ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

10-06-2018

ಸಾಧಾರಣ ಕಾಲದ ಹತ್ತನೆಯ ಭಾನುವಾರ

ಮೊದಲನೇ ವಾಚನ: ಆದಿಕಾಂಡ 3:9-15

ಆದರೆ ಸರ್ವೇಶ್ವರನಾದ ದೇವರು, "ಎಲ್ಲಿರುತ್ತೀಯಾ" ಎಂದು ಆದಾಮನನ್ನು ಕೂಗಿ ಕೇಳಿದರು. ಅದಕ್ಕೆ ಅವನು, "ತಾವು ತೋಟದಲ್ಲಿ ಸಂಚರಿಸುವ ಸಪ್ಪಳವು ಕೇಳಿಸಿತು; ಬೆತ್ತಲೆಯಾಗಿದ್ದೇನಲ್ಲಾ ಎಂದು ಹೆದರಿ ಅವಿತುಕೊಂಡೆ," ಎಂದನು. "ನೀನು ಬೆತ್ತಲೆಯಾಗಿರುತ್ತಿಯೆಂದು ನಿನಗೆ ತಿಳಿಸಿದವರು ಯಾರು?" ಎಂದು ಕೇಳಿದರು. ಅದಕ್ಕೆ ಆದಾಮನು, "ನನ್ನ ಜೊತೆಯಲ್ಲಿ ಇರಲು ತಾವು ಕೊಟ್ಟ ಮಹಿಳೆ ಮರದ ಹಣ್ಣನ್ನು ನನಗೆ ಕೊಟ್ಟಳು; ನಾನು ತಿಂದೆ," ಎಂದನು. ಸರ್ವೇಶ್ವರನಾದ ದೇವರು ಮಹಿಳೆಯನ್ನು, "ಇದೇನು ನೀನು ಮಾಡಿದ್ದು?" ಎಂದು ಕೇಳಲು ಆಕೆ, "ಸರ್ಪವು ನನ್ನನ್ನು ವಂಚಿಸಿ ತಿನ್ನುವಂತೆ ಮಾಡಿತು," ಎಂದು ಉತ್ತರ ಕೊಟ್ಟಳು. ಆಗ ಸರ್ವೇಶ್ವರನಾದ ದೇವರು, ಇಂತೆದರು ಸರ್ಪಕ್ಕೆ: " ಪರಿಯ ಕೃತ್ಯವನ್ನು ನೀನೆಸಗಿದುದರಿಂದ ಶಾಪಗ್ರಸ್ತನಾದೆ ಎಲ್ಲ ಪಶು ಪ್ರಾಣಿಗಳಿಗಿಂತ; ಹರಿದಾಡುವೆ ಹೊಟ್ಟೆಯ ಮೇಲೆ ಇಂದಿನಿಂದ ತಿನ್ನುವೆ ಮಣ್ಣನೇ ಜೀವಮಾನ ಪರಿಯಂತ, ಹಗೆತನವಿರಿಸುವೆನು ನಿನಗೂ ಮಹಿಳೆಗೂ ನಿನ್ನ ಸಂತಾನಕ್ಕೂ ಇವಳ ಸಂತಾನಕ್ಕೂ ಜಜ್ಜುವುದಿವಳ ಸಂತಾನ ನಿನ್ನ ತಲೆಯನ್ನು, ಕಚ್ಚುವೆ ನಿನ್ನಾ ಸಂತಾನದ ಹಿಮ್ಮಡಿಯನು."

ಕೀರ್ತನೆ: 130:1-2,3-4,5-6,7-8
ಶ್ಲೋಕ: ಪ್ರಭುವಿನಲ್ಲಿದೆ ಕರುಣೆ, ಪೂರ್ಣ ವಿಮೋಚನೆ.

ಎರಡನೇ ವಾಚನ: 2ಕೊರಿಂಥಿಯರಿಗೆ 4:13-5:1

"ನಾನು ವಿಶ್ವಾಸವಿಟ್ಟೆನು. ಆದ್ದರಿಂದ ಮಾತನಾಡಿದೆನು," ಎಂದು ಪವಿತ್ರಗ್ರಂಥದಲ್ಲಿ ಬರೆಯಲಾಗಿದೆ. ಇದೇ ಮನೋಭಾವನೆಯಿಂದ ಕೂಡಿರುವ ನಾವು ಮಾತನಾಡಲೇಬೇಕು. ಏಕೆಂದರೆ ನಮಗೆ ವಿಶ್ವಾಸವಿದೆ. ಪ್ರಭು ಯೇಸುವನ್ನು ಪುನರುತ್ದಾನಗೊಳಿಸಿದ ದೇವರು ನಮ್ಮನ್ನು ಯೇಸುಕ್ರಿಸ್ತರೊಡನೆ ಪುನರುತ್ದಾನಗೊಳಿಸಿ ತಮ್ಮ ಸಾನ್ನಿಧ್ಯಕ್ಕೆ ಬರಮಾಡಿಕೊಳ್ಳುವರು. ಎಂಬುದನ್ನು ನಾವು ಬಲ್ಲೆವು. ಅಂತೆಯೇ ನಿಮ್ಮನ್ನೂ ಬರಮಾಡಿಕೊಳ್ಳುವರು. ಇದೆಲ್ಲವೂ ನಿಮ್ಮ ಒಳಿತಿಗಾಗಿಯೇ. ಹೀಗೆ ಅನೇಕರಲ್ಲಿ ದೇವರ ವರಪ್ರಸಾದವು ಉಕ್ಕಿ ಹರಿಯುವುದು; ಅವರಲ್ಲಿ ಕೃತಜ್ಞತಾ ಭಾವನೆಯನ್ನು ಹೆಚ್ಚಿಸುವುದು; ಇದರಿಂದಾಗಿ ದೇವರ ಮಹಿಮೆ ಬೆಳಗುವುದು. ಹೀಗಿರಲು, ನಾವು ಎದೆಗುಂದುವುದಿಲ್ಲ. ನಮ್ಮ ಭೌತಿಕ ದೇಹವು ನಶಿಸುತ್ತಿದ್ದರೂ ನಮ್ಮ ಅಂತರಂಗವು ದಿನೇ ದಿನೇ ನೂತನವಾಗುತ್ತದೆ. ನಾವು ಅನುಭವಿಸುತ್ತಿರುವ ಕಷ್ಟಸಂಕಟಗಳು ಅಲ್ಪವಾದುವು, ಕ್ಷಣಿಕವಾದುವು. ಅವುಗಳಿಂದ ಲಭಿಸುವ ಮಹಿಮೆಯಾದರೋ ಅಪಾರವಾದುದು, ಅನಂತವಾದುದು. ನಮ್ಮ ಗಮನವು ಕೇಂದ್ರೀಕೃತವಾಗಿರುವುದು ಗೋಚರವಾದುವುಗಳ ಮೇಲಲ್ಲ, ಅಗೋಚರವಾದವುಗಳ ಮೇಲೆ. ಗೋಚರವಾದುವುಗಳು ತಾತ್ಕಾಲಿಕ; ಅಗೋಚರವಾದವುಗಳು ಶಾಶ್ವತ. ಭೂಮಿಯ ಮೇಲಿನ ನಮ್ಮ ದೇಹ ಎಂಬ ಗಡಾರವು ನಾಶವಾಗಿ ಹೋದರೂ ಸ್ವರ್ಗದಲ್ಲಿ ಶಾಶ್ವತವಾದ ಗೃಹವೂಂದು ನಮಗೆ ದೊರಕುವುದು. ಅದು ಮಾನವರಿಂದ ನಿರ್ಮಿತ ಆದುದಲ್ಲ, ದೇವರಿಂದಲೇ ನಿರ್ಮಿತವಾದುದು. ಇದು ನಮಗೆ ತಿಳಿದ ವಿಷಯ.

ಶುಭಸಂದೇಶ: ಮಾರ್ಕ 3:20-35 

ಯೇಸುಸ್ವಾಮಿ ಮನೆಗೆ ಹೋದಾಗ ಜನರು ಮರಳಿ ಗಂಪುಗುಂಪಾಗಿ ಬಂದರು. ಯೇಸುವಿಗೂ ಶಿಷ್ಯರಿಗೂ ಊಟಮಾಡಲು ಕೂಡ ಬಿಡುವಿಲ್ಲದೆ ಹೋಯಿತು. "ಈತನಿಗೆ ಹುಚ್ಚು ಹಿಡಿದಿದೆ," ಎಂದು ಜನರು ಮಾತನಾಡಿಕೊಳ್ಳುತ್ತಿದ್ದರು. ಆದ್ದರಿಂದ ಯೇಸುವಿನ ಬಂಧುಗಳು ಯೇಸುವನ್ನು ಹಿಡಿದು ತರಲು ಹೊರಟರು. ಇದಲ್ಲದೆ, ಜೆರುಸಲೇಮಿನಿಂದ ಬಂದಿದ್ದ ಧರ್ಮಶಾಸ್ತ್ರಿಗಳು, "ಇವನನ್ನು ಬೆಲ್ಜೆಬೂಲನು ಹಿಡಿದಿದ್ದಾನೆ; ದೆವ್ವಗಳ ಒಡೆಯನ ಶಕ್ತಿಯಿಂದಲೇ ಇವನು ದೆವ್ವ ಬಿಡಿಸುತ್ತಾನೆ," ಎನ್ನುತ್ತಿದ್ದರು. ಆಗ ಯೇಸು ಅವರನ್ನು ತಮ್ಮ ಹತ್ತಿರಕ್ಕೆ ಕರೆದು ಸಾಮತಿಗಳ ಮೂಲಕ ಮಾತನಾಡತೊಡಗಿದರು: ಸೈತಾನನು ಸೈತಾನನನ್ನು ಹೊರದೂಡುವುದು ಹೇಗೆ ತಾನೇ ಸಾಧ್ಯ? ಒಂದು ರಾಜ್ಯದ ಪ್ರಜೆಗಳು ತಮ್ಮ ತಮ್ಮೊಳಗೆ ಕಚ್ಚಾಡುವುದಾದರೆ ಆ ರಾಜ್ಯ ಉಳಿಯದು. ಒಂದು ಕುಟುಂಬದ ಸದಸ್ಯರು ತಮ್ಮ ತಮ್ಮೊಳಗೆ ಕಚ್ಚಾಡುವುದಾದರೆ ಆ ಕುಟುಂಬ ಬಾಳದು. ಅದರಂತೆಯೇ ಸೈತಾನನ ಪಕ್ಷದವರು ಪರಸ್ಪರ ವಿರೋಧಿಗಳಾದರೆ ಅವನ ರಾಜ್ಯ ಉಳಿಯದು; ಅದು ಅಳಿದು ಹೋಗುವುದು. ಒಬ್ಬನು ಬಲಿಷ್ಠನ ಮನೆಯನ್ನು ನುಗ್ಗಿ ಅವನನ್ನು ಕಟ್ಟಿಹಾಕದೆ ಅವನ ಸೊತ್ತನ್ನು ಸೂರೆಮಾಡಲಾಗದು. ಮೊದಲು ಅವನನ್ನು ಕಟ್ಟಬೇಕು ಬಳಿಕ ಅವನ ಮನೆಯನ್ನು ಕೊಳ್ಳೆ ಹೊಡೆಯಬೇಕು. ನಿಶ್ಚಯವಾಗಿ ನಿಮಗೆ ಹೇಳುತ್ತೇನೆ; ಮನುಷ್ಯರು ಮಾಡುವ ಎಲ್ಲಾ ಪಾಪಗಳಿಗೂ ಆಡುವ ಎಲ್ಲಾ ದೇವದೂಷಣೆಗಳಿಗೂ ಕ್ಷಮೆ ದೊರಕಬಹುದು. ಆದರ ಪವಿತ್ರಾತ್ಮ ಅವರನ್ನು ದೂಷಿಸುವವನಿಗೆ ಮಾತ್ರ ಕ್ಷಮೆ ದೊರಕದು. ಅಂಥವನ ಪಾಪ ಶಾಶ್ವತವಾದುದು," ಎಂದರು. (ದೆವ್ವ ಹಿಡಿದಿದೆ ಎಂದು ತಮ್ಮನು ಕೆಲವರು ನಿಂದಿಸುತ್ತಿದ್ದದರಿಂದ ಯೇಸು ಹೀಗೆ ಹೇಳಿದರು) ಯೇಸುಸ್ವಾಮಿಯ ತಾಯಿ ಮತ್ತು ಸಹೋದರರು ಅಲ್ಲಿಗೆ ಬಂದರು. ಒಳಗೆ ಜನರು ಯೇಸುವಿನ ಸುತ್ತಲೂ ಗಂಪಾಗಿ ಕುಳಿತ್ತಿದ್ದರು. ಆದುದರಿಂದ ಅವರು ಹೊರಗೆ ನಿಂತು, ಯೇಸುವಿಗೆ ಬರಬೇಕೆಂದು ಹೇಳಿ ಕಳುಹಿಸಿದರು. "ನಿಮ್ಮ ತಾಯಿಯೂ ಸಹೋದರರೂ ಹೊರಗೆ ನಿಮಗಾಗಿ ಕಾದಿದ್ದಾರೆ," ಎಂದು ಯೇಸುವಿಗೆ ತಿಳಿಸಿದರು. ಅದಕ್ಕೆ ಯೇಸು, "ನನಗೆ ತಾಯಿ ಯಾರು?, ಸಹೋದರರು ಯಾರು?" ಎನ್ನುತ್ತಾ ತಮ್ಮ ಸುತ್ತಲೂ ಕುಳಿತಿದ್ದವರ ಮೇಲೆ ದೃಷ್ಟಿ ಹರಿಸಿ, "ಇಗೋ, ನನ್ನ ತಾಯಿ! ಇಗೋ ನನ್ನ ಸಹೋದರರು! ದೈವೇಚ್ಛೆಯನ್ನು ಯಾರು ನೆರವೇರಿಸುತ್ತಾರೋ ಅವರೇ ನನ್ನ ಸಹೋದರ, ಸಹೋದರಿ, ತಾಯಿ," ಎಂದರು.

No comments:

Post a Comment