ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

01.07.2019 - "ಸತ್ತವರೇ ತಮ್ಮ ಸತ್ತವರನ್ನು ಸಮಾಧಿ ಮಾಡಿಕೊಳ್ಳಲು; ನೀನು ನನ್ನನ್ನು ಹಿಂಬಾಲಿಸು,"

ಮೊದಲನೇ ವಾಚನ: ಆದಿಕಾಂಡ  18:16-33

ಆ ಮನುಷ್ಯರು ಅಲ್ಲಿಂದ ಹೊರಟು ಸೊದೋಮ್ ಕಾಣಿಸುತ್ತಿದ್ದ ಒಂದು ಸ್ಥಳಕ್ಕೆ ಬಂದರು. ಅವರನ್ನು ಸಾಗ ಕಳುಹಿಸುತ್ತಾ ಅಬ್ರಾಹಾಮನೂ ಅವರ ಜೊತೆಯಲ್ಲೇ ಅಲ್ಲಿಗೆ ಬಂದನು. ಆಗ ಸರ್ವೇಶ್ವರ ತಮ್ಮೊಳಗೆ ಇಂತೆಂದುಕೊಂಡರು: "ನಾನು ಮಾಡಬೇಕು ಎಂದಿರುವ ಕಾರ್ಯವನ್ನು ಅಬ್ರಾಹಾಮನಿಂದ ಮರೆಮಾಡುವುದು ಸರಿಯಲ್ಲ. ಅವನಿಂದ ಮಹಾ ಬಲಿಷ್ಟವಾದ ರಾಷ್ಟ್ರವೊಂದು ಹುಟ್ಟಬೇಕಾಗಿದೆ. ಅವನ ಮುಖಾಂತರ ಜಗದ ಎಲ್ಲ ರಾಷ್ಟ್ರಗಳಿಗೆ ನನ್ನ ಆಶೀರ್ವಾದ ದೊರಕಬೇಕಾಗಿದೆ. ಅವನು ತನ್ನ ಪುತ್ರ ಪೌತ್ರರಿಗೆ, "ನೀವು ನ್ಯಾಯ ನೀತಿಯನ್ನು ಪಾಲಿಸುತ್ತಾ ಸರ್ವೇಶ್ವರಸ್ವಾಮಿಯ ಮಾರ್ಗದಲ್ಲೇ ನಡೆಯಬೇಕು; ಹಾಗೆ ಮಾಡಿದರೆ ವಾಗ್ದಾನ ಮಾಡಿದುದನ್ನೆಲ್ಲ ಈಡೇರಿಸುವರು," ಎಂದು ಬೋಧಿಸಲೆಂದೇ ನಾನು ಅವನನ್ನು ಆರಿಸಿಕೊಂಡಿದ್ದೇನೆ," ಇದಲ್ಲದೆ ಸರ್ವೇಶ್ವರ, "ಸೊದೋಮ್ ಗೊಮೋರಗಳ ವಿರುದ್ಧ ಎಷ್ಟೋ ಘನತರವಾದ ದೂರುಗಳು ನನಗೆ ಬಂದಿವೆ; ಆ ಊರಿನವರ ಮೇಲೆ ಹೊರಿಸಲಾಗಿರುವ ಪಾಪ ಕೃತ್ಯವೂ ಘೋರವಾದುದು. ನನಗೆ ಮುಟ್ಟಿರುವ ದೂರಂತೆ ಅವರು ಮಾಡಿರೋ ಇಲ್ಲವೋ ಎಂದು ನೋಡಿ ತಿಳಿದುಕೊಳ್ಳುತ್ತೇನೆ. ಎಂದುಕೊಂಡರು. ಆಗ ಆ ಇಬ್ಬರು ಮನುಷ್ಯರು ಅಲ್ಲಿಂದ ಸೊದೋಮಿನ ಕಡೆಗೆ ಹೊರಟರು. ಆದರೆ ಅಬ್ರಾಹಾಮನು ಸರ್ವೇಶ್ವರಸ್ವಾಮಿಯ ಸಂಗಡವೇ ಉಳಿದುಕೊಂಡನು. ಅವನು ಅವರ ಹತ್ತಿರಕ್ಕೆ ಬಂದು, "ನೀವು ದುರ್ಜನರ ಸಂಗಡ ಸಜ್ಜನರನ್ನೂ ನಾಶ ಮಾಡುವಿರೋ? ಒಂದು ವೇಳೆ ಆ ಊರೊಳಗೆ ಐವತ್ತು ಮಂದಿ ಸಜ್ಜನರಿದ್ದಾರು. ಅದರಲ್ಲಿ ಐವತ್ತು ಮಂದಿ ಸಜ್ಜನರಿದ್ದರೂ ಆ ಉಳಿಸದೆ ನಾಶಮಾಡುವಿರೋ? ಹೀಗೆ ದುಷ್ಟರಿಗೂ ಸಿಷ್ಟರಿಗೂ ಭೇದ ಮಾಡದೆ ದುಷ್ಟರ ಸಂಗಡ ಸಜ್ಜನರನ್ನೂ ಸಂಹರಿಸುವುದು ನಿಮ್ಮಿಂದ ಎಂದಿಗೂ ಆಗಬಾರದು. ಇಡೀ ಜಗತ್ತಿನ ನ್ಯಾಯಾಧಿಪತಿ ಸರಿಯಾಗಿ ನ್ಯಾಯತೀರಿಸಬೇಕಲ್ಲವೆ?" ಎಂದನು. ಅದಕ್ಕೆ ಸರ್ವೇಶ್ವರ, "ಸೊದೋಮಿನಲ್ಲಿ ಐವತ್ತು ಮಂದಿ ಸಜ್ಜನರು ನನಗೆ ಸಿಕ್ಕಿದರೆ ಅವರ ನಿಮಿತ್ತ ಊರನ್ನೆಲ್ಲಾ ಉಳಿಸುತ್ತೇನೆ," ಎಂದರು. ಆಗ ಅಬ್ರಾಹಾಮನು " ನಾನಂತೂ ಮಣ್ಣುಬೂದಿ, ಆದರೂ ಸ್ವಾಮಿಯ ಸಂಗಡ ವಾದಿಸುವುದಕ್ಕೆ ಧೈರ್ಯಗೊಂಡಿದ್ದೇನೆ. ಒಂದು ವೇಳೆ ಐವತ್ತು ಮಂದಿ ಸಜ್ಜನರಿಗೆ ಐದು  ಮಂದಿ ಕಡಿಮೆಯಾಗಿದ್ದಾರು, ಐದು ಮಂದಿ ಕಡಿಮೆಯಾದುದಕ್ಕೆ ಪಟ್ಟಣವನ್ನೆಲ್ಲ ನಾಶ ಮಾಡುವಿರೋ?" ಎಂದು ಕೇಳಲು ಸರ್ವೇಶ್ವರ, "ಅಲ್ಲಿ ನಲವತ್ತೈದು ಮಂದಿ ಸಿಕ್ಕಿದರೆ ಅದನ್ನು ನಾಶಮಾಡುವುದಿಲ್ಲ" ಎಂದರು. ಮರಳುಗಾಡಿನಲ್ಲಿ ಶೂರಿಗೆ ಹೋಗುವ ಹಾದಿಪಕ್ಕದಲ್ಲಿದ್ದ ಒಂದು ಒರತೆಯ ಬಳಿ ಸ್ವಾಮಿಯ ದೂತನು ಅವಳನ್ನು ಕಂಡನು. "ಸಾರಯಳ ದಾಸಿಯಾದ ಹಾಗರಳೇ, ಎಲ್ಲಿಂದ ಬಂದೆ? ಎಲ್ಲಿಗೆ ಹೋಗುತ್ತಿರುವೆ?" ಎಂದು ವಿಚಾರಿಸಿದನು. "ನನ್ನ ಯಜಮಾನಿ ಸಾರಯಳ ಬಳಿಯಿಂದ ಓಡಿ ಹೋಗುತ್ತಿದ್ದೇನೆ," ಎಂದು ಉತ್ತರಕೊಟ್ಟಳು. ಅದಕ್ಕೆ ಆ ದೂತನು, "ನಿನ್ನ ಯಜಮಾನಿಯ ಬಳಿಗೆ ಹಿಂತಿರುಗು, ಅವಳಿಗೆ ತಗ್ಗಿ ನಡೆದುಕೊ," ಎಂದು ತಿಳಿಸಿದನು. ಅದೂ ಅಲ್ಲದೆ ಸ್ವಾಮಿಯ ದೂತನು, "ನಿನ್ನ ಸಂತಾನವನ್ನು ಲೆಕ್ಕಿಸಲಾಗದಷ್ಟು ದೊಡ್ಡದಾಗಿಸುವೆನು," ಎಂದು ಹೇಳಿ ಹಿಂತೆಂದನು: ಹುಟ್ಟುವನು ಮಗನೊಬ್ಬನು ಗರ್ಭಣಿಯಾದ ನಿನಗೆ, ಇಷ್ಮಾಯೇಲೆಂಬ ಹೆಸರನಿಡು ಅವನಿಗೆ ಕಾರಣ ಸರ್ವೇಶ್ವರ ಕಿವಿಗೊಟ್ಟಿಹನು ನಿನ್ನ ಮೊರೆಗೆ. ಬಾಳೂವನವನು ಕಾಡುಗತ್ತೆಯಂತೆ, ಎತ್ತುವನು ಕೈಯನು ಎಲ್ಲರ ಮೇಲೆ, ಎತ್ತುವರೆಲ್ಲರು ಕೈ ಅವನ ಮೇಲೆ ಬಾಳುವನು ಸೋದರರಿಗೆ ಎದುರುಬದುರಾಗಿ." ಹಾಗರಳು ಅಬ್ರಾಮನಿಗೆ ಒಬ್ಬ ಮಗನನ್ನು ಹೆತ್ತಳು. ಅಬ್ರಾಮನು ಅವನಿಗೆ ಇಷ್ಮಾಯೇಲ್ ಎಂದು ಹೆಸರಿಟ್ಟನು. ಆಗ ಅಬ್ರಾಮನಿಗೆ ಎಂಬತ್ತಾರು ವರ್ಷವಾಗಿತ್ತು.

ಕೀರ್ತನೆ:  103:1-2, 3-4, 8-9, 10-11

ಶ್ಲೋಕ: ಸ್ಥಾಪಿಸಿಹನು ಪ್ರಭು ಸ್ವರ್ಗದೊಳು ಸಿಂಹಾಸನವನು

ಶುಭಸಂದೇಶ: ಮತ್ತಾಯ 8:18-22


ದೊಡ್ಡ ಜನಸಮೂಹ ತಮ್ಮ ಸುತ್ತಲು ನಿಂತಿರುವುದನ್ನು ಯೇಸುಸ್ವಾಮಿ ನೋಡಿದರು. ಸರೋವರದ ಆಚೆಯ ದಡಕ್ಕೆ ಹೋಗಲು ತಮ್ಮ ಶಿಷ್ಯರಿಗೆ ಅಪ್ಪಣೆ ಮಾಡಿದರು. ಆಗ ಒಬ್ಬ ದರ್ಮಶಾಸ್ತ್ರಿ ಬಂದು, "ಗುರುವೇ , ನೀವು ಎಲ್ಲಿಗೆ ಹೋದರೂ ನಿಮ್ಮನ್ನು ಹಿಂಬಾಲಿಸಿ ಬರುತ್ತೇನೆ," ಎಂದನು. ಅದಕ್ಕೆ ಯೆಸು, " "ನರಿಗಳಿಗೆ ಗುಹೆಗಳುಂಟು; ಆಕಾಶದ ಪಕ್ಷಿಗಳಿಗೆ ಗೂಡುಗಳುಂಟು; ಆದರೆ ನರಪುತ್ರನಿಗೆ ತಲೆಯಿಟ್ಟು ಮಲಗಲೂ ಸ್ಥಳ ಇಲ್ಲ," ಎಂದರು. ಶಿಷ್ಯರಲ್ಲಿ ಮತ್ತೊಬ್ಬನು ಮುಂದೆ ಬಂದು, "ಸ್ವಾಮೀ, , ಮೊದಲು ನನ್ನ ತಂದೆಯ ಉತ್ತರಕ್ರಿಯೆಗಳನ್ನು ಮುಗಿಸಲು ಸಮಯ ಕೊಡಿ," ಎಂದು ಕೇಳಿದನು. ಅವನಿಗೆ ಯೇಸು, "ಸತ್ತವರೇ ತಮ್ಮ ಸತ್ತವರನ್ನು ಸಮಾಧಿ ಮಾಡಿಕೊಳ್ಳಲು; ನೀನು ನನ್ನನ್ನು ಹಿಂಬಾಲಿಸು," ಎಂದರು


30.06.2019 - "ನೇಗಿಲಿಗೆ ಕೈಹಾಕಿ ಹಿಂದಕ್ಕೆ ನೋಡುವವನು ದೇವರ ಸಾಮ್ರಾಜ್ಯಕ್ಕೆ ತಕ್ಕವನಲ್ಲ,"

ಮೊದಲನೇ ವಾಚನ: 1 ಅರಸುಗಳು  19:16, 19-21

ಸರ್ವೇಶ್ವರ ಎಲೀಯನಿಗೆ: "ನಿಂಷಿಯ ಮಗ ಯೇಹುವನ್ನು ಇಸ್ರಯೇಲರ ಅರಸನನ್ನಾಗಿ ಅಭಿಷೇಕಿಸು. ಆಬೇಲ್ ಮಹೋಲದವನೂ ಶಾಫಾಟನ ಮಗನೂ ಆದ ಎಲೀಷನನ್ನು ನಿನ್ನ  ಉತ್ತರಾಧಿಕಾರಿಯಾದ ಪ್ರವಾದಿಯನ್ನಾಗಿ ಅಭಿಷೇಕಿಸು" ಎಂದರು. ಎಲೀಯನು ಅಲ್ಲಿಂದ ಹೊರಟುಹೋಗಿ ಶಾಫಾಟನ ಮಗನಾದ ಎಲೀಷನನ್ನು ಕಂಡನು. ಅವನು ಹೊಲವನ್ನು ಉಳುವುದಕ್ಕೆ ಹನ್ನೆರಡು ಜೋಡಿ ಎತ್ತುಗಳನ್ನು ತಂದು ಹನ್ನೆರಡನೆಯ ಜೋಡಿಯಿಂದ ತಾನಾಗಿ ಉಳುತ್ತಿದ್ದನು. ಎಲೀಯನು ಅಲ್ಲಿಂದ ಹಾದುಹೋಗುವಾಗ ತನ್ನ ಕಂಬಳಿಯನ್ನು ಅವನ ಮೇಲೆ ಹಾಕಿದನು. ಕೂಡಲೆ ಅವನು ಎತ್ತುಗಳನ್ನು ಬಿಟ್ಟು ಓಡುತ್ತಾ ಬಂದು ಎಲೀಯನಿಗೆ, "ನನ್ನ ತಂದೆತಾಯಿಗಳನ್ನು ಮುದ್ದಿಟ್ಟು ಬರುವುದಕ್ಕೆ ಅಪ್ಪಣೆಯಾಗಲಿ; ಆನಂತರ ನಿನ್ನನ್ನು ಹಿಂಬಾಲಿಸುವೆನು," ಎಂದನು. ಅದಕ್ಕೆ ಎಲೀಯನು, "ಹೋಗಿ ಬಾ; ನಾನು ನಿನಗೆ ಮಾಡಬೇಕಾದ್ದನ್ನು ಮಾಡಿದ್ದೇನೆ," ಎಂದು ಉತ್ತರಕೊಟ್ಟನು. ಎಲೀಷನು ಹಿಂದಿರುಗಿ ಹೋಗಿ ತಾನು ಉಳುತ್ತಿದ್ದ ಜೋಡಿ ಎತ್ತುಗಳನ್ನು ತೆಗೆದುಕೊಂಡು ವಧಿಸಿ ಮಾಂಸವನ್ನು ನೊಗದ ಕಟ್ಟಿಗೆಯಿಂದ ಬೇಯಿಸಿ, ಜನರಿಗೆ ಔತಣ ಮಾಡಿಸಿದನು. ಆನಂತರ ಅವನು ಎದ್ದು ಎಲೀಯನನ್ನು ಹಿಂಬಾಲಿಸಿ ಅವನ ಶಿಷ್ಯನಾದನು.

ಕೀರ್ತನೆ: 16:1-2, 5, 7-8, 9-10, 11

ಶ್ಲೋಕ: ಪ್ರಭೂ, ನನ್ನ ಸ್ವತ್ತೂ ಸ್ವಾಸ್ಥ್ಯವೂ ನೀನೇ

ಎರಡನೇ ವಾಚನ: ಗಲಾತ್ಯರಿಗೆ  5:1, 13-18

ನಾವು ಮುಕ್ತ ಸ್ವಾತಂತ್ರ್ಯದಿಂದ ಬಾಳಬೇಕೆಂದು ಕ್ರಿಸ್ತಯೇಸು ನಮ್ಮನ್ನು ಬಿಡುಗಡೆ ಮಾಡಿದರು. ಆದ್ದರಿಂದ ದೃಢವಾಗಿರಿ.  ಗುಲಾಮಗಿರಿಯ ನೊಗಕ್ಕೆ ಪುನಃ ಕೊರಳನ್ನು ಒಡ್ಡದಿರಿ. ಸಹೋದರರೇ, ನೀವು ಮುಕ್ತ ಸ್ವಾತಂತ್ರ ಜೀವನವನ್ನು ನಡೆಸಬೇಕೆಂದು ದೇವರು ನಿಮ್ಮನ್ನು ಕರೆದಿದ್ದಾರೆ. ಆದರೆ, ಆ ಸ್ವಾತಂತ್ರ್ಯವನ್ನು ದೈಹಿಕ ಬಯಕೆಗಳಿಗೆ ಸಾಧನವಾಗಿ ಮಾಡಿಕೊಳ್ಳಬೇಡಿ. ಬದಲಾಗಿ, ನೀವು ಒಬ್ಬರಿಗೊಬ್ಬರು ಪ್ರೀತಿಯಿಂದ ಸೇವೆಮಾಡಿರಿ. "ನೀನು ನನ್ನನ್ನೇ ಪ್ರೀತಿಸಿಕೊಳ್ಳುವಂತೆ ನಿನ್ನ ನೆರೆಯವರನ್ನು ಪ್ರೀತಿಸು," ಎಂಬ ಒಂದೇ ವಚನದಲ್ಲಿ ಇಡೀ ಧರ್ಮಶಾಸ್ತ್ರವು ಅಡಗಿದೆ. ಆದರೆ ನೀವು ನಿಮ್ಮ ಕಚ್ಚಾಟ, ಕಿತ್ತಾಟ, ನುಗ್ಗಾಟ - ಇವುಗಳನ್ನು ನಿಲ್ಲಿಸದಿದ್ದರೆ ಒಬ್ಬರಿಂದೊಬ್ಬರು ವಿನಾಶವಾದಿರಿ, ಎಚ್ಚರಿಕೆ! ನಾನು ಹೇಳುವುದೇನೆಂದರೆ: ನೀವು ಪವಿತ್ರಾತ್ಮರ ಪ್ರೇರಣೆಗನುಸಾರವಾಗಿ ನಡೆದುಕೊಳ್ಳಬೇಕು. ಆಗ, ದೈಹಿಕ ವ್ಯಾಮೋಹಕ್ಕೆ ನೀವು ಈಡಾಗಲಾರಿರಿ. ಏಕೆಂದರೆ, ದೈಹಿಕ ವ್ಯಾಮೋಹವು ಪವಿತ್ರಾತ್ಮರಿಗೆ ವಿರುದ್ಧವಾಗಿದೆ. ಪವಿತ್ರಾತ್ಮ ಆ ವ್ಯಾಮೋಹಕ್ಕೆ ವಿರುದ್ಧವಾಗಿದ್ದಾರೆ. ಇವೆರಡೂ ಒಂದಕ್ಕೊಂದು ಕಾದಾಡುವುದರಿಂದ ನಿಮ್ಮ ಬಯಕೆ ಕೈಗೂಡುವುದಿಲ್ಲ. ನೀವು ಪವಿತ್ರಾತ್ಮ ನಡೆಸುವ ಮಾರ್ಗದಲ್ಲಿ ನಡೆಯುವವರಾದರೆ, ಧರ್ಮಶಾಸ್ತ್ರದ ವಿಧಿನಿಯಮಗಳಿಗೆ ನೀವು ಅಧೀನರಲ್ಲ.

ಶುಭಸಂದೇಶ: ಲೂಕ  9:51-62


ತಾವು ಸ್ವರ್ಗರೋಣವಾಗುವ ದಿನಗಳು ಸಮೀಪಿಸಲು ಯೇಸುಸ್ವಾಮಿ ಜೆರುಸಲೇಮಿಗೆ ಅಭಾಮುಖವಾಗಿ ಹೊರಡಲು  ನಿರ್ಧರಿಸಿದರು. ಅಲ್ಲದೆ ತಮಗೆ ಮುಂದಾಗಿ ದೂತರನ್ನು ಕಳುಹಿಸಿದರು. ಇವರು ಹೊರಟು ಯೇಸುವಿಗೆ ಬೇಕಾದುದನ್ನು ಸಿದ್ದಮಾಡಲು ಸಮಾರಿಯದ ಒಂದು ಹಳ್ಳಿಗೆ ಬಂದರು. ಯೇಸು ಜೆರುಸಲೇಮಿಗೆ ಹೋಗುತ್ತಿದ್ದ ಕಾರಣ ಅವರನ್ನು ಅಲ್ಲಿಯ ಜನರು ಬರಗೊಳಿಸಲಿಲ್ಲ. ಇದನ್ನು ಕಂಡು ಶಿಷ್ಯರಾದ ಯಕೋಬ ಮತ್ತು ಯೊವಾನ್ನ, "ಪ್ರಭೂ, ಆಕಾಶದಿಂದ ಅಗ್ನಿಮಳೆ ಸುರಿದು ಇವರನ್ನು ನಾಶ ಮಾಡಲಿ ಎಂದು ನಾವು ಆಜ್ಞೆಮಾಡಬಹುದಲ್ಲವೇ?" ಎಂದರು. ಯೇಸು ಅವರ ಕಡೆ ತಿರುಗಿ, "ನೀವು ಎಂಥ ಸ್ವಭಾವಿಗಳೆಂದು ನಿಮಗೇ ತಿಳಿಯದು. ನರಪುತ್ರನು ಬಂದಿರುವುದು ಮಾನವ ಜೀವಿಗಳ ವಿನಾಶಕ್ಕೆ ಅಲ್ಲ, ಉದ್ಧಾರಕ್ಕೆ" ಎಂದು ಅವರನ್ನು ಖಂಡಿಸಿದರು. ಆನಂತರ  ಯೇಸು ಮತ್ತು ಶಿಷ್ಯರು ಬೇರೆ ಹಳ್ಳಿಗೆ ಹೋದರು. ಅವರೆಲ್ಲರೂ ದಾರಿಯಲ್ಲಿ ಹೋಗುತ್ತಿದ್ದಾಗ ಒಬ್ಬನು ಯೇಸುವಿಗೆ, "ನೀವು ಎಲ್ಲಿಗೆ ಹೋದರೂ ನಿಮ್ಮನ್ನು ಹಿಂಬಾಲಿಸುತ್ತೇನೆ," ಎಂದನು. ಯೇಸು ಅವನಿಗೆ, "ನರಿಗಳಿಗೆ ಗುಹೆಗಳುಂಟು; ಆಕಾಶದ ಪಕ್ಷಿಗಳಿಗೆ ಗೂಡುಗಳುಂಟು; ಆದರೆ ನರಪುತ್ರನಿಗೆ ತಲೆಯಿಡುವುದಕ್ಕೂ ಸ್ಥಳವಿಲ್ಲ," ಎಂದರು. ಇನ್ನೊಬ್ಬನಿಗೆ ಯೇಸು, "ನನ್ನನ್ನು ಹಿಂಬಾಲಿಸು," ಎಂದು ಹೇಳಿದಾಗ ಅವನು, ಸ್ವಾಮೀ, ಮೊದಲು ನನ್ನ ತಂದೆಯ ಉತ್ತರಕ್ರಿಯೇಗಳನ್ನು ಮುಗಿಸುವ ತನಕ ಸಮಯಕೊಡಿ," ಎಂದನು. ಅವನಿಗೆ ಯೇಸು, "ಸತ್ತವರೇ ತಮ್ಮ ಸತ್ತವರನ್ನು ಸಮಾಧಿಮಾಡಿಕೊಳ್ಳಲಿ; ನೀನಾದರೋ, ಹೋಗು, ದೇವರ ಸಾಮ್ರಾಜ್ಯವನ್ನು ಪ್ರಚಾರಮಾಡು," ಎಂದು ಹೇಳಿದರು. ಮತ್ತೊಬ್ಬನು, "ನಿಮ್ಮನ್ನು ಹಿಂಬಾಲಿಸುತ್ತೇನೆ ಪ್ರಭೂ, ಆದರೆ ಮೊದಲು ಮನೆಯವರನ್ನು ಬೀಳ್ಕೊಟ್ಟು ಬರಲು ಅಪ್ಪಣೆ ಆಗಬೇಕು," ಎಂದನು. ಯೇಸು ಅವನನ್ನು ನೋಡಿ, "ನೇಗಿಲಿಗೆ ಕೈಹಾಕಿ ಹಿಂದಕ್ಕೆ ನೋಡುವವನು ದೇವರ ಸಾಮ್ರಾಜ್ಯಕ್ಕೆ ತಕ್ಕವನಲ್ಲ," ಎಂದರು.

29.06.2019 - "ನಿನ್ನ ಹೆಸರು ಪೇತ್ರ ; ಈ ಬಂಡೆಯ ಮೇಲೆ ನನ್ನ ಧರ್ಮಸಭೆಯನ್ನು ಕಟ್ಟುವೆನು"

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 12:1-11


ಅರಸ ಹೆರೋದನು ಕ್ರೈಸ್ತಸಭೆಯ ಸದಸ್ಯರಲ್ಲಿ ಕೆಲವರನ್ನು ಹಿಂಸಿಸಲು ಆರಂಭಿಸಿದನು. ಯೊವಾನ್ನನ ಸಹೋದರ ಯಕೋಬನನ್ನು ಖಡ್ಗದಿಂದ ಕೊಲ್ಲಿಸಿದನು. ಇದರಿಂದ ಯೆಹೂದ್ಯರಿಗೆ ಮೆಚ್ಚುಗೆಯಾಯಿತೆಂದು ತಿಳಿದು ಪೇತ್ರನನ್ನು ಬಂಧಿಸಿದನು. ಆಗ ಹುಳಿರಹಿತ ರೊಟ್ಟಿಯ ಹಬ್ಬ ನಡೆಯುತ್ತಿತ್ತು. ಪೇತ್ರನನ್ನು ಬಂಧಿಸಿದ ಮೇಲೆ ಸೆರೆಮನೆಯಲ್ಲಿಟ್ಟು ಅವನನ್ನು ಕಾಯಲು ನಾಲ್ಕು ನಾಲ್ಕು ಸೈನಿಕರಿದ್ದ ಚತುರ್ದಳಕ್ಕೆ ವಹಿಸಿದನು. ಪಾಸ್ಕಹಬ್ಬದ ನಂತರ ಪೇತ್ರನನ್ನು ಬಹಿರಂಗ ವಿಚಾರಣೆಗೆ ಗುರಿಪಡಿಸಲು ಉದ್ದೇಶಿಸಿದನು. ಪೇತ್ರನನ್ನು ಹೀಗೆ ಸೆರೆಯಲ್ಲಿಟ್ಟಿದ್ದಾಗ, ಸಭೆಯು ಅವನಿಗಾಗಿ ಶ್ರದ್ದೆಯಿಂದ ದೇವರಿಗೆ ಪ್ರಾರ್ಥನೆಮಾಡುತ್ತಿತ್ತು. ಹೆರೋದನು ಪೇತ್ರನನ್ನು ಜನರ ಮುಂದೆ ತರಬೇಕೆಂದಿದ್ದ ಹಿಂದಿನ ರಾತ್ರಿ ಅದು. ಪೇತ್ರನು ಇಬ್ಬರು ಸೈನಿಕರ ನಡುವೆ ನಿದ್ರಿಸುತ್ತಿದ್ದನು. ಅವನನ್ನು ಎರಡು ಸರಪಣಿಗಳಿಂದ ಕಟ್ಟಲಾಗಿತ್ತು. ಪಹರೆಯವರು ಸೆರೆಮನೆಯ ದ್ವಾರದಲ್ಲಿ ಕಾವಲಿದ್ದರು. ಫಕ್ಕನೆ ದೇವದೂತನೊಬ್ಬನು ಕಾಣಿಸಿಕೊಂಡನು. ಆ ಕೋಣೆಯೆಲ್ಲಾ ಪ್ರಕಾಶಮಯವಾಯಿತು. ದೂತನು ಪೇತ್ರನ ಭುಜವನ್ನು ತಟ್ಟಿ, ಎಬ್ಬಿಸಿ, "ಬೇಗನೆ ಏಳು," ಎಂದನು. ಆ ಕ್ಷಣವೇ ಪೇತ್ರನ ಕೈಗಳಿಗೆ ಕಟ್ಟಿದ್ದ ಸರಪಣಿಗಳು ಕಳಚಿಬಿದ್ದವು. ದೂತನು ಅವನಿಗೆ, "ಬಟ್ಟೆಯನ್ನು ತೊಟ್ಟುಕೋ, ಪಾದರಕ್ಷೆಯನ್ನು ಮೆಟ್ಟಿಕೋ," ಎಂದನು. ಪೇತ್ರನು ಹಾಗೆಯೇ ಮಾಡಿದನು. ಆನಂತರ ದೂತನು, "ನಿನ್ನ ಮೇಲುಹೊದಿಕೆಯನ್ನು ಹೊದ್ದುಕೊಂಡು ನನ್ನ ಜೊತೆ ಬಾ," ಎಂದನು. ಪೇತ್ರನು ಸೆರೆಮನೆಯ ಹೊರಕ್ಕೆ ಅವನನ್ನು ಹಿಂಬಾಲಿಸಿ ಹೋದನು. ಅಷ್ಟಾದರೂ ದೂತನು ಮಾಡುತ್ತಿರುವುದು ನಿಜವೆಂದು ಅವನಿಗೆ ಅರಿವಾಗಲಿಲ್ಲ; ತನಗೇನೋ ದರ್ಶನವಾಗುತ್ತಿದೆಯೆಂದೇ ಭಾವಿಸಿದನು. ಅವರು ಮೊದಲನೆಯ ಮತ್ತು ಎರಡನೆಯ ಕಾವಲನ್ನು ದಾಟಿದರು. ಪಟ್ಟಣದ ಕಡೆಯಿದ್ದ ಕಬ್ಬಿಣದ ದ್ವಾರದ ಬಳಿ ಬಂದರು. ಆ ದ್ವಾರ ತನ್ನಷ್ಟಕ್ಕೆ ತಾನೇ ತೆರೆಯಿತು. ಅವರು ಹೊರ ನಡೆದರು. ಬೀದಿಯೊಂದರಲ್ಲಿ ಹಾದು ಹೋಗುತ್ತಿರಲು ಒಮ್ಮೆಲೆ ದೂತನು ಪೇತ್ರನನ್ನು ಬಿಟ್ಟು ಅದೃಶ್ಯನಾದನು. ನಡೆದ ಸಂಗತಿ ಏನೆಂದು ಪೇತ್ರನಿಗೆ ಅರಿವಾದಾಗ ಆತನು, "ನಡೆದುದೆಲ್ಲಾ ಸಾಕ್ಷಾತ್ ಸತ್ಯವೆಂದು ಈಗ ನನಗೆ ತಿಳಿಯಿತು. ಪ್ರಭು ದೂತನನ್ನು ಕಳುಹಿಸಿ ಹೆರೋದನ ಕೈಯಿಂದಲೂ ಯೆಹೂದ್ಯರು ಮಾಡಬೇಕೆಂದಿದ್ದ ಕೇಡಿನಿಂದಲೂ ನನ್ನನ್ನು ಪಾರುಮಾಡಿದ್ದಾರೆ," ಎಂದುಕೊಂಡನು.

ಕೀರ್ತನೆ: 34:2-3, 4-5, 6-7, 8-9
ಶ್ಲೋಕ: ಭಯಭೀತಿಯಿಂದೆನ್ನನು ಮುಕ್ತನಾಗಿಸಿಹನು

ಎರಡನೇ ವಾಚನ: 2 ತಿಮೊಥೇಯನಿಗೆ  4:6-8, 17-18

ಅತಿ ಪ್ರಿಯನೇ, ನಾನು ಯಜ್ಞಪಶುವಾಗಿ ಅರ್ಪಿತನಾಗುವ ಸಮಯವು ಬಂದಿದೆ. ಈ ಲೋಕದಿಂದ ತೆರಳಬೇಕಾದ ಕಾಲವೂ ಕೂಡಿಬಂದಿದೆ. ಬಾಳಿನ ಸ್ಪರ್ಧೆಯಲ್ಲಿ ಭಾಗವಹಿಸಿದ್ದೇನೆ. ನನ್ನ ಓಟವನ್ನು ಮುಗಿಸಿದ್ದೇನೆ. ವಿಶ್ವಾಸವನ್ನು ಕಾಪಾಡಿಕೊಂಡಿದ್ದೇನೆ. ಇನ್ನು ನನಗೆ ಉಳಿದಿರುವುದು ಒಂದೇ: ಸಜ್ಜನರಿಗೆ ಸಲ್ಲುವಂಥ ಜಯಮಾಲೆ ನನಗೀಗ ಸಿದ್ದವಾಗಿದೆ. ಅದನ್ನು ನೀತಿವಂತ, ನ್ನಾಯಾಧಿಪತಿಯಾದ ಪ್ರಭು ಆ ದಿನದಂದು ನನಗೆ ಕೊಡುವರು; ನನಗೆ ಮಾತ್ರವಲ್ಲ, ಅವರ ಪ್ರತ್ಯಕ್ಷತೆಯನ್ನು ಪ್ರೀತಿಯಿಂದ ನಿರೀಕ್ಷಿಸುತ್ತಿರುವ ಎಲ್ಲರಿಗೂ ಕೊಡುವರು. ಪ್ರಭು ನನಗೆ ಬೆಂಬಲವಾಗಿ ನಿಂತರು. ‌ನಾನು ಶುಭಸಂದೇಶವನ್ನು ಸಂಪೂರ್ಣವಾಗಿ ಸಾರುವಂತೆಯೂ ಅನ್ಯಧರ್ಮೀಯರೆಲ್ಲರು ಅದನ್ನು ಕೇಳುವಂತೆಯೂ ಮಾಡಿದರು. ಅಲ್ಲದೆ, ಸಿಂಹದ ಬಾಯಿಂದಲೂ ನನ್ನನ್ನು ಸಂರಕ್ಷಿಸಿದರು. ಪ್ರಭು ನನ್ನನ್ನು ಸಕಲ ಕೇಡುಗಳಿಂದ ರಕ್ಷಿಸಿ, ತಮ್ಮ ಸ್ವರ್ಗಸಾಮ್ರಾಜ್ಯಕ್ಕೆ ನನ್ನನ್ನು ಸುರಕ್ಷಿತವಾಗಿ ಸೇರಿಸುವರು. ಯುಗಯುಗಾಂತರಕ್ಕೂ ಅವರಿಗೆ ಮಹಿಮೆ ಸಲ್ಲಲ್ಲಿ, ಆಮೇನ್.

ಶುಭಸಂದೇಶ: ಮತ್ತಾಯ 16:13-19


ಯೇಸುಸ್ವಾಮಿ "ಫಿಲಿಪನ ಸೆಜರೇಯ" ಎಂಬ ಪ್ರಾಂತ್ಯಕ್ಕೆ ಬಂದರು. ಅಲ್ಲಿ ತಮ್ಮ ಶಿಷ್ಯರನ್ನು ಉದ್ದೇಶಿಸಿ, "ನರಪುತ್ರನನ್ನು ಜನರು ಯಾರೆಂದು ಹೇಳುತ್ತಾರೆ?" ಎಂದು ಕೇಳಿದರು. ಅದಕ್ಕೆ ಶಿಷ್ಯರು, "ಸ್ನಾನಿಕ ಯೊವಾನ್ನ", ಎಂದು ಕೆಲವರು ಹೇಳುತ್ತಾರೆ; ಮತ್ತೆ ಕೆಲವರು, "ಎಲೀಯನು" ಎನ್ನುತ್ತಾರೆ; "ಯೆರೆಮೀಯನು ಅಥವಾ ಪ್ರವಾದಿಗಳಲ್ಲಿ ತಾವೂ ಒಬ್ಬರು," ಎಂಬುದು ಇನ್ನೂ ಕೆಲವರ ಅಭಿಪ್ರಾಯ," ಎಂದು ಉತ್ತರ ಕೊಟ್ಟರು. ಆಗ ಯೇಸು, "ಆದರೆ ನೀವು ನನ್ನನ್ನು ಯಾರೆನ್ನುತ್ತೀರಿ?" ಎಂದು ಪ್ರಶ್ನಿಸಿದರು. ಅದಕ್ಕೆ ಪೇತ್ರನು, "ಅಭಿಷಿಕ್ತರಾದ ಲೋಕೋದ್ಧಾರಕ ತಾವೇ, ಜೀವಸ್ವರೂಪರಾದ ದೇವರ ಪುತ್ರ ತಾವೇ," ಎಂದನು. ಅದಕ್ಕೆ ಪ್ರತ್ಯುತ್ತರವಾಗಿ ಯೇಸು ಹೀಗೆಂದರು. ಯೋನ್ನನ ಮಗ ಸಿಮೋನನೇ, ನೀನು ಧನ್ಯ! ಈ ವಿಷಯವನ್ನು ನಿನಗೆ ಶ್ರುತಪಡಿಸಿದ್ದು ನರಮಾನವ ಶಕ್ತಿಯಲ್ಲ, ಸ್ವರ್ಗದಲ್ಲಿರುವ ನನ್ನ ಪಿತನೇ , ನಾನು ನಿನಗೆ ಹೇಳುತ್ತೇನೆ, ಕೇಳು : "ನಿನ್ನ ಹೆಸರು ಪೇತ್ರ ; ಈ ಬಂಡೆಯ ಮೇಲೆ ನನ್ನ ಧರ್ಮಸಭೆಯನ್ನು ಕಟ್ಟುವೆನು. ಪಾತಾಳಲೋಕದ ಶಕ್ತಿಯು ಅದನ್ನು ಎಂದಿಗೂ ಜಯಸಲಾರದು. ಸ್ವರ್ಗಸಾಮ್ರಾಜ್ಯದ ಬೀಗದ ಕೈಗಳನ್ನು ನಿನಗೆ ಕೊಡುವೆನು. ಇಹದಲ್ಲಿ ನೀನು ಎನನ್ನು ಬಂಧಿಸುತ್ತೀಯೋ ಅದನ್ನು ಪರದಲ್ಲಿಯೂ ಬಂಧಿಸಲಾಗುವುದು. ಇಹದಲ್ಲಿ ನೀನು ಏನನ್ನು ಬಿಚ್ಚುತ್ತೀಯೋ ಅದನ್ನು ಪರದಲ್ಲಿಯೂ ಬಿಚ್ಚಲಾಗುವುದು'.

28.06.2019 - "ನಾನೇ ನನ್ನ ಕುರಿಗಳನ್ನು ಮೇಯಿಸಿ ಹಾಯಾಗಿ ಮಲಗುವಂತೆ ಮಾಡುವೆನು"

ಮೊದಲನೇ ವಾಚನ: ಯೆಜೆಕಿಯೇಲ 34:11-16

ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ಆಹಾ, ನಾನೇ ನನ್ನ ಕುರಿಗಳನ್ನು ಹಿಂಬಾಲಿಸಿ ಹುಡುಕುವೆನು. ಮಂದೆಯ ಕುರುಬನು ಸುತ್ತಮುತ್ತಲು ಚದುರಿಹೋದ ತನ್ನ ಕುರಿಗಳನ್ನು ಹುಡುಕುವ ಹಾಗೆ ನಾನು ನನ್ನ ಕುರಿಗಳನ್ನು ಹುಡುಕುವೆನು; ಕಾರ್ಮುಗಿಲಿನ ದುರ್ದಿನದಲ್ಲಿ ಚೆಲ್ಲಾಪಿಲ್ಲಿಯಾದ ಅವುಗಳನ್ನು ಎಲ್ಲ ಸ್ಥಳಗಳಿಂದ ಬಿಡಿಸಿ, ಜನಾಂಗಗಳ ವಶದಿಂದ ತಪ್ಪಿಸಿ, ದೇಶಗಳಿಂದ ಒಟ್ಟುಗೂಡಿಸಿ, ಸ್ವದೇಶಕ್ಕೆ ಬರಮಾಡಿ ಇಸ್ರಯೇಲಿನ ಬೆಟ್ಟಗಳಲ್ಲೂ, ತೊರೆಗಳ ಬಳಿಯಲ್ಲೂ ನಾಡಿನ ಎಲ್ಲಹಕ್ಕೆಗಳಲ್ಲೂ ಮೇಯಿಸುವೆನು; ಅವುಗಳಿಗೆ ಒಳ್ಳೆಯ ಮೇವನ್ನು ಮೇಯಿಸುವೆನು; ಅವುಗಳ ಹುಲ್ಲುಗಾವಲು ಇಸ್ರಯೇಲಿನ ಎತ್ತರವಾದ ಬೆಟ್ಟಗಳಲ್ಲಿರುವುದು; ಅಲ್ಲಿ ಒಳ್ಳೆಯ ತೆವರಿನಲ್ಲಿ ಮಲಗುವುವು;  ಇಸ್ರಯೇಲಿನ ಬೆಟ್ಟಗಳಲ್ಲಿ ಹಸಿಹುಲ್ಲನ್ನು ಮೇಯುವುವು. ನಾನೇ ನನ್ನ ಕುರಿಗಳನ್ನು ಮೇಯಿಸಿ ಹಾಯಾಗಿ ಮಲಗುವಂತೆ ಮಾಡುವೆನು; ಇದು ಸರ್ವೇಶ್ವರನಾದ ದೇವರ ನುಡಿ. "ತಪ್ಪಿಸಿಕೊಂಡಿದ್ದನ್ನು ಹುಡುಕುವೆನು, ದಾರಿತಪ್ಪಿದ್ದನ್ನು ಮಂದೆಗೆ ಸೇರಿಸುವೆನು, ದುರ್ಬಲವಾದುದನ್ನು ಬಲಗೊಳಿಸುವೆನು, ಮುರಿದ ಅಂಗವನ್ನು ಕಟ್ಟುವೆನು; ಬಲಿತ ಕೊಬ್ಬಿದ ಕುರಿಗಳನ್ನಾದರೋ ದ್ವಂಸಮಾಡುವೆನು; ಅವುಗಳಿಗೆ ನ್ಯಾಯದಂಡನೆ ಎಂಬ ಮೇವನ್ನು ತಿನ್ನಿಸುವೆನು.

ಕೀರ್ತನೆ: 23:1-3, 4, 5, 6

ಶ್ಲೋಕ: ಪ್ರಭು ಕುರಿಗಾಹಿಯಾಗಿರಲು ಎನಗೆ, ಕುಂದುಕೊರತೆಗಳೆಲ್ಲಿಯವು ಎನಗೆ?

ಎರಡನೇ ವಾಚನ: ರೋಮನರಿಗೆ 5:5-11

ಸಹೋದರರೇ, ನಂಬಿಕೆ ನಿರೀಕ್ಷೆಯು ನಮಗಿರುವುದರಿಂದ ನಮಗೆ ಆಶಾಭಂಗವಾಗುವುದಿಲ್ಲ. ಏಕೆಂದರೆ, ನಮಗೆ ದಾನವಾಗಿ ದಯಪಾಲಿಸಿರುವ ಪವಿತ್ರಾತ್ಮ ಅವರ ಮುಖಾಂತರ ದೇವರು ತಮ್ಮ ಪ್ರೀತಿಯನ್ನು ನಮ್ಮ  ಹೃದಯಗಳಲ್ಲಿ ಧಾರಾಳವಾಗಿ ಸುರಿಸಿದ್ದಾರೆ. ನಾವು ಪಾಪದಿಂದ ದುರ್ಬಲರಾಗಿದ್ದಾಗಲೇ ನಿಯಮಿತ ಕಾಲದಲ್ಲಿ ಕ್ರಿಸ್ತಯೇಸು ಪಾಪಿಗಳಿಗೋಸ್ಕರ ಪ್ರಾಣತ್ಯಾಗಮಾಡಿದರು. ನೀತಿವಂತನಿಗಾಗಿ ಒಬ್ಬನು ತನ್ನ ಪ್ರಾಣಕೊಡುವುದು ವಿರಳ. ಸತ್ಪುರುಷನಿಗಾಗಿ ಒಬ್ಬನು ತನ್ನ ಪ್ರಾಣವನ್ನು ಕೊಟ್ಟರೂ ಕೊಟ್ಟಾನು. ಆದರೆ  ನಾವಿನ್ನೂ  ಪಾಪಿಗಳಾಗಿರುವಾಗಲೇ ಕ್ರಿಸ್ತಯೇಸು ನಮಗೋಸ್ಕರ ಪ್ರಾಣತ್ಯಾಗ ಮಾಡಿದರು. ಇದರಿಂದ ನಮ್ಮ ಮೇಲೆ ದೇವರಿಗಿರುವ ಪ್ರೀತಿ ಎಷ್ಟೆಂದು ವ್ಯಕ್ತವಾಗುತ್ತದೆ. ಕ್ರಿಸ್ತಯೇಸುವಿನ  ರಕ್ತಧಾರೆಯಿಂದ ನಾವೀಗ ದೇವರೊಡನೆ ಸತ್ಸಂಬಂಧದಲ್ಲಿದ್ದೇವೆ. ಹೀಗಿರಲಾಗಿ, ಬರಲಿರುವ ದೈವಕೋಪಾಗ್ನಿಯಿಂದ ಯೇಸುಕ್ರಿಸ್ತರ ಮುಖಾಂತರವೇ ಪಾರಾಗುತ್ತೇವೆ ಎಂಬುದು ಮತ್ತಷ್ಟು ನಿಶ್ಚಯವಲ್ಲವೆ? ನಾವು ದೇವರಿಗೆ ಶತ್ರುಗಳಾಗಿದ್ದರೂ ಅವರು ತಮ್ಮ ಮಗನ ಮರಣದ ಮೂಲಕ ನಮ್ಮನ್ನು ತಮ್ಮೊಡನೆ ಸಂಧಾನಗೊಳಿಸಿ ಮಿತ್ರರನ್ನಾಗಿ ಮಾಡಿಕೊಂಡರು. ನಾವೀಗ ದೇವರ ಮಿತ್ರರಾಗಿರುವುದರಿಂದ, ಕ್ರಿಸ್ತಯೇಸುವಿನ ಜೀವದ ಮೂಲಕ ಉದ್ದಾರ ಹೊಂದುತ್ತೇವೆ ಎಂಬುದು ಮತ್ತಷ್ಟು ಖಚಿತವಲ್ಲವೆ? ಅಷ್ಟೆ ಅಲ್ಲದೆ, ನಮ್ಮ ಪ್ರಭು ಯೇಸುಕ್ರಿಸ್ತರ ಮುಖಾಂತರ ದೇವರು ನಮ್ಮನ್ನು ಮಿತ್ರರನ್ನಾಗಿಸಿರುವುದರಿಂದ ಅವರ ಮೂಲಕವೇ ನಾವು ದೇವರಲ್ಲಿ ಹೆಮ್ಮೆಪಡುತ್ತೇವೆ.

ಶುಭಸಂದೇಶ: ಲೂಕ  15:3-7


ಆ ಸಂದರ್ಭದಲ್ಲಿ ಯೇಸು ಈ ಸಾಮತಿಯನ್ನು ಹೇಳಿದರು: "ನಿಮ್ಮಲ್ಲಿ ಯಾರ ಬಳಿಯಾದರೂ ನೂರು ಕುರಿಗಳಿವೆಯೆನ್ನೋಣ.  ಅವುಗಳಲ್ಲಿ ಒಂದು ಕುರಿ ಕಾಣದೆ ಹೋದಾಗ ಅವನೇನು ಮಾಡುತ್ತಾನೆ? ಇರುವ ತೊಂಭತ್ತೊಂಭತ್ತು ಕುರಿಗಳನ್ನು ಹುಲ್ಲುಗಾವಲಿನಲ್ಲೇ ಬಿಟ್ಟು ಕಾಣದೆ ಹೋದ ಆ ಒಂದು ಕುರಿ ಸಿಕ್ಕುವ ತನಕ ಹುಡುಕಿಕೊಂಡು ಹೋಗುತ್ತಾನಲ್ಲವೆ? ಅದು ಸಿಕ್ಕಿದಾಗ ಸಿಕ್ಕಿತೆಂಬ ಸಂತೋಷದಿಂದ ಅದನ್ನು ಹೆಗಲ ಮೇಲೆ ಎತ್ತಿಕೊಂಡು ಮನೆಗೆ ಬರುತ್ತಾನೆ; ಸ್ನೇಹಿತರನ್ನೂ ನೆರೆಯವರನ್ನೂ ಒಟ್ಟಿಗೆ ಕರೆಯುತ್ತಾನೆ. "ಕಳೆದು ಹೋಗಿದ್ದ ಕುರಿ ಸಿಕ್ಕಿತು; ನನ್ನೊಡನೆ ಸೇರಿ ಸಂತೋಷಪಡಿ," ಎನ್ನುತ್ತಾನೆ, ಅಲ್ಲವೇ? ಅದೇ ರೀತಿಯಲ್ಲಿ, ಪಶ್ಚಾತ್ತಾಪದ ಅವಶ್ಯಕತೆಯಿಲ್ಲದ ತೊಂಭತ್ತೊಂಭತ್ತು ಸತ್ಪುರುಷರ ವಿಷಯವಾಗಿ ಸ್ವರ್ಗದಲ್ಲಿ ಉಂಟಾಗುವ ಸಂತೋಷಕಿಂತ, ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖನಾಗಿ ದೇವರಿಗೆ ಅಭಿಮುಖನಾಗುವ ಒಬ್ಬ  ಪಾಪಿಯ ವಿಷಯವಾಗಿ ಹೆಚ್ಚು ಸಂತೋಷ ಉಂಟಾಗುತ್ತದೆ ಎಂಬುದರಲ್ಲಿ ಸಂದೇಹವಿಲ್ಲ.

27.06.2019 - "ಸ್ವರ್ಗದಲ್ಲಿರುವ ನನ್ನ ಚಿತ್ತಾನುಸಾರ ನಡೆಯುವವನು ಮಾತ್ರ ಅದನ್ನು ಪ್ರವೇಶಿಸುವನು"

ಮೊದಲನೇ ವಾಚನ: ಆದಿಕಾಂಡ  16:1-12, 15-16

ಅಬ್ರಾಮನ ಹೆಂಡತಿ ಸಾರಳಿಗೆ ಮಕ್ಕಳಿರಲಿಲ್ಲ. ಆಕೆಗೆ ಈಜಿಪ್ಟ್  ದೇಶವಳಾದ ಹಾಗರಳೆಂಬ ಒಬ್ಬ ದಾಸಿ ಇದ್ದಳು.  ಎಂದೇ ಸಾರಯಳು ಅಬ್ರಾಮನಿಗೆ, "ನೋಡಿ, ನನಗೇನೋ ಸರ್ವೇಶ್ವರಸ್ವಾಮಿ ಮಕ್ಕಳನ್ನು ದಯಪಾಲಿಸಲಿಲ್ಲ; ನೀವು ನನ್ನ ದಾಸಿಯನ್ನು ಸೇರಬೇಕು. ಬಹುಶಃ ಅವಳ ಮೂಲಕವಾದರೂ ನನಗೆ ಮಕ್ಕಳಾದೀತು," ಎಂದು ಹೇಳಿದಳು.  ಅಬ್ರಾಮನು ಆಕೆಯ ಮಾತಿಗೆ ಸಮ್ಮತಿಸಿದನು. ಹೀಗೆ ಹತ್ತು ವರ್ಷ ಕಾನಾನ್ ನಾಡಿನಲ್ಲಿ ವಾಸಮಾಡಿದ ಮೇಲೆ ಅಬ್ರಾಮನ ಹೆಂಡತಿ ಸಾರಯಳು ಈಜಿಪ್ಟಿನ ಹಾಗರಳೆಂಬ ದಾಸಿಯನ್ನು ತನ್ನ ಗಂಡನಿಗೆ ಉಪಪತ್ನಿಯಾಗಿ ಒಪ್ಪಿಸಿದಳು. ಅಬ್ರಾಮನು ಹಾಗರಳನ್ನು ಕೂಡಿದನು ಅವಳು ಗರ್ಭಿಣಿಯಾದಳು ತಾನು ಗರ್ಭಿಣಿಯಾದೆನೆಂದು ತಿಳಿದು ಅವಳು, ತನ್ನ ಯಜಮಾನಿಯನ್ನೇ ತಾತ್ಸಾರ ಮಾಡತೊಡಗಿದಳು. ಆಗ ಸಾರಯಳು ಅಬ್ರಾಮನಿಗೆ, "ನನಗೆ ಅನ್ಯಾಯವಾಗುತ್ತಿದೆ; ಇದಕ್ಕೆ ನೀವೇ ಹೊಣೆ. ನನ್ನ ದಾಸಿಯನ್ನು ನಿಮಗೆ ಉಪಪತ್ನಿಯಾಗಿ ಕೊಟ್ಟೆನಷ್ಟೆ; ಇವಳೋ, ತಾನು ಗರ್ಭಿಣಿಯಾದೆನೆಂದು ತಿಳಿದದ್ದೆ, ನನ್ನನ್ನು ತಾತ್ಸಾರ ಮಾಡುತ್ತಿದ್ದಾಳೆ. ಈಗ ಸರ್ವೇಶ್ವರಸ್ವಾಮಿಯೇ ನಿಮಗೂ ನನಗೂ ನ್ಯಾಯ ತೀರಿಸಬೇಕು," ಎಂದು ದೂರಿದಳು. ಅದಕ್ಕೆ ಅಬ್ರಾಮನು, "ನಿನ್ನ ದಾಸಿ ನಿನ್ನ ಕೈಯಲ್ಲೇ ಇದ್ದಾಳೆ. ನಿನಗಿಷ್ಟಬಂದಂತೆ ಮಾಡು," ಎಂದುಬಿಟ್ಟನು. ಬಳಿಕ ಸಾರಯಳು ಕೊಡುತ್ತಿದ್ದ ಕಿರುಕುಳವನ್ನು ತಾಳಲಾರದೆ ಹಾಗರಳು ಓಡಿಹೋದಳು. ಮರಳುಗಾಡಿನಲ್ಲಿ ಶೂರಿಗೆ ಹೋಗುವ ಹಾದಿಪಕ್ಕದಲ್ಲಿದ್ದ ಒಂದು ಒರತೆಯ ಬಳಿ ಸ್ವಾಮಿಯ ದೂತನು ಅವಳನ್ನು ಕಂಡನು. "ಸಾರಯಳ ದಾಸಿಯಾದ ಹಾಗರಳೇ, ಎಲ್ಲಿಂದ ಬಂದೆ? ಎಲ್ಲಿಗೆ ಹೋಗುತ್ತಿರುವೆ?" ಎಂದು ವಿಚಾರಿಸಿದನು. "ನನ್ನ ಯಜಮಾನಿ ಸಾರಯಳ ಬಳಿಯಿಂದ ಓಡಿಹೋಗುತ್ತಿದ್ದೇನೆ," ಎಂದು ಉತ್ತರಕೊಟ್ಟಳು. ಅದಕ್ಕೆ ಆ ದೂತನು, "ನಿನ್ನ ಯಜಮಾನಿಯ ಬಳಿಗೆ ಹಿಂತಿರುಗು, ಅವಳಿಗೆ ತಗ್ಗಿ ನಡೆದುಕೊ," ಎಂದು ತಿಳಿಸಿದನು. ಅದೂ ಅಲ್ಲದೆ ಸ್ವಾಮಿಯ ದೂತನು, "ನಿನ್ನ ಸಂತಾನವನ್ನು ಲೆಕ್ಕಿಸಲಾಗದಷ್ಟು ದೊಡ್ಡದಾಗಿಸುವೆನು," ಎಂದು ಹೇಳಿ ಇಂತೆಂದನು: ಹುಟ್ಟುವನು ಮಗನೊಬ್ಬನು ಗರ್ಭಿಣಿಯಾದ ನಿನಗೆ, ಇಷ್ಮಾಯೇಲೆಂಬ ಹೆಸರನಿಡು ಅವನಿಗೆ, ಕಾರಣ - ಸರ್ವೇಶ್ವರ ಕಿವಿಗೊಟ್ಟಿಹನು ನಿನ್ನ ಮೊರೆಗೆ, ಬಾಳುವನವನು ಕಾಡುಗತ್ತೆಯಂತೆ, ಎತ್ತುವನು ಕೈಯನ್ನು ಎಲ್ಲರ ಮೇಲೆ, ಎತ್ತುವರೆಲ್ಲರು ಕೈ ಅವನ ‌ಮೇಲೆ ಬಾಳುವನು ಸೋದರರಿಗೆ ಎದುರುಬದುರಾಗಿ," ಹಾಗರಳು ಅಬ್ರಾಮನಿಗೆ ಒಬ್ಬ ಮಗನನ್ನು ಹೆತ್ತಳು. ಅಬ್ರಾಮನು ಅವನಿಗೆ ಇಷ್ಮಾಯೇಲ್  ಎಂದು ಹೆಸರಿಟ್ಟನು. ಆಗ ಅಬ್ರಾಮನಿಗೆ ಎಂಬತ್ತಾರು ವರ್ಷವಾಗಿತ್ತು.

ಕೀರ್ತನೆ: 106:2, 3-4, 5
ಶ್ಲೋಕ: ಪ್ರಭು ದಯಾಪೂರಿತ, ತೋರಿ ಆತನಿಗೆ ನಿಮ್ಮ ಕೃತಜ್ಞತಾಸ್ತೋತ್ರ

ಶುಭಸಂದೇಶ: ಮತ್ತಾಯ 7:21-29


ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು: "ನನ್ನನ್ನು "ಸ್ವಾಮೀ, ಸ್ವಾಮೀ," ಎನ್ನುವ ಪ್ರತಿಯೊಬ್ಬನೂ ಸ್ವರ್ಗಸಾಮ್ರಾಜ್ಯವನ್ನು ಪ್ರವೇಶಿಸನು. ಸ್ವರ್ಗದಲ್ಲಿರುವ ನನ್ನ ಚಿತ್ತಾನುಸಾರ ನಡೆಯುವವನು ಮಾತ್ರ ಅದನ್ನು ಪ್ರವೇಶಿಸುವನು. ತೀರ್ಪಿನ ದಿನದಂದು, 'ಸ್ವಾಮೀ, ಸ್ವಾಮೀ ನಿಮ್ಮ ಹೆಸರಿನಲ್ಲಿ ನಾವು ಪ್ರವಾದನೆ ಮಾಡಲಿಲ್ಲವೇ? ನಿಮ್ಮ ಹೆಸರಿನಲ್ಲಿ ದೆವ್ವಗಳನ್ನು ಬಿಡಿಸಲಿಲ್ಲವೇ? ನಿಮ್ಮ ಹೆಸರಿನಲ್ಲಿ ಹಲವಾರು ಮಹತ್ಕಾರ್ಯಗಳನ್ನು ಮಾಡಲಿಲ್ಲವೇ?" ಎಂದು ಅನೇಕರು ನನಗೆ ಹೇಳುವರು. ಆಗ  ನಾನು ಅವರಿಗೆ "ಇಂದಿಗೂ ನಿಮ್ಮ ಗುರುತೇ ನನಗಿಲ್ಲ. ಅಧರ್ಮಿಗಳೇ, ನನ್ನಿಂದ ತೊಲಗಿರಿ," ಎಂದು ಬಹಿರಂಗವಾಗಿ ಹೇಳಿಬಿಡುವೆನು. ನನ್ನ ಈ ಮಾತನ್ನು ಕೇಳಿ ಅದರಂತೆ ನಡೆಯುವ ಪ್ರತಿಯೊಬ್ಬನೂ ಬಂಡೆಯ ಮೇಲೆ ಮನೆ ಕಟ್ಟಿಕೊಂಡ ಬುದ್ದಿವಂತನನ್ನು ಹೋಲುತ್ತಾನೆ. ಮಳೆ ಬಿತ್ತು, ನೆರೆ ಬಂತು, ಗಾಳಿ ಬೀಸಿ ಆ ಮನೆಗೆ ಅಪ್ಪಳಿಸಿತು ಆದರೂ ಅದು ಬೀಳಲಿಲ್ಲ. ಕಾರಣ ಅದರ ಅಡಿಗಟ್ಟು ಬಂಡೆಯ ಮೇಲಿತ್ತು. ನನ್ನ ಈ ಮಾತುಗಳನ್ನು ಕೇಳಿಯೂ ಅದರಂತೆ ನಡೆಯದ ಪ್ರತಿಯೊಬ್ಬನೂ ಮರಳಿನ ಮೇಲೆ ಮನೆ ಕಟ್ಟಿಕೊಂಡ ಬುದ್ದಿಹೀನನನ್ನು ಹೋಲುತ್ತಾನೆ. ಮಳೆ ಬಿತ್ತು. ನೆರೆ ಬಂತು, ಗಾಳಿ ಬೀಸಿ ಆ ಮನೆಗೆ ಅಪ್ಪಳಿಸಿತು; ಅದು ಕುಸಿದು ಬಿತ್ತು. ಅದಕ್ಕಾದ ಪತನವೋ ಅಗಾಧ!" ಯೇಸುಸ್ವಾಮಿ ಇದೆಲ್ಲವನ್ನು ಹೇಳಿ ಮುಗಿಸಿದರು. ಅವರ ಬೋಧನೆ ಜನರಲ್ಲಿ ಅಮೋಗ ಪ್ರಭಾವವನ್ನು ಬೀರಿತು. ಏಕೆಂದರೆ, ಅವರ ಧರ್ಮಶಾಸ್ತ್ರಿಗಳಂತೆ ಭೋಧಿಸದೆ ಯೇಸು ಅಧಿಕಾರವಾಣಿಯಿಂದ ಪ್ರಬೋಧಿಸುತ್ತಿದ್ದರು.

26.06.2019 - "ಒಳ್ಳೆಯ ಮರ ಒಳ್ಳೆಯ ಹಣ್ಣನ್ನೂ ಕೆಟ್ಟ ಮರವು ಕೆಟ್ಟ ಹಣ್ಣನ್ನೂ ಕೊಡುತ್ತದೆ"

ಮೊದಲನೇ ವಾಚನ: ಆದಿಕಾಂಡ 15:1-12, 17-18

ಈ ಘಟನೆಗಳೆಲ್ಲ ನಡೆದ ಮೇಲೆ ಅಬ್ರಾಮನಿಗೆ ಒಂದು ದಿವ್ಯ ದರ್ಶನ ಆಯಿತು. ಅದರಲ್ಲಿ ಸರ್ವೇಶ್ವರಸ್ವಾಮಿಯ ಈ ವಾಣಿ ಕೇಳಿಸಿತು: "ಅಬ್ರಾಮನೇ, ಭಯಪಡಬೇಡ, ನಿನ್ನನ್ನು ರಕ್ಷಿಸುವ ಕವಚ ನಾನೇ, ಘನವಾದ ಬಹುಮಾನ ಸಿಗುವುದು ನಿನಗೆ." ಅದಕ್ಕೆ ಪ್ರತ್ಯುತ್ತರವಾಗಿ ಅಬ್ರಾಮನು -- "ಸ್ವಾಮಿ ಸರ್ವೇಶ್ವರಾ, ನನಗೆ ಏನು ಕೊಟ್ಟರೇನು? ನಾನು ಪುತ್ರಸಂತಾನವಿಲ್ಲದವನು. ನನ್ನ ಮನೆ ಮಾರುಗಳಿಗೆ ಉತ್ತರಾಧಿಕಾರಿ ದಮಸ್ಕದ ಎಲೀಯೆಜರನೇ ಹೊರತು ಮತ್ತಾರೂ ಇಲ್ಲ, ನೀವು ನನಗೆ ಮಕ್ಕಳನ್ನು ಕೊಟ್ಟಿಲ್ಲ. ನನ್ನ ಮನೆದಾಸನೇ ನನಗೆ ಉತ್ತರಾಧಿಕಾರಿ,"  ಎಂದನು. ಮತ್ತೆ ಸ್ವಾಮಿಯ ವಾಣಿ -- "ಇಲ್ಲ, ಅವನು ಉತ್ತಾರಾಧಿಕಾರಿಯಾಗುವುದಿಲ್ಲ. ನಿನ್ನಿಂದ ಹುಟ್ಟಿದವನೇ ನಿನಗೆ ಉತ್ತಾರಾಧಿಕಾರಿ ಆಗುತ್ತಾನೆ," ಎಂದಿತು. ಸರ್ವೇಶ್ವರ ಬಳಿಕ ಅಬ್ರಾಮನನ್ನು ಹೊರಗೆ ಕರೆತಂದು, "ಆಕಾಶದ ಕಡೆಗೆ ನೋಡು. ಆ ನಕ್ಷತ್ರಗಳನ್ನು ನಿನ್ನಿಂದಾದರೆ ಲೆಕ್ಕಿಸು. ನಿನ್ನ ಸಂತಾನವು ಅಷ್ಟು ಅಸಂಖ್ಯಾತವಾಗುವುದು!" ಎಂದರು. ಅಬ್ರಾಮನು ಸರ್ವೇಶ್ವರಸ್ವಾಮಿಯಲ್ಲಿ ವಿಶ್ವಾಸವಿಟ್ಟನು. ಅವರು ಅವನ ವಿಶ್ವಾಸವೇ ಸರಿಯಾದ ಸಂಬಂಧವೆಂದು ಪರಿಗಣಿಸಿದರು. ಸರ್ವೇಶ್ವರ ಬಳಿಕ ಅಬ್ರಾಮನಿಗೆ ಇಃತೆಂದರು: "ಈ ನಾಡನ್ನು ನಿನಗೆ ಸ್ವತ್ತಾಗಿ ಕೊಡಬೇಕೆಂದು ಬಾಬಿಲೋನಿನಲ್ಲಿರುವ ಊರ್ ಪಟ್ಟಣದಿಂದ ನಿನ್ನನ್ನು ಬರಮಾಡಿದ ಸರ್ವೇಶ್ವರ ನಾನೇ," ಎಂದರು. ಅದಕ್ಕೆ ಅಬ್ರಾಮನು, "ಸರ್ವೇಶ್ವರಾ, ಇದು ನನ್ನ ಸೊತ್ತು ಎಂದು ತಿಳಿದುಕೊಳ್ಳುವುದು ಹೇಗೆ?" ಎಂದನು. ಸರ್ವೇಶ್ವರ ಪ್ರತ್ಯುತ್ತರವಾಗಿ, "ನೀನು ಮೂರು ಮೂರು ವರ್ಷದ ಒಂದು ಕಬಸನ್ನು, ಒಂದು ಆಡನ್ನು, ಒಂದು ಟಗರನ್ನು, ಒಂದು ಬೆಳವಕ್ಕಿಯನ್ನು ಹಾಗೂ ಒಂದು ಮರಿಪಾರಿವಾಳವನ್ನು ತೆಗೆದುಕೊಂಡು ಬಾ," ಎಂದರು. ಅಬ್ರಾಮನು ಅವುಗಳನ್ನೆಲ್ಲಾ ತೆಗೆದುಕೊಂಡು ಬಂದು ಆ ಪ್ರಾಣಿಗಳನ್ನು ಕಡಿದು, ಎರಡೆರಡು ಹೋಳು ಮಾಡಿ, ತುಂಡಿಗೆ ತುಂಡನ್ನು ಎದುರಾಗಿಟ್ಟನು. ಪಕ್ಷಿಗಳನ್ನು ಮಾತ್ರ ಕಡಿಯಲಿಲ್ಲ ಆ ಪ್ರಾಣಿಗಳ ತುಂಡುಗಳ ಮೇಲೆ ರಣಹದ್ದುಗಳು ಎರಗಿದಾಗ ಅಬ್ರಾಮನು ಅವುಗಳನ್ನು ಓಡಿಸಿಬಿಟ್ಟನು. ಹೊತ್ತು ಮುಳುಗುತ್ತಿದ್ದಾಗ ಅಬ್ರಾಮನಿಗೆ ಗಾಢನಿದ್ರೆ  ಹತ್ತಿತು. ಭೀಕರವಾದ ಕಾರ್ಗತ್ತಲು ಅವನನ್ನು ಕವಿಯಿತು. ಹೊತ್ತು ಮುಳುಗಿ ಕಾರ್ಗತ್ತಲಾದಾಗ ಇಗೋ, ಹೊಗೆಯಾಡುವ ಒಲೆಯೊಂದು ಹಾಗು ಉರಿಯುವ ದೀವಟಿಗೆಯೊಂದು ಕಾಣಿಸಿಕೊಂಡಿತು. ಆ ತುಂಡುಗಳ ನಡುವೆ ಹಾದುಹೋದವು. ಸರ್ವೇಶ್ವರ ಅಂದೇ ಅಬ್ರಾಮನ ಸಂಗಡ ಒಂದು ಒಡಂಬಡಿಕೆಯನ್ನು ಮಾಡಿಕೊಂಡರು. "ಈಜಿಪ್ಟಿನ ನದಿಯಿಂದ ಯೂಫ್ರೆಟಿಸ್ ಮಹಾನದಿಯವರಿಗೆ, ಕೊಡುವೆನು ಈ ನಾಡೆಲ್ಲವನ್ನು ನಿನ್ನ ಸಂತತಿಯವರಿಗೆ."

ಕೀರ್ತನೆ: 105: 1-2, 3-4, 6-7, 8-9
ಶ್ಲೋಕ: ನೆನಪಿನಲ್ಲಿಡುವನು ಪ್ರಭು ತನ್ನ ವಾಗ್ದಾನವನ್ನು

ಶುಭಸಂದೇಶ: ಮತ್ತಾಯ  7:15-20

"ಸುಳ್ಳು ಪ್ರವಾದಿಗಳ ಬಗ್ಗೆ ಹೆಚ್ಚರಿಕೆಯಿಂದಿರಿ. ಹೊರಗೆ ಕುರಿಯ ವೇಷದಲ್ಲಿ ಬಂದರೂ ಒಳಗೆ ಅವರು ಕಿತ್ತುತಿನ್ನುವ ತೋಳಕಳು. ಅವರ ವರ್ತನೆಯಿಂದ ನೀವು ಅವರನ್ನು ಗುರುತು ಹಚ್ಚುವಿರಿ. ಮುಳ್ಳುಕಳ್ಳಿಯಲ್ಲಿ ದ್ರಾಕ್ಷಿ ಕೊಯ್ಯುವುದುಂಟೇ? ಮದ್ದುಗುಣಿಕೆಯಲ್ಲಿ ಅಂಜೂರ ಕೀಳುವುದುಂಟೇ? ಅದರಂತೆಯೇ ಒಳ್ಳೆಯ ಮರ ಒಳ್ಳೆಯ ಹಣ್ಣನ್ನೂ ಕೆಟ್ಟ ಮರವು ಕೆಟ್ಟ ಹಣ್ಣನ್ನೂ ಕೊಡುತ್ತದೆ. ಒಳ್ಳೆಯ ಮರ ಕೆಟ್ಟ ಹಣ್ಣನ್ನು ಕೊಡಲಾರದು, ಹಾಗೆಯೇ ಕೆಟ್ಟ ಮರ ಒಳ್ಳೆಯ ಹಣ್ಣನ್ನು ಕೊಡಲಾರದು. ಒಳ್ಳೆಯ ಫಲವನ್ನು ಕೊಡದ ಪ್ರತಿಯೊಂದು ಮರವನ್ನೂ ಕಡಿದು ಬೆಂಕಿಯಲ್ಲಿ ಹಾಕಲಾಗುವುದು. ಆದ್ದರಿಂದ ಸುಳ್ಳು ಪ್ರವಾದಿಗಳನ್ನು ಅವರ ನಡತೆಯಿಂದ ಗುರುತು ಹಚ್ಚುವಿರಿ."

25.06.2019 - ವಿನಾಶಕ್ಕೆ ಒಯ್ಯುವ ಬಾಗಿಲು ಹಿರಿದು; ಅದರ ಮಾರ್ಗ ಸರಾಗ

ಮೊದಲನೇ ವಾಚನ: ಆದಿಕಾಂಡ  13:2, 5-18


ಅಬ್ರಾಮನು ಈಜಿಪ್ಟನ್ನು ಬಿಟ್ಟು ಕಾನಾನ್ ನಾಡಿನ ದಕ್ಷಿಣ ಪ್ರಾಂತ್ಯಕ್ಕೆ ಬಂದನು. ಈಗ ಅಬ್ರಾಮನಿಗೆ ಪಶುಪ್ರಾಣಿಗಳಿದ್ದವು, ಬೆಳ್ಳಿಬಂಗಾರವಿತ್ತು. ಅಬ್ರಾಮನ ಜೊತೆಯಲ್ಲಿದ್ದ ಲೋಟನಿಗೆ ಕುರಿಮಂದೆಗಳೂ ದನಕರುಗಳೂ ಗುಡಾರಬಿಡಾರಗಳೂ ಇದ್ದವು. ಈ ಕಾರಣ ಅವರಿಬ್ಬರ ಜೀವನಕ್ಕೆ ಅಲ್ಲಿ ಸ್ಥಳ ಸಾಲದೆ ಹೋಯಿತು. ಇಬ್ಬರಿಗೂ ಪಶುಪ್ರಾಣಿಗಳು ಹೇರಳವಾಗಿದ್ದರಿಂದ ಒಂದೇ ಸ್ಥಳದಲ್ಲಿ ವಾಸವಾಗಿರಲು ಆಗಲಿಲ್ಲ. ಅಬ್ರಾಮನ ದನಕಾಯುವವರಿಗೂ ಲೋಟನ ದನಕಾಯುವವರಿಗೂ ಜಗಳ ಬೇರೆ. ಇದೂ ಅಲ್ಲದೆ, ಆ ಕಾಲದಲ್ಲಿ ಕಾನಾನ್ಯರೂ ಪೆರಿಜೀಯರೂ ಅದೇ ನಾಡಿನಲ್ಲಿ ವಾಸವಾಗಿದ್ದರು. ಆದುದರಿಂದ ಅಬ್ರಾಮನು ಲೋಟನಿಗೆ ಹೀಗೆಂದನು: "ನನಗೂ ನಿನಗೂ, ನನ್ನ ದನಕಾಯುವವರಿಗೂ ನಿನ್ನ ದನಕಾಯುವವರಿಗೂ ಜಗಳವಿರಬಾರದು. ನಾವು ಬಳಗದವರು. ನಾಡೆಲ್ಲಾ ನಿನ್ನ ಕಣ್ಮುಂದಿದೆ ದಯವಿಟ್ಟು ನನ್ನನ್ನು ಬಿಟ್ಟು ಹೋಗು. ನೀನು ಎಡಗಡೆಗೆ ಹೋದರೆ ನಾನು ಬಲಗಡೆಗೆ ಹೋಗುತ್ತೇನೆ.  ನೀನು ಬಲಗಡೆಗೆ ಹೋದರೆ ನಾನು ಎಡಗಡೆಗೆ ಹೋಗುತ್ತೇನೆ." ಲೋಟನು ಕಣ್ಣೆತ್ತಿ ನೋಡಿದನು. ಜೋರ್ಡಾನ್ ನದಿಯ ಸುತ್ತಲಿನ ಪ್ರದೇಶ ಚೋಗರೂರಿನವರೆಗೂ ಎಲ್ಲೆಲ್ಲೂ ನೀರಾವರಿ ಆಗಿರುವುದು ಕಾಣಿಸಿತು. ಸರ್ವೇಶ್ವರ, ಸೊದೋಮ್ - ಗೊವೋರ ಪಟ್ಟಣಗಳನ್ನು ವಿನಾಶ ಮಾಡುವುದಕ್ಕೆ ಮುಂಚೆ ಈ ಪ್ರಾಂತ್ಯವು ಸರ್ವೇಶ್ವರನ ಉದ್ಯಾನವನದಂತೆ, ಈಜಿಪ್ಟಿನ ದೇಶದಂತೆ, ನೀರಿನ ಸೌಕರ್ಯ ಪಡೆದಿತ್ತು. ಆದುದರಿಂದ ಲೋಟನು ಜೋರ್ಡಾನ್ ನದಿಯ ಸುತ್ತಲಿನ ಪ್ರದೇಶವನ್ನು ಆರಿಸಿಕೊಂಡು ಪೂರ್ವ ದಿಕ್ಕಿನ ಕಡೆಗೆ ಹೊರಟನು. ಹೀಗೆ ಅವರಿಬ್ಬರು ಬೇರೆ ಬೇರೆ ಆದರು. ಅಬ್ರಾಮನು ಕಾನಾನ್ ನಾಡಿನಲ್ಲೇ ವಾಸಮಾಡಿದನು. ಲೋಟನು ಜೋರ್ಡನ್ ನದಿಯ ಸುತ್ತಣ ಊರುಗಳಲ್ಲಿ ವಾಸಮಾಡುತ್ತಾ ಸೊದೋಮ್ಗೆ ಸಮೀಪದಲ್ಲಿ ಗುಡಾರ ಹಾಕಿದನು. ಸೊದೋಮಿನ ಪಟ್ಟಣದವರು ಬಹಳ ದುಷ್ಟರು. ಪ್ರಭುವಿನ ದೃಷ್ಟಿಯಲ್ಲಿ ಕಡುಪಾಪಿಗಳು. ಲೋಟನು ಅಬ್ರಾಮನನ್ನು ಬಿಟ್ಟುಹೋದ ಬಳಿಕ ಸರ್ವೇಶ್ವರಸ್ವಾಮಿ ಅಬ್ರಾಮನಿಗೆ, "ನೀನು ಇರುವ ಸ್ಥಳದಿಂದಲೇ ದಕ್ಷಿಣೋತ್ತರ ಪೂರ್ವ ಪಶ್ಚಿಮಗಳ ಕಡೆಗೆ ಕಣ್ಣೆತ್ತಿ ನೋಡು. ನಿನ್ನ ಕಣ್ಣಿಗೆ ಕಾಣಿಸುವ ಈ ಪ್ರಾಂತ್ಯವನ್ನೆಲ್ಲಾ ನಿನಗೂ ನಿನ್ನ ಸಂತಾನಕ್ಕೂ ಶಾಶ್ವತವಾಗಿ ಕೊಡುತ್ತೇನೆ. ನಿನ್ನ ಸಂತಾನದವರನ್ನು ಭೂಮಿಯ ಧೂಳಿನಷ್ಟು ಆಸಂಖ್ಯಾತರನ್ನಾಗಿ ಮಾಡುತ್ತೇನೆ. ಭೂಮಿಯ ಧೂಳನ್ನು ಲೆಕ್ಕಿಸಲು ಸಾಧ್ಯವಾದಲ್ಲಿ ನಿನ್ನ ಸಂತಾನದವರನ್ನು ಲೆಕ್ಕಿಸಲು ಸಾಧ್ಯವಾದೀತು. ನೀನೆದ್ದು ಈ ನಾಡಿನ  ಉದ್ದಗಲಕ್ಕೂ ತಿರುಗಾಡು; ಇದನ್ನು ನಾನು ನಿನಗೆ ಕೊಡುತ್ತೇನೆ," ಎಂದು ಹೇಳಿದರು. ಅಬ್ರಾಮನು ಅಲ್ಲಿಂದ ಹೊರಟು ಅಲ್ಲಲ್ಲಿ ಗುಡಾರ ಹಾಕಿಸಿಕೊಳ್ಳುತ್ತಾ, ಹೆಬ್ರೋನಿನಲ್ಲಿರುವ ಮಮ್ರೆವೃಕ್ಷಗಳ ತೋಪಿಗೆ ಬಂದು ವಾಸಮಾಡಿದನು. ಸರ್ವೇಶ್ವರಸ್ವಾಮಿಗೆ ಅಲ್ಲಿ ಒಂದು ಬಲಿಪೀಠವನ್ನು ಕಟ್ಟಿಸಿದನು.

ಕೀರ್ತನೆ: 15:2-3, 3-4, 5

ಶ್ಲೋಕ: ಯೋಗ್ಯನಾರು ಪ್ರಭೂ, ನಿನ್ನ ಗುಡಾರದಲ್ಲಿ ಬಿಡಾರಮಾಡಲು?

ಶುಭಸಂದೇಶ: ಮತ್ತಾಯ 7:6, 12-14

ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು; "ಪವಿತ್ರವಾದುದನ್ನು ನಾಯಿಗಳಿಗೆ ಹಾಕಬೇಡಿ - ಅವು ನಿಮ್ಮ ಮೇಲೆ ತಿರುಗಿಬಿದ್ದು ನಿಮ್ಮನ್ನು ಸಿಳಿಬಿಟ್ಟಾವು; ಮುತ್ತುಗಳನ್ನು ಹಂದಿಗಳ ಮುಂದೆ ಚೆಲ್ಲಬೇಡಿ ಅವು ಆ ಮುತ್ತುಗಳನ್ನು ಕಾಲಿನಿಂದ ತುಳಿದು ಹಾಕಿಯಾವು. ಜನರು ನಿಮಗೆ ಏನೇನು ಮಾಡಬೇಕೆಂದು ನೀವು ಅಪೇಕ್ಷಿಸುತ್ತೀರೋ, ಅದನ್ನೇ ನೀವು ಅವರಿಗೆ ಮಾಡಿ. ಧರ್ಮಶಾಸ್ತ್ರದ ಹಾಗೂ ಪ್ರವಾದನೆಗಳ ಸಾರ ಇದೇ," ಕಿರಿದಾದ ಬಾಗಿಲಿನಿಂದಲೇ ಒಳಕ್ಕೆ ಹೋಗಿರಿ. ಏಕೆಂದರೆ ವಿನಾಶಕ್ಕೆ ಒಯ್ಯುವ ಬಾಗಿಲು ಹಿರಿದು; ಅದರ ಮಾರ್ಗ ಸರಾಗ; ಅದನ್ನು ಹಿಡಿಯುವವರು ಅನೇಕರು. ಅಮರ ಜೀವಕ್ಕೆ ಕೊಂಡೊಯ್ಯುವ ಮಾರ್ಗ ದುರ್ಭರ; ಅದರ ಬಾಗಿಲು ಕಿರಿದು; ಅದನ್ನು ಗುರುತಿಸುವವರೋ ಕೆಲವರು,"

24.06.2019 - "ಇವನ ಹೆಸರು ಯೊವಾನ್ನ"

ಸಂತ ಸ್ನಾನಿಕ ಯೊವಾನ್ನರ ಮಹೋತ್ಸವ

ಮೊದಲನೇ ವಾಚನ: ಯೆಶಾಯ 49:1-6

ಕಿವಿಗೊಡಿ ನನ್ನ ದ್ವೀಪನಿವಾಸಿಗಳೇ, ಆಲಿಸಿ ನನ್ನನ್ನು ದೂರದ ಜನಾಂಗಗಳೇ, ಸರ್ವೇಶ್ವರ ಕರೆದನೆನ್ನನ್ನು ಗರ್ಭದಲ್ಲಿದ್ದಾಗಲೇ; ಹೆಸರಿಟ್ಟನೆನಗೆ ನಾನು ತಾಯಿಯ ಉದರದಲ್ಲಿದ್ದಾಗಲೇ. ಮಾಡಿದನು ನನ್ನ ನುಡಿಯನ್ನು ಹರಿತವಾದ ಖಡ್ಗವನ್ನಾಗಿ, ಮುಚ್ಚಿಟ್ಟಿಹನು ನನ್ನನ್ನು ತನ್ನ ಕರದ ನೆರಳಿನಲ್ಲಿ, ರೂಪಿಸಿಹನು ನನ್ನನ್ನು ಚೂಪಾದ ಬಾಣವನ್ನಾಗಿ, ಬಚ್ಚಿಟ್ಟಿಹನು ನನ್ನನ್ನು ತನ್ನ ಬತ್ತಳಿಕೆಯಲ್ಲಿ ಆತನೆನಗೆ ಇಂತೆಂದ: "ನೀನೆನ್ನ ದಾಸ; ನನ್ನ ಮಹಿಮೆ ಬೆಳಗಿಸುವ ಇಸ್ರಯೇಲ." ಇಂತೆಂದುಕೊಂಡೆ ನಾನಾಗ; ವ್ಯರ್ಥವಾಯಿತು ನನ್ನ ಸಾಮರ್ಥ್ಯವೆಲ್ಲ ಶೂನ್ಯವಾಗಿ ಹೋಯಿತು ನನ್ನ ಶಕ್ತಿಯೆಲ್ಲ. ನನಗೆ ದೊರಕುವುದು ನ್ಯಾಯ ಸರ್ವೇಶ್ವರನ ಕೈಯಲ್ಲೇ, ನನಗೆ ಬರುವುದು ಬಹುಮಾನ ಆ ದೇವರಿಂದಲೇ. ಯಕೋಬ್ಯರನ್ನುತನ್ನ ಬಳಿಗೆ ಕರೆತರಲು, ಇಸ್ರಯೇಲರನ್ನು ತನ್ನೊಂದಿಗೆ ಸೇರಿಸಿಕೊಳ್ಳಲು ತನ್ನ ದಾಸನನ್ನಾಗಿ ನನ್ನ ರೂಪಿಸಿದನು, ತಾಯ ಗರ್ಭದಲ್ಲಿದ್ದಾಗಲೇ ಮಾಡಿದನಿದನು. ಸನ್ಮಾನ್ಯನು ನಾನು ಸರ್ವೇಶ್ವರನ ದೃಷ್ಟಿಯಲಿ; ನನ್ನ  ಶಕ್ತಿಸಾಮರ್ಥ್ಯ ಇರುವುದು ಆ ದೇವರಲಿ. ಮತ್ತೆ ಆತ ಇಂತೆಂದನು ನನಗೆ: "ಮಹತ್ಕಾರ್ಯವೇನೂ ಅಲ್ಲ, ನನ್ನ ದಾಸನಾದ ನಿನಗೆ ಕುಲಗಳನು ಉದ್ದರಿಸುವ ಮಾತ್ರಕ್ಕೆ ಇಸ್ರಯೇಲರಲಿ ರಕ್ಷಿತರಾದವರನ್ನು ಮರಳಿ ಬರಮಾಡುವ ಮಾತ್ರಕೆ . ನೇಮಿಸಿರುವೆನು ನಿನ್ನನ್ನು ಜ್ಯೋತಿಯನ್ನಾಗಿ ಸರ್ವ ಜನಾಂಗಗಳಿಗೆ ನನ್ನ ರಕ್ಷಣೆ ವ್ಯಾಪಿಸಿರುವಂತೆ ಮಾಡಲು ಜಗದ ಕಟ್ಟ ಕಡೆಯವರಗೆ."

ಕೀರ್ತನೆ: 139:1-3, 13-15

ಶ್ಲೋಕ: ನಿನಗೆ ವಂದನೆ, ನೀ ನನ್ನ ಭಯಭಕ್ತಿಗೆ ಪಾತ್ರ

ಎರಡನೆಯ ವಾಚನ: ಪ್ರೇಷಿತರ ಕಾರ್ಯಕಲಾಪಗಳು  13:22-26

ಪೌಲನು ಉಪದೇಶ ಮಾಡುತ್ತಾ ಹೀಗೆಂದನು: "ದೇವರು ಸೌಲನನ್ನು ತ್ಯಜಿಸಿ ದಾವೀದನನ್ನು ಅರಸನನ್ನಾಗಿ ನೇಮಿಸಿದರು. ಇವನ ಬಗ್ಗೆ ದೇವರು, 'ಜೆಸ್ಸೆಯನ ಮಗ ದಾವೀದನು ನನಗೆ ಮೆಚ್ಚುಗೆಯಾದ ವ್ಯಕ್ತಿ; ಇವನು ನನ್ನ ಆಶೆ ಆಕಾಂಕ್ಷೆಗಳನ್ನೆಲ್ಲಾ ಪೂರೈಸುವನು," ಎಂದು ತಮ್ಮ ಒಪ್ಪಿಗೆಯನ್ನು ಸೂಚಿಸಿದರು. ಈ ದಾವೀದನ ಸಂತತಿಯಿಂದಲೇ ದೇವರು ತಮ್ಮ ವಾಗ್ದಾನದ ಪ್ರಕಾರ ಇಸ್ರಯೇಲ್ ಜನರಿಗೆ ಒಬ್ಬ ಉದ್ಧಾರಕನನ್ನು ಕಳುಹಿಸಿದರು. ಇವರೇ ಯೇಸುಸ್ವಾಮಿ. ಇವರ ಆಗಮನಕ್ಕೆ ಸಿದ್ಧತೆಯಾಗಿ, ಪಶ್ಚಾತ್ತಾಪಪಟ್ಟು ಪಾಪಕ್ಕೆ  ವಿಮುಖರಾಗಿ ದೇವರಿಗೆ ಅಭಿಮುಖರಾಗಿ ಸ್ನಾನದೀಕ್ಷೆಯನ್ನು ಪಡೆಯಬೇಕೆಂದು ಯೊವಾನ್ನನು ಇಸ್ರಯೇಲಿನ ಎಲ್ಲ ಜನರಿಗೆ ಸಾರಿದನು. ಯೊವಾನ್ನನು ತನ್ನ ನಿಯೋಗವನ್ನು ಪೂರೃಸುತ್ತಿದ್ದಂತೆ ಜನರಿಗೆ, "ನಾನು ಯಾರೆಂದು ನೀವು ನೆನೆಸುತ್ತೀರಿ? ನೀವು ಎದುರು ನೋಡುತ್ತಿರುವ ವ್ಯಕ್ತಿ ನಾನಲ್ಲ. ನನ್ನ ಆನಂತರ ಒಬ್ಬರು ಬರುವರು; ಅವರ ಪಾದರಕ್ಷೆಗಳನ್ನು ಬಿಚ್ಚುವುದಕ್ಕೂ ನಾನು ಯೋಗ್ಯನಲ್ಲ," ಎಂದನು. ನನ್ನ ಸಹೋದರರೇ ಅಬ್ರಾಹಾಮನ ಸಂತತಿಯವರೇ ಮತ್ತು ದೇವರಲ್ಲಿ ಭಯಭಕ್ತಿಯುಳ್ಳ ಇನ್ನಿತರರೇ, ಈ ಜೀವೋದ್ಧಾರದ ಸಂದೆಶವನ್ನು ಕಳುಹಿಸಿರುವುದು ನಮಗಾಗಿಯೇ."

ಶುಭಸಂದೇಶ ಲೂಕ: 1:57-66, 80


ದಿನ ತುಂಬಿದಾಗ ಎಲಿಜಬೇತಳು ಗಂಡು ಮಗುವಿಗೆ ಜನ್ಮವಿತ್ತಳು.  ಸರ್ವೇಶ್ವರ ಆಕೆಗೆ ವಿಶೇಷ ಕೃಪೆ ತೋರಿದ್ಧಾರೆಂದು ಅರಿತುಕೊಂಡ ನೆರಹೊರೆಯವರೂ ಬಂಧು ಬಳಗದವರೂ ಬಂದು ಆಕೆಯೊಡನೆ ಸೇರಿ ಸಂತೋಷಪಟ್ಟರು. ಎಂಟನೆಯ ದಿನ ಮಗುವಿನ ಸುನ್ನತಿಗಾಗಿ ಅವರು ಬಂದು ಅದಕ್ಕೆ ,  ತಂದೆಯ ಹೆಸರನ್ನು ಒನುಸರಿಸಿ, ಜಕರೀಯನೆಂದು ನಾಮಕರಣ ಮಾಡುವುದರಲ್ಲಿದ್ದರು. ಆದರೆ ಮಗುವಿನ ತಾಯಿ, "ಇಲ್ಲ, ಅದು ಕೂಡದು, ಅವನಿಗೆ "ಯೊವಾನ್ನ" ಎಂಬ ಹೆಸರಿಡಬೇಕು," ಎಂದಳು. ಅದಕ್ಕೆ ಅವರು , "ನಿನ್ನ ಬಂಧು ಬಳಗದವರಲ್ಲಿ ಯಾರಿಗೂ ಈ ಹೆಸರು ಇಲ್ಲವಲ್ಲಾ," ಎಂದು ಹೇಳಿ, "ಮಗುವಿಗೆ ಏನು ಹೆಸರಿಡಬೇಕೆನ್ನುತ್ತೀರಿ? ಎಂದು ಮಗುವಿನ ತಂದೆಗೆ ಸನ್ನೆಮಾಡಿ ಕೇಳಿದರು. ಆಗ ಜಕರೀಯನು ಬರೆಯುವ ಒಂದು ಹಲಗೆಯನ್ನು ತರಿಸಿಕೊಂಡು, "ಇವನ ಹೆಸರು ಯೊವಾನ್ನ" ಎಂದು ಬರೆದನು. ಎಲ್ಲರೂ ಬೆರಗಾದರು. ತಕ್ಷಣವೇ ಅವನಿಗೆ ಬಾಯಿ ಬಂದಿತು; ನಾಲಿಗೆ ಸಡಿಲವಾಯಿತು; ಅವನು ಮಾತನಾಡಲು ಆರಂಭಿಸಿ ದೇವರನ್ನು ಸ್ತುತಿಸಿದನು. ನೆರೆಹೊರೆಯವರೆಲ್ಲರೂ ತಲ್ಲಣಗೊಂಡರು. ಈ ಸಮಾಚಾರ ಜುದೇಯದ ಗುಡ್ಡಗಾಡು ಪ್ರಾಂತ್ಯದಲ್ಲೆಲ್ಲಾ ಹರಡಿತು. ಕೇಳಿದವರೆಲ್ಲರೂ ಈ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಂಡು, "ಈ ಮಗು ಮುಂದೆ ಎಂಥವನಾಗುವನೋ? ಎಂದುಕೊಂಡರು. ನಿಶ್ಚಯವಾಗಿಯೂ ಸರ್ವೇಶ್ವರನ ಅಭಯ ಹಸ್ತವು ಈ ಮಗುವಿನ ಮೇಲಿತ್ತು. ಬಾಲಕನು ಬೆಳೆದಂತೆ ಆತ್ಮಶಕ್ತಿಯುತನಾದನು. ಇಸ್ರಯೇಲ್ ಜನರಿಗೆ ಬಹಿರಂಗವಾಗಿ ಕಾಣಿಸಿಕೊಳ್ಳುವವರೆಗೂ ಅವನು ಬೆಂಗಾಡಿನಲ್ಲೇ ವಾಸಿಸುತ್ತಿದ್ದನು.

23.06.2019 - "ನಮ್ಮಲ್ಲಿರುವುದು ಐದು ರೊಟ್ಟಿ ಮತ್ತು ಎರಡು ಮೀನು ಮಾತ್ರ"

ಮೊದಲನೇ ವಾಚನ: ಆದಿಕಾಂಡ 14:18-20

ಸಾಲೇಮಿನ ಅರಸನೂ  ಪರಾತ್ಪರ ದೇವರ ಯಾಜಕನೂ ಆಗಿದ್ದ ಮೆಲ್ಕಿಸದೇಕನು ಸಹ ಅಲ್ಲಿಗೆ ಬಂದು ರೊಟ್ಟಿಯನ್ನೂ ದ್ರಾಕ್ಷಾರಸವನ್ನೂ ಅರ್ಪಿಸಿ ಅಬ್ರಾಮನಿಗೆ ಇಂತೆಂದು ಆಶೀರ್ವಾದ ಮಾಡಿದನು: "ಭೂಮ್ಯಾಕಾಶಗಳನ್ನು ಉಂಟುಮಾಡಿದ ಪರಾತ್ಪರ ದೇವರ ಆಶೀರ್ವಾದ ಅಬ್ರಾಮನಿಗಿರಲಿ; ನಿನ್ನ ಶತ್ರುಗಳನ್ನು ನಿನ್ನ ಕೈವಶ ಮಾಡಿದ ಆ ಪರಾತ್ಪರ ದೇವರಿಗೆ ಸ್ತೋತ್ರವಾಗಲಿ!" ಅಬ್ರಾಮನು ತಾನು ಗೆದ್ದು ತಂದಿದ್ದ ಎಲ್ಲ ವಸ್ತುಗಳಲ್ಲಿ ಹತ್ತನೆಯ ಒಂದು ಭಾಗವನ್ನು ಮೆಲ್ಕಿಸದೇಕನಿಗೆ ಕೊಟ್ಟನು.

ಕೀರ್ತನೆ: 110:1, 2, 3, 4

ಶ್ಲೋಕ: ಮೆಲ್ಕಿಸದೇಕ್ ಪರಂಪರೆಯ ಯಾಜಕ ನೀ ನಿರುತ

ಎರಡನೇ ವಾಚನ: 1ಕೊರಿಂಥಿಯರಿಗೆ  11:23-26

ಸಹೋದರರೇ, ನಿಮಗೆ ಮಾಡಿದ ಉಪದೇಶವನ್ನು ನಾನು ಪ್ರಭುವಿನಿಂದಲೇ ಪಡೆದೆನು. ಅದೇನೆಂದರೆ; ಪ್ರಭುಯೇಸು, ತಮ್ಮನ್ನು ಹಿಡಿದುಕೊಡಲಾದ ಆ ರಾತ್ರಿ ರೊಟ್ಟಿಯನ್ನು ತೆಗೆದುಕೊಂಡು ದೇವರಿಗೆ ಕೃತಜ್ಞತಾಸ್ತೋತ್ರವನ್ನು ಸಲ್ಲಿಸಿ ಅದನ್ನು ಮುರಿದು, "ಇದು ನಿಮಗಾಗಿ ಒಪ್ಪಿಸಲಾಗುವ ನನ್ನ ಶರೀರ, ಇದನ್ನು ನನ್ನ ಸ್ಮರಣೆಗಾಗಿ ಮಾಡಿ," ಎಂದರು. ಅಂತೆಯೇ ಭೋಜನದ ಕೊನೆಯಲ್ಲಿ ಪಾನ ಪಾತ್ರೆಯನ್ನು ತೆಗೆದುಕೊಂಡು, "ಈ ಪಾತ್ರೆ ನನ್ನ ರಕ್ತದಿಂದ ಮುದ್ರಿತವಾದ ಹೊಸ ಒಡಂಬಡಿಕೆ; ಇದನ್ನು ನೀವು ಪಾನಮಾಡುವಾಗಲೆಲ್ಲಾ ನನ್ನ ಸ್ನರಣೆಗಾಗಿ ಮಾಡಿರಿ," ಎಂದರು. ಎಂದೇ, ನೀವು ಈ ರೊಟ್ಟಿಯನ್ನು ಭುಜಿಸಿ ಈ ಪಾತ್ರೆಯಿಂದ ಪಾನಮಾಡುವಾಗಲೆಲ್ಲಾ ಪ್ರಭು ಬರುವ ತನಕ ಅವರ ಮರಣವನ್ನು ಸಾರುತ್ತೀರಿ.

ಶುಭಸಂದೇಶ: ಲೂಕ 9:11-17


ತಮ್ಮನ್ನು ಹಿಂಬಾಲಿಸುತ್ತಿದ್ದ ಜನಸಮೂಹವನ್ನು ಯೇಸು ಸ್ವಾಗತಿಸಿ, ದೇವರ ಸಾಮ್ರಾಜ್ಯದ ವಿಷಯವಾಗಿ ಹೇಳಿ, ಅಗತ್ಯವಿದ್ದವರಿಗೆ ಆರೋಗ್ಯದಾನ ಮಾಡಿದರು. ಅಷ್ಟರಲ್ಲಿ ಸಾಂಯಕಾಲವಾಗುತ್ತಾ ಬಂದಿತು. ಹನ್ನೆರಡು ಮಂದಿ ಪ್ರೇಷಿತರು ಯೇಸುವಿನ ಬಳಿಗೆ ಬಂದು, "ಇದು ನಿರ್ಜನ ಪ್ರದೇಶ, ಜನರನ್ನು ಕಳುಹಿಸಿಬಿಡಿ; ಅವರು ಸಮೀಪದ ಊರುಕೇರಿಗಳಿಗೂ ಹೋಗಿ ಊಟವಸತಿಗಳನ್ನು ಒದಗಿಸಿಕೊಳ್ಳಲಿ," ಎಂದರು. ಅದಕ್ಕೆ ಯೇಸು, "ನೀವೇ ಅವರಿಗೆ ಊಟಕ್ಕೆ ಏನಾದರು ಕೊಡಿ," ಎಂದರು. ಅವರು, "ನಮ್ಮಲ್ಲಿರುವುದು ಐದು ರೊಟ್ಟಿ ಮತ್ತು  ಎರಡು ಮೀನು ಮಾತ್ರ; ನಾವು ಹೋಗಿ ಇವರೆಲ್ಲರಿಗೆ ಬೇಕಾಗುವಷ್ಟು ಊಟ ಕೊಂಡುಕೊಂಡು ಬರಬೇಕೇ?" ಎಂದರು. ಏಕೆಂದರೆ ಅಲ್ಲಿ ಗಂಡಸರೇ ಸುಮಾರು ಐದು ಸಾವಿರ ಮಂದಿ  ಇದ್ದರು. ಆಗ ಯೇಸು ಶಿಷ್ಯರಿಗೆ, "ಇವರನ್ನು ಐವತ್ತು ಐವತ್ತರಂತೆ ಪಂಕ್ತಿಯಾಗಿ ಕೂರಿಸಿರಿ," ಎಂದು ಹೇಳಲು, ಅವರು ಹಾಗೆಯೇ ಎಲ್ಲರನ್ನು ಕುಳ್ಳಿರಿಸಿದರು. ಆನಂತರ ಯೇಸು ಐದು ರೊಟ್ಟಿಗಳನ್ನೂ ಎರಡು ಮೀನುಗಳನ್ನೂ  ತೆಗೆದುಕೊಂಡು ಸ್ವರ್ಗದತ್ತ ಕಣ್ಣೆತ್ತಿ ನೋಡಿ, ದೇವರಿಗೆ ಸ್ತೋತ್ರ ಸಲ್ಲಿಸಿದರು.  ತರುವಾಯ ಅವುಗಳನ್ನು ಮುರಿದು ಜನಸಮೂಹಕ್ಕೆ ಬಡಿಸುವಂತೆ ಶಿಷ್ಯರಿಗೆ ಕೊಟ್ಟರು. ಎಲ್ಲರೂ ಹೊಟ್ಟೆತುಂಬ ತಂದು ಸಂತೃಪ್ತರಾದರು. ಇನ್ನೂ ಉಳಿದಿದ್ದ ತುಂಡುಗಳನ್ನು ಒಟ್ಟುಗೂಸಿದಾಗ ಅವು ಹನ್ನರಡು ಬುಟ್ಟಿ ತುಂಬ ಆದ್ದವು

22.06.2019

ಮೊದಲ ವಾಚನ: 2  ಕೊರಿಂಥಿಯರಿಗೆ  12:1-10

ಹೊಗಳಿಕೊಳ್ಳುವುದು ಹಿತಕರವಲ್ಲ. ಆದರೂ ಹೊಗಳಿಕೊಳ್ಳಬೇಕಾದ್ದು ಅನಿವಾರ್ಯವಾಗಿದೆ. ಆದುದರಿಂದ ಪ್ರಭು ನನಗಿತ್ತ ದರ್ಶನಗಳನ್ನು ಮತ್ತು ಶ್ರುತಪಡಿಸಿದ ಸತ್ಯಗಳನ್ನು ಕುರಿತು ಹೇಳುತ್ತೇನೆ. ಕ್ರೈಸ್ತನಾದ ಒಬ್ಬ ವೆಕ್ತಿಯನ್ನು ನಾನು ಬಲ್ಲೆ. ಅವನು ಹದಿನಾಲ್ಕು ವರ್ಷಗಳಿಗೆ ಹಿಂದೆ ಮಹೋನ್ನತ ಸ್ವರ್ಗಕ್ಕೆ ಒಯ್ಯಲ್ಪಟ್ಟನು. ದೇಹಸಹಿತವಾಗಿಯೋ ಅದನ್ನು ನಾನರಿಯೆ. ದೇವರೊಬ್ಬರೇ ಬಲ್ಲರು. ಅವನು ಪರಂಧಾಮಕ್ಕೆ ಒಯ್ಯಲ್ಪಟ್ಟನೆಂಬುದು ನಿಶ್ಚಯ. ದೇಹಸಹಿತವಾಗಿಯೋ ದೇಹರಹಿತವಾಗಿಯೋ ಅದನ್ನು ನಾನರಿಯೆ. ದೇವರೊಬ್ಬರೇ ಬಲ್ಲರು.  ಅಲ್ಲಿ ಅವನಿಗೆ ಕೇಳಿ ಬಂದ ವಿಷಯಗಳು ಮಾನವನ ವರ್ಣನೆಗೆ ಎಟುಕದವು. ಮಾನವನ ನುಡಿಗೆ ನಿಲುಕದವು. ಅವನನ್ನು ಕುರಿತು ನಾನು ಹೆಮ್ಮೆಪಡುತ್ತೇನೆ. ಆದರೆ ನನ್ನನ್ನು ಕುರಿತು ನಾನು ಹೊಗಳಿಕೊಳ್ಳುವುದಿಲ್ಲ. ನನ್ನ ದೌರ್ಬಲ್ಯವೇ ನನ್ನ ಹೊಗಳಿಕೆ. ಹಾಗೇನಾದರೂ ನಾನು ಹೊಗಳಿಸಿಕೊಳ್ಳಲು ಆಶಿಸಿದರೆ ಅದೇನು ಹುಚ್ಚುತನವಲ್ಲ. ಏಕೆಂದರೆ, ನಾನು ನುಡಿಯುತ್ತಿರುವುದು ಸತ್ಯವನ್ನೇ. ಆದರೂ ನಾನು ಹಾಗೆ ಹೊಗಳಿಕೊಳ್ಳುವುದಿಲ್ಲ. ಕಾರಣ, ಯಾರೂ ನನ್ನಲ್ಲಿ ಕಾಣುವುದಕಿಂತಲೂ ನನ್ನಿಂದ ಕೇಳುವುದಕಿಂತಲೂ ಹೆಚ್ಚಾಗಿ ನನ್ನನ್ನು ಪರಿಗಣಿಸಬಾರದು. ನನಗೆ ತಿಳಿಸಲಾದ ಗಹನ ಸತ್ಯಗಳಿಂದ ನಾನು ಉಬ್ಬಿಹೋಗದ ಹಾಗೆ ನನ್ನ ದೇಹದಲ್ಲಿ ಶೂಲದಂತೆ ನಾಟಿರುವ ಬೇನೆಯೊಂದನ್ನು ನನಗೆ ಕೊಡಲಾಯಿತು. ನಾನು ಆಹಂಕಾರ ಪಡದಹಾಗೆ ಇದು ನನ್ನನ್ನು ತಿವಿತಿವಿದು ಸೃತಾನನ ದೂತನಂತೆ ಕಾಡಿಸುತ್ತಿತ್ತು. ಈ ಪೀಡೆ ನನ್ನನ್ನು ಬಿಟ್ಟು ತೊಲಗಲೆಂದು ನಾನು ಮೂರು ಸಾರಿ ಪ್ರಭುವಿನಲ್ಲಿ ಬೇಡಿಕೊಂಡೆ. ಅದಕ್ಕವರು, "ನನ್ನ ಅನುಗ್ರಹವೇ ನಿನಗೆ ಸಾಕು. ನನ್ನ ಶಕ್ತಿ ಪರಿಪಕ್ವವಾಗುವುದು ನಿಶ್ಯಕ್ತಿಯಲ್ಲಿಯೇ," ಎಂದು ಹೇಳಿದರು. ಕ್ರಿಸ್ತ ಯೇಸುವಿನ ಶಕ್ತಿ ನನ್ನಲ್ಲಿ ನೆಲಸುವಂತೆ ನನ್ನ ನಿಶ್ಯಕ್ತಿಯನ್ನು ಕುರಿತು ಹೆಮ್ಮೆಪಡುತ್ತೇನೆ. ದುರ್ಬಲತೆಗಳಲ್ಲೂ ದುರವಸ್ಥೆಗಳಲ್ಲೂ ಮಾನನಷ್ಟದಲ್ಲೂ ಕಷ್ಟಹಿಂಸೆಗಳಲ್ಲೂ, ಆಪತ್ತುವಿಪತ್ತುಗಳಲ್ಲೂ ನಾನು ಕ್ರಿಸ್ತಯೇಸುವಿನ ನಿಮಿತ್ತ ಸಂತುಷ್ಟನಾಗಿದ್ದೇನೆ. ನಾನು ಬಲಶಾಲಿಯಾಗಿರುವುದು ಬಲಹೀನನಾಗಿರುವಾಗಲೇ.

ಕೀರ್ತನೆ: 34:8-9, 10-11, 12-13

ಶ್ಲೋಕ: ಸವಿದು ನೋಡು ಪ್ರಭುವಿನ ಮಾಧುರ್ಯವನು

ಶುಭಸಂದೇಶ: ಮತ್ತಾಯ 6:24-34


ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು: "ಯಾರೂ ಇಬ್ಬರು ಯಜಮಾನರಿಗೆ ಜೀತಮಾಡಲಾಗದು. ಅವನು ಒಬ್ಬನನ್ನು ದ್ವೇಷಿಸಿ ಇನ್ನೊಬ್ಬನನ್ನು ಪ್ರೀತಿಸುತ್ತಾನೆ; ಅಥವಾ ಒಬ್ಬನೊಡನೆ ಹೊಂದಿಕೊಂಡು ಇನ್ನೊಬ್ಬನನ್ನು ತಾತ್ಸಾರ ಮಾಡುತ್ತಾನೆ. ದೇವರಿಗೂ ದ್ರವ್ಯಕ್ಕೂ ಒಟ್ಟಿಗೆ ಸೇವೆಮಾಡಲು ನಿಮ್ಮಿಂದಾಗದು. ನಾನು ಹೇಳುವುದನ್ನು ಕೇಳಿ; "ಪ್ರಾಣಧಾರಣೆಗೆ ಏನು ಉಣ್ಣುವುದು, ಏನು ಕುಡಿಯುವುದು; ದೇಹರಕ್ಷಣೆಗೆ ಏನು ಹೊದೆಯುವುದು" ಎಂದು ಚಿಂತೆಮಾಡಬೇಡಿ. ಊಟಕಿಂತ ಪ್ರಾಣ, ಉಡುಪಿಗಿಂತ ದೇಹ ಮೇಲಾದುದಲ್ಲವೇ? ಆಕಾಶದಲ್ಲಿ ಹಾರಾಡುವ ಹಕ್ಕಿಗಳನ್ನು ಗಮನಿಸಿ; ಅವು ಬಿತ್ತುವುದಿಲ್ಲ, ಕೊಯ್ಯುವುದಿಲ್ಲ, ಕಣಜಗಳಲ್ಲಿ ಕುಡಿಡುವುದೂ ಇಲ್ಲ. ಆದರೂ ಸ್ವರ್ಗದಲ್ಲಿರುವ ನಿಮ್ಮ ತಂದೆ ಅವುಗಳನ್ನು ಪೋಷಿಸುತ್ತಾರೆ. ಹಕ್ಕಿಗಳಿಗಿಂತ ನೀವು ಎಷ್ಟೋ ಮೇಲಾದವರಲ್ಲವೆ? ಚಿಂತಿಸಿ, ಚಿಂತಿಸಿ ನಿಮ್ಮ ಜೀವನಾವಧಿಯನ್ನು ಕೊಂಚ ಕಾಲವಾದರೂ ದೀರ್ಘ ಮಾಡಲು ನಿಮ್ಮಲ್ಲಿ ಯಾರಿಂದಾದೀತು? ಉಡುಗೆತೊಡುಗೆಗಳ ಚಿಂತೆ ನಿಮಗೇಕೆ? ವನಕುಸುಮಗಳು ಬೆಳೆಯುವ ರೀತಿಯನ್ನು ಗಮನಿಸಿ ನೋಡಿ: ಅವು ದುಡಿಯುವುದಿಲ್ಲ, ನೂಲುವುದಿಲ್ಲ. ಆದರೂ ಅರಸ ಸೊಲೊಮೋನನು ತನ್ನ ಸರ್ವವೈಭವದಲ್ಲಿ ಇದ್ದಾಗಲೂ ಈ ಕುಸುಮಗಳಲ್ಲಿ ಒಂದರಷ್ಟೂ ಸುಂದರವಾದ ಉಡುಪನ್ನು ಧರಿಸಲಿಲ್ಲ. ಅಲ್ಪ ವಿಶ್ವಾಸಿಗಳೇ,  ಇಂದಿದ್ದು ನಾಳೆ ಒಲೆಪಾಲಾಗುವ ಬಯಲಿನ ಹುಲ್ಲಿಗೆ ದೇವರು ಹೀಗೆ ಉಡಿಸಿದರೆ, ನಿಮಗೆ ಮತ್ತಷ್ಟೂ ಮಾಡಲಾರರೇ? ಅದುದರಿಂದ ತಿನ್ನಲು ಏನು? ಕುಡಿಯಲು ಏನು? ಉಡಲು ಏನು? ಎಂದು ಪೇಚಾಡಬೇಡಿ. ಇವೆಲ್ಲವುಗಳಿಗಾಗಿ ಪರಕೀಯರೂ ಪರದಾಡುತ್ತಾರೆ; ಇವೆಲ್ಲಾ ನಿಮಗೆ ಅವಶ್ಯ ಎಂದು ಸ್ವರ್ಗದಲ್ಲಿರುವ ನಿಮ್ಮ ತಂದೆಗೆ ತಿಳಿದಿದೆ. ನೀವಾದರೋ ಮೊದಲು ದೇವರ ಸಾಮ್ರಾಜ್ಯಕ್ಕಾಗಿ, ಅವರ ಸತ್ಸಂಬಂದಕ್ಕಾಗಿ ತವಕಪಡಿ. ಇದರೊಂದಿಗೆ ಅವೆಲ್ಲವೂ ನಿಮಗೆ ನೀಡಲಾಗುವುದು. ಆದುದರಿಂದ ನಾಳೆಯ ಚಿಂತೆ ನಿಮಗೆ ಬೇಡ. ನಾಳೆಯ ಚಿಂತೆ ನಾಳೆಗೇ ಇರಲಿ; ಇಂದಿನ ಪಾಡೇ ಇಂದಿಗೆ ಸಾಕು."

21.06.2019 - ನಿಮ್ಮ ಆಸ್ತಿಯನ್ನು ಸ್ವರ್ಗದಲ್ಲಿ ಕೂಡಿಸಿಡಿ

ಮೊದಲನೇ ವಾಚನ: 2 ಕೊರಿಂಥಿಯರಿಗೆ  11:18, 21-30 

ಅನೇಕರು ಕೇವಲ ಪ್ರಾಂಪಚಿಕ ವಿಷಯಗಳನ್ನು ಕುರಿತು ತನ್ನನ್ನೇ ಹೊಗಳಿಕೊಳ್ಳುತ್ತಾರೆ. ಹಾಗೆಯೇ ನಾನೂ ಹೊಗಳಿಕೊಳ್ಳುತ್ತೇನೆ. ಇದನ್ನೆಲ್ಲಾ ಮಾಡುವ ಸಾಹಸ ನಮಗಿಲ್ಲವೆಂದು ಹೇಳಿಕೊಳ್ಳಲು ನನಗೆ ನಾಚಿಕೆಯಾಗುತ್ತದೆ. ಯಾರಿಗಾದರೂ ಯಾರ ವಿಷಯದಲ್ಲಾದರೂ ಹೊಗಳಿಕೊಳ್ಳುವ ಧ್ಯೆರ್ಯವಿದ್ದರೆ ಅದಕಿಂತ ಹೆಚ್ಚಿನ ಧ್ಯೆರ್ಯ ನನಗಿದೆ. ಇದನ್ನು ನಾನು ಹುಚ್ಚನಂತೆಯೇ ಹೇಳುತ್ತಿದ್ದೇನೆ ಎಂದು ಭಾವಿಸಿಕೊಳ್ಳಿ. ಅವರು ಹಿಬ್ರಿಯರೋ? ನಾನೂ  ಹಿಬ್ರಿಯನೇ. ಅವರು ಇಸ್ರಯೇಲರೋ? ನಾನೂ ಇಸ್ರಯೇಲನೇ. ಅವರು ಅಬ್ರಾಹಾಮನ ವಂಶದವರೋ? ನಾನೂ ಅದೇ ವಂಶದವನೇ. ಅವರು ಕ್ರಿಸ್ತ ಯೇಸುವಿನ ದಾಸರೋ? ಅವರಿಗಿಂತ ನಾನು ದಾಸಾನುದಾಸ ಅವರಿಗಿಂತ ಹೆಚ್ಚಾಗಿ ಸೇವೆಮಾಡಿದ್ದೇನೆ; ಅವರಿಗಿಂತ ಹೆಚ್ಚಾಗಿ ಸೆರೆಮನೆಗಳ ವಾಸವನ್ನು ಅನುಭವಿಸಿದ್ದೇನೆ; ಮಿತಿಮೀರಿ ಏಟು ಪೆಟ್ಟುಗಳನ್ನು ತಿಂದಿದ್ದೇನೆ; ಅನೇಕ ಸಲ ಸಾವಿನ ದವಡೆಗೆ ಸಿಲುಕಿಕೊಂಡಿದ್ದೇನೆ. ಐದು ಸಾರಿ ಯೆಹೂದ್ಯರಿಂದ ನನಗೆ ನಲವತ್ತಕ್ಕೆ ಒಂದು ಕಡಿಮೆ ಚಾಟಿ ಏಟುಗಳು ಬಿದ್ದವು. ಮೂರು ಸಾರಿ ರೋಮನರು ನನ್ನನ್ನು ಛಡಿಗಳಿಂದ ಹೊಡೆಸಿದರು. ಒಮ್ಮೆ ಜನರು ನನ್ನನ್ನು ಕೊಲ್ಲಲೆಂದು ಕಲ್ಲು ತೂರಿದರು. ಮೂರು ಸಲ ನಾನಿದ್ದ ಹಡಗು ಒಡೆದು ನೀರುಪಾಲಾಯಿತು. ಒಂದು ರಾತ್ರಿ, ಒಂದು ಹಗಲು ನಡುಗಡಲಲ್ಲಿ ತೇಲಾಡಿದೆ. ಪ್ರಭುವಿನ ಸೇವೆಯಲ್ಲಿ ನಾನು ಕೈಗೊಂಡ ಪ್ರಯಾಣಗಳು ಅನೇಕ; ನನಗೆ ಬಂದೊದಗಿದ ಅಪಾಯಗಳೂ ಅನೇಕ. ಪ್ರವಾಹಗಳ ಅಪಾಯ, ಕಳ್ಳಕಾಕರ ಅಪಾಯ, ಸ್ವಜನ ಹಾಗೂ ಅನ್ಯಜನರಿಂದ ಅಪಾಯ, ನಗರಗಳ ಹಾಗೂ ನಿರ್ಜನ ಪ್ರದೇಶಗಳ ಅಪಾಯ, ಕಡಲುಗಳ ಅಪಾಯ, ಕಪಟ ಸಹೋದರರಿಂದ  ಅಪಾಯ - ಇವೆಲ್ಲಕ್ಕೂ ತುತ್ತಾದೆ. ಶ್ರಮಪಟ್ಟು ದುಡಿದಿದ್ದೇನೆ, ಎಷ್ಟೋ ಸಾರಿ ನಿದ್ದೆಗೆಟ್ಟಿದ್ದೇನೆ; ಹಸಿವು ನೀರಡಿಕೆಗಳಿಂದ ಬಳಲಿದ್ದೇನೆ; ಅನೇಕ ಸಾರಿ ಊಟ ಬಟ್ಟೆಯಿಲ್ಲದೆ ಅಲೆದಿದ್ದೇನೆ; ಚಳಿಗಾಳಿಯಲ್ಲಿ ನಡುಗಿದ್ದೇನೆ. ಇಂಥ ಇನ್ನಿತರ ಕಷ್ಟ ಸಂಕಟಗಳನ್ನು ಅನುಭವಿಸಿದ್ದೇನೆ. ಅಷ್ಟೆ ಅಲ್ಲದೆ, ಎಲ್ಲಾ ಸಭೆಗಳ ಹಿತಚಿಂತನೆಯೂ ನನ್ನನ್ನು ಅನುದಿನವು ಕಾಡಿಸಿದೆ. ಒಬ್ಬನು ಬಲಹೀನನಾಗಿದ್ದರೆ, ಅವನೊಡನೆ ನಾನೂ ಬಲಹೀನನೇ; ಒಬ್ಬನು ಪಾಪಕ್ಕೆ ಬಲಿಯಾದರೆ ನಾನೂ ತಾಪದಿಂದ ಕುದಿಯುತ್ತೇನೆ. ನಾನು ನನ್ನನ್ನೇ ಹೊಗಳಿಕೊಳ್ಳಬೇಕಾಗಿ ಬಂದರೆ, ನನ್ನ ದೌರ್ಬಲ್ಯವನ್ನು ಬಹಿರಂಗಪಡಿಸಿರುವ ವಿಷಯಗಳಬಗ್ಗೆ ಹೊಗಳಿಕೊಳ್ಳುತ್ತೇನೆ.

ಕೀರ್ತನೆ: 34:2-3, 4-5, 6-7 
ಶ್ಲೋಕ: ಕಿವಿಗೊಡುವನು ಪ್ರಭು ಸಜ್ಜನರ ಮೊರೆಗೆ 

ಶುಭಸಂದೇಶ: ಮತ್ತಾಯ 6:19-23 


ಯೇಸುಸ್ವಾಮಿ ತ್ತಮ್ಮ ಶಿಷ್ಯರಿಗೆ ಹೀಗೆಂದರು; ಇಹಲೋಕದಲ್ಲಿ ಆಸ್ತಿಪಾಸ್ತಿಯನ್ನು ಶೇಕರಿಸಿಡಬೇಡಿ. ಇಲ್ಲಿ ತುಕ್ಕು ಹಿಡಿದೀತು; ನುಸಿ ಹೊಡೆದೀತು; ಕಳ್ಳರು ಕನ್ನ ಕೊರೆದೂ ಕದ್ದಾರು. ನಿಮ್ಮ ಆಸ್ತಿಯನ್ನು ಸ್ವರ್ಗದಲ್ಲಿ ಕೂಡಿಸಿಡಿ. ಅಲ್ಲಿ ತುಕ್ಕು ಹಿಡಿಯದು, ನುಸಿ ಹೊಡೆಯದು, ಕಳ್ಳರು ಕನ್ನ ಕೊರೆದು ಕದಿಯರು. ನಿನ್ನ ನಿಧಿ ಎಲ್ಲಿದೆಯೋ ಅಲ್ಲೆ ಇರುವುದು ನಿನ್ನ ಹೃದಯ. ಕಣ್ಣೇ ದೇಹಕ್ಕೆ ದೀಪ. ನಿನ್ನ ಕಣ್ಣು ಸರಿಯಿದ್ದರೆ ದೇಹವೆಲ್ಲ ಕಾಂತಿಮಯವಾಗುವುದು. ಅದು ಕೆಟ್ಟಿದ್ದರೆ ನಿನ್ನ ದೇಹವೆಲ್ಲ ಕತ್ತಲೆಮಯವಾಗುವುದು. ನಿನ್ನೊಳಗಿರುವ ಬೆಳಕ್ಕೇ ಕತ್ತಲೆಯಾದರೆ ಅದೆಂತಹ ಕರಾಳ ಕತ್ತಲೆಯಾಗಿರಬಹುದು!"

20.06.19 - ಜನರನ್ನು ನೀವು ಕ್ಷಮಿಸದಿದ್ದರೆ, ನಿಮ್ಮ ತಂದೆಯೂ ನಿಮ್ಮ ತಪ್ಪುಗಳನ್ನು ಕ್ಷಮಿಸರು

ಮೊದಲನೇ ವಾಚನ: 2 ಕೊರಿಂಥಿಯರಿಗೆ 11:1--11

ತನ್ನನ್ನು ನಾನೇ ಹೊಗಳಿಕೊಳ್ಳುವ ಹುಚ್ಚುತನವನ್ನು ನೀವು ಸ್ವಲ್ಪ ಸಹಿಸಿಕೊಳ್ಳಬೇಕೆಂದು ಕೇಳಿಕೊಳ್ಳುತ್ತೇನೆನಿಮ್ಮ ಬಗ್ಗೆ ದೇವರಿಗಿರುವ ಪ್ರೇಮಾಸೂಹೆ ನನಗೂ ಇದೆನಿಷ್ಕಳಂಕ ಕನ್ನಿಕೆಯೊಬ್ಬಳನ್ನು ಅವಳ ಏಕೈಕ ಪುರುಷನಿಗೆ ನಿಮ್ಮನ್ನು ನಿಶ್ಚಯಮಾಡಿದ್ದೇನೆಆದರೂ ಹವ್ವಳು ಸರ್ಪದ ಕುಯುಕ್ತಿಗೆ ಸಿಕ್ಕಿ ಮೋಸಹೋದಂತೆ ನೀವೂ ಕೂಡ ಕ್ರಿಸ್ತ ಯೇಸುವಿನ ವಿಷಯದಲ್ಲಿ ಇರಬೇಕಾದ ಶುದ್ಧ ಪಾತಿವ್ರತ್ಯಯನ್ನು ಕಳೆದುಕೊಂಡು ಕೆಟ್ಟುಹೋದಿರಿ ಎಂಬ ಭಯ ನನಗುಂಟುಏಕೆಂದರೆಯಾರಾದರೂ ಬಂದುನಾವು ಬೋಧಿಸದೆ ಇರುವ ಬೇರೊಬ್ಬ ಯೇಸುವನ್ನು ಬೋಧಿಸಿದರೆ ನೀವು ಸ್ವೀಕರಿಸುತ್ತೀರಿನೀವು ಹೊಂದಿರುವ ಪವಿತ್ರಾತ್ಮರಿಗೆ ಬದಲಾಗಿ ಬೇರೊಬ್ಬ ಆತ್ಮವನ್ನು ಪಡೆಯುವಂತೆ ಮಾಡಿದರೆನೀವು ಸ್ವಾಗತಿಸುತ್ತೀರಿನಿಮಗೆ ಈಗಾಗಲೇ ದೊರಕಿರುವ ಶುಭಸಂದೇಶವಲ್ಲದೆ ಬೇರೊಂದು ಸಂದೇಶವನ್ನು ನಿಮಗೆ ಸಾರಿದರೆನೀವು ಒಮ್ಮೆಗೇ ಒಪ್ಪಿಕೊಳ್ಳುತ್ತೀರಿಇದು ನಿಜಕ್ಕೂ ಆಶ್ಚರ್ಯವೇ ಸರಿ.ಮಹಾ ಪ್ರೇಷಿತರುಎನ್ನಿಸಿಕೊಳ್ಳುವ  ಜನರಿಗಿಂತ ನಾನು ಯಾವುದರಲ್ಲೂ ಕಡಿಮೆಯಿಲ್ಲಮಾತಿನಲ್ಲಿ ಚತುರನಲ್ಲದಿದ್ದರೂ ಜ್ಞಾನದಲ್ಲಿ ಅಲ್ಪನಲ್ಲಇದನ್ನು ನಿಮಗೆ ಎಲ್ಲಾ ಸಮಯ ಸಂಧರ್ಭಗಳಲ್ಲೂ ಸ್ಪಷ್ಟಪಡಿಸಿದ್ದೇನೆನಿಮಗೆ ದೇವರ ಶುಭಸಂದೇಶವನ್ನು ಉಚಿತವಾಗಿಯೇ ಬೋಧಿಸಿದೆನುನಿಮ್ಮನ್ನು ಮೇಲಕ್ಕೇರಿಸಲು ನನ್ನನ್ನೇ ತಗ್ಗಿಸಿಕೊಂಡೆನುಹೀಗೆ ಮಾಡಿದ್ದು ತಪ್ಪಾಯಿತೇನಿಮಗೆ ಸೇವೆಮಾಡುವುದಕ್ಕೋಸ್ಕರ ನಾನು ಬೇರೆ ಸಭೆಗಳಿಂದ ನೆರವು ಪಡೆಯುತ್ತಿದ್ದೆನಿಮಗೋಸ್ಕರ ಇತರ ಸಭೆಗಳಿಂದ ಹಣ  ವಸೂಲಿಮಾಡುತ್ತಿದ್ದೆನಾನು ನಿಮ್ಮೊಂದಿಗಿದ್ದಾಗ ನನಗೆ  ಹಣದ ಕೊರತೆ ಇದ್ದರೂ ನಿಮ್ಮಲ್ಲಿ ಯಾರಿಗೂ ಹೊರೆಯಾಗಲಿಲ್ಲಮಕೆದೋನಿಯಾದಿಂದ ಬಂದ ಸಹೋದರರು ನನ್ನ ಕೊರತೆಯನ್ನೆಲ್ಲಾ  ನೀಗಿಸಿದರುನಿಮಗೆ ಯಾವುದರಲ್ಲೂ ಹೊರೆಯಾಗಬಾರದೆಂದು ಎಚ್ಚರಿಕೆ ವಹಿಸಿದ್ದೆಇನ್ನೂ ಮುಂದಕ್ಕೂ ಎಚ್ಚರಿಕೆಯಿಂದ ಇರುತ್ತೆನೆ ನನ್ನ ಹೊಗಳಿಕೆಯನ್ನು ಅಖಾಯ ಪ್ರಾಂತ್ಯದ ಯಾರೂ ಅಡಗಿಸುವಂತಿಲ್ಲವೆಂದು ಕ್ರಿಸ್ತಯೇಸುವಿನ ಮುಂದೆ ಸತ್ಯವಾಗಿ ನುಡಿಯುತ್ತೇನೆನಿಮ್ಮಿಂದ ನಾನು ಏನನ್ನೂ ತೆಗೆದುಕೊಳ್ಳುತ್ತಿಲ್ಲವೇಕೆನಿಮ್ಮ ಮೇಲೆ ಪ್ರೀತಿ ಇಲ್ಲದ್ದಿರಿಂದಲೋಇಲ್ಲನಿಮ್ಮ ಮೇಲೆ ನಮಗಿರುವ ಪ್ರೀತಿ ಎಷ್ಟೆಂದು ದೇವರೇ ಬಲ್ಲರು.

ಕೀರ್ತನೆ: 111:1--2, 3--4, 7--8

ಶ್ಲೋಕನೀತಿ ಸತ್ಯತೆಯುಳ್ಳವು ಪ್ರಭುವಿನ ಸತ್ಕಾರ್ಯಗಳು.

ಶುಭಸಂದೇಶಮತ್ತಾಯ 6:7--15

ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು:ಪ್ರಾರ್ಥನೆ ಮಾಡುವಾಗ ಪರಕೀಯರಂತೆ ನಿರರ್ಥಕ  ಪದಗಳನ್ನು ಪಿಸುಗುಟ್ಟಬೇಡ. ತಮ್ಮ ಪ್ರಾರ್ಥನೆದೀರ್ಘವಾದಷ್ಟೂ ದೇವರು ಆಲಿಸುತ್ತಾರೆಂದು  ಅವರು ಭಾವಿಸುತ್ತಾರೆ. ನೀವು ಅವರಂತೆ ಆಗಬೇಡಿ. ನಮ್ಮ ಅಗತ್ಯಗಳೇನೆಂದು ನೀವು ಕೇಳುವುದಕ್ಕೆ ಮೊದಲೇ ನಿಮ್ಮ ತಂದೆಗೆ ಗೊತ್ತಿದೆ. ಆದುದರಿಂದ ಹೀಗೆಂದು   ಪ್ರಾರ್ಥನೆ ಮಾಡಿಸ್ವರ್ಗದಲ್ಲಿರುವ  ನಮ್ಮ ತಂದೆಯೇ, ನಿಮ್ಮ ಪವಿತ್ರ ನಾಮ ಪೂಜಿತವಾಗಲಿ; ನಿಮ್ಮ ರಾಜ್ಯ ಬರಲಿ; ನಿಮ್ಮ ಚಿತ್ತ ಸ್ವರ್ಗದಲ್ಲಿ ನೆರವೇರುವ ಪ್ರಕಾರ ಜಗತ್ತಿನಲ್ಲಿಯೂ ನೆರವೇರಲಿ. ನಮ್ಮ ನುದಿನದ ಆಹಾರವನ್ನು ನಮಗಿಂದುಕೊಡಿ. ನಮಗೆ ತಪ್ಪು ಮಾಡಿದವರನ್ನು ನಾವು ಕ್ಷಮಿಸುವ ಪ್ರಕಾರ ನಾವು ಮಾಡಿದ ತಪ್ಪುಗಳನ್ನು ಕ್ಷಮಿಸಿ, ನಮ್ಮನ್ನು ಶೋಧನೆಗೆ ಒಳಪಡಿಸಬೇಡಿ; ಕೇಡಿನಿಂದ ನಮ್ಮನ್ನು ರಕ್ಷಿಸಿರಿ," ಜನರ ತಪ್ಪುಗಳನ್ನು ನೀವು ಕ್ಷಮಿಸಿದರೆ ಸ್ವರ್ಗದಲ್ಲಿರುವ ನಿಮ್ಮ ತಂದೆ ನಿಮ್ಮನ್ನು ಕ್ಷಮಿಸುವರು. ಜನರನ್ನು ನೀವು ಕ್ಷಮಿಸದಿದ್ದರೆ, ನಿಮ್ಮ ತಂದೆಯೂ ನಿಮ್ಮ ತಪ್ಪುಗಳನ್ನು ಕ್ಷಮಿಸರು."