಿ, ‘ಇವನು ನಿಜವಾಗಿಯೂ ಪ್ರವಾದಿಯಾಗಿದ್ದರೆ ತನ್ನನ್ನು ಮುಟ್ಟುತ್ತಿರುವ ಇವಳು ಯಾರು, ಎಂಥಾ ಪತಿತಳು, ಎಂದು ತಿಳಿದುಕೊಳ್ಳುತ್ತಿದ್ದನು’ ಎಂದು ತನ್ನೊಳಗೇ ಅಂದುಕೊಂಡನು.  ಅದಕ್ಕೆ ಯೇಸು, “ಸಿಮೋನ್, ನಾನು ನಿನಗೆ ಹೇಳಬೇಕಾದ ವಿಷಯ ಒಂದಿದೆ,” ಎಂದರು. ಸಿಮೋನನು, “ಅದೇನು ಹೇಳಿ ಗುರುವೇ,” ಎಂದನು.  ಆಗ ಯೇಸು, “ಒಬ್ಬ ಸಾಲಿಗನಿಗೆ ಇಬ್ಬರು ಸಾಲಗಾರರಿದ್ದರು. ಒಬ್ಬನು ಐನೂರು, ಇನ್ನೊಬ್ಬನು ಐವತ್ತು ಬೆಳ್ಳಿ ನಾಣ್ಯಗಳನ್ನು ಅವನಿಗೆ ಸಾಲ ಕೊಡಬೇಕಾಗಿತ್ತು.  ಆ ಇಬ್ಬರಿಗೂ ಸಾಲ ತೀರಿಸಲು ಸಾಧ್ಯವಾಗಲಿಲ್ಲ. ಸಾಲಿಗನು ಇಬ್ಬರ ಸಾಲವನ್ನು ಮನ್ನಾ ಮಾಡಿದನು. ಈಗ ಹೇಳು, ಈ ಇಬ್ಬರಲ್ಲಿ “ಯಾರಿಗೆ ಆ ಸಾಲಿಗನ ಮೇಲೆ ಹೆಚ್ಚು ಪ್ರೀತಿ?” ಎಂದು ಕೇಳಿದರು.  ಅದಕ್ಕೆ ಸಿಮೋನನು, “ಯಾರು ಹೆಚ್ಚು ಸಾಲದಿಂದ ಬಿಡುಗಡೆ ಹೊಂದಿದ್ದಾನೋ ಅವನೇ ಎಂದು ತೋರುತ್ತದೆ,” ಎಂದನು. “ಸರಿಯಾಗಿ ಹೇಳಿದೆ,” ಎಂದರು ಯೇಸು.  ಅನಂತರ ಆ ಮಹಿಳೆಯ ಕಡೆ ತಿರುಗಿ ಸಿಮೋನನಿಗೆ, “ಈಕೆಯನ್ನು ನೋಡಿದೆಯಾ? ನಾನು ನಿನ್ನ ಮನೆಗೆ ಬಂದಾಗ ನೀನು ನನ್ನ ಕಾಲಿಗೆ ನೀರು ಕೊಡಲಿಲ್ಲ; ಈಕೆಯಾದರೋ ನನ್ನ ಪಾದಗಳನ್ನು ತನ್ನ ಕಣ್ಣೀರಿನಿಂದ ತೊಳೆದು ತಲೆಗೂದಲಿನಿಂದ ಒರಸಿರುವಳು.  ನೀನು ನನಗೆ ಮುತ್ತಿಟ್ಟು ಸ್ವಾಗತಿಸಲಿಲ್ಲ; ಆದರೆ ಈಕೆ ಒಳಗೆ ಬಂದಾಗಿನಿಂದ ನನ್ನ ಪಾದಗಳಿಗೆ ಮುತ್ತಿಡುವುದನ್ನು ನಿಲ್ಲಿಸಿಲ್ಲ;  ನನ್ನ ತಲೆಗೆ ನೀನು ಎಣ್ಣೆ ಹಚ್ಚಲಿಲ್ಲ; ಈಕೆಯೋ ನನ್ನ ಪಾದಗಳಿಗೆ ಸುಗಂಧ ತೈಲವನ್ನು ಹಚ್ಚಿರುವಳು.  ಆದ್ದರಿಂದ ನಾನು ನಿಮಗೆ ಹೇಳುವುದೇನೆಂದರೆ, ಈಕೆ ಮಾಡಿದ ಪಾಪಗಳು ಅಪಾರವಾದರೂ ಅವನ್ನು ಕ್ಷಮಿಸಲಾಗಿವೆ; ಇದಕ್ಕೆ ಈಕೆ ತೋರಿಸಿರುವ ಅಧಿಕವಾದ ಪ್ರೀತಿಯೇ ಸಾಕ್ಷಿ. ಕಡಿಮೆ ಕ್ಷಮೆ ಪಡೆದವನು ಕಡಿಮೆ ಪ್ರೀತಿ ತೋರಿಸುತ್ತಾನೆ,” ಎಂದರು.  ಅನಂತರ ಯೇಸು ಆ ಮಹಿಳೆಗೆ: “ನಿನ್ನ ಪಾಪಗಳನ್ನು ಕ್ಷಮಿಸಲಾಗಿದೆ,” ಎಂದರು.  ಜೊತೆಯಲ್ಲಿ ಊಟಕ್ಕೆ ಕುಳಿತಿದ್ದವರು ಇದನ್ನು ಕೇಳಿ, “ಪಾಪಗಳನ್ನು ಕೂಡ ಕ್ಷಮಿಸುವ ಈತ ಯಾರು?” ಎಂದು ತಮ್ಮತಮ್ಮಲ್ಲೇ ಹೇಳಿಕೊಂಡರು.  ಯೇಸು ಆಕೆಗೆ, “ನಿನ್ನ ವಿಶ್ವಾಸ ನಿನ್ನನ್ನು ಉದ್ಧಾರಮಾಡಿದೆ; ಸಮಾಧಾನದಿಂದ ಹೋಗು,” ಎಂದರು.

14.09.22 - "ದೇವರು ಲೋಕವನ್ನು ಎಷ್ಟಾಗಿ ಪ್ರೀತಿಸಿದರೆಂದರೆ ತಮ್ಮ ಏಕೈಕ ಪುತ್ರನನ್ನೇ ಧಾರೆಯೆರೆದರು"

 ಮೊದಲನೇ ವಾಚನ: ಸಂಖ್ಯಾಕಾಂಡ - 21:4-9



ಇಸ್ರಯೇಲರು ಹೋರ್ ಬೆಟ್ಟದಿಂದ ಹೊರಟು ಎದೋಮ್ಯರ ನಾಡನ್ನು ಸುತ್ತಿಕೊಂಡು ಹೋಗುವುದಕ್ಕೆ ಕೆಂಪು ಕಡಲಿನ ಮಾರ್ಗವಾಗಿ ಪ್ರಯಾಣ ಮಾಡಿದರು. ಈ ಮಾರ್ಗದ ಆಯಾಸದಿಂದವರಿಗೆ ಬೇಸರವಾಯಿತು. ಆಗ ಅವರು ದೇವರಿಗೂ ಮೋಶೆಗೂ ವಿರುದ್ಧ ಮಾತನಾಡತೊಡಗಿದರು: "ನೀವು ನಮ್ಮನ್ನು ಈ ಮರಳುಗಾಡಿನಲ್ಲಿ ಕೊಲ್ಲಬೇಕೆಂದು ಈಜಿಪ್ಟ್ ದೇಶದಿಂದ ಕರೆದುಕೊಂಡು ಬಂದಿರೋ? ಇಲ್ಲಿ ಆಹಾರವಿಲ್ಲ, ನೀರೂ ಇಲ್ಲ; ಈ ನಿಸ್ಸಾರವಾದ ಆಹಾರವನ್ನು ತಿಂದು ತಿಂದು ನಮಗೆ ಬೇಸರವಾಗಿದೆ,", ಎಂದು ಹೇಳತೊಡಗಿದರು. ಅದಕ್ಕೆ ಸರ್ವೇಶ್ವರ ವಿಷಸರ್ಪಗಳನ್ನು ಅವರ ನಡುವೆ ಬರಮಾಡಿದರು. ಅವು ಆ ಜನರನ್ನು ಕಚ್ಚಿದವು. ಬಹು ಜನ ಸತ್ತುಹೋದರು. ಆಗ ಜನರು ಮೋಶೆಯ ಬಳಿಗೆ ಬಂದು, "ನಾವು ನಿಮಗೂ ಸರ್ವೇಶ್ವರನಿಗೂ ವಿರುದ್ಧ ಮಾತಾಡಿ ದೋಷಿಗಳಾದೆವು. ಈ ಸರ್ಪಗಳು ನಮ್ಮನ್ನು ಬಿಟ್ಟು ತೊಲಗುವಂತೆ ಸರ್ವೇಶ್ವರನನ್ನು ಪ್ರಾರ್ಥಿಸಿ," ಎಂದು ಬೇಡಿಕೊಂಡರು. ಮೋಶೆ ಜನರ ಪರವಾಗಿ ಪ್ರಾರ್ಥಿಸಿದನು. ಸರ್ವೇಶ್ವರ ಅವನಿಗೆ, ನೀನು ಕಂಚಿನಿಂದ ವಿಷಸರ್ಪದ ಆಕಾರವನ್ನು ಮಾಡಿಸಿ, ಧ್ವಜ ಸ್ತಂಭದ ಮೇಲೆ ಎತ್ತಿ ನಿಲ್ಲಿಸು. ಸರ್ಪಗಳಿಂದ ಗಾಯಗೊಂಡ ಪ್ರತಿಯೊಬ್ಬನು ಅದನ್ನು ನೋಡಿ ಬದುಕಿಕೊಳ್ಳುವನು," ಎಂದು ಆಜ್ಞಾಪಿಸಿದರು. ಅಂತೆಯೇ ಮೋಶೆ ಕಂಚಿನಂದ ಸರ್ಪದ ಆಕಾರವನ್ನು ಮಾಡಿಸಿ ಧ್ವಜ ಸ್ತಂಭದ ಮೇಲೆ ಇಡಿಸಿದನು. ಸರ್ಪಗಳಿಂದ ಗಾಯಗೊಂಡವರಲ್ಲಿ ಯಾರು ಯಾರು ಆ ಕಂಚಿನ  ಸರ್ಪವನ್ನು ಲಕ್ಷ್ಯವಿಟ್ಟು ನೋಡಿದರೋ ಅವರೆಲ್ಲರೂ ಬದುಕಿಕೊಂಡರು.

ಕೀರ್ತನೆ: 78:1-2, 34-38
ಶ್ಲೋಕ: ಮರೆಯದಿರು ಪ್ರಭುವಿನ ಮಹತ್ಕಾರ್ಯಗಳನು

ನನ್ನ ಜನರೇ, ಕಿವಿಗೊಡಿ ನನ್ನ ಬೋಧನೆಗೆ|
ಗಮನಕೊಡಿ ನಾ ಹೇಳುವ ಮಾತುಗಳಿಗೆ||
ಸಾಮತಿಯೊಂದಿಗೆ ಬೋಧನೆಯನಾರಂಭಿಸುವೆನು|
ಹೊರಪಡಿಸುವೆನು ಪೂರ್ವಕಾಲದ ಗೂಢಾರ್ಥಗಳನು||

ಆತನನು ನೆನಸಿಕೊಂಡರವರು ವಧೆಯಾಗುವಾಗ|
ಪರಿತಾಪಗೊಂಡು ದೇವರಿಗೆ ಅಭಿಮುಖರಾದಾಗ||
ನೆನೆದರಾಗ ದೇವರೇ ತಮಗಾಶ್ರಯದುರ್ಗವೆಂದು|
ಆ ಪರಾತ್ಪರ ದೇವರೇ ತಮಗೆ ಉದ್ಧಾರಕನೆಂದು||

ಆದರೆ ಅವರ ನಾಲಿಗೆಯಾಡಿತು ಅಸತ್ಯ|
ಅವರ ಬಾಯಿ ಮಾಡಿತು ಕೇವಲ ಮುಖಸ್ತುತಿಯ||
ನೆಲೆಯಾಗಿರಲಿಲ್ಲ ಅವರ ಹೃದಯ ಆತನಲಿ|
ಬದ್ದರಾಗಿರಲಿಲ್ಲ ಆತನ ನಿಬಂಧನೆಗಳಲಿ||

ಆದರೂ ಕ್ಷಮಿಸಿದನವರನು ಆ ದಯಾಳು, ನಾಶಮಾಡದೆ|
ಕೋಪವ ತಾಳಿಕೊಂಡನು, ಹಲವು ವೇಳೆ ಉದ್ರೇಕಗೊಳ್ಳದೆ||

ಎರಡನೇ ವಾಚನ: ಫಿಲಿಪ್ಪಿಯರಿಗೆ 2:6-11

ಜೀವಸ್ವರೂಪಿ ತಾನಾಗಿದ್ದರೂ ನಿರುತ ದೇವರಿಗೆ ಸಮನಾದ ಆ ಸಿರಿ ಪದವಿಯನಾತ ಹಿಡಿದಿಟ್ಟುಕೊಳ್ಳಲಿಲ್ಲ ಬಿಡಲೊಲ್ಲೆನೆನುತ. ತನ್ನನ್ನೇ ಬರಿದು ಮಾಡಿಕೊಂಡು ದಾಸನ ರೂಪವನು ಧರಿಸಿಕೊಂಡು ಮನುಜನಾಕಾರದಲಿ ಕಾಣಿಸಿಕೊಂಡು ನರಮಾನವರಿಗೆ ಸರಿಸಮನಾದ. ತನ್ನನೇ ಆತ ತಗ್ಗಿಸಿಕೊಂಡು ವಿಧೇಯನಾಗಿ ನಡೆದುಕೊಂಡು ಮರಣಪರಿಯಂತ, ಹೌದೌದು, ಶಿಲುಬೆಯ ಮರಣಪರಿಯಂತ ವಿಧೇಯನಾದ. ಎಂತಲೇ ಪರಮೋನ್ನತ ಸ್ಥಾನಕ್ಕೇರಿಸಿದನಾತನನು ಇತ್ತನು ಹೆಸರುಗಳೊಳುತ್ತಮ ಹೆಸರನು ದೇವ ಪರಮನು, ಯೇಸುವಿನ ಹೆಸರಿಗೆಂದೇ ಮೊಣಕಾಲೂರಿ ಮಣಿವರು ಸ್ವರ್ಗವಾಸಿಗಳು, ಭೂನಿವಾಸಿಗಳು, ಪಾತಾಳ ಜೀವರಾಶಿಗಳು,  "ಕ್ರಿಸ್ತ ಯೇಸುವೇ ಪ್ರಭು", ಎಂದೆಲ್ಲರಿಗೆ ಅರಿಕೆ ಮಾಡುವರು ಪಿತ ದೇವನ ಮಹಿಮೆಯನ್ನು ಈ ಪರಿ ಹೊಗಳಿ ಸಾರುವರವರು.

ಶುಭಸಂದೇಶ: ಯೊವಾನ್ನ 3:13-17



ಯೇಸು ನಿಕೊದೇಮನಿಗೆ ಇಂತೆಂದರು: "ಸ್ವರ್ಗಲೋಕದಿಂದಲೇ ಇಳಿದುಬಂದ ನರಪುತ್ರನೇ ಹೊರತು ಬೇರೆ ಯಾರೂ ಸ್ವರ್ಗಕ್ಕೆ ಏರಿಹೋದವರಿಲ್ಲ. ಮೋಶೆ ಮರುಭೂಮಿಯಲ್ಲಿ ಸರ್ಪವನ್ನು ಮೇಲಕ್ಕೆ ಏರಿಸಿದನು. ಅಂತೆಯೇ ನರಪುತ್ರನಲ್ಲಿ ವಿಶ್ವಾಸವಿಟ್ಟವರೆಲ್ಲರೂ ನಿತ್ಯಜೀವವನ್ನು ಪಡೆಯುವಂತೆ ನರಪುತ್ರನನ್ನು ಸಹ ಮೇಲಕ್ಕೆ ಏರಿಸಬೇಕು. ದೇವರು ಲೋಕವನ್ನು ಎಷ್ಟಾಗಿ ಪ್ರೀತಿಸಿದರೆಂದರೆ ತಮ್ಮ ಏಕೈಕ ಪುತ್ರನನ್ನೇ ಧಾರೆಯೆರೆದರು; ಆತನಲ್ಲಿ ವಿಶ್ವಾಸವಿಟ್ಟ ಯಾರೂ ನಾಶವಾಗದೆ ಎಲ್ಲರೂ ನಿತ್ಯ ಜೀವವನ್ನು ಪಡೆಯಬೇಕೆಂಬುದೇ ದೇವರ ಉದ್ದೇಶ. ದೇವವರು ತಮ್ಮ ಪುತ್ರನನ್ನು ಈ ಲೋಕಕ್ಕೆ ಕಳುಹಿಸಿದ್ದು ಲೋಕವನ್ನು ತೀರ್ಪಿಗೆ ಗುರಿ ಮಾಡಲೆಂದಲ್ಲ; ಪುತ್ರನ ಮುಖಾಂತರ ಲೋಕ ಉದ್ಧಾರವಾಗಲೆಂದು.

13.09.22 - “ಮಹಾಪ್ರವಾದಿಯೊಬ್ಬನು ನಮ್ಮಲ್ಲೇ ಉದಯಿಸಿದ್ದಾನೆ; ದೇವರು ತಮ್ಮ ಜನರನ್ನು ರಕ್ಷಿಸಲು ಬಂದಿದ್ದಾರೆ,”

ಮೊದಲನೇ ವಾಚನ: 1 ಕೊರಿಂಥಿಯರಿಗೆ  12:12-14, 27-31

ದೇಹ ಒಂದೇ; ಅಂಗಗಳು ಹಲವು. ಆ ಅಂಗಗಳು ಅನೇಕವಿದ್ದರೂ ಅವು ಸೇರಿ ಒಂದೇ ದೇಹವಾಗುತ್ತದೆ. ಅಂತೆಯೇ ಕ್ರಿಸ್ತಯೇಸು. ಯೆಹೂದ್ಯರಾಗಿರಲಿ, ಗ್ರೀಕರಾಗಿರಲಿ, ಪರತಂತ್ರರಾಗಿರಲಿ, ಸ್ವತಂತ್ರರಾಗಿರಲಿ - ನಾವೆಲ್ಲರೂ ಒಂದೇ ದೇಹವಾಗುವಂತೆ ಒಂದೇ ಆತ್ಮದಿಂದ ದೀಕ್ಷಾಸ್ನಾನ ಹೊಂದಿದ್ದೇವೆ. ಒಂದೇ ಆತ್ಮವನ್ನು ನಮ್ಮೆಲ್ಲರಿಗೂ ಪಾನವಾಗಿ ಕೊಡಲಾಗಿದೆ. ದೇಹವು ಏಕ ಅಂಗದಿಂದ ಅಲ್ಲ, ಅನೇಕ ಅಂಗಗಳಿಂದ ಕೂಡಿದೆ. ನೀವೆಲ್ಲರೂ ಕ್ರಿಸ್ತಯೇಸುವಿನ ದೇಹ ಆಗಿದ್ದೀರಿ; ಪ್ರತಿಯೊಬ್ಬನೂ ಈ ದೇಹದ ಅಂಗವಾಗಿದ್ದಾನೆ. ದೇವರು ತಮ್ಮ ಸಭೆಯಲ್ಲಿ, ಮೊದಲನೆಯದಾಗಿ ಪ್ರೇಷಿತರನ್ನು, ಎರಡನೆಯದಾಗಿ ಪ್ರವಾದಿಗಳನ್ನು, ಮೂರನೆಯದಾಗಿ ಬೋಧಕರನ್ನು ನೇಮಿಸಿದ್ದಾರೆ. ಅನಂತರ ಪವಾಡಗಳನ್ನು ಎಸಗುವವರನ್ನು, ರೋಗಗಳನ್ನು ಗುಣಪಡಿಸುವವರನ್ನು, ಪರೋಪಕಾರಿಗಳನ್ನು, ಪರಿಪಾಲಕರನ್ನು, ಬಹುಭಾಷಾ ಪಂಡಿತರನ್ನು ನೇಮಿಸಿದ್ದಾರೆ. ಎಲ್ಲರೂ ಪ್ರೇಷಿತರಲ್ಲ, ಎಲ್ಲರೂ ಪ್ರವಾದಿಗಳಲ್ಲ, ಎಲ್ಲರೂ ಬೋಧಕರಲ್ಲ, ಎಲ್ಲರೂ ಪವಾಡಪುರುಷರಲ್ಲ, ಎಲ್ಲರೂ ರೋಗಗಳನ್ನು ಗುಣಪಡಿಸುವವರಲ್ಲ, ಎಲ್ಲರೂ ಪರೋಪಕಾರಿಗಳಲ್ಲ, ಎಲ್ಲರೂ ಪರಿಪಾಲಕರಲ್ಲ, ಎಲ್ಲರೂ ಬಹುಭಾಷಾಪಂಡಿತರಲ್ಲ, ಅಥವಾ ಎಲ್ಲರೂ ಆ ಭಾಷೆಗಳನ್ನು ವಿವರಿಸಿ ಹೇಳುವವರಲ್ಲ. ಶ್ರೇಷ್ಠವಾದ ವರಗಳನ್ನು ನೀವು ಶ್ರದ್ಧಾಪೂರ್ವಕವಾಗಿ ಅಪೇಕ್ಷಿಸಿರಿ. 

ಕೀರ್ತನೆ: 100:1-2, 3, 4, 5

ಶ್ಲೋಕ: ಪ್ರಭುವಿನ ಜನ, ಆತನೇ ಮೇಯಿಸುವ ಕುರಿಗಳು ನಾವು

ಭೊನಿವಾಸಿಗಳೇ, ಜಯಘೋಷಮಾಡಿ ಪ್ರಭುವಿಗೆ|
ಅತಿಸಂತೋಷದಿಂದ ಸೇವೆಮಾಡಿ ಆತನಿಗೆ||
ಹಾಡುತಾ, ಪಾಡುತಾ, ಬನ್ನಿ ಆತನ ಸನ್ನಿಧಿಗೆ||

ಪಭುವೇ ದೇವರೆಂಬುದನು ಮರೆತುಬಿಡಬೇಡಿ ನೀವು|
ನಮ್ಮ ಸೃಷ್ಟಿಕರ್ತ ಆತನು, ಆತನವರು ನಾವು|
ಆತನ ಜನ, ಆತನೇ ಮೇಯಿಸುವ ಕುರಿಗಳು ನಾವು||

ಆತನ ಗೃಹದ್ವಾರವನು ಪ್ರವೇಶಿಸಿ ಧನ್ಯವಾದಗಳೊಂದಿಗೆ|
ಆತನ ನಾಮವನು ಕೊಂಡಾಡಿ ಉಪಕಾರ ಸ್ಮರಣೆಯೊಂದಿಗೆ||

ಹೌದು, ಪ್ರಭುವೆನಿತೋ ಒಳ್ಳೆಯವನು|
ಇರುವುದಾತನ ಪ್ರೀತಿ ಯುಗಯುಗಕು|
ಆತನ ಸತ್ಯತೆ ತಲತಲಾಂತರಕು||

ಅಲ್ಲೆಲೂಯ, ಅಲ್ಲೆಲೂಯ!

ಹೊಗಳಲಿ ಇವರೆಲ್ಲರು ಪ್ರಭುವಿನ ನಾಮವನು, ಕೋಡು ಮೂಡಿಸಿಹನು ಪ್ರಭು ತನ್ನ ಪ್ರಜೆಗೆ,,
ಅಲ್ಲೆಲೂಯ!

ಶುಭಸಂದೇಶ: ಲೂಕ 7:11-17


ಯೇಸುಸ್ವಾಮಿ ನಾಯಿನ್ ಎಂಬ ಊರಿಗೆ ಹೊರಟರು. ಅವರೊಂದಿಗೆ ಶಿಷ್ಯರೂ ಅನೇಕ ಜನರೂ ಹೊರಟರು. ಊರಬಾಗಿಲನ್ನು ಸಮೀಪಿಸಿದಾಗ, ಒಂದು ಶವಯಾತ್ರೆಯನ್ನು ಅವರು ಎದುರುಗೊಂಡರು. ಆ ಸತ್ತವನು ತನ್ನ ತಾಯಿಗೆ ಒಬ್ಬನೇ ಮಗ. ಆಕೆಯೋ ವಿಧವೆ. ಜನರ ದೊಡ್ಡ ಗುಂಪೊಂದು ಆಕೆಯೊಡನೆ ಬರುತ್ತಿತ್ತು. ಪ್ರಭು ಯೇಸು ಆಕೆಯನ್ನು ಕಂಡದ್ದೇ ಕನಿಕರಗೊಂಡು, ‘ಅಳಬೇಡ’ ಎಂದು ಹೇಳಿ, ಚಟ್ಟದ ಹತ್ತಿರಕ್ಕೆ ಬಂದು, ಅದನ್ನು ಮುಟ್ಟಿದರು. ಹೊತ್ತುಕೊಂಡು ಹೋಗುತ್ತಿದ್ದವರು ಹಾಗೆಯೇ ನಿಂತರು. ಆಗ ಯೇಸು, “ಯುವಕನೇ, ನಾನು ನಿನಗೆ ಹೇಳುತ್ತೇನೆ, ಎದ್ದೇಳು,” ಎಂದರು. ಸತ್ತವನು ಎದ್ದು ಕುಳಿತು ಮಾತನಾಡಲಾರಂಭಿಸಿದನು. ಯೇಸು ಆ ಮಗನನ್ನು ತಾಯಿಗೆ ಒಪ್ಪಿಸಿದರು. ಎಲ್ಲರೂ ಭಯಭ್ರಾಂತರಾದರು. “ಮಹಾಪ್ರವಾದಿಯೊಬ್ಬನು ನಮ್ಮಲ್ಲೇ ಉದಯಿಸಿದ್ದಾನೆ; ದೇವರು ತಮ್ಮ ಜನರನ್ನು ರಕ್ಷಿಸಲು ಬಂದಿದ್ದಾರೆ,” ಎಂದು ದೇವರನ್ನು ಕೊಂಡಾಡಿದರು. ಯೇಸುವಿನ ಈ ಸಮಾಚಾರ ಜುದೇಯ ನಾಡಿನಲ್ಲೆಲ್ಲಾ ಹಾಗೂ ಸುತ್ತಮುತ್ತಲಿನ ಪ್ರಾಂತ್ಯದಲ್ಲೆಲ್ಲಾ ಹರಡಿತು. 

12.09.22

ಮೊದಲನೇ ವಾಚನ: 1 ಕೊರಿಂಥಿಯರಿಗೆ  11:17-26, 33

ಸಹೋದರರೇ, ಈಗ ನಾನು ಹೇಳಲಿರುವ ವಿಷಯದಲ್ಲಿ ನಿಮ್ಮನ್ನು ಮೆಚ್ಚಿಸಲಾರೆ. ನೀವು ಸಭೆ ಸೇರುವುದು ಒಳಿತಿಗಿಂತಲೂ ಹೆಚ್ಚಾಗಿ ಕೇಡನ್ನೆ ಉಂಟುಮಾಡುತ್ತಿದೆ. ಮೊದಲನೆಯದಾಗಿ, ನೀವು ಸೇರುವ ಸಭೆಯಲ್ಲಿ ಪಂಗಡಗಳಿವೆಯಂತೆ. ಸ್ವಲ್ಪ ಮಟ್ಟಿಗಾದರೂಈ ಸಮಾಚಾರ ನಿಜವೆಂದು ನನಗನಿಸುತ್ತದೆ. ನಿಮ್ಮಲ್ಲಿ ಭಿನ್ನಾಭಿಪ್ರಾಯಗಳು ಇರುವುದು ಸಹಜ. ಹಾಗಿರುವಾಗಲೇ ಪ್ರಮಾಣಿಕರು ಯಾರೆಂದು ಕಂಡುಕೊಳ್ಳಲು ಸಾಧ್ಯ. ಆದರೂ ನೀವೆಲ್ಲಾ ಒಂದಾಗಿ ಸೇರುವಾಗ ನೀವು ಮಾಡುವ ಭೋಜನ ಪ್ರಭುವಿನ ಭೋಜನವಲ್ಲ. ಏಕೆಂದರೆ, ಭೋಜನ ಸಮಯದಲ್ಲಿ ಒಬ್ಬೊಬ್ಬನೂ ತಾನು ತಂದಿದ್ದನ್ನು ತಿನ್ನಲು ಇತರರಿಗಿಂತ ಮುಂಚಿತವಾಗಿಯೇ ಕುಳಿತುಕೊಳ್ಳುತ್ತಾನೆ. ಒಬ್ಬನು ಹಸಿದಿರುತ್ತಾನೆ;  ಇನ್ನೊಬ್ಬನು ಕುಡಿದು ಮತ್ತನಾಗಿರುತ್ತಾನೆ. ತಿನ್ನಲು, ಕುಡಿಯಲು ನಿಮಗೆ ಸ್ವಂತ ಮನೆಗಳಿಲ್ಲವೇ? ನಿರ್ಗತಿಕರನ್ನು ನಾಚಿಕೆಗೀಡುಮಾಡಿ, ದೇವರ ಸಭೆಯನ್ನು ಉಪೇಕ್ಷಿಸಬೇಕೆಂದಿರುವಿರೋ? ಇದರ ಬಗ್ಗೆ ನಿಮಗೆ ನಾನು ಏನು ಹೇಳಲಿ? ನಿಮ್ಮನ್ನು ಹೊಗಳುವುದೋ, ತೆಗಳುವುದೋ? ಖಂಡಿತವಾಗಿ ನಿಮ್ಮನ್ನು ಹೊಗಳಲಾರೆ. ನಿಮಗೆ ಮಾಡಿದ ಉಪದೇಶವನ್ನು ನಾನು ಪ್ರಭುವಿನಿಂದಲೇ ಪಡೆದೆನು. ಅದೇನೆಂದರೆ; ಪ್ರಭುಯೇಸು, ತಮ್ಮನ್ನು ಹಿಡಿದುಕೊಡಲಾದ ಆ ರಾತ್ರಿ ರೊಟ್ಟಿಯನ್ನು ತೆಗೆದುಕೊಂಡು ದೇವರಿಗೆ ಕೃತಜ್ಞತಾಸ್ತೋತ್ರವನ್ನು ಸಲ್ಲಸಿ ಅದನ್ನು ಮುರಿದು, "ಇದು ನಿಮಗಾಗಿ ಒಪ್ಪಿಸಲಾಗುವ ನನ್ನ ಶರೀರ, ಇದನ್ನು ನನ್ನ ಸ್ಮರಣೆಗಾಗಿ ಮಾಡಿ," ಎಂದರು. ಅಂತೆಯೇ ಭೋಜನದ ಕೊನೆಯಲ್ಲಿ ಪಾನ ಪಾತ್ರೆಯನ್ನು ತೆಗೆದುಕೊಂಡು, "ಈ ಪಾತ್ರೆ ನನ್ನ ರಕ್ತದಿಂದ ಮುದ್ರಿತವಾದ ಹೊಸ ಒಡಂಬಡಿಕೆ; ಇದನ್ನು ನೀವು ಪಾನ ಮಾಡುವಾಗಲೆಲ್ಲಾ ನನ್ನ ಸ್ಮರಣೆಗಾಗಿ ಮಾಡಿರಿ," ಎಂದರು. ಎಂದೇ, ನೀವು ಈ ರೊಟ್ಟಿಯನ್ನು ಭುಜಿಸಿ ಈ ಪಾತ್ರೆಯಿಂದ ಪಾನಮಾಡುವಾಗಲೆಲ್ಲಾ ಪ್ರಭು ಬರುವ ತನಕ ಅವರ ಮರಣವನ್ನು ಸಾರುತ್ತೀರಿ. ಆದ್ದರಿಂದ ಪ್ರಿಯ ಸಹೋದರರೇ, ಪ್ರಭುವಿನ ಭೋಜನಕ್ಕಾಗಿ ನೀವು ಒಂದಾಗಿ ಸೇರುವಾಗ ಒಬ್ಬರಿಗೊಬ್ಬರು ಕಾದುಕೊಂಡಿರಿ.

ಕೀರ್ತನೆ: 40:7-8, 8-9, 10, 17
ಶ್ಲೋಕ: ಪ್ರಭು ಬರುವ ತನಕ ಅವರ ಮರಣವನ್ನು ಸಾರುತ್ತೀರಿ .

ಶುಭಸಂದೇಶ: ಲೂಕ 7:1-10

ಜನರಿಗೆ ಮನ ಮುಟ್ಟುವಂತೆ ಭೋಧನೆ ಮಾಡಿದ ನಂತರ ಯೇಸುಸ್ವಾಮಿ ಕಫೆರ್ನವುಮ್ ಎಂಬ ಊರಿಗೆ ಬಂದರು. ಅಲ್ಲಿ ರೋಮ್ ಶತಾಧಿಪತಿಯೊಬ್ಬನ ನೆಚ್ಚಿನ ಸೇವಕನು ಕಾಯಿಲೆಯಿಂದ ಸಾಯುವುದರಲ್ಲಿದ್ದನು. ಶತಾಧಿಪತಿ ಯೇಸುವಿನ ವಿಷಯವನ್ನು ಕೇಳಿ ಅವರ ಬಳಿಗೆ ಯೆಹೂದ್ಯ ಪ್ರಮುಖರನ್ನು ಕಳುಹಿಸಿ, ತನ್ನ ಸೇವಕನನ್ನು ಗುಣಪಡಿಸಲು ಬರಬೇಕೆಂದು ಮನವಿ ಮಾಡಿಕೊಂಡನು. ಅವರು ಯೇಸುವಿನ ಬಳಿಗೆ ಬಂದು, "ಆ ಶತಾಧಿಪತಿ ನಿಮ್ಮ ಉಪಕಾರಕ್ಕೆ ಅರ್ಹನು; ನಮ್ಮ ಜನರ ಮೇಲೆ ಅವನಿಗೆ ಪ್ರೀತಿ ಇದೆ; ಅಲ್ಲದೆ ನಮ್ಮ ಪ್ರಾರ್ಥನಾಮಂದಿರವನ್ನು ಕಟ್ಟಿಸಿಕೊಟ್ಟವನೂ ಅವನೇ," ಎಂದು ಬಹಳವಾಗಿ ವಿನಂತಿಸಿದರು. ಯೇಸು ಅವರ ಸಂಗಡವೇ ಹೊರಟರು. ಮನೆಯಿಂದ ಸ್ವಲ್ಪ ದೂರವಿರುವಾಗಲೇ, ಶತಾಧಿಪತಿ ತನ್ನ ಗೆಳೆಯರ ಮುಖಾಂತರ, ಪ್ರಭುವೇ, ಇಷ್ಟು ಶ್ರಮ ತೆಗೆದುಕೊಳ್ಳಬೇಡಿ; ತಾವು ನನ್ನ ಮನೆಗೆ ಬರುವಷ್ಟು ಯೋಗ್ಯತೆ ನನಗಿಲ್ಲ. ನಾನೇ ತಮ್ಮಲ್ಲಿಗೆ ಬರೋಣವೆಂದರೆ ಆ ಯೋಗ್ಯತೆಯೂ ನನಗಿಲ್ಲ. ತಾವು ಒಂದು ಮಾತು ಹೇಳಿದರೆ ಸಾಕು, ನನ್ನ ಸೇವಕ ಸ್ವಸ್ಥನಾಗುವನು. ಏಕೆಂದರೆ, ನಾನೂ ಮತ್ತೊಬ್ಬರ ಕೈಕೆಳಗಿರುವವನು; ನನ್ನ ಅಧೀನದಲ್ಲೂ ಸೈನಿಕರಿದ್ದಾರೆ. ಅವರಲ್ಲಿ ಒಬ್ಬನಿಗೆ ನಾನು 'ಬಾ', ಎಂದರೆ ಬರುತ್ತಾನೆ. ಇನ್ನೊಬ್ಬನಿಗೆ "ಹೋಗು,' ಎಂದರೆ ಹೋಗುತ್ತಾನೆ. ಸೇವಕನಿಗೆ 'ಇಂಥದ್ದನ್ನು ಮಾಡು,' ಎಂದರೆ ಮಾಡುತ್ತಾನೆ. ಎಂದು ಹೇಳಿ ಕಳುಹಿಸಿದನು. ಅವನ ಈ ಮಾತನ್ನು ಕೇಳಿದಾಗ ಯೇಸುವಿಗೆ ಆಶ್ಚರ್ಯವಾಯಿತು. ತಮ್ಮ ಹಿಂದೆ ಬರುತ್ತಿದ್ದ ಜನರ ಗುಂಪಿನ ಕಡೆ ತಿರುಗಿ ನೋಡಿ, "ಇಂಥ ಗಾಢ  ವಿಶ್ವಾಸವನ್ನು ನಾನು ಇಸ್ರಯೇಲ್ ಜನರಲ್ಲೂ ಕಾಣಲಿಲ್ಲವೆಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ," ಎಂದರು.ಇತ್ತ ಶತಾಧಿಪತಿಯ ಕಡೆಯಿಂದ ಬಂದವರು ಮನೆಗೆ ಹಿಂದಿರುಗಿದಾಗ ಕಾಯಿಲೆ ಬಿದ್ದಿದ್ದ ಆ ಸೇವಕನು ಸ್ವಸ್ಥನಾಗಿದ್ದುದನ್ನು ಕಂಡರು.


11.09.22

ಮೊದಲನೇ ವಾಚನ: 1 ಕೊರಿಂಥಿಯರಿಗೆ  11:17-26, 33

ಸಹೋದರರೇ, ಈಗ ನಾನು ಹೇಳಲಿರುವ ವಿಷಯದಲ್ಲಿ ನಿಮ್ಮನ್ನು ಮೆಚ್ಚಿಸಲಾರೆ. ನೀವು ಸಭೆ ಸೇರುವುದು ಒಳಿತಿಗಿಂತಲೂ ಹೆಚ್ಚಾಗಿ ಕೇಡನ್ನೆ ಉಂಟುಮಾಡುತ್ತಿದೆ. ಮೊದಲನೆಯದಾಗಿ, ನೀವು ಸೇರುವ ಸಭೆಯಲ್ಲಿ ಪಂಗಡಗಳಿವೆಯಂತೆ. ಸ್ವಲ್ಪ ಮಟ್ಟಿಗಾದರೂಈ ಸಮಾಚಾರ ನಿಜವೆಂದು ನನಗನಿಸುತ್ತದೆ. ನಿಮ್ಮಲ್ಲಿ ಭಿನ್ನಾಭಿಪ್ರಾಯಗಳು ಇರುವುದು ಸಹಜ. ಹಾಗಿರುವಾಗಲೇ ಪ್ರಮಾಣಿಕರು ಯಾರೆಂದು ಕಂಡುಕೊಳ್ಳಲು ಸಾಧ್ಯ. ಆದರೂ ನೀವೆಲ್ಲಾ ಒಂದಾಗಿ ಸೇರುವಾಗ ನೀವು ಮಾಡುವ ಭೋಜನ ಪ್ರಭುವಿನ ಭೋಜನವಲ್ಲ. ಏಕೆಂದರೆ, ಭೋಜನ ಸಮಯದಲ್ಲಿ ಒಬ್ಬೊಬ್ಬನೂ ತಾನು ತಂದಿದ್ದನ್ನು ತಿನ್ನಲು ಇತರರಿಗಿಂತ ಮುಂಚಿತವಾಗಿಯೇ ಕುಳಿತುಕೊಳ್ಳುತ್ತಾನೆ. ಒಬ್ಬನು ಹಸಿದಿರುತ್ತಾನೆ;  ಇನ್ನೊಬ್ಬನು ಕುಡಿದು ಮತ್ತನಾಗಿರುತ್ತಾನೆ. ತಿನ್ನಲು, ಕುಡಿಯಲು ನಿಮಗೆ ಸ್ವಂತ ಮನೆಗಳಿಲ್ಲವೇ? ನಿರ್ಗತಿಕರನ್ನು ನಾಚಿಕೆಗೀಡುಮಾಡಿ, ದೇವರ ಸಭೆಯನ್ನು ಉಪೇಕ್ಷಿಸಬೇಕೆಂದಿರುವಿರೋ? ಇದರ ಬಗ್ಗೆ ನಿಮಗೆ ನಾನು ಏನು ಹೇಳಲಿ? ನಿಮ್ಮನ್ನು ಹೊಗಳುವುದೋ, ತೆಗಳುವುದೋ? ಖಂಡಿತವಾಗಿ ನಿಮ್ಮನ್ನು ಹೊಗಳಲಾರೆ. ನಿಮಗೆ ಮಾಡಿದ ಉಪದೇಶವನ್ನು ನಾನು ಪ್ರಭುವಿನಿಂದಲೇ ಪಡೆದೆನು. ಅದೇನೆಂದರೆ; ಪ್ರಭುಯೇಸು, ತಮ್ಮನ್ನು ಹಿಡಿದುಕೊಡಲಾದ ಆ ರಾತ್ರಿ ರೊಟ್ಟಿಯನ್ನು ತೆಗೆದುಕೊಂಡು ದೇವರಿಗೆ ಕೃತಜ್ಞತಾಸ್ತೋತ್ರವನ್ನು ಸಲ್ಲಸಿ ಅದನ್ನು ಮುರಿದು, "ಇದು ನಿಮಗಾಗಿ ಒಪ್ಪಿಸಲಾಗುವ ನನ್ನ ಶರೀರ, ಇದನ್ನು ನನ್ನ ಸ್ಮರಣೆಗಾಗಿ ಮಾಡಿ," ಎಂದರು. ಅಂತೆಯೇ ಭೋಜನದ ಕೊನೆಯಲ್ಲಿ ಪಾನ ಪಾತ್ರೆಯನ್ನು ತೆಗೆದುಕೊಂಡು, "ಈ ಪಾತ್ರೆ ನನ್ನ ರಕ್ತದಿಂದ ಮುದ್ರಿತವಾದ ಹೊಸ ಒಡಂಬಡಿಕೆ; ಇದನ್ನು ನೀವು ಪಾನ ಮಾಡುವಾಗಲೆಲ್ಲಾ ನನ್ನ ಸ್ಮರಣೆಗಾಗಿ ಮಾಡಿರಿ," ಎಂದರು. ಎಂದೇ, ನೀವು ಈ ರೊಟ್ಟಿಯನ್ನು ಭುಜಿಸಿ ಈ ಪಾತ್ರೆಯಿಂದ ಪಾನಮಾಡುವಾಗಲೆಲ್ಲಾ ಪ್ರಭು ಬರುವ ತನಕ ಅವರ ಮರಣವನ್ನು ಸಾರುತ್ತೀರಿ. ಆದ್ದರಿಂದ ಪ್ರಿಯ ಸಹೋದರರೇ, ಪ್ರಭುವಿನ ಭೋಜನಕ್ಕಾಗಿ ನೀವು ಒಂದಾಗಿ ಸೇರುವಾಗ ಒಬ್ಬರಿಗೊಬ್ಬರು ಕಾದುಕೊಂಡಿರಿ.

ಕೀರ್ತನೆ: 40:7-8, 8-9, 10, 17
ಶ್ಲೋಕ: ಪ್ರಭು ಬರುವ ತನಕ ಅವರ ಮರಣವನ್ನು ಸಾರುತ್ತೀರಿ .

ಶುಭಸಂದೇಶ: ಲೂಕ 7:1-10

ಜನರಿಗೆ ಮನ ಮುಟ್ಟುವಂತೆ ಭೋಧನೆ ಮಾಡಿದ ನಂತರ ಯೇಸುಸ್ವಾಮಿ ಕಫೆರ್ನವುಮ್ ಎಂಬ ಊರಿಗೆ ಬಂದರು. ಅಲ್ಲಿ ರೋಮ್ ಶತಾಧಿಪತಿಯೊಬ್ಬನ ನೆಚ್ಚಿನ ಸೇವಕನು ಕಾಯಿಲೆಯಿಂದ ಸಾಯುವುದರಲ್ಲಿದ್ದನು. ಶತಾಧಿಪತಿ ಯೇಸುವಿನ ವಿಷಯವನ್ನು ಕೇಳಿ ಅವರ ಬಳಿಗೆ ಯೆಹೂದ್ಯ ಪ್ರಮುಖರನ್ನು ಕಳುಹಿಸಿ, ತನ್ನ ಸೇವಕನನ್ನು ಗುಣಪಡಿಸಲು ಬರಬೇಕೆಂದು ಮನವಿ ಮಾಡಿಕೊಂಡನು. ಅವರು ಯೇಸುವಿನ ಬಳಿಗೆ ಬಂದು, "ಆ ಶತಾಧಿಪತಿ ನಿಮ್ಮ ಉಪಕಾರಕ್ಕೆ ಅರ್ಹನು; ನಮ್ಮ ಜನರ ಮೇಲೆ ಅವನಿಗೆ ಪ್ರೀತಿ ಇದೆ; ಅಲ್ಲದೆ ನಮ್ಮ ಪ್ರಾರ್ಥನಾಮಂದಿರವನ್ನು ಕಟ್ಟಿಸಿಕೊಟ್ಟವನೂ ಅವನೇ," ಎಂದು ಬಹಳವಾಗಿ ವಿನಂತಿಸಿದರು. ಯೇಸು ಅವರ ಸಂಗಡವೇ ಹೊರಟರು. ಮನೆಯಿಂದ ಸ್ವಲ್ಪ ದೂರವಿರುವಾಗಲೇ, ಶತಾಧಿಪತಿ ತನ್ನ ಗೆಳೆಯರ ಮುಖಾಂತರ, ಪ್ರಭುವೇ, ಇಷ್ಟು ಶ್ರಮ ತೆಗೆದುಕೊಳ್ಳಬೇಡಿ; ತಾವು ನನ್ನ ಮನೆಗೆ ಬರುವಷ್ಟು ಯೋಗ್ಯತೆ ನನಗಿಲ್ಲ. ನಾನೇ ತಮ್ಮಲ್ಲಿಗೆ ಬರೋಣವೆಂದರೆ ಆ ಯೋಗ್ಯತೆಯೂ ನನಗಿಲ್ಲ. ತಾವು ಒಂದು ಮಾತು ಹೇಳಿದರೆ ಸಾಕು, ನನ್ನ ಸೇವಕ ಸ್ವಸ್ಥನಾಗುವನು. ಏಕೆಂದರೆ, ನಾನೂ ಮತ್ತೊಬ್ಬರ ಕೈಕೆಳಗಿರುವವನು; ನನ್ನ ಅಧೀನದಲ್ಲೂ ಸೈನಿಕರಿದ್ದಾರೆ. ಅವರಲ್ಲಿ ಒಬ್ಬನಿಗೆ ನಾನು 'ಬಾ', ಎಂದರೆ ಬರುತ್ತಾನೆ. ಇನ್ನೊಬ್ಬನಿಗೆ "ಹೋಗು,' ಎಂದರೆ ಹೋಗುತ್ತಾನೆ. ಸೇವಕನಿಗೆ 'ಇಂಥದ್ದನ್ನು ಮಾಡು,' ಎಂದರೆ ಮಾಡುತ್ತಾನೆ. ಎಂದು ಹೇಳಿ ಕಳುಹಿಸಿದನು. ಅವನ ಈ ಮಾತನ್ನು ಕೇಳಿದಾಗ ಯೇಸುವಿಗೆ ಆಶ್ಚರ್ಯವಾಯಿತು. ತಮ್ಮ ಹಿಂದೆ ಬರುತ್ತಿದ್ದ ಜನರ ಗುಂಪಿನ ಕಡೆ ತಿರುಗಿ ನೋಡಿ, "ಇಂಥ ಗಾಢ  ವಿಶ್ವಾಸವನ್ನು ನಾನು ಇಸ್ರಯೇಲ್ ಜನರಲ್ಲೂ ಕಾಣಲಿಲ್ಲವೆಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ," ಎಂದರು.ಇತ್ತ ಶತಾಧಿಪತಿಯ ಕಡೆಯಿಂದ ಬಂದವರು ಮನೆಗೆ ಹಿಂದಿರುಗಿದಾಗ ಕಾಯಿಲೆ ಬಿದ್ದಿದ್ದ ಆ ಸೇವಕನು ಸ್ವಸ್ಥನಾಗಿದ್ದುದನ್ನು ಕಂಡರು.


10.09.22 - “ಒಳ್ಳೆಯ ಮರವು ಕೆಟ್ಟ ಫಲವನ್ನು ಕೊಡುವುದಿಲ್ಲ; ಕೆಟ್ಟ ಮರವು ಒಳ್ಳೆಯ ಫಲವನ್ನು ಕೊಡುವುದಿಲ್ಲ"

ಮೊದಲನೇ ವಾಚನ: 1 ಕೊರಿಂಥಿಯರಿಗೆ 10:14-22

ಪ್ರಿಯರೇ, ವಿಗ್ರಹಾರಾಧನೆಯನ್ನು ತೊರೆದುಬಿಡಿ. ನೀವು ಅರಿತವರೆಂದು ತಿಳಿದೇ ಇದನ್ನು ಹೇಳುತ್ತಿದ್ಧೇನೆ. ನನ್ನ ಮಾತುಗಳನ್ನು ನೀವೇ ಪರಿಶೀಲಿಸಿನೋಡಿ.  ನಾವು ದೇವರಿಗೆ ಕೃತಜ್ಞತಾಸ್ತೋತ್ರವನ್ನು ಸಲ್ಲಿಸಿ ಪಾನಪಾತ್ರೆಯಿಂದ ಕುಡಿಯುವಾಗ ಕ್ರಿಸ್ತಯೇಸುವಿನ ರಕ್ತದಲ್ಲಿ ಪಾಲುಗೊಳ್ಳುತ್ತೇವಲ್ಲವೇ? ರೊಟ್ಟಿಯನ್ನು ಮುರಿದು ತಿನ್ನುವಾಗ ಕ್ರಿಸ್ತಯೇಸುವಿನ ಶರೀರದಲ್ಲಿ ಪಾಲುಗೊಳ್ಳುತ್ತೇವಲ್ಲವೇ?  ರೊಟ್ಟಿ ಒಂದೇ; ಆದ್ದರಿಂದ ನಾವು ಅನೇಕರಿದ್ದರೂ ಒಂದೇ ಶರೀರವಾಗುತ್ತೇವೆ. ಏಕೆಂದರೆ ನಾವೆಲ್ಲರೂ ಆ ಒಂದೇ ರೊಟ್ಟಿಯಲ್ಲಿ ಭಾಗಿಗಳಾಗುತ್ತೇವೆ. ಇಸ್ರಯೇಲರ ಪದ್ಧತಿಯನ್ನು ಗಮನಿಸಿರಿ: ಬಲಿಯಾಗಿ ಅರ್ಪಿತವಾದುದನ್ನು ಭುಜಿಸುವವರು ಬಲಿಪೀಠದ ಸೇವೆಯಲ್ಲಿ ಭಾಗಿಯಾಗುತ್ತಾರಷ್ಟೆ.  ಹೀಗೆ ನಾನು ಹೇಳುವಾಗ ವಿಗ್ರಹಕ್ಕೆ ನೈವೇದ್ಯಮಾಡಿದ ಪದಾರ್ಥವು ವಾಸ್ತವವಾದುದು ಅಥವಾ ವಿಗ್ರಹವೇ ವಾಸ್ತವವಾದುದು ಎಂದು ಅರ್ಥವೇ?  ಯಾವುದೂ ಅಲ್ಲ. ನಾನು ಹೇಳುವುದೇನೆಂದರೆ : ಅನ್ಯಜನರು ಬಲಿಯನ್ನು ದೆವ್ವಗಳಿಗೆ ಅರ್ಪಿಸುತ್ತಾರೆ ಹೊರತು ದೇವರಿಗಲ್ಲ. ಹೀಗೆ ನೀವು ದೆವ್ವಗಳೊಂದಿಗೆ ಭಾಗಿಯಾಗುವುದನ್ನು ನಾನೆಂದಿಗೂ ಇಷ್ಟಪಡುವುದಿಲ್ಲ.  ನೀವು ಪ್ರಭುವಿನ ಪಾತ್ರೆಯಿಂದ ಹಾಗೂ ದೆವ್ವಗಳ ಪಾತ್ರೆಯಿಂದ ಕುಡಿಯಲಾಗದು. ಪ್ರಭುವಿನ ಪಂಕ್ತಿಯಲ್ಲೂ ಅಂತೆಯೇ ದೆವ್ವಗಳ ಪಂಕ್ತಿಯಲ್ಲೂ ಊಟಮಾಡಲಾಗದು.  ನಾವು ಪ್ರಭುವನ್ನು ಅಸೂಯೆಗೆಬ್ಬಿಸಬಹುದೇ? ಅವರಿಗಿಂತ ನಾವು ಬಲಾಢ್ಯರೇ?

ಕೀರ್ತನೆ: 116:12-13, 17-18

ಶ್ಲೋಕ: ಅರ್ಪಿಸುವೆ ಪ್ರಭೂ ನಾ ನಿನಗೆ ಕೃತಜ್ಞತಾಬಲಿಗಳನು

ಶುಭಸಂದೇಶ: 6:43-49


ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದು ಹೇಳಿದರು: “ಒಳ್ಳೆಯ ಮರವು ಕೆಟ್ಟ ಫಲವನ್ನು ಕೊಡುವುದಿಲ್ಲ; ಕೆಟ್ಟ ಮರವು ಒಳ್ಳೆಯ ಫಲವನ್ನು ಕೊಡುವುದಿಲ್ಲ.  ಪ್ರತಿಯೊಂದು ಮರದ ಗುಣವನ್ನು ಅದರ ಹಣ್ಣಿನಿಂದ ಗುರುತಿಸಬಹುದು. ಮುಳ್ಳುಗಿಡದಲ್ಲಿ ಅಂಜೂರ ಕೀಳುವಂತಿಲ್ಲ. ಮುಳ್ಳು ಕಳ್ಳಿಯಲ್ಲಿ ದ್ರಾಕ್ಷಿ ಕೊಯ್ಯುವಂತಿಲ್ಲ.  ಒಳ್ಳೆಯವನು ತನ್ನ ಹೃದಯವೆಂಬ ಬೊಕ್ಕಸದಿಂದ ಒಳ್ಳೆಯದನ್ನೇ ಹೊರತರುತ್ತಾನೆ. ಕೆಟ್ಟವನು ಕೆಟ್ಟ ಬೊಕ್ಕಸದಿಂದ ಕೆಟ್ಟದ್ದನ್ನೇ ಹೊರತರುತ್ತಾನೆ. ಹೃದಯದಲ್ಲಿ ತುಂಬಿರುವುದೇ ಬಾಯಿಮಾತಾಗಿ ತುಳುಕುತ್ತದೆ. “ನೀವು ನನ್ನನ್ನು ‘ಸ್ವಾಮೀ ಸ್ವಾಮೀ,’ ಎಂದು ಕರೆಯುತ್ತೀರಿ; ಆದರೆ ನನ್ನ ಮಾತಿನಂತೆ ನಡೆಯುವುದಿಲ್ಲವೇಕೆ?  ನನ್ನ ಬಳಿಗೆ ಬಂದು ನನ್ನ ಮಾತನ್ನು ಕೇಳಿ, ಅದರಂತೆ ನಡೆಯುವ ಪ್ರತಿಯೊಬ್ಬನೂ ಎಂಥವನಿಗೆ ಸಮಾನನೆಂದು ನಿಮಗೆ ಹೇಳುತ್ತೇನೆ ಕೇಳಿ:  ಆಳವಾಗಿ ಅಡಿಪಾಯ ತೆಗೆದು, ಬಂಡೆಕಲ್ಲಿನ ಮೇಲೆ ಅಸ್ತಿವಾರ ಹಾಕಿ, ಮನೆಕಟ್ಟಿದವನಿಗೆ ಅವನು ಸಮಾನನು; ಹುಚ್ಚು ಹೊಳೆ ಬಂದು ಪ್ರವಾಹವು ಆ ಮನೆಗೆ ಅಪ್ಪಳಿಸಿದರೂ ಅದು ಕದಲಲಿಲ್ಲ. ಕಾರಣ - ಆ ಮನೆಯನ್ನು ಸುಭದ್ರವಾಗಿ ಕಟ್ಟಲಾಗಿತ್ತು.  ನನ್ನ ಮಾತನ್ನು ಕೇಳಿಯೂ ಅದರಂತೆ ನಡೆಯದವನು ಅಸ್ತಿವಾರವೇ ಇಲ್ಲದೆ ಬರಿಯ ಮಣ್ಣಿನ ಮೇಲೆ ಮನೆ ಕಟ್ಟಿದವನಿಗೆ ಸಮಾನನು. ಆ ಮನೆಗೆ ಪ್ರವಾಹವು ಅಪ್ಪಳಿಸಿದಾಗ ಒಡನೆಯೇ ಅದು ಕುಸಿದು ಬಿತ್ತು. ಆ ಮನೆಗೆ ಒದಗಿದ ಪತನವೋ ವಿಪರೀತ!” ಎಂದರು.

11.09.22 - "ಈ ನನ್ನ ಮಗ ಸತ್ತುಹೋಗಿದ್ದ, ಈಗ ಬದುಕಿ ಬಂದಿದ್ದಾನೆ. ತಪ್ಪಿಹೋಗಿದ್ದ, ಈಗ ಸಿಕ್ಕಿದ್ದಾನೆ"

ಮೊದಲನೇ ವಾಚನ: ವಿಮೋಚನಕಾಂಡ 32:7-11, 13-14

ಸರ್ವೇಶ್ವರ ಮೋಶೆಗೆ, "ನೀನು ಕೂಡಲೆ ಬೆಟ್ಟದಿಂದ ಇಳಿದು ಹೋಗು. ಈಜಿಪ್ಟಿನಿಂದ ನೀನು ಕರೆದುತಂದ ನಿನ್ನ ಜನರು ಕೆಟ್ಟು ಹೋದರು. ನಾನು ಅವರಿಗೆ ಆಜ್ಞಾಪಿಸಿದ ಮಾರ್ಗವನ್ನು ಇಷ್ಟು ಬೇಗನೆ ತೊರೆದು ಬಿಟ್ಟು ತಮಗೇ ಲೋಹದ ಹೋರಿ ಕರುವನ್ನು ಮಾಡಿಸಿಕೊಂಡು, ಅದಕ್ಕೆ ಅಡ್ಡ ಬಿದ್ದು, ಬಲಿಗಳನರ್ಪಿಸಿ, "ಇಸ್ರಯೇಲರೇ ನೋಡಿ, ನಿಮ್ಮನ್ನು ಈಜಿಪ್ಟಿನಿಂದ ಕರೆದುತಂದ ದೇವರು" ಎಂದು ಹೇಳಿಕೊಳ್ಳುತ್ತಿದ್ದಾರೆ. ಈ ಜನರ ಸ್ವಭಾವ ನನಗೆ ಗೊತ್ತಿದೆ. ಇವರು ನನ್ನ ಆಜ್ಞೆಗೆ ಬಗ್ಗದ ಹಟಮಾರಿಗಳು. ಆದ ಕಾರಣ ನೀನು ನನಗೆ ಅಡ್ಡ ಬರಬೇಡ. ನನ್ನ ಕೋಪಾಗ್ನಿ ಉರಿಯಲಿ. ಅವರನ್ನು ಸುಟ್ಟು ಭಸ್ಮ ಮಾಡುವೆನು. ಬಳಿಕ ನಿನ್ನಿಂದಲೇ ಬೇರೆ ಒಂದು ದೊಡ್ಡ ಜನಾಂಗ ಉದಯಿಸುವಂತೆ ಮಾಡುವೆನು." ಎಂದು ಹೇಳಿದರು. ಆಗ ಮೋಶೆ ತನ್ನ ದೇವರಾದ ಸರ್ವೇಶ್ವರನನ್ನು ಹೀಗೆಂದು ಬೇಡಿಕೊಂಡನು: "ಸ್ವಾಮಿ ಸರ್ವೇಶ್ವರ, ಮಹಾಶಕ್ತಿಯಿಂದಲೂ ಬುಜಬಲದಿಂದಲೂ ತಾವೇ ಈಜಿಪ್ಟಿನಿಂದ ಬಿಡಿಸಿದ ತಮ್ಮ ಪ್ರಜೆಯ ಮೇಲೆ ಕೋಪಾಗ್ನಿ ಕಾರಬಹುದೆ? ತಮ್ಮ ದಾಸರಾದ ಅಬ್ರಹಾಮ್, ಇಸಾಕ್ ಹಾಗು ಯಕೋಬರನ್ನು ನೆನಪಿಗೆ ತಂದುಕೊಳ್ಳಿ. ತಾವು ತಮ್ಮ ಜೀವದಾಣೆ ಪ್ರಮಾಣಮಾಡಿ ಅವರಿಗೆ, "ನಾನು ನಿಮ್ಮ ಸಂತತಿಯನ್ನು ಹೆಚ್ಚಿಸಿ ಆಕಾಶದ ನಕ್ಷತ್ರಗಳಷ್ಟು ಅಸಂಖ್ಯವಾಗಿ ಮಾಡುವೆನು; ನಾನು ಸೂಚಿಸಿರುವ ಈ ಪ್ರದೇಶಗಳನ್ನೆಲ್ಲಾ ನಿಮ್ಮ ಸಂತತಿಯವರಿಗೆ ಕೊಡುವೆನು; ಮತ್ತು ಅವರು ಈ ನಾಡನ್ನು ಶಾಶ್ವತವಾಗಿ ಸ್ವಾಧೀನದಲ್ಲಿಟ್ಟುಕೊಳ್ಳುವರು" ಎಂದು ತಾವು ಮಾತುಕೊಡಲಿಲ್ಲವೆ?" ಎಂದನು. ಆಗ ಸರ್ವೇಶ್ವರ ತಮ್ಮ ಪ್ರಜೆಗಳಿಗೆ ಮಾಡುವೆನೆಂದು ಹೇಳಿದ ಕೇಡಿನ ಬಗ್ಗೆ ಮನಸ್ಸನ್ನು ಮಾರ್ಪಡಿಸಿಕೊಂಡರು.

ಕೀರ್ತನೆ: 51:1-2, 10-11, 15, 17
ಶ್ಲೋಕ: ನಾನು ಇದೀಗಲೇ ಹೊರಟು ತಂದೆಯ ಬಳಿಗೆ ಹೋಗುತ್ತೇನೆ

ಎರಡನೇ ವಾಚನ: 1 ತಿಮೊಥೇಯನಿಗೆ 1:12-17

ತಿಮೊಥೇಯನೇ, ಶುಭಸಂದೇಶದ ಸೇವೆಯನ್ನು ಕೈಗೊಳ್ಳಲು ಯೋಗ್ಯನೆಂದು ಎಣಿಸಿ ನನಗೆ ಬೇಕಾದ ಶಕ್ತಿ ಸಾಮರ್ಥ್ಯವನ್ನು ದಯಪಾಲಿಸಿದ ನಮ್ಮ ಪ್ರಭು ಯೇಸುಕ್ರಿಸ್ತರಿಗೆ ನಾನು ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಹಿಂದೆ ನಾನು ಅವರನ್ನು ದೂಷಿಸಿದೆ, ಹಿಂಸಿಸಿದೆ, ಅವಮಾನಪಡಿಸಿದೆ. ಆದರೆ ದೇವರು ದಯಾಮಯಿ; ಆಗ ನಾನು ತಿಳಿಯದೆ ಅವಿಶ್ವಾಸಿಯಾಗಿ ಹಾಗೆ  ಮಾಡಿದ್ದರಿಂದ ದೇವರು ನನಗೆ ಕರುಣೆ ತೋರಿದರು. ಕ್ರಿಸ್ತ ಯೇಸುವಿನ ಅನ್ಯೋನ್ಯತೆಯಿಂದ ಲಭಿಸುವ ಪ್ರೀತಿವಿಶ್ವಾಸದಲ್ಲಿ ಭಾಗಿಯಾಗುವಂತೆ ಅವರು ನನ್ನ ಮೇಲೆ ತಮ್ಮ ಕೃಪಾವರಗಳನ್ನು ಹೇರಳವಾಗಿ ಸುರಿಸಿದರು.  ಕ್ರಿಸ್ತ ಯೇಸು, ಪಾಪಿಗಳ ಉದ್ಧಾರಕ್ಕಾಗಿ ಈ ಲೋಕಕ್ಕೆ ಬಂದರು. ಎನ್ನುವ ಮಾತು ಸತ್ಯವಾದುದು, ನಂಬಲರ್ಹವಾದುದು ಹಾಗೂ ಎಲ್ಲರ ಅಂಗೀಕಾರಕ್ಕೆ ಯೋಗ್ಯವಾದುದು. ಅಂಥ ಪಾಪಿಗಳಲ್ಲಿ ನಾನೇ ಪ್ರಮುಖನು. ಇದರಿಂದಾಗಿ, ಮುಂದೆ ವಿಶ್ವಾಸಿಗಳಾಗಿ ನಿತ್ಯಜೀವ ಪಡೆಯುವವರಿಗೆ ಆದರ್ಶ ದೊರಕುವಂತೆ ಕ್ರಿಸ್ತ ಯೇಸು ನನಗೆ ಪೂರ್ಣ ಸಹನೆ ತೋರಿದರು. ಇದು ದೇವರ ಕರುಣೆಯೇ ಸರಿ. ಸರ್ವ ಯುಗಗಳ ಅರಸರೂ ಅಮರರೂ ಅಗೋಚರರೂ ಆಗಿರುವ ಏಕೈಕ ದೇವರಿಗೆ ಯುಗಯುಗಾಂತರಕ್ಕೆ ಗೌರವವೂ ಮಹಿಮೆಯೂ ಸಲ್ಲಲಿ! ಆಮೆನ್.

ಶುಭಸಂದೇಶ: ಲೂಕ 15:1-32


ಯೇಸುಸ್ವಾಮಿಯ ಉಪದೇಶವನ್ನು ಕೇಳಲು ಎಲ್ಲಾ ಸುಂಕದವರೂ ಪಾಪಿಗಳೂ ಬರುತ್ತಿದ್ದರು ಇದನ್ನು ಕಂಡ ಫರಿಸಾಯರು ಮತ್ತು ಧರ್ಮಶಾಸ್ತ್ರಿಗಳು, ಈ ಮನುಷ್ಯ ಪಾಪಿಗಳನ್ನು ಬರಮಾಡಿಕೊಳ್ಳುತ್ತಾನೆ; ಅವರೊಡನೆ ಊಟಮಾಡುತ್ತಾನೆ,"ಎಂದು ಗೊಣಗಿದರು. ಆ ಸಂದರ್ಭದಲ್ಲಿ ಯೇಸು ಈ ಸಾಮತಿಯನ್ನು ಹೇಳಿದರು;  "ನಿಮ್ಮಲ್ಲಿ ಯಾರ ಬಳಿಯಾದರೂ ನೂರು ಕುರಿಗಳು ಇವೆ ಎನ್ನೋಣ. ಅವುಗಳಲ್ಲಿ ಒಂದು ಕುರಿ ಕಾಣದೆ ಹೋದಾಗ ಅವನೇನು ಮಾಡುತ್ತಾನೆ? ಇರುವ ತೊಂಭತ್ತೊಂಭತ್ತು ಕುರಿಗಳನ್ನು ಹುಲ್ಲುಗವಲಿನಲ್ಲೇ ಬಿಟ್ಟು ಕಾಣದೆ ಹೋದ ಆ ಒಂದು ಕುರಿ ಸಿಕ್ಕುವ ತನಕ ಹುಡುಕಿಕೊಂಡು ಹೋಗುತ್ತಾನಲ್ಲವೆ? ಅದು ಸಿಕ್ಕಿದಾಗ ಸಿಕ್ಕಿತೆಂಬ ಸಂತೋಷದಿಂದ ಅದನ್ನು ಹೆಗಲ ಮೇಲೆ ಎತ್ತಿಕೊಂಡು ಮನೆಗೆ ಬರುತ್ತಾನೆ; ಸ್ನೇಹಿತರನ್ನೂ ನೆರೆಯವರನ್ನೂ ಒಟ್ಟಿಗೆ ಕರೆಯುತ್ತಾನೆ "ಕಳೆದುಹೋಗಿದ್ದ ಕುರಿ ಸಿಕ್ಕಿತು; ನನ್ನೊಡನೆ ಸೇರಿ ಸಂತೋಷಪಡಿ," ಎನ್ನುತ್ತಾನೆ, ಅಲ್ಲವೆ? ಅದೇ ರೀತಿಯಲ್ಲಿ, ಪಶ್ಚಾತ್ತಾಪದ ಅವಶ್ಯಕತೆಯಿಲ್ಲದ ತೊಂಭತ್ತೊಂಭತ್ತು ಸತ್ಪುರುಷರ ವಿಷಯವಾಗಿ ಸ್ವರ್ಗದಲ್ಲಿ ಉಂಟಾಗುವ ಸಂತೋಷಕ್ಕಿಂತ, ಪಶ್ಚಾತಾಪಪಟ್ಟು ಪಾಪಕ್ಕೆ ವಿಮುಖನಾಗಿ ದೇವರಿಗೆ ಅಭಿಮುಖನಾಗುವ ಒಬ್ಬ ಪಾಪಿಯ ವಿಷಯವಾಗಿ ಹೆಚ್ಚು ಸಂತೋಷ ಉಂಟಾಗುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ಅಂತೆಯೇ, ಮನೆಯಾಕೆಯೊಬ್ಬಳು ತನ್ನ ಬಳಿಯಿದ್ದ ಹತ್ತು ನಾಣ್ಯಗಳಲ್ಲಿಒಂದನ್ನು ಕಳೆದುಕೊಂಡಳು ಎನ್ನೋಣ. ಆಗ ಅವಳೇನು ಮಾಡುತ್ತಾಳೆ? ದೀಪ ಹಚ್ಚಿ ಮನೆಯನ್ನು ಗುಡಿಸಿ, ಕಳೆದುಹೋದ ನಾಣ್ಯ ಸಿಕ್ಕುವವರೆಗೂ ಚೆನ್ನಾಗಿ ಹುಡುಕಾಡುತ್ತಾಳೆ, ಅಲ್ಲವೆ?  ಅದು ಸಿಕ್ಕಿದಾಗ ತನ್ನ ಗೆಳತಿಯರನ್ನೂ ನೆರೆಯವರನ್ನೂ ಒಟ್ಟಿಗೆ ಕರೆದು "ಕಳೆದುಹೋದ ನಾಣ್ಯ ಸಿಕ್ಕಿಬಿಟ್ಟಿತು. ನನ್ನೊಡನೆ ಸೇರರಿ ಸಂತೋಷಪಡಿ," ಎನ್ನುತ್ತಾಳಲ್ಲವೆ? ಅದೇ ಮೇರೆಗೆ ಪಶ್ಚಾತಾಪಪಟ್ಟು ದೇವರಿಗೆ ಅಭಿಮುಖನಾಗುವ ಒಬ್ಬ ಪಾಪಿಯ ವಿಷಯವಾಗಿ ದೇವದೂತರಿಗೆ ಸಂತೋಷ ಉಂಟಾಗುತ್ತದೆಂಬುದು ನಿಶ್ಚಯ," ಎಂದರು. ಯೇಸುಸ್ವಾಮಿ ಮುಂದುವರಿಸುತ್ತಾ ಈ ಸಾಮತಿಯನ್ನು ಹೇಳಿದರು: ಒಬ್ಬಾತನಿಗೆ ಇಬ್ಬರು ಮಕ್ಕಳಿದ್ದರು. ಅವರಲ್ಲಿ ಕಿರಿಯವನು  "ಅಪ್ಪಾ, ಆಸ್ತಿಯಲ್ಲಿ ನನಗೆ ಬರಬೇಕಾದ ಪಾಲನ್ನು ಕೊಟ್ಟುಬಿಡು," ಎಂದು ಕೇಳಿದ. ತಂದೆ ಅವರಿಬ್ಬರಿಗೂ ಆಸ್ತಿಯನ್ನು ಹಂಚಿಕೊಟ್ಟ. ಕೆಲವು ದಿವಸಗಳಾದ ಮೇಲೆ ಕಿರಿಯ ಮಗ ತನ್ನ ಆಸ್ತಿಯನ್ನೆಲ್ಲಾ ಮಾರಿ, ಬಂದ ಹಣವನ್ನು ತೆಗೆದುಕೊಂಡು ಮನೆಬಿಟ್ಟು ಹೋದ. ದೂರದೇಶಕ್ಕೆ ಹೋಗಿ, ದುಂದು ಜೀವನ ನಡೆಸಿ ಹಣವನ್ನೆಲ್ಲಾ ಪೋಲು ಮಾಡಿಬಿಟ್ಟ. ಹೀಗೆ ಅವನು ಎಲ್ಲವನ್ನು ಹಾಳುಮಾಡಿಕೊಂಡಮೇಲೆ ಆ ದೇಶಾದಾದ್ಯಂತ ಘೋರವಾದ ಕ್ಷಾಮ ತಲೆದೋರಿತು. ನಿರ್ಗತಿಕನಾದ ಅವನು ಹೋಗಿ, ಆ ದೇಶದ ನಿವಾಸಿಯೊಬ್ಬನನ್ನು ಆಶ್ರಯಿಸಿದ. ಆತ ಇವನನ್ನು ಹಂದಿ ಮೇಯಿಸಲು ತನ್ನ ರೊಪ್ಪಗಳಿಗೆ ಕಳುಹಿಸಿದ. ಅಲ್ಲಿ ಹಂದಿ ತಿನ್ನುತ್ತಿದ್ದ ಕಾಳುಗಳನ್ನಾದರೂ ತಿಂದು ಹಸಿವನ್ನು ನೀಗಿಸಿಕೊಳ್ಳಲು ಹಂಬಲಿಸಿದ. ಆದರೆ ಅದನ್ನೂ ಅವನಿಗೆ ಯಾರೂ ಕೊಡಲಿಲ್ಲ. ಆಗ ಅವನಿಗೆ ಬುದ್ಧಿ ಬಂದಿತು. ನನ್ನ ತಂದೆಯ ಮನೆಯಲ್ಲಿ ಎಷ್ಟೋ ಮಂದಿ ಕೂಲಿಯಾಳುಗಳಿಗೆ ತಿಂದು ತೇಗುವಷ್ಟು ಆಹಾರವಿದೆ. ನಾನಾದರೋ ಇಲ್ಲಿ ಹಸಿವಿನಿಂದ ಸಾಯುತ್ತಾ ಇದ್ದೇನೆ. ನಾನು ಇದೀಗಲೇ ಹೊರಟು, ತಂದೆಯ ಬಳಿಗೆ ಹೋಗಿ, "ಅಪ್ಪಾ, ದೇವರಿಗೂ ನಿಮಗೂ ವಿರುದ್ಧವಾಗಿ ಪಾಪಮಾಡಿದ್ದೇನೆ; ನಿಮ್ಮ ಮಗನು ಎನಿಸಿಕೊಳ್ಳುವ ಯೋಗ್ಯತೆಯೂ ನನಗಿಲ್ಲ; ನನ್ನನ್ನು ನಿಮ್ಮ ಮನೆಯ ಕೂಲಿಯಾಳುಗಳಲ್ಲಿ ಒಬ್ಬನನ್ನಾಗಿ ಇಟ್ಟುಕೊಳ್ಳಿ" ಎಂದು ಬೇಡಿಕೊಳ್ಳುತ್ತೇನೆ, ಎಂದುಕೊಂಡ. ಅಂತೆಯೇ ಎದ್ದು ತಂದೆಯ ಬಳಿಗೆ ಹೊರಟ. ಮಗನು ಇನ್ನೂ ಅಷ್ಟುದೂರದಲ್ಲಿ ಇರುವಾಗಲೇ ತಂದೆ ನೋಡಿದ. ಆತನ ಹೃದಯ ಕನಿಕರದಿಂದ ಕರಗಿಹೋಯಿತು. ಓಡಿಹೋಗಿ, ಮಗನನ್ನು ಬಿಗಿಯಾಗಿ ತಬ್ಬಿಕೊಂಡು  ಮುತ್ತಿಟ್ಟ. ಆದರೂ ಮಗನು, "ಅಪ್ಪಾ, ದೇವರಿಗೂ ನಿಮಗೂ ವಿರುದ್ಧವಾಗಿ ಪಾಪಮಾಡಿದ್ದೇನೆ; ನಿಮ್ಮ ಮಗನೆನಿಸಿಕೊಳ್ಳುವ ಯೋಗ್ಯತೆಯೂ ನನಗಿಲ್ಲ" ಎಂದ. ತಂದೆಯಾದರೋ ಆಳುಗಳನ್ನು ಕರೆದು, ಅತ್ಯುತ್ತಮವಾದ ಅಂಗಿಯನ್ನು ತಕ್ಷಣವೇ ತಂದು ಇವನಿಗೆ ಉಡಿಸಿರಿ ಬೆರಳಿಗೆ ಉಂಗುರವನ್ನು ತೊಡಿಸಿರಿ. ಕಾಲಿಗೆ ಪಾದರಕ್ಷೆಗಳನ್ನು ಮೆಟ್ಟಿಸಿರಿ; ಕೊಬ್ಬಿಸಿದ ಕರುವನ್ನು ತಂದು ಕೊಯ್ಯಿರಿ; ಹಬ್ಬಮಾಡೋಣ, ಆನಂದಿಸೋಣ. ಏಕೆಂದರೆ, ಈ ನನ್ನ ಮಗ ಸತ್ತುಹೋಗಿದ್ದ, ಈಗ ಬದುಕಿ ಬಂದಿದ್ದಾನೆ. ತಪ್ಪಿಹೋಗಿದ್ದ, ಈಗ ಸಿಕ್ಕಿದ್ದಾನೆ," ಎಂದು ಹೇಳಿದ. ಒಡನೆಯೇ ಹಬ್ಬದ ಸಡಗರ ತೊಡಗಿತು.  ಇತ್ತ ಹೊಲಕ್ಕೆ ಹೋಗಿದ್ದ ಹಿರಿಯ ಮಗ ಹಿಂದಿರುಗಿ ಮನೆಯನ್ನು ಸಮೀಪಿಸುವಾಗ ನಾನ, ನರ್ತನಗಳ ಶಬ್ದವು ಅವನ ಕಿವಿಗೆ ಬಿತ್ತು. "ಮನೆಯಲ್ಲೇನು ವಿಶೇಷ?" ಎಂದು ಒಬ್ಬ ಆಳನ್ನು ಕರೆದು ವಿಚಾರಿಸಿದ. "ನಿಮ್ಮ ತಮ್ಮ ಬಂದಿದ್ದಾರೆ; ಅವರು ಮರಳಿ ಸುರಕ್ಷಿತವಾಗಿ ಬಂದುದಕ್ಕಾಗಿ ಕೊಬ್ಬಿಸಿದ ಕರುವನ್ನು ನಿಮ್ಮ ತಂದೆ ಕೊಯ್ಯಿಸಿದ್ದಾರೆ," ಎಂದು ಆಳು ತಿಳಿಸಿದ. ಇದನ್ನು ಕೇಳಿದ ಹಿರಿಯ ಮಗನಿಗೆ ಸಿಟ್ಟು ಬಂದಿತು. ಮನೆಯೊಳಕ್ಕೆ ಕಾಲಿಡಲೂ ಒಪ್ಪಲಿಲ್ಲ. ತಂದೆಯೇ ಹೊರಗೆ ಬಂದು ಬೇಡಿಕೊಂಡಾಗ ಅವನು, "ನೋಡಿ, ನಾನು ಇಷ್ಟು ವರ್ಷಗಳಿಂದ ನಿಮಗೆ ಗುಲಾಮನಂತೆ ಸೇವೆ ಮಾಡುತ್ತಿದ್ದೇನೆ. ನಿಮ್ಮ ಮಾತನ್ನು ಎಂದೂ ಮೀರಿಲ್ಲ; ಆದರೂ ನಾನು ನನ್ನ ಸ್ನೇಹಿತರೊಡನೆ ಹಬ್ಬಮಾಡಲು ಒಂದು ಆಡುಮರಿಯನ್ನು ಕೂಡ ನೀವು ಕೊಟ್ಟಿಲ್ಲ. ಆದರೆ ನಿಮ್ಮ ಆಸ್ತಿಪಾಸ್ತಿಯನ್ನೆಲ್ಲಾ ವೇಶ್ಯೆಯರಿಗೆ ಸುರಿದ ಈ ನಿಮ್ಮ ಮಗ ಬಂದದ್ದೇ ಕೊಬ್ಬಿಸಿದ ಕರುವನ್ನು ಕೊಯ್ಯಿಸಿದ್ದೀರಿ!" ಎಂದು ವಾದಿಸಿದ. ಆಗ ತಂದೆ ಅವನಿಗೆ, ಮಗನೇ, ನೀನು ಯಾವಾಗಲೂ ನನ್ನ ಸಂಗಡ ಇದ್ದೀ; ನನ್ನ ಸರ್ವಸ್ವವೂ ನಿನ್ನದೇ ಆಗಿದೆ. ಈ ನಿನ್ನ ತಮ್ಮ ನಮ್ಮ ಪಾಲಿಗೆ ಸತ್ತುಹೋಗಿದ್ದ, ಈಗ ಬದುಕಿಬಂದಿದ್ದಾನೆ. ತಪ್ಪಿ ಹೋಗಿದ್ದ, ಈಗ ಸಿಕ್ಕಿದ್ದಾನೆ. ಆದುದರಿಂದ ನಾವು ಹಬ್ಬಮಾಡಿ ಆನಂದಿಸುವುದು ಸಹಜವಲ್ಲವೇ?" ಎಂದನು."