ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

01.11.2018

ಸಾಧಾರಣ ಕಾಲದ 30ನೇ ಗುರುವಾರ

ಮೊದಲನೇ ವಾಚನ; ಪ್ರಕಟನಾ ಗ್ರಂಥ 7:2-4, 9-14

ಪೂರ್ವದಿಕ್ಕಿನಿಂದ ಒಬ್ಬ ದೇವದೂತನು ಏರಿಬಂದದ್ದನು ಕಂಡೆನು. ಅವನು ಜೀವಸ್ವರೂಪಿಯಾದ ದೇವರ ಮುದ್ರೆಯನ್ನು ಕೈಯಲ್ಲಿ ಹಿಡಿದಿದ್ದನು. ಅವನು ಭೂಮಿಗೂ ಸಮುದ್ರಕ್ಕೂ ಕೇಡನ್ನು ಮಾಡುವ ಅಧಿಕಾರವನ್ನು ಪಡೆದಿದ್ದ ನಾಲ್ಕು ಮಂದಿ ದೇವದೂತರಿಗೆ: "ನಮ್ಮ ದೇವರ ದಾಸರಿಗೆ ಹಣೆಯ ಮೇಲೆ ನಾವು ಮುದ್ರೆಯೊತ್ತುವ ತನಕ ಭೂಮಿಗಾಗಲಿ, ಸಮುದ್ರಕ್ಕಾಗಲಿ, ಇಲ್ಲವೇ ಮರಗಳಿಗಾಗಲಿ ಕೇಡನ್ನು ಮಾಡಬೇಡಿ," ಎಂದು ಗಟ್ಟಿಯಾಗಿ ಕೂಗಿ ಹೇಳಿದನು. ಮುದ್ರೆಯೊತ್ತಿಸಿಕೊಂಡವರ ಸಂಖೆ ನನಗೆ ಕೇಳಿಬಂತು. ಇಸ್ರಯೇಲರು ಪ್ರತಿಯೊಂದು ಕುಲದಲ್ಲಿ ಮುದ್ರೆಯೊತ್ತಿಸಿಕೊಂಡವರು ಒಂದು ಲಕ್ಷದ ನಲವತ್ತುನಾಲ್ಕು ಸಾವಿರ ಮಂದಿ. ಇದಾದ ಬಳಿಕ ನಾನು ಇನ್ನೊಂದು ದಿವ್ಯದರ್ಶನವನ್ನು ಕಂಡೆ; ಯಾರಿಂದಲೂ ಎಣಿಸಲಾಗದಷ್ಟು ಒಂದು ದೊಡ್ಡ ಜನಸಮೂಹವು ನೆರೆದಿತ್ತು. ಅವರು ಎಲ್ಲಾ ದೇಶ, ಭಾಷೆ, ಕುಲ ಗೋತ್ರಗಳಿಂದ ಬಂದವರಾಗಿದ್ದರು. ಶ್ವೇತಾಂಬರರಾಗಿ ಸಿಂಹಾಸನದ ಮತ್ತು ಯಜ್ಞದ ಕುರಿಮರಿಯಾದಾತನ ಸಾನ್ನಿಧ್ಯದಲ್ಲಿ ನಿಂತಿದ್ದರು. ಕೈಗಳಲ್ಲಿ ಖರ್ಜೂರದ ಗರಿಗಳನ್ನು ಹಿಡಿದಿದ್ದರು. ಅವರು ಗಟ್ಟಿಯಾದ ದ್ವನಿಯಿಂದ: "ಸಿಂಹಾಸನಾರೂಢರಾದ ದೇವರಿಂದ, ಬಲಿಯರ್ಪಿತರಾದ ಯಜ್ಞದ ಕುರಿಮರಿಯಿಂದ ಲಭಿಸುತ್ತದೆಮಗೆ ಜೀವೋದ್ದಾರ," ಎಂದು ಹಾಡಿದರು. ಆಗ ಸಭಾಪ್ರಮುಖರ ಮತ್ತು ನಾಲ್ಕು ಜೀವಿಗಳ ಸಮೇತ ದೇವದೂತರೆಲ್ಲರೂ ಸಂಹಾಸನದ ಸುತ್ತಲೂ ನಿಂತಿದ್ದರು. ಅವರೆಲ್ಲರೂ ಸಿಂಹಾಸನದ ಮುಂದೆ ಸಾಷ್ಟಾಂಗ ನಮಸ್ಕಾರಮಾಡಿ, "ಆಮೆನ್, ಸ್ತುತಿಸ್ತೋತ್ರವೂ ಘನಮಾನವೂ ಜ್ಞಾನವೂ ಧನ್ಯವಾದವೂ ಶಕ್ತಿಯೂ ಪರಾಕ್ರಮವೂ ಸಲ್ಲಲಿ ಯುಗಯುಗಾಂತರಕ್ಕೂ, ಆಮೆನ್," ಎಂದು ಹಾಡುತ್ತಾ ದೇವರನ್ನು ಆರಾಧಿಸಿದರು. ಸಭಾಪ್ರಮುಖರಲ್ಲಿ ಒಬ್ಬನು, "ಶ್ವೇತಾಂಬರರಾದ ಇವರೆಲ್ಲರೂ ಯಾರು? ಎಲ್ಲಿಂದ ಬಂದರು?" ಎಂದು ನನ್ನನ್ನು ಪ್ರಶ್ನಿಸಿದನು. ಅದಕ್ಕೆ ನಾನು, "ಸ್ವಾಮೀ ನೀವೇ ಬಲ್ಲಿರಿ", ಎಂದು ಉತ್ತರ ಕೊಟ್ಟೆ, ಆಗ ಆತನು ನನಗೆ ಹೀಗೆಂದನು; "ಇವರು ಆ ಭೀಕರ ಹಿಂಸೆ ಬಾಧೆಗಳನ್ನು ಅನುಭವಿಸಿ ಬಂದವರು. ತಮ್ಮ ನಿಲುವಂಗಿಗಳನ್ನು ಯಜ್ಞದ ಕುರಿಮರಿಯ ರಕ್ತದಿಂದ ತೊಳೆದು ಬಿಳುಪಾಗಿಸಿಕೊಂಡಿದ್ದಾರೆ.

ಕೀರ್ತನೆ: 24:1-2, 3-4, 5-6
ಶ್ಲೋಕ : ಇಂಥವರೇ ದೇವರ ದರ್ಶನಾಭ್ಯರ್ಥಿಗಳು

ಎರಡನೇ ವಾಚನ: 1 ಯೊವಾನ್ನ 3:1-3

ನಾವು ದೇವರ ಮಕ್ಕಳು ಎನಿಸಿಕೊಂಡಿರಬೇಕಾದರೆ ಪಿತನು ನಮ್ಮನ್ನು ಎಷ್ಟಾಗಿ ಪ್ರೀತಿಸುತ್ತಾರೆಂಬುದನ್ನು ಗಮನಿಸಿರಿ. ನಿಜಕ್ಕೂ ನಾವು ದೇವರ ಮಕ್ಕಳೇ. ಲೋಕವು ಅವರನ್ನು ಅರಿತುಕೊಳ್ಳಲಿಲ್ಲವಾದ ಕಾರಣ ನಾವು ಎಂಥವರೆಂದು ಅದು ಅರಿತಿಲ್ಲ. ಪ್ರಿಯರೇ, ನಾವೀಗ ದೇವರ ಮಕ್ಕಳು ಮುಂದೆ ನಾವು ಎಂಥವರಾಗುತ್ತೇವೆ ಎಂಬುದು ಇನ್ನೂ ವಿಷದವಾಗಿಲ್ಲ. ಆದರೆ ಕ್ರಿಸ್ತ ಯೇಸು ಪ್ರತ್ಯಕ್ಷವಾಗುವಾಗ ನಾವು ಅವರಂತೆಯೇ ಇರುತ್ತೇವೆಂದು ಬಲ್ಲೆವು.  ಎಕೆಂದರೆ, ಅವರನ್ನು ನಾವು ಅವರ ಯಥಾರ್ಥ ರೂಪದಲ್ಲೇ ಕಾಣುತ್ತೇವೆ. ಕ್ರಿಸ್ತ ಯೇಸುವಿನಲ್ಲಿ ನಂಬಿಕೆ ನಿರಿಕ್ಷೆಯನ್ನಿಟ್ಟಿರುವ ಪ್ರತಿಯೊಬ್ಬನೂ ಅವರು ಶುದ್ಧರಾಗಿರುವಂತೆಯೇ ತನ್ನನ್ನು ಶುದ್ಧವಾಗಿಸಿಟ್ಟುಕೊಳ್ಳುತ್ತಾನೆ.

ಶುಭಸಂದೇಶ ಮತ್ತಾಯ  5:1-12

ಜನರ ದೊಡ್ಡ ಗುಂಪನ್ನು ಕಂಡು ಯೇಸುಸ್ವಾಮಿ ಒಂದು ಬೆಟ್ಟವನ್ನು ಹತ್ತಿ ಕುಳಿತುಕೊಂಡರು. ಅವರ ಶಿಷ್ಯರು ಸುತ್ತಲೂ  ನೆರೆದರು ಆಗ ಯೇಸು ಇಂತೆಂದು ಪ್ರಭೋಧಿಸಿದರು: "ಪಾರಮಾರ್ಥಿಕವಾಗಿ ಬಡವರು ಭಾಗ್ಯವಂತರು; ಸ್ವರ್ಗಸಾಮ್ರಾಜ್ಯ ಅವರದು, ದುಃಖಿಗಳು ಭಾಗ್ಯವಂತರು; ದೇವರು ಅವರನ್ನು ಸಂತೈಸುವರು; ವಿನಯಶೀಲರು ಭಾಗ್ಯವಂತರು, ದೇವರ ವಾಗ್ದತ್ತ ನಾಡಿಗೆ ಬಾಧ್ಯಸ್ಥರು ಅವರು. ನ್ಯಾಯನೀತಿಗಾಗಿ ಹಸಿದು ಹಾತೊರೆಯುವವರು ಭಾಗ್ಯವಂತರು, ದೇವರು ಅವರಿಗೆ ತೃಪ್ತಿಯನ್ನಿಯುವರು. ದಯಾವಂತರು ಭಾಗ್ಯವಂತರು, ದೇವರ ದಯೆ ಅವರಿಗೆ ದೊರಕುವುದು. ನಿರ್ಮಲ ಹೃದಯಿಗಳು ಭಾಗ್ಯವಂತರು; ಅವರು ದೇವರನ್ನು ಕಾಣುವರು.  ಶಾಂತಿಗಾಗಿ ಶ್ರಮಿಸುವವರು ಭಾಗ್ಯವಂತರು; ಅವರು ದೇವರ ಮಕ್ಕಳೆನಿಸಿಕೊಳ್ಳುವರು. ನ್ಯಾಯ ನೀತಿಯ ನಿಮಿತ್ತ ಹಿಂಸೆಯನ್ನು ತಾಳುವವರು ಭಾಗ್ಯವಂತರು; ಸ್ವರ್ಗಸಾಮ್ರಾಜ್ಯ ಅವರದು. ನನ್ನ ಶಿಷ್ಯರು ನೀವಾದ್ಧರಿಂದ ಜನರು ನಿಮ್ಮನ್ನು ಧಿಕ್ಕರಿಸುವರು, ಹಿಂಸಿಸುವರು. ಅನ್ಯಾಯವಾಗಿ ಇಲ್ಲಸಲ್ಲದ್ದನ್ನು ನಿಮ್ಮ ಮೇಲೆ ಹೊರಿಸುವರು; ಆಗ ನೀವು ಭಾಗ್ಯವಂತರು, ಅದಕ್ಕಾಗಿ ಹರ್ಷಿಸಿ ಆನಂದಪಡಿ; ಏಕೆಂದರೆ ಸ್ವರ್ಗದಲ್ಲಿ ನಿಮಗೆ ಸಿಗುವ ಪ್ರತಿಫಲ ಹಿರಿದು. ನಿಮಗಿಂತ ಮೊದಲಿದ್ದ ಪ್ರವಾದಿಗಳನ್ನೂ ಜನರು ಹೀಗೆಯೇ ಚಿತ್ರಹಿಂಸೆಗೆ ಒಳಪಡಿಸಿದರು.



31.10.2018

ಸಾಧಾರಣ ಕಾಲದ 30ನೇ ಬುಧವಾರ

ಮೊದಲನೇ ವಾಚನ: ಎಫೆಸಿಯರಿಗೆ: 6: 1-9

ಮಕ್ಕಳೇ, ಪ್ರಭುವಿನಲ್ಲಿ ನಿಮ್ಮ ತಂದೆತಾಯಿಗಳ ಮಾತಿಗೆ ಕಿವಿಗೊಡಿ. ಇದು ಧರ್ಮಸಮ್ಮತವಾದುದು. ’ನಿನ್ನ ತಂದೆತಾಯಿಯನ್ನು ಗೌರವಿಸು’ ಎಂಬುದು ವಾಗ್ದಾನದಿಂದ ಕೂಡಿದ ಮೊದಲನೇಯ ಆಜ್ನೆ. ಇದನ್ನು ಪಾಲಿಸಿದರೆ ನಿನಗೆ ಶುಭವಾಗುವುದು; ನೀನು ಬಹುಕಾಲ ಬಾಳುವೆ. ತಂದೆತಾಯಿಗಳೇ ನಿಮ್ಮ ಮಕ್ಕಳನ್ನು ಕೆಣಕಿ ಕೆರಳಿಸ ಬೇಡಿ. ಪ್ರತಿಯಾಗಿ ಪ್ರಭುವಿಗೆ ಮೆಚ್ಚುಗೆಯಾಗುವ ರೀತಿಯಲ್ಲಿ ಅವರಿಗೆ ಶಿಕ್ಷಣವನ್ನು ಕೊಟ್ಟು ಶಿಸ್ತಿನಿಂದ ಸಾಕಿಸಲಹಿರಿ. ಸೇವಕರೇ, ನೀವು ಮಾಡುತ್ತಿರುವುದು ಕ್ರಿಸ್ತಯೇಸುವಿನ ಸೇವೆಯನ್ನೇ ಎಂದು ಭಾವಿಸಿ, ನಿಮ್ಮ ಲೌಕಿಕ ಧಣಿಗಳಿಗೆ ಭಯಭಕ್ತಿಯಿಂದಲೂ ಏಕ ಮನಸ್ಸಿನಿಂದಲೂ ವಿಧೇಯರಾಗಿರಿ. ಧಣಿಗಳನ್ನು ಮೆಚ್ಚಿಸುವ ಸಲುವಾಗಿ ಮುಖದಾಕ್ಷಿಣ್ಯದ ಸೇವೆಯನ್ನು ಮಾಡದಿರಿ. ಕ್ರಿಸ್ತಯೇಸುವಿನ ದಾಸರಂತೆ ದೈವೇಚ್ಚೆಯನ್ನು ಹೃದಯ ಪೂರ್ವಕವಾಗಿ ಈಡೇರಿಸಿರಿ. ನೀವು ಮಾಡುವುದು ಜನಸೇವೆಯಲ್ಲ, ಪ್ರಭುಸೇವೆ ಎಂದೇ ಭಾವಿಸಿ ನಗುಮುಖದಿಂದ ಸೇವೆಮಾಡಿ. ದಾಸ್ಯದಲ್ಲಿರುವವನಾಗಲಿ, ಸ್ವತಂತ್ರ ಉಳ್ಳವನಾಗಿರಲಿ ಸತ್ಕಾರ್ಯವನ್ನು ಮಾಡುವವನು ಪ್ರಭುವಿನಿಂದ ತಕ್ಕ ಪ್ರತಿಫಲವನ್ನು ಪಡೆದೇ ತೀರುವನೆಂದು ನೀವು ಬಲ್ಲಿರಿ. ಯಜಮಾನರೇ, ನೀವು ಕೂಡ ನಿಮ್ಮ ಸೇವಕರೊಡನೆ ಯೋಗ್ಯವಾದ ರೀತಿಯಲ್ಲಿ ವರ್ತಿಸಿರಿ. ಅವರನ್ನು ಬೆದರಿಸುವುದನ್ನು ಬಿಟ್ಟುಬಿಡಿ. ಸ್ವರ್ಗ ಲೋಕದಲ್ಲಿ ನಿಮಗೂ ಅವರಿಗೂ ಒಬ್ಬ ಯಜಮಾನ ಇರುತ್ತಾನೆ. ಆತ ಪಕ್ಷಪಾತಿಯಲ್ಲ ಎಂಬುದನ್ನು ಮರೆಯದಿರಿ.

ಕೀರ್ತನೆ: 145: 10-13ಎಬಿ, 13ಸಿಡಿ-14
ಶ್ಲೋಕ: ನುಡಿಯಲಿ ಪ್ರಭು ಸದಾ ಪ್ರಾಮಾಣಿಕರು.

ಶುಭಸಂದೇಶ: ಲೂಕ: 13: 22-30

ಯೇಸುಸ್ವಾಮಿ ಊರೂರುಗಳಲ್ಲೂ ಹಳ್ಳಿಹಳ್ಳಿಗಳಲ್ಲೂ ಉಪದೇಶಮಾಡಿಕೊಂಡು ಜೆರುಸಲೇಮಿನತ್ತಾ ಪ್ರಯಾಣ ಮಾಡುತ್ತಿದ್ದರು. ಆಗ ಒಬ್ಬನು, "ಸ್ವಾಮಿ, ಜೀವೋದ್ಧಾರ ಹೊಂದುವವರು ಕೆಲವರು ಮಾತ್ರವೋ?" ಎಂದು ವಿಚಾರಿಸಿದನು. ಆಗ ಯೇಸು ಜನರಿಗೆ, "ಇಕ್ಕಟ್ಟಾದ ಬಾಗಿಲಿನಿಂದಲೇ ಒಳಹೋಗಲು ಸರ್ವ ಪ್ರಯತ್ನ ಮಾಡಿ. ಏಕೆಂದರೆ ಅನೇಕರು ಒಳಕ್ಕೆ ಹೋಗಲು ಖಂಡಿತವಾಗಿ ಪ್ರಯತ್ನಿಸುವರು; ಆದರೆ ಅದು ಅವರಿಂದಾಗದು. ಮನೆಯ ಯಜಮಾನನು ಎದ್ದು ಬಾಗಿಲನ್ನು ಮುಚ್ಚಿದ ಮೇಲೆ ನೀವು ಹೊರಗಡೆ ನಿಲ್ಲಬೇಕಾಗುವುದು. ಬಾಗಿಲನ್ನು ತಟ್ಟುತ್ತಾ, ’ಸ್ವಾಮಿ, ನಮಗೆ ಬಾಗಿಲು ತೆರೆಯಿರಿ, ಎಂದು ನೀವು ಕೇಳುವಿರಿ. ಅದಕ್ಕೆ ಅವನು, ’ನೀವು ಎಲ್ಲಿಯವರೋ ನಾನು ಅರಿಯೆ’ ಎನ್ನುವನು. ಆಗ ನೀವು, ’ನಿಮ್ಮೊಂದಿಗೆ ನಾವು ಊಟ ಮಾಡಿದ್ದೇವೆ, ಪಾನಮಾಡಿದ್ದೇವೆ; ನೀವು ನಮ್ಮ ಬೀದಿಗಳಲ್ಲಿ ಉಪದೇಶ ಮಾಡಿದ್ದೀರಿ,’ ಎಂದು ಹೇಳಲಾರಂಭಿಸುವಿರಿ. ಆದರೆ ಅವನು ಪುನಃ, ’ನೀವು ಎಲ್ಲಿಯವರೋ ನಾನರಿಯೇ. ಅಕ್ರಮಿಗಳೇ, ಎಲ್ಲರೂ ನನ್ನಿಂದ ತೊಲಗಿರಿ,’ ಎಂದು ಸ್ಪಷ್ಟವಾಗಿ ನುಡಿಯುವನು. ಅಬ್ರಹಾಮ, ಇಸಾಕ, ಯಕೋಬ ಮತ್ತು ಎಲ್ಲಾ ಪ್ರವಾದಿಗಳು ದೇವರ ಸಾಮ್ರಾಜ್ಯದಲ್ಲಿ ಇರುವುದನ್ನೂ ನಿಮ್ಮನ್ನು ಮಾತ್ರ ಹೊರಗೆ ಹಾಕಿರುವುದನ್ನೂ ನೋಡುವಾಗ ನಿಮಗಾಗುವ ಗೋಳಾಟವೇನು! ಹಲ್ಲುಕಡಿತವೇನು! ಚತುರ್ದಿಕ್ಕುಗಳಿಂದಲೂ ಜನರು ಬಂದು, ದೇವರ ಸಾಮ್ರಾಜ್ಯದ ಹಬ್ಬದೂಟದಲ್ಲಿ ಭಾಗಿಗಳಾಗುವರು. "ಇಗೋ, ಕಡೆಯವರಲ್ಲಿ ಕೆಲವರು ಮೊದಲಿಗರಾಗುವರು. ಮೊದಲಿಗರಲ್ಲಿ ಕೆಲವರು ಕಡೆಯವರಾಗುವರು," ಎಂದರು.

30.10.2018

ಸಾಧಾರಣ ಕಾಲದ 30ನೇ - ಮಂಗಳವಾರ

ಮೊದಲನೇ ವಾಚನ: ಎಫೆಸಿಯರಿಗೆ: 5: 21-33

ಕ್ರಿಸ್ತ ಯೇಸುವಿನಲ್ಲಿ ಭಯಭಕ್ತಿಯುಳ್ಳವರಾಗಿದ್ದು, ಒಬ್ಬರಿಗೊಬ್ಬರು ನಮ್ರತೆಯಿಂಡ ನೆಡೆದುಕೊಳ್ಳಿರಿ. ಮಹಿಳೆಯರೇ, ನೀವು ಪ್ರಭುವಿಗೆ ಹೇಗೋ ಹಾಗೆಯೇ ನಿಮ್ಮನಿಮ್ಮ ಪತಿಯರಿಗೆ ವಿಧೇಯರಾಗಿರಿ. ಕ್ರಿಸ್ತಯೇಸು ಧರ್ಮಸಭೆಯಂಬ ದೇಹಕ್ಕೆ ಶಿರಸ್ಸಾಗಿರುವ ಹಾಗೆಯೇ, ಪತಿಯಾದವನು ತನ್ನ ಪತ್ನಿಗೆ ಶಿರಸ್ಸಾಗಿರುತ್ತಾನೆ. ಕ್ರಿಸ್ತಯೇಸುವೇ ಧರ್ಮಸಭೆಯ ಉದ್ದಾರಕ. ಧರ್ಮಸಭೆ ಕ್ರಿಸ್ತ ಯೇಸುವಿನ ಆಡಳಿತಕ್ಕೆ ಒಳಪಟ್ಟಿರುವಂತೆ ಪತ್ನಿಯೂ ಸಹ ಎಲ್ಲಾ ವಿಷಯಗಳಲ್ಲೂ ತನ್ನ ಪತಿಯ ಆಡಳಿತಕ್ಕೆ ಒಳಪಟ್ಟಿರಬೇಕು. ಪುರುಷರೇ, ಕ್ರಿಸ್ತ ಯೇಸು ಧರ್ಮಸಭೆಯನ್ನು ಪ್ರೀತಿಸಿದ ಪ್ರಕಾರ ನಿಮ್ಮನಿಮ್ಮ ಪತ್ನಿಯರನ್ನು ಪ್ರೀತಿಸಿರಿ. ಧರ್ಮಸಭೆಯನ್ನು ಪಾವನಗೊಳಿಸುವುದಕ್ಕಾಗಿ ಕ್ರಿಸ್ತಯೇಸು ತಮ್ಮ ಪ್ರಾಣವನ್ನೇ ಕೊಟ್ಟರು. ವಾಕ್ಯೋಪದೇಶದಿಂದಲೂ ಜಲಸ್ನಾನದಿಂದಲೂ ಅದನ್ನು ಶುದ್ಧೀಕರಿಸಿದರು. ಧರ್ಮಸಭೆ ಕಳಂಕಕಲ್ಮಷವಾಗಲಿ, ಸುಕ್ಕುಬೊಕ್ಕೆಯಾಗಲಿ ಇಲ್ಲದ ಸೌಂದರ್ಯವತಿಯಾಗಿ ತಮಗೆ ಅರ್ಪಿಸಿಕೊಳ್ಳುವಂತೆ ಹೀಗೆ ಮಾಡಿದರು. ಹಾಗೆಯೇ ಪುರುಷನು ಸಹ ತನ್ನ ಶರೀರವನ್ನು ಪ್ರೀತಿಸುವಂತೆ ತನ್ನ ಪತ್ನಿಯನ್ನು ಪ್ರೀತಿಸಲಿ. ತನ್ನ ಪತ್ನಿಯನ್ನು ಪ್ರೀತಿಸುವವನು ತನ್ನನ್ನೇ ಪ್ರೀತಿಸುತ್ತಾನೆ. ಸ್ವಂತ ಶರೀರವನ್ನು ಯಾರೂ ಎಂದೂ ದ್ವೇಷಿಸುವುದಿಲ್ಲ, ಬದಲಿಗೆ ಅದನ್ನು ಪೋಷಿಸಿ ಪಾಲನೆ ಮಾಡುತ್ತಾನೆ. ಧರ್ಮಸಭೆಯನ್ನು ಸಹ ಕ್ರಿಸ್ತಯೇಸು ಹೀಗೆಯೇ ಕಾಪಾಡುತ್ತಾರೆ. ನಾವು ಆ ಸಭೆಯ ಅಂಗಗಳು. ಪವಿತ್ರಗ್ರಂಥದಲ್ಲಿ ಹೀಗೆ ಬರೆಯಲಾಗಿದೆ: "ಈ ಕಾರಣದಿಂದ ಪುರುಷನಾದವನು ತನ್ನ ತಂದೆತಾಯಿಯನ್ನು ಬಿಟ್ಟು ತನ್ನ ಪತ್ನಿಯೊಡನೆ ಒಂದುಗೂಡುವನು ಮತ್ತು ಅವರಿಬ್ಬರೂ ಒಂದೇ ಶರೀರವಾಗಿರುವರು." ಈ ಗಹನವಾದ ರಹಸ್ಯವು ಯೇಸುಕ್ರಿಸ್ತರಿಗೂ ಧರ್ಮಸಭೆಗೂ ಇರುವ ಸಂಬಂಧವನ್ನು ಸೂಚಿಸುತ್ತದೆ ಎಂಬುದೇ ನನ್ನ ಅಭಿಪ್ರಾಯ. ಆದರೆ ಇದು ನಿಮಗೂ ಅನ್ವಯಿಸುತ್ತದೆ. ಪ್ರತಿಯೊಬ್ಬ ಪುರುಷನು ತನ್ನನ್ನು ಪ್ರೀತಿಸುವಂತೆ ತನ್ನ ಪತ್ನಿಯನ್ನೂ ಪ್ರೀತಿಸಲಿ ಮತ್ತು ಪ್ರತಿಯೊಬ್ಬ ಸ್ತ್ರೀಯೂ ತನ್ನ ಪತಿಯ ವಿಷಯದಲ್ಲಿ ಗೌರವದಿಂದ ನಡೆದುಕೊಳ್ಳಲಿ.

ಕೀರ್ತನೆ: 128: 1-2, 3, 4-5
ಶ್ಲೋಕ: ಹೊಂದುವನು ಆಶೀರ್ವಾದವನು ಪ್ರಭುವಿನಲಿ ಭಯಭಕ್ತಿಯುಳ್ಳವನು.

ಶುಭಸಂದೇಶ: ಲೂಕ: 13: 18-21

ಆಗ ಯೇಸುಸ್ವಾಮಿ, "ದೇವರ ಸಾಮ್ರಾಜ್ಯವು ಏನನ್ನು ಹೋಲುತ್ತದೆ? ಅದನ್ನು ಯಾವುದಕ್ಕೆ ಹೋಲಿಸಲಿ? ಅದು ಒಂದು ಸಾಸಿವೆ ಕಾಳಿನಂತೆ ಇದೆ. ಒಬ್ಬನು ಅದನ್ನು ತೆಗೆದುಕೊಂಡು ಹೋಗಿ ತನ್ನ ತೋಟದಲ್ಲಿ ಬಿತ್ತಿದನು. ಅದು ಬೆಳೆದು ಮರವಾಯಿತು. ಆಕಾಶದಲ್ಲಿ ಹಾರಾಡುವ ಪಕ್ಷಿಗಳು ಅದರ ರೆಂಬೆಗಳಲ್ಲಿ ಗೂಡು ಕಟ್ಟಿ ವಾಸ ಮಾಡತೊಡಗಿದವು." ಪುನಃ ಯೇಸುಸ್ವಾಮಿ, "ದೇವರ ಸಾಮ್ರಾಜ್ಯವನ್ನು ಯಾವುದಕ್ಕೆ ಹೋಲಿಸಲಿ, ಅದು ಹುಳಿ ಹಿಟ್ಟಿನಂತೆ ಇದೆ. ಅದನ್ನು ಒಬ್ಬಾಕೆ ತೆಗೆದುಕೊಂಡು ಮೂರುಸೇರು ಹಿಟ್ಟಿನಲ್ಲಿ ಕಲಸಿದಳು. ಆ ಹಿಟ್ಟೆಲ್ಲಾ ಹುಳಿಯಾಯಿತು," ಎಂದರು.

29.10.2018

ಸಾಧಾರಣ ಕಾಲದ 30ನೇ - ಸೋಮವಾರ

ಮೊದಲನೇ ವಾಚನ: ಎಫೆಸಿಯರಿಗೆ: 4: 32 - 5:8

ಪರಸ್ಪರ ಕರುಣೆಯಿಂದಲೂ ಕನಿಕರದಿಂದಲೂ ವರ್ತಿಸಿರಿ. ಯೇಸು ಕ್ರಿಸ್ತರಲ್ಲಿ ದೇವರು ನಿಮ್ಮನ್ನು ಕ್ಷಮಿಸಿದಂತೆಯೇ, ನೀವು ಸಹ ಒಬ್ಬರನೊಬ್ಬರು ಕ್ಷಮಿಸಿರಿ. ದೇವರ ಅಕ್ಕರೆಯ ಮಕ್ಕಳು ನೀವು. ಆದ್ದರಿಂದ ದೇವರನ್ನೇ ಅನುಸರಿಸಿ ಬಾಳಿರಿ. ಕ್ರಿಸ್ತಯೇಸು ನಮ್ಮನ್ನು ಪ್ರೀತಿಸಿ ನಮಗೋಸ್ಕರ ತಮ್ಮನ್ನೇ ಸಮರ್ಪಿಸಿದರು. ದೇವರಿಗೆ ಸುಗಂಧ ಕಾಣಿಕೆಯನ್ನಾಗಿಯೂ ಬಲಿಯನ್ನಾಗಿಯೂ ಅರ್ಪಿಸಿದರು. ಅಂತೆಯೇ, ನೀವು ಪ್ರೀತಿಯಿಂದ ಬಾಳಿರಿ. ನೀವು ದೇವಜನರಾಗಿರುವುದರಿಂದ ನಿಮ್ಮಲ್ಲಿ ಲೈಂಗಿಕ ಪಾಪವಾಗಲಿ, ಅಶುದ್ದ ಕೃತ್ಯಗಳಾಗಲಿ ಮತ್ತು  ದುರಾಶೆಯಾಗಲಿ ಇರಬಾರದು. ಇಂಥ ಸುದ್ದಿಗೂ ನೀವು ಅವಕಾಶ ಕೊಡಬಾರದು. ಹೊಲಸು ಮಾತುಗಳು, ಬರಡು ನುಡಿಗಳು, ಕುಚೋಧ್ಯ ಪದಗಳು ಯಾವುವು ನಿಮಗೆ ತರವಲ್ಲ. ಪ್ರತಿಯಾಗಿ, ದೇವರಿಗೆ ನೀವು ಕೃತಜ್ನತಾ ಸ್ತುತಿ ಮಾಡಿರಿ. ವ್ಯಭಿಚಾರಿಗಳಿಗೂ ಅಶ್ಲೀಲ ಕೃತ್ಯಗಳಲ್ಲಿ ಭಾಗವಹಿಸುವವರಿಗೂ ಮತ್ತು ದುರಾಶೆಯುಳ್ಳವರಿಗೂ ಕ್ರಿಸ್ತಯೇಸುವಿನ ಮತ್ತು ದೇವರ ಸಾಮ್ರಾಜ್ಯದಲ್ಲಿ ಹಕ್ಕುಬಾಧ್ಯತೆ ಇಲ್ಲವೆಂದು ನಿಮಗೆ ಮನದಟ್ಟಾಗಿರಲಿ. ಹುರುಳಿಲ್ಲದ ಮಾತುಗಳನ್ನು ಆಡುವವರಿಗೆ ಮರುಳಾಗದಿರಿ. ಇಂಥ ಕೃತ್ಯಗಳನ್ನು ಮಾಡುವ ದುಷ್ಕರ್ಮಿಗಳ ಮೇಲೆ ದೇವರ ಕೋಪ ಎರಗುತ್ತದೆ. ಅಂಥವರ ಸಹವಾಸವೇ ನಿಮಗೆ ಬೇಡ. ನೀವು ಹಿಂದೊಮ್ಮೆ ಕತ್ತಲುಮಯವಾಗಿದಿರಿ; ಈಗಲಾದರೋ ಪ್ರಭುವಿನಲ್ಲಿ ಬೆಳಕಾಗಿದ್ದೀರಿ. ಆದ್ದರಿಂದ ಬೆಳಕಿನ ಮಕ್ಕಳಾಗಿ ಬಾಳಿರಿ. 

ಕೀರ್ತನೆ: 1: 1-2, 3,4,6
ಶ್ಲೋಕ: ಪ್ರಭುವಿನಲ್ಲೇ ಭರವಸೆಯಿಟ್ಟು ನಡೆವಾತನು ಧನ್ಯನು.

ಶುಭಸಂದೇಶ: ಲೂಕ: 13: 10-17

ಒಂದು ಸಬ್ಬತ್ ದಿನ ಯೇಸುಸ್ವಾಮಿ ಪ್ರಾರ್ಥನಾ ಮಂದಿರದಲ್ಲಿ ಭೋಧಿಸುತ್ತಿದ್ದರು. ಹದಿನೆಂಟು ವರ್ಷಗಳಿಂದ ದೆವ್ವ ಪೀಡಿತಳಾಗಿ ನರಳುತ್ತಿದ್ದ ಒಬ್ಬ ಮಹಿಳೆ ಅಲ್ಲಿದ್ದಳು. ಆಕೆ ಒಬ್ಬ ಗೂನಿ; ನೆಟ್ಟಗೆ ನಿಲ್ಲಲು ಸ್ವಲ್ಪವೂ ಆಗುತ್ತಿರಲಿಲ್ಲ. ಯೇಸು ಆಕೆಯನ್ನು ನೋಡಿ ಹತ್ತಿರಕ್ಕೆ ಕರೆದು, "ನೋಡಮ್ಮ, ನೀನು ವ್ಯಾಧಿಯಿಂದ ಬಿಡುಗಡೆಯಾದೆ," ಎಂದು ಹೇಳಿ, ಆಕೆಯ ಮೇಲೆ ತಮ ಹಸ್ತಗಳನಿಟ್ಟರು. ತಕ್ಷಣವೇ ಆಕೆ ನೆಟ್ಟಗಾದಳು ಮತ್ತು ದೇವರಿಗೆ ಸ್ತುತಿಸ್ತೋತ್ರ ಸಲ್ಲಿಸಿದಳು. ಯೇಸು ಸಬ್ಬತ್ ದಿನದಲ್ಲಿ ಗುಣ ಮಾಡಿದ್ದನ್ನು ಕಂಡು, ಪ್ರಾರ್ಥನಾ ಮಂದಿರದ ಅಧಿಕಾರಿ ಕುಪಿತನಾದನು. ಕೂಡಿದ್ದ ಜನರನ್ನು ಉದ್ದೇಶಿಸಿ, "ಕೆಲಸ ಮಾಡಲು ಆರು ದಿನಗಳಿವೆ, ಆ ದಿನಗಳಲ್ಲಿ ಬಂದು ಗುಣ ಮಾಡಿಸಿಕೊಳ್ಳಿರಿ; ಸಬ್ಬತ್ ದಿನದಲ್ಲಿ ಮಾತ್ರ ಕೂಡದು." ಎಂದನು. ಪ್ರಭು ಅವನಿಗೆ ಪ್ರತ್ಯುತ್ತರವಾಗಿ, "ಕಪಟಿಗಳೇ, ಸಬ್ಬತ್ ದಿನ ನಿಮ್ಮಲ್ಲಿ ಪ್ರತಿಯೊಬ್ಬನು ತನ್ನ ಕತ್ತೆಯನ್ನಾಗಲಿ, ಎತ್ತನ್ನಾಗಲಿ ಕೊಟ್ಟಿಗೆಯಿಂದ ಬಿಚ್ಚಿ ನೀರಿಗೆ ಹಿಡಿದುಕೊಂಡು ಹೋಗುವುದಿಲ್ಲವೇ? ಅಬ್ರಹಾಮನ ವಂಶಜಳಾದ ಈಕೆಯನ್ನು ಸೈತಾನನು ಹದಿನೆಂಟು ವರ್ಷಗಳಿಂದ ಕಟ್ಟಿ ಹಾಕಿದ್ದನು; ಈ ಕಟ್ಟಿನಿಂದ ಈಕೆಯನ್ನು ಸಬ್ಬತ್ ದಿನ ಬಿಡಿಸಬಾರದಿತ್ತೆ?" ಎಂದರು. ಈ ಉತ್ತರವನ್ನು ಕೇಳಿ ಯೇಸುವಿನ ವಿರೋಧಿಗಳೆಲ್ಲರೂ ನಾಚಿದರು. ಜನರ ಕೂಟವಾದರೋ ಅವರು ಮಾಡಿದ ಮಹತ್ಕಾರ್ಯಗಳನ್ನೆಲ್ಲಾ ಕಂಡು ಸಂತೋಷ ಪಟ್ಟಿತು.

28.10.2018

ಸಾಧಾರಣ ಕಾಲದ 30ನೇ - ಭಾನುವಾರ

ಮೊದಲನೇ ವಾಚನ: ಯೆರೆಮೀಯ: 31: 7-9

ಸರ್ವೇಶ್ವರ ಹೀಗೆನ್ನುತ್ತಾರೆ: "ಯಕೋಬನನ್ನು ಕುರಿತು ಹರ್ಷಧ್ವನಿಗೈಯಿರಿ ಜನಾಂಗಗಳ ಶಿರೋಮಣಿಗೆ ಜೈಕಾರ ಮಾಡಿರಿ. ’ಸರ್ವೇಶ್ವರ ಅಳಿದುಳಿದ ಇಸ್ರಯೇಲರನ್ನು ರಕ್ಷಿಸಿಹನು’ ಎಂದು ಘೋಷಿಸುತ್ತಾ ಸ್ತುತಿರಿಸಿರಿ. ಇಗೋ ನೋಡು, ಅವರನ್ನು ಬರಮಾಡುವೆನು ಉತ್ತರ ದೇಶದಿಂದ ಅವರನ್ನು ಒಂದುಗೂಡಿಸುವೆನು ದಿಗಂತಗಳಿಂದ. ಅವರೊಡನೆ ಕುರುಡರನ್ನೂ ಕುಂಟರನ್ನೂ ಗರ್ಭಿನಿಯರನ್ನೂ ದಿನತುಂಬಿದ ಬಸುರಿಯರನ್ನೂ ಒಟ್ಟಿಗೆ ಕರೆತರುವೆನು. ಅವರು ದೊಡ್ಡ ಗುಂಪಾಗಿ ಇಲ್ಲಿಗೆ ಹಿಂದಿರುಗುವರು. ಕಣ್ಣೀರಿಡುತ್ತಾ ಹೋದವರು ಹಿಂದಿರುಗಿ ಬರುವರು. ಪ್ರಾರ್ಥಿಸುತ್ತಾ ಅವರು ಮುನ್ನಡೆಯುವಂತೆ ಮಾಡುವೆನು ಎಡವಲಾಗದ ಸಮಮಾರ್ಗದಲ್ಲಿ ಅವರನ್ನು ನಡೆಸುವೆನು ತುಂಬಿದ ತೊರೆಯ ಬಳಿಗೆ ಬರಮಾಡುವೆನು. 

ಕೀರ್ತನೆ: 126: 1-2, 2-3, 4-5, 6.
ಶ್ಲೋಕ: ಪ್ರಭು ನಮಗೆ ಮಹತ್ಕಾರ್ಯ ಮಾಡಿದುದು ಖಚಿತ.

ಎರಡನೆಯ ವಾಚನ: ಹಿಬ್ರಿಯರಿಗೆ: 5: 1-6


ಪ್ರತಿಯೊಬ್ಬ ಪ್ರಧಾನ ಯಾಜಕ ಜನರ ಮಧ್ಯದಿಂದ ಆರಿಸಲಾದವನು; ಜನರ ಪರವಾಗಿ ದೇವರ ಸನ್ನಿಧಿಯಲ್ಲಿ ಸೇವೆಸಲ್ಲಿಸಲು ಮತ್ತು ಪಾಪಪರಿಹಾರಕ್ಕಾಗಿ ಬಲಿಗಳನ್ನೂ ಕಾಣಿಕೆಗಳನ್ನೂ ಸಮರ್ಪಿಸಲು ನೇಮಕಗೊಂಡವನು. ತಾನೂ ದುರ್ಬಲ ಮಾನವನಾದ ಕಾರಣ, ಆತನು ಅಜ್ನಾನಿಗಳನ್ನು ದುರ್ಮಾರ್ಗಿಗಳನ್ನು ಸಹಾನುಭೂತಿಯಿಂದ ಕಾಣಬಲ್ಲನು. ಜನರಿಗೋಸ್ಕರ ಹೇಗೋ ಹಾಗೆಯೇ ತನ್ನ ದೌರ್ಬಲ್ಯದ ನಿಮಿತ್ತ ತನಗೋಸ್ಕರವೂ ಆತನು ಪಾಪಪರಿಹಾರಕ ಬಲಿಯನ್ನು ಅರ್ಪಿಸಬೇಕಾಗಿದೆ. ಅಲ್ಲದೆ, ಪ್ರಧಾನ ಯಾಜಕನೆಂಬ ಗೌರವ ಪದವಿಯನ್ನು ತನ್ನಷ್ಟಕ್ಕೆ ತಾನೇ ಯಾರೂ ವಹಿಸಿಕೊಳ್ಳರು. ಆರೋನನಂತೆ ಅವರೂ ದೇವರಿಂದ ಕರೆ ಹೊಂದಿದವರಾಗಿರಬೇಕು. ಅದೇ ರೀತಿ ಕ್ರಿಸ್ತ ಯೇಸು, ಪ್ರಧಾನ ಯಾಜಕನೆಂಬ ಉನ್ನತ ಪದವಿಗೆ ತನ್ನನ್ನೇ ಏರಿಸಿಕೊಳ್ಳಲಿಲ್ಲ. "ನೀನೇ ನನ್ನ ಪುತ್ರನು: ನಾನೇ ನಿನ್ನನ್ನು ಪಡೆದಿದ್ದೇನೆ." ಎಂದ ದೇವರೇ ಅವರನ್ನು ಆ ಪದವಿಗೆ ಏರಿಸಿದರು. ಅವರೇ ಮತ್ತೊಂದು ಕಡೆಯಲ್ಲಿ: " ನೀನು ಸದಾಕಾಲವು ಮೆಲ್ಕಿಸದೇಕನ ಪರಂಪರೆಗೆ ಸೇರಿದ ಯಾಜಕ," ಎಂದಿದ್ದಾರೆ.

ಶುಭಸಂದೇಶ: ಮಾರ್ಕ: 10: 46-52

ಯೇಸುಸ್ವಾಮಿ ಮತ್ತು ಅವರ ಶಿಷ್ಯರು ಜೆರಿಕೋ ಪಟ್ಟಣವನ್ನು ತಲುಪಿದರು. ಅಲ್ಲಿಂದ ಹೊರಡುವಾಗ ಜನರ ದೊಡ್ಡ ಗುಂಪು ಅವರನ್ನು ಹಿಂಬಾಲಿಸಿತು. ಕುರುಡು ಭಿಕ್ಷುಗಾರನಾದ, ತಿಮಾಯನ ಮಗ ಬಾರ್ ತಿಮಾಯನು ದಾರಿಯ ಮಗ್ಗುಲಲ್ಲಿ ಕುಳಿತಿದ್ದನು. ಆ ಮಾರ್ಗವಾಗಿ ಹೋಗುತ್ತಿರುವಾತನು ನಜರೇತಿನ ಯೇಸು ಎಂದು ಕೇಳಿದೊಡನೆಯೇ ಅವನು, "ಯೇಸುವೇ, ದಾವೀದ ಕುಲಪುತ್ರರೇ, ನನಗೆ ದಯೆತೋರಿ," ಎಂದು ಗಟ್ಟಿಯಾಗಿ ಕೂಗಿಕೊಂಡನು ಅನೇಕರು ’ಸುಮ್ಮನಿರು’ ಎಂದು ಅವನನ್ನು ಗದರಿಸಿದರು. ಅವನಾದರೋ, "ದಾವೀದ ಕುಲಪುತ್ರರೇ್, ನನಗೆ ದಯೆತೋರಿ," ಎಂದು ಇನ್ನಷ್ಟು ಗಟ್ಟಿಯಾಗಿ ಕೂಗಿಕೊಂಡನು. ಇದನ್ನು ಕೇಳಿ ಯೇಸು ಅಲ್ಲೇ ನಿಂತು, "ಅವನನ್ನು ಕರೆದುಕೊಂಡು ಬನ್ನಿ," ಎಂದು ಅಪ್ಪಣೆ ಮಾಡಿದರು. ಅವರು ಹೋಗಿ, "ಏಳು ಭಯಪಡಬೇಡ, ಯೇಸು ನಿನ್ನನ್ನು ಕರೆಯುತ್ತಿದ್ದಾರೆ," ಎಂದು ಹೇಳಿದರು. ಅವನು ತನ್ನ ಮೇಲುಹೊದಿಕೆಯನ್ನು ಅಲ್ಲೇ ಬಿಟ್ಟು ತಟ್ಟನೆ ಎದ್ದು ಯೇಸುವಿನ ಬಳಿಗೆ ಬಂದನು. ಯೇಸು, "ನನ್ನಿಂದ ನಿನಗೆ ಏನಾಗಬೇಕು?" ಎಂದು ಕೇಳಿದರು. ಅದಕ್ಕೆ ಅವನು, "ಗುರುದೇವಾ! ನನಗೆ ಕಣ್ಣು ಕಾಣುವಂತೆ ಮಾಡಿ," ಎಂದು ಪ್ರಾರ್ಥಿಸಿದನು. ಯೇಸು ಅವನಿಗೆ, "ಹೋಗು ನಿನ್ನ ವಿಶ್ವಾಸವೇ ನಿನ್ನನ್ನು ಸ್ವಸ್ಥಮಾಡಿದೆ," ಎಂದರು. ಆ ಕ್ಷಣವೇ ಅವನಿಗೆ ದೃಷ್ಠಿಬಂದಿತು. ಅವನೂ ಯೇಸುವನ್ನು ಹಿಂಬಾಲಿಸಿ ಹಿಂದೆ ಹೋದನು.

27.10.2018

ಸಾಧಾರಣ ಕಾಲದ 29ನೇ - ಶನಿವಾರ

ಮೊದಲನೆಯ ವಾಚನಸಂತ ಪೌಲನು ಎಫೆಸಿಯರಿಗೆ ಬರೆದ ಪತ್ರದಿಂದ ವಾಚನ4:7-16

“ಶಿರಸ್ಸಾದ ಕ್ರಿಸ್ತ ಯೇಸುವಿನ ಅನ್ಯೋನ್ಯತೆಯಲ್ಲಿಸರ್ವತೋಮುಖವಾಗಿ ಬೆಳೆಯುತ್ತೇವೆ.”

ಸಹೋದರರೇ, ನಮ್ಮಲ್ಲಿ ಪ್ರತಿಯೊಬ್ಬನೂ ಕ್ರಿಸ್ತ ಯೇಸು ಅನುಗ್ರಹಿಸುವ ಪ್ರಕಾರವೇ ವರಗಳನ್ನು ಪಡೆದಿದ್ದಾನೆ. ಎಂತಲೇ ಪವಿತ್ರಗ್ರಂಥದಲ್ಲಿ ಹೀಗಿದೆ :“ಆತನು ಉನ್ನತಿಗೇರಿದನು;ಶತ್ರುಗಳನ್ನು ಸೆರೆಯಾಳಾಗಿ ಕೊಂಡೊಯ್ದನು.ನರಮಾನವರಿಗಿತ್ತನು ವರದಾನಗಳನು.”‘ಏರಿದನು’ ಎನ್ನುವುದರ ಅರ್ಥವಾದರೂ ಏನು? ಆತನು ಮೊದಲು ಭೂಗರ್ಭಕ್ಕೂ ಇಳಿದಿದ್ದನು ಎಂಬ ಅರ್ಥವನ್ನೂ ಒಳಗೊಂಡಿದೆ. ಇಳಿದುಬಂದಿದ್ದಾತನೇ ಲೋಕಗಳಿಗೆಲ್ಲ ಮೇಲೇರಿ ಹೋಗಿದ್ದಾನೆ. ತನ್ನ ಪ್ರಸನ್ನತೆಯಿಂದ ಇಡೀ ಜಗತ್ತನ್ನೇ ಆವರಿಸಿದ್ದಾನೆ. ಈ ವ್ಯಕ್ತಿ ನರಮಾನವರಿಗೆ ವರದಾನಗಳನ್ನಿತ್ತರು. ಕೆಲವರನ್ನು ಪ್ರೇಷಿತರನ್ನಾಗಿಯೂ, ಕೆಲವರನ್ನು ಸಭಾಪಾಲಕರನ್ನಾಗಿಯೂ ಮತ್ತು ಕೆಲವರನ್ನು ಬೋಧಕರನ್ನಾಗಿಯೂ ನೇಮಿಸಿದರು. ದೇವಜನರನ್ನು ಪರಿಣತರನ್ನಾಗಿ ದೇವರ ಸೇವೆಗೆ ಸಿದ್ಧಗೊಳಿಸಲೆಂದು ಮತ್ತು ಯೇಸುಕ್ರಿಸ್ತರ ದೇಹವಾದ ಧರ್ಮಸಭೆ ಅಭಿವೃದ್ಧಿ ಹೊಂದಲೆಂದು ಈ ವರಗಳನ್ನು ಅವರಿಗೆ ನೀಡಿದರು. ಹೀಗೆ ನಾವೆಲ್ಲರೂ ಒಂದೇ ವಿಶ್ವಾಸದಿಂದಲೂ ದೇವರ ಪುತ್ರನನ್ನು ಕುರಿತ ಜ್ಞಾನದಿಂದಲೂ ಐಕ್ಯಮತ್ಯವನ್ನು ಮತ್ತು ಪರಿಪಕ್ವತೆಯನ್ನು ಪಡೆಯುತ್ತೇವೆ. ಜ್ಞಾನಾರ್ಜನೆಯನ್ನು ಪಡೆದವರಾಗಿ, ಕ್ರಿಸ್ತ ಯೇಸುವಿನ ಪರಿಪುರ್ಣತೆಯ ಮಟ್ಟವನ್ನು ಮುಟ್ಟುತ್ತೇವೆ. ಇನ್ನು ಮೇಲೆ ನಾವು ಸಣ್ಣ ಮಕ್ಕಳಂತೆ ದುರ್ಜನರ ವಂಚನೆಗೂ ದುರ್ಬೋಧಕರ ಕುಯುಕ್ತಿಗೂ ಒಳಪಟ್ಟು ಅತ್ತಿತ್ತ ಅಲೆದಾಡುವುದಿಲ್ಲ. ಗಾಳಿ ಬಂದಂತೆ ತೂರಾಡುವುದಿಲ್ಲ. ಬದಲಾಗಿ, ಪ್ರೀತಿಯಿಂದ ಸತ್ಯವನ್ನೇ ನುಡಿಯುತ್ತೇವೆ. ಶಿರಸ್ಸಾದ ಕ್ರಿಸ್ತ ಯೇಸುವಿನಅನ್ಯೋನ್ಯತೆಯಲ್ಲಿ ಸರ್ವತೋಮುಖವಾಗಿ ಬೆಳೆಯುತ್ತೇವೆ. ಇದೇ ದೇಹವು ಯೇಸುವನ್ನೇ ಆಧರಿಸಿದೆ. ಅವರಲ್ಲಿಯೇ ಎಲ್ಲ ನರನಾಡಿಗಳು, ಕೀಲುಗಂಟುಗಳು ಒಂದಾಗಿ ಕೆಲಸಮಾಡುತ್ತವೆ. ಪ್ರತಿಯೊಂದು ಅಂಗವೂ ತನ್ನ ಕೆಲಸವನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸುವುದರಿಂದ ಇಡೀ ದೇಹ ಬೆಳೆಯುತ್ತಾ, ಪ್ರೀತಿಯಲ್ಲಿ ಪ್ರವರ್ಧಿಸುತ್ತಾ ಕ್ಷೇಮಾಭಿವೃದ್ಧಿಯನ್ನುಪಡೆಯುತ್ತದೆ.
ದೇವರ ವಾಕ್ಯವಿದು.

ಕೀರ್ತನೆ 122:1-5. ಗಿ. 1
ಶ್ಲೋಕ : ಪ್ರಭುವಿನಾಲಯಕೆ ಹೋಗೋಣ ಬಾ ಎಂದು ಜನರನ್ನು ಕರೆದಾಗ ಆಯಿತೆನಗೆ ಆನಂದ.

ಘೋಷಣೆ ಯೊವಾನ್ನ 14:23
ಅಲ್ಲೆಲೂಯ, ಅಲ್ಲೆಲೂಯ !
ನನ್ನನ್ನು ಪ್ರೀತಿಸುವವನು ನನ್ನ ಮಾತನ್ನು ಕೈಗೊಂಡು ನಡೆಯುವನು,
ಅವನನ್ನು ನನ್ನ ಪಿತನೂ ಪ್ರೀತಿಸುವರು,ಮತ್ತು ನಾವಿಬ್ಬರೂ ಅವನ ಬಳಿ ಬಂದು ಅವನಲ್ಲಿ ನೆಲಸುವೆವು,
ಅಲ್ಲೆಲೂಯ !

ಸಂತ ಲೂಕನು ಬರೆದ ಶುಭಸಂದೇಶದಿಂದ ವಾಚನ13:1-9

“ನೀವು ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿ ದೇವರಿಗೆಅಭಿಮುಖರಾಗದೆ ಹೋದರೆಅವರ ಹಾಗೆಯೇ ನೀವೂ ನಾಶವಾಗುವಿರಿ.”

ಕೆಲವರು ಯೇಸುಸ್ವಾಮಿಯ ಬಳಿಗೆ ಬಂದು, ಬಲಿಯರ್ಪಿಸುತ್ತಾ ಇದ್ದ ಗಲಿಲೇಯದವರನ್ನು ಪಿಲಾತನು ಕೊಲ್ಲಿಸಿದನೆಂಬ ವಿಷಯವನ್ನು ತಿಳಿಸಿದರು. ಅದಕ್ಕೆ ಯೇಸು, “ಇಂಥಾ ಕೊಲೆಗೆ ಈಡಾದವರು ಇತರ ಎಲ್ಲ ಗಲಿಲೇಯದವರಿಗಿಂತ ಹೆಚ್ಚು ಪಾಪಿಗಳೆಂದು ಭಾವಿಸುತ್ತೀರೋ? ಹಾಗೆ ಭಾವಿಸಕೂಡದು. ನೀವು ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿ ದೇವರಿಗೆ ಅಭಿಮುಖರಾಗದೆ ಹೋದರೆ, ಅವರ ಹಾಗೆಯೇ ನೀವೂ ನಾಶವಾಗುವಿರಿ. ಶಿಲೊವಾ ಎಂಬಲ್ಲಿ ಗೋಪುರ ಕುಸಿದು ಬಿದ್ದಾಗ ಹದಿನೆಂಟು ಜನ ಸತ್ತರಲ್ಲವೇ? ಅವರು ಜೆರುಸಲೇಮಿನಲ್ಲಿ ವಾಸವಾಗಿರುವ ಇತರ ಎಲ್ಲಾ ಜನರಿಗಿಂತ ಹೆಚ್ಚು ದೋಷಿಗಳಾಗಿದ್ದರೆಂದು ಭಾವಿಸುತ್ತೀರೋ? ಹಾಗಲ್ಲ, ನೀವು ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿ ದೇವರಿಗೆ ಅಭಿಮುಖರಾಗದಿದ್ದರೆ ಅವರ ಹಾಗೆಯೇ ನೀವೂ ನಾಶವಾಗುವಿರಿ,” ಎಂದರು.ಅನಂತರ ಯೇಸುಸ್ವಾಮಿ ಈ ಸಾಮತಿಯನ್ನು ಹೇಳಿದರು: “ಒಬ್ಬನು ತನ್ನ ದ್ರಾಕ್ಷಿ ತೋಟದಲ್ಲಿ ಒಂದು ಅಂಜೂರದ ಮರವನ್ನು ನೆಡಿಸಿದ್ದ. ಒಮ್ಮೆ ಅವನು ಬಂದು ಅದರಲ್ಲಿ ಹಣ್ಣನ್ನು ಹುಡುಕಲು ಒಂದೂ ಕಾಣಿಸಲಿಲ್ಲ. ತೋಟಗಾರರನ್ನು ಕರೆದು, ‘ನೋಡು, ಮೂರು ವರ್ಷಗಳಿಂದ ಈ ಮರದಲ್ಲಿ ಹಣ್ಣನ್ನು ಹುಡುಕುತ್ತಾ ಇದ್ದೇನೆ. ಒಂದಾದರೂ ಕಂಡುಬರಲಿಲ್ಲ.ಇನ್ನು ಇದನ್ನು ಕಡಿದು ಹಾಕು. ಭೂಮಿಗೆ ಭಾರವಾಗಿ ಅದರ ಸಾರವನ್ನು ಇದೇಕೆ ವ್ಯರ್ಥಮಾಡಬೇಕು?’ ಎಂದು ಹೇಳಿದ ಅದಕ್ಕೆ ತೋಟಗಾರನು, ‘ಸ್ವಾಮೀ, ಈ ಒಂದು ವರ್ಷ ಇದು ಹಾಗೆಯೇ ಇರಲಿ ಬಿಡಿ. ಅಷ್ಟರಲ್ಲಿ ಸುತ್ತಲೂ ಪಾತಿತೆಗೆದು ಗೊಬ್ಬರ ಹಾಕುತ್ತೇನೆ. ಮುಂದಿನ ವರ್ಷ ಹಣ್ಣುಬಿಟ್ಟರೆ ಸರಿ; ಇಲ್ಲದಿದ್ದರೆ ಕಡಿದು ಹಾಕೋಣ,” ಎಂದನು.
ಪ್ರಭು ಕ್ರಿಸ್ತರ ಶುಭಸಂದೇಶವಿದು.

26.10.2018

ಸಾಧಾರಣ ಕಾಲದ 29ನೇ - ಶುಕ್ರವಾರ

ಮೊದಲನೆಯ ವಾಚನಸಂತ ಪೌಲನು ಎಫೆಸಿಯರಿಗೆ ಬರೆದ ಪತ್ರದಿಂದ ವಾಚನ4:1-6

“ನಮ್ಮೆಲ್ಲರಿಗೂ ಪ್ರಭು ಒಬ್ಬರೇ, ವಿಶ್ವಾಸವೂ ಒಂದೇ;ದೀಕ್ಷಾಸ್ನಾನವೂ ಒಂದೇ.”

ಸಹೋದರರೇ, ಪ್ರಭುವಿನ ಸೇವೆಯ ನಿಮಿತ್ತ ಸೆರೆಯಾಳಾಗಿ ಇರುವ ನಾನು ನಿಮ್ಮಲ್ಲಿ ಬಿನ್ನವಿಸುವುದು ಏನೆಂದರೆ ದೇವರ ಕರೆಗೆ ಅನುಗುಣವಾಗಿಯೋಗ್ಯ ಬಾಳುವೆ ನಡೆಸಿರಿ. ಯಾವಾಗಲೂ ದೀನದಯಾಳತೆ, ವಿನಯಶೀಲತೆ ಹಾಗೂ ಶಾಂತಿಸಮಾಧಾನವುಳ್ಳವರಾಗಿರಿ. ಪರಸ್ಪರ ಪ್ರೀತಿಯಿಂದಲೂ ಸಹನೆಯಿಂದಲೂ ವರ್ತಿಸಿರಿ. ಪವಿತ್ರಾತ್ಮರಿಂದ ಉಂಟಾಗುವ ಐಕ್ಯತೆಯನ್ನು ಕಾಪಾಡಿಕೊಳ್ಳಲು ಆಸಕ್ತರಾಗಿರಿ. ಅದು ನಿಮ್ಮನ್ನು ಸಮಾಧಾನದಲ್ಲಿ ಬಂಧಿಸುವುದು ನೀವೆಲ್ಲರೂ ಒಂದೇ ಶರೀರಕ್ಕೆ ಸೇರಿದವರು; ಒಬ್ಬರೇ ಪವಿತ್ರಾತ್ಮರನ್ನು ಪಡೆದವರು; ಒಂದೇ ನಿರೀಕ್ಷೆಗಾಗಿ ಕರೆಹೊಂದಿದವರು; ನಮ್ಮೆಲ್ಲರಿಗೂ ಪ್ರಭು ಒಬ್ಬರೇ; ವಿಶ್ವಾಸವೂ ಒಂದೇ.ದೀಕ್ಷಾಸ್ನಾನವೂ ಒಂದೇ. ದೇವರು ಒಬ್ಬರೇ, ಸರ್ವರ ತಂದೆಯು ಅವರೇ; ಸರ್ವಶ್ರೇಷ್ಠರೂ ಅವರೇ; ಸರ್ವರ ಮೂಲಕ ಕಾರ್ಯನಿರ್ವಹಿಸುವವರೂ ಅವರೇ ಮತ್ತು ಸಮಸ್ತರಲ್ಲಿ ವಾಸಿಸುವವರೂಅವರೇ.
ದೇವರ ವಾಕ್ಯವಿದು.

ಕೀರ್ತನೆ 24:1-6. ಗಿ. 6
ಶ್ಲೋಕ : ಇಂಥವರೇ ದೇವರ ದರ್ಶನಾಭ್ಯರ್ಥಿಗಳು.

ಘೋಷಣೆ ಯೊವಾನ್ನ 14:6
ಅಲ್ಲೆಲೂಯ, ಅಲ್ಲೆಲೂಯ !
ಮಾರ್ಗವೂ ಸತ್ಯವೂ ಜೀವವೂ ನಾನೇ;
ನನ್ನ ಮುಖಾಂತರ ಬಾರದ ಹೊರತು ಯಾರೂ ಪಿತನ ಬಳಿಗೆ ಬರಲಾರರು.
ಅಲ್ಲೆಲೂಯ !

ಶುಭಸಂದೇಶಸಂತ ಲೂಕನು ಬರೆದ ಶುಭಸಂದೇಶದಿಂದ ವಾಚನ12:54-59

“ಭೂಮ್ಯಾಕಾಶಗಳ ಲಕ್ಷಣಗಳನ್ನು ನೀವು ಸರಿಯಾಗಿಅರಿತುಕೊಳ್ಳಬಲ್ಲಿರಿ;ಪ್ರಸ್ತುತ ಕಾಲವನ್ನು ಅರ್ಥಮಾಡಿಕೊಳ್ಳಲಾರಿರಾ?”

ಯೇಸುಸ್ವಾಮಿ ಜನಸಮೂಹವನ್ನು ನೋಡಿ, “ಪಶ್ಚಿಮ ದಿಕ್ಕಿನಲ್ಲಿ ಮೋಡ ಏಳುವುದನ್ನು ನೀವು ನೋಡಿದ ಕೂಡಲೇ, ಭಾರಿ ಮಳೆ ಬರುತ್ತದೆ ಎನ್ನುತ್ತೀರಿ; ಹಾಗೆಯೇ ಆಗುತ್ತದೆ. ದಕ್ಷಿಣ ದಿಕ್ಕಿನ ಗಾಳಿ ಬೀಸಿದಾಗ ಉರಿಬಿಸಿಲು ಎನ್ನುತ್ತೀರಿ; ಅಂತೆಯೇ ಇರುತ್ತದೆ. ಆಷಾಢಭೂತಿಗಳೇ, ಭೂಮ್ಯಾಕಾಶಗಳ ಲಕ್ಷಣಗಳನ್ನು ನೀವು ಸರಿಯಾಗಿ ಅರಿತುಕೊಳ್ಳಬಲ್ಲಿರಿ;ಆದರೆ ಪ್ರಸ್ತುತ ಕಾಲವನ್ನು ಅರ್ಥಮಾಡಿಕೊಳ್ಳಲಾರಿರಾ? ನ್ಯಾಯನಿರ್ಣಯವನ್ನು ನಿಮ್ಮಲ್ಲಿಯೇ ನೀವು ಏಕೆ ಮಾಡಿಕೊಳ್ಳಬಾರದು? ನೀನು ನ್ಯಾಯಾಧಿಪತಿಯ ಬಳಿಗೆ ಹೋಗಬೇಕಾಗಿ ಬಂದಲ್ಲಿ, ದಾರಿಯಲ್ಲೇ ನಿನ್ನವಿರೋಧಿಯೊಡನೆ ವ್ಯಾಜ್ಯತೀರಿಸಿಕೊಳ್ಳಲು ಪ್ರಯತ್ನಿಸು. ಇಲ್ಲದಿದ್ದರೆ ಅವನು ನಿನ್ನನ್ನು ನ್ಯಾಯಾಧಿಪತಿಯ ಮುಂದೆ ಎಳೆದೊಯ್ಯಬಹುದು; ನ್ಯಾಯಾಧಿಪತಿ ನಿನ್ನನ್ನು ಸೆರೆಯಾಧಿಕಾರಿ ಕೈಗೊಪ್ಪಿಸಬಹುದು. ಸೆರೆಯಧಿಕಾರಿ ನಿನ್ನನ್ನು ಸೆರೆಮನೆಯಲ್ಲಿ ಹಾಕಬಹುದು. ಅಲ್ಲಿಂದ ನೀನು ಹೊರಗೆ ಬರಬೇಕಾದರೆ ಕಡೇ ಕಾಸನ್ನೂ ಬಿಡದೆ ಎಲ್ಲವನ್ನೂ ಸಲ್ಲಿಸಬೇಕಾಗುವುದೆಂಬುದು ನಿಶ್ಚಯ,” ಎಂದರು.
ಪ್ರಭು ಕ್ರಿಸ್ತರ ಶುಭಸಂದೇಶವಿದು.

25.10.2018

ಸಾಧಾರಣ ಕಾಲದ 29ನೇ - ಗುರುವಾರ

ಮೊದಲನೆಯ ವಾಚನ ಸಂತ ಪೌಲನು ಎಫೆಸಿಯರಿಗೆ ಬರೆದ ಪತ್ರದಿಂದ ವಾಚನ - 3:14-21

“ನಿಮ್ಮ ವಿಶ್ವಾಸದ ಫಲವಾಗಿ ಯೇಸುಕ್ರಿಸ್ತರು ನಿಮ್ಮ ಹೃದಯಗಳಲ್ಲಿಸದಾ ವಾಸಿಸಲಿಮತ್ತು ನಿಮ್ಮ ಜೀವನವು ಪ್ರೀತಿಯಲ್ಲಿ ಬೇರೂರಿ ಸದೃಢವಾಗಿ ನಿಲ್ಲಲಿ.”

ಸಹೋದರರೇ, ಈ ಕಾರಣ ನಾನು ಮೊಣಕಾಲೂರಿ ಪಿತನಲ್ಲಿ ಪ್ರಾರ್ಥಿಸುತ್ತೇನೆ : ಸ್ವರ್ಗಲೋಕದಲ್ಲೂ ಭೂಲೋಕದಲ್ಲೂ ಪ್ರತಿ ಕುಟುಂಬವು ತನ್ನ ಹೆಸರನ್ನು ಪಡೆದಿರುವುದು ಅವರಿಂದಲೇ. ಅವರು ತನ್ನ ಮಹಿಮೆಯ ಸಂಪನ್ಮೂಲಗಳಿಂದ ಪವಿತ್ರಾತ್ಮ ಅವರ ಮುಖಾಂತರ ನಿಮ್ಮ ಅಂತರಂಗವನ್ನು ಬಲಗೊಳಿಸಲಿ. ನಿಮ್ಮ ವಿಶ್ವಾಸದ ಫಲವಾಗಿ, ಯೇಸುಕ್ರಿಸ್ತರು ನಿಮ್ಮ ಹೃದಯಗಳಲ್ಲಿ ಸದಾ ವಾಸಿಸಲಿ ಮತ್ತು ನಿಮ್ಮ ಜೀವನವು ಪ್ರೀತಿಯಲ್ಲಿ ಬೇರೂರಿ ಸದೃಢವಾಗಿ ನಿಲ್ಲಲಿ. ಹೀಗೆ ದೇವಜನರೆಲ್ಲರೊಡನೆ, ಕ್ರಿಸ್ತ ಯೇಸುವಿನ ಅಗಾಧ ಪ್ರೀತಿಯ ಉದ್ದ-ಅಗಲ, ಆಳ-ಎತ್ತರ ಎಷ್ಟೆಂಬುದನ್ನು ನೀವು ಗ್ರಹಿಸಿಕೊಳ್ಳುವಂತಾಗಲಿ. ಹೌದು, ಜ್ಞಾನವನ್ನು ಮೀರಿದ ಈ ಪ್ರೀತಿಯನ್ನು ಅರಿತುಕೊಳ್ಳಲು ಆಸಕ್ತರಾಗಬೇಕು. ದೇವರ ಪರಿಪುರ್ಣತೆಯಿಂದ ತುಂಬಿದವರಾಗಬೇಕು ಎಂದು ನಾನು ಬೇಡಿಕೊಳ್ಳುತ್ತೇನೆ. ನಮ್ಮಲ್ಲಿ ಕಾರ್ಯಸಾಧಿಸುವ ಹಾಗೂ ನಮ್ಮ ಆಶೆ-ಆಕಾಂಕ್ಷೆಗಿಂತಲೂ ಬೇಡಿಕೆ-ಕೋರಿಕೆಗಿಂತಲೂ ಅಧಿಕವಾದುದನ್ನು ಮಾಡಲು ದೇವರು ಶಕ್ತರು. ಅವರಿಗೆ ಧರ್ಮಸಭೆಯಲ್ಲೂ ಕ್ರಿಸ್ತ ಯೇಸುವಿನಲ್ಲೂ ಯುಗಯುಗಾಂತರಕ್ಕೂ ತಲತಲಾಂತರಕ್ಕೂ ಮಹಿಮೆ ಸಲ್ಲಲಿ! ಆಮೆನ್!
-ದೇವರ ವಾಕ್ಯವಿದು.

ಕೀರ್ತನೆ 33:1-2, 4-5, 11-12, 18-19. ಗಿ. 5
ಶ್ಲೋಕ : ಪ್ರಭು ಅಚಲ ಪ್ರೀತಿಯಿಂದ ಜಗವನು ತುಂಬಿಹನು.

ಘೋಷಣೆ ಯೊವಾನ್ನ 8:12
ಅಲ್ಲೆಲೂಯ, ಅಲ್ಲೆಲೂಯ !
ನಾನೇ ಜಗಜ್ಯೋತಿ; ನನ್ನನ್ನು ಹಿಂಬಾಲಿಸುವವನು ಕತ್ತಲಲ್ಲಿ ನಡೆಯುವುದಿಲ್ಲ.
ಜೀವದಾಯಕ ಜ್ಯೋತಿ ಅವನಲ್ಲಿರುತ್ತದೆ.
ಅಲ್ಲೆಲೂಯ !

ಸಂತ ಲೂಕನು ಬರೆದ ಶುಭಸಂದೇಶದಿಂದ ವಾಚನ - 12:49-53

“ನಾನು ಲೋಕಕ್ಕೆ ಸಮಾಧಾನವನ್ನು ತರಲು ಬಂದೆ ಎಂದು ನೆನಸುತ್ತೀರೋ ?ಇಲ್ಲ. ಭಿನ್ನಭೇದಗಳನ್ನು ಉಂಟುಮಾಡಲು ಬಂದಿದ್ದೇನೆ.”

ಯೇಸು ತಮ್ಮ ಶಿಷ್ಯರಿಗೆ ಹೀಗೆಂದರು: “ನಾನು ಬಂದಿರುವುದು ಜಗತ್ತಿನಲ್ಲಿ ಬೆಂಕಿಯನ್ನು ಹೊತ್ತಿಸಲು. ಅದು ಈಗಾಗಲೇ ಉರಿಯುತ್ತಿರಬೇಕೆಂಬುದೇ ನನ್ನ ಬಯಕೆ. ಆದರೆ ನಾನು ಪಡೆಯಬೇಕಾದ ಶ್ರಮಾಸ್ನಾನ ಒಂದುಂಟು. ಅದು ಈಡೇರುವ ತನಕ ನನಗೆ ನೆಮ್ಮದಿಯಿಲ್ಲ. ನಾನು ಲೋಕಕ್ಕೆ ಸಮಾಧಾನವನ್ನು ತರಲು ಬಂದೆ ಎಂದು ಭಾವಿಸುತ್ತೀರೋ? ಇಲ್ಲ. ಭಿನ್ನಭೇದಗಳನ್ನು ಉಂಟುಮಾಡಲು ಬಂದೆನೆಂದು ನಿಮಗೆ ಒತ್ತಿ ಹೇಳುತ್ತೇನೆ. ಹೇಗೆಂದರೆ, ಒಂದೇ ಮನೆಯಲ್ಲಿರುವ ಐವರಲ್ಲಿ, ಇಂದಿನಿಂದ ಇಬ್ಬರಿಗೆ ವಿರುದ್ಧ ಮೂವರು, ಮೂವರಿಗೆ ವಿರುದ್ಧ ಇಬ್ಬರು ವಿಭಾಗವಾಗುವರು. ಮಗನಿಗೆ ವಿರುದ್ಧವಾಗಿ ತಂದೆ, ಮಗಳಿಗೆ ವಿರುದ್ಧವಾಗಿ ತಾಯಿ, ಸೊಸೆಗೆ ವಿರುದ್ಧವಾಗಿ ಅತ್ತೆ, ಪರಸ್ಪರ ವಿರೋಧವಾಗಿ ವಿಂಗಡಿಸಿ ಹೋಗುವರು,” ಎಂದರು.
-ಪ್ರಭು ಕ್ರಿಸ್ತರ ಸಂದೇಶವಿದು

24.10.2018

ಸಾಧಾರಣ ಕಾಲದ ೨೯ನೇ - ಬುಧವಾರ

ಮೊದಲನೆಯ ವಾಚನ: ಸಂತ ಪೌಲನು ಎಫೆಸಿಯರಿಗೆ ಬರೆದ ಪತ್ರದಿಂದ ವಾಚನ 3:2-12

“ಶುಭಸಂದೇಶದ ಮೂಲಕ ಅನ್ಯಜನರೂ ಯೇಸುಕ್ರಿಸ್ತರಲ್ಲಿದೇವಜನರೊಡನೆ ಸಹಬಾಧ್ಯರು.”

ಸಹೋದರರೇ, ದೇವರು ತಮ್ಮ ಕೃಪಾತಿಶಯದ ಬಗ್ಗೆ ಸಾರುವ ಹೊಣೆಯನ್ನು ನಿಮ್ಮ ಸಲುವಾಗಿ ನನಗೆ ಕೊಟ್ಟಿರುತ್ತಾರೆಂಬುದನ್ನು ನೀವೇ ಬಲ್ಲಿರಿ. ದೇವರು ತಮ್ಮ ನಿಗೂಢ ಯೋಜನೆಯನ್ನು ನನಗೆ ಪ್ರಕಟಗೊಳಿಸಿದ್ದಾರೆ. ಇದರ ಬಗ್ಗೆ ನಾನು ಮೊದಲೇ ನಿಮಗೆ ಸಂಕ್ಷೇಪವಾಗಿ ಬರೆದಿದ್ದೇನೆ. ಅದನ್ನು ಲಕ್ಷ್ಯವಿಟ್ಟು ಓದಿದರೆ, ಆಗ ಯೇಸುಕ್ರಿಸ್ತರ ರಹಸ್ಯವನ್ನು ಎಷ್ಟರ ಮಟ್ಟಿಗೆ ನಾನು ಮನಗಂಡಿದ್ದೇನೆ ಎಂದು ನಿಮಗೆ ತಿಳಿಯುತ್ತದೆ. ಹಿಂದಿನ ಕಾಲದವರಿಗೆ ಈ ರಹಸ್ಯವನ್ನು ತಿಳಿಸಿರಲಿಲ್ಲ. ಆದರೆ ಈಗ ದೇವರು ಪವಿತ್ರಾತ್ಮರ ಮುಖಾಂತರ ಪುಜ್ಯ ಪ್ರೇಷಿತರಿಗೂ ಪ್ರವಾದಿಗಳಿಗೂ ಅದನ್ನು ಪ್ರಕಟಿಸಿದ್ದಾರೆ. ಶುಭಸಂದೇಶದ ಮೂಲಕ ಅನ್ಯಜನರೂ ಯೇಸುಕ್ರಿಸ್ತರಲ್ಲಿ ದೇವಜನರೊಡನೆ ಸಹಬಾಧ್ಯರು, ಹಕ್ಕುದಾರರು, ಒಂದೇ ಶರೀರದ ಅಂಗಗಳು, ಹಾಗೂ ದೇವರು ಮಾಡಿದ ವಾಗ್ದಾನದಲ್ಲಿ ಪಾಲುಗಾರರು. ಇದೇ ಆ ರಹಸ್ಯ.ಈ ಶುಭಸಂದೇಶಕ್ಕೆ ದಾಸನನ್ನಾಗಿ ದೇವರು ನನ್ನನ್ನು ನೇಮಿಸಿದ್ದಾರೆ. ತಮ್ಮ ಪ್ರಭಾವಮಯ ಶಕ್ತಿಯಿಂದ ಈ ವಿಶೇಷ ವರವನ್ನು ಉಚಿತವಾಗಿ ನನಗೆ ದಯಪಾಲಿಸಿದ್ದಾರೆ. ದೇವಜನರಲ್ಲೆಲ್ಲ ನಾನು ಅತ್ಯಲ್ಪನು. ಆದರೂ ಯೇಸುಕ್ರಿಸ್ತರ ಅಪರಿಮಿತ ಆಧ್ಯಾತ್ಮಿಕ ಸಿರಿಸಂಪತ್ತಿನ ಬಗ್ಗೆ ಅನ್ಯಜನರಿಗೆ ಪ್ರಬೋಧಿಸುವ ಸೌಭಾಗ್ಯ ನನ್ನದಾಯಿತು. ಸಮಸ್ತವನ್ನು ಸೃಷ್ಟಿಸಿದ ದೇವರು ಆದಿಯಿಂದಲೂ ಗುಪ್ತವಾಗಿಟ್ಟಿದ್ದ ತಮ್ಮ ಯೋಜನೆಯನ್ನು ಈಡೇರಿಸುವ ವಿಧಾನವನ್ನು ಸರ್ವಜನರಿಗೆ ತಿಳಿಯಪಡಿಸುವುದಕ್ಕಾಗಿ ನನ್ನನ್ನು ಆರಿಸಿಕೊಂಡಿರುವರು. ಹೀಗೆ ಧರ್ಮಸಭೆಯ ಮೂಲಕ ದೇವರ ಬಹುರೂಪದ ಜ್ಞಾನವು ಅಶರೀರ ಶಕ್ತಿಗಳ ಅಧಿಕಾರಿಗಳಿಗೂ ಅಧಿಪತಿಗಳಿಗೂ ಈಗಿನ ಕಾಲದಲ್ಲಿ ತಿಳಿಯಬೇಕೆಂಬುದೇ ಅವರ ಉದ್ದೇಶವಾಗಿತ್ತು. ತಮ್ಮ ಪುರ್ವ ಸಂಕಲ್ಪದಂತೆಯೇ ಇದನ್ನು ದೇವರು ನಮ್ಮ ಪ್ರಭುವಾದ ಯೇಸುಕ್ರಿಸ್ತರಲ್ಲಿ ಕಾರ್ಯಗತಗೊಳಿಸಿದರು. ಯೇಸುಕ್ರಿಸ್ತರಲ್ಲಿ ನಾವಿಟ್ಟಿರುವ ವಿಶ್ವಾಸದ ಮೂಲಕ ಅವರಲ್ಲಿ ಒಂದಾಗಿ ದೇವರ ಸಾನಿಧ್ಯವನ್ನು ಸೇರುವ ಧೈರ್ಯ ಹಾಗೂ ಭರವಸೆ ನಮಗಿದೆ.
ದೇವರ ವಾಕ್ಯವಿದು.

ಕೀರ್ತನೆ: ಯೆಶಾಯ 12:2-6. ಗಿ. 3
ಶ್ಲೋಕ : ಉದ್ಧರಿಸುವ ಒರತೆಗಳಿಂದ ಸೇದುವಿರಿ, ನೀರನು ಹರುಷದಿಂದ .

ಘೋಷಣೆ: ಲೂಕ 19:38 ಅಲ್ಲೆಲೂಯ, ಅಲ್ಲೆಲೂಯ !
ನಾನೇ ಜಗಜ್ಯೋತಿ; ನನ್ನನ್ನು ಹಿಂಬಾಲಿಸುವವನು ಕತ್ತಲಲ್ಲಿ ನಡೆಯುವುದಿಲ್ಲ.
ಜೀವದಾಯಕ ಜ್ಯೋತಿ ಅವನಲ್ಲಿರುತ್ತದೆ.
ಅಲ್ಲೆಲೂಯ !

ಶುಭಸಂದೇಶ: ಸಂತ ಲೂಕನು ಬರೆದ ಶುಭಸಂದೇಶದಿಂದ ವಾಚನ 12:39-48

“ಹೆಚ್ಚು ಪಡೆದವನಿಂದ ಹೆಚ್ಚು ನಿರೀಕ್ಷಿಸಲಾಗುವುದು.”

ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು: “ಕಳ್ಳನು ಬರುವ ಗಳಿಗೆಯು ಮನೆಯ ಯಜಮಾನನಿಗೆ ತಿಳಿದರೆ, ಅವನು ತನ್ನ ಮನೆಗೆ ಕನ್ನಹಾಕಲು ಬಿಡುವನೇ? ಇಲ್ಲ. ಇದನ್ನು ಚೆನ್ನಾಗಿ ತಿಳಿದುಕೊಂಡು ನೀವು ಸಹ ಸಿದ್ಧರಾಗಿರಿ. ಏಕೆಂದರೆ, ನರಪುತ್ರನು ನೀವು ನಿರೀಕ್ಷಿಸದ ಗಳಿಗೆಯಲ್ಲಿ ಬರುವನು,” ಎಂದರು. ಆಗ ಪೇತ್ರನು, “ಪ್ರಭೂ ನೀವು ಹೇಳಿದ ಈ ಸಾಮತಿ ನಮಗೆ ಮಾತ್ರ ಅನ್ವಯಿಸುತ್ತದೋ ಅಥವಾ ಎಲ್ಲರಿಗೋ?” ಎಂದು ಕೇಳಿದನು. ಅದಕ್ಕೆ ಪ್ರಭು ಹೀಗೆಂದರು; “ಪ್ರಾಮಾಣಿಕನೂ ವಿವೇಕಿಯೂ ಆದ ಮೇಸ್ತ್ರಿ ಯಾರು? ಕಾಲಕಾಲಕ್ಕೆ ಸರಿಯಾಗಿ ಕೂಲಿಯಾಳುಗಳಿಗೆ ದವಸಧಾನ್ಯವನ್ನು ಅಳೆದುಕೊಟ್ಟು, ಮನೆಯ ಮೇಲ್ವಿಚಾರಣೆಯನ್ನು ನೋಡಿಕೊಳ್ಳಲು ಯಜಮಾನನು ನೇಮಿಸಿದ್ದ ಮೇಸ್ತ್ರಿಯೇ. ಯಜಮಾನನು ಮನೆಗೆ ಹಿಂದಿರುಗೆ ಬಂದಾಗ ಆ ಸೇವಕನು ತನ್ನ ಕರ್ತವ್ಯವನ್ನು ನಿಷ್ಠೆಯಿಂದ ನೆರವೇರಿಸುತ್ತಿದ್ದರೆ ಅವನು ಧನ್ಯನು. ಅಂಥವನನ್ನು ಯಜಮಾನನು ತನ್ನ ಎಲ್ಲ ಆಸ್ತಿಪಾಸ್ತಿಗೆಆಡಳಿತಗಾರನನ್ನಾಗಿ ನೇಮಿಸುವನೆಂದು ನಿಮಗೆ ನಿಜವಾಗಿ ಹೇಳುತ್ತೇನೆ. ಆದರೆ ಆ ಸೇವಕನು ತನ್ನಲ್ಲೇ, ‘ನನ್ನ ಯಜಮಾನ ಬಹಳ ತಡಮಾಡಿ ಬರುತ್ತಾನೆ’, ಎಂದುಕೊಂಡು ಗಂಡಾಳು ಹೆಣ್ಣಾಳು ಎನ್ನದೆ ಹೊಡೆಯುವುದಕ್ಕೂ ಅಮಲೇರುವಷ್ಟು ತಿಂದು ಕುಡಿಯುವುದಕ್ಕೂ ತೊಡಗಿದರೆ ಅವನು ನಿರೀಕ್ಷಿಸದ ದಿನದಲ್ಲಿ, ತಿಳಿಯದ ಗಳಿಗೆಯಲ್ಲಿ ಯಜಮಾನನು ಬಂದು ಅವನನ್ನು ಚಿತ್ರಹಿಂಸೆಗೂ ವಿಶ್ವಾಸಹೀನರ ದುರ್ಗತಿಗೂ ಗುರಿಮಾಡುವನು. ಸೇವಕನು ಯಜಮಾನನ ಇಷ್ಟಾರ್ಥವನ್ನು ಅರಿತುಕೊಂಡಿದ್ದರೂ ಅಜಾಗರೂಕನಾಗಿ ಇದ್ದರೆ ಕಠಿಣ ಶಿಕ್ಷೆಗೆ ಗುರಿಯಾಗುತ್ತಾನೆ. ಅರಿಯದೆ ಅಜಾಗರೂಕನಾಗಿದ್ದರೆ ಕಡಿಮೆ ಶಿಕ್ಷೆಗೆ ಗುರಿಯಾಗುತ್ತಾನೆ. ಹೆಚ್ಚು ಪಡೆದವನಿಂದ ಹೆಚ್ಚು ನಿರೀಕ್ಷಿಸಲಾಗುವುದು. ಇನ್ನೂ ಹೆಚ್ಚು ವಹಿಸಿಕೊಂಡವನಿಂದ ಇನ್ನೂ ಹೆಚ್ಚಾಗಿ ಕೇಳಲಾಗುವುದು.”ಪ್ರಭು ಕ್ರಿಸ್ತರ ಶುಭಸಂದೇಶವಿದು

23.10.2018

ಸಾಧಾರಣ ಕಾಲದ ೨೯ನೇ - ಮಂಗಳವಾರ

ಮೊದಲನೆಯ ವಾಚನ ಸಂತ ಪೌಲನು ಎಫೆಸಿಯರಿಗೆ ಬರೆದ ಪತ್ರದಿಂದ ವಾಚನ2:12-22

“ನಿಮ್ಮನ್ನೂ ನಮ್ಮನ್ನೂ ಒಂದುಗೂಡಿಸಿದವರು ಅವರೇ.ಯೇಸುಕ್ರಿಸ್ತರೇ ನಮ್ಮ ಶಾಂತಿದಾತ.”

ಸಹೋದರರೇ, ಹಿಂದೊಮ್ಮೆ ನೀವು ಯೇಸುಕ್ರಿಸ್ತರಿಂದ ದೂರವಿದ್ದಿರಿ; ದೇವರು ಆಯ್ದುಕೊಂಡ ಜನಾಂಗಕ್ಕೆ ಸೇರದೆ ಪರಕೀಯರಾಗಿದ್ದಿರಿ; ದೇವರು ತಮ್ಮ ಜನರೊಂದಿಗೆ ಮಾಡಿಕೊಂಡ ಒಡಂಬಡಿಕೆಯಲ್ಲಿ ಪಾಲಿಲ್ಲದವರಾಗಿದ್ದಿರಿ; ನಂಬಿಕೆ ನಿರೀಕ್ಷೆ ಇಲ್ಲದೆ ಬಾಳಿದಿರಿ. ಹೀಗೆ ಹಿಂದೊಮ್ಮೆ ದೇವರಿಂದ ದೂರವಾಗಿದ್ದ ನಿಮ್ಮನ್ನು ಕ್ರಿಸ್ತ ಯೇಸು ಸುರಿಸಿದ ರಕ್ತದ ಮೂಲಕ ದೇವರ ಹತ್ತಿರಕ್ಕೆ ತರಲಾಯಿತು. ಯೇಸುಕ್ರಿಸ್ತರೇ ನಮ್ಮ ಶಾಂತಿದಾತ. ನಿಮ್ಮನ್ನೂ ನಮ್ಮನ್ನೂ ಒಂದುಗೂಡಿಸಿದವರು ಅವರೇ. ನಮ್ಮೀರ್ವರನ್ನು ಪ್ರತ್ಯೇಕಿಸಿದ್ದ ಹಗೆತನವೆಂಬ ಅಡ್ಡಗೋಡೆಯನ್ನು ತಮ್ಮ ಶರೀರದಿಂದಲೇ ಕೆಡವಿಹಾಕಿದ್ದಾರೆ. ವಿಧಿನಿಯಮಗಳಿಂದ ಕೂಡಿದ ಧರ್ಮಶಾಸ್ತ್ರವನ್ನು ನಿರರ್ಥಕಗೊಳಿಸಿದ್ದಾರೆ. ಉಭಯರನ್ನು ಒಂದುಗೂಡಿಸಿ, ಶಾಂತಿ ಸಮಾಧಾನವನ್ನೇರ್ಪಡಿಸಿ, ನೂತನ ಮಾನವನನ್ನಾಗಿ ಪರಿವರ್ತಿಸಿದ್ದಾರೆ. ತಮ್ಮ ಶಿಲುಬೆಯ ಮರಣದ ಮೂಲಕ ಹಗೆತನವನ್ನು ನಿರ್ಮೂಲಗೊಳಿಸಿ ಉಭಯತ್ರರನ್ನು ಒಂದೇ ದೇಹದಂತೆ ಮಾಡಿ ದೇವರೊಂದಿಗೆ ಸಂಧಾನಗೊಳಿಸಿದ್ದಾರೆ. ಯೇಸುಕ್ರಿಸ್ತರು ಬಂದು ದೇವರಿಂದ ದೂರವಾಗಿದ್ದ ನಿಮಗೂ ಹತ್ತಿರವಾಗಿದ್ದ ನಮಗೂ ಶಾಂತಿಯ ಸಂದೇಶವನ್ನು ಸಾರಿದರು. ಇದರ ಪರಿಣಾಮವಾಗಿ ಅವರ ಮುಖಾಂತರವೇ ಉಭಯತ್ರರು ಒಂದೇ ಪವಿತ್ರಾತ್ಮ ಅವರಲ್ಲಿ ಪಿತನ ಸಾನಿಧ್ಯವನ್ನು ಸೇರಲು ಮಾರ್ಗವಾಯಿತು. ಹೀಗಿರಲಾಗಿ, ನೀವು ಇನ್ನು ಮೇಲೆ ಪರಕೀಯರೂ ಪರದೇಶಿಗಳೂ ಆಗಿರದೆ, ದೇವಜನರೊಂದಿಗೆ ಸಹಜೀವಿಗಳು ಮತ್ತು ದೇವರ ಮನೆತನದವರು ಆಗಿದ್ದೀರಿ. ಪ್ರೇಷಿತರು ಹಾಗೂ ಪ್ರವಾದಿಗಳೂ ಹಾಕಿದ ತಳಹದಿಯ ಮೇಲೆ ನಿಮ್ಮನ್ನು ನಿರ್ಮಿಸಲಾಗಿದೆ. ಯೇಸುಕ್ರಿಸ್ತರೇ ಈ ತಳಹದಿಯ ಮುಖ್ಯ ಮೂಲೆಗಲ್ಲು. ಇಡೀ ಕಟ್ಟಡವು ಅವರನ್ನೇ ಆಧರಿಸಿ, ಎಲ್ಲಾ ಭಾಗಗಳು ಒಂದಕ್ಕೊಂದು ಹೊಂದಿಕೆಯಾಗಿ ನಿಂತು, ಪ್ರಭುವಿಗೆ ಅರ್ಪಿತವಾದ ದೇವಮಂದಿರ ಆಗುತ್ತದೆ. ಯೇಸುಕ್ರಿಸ್ತರ ಅನ್ಯೋನ್ಯತೆಯಲ್ಲಿ ನೀವು ಸಹ ಇತರರೆಲ್ಲರೊಡನೆ ದೇವರ ನಿವಾಸಕ್ಕೆ ತಕ್ಕ ಮಂದಿರವಾಗಿ ಪವಿತ್ರಾತ್ಮ ಅವರಿಂದ ಕಟ್ಟಲ್ಪಡುತ್ತಿದ್ದೀರಿ.
ದೇವರ ವಾಕ್ಯವಿದು.

ಕೀರ್ತನೆ 85:8-13. ಗಿ. 8.
ಶ್ಲೋಕ : ತೋರಿಸೆಮಗೆ ಪ್ರಭೂ, ಕರುಣೆಯನು.

|ಘೋಷಣೆ: ಯೊವಾನ್ನ 6:63, 68
ಅಲ್ಲೆಲೂಯ, ಅಲ್ಲೆಲೂಯ !
ನಾನು ನಿಮ್ಮೊಡನೆ ಆಡಿದ ಮಾತುಗಳುಜೀವದಾಯಕ ದೇವರಾತ್ಮವನ್ನು ತರುತ್ತವೆ.
ನಿತ್ಯಜೀವವನ್ನು ಈಯುವ ನುಡಿ ಇರುವುದು ತಮ್ಮಲ್ಲೇ.
ಅಲ್ಲೆಲೂಯ !

ಸಂತ ಲೂಕನು ಬರೆದ ಶುಭಸಂದೇಶದಿಂದ ವಾಚನ12:35-38

“ಯಜಮಾನನು ಬಂದು ಯಾವ ಯಾವ ಸೇವಕಎಚ್ಚರವಾಗಿದ್ದಾನೆಂದು ಕಂಡುಕೊಳ್ಳುತ್ತಾನೋ ಅಂಥವರು ಭಾಗ್ಯವಂತರು.”

ಯೇಸು ತಮ್ಮ ಶಿಷ್ಯರಿಗೆ ಹೀಗೆಂದರು : “ನಿಮ್ಮ ನಡು ಕಟ್ಟಿರಲಿ; ನಿಮ್ಮ ದೀಪ ಉರಿಯುತ್ತಿರಲಿ. ತಟ್ಟಿದ ತಕ್ಷಣ ಯಜಮಾನನಿಗೆ ಬಾಗಿಲು ತೆರೆಯಲು ಸಿದ್ಧರಿರುವ ಸೇವಕರಂತೆ ಇರಿ. ತಮ್ಮ ಯಜಮಾನನು ಮದುವೆ ಔತಣ ಮುಗಿಸಿಕೊಂಡು ಯಾವಾಗ ಹಿಂದಿರುಗುತ್ತಾನೋ, ಎಂದು ಅವರು ಎದುರು ನೋಡುತ್ತಾ ಇರುತ್ತಾರೆ. ಯಜಮಾನನು ಬಂದು ಯಾವ ಯಾವ ಸೇವಕ ಎಚ್ಚರವಾಗಿದ್ದಾನೆಂದು ಕಂಡುಕೊಳ್ಳುತ್ತಾನೋ, ಅಂಥವರು ಭಾಗ್ಯವಂತರು. ಏಕೆಂದರೆ, ಯಜಮಾನನೇ ನಡುಕಟ್ಟಿನಿಂತ, ಅವರನ್ನುಊಟಕ್ಕೆ ಕೂರಿಸಿ, ಒಬ್ಬೊಬ್ಬನಿಗೂ ತಾನೇ ಉಪಚಾರ ಮಾಡುವನೆಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ. ಯಜಮಾನನು ಬರುವಾಗ ನಡುರಾತ್ರಿಯಾಗಿರಲಿ, ಮುಂಜಾವವಾಗಿರಲಿ, ಎಚ್ಚರದಿಂದ ಇರುವ ಸೇವಕರನ್ನು ಆತನು ಕಂಡರೆ ಅವರು ಭಾಗ್ಯವಂತರು.”
ಪ್ರಭು ಕ್ರಿಸ್ತರ ಸಂದೇಶವಿದು.

22.10.2018

ಸಾಧಾರಣ ಕಾಲದ ೨೯ನೇ - ಸೋಮವಾರ

ಮೊದಲನೆಯ ವಾಚನ:  ಸಂತ ಪೌಲನು ಎಫೆಸಿಯರಿಗೆ ಬರೆದ ಮೊದಲನೆಯ ಪತ್ರದಿಂದ ವಾಚನ2:1-10

“ಆಧ್ಯಾತ್ಮಿಕವಾಗಿ ಮೃತರಾಗಿದ್ದ ನಮ್ಮನ್ನು ದೇವರು ಕ್ರಿಸ್ತಯೇಸುವಿನೊಡನೆಜೀವಂತರನ್ನಾಗಿ ಮಾಡಿದರು.

”ಸಹೋದರರೇ, ನಿಮ್ಮ ಅಪರಾಧಗಳ ಹಾಗೂ ಪಾಪಗಳ ದೆಸೆಯಿಂದ ಹಿಂದೊಮ್ಮೆ ನೀವು ಆಧ್ಯಾತ್ಮಿಕವಾಗಿ ಮೃತರಾಗಿದ್ದಿರಿ. ಆಗ ನೀವು ಲೋಕದ ರೀತಿನೀತಿಗಳನ್ನು ಅನುಸರಿಸಿ ಬಾಳಿದಿರಿ. ವಾಯುಮಂಡಲದಲ್ಲಿನ ಅಶರೀರ ಶಕ್ತಿಗಳ ಅಧಿಪತಿಗೆ ಅಧೀನರಾಗಿದಿರಿ. ದುಷ್ಕರ್ಮಿಗಳನ್ನು ಪ್ರಚೋದಿಸುತ್ತಲಿರುವ ದುರಾತ್ಮನಿಗೆ ವಿಧೇಯರಾಗಿದ್ದಿರಿ. ವಾಸ್ತವವಾಗಿ ಹಿಂದೊಮ್ಮೆ ನಾವೆಲ್ಲರು ಸಹ ಹಾಗೆಯೇ ಇದ್ದೆವು. ಶಾರೀರಿಕ ಆಶೆ ಆಮಿಷಗಳಿಗೆ ತುತ್ತಾಗಿದ್ದೆವು; ಮಾನಸಿಕ ಹಾಗೂ ಶಾರೀರಿಕ ದುರಿಚ್ಛೆಗಳನ್ನೇ ಈಡೇರಿಸುತ್ತಾ ಬಂದೆವು. ಸ್ವಭಾವತಃ ನಾವು ಸಹ ಇತರರಂತೆಯೇ ದೈವಕೋಪಕ್ಕೆ ಗುರಿಯಾಗಿದ್ದೆವು. ಆದರೆ ಕರುಣಾಮಯ ದೇವರು ನಮ್ಮನ್ನು ಅಪಾರವಾಗಿ ಪ್ರೀತಿಸಿ, ನಮ್ಮ ಅಪರಾಧಗಳ ನಿಮಿತ್ತ ಆಧ್ಯಾತ್ಮಿಕವಾಗಿ ಮೃತರಾಗಿದ್ದ ನಮ್ಮನ್ನು ಕ್ರಿಸ್ತ ಯೇಸುವಿನೊಡನೆ ಜೀವಂತರನ್ನಾಗಿ ಮಾಡಿದರು. ದೈವಾನುಗ್ರಹದಿಂದಲೇ ನೀವೀಗ ಜೀವೋದ್ಧಾರಹೊಂದಿದ್ದೀರಿ. ಯೇಸುಕ್ರಿಸ್ತರೊಡನೆ ನಮ್ಮನ್ನು ಎಬ್ಬಿಸಿ, ಸ್ವರ್ಗಲೋಕದಲ್ಲಿ ಅವರ ಸನ್ನಿಧಿಯಲ್ಲಿಯೇ ಮಂಡಿಸುವ ಅವಕಾಶ ಮಾಡಿಕೊಟ್ಟರು. ದೇವರು ಯೇಸುಕ್ರಿಸ್ತರಲ್ಲಿ ನಮಗೆ ತೋರಿದ ದಯೆಯ ಮೂಲಕ ತಮ್ಮ ಅನುಗ್ರಹದ ಶ್ರೀಮಂತಿಕೆಯನ್ನು ಮುಂದಣ ಯುಗಗಳಲ್ಲಿ ತಿಳಿಯಪಡಿಸುವುದೇ ಅವರ ಉದ್ದೇಶವಾಗಿತ್ತು.ದೈವಾನುಗ್ರಹದಿಂದಲೇ ನೀವು ವಿಶ್ವಾಸದ ಮೂಲಕ ಜೀವೋದ್ಧಾರ ಹೊಂದಿದ್ದೀರಿ. ಇದು ನಿಮ್ಮ ಪ್ರಯತ್ನದ ಫಲವಲ್ಲ, ದೇವರಿತ್ತ ವರಪ್ರಸಾದ. ಇದು ಮಾನವರ ಪುಣ್ಯಕಾರ್ಯಗಳ ಪರಿಣಾಮವೂ ಅಲ್ಲ. ಆದುದರಿಂದ ಯಾರೂ ಹೆಮ್ಮೆಪಡಲು ಆಸ್ಪದವಿಲ್ಲ. ನಾವಾದರೋ ದೇವರ ಕಲಾಕೃತಿಗಳು. ಕ್ರಿಸ್ತ ಯೇಸುವಿನಲ್ಲಿ ನಾವು ಸತ್ಕಾರ್ಯಗಳನ್ನು ಮಾಡುತ್ತಾ ಬಾಳಬೇಕೆಂದು ತಾವು ಮೊದಲೇ ನಿರ್ಣಯಿಸಿದಂತೆ ದೇವರು ನಮ್ಮನ್ನು ಸೃಷ್ಟಿಸಿದ್ದಾರೆ.
ದೇವರ ವಾಕ್ಯವಿದು.

ಕೀರ್ತನೆ 100:1-4, ಗಿ. 3
ಶ್ಲೋಕ : ಪ್ರಭುವಿನ ಜನ, ಆತನೇ ಮೇಯಿಸುವ ಕುರಿಗಳು ನಾವು.

ಘೋಷಣೆ ಲೂಕ 8:15
ಅಲ್ಲೆಲೂಯ, ಅಲ್ಲೆಲೂಯ !
ದೇವರ ವಾಕ್ಯವನ್ನು ಕೇಳಿ ಅದನ್ನುಸದ್ಗುಣ ಹಾಗೂ ಸಾತ್ವಿಕವಾದ ಹೃದಯದಲ್ಲಿಟ್ಟುಸಹನೆಯಿಂದ ಫಲತರುವವರು ಧನ್ಯರು.ಅಲ್ಲೆಲೂಯ !

ಸಂತ ಲೂಕನು ಬರೆದ ಶುಭಸಂದೇಶದಿಂದ ವಾಚನ12:13-21

“ನಿನಗಾಗಿ ಸಿದ್ಧಮಾಡಿಟ್ಟಿರುವುದೆಲ್ಲ ಯಾರ ಪಾಲಾಗುವುದು?."

ಜನಸಮೂಹದಿಂದ ಒಬ್ಬನು, “ಬೋಧಕರೇ, ನಮ್ಮ ಪಿತ್ರಾರ್ಜಿತ ಸೊತ್ತನ್ನು ನನಗೆ ಭಾಗಮಾಡಿಕೊಡುವಂತೆ ನನ್ನ ಸಹೋದರನಿಗೆ ಹೇಳಿ,” ಎಂದು ಕೇಳಿಕೊಂಡನು. ಅದಕ್ಕೆ ಯೇಸು, “ಏನಯ್ಯಾ, ನಿಮ್ಮಿಬ್ಬರ ನ್ಯಾಯ ತೀರಿಸುವುದಕ್ಕೂ ನಿಮ್ಮ ಸ್ವತ್ತನ್ನು ಭಾಗಮಾಡಿಕೊಡುವುದಕ್ಕೂ ನನ್ನನ್ನು ನೇಮಿಸಿದವರು ಯಾರು?” ಎಂದು ಮರುಪ್ರಶ್ನೆ ಹಾಕಿದರು. ಅನಂತರ ಜನರನ್ನುದ್ದೇಶಿಸಿ, “ಎಚ್ಚರಿಕೆ, ಯಾವ ವಿಧವಾದ ಲೋಭಕ್ಕೂ ಒಳಗಾಗದಂತೆ ಜಾಗರೂಕರಾಗಿರಿ. ಏಕೆಂದರೆ ಒಬ್ಬನಿಗೆ ಎಷ್ಟೇ ಸಿರಿಸಂಪತ್ತಿರಲಿ, ಅವನ ನಿಜವಾದ ಜೀವನ ಅದನ್ನು ಅವಲಂಬಿಸಿಲ್ಲ,” ಎಂದು ಹೇಳಿದರು. ಅನಂತರ ಅವರಿಗೆ ಈ ಸಾಮತಿಯನ್ನು ಹೇಳಿದರು: “ಒಬ್ಬ ಧನಿಕನಿದ್ದ. ಅವನ ಭೂಮಿ ಒಮ್ಮೆ ಸಮೃದ್ಧಿಯಾದ ಬೆಳೆಕೊಟ್ಟಿತು. ಆಗ ಅವನು, ‘ನನ್ನ ಬೆಳೆಯನ್ನೆಲ್ಲಾ ತುಂಬಿಡಲು ಸ್ಥಳವಿಲ್ಲವಲ್ಲಾ, ಏನು ಮಾಡಲಿ?’ ಎಂದು ತನ್ನಲ್ಲೇ ಆಲೋಚಿಸುತ್ತಾ, ‘ಹೌದು,ಹೀಗೆ ಮಾಡುತ್ತೇನೆ: ಇರುವ ಕಣಜಗಳನ್ನು ಕಿತ್ತುಹಾಕಿಸಿ, ಇನ್ನೂ ದೊಡ್ಡವುಗಳನ್ನು ಕಟ್ಟಿಸುತ್ತೇನೆ. ಅಲ್ಲಿ ನನ್ನ ಎಲ್ಲಾ ದವಸಧಾನ್ಯಗಳನ್ನೂ ಸರಕು ಸಾಮಾಗ್ರಿಗಳನ್ನೂ ತುಂಬಿಸಿಡುತ್ತೇನೆ. ಅಲ್ಲದೆ, “ಎಲೈ ಮನವೇ, ಅನೇಕ ವರ್ಷಗಳಿಗೆ ಬೇಕಾದಷ್ಟು ಸರಕು ಬಿದ್ದಿದೆ; ಆರಾಮವಾಗಿರು. ತಿನ್ನು, ಕುಡಿ, ಸುಖಪಡು” ಎಂದು ಹೇಳಿಕೊಳ್ಳುತ್ತೇನೆ.’ ಎಂದುಕೊಂಡ. ಆಗ ದೇವರು, ‘ಎಲವೋ ಮೂರ್ಖ, ಇದೇ ರಾತ್ರಿ ನೀನು ಸಾಯಬೇಕಾಗಿದೆ, ನಿನಗಾಗಿ ಸಿದ್ಧಮಾಡಿಟ್ಟಿರುವುದೆಲ್ಲ ಯಾರ ಪಾಲಾಗುವುದು?’ ಎಂದರು. ತನಗೋಸ್ಕರ ಸಂಪತ್ತನ್ನು ಶೇಖರಿಸಿಟ್ಟುಕೊಂಡು ದೇವರ ಸೃಷ್ಟಿಯಲ್ಲಿ ಧನಿಕನಲ್ಲದವನು ಇವನಿಗೆ ಸಮಾನನು,” ಎಂದರು ಯೇಸು.
ಪ್ರಭು ಕ್ರಿಸ್ತರ ಶುಭಸಂದೇಶವಿದು.

21.10.2018

ವರ್ಷದ 29ನೇ ಭಾನುವಾರ

ಮೊದಲನೆಯ ವಾಚನ
ಪ್ರವಾದಿ ಯೆಶಾಯನ ಗ್ರಂಥದಿಂದ ವಾಚನ                                                   53: 10-11

ಇವನು ತನ್ನ ಪಾಪಪ್ರಾಯಶ್ಚಿತ್ತಕ್ಕಾಗಿ ತನ್ನ ಪ್ರಾಣವನ್ನೇ ಸಮರ್ಪಿಸಿದ.
ಈ ಪರಿ ಕಾಣುವನು ತನ್ನ ಸಿರಿ ಸಂತಾನವನು.
ಸರ್ವೇಶ್ವರನ ಚಿತ್ತದಂತೆ 
ಜಜ್ಜರಿತವಾದ ಹಿಂಸೆಬಾಧೆಗಳಿಂದ 
ಪಾಪ ಪ್ರಾಯಶ್ಚಿತ್ತಕ್ಕಾಗಿ ತನ್ನ ಪ್ರಾಣವನೇ ಸಮರ್ಪಿಸಿದ.
ಈ ಪರಿ ಕಾಣುವನು ತನ್ನ ಸಿರಿಸಂತಾನವನು
ಪಡೆಯುವನು ಚಿರಜೀವವನು
ತಾನೇ ನೆರವೇರಿಸುವನು ಸರ್ವೇಶ್ವರನ ಸಂಕಲ್ಪವನು.
ತೃಪ್ತನಾಗುವನಾತ ಕಂಡು ತನ್ನ 
ಪ್ರಾಣಯಾತನೆಯ ಫಲವನು.
ಸಜ್ಜನನಾದ ಆ ನನ್ನ ದಾಸ ತರುವನು ಸನ್ಮಾರ್ಗಕೆ ಬಹು ಜನರನು.
ತಾನೇ ಹೊತ್ತುಕೊಳ್ಳುವನು ಅವರ ಅಪರಾಧಗಳ ಹೊರೆಯನು.
ದೇವರ ವಾಕ್ಯವಿದು

ಕೀರ್ತನೆ                                                                           33: 4-5, 18-19, 20, 22. 22
ಶ್ಲೋಕ : ನಮ್ಮ ಮೇಲಿರಲಿ ಪ್ರಭೂ, ನಿನ್ನಚಲ ಪ್ರೀತಿ |

 ಎರಡನೆಯ ವಾಚನ
ಹಿಬ್ರಿಯರಿಗೆ ಬರೆದ ಪತ್ರದಿಂದ ವಾಚನ                                                                4: 14-16

ನಾವು ಧೈರ್ಯದಿಂದ ಅವರ ಕೃಪಾಸನವನ್ನು ಸಮೀಪಿಸೋಣ.
ಸಹೋದರರೇ, ಸ್ವರ್ಗಲೋಕಕ್ಕೆ ಏರಿಹೋದ ದೇವರ ಪುತ್ರನಾದ ಯೇಸುವೇ ನಮಗೆ ಶ್ರೇಷ್ಠ ಹಾಗೂ ಪ್ರಧಾನಯಾಜಕ ಆಗಿರುವುದರಿಂದ ನಾವು ನಿವೇದಿಸುವ ವಿಶ್ವಾಸದಲ್ಲಿ ಸದೃಢರಾಗಿರೋಣ. ಈ ಪ್ರಧಾನಯಾಜಕ, ನಮ್ಮ ದೌರ್ಬಲ್ಯಗಳನ್ನು ಕಂಡು ಅನುಕಂಪ ತೋರದೆ ಇರುವವರಲ್ಲ. ಅವರು, ನಮ್ಮಂತೆಯೇ ಇದ್ದುಕೊಂಡು ಎಲ್ಲಾ ವಿಷಯಗಳಲ್ಲೂ ಶೋಧನೆ-ಸಂಕಟಗಳನ್ನು ಅನುಭವಿಸಿದರು. ಆದರೆ ಪಾಪವನ್ನು ಮಾತ್ರ ಮಾಡಲಿಲ್ಲ. ಆದಕಾರಣ ನಾವು ಸಮಯೋಚಿತ ಸಹಾಯವನ್ನು ಅವರ ಅನುಗ್ರಹದಿಂದ ಪಡೆಯಲು ಮತ್ತು ಅವರ ಕರುಣೆಯನ್ನು ಸವಿಯಲು ಧೈರ್ಯದಿಂದ ಅವರ ಕೃಪಾಸನವನ್ನು ಸಮೀಪಿಸೋಣ.
ದೇವರ ವಾಕ್ಯವಿದು.

ಘೋಷಣೆ                                                                                   ಯೊವಾನ್ನ 8: 12
ಅಲ್ಲೆಲೂಯ, ಅಲ್ಲೆಲೂಯ !
ನಾನೇ ಜಗಜ್ಯೋತಿ; ನನ್ನನ್ನು ಹಿಂಬಾಲಿಸುವವನು ಕತ್ತಲಲ್ಲಿ ನಡೆಯುವುದಿಲ್ಲ.
ಜೀವದಾಯಕ ಜ್ಯೋತಿ ಅವನಲ್ಲಿರುತ್ತದೆ.
ಅಲ್ಲೆಲೂಯ !

 ಶುಭಸಂದೇಶ
ಸಂತ ಮಾರ್ಕನು ಬರೆದ ಶುಭಸಂದೇಶದಿಂದ ವಾಚನ                                       10: 35-45

ನರಪುತ್ರನು ಸರ್ವರ ಉದ್ಧಾರಕ್ಕಾಗಿ ತನ್ನ ಪ್ರಾಣವನ್ನು ಈಡಾಗಿ ಕೊಡುವುದಕ್ಕೆ ಬಂದಿದ್ದಾನೆ.
ಜೆಬೆದಾಯನ ಮಕ್ಕಳಾದ ಯಕೋಬ ಮತ್ತು ಯೊವಾನ್ನ ಯೇಸುವಿನ ಬಳಿಗೆ ಬಂದು, ಗುರುವೇ, ನಮ್ಮದೊಂದು ಬಿನ್ನಹವಿದೆ, ಅದನ್ನು ನಡೆಸಿಕೊಡಬೇಕು, ಎಂದು ವಿಜ್ಞಾಪಿಸಿಕೊಂಡರು. ನನ್ನಿಂದ ನಿಮಗೇನಾಗಬೇಕು? ಎಂದು ಯೇಸು ಕೇಳಿದರು. ತಮ್ಮ ಮಹಿಮಾಸ್ಥಾನದಲ್ಲಿ ನಮ್ಮಲ್ಲಿ ಒಬ್ಬನು ತಮ್ಮ ಬಲಗಡೆಯಲ್ಲೂ ಇನ್ನೊಬ್ಬನು ಎಡಗಡೆಯಲ್ಲೂ ಆಸೀನರಾಗುವಂತೆ ಅನುಗ್ರಹಿಸಬೇಕು, ಎಂದು ತಮ್ಮ ಬಯಕೆಯನ್ನು ತೋಡಿಕೊಂಡರು. ಅದಕ್ಕೆ ಯೇಸು, ನೀವು ಕೋರಿಕೊಂಡದ್ದು ಏನೆಂದು ನಿಮಗೇ ತಿಳಿಯದು. ನಾನು ಕುಡಿಯಲಿರುವ ಪಾತ್ರೆಯಿಂದ ಕುಡಿಯಲು ನಿಮ್ಮಿಂದಾದೀತೆ? ನಾನು ಪಡೆಯಲಿರುವ ಸ್ನಾನವನ್ನು ಪಡೆಯಲು ನಿಮ್ಮಿಂದ ಆದೀತೆ? ಎಂದು ಪ್ರಶ್ನಿಸಿದರು. ಹೌದು ಆಗುತ್ತದೆ, ಎಂದು ಮರು ನುಡಿದರು. ಆಗ ಯೇಸು, ನಾನು ಕುಡಿಯಲಿರುವ ಪಾತ್ರೆಯಿಂದ ನೀವೂ ಕುಡಿಯುವಿರಿ; ನಾನು ಪಡೆಯಲಿರುವ ಸ್ನಾನವನ್ನು ನೀವೂ ಪಡೆಯುವಿರಿ. ಆದರೆ ನನ್ನ ಬಲಗಡೆಯಲ್ಲಾಗಲೀ ಎಡಗಡೆಯಲ್ಲಾಗಲೀ ಆಸೀನರಾಗುವಂತೆ ಅನುಗ್ರಹಿಸುವುದು ನನ್ನದಲ್ಲ. ಅದು ಯಾರಿಗಾಗಿ ಸಿದ್ಧ ಮಾಡಲಾಗಿದೆಯೋ ಅವರಿಗೇ ಸಿಗುವುದು, ಎಂದು ನುಡಿದರುಉಳಿದ ಹತ್ತು ಮಂದಿ ಶಿಷ್ಯರು ಇದನ್ನು ಕೇಳಿದಾಗ ಯಕೋಬ ಯೊವಾನ್ನರ ಮೇಲೆ ಸಿಟ್ಟುಗೊಂಡರು. ಆಗ ಯೇಸು ಶಿಷ್ಯರೆಲ್ಲರನ್ನು ತಮ್ಮ ಬಳಿಗೆ ಕರೆದು, ಪ್ರಜಾಧಿಪತಿಗಳು ಎನಿಸಿಕೊಳ್ಳುವವರು ಪ್ರಜೆಗಳ ಮೇಲೆ ದರ್ಪದಿಂದ ದೊರೆತನ ಮಾಡುತ್ತಾರೆ; ಜನನಾಯಕರು ಎನಿಸಿಕೊಳ್ಳುವವರು ಜನರ ಮೇಲೆ ಅಧಿಕಾರ ಪ್ರದರ್ಶನ ಮಾಡುತ್ತಾರೆ; ಇದು ನಿಮಗೆ ಗೊತ್ತು. ಆದರೆ ನೀವು ಹಾಗಿರಬಾರದು. ನಿಮ್ಮಲ್ಲಿ ಶ್ರೇಷ್ಠನಾಗಿರಲು ಇಚ್ಛಿಸುವವನು ನಿಮ್ಮ ಸೇವಕನಾಗಿರಲಿ; ಪ್ರಥಮನಾಗಿರಲು ಆಶಿಸುವವನು ಎಲ್ಲರ ದಾಸನಾಗಿರಲಿ. ನರಪುತ್ರನು ಸಹ ಸೇವೆಮಾಡಿಸಿಕೊಳ್ಳುವುದಕ್ಕೆ ಅಲ್ಲ, ಇತರರ ಸೇವೆ ಮಾಡುವುದಕ್ಕೂ ಸರ್ವರ ಉದ್ಧಾರಕ್ಕಾಗಿ ತನ್ನ ಪ್ರಾಣವನ್ನು ಈಡಾಗಿ ಕೊಡುವುದಕ್ಕೂ ಬಂದಿದ್ದಾನೆ, ಎಂದು ಬೋಧಿಸಿದರು.
- ಪ್ರಭು ಕ್ರಿಸ್ತರ ಶುಭಸಂದೇಶವಿದು.

20.10.2018

ಸಾಧಾರಣ ಕಾಲದ 28ನೇ - ಶನಿವಾರ

ಮೊದಲನೇ ವಾಚನ: ಎಫೆಸಿಯರಿಗೆ: 1 : 15-32

ಪ್ರಭು ಯೇಸುವಿನಲ್ಲಿ ನೀವಿಟ್ಟಿರುವ ವಿಶ್ವಾಸ ಹಾಗೂ ದೇವಜನರೆಲ್ಲರ ಮೇಲೆ ನಿಮಗಿರುವ ಪ್ರೀತಿಯನ್ನು ಕುರಿತು ಕೇಳಿದ್ದೇನೆ. ಅಂದಿನಿಂದ ನಿಮ್ಮ ಸಲುವಾಗಿ ದೇವರಿಗೆ ಸದಾ ಕೃತಜ್ನತಾಸ್ತುತಿ ಸಲ್ಲಿಸಿ, ನನ್ನ ಪ್ರಾರ್ಥನೆಯಲ್ಲಿ ನಿಮ್ಮನ್ನು ಸ್ಮರಿಸಿಕೊಳ್ಳುತ್ತಿದ್ದೇನೆ. ನಮ್ಮ ಪ್ರಭು ಯೇಸುಕ್ರಿಸ್ತರ ದೇವರೂ ಮಹಿಮಾನ್ವಿತ ತಂದೆಯೂ ಆದವರು, ನಿಮಗೆ ಜ್ನಾನವನ್ನೂ ವಿವೇಚನೆಯನ್ನೂ ನೀಡುವ ಆತ್ಮವನ್ನು ದಯಪಾಲಿಸಲಿ; ತಮ್ಮನ್ನು ಸಂಪೂರ್ಣವಾಗಿ ಅರಿತುಕೊಳ್ಳುವ ವರವನ್ನು ಈಯಲಿ, ಎಂದು ಪ್ರಾರ್ಥಿಸುತ್ತೇನೆ. ದೇವರು ನಿಮ್ಮ ಮನೋನೇತ್ರಗಳನ್ನು ತೆರೆಯಲಿ; ಅವರ ಬೆಳಕು ನಿಮಗೆ ಕಾಣುವಂತೆ ಆಗಲಿ. ಹೀಗೆ, ಅವರು ಕರೆದಿರುವ ಜನರಿಗೆ ಲಭಿಸುವ ಭರವಸೆಯ ಭಾಗ್ಯ ಎಂಥದ್ದೆಂದೂ ದೇವಜನರಿಗೆ ಕಾಯ್ದಿರಿಸಿರುವ ಸ್ವಾಸ್ಥ್ಯ ಸಂಪತ್ತು ಎಂಥದ್ದೆಂದೂ ನೀವು ಅರಿತುಕೊಳ್ಳಬೇಕು. ಕ್ರೈಸ್ತವಿಶ್ವಾಸಿಗಳಾದ ನಮ್ಮಲ್ಲಿ ದೇವರು ಸಾಧಿಸಿರುವ ಮಹತ್ಕಾರ್ಯಗಳು ಎಷ್ಟು ಶಕ್ತಿಯುತವಾದವು ಎಂಬುದು ನಿಮಗೆ ಮನದಟ್ಟಾಗಬೇಕು. ಈ ಮಹಾಶಕ್ತಿಯಿಂದಲೇ ದೇವರು ಯೇಸುಕ್ರಿಸ್ತರನ್ನು ಮರಣದಿಂದ ಎಬ್ಬಿಸಿದರು; ಸಕಲ ಅಧಿಕಾರ, ಅಧಿಪತ್ಯ, ಪ್ರಭಾವ ಮತ್ತು ಪ್ರಭುತ್ವ ಇವೆಲ್ಲವುಗಳ ಮೇಲೆ ಯೇಸುಕ್ರಿಸ್ತರೇ ಆಡಳಿತ ನಡೆಸುವಂತೆ ಸ್ವರ್ಗಲೋಕದಲ್ಲಿ ಅವರನ್ನು ತಮ್ಮ ಬಲಗಡೆಯಲ್ಲಿ ಆಸೀನರಾಗಿಸಿದ್ದಾರೆ. ಹೀಗೆ ಇಹದಲ್ಲೂ ಪರದಲ್ಲೂ ಕೀರ್ತಿಗಳಿಸಿದವರೆಲ್ಲರಿಗಿಂತಲೂ ಯೇಸುಕ್ರಿಸ್ತರ ಮಹಿಮೆಯೇ ಸರ್ವಶ್ರೇಷ್ಠವಾದುದು. ದೇವರು ಸಮಸ್ತವನ್ನು ಯೇಸುಕ್ರಿಸ್ತರ ಪಾದದಡಿಯಲ್ಲಿರಿಸಿ, ಅವರನ್ನು ಧರ್ಮಸಭೆಯ ಶಿರಸ್ಸನ್ನಾಗಿ ನೇಮಿಸಿದ್ದಾರೆ. ಧರ್ಮಸಭೆಯೇ ಯೇಸುಕ್ರಿಸ್ತರ ದೇಹ. ಎಲ್ಲವನ್ನೂ ಎಲ್ಲಾ ವಿಧದಲ್ಲೂ ಪೂರೈಸುವಾತನಿಂದ ಅದು ಪರಿಪೂರ್ಣ ಉಳ್ಳದ್ದಾಗಿದೆ.

ಕೀರ್ತನೆ: 8: 2-3ಎಬಿ, 4-5, 6-7
ಶ್ಲೋಕ: ಒಡೆಯನಾಗಿಸಿದೆ ಪ್ರಭೂ ಮಾನವನನು ನಿನ್ನಯ ಕರಕೃತಿಗಳಿಗೆ.

ಶುಭಸಂದೇಶ: ಲೂಕ: 12: 8-12

"ಯಾವನು ಜನರ ಮುಂದೆ ಬಹಿರಂಗವಾಗಿ ತಾನು ನನ್ನವನೆಂದು ಒಪ್ಪಿಕೊಳ್ಳುತ್ತಾನೋ, ಅವನನ್ನು ನರಪುತ್ರನು ಸಹ ದೇವದೂತರ ಮುಂದೆ ತನ್ನವನೆಂದು ಒಪ್ಪಿಕೊಳ್ಳುವನು. ಆದರೆ ಯಾವನು ತಾನು ನನ್ನವನಲ್ಲ ಎಂದು ಜನರ ಮುಂದೆ ಬಹಿರಂಗವಾಗಿ ನಿರಾಕರಿಸುತ್ತಾನೋ, ಅವನನ್ನು ದೇವದೂತರ ಮುಂದೆ ನಿರಾಕರಿಸಲಾಗುವುದೆಂಬುದು ನಿಶ್ಚಯ. "ಯಾವನಾದರೂ ನರಪುತ್ರನ ವಿರುದ್ದ ಮಾತನಾಡಿದರೆ ಅವನಿಗೆ ಕ್ಷಮೆ ದೊರಕಬಹುದು. ಆದರೆ ಪವಿತ್ರಾತ್ಮ ಅವರನ್ನು ದೂಷಿಸುವವನಿಗೆ ಕ್ಷಮೆಯೇ ದೊರಕದು. "ಪ್ರಾರ್ಥನಾಮಂದಿರಗಳಲ್ಲಿ ಮತ್ತು ನ್ಯಾಯಾಧಿಪತಿಗಳ ಹಾಗೂ ದೇಶಾಧಿಕಾರಿಗಳ ಮುಂದೆ ನಿಮ್ಮನ್ನು ಎಳೆದೊಯ್ಯುವಾಗ ಹೇಗೆ ವಾದಿಸಿವುದು, ಏನು ಹೇಳುವುದು ಎಂದು ಚಿಂತಾಕ್ರಾಂತರಾಗಬೇಡಿ. ಏಕೆಂದರೆ, ನೀವು ಹೇಳತಕ್ಕದ್ದನ್ನು ಪವಿತ್ರಾತ್ಮ ಅದೇ ಗಳಿಗೆಯಲ್ಲಿ ನಿಮಗೆ ಕಲಿಸಿಕೊಡುವರು," ಎಂದರು.

19.10.2018

ಸಾಧಾರಣ ಕಾಲದ 28ನೇ - ಶುಕ್ರವಾರ

ಮೊದಲನೇ ವಾಚನ: ಎಫೆಸಿಯರಿಗೆ:  1:11-14

ದೈವಯೋಜನೆಯಂತೆಯೇ ಸಕಲವೂ ಸಂಭವಿಸುತ್ತದೆ. ದೇವರು ಆದಿಯಲ್ಲೇ ಸಂಕಲ್ಪಸಿದ್ದಂತೆ ತಮ್ಮ ಚಿತ್ತಕ್ಕನುಗುಣವಾಗಿ ಕ್ರಿಸ್ತಯೇಸುವಿನ ಅನ್ಯೋನ್ಯತೆಯಲ್ಲಿ ನಮ್ಮನ್ನು ತಮ್ಮವರನ್ನಾಗಿ ಆರಿಸಿಕೊಂಡರು. ಆದಕಾರಣ ಯೇಸುಕ್ರಿಸ್ತರಲ್ಲಿ ಮೊತ್ತಮೊದಲು ನಿರೀಕ್ಷೆಯನ್ನಿರಿಸಿದ ನಾವು ದೇವರ ಮಹಿಮೆಯನ್ನು ಸ್ತುತಿಸಿ ಹಾಡಬೇಕು. ನೀವು ಸಹ ಸತ್ಯ ವಾಕ್ಯವನ್ನು ಅಂದರೆ, ನಿಮಗೆ ಜೀವೋದ್ದಾರವನ್ನೀಯುವ ಶುಭಸಂದೇಶವನ್ನು ಕೇಳಿ ಯೇಸುಕ್ರಿಸ್ತರಲ್ಲಿ ವಿಶ್ವಾಸ ಇಟ್ಟಿರಿ. ದೇವರು ವಾಗ್ದಾನ ಮಾಡಿದ ಪವಿತ್ರಾತ್ಮ ಅವರಿಂದ ಮುದ್ರಿತರಾದಿರಿ. ಹೀಗೆ ದೇವರಿಗೆ ಸೇರಿದವರು ವಿಮೋಚನೆ ಹೊಂದಿ ಸ್ವರ್ಗೀಯ ಸ್ವಾಸ್ಥ್ಯಕ್ಕೆ ಬಾಧ್ಯರಾಗಲು ಆ ಪವಿತ್ರಾತ್ಮರೇ ಆಧಾರ. ಈ ಕಾರಣ ದೇವರಿಗೆ ಮಹಿಮೆ ಸಲ್ಲಲಿ.

ಕೀರ್ತನೆ: 33: 1, 2,4, 5, 12,13
ಶ್ಲೋಕ: ಸ್ವಜನರಾಗಿ ಪ್ರಭು ಆಯ್ದುಕೊಂಡ ಜನತೆ ಧನ್ಯ.

ಶುಭಸಂದೇಶ: ಲೂಕ: 12: 1-7

ಇಷ್ಟರಲ್ಲೇ, ಸಾವಿರಾರು ಜನರು ಒಬ್ಬರನ್ನೊಬ್ಬರು ಒತ್ತರಿಸುತ್ತಾ ಕಿಕ್ಕಿರಿದು ನೆರೆದಿದ್ದರು. ಯೇಸು ಮೊದಲು ಶಿಷ್ಯರನ್ನು ಉದ್ದೇಶಿಸಿ, "ಫರಿಸಾಯರ ’ಹುಳಿ ಹಿಟ್ಟಿನ’ ಬಗ್ಗೆ ಅಂದರೆ ಅವರ ಕಪಟತನದ ಬಗ್ಗೆ, ಎಚ್ಚರಿಕೆಯಿಂದಿರಿ. ಮುಚ್ಚುಮರೆಯಾಗಿರುವುದೆಲ್ಲಾ ಬಟ್ಟ ಬಯಲಾಗುವುದು; ಗುಟ್ಟಾಗಿರುವುದೆಲ್ಲಾ ರಟ್ಟಾಗುವುದು. ನೀವು ಕತ್ತಲಲ್ಲಿ ಹೇಳಿದ್ದೆಲ್ಲವನ್ನು ಬೆಳಕಿನಲ್ಲಿ ಕೇಳಲಾಗುವುದು; ಒಳಕೋಣೆಗಳಲ್ಲಿ ಕಿವಿಮಾತಾಗಿ ನೀವು ಹೇಳಿದ್ದೆಲ್ಲವನ್ನು ಮನೆಮಾಳಿಗೆಗಳ ಮೇಲಿಂದ ಸಾರಲಾಗುವುದು," ಎಂದರು. "ಗೆಳೆಯರೇ, ನನ್ನ ಮಾತಿಗೆ ಕಿವಿಗೊಡಿ: ದೇಹವನ್ನು ಕೊಂದುಹಾಕುವವರಿಗೆ ಭಯಪಡಬೇಡಿ. ಕೊಂದುಹಾಕಿದ ಮೇಲೆ ಹೆಚ್ಚೇನು ಮಾಡಲು ಅವರಿಂದಾಗದು. ನೀವು ಯಾರಿಗೆ ಭಯಪಡಬೇಕೆಂದು ಹೇಳುತ್ತೇನೆ, ಕೇಳಿ: ಸತ್ತ ಮೇಲೆ ನರಕದೊಳಕ್ಕೆ ದಬ್ಬಲು ಅಧಿಕಾರವುಳ್ಳಾತನಿಗೆ ಭಯಪಡಿ. ಹೌದು, ಆತನಿಗೆ ಭಯಪಡಿರೆಂದು ನಿಮಗೆ ಒತ್ತಿ ಹೇಳುತ್ತೇನೆ. ಎರಡು ಕಾಸಿಗೆ ಐದು ಗುಬ್ಬಚ್ಚಿಗಳನ್ನು ಮಾರುವುದಿಲ್ಲವೇ? ಆದರೂ ಅವುಗಳಲ್ಲಿ ಒಂದನ್ನೂ ದೇವರು ಮರೆಯುವುದಿಲ್ಲ. ಅಷ್ಟು ಮಾತ್ರವಲ್ಲ, ನಿಮ್ಮ ತಲೆಗೂದಲುಗಳು ಸಹ ಎಲ್ಲವೂ ಎಣಿಕೆಯಾಗಿವೆ. ಭಯಪಡಬೇಡಿ; ಅನೇಕ ಗುಬ್ಬಚ್ಚಿಗಳಿಗಿಂತ ನೀವು ಎಷ್ಟೋ ಮೌಲ್ಯವುಳ್ಳವರು," ಎಂದರು ಯೇಸುಸ್ವಾಮಿ.

18.10.2018

ಸಾಧಾರಣ ಕಾಲದ 29ನೇ - ಗುರುವಾರ

ಮೊದಲನೇ ವಾಚನ: 2 ತಿಮೊಥೇಯನಿಗೆ: 4: 10-177

ದೇವನು ಇಹ ಲೋಕದ ಆಶಾಪಾಶಗಳಿಗೆ ಒಳಗಾಗಿ ನನ್ನನ್ನು ಇಟ್ಟು ಥೆಸಲೋನಿಕಕ್ಕೆ ಹೋದನು. ಕ್ರೆಸ್ಕನು ಗಲಾತ್ಯಕ್ಕೂ ತೀತನು ದಲ್ಮಾತ್ಯಕ್ಕೂ ಹೋಗಿದ್ದಾರೆ. ಲೂಕನು ಮಾತ್ರ ನನ್ನ ಜೊತೆಯಿದ್ದಾನೆ. ನೀನು ಬರುವಾಗ ಮಾರ್ಕನನ್ನು ನಿನ್ನ ಸಂಗಡ ಕರೆದುಕೊಂಡು ಬಾ. ಅವನ ಸೇವೆ ನನಗೆ ಅಗತ್ಯವಾಗಿದೆ. ತುಖಿನನ್ನು ನಾನು ಎಫೆಸಕ್ಕೆ ಕಳುಹಿಸಿದ್ದೇನೆ. ನೀನು ಬರುವಾಗ ತ್ರೋವದಲ್ಲಿ ನಾನು ಕರ್ಪನ ಬಳಿ ಬಿಟ್ಟುಬಂದ ನನ್ನ ಮೇಲಂಗಿಯನ್ನು ತೆಗೆದುಕೊಂಡು ಬಾ. ನನ್ನ ಕೆಲವು ಪುಸ್ತಕಗಳನ್ನೂ ಮುಖ್ಯವಾಗಿ ಚರ್ಮದ ಸುರುಳಿಗಳನ್ನೂ ತಪ್ಪದೆ ತೆಗೆದುಕೊಂಡು ಬಾ. ಕಂಚುಗಾರನಾದ ಅಲೆಗ್ಸಾಂಡರನು ನನಗೆ ಬಹಳ ಕೇಡುಮಾಡಿದ್ದಾನೆ. ಪ್ರಭು ಅವನ ಕೃತ್ಯಗಳಿಗೆ ತಕ್ಕ ಶಿಕ್ಷೆಯನ್ನು ವಿಧಿಸುವರು. ನೀನು ಅವನ ವಿಷಯದಲ್ಲಿ ಎಚ್ಚರಿಕೆಯಿಂದಿರು. ನಮ್ಮ ಬೋಧನೆಗೆ ಅವನು ಕಟುವಾದ ವಿರೋಧಿ ಆಗಿದ್ದಾನೆ. ನಾನು ಮೊದಲನೆಯ ಸಾರಿ ವಿಚಾರಣೆಗೆ ಒಳಗಾಗಿ ಪ್ರತಿವಾದಿಸುತ್ತಿದ್ದಾಗ ಯಾರೂ ನನ್ನ ಪರವಾಗಿ ನಿಲ್ಲಲಿಲ್ಲ. ಎಲ್ಲರೂ ನನ್ನನ್ನು ಕೈ ಬಿಟ್ಟರು. ದೇವರು ಅವರನ್ನು ಕ್ಷಮಿಸಲಿ. ಆದರೆ ಪ್ರಭು ನನಗೆ ಬೆಂಬಲವಾಗಿ ನಿಂತರು. ನಾನು ಶುಭಸಂದೇಶವನ್ನು ಸಂಪೂರ್ಣವಾಗಿ ಸಾರುವಂತೆಯೂ ಅನ್ಯಧರ್ಮಿಯರೆಲ್ಲರು ಅದನ್ನು ಕೇಳುವಂತೆಯೂ ಮಾಡಿದರು. ಅಲ್ಲದೆ, ಸಿಂಹದ ಬಾಯಿಂದಲೂ ನನ್ನನ್ನು ಸಂರಕ್ಷಿಸಿದರು.

ಕೀರ್ತನೆ: 145: 10-11, 12-13, 17-18, 19
ಶ್ಲೋಕ: ಪ್ರಭೂ, ನಿನ್ನ ಭಕ್ತಸಮೂಹವು ಪ್ರಸಿದ್ದಪಡಿಸುವುದು ನಿನ್ನ ರಾಜ್ಯದ ಮಹತ್ವವನು.

ಶುಭಸಂದೇಶ: ಲೂಕ: 10: 1-9

ಇದಾದ ಮೇಲೆ, ಯೇಸುಸ್ವಾಮಿ ಇನ್ನೂ ಎಪ್ಪತ್ತೆರಡು ಮಂದಿಯನ್ನು ನೇಮಿಸಿ ಅವರನ್ನು ಇಬ್ಬಿಬ್ಬರನ್ನಾಗಿ ತಾವೇ ಹೋಗಲಿದ್ದ ಊರುಗಳಿಗೂ ಸ್ಥಳಗಳಿಗೂ ಮುಂದಾಗಿ ಕಳಿಸಿದರು. ಕಳುಹಿಸುವಾಗ ಅವರಿಗೆ ಹೇಳಿದ್ದೇನೆಂದರೆ, "ಬೆಳೆಯೇನೋ ಹೇರಳವಾಗಿದೆ; ಕೊಯ್ಲುಗಾರರೋ ವಿರಳ. ಆದುದರಿಂದ ಕೊಯ್ಲಿಗೆ ಆಳುಗಳನ್ನು ಕಳುಹಿಸುವಂತೆ ಬೆಳೆಯ  ಯಜಮಾನನನ್ನು ಬೇಡಿಕೊಳ್ಳಿ. ಹೋಗಿರಿ, ತೋಳಗಳ ನಡುವೆ ಕುರಿಮರಿಗಳನ್ನು ಬಿಟ್ಟಂತೆ ನಾನು ನಿಮ್ಮನ್ನು ಕಳುಹಿಸುತ್ತೇನೆ. ಹಣದ ಚೀಲವನ್ನಾಗಲಿ, ಜೋಳಿಗೆಯನ್ನಾಗಲಿ, ಪಾದರಕ್ಷೆಗಳನ್ನಾಗಲಿ ತೆಗೆದುಕೊಂಡು ಹೋಗದಿರಿ. ದಾರಿಯಲ್ಲಿ ಯಾರಿಗೂ ವಂದನೋಪಚಾರಗಳನ್ನು. ಮಾಡಿಕೊಂಡಿರಬೇಡಿ. ನೀವು ಯಾವ ಮನೆಗೆ ಹೋದರೂ, "ಈ ಮನೆಗೆ ಶಾಂತಿ," ಎಂದು ಆಶೀರ್ವಾದ ಮಾಡಿ. ಶಾಂತಿ ಪ್ರೀಯನು ಅಲ್ಲಿದ್ದರೆ ನಿಮ್ಮ ಆಶೀರ್ವಾದವು ಅವನ ಮೇಲೆ ನೆಲಸುವುದು. ಇಲ್ಲವಾದರೆ, ಅದು ನಿಮಗೆ ಹಿಂದಿರುಗುವುದು. ಮನೆಯಿಂದ ಮನೆಗೆ ಹೋಗದೆ ಆ ಮನೆಯಲ್ಲೇ ತಂಗಿದ್ದು, ಅಲ್ಲಿಯವರು ಕೊಡುವ ಅನ್ನಪಾನೀಯಗಳನ್ನು ಸೇವಿಸಿರಿ. ದುಡಿಮೆಗಾರನು ಕೂಲಿಗೆ ಬಾಧ್ಯನು. ನೀವು ಯಾವ ಊರಿಗೆ ಹೋದರೂ ಜನರು ನಿಮ್ಮನ್ನು ಸ್ವಾಗತಿಸಿದಾಗ, ಅವರು ಬಡಿಸಿದ್ದನ್ನು ಭುಜಿಸಿರಿ. ಅಲ್ಲಿರುವ ರೋಗಿಗಳನ್ನು ಗುಣಪಡಿಸಿರಿ. "ದೇವರ ಸಾಮ್ರಾಜ್ಯ ನಿಮ್ಮನ್ನು ಸಮೀಪಿಸಿದೆ," ಎಂದು ತಿಳಿಸಿರಿ ಎಂದರು.

17.10.2018

ಸಾಧಾರಣ ಕಾಲದ 28ನೇ - ಬುಧವಾರ

ಮೊದಲನೇ ವಾಚನ: ಗಲಾತ್ಯರಿಗೆ: 5: 18-25

ನೀವು ಪವಿತ್ರಾತ್ಮ ನಡೆಸುವ ಮಾರ್ಗದಲ್ಲಿ ನಡೆಯುವವರಾದರೆ, ಧರ್ಮಶಾಸ್ತ್ರದ ವಿಧಿನಿಯಮಗಳಿಗೆ ನೀವು ಅಧೀನರಲ್ಲ. ದೈಹಿಕ ವ್ಯಾಮೋಹದ ದುಷ್ಪರಿಣಾಮಗಳು ತಿಳಿದೇ ಇವೆ: ಹಾದರ, ಅಶುದ್ದತೆ, ಕಾಮುಕತನ, ವಿಗ್ರಹಾರಾಧನೆ, ಮಾಟಮಂತ್ರ, ಹಗೆತನ, ಜಗಳ, ಹೊಟ್ಟೆಕೆಚ್ಚು, ಕ್ರೋಧ, ಸ್ವಾರ್ಥಭೇದ, ಪಕ್ಷಪಾತ, ಮತ್ಸರ, ಕುಡುಕತನ, ದುಂದೌತಣ - ಇತ್ಯಾದಿಗಳು. ಇಂಥ ಕೃತ್ಯಗಳನ್ನು ಮಾಡುವವರು ದೇವರ ಸಾಮ್ರಾಜ್ಯಕ್ಕೆ ಬಾಧ್ಯಾರಲ್ಲ ಎಂದು ಈಗಾಗಲೇ ನಿಮ್ಮನ್ನು ಎಚ್ಚರಿಸಿದ್ದೇನೆ; ಈಗಲೂ ಎಚ್ಚರಿಸುತ್ತೇನೆ. ಪವಿತ್ರಾತ್ಮದತ್ತವಾದ ಸತ್ಫಲಗಳು ಯಾವುದೆಂದರೆ: ಪ್ರೀತಿ, ಆನಂದ, ಶಾಂತಿಸಮಧಾನ, ಸಹನೆ, ದಯೆ, ಸದ್ಗುಣ, ಪಾಮಾಣಿಕತೆ, ಸೌಜನ್ಯ, ಸಂಯಮ - ಇಂಥವುಗಳೇ. ಇವುಗಳನ್ನು ಯಾವ ಧರ್ಮಶಾಸ್ತ್ರವೂ ಅಕ್ಷೇಪಿಸುವುದಿಲ್ಲ. ಕ್ರಿಸ್ತಯೇಸುವಿಗೆ ಸೇರಿದ ಎಲ್ಲರೂ ತಮ್ಮ ದೈಹಿಕ ವ್ಯಾಮೋಹವನ್ನು, ಅದರ ಆಶಾಪಾಶಗಳ ಹಾಗೂ ದುರಿಚ್ಚೆಗಳ ಸಮೇತ ಶಿಲುಬೆಗೆ ಜಡಿದುಬಿಟ್ಟಿದ್ದಾರೆ. ಪವಿತ್ರಾತ್ಮ ನಮ್ಮ ಜೀವಾಳವಾಗಿದ್ದರೆ, ಅವರೇ ನಮ್ಮ ಜೀವನದ ಮಾರ್ಗದರ್ಶಿಯೂ ಆಗಿರಬೇಕು.


ಕೀರ್ತನೆ: 1: 1-2, 3, 4, 6
ಶ್ಲೋಕ: ನಾನೇ ಜಗಜ್ಯೋತಿ, ನನ್ನನ್ನು ಹಿಂಬಾಲಿಸುವವನು ಕತ್ತಲಲ್ಲಿ ನಡೆಯುವುದಿಲ್ಲ; ಜೀವದಾಯಕ ಜ್ಯೋತಿ ಅವನಲ್ಲಿರುತ್ತದೆ.

ಶುಭಸಂದೇಶ: ಲೂಕ: 11: -42-46

"ಫರಿಸಾಯರೇ, ನಿಮಗೆ ಧಿಕ್ಕಾರ! ನೀವು ಪುದಿನ, ಸದಾಪು ಮುಂತಾದ ಪಲ್ಯಗಳಲ್ಲೂ ಹತ್ತರಲ್ಲಿ  ಒಂದು ಪಾಲು ಸಲ್ಲಿಸುತ್ತೀರಿ, ಸರಿ. ಆದರೆ ನ್ಯಾಯನೀತಿಯನ್ನೂ ದೇವರ ಪ್ರೀತಿಯನ್ನೂ ಬದಿಗೊತ್ತಿದ್ದೀರಿ. ನೀವು ಅವುಗಳನ್ನು ಅಲಕ್ಷ್ಯ ಮಾಡದೆ, ಇವುಗಳನ್ನು ಅನುಷ್ಠಾನಕ್ಕೆ ತರಬೇಕಾಗಿತ್ತು. "ಫರಿಸಾಯರೇ, ನಿಮಗೆ ಧಿಕ್ಕಾರ! ಪ್ರಾರ್ಥನಾ ಮಂದಿರಗಳಲ್ಲಿ ಪ್ರಧಾನ ಆಸನಗಳನ್ನೂ ಪೇಟೆ ಬೀದಿಗಳಲ್ಲಿ ವಂದನೋಪಚಾರಗಳನ್ನೂ ಅಪೇಕ್ಷಿಸುತ್ತೀರಿ. ಅಯ್ಯೋ, ನಿಮಗೆ ಧಿಕ್ಕಾರ! ನೀವು ನೆಲಸಮವಾದ ಸಮಾಧಿಗಳಂತೆ ಇದ್ದೀರಿ. ಸಮಾಧಿಗಳೆಂದು ತಿಳಿಯದೆಯೆ ಜನರು ಅವುಗಳ ಮೇಲೆ ನಡೆದಾಡುತ್ತಾರೆ," ಎಂದರು. ಇದನ್ನು ಕೇಳಿದ ಒಬ್ಬ ಧರ್ಮಶಾಸ್ತ್ರಜ್ನನು, "ಭೋಧಕರೇ, ನೀವು ಹೀಗೆ ಮಾತನಾಡುವುದರಿಂದ ನಮ್ಮನ್ನೂ ಖಂಡಿಸಿದಂತಾಯಿತು," ಎಂದನು. ಅದಕ್ಕೆ ಯೇಸು, "ಶಾಸ್ತ್ರಜ್ನರೇ, ನಿಮಗೂ ಧಿಕ್ಕಾರ! ಹೊರಲಾಗದ ಹೊರೆಗಳನ್ನು ನೀವು ಜನರ ಮೇಲೆ ಹೇರುತ್ತೀರಿ; ನೀವಾದರೋ ನಿಮ್ಮ ಕಿರು ಬೆರಳಿನಿಂದ ಕೂಡ ಅವುಗಳನ್ನು ಮುಟ್ಟುವುದಿಲ್ಲ," ಎಂದರು.

16.10.2018

ಸಾಧಾರಣ ಕಾಲದ 28ನೇ - ಮಂಗಳವಾರ

ಮೊದಲನೇ ವಾಚನ: ಗಲಾತ್ಯರಿಗೆ: 5: 1-6

ನಾವು ಮುಕ್ತ ಸ್ವಾತಂತ್ರ್ಯದಿಂದ ಬಾಳಬೇಕೆಂದು ಕ್ರಿಸ್ತಯೇಸು ನಮ್ಮನ್ನು ಬಿಡುಗಡೆ ಮಾಡಿದರು. ಆದ್ದರಿಂದ ದೃಢವಾಗಿರಿ. ಗುಲಾಮಗಿರಿಯ ನೊಗಕ್ಕೆ ಪುನಃ ಕೊರಳನ್ನು ಒಡ್ಡದಿರಿ. ಪೌಲನಾದ ನಾನು ಹೇಳುವುದನ್ನು ಕೇಳಿ: ನೀವು ಸುನ್ನತಿ ಮಾಡಿಸಿಕೊಂಡರೆ ಕ್ರಿಸ್ತ ಯೇಸುವಿನಿಂದ ನಿಮಗೆ ಯಾವ ಪ್ರಯೋಜನವೂ ಆಗುವುದಿಲ್ಲ. ಸುನ್ನತಿ ಮಾಡಿಸಿಕೊಳ್ಳುವ ಪ್ರತಿಯೊಬ್ಬನೂ ಇಡೀ ಧರ್ಮಶಾಸ್ತ್ರದ ವಿಧಿನಿಯಮಗಳನ್ನು ಅನುಸರಿಸಲು ಬದ್ದನಾಗಿದ್ದಾನೆ ಎಂದು ಪುನಃ ನಿಮಗೆ ನಾನು ಒತ್ತಿ ಹೇಳುತ್ತೇನೆ. ಧರ್ಮಶಾಸ್ತ್ರದ ವಿಧಿನಿಯಮಗಳನ್ನು ಅನುಸರಿಸುವುದರ ಮೂಲಕವೇ ದೇವರೊಡನೆ ಸತ್ಸಂಬಂಧ ಪಡೆಯಬೇಕೆಂದಿರುವ ನೀವು ಕ್ರಿಸ್ತಯೇಸುವಿನಿಂದ ಬೇರ್ಪಟ್ಟಿದ್ದೀರಿ. ದೈವಾನುಗ್ರಹದಿಂದ ದೂರವಾಗಿದ್ದೀರಿ. ನಾವಾದರೋ ಪವಿತ್ರಾತ್ಮರ ಮುಖಾಂತರ ವಿಶ್ವಾಸದಿಂದ ದೇವರೊಂದಿಗೆ ಸತ್ಸಂಬಂಧವನ್ನು ಹೊಂದುತ್ತೇವೆಂಬ ನಿರೀಕ್ಷೆ ಉಳ್ಳವರಾಗಿದ್ದೇವೆ; ಈ ನಿರೀಕ್ಷೆ ಸಫಲವಾಗುವುದನ್ನು ಎದುರುನೋಡುತ್ತಿದ್ದೇವೆ. ಕ್ರಿಸ್ತ ಯೇಸುವಿನಲ್ಲಿ ಬಾಳುವವರಿಗೆ ಸುನ್ನತಿ ಮಾಡಿಸಿಕೊಳ್ಳುವುದೋ ಅಥವಾ ಮಾಡಿಸಿಕೊಳ್ಳದಿರುವುದೋ ಮುಖ್ಯವಲ್ಲ. ಪ್ರೀತಿಯಿಂದ ಕಾರ್ಯ ಎಸಗುವ ವಿಶ್ವಾಸವೇ ಪ್ರಮುಖವಾದುದು.


ಕೀರ್ತನೆ: 119: 41, 43, 44, 45, 47, 48
ಶ್ಲೋಕ: ದೊರಕಲಿ ಪ್ರಭೂ ನನಗೆ, ನಿನ್ನ ಕರುಣೆ.

ಶುಭಸಂದೇಶ: ಲೂಕ: 11: 37-41

ಯೇಸುಸ್ವಾಮಿ ತಮ್ಮ ಬೋಧನೆಯನ್ನು ಮುಗಿಸಿದಾಗ, ಫರಿಸಾಯನೊಬ್ಬನು ಅವರನ್ನು ಊಟಕ್ಕೆ ಆಮಂತ್ರಿಸಿದನು. ಯೇಸು ಒಳಕ್ಕೆ ಊಟಕ್ಕೆ ಕುಳಿತುಕೊಂಡರು. ಊಟಕ್ಕೆ ಮುಂಚೆ ಅವರು ಕೈ ತೊಳೆಯದೆ ಹೋದುದನ್ನು ಕಂಡು ಫರಿಸಾಯನು ಚಕಿತನಾದನು. ಆಗ ಯೇಸು, "ಫರಿಸಾಯರಾದ ನೀವು ಲೋಟ ಹಾಗೂ ಊಟದ ತಟ್ಟೆಗಳ ಹೊರಭಾಗವನ್ನು ಶುಚಿ ಮಾಡುತ್ತೀರಿ; ಆದರೆ ನಿಮ್ಮ ಒಳಭಾಗವು ಲೋಭದಿಂದಲೂ ಕೆಡುಕಿನಿಂದಲೂ ತುಂಬಿದೆ. ಮೂರ್ಖರೇ, ಹೊರಭಾಗವನ್ನು ಮಾಡಿದಾತನು ಒಳಭಾಗವನ್ನು ಮಾಡಲಿಲ್ಲವೇ? ನಿಮ್ಮ ತಟ್ಟೆ ಲೋಟಗಳಲ್ಲಿ ಇರುವುದನ್ನು ಮೊಟ್ಟ ಮೊದಲು ದಾನಮಾಡಿರಿ. ಆಗ ಸಮಸ್ತವೂ ನಿಮಗೆ ಶುದ್ದಿಯಾಗಿರುವುದು," ಎಂದರು.

15.10.2018

ಸಾಧಾರಣ ಕಾಲದ 28ನೇ - ಸೋಮವಾರ

ಮೊದಲನೇ ವಾಚನ: ಗಲಾತ್ಯರಿಗೆ: 4: 22-24, 26-27, 31-5:1

ಅಬ್ರಹಾಮನಿಗೆ ಇಬ್ಬರು ಮಕ್ಕಳಿದ್ದರು: ಒಬ್ಬನು ದಾಸಿಯಿಂದ ಹುಟ್ಟಿದವನು; ಇನ್ನೊಬ್ಬನು ಧರ್ಮಪತ್ನಿಯಿಂದ ಹುಟ್ಟಿದವನು. ದಾಸಿಯ ಮಗ ಪ್ರಕೃತಿ ಸಹಜವಾಗಿ ಹುಟ್ಟಿದವನು; ಧರ್ಮಪತ್ನಿಯ ಮಗನಾದರೋ ವಾಗ್ದಾನದ ಫಲವಾಗಿ ಹುಟ್ಟಿದವನು. ಇದೊಂದು ಅಲಂಕಾರ ರೂಪ. ಆ ಇಬ್ಬರು ಸ್ತ್ರಿಯರು ಎರಡು ಒಡಂಬಡಿಕೆಗಳಿಗೆ ಸದೃಶ್ಯರಾಗಿದ್ದಾರೆ. ಒಂದು, ಸೀನಾಯ್ ಪರ್ವತದಲ್ಲಿ ಮಾಡಲಾದ ಒಡಂಬಡಿಕೆ; ಅದು ದಾಸತ್ವಕ್ಕೆ ಮಕ್ಕಳನ್ನು ಹೆರುತ್ತದೆ. ಅದನ್ನು ಸೂಚಿಸುವವಳೇ ದಾಸಿ ಹಾಗರಳು. ಆದರೆ ಸ್ವರ್ಗೀಯ ಜೆರುಸಲೇಮ್ ದಾಸಿ ಅಲ್ಲ. ಸ್ವತಂತ್ರಳು, ಈಕೆಯೇ ನಮ್ಮ ತಾಯಿ. "ಸಂತಾನವಿಲ್ಲದ ಸ್ತ್ರಿಯೇ ಸಂತೋಷಿಸು ಪ್ರಸವ ವೇದನೆಯನರಿಯದವಳೇ, ಹರ್ಷೋದ್ಗಾರ ಮಾಡು ಗಂಡನುಳ್ಳವಳಿಗಿಂತ ಕೈಬಿಟ್ಟವಳ ಸಂತಾನ ಹೆಚ್ಚು," ಎಂದು ಪವಿತ್ರಗ್ರಂಥದಲ್ಲೇ ಲಿಖಿತವಾಗಿದೆ. ಹೌದು, ಪ್ರಿಯ ಸಹೋದರರೇ, ನಾವು ದಾಸಿಯ ಮಕ್ಕಳಲ್ಲ, ಧರ್ಮಪತ್ನಿಯ ಮಕ್ಕಳು. ನಾವು ಮುಕ್ತ ಸ್ವಾತಂತ್ರ್ಯದಿಂದ ಬಾಳಬೇಕೆಂದು ಕ್ರಿಸ್ತ ಯೇಸು ನಮ್ಮನ್ನು ಬಿಡುಗಡೆ ಮಾಡಿದರು. ಆದ್ದರಿಂದ ದೃಢವಾಗಿರಿ. ಗುಲಾಮಗಿರಿಯ ನೊಗಕ್ಕೆ ಪುನಃ ಕೊರಳನ್ನು ಒಡ್ಡದಿರಿ. 

ಕೀರ್ತನೆ: 113: 1ಬಿ-2, 3-4, 5ಎ, 6-7
ಶ್ಲೋಕ: ಪ್ರಭುವಿನ ಸಿರಿನಾಮವು ಪಾವನವಾಗಲಿ ಎಂದೆಂದಿಗು.

ಶುಭಸಂದೇಶ: ಲೂಕ: 11: 29-32

ಜನರ ಗುಂಪು ಹೆಚ್ಚುತ್ತಿದ್ದಾಗ ಯೇಸುಸ್ವಾಮಿ ಹೀಗೆಂದು ಮುಂದುವರಿಸಿದರು: "ಈ ಪೀಳಿಗೆ ಕೆಟ್ಟ ಪೀಳಿಗೆ. ಇದು ಅದ್ಭುತ ಕಾರ್ಯವನ್ನು ಸಂಕೇತವಾಗಿ ಕೋರುತ್ತದೆ. ಪ್ರವಾದಿ ಯೋನನ ಸಂಕೇತವೇ ಹೊರತು ಬೇರೆ ಯಾವ ಸಂಕೇತವೂ ಇದಕ್ಕೆ ದೊರಕದು. ಹೇಗೆಂದರೆ, ನಿನಿವೆ ನಗರದ ಜನರಿಗೆ ಪ್ರವಾದಿ ಯೋನನು ಸಂಕೇತವಾದಂತೆ ನರಪುತ್ರನು ಈ ಸಂತತಿಗೆ ಸಂಕೇತವಾಗಿರುವನು. "ದೈವ ತೀರ್ಪಿನ ದಿನ ದಕ್ಷಿಣ ದೇಶದ ರಾಣಿ ಈ ಪೀಳಿಗೆಗೆ ಎದುರಾಗಿ ನಿಂತುಕೊಂಡು ಇವರನ್ನು ಅಪರಾಧಿಗಳೆಂದು ತೋರಿಸುವಳು. ಆಕೆ ಸೊಲೊಮೋನನ ಜ್ಞಾನೋಕ್ತಿಗಳನ್ನು ಕೇಳುವುದಕ್ಕಾಗಿ ದೇಶದ ಕಟ್ಟಕಡೆಯಿಂದ ಬಂದಳು, ಆದರೆ ಸೊಲೊಮೋನನಿಗಿಂತಲೂ ಮೇಲಾದವನು ಇಗೋ, ಇಲ್ಲಿದ್ದಾನೆ. ತೀರ್ಪಿನ ದಿನ ನಿನಿವೆ ನಗರದವರು  ಈ ಪೀಳಿಗೆಗೆ ಎದುರಾಗಿ ನಿಂತು ಇದನ್ನು ಅಪರಾಧಿ ಎಂದು ತೋರಿಸುವರು. ಏಕೆಂದರೆ, ಪ್ರವಾದಿ ಯೋನನ ಬೋಧನೆಯನ್ನು ಕೇಳಿ ಪಶ್ಚಾತ್ತಾಪಪಟ್ಟು ಅವರು ದೇವರಿಗೆ ಅಭಿಮುಖರಾದರು. ಆದರೆ ಪ್ರವಾದಿ ಯೋನನಿಗಿಂತಲೂ ಮೇಲಾದವನು ಇಗೋ, ಇಲ್ಲಿದ್ದಾನೆ."

14.10.2018

ವರ್ಷದ 28ನೆಯ ಭಾನುವಾರ

ಮೊದಲನೆಯ ವಾಚನ
ಸುಜ್ಞಾನ ಗ್ರಂಥದಿಂದ ವಾಚನ                                                                          7: 7-11
ಜ್ಞಾನದ ಮುಂದೆ ಸಿರಿಸಂಪತ್ತು ಶೂನ್ಯವೆಂದು ಅರಿತುಕೊಂಡೆ.
ಇಂತಿರಲು ನಾನು ಮಾಡಿದೆ ಪ್ರಾರ್ಥನೆ, ಕೊಡಲಾಯಿತು ನನಗೆ ತಿಳುವಳಿಕೆ
ನಾನು ಮೊರೆಯಿಟ್ಟೆ ದೇವರಿಗೆ, ಸುಜ್ಞಾನವೆಂಬ ಚೈತನ್ಯೆ ಬಂದಳು ನನ್ನ ಬಳಿಗೆ.
ರಾಜದಂಡ, ಸಿಂಹಾಸನಕ್ಕೂ ಮಿಗಿಲಾಗಿ ಅವಳನ್ನು ಇಷ್ಟಪಟ್ಟೆ
ಅವಳ ಮುಂದೆ ಸಿರಿಸಂಪತ್ತು ಶೂನ್ಯವೆಂದು ಅರಿತುಕೊಂಡೆ.
ಅವಳ ಮುಂದೆ, ಭೂಮಿಯ ಚಿನ್ನವೆಲ್ಲ ಉಸುಬಿನ ಕಣದಂತೆ,
ಅಮೂಲ್ಯ ರತ್ನವು ಸಾಟಿಯಲ್ಲ, ಬೆಳ್ಳಿಯೂ ಮಣ್ಣಿನ ಮುದ್ದೆಯಂತೆ.
ಆರೋಗ್ಯ ಸೌಂದರ್ಯಗಳಿಗಿಂತ ಹೆಚ್ಚಾಗಿ ಅವಳನ್ನು ಪ್ರೀತಿಸಿದೆ
ಬೆಳಕಿಗಿಂತ ಅವಳ ಕುಂದದ ಕಾಂತಿಯನ್ನೇ ಆಯ್ದುಕೊಂಡೆ.
ಅವಳೊಂದಿಗೆ ಉತ್ತಮ ವಸ್ತುಗಳೆಲ್ಲವೂ ಬಂದವು
ಅವಳ ಕೈಯಲ್ಲಿತ್ತು ಅಗಣಿತವಾದ ಐಶ್ವರ್ಯವು.
                                                                                                ದೇವರ ವಾಕ್ಯವಿದು
ಕೀರ್ತನೆ                                                                                       90:12-17  14
ಶ್ಲೋಕ : ಉದಯದಲಿ ತೋಯಿಸೆಮ್ಮನು ನಿನ್ನ ಕೃಪೆಯಿಂದ |


ಎರಡನೆಯ ವಾಚನ
ಹಿಬ್ರಿಯರಿಗೆ ಬರೆದ ಪತ್ರದಿಂದ ವಾಚನ                                                                4:12-13

ದೇವರ ವಾಕ್ಯ ಹೃದಯದ ಆಶೆ ಆಲೋಚನೆಗಳನ್ನು ವಿವೇಚಿಸುವಂತದ್ದು.” ದೇವರ ವಾಕ್ಯ ಜೀವಂತವಾದುದು, ಕ್ರಿಯಾತ್ಮಕವಾದುದುಎಂಥ ಇಬ್ಬಾಯಿ ಕತ್ತಿಗಿಂತಲೂ ಹರಿತವಾದುದುಪ್ರಾಣ ಮತ್ತು ಆತ್ಮಗಳ, ಕೀಲು 
ಮತ್ತು ಮಜ್ಜೆಗಳ ಭೇದವನ್ನು ಛೇದಿಸುವಂತಾದ್ದು ;
ಹೃದಯದ ಆಶೆ ಆಲೋಚನೆಗಳನ್ನು ವಿವೇಚಿಸುವಂತಾದ್ದು.
ನಾವು ಯಾರಿಗೆ ಲೆಕ್ಕ ಒಪ್ಪಿಸಬೇಕಾಗಿದೆಯೋ,
ಅವರ ಕಣ್ಣಿಗೆ ಮುಚ್ಚುಮರೆಯಾದುದು ಯಾವುದೂ ಇಲ್ಲ.
ಅವರ ದೃಷ್ಟಿಗೆ ಎಲ್ಲವೂ ಬಟ್ಟಬಯಲು.
- ದೇವರ ವಾಕ್ಯವಿದು.

ಘೋಷಣೆ                                                                                     ಯೊವಾನ್ನ 8:12
ಅಲ್ಲೆಲೂಯ, ಅಲ್ಲೆಲೂಯ !
ನಾನೇ ಜಗಜ್ಯೋತಿ; ನನ್ನನ್ನು ಹಿಂಬಾಲಿಸುವವನು ಕತ್ತಲಲ್ಲಿ ನಡೆಯುವುದಿಲ್ಲ;
ಜೀವದಾಯಕ ಜ್ಯೋತಿ ಅವನಲ್ಲಿರುತ್ತದೆ.
ಅಲ್ಲೆಲೂಯ !


ಶುಭಸಂದೇಶ
ಸಂತ ಮಾರ್ಕನು ಬರೆದ ಶುಭಸಂದೇಶದಿಂದ ವಾಚನ                                       10:17-30
ನಿನ್ನ ಆಸ್ತಿಯನ್ನೆಲ್ಲಾ ಮಾರಿ ಬಂದು, ನನ್ನನ್ನು ಹಿಂಬಾಲಿಸು.
ಯೇಸುಸ್ವಾಮಿ ಪ್ರಯಾಣವನ್ನು ಮುಂದುವರಿಸಿದರು. ದಾರಿಯಲ್ಲೊಬ್ಬನು ಅವರ ಬಳಿಗೆ ಓಡಿ ಬಂದು ಮೊಣಕಾಲೂರಿ, ಒಳ್ಳೆಯ ಗುರುವೇ, ಅಮರ ಜೀವವು ನನಗೆ ಪ್ರಾಪ್ತಿಯಾಗಬೇಕಾದರೆ ನಾನೇನು ಮಾಡಬೇಕು? ಎಂದು ಕೇಳಿದನು. ನೀನು ನನ್ನನ್ನು ಒಳ್ಳೆಯವನೆಂದು ಕರೆಯುವುದೇಕೆ? ದೇವರೊಬ್ಬರನ್ನು ಬಿಟ್ಟರೆ ಬೇರೆ ಯಾರು ಒಳ್ಳೆಯವರಲ್ಲ. ದೈವಾಜ್ಞೆಗಳು ನಿನಗೆ ತಿಳಿದೇ ಇವೆ. ನರಹತ್ಯೆ ಮಾಡಬೇಡ, ವ್ಯಭಿಚಾರ ಮಾಡಬೇಡ, ಕದಿಯಬೇಡ, ಸುಳ್ಳುಸಾಕ್ಷಿ ಹೇಳಬೇಡ, ಮೋಸಮಾಡಬೇಡ, ನಿನ್ನ ತಂದೆತಾಯಿಗಳನ್ನು ಗೌರವಿಸು”, ಎಂದು ಯೇಸು ಉತ್ತರವಿತ್ತರು. ಅದಕ್ಕೆ ಅವನು, “ಗುರುದೇವಾ, ನಾನು ಬಾಲ್ಯದಿಂದಲೇ ಇವೆಲ್ಲವನ್ನೂ ಅನುಸರಿಸಿಕೊಂಡು ಬಂದಿದ್ದೇನೆ,” ಎಂದು ಹೇಳಿದನು. ಆಗ ಯೇಸು ಅವನನ್ನು ಮಮತೆಯಿಂದ ಈಕ್ಷಿಸಿ, “ನೀನು ಮಾಡಬೇಕಾದ ಕಾರ್ಯವೊಂದು ಬಾಕಿ ಇದೆ. ಹೋಗು, ನಿನ್ನ ಆಸ್ತಿಪಾಸ್ತಿಯನ್ನೆಲ್ಲಾ ಮಾರಿ ಬಡಬಗ್ಗರಿಗೆ ದಾನಮಾಡು; ಸ್ವರ್ಗದಲ್ಲಿ ನಿನಗೆ ಸಂಪತ್ತು ಇರುತ್ತದೆ. ನೀನು ಬಂದು ನನ್ನನ್ನು ಹಿಂಬಾಲಿಸು,” ಎಂದರು. ಯೇಸುವಿನ ಈ ಮಾತನ್ನು ಕೇಳುತ್ತಲೇ ಅವನ ಮುಖ ಪೆಚ್ಚಾಯಿತು. ಅವನು ಖಿನ್ನಮನಸ್ಕನಾಗಿ ಅಲ್ಲಿಂದ ಹೊರಟು ಹೋದನು. ಏಕೆಂದರೆ ಅವನಿಗೆ ಅಪಾರ ಆಸ್ತಿಯಿತ್ತು. ಆಗ ಯೇಸುಸ್ವಾಮಿ ಸುತ್ತಲೂ ನೋಡಿ, ತಮ್ಮ ಶಿಷ್ಯರನ್ನು ಉದ್ದೇಶಿಸಿ, “ಐಶ್ವರ್ಯವುಳ್ಳವರಿಗೆ ದೇವರ ಸಾಮ್ರಾಜ್ಯವನ್ನು ಪ್ರವೇಶಿಸುವುದು ಎಷ್ಟೊಂದು ಕಷ್ಟ!” ಎಂದರು. ಅವರ ಈ ಮಾತನ್ನು ಕೇಳಿದ ಶಿಷ್ಯರು ಬೆರಗಾದರು. ಯೇಸು ಪುನಃ ಅವರಿಗೆ, “ಮಕ್ಕಳೇ, ದೇವರ ಸಾಮ್ರಾಜ್ಯವನ್ನು ಸೇರುವುದು ಎಷ್ಟು ಕಷ್ಟ! ಐಶ್ವರ್ಯವಂತನು ದೇವರ ಸಾಮ್ರಾಜ್ಯವನ್ನು ಸೇರುವುದಕ್ಕಿಂತಲೂ ಒಂಟೆಯ ಸೂಜಿಗಣ್ಣಲ್ಲಿ ನುಸುಳುವುದು ಸುಲಭ.” ಎಂದರು. ಇದನ್ನು ಕೇಳಿದ ಮೇಲಂತೂ ಶಿಷ್ಯರಿಗೆ ಅಪರಿಮಿತ ಆಶ್ಚರ್ಯವಾಯಿತು. “ಹಾಗಾದರೆ ಯಾರು ತಾನೆ ಜೀವೋದ್ಧಾರ ಹೊಂದಲು ಸಾಧ್ಯ?” ಎಂದು ತಮ್ಮತಮ್ಮೊಳಗೇ ಮಾತನಾಡಿಕೊಂಡರು. ಯೇಸು ಅವರನ್ನು ನಿಟ್ಟಿಸಿ ನೋಡಿ, “ಮನುಷ್ಯರಿಗೆ ಇದು ಅಸಾಧ್ಯ, ದೇವರಿಗಲ್ಲ. ದೇವರಿಗೆ ಎಲ್ಲವೂ ಸಾಧ್ಯ,” ಎಂದರು. ಆಗ ಪೇತ್ರನು ಮುಂದೆ ಬಂದು, “ನೋಡಿ, ನಾವು ಎಲ್ಲವನ್ನೂ ಬಿಟ್ಟುಬಿಟ್ಟು ನಿಮ್ಮನ್ನು ಹಿಂಬಾಲಿಸಿದ್ದೇವಲ್ಲ,” ಎಂದನು. ಆಗ ಯೇಸು, “ನಾನು ನಿಶ್ಚಯವಾಗಿ ಹೇಳುತ್ತೇನೆ: ಯಾರಾದರೂ ನನ್ನ ನಿಮಿತ್ತ ಹಾಗೂ ಶುಭಸಂದೇಶದ ನಿಮಿತ್ತ ಮನೆಯನ್ನಾಗಲಿ, ಅಣ್ಣತಮ್ಮಂದಿರನ್ನಾಗಲಿ, ಅಕ್ಕತಂಗಿಯರನ್ನಾಗಲಿ, ತಾಯಿಯನ್ನಾಗಲಿ, ತಂದೆಯನ್ನಾಗಲಿ, ಮಕ್ಕಳನ್ನಾಗಲಿ, ಹೊಲಗದ್ದೆಗಳನ್ನಾಗಲಿ ತ್ಯಜಿಸುತ್ತಾನೋ ಅವನು, ಈ ಕಾಲದಲ್ಲೇ ಮನೆ, ಅಣ್ಣತಮ್ಮ, ಅಕ್ಕತಂಗಿ, ತಾಯಿ, ಮಕ್ಕಳು, ಹೊಲಗದ್ದೆ ಇವೆಲ್ಲವನ್ನೂ ನೂರ್ಮಡಿಯಷ್ಟು ಪಡೆಯುವನು. ಇವುಗಳೊಂದಿಗೆ ಹಿಂಸೆಯನ್ನೂ ಅನುಭವಿಸಬೇಕಾಗುವುದು’ ಅದಲ್ಲದೆ ಮುಂದಿನ ಲೋಕದಲ್ಲಿ ಅಮರ ಜೀವವನ್ನು ಪಡೆಯುವನು,” ಎಂದರು. 
ಪ್ರಭು ಕ್ರಿಸ್ತರ ಶುಭಸಂದೇಶವಿದು