01.07.2026 - "ಓ ದೇವರ ಪುತ್ರನೇ, ನಿಮಗೇಕೆ ನಮ್ಮ ಗೊಡವೆ?

 ಮೊದಲನೇ ವಾಚನ: ಆದಿಕಾಂಡ 21:5, 8-20

ಇಸಾಕನು ಹುಟ್ಟಿದಾಗ ಅಬ್ರಹಾಮನಿಗೆ ನೂರು ವರ್ಷವಾಗಿತ್ತು. ಕ್ರಮೇಣ ಆ ಮಗು ಬೆಳೆದು ಹಾಲು ಕುಡಿಯುವುದನ್ನು ಬಿಟ್ಟಿತು. ಇಸಾಕನು ಮೊಲೆ ಬಿಟ್ಟ ಆ ದಿನದಂದು ಅಬ್ರಹಾಮನು ದೊಡ್ಡ ಔತಣವನ್ನು ಏರ್ಪಡಿಸಿದ್ದನು. ಈಜಿಪ್ಟಿನ ಹಾಗರಳಿಂದ ಅಬ್ರಹಾಮನಿಗೆ ಹುಟ್ಟಿದ ಹುಡುಗನು ತನ್ನ ಮಗ ಇಸಾಕನೊಡನೆ ನಕ್ಕುನಲಿದಾಡುವುದನ್ನು ಸಾರಳು ಕಂಡಳು. ಆಕೆ ಅಬ್ರಹಾಮನಿಗೆ, “ಈ ದಾಸಿಯನ್ನೂ ಅವಳ ಮಗನನ್ನೂ ಮನೆಯಿಂದ ಕಳುಹಿಸಿಬಿಡಿ. ದಾಸಿಯ ಮಗನು ನನ್ನ ಮಗನೊಂದಿಗೆ ಹಕ್ಕು ಬಾಧ್ಯಸ್ಥನಾಗಬಾರದು,” ಎಂದು ಹೇಳಿದಳು. ಈ ಮಾತನ್ನು ಕೇಳಿ ಅಬ್ರಹಾಮನಿಗೆ ಬಹು ದುಃಖವಾಯಿತು. ಕಾರಣ - ಆ ದಾಸಿಯ ಮಗನೂ ಅವನ ಸ್ವಂತ ಮಗನಾಗಿದ್ದನು. ಆದರೆ ದೇವರು, ಅಬ್ರಹಾಮನಿಗೆ, “ನಿನ್ನ ಮಗನ ಹಾಗೂ ದಾಸಿಯ ಬಗ್ಗೆ ನಿನಗೆ ಚಿಂತೆಬೇಡ; ಸಾರಳು ಹೇಳಿದಂತೆಯೇ ಮಾಡು, ಏಕೆಂದರೆ ಇಸಾಕನಿಂದ ಹುಟ್ಟುವವರೇ ನಿನ್ನ ಸಂತತಿ ಎನಿಸಿಕೊಳ್ಳುವರು. ಈ ದಾಸಿಯ ಮಗನು ನಿನ್ನಿಂದ ಹುಟ್ಟಿದವನಾದ್ದರಿಂದ ಅವನಿಂದಲೂ ಒಂದು ರಾಷ್ಟ್ರ ಉತ್ಪತ್ತಿಯಾಗುವಂತೆ ಮಾಡುತ್ತೇನೆ,” ಎಂದು ಹೇಳಿದರು. ಮಾರನೆಯ ದಿನ ಬೆಳಿಗ್ಗೆ ಅಬ್ರಹಾಮನು ಹಾಗರಳಿಗೆ ಬುತ್ತಿಯನ್ನೂ ನೀರಿನ ತಿತ್ತಿಯನ್ನೂ ಕೊಟ್ಟು, ಹೆಗಲ ಮೇಲೆ ಮಗುವನ್ನು ಕೂರಿಸಿ ಕಳುಹಿಸಿಬಿಟ್ಟನು. ಅವಳು ಹೊರಟು ಬೇರ್ಷೆಬದ ಕಾಡಿನಲ್ಲಿ ಅಲೆಯುತ್ತಿದ್ದಳು. ತಿತ್ತಿಯಲ್ಲಿದ್ದ ನೀರು ಮುಗಿದುಹೋಯಿತು. ಮಗು ಸಾಯುವುದನ್ನು ನಾನು ನೋಡಲಾರೆ ಎಂದುಕೊಂಡು, ಅವಳು ಆ ಮಗುವನ್ನು ಒಂದು ಗಿಡದ ನೆರಳಿನಲ್ಲಿ ಬಿಟ್ಟು ಒಂದು ಬಾಣವನ್ನೆಸೆಯುವಷ್ಟು ದೂರ ಹೋಗಿ ಕುಳಿತುಕೊಂಡು ಗಟ್ಟಿಯಾಗಿ ಅತ್ತಳು. ಇತ್ತ ಆ ಹುಡುಗನ ಕೂಗು ದೇವರಿಗೆ ಕೇಳಿಸಿತು. ದೇವದೂತನು ಆಕಾಶದಿಂದ ಹಾಗರಳನ್ನು ಕರೆದು, “ಹಾಗರಳೇ, ನಿನಗೇನು ಆಯಿತು? ಅಂಜಬೇಡ; ಆ ಹುಡುಗನು ಬಿದ್ದು ಇರುವ ಸ್ಥಳದಿಂದಲೇ ಅವನ ಕೂಗು ದೇವರನ್ನು ಮುಟ್ಟಿತು; ನೀನೆದ್ದು ಹೋಗಿ ಅವನನ್ನು ಎತ್ತಿಕೊ; ಅವನನ್ನು ಕೈ ಬಿಡಬೇಡ; ಅವನಿಂದ ಒಂದು ದೊಡ್ಡ ರಾಷ್ಟ್ರ ಉತ್ಪತ್ತಿಯಾಗುವಂತೆ ಮಾಡುತ್ತೇನೆ,” ಎಂದು ಹೇಳಿದನು. ಇದಲ್ಲದೆ ದೇವರು ಅವಳ ಕಣ್ಣನ್ನು ತೆರೆದರು; ನೀರಿನ ಬಾವಿಯೊಂದು ಅವಳಿಗೆ ಕಾಣಿಸಿತು; ತಿತ್ತಿಯಲ್ಲಿ ನೀರನ್ನು ತುಂಬಿಸಿಕೊಂಡು ಹೋಗಿ ಆ ಹುಡುಗನಿಗೆ ಕುಡಿಸಿದಳು. ಹುಡುಗನ ಸಂಗಡ ದೇವರಿದ್ದರು.

ಕೀರ್ತನೆ: 34:6-7, 9-10, 11-12
ಶ್ಲೋಕ: ನಿರ್ಗತಿಕನು ಮೊರೆಯಿಡಲು ಪ್ರಭು ಕಿವಿಗೊಟ್ಟನು. 

ಭಯಭಕುತಿಯುಳ್ಳವರ ಸುತ್ತಲು ಕಾವಲಿದ್ದು I
ಕಾಯುವನು ಪ್ರಭುವಿನ ದೂತನೆ ಬಂದಿಳಿದು II
ಸವಿದು ನೋಡು ಪ್ರಭುವಿನ ಮಾಧುರ್ಯವನು I
ಆತನನು ಆಶ್ರಯಿಸಿಕೊಂಡವನು ಧನ್ಯನು II

ದೇವಜನರೆ, ನಿಮಗಿರಲಿ ಪ್ರಭುವಿನ ಭಯಭಕುತಿ I
ಅಂಥವರಿಗಿರದು ಯಾವ ಕುಂದುಕೊರತೆಯ ಭೀತಿ II
ಯುವ ಕೇಸರಿಗೆ ಇರಬಹುದು ಹಸಿವು, ದಾಹ I
ಪ್ರಭುವನು ಅರಸುವವರಿಗಿರದು ಒಳಿತಿನ ಅಭಾವ II

ಬನ್ನಿ ಮಿತ್ರರೇ, ಆಲಿಸಿರೀ ಮಾತನು I
ಕಲಿಸುವೆನು ನಾ ನಿಮಗೆ ದೇವ ಭಯವನು II
ಎಲೆ ಮಾನವ, ಬಲುದಿನ ಬಾಳಲು ಬಯಸುವೆಯಾ? I
ಆಯುರಾರೋಗ್ಯ ಭಾಗ್ಯವನು ಆಶಿಸುವೆಯಾ? II

ಕಾದಿಡು ನಾಲಿಗೆಯನು ಕೇಡನು ಆಡದಂತೆ I
ಬಿಗಿಯಿಡು ತುಟಿಯನ್ನು ಕುಟಿಲವನು ನುಡಿಯದಂತೆ II

ಶುಭಸಂದೇಶ: ಮತ್ತಾಯ 8:28-34


ಯೇಸುಸ್ವಾಮಿ ಗಲಿಲೇಯ ಸರೋವರವನ್ನು ದಾಟಿ, ಆಚೆಯ ಕಡೆಯಿದ್ದ ಗದರೇನ ಎಂಬ ಪ್ರಾಂತ್ಯಕ್ಕೆ ಬಂದರು. ದೆವ್ವ ಹಿಡಿದಿದ್ದ ಇಬ್ಬರು ಸಮಾಧಿಯ ಗುಹೆಗಳಿಂದ ಹೊರಬಂದು ಅವರಿಗೆ ಎದುರಾದರು. ಅವರಿಬ್ಬರೂ ಮಹಾಕ್ರೂರಿಗಳು. ಈ ಕಾರಣ ಯಾರೂ ಆ ಮಾರ್ಗವಾಗಿ ಹೋಗಲಾಗುತ್ತಿರಲಿಲ್ಲ. ಅವರು ಯೇಸುವನ್ನು ನೋಡಿದೊಡನೆಯೇ "ಓ ದೇವರ ಪುತ್ರನೇ, ನಿಮಗೇಕೆ ನಮ್ಮ ಗೊಡವೆ? ನಿಯಮಿತ ಕಾಲಕ್ಕೆ ಮುಂಚೆಯೇ ನಮ್ಮನ್ನು ಪೀಡಿಸಲು ಬಂದಿರಾ?" ಎಂದು ಕೂಗಿಕೊಂಡರು. ಹಂದಿಗಳ ದೊಡ್ಡ ಹಿಂಡೊಂದು ಅಲ್ಲಿಂದ ಸ್ವಲ್ಪ ದೂರದಲ್ಲೇ ಮೇಯುತ್ತಿತ್ತು. "ನೀವು ನಮ್ಮನ್ನು ಹೊರದೂಡಿದ್ದೇ ಆದರೆ ಆ ಹಂದಿಗಳ ಹಿಂಡಿಗೆ ನಮ್ಮನ್ನು ಕಳುಹಿಸಿಕೊಡಿ," ಎಂದು ಆ ದೆವ್ವಗಳು ಯೇಸುವನ್ನು ಬೇಡಿಕೊಂಡವು. ಯೇಸು, "ಹೋಗಿ" ಎಂದು ಅಪ್ಪಣೆಯಿತ್ತರು. ದೆವ್ವಗಳು ಹೊರಗೆ ಬಂದು ಹಂದಿಗಳ ಹಿಂಡನ್ನು ಹೊಕ್ಕವು. ಆ ಕ್ಷಣವೇ ಆ ಹಿಂಡೆಲ್ಲಾ ಬೆಟ್ಟದ ಕಡಿದಾದ ಬದಿಯಿಂದ ಧಾವಿಸಿ, ಸರೋವರಕ್ಕೆ ಬಿದ್ದು, ನೀರುಪಾಲಾಗಿ ಹೋಯಿತು. ಹಂದಿ ಮೇಯಿಸುತ್ತಿದ್ದವರು ಅಲ್ಲಿಂದ ಪಲಾಯನ ಮಾಡಿ ಊರಿಗೆ ಓಡಿಹೋಗಿ ನಡೆದದ್ದೆಲ್ಲವನ್ನೂ ಮತ್ತು ದೆವ್ವ ಮೆಟ್ಟಿದ್ದವರಿಗೆ ಸಂಭವಿಸಿದ್ದನ್ನೂ ವರದಿಮಾಡಿದರು. ಆಗ ಊರಿಗೆ ಊರೇ ಯೇಸುವನ್ನು ನೋಡಲು ಬಂದಿತು. ಅವರನ್ನು ಕಂಡು ತಮ್ಮ ಆಸುಪಾಸನ್ನು ಬಿಟ್ಟು ಹೋಗಬೇಕೆಂದು ಮನವಿ ಮಾಡಿಕೊಂಡಿತು.

30.06.2026 - ಅಲ್ಪವಿಶ್ವಾಸಿಗಳೇ, ನಿಮಗೇಕೆ ಇಷ್ಟು ಭಯ

 ಮೊದಲನೇ ವಾಚನ: ಪ್ರವಾದಿ ಆಮೋಸನ ಗ್ರಂಥ 3:1-8; 4:11-12


ಇಸ್ರಯೇಲಿನ ಜನರೇ, ಕಿವಿಗೊಡಿ. ಈಜಿಪ್ಟ್ ದೇಶದಿಂದ ನಿಮ್ಮನ್ನು ಬಿಡುಗಡೆಮಾಡಿ ಕರೆತಂದ ಸರ್ವೆಶ್ವರ ನಿಮ್ಮ ವಿರುದ್ಧವಾಗಿ ನುಡಿಯುವ ಮಾತುಗಳನ್ನು ಆಲಿಸಿರಿ: “ಜಗದ ಜನಾಂಗಗಳಲ್ಲಿ ನನಗೆ ಆಪ್ತರಾದವರೆಂದರೆ ನೀವು. ಆದಕಾರಣ ನೀವು ಮಾಡಿರುವ ಎಲ್ಲಾ ಪಾಪಗಳಿಗೆ ತಕ್ಕ ಪ್ರಾಯಶ್ಚಿತ್ತವನ್ನು ಸವಿಯುವಂತೆ ಮಾಡುವೆನು.” ಗೊತ್ತುಗುರಿಯಿಲ್ಲದೆ ಯಾರಾದರಿಬ್ಬರು ಜೊತೆಯಾಗಿ ಪ್ರಯಾಣಮಾಡುವುದುಂಟೆ? ಬೇಟೆ ಕಂಡಾಗಲ್ಲದೆ ಸಿಂಹವು ಕಾಡಿನಲ್ಲಿ ಗರ್ಜಿಸುವುದುಂಟೆ? ಏನನ್ನೂ ಹಿಡಿಯದೆ ಯುವಸಿಂಹವು ಗುಹೆಯಲ್ಲೆ ಗುರುಗುಟ್ಟುವುದುಂಟೆ? ಕಾಳಿಲ್ಲದೆ ಪಕ್ಷಿ ಬಲೆಗೆ ಬೀಳುವುದುಂಟೆ? ಏನೂ ಸಿಕ್ಕಿಕೊಳ್ಳದೆ ಬೋನು ಮೇಲಕ್ಕೆ ಏರುವುದುಂಟೆ? ರಣಕಹಳೆ ಮೊಳಗಲು ಜನರು ಬೆದರದೆ ಇರುವುದುಂಟೆ? ಸರ್ವೇಶ್ವರನಿಂದಲ್ಲದೆ ಪಟ್ಟಣಕ್ಕೆ ಕೇಡು ತಟ್ಟುವುದುಂಟೆ? ತನ್ನ ಪರಿಚಾರಕರಾದ ಪ್ರವಾದಿಗಳಿಗೆ ತನ್ನ ಯೋಜನೆಯನ್ನು ತಿಳಿಸದೆ ಸ್ವಾಮಿ ಸರ್ವೇಶ್ವರ ಏನೂ ಮಾಡುವುದಿಲ್ಲ. ಸಿಂಹದ ಗರ್ಜನೆಯನ್ನು ಕೇಳಿ ಹೆದರದಿರುವವರು ಯಾರು? ಸ್ವಾಮಿ ಸರ್ವೇಶ್ವರನ ನುಡಿಯನ್ನು ಕೇಳಿ ಪ್ರವಾದನೆಮಾಡದಿರುವವರು ಯಾರು?.” “ಒಮ್ಮೆ ಸೊದೋಮ್ ಮತ್ತು ಗೊಮೋರಾ ಪಟ್ಟಣಗಳನ್ನು ಕೆಡವಿದಂತೆ ನಾನು ನಿಮ್ಮ ಪಟ್ಟಣಪಾಳೆಯಗಳನ್ನು ಕೆಡವಿದೆನು, ಉರಿಯುವ ಬೆಂಕಿಯಿಂದ ಎಳೆದ ಕೊಳ್ಳಿಯಂತೆ ನೀವು ಇದ್ದೀರಿ. ಆದರೂ ನೀವು ನನ್ನ ಬಳಿಗೆ ಹಿಂದಿರುಗಲಿಲ್ಲ,” ಎನ್ನುತ್ತಾರೆ ಸರ್ವೇಶ್ವರ. ಆದುದರಿಂದ ಇಸ್ರಯೇಲಿನ ಜನರೇ, ನಿಮ್ಮನ್ನು ದಂಡಿಸಿಯೇ ತೀರುವೆನು. ಓ ಇಸ್ರಯೇಲರೇ, ನ್ಯಾಯತೀರ್ಪನ್ನು ಕೊಡಲು ಬರಲಿರುವ ನಿಮ್ಮ ದೇವರನ್ನು ಎದುರಗೊಳ್ಳಲು ಸಿದ್ಧಮಾಡಿಕೊಳ್ಳಿ," ಎನ್ನುತ್ತಾರೆ ಸರ್ವೇಶ್ವರ.

ಕೀರ್ತನೆ: 5:4-6, 6-7, 8
ಶ್ಲೋಕ: ಪ್ರಭೂ, ಸತ್ಯಪಥದಲಿ ನಡೆಸೆನ್ನನು

ಶುಭಸಂದೇಶ: ಮತ್ತಾಯ 8:23-27


ಆಮೇಲೆ ಯೇಸುಸ್ವಾಮಿ ದೋಣಿಯನ್ನು ಹತ್ತಿದರು. ಶಿಷ್ಯರೂ ಹತ್ತಿ ಅವರ ಸಂಗಡಹೋದರು. ಇದ್ದಕ್ಕಿದ್ದ ಹಾಗೆ ಸರೋವರದಲ್ಲಿ ರಭಸವಾದ ಬಿರುಗಾಳಿ ಎದ್ದಿತು. ದೋಣಿ ಅಲೆಗಳಿಂದ ಮುಳುಗಿಹೋಗುವುದರಲ್ಲಿತ್ತು. ಯೇಸುವಾದರೋ ನಿದ್ರಾವಶರಾಗಿದ್ದರು. ಶಿಷ್ಯರು ಹತ್ತಿರಕ್ಕೆ ಬಂದು ಅವರನ್ನು ಎಬ್ಬಿಸಿ, “ಸ್ವಾಮೀ, ಕಾಪಾಡಿ. ನಾವು ನೀರು ಪಾಲಾಗುತ್ತಿದ್ದೇವೆ,” ಎಂದರು. ಅದಕ್ಕೆ ಯೇಸು, “ಅಲ್ಪವಿಶ್ವಾಸಿಗಳೇ, ನಿಮಗೇಕೆ ಇಷ್ಟು ಭಯ?” ಎಂದರು. ಅನಂತರ ಎದ್ದು ನಿಂತು ಸುಂಟರಗಾಳಿಯನ್ನೂ ಸರೋವರವನ್ನೂ ಗದರಿಸಿದರು. ಆಗ ವಾತಾವರಣ ಪ್ರಶಾಂತವಾಯಿತು. ಶಿಷ್ಯರು ನಿಬ್ಬೆರಗಾದರು. “ಗಾಳಿಯೂ ಸರೋವರವೂ ಇವರು ಹೇಳಿದ್ದಂತೆ ಕೇಳಬೇಕಾದರೆ ಇವರೆಂತಹ ವ್ಯಕ್ತಿಯಾಗಿರಬೇಕು!” ಎಂದುಕೊಂಡರು.

29.06.2026 - ಕೇಳು: “ನಿನ್ನ ಹೆಸರು ಪೇತ್ರ! ಈ ಬಂಡೆಯ ಮೇಲೆ ನನ್ನ ಧರ್ಮಸಭೆಯನ್ನು ಕಟ್ಟುವೆನು,

 ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 12:1-11


ಆ ದಿನಗಳಲ್ಲಿ ಅರಸ ಹೆರೋದನು ಕ್ರೈಸ್ತಸಭೆಯ ಸದಸ್ಯರಲ್ಲಿ ಕೆಲವರನ್ನು ಹಿಂಸಿಸಲು ಆರಂಭಿಸಿದನು. ಯೊವಾನ್ನನ ಸಹೋದರ ಯಕೋಬನನ್ನು ಖಡ್ಗದಿಂದ ಕೊಲ್ಲಿಸಿದನು. ಇದರಿಂದ ಯೆಹೂದ್ಯರಿಗೆ ಮೆಚ್ಚುಗೆಯಾಯಿತೆಂದು ತಿಳಿದು ಪೇತ್ರನನ್ನು ಬಂಧಿಸಿದನು. (ಆಗ ಹುಳಿರಹಿತ ರೊಟ್ಟಿಯ ಹಬ್ಬ ನಡೆಯುತ್ತಿತ್ತು). ಪೇತ್ರನನ್ನು ಬಂಧಿಸಿದ ಮೇಲೆ ಸೆರೆಮನೆಯಲ್ಲಿಟ್ಟು ಅವನನ್ನು ಕಾಯಲು ನಾಲ್ಕು ನಾಲ್ಕು ಸೈನಿಕರಿದ್ದ ಚತುರ್ದಳಕ್ಕೆ ವಹಿಸಿದನು. ಪಾಸ್ಕಹಬ್ಬದ ನಂತರ ಪೇತ್ರನನ್ನು ಬಹಿರಂಗ ವಿಚಾರಣೆಗೆ ಗುರಿಪಡಿಸಲು ಉದ್ದೇಶಿಸಿದ್ದನು. ಪೇತ್ರನನ್ನು ಹೀಗೆ ಸೆರೆಯಲ್ಲಿಟ್ಟಿದ್ದಾಗ, ಸಭೆಯು ಅವನಿಗಾಗಿ ಶ್ರದ್ಧೆಯಿಂದ ದೇವರಿಗೆ ಪ್ರಾರ್ಥನೆಮಾಡುತ್ತಿತ್ತು. ಹೆರೋದನು ಪೇತ್ರನನ್ನು ಜನರ ಮುಂದೆ ತರಬೇಕೆಂದಿದ್ದ ಹಿಂದಿನ ರಾತ್ರಿ ಅದು. ಪೇತ್ರನು ಇಬ್ಬರು ಸೈನಿಕರ ನಡುವೆ ನಿದ್ರಿಸುತ್ತಿದ್ದನು. ಅವನನ್ನು ಎರಡು ಸರಪಣಿಗಳಿಂದ ಕಟ್ಟಲಾಗಿತ್ತು. ಪಹರೆಯವರು ಸೆರೆಮನೆಯ ದ್ವಾರದಲ್ಲಿ ಕಾವಲಿದ್ದರು. ಫಕ್ಕನೆ ದೇವದೂತನೊಬ್ಬನು ಕಾಣಿಸಿಕೊಂಡನು. ಆ ಕೋಣೆಯೆಲ್ಲಾ ಪ್ರಕಾಶಮಯವಾಯಿತು. ದೂತನು ಪೇತ್ರನ ಭುಜವನ್ನು ತಟ್ಟಿ, ಎಬ್ಬಿಸಿ, “ಬೇಗನೆ ಏಳು,” ಎಂದನು. ಆ ಕ್ಷಣವೇ ಪೇತ್ರನ ಕೈಗಳಿಗೆ ಕಟ್ಟಿದ್ದ ಸರಪಣಿಗಳು ಕಳಚಿಬಿದ್ದವು. ದೂತನು ಅವನಿಗೆ, “ಬಟ್ಟೆಯನ್ನು ತೊಟ್ಟುಕೋ, ಪಾದರಕ್ಷೆಯನ್ನು ಮೆಟ್ಟಿಕೋ,” ಎಂದನು. ಪೇತ್ರನು ಹಾಗೆಯೇ ಮಾಡಿದನು. ಅನಂತರ ದೂತನು, “ನಿನ್ನ ಮೇಲುಹೊದಿಕೆಯನ್ನು ಹೊದ್ದುಕೊಂಡು ನನ್ನ ಜೊತೆ ಬಾ,” ಎಂದನು. ಪೇತ್ರನು ಸೆರೆಮನೆಯ ಹೊರಕ್ಕೆ ಅವನನ್ನು ಹಿಂಬಾಲಿಸಿ ಹೋದನು. ಅಷ್ಟಾದರೂ ದೂತನು ಮಾಡುತ್ತಿರುವುದು ನಿಜವೆಂದು ಅವನಿಗೆ ಅರಿವಾಗಲಿಲ್ಲ; ತನಗೇನೋ ದರ್ಶನವಾಗುತ್ತಿದೆಯೆಂದೆ ಭಾವಿಸಿದನು. ಅವರು ಮೊದಲನೆಯ ಮತ್ತು ಎರಡನೆಯ ಕಾವಲನ್ನು ದಾಟಿದರು. ಪಟ್ಟಣದ ಕಡೆಯಿದ್ದ ಕಬ್ಬಿಣದ ದ್ವಾರದ ಬಳಿ ಬಂದರು. ಆ ದ್ವಾರ ತನ್ನಷ್ಟಕ್ಕೆ ತಾನೇ ತೆರೆಯಿತು. ಅವರು ಹೊರ ನಡೆದರು. ಬೀದಿಯೊಂದರಲ್ಲಿ ಹಾದುಹೋಗುತ್ತಿರಲು ಒಮ್ಮೆಲೆ ದೂತನು ಪೇತ್ರನನ್ನು ಬಿಟ್ಟು ಅದೃಶ್ಯನಾದನು. ನಡೆದ ಸಂಗತಿ ಏನೆಂದು ಪೇತ್ರನಿಗೆ ಅರಿವಾದಾಗ ಆತನು, “ನಡೆದುದೆಲ್ಲಾ ಸಾಕ್ಷಾತ್ ಸತ್ಯವೆಂದು ಈಗ ನನಗೆ ತಿಳಿಯಿತು. ಪ್ರಭು ತಮ್ಮ ದೂತನನ್ನು ಕಳುಹಿಸಿ ಹೆರೋದನ ಕೈಯಿಂದಲೂ ಯೆಹೂದ್ಯರು ಮಾಡಬೇಕೆಂದಿದ್ದ ಕೇಡಿನಿಂದಲೂ ನನ್ನನ್ನು ಪಾರುಮಾಡಿದ್ದಾರೆ,” ಎಂದುಕೊಂಡನು.

ಕೀರ್ತನೆ: 34:2-3, 4-5, 6-7, 8-9

ಶ್ಲೋಕ: ಭಯಭೀತಿಯಿಂದೆನ್ನನು ಮುಕ್ತನಾಗಿಸಿಹನು

1.  ಪ್ರಭುವನು ನಾ ಕೊಂಡಾಡುವ ಎಲ್ಲ ಕಾಲದೊಳು|
ಆತನ ಸ್ತುತಿ ಸದಾ ಇಹುದು ನನ್ನ ಬಾಯೊಳು||
ಪ್ರಭುವಿನಲ್ಲಿದೆ ನನ್ನ ಮನದಭಿಮಾನ|
ದೀನರಿದನು ಕೇಳಿ, ಪಡೆಯಲಿ ಸುಮ್ಮಾನ||
ಶ್ಲೋಕ

2.  ಬನ್ನಿ, ಕೊಂಡಾಡುವ ಪ್ರಭು ದೇವನನು|
ಘನಪಡಿಸೋಣ ಅವನ ಶ್ರೀ ನಾಮವನು||
ಬೇಡಿಕೊಳ್ಳಲು ಕೊಟ್ಟನಾತ ಸದುತ್ತರವನು|
ಭಯಭೀತಿಯಿಂದೆನ್ನನು ಮುಕ್ತನಾಗಿಸಿಹನು||
ಶ್ಲೋಕ

3.  ಆತನತ್ತ ತಿರುಗಿದ ಮುಖ ಅರಳುವುದು|
ಲಜ್ಜೆಯಿಂದೆಂದಿಗು ಕುಂದಿಹೋಗದು||
ನಿರ್ಗತಿಕನು ಮೊರೆಯಿಡಲು ಪ್ರಭು ಕಿವಿಗೊಟ್ಟನು|
ಸರ್ವಾಪತ್ತಿನಿಂದವನು ಮುಕ್ತಗೊಂಡನು||
ಶ್ಲೋಕ

4.  ಭಯಭಕುತಿಯುಳ್ಳವರು ಸುತ್ತಲು  ಕಾವಲಿದ್ದು|
ಕಾಯುವನು ಪ್ರಭುವಿನ ದೂತನೇ ಬಂದಿಳಿದು||
ಸವಿದು ನೋಡು ಪ್ರಭುವಿನ ಮಾಧುರ್ಯವನು|
ಆತನನು ಆಶ್ರಯಿಸಿಕೊಂಡವನು ಧನ್ಯನು||
ಶ್ಲೋಕ

ಎರಡನೇ ವಾಚನ: 2 ತಿಮೊಥೇಯನಿಗೆ 4:6-8, 17-18

ಅತಿ ಪ್ರಿಯನೇ, ನಾನು ಯಜ್ಞಪಶುವಾಗಿ ಅರ್ಪಿತನಾಗುವ ಸಮಯವು ಬಂದಿದೆ. ಈ ಲೋಕದಿಂದ ತೆರಳಬೇಕಾದ ಕಾಲವೂ ಕೂಡಿಬಂದಿದೆ. ಬಾಳಿನ ಸ್ಪರ್ಧೆಯಲ್ಲಿ ಭಾಗವಹಿಸಿದ್ದೇನೆ. ನನ್ನ ಓಟವನ್ನು ಮುಗಿಸಿದ್ದೇನೆ. ವಿಶ್ವಾಸವನ್ನು ಕಾಪಾಡಿಕೊಂಡಿದ್ದೇನೆ. ಇನ್ನು ನನಗೆ ಉಳಿದಿರುವುದು ಒಂದೇ: ಸಜ್ಜನರಿಗೆ ಸಲ್ಲುವಂಥ ಜಯಮಾಲೆ ನನಗೀಗ ಸಿದ್ಧವಾಗಿದೆ. ಅದನ್ನು ನೀತಿವಂತ ನ್ಯಾಯಾಧಿಪತಿಯಾದ ಪ್ರಭು ಆ ದಿನದಂದು ನನಗೆ ಕೊಡುವರು; ನನಗೆ ಮಾತ್ರವಲ್ಲ, ಅವರ ಪ್ರತ್ಯಕ್ಷತೆಯನ್ನು ಪ್ರೀತಿಯಿಂದ ನಿರೀಕ್ಷಿಸುತ್ತಿರುವ ಎಲ್ಲರಿಗೂ ಕೊಡುವರು. ಆದರೆ ಪ್ರಭು ನನಗೆ ಬೆಂಬಲವಾಗಿ ನಿಂತರು. ನಾನು ಶುಭಸಂದೇಶವನ್ನು ಸಂಪೂರ್ಣವಾಗಿ ಸಾರುವಂತೆಯೂ ಅನ್ಯಧರ್ಮೀಯರೆಲ್ಲರು ಅದನ್ನು ಕೇಳುವಂತೆಯೂ ಮಾಡಿದರು. ಅಲ್ಲದೆ, ಸಿಂಹದ ಬಾಯಿಂದಲೂ ನನ್ನನ್ನು ಸಂರಕ್ಷಿಸಿದರು. ಪ್ರಭು ನನ್ನನ್ನು ಸಕಲ ಕೇಡುಗಳಿಂದ ರಕ್ಷಿಸಿ, ತಮ್ಮ ಸ್ವರ್ಗಸಾಮ್ರಾಜ್ಯಕ್ಕೆ ನನ್ನನ್ನು ಸುರಕ್ಷಿತವಾಗಿ ಸೇರಿಸುವರು. ಯುಗಯುಗಾಂತರಕ್ಕೂ ಅವರಿಗೆ ಮಹಿಮೆ ಸಲ್ಲಲಿ, ಆಮೆನ್.

ಶುಭಸಂದೇಶ: ಮತ್ತಾಯ 16:13-19


ಯೇಸುಸ್ವಾಮಿ ‘ಫಿಲಿಪ್ಪನ ಸೆಜರೇಯ’ ಎಂಬ ಪ್ರಾಂತ್ಯಕ್ಕೆ ಬಂದರು. ಅಲ್ಲಿ ತಮ್ಮ ಶಿಷ್ಯರನ್ನು ಉದ್ದೇಶಿಸಿ, “ನರಪುತ್ರನನ್ನು ಜನರು ಯಾರೆಂದು ಹೇಳುತ್ತಾರೆ?” ಎಂದು ಕೇಳಿದರು. ಅದಕ್ಕೆ ಶಿಷ್ಯರು, “ ‘ಸ್ನಾನಿಕ ಯೊವಾನ್ನ’, ಎಂದು ಕೆಲವರು ಹೇಳುತ್ತಾರೆ; ಮತ್ತೆ ಕೆಲವರು ' ಎಲೀಯನು' ಎನ್ನುತ್ತಾರೆ. ‘ಯೆರೆಮೀಯನು ಅಥವಾ ಪ್ರವಾದಿಗಳಲ್ಲಿ ತಾವೂ ಒಬ್ಬರು,’ ಎಂಬುದು ಇನ್ನೂ ಕೆಲವರ ಅಭಿಪ್ರಾಯ,” ಎಂದು ಉತ್ತರಕೊಟ್ಟರು. ಆಗ ಯೇಸು, “ಆದರೆ ನೀವು ನನ್ನನ್ನು ಯಾರೆನ್ನುತ್ತೀರಿ?” ಎಂದು ಪ್ರಶ್ನಿಸಿದರು. ಅದಕ್ಕೆ ಪೇತ್ರನು, “ಅಭಿಷಿಕ್ತರಾದ ಲೋಕೋದ್ಧಾರಕ ತಾವೇ, ಜೀವಸ್ವರೂಪರಾದ ದೇವರ ಪುತ್ರ ತಾವೇ,” ಎಂದನು. ಅದಕ್ಕೆ ಪ್ರತ್ಯುತ್ತರವಾಗಿ ಯೇಸು ಹೀಗೆಂದರು: “ಯೋನ್ನನ ಮಗ ಸಿಮೋನನೇ, ನೀನು ಧನ್ಯ! ಈ ವಿಷಯವನ್ನು ನಿನಗೆ ಶ್ರುತಪಡಿಸಿದ್ದು ನರಮಾನವ ಶಕ್ತಿ ಅಲ್ಲ. ಸ್ವರ್ಗದಲ್ಲಿರುವ ನನ್ನ ಪಿತನೇ. ನಾನು ನಿನಗೆ ಹೇಳುತ್ತೇನೆ, ಕೇಳು: “ನಿನ್ನ ಹೆಸರು ಪೇತ್ರ! ಈ ಬಂಡೆಯ ಮೇಲೆ ನನ್ನ ಧರ್ಮಸಭೆಯನ್ನು ಕಟ್ಟುವೆನು, ಪಾತಾಳಲೋಕದ ಶಕ್ತಿಯು ಅದನ್ನು ಎಂದಿಗೂ ಜಯಿಸಲಾರದು. ಸ್ವರ್ಗಸಾಮ್ರಾಜ್ಯದ ಬೀಗದ ಕೈಗಳನ್ನು ನಿನಗೆ ಕೊಡುವೆನು. ಇಹದಲ್ಲಿ ನೀನು ಏನನ್ನು ಬಂಧಿಸುತ್ತಿಯೋ ಅದನ್ನು ಪರದಲ್ಲಿಯೂ ಬಂಧಿಸಲಾಗುವುದು. ಇಹದಲ್ಲಿ ನೀನು ಏನನ್ನು ಬಿಚ್ಚುತ್ತೀಯೋ ಅದನ್ನು ಪರದಲ್ಲಿಯೂ ಬಿಚ್ಚಲಾಗುವುದು,

28.06.2026 - ನನ್ನನ್ನು ಪ್ರೀತಿಸುವುದಕ್ಕಿಂತ ಹೆಚ್ಚಾಗಿ ತನ್ನ ತಂದೆಯನ್ನು ಅಥವಾ ತಾಯಿಯನ್ನು ಪ್ರೀತಿಸುವವನು ನನ್ನವನಾಗಲು ಯೋಗ್ಯನಲ್ಲ

 ಮೊದಲನೇ ವಾಚನ: 2 ಅರಸುಗಳು 4:8-11, 14-16

ಒಂದು ಸಾರಿ ಎಲೀಷನು ಶೂನೇಮಿಗೆ ಹೋದನು. ಅಲ್ಲಿ ಒಬ್ಬ ಶ್ರೀಮಂತ ಮಹಿಳೆ ಇದ್ದಳು. ಆಕೆ ಅವನನ್ನು ತನ್ನ ಮನೆಯಲ್ಲಿ ಊಟಮಾಡಬೇಕೆಂದು ಒತ್ತಾಯಪಡಿಸಿದಳು. ಅಂದಿನಿಂದ ಅವನು ಆ ಮಾರ್ಗವಾಗಿ ಹೋಗುವಾಗಲೆಲ್ಲಾ ಆ ಮನೆಯಲ್ಲೇ ಊಟಮಾಡುತ್ತಿದ್ದನು. ಆ ಮಹಿಳೆ ತನ್ನ ಗಂಡನಿಗೆ, “ಯಾವಾಗಲೂ ಈ ದಾರಿಯಿಂದ ಹೋಗುತ್ತಾ ಬರುತ್ತಾ ಇರುವ ಆ ವ್ಯಕ್ತಿ ಒಬ್ಬ ಸಂತನು ಹಾಗು ದೈವಪುರುಷನು ಆಗಿರುತ್ತಾನೆಂದು ನನಗೆ ಗೊತ್ತಾಯಿತು. ಆದುದರಿಂದ ನಾವು ಅವನಿಗಾಗಿ ಮಾಳಿಗೆಯ ಮೇಲೆ ಒಂದು ಸಣ್ಣ ಕೋಣೆಯನ್ನು ಕಟ್ಟಿಸೋಣ. ಅದರಲ್ಲಿ ಒಂದು ಮಂಚ, ಮೇಜು, ಕುರ್ಚಿ, ದೀಪಸ್ತಂಭ ಇವುಗಳನ್ನು ಇಡೋಣ; ಅವನು ಇಲ್ಲಿಗೆ ಬಂದಾಗೆಲ್ಲಾ ಅದರಲ್ಲಿ ವಾಸಮಾಡಲಿ,” ಎಂದು ಹೇಳಿದಳು. ಒಂದು ದಿನ ಎಲೀಷನು ಅಲ್ಲಿಗೆ ಬಂದು ಆ ಕೋಣೆಯೊಳಗೆ ಪ್ರವೇಶಿಸಿ ದಣಿವಾರಿಸಿಕೊಂಡನು. ಆಮೇಲೆ ಎಲೀಷನು ಗೇಹಜಿಯನ್ನು, “ನಾವು ಆಕೆಗೆ ಯಾವ ಉಪಕಾರ ಮಾಡಬಹುದು?” ಎಂದು ಕೇಳಿದನು. ಅವನು, “ಆಕೆಗೆ ಮಗನಿಲ್ಲ, ಗಂಡನು ಮುದುಕನಾಗಿದ್ದಾನೆ,” ಎಂದನು. ಇದನ್ನು ಕೇಳಿ ಎಲೀಷನು ಆ ಮಹಿಳೆಯನ್ನು ಕರೆಯಬೇಕೆಂದು ಆಜ್ಞಾಪಿಸಿದನು. ಅವನು ಹೋಗಿ ಕರೆದನು. ಆಕೆ ಬಂದು ಬಾಗಿಲಿನ ಹತ್ತಿರ ನಿಂತಳು. ಎಲೀಷನು ಆಕೆಗೆ, “ನೀನು ಬರುವ ವರ್ಷ ಇದೇ ಕಾಲದಲ್ಲಿ ಒಬ್ಬ ಮಗನನ್ನು ಅಪ್ಪಿಕೊಂಡಿರುವೆ,” ಎಂದನು. 

ಕೀರ್ತನೆ: 89:2-3, 16-17, 18-19

ಶ್ಲೋಕ: ಪ್ರಭೂ, ಕೀರ್ತಿಸುವೆನು ಸದಾ ನಿನ್ನಚಲ ಪ್ರೀತಿಯನು

ಎರಡನೇ ವಾಚನ: ರೋಮನರಿಗೆ 6:3-4, 8-11

ಕ್ರಿಸ್ತಯೇಸುವಿನವರಾಗಲು ದೀಕ್ಷಾಸ್ನಾನ ಹೊಂದಿರುವ ನಾವು, ಅವರ ಮರಣದಲ್ಲಿ ಪಾಲುಗಾರರಾಗಲು ದೀಕ್ಷಾಸ್ನಾನ ಪಡೆದೆವು ಎಂಬುದು ನಿಮಗೆ ತಿಳಿಯದೆ? ಹೀಗಿರಲಾಗಿ, ದೀಕ್ಷಾಸ್ನಾನ ಮಾಡಿಸಿಕೊಂಡಾಗ ಅವರ ಮರಣದಲ್ಲಿ ಪಾಲುಗಾರರಾದ ನಮಗೆ ಅವರೊಡನೆ ಸಮಾಧಿಯೂ ಆಯಿತು. ಆದುದರಿಂದ ತಂದೆಯ ಮಹಿಮಾಶಕ್ತಿಯಿಂದ ಕ್ರಿಸ್ತಯೇಸು ಮರಣದಿಂದ ಪುನರುತ್ಥಾನ ಹೊಂದಿದಂತೆಯೇ ನಾವು ಸಹ ಹೊಸಜೀವವನ್ನು ಹೊಂದಿ ಬಾಳುತ್ತೇವೆ. ಕ್ರಿಸ್ತಯೇಸುವಿನೊಂದಿಗೆ ನಾವು ಮರಣ ಹೊಂದಿದ್ದರೆ ಅವರೊಡನೆ ನಾವೂ ಜೀವಿಸುತ್ತೇವೆ; ಇದೇ ನಮ್ಮ ವಿಶ್ವಾಸ. ಯೇಸುಕ್ರಿಸ್ತರನ್ನು ಮರಣದಿಂದ ಎಬ್ಬಿಸಲಾಯಿತು ಎಂಬುದನ್ನು ನಾವು ಬಲ್ಲೆವು. ಆದ್ದರಿಂದ ಅವರು ಇನ್ನು ಎಂದಿಗೂ ಸಾಯುವುದಿಲ್ಲ; ಸಾವಿಗೆ ಅವರ ಮೇಲೆ ಯಾವ ಅಧಿಕಾರವೂ ಇಲ್ಲ. ಏಕೆಂದರೆ, ಅವರು ಪಾಪದ ಪಾಲಿಗೆ ಒಂದೇ ಸಾರಿಗೆ ಮಾತ್ರವಲ್ಲ, ಎಂದೆಂದಿಗೂ ಸತ್ತವರು. ಅವರು ಈಗ ಜೀವಿಸುವುದು ದೇವರಿಗಾಗಿಯೇ. ಅಂತೆಯೇ ನೀವೂ ಸಹ ಪಾಪದ ಪಾಲಿಗೆ ಸತ್ತವರೆಂದೂ ದೇವರಿಗಾಗಿ ಮಾತ್ರ ಯೇಸುಕ್ರಿಸ್ತರಲ್ಲಿ ಜೀವಿಸುವವರೆಂದೂ ಪರಿಗಣಿಸಿರಿ.

ಶುಭಸಂದೇಶ:  ಮತ್ತಾಯ 10:37-42


ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು: “ನನ್ನನ್ನು ಪ್ರೀತಿಸುವುದಕ್ಕಿಂತ ಹೆಚ್ಚಾಗಿ ತನ್ನ ತಂದೆಯನ್ನು ಅಥವಾ ತಾಯಿಯನ್ನು ಪ್ರೀತಿಸುವವನು ನನ್ನವನಾಗಲು ಯೋಗ್ಯನಲ್ಲ. ನನ್ನನ್ನು ಪ್ರೀತಿಸುವುದಕ್ಕಿಂತ ಹೆಚ್ಚಾಗಿ ತನ್ನ ಮಗನನ್ನು ಅಥವಾ ಮಗಳನ್ನು ಪ್ರೀತಿಸುವವನು ನನ್ನವನಾಗಲು ಯೋಗ್ಯನಲ್ಲ. ತನ್ನ ಶಿಲುಬೆಯನ್ನು ಹೊತ್ತು ನನ್ನನ್ನು ಹಿಂಬಾಲಿಸದವನು ನನ್ನವನಾಗಲು ಯೋಗ್ಯನಲ್ಲ. ತನ್ನ ಪ್ರಾಣವನ್ನು ಕಾಪಾಡಿಕೊಳ್ಳುವವನು ಅದನ್ನು ಕಳೆದುಕೊಳ್ಳುತ್ತಾನೆ. ನನಗೋಸ್ಕರವಾಗಿ ತನ್ನ ಪ್ರಾಣವನ್ನು ಕಳೆದುಕೊಳ್ಳುವವನು ಅದನ್ನು ಕಾಪಾಡಿಕೊಳ್ಳುತ್ತಾನೆ. “ನಿಮ್ಮನ್ನು ಸ್ವಾಗತಿಸುವವನು ನನ್ನನ್ನು ಸ್ವಾಗತಿಸುತ್ತಾನೆ; ನನ್ನನ್ನು ಸ್ವಾಗತಿಸುವವನು ನನ್ನನ್ನು ಕಳುಹಿಸಿಕೊಟ್ಟಾತನನ್ನೇ ಸ್ವಾಗತಿಸುತ್ತಾನೆ. ಪ್ರವಾದಿಯನ್ನು ಪ್ರವಾದಿಯೆಂದು ಸ್ವಾಗತಿಸುವವನು ಪ್ರವಾದಿಗೆ ಸಿಗುವ ಪ್ರತಿಫಲವನ್ನು ಪಡೆಯುತ್ತಾನೆ. ಸತ್ಪುರುಷನನ್ನು ಸತ್ಪುರುಷನೆಂದು ಸ್ವಾಗತಿಸುವವನು ಸತ್ಪುರುಷನಿಗೆ ಸಿಗುವ ಪ್ರತಿಫಲವನ್ನು ಪಡೆಯುತ್ತಾನೆ. ಯಾರಾದರೂ ಈ ಚಿಕ್ಕವರಲ್ಲಿ ಒಬ್ಬನಿಗೆ ಅವನು ನನ್ನ ಶಿಷ್ಯನೆಂದು ಕುಡಿಯಲು ಒಂದು ಲೋಟ ತಣ್ಣೀರನ್ನು ಕೊಟ್ಟರೂ ಅದಕ್ಕೆ ತಕ್ಕ ಪ್ರತಿಫಲವನ್ನು ಪಡೆಯದೆಹೋಗನೆಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ.”

26.06.2026 - ಖಂಡಿತವಾಗಿಯೂ ನನಗೆ ಮನಸ್ಸಿದೆ, ಗುಣಹೊಂದು.

 ಮೊದಲನೇ ವಾಚನ: 2 ಅರಸುಗಳು 25:1-12

ಚಿದ್ಕೀಯನು ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನ ವಿರುದ್ಧ ದಂಗೆ ಎದ್ದನು. ಇವನು ಚಿದ್ಕೀಯನ ಆಳ್ವಿಕೆಯ ಒಂಬತ್ತನೆಯ ವರ್ಷದ ಹತ್ತನೆಯ ತಿಂಗಳಿನ ಹತ್ತನೆಯ ದಿನ ಸರ್ವಸೈನ್ಯ ಸಮೇತ ಜೆರುಸಲೇಮಿಗೆ ಬಂದನು. ಅಲ್ಲಿ ಪಾಳೆಯ ಮಾಡಿಕೊಂಡು ಅದರ ಸುತ್ತಲು ಮಣ್ಣಿನ ದಿಬ್ಬವನ್ನು ಎಬ್ಬಿಸಿದನು. ಚಿದ್ಕೀಯನ ಆಳ್ವಿಕೆಯ ಹನ್ನೊಂದನೆಯ ವರ್ಷದಲ್ಲಿ ಅದಕ್ಕೆ ಮುತ್ತಿಗೆ ಹಾಕಿದನು. ಘೋರಕ್ಷಾಮದ ಕಾರಣ ನಗರದವರಿಗೆ ಆಹಾರ ಸಿಕ್ಕದೆ ಹೋಯಿತು. ನಗರಕ್ಕೆ ಮುತ್ತಿಗೆಹಾಕಿದ್ದ ಬಾಬಿಲೋನಿಯರು ಹನ್ನೊಂದನೆಯ ತಿಂಗಳಿನ ಒಂಬತ್ತನೆಯ ದಿವಸ ಪೌಳಿಗೋಡೆಯಲ್ಲಿ ಒಂದು ದ್ವಾರವನ್ನು ಮಾಡಿದರು. ಒಳಗಿದ್ದ ಅರಸನೂ ಅವನ ಎಲ್ಲ ಸೈನಿಕರೂ ಅದೇ ರಾತ್ರಿ, ಅರಸನ ತೋಟದ ಬಳಿಯಿದ್ದ ಬಾಗಿಲಿನ ಮೂಲಕ, ನಗರದಿಂದ ಓಡಿಹೋದರು. ಆ ಬಾಗಿಲು ಎರಡು ಗೋಡೆಗಳ ಮಧ್ಯೆಯಿತ್ತು. ಅರಸನು ಅರಾಬಾ ಎಂಬ ಕಣಿವೆ ಪ್ರದೇಶದ ಮಾರ್ಗವಾಗಿ ಓಡಿಹೋದನು. ಬಾಬಿಲೋನಿಯದ ಸೈನಿಕರು ಅವನನ್ನು ಹಿಂದಟ್ಟಿ ಜೆರಿಕೋವಿನ ಬಯಲಿನಲ್ಲಿ ಹಿಡಿದರು. ಅಷ್ಟರಲ್ಲಿ ಅವನ ಸೈನಿಕರೆಲ್ಲರು ಅವನನ್ನು ಬಿಟ್ಟು ಚದರಿಹೋಗಿದ್ದರು. ಅನಂತರ ಬಾಬಿಲೋನಿಯರು ಅವನನ್ನು ರಿಬ್ಲದಲ್ಲಿದ್ದ ತಮ್ಮ ಅರಸನ ಬಳಿಗೆ ಎಳೆದು ತಂದು ಅವನಿಗೆ ಶಿಕ್ಷೆಯನ್ನು ವಿಧಿಸಿದರು. ಇವನ ಇಬ್ಬರು ಮಕ್ಕಳನ್ನು ಅವನ ಕಣ್ಣೆದುರಿಗೇ ವಧಿಸಿ, ಅವನಿಗೆ ಬೇಡಿಹಾಕಿ ಎರಡು ಕಣ್ಣುಗಳನ್ನೂ ಕಿತ್ತು ಬಾಬಿಲೋನಿಗೆ ತೆಗೆದುಕೊಂಡು ಹೋದರು. ಐದನೆಯ ತಿಂಗಳಿನ ಏಳನೆಯ ದಿನ, ಅಂದರೆ ಬಾಬಿಲೋನಿನ ಅರಸ ನೆಬೂಕದ್ನೆಚ್ಚರನ ಆಳ್ವಿಕೆಯ ಹತ್ತೊಂಬತ್ತನೆಯ ವರ್ಷದಲ್ಲಿ, ಬಾಬಿಲೋನಿನ ಅರಸನ ಸೇವಕನೂ ರಕ್ಷಾದಳದ ಅಧಿಪತಿಯೂ ಆಗಿದ್ದ ನೆಬೂಜರದಾನ್ ಎಂಬವನು ಜೆರುಸಲೇಮಿಗೆ ಬಂದನು. ಸರ್ವೇಶ್ವರನ ಆಲಯವನ್ನೂ ಅರಮನೆಯನ್ನೂ ಜೆರುಸಲೇಮಿನ ಎಲ್ಲ ದೊಡ್ಡ ಮನೆಗಳನ್ನೂ ಸುಟ್ಟುಬಿಟ್ಟನು. ಅವನ ಜೊತೆಯಲ್ಲಿ ಬಂದಿದ್ದ ಬಾಬಿಲೋನಿಯದ ಸೈನ್ಯದವರು ಜೆರುಸಲೇಮಿನ ಸುತ್ತುಗೋಡೆಗಳನ್ನೆಲ್ಲ ಕೆಡವಿದರು. ರಕ್ಷಾದಳದ ಅಧಿಪತಿಯಾದ ನೆಬೂಜರದಾನನು ನಗರದಲ್ಲಿ ಉಳಿದವರನ್ನು, ಮೊದಲೇ ಬಾಬಿಲೋನಿನ ಅರಸನಿಗೆ ಮರೆಹೊಕ್ಕವರನ್ನು ಹಾಗು ಬೇರೆ ಜನರೆಲ್ಲರನ್ನು ಸೆರೆಗೆ ಒಯ್ದನು. ಹೊಲಗಳನ್ನು ಮತ್ತು ದ್ರಾಕ್ಷೀತೋಟಗಳನ್ನು ಮಾಡುವುದಕ್ಕಾಗಿ ನಾಡಿನ ಜನರಲ್ಲಿ ಕೇವಲ ದರಿದ್ರರನ್ನು ಮಾತ್ರ ಬಿಟ್ಟುಹೋದನು.

ಕೀರ್ತನೆ: 137:1-2, 3, 4-5, 6

ಶ್ಲೋಕ: ಜೆರುಸಲೇಮನು ನಾ ಸ್ಮರಣೆಮಾಡದಿದ್ದಲಿ, ಸೇದಿಹೋಗಲಿ ನಾಲಿಗೆ ನನ್ನ ಬಾಯಲಿ

1.  ಬಾಬಿಲೋನಿನ  ನದಿಗಳ  ತೀರದಲಿ  ಕುಳಿತು |
ಅತ್ತು  ಪ್ರಲಾಪಿಸಿದೆವು  ಸಿಯೋನನ್ನು   ನೆನೆದು ||
ಆ  ನಾಡಿನಲ್ಲಿ  ಕಿನ್ನರಿಗಳನ್ನೆ  ತೂಗುಹಾಕಿದೆವು|
ನೀರವಂಜಿ  ಮರಗಳಿಗೆ ಅವನ್ನು  ನೇತುಹಾಕಿದೆವು||
ಶ್ಲೋಕ

2.  ಸೆರೆಹಿಡಿದು  ಬಂಧಿಸಿದ ಆ ಜನ  ಈ  ಪರಿ  ಪೀಡಿಸಿದರೆಮ್ಮನು:|
"ಹಾಡಿ,  ನಮ್ಮ  ವಿನೋದಕ್ಕಾಗಿ  ಸಿಯೋನಿನ  ಗೀತೆಗಳಲೊಂದನು"||
ಶ್ಲೋಕ

3.  ಪ್ರಭು  ಗೀತೆಗಳ  ನಾವು  ಗಾನ  ಮಾಡುವುದೆಂತು|
ಅನ್ಯ  ನಾಡಿನೊಳು  ಅವುಗಳನು  ಹಾಡುವುದೆಂತು||
ಜೆರುಸಲೇಮ್, ನಾನು  ನಿನ್ನ   ಮರೆತಲ್ಲಿ|
ನನ್ನ  ಬಲ  ಹಸ್ತ  ಬತ್ತಿಹೋಗಿಬಿಡಲಿ||
ಶ್ಲೋಕ

4.  ಜೆರುಸಲೇಮನು  ನಾ  ಸ್ಮರಣೆಮಾಡದಿದ್ದಲಿ |
ಫಆ  ಸ್ಮರಣೆ  ಸರ್ವೋತ್ತಮ  ನಲಿವು  ನನಗಾಗದಿದ್ದಲಿ|
ಸೇದಿಹೋಗಲಿ  ನಾಲಿಗೆ  ನನ್ನ  ಬಾಯಲಿ ||
ಶ್ಲೋಕ

🌺✝️🌺

ಘೋಷಣೆ
(ಎಫೆಸಿಯರಿಗೆ 1: 17-18)

ಅಲ್ಲೆಲೂಯ, ಅಲ್ಲೆಲೂಯ!
ನಮ್ಮ  ಪ್ರಭು  ಯೇಸು  ಕ್ರಿಸ್ತರ  ದೇವರೂ,  ಮಹಿಮಾನ್ವಿತ ತಂದೆಯೂ ಆದವರು ನಿಮಗೆ  ಜ್ಞಾನವನ್ನು ವಿವೇಚನೆಯನ್ನು ನೀಡುವ ಆತ್ಮವನ್ನು ದಯಪಾಲಿಸಲಿ ಮತ್ತು ನಿಮ್ಮ ಮನೋನೇತ್ರಗಳನ್ನು ತೆರೆಯಲಿ||
ಅಲ್ಲೆಲೂಯ!

ಶುಭಸಂದೇಶ: ಮತ್ತಾಯ 8:1-4


ಯೇಸುಸ್ವಾಮಿ ಬೆಟ್ಟದಿಂದ ಇಳಿದುಬಂದಾಗ ಜನರು ಗುಂಪುಗುಂಪಾಗಿ ಅವರನ್ನು ಹಿಂಬಾಲಿಸಿದರು. ಆಗ ಒಬ್ಬ ಕುಷ್ಠರೋಗಿ ಯೇಸುವಿನ ಮುಂದೆ ಬಂದು, ತಲೆಬಾಗಿ, “ಸ್ವಾಮೀ, ತಾವು ಮನಸ್ಸುಮಾಡಿದರೆ ನನ್ನನ್ನು ಗುಣಮಾಡಬಲ್ಲಿರಿ,” ಎಂದು ಬೇಡಿದನು. ಯೇಸು ಕೈಚಾಚಿ ಅವನನ್ನು ಮುಟ್ಟಿ, “ಖಂಡಿತವಾಗಿಯೂ ನನಗೆ ಮನಸ್ಸಿದೆ, ಗುಣಹೊಂದು,” ಎಂದರು. ತಕ್ಷಣವೇ ಅವನ ಕುಷ್ಠವು ಮಾಯವಾಯಿತು. ಯೇಸು ಅವನಿಗೆ, “ಎಚ್ಚರಿಕೆ, ನೀನು ಗುಣಹೊಂದಿರುವುದನ್ನು ಯಾರಿಗೂ ಹೇಳಕೂಡದು. ಆದರೆ ನೆಟ್ಟಗೆ ಯಾಜಕನ ಬಳಿಗೆ ಹೋಗು; ಅವನು ನಿನ್ನನ್ನು ಪರೀಕ್ಷಿಸಿನೋಡಲಿ. ಅನಂತರ ಮೋಶೆ ನಿಯಮಿಸಿರುವ ಪ್ರಕಾರ ಶುದ್ಧೀಕರಣವಿಧಿಯನ್ನು ಅನುಸರಿಸು. ಇದು ಜನರಿಗೆ ಸಾಕ್ಷಿಯಾಗಿರಲಿ,” ಎಂದರು.

25.06.2026 - ನನ್ನ ಈ ಮಾತನ್ನು ಕೇಳಿ ಅದರಂತೆ ನಡೆಯುವ ಪ್ರತಿಯೊಬ್ಬನೂ ಬಂಡೆಯ ಮೇಲೆ ಮನೆ ಕಟ್ಟಿಕೊಂಡ ಬುದ್ಧಿವಂತನನ್ನು ಹೋಲುತ್ತಾನೆ

 ಮೊದಲನೇ ವಾಚನ: ೨ ಅರಸುಗಳು 24:8-17


ಯೆಹೋಯಾಖೀನನು ಅರಸನಾದಾಗ ಹದಿನೆಂಟು ವರ್ಷದವನಾಗಿದ್ದು ಜೆರುಸಲೇಮಿನಲ್ಲಿ ಮೂರು ತಿಂಗಳು ಆಳಿದನು. ಜೆರುಸಲೇಮಿನ ಎಲ್ನಾತಾನನ ಮಗಳಾದ ನೆಹುಷ್ಟಾ ಎಂಬಾಕೆ ಇವನ ತಾಯಿ. ಇವನು ತನ್ನ ತಂದೆಯಂತೆ ಸರ್ವೇಶ್ವರನ ದೃಷ್ಟಿಯಲ್ಲಿ ದ್ರೋಹಿಯಾಗಿದ್ದನು. ಅವನ ಕಾಲದಲ್ಲಿ ಬಾಬಿಲೋನಿನ ಅರಸ ನೆಬೂಕದ್ನೆಚ್ಚರನ ಸೈನ್ಯದವರು ಜೆರುಸಲೇಮಿಗೆ ದಂಡೆತ್ತಿ ಬಂದು ಅದಕ್ಕೆ ಮುತ್ತಿಗೆ ಹಾಕಿದರು. ಅಷ್ಟರಲ್ಲಿ ನೆಬೂಕದ್ನೆಚ್ಚರನೂ ಬಂದನು. ಆಗ ಜುದೇಯದ ಅರಸ ಯೆಹೋಯಾಖೀನನು, ತನ್ನ ತಾಯಿ, ಪರಿವಾರದವರು, ಸೇನಾಪತಿಗಳು, ಕಂಚುಕಿಗಳು ಇವರೊಡನೆ ಅವನ ಬಳಿಗೆ ಹೋದನು. ಅವನು ಇವನನ್ನು ತನ್ನ ಆಳ್ವಿಕೆಯ ಎಂಟನೆಯ ವರ್ಷದಲ್ಲಿ ಸೆರೆಹಿಡಿದನು. ಇದಲ್ಲದೆ, ಸರ್ವೇಶ್ವರ ಮುಂತಿಳಿಸಿದ ಪ್ರಕಾರ, ಅವನು ಸರ್ವೇಶ್ವರನ ಆಲಯದ ಮತ್ತು ಅರಮನೆಯ ಭಂಡಾರಗಳಲ್ಲಿದ್ದ ದ್ರವ್ಯವನ್ನೆಲ್ಲಾ ದೋಚಿಕೊಂಡು ಹೋದನು. ಇಸ್ರಯೇಲರ ಅರಸನಾದ ಸೊಲೊಮೋನನು ಸರ್ವೇಶ್ವರನ ಆಲಯಕ್ಕಾಗಿ ಮಾಡಿಸಿದ್ದ ಬಂಗಾರದ ಎಲ್ಲಾ ಆಭರಣಗಳನ್ನು ಮುರಿದುಬಿಟ್ಟನು. ಜೆರುಸಲೇಮಿನಲ್ಲಿದ್ದ ಎಲ್ಲಾ ಪದಾಧಿಕಾರಿಗಳನ್ನೂ ಯೋಧರನ್ನೂ ಕಮ್ಮಾರರು ಮೊದಲಾದ ಕೈಗಾರಿಕೆಯವರನ್ನೂ ಒಟ್ಟಾರೆ ಹತ್ತು ಸಾವಿರ ಜನರನ್ನು ಸೆರೆಗೊಯ್ದನು. ನಾಡಿನ ಜನರಲ್ಲಿ ಕೇವಲ ಬಡವರನ್ನು ಹೊರತಾಗಿ ಬೇರೆ ಯಾರನ್ನೂ ಬಿಡಲಿಲ್ಲ. ಅವನು ಯೆಹೋಯಾಖೀನನ್ನೂ ಅವನ ತಾಯಿ, ಹೆಂಡತಿಯರು, ಕಂಚುಕಿಗಳನ್ನೂ ನಾಡಿನ ಪ್ರಧಾನ ಪುರುಷರು ಇವರನ್ನೂ, ಏಳು ಸಾವಿರ ಮಂದಿ ಯೋಧರನ್ನೂ ಸಾವಿರ ಮಂದಿ ಕಮ್ಮಾರರು ಮೊದಲಾದ ಕೈಗಾರಿಕೆಯವರನ್ನೂ ಜೆರುಸಲೇಮಿನಿಂದ ಬಾಬಿಲೋನಿಗೆ ಒಯ್ದನು. ಅವರೆಲ್ಲರು ಪುಷ್ಟರೂ ರಣವೀರರೂ ಆಗಿದ್ದರು. ಬಾಬಿಲೋನಿನ ಅರಸನು ಯೆಹೋಯಾಖೀನನಿಗೆ ಬದಲಾಗಿ ಅವನ ಚಿಕ್ಕಪ್ಪನಾದ ಮತ್ತನ್ಯ ಎಂಬುವನನ್ನು ಅರಸನನ್ನಾಗಿ ನೇಮಿಸಿ ಅವನಿಗೆ ‘ಚಿದ್ಕೀಯ’ ಎಂಬ ಹೆಸರಿಟ್ಟನು.

ಕೀರ್ತನೆ: 79:1-2, 3-5, 8, 9

ಶ್ಲೋಕ: ದೇವಾ, ನೆರವಾಗು ನಿನ್ನ ನಾಮಮಹಿಮೆಯ ನಿಮಿತ್ತ

1.  ಹೊಕ್ಕಿದರು  ದೇವಾ,  ಮ್ಲೇಚ್ಛರು ನಿನ್ನ ಸ್ವಂತ ನಾಡನು |
ಹೊಲೆಮಾಡಿಹರು  ನಿನ್ನ  ಪವಿತ್ರ  ದೇವಾಲಯವನು |
ಹಾಳು ದಿಬ್ಬವನ್ನಾಗಿಸಿಹರು  ಜೆರುಸಲೇಮ್  ನಗರವನು ||
ಅರ್ಪಿಸಿದರು  ನಿನ್ನ  ದಾಸರ  ಶವಗಳನು  ಗಗನ  ಪಕ್ಷಿಗಳಿಗೆ |
ಹಾಕಿದರು  ನಿನ್ನ  ಭಕ್ತರ   ಮಾಂಸವನು  ಕಾಡು  ಮೃಗಗಳಿಗೆ ||
ಶ್ಲೋಕ

2.  ನೀರಂತೆ  ಚೆಲ್ಲಿಹರಾ  ನೆತ್ತರನು  ಜೆರುಸಲೇಮ್   ಸುತ್ತಲು |
ನಮ್ಮವರ  ಶವಗಳನು  ಹೂಳಲು  ಯಾರೂ  ಇಲ್ಲದಿರಲು ||
ನಿಂದಾಸ್ಪದರಾದೆವು  ನೆರೆಹೊರೆಯ  ಜನಾಂಗಗಳಿಗೆ |
ಗುರಿಯಾದೆವು  ಸುತ್ತಣವರ  ಹಾಸ್ಯ  ಕುಚೋದ್ಯಗಳಿಗೆ ||
ನಿನ್ನ  ಕೋಪತಾಪ  ಹೇ  ಪ್ರಭೂ,  ಇನ್ನೆಷ್ಟರವರೆಗೆ?|
ಉರಿಯುತ್ತಿರಬೇಕೆ  ಸದಾ  ನಿನ್ನ  ರೋಷಾಗ್ನಿಯ ಧಗೆ?||
ಶ್ಲೋಕ

3.  ಹೊರಿಸಬೇಡ  ಪೂರ್ವಿಕರ  ತಪ್ಪುಗಳನು  ನಮ್ಮ  ಮೇಲೆ|  ಉರಿ  ಸಂಕಟದಲ್ಲಿರುವೆವು  ತೋರೆಮಗೆ  ಕರುಣೆಯನೀಗಲೆ  ||
ದೇವಾ,  ಮುಕ್ತಿದಾತ,  ನೆರವಾಗು ನಿನ್ನ ನಾಮ  ಮಹಿಮೆಯ ನಿಮಿತ್ತ |
ಪಾಪಗಳನು  ಅಳಿಸಿ  ನಮ್ಮನ್ನುದ್ದರಿಸು  ನಿನ್ನ  ನಾಮದ  ಪ್ರಯುಕ್ತ||
ಶ್ಲೋಕ

ಘೋಷಣೆ
(2 ಕೊರಿಂಥಿ 5: 19)

ಅಲ್ಲೆಲೂಯ, ಅಲ್ಲೆಲೂಯ!
ದೇವರು  ಕ್ರಿಸ್ತ  ಯೇಸುವಿನಲ್ಲಿ  ಇಡೀ  ಜಗತ್ತನ್ನೇ  ತಮ್ಮೊಡನೆ  ಸಂಧಾನಗೊಳಿಸುತ್ತಿದ್ದಾರೆ| ಈ  ಸಂಧಾನದ  ಸಂದೇಶವನ್ನು  ಸಾರುವ  ಸೌಭಾಗ್ಯವನ್ನು  ಅವರೇ  ನಮಗೆ  ಕೊಟ್ಟಿದ್ದಾರೆ ||
ಅಲ್ಲೆಲೂಯ!




ಶುಭಸಂದೇಶ: ಮತ್ತಾಯ 7:21-29

ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು: “ನನ್ನನ್ನು ‘ಸ್ವಾಮೀ, ಸ್ವಾಮೀ,’ ಎನ್ನುವ ಪ್ರತಿಯೊಬ್ಬನೂ ಸ್ವರ್ಗಸಾಮ್ರಾಜ್ಯವನ್ನು ಪ್ರವೇಶಿಸನು. ಸ್ವರ್ಗದಲ್ಲಿರುವ ನನ್ನ ತಂದೆಯ ಚಿತ್ತಾನುಸಾರ ನಡೆಯುವವನು ಮಾತ್ರ ಅದನ್ನು ಪ್ರವೇಶಿಸುವನು. ತೀರ್ಪಿನ ದಿನದಂದು, ‘ಸ್ವಾಮೀ, ಸ್ವಾಮೀ, ನಿಮ್ಮ ಹೆಸರಿನಲ್ಲಿ ನಾವು ಪ್ರವಾದನೆ ಮಾಡಲಿಲ್ಲವೇ? ನಿಮ್ಮ ಹೆಸರಿನಲ್ಲಿ ದೆವ್ವಗಳನ್ನು ಬಿಡಿಸಲಿಲ್ಲವೆ? ನಿಮ್ಮ ಹೆಸರಿನಲ್ಲಿ ಹಲವಾರು ಮಹತ್ಕಾರ್ಯಗಳನ್ನು ಮಾಡಲಿಲ್ಲವೇ?’ ಎಂದು ಅನೇಕರು ನನಗೆ ಹೇಳುವರು. ಆಗ ನಾನು ಅವರಿಗೆ ‘ಇಂದಿಗೂ ನಿಮ್ಮ ಗುರುತೇ ನನಗಿಲ್ಲ. ಅಧರ್ಮಿಗಳೇ, ನನ್ನಿಂದ ತೊಲಗಿರಿ,’ ಎಂದು ಬಹಿರಂಗವಾಗಿ ಹೇಳಿಬಿಡುವೆನು.” “ನನ್ನ ಈ ಮಾತನ್ನು ಕೇಳಿ ಅದರಂತೆ ನಡೆಯುವ ಪ್ರತಿಯೊಬ್ಬನೂ ಬಂಡೆಯ ಮೇಲೆ ಮನೆ ಕಟ್ಟಿಕೊಂಡ ಬುದ್ಧಿವಂತನನ್ನು ಹೋಲುತ್ತಾನೆ. ಮಳೆ ಬಿತ್ತು, ನೆರೆ ಬಂತು, ಗಾಳಿ ಬೀಸಿ ಆ ಮನೆಗೆ ಅಪ್ಪಳಿಸಿತು. ಆದರೂ ಅದು ಬೀಳಲಿಲ್ಲ. ಕಾರಣ ಅದರ ಅಡಿಗಟ್ಟು ಬಂಡೆಯ ಮೇಲಿತ್ತು. ನನ್ನ ಈ ಮಾತುಗಳನ್ನು ಕೇಳಿಯೂ ಅದರಂತೆ ನಡೆಯದ ಪ್ರತಿಯೊಬ್ಬನೂ ಮರಳಿನ ಮೇಲೆ ಮನೆ ಕಟ್ಟಿಕೊಂಡ ಬುದ್ಧಿಹೀನನನ್ನು ಹೋಲುತ್ತಾನೆ. ಮಳೆ ಬಿತ್ತು, ನೆರೆ ಬಂತು, ಗಾಳಿ ಬೀಸಿ ಆ ಮನೆಗೆ ಅಪ್ಪಳಿಸಿತು; ಅದು ಕುಸಿದು ಬಿತ್ತು. ಅದಕ್ಕಾದ ಪತನವೋ ಅಗಾಧ!” ಯೇಸುಸ್ವಾಮಿ ಇದೆಲ್ಲವನ್ನು ಹೇಳಿ ಮುಗಿಸಿದರು. ಅವರ ಬೋಧನೆ ಜನರಲ್ಲಿ ಅಮೋಘ ಪ್ರಭಾವವನ್ನು ಬೀರಿತು. ಏಕೆಂದರೆ, ಅವರ ಧರ್ಮಶಾಸ್ತ್ರಿಗಳಂತೆ ಬೋಧಿಸದೆ ಯೇಸು ಅಧಿಕಾರ ವಾಣಿಯಿಂದ ಪ್ರಬೋಧಿಸುತ್ತಿದ್ದರು.

24.06.2026 - "ಇವನ ಹೆಸರು ಯೊವಾನ್ನ

 ಮೊದಲನೆಯ ವಾಚನ

ಪ್ರವಾದಿ ಯೆಶಾಯನ  ಗ್ರಂಥ  49:1-6

                                      

ಕಿವಿಗೊಡಿ  ನನ್ನ  ದ್ವೀಪ  ನಿವಾಸಿಗಳೇ,  ಆಲಿಸಿ  ನನ್ನನ್ನು  ದೂರದ  ಜನಾಂಗಗಳೇ.  ಸರ್ವೇಶ್ವರ  ಕರೆದನೆನ್ನನ್ನು  ಗರ್ಭದಲ್ಲಿದ್ದಾಗಲೇ,  ಹೆಸರಿಟ್ಟನೆನಗೆ  ನಾನು  ತಾಯಿಯ  ಉದರದಲ್ಲಿದ್ದಾಗಲೇ.  ಮಾಡಿದನು  ನನ್ನ  ನುಡಿಯನ್ನು  ಹರಿತವಾದ  ಖಡ್ಗವನ್ನಾಗಿ.  ಮುಚ್ಚಿಟ್ಟಿಹನು  ನನ್ನನ್ನು  ತನ್ನ  ಕರದ  ನೆರಳಿನಲ್ಲಿ.  ರೂಪಿಸಿಹನು  ನನ್ನನ್ನು  ಚೂಪಾದ  ಬಾಣವನ್ನಾಗಿ,  ಬಚ್ಚಿಟ್ಟಿಹನು  ನನ್ನನ್ನು  ತನ್ನ  ಬತ್ತಳಿಕೆಯಲ್ಲಿ.  ಆತನೆನಗೆ  ಇಂತೆಂದ:

"ನೀನೆನ್ನ  ದಾಸ;  ನನ್ನ  ಮಹಿಮೆ  ಬೆಳಗಿಸುವ  ಇಸ್ರಯೇಲ,  "ಇಂತೆಂದುಕೊಂಡೆ  ನಾನಾಗ.  ವ್ಯರ್ಥವಾಯಿತು  ನನ್ನ  ಸಾಮರ್ಥ್ಯವೆಲ್ಲ,  ಶೂನ್ಯವಾಗಿ  ಹೋಯಿತು  ನನ್ನ  ಶಕ್ತಿಯೆಲ್ಲ.  ನನಗೆ  ದೊರಕುವುದು  ನ್ಯಾಯ  ಸರ್ವೇಶ್ವರನ  ಕೈಯಲ್ಲೇ,  ನನಗೆ  ಬರುವುದು  ಬಹುಮಾನ  ಆ  ದೇವರಿಂದಲೇ.  ಯಕೋಬ್ಯರನ್ನು  ತನ್ನ  ಬಳಿಗೆ  ಕರೆತರಲು,  ಇಸ್ರಯೇಲರನ್ನು  ತನ್ನೊಂದಿಗೆ  ಸೇರಿಸಿಕೊಳ್ಳಲು,  ತನ್ನ  ದಾಸನನ್ನಾಗಿ  ನನ್ನ  ರೂಪಿಸಿದನು.  ತಾಯ  ಗರ್ಭದಲ್ಲಿದ್ದಾಗಲೇ  ಮಾಡಿದನಿದನು.  ಸನ್ಮಾನ್ಯನು  ನಾನು  ಸರ್ವೇಶ್ವರನ  ದೃಷ್ಟಿಯಲ್ಲಿ;  ನನ್ನ  ಶಕ್ತಿಸಾಮರ್ಥ್ಯ  ಇರುವುದು  ಆ  ದೇವರಲ್ಲಿ.  ಮತ್ತೆ  ಆತ  ಇಂತೆಂದನು  ನನಗೆ:

"ಮಹಾತ್ಕಾರ್ಯವೇನೂ  ಅಲ್ಲ.  ನನ್ನ  ದಾಸನಾದ  ನಿನಗೆ  ಕುಲಗಳನ್ನು  ಉದ್ದರಿಸುವ  ಮಾತ್ರಕೆ,    ಇಸ್ರಯೇಲರಲ್ಲಿ  ರಕ್ಷಿತರಾದವರನ್ನು  ಮರಳಿ  ಬರಮಾಡುವ  ಮಾತ್ರಕೆ.  ನೇಮಿಸಿರುವೆನು  ನಿನ್ನನ್ನು  ಜ್ಯೋತಿಯನ್ನಾಗಿ  ಸರ್ವ  ಜನಾಂಗಗಳಿಗೆ,  ನನ್ನ  ರಕ್ಷಣೆ  ವ್ಯಾಪಿಸಿರುವಂತೆ  ಮಾಡಲು  ಜಗದ  ಕಟ್ಟ  ಕಡೆಯವರೆಗೆ."

- ಪ್ರಭುವಿನ  ವಾಕ್ಯ

ಕೀರ್ತನೆ: 139: 1-3,13-14,15

ಶ್ಲೋಕ:  ನಿನಗೆ  ವಂದನೆ, ನೀ  ನನ್ನ  ಭಯಭಕ್ತಿಗೆ  ಪಾತ್ರ,  ನಿನ್ನ  ಕೃತ್ಯಗಳು  ಅದ್ಭುತಕರ  ಹಾಗೂ  ವಿಚಿತ್ರ.

1.  ಪ್ರಭೂ, ಪರಿಶೋಧಿಸಿರುವೆ ನೀ ನನ್ನನು|

ನೀ ಅರಿತುಕೊಂಡಿರುವ ಅಂತರಂಗವನು||

ನಾ ಕೂರುವುದೂ ಏಳುವುದು ನಿನಗೆ ಗೊತ್ತಿದೆ|

ನನ್ನ ಆಲೋಚನೆ ದೂರದಿಂದಲೇ ನಿನಗೆ ತಿಳಿದಿದೆ||

ನನ್ನ ನಡೆಯನು, ನಿದ್ರೆಯನು ನೀ ಬಲ್ಲಾತ|

ನನ್ನ ನಡೆತೆಯಲ್ಲವು ನಿನಗೆ ಸುಪರಿಚಿತ||

  

2.  ನನ್ನ ಅಂತರಂಗವನು ಉಂಟುಮಾಡಿದಾತ ನೀನು|

ತಾಯಗರ್ಭದಲೇ ನನ್ನ ರೂಪಿಸಿದಾತ ನೀನು||

ನಿನಗೆ ವಂದನೆ, ನೀ ನನ್ನ  ಭಯಭಕ್ತಿಗೆ ಪಾತ್ರ|

ನಿನ್ನ ಕೃತ್ಯಗಳು ಅದ್ಭುತಕರ ಹಾಗೂ ವಿಚಿತ್ರ||

 

3.  ನನ್ನ ಅಸ್ಥಿಪಂಜರವನು ರೂಪಿಸುವಾಗ|

ತಾಯಗರ್ಭದೊಳು ಅಚ್ಚರದಿ ರಚಿಸುವಾಗ||

ಗುಟ್ಟಾಗಿ ನಾನಲ್ಲಿ ಬೆಳೆಯುತ್ತಿದ್ದಾಗ|

ಮರೆಯಾಗಿರಲಿಲ್ಲ ನಾನು ನಿನಗಾಗ||

ಎರಡನೆಯ ವಾಚನ : ಪ್ರೇಷಿತರ ಕಾರ್ಯಕಲಾಪ 13:22-26


"ದೇವರು  ಸೌಲನನ್ನು  ತ್ಯಜಿಸಿ  ದಾವೀದನನ್ನು  ಅರಸನನ್ನಾಗಿ  ನೇಮಿಸಿದರು.  ಇವನ  ಬಗ್ಗೆ  ದೇವರು,  'ಜೆಸ್ಸೆಯನ  ಮಗ  ದಾವೀದನು  ನನಗೆ  ಮೆಚ್ಚುಗೆಯಾದ  ವ್ಯಕ್ತಿ;   ಇವನು  ನನ್ನ  ಆಶೆ  ಆಕಾಂಕ್ಷೆಗಳನೆಲ್ಲಾ  ಪೂರೈಸುವನು' ಎಂದು  ತಮ್ಮ  ಒಪ್ಪಿಗೆಯನ್ನು  ಸೂಚಿಸಿದರು.  ಈ  ದಾವೀದನ  ಸಂತತಿಯಿಂದಲೇ  ದೇವರು  ತಮ್ಮ  ವಾಗ್ಧನದ  ಪ್ರಕಾರ  ಇಸ್ರಯೇಲ್  ಜನರಿಗೆ  ಒಬ್ಬ  ಉದ್ಧಾರಕನನ್ನು  ಕಳುಹಿಸಿದರು.  ಇವರೇ  ಯೇಸು.  ಇವರ  ಆಗಮನಕ್ಕೆ  ಸಿದ್ಧತೆಯಾಗಿ  ಪಶ್ಚಾತ್ತಾಪಪಟ್ಟು  ಪಾಪಕ್ಕೆ  ವಿಮುಖರಾಗಿ  ದೇವರಿಗೆ  ಅಭಿಮುಖರಾಗಿ  ಸ್ನಾನದೀಕ್ಷೆಯನ್ನು  ಪಡೆಯಬೇಕೆಂದು  ಯೊವಾನ್ನನು  ಇಸ್ರಯೇಲಿನ  ಎಲ್ಲಾ ಜನರಿಗೆ  ಸಾರಿದನು.  ಯೊವಾನ್ನನು  ತನ್ನ  ನಿಯೋಗವನ್ನು  ಪೂರೈಸುತ್ತಿದ್ದಂತೆ  ಜನರಿಗೆ,  'ನಾನು  ಯಾರೆಂದು  ನೀವು  ನೆನಸುತ್ತೀರಿ?  ನೀವು  ಎದುರು  ನೋಡುತ್ತಿರುವ  ವ್ಯಕ್ತಿ  ನಾನಲ್ಲ.  ನನ್ನ  ಅನಂತರ  ಒಬ್ಬರು  ಬರುವರು;  ಅವರ  ಪಾದರಕ್ಷೆಗಳನ್ನು  ಬಿಚ್ಚುವುದಕ್ಕೂ  ನಾನು  ಯೋಗ್ಯನಲ್ಲ'  ಎಂದನು.  "ನನ್ನ  ಸಹೋದರರೇ,  ಅಬ್ರಹಾಮನ  ಸಂತತಿಯವರೇ  ಮತ್ತು  ದೇವರಲ್ಲಿ  ಭಯಭಕ್ತಿಯುಳ್ಳ  ಇನ್ನಿತರರೇ,  ಈ  ಜೀವೋದ್ದಾರದ  ಸಂದೇಶವನ್ನು  ಕಳುಹಿಸಿರುವುದು  ನಮಗಾಗಿಯೇ."

ಪ್ರಭುವಿನ ವಾಕ್ಯ

ಅಲ್ಲೆಲೂಯ, ಅಲ್ಲೆಲೂಯ!

"ಸುಕುಮಾರ,  ನೀನೆನಿಸಿಕೊಳ್ಳುವೆ  ಪರಾತ್ಪರನ  ಪ್ರವಾದಿ | ಸರ್ವೇಶ್ವರನ  ಮಾರ್ಗವನು  ಸಜ್ಜುಗೊಳಿಸುವೆ  ಮುಂದಾಗಿ  ತೆರಳಿ ||

ಶುಭಸಂದೇಶ : ಲೂಕನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 1:57-66,80

                               


ದಿನ  ತುಂಬಿದಾಗ  ಎಲಿಜಬೇತಳು  ಗಂಡು  ಮಗುವಿಗೆ  ಜನ್ಮವಿತ್ತಳು.  ಸರ್ವೇಶ್ವರ  ಆಕೆಗೆ  ವಿಶೇಷ  ಕೃಪೆ  ತೋರಿದ್ದಾರೆಂದು  ಅರಿತುಕೊಂಡ  ನೆರೆಹೊರೆಯವರೂ  ಬಂಧುಬಳಗದವರೂ  ಬಂದು  ಆಕೆಯೊಡನೆ  ಸೇರಿ  ಸಂತೋಷಪಟ್ಟರು.  ಎಂಟನೆಯ  ದಿನ  ಮಗುವಿನ  ಸುನ್ನತಿಗಾಗಿ  ಅವರು  ಬಂದು  ಅದಕ್ಕೆ,  ತಂದೆಯ  ಹೆಸರನ್ನು  ಅನುಸರಿಸಿ,  ಜಕರೀಯನೆಂದು  ನಾಮಕರಣ  ಮಾಡುವುದರಲ್ಲಿದ್ದರು.  ಆದರೆ  ಮಗುವಿನ  ತಾಯಿ,  "ಇಲ್ಲ,  ಅದು  ಕೂಡದು,  ಅವನಿಗೆ  'ಯೊವಾನ್ನ'  ಎಂಬ  ಹೆಸರಿಡಬೇಕು, " ಎಂದಳು.  ಅದಕ್ಕೆ  ಅವರು,  "ನಿನ್ನ  ಬಂಧು  ಬಳಗದವರಲ್ಲಿ  ಯಾರಿಗೂ  ಈ  ಹೆಸರು  ಇಲ್ಲವಲ್ಲಾ‌,  "ಎಂದು  ಹೇಳಿ,  "ಮಗುವಿಗೆ  ಏನು. ಹೆಸರಿಡಬೇಕೆನ್ನುತ್ತೀರಿ?  "ಎಂದು  ಮಗುವಿನ  ತಂದೆಗೆ  ಸನ್ನೆ ಮಾಡಿ  ಕೇಳಿದರು.  ಆಗ  ಜಕರೀಯನು  ಬರೆಯುವ  ಒಂದು  ಹಲಗೆಯನ್ನು  ತರಿಸಿಕೊಂಡು,  "ಇವನ  ಹೆಸರು  ಯೊವಾನ್ನ " ಎಂದು  ಬರೆದನು.  ಎಲ್ಲರೂ  ಬೆರಗಾದರು.  ತಕ್ಷಣವೇ  ಅವನಿಗೆ  ಬಾಯಿ  ಬಂದಿತು.  ನಾಲಿಗೆ  ಸಡಿಲವಾಯಿತು;  ಅವನು  ಮಾತನಾಡಲು  ಆರಂಭಿಸಿ  ದೇವರನ್ನು  ಸ್ತುತಿಸಿದನು.  ನೆರೆಹೊರೆಯವರೆಲ್ಲರೂ  ತಲ್ಲಣಗೊಂಡರು.  ಈ  ಸಮಾಚಾರ  ಜುದೇಯದ  ಗುಡ್ಡಗಾಡು  ಪ್ರಾಂತ್ಯದಲ್ಲೆಲ್ಲಾ  ಹರಡಿತು.  ಕೇಳಿದವರೆಲ್ಲರೂ  ಈ  ವಿಷಯಗಳನ್ನು  ಮನಸ್ಸಿನಲ್ಲಿಟ್ಟುಕೊಂಡು,  ಈ  ಮಗು  ಮುಂದೆ  ಎಂಥವನಾಗುವನೋ! " ಎಂದುಕೊಂಡರು.  ನಿಶ್ಚಯವಾಗಿಯೂ  ಸರ್ವೇಶ್ವರನ  ಅಭಯ  ಹಸ್ತವು  ಈ  ಮಗುವಿನ    ಮೇಲಿತ್ತು.  ಬಾಲಕನು  ಬೆಳೆದಂತೆ  ಆತ್ಮಶಕ್ತಿಯುತನಾದನು.  ಇಸ್ರಯೇಲ್  ಜನರಿಗೆ  ಬಹಿರಂಗವಾಗಿ  ಕಾಣಿಸಿಕೊಳ್ಳುವವರೆಗೂ  ಅವನು  ಬೆಂಗಾಡಿನಲ್ಲೇ  ವಾಸಿಸುತ್ತಿದ್ದನು.

- ಪ್ರಭುಕ್ರಿಸ್ತರ  ಶುಭಸಂದೇಶ

23.06.2026 - ಪವಿತ್ರವಾದುದನ್ನು ನಾಯಿಗಳಿಗೆ ಹಾಕಬೇಡಿ - ಅವು ನಿಮ್ಮ ಮೇಲೆ ತಿರುಗಿಬಿದ್ದು ನಿಮ್ಮನ್ನು ಸೀಳಿ ಬಿಟ್ಟಾವು

 ಮೊದಲನೇ ವಾಚನ: 2 ಅರಸುಗಳು 19:9-11, 14-21, 31-35, 36



ಸುಡಾನಿನ ರಾಜ ತಿರ್ಹಾಕನು ತನಗೆ ವಿರುದ್ಧವಾಗಿ ಹೊರಟಿದ್ದಾನೆ ಎಂಬ ಸುದ್ದಿ ಅಸ್ಸೀರಿಯದ ಅರಸನಿಗೆ ಮುಟ್ಟಿತು. ಆಗ ಅವನು ಜುದೇಯದ ಅರಸನಾದ ಹಿಜ್ಕೀಯನಿಗೆ, “ಜೆರುಸಲೇಮ್ ನನ್ನ ವಶವಾಗುವುದಿಲ್ಲವೆಂದು ನೀನು ನಂಬುವ ದೇವರು ನಿನಗೆ ಹೇಳಿ ನಿನ್ನನ್ನು ಮೋಸಗೊಳಿಸಬಹುದು. ಅಸ್ಸೀರಿಯದ ಅರಸನು ಎಲ್ಲಾ ರಾಜ್ಯಗಳನ್ನು ಸಂಪೂರ್ಣವಾಗಿ ನಾಶಪಡಿಸಿದ್ದಾನೆಂಬ ಸಮಾಚಾರ ನಿನಗೆ ಮುಟ್ಟಿರಬೇಕು, ಹೀಗಿರುವಲ್ಲಿ ನೀನು ಮಾತ್ರ ತಪ್ಪಿಸಿಕೊಳ್ಳುವಿಯೋ?  ಹಿಜ್ಕೀಯನು, ಆ ದೂತರು ತಂದ ಪತ್ರವನ್ನು ತೆಗೆದುಕೊಂಡು ಓದಿದ ನಂತರ, ದೇವಾಲಯಕ್ಕೆ ಹೋಗಿ ಅದನ್ನು ಸರ್ವೇಶ್ವರ ಸ್ವಾಮಿಯ ಮುಂದೆ ತೆರೆದಿಟ್ಟು, ಹೀಗೆಂದು ಪ್ರಾರ್ಥನೆ ಮಾಡಿದನು: “ಇಸ್ರಯೇಲಿನ ದೇವರೇ, ಸರ್ವೇಶ್ವರಾ, ಕೆರೂಬಿಗಳ ಮೇಲೆ ಆಸೀನಾರೂಢರಾಗಿರುವವರೇ, ಎಲ್ಲಾ ಭೂರಾಜ್ಯಗಳನ್ನು ಆಳುವ ದೇವರು ನೀವೊಬ್ಬರೇ; ಪರಲೋಕ ಭೂಲೋಕಗಳನ್ನುಂಟುಮಾಡಿದವರು ನೀವೇ. ಸರ್ವೇಶ್ವರಾ, ಕಿವಿಗೊಟ್ಟು ಕೇಳಿ; ಸರ್ವೇಶ್ವರಾ, ಕಣ್ಣಿಟ್ಟು ನೋಡಿ: ಸನ್ಹೇರೀಬನು ಜೀವಸ್ವರೂಪ ದೇವರಾದ ನಿಮ್ಮನ್ನು ನಿಂದಿಸುವುದಕ್ಕಾಗಿ ಹೇಳಿಕಳುಹಿಸಿದ ಈ ಮಾತುಗಳನ್ನೆಲ್ಲಾ ಮನಸ್ಸಿಗೆ ತಂದುಕೊಳ್ಳಿ. ಸರ್ವೇಶ್ವರಾ, ಅಸ್ಸೀರಿಯದ ರಾಜರು ಸಕಲ ರಾಷ್ಟ್ರಗಳನ್ನೂ ಹಾಗೂ ಅವರ ನಾಡುಗಳನ್ನೂ ಹಾಳುಮಾಡಿದ್ದಾರೆ. ಅವರ ದೇವರುಗಳನ್ನೂ ಬೆಂಕಿಗೆ ಹಾಕಿದ್ದು ನಿಜ. ಅವು ದೇವರುಗಳಲ್ಲ, ಕೇವಲ ಮನುಷ್ಯರು ಕೆತ್ತಿದ ಕಲ್ಲುಮರಗಳ ಬೊಂಬೆಗಳಷ್ಟೆ. ಆದುದರಿಂದಲೇ ಅವು ಅವರಿಂದ ಹಾಳಾದವು. ನಮ್ಮ ದೇವರಾದ ಸರ್ವೇಶ್ವರಾ, ನೀವೇ ಏಕೈಕ ದೇವರು ಎಂಬುದನ್ನು ಭೂಮಿಯ ರಾಷ್ಟ್ರಗಳೆಲ್ಲವೂ ತಿಳಿದುಕೊಳ್ಳುವಂತೆ ನಮ್ಮನ್ನು ಈ ಅಸ್ಸೀರಿಯನ ಕೈಯಿಂದ ಬಿಡಿಸಿರಿ.” ಆಗ ಆಮೋಚನ ಮಗನಾದ ಯೆಶಾಯನು ಹಿಜ್ಕೀಯನಿಗೆ ಹೇಳಿಕಳುಹಿಸಿದ್ದೇನೆಂದರೆ:” ಇಸ್ರಯೇಲಿನ ದೇವರಾದ ಸರ್ವೇಶ್ವರಸ್ವಾಮಿಯ ಈ ಮಾತುಗಳನ್ನು ಕೇಳು: ನೀನು ಅಸ್ಸೀರಿಯದ ರಾಜನಾದ ಸನ್ಹೇರೀಬನ ವಿಷಯವಾಗಿ ಮಾಡಿದ ಬಿನ್ನಹಗಳು ಸರ್ವೇಶ್ವರಸ್ವಾಮಿಗೆ ಮುಟ್ಟಿವೆ. ಅವರು ಅವನನ್ನು ಕುರಿತು ಹೀಗೆಂದಿದ್ದಾರೆ: ‘ನಿನ್ನನ್ನು ಪರಿಹಾಸ್ಯಮಾಡಿ ತಿರಸ್ಕರಿಸುತಿಹಳು ಕನ್ಯೆಯಾದ ಸಿಯೋನಿನ ಕುವರಿಯು; ನಿನ್ನ ಹಿಂದೆ ತಲೆಯಾಡಿಸಿ ಮೂದಲಿಸುತಿಹಳು ಜೆರುಸಲೇಮಿನ ಆ ಕುವರಿಯು. ಅಳಿದುಳಿದವರು ಜೆರುಸಲೇಮಿನಲ್ಲೇ ಹರಡಿಕೊಳ್ಳುವರು; ಸಿಯೋನ್ ಪರ್ವತದಲ್ಲಿ ಅಭಿವೃದ್ಧಿಯಾಗುವರು. ಸರ್ವೇಶ್ವರಸ್ವಾಮಿಯ ಆಗ್ರಹವೇ ಇದನ್ನು ಸಾಧಿಸುವುದು. “ಅಸ್ಸೀರಿಯದ ಅರಸನನ್ನು ಕುರಿತು ಸರ್ವೇಶ್ವರ ಹೇಳಿರುವ ಮಾತಿದು: ‘ಅವನು ಪಟ್ಟಣವನ್ನು ಸಮೀಪಿಸುವುದಿಲ್ಲ, ಅದರತ್ತ ಬಾಣವನ್ನೆಸೆಯುವುದಿಲ್ಲ, ಕವಚಧಾರಿಗಳನ್ನು ಕಳುಹಿಸುವುದಿಲ್ಲ. ಅದರ ಆಕ್ರಮಣಕ್ಕಾಗಿ ಮಣ್ಣುದಿಬ್ಬಗಳನ್ನು ಎಬ್ಬಿಸುವುದಿಲ್ಲ. ಅವನು ಬಂದ ದಾರಿಯಿಂದಲೇ ಹಿಂದಿರುಗಿ ಹೋಗುವನು; ಈ ಪಟ್ಟಣಕ್ಕೆ ಕಾಲಿಡನು. ನನಗಾಗಿಯೂ ನನ್ನ ದಾಸ ದಾವೀದನಿಗಾಗಿಯೂ ಈ ಪಟ್ಟಣವನ್ನು ಉಳಿಸಿ ಕಾಪಾಡುವೆನು,’ ಎಂದಿದ್ದಾರೆ". ಅದೇ ರೀತಿಯಲ್ಲಿ ಸರ್ವೇಶ್ವರಸ್ವಾಮಿಯ ದೂತನು ಹೊರಟುಬಂದು ಅಸ್ಸೀರಿಯರ ಪಾಳೆಯದಲ್ಲಿ 185,000 ಮಂದಿ ಸೈನಿಕರನ್ನು ಮರಣಕ್ಕೆ ಈಡುಮಾಡಿದನು; ಅಸ್ಸೀರಿಯರು ಬೆಳಿಗ್ಗೆ ಎದ್ದು ನೋಡುವಾಗ ಪಾಳೆಯ ತುಂಬ ಹೆಣಗಳು ಇದ್ದವು. ಆದ್ದರಿಂದ ಅಸ್ಸೀರಿಯರ ಅರಸನಾದ ಸನ್ಹೇರೀಬನು ಹಿಂದಿರುಗಿದನು. ನಿನೆವೆ ಪಟ್ಟಣಕ್ಕೆ ಹೋಗಿ ಅಲ್ಲೆ ವಾಸಿಸಿದನು.

ಕೀರ್ತನೆ: 48:2-4, 10-11
ಶ್ಲೋಕ: ನಿನ್ನಚಲ ಪ್ರೀತಿಯನು ದೇವಾ, ಸ್ಮರಿಸುವೆವು

ಸರ್ವ ಸ್ತುತಿಗೆ ಪಾತ್ರ, ಪ್ರಭುವು ಪರಮೋನ್ನತ|
ದೇವನಖರದಲ್ಲಿ ಆತನ ಪವಿತ್ರ ಪರ್ವತ||
ಎತ್ತರದಲಿ ಸುಂದರ, ಉತ್ತರದಲಿ ಸಿಯೋನ್ ಶಿಖರ|
ಆನಂದದಾಯಕ ರಾಜಾಧಿರಾಜನ ಆ ನಗರ||

ಅದರ ಕೋಟೆಕೊತ್ತಲಗಳ ನಡುವೆ ದೇವನು|
ತಾನೇ ಸುಭದ್ರ ದುರ್ಗವೆಂದು ತೋರಿಹನು||

ನಿನ್ನಚಲ ಪ್ರೀತಿಯನು ದೇವಾ, ಸ್ಮರಿಸುವೆವು|
ನಿನ್ನ ಮಹದಾಲಯದೊಳು ಅದನು ಧ್ಯಾನಿಸುವೆವು||
ನಿನ್ನ ನಾಮದಂತೆ ನಿನ್ನಾ ಹೊಗಳಿಕೆ|
ಮುಟ್ಟುತ್ತದೆ ಜಗದ ಎಲ್ಲೆ ಎಲ್ಲೆಗೆ ||

ಘೋಷಣೆ ಯೊವಾನ್ನ 17:17
ಅಲ್ಲೆಲೂಯ, ಅಲ್ಲೆಲೂಯ!

ಪಿತನೇ, ಇವರನ್ನು ಸತ್ಯಸಂಧರನ್ನಾಗಿಸಿ ನಿಮ್ಮ ಸೇವೆಗೆ ಮೀಸಲಾಗಿಡಿ. ನಿಮ್ಮ ಮಾತೇ ಸತ್ಯ.
ಅಲ್ಲೆಲೂಯ!


ಶುಭಸಂದೇಶ: ಮತ್ತಾಯ 7:6, 12-14


ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು: “ಪವಿತ್ರವಾದುದನ್ನು ನಾಯಿಗಳಿಗೆ ಹಾಕಬೇಡಿ - ಅವು ನಿಮ್ಮ ಮೇಲೆ ತಿರುಗಿಬಿದ್ದು ನಿಮ್ಮನ್ನು ಸೀಳಿಬಿಟ್ಟಾವು; ಮುತ್ತುಗಳನ್ನು ಹಂದಿಗಳ ಮುಂದೆ ಚೆಲ್ಲಬೇಡಿ - ಅವು ಆ ಮುತ್ತುಗಳನ್ನು ಕಾಲಿನಿಂದ ತುಳಿದು ಹಾಕಿಯಾವು.” “ಜನರು ನಿಮಗೆ ಏನೇನು ಮಾಡಬೇಕೆಂದು ನೀವು ಅಪೇಕ್ಷಿಸುತ್ತೀರೋ, ಅದನ್ನೇ ನೀವು ಅವರಿಗೆ ಮಾಡಿ, ಧರ್ಮಶಾಸ್ತ್ರದ ಹಾಗೂ ಪ್ರವಾದನೆಗಳ ಸಾರ ಇದೇ.” “ಕಿರಿದಾದ ಬಾಗಿಲಿನಿಂದಲೇ ಒಳಕ್ಕೆ ಹೋಗಿರಿ. ಏಕೆಂದರೆ ವಿನಾಶಕ್ಕೆ ಒಯ್ಯುವ ಬಾಗಿಲು ಹಿರಿದು; ಅದರ ಮಾರ್ಗ ಸರಾಗ; ಅದನ್ನು ಹಿಡಿಯುವವರು ಅನೇಕರು. ಅಮರ ಜೀವಕ್ಕೆ ಕೊಂಡೊಯ್ಯುವ ಮಾರ್ಗ ದುರ್ಭರ, ಅದರ ಬಾಗಿಲು ಕಿರಿದು; ಅದನ್ನು ಗುರುತಿಸುವವರೋ ಕೆಲವರು.”

22.06.2026 - ನೀವು ಇತರರ ಬಗ್ಗೆ ತೀರ್ಪುಕೊಡಬೇಡಿ; ಆಗ ದೇವರು ನಿಮ್ಮ ಬಗ್ಗೆ ತೀರ್ಪುಕೊಡುವುದಿಲ್ಲ

 ಮೊದಲನೇ ವಾಚನ: 2 ಅರಸುಗಳು 17:5-8, 13-15, 18

ಅಸ್ಸೀರಿಯದ ಅರಸನು ದೇಶವನ್ನೆಲ್ಲಾ ಸ್ವಾಧೀನಮಾಡಿಕೊಂಡು ಸಮಾರಿಯಕ್ಕೆ ಬಂದು ಮೂರು ವರ್ಷಗಳವರೆಗೂ ಅದಕ್ಕೆ ಮುತ್ತಿಗೆಹಾಕಿದನು. ಅದು ಹೋಶೇಯನ ಆಳ್ವಿಕೆಯ ಒಂಬತ್ತನೆಯ ವರ್ಷದಲ್ಲಿ ಅವನ ಸ್ವಾಧೀನವಾಯಿತು. ಅವನು ಎಲ್ಲಾ ಇಸ್ರಯೇಲರನ್ನು ಅಸ್ಸೀರಿಯ ದೇಶಕ್ಕೆ ಒಯ್ದು ಹಲಹು ಎಂಬ ಪ್ರಾಂತ್ಯದಲ್ಲಿ, ಹಾಬೋರ್ ನದಿಯಿರುವ ಗೋಜಾನ್ ಪ್ರಾಂತ್ಯದಲ್ಲಿ ಹಾಗು ಮೇದ್ಯರ ಪಟ್ಟಣಗಳಲ್ಲಿ ಇರಿಸಿದನು. ಇಸ್ರಯೇಲರ ಈ ದುರ್ಗತಿಗೆ ಅವರ ದುರ್ನಡತೆಯೇ ಕಾರಣ: ಹೇಗೆಂದರೆ, ಅವರು ತಮ್ಮನ್ನು ಈಜಿಪ್ಟಿನ ಅರಸನಾದ ಫರೋಹನ ಕೈಯಿಂದ ಬಿಡಿಸಿ ಅವನ ರಾಜ್ಯದಿಂದ ಹೊರತಂದ ದೇವರಾದ ಸರ್ವೇಶ್ವರನಿಗೆ ವಿರುದ್ಧ ಪಾಪಮಾಡಿ ಅನ್ಯದೇವತೆಗಳನ್ನು ಪೂಜಿಸಿದರು. ತಮ್ಮ ನಾಡಿನಿಂದ ಸರ್ವೇಶ್ವರ ಹೊರಡಿಸಿಬಿಟ್ಟಿದ್ದ ಜನಾಂಗಗಳ ಮತ್ತು ಇಸ್ರಯೇಲ್ ರಾಜರ ದುರಾಚಾರಗಳನ್ನು ಅವರು ಅನುಸರಿಸಿದರು. ದರ್ಶಿನಿಗಳೆನಿಸಿಕೊಂಡ ತಮ್ಮ ಪ್ರವಾದಿಗಳ ಮುಖಾಂತರ ಇಸ್ರಯೇಲ ಯೆಹೂದ್ಯರಿಗೆ, “ನೀವು ನಿಮ್ಮ ದುರಾಚಾರವನ್ನು ಬಿಟ್ಟು ನಾನು ನಿಮ್ಮ ಪೂರ್ವಜರಿಗೂ ನನ್ನ ದಾಸರಾದ ಪ್ರವಾದಿಗಳ ಮುಖಾಂತರ ನಿಮಗೂ ಕೊಟ್ಟಂಥ ನನ್ನ ಎಲ್ಲಾ ಆಜ್ಞಾವಿಧಿನಿಯಮಗಳನ್ನು ಕೈಕೊಂಡು ನಡೆಯಿರಿ,” ಎಂದು ಖಂಡಿತವಾಗಿ ಹೇಳಿದರು. ಆದರೆ ಅವರು, ದೇವರಾದ ಸರ್ವೇಶ್ವರನನ್ನು ನಂಬದೆ, ಅವರ ಆಜ್ಞೆಗಳಿಗೆ ಮಣಿಯದೆಯಿದ್ದ ತಮ್ಮ ಹಿರಿಯರಂತೆ, ಕಿವಿಗೊಡದೆ ಹೋದರು. ಸರ್ವೇಶ್ವರ ತಮ್ಮ ಪೂರ್ವಜರಿಗೆ ಕೊಟ್ಟ ವಿಧಿನಿಬಂಧನೆಗಳನ್ನೂ ತಮಗೆ ಹೇಳಿಸಿದ ಬುದ್ಧಿವಾಕ್ಯಗಳನ್ನೂ ತಿರಸ್ಕರಿಸಿ, ಮಿಥ್ಯಾದೇವತೆಗಳನ್ನು ಪೂಜಿಸಿ ನಿಸ್ಸಾರ್ಥಕರಾದರು. ಸುತ್ತಣ ಜನಾಂಗಗಳನ್ನು ಅನುಸರಿಸಬಾರದೆಂದು ಸರ್ವೇಶ್ವರ ಆಜ್ಞಾಪಿಸಿದ್ದರೂ ಕೇಳದೆ ಆ ಜನಾಂಗಗಳನ್ನೇ ಅನುಸರಿಸಿದರು.  ಈ ಪ್ರಕಾರ ನಡೆದುದರಿಂದ ಸರ್ವೇಶ್ವರ ಅವರ ಮೇಲೆ ಕಡುಕೋಪಗೊಂಡು ಯೆಹೂದಕುಲದವರ ಹೊರತು, ಉಳಿದ ಎಲ್ಲಾ ಕುಲಗಳವರನ್ನು ತಮ್ಮ ಸನ್ನಿಧಿಯಿಂದ ತಳ್ಳಿಬಿಟ್ಟರು.

ಕೀರ್ತನೆ: 60:3, 4-5, 12-13

ಶ್ಲೋಕ: ಪ್ರಭೂ, ನಿನಗೆ ಪ್ರಿಯರಾದ ನಮ್ಮ ಮೊರೆಯನಾಲಿಸು

1.  ಕೈಬಿಟ್ಟೆ ದೇವಾ, ನಮ್ಮನ್ನು ಕೈಬಿಟ್ಟೆ|
ಕೋಪದಿಂದೆಮ್ಮನು ತಳ್ಳಿ ಕೆಡವಿಬಿಟ್ಟೆ|
ಉದ್ಧಾರವಾಗ್ವೆವು ನೀ ಮರಳಿ ಬೆಂಗೊಡೆ||
ಶ್ಲೋಕ

2.  ನಾಡನು ನಡುಗಿಸಿ ಬಿಡಿಬಿಡಿಯಾಗಿಸಿದೆ|
ಅದರೊಡಕನು ಸರಿಮಾಡು ತಡವರಿಸದೆ||
ನಿನ್ನ ಜನರನ್ನು ಗುರಿಪಡಿಸಿದೆ  ಸಂಕಟಕೆ|
ಭ್ರಮಣಗೊಳಿಪ ಮದ್ಯವ ಕುಡಿಸಿದೆ ನಮಗೆ||
ಶ್ಲೋಕ

3.  ದೇವಾ ನೀ, ನಮ್ಮನ್ನು ಕೈ ಬಿಟ್ಟಿರುವುದು ಸರಿಯೋ?|
ನಮ್ಮ ಸೈನಸಮೇತ ನೀ ಬರದೆ ಹೋದೆಯೋ?||
ಶತ್ರುವಿರುದ್ದ ಸಹಾಯ ಮಾಡಯ್ಯಾ|
ಮಾನವ ನೆರವು ನಮಗೆ ವ್ಯರ್ಥವಯ್ಯಾ||
ಶ್ಲೋಕ

ಘೋಷಣೆ
(ಯೊವಾನ್ನ 15: 15)

ಅಲ್ಲೆಲೂಯ, ಅಲ್ಲೆಲೂಯ!
ನಾನಾದರೋ ಪಿತನಿಂದ ಕೇಳಿಸಿಕೊಂಡದ್ದನ್ನೆಲ್ಲಾ ನಿಮಗೆ ತಿಳಿಸಿದ್ದೇನೆ | ಈ ಕಾರಣ ನಿಮ್ಮನ್ನು ಗೆಳೆಯರೆಂದು ಕರೆದಿದ್ದೇನೆ ||
ಅಲ್ಲೆಲೂಯ!



ಶುಭಸಂದೇಶ: ಮತ್ತಾಯ 7:1-5


ಯೇಸುಸ್ವಾಮಿ ತಮ್ಮ ಶಿಷ್ಯರನ್ನುದ್ದೇಶಿಸಿ, “ನೀವು ಇತರರ ಬಗ್ಗೆ ತೀರ್ಪುಕೊಡಬೇಡಿ; ಆಗ ದೇವರು ನಿಮ್ಮ ಬಗ್ಗೆ ತೀರ್ಪುಕೊಡುವುದಿಲ್ಲ. ನೀವು ಇತರರ ಬಗ್ಗೆ ಕೊಡುವ ತೀರ್ಪಿಗೆ ಅನುಗುಣವಾಗಿಯೇ ದೇವರು ನಿಮಗೂ ತೀರ್ಪುಕೊಡುವರು. ಇತರರಿಗೆ ನೀವು ಕೊಟ್ಟ ಅಳತೆಯಲ್ಲೇ ದೇವರು ನಿಮಗೂ ಅಳೆದುಕೊಡುವರು. ನಿನ್ನ ಕಣ್ಣಿನಲ್ಲಿರುವ ದಿಮ್ಮಿಯನ್ನು ನೋಡದೆ ನಿನ್ನ ಸೋದರನ ಕಣ್ಣಿನಲ್ಲಿರುವ ಅಣುವನ್ನು ನೀನು ಗಮನಿಸುವುದೇಕೆ? ನಿನ್ನ ಕಣ್ಣಿನಲ್ಲಿ ಒಂದು ದಿಮ್ಮಿಯೇ ಇರುವಾಗ, ‘ತಾಳು, ನಿನ್ನ ಕಣ್ಣಿನಲ್ಲಿರುವ ಅಣುವನ್ನು ತೆಗೆದುಬಿಡುತ್ತೇನೆ,’ ಎಂದು ನಿನ್ನ ಸೋದರನಿಗೆ ಹೇಗೆ ಹೇಳಬಲ್ಲೆ? ಎಲೈ ಕಪಟಿಯೇ, ಮೊದಲು ನಿನ್ನ ಕಣ್ಣಿನಲ್ಲಿರುವ ದಿಮ್ಮಿಯನ್ನು ತೆಗೆದುಹಾಕು. ಅನಂತರ ನಿನ್ನ ಸೋದರನ ಕಣ್ಣಿನಿಂದ ಅಣುವನ್ನು ತೆಗೆಯಲು ನಿನ್ನ ಕಣ್ಣು ನಿಚ್ಚಳವಾಗಿ ಕಾಣಿಸುವುದು.” ಎಂದು ಹೇಳಿದರು.

21.06.2026 - ದೇಹವನ್ನು ಕೊಂದು ಹಾಕುವವರಿಗೆ ಭಯಪಡಬೇಡಿ; ಏಕೆಂದರೆ, ಅವರಿಂದ ಆತ್ಮವನ್ನು ಕೊಲ್ಲಲು ಆಗದು

 ಮೊದಲನೇ ವಾಚನ: ಪ್ರವಾದಿ ಯೆರೆಮೀಯನ ಗ್ರಂಥ 20:10-13

ಸುತ್ತಮುತ್ತಲು ದಿಗಿಲೆಂದರೆ ದಿಗಿಲು ! ‘ಬನ್ನಿ, ಇವನ ಮೇಲೆ ಚಾಡಿ ಹೇಳಿ, ನಾವೂ ಹೇಳುವೆವು’ ಎಂದು ಗುಸುಗುಟ್ಟುತ್ತಿರುವರು ಬಹುಜನರು. ‘ಇವನು ಎಡವಿಬೀಳಲಿ, ನಾವು ಹೊಂಚಿನೋಡುವೆವು’ ಎನ್ನುತ್ತಿರುವರು ನನ್ನಾಪ್ತ ಮಿತ್ರರೆಲ್ಲರು. ‘ಇವನು ಸಿಕ್ಕಿಬೀಳಲಿ, ಆಗ ಗೆದ್ದು ಮುಯ್ಯಿತೀರಿಸಿಕೊಳ್ಳುವೆವು.’ ಎಂದುಕೊಳ್ಳುತ್ತಿರುವರು ತಮ್ಮತಮ್ಮೊಳಗೆ. ಆದರೆ ನನ್ನ ಸಂಗಡ ಇರುವರು ಸರ್ವೇಶ್ವರ ಭಯಂಕರ ಶೂರನಂತೆ ನನ್ನ ಹಿಂಸಕರು ಮುಗ್ಗರಿಸಿ ಬೀಳುವರು ಜಯಸಾಧಿಸದೆ. ನಾಚಿಕೆಗೆ ಈಡಾಗುವರು ತಮ್ಮ ಯೋಜನೆ ಕೈಗೂಡದೆ ಶಾಶ್ವತ ಅವಮಾನಕ್ಕೆ ಗುರಿಯಾಗುವರು ಎಂದಿಗೂ ಮರೆಯಲಾಗದಂತೆ. ಸರ್ವಶಕ್ತರಾದ ಸರ್ವೇಶ್ವರಾ, ನೀವು ಸತ್ಪುರುಷರನ್ನು ಪರಿಶೋಧಿಸುವವರು ಅಂತರಿಂದ್ರಿಯಗಳನ್ನೂ ಅಂತರಾಳವನ್ನೂ ವೀಕ್ಷಿಸುವವರು. ನನ್ನ ವ್ಯಾಜ್ಯವನ್ನು ನಿಮಗೆ ಅರಿಕೆಮಾಡಿರುವೆನು ನನ್ನ ಹಿಂಸಕರಿಗೆ ನೀವು ವಿಧಿಸುವ ಪ್ರತಿದಂಡನೆಯನ್ನು ನಾನು ನೋಡುವಂತೆ ಮಾಡಿ. ಸರ್ವೇಶ್ವರನನ್ನು ಸ್ತುತಿಸಿರಿ, ಸರ್ವೇಶ್ವರನನ್ನು ಸಂಕೀರ್ತಿಸಿರಿ. ಅವರು ಬಡವರ ಪ್ರಾಣವನ್ನು ಬಿಡಿಸಿದ್ದಾರೆ ಕೆಡುಕರ ಕೈಯಿಂದ. 

ಕೀರ್ತನೆ: 69:8-10, 14, 17, 33-35

ಶ್ಲೋಕ: ಪ್ರೀತಿಮಯ ದೇವಾ, ಸದುತ್ತರ ನೀಡೆನಗೆ

1.  ನಿನಗಾಗಿಯೇ ನಾ ನಿಂದೆಗೊಳಗಾದೆನಯ್ಯಾ|
ನಾಚಿಕೆಯಿಂದಲೇ ಮುಖ ಮುಚ್ಚಿಕೊಂಡೆನಯ್ಯಾ||
ನನ್ನವರಿಗೇ ನಾನು ಅನ್ಯನಾದೆನಯ್ಯಾ|
ಒಡಹುಟ್ಟಿದವರಿಗೇ ಹೊರಗಿನವನಾದೆನಯ್ಯಾ||
ಅಗ್ನಿಯಂತೆನ್ನ ದಹಿಸುತ್ತಿದೆ ನಿನ್ನಾಲಯದ ಅಭಿಮಾನ|
ಎನ್ನ ಮೇಲೆರಗಿದೆ ನಿನ್ನ ಕಡು  ದ್ರೋಹಿಗಳ ದೂಷಣ||
ಶ್ಲೋಕ

2.  ಪ್ರಸನ್ನಕಾಲದಲ್ಲಿ ಪ್ರಭೂ, ನಾ ಮೊರೆಯಿಡುತ್ತಿರುವೆ ನಿನಗೆ|
ಪ್ರೀತಿಮಯ ದೇವಾ, ಜೀವೋದ್ಧಾರಕಾ, ಸದುತ್ತರ ನೀಡೆನಗೆ||
ಆಲಿಸೆನ್ನ ಪ್ರಭೂ, ನಿನ್ನ ಪ್ರೀತಿ ಸುಮಧುರ|
ಕಟಾಕ್ಷಿಸೆನ್ನನು ದೇವಾ, ಕರುಣಾಸಾಗರ||
ಶ್ಲೋಕ

3.  ಇದನರಿತು ದೀನದಲಿತರು ಆನಂದಗೊಳ್ಳಲಿ|
ದೇವನನು ಅರಸುವವರು ಪುನಶ್ಚೇತನಗೊಳ್ಳಲಿ||
ಬಡಬಗ್ಗರ ಮೊರೆಗೆ ಪ್ರಭು ಕಿವಿಗೊಡದಿರನು|
ಭೂಮ್ಯಾಕಾಶಗಳು ಆತನನು ಕೊಂಡಾಡಲಿ|
ಸಾಗರಗಳು, ಜಲಚರಗಳು ಆತನನ್ನು ಭಜಿಸಲಿ||
ಶ್ಲೋಕ

ಎರಡನೇ ವಾಚನ: ರೋಮನರಿಗೆ  5:12-15

ಒಬ್ಬ ಮನುಷ್ಯನಿಂದಲೇ ಪಾಪ, ಪಾಪದಿಂದ ಮರಣ, ಈ ಲೋಕವನ್ನು ಪ್ರವೇಶಿಸಿದವು. ಎಲ್ಲರೂ ಪಾಪಮಾಡಿದ್ದರಿಂದ ಮರಣವು ಎಲ್ಲರಿಗೂ ಪ್ರಾಪ್ತಿಯಾಯಿತು. ಧರ್ಮಶಾಸ್ತ್ರವನ್ನು ಕೊಡುವುದಕ್ಕೆ ಮೊದಲೇ ಪಾಪವು ಲೋಕದಲ್ಲಿತ್ತು. ಆದರೆ ಧರ್ಮಶಾಸ್ತ್ರ ಇಲ್ಲದೆ ಇದ್ದುದರಿಂದ ಪಾಪವನ್ನು ಗಣನೆಗೆ ತಂದುಕೊಳ್ಳಲಾಗಲಿಲ್ಲ. ಆದರೂ, ಆದಾಮನ ಕಾಲದಿಂದ ಮೋಶೆಯ ಕಾಲದವರೆಗೂ ಮರಣವು ದಬ್ಬಾಳಿಕೆ ನಡೆಸುತ್ತಿತ್ತು. ದೇವರ ಆಜ್ಞಾವಿಧಿಗಳನ್ನು ಮೀರಿ ಆದಾಮನು ಮಾಡಿದ ಪಾಪಕ್ಕೆ ಸಮನಾದ ಪಾಪವನ್ನು ಮಾಡದೆ ಇದ್ದವರ ಮೇಲೆಯೂ, ಮರಣದ ಆಳ್ವಿಕೆ ನಡೆಯುತ್ತಿತ್ತು. ಆದಾಮನು ಮುಂಬರಲಿದ್ದ ಮಹಾತ್ಮನ ಮುನ್ಸೂಚನೆಯಾಗಿದ್ದಾನೆ. ಆದರೆ ಆದಾಮನ ಪಾಪಕ್ಕೂ ದೇವರ ಅನುಗ್ರಹಕ್ಕೂ ವ್ಯತ್ಯಾಸವಿದೆ. ಒಬ್ಬ ಮನುಷ್ಯನ ಅಪರಾಧದಿಂದ ಎಲ್ಲರೂ ಮರಣಕ್ಕೊಳಗಾದರು ಎಂಬುದೇನೋ ನಿಜ. ಆದರೆ ದೇವರ ಅನುಗ್ರಹವು ಅದಕ್ಕಿಂತಲೂ ಅತ್ಯಧಿಕವಾದುದು. ಅಂತೆಯೇ, ಯೇಸುಕ್ರಿಸ್ತ ಎಂಬ ಒಬ್ಬ ಮಹಾತ್ಮನ ಅನುಗ್ರಹದಿಂದ ಲಭಿಸುವ ಉಚಿತಾರ್ಥವರಗಳು ಇನ್ನೂ ಅಧಿಕಾಧಿಕವಾದುವು ಎಂಬುದೂ ನಿಜ.

ಘೋಷಣೆ
(ಯೊವಾನ್ನ 15: 15)

ಅಲ್ಲೆಲೂಯ, ಅಲ್ಲೆಲೂಯ!
ನಾನಾದರೋ ಪಿತನಿಂದ ಕೇಳಿಸಿಕೊಂಡದ್ದನ್ನೆಲ್ಲಾ ನಿಮಗೆ ತಿಳಿಸಿದ್ದೇನೆ | ಈ ಕಾರಣ ನಿಮ್ಮನ್ನು ಗೆಳೆಯರೆಂದು ಕರೆದಿದ್ದೇನೆ ||
ಅಲ್ಲೆಲೂಯ!

ಶುಭಸಂದೇಶ: ಮತ್ತಾಯ 10:26-33

ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು: “ಜನರಿಗೆ ಭಯಪಡಬೇಡಿ. ಮುಚ್ಚುಮರೆ ಆಗಿರುವುದೆಲ್ಲ ಬಟ್ಟಬಯಲಾಗುವುದು. ಗುಟ್ಟಾಗಿ ಇರುವುದೆಲ್ಲ ರಟ್ಟಾಗುವುದು. ನಾನು ಕತ್ತಲಲ್ಲಿ ಹೇಳುವುದನ್ನು ನೀವು ಬೆಳಕಿನಲ್ಲಿ ಪ್ರಚುರಪಡಿಸಿರಿ, ಕಿವಿಮಾತಾಗಿ ಕೇಳಿದ್ದನ್ನು ಮನೆಮಾಳಿಗೆಯ ಮೇಲೆ ನಿಂತು ಸಾರಿರಿ. ದೇಹವನ್ನು ಕೊಂದು ಹಾಕುವವರಿಗೆ ಭಯಪಡಬೇಡಿ; ಏಕೆಂದರೆ, ಅವರಿಂದ ಆತ್ಮವನ್ನು ಕೊಲ್ಲಲು ಆಗದು. ಆದರೆ ದೇಹಾತ್ಮಗಳೆರಡನ್ನೂ ನರಕದಲ್ಲಿ ನಾಶಮಾಡಬಲ್ಲ ದೇವರಿಗೆ ಭಯಪಡಿ. ಒಂದು ಕಾಸಿಗೆ ಎರಡು ಗುಬ್ಬಚ್ಚಿಗಳನ್ನು ಮಾರುವುದಿಲ್ಲವೆ? ಆದರೂ ಅವುಗಳಲ್ಲಿ ಒಂದಾದರೂ ನಿಮ್ಮ ತಂದೆಯ ಅನುಮತಿಯಿಲ್ಲದೆ ನೆಲಕ್ಕೆ ಬೀಳುವುದಿಲ್ಲ. ಅಲ್ಲದೆ ನಿಮ್ಮ ತಲೆಗೂದಲುಗಳು ಸಹ ಎಲ್ಲವೂ ಎಣಿಕೆಯಾಗಿವೆ. ಆದುದರಿಂದ ಭಯಪಡಬೇಡಿ; ಅನೇಕ ಗುಬ್ಬಚ್ಚಿಗಳಿಗಿಂತ ನೀವು ಎಷ್ಟೋ ಮೌಲ್ಯವುಳ್ಳವರು. “ಜನರ ಮುಂದೆ, ತಾನು ನನ್ನವನೆಂದು ಬಹಿರಂಗವಾಗಿ ಒಪ್ಪಿಕೊಳ್ಳುವ ಪ್ರತಿಯೊಬ್ಬನನ್ನು ನಾನು ಸಹ ಸ್ವರ್ಗದಲ್ಲಿರುವ ನನ್ನ ಪಿತನ ಮುಂದೆ ನನ್ನವನೆಂದು ಒಪ್ಪಿಕೊಳ್ಳುತ್ತೇನೆ. ಆದರೆ ಯಾವನಾದರೂ ತಾನು ನನ್ನವನಲ್ಲ ಎಂದು ಜನರ ಮುಂದೆ ಬಹಿರಂಗವಾಗಿ ನಿರಾಕರಿಸಿದರೆ, ಅಂಥವನನ್ನು ನಾನು ಸಹ ಸ್ವರ್ಗದಲ್ಲಿರುವ ನನ್ನ ಪಿತನ ಮುಂದೆ ನನ್ನವನಲ್ಲವೆಂದು ನಿರಾಕರಿಸುತ್ತೇನೆ.

20.06.2026 - ಯಾರೂ ಇಬ್ಬರು ಯಜಮಾನನಿಗೆ ಜೀತಮಾಡಲಾಗದು. ಅವನು ಒಬ್ಬನನ್ನು ದ್ವೇಷಿಸಿ ಇನ್ನೊಬ್ಬನನ್ನು ಪ್ರೀತಿಸುತ್ತಾನೆ

 ಮೊದಲನೇ ವಾಚನ: 2 ಪೂರ್ವಕಾಲದ ಇತಿಹಾಸ 24:17-25 


 ಯೆಹೋಯಾದನು ಮೃತನಾದ ಮೇಲೆ, ಜುದೇಯದ ಪದಾಧಿಕಾರಿಗಳು ಅರಸ ಯೆಹೋವಾಷನ ಬಳಿಗೆ ಬಂದು, ಅವನಿಗೆ ಅಡ್ಡ ಬಿದ್ದು ಅವನನ್ನು ಒಲಿಸಿಕೊಂಡರು. ಅಂದಿನಿಂದ ಅವರು ತಮ್ಮ ಪೂರ್ವಜರ ದೇವರಾದ ಸರ್ವೇಶ್ವರನ ಆಲಯವನ್ನು ನಿರಾಕರಿಸಿ, ಆಶೇರ ಸ್ತಂಭಗಳನ್ನೂ ವಿಗ್ರಹಗಳನ್ನೂ ಪೂಜಿಸತೊಡಗಿದರು. ಅವರ ಈ ಆಪರಾಧದಿಂದ ಜುದೇಯದ ಮೇಲೂ ಜೆರುಸಲೇಮಿನ ಮೇಲೂ ದೈವ ಕೋಪ ಎರಗಿತು. ಸರ್ವೇಶ್ವರ ಅವರನ್ನು ತಮ್ಮ ಕಡೆಗೆ ತಿರುಗಿಸಿಕೊಳ್ಳುವುದಕ್ಕಾಗಿ ಅವರ ಬಳಿಗೆ ಪ್ರವಾದಿಗಳನ್ನು ಕಳುಹಿಸಿದರು. ಇವರ ಮುಖಾಂತರ ಎಷ್ಟು ಎಚ್ಚರಿಸಿದರೂ ಅವರು ಕಿವಿಗೊಡಲಿಲ್ಲ, ಆಗ ಯಾಜಕ ಯೆಹೋಯಾದನ ಮಗ ಜೆಕರ್ಯನು ದೇವಾತ್ಮನಿಂದ ಆವೇಶ ಉಳ್ಳವನಾದನು. ಅವನು ಜನರ ಎದುರಿಗೆ ಉನ್ನತ ಸ್ಥಾನದಲ್ಲಿ ನಿಂತು, "ದೇವರ ಮಾತುಗಳನ್ನು ಕೇಳಿರಿ; ನೀವೇಕೆ ಸರ್ವೇಶ್ವರನ ಆಜ್ಞೆಗಳನ್ನು ಮೀರಿ, ನಿಮ್ಮನ್ನೆ ನಾಶಮಾಡಿಕೊಳ್ಳುತ್ತೀರಿ? ನೀವು ಸರ್ವೇಶರಸ್ವಾಮಿಯನ್ನು ಬಿಟ್ಟಿದ್ದರಿಂದ ಅವರೂ ನಿಮ್ಮನ್ನು ಬಿಟ್ಟು ಬಿಟ್ಟಿದ್ದಾರೆ." ಎಂದನು. ಆಗ ಅವರು ಆತನಿಗೆ ವಿರೋಧವಾಗಿ ಹೊಳಸಂಚು ಮಾಡಿ, ಸರ್ವೇಶ್ವರನ ಆಲಯದ  ಪ್ರಾಕಾರದಲ್ಲಿ ಅವನನ್ನ ಕಲ್ಲೆಸೆದು ಕೊಂದರು. ಇದು ಅರಸ ಯೆಹೋವಾಷನ ಅಪ್ಪಣೆಯಿಂದಲೇ ಆಯಿತು. ಜೆಕರಿಯನ ತಂದೆ ಯೆಹೋಯಾದನಿಂದ ತನಗಾದ ಉಪಕಾರವನ್ನು ನೆನಪುಮಾಡಿಕೊಳ್ಳದೆ ಈ ಯೆಹೋವಾಷನು ಅವನ ಮಗನನ್ನು ಕೊಲ್ಲಿಸಿದನು. ಜೆಕರೀಯನು ಸಾಯುವಾಗ, "ಸರ್ವೇಶ್ವರಸ್ವಾಮಿಯೇ ಇದನ್ನು ನೋಡಿ ತಕ್ಕ ಶಾಸ್ತಿಮಾಡಲಿ" ಎಂದನು. ವರ್ಷಾಂತ್ಯದಲ್ಲಿ ಸಿರಿಯಾದ ಸೈನ್ಯ ಯೆಹೋವಾಷನ ಮೇಲೆ ದಾಳಿ ಮಾಡಲು ಹೊರಟಿತು. ಆ ಸೈನ್ಯದವರು ಜುದೇಯ ನಾಡಿನೊಳಗೆ ನುಗ್ಗಿ ಜೆರುಸಲೇಮಿಗೆ ಬಂದು, ಇಸ್ರಯೇಲರ ಎಲ್ಲ ಜನಾಧಿಪತಿಗಳನ್ನು ನಿರ್ನಾಮ ಮಾಡಿ ಅವರಲ್ಲಿ ಸಿಕ್ಕಿದ ಕೊಳ್ಳೆಯನ್ನೆಲ್ಲಾ ದಮಸ್ಕದ ಅರಸನಿಗೆ ಕಳುಹಿಸಿದರು.     

ಸಿರಿಯಾದ ಸೈನ್ಯದಿಂದ ಬಂದ ಗುಂಪು ಚಿಕ್ಕದಾದ್ದರೂ ಯೆಹೂದ್ಯರು ತಮ್ಮ ಪೂರ್ವಜರ ದೇವರಾದ ಸರ್ವೇಶ್ವರನನ್ನು ಬಿಟ್ಟು ಬಿಟ್ಟಿದ್ದರಿಂದ ಶಿಕ್ಷೆಗೆ ಗುರಿಯಾದರು. ತಮ್ಮದು ಮಹಾಸೈನ್ಯವಾಗಿದ್ದರೂ ಸಿರಿಯಾದವರ  ಕೈಯಲ್ಲಿ ಸೋಲನ್ನು ಅನುಭವಿಸಿದರು; ಯೆಹೋವಾಷನಿಗೆ ದಂಡನೆಯಾಯಿತು. ಕಠಿಣವಾಗಿ ಗಾಯಗೊಂಡದ್ದ ಅವನನ್ನು ಸಿರಿಯಾದವರು ಬಿಟ್ಟುಹೋದರು. ಅವನ ಸೇವಕರೇ, ಯಾಜಕ ಯೆಹೋಯಾದವನ ಮಗನ ವಧೆಯ ನಿಮಿತ್ತ, ಅವನಿಗೆ ವಿರೋಧವಾಗಿ ಒಳಸಂಚುಮಾಡಿ ಅವನನ್ನು ಹಾಸಿಗೆಯಲ್ಲೇ ಕೊಂದುಹಾಕಿದರು. ಅವನ ಶವವನ್ನು ದಾವೀದ ನಗರದೊಳಗೆ ಸಮಾಧಿ ಮಾಡಿದರು; ಆದರೆ ರಾಜ ಸ್ಮಶಾನದಲ್ಲಿ ಮಾಡಲಿಲ್ಲ. 

ಕೀರ್ತನೆ 89:4-5, 29-30, 31-32, 33-34 
ಶ್ಲೋಕ : ಇರುವುದು ಎನ್ನಚಲ ಪ್ರೀತಿ ಅವನ ಮೇಲೆ ಶಾಶ್ವತವಾಗಿ. 

ಶುಭಸಂದೇಶ: ಮತ್ತಾಯ 6:24-34 

ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು: "ಯಾರೂ ಇಬ್ಬರು ಯಜಮಾನನಿಗೆ ಜೀತಮಾಡಲಾಗದು. ಅವನು ಒಬ್ಬನನ್ನು ದ್ವೇಷಿಸಿ ಇನ್ನೊಬ್ಬನನ್ನು ಪ್ರೀತಿಸುತ್ತಾನೆ; ಅಥವಾ, ಒಬ್ಬನೊಡನೆ ಹೊಂದಿಕೊಂಡು ಇನ್ನೊಬ್ಬನನ್ನು ತಾತ್ಸಾರ ಮಾಡುತ್ತಾನೆ. ದೇವರಿಗೂ ದ್ರವ್ಯಕ್ಕೂ ಒಟ್ಟಿಗೆ ಸೇವೆ ಮಾಡಲು ನಿಮ್ಮಿಂದಾಗದು."  "ನಾನು ಹೇಳುವುದನ್ನು ಕೇಳಿ; "ಪ್ರಾಣದಾರಣೆಗೆ ಏನು ಉಣ್ಣುವುದು, ಏನು ಕುಡಿಯುವುದು; ದೇಹರಕ್ಷಣೆಗೆ ಏನು ಹೊದೆಯುವುದು" ಎಂದು ಚಿಂತೆಮಾಡಬೇಡಿ. ಊಟಕ್ಕಿಂತ ಪ್ರಾಣ, ಉಡುಪಿಗಿಂತ ದೇಹ ಮೇಲಾದುದಲ್ಲವೇ? ಆಕಾಶದಲ್ಲಿ ಹಾರಾಡುವ ಪಕ್ಷಿಗಳನ್ನು ಗಮನಿಸಿ; ಅವು ಬಿತ್ತುವುದಿಲ್ಲ, ಕೊಯ್ಯುವುದಿಲ್ಲ, ಕಣಜಗಳಲ್ಲಿ ಕೂಡಿಡುವುದೂ ಇಲ್ಲ. ಆದರೂ ಸ್ವರ್ಗದಲ್ಲಿರುವ ನಿಮ್ಮ ತಂದೆ ಅವುಗಳನ್ನು ಪೋಷಿಸುತ್ತಾರೆ. ಹಕ್ಕಿಗಳಿಗಿಂತ ನೀವು ಎಷ್ಟೋ ಮೇಲಾದವರಲ್ಲವೇ? ಚಿಂತಿಸಿ, ಚಿಂತಿಸಿ, ನಿಮ್ಮ ಜೀವನಾವಧಿಯನ್ನು ಕೊಂಚಕಾಲವಾದರೂ ದೀರ್ಘಮಾಡಲು ನಿಮ್ಮಲ್ಲಿ ಯಾರಿಂದಾದೀತು? ಉಡುಗೆತೊಡುಗೆಗಳ ಚಿಂತೆ ನಿಮಗೇಕೆ? ವನಕುಸುಮಗಳು ಬೆಳೆಯುವ ರೀತಿಯನ್ನು ಗಮನಿಸಿ ನೋಡಿ: ಅವು ದುಡಿಯುವುದಿಲ್ಲ , ನೂಲುವುದಿಲ್ಲ. ಆದರೂ ಅರಸ ಸೊಲೊಮೋನನು ತನ್ನ ಸರ್ವವೈಭವದಲ್ಲಿ ಇದ್ದಾಗಲೂ ಈ ಕಸುಮಗಳಲ್ಲಿ ಒಂದರಷ್ಟೂ ಸುಂದರವಾದ ಉಡುಪನ್ನು ಧರಿಸಿರಲಿಲ್ಲ. ಅಲ್ಪ ವಿಶ್ವಾಸಿಗಳೇ, ಇಂದಿದ್ದು ನಾಳೆ ಒಲೆ ಪಾಲಾಗುವ ಬಯಲಿನ ಹುಲ್ಲಿಗೆ ದೇವರು ಹೀಗೆ ಉಡಿಸಿದರೆ, ನಿಮಗೆ ಮತ್ತಷ್ಟೂ ಮಾಡಲಾರರೇ? ಆದುದರಿಂದ ತಿನ್ನಲು ಏನು? ಕುಡಿಯಲು ಏನು? ಉಡಲು ಏನು? ಎಂದು ಪೇಚಾಡಬೇಡಿ. ಇವೆಲ್ಲವುಗಳಿಗಾಗಿ ಪರಕೀಯರೂ ಪರದಾಡುತ್ತಾರೆ; ಇವೆಲ್ಲಾ ನಿಮಗೆ ಅವಶ್ಯ  ಎಂದು ಸ್ವರ್ಗದಲ್ಲಿವ ನಿಮ್ಮ ತಂದೆಗೆ ತಿಳಿದಿದೆ. ನೀವಾದರೋ ಮೊದಲು ದೇವರ ಸಾಮ್ರಾಜ್ಯಕ್ಕಾಗಿ, ಅವರ ಸತ್ಸಂಬಂಧಕ್ಕಾಗಿ ತವಕಪಡಿ. ಇದರೊಂದಿಗೆ ಅವೆಲ್ಲವೂ ನಿಮಗೆ ನೀಡಲಾಗುವುದು. ಆದುದರಿಂದ ನಾಳೆಯ ಚಿಂತೆ ನಿಮಗೆ ಬೇಡ. ನಾಳೆಯ ಚಿಂತೆ ನಾಳೆಗೇ ಇರಲಿ. ಇಂದಿನ ಪಾಡೇ ಇಂದಿಗೆ ಸಾಕು."

19.06.2026 - ಇಹಲೋಕದಲ್ಲಿ ಆಸ್ತಿಪಾಸ್ತಿಯನ್ನು ಶೇಖರಿಸಿಡಬೇಡಿ.

 ಮೊದಲನೇ ವಾಚನ: 2 ಅರಸುಗಳು 11:1-4, 8-18, 20 


ಏಳನೆಯ ವರ್ಷದಲ್ಲಿ ಯೆಹೋಯಾದವನು 'ಕಾರಿ' ಎಂಬ ಸಿಪಾಯಿಗಳ ಮತ್ತು ಕಾವಲು ದಂಡಿನವರ ಶತಾಧಿಪತಿಗಳನ್ನು ತನ್ನ ಹತ್ತಿರ ಸರ್ವೇಶ್ವರನ ಆಲಯಕ್ಕೆ ಕರೆಯಿಸಿದನು. ಅಲ್ಲಿ ಅವನು ಅವರ ಸಂಗಡ ಪ್ರಮಾಣಪೂರ್ವಕವಾದ ಒಪ್ಪಂದವನ್ನು ಮಾಡಿಕೊಂಡನಂತರ ರಾಜಕುಮಾರನನ್ನು ತೋರಿಸಿದನು. ಯಾಜಕನಾದ ಯೆಹೋಯಾದವನು ಆಜ್ಞಾಪಿಸಿದಂತೆ ಶತಾಧಿಪತಿಗಳು ಸಬ್ಬತ್ ದಿನದಲ್ಲಿ ಮನಗೆ ಹೋಗತಕ್ಕ ಮತ್ತು ಕಾಯುವುದಕ್ಕಾಗಿ ಬರತಕ್ಕ ಸಿಪಾಯಿಗಳನ್ನು ಕರೆದುಕೊಂಡು ಅವನ ಬಳಿಗೆ ಬಂದರು. ಅವರು ಆ ಶತಾಧಿಪತಿಗಳಿಗೆ ಸರ್ವೇಶ್ವರನ ಆಲಯದಲ್ಲಿ ಇಡಲಾಗಿದ್ದ ದಾವೀದನ ಭರ್ಜಿಯನ್ನೂ ಗುರಾಣಿಗಳನ್ನೂ ಕೊಟ್ಟನು. ಕಾವಲುದಂಡಿನವರು ಆಯುಧ ಹಿಡಿದುಕೊಂಡು ಅರಸನನ್ನು ಕಾಯುವುದಕ್ಕಾಗಿ ದೇವಾಲದ ದಕ್ಷಿಣ ದಿಕ್ಕಿನ ಮೂಲೆಯಿಂದ ಬಲಿಪೀಠದವರೆಗೂ, ಅಲ್ಲಿಂದ ಉತ್ತರ ದಿಕ್ಕಿನ ಮೂಲೆಯವರೆಗೂ, ಸಾಲಾಗಿ ನಿಂತರು. ಯೆಹೋಯಾದವನು ರಾಜಪುತ್ರನನ್ನು ಹೊರಗೆ ಕರೆದುಕೊಂಡು ಅವನ ತಲೆಯ ಮೇಲೆ ಕಿರೀಟವನ್ನಿಟ್ಟು, ಕೈಗೆ ಧರ್ಮಶಾಸ್ತ್ರವನ್ನು ಕೊಟ್ಟು, ಅವನಿಗೆ ರಾಜ್ಯಾಭಿಷೇಕ ಮಾಡಿದನು. ಕೂಡಲೇ ಜನರು ಚಪ್ಪಾಳೆ ಹೊಡೆದು 'ಅರಸನು ಚಿರಂಜೀವಿಯಾಗಲಿ!' ಎಂದು ಜಯಕಾರ ಮಾಡಿದರು. ಅತಲ್ಯಳು ಕಾವಲು ದಂಡಿನವರ ಮತ್ತು ಇತರ ಜನರ ಗದ್ದಲವನ್ನು ಕೇಳಿ, ಅವರು ಕೂಡಿದ್ದ ಸರ್ವೇಶ್ವರನ ಆಲಯಕ್ಕೆ ಬಂದಳು. ಅಲ್ಲಿ ಅರಸನು ಪದ್ದತಿಯ ಪ್ರಕಾರ ಸ್ತಂಭದ ಬಳಿಯಲ್ಲಿ ನಿಂತಿದ್ದನು; ಅಧಿಪತಿಗಳೂ ತುತ್ತೂರಿಗಳನ್ನು ಊದುವವರೂ ಅರಸನ ಹತ್ತಿರ ಇದ್ದರು. ಜನ ಸಾಮಾನ್ಯರೆಲ್ಲರೂ ಸಂತೋಷದಿಂದ ಕೊಂಬೂದುತ್ತಿದ್ದರು. ಇದನ್ನು ಕಂಡಕೂಡಲೇ ಆಕೆ ಕೋಪದಿಂದ ಬಟ್ಟೆಗಳನ್ನು ಹರಿದುಕೊಂಡು, "ದ್ರೋಹ! ದ್ರೋಹ!" ಎಂದು ಕೂಗಿದಳು. ಆಗ ಯಾಜಕನಾದ ಯೆಹೋಯಾದವನು ಸೇನಾನಿಗಳಾದ ಶತಾಧಿಪತಿಗಳಿಗೆ, "ಈಕೆಯನ್ನು ಸರ್ವೇಶ್ವರನ ಆಲಯದಲ್ಲಿ ಕೊಲ್ಲಬೇಡಿ; ಎರಡು ಸಾಲು ಸಿಪಾಯಿಗಳು ಈಕೆಯನ್ನು ನಡುವೆ ಮಾಡಿ, ಹೊರಗೆ ಕರೆದುಕೊಂಡು ಹೋಗಲಿ; ಮತ್ತು ಈಕೆಯನ್ನು ಹಿಂಬಾಲಿಸುವಂತವರನ್ನು ಕತ್ತಿಯಿಂದ ಕೊಲ್ಲಿರಿ," ಎಂದು ಆಜ್ಞಾಪಿಸಿದನು. 

ಕೀರ್ತನೆ:132:11-12, 13-14, 17-18 

ಶ್ಲೋಕ : ಆರಿಸಿಕೊಂಡಿಹನು ಪ್ರಭು ಸಿಯೋನ್ ನಗರವನ್ನು. 

ಶುಭಸಂದೇಶ: ಮತ್ತಾಯ 6:19-23


"ಇಹಲೋಕದಲ್ಲಿ ಆಸ್ತಿಪಾಸ್ತಿಯನ್ನು ಶೇಖರಿಸಿಡಬೇಡಿ. ಇಲ್ಲಿ ತುಕ್ಕು ಹಿಡಿದೀತು; ನುಸಿ ಹೊಡೆದೀತು; ಕಳ್ಳರು ಕನ್ನ ಕೊರೆದು ಕದಿಯಾರು. ನಿನ್ನ ನಿಧಿ ಎಲ್ಲಿದೆಯೋ ಅಲ್ಲೇ ಇರುವುದು ನಿನ್ನ ಹೃದಯ. ಕಣ್ಣೇ ದೇಹಕ್ಕೆ ದೀಪ. ನಿನ್ನ ಕಣ್ಣು ಸರಿಯಿದ್ದರೆ ದೇಹವೆಲ್ಲಾ  ಕಾಂತಿಮಯವಾಗುವುದು. ಅದು ಕೆಟ್ಟದ್ದರೆ ನಿನ್ನ ದೇಹವೆಲ್ಲ ಕತ್ತಲಮಯವಾಗುವುದು!" ಎಂದು ಯೇಸುಸ್ವಾಮಿ ಹೇಳಿದರು.

18.06.2026 - ಸ್ವರ್ಗದಲ್ಲಿರುವ ಓ ನಮ್ಮ ತಂದೆಯೇ, ನಿಮ್ಮ ಪವಿತ್ರ ನಾಮ ಪೂಜಿತವಾಗಲಿ

 ಮೊದಲನೇ ವಾಚನ: ಸಿರಾಖನು 48:1-14

ಎಲೀಯನು ಆಮೇಲೆ ಪ್ರವಾದಿ ಎಲೀಯನೆದ್ದನು ಬೆಂಕಿಯಂತೆ ಉರಿಯಿತವನ ನುಡಿ ಪಂಜಿನಂತೆ. ಕ್ಷಾಮವನ್ನು ಬರಮಾಡಿದನಿವನು ಜನರ ಮೇಲೆ ಅವರನ್ನು ಕುಂದಿಸಿದನು ತನ್ನ ರೋಷದಿಂದಲೆ. ಆಕಾಶವನ್ನೇ ಮುಚ್ಚಿಬಿಟ್ಟನು ಸರ್ವೇಶ್ವರನ ಹೆಸರಿನಲ್ಲಿ ಬೆಂಕಿಯಿಳಿಯುವಂತೆ ಮಾಡಿದನು ಮೂರುಸಾರಿ. ಎಲೈ ಎಲೀಯನೇ, ಮಹತ್ಕಾರ್ಯಗಳಲ್ಲಿ ನೀನು ಎಷ್ಟು ಘನವಂತನಾಗಿದ್ದೆ ! ನಿನ್ನಂತೆ ಹೆಚ್ಚಳಪಡುವವರು ಯಾರಿದ್ದಾರೆ? ಸತ್ತವನನ್ನು ನೀನೆಬ್ಬಿಸಿದೆ ಮರಣದಿಂದ, ಪಾತಾಳದಿಂದ ಇದು ಸಾಧ್ಯವಾಯಿತು ಮಹೋನ್ನತನ ವಾಕ್ಯ ಶಕ್ತಿಯಿಂದ. ಅರಸುಗಳನ್ನು ನಾಶನಕ್ಕೆ ಗುರಿಮಾಡಿದವನು ನೀನು ಗಣ್ಯವ್ಯಕ್ತಿಗಳನ್ನು ಮಂಚದಿಂದ ಇಳಿಸಿದವನು ನೀನು. ಸೀನಾಯಿನಲ್ಲಿ ಗದರಿಸಿಕೊಂಡವನು ನೀನು ಹೋರೇಬಿನಲ್ಲಿ ಮುಯ್ಯಿತೀರಿಸುವ ನಿರ್ಣಯ ಕೇಳಿಸಿಕೊಂಡವನು ನೀನು. ಪ್ರತೀಕಾರ ಮಾಡುವುದಕ್ಕೆ ಅರಸರನ್ನು, ನಿನ್ನಾನಂತರ ಇರಬೇಕಾದ ಪ್ರವಾದಿಯನ್ನು ಅಭಿಷೇಕಿಸಿದವನು ನೀನು. ನೀ ಒಯ್ಯಲ್ಪಟ್ಟೆ ಬೆಂಕಿಯ ಬಿರುಗಾಳಿಯಲ್ಲಿ ಅಗ್ನಿಮಯ ಕುದುರೆಗಳೆಳೆದ ರಥದಲ್ಲಿ. ಕೋಪ ರೌದ್ರಕ್ಕೇರುವುದಕ್ಕೆ ಮುಂಚೆ ಅದನ್ನು ಶಾಂತಪಡಿಸುವುದಕ್ಕಾಗಿ ತಂದೆಯ ಹೃದಯವನ್ನು ಮಗನ ಕಡೆಗೆ ತಿರುಗಿಸುವುದಕ್ಕಾಗಿ ಇಸ್ರಯೇಲಿನ ಕುಲಗಳನ್ನು ಯಥಾಸ್ಥಿತಿಗೆ ತರುವುದಕ್ಕಾಗಿ ತಕ್ಕಕಾಲದಲ್ಲಿ ಗದರಿಸುವಾತ ನೀನೆಂದು ಬರೆದಿದೆ ನಿನ್ನ ವಿಷಯವಾಗಿ. ನಿನ್ನನು ನೋಡುವವರು ಧನ್ಯರು ಪ್ರೀತಿಯಿಂದ ನಿಧನರಾದವರು ಧನ್ಯರು ! ಕಾರಣ, ನಾವು ಸಹ ನಿಜವಾಗಿ ಜೀವಿಸುವೆವು. ಎಲೀಷ ಸುಳಿಗಾಳಿಯಿಂದ ಆವರಿಸಲ್ಪಟ್ಟವನು ಎಲೀಯನು ಅವನ ಆತ್ಮದಿಂದ ತುಂಬಿಕೊಂಡವನು ಎಲೀಷನು. ಇವನು ತನ್ನ ಜೀವನದಲ್ಲಿ ಜಗ್ಗಲಿಲ್ಲ ಯಾವ ಅರಸನ ಬೆದರಿಕೆಗು ಇವನನ್ನು ಅಧೀನದಲ್ಲಿಟ್ಟುಕೊಳ್ಳುವ ಶಕ್ತಿ ಇರಲಿಲ್ಲ ಯಾರಿಗು. ಇವನು ಸೋಲಲಿಲ್ಲ ಯಾವ ಮಾತಿಗು ಇವನ ದೇಹ ಪ್ರವಾದಿಸಿತು ಸತ್ತ ಮೇಲೂ. ಜೀವಮಾನಕಾಲದಲ್ಲಿ ಎಸಗಿದನು ಮಹತ್ಕಾರ್ಯಗಳನ್ನು ಸತ್ತಮೇಲೂ ಅವನ ಕಾರ್ಯಗಳು ಅಗಾಧವಾಗಿದ್ದವು.

ಕೀರ್ತನೆ: 97:1-2, 3-4, 5-6, 7

ಶ್ಲೋಕ: ಸಜ್ಜನರೇ, ಪ್ರಭುವಿನಲಿ ಆನಂದಿಸಿರಿ

1.  ಇದೆ ಪ್ರಭುವಿನ ಕೈಯಲಿ  ರಾಜ್ಯಾಧಿಕಾರ|
ಉಲ್ಲಾಸಿಸಲಿ  ಧರಣಿಮಂಡಲದಾದ್ಯಂತ||
ಸಂತೋಷಿಸಲಿ ಕಡಲಿನ ದ್ವೀಪಗಳೆಲ್ಲ|
ಇವೇ ಮುಗಿಲೂ ಕಾರ್ಮುಗಿಲೂ ಆತನ ಸುತ್ತಲು|
ನ್ಯಾಯ ನೀತಿ ಆತನ ಗದ್ದುಗೆಯಸ್ತಿವಾರಗಳು||
ಶ್ಲೋಕ

2.  ಚಲಿಸುತ್ತಿದೆ ಬೆಂಕಿ ಆತನ ಮುಂದುಗಡೆ|
ಸುಡುತ್ತದೆ ಆತನ ವೈರಿಗಳನ್ನು ಎಲ್ಲೆಡೆ||
ಇಳೆಯನು ಬೆಳಗಿಸುತ್ತದೆ ಆತನ ಮಿಂಚು|
ನಡುಗುತ್ತದೆ  ಭೂಮಿ ಅದಕ್ಕೆ ಬೆಚ್ಚುಬಿದ್ದು||
ಶ್ಲೋಕ

3.  ಸಾರ್ವಭೌಮನಾದ ಪ್ರಭುವಿನ ಮುಂದೆ|
ಕರಗುತ್ತವೆ ಬೆಟ್ಟಗುಡ್ಡಗಳು  ಮೇಣದಂತೆ||
ಘೋಷಿಸುತ್ತದೆ ಗಗನಮಂಡಲ ಆತನ ನೀತಿಯನು|
ಕಾಣುತ್ತವೆ ಸಕಲ ಜನಾಂಗ ಆತನ ಮಹಿಮೆಯನು||
ನಾಚಲಿ ವ್ಯರ್ಥ ವಿಗ್ರಹಗಳನ್ನು ಪೂಜಿಸಿ ಹಿಗ್ಗುವವರು|
ಪ್ರಭುವಿಗೆ ಅಡ್ಡಬೀಳಲಿ ಆ ದೇವರುಗಳೆಲ್ಲರು||
ಶ್ಲೋಕ

ಘೋಷಣೆ
(ಯೊವಾನ್ನ 10: 27)

ಅಲ್ಲೆಲೂಯ, ಅಲ್ಲೆಲೂಯ!
ನನ್ನ  ಕುರಿಗಳಾದರೋ  ನನ್ನ  ಸ್ವರವನ್ನು  ಗುರುತಿಸುತ್ತೇವೆ;| ನಾನು  ಅವನ್ನು  ಬಲ್ಲೆನು,  ಅವು  ನನ್ನನ್ನು  ಹಿಂಬಾಲಿಸುತ್ತವೆ||
ಅಲ್ಲೆಲೂಯ!



ಶುಭಸಂದೇಶ: ಮತ್ತಾಯ 6:7-15


ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು: “ಪ್ರಾರ್ಥನೆ ಮಾಡುವಾಗ ಪರಕೀಯರಂತೆ ನಿರರ್ಥಕ ಪದಗಳನ್ನು ಪಿಸುಗುಟ್ಟಬೇಡ. ತಮ್ಮ ಪ್ರಾರ್ಥನೆ ದೀರ್ಘವಾದಷ್ಟೂ ದೇವರು ಆಲಿಸುತ್ತಾರೆಂದು ಅವರು ಭಾವಿಸುತ್ತಾರೆ. ನೀವು ಅವರಂತೆ ಆಗಬೇಡಿ. ನಿಮ್ಮ ಅಗತ್ಯಗಳೇನೆಂದು ನೀವು ಕೇಳುವುದಕ್ಕೆ ಮೊದಲೇ ನಿಮ್ಮ ತಂದೆಗೆ ಗೊತ್ತಿದೆ. ಆದುದರಿಂದ ಹೀಗೆಂದು ಪ್ರಾರ್ಥನೆಮಾಡಿ: ‘ಸ್ವರ್ಗದಲ್ಲಿರುವ ಓ ನಮ್ಮ ತಂದೆಯೇ, ನಿಮ್ಮ ಪವಿತ್ರ ನಾಮ ಪೂಜಿತವಾಗಲಿ; ನಿಮ್ಮ ಸಾಮ್ರಾಜ್ಯ ಬರಲಿ; ನಿಮ್ಮ ಚಿತ್ತ ಸ್ವರ್ಗದಲ್ಲಿ ನೆರವೇರುವ ಪ್ರಕಾರ ಜಗತ್ತಿನಲ್ಲಿಯೂ ನೆರವೇರಲಿ. ನಮ್ಮ ಅನುದಿನದ ಆಹಾರವನ್ನು ನಮಗಿಂದು ಕೊಡಿ. ನಮಗೆ ತಪ್ಪುಮಾಡಿದವರನ್ನು ನಾವು ಕ್ಷಮಿಸುವ ಪ್ರಕಾರ ನಾವು ಮಾಡಿದ ತಪ್ಪುಗಳನ್ನು ಕ್ಷಮಿಸಿ. ನಮ್ಮನ್ನು ಶೋಧನೆಗೆ ಒಳಪಡಿಸಬೇಡಿ; ಕೇಡಿನಿಂದ ನಮ್ಮನ್ನು ರಕ್ಷಿಸಿರಿ.’ “ಜನರ ತಪ್ಪುಗಳನ್ನು ನೀವು ಕ್ಷಮಿಸಿದರೆ ಸ್ವರ್ಗದಲ್ಲಿರುವ ನಿಮ್ಮ ತಂದೆ ನಿಮ್ಮನ್ನು ಕ್ಷಮಿಸುವರು. ಜನರನ್ನು ನೀವು ಕ್ಷಮಿಸದಿದ್ದರೆ, ನಿಮ್ಮ ತಂದೆಯೂ ನಿಮ್ಮ ತಪ್ಪುಗಳನ್ನು ಕ್ಷಮಿಸರು.”

17.06.2026 - ಜನರಿಗೆ ತೋರಿಸಿಕೊಳ್ಳುವುದಕ್ಕಾಗಿ ನಿಮ್ಮ ಧಾರ್ಮಿಕ ಕಾರ್ಯಗಳನ್ನು ಅವರ ಎದುರಿಗೆ ಪ್ರದರ್ಶಿಸದಂತೆ ಎಚ್ಚರಿಕೆಯಿಂದಿರಿ

 ಮೊದಲನೇ ವಾಚನ: 2 ಅರಸುಗಳು 2:1, 6-14



ಸರ್ವೇಶ್ವರಸ್ವಾಮಿ ಎಲೀಯನನ್ನು ಸುಂಟರಗಾಳಿಯಲ್ಲಿ ಪರಲೋಕಕ್ಕೆ ಸೇರಿಸುವ ಸಮಯ ಬಂದಿತು. ಆಗ ಎಲೀಯನು ಎಲೀಷನೊಡನೆ ಗಿಲ್ಗಾಲನ್ನು ಬಿಟ್ಟು ಹೊರಟನು. ಎಲೀಯನು ಮತ್ತೆ ಎಲೀಷನಿಗೆ, “ದಯವಿಟ್ಟು ನೀನು ಇಲ್ಲೇ ಇರು; ಸರ್ವೇಶ್ವರ ನನಗೆ ಜೋರ್ಡನಿಗೆ ಹೋಗಬೇಕೆಂದು ಆಜ್ಞಾಪಿಸಿದ್ದಾರೆ,” ಎಂದನು. ಆಗ ಅವನು, “ಸರ್ವೇಶ್ವರನ ಆಣೆ, ನಿಮ್ಮ ಜೀವದಾಣೆ, ನಾನು ನಿಮ್ಮನ್ನು ಬಿಟ್ಟಿರಲಾಗದು,” ಎಂದು ಉತ್ತರಕೊಟ್ಟನು. ಆದುದರಿಂದ ಇಬ್ಬರೂ ಹೊರಟು ಜೋರ್ಡನ್ ನದಿಯ ದಡಕ್ಕೆ ಬಂದರು. ಪ್ರವಾದಿಮಂಡಲಿಯವರಲ್ಲಿ ಐವತ್ತುಮಂದಿ ಇವರ ಹಿಂದಿನಿಂದಲೇ ಬಂದು ಸ್ವಲ್ಪ ದೂರದಲ್ಲಿ ನಿಂತುಕೊಂಡರು. ಅನಂತರ ಎಲೀಯನು ತನ್ನ ಕಂಬಳಿಯನ್ನು ಮಡಿಚಿ, ಅದರಿಂದ ನೀರನ್ನು ಹೊಡೆದನು. ನೀರು ಇಬ್ಭಾಗವಾಯಿತು; ಅವರಿಬ್ಬರೂ ಒಣ ನೆಲದ ಮೇಲೆ ದಾಟಿಹೋದರು. ಅವರು ಆಚೆ ದಡಕ್ಕೆ ಸೇರಿದ ಮೇಲೆ ಎಲೀಯನು ಎಲೀಷನನ್ನು, “ನಿನ್ನನ್ನು ಬಿಟ್ಟುಹೋಗುವ ಮೊದಲು ನಾನು ನಿನಗೋಸ್ಕರ ಏನು ಮಾಡಬೇಕನ್ನುತ್ತಿ ಹೇಳು?” ಎಂದು ಕೇಳಿದನು. ಅದಕ್ಕೆ ಎಲೀಷನು, “ನಿಮಗಿರುವ ಆತ್ಮಶಕ್ತಿಯಲ್ಲಿ ನನಗೆ ಎರಡು ಪಾಲನ್ನು ಅನುಗ್ರಹಿಸಿ,” ಎಂದು ಬೇಡಿಕೊಂಡನು. ಆಗ ಎಲೀಯನು, “ನೀನು ದುರ್ಲಭವಾದದ್ದನ್ನು ಕೇಳಿಕೊಂಡೆ; ಆದರೂ ನನ್ನನ್ನು ನಿನ್ನ ಬಳಿಯಿಂದ ತೆಗೆಯಲಾಗುವಾಗ ನೀನು ನನ್ನನ್ನು ನೋಡುವುದಾದರೆ ಅದು ದೊರಕುವುದು; ಇಲ್ಲವಾದರೆ ದೊರಕುವುದಿಲ್ಲ,” ಎಂದನು. ಅವರು ಮಾತನಾಡುತ್ತಾ ಮುಂದೆ ಹೋಗುತ್ತಿರುವಾಗ ಫಕ್ಕನೆ ಅಗ್ನಿಮಯವಾದ ರಥರಥಾಶ್ವಗಳು ನಡುವೆ ಬಂದು ಅವರನ್ನು ವಿಂಗಡಿಸಿದವು. ಎಲೀಯನು ಸುಂಟರಗಾಳಿಯಲ್ಲಿ ಪರಲೋಕಕ್ಕೆ ಹೋದನು. ಎಲೀಷನು ಅದನ್ನು ನೋಡುತ್ತಾ, “ನನ್ನ ತಂದೆಯೇ, ನನ್ನ ತಂದೆಯೇ, ಇಸ್ರಯೇಲರಿಗೆ ರಥರಥಾಶ್ವಗಳಾಗಿದ್ದವರೇ,” ಎಂದು ಕೂಗಿಕೊಂಡನು. ಎಲೀಯನು ತನಗೆ ಕಾಣಿಸದೆ ಹೋದಮೇಲೆ ದುಃಖದಿಂದ ತನ್ನ ಬಟ್ಟೆಗಳನ್ನು ಹರಿದು ಎರಡು ತುಂಡುಮಾಡಿದನು. ಅನಂತರ ಅವನು ಮೇಲಿನಿಂದ ಬಿದ್ದ ಎಲೀಯನ ಕಂಬಳಿಯನ್ನು ತೆಗೆದುಕೊಂಡು ಜೋರ್ಡನ್ ನದೀತೀರಕ್ಕೆ ಬಂದನು. “ಎಲೀಯನ ದೇವರಾದ ಸರ್ವೇಶ್ವರನೆಲ್ಲಿ?” ಎಂದುಕೊಂಡು ಆ ಕಂಬಳಿಯಿಂದ ನೀರನ್ನು ಹೊಡೆದನು. ಅದು ಇಬ್ಭಾಗ ಆಯಿತು. ಅವನು ದಾಟಿಹೋದನು. 

ಕೀರ್ತನೆ: 31:20, 21, 24
ಶ್ಲೋಕ: ಪ್ರಭುವಿಗಾಗಿ ಕಾದಿಹೆ ಜನರೇ, ನಿಮಗಿರಲಿ ಅಭಯ

ಶುಭಸಂದೇಶ: ಮತ್ತಾಯ 6:1-6, 16-18


ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು: " ಜನರಿಗೆ ತೋರಿಸಿಕೊಳ್ಳುವುದಕ್ಕಾಗಿ ನಿಮ್ಮ ಧಾರ್ಮಿಕ ಕಾರ್ಯಗಳನ್ನು ಅವರ ಎದುರಿಗೆ ಪ್ರದರ್ಶಿಸದಂತೆ ಎಚ್ಚರಿಕೆಯಿಂದಿರಿ. ಹಾಗೆ ಮಾಡಿದರೆ, ಸ್ವರ್ಗದಲ್ಲಿರುವ ನಿಮ್ಮ ತಂದೆಯಿಂದ ನಿಮಗೆ ಪ್ರತಿಫಲ ದೊರಕದು. ಅಂತೆಯೇ, ನೀನು ದಾನಧರ್ಮ ಮಾಡುವಾಗ ತುತೂರಿಯನ್ನು ಊದಿಸಬೇಡ. ಜನರ ಹೊಗಳಿಕೆಗಾಗಿ ಕಪಟಿಗಳು ಪ್ರಾರ್ಥನಾಮಂದಿರಗಳಲ್ಲೂ ಹಾದಿ ಬೀದಿಗಳಲ್ಲೂ ಹೀಗೆ ಪ್ರದರ್ಶನ ಮಾಡುತ್ತಾರೆ. ಅವರಿಗೆ ಬರಬೇಕಾದ ಫಲ ಪೂರ್ತಿಯಾಗಿ ದೊರಕಿದ್ದಾಯಿತೆಂದು ನಿಮಗೆ ಖಚಿತವಾಗಿ ಹೇಳುತ್ತೇನೆ. ಆದರೆ ನೀನು ದಾನ ಧರ್ಮಮಾಡುವಾಗ ನಿನ್ನ ಬಲಗೈ ಕೊಡುವುದು ನಿನ್ನ ಎಡಗೈಗೂ ತಿಳಿಯದ ಹಾಗೆ ಗೋಪ್ಯವಾಗಿರಲಿ. ಅಂತರಂಗದಲ್ಲಿ ನಡೆಯುವುದನ್ನು ನೋಡುವ ನಿನ್ನ ತಂದೆ ನಿನಗೆ ಪ್ರತಿಫಲವನ್ನು ಕೊಡುವರು. “ಪ್ರಾರ್ಥನೆ ಮಾಡುವಾಗ ಕಪಟಿಗಳಂತೆ ಮಾಡಬೇಡಿ. ಜನರು ತಮ್ಮನ್ನು ನೋಡಲೆಂದು ಪ್ರಾರ್ಥನಾ ಮಂದಿರಗಳಲ್ಲೂ ಬೀದಿಯ ಚೌಕಗಳಲ್ಲೂ ನಿಂತು ಪ್ರಾರ್ಥನೆ ಮಾಡಲು ಇಚ್ಛಿಸುತ್ತಾರೆ. ಅವರಿಗೆ ಬರಬೇಕಾದ ಪೂರ್ತಿ ಫಲ ಆಗಲೇ ಬಂದಾಯಿತೆಂಬುದು ನಿಮಗೆ ಚೆನ್ನಾಗಿ ತಿಳಿದಿರಲಿ. ನೀನು ಪ್ರಾರ್ಥನೆ ಮಾಡುವಾಗ ನಿನ್ನ ಕೊಠಡಿಗೆ ಹೋಗು; ಬಾಗಿಲನ್ನು ಮುಚ್ಚು; ಅಂತರಂಗದಲ್ಲಿರುವ ನಿನ್ನ ತಂದೆಗೆ ಪ್ರಾರ್ಥನೆಮಾಡು. ಅಂತರಂಗದಲ್ಲಿ ನಡೆಯುವುದನ್ನು ನೋಡುವ ನಿನ್ನ ತಂದೆ ನಿನಗೆ ಪ್ರತಿಫಲವನ್ನು ಕೊಡುವರು.” “ಉಪವಾಸ ಮಾಡುವಾಗ ಕಪಟಿಗಳಂತೆ ಮುಖ ಸಪ್ಪೆಮಾಡಬೇಡಿ. ಜನರ ಕಣ್ಣಿಗೆ ತಾವು ಉಪವಾಸಿಗಳೆಂದು ತೋರ್ಪಡಿಸಿಕೊಳ್ಳುವುದಕ್ಕಾಗಿ ಅವರು ಮುಖವನ್ನು ಬಾಡಿಸಿಕೊಳ್ಳುತ್ತಾರೆ. ಅವರಿಗೆ ಬರಬೇಕಾದ ಫಲ ಪೂರ್ತಿಯಾಗಿ ದೊರಕಿಯಾಯಿತೆಂದು ನಿಮಗೆ ಖಚಿತವಾಗಿ ಹೇಳುತ್ತೇನೆ. ಆದರೆ ನೀನು ಉಪವಾಸ ಕೈಗೊಂಡಾಗ ಮುಖ ತೊಳೆದುಕೊ, ತಲೆಬಾಚಿಕೊ. ಆಗ ಉಪವಾಸ ಮಾಡುವವನಂತೆ ನೀನು ಜನರಿಗೆ ಕಾಣಿಸಿಕೊಳ್ಳುವುದಿಲ್ಲ; ಅಂತರಂಗದಲ್ಲಿ ಇರುವ ನಿನ್ನ ತಂದೆಗೆ ಮಾತ್ರ ಕಾಣಿಸಿಕೊಳ್ಳುವೆ. ಅಂತರಂಗದಲ್ಲಿ ನಡೆಯುವುದನ್ನು ನೋಡುವ ನಿನ್ನ ತಂದೆ ಅದಕ್ಕೆಲ್ಲ ಪ್ರತಿಫಲ ಕೊಡುವರು.”

16.06.2026 - ನಿಮ್ಮ ಮಿತ್ರರನ್ನು ಮಾತ್ರ ನೀವು ಗೌರವಿಸಿದರೆ ಅದರಲ್ಲೇನು ವಿಶೇಷ

 ಮೊದಲನೇ ವಾಚನ: 1 ಅರಸುಗಳು 21:17-29



ಆಗ ತಿಷ್ಬೀಯನಾದ ಎಲೀಯನಿಗೆ ಸರ್ವೇಶ್ವರನ ವಾಣಿವುಂಟಾಯಿತು. “ನೀನು ಹೋಗಿ ಸಮಾರಿಯಲ್ಲಿ ವಾಸಿಸುವ ಇಸ್ರಯೇಲ್ ಅರಸನನ್ನು ಕಾಣು; ಅವನು ಈಗ ನಾಬೋತನ ದ್ರಾಕ್ಷೀತೋಟವನ್ನು ಸ್ವಾಧೀನಮಾಡಿಕೊಳ್ಳುವುದಕ್ಕಾಗಿ ಅಲ್ಲಿಗೆ ಹೋಗಿದ್ದಾನೆ; ಅವನಿಗೆ, “ನೀನು ಕೊಲೆಮಾಡಿ, ಸೊತ್ತನ್ನು ಸಂಪಾದಿಸಿಕೊಂಡೆಯಲ್ಲವೇ? ನಾಯಿಗಳು ನಾಬೋತನ ರಕ್ತವನ್ನು ನೆಕ್ಕಿದ ಸ್ಥಳದಲ್ಲೇ ನಿನ್ನ ರಕ್ತವನ್ನೂ ನೆಕ್ಕುವುವು, ಎನ್ನುತ್ತಾರೆ ಸರ್ವೇಶ್ವರ’ ಎಂದು ಹೇಳು.” ಅಹಾಬನು ಎಲೀಯನನ್ನು ನೋಡಿ, “ಎಲೈ ವೈರಿಯೇ, ನೀನು ನನ್ನನ್ನು ಕಂಡುಹಿಡಿದೆಯಾ?” ಎಂದು ಕೇಳಿದನು. ಅವನು, “ಹೌದು, ಕಂಡುಹಿಡಿದೆ, ನೀನು ನಿನ್ನನ್ನು ಪಾಪಕ್ಕೆ ಮಾರಿಬಿಟ್ಟು, ಸರ್ವೇಶ್ವರನ ದೃಷ್ಟಿಯಲ್ಲಿ ದ್ರೋಹಿಯಾದೆ. ಸರ್ವೇಶ್ವರ ನಿನ್ನನ್ನು ಕುರಿತು, ‘ನಾನು ನಿನ್ನ ಮೈಮೇಲೆ ಕೇಡನ್ನು ಬರಮಾಡಿ, ನಿನ್ನನ್ನು ಕಸದಂತೆ ತೆಗೆದುಹಾಕುವೆನು; ನಿನ್ನ ಸಂತಾನದ ಗಂಡಸರಲ್ಲಿ ಸ್ವತಂತ್ರರಾಗಲಿ, ಪರತಂತ್ರರಾಗಲಿ ಎಲ್ಲರನ್ನೂ ಇಸ್ರಯೇಲರ ಮಧ್ಯೆಯಿಂದ ಕಡಿದುಬಿಡುವೆನು. ನೀನು ಇಸ್ರಯೇಲರನ್ನು ಪಾಪಕ್ಕೆ ಪ್ರೇರಿಸಿ, ನನಗೆ ಕೋಪವನ್ನೆಬ್ಬಿಸಿದ್ದರಿಂದ ನೆಬಾಟನ ಮಗ ಯಾರೊಬ್ಬಾಮನ ಮನೆಗೂ ಅಹೀಯನ ಮಗ ಬಾಷನ ಮನೆಗೂ ಆದ ಗತಿ ನಿನ್ನ ಮನೆಗೂ ಆಗುವುದು,’ ಎನ್ನುತ್ತಾರೆ. ಇದಲ್ಲದೆ ಈಜೆಬೆಲಳನ್ನು ಕುರಿತು ಅವರು, ‘ನಾಯಿಗಳು ಜೆಸ್ರೀಲ್ ಪಟ್ಟಣದ ಗೋಡೆಯ ಬಳಿಯಲ್ಲಿ ಆಕೆಯ ಶವವನ್ನು ತಿನ್ನುವುವು; ಅಹಾಬನ ಮನೆಯವರಲ್ಲಿ ಊರೊಳಗೆ ಸಾಯುವಂಥವರನ್ನು ನಾಯಿಗಳೂ ಅಡವಿಯಲ್ಲಿ ಸಾಯುವಂಥವರನ್ನು ಪಕ್ಷಿಗಳೂ ತಿಂದುಬಿಡುವುವು’ ಎಂದು ಹೇಳುತ್ತಾರೆ,” ಎಂದನು. ಹೆಂಡತಿ ಈಜೆಬೆಲಳಿಂದ ಪ್ರಚೋದಿತನಾಗಿ ಸರ್ವೇಶ್ವರನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡುವುದಕ್ಕೆ ತನ್ನನ್ನೇ ಮಾರಿಬಿಟ್ಟ ಅಹಾಬನಂಥ ದುಷ್ಟನು ಇನ್ನೊಬ್ಬನಿರಲಿಲ್ಲ. ಸರ್ವೇಶ್ವರ ಇಸ್ರಯೇಲರ ನಾಡಿನಿಂದ ಓಡಿಸಿಬಿಟ್ಟ ಅಮೋರಿಯರಂತೆ ವಿಗ್ರಹಗಳನ್ನು ಪೂಜಿಸಿದ ಅಹಾಬನ ನಡತೆ ಬಹಳ ಅಸಹ್ಯವಾಗಿತ್ತು. ಅಹಾಬನು ಎಲೀಯನ ಮಾತುಗಳನ್ನು ಕೇಳಿ ತನ್ನ ಬಟ್ಟೆಯನ್ನು ದುಃಖದಿಂದ ಹರಿದುಕೊಂಡನು; ಹಗಲಿರುಳು ಮೈಮೇಲೆ ಗೋಣಿತಟ್ಟನ್ನು ಹಾಕಿಕೊಂಡು ಉಪವಾಸ ಮಾಡುತ್ತಾ ದೀನಮನಸ್ಸಿನಿಂದ ವರ್ತಿಸಿದನು. ಆದುದರಿಂದ ಸರ್ವೇಶ್ವರ ತಿಷ್ಬೀಯನಾದ ಎಲೀಯನಿಗೆ, “ಅಹಾಬನು ನನ್ನ ಮುಂದೆ ತನ್ನನ್ನೇ ತಗ್ಗಿಸಿಕೊಂಡದ್ದನ್ನು ನೋಡಿದಿಯಲ್ಲವೇ? ಅವನು ಹೀಗೆ ತನ್ನನ್ನು ತಗ್ಗಿಸಿಕೊಂಡದ್ದರಿಂದ ನಾನು ಮುಂತಿಳಿಸಿದ ಕೇಡನ್ನು ಅವನ ಜೀವಮಾನದಲ್ಲಿ ಬರಗೊಡಿಸುವುದಿಲ್ಲ. ಅವನ ಮಗನ ಕಾಲದಲ್ಲಿ ಅವನ ಮನೆಯವರ ಮೇಲೆ ಬರಮಾಡುವೆನು,” ಎಂದು ಹೇಳಿದರು.

ಕೀರ್ತನೆ: 51:3-4, 5-6, 11, 16

ಶ್ಲೋಕ: ಕೃಪಾಳು ದೇವಾ, ಕರುಣಿಸೆನ್ನನು, ನಿನಗೆ ದ್ರೋಹವೆಸಗಿದೆ

ಶುಭಸಂದೇಶ: ಮತ್ತಾಯ 5:43-48


ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೇಳಿದ್ದೇನೆಂದರೆ: “ ‘ಮಿತ್ರರನ್ನು ಪ್ರೀತಿಸು, ಶತ್ರುವನ್ನು ದ್ವೇಷಿಸು’ ಎಂದು ಹೇಳಿರುವುದು ನಿಮಗೆ ತಿಳಿದೇ ಇದೆ. ನಾನು ಹೇಳುವುದನ್ನು ಗಮನಿಸಿರಿ; ನಿಮ್ಮ ಶತ್ರುಗಳನ್ನು ಪ್ರೀತಿಸಿರಿ; ನಿಮ್ಮನ್ನು ಪೀಡಿಸುವವರಿಗಾಗಿ ಪ್ರಾರ್ಥಿಸಿರಿ. ಇದರಿಂದ ಸ್ವರ್ಗದಲ್ಲಿರುವ ನಿಮ್ಮ ತಂದೆಗೆ ನೀವು ಮಕ್ಕಳಾಗುವಿರಿ. ಅವರು ಸಜ್ಜನರ ಮೇಲೂ ದುರ್ಜನರ ಮೇಲೂ ತಮ್ಮ ಸೂರ್ಯನು ಉದಯಿಸುವಂತೆ ಮಾಡುತ್ತಾರೆ; ನೀತಿವಂತರ ಮೇಲೂ ಅನೀತಿವಂತರ ಮೇಲೂ ಮಳೆಗರೆಯುತ್ತಾರೆ. ನಿಮ್ಮನ್ನು ಪ್ರೀತಿಸುವವರನ್ನು ಮಾತ್ರ ನೀವು ಪ್ರೀತಿಸಿದರೆ ಅದರಿಂದೇನು ಫಲ? ಸುಂಕ ವಸೂಲಿ ಮಾಡುವವರೂ ಹಾಗೆ ಮಾಡುವುದಿಲ್ಲವೇ? ನಿಮ್ಮ ಮಿತ್ರರನ್ನು ಮಾತ್ರ ನೀವು ಗೌರವಿಸಿದರೆ ಅದರಲ್ಲೇನು ವಿಶೇಷ? ಅನ್ಯಜನರೂ ಹಾಗೆ ಮಾಡುತ್ತಾರಲ್ಲವೇ? ಆದುದರಿಂದ ಸ್ವರ್ಗದಲ್ಲಿರುವ ನಿಮ್ಮ ತಂದೆ ಪರಿಪೂರ್ಣರಾಗಿರುವಂತೆ ನೀವೂ ಪರಿಪೂರ್ಣರಾಗಿರಿ.”

15.06.2026 - ನಿನಗೆ ಅಪಕಾರ ಮಾಡಿದವನಿಗೆ ಪ್ರತೀಕಾರ ಮಾಡಬೇಡ.

 ಮೊದಲನೇ ವಾಚನ: 1 ಅರಸುಗಳು 21:1-16



ಜೆಸ್ರೀಲಿನಲ್ಲಿ, ಸಮಾರಿಯದ ಅರಸ ಅಹಾಬನ ಅರಮನೆಯ ಹತ್ತಿರ ಜೆಸ್ರೀಲಿನವನಾದ ನಾಬೋತನೆಂಬ ವ್ಯಕ್ತಿಗೆ ಒಂದು ದ್ರಾಕ್ಷೀತೋಟವಿತ್ತು. ಅಹಾಬನು ಆ ನಾಬೋತನಿಗೆ, “ನಿನ್ನ ದ್ರಾಕ್ಷೀತೋಟವನ್ನು ನನಗೆ ಕೊಡು; ಅದು ನನ್ನ ಅರಮನೆಯ ಹತ್ತಿರವಿರುವುದರಿಂದ ಅದನ್ನು ಕಾಯಿಪಲ್ಯದ ತೋಟವನ್ನಾಗಿ ಮಾಡಿಕೊಳ್ಳುತ್ತೇನೆ; ಅದಕ್ಕೆ ಬದಲಾಗಿ ನಿನಗೆ ಅದಕ್ಕಿಂತ ಉತ್ತಮವಾದ ತೋಟವನ್ನು ಕೊಡುತ್ತೇನೆ; ಅದು ಬೇಡವಾದರೆ ಕ್ರಯವನ್ನು ಕೊಡುತ್ತೇನೆ,” ಎಂದು ಹೇಳಿದನು. ಅದಕ್ಕೆ ನಾಬೋತನು, “ಪಿತ್ರಾರ್ಜಿತ ಸೊತ್ತನ್ನು ನಿಮಗೆ ಮಾರದಂತೆ ಸರ್ವೇಶ್ವರ ನನ್ನನ್ನು ತಡೆಯಲಿ!” ಎಂದು ಉತ್ತರಕೊಟ್ಟನು. ಪಿತ್ರಾರ್ಜಿತ ಸೊತ್ತನ್ನು ನಿನಗೆ ಕೊಡುವುದಿಲ್ಲವೆಂದು ನಾಬೋತನು ಹೇಳಿದ್ದರಿಂದ ಅಹಾಬನು ಸಿಟ್ಟುಗೊಂಡನು; ಗಂಟುಮೋರೆ ಮಾಡಿಕೊಂಡು ಮನೆಗೆ ಹೋಗಿ, ಊಟಮಾಡಲೊಲ್ಲದೆ ಮಂಚದ ಮೇಲೆ ಮಲಗಿ, ಗೋಡೆಯ ಕಡೆಗೆ ಮುಖ ತಿರುಗಿಸಿಕೊಂಡನು. ಆಗ ಅವನ ಹೆಂಡತಿ ಈಜೆಬೆಲಳು ಅವನ ಬಳಿಗೆ ಬಂದು, “ನೀವೇಕೆ ಊಟಮಾಡುವುದಿಲ್ಲ? ನಿಮಗೆ ಯಾವ ಚಿಂತೆ?” ಎಂದು ಕೇಳಿದಳು. ಅವನು, “ನಾನು ಜೆಸ್ರೀಲಿನವನಾದ ನಾಬೋತನಿಗೆ, ‘ನಿನ್ನ ದ್ರಾಕ್ಷೀತೋಟವನ್ನು ನನಗೆ ಮಾರಿಬಿಡು; ಹಣ ಬೇಡವಾದರೆ ನಿನಗೆ ಬೇರೊಂದು ದ್ರಾಕ್ಷೀತೋಟವನ್ನು ಕೊಡುತ್ತೇನೆ ಎಂದು ಹೇಳಿದೆ; ಆದರೆ ಅವನು ಕೊಡುವುದಿಲ್ಲ ಎಂದುಬಿಟ್ಟ,” ಎಂದು ಉತ್ತರಕೊಟ್ಟನು. ಆಗ ಅವನ ಹೆಂಡತಿ ಈಜೆಬೆಲಳು, “ಇಸ್ರಯೇಲರ ಅರಸರಾದ ನೀವು ಹೀಗೆ ವರ್ತಿಸುವುದೇ! ಎದ್ದು ಊಟಮಾಡಿ, ಸಂತೋಷದಿಂದಿರಿ; ನಾನು ನಿಮಗೆ ಜೆಸ್ರೀಲಿನವನಾದ ನಾಬೋತನ ದ್ರಾಕ್ಷೀತೋಟವನ್ನು ಕೊಡುತ್ತೇನೆ,” ಎಂದು ನುಡಿದಳು. ಅಂತೆಯೇ ಅಹಾಬನ ಹೆಸರಿನಲ್ಲಿ ಒಂದು ಪತ್ರವನ್ನು ಬರೆದು, ಅದಕ್ಕೆ ಅವನ ಮುದ್ರೆ ಹಾಕಿ, ಅದನ್ನು ನಾಬೋತನ ಊರಿನಲ್ಲಿದ್ದ ಎಲ್ಲಾ ಪ್ರಧಾನಪುರುಷರಿಗೂ ಹಿರಿಯರಿಗೂ ಕಳುಹಿಸಿದಳು. ಅದರಲ್ಲಿ, “ಎಲ್ಲರೂ ಉಪವಾಸ ಮಾಡಬೇಕೆಂದು ಪ್ರಕಟಿಸಿರಿ: ನಾಬೋತನನ್ನು ನೆರೆದ ಸಭೆಯ ಮುಂದೆ ನಿಲ್ಲಿಸಿರಿ; ಅವನು ದೇವರನ್ನೂ ಅರಸನನ್ನೂ ಶಪಿಸಿದವನು ಎಂಬುದಾಗಿ ಇಬ್ಬರು ದುಷ್ಟಮನುಷ್ಯರಿಂದ ಅವನಿಗೆ ವಿರೋಧವಾಗಿ ಸಾಕ್ಷಿ ಹೇಳಿಸಿರಿ; ಅವನನ್ನು ಹೊರಗೆ ಒಯ್ದು, ಕಲ್ಲೆಸೆದು ಕೊಲ್ಲಿರಿ,” ಎಂದು ಬರೆದಿದ್ದಳು. ಅವನ ಊರಿನ ಹಿರಿಯರೂ ಪ್ರಧಾನಪುರುಷರೂ ಈಜೆಬೆಲಳು ಕಳುಹಿಸಿದ ಪತ್ರದಲ್ಲಿ ಬರೆದಿದ್ದಂತೆಯೇ ಮಾಡಿದರು. ಉಪವಾಸವನ್ನು ಪ್ರಕಟಿಸಿದರು, ನೆರೆದ ಸಭೆಯ ಮುಂದೆ ನಾಬೋತನನ್ನು ನಿಲ್ಲಿಸಿದರು; ತರುವಾಯ ಇಬ್ಬರು ದುಷ್ಟರು ಬಂದು ಅವನ ಮುಂದೆ ಕುಳಿತರು. ಇವನು ದೇವರನ್ನೂ ಅರಸನನ್ನೂ ಶಪಿಸಿದ್ದಾನೆಂಬುದಾಗಿ ಜನರ ಎದುರಿನಲ್ಲೆ ಅವನಿಗೆ ವಿರುದ್ಧ ಸಾಕ್ಷಿಹೇಳಿದರು. ಜನರು ಅವನನ್ನು ಊರಿನ ಹೊರಗೆ ಒಯ್ದು ಕಲ್ಲೆಸೆದು ಕೊಂದರು. ನಾಬೋತನು ಕಲ್ಲೆಸೆತದಿಂದ ಸತ್ತ ಸಮಾಚಾರವನ್ನು ಆ ಹಿರಿಯರು ಈಜೆಬೆಲಳಿಗೆ ಮುಟ್ಟಿಸಿದರು. ಆಕೆ ಇದನ್ನು ಕೇಳಿ ಅಹಾಬನಿಗೆ, “ನೀವು ಹೋಗಿ ನಾಬೋತನು ಮಾರುವುದಿಲ್ಲವೆಂದು ಹೇಳಿದ ದ್ರಾಕ್ಷೀತೋಟವನ್ನು ಸ್ವಾಧೀನಮಾಡಿಕೊಳ್ಳಿ. ಅವನು ಜೀವದಿಂದಿಲ್ಲ, ಸತ್ತನು,” ಎಂದು ಹೇಳಿದಳು. ಜೆಸ್ರೀಲಿನವನಾದ ನಾಬೋತನ ಮರಣವಾರ್ತೆಯನ್ನು ಅಹಾಬನು ಕೇಳಿ, ದ್ರಾಕ್ಷೀತೋಟವನ್ನು ಸ್ವಾಧೀನಮಾಡಿಕೊಳ್ಳುವುದಕ್ಕೆ ಹೋದನು.

ಕೀರ್ತನೆ: 5:2-3, 4-6, 6-7

ಶ್ಲೋಕ: ಕಿವಿಗೊಡು ಪ್ರಭೂ, ಎನ್ನ ನುಡಿಗೆ 

ಶುಭಸಂದೇಶ: ಮತ್ತಾಯ 5:38-42

ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು: “ ‘ಕಣ್ಣಿಗೆ ಪ್ರತಿಯಾಗಿ ಕಣ್ಣು, ಹಲ್ಲಿಗೆ ಬದಲಾಗಿ ಹಲ್ಲು’ ಎಂಬುದನ್ನು ನೀವು ಕೇಳಿದ್ದೀರಿ. ಆದರೆ ನನ್ನ ಬೋಧೆ ಇದು; ನಿನಗೆ ಅಪಕಾರ ಮಾಡಿದವನಿಗೆ ಪ್ರತೀಕಾರ ಮಾಡಬೇಡ. ನಿನ್ನ ಬಲಗೆನ್ನೆಗೆ ಒಬ್ಬನು ಹೊಡೆದರೆ ಇನ್ನೊಂದು ಕೆನ್ನೆಯನ್ನೂ ಒಡ್ಡು. ನಿನ್ನೊಡನೆ ವ್ಯಾಜ್ಯಮಾಡಿ ನಿನ್ನ ಒಳ ಅಂಗಿಯನ್ನು ಕಿತ್ತುಕೊಳ್ಳುವವನಿಗೆ ಹೊರ ಅಂಗಿಯನ್ನೂ ಕೊಟ್ಟುಬಿಡು. ಯಾರಾದರೂ ಒಂದು ಕಿಲೊಮೀಟರ್ ದೂರ ಬಾ ಎಂದು ನಿನ್ನನ್ನು ಒತ್ತಾಯಪಡಿಸಿದರೆ ಅವನೊಡನೆ ಎರಡು ಕಿಲೊಮೀಟರ್ ಹೋಗು; ಬೇಡಿಕೊಳ್ಳುವವನಿಗೆ ಕೊಡು. ಸಾಲ ಕೇಳಬಂದವನಿಂದ ಮುಖ ತಿರುಗಿಸಿಕೊಳ್ಳಬೇಡ.”

14.06.2026 - ಪರಕೀಯರತ್ತ ಹೋಗಲೇಬೇಡಿ; ಸಮಾರಿಯದವರ ಯಾವ ಊರಿಗೂ ಕಾಲಿಡಬೇಡಿ.

 ಮೊದಲನೇ ವಾಚನ: ವಿಮೋಚನಕಾಂಡ 19:2-6

ಅವರು ರೆಫೀದೀಮನ್ನು ಬಿಟ್ಟು ಆ ಮರುಭೂಮಿಗೆ ಬಂದು ಅಲ್ಲಿನ ಬೆಟ್ಟಕ್ಕೆ ಎದುರಾಗಿ ಇಳಿದುಕೊಂಡರು. ಮೋಶೆ ಆ ಬೆಟ್ಟವನ್ನೇರಿ ದೇವರ ಸನ್ನಿಧಿಗೆ ಬಂದನು. ಸರ್ವೇಶ್ವರಸ್ವಾಮಿ ಬೆಟ್ಟದ ಮೇಲಿಂದ ಕೂಗಿ ಅವನಿಗೆ, “ನೀನು ಯಕೋಬನ ಮನೆತನದವರಾದ ಇಸ್ರಯೇಲರಿಗೆ ಈ ಮಾತುಗಳನ್ನು ಹೇಳು: ‘ನಾನು ಈಜಿಪ್ಟಿನವರಿಗೆ ಏನು ಮಾಡಿದೆನೆಂದು ನೀವು ನೋಡಿದ್ದೀರಿ. ಹದ್ದು ತನ್ನ ಮರಿಗಳನ್ನು ರೆಕ್ಕೆಗಳ ಮೇಲೆ ಹೊತ್ತುಕೊಳ್ಳುವಂತೆ ನಾನು ನಿಮ್ಮನ್ನು ಹೊತ್ತು ಈ ನನ್ನ ಸ್ಥಳಕ್ಕೆ ಸೇರಿಸಿದ್ದೇನೆ. ಇದೆಲ್ಲಾ ನಿಮಗೆ ಗೊತ್ತಿದೆ. ಹೀಗಿರಲು, ನೀವು ನನ್ನ ಮಾತನ್ನು ಶ್ರದ್ಧೆಯಿಂದ ಕೇಳಿ, ನಾನು ನೀಡುವ ನಿಬಂಧನೆಯನ್ನು ಅನುಸರಿಸಿ ನಡೆದರೆ, ಸಮಸ್ತ ಭೂಮಿ ನನ್ನದಾಗಿದ್ದರೂ ನೀವು ಎಲ್ಲ ಜನಾಂಗಗಳಲ್ಲೂ ನನಗೆ ಸ್ವಕೀಯ ಜನರಾಗುವಿರಿ. ಅಲ್ಲದೆ ನೀವು ನನಗೆ ಯಾಜಕರಾಜವಂಶ ಹಾಗು ಪರಿಶುದ್ಧ ಜನಾಂಗ ಆಗುವಿರಿ.’ ಇಸ್ರಯೇಲರಿಗೆ ನೀನು ತಿಳಿಸಬೇಕಾದ ವಿಷಯವಿದು,” ಎಂದರು.

ಕೀರ್ತನೆ: 100: 1-2, 3, 5
ಶ್ಲೋಕ: ಸೃಷ್ಟಿಕರ್ತನ ಜನ, ಆತನೇ ಮೇಯಿಸುವ ಕುರಿಗಳು ನಾವು. 

1.  ಭೂನಿವಾಸಿಗಳೇ, ಜಯಘೋಷ ಮಾಡಿ ಪ್ರಭುವಿಗೆ|
ಅತಿ ಸಂತೋಷದಿಂದ ಸೇವೆ ಮಾಡಿ ಆತನಿಗೆ||
ಶ್ಲೋಕ

2.  ಪ್ರಭುವೇ, ದೇವರೆಂಬುದನ್ನು ಮರೆತುಬಿಡಬೇಡಿ ನೀವು|
ನಮ್ಮ ಸೃಷ್ಟಿಕರ್ತ ಆತನು ಆತನವರು ನಾವು|
ಆತನ ಜನ ಆತನೇ ಮೇಯಿಸುವ ಕುರಿಗಳು ನಾವು||
ಶ್ಲೋಕ

3.  ಹೌದು, ಪ್ರಭುವೆನಿತೋ ಒಳ್ಳೆಯವನು|
ಇರುವುದಾತನ ಪ್ರೀತಿ ಯುಗಯುಗಕು|
ಆತನ ಸತ್ಯತೆ ತಲತಲಾಂತರಕು||

ಎರಡನೇ ವಾಚನ: ರೋಮನರಿಗೆ 5: 6-11


ನಾವು ಪಾಪದಿಂದ ದುರ್ಬಲರಾಗಿದ್ದಾಗಲೇ ನಿಯಮಿತ ಕಾಲದಲ್ಲಿ ಕ್ರಿಸ್ತಯೇಸು ಪಾಪಿಗಳಿಗೋಸ್ಕರ ಪ್ರಾಣತ್ಯಾಗಮಾಡಿದರು. ನೀತಿವಂತನಿಗಾಗಿ ಒಬ್ಬನು ತನ್ನ ಪ್ರಾಣಕೊಡುವುದು ವಿರಳ. ಸತ್ಪುರುಷನಿಗಾಗಿ ಒಬ್ಬನು ತನ್ನ ಪ್ರಾಣವನ್ನು ಕೊಟ್ಟರೂ ಕೊಟ್ಟಾನು. ಆದರೆ ನಾವಿನ್ನೂ ಪಾಪಿಗಳಾಗಿರುವಾಗಲೇ ಕ್ರಿಸ್ತಯೇಸು ನಮಗೋಸ್ಕರ ಪ್ರಾಣತ್ಯಾಗ ಮಾಡಿದರು. ಇದರಿಂದ ನಮ್ಮ ಮೇಲೆ ದೇವರಿಗಿರುವ ಪ್ರೀತಿ ಎಷ್ಟೆಂದು ವ್ಯಕ್ತವಾಗುತ್ತದೆ. ಕ್ರಿಸ್ತಯೇಸುವಿನ ರಕ್ತಧಾರೆಯಿಂದ ನಾವೀಗ ದೇವರೊಡನೆ ಸತ್ಸಂಬಂಧದಲ್ಲಿದ್ದೇವೆ. ಹೀಗಿರಲಾಗಿ, ಬರಲಿರುವ ದೈವಕೋಪಾಗ್ನಿಯಿಂದ ಯೇಸುಕ್ರಿಸ್ತರ ಮುಖಾಂತರವೇ ಪಾರಾಗುತ್ತೇವೆ ಎಂಬುದು ಮತ್ತಷ್ಟು ನಿಶ್ಚಯವಲ್ಲವೆ? ನಾವು ದೇವರಿಗೆ ಶತ್ರುಗಳಾಗಿದ್ದರೂ ಅವರು ತಮ್ಮ ಮಗನ ಮರಣದ ಮೂಲಕ ನಮ್ಮನ್ನು ತಮ್ಮೊಡನೆ ಸಂಧಾನಗೊಳಿಸಿ ಮಿತ್ರರನ್ನಾಗಿ ಮಾಡಿಕೊಂಡರು. ನಾವೀಗ ದೇವರ ಮಿತ್ರರಾಗಿರುವುದರಿಂದ, ಕ್ರಿಸ್ತಯೇಸುವಿನ ಜೀವದ ಮೂಲಕ ಉದ್ಧಾರ ಹೊಂದುತ್ತೇವೆ ಎಂಬುದು ಮತ್ತಷ್ಟು ಖಚಿತವಲ್ಲವೆ? ಅಷ್ಟೇ ಅಲ್ಲದೆ, ನಮ್ಮ ಪ್ರಭು ಯೇಸುಕ್ರಿಸ್ತರ ಮುಖಾಂತರ ದೇವರು ನಮ್ಮನ್ನು ಮಿತ್ರರನ್ನಾಗಿಸಿರುವುದರಿಂದ ಅವರ ಮೂಲಕವೇ ನಾವು ದೇವರಲ್ಲಿ ಹೆಮ್ಮೆ ಪಡುತ್ತೇವೆ.

ಶುಭಸಂದೇಶ: ಮತ್ತಾಯ 9: 35, 10:1-8


ಆ ಕಾಲದಲ್ಲಿ ಯೇಸು ಊರೂರುಗಳಲ್ಲೂ ಹಳ್ಳಿಹಳ್ಳಿಗಳಲ್ಲೂ ಸಂಚಾರ ಮಾಡುತ್ತಾ ಅಲ್ಲಿಯ ಪ್ರಾರ್ಥನಾ ಮಂದಿರಗಳಲ್ಲಿ ಬೋಧಿಸಿದರು.  ಶ್ರೀ ಸಾಮ್ರಾಜ್ಯದ ಶುಭಸಂದೇಶವನ್ನು ಸಾರಿದರು. ಎಲ್ಲಾ ತರಹದ  ರೋಗರುಜಿನಗಳನ್ನು ಗುಣಪಡಿಸುದರು. ಆ ಜನ ಸಮೂಹವನ್ನು ಕಂಡಾಗ ಅವರ ಮನ ಕರಗಿತು. ಏಕೆಂದರೆ ಕುರುಬನಿಲ್ಲದ ಕುರಿಗಳಂತೆ ಅವರು ತೊಳಲಿದರು ಹಾಗೂ ಬಳಲಿದ್ದರು ಆದುದರಿಂದ ಯೇಸು ತಮ್ಮ ಶಿಷ್ಯರಿಗೆ,  "ಬೆಳೆಯೇನೋ ಹೇರಳ; ಕೊಯಿಲುಗಾರರೋ ವಿರಳ; ಈ ಕಾರಣ ತನ್ನ ಕೊಯಿಲಿಗೆ ಆಳುಗಳನ್ನು ಕಳುಹಿಸುವಂತೆ ಬೆಳೆಯ ಯಜಮಾನನನ್ನು ಪ್ರಾರ್ಥಿಸಿರಿ," ಎಂದರು. ಯೇಸು ತಮ್ಮ ಹನ್ನೆರಡು ಮಂದಿ ಶಿಷ್ಯರನ್ನು ಒಟ್ಟಿಗೆ ಕರೆದು, ಎಲ್ಲ ರೋಗರುಜಿನಗಳನ್ನು ಗುಣಪಡಿಸುವುದಕ್ಕ  ಕ್ಕೂ ದೆವ್ವಗಳನ್ನು ಬಿಡಿಸುವುದಕ್ಕೂ ಅವರಿಗೆ ಅಧಿಕಾರವನ್ನು ಕೊಟ್ಟರು.  ಆ ಹನ್ನೆರಡು ಮಂದಿ ಪ್ರೇಷಿತರ ಹೆಸರುಗಳು ಇವು; ಮೊದಲನೆಯವನು ಪೇತ್ರ ಎನಿಸಿಕೊಂಡ ಸಿಮೋನ ಮತ್ತು ಅವನ ಸಹೋದರ ಅಂದ್ರೆಯ; ಜೆಬೆದಾಯನ ಮಗ ಯಕೋಬ ಮತ್ತು ಅವನ ಸಹೋದರ ಯೊವಾನ್ನ; ಫಿಲಿಪ್ಪ ಮತ್ತು ಬಾರ್ತೊಲೊಮಾಯ; ತೋಮ ಮತ್ತು ಸುಂಕ ವಸೂಲಿಗಾರ ಮತ್ತಾಯ; ಅಲ್ಫಾಯನ ಮಗ ಯಕೋಬ ಮತ್ತು ತದ್ದಾಯ; ದೇಶಾಭಿಮಾನಿ ಎಂದು ಕರೆಯಲಾದ ಸಿಮೋನ ಮತ್ತು ಗುರುದ್ರೋಹಿ ಆಗಲಿದ್ದ ಯೂದ ಇಸ್ಕರಿಯೋತ.  ಆ ಹನ್ನೆರಡು ಮಂದಿಯ ನಿಯೋಗವನ್ನು ಕಳುಹಿಸುವಾಗ ಯೇಸು ಅವರಿಗೆ ಕೊಟ್ಟ ಆದೇಶ ಇದು: "ಪರಕೀಯರತ್ತ ಹೋಗಲೇಬೇಡಿ; ಸಮಾರಿಯದವರ ಯಾವ ಊರಿಗೂ ಕಾಲಿಡಬೇಡಿ.  ಅದಕ್ಕೆ ಬದಲು ತಪ್ಪಿಹೋದ ಕುರಿಗಳಂತೆ ಇರುವ ಇಸ್ರಯೇಲ್ ಜನರ ಬಳಿಗೆ ಹೋಗಿರಿ; ಹೋಗುತ್ತಾ, ‘ಸ್ವರ್ಗಸಾಮ್ರಾಜ್ಯವು ಸಮೀಪಿಸಿದೆ’ ಎಂದು ಬೋಧನೆ ಮಾಡಿರಿ.  ರೋಗಿಗಳನ್ನು ಗುಣಪಡಿಸಿರಿ, ಸತ್ತವರನ್ನು ಮತ್ತೆ ಬದುಕಿಸಿರಿ, ಕುಷ್ಠರೋಗಿಗಳನ್ನು ಸ್ವಸ್ಥಮಾಡಿರಿ, ದೆವ್ವಗಳನ್ನು ಬಿಡಿಸಿರಿ.  ಉಚಿತವಾಗಿ ಪಡೆದಿರುವಿರಿ, ಉಚಿತವಾಗಿ ಕೊಡಿ."

17.07.2026 - ನನಗೆ ಬೇಕಾದುದು ದಯೆ, ಯಜ್ಞ ಬಲಿಯಲ್ಲ

  ಪ್ರವಾದಿ ಯೆಶಾಯನ ಗ್ರಂಥ 38:1-6, 21-22, 7-8 ಹಿಜ್ಕೀಯನು ರೋಗದಿಂದ ಮರಣಾವಸ್ಥೆಯಲ್ಲಿದ್ದನು. ಆಗ ಆಮೋಚನ ಮಗನೂ ಪ್ರವಾದಿಯೂ ಆದ ಯೆಶಾಯನು ಅವನ ಬಳಿಗೆ ಬಂದು, “ನೀನು ಉಳ...