ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

12.08.22 - "ಇನ್ನು ಮುಂದೆ ಅವರು ಇಬ್ಬರಲ್ಲ, ಒಂದೇ ಶರೀರವಾಗಿರುವರು"

 ಮೊದಲನೇ ವಾಚನ: ಪ್ರವಾದಿ ಯೆಜೆಕಿಯೇಲನ ಗ್ರಂಥ 16:1-15, 60, 63

ಆಮೇಲೆ ಸರ್ವೇಶ್ವರ ನನಗೆ ದಯಪಾಲಿಸಿದ ವಾಣಿ - “ನರಪುತ್ರನೇ, ನೀನು ಜೆರುಸಲೇಮಿಗೆ ಅದರ ಅಸಹ್ಯಕಾರ್ಯಗಳನ್ನು ತಿಳಿಯಪಡಿಸಿ ಹೀಗೆ ನುಡಿ - ಸರ್ವೇಶ್ವರ ದೇವರು ಜೆರುಸಲೇಮೆಂಬಾಕೆಗೆ ಈ ಮಾತನ್ನು ಹೇಳಿ ಕಳುಹಿಸಿದ್ದಾರೆ: “ನೀನು ಹುಟ್ಟಿದ್ದು ಕಾನಾನ್ ದೇಶದಲ್ಲಿ, ಅದೇ ನಿನ್ನ ಜನ್ಮಭೂಮಿ. ನಿನ್ನ ತಂದೆ ಅಮೋರಿಯನು, ನಿನ್ನ ತಾಯಿ ಹಿತ್ತಿಯಳು. ನಿನ್ನ ಜನನವನ್ನು ಕುರಿತು ಏನು ಹೇಳಲಿ! ನೀನು ಹುಟ್ಟಿದ ದಿನದಂದು ಯಾರೂ ನಿನ್ನ ಹೊಕ್ಕಳು ಕೊಯ್ದು ಕಟ್ಟಲಿಲ್ಲ. ನಿನ್ನನ್ನು ನೀರಿನಿಂದ ತೊಳೆದು ಶುಚಿಮಾಡಲಿಲ್ಲ, ನಿನಗೆ ಉಪ್ಪನ್ನು ಸ್ವಲ್ಪವು ಸವರಲಿಲ್ಲ, ನಿನ್ನನ್ನು ಬಟ್ಟೆಯಲ್ಲಿ ಸುತ್ತಲೇ ಇಲ್ಲ. ನಿನ್ನನ್ನು ಕಟಾಕ್ಷಿಸಿ, ಕರುಣಿಸಿ ಯಾರೂ ನಿನಗೆ ಇಂಥಾ ಸಹಾಯ ಮಾಡಲಿಲ್ಲ; ನಿನ್ನ ಜನನ ದಿವಸದಲ್ಲಿ ನೀನು ಹೇಸಿಗೆಯಾಗಿದ್ದೆ, ನಿನ್ನನ್ನು ಬಯಲಿನಲ್ಲಿ ಬಿಸಾಡಿಬಿಟ್ಟರು. “ನಾನು ಹಾದುಹೋಗುತ್ತಾ, ನಿನ್ನ ರಕ್ತದಲ್ಲೇ ಹೊರಳಾಡುತ್ತಿದ್ದ ನಿನ್ನನ್ನು ನೋಡಿ, ‘ನೀನು ರಕ್ತದಿಂದ ಅಶುದ್ಧವಾಗಿದ್ದರೂ ಬದುಕು’ ಎಂದು ಹೇಳಿದೆ; ಹೌದು, ‘ನೀನು ರಕ್ತದಿಂದ ಅಶುದ್ಧವಾಗಿದ್ದರೂ ಬದುಕು’ ಎಂದು ಹೇಳಿ ಬದುಕಿಸಿದೆ. ಭೂಮಿಯಲ್ಲಿ ಮೊಳಕೆಯನ್ನೋ ಎಂಬಂತೆ ನಾನು ನಿನ್ನನ್ನು ಬೆಳೆಯಿಸಿದೆ; ನೀನು ಬಲಿತು ಪ್ರಾಯ ತುಂಬಿ ಅತಿ ಸುಂದರಿಯಾದೆ; ನಿನಗೆ ಸ್ತನಗಳು ಮೂಡಿದವು. ನಿನ್ನ ಕೂದಲು ಉದ್ದವಾಯಿತು; ಆದರೆ ನೀನು ಬಟ್ಟೆಯಿಲ್ಲದೆ ಬೆತ್ತಲೆಯಾಗಿದ್ದೆ. “ನಾನು ಪುನಃ ಹಾದುಹೋಗುತ್ತಾ ನಿನ್ನನ್ನು ನೋಡಲು ಇಗೋ, ನೀನು ಮದುವೆಗೆ ಸಿದ್ಧಳಾಗಿದ್ದೆ; ಆಗ ನಾನು ನನ್ನ ಹೊದಿಕೆಯ ಸೆರಗನ್ನು ನಿನಗೆ ಹೊದಿಸಿ, ನಿನ್ನ ಮಾನವನ್ನು ಕಾಪಾಡಿದೆ; ಇದಲ್ಲದೆ ನಾನು ನಿನಗೆ ಮಾತುಕೊಟ್ಟು ಒಡಂಬಡಿಕೆ ಮಾಡಿಕೊಂಡೆ. ಆದ್ದರಿಂದ ನೀನು ನನ್ನವಳಾದೆ; ಇದು ಸರ್ವೇಶ್ವರನಾದ ದೇವರ ನುಡಿ. “ಆಗ ನಾನು ನೀರಿನಲ್ಲಿ ನಿನಗೆ ಸ್ನಾನ ಮಾಡಿಸಿ, ನಿನ್ನ ಮೇಲಿನ ರಕ್ತವನ್ನು ತೊಳೆದುಬಿಟ್ಟು, ನಿನಗೆ ತೈಲವನ್ನು ಹಚ್ಚಿದೆ.  ಇದಲ್ಲದೆ ಕಸೂತಿಯ ಬಟ್ಟೆಯನ್ನು ನಿನಗೆ ತೊಡಿಸಿ, ಕಡಲು ಹಂದಿಯ ತೊಗಲಿನ ಕೆರಗಳನ್ನು ನಿನ್ನ ಕಾಲಿಗೆ ಮೆಟ್ಟಿಸಿ, ನಯವಾದ ನಾರುಮಡಿಯನ್ನು ನಿನಗೆ ಉಡಿಸಿ, ರೇಷ್ಮೆಯ ಹೊದಿಕೆಯನ್ನು ನಿನಗೆ ಹೊದಿಸಿದೆ.  ಮತ್ತು ನಾನು ನಿನ್ನ ಕೈಗಳಿಗೆ ಬಳೆಗಳನ್ನು,  ಕೊರಳಿಗೆ ಮಾಲೆಯನ್ನು, ಮೂಗಿಗೆ ಮೂಗುತಿಯನ್ನು, ಶಿರಸ್ಸಿಗೆ ಸುಂದರ ಕಿರೀಟವನ್ನು ಇಟ್ಟು, ನಿನ್ನನ್ನು ಆಭರಣಗಳಿಂದ ಸಿಂಗರಿಸಿದೆ.  ನಿನ್ನ ಒಡವೆಗಳು ಬೆಳ್ಳಿಬಂಗಾರದವು; ನಿನ್ನ ಉಡುಪು ನಯವಾದ ನಾರುಮಡಿ, ರೇಷ್ಮೆಯ ಹೊದಿಕೆ, ಕಸೂತಿಯ ವಸ್ತ್ರ; ನಿನ್ನ ಆಹಾರವು ಗೋದಿಹಿಟ್ಟು, ಜೇನುತುಪ್ಪ ಮತ್ತು ಎಣ್ಣೆ; ನಿನ್ನ ಲಾವಣ್ಯವು ಅತಿ ಮನೋಹರ; ನೀನು ಹೀಗೆ ವೃದ್ಧಿಗೊಂಡು ರಾಣಿಯಾದೆ.  ನಾನು ನಿನಗೆ ಅನುಗ್ರಹಿಸಿದ ನಿನ್ನ ವೈಭವದಿಂದ ನಿನ್ನ ಸೌಂದರ್ಯ ಪರಿಪೂರ್ಣವಾಯಿತು; ನಿನ್ನ ಚೆಲುವು ಜನಾಂಗಗಳಲ್ಲಿ ಪ್ರಸಿದ್ಧವಾಯಿತು; ಇದು ಸರ್ವೇಶ್ವರನಾದ ದೇವರ ನುಡಿ. “ಆದರೆ ನೀನು ನಿನ್ನ ಸೌಂದರ್ಯವನ್ನೇ ನೆಚ್ಚಿಕೊಂಡೆ, ‘ನಾನು ಪ್ರಸಿದ್ಧಳಾದೆ’ ಎಂದು ಉಬ್ಬಿಕೊಂಡು ಸೂಳೆತನ ಮಾಡಿದೆ; ಹಾದುಹೋಗುವ ಪ್ರತಿಯೊಬ್ಬನ ಸಂಗಡ ಮಿತಿಮೀರಿ ಹಾದರಮಾಡಿದೆ. ಒಬ್ಬೊಬ್ಬನಿಗೂ ಒಳಗಾದೆ. ಆದರೂ ನಾನು ನಿನ್ನ ಯೌವನಕಾಲದಲ್ಲಿ ನಿನ್ನೊಂದಿಗೆ ಮಾಡಿಕೊಂಡ ಒಡಂಬಡಿಕೆಯನ್ನು ನೆನಪಿಗೆ ತಂದುಕೊಂಡು ನಿನ್ನೊಂದಿಗೆ ಶಾಶ್ವತವಾದ ಒಡಂಬಡಿಕೆಯನ್ನು ಮಾಡಿಕೊಂಡು ದೃಢೀಕರಿಸುವೆನು. ನಾನು ನಿನ್ನ ದುಷ್ಕೃತ್ಯಗಳನ್ನೆಲ್ಲಾ ಕ್ಷಮಿಸಿಬಿಟ್ಟ ಮೇಲೆ, ನೀನು ಅವುಗಳನ್ನು ನೆನಪಿಗೆ ತಂದು ನಾಚಿಕೆಪಟ್ಟು, ನಿನಗಾದ ಅವಮಾನದ ನಿಮಿತ್ತ ಇನ್ನು ಬಾಯಿ ತೆರೆಯದಿರುವೆ.” ಇದು ಸರ್ವೇಶ್ವರನಾದ ದೇವರ ನುಡಿ.

ಕೀರ್ತನೆ: 12:2-3, 4, 5-6

ಶ್ಲೋಕ: ನಿನಗಿತ್ತು ಎನ್ನ ಮೇಲೆ ಕೋಪ ಮನ; ಆದರೆ ಆದೀಗ ಆಗಿದೆ ಶಮನ

ಶುಭಸಂದೇಶ: ಮತ್ತಾಯ 19:3-12

ಫರಿಸಾಯರಲ್ಲಿ ಕೆಲವರು ಯೇಸುವಿನ ಬಳಿಗೆ ಬಂದು ಅವರನ್ನು ಮಾತಿನಲ್ಲಿ ಸಿಕ್ಕಿಸುವ ಉದ್ದೇಶದಿಂದ, “ಯಾವುದಾದರೂ ಕಾರಣದಿಂದ ಗಂಡನು ತನ್ನ ಹೆಂಡತಿಯನ್ನು ಬಿಟ್ಟುಬಿಡುವುದು ಧರ್ಮಸಮ್ಮತವೋ?” ಎಂದು ಕೇಳಿದರು. ಅದಕ್ಕೆ ಪ್ರತ್ಯುತ್ತರವಾಗಿ ಯೇಸು, “ಸೃಷ್ಟಿಕರ್ತ ಆದಿಯಿಂದಲೇ ಅವರನ್ನು ಗಂಡುಹೆಣ್ಣಾಗಿ ಉಂಟುಮಾಡಿದರು ಎಂದೂ, ‘ಈ ಕಾರಣದಿಂದಲೇ ಗಂಡನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಕೂಡಿಕೊಂಡು ಅವರಿಬ್ಬರೂ ಒಂದಾಗಿ ಬಾಳುವರು’ ಎಂದೂ ಹೇಳಿದ್ದಾರೆಂಬುದಾಗಿ ನೀವು ಪವಿತ್ರಗ್ರಂಥದಲ್ಲಿ ಓದಿಲ್ಲವೇ? ಹೀಗಿರುವಲ್ಲಿ, ಇನ್ನು ಮುಂದೆ ಅವರು ಇಬ್ಬರಲ್ಲ, ಒಂದೇ ಶರೀರವಾಗಿರುವರು. ಈ ನಿಮಿತ್ತ ದೇವರು ಒಂದುಗೂಡಿಸಿದ್ದನ್ನು ಮನುಷ್ಯನು ಬೇರ್ಪಡಿಸದೆ ಇರಲಿ,” ಎಂದರು. "ಹಾಗಾದರೆ ವಿವಾಹ ವಿಚ್ಛೇದನ ಪತ್ರವನ್ನು ಕೊಟ್ಟು ಹೆಂಡತಿಯನ್ನು ಬಿಟ್ಟುಬಿಡಬಹುದೆಂದು ಮೋಶೆಯು ನಿಯಮಿಸಿದ್ದು ಏಕೆ?” ಎಂದು ಫರಿಸಾಯರು ಮರುಪ್ರಶ್ನೆ ಹಾಕಿದರು. “ನಿಮ್ಮ ಹೆಂಡತಿಯನ್ನು ನೀವು ಬಿಟ್ಟುಬಿಡಬಹುದೆಂದು ಮೋಶೆ ಅನುಮತಿ ಇತ್ತದ್ದು ನಿಮ್ಮ ಹೃದಯ ಕಾಠಿಣ್ಯದ ನಿಮಿತ್ತದಿಂದಲೇ. ಆದರೆ ಅದು ಆದಿಯಿಂದಲೇ ಹಾಗಿರಲಿಲ್ಲ. ನಾನು ನಿಮಗೆ ಹೇಳುವುದನ್ನು ಕೇಳಿ; ತನ್ನ ಹೆಂಡತಿಯನ್ನು ಅವಳ ದುರ್ನಡತೆಯ ಕಾರಣದಿಂದಲ್ಲದೆ ಬಿಟ್ಟುಬಿಟ್ಟು ಮತ್ತೊಬ್ಬಳನ್ನು ಮದುವೆ ಮಾಡಿಕೊಳ್ಳುವ ಪ್ರತಿಯೊಬ್ಬನೂ ವ್ಯಭಿಚಾರಿಯಾಗುತ್ತಾನೆ.” ಶಿಷ್ಯರು ಆಗ, “ಸತಿಪತಿಯರ ಸಂಬಂಧ ಈ ರೀತಿ ಇರುವುದಾದರೆ, ಮದುವೆಮಾಡಿಕೊಳ್ಳದಿರುವುದೇ ಲೇಸು,” ಎಂದರು.  ಅದಕ್ಕೆ ಯೇಸು, “ಇದನ್ನು ಅಂಗೀಕರಿಸಲು ಎಲ್ಲರಿಂದಲೂ ಸಾಧ್ಯವಿಲ್ಲ; ಯಾರಿಗೆ ಅನುಗ್ರಹಿಸಲಾಗಿದೆಯೋ ಅವರಿಂದ ಮಾತ್ರ ಸಾಧ್ಯ. ತಾಯಿಯ ಉದರದಿಂದಲೇ ನಪುಂಸಕರಾಗಿ ಹುಟ್ಟಿದವರಿದ್ದಾರೆ; ಜನರಿಂದ ನಪುಂಸಕರಾದವರು ಕೂಡ ಇದ್ದಾರೆ; ಸ್ವರ್ಗಸಾಮ್ರಾಜ್ಯದ ನಿಮಿತ್ತ ಅವಿವಾಹಿತರಾಗಿ ಇರುವವರೂ ಇದ್ದಾರೆ; ಇದನ್ನು ಅಂಗೀಕರಿಸಬಲ್ಲವನು ಅಂಗೀಕರಿಸಲಿ,” ಎಂದರು.

No comments:

Post a Comment