ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

29-10-2010 - ಸಬ್ಬತ್ ದಿನ

ಸಂತ ಲೂಕನ ಶುಭ ಸಂದೇಶ - 14: 1-6

"ನಿಮ್ಮಲ್ಲಿ ಒಬ್ಬನ ಮಗನಾಗಲಿ, ಎತ್ತಾಗಲಿ ಬಾವಿಯಲ್ಲಿ ಬಿದ್ದರೆ, ಸಬ್ಬತ್ ದಿನವಾಗಿದ್ದರೂ ನೀವೂ ತಡಮಾಡದೆ ಮೇಲಕ್ಕೆ ಎತ್ತುವುದಿಲ್ಲವೆ?"

ಅಂದು ಸಬ್ಬತ್ ದಿನ, ಯೇಸುಸ್ವಾಮಿ ಒಬ್ಬ ಪ್ರಮುಖ ಫರಿಸಾಯನ ಮನೆಗೆ ಊಟಕ್ಕೆ ಹೋದರು. ಎಲ್ಲರ ಕಣ್ಣು ಅವರ ಮೇಲಿತ್ತು. ಅಲ್ಲೇ ಅವರ ಮುಂದೆ ಜಲೋದರ ರೋಗಿಯೊಬ್ಬನು ಇದ್ದನು. “ಸಬ್ಬತ್ ದಿನ ಗುಣಪಡಿಸುವುದು ಸರಿಯೋ ತಪ್ಪೋ?” ಎಂದು ಯೇಸು ಫರಿಸಾಯರನ್ನೂ ಶಾಸ್ತ್ರಜ್ಞರನ್ನೂ ಕೇಳಿದರು. ಅದಕ್ಕವರು ಮೌನವಾಗಿದ್ದರು. ಯೇಸು ರೋಗಿಯ ಕೈ ಹಿಡಿದು ಗುಣಪಡಿಸಿ ಕಳಿಸಿಬಿಟ್ಟರು. ಅನಂತರ, “ನಿಮ್ಮಲ್ಲಿ ಒಬ್ಬನ ಮಗನಾಗಲಿ, ಎತ್ತಾಗಲಿ ಬಾವಿಯಲ್ಲಿ ಬಿದ್ದರೆ, ಸಬ್ಬತ್ ದಿನವಾಗಿದ್ದರೂ ನೀವೂ ತಡಮಾಡದೆ ಮೇಲಕ್ಕೆ ಎತ್ತುವುದಿಲ್ಲವೆ?” ಎಂದು ಕೇಳಿದರು. ಅದಕ್ಕೂ ಅವರು ನಿರುತ್ತರರಾದರು.

28-10-2010 - ಪ್ರೇಷಿತರು

ಸಂತ ಲೂಕನ ಶುಭ ಸಂದೇಶ - 6: 12-19

ಜನರೆಲ್ಲರು ಯೇಸುವನ್ನು ಮುಟ್ಟಲು ತವಕಪಡುತ್ತಿದ್ದರು

ಒಮ್ಮೆ ಯೇಸುಸ್ವಾಮಿ ಪ್ರಾರ್ಥನೆ ಮಾಡಲು ಬೆಟ್ಟವನ್ನೇರಿದರು. ರಾತ್ರಿಯೆಲ್ಲಾ ದೇವರ ಪ್ರಾರ್ಥನೆಯಲ್ಲಿ ಕಳೆದರು. ಬೆಳಗಾದಾಗ ತಮ್ಮ ಶಿಷ್ಯರನ್ನು ಕರೆದು, ಅವರಲ್ಲಿ ಹನ್ನೆರಡು ಮಂದಿಯನ್ನು ಆರಿಸಿಕೊಂಡು, ಅವರಿಗೆ ’ಪ್ರೇಷಿತರು’ ಎಂದು ಹೆಸರಿಟ್ಟರು. ಹೀಗೆ ಆಯ್ಕೆ ಆದವರು: ಪೇತ್ರನೆಂದು ಹೆಸರು ಪಡೆದ ಸಿಮೋನ ಮತ್ತು ಅವನ ಸಹೋದರ ಅಂದ್ರೆಯ, ಯಕೋಬ ಮತ್ತು ಯೊವಾನ್ನ, ಫಿಲಿಪ್ಪ ಮತ್ತು ಬಾರ್ತೊಲೊಮಾಯ, ಮತ್ತಾಯ ಮತ್ತು ತೋಮ, ಅಲ್ಫಾಯನ ಮಗ ಯಕೋಬ ಮತ್ತು ದೇಶಾಭಿಮಾನಿ ಎನಿಸಿಕೊಂಡಿದ್ದ ಸಿಮೋನ, ಯಕೋಬನ ಮಗ ಯೂದ ಮತ್ತು ಗುರುದ್ರೋಹಿಯಾಗಲಿದ್ದ ಯೂದ ಇಸ್ಕರಿಯೋತ.

ಅನಂತರ ಯೇಸುಸ್ವಾಮಿ ಅವರೊಂದಿಗೆ ಬೆಟ್ಟದಿಂದ ಇಳಿದು, ಸಮತಟ್ಟಾದ ಸ್ಥಳಕ್ಕೆ ಬಂದರು. ಶಿಷ್ಯರ ದೊಡ್ಡ ಗುಂಪು ಅಲ್ಲಿ ನೆರೆದಿತ್ತು. ಜುದೇಯ ಪ್ರಾಂತ್ಯದಿಂದಲೂ ಜೆರುಸಲೇಮ್ ಪಟ್ಟಣದಿಂದಲೂ ಸಮುದ್ರ ತೀರದ ಟೈರ್ ಹಾಗೂ ಸಿದೋನ್ ಪಟ್ಟಣಗಳಿಂದಲೂ ಜನ ಸಮೂಹ ಅಲ್ಲಿಗೆ ಬಂದಿತ್ತು. ಯೇಸುವಿನ ಬೋಧನೆಯನ್ನು ಕೇಳುವುದಕ್ಕೂ ತಮ್ಮ ರೋಗರುಜಿನಗಳಿಂದ ವಿಮುಕ್ತರಾಗುವುದಕ್ಕೂ ಜನರು ಅಲ್ಲಿಗೆ ಬಂದು ಸೇರಿದ್ದರು. ದೆವ್ವಪೀಡಿತರು ಕೂಡ ಬಂದು ಸ್ವಸ್ಥರಾಗುತ್ತಿದ್ದರು. ಯೇಸುವಿನಿಂದ ದಿವ್ಯ ಶಕ್ತಿ ಹರಿದು ಎಲ್ಲರನ್ನೂ ಗುಣ ಪಡಿಸುತ್ತಿತ್ತು. ಆದುದರಿಂದ ಅಲ್ಲಿದ್ದ ಜನರೆಲ್ಲರು ಯೇಸುವನ್ನು ಮುಟ್ಟಲು ತವಕಪಡುತ್ತಿದ್ದರು.

27-10-2010 - ಜೀವೋದ್ಧಾರ

ಸಂತ ಲೂಕನ ಶುಭ ಸಂದೇಶ - 13: 22-30

 “ಇಗೋ, ಕಡೆಯವರಲ್ಲಿ ಕೆಲವರು ಮೊದಲಿಗರಾಗುವರು. ಮೊದಲಿಗರಲ್ಲಿ ಕೆಲವರು ಕಡೆಯವರಾಗುವರು"

ಯೇಸುಸ್ವಾಮಿ ಊರೂರುಗಳಲ್ಲೂ ಹಳ್ಳಿಹಳ್ಳಿಗಳಲ್ಲೂ ಉಪದೇಶಮಾಡಿಕೊಂಡು ಜೆರುಸಲೇಮಿನತ್ತ ಪ್ರಯಾಣಮಾಡುತ್ತಿದ್ದರು. ಆಗ ಒಬ್ಬನು, “ಸ್ವಾಮಿ, ಜೀವೋದ್ಧಾರ ಹೊಂದುವವರು ಕೆಲವರು ಮಾತ್ರವೊ?” ಎಂದು ವಿಚಾರಿಸಿದನು. ಆಗ ಯೇಸು ಜನರಿಗೆ, “ಇಕ್ಕಟ್ಟಾದ ಬಾಗಿಲಿನಿಂದಲೇ ಒಳಹೋಗಲು ಸರ್ವಪ್ರಯತ್ನಮಾಡಿ. ಏಕೆಂದರೆ, ಅನೇಕರು ಒಳಕ್ಕೆ ಹೋಗಲು ಖಂಡಿತವಾಗಿ ಪ್ರಯತ್ನಿಸುವರು;  ಆದರೆ ಅದು ಅವರಿಂದಾಗದು. ಮನೆಯ ಯಜಮಾನನು ಎದ್ದು ಬಾಗಿಲನ್ನು ಮುಚ್ಚಿದ ಮೇಲೆ ನೀವು ಹೊರಗಡೆ ನಿಲ್ಲಬೇಕಾಗುವುದು. ಬಾಗಿಲನ್ನು ತಟ್ಟುತ್ತಾ, 'ಸ್ವಾಮೀ,  ನಮಗೆ ಬಾಗಿಲು ತೆರೆಯಿರಿ,’ಎಂದು ನೀವು ಕೇಳುವಿರಿ. ಅದಕ್ಕೆ ಅವನು, ’ನೀವು ಎಲ್ಲಿಯವರೋ ನಾನು ಅರಿಯೆಎನ್ನುವನು. ಆಗ ನೀವು, ’ನಿಮ್ಮೊಂದಿಗೆ ನಾವು ಊಟಮಾಡಿದ್ದೇವೆ, ಪಾನಮಾಡಿದ್ದೇವೆ; ನೀವು ನಮ್ಮ ಬೀದಿಗಳಲ್ಲಿ ಉಪದೇಶಮಾಡಿದ್ದೀರಿ,’ ಎಂದು ಹೇಳಲಾರಂಭಿಸುವಿರಿ. ಆದರೆ ಅವನು ಪುನ:, ನೀವು ಎಲ್ಲಿಯವರೋ ನಾನರಿಯೆ.  ಅಕ್ರಮಿಗಳೇ, ಎಲ್ಲರೂ ನನ್ನಿಂದ ತೊಲಗಿರಿ, ’ ಎಂದು ಸ್ಪಷ್ಟವಾಗಿ ನುಡಿಯುವನು. ಅಬ್ರಹಾಮ, ಇಸಾಕ, ಯಕೋಬ ಮತ್ತು ಎಲ್ಲಾ ಪ್ರವಾದಿಗಳು ದೇವರ ಸಾಮ್ರಾಜ್ಯದಲ್ಲಿ ಇರುವುದನ್ನೂ ನಿಮ್ಮನ್ನು ಮಾತ್ರ ಹೊರಗೆ ಹಾಕಿರುವುದನ್ನೂ ನೋಡುವಾಗ ನಿಮಗಾಗುವ ಗೋಳಾಟವೇನು! ಹಲ್ಲು ಕಡಿತವೇನು!! ಚತುರ್ದಿಕ್ಕುಗಳಿಂದಲೂ ಜನರು ಬಂದು, ದೇವರ ಸಾಮ್ರಾಜ್ಯದ ಹಬ್ಬದೂಟದಲ್ಲಿ ಭಾಗಿಗಳಾಗುವರು. “ಇಗೋ, ಕಡೆಯವರಲ್ಲಿ ಕೆಲವರು ಮೊದಲಿಗರಾಗುವರು. ಮೊದಲಿಗರಲ್ಲಿ ಕೆಲವರು ಕಡೆಯವರಾಗುವರು,” ಎಂದರು.

25-10-2010 - ಸಬ್ಬತ್

ಸಂತ ಲೂಕನ ಶುಭ ಸಂದೇಶ - 13: 10-17

ತಕ್ಷಣವೇ ಆಕೆ ನೆಟ್ಟಗಾದಳು ಮತ್ತು ದೇವರಿಗೆ ಸ್ತುತಿಸ್ತೋತ್ರ ಸಲ್ಲಿಸಿದಳು.

ಒಂದು ಸಬ್ಬತ್ ದಿನ ಯೇಸುಸ್ವಾಮಿ ಪ್ರಾರ್ಥನಾಮಂದಿರದಲ್ಲಿ ಬೋಧಿಸುತ್ತಿದ್ದರು. ಹದಿನೆಂಟು ವರ್ಷಗಳಿಂದ ದೆವ್ವಪೀಡಿತಳಾಗಿ ನರಳುತ್ತಿದ್ದ ಒಬ್ಬ ಮಹಿಳೆ ಅಲ್ಲಿದ್ದಳು. ಆಕೆ ಒಬ್ಬ ಗೂನಿ; ನೆಟ್ಟಗೆ ನಿಲ್ಲಲು ಸ್ವಲ್ಪವೂ ಆಗುತ್ತಿರಲಿಲ್ಲ. ಯೇಸು ಆಕೆಯನ್ನು ನೋಡಿ ಹತ್ತಿರಕ್ಕೆ ಕರೆದು, “ನೋಡಮ್ಮ, ನೀನು ವ್ಯಾಧಿಯಿಂದ ಬಿಡುಗಡೆಯಾದೆ,” ಎಂದು ಹೇಳಿ, ಆಕೆಯ ಮೇಲೆ ತಮ್ಮ ಹಸ್ತಗಳನ್ನಿಟ್ಟರು. ತಕ್ಷಣವೇ ಆಕೆ ನೆಟ್ಟಗಾದಳು ಮತ್ತು ದೇವರಿಗೆ ಸ್ತುತಿಸ್ತೋತ್ರ ಸಲ್ಲಿಸಿದಳು.

ಯೇಸು ಸಬ್ಬತ್ ದಿನದಲ್ಲಿ ಗುಣಮಾಡಿದ್ದನ್ನು ಕಂಡು, ಪ್ರಾರ್ಥನಾಮಂದಿರದ ಅಧಿಕಾರಿ ಕುಪಿತನಾದನು. ಕೂಡಿದ್ದ ಜನರನ್ನು ಉದ್ದೇಶಿಸಿ,  ಕೆಲಸ ಮಾಡಲು ಆರು ದಿನಗಳಿವೆ, ದಿನಗಳಲ್ಲಿ ಬಂದು ಗುಣಮಾಡಿಸಿಕೊಳ್ಳಿರಿ; ಸಬ್ಬತ್ ದಿನದಲ್ಲಿ ಮಾತ್ರ ಕೂಡದು, “ಎಂದನು. ಪ್ರಭು, ಅವನಿಗೆ ಪ್ರತ್ಯುತ್ತರವಾಗಿ, “ಕಪಟಿಗಳೇ, ಸಬ್ಬತ್ ದಿನ ನಿಮ್ಮಲ್ಲಿ ಪ್ರತಿಯೊಬ್ಬನೂ ತನ್ನ ಕತ್ತೆಯನ್ನಾಗಲಿ, ಎತ್ತನ್ನಾಗಲಿ ಕೊಟ್ಟಿಗೆಯಿಂದ ಬಿಚ್ಚಿ ನೀರಿಗೆ ಹಿಡಿದುಕೊಂಡು ಹೋಗುವುದಿಲ್ಲವೆ? ಅಬ್ರಹಾಮನ ವಂಶಜಳಾದ ಈಕೆಯನ್ನು ಸೈತಾನನು ಹದಿನೆಂಟು ವರ್ಷಗಳಿಂದ ಕಟ್ಟಿ ಹಾಕಿದ್ದನು; ಕಟ್ಟಿನಿಂದ ಈಕೆಯನ್ನು ಸಬ್ಬತ್ ದಿನ ಬಿಡಿಸಬಾರದಿತ್ತೆ?” ಎಂದರು ಉತ್ತರವನ್ನು ಕೇಳಿ ಯೇಸುವಿನ ವಿರೋಧಿಗಳೆಲ್ಲರೂ ನಾಚಿದರು. ಜನರ ಕೂಟವಾದರೋ ಅವರು ಮಾಡಿದ ಮಹತ್ಕಾರ್ಯಗಳನ್ನೆಲ್ಲಾ ಕಂಡು ಸಂತೋಷಪಟ್ಟಿತು.

22-10-2010 - ನ್ಯಾಯ ನಿರ್ಣಯ

ಸಂತ ಲೂಕನ ಶುಭ ಸಂದೇಶ12: 54-59

"ನ್ಯಾಯ ನಿರ್ಣಯವನ್ನು ನಿಮ್ಮಲ್ಲಿಯೇ ನೀವು ಏಕೆ ಮಾಡಿಕೊಳ್ಳಬಾರದು

ಇದೂ ಅಲ್ಲದೆ ಯೇಸುಸ್ವಾಮಿ ಜನ ಸಮೂಹವನ್ನು ನೋಡಿ, “ಪಶ್ಚಿಮ ದಿಕ್ಕಿನಲ್ಲಿ ಮೋಡ ಏಳುವುದನ್ನು ನೀವು ನೋಡಿದ ಕೂಡಲೇ, ’ಭಾರಿ ಮಳೆ ಬರುತ್ತದೆ’ ಎನ್ನುತ್ತೀರಿ;  ಹಾಗೆಯೇ ಆಗುತ್ತದೆ. ದಕ್ಷಿಣ ದಿಕ್ಕಿನ ಗಾಳಿ ಬೀಸಿದಾಗ ಉರಿಬಿಸಿಲು ಎನ್ನುತ್ತೀರಿ; ಅಂತೆಯೇ ಇರುತ್ತದೆ. ಆಷಾಢಭೂತಿಗಳೇ, ಭೂಮ್ಯಾಕಾಶಗಳ ಲಕ್ಷಣಗಳನ್ನು ನೀವು ಸರಿಯಾಗಿ ಅರಿತುಕೊಳ್ಳಬಲ್ಲಿರಿ; ಅದರೆ ಪ್ರಸ್ತುತ ಕಾಲವನ್ನು ಅರ್ಥಮಾಡಿಕೊಳ್ಳಲಾರಿರಾ?"ನ್ಯಾಯನಿರ್ಣಯವನ್ನು ನಿಮ್ಮಲ್ಲಿಯೇ ನೀವು ಏಕೆ ಮಾಡಿಕೊಳ್ಳಬಾರದು? ನೀನು ನ್ಯಾಯಧಿಪತಿಯ ಬಳಿಗೆ ಹೋಗಬೇಕಾಗಿ ಬಂದಲ್ಲಿ, ದಾರಿಯಲ್ಲೇ ನಿನ್ನ ವಿರೋಧಿಯೊಡನೆ ವ್ಯಾಜ್ಯ ತೀರಿಸಿಕೊಳ್ಳಲು ಪ್ರಯತ್ನಿಸು.ಇಲ್ಲದಿದ್ದರೆ ಅವನು ನಿನ್ನನ್ನು ನಾಯಾಧಿಪತಿಯ ಮುಂದೆ ಎಳೆದೊಯ್ಯಬಹುದು; ನ್ಯಾಯಾಧಿಪತಿ ನಿನ್ನನ್ನು ಸೆರೆಯ ಅಧಿಕಾರಿಯ ಕೈಗೊಪ್ಪಿಸಬಹುದು. ಸೆರೆ ಅಧಿಕಾರಿ ನಿನ್ನನ್ನು ಸೆರೆಮನೆಯಲ್ಲಿ ಹಾಕಬಹುದು. ಅಲ್ಲಿಂದ ನೀನು ಹೊರಗೆ ಬರಬೇಕಾದರೆ ಕಡೇ ಕಾಸನ್ನೂ ಬಿಡದೆ ಎಲ್ಲವನ್ನೂ ಸಲ್ಲಿಸಬೇಕಾಗುವುದೆಂಬುದು ನಿಶ್ಚಯ,” ಎಂದರು.

21.10.2010 - ವಿಂಗಡಣೆ

21-10-2010

ಸಂತ ಲೂಕನ ಶುಭ ಸಂದೇಶ – 12: 49-53

“ನಾನು ಬಂದಿರುವುದು ಜಗತ್ತಿನಲ್ಲಿ ಬೆಂಕಿಯನ್ನು ಹೊತ್ತಿಸಲು."

“ನಾನು ಬಂದಿರುವುದು ಜಗತ್ತಿನಲ್ಲಿ ಬೆಂಕಿಯನ್ನು ಹೊತ್ತಿಸಲು. ಅದು ಈಗಾಗಲೇ ಉರಿಯುತ್ತಿರಬೇಕೆಂಬುದೇ ನನ್ನ ಬಯಕೆ. ಆದರೆ ನಾನು ಪಡೆಯಬೇಕಾದ ಶ್ರಮಾಸ್ನಾನ ಒಂದುಂಟು: ಅದು ಈಡೇರುವ ತನಕ ನನಗೆ ನೆಮ್ಮದಿಯಿಲ್ಲ. ನಾನು ಲೋಕಕ್ಕೆ ಸಮಾಧಾನವನ್ನು ತರಲು ಬಂದೆ ಎಂದು ಭಾವಿಸುತ್ತೀರೋ? ಇಲ್ಲ. ಭಿನ್ನಭೇದಗಳನ್ನು ಉಂಟುಮಾಡಲು ಬಂದೆನೆಂದು ನಿಮಗೆ ಒತ್ತಿ ಹೇಳುತ್ತೇನೆ. ಹೇಗೆಂದರೆ, ಒಂದೇ ಮನಯಲ್ಲಿರುವ ಐವರಲ್ಲಿ, ಇಂದಿನಿಂದ ಇಬ್ಬರಿಗೆ ವಿರುದ್ದ ಮೂವರು, ಮೂವರಿಗೆ ವಿರುದ್ದ ಇಬ್ಬರು ವಿಭಾಗವಾಗುವರು. ಮಗನಿಗೆ ವಿರುದ್ದವಾಗಿ ತಂದೆ, ಮಗಳಿಗೆ ವಿರುದ್ದ ತಾಯಿ, ಸೊಸೆಗೆ ವಿರುದ್ದವಾಗಿ ಅತ್ತೆ, ಪರಸ್ಪರ ವಿರೋಧವಾಗಿ ವಿಂಗಡಿಸಿ ಹೋಗುವರು,” ಎಂದರು.

20.10.2010 - ನಿರೀಕ್ಶೆ

ಸಂತ ಲೂಕನ ಶುಭ ಸಂದೇಶ – 12: 39-48

"ಹೆಚ್ಚು ಪಡೆದವನಿಂದ ಹೆಚ್ಚು ನಿರೀಕ್ಷಿಸಲಾಗುವುದು. ಇನ್ನೂ ಹೆಚ್ಚು ವಹಿಸಿಕೊಂಡವನಿಂದ ಇನ್ನೂ ಹೆಚ್ಚಾಗಿ ಕೇಳಲಾಗುವುದು"

ಕಳ್ಳನು ಬರುವ ಗಳಿಗೆಯು ಮನೆಯ ಯಜಮಾನನಿಗೆ ತಿಳಿದರೆ, ಅವನು ತನ್ನ ಮನೆಗೆ ಕನ್ನಹಾಕಲು ಬಿಡುವನೇ? ಇಲ್ಲ. ಇದ್ದನ್ನು ಚೆನಾಗಿ ತಿಳಿದಿಕೊಂಡು ನೀವು ಸಹ ಸಿದ್ದರಾಗಿರಿ. ಏಕೆಂದರೆ, ನರಪುತ್ರನು ನೀವು ನಿರೀಕ್ಷಿಸದ ಗಳಿಗೆಯಲ್ಲಿ ಬರುವನು,” ಎಂದರು. ಆಗ ಪೇತ್ರನು, “ಪ್ರಭು, ನೀವು ಹೇಳಿದ ಈ ಸಾಮತಿ ನಮಗೆ ಮಾತ್ರ ಅನ್ವಯಿಸುತ್ತದೋ ಅಥವಾ ಎಲ್ಲರಿಗೋ?” ಎಂದು ಕೇಳಿದನು. ಅದಕ್ಕೆ ಪ್ರಭು ಹೀಗೆಂದರು: “ಪ್ರಾಮಾಣಿಕನೂ ವಿವೇಕಿಯೂ ಆದ ಮೇಸ್ತ್ರಿ ಯಾರು? ಕಾಲಕಾಲಕ್ಕೆ ಸರಿಯಾಗಿ ಕೊಲಿಯಾಳುಗಳಿಗೆ ದವಸ ಧಾನ್ಯವನ್ನು ಅಳೆದುಕೊಟ್ಟು, ಮನೆಯ ಮೇಲ್ವಿಚಾರಣೆಯನ್ನು ನೋಡಿಕೊಳ್ಳಲು ಯಜಮಾನನು ನೇಮಿಸಿದ್ದ ಮೇಸ್ತ್ರಿಯೇ. ಯಜಮಾನನು ಮನೆಗೆ ಹಿಂದಿರುಗಿ ಬಂದಾಗ ಆ ಸೇವಕನು ತನ್ನ ಕರ್ತವ್ಯವನ್ನು ನಿಷ್ಠೆಯಿಂದ ನೆರವೇರಿಸುತ್ತಿದ್ದರೆ ಅವನು ಧನ್ಯನು. ಅಂಥವನನ್ನು ಯಜಮಾನನು ತನ್ನ ಎಲ್ಲ ಆಸ್ತಿಪಾಸ್ತಿಗೆ ಆಡಳಿತಗಾರನನ್ನಾಗಿ ನೇಮಿಸುವನೆಂದು ನಿಮಗೆ ನಿಜವಾಗಿ ಹೇಳುತ್ತೇನೆ.

“ಆದರೆ ಆ ಸೇವಕನು ತನ್ನಲ್ಲೇ, ’ನನ್ನ ಯಜಮಾನ ಬಹಳ ತಡಮಾಡಿ ಬರುತ್ತಾನೆ’, ಎಂದುಕೊಂಡು ಗಂಡಾಳು ಹೆಣ್ಣಾಳು ಎನ್ನದೆ ಹೊಡೆಯುವುದಕ್ಕೂ ಅಮಲೇರುವಷ್ಟು ತಿಂದು ಕುಡಿಯುವುದಕ್ಕೂ ತೊಡಗಿದರೆ ಅವನು ನಿರೀಕ್ಷಿಸದ ದಿನದಲ್ಲಿ, ತಿಳಿಯದ ಗಳಿಗೆಯಲ್ಲಿ ಯಜಮಾನನು ಬಂದು ಅವನನ್ನು ಚಿತ್ರಹಿಂಸೆಗೂ ವಿಶ್ವಾಸಹೀನರ ದುರ್ಗತಿಗೂ ಗುರಿಮಾಡುವನು."

“ಸೇವಕನು ಯಜಮಾನನು ಇಷ್ಟಾರ್ಥವನ್ನು ಅರಿತುಕೊಂಡಿದ್ದರೂ ಅಜಾಗರೂಕನಾಗಿ ಇದ್ದರೆ ಕಠಿಣ ಶಿಕ್ಷೆಗೆ ಗುರಿಯಾಗುತ್ತಾನೆ. ಅರಿಯದೆ ಅಜಾಗರೂಕನಾಗಿದ್ದರೆ ಕಡಿಮೆ ಶಿಕ್ಷೆಗೆ ಗುರುಯಾಗುತ್ತಾನೆ. ಹೆಚ್ಚು ಪಡೆದವನಿಂದ ಹೆಚ್ಚು ನಿರೀಕ್ಷಿಸಲಾಗುವುದು. ಇನ್ನೂ ಹೆಚ್ಚು ವಹಿಸಿಕೊಂಡವನಿಂದ ಇನ್ನೂ ಹೆಚ್ಚಾಗಿ ಕೇಳಲಾಗುವುದು."

19-10-2010 - ಸಿದ್ಧತೆ

ಸಂತ ಲೂಕನ ಶುಭ ಸಂದೇಶ12: 35-38

ನಿಮ್ಮ ನಡು ಕಟ್ಟಿರಲಿನಿಮ್ಮ ದೀಪ ಉರಿಯುತ್ತಿರಲಿ"

ನಿಮ್ಮ ನಡು ಕಟ್ಟಿರಲಿ; ನಿಮ್ಮ ದೀಪ ಉರಿಯುತ್ತಿರಲಿ. ತಟ್ಟಿದ ತಕ್ಷಣ ಯಜಮಾನನಿಗೆ ಬಾಗಿಲು ತೆರೆಯಲು ಸಿದ್ದರಿರುವ ಸೇವಕನಂತೆ ಇರಿ. ತಮ್ಮ ಯಜಮಾನನು ಮದುವೆ ಔತಣ ಮುಗಿಸಿಕೊಂಡು ಯಾವಾಗ ಹಿಂದಿರಿಗುತ್ತಾನೋ ಎಂದು ಅವರು ಎದುರು ನೋಡುತ್ತಾ ಇರುತ್ತಾರೆ. ಯಜಮಾನನು ಬಂದು ಯಾವ ಯಾವ ಸೇವಕ ಎಚ್ಚರವಾಗಿದ್ದಾನೆಂದು ಕಂಡು ಕೊಳ್ಳುತ್ತಾನೋ, ಅಂಥವರು ಭಾಗ್ಯವಂತರು. ಏಕೆಂದರೆ, ಯಜಮಾನನೇ ನಡುಕಟ್ಟಿ ನಿಂತು, ಅವರನ್ನು ಊಟಕ್ಕೆ ಕೂರಿಸಿ, ಒಬ್ಬೊಬ್ಬನಿಗೂ ತಾನೇ ಉಪಚಾರ ಮಾಡುವನೆಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ. “ಯಜಮಾನನು ಬರುವಾಗ ನಡು ರಾತ್ರಿ ಆಗಿರಲಿ, ಮುಂಜಾವಾಗಿರಲಿ, ಎಚ್ಚರದಿಂದ ಇರುವ ಸೇವಕರನ್ನು ಆತನು ಕಂಡರೆ ಅವರು ಭಾಗ್ಯವಂತರು".

18-10-2010 - ಈ ಮನೆಗೆ ಶಾಂತಿ

ಸಂತ ಲೂಕನ ಶುಭ ಸಂದೇಶ10: 1-9

ಬೆಳೆಯೇನೋ ಹೇರಳವಾಗಿದೆಕೊಯ್ಲುಗಾರರೊ ವಿರಳ"


ಇದಾದ ಮೇಲೆ, ಯೇಸುಸ್ವಾಮಿ ಇನ್ನೂ ಎಪ್ಪತ್ತೆರಡು ಮಂದಿಯನ್ನು ನೇಮಿಸಿ ಅವರನ್ನು ಇಬ್ಬಿಬ್ಬರನ್ನಾಗಿ ತಾವೇ ಹೋಗಲಿದ್ದ ಊರುಗಳಿಗೂ ಸ್ಥಳಗಳಿಗೂ ಮುಂದಾಗಿ ಕಳಿಸಿದರು.ಕಳುಹಿಸುವಾಗ ಅವರಿಗೆ ಹೇಳಿದ್ದೇನೆಂದರೆ, “ಬೆಳೆಯೇನೋ ಹೇರಳವಾಗಿದೆ; ಕೊಯ್ಲುಗಾರರೊ ವಿರಳ. ಆದುದರಿಂದ ಕೊಯ್ಲಿಗೆ ಆಳುಗಳನ್ನು ಕಳುಹಿಸುವಂತೆ ಬೆಳೆಯ ಯಜಮಾನನನ್ನು ಬೇಡಿಕೊಳ್ಳಿ. ಹೋಗಿರಿ, ತೊಳಗಳ ನಡುವೆ ಕುರಿಮರಿಗಳನ್ನು ಬಿಟ್ಟಂತೆ ನಾನು ನಿಮ್ಮನ್ನು ಕಳುಹಿಸುತ್ತೇನೆ. ಹಣದ ಚೀಲವನ್ನಾಗಲಿ, ಜೋಳಿಗೆಯನ್ನಾಗಲಿ, ಪಾದರಕ್ಷೆಗಳನ್ನಾಗಲಿ ತೆಗೆದುಕೊಂಡು ಹೋಗದಿರಿ. ದಾರಿಯಲ್ಲಿ ಯಾರಿಗೊ ವಂದನೋಪಚಾರಗಳನ್ನು ಮಾಡಿಕೊಂಡಿರಬೇಡಿ. ನೀವು ಯಾವ ಮನೆಗೆ ಹೋದರೂ, ’ ಮನೆಗೆ ಶಾಂತಿ,’ ಎಂದು ಆಶೀರ್ವಾದ ಮಾಡಿ. ಶಾಂತಿ ಪ್ರಿಯನು ಅಲ್ಲಿದ್ದರೆ ನಿಮ್ಮ ಆಶೀರ್ವಾದವು ಅವನ ಮೇಲೆ ನೆಲೆಸುವುದು. ಇಲ್ಲವಾದರೆ, ಅದು ನಿಮಗೆ ಹಿಂದಿರುಗುವುದು. ಮನೆಯಿಂದ ಮನೆಗೆ ಹೋಗದೆ ಮನೆಯಲ್ಲೇ ತಂಗಿದ್ದು, ಅಲ್ಲಿಯವರು ಕೊಡುವ ಅನ್ನಪಾನ್ನೀಯಗಳನ್ನು ಸೇವಿಸಿರಿ. ದುಡಿಮೆಗಾರನು ಕೂಲಿಗೆ ಬಾಧ್ಯನು.

ನೀವು ಯಾವ ಊರಿಗೆ ಹೋದರೂ ಜನರು ನಿಮ್ಮನ್ನು ಸ್ವಾಗತಿಸಿದಾಗ, ಅವರು ಬಡಿಸಿದ್ದನ್ನು ಭುಜಿಸಿರಿ. ಅಲ್ಲಿರುವ ರೋಗಿಗಳನ್ನು ಗುಣಪಡಿಸಿರಿ. ’ದೇವರ ಸಾಮ್ರಾಜ್ಯ ನಿಮ್ಮನ್ನು ಸಮೀಪಿಸಿದೆ,ಎಂದು ತಿಳಿಸಿರಿ.

15-10-2010 - ರಟ್ಟಾಗದ ಗುಟ್ಟಿಲ್ಲ

ಸಂತ ಲೂಕನ ಶುಭ ಸಂದೇಶ – 12: 1-7

"ಒಳಕೋಣೆಗಳಲ್ಲಿ ಕಿವಿಮಾತಾಗಿ ನೀವು ಹೇಳಿದ್ದೆಲ್ಲವನ್ನು ಮನೆಮಾಳಿಗೆಗಳ ಮೇಲಿಂದ ಸಾರಲಾಗುವುದು,”

ಇಷ್ಟರಲ್ಲೇ, ಸಾವಿರಾರು ಜನರು ಒಬ್ಬರನ್ನೊಬ್ಬರು ಒತ್ತರಿಸುತ್ತಾ ಕಿಕ್ಕಿರಿದು ನೆರೆದಿದ್ದರು. ಯೇಸು ಮೊದಲು ಶಿಷ್ಯರನ್ನು ಉದ್ದೇಶಿಸಿ,“ಫರಿಸಾಯರ’ಹುಳಿಹಿಟ್ಟಿನ’ ಬಗ್ಗೆ,ಅಂದರೆ ಅವರ ಕಪಟತನದ ಬಗ್ಗೆ,ಎಚ್ಚರಿಕೆಯಿಂದಿರಿ.  ಮುಚ್ಚುಮರೆಯಾಗಿರುವುದೆಲ್ಲಾ ಬಟ್ಟ ಬಯಲಾಗುವುದು; ಗುಟ್ಟಾಗಿರುವುದೆಲ್ಲಾ ರಟ್ಟಾಗುವುದು. ನೀವು ಕತ್ತಲಲ್ಲಿ ಹೇಳಿದ್ದೆಲ್ಲವನ್ನು ಬೆಳಕಿನಲ್ಲಿ ಕೇಳಲಾಗುವುದು; ಒಳಕೋಣೆಗಳಲ್ಲಿ ಕಿವಿಮಾತಾಗಿ ನೀವು ಹೇಳಿದ್ದೆಲ್ಲವನ್ನು ಮನೆಮಾಳಿಗೆಗಳ ಮೇಲಿಂದ ಸಾರಲಾಗುವುದು,” ಎಂದರು.

“ಗೆಳೆಯರೇ, ನನ್ನ ಮಾರಿಗೆ ಕಿವಿಗೊಡಿ: ದೇಹವನ್ನು ಕೊಂದುಹಾಕುವವರಿಗೆ ಭಯಪಡಬೇಡಿ. ಕೊಂದುಹಾಕಿದ ಮೇಲೆ ಹೆಚ್ಚೇನು ಮಾಡಲು ಅವರಿಂದಾಗದು. ನೀವು ಯಾರಿಗೆ ಭಯಪಡಬೇಕೆಂದು ಹೇಳುತ್ತೇನೆ, ಕೇಳಿ: ಸತ್ತ ಮೇಲೆ ನರಕದೊಳಕ್ಕೆ ದಬ್ಬಲು ಅಧಿಕಾರವುಳ್ಳಾತನಿಗೆ ಭಯಪಡಿ. ಹೌದು, ಆತನಿಗೆ ಭಯಪಡಿರಂದು ನಿಮಗೆ ಒತ್ತಿಹೇಳುತ್ತೇನೆ.

“ಎರಡು ಕಾಸಿಗೆ ಐದು ಗುಬ್ಬಚ್ಚಿಗಳನ್ನು ಮಾರುವುದಿಲ್ಲವೇ? ಆದರೂ ಅವುಗಳಲ್ಲಿ ಒಂದನ್ನೂ ದೇವರು ಮರೆಯುವುದಿಲ್ಲ. ಅಷ್ಟು ಮಾತ್ರವಲ್ಲ, ನಿಮ್ಮ ತಲೆಗೂದಲುಗಳು ಸಹ ಎಲ್ಲವೂ ಎಣಿಕೆಯಾಗಿವೆ. ಭಯಪಡಬೇಡಿ; ಅನೇಕ ಗುಬ್ಬಚ್ಚಿಗಳಿಗಿಂತ ನೀವು ಎಷ್ಟೋ ಮೌಲ್ಯವುಳ್ಳವರು.

14-10-2010 - ದೇವರ ಜ್ಞಾನ

ಸಂತ ಲೂಕನ ಶುಭ ಸಂದೇಶ - 11: 47-54

"ಜ್ಞಾನವೆಂಬ ಮಂದಿರದ ಬೀಗದ ಕೈಯನ್ನು ನಿಮ್ಮಲ್ಲೇ ಇಟ್ಟುಕೊಂಡಿದ್ದೀರಿ. ನೀವೂ ಒಳಗೆ ಪ್ರವೇಶಿಸುವುದಿಲ್ಲ; ಪ್ರವೇಶಿಸಲು ಯತ್ನಿಸುವವರನ್ನೂ ತಡೆಗಟ್ಟುತೀರಿ“

ನಿಮಗೆ ಧಿಕ್ಕಾರ ! ನಿಮ್ಮಪಿತೃಗಳು ಕೊಂದು ಹಾಕಿದ ಪ್ರವಾದಿಗಳಿಗೆ ನೀವು ಅಂದದ ಗೋರಿಗಳನ್ನು ನಿರ್ಮಿಸುತ್ತೀರಿ. ನಿಮ್ಮ ಪಿತೃಗಳು ಕೃತ್ಯಗಳನ್ನು ನೀವು ಅನುಮೋದಿಸುತ್ತೀರಿ ಎಂಬುದಕ್ಕೆ ಇದೇ ಸಾಕ್ಷಿ. ಏಕೆಂದರೆ, ಪ್ರವಾದಿಗಳನ್ನು ಕೊಂದವರು ಅವರಾದರೆ, ಗೋರಿ ನಿರ್ಮಿಸುತ್ತಿರುವವರು ನೀವು. ಈ ಕಾರಣದಿಂದಲೇ ’ದೇವರ ಜ್ಞಾನವು’ ಹೇಳಿರುವುದೇನೆಂದರೆ – ’ನಾನು ಅವರ ಬಳಿಗೆ ಪ್ರವಾದಿಗಳನ್ನೂ ಪ್ರೇಷಿತರನ್ನೂ ಕಳುಹಿಸುವೆನು; ಅವರಲ್ಲಿ ಕೆಲವರನ್ನು ಕೊಲೆ ಮಾಡುವರು; ಕೆಲವರನ್ನು ಚಿತ್ರಹಿಂಸೆಪಡಿಸುವರು. ಲೋಕಾದಿಯಿಂದ ಸುರಿಸಲಾದ ಎಲ್ಲಾ ಪ್ರವಾದಿಗಳ ರಕ್ತಕ್ಕೂ ಅಂದರೆ, ಹೇಬೆಲನ ರಕ್ತ ಮೊದಲ್ಗೊಂಡು, ಬಲಿ ಪೀಠಕ್ಕೂ ದೇವಾಲಯಕ್ಕೂ ನಡುವೆ ಹತನಾದ ಜಕರೀಯನ ರಕ್ತದವರೆಗೂ ಈ ಪೀಳಿಗೆಯವರು ಲೆಕ್ಕ ಕೊಡಬೇಕಾಗುವುದು. ಹೌದು, ಈ ಪೀಳಿಗೆಯವರೇ ಲೆಕ್ಕ ಕೊಡಬೇಕಾಗಿವುದೆಂದು ನಿಮಗೆ ಸ್ಪಷ್ಟವಾಗಿ ಹೇಳುತ್ತೇನೆ. ಧರ್ಮಶಾಸ್ತ್ರಜ್ಞರೇ, ನಿಮಗೆ ಧಿಕ್ಕಾರ ! ಜ್ಞಾನವೆಂಬ ಮಂದಿರದ ಬೀಗದ ಕೈಯನ್ನು ನಿಮ್ಮಲ್ಲೇ ಇಟ್ಟುಕೊಂಡಿದ್ದೀರಿ. ನೀವು ಒಳಗೆ ಪ್ರವೇಶಿಸುವುದಿಲ್ಲ; ಪ್ರವೇಶಿಸಲು ಯತ್ನಿಸುವವರನ್ನೂ ತಡೆಗಟ್ಟುತೀರಿ,“ ಎಂದರು. 

ಬಳಿಕ ಯೇಸು ಅಲ್ಲಿಂದ ಹೊರಗೆ ಬಂದಾಗ ಧರ್ಮಶಾಸ್ತ್ರಿಗಳೂ ಫರಿಸಾಯರೂ ಅವರನ್ನು ಉಗ್ರವಾಗಿ ಪ್ರತಿಭಟಿಸಲಾರಂಭಿಸಿದರು. ಹಲವಾರು ವಿಷಯಗಳನ್ನು ಕುರಿತು ಮಾತಾಡುವಂತೆ ಕೆಣಕಿ, ಅವರ ಮಾತಿನಲ್ಲಿ ಏನಾದರೂ ತಫ್ಫು ಕಂಡು ಹಿಡಿಯಲೇಬೇಕೆಂದು ಹೊಂಚುಹಾಕುತ್ತಿದ್ದರು.

13-10-2010 - ನೆಲಸಮವಾದ ಸಮಾಧಿಗಳು

ಸಂತ ಲೂಕನ ಶುಭ ಸಂದೇಶ - 11: 42-46

"ನೀವು ನೆಲಸಮವಾದ ಸಮಾಧಿಗಳಂತೆ ಇದ್ದೀರಿ. ಸಮಾಧಿಗಳೆಂದು ತಿಳಿಯದೆಯೆ ಜನರು ಅವುಗಳ ಮೇಲೆ ನಡೆದಾಡುತ್ತಾರೆ,” 

“ಫರಿಸಾಯರೇ, ನಿಮಗೆ ಧಿಕ್ಕಾರ ! ನೀವು ಪುದಿನ, ಸದಾಪು ಮುಂತಾದ ಪಲ್ಯಗಳಲ್ಲೂ ಹತ್ತರಲ್ಲಿ ಒಂದು ಪಾಲು ಸಲ್ಲಿಸುತ್ತೀರಿ, ಸರಿ. ಆದರೆ ನ್ಯಾಯನೀತಿಯನ್ನೂ ದೇವರ ಪ್ರೀತಿಯನ್ನೂ ಬದಿಗೊತ್ತಿದ್ದೀರಿ. ನೀವು ಅವುಗಳನ್ನು ಅಲಕ್ಷ್ಯ ಮಾಡದೆ, ಇವುಗಳನ್ನು ಅನುಷ್ಠಾನಕ್ಕೆ ತರಬೇಕಾಗಿತ್ತು. “ಫರಿಸಾಯರೇ, ನಿಮಗೆ ಧಿಕ್ಕಾರ ! ಪ್ರಾರ್ಥನಾ ಮಂದಿರಗಳಲ್ಲಿ ಪ್ರಧಾನ ಆಸನಗಳನ್ನೂ ಪೇಟೆ ಬೀದಿಗಳಲ್ಲಿ ವಂದನೋಪಚಾರಗಳನ್ನೂ ಅಪೇಕ್ಷಿಸುತ್ತೀರಿ. ಅಯ್ಯೋ, ನಿಮಗೆ ಧಿಕ್ಕಾರ ! ನೀವು ನೆಲಸಮವಾದ ಸಮಾಧಿಗಳಂತೆ ಇದ್ದೀರಿ. ಸಮಾಧಿಗಳೆಂದು ತಿಳಿಯದೆಯೆ ಜನರು ಅವುಗಳ ಮೇಲೆ ನಡೆದಾಡುತ್ತಾರೆ,” ಎಂದರು.

ಇದನ್ನು ಕೇಳಿದ ಒಬ್ಬ ಧರ್ಮಶಾಸ್ತ್ರಜ್ಞನು, “ಬೋಧಕರೇ, ನೀವು ಹೀಗೆ ಮಾತನಾಡುವುದರಿಂದ ನಮ್ಮನ್ನೂ ಖಂಡಿಸಿದಂತಾಯಿತು,” ಎಂದನು. ಅದಕ್ಕೆ ಯೇಸು, “ಶಾಸ್ತ್ರಜ್ಞರೇ, ನಿಮಗೂ ಧಿಕ್ಕಾರ ! ಹೊರಲಾಗದ ಹೊರೆಗಳನ್ನು ನೀವು ಜನರ ಮೇಲೆ ಹೇರುತ್ತೀರಿ; ನೀವಾದರೋ ನಿಮ್ಮ ಕಿರುಬೆರಳಿನಿಂದ ಕೂಡ ಅವುಗಳನ್ನು ಮುಟ್ಟುವುದಿಲ್ಲ.

12-10-2010 - ಕೊಳಕು ಥಳಕು

ಸಂತ ಲೂಕನ ಶುಭ ಸಂದೇಶ -  11: 37-41

ಹೊರಭಾಗವನ್ನು ಮಾಡಿದಾತನು ಒಳಭಾಗವನ್ನೂ ಮಾಡಲಿಲ್ಲವೇ?

ಯೇಸುಸ್ವಾಮಿ ತಮ್ಮ ಬೋಧನೆಯನ್ನು ಮುಗಿಸಿದಾಗ, ಫರಿಸಾಯನೊಬ್ಬನು ಅವರನ್ನು ಊಟಕ್ಕೆ ಆಮಂತ್ರಿಸಿದನು. ಯೇಸು ಒಳಕ್ಕೆ ಹೋಗಿ ಊಟಕ್ಕೆ ಕುಳಿತುಕೊಂಡರು. ಊಟಕ್ಕೆ ಮುಂಚೆ ಅವರು ಕೈ ತೊಳೆಯದೆ ಹೋದುದನ್ನು ಕಂಡು ಫರಿಸಾಯನು ಚಕಿತವಾದನು. ಆಗ ಯೇಸು, “ಫರಿಸಾಯರಾದ ನೀವು ಲೋಟ ಹಾಗೂ ಊಟದ ತಟ್ಟೆಗಳ ಹೊರಭಾಗವನ್ನು ಶುಚಿ ಮಾಡುತ್ತೀರಿ; ಆದರೆ ನಿಮ್ಮ ಒಳಭಾಗವು ಲೋಭದಿಂದಲೂ ಕೆಡುಕಿನಿಂದಲೂ ತುಂಬಿದೆ. ಮೂರ್ಖರೇ, ಹೊರಭಾಗವನ್ನು ಮಾಡಿದಾತನು ಒಳಭಾಗವನ್ನೂ ಮಾಡಲಿಲ್ಲವೇ? ನಿಮ್ಮ ತಟ್ಟೆ, ಲೋಟಗಳಲ್ಲಿ ಇರುವುದನ್ನು ಮೊಟ್ಟಮೊದಲು ದಾನಮಾಡಿರಿ. ಆಗ ಸಮಸ್ತವೂ ನಿಮಗೆ ಶುದ್ಧಿಯಾಗಿರುವುದು.

11-10-2010 - ಯೋನನಿಗಿಂತಲೂ ಮೇಲಾದವನು



ಸಂತ ಲೂಕನ ಶುಭ ಸಂದೇಶ - 11: 29 – 32

"ಈ ಪೀಳಿಗೆ ಕೆಟ್ಟ ಪಿಳಿಗೆ.ಇದು ಅದ್ಭುತಕಾರ್ಯವನ್ನು ಸಂಕೇತವಾಗಿ ಕೋರುತ್ತದೆ"

ಜನರ ಗುಂಪು ಹೆಚ್ಚುತ್ತಿದ್ದಾಗ, ಯೇಸು ಸ್ವಾಮಿ ಹೀಗೆಂದು ಮುಂದುವರಿಸಿದರು:“ಈ ಪೀಳಿಗೆ ಕೆಟ್ಟ ಪಿಳಿಗೆ.ಇದು ಅದ್ಭುತಕಾರ್ಯವನ್ನು ಸಂಕೇತವಾಗಿ ಕೋರುತ್ತದೆ. ಪ್ರವಾದಿ ಯೋನನ ಸಂಕೇತವೇ ಹೊರತು ಬೇರೆ ಯಾವ ಸಂಕೇತವೂ ಇದಕ್ಕೆ ದೊರಕದು. ಹೇಗೆಂದರೆ, ನಿನೆವೆ ನಗರದ ಜನರಿಗೆ ಪ್ರವಾದಿ ಯೋನನು ಸಂಕೇತವಾದಂತೆ ನರಪುತ್ರನು ಈ ಸಂತತಿಗೆ ಸಂಕೇತವಾಗಿರುವನು.

“ದೈವ ತೀರ್ಪಿನ ದಿನ ದಕ್ಷಿಣದೇಶದ ರಾಣಿ ಈ ಪೀಳಿಗೆಗೆ ಎದುರಾಗಿ ನಿಂತುಕೊಂಡು, ಇವರನ್ನು ಅಪರಾಧಿಗಳೆಂದು ತೋರಿಸುವಳು. ಆಕೆ ಸೊಲೊಮೋನನ ಜ್ಞಾನೋಕ್ತಿಗಳನ್ನು ಕೇಳುವುದಕ್ಕಾಗಿ ದೇಶದ ಕಟ್ಟಕಡೆಯಿಂದ ಬಂದಳು. ಆದರೆ, ಸೊಲೊಮೋನನಿಗಿಂತಲೂ ಮೇಲಾದವನು ಇಗೋ, ಇಲ್ಲಿದ್ದಾನೆ. ತೀರ್ಪಿನ ದಿನ ನಿನೆವೆ ನಗರದವರು ಈ ಪೀಳಿಗೆಗೆ ಎದುರಾಗಿ ನಿಂತು ಇದನ್ನು ಅಪರಾಧಿ ಎಂದು ತೋರಿಸಿವರು. ಏಕೆಂದರೆ, ಪ್ರವಾದಿ ಯೋನನ ಬೋಧನೆಯನ್ನು ಕೇಳಿ ಪಶ್ಚಾತ್ತಾಪಪಟ್ಟು ಅವರು ದೇವರಿಗೆ ಅಭಿಮುಖರಾದರು. ಆದರೆ ಪ್ರವಾದಿ ಯೋನನಿಗಿಂತಲೂ ಮೇಲಾದವನು ಇಗೋ ಇಲ್ಲಿದ್ದಾನೆ."

06-10-2010 - ಸರಳ ಪ್ರಾರ್ಥನೆ



ಸಂತ ಲೂಕನ ಶುಭ ಸಂದೇಶ - 11: 1-4

ನಮಗೆ ತಪ್ಪು ಮಾಡಿದ ಪ್ರತಿಯೊಬ್ಬನನ್ನು ನಾವು ಕ್ಷಮಿಸುವುದರಿಂದ, ನಮ್ಮ ಪಾಪಗಳನ್ನು ಕ್ಷಮಿಸಿರಿ

ಒಮ್ಮೆ ಯೇಸುಸ್ವಾಮಿ ಒಂದು ಸ್ಥಳದಲ್ಲಿ ಪ್ರಾರ್ಥನೆ ಮಾಡುತ್ತಾ ಇದ್ದರು. ಅವರ ಪ್ರಾರ್ಥನೆ ಮುಗಿದ ಮೇಲೆ ಶಿಷ್ಯರಲ್ಲಿ ಒಬ್ಬನು, “ಪ್ರಭುವೇ, ಯೊವಾನ್ನನ್ನು ತನ್ನ ಶಿಷ್ಯರಿಗೆ ಪ್ರಾರ್ಥನೆ ಮಾಡುವುದನ್ನು ಕಲಿಸಿದ ಹಾಗೆ ನಮಗೂ ಕಲಿಸಿಕೊಡಿ, “ಎಂದನು.
ಅದಕ್ಕೆ ಯೇಸು ಇಂತೆಂದರು,“ನೀವು ಹೀಗೆ ಪ್ರಾರ್ಥನೆಮಾಡಬೇಕು:
"ತಂದೆಯೇ, ನಿಮ್ಮ ಪವಿತ್ರನಾಮ ಪೂಜಿತವಾಗಲಿ; ನಿಮ್ಮ ಸಾಮ್ರಾಜ್ಯ ಬರಲಿ.
ನಮಗೆ ಅಗತ್ಯವಾದ ಆಹಾರವನ್ನು ಅನುದಿನವೂ ಕೊಡಿ.
ನಮಗೆ ತಪ್ಪು ಮಾಡಿದ ಪ್ರತಿಯೊಬ್ಬನನ್ನು ನಾವು ಕ್ಷಮಿಸುವುದರಿಂದ,
ನಮ್ಮ ಪಾಪಗಳನ್ನು ಕ್ಷಮಿಸಿರಿ.
ನಮ್ಮನ್ನು ಶೋಧನೆಗೆ ಒಳಪಡಿಸಬೇಡಿ.”

05-10-2010 - ಸೇವಾಸಕ್ತರು ಹಾಗೂ ಧ್ಯಾನಾಸಕ್ತರು

ಸಂತ ಲೂಕನ ಶುಭ ಸಂದೇಶ - 10: 38-42

ಸೇವಾಸಕ್ತ ಮಾರ್ತಳು – ಧ್ಯಾನಾಸಕ್ತ ಮರಿಯಳು

ಯೇಸು ಸ್ವಾಮಿ ತಮ್ಮ ಶಿಷ್ಯಯರೊಡನೆ ಪ್ರಯಾಣ ಮುಂದುವರಿಸಿ ಒಂದು ಹಳ್ಳಿಗೆ ಬಂದರು. ಅಲ್ಲಿ ಮಾರ್ತಳೆಂಬ ಮಹಿಳೆ ಅವರನ್ನು ತಮ್ಮ ಮನೆಗೆ ಆಮಂತ್ರಿಸಿದಳು. ಆಕೆಗೆ ಮರಿಯಳೆಂಬ ಸೋದರಿ ಇದ್ದಳು. ಈಕೆ ಪ್ರಭುವಿನ ಪಾದತಳದಲ್ಲಿ ಕುಳಿತುಕೊಂಡು ಅವರ ಬೋಧನೆಯನ್ನು ಆಲಿಸುತ್ತಿದ್ದಳು. ಮಾರ್ತಳಾದರೋ, ಅತಿಥಿಸತ್ಕಾರದ ಗಡಿಬಿಡಿಯಲ್ಲಿ ಇದ್ದಳು. ಅವಳು ಬಂದು, “ಪ್ರಭೂ, ನನ್ನ ಸೋದರಿ ಈ ಕೆಲಸವನ್ನೆಲ್ಲಾ ನನ್ನೊಬ್ಬಳಿಗೇ ಬಿಟ್ಟಿದ್ದಾಳೆ. ನೀವಿದನ್ನು ಗಮನಿಸಬಾರದೇ? ನನಗೆ ಸಹಾಯ ಮಾಡುವಂತೆ ಅವಳಿಗೆ ಹೇಳಿ,” ಎಂದಳು. ಯೇಸು ಆಕೆಗೆ ಪ್ರತ್ಯತ್ತರವಾಗಿ, “ಮಾರ್ತಾ, ಮಾರ್ತಾ, ನೀನು ಅನಾವಶ್ಯ ಚಿಂತೆ ಪೇಚಾಟಗಳಿಗೆ  ಒಳಗಾಗಿರುವೆ. ಆದರೆ ಅಗತ್ಯವಾದುದು ಒಂದೇ. ಮರಿಯಳು ಉತ್ತಮವಾದುದನ್ನೇ ಆರಿಸಿಕೊಂಡಿದ್ದಾಳೆ. ಅದನ್ನು ಆಕೆಯಿಂದ ಕಸಿದುಕೊಳ್ಳಲಾಗದು,” ಎಂದರು.

04-10-2010 - ಸದಯ ಸಮಾರಿತನ ಸಾಮತಿ


ಸಂತ ಲೂಕನು ಬರೆದ ಶುಭ ಸಂದೇಶ – 10: 25-37

 “ದಯೆ ತೋರಿದವನೇ ನೆರೆಯವನು, ಹೋಗು, ನೀನೂ ಹಾಗೆಯೇ ಮಾಡು” 

ಒಬ್ಬ ಶಾಸ್ತ್ರಜ್ಞನು ಎದ್ದು ಯೇಸು ಸ್ವಾಮಿಯನ್ನು ಪರೀಕ್ಷಿಸುವ ಉದ್ದೇಶದಿಂದ “ಬೋಧಕರೇ, ಅಮರಜೀವ ನನಗೆ ಪ್ರಾಪ್ತಿ ಆಗಬೇಕಾದರೆ ನಾನು ಮಾಡಬೇಕಾದುದು ಏನು?” ಎಂದು ಕೇಳಿದನು. ಅದಕ್ಕೆ ಯೇಸು, “ಧರ್ಮಶಾಸ್ತ್ರದಲ್ಲಿ ಏನು ಬರೆದಿದೆ? ಹೇಗೆ ಪಠಿಸುತ್ತೀಯೆ?” ಎಂದು ಮರುಪ್ರಶ್ನೆ ಹಾಕಿದರು. ಅವನು, “ನಿನ್ನ ಸರ್ವೇಶ್ವರನಾದ ದೇವರನ್ನು ನಿನ್ನ ಪೂರ್ಣ  ಹೃದಯದಿಂದಲೂ ನಿನ್ನ ಪೂರ್ಣ ಆತ್ಮದಿಂದಲೂ ನಿನ್ನ ಪೂರ್ಣ ಶಕ್ತಿಯಿಂದಲೂ ನಿನ್ನ ಪೂರ್ಣ ಮನಸ್ಸಿನಿಂದಲೂ ಪ್ರೀತಿಸು  ಮತ್ತು ನಿನ್ನನ್ನು ನೀನೇ ಪ್ರೀತಿಸಿಕೊಳ್ಳುವಂತೆ ನಿನ್ನ ನೆರೆಯವನನ್ನೂ ಪ್ರೀತಿಸು’ ಎಂದಿದೆ,” ಎಂದು ಉತ್ತರಕೊಟ್ಟನು. ಯೇಸು, “ಸರಿಯಾಗಿ ಉತ್ತರಕೊಟ್ಟೆ. ಅದರಂತೆ ಮಾಡು. ನಿನಗೆ ಅಮರಜೀವ ಲಭಿಸುವುದು,” ಎಂದರು. ಆದರೆ ಆ ಶಾಸ್ತ್ರಜ್ಞನು ತನ್ನನ್ನು ತಾನೇ ಸಮರ್ಥಿಸಿಕೊಳ್ಳಲು, “ನನ್ನ ನೆರೆಯವನು ಯಾರು? ಎಂದು ಯೇಸುವನ್ನು ಮತ್ತೆ ಪ್ರಶ್ನಿಸಿದನು. ಆಗ ಯೇಸು ಅವನಿಗೆ ಹೀಗೆಂದು ವಿವರಿಸಿದರು.

“ಒಬ್ಬನು ಜೆರುಸಲೇಮಿನಿಂದ ಇಳಿದು ಜೆರಿಕೋವಿಗೆ ಪ್ರಯಾಣ ಮಾಡುತ್ತಿದ್ದಾಗ, ದರೋಡೆಗಾರರ ಕೈಗೆ ಸಿಕ್ಕಿಬಿದ್ದ. ದರೋಡೆಗಾರರು ಅವನನ್ನು ಸುಲಿಗೆ ಮಾಡಿ, ಹೊಡೆದು ಬಡಿದು, ಅರಜೀವ ಮಾಡಿ ಅಲ್ಲೇ ಬಿಟ್ಟುಹೋದರು.ಅದೇ ಮಾರ್ಗವಾಗಿ ಒಬ್ಬ ಯಾಜಕನು ಹಾದು ಹೋಗಬೇಕಾಗಿ ಬಂದಿತು. ಈತನು, ಅವನನ್ನು ಕಂಡದ್ದೇ  ಆಚೆ ಬಳಸಿಕೊಂದಡು ಹೋದ. ಹಾಗೆಯೇ ಲೇವಿಯೊಬ್ಬನು ಆ ಸ್ಥಳಕ್ಕೆ ಬಂದು ಅವನನ್ನು ನೋಡಿ, ಹಾಗೆಯೇ ಬಳಸಿಕೊಂಡು ಹೋದ. ಆದರೆ ಆ ಮಾರ್ಗವಾಗಿ ಪ್ರಯಾಣ ಮಾಡುತ್ತಿದ್ದ ಒಬ್ಬ ಸಮಾರಿಯದವನು ಅಲ್ಲಿಗೆ ಬಂದಾಗ, ಅವನನ್ನು ಕಂಡು ಕನಿಕರಪಟ್ಟ. ಹತ್ತಿರಕ್ಕೆ ಹೋಗಿ ಅವನ ಗಾಯಗಳಿಗೆ ಎಣ್ಣೆಯನ್ನೂ ದ್ರಾಕ್ಷಾರಸವನ್ನೂ ಹಚ್ಚಿ ಅವುಗಳಿಗೆ ಬಟ್ಟೆ ಕಟ್ಟಿದ. ಬಳಿಕ ಅವನನ್ನು ತನ್ನ ಸ್ವಂತ ವಾಹಕಪಶುವಿನ ಮೇಲೆ ಹತ್ತಿಸಿಕೂಂಡು ಒಂದು ಛತ್ರಕ್ಕೆ ಕರೆದುಕೂಂಡು ಹೋಗಿ, ಆರೈಕೆ ಮಾಡಿದ. ಮಾರನೆಯ ದಿನ ಎರಡು ದಿನಾರಿ ನಾಣ್ಯಗಳನ್ನು ಛತ್ರದವನಿಗೆ ಕೊಟ್ಟು, ’ಇವನನ್ನು ಚೆನ್ನಾಗಿ ನೋಡಿಕೊ, ಇದಕ್ಕಿಂತ ಹೆಚ್ಚು ವೆಚ್ಚ ಆದರೆ ನಾನು ಹಿಂದಿರುಗಿ ಬರುವಾಗ ಸಲ್ಲಿಸುತ್ತೇನೆ ಎಂದ’. 
“ದರೋಡೆಗಾರರ ಕೈಗೆ ಸಿಕ್ಕಿದವನಿಗೆ ಈ ಮೂವರಲ್ಲಿ ಯಾರು ನೆರೆಯವನೆಂದು ನಿನಗೆ ತೋರುತ್ತದೆ?” ಎಂದು ಯೇಸು ಆ ಶಾಸ್ತ್ರಜ್ಞನನ್ನು ಕೇಳಿದರು. ಅದಕ್ಕೆ ಅವನು, “ದಯೆ ತೋರಿದವನೇ ನೆರೆಯವನು,” ಎಂದನು. ಆಗ ಯೇಸು, “ಹೋಗು, ನೀನೂ ಹಾಗೆಯೇ ಮಾಡು,” ಎಂದು ಹೇಳಿದರು.


02-10-2010 - ಎಪ್ಪತ್ತೆರಡು ಮಂದಿಯ ನಿಯೋಗ

ಸಂತ ಲೂಕನ ಶುಭ ಸಂದೇಶ – 10: 17-24

"ಜ್ಞಾನಿಗಳಿಗೂ ಮೇಧಾವಿಗಳಿಗೂ ಮರೆಮಾಡಿ, ಮಕ್ಕಳಂಥವರಿಗೆ ನೀವು ಶ್ರುತಪಡಿಸಿದ್ದೀರಿ"

ಕಳುಹಿಸಲಾಗಿದ್ದ ಎಪ್ಪತ್ತೆರಡು ಮಂದಿ ಸಂತೋಷಭರಿತರಾಗಿ ಹಿಂದಿರುಗಿ ಬಂದು, “ಸ್ವಾಮಿ, ನಿಮ್ಮ ಹೆಸರಿನಲ್ಲಿ ಆಜ್ಞೆಮಾಡಿದಾಗ ದೆವ್ವಗಳು ಕೂಡ ನಮಗೆ ಅಧೀನವಾಗುತ್ತವೆ,” ಎಂದು ವರದಿಮಾಡಿದರು. ಅದಕ್ಕೆ ಯೇಸು, “ಸೈತಾನನು ಆಕಾಶದಿಂದ ಸಿಡಿಲಿನಂತೆ ಬೀಳುವುದನ್ನು ಕಂಡೆನು. ಇಗೋ, ಸರ್ಪಗಳನ್ನು ಹಾಗೂ ಚೇಳುಗಳನ್ನು ತುಳಿಯುವುದಕ್ಕೂ ಶತ್ರುವಿನ ಸಮಸ್ತ ಶಕ್ತಿಯನ್ನು ಜಯಿಸುವುದಕ್ಕೂ ನಿಮಗೆ ಹಾನಿಮಾಡದು. ಆದರೂ ದೆವ್ವಗಳು ನಿಮಗೆ ಅಧೀನವಾಗಿವೆಯೆಂದು ಸಂತೋಷಪಡುವುದಕ್ಕಿಂತ ನಿಮ್ಮ ಹೆಸರುಗಳು ಸ್ವರ್ಗದಲ್ಲಿ ಲಿಖಿತವಾಗಿವೆ ಎಂದು ಸಂತೋಷಪಡಿರಿ,” ಎಂದು ಹೇಳಿದರು. 

ಅದೇ ಗಳಿಗೆಯಲ್ಲಿ ಯೇಸುಸ್ವಾಮಿ ಪವಿತ್ರಾತ್ಮರಿಂದ ಹರ್ಷಾವೇಶಗೊಂಡು, “ಪಿತನೇ, ಭೂಸ್ವರ್ಗಗಳ ಒಡೆಯನೇ, ಈ ವಿಷಯಗಳನ್ನು ಜ್ಞಾನಿಗಳಿಗೂ ಮೇಧಾವಿಗಳಿಗೂ ಮರೆಮಾಡಿ, ಮಕ್ಕಳಂಥವರಿಗೆ ನೀವು ಶ್ರುತಪಡಿಸಿದ್ದೀರಿ; ಇದಕ್ಕಾಗಿ ನಿಮ್ಮನ್ನು ವಂದಿಸುತ್ತೇನೆ. ಹೌದು ಪಿತನೇ, ಇದೇ ನಿಮ್ಮ ಸುಪ್ರೀತ ಸಂಕಲ್ಪ. ನನ್ನ ಪಿತ ಸಮಸ್ತವನ್ನೂ ನನ್ನ ವಶಕ್ಕೆ ಒಪ್ಪಿಸಿದ್ದಾರೆ. ಪುತ್ರನು ಯಾರೆಂದು ಪಿತನ ಹೊರತು ಬೇರಾರೂ ಅರಿಯರು. ಪಿತನು ಯಾರೆಂದು ಪುತ್ರನು ಮತ್ತು ಯಾರಿಗೆ ಪುತ್ರನು ಅವರನ್ನು ಶ್ರುತಪಡಿಸಲು ಇಚ್ಚಿಸುತ್ತಾನೋ ಅವನೇ ಹೊರತು ಮತ್ತಾರೂ ಅರಿಯರು,” ಎಂದು ಹೇಳಿದರು. ಅನಂತರ ಯೇಸು ಶಿಷ್ಯರ ಕಡೆ ತಿರುಗಿ, ಅವರಿಗೆ ಪ್ರತ್ಯೇಕವಾಗಿ, “ನೀವು ಕಾಣುವುದನ್ನು ಕಾಣುವ ಕಣ್ಣುಗಳು ಭಾಗ್ಯವುಳ್ಳವು. ಏಕೆಂದರೆ, ಎಷ್ಟೋ ಪ್ರವಾದಿಗಳು ಹಾಗೂ ಅರಸರು ನೀವು ನೋಡುವುದನ್ನು ನೋಡುವುದಕ್ಕೂ, ನೀವು ಕೇಳುವುದನ್ನು ಕೇಳುವುದಕ್ಕೂ ಆಶಿಸಿದರು. ಆದರೂ ಅದನ್ನು ಅವರು ನೋಡಲೂ ಇಲ್ಲ, ಕಾಣಲೂ ಇಲ್ಲ ಎಂದು ನಿಮಗೆ ಹೇಳುತ್ತೇನೆ,” ಎಂದರು. 

01.10.10 - ತೀರ್ಪಿನ ದಿನ

ಲೂಕನ ಶುಭ ಸಂದೇಶ - 10-13-16

"ನನ್ನನ್ನು ಅಲಕ್ಷ್ಯ ಮಾಡುವವನಾದರೋ ನನ್ನನ್ನು ಕಳುಹಿಸಿದಾತನನ್ನೆ ಅಲಕ್ಷ್ಯ ಮಾಡುತ್ತಾನೆ”

ಯೇಸು ಹೀಗೆಂದರು: “ಕೊರಾಜ್ಜಿನ್ ಪಟ್ಟಣವೇ, ನಿನಗೆ ಧಿಕ್ಕಾರ! ಬೆತ್ಸಾಯಿದ ಪಟ್ಟಣವೇ, ನಿನಗೆ ಧಿಕ್ಕಾರ! ನಿಮ್ಮಲಿ ಮಾಡಿದ ಅದ್ಭುತಕಾರ್ಯಗಳನ್ನು ಟೈರ್ ಮತ್ತು ಸಿದೋನ್ ಪಟ್ಟಣಗಳಲ್ಲಿ ಮಾಡಿದ್ದರೆ, ಅಲ್ಲಿಯವರು ಎಂದೋ ಗೋಣಿತಟ್ಟನ್ನು  ಉಟ್ಟುಕೊಂಡು, ಬೂದಿಯನ್ನು ಬಳಿದುಕೊಂಡು ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗುತ್ತಿದ್ದರು. ಆದುದರಿಂದ ತೀರ್ಪಿನ ದಿನ  ಟೈರ್ ಮತ್ತು ಸಿದೋನಿನ ಗತಿಯು ನಿಮಗಿಂತಲೂ ಸಹನೀಯವಾಗಿರುವುದು. ಎಲೈ ಕಫೆರ್ನವುಮ್ ಪಟ್ಟಣವೇ, ನೀನು ಸ್ವರ್ಗಕ್ಕೇರುವೆ ಇಂದು ನೆನಸುತ್ತೀಯೋ? ಇಲ್ಲ,  ಪಾತಾಳಕ್ಕೆ ಇಳಿಯುವೆ”

ಅನಂತರ ತಮ್ಮ ಶಿಷ್ಯರನ್ನು ಉದ್ದೆಶಿಸಿ, “ನಿಮ್ಮನ್ನು ಆಲಿಸಿವವನು ನನ್ನನ್ನೇ ಆಲಿಸುತ್ತಾನೆ; ನಿಮ್ಮನು ಅಲಕ್ಷ್ಯ ಮಾಡುವವನು ನನ್ನನ್ನೇ ಅಲಕ್ಷ್ಯ ಮಾಡುತ್ತಾನೆ. ನನ್ನನ್ನು ಅಲಕ್ಷ್ಯ ಮಾಡುವವನಾದರೋ ನನ್ನನ್ನು ಕಳುಹಿಸಿದಾತನನ್ನೆ ಅಲಕ್ಷ್ಯ ಮಾಡುತ್ತಾನೆ” ಎಂದರು.