ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

31.08.22 - “ನೀವು ದೇವರ ಪುತ್ರ”

ಮೊದಲನೇ ವಾಚನ: ೧ ಕೊರಿಂಥಿಯರಿಗೆ 3:1-9

ಪ್ರಿಯ ಸಹೋದರರೇ, ದೇವರ ಆತ್ಮವನ್ನು ಪಡೆದವರೊಡನೆ ಮಾತನಾಡಿದಂತೆ ನಿಮ್ಮೊಡನೆ ನಾವು ಮಾತನಾಡಲಿಲ್ಲ. ಲೌಕಿಕರು ನೀವು; ಕ್ರಿಸ್ತಯೇಸುವಿನಲ್ಲಿ ಹಸುಗೂಸುಗಳು ನೀವು ಎಂದು ಭಾವಿಸಿ ನಿಮ್ಮೊಡನೆ ಮಾತನಾಡಬೇಕಾಯಿತು.  ನಾನು ನಿಮಗೆ ಹಾಲೂಡಿಸಿದೆನು; ಗಟ್ಟಿ ಆಹಾರವನ್ನು ಕೊಡಲಿಲ್ಲ. ಏಕೆಂದರೆ, ಅದನ್ನು ಜೀರ್ಣಿಸಿಕೊಳ್ಳಲು ನಿಮಗೆ ಶಕ್ತಿ ಇರಲಿಲ್ಲ. ಇಂದಿಗೂ ನೀವು ಶಕ್ತರಲ್ಲ. ನೀವು ಇನ್ನೂ ಲೌಕಿಕರಂತೆ ಬಾಳುತ್ತಿದ್ದೀರಿ. ನಿಮ್ಮ ನಡುವೆ ದ್ವೇಷ-ಅಸೂಯೆ, ವಾದ-ವಿವಾದಗಳು ಪ್ರಬಲವಾಗಿದ್ದು ನೀವಿನ್ನೂ ಪ್ರಾಣಿಗಳಂತೆ, ಸಾಧಾರಣ ಮನುಷ್ಯರಂತೆ ವರ್ತಿಸುತ್ತಿದ್ದೀರಲ್ಲವೆ? ಒಬ್ಬನು, ನಾನು ಪೌಲನ ಕಡೆಯವನು; ಇನ್ನೊಬ್ಬನು, ನಾನು ಅಪೊಲೋಸನ ಕಡೆಯವನು, ಎಂದು ನಿಮ್ಮೊಳಗೆ ಕಿತ್ತಾಡುವ ನೀವು ಕೇವಲ ನರಪ್ರಾಣಿಗಳಲ್ಲದೆ ಮತ್ತೇನು? ಅಪೊಲೋಸನು ಯಾರು? ಪೌಲನು ಯಾರು? ನಿಮ್ಮನ್ನು ವಿಶ್ವಾಸಕ್ಕೆ ಕರೆತಂದ ದಾಸರು ನಾವಲ್ಲವೇ? ನಮ್ಮಲ್ಲಿ ಪ್ರತಿಯೊಬ್ಬನು ಪ್ರಭು ನಿಯಮಿಸುವ ಕಾರ್ಯವನ್ನು ನಿರ್ವಹಿಸುತ್ತೇವೆ. ನಾನು ಸಸಿಯನ್ನು ನೆಟ್ಟೆನು; ಅಪೊಲೋಸನು ನೀರೆರೆದನು; ಆದರೆ ಅದನ್ನು ಬೆಳೆಸಿದವರು ದೇವರು. ಆದ್ದರಿಂದ ನೆಡುವವನಾಗಲಿ, ನೀರೆರೆಯುವವನಾಗಲಿ ಪ್ರಮುಖನಲ್ಲ; ಬೆಳವಣಿಗೆ ನೀಡುವ ದೇವರೇ ದೊಡ್ಡವರು. ನೆಡುವವನೂ ನೀರೆರೆಯುವವನೂ ಇಬ್ಬರೂ ಅಗತ್ಯವಾಗಿ ಬೇಕಾದವರೇ. ಅವನವನ ದುಡಿಮೆಗೆ ತಕ್ಕ ಹಾಗೆ ಪ್ರತಿಯೊಬ್ಬನೂ ಸಂಭಾವನೆ ಪಡೆಯುತ್ತಾನೆ. ನಾವು ದೇವರ ಸಹಕಾರ್ಮಿಕರು. ನೀವು ದೇವರೆ ಸಾಗುವಳಿಮಾಡುವ ಹೊಲ; ಅವರೆ ನಿರ್ಮಿಸುತ್ತಿರುವ ಮಂದಿರ.

ಕೀರ್ತನೆ: 33:12-13, 14-15, 20-21

ಶ್ಲೋಕ: ಸ್ವಜನರಾಗಿ ಪ್ರಭು ಆಯ್ದುಕೊಂಡ ಜನತೆ ಧನ್ಯ

ಶುಭಸಂದೇಶ: ಲೂಕ 4:38-44

ಪ್ರಾರ್ಥನಾಮಂದಿರದಿಂದ ಹೊರಟ ಯೇಸುಸ್ವಾಮಿ ಸಿಮೋನನ ಮನೆಗೆ ಬಂದರು. ಆ ಸಿಮೋನನ ಅತ್ತೆ ವಿಷಮಜ್ವರದಿಂದ ನರಳುತ್ತಿದ್ದಳು. ಅಲ್ಲಿದ್ದವರು ಅವಳ ಪರವಾಗಿ ಯೇಸುವಿನಲ್ಲಿ ಮೊರೆಯಿಟ್ಟರು. ಯೇಸು ಆಕೆಯ ಬಳಿ ನಿಂತು, ಬಾಗಿ, ಜ್ವರಕ್ಕೆ ಬಿಟ್ಟುಹೋಗೆಂದು ಆಜ್ಞಾಪಿಸಿದರು; ಅದು ಬಿಟ್ಟುಹೋಯಿತು. ಆ ಕ್ಷಣವೇ ಆಕೆ ಎದ್ದು ಅವರೆಲ್ಲರನ್ನು ಸತ್ಕರಿಸಿದಳು. ಸಂಜೆಯಾಗುತ್ತಿದ್ದಂತೆ ಜನರು ತಮ್ಮ ಮನೆಯಲ್ಲಿ ವಿಧವಿಧವಾದ ಕಾಯಿಲೆಯಿಂದ ನರಳುತ್ತಿದ್ದವರನ್ನೆಲ್ಲಾ ಯೇಸುಸ್ವಾಮಿಯ ಬಳಿಗೆ ಕರೆತಂದರು. ಯೇಸು ಪ್ರತಿಯೊಬ್ಬನ ಮೇಲೆ ತಮ್ಮ ಕೈಯಿಟ್ಟು ಗುಣಪಡಿಸಿದರು.  ಅನೇಕರ ಮೈಮೇಲಿದ್ದ ದೆವ್ವಗಳು ಸಹ, “ನೀವು ದೇವರ ಪುತ್ರ,” ಎಂದು ಬೊಬ್ಬೆಹಾಕುತ್ತಾ ಬಿಟ್ಟುಹೋದುವು. ಇವರೇ ‘ಕ್ರಿಸ್ತ’ ಎಂದು ಅವುಗಳು ತಿಳಿದಿದ್ದರಿಂದ ಯೇಸು ಅವುಗಳನ್ನು ಗದರಿಸಿ ಮಾತೆತ್ತಲು ಬಿಡಲಿಲ್ಲ. ಬೆಳಗಾಗುತ್ತಲೇ, ಯೇಸುಸ್ವಾಮಿ ಅಲ್ಲಿಂದ ಹೊರಟು ನಿರ್ಜನ ಸ್ಥಳಕ್ಕೆ ಹೋದರು. ಜನಸಮೂಹವು ಅವರನ್ನು ಹುಡುಕಿಕೊಂಡು ಅಲ್ಲಿಗೂ ಬಂದಿತು; ತಮ್ಮನ್ನು ಬಿಟ್ಟುಹೋಗಬಾರದೆಂದು ಜನರು ತಡೆಗಟ್ಟಲು ಯತ್ನಿಸಿದರು.  ಅವರಿಗೆ ಯೇಸು, “ದೇವರ ಸಾಮ್ರಾಜ್ಯದ ಶುಭಸಂದೇಶವನ್ನು ಬೇರೆ ಬೇರೆ ಊರುಗಳಿಗೂ ನಾನು ಬೋಧಿಸಬೇಕಾಗಿದೆ. ನನ್ನನ್ನು ಕಳುಹಿಸಿರುವುದು ಅದಕ್ಕಾಗಿಯೇ,” ಎಂದರು.  ಬಳಿಕ ಜುದೇಯ ಪ್ರಾಂತ್ಯದ ಪ್ರಾರ್ಥನಾಮಂದಿರಗಳಲ್ಲಿ ಯೇಸು ಬೋಧಿಸುತ್ತಿದ್ದರು.

No comments:

Post a Comment