ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

01.03.2020 - ‘ನಿನ್ನ ದೇವರಾದ ಸರ್ವೇಶ್ವರನನ್ನು ಆರಾಧಿಸು. ಅವರೊಬ್ಬರಿಗೇ ಸೇವೆ ಸಲ್ಲಿಸು,’

ಮೊದಲನೇ ವಾಚನ: ಆದಿಕಾಂಡ 2:7-9; 3:1-7

ದೇವರಾದ ಸರ್ವೇಶ್ವರ ನೆಲದ ಮಣ್ಣಿನಿಂದ ಮನುಷ್ಯನನ್ನು ರೂಪಿಸಿ ಅವನ ಮೂಗಿನಲ್ಲಿ ಜೀವಶ್ವಾಸವನ್ನು ಊದಿದರು. ಆಗ ಮನುಷ್ಯನು ಜೀವಾತ್ಮನಾದನು. ಇದಲ್ಲದೆ, ದೇವರಾದ ಸರ್ವೇಶ್ವರ ಪೂರ್ವ ದಿಕ್ಕಿನಲ್ಲಿರುವ ಏದೆನ್ ಪ್ರದೇಶದಲ್ಲಿ ಒಂದು ಉದ್ಯಾನವನವನ್ನು ಮಾಡಿ ತಾವು ರೂಪಿಸಿದ ಮನುಷ್ಯನನ್ನು ಅದರಲ್ಲಿ ಇರಿಸಿದರು. ನೋಟಕ್ಕೆ ರಮ್ಯವೂ ಊಟಕ್ಕೆ ರುಚಿಕರವೂ ಆದ ನಾನಾ ತರದ ಮರಗಳನ್ನು ದೇವರಾದ ಸರ್ವೇಶ್ವರ ಅಲ್ಲಿ ಬೆಳೆಯ ಮಾಡಿದರು. ಆ ವನದ ಮಧ್ಯದಲ್ಲಿ ಜೀವದಾಯಕ ವೃಕ್ಷವನ್ನು ಹಾಗು ಒಳಿತು ಕೆಡಕುಗಳ ಅರಿವನ್ನು ಮೂಡಿಸುವ ವೃಕ್ಷವನ್ನು ಬೆಳೆಯಿಸಿದರು. ಸರ್ವೇಶ್ವರನಾದ ದೇವರು ಉಂಟುಮಾಡಿದ ಭೂಜಂತುಗಳಲ್ಲಿ ಅತಿ ಯುಕ್ತಿಉಳ್ಳದ್ದು ಸರ್ಪ. ಅದು ಮಹಿಳೆಯ ಬಳಿಗೆ ಬಂದು, “ಏನಮ್ಮಾ, ತೋಟದಲ್ಲಿರುವ ಯಾವ ಮರದ ಹಣ್ಣನ್ನೂ ತಿನ್ನಕೂಡದು ಎಂದು ದೇವರು ಆಜ್ಞೆ ಮಾಡಿರುವುದು ನಿಜವೋ”? ಎಂದು ಕೇಳಿತು. ಅದಕ್ಕೆ ಆ ಮಹಿಳೆ, “ತೋಟದಲ್ಲಿರುವ ಮರಗಳ ಹಣ್ಣುಗಳನ್ನು ನಾವು ತಿನ್ನಬಹುದು; ಆದರೆ ಅದರ ನಡುವೆಯಿರುವ ಈ ಮರದ ಹಣ್ಣನ್ನು ಮಾತ್ರ ತಿನ್ನಲೂ ಕೂಡದು, ಮುಟ್ಟಲೂ ಕೂಡದು, ‘ತಿಂದರೆ ಸಾಯುವಿರಿ’ ಎಂದು ದೇವರು ಹೇಳಿದ್ದಾರೆ,” ಎಂದು ಉತ್ತರ ಕೊಟ್ಟಳು. ಆಗ ಆ ಸರ್ಪ, “ಆ ಮಾತು ನಿಜವಲ್ಲ, ನೀವು ಸಾಯುವುದು ಸುಳ್ಳು. ಇದರ ಹಣ್ಣನ್ನು ತಿಂದ ಕೂಡಲೆ ನಿಮ್ಮ ಕಣ್ಣುಗಳು ತೆರೆಯುವುವು. ನೀವು ದೇವರಂತೆ ಆಗಿ ಒಳಿತು- ಕೆಡುಕುಗಳನ್ನರಿತ ಜ್ಞಾನಿಗಳು ಆಗಿಬಿಡುವಿರಿ. ಇದು ದೇವರಿಗೆ ಚೆನ್ನಾಗಿ ಗೊತ್ತುಂಟು,” ಎಂದಿತು. ಆಗ ಆ ಮಹಿಳೆ, “ಈ ಮರದ ಹಣ್ಣು ಊಟಕ್ಕೆ ಎಷ್ಟು ಚೆನ್ನಾಗಿದೆ, ನೋಟಕ್ಕೆ ಎಷ್ಟು ರಮಣೀಯವಾಗಿದೆ, ಜ್ಞಾನಾರ್ಜನೆಗೆ ಎಷ್ಟು ಆಕರ್ಷಣೀಯವಾಗಿದೆ” ಎಂದು ತಿಳಿದು, ಅದನ್ನು ತೆಗೆದುಕೊಂಡು ತಿಂದಳು; ಸಂಗಡವಿದ್ದ ಗಂಡನಿಗೂ ಕೊಟ್ಟಳು; ಅವನೂ ತಿಂದನು. ಕೂಡಲೆ ಅವರಿಬ್ಬರ ಕಣ್ಣುಗಳು ತೆರೆದವು. ತಾವು ಬೆತ್ತಲೆ ಆಗಿದ್ದೇವೆಂದು ತಿಳಿದು ಅವರು ಅಂಜೂರದ ಎಲೆಗಳನ್ನು ಹೊಲಿದು ಉಟ್ಟುಕೊಂಡರು.

ಕೀರ್ತನೆ 51:3-4, 5-6, 12-13, 17

ಶ್ಲೋಕ: ಕೃಪಾಳು ದೇವಾ, ಕರುಣಿಸೆಮ್ಮನು ಏಕೆಂದರೆ ನಿಮ್ಮ ವಿರುದ್ಧ ಪಾಪವನ್ನು ಮಾಡಿದ್ದೇವೆ

ಎರಡನೇ ವಾಚನ: ರೋಮನರಿಗೆ 5:12-19

ಒಬ್ಬ ಮನುಷ್ಯನಿಂದಲೇ ಪಾಪ, ಪಾಪದಿಂದ ಮರಣ, ಈ ಲೋಕವನ್ನು ಪ್ರವೇಶಿಸಿದವು. ಎಲ್ಲರೂ ಪಾಪ ಮಾಡಿದ್ದರಿಂದ ಮರಣವು ಎಲ್ಲರಿಗೂ ಪ್ರಾಪ್ತಿಯಾಯಿತು. ಧರ್ಮಶಾಸ್ತ್ರವನ್ನು ಕೊಡುವುದಕ್ಕೆ ಮೊದಲೇ ಪಾಪವು ಲೋಕದಲ್ಲಿತ್ತು. ಆದರೆ ಧರ್ಮಶಾಸ್ತ್ರ ಇಲ್ಲದೆ ಇದ್ದುದರಿಂದ ಪಾಪವನ್ನು ಗಣನೆಗೆ ತಂದುಕೊಳ್ಳಲಾಗಲಿಲ್ಲ. ಆದರೂ, ಆದಾಮನ ಕಾಲದಿಂದ ಮೋಶೆಯ ಕಾಲದವರೆಗೂ ಮರಣವು ದಬ್ಬಾಳಿಕೆ ನಡೆಸುತ್ತಿತ್ತು. ದೇವರ ಆಜ್ಞಾವಿಧಿಗಳನ್ನು ವಿೂರಿ ಆದಾಮನು ಮಾಡಿದ ಪಾಪಕ್ಕೆ ಸಮನಾದ ಪಾಪವನ್ನು ಮಾಡದೆ ಇದ್ದವರ ಮೇಲೆಯೂ, ಮರಣದ ಆಳ್ವಿಕೆ ನಡೆಯುತ್ತಿತ್ತು. ಆದಾಮನು ಮುಂಬರಲಿದ್ದ ಮಹಾತ್ಮನ ಮುನ್ಸೂಚನೆಯಾಗಿದ್ದಾನೆ. ಆದರೆ ಆದಾಮನ ಪಾಪಕ್ಕೂ ದೇವರ ಅನುಗ್ರಹಕ್ಕೂ ವ್ಯತ್ಯಾಸವಿದೆ. ಒಬ್ಬ ಮನುಷ್ಯನ ಅಪರಾಧದಿಂದ ಎಲ್ಲರೂ ಮರಣಕ್ಕೊಳಗಾದರು ಎಂಬುದೇನೋ ನಿಜ. ಆದರೆ ದೇವರ ಅನುಗ್ರಹವು ಅದಕ್ಕಿಂತಲೂ ಅತ್ಯಧಿಕವಾದುದು. ಅಂತೆಯೇ, ಯೇಸುಕ್ರಿಸ್ತ ಎಂಬ ಒಬ್ಬ ಮಹಾತ್ಮನ ಅನುಗ್ರಹದಿಂದ ಲಭಿಸುವ ಉಚಿತಾರ್ಥ ವರಗಳು ಇನ್ನೂ ಅಧಿಕಾಧಿಕವಾದುವು ಎಂಬುದೂ ನಿಜ. ದೇವರ ಉಚಿತಾರ್ಥ ವರಕ್ಕೂ ಒಬ್ಬ ಮನುಷ್ಯನ ಪಾಪದ ಪರಿಣಾಮಕ್ಕೂ ಎಷ್ಟೋ ವ್ಯತ್ಯಾಸವಿದೆ. ಆ ಒಂದು ಪಾಪದ ಪರಿಣಾಮವಾಗಿ ಮನುಷ್ಯನು ಅಪರಾಧಿಯೆಂದು ನಿರ್ಣಯಿಸಲ್ಪಟ್ಟನು. ಆದರೆ ಅನೇಕರು ಅಪರಾಧಿಗಳಾದ ಮೇಲೂ ಕೊಡಲಾಗುವ ಉಚಿತಾರ್ಥ ವರವು ದೇವರೊಡನೆ ಸತ್ಸಂಬಂಧವನ್ನು ಉಂಟುಮಾಡುತ್ತದೆ. ಒಬ್ಬ ಮನುಷ್ಯನ ಅಪರಾಧದ ಕಾರಣ, ಒಬ್ಬ ವ್ಯಕ್ತಿಯ ಮುಖಾಂತರ ಮರಣವು ಎಲ್ಲಾ ಮಾನವರ ಮೇಲೆ ದಬ್ಬಾಳಿಕೆ ನಡೆಸಿತು. ಆದರೆ, ಹೇರಳವಾದ ದೈವಾನುಗ್ರಹವನ್ನೂ ದೇವರೊಡನೆ ಸತ್ಸಂಬಂಧವೆಂಬ ಉಚಿತಾರ್ಥ ವರವನ್ನೂ ಪಡೆದವರಾದರೋ ಯೇಸುಕ್ರಿಸ್ತ ಎಂಬ ಮಹಾತ್ಮನ ಮುಖಾಂತರ ಮತ್ತಷ್ಟು ವಿಪುಲವಾಗಿ ಸಜ್ಜೀವವನ್ನು ಪಡೆದು ರಾಜ್ಯವಾಳುತ್ತಾರೆ. ಒಬ್ಬನ ಅಪರಾಧದಿಂದ ಎಲ್ಲಾ ಮಾನವರು ದಂಡನೆಯ ತೀರ್ಪಿಗೆ ಗುರಿಯಾಗುತ್ತಾರೆ. ಹಾಗೆಯೇ ಒಬ್ಬನ ಸತ್ಕಾರ್ಯದಿಂದ ಎಲ್ಲಾ ಮಾನವರು ವಿಮೋಚನೆಯನ್ನೂ ಸಜ್ಜೀವವನ್ನೂ ಪಡೆಯುತ್ತಾರೆ. ಹೇಗೆ ಒಬ್ಬ ಮನುಷ್ಯನ ಅವಿಧೇಯತೆಯಿಂದ ಎಲ್ಲರೂ ಪಾಪಿಗಳಾದರೋ, ಹಾಗೆಯೇ ಒಬ್ಬ ಮನುಷ್ಯನ ವಿಧೇಯತೆಯಿಂದ ಎಲ್ಲರೂ ದೇವರೊಡನೆ ಸತ್ಸಂಬಂಧವನ್ನು ಹೊಂದುತ್ತಾರೆ.

ಶುಭಸಂದೇಶ: ಮತ್ತಾಯ 4:1-11
ಯೇಸುಸ್ವಾಮಿ ಪಿಶಾಚಿಯಿಂದ ಪರಿಶೋಧಿತರಾಗಲೆಂದು ಪವಿತ್ರಾತ್ಮ ಅವರನ್ನು ಬೆಂಗಾಡಿಗೆ ಕರೆದೊಯ್ದರು. ಅಲ್ಲಿ ಯೇಸು ನಲವತ್ತು ದಿನ ಹಗಲಿರುಳೂ ಉಪವಾಸವಿದ್ದರು. ಅನಂತರ ಅವರಿಗೆ ಬಹಳ ಹಸಿವಾಯಿತು. ಆಗ ಶೋಧಕನು ಬಂದು, "ನೀನು ದೇವರ ಪುತ್ರನೆಂಬುದು ಸತ್ಯವಾದರೆ, ಈ ಕಲ್ಲುಗಳು ರೊಟ್ಟಿಗಳಾಗಲೆಂದು ಆಜ್ಞೆಮಾಡು," ಎಂದನು. ಅದಕ್ಕೆ ಯೇಸುಸ್ವಾಮಿ, "ಪವಿತ್ರ ಗ್ರಂಥದಲ್ಲಿ ಹೇಳಿರುವ ಪ್ರಕಾರ, "ಮಾನವನು ಜೀವಿಸುವುದು ಆಹಾರದಿಂದ ಮಾತ್ರವಲ್ಲ; ದೇವರಾಡುವ ಪ್ರತಿಯೊಂದು ನುಡಿಯಿಂದ", ಎಂದರು. ಬಳಿಕ ಪಿಶಾಚಿ ಅವರನ್ನು ಪವಿತ್ರ ನಗರಕ್ಕೆ ಅಂದರೆ ಜೆರುಸಲೇಮಿಗೆ ಕರೆದೊಯ್ದು ಮಹಾದೇವಾಲಯದ ಗೋಪುರದ ತುದಿಯ ಮೇಲೆ ನಿಲ್ಲಿಸಿ, "ನೀನು ದೇವರ ಪುತ್ರನೆಂಬುದು ಸತ್ಯವಾದರೆ ಕಳಕ್ಕೆ ಧುಮುಕು. ಏಕೆಂದರೆ, ಪವಿತ್ರ ಗ್ರಂಥದಲ್ಲಿ ಬರೆದಿರುವ ಪ್ರಕಾರ, ‘ದೇವರೇ ತಮ್ಮ ದೂತರಿಗೆ ಆಜ್ಞೆ ಮಾಡುವರು’ ಮತ್ತು ‘ಇವರು ನಿನ್ನ ಕಾಲುಗಳು ಕಲ್ಲುಗಳಿಗೆ ತಾಕದಂತೆ ನಿನ್ನನ್ನು ಕೈಗಳಲ್ಲಿ ಆತುಗೊಳ್ಳುವರು,’ ಎಂದಿತು. ಅದಕ್ಕೆ ಯೇಸು, “ ‘ನಿನ್ನ ದೇವರು ಸರ್ವೇಶ್ವರ; ನೀನು ಅವರನ್ನು ಪರೀಕ್ಷಿಸಬಾರದು’, ಎಂದೂ ಸಹ ಪವಿತ್ರಗ್ರಂಥದಲ್ಲಿ ಬರೆದಿದೆ,” ಎಂದರು. ಅನಂತರ ಪಿಶಾಚಿ ಯೇಸುವನ್ನು ಬಹಳ ಎತ್ತರವಾದ ಬೆಟ್ಟಕ್ಕೆ ಕೊಂಡೊಯ್ದು, ಪ್ರಪಂಚದ ಎಲ್ಲಾ ರಾಜ್ಯಗಳನ್ನೂ ಅವುಗಳ ವೈಭವವನ್ನೂ ತೋರಿಸಿತು. "ನೀನು ನನಗೆ ಅಡ್ಡಬಿದ್ದು ಆರಾಧಿಸುವೆಯಾದರೆ ಇವೆಲ್ಲವನ್ನು ನಿನಗೆ ಕೊಡಬಲ್ಲೆ," ಎಂದಿತು. ಅದಕ್ಕೆ ಪ್ರತ್ಯುತ್ತರವಾಗಿ ಯೇಸು, "ಸೈತಾನನೇ, ತೊಲಗು, ‘ನಿನ್ನ ದೇವರಾದ ಸರ್ವೇಶ್ವರನನ್ನು ಆರಾಧಿಸು. ಅವರೊಬ್ಬರಿಗೇ ಸೇವೆಸಲ್ಲಿಸು,’ ಎಂದೂ ಪವಿತ್ರಗ್ರಂಥದಲ್ಲಿ ಬರೆದಿದೆ," ಎಂದರು. ಆಗ ಪಿಶಾಚಿ ಯೇಸುವನ್ನು ಬಿಟ್ಟು ತೊಲಗಿತು. ದೇವದೂತರು ಬಂದು ಅವರನ್ನು ಉಪಚರಿಸಿದರು.

ಮನಸ್ಸಿಗೊಂದಿಷ್ಟು : ಶೋಧನೆಗಳು ನಮ್ಮ ಪಾಪಗಳಿಗೆ ದಾರಿಯಲ್ಲ, ಬದಲಾಗಿ ಪಾಪಗಳನ್ನು ಜಯಿಸುವ ಸಾಧನವಾಗಬಲ್ಲದು. ನಮ್ಮನ್ನು ದುರ್ಬಲಗಳಿಸುವುದಕ್ಕಿಂತ ನಮ್ಮನ್ನು ಇನ್ನಷ್ಟು ಶಕ್ತರನ್ನಾಗಿಸಬಲ್ಲದು. ದೇವರ ಚಿತ್ತ ಕಾರ್ಯಗಳನ್ನು ನೆರವೇರಿಸುವವರು ಈ ಶೋಧನೆಗಳನ್ನು ವಿಜಯದ ಮೆಟ್ಟಿಲುಗಳನ್ನಾಗಿ ಬಳಸಿಕೊಂಡು ದೇವರತ್ತ ಏರಬಲ್ಲರು ಎಂಬ ಸಂದೇಶ ಇಂದಿನ ಶುಭಸಂದೇಶದಲ್ಲಿದೆ

ಪ್ರಶ್ನೆ : ನಾವು ಎದುರಿಸುತ್ತಿರುವ ಶೋಧನೆಗಳನ್ನು ನಮ್ಮನ್ನು ದೇವರತ್ತ ಏರಿಸುತ್ತಿದೆಯೇ ಅಥವಾ ವಿಮುಖವಾಗಿಸುತ್ತಿದೆಯೇ?

ಪ್ರಭುವೇ,
ನಮಗೆ ಬಂದೊದಗುವ ಶೋಧನೆ
ತರುವ ಯಾವುದೇ ವೇದನೆ
ಮೀರಿ ಏರುವ ಸಾಧನೆ 
ನಮ್ಮದಾಗಲು ಬೇಕಿದೆ 
ನಿಮ್ಮ ಭರವಸೆಯ ಅನುಮೋದನೆ
-ಚಿತ್ತ

29.02.2020 - “ವೈದ್ಯನ ಅವಶ್ಯಕತೆಯಿರುವುದು ರೋಗಿಗಳಿಗೆ, ಆರೋಗ್ಯವಂತರಿಗಲ್ಲ"

ಮೊದಲನೇ ವಾಚನ: ಯೆಶಾಯ 58:9-14

ಸರ್ವೇಶ್ವರ ಇಂತೆನ್ನುತ್ತಾರೆ: "ನೀವು ದಬ್ಬಾಳಿಕೆ ನಡೆಸುವುದನ್ನೂ ಇತರರನ್ನು ಜರೆಯುವುದನ್ನೂ ಕೇಡನ್ನು ನುಡಿಯುವುದನ್ನೂ ನಿಮ್ಮ ನಡುವೆಯಿಂದ ತೊಲಗಿಸಿದರೆ ಹಾಗೂ ಹಸಿದವರಿಗೆ ಜೀವನಾಂಶವನ್ನೂ ಬಡವರಿಗೆ ಅಗತ್ಯವಾದುದನ್ನೂ ನೀಡಿದರೆ, ನಿಮ್ಮ ಜ್ಯೋತಿ ಕತ್ತಲಲ್ಲಿ ಬೆಳಗುವುದು; ಅಂಧಕಾರ ನೀಗಿ ಮಧ್ಯಾಹ್ನವಾಗುವುದು. ಸರ್ವೇಶ್ವರಸ್ವಾಮಿ ನಿಮ್ಮನ್ನು ನಿರಂತರವಾಗಿ ಮುನ್ನಡೆಸುವರು; ಮರುಭೂಮಿಯಲ್ಲೂ ನಿಮಗೆ ಮನಃತೃಪ್ತಿಯನ್ನು ನೀಡುವರು; ನಿಮ್ಮ ಎಲುಬುಗಳನ್ನು ಬಲಪಡಿಸುವರು; ನೀರೆರೆದ ತೋಟದಂತೆಯೂ ಬತ್ತಿಹೋಗದ ಬುಗ್ಗೆಯಂತೆಯೂ ನೀವು ಇರುವಿರಿ. ಪುರಾತನಕಾಲದ ಪಾಳುಬಿದ್ದ ಮನೆಗಳನ್ನು ನಿಮ್ಮವರು ಮರಳಿ ಕಟ್ಟುವರು. ತಲತಲಾಂತರಗಳಿಂದ ಪಾಳುಬಿದ್ದಿರುವ ತಳಹದಿಗಳ ಮೇಲೆ ಕಟ್ಟಡಗಳನ್ನು ನೀವು ನಿರ್ಮಿಸುವಿರಿ. ‘ಬಿದ್ದ ಗೋಡೆಯನ್ನು ಎಬ್ಬಿಸಿದ ರಾಷ್ಟ್ರ, ಹಳೆಯ ದಾರಿಗಳನ್ನು ಸರಾಗಮಾಡಿದ ರಾಷ್ಟ್ರ’ ಎಂಬ ಬಿರುದು ನಿಮಗೆ ಬರುವುದು.” ಸಬ್ಬತ್‍ದಿನದ ಸದಾಚರಣೆ “ನೀವು ಸಬ್ಬತ್‍ದಿನವನ್ನು ತಾತ್ಸಾರ ಮಾಡದೆ, ಆ ನನ್ನ ಪರಿಶುದ್ಧ ದಿನದಲ್ಲಿ ನಿಮ್ಮ ದೈನಂದಿನ ವ್ಯವಹಾರವನ್ನು ನಡೆಸದೆ, ಸ್ವೇಚ್ಛೆಯಾಗಿ ವರ್ತಿಸದೆ, ಸ್ವಕಾರ್ಯದಲ್ಲೇ ನಿರತರಾಗದೆ, ಹರಟೆಮಾತುಗಳಲ್ಲಿ ಕಾಲಕಳೆಯದೆ, ಸರ್ವೇಶ್ವರಸ್ವಾಮಿಯ ಸಬ್ಬತ್‍ದಿನ ಪರಿಶುದ್ಧವಾದುದು, ಸಂತೋಷಕರವಾದುದು, ಮಾನ್ಯತೆಗೆ ಅರ್ಹವಾದುದು ಎಂದು ಸನ್ಮಾನಿಸಿದ್ದೇ ಆದರೆ ನೀವು ಸರ್ವೇಶ್ವರಸ್ವಾಮಿಯಾದ ನನ್ನ ಆನಂದದಲ್ಲಿ ಭಾಗಿಗಳಾಗುವಿರಿ; ನಾನು ನಿಮ್ಮನ್ನು ಉನ್ನತಸ್ಥಾನಕ್ಕೆ ಏರಿಸುವೆನು. ನಿಮ್ಮ ಪಿತೃ ಯಕೋಬನ ಸೊತ್ತನ್ನು ನೀವು ನಿರಂತಕವಾಗಿ ಅನುಭವಿಸುವಂತೆ ಮಾಡುವೆನು,” ಇದು ಸರ್ವೇಶ್ವರಸ್ವಾಮಿಯ ನುಡಿ.

ಕೀರ್ತನೆ: 86:1-2, 3-4, 5-6

ಶ್ಲೋಕ: ನಿನ್ನ ಸತ್ಯಪಥದಲಿ ನಾ ನಡೆವಂತೆ, ಬೋಧಿಸೆನಗೆ ಪ್ರಭೂ, ನಿನ್ನ ಮಾರ್ಗವನು.

ಶುಭಸಂದೇಶ: ಲೂಕ 5:27-32


ಯೇಸುಸ್ವಾಮಿ ಅಲ್ಲಿಂದ ಹೋಗುತ್ತಿದ್ದಾಗ ಲೇವಿ ಎಂಬ ಸುಂಕದವನನ್ನು ಕಂಡರು. ಅವನು ಸುಂಕ ವಸೂಲಿಗಾಗಿ ಉಕ್ಕಡದಲ್ಲಿ ಕುಳಿತಿದ್ದನು. “ನನ್ನನ್ನು ಹಿಂಬಾಲಿಸು,” ಎಂದು ಹೇಳಿ ಯೇಸು ಅವನನ್ನು ಕರೆದರು. ಲೇವಿಯು ಎದ್ದು ಎಲ್ಲವನ್ನೂ ಪರಿತ್ಯಜಿಸಿ, ಯೇಸುವನ್ನು ಹಿಂಬಾಲಿಸಿದನು. ತರುವಾಯ ಆ ಲೇವಿ ತನ್ನ ಮನೆಯಲ್ಲಿ ಯೇಸುವಿಗೆ ಒಂದು ದೊಡ್ಡ ಔತಣವನ್ನು ಏರ್ಪಡಿಸಿದನು. ಬಹುಜನ ಸುಂಕದವರೂ ಇತರರೂ ಯೇಸುವಿನ ಪಂಕ್ತಿಯಲ್ಲೇ ಊಟಕ್ಕೆ ಕುಳಿತಿದ್ದರು. ಇದನ್ನು ಕಂಡ ಫರಿಸಾಯರು ಮತ್ತು ಅವರ ಪಂಥಕ್ಕೆ ಸೇರಿದ ಧರ್ಮಶಾಸ್ತ್ರಜ್ಞರು ಗೊಣಗಾಡುತ್ತಾ, ಯೇಸುವಿನ ಶಿಷ್ಯರ ಬಳಿಗೆ ಬಂದು, “ನೀವು ಸುಂಕದವರ ಮತ್ತು ಪಾಪಿಷ್ಠರ ಜೊತೆಯಲ್ಲಿ ಏಕೆ ತಿನ್ನುತ್ತೀರಿ, ಕುಡಿಯುತ್ತೀರಿ?” ಎಂದು ಪ್ರಶ್ನಿಸಿದರು. ಅದಕ್ಕೆ ಯೇಸು ಪ್ರತ್ಯುತ್ತರವಾಗಿ, “ವೈದ್ಯನ ಅವಶ್ಯಕತೆಯಿರುವುದು ರೋಗಿಗಳಿಗೆ, ಆರೋಗ್ಯವಂತರಿಗಲ್ಲ; ನಾನು ಬಂದಿರುವುದು ಧರ್ಮಿಷ್ಠರನ್ನು ಕರೆಯುವುದಕ್ಕಲ್ಲ, ‘ಪಶ್ಚತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿ, ದೇವರಿಗೆ ಅಭಿಮುಖಿಗಳಾಗಿರಿ’ ಎಂದು ಪಾಪಿಷ್ಠರನ್ನು ಕರೆಯುವುದಕ್ಕೆ,” ಎಂದರು.

ಮನಸ್ಸಿಗೊಂದಿಷ್ಟು : ’ಹಿಂಬಾಲಿಸು’ ಎಂಬ ಒಂದೇ ಮಾತಿಗೆ ಎಲ್ಲವನ್ನೂ ತ್ಯಜಿಸಿ  ಹೊರಟ ಮತ್ತಾಯನ ಆ ಕ್ಷಣದ ನಿರ್ಧಾರ ನಮಗೆಷ್ಟು ಕಠಿಣ. ವೈದ್ಯನ ಅವಶ್ಯಕತೆಯಿರುವ ರೋಗಿಗಳಂತ ನಮ್ಮ ಬದುಕಿಗೆ ಯೇಸುವಿನ ಅವಶ್ಯಕತೆ ಇದ್ದರೂ ನಾವು ಯೇಸುವನ್ನು ಬರಮಾಡಿಕೊಳ್ಳುತ್ತಿಲ್ಲ. ಬರಮಾಡಿಕೊಳ್ಳಲು ಬೇಕಾದ ಹೃದಯ ನಮ್ಮದಾಗಲಿ.

ಪ್ರಶ್ನೆ : ಯೇಸು ನನ್ನ ಬಾಳಿಗೆಷ್ಟು ಅವಶ್ಯ?  

ಪ್ರಭುವೇ,
ಬಾ ಹಿಂಬಾಲಿಸು ಎಂದು 
ಕರೆದರೂ ನೀನು
ತಡೆಯೊಡ್ಡುತ್ತಿದೆ 
ನನ್ನೊಳಗಿನ ನಾನು
ಪಾಪ ಸರಿಸಿ ಏರ್ಪಡಿಸುವೆ
ಮನದಲೊಂದೌತಣ
ಮುಂದಿನದೆಲ್ಲಾ ಸಂಭ್ರಮಕ್ಕೆ
ನೀನೊಬ್ಬನೇ ಆಗು ಕಾರಣ
-ಚಿತ್ತ   

28.02.2020 - "ಇದೇ ಅಲ್ಲವೆ ನನಗೆ ಇಷ್ಟಕರವಾದ ಉಪವಾಸ ವ್ರತ?"

ಮೊದಲನೇ ವಾಚನ: ಯೆಶಾಯ  58:1-9

ಸರ್ವೇಶ್ವರಸ್ವಾಮಿ ಇಂತೆನ್ನುತ್ತಾರೆ: “ಗಟ್ಟಿಯಾಗಿ ಕೂಗು, ನಿಲ್ಲಿಸಬೇಡ; ಕೊಂಬಿನಂತೆ ಸ್ವರವೆತ್ತಿ ನನ್ನ ಜನರಿಗೆ ಅವರ ದ್ರೋಹವನ್ನು ತಿಳಿಸು; ಯಕೋಬ ವಂಶದವರಿಗೆ ಅವರ ಪಾಪವನ್ನು ತಿಳಿಸು; ತಮ್ಮ ದೇವರ ವಿಧಿನಿಯಮಗಳನ್ನು ಬಿಡದೆ, ಧರ್ಮವನ್ನು ಆಚರಿಸುವ ಜನಾಂಗವೊ ಎಂಬಂತೆ, ಇವರು ದಿನ ದಿನವೂ ನನ್ನ ದರ್ಶನಕ್ಕಾಗಿ ಬರುತ್ತಾರೆ; ನನ್ನ ಮಾರ್ಗವನ್ನು ತಿಳಿದುಕೊಳ್ಳುವುದರಲ್ಲಿ ಸಂತೋಷಿಸುವಂತೆ ನಟಿಸುತ್ತಾರೆ. ಧೈರ್ಯವಾಗಿ ನನ್ನಿಂದ ನ್ಯಾಯವಿಧಿಗಳನ್ನು ಕೇಳುತ್ತಾರೆ. ದೇವ ದರ್ಶನದಲ್ಲಿ ಆನಂದಿಸುವವರಂತೆ ತೋರಿಸಿಕೊಳ್ಳುತ್ತಾರೆ.” ನಾವು ಉಪವಾಸ ಮಾಡಿದ್ದೇವೆ, ನೀನು ಏಕೆ ಕಟಾಕ್ಷಿಸುವುದಿಲ್ಲ? ನಮ್ಮನ್ನು ನಾವೇ ತಗ್ಗಿಸಿಕೊಂಡಿದ್ದೇವೆ, ನೀನು ಗಮನಿಸದೆ ಇರುವುದೇಕೆ?” ಎಂದುಕೊಳ್ಳುತ್ತಾರೆ. “ನಿಮ್ಮ ಉಪವಾಸದ ಪರಿಣಾಮಗಳು ಇಷ್ಟೆ: ವ್ಯಾಜ್ಯ, ಕಲಹ, ಗುದ್ದಾಟ. ಇಲ್ಲಿಯವರೆಗೆ ನೀವು ಮಾಡಿದಂತೆ ಉಪವಾಸ ಮಾಡಿದರೆ, ನಿಮ್ಮ ಪ್ರಾರ್ಥನೆ ಪರಲೋಕವನ್ನು ಮುಟ್ಟುವುದಿಲ್ಲ. ಸ್ವಾರ್ಥ ನಿಗ್ರಹಕ್ಕಾಗಿ ನಾನು ನೇಮಿಸಿದ ಉಪವಾಸದ ದಿನ ಇಂಥದೋ? ಒಬ್ಬನು ಜೊಂಡಿನಂತೆ ತಲೆಯನ್ನು ಬಗ್ಗಿಸಿಕೊಳ್ಳುವುದು, ಗೋಣಿತಟ್ಟನ್ನು ಉಟ್ಟುಕೊಳ್ಳುವುದು, ಬೂದಿಯ ಗುಂಡಿಯಲ್ಲಿ ಕುಳಿತುಕೊಳ್ಳುವುದು, ಇವು ನನಗೆ ಮೆಚ್ಚುಗೆಯಾಗುವ ಉಪವಾಸ ಎನ್ನುತ್ತೀರೊ? “ನಾನು ಹೇಳುವುದನ್ನು ಕೇಳಿ: ಅನ್ಯಾಯದ ಬಂಧನಗಳನ್ನು ಬಿಚ್ಚುವುದು, ಭಾರವಾದ ನೊಗದ ಕಣಿಗಳನ್ನು ಕಳಚುವುದು, ಜರ್ಜರಿತರಾದವರನ್ನು ಬಿಡುಗಡೆಮಾಡುವುದು, ಹಸಿದವರಿಗೆ ಅನ್ನ ಹಾಕುವುದು, ನೆಲೆಯಿಲ್ಲದೆ ಅಲೆಯುತ್ತಿರುವ ಬಡವರನ್ನು ಮನೆಗೆ ಬರಮಾಡಿಕೊಳ್ಳುವುದು, ಬೆತ್ತಲೆಯಾದವರನ್ನು ಕಂಡಾಗ ಅವರಿಗೆ ಬಟ್ಟೆ ಹೊದಿಸುವುದು, ನಿನ್ನ ರಕ್ತ ಸಂಬಂಧಿಕರಿಂದ ಮುಖ ಮರೆಮಾಡಿಕೊಳ್ಳದಿರುವುದು, ಇದೇ ಅಲ್ಲವೆ ನನಗೆ ಇಷ್ಟಕರವಾದ ಉಪವಾಸ ವ್ರತ? “ಇದನ್ನು ಆಚರಿಸುವಾಗ ನೀವು ಉದಯ ಕಾಲದ ಸೂರ್ಯನಂತೆ ಪ್ರಜ್ವಲಿಸುವಿರಿ. ಆರೋಗ್ಯಭಾಗ್ಯವು ನಿಮಗೆ ಬೇಗನೆ ದೊರಕುವುದು. ನಿಮ್ಮ ಸದಾಚಾರವೆ ನಿಮಗೆ ಮುಂಬಲವಾಗಿ ನಡೆಸುವುದು; ಸರ್ವೇಶ್ವರಸ್ವಾಮಿಯ ಮಹಿಮೆ ನಿಮಗೆ ಹಿಂಬಲವಾಗಿ ಇರುವುದು. ಆಗ ನೀವು ಪ್ರಾರ್ಥಿಸಿದರೆ, ಆ ಸ್ವಾಮಿ ನಿಮಗೆ ಉತ್ತರಿಸುವರು; ಮೊರೆಯಿಟ್ಟು ಕರೆದರೆ ‘ಇಗೋ ಆಲಿಸುತ್ತಿದ್ದೇನೆ’ ಎನ್ನುವರು. 

ಕೀರ್ತನೆ: 51:3-4, 5-6, 18-19

ಶ್ಲೋಕ: ನೊಂದ ಬೆಂದ ಮನವನಾತ ಬಲ್ಲೆಯೆನನು

ಶುಭಸಂದೇಶ: ಮತ್ತಾಯ 9: 14-15

ಯೊವಾನ್ನನ ಶಿಷ್ಯರು ಯೇಸುಸ್ವಾಮಿಯ ಬಳಿಗೆ ಬಂದರು. “ನಾವೂ ಫರಿಸಾಯರೂ ಉಪವಾಸ ವ್ರತವನ್ನು ಕೈಗೊಳ್ಳುತ್ತೇವೆ. ಆದರೆ ನಿಮ್ಮ ಶಿಷ್ಯರು ಏಕೆ ಹಾಗೆ ಮಾಡುವುದಿಲ್ಲ?" ಎಂದು ಪ್ರಶ್ನೆ ಹಾಕಿದರು. ಅದಕ್ಕೆ ಯೇಸು, "ಮದುವಣಿಗನು ಜೊತೆಯಲ್ಲಿ ಇರುವಷ್ಟು ಕಾಲ ಅವನ ಆಪ್ತರು ದುಃಖಪಡುವುದುಂಟೇ? ಮದುವಣಿಗನು ಅವರಿಂದ ಅಗಲಬೇಕಾಗುವ ಕಾಲವು ಬರುವುದು; ಆಗ ಅವರು ಉಪವಾಸ ಮಾಡುವರು.

ಮನಸ್ಸಿಗೊಂದಿಷ್ಟು : ಕೇವಲ ಆಚರಣೆಗಾಗಿ ಮಾತ್ರವೇ ಮಾಡುವ ಉಪವಾಸ ವ್ರತದ ಬಗ್ಗೆ ಇಂದಿನ ಎರಡೂ ವಾಚನಗಳು ಮಾತನಾಡುತ್ತವೆ.   ದೇವರಿಗೆ ಇಷ್ಟವಾದ  ಉಪವಾಸ ವ್ರತ ಯಾವುದೆಂದು ಯೆಶಾಯ ಪ್ರವಾದಿ ಹೇಳಿದರೆ, "ನಾನು ಜೊತೆಗಿರುವಾಗ ಉಪವಾಸವೇಕೆ ಬೇಕು" ಎನ್ನುತ್ತಾರೆ ಯೇಸು. ನಮ್ಮ ಉಪವಾಸ, ತ್ಯಾಗದಿಂದ ನಮಗೆ ಮಾತ್ರವೇ ಒಳ್ಳೆಯದಾಗಿ ಮತ್ತೊಬ್ಬರಿಗೆ ಅದರಿಂದ ಪ್ರಯೋಜನವಾಗದಿದ್ದರೆ ಅದು ನಿರರ್ಥಕ ಎಂಬ ಪೋಪ್ ಫ್ರಾನ್ಸಿಸ್ ರ  ಮಾತು ಚಿಂತನೆಗೆ ಯೋಗ್ಯವಾಗಿದೆ. 

ಪ್ರಭುವೇ,
ನೀ ನನ್ನ ಜೊತೆಯಿರೇ ದುಃಖವೇಕೆ 
ಕರುಣೆ ಪ್ರೀತಿಯಿಲ್ಲದ ಉಪವಾಸವೇಕೆ?
-ಚಿತ್ತ 

27.02.2020 - "ನಾನು ಶುಭವನ್ನೂ ಅಶುಭವನ್ನೂ ಜೀವವನ್ನೂ ಸಾವನ್ನೂ ಈಗ ನಿಮ್ಮ ಮುಂದೆ ಇಟ್ಟಿದ್ದೇನೆ"

ಮೊದಲನೇ ವಾಚನ: ಧರ್ಮೋಪದೇಶಕಾಂಡ 30:15-20

ಮೋಶೆಯು ಜನರಿಗೆ ಹೀಗೆಂದು ಹೇಳಿದನು: “ಇಗೋ ನೋಡಿ: ನಾನು ಶುಭವನ್ನೂ ಅಶುಭವನ್ನೂ ಜೀವವನ್ನೂ ಸಾವನ್ನೂ ಈಗ ನಿಮ್ಮ ಮುಂದೆ ಇಟ್ಟಿದ್ದೇನೆ. ನಾನು ಈಗ ನಿಮಗೆ ಬೋಧಿಸುವಂತೆ ನೀವು ನಿಮ್ಮ ದೇವರಾದ ಸರ್ವೇಶ್ವರನನ್ನು ಪ್ರೀತಿಸಿ, ಅವರು ಹೇಳಿದ ಮಾರ್ಗದಲ್ಲಿ ನಡೆದು, ಅವರ ಆಜ್ಞಾವಿಧಿ ನಿರ್ಣಯಗಳನ್ನು ಅನುಸರಿಸಿದರೆ ನೀವು ಬದುಕಿ ಬಾಳುವಿರಿ, ಅಭಿವೃದ್ಧಿಯಾಗುವಿರಿ, ಮತ್ತು ನೀವು ಸ್ವಾಧೀನ ಮಾಡಿಕೊಳ್ಳಲು ಹೋಗುವ ನಾಡಿನಲ್ಲಿ ನಿಮ್ಮ ದೇವರಾದ ಸರ್ವೇಶ್ವರ ನಿಮ್ಮನ್ನು ಆಶೀರ್ವದಿಸುವರು. ಆದರೆ ನೀವು ಅವರನ್ನು ಬಿಟ್ಟು, ಅವರ ಮಾತನ್ನು ಕೇಳಲೊಲ್ಲದೆ, ಮೋಸಹೋಗಿ, ಇತರ ದೇವರುಗಳನ್ನು ಪೂಜಿಸಿ ಅವಲಂಬಿಸಿದರೆ ನೀವು ಸ್ವಾಧೀನ ಮಾಡಿಕೊಳ್ಳಲು ಜೋರ್ಡನ್ ನದಿಯನ್ನು ದಾಟಿ ಹೋಗುವ ನಾಡಿನಲ್ಲಿ ಬಹುಕಾಲ ಇರದೆ ನಾಶ ಆಗಿ ಹೋಗುವಿರಿ. ಇದನ್ನು ನಾನು ಈಗ ನಿಮಗೆ ಖಂಡಿತವಾಗಿ ತಿಳಿಸುತ್ತೇನೆ. ನಾನು ಸಾವು ಜೀವಗಳನ್ನೂ ಶಾಪಾಶೀರ್ವಾದಗಳನ್ನೂ ಈಗ ನಿಮ್ಮ ಮುಂದೆ ಇಟ್ಟಿದ್ದೇನೆ; ಇದಕ್ಕೆ ಭೂಮಿ ಆಕಾಶಗಳೇ ಸಾಕ್ಷಿಗಳಾಗಿರಲಿ; ಆದುದರಿಂದ ನೀವೂ ನಿಮ್ಮ ಸಂತತಿಯವರೂ ಬದುಕಿಬಾಳುವಂತೆ ಜೀವವನ್ನೇ ಆರಿಸಿಕೊಳ್ಳಿ; ನಿಮ್ಮ ದೇವರಾದ ಸರ್ವೇಶ್ವರನನ್ನು ಪ್ರೀತಿಸಿ ಅವರ ಮಾತಿಗೆ ವಿಧೇಯರಾಗಿರಿ; ಅವರನ್ನು ಹೊಂದಿಕೊಂಡೇ ಇರಿ. ಸರ್ವೇಶ್ವರ ನಿಮ್ಮ ಪಿತೃಗಳಾದ ಅಬ್ರಹಾಮ್ ಇಸಾಕ್, ಯಕೋಬರಿಗೆ ಪ್ರಮಾಣಮಾಡಿ ಕೊಟ್ಟ ನಾಡಿನಲ್ಲಿ ನೀವು ಬದುಕಿ ಬಾಳುವುದಕ್ಕೂ ಬಹುಕಾಲ ಇರುವುದಕ್ಕೂ ಅವರೇ ಆಧಾರ.”

ಕೀರ್ತನೆ: 1:1-2, 3, 4, 6

ಶ್ಲೋಕ: ಪ್ರಭುವಿನಲ್ಲೇ ಭರವಸೆಯಿಟ್ಟು ನಡೆವಾತನು ಧನ್ಯನು

ಶುಭಸಂದೇಶ: ಲೂಕ 9:22-25


ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು: “ನರಪುತ್ರನು ಕಠಿಣವಾದ ಯಾತನೆಯನ್ನು ಅನುಭವಿಸಬೇಕಾಗಿದೆ. ಸಭಾ ಪ್ರಮುಖರಿಂದಲೂ ಮುಖ್ಯ ಯಾಜಕರಿಂದಲೂ ಧರ್ಮಶಾಸ್ತ್ರಿಗಳಿಂದಲೂ ಆತನು ತಿರಸ್ಕೃತನಾಗಿ ಕೊಲ್ಲಲ್ಪಡುವನು. ಆದರೆ ಮೂರನೇ ದಿನ ಆತನು ಪುನರುತ್ಥಾನ ಹೊಂದುವನು,” ಎಂದು ಅವರಿಗೆ ತಿಳಿಸಿದರು. ಯೇಸುಸ್ವಾಮಿ ಎಲ್ಲರನ್ನು ನೋಡಿ ಹೇಳಿದ್ದೇನೆಂದರೆ: “ಯಾರಿಗಾದರೂ ನನ್ನನ್ನು ಹಿಂಬಾಲಿಸಲು ಮನಸ್ಸಿದ್ದರೆ, ಅವನು ತನ್ನನ್ನು ತಾನೇ ಪರಿತ್ಯಜಿಸಿ, ತನ್ನ ಶಿಲುಬೆಯನ್ನು ಅನುದಿನವೂ ಹೊತ್ತುಕೊಂಡು ನನ್ನನ್ನು ಹಿಂಬಾಲಿಸಲಿ. ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಹಾತೊರೆಯುವವನು ಅದನ್ನು ಕಳೆದುಕೊಳ್ಳುವನು. ಆದರೆ ನನ್ನ ನಿಮಿತ್ತ ತನ್ನ ಪ್ರಾಣವನ್ನು ಕಳೆದುಕೊಳ್ಳುವವನು ಅದನ್ನು ನಿತ್ಯಕ್ಕೂ ಉಳಿಸಿಕೊಳ್ಳುವನು. ಒಬ್ಬನು ಪ್ರಪಂಚವನ್ನೆಲ್ಲಾ ಗೆದ್ದುಕೊಂಡು ತನ್ನ ಪ್ರಾಣವನ್ನೇ ಕಳೆದುಕೊಂಡರೆ ಅಥವಾ ತೆತ್ತರೆ ಅವನಿಗೆ ಅದರಿಂದ ಬರುವ ಲಾಭವಾದರೂ ಏನು?

ಮನಸ್ಸಿಗೊಂದಿಷ್ಟು :  ಆಯ್ಕೆಗಳು ನಮ್ಮನ್ನು ಗೊಂದಲಕ್ಕೆ ತಳ್ಳಬಹುದು. ಸುಖ-ಸಮೃದ್ಧಿ, ಆಸೆ-ಸೌಲಭ್ಯಗಳ ನಡುವೆ ಶಿಲುಬೆಯನ್ನು ಹೊತ್ತು ತಮ್ಮ ಹಿಂದೆ  ಬರಲು ಯೇಸು ನೀಡುವ ಕರೆ ಕಷ್ಟದ ಆಯ್ಕೆಯೇ. ಇಂದಿನವರೆಗಿನ ನಮ್ಮ ಆಯ್ಕೆ ಯಾವುದಾಗಿತ್ತು. ಮುಂದೆ ಯಾವುದಾಗಬಹುದು?
ಯೇಸುವಿನ ಹಿಂದೆ ಸಾಗಲು ನಮಗಿರುವ ಅಡ್ಡಿಗಳೇನು?

ಪ್ರಶ್ನೆ : ಇಂದಿನ ಶುಭಸಂದೇಶದಲ್ಲಿನ ಯೇಸುವಿನ ಕರೆ ನಮ್ಮನ್ನು ಯೋಚಿಸುವಂತೆ ಮಾಡಿದೆಯೇ ಅಥವಾ ಪ್ರತಿ ನಿತ್ಯದ ವಾಕ್ಯದಂತೆ ಇದೂ ಓದಿಗೆ ಮಾತ್ರವೇ?

ಪ್ರಭುವೇ,
ಹೊರಬೇಕಾದ ಶಿಲುಬೆ, ಭಾರವೇ ಸರಿ 
ಹೊತ್ತು ನಿನ್ನ ಹಿಂದೆ ಬರುವುದಾಗಲಿ 
ಈ ನನ್ನ ಜೀವನದ ಗುರಿ
-ಚಿತ್ತ  



26.02.2020 - "ಅಂತರಂಗದಲ್ಲಿ ನಡೆಯುವುದನ್ನು ನೋಡುವ ನಿನ್ನ ತಂದೆ ಅದಕ್ಕೆಲ್ಲ ಪ್ರತಿಫಲ ಕೊಡುವರು"





ಮೊದಲನೇ ವಾಚನ: ಯೊವೇಲ 2:12-18

ಸರ್ವೇಶ್ವರ ಇಂತೆನ್ನುತ್ತಾರೆ: “ಈಗಲಾದರೂ ಮನಃಪೂರ್ವಕವಾಗಿ ನನ್ನ ಕಡೆಗೆ ತಿರುಗಿಕೊಳ್ಳಿ. ಉಪವಾಸ ಕೈಗೊಂಡು, ಅತ್ತು ಗೋಳಾಡಿ.” ನಿಮ್ಮ ಉಡುಪುಗಳನ್ನು ಅಲ್ಲ, ಹೃದಯಗಳನ್ನು ಸೀಳಿರಿ: ನಿಮ್ಮ ದೇವರಾದ ಸರ್ವೇಶ್ವರಸ್ವಾಮಿಯ ಕಡೆಗೆ ತಿರುಗಿಕೊಳ್ಳಿ; ಅವರು ದಯಾವಂತರು, ಕರುಣಾಮೂರ್ತಿ, ಸಹನಶೀಲ, ಪ್ರೀತಿಮಯ. ವಿಧಿಸಬೇಕಾಗಿದ್ದ ದಂಡನೆಗಾಗಿ ಮನನೊಂದುಕೊಳ್ಳುವಂಥವರು. ಒಂದು ವೇಳೆ ಸರ್ವೇಶ್ವರ ತಮ್ಮ ಮನಸ್ಸನ್ನು ಬದಲಾಯಿಸಬಹುದು. ನಿಮ್ಮ ಕಡೆಗೆ ತಿರುಗಿ ನಿಮ್ಮನ್ನು ಆಶೀರ್ವದಿಸಬಹುದು; ನಿಮ್ಮ ದೇವರಾದ ಅವರಿಗೆ ಅರ್ಪಿಸಲು ಬೇಕಾದ ನೈವೇದ್ಯಗಳನ್ನು ಧಾರಾಳವಾಗಿ ಅನುಗ್ರಹಿಸಬಹುದು. ಸಿಯೋನ್ ಶಿಖರದ ಮೇಲೆ ನಿಂತು ಕೊಂಬೂದಿರಿ. ಉಪವಾಸ ದಿನವನ್ನು ಘೋಷಿಸಿರಿ. ಮಹಾಸಭೆಯನ್ನು ಕರೆಯಿರಿ. ಜನರನ್ನು ಒಟ್ಟುಗೂಡಿಸಿರಿ; ಸಭೆಯನ್ನು ಏರ್ಪಡಿಸಿರಿ; ವೃದ್ಧರನ್ನು, ಮಕ್ಕಳನ್ನು, ಮೊಲೆಗೂಸುಗಳನ್ನು ಕರೆತನ್ನಿರಿ. ವಧೂವರರು ತಮ್ಮ ಕಲ್ಯಾಣಗೃಹದಿಂದ ಹೊರಟುಬರಲಿ. ಸರ್ವೇಶ್ವರಸ್ವಾಮಿಯ ಪರಿಚಾರಕರಾದ ಯಾಜಕರು ದೇವಾಲಯದ ದ್ವಾರ ಮಂಟಪಕ್ಕೂ ಬಲಿಪೀಠಕ್ಕೂ ನಡುವೆ ಶೋಕತಪ್ತರಾಗಿ ಹೀಗೆಂದು ಪ್ರಾರ್ಥಿಸಲಿ: “ಕರುಣೆ ತೋರು, ಹೇ ಸರ್ವೇಶ್ವರಾ, ನಿನ್ನ ಪ್ರಜೆಗೆ ನಿಂದೆಯಾಗದಿರಲಿ ನಿನ್ನ ಸ್ವಂತ ಜನತೆಗೆ ಗುರಿಯಾಗದಿರಲಿ ಅವರು ಅನ್ಯರ ತಾತ್ಸಾರಕೆ ‘ನಿಮ್ಮ ದೇವನೆಲ್ಲಿ?’ ಎಂಬ ಪರಕೀಯರ ಹೀಯಾಳಿಕೆಗೆ” ಆಗ ಸರ್ವೇಶ್ವರ ತಮ್ಮ ದೇಶದ ಮೇಲೆ ಅಭಿಮಾನಗೊಂಡು, ತಮ್ಮ ಜನರಿಗೆ ಕರುಣೆ ತೋರಿ ಹೀಗೆಂದರು:

ಕೀರ್ತನೆ: 51:3-4, 5-6, 12-13, 14, 17

ಶ್ಲೋಕ: ಕೃಪಾಳು ದೇವಾ ಕರುಣಿಸೆಮ್ಮನು ನಿಮ್ಮ ವಿರುದ್ಧ ನಾವು ಪಾಪ ಮಾಡಿದ್ದೇವೆ.

ಎರಡನೇ ವಾಚನ: 2 ಕೊರಿಂಥಿಯರಿಗೆ 5:20-6:2

ಸಹೋದರರೇ, ನಾವು ಕ್ರಿಸ್ತಯೇಸುವಿನ ರಾಯಭಾರಿಗಳು. ದೇವರೇ ನಮ್ಮ ಮುಖಾಂತರ ಕರೆನೀಡುತ್ತಿದ್ದಾರೆ. ಅವರೊಡನೆ ಸಂಧಾನಮಾಡಿಕೊಳ್ಳಿರೆಂದು ಕ್ರಿಸ್ತಯೇಸುವಿನ ಹೆಸರಿನಲ್ಲಿ ನಾವು ನಿಮ್ಮನ್ನು ವಿನಂತಿಸುತ್ತೇವೆ. ಪಾಪವನ್ನೇ ಅರಿಯದ ಕ್ರಿಸ್ತಯೇಸುವನ್ನು ದೇವರು ನಮಗೋಸ್ಕರ ಪಾಪಸ್ವರೂಪಿಯನ್ನಾಗಿಸಿದರು. ಕ್ರಿಸ್ತಯೇಸುವಿನಲ್ಲಿ ನಾವು ದೇವರೊಡನೆ ಸತ್ಸಂಬಂಧವನ್ನು ಪಡೆಯಲೆಂದೇ ಹೀಗೆ ಮಾಡಿದರು. ದೇವರೊಡನೆ ದುಡಿಯುತ್ತಿರುವ ನಾವು ನಿಮ್ಮಲ್ಲಿ ವಿಜ್ಞಾಪಿಸುವುದೇನೆಂದರೆ: ದೇವರಿಂದ ನೀವು ಪಡೆದ ವರಪ್ರಸಾದಗಳನ್ನು ವ್ಯರ್ಥಮಾಡಬೇಡಿ. "ಸುಪ್ರಸನ್ನತೆಯ ಕಾಲದಲ್ಲಿ ನಿನ್ನನ್ನಾಲಿಸಿದೆನು; ಉದ್ಧಾರ ದಿನದಂದು ನಿನಗೆ ನೆರವಾದೆನು,” ಎಂದಿದ್ದಾರೆ ದೇವರು. ಇದೇ ಆ ಸುಪ್ರಸನ್ನತೆಯ ಕಾಲ. ಇದೇ ಆ ಉದ್ಧಾರದ ಸುದಿನ.

ಶುಭಸಂದೇಶ: ಮತ್ತಾಯ 6:1-6, 16-18

ಯೇಸು ತಮ್ಮ ಶಿಷ್ಯರಿಗೆ ಹೀಗೆಂದರು: "ಜನರಿಗೆ ತೋರಿಸಿಕೊಳ್ಳುವುದಕ್ಕಾಗಿ ನಿಮ್ಮ ಧಾರ್ಮಿಕ ಕಾರ್ಯಗಳನ್ನು ಅವರ ಎದುರಿಗೆ ಪ್ರದರ್ಶಿಸದಂತೆ ಎಚ್ಚರಿಕೆಯಿಂದಿರಿ. ಹಾಗೆ ಮಾಡಿದರೆ, ಸ್ವರ್ಗದಲ್ಲಿರುವ ನಿಮ್ಮ ತಂದೆಯಿಂದ ನಿಮಗೆ ಪ್ರತಿಫಲ ದೊರಕದು. ಅಂತೆಯೇ, ನೀನು ದಾನಧರ್ಮ ಮಾಡುವಾಗ ತುತೂರಿಯನ್ನು ಊದಿಸಬೇಡ. ಜನರ ಹೊಗಳಿಕೆಗಾಗಿ ಕಪಟಿಗಳು ಪ್ರಾರ್ಥನಾಮಂದಿರಗಳಲ್ಲೂ ಹಾದಿಬೀದಿಗಳಲ್ಲೂ ಹೀಗೆ ಪ್ರದರ್ಶನ ಮಾಡುತ್ತಾರೆ. ಅವರಿಗೆ ಬರಬೇಕಾದ ಫಲ ಪೂರ್ತಿಯಾಗಿ ದೊರಕಿದ್ದಾಯಿತೆಂದು ನಿಮಗೆ ಖಚಿತವಾಗಿ ಹೇಳುತ್ತೇನೆ. ಆದರೆ ನೀನು ದಾನಧರ್ಮ ಮಾಡುವಾಗ ನಿನ್ನ ಬಲಗೈ ಕೊಡುವುದು ನಿನ್ನ ಎಡಗೈಗೂ ತಿಳಿಯದ ಹಾಗೆ ಗೋಪ್ಯವಾಗಿರಲಿ. ಅಂತರಂಗದಲ್ಲಿ ನಡೆಯುವುದನ್ನು ನೋಡುವ ನಿನ್ನ ತಂದೆ ನಿನಗೆ ಪ್ರತಿಫಲವನ್ನು ಕೊಡುವರು." "ಪ್ರಾರ್ಥನೆ ಮಾಡುವಾಗ ಕಪಟಿಗಳಂತೆ ಮಾಡಬೇಡಿ. ಜನರು ತಮ್ಮನ್ನು ನೋಡಲೆಂದು ಪ್ರಾರ್ಥನಾ ಮಂದಿರಗಳಲ್ಲೂ ಬೀದಿಯ ಚೌಕಗಳಲ್ಲೂ ನಿಂತು ಪ್ರಾರ್ಥನೆ ಮಾಡಲು ಇಚ್ಛಿಸುತ್ತಾರೆ. ಅವರಿಗೆ ಬರಬೇಕಾದ ಪೂರ್ತಿಫಲ ಆಗಲೇ ಬಂದಾಯಿತೆಂಬುದು ನಿಮಗೆ ಚೆನ್ನಾಗಿ ತಿಳಿದಿರಲಿ. ನೀನು ಪ್ರಾರ್ಥನೆ ಮಾಡುವಾಗ ನಿನ್ನ ಕೊಠಡಿಗೆ ಹೋಗು; ಬಾಗಿಲನ್ನು ಮುಚ್ಚು; ಅಂತರಂಗದಲ್ಲಿರುವ ನಿನ್ನ ತಂದೆಗೆ ಪ್ರಾರ್ಥನೆ ಮಾಡು. ಅಂತರಂಗದಲ್ಲಿ ನಡೆಯುವುದನ್ನು ನೋಡುವ ನಿನ್ನ ತಂದೆ ನಿನಗೆ ಪ್ರತಿಫಲವನ್ನು ಕೊಡುವರು."  "ಉಪವಾಸ ಮಾಡುವಾಗ ಕಪಟಿಗಳಂತೆ ಮುಖ ಸಪ್ಪೆಮಾಡಬೇಡಿ. ಜನರ ಕಣ್ಣಿಗೆ ತಾವು ಉಪವಾಸಿಗಳೆಂದು ತೋರ್ಪಡಿಸಿಕೊಳ್ಳುವುದಕ್ಕಾಗಿ ಅವರು ಮುಖವನ್ನು ಬಾಡಿಸಿಕೊಳ್ಳುತ್ತಾರೆ. ಅವರಿಗೆ ಬರಬೇಕಾದ ಫಲ ಪೂರ್ತಿಯಾಗಿ ದೊರಕಿಯಾಯಿತೆಂದು ನಿಮಗೆ ಖಚಿತವಾಗಿ ಹೇಳುತ್ತೇನೆ. ಆದರೆ ನೀನು ಉಪವಾಸ ಕೈಗೊಂಡಾಗ ಮುಖ ತೊಳೆದುಕೊ, ತಲೆಬಾಚಿಕೊ. ಆಗ ಉಪವಾಸ ಮಾಡುವವನಂತೆ ನೀನು ಜನರಿಗೆ ಕಾಣಿಸಿಕೊಳ್ಳುವುದಿಲ್ಲ; ಅಂತರಂಗದಲ್ಲಿ ಇರುವ ನಿನ್ನ ತಂದೆಗೆ ಮಾತ್ರ ಕಾಣಿಸಿಕೊಳ್ಳುವೆ. ಅಂತರಂಗದಲ್ಲಿ ನಡೆಯುವುದನ್ನು ನೋಡುವ ನಿನ್ನ ತಂದೆ ಅದಕ್ಕೆಲ್ಲ ಪ್ರತಿಫಲ ಕೊಡುವರು."

ಮನಸ್ಸಿಗೊಂದಿಷ್ಟು : ಸಾಂಪ್ರದಾಯಿಕ ಧಾರ್ಮಿಕ ಆಚರಣೆಗಳಾದ ದಾನ-ಧರ್ಮ ಪ್ರಾರ್ಥನೆ ಹಾಗೂ ಉಪವಾಸ ವ್ರತ ಹೇಗಿರಬೇಕೆಂಬುದನ್ನು ಯೇಸು ಇಂದು ಹೇಳುವುದನ್ನು ನಾವು ಕಾಣುತ್ತೇವೆ. ಆಚರಣೆಗಳು ತಮ್ಮ ಮೂಲ ಅರ್ಥವನ್ನೇ ಕಳೆದುಕೊಂಡು ಕೇವಲ ತೋರ್ಪಡಿಕೆಗೆ ಸೀಮಿತವಾದಾಗ ಅದು ಮನುಷ್ಯರ ಮೆಚ್ಚುಗೆಗಷ್ಟೇ  ಪಾತ್ರವಾಗುತ್ತದೆ. ಆದರೆ ದೇವರನ್ನು ಮೆಚ್ಚಿಸುವುದು ಅವುಗಳ ನಿಜ ಕಾರಣವಾಗಬೇಕು ಎಂಬುದು ಯೇಸುವಿನ ಕರೆ.

ಪ್ರಶ್ನೆ : ನಮ್ಮ ದಿನ ನಿತ್ಯದ ಕಾರ್ಯಗಳು ಯಾರನ್ನು ಹೆಚ್ಚು ಮೆಚ್ಚಿಸುವತ್ತ ಸಾಗುತ್ತಿದೆ? ಮನುಷ್ಯರನ್ನೋ ? ದೇವರನ್ನೋ ?

ಪ್ರಭುವೇ,
ಇಂದಿನವರೆಗಿನ 'ನನ್ನನ್ನು' ಸರಿಸಿ 
ಈಗಿಂದಲೇ  ನಿಮ್ಮನ್ನು ನನ್ನಲಿರಿಸಿ 
-ಚಿತ್ತ 


25.02.2020 - "“ನನ್ನ ಹೆಸರಿನಲ್ಲಿ ಇಂಥ ಮಗುವೊಂದನ್ನು ಯಾರು ಬರಮಾಡಿಕೊಳ್ಳುತ್ತಾನೋ ಅವನು ನನ್ನನ್ನೇ ಬರಮಾಡಿಕೊಳ್ಳುತ್ತಾನೆ; "

ಮೊದಲನೇ ವಾಚನ: ಯಕೋಬ 4:1-10


ನಿಮ್ಮಲ್ಲಿ ಕಲಹ ಕಾದಾಟಗಳು ಉಂಟಾಗುವುದು ಹೇಗೆ? ನಿಮ್ಮ ಇಂದ್ರಿಯಗಳಲ್ಲಿ ಗೊಂದಲವೆಬ್ಬಿಸುವ ದುರಿಚ್ಛೆಗಳಿಂದಲ್ಲವೇ? ಪರರ ಆಸ್ತಿಪಾಸ್ತಿಗಳನ್ನು ಬಯಸುತ್ತೀರಿ; ಅವುಗಳು ಸಿಗದೆ ಇದ್ದಾಗ, ನೀವು ಕೊಲೆಮಾಡಲೂ ಹಿಂಜರಿಯುವುದಿಲ್ಲ. ದುರಾಶೆಗಳಿಗೆ ಬಲಿಯಾಗುತ್ತೀರಿ; ಅವುಗಳು ಈಡೇರದಾಗ ಜಗಳವಾಡುತ್ತೀರಿ, ಕಾದಾಡುತ್ತೀರಿ. ನಿಮಗೆ ಬೇಕಾದುದು ನಿಮ್ಮಲ್ಲಿಲ್ಲ. ಏಕೆಂದರೆ, ನೀವು ಅದಕ್ಕಾಗಿ ಬೇಡಿಕೊಳ್ಳಲಿಲ್ಲ. ಬೇಡಿಕೊಂಡರೂ ನಿಮಗದು ದೊರಕುವುದಿಲ್ಲ. ಏಕೆಂದರೆ, ನಿಮ್ಮ ಬೇಡಿಕೆ ದುರುದ್ದೇಶದಿಂದ ಕೂಡಿರುತ್ತದೆ. ಭೋಗಾಭಿಲಾಶೆಗಳ ಈಡೇರಿಕೆ ನಿಮ್ಮ ಗುರಿಯಾಗಿರುತ್ತದೆ. ವಿಶ್ವಾಸದಲ್ಲಿ ವ್ಯಭಿಚಾರಿಗಳಂತೆ ಬಾಳುವವರೇ, ಲೋಕದೊಡನೆ ಗೆಳೆತನವೆಂದರೆ ದೇವರೊಡನೆ ಹಗೆತನವೆಂಬುದು ನಿಮಗೆ ತಿಳಿಯದೇ? ಲೋಕದೊಡನೆ ಗೆಳೆತನವನ್ನು ಬಯಸುವವನು ದೇವರೊಡನೆ ಹಗೆತನವನ್ನು ಬೆಳೆಸುತ್ತಾನೆ. “ದೇವರು ನಮ್ಮಲ್ಲಿ ಇರುವ ಆತ್ಮವನ್ನು ಅತ್ಯಾಸಕ್ತಿಯಿಂದ ಅಪೇಕ್ಷಿಸುತ್ತಾರೆ” ಎಂಬ ಪವಿತ್ರಗ್ರಂಥದ ವಾಕ್ಯವು ಹುರುಳಿಲ್ಲದ್ದೆಂದು ಭಾವಿಸುವಿರಾ? ದೇವರು ನಮಗೆ ದಯಪಾಲಿಸುವ ವರಪ್ರಸಾದ ಅತ್ಯಧಿಕವಾದುದು. ಎಂತಲೇ, “ದೇವರು ಗರ್ವಿಷ್ಠರನ್ನು ವಿರೋಧಿಸುತ್ತಾರೆ. ದೀನದಲಿತರಿಗೆ ಕೃಪಾವರವನ್ನು ಅನುಗ್ರಹಿಸುತ್ತಾರೆ,” ಎಂದು ಲಿಖಿತವಾಗಿದೆ. ಆದ್ದರಿಂದ ದೇವರಿಗೆ ಶರಣರಾಗಿ ಬಾಳಿ. ಸೈತಾನನನ್ನು ಎದುರಿಸಿ ನಿಲ್ಲಿ. ಅವನು ನಿಮ್ಮಿಂದ ಪಲಾಯನಗೈಯುವನು. ದೇವರ ಸವಿೂಪಕ್ಕೆ ಬನ್ನಿ, ಆಗ ಅವರು ನಿಮ್ಮ ಸವಿೂಪಕ್ಕೆ ಬರುವರು. ಪಾಪಾತ್ಮರೇ, ನಿಮ್ಮ ಕೈ ಶುದ್ಧವಾಗಿರಲಿ. ಎರಡು ಮನಸ್ಸಿನವರೇ, ನಿಮ್ಮ ಹೃದಯ ನಿರ್ಮಲವಾಗಿರಲಿ. ನಿಮ್ಮ ಹೀನಸ್ಥಿತಿಗಾಗಿ ವ್ಯಥೆಪಡಿರಿ, ಕಣ್ಣೀರಿಟ್ಟು ಗೋಳಾಡಿರಿ. ನಗುವುದನ್ನು ಬಿಟ್ಟು ದುಃಖಿಸಿರಿ; ಸಂತೋಷವನ್ನು ಬಿಟ್ಟು ಶೋಕಿಸಿರಿ. ಪ್ರಭುವಿನ ಮುಂದೆ ನಮ್ರರಾಗಿರಿ. ಆಗ ಅವರು ನಿಮ್ಮನ್ನು ಉದ್ಧರಿಸುವರು.

ಕೀರ್ತನೆ: 55:7-8, 9-10, 10-11, 23

ಶ್ಲೋಕ: ಪ್ರಭುವಿನ ಮೇಲೆ ಹಾಕು ನಿನ್ನ ಚಿಂತಾಭಾರವನು

ಶುಭಸಂದೇಶ: ಮಾರ್ಕ 9:30-37


ಯೇಸುಸ್ವಾಮಿ ಮತ್ತು ಶಿಷ್ಯರು ಹೊರಟು ಗಲಿಲೇಯದ ಮಾರ್ಗವಾಗಿ ಮುಂದಕ್ಕೆ ಪ್ರಯಾಣ ಮಾಡಿದರು. ಇದು ಯಾರಿಗೂ ತಿಳಿಯಬಾರದು ಎಂಬುದು ಯೇಸುವಿನ ಇಚ್ಛೆಯಾಗಿತ್ತು. ಕಾರಣ, ತಮ್ಮ ಶಿಷ್ಯರಿಗೆ ಪ್ರಬೋಧಿಸುವುದರಲ್ಲಿ ಅವರು ನಿರತರಾಗಿದ್ದರು. “ನರಪುತ್ರನನ್ನು ಜನರ ವಶಕ್ಕೆ ಒಪ್ಪಿಸಲಾಗುವುದು. ಅವರು ಆತನನ್ನು ಕೊಲ್ಲುವರು. ಕೊಂದ ಮೂರನೆಯ ದಿನ ಆತನು ಪುನರುತ್ಥಾನ ಹೊಂದುವನು,” ಎಂದು ಯೇಸು ಅವರಿಗೆ ತಿಳಿಸಿದರು. ಆದರೆ ಯೇಸು ಹೇಳಿದ ಈ ಮಾತುಗಳನ್ನು ಶಿಷ್ಯರು ಅರ್ಥಮಾಡಿಕೊಳ್ಳಲಿಲ್ಲ. ಅವುಗಳ ಬಗ್ಗೆ ಪ್ರಶ್ನಿಸಲು ಸಹ ಅಂಜಿದರು. ಅನಂತರ ಅವರೆಲ್ಲರೂ ಕಫೆರ್ನವುಮಿಗೆ ಬಂದರು. ಮನೆ ಸೇರಿದಾಗ ಯೇಸುಸ್ವಾಮಿ, “ದಾರಿಯಲ್ಲಿ ಬರುತ್ತಾ ನೀವು ನಿಮ್ಮಲ್ಲೇ ಏನು ಚರ್ಚೆಮಾಡುತ್ತಿದ್ದಿರಿ?” ಎಂದು ಶಿಷ್ಯರನ್ನು ಕೇಳಿದರು. ಅವರು ಮೌನ ತಾಳಿದರು. ಏಕೆಂದರೆ, ತಮ್ಮಲ್ಲಿ ಯಾವನು ಅತಿ ಶ್ರೇಷ್ಠನು ಎಂದು ತಮ್ಮ ತಮ್ಮಲ್ಲೇ ವಾದಿಸುತ್ತಾ ಬಂದಿದ್ದರು. ಯೇಸು ಕುಳಿತುಕೊಂಡು, ಹನ್ನೆರಡು ಮಂದಿಯನ್ನೂ ಕರೆದು, ಅವರಿಗೆ, ‘ನಿಮ್ಮಲ್ಲಿ ಮೊದಲಿಗನಾಗ ಬಯಸುವವನು ಎಲ್ಲರಿಗೂ ಕಡೆಯವನಾಗಿರಲಿ; ಎಲ್ಲರ ಸೇವೆ ಮಾಡುವವನಾಗಿ ಇರಲಿ,’ ಎಂದರು. ಅನಂತರ ಯೇಸು, ಒಂದು ಚಿಕ್ಕ ಮಗುವನ್ನು ಕರೆದು ಅವರ ನಡುವೆ ನಿಲ್ಲಿಸಿ, ಅದನ್ನು ತಬ್ಬಿಕೊಂಡು ತಮ್ಮ ಶಿಷ್ಯರಿಗೆ, “ನನ್ನ ಹೆಸರಿನಲ್ಲಿ ಇಂಥ ಮಗುವೊಂದನ್ನು ಯಾರು ಬರಮಾಡಿಕೊಳ್ಳುತ್ತಾನೋ ಅವನು ನನ್ನನ್ನೇ ಬರಮಾಡಿಕೊಳ್ಳುತ್ತಾನೆ; ಯಾರು ನನ್ನನ್ನು ಬರಮಾಡಿಕೊಳ್ಳುತ್ತಾನೋ ಅವನು ನನ್ನನ್ನು ಅಲ್ಲ, ನನ್ನನ್ನು ಕಳುಹಿಸಿದಾತನನ್ನೇ ಬರಮಾಡಿಕೊಳ್ಳುತ್ತಾನೆ,” ಎಂದರು.

24.02.2020 - “ಸಾಧ್ಯವಾದರೆ’ ಎನ್ನುತ್ತೀಯಲ್ಲಾ? ದೇವರಲ್ಲಿ ವಿಶ್ವಾಸ ಇಡುವವನಿಗೆ ಎಲ್ಲವೂ ಸಾಧ್ಯ!”

ಮೊದಲನೇ ವಾಚನ: ಯಕೋಬ 3:13-18

ನಿಮ್ಮಲ್ಲಿ ಯಾರಾದರೂ ಜ್ಞಾನಿಯೂ ವಿವೇಕಿಯೂ ಆದವನು ಇದ್ದಾನೋ? ಅಂಥವನು ಜ್ಞಾನದ ಲಕ್ಷಣವಾಗಿರುವ ವಿನಯಶೀಲತೆಯನ್ನು ತನ್ನ ನಡೆನುಡಿಯಲ್ಲಿ ತೋರ್ಪಡಿಸಲಿ. ನಿಮ್ಮ ಹೃದಯದಲ್ಲಿ ಮರ್ಮಮತ್ಸರವೂ ಸ್ವಾರ್ಥಾಭಿಲಾಶೆಯೂ ತುಂಬಿರುವಾಗ ಜ್ಞಾನಿಗಳೆಂದು ಕೊಚ್ಚಿಕೊಳ್ಳಬೇಡಿ; ಸತ್ಯಕ್ಕೆ ವಿರುದ್ಧವಾಗಿ ಸುಳ್ಳಾಡಬೇಡಿ. ಅಂಥ ಜ್ಞಾನ ದೇವರಿಂದ ಬಂದ ಜ್ಞಾನವಲ್ಲ; ಅದು ಪ್ರಾಪಂಚಿಕವಾದುದು. ಪ್ರಾಕೃತವಾದುದು, ಪೈಶಾಚಿಕವಾದುದು. ಮರ್ಮ ಮತ್ಸರವೂ ಸ್ವಾರ್ಥಾಭಿಲಾಶೆಯೂ ಇರುವ ಕಡೆಗಳಲ್ಲೆಲ್ಲಾ ನಾನಾವಿಧವಾದ ಅಕ್ರಮಗಳೂ ದುಶ್ಚಟಗಳೂ ಇರುತ್ತವೆ. ದೇವರಿಂದ ಬರುವ ಜ್ಞಾನವಾದರೋ ಮೊಟ್ಟಮೊದಲನೆಯದಾಗಿ ಪವಿತ್ರವಾದುದು. ಅದು ಶಾಂತಿಸಮಾಧಾನ ಉಳ್ಳದ್ದು. ಸಹನೆ ಸಂಯಮವುಳ್ಳದ್ದು, ನ್ಯಾಯ ಸಮ್ಮತವಾದದ್ದು, ದಯೆದಾಕ್ಷಿಣ್ಯಗಳಿಂದಲೂ ಸತ್ಕಾರ್ಯಗಳಿಂದಲೂ ಫಲಭರಿತವಾದದ್ದು. ವಂಚನೆಯಾಗಲಿ, ಚಂಚಲತೆಯಾಗಲಿ ಅದರಲ್ಲಿ ಇರುವುದಿಲ್ಲ. ಸಮಾಧಾನಪಡಿಸುವವರು ಸಮಾಧಾನವೆಂಬ ಬೀಜವನ್ನು ಬಿತ್ತಿ ದೇವರೊಡನೆ ಸತ್ಸಂಬಂಧವೆಂಬ ಫಲವನ್ನು ಕೊಯ್ಯುತ್ತಾರೆ. 

ಕೀರ್ತನೆ: 19:8, 9, 10, 15

ಶ್ಲೋಕ: ಪ್ರಭುವಿನ ನಿಯಮ ನೀತಿಬದ್ಧ; ಮನಸ್ಸಿಗದು ಒಸಗೆ

ಶುಭಸಂದೇಶ: ಮಾರ್ಕ 9:14-29


ಯೇಸುಸ್ವಾಮಿಯು, ಪೇತ್ರ, ಯಕೋಬ ಮತ್ತು ಯೊವಾನ್ನರೊಂದಿಗೆ ಬೆಟ್ಟದಿಂದ ಇಳಿದು ಬಂದಾಗ ಉಳಿದ ಶಿಷ್ಯರ ಸುತ್ತಲೂ ಜನರು ದೊಡ್ಡ ಗುಂಪಾಗಿ ನೆರೆದಿರುವುದನ್ನು, ಧರ್ಮಶಾಸ್ತ್ರಿಗಳು ಇವರೊಡನೆ ವಾದಿಸುತ್ತಿರುವುದನ್ನು ಕಂಡರು. ನೆರೆದಿದ್ದ ಜನರು ಯೇಸುವನ್ನು ಕಂಡೊಡನೆ ಆಶ್ಚರ್ಯಪಟ್ಟು ಓಡಿಬಂದು, ಅವರಿಗೆ ನಮಸ್ಕರಿಸಿದರು. ಯೇಸುಸ್ವಾಮಿ, “ನಿಮ್ಮ ವಾಗ್ವಾದ ಏನು?” ಎಂದು ಕೇಳಿದರು. ಆ ಗುಂಪಿನಲ್ಲಿದ್ದ ಒಬ್ಬನು, “ಬೋಧಕರೇ, ನನ್ನ ಮಗನನ್ನು ತಮ್ಮ ಬಳಿಗೆಂದು ಕರೆತಂದೆ. ಅವನಿಗೆ ಒಂದು ಮೂಕ ದೆವ್ವ ಹಿಡಿದಿದೆ. ಅವನ ಮೇಲೆ ಅದು ಬಂದಾಗಲೆಲ್ಲ ಅವನನ್ನು ನೆಲಕ್ಕೆ ಅಪ್ಪಳಿಸುತ್ತದೆ. ಅವನು ನೊರೆಕಾರುತ್ತಾ ಹಲ್ಲು ಕಡಿದುಕೊಳ್ಳುತ್ತಾನೆ. ಆಗ ಅವನ ದೇಹವೆಲ್ಲಾ ಮರಗಟ್ಟಿದಂತಾಗುತ್ತದೆ. ಆ ದೆವ್ವವನ್ನು ಬಿಡಿಸಬೇಕೆಂದು ತಮ್ಮ ಶಿಷ್ಯರನ್ನು ಕೇಳಿಕೊಂಡೆ. ಆದರೆ, ಅದು ಅವರಿಂದಾಗಲಿಲ್ಲ,” ಎಂದನು. ಇದನ್ನು ಕೇಳಿ ಯೇಸು, “ಅಯ್ಯೋ, ವಿಶ್ವಾಸವಿಲ್ಲದ ಪೀಳಿಗೆಯೇ, ಇನ್ನೆಷ್ಟು ಕಾಲ ನಿಮ್ಮೊಂದಿಗಿರಲಿ! ಇನ್ನೆಷ್ಟು ಕಾಲ ನಿಮ್ಮನ್ನು ಸಹಿಸಿಕೊಳ್ಳಲಿ! ಅವನನ್ನು ನನ್ನ ಬಳಿಗೆ ಕರೆದುಕೊಂಡು ಬನ್ನಿ” ಎಂದರು. ಆಗ ಆ ಹುಡುಗನನ್ನು ಯೇಸುವಿನ ಬಳಿಗೆ ಕರೆತಂದರು. ಯೇಸುವನ್ನು ನೋಡಿದಾಕ್ಷಣ ಆ ದೆವ್ವ ಹುಡುಗನನ್ನು ನೆಲಕ್ಕೆ ಅಪ್ಪಳಿಸಿ ಒದ್ದಾಡಿಸಿತು. ಹುಡುಗ ಹೊರಳಾಡುತ್ತಾ ನೊರೆಕಾರಿದನು. ಯೇಸು, “ಇವನಿಗೆ ಎಷ್ಟು ದಿನದಿಂದ ಹೀಗಾಗುತ್ತಿದೆ?” ಎಂದು ಹುಡುಗನ ತಂದೆಯನ್ನು ವಿಚಾರಿಸಿದರು. ಅದಕ್ಕೆ ಅವನು “ಬಾಲ್ಯದಿಂದಲೇ ಹೀಗಾಗುತ್ತಿದೆ; ಇದಲ್ಲದೆ ದೆವ್ವವು ಇವನನ್ನು ಕೊಲ್ಲಬೇಕೆಂದು ಪದೇ ಪದೇ ಬೆಂಕಿಗೂ ನೀರಿಗೂ ದೂಡಿದೆ; ತಮ್ಮಿಂದ ಏನಾದರೂ ಸಾಧ್ಯವಾದರೆ, ನಮ್ಮ ಮೇಲೆ ದಯವಿಟ್ಟು ಸಹಾಯಮಾಡಿ,” ಎಂದು ಯೇಸುವನ್ನು ಬೇಡಿಕೊಂಡನು. ಅದಕ್ಕೆ ಯೇಸು, “ಸಾಧ್ಯವಾದರೆ’ ಎನ್ನುತ್ತೀಯಲ್ಲಾ? ದೇವರಲ್ಲಿ ವಿಶ್ವಾಸ ಇಡುವವನಿಗೆ ಎಲ್ಲವೂ ಸಾಧ್ಯ!” ಎಂದರು. ಆಗ ಆ ಬಾಲಕನ ತಂದೆ, “ನಾನು ವಿಶ್ವಾಸಿಸುತ್ತೇನೆ, ನನ್ನ ವಿಶ್ವಾಸದಲ್ಲಿ ಕೊರತೆಯಿದ್ದರೆ ನೆರವು ನೀಡಿ,” ಎಂದು ಯೇಸುವಿಗೆ ಮೊರೆಯಿಟ್ಟನು. ಜನಸಂದಣಿ ಬೆಳೆಯುತ್ತಿರುವುದನ್ನು ಕಂಡ ಯೇಸು, ಆ ದೆವ್ವವನ್ನು ಗದರಿಸಿ, “ಎಲೈ, ಕಿವುಡು ಮೂಕ ದೆವ್ವವೇ, ಇವನನ್ನು ಬಿಟ್ಟುತೊಲಗು; ಇನ್ನೆಂದಿಗೂ ಇವನೊಳಗೆ ಪ್ರವೇಶಿಸ ಕೂಡದೆಂದು ನಿನಗೆ ಆಜ್ಞಾಪಿಸುತ್ತೇನೆ,” ಎಂದರು. ದೆವ್ವವು ಚೀರುತ್ತಾ, ಹುಡುಗನನ್ನು ವಿಲವಿಲನೆ ಒದ್ದಾಡಿಸಿ, ಕೊನೆಗೆ ಬಿಟ್ಟುಹೋಯಿತು. ಹುಡುಗನು ಶವದಂತಾದನು. ಅಲ್ಲಿದ್ದವರಲ್ಲಿ ಅನೇಕರು ‘ಹುಡುಗ ಸತ್ತುಹೋದ,’ ಎಂದುಕೊಂಡರು. ಆದರೆ ಯೇಸು ಅವನ ಕೈಹಿಡಿದು ಎತ್ತಲು ಅವನು ಎದ್ದು ನಿಂತನು. ಅಂದು ಯೇಸುಸ್ವಾಮಿ ಮನೆಗೆ ಬಂದಾಗ, ಶಿಷ್ಯರು ಪ್ರತ್ಯೇಕವಾಗಿ ಅವರ ಬಳಿಗೆ ಬಂದು, “ಆ ದೆವ್ವವನ್ನು ಹೊರಗಟ್ಟಲು ನಮ್ಮಿಂದೇಕೆ ಆಗಲಿಲ್ಲ?” ಎಂದು ಕೇಳಿದರು. ಅದಕ್ಕೆ ಯೇಸು, “ಈ ಬಗೆಯ ದೆವ್ವವನ್ನು ಹೊರಗಟ್ಟಲು ಪ್ರಾರ್ಥನೆಯೇ ಹೊರತು ಬೇರೆ ಮಾರ್ಗವಿಲ್ಲ,” ಎಂದರು.

23.02.2020 - "ನಿಮ್ಮ ಮಿತ್ರರನ್ನು ಮಾತ್ರ ನೀವು ಗೌರವಿಸಿದರೆ ಅದರಲ್ಲೇನು ವಿಶೇಷ?"

ಮೊದಲನೇ ವಾಚನ: ಯಾಜಕಕಾಂಡ 19:1-2, 17-18

ಇಸ್ರಯೇಲ್ ಸಮಾಜದವರಿಗೆ ಹೀಗೆ ಆಜ್ಞಾಪಿಸುವಂತೆ ಸರ್ವೇಶ್ವರಸ್ವಾಮಿ ಮೋಶೆಗೆ ಹೇಳಿದರು: "ನಿಮ್ಮ ದೇವರಾದ ಸರ್ವೇಶ್ವರನೆಂಬ ನಾನು ಪರಿಶುದ್ಧನಾಗಿರುವಂತೆ ನೀವು ಕೂಡ ಪರಿಶುದ್ಧರಾಗಿರಬೇಕು. “ಸಹೋದರನ ಬಗ್ಗೆ ಒಳಗೊಳಗೇ ಹಗೆ ಇಟ್ಟುಕೊಳ್ಳಬೇಡ. ನೆರೆಯವನ ದೋಷಕ್ಕೆ ನೀನು ಒಳಗಾಗದಂತೆ ಅವನ ತಪ್ಪನ್ನು ಅವನಿಗೆ ಎತ್ತಿ ತೋರಿಸಲೇಬೇಕು. ನಿನ್ನ ಸ್ವಜನರಲ್ಲಿ ಯಾರಿಗೂ ಕೇಡಿಗೆ ಕೇಡು ಮಾಡಬೇಡ, ಅವರಿಗೆ ವಿರುದ್ಧ ಮತ್ಸರ ಇಟ್ಟುಕೊಳ್ಳಬೇಡ, ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸು. ನಾನು ಸರ್ವೇಶ್ವರ.

ಕೀರ್ತನೆ: 103:1-2, 3-4, 8-10, 12-13

ಶ್ಲೋಕ: ಪ್ರಭು ದಯಾಳು, ಕೃಪಾಪೂರ್ಣನು.

ಎರಡನೇ ವಾಚನ: 1 ಕೊರಿಂಥಿಯರಿಗೆ 3:16-23

ಸಹೋದರರೇ, ನೀವು ದೇವರ ಆಲಯವಾಗಿದ್ದೀರಿ. ದೇವರ ಆತ್ಮವು ನಿಮ್ಮಲ್ಲಿ ವಾಸಿಸುತ್ತದೆಂದು ನಿಮಗೆ ಚೆನ್ನಾಗಿ ತಿಳಿದಿದೆ. ಯಾವನಾದರೂ ದೇವಾಲಯವನ್ನು ನಾಶಮಾಡಿದರೆ ದೇವರು ಅವನನ್ನು ನಾಶಮಾಡುತ್ತಾರೆ. ದೇವರ ಆಲಯವು ಪವಿತ್ರವಾದುದು. ನೀವೇ ಆ ಆಲಯ. ಯಾರೂ ತನ್ನನ್ನು ತಾನೇ ವಂಚಿಸಿಕೊಳ್ಳದಿರಲಿ. ನಿಮ್ಮಲ್ಲಿ ಯಾರಾದರೂ ಈ ಲೋಕದ ದೃಷ್ಟಿಯಲ್ಲಿ ತಾನು ಜಾಣನೆಂದು ಭಾವಿಸುವುದಾದರೆ ಅಂಥವನು ಮೊದಲು ಹುಚ್ಚನಂತಿರಲು ಕಲಿಯಲಿ. ಆಗ ಅವನು ನಿಜವಾಗಿಯೂ ಜಾಣನಾಗುತ್ತಾನೆ. ಇಹಲೋಕದ ಜಾಣತನವು ದೇವರ ದೃಷ್ಟಿಯಲ್ಲಿ ಹುಚ್ಚುತನವೇ ಸರಿ. “ದೇವರು ಜ್ಞಾನಿಗಳನ್ನು ಅವರ ಜಾಲವುದಲ್ಲಿಯೇ ಸಿಕ್ಕಿಸುವರು” ಎಂದೂ “ಜ್ಞಾನಿಗಳ ಯೋಜನೆಗಳು ನಿಷ್ಫಲವೆಂಬುದು ಪ್ರಭುವಿಗೆ ತಿಳಿದಿದೆ” ಎಂದೂ ಲಿಖಿತವಾಗಿದೆಯಲ್ಲವೆ? ಆದ್ದರಿಂದ ಕೇವಲ ನರಮಾನವರನ್ನೇ ನೆಚ್ಚಿಕೊಂಡು ಯಾರೂ ಹೆಚ್ಚಳಪಡದಿರಲಿ. ವಾಸ್ತವವಾಗಿ ಸಮಸ್ತವೂ ನಿಮ್ಮದೇ. ಪೌಲ, ಅಪೊಲೋಸ್, ಕೇಫ - ಇವರಾಗಲಿ; ಜಗತ್ತು, ಜೀವ, ಮರಣ – ಇವುಗಳಾಗಲಿ, ಅಥವಾ ವರ್ತಮಾನ, ಭವಿಷ್ಯತ್ಕಾಲಗಳಾಗಲಿ, ಇವೆಲ್ಲವೂ ನಿಮ್ಮವೇ. ಆದರೆ ನೀವು ಕ್ರಿಸ್ತ ಯೇಸುವಿಗೆ ಸೇರಿದವರು; ಕ್ರಿಸ್ತಯೇಸು ದೇವರಿಗೆ ಸೇರಿದವರು.

ಘೋಷಣೆ: ಅಲ್ಲೆಲೂಯ, ಅಲ್ಲೆಲೂಯ!
ಸರ್ವೇಶ್ವರನ ನಾಮದಲಿ ಬರುವ ಅರಸನಿಗೆ ಜಯ ಜಯವಾಗಲಿ/
ಶಾಂತಿ ಸ್ವರ್ಗದಲಿ, ಮಹಿಮೆ ಮಹೋನ್ನತದಲಿ//ಅಲ್ಲೆಲೂಯ!

ಶುಭಸಂದೇಶ: ಮತ್ತಾಯ 5:38-48

ಯೇಸು ತಮ್ಮ ಶಿಷ್ಯರಿಗೆ ಇಂತೆಂದರು: " ’ಕಣ್ಣಿಗೆ ಪ್ರತಿಯಾಗಿ ಕಣ್ಣು, ಹಲ್ಲಿಗೆ ಬದಲಾಗಿ ಹಲ್ಲು’ ಎಂಬುದನ್ನು ನೀವು ಕೇಳಿದ್ದೀರಿ. ಆದರೆ ನನ್ನ ಬೋಧೆ ಇದು: ನಿನಗೆ ಅಪಕಾರ ಮಾಡಿದವನಿಗೆ ಪ್ರತೀಕಾರ ಮಾಡಬೇಡ. ನಿನ್ನ ಬಲಗೆನ್ನೆಗೆ ಒಬ್ಬನು ಹೊಡೆದರೆ ಇನ್ನೊಂದು ಕೆನ್ನೆಯನ್ನೂ ಒಡ್ಡು. ನಿನ್ನೊಡನೆ ವ್ಯಾಜ್ಯಮಾಡಿ ನಿನ್ನ ಒಳ ಅಂಗಿಯನ್ನು ಕಿತ್ತುಕೊಳ್ಳುವವನಿಗೆ ಹೊರ ಅಂಗಿಯನ್ನೂ ಕೊಟ್ಟುಬಿಡು. ಯಾರಾದರೂ ಒಂದು ಕಿಲೊವಿೂಟರ್ ದೂರ ಬಾ ಎಂದು ನಿನ್ನನ್ನು ಒತ್ತಾಯಪಡಿಸಿದರೆ ಅವನೊಡನೆ ಎರಡು ಕಿಲೊವಿೂಟರ್ ಹೋಗು; ಬೇಡಿಕೊಳ್ಳುವವನಿಗೆ ಕೊಡು. ಸಾಲ ಕೇಳಬಂದವನಿಂದ ಮುಖ ತಿರುಗಿಸಿಕೊಳ್ಳಬೇಡ." "ಮಿತ್ರರನ್ನು ಪ್ರೀತಿಸು, ಶತ್ರುವನ್ನು ದ್ವೇಷಿಸು" ಎಂದು ಹೇಳಿರುವುದು ನಿಮಗೆ ತಿಳಿದೇ ಇದೆ. ನಾನು ಹೇಳುವುದನ್ನು ಗಮನಿಸಿರಿ: ನಿಮ್ಮ ಶತ್ರುಗಳನ್ನು ಪ್ರೀತಿಸಿರಿ; ನಿಮ್ಮನ್ನು ಪೀಡಿಸುವವರಿಗಾಗಿ ಪ್ರಾರ್ಥಿಸಿರಿ. ಇದರಿಂದ ಸ್ವರ್ಗದಲ್ಲಿರುವ ನಿಮ್ಮ ತಂದೆಗೆ ನೀವು ಮಕ್ಕಳಾಗುವಿರಿ. ಅವರು ಸಜ್ಜನರ ಮೇಲೂ ದುರ್ಜನರ ಮೇಲೂ ತಮ್ಮ ಸೂರ್ಯನು ಉದಯಿಸುವಂತೆ ಮಾಡುತ್ತಾರೆ; ನೀತಿವಂತರ ಮೇಲೂ ಅನೀತಿವಂತರ ಮೇಲೂ ಮಳೆಗರೆಯುತ್ತಾರೆ. ನಿಮ್ಮನ್ನು ಪ್ರೀತಿಸುವವರನ್ನು ಮಾತ್ರ ನೀವು ಪ್ರೀತಿಸಿದರೆ ಅದರಿಂದೇನು ಫಲ? ಸುಂಕ ವಸೂಲಿ ಮಾಡುವವರೂ ಹಾಗೆ ಮಾಡುವುದಿಲ್ಲವೇ? ನಿಮ್ಮ ಮಿತ್ರರನ್ನು ಮಾತ್ರ ನೀವು ಗೌರವಿಸಿದರೆ ಅದರಲ್ಲೇನು ವಿಶೇಷ? ಅನ್ಯಜನರೂ ಹಾಗೆ ಮಾಡುತ್ತಾರಲ್ಲವೇ? ಆದುದರಿಂದ ಸ್ವರ್ಗದಲ್ಲಿರುವ ನಿಮ್ಮ ತಂದೆ ಪರಿಪೂರ್ಣರಾಗಿರುವಂತೆ ನೀವೂ ಪರಿಪೂರ್ಣರಾಗಿರಿ."

22.02.2020

ಮೊದಲನೇ ವಾಚನ: 1 ಪೇತ್ರ 5:1-4

ಕ್ರಿಸ್ತಯೇಸುವಿನ ಮರಣ-ಯಾತನೆಯನ್ನು ಕಣ್ಣಾರೆ ಕಂಡವನೂ ಮುಂದೆ ಪ್ರತ್ಯಕ್ಷವಾಗುವ ಮಹಿಮೆಯಲ್ಲಿ ಭಾಗಿಯಾಗಲಿರುವವನೂ ಸಭಾಪ್ರಮುಖನೂ ಆದ ನಾನು, ನಿಮ್ಮಲ್ಲಿ ಪ್ರಮುಖರಾದ ಇತರರನ್ನು ಪ್ರೋತ್ಸಾಹಿಸಿ ವಿನಂತಿಸುವುದೇನೆಂದರೆ: ನನ್ನ ಜೊತೆಹಿರಿಯರೇ, ದೇವರು ನಿಮಗೆ ವಹಿಸಿಕೊಟ್ಟಿರುವ ಮಂದೆಯನ್ನು ಕಾಯಿರಿ. ಕಡ್ಡಾಯದಿಂದಲ್ಲ, ದೇವರ ಚಿತ್ತಾನುಸಾರ ಅಕ್ಕರೆಯಿಂದ ಕಾಯಿರಿ. ದ್ರವ್ಯದ ದುರಾಶೆಯಿಂದಲ್ಲ, ಸೇವಾಸಕ್ತಿಯಿಂದ ಕಾಯಿರಿ. ನಿಮ್ಮ ಪಾಲನೆಗೆ ಒಳಗಾಗಿರುವವರ ಮೇಲೆ ದರ್ಪದಿಂದ ದೊರೆತನಮಾಡದೆ ದೇವರ ಮಂದೆಗೆ ಆದರ್ಶ ಮಾದರಿಗಳಾಗಿರಿ. ಆಗಮಾತ್ರ, ಪ್ರಧಾನ ಕುರಿಗಾಹಿ ಪ್ರತ್ಯಕ್ಷನಾಗುವಾಗ ಮಲಿನವಾಗದ ಮಹಿಮಾನ್ವಿತ ಜಯಮಾಲೆಯನ್ನು ಪಡೆಯುವಿರಿ.

ಕೀರ್ತನೆ: 23:1-3, 4, 5, 6
ಶ್ಲೋಕ: ಪ್ರಭು ಕುರಿಗಾಹಿಯಾಗಿರಲು ನನಗೆ ಕುಂದುಕೊರತೆಗಳೆಲ್ಲಿಯವು ಎನಗೆ?

ಶುಭಸಂದೇಶ: ಮತ್ತಾಯ 16:13-19

ಯೇಸುಸ್ವಾಮಿ "ಫಿಲಿಪ್ಪನ ಸೆಜರೇಯ" ಎಂಬ ಪ್ರಾಂತ್ಯಕ್ಕೆ ಬಂದರು. ಅಲ್ಲಿ ತಮ್ಮ ಶಿಷ್ಯರನ್ನು ಉದ್ದೇಶಿಸಿ, "ನರಪುತ್ರನನ್ನು ಜನರು ಯಾರೆಂದು ಹೇಳುತ್ತಾರೆ?" ಎಂದು ಕೇಳಿದರು.  ಅದಕ್ಕೆ ಶಿಷ್ಯರು, "ಸ್ನಾನಿಕ ಯೊವಾನ್ನ", ಎಂದು ಕೆಲವರು ಹೇಳುತ್ತಾರೆ; ಮತ್ತೆ ಕೆಲವರು, "ಎಲೀಯನು" ಎನ್ನುತ್ತಾರೆ; "ಯೆರೆಮೀಯನು ಅಥವಾ ಪ್ರವಾದಿಗಳಲ್ಲಿ ತಾವೂ ಒಬ್ಬರು," ಎಂಬುದು ಇನ್ನೂ ಕೆಲವರ ಅಭಿಪ್ರಾಯ, ಎಂದು ಉತ್ತರ ಕೊಟ್ಟರು. ಆಗ ಯೇಸು, "ಆದರೆ ನೀವು ನನ್ನನ್ನು ಯಾರೆನ್ನುತ್ತೀರಿ?" ಎಂದು ಪ್ರಶ್ನಿಸಿದರು. ಅದಕ್ಕೆ ಪೇತ್ರನು, "ಅಭಿಷಿಕ್ತರಾದ ಲೋಕೋದ್ದಾರಕ ತಾವೇ, ಜೀವಸ್ವರೂಪರಾದ ದೇವರ ಪುತ್ರ ತಾವೇ," ಎಂದನು. ಅದಕ್ಕೆ ಪ್ರತ್ಯುತ್ತರವಾಗಿ ಯೇಸು ಹೀಗೆಂದರು: "ಯೋನ್ನನ ಮಗ ಸಿಮೋನನೇ, ನೀನು ಧನ್ಯ! ಈ ವಿಷಯವನ್ನು ನಿನಗೆ ಶ್ರುತ ಪಡಿಸಿದ್ದು ನರಮಾನವ ಶಕ್ತಿ ಅಲ್ಲ, ಸ್ವರ್ಗದಲ್ಲಿರುವ ನನ್ನ ಪಿತನೇ. ನಾನು ನಿನಗೆ ಹೇಳುತ್ತೇನೆ, ಕೇಳು: "ನಿನ್ನ ಹೆಸರು ಪೇತ್ರ; ಈ ಬಂಡೆಯ ಮೇಲೆ ನನ್ನ ಧರ್ಮಸಭೆಯನ್ನು ಕಟ್ಟುವೆನು. ಪಾತಾಳಲೋಕದ ಶಕ್ತಿಯು ಅದನ್ನು ಎಂದಿಗೂ ಜಯಿಸಲಾರದು. ಸ್ವರ್ಗಸಾಮ್ರಾಜ್ಯದ ಬೀಗದ ಕೈಗಳನ್ನು ನಿನಗೆ ಕೊಡುವೆನು. ಇಹದಲ್ಲಿ ನೀನು ಏನನ್ನು ಬಂಧಿಸುತ್ತೀಯೋ ಅದನ್ನು ಪರದಲ್ಲಿಯೂ ಬಂಧಿಸಲಾಗುವುದು. ಇಹದಲ್ಲಿ ನೀನು ಏನನ್ನು ಬಿಚ್ಚುತ್ತೀಯೋ ಅದನ್ನು ಪರದಲ್ಲಿಯೂ ಬಿಚ್ಚಲಾಗುವುದು."

21.02.2020 - "ಶುಭಸಂದೇಶದ ನಿಮಿತ್ತ ತನ್ನ ಪ್ರಾಣವನ್ನು ಕಳೆದುಕೊಳ್ಳುವವನು ಅದನ್ನು ನಿತ್ಯಕ್ಕೂ ಉಳಿಸಿಕೊಳ್ಳುವನು"

ಮೊದಲನೇ ವಾಚನ: ಯಕೋಬ 2:14-24, 26

ಸಹೋದರರೇ, ಒಬ್ಬನು ತನಗೆ ವಿಶ್ವಾಸ ಇದೆಯೆಂದು ಕೊಚ್ಚಿಕೊಂಡು ಅದನ್ನು ಕಾರ್ಯತಃ ವ್ಯಕ್ತಪಡಿಸದಿದ್ದರೆ ಅದರಿಂದ ಪ್ರಯೋಜನ ಏನು? ಅಂಥ ವಿಶ್ವಾಸ ಅವನನ್ನು ಉದ್ಧಾರ ಮಾಡಬಲ್ಲುದೇ? ಒಂದು ವೇಳೆ ಒಬ್ಬ ಸಹೋದರನಾಗಲಿ, ಸಹೋದರಿಯಾಗಲಿ ದಿನನಿತ್ಯ ಊಟಬಟ್ಟೆಗಿಲ್ಲದೆ ಇರುವಾಗ, ನಿಮ್ಮಲ್ಲಿ ಯಾರಾದರು ಅವರಿಗೆ ಅಗತ್ಯವಾದುದನ್ನು ನೀಡದೆ, ‘ಹೋಗು, ಸುಖವಾಗಿ ಬಾಳು, ಚಳಿ ಕಾಯಿಸಿಕೊ, ಹೊಟ್ಟೆ ತುಂಬಾ ತಿನ್ನು,’ ಎಂದು ಬರೀ ಬಾಯಿಮಾತಿನಲ್ಲಿ ಉಪಚರಿಸಿದರೆ ಅದರಿಂದಾದ ಪ್ರಯೋಜನವೇನು? ಸತ್ಕ್ರಿಯೆಗಳಿಲ್ಲದ ವಿಶ್ವಾಸ ಸತ್ತ ವಿಶ್ವಾಸವೇ ಸರಿ. ಒಬ್ಬನು, “ನಿನ್ನಲ್ಲಿ ವಿಶ್ವಾಸವಿದೆ, ನನ್ನಲ್ಲಿ ಸತ್ಕ್ರಿಯೆಗಳಿವೆ,” ಎನ್ನಬಹುದು. ಅಂಥವನಿಗೆ, “ಸತ್ಕ್ರಿಯೆಗಳಿಲ್ಲದ ನಿನ್ನ ವಿಶ್ವಾಸವನ್ನು ನನಗೆ ತೋರಿಸು; ನನ್ನ ಸತ್ಕಾರ್ಯಗಳ ಮೂಲಕ ನನ್ನ ವಿಶ್ವಾಸವನ್ನು ನಿನಗೆ ವ್ಯಕ್ತಪಡಿಸುತ್ತೇನೆ,” ಎಂದು ಉತ್ತರಿಸಬಹುದು. ದೇವರು ಒಬ್ಬರೇ ಎಂದು ನೀವು ನಂಬುತ್ತೀರಿ. ಈ ನಂಬಿಕೆ ಒಳ್ಳೆಯದೇ. ಆದರೆ ದೆವ್ವಗಳೂ ನಂಬುತ್ತವೆ; ಹೆದರಿ ನಡುಗುತ್ತವೆ. ಮತಿಹೀನನೇ, ಸತ್ಕ್ರಿಯೆಗಳಿಲ್ಲದ ವಿಶ್ವಾಸ ಗೊಡ್ಡು ವಿಶ್ವಾಸ ಎಂಬುದಕ್ಕೆ ದೃಷ್ಟಾಂತ ಬೇಕೇ? ನಮ್ಮ ಪಿತಾಮಹ ಅಬ್ರಹಾಮನು ದೇವರೊಂದಿಗೆ ಸತ್ಸಂಬಂಧವನ್ನು ಪಡೆದುದ್ದಾದರೂ ಹೇಗೆ? ತನ್ನ ಮಗ ಇಸಾಕನನ್ನು ದೇವರಿಗೆ ಬಲಿಯಾಗಿ ಸಮರ್ಪಿಸಿದ ಸತ್ಕ್ರಿಯೆಯಿಂದಲ್ಲವೇ? ವಿಶ್ವಾಸವು ಸತ್ಕ್ರಿಯೆಗಳಿಂದ ಸಚೇತನಗೊಂಡಿತು. ಆತನ ಸತ್ಕ್ರಿಯೆಗಳಿಂದಲೇ ವಿಶ್ವಾಸವು ಸಿದ್ಧಿಗೆ ಬಂದಿತು ಎಂಬುದನ್ನು ನಾವು ನೋಡುತ್ತೇವೆ. ಆದುದರಿಂದಲೇ, “ಅಬ್ರಹಾಮನು ದೇವರಲ್ಲಿ ವಿಶ್ವಾಸ ಇಟ್ಟನು. ದೇವರು ಆತನನ್ನು ತಮ್ಮ ಸತ್ಸಂಬಂಧದಲ್ಲಿ ಇರುವುದಾಗಿ ಪರಿಗಣಿಸಿದರು,” ಎಂದು ಪವಿತ್ರಗ್ರಂಥದಲ್ಲಿ ಬರೆದಿರುವ ಮಾತು ನೆರವೇರಿತು. ಅಬ್ರಹಾಮನು ದೇವರ ಮಿತ್ರನೆನಿಸಿಕೊಂಡನು. ಮಾನವನು ದೇವರೊಡನೆ ಸತ್ಸಂಬಂಧವನ್ನು ಪಡೆಯುವುದು ವಿಶ್ವಾಸದಿಂದ ಮಾತ್ರವಲ್ಲ, ವಿಶ್ವಾಸವು ಸತ್ಕ್ರಿಯೆಗಳೊಡನೆ ಬೆರೆತಾಗ ಮಾತ್ರ ಎಂಬುದು ನಿಮಗೆ ತಿಳಿದಿರಲಿ.  ಆತ್ಮವಿಲ್ಲದ ದೇಹವು ಸತ್ತದ್ದು: ಸತ್ಕ್ರಿಯೆಗಳಿಲ್ಲದ ವಿಶ್ವಾಸವೂ ಸತ್ತದ್ದೇ ಸರಿ.

ಕೀರ್ತನೆ: 112:1-2, 3-4, 5-6

ಶ್ಲೋಕ: ಪ್ರಭುವಿನಾಜ್ಞೆಗಳಲ್ಲಿ ಹಿಗ್ಗುವವನು ಧನ್ಯನು

ಶುಭಸಂದೇಶ: ಮಾರ್ಕ 8:34-9:1

ಅನಂತರ ಯೇಸುಸ್ವಾಮಿ ತಮ್ಮ ಶಿಷ್ಯರನ್ನೂ ಜನರ ಗುಂಪನ್ನೂ ಒಟ್ಟಾಗಿ ತಮ್ಮ ಬಳಿಗೆ ಕರೆದು, “ಯಾರಿಗಾದರೂ ನನ್ನನ್ನು ಹಿಂಬಾಲಿಸಲು ಮನಸ್ಸಿದ್ದರೆ, ಅವನು ತನ್ನನ್ನು ತಾನೇ ಪರಿತ್ಯಜಿಸಿ, ತನ್ನ ಶಿಲುಬೆಯನ್ನು ತಾನೇ ಹೊತ್ತುಕೊಂಡು ನನ್ನನ್ನು ಹಿಂಬಾಲಿಸಲಿ; ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಹಾತೊರೆಯುವವನು ಅದನ್ನು ಕಳೆದುಕೊಳ್ಳುವನು. ಆದರೆ ನನ್ನ ನಿಮಿತ್ತ ಹಾಗೂ ಶುಭಸಂದೇಶದ ನಿಮಿತ್ತ ತನ್ನ ಪ್ರಾಣವನ್ನು ಕಳೆದುಕೊಳ್ಳುವವನು ಅದನ್ನು ನಿತ್ಯಕ್ಕೂ ಉಳಿಸಿಕೊಳ್ಳುವನು. ಒಬ್ಬನು ಪ್ರಪಂಚವನ್ನೆಲ್ಲಾ ಗೆದ್ದು, ಪ್ರಾಣವನ್ನೇ ಕಳೆದುಕೊಂಡರೆ ಅದರಿಂದ ಬರುವ ಲಾಭವಾದರೂ ಏನು? ಮನುಷ್ಯನು ತನ್ನ ಪ್ರಾಣಕ್ಕೆ ಈಡಾಗಿ ಏನನ್ನು ತಾನೇ ಕೊಡಬಲ್ಲನು? ದೈವನಿಷ್ಠೆಯಿಲ್ಲದ ಈ ಪಾಪಿಷ್ಠ ಪೀಳಿಗೆಯವರಲ್ಲಿ ಯಾರು ನನ್ನನ್ನೂ ನನ್ನ ಮಾತುಗಳನ್ನೂ ಕುರಿತು ನಾಚಿಕೆ ಪಡುತ್ತಾರೋ, ಅಂಥವರನ್ನು ಕುರಿತು ನರಪುತ್ರನು ಸಹ ತನ್ನ ಪಿತನ ಪ್ರಭಾವದೊಡನೆ ದೇವದೂತರ ಪರಿವಾರ ಸಮೇತನಾಗಿ ಬರುವಾಗ, ನಾಚಿಕೆ ಪಡುವನು,” ಎಂದರು. ಪುನಃ ಯೇಸುಸ್ವಾಮಿ, ಅವರಿಗೆ “ಇಲ್ಲಿರುವವರಲ್ಲಿ ಕೆಲವರು ದೇವರ ಸಾಮ್ರಾಜ್ಯವು ಪ್ರಭಾವದೊಡನೆ ಜಗತ್ತಿನಲ್ಲಿ ಪ್ರತ್ಯಕ್ಷವಾಗುವುದನ್ನು ನೋಡದೆ ಮರಣ ಹೊಂದುವುದಿಲ್ಲ ಎಂದು ನಿಮಗೆ ಖಂಡಿತವಾಗಿ ಹೇಳುತ್ತೇನೆ,” ಎಂದು ಹೇಳಿದರು.

20.02.2020 -“ಅಭಿಷಿಕ್ತರಾದ ಲೋಕೋದ್ಧಾರಕ ತಾವೇ”

ಮೊದಲನೇ ವಾಚನ: ಯಕೋಬ 2:1-9


ನನ್ನ ಸಹೋದರರೇ, ಮಹಿಮಾನ್ವಿತ ಪ್ರಭು ಯೇಸುಕ್ರಿಸ್ತರಲ್ಲಿ ವಿಶ್ವಾಸವಿಟ್ಟಿರುವ ನೀವು ಪಕ್ಷಪಾತ ಮಾಡಲೇಬಾರದು. ಉದಾಹರಣೆಗೆ: ಇಬ್ಬರು ನಿಮ್ಮ ಪ್ರಾರ್ಥನಾಲಯಕ್ಕೆ ಬಂದರೆಂದು ಇಟ್ಟುಕೊಳ್ಳಿ. ಅವರಲ್ಲಿ ಒಬ್ಬನು ಚಿನ್ನದುಂಗುರವನ್ನು ತೊಟ್ಟು, ಸೊಗಸಾದ ಉಡುಪನ್ನು ಧರಿಸಿದವನು. ಮತ್ತೊಬ್ಬನು ಹರಕು ಬಟ್ಟೆಯನ್ನು ಉಟ್ಟ ಬಡವನು. ಆಗ, ನೀವು ಸೊಗಸಾದ ಉಡುಪನ್ನು ಧರಿಸಿದವನಿಗೆ ಗೌರವದಿಂದ, “ಬನ್ನಿ ಸ್ವಾವಿೂ ಬನ್ನಿ, ದಯವಿಟ್ಟು ಈ ಪೀಠವನ್ನು ಅಲಂಕರಿಸಿ,” ಎನ್ನುತ್ತೀರಿ. ಬಡವನಿಗೆ “ನೀನು ಅಲ್ಲಿಯೇ ನಿಂತುಕೋ, ಇಲ್ಲವೇ ಕೆಳಗೆ, ನನ್ನ ಕಾಲ ಬಳಿ ಕುಳಿತುಕೋ,” ಎನ್ನುತ್ತೀರಿ. ಹೀಗಿರಲು ನೀವು ನಿಮ್ಮಲ್ಲೇ ಭೇದಭಾವ ಮಾಡುತ್ತೀರಿ; ಅಲ್ಲದೆ ನೀವು ಮಾಡುವ ಈ ತೀರ್ಪು ದುರುದ್ದೇಶದಿಂದ ಕೂಡಿರುತ್ತದೆ. ನನ್ನ ಪ್ರಿಯ ಸಹೋದರರೇ, ಪ್ರಪಂಚದ ದೃಷ್ಟಿಗೆ ಬಡವರಾಗಿ ಕಾಣುವವರನ್ನು ವಿಶ್ವಾಸದಲ್ಲಿ ಸಿರಿವಂತರನ್ನಾಗಿಸಲು ದೇವರು ಆರಿಸಿಕೊಳ್ಳಲಿಲ್ಲವೇ? ತಮ್ಮನ್ನು ಪ್ರೀತಿಸುವವರು ಸ್ವರ್ಗಸಾಮ್ರಾಜ್ಯಕ್ಕೆ ಬಾಧ್ಯಸ್ಥರೆಂದು ದೇವರೇ ವಾಗ್ದಾನ ಮಾಡಿಲ್ಲವೇ? ಹೀಗಿದ್ದರೂ ನೀವು ಬಡವನನ್ನು ಅವಮಾನಕ್ಕೆ ಈಡುಮಾಡಿದಿರಿ. ನಿಮ್ಮನ್ನು ತುಳಿದು ಹಿಂಸಿಸುವವರು ಮತ್ತು ನಿಮ್ಮನ್ನು ನ್ಯಾಯಾಲಯಕ್ಕೆ ಎಳೆಯುವವರು ಸಿರಿವಂತರೇ ಅಲ್ಲವೇ? ನೀವು ಯಾರಿಗೆ ಶರಣರಾಗಿದ್ದೀರೋ ಅವರ ಶ್ರೇಷ್ಠ ನಾಮವನ್ನು ದೂಷಿಸುವವರೂ ಸಿರಿವಂತರೇ ಅಲ್ಲವೇ? ‘ನಿನ್ನನ್ನು ನೀನು ಪ್ರೀತಿಸಿಕೊಳ್ಳುವಂತೆ ನಿನ್ನ ನೆರೆಯವನನ್ನು ಪ್ರೀತಿಸು’ ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ. ಈ ರಾಜಾಜ್ಞೆಯನ್ನು ಕೈಗೊಂಡು ನಡೆಯುತ್ತಿದ್ದರೆ ಅದು ಒಳ್ಳೆಯದು. ಅದನ್ನು ಬಿಟ್ಟು ಪಕ್ಷಪಾತ ಮಾಡಿದರೆ ನೀವು ಪಾಪ ಮಾಡುತ್ತೀರಿ ಮತ್ತು ಧರ್ಮಶಾಸ್ತ್ರ ನಿಮ್ಮನ್ನು ಅಪರಾಧಿಗಳೆಂದು ನಿರ್ಣಯಿಸುತ್ತದೆ.

ಕೀರ್ತನೆ: 34:2-3, 4-5, 5-6

ಶ್ಲೋಕ: ನಿರ್ಗತಿಕನು ಮೊರೆಯಿಡಲು, ಪ್ರಭು ಕಿವಿಗೊಟ್ಟನು

ಶುಭಸಂದೇಶ: ಮಾರ್ಕ 8: 27-33

ಯೇಸುಸ್ವಾಮಿ ತಮ್ಮ ಶಿಷ್ಯರ ಸಂಗಡ ಫಿಲಿಪ್ಪನ ಸೆಜರೇಯ ಎಂಬ ಪಟ್ಟಣದ ಪಕ್ಕದಲ್ಲಿರುವ ಹಳ್ಳಿಗಳಿಗೆ ಪ್ರಯಾಣ ಬೆಳೆಸಿದರು. ದಾರಿಯಲ್ಲಿ, “ಜನರು ನನ್ನನ್ನು ಯಾರೆಂದು ಹೇಳುತ್ತಾರೆ?” ಎಂದು ಶಿಷ್ಯರನ್ನು ಕೇಳಿದರು. ಅದಕ್ಕೆ ಶಿಷ್ಯರು, “ಕೆಲವರು ತಮ್ಮನ್ನು ‘ಸ್ನಾನಿಕ ಯೊವಾನ್ನ’ ಎನ್ನುತ್ತಾರೆ. ಇನ್ನು ಕೆಲವರು ‘ಎಲೀಯನು,’ ಮತ್ತೆ ಕೆಲವರು ಪ್ರವಾದಿಗಳಲ್ಲಿ ತಾವೂ ಒಬ್ಬರು ಎನ್ನುತ್ತಾರೆ,” ಎಂದರು. ಆಗ ಯೇಸು, “ಆದರೆ ನೀವು ನನ್ನನ್ನು ಯಾರೆನ್ನುತ್ತೀರಿ?” ಎಂದು ಪ್ರಶ್ನಿಸಿದರು. ಅದಕ್ಕೆ ಪೇತ್ರನು, “ಅಭಿಷಿಕ್ತರಾದ ಲೋಕೋದ್ಧಾರಕ ತಾವೇ” ಎಂದು ಉತ್ತರವಿತ್ತನು. ಆಗ ಯೇಸು, “ಈ ವಿಷಯವನ್ನು ಯಾರಿಗೂ ತಿಳಿಸಬೇಡಿ,” ಎಂದು ತಮ್ಮ ಶಿಷ್ಯರಿಗೆ ಕಟ್ಟಪ್ಪಣೆ ಮಾಡಿದರು. ಈ ಘಟನೆಯ ಬಳಿಕ ಯೇಸುಸ್ವಾಮಿ, “ನರಪುತ್ರನು ಕಠಿಣವಾದ ಯಾತನೆಯನ್ನು ಅನುಭವಿಸಬೇಕಾಗಿದೆ. ಸಭಾಪ್ರಮುಖರಿಂದಲೂ ಪ್ರಧಾನ ಯಾಜಕರಿಂದಲೂ ಧರ್ಮಶಾಸ್ತ್ರಿಗಳಿಂದಲೂ ಆತನು ತಿರಸ್ಕೃತನಾಗಿ ಕೊಲ್ಲಲ್ಪಡುವನು; ಆದರೆ ಮೂರನೇ ದಿನ ಪುನರುತ್ಥಾನ ಹೊಂದುವನು,” ಎಂದು ತಮ್ಮ ಶಿಷ್ಯರಿಗೆ ಮುಚ್ಚು ಮರೆಯಿಲ್ಲದೆ ಬೋಧಿಸಲಾರಂಭಿಸಿದರು. ಇದನ್ನು ಕೇಳಲಾಗದೇ ಪೇತ್ರನು ಅವರನ್ನು ಪ್ರತ್ಯೇಕವಾಗಿ ಕರೆದು, “ತಾವು ಹೀಗೆಲ್ಲಾ ಹೇಳಬಾರದು,” ಎಂದು ಪ್ರತಿಭಟಿಸಿದನು. ಆಗ ಯೇಸು ಹಿಂದಕ್ಕೆ ತಿರುಗಿ, ತಮ್ಮ ಶಿಷ್ಯರನ್ನು ನೋಡಿ, ಪೇತ್ರನನ್ನು ಗದರಿಸುತ್ತಾ, “ಸೈತಾನನೇ, ತೊಲಗು ಇಲ್ಲಿಂದ; ನಿನ್ನ ಈ ಆಲೋಚನೆ ಮನುಷ್ಯರದೇ ಹೊರತು ದೇವರದಲ್ಲ,” ಎಂದರು.

19.02.2020 - "ಅವನು ಕಣ್ಣರಳಿಸಿ ನೋಡಿದಾಗ ಪೂರ್ಣ ದೃಷ್ಟಿಯನ್ನು ಹೊಂದಿದ್ದನು"

ಮೊದಲನೇ ವಾಚನ: ಯಕೋಬ 1:19-27

ಸಹೋದರರೇ, ಇದನ್ನು ನೆನಪಿನಲ್ಲಿಡಿ; ನಿಮ್ಮಲ್ಲಿ ಪ್ರತಿಯೊಬ್ಬನು ಆಲಿಸುವುದರಲ್ಲಿ ಚುರುಕಾಗಿ, ಮಾತನಾಡುವುದರಲ್ಲಿ ದುಡುಕದೆ, ಸಿಟ್ಟುಗೊಳ್ಳುವುದರಲ್ಲಿ ಸಾವಧಾನವಾಗಿ ಇರಲಿ. ಮಾನವನ ಕೋಪ ದೇವನೀತಿಗೆ ಧಕ್ಕೆ! ಆದುದರಿಂದ ನಿಮ್ಮಲ್ಲಿರುವ ಎಲ್ಲಾ ನೀಚತನವನ್ನು ಮತ್ತು ಬೆಳೆಯುತ್ತಿರುವ ದುಷ್ಟತನವನ್ನು ಕಿತ್ತೊಗೆಯಿರಿ. ನಿಮ್ಮ ಹೃದಯದಲ್ಲಿ ದೇವರು ನೆಟ್ಟಿರುವ ವಾಕ್ಯವನ್ನು ನಮ್ರತೆಯಿಂದ ಪರಿಗ್ರಹಿಸಿರಿ. ಇದು ನಿಮ್ಮ ಜೀವೋದ್ಧಾರ ಮಾಡಬಲ್ಲುದು. ದೇವರ ವಾಕ್ಯವನ್ನು ಕಿವಿಯಿಂದ ಕೇಳಿದರೆ ಸಾಕೆಂದು ತಿಳಿದು ಮರುಳಾಗದಿರಿ. ಆ ವಾಕ್ಯವನ್ನು ಅನುಸರಿಸಿ ನಡೆಯುವವರಾಗಿರಿ. ದೇವರ ವಾಕ್ಯವನ್ನು ಕೇಳಿ ಅದರಂತೆ ನಡೆಯದವನು ಕನ್ನಡಿಯಲ್ಲಿ ತನ್ನ ಸಹಜ ಮುಖವನ್ನು ನೋಡಿ, ಮರುಕ್ಷಣವೇ ತಾನು ಹೇಗಿದ್ದೇನೆಂದು ಮರೆತುಬಿಡುವವನಿಗೆ ಸಮಾನನು. ಆದರೆ ನಮಗೆ ವಿಮೋಚನೆಯನ್ನು ತರುವ ಸರ್ವೋತ್ತಮ ಧರ್ಮಶಾಸ್ತ್ರವನ್ನು ಲಕ್ಷ್ಯವಿಟ್ಟು ನೋಡಿ ಅದರಲ್ಲೇ ಧ್ಯಾನಾಸಕ್ತನಾಗಿರುವವನು ಅದನ್ನು ಮರೆಯುವುದಿಲ್ಲ. ಅವನು ಕೇಳುವವನು ಮಾತ್ರ ಆಗಿರದೆ, ವಾಕ್ಯದ ಪ್ರಕಾರ ನಡೆಯುವವನೂ ಆಗಿರುತ್ತಾನೆ. ಇಂಥವನು ಭಾಗ್ಯವಂತನು! ತಾನು ಸದ್ಭಕ್ತನೆಂದು ಭಾವಿಸಿಕೊಳ್ಳುವ ಯಾವನಾದರೂ ತನ್ನ ನಾಲಿಗೆಗೆ ಕಡಿವಾಣ ಹಾಕದಿದ್ದರೆ, ಅಂಥವನ ಭಕ್ತಿ ವ್ಯರ್ಥ. ಅವನು ತನ್ನನ್ನೇ ವಂಚಿಸಿಕೊಳ್ಳುತ್ತಾನಷ್ಟೆ. ಕಷ್ಟಸಂಕಟಗಳಲ್ಲಿರುವ ಅನಾಥರಿಗೂ ವಿಧವೆಯರಿಗೂ ನೆರವಾಗುವುದು ಹಾಗೂ ಪ್ರಾಪಂಚಿಕ ಮಲಿನತೆಯಿಂದ ದೂರವಿರುವುದು - ನಮ್ಮ ತಂದೆಯಾದ ದೇವರ ಮುಂದೆ ನಿಷ್ಕಳಂಕವಾದ ಮತ್ತು ನಿರ್ಮಲವಾದ ಧರ್ಮವೆನಿಸುತ್ತದೆ.

ಕೀರ್ತನೆ: 15:2-3, 3-4, 5

ಶ್ಲೋಕ: ರ್ಹನಾರು ಪ್ರಭೂ, ನಿನ್ನ ಪವಿತ್ರ ಶಿಖರದಲಿ ವಾಸವಾಗಿರಲು

ಶುಭಸಂದೇಶ: ಮಾರ್ಕ 8:22-26


ಯೇಸುಸ್ವಾಮಿ ಮತ್ತು ಅವರ ಶಿಷ್ಯರು ಬೆತ್ಸಾಯಿದಕ್ಕೆ ಬಂದರು. ಕೆಲವರು ಯೇಸುವಿನ ಬಳಿಗೆ ಕುರುಡನೊಬ್ಬನನ್ನು ಕರೆತಂದು ಅವನನ್ನು ಮುಟ್ಟಬೇಕೆಂದು ಬೇಡಿಕೊಂಡರು. ಯೇಸು ಕುರುಡನ ಕೈಹಿಡಿದು, ಅವನನ್ನು ಊರ ಹೊರಗೆ ಕರೆದೊಯ್ದರು. ಅವನ ಮೇಲೆ ಕೈಯಿಟ್ಟು, “ನಿನಗೆ ಏನಾದರೂ ಕಾಣುತ್ತಿದೆಯೇ?” ಎಂದು ಕೇಳಿದರು. ಆಗ ಅವನು ಕಣ್ಣೆತ್ತಿ ನೋಡಿ, “ನನಗೆ ಮನುಷ್ಯರು ಮರಗಳಂತೆ ಕಾಣಿಸುತ್ತಾರೆ. ಆದರೂ ಅವರು ನಡೆದಾಡುತ್ತಿದ್ದಾರೆ,” ಎಂದನು. ಯೇಸು ಪುನಃ ಅವನ ಕಣ್ಣುಗಳ ಮೇಲೆ ಕೈಯಿಟ್ಟರು. ಅವನು ಕಣ್ಣರಳಿಸಿ ನೋಡಿದಾಗ ಪೂರ್ಣ ದೃಷ್ಟಿಯನ್ನು ಹೊಂದಿದ್ದನು. ಎಲ್ಲವೂ ಅವನಿಗೆ ಸ್ಪಷ್ಟವಾಗಿ ಕಾಣಿಸಿತು. ಅನಂತರ ಯೇಸು, “ನೀನು ಊರೊಳಗೆ ಹೋಗುವುದೇ ಬೇಡ,” ಎಂದು ಅವನಿಗೆ ಆಜ್ಞಾಪಿಸಿ, ಮನೆಗೆ ಕಳುಹಿಸಿಬಿಟ್ಟರು.

18.02.2020 - "ನೀವಿನ್ನೂ ಮಂದಮತಿಗಳಾಗಿರುವಿರೋ? ಕಿವಿಗಳಿದ್ದೂ ಕೇಳಲಾರಿರಾ? ಕಣ್ಣುಗಳಿದ್ದೂ ನೋಡಲಾರಿರಾ?"

ಮೊದಲನೇ ವಾಚನ: ಯಕೋಬ 1:12-18

ಸಂಕಟ ಶೋಧನೆಗಳನ್ನು ತಾಳ್ಮೆಯಿಂದ ಸಹಿಸಿಕೊಳ್ಳುವವನೇ ಧನ್ಯನು. ಅವನು ಪರಿಶೋಧನೆಯಲ್ಲಿ ಯಶಸ್ವಿಯಾದ ಮೇಲೆ ಸಜ್ಜೀವವೆಂಬ ಜಯಮಾಲೆಯನ್ನು ಪಡೆಯುತ್ತಾನೆ. ದೇವರು ತಮ್ಮನ್ನು ಪ್ರೀತಿಸುವವರಿಗೆ ಇದನ್ನು ಕಾದಿರಿಸಿರುತ್ತಾರೆ. ಪಾಪಪ್ರಲೋಭನೆಗೆ ಒಳಗಾದಾಗ, “ಈ ಪ್ರಲೋಭನೆಗಳು ದೇವರಿಂದಲೇ ಬಂದವು,” ಎಂದು ಯಾರೂ ಹೇಳದಿರಲಿ. ಏಕೆಂದರೆ, ದೇವರು ಸ್ವತಃ ಪಾಪಪ್ರಲೋಭನೆಗೆ ಗುರಿಯಾಗುವುದಿಲ್ಲ ಮತ್ತು ಯಾರನ್ನೂ ಅಂಥ ಪ್ರಲೋಭನೆಗೆ ಗುರಿಪಡಿಸುವುದಿಲ್ಲ. ಮಾನವನು ಪ್ರಲೋಭನೆಗೆ ಒಳಗಾಗುವುದು ತನ್ನ ದುರಿಚ್ಛೆಯಿಂದಲೇ. ಅದು ಅವನನ್ನು ಆಕರ್ಷಿಸಿ ಮರುಳುಗೊಳಿಸುತ್ತದೆ. ದುರಿಚ್ಛೆ ಗರ್ಭಧರಿಸಿ ಪಾಪಕ್ಕೆ ಜನ್ಮವೀಯುತ್ತದೆ; ಪಾಪವು ಪೂರ್ತಿಯಾಗಿ ಬೆಳೆದು ಮರಣವನ್ನು ಹಡೆಯುತ್ತದೆ. ಪ್ರಿಯ ಸಹೋದರರೇ, ಮೋಸಹೋಗಬೇಡಿ. ಎಲ್ಲಾ ಯೋಗ್ಯ ವರಗಳೂ ಉತ್ತಮಕೊಡುಗೆಗಳೂ ಬರುವುದು ಮೇಲಿನಿಂದಲೇ. ಜ್ಯೋತಿರ್ಮಂಡಲವನ್ನು ಉಂಟುಮಾಡಿದ ದೇವರೇ ಅವುಗಳ ಮೂಲದಾತರು. ಅವರಲ್ಲಿ ಚಂಚಲತೆ ಇಲ್ಲ, ಮಬ್ಬು ಮುಸುಕಿನ ಛಾಯೆಯೂ ಇಲ್ಲ. ಸೃಷ್ಟಿಗಳಲ್ಲೆಲ್ಲಾ ನಾವು ಪ್ರಥಮ ಫಲವಾಗುವಂತೆ ದೇವರು ತಮ್ಮ ಸುಚಿತ್ತದ ಪ್ರಕಾರ ಸತ್ಯವಾಕ್ಯದ ಮೂಲಕ ನಮಗೆ ಜೀವವಿತ್ತರು.

ಕೀರ್ತನೆ: 94:12-13, 14-15, 18-19

ಶ್ಲೋಕ: ಪ್ರಭೂ, ನಿನ್ನಿಂದ ಧರ್ಮೋಪದೇಶ ಪಡೆದವನು ಧನ್ಯ

ಶುಭಸಂದೇಶ: ಮಾರ್ಕ 8:14-21


ಶಿಷ್ಯರು ಬುತ್ತಿಯನ್ನು ಕಟ್ಟಿಕೊಳ್ಳಲು ಮರೆತಿದ್ದರು. ದೋಣಿಯಲ್ಲಿ ಒಂದೇ ಒಂದು ರೊಟ್ಟಿಯಿತ್ತು. ಯೇಸುಸ್ವಾಮಿ ಅವರಿಗೆ, “ಎಚ್ಚರಿಕೆ, ಫರಿಸಾಯರ ಹಾಗೂ ಹೆರೋದನ ಹುಳಿಹಿಟ್ಟಿನ ವಿಷಯದಲ್ಲಿ ಜಾಗರೂಕರಾಗಿರಿ,” ಎಂದು ಹೇಳಿದರು. ಇದನ್ನು ಕೇಳಿದ ಶಿಷ್ಯರು, “ನಮ್ಮಲ್ಲಿ ರೊಟ್ಟಿಯಿಲ್ಲದ್ದರಿಂದ ಹೀಗೆ ಹೇಳುತ್ತಿರಬಹುದೇ” ಎಂದು ಚರ್ಚಿಸತೊಡಗಿದರು. ಆ ಚರ್ಚೆಯನ್ನು ಯೇಸು ಗಮನಿಸಿ “ರೊಟ್ಟಿ ಇಲ್ಲವೆಂದು ಚರ್ಚೆ ಏಕೆ? ನಿಮಗೆ ಇನ್ನೂ ಅರಿವಾಗಲಿ, ಗ್ರಹಿಕೆಯಾಗಲಿ ಇಲ್ಲವೇ? ನೀವಿನ್ನೂ ಮಂದಮತಿಗಳಾಗಿರುವಿರೋ? ಕಿವಿಗಳಿದ್ದೂ ಕೇಳಲಾರಿರಾ? ಕಣ್ಣುಗಳಿದ್ದೂ ನೋಡಲಾರಿರಾ? ನಾನು ಐದು ರೊಟ್ಟಿಗಳಿಂದ ಐದುಸಾವಿರ ಜನರನ್ನು ತೃಪ್ತಿಪಡಿಸಿದಾಗ ಉಳಿದ ರೊಟ್ಟಿಯ ತುಂಡುಗಳನ್ನು ಎಷ್ಟು ಬುಟ್ಟಿ ತುಂಬಾ ಒಟ್ಟುಗೂಡಿಸಿದಿರಿ? ನಿಮಗೆ ಜ್ಞಾಪಕವಿಲ್ಲವೇ?” ಎಂದು ಕೇಳಿದರು. “ಹನ್ನೆರಡು ಬುಟ್ಟಿಗಳು” ಎಂದು ಅವರು ಉತ್ತರವಿತ್ತರು. “ಅಲ್ಲದೆ ನಾನು ಏಳು ರೊಟ್ಟಿಗಳಿಂದ ನಾಲ್ಕುಸಾವಿರ ಜನರನ್ನು ತೃಪ್ತಿಪಡಿಸಿದಾಗ ಎಷ್ಟು ಕುಕ್ಕೆತುಂಬಾ ರೊಟ್ಟಿಯ ತುಂಡುಗಳನ್ನು ಒಟ್ಟುಗೂಡಿಸಿದಿರಿ?” ಎಂದು ಪುನಃ ಅವರನ್ನು ಕೇಳಲು, “ಏಳು ಕುಕ್ಕೆಗಳು,” ಎಂದರು. ಆಗ ಯೇಸು, “ಇಷ್ಟಾದರೂ ನಿಮಗಿನ್ನೂ ತಿಳುವಳಿಕೆ ಇಲ್ಲವೆ?” ಎಂದರು. 

17.02.2020 - “ಈ ಪೀಳಿಗೆ ಅದ್ಭುತವನ್ನು ಸಂಕೇತವಾಗಿ ಅಪೇಕ್ಷಿಸುವುದೇಕೆ?"

ಮೊದಲನೇ ವಾಚನ: ಯಕೋಬ 1:1-11

ಜಗದಾದ್ಯಂತ ಚದರಿರುವ ಇಸ್ರಯೇಲಿನ ಹನ್ನೆರಡು ಕುಲದವರಿಗೆ - ದೇವರ ಹಾಗೂ ಪ್ರಭು ಯೇಸುಕ್ರಿಸ್ತರ ದಾಸನಾದ ಯಕೋಬನ ಶುಭಾಶಯಗಳು. ನನ್ನ ಪ್ರಿಯ ಸಹೋದರರೇ, ನಿಮಗೆ ವಿವಿಧ ಸಂಕಟ ಶೋಧನೆಗಳು ಬಂದೊದಗಿದಾಗ ಅವುಗಳನ್ನು ಸಂತೋಷದಿಂದ ಸಹಿಸಿಕೊಳ್ಳಿ. ಇವು ನಿಮ್ಮ ವಿಶ್ವಾಸವನ್ನು ಒರೆಗೆ ಹಚ್ಚಿ ನಿಮ್ಮನ್ನು ದೃಢಪಡಿಸುತ್ತೇವೆ; ನಿಮ್ಮನ್ನು ಸಹನಶೀಲರನ್ನಾಗಿ ಮಾಡುತ್ತವೆ. ಈ ಸಹನೆ ಸಿದ್ಧಿಗೆ ಬಂದಾಗ ನೀವು ಯಾವ ಕುಂದುಕೊರತೆ ಇಲ್ಲದೆ, ಪರಿಪೂರ್ಣರೂ ಸರ್ವಗುಣ ಸಂಪನ್ನರೂ ಆಗುತ್ತೀರಿ. ನಿಮ್ಮಲ್ಲಿ ಯಾರಿಗಾದರೂ ಜ್ಞಾನದ ಕೊರತೆಯಿದ್ದರೆ ಅಂಥವನು ದೇವರಲ್ಲಿ ಬೇಡಿಕೊಳ್ಳಲಿ. ಯಾರನ್ನೂ ತಿರಸ್ಕರಿಸದೆ ಎಲ್ಲರಿಗೂ ಯಥೇಚ್ಛವಾಗಿ ನೀಡುವ ದೇವರು, ಅವನಿಗೆ ಜ್ಞಾನವನ್ನು ದಯಪಾಲಿಸುತ್ತಾರೆ. ಆದರೆ ಬೇಡುವವನು ವಿಶ್ವಾಸದಿಂದ ಬೇಡಲಿ. ಸಂಶಯಕ್ಕೆ ಎಡೆಕೊಡದಿರಲಿ. ಸಂಶಯಕ್ಕೀಡಾಗುವವನ ಪರಿಸ್ಥಿತಿಯಾದರೋ ಬಿರುಗಾಳಿಯ ಬಡಿತಕ್ಕೆ ಸಿಕ್ಕಿದ ಸಮುದ್ರದ ಅಲೆಯಂತೆ ತುಯ್ದಾಡುತ್ತಿರುತ್ತದೆ. ಅಂಥವನು ಚಂಚಲಚಿತ್ತನು. ಆಚಾರವಿಚಾರಗಳಲ್ಲಿ ಅಸ್ಥಿರ ಮನಸ್ಸುಳ್ಳವನು. ಆದ್ದರಿಂದ ಅವನು ಪ್ರಭುವಿನಿಂದ ಏನನ್ನಾದರೂ ಪಡೆಯುತ್ತೇನೆಂದು ಭಾವಿಸದಿರಲಿ. ದೀನದಲಿತನಾದ ಸಹೋದರನು, ದೇವರು ತನ್ನನ್ನು ಉನ್ನತ ಸ್ಥಿತಿಗೆ ಏರಿಸಿದಾಗ ಅನಂದಿಸಲಿ. ಅಂತೆಯೇ ಧನಿಕನಾದ ಸಹೋದರನು, ದೇವರು ತನ್ನನ್ನು ದೀನಸ್ಥಿತಿಗೆ ಇಳಿಸಿದಾಗ ಆನಂದಿಸಲಿ. ಏಕೆಂದರೆ, ಧನಿಕರು ಹುಲ್ಲಿನ ಹೂವಿನಂತೆ ಗತಿಸಿ ಹೋಗುತ್ತಾರೆ. ಸೂರ್ಯನ ಸುಡು ಬಿಸಿಲಿಗೆ ಹುಲ್ಲು ಒಣಗಿಹೋಗುತ್ತದೆ, ಅದರ ಹೂವು ಉದುರಿ ಹೋಗುವುದು, ಅದರ ಅಂದ ಚೆಂದವೂ ಹಾಳಾಗಿ ಹೋಗುತ್ತದೆ. ಅಂತೆಯೇ ಧನಿಕನು ತನ್ನ ವ್ಯವಹಾರಗಳಲ್ಲಿಯೇ ಕುಂದಿ ಹೋಗುತ್ತಾನೆ.

ಕೀರ್ತನೆ: 119:67, 68, 71, 72, 75, 76

ಶ್ಲೋಕ: ನಾ ಬದುಕುವಂತೆ ತೋರೆನಗೆ ನಿನ್ನ ದಯೆ

ಶುಭಸಂದೇಶ: ಮಾರ್ಕ 8:11-13


ಫರಿಸಾಯರು ಯೇಸುಸ್ವಾಮಿಯ ಬಳಿಗೆ ಬಂದು, ಅವರೊಡನೆ ತರ್ಕಮಾಡಿ, ಅವರನ್ನು ಪರೀಕ್ಷಿಸುವ ಉದ್ದೇಶದಿಂದ: “ನೀನು ದೇವರಿಂದ ಬಂದವನೆಂಬುದನ್ನು ಸೂಚಿಸಲು ಒಂದು ಅದ್ಭುತವನ್ನು ಮಾಡಿತೋರಿಸು,” ಎಂದು ಕೇಳಿದರು. ಇದನ್ನು ಕೇಳಿ ಯೇಸು, ಮನಸ್ಸಿನಲ್ಲೇ ನೊಂದುಕೊಂಡು, ನಿಟ್ಟುಸಿರಿಟ್ಟು, “ಈ ಪೀಳಿಗೆ ಅದ್ಭುತವನ್ನು ಸಂಕೇತವಾಗಿ ಅಪೇಕ್ಷಿಸುವುದೇಕೆ? ಇದಕ್ಕೆ ಅಂಥ ಯಾವ ಸಂಕೇತವನ್ನು ಕೊಡಲಾಗದು, ಇದು ಖಂಡಿತ,” ಎಂದರು. ಅನಂತರ ಯೇಸು ಅವರನ್ನು ಬಿಟ್ಟು, ದೋಣಿಯನ್ನು ಹತ್ತಿ ಸರೋವರದ ಆಚೆದಡಕ್ಕೆ ಹೊರಟುಹೋದರು.

16.02.2020 - "ತನ್ನ ಸೋದರನ ಮೇಲೆ (ನಿಷ್ಕಾರಣವಾಗಿ) ಕೋಪಗೊಳ್ಳುವ ಪ್ರತಿಯೊಬ್ಬನೂ ನ್ಯಾಯತೀರ್ಪಿಗೆ ಈಡಾಗುವನು"

ಮೊದಲನೇ ವಾಚನ: ಸಿರಾಖನು 15:15-50

ನೀನು ಇಚ್ಛಿಸಿದೆಯಾದರೆ ಆತನ ಆಜ್ಞೆಗಳನ್ನು ಅನುಸರಿಸಿ ನಡೆವೆ ಹೀಗೆ ನಂಬಿಗಸ್ಥನಾಗಿ ದೇವರ ಚಿತ್ತಾನುಸಾರ ಬಾಳುವೆ. ನಿನ್ನ ಮುಂದೆ ಇಟ್ಟಿರುವರು ಬೆಂಕಿಯನ್ನು ಹಾಗು ನೀರನ್ನು ನೀನು ಆಯ್ದುಕೊಳ್ಳಬಹುದು ನಿನಗೆ ಬೇಕಾದುದನ್ನು. ಜೀವನ್ಮರಣಗಳು ಇರಿಸಲಾಗಿವೆ ಮನುಷ್ಯನ ಎದುರಿನಲ್ಲೆ ಅವನು ಇಷ್ಟಪಟ್ಟದ್ದನ್ನು ಕೊಡಲಾಗುವುದು ಅವನಿಗೆ. ಏಕೆಂದರೆ ದೇವರ ಜ್ಞಾನ ಅಪರಿಮಿತ ಆತ ಅಪೂರ್ವ ಬಲವಂತ, ಎಲ್ಲವನು ವೀಕ್ಷಿಸುವಂಥವ. ದೇವರಿಗೆ ಭಯಪಡುವವರ ಮೇಲಿದೆ ಆತನ ಕೃಪಾಕಟಾಕ್ಷ ಮನುಷ್ಯನು ಮಾಡುವ ಪ್ರತಿಯೊಂದೂ ಆತನಿಗೆ ವ್ಯಕ್ತ. ದುರುಳನಾಗೆಂದು ದೇವರು ಯಾರಿಗೂ ಆಜ್ಞಾಪಿಸಲಿಲ್ಲ, ಪಾಪಮಾಡಲು ಯಾರಿಗೂ ಅನುಮತಿ ಕೊಟ್ಟಿಲ್ಲ.

ಕೀರ್ತನೆ: 119:1-2, 4-5, 17-18, 33-34

ಶ್ಲೋಕ: ಪ್ರಭುವಿನ ಶಾಸ್ತ್ರಾನುಸಾರ ನಡೇದವರು ಧನ್ಯರು

ಎರಡನೇ ವಾಹನ: 1 ಕೊರಿಂಥಿಯರಿಗೆ 2:6-10

ನಾನು ಪರಿಣಿತರೊಂದಿಗೆ ಜ್ಞಾನವನ್ನೇ ಕುರಿತು ಮಾತನಾಡುತ್ತೇನೆ. ಆದರೆ ಇದು ಇಹಲೋಕದ ಜ್ಞಾನವಲ್ಲ, ಅಳಿದು ಹೋಗುವಂಥ ಅಧಿಪತಿಗಳ ಜ್ಞಾನವೂ ಅಲ್ಲ. ನಾನು ಸಾರುವ ಜ್ಞಾನ ದೇವರ ನಿಗೂಢ ಜ್ಞಾನ. ಮಾನವರಿಗೆ ಮುಚ್ಚಿಟ್ಟ ಜ್ಞಾನ. ನಮ್ಮನ್ನು ಮಹಿಮೆಗೊಳಿಸುವುದಕ್ಕಾಗಿ ಲೋಕದ ಉತ್ಪತ್ತಿಗೆ ಮೊದಲೇ ದೇವರು ನಿಯೋಜಿಸಿದ ಜ್ಞಾನ. ಲೋಕಾಧಿಪತಿಗಳಾರಿಗೂ ಇದರ ಅರಿವಿರಲಿಲ್ಲ. ಹಾಗೆ ಅರಿತಿದ್ದರೆ ಆ ಮಹಿಮಾನ್ವಿತ ಪ್ರಭುವನ್ನು ಅವರು ಶಿಲುಬೆಗೇರಿಸುತ್ತಿರಲಿಲ್ಲ. ಪವಿತ್ರಗ್ರಂಥದಲ್ಲಿ ಹೇಳಿರುವಂತೆ: “ಕಣ್ಣಾವುದೂ ಕಂಡಿಲ್ಲ, ಕಿವಿಯಾವುದೂ ಕೇಳಿಲ್ಲ. ಮನುಜಕಲ್ಪನೆಗೂ ಎಟುಕಲಿಲ್ಲ. ಅಂಥ ಅತಿಶಯಗಳನ್ನು ಸಜ್ಜುಗೊಳಿಸಿರುವನು, ತನ್ನನೊಲಿದವರಿಗೆ ಪರಮದೇವನು.” ನಮಗಾದರೋ ದೇವರು ಪವಿತ್ರಾತ್ಮ ಅವರ ಮುಖಾಂತರ ಇವುಗಳನ್ನು ಪ್ರಕಟಿಸಿದ್ದಾರೆ. ಸಕಲವನ್ನು ಹಾಗೂ ದೇವರ ಅಂತರಾಳವನ್ನು ಅವಲೋಕಿಸುವವರು ಈ ಪವಿತ್ರಾತ್ಮರೇ.

ಶುಭಸಂದೇಶ: ಮತ್ತಾಯ 5:17-37


ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೇಳಿದ್ದೇನೆಂಡರೆ: "ಮೋಶೆಯ ಧರ್ಮಶಾಸ್ತ್ರವನ್ನಾಗಲಿ, ಪ್ರವಾದಿಗಳ ಪ್ರವಚನಗಳನ್ನಾಗಲಿ ರದ್ದು ಮಾಡಲು ನಾನು ಬಂದೆನೆಂದು ತಿಳಿಯಬೇಡಿ. ರದ್ದು ಮಾಡಲು ಅಲ್ಲ, ಅವುಗಳನ್ನು ಸಿದ್ಧಿಗೆ ತರಲು ಬಂದಿದ್ದೇನೆ. ಭೂಮ್ಯಾಕಾಶಗಳು ಉಳಿದಿರುವ ತನಕ ಧರ್ಮಶಾಸ್ತ್ರವೆಲ್ಲ ನೆರವೇರುವುದೇ ಹೊರತು ಅದರಲ್ಲಿ ಒಂದು ಚಿಕ್ಕ ಅಕ್ಷರವಾಗಲಿ, ಚುಕ್ಕೆಯಾಗಲಿ ನಿರರ್ಥಕವಾಗದೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ. ಹೀಗಿರುವಲ್ಲಿ, ಅದರ ಆಜ್ಞೆಗಳಲ್ಲಿ ಅತಿ ಚಿಕ್ಕದೊಂದನ್ನು ವಿೂರುವವನು, ವಿೂರುವಂತೆ ಜನರಿಗೆ ಬೋಧಿಸುವವನು, ಸ್ವರ್ಗಸಾಮ್ರಾಜ್ಯದಲ್ಲಿ ಅತ್ಯಲ್ಪನೆಂದು ಪರಿಗಣಿತನಾಗುವನು; ಧರ್ಮಶಾಸ್ತ್ರವನ್ನು ಪಾಲಿಸುವವನು, ಪಾಲಿಸುವಂತೆ ಜನರಿಗೆ ಬೋಧಿಸುವವನು, ಸ್ವರ್ಗಸಾಮ್ರಾಜ್ಯದಲ್ಲಿ ಮಹಾತ್ಮನೆಂದು ಪರಿಗಣಿತನಾಗುವನು. ಧರ್ಮಶಾಸ್ತ್ರಿಗಳ ಹಾಗೂ ಫರಿಸಾಯರ ಧರ್ಮನಿಷ್ಠೆಗಿಂತ ನಿಮ್ಮ ಧರ್ಮನಿಷ್ಠೆ ಉತ್ತಮವಾಗದ ಹೊರತು ನೀವು ಸ್ವರ್ಗಸಾಮ್ರಾಜ್ಯವನ್ನು ಪ್ರವೇಶಿಸಲಾರಿರಿ ಎಂಬುದು ನಿಶ್ಚಯ." ಕೋಪ ಕೊಲೆಗೆ ಮೂಲ " ‘ನರಹತ್ಯೆ ಮಾಡಬೇಡ; ನರಹತ್ಯೆ ಮಾಡುವವನು ನ್ಯಾಯತೀರ್ಪಿಗೆ ಗುರಿಯಾಗುವನು’ ಎಂದು ಪೂರ್ವಿಕರಿಗೆ ಹೇಳಿದ್ದನ್ನು ನೀವು ಕೇಳಿದ್ದೀರಿ. ಆದರೆ ನಾನೀಗ ನಿಮಗೆ ಹೇಳುತ್ತೇನೆ, ಕೇಳಿ: ತನ್ನ ಸೋದರನ ಮೇಲೆ (ನಿಷ್ಕಾರಣವಾಗಿ) ಕೋಪಗೊಳ್ಳುವ ಪ್ರತಿಯೊಬ್ಬನೂ ನ್ಯಾಯತೀರ್ಪಿಗೆ ಈಡಾಗುವನು; ತನ್ನ ಸೋದರನನ್ನು ತುಚ್ಛೀಕರಿಸುವವನು ನ್ಯಾಯಸಭೆಯ ವಿಚಾರಣೆಗೆ ಒಳಗಾಗುವನು; ‘ಮೂರ್ಖ’ ಎಂದು ಮೂದಲಿಸುವವನು ನರಕಾಗ್ನಿಗೆ ಗುರಿಯಾಗುವನು. ಆದಕಾರಣ, ಬಲಿಪೀಠದ ಮುಂದೆ ದೇವರಿಗೆ ಕಾಣಿಕೆಯನ್ನು ಅರ್ಪಿಸಲಿರುವಾಗ, ನಿನ್ನ ಸೋದರನಿಗೆ ನಿನ್ನ ಮೇಲೆ ಏನೋ ಮನಸ್ತಾಪವಿದೆ ಎಂಬುದು ನಿನ್ನ ನೆನಪಿಗೆ ಬಂದರೆ, ನಿನ್ನ ಕಾಣಿಕೆಯನ್ನು ಆ ಬಲಿಪೀಠದ ಮುಂದೆಯೇ ಇಟ್ಟುಬಿಡು. ಮೊದಲು ಹೋಗಿ ನಿನ್ನ ಸೋದರನೊಡನೆ ಸಮಾಧಾನಮಾಡಿಕೊ, ಅನಂತರ ಬಂದು ನಿನ್ನ ಕಾಣಿಕೆಯನ್ನು ಒಪ್ಪಿಸು." "ನಿನ್ನ ಎದುರಾಳಿ ನಿನ್ನನ್ನು ನ್ಯಾಯಸ್ಥಾನಕ್ಕೆ ಎಳೆಯುವಾಗ ಮಾರ್ಗಮಧ್ಯದಲ್ಲೇ ಅವನೊಡನೆ ಬೇಗ ಸಂಧಾನಮಾಡಿಕೊ. ಇಲ್ಲದಿದ್ದರೆ, ಅವನು ನಿನ್ನನ್ನು ನ್ಯಾಯಾಧಿಪತಿಗೆ ಒಪ್ಪಿಸಬಹುದು. ನ್ಯಾಯಾಧಿಪತಿ ನಿನ್ನನ್ನು ಪೋಲೀಸರ ವಶಕ್ಕೆ ಬಿಡಬಹುದು. ಅನಂತರ ನಿನಗೆ ಸೆರೆವಾಸ ಪ್ರಾಪ್ತವಾದೀತು! ಅಲ್ಲಿಂದ ನೀನು ಹೊರಗೆ ಬರಬೇಕಾದರೆ ಬಿಡಿಕಾಸನ್ನೂ ಬಿಡದೆ ಎಲ್ಲವನ್ನೂ ತೆರಬೇಕಾಗುವುದು. ಇದನ್ನು ನೆನಪಿನಲ್ಲಿಡು." "ವ್ಯಭಿಚಾರ ಮಾಡಕೂಡದು ಎಂಬ ನಿಯಮವನ್ನು ನೀವು ಕೇಳಿದ್ದೀರಿ; ಆದರೆ ನಾನು ಹೇಳುತ್ತೇನೆ, ಕೇಳಿ: ಪರಸ್ತ್ರೀಯನ್ನು ಕಾಮದೃಷ್ಟಿಯಿಂದ ನೋಡುವ ಪ್ರತಿಯೊಬ್ಬನೂ ತನ್ನ ಹೃದಯದಲ್ಲಿ ಆಕೆಯೊಡನೆ ಆಗಲೇ ವ್ಯಭಿಚಾರ ಮಾಡಿದವನೇ ಆಗುತ್ತಾನೆ. ನಿನ್ನ ಬಲಗಣ್ಣು ನಿನಗೆ ಪಾಪಕ್ಕೆ ಕಾರಣವಾದರೆ ಅದನ್ನು ಕಿತ್ತೆಸೆದುಬಿಡು; ನಿನ್ನ ಇಡೀ ದೇಹ ನರಕಕ್ಕೆ ತುತ್ತಾಗುವುದಕ್ಕಿಂತ ನಿನ್ನ ಒಂದು ಅಂಗ ನಾಶವಾಗುವುದೇ ಲೇಸು. ನಿನ್ನ ಬಲಗೈ ನಿನಗೆ ಪಾಪಕ್ಕೆ ಕಾರಣವಾದರೆ ಅದನ್ನು ಕತ್ತರಿಸಿ ಬಿಸಾಡಿಬಿಡು; ನಿನ್ನ ಇಡೀ ದೇಹ ನರಕದ ಪಾಲಾಗುವುದಕ್ಕಿಂತ ಒಂದು ಅವಯವ ನಾಶವಾಗುವುದು ಎಷ್ಟೋ ಮೇಲು." "ಇದಲ್ಲದೆ, ‘ತನ್ನ ಹೆಂಡತಿಯನ್ನು ಬಿಟ್ಟುಬಿಡುವವನು ವಿವಾಹ ವಿಚ್ಛೇದನ ಪತ್ರವನ್ನು ಅವಳಿಗೆ ಕೊಡಲಿ,’ ಎಂದು ವಿಧಿಸಲಾಗಿದೆ. ಆದರೆ ನಾನೀಗ ನಿಮಗೆ ಹೇಳುತ್ತೇನೆ, ಕೇಳಿ: ತನ್ನ ಹೆಂಡತಿಯ ದುರ್ನಡತೆಯ ಕಾರಣದಿಂದಲ್ಲದೆ, ಅವಳನ್ನು ಬಿಟ್ಟುಬಿಡುವವನು ಅವಳು ವ್ಯಭಿಚಾರಿಣಿಯಾಗುವುದಕ್ಕೆ ಕಾರಣನಾಗುತ್ತಾನೆ; ಅಲ್ಲದೆ ಗಂಡ ಬಿಟ್ಟವಳನ್ನು ಮದುವೆಯಾಗುವವನು ಕೂಡ ವ್ಯಭಿಚಾರಿಯಾಗುತ್ತಾನೆ." " ‘ಸುಳ್ಳಾಣೆಯಿಡಬೇಡ; ದೇವರಿಗೆ ಆಣೆಯಿಟ್ಟು ವಾಗ್ದಾನಮಾಡಿದಂತೆ ನಡೆದುಕೊಳ್ಳಲೇ ಬೇಕು’ ಎಂದು ಪೂರ್ವಿಕರಿಗೆ ಹೇಳಿದ್ದು ನಿಮಗೆ ತಿಳಿದೇ ಇದೆ. ಈಗ ನಾನು ಹೇಳುವುದನ್ನು ಕೇಳಿ: ನೀವು ಆಣೆಯಿಡಲೇಬೇಡಿ. ಆಕಾಶದ ಮೇಲೆ ಆಣೆಯಿಡಬೇಡಿ, ಅದು ದೇವರ ಸಿಂಹಾಸನ; ಭೂಮಿಯ ಮೇಲೆ ಆಣೆಯಿಡಬೇಡಿ, ಅದು ದೇವರ ಪಾದಪೀಠ; ಜೆರುಸಲೇಮಿನ ಮೇಲೆ ಆಣೆಯಿಡಬೇಡಿ, ಅದು ರಾಜಾಧಿರಾಜನ ಪಟ್ಟಣ; ನಿಮ್ಮ ತಲೆಯ ಮೇಲೂ ಆಣೆಯಿಡಬೇಡಿ; ಹಾಗೆ ಆಣೆಯನ್ನಿಟ್ಟು ಅದರ ಒಂದು ಕೂದಲನ್ನಾದರೂ ಬೆಳ್ಳಗೆ ಅಥವಾ ಕಪ್ಪಗೆ ಮಾಡಲು ನಿಮ್ಮಿಂದಾಗದು. ಹೌದಾದರೆ ಹೌದೆನ್ನಿ, ಅಲ್ಲವಾದರೆ ಅಲವೆನ್ನಿ; ಇದಕ್ಕಿಂತ ಮಿಗಿಲಾದುದು ಪಿಶಾಚಿಯಿಂದ ಪ್ರೇರಿತವಾದುದು."

15.02.2020 - “ನಿಮ್ಮಲ್ಲಿ ಎಷ್ಟು ರೊಟ್ಟಿಗಳಿವೆ?”

ಮೊದಲನೇ ವಾಚನ: 1 ಅರಸುಗಳು 12:26-32; 13:33-34

ಯಾರೊಬ್ಬಾಮನು ತನ್ನಲ್ಲೇ, “ರಾಜ್ಯವು ಮತ್ತೆ ದಾವೀದನ ಕುಟುಂಬದವರಿಗೆ ಆಗುವುದೋ ಏನೋ; ಜನರು ಜೆರುಸಲೇಮಿನಲ್ಲಿರುವ ಸರ್ವೇಶ್ವರನ ಆಲಯಕ್ಕೆ ಬಲಿಯರ್ಪಣೆಗಾಗಿ ಹೋದರೆ ಅವರ ಮನಸ್ಸು ಅವರ ಒಡೆಯನೂ ಯೆಹೂದದ ಅರಸನೂ ಆದ ರೆಹಬ್ಬಾಮನ ಕಡೆಗೆ ತಿರುಗಬಹುದು; ಅವರು ನನ್ನನ್ನು ಕೊಂದು ಅವನ ಬಳಿಗೆ ಹೋಗಬಹುದು,” ಎಂದುಕೊಂಡನು. ಬಹಳವಾಗಿ ಆಲೋಚಿಸಿ, ಕಡೆಗೆ ಬಂಗಾರದ ಎರಡು ಹೋರಿಕರುಗಳ ಮೂರ್ತಿಗಳನ್ನು ಮಾಡಿಸಿ, ಇಸ್ರಯೇಲರಿಗೆ, “ನೀವು ಜಾತ್ರೆಗಾಗಿ ಜೆರುಸಲೇಮಿಗೆ ಹೋದದ್ದು ಇನ್ನು ಸಾಕು. ಇಗೋ, ನಿಮ್ಮನ್ನು ಈಜಿಪ್ಟಿನಿಂದ ಕರೆದು ತಂದ ದೇವರುಗಳು ಇಲ್ಲಿರುತ್ತವೆ,” ಎಂದು ಹೇಳಿ ಅವುಗಳಲ್ಲಿ ಒಂದನ್ನು ಬೇತೇಲಿನಲ್ಲಿರಿಸಿದನು; ಇನ್ನೊಂದನ್ನು ದಾನಿಗೆ ಕಳುಹಿಸಿದನು. ಇದು ಪಾಪಕ್ಕೆ ಕಾರಣವಾಯಿತು. ಜನರು ಈ ಎರಡನೆಯ ವಿಗ್ರಹವನ್ನು ಮೆರವಣಿಗೆಯಿಂದ ದಾನಿಗೆ ಒಯ್ದರು. ಇದಲ್ಲದೆ, ಅವನು ಪೂಜಾಗಿರಿಗಳ ಮೇಲೆ ಗುಡಿಗಳನ್ನು ಕಟ್ಟಿಸಿ, ಲೇವಿಯರಲ್ಲದ ಜನ ಸಾಮಾನ್ಯರನ್ನು ಯಾಜಕರನ್ನಾಗಿ ನೇಮಿಸಿದನು. ಅವನು ಎಂಟನೆಯ ತಿಂಗಳ ಹದಿನೈದನೆಯ ದಿವಸ, ನಾಡಿನ ಜಾತ್ರೆಗೆ ಸಮನಾದ ಜಾತ್ರೆ ಬೇತೇಲಿನಲ್ಲಿ ನಡೆಯಬೇಕೆಂದು ಅಪ್ಪಣೆ ಮಾಡಿದನು. ತಾನೂ ಅಲ್ಲಿಗೆ ಹೋಗಿ ಅಲ್ಲಿ ನಿಲ್ಲಿಸಿದ್ದ ಹೋರಿಕರುಗಳ ಮೂರ್ತಿಗಳಿಗೆ, ಪೀಠದ ಮೇಲೆ ಬಲಿ ಅರ್ಪಿಸಿದನು. ತಾನು ಏರ್ಪಡಿಸಿದ ಪೂಜಾಸ್ಥಳಗಳ ಯಾಜಕರನ್ನು ಬೇತೇಲಿನ ದೇವಸ್ಥಾನದ ಸೇವೆಗೆ ನೇಮಿಸಿದನು. ಇಷ್ಟಾದರೂ ಯಾರೊಬ್ಬಾಮನು ತನ್ನ ದುರ್ಮಾರ್ಗವನ್ನು ಬಿಡದೆ ಪದೇ ಪದೇ ಜನ ಸಾಮಾನ್ಯರನ್ನು ಉನ್ನತಸ್ಥಾನಗಳಿಗೆ ನೇಮಿಸಿದನು; ಮನಸ್ಸಿಗೆ ಬಂದವರನ್ನು ಪೂಜಾಸ್ಥಳಗಳ ಯಾಜಕರನ್ನಾಗಿ ಪ್ರತಿಷ್ಠಿಸಿದನು. ಈ ಕಾರಣ ಯಾರೊಬ್ಬಾಮನ ಕುಟುಂಬದವರು ಪಾಪಿಗಳಾಗಿ ಭೂಲೋಕದಿಂದ ವಿಸರ್ಜಿತರಾಗಿ ನಿರ್ನಾಮವಾದರು.


ಕೀರ್ತನೆ: 106:6-7, 19-20, 21-22

ಶ್ಲೋಕ: ಮರೆಯಬೇಡೆನ್ನನು ಪ್ರಭೂ, ನಿನ್ನ ಪ್ರಜೆಗೆ ದಯೆತೋರುವಾಗ

ಶುಭಸಂದೇಶ: ಮಾರ್ಕ 8:1-10

ಜನರು ಪುನಃ ದೊಡ್ಡ ಸಂಖ್ಯೆಯಲ್ಲಿ ಬಂದು ನೆರೆದಿದ್ದರು. ಊಟಮಾಡಲು ಅವರಲ್ಲಿ ಆಹಾರವಿರಲಿಲ್ಲ. ಆಗ ಯೇಸುಸ್ವಾಮಿ ಶಿಷ್ಯರನ್ನು ಕರೆದು, “ಈ ಜನರು ಕಳೆದ ಮೂರು ದಿನಗಳಿಂದಲೂ ನನ್ನ ಬಳಿ ಇದ್ದಾರೆ; ಊಟಕ್ಕೆ ಇವರಲ್ಲಿ ಏನೂ ಇಲ್ಲ. ಇವರನ್ನು ಕಂಡಾಗ ನನ್ನ ಹೃದಯ ಕರಗುತ್ತದೆ. ಬರೀ ಹೊಟ್ಟೆಯಲ್ಲಿ ಮನೆಗೆ ಕಳುಹಿಸಿದರೆ ದಾರಿಯಲ್ಲಿ ಬಳಲಿ ಬಿದ್ದಾರು. ಕೆಲವರಂತೂ ಬಹುದೂರದಿಂದ ಬಂದಿದ್ದಾರೆ,” ಎಂದರು. ಅದಕ್ಕೆ ಶಿಷ್ಯರು, “ಇಷ್ಟು ದೊಡ್ಡ ಗುಂಪಿಗೆ ಆಗುವಷ್ಟು ರೊಟ್ಟಿಯನ್ನು ಈ ಅಡವಿಯಲ್ಲಿ ನಾವು ತರುವುದಾದರೂ ಎಲ್ಲಿಂದ?” ಎಂದು ಮರುನುಡಿದರು. ಯೇಸು, “ನಿಮ್ಮಲ್ಲಿ ಎಷ್ಟು ರೊಟ್ಟಿಗಳಿವೆ?” ಎಂದು ಕೇಳಲು ಅವರು, “ಏಳು ಇವೆ,” ಎಂದರು. ಯೇಸು ಜನರ ಗುಂಪಿಗೆ ನೆಲದ ಮೇಲೆ ಕುಳಿತುಕೊಳ್ಳುವಂತೆ ಆಜ್ಞಾಪಿಸಿದರು. ಅನಂತರ ಆ ಏಳು ರೊಟ್ಟಿಗಳನ್ನು ತೆಗೆದುಕೊಂಡು ದೇವರಿಗೆ ಸ್ತೋತ್ರಸಲ್ಲಿಸಿ, ಅವುಗಳನ್ನು ಮುರಿದು, ಜನರ ಗುಂಪಿಗೆ ಬಡಿಸಲು ಶಿಷ್ಯರಿಗೆ ಕೊಟ್ಟರು. ಅವರು ಬಡಿಸಿದರು. ಅವರಲ್ಲಿ ಕೆಲವು ಸಣ್ಣ ವಿೂನುಗಳಿದ್ದವು. ಯೇಸು ಅವುಗಳಿಗಾಗಿಯೂ ದೇವಸ್ತುತಿಮಾಡಿ ಅವುಗಳನ್ನು ಹಂಚಬೇಕೆಂದು ಆಜ್ಞಾಪಿಸಿದರು. ಜನರೆಲ್ಲರೂ ಉಂಡು ತೃಪ್ತರಾದರು. ಉಳಿದ ರೊಟ್ಟಿಯ ತುಂಡುಗಳನ್ನು ಒಟ್ಟುಗೂಡಿಸಿದಾಗ ಅವು ಏಳು ಕುಕ್ಕೆಗಳ ತುಂಬ ಆದುವು. ಊಟಮಾಡಿದವರ ಸಂಖ್ಯೆ ನಾಲ್ಕು ಸಾವಿರ. ಊಟವಾದ ಬಳಿಕ ಯೇಸು ಜನರನ್ನು ಕಳುಹಿಸಿಕೊಟ್ಟು, ವಿಳಂಬಮಾಡದೆ ದೋಣಿಯನ್ನು ಹತ್ತಿ, ಶಿಷ್ಯರೊಡನೆ ದಲ್ಮನೂಥ ಎಂಬ ಪ್ರದೇಶಕ್ಕೆ ಹೋದರು. 

14.02.2020 - ‘ಎಪ್ಫಥಾ’ ಎಂದರೆ ‘ತೆರೆಯಲಿ’

ಮೊದಲನೇ ವಾಚನ: 1 ಅರಸುಗಳು 11:29-32; 12:19

ಒಂದು ದಿವಸ ಯಾರೊಬ್ಬಾಮನು ಜೆರುಸಲೇಮಿನಿಂದ ಎಲ್ಲಿಗೋ ಹೋಗುತ್ತಿರುವಾಗ ಅಡವಿಯಲ್ಲಿ ಶಿಲೋವಿನವನಾದ ಅಹೀಯನೆಂಬ ಪ್ರವಾದಿ ಅವನಿಗೆ ಎದುರಾದನು. ಇವನು ಹೊಸ ಬಟ್ಟೆಯನ್ನು ಹೊದ್ದುಕೊಂಡಿದ್ದನು. ಅಲ್ಲಿ ಇವರಿಬ್ಬರ ಹೊರತಾಗಿ ಬೇರೆ ಯಾರೂ ಇರಲಿಲ್ಲ. ಆಗ ಅಹೀಯನು, ತಾನು ಹೊದ್ದುಕೊಂಡಿದ್ದ ಹೊಸ ಬಟ್ಟೆಯನ್ನು ತೆಗೆದುಕೊಂಡು, ಅದನ್ನು ಹರಿದು ಹನ್ನೆರಡು ತುಂಡುಮಾಡಿ, ಯಾರೊಬ್ಬಾಮನಿಗೆ, “ನೀನು ಇವುಗಳಲ್ಲಿ ಹತ್ತು ತುಂಡುಗಳನ್ನು ತೆಗೆದುಕೋ. ಇಸ್ರಯೇಲ್ ದೇವರಾದ ಸರ್ವೇಶ್ವರ ರಾಜ್ಯವನ್ನು ಸೊಲೊಮೋನನಿಂದ ಕಿತ್ತುಕೊಂಡು ತನ್ನ ದಾಸ ದಾವೀದನ ನಿಮಿತ್ತ ಹಾಗು ತಾವು ಇಸ್ರಯೇಲರ ಎಲ್ಲಾ ಕುಲಗಳಿಂದ ಆರಿಸಿಕೊಂಡ ಜೆರುಸಲೇಮ್ ಪಟ್ಟಣದ ನಿಮಿತ್ತ ಅವನಿಗೆ ಒಂದೇ ಒಂದು ಕುಲವನ್ನು ಉಳಿಸಿ, ಬೇರೆ ಹತ್ತು ಕುಲಗಳನ್ನು ನಿನಗೆ ಕೊಡುತ್ತೇನೆಂದು ಹೇಳಿದ್ದಾರೆ. ಎಂದನು.  ಇಸ್ರಯೇಲರು ಅಂದಿನಿಂದ ಇಂದಿನವರೆಗೂ ದಾವೀದನ ಕುಟುಂಬದವರೊಡನೆ ಸಮಾಧಾನವಾಗಲೇ ಇಲ್ಲ.

ಕೀರ್ತನೆ: 81:10-11, 12-13, 14-15

ಶ್ಲೋಕ: ನನ್ನ ಜನರೇ, ಕಿವಿಗೊಡಿ ನನ್ನ ಬುದ್ಧಿಮಾತಿಗೆ

ಶುಭಸಂದೇಶ: ಮಾರ್ಕ 7:31-37

ಯೇಸುಸ್ವಾಮಿ ಆ ಸ್ಥಳವನ್ನು ಬಿಟ್ಟು ಸಿದೋನಿನ ಮಾರ್ಗವಾಗಿ ದೆಕಪೊಲಿ ಪ್ರದೇಶವನ್ನು ಹಾದು ಗಲಿಲೇಯ ಸರೋವರದ ತೀರಕ್ಕೆ ಹಿಂದಿರುಗಿದರು. ಮಾತನಾಡಲಾಗದ ಒಬ್ಬ ಕಿವುಡನನ್ನು ಜನರು ಅವರ ಬಳಿಗೆ ಕರೆತಂದರು. ಅವನ ಮೇಲೆ ಕೈಗಳನ್ನಿಡಬೇಕೆಂದು ಬೇಡಿಕೊಂಡರು. ಯೇಸು ಅವನನ್ನು ಜನರ ಗುಂಪಿನಿಂದ ಪ್ರತ್ಯೇಕವಾಗಿ ಕರೆದೊಯ್ದು, ತಮ್ಮ ಬೆರಳುಗಳನ್ನು ಅವನ ಕಿವಿಯೊಳಗೆ ಇಟ್ಟರು. ತಮ್ಮ ಉಗುಳಿನಿಂದ ಅವನ ನಾಲಗೆಯನ್ನು ಮುಟ್ಟಿದರು. ಬಳಿಕ ಸ್ವರ್ಗದತ್ತ ಕಣ್ಣೆತ್ತಿ ನೋಡಿ, ದೀರ್ಘವಾಗಿ ಉಸಿರೆಳೆದು, ‘ಎಪ್ಫಥಾ’ ಎಂದರೆ ‘ತೆರೆಯಲಿ’ ಎಂದರು. ತಕ್ಷಣವೇ ಅವನ ಕಿವಿಗಳು ತೆರೆದವು; ನಾಲಗೆಯ ಬಿಗಿ ಸಡಿಲಗೊಂಡಿತು; ಅವನು ಸರಾಗವಾಗಿ ಮಾತನಾಡತೊಡಗಿದನು. ಇದನ್ನು ಯಾರಿಗೂ ಹೇಳಕೂಡದೆಂದು ಯೇಸು ಜನರಿಗೆ ಕಟ್ಟಪ್ಪಣೆ ಮಾಡಿದರು. ಆದರೆ ಎಷ್ಟು ಹೇಳಿದರೂ ಕೇಳದೆ ಅವರು ಮತ್ತಷ್ಟು ಆಸಕ್ತಿಯಿಂದ ಈ ಕಾರ್ಯವನ್ನು ಪ್ರಚಾರ ಮಾಡಿದರು. ಎಲ್ಲರೂ ಆಶ್ಚರ್ಯಭರಿತರಾಗಿ, “ಇವರು ಎಲ್ಲಾ ಕಾರ್ಯವನ್ನು ಚೆನ್ನಾಗಿ ಮಾಡುತ್ತಾರೆ; ಕಿವುಡರು ಕೇಳುವಂತೆಯೂ ಮೂಕರು ಮಾತನಾಡುವಂತೆಯೂ ಮಾಡುತ್ತಾರಲ್ಲಾ!” ಎಂದುಕೊಳ್ಳುತ್ತಿದ್ದರು.

13.02.2020 - "ನಿಶ್ಚಿಂತೆಯಿಂದ ಮನೆಗೆ ಹಿಂದಿರುಗು. ದೆವ್ವ ನಿನ್ನ ಮಗಳನ್ನು ಬಿಟ್ಟು ತೊಲಗಿದೆ,”

ಮೊದಲನೇ ವಾಚನ: 1 ಅರಸುಗಳು 11:4-13

ಅವನು ವೃದ್ಧನಾದಾಗ ಇವರು ಅವನ ಹೃದಯವನ್ನು ಅನ್ಯ ದೇವತೆಗಳ ಕಡೆಗೆ ತಿರುಗಿಸಿದರು. ಈ ಕಾರಣ ಅವನು ತನ್ನ ದೇವರಾದ ಸರ್ವೇಶ್ವರನಲ್ಲಿಟ್ಟಿದ್ದ ಯಥಾರ್ಥ ಭಕ್ತಿಯನ್ನು ಕಳೆದುಕೊಂಡನು. ತನ್ನ ತಂದೆಯಾದ ದಾವೀದನಂತೆ ನಡೆಯಲಿಲ್ಲ. ಸಿದೋನ್ಯರ ಅಷ್ಟೋರೆತ್ ದೇವತೆಯನ್ನೂ ಅಮ್ಮೋನಿಯರ ಮಿಲ್ಕೋಮ್ ಎಂಬ ಅಸಹ್ಯ ವಿಗ್ರಹವನ್ನೂ ಆರಾಧಿಸತೊಡಗಿದನು. ಸರ್ವೇಶ್ವರನ ದೃಷ್ಟಿಯಲ್ಲಿ ದ್ರೋಹಿಯಾದನು; ಅವನ ತಂದೆ ದಾವೀದನು ಪೂರ್ಣ ಮನಸ್ಸಿನಿಂದ ಸರ್ವೇಶ್ವರನನ್ನು ಸೇವೆ ಮಾಡಿದಂತೆ ಅವನು ಸೇವೆ ಮಾಡಲಿಲ್ಲ. ಅವನು ಜೆರುಸಲೇಮಿನ ಮೂಡಲಲ್ಲಿರುವ ಗುಡ್ಡದಲ್ಲಿ ಮೋವಾಬ್ಯರ ಕೆಮೋಷ್ ಎಂಬ ಅಸಹ್ಯ ವಿಗ್ರಹಕ್ಕೂ ಪೂಜಾ ಸ್ಥಳಗಳನ್ನು ಏರ್ಪಡಿಸಿದನು. ಅವನು ಜೆರುಸಲೇಮಿನ ಮೂಡಲಲ್ಲಿರುವ ಗುಡ್ಡದಲ್ಲಿ ಮೋವಾಬ್ಯರ ಕೆಮೋಷ್ ಎಂಬ ಅಸಹ್ಯ ವಿಗ್ರಹಕ್ಕೂ ಪೂಜಾ ಸ್ಥಳಗಳನ್ನು ಏರ್ಪಡಿಸಿದನು. ಈ ಪ್ರಕಾರ ಅನ್ಯ ಜನಾಂಗಗಳಿಂದ ಬಂದ ತನ್ನ ಹೆಂಡತಿಯರು ತಮ್ಮ ದೇವತೆಗಳಿಗೆ ಧೂಪಾರತಿ ಎತ್ತುವುದಕ್ಕೂ ಬಲಿ ಅರ್ಪಿಸುವುದಕ್ಕೂ ಅನುಕೂಲ ಮಾಡಿಕೊಟ್ಟನು. ಸೊಲೊಮೋನನಿಗೆ ಇಸ್ರಯೇಲ್ ದೇವರಾದ ಸರ್ವೇಶ್ವರ ಎರಡು ಸಾರಿ ಕಾಣಿಸಿಕೊಂಡು, ಅನ್ಯ ದೇವತೆಗಳನ್ನು ಪೂಜಿಸಲೇಬಾರದೆಂದು ಆಜ್ಞಾಪಿಸಿದ್ದರೂ ಅವನು ಅವರ ಆಜ್ಞೆಗಳನ್ನು ಮೀರಿದನು. ಆದ್ದರಿಂದ ಸರ್ವೇಶ್ವರ ಅವನ ಮೇಲೆ ಕೋಪಗೊಂಡು, “ನೀನು ಹೀಗೆ ಮಾಡಿ ನನ್ನ ನಿಬಂಧನೆಗಳನ್ನು ವಿೂರಿದ್ದರಿಂದ ನಿನ್ನ ರಾಜ್ಯವನ್ನು ಕಿತ್ತುಕೊಂಡು ನಿನ್ನ ದಾಸನಿಗೆ ಕೊಡುವೆನು. ಆದರೂ ನಾನು ನಿನ್ನ ತಂದೆ ದಾವೀದನನ್ನು ಸ್ಮರಿಸಿ, ನಿನ್ನ ಕಾಲದಲ್ಲಿ ಇದನ್ನು ಮಾಡುವುದಿಲ್ಲ. ನಿನ್ನ ಮಗನ ಕೈಯಿಂದ ಅದನ್ನು ಕಿತ್ತುಕೊಳ್ಳುವೆನು. ಆದರೆ ಇಡೀ ಸಾಮ್ರಾಜ್ಯವನ್ನು ಕಿತ್ತುಕೊಳ್ಳುವುದಿಲ್ಲ; ನನ್ನ ದಾಸ ದಾವೀದನ ನಿಮಿತ್ತ ಹಾಗು ನಾನು ಆರಿಸಿಕೊಂಡ ಜೆರುಸಲೇಮ್ ಪಟ್ಟಣದ ನಿಮಿತ್ತ ನಿನ್ನ ಮಗನಿಗೆ ಒಂದು ಕುಲವನ್ನು ಉಳಿಸುವೆನು,” ಎಂದು ಸರ್ವೇಶ್ವರ ಹೇಳಿದರು.

ಕೀರ್ತನೆ: 106:3-4, 35-36, 37, 40

ಶ್ಲೋಕ: ಮರೆಯಬೇಡೆನ್ನನು ಪ್ರಭೂ, ನಿನ್ನ ಪ್ರಜೆಗೆ ದಯೆತೋರುವಾಗ

ಶುಭಸಂದೇಶ: ಮಾರ್ಕ 7:24-30


ಯೇಸುಸ್ವಾಮಿ ಅಲ್ಲಿಂದ ಹೊರಟು ಟೈರ್ ಹಾಗೂ ಸಿದೋನ್ ಪಟ್ಟಣಗಳ ಸಮೀಪವಿದ್ದ ಪ್ರದೇಶಕ್ಕೆ ಹೋಗಿ ಒಂದು ಮನೆಯಲ್ಲಿ ಇಳಿದುಕೊಂಡರು. ತಾವು ಜನರ ಕಣ್ಣಿಗೆ ಬೀಳಬಾರದೆಂಬುದು ಅವರ ಇಚ್ಛೆಯಾಗಿದ್ದರೂ ಅದು ಸಾಧ್ಯವಾಗಲಿಲ್ಲ. ಹೊರನಾಡಾದ ಸಿರಿಯ ದೇಶದ ಫೆನಿಷ್ಯ ಪ್ರಾಂತ್ಯಕ್ಕೆ ಸೇರಿದ ಗ್ರೀಕ್ ಮಹಿಳೆ ಒಬ್ಬಳು ಅವರ ವಿಷಯವನ್ನು ಕೇಳಿ, ಒಡನೆ ಅಲ್ಲಿಗೆ ಬಂದು ಅವರ ಪಾದಕ್ಕೆರಗಿದಳು. ಆಕೆಯ ಚಿಕ್ಕಮಗಳಿಗೆ ದೆವ್ವ ಹಿಡಿದಿತ್ತು. ತನ್ನ ಮಗಳಿಂದ ಪಿಶಾಚಿಯನ್ನು ಹೊರಗಟ್ಟಬೇಕೆಂದು ಆಕೆ ಯೇಸುವನ್ನು ಬೇಡಿಕೊಂಡಳು. ಆದರೆ ಯೇಸು ಆಕೆಗೆ, “ಮೊದಲು ಮಕ್ಕಳು ತಿಂದು ತೃಪ್ತಿಪಡೆಯಲಿ, ಮಕ್ಕಳ ಆಹಾರವನ್ನು ನಾಯಿಗಳಿಗೆ ಎಸೆಯುವುದು ಸರಿಯಲ್ಲ,” ಎಂದರು. ಅದಕ್ಕೆ ಆಕೆ, “ಅದು ನಿಜ ಸ್ವಾವಿೂ; ಆದರೂ ಮಕ್ಕಳು ತಿಂದುಬಿಟ್ಟ ಚೂರುಪಾರುಗಳನ್ನು ಮೇಜಿನ ಕೆಳಗಿರುವ ನಾಯಿಗಳು ತಿನ್ನುತ್ತವಲ್ಲವೆ?” ಎಂದಳು. ಆಕೆಯ ಮಾತುಗಳನ್ನು ಕೇಳಿ ಯೇಸು, “ಚೆನ್ನಾಗಿ ಹೇಳಿದೆ, ನಿಶ್ಚಿಂತೆಯಿಂದ ಮನೆಗೆ ಹಿಂದಿರುಗು. ದೆವ್ವ ನಿನ್ನ ಮಗಳನ್ನು ಬಿಟ್ಟು ತೊಲಗಿದೆ,” ಎಂದರು. ಆಕೆ ಮನೆಗೆ ಹೋದಾಗ, ಮಗಳು ಹಾಸಿಗೆಯ ಮೇಲೆ ಸುಖವಾಗಿ ಮಲಗಿರುವುದನ್ನು ಕಂಡಳು. ದೆವ್ವ ಅವಳನ್ನು ಬಿಟ್ಟು ಹೋಗಿತ್ತು. 

12.02.2020 - "ಕೇಡುಗಳು ಮಾನವನ ಅಂತರಂಗದಿಂದಲೇ ಉದ್ಭವಿಸಿ, ಅವನನ್ನು ಅಶುದ್ಧ ಮಾಡುತ್ತವೆ,”

ಮೊದಲನೇ ವಾಚನ: 1 ಅರಸುಗಳು 10:1-10

ಸರ್ವೇಶ್ವರನ ನಾಮ ಮಹತ್ತಿನಿಂದ ಸೊಲೊಮೋನನ ಕೀರ್ತಿ ಹರಡಿತು. ಇದನ್ನು ಕೇಳಿದ ಶೆಬದ ರಾಣಿ ಅವನನ್ನು ಒಗಟುಗಳಿಂದ ಪರೀಕ್ಷಿಸುವುದಕ್ಕೆ ಬಂದಳು. ಆಕೆ ಸುಗಂಧ ದ್ರವ್ಯ, ಅಪರಿಮಿತವಾದ ಬಂಗಾರ, ರತ್ನ, ಇವುಗಳನ್ನು ಒಂಟೆಗಳ ಮೇಲೆ ಹೇರಿಸಿಕೊಂಡು ಮಹಾ ಪರಿವಾರದೊಡನೆ ಜೆರುಸಲೇಮಿಗೆ ಬಂದಳು. ತನ್ನ ಮನಸ್ಸಿನಲ್ಲಿ ಗೊತ್ತುಮಾಡಿಕೊಂಡಿದ್ದ ಎಲ್ಲಾ ವಿಷಯಗಳನ್ನು ಕುರಿತು ಸೊಲೊಮೋನನೊಡನೆ ಸಂಭಾಷಿಸಿದಳು. ಸೊಲೊಮೋನನು ಆಕೆಯ ಎಲ್ಲಾ ಪ್ರಶ್ನೆಗಳಿಗೆ ಉತ್ತರಕೊಟ್ಟನು; ಅರಸನಿಗೆ ಬಿಡಿಸಲು ಕ್ಷಿಷ್ಟವಾದ ಒಗಟು ಒಂದೂ ಇರಲಿಲ್ಲ. ಶೆಬದ ರಾಣಿ ಸೊಲೊಮೋನನ ಹಲವಿಧವಾದ ಜ್ಞಾನೋಕ್ತಿಗಳನ್ನು ಕೇಳಿದಳು; ಅವನು ಕಟ್ಟಿಸಿದ ಅರಮನೆ, ಅವನ ಭೋಜನಪೀಠದ ಆಹಾರ, ಆ ಪೀಠದ ಸುತ್ತಲಿರುವ ಉದ್ಯೋಗಸ್ಥರ ಆಸನಗಳು, ಅವನ ಪರಿಚಾರಕರ ಸೇವಾಕ್ರಮ, ಅವರ ಉಡುಪುಗಳು, ಅವನ ಪಾನಕಗಳು ಇವುಗಳನ್ನು ಮತ್ತು ಸರ್ವೇಶ್ವರನ ಆಲಯದಲ್ಲಿ ಅವನು ಸಮರ್ಪಿಸುತ್ತಿದ್ದ ದಹನಬಲಿಗಳನ್ನು ನೋಡಿದಳು. ಇವುಗಳಿಂದ ಆಶ್ಚರ್ಯಚಕಿತಳಾಗಿ, “ನಾನು ನನ್ನ ದೇಶದಲ್ಲಿ ನಿಮ್ಮ ಜ್ಞಾನವನ್ನೂ ಸಾಧನೆಗಳನ್ನೂ ಕುರಿತು ಕೇಳಿದ್ದು ಸತ್ಯವಾಗಿದೆ. ನಾನಾಗಿ ಇಲ್ಲಿಗೆ ಬಂದು ಕಣ್ಣಾರೆ ನೋಡುವುದಕ್ಕೆ ಮೊದಲು ಜನರು ಹೇಳಿದ ಸುದ್ದಿಯನ್ನು ನಂಬಲಿಲ್ಲ; ಈಗ ನೋಡಿದರೆ ನಿಮ್ಮ ಜ್ಞಾನ ವೈಭವಗಳು, ನಾನು ಕೇಳಿದ್ದಕ್ಕಿಂತ ಮಿಗಿಲಾಗಿವೆ. ಜನರು ನನಗೆ ಇದರಲ್ಲಿ ಅರ್ಧವನ್ನಾದರೂ ವರದಿ ಮಾಡಿರಲಿಲ್ಲ. ನಿಮ್ಮ ಪ್ರಜೆಗಳು ಭಾಗ್ಯವಂತರು! ಸದಾ ನಿಮ್ಮ ಸನ್ನಿಧಿಯಲ್ಲಿದ್ದು ನಿಮ್ಮ ಜ್ಞಾನ ವಾಕ್ಯಗಳನ್ನು ಕೇಳುವ ನಿಮ್ಮ ಸೇವಕರು ಧನ್ಯರು! ನಿಮ್ಮನ್ನು ಮೆಚ್ಚಿ ಇಸ್ರಯೇಲ್ ಸಿಂಹಾಸನದ ಮೇಲೆ ಕುಳ್ಳಿರಿಸಿದ ನಿಮ್ಮ ದೇವರಾದ ಸರ್ವೇಶ್ವರನಿಗೆ ಸ್ತೋತ್ರವಾಗಲಿ! ಅವರು ಇಸ್ರಯೇಲರನ್ನು ಸದಾ ಪ್ರೀತಿಸುವವರಾಗಿರುವುದರಿಂದ ಆ ಜನರ ನೀತಿನ್ಯಾಯಗಳನ್ನು ಸ್ಥಾಪಿಸುವುದಕ್ಕಾಗಿ ನಿಮ್ಮನ್ನು ಅರಸನನ್ನಾಗಿ ನೇಮಿಸಿದ್ದಾರೆ,” ಎಂದು ಹೇಳಿದಳು. ಆಕೆ ಅರಸನಿಗೆ ನಾಲ್ಕು ಸಾವಿರ ಕಿಲೋಗ್ರಾಂಗೂ ಹೆಚ್ಚು ಬಂಗಾರವನ್ನು, ಅಪರಿಮಿತ ಸುಗಂಧದ್ರವ್ಯವನ್ನು ಹಾಗು ರತ್ನಗಳನ್ನು ಕೊಟ್ಟಳು. ಶೆಬದ ರಾಣಿ ಅರಸ ಸೊಲೊಮೋನನಿಗೆ ಕೊಟ್ಟಷ್ಟು ಸುಗಂಧದ್ರವ್ಯವನ್ನು ಬೇರೆ ಯಾರೂ ಈ ನಾಡಿಗೆ ಕೊಟ್ಟಿರಲಿಲ್ಲ.


ಕೀರ್ತನೆ: 37:5-6, 30-31, 39-40

ಶ್ಲೋಕ: ಸಜ್ಜನರ ಬಾಯಿ ಆಡುವುದು ಸುಜ್ಞಾನವನು

ಶುಭಸಂದೇಶ: ಮಾರ್ಕ 7:14-23

ಅನಂತರ ಯೇಸುಸ್ವಾಮಿ ಜನರ ಗುಂಪನ್ನು ತಮ್ಮ ಬಳಿಗೆ ಕರೆದು, “ನಾನು ಹೇಳುವುದನ್ನು ನೀವೆಲ್ಲರೂ ಕೇಳಿ ಗ್ರಹಿಸಿಕೊಳ್ಳಿ: ಹೊರಗಿನಿಂದ ಮನುಷ್ಯನ ಒಳಗೆ ಹೋಗುವ ಯಾವುದೂ ಅವನನ್ನು ಕಲುಷಿಗೊಳಿಸುವುದಿಲ್ಲ. ಮನುಷ್ಯನ ಅಂತರಂಗದಿಂದ ಹೊರಬರುವಂತಹುದೇ ಅವನನ್ನು ಕಲುಷಿತಗೊಳಿಸುತ್ತದೆ. (ಕೇಳುವುದಕ್ಕೆ ಕಿವಿಯುಳ್ಳವನು ಕೇಳಲಿ)” ಎಂದರು. ಯೇಸು ಜನರ ಗುಂಪನ್ನು ಬಿಟ್ಟು ಮನೆ ಸೇರಿದ ಬಳಿಕ ಶಿಷ್ಯರು, ಅವರ ಬಳಿಗೆ ಬಂದು ಆ ಸಾಮತಿಯ ಅರ್ಥವೇನೆಂದು ಕೇಳಿದರು. ಅದಕ್ಕೆ ಅವರು, “ನೀವು ಕೂಡ ಮಂದಮತಿಗಳೋ? ನಿಮಗೂ ಇದು ಅರ್ಥವಾಗದೋ? ಹೊರಗಿನಿಂದ ಮನುಷ್ಯನ ಒಳಕ್ಕೆ ಹೋಗುವ ಯಾವುದೂ ಅವನನ್ನು ಕಲುಷಿತಗೊಳಿಸುವುದಿಲ್ಲ. ಅವನು ತಿಂದದ್ದು ಅವನ ಹೃದಯವನ್ನು ಹೊಕ್ಕದೆ, ಹೊಟ್ಟೆಯನ್ನು ಮಾತ್ರ ಸೇರಿ, ಬಳಿಕ ದೇಹದಿಂದ ವಿಸರ್ಜಿತವಾಗುತ್ತದೆ. (ಹೀಗೆ ಆಹಾರ ಪದಾರ್ಥಗಳು ಯಾವುವೂ ಅಶುದ್ಧವಲ್ಲವೆಂದು ಯೇಸು ಸೂಚಿಸಿದರು.) ಆದರೆ ಮನುಷ್ಯನ ಅಂತರಂಗದಿಂದ ಹೊರಹೊಮ್ಮುವ ಯೋಚನೆಗಳು ಅವನನ್ನು ಕಲುಷಿತಗೊಳಿಸುತ್ತವೆ. ಮಾನವನ ಹೃದಯಾಂತರಾಳದಿಂದ ದುರಾಲೋಚನೆ, ಅನೈತಿಕತೆ, ಕಳ್ಳತನ, ಕೊಲೆ, ವ್ಯಭಿಚಾರ, ಲೋಭ, ಕೆಡುಕುತನ, ಮೋಸ, ಭಂಡತನ, ಅಸೂಯೆ, ಅಪದೂರು, ಅಹಂಕಾರ, ಮೂರ್ಖತನ ಮೊದಲಾದವು ಹೊರಬರುತ್ತವೆ. ಈ ಎಲ್ಲಾ ಕೇಡುಗಳು ಮಾನವನ ಅಂತರಂಗದಿಂದಲೇ ಉದ್ಭವಿಸಿ, ಅವನನ್ನು ಅಶುದ್ಧ ಮಾಡುತ್ತವೆ,” ಎಂದರು.

11.02.2020 - ನೀವು ಬೋಧಿಸುವ ಸಂಪ್ರದಾಯಗಳಿಂದಾಗಿ ದೇವರ ವಾಕ್ಯವನ್ನೇ ನಿರರ್ಥಕಗೊಳಿಸುತ್ತೀರಿ.

ಮೊದಲನೇ ವಾಚನ: 1 ಅರಸುಗಳು 8:22-23, 27-30

ಸೊಲೊಮೋನನು ಇಸ್ರಯೇಲರೆಲ್ಲರ ಎದುರಿನಲ್ಲಿ ಸರ್ವೇಶ್ವರನ ಬಲಿಪೀಠದ ಮುಂದೆ ನಿಂತು, ಆಕಾಶದ ಕಡೆಗೆ ಕೈಗಳನ್ನೆತ್ತಿ, ಹೀಗೆ ಪ್ರಾರ್ಥಿಸಿದನು: “ಇಸ್ರಯೇಲ್ ದೇವರಾದ ಸರ್ವೇಶ್ವರಾ, ಭೂಲೋಕದಲ್ಲೂ ಪರಲೋಕದಲ್ಲೂ ನಿಮಗೆ ಸಮಾನರಾದ ದೇವರಿಲ್ಲ; ಪೂರ್ಣಮನಸ್ಸಿನಿಂದ ನಿಮಗೆ ಪ್ರಾಮಾಣಿಕರಾಗಿ ನಡೆದುಕೊಳ್ಳುವಂಥ ಭಕ್ತರ ಬಗ್ಗೆ ನಿಮ್ಮ ಒಡಂಬಡಿಕೆಯನ್ನೂ ಕೃಪೆಯನ್ನೂ ನೆರವೇರಿಸುವವರು ನೀವು. “ದೇವರು ನಿಜವಾಗಿ ಭೂಲೋಕದಲ್ಲಿ ವಾಸಿಸುವರೋ? ಆಕಾಶವೂ, ಉನ್ನತೋನ್ನತ ಆದ ಆಕಾಶವೂ, ನಿಮ್ಮ ವಾಸಕ್ಕೆ ಸಾಲದು; ಹೀಗಿರುವಲ್ಲಿ ನಾನು ಕಟ್ಟಿಸಿದ ಈ ಮಂದಿರವು ಹೇಗೆ ತಾನೆ ಸಾಕಾದೀತು? ಆದರೂ ನನ್ನ ದೇವರೇ, ಸರ್ವೇಶ್ವರಾ, ನಿಮ್ಮ ದಾಸನ ಪ್ರಾರ್ಥನೆಗೂ ವಿಜ್ಞಾಪನೆಗೂ ಕಿವಿಗೊಡಿ; ಈ ದಿನ ನಿಮ್ಮನ್ನು ಪ್ರಾರ್ಥಿಸುತ್ತಿರುವ ನಿಮ್ಮ ದಾಸನ ಮೊರೆಯನ್ನು ಆಲಿಸಿರಿ. ಈ ಸ್ಥಳವನ್ನು ಕುರಿತು ‘ನನ್ನ ನಾಮಪ್ರಭಾವವು ಇಲ್ಲಿ ವಾಸಿಸುವುದು’ ಎಂದು ಹೇಳಿದವರೇ, ನಿಮ್ಮ ಕಟಾಕ್ಷವು ಹಗಲಿರುಳೂ ಈ ಮಂದಿರದ ಮೇಲಿರಲಿ; ಇಲ್ಲಿ ನಿಮ್ಮ ದಾಸನು ನಿಮ್ಮನ್ನು ಪ್ರಾರ್ಥಿಸುವಾಗಲೆಲ್ಲಾ ಅವನಿಗೆ ಸದುತ್ತರವನ್ನು ದಯಪಾಲಿಸಿರಿ. ನಿಮ್ಮ ದಾಸನಾದ ನಾನಾಗಲಿ, ನಿಮ್ಮ ಪ್ರಜೆಗಳಾದ ಇಸ್ರಯೇಲರಾಗಲಿ, ಈ ಸ್ಥಳದ ಕಡೆಗೆ ತಿರುಗಿಕೊಂಡು ನಿಮ್ಮನ್ನು ಪ್ರಾರ್ಥಿಸಿದರೆ ನಿಮ್ಮ ನಿವಾಸವಾಗಿರುವ ಪರಲೋಕದಿಂದ ನಮ್ಮ ಬಿನ್ನಹವನ್ನು ಕೇಳಿ, ಕ್ಷಮೆಯನ್ನು ಅನುಗ್ರಹಿಸಿರಿ.

ಕೀರ್ತನೆ: 84:3, 4, 5, 10, 11

ಶ್ಲೋಕ: ಪ್ರಭೂ, ನಿನ್ನ ನಿವಾಸಗಳೆನಿತೋ ಸುಂದರ

ಶುಭಸಂದೇಶ: ಮಾರ್ಕ 7:1-13

ಒಮ್ಮೆ ಫರಿಸಾಯರು ಮತ್ತು ಜೆರುಸಲೇಮಿನಿಂದ ಕೆಲವು ಮಂದಿ ಧರ್ಮಶಾಸ್ತ್ರಿಗಳು ಯೇಸುಸ್ವಾಮಿಯ ಬಳಿಗೆ ಬಂದು ಸೇರಿದರು. ಯೇಸುವಿನ ಶಿಷ್ಯರಲ್ಲಿ ಕೆಲವರು ಅಶುದ್ಧ ಕೈಗಳಿಂದ, ಎಂದರೆ ಶುದ್ಧಾಚಾರಕ್ಕೆ ಅನುಗುಣವಾಗಿ ಕೈತೊಳೆದುಕೊಳ್ಳದೆ ಊಟಮಾಡುವುದನ್ನು ಅವರು ನೋಡಿದರು. ಫರಿಸಾಯರು ಇತರ ಯೆಹೂದ್ಯರಂತೆ ಕೈಗಳನ್ನು ವಿಧಿಬದ್ಧವಾಗಿ ತೊಳೆಯದೆ ಊಟ ಮಾಡುವುದಿಲ್ಲ. ಇದು ಅವರ ಪೂರ್ವಜರಿಂದ ಬಂದ ಸಂಪ್ರದಾಯ. ಪೇಟೆ ಬೀದಿಗಳಿಗೆ ಹೋಗಿ ಬಂದರೆ ಸ್ನಾನಮಾಡಿಯೇ ಊಟಮಾಡುವುದು; ತಂಬಿಗೆ, ಚೆಂಬು, ತಪ್ಪಲೆಗಳನ್ನು ಸೂತ್ರಬದ್ಧವಾಗಿ ತೊಳೆಯುವುದು; ಇವೇ ಮೊದಲಾದ ಅನೇಕ ಆಚಾರಗಳು ಅವರಲ್ಲಿ ರೂಢಿಯಲ್ಲಿದ್ದುವು. ಆದುದರಿಂದ ಫರಿಸಾಯರೂ ಧರ್ಮಶಾಸ್ತ್ರಿಗಳೂ, “ನಿನ್ನ ಶಿಷ್ಯರು ಪೂರ್ವಜರಿಂದ ಬಂದ ಆಚಾರಗಳನ್ನೇಕೆ ಅನುಸರಿಸುವುದಿಲ್ಲ? ಅಶುದ್ಧವಾದ ಕೈಗಳಿಂದಲೇ ಅವರು ಊಟ ಮಾಡುತ್ತಿದ್ದಾರಲ್ಲಾ?” ಎಂದು ಯೇಸುವನ್ನು ಕೇಳಿದರು. ಅದಕ್ಕೆ ಯೇಸು, “ಕಪಟಿಗಳೇ, ನಿಮ್ಮ ವಿಷಯದಲ್ಲಿ ಯೆಶಾಯನು ಎಷ್ಟೊಂದು ಚೆನ್ನಾಗಿ ಪ್ರವಾದಿಸಿದ್ದಾನೆ: ‘ಬರಿಯ ಮಾತಿನ ಮನ್ನಣೆಯನೀಯುತ, ಹೃದಯವನು ದೂರವಿರಿಸುತ, ನರಕಲ್ಪಿತ ಕಟ್ಟಳೆಗಳನೆ ದೇವವಾಕ್ಯವೆಂದು ಉಪದೇಶಿಸುತ, ಈ ಜನರೆನಗೆ ಮಾಡುವ ಆರಾಧನೆ ವ್ಯರ್ಥ! ಎಂದರು ದೇವರು.’ “ನೀವು ದೇವರ ಆಜ್ಞೆಯನ್ನು ತೊರೆದು ಮಾನವನಿರ್ಮಿತ ಸಂಪ್ರದಾಯಗಳನ್ನು ನಿಷ್ಠೆಯಿಂದ ಪರಿಪಾಲಿಸುತ್ತಿದ್ದೀರಿ. ಸಂಪ್ರದಾಯದ ನೆವದಲ್ಲಿ ದೇವರ ಆಜ್ಞೆಗಳನ್ನು ನೀವು ಜಾಣ್ಮೆಯಿಂದ ಬದಿಗೊತ್ತಿರುವುದು ಬಲು ಚೆನ್ನಾಗಿದೆ! ‘ನಿಮ್ಮ ತಂದೆತಾಯಿಗಳನ್ನು ಗೌರವಿಸಬೇಕು; ತಂದೆಯನ್ನಾಗಲೀ ತಾಯಿಯನ್ನಾಗಲೀ ದೂಷಿಸುವವನಿಗೆ ಮರಣದಂಡನೆ ಆಗಲೇಬೇಕು,’ ಎಂಬುದು ಮೋಶೆ ವಿಧಿಸಿದ ಆಜ್ಞೆ. ನೀವಾದರೋ, ಒಬ್ಬನು ತನ್ನ ತಂದೆಗೆ ಅಥವಾ ತಾಯಿಗೆ ‘ನನ್ನಿಂದ ನಿಮಗೆ ಸಲ್ಲತಕ್ಕದ್ದು “ಕೊರ್ಬಾನ್” (ಎಂದರೆ ದೇವರಿಗೆ ಮುಡಿಪು) ಎಂದು ಹೇಳಿಬಿಟ್ಟರೆ ಸಾಕು, ಮುಂದೆ ಅವನು ತನ್ನ ತಂದೆತಾಯಿಗಳಿಗೆ ಯಾವ ಸಹಾಯವನ್ನೂ ಮಾಡುವುದಕ್ಕೆ ನೀವು ಬಿಡುವುದಿಲ್ಲ. “ಹೀಗೆ ನೀವು ಬೋಧಿಸುವ ಸಂಪ್ರದಾಯಗಳಿಂದಾಗಿ ದೇವರ ವಾಕ್ಯವನ್ನೇ ನಿರರ್ಥಕಗೊಳಿಸುತ್ತೀರಿ. ಇಂಥಾ ಕೃತ್ಯಗಳು ಇನ್ನೆಷ್ಟೋ!” ಎಂದರು.