ಮೊದಲನೇ ವಾಚನ: 2 ಅರಸುಗಳು 22:8-13; 23:1-3
ಪ್ರಧಾನ ಯಾಜಕ ಹಿಲ್ಕೀಯನು ಲೇಖಕ ಶಾಫಾನನಿಗೆ, "ಸರ್ವೇಶ್ವರನ ಆಲಯದಲ್ಲಿ ನನಗೆ ಧರ್ಮೋಪದೇಶ ಗ್ರಂಥವು ಸಿಕ್ಕಿರುತ್ತದೆ" ಎಂದು ಹೇಳಿ ಅದನ್ನು ಅವನ ಕೈಯಲ್ಲಿ ಕೊಟ್ಟನು; ಶಾಫಾನನು ಓದಿದನು. ಆನಂತರ ಅವನು ಹಿಂದಿರುಗಿ ಅರಸನ ಬಳಿಗೆ ಹೋಗಿ, "ನಿಮ್ಮ ಸೇವಕರು ದೇವಾಲಯದಲ್ಲಿ ಸಂಗ್ರಹವಾದ ಹಣವನ್ನು ತೆಗೆದು ದೇವಾಲಯದ ಕೆಲಸವನ್ನು ಮಾಡಿಸುವ ಮೇಸ್ತ್ರಿಗಳಿಗೆ ಒಪ್ಪಿಸಿದರು; ಇದಲ್ಲದೆ ಯಾಜಕ ಹಿಲ್ಕೀಯನು ನನಗೆ ಒಂದು ಗ್ರಂಥವನ್ನು ಕೊಟ್ಟಿದ್ದಾನೆ," ಎಂದು ಹೇಳಿ ಅದನ್ನು ಅರಸನ ಮುಂದೆ ಓದಿದನು. ಅರಸನು ಧರ್ಮೋಪದೇಶ ಗ್ರಂಥ ವಾಕ್ಯಗಳನ್ನು ಕೇಳಿದಾಗ ದುಃಖಾವೇಶದಿಂದ ಬಟ್ಟೆಗಳನ್ನು ಹರಿದುಕೊಂಡು, ಯಾಜಕ ಹಿಲ್ಕೀಯನು, ಶಾಫಾನನ ಮಗ ಆಹೀಕಾಮ್, ಮೀಕಾಯನ ಮಗ ಅಕ್ಬೋರ್, ಲೇಖಕ ಶಾಫಾನ್ ಹಾಗು ತನ್ನ ಹಸ್ತಕನಾದ ಅಸಾಯ ಎಂಬುವರಿಗೆ, " ನಮ್ಮ ಪೂರ್ವಜರೂ ನಮಗೆ ಸಿಕ್ಕಿರುವ ಈ ಗ್ರಂಥ ವಾಕ್ಯಗಳಿಗೆ ಕಿವಿಗೊಡದೆ ಹಾಗೂ ಅವುಗಳನ್ನು ಕೈಗೊಳ್ಳದೆ ಹೋದುದರಿಂದ ಸರ್ವೇಶ್ವರನ ಉಗ್ರ ಕೋಪಕ್ಕೆ ಪಾತ್ರರಾಗಿದ್ದೇವೆ. ಆದುದರಿಂದ ನೀವು ನನಗಾಗಿ ಜನರಿಗಾಗಿ ಹಾಗು ಎಲ್ಲಾ ಯೆಹೂದ್ಯರಿಗಾಗಿ ಸರ್ವೇಶ್ವರನ ಬಳಿಗೆ ಹೋಗಿ ಈ ಗ್ರಂಥ ವಾಕ್ಯಗಳ ವಿಷಯವಾಗಿ ವಿಚಾರಿಸಿರಿ," ಎಂದು ಆಜ್ಞಾಪಿಸಿದನು. ಆನಂತರ ಅರಸನು ದೂತರ ಮುಖಾಂತರ ಜೆರುಸಲೇಮಿನ ಮತ್ತು ಜುದೇಯ ಪ್ರಾಂತ್ಯದ ಬೇರೆ ಎಲ್ಲಾ ಊರುಗಳ ಹಿರಿಯರನ್ನು ತನ್ನ ಬಳಿಗೆ ಕರೆಯಿಸಿದನು. ಜೆರುಸಲೇಮಿನವರನ್ನೂ ಬೇರೆ ಎಲ್ಲಾ ಯೆಹೂದ್ಯರನ್ನೂ ಯಾಜಕರನ್ನೂ ಪ್ರವಾದಿಗಳನ್ನೂ ಕರೆದುಕೊಂಡು ಸರ್ವೇಶ್ವರನ ಆಲಯಕ್ಕೆ ಹೋದನು. ಚಿಕ್ಕವರೂ ದೊಡ್ಡವರೂ ಎಲ್ಲರೂ ಅವನನ್ನು ಹಿಂಬಾಲಿಸಿದರು. ಅಲ್ಲಿ ಅವನು ಎಲ್ಲರಿಗೂ ಕೇಳಿಸುವಂತೆ ಸರ್ವೇಶ್ವರನ ಆಲಯದಲ್ಲಿ ಸಿಕ್ಕಿದ ನಿಬಂಧನಾ ಗ್ರಂಥವನ್ನು ಸಂಪೂರ್ಣವಾಗಿ ಓದಿಸಿದನು. ಕಂಬದ ಬಳಿಯಲ್ಲಿ ನಿಂತು ತಾನು ಸರ್ವೇಶ್ವರನ ಮಾರ್ಗದಲ್ಲಿ ನಡೆಯುವುದಕ್ಕಾಗಿಯೂ ಅತನ ಆಜ್ಞಾನಿಯಮ ವಿಧಿಗಳನ್ನು ಪೂರ್ಣಮನಸ್ಸಿನಿಂಲೂ ಪೂರ್ಣಪ್ರಾಣದಿಂದಲೂ ಕೈಕೊಳ್ಳುವುದಾಗಿಯೂ ಮತ್ತು ನಿಬಂಧನಾ ಗ್ರಂಥದಲ್ಲಿ ಬರೆದಿರುವ ಎಲ್ಲಾ ವಾಕ್ಯಗಳನ್ನು ನೆರವೇರಿಸುವುದಾಗಿಯೂ ಸರ್ವೇಶ್ವರನಿಗೆ ಪ್ರಮಾಣ ಮಾಡಿದನು. ಎಲ್ಲಾ ಜನರೂ ಹಾಗೆಯೇ ಪ್ರಮಾಣ ಮಾಡಿದರು.
ಕೀರ್ತನೆ: 119:33, 34, 36-37, 40
ಶ್ಲೋಕ : ನಿನ್ನ ನಿಬಂಧನೆಯನು, ಪ್ರಭೂ, ಕಲಿಸೆನಗೆ.
ಶುಭಸಂದೇಶ: ಮತ್ತಾಯ 7:15-20
"ಸುಳ್ಳು ಪ್ರವಾದಿಗಳ ಬಗ್ಗೆ ಎಚ್ಚರಿಕೆಯಿಂದಿರಿ. ಹೊರಗೆ ಕುರಿಯ ವೇಷದಲ್ಲಿ ಬಂದರೂ ಒಳಗೆ ಅವರು ಕಿತ್ತು ತಿನ್ನುವ ತೋಳಗಳು. ಅವರ ವರ್ತನೆಯಿಂದ ನೀವು ಅವರನ್ನು ಗುರುತು ಹಚ್ಚುವಿರಿ. ಮುಳ್ಳುಕಳ್ಳಿಯಲ್ಲಿ ದ್ರಾಕ್ಷಿ ಕೊಯ್ಯುವುದುಂಟೇ? ಮದ್ದುಗುಣಿಕೆಯಲ್ಲಿ ಅಂಜೂರ ಕೀಳುವುದುಂಟೇ? ಅದರಂತೆಯೇ ಒಳ್ಳೆಯ ಮರ ಒಳ್ಳೆಯ ಹಣ್ಣನ್ನೂ ಕೆಟ್ಟ ಮರವು ಕೆಟ್ಟ ಹಣ್ಣನ್ನೂ ಕೊಡುತ್ತದೆ. ಒಳ್ಳೆಯ ಮರ ಕೆಟ್ಟ ಹಣ್ಣನ್ನು ಕೊಡಲಾರದು, ಹಾಗೆಯೇ ಕೆಟ್ಟ ಮರ ಒಳ್ಳೆಯ ಹಣ್ಣನ್ನು ಕೊಡಲಾರದು. ಒಳ್ಳೆಯ ಫಲವನ್ನು ಕೊಡದ ಪ್ರತಿಯೊಂದು ಮರವನ್ನೂ ಕಡಿದು ಬೆಂಕಿಯಲ್ಲಿ ಹಾಕಲಾಗುವುದು. ಅದ್ದರಿಂದ ಸುಳ್ಳು ಪ್ರವಾದಿಗಳನ್ನು ಅವರ ನಡತೆಯಿಂದ ಗುರುತು ಹಚ್ಚುವಿರಿ" ಎಂದರು ಯೇಸುಸ್ವಾಮಿ.
No comments:
Post a Comment