ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

02.12.23

ಮೊದಲನೆಯ ವಾಚನ: ದಾನಿಯೇಲ 7:15-27

ದಾನಿಯೇಲನಾದ ನನ್ನ ಮನ ಒಳಗೇ ವ್ಯಥೆಗೊಂಡಿತು. ನನ್ನ ಮನಸ್ಸಿನಲ್ಲಿ ತೋಚದ ದರ್ಶನಗಳು ನನ್ನನ್ನು ಕಳವಳಪಡಿಸಿದವು. ಹತ್ತಿರದಲ್ಲೇ ನಿಂತಿದ್ದವರಲ್ಲಿ ಒಬ್ಬನ ಬಳಿಗೆ ಹೋಗಿ ಇವುಗಳ ಸರಿಯಾದ ಅರ್ಥ ಏನೆಂದು ವಿಚಾರಿಸಿದೆ. ಅವನು ನನಗೆ: " ಆ ನಾಲ್ಕು ದೊಡ್ಡ ಮೃಗಗಳು ಲೋಕಸಾಗರಗಳಿಂದ ಏರತಕ್ಕ ನಾಲ್ಕು ರಾಜ್ಯಗಳು. ಆದರೆ ರಾಜ್ಯಾಧಿಕಾರ ಲಭಿಸುವುದು ಮಹೋನ್ನತರ ಪವಿತ್ರ ಪ್ರಜೆಗೆ. ಅದನ್ನು ತಲೆತಲಾಂತರಕ್ಕೂ ಶಾಶ್ವತವಾಗಿ ಅನುಭವಿಸುವವರು ಅವರೇ, " ಎಂದು ಆ ವಿಷಯಗಳ ತಾತ್ಪರ್ಯವನ್ನು ವಿವರಿಸಿ ತಿಳಿಸಿದನು. ಆದಾದ ಮೇಲೆ ಇತರ ಮೃಗಗಳಿಗಿಂತ ವಿಲಕ್ಷಣವಾಗಿಯೂ ಅತಿ ಭಯಂಕರವಾಗಿಯೂ ಕಬ್ಬಿಣದ ಹಲ್ಲು, ಕಂಚಿನ ಉಗುರುಳ್ಳದ್ದಾಗಿಯೂ ತನ್ನ ಬಲಿಯನ್ನು ತುಂಡುತುಂಡಾಗಿಸಿ ಕಬಳಿಸುತ್ತಿದ್ದ ಆ ನಾಲ್ಕನೆಯ ಮೃಗದ ವಿಷಯವನ್ನು ತಿಳಿದುಕೊಳ್ಳಲು ಬಯಸಿದೆ. ಅದರ ತಲೆಯ ಮೇಲಿದ್ದ ಹತ್ತು ಕೊಂಬುಗಳ ವಿಷಯವಾಗಿಯೂ, ನಾನು ನೋಡುತ್ತಿದ್ದ ಹಾಗೆ ಯಾವ ಕೊಂಬು ಮೊಳೆತು ಮೂರು ಕೊಂಬುಗಳನ್ನು ಬೀಳಿಸಿ, ತನ್ನಲ್ಲೆ ಕಣ್ಣುಳ್ಳದಾಗಿ ಬಡಾಯಿ ಕೊಚ್ಚಿಕೊಳ್ಳುವ ಬಾಯುಳ್ಳದ್ದಾಗಿ, ಮಿಕ್ಕ ಕೊಂಬುಗಳಿಗಿಂತ ಭಯಂಕರವಾಗಿ ಕಾಣಿಸುತ್ತಾ ಇತ್ತೋ, ಆ ಕೊಂಬಿನ ವಿಷಯವಾಗಿ ಸತ್ಯಾರ್ಥವನ್ನೂ ತಿಳಿದುಕೊಳ್ಳಬೇಕೆಂದು ವಿಚಾರಿಸಿದೆ. ಆ ಕೊಂಬು ಪವಿತ್ರ ಪ್ರಜೆಯೊಂದಿಗೆ ಯುದ್ಧಮಾಡುತ್ತಿತ್ತು. ಮಹಾವೃದ್ಧನು ಬಂದು ಮಹೋನ್ನತರ ಆ ಪವಿತ್ರ ಪ್ರಜೆಗೆ ನ್ಯಾಯತೀರಿಸಿ ಅವರಿಗೆ ರಾಜ್ಯವನ್ನು ದೊರಕಿಸುವ ತನಕ ಅವರನ್ನು ಗೆಲ್ಲುತ್ತಾ ಬಂದಿತ್ತು. ಆಗ ಅವನು ನನಗೆ ಕೊಟ್ಟ ವಿವರ ಇದು: " ಆ ನಾಲ್ಕನೆಯ ಮೃಗ ಲೋಕದಲ್ಲಿ ತಲೆಯೆತ್ತುವ ನಾಲ್ಕನೆಯ ರಾಜ್ಯ. ಅದು ಮಿಕ್ಕ ರಾಜ್ಯಗಳಿಗಿಂತ ವಿಲಕ್ಷಣವಾದುದು. ಲೋಕವನ್ನೇ ಕಾಲಿನಿಂದ ತುಳಿದು ಚೂರುಚೂರು ಮಾಡಿ ಕಬಳಿಸುವುದು. ಆ ಹತ್ತು ಕೊಂಬುಗಳು ಅದೇ ರಾಜ್ಯವನ್ನು ಆಳುವ ಹತ್ತು ಮಂದಿ ಅರಸರು. ಅವರ ತರುವಾಯ ಮತ್ತೊಬ್ಬನು ತಲೆದೋರುವನು. ಅವನು ಮುಂಚಿನ ಅರಸರಿಗಿಂತ ವಿಲಕ್ಷಣವಾಗಿರುವನು, ಆ ಮೂವರು ಅರಸರನ್ನು ಸದೆಬಡಿದುಬಿಡುವನು. ಅವನು ಮಹೋನ್ನತ ದೇವರಿಗೆ ವಿರುದ್ದವಾಗಿ ಕೊಚ್ಚಿಕೊಳ್ಳುವನು. ಮಹೋನ್ನತರ ಪವಿತ್ರ ಪ್ರಜೆಯನ್ನು ಶೋಷಣೆಗೆ ಗುರಿಮಾಡುವನು. ಆ ಪ್ರಜೆ ಅವನಿಗೆ ಮೂರುವರೆ ವರ್ಷ ಅಧೀನರಾಗಿರುವರು. ಆದರೆ ದೇವರ ನ್ಯಾಯಸಭೆ ತೀರ್ಪಿತ್ತು, ಅವನ ದೊರೆತನವನ್ನು ಕಿತ್ತು, ವಿನಾಶಮಾಡಿ, ಕೊನೆಗಾಣಿಸಿಬಿಡುವುದು. ರಾಜ್ಯಭಾರವೂ ದೊರೆತನವೂ ಸಮಸ್ತಲೋಕದಲ್ಲಿನ ರಾಜ್ಯಗಳ ಮಹಿಮೆಯೂ ಮಹೋನ್ನತರ ಭಕ್ತಜನರಿಗೆ ಕೊಡಲಾಗುವುದು. ಅವರ ರಾಜ್ಯ ಶಾಶ್ವತ ರಾಜ್ಯ. ಎಲ್ಲ ದೇಶಾಧಿಪತಿಗಳೂ ಅವರಿಗೆ ಅಧೀನರಾಗಿ ಸೇವೆ ಮಾಡುವರು, " ಎಂದು ಹೇಳಿದನು.

ಕೀರ್ತನೆ ಅಜರ್ಯ 60:65
ಶ್ಲೋಕ: ಸರ್ವೇಶ್ವರನನ್ನು ಕೊಂಡಾಡಿ, ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸಿ.

ಮಾನವ ಜನಾಂಗಗಳೇ, ಸರ್ವೇಶ್ವರನನ್ನು ಕೊಂಡಾಡಿ|
ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸಿ||
ಇಸ್ರಯೇಲ್ ನಾಡೇ, ಸರ್ವೇಶ್ವರನನ್ನು ಕೊಂಡಾಡು|
ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸು||

ಸರ್ವೇಶ್ವರನ ಯಾಜಕರೇ,, ಸರ್ವೇಶ್ವರನನ್ನು ಕೊಂಡಾಡಿ|
ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸಿ||
ಸರ್ವೇಶ್ವರನ ದಾಸರೇ, ಸರ್ವೇಶ್ವರನನ್ನು ಕೊಂಡಾಡಿ|
ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸಿ||

ಸಜ್ಜನರ ಜೀವಾತ್ಮಗಳೇ, ಸರ್ವೇಶ್ವರನನ್ನು ಕೊಂಡಾಡಿ|
ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸಿ||
ಸಂತರೇ, ದೀನಮನಸ್ಕರೇ, ಸರ್ವೇಶ್ವರನನ್ನು ಕೊಂಡಾಡಿ|
ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸಿ||

ಶುಭಸಂದೇಶ: ಲೂಕ 21:34-36

ಆ ಕಾಲದಲ್ಲಿ ಯೇಸು ತಮ್ಮ ಶಿಷ್ಯರಿಗೆ ಹೀಗೆಂದರು: "ಮಿತಿಮೀರಿದ ಭೋಜನದಿಂದಾಗಲಿ, ಕುಡಿತದಿಂದಾಗಲಿ, ಲೌಕಿಕ ಚಿಂತೆಗಳಿಂದಾಗಲಿ ಮಂದಮತಿಗಳಾಗಬೇಡಿ. ಆ ದಿನವು ಅನಿರೀಕ್ಷಿತ ಉರುಲಿನಂತೆ ನಿಮ್ಮನ್ನು ಸಿಕ್ಕಿಸೀತು, ಜಾಗುರೂಕರಾಗಿರಿ! ಜಗತ್ತಿನ ಎಲ್ಲಾ ನಿವಾಸಿಗಳೂ ಅದಕ್ಕೆ ಸಿದ್ಧರಾಗಿರಬೇಕು. ಬಂದೊದಗಲಿರುವ ಇವೆಲ್ಲವುಗಳಿಂದ ಪಾರಾಗಿ ನರಪುತ್ರರ ಮುಂದೆ ನಿಲ್ಲಲು ನೀವು ಶಕ್ತರಾಗುವಂತೆ ನಿರಂತರವಾಗಿ ಪ್ರಾರ್ಥನೆ ಮಾಡುತ್ತಾ ಎಚ್ಚರಿಕೆಯಿಂದಿರಿ, " ಎಂದರು.

01.12.23 - "ಭೂಮ್ಯಾಕಾಶಗಳು ಗತಿಸಿಹೋಗುತ್ತದೆ; ಆದರೆ ನನ ಮಾತುಗಳು ಶಾಶ್ವತವಾಗಿ ಉಳಿಯುತ್ತವೆ"

ಮೊದಲನೇ ವಾಚನ: ದಾನಿಯೇಲ  7:2-14 


ದಾನಿಯೇಲನು ತಾನು ಕಂಡ ಕನಸಿನ ವಿಷಯವಾಗಿ ಇಂತೆಂದನು: ನಾನು ರಾತ್ರಿ ಕಂಡ ಕನಸಿನಲ್ಲಿ ನಾಲ್ಕು ದಿಕ್ಕುಗಳಿಂದಲೂ ಗಾಳಿ ಮಹಾಸಾಗರದ ಮೇಲೆ ರಭಸವಾಗಿ ಬೀಸಿ ಬಡಿಯುತ್ತಿತ್ತು. ವಿಲಕ್ಷಣವಾದ ನಾಲ್ಕು ದೊಡ್ಡ ಮೃಗಗಳು ಆ ಸಾಗರದಿಂದ ಹೊರಗೆ ಬಂದವು ಮೊದಲು ಕಾಣಿಸಿದ ಮೃಗ ಸಿಂಹದ ಹಾಗಿತ್ತು. ಆದರೆ ಅದಕ್ಕೆ ಹದ್ದಿನಂಥ ರೆಕ್ಕೆಗಳಿದ್ದವು. ನಾನು ನೋಡುತ್ತಿರುವಾಗಲೇ ಆ ರೆಕ್ಕೆಗಳು ಕೀಳಲ್ಪಟ್ಟವು. ಆ ಮೃಗವನ್ನು ನೆಲದಿಂದ ಮೇಲಕ್ಕೆತ್ತಿ ಮನುಷ್ಯನ ಹಾಗೆ ಎರಡು ಕಾಲುಗಳ ಮೇಲೆ ನಿಲ್ಲಿಸಲಾಯಿತು. ಅದಕ್ಕೆ ಮನುಷ್ಯನ ಹೃದಯ ಕೊಡಲಾಯಿತು. ಬಳಿಕ ಎರಡನೆಯ ಇನ್ನೊಂದು ಮೃಗವನ್ನು ಕಂಡೆ. ಅದು ಕರಡಿಯ ಹಾಗಿತ್ತು. ಒಂದು ಹೆಗಲನ್ನು ಮೇಲಕ್ಕೆ ಎತ್ತಿಕೊಂಡಿತ್ತು. ತನ್ನ ಬಾಯಲ್ಲಿನ ಹಲ್ಲುಗಳ ನಡುವೆ ಮೂರು ಪಕ್ಕೆಲುಬುಗಳನ್ನು ಕಚ್ಚಿಕೊಂಡಿತ್ತು. "ನೀನೆದ್ದು ಬೇಕಾದಷ್ಟು ಮಾಂಸವನ್ನು ತಿನ್ನು," ಎಂದು ಅದಕ್ಕೆ ಹೇಳಲಾಯಿತು. ಆನಂತರ ನಾನು ನೋಡುತ್ತಿರುವಾಗಲೇ ಚಿರತೆಯ ಹಾಗಿದ್ದ ಮತ್ತೊಂದು ಮೃಗ ಕಾಣಿಸಿತು. ಅದರ ಪಕ್ಕೆಗಳಲ್ಲಿ ಪಕ್ಷಿಯ ರೆಕ್ಕೆಗಳಂತಿರುವ ನಾಲ್ಕು ರೆಕ್ಕೆಗಳಿದ್ದವು. ಆ ಮೃಗಕ್ಕೆ ನಾಲ್ಕು ತಲೆಗಳಿದ್ದವು. ಅದಕ್ಕೆ ದೊರೆತನ ಕೊಡಲಾಯಿತು. ಇದಾದ ಬಳಿಕ ಆ ರಾತ್ರಿ ಕನಸಿನಲ್ಲಿ ಕಾಣಿಸಿಕೊಂಡ ನಾಲ್ಕನೇ ಮೃಗ ಭಯಂಕರವಾಗಿತ್ತು, ಹೆದರಿಸುವಂಥದಾಗಿತ್ತು. ಅಧಿಕ ಬಲವುಳ್ಳದ್ದಾಗಿತ್ತು. ಅದಕ್ಕೆ ಕಬ್ಬಿಣದ ದೊಡ್ಡ ಹಲ್ಲುಗಳಿದ್ದವು. ಅದು ತನ್ನ ಬಲಿಯನ್ನು ತುಂಡು ತುಂಡಾಗಿಸಿ ಕಬಳಿಸುತ್ತಿತ್ತು. ಮಿಕ್ಕದ್ದನ್ನು ಕಾಲುಗಳಿಂದ ತುಳಿಯುತ್ತಾ ಇತ್ತು. ಅದು ಮುಂಚಿನ  ಮೃಗಗಳಿಗಿಂತ ವಿಲಕ್ಷಣವಾಗಿತ್ತು ಅದಕ್ಕೆ ಹತ್ತು ಕೊಂಬುಗಳಿದ್ದವು. ನಾನು ಆ ಕೊಂಬುಗಳನ್ನು ಗಮನಿಸುತ್ತಿರುವಾಗಲೇ ಅವುಗಳ ನಡುವೆ ಇಗೋ ಇನ್ನೊಂದು ಚಿಕ್ಕ ಕೊಂಬು ಮೊಳೆಯಿತು. ಅದಕ್ಕೆ ಎಡೆ ಮಾಡಿಕೊಡಲು ಮುಂಚಿನ ಕೊಂಬುಗಳಲ್ಲಿ ಮೂರನ್ನು ಬೇರುಸಹಿತ ಕೀಳಲಾಯಿತು. ಆಶ್ಚರ್ಯವೆಂದರೆ, ಆ ಕೊಂಬಿನಲ್ಲಿ ಮನುಷ್ಯನ ಕಣ್ಣುಗಳಂತಿರುವ ಕಣ್ಣುಗಳಿದ್ದವು. ಬಡಾಯಿ ಕೊಚ್ಚಿಕೊಳ್ಳುವ ಬಾಯೂ ಇತ್ತು. ನಾನು ನೋಡುತ್ತಿದ್ದ ಹಾಗೆ: ಸಿಂಹಾಸನಗಳನ್ನು ಹಾಕಲಾಯಿತು.  ಮಹಾವೃದ್ಧನೊಬ್ಬನು ಆಸೀನನಾದನು. ಆತನ ಉಡುಪು ಬೆಳ್ಳಗಿತ್ತು ಹಿಮದಂತೆ. ಆತನ ಸಿಂಹಾಸನ ಅಗ್ನಿಜ್ವಾಲೆಗಳು. ಧಗಧಗಿಸುವ ಬೆಂಕಿ ಅದರ ಚಕ್ರಗಳು. ಆ ಸಿಂಹಾಸನದ ಸಮ್ಮುಖದಿಂದ ಪ್ರಜ್ವಲ ಪ್ರವಾಹವೊಂದು ಉಕ್ಕಿ ಹರಿದು ಬಂದಿತು. ಲಕ್ಷೋಪಲಕ್ಷ ದೂತರು ಆತನಿಗೆ ಸೇವೆ ಸಲ್ಲಿಸುತ್ತಿದ್ದರು. ಕೋಟ್ಯಾನುಕೋಟಿ ಕಿಂಕರರು ಆತನ ಮುಂದೆ ನಿಂತಿದ್ದರು. ನ್ಯಾಯಸಭೆಯವರು ತೀರ್ಪು ನೀಡಲು ಕುಳಿತುಕೊಂಡರು. ಪಟ್ಟಿ ಪುಸ್ತಕಗಳನ್ನು ತೆರೆಯಲಾಯಿತು. ನಾನು ನೋಡುತ್ತಾ ಇದ್ದೆ: ಆ ಕಿರು ಕೊಂಬು ಬಡಾಯಿಕೊಚ್ಚಿಕೊಂಡ ನಿಮಿತ್ತ ಆ ಕೊಂಬಿನ ಮೃಗವನ್ನು ಕೊಂದು ಅದರ ಹೆಣವನ್ನು ಉರಿಯುವ ಬೆಂಕಿಗೆ ಹಾಕಿ ನಾಶಮಾಡಿದರು. ಮಿಕ್ಕ ಮೃಗಗಳ ದೊರೆತನವನ್ನು ತೆಗೆದುಬಿಟ್ಟರು. ಆದರೆ ಕೆಲವು ಕಾಲದ ಮಟ್ಟಿಗೆ, ತಕ್ಕ ಸಮಯ ಬರುವ ತನಕ, ಅವುಗಳ ಜೀವಾವಧಿಯನ್ನು ಉಳಿಸಿದರು. ನಾನು ಕಂಡ ರಾತ್ರಿಯ ಕನಸಿನಲ್ಲಿ ನರಪುತ್ರನಂತಿರುವವನು ಆಕಾಶದ ಮೇಘಗಳೊಂದಿಗೆ ಬಂದು ಆ ಮಹಾವೃದ್ಧನನ್ನು ಸಮೀಪಿಸಿದನು. ಅವನನ್ನು ಆತನ ಸನ್ನಿಧಿಗೆ ತಂದರು. ಸಕಲ ರಾಷ್ಟ್ರ - ಕುಲ - ಭಾಷೆಗಳವರು ಅವನಿಗೆ ಸೇವೆ ಸಲ್ಲಿಸಲೆಂದು ಅವನಿಗೆ ದೊರೆತನ, ಘನತೆ, ರಾಜ್ಯತ್ವ ಇವುಗಳನ್ನು ಕೊಡಲಾಯಿತು. ಅವನ ಆಳ್ವಿಕೆಗೆ ಅಂತ್ಯವಿಲ್ಲ. ಅದು ಶಾಶ್ವತವಾದುದು, ಅವನ ರಾಜ್ಯ ಎಂದಿಗೂ ಅಳಿಯದು! 

ಅಜರ್ಯ: 1:53-54, 55-56, 57-59 
ಶ್ಲೋಕ: ಸರ್ವೇಶ್ವರನನು ಕೊಂಡಾಡಿ ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸಿ 

ಶುಭಸಂದೇಶ: ಲೂಕ 21:29-33 


ಯೇಸುಸ್ವಾಮಿ ಶಿಷ್ಯರಿಗೆ ಈ ಸಾಮತಿಯನ್ನು ಹೇಳಿದರು; "ಅಂಜೂರದ ಹಾಗೂ ಇತರ ಮರಗಳನ್ನು ಗಮನಿಸಿರಿ. ಅವುಗಳ ಎಲೆಗಳು ಚಿಗುರುತ್ತಲೇ ವಸಂತಕಾಲ ಆರಂಭಿಸಿತೆಂದು ನೀವೇ ಅರಿತುಕೊಳ್ಳುತ್ತೀರಿ. ಅಂತೆಯೇ ಇವೆಲ್ಲವೂ ಸಂಭವಿಸುವುದನ್ನು ನೋಡುವಾಗ ದೇವರ ಸಾಮ್ರಾಜ್ಯವು ಸಮೀಪಿಸಿತೆಂದು ತಿಳಿದುಕೊಳ್ಳಿರಿ. ಇವೆಲ್ಲ ಸಂಭವಿಸುವವರೆಗೆ ಈ ಪೀಳಿಗೆ ಗತಿಸಿ ಹೋಗದೆಂದು ಒತ್ತಿಹೇಳುತ್ತೇನೆ. ಭೂಮ್ಯಾಕಾಶಗಳು ಗತಿಸಿಹೋಗುತ್ತದೆ; ಆದರೆ ನನ ಮಾತುಗಳು ಶಾಶ್ವತವಾಗಿ ಉಳಿಯುತ್ತವೆ.

30.11.23

ಮೊದಲನೇ ವಾಚನ: ರೋಮನ್ನರಿಗೆ  10: 9-18

"ಯೇಸುಸ್ವಾಮಿಯೇ ಪ್ರಭು" ಎಂದು ನೀನು ಬಾಯಿಂದ ನಿವೇದಿಸಿಅವರನ್ನು ದೇವರು ಸಾವಿನಿಂದ ಪುನರುತ್ದಾನಗೊಳಿಸಿದ್ದಾರೆಂದು ಹೃದಯದಿಂದ ವಿಶ್ವಾಸಿಸಿದರೆ ಜೀವೋದ್ಧಾರವನ್ನು ಹೊಂದುತ್ತೀಯೆ. ಹೌದುಹೃದಯಪೂರ್ವಕವಾಗಿ ವಿಶ್ವಾಸಿಸುವವನು ದೇವರೊಡನೆ ಸತ್ಸಂಬಂದವನ್ನು ಪಡೆಯುತ್ತಾನೆಬಾಯಿಂದ ನಿವೇದಿಸುವವನು ಜೀವೋದ್ಧಾರ ಹೊಂದುತ್ತಾನೆ. ಏಕೆಂದರೆ, "ಅವರಲ್ಲಿ ವಿಶ್ವಾಸ ಇಡುವ ಯಾರಿಗೂ ಆಶಾಭಂಗವಾಗುವುದಿಲ್ಲ." ಎಂದು ಪವಿತ್ರಗ್ರಂಥದಲ್ಲೇ ಹೇಳಲಾಗಿದೆ. ಈ ವಿಷಯದಲ್ಲಿ ಯೆಹೂದ್ಯರುಯೆಹೂದ್ಯರಲ್ಲದವರು ಎಂಬ ಭೇದಭಾವವಿಲ್ಲಸರ್ವರಿಗೂ ಒಬ್ಬರೇ ಪ್ರಭು. ತಮ್ಮನ್ನು ಬೇಡಿಕೊಳ್ಳುವ ಎಲ್ಲರಿಗೂ ಅವರು ಧಾರಾಳವಾಗಿ ವರದಾನವನ್ನು ನೀಡುತ್ತಾರೆ. "ಪ್ರಭುವಿನ ನಾಮಸ್ಮರಣೆ ಮಾಡುವ ಪ್ರತಿಯೊಬ್ಬನೂ ಜೀವೋದ್ಧಾರವನ್ನು ಹೊಂದುತ್ತಾನೆ," ಎಂದು ಲಿಖಿತವಾಗಿದೆ. ಪ್ರಭುವಿನಲ್ಲಿ ವಿಶ್ವಾಸವಿಲ್ಲದಿದ್ದರೆ ಅವರ ನಾಮಸ್ಮರಣೆ ಮಾಡುವುದಾದರೂ ಹೇಗೆಅವರ ವಿಷಯವನ್ನು ಕುರಿತು ಕೇಳದಿದ್ದರೆ ಅವರನ್ನು ವಿಶ್ವಾಸಿಸುವುದಾದರೂ ಹೇಗೆಭೋಧಿಸುವವರು ಇಲ್ಲದಿದ್ದರೆ ಅವರ ವಿಷಯಗಳನ್ನು ಕುರಿತು ಕೇಳುವುದಾದರೂ ಹೇಗೆಭೋಧಿಸುವವರನ್ನು ಕಳುಹಿಸದೆ ಹೋದರೆಅವರು ಶುಭಸಂದೇಶವನ್ನು ಭೋಧಿಸುವುದಾದರೂ ಹೇಗೆ? "ಶುಭಸಂದೇಶವನ್ನು ತರುವವರ ಬರುವಿಕೆ ಎಷ್ಟೋ ಶುಭದಾಯಕ," ಎಂದು ಪವಿತ್ರ ಗ್ರಂಥದಲ್ಲೇ ಬರೆಯಲಾಗಿದೆ. ಆದರೂ ಈ ಶುಭಸಂದೇಶವನ್ನು ಎಲ್ಲರೂ ಅಃಗೀಕರಿಸಲಿಲ್ಲ. ಆದ್ದರಿಂದಲೇ ಯೆಶಾಯನು, "ಪ್ರಭುವೇನಾವು ಸಾರಿದ ಸಂದೇಶವನ್ನು ನಂಬಿದವರು ಯಾರು?"  ಎಂದು ಮೊರೆಯಿಟ್ಟಿದ್ದಾನೆ. ಇಂತಿರಲುಶುಭಸಂದೇಶವನ್ನು ಆಲಿಸುವುದರಿಂದ ವಿಶ್ವಾಸ ಮೂಡುತ್ತದೆ. ಶುಭಸಂದೇಶ ಕ್ರಿಸ್ತಯೇಸುವನ್ನು ಭೋಧಿಸುವುದರ ಮೂಲಕ ಪ್ರಕಟವಾಗುತ್ತದೆ. ಈಗ ನನ್ನದೊಂದು ಪ್ರಶ್ನೆ; "ಇಸ್ರಯೇಲರಿಗೆ ಶುಭಸಂದೇಶವನ್ನು ಕೇಳುವ ಸಂದರ್ಭ ಇರಲಿಲ್ಲವೇ?" ನಿಶ್ಚಯವಾಗಿ ಇತ್ತು. ಪವಿತ್ರ ಗ್ರಂಥದಲ್ಲಿ ಹೇಳಿರುವಂತೆ: "ಸಾರುವವರ ಧ್ವನಿ ಜಗದಲ್ಲೆಲ್ಲಾ ಹರಡಿತು ಅವರ ನುಡಿ ಭೂಮಿಯ ತುತ್ತತುದಿಯನ್ನು ಮುಟ್ಟಿತು,"

ಕೀರ್ತನೆ: 19:2-3, 4-5
ಶ್ಲೋಕ: ಅವುಗಳ ನುಡಿಮಾತು ವ್ಯಾಪಿಸಿದೆ ಜಗದಾದ್ಯಂತ.

ಆಕಾಶಮಂಡಲ ಸಾರುತಿದೆ ದೇವರ ಮಹಿಮೆಯನು|
ತಾರಮಂಡಲ ತೋರುತಿದೆ ದೇವರ ಕೈಕೃತಿಗಳನು||
ದಿನವು ಮರುದಿನಕೆ ಈ ಪ್ರಕಟನೆಯನು|
ರಾತ್ರಿ ಮರುರಾತ್ರಿಗೆ ನೀಡುತಿದೆ ಈ ಪ್ರಚಾರವನು||

ಅವುಗಳಿಗೆ ಮಾತಿಲ್ಲ, ಅವುಗಳಿಗೆ ಶಬ್ದವಿಲ್ಲ|
ಅವುಗಳ ಸ್ವರವಂತೂ ಕೇಳಿ ಬರುವುದಿಲ್ಲ||
ಆದರೂ ಅವುಗಳ ಧ್ವನಿರೇಖೆ ಹರಡಿದೆ ಬುವಿಯಾದ್ಯಂತ|
ಅವುಗಳ ನುಡಿಮಾತು ವ್ಯಾಪಿಸಿದೆ ಜಗದಾದ್ಯಂತ||

ಘೋಷಣೆ: ಮತ್ತಾಯ 4:19

ಅಲ್ಲೆಲೂಯ, ಅಲ್ಲೆಲೂಯ!
ನನ್ನನ್ನು ಹಿಂಬಾಲಿಸಿ ಬನ್ನಿ; ನಿಮ್ಮನ್ನು ಮನುಷ್ಯರನೇ ಹಿಡಿಯುವವರನ್ನಾಗಿ ಮಾಡುವೆನು.
ಅಲ್ಲೆಲೂಯ!


ಶುಭಸಂದೇಶ: ಮತ್ತಾಯ  4:18-22

ಯೇಸುಸ್ವಾಮಿ ಗಲಿಲೇಯ ಸರೋವರದ ತೀರದಲ್ಲಿ ನಡೆದು ಹೋಗುತ್ತಿದ್ದರು ಆಗ ಇಬ್ಬರು ಸಹೋದರರನ್ನು ಕಂಡರು. ಇವರೇ 'ಪೇತ್ರಎನಿಸಿಕೊಂಡ ಸಿಮೋನ ಮತ್ತು ಅವನ ಸಹೋದರ ಆಂದ್ರೆಯ. ಬೆಸ್ತರಾದ ಇವರು ಸರೋವರದಲ್ಲಿ ಬಲೆ ಬೀಸುತ್ತಾ ಇದ್ದರು. "ನನ್ನನ್ನು ಹಿಂಬಾಲಿಸಿ ಬನ್ನಿ. ನಿಮ್ಮನ್ನು ಮನುಷ್ಯರನ್ನೇ ಹಿಡಿಯುವವರನ್ನಾಗಿ ಮಾಡುವೆನು," ಎಂದು ಹೇಳಿ ಯೇಸು ಅವರನ್ನು ಕರೆದರು. ತಕ್ಷಣವೇಅವರು ತಮ್ಮ ಬಲೆಗಳನ್ನು ಬಿಟ್ಟು ಯೇಸುವನ್ನು ಹಿಂಬಾಲಿಸಿದರು. ಅಲ್ಲಿಂದ ಮುಂದಕ್ಕೆ ಹೋಗುತ್ತಿದ್ದಾಗ ಯೇಸು ಜೆಬೆದಾಯನ ಮಕ್ಕಳಾದ ಯಕೋಬ ಮತ್ತು ಯೊವಾನ್ನ ಎಂಬ ಇನ್ನಿಬ್ಬರು ಸಹೋದರರನ್ನು ಕಂಡರು. ಇವರು ತಮ್ಮ ತಂದೆ ಜೆಬೆದಾಯನೊಡನೆ ದೋಣಿಯಲ್ಲಿ ಬಲೆಗಳನ್ನು ಸರಿಪಡಿಸುತ್ತಿದ್ದರು. ಯೇಸು ಇವರನ್ನೂ ಕರೆದರು. ಕೂಡಲೇ ಅವರು ದೋಣಿಯನ್ನೂ ತಮ್ಮ ತಂದೆಯನ್ನೂ ಬಿಟ್ಟು ಯೇಸುವನ್ನು ಹಿಂಬಾಲಿಸಿದರು.

29.11.23 - "ಶುಭ ಸಂದೇಶಕ್ಕೆ ಸಾಕ್ಷಿ ಕೊಡಲು ಇದು ನಿಮಗೆ ಸದವಕಾಶವಾಗಿರುತ್ತದೆ"

ಮೊದಲನೇ ವಾಚನ: ದಾನಿಯೇಲ 5:1-6, 13-14, , 16-17, 23-28 


ಬೇಲ್ಯಚ್ಚರ ಎಂಬ ಅರಸನು ತನ್ನ ರಾಜ್ಯದ ಪ್ರಮುಖರಲ್ಲಿ ಸಾವಿರ ಮಂದಿಯನ್ನು ಸೇರಿಸಿ ಒಂದು ಔತಣವನ್ನು ಏರ್ಪಡಿಸಿದ. ಆ ಸಾವಿರ ಜನರ ಮುಂದೆ ಅವನೂ ದ್ರಾಕ್ಷಾರಸವನ್ನು ಕುಡಿದ. ಹಾಗೆ ಕುಡಿದು ಕೊಂಡಿರುವಾಗ ತಾನೂ ತನ್ನ ಪ್ರಮುಖ ಪತ್ನಿಯರೂ ಉಪಪತ್ನಿಯರೂ ಕುಡಿಯುವುದಕ್ಕಾಗಿ ತನ್ನ ತಂದೆ ನೆಬೂಕದ್ನೆಚ್ಚರನು ಜೆರುಸಲೇಮಿನ ದೇವಾಲಯದ ಗರ್ಭಗುಡಿಯಿಂದ ಸೂರೆಯಾಗಿ ತಂದ ಬಂಗಾರದ ಪೂಜಾ ಪಾತ್ರೆಗಳನ್ನು ತರಿಸಿದ. ರಾಜನೂ ಅವನ ಪ್ರಮುಖರೂ ಪತ್ನಿ - ಉಪಪತ್ನಿಯರೂ ಅವುಗಳಲ್ಲಿ ಕುಡಿದರು. ಕುಡಿದುಕೊಂಡೇ ಬಂಗಾರ, ಬೆಳ್ಳಿ, ಕಂಚು, ಕಬ್ಬಿಣ, ಮರ ಮತ್ತು ಕಲ್ಲಿನ ತಮ್ಮ ದೇವರುಗಳನ್ನು ಆರಾಧಿಸಿದರು. ಅದೇ ಸಮಯದಲ್ಲಿ ಒಬ್ಬ ಮನುಷ್ಯನ ಕೈಬೆರಳುಗಳು ಕಾಣಿಸಿಕೊಂಡು ದೀಪಸ್ತಂಭದ ಎದುರಿಗೆ ಅರಮನೆಯ ಸುಣ್ಣದ ಗೋಡೆಯ ಮೇಲೆ ಬರೆಯಲು ತೊಡಗಿದವು. ಬರೆಯುತ್ತಿದ್ದ ಆ ಕೈಯನ್ನು ರಾಜನು ನೋಡಿದನು. ಅದನ್ನು ಕಂಡದ್ದೇ ಅವನ ಮುಖ ಕಳೆಗುಂದಿತು, ಮನಸು ಕಳವಳಗೊಂಡಿತು, ಸೊಂಟದ ಕೀಲು ಸಡಿಲಗೊಂಡಿತು, ಮೊಣಕಾಲುಗಳು ಒಂದಕ್ಕೊಂದು ಬಡಿದುಕೊಂಡವು. ಅಂತೆಯೇ, ದಾನಿಯೇಲನನ್ನು ರಾಜ ಸನ್ನಿಧಿಗೆ ಬರಮಾಡಲಾಯಿತು. ರಾಜನು ಅವನಿಗೆ: "ರಾಜನಾದ ನನ್ನ ತಂದೆ ಜುದೇಯದಿಂದ ಖೈದಿಯಾಗಿ ತಂದು ಸೆರೆಮಾಡಿದ ಯೆಹೂದ್ಯರಲ್ಲಿ ದಾನಿಯೇಲ್ ಎಂಬುವನು ನೀನೋ? ದೇವರ ಆತ್ಮ ನಿನ್ನಲ್ಲಿ ನೆಲೆಸಿದೆಯೆಂದು ನಾನು ಕೇಳಿದ್ದೇನೆ. ನಿನಗೆ ಪರಮಜ್ಞಾನ, ವಿವೇಕ, ಬುದ್ಧಿ, ತೇಜಸ್ಸು ಇದೆಯೆಂದು ನನಗೆ ತಿಳಿದುಬಂದಿದೆ. ನೀನು ಗೂಡಾರ್ಥಗಳನ್ನು ವಿವರಿಸಬಲ್ಲವನೂ ಎಂಬ ಸಮಾಚಾರ ನನಗೆ ಮುಟ್ಟಿದೆ. ಈ ಬರಹವನ್ನು ಓದಿ, ಇದರ ಅಭಿಪ್ರಾಯವನ್ನು ನನಗೆ ತಿಳಿಸಿದೆಯಾದರೆ ನಿನಗೆ ಕೆನ್ನೀಲಿಯ ರಾಜವಸ್ತ್ರವನ್ನು ಹೊದಿಸಿ. ಕೊರಳಿಗೆ ಚಿನ್ನದ ಹಾರವನ್ನು ಹಾಕಿಸಿ, ನಿನ್ನನ್ನು ರಾಜ್ಯದ ಮೂವರು  ಮುಖ್ಯಾಧಿಕಾರಿಗಳಲ್ಲಿ ಒಬ್ಬನನ್ನಾಗಿ ನೇಮಿಸುವೆನು," ಎಂದು ಹೇಳಿದನು. ಆಗ ದಾನಿಯೇಲನು ರಾಜನಿಗೆ, "ಅರಸರೇ, ನಿಮ್ಮ ದಾನಗಳು ನಿಮಗೇ ಇರಲಿ. ನಿಮ್ಮ ಬಹುಮಾನಗಳು ಮತ್ತೊಬ್ಬನಿಗೆ ದೊರಕಲಿ. ಆದರೆ ನಾನು ಈ ಬರಹವನ್ನು ಓದಿ ಅದರ ಅರ್ಥವನ್ನು ತಮಗೆ ತಿಳಿಸುವೆನು. ಪರಲೋಕದ ಒಡೆಯನಿಗೆ ವಿರುದ್ಧವಾಗಿ ನಿಮ್ಮನ್ನೆ ಹೆಚ್ಚಿಸಿಕೊಂಡಿದ್ದೀರಿ. ದೇವಾಲಯದಿಂದ ಪವಿತ್ರ ಪೂಜಾಪಾತ್ರೆಗಳನ್ನು ಇಲ್ಲಿಗೆ ತಂದಿದ್ದೀರಿ. ನೀವೂ ನಿಮ್ಮ ರಾಜ್ಯದ ಪ್ರಮುಖರೂ ಪತ್ನಿ - ಉಪಪತ್ನಿಯರೂ ಅವುಗಳಲ್ಲಿ ದ್ರಾಕ್ಷಾರಸವನ್ನೂ ಕುಡಿದಿದ್ದೀರಿ. ಬುದ್ದಿ, ಕಣ್ಣು, ಕಿವಿ ಇಲ್ಲದೆ ಬೆಳ್ಳಿಬಂಗಾರಗಳ, ಕಂಚು ಕಬ್ಬಿಣಗಳ, ಮರ ಕಲ್ಲುಗಳ ದೇವರುಗಳನ್ನು ಆರಾಧಿಸಿದ್ದೀರಿ. ನಿಮ್ಮ ಪ್ರಾಣ ಯಾರ ಕೈಯಲ್ಲಿದೆಯೋ ನಿಮ್ಮ ಸ್ಥಿತಿಗತಿಗಳು ಯಾರ ಅಧೀನದಲ್ಲಿದೆಯೋ ಆ ದೇವರನ್ನು ಮಾತ್ರ ಗೌರವಿಸದೆ ಇದ್ದೀರಿ. ಹೀಗಿರಲು, ಆ ಕೈಬೆರಳು ದೇವರ ಸನ್ನಿಧಿಯಿಂದ ಬಂದು ಬರೆದಿದೆ. ಬರೆದಿರುವ ಮಾತುಗಳು ಇವು: "ಮೆನೇ, ಮೆನೇ, ತೆಕೇಲ್, ಉಫರ್ಸಿನ್." ಇದರ ಅರ್ಥ ಹೀಗಿದೆ: "ಮೆನೇ" ಎಂದರೆ, ದೇವರು ನಿನ್ನ ಆಳ್ವಿಕೆಯ ಕಾಲಾವಧಿಯನ್ನು ಲೆಕ್ಕಿಸಿ ಕೊನೆಗಾಣಿಸಿದ್ದಾರೆ. "ತೆಕೇಲ್" ಎಂದರೆ ನಿನ್ನನ್ನು ತಕ್ಕಡಿಯಲ್ಲಿ ಹಾಕಿ ನೋಡಲು ನಿನ್ನ ತೂಕ ಕಡಿಮೆಯಾಗಿ ಕಂಡುಬಂದಿದೆ. "ಉಫರ್ಸಿನ್" ಎಂದರೆ ನಿನ್ನ ರಾಜ್ಯವನ್ನು ವಿಭಾಗಮಾಡಿ ಮೇದ್ಯರಿಗೂ ಪರ್ಷಿಯದವರಿಗೂ ಕೊಡಲಾಗಿದೆ," ಎಂದು ಅರಿಕೆಮಾಡಿದನು. 
  
ಅಜರ್ಯ: 1:40-45 
ಶ್ಲೋಕ: ಸರ್ವೇಶ್ವರನನ್ನು ಕೊಂಡಾಡಿ, ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸಿರಿ 

ಶುಭಸಂದೇಶ: ಲೂಕ 21: 12-19


ಯೇಸು ತಮ್ಮ ಶಿಷ್ಯರಿಗೆ ಹೀಗೆಂದರು: "ಇದೆಲ್ಲಾ ಸಂಭವಿಸುವುದಕ್ಕೆ ಮುಂಚೆ ನಿಮ್ಮನ್ನು ಬಂಧಿಸಿ ಹಿಂಸೆಗೊಳಪಡಿಸುವರು. ಪ್ರಾರ್ಥನಾ ಮಂದಿರಗಳಿಗೂ ಕಾರಾಗೃಹಗಳಿಗೂ ಎಳೆದೊಪ್ಪಿಸುವರು; ನನ್ನ ನಾಮದ ನಿಮಿತ್ತ ನಿಮ್ಮನ್ನು ಅರಸರ ಹಾಗೂ ಅಧಿಪತಿಗಳ ಮುಂದಕ್ಕೆ ಎಳೆಯುವರು. ಶುಭಸಂದೇಶಕ್ಕೆ ಸಾಕ್ಷಿಕೊಡಲು ಇದು ನಿಮಗೆ  ಸದವಕಾಶವಾಗಿರುತ್ತದೆ. ಆಗ ವಾದಿಸುವುದು ಹೇಗೆಂದು ನೀವು ಮುಂಚಿತವಾಗಿ ಚಿಂತಿಸಬೇಕಾಗಿಲ್ಲ; ಇದು ನಿಮಗೆ ಮನದಟ್ಟಾಗಿರಲಿ. ಏಕೆಂದರೆ ನಿಮ್ಮ ವಿರೋಧಿಗಳಾರೂ ಪ್ರತಿಭಟಿಸಲು ಅಥವಾ ವಿರೋಧಿಸಲು ಆಗದಂಥ ವಾಕ್ಚಾತುರ್ಯವನ್ನೂ ಜ್ಞಾನಶಕ್ತಿಯನ್ನೂ ನಿಮಗೆ ಕೊಡುವೆನು. ನಿಮ್ಮ ತಂದೆತಾಯಿಗಳೇ, ಒಡಹುಟ್ಟಿದವರೇ, ಬಂಧುಮಿತ್ರರೇ, ನಿಮ್ಮನ್ನು ಪರಾಧೀನ ಮಾಡುವರು; ಮಾತ್ರವಲ್ಲ, ನಿಮ್ಮಲ್ಲಿ ಕೆಲವರನ್ನು ಕೊಂದು ಹಾಕಿಸುವರು. ನೀವು ನನ್ನವರು ಆದುದರಿಃದಲೇ ಎಲ್ಲರೂ ನಿಮ್ಮನ್ನು ದ್ವೇಷಿಸುವರು ಆದರೂ ನಿಮ್ಮ ತಲೆಕೂದಲೊಂದೂ ನಾಶವಾಗುವುದಿಲ್ಲ. ಸೈರಣೆಯಿಂದಿರಿ, ಸಂರಕ್ಷಣೆಯನ್ನು ಪಡೆಯುವಿರಿ."

28.11.23 - "ಇಲ್ಲಿ ಕಲ್ಲಿನ ಮೇಲೆ ಕಲ್ಲು ಉಳಿಯದು; ಎಲ್ಲವನ್ನೂ ಕೆಡವಿಹಾಕುವ ಕಾಲವೊಂದು ಬರುವುದು,"

ಮೊದಲನೇ ವಾಚನ: ದಾನಿಯೇಲ 2:31-45 

ರಾಜರೇ ಕೇಳಿ, ತಾವು ಕಂಡದ್ದು ಒಂದು ಅದ್ಭುತ ಪ್ರತಿಮೆ. ಥಳಥಳನೆ ಹೊಳೆಯುವ ಆ ದೊಡ್ಡ ಪ್ರತಿಮೆ ನಿಮ್ಮೆದುರಿಗೆ ನಿಂತಿತ್ತು. ಭಯಂಕರವಾಗಿ ಕಾಣಿಸುತ್ತಿತ್ತು. ಆ ಪ್ರತಿಮೆಯ ತಲೆ ಅಪ್ಪಟ ಬಂಗಾರದ್ದು. ಎದೆ ತೊಳುಗಳು ಬೆಳ್ಳಿಯವು. ಹೊಟ್ಟೆಸೊಂಟಗಳು ಕಂಚಿನವು. ಕಾಲುಗಳು ಕಬ್ಬಿಣದವು. ಪಾದಗಳು ಕಬ್ಬಿಣ ಮತ್ತು ಮಣ್ಣಿನಿಂದ ಮಾಡಿದವು. ನೀವು ನೋಡುತ್ತಿದ್ದ ಹಾಗೆ ಬೆಟ್ಟದಿಂದ ಒಂದು ಗುಂಡು ಬಂಡೆ, ಯಾವ ಕೈಯೂ ಮುಟ್ಟದೆಯೇ, ಸಿಡಿದುಬಂದು ಆ ಪ್ರತಿಮೆಯ ಕಬ್ಬಿಣ ಮಣ್ಣಿನಿಂದಾದ ಆ ಪಾದಗಳಿಗೆ ಬಡಿದು ಚೂರುಚೂರು ಮಾಡಿಬಿಟ್ಟಿತು. ಆಗ ಕಬ್ಬಿಣ - ಮಣ್ಣು - ಕಂಚು - ಬೆಳ್ಳಿ - ಬಂಗಾರ ಇವುಗಳೆಲ್ಲವೂ ಪುಡಿಪುಡಿಯಾದವು: ಸುಗ್ಗಿಯ ಕಣಗಳ ಹೊಟ್ಟಿನಂತಾದವು. ಗಾಳಿ ಅವುಗಳನ್ನು ತೂರಿಕೊಂಡು ಹೋಯಿತು. ಅವುಗಳಿಗೆ ನೆಲೆಯೇ ಇಲ್ಲವಾಯಿತು. ಪ್ರತಿಮೆಗೆ ಬಡಿದ ಆ ಬಂಡೆ ಮಹಾ ಪರ್ವತವಾಗಿ ಭೂಲೋಕದಲ್ಲೆಲ್ಲಾ ತುಂಬಿಕೊಂಡಿತು. ಅರಸರೇ, ಇದೇ ನೀವು ಕಂಡ ಕನಸು. ಇದರ ಅರ್ಥವನ್ನೂ ತಮ್ಮ  ಸನ್ನಿಧಿಯಲ್ಲಿ ಅರಿಕೆ ಮಾಡುತ್ತೇವೆ. ನೀವು ರಾಜಾಧಿರಾಜರು, ಪರಲೋಕ ದೇವರು ನಿಮಗೆ ರಾಜ್ಯಬಲ, ಪರಾಕ್ರಮ ಹಾಗು ವೈಭವಗಳನ್ನು ದಯಪಾಲಿಸಿದ್ದಾರೆ. ನರಮಾನವರು ವಾಸಿಸುವ ಸಕಲ  ಪ್ರಾಂತ್ಯಗಳಲ್ಲಿ ಆಕಾಶಪಕ್ಷಿಗಳನ್ನೂ ಭೂಜಂತುಗಳನ್ನೂ ನಿಮ್ಮ ಕೈಗೆ ಒಪ್ಪಿಸಿದ್ದಾರೆ. ನಿಮ್ಮ ಕಾಲವಾದ ಮೇಲೆ ನಿಮಗಿಂತ ಬೀಳಾದ ಮತ್ತೊಂದು ರಾಜ್ಯ ತಲೆಯೆತ್ತಿಕೊಳ್ಳುವುದು. ಆನಂತರ ಬೇರೊಂದು ರಾಜ್ಯ ಕಂಚಿನದಾಗಿ ಕಾಣಿಸಿಕೊಂಡು ಭೂಮಂಡಲವನ್ನೆಲ್ಲ ಆಳುವುದು‌. ನಾಲ್ಕನೆಯ ರಾಜ್ಯ ಕಬ್ಬಿಣದಷ್ಟು ಗಟ್ಟಿಗೆ ಕಬ್ಬಿಣದ ಎಲ್ಲ ವಸ್ತುಗಳನ್ನು ಚೂರುಚೂರಾಗಿ ಒಡೆದುಹಾಕುತ್ತದೆ. ಅಂತೆಯೇ ಅದು ಎಲ್ಲರನ್ನು ಚೂರು ಚೂರಾಗಿಸಿ ಧ್ವಂಸ ಮಾಡುವುದು.ಪಾದಗಳಲ್ಲಿ ಹಾಗು ಪಾದಬೆರಳುಗಳಲ್ಲಿ ಒಂದು ಅಂಶ ಕಬ್ಬಿಣ ಮತ್ತೊಂದು ಅಂಶ ಮಣ್ಣು ಆಗಿದ್ದನ್ನು ನೀವು ನೋಡಿದಿರಿ. ಅಂತೆಯೇ ಆ ರಾಜ್ಯವು ಭಿನ್ನಭಿನ್ನವಾಗಿರುವುದು. ಜೇಡಿಮಣ್ಣಿನೊಂದಿಗೆ ಕಬ್ಬಿಣ ಮಿಶ್ರವಾಗಿದ್ದನ್ನು ನೀವು ನೋಡಿದಂತೆ ಆ ರಾಜ್ಯದಲ್ಲಿ ಕಬ್ಬಿಣದ ಬಲ ಸೇರಿರುವುದು. ಕಾಲ್ಬೆರಳು ಒಂದಂಶ ಮಣ್ಣು ಆಗಿದ್ದ ಹಾಗೆ ಆ ರಾಜ್ಯದ ಒಂದಂಶ ಗಟ್ಟಿ ಇನ್ನೊಂದು ಅಂಶ ಬೆಂಡು. ಕಬ್ಬಿಣ ಜೇಡಿಮಣ್ಣಿನೊಂದಿಗೆ ಬೆರೆತಿರುವುದನ್ನು ನೀವು ನೋಡಿದ ಮೇರೆಗೆ ಆ ರಾಜ್ಯಾಂಶಗಳು ಮದುವೆ ಸಂಬಂಧದಿಂದ ಬೆರೆತುಕೊಳ್ಳುವುವು. ಆದರೆ ಕಬ್ಬಿಣ ಮಣ್ಣಿನೊಂದಿಗೆ ಹೇಗೆ ಕಲೆಯುವುದಿಲ್ಲವೋ ಹಾಗೆ ಅವು ಒಂದಕ್ಕೊಂದು ಅಂಟಿಕೊಳ್ಳುವುದಿಲ್ಲ. ಆ ರಾಜರ ಕಾಲದಲ್ಲಿ ಪರಲೋಕ ದೇವರು ಒಂದು ಸಾಮ್ರಾಜ್ಯವನ್ನು ಸ್ಥಾಪಿಸುವರು. ಅದು ಎಂದಿಗೂ ಅಳಿಯದು. ಅದರ ಪ್ರಾಬಲ್ಯವು ಬೇರೆ ರಾಷ್ಪ್ರಕ್ಕೆ ಜಾರಿಹೋಗದು. ರಾಷ್ಪ್ರಗಳನ್ನೆಲ್ಲಾ ಭಂಗಪಡಿಸಿ, ನಿರ್ನಾಮಮಾಡಿ ಆ ಸಾಮ್ರಾಜ್ಯ ಶಾಶ್ವತವಾಗಿ ನಿಲ್ಲುವುದು. ಬೆಟ್ಟದಿಂದ ಒಂದು ಗುಂಡುಬಂಡೆ, ಯಾವ ಕೈಯೂ ಮುಟ್ಟದೆಯೇ, ಸಿಡಿದುಬಂದು ಕಬ್ಬಿಣ - ಕಂಚು - ಮಣ್ಣು - ಬೆಳ್ಳಿ - ಬಂಗಾರ ಇವುಗಳನ್ನು ಚೂರುಚೂರು ಮಾಡಿದ್ದನ್ನು ನೀವು ನೋಡಿದಿರಿ. ಇದರಿಂದ ಪರಲೋಕ ದೇವರು ಮುಂದೆ ನಡೆಯಲಿರುವ ವಿಷಯಗಳನ್ನು ರಾಜರಾದ ತಮಗೆ ತಿಳಿಯಪಡಿಸಿದ್ದಾರೆ. ಆ ಕನಸು ನಿಜವಾದುದು ಅದರ ಅರ್ಥವೂ ನಂಬತಕ್ಕದ್ದು," ಎಂದು ವಿವರಿಸಿದನು. 

ಅಜರ್ಯ: 1:35-39 
ಶ್ಲೋಕ: ಸರ್ವೇಶ್ವರನನ್ನು ಕೊಂಡಾಡಿರಿ, ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸಿರಿ

ಸರ್ವೇಶ್ವರನ ಸಕಲ ಸೃಷ್ಟಿಗಳೇ, ಸರ್ವೇಶ್ವರನನ್ನು ಕೊಂಡಾಡಿ|
ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸಿ||
ದೇವರ ದಿವ್ಯದೂತರೇ, ಸರ್ವೇಶ್ವರನನ್ನು ಕೊಂಡಾಡಿ|
ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸಿ||

ಆಕಾಶಗಳೇ, ಸರ್ವೇಶ್ವರನನ್ನು ಕೊಂಡಾಡಿ|
ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸಿ||
ಆಕಾಶದ ಮೇಲಿರುವ ಸಕಲ ಜಲರಾಶಿಗಳೇ, ಸರ್ವೇಶ್ವರನನ್ನು ಕೊಂಡಾಡಿ|
ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸಿರಿ||

ಸರ್ವೇಶ್ವರನ ಸಕಲ ಶಕ್ತಿಗಳೇ ಸರ್ವೇಶ್ವರನನ್ನು ಕೊಂಡಾಡಿ|
ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸಿ||


ಶುಭಸಂದೇಶ: ಲೂಕ 21:5-11 


"ಈ ಮಹಾದೇವಾಲಯವು ಅಂದವಾದ ಕಲ್ಲುಗಳಿಂದಲೂ ಅಮೂಲ್ಯವಾದ ಕೊಡುಗೆಗಳಿಂದಲೂ ಎಷ್ಟು ಅಲಂಕೃತವಾಗಿದೆ!" ಎಂದು ಕೆಲವರು ಮಾತನಾಡುತ್ತಿದ್ದರು. ಆಗ ಯೇಸು, "ಇವುಗಳನ್ನು ನೀವು ನೋಡುತ್ತಿದ್ದೀರಲ್ಲವೆ? ಇಲ್ಲಿ ಕಲ್ಲಿನ ಮೇಲೆ ಕಲ್ಲು ಉಳಿಯದು; ಎಲ್ಲವನ್ನೂ ಕೆಡವಿಹಾಕುವ ಕಾಲವೊಂದು ಬರುವುದು," ಎಂದರು. "ಗುರುವೇ, ಇದು ಸಂಭವಿಸುವುದು ಯಾವಾಗ? ಇದೀಗಲೆ ಸಂಭವಿಸಲಿದೆ ಎಂದು ತಿಳಿಸುವ ಪೂರ್ವಸೂಚನೆ ಯಾವುದು?" ಎಂದು ಕೆಲವರು ಕೇಳಿದರು. ಅದಕ್ಕೆ ಯೇಸುಸ್ವಾಮಿ, "ನೀವು ಮೋಸಹೋಗದಂತೆ ಜಾಗರೂಕರಾಗಿರಿ. ಅನೇಕರು "ನಾನೇ ಆತ, ನಾನೇ ಆತ," ಎನ್ನುತ್ತಾ ನನ್ನ ಹೆಸರನ್ನೇ ಇಟ್ಟುಕೊಂಡು ಬಂದು "ಕಾಲವು ಸಮೀಪಿಸಿಬಿಟ್ಟಿತು," ಎಂದು ಹೇಳುತ್ತಾರೆ. ಅವರನ್ನು ಹಿಂಬಾಲಿಸಬೇಡಿ. ಸಮರ ಸಂಕಲಹಗಳ ಸುದ್ದಿ ಬಂದಾಗ ದಿಗಿಲುಗೊಳ್ಳಬೇಡಿ; ಇವೆಲ್ಲವೂ ಮೊದಲು ಸಂಭವಿಸಲೇಬೇಕು. ಆದರೂ ಆಂತ್ಯವು ಕೂಡಲೇ ಬರುವುದಿಲ್ಲ," ಎಂದರು. ಅದೂ ಅಲ್ಲದೆ ಯೇಸು ಇಂತೆಂದರು: "ಜನಾಂಗಕ್ಕೆ ವಿರುದ್ಧವಾಗಿ ಜನಾಂಗ, ರಾಷ್ಟ್ರಕ್ಕೆ ವಿರುದ್ಧವಾಗಿ ರಾಷ್ಟ್ರ ಯುದ್ಧಕಿಳಿಯುವುವು; ಭೀಕರ ಭೂಕಂಪಗಳಾಗುವುವು; ಕ್ಷಾಮಡಾಮರಗಳು ತಲೆದೋರುವುವು; ಭಯಂಕರ ಘಟನೆಗಳೂ ಬಾಹ್ಯಾಕಾಶದಲ್ಲಿ ಅಪೂರ್ವ ಸೂಚನೆಗಳೂ ಕಾಣಿಸಿಕೊಳ್ಳುವುವು.

27.11.23 - "ತನ್ನ ಕಡುಬಡತನದಲ್ಲೂ ತನಗಿದ್ದ ಜೀವನಾಧಾರವನ್ನೆಲ್ಲಾ ಕೊಟ್ಟು ಬಿಟ್ಟಳು"

ಮೊದಲನೇ ವಾಚನ: ದಾನಿಯೇಲ  1:1-6, 8-20 


ಜುದೇಯದ ಅರಸ ಯೆಹೋಯಾಕೀಮನ ಆಳ್ವಿಕೆಯ ಮೂರನೆಯ ವರ್ಷದಲ್ಲಿ ಬಾಬಿಲೋನಿನ ರಾಜ ನೆಬೂಕದ್ನೆಚ್ಚರನು ಜೆರುಸಲೇಮಿಗೆ ಬಂದು ಮುತ್ತಿಗೆ ಹಾಕಿದನು.  ಸರ್ವೇಶ್ವರಸ್ವಾಮಿ ಜುದೇಯದ ಅರಸ ಯೆಹೋಯಾಕೀಮನನ್ನು ಅವನ ಕೈವಶವಾಗುವಂತೆ ಮಾಡಿದರು. ಅಃತೆಯೇ ದೇವಾಲಯದ ಆನೇಕ ಪೂಜಾಪಾತ್ರೆಗಳು ಅವನ ಕೈವಶವಾದವು. ನೆಬೂಕದ್ನೆಚ್ಚರನು ಅವುಗಳನ್ನು ಶಿನಾರ್ ದೇಶಕ್ಕೆ ಸಾಗಿಸಿ, ತನ್ನ ದೇವರ ಮಂದಿರಕ್ಕೆ ತಂದು, ಆ ದೇವರ ಭಂಡಾರಕ್ಕೆ ಸೇರಿಸಿಕೊಂಡನು. ಆನಂತರ ಆ ರಾಜನು ತನ್ನ ಕಂಚುಕಿಯರಲ್ಲಿ ಮುಖ್ಯಸ್ಥನಾದ ಅಶ್ಪೇನಜನಿಗೆ, "ನೀನು ಇಸ್ರಯೇಲರಲ್ಲಿ, ಅಂದರೆ ರಾಜವಂಶೀಯರಲ್ಲಿ ಮತ್ತು ಪ್ರಧಾನರಲ್ಲಿ ಕೆಲವು ಯುವಕರನ್ನು ಇಲ್ಲಿಗೆ ಕರೆದು ಬಾ. ಅವರು ಅಂಗದೋಷವಿಲ್ಲದವರಾಗಿರಬೇಕು. ಸುಂದರರು, ಸಮಸ್ತ ಶಾಸ್ತ್ರಜ್ಞರು, ಪಂಡಿತರು, ವಿದ್ಯಾನಿಪುಣರು, ರಾಜಾಲಯದಲ್ಲಿ ಸನ್ನಿಧಿಸೇವೆ ಮಾಡಲು ಸಮರ್ಥರೂ ಆಗಿರಬೇಕು. ಅವರಿಗೆ ಬಾಬಿಲೋನ್ ಪಂಡಿತರ ಭಾಷೆಗಳನ್ನೂ ಶಾಸ್ತ್ರಗಳನ್ನೂ ಕಲಿಸಬೇಕು. " ಎಂದು ಅಪ್ಪಣೆಕೊಟ್ಟನು. ಇದಲ್ಲದೆ, "ಇನ್ನುಮುಂದಕ್ಕೆ ಅವರು ಸನ್ನಿಧಿಸೇವಕರಾಗುವಂತೆ, ನನ್ನ ಭೋಜನ  ಪದಾರ್ಥಗಳನ್ನು ಹಾಗೂ ನಾನು ಕುಡಿಯುವ ದ್ರಾಕ್ಷಾರಸವನ್ನು ಅವರಿಗೆ ಪ್ರತಿದಿನ ಬಡಿಸುವ ಏರ್ಪಾಡುಮಾಡಿ ಅವರನ್ನು ಮೂರುವರ್ಷ ಪೋಷಿಸಬೇಕು" ಎಂದು ಆಜ್ಞಾಪಿಸಿದನು. ಹೀಗೆ ಆರಿಸಿಕೊಂಡ ಯುವಕರಲ್ಲಿ ದಾನಿಯೇಲನು, ಹನನ್ಯನು, ಮಿಶಾಯೇಲನು, ಅಜರ್ಯನು ಎಂಬ ಯೆಹೂದ್ಯರು ಸೇರಿದ್ದರು. ಆದರೆ ದಾನಿಯೇಲನು  ತಾನು ರಾಜನ ಭೋಜನ ಪದಾರ್ಥಗಳನ್ನು ತಿಂದು ಹಾಗೂ ರಾಜನು ಕುಡಿಯುವ ದ್ರಾಕ್ಷಾರಸವನ್ನು ಕುಡಿದು ತನ್ನನ್ನೇ ಅಶುದ್ಧ ಮಾಡಿಕೊಳ್ಳಬಾರದೆಂದು ನಿಶ್ಚಯಿಸಿಕೊಂಡನು. ಕಂಚುಕಿಯರ ನಾಯಕನಿಗೆ, "ಕ್ಷಮಿಸು, ನಾನು ಅಶುದ್ಧನಾಗಲಾರೆ," ಎಂದು  ವಿನಂತಿಸಿದನು.  ಕಂಚುಕಿಯರ ನಾಯಕನು ದಾನಿಯೇಲನ ಮೇಲೆ ಕನಿಕರ ಮತ್ತು ದಯೆ ತೋರುವಂತೆ ದೇವರು ಅನುಗ್ರಹಿಸಿದರು. ಆದುದರಿಂದ ಆ ನಾಯಕನು ದಾನಿಯೇಲನಿಗೆ, "ನಿಮಗೆ ಅನ್ನಪಾನಗಳನ್ನು ಏರ್ಪಡಿಸಿದ ನನ್ನೊಡೆಯನಾದ ರಾಜನು ನಿಮ್ಮಂತೆ ಆಯ್ಕೆಯಾದ ಯುವಕರ ಮುಖಕಿಂತ ನಿಮ್ಮ ಮುಖ ಬಾಡಿರುವುದನ್ನು ನೋಡಿ ನನ್ನ ತಲೆ ತಗ್ಗಿಸಬಹುದೆಂಬ  ಭಯ ನನಗಿದೆ. ಇದಕ್ಕೆ ನೀವು ಕಾರಣವಾಗಬಹುದಲ್ಲವೆ?" ಎಂದು ಹೇಳಿದನು. ದಾನಿಯೇಲನು ತನ್ನನ್ನೂ, ಹನನ್ಯ, ಮಿಶಾಯೇಲ, ಅಜರ್ಯ ಇವರನ್ನೂ ನೋಡಿಕೊಳ್ಳಲು ಆ ನಾಯಕನು ನೇಮಿಸಿದ್ದ ವಿಚಾರಕನ ಬಳಿಗೆ ಬಂದು, "ಅಯ್ಯಾ, ಹತ್ತು ದಿನಗಳ ಮಟ್ಟಿಗೆ ನಮ್ಮನ್ನು ಪರೀಕ್ಷಿಸಿನೋಡು. ಸೇವಕರಾದ ನಮಗೆ ಭೋಜನಕ್ಕೆ ಬದಲಾಗಿ ಕಾಯಿಪಲ್ಯ, ಪಾನಕ್ಕೆ ಬದಲಾಗಿ ನೀರು ಒದಗಿಸಿದರೆ ಸಾಕು. ಆಮೇಲೆ ನಮ್ಮ ಮುಖಗಳನ್ನೂ ರಾಜಭೋಜನ ಉಣ್ಣುವ ಮುಖಗಳನ್ನೂ ಹೋಲಿಸಿನೋಡು. ಆನಂತರ ನಿನಗೆ ತೋಚಿದ ಹಾಗೆ ನಮಗೆ ಮಾಡು," ಎಂದು ಕೇಳಿಕೊಂಡನು. ವಿಚಾರಕನು ಅವರ ಬಿನ್ನಹಕ್ಕೆ ಒಪ್ಪಿ ಹತ್ತುದಿನದವರೆಗೆ ಪರೀಕ್ಷಿಸಿದನು. ಹತ್ತು ದಿನಗಳಾದ ಮೇಲೆ ರಾಜಭೋಜನ ಉಣ್ಣುತ್ತಿದ್ದ ಎಲ್ಲ ಯುವಕರಿಗಿಂತ ಇವರು ಸುಂದರವಾಗಿಯೂ ಪುಷ್ಟರಾಗಿಯೂ ಕಾಣಿಸಿದರು. ಅಂದಿನಿಂದ ವಿಚಾರಕನು ಇವರಿಗೆ ನೇಮಕವಾದ ಭೋಜನ ಪದಾರ್ಥಗಳನ್ನೂ ಕುಡಿಯಬೇಕಾದ ದ್ರಾಕ್ಷಾರಸವನ್ನೂ ತೆಗೆದುಬಿಟ್ಟು ಕಾಯಿಪಲ್ಯಗಳನ್ನೇ ಕೊಡುತ್ತಾ ಬಂದನು. ಹೀಗಿರಲು ದೇವರು ಆ ನಾಲ್ಕು ಮಂದಿ ಯುವಕರಿಗೆ ಸಕಲ ಶಾಸ್ತ್ರಗಳಲ್ಲೂ ವಿದ್ಯೆಗಳಲ್ಲೂ ಜ್ಞಾನ ವಿವೇಕಗಳನ್ನು ದಯಪಾಲಿಸಿದರು. ದಾನಿಯೇಲನು ಸಮಸ್ತ ಸ್ವಪ್ನಗಳನ್ನೂ  ದಿವ್ಯ ದರ್ಶನಗಳನ್ನೂ ಅರ್ಥೈಸುವುದರಲ್ಲಿ ಪ್ರವಿಣನಾದನು. ರಾಜನು ನೇಮಿಸಿದ ಕಾಲವು ಕಳೆಯಿತು. ಆ ಯುವಕರನ್ನು ರಾಜಸನ್ನಿಧಿಗೆ ಕರೆದು ತರುವ ಸಮಯವು ಬಂದಿತು. ಕಂಚುಕಿಯರ ನಾಯಕ ಅವರನ್ನು ನೆಬೂಕದ್ನೆಚ್ಚರನ ಸಮ್ಮುಖಕ್ಕೆ ಕರೆದು ತಂದನು. ರಾಜನು ಅವರ ಸಂಗಡ ಮಾತಾಡುವಾಗ ಅಲ್ಲಿದ್ದ ಯುವಕರಲ್ಲೆಲ್ಲ ದಾನಿಯೇಲನಿಗೆ, ಹನನ್ಯನಿಗೆ, ಮಿಶಾಯೇಲನಿಗೆ, ಅಜರ್ಯನಿಗೆ, ಸಮಾನರು ಯಾರೂ ಕಂಡುಬರಲಿಲ್ಲ. ಆದಕಾರಣ ಆ ನಾಲ್ವರು ಸನ್ನಿಧಿ ಸೇವಕರಾದರು. ಬಳಿಕ ರಾಜನು ಶಾಸ್ತ್ರೀಯ ವಿದ್ಯೆಯ ಎಲ್ಲ ವಿಷಯಗಳಲ್ಲಿ ಅವರನ್ನು ವಿಚಾರ ಮಾಡಿದಾಗ ಸಮಸ್ತ ರಾಜ್ಯದಲ್ಲಿನ ಎಲ್ಲ ಜೋಯಿಸರಿಗಿಂತಲೂ ಮಂತ್ರವಾದಿಗಳಿಗಿಂತಲೂ ಹತ್ತರಷ್ಟು ನಿಪುಣರಾಗಿ ಕಂಡುಬಂದರು. 

ಅಜರ್ಯ: 1:29-33 
ಶ್ಲೋಕ: ಸರ್ವೇಶ್ವರಾ, ನೀವು ಪರಮಪೂಜ್ಯರು, ಎಂದೆಂದಿಗೂ ಮಹೋನ್ನತರು 

ಸರ್ವೇಶ್ವರನ ಸಕಲ ಸೃಷ್ಟಿಗಳೇ, ಸರ್ವೇಶ್ವರನನ್ನು ಕೊಂಡಾಡಿ|
ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸಿ||
ದೇವರ ದಿವ್ಯದೂತರೇ, ಸರ್ವೇಶ್ವರನನ್ನು ಕೊಂಡಾಡಿ|
ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸಿ||

ಆಕಾಶಗಳೇ, ಸರ್ವೇಶ್ವರನನ್ನು ಕೊಂಡಾಡಿ|
ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸಿ||
ಆಕಾಶದ ಮೇಲಿರುವ ಸಕಲ ಜಲರಾಶಿಗಳೇ, ಸರ್ವೇಶ್ವರನನ್ನು ಕೊಂಡಾಡಿ|
ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸಿರಿ||

ಸರ್ವೇಶ್ವರನ ಸಕಲ ಶಕ್ತಿಗಳೇ ಸರ್ವೇಶ್ವರನನ್ನು ಕೊಂಡಾಡಿ|
ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸಿ||


ಶುಭಸಂದೇಶ: ಲೂಕ 21:1-4 


"ಒಬ್ಬ ಬಡ ವಿಧವೆ ತಾಮ್ರದ ಚಿಕ್ಕ ನಾಣ್ಯಗಳೆರಡನ್ನು  ಕಾಣಿಕೆಯಾಗಿ ಹಾಕುವುದನ್ನು ಯೇಸು ಕಂಡರು. "ದೇವಾಲಯದ ಕಾಣಿಕೆಯ ಪೆಟ್ಟಿಗೆಯಲ್ಲಿ ಧನವಂತರು ತಮ್ಮ ಕಾಣಿಕೆಗಳನ್ನು ಹಾಕುತ್ತಿದ್ದುದನ್ನು ಯೇಸುಸ್ವಾಮಿ ಗಮನಿಸಿದರು. ಅಷ್ಟರಲ್ಲಿ ಒಬ್ಬ ಬಡ ವಿಧವೆ ಅಲ್ಲಿಗೆ ಬಂದು, ತಾಮ್ರದ ಚಿಕ್ಕ ನಾಣ್ಯಗಳೆರಡನ್ನು ಕಾಣಿಕೆಯಾಗಿ ಹಾಕಿದಳು. ಅದನ್ನು ಕಂಡ ಯೇಸು, "ಈ ಬಡ ವಿಧವೆ ಅವರೆಲ್ಲರಿಗಿಂತಲೂ ಹೆಚ್ಚಾಗಿ ಅರ್ಪಿಸಿದಳೆಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ. ಅವರೆಲ್ಲರು ತಮ್ಮ ಅಪರಿಮಿತ ಐಶ್ವರ್ಯದಿಂದ ಕಾಣಿಕೆಯಿತ್ತರು; ಈಕೆಯಾದರೋ, ತನ್ನ ಕಡುಬಡತನದಲ್ಲೂ ತನಗಿದ್ದ ಜೀವನಾಧಾರವನ್ನೆಲ್ಲಾ ಕೊಟ್ಟುಬಿಟ್ಟಳು," ಎಂದರು.

26.11.23 - " ‘ಈ ನನ್ನ ಸೋದರರಲ್ಲಿ ಒಬ್ಬನಿಗೆ, ಅವನೆಷ್ಟೇ ಕನಿಷ್ಟನಾಗಿರಲಿ, ನೀವು ಹೀಗೆ ಮಾಡಿದಾಗಲೆಲ್ಲಾ ಅದನ್ನು ನನಗೇ ಮಾಡಿದಿರಿ,"

 ಮೊದಲನೇ ವಾಚನಪ್ರವಾದಿ ಯೇಜೆಕಿಯಲ್ 34:11-12, 15-17 


ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ ಆಹಾನಾನೇ ನನ್ನ ಕುರಿಗಳನ್ನು ಹಿಂಬಾಲಿಸಿ ಹುಡುಕುವೆನುಮಂದೆಯ ಕುರುಬನು ಸುತ್ತಮುತ್ತಲು ಚದರಿಹೋದ ತನ್ನ ಕುರಿಗಳನ್ನು ಹುಡುಕುವ ಹಾಗೆ ನಾನು ನನ್ನ ಕುರಿಗಳನ್ನು ಹುಡುಕುವೆನುನಾನೇ ನನ್ನ ಕುರಿಗಳನ್ನು ಮೇಯಿಸಿ ಹಾಯಾಗಿ ಮಲಗುವಂತೆ ಮಾಡುವೆನುಇದು ಸರ್ವೇಶ್ವರನಾದ ದೇವರ ನುಡಿತಪ್ಪಿಸಿಕೊಂಡಿದ್ದನ್ನು ಹುಡುಕುವೆನುದಾರಿತಪ್ಪಿದ್ದನ್ನು ಮಂದೆಗೆ ಸೇರಿಸುವೆನುದುರ್ಬಲವಾದುದನ್ನು ಬಲಗೊಳಿಸುವೆನುಮುರಿದ ಅಂಗವನ್ನು ಕಟ್ಟುವೆನುಬಲಿತ ಕೊಬ್ಬಿನ ಕುರಿಗಳನ್ನಾದರೋ ಧ್ವಂಸಮಾಡುವೆನುಅವುಗಳಿಗೆ ನ್ಯಾಯದಂಡನೆ ಎಂಬ ಮೇವನ್ನು ತಿನ್ನಿಸುವೆನು.” ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ ನನ್ನ ಹಿಂಡೇಇಗೋನಾನು ನಿಮ್ಮಲ್ಲಿನ ಕುರಿಮೇಕೆಗಳಿಗೂ ಟಗರುಹೋತಗಳಿಗೂ ಮಧ್ಯವರ್ತಿಯಾಗಿ ನ್ಯಾಯ ತೀರಿಸುವೆನು. 

ಕೀರ್ತನೆ23:1-2, 2-3, 5, 6

ಎರಡನೇ ವಾಚನಕೊರಿಂಥ 15:20-26, 28


ಕ್ರಿಸ್ತಯೇಸು ಪುನರುತ್ಥಾನಹೊಂದಿದ್ದೇನೋ ಸತ್ಯಸ್ಯ ಸತ್ಯಅವರ ಪುನರುತ್ಥಾನವುಸತ್ತವರು ಪುನರುತ್ಥಾನ ಹೊಂದುತ್ತಾರೆ ಎನ್ನುವುದಕ್ಕೆ ಪ್ರಮಾಣಒಬ್ಬ ಮನುಷ್ಯನಿಂದ ಸಾವು ಸಂಭವಿಸಿದಂತೆಯೇ ಒಬ್ಬ ಮನುಷ್ಯನಿಂದಲೇ ಸತ್ತವರಿಗೆ ಪುನರುತ್ಥಾನವು ಪರಿಣಮಿಸಿತುಆದಾಮನ ಸಂಬಂಧದಿಂದ ಎಲ್ಲರೂ ಸಾವಿಗೀಡಾದಂತೆ ಕ್ರಿಸ್ತಯೇಸುವಿನ ಸಂಬಂಧದಿಂದ ಎಲ್ಲರೂ ಜೀವಂತರಾಗಿ ಏಳುತ್ತಾರೆ ಭಾಗ್ಯವನ್ನು ಒಬ್ಬೊಬ್ಬನೂ ಕ್ರಮಬದ್ಧ ರೀತಿಯಲ್ಲಿ ಪಡೆಯತ್ತಾನೆಪ್ರಪ್ರಥಮ ಫಲವಾಗಿ ಕ್ರಿಸ್ತಯೇಸುವೇ ಜೀವಂತರಾದರುಅನಂತರಕ್ರಿಸ್ತಯೇಸುವಿಗೆ ಸೇರಿದವರು ಯೇಸು ಪುನರಾಗಮಿಸುವಾಗ ಜೀವಂತರಾಗುತ್ತಾರೆಅಂತ್ಯ ಬರುವುದು ಅನಂತರವೇಆಗ ಯೇಸು ಎಲ್ಲಾ ಆಧಿಪತ್ಯವನ್ನೂ ಅಧಿಕಾರವನ್ನೂ ಶಕ್ತಿಯನ್ನೂ ನಿರ್ಮೂಲಮಾಡಿ ತಂದೆಯಾದ ದೇವರಿಗೆ ಸಾಮ್ರಾಜ್ಯವನ್ನು ಒಪ್ಪಿಸಿಕೊಡುವರುಶತ್ರುಗಳೆಲ್ಲರನ್ನು ತಮ್ಮ ಪಾದಪೀಠವಾಗಿಸಿಕೊಳ್ಳುವ ತನಕ ಅವರು ರಾಜ್ಯವಾಳಬೇಕಾಗಿದೆಕಟ್ಟಕಡೆಗೆ ನಿರ್ಮೂಲವಾಗುವ ಶತ್ರುವೆಂದರೆ ಮೃತ್ಯುವೇಎಲ್ಲವೂ ಕ್ರಿಸ್ತಯೇಸುವಿಗೆ ಅಧೀನವಾದಾಗ ಪುತ್ರನಾದ ಅವರೇಎಲ್ಲವನ್ನು ತನಗೆ ಅಧೀನಪಡಿಸಿದ ದೇವರಿಗೆ ಅಧೀನರಾಗುತ್ತಾರೆಆಗ ದೇವರು ಸರ್ವರಿಗೆ ಸರ್ವಸ್ವವೂ ಆಗುತ್ತಾರೆ

ಶುಭಸಂದೇಶ: ಮತ್ತಾಯ 25:31-46



“ನರಪುತ್ರನು ತನ್ನ ಮಹಿಮೆಯಲ್ಲಿ ಸಮಸ್ತ ದೇವದೂತರ ಸಮೇತ ಬರುವಾಗ ತನ್ನ ಮಹಿಮಾನ್ವಿತ ಸಿಂಹಾಸನದಲ್ಲಿ ಆಸೀನನಾಗಿರುವನು. ಸರ್ವಜನಾಂಗಗಳನ್ನು ಆತನ ಸಮ್ಮುಖದಲ್ಲಿ ಒಟ್ಟುಗೂಡಿಸಲಾಗುವುದು. ಕುರುಬನು ಕುರಿಗಳನ್ನು ಆಡುಗಳಿಂದ ಬೇರ್ಪಡಿಸುವಂತೆ ಆತನು ಅವರನ್ನು ಬೇರ್ಪಡಿಸುವನು. ಕುರಿಗಳನ್ನು ತನ್ನ ಬಲಗಡೆಯಲ್ಲೂ ಆಡುಗಳನ್ನು ತನ್ನ ಎಡಗಡೆಯಲ್ಲೂ ಇರಿಸುವನು. ಆಗ ಅರಸನು ತನ್ನ ಬಲಗಡೆಯಿರುವ ಜನರಿಗೆ, ‘ನನ್ನ ಪಿತನಿಂದ ಧನ್ಯರೆನಿಸಿಕೊಂಡವರೇ, ಬನ್ನಿ. ಲೋಕಾದಿಯಿಂದ ನಿಮಗಾಗಿ ಸಿದ್ಧಮಾಡಿದ ಸಾಮ್ರಾಜ್ಯವನ್ನು ಸ್ವಾಸ್ತ್ಯವಾಗಿ ಪಡೆಯಿರಿ. ಏಕೆಂದರೆ, ನಾನು ಹಸಿದಿದ್ದೆ, ನನಗೆ ಆಹಾರ ಕೊಟ್ಟಿರಿ; ಬಾಯಾರಿದ್ದೆ, ಕುಡಿಯಲು ಕೊಟ್ಟಿರಿ; ಅಪರಿಚಿತನಾಗಿದ್ದೆ, ನನಗೆ ಆಶ್ರಯ ಕೊಟ್ಟಿರಿ. ಬಟ್ಟೆಬರೆಯಿಲ್ಲದೆ ಇದ್ದೆ, ನನಗೆ ಉಡಲು ಕೊಟ್ಟಿರಿ. ರೋಗದಿಂದಿದ್ದೆ, ನನ್ನನ್ನು ಆರೈಕೆಮಾಡಿದಿರಿ. ಬಂಧಿಯಾಗಿದ್ದೆ, ನೀವು ನನ್ನನ್ನು ಸಂಧಿಸಿದಿರಿ,’ ಎಂದು ಹೇಳುವನು. ಅದಕ್ಕೆ ಆ ಸಜ್ಜನರು, ‘ಸ್ವಾಮೀ, ತಾವು ಯಾವಾಗ ಹಸಿದಿದ್ದನ್ನು ಕಂಡು ನಾವು ಆಹಾರ ಕೊಟ್ಟೆವು? ಬಾಯಾರಿದ್ದನ್ನು ಕಂಡು ಕುಡಿಯಲು ಕೊಟ್ಟೆವು? ಯಾವಾಗ ತಾವು ಅಪರಿಚಿತರಾಗಿದ್ದನ್ನು ಕಂಡು ನಾವು ಆಶ್ರಯಕೊಟ್ಟೆವು? ಬಟ್ಟೆಬರೆಯಿಲ್ಲದ್ದನ್ನು ಕಂಡು ಉಡಲು ಕೊಟ್ಟೆವು? ತಾವು ರೋಗಿಯಾಗಿರುವುದನ್ನು ಅಥವಾ ಬಂಧಿಯಾಗಿರುವುದನ್ನು ಕಂಡು ನಾವು ಸಂಧಿಸಲು ಬಂದೆವು?’ ಎಂದು ಕೇಳುವರು. ಆಗ ಅರಸನು ಪ್ರತ್ಯುತ್ತರವಾಗಿ, ‘ಈ ನನ್ನ ಸೋದರರಲ್ಲಿ ಒಬ್ಬನಿಗೆ, ಅವನೆಷ್ಟೇ ಕನಿಷ್ಟನಾಗಿರಲಿ, ನೀವು ಹೀಗೆ ಮಾಡಿದಾಗಲೆಲ್ಲಾ ಅದನ್ನು ನನಗೇ ಮಾಡಿದಿರಿ, ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ,’ ಎನ್ನುವನು. “ಅನಂತರ ಆತನು ತನ್ನ ಎಡಗಡೆ ಇರುವವರನ್ನು ನೋಡಿ, ‘ಶಾಪಗ್ರಸ್ತರೇ, ನನ್ನಿಂದ ತೊಲಗಿರಿ. ಪಿಶಾಚಿಗೂ ಅವನ ದೂತರಿಗೂ ಸಿದ್ಧಮಾಡಿರುವ ಆರದ ಬೆಂಕಿಗೆ ಬೀಳಿರಿ. ಏಕೆಂದರೆ ನಾನು ಹಸಿದಿದ್ದೆ, ನೀವು ನನಗೆ ಆಹಾರಕೊಡಲಿಲ್ಲ; ಬಾಯಾರಿದ್ದೆ, ಕುಡಿಯಲು ಕೊಡಲಿಲ್ಲ; ಅಪರಿಚಿತನಾಗಿದ್ದೆ, ನನಗೆ ಆಶ್ರಯ ನೀಡಲಿಲ್ಲ; ಬಟ್ಟೆಬರೆಯಿಲ್ಲದೆ ಇದ್ದೆ, ನನಗೆ ಉಡಲು ಕೊಡಲಿಲ್ಲ; ರೋಗಿಯಾಗಿದ್ದೆ, ಬಂಧಿಯಾಗಿದ್ದೆ, ನೀವು ನನ್ನನ್ನು ಸಂಧಿಸಲಿಲ್ಲ,’ ಎಂದು ಹೇಳುವನು. ಅದಕ್ಕೆ ಅವರು ಕೂಡ, ‘ಸ್ವಾಮೀ, ತಾವು ಯಾವಾಗ ಹಸಿದಿದ್ದಿರಿ, ಬಾಯಾರಿದ್ದಿರಿ, ಅಪರಿಚಿತರಾಗಿದ್ದಿರಿ, ಯಾವಾಗ ಬಟ್ಟೆಬರೆ ಇಲ್ಲದೆ ಇದ್ದಿರಿ, ರೋಗಿಯಾಗಿದ್ದಿರಿ, ಮತ್ತು ಬಂಧಿಯಾಗಿ ಇದ್ದಿರಿ ಮತ್ತು ನಾವು ಅವನ್ನು ಕಂಡು ನಿಮಗೆ ಉಪಚಾರಮಾಡದೆಹೋದೆವು? ಎಂದು ಪ್ರಶ್ನಿಸುವರು. ಅದಕ್ಕೆ ಪ್ರತ್ಯುತ್ತರವಾಗಿ ಅರಸನು, ‘ಇವರಲ್ಲಿ ಒಬ್ಬನಿಗೆ, ಅವನೆಷ್ಟೇ ಕನಿಷ್ಠನಾಗಿರಲಿ, ನೀವು ಹಾಗೆ ಮಾಡದೆಹೋದಾಗ ಅದನ್ನು ನನಗೇ ಮಾಡಲಿಲ್ಲ,’ ಎನ್ನುವರು. “ಹೀಗೆ ಈ ದುರ್ಜನರು ನಿತ್ಯಶಿಕ್ಷೆಗೂ, ಆ ಸಜ್ಜನರು ನಿತ್ಯಜೀವಕ್ಕೂ ಹೋಗುವರು,” ಎಂದು ಹೇಳಿದರು ಸ್ವಾಮಿ.