ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

01.04.2020 - "ನಾನು ದೇವರಿಂದಲೇ ಹೊರಟು ಇಲ್ಲಿಗೆ ಬಂದವನು. ನನ್ನಷ್ಟಕ್ಕೆ ನಾನೇ ಬರಲಿಲ್ಲ. ನನ್ನನ್ನು ಕಳುಹಿಸಿದ್ದು ದೇವರೇ"

ಮೊದಲನೇ ವಾಚನ: ದಾನಿಯೇಲ 3:14-20, 24-25, 28

ನೆಬೂಕದ್ನೆಚ್ಚರನು ಉಗ್ರಕೋಪಗೊಂಡು ಶದ್ರಕ್, ಮೇಶಕ್, ಅಬೇದ್‍ನೆಗೋ ಎಂಬವರನ್ನು ಹಿಡಿದುತರಲು ಆಜ್ಞಾಪಿಸಿದನು. ನಂತರ ಅವನು ಅವರಿಗೆ, “ಶದ್ರಕ್, ಮೇಶಕ್, ಹಾಗು ಅಬೇದ್‍ನೆಗೋ ಎಂಬವರೇ,ನೀವು ಬೇಕುಬೇಕೆಂದು, ನನ್ನ ದೇವರಿಗೆ ಸೇವೆಮಾಡದೆ, ನಾನು ಸ್ಥಾಪಿಸಿದ ಬಂಗಾರದ ಪ್ರತಿಮೆಯನ್ನು ಆರಾಧಿಸದೆ ಇರುವಿರೋ? ಈಗಲಾದರು ನೀವು ಸಿದ್ಧರಾಗಿದ್ದು ತುತೂರಿ, ಕೊಳಲು, ಕಿನ್ನರಿ, ತಂಬೂರಿ, ವೀಣೆ, ಓಲಗ ಮುಂತಾದ ಸಕಲ ವಾದ್ಯಗಳ ಧ್ವನಿ ಕೇಳಿದ ಕೂಡಲೆ ಅಡ್ಡಬಿದ್ದು ನಾನು ಸ್ಥಾಪಿಸಿದ ಪ್ರತಿಮೆಯನ್ನು ಆರಾಧಿಸಿದರೆ ಸರಿ, ಇಲ್ಲವಾದರೆ ಈ ಗಳಿಗೆಯಲ್ಲೆ ನಿಮ್ಮನ್ನು ಧಗಧಗನೆ ಉರಿಯುವ ಆವಿಗೆಯೊಳಗೆ ಹಾಕಲಾಗುವುದು. ನಿಮ್ಮನ್ನು ನನ್ನ ಕೈಯಿಂದ ಬಿಡಿಸಬಲ್ಲ ದೇವರು ಯಾರಿದ್ದಾನೆ?” ಎಂದು ಹೇಳಿದನು. ಇದನ್ನು ಕೇಳಿದ ಶದ್ರಕ್, ಮೇಶಕ್ ಮತ್ತು ಆಬೇದ್‍ನೆಗೋ ಎಂಬುವರು ರಾಜನಿಗೆ: “ನೆಬೂಕದ್ನೆಚ್ಚರ ಅರಸರೇ, ಈ ವಿಷಯದಲ್ಲಿ ನಾವು ನಿಮಗೆ ಏನನ್ನೂ ಹೇಳಬೇಕಾಗಿಲ್ಲ. ನಾವು ಸೇವೆ ಮಾಡುವ ದೇವರಿಗೆ ಚಿತ್ತವಿದ್ದರೆ ಅವರೇ ಧಗಧಗನೆ ಉರಿಯುವ ಆವಿಗೆಯೊಳಗಿಂದಲೂ ನಮ್ಮನ್ನು ಕಾಪಾಡಬಲ್ಲರು. ಅವರೇ ನಮ್ಮನ್ನು ನಿಮ್ಮ ಕೈಯಿಂದಲೂ ಬಿಡಿಸಬಲ್ಲರು. ಒಂದು ವೇಳೆ ಬಿಡಿಸದಿದ್ದರೂ ರಾಜರೇ, ಇದು ನಿಮಗೆ ತಿಳಿದಿರಲಿ: ನಾವು ನಿಮ್ಮ ದೇವರುಗಳಿಗೆ ಸೇವೆಮಾಡುವುದಿಲ್ಲ. ನೀವು ಸ್ಥಾಪಿಸಿರುವ ಬಂಗಾರದ ಪ್ರತಿಮೆಯನ್ನು ಆರಾಧಿಸುವುದಿಲ್ಲ,” ಎಂದು ಉತ್ತರಕೊಟ್ಟರು. ಆಗ ನೆಬೂಕದ್ನೆಚ್ಚರನು ಕೋಪೋದ್ರೇಕಗೊಂಡನು. ಶದ್ರಕ್, ಮೇಶಕ್ ಮತ್ತು ಅಬೇದ್‍ನೆಗೋ ಅವರ ಬಗ್ಗೆ ಅವನ ಮುಖಚರ್ಯೆ ಬದಲಾಯಿತು. ಆವಿಗೆಯನ್ನು ವಾಡಿಕೆಗಿಂತ ಏಳರಷ್ಟು ಹೆಚ್ಚಾಗಿ ಉರಿಸಬೇಕೆಂದು ಆಜ್ಞಾಪಿಸಿದನು. ಇದಲ್ಲದೆ ತನ್ನ ಸೈನ್ಯದ ಕೆಲವು ಮಂದಿ ಶೂರರಿಗೆ ಶದ್ರಕ್, ಮೇಶಕ್, ಅಬೇದ್‍ನೆಗೋ ಅವರನ್ನು ಕಟ್ಟಿ ಧಗಧಗನೆ ಉರಿಯುವ ಆವಿಗೆಯೊಳಗೆ ಎತ್ತಿಹಾಕಬೇಕೆಂದು ಅಪ್ಪಣೆಕೊಟ್ಟನು. ಇತ್ತ ರಾಜ ನೆಬೂಕದ್ನೆಚ್ಚರನು ಬೆಚ್ಚಿಬಿದ್ದು, ತಟ್ಟನೆ ಎದ್ದು ತನ್ನ ಮಂತ್ರಿಗಳನ್ನು ಕರೆಸಿ, “ನಾವು ಮೂವರನ್ನು ಕಟ್ಟಿ ಬೆಂಕಿಯಲ್ಲಿ ಹಾಕಿಸಿದೆವಲ್ಲವೆ?” ಎಂದು ಕೇಳಿದನು. ಅವರು ರಾಜನಿಗೆ, “ಹೌದು ಪ್ರಭೂ, ಅದು ಸತ್ಯ,” ಎಂದು ಉತ್ತರ ಕೊಟ್ಟರು. ಅದಕ್ಕೆ ಅವನು, “ಆದರೆ, ಇಗೋ ಕಟ್ಟಿಲ್ಲದ ನಾಲ್ವರನ್ನು ನಾನು ನೋಡುತ್ತಿದ್ದೇನೆ. ಬೆಂಕಿಯಲ್ಲಿ ತಿರುಗಾಡುತ್ತಿದ್ದಾರೆ; ಅವರಿಗೆ ಯಾವ ಹಾನಿಯೂ ಆಗುತ್ತಿಲ್ಲ. ಆಗ ನೆಬೂಕದ್ನೆಚ್ಚರನು, “ಶದ್ರಕ್, ಮೇಶಕ್ ಹಾಗು ಅಬೇದ್‍ನೆಗೋ ಎಂಬುವರ ದೇವರಿಗೆ ಸ್ತೋತ್ರವಾಗಲಿ! ಆತ ತನ್ನ ದೂತರನ್ನು ಕಳಿಸಿ ತನ್ನಲ್ಲಿ ವಿಶ್ವಾಸವಿಟ್ಟ ಇವರನ್ನು ರಕ್ಷಿಸಿದ್ದಾನೆ. ಇವರೋ ರಾಜಾಜ್ಞೆಯನ್ನೂ ಮೀರಿ ತಮ್ಮ ದೇವರನ್ನೇ ಹೊರತು ಇನ್ನಾವ ದೇವರನ್ನೂ ಪೂಜಿಸಿ ಆರಾಧಿಸಬಾರದೆಂದು ಸ್ವಂತ ದೇಹಗಳನ್ನೇ ಸಾವಿಗೊಪ್ಪಿಸಿದಂಥ ಭಕ್ತರು! ಎಂದು ಹೇಳಿದನು.

ಅಜರ್ಯನ ಗೀತೆ: 1:29-34

ಶ್ಲೋಕ: ನೀವು ಸ್ತುತ್ಯರು, ಎಂದೆಂದಿಗೂ ಮಹಿಮಾನ್ವಿತರು

ನಮ್ಮ ಪೂರ್ವಜರ ದೇವರಾದ ಸರ್ವೇಶ್ವರ,
ನೀವು ಪರಮ ಪೂಜ್ಯರು,ಎಂದೆಂದಿಗೂ ಮಹೋನ್ನತರು.
ಮಹಿಮೆಯುತವಾದ ನಿಮ್ಮ ನಾಮ‌ಸ್ತುತ್ಯರ್ಹವಾದುದು,
ಪರಮಪೂಜ್ಯವಾದುದು, ಎಂದೆಂದಿಗೂ ಮಹಾ‌ಘನತರವಾದುದು.

ಪರಮ ವೈಭವದಿಂದ ತುಂಬಿದ ಕೂಡಿದ ಮಂದಿರದ್ಲಲಿ
ನೀವು ಸ್ತುತಿ ಸ್ತೋತ್ರಕ್ಕೆ ಪಾತ್ರರು :
ನೀವು ಪರಮಪೂಜ್ಯರು, ಎಂದೆಂದಿಗೂ ಮಹೋನ್ನತರು.‌‌

ಸಾಗರಾಧಿಗಳನ್ನು ಸಮೀಕ್ಷಿಸುವ ನಿಮಗೆ ಸ್ತೋತ್ರ !
ಕೆರೂಬಿಗಳ ಮೇಲೆ ಆಸೀನರಾಗಿರುವ ನಿಮಗೆ ಸ್ತೋತ್ರ !
ನೀವು ಪರಮಪೂಜ್ಯರು, ಎಂದೆಂದಿಗೂ ಮಹೋನ್ನತರು.‌‌

ನಿಮ್ಮ ಸಾಮ್ರಾಜ್ಯದ ಸಿಂಹಾಸನದ ಮೇಲೆ ಮಂಡಿಸಿರುವ ನಿಮಗೆ ಸ್ತೋತ್ರ :
ನೀವು ಪರಮಪೂಜ್ಯರು, ಎಂದೆಂದಿಗೂ ಮಹೋನ್ನತರು.‌‌
ಗಗನ ಮಂಡಲದಲ್ಲಿ ಸ್ತೋತ್ರ ಪಾತ್ರರು:
ನೀವು ಸ್ತುತ್ಯರು ಎಂದೆಂದಿಗೂ ಮಹಿಮಾನ್ವಿತರು.


ಶುಭಸಂದೇಶ: ಯೊವಾನ್ನ 8:31-42


ಯೇಸುಸ್ವಾಮಿ ತಮ್ಮಲ್ಲಿ ನಂಬಿಕೆ ಇಟ್ಟಿದ್ದ ಯೆಹೂದ್ಯರಿಗೆ ಹೀಗೆಂದರು: “ನನ್ನ ಮಾತಿಗೆ ನೀವು ಶರಣಾದರೆ ನಿಜವಾಗಿಯೂ ನೀವು ನನ್ನ ಶಿಷ್ಯರು. ನೀವು ಸತ್ಯವನ್ನು ಅರಿತುಕೊಳ್ಳುವಿರಿ. ಸತ್ಯವು ನಿಮಗೆ ಸ್ವಾತಂತ್ರ್ಯ ನೀಡುವುದು.” ಅದಕ್ಕೆ ಯೆಹೂದ್ಯರು, “ನಾವು ಅಬ್ರಹಾಮನ ವಂಶಜರು; ಯಾರಿಗೂ ಎಂದೂ ನಾವು ದಾಸರಾಗಿಲ್ಲ. ಅಂದಮೇಲೆ ನಾವು ಸ್ವತಂತ್ರರಾಗುತ್ತೇವೆ, ಎಂದು ನೀನು ಹೇಳುವುದಾದರೂ ಹೇಗೆ?” ಎಂದು ಪ್ರಶ್ನಿಸಿದರು. ಅದಕ್ಕೆ ಪ್ರತ್ಯುತ್ತರವಾಗಿ ಯೇಸು, “ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ ಕೇಳಿ: ಪಾಪವನ್ನು ಮಾಡುವವನು ಪಾಪಕ್ಕೆ ದಾಸನೇ. ದಾಸನಾದವನು ಶಾಶ್ವತವಾಗಿ ಮನೆಯಲ್ಲಿ ಇರುವಂತಿಲ್ಲ. ಶಾಶ್ವತವಾಗಿ ಇರುವವನು ಪುತ್ರನೇ. ಪುತ್ರನು ನಿಮಗೆ ಸ್ವಾತಂತ್ರ್ಯ ನೀಡಿದರೆ, ನೀವು ನಿಜವಾಗಿಯೂ ಸ್ವತಂತ್ರರು. ನೀವು ಅಬ್ರಹಾಮನ ವಂಶಜರೆಂದು ನಾನು ಬಲ್ಲೆ. ಆದರೆ ನನ್ನ ಮಾತು ಹಿಡಿಸದ ಕಾರಣ ನನ್ನನ್ನು ಕೊಲ್ಲಲು ಹವಣಿಸುತ್ತೀರಿ. ನಾನಾಡುವ ಮಾತುಗಳು ಪಿತನ ಸನ್ನಿಧಿಯಲ್ಲಿ ನಾನು ಕಂಡದ್ದನ್ನೇ ನಿರೂಪಿಸುತ್ತವೆ. ನೀವು ಮಾಡುವ ಕಾರ್ಯಗಳೋ ನಿಮ್ಮ ತಂದೆಯಿಂದ ನೀವು ಕಲಿತದ್ದನ್ನೇ ವ್ಯಕ್ತಪಡಿಸುತ್ತವೆ,” ಎಂದರು. ಆಗ ಆ ಯೆಹೂದ್ಯರು, “ಅಬ್ರಹಾಮನೇ ನಮ್ಮ ತಂದೆ,” ಎಂದು ಮರುನುಡಿದರು. ಯೇಸು, “ಅಬ್ರಹಾಮನ ಮಕ್ಕಳು ನೀವಾಗಿದ್ದರೆ ಅಬ್ರಹಾಮನು ಮಾಡಿದಂತೆ ನೀವು ಮಾಡುತ್ತಿದ್ದಿರಿ. ಅದಕ್ಕೆ ಬದಲಾಗಿ ದೇವರಿಂದಲೇ ತಿಳಿದ ಸತ್ಯವನ್ನು ನಿಮಗೆ ಹೇಳುತ್ತಿರುವ ನನ್ನನ್ನು ಕೊಲ್ಲಲು ಹವಣಿಸುತ್ತಿದ್ದೀರಿ. ಅಬ್ರಹಾಮನು ಹಾಗೇನೂ ಮಾಡಲಿಲ್ಲ. ನೀವಾದರೋ ನಿಮಗೆ ತಂದೆಯಾದವನು ಮಾಡಿದಂತೆ ಮಾಡುತ್ತೀರಿ,” ಎಂದರು. ಅದಕ್ಕೆ ಅವರು, “ನಾವೇನು ಹಾದರಕ್ಕೆ ಹುಟ್ಟಿದವರಲ್ಲ, ದೇವರೇ ನಮ್ಮ ತಂದೆ,” ಎಂದು ಪ್ರತಿಭಟಿಸಿದರು. ಯೇಸು, ಅವರಿಗೆ, “ದೇವರೇ ನಿಮ್ಮ ತಂದೆಯಾಗಿದ್ದರೆ, ನನ್ನ ಮೇಲೆ ನಿಮಗೆ ಪ್ರೀತಿಯಿರುತ್ತಿತ್ತು. ಕಾರಣ, ನಾನು ದೇವರಿಂದಲೇ ಹೊರಟು ಇಲ್ಲಿಗೆ ಬಂದವನು. ನನ್ನಷ್ಟಕ್ಕೆ ನಾನೇ ಬರಲಿಲ್ಲ. ನನ್ನನ್ನು ಕಳುಹಿಸಿದ್ದು ದೇವರೇ.

ಮನಸ್ಸಿಗೊಂದಿಷ್ಟು : "ತನ್ನ ಆಸೆಗಳಿಗೆ ದಾಸನಾಗಿರುವ ಮನುಷ್ಯನನ್ನು ಸ್ವತಂತ್ರನು ಎಂದು ಹೇಗೆ ತಾನೇ ಕರೆಯಲು ಸಾಧ್ಯ" ಎನ್ನುತ್ತಾನೆ ಸಾಕ್ರಟಿಸ್. ಪಾಪಕ್ಕೆ ದಾಸರಾಗಿರುವ ನಮಗೆ ಅದರಿಂದ ಸ್ವಾತಂತ್ರ ದೊರಕಬೇಕಾದರೆ ಪ್ರಭು ಯೇಸುವೇ ನಮ್ಮ ಮೊದಲ ಆಯ್ಕೆಯಾಗಬೇಕು. 
ಆಯ್ಕೆಗಳ ಲೋಕದಲ್ಲಿ ನಮ್ಮ ಆಯ್ಕೆ  ಸ್ವಾತಂತ್ರದೆಡೆಗೆಯೇ ಅಥವಾ ದಾಸತ್ವದ ಕಡೆಗೆಯೇ ಎಂಬುದನ್ನು ನಾವೇ ನಿರ್ಧರಿಸಬೇಕು. 

ಪ್ರಶ್ನೆ : ನಾವು  ದಾಸರೇ? ಸ್ವತಂತ್ರರೇ?

ಪ್ರಭುವೇ,
ಆಸೆ ದುರಾಸೆ ನಿರಾಸೆಯ 
ದಾಸರು ನಾವು 
ಎಲ್ಲದರಿಂದ  ಬಿಡಿಸಬಲ್ಲ 
ದೇವರು ನೀವು 
ಹಕ್ಕಿಯಂತೆ ನಿರಾಳ 
ನೆಮ್ಮದಿಯಲ್ಲಿ ಧಾರಾಳ 
ಆಗಲಿ ಈ ಮನವು 
ತುಂಬಿಕೊಳ್ಳಲ್ಲಿ ಎದೆಗೂಡಲ್ಲಿ 
ಅನುದಿನವು  ನಿನ್ನೊಲವು     

31.03.2020 - “ನಾನು ಹೊರಟು ಹೋಗುತ್ತೇನೆ, ನೀವು ನನ್ನನ್ನು ಹುಡುಕುವಿರಿ. ಆದರೆ ನಿಮ್ಮ ಪಾಪದಲ್ಲೇ ನೀವು ಸಾಯುವಿರಿ"

ಮೊದಲನೇ ವಾಚನ: ಸಂಖ್ಯಾಕಾಂಡ 21:4-9


ಇಸ್ರಯೇಲರು ಹೋರ್ ಬೆಟ್ಟದಿಂದ ಹೊರಟು ಎದೋಮ್ಯರ ನಾಡನ್ನು ಸುತ್ತಿಕೊಂಡು ಹೋಗುವುದಕ್ಕೆ ಕೆಂಪುಕಡಲಿನ ಮಾರ್ಗವಾಗಿ ಪ್ರಯಾಣ ಮಾಡಿದರು. ಈ ಮಾರ್ಗದ ಆಯಾಸ ದಿಂದ ಅವರಿಗೆ ಬೇಸರವಾಯಿತು. ಆಗ ಅವರು ದೇವರಿಗೂ ಮೋಶೆಗೂ ವಿರುದ್ಧ ಮಾತಾಡ ತೊಡಗಿದರು: “ನೀವು ನಮ್ಮನ್ನು ಈ ಮರಳುಗಾಡಿನಲ್ಲಿ ಕೊಲ್ಲಬೇಕೆಂದು ಈಜೆಪ್ಟ್ ದೇಶದಿಂದ ಕರೆದುಕೊಂಡು ಬಂದಿರೋ? ಇಲ್ಲಿ ಆಹಾರವಿಲ್ಲ, ನೀರೂ ಇಲ್ಲ; ಈ ನಿಸ್ಸಾರವಾದ ಆಹಾರವನ್ನು ತಿಂದು ತಿಂದು ನಮಗೆ ಬೇಸರವಾಗಿದೆ,” ಎಂದು ಹೇಳತೊಡಗಿದರು. ಅದಕ್ಕೆ ಸರ್ವೇಶ್ವರ ವಿಷಸರ್ಪಗಳನ್ನು ಅವರ ನಡುವೆ ಬರಮಾಡಿದರು. ಅವು ಆ ಜನರನ್ನು ಕಚ್ಚಿದವು. ಬಹುಜನ ಸತ್ತುಹೋದರು. ಆಗ ಜನರು ಮೋಶೆಯ ಬಳಿಗೆ ಬಂದು, “ನಾವು ನಿಮಗೂ ಸರ್ವೇಶ್ವರನಿಗೂ ವಿರುದ್ಧ ಮಾತಾಡಿ ದೋಷಿಗಳಾದೆವು. ಈ ಸರ್ಪಗಳು ನಮ್ಮನ್ನು ಬಿಟ್ಟು ತೊಲಗುವಂತೆ ಸರ್ವೇಶ್ವರನನ್ನು ಪ್ರಾರ್ಥಿಸಿ,” ಎಂದು ಬೇಡಿಕೊಂಡರು. ಮೋಶೆ ಜನರ ಪರವಾಗಿ ಪ್ರಾರ್ಥಿಸಿದನು. ಸರ್ವೇಶ್ವರ ಅವನಿಗೆ, “ನೀನು ಕಂಚಿನಿಂದ ವಿಷಸರ್ಪದ ಆಕಾರವನ್ನು ಮಾಡಿಸಿ, ಧ್ವಜಸ್ತಂಭದ ಮೇಲೆ ಎತ್ತಿ ನಿಲ್ಲಿಸು. ಸರ್ಪಗಳಿಂದ ಗಾಯಗೊಂಡ ಪ್ರತಿ ಒಬ್ಬನು ಅದನ್ನು ನೋಡಿ ಬದುಕಿಕೊಳ್ಳುವನು,” ಎಂದು ಆಜ್ಞಾಪಿಸಿದರು. ಅಂತೆಯೆ ಮೋಶೆ ಕಂಚಿನಿಂದ ಸರ್ಪದ ಆಕಾರವನ್ನು ಮಾಡಿಸಿ ಧ್ವಜಸ್ತಂಭದ ಮೇಲೆ ಇಡಿಸಿದನು. ಸರ್ಪಗಳಿಂದ ಗಾಯಗೊಂಡವರಲ್ಲಿ ಯಾರು ಯಾರು ಆ ಕಂಚಿನ ಸರ್ಪವನ್ನು ಲಕ್ಷ್ಯವಿಟ್ಟು ನೋಡಿದರೋ ಅವರೆಲ್ಲರೂ ಬದುಕಿಕೊಂಡರು.

ಕೀರ್ತನೆ: 102:2-3, 16-18, 19-21

ಶ್ಲೋಕ: ಕಿವಿಗೊಡು ಪ್ರಭೂ, ನನ್ನ ಪ್ರಾರ್ಥನೆಗೆ ನನ್ನ ಕೂಗು ಸೇರಲಿ ನಿನ್ನ ಬಳಿಗೆ

ಶುಭಸಂದೇಶ: ಯೊವಾನ್ನ 8:21-30

ಯೇಸುಸ್ವಾಮಿ ಯೆಹೂದ್ಯರಿಗೆ, “ನಾನು ಹೊರಟುಹೋಗುತ್ತೇನೆ, ನೀವು ನನ್ನನ್ನು ಹುಡುಕುವಿರಿ. ಆದರೆ ನಿಮ್ಮ ಪಾಪದಲ್ಲೇ ನೀವು ಸಾಯುವಿರಿ. ನಾನು ಹೋಗುವಲ್ಲಿಗೆ ನೀವು ಬರಲಾರಿರಿ,” ಎಂದರು. ಅದಕ್ಕೆ ಯೆಹೂದ್ಯರು, ‘ತಾನು ಹೋಗುವಲ್ಲಿಗೆ ನಮ್ಮಿಂದ ಬರಲಾಗದಂತೆ! ಹಾಗೆಂದರೆ ಆತ್ಮಹತ್ಯೆ ಮಾಡಿಕೊಳ್ಳಬೇಕೆಂಬುದು ಇವನ ಇಂಗಿತವೆ?’ ಎಂದು ಮಾತನಾಡಿಕೊಂಡರು. “ನೀವು ನರಲೋಕದವರು, ನಾನು ಪರಲೋಕದವನು. ನಿಮ್ಮಂತೆ ನಾನು ಇಹಲೋಕದವನಲ್ಲ, ನಿಮ್ಮ ಪಾಪಗಳಲ್ಲೇ ನೀವು ಸಾಯುವಿರೆಂದು ನಾನು ಹೇಳಿದುದು ಇದಕ್ಕಾಗಿಯೇ. ‘ಇರುವಾತನೇ ನಾನು’ ಎಂಬುದನ್ನು ನೀವು ವಿಶ್ವಾಸಿಸದೆ ಹೋದರೆ ನಿಮ್ಮ ಪಾಪಗಳಲ್ಲೇ ಸಾಯುವಿರಿ,” ಎಂದು ಯೇಸು ಅವರಿಗೆ ಹೇಳಿದರು. ಅವರು, “ನೀನು ಯಾರು?” ಎಂದು ಪ್ರಶ್ನಿಸಿದರು. ಯೇಸು, “ನಾನು ಯಾರೆಂದು ನಿಮಗೆ ಮೊದಲಿನಿಂದಲೂ ತಿಳಿಸುತ್ತಾ ಬಂದಿದ್ದೇನೆ. ನಿಮ್ಮನ್ನು ಕುರಿತು ನಾನು ಎಷ್ಟೋ ಹೇಳಿಯೇನು; ಎಷ್ಟೋ ಖಂಡಿಸಿಯೇನು. ಆದರೆ ನನ್ನನ್ನು ಕಳುಹಿಸಿದಾತನು ಹೇಳಿದ್ದನ್ನೇ ಲೋಕಕ್ಕೆ ಸಾರುತ್ತೇನೆ. ಆತನು ಸತ್ಯಸ್ವರೂಪಿ,” ಎಂದು ಹೇಳಿದರು. ಯೇಸುಸ್ವಾಮಿ ತಮ್ಮ ಪಿತನನ್ನು ಕುರಿತು ಹೀಗೆನ್ನುತ್ತಿದ್ದಾರೆಂದು ಅವರು ಅರಿತುಕೊಳ್ಳಲಿಲ್ಲ. ಎಂದೇ ಯೇಸು ಮತ್ತೆ ಇಂತೆಂದರು: “ನರ ಪುತ್ರನನ್ನು ನೀವು ಮೇಲಕ್ಕೇರಿಸಿದಾಗ, ‘ಇರುವಾತನೇ ನಾನು’ ಎಂದು ನಿಮಗೆ ತಿಳಿಯುವುದು. ನಾನಾಗಿಯೇ ಏನನ್ನೂ ಮಾಡುವುದಿಲ್ಲವೆಂದೂ ಪಿತನು ನನಗೆ ಬೋಧಿಸಿದಂತೆ ನಾನು ಮಾತನಾಡುತ್ತೇನೆಂದೂ ನಿಮಗೆ ಆಗ ಅರಿವಾಗುವುದು. ನನ್ನನ್ನು ಕಳುಹಿಸಿದಾತನು ನನ್ನೊಡನಿದ್ದಾನೆ. ಆತನು ಮೆಚ್ಚುವುದನ್ನೇ ನಾನು ಸತತವೂ ಮಾಡುವುದರಿಂದ ಆತನು ನನ್ನನ್ನು ಏಕಾಂಗಿಯಾಗಿ ಬಿಟ್ಟಿಲ್ಲ.” ಯೇಸುಸ್ವಾಮಿ ಹೀಗೆ ಹೇಳಿದ್ದನ್ನು ಕೇಳಿ ಹಲವರಿಗೆ ಅವರಲ್ಲಿ ನಂಬಿಕೆ ಹುಟ್ಟಿತು.

ಮನಸ್ಸಿಗೊಂದಿಷ್ಟು : ಯೇಸು ಸ್ವಾಮಿ ಬಹಳ ಬೇಸರವಾಗಿ ಮಾತನಾಡುವುದನ್ನು ಕಾಣಬಹುದು.  ಅಂತರಂಗದ ನಮ್ಮೆಲ್ಲ ಹುಳುಕುಗಳು ನಮಗೆ ತಿಳಿದಿದೆ , ಅದು ಯೇಸುವಿಗೂ ತಿಳಿದಿದೆ. ಅವೆಲ್ಲವನ್ನೂ ತಿಳಿಗೊಳಿಸಲು  ನಮ್ಮ ಆಧ್ಯಾತ್ಮಿಕ ವೈದ್ಯನಾಗಿ, ರಕ್ಷಕನಾಗಿ ಬರುವ ಯೇಸುವನ್ನು ನಾವು ತಿರಸ್ಕರಿಸುತ್ತಾ ನಡೆದರೆ, ನಮ್ಮ ಬಗ್ಗೆಯೂ ಯೇಸು ಸ್ವಾಮಿ  ಬೇಸರಗೊಳ್ಳಬಹುದು ಎಂಬ ಮುನ್ನೆಚ್ಚರಿಕೆ ನಮ್ಮದಾಗಲಿ. 

ಪ್ರಶ್ನೆ : ಹಂಬಲಗಳ ನಮ್ಮ ಬಾಳಲ್ಲಿ ಯೇಸುವಿನ ಹಂಬಲಿಕೆ ಎಷ್ಟು?

30.03.2020 - “ನಾನೂ ನಿನಗೆ ಶಿಕ್ಷೆವಿಧಿಸುವುದಿಲ್ಲ, ಹೋಗು; ಇನ್ನು ಮೇಲೆ ಪಾಪ ಮಾಡಬೇಡ,”

ಮೊದಲನೇ ವಾಚನ: ಸುಸನ್ನಳ ಗ್ರಂಥ 

ಅವರು ಜನರ ಹಿರಿಯರು ಮಾತ್ರವಲ್ಲ ನ್ಯಾಯಾಧೀಶರೂ ಆಗಿದ್ದರಿಂದ ಕೂಡಿದ್ದ ಸಭಿಕರು ಅವರ ಮಾತನ್ನು ನಂಬಿ ಆಕೆಗೆ ಮರಣದಂಡನೆಯನ್ನು ವಿಧಿಸಿದರು. ಆಗ ಸುಸನ್ನಳು ಗಟ್ಟಿಯಾಗಿ ಕೂಗಿ, “ನಿತ್ಯರಾದ ದೇವರೇ ನೀವು ಎಲ್ಲ ಗುಟ್ಟನ್ನು ತಿಳಿದವರು. ಎಲ್ಲ ವಿಷಯಗಳನ್ನು , ಅವು ಹುಟ್ಟುವ ಮೊದಲೇ ಅರಿತವರೂ ಆಗಿದ್ದೀರಿ. ಇವರು ನನ್ನ ವಿರುದ್ಧ ಸುಳ್ಳುಸಾಕ್ಷಿ ಹೇಳಿದ್ದಾರೆಂಬುದು ನಿಮಗೆ ಗೊತ್ತಿದೆ. ಇವರು ನನ್ನ ವಿರುದ್ಧ ಹೊಟ್ಟೆಕಿಚ್ಚಿನಿಂದ ಹೇಳಿದ ಕಾರ್ಯಗಳನ್ನು ನಾನು ಮಾಡಿದ್ದೇ ಇಲ್ಲ. ಆದರೂ ಈಗ ನಾನು ಸಾಯಲೇಬೇಕು. ಎಂದು ಮೊರೆಯಿಟ್ಟಳು. ಸರ್ವೇಶ್ವರಸ್ವಾಮಿ ಆಕೆಯ ಮೊರೆಯನ್ನು ಆಲಿಸಿದರು. ಜನರು ಅವಳನ್ನು ಕೊಲ್ಲುವುದಕ್ಕೆ ಸಾಗಿಸಿಕೊಂಡು ಹೋಗುತ್ತಿರುವಾಗ ದೇವರು ದಾನಿಯೇಲನೆಂಬ ಯುವಕನಲ್ಲಿದ್ದ ಪವಿತ್ರಾತ್ಮನನ್ನು ಚೇತನಗೊಳಿಸಿದರು. ದಾನಿಯೇಲನು, “ಈ ಮಹಿಳೆಯ ರಕ್ತಪಾತಕ್ಕೆ ನಾನು ಹೊಣೆ ಅಲ್ಲ”, ಎಂದು ಕೂಗಿ ಹೇಳಿದನು. ಜನರೆಲ್ಲರು ಅವನ ಕಡೆಗೆ ತಿರುಗಿಕೊಂಡು, “ನೀನು ಆಡಿದ ಮಾತಿನ ಮರ್ಮವೇನು?” ಎಂದು ವಿಚಾರಿಸಿದರು. ಅವನು ಅವರ ಮಧ್ಯೆ ನಿಂತು, “ಇಸ್ರಯೇಲಿನ ಕುಲಪುತ್ರರೇ, ನೀವು ಇಷ್ಟು ಬುದ್ಧಿಹೀನರೋ? ಪರೀಕ್ಷೆಮಾಡದೆ, ಸತ್ಯವನ್ನು ಅರಿತುಕೊಳ್ಳದೆ. ಇಸ್ರಯೇಲಿನ ಕುಲಪುತ್ರಿಯೊಬ್ಬಳಿಗೆ ದಂಡನೆ ವಿಧಿಸಿದಿರೋ? ನ್ಯಾಯಸ್ಥಾನಕ್ಕೆ ಮರಳಿ ಬನ್ನಿ, ಏಕೆಂದರೆ ಇವಳ ಮೇಲೆ ಸುಳ್ಳುಸಾಕ್ಷಿ ಹೇಳಲಾಗಿದೆ,” ಎಂದು ಹೇಳಿದನು. ಜನರೆಲ್ಲರು ಕೂಡಲೆ ಹಿಂದಿರುಗಿ ಬಂದರು. ಜನನಾಯಕ್ತು ದಾನಿಯೇಲನಿಗೆ , “ಬಾ, ನಮ್ಮ ನಡುವೆ ಕುಳಿತುಕೊಂಡು ಆ ವಿಷಯವನ್ನು ನಮಗೆ ವಿವರಿಸು. ಹಿರಿಯರಿಗೆ ಕೊಟ್ಟಂಥ ಗೌರವವನ್ನು ದೇವರು ನಿನಗೆ ಕೊಟ್ಟಂತಿದೆ!” ಎಂದರು, ಆಗ ದಾನಿಯೇಲನು, “ಇವರಿಬ್ಬರನ್ನು ಬೇರ್ಪಡಿಸಿ ದೂರದೂರದಲ್ಲಿ ಇಡಿ. ನಾನು ಇವರನ್ನು ಪರೀಕ್ಷಿಸುತ್ತೇನೆ”, ಎಂದನು. ಅಂತೆಯೇ ಅವರನ್ನು ಬೇರ್ಪಡಿಸಲಾಯಿತು. ಆಮೇಲೆ ಅವರಿಬ್ಬರಲ್ಲಿ ಒಬ್ಬನನ್ನು ಕರೆದು ಅವನಿಗೆ, “ಕೆಟ್ಟತನದಲ್ಲೆ ಬೆಳೆದು ಮುಪ್ಪಾಗಿರುವವನೇ, ನೀನು ಹಿಂದೆ ಮಾಡಿದ ಪಾಪಗಳು ಇಂದು ಬಯಲಿಗೆ ಬಂದಿವೆ. `ನಿರಪರಾಧಿಗೂ ನೀತಿವಂತನಿಗೂ ಮರಣದಂಡನೆ ವಿಧಿಸಲೇಕೂಡದು’ ಎಂದು ಸರ್ವೇಶ್ವರಸ್ವಾಮಿ ಹೇಳಿದ್ದರೂ ಅನ್ಯಾಯವಾದ ತೀರ್ಪುಕೊಟ್ಟು, ನಿರಪರಾಧಿಯನ್ನು ದಂಡಿಸಿ, ಅಪರಾಧಿಗಳನ್ನು ಬಿಡುಗಡೆಮಾಡುತ್ತಾ ಬಂದಿರುವೆ. ಈಗ ಹೇಳು, ಇವಳನ್ನು ನೀನು ನೋಡಿದ್ದೇ ಆದರೆ, ಇವರು ಯಾವ ಗಿಡದ ಅಡಿಯಲ್ಲಿ ಕೂಡಿದ್ದರು. ನನಗೆ ತಿಳಿಸು,” ಎಂದನು. ಅದಕ್ಕೆ ಅವನು, “ಬಗಿನಿ ಮರದ ಅಡಿಯಲ್ಲಿ,” ಎಂದು ಉತ್ತರವಿತ್ತನು. ಅದಕ್ಕೆ ದಾನಿಯೇಲನು, “ನಿನ್ನ ಪ್ರಾಣಕ್ಕೆ ವಿರುದ್ಧ ಚೆನ್ನಾಗಿ ಸುಳ್ಳಾಡಿದೆ. ದೇವದೂತನು ಈಗಲೆ ದೇವರಿಂದ ತೀರ್ಮಾನ ಪಡೆದು ನಿನ್ನನ್ನು ಬಗೆದುಹಾಕಿ, ಎರಡು ತುಂಡಾಗಿ ಮಾಡಲಿದ್ದಾನೆ”, ಎಂದು ಹೇಳಿ ಅವನನ್ನು ಪಕ್ಕಕ್ಕೆ ಸರಿಸಿದನು. ಬಳಿಕ ಎರಡನೆಯವನನ್ನು ಕರೆತರಲು ಆಜ್ಞಾಪಿಸಿದನು. ಅವನನ್ನು ನೋಡಿ, “ಯೆಹೂದ ವಂಶಕ್ಕೆ ಅಯೋಗ್ಯನಾದ ಎಲೈ ಕಾನಾನ್ ವಂಶಜನೇ, ಸೌಂದರ್ಯವು ನಿನ್ನನ್ನು ಮೋಸಗೊಳಿಸಿತು. ಕಾಮವು ನಿನ್ನ ಮನಸ್ಸನ್ನು ಕೆಡಿಸಿತು. ಇಸ್ರಯೇಲಿನ ಕುಲಪುತ್ರಿಯರೊಂದಿಗೆ ನೀವು ಇದೇ ರೀತಿ ವರ್ತಿಸುತ್ತಾ ಬಂದಿರಿ. ಅವರು ಅಂಜಿಕೆಯಿಂದ ನಿಮಗೆ ವಶವಾಗುತ್ತಿದ್ದರು. ಆದರೆ ಜುದೇಯದ ಈ ಕುಲಪುತ್ರಿ ಮಾತ್ರ ನಿಮ್ಮ ಅಧರ್ಮಕ್ಕೆ ಇಂಬುಕೊಡಲಿಲ್ಲ. ಈಗ ಹೇಳು, `ಯಾವ ಮರದ ಕೆಳಗೆ ಇವರು ಕೂಡಿದ್ದನ್ನು ನೀನು ಕಂಡುಹಿಡಿದೆ?” ಎಂದನು. ಅವನು, `ಕಡವಾಲ ಮರದ ಕೆಳಗೆ’ ಎಂದು ಉತ್ತರಕೊಟ್ಟ , ಆಗ ದಾನಿಯೇಲನು “ನೀನು ಸಹ ನಿನ್ನ ಕುತ್ತಿಗೆಗೆ ವಿರುದ್ಧ ಚೆನ್ನಾಗಿ ಸುಳ್ಳಾಡಿದೆ, ನಿನ್ನನ್ನು ಕಡಿದು ಎರಡು ಹೋಳಾಗಿ ಮಾಡಿ ನಿಮ್ಮಿಬ್ಬರನ್ನೂ ನಾಶಮಾಡಲು ದೇವದೂತನು ಕೈಯಲ್ಲಿ ಕತ್ತಿಹಿಡಿದು ಕಾದಿದ್ದಾನೆ”, ಎಂದು ನುಡಿದನು, ಕೂಡಿದ್ದ ಸಭಿಕರೆಲ್ಲರು ಆಗ ಗಟ್ಟಿಯಾಗಿ ಕೂಗುತ್ತಾ, ತನ್ನಲ್ಲಿ ಭರವಸೆಯಿಟ್ಟವರನ್ನು ಸಂರಕ್ಷಿಸಿ ಕಾಪಾಡುವ ದೇವರನ್ನು ಕೊಂಡಾಡಿದರು. ಅಲ್ಲದೆ, ದಾನಿಯೇಲನು ಆ ಇಬ್ಬರು ಹಿರಿಯರನ್ನು ಸುಳ್ಳುಸಾಕ್ಷಿಗಳೆಂದು ತೋರಿಸಿಕೊಟ್ಟ ಕಾರಣ, ಸಭಿಕರು ಅವರ ವಿರುದ್ಧ ಎದ್ದುನಿಂತು ಪ್ರತಿಭಟಿಸಿದರು. ಹೊಟ್ಟೆಕಿಚ್ಚಿನಿಂದ ನೆರೆಯವರ ಮೇಲೆ ಏನು ದಂಡನೆ ತೆರಬೇಕೆಂದಿದ್ದರೋ ಅದನ್ನೇ ಮೋಶೆಯ ಧರ್ಮಶಾಸ್ತ್ರದ ಪ್ರಕಾರ ಅವರ ಮೇಲೆ ತಂದು, ಅವರನ್ನು ಕೊಲ್ಲಿಸಿದರು. ಹೀಗೆ ನಿರ್ದೋಷಿಯ ರಕ್ತ. ಅಂದು ಸುರಕ್ಷಿತವಾಯಿತು.

ಕೀರ್ತನೆ: 23:1-3, 3-4, 5, 6

ಶ್ಲೋಕ: ಕಾರ್ಗತ್ತಲ ಕಣಿವೆಯಲಿ ನಡೆವಾಗಲು ಕಾಣೆನೆಂದಿಗೂ ನಾ ದಿಗಿಲನು, ನೀನಿರಲು ನನ್ನೊಂದಿಗೆ

ಶುಭಸಂದೇಶ: ಯೊವಾನ್ನ 8:1-11

ಯೇಸುಸ್ವಾಮಿ ಓಲಿವ್ ಗುಡ್ಡಕ್ಕೆ ಹೋದರು. ಮರುದಿನ ಮುಂಜಾನೆ ಅವರು ಮತ್ತೆ ಮಹಾದೇವಾಲಯಕ್ಕೆ ಬಂದರು. ಜನರು ಸುತ್ತಲೂ ಬಂದು ನೆರೆಯಲು ಯೇಸು ಕುಳಿತುಕೊಂಡು ಬೋಧಿಸತೊಡಗಿದರು. ಆಗ ಧರ್ಮಶಾಸ್ತ್ರಿಗಳೂ ಫರಿಸಾಯರೂ ಒಬ್ಬ ಹೆಂಗಸನ್ನು ಅಲ್ಲಿಗೆ ಕರೆತಂದರು; ಅವಳು ವ್ಯಭಿಚಾರಮಾಡುತ್ತಿದ್ದಾಗಲೇ ಸಿಕ್ಕಿಬಿದ್ದಿದ್ದಳು. ಅವಳನ್ನು ಎಲ್ಲರ ಮುಂದೆ ನಿಲ್ಲಿಸಿ, “ಬೋಧಕರೇ, ಈ ಹೆಂಗಸು ವ್ಯಭಿಚಾರ ಮಾಡುತ್ತಿದ್ದಾಗಲೇ ಸಿಕ್ಕಿಬಿದ್ದಳು. ಇಂಥವರನ್ನು ಕಲ್ಲೆಸೆದು ಕೊಲ್ಲಬೇಕೆಂದು ಮೋಶೆಯೇ ಧರ್ಮಶಾಸ್ತ್ರದಲ್ಲಿ ವಿಧಿಸಿದ್ದಾನೆ. ಈ ಕುರಿತು ನಿಮ್ಮ ಅಭಿಪ್ರಾಯವೇನು?” ಎಂದು ಪ್ರಶ್ನಿಸಿದರು. ಯೇಸುವನ್ನು ಮಾತಿನಲ್ಲಿ ಸಿಕ್ಕಿಸಿ ಅವರ ಮೇಲೆ ತಪ್ಪುಹೊರಿಸಬೇಕೆಂಬುದೇ ಅವರ ಉದ್ದೇಶವಾಗಿತ್ತು. ಯೇಸುವಾದರೋ ಬಗ್ಗಿಕೊಂಡು ಬೆರಳಿನಿಂದ ಮರಳ ಮೇಲೆ ಏನನ್ನೋ ಬರೆಯುತ್ತಾ ಕುಳಿತರು. ಬಂದವರಾದರೋ ಮೇಲಿಂದ ಮೇಲೆ ಪ್ರಶ್ನೆಹಾಕುತ್ತಲೇ ಇದ್ದರು. ಆಗ ಯೇಸು ನೆಟ್ಟಗೆ ಕುಳಿತು, “ನಿಮ್ಮಲ್ಲಿ ಪಾಪ ಮಾಡದವನು ಯಾವನೋ ಅಂಥವನು ಇವಳ ಮೇಲೆ ಮೊದಲನೆಯ ಕಲ್ಲು ಬೀರಲಿ,” ಎಂದು ಹೇಳಿ, ಪುನಃ ಬಗ್ಗಿಕೊಂಡು ನೆಲದ ಮೇಲೆ ಬರೆಯತೊಡಗಿದರು. ಇದನ್ನು ಕೇಳಿದ್ದೇ ಹಿರಿಯರಿಂದ ಹಿಡಿದು ಅವರೆಲ್ಲರೂ ಒಬ್ಬೊಬ್ಬರಾಗಿ ಅಲ್ಲಿಂದ ಕಾಲುಕಿತ್ತರು. ಕೊನೆಗೆ ಅಲ್ಲಿ ಉಳಿದವರೆಂದರೆ, ಯೇಸು ಮತ್ತು ನಿಂತುಕೊಂಡಿದ್ದ ಆ ಹೆಂಗಸು. ಆಗ ಯೇಸು ತಲೆಯೆತ್ತಿ, “ತಾಯಿ, ಅವರೆಲ್ಲಾ ಎಲ್ಲಿ? ನಿನಗೆ ಯಾರೂ ಶಿಕ್ಷೆ ವಿಧಿಸಲಿಲ್ಲವೆ?” ಎಂದು ಕೇಳಿದರು. ಅವಳು “ಇಲ್ಲ, ಸ್ವಾವಿೂ,” ಎಂದಳು. ಯೇಸು ಅವಳಿಗೆ, “ನಾನೂ ನಿನಗೆ ಶಿಕ್ಷೆ ವಿಧಿಸುವುದಿಲ್ಲ, ಹೋಗು; ಇನ್ನು ಮೇಲೆ ಪಾಪ ಮಾಡಬೇಡ,” ಎಂದರು.



ಮನಸ್ಸಿಗೊಂದಿಷ್ಟು : “ನಾನೂ ನಿನಗೆ ಶಿಕ್ಷೆ ವಿಧಿಸುವುದಿಲ್ಲ" ಎಂದು ಯೇಸು ಹೇಳಿದ ಮಾತು ಇಷ್ಟು ಸಾವಿರ ವರ್ಷಗಳಾದ ಮೇಲೂ ಇನ್ನೂ ಪ್ರತಿಧ್ವನಿಸುತ್ತಿದೆ. ಆ ಮಹಿಳೆಗೆ ಅಂದು ತೋರಿದ ಕರುಣೆ, ಅನುಕಂಪ ನಮಗೆಲ್ಲಾ ಸ್ಪೂರ್ತಿಯಾಗಬೇಕು. ಮತ್ತೊಬ್ಬರ ಬಗ್ಗೆ ತೀರ್ಪು ಕೊಡಲು ನಮಗೆ ಯಾವುದೇ ಅಧಿಕಾವಿಲ್ಲ, ಅದು ದೇವರ ಹಕ್ಕು ಮಾತ್ರ ಎನ್ನುವುದು ಯೇಸು ತಿಳಿಸಿದ, ಬರೆದ ಸಂದೇಶ. 

ಪ್ರಶ್ನೆ : ಮತ್ತೊಬ್ಬರ ತಪ್ಪು ಕಂಡು ಹಿಡಿಯುತ್ತಲೇ ಇರುವ ನಾವೆಷ್ಟು ಶುದ್ಧ?

29.03.2020 - ಆಗ ಯೇಸು, “ಕಟ್ಟುಗಳನ್ನು ಬಿಚ್ಚಿ ಅವನನ್ನು ಹೋಗಲು ಬಿಡಿ,” ಎಂದು ಅಲ್ಲಿದ್ದವರಿಗೆ ಹೇಳಿದರು

ಮೊದಲನೇ ವಾಚನ: ಯಜೆಕಿಯೇಲ 37:12-14

ಸರ್ವೇಶ್ವರ ನನಗೆ ಹೀಗೆಂದರು: "ನೀನು ಈ ದೈವೋಕ್ತಿಯನ್ನು ಅವರಿಗೆ ನುಡಿ: ‘ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ನನ್ನ ಜನರೇ, ನೋಡಿ: ನಾನು ನಿಮ್ಮ ಗೋರಿಗಳನ್ನು ತೆರೆದು, ಅವುಗಳೊಳಗಿಂದ ನಿಮ್ಮನ್ನು ಎಬ್ಬಿಸಿ, ಇಸ್ರಯೇಲ್ ನಾಡಿಗೆ ಸೇರಮಾಡುವೆನು. ನನ್ನ ಜನರೇ, ನಾನು ನಿಮ್ಮ ಗೋರಿಗಳನ್ನು ತೆರೆದು, ಅವುಗಳೊಳಗಿಂದ ನಿಮ್ಮನ್ನು ಎಬ್ಬಿಸಿದಾಗ, ನಾನೇ ಸರ್ವೇಶ್ವರ ಎಂದು ನಿಮಗೆ ದೃಢವಾಗುವುದು. ನಾನು ನನ್ನ ಶ್ವಾಸವನ್ನು ನಿಮ್ಮಲ್ಲಿ ಊದಿ, ನಿಮ್ಮನ್ನು ಬದುಕಿಸಿ, ನಿಮ್ಮ ದೇಶದಲ್ಲಿ ನೆಲೆಗೊಳಿಸುವೆನು. ಆಗ ಸರ್ವೇಶ್ವರನಾದ ನಾನೇ ಇದನ್ನು ನುಡಿದು ನಡೆಸಿದ್ದೇನೆ ಎಂದು ತಿಳಿದುಕೊಳ್ಳುವಿರಿ; ಇದು ಸರ್ವೇಶ್ವರನ ಸಂಕಲ್ಪ’.”

ಕೀರ್ತನೆ: 130:1-2, 3-4, 5-6, 7-8

ಶ್ಲೋಕ: ಪಾಪಗಳ ನೀ ಪಟ್ಟಿಮಾಡಿದೆಯಾದರೆ ಪ್ರಭೂ, ನಿನ್ನ ಮುಂದೆ ಯಾರು ತಾನೆ ನಿಲ್ಲಬಲ್ಲರು ವಿಭೂ?

ಎರಡನೇ ವಾಚನ: ರೋಮನರಿಗೆ 8:8-11

ಶರೀರ ಸ್ವಭಾವಕ್ಕೆ ಅನುಸಾರವಾಗಿ ನಡೆಯುವವರು ದೇವರನ್ನು ಮೆಚ್ಚಿಸಲು ಸಾಧ್ಯವೇ ಇಲ್ಲ. ನಿಮ್ಮಲ್ಲಿ ನಿಜವಾಗಿಯೂ ದೇವರ ಆತ್ಮವು ನೆಲಸಿದ್ದರೆ ನೀವು ಶರೀರ ಸ್ವಭಾವಕ್ಕೆ ಅನುಸಾರವಾಗಿ ಜೀವಿಸದೆ ಪವಿತ್ರಾತ್ಮ ಅವರ ಚಿತ್ತಕ್ಕೆ ಅನುಸಾರವಾಗಿ ಜೀವಿಸುತ್ತೀರಿ. ಯಾರಲ್ಲಿ ಕ್ರಿಸ್ತಯೇಸುವಿನ ಆತ್ಮ ಇಲ್ಲವೋ ಅಂಥವನು ಕ್ರಿಸ್ತಯೇಸುವಿಗೆ ಸೇರಿದವನಲ್ಲ. ಆದರೆ ಕ್ರಿಸ್ತಯೇಸು ನಿಮ್ಮಲ್ಲಿ ವಾಸಿಸಿದರೆ, ಪಾಪದ ನಿಮಿತ್ತ ನಿಮ್ಮ ಶರೀರ ಮರಣಕ್ಕೆ ಗುರಿಯಾಗಿದ್ದರೂ ನೀವು ದೇವರೊಡನೆ ಸತ್ಸಂಬಂಧವನ್ನು ಪಡೆದಿರುವುದರಿಂದ ಪವಿತ್ರಾತ್ಮ ನಿಮಗೆ ಜೀವಾಳವಾಗಿರುತ್ತಾರೆ. ಯೇಸುವನ್ನು ಮರಣದಿಂದ ಎಬ್ಬಿಸಿದ ದೇವರ ಆತ್ಮ ನಿಮ್ಮಲ್ಲಿ ನೆಲೆಗೊಂಡಿರಲಿ. ಆಗ ಕ್ರಿಸ್ತಯೇಸುವನ್ನು ಮರಣದಿಂದ ಎಬ್ಬಿಸಿದ ದೇವರು ನಿಮ್ಮಲ್ಲಿ ನೆಲೆಗೊಂಡಿರುವ ಆತ್ಮನ ಮುಖಾಂತರ ನಿಮ್ಮ ನಶ್ವರ ದೇಹಗಳಿಗೂ ಜೀವವನ್ನೀಯುವರು.

ಶುಭಸಂದೇಶ: ಯೊವಾನ್ನ 11:1-45

ಬೆಥಾನಿಯ ಎಂಬ ಊರಿನಲ್ಲಿ ಲಾಸರ್ ಎಂಬವನು ಅಸ್ವಸ್ಥನಾಗಿದ್ದನು. ಮರಿಯ ಮತ್ತು ಅವಳ ಸಹೋದರಿ ಮಾರ್ತ ಎಂಬವರ ಊರು ಅದೇ ಆಗಿತ್ತು. (ಹಿಂದೊಮ್ಮೆ ಪ್ರಭುವಿನ ಪಾದಗಳಿಗೆ ಸುಗಂಧ ತೈಲವನ್ನು ಹಚ್ಚಿ ಅವರ ಪಾದಗಳನ್ನು ತನ್ನ ತಲೆಗೂದಲಿನಿಂದ ಒರಸಿದವಳೇ ಈ ಮರಿಯ. ಅಸ್ವಸ್ಥನಾಗಿದ್ದ ಲಾಸರನು ಇವಳ ಸಹೋದರ.) ಈ ಸಹೋದರಿಯರು, ಯೇಸುಸ್ವಾಮಿಗೆ, “ಪ್ರಭುವೇ, ನಿಮ್ಮ ಆಪ್ತಮಿತ್ರನು ಅಸ್ವಸ್ಥನಾಗಿದ್ದಾನೆ,” ಎಂದು ಹೇಳಿಕಳುಹಿಸಿದರು. ಇದನ್ನು ಕೇಳಿದ ಯೇಸು, “ಈ ಕಾಯಿಲೆ ಮರಣಕ್ಕಾಗಿ ಬಂದುದಲ್ಲ, ದೇವರ ಮಹಿಮೆಗೋಸ್ಕರ ಬಂದಿದೆ. ಇದರ ಮೂಲಕ ದೇವರ ಪುತ್ರನಿಗೆ ಮಹಿಮೆ ಉಂಟಾಗಲಿದೆ,” ಎಂದು ನುಡಿದರು. ಮಾರ್ತ, ಅವಳ ಸಹೋದರಿ ಮರಿಯ ಮತ್ತು ಲಾಸರ, ಇವರು ಯೇಸುವಿಗೆ ಅಚ್ಚುಮೆಚ್ಚಿನವರು. ಲಾಸರನ ಕಾಯಿಲೆಯ ಸುದ್ದಿಯನ್ನು ಕೇಳಿದ ಮೇಲೂ ಯೇಸು ತಾವಿದ್ದಲ್ಲಿಯೇ ಇನ್ನೂ ಎರಡು ದಿನ ಉಳಿದುಕೊಂಡರು. ಅನಂತರ ತಮ್ಮ ಶಿಷ್ಯರಿಗೆ, “ಬನ್ನಿ, ಜುದೇಯಕ್ಕೆ ಮರಳಿ ಹೋಗೋಣ,” ಎಂದರು. ಆ ಶಿಷ್ಯರು, “ಗುರುದೇವಾ, ಇತ್ತೀಚೆಗೆ ತಾನೆ ಯೆಹೂದ್ಯರು ನಿಮ್ಮನ್ನು ಕಲ್ಲಿನಿಂದ ಹೊಡೆಯಬೇಕೆಂದಿದ್ದರು. ಪುನಃ ಅಲ್ಲಿಗೇ ಹೋಗಬೇಕೆಂದಿರುವಿರಾ?” ಎಂದು ಕೇಳಿದರು. ಅದಕ್ಕೆ ಯೇಸು, “ಹಗಲಿಗೆ ಹನ್ನೆರಡು ತಾಸು ಉಂಟಲ್ಲವೆ? ಹಗಲಿನಲ್ಲಿ ನಡೆಯುವವನು ಎಡವಿ ಬೀಳುವುದಿಲ್ಲ. ಏಕೆಂದರೆ ಈ ಲೋಕದ ಬೆಳಕು ಅವನಿಗೆ ಕಾಣಿಸುತ್ತದೆ. ಆದರೆ ರಾತ್ರಿಯಲ್ಲಿ ನಡೆಯುವವನು ಎಡವಿ ಬೀಳುತ್ತಾನೆ. ಕಾರಣ, ಅವನಲ್ಲಿ ಬೆಳಕು ಇಲ್ಲ,” ಎಂದರು. ಬಳಿಕ ಯೇಸು, “ನಮ್ಮ ಮಿತ್ರನಾದ ಲಾಸರನು ನಿದ್ರೆ ಮಾಡುತ್ತಿದ್ದಾನೆ, ಅವನನ್ನು ಎಬ್ಬಿಸಲು ನಾನು ಹೋಗಬೇಕು,” ಎಂದು ನುಡಿದರು. ಶಿಷ್ಯರು, “ಪ್ರಭುವೇ, ಅವನು ನಿದ್ರೆ ಮಾಡುತ್ತಿರುವನಾದರೆ ಚೇತರಿಸಿಕೊಳ್ಳುತ್ತಾನೆ,” ಎಂದರು. ಯೇಸು ಹೇಳಿದ್ದು ಅವನ ಮರಣವನ್ನು ಕುರಿತು. ಶಿಷ್ಯರಾದರೋ ಅದು ಸಾಮಾನ್ಯ ನಿದ್ರೆಯೆಂದು ತಿಳಿದುಕೊಂಡರು. ಆದುದರಿಂದ ಯೇಸು ಅವರಿಗೆ ಸ್ಪಷ್ಟವಾಗಿ, “ಲಾಸರನು ಸತ್ತು ಹೋಗಿದ್ದಾನೆ; ನಾನು ಅಲ್ಲಿ ಇಲ್ಲದೆ ಹೋದದ್ದು ನಿಮಗೆ ಒಳ್ಳೆಯದೇ ಆಯಿತು. ನಿಮಗೆ ನನ್ನಲ್ಲಿ ವಿಶ್ವಾಸ ಮೂಡುವಂತೆ ಇದೆಲ್ಲಾ ನಡೆದಿದೆ. ಬನ್ನಿ, ಅವನ ಬಳಿಗೆ ಹೋಗೋಣ,” ಎಂದರು. ಆಗ ದಿದುಮನೆಂಬ ತೋಮನು ತನ್ನ ಜೊತೆ ಶಿಷ್ಯರಿಗೆ, “ನಾವು ಕೂಡ ಪ್ರಭುವಿನೊಡನೆ ಹೋಗಿ ಸಾಯೋಣ,” ಎಂದು ಹೇಳಿದನು. ‘ನಾನೇ ಪುನರುತ್ಥಾನ; ನಾನೇ ಜೀವ!’ ಯೇಸುಸ್ವಾಮಿ ಅಲ್ಲಿಗೆ ಬಂದಾಗ ಲಾಸರನನ್ನು ಸಮಾಧಿಯಲ್ಲಿ ಹೂಳಿಟ್ಟು ಆಗಾಗಲೇ ನಾಲ್ಕು ದಿನಗಳಾಗಿದ್ದುವೆಂದು ತಿಳಿಯಿತು. ಬೆಥಾನಿಯ ಜೆರುಸಲೇಮಿನಿಂದ ಸುಮಾರು ಮೂರು ಕಿಲೊವಿೂಟರು ದೂರದಲ್ಲಿದೆ. ಅನೇಕ ಯೆಹೂದ್ಯರು ಮಾರ್ತಳನ್ನೂ ಮರಿಯಳನ್ನೂ ಕಂಡು ಅವರ ಸೋದರನ ಮರಣಕ್ಕಾಗಿ ಸಂತಾಪ ಸೂಚಿಸಲು ಬಂದಿದ್ದರು.

ಯೇಸು ಬರುತ್ತಿದ್ದಾರೆಂದು ಕೇಳಿದೊಡನೆ ಮಾರ್ತ ಅವರನ್ನು ಎದುರುಗೊಳ್ಳಲು ಹೋದಳು. ಮರಿಯ ಮನೆಯಲ್ಲೇ ಇದ್ದಳು ಮಾರ್ತ ಯೇಸುವನ್ನು ಕಂಡು, ‘ಪ್ರಭುವೇ, ನೀವು ಇಲ್ಲಿದ್ದಿದ್ದರೆ ನನ್ನ ಸಹೋದರ ಸಾಯುತ್ತಿರಲಿಲ್ಲ. ಈಗಲೂ ದೇವರಲ್ಲಿ ನೀವು ಏನೇ ಕೇಳಿಕೊಂಡರೂ ನಿಮಗವರು ನೀಡುವರೆಂದು ನಾನು ಬಲ್ಲೆ,” ಎಂದಳು. ಯೇಸು, “ನಿನ್ನ ಸಹೋದರನು ಜೀವಂತವಾಗಿ ಏಳುವನು,” ಎಂದರು. “ಅವನು ಅಂತಿಮ ದಿನದ ಪುನರುತ್ಥಾನದಲ್ಲಿ ಜೀವಂತವಾಗಿ ಏಳುವನೆಂದು ನನಗೆ ತಿಳಿದಿದೆ,” ಎಂದಳು ಮಾರ್ತ. ಯೇಸು, ಅವಳಿಗೆ, “ಪುನರುತ್ಥಾನವೂ ಜೀವವೂ ನಾನೇ; ನನ್ನಲ್ಲಿ ವಿಶ್ವಾಸವಿಟ್ಟವನು ಸಾವಿಗೀಡಾದರೂ ಜೀವಿಸುವನು. ಜೀವಿಸುವ ಪ್ರತಿಯೊಬ್ಬನೂ ನನ್ನಲ್ಲಿ ವಿಶ್ವಾಸವಿಟ್ಟನೆಂದರೆ ಅವನೆಂದಿಗೂ ಸಾಯನು. ಇದನ್ನು ನೀನು ವಿಶ್ವಾಸಿಸುತ್ತೀಯಾ?” ಎಂದು ಕೇಳಲು ಅವಳು, ಹೌದು ಪ್ರಭುವೇ, ನೀವೇ ಅಭಿಷಿಕ್ತರಾದ ಲೋಕೋದ್ಧಾರಕ; ದೇವರ ಪುತ್ರ; ಈ ಲೋಕಕ್ಕೆ ಬರಬೇಕಾದವರು - ಎಂದು ನಾನು ವಿಶ್ವಾಸಿಸುತ್ತೇನೆ,” ಎಂದು ಹೇಳಿದಳು. ಕಂಬನಿಗರೆದ ಯೇಸು ಹೀಗೆ ಹೇಳಿದ ಮೇಲೆ ಅವಳು ತನ್ನ ಸೋದರಿಯನ್ನು ಕರೆಯಲು ಹೋದಳು. ಅವಳನ್ನು ಕಂಡು, “ಬೋಧಕರು ಬಂದಿದ್ದಾರೆ; ನಿನ್ನನ್ನು ಕರೆಯುತ್ತಿದ್ದಾರೆ,” ಎಂದು ಹೇಳಿದಳು. ಇದನ್ನು ಕೇಳಿದ ಮರಿಯಳು ತಟ್ಟನೆ ಎದ್ದು ಯೇಸುವನ್ನು ಕಾಣಹೋದಳು. ಯೇಸು ಇನ್ನೂ ಊರೊಳಗೆ ಬಂದಿರಲಿಲ್ಲ; ಮಾರ್ತ ತಮ್ಮನ್ನು ಎದುರುಗೊಂಡ ಸ್ಥಳದಲ್ಲಿಯೇ ಇದ್ದರು. ಇತ್ತ ಮನೆಯಲ್ಲಿ ಮರಿಯಳನ್ನು ಸಂತೈಸಿಕೊಂಡಿದ್ದ ಯೆಹೂದ್ಯರು, ಆಕೆ ಅವಸರವಸರವಾಗಿ ಎದ್ದುಹೋಗುವುದನ್ನು ಕಂಡು ಗೋಳಿಡುವುದಕ್ಕಾಗಿಯೇ ಸಮಾಧಿಯ ಕಡೆಗೆ ಹೋಗುತ್ತಿದ್ದಾಳೆಂದು ಎಣಿಸಿ ಆಕೆಯ ಹಿಂದೆಯೇ ಹೋದರು. ಮರಿಯಳು ಯೇಸುವಿನ ಬಳಿಗೆ ಬಂದಕೂಡಲೇ ಅವರ ಕಾಲಿಗೆ ಬಿದ್ದು, “ಪ್ರಭುವೇ, ನೀವು ಇಲ್ಲಿದ್ದಿದ್ದರೆ ನನ್ನ ಸಹೋದರನು ಸಾಯುತ್ತಿರಲಿಲ್ಲ,” ಎಂದಳು. ಆಕೆಯ ಮತ್ತು ಆಕೆಯೊಡನೆ ಬಂದಿದ್ದ ಯೆಹೂದ್ಯರ ಗೋಳಾಟವನ್ನು ಯೇಸು ನೋಡಿದರು. ಅವರ ಮನ ಕರಗಿತು; ದುಃಖ ತುಂಬಿ ಬಂದಿತು. ಯೇಸು ಅವರಿಗೆ, “ಆತನನ್ನು ಎಲ್ಲಿ ಸಮಾಧಿಮಾಡಿದ್ದೀರಿ?” ಎಂದು ಕೇಳಿದರು. ಅವರು, “ಬಂದು ನೋಡಿ ಸ್ವಾವಿೂ,” ಎಂದರು. ಯೇಸು ಕಣ್ಣೀರಿಟ್ಟರು. ಇದನ್ನು ಕಂಡ ಯೆಹೂದ್ಯರು, “ಅವನ ಮೇಲೆ ಈತನಿಗೆಷ್ಟು ಪ್ರೀತಿಯಿತ್ತು, ನೋಡಿದಿರಾ!” ಎಂದುಕೊಂಡರು. ಕೆಲವರಾದರೋ, “ಆ ಕುರುಡನಿಗೆ ಕಣ್ಣುಕೊಟ್ಟ ಈತ ಲಾಸರನು ಸಾಯದಂತೆ ಮಡಬಾರದಿತ್ತೆ?” ಎಂದರು. ಲಾಸರನ ಪುನರುಜ್ಜೀವನ ಯೇಸುಸ್ವಾಮಿ ಮತ್ತೊಮ್ಮೆ ಮನಮರುಗಿ ಸಮಾಧಿಯ ಬಳಿಗೆ ಬಂದರು.

ಅದು ಒಂದು ಗವಿಯಾಗಿತ್ತು; ಅದರ ಬಾಯಿಗೆ ಒಂದು ಕಲ್ಲನ್ನು ಮುಚ್ಚಲಾಗಿತ್ತು. ಯೇಸು, “ಆ ಕಲ್ಲನ್ನು ತೆಗೆಯಿರಿ,” ಎಂದು ಆಜ್ಞಾಪಿಸಿದರು. ಮೃತನ ಸಹೋದರಿಯಾದ ಮಾರ್ತಳು, “ಪ್ರಭುವೇ, ಅವನು ಸತ್ತು ನಾಲ್ಕು ದಿನಗಳಾದವು; ಈಗಾಗಲೇ ಅವನ ದೇಹ ಕೊಳೆತು ನಾರುತ್ತಿರಬೇಕು,” ಎಂದಳು. “ನಿನಗೆ ವಿಶ್ವಾಸವಿದ್ದಲ್ಲಿ ದೇವರ ಮಹಿಮೆಯನ್ನು ಕಾಣುವೆ ಎಂದು ನಾನು ಹೇಳಲಿಲ್ಲವೆ?” ಎಂದು ಮರುನುಡಿದರು ಯೇಸು. ಆಗ ಕಲ್ಲನ್ನು ತೆಗೆದುಹಾಕಲಾಯಿತು. ಯೇಸು ಕಣ್ಣೆತ್ತಿ ಮೇಲಕ್ಕೆ ನೋಡಿ, “ಪಿತನೇ, ನನ್ನ ಪ್ರಾರ್ಥನೆಗೆ ನೀವು ಕಿವಿಗೊಡುತ್ತೀರಿ; ಆದುದರಿಂದ ನಾನು ನಿಮಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ನನ್ನ ಪ್ರಾರ್ಥನೆಗೆ ನೀವು ಯಾವಾಗಲೂ ಕಿವಿಗೊಡುತ್ತೀರಿ ಎಂಬುದು ನನಗೆ ಚೆನ್ನಾಗಿ ತಿಳಿದಿದೆ. ಆದರೆ ನನ್ನನ್ನು ಕಳುಹಿಸಿದಾತ ನೀವೇ ಎಂದು ಸುತ್ತಲೂ ನೆರೆದಿರುವವರು ನಂಬುವಂತೆ ನಾನು ಹೀಗೆ ಹೇಳಿದೆನು,” ಎಂದು ನುಡಿದರು. ಅನಂತರ ಗಟ್ಟಿಯಾದ ಧ್ವನಿಯಿಂದ, “ಲಾಸರನೇ, ಹೊರಗೆ ಬಾ,” ಎಂದು ಕೂಗಿದರು. ಸತ್ತಿದ್ದವನು ಕೂಡಲೇ ಹೊರಗೆ ಬಂದನು. ಅವನ ಕೈಕಾಲುಗಳು ಶವವಸ್ತ್ರದಿಂದ ಸುತ್ತಿದ್ದವು; ಮುಖವು ಬಟ್ಟೆಯಿಂದ ಮುಚ್ಚಿತ್ತು. ಆಗ ಯೇಸು, “ಕಟ್ಟುಗಳನ್ನು ಬಿಚ್ಚಿ ಅವನನ್ನು ಹೋಗಲು ಬಿಡಿ,” ಎಂದು ಅಲ್ಲಿದ್ದವರಿಗೆ ಹೇಳಿದರು. ಯೇಸುವಿನ ವಿರುದ್ಧ ಹಂಚಿಕೆ ಮರಿಯಳನ್ನು ನೋಡಲು ಬಂದಿದ್ದ ಹಲವು ಮಂದಿ ಯೆಹೂದ್ಯರು ನಡೆದ ಸಂಗತಿಯನ್ನು ನೋಡಿ ಯೇಸುವನ್ನು ವಿಶ್ವಾಸಿಸಿದರು.

ಮನಸ್ಸಿಗೊಂದಿಷ್ಟು : ಎಲ್ಲವನ್ನು ದೇವರ ಮಹಿಮೆಗಾಗಿ ಮಾಡಿದ ಯೇಸು, ದೇವರ ಮಹಿಮೆಯನ್ನು ಎಲ್ಲರೂ ಅರಿಯುವಂತಾಗಲು ಲಾಜರನನ್ನು ಜೀವದಿಂದ ಎಬ್ಬಿಸುವ ಘಟನೆಯನ್ನು ಬಳಸಿಕೊಳ್ಳುತ್ತಾರೆ.  ನಮ್ಮದಾದರೂ ಇದಕ್ಕೆ ತದ್ವಿರುದ್ಧವಾದ ಮನೋಭಾವ. ನಮ್ಮನ್ನೇ ಇತರರ ಮುಂದೆ ಹೆಚ್ಚಿಸಕೊಳ್ಳಲು ಆದಷ್ಟು ಪ್ರಯತ್ನಿಸುತ್ತೇವೆ, ಅವಕಾಶಕ್ಕಾಗಿ ಪ್ರಯತ್ನಿಸುತ್ತೇವೆ. ದೇವರ ಮಹಿಮೆಗಾಗಿ ಬಾಳೋಣ, ದೇವರ ಮಹಿಮೆಯು ನಮ್ಮ ಮೂಲಕ ನೆರವೇರಲು ಸಾಧನವಾಗೋಣ, ಅಮರ ಜೀವದತ್ತ ಮನಸ್ಸನ್ನು ಹರಿಸೋಣ.    

ಪ್ರಶ್ನೆ :  ದೇವರ ಮಹಿಮೆಯು ಪ್ರಕಟಗೊಳ್ಳುವ ಸಾಧನ ನಾವಾಗಿದ್ದೇವೆಯೇ?

ಪ್ರಭುವೇ,
ನವ ಜೀವನ ಲಾಜರನದು
ನೀ ಹೊರಗೆ ಬಾ ಎನಲು  
ಪಡೆಯಲಿ ಎನ್ನ ಆತ್ಮ
ಹೊಸ ಜೀವ ಭಾವ 
ನಿನ್ನ ಕರೆಯೊಳು
ಸಾಕಾರಗೊಳ್ಳಲಿ ಚಿತ್ತ 
ನಿನ್ನಯ ಎನ್ನಲಿ 
ಸಾಧನವಾಗಲಿ ಬದಕು 
ನನ್ನದು ನಿನ್ನ 
ಮಹಿಮೆಯಲಿ  

28.03.2020 - ‘ಆತ ದಾವೀದ ವಂಶಜನು; ಆತನು ಹುಟ್ಟುವುದು ದಾವೀದನ ಊರಾದ ಬೆತ್ಲೆಹೇಮಿನಲ್ಲಿ’

ಮೊದಲನೇ ವಾಚನ: ಯೆರೆಮಿಯ 11:18-20

ಸರ್ವೇಶ್ವರಸ್ವಾಮಿ ತಿಳಿಸಿದ್ದರಿಂದಲೇ ಶತ್ರುಗಳು ನನಗೆ ವಿರುದ್ಧ ಹೂಡಿದ್ದ ಕುತಂತ್ರವು ನನಗೆ ಗೊತ್ತಾಯಿತು. ಅವರ ಕೃತ್ಯಗಳನ್ನು ನನಗೆ ತೋರಿಸಲಾಯಿತು. ನಾನಾದರೋ ವಧೆಗೆ ಒಯ್ಯುವ ಸಾಧು ಕುರಿಯಂತೆ ಇದ್ದೆ. “ಮರವನ್ನು ಫಲಸಹಿತ ನಾಶಪಡಿಸೋಣ, ಜೀವ ಲೋಕದಿಂದ ಇವನನ್ನು ನಿರ್ಮೂಲ ಮಾಡೋಣ. ಅವನ ಹೆಸರೇ ಇಲ್ಲದಂತಾಗಲಿ,” ಎಂದು ಅವರು ಕುಯುಕ್ತಿ ಕಲ್ಪಿಸಿದ್ದರು. ಆದರೆ ನನಗೆ ಅದು ತಿಳಿದಿರಲಿಲ್ಲ. ಆಗ ನಾನು, “ಸೇನಾಧೀಶ್ವರರಾದ ಸರ್ವೇಶ್ವರಾ, ನೀವು ಹೃನ್ಮನಗಳನ್ನು ಪರೀಕ್ಷಿಸಿ ನ್ಯಾಯವಾದ ತೀರ್ಪನ್ನು ನೀಡುವವರು. ನೀವು ಅವರಿಗೆ ಮಾಡುವ ಪ್ರತೀಕಾರವನ್ನು ನಾನು ಕಾಣುವೆನು. ನನ್ನ ವ್ಯಾಜ್ಯವನ್ನು ನಿಮ್ಮ ಕೈಗೊಪ್ಪಿಸಿದ್ದೇನೆ,” ಎಂದೆನು.

ಕೀರ್ತನೆ: 7:2-3, 9-10, 11-12

ಶ್ಲೋಕ: ನಿನ್ನಾಶ್ರಯವನರಿಸಿ ಹೇ ಸ್ವಾಮಿ ದೇವಾ, ನಾ ಬಂದಿಹೆನು

ಶುಭಸಂದೇಶ: ಯೊವಾನ್ನ 7:40-53


ಯೇಸುಸ್ವಾಮಿ ಹೇಳಿದ್ದನ್ನು ಕೇಳಿ ನೆರೆದಿದ್ದವರಲ್ಲಿ ಕೆಲವರು, “ಬರಬೇಕಾಗಿದ್ದ ಪ್ರವಾದಿ ಈತನೇ ಸರಿ,” ಎಂದರು. ಇನ್ನೂ ಕೆಲವರು, “ಈತನೇ ಲೋಕೋದ್ದಾರಕ,” ಎಂದರು. ಮತ್ತೆ ಕೆಲವರು, “ಲೋಕೋದ್ಧಾರಕ ಗಲಿಲೇಯದಿಂದ ಬರುವುದುಂಟೇ? ‘ಆತ ದಾವೀದ ವಂಶಜನು; ಆತನು ಹುಟ್ಟುವುದು ದಾವೀದನ ಊರಾದ ಬೆತ್ಲೆಹೇಮಿನಲ್ಲಿ’ ಎಂದು ಪವಿತ್ರ ಗ್ರಂಥವೇ ಹೇಳಿದೆಯಲ್ಲವೆ?” ಎಂದು ವಾದಿಸಿದರು. ಹೀಗೆ ಯೇಸುವನ್ನು ಕುರಿತು ಜನರಲ್ಲಿ ಭಿನ್ನಾಭಿಪ್ರಾಯ ಉಂಟಾಯಿತು. ಕೆಲವರಿಗಂತೂ ಯೇಸುವನ್ನು ಹಿಡಿದು ಬಂಧಿಸಬೇಕೆನಿಸಿತು. ಆದರೆ ಯಾರೂ ಅವರ ಮೇಲೆ ಕೈ ಹಾಕಲಿಲ್ಲ. ವಿಶ್ವಾಸವಹೀನ ಮುಖಂಡರು ಕಾವಲಾಳುಗಳು ಹಿಂದಿರುಗಿದಾಗ, ಮುಖ್ಯ ಯಾಜಕರು ಮತ್ತು ಫರಿಸಾಯರು, “ಅವನನ್ನೇಕೆ ನೀವು ಹಿಡಿದು ತರಲಿಲ್ಲ?” ಎಂದು ಕೇಳಿದರು. ಅವರು, “ಆತನು ಮಾತನಾಡುವಂತೆ ಯಾರೂ ಎಂದೂ ಮಾತನಾಡಿದ್ದಿಲ್ಲ,” ಎಂದು ಉತ್ತರಿಸಿದರು. ಅದಕ್ಕೆ ಫರಿಸಾಯರು, “ಏನು, ನೀವು ಕೂಡ ಅವನಿಗೆ ಮರುಳಾಗಿಬಿಟ್ಟಿರೋ? ನಮ್ಮ ಮುಖಂಡರಲ್ಲಾಗಲಿ, ಫರಿಸಾಯರಲ್ಲಾಗಲಿ, ಯಾರಾದರೂ ಅವನನ್ನು ನಂಬಿದ್ದುಂಟೆ? ಧರ್ಮಶಾಸ್ತ್ರದ ಗಂಧವೂ ಇಲ್ಲದ ಜನ ಜಂಗುಳಿ ಶಾಪಗ್ರಸ್ತವಾಗಿದೆ,” ಎಂದರು. ಅಲ್ಲಿದ್ದ ಫರಿಸಾಯರಲ್ಲಿ ನಿಕೊದೇಮನು ಒಬ್ಬನು. ಹಿಂದೆ ಯೇಸುವನ್ನು ಕಾಣಲು ಬಂದಿದ್ದವನು ಈತನೇ. ಈತನು ಅವರಿಗೆ, “ಒಬ್ಬ ವ್ಯಕ್ತಿಯ ಹೇಳಿಕೆಯನ್ನು ಕೇಳದೆ, ಆತನು ಮಾಡಿರುವುದನ್ನು ಕಂಡುಕೊಳ್ಳದೆ, ಆತನನ್ನು ದೋಷಿಯೆಂದು ನಿರ್ಧರಿಸುವುದು ಶಾಸ್ತ್ರಸಮ್ಮತವೇ?” ಎಂದು ಕೇಳಿದನು. ಅದಕ್ಕೆ ಅವರು, “ನೀನೂ ಗಲಿಲೇಯದವನೋ? ಪವಿತ್ರಗ್ರಂಥವನ್ನು ಓದಿ ನೋಡು; ಗಲಿಲೇಯದಿಂದ ಯಾವ ಪ್ರವಾದಿಯೂ ತಲೆಯೆತ್ತುವುದಿಲ್ಲ, ಎಂಬುದು ನಿನಗೇ ಗೊತ್ತಾಗುತ್ತದೆ,” ಎಂದು ಮರುತ್ತರಕೊಟ್ಟರು.

ಮನಸ್ಸಿಗೊಂದಿಷ್ಟು: ಯೇಸುವನ್ನು ಸಮರ್ಥಿಸಿದ  ನಿಕೊದೇಮನು ವಿರೋಧವನ್ನು, ಪ್ರತಿರೋಧವನ್ನು ಎದುರಿಸಬೇಕಾಯಿತು. ಜಗತ್ತಿನಲ್ಲಿ ಪ್ರಭು ಯೇಸುವಿನ  ಬೋಧನೆಯನ್ನು ಪಾಲಿಸಲು ಹೊರಟಾಗ ನಾವು ಇದೆ ರೀತಿ ದ್ವಂದ್ವಗಳನ್ನು ಅನುಭವಿಸಬೇಕಾಗುತ್ತದೆ. ಒಂದು ಇತರರಿಂದ  ಮತ್ತೊಂದು ನಮ್ಮ ಆಂತರಿಕ ಸಂಘರ್ಷ. ಪಾಲಿಸಲು ಕಷ್ಟವೆನಿಸುವ ಯೇಸುವಿನ ಬೋಧನೆಯನ್ನು ಪಾಲಿಸಲು ಬೇಕಾದ ಶಕ್ತಿಗಾಗಿ ಹಂಬಲಿಸೋಣ. 

ಪ್ರಶ್ನೆ : ಯೇಸುವಿನ ಅನುಯಾಯಿಗಳಾಗಿ ಯೇಸುವನ್ನು ನಾವೆಷ್ಟು ಸಮರ್ಥಿಸಿಕೊಳ್ಳಬಲ್ಲೆವು?

ಪ್ರಭುವೇ,
ಅರಿಯಲಿ ಲೋಕ 
ಲೋಕೋದ್ಧಾರಕನ
ಸ್ತುತಿಸಲಿ ಎನ್ನ ಆತ್ಮ 
ಆತ್ಮೋದ್ಧಾರಕನ 
ನಮಿಸಲಿ ಜೀವರಾಶಿ 
ಜೀವೋದ್ಧಾರಕನ 
ವಿಶ್ವಾಸದ  ಶ್ವಾಸದಲ್ಲಿ 
ಸದಾ ನಲಿಯುತ್ತಿರಲಿ 
ಎನ್ನ ಮನ   

27.03.2020 - "ನನ್ನನ್ನು ಕಳುಹಿಸಿದಾತನು ಸತ್ಯಸ್ವರೂಪಿ. ಆತನನ್ನು ನೀವು ಅರಿತಿಲ್ಲ"

ಮೊದಲನೇ ವಾಚನ: ಸುಜ್ಜಾನಗ್ರಂಥ 2:1, 12-22

ದೇವರಿಲ್ಲದವರು ಅಪವಾದಮಾಡಿಕೊಂಡರು ಈ ಪರಿ: “ನಮ್ಮ ಬದುಕು ಅಲ್ಪಕಾಲಿಕ ಹಾಗು ದುಃಖಕರ ಮರಣಕ್ಕೆ ಮದ್ದಿಲ್ಲ, ಸತ್ತವರಿಂದ ಹಿಂದಿರುಗಿದವರಿಲ್ಲ; ನೀತಿವಂತನಿಗಾಗಿ ಹೊಂಚುಹಾಕೋಣ ಬಲೆಯೊಡ್ಡಿ ಅವನು ನಮಗೊಂದು ಪೀಡೆ, ನಮ್ಮ ನಡತೆಗೆ ಅಡ್ಡಿ ಆರೋಪಿಸುತ್ತಾನೆ, ಧರ್ಮಕ್ಕೆ ವಿರುದ್ಧ ಪಾಪಕಟ್ಟಿಕೊಂಡೆವೆಂದು ದೂಷಿಸುತ್ತಾನೆ, ಸಂಪ್ರದಾಯದ ವಿರುದ್ಧ ಪಾಪ ಮಾಡಿದೆವೆಂದು. ಹೇಳಿಕೊಳ್ಳುತ್ತಾನೆ ತಾನೇ ದೇವರನು ಬಲ್ಲವನೆಂದು ಕರೆದುಕೊಳ್ಳುತ್ತಾನೆ ತನ್ನನ್ನು ತಾನೇ ದೇವರ ಮಗನೆಂದು. ನಮ್ಮ ಆಲೋಚನೆಗಳನ್ನು ಆಕ್ಷೇಪಿಸುವ ವ್ಯಕ್ತಿ ಅವನು ಅವನನ್ನು ನೋಡಿದ್ದೇ ನಮ್ಮ ಉತ್ಸಾಹ ಕುಂದಿಹೋಗುವುದು. ಏಕೆಂದರೆ ಅವನು ಇತರರಂತೆ ಅಲ್ಲ ಅವನ ಮಾರ್ಗವೋ ನಮಗೆ ವಿಚಿತ್ರ. ಅವನ ಎಣಿಕೆಯಲ್ಲಿ ನಾವೆಲ್ಲರು ನಕಲಿ ನಾಣ್ಯದಂತೆ ನಮ್ಮಿಂದ ದೂರವಾಗುತ್ತಾನೆ ಹೇಸಿಕೆಯನ್ನು ಕಂಡಂತೆ. ನೀತಿವಂತರ ಮರಣ ಸಂತೋಷಕರವೆನ್ನುತ್ತಾನೆ ದೇವರೇ ತನ್ನ ತಂದೆಯೆಂದು ಕೊಚ್ಚಿಕೊಳ್ಳುತ್ತಾನೆ. ಅವನ ಮಾತುಗಳೇ ಸತ್ಯವೇನೋ ನೋಡೋಣ ಅವನ ಜೀವಾಂತ್ಯದ ಗತಿ ಏನೆಂದು ಪರೀಕ್ಷಿಸೋಣ. ನೀತಿವಂತ ದೇವಕುಮಾರನಾಗಿದ್ದರೆ ದೇವರು ಅವನಿಗೆ ನೆರವಾಗಬೇಕು ಶತ್ರುಗಳ ಕೈಯಿಂದ ಅವನನ್ನು ತಪ್ಪಿಸಿ ಕಾಪಾಡಬೇಕು. ಅಂಥವನನ್ನು ಹಿಂಸಿಸಿ, ಪೀಡಿಸಿ, ಪರೀಕ್ಷಿಸೋಣ ಅವನಲ್ಲಿ ಸೌಜನ್ಯ ಎಷ್ಟಿದೆಯೆಂದು ತಿಳಿಯೋಣ ಅನ್ಯಾಯದೆದುರು ತಾಳ್ಮೆಯೆಷ್ಟಿದೆಯೆಂದು ಶೋಧಿಸೋಣ; ಅವಮಾನಕರ ಮರಣಶಿಕ್ಷೆಯನ್ನು ಅವನಿಗೆ ವಿಧಿಸೋಣ ‘ದೇವರು ರಕ್ಷಿಸುತ್ತಾನೆ’ ಎಂದಾಗಿತ್ತಲ್ಲವೇ ಅವನ ವಾದ?” ಈ ಪರಿ ಆಲೋಚಿಸಿ ವಂಚಿತರಾದರು ದುರುಳರು ಅವರ ದುಷ್ಟತನವೇ ಅವರನ್ನು ಕುರುಡರನ್ನಾಗಿಸಿತು. ದೇವರ ನಿಗೂಢ ಯೋಜನೆಯನ್ನು ಅವರು ಅರಿಯಲಿಲ್ಲ ಪವಿತ್ರ ಜೀವನಕ್ಕೆ ದೊರಕುವ ಫಲವನ್ನು ಹಾರೈಸಲಿಲ್ಲ ನಿರ್ದೋಷಿಗಳಿಗೆ ಸಂಭಾವನೆಯಿದೆಯೆಂದು ನಂಬಲಿಲ್ಲ.

ಕೀರ್ತನೆ: 34:17-18, 19-20, 21, 23

ಶ್ಲೋಕ: ಸನಿಹದಲ್ಲಿಹನು ಪ್ರಭು ಭಗ್ನ ಹೃದಯಿಗಳಿಗೆ

ಶುಭಸಂದೇಶ: ಯೊವಾನ್ನ 7:1-2, 10, 25-30


ಇದಾದ ಬಳಿಕ ಯೇಸುಸ್ವಾಮಿ ಗಲಿಲೇಯದಲ್ಲಿ ಸಂಚರಿಸತೊಡಗಿದರು. ಯೆಹೂದ್ಯರು ತಮ್ಮನ್ನು ಕೊಲ್ಲಲು ಹವಣಿಸುತ್ತಿದ್ದುದರಿಂದ ಜುದೇಯದಲ್ಲಿ ಸಂಚರಿಸಲು ಅವರು ಇಷ್ಟಪಡಲಿಲ್ಲ. ಯೆಹೂದ್ಯರ ಪರ್ಣಕುಟೀರಗಳ ಹಬ್ಬವು ಹತ್ತಿರವಾಗುತ್ತಿತ್ತು. ಯೇಸುಸ್ವಾಮಿಯ ಸೋದರರು ಹಬ್ಬಕ್ಕೆ ಹೋದರು. ಯೇಸುವೂ ಅಲ್ಲಿಗೆ ಹೋದರು. ಬಹಿರಂಗವಾಗಿ ಅಲ್ಲ, ಗುಟ್ಟಾಗಿ. ಜೆರುಸಲೇಮಿನ ಕೆಲವು ಮಂದಿ ಇದನ್ನು ಕೇಳಿ, “ಅವರು ಕೊಲ್ಲಬೇಕೆಂದು ಹವಣಿಸುತ್ತಾ ಇರುವುದು ಈತನನ್ನೇ ಅಲ್ಲವೆ? ಇಗೋ, ಈತ ಬಹಿರಂಗವಾಗಿ ಮಾತನಾಡುತ್ತಿದ್ದಾನೆ. ಆದರೂ ಈತನಿಗೆ ವಿರುದ್ಧವಾಗಿ ಅವರಾರೂ ಮಾತೆತ್ತುತ್ತಿಲ್ಲ! ಈತನೇ ಲೋಕೋದ್ಧಾರಕನೆಂದು ಆ ಮುಖಂಡರಿಗೆ ಹೊಳೆದಿರಬಹುದೆ? ಲೋಕೋದ್ಧಾರಕನು ಕಾಣಿಸಿಕೊಳ್ಳುವಾಗ ಆತನು ಎಲ್ಲಿಂದ ಬಂದನೆಂದು ಯಾರಿಗೂ ತಿಳಿದಿರುವುದಿಲ್ಲ. ಆದರೆ ಈತನು ಎಲ್ಲಿಂದ ಬಂದವನೆಂದು ನಮ್ಮೆಲ್ಲರಿಗೂ ತಿಳಿದಿದೆಯಲ್ಲಾ!” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು. ಆದುದರಿಂದ ದೇವಾಲಯದಲ್ಲಿ ಬೋಧಿಸುತ್ತಿದ್ದ ಯೇಸುಸ್ವಾಮಿ ಆಗ ಗಟ್ಟಿಯಾಗಿ ಇಂತೆಂದರು: “ನಾನು ಯಾರೆಂದು, ಎಲ್ಲಿಂದ ಬಂದವನೆಂದು ನೀವು ಬಲ್ಲಿರೋ? ನಾನು ನನ್ನಷ್ಟಕ್ಕೇ ಬಂದವನಲ್ಲ; ನನ್ನನ್ನು ಕಳುಹಿಸಿದಾತನು ಸತ್ಯಸ್ವರೂಪಿ. ಆತನನ್ನು ನೀವು ಅರಿತಿಲ್ಲ. ನಾನಾದರೋ ಆತನನ್ನು ಅರಿತಿದ್ದೇನೆ. ಏಕೆಂದರೆ, ನಾನು ಬಂದುದು ಆತನಿಂದಲೇ. ಆತನೇ ನನ್ನನ್ನು ಕಳುಹಿಸಿದ್ದು,” ಇದನ್ನು ಕೇಳಿದ ಯೆಹೂದ್ಯರು ಯೇಸುವನ್ನು ಹಿಡಿದು ಬಂಧಿಸಲು ಪ್ರಯತ್ನಿಸಿದರು. ಆದರೆ ಅವರ ಗಳಿಗೆ ಇನ್ನೂ ಬಾರದೆ ಇದ್ದ ಕಾರಣ ಯಾರೂ ಅವರ ಮೇಲೆ ಕೈ ಹಾಕಲಿಲ್ಲ.

ಮನಸ್ಸಿಗೊಂದಿಷ್ಟು : ಯೇಸುವನ್ನು ನಿರಾಕರಿಸಿದವರನ್ನು ಇಂದಿನ ಶುಭಸಂದೇಶದಲ್ಲಿ ಕಾಣಬಹುದು. ನಾವು ಅವರಿಗಿಂತ ಭಿನ್ನರೆನ್ನಲ್ಲ. ಅಂದಿನ ಯಹೂದ್ಯರಿಗಾದರೂ  ಅವರದೇ ಸಂಪ್ರದಾಯ, ಆಚರಣೆ, ದೇವರ ಬಗ್ಗೆಗಿನ ಕಲ್ಪನೆಯ ಅಡಚಣೆಯಿತ್ತು, ಅವರು ಯೇಸುವನ್ನು ನಿರಾಕರಿಸಿದರು. ಆದರೆ ಹುಟ್ಟಿನಿಂದಲೂ ಯೇಸುವಿನ ವಾಕ್ಯ, ಧರ್ಮಸಭೆಯ ಬೋಧನೆಯೆಲ್ಲವನ್ನು ಕೇಳುತ್ತಲೇ ಬಂದಿರುವ ನಾವು  ನಮ್ಮ ನಡೆ ನುಡಿಯಿಂದ ಕ್ರಿಸ್ತ ಯೇಸುವನ್ನು ನಿರಾಕರಿಸುತ್ತಲೇ ಇದ್ದೇವೆ. ಆದರಿಸುವಂತವರಾಗೋಣ.   

ಪ್ರಶ್ನೆ : ಸತ್ಯಸ್ವರೂಪಿಯಾದ ದೇವರನ್ನು ನಾವು ಅರಿತ್ತಿದ್ದೇವೆಯೇ?

ಪ್ರಭುವೇ,
ಅರಿವಂತೆ ಮಾಡು ನಿಮ್ಮನ್ನೂ 
ನಿಮ್ಮನು ಕಳುಹಿಸಿದಾತನನ್ನು
ನುಡಿವಂತೆ ಮಾಡು ಸದಾ 
ನಿಮ್ಮನ್ನು ನಿಮ್ಮ ಕಳುಹಿಸಿದಾತನ
ಸಂದೇಶವನ್ನು
ನಡೆವಂತೆ ಮಾಡು ಮರೆಯದೆ 
ನಿಮ್ಮ ನಿಮ್ಮನ್ನು ಕಳುಹಿಸಿದಾತನ 
ಮಾರ್ಗವನ್ನು 

26.03.2020 - "ದೇವರಿಂದ ಸಿಗುವಂಥ ಗೌರವವನ್ನು ಅರಸದೆ ನಿಮ್ಮ ನಿಮ್ಮಲ್ಲೇ ಪರಸ್ಪರ ಗೌರವವನ್ನು ಬಯಸುತ್ತೀರಿ"

ಮೊದಲನೇ ವಾಚನ: ವಿಮೋಚನಕಾಂಡ 32:7-14

ಸರ್ವೇಶ್ವರ ಮೋಶೆಗೆ, “ನೀನು ಕೂಡಲೆ ಬೆಟ್ಟದಿಂದ ಇಳಿದುಹೋಗು. ಈಜಿಪ್ಟಿನಿಂದ ನೀನು ಕರೆದುತಂದ ನಿನ್ನ ಜನರು ಕೆಟ್ಟುಹೋದರು. ನಾನು ಅವರಿಗೆ ಆಜ್ಞಾಪಿಸಿದ ಮಾರ್ಗವನ್ನು ಇಷ್ಟು ಬೇಗನೆ ತೊರೆದುಬಿಟ್ಟು ತಮಗೇ ಲೋಹದ ಹೋರಿಕರುವನ್ನು ಮಾಡಿಸಿಕೊಂಡು, ಅದಕ್ಕೆ ಅಡ್ಡಬಿದ್ದು, ಬಲಿಗಳನ್ನರ್ಪಿಸಿ, ‘ಇಸ್ರಯೇಲರೇ ನೋಡಿ, ನಿಮ್ಮನ್ನು ಈಜಿಪ್ಟಿನಿಂದ ಕರೆದುತಂದ ದೇವರು’ ಎಂದು ಹೇಳಿಕೊಳ್ಳುತ್ತಿದ್ದಾರೆ “ಈ ಜನರ ಸ್ವಭಾವ ನನಗೆ ಗೊತ್ತಿದೆ. ಇವರು ನನ್ನ ಆಜ್ಞೆಗೆ ಬಗ್ಗದ ಹಟಮಾರಿಗಳು. ಆದಕಾರಣ ನೀನು ನನಗೆ ಅಡ್ಡಬರಬೇಡ. ನನ್ನ ಕೋಪಾಗ್ನಿ ಉರಿಯಲಿ. ಅವರನ್ನು ಸುಟ್ಟು ಭಸ್ಮಮಾಡುವೆನು. ಬಳಿಕ ನಿನ್ನಿಂದಲೇ ಬೇರೆ ಒಂದು ದೊಡ್ಡ ಜನಾಂಗ ಉದಯಿಸುವಂತೆ ಮಾಡುವೆನು,” ಎಂದು ಹೇಳಿದರು. ಆಗ ಮೋಶೆ ತನ್ನ ದೇವರಾದ ಸರ್ವೇಶ್ವರನನ್ನು ಹೀಗೆಂದು ಬೇಡಿಕೊಂಡನು: “ಸ್ವಾಮಿ ಸರ್ವೇಶ್ವರಾ, ಮಹಾಶಕ್ತಿಯಿಂದಲೂ ಭುಜಬಲದಿಂದಲೂ ತಾವೇ ಈಜಿಪ್ಟಿನಿಂದ ಬಿಡಿಸಿದ ತಮ್ಮ ಪ್ರಜೆಯ ಮೇಲೆ ಕೋಪಾಗ್ನಿ ಕಾರಬಹುದೆ? ಈಜಿಪ್ಟಿನವರು ತಮ್ಮ ವಿಷಯದಲ್ಲಿ, ‘ಸರ್ವೇಶ್ವರನು ಕೇಡುಮಾಡಬೇಕೆಂಬ ಉದ್ದೇಶದಿಂದಲೇ ಇಸ್ರಯೇಲರನ್ನು ಇಲ್ಲಿಂದ ಕರೆದುಕೊಂಡು ಹೋದದ್ದು; ಅವರನ್ನು ಬೆಟ್ಟಗುಡ್ಡಗಳಲ್ಲಿ ಸಾಯಿಸಿ ಇಳೆಯಲ್ಲಿ ಉಳಿಯದಂತೆ ನಿರ್ಮೂಲಮಾಡಬೇಕೆಂದೇ ಅವರನ್ನು ಕರೆದುಕೊಂಡು ಹೋದದ್ದು ಎಂದು ಆಡಿಕೊಳ್ಳುವುದಕ್ಕೆ ಎಡೆಮಾಡಿಕೊಳ್ಳಬೇಕೆ? ತಾವು ಕೋಪಾಗ್ನಿಯನ್ನು ಬಿಟ್ಟು, ತಮ್ಮ ಪ್ರಜೆಗೆ ಕೇಡುಮಾಡಬೇಕೆಂಬ ಮನಸ್ಸನ್ನು ಮಾರ್ಪಡಿಸಿಕೊಳ್ಳಿ. ತಮ್ಮ ದಾಸರಾದ ಅಬ್ರಹಾಮ್, ಇಸಾಕ್ ಹಾಗು ಯಕೋಬರನ್ನು ನೆನಪಿಗೆ ತಂದುಕೊಳ್ಳಿ. ತಾವು ತಮ್ಮ ಜೀವದಾಣೆ ಪ್ರಮಾಣಮಾಡಿ ಅವರಿಗೆ, ‘ನಾನು ನಿಮ್ಮ ಸಂತತಿಯನ್ನು ಹೆಚ್ಚಿಸಿ ಆಕಾಶದ ನಕ್ಷತ್ರಗಳಷ್ಟು ಅಸಂಖ್ಯವಾಗಿ ಮಾಡುವೆನು; ನಾನು ಸೂಚಿಸಿರುವ ಈ ಪ್ರದೇಶಗಳನ್ನೆಲ್ಲಾ ನಿಮ್ಮ ಸಂತತಿಯವರಿಗೆ ಕೊಡುವೆನು; ಮತ್ತು ಅವರು ಈ ನಾಡನ್ನು ಶಾಶ್ವತವಾಗಿ ಸ್ವಾಧೀನದಲ್ಲಿಟ್ಟುಕೊಳ್ಳುವರು’ ಎಂದು ತಾವು ಮಾತುಕೊಡಲಿಲ್ಲವೆ?” ಎಂದನು. ಆಗ ಸರ್ವೇಶ್ವರ ತಮ್ಮ ಪ್ರಜೆಗಳಿಗೆ ಮಾಡುವೆನೆಂದು ಹೇಳಿದ ಕೇಡಿನ ಬಗ್ಗೆ ಮನಸ್ಸನ್ನು ಮಾರ್ಪಡಿಸಿಕೊಂಡರು.

ಕೀರ್ತನೆ: 106:19-20, 21-22, 23

ಶ್ಲೋಕ: ಮರೆಯಬೇಡೆನ್ನನು ಪ್ರಭೂ, ನಿನ್ನ ಪ್ರಜೆಗೆ ದಯೆತೋರುವಾಗ

ಶುಭಸಂದೇಶ: ಯೊವಾನ್ನ 51:31-47


ಯೇಸುಸ್ವಾಮಿ ಯೆಹೂದ್ಯರನ್ನು ಉದ್ದೇಶಿಸಿ ಹೀಗೆಂದರು: “ನನ್ನ ಪರವಾಗಿ ನಾನೇ ಸಾಕ್ಷಿ ನೀಡಿದರೆ ನನ್ನ ಸಾಕ್ಷಿಗೆ ಬೆಲೆಯಿರದು. ನನ್ನ ಪರವಾಗಿ ಸಾಕ್ಷಿ ನೀಡುವಾತನು ಇನ್ನೊಬ್ಬನಿದ್ದಾನೆ. ಆತನು ನೀಡುವ ಸಾಕ್ಷ್ಯಕ್ಕೆ ಬೆಲೆಯಿದೆ ಎಂದು ನಾನು ಬಲ್ಲೆ. ನೀವೇ ಯೊವಾನ್ನನ ಬಳಿಗೆ ದೂತರನ್ನು ಕಳುಹಿಸಿದ್ದಿರಿ. ಆತನು ಸತ್ಯವನ್ನು ಕುರಿತು ಸಾಕ್ಷಿ ಹೇಳಿದ್ದಾನೆ. ನನಗೆ ಮಾನವ ಸಾಕ್ಷಿ ಬೇಕೆಂದು ಅಲ್ಲ; ಆದರೆ ಇದನ್ನೆಲ್ಲಾ ನಿಮ್ಮ ಉದ್ಧಾರಕ್ಕೆಂದು ನಾನು ಹೇಳುತ್ತಿದ್ದೇನೆ. ಯೊವಾನ್ನನು ಉಜ್ವಲವಾಗಿ ಉರಿಯುವ ದೀಪದಂತೆ ಇದ್ದನು. ಆ ಬೆಳಕಿನಲ್ಲಿ ನೀವು ಸ್ವಲ್ಪಕಾಲ ನಲಿದಾಡಿದಿರಿ. ಯೊವಾನ್ನನು ನೀಡಿದ ಸಾಕ್ಷ್ಯಕ್ಕಿಂತಲೂ ಮಿಗಿಲಾದ ಸಾಕ್ಷ್ಯ ನನಗುಂಟು: ನಾನು ಸಾಧಿಸುತ್ತಿರುವ ಸುಕೃತ್ಯಗಳೇ, ಅಂದರೆ, ಪಿತನು ನನಗೆ ಮಾಡಿ ಮುಗಿಸಲು ಕೊಟ್ಟ ಕಾರ್ಯಗಳೇ, ನಾನು ಪಿತನಿಂದ ಬಂದವನೆಂದು ನನ್ನ ಪರವಾಗಿ ಸಾಕ್ಷಿಕೊಡುತ್ತವೆ. ನನ್ನನ್ನು ಕಳುಹಿಸಿದ ಪಿತನೇ ನನ್ನ ಪರವಾಗಿ ಸಾಕ್ಷಿ ನೀಡಿದ್ದಾರೆ. ನೀವಾದರೋ ಅವರ ಧ್ವನಿಯನ್ನು ಎಂದೂ ಕೇಳಿಲ್ಲ, ಅವರ ದರ್ಶನವನ್ನು ಎಂದೂ ಕಂಡಿಲ್ಲ. ಅವರ ಸಂದೇಶ ನಿಮ್ಮಲ್ಲಿ ನೆಲಸಿಲ್ಲ. ಏಕೆಂದರೆ, ಅವರು ಕಳುಹಿಸಿದವನಲ್ಲಿ ನೀವು ವಿಶ್ವಾಸವಿಡಲಿಲ್ಲ. ಪವಿತ್ರ ಗ್ರಂಥದಿಂದಲೇ ನಿತ್ಯಜೀವ ಲಭಿಸುವುದೆಂದು ಭಾವಿಸಿ, ನೀವು ಅದನ್ನು ಪರಿಶೀಲಿಸಿ ನೋಡುತ್ತೀರಿ. ಆ ಗ್ರಂಥವು ಸಹ ನನ್ನ ಪರವಾಗಿ ಸಾಕ್ಷಿಹೇಳುತ್ತದೆ. ಆದರೂ ನಿತ್ಯಜೀವವನ್ನು ಪಡೆಯುವುದಕ್ಕಾಗಿ ನನ್ನ ಬಳಿಗೆ ಬರಲು ನಿಮಗೆ ಇಷ್ಟವಿಲ್ಲ. “ನಾನು ಮನುಷ್ಯರಿಂದ ಬರುವ ಗೌರವವನ್ನು ಅರಸುವುದಿಲ್ಲ. ದೇವರ ಮೇಲೆ ನಿಮಗೆ ಪ್ರೀತಿಯಿಲ್ಲವೆಂದು ನಾನು ಚೆನ್ನಾಗಿ ಬಲ್ಲೆ. ನಾನು ಬಂದಿರುವುದು ಪಿತನ ಹೆಸರಿನಲ್ಲೇ. ಆದರೂ ನೀವು ನನ್ನನ್ನು ಬರಮಾಡಿಕೊಳ್ಳುವುದಿಲ್ಲ. ಬೇರೊಬ್ಬನು ತನ್ನ ಸ್ವಂತ ಹೆಸರಿನಲ್ಲಿ ಬಂದನೆಂದರೆ ಅಂಥವನನ್ನು ನೀವು ಬರಮಾಡಿಕೊಳ್ಳುತ್ತೀರಿ. ಕಾರಣ, ದೇವರಿಂದ ಸಿಗುವಂಥ ಗೌರವವನ್ನು ಅರಸದೆ ನಿಮ್ಮ ನಿಮ್ಮಲ್ಲೇ ಪರಸ್ಪರ ಗೌರವವನ್ನು ಬಯಸುತ್ತೀರಿ. ಹೀಗಿರುವಲ್ಲಿ, ನಿಮ್ಮಲ್ಲಿ ವಿಶ್ವಾಸಮೂಡಲು ಹೇಗೆ ತಾನೆ ಸಾಧ್ಯ? ಪಿತನ ಮುಂದೆ ನಾನು ನಿಮ್ಮನ್ನು ಆಪಾದಿಸುತ್ತಿರುವೆನೆಂದು ಎಣಿಸಬೇಡಿ. ಆಪಾದಿಸುವವನು ಒಬ್ಬನಿದ್ದಾನೆ. ಆತನೇ ನೀವು ಆಶ್ರಯಿಸಿಕೊಂಡಿರುವ ಮೋಶೆ. ಮೋಶೆಯಲ್ಲಿ ನಿಮಗೆ ವಿಶ್ವಾಸ ಇದ್ದಿದ್ದರೆ ನನ್ನಲ್ಲಿ ವಿಶ್ವಾಸ ಇಡುತ್ತಿದ್ದಿರಿ. ಏಕೆಂದರೆ, ಆತನು ಬರೆದುದು ನನ್ನನ್ನು ಕುರಿತೇ. ಆತನು ಬರೆದುದರಲ್ಲಿ ನಿಮಗೆ ನಂಬಿಕೆಯಿಲ್ಲವೆಂದ ಮೇಲೆ ನನ್ನ ಮಾತಿನಲ್ಲಿ ನಿಮಗೆ ಹೇಗೆ ನಂಬಿಕೆ ಹುಟ್ಟೀತು?”

25.03.2020 - “ಇಗೋ, ನಾನು ದೇವರ ಸೇವಕಿ, ನೀವು ಹೇಳಿದಂತೆ ನನಗಾಗಲಿ,”

ಮಂಗಳವಾರ್ತೆಯ ಮಹೋತ್ಸವ

ಮೊದಲನೇ ವಾಚನ: ಯೆಶಾಯ 7:10-14; 8:10

ಪುನಃ ಸರ್ವೇಶ್ವರಸ್ವಾಮಿ ಆಹಾಜನಿಗೆ ಹೇಳಿದ್ದೇನೆಂದರೆ: “ನಿನ್ನ ದೇವರಾದ ಸರ್ವೇಶ್ವರನಿಂದ ಒಂದು ಗುರುತನ್ನು ಕೇಳಿಕೊ. ಅದು ಪಾತಾಳದಷ್ಟು ಆಳದಲ್ಲೇ ಇರಲಿ, ಆಕಾಶದಷ್ಟು ಎತ್ತರದಲ್ಲೇ ಇರಲಿ, ಕೇಳು” ಎಂದರು. ಅದಕ್ಕೆ ಆಹಾಜನು “ಇಲ್ಲ, ನಾನು ಗುರುತನ್ನು ಕೇಳುವುದಿಲ್ಲ, ಸರ್ವೇಶ್ವರನನ್ನು ಪರೀಕ್ಷಿಸುವುದಿಲ್ಲ” ಎಂದನು. ಆಗ ಯೆಶಾಯನು: “ದಾವೀದ ವಂಶಜರೇ, ಕೇಳಿರಿ, ಮಾನವರನ್ನು ಕೆಣಕಿದ್ದು ಸಾಲದೆಂದು ದೇವರನ್ನೇ ಕೆಣಕುತ್ತಿರುವಿರಾ? ಆಗಲಿ, ಸರ್ವೇಶ್ವರ ನಿಮಗೊಂದು ಗುರುತನ್ನು ಕೊಡುವರು. ಇಗೋ, ಕನ್ಯೆಯೊಬ್ಬಳು ಗರ್ಭ ತಳೆದು ಪುತ್ರನೊಬ್ಬನನ್ನು ಪ್ರಸವಿಸುವಳು. ಇಮ್ಮಾನುವೇಲ್ ಎಂದು ಆತನಿಗೆ ಹೆಸರಿಡುವಳು. ವ್ಯರ್ಥವಾಗುವುದು ನೀವು ಮಾಡಿದ ಸಮಾಲೋಚನೆ; ಕೈಗೂಡದು ನೀವು ಮಾಡಿದ ಪ್ರತಿಜ್ಞೆ; ಕಾರಣ, ದೇವನಿರುವನು ನಮ್ಮೊಡನೆ.”

ಕೀರ್ತನೆ: 40:7, 8-9, 10, 11

ಶ್ಲೋಕ: ನಾನೋಗೊಡುತ ಇಂತೆಂದೆ: ’ಇಗೋ ನಾನೇ ಬರುತ್ತಿರುವೆ’

ಎರಡನೇ ವಾಚನ: ಹಿಬ್ರಿಯರಿಗೆ 10:4-10

ಏಕೆಂದರೆ, ಹೋತ, ಹೋರಿಗಳ ರಕ್ತದಿಂದ ಪಾಪನಿವಾರಣೆ ಅಸಾಧ್ಯ. ಆದ್ದರಿಂದಲೇ ಭೂಲೋಕಕ್ಕೆ ಬರಲಿದ್ದ ಕ್ರಿಸ್ತ ಯೇಸು ದೇವರಿಗೆ ಇಂತೆಂದರು: “ಬಲಿಯರ್ಪಣೆಗಳೂ ಕಾಣಿಕೆಗಳೂ ನಿಮಗೆ ಬೇಡವಾದವು ಎಂದೇ ಅಣಿಮಾಡಿ ಕೊಟ್ಟಿರಿ ನನಗೆ ದೇಹವೊಂದನು. ಸರ್ವಾಂಗ ಹೋಮಗಳೂ ಪಾಪ ಪರಿಹಾರಕ ಬಲಿಗಳೂ ನಿಮಗೆ ತರಲಿಲ್ಲ ತೃಪ್ತಿಯನು. ಆಗ ಇಂತೆಂದೆ ನಾನು: ಗ್ರಂಥದ ಸುರುಳಿಯಲಿ ನನ್ನನ್ನು ಕುರಿತು ಬರೆದಿರುವಂತೆ, ಓ ದೇವಾ, ಇಗೋ ನಾ ಬಂದೆ ನಿನ್ನ ಚಿತ್ತವನು ನೆರವೇರಿಸಲೆಂದೇ.” ಧರ್ಮಶಾಸ್ತ್ರದ ವಿಧಿಗನುಸಾರ ಅರ್ಪಿಸಲಾಗುತ್ತಿದ್ದುವಾದರೂ “ಬಲಿಯರ್ಪಣೆಗಳು, ಕಾಣಿಕೆಗಳು, ದಹನಬಲಿಗಳು ಮತ್ತು ಪಾಪ ಪರಿಹಾರಕ ಬಲಿಗಳು ನಿಮಗೆ ಬೇಡವಾದವು; ಇವು ಯಾವುವೂ ನಿಮಗೆ ತರಲಿಲ್ಲ ತೃಪ್ತಿಯನು,” ಎಂದು ಮೊದಲು ಹೇಳುತ್ತಾರೆ. ಅನಂತರ, “ಇಗೋ, ನಾ ಬಂದೆ, ನಿಮ್ಮ ಚಿತ್ತವನ್ನು ನೆರವೇರಿಸಲೆಂದೇ,” ಎನ್ನುತ್ತಾರೆ. ಹೀಗೆ ಹೊಸದನ್ನು ಸ್ಥಾಪಿಸಲು ಹಳೆಯದನ್ನು ರದ್ದು ಮಾಡಿದ್ದಾರೆ. ಯೇಸುಕ್ರಿಸ್ತರು ಒಮ್ಮೆಗೇ ಎಲ್ಲಾ ಕಾಲಕ್ಕೂ ತಮ್ಮ ದೇಹವನ್ನು ಸಮರ್ಪಿಸಿ, ದೇವರ ಚಿತ್ತವನ್ನು ನೆರವೇರಿಸಿದ್ದರಿಂದಲೇ ನಾವು ಪುನೀತರಾಗಿದ್ದೇವೆ.

ಶುಭಸಂದೇಶ: ಲೂಕ 1:26-38

ಎಲಿಜಬೇತಳು ಗರ್ಭಿಣಿಯಾದ ಆರನೇ ತಿಂಗಳಲ್ಲಿ, ದೇವರು ಗಬ್ರಿಯೇಲ್ ದೂತನನ್ನು ಗಲಿಲೇಯ ಪ್ರಾಂತ್ಯದ ನಜರೇತೆಂಬ ಊರಿನಲ್ಲಿದ್ದ ಒಬ್ಬ ಕನ್ನಿಕೆಯಲ್ಲಿಗೆ ಕಳುಹಿಸಿದರು. ಆಕೆಗೆ ದಾವೀದರಸನ ವಂಶಜನಾದ ಜೋಸೆಫನೊಂದಿಗೆ ನಿಶ್ಚಿತಾರ್ಥವಾಗಿತ್ತು. ಆಕೆಯ ಹೆಸರು ಮರಿಯ. ದೇವದೂತನು ಆಕೆಯ ಬಳಿಗೆ ಬಂದು “ದೈವಾನುಗ್ರಹಭರಿತಳೇ, ನಿನಗೆ ಶುಭವಾಗಲಿ; ಸರ್ವೇಶ್ವರ ನಿನ್ನೊಡನೆ ಇದ್ದಾರೆ!” ಎಂದನು. ಇದನ್ನು ಕೇಳಿದ ಮರಿಯಳು ತಬ್ಬಿಬ್ಬಾದಳು. ‘ಇದೆಂಥ ಶುಭಾಶಯ’ ಎಂದು ಅವಳು ಯೋಚಿಸತೊಡಗಿದಳು. ದೂತನು ಆಕೆಗೆ, “ಮರಿಯಾ, ನೀನು ಅಂಜಬೇಕಾಗಿಲ್ಲ; ದೇವರ ಅನುಗ್ರಹ ನಿನಗೆ ಲಭಿಸಿದೆ; ಇಗೋ, ನೀನು ಗರ್ಭವತಿಯಾಗಿ ಒಬ್ಬ ಮಗನನ್ನು ಹೆರುವೆ. ಆತನಿಗೆ ‘ಯೇಸು’ ಎಂಬ ಹೆಸರಿಡಬೇಕು; ಆತನು ಮಹಾಪುರುಷನಾಗುವನು; ಪರಾತ್ಪರ ದೇವರ ಪುತ್ರ ಎನಿಸಿಕೊಳ್ಳುವನು. ಪಿತಾಮಹ ದಾವೀದರಸನ ಸಿಂಹಾಸನವನ್ನು ಸರ್ವೇಶ್ವರನಾದ ದೇವರು ಆತನಿಗೆ ಕೊಡುವರು. ಯಕೋಬನ ವಂಶವನ್ನು ಆತನು ಚಿರಕಾಲ ಆಳುವನು; ಆತನ ರಾಜ್ಯಭಾರಕ್ಕೆ ಅಂತ್ಯವೇ ಇರದು,” ಎಂದನು. ಅದಕ್ಕೆ ಮರಿಯಳು, “ಇದು ಆಗುವುದಾದರೂ ಹೇಗೆ? ನನಗೆ ಯಾವ ಪುರುಷನ ಸಂಸರ್ಗವೂ ಇಲ್ಲವಲ್ಲಾ?” ಎಂದು ವಿಚಾರಿಸಿದಳು. ದೂತನು ಪ್ರತ್ಯುತ್ತರವಾಗಿ, “ಪವಿತ್ರಾತ್ಮ ನಿನ್ನ ಮೇಲೆ ಬರುವರು; ಪರಾತ್ಪರ ದೇವರ ಶಕ್ತಿ ನಿನ್ನನ್ನು ಆವರಿಸುವುದು; ಈ ಕಾರಣದಿಂದ, ನಿನ್ನಲ್ಲಿ ಹುಟ್ಟುವ ಆ ಪವಿತ್ರ ಶಿಶು ‘ದೇವರ ಪುತ್ರ’ ಎನಿಸಿಕೊಳ್ಳುವನು. ನಿನ್ನ ಸಂಬಂಧಿಕಳಾದ ಎಲಿಜಬೇತಳ ವಿಷಯವನ್ನು ಕೇಳು: ಆಕೆ ತನ್ನ ಮುಪ್ಪಿನಲ್ಲೂ ಒಬ್ಬ ಮಗನನ್ನು ಹೆರಲಿದ್ದಾಳೆ; ಬಂಜೆ ಎನಿಸಿಕೊಂಡಿದ್ದ ಆಕೆ ಈಗ ಆರು ತಿಂಗಳ ಗರ್ಭಿಣಿ. ದೇವರಿಗೆ ಅಸಾಧ್ಯವಾದುದು ಯಾವುದೂ ಇಲ್ಲ,” ಎಂದನು. ಆಗ ಮರಿಯಳು, “ಇಗೋ, ನಾನು ದೇವರ ಸೇವಕಿ, ನೀವು ಹೇಳಿದಂತೆ ನನಗಾಗಲಿ,” ಎಂದಳು. ದೇವದೂತನು ಆಕೆಯನ್ನು ಬೀಳ್ಕೊಟ್ಟು ಅದೃಶ್ಯನಾದನು.

ಮನಸ್ಸಿಗೊಂದಿಷ್ಟು :  ದೂತನು ಮಾತೆ ಮರಿಯ ಬಳಿಗೆ  ಬಂದು ಶುಭವಾರ್ತೆಯನ್ನು ತಿಳಿಸಿದಾಗ, ಮೊದಲಿಗೆ ಮರಿಯ ತಬ್ಬಿಬ್ಬಾಗುತ್ತಾರೆ, ಆಶ್ಚರ್ಯಪಡುತ್ತಾರೆ ನಂತರ ಸಂಪೂರ್ಣವಾಗಿ ಒಪ್ಪಿಸಿಕೊಂಡು ದೈವಚಿತ್ತಕ್ಕೆ ತಲೆ ಬಾಗುತ್ತಾರೆ. ದೇವರಿಗೆ ಎಲ್ಲವು ಸಾಧ್ಯ ಎಂಬ ಮರಿಯಳ  ವಿಶ್ವಾಸ ಲೋಕ ರಕ್ಷಣಾ ಕಾರ್ಯಕ್ಕೆ ಮುನ್ನುಡಿಯಾಯಿತು. ಬಾಳಿನ ಕಷ್ಟದ ಸಮಯದಲ್ಲಿ ನಾವು ತಬ್ಬಿಬ್ಬಾಗುತ್ತೇವೆ, ಗೊಂದಲಗೊಳ್ಳುತ್ತೇವೆ, ಭಯಪಡುತ್ತೇವೆ. ಆದರೆ ದೇವರಿಗೆ ನಮ್ಮ ಬಾಳನ್ನು ಸಮರ್ಪಿಸಿದಾಗ ದೇವರ ಕಾರ್ಯಗಳು ನಮ್ಮಲ್ಲಿ ಕೈಗೂಡುವುದನ್ನು ಕಾಣುತ್ತೇವೆ, ಅನುಭವಿಸುತ್ತೇವೆ.

ಪ್ರಶ್ನೆ : ಮಾತೆ ಮರಿಯಳ ವಿನಯ ವಿಧೇಯತೆ ನಮ್ಮ ಬಾಳಿಗೆಷ್ಟು ಪ್ರಸ್ತುತ?

24.03.2020 - ಎದ್ದು ನಿಲ್ಲು, ನಿನ್ನ ಹಾಸಿಗೆಯನ್ನು ಸುತ್ತಿಕೊಂಡು ನಡೆ,”

ಮೊದಲನೇ ವಾಚನ: ಯೆಜೆಕಿಯೇಲ 47:1-9, 12

ಆಮೇಲೆ ಆ ಪುರುಷ ನನ್ನನ್ನು ದೇವಸ್ಥಾನದ ಬಾಗಿಲಿಗೆ ಪುನಃ ಕರೆದು ತಂದನು: ಇಗೋ, ದೇವಸ್ಥಾನದ ಹೊಸ್ತಿಲ ಕೆಳಗಿನಿಂದ ನೀರು ಹೊರಟು ಪೂರ್ವದಕಡೆಗೆ ಹರಿಯುತ್ತಿತ್ತು. (ದೇವಸ್ಥಾನ ಪೂರ್ವಾಭಿಮುಖವಾಗಿತ್ತು). ಆ ನೀರು ದೇವಸ್ಥಾನದ ಬಲಗಡೆ ಕೆಳಗಿನಿಂದ ಹೊರಟು ಬಲಿಪೀಠದ ದಕ್ಷಿಣದಲ್ಲಿ ಹರಿಯುತ್ತಿತ್ತು. ಆಗ ಅವನು ನನ್ನನ್ನು ಉತ್ತರ ಹೆಬ್ಬಾಗಿಲಿನಿಂದ ದೇವಾಲಯದ ಹೊರಗಿನ ಮಾರ್ಗವಾಗಿ ಸುತ್ತಿಸಿಕೊಂಡು ಪೂರ್ವದ ಹೆಬ್ಬಾಗಿಲಿಗೆ ಕರೆದುತಂದನು. ಅಲ್ಲಿ ನೋಡಲು ಅದರ ಬಲಗಡೆ ಮೆಲ್ಲಮೆಲ್ಲನೆ ಹರಿಯುವ ನೀರು ಕಾಣಿಸಿತು. ಆ ಪುರುಷನು ಕೈಯಲ್ಲಿ ಹುರಿಯನ್ನು ಹಿಡಿದುಕೊಂಡು ಪೂರ್ವದಂಡೆಗೆ ಮುಂದುವರಿದು ಐನೂರು ವಿೂಟರ್ ಅಳೆದು, ನನ್ನನ್ನು ನೀರಿನ ಆಚೆಗೆ ದಾಟಿಸುವಾಗ ಆ ನೀರು ಹೆಜ್ಜೆ ಮುಳುಗುವಷ್ಟಿತ್ತು. ಅವನು ಪುನಃ ಐನೂರು ವಿೂಟರ್ ಅಳೆದು ದಾಟಿಸುವಾಗ ಆ ನೀರು ಮೊಣಕಾಲಿನವರೆಗೆ ಇತ್ತು. ಅವನು ಮತ್ತೆ ಐನೂರು ವಿೂಟರ್ ಅಳೆದು ನನ್ನನ್ನು ನೀರಿನ ಆಚೆ ದಾಟಿಸುವಾಗ ಆ ನೀರು ಸೊಂಟದವರೆಗೆ ಇತ್ತು. ಅವನು ಮತ್ತೆ ಅಳೆದು ಐನೂರು ವಿೂಟರ್ ಅಳೆದಾಗ ಅದು ನನ್ನಿಂದ ದಾಟಲಾಗದ ತೊರೆಯಾಗಿತ್ತು; ನೀರು ಏರಿ ಈಜಾಡುವಷ್ಟು ಪ್ರವಾಹವಾಗಿತ್ತು. ದಾಟಲಾಗದ ತೊರೆಯಾಗಿತ್ತು. ಆಗ ಅವನು ನನಗೆ, “ನರಪುತ್ರನೇ, ಇದನ್ನು ನೋಡಿದೆಯಾ?” ಎಂದು ಹೇಳಿ ನನ್ನನ್ನು ತೊರೆಯ ದಡಕ್ಕೆ ಹತ್ತಿಸಿ ಹಿಂದಿರುಗಿಸಿದನು. ನಾನು ಹಿಂದಿರುಗಲು, ಇಗೋ, ತೊರೆಯ ಎರಡು ದಡಗಳಲ್ಲಿಯೂ ಅನೇಕಾನೇಕ ವೃಕ್ಷಗಳು ಕಾಣಿಸಿದವು. ಆಗ ಅವನು ನನಗೆ ಹೀಗೆ ಹೇಳಿದನು: “ಈ ಪ್ರವಾಹ ಪೂರ್ವಪ್ರಾಂತ್ಯಕ್ಕೆ ಹೊರಟು ಅರಬಾ ಎಂಬ ಕಣಿವೆಗೆ ಇಳಿದು ಲವಣ ಸಮುದ್ರದ ಕಡೆಗೆ ಹರಿಯುವುದು; ದೇವಸ್ಥಾನದಿಂದ ಹೊರಟ ಪ್ರವಾಹವು ಲವಣಸಮುದ್ರಕ್ಕೆ ಸೇರಲು ಅದರ ನೀರು ಸಿಹಿಯಾಗುವುದು. ಈ ತೊರೆ ಎಲ್ಲೆಲ್ಲಿ ಹರಿಯುತ್ತದೋ ಅಲ್ಲಲ್ಲಿ ಗುಂಪು ಗುಂಪಾಗಿ ಚಲಿಸುವ ಸಕಲವಿಧ ಜಲ ಜಂತುಗಳು ಬದುಕಿ ಬಾಳುವುವು; ವಿೂನುಗಳು ತಂಡೋಪ ತಂಡವಾಗಿರುವುವು. ಈ ನೀರು ಸಮುದ್ರಕ್ಕೆ ಬೀಳಲು ಆ ನೀರೂ ಸಿಹಿಯಾಗುವುದು; ಈ ತೊರೆ ಎಲ್ಲೆಲ್ಲಿ ಹರಿದರೂ ಅಲ್ಲಲ್ಲಿ ಜೀವವುಂಟಾಗುವುದು. ತೊರೆಯ ಎರಡು ದಡಗಳಲ್ಲಿಯೂ ಸಕಲ ಫಲವೃಕ್ಷಗಳು ಬೆಳೆಯುವುವು. ಅವುಗಳ ಎಲೆ ಬಾಡದು, ಹಣ್ಣು ತೀರದು. ತೊರೆಯ ನೀರು ಪವಿತ್ರಾಲಯದೊಳಗಿಂದ ಹೊರಟುಬರುವ ಕಾರಣ ಅವು ತಿಂಗಳು ತಿಂಗಳಲ್ಲಿಯೂ ಹೊಸ ಹೊಸ ಫಲವನ್ನು ಕೊಡುತ್ತಲಿರುವುವು; ಅವುಗಳ ಹಣ್ಣು ಆಹಾರಕ್ಕೂ, ಸೊಪ್ಪು ಔಷಧಕ್ಕೂ ಅನುಕೂಲಿಸುವುವು.”

ಕೀರ್ತನೆ: 46:2-3, 5-6, 8-9

ಶ್ಲೋಕ: ನಮ್ಮ ಕಡೆಯಿರುವನು ಸೇನಾಧೀಶ್ವರ ಪ್ರಭುವು,
               ಯಕೋಬ ಕುಲದೇವರು ನಮಗಾಶ್ರಯ ದುರ್ಗವು.

ಶುಭಸಂದೇಶ: ಯೊವಾನ್ನ 5:1-16

ಇದಾದ ಮೇಲೆ ಯೆಹೂದ್ಯರ ಹಬ್ಬ ಬಂದಿತು. ಯೇಸುಸ್ವಾಮಿ ಜೆರುಸಲೇಮಿಗೆ ತೆರಳಿದರು. ಅಲ್ಲಿ, ‘ಕುರಿಬಾಗಿಲು’ ಎಂಬ ಸ್ಥಳದ ಬಳಿ ಐದು ಮಂಟಪಗಳಿಂದ ಕೂಡಿದ ಒಂದು ಕೊಳವಿದೆ. ಅದನ್ನು ಹಿಬ್ರಿಯ ಭಾಷೆಯಲ್ಲಿ ‘ಬೆತ್ಸಥ’ ಎಂದು ಕರೆಯುತ್ತಾರೆ. ಕುರುಡರು, ಕುಂಟರು, ಪಾಶ್ರ್ವವಾಯು ಪೀಡಿತರು ಮೊದಲಾದ ಅನೇಕ ರೋಗಿಗಳು ಆ ಮಂಟಪಗಳಲ್ಲಿ ಬಿದ್ದುಕೊಳ್ಳುತ್ತಾ ಇದ್ದರು. ಮೂವತ್ತೆಂಟು ವರ್ಷ ಕಾಯಿಲೆಯಿಂದ ನರಳುತ್ತಿದ್ದ ಒಬ್ಬ ರೋಗಿ ಅಲ್ಲಿ ಮಲಗಿದ್ದನು. ಯೇಸು ಅವನನ್ನು ನೋಡಿ, ದೀರ್ಘಕಾಲದಿಂದ ಅವನು ಹಾಗೆ ಬಿದ್ದುಕೊಂಡಿರುವುದನ್ನು ತಿಳಿದು, “ನಿನಗೆ ಗುಣ ಹೊಂದಲು ಮನಸ್ಸಿದೆಯೇ?” ಎಂದು ಕೇಳಿದರು. “ಸ್ವಾವಿೂ, ನೀರು ಉಕ್ಕಿದಾಗ ನನ್ನನ್ನು ಕೊಳಕ್ಕಿಳಿಸಲು ಸಹಾಯಕರು ಇರುವುದಿಲ್ಲ; ನಾನು ಹೋಗುವಷ್ಟರಲ್ಲೇ ಬೇರೆ ಯಾರಾದರೂ ಇಳಿದು ಬಿಡುತ್ತಾರೆ,” ಎಂದು ಉತ್ತರಿಸಿದ ಆ ರೋಗಿ. ಯೇಸು ಅವನಿಗೆ, “ ‘ನಿನ್ನ ಹಾಸಿಗೆಯನ್ನು ಎತ್ತಿಕೊಂಡು ನಡೆ’ ಎಂದು ಹೇಳಿದರು,”

ಆ ಕ್ಷಣವೇ ಅವನು ಗುಣ ಹೊಂದಿ, ತನ್ನ ಹಾಸಿಗೆಯನ್ನು ಸುತ್ತಿಕೊಂಡು ನಡೆಯ ತೊಡಗಿದನು. ಅದು ಸಬ್ಬತ್ತಿನ ದಿನವಾಗಿತ್ತು. ಆದುದರಿಂದ ಯೆಹೂದ್ಯ ಅಧಿಕಾರಿಗಳು ಗುಣಹೊಂದಿದ ಆ ಮನುಷ್ಯನಿಗೆ, “ಇಂದು ಸಬ್ಬತ್ತಿನ ದಿನ. ನೀನು ಹಾಸಿಗೆಯನ್ನು ಎತ್ತಿಕೊಂಡು ನಡೆಯುವುದು ನಿಷಿದ್ಧ,” ಎಂದು ಹೇಳಿದರು. ಅದಕ್ಕೆ ಅವನು: “ನನ್ನನ್ನು ಗುಣಪಡಿಸಿದವರೇ, ‘ನಿನ್ನ ಹಾಸಿಗೆಯನ್ನು ಎತ್ತಿಕೊಂಡು ನಡೆ’ ಎಂದು ಹೇಳಿದರು,” ಎಂದು ಉತ್ತರಕೊಟ್ಟನು. ಅಧಿಕಾರಿಗಳು, “ಅದನ್ನು ಎತ್ತಿಕೊಂಡು ನಡೆ ಎಂದ ಅವನು ಯಾರು?” ಎಂದು ಪ್ರಶ್ನಿಸಿದರು. ತನ್ನನ್ನು ಗುಣಪಡಿಸಿದವರು ಯಾರೆಂದು ಅವನಿಗೆ ತಿಳಿದಿರಲಿಲ್ಲ; ಅಲ್ಲದೆ ಜನಸಂದಣಿಯ ನಿಮಿತ್ತ ಯೇಸು ಆಗಲೇ ಮರೆಯಾಗಿ ಬಿಟ್ಟಿದ್ದರು. ಅನಂತರ ದೇವಾಲಯದಲ್ಲಿ ಯೇಸು ಆ ಮನುಷ್ಯನನ್ನು ಕಂಡು, “ನೋಡು, ನೀನು ಗುಣಹೊಂದಿರುವೆ; ಇನ್ನುಮೇಲೆ ಪಾಪ ಮಾಡುವುದನ್ನು ಬಿಟ್ಟುಬಿಡು. ಇಲ್ಲದಿದ್ದರೆ ನಿನ್ನ ಗತಿ ಇನ್ನಷ್ಟು ಚಿಂತಾಜನಕವಾದೀತು,” ಎಂದರು. ಆ ಮನುಷ್ಯ ಅಲ್ಲಿಂದ ಯೆಹೂದ್ಯರ ಬಳಿಗೆ ಹೋಗಿ, “ನನ್ನನ್ನು ಗುಣಪಡಿಸಿದವನು ಯೇಸುವೇ,” ಎಂದು ತಿಳಿಸಿದನು. ಯೇಸು ಇದನ್ನು ಸಬ್ಬತ್ ದಿನದಲ್ಲಿ ಮಾಡಿದ್ದರಿಂದ ಯೆಹೂದ್ಯರು ಅವರಿಗೆ ಕಿರುಕುಳಕೊಡಲು ತೊಡಗಿದರು.

ಮನಸ್ಸಿಗೊಂದಿಷ್ಟು :  "ಗುಣ ಹೊಂದಲು ಮನಸ್ಸಿದೆಯೇ" ಎಂಬುದು ಗುಣ ಹೊಂದಬೇಕಾದವನು ಉತ್ತರಿಸಬೇಕಾದ ದೊಡ್ಡ ಪ್ರಶ್ನೆ. ನಿಜಕ್ಕೂ ಅಸಹಾಯಕರಾಗಿದ್ದಾಗ ನಮಗೆ ದೇವರ ನೆರವು ಸಿಗುತ್ತದೆ. ನಮ್ಮ ಪ್ರಯತ್ನ ಹಾಗು ದೇವರ ಶಕ್ತಿ ನಮ್ಮಲ್ಲಿ ಬದಲಾವಣೆ ತರಬಹುದು.  ಅನೇಕ ಬಾರಿ  ನಾವು ಇದ್ದಲ್ಲೇ ಇರಲು ಬಯಸುತ್ತೇವೆ. ಅಸಹಾಯಕನಾಗಿದ್ದೂ  ಗುಣ ಹೊಂದಲು ಬಯಸಿದ ವ್ಯಕ್ತಿ ಇಂದಿನ ಶುಭಸಂದೇಶದಲ್ಲಿ ಗುಣ ಹೊಂದುತ್ತಾನೆ.

ಪ್ರಶ್ನೆ :  ನಮ್ಮ ಪಾಪಗಳಿಂದ ಎದ್ದು ಬರಲು ನಮಗೆ ಮನಸ್ಸಿದೆಯೇ?




23.03.2020 - “ಹೋಗು, ನಿನ್ನ ಮಗನು ಬದುಕುತ್ತಾನೆ,”

ಮೊದಲನೇ ವಾಚನ: ಯೆಶಾಯ 65:17-21

“ನಾನು ಹೊಸ ಆಕಾಶವನ್ನೂ ಹೊಸಭೂಮಿಯನ್ನೂ ಸೃಷ್ಟಿಸುವೆನು; ಆಗ, ಮೊದಲಿದ್ದದ್ದು ಜ್ಞಾಪಕದಲ್ಲಿರದು; ಅದು ಯಾರ ನೆನಪಿಗೂ ಬಾರದು. ನಾನು ಮಾಡುವ ಸೃಷ್ಟಿಕಾರ್ಯದಲ್ಲೇ ಸಂತೋಷಿಸಿ, ಎಂದೆಂದಿಗೂ ಆನಂದಿಸಿರಿ: ಹೌದು, ನಾನು ಜೆರುಸಲೇಮನ್ನು ಉಲ್ಲಾಸದ ನಿವಾಸವನ್ನಾಗಿಸುವೆನು; ಅದರ ಜನರನ್ನು ಹರ್ಷಭರಿತರನ್ನಾಗಿಸುವೆನು. ನಾನು ಕೂಡ ಜೆರುಸಲೇಮನ್ನು ನೋಡಿ ಆನಂದಿಸುವೆನು, ಅದರ ಜನರನ್ನು ದೃಷ್ಟಿಸಿ ಹರ್ಷಗೊಳ್ಳುವೆನು. ಇನ್ನು ಅಲ್ಲಿ ಅಳುವಾಗಲಿ, ಆಕ್ರೋಶವಾಗಲಿ ಕೇಳಿ ಬರದು. ಕೆಲವೇ ದಿನ ಬದುಕುವ ಮಗುವಾಗಲಿ, ಆಯುಸ್ಸು ಮುಗಿಸದ ಮುದುಕನಾಗಲಿ ಇನ್ನು ಇಲ್ಲಿರನು. ನೂರು ವರ್ಷ ಬಾಳುವವನು ‘ಯುವಕ’ ಎನಿಸಿಕೊಳ್ಳುವನು; ನೂರರೊಳಗೆ ಸಾಯುವ ಪಾಪಿಯು ‘ಶಾಪಗ್ರಸ್ತ’ ಎನಿಸಿಕೊಳ್ಳುವನು. ಜನರು ಅಲ್ಲೇ ಮನೆ ಮಾಡಿ ನಿವಾಸ ಮಾಡುವರು; ತೋಟ ನೆಟ್ಟು ಅದರ ಫಲವನ್ನು ಅನುಭವಿಸುವರು.

ಕೀರ್ತನೆ: 30:2, 4, 5-6, 11-12, 13

ಶ್ಲೋಕ: ನಿನಗೆನ್ನ ವಂದನೆ ಪ್ರಭೂ, ನನ್ನನ್ನುದ್ಧರಿಸಿದೆ

ಶುಭಸಂದೇಶ: ಯೊವಾನ್ನ 4:43-54


ಎರಡು ದಿನಗಳಾದ ಬಳಿಕ ಯೇಸುಸ್ವಾಮಿ ಅಲ್ಲಿಂದ ಗಲಿಲೇಯಕ್ಕೆ ಹೊರಟರು. ಪ್ರವಾದಿಗೆ ಸ್ವಗ್ರಾಮದಲ್ಲಿ ಮರ್ಯಾದೆ ಇಲ್ಲ ಎಂದು ಅವರೇ ಸಾರಿದ್ದರು. ಗಲಿಲೇಯವನ್ನು ತಲುಪಿದೊಡನೆ ಜನರು ಅವರನ್ನು ಆದರದಿಂದ ಬರಮಾಡಿಕೊಂಡರು. ಏಕೆಂದರೆ, ಹಬ್ಬಕ್ಕಾಗಿ ಆ ಜನರು ಜೆರುಸಲೇಮಿಗೆ ಹೋಗಿದ್ದಾಗ ಹಬ್ಬದ ಸಮಯ ದಲ್ಲಿ ಯೇಸು ಮಾಡಿದ್ದನ್ನೆಲ್ಲಾ ನೋಡಿದ್ದರು. ಯೇಸು ಗಲಿಲೇಯದ ಕಾನಾ ಊರಿಗೆ ಮರಳಿ ಬಂದರು. ಅವರು ಹಿಂದೆ ನೀರನ್ನು ದ್ರಾಕ್ಷಾರಸವನ್ನಾಗಿ ಮಾಡಿದ್ದು ಅಲ್ಲಿಯೇ. ಕಫೆರ್ನವುಮಿನಲ್ಲಿ ರಾಜಸೇವೆಯಲ್ಲಿದ್ದ ಒಬ್ಬ ಅಧಿಕಾರಿಯ ಮಗನಿಗೆ ಕಾಯಿಲೆಯಾಗಿತ್ತು. ಯೇಸು ಜುದೇಯದಿಂದ ಗಲಿಲೇಯಕ್ಕೆ ಬಂದಿರುವುದನ್ನು ಕೇಳಿದ ಆ ಅಧಿಕಾರಿ, ಅವರ ಬಳಿಗೆ ಬಂದು, ಸಾವಿನ ದವಡೆಯಲ್ಲಿರುವ ತನ್ನ ಮಗನನ್ನು ಬಂದು ಬದುಕಿಸಬೇಕೆಂದು ಬೇಡಿಕೊಂಡನು. ಯೇಸು ಅವನಿಗೆ “ಸೂಚಕಕಾರ್ಯಗಳನ್ನೂ ಅದ್ಭುತಗಳನ್ನೂ ಕಂಡ ಹೊರತು ನೀವು ನಂಬುವುದಿಲ್ಲವಲ್ಲಾ,” ಎಂದರು. ಆದರೂ ಆ ಅಧಿಕಾರಿ, “ನನ್ನ ಮಗನು ಪ್ರಾಣಬಿಡುವ ಮೊದಲೇ ಬನ್ನಿ ಸ್ವಾವಿೂ,” ಎಂದು ಅಂಗಲಾಚಿದನು. ಆಗ ಯೇಸು, “ಹೋಗು, ನಿನ್ನ ಮಗನು ಬದುಕುತ್ತಾನೆ,” ಎಂದು ಹೇಳಿದರು. ಆ ಅಧಿಕಾರಿ ಯೇಸುವಿನ ಮಾತನ್ನು ನಂಬಿ ಹೊರಟನು. ಅವನು ಅರ್ಧದಾರಿಯಲ್ಲಿ ಇದ್ದಾಗಲೇ ಆಳುಗಳು ಅವನಿಗೆ ಎದುರಾಗಿ ಬಂದು, “ನಿಮ್ಮ ಮಗ ಬದುಕಿಕೊಂಡ,” ಎಂದು ತಿಳಿಸಿದರು. ಎಷ್ಟು ಹೊತ್ತಿಗೆ ತನ್ನ ಮಗ ಚೇತರಿಸಿಕೊಂಡನೆಂದು ಆ ಅಧಿಕಾರಿ ವಿಚಾರಿಸಿದಾಗ, “ನಿನ್ನೆ ಮಧ್ಯಾಹ್ನ: ಒಂದು ಗಂಟೆಗೆ ಅವನ ಜ್ವರ ಬಿಟ್ಟಿತು,” ಎಂದು ಆಳುಗಳು ಉತ್ತರಕೊಟ್ಟರು. ನಿನ್ನ ಮಗ ಬದುಕುತ್ತಾನೆ’ ಎಂದು ಯೇಸು ಹೇಳಿದ್ದ ಗಳಿಗೆಯಲ್ಲಿಯೇ ತನ್ನ ಮಗ ಬದುಕಿಕೊಂಡನೆಂದು ತಂದೆಗೆ ತಿಳಿಯಿತು. ಅವನೂ ಅವನ ಮನೆಯವರೆಲ್ಲರೂ ಯೇಸುವನ್ನು ವಿಶ್ವಾಸಿಸಿದರು. ಯೇಸು ಜುದೇಯದಿಂದ ಗಲಿಲೇಯಕ್ಕೆ ಬಂದು, ಮಾಡಿದ ಎರಡನೆಯ ಸೂಚಕಕಾರ್ಯ ಇದು.

ಮನಸ್ಸಿಗೊಂದಿಷ್ಟು  : ಜರ್ಮನಿಯ ಕವಿ ಹೆನ್ರಿಚ್ ಹೇನ್,  ಕೊಲೊನ್ ಎಂಬ ಸ್ಥಳದ ಸುಂದರವಾದ ಕೆಥೆಡ್ರಲ್ ದೇವಾಲಯವನ್ನು ಕಂಡು ಉದ್ಘಾರಿಸುತ್ತಾನೆ  "ನಮ್ಮ ಹಿರಿಯರಲ್ಲಿ  ಇದ್ಧ ವಿಶ್ವಾಸದಿಂದಾಗಿ ಇಂತಹ ಸುಂದರ ದೇವಾಲಯಗಳನ್ನು ಕಟ್ಟಲು ಸಾಧ್ಯವಾಯಿತು. ನಮ್ಮದಾದರೋ ಕೇವಲ ಅಭಿಪ್ರಾಯಗಳು. ಅಭಿಪ್ರಾಯಗಳಿಂದ ದೇವಾಲಯಗಳು ಏಳುವುದಿಲ್ಲ." ಇಂದಿನ ಶುಭ ಸಂದೇಶದಲ್ಲಿ ಅಧಿಕಾರಿ ವಿಶ್ವಾಸವಿಟ್ಟು, ತನ್ನ ಮಗನನ್ನು ಉಳಿಸಿಕೊಳ್ಳುತ್ತಾನೆ. ನಮ್ಮ ವಿಶ್ವಾಸ ಅದೆಷ್ಟೋ ಸಲ "ನೆರೆವೇರಬಹುದು" ಎಂಬಲ್ಲಿಯೇ ಇರುತ್ತದೆ.  "ನೆರವೇರುತ್ತದೆ" ಎಂಬ ಅಚಲ ವಿಶ್ವಾಸವೇ ನಮ್ಮನ್ನು ದಡ ಸೇರಿಸುತ್ತದೆ.     

ಪ್ರಶ್ನೆ : ನಮ್ಮಲ್ಲಿಯ ವಿಶ್ವಾಸದ ಪ್ರಮಾಣವೆಷ್ಟು?

ಪ್ರಭುವೇ,
ಕಲಿಸಿ ವಿಶ್ವಾಸವಿರಿಸಲು 
ಎಲ್ಲವನ್ನು ನಿಮ್ಮ ಹಸ್ತದಲ್ಲಿರಿಸಲು 
ಕಲಿಸಿ ವಿಶ್ವಾಸವಿರಿಸಲು
ಕರೆದೊಯ್ಯುವ ಕಡೆ
ನಡೆವ  ಮಗುವಿನೊಲು 
ಕಲಿಸಿ ವಿಶ್ವಾಸವಿರಿಸಲು
ಎಲ್ಲದರಲ್ಲೂ ನಿಮ್ಮನ್ನೇ 
ನೆಚ್ಚುತ್ತಾ  ಅವಲಂಬಿಸಲು 

22.03.2020 - “ಸ್ವಾವಿೂ, ನಾನು ವಿಶ್ವಾಸಿಸುತ್ತೇನೆ,”

ಮೊದಲನೇ ವಾಚನ: 1 ಸಮುವೇಲ 16:1, 6-7, 10-13


ಸರ್ವೇಶ್ವರಸ್ವಾಮಿ ಸಮುವೇಲನಿಗೆ, “ನಾನು ಸೌಲನನ್ನು ಇಸ್ರಯೇಲರ ಅರಸನಾಗಿರುವುದಕ್ಕೆ ಅಯೋಗ್ಯನೆಂದು ತಳ್ಳಿಬಿಟ್ಟೆನಲ್ಲವೆ? ನೀನು ಅವನಿಗಾಗಿ ಎಷ್ಟರವರೆಗೆ ದುಃಖಿಸುತ್ತಿರುವೆ? ಕೊಂಬನ್ನು ಎಣ್ಣೆಯಿಂದ ತುಂಬಿಸಿಕೊಂಡು ಬಾ; ನಾನು ನಿನ್ನನ್ನು ಬೆತ್ಲೆಹೇಮಿನವನಾದ ಜೆಸ್ಸೆಯನ ಬಳಿಗೆ ಕಳುಹಿಸುತ್ತೇನೆ. ಅವನ ಮಕ್ಕಳಲ್ಲೊಬ್ಬನನ್ನು ಅರಸನನ್ನಾಗಿ ಆರಿಸಿಕೊಂಡಿದ್ದೇನೆ,” ಎಂದು ಹೇಳಿದರು. ಸಮುವೇಲನು ಎಲೀಯಾಬನನ್ನು ನೋಡಿ ತನ್ನಷ್ಟಕ್ಕೆ, “ನಿಶ್ಚಯವಾಗಿ ಸರ್ವೇಶ್ವರ ಅಭಿಷೇಕಕ್ಕೆ ಆರಿಸಿಕೊಂಡವನು ನನ್ನ ಮುಂದೆಯೇ ಇದ್ದಾನೆ,” ಎಂದುಕೊಂಡನು. ಆದರೆ ಸರ್ವೇಶ್ವರಸ್ವಾಮಿ ಸಮುವೇಲನಿಗೆ, “ನೀನು ಅವನ ಚೆಲುವಿಕೆಯನ್ನಾಗಲಿ ಎತ್ತರವನ್ನಾಗಲಿ ನೋಡಬೇಡ; ನಾನು ಅವನನ್ನು ತಳ್ಳಿಬಿಟ್ಟಿದ್ದೇನೆ. ಸರ್ವೇಶ್ವರ ಮನುಷ್ಯರಂತೆ ಬಹಿರಂಗದ ತೋರಿಕೆಯನ್ನು ನೋಡುವುದಿಲ್ಲ; ಅಂತರಂಗವನ್ನೇ ವೀಕ್ಷಿಸುತ್ತಾನೆ,” ಎಂದರು. ಹೀಗೆ ಜೆಸ್ಸೆಯನು ತನ್ನ ಮಕ್ಕಳಲ್ಲಿ ಏಳು ಮಂದಿಯನ್ನೂ ಅವನ ಬಳಿಗೆ ಬರಮಾಡಿದರೂ ಅವನು, “ಸರ್ವೇಶ್ವರ ಇವರನ್ನು ಆರಿಸಿಕೊಳ್ಳಲಿಲ್ಲ,” ಎಂದು ನುಡಿದನು. ಅನಂತರ ಸಮುವೇಲನು ಜೆಸ್ಸೆಯನನ್ನು, “ನಿನ್ನ ಮಕ್ಕಳೆಲ್ಲಾ ಇಷ್ಟೇ ಮಂದಿಯೋ?” ಎಂದು ಕೇಳಿದನು. ಅವನು, “ಇವರೆಲ್ಲರಿಗಿಂತಲೂ ಚಿಕ್ಕವನು ಒಬ್ಬನಿದ್ದಾನೆ; ಅವನು ಕುರಿಮೇಯಿಸುವುದಕ್ಕೆ ಹೋಗಿದ್ದಾನೆ,” ಎಂದು ಉತ್ತರಕೊಟ್ಟನು.

ಆಗ ಸಮುವೇಲನು, “ಅವನನ್ನು ಇಲ್ಲಿಗೆ ಬರಮಾಡು; ಅವನು ಬರುವವರೆಗೂ ನಾವು ಊಟಕ್ಕೆ ಕುಳಿತುಕೊಳ್ಳಬಾರದು,” ಎಂದು ಹೇಳಿದನು. ಜೆಸ್ಸೆಯನು ಅವನನ್ನು ಕರೆದುತರಿಸಿದನು. ಅವನು ಕೆಂಬಣ್ಣದವನು, ಸುಂದರನೇತ್ರನು, ಹಾಗು ನೋಟಕ್ಕೆ ರಮಣೀಯನು. ಸರ್ವೇಶ್ವರ ಸಮುವೇಲನಿಗೆ, “ಎದ್ದು ಇವನನ್ನು ಅಭಿಷೇಕಿಸು; ನಾನು ಆರಿಸಿಕೊಂಡವನು ಇವನೇ,” ಎಂದು ಆಜ್ಞಾಪಿಸಿದರು. ಸಮುವೇಲನು ಎಣ್ಣೆಯ ಕೊಂಬನ್ನು ತೆಗೆದುಕೊಂಡು ಅವನನ್ನು ಅವನ ಸಹೋದರರ ಮಧ್ಯದಲ್ಲಿ ಅಭಿಷೇಕಿಸಿದನು. ಕೂಡಲೆ ಸರ್ವೇಶ್ವರನ ಆತ್ಮವು ದಾವೀದನ ಮೇಲೆ ಬಂದು ನೆಲೆಗೊಂಡಿತು. ಅನಂತರ ಸಮುವೇಲನು ರಾಮಾಕ್ಕೆ ಹೊರಟು ಹೋದನು.

ಕೀರ್ತನೆ: 23:1-3, 3-4, 5, 6
ಶ್ಲೋಕ: ಪ್ರಭು ಕುರಿಗಾಹಿಯಾಗಿರಲು ಎನಗೆ, ಕುಂದುಕೊರತೆಗಳೆಲ್ಲಿಯವು ಎನಗೆ?

ಎರಡನೇ ವಾಚನ: ಎಫೆಸಿಯರಿಗೆ 5:8-14

ನೀವು ಹಿಂದೊಮ್ಮೆ ಕತ್ತಲುಮಯವಾಗಿದ್ದಿರಿ; ಈಗಲಾದರೋ ಪ್ರಭುವಿನಲ್ಲಿ ಬೆಳಕಾಗಿದ್ದೀರಿ. ಆದ್ದರಿಂದ ಬೆಳಕಿನ ಮಕ್ಕಳಾಗಿ ಬಾಳಿರಿ. ಕಾರಣ - ಸಚ್ಚರಿತೆ, ಸದಾಚಾರ ಮತ್ತು ಸತ್ಯಸಂಧತೆ ಇವೆಲ್ಲವೂ ಬೆಳಕಿನ ಕುಡಿಗಳು. ಪ್ರಭುವಿಗೆ ಮೆಚ್ಚಿಕೆಯಾದುದು ಯಾವುದೆಂಬುದನ್ನು ಕಲಿತುಕೊಳ್ಳಿರಿ. ನಿಷ್ಪ್ರಯೋಜಕವಾದ ಕತ್ತಲುಮಯ ಕಾರ್ಯಗಳಿಗೆ ಕೈಹಾಕದಿರಿ. ಅಂಥವುಗಳನ್ನು ಬಯಲಿಗೆಳೆದು ಖಂಡಿಸಿರಿ. ಆ ಜನರು ಗುಟ್ಟಾಗಿ ಮಾಡುವ ಕೃತ್ಯಗಳು ಹೇಳುವುದಕ್ಕೂ ಅವಮಾನಕರವಾದುವು. ಬೆಳಕು ಬೆಳಗಿಸುವ ವಸ್ತುಗಳೆಲ್ಲವೂ ಕಂಗೊಳಿಸುವುವು. ಹೀಗೆ ಕಂಗೊಳಿಸುವುದೆಲ್ಲವೂ ಬೆಳಕಾಗುವುದು. ಆದ್ದರಿಂದ: “ನಿದ್ರೆಮಾಡುವವನೇ ಎದ್ದೇಳು ಸತ್ತವರನ್ನು ಬಿಟ್ಟು ಬಾ ಎಚ್ಚೆತ್ತು ನಿನಗೀವನು ಬೆಳಕನು ಕ್ರಿಸ್ತನು.” ಎಂದು ಬರೆಯಲಾಗಿದೆ.

ಶುಭಸಂದೇಶ: ಯೊವಾನ್ನ 9:1-41


ಯೇಸುಸ್ವಾಮಿ ನಡೆದು ಹೋಗುತ್ತಿದ್ದಾಗ, ಒಬ್ಬ ಹುಟ್ಟು ಕುರುಡನನ್ನು ಕಂಡರು. ಶಿಷ್ಯರು, “ಗುರುದೇವಾ, ಇವನು ಕುರುಡನಾಗಿ ಹುಟ್ಟಬೇಕಾದರೆ ಅದಕ್ಕೆ ಯಾರ ಪಾಪ ಕಾರಣ? ಇವನದೋ ಅಥವಾ ಇವನನ್ನು ಹೆತ್ತವರದೋ?” ಎಂದು ಕೇಳಿದರು. ಅದಕ್ಕೆ ಉತ್ತರವಾಗಿ ಯೇಸು, ಇವನ ಪಾಪವಾಗಲಿ, ಇವನನ್ನು ಹೆತ್ತವರ ಪಾಪವಾಗಲಿ ಇದಕ್ಕೆ ಕಾರಣವಲ್ಲ, ದೇವರ ಕಾರ್ಯ ಇವನಲ್ಲಿ ವ್ಯಕ್ತವಾಗುವಂತೆ ಹೀಗಾಗಿದೆ. ಹಗಲಿರುವಾಗಲೇ ನನ್ನನ್ನು ಕಳುಹಿಸಿರುವಾತನ ಕೆಲಸವನ್ನು ನಾನು ಮಾಡುತ್ತಿರಬೇಕು. ರಾತ್ರಿ ಆದಮೇಲೆ ಯಾರೂ ಕೆಲಸಮಾಡಲಾಗದು. ಜಗತ್ತಿನಲ್ಲಿ ನಾನಿರುವಾಗ ಜಗದ ಜ್ಯೋತಿ ನಾನೇ,” ಎಂದು ನುಡಿದರು. ತರುವಾಯ ನೆಲದಲ್ಲಿ ಉಗುಳಿ, ಮಣ್ಣಿನ ಲೇಪಮಾಡಿ, ಅದನ್ನು ಕುರುಡನ ಕಣ್ಣಿಗೆ ಲೇಪಿಸಿ, “ನೀನು ಶಿಲೋವಾಮಿನ ಕೊಳಕ್ಕೆ ಹೋಗಿ ತೊಳೆದುಕೋ,” ಎಂದು ಹೇಳಿದರು. (‘ಶಿಲೋವಾಮ್’ ಎಂದರೆ ಕಳುಹಿಸಲಾದವನು ಎಂದರ್ಥ). ಅದರಂತೆಯೇ ಆ ಕುರುಡನು ಹೋಗಿ ಕಣ್ಣುಗಳನ್ನು ತೊಳೆದುಕೊಂಡನು; ಹಿಂದಿರುಗಿದಾಗ ಅವನಿಗೆ ಕಣ್ಣು ಬಂದಿತ್ತು. ಪುನಃ ಬಗ್ಗಿಕೊಂಡು ನೆಲದ ಮೇಲೆ ಬರೆಯತೊಡಗಿದರು. “ಹೌದು ಅವನೇ,” ಎಂದರು ಕೆಲವರು. “ಇಲ್ಲ, ಇವನು ಅವನಂತೆ ಕಾಣುತ್ತಾನೆ, ಅಷ್ಟೆ,” ಎಂದರು ಇತರರು. ಆ ಕುರುಡನು “ನಾನೇ ಅವನು” ಎಂದು ತಿಳಿಸಿದನು. ಆಗ ಅವರು, “ಹಾಗಾದರೆ ನಿನಗೆ ಕಣ್ಣು ಹೇಗೆ ಬಂತು?” ಎಂದು ಕೇಳಿದರು. ಅದಕ್ಕೆ ಅವನು, “ಯೇಸು ಎಂಬುವರು ಮಣ್ಣಿನ ಲೇಪಮಾಡಿ ನನ್ನ ಕಣ್ಣಿಗೆ ಹಚ್ಚಿದರು, ‘ಶಿಲೋವಾಮಿಗೆ ಹೋಗಿ ತೊಳೆದುಕೊ,’ ಎಂದು ಹೇಳಿದರು; ನಾನು ಹೋಗಿ ತೊಳೆದುಕೊಂಡೆ; ನನಗೆ ಕಣ್ಣು ಬಂತು,” ಎಂದು ಹೇಳಿದನು. ಅದಕ್ಕೆ ಅವರು, “ಆತ ಎಲ್ಲಿದ್ದಾನೆ?” ಎಂದು ವಿಚಾರಿಸಿದರು. ಅವನು ಉತ್ತರವಾಗಿ “ನಾನರಿಯೆ,” ಎಂದನು. ಆಗ ಆ ಜನರು ಅವನನ್ನು ಫರಿಸಾಯರ ಬಳಿಗೆ ಕರೆದುಕೊಂಡು ಹೋದರು. ಏಕೆಂದರೆ, ಯೇಸುಸ್ವಾಮಿ ಮಣ್ಣಿನ ಲೇಪವನ್ನು ಮಾಡಿ ಅವನಿಗೆ ಕಣ್ಣುಕೊಟ್ಟ ದಿನ ಸಬ್ಬತ್ ದಿನವಾಗಿತ್ತು. ಕಣ್ಣು ಬಂದುದು ಹೇಗೆಂದು ಫರಿಸಾಯರು ಅವನನ್ನು ಮತ್ತೆ ಕೇಳಿದರು. “ಯೇಸು ನನ್ನ ಕಣ್ಣುಗಳಿಗೆ ಮಣ್ಣಿನ ಲೇಪವನ್ನು ಹಚ್ಚಿದರು; ನಾನು ಹೋಗಿ ಕಣ್ಣುಗಳನ್ನು ತೊಳೆದುಕೊಳ್ಳುತ್ತಲೇ ನನಗೆ ದೃಷ್ಟಿ ಬಂತು,” ಎಂದನು ಅವನು. ಫರಿಸಾಯರಲ್ಲಿ ಕೆಲವರು, “ಹೀಗೆ ಮಾಡಿದವನು ದೇವರಿಂದ ಬಂದವನಲ್ಲ, ಅವನು ಸಬ್ಬತ್ ನಿಯಮವನ್ನು ಪಾಲಿಸುವುದಿಲ್ಲ,” ಎಂದರು. ಇತರರು, “ಪಾಪಿಯಾದವನು ಇಂಥ ಸೂಚಕ ಕಾರ್ಯಗಳನ್ನು ಮಾಡಲು ಸಾಧ್ಯವೇ?” ಎಂದರು. ಹೀಗೆ ಅವರಲ್ಲೇ ಭಿನ್ನ ಬೇಧವುಂಟಾಯಿತು. ಆದ್ದರಿಂದ ಫರಿಸಾಯರು ಆ ಕುರುಡನನ್ನು ಕುರಿತು, “ಅವನೇ ನಿನಗೆ ಕಣ್ಣು ಕೊಟ್ಟನೆಂದು ಹೇಳುತ್ತೀಯಲ್ಲಾ, ಅವನ ಬಗ್ಗೆ ನಿನಗೇನು ಅನ್ನಿಸುತ್ತದೆ?” ಎಂದು ವಿಚಾರಿಸಿದರು. ಅದಕ್ಕೆ ಅವನು, “ಅವರೊಬ್ಬ ಪ್ರವಾದಿಯೇ ಸರಿ,” ಎಂದನು. ಆ ಕುರುಡನು ಹಿಂದೆ ನಿಜವಾಗಿಯೂ ಕುರುಡನಾಗಿದ್ದು ಈಗ ದೃಷ್ಟಿ ಪಡೆದಿದ್ದಾನೆ ಎಂದು ಯೆಹೂದ್ಯ ಅಧಿಕಾರಿಗಳು ನಂಬಲು ಒಪ್ಪಲಿಲ್ಲ. ಈ ಕಾರಣ ಅವನ ಹೆತ್ತವರನ್ನು ಕರೆಯಿಸಿ, “ಇವನು ನಿಮ್ಮ ಮಗನೋ? ಇವನು ಹುಟ್ಟು ಕುರುಡನೋ? ಹಾಗಾದರೆ ಇವನಿಗೆ ಈಗ ಕಣ್ಣು ಬಂದದ್ದು ಹೇಗೆ?” ಎಂದು ಕೇಳಿದರು. ಅದಕ್ಕೆ ಅವನ ತಂದೆ ತಾಯಿಗಳು, “ಇವನಿಗೆ ದೃಷ್ಟಿ ಬಂದದ್ದು ಹೇಗೆ ಎಂದು ನಮಗೆ ಗೊತ್ತಿಲ್ಲ; ಇವನಿಗೆ ಕಣ್ಣುಕೊಟ್ಟವರು ಯಾರೆಂದೂ ನಮಗೆ ತಿಳಿಯದು. ಇವನನ್ನೇ ಕೇಳಿ, ಹೇಗೂ ಪ್ರಾಯದವನಾಗಿದ್ದಾನಲ್ಲವೆ? ತನ್ನ ವಿಷಯವಾಗಿ ತಾನೇ ಮಾತನಾಡಬಲ್ಲ,” ಎಂದು ಉತ್ತರಿಸಿದರು. ಅವರು ಹೀಗೆ ಹೇಳಿದ್ದು ಯೆಹೂದ್ಯ ಅಧಿಕಾರಿಗಳ ಅಂಜಿಕೆಯಿಂದ. ಏಕೆಂದರೆ, ಯಾರಾದರೂ ಯೇಸುವನ್ನು ಲೋಕೋದ್ಧಾರಕ ಎಂದು ಒಪ್ಪಿಕೊಂಡರೆ ಅಂಥವರಿಗೆ ಪ್ರಾರ್ಥನಾ ಮಂದಿರದಿಂದ ಬಹಿಷ್ಕಾರ ಹಾಕಬೇಕೆಂದು ಅಧಿಕಾರಿಗಳು ಈ ಮೊದಲೇ ಗೊತ್ತುಮಾಡಿದ್ದರು. ಆದುದರಿಂದಲೇ, “ಅವನು ಪ್ರಾಯದವನು, ಅವನನ್ನೇ ಕೇಳಿ” ಎಂದು ಅವನ ತಂದೆತಾಯಿಗಳು ಹೇಳಿದ್ದು. ಅಧಿಕಾರಿಗಳು ಆ ಹುಟ್ಟು ಕುರುಡನನ್ನು ಮತ್ತೆ ಕರೆಯಿಸಿ, “ನೀನು ದೇವರ ಮುಂದೆ ಪ್ರಮಾಣ ಮಾಡಿ ಹೇಳು. ಆ ಮನುಷ್ಯ ಪಾಪಿಯೆಂದು ನಮಗೆ ಗೊತ್ತು,” ಎಂದು ಕೇಳಿದರು. ಉತ್ತರವಾಗಿ ಅವನು, “ಅವರು ಪಾಪಿಯೋ, ಅಲ್ಲವೋ ನಾನರಿಯೆ; ಆದರೆ ನಾನೊಮ್ಮೆ ಕುರುಡನಾಗಿದ್ದೆ; ಈಗಲಾದರೋ ಕಣ್ಣು ಕಾಣಿಸುತ್ತದೆ ಇಷ್ಟು ಮಾತ್ರ ಬಲ್ಲೆ,” ಎಂದು ಹೇಳಿದನು. “ಅವನು ನಿನಗೇನು ಮಾಡಿದ? ನಿನಗೆ ಹೇಗೆ ಕಣ್ಣು ಬರಿಸಿದ?” ಎಂದು ಅವರು ಮತ್ತೆ ಪ್ರಶ್ನಿಸಿದರು. ಅವನು, “ನಿಮಗೆ ಆಗಲೇ ಹೇಳಿದ್ದೇನೆ. ಆದರೆ ನೀವು ನಂಬುವುದಿಲ್ಲ. ಅದನ್ನೇ ಏಕೆ ಮತ್ತೆ ಮತ್ತೆ ಕೇಳುತ್ತೀರಿ? ಅವನ ಶಿಷ್ಯರಾಗಲು ನಿಮಗೂ ಮನಸ್ಸಿದೆಯೇ?” ಎಂದನು. ಆಗ ಅಧಿಕಾರಿಗಳು ಅವನನ್ನು ಶಪಿಸಿದರು. “ನೀನೇ ಅವನ ಶಿಷ್ಯ, ನಾವು ಮೋಶೆಯ ಶಿಷ್ಯರು. ಮೋಶೆಯೊಡನೆ ದೇವರು ಮಾತನಾಡಿದರು ಎಂಬುದನ್ನು ನಾವು ಬಲ್ಲೆವು. ಆದರೆ ಇವನು ಎಲ್ಲಿಯವನೋ ನಾವು ಅರಿಯೆವು,” ಎಂದರು. ಅದಕ್ಕೆ ಆ ಕುರುಡ, “ಏನಾಶ್ಚರ್ಯ! ನನಗೆ ಕಣ್ಣು ಬರಿಸಿದ್ದಾರೆ. ಆದರೂ ‘ಅವನು ಎಲ್ಲಿಯವನೋ ನಾವರಿಯೆವು’ ಎನ್ನುತ್ತೀರಿ. ದೇವರು ಪಾಪಿಗಳಿಗೆ ಓಗೊಡುವುದಿಲ್ಲ. ಯಾರು ಭಕ್ತಿಯಿಂದ ಅವರ ಚಿತ್ತದಂತೆ ನಡೆಯುತ್ತಾರೋ ಅವರಿಗೆ ಓಗೊಡುತ್ತಾರೆಂದು ನಮಗೆಲ್ಲಾ ಚೆನ್ನಾಗಿ ತಿಳಿದಿದೆ. ಹುಟ್ಟು ಕುರುಡನಿಗೆ ಯಾರಾದರೂ ಕಣ್ಣುಕೊಟ್ಟ ಸುದ್ದಿಯನ್ನು ಲೋಕ ಸೃಷ್ಟಿಯಾದಾಗಿನಿಂದ ಒಬ್ಬರೂ ಕೇಳಿಲ್ಲ.

ಇವರು ದೇವರಿಂದ ಬಂದವರು ಅಲ್ಲದಿದ್ದರೆ ಇಂಥದ್ದೇನನ್ನೂ ಮಾಡಲಾಗುತ್ತಿರಲಿಲ್ಲ,” ಎಂದನು. ಆಗ ಫರಿಸಾಯರು, “ಪಾಪದಲ್ಲೇ ಹುಟ್ಟಿ ಬೆಳೆದವನು ನೀನು. ನಮಗೇ ಬುದ್ಧಿ ಹೇಳ ಹೊರಟೆಯಾ?” ಎಂದು ಹೇಳಿ ಅವನನ್ನು ತಳ್ಳಿ ಬಿಟ್ಟರು. ಹುಟ್ಟು ಕುರುಡನನ್ನು ಹೊರಗೆ ತಳ್ಳಿದ ವಾರ್ತೆ ಯೇಸುಸ್ವಾಮಿಯ ಕಿವಿಗೆ ಮುಟ್ಟಿತು. ಯೇಸು ಅವನನ್ನು ಕಂಡು, “ನರಪುತ್ರನಲ್ಲಿ ನಿನಗೆ ವಿಶ್ವಾಸವಿದೆಯೇ?” ಎಂದು ಕೇಳಿದರು. ಅವನು, “ಅವರು ಯಾರೆಂದು ತಿಳಿಸಿ ಸ್ವಾವಿೂ, ನಾನು ವಿಶ್ವಾಸಿಸುತ್ತೇನೆ,” ಎಂದನು. ಯೇಸು, “ನೀನು ಆತನನ್ನು ಕಂಡಿದ್ದೀಯೆ, ನಿನ್ನೊಡನೆ ಮಾತನಾಡುತ್ತಿರುವ ನಾನೇ ಆತನು,” ಎಂದರು. “ಸ್ವಾವಿೂ, ನಾನು ವಿಶ್ವಾಸಿಸುತ್ತೇನೆ,” ಎಂದು ಹೇಳುತ್ತಾ ಅವನು ಯೇಸುವಿಗೆ ಅಡ್ಡಬಿದ್ದನು. ಆಗ ಯೇಸು, “ಕುರುಡರು ಕಾಣುವಂತೆಯೂ ಕಾಣುವವರು ಕುರುಡರಾಗುವಂತೆಯೂ ತೀರ್ಪು ಕೊಡಲೆಂದೇ ನಾನು ಈ ಲೋಕಕ್ಕೆ ಬಂದುದು,” ಎಂದು ನುಡಿದರು. ಅಲ್ಲಿ ನಿಂತಿದ್ದ ಫರಿಸಾಯರು ಈ ಮಾತನ್ನು ಕೇಳಿ, “ಹಾಗಾದರೆ ನಾವು ಕೂಡ ಕುರುಡರೋ?” ಎಂದು ಪ್ರಶ್ನಿಸಿದರು. ಯೇಸು, “ನೀವು ಕುರುಡರೇ ಆಗಿದ್ದರೆ ಪಾಪಿಗಳಾಗುತ್ತಿರಲಿಲ್ಲ, ಆದರೆ, ‘ನಮಗೆ ಕಣ್ಣು ಕಾಣುತ್ತದೆ,’ ಎಂದು ಹೇಳಿಕೊಳ್ಳುತ್ತೀರಿ; ಆದ್ದರಿಂದ ನೀವು ಪಾಪಿಗಳಾಗಿದ್ದೀರಿ,” ಎಂದರು.





ಮನಸ್ಸಿಗೊಂದಿಷ್ಟು :  ಹುಟ್ಟಿನಿಂದಲೇ ಕುರುಡನಾಗಿದ್ದ ವ್ಯಕ್ತಿಗೆ ಯೇಸು ದೃಷ್ಟಿ ನೀಡಿದರೂ ನಂಬದವರು ಇದ್ದರು ಎನ್ನುತ್ತದೆ ಇಂದಿನ ಶುಭಸಂದೇಶ. ಅಷ್ಟು ಮಾತ್ರವಲ್ಲದೆ ಆ ಗುಣ ಹೊಂದಿದ ವ್ಯಕ್ತಿಯನ್ನೂ ವ್ಯಂಗ ಮಾಡುತ್ತಾರೆ, ದೂಷಿಸುತ್ತಾರೆ.  ಇದು ಆಶ್ಚರ್ಯದ ಸಂಗತಿಯೇನ್ನಲ್ಲ. ಇಂದಿಗೂ ದೇವರ ಕಾರ್ಯಗಳು ನೆರವೇರುತ್ತದೆ ಎಂಬುದನ್ನು ನಂಬದವರು ನಮ್ಮ ನಡುವೆಯೇ ಇದ್ದಾರೆ. ನಂಬುವವರನ್ನು, ವ್ಯಂಗ ಮಾಡುವವರು ಈಗಲೂ ಇದ್ದಾರೆ. ನಮ್ಮ ಮನೋಭಾವ ಹಾಗಾಗದಿರಲಿ. 

ಪ್ರಶ್ನೆ : ವಿಶ್ವಾಸದ ಕುರುಡುತನದಿಂದ ಬಳಲುತ್ತಿರುವ ನಮ್ಮ ಕಣ್ಣುಗಳು ತೆರೆಯಬೇಕೆಂಬ ಆಸೆ ನಮಗಿದೆಯೇ?

ಪ್ರಭುವೇ,
ಹುಟ್ಟಿನಿಂದಲೂ ನಿಮ್ಮವರೇ   
ಎನ್ನಿಸಿಗೊಂಡಿದ್ದರೂ 
ಬೆನ್ನು ಮಾಡಿದ್ದೇವೆ ಬೆಳಕಿಗೆ 
ನಮ್ಮ ಅವಿಶ್ವಾಸದ 
ಅಂಧತ್ವವನ್ನು ನೀಗಿಸಿ
ಬೆಳಕು ನೀಡಿ 
ಕಣ್ಣು ಮನಸ್ಸಿಗೆ  
ಪಡೆದ ಬೆಳಕು ಸಾರಲಿ 
ನಿಮ್ಮ ಮಹಿಮೆ 
ಸಾರಿ ಹರಡಲಿ 
ದೈವ ನಲುಮೆ 

21.03.2020 - "ತನ್ನನ್ನು ತಾನೇ ಕೆಳಗಿಳಿಸಿಕೊಳ್ಳುವವನನ್ನು ದೇವರು ಮೇಲಕ್ಕೇರಿಸುವರು"

ಮೊದಲನೇ ವಾಚನ: ಹೊಶೇಯ 6:1-6

ಸರ್ವೇಶ್ವರ ಇಂತೆನ್ನುತಾರೆ: ನನ್ನ ಜನರು ನನ್ನನ್ನು ಮರೆಹೋಗುತ್ತಾ ಹೀಗೆನ್ನುವರು: “ಬನ್ನಿ, ಸರ್ವೇಶ್ವರಸ್ವಾಮಿಯ ಬಳಿಗೆ ಹಿಂದಿರುಗೋಣ. ಅವರು ನಮ್ಮನ್ನು ಛಿದ್ರಗೊಳಿಸಿದವರು. ಅವರು ನಮ್ಮನ್ನು ಗಾಯಗೊಳಿಸಿದ್ದಾರೆ; ಅವರೇ ನಮ್ಮ ಗಾಯಗಳನ್ನು ಕಟ್ಟಿ ಗುಣಪಡಿಸುವರು. ಒಂದೆರಡು ದಿನಗಳ ನಂತರ ಅವರು ನಮ್ಮನ್ನು ಬದುಕಿಸುವರು. ಮೂರನೆಯ ದಿನದಲ್ಲಿ ಅವರು ನಮ್ಮನ್ನು ಎಬ್ಬಿಸುವರು. ಆಗ ನಾವು ಅವರ ಸನ್ನಿಧಿಯಲ್ಲಿ ಬಾಳುವೆವು. ನಿರಂತರವಾಗಿ ಹುಡುಕಿ ಅವರನ್ನು ಕಂಡುಕೊಳ್ಳೋಣ; ಸರ್ವೇಶ್ವರಸ್ವಾಮಿಯನ್ನು ಅರಿತುಕೊಳ್ಳೋಣ; ಅವರ ಆಗಮನ ಸೂರ್ಯೋದಯದಂತೆ ನಿಶ್ಚಯ. ಭೂಮಿಯನ್ನು ತಣಿಸುವ ಮುಂಗಾರು ಹಿಂಗಾರು ಮಳೆಗಳಂತೆ ಅವರು ನಮ್ಮ ಬಳಿಗೆ ಬಂದೇ ಬರುವರು. ಆದರೆ ಸರ್ವೇಶ್ವರ ಹೇಳುವುದೇನೆಂದರೆ: “ಎಫ್ರಯಿಮೇ, ನಾನು ನಿನ್ನನ್ನು ಹೇಗೆ ತಿದ್ದಲಿ? ಜುದೇಯವೇ, ನಿನ್ನನ್ನು ಹೇಗೆ ಸರಿಪಡಿಸಲಿ? ನಿಮ್ಮ ಭಕ್ತಿ ಪ್ರಾತಃಕಾಲದ ಮೋಡದಂತಿದೆ; ಬೇಗನೆ ಮಾಯವಾಗುವ ಇಬ್ಬನಿಯಂತಿದೆ. ಖಂಡ ತುಂಡವಾದ ತೀರ್ಪುನೀಡುವ, ಕತ್ತಿಯಂತೆ ಹರಿತವಾಗಿ ಮಾತನಾಡುವ ನನ್ನ ಪ್ರವಾದಿಗಳನ್ನು ನಿಮ್ಮ ಬಳಿಗೆ ಕಳುಹಿಸಿದ್ದೇನೆ. ನನ್ನ ನ್ಯಾಯ ದಂಡನೆ ಮಿಂಚಿನಂತೆ ಹೊರಡುವುದು. ನನಗೆ ಬೇಕಾದುದು ಕರುಣೆ, ಬಲಿಯರ್ಪಣೆಯಲ್ಲ; ನನಗೆ ಬೇಕಾದುದು ದೈವಜ್ಞಾನ, ದಹನಬಲಿ ದಾನವಲ್ಲ.

ಕೀರ್ತನೆ: 51:3-4, 18-19, 20-21

ಶ್ಲೋಕ: ನನಗೆ ಬೇಕಾದುದು ಕರುಣೆ, ಬಲಿಯರ್ಪಣೆಯಲ್ಲ

ಶುಭಸಂದೇಶ: ಲೂಕ 18:9-14


ಕೆಲವರು ತಾವೇ ಸತ್ಪುರುಷರು ಎಂದುಕೊಂಡು ಇತರರನ್ನು ತುಚ್ಛವಾಗಿ ಕಾಣುತ್ತಿದ್ದರು. ಅಂಥವರನ್ನು ಉದ್ದೇಶಿಸಿ ಯೇಸುಸ್ವಾಮಿ ಈ ಸಾಮತಿಯನ್ನು ಹೇಳಿದರು: “ಒಮ್ಮೆ, ಇಬ್ಬರು ಪ್ರಾರ್ಥನೆಮಾಡಲು ದೇವಾಲಯಕ್ಕೆ ಹೋದರು. ಇವರಲ್ಲಿ ಒಬ್ಬನು ಫರಿಸಾಯನು, ಇನ್ನೊಬ್ಬನು ಸುಂಕವಸೂಲಿಯವನು. ಫರಿಸಾಯನು ಮುಂದೆ ನಿಂತು ತನ್ನಷ್ಟಕ್ಕೆ ಹೀಗೆ ಪ್ರಾರ್ಥನೆಮಾಡಿದ: ‘ಓ ದೇವರೇ, ನಾನು ಇತರರ ಹಾಗೆ ಅಲ್ಲ. ಅವರೋ ಕೊಳ್ಳೆಗಾರರು, ಅನ್ಯಾಯಗಾರರು, ವ್ಯಭಿಚಾರಿಗಳು. ನಾನು ಈ ಸುಂಕದವನಂತೆಯೂ ಅಲ್ಲ. ಇದಕ್ಕಾಗಿ ನಿಮಗೆ ಧನ್ಯವಾದವನ್ನು ಸಲ್ಲಿಸುತ್ತೇನೆ. ನಾನಾದರೋ ವಾರಕ್ಕೆ ಎರಡು ದಿನ ಉಪವಾಸವ್ರತವನ್ನು ಕೈಗೊಳ್ಳುತ್ತೇನೆ; ನನ್ನ ಆದಾಯದಲ್ಲಿ ಹತ್ತನೆಯ ಒಂದು ಪಾಲನ್ನು ನಿಮಗೆ ಸಲ್ಲಿಸುತ್ತೇನೆ. “ಸುಂಕವಸೂಲಿಯವನಾದರೋ ದೂರದಲ್ಲೇ ನಿಂತು, ತಲೆಯನ್ನೂ ಮೇಲಕ್ಕೆ ಎತ್ತದೆ, ‘ಓ ದೇವರೇ, ನಾನು ಪಾಪಿ; ನನಗೆ ದಯೆತೋರಿ,’ ಎನ್ನುತ್ತಾ ಎದೆಬಡಿದುಕೊಂಡ. “ದೇವರ ದೃಷ್ಟಿಯಲ್ಲಿ ಪಾಪಮುಕ್ತನಾಗಿ ಮನೆಗೆ ತೆರಳಿದವನು ಈ ಸುಂಕ ವಸೂಲಿಯವನು, ಆ ಫರಿಸಾಯನಲ್ಲ, ಎಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ. ಏಕೆಂದರೆ, ತನ್ನನ್ನು ತಾನೇ ಮೇಲಕ್ಕೇರಿಸಿಕೊಳ್ಳುವವನನ್ನು ದೇವರು ಕೆಳಗಿಳಿಸುವರು. ತನ್ನನ್ನು ತಾನೇ ಕೆಳಗಿಳಿಸಿಕೊಳ್ಳುವವನನ್ನು ದೇವರು ಮೇಲಕ್ಕೇರಿಸುವರು,” ಎಂದರು ಯೇಸು. 

ಮನಸ್ಸಿಗೊಂದಿಷ್ಟು  : ಕ್ರಿಸ್ತ ಶಿಲುಬೆಯ ಮೇಲೆ ತೂಗಿ, ರಕ್ತ ಸುರಿಸುವಾಗ ಅವರಲ್ಲಿ ಇದ್ದ ಗುರಿ ಎಂದರೆ, ಮಾನವನ ಹೃದಯದಲ್ಲಿ ಸ್ವ-ಪ್ರೇಮವನ್ನು ಕಿತ್ತು ಹಾಕಿ ಅಲ್ಲಿ ದೈವ ಪ್ರೇಮವನ್ನು ಸ್ಥಾಪಿಸುವುದು. ಒಂದು ಹೆಚ್ಛಾಗುತಲೇ  ಮತ್ತೊಂದು ಕಡಿಮೆಯಾಗುತ್ತಾ ಹೋಗುತ್ತದೆ -  ವಾಲ್ಟರ್ ಜೆ ಚ್ಯಾಂಟ್ರಿ     

ಪ್ರಶ್ನೆ : ನಾವು ಯಾವುದನ್ನು ಹಿಂಬಾಲಿಸುತ್ತಿದ್ದೇವೆ?

ಪ್ರಭುವೇ,
ಹಿಂಬಾಲಿಸುವ  ಮನಸ್ಸಿದ್ದರೂ 
ಚಿತ್ತ ಚಂಚಲ
ಪ್ರಾಣ ಕ್ಷಣಿಕವಾದರೂ   
ಕ್ಷಣಿಕ ಸುಖಗಳತ್ತ   
ಹಂಬಲ
ನನ್ನನೇ ಪರಿತ್ಯಜಿಸುವ 
ನಿನ್ನನೇ ಅನುಕರಿಸುವ
ಗೆಲುವು ನನ್ನದಾಗಲಿ
ಸೋಲು ನನಗಾಗಲಿ    
 -ಚಿತ್ತ 

20.03.2020 - "ಇವೆರಡು ಆಜ್ಞೆಗಳಿಗಿಂತ ಶ್ರೇಷ್ಠವಾದ ಆಜ್ಞೆ ಬೇರೊಂದೂ ಇಲ್ಲ,”

ಮೊದಲನೇ ವಾಚನಮೊದಲನೆಯ ವಾಚನ : ಹೊಶೇಯ 14:1-9

ಇಸ್ರಯೇಲ್, ನಿನ್ನ ಸರ್ವೇಶ್ವರನಾದ ದೇವರ ಬಳಿಗೆ ಹಿಂದಿರುಗು. ನಿನ್ನ ಪಾಪದ್ರೋಹಗಳೇ ನಿನ್ನ ಪತನಕ್ಕೆ ಕಾರಣ. ಆದುದರಿಂದ ಪಶ್ಚಾತ್ತಾಪದ ಮಾತುಗಳೊಂದಿಗೆ ದೇವರಿಗೆ ಅಭಿಮುಖವಾಗಿ, “ಪ್ರಭುವೇ, ನಮ್ಮ ಅಪರಾಧವನ್ನು ತೊಡೆದುಹಾಕು. ನಮ್ಮಲ್ಲಿ ಒಳಿತಾದುದನ್ನೇ ಅಂಗೀಕರಿಸು. ನಿನಗೆ ಸ್ತುತಿಬಲಿಯನ್ನು ಸಮರ್ಪಿಸುವೆವು. ಅಸ್ಸೀರಿಯದಿಂದ ನಮಗೆ ರಕ್ಷಣೆ ದೊರಕದು. ನಾವು ಕಾಳಗದ ಕುದುರೆಗಳ ಮೇಲೆ ಇನ್ನೆಂದೂ ಸವಾರಿಮಾಡೆವು. ನಮ್ಮ ಕೈಗಳು ನಿರ್ಮಿಸಿರುವ ವಿಗ್ರಹಗಳನ್ನು ವೀಕ್ಷಿಸಿ, ‘ನೀವೇ ನಮ್ಮ ದೇವರು’ ಎಂದು ಜಪಿಸೆವು. ಓ ದೇವಾ, ದಿಕ್ಕಿಲ್ಲದವರಿಗೆ ಕರುಣೆ ತೋರಿಸುವವನು ನೀನೇ,” ಎಂದು ಹೇಳು. ಸರ್ವೇಶ್ವರ ಇಂತೆನ್ನುತ್ತಾರೆ: ಪರಿಹರಿಸುವೆನು ಜನರ ಭ್ರಷ್ಟತನವನು ಪ್ರೀತಿಸುವೆನು ಮನಃಪೂರ್ವಕವಾಗಿ ಅವರನು ತ್ಯಜಿಸಿಬಿಡುವೆನು ಅವರ ಮೇಲಿದ್ದ ಕೋಪವನು. ಇರುವೆನು ಇಸ್ರಯೇಲಿಗೆ ಇಬ್ಬನಿಯಂತೆ ಅರಳುವುದು ಆ ನಾಡು ತಾವರೆಯಂತೆ ಬೇರೂರುವುದು ಲೆಬನೋನಿನ ದೇವದಾರು ವೃಕ್ಷದಂತೆ. ಹರಡಿಕೊಳ್ಳುವುದದು ಮರದ ರೆಂಬೆಗಳಂತೆ ಕಂಗೊಳಿಸುವುದು ಚೆಲುವಾದ ಓಲಿವ ಮರದಂತೆ ಅದರ ಪರಿಮಳ ಮನೋಹರ ಲೆಬನೋನಿನ ಲತೆಗಳಂತೆ. ಮರಳಿ ಆಶ್ರಯಿಸುವರು ನನ್ನ ನೆರಳನ್ನು ಆ ಜನತೆ ಅಭಿವೃದ್ಧಿಯಾಗುವರು ಉದ್ಯಾನವನದಂತೆ ಫಲಪ್ರದವಾಗುವರು ಆ ಜನರು ದ್ರಾಕ್ಷಾಲತೆಯಂತೆ ಸುಪ್ರಸಿದ್ಧ ಅವರ ಕೀರ್ತಿ ಲೆಬನೋನಿನ ದ್ರಾಕ್ಷಾರಸದಂತೆ. ನುಡಿವುದು ಎಫ್ರಯಿಮ್, “ನನಗಿನ್ನು ಬೇಡ ವಿಗ್ರಹಗಳ ಗೊಡವೆ". ಅದಕ್ಕೆ ಒಲಿದು ಕಟಾಕ್ಷಿಸುವವನು ನಾನೇ ಅದಕ್ಕೆ ಹಚ್ಚಹಸಿರಾದ ತುರಾಯಿ ಮರದಂತಿರುವೆ ಅದಕ್ಕೆ ಫಲವನ್ನು ನೀಡುವವನು ನಾನೇ.” ಬುದ್ಧಿವಂತನು ಈ ಮಾತುಗಳನ್ನು ಗ್ರಹಿಸಿಕೊಳ್ಳಲಿ. ವಿವೇಕಿಯು ಈ ನುಡಿಗಳನ್ನು ಅರ್ಥಮಾಡಿಕೊಳ್ಳಲಿ. ಸರ್ವೇಶ್ವರಸ್ವಾಮಿಯ ಮಾರ್ಗಗಳು ನೇರವಾದವುಗಳು. ಸನ್ಮಾರ್ಗಿಗಳು ಅವುಗಳನ್ನು ಕೈಗೊಂಡು ನಡೆಯುವರು. ದುರ್ಮಾರ್ಗಿಗಳು ಅವುಗಳನ್ನು ಕೈಬಿಟ್ಟು ಮುಗ್ಗರಿಸಿ ಬೀಳುವರು.

ಕೀರ್ತನೆ81:6-8,8-9,10-11,14,17

ಶ್ಲೋಕಈಜಿಪ್ಟಿನಿಂದ ಕರೆ ತಂದ ಸ್ವಾಮಿ ದೇವನು ನಾನು
              ನನ್ನ ಜನರೇ, ಕಿವಿಗೊಡಿ ನನ್ನ ಬುದ್ಧಿ ಮಾತಿಗೆ   

ಶುಭಸಂದೇಶಮಾರ್ಕ 12:28-34

ಈ ತರ್ಕವನ್ನು ಕೇಳುತ್ತಿದ್ದ ಧರ್ಮಶಾಸ್ತ್ರಿ ಒಬ್ಬನು, ಯೇಸುಸ್ವಾಮಿ ಸದ್ದುಕಾಯರಿಗೆ ಸಮರ್ಪಕವಾದ ಉತ್ತರವನ್ನು ಕೊಟ್ಟಿದ್ದನ್ನು ಮೆಚ್ಚಿ, ಅವರ ಬಳಿಗೆ ಬಂದು, “ಆಜ್ಞೆಗಳಲ್ಲೆಲ್ಲಾ ಪ್ರಪ್ರಥಮ ಆಜ್ಞೆ ಯಾವುದು?” ಎಂದು ಕೇಳಿದನು. ಯೇಸು ಅವನಿಗೆ, “ಇಸ್ರಯೇಲ್ ಸಮಾಜವೇ ಕೇಳು: ನಮ್ಮ ದೇವರಾದ ಸರ್ವೇಶ್ವರ ಏಕೈಕ ಸರ್ವೇಶ್ವರ; ನಿನ್ನ ದೇವರಾದ ಸರ್ವೇಶ್ವರನನ್ನು ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಪೂರ್ಣ ಆತ್ಮದಿಂದಲೂ ನಿನ್ನ ಪೂರ್ಣ ಮನಸ್ಸಿನಿಂದಲೂ ನಿನ್ನ ಪೂರ್ಣ ಶಕ್ತಿಯಿಂದಲೂ ಪ್ರೀತಿಸು. ಇದೇ ಪ್ರಪ್ರಥಮ ಆಜ್ಞೆ. “ನಿನ್ನನ್ನು ನೀನೇ ಪ್ರೀತಿಸಿಕೊಳ್ಳುವಂತೆ ನಿನ್ನ ನೆರೆಯವನನ್ನೂ ಪ್ರೀತಿಸು. ಇದೇ ಎರಡನೆಯ ಆಜ್ಞೆ. ಇವೆರಡು ಆಜ್ಞೆಗಳಿಗಿಂತ ಶ್ರೇಷ್ಠವಾದ ಆಜ್ಞೆ ಬೇರೊಂದೂ ಇಲ್ಲ,” ಎಂದರುಇದನ್ನು ಕೇಳಿದ ಧರ್ಮಶಾಸ್ತ್ರಿ, “ಬೋಧಕರೇ, ಚೆನ್ನಾಗಿ ಹೇಳಿದಿರಿ. ದೇವರು ಒಬ್ಬರೇ, ಅವರ ಹೊರತು ಬೇರೆ ದೇವರಿಲ್ಲ, ಎಂದು ನೀವು ಹೇಳಿದ್ದು ಸತ್ಯಅವರನ್ನು ನಾವು ಪೂರ್ಣ ಹೃದಯದಿಂದಲೂ ಪೂರ್ಣ ಜ್ಞಾನದಿಂದಲೂ ಪೂರ್ಣ ಶಕ್ತಿಯಿಂದಲೂ ಪ್ರೀತಿಸತಕ್ಕದ್ದು. ಇದಲ್ಲದೆ ನಮ್ಮನ್ನು ನಾವು ಪ್ರೀತಿಸಿಕೊಳ್ಳುವಂತೆಯೇ ನಮ್ಮ ನೆರೆಯವರನ್ನೂ ಪ್ರೀತಿಸತಕ್ಕದ್ದು. ಇವು ಎಲ್ಲಾ ದಹನ ಬಲಿಗಳಿಗಿಂತಲೂ ಯಜ್ಞಯಾಗಾದಿಗಳಿಗಿಂತಲೂ ಎಷ್ಟೋ ಮೇಲಾದುವು,” ಎಂದನುಅವನ ವಿವೇಕಪೂರ್ಣವಾದ ಉತ್ತರವನ್ನು ಮೆಚ್ಚಿ ಯೇಸು, “ನೀನು ದೇವರ ಸಾಮ್ರಾಜ್ಯದಿಂದ ದೂರವಿಲ್ಲ,” ಎಂದರು. ಇದಾದ ಬಳಿಕ ಯೇಸುವನ್ನು ಪ್ರಶ್ನಿಸುವುದಕ್ಕೆ ಯಾರೊಬ್ಬರೂ ಧೈರ್ಯಗೊಳ್ಳಲಿಲ್ಲ.

ಮನಸ್ಸಿಗೊಂದಿಷ್ಟು : ಇದ್ದ ನೂರಾರು ದೈವ ಆಜ್ಞೆಗಳನ್ನು ಹೇಗೆ ಪಾಲಿಸಿಬೇಕೆನ್ನುವ ಗೊಂದಲವನ್ನು ಯೇಸು ನಿವಾರಿಸುತ್ತಾರೆ. ದೈವ ಚಿತ್ತಕ್ಕೆ ತಲೆಬಾಗಿ,
ಪರರಿಗಾಗಿ ಮರುಗಿದ, ಕ್ಷಮಿಸಿದ, ಕೊನೆಗೆ ಪ್ರಾಣ ಕೊಟ್ಟ ಯೇಸು ಈ ಎರಡೂ ಆಜ್ಞೆಗಳ ಪೂರ್ಣ ಪರಿಪಾಲಕ. ಇದನ್ನು ಪಾಲಿಸುವವನು ಸ್ವರ್ಗ ಸಾಮ್ರಾಜ್ಯದಿಂದ ದೂರವಿಲ್ಲ ಎಂಬ ಮಾತು ನಮ್ಮನ್ನು ಸದಾ ಪ್ರೇರೇಪಿಸುತ್ತಿರಲಿ 

ಪ್ರಶ್ನೆ :  ಈ ಆಜ್ಞೆಗಳ ಪರಿಪಾಲಕರು ನಾವಾಗಿದ್ದೇವೆಯೇ?

ಪ್ರಭುವೇ,
ನಿಮ್ಮಂತೆ ಪರಿಪೂರ್ಣರಾಗುವ 
ಭಾಗ್ಯ ನಮ್ಮದಾಗಲಿ 
ಪರ ಪ್ರೀತಿಯ ಮೂಲಕವೇ 
ನಮ್ಮ ದೈವ ಪ್ರೀತಿ 
ಪರಿಪೂರ್ಣತೆ ಪಡೆಯಲಿ