ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

16.04.22 - "ಅವರು ಇಲ್ಲಿಲ್ಲ; ಅವರೇ ಹೇಳಿದಂತೆ ಪುನರುತ್ಥಾನ ಹೊಂದಿದ್ದಾರೆ. ಬನ್ನಿ, ಅವರನ್ನಿಟ್ಟಿದ್ದ ಸ್ಥಳವನ್ನು ನೋಡಿ"

ಪಾಸ್ಖ ಹಬ್ಬದ ಭಾನುವಾರ


ಮೊದಲನೇ ವಾಚನ: ಆದಿಕಾಂಡ 1:1-2:2 (1:1, 26-31)

ಆದಿಯಲ್ಲಿ ದೇವರು ಪರಲೋಕ - ಭೂಲೋಕವನ್ನು ಸೃಷ್ಟಿಮಾಡಿದರು. ಅದಾದನಂತರ ದೇವರು, “ನಮ್ಮಂತೆಯೇ ಇರುವ ಹಾಗು ನಮ್ಮನ್ನು ಹೋಲುವ, ಮನುಷ್ಯರನ್ನು ಉಂಟುಮಾಡೋಣ. ಅವರು ಸಮುದ್ರದಲ್ಲಿರುವ ವಿೂನುಗಳ ಮೇಲೆಯೂ ಅಂತರಿಕ್ಷದಲ್ಲಿ ಹಾರಾಡುವ ಪಕ್ಷಿಗಳ ಮೇಲೆಯೂ ದೊಡ್ಡ - ಚಿಕ್ಕ ಸಾಕುಪ್ರಾಣಿ ಹಾಗು ಕಾಡುಮೃಗಗಳ ಮೇಲೆಯೂ ನೆಲದ ಮೇಲೆ ಹರಿದಾಡುವ ಕ್ರಿಮಿಕೀಟಗಳ ಮೇಲೆಯೂ ದೊರೆತನ ಮಾಡಲಿ,” ಎಂದರು. ಹೀಗೆ ದೇವರು: ಸೃಷ್ಟಿಸಿದರು ನರರನ್ನು ತಮ್ಮ ಹೋಲಿಕೆಯಲ್ಲಿ ಸೃಷ್ಟಿಸಿದರವರನ್ನು ದೇವಾನುರೂಪದಲ್ಲಿ ಸೃಷ್ಟಿಸಿದರವರನ್ನು ಸ್ತ್ರೀಪುರುಷರನ್ನಾಗಿ. ಅವರನ್ನು ದೇವರು ಆಶೀರ್ವದಿಸಿ, “ನೀವು ಅಭಿವೃದ್ಧಿಯಾಗಿ, ಅನೇಕ ಮಕ್ಕಳನ್ನು ಪಡೆಯಿರಿ; ಭೂಮಿಯಲ್ಲಿ ಹರಡಿಕೊಂಡು ಅದನ್ನು ವಶಪಡಿಸಿ ಕೊಳ್ಳಿರಿ; ಸಮುದ್ರದ ವಿೂನುಗಳ ಮೇಲೆಯೂ ಆಕಾಶದ ಪಕ್ಷಿಗಳ ಮೇಲೆಯೂ ಭೂಮಿಯಲ್ಲಿ ಚಲಿಸುವ ಎಲ್ಲ ಪ್ರಾಣಿಗಳ ಮೇಲೆಯೂ ದೊರೆತನ ಮಾಡಿರಿ. ಇನ್ನೂ, ಭೂಮಿಯಲ್ಲಿರುವ ಎಲ್ಲ ತರದ ದವಸ ಧಾನ್ಯಗಳನ್ನೂ ಹಣ್ಣು ಹಂಪಲುಗಳನ್ನೂ ನಿಮಗೆ ಆಹಾರವಾಗಿ ಕೊಟ್ಟಿದ್ದೇನೆ. ಇದಲ್ಲದೆ, ಭೂಮಿಯ ಮೇಲೆ ತಿರುಗಾಡುವ ದೊಡ್ಡ - ಚಿಕ್ಕ ಮೃಗಗಳಿಗೂ ಆಕಾಶದಲ್ಲಿ ಹಾರಾಡುವ ಪಕ್ಷಿಗಳಿಗೂ ನೆಲದಲ್ಲಿ ಹರಿದಾಡುವ ಕ್ರಿಮಿ ಕೀಟಗಳಿಗೂ ಹುಲ್ಲು ಸೊಪ್ಪುಗಳನ್ನು ಆಹಾರವಾಗಿ ಕೊಟ್ಟಿದ್ದೇನೆ,” ಎಂದು ಹೇಳಿದರು. ಹಾಗೆಯೇ ಆಯಿತು. ತಾವು ಸೃಷ್ಟಿಸಿದ ಎಲ್ಲವನ್ನು ದೇವರು ನೋಡಿದರು. ಅವೆಲ್ಲವೂ ಬಹಳ ಚೆನ್ನಾಗಿತ್ತು. ಹೀಗೆ ಬೈಗೂ ಬೆಳಗೂ ಆಗಿ ಆರನೆಯ ದಿನ ಆಯಿತು.

ಎರಡನೇ ವಾಚನ: ಆದಿಕಾಂಡ 22:1-1 8 (22:1-2, 9, 10-13, 15-18)


ಈ ಘಟನೆಗಳಾದ ಬಳಿಕ ದೇವರು ಅಬ್ರಹಾಮನನ್ನು ಪರೀಕ್ಷಿಸುವುದಕ್ಕೋಸ್ಕರ, “ಅಬ್ರಹಾಮನೇ,” ಎಂದು ಕರೆದರು. ಅವನು “ಇಗೋ, ಸಿದ್ಧನಿದ್ದೇನೆ” ಎಂದನು. ಆಗ ದೇವರು, “ನಿನಗೆ ಒಬ್ಬನೇ ಒಬ್ಬನೂ ಮುದ್ದು ಮಗನೂ ಆದ ಇಸಾಕನನ್ನು ಕರೆದುಕೊಂಡು ಮೊರೀಯ ಪ್ರಾಂತಕ್ಕೆ ಹೋಗು. ಅಲ್ಲಿ ನಾನು ತೋರಿಸುವ ಬೆಟ್ಟದ ಮೇಲೆ ಅವನನ್ನು ದಹನ ಬಲಿಯಾಗಿ ಅರ್ಪಿಸು” ಎಂದರು. ದೇವರು ಹೇಳಿದ ಸ್ಥಳಕ್ಕೆ ಬಂದು ಸೇರಿದಾಗ ಅಬ್ರಹಾಮನು ಅಲ್ಲಿ ಒಂದು ಬಲಿಪೀಠವನ್ನು ಕಟ್ಟಿದ. ಕಟ್ಟಿಗೆಯನ್ನು ಅದರ ಮೇಲೆ ಒಟ್ಟಿ, ಮಗ ಇಸಾಕನ ಕೈಕಾಲುಗಳನ್ನು ಬಿಗಿದು, ಕಟ್ಟಿಗೆಗಳ ಮೇಲೆ ಅವನನ್ನು ಕೆಡವಿದ. ಬಳಿಕ ಮಗನನ್ನು ವಧಿಸಲು ಕೈಚಾಚಿ ಕತ್ತಿಯನ್ನು ಎತ್ತಿದ. ಆದರೆ ಸರ್ವೇಶ್ವರನ ದೂತನು ಆಕಾಶದಿಂದ, “ಅಬ್ರಹಾಮನೇ, ಹೇ ಅಬ್ರಹಾಮನೇ” ಎಂದು ಕರೆದನು. ಅದಕ್ಕೆ ಅಬ್ರಹಾಮನು, “ಇಗೋ ಸಿದ್ಧನಿದ್ದೇನೆ” ಎಂದ. ದೂತನು ಅವನಿಗೆ, “ಹುಡುಗನ ಮೇಲೆ ಕೈಯೆತ್ತಬೇಡ; ಅವನಿಗೆ ಯಾವ ಹಾನಿಯನ್ನೂ ಮಾಡಬೇಡ; ನೀನು ನಿನ್ನ ಒಬ್ಬನೇ ಮಗನನ್ನು ನನಗೆ ಬಲಿಕೊಡಲು ಹಿಂತೆಗೆಯಲಿಲ್ಲ; ಎಂತಲೇ, ನೀನು ದೇವರಲ್ಲಿ ಭಯಭಕ್ತಿಯುಳ್ಳವನೆಂದು ಈಗ ನನಗೆ ಚೆನ್ನಾಗಿ ಗೊತ್ತಾಯಿತು,” ಎಂದು ಹೇಳಿದನು. ಅಬ್ರಹಾಮನು ಕಣ್ಣೆತ್ತಿನೋಡಿದ. ತನ್ನ ಹಿಂದುಗಡೆ ಒಂದು ಟಗರು ಪೊದೆಯಲ್ಲಿ ಕೊಂಬುಗಳಿಂದ ಸಿಕ್ಕಿಕೊಂಡಿತ್ತು. ಅವನು ಹೋಗಿ ಅದನ್ನು ಹಿಡಿದು ತಂದು ತನ್ನ ಮಗನಿಗೆ ಬದಲಾಗಿ ಅದನ್ನು ದಹನಬಲಿಯನ್ನಾಗಿ ಅರ್ಪಿಸಿದ. “ಬೆಟ್ಟದ ಮೇಲೆ ಸರ್ವೇಶ್ವರಸ್ವಾಮಿಯೇ ಒದಗಿಸುತ್ತಾರೆ” ಎಂಬ ಹೇಳಿಕೆ ಇಂದಿಗೂ ರೂಢಿಯಲ್ಲಿದೆ. ಸರ್ವೇಶ್ವರಸ್ವಾಮಿಯ ದೂತನು ಆಕಾಶದಿಂದ ಮತ್ತೊಮ್ಮೆ ಅಬ್ರಹಾಮನನ್ನು ಕರೆದು, “ಸರ್ವೇಶ್ವರನ ವಾಕ್ಯವನ್ನು ಕೇಳು: ನೀನು ನಿನ್ನ ಒಬ್ಬನೇ ಮಗನನ್ನು ಬಲಿಕೊಡಲು ಹಿಂತೆಗೆಯದೆ ಹೋದುದರಿಂದ ನಾನು ನಿನ್ನನ್ನು ತಪ್ಪದೆ ಆಶೀರ್ವದಿಸುತ್ತೇನೆ; ನಿನ್ನ ಸಂತತಿಯನ್ನು ಹೆಚ್ಚಿಸಿಯೇ ಹೆಚ್ಚಿಸುತ್ತೇನೆ; ಅದನ್ನು ಆಕಾಶದ ನಕ್ಷತ್ರಗಳಂತೆಯೂ ಸಮುದ್ರ ತೀರದ ಮರಳಿನಂತೆಯೂ ಅಸಂಖ್ಯವಾಗಿ ಮಾಡುತ್ತೇನೆ. ಅವರು ಶತ್ರುಗಳ ಪಟ್ಟಣಗಳನ್ನು ಸ್ವಾಧೀನ ಪಡಿಸಿಕೊಳ್ಳುವರು. ನೀನು ನನ್ನ ಮಾತನ್ನು ಕೇಳಿದ್ದರಿಂದ ವಿಶ್ವದ ಎಲ್ಲ ರಾಷ್ಟ್ರಗಳಿಗೂ ನಿನ್ನ ಸಂತತಿಯ ಮೂಲಕ ಆಶೀರ್ವಾದವುಂಟಾಗುವುದು ಎಂಬುದಾಗಿ ಸರ್ವೇಶ್ವರನೇ ಆಣೆಯಿಟ್ಟು ಹೇಳಿದ್ದಾರೆ,” ಎಂದನು.

ಮೂರನೇ ವಾಚನ: ವಿಮೋಚನಾಕಾಂಡ 14:15-15:1


ಆಗ ಸರ್ವೇಶ್ವರ: “ನೀನೇಕೆ ನನಗೆ ಮೊರೆಯಿಡುತ್ತಿರುವೆ? ಮುಂದಕ್ಕೆ ಹೊರಡಬೇಕೆಂದು ಇಸ್ರಯೇಲರಿಗೆ ಹೇಳು. ನೀನು ನಿನ್ನ ಕೋಲನ್ನು ಎತ್ತಿ ಸಮುದ್ರದ ಮೇಲೆ ಚಾಚಿ ಅದನ್ನು ವಿಭಾಗಿಸು; ಆಗ ಇಸ್ರಯೇಲರು ಸಮುದ್ರದ ಮಧ್ಯೆ ಒಣಗಿದ ನೆಲದ ಮೇಲೆ ನಡೆದುಹೋಗುವರು. ನಾನು ಈಜಿಪ್ಟಿನವರ ಹೃದಯಗಳನ್ನು ಕಠಿಣಪಡಿಸುವೆನು; ಎಂದೇ ಅವರು ಇವರ ಹಿಂದೆ ಸಮುದ್ರದೊಳಕ್ಕೆ ಹೋಗುವರು. ಆಗ ನಾನು ಫರೋಹನನ್ನು, ಅವನ ಸಮಸ್ತ ಸೈನ್ಯವನ್ನು, ರಥಗಳನ್ನು ಹಾಗು ರಾಹುತರನ್ನು ಸೋಲಿಸಿ ಪ್ರಖ್ಯಾತಿ ಹೊಂದಿದ ನಂತರ ನಾನೇ ಸರ್ವೇಶ್ವರ ಎಂಬುದನ್ನು ಈಜಿಪ್ಟಿನವರು ತಿಳಿದುಕೊಳ್ಳುವರು,” ಎಂದರು ಮೋಶೆಗೆ. ಇಸ್ರಯೇಲರ ದಂಡಿನ ಮುಂದೆ ಹೋಗುತ್ತಿದ್ದ ದೇವದೂತನು ಸ್ಥಳ ಬದಲಾಯಿಸಿ ಅವರ ಹಿಂದಕ್ಕೆ ಬಂದನು. ಅವರ ಮುಂಭಾಗದಲ್ಲಿದ್ದ ಮೇಘಸ್ತಂಭವು ಅಲ್ಲಿಂದ ಬಂದು ಅವರ ಹಿಂದೆ ನಿಂತುಕೊಂಡಿತು. ಆ ಮೇಘಸ್ತಂಭವು ಈಜಿಪ್ಟಿನವರ ಪಡೆಗೂ ಇಸ್ರಯೇಲರ ಪಡೆಗೂ ನಡುವೆ ಬಂದು ಈಜಿಪ್ಟಿನವರಿಗೆ ಕತ್ತಲೆಯನ್ನು ಉಂಟುಮಾಡಿತು; ಇಸ್ರಯೇಲರಿಗೆ ರಾತ್ರಿಯನ್ನು ಬೆಳಕಾಗಿಸಿತು. ಈ ಕಾರಣ ಆ ರಾತ್ರಿಯೆಲ್ಲಾ ಒಂದು ಪಡೆಯವರು ಇನ್ನೊಂದು ಪಡೆಯವರ ಬಳಿಗೆ ಬರಲಾಗಲಿಲ್ಲ. ಮೋಶೆ ಸಮುದ್ರದ ಮೇಲೆ ಕೈಚಾಚಿದಾಗ ಸರ್ವೇಶ್ವರಸ್ವಾಮಿ ಆ ರಾತ್ರಿಯೆಲ್ಲಾ ಪೂರ್ವದಿಕ್ಕಿನಿಂದ ಬಲವಾದ ಬಿರುಗಾಳಿ ಬೀಸುವಂತೆ ಮಾಡಿ ಸಮುದ್ರದ ನೀರನ್ನು ಒಂದುಕಡೆ ನೂಕಿ ಅದರ ತಳದಲ್ಲಿ ಒಣನೆಲವು ಕಾಣಿಸುವಂತೆ ಮಾಡಿದರು. ನೀರು ಇಬ್ಭಾಗವಾಯಿತು. ಇಸ್ರಯೇಲರು ಸಮುದ್ರದ ಮಧ್ಯದಲ್ಲಿ ಒಣನೆಲದಲ್ಲೇ ನಡೆದುಹೋದರು. ನೀರು ಅವರ ಎಡಗಡೆ ಬಲಗಡೆಗಳಲ್ಲಿ ಗೋಡೆಯಂತೆ ನಿಂತಿತು. ಈಜಿಪ್ಟಿನವರು, ಅಂದರೆ ಫರೋಹನ ಕುದುರೆಗಳು, ರಥಗಳು, ರಾಹುತರು ಇಸ್ರಯೇಲರನ್ನು ಬೆನ್ನಟ್ಟಿ ಬಂದು ಅವರ ಹಿಂದೆಯೇ ಸಮುದ್ರದೊಳಗೆ ಹೋದರು. ಬೆಳಗಿನ ಜಾವದಲ್ಲಿ ಸರ್ವೇಶ್ವರ ಆ ಅಗ್ನಿಸ್ತಂಭದಿಂದ ಈಜಿಪ್ಟಿನವರ ದಂಡಿನ ಕಡೆಗೆ ನೋಡಿ ಅದನ್ನು ಗಲಿಬಿಲಿ ಮಾಡಿದರು. ಸರ್ವೇಶ್ವರ ಅವರ ರಥಗಳ ಚಕ್ರಗಳನ್ನು ತೆಗೆದುಬಿಟ್ಟದರಿಂದ ಈಜಿಪ್ಟಿನವರು ಬಹುಕಷ್ಟದಿಂದ ಅವುಗಳನ್ನು ಸಾಗಿಸಿಕೊಂಡು ಹೋದರು. ಆಗ ಈಜಿಪ್ಟಿನವರು, “ನಾವು ಇಸ್ರಯೇಲರ ಮುಂದೆ ಗೆಲ್ಲಲಾರೆವು, ಓಡಿಹೋಗೋಣ ಬನ್ನಿ; ಸರ್ವೇಶ್ವರನು ಅವರ ಪರವಾಗಿ, ನಮಗೆ ವಿರುದ್ಧವಾಗಿ ಯುದ್ಧ ಮಾಡುತ್ತಿದ್ದಾನೆ,” ಎಂದುಕೊಂಡರು. ಅಷ್ಟರಲ್ಲಿ ಸರ್ವೇಶ್ವರ, “ಸಮುದ್ರದ ಮೇಲೆ ನಿನ್ನ ಕೈಚಾಚು; ಆಗ ಅದರ ನೀರು ಮೊದಲಿನಂತೆ ಬಂದು ಈಜಿಪ್ಟಿನವರನ್ನೂ ಅವರ ರಥಗಳನ್ನೂ ರಾಹುತರನ್ನೂ ಮುಳುಗಿಸುವುದು,” ಎಂದು ಮೋಶೆಗೆ ಹೇಳಿದರು. ಅಂತೆಯೇ ಮೋಶೆ ಸಮುದ್ರದ ಮೇಲೆ ಕೈಚಾಚಿದನು. ಬೆಳಗಾಗುವಾಗಲೇ ಸಮುದ್ರದ ನೀರು ಮೊದಲಿದ್ದಂತೆಯೇ ತುಂಬಿಕೊಂಡಿತು. ಈಜಿಪ್ಟಿನವರು ಓಡಿ ಹೋಗತ್ತಾ ಅದಕ್ಕೆ ಎದುರಾಗಿಯೇ ಬಂದರು. ಹೀಗೆ ಸರ್ವೇಶ್ವರ ಈಜಿಪ್ಟಿನವರನ್ನು ಸಮುದ್ರದೊಳಗೆ ಕೆಡವಿಬಿಟ್ಟರು. ನೀರು ಮೊದಲಿನಂತೆ ಬಂದು ಆ ರಥಗಳನ್ನು, ರಾಹುತರನ್ನು ಹಾಗು ಅವರ ಹಿಂದೆ ಸಮುದ್ರದೊಳಗೆ ಹೋಗಿದ್ದ ಫರೋಹನ ಸೈನ್ಯದವರೆಲ್ಲರನ್ನು ಮುಳುಗಿಸಿತು. ಅವರಲ್ಲಿ ಒಬ್ಬರಾದರೂ ಉಳಿಯಲಿಲ್ಲ. ಇಸ್ರಯೇಲರಾದರೋ, ಸಮುದ್ರದೊಳಗೆ ಒಣ ನೆಲದಲ್ಲೇ ನಡೆದುಹೋದರು. ನೀರು ಅವರ ಎಡಬಲಗಳಲ್ಲಿ ಗೋಡೆಯಂತೆ ನಿಂತಿತ್ತು. ಆ ದಿನ ಸರ್ವೇಶ್ವರಸ್ವಾಮಿ ಇಸ್ರಯೇಲರನ್ನು ಈಜಿಪ್ಟಿನವರ ಕೈಯಿಂದ ರಕ್ಷಿಸಿದರು. ಈಜಿಪ್ಟಿನವರು ಸತ್ತು ಸಮುದ್ರ ತೀರದಲ್ಲಿ ಬಿದ್ದಿರುವುದನ್ನು ಇಸ್ರಯೇಲರು ಕಂಡರು. ಸರ್ವೇಶ್ವರ ಈಜಿಪ್ಟಿನವರಲ್ಲಿ ಮಾಡಿದ ಈ ಪರಾಕ್ರಮ ಕಾರ್ಯವನ್ನು ಇಸ್ರಯೇಲರು ನೋಡಿ ಸರ್ವೇಶ್ವರನಿಗೆ ಭಯಪಟ್ಟು ಅವರಲ್ಲೂ ಅವರ ದಾಸ ಮೋಶೆಯಲ್ಲೂ ನಂಬಿಕೆಯಿಟ್ಟರು. ಆಗ ಮೋಶೆ ಮತ್ತು ಇಸ್ರಯೇಲರು ಸರ್ವೇಶ್ವರಸ್ವಾಮಿಗೆ ಸ್ತೋತ್ರವಾಗಿ ಈ ಕೀರ್ತನೆಯನ್ನು ಹಾಡಿದರು: “ಮಾಡೋಣ ಸರ್ವೇಶ್ವರನ ಗುಣಗಾನ ಮಹೋನ್ನತ ಆತ ಗಳಿಸಿದ ವಿಜಯ! ಕುದುರೆಗಳನು, ರಾಹುತರನು ಕಡಲಲ್ಲಿ ಕೆಡವಿ ನಾಶಮಾಡಿಹನು.

ನಾಲ್ಕನೇ ವಾಚನ: ಯೆಶಾಯ 54:5-14

ನಿನ್ನ ಸೃಷ್ಟಿಕರ್ತನೆ ನಿನಗೆ ಪತಿಯು ‘ಸೇನಾಧೀಶ್ವರನಾದ ಸರ್ವೇಶ್ವರ’ ಆತನ ಹೆಸರು. ಇಸ್ರಯೇಲಿನ ಪರಮಪಾವನನೆ ನಿನ್ನ ಉದ್ಧಾರಕನು. ‘ಸರ್ವಲೋಕದ ದೇವ’ ಆತನ ನಾಮಧೇಯ. ಗಂಡಬಿಟ್ಟು ಮನನೊಂದಿರುವ ಪತ್ನಿ ನೀನು ಹೌದು, ತ್ಯಜಿಸಲಾದ ಯೌವನದ ಪತ್ನಿ ನೀನು. ಸರ್ವೇಶ್ವರ ಕನಿಕರಿಸಿ ಕರೆದಿಹನು ನಿನ್ನನು. ಆ ನಿನ್ನ ದೇವರ ನುಡಿಯಿದು: "ಬಿಟ್ಟಿದ್ದೆನು ನಿನ್ನನು ಕ್ಷಣಮಾತ್ರ ಪ್ರೀತಿಯಿಂದ ಸೇರಿಸಿಕೊಳ್ಳುವೆ ಹತ್ತಿರ. ತಟ್ಟನೆ ಉಕ್ಕು ಹರಿಯುವ ಕೋಪದಿಂದ ಕ್ಷಣಮಾತ್ರ ಮುಖಮರೆಸಿಕೊಂಡೆ ನಿನ್ನಿಂದ ಕರುಣಿಸುವೆನು ನಿನ್ನನು ಶಾಶ್ವತ ಕೃಪೆಯಿಂದ.” ಇಂತೆನ್ನುತಿಹನು ನಿನ್ನ ಉದ್ಧಾರಕ ಸರ್ವೇಶ್ವರ. “ಶಪಥಮಾಡಿದೆ ನಾನು ನೋಹನ ದಿನದಂದು: ಜಲಪ್ರಳಯವು ಭೂಮಿಯನು ಇನ್ನು ಮುಳುಗಿಸದೆಂದು. ಶಪಥಮಾಡುವೆ ಈಗ ‘ಕೋಪಮಾಡೆನು’ ಎಂದು ‘ಇನ್ನು ನಿನ್ನನು ಗದರಿಸೆನು’ ಎಂದು. ಬಿರುಕುಬಿಟ್ಟಾವು ಬೆಟ್ಟಗಳು, ಕದಲಿಯಾವು ಗುಡ್ಡಗಳು, ನನ್ನ ಅಚಲ ಪ್ರೀತಿಯಾದರೊ ಬಿಟ್ಟುಹೋಗದು ನಿನ್ನನು. ಶಾಂತಿಸಮಾಧಾನದ ನನ್ನೀ ಒಪ್ಪಂದವು ಕದಲದು. ನಿನ್ನ ಮೇಲೆ ಕರುಣೆಯಿಟ್ಟಿರುವ ಸರ್ವೇಶ್ವರನ ನುಡಿಯಿದು.” ಜೆರುಸಲೇಮಿನ ಭವ್ಯ ಭವಿಷ್ಯ “ಶೋಷಣೆಗೆ, ಬಿರುಗಾಳಿಗೆ, ನಿರ್ಗತಿಗೆ ಗುರಿಯಾದವಳೇ, ನಿರ್ಮಿಸುವೆ ನಿನ್ನನು ವಜ್ರವೈಡೂರ್ಯಗಳಿಂದ ಅಸ್ತಿವಾರ ಹಾಕುವೆ ನಿನಗೆ ನೀಲಮಣಿ ಗಳಿಂದ. ನಿರ್ಮಿಸುವೆ ನಿನ್ನ ಗೋಪುರಗಳನು ಮಾಣಿಕ್ಯಗಳಿಂದ ನಿನ್ನ ಪೌಳಿಗೋಡೆಯನು ಅನಘ್ರ್ಯ ರತ್ನಗಳಿಂದ. ನಿನ್ನ ಮಕ್ಕಳು ಶಿಕ್ಷಿತರಾಗುವರು ನನ್ನಿಂದ ಸಮೃದ್ಧವಾಗಿ ಬಾಳುವರು ಅವರು ಸುಖಶಾಂತಿಯಿಂದ. ನ್ಯಾಯನೀತಿ ನಿನಗಾಧಾರ; ದೂರವಿರುವುದು ಹಿಂಸಾಚಾರ. ಭಯಭೀತಿಗೆ ದೂರ, ಅವು ಬಾರವು ನಿನ್ನ ಹತ್ತಿರ.

ಐದನೇ ವಾಚನ: ಯೆಶಾಯ 55:1-11

ಎಲೈ ಬಾಯಾರಿದ ಜನರೇ, ನೀರಿನ ಬಳಿಗೆ ಬನ್ನಿ ಹಣವಿಲ್ಲದವರೇ ಬನ್ನಿ, ಅನ್ನವನ್ನು ತೆಗೆದು ಕೊಂಡು ತಿನ್ನಿ. ಹಾಲನು, ದ್ರಾಕ್ಷಾರಸವನು ಕ್ರಯವಿಲ್ಲದೆ ಕೊಂಡುಕೊಳ್ಳಿ. ಆಹಾರವಲ್ಲದ್ದಕ್ಕೆ ಹಣವನು ವ್ಯಯಮಾಡುವುದೇಕೆ? ತೃಪ್ತಿ ತರದ ಪದಾರ್ಥಕ್ಕೆ ನಿಮ್ಮ ದುಡಿತದ ವೆಚ್ಚವೇಕೆ? ಕಿವಿಗೊಡಿ ನನಗೆ, ಒಳಿತನ್ನು ತಿಂದು ಆನಂದಪಡಿ ಆ ಮೃಷ್ಟಾನ್ನವನುಂಡು. ಕಿವಿಯನ್ನಿತ್ತ ತಿರುಗಿಸಿ ಬನ್ನಿ ನನ್ನ ಬಳಿಗೆ, ಬದುಕಿಬಾಳುವಿರಿ ನೀವು ಕಿವಿಗೊಟ್ಟರೆನಗೆ. ದಾವೀದನಿಗೆ ವಾಗ್ದಾನವಿತ್ತ ವರವ ಈವೆ ನಿಮಗೆ ಮಾಡಿಕೊಳ್ಳುವೆ-ಚಿರವಾದ ಒಡಂಬಡಿಕೆಯನು ನಿಮ್ಮೊಂದಿಗೆ. ನೇಮಿಸಿರುವೆ ಆತನನು ಜನಗಳಿಗೆ ಸಾಕ್ಷಿಯನ್ನಾಗಿ ಜನಾಂಗಗಳಿಗೆ ನಾಯಕನನ್ನಾಗಿ, ಅಧಿಪತಿಯನ್ನಾಗಿ. ಎಲೈ ಇಸ್ರಯೇಲೇ, ನಿನ್ನ ದೇವರಾದ ಸರ್ವೇಶ್ವರನಿಗೋಸ್ಕರ ನಿನ್ನ ಮಹಿಮೆಪಡಿಸಿದ ಇಸ್ರಯೇಲಿನ ಪರಮಪಾವನನಿಗೋಸ್ಕರ ನೀ ಕರೆಗೊಡುವೆ ನಿನಗೆ ಗೊತ್ತಿಲ್ಲದ ಜನಾಂಗಕೆ. ಆಗ ಅಪರಿಚಿತರೂ ಓಡಿಬರುವರು ನಿನ್ನಾಶ್ರಯಕೆ. ಅರಸಿರಿ ಸರ್ವೇಶ್ವರನನು ಆತ ದೊರಕುವ ವೇಳೆಯಲಿ ವಿನಂತಿಸಿರಿ ಆತನಿರುವಾಗಲೆ ಸಮೀಪದಲಿ. ಬಿಟ್ಟುಬಿಡಲಿ ದುಷ್ಟನು ತನ್ನ ದುರ್ಮಾರ್ಗವನು ತೊರೆದುಬಿಡಲಿ ದುರುಳನು ದುರಾಲೋಚನೆಗಳನು. ಹಿಂದಿರುಗಿ ಬರಲಿ ಸರ್ವೇಶ್ವರನ ಬಳಿಗೆ ಕರುಣೆ ತೋರುವನು ಆತನು ಅವನಿಗೆ.  ಪಡೆಯಲಿ ಅವನು ನಮ್ಮ ದೇವರಿಂದ ಕ್ಷಮಿಸುವನಾತನು ಮಹಾಕೃಪೆಯಿಂದ. “ನನ್ನ ಆಲೋಚನೆಗಳು ನಿಮ್ಮ ಆಲೋಚನೆಗಳಂಥಲ್ಲ ನನ್ನ ಮಾರ್ಗಗಳು ನಿಮ್ಮ ಮಾರ್ಗಗಳಂಥಲ್ಲ” ಎಂದಿಹನು ಸರ್ವೇಶ್ವರ. “ಎಷ್ಟೋ ಉನ್ನತ ಆಕಾಶವು ಭೂಮಿಯಿಂದ ಅಷ್ಟೂ ಉನ್ನತ ನನ್ನ ಮಾರ್ಗ ನಿಮ್ಮ ಮಾರ್ಗಗಳಿಗಿಂತ, ನನ್ನ ಆಲೋಚನೆಗಳು ನಿಮ್ಮ ಆಲೋಚನೆಗಳಿಗಿಂತ. ಮಳೆಯೂ ಹಿಮವೂ ಆಕಾಶಮಂಡಲದಿಂದಿಳಿದು ಬಂದು ತೋಯಿಸಿ, ಹಸಿರುಗೊಳಿಸಿ, ಹುಲುಸು ಮಾಡುತ್ತವೆ ಭೂಮಿಯನು. ಬಿತ್ತುವವನಿಗೆ ಬೀಜ, ಉಣ್ಣುವವನಿಗೆ ಆಹಾರ ಒದಗಿಸದೆ, ಹಿಂದಿರುಗಿ ಬರುವುದಿಲ್ಲ ಅವು ಸುಮ್ಮನೆ ಬಂದಲ್ಲಿಗೆ. ಅಂತೆಯೇ, ನನ್ನ ಬಾಯಿಂದ ಹೊರಡುವ ಮಾತು ನನ್ನ ಇಷ್ಟಾರ್ಥವನು ನೆರವೇರಿಸಿದ ಹೊರತು, ನನ್ನ ಉದ್ದೇಶವನು ಕೈಗೂಡಿಸಿದ ಹೊರತು, ನನ್ನ ಬಳಿಗೆ ವ್ಯರ್ಥವಾಗಿ ಹಿಂದಿರುಗದು.

ಆರನೇ ವಾಚನ: ಬಾರೂಕ 3:9-15, 32-4:4

ಇಸ್ರಯೇಲೇ, ಜೀವದಾಯಕ ಆಜ್ಞೆಗಳನ್ನು ಕೇಳು, ಸುಜ್ಞಾನವನ್ನು ಕಲಿತುಕೊ ಕಿವಿಗೊಟ್ಟು. ಇಸ್ರಯೇಲೇ, ಇದು ಸಂಭವಿಸಿದ್ದು ಹೇಗೆ? ನಿನ್ನ ಶತ್ರುಗಳ ದೇಶದೊಳಕ್ಕೆ ನೀನು ಬಂದುದು ಹೇಗೆ? ಪರದೇಶದಲ್ಲಿ ನೀನು ಮುಪ್ಪಾದುದು ಹೇಗೆ? ಸತ್ತವರಂತೆ ನೀನು ಹೊಲೆಯಾದುದು ಹೇಗೆ? ಪಾತಾಳಲೋಕ ಸೇರಿದವರಂತೆ ನೀನು ಪರಿಗಣಿತನಾದುದು ಹೇಗೆ? ಸುಜ್ಞಾನದ ಬುಗ್ಗೆಯನ್ನೇ ನೀ ಮರೆತು ಬಿಟ್ಟಿರುವೆ. ದೇವರ ಮಾರ್ಗದಲ್ಲಿ ನೀನು ನಡೆದಿದ್ದರೆ ನಿರಂತರ ಶಾಂತಿಸಮಾಧಾನದಿಂದ ವಾಸಿಸುತ್ತಿದ್ದೆ. ಸುಜ್ಞಾನವೆಲ್ಲಿದೆ, ಶಕ್ತಿಯೆಲ್ಲಿದೆ, ವಿವೇಕವೆಲ್ಲಿದೆ ಎಂಬುದನ್ನು ಕಲಿ; ಆಗ ಕಂಡುಕೊಳ್ಳುವೆ ದೀರ್ಘಾಯುಸ್ಸು ಮತ್ತು ಜೀವ ಎಲ್ಲಿವೆಯೆಂದು ದಾರಿತೋರುವ ಬೆಳಕು ಮತ್ತು ಶಾಂತಿ ಎಲ್ಲಿವೆಯೆಂದು. ಸುಜ್ಞಾನದ ನೆಲೆಯನ್ನು ಕಂಡು ಹಿಡಿದಿರುವವರಾರು? ಅದರ ನಿಧಿಗೃಹವನ್ನು ಪ್ರವೇಶಿಸಿರುವವರಾರು? ಆದರೆ ಸುಜ್ಞಾನವನ್ನು ಬಲ್ಲ ಸರ್ವಜ್ಞನೊಬ್ಬನಿದ್ದಾನೆ. ಆತ ತನ್ನ ಸ್ವಂತ ಬುದ್ಧಿವಿವೇಕದಿಂದ ಅದನ್ನು ತಿಳಿದಿದ್ದಾನೆ. ಜಗತ್ತನ್ನು ಚಿರಕಾಲ ಸ್ಥಿರವಾಗಿರಿಸಿದವನು ಆತನೆ ನಾಲ್ಕು ಕಾಲಿನ ಪಶುಪ್ರಾಣಿಗಳಿಂದ ಅದನ್ನು ತುಂಬಿಸಿದವನು ಆತನೆ. ಆತ ಬೆಳಕನ್ನು ಕಳುಹಿಸುತ್ತಾನೆ – ಅದು ಬರುತ್ತದೆ ಹಿಂದಕ್ಕೆ ಕರೆದಾಗ ಭಯದಿಂದ ಹಿಂದಿರುಗುತ್ತದೆ. ತಾರೆಗಳು ನಿಯಮಿತ ಸ್ಥಳದಲ್ಲಿ ಸಂತಸದಿಂದ ಮಿನುಗುತ್ತವೆ ಆತ ಕರೆದಾಗ “ಇಗೋ ಇಲ್ಲಿದ್ದೇವೆ,” ಎಂದು ಹೇಳುತ್ತವೆ, ತಮ್ಮನ್ನು ಸೃಷ್ಟಿಸಿದಾತನ ಆನಂದಕ್ಕಾಗಿ ಅವು ಹೊಳೆಯುತ್ತವೆ. ಆತನೇ ನಮ್ಮ ದೇವರು; ಯಾರೂ ಇಲ್ಲ ಆತನಿಗೆ ಸಮಾನರು. ಜ್ಞಾನದ ಇಡೀ ಮಾರ್ಗವನ್ನು ಅರಿತಿದ್ದಾರೆ ಆ ದೇವರು. ತಮ್ಮ ದಾಸ ಯಕೋಬನಿಗೂ ತಮ್ಮ ಪ್ರಿಯ ಇಸ್ರಯೇಲರಿಗೂಹಿಂದಿರುಗುತ್ತದೆ. ಅನಂತರವೇ ಸುಜ್ಞಾನ ಧರೆಯ ಮೇಲೆ ಕಾಣಿಸಿಕೊಂಡಿತು, ಮಾನವರ ಮಧ್ಯೆ ಅದು ವಾಸಮಾಡಿತು. ಜ್ಞಾನವೇ ದೈವಾಜ್ಞೆಗಳ ಗ್ರಂಥ ಸದಾಕಾಲಕ್ಕೂ ಸ್ಥಿರವಾದ ಧರ್ಮಶಾಸ್ತ್ರ. ಪಡೆಯುವರು ಸಜೀವ ಅದನ್ನು ಪ್ರಾಮಾಣಿಕವಾಗಿ ಪಾಲಿಸುವವರು; ಅದನ್ನು ಬಿಟ್ಟುಬಿಡುವವರು ಸಾಯುವರು. ಇಸ್ರಯೇಲೇ, ಹಿಂದಿರುಗಿ ಬಾ, ಸುಜ್ಞಾನವನ್ನು ಸ್ವೀಕರಿಸು, ಅದರ ಪ್ರಕಾಶದಲ್ಲಿ ಬೆಳಕಿನತ್ತ ಪ್ರವರ್ಧಿಸು. ನಿನ್ನ ಗೌರವವನ್ನು ಇನ್ನೊಬ್ಬನಿಗೆ ಸಲ್ಲಗೊಡಬೇಡ ನಿನ್ನ ಸೌಲಭ್ಯಗಳನ್ನು ಅನ್ಯಜನರಿಗೆ ಬಿಟ್ಟುಬಿಡಬೇಡ. ಇಸ್ರಯೇಲೇ, ನಾವು ಧನ್ಯರು ! ದೇವರಿಗೆ ಪ್ರಿಯವಾದುದು ನಮಗೆ ಬಯಲಾಗಿರುವುದು. ಜೆರುಸಲೇಮಿನ ವಿಲಾಪ ಹಾಗು ಸಾಂತ್ವನ

ಏಳನೇ ವಾಚನ: ಯೆಜೆಕಿಯೇಲ 36:16-17, 18-26

ಸರ್ವೇಶ್ವರ ಈ ವಾಣಿಯನ್ನು ನನಗೆ ದಯಪಾಲಿಸಿದರು “ನರಪುತ್ರನೇ, ಇಸ್ರಯೇಲ್ ವಂಶದವರು ಸ್ವದೇಶದಲ್ಲಿ ವಾಸಿಸುತ್ತಿದ್ದಾಗ ತಮ್ಮ ದುರ್ಮಾರ್ಗ ದುರಾಚಾರಗಳಿಂದ ಅದನ್ನು ಅಶುದ್ಧಗೊಳಿಸಿದರು. ಅವರ ನಡತೆ ಮುಟ್ಟಿನ ಹೊಲಸಿನಂತೆ ನನಗೆ ಅಸಹ್ಯವಾಗಿತ್ತು. ಅವರು ನಾಡಿನ ಮೇಲೆ ರಕ್ತವನ್ನು ಸುರಿಸಿ, ತಮ್ಮ ವಿಗ್ರಹಗಳಿಂದ ಅದನ್ನು ಹೊಲೆಗೈದಕಾರಣ ನಾನು ಅವರ ಮೇಲೆ ನನ್ನ ರೋಷಾಗ್ನಿಯನ್ನು ಸುರಿಸಿವೆನು; ಜನಾಂಗಗಳೊಳಗೆ ಅವರನ್ನು ಚದರಿಸುವೆನು; ದೇಶಗಳಿಗೆ ತೂರಿಬಿಟ್ಟು, ಅವರ ದುರ್ಮಾರ್ಗ ದುರಾಚಾರಗಳಿಗೆ ಸರಿಯಾಗಿ ದಂಡಿಸಿದೆನು. ಅವರು ಆ ಜನಾಂಗಗಳೊಳಗೆ ಸೇರಿಕೊಂಡ ಮೇಲೆ, ‘ಓಹೋ, ಇವರು ಸರ್ವೇಶ್ವರನ ಪ್ರಜೆಗಳು, ಆತನ ದೇಶದಿಂದ ಭ್ರಷ್ಟರಾಗಿ ಬಂದಿದ್ದಾರೆ’ ಎಂದೆನಿಸಿಕೊಂಡರು. ನನ್ನ ಪರಿಶುದ್ಧನಾಮಕ್ಕೆ ಅಪಕೀರ್ತಿಯನ್ನು ತಂದರು. ಇಸ್ರಯೇಲ್ ವಂಶದವರು ಜನಾಂಗಗಳೊಳಗೆ ಸೇರಿ, ಅಲ್ಲಿ ಅಪಕೀರ್ತಿಗೆ ಗುರಿಮಾಡಿದ ನನ್ನ ಪರಿಶುದ್ಧ ನಾಮವನ್ನು ಕುರಿತು, ನಾನು ಮರುಗಿದೆನು. “ಆದಕಾರಣ - ನೀನು ಇಸ್ರಯೇಲ್ ವಂಶದವರಿಗೆ ಹೀಗೆ ನುಡಿ - ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ – ಇಸ್ರಯೇಲ್ ವಂಶದವರೇ, ನಿಮ್ಮ ನಿಮಿತ್ತವಲ್ಲ, ನೀವು ಜನಾಂಗಗಳೊಳಗೆ ಸೇರಿ ಅಪಕೀರ್ತಿಗೆ ಗುರಿಮಾಡಿದ ನನ್ನ ಪರಿಶುದ್ಧನಾಮದ ನಿಮಿತ್ತವೆ, ಈ ರಕ್ಷಣಾ ಕಾರ್ಯವನ್ನು ಮಾಡುತ್ತೇನೆ. ಜನಾಂಗಗಳಲ್ಲಿ ಅಪಕೀರ್ತಿಗೆ ಗುರಿಯಾದ, ಅಂದರೆ ನೀವು ಜನಾಂಗಗಳ ನಡುವೆ ಅಪಕೀರ್ತಿಗೆ ಗುರಿಮಾಡಿದ ನನ್ನ ಶ್ರೀನಾಮದ ಗೌರವವನ್ನು ನಾನು ಕಾಪಾಡಿಕೊಳ್ಳುವೆನು. ಹೀಗೆ ನಾನು ಅವುಗಳ ಕಣ್ಣೆದುರಿಗೆ, ನಿಮ್ಮ ರಕ್ಷಣೆಯ ಮೂಲಕ ನನ್ನ ಗೌರವವನ್ನು ಕಾಪಾಡಿಕೊಳ್ಳುವೆನು. ಆಗ ನಾನೇ ಸರ್ವೇಶ್ವರ ಎಂದು ಅವುಗಳಿಗೆ ನಿಶ್ಚಿತವಾಗುವುದು. ಇದು ಸರ್ವೇಶ್ವರನಾದ ದೇವರ ನುಡಿ. ನಾನು ನಿಮ್ಮನ್ನು ಜನಾಂಗಗಳಿಂದ ಬಿಡಿಸಿ, ಸಕಲ ದೇಶಗಳಿಂದ ಒಟ್ಟುಗೂಡಿಸಿ, ಸ್ವದೇಶಕ್ಕೆ ಬರಮಾಡುವೆನು. ನಾನು ನಿಮ್ಮ ಮೇಲೆ ನಿರ್ಮಲೋದಕವನ್ನು ಪ್ರೋಕ್ಷಿಸುವೆನು, ನೀವು ನಿರ್ಮಲರಾಗುವಿರಿ; ನಿಮ್ಮ ಸಮಸ್ತ ವಿಗ್ರಹಗಳಿಂದಲೂ ಸಕಲ ವಿಧವಾದ ಹೊಲಸಿನಿಂದಲೂ ನಿಮ್ಮನ್ನು ಶುದ್ಧಿಮಾಡುವೆನು. ನಾನು ನಿಮಗೆ ಹೊಸ ಮನಸ್ಸನ್ನು ಕೊಟ್ಟು, ನಿಮ್ಮಲ್ಲಿ ನನ್ನ ಸ್ವಭಾವವನ್ನು ಹುಟ್ಟಿಸುವೆನು. ಕಲ್ಲಾದ ಹೃದಯವನ್ನು ನಿಮ್ಮೊಳಗಿಂದ ತೆಗೆದು, ಮೃದುವಾದ ಹೃದಯವನ್ನು ನಿಮಗೆ ದಯಪಾಲಿಸುವೆನು. ನನ್ನ ಆತ್ಮವನ್ನು ನಿಮ್ಮಲ್ಲಿ ನೆಲೆಸಿರುವಂತೆ ಅನುಗ್ರಹಿಸಿ, ನೀವು ನನ್ನ ನಿಯಮಗಳನ್ನು ಅನುಸರಿಸುವ ಹಾಗೆ ಮಾಡುವೆನು. ನೀವು ನನ್ನ ವಿಧಿಗಳನ್ನು ಕೈಗೊಂಡು ಆಚರಿಸುವಿರಿ. ನಾನು ನಿಮ್ಮ ಪಿತೃಗಳಿಗೆ ಅನುಗ್ರಹಿಸಿದ ನಾಡಿನಲ್ಲಿ ನೀವು ವಾಸಿಸುವಿರಿ. ನೀವು ನನಗೆ ಪ್ರಜೆಯಾಗಿರುವಿರಿ, ನಾನು ನಿಮಗೆ ದೇವರಾಗಿರುವೆನು.

ಮೊದಲನೇ ವಾಚನ: ರೋಮನರಿಗೆ 6:3-11

ಕ್ರಿಸ್ತಯೇಸುವಿನವರಾಗಲು ದೀಕ್ಷಾಸ್ನಾನ ಹೊಂದಿರುವ ನಾವು, ಅವರ ಮರಣದಲ್ಲಿ ಪಾಲುಗಾರರಾಗಲು ದೀಕ್ಷಾಸ್ನಾನ ಪಡೆದೆವು ಎಂಬುದು ನಿಮಗೆ ತಿಳಿಯದೆ? ಹೀಗಿರಲಾಗಿ, ದೀಕ್ಷಾಸ್ನಾನ ಮಾಡಿಸಿಕೊಂಡಾಗ ಅವರ ಮರಣದಲ್ಲಿ ಪಾಲುಗಾರರಾದ ನಮಗೆ ಅವರೊಡನೆ ಸಮಾಧಿಯೂ ಆಯಿತು. ಆದುದರಿಂದ ತಂದೆಯ ಮಹಿಮಾಶಕ್ತಿಯಿಂದ ಕ್ರಿಸ್ತಯೇಸು ಮರಣದಿಂದ ಪುನರುತ್ಥಾನ ಹೊಂದಿದಂತೆಯೇ ನಾವು ಸಹ ಹೊಸ ಜೀವವನ್ನು ಹೊಂದಿ ಬಾಳುತ್ತೇವೆ. ಅವರು ಮರಣ ಹೊಂದಿದಂತೆ ನಾವೂ ಅವರೊಂದಿಗೆ ಐಕ್ಯವಾಗಿ ಮರಣವನ್ನು ಹೊಂದುತ್ತೇವೆ. ಅಂತೆಯೇ, ಅವರು ಪುನರುತ್ಥಾನ ಆದಂತೆ ನಾವೂ ಅವರೊಡನೆ ಐಕ್ಯವಾಗಿ ಪುನರುತ್ಥಾನ ಹೊಂದುತ್ತೇವೆ. ನಮಗೆ ತಿಳಿದಿರುವಂತೆ ಪಾಪಾಧೀನವಾದ ನಮ್ಮ ಸ್ವಭಾವವು ನಾಶವಾಗುವಂತೆಯೂ ಇನ್ನು ಮುಂದೆ ನಾವು ಪಾಪಕ್ಕೆ ದಾಸರಾಗಿರದಂತೆಯೂ ಯೇಸುಕ್ರಿಸ್ತರೊಡನೆ ನಮ್ಮ ಹಳೆಯ ಸ್ವಭಾವವನ್ನು ಶಿಲುಬೆಗೆ ಜಡಿಯಲಾಗಿದೆ. ಹೀಗೆ ಸತ್ತವನು ಪಾಪಬಂಧದಿಂದ ಬಿಡುಗಡೆ ಹೊಂದಿದವನು. ಕ್ರಿಸ್ತ ಯೇಸುವಿನೊಂದಿಗೆ ನಾವು ಮರಣ ಹೊಂದಿದ್ದರೆ ಅವರೊಡನೆ ನಾವೂ ಜೀವಿಸುತ್ತೇವೆ; ಇದೇ ನಮ್ಮ ವಿಶ್ವಾಸ. ಯೇಸುಕ್ರಿಸ್ತರನ್ನು ಮರಣದಿಂದ ಎಬ್ಬಿಸಲಾಯಿತು ಎಂಬುದನ್ನು ನಾವು ಬಲ್ಲೆವು. ಆದ್ದರಿಂದ ಅವರು ಇನ್ನು ಎಂದಿಗೂ ಸಾಯುವುದಿಲ್ಲ; ಸಾವಿಗೆ ಅವರ ಮೇಲೆ ಯಾವ ಅಧಿಕಾರವೂ ಇಲ್ಲ. ಏಕೆಂದರೆ, ಅವರು ಪಾಪದ ಪಾಲಿಗೆ ಒಂದೇ ಸಾರಿಗೆ ಮಾತ್ರವಲ್ಲ, ಎಂದೆಂದಿಗೂ ಸತ್ತವರು. ಅವರು ಈಗ ಜೀವಿಸುವುದು ದೇವರಿಗಾಗಿಯೇ. ಅಂತೆಯೇ ನೀವೂ ಸಹ ಪಾಪದ ಪಾಲಿಗೆ ಸತ್ತವರೆಂದೂ ದೇವರಿಗಾಗಿ ಮಾತ್ರ ಯೇಸುಕ್ರಿಸ್ತರಲ್ಲಿ ಜೀವಿಸುವವರೆಂದೂ ಪರಿಗಣಿಸಿರಿ.

ಕೀರ್ತನೆ: 104:1-2, 5-6, 10, 12-14, 24, 35

ಶ್ಲೋಕ: ನೀ ಉಸಿರನ್ನೂದಲು ಹೊಸದಾಗುವುವು ಪುನಶ್ಚೇತನಗೊಳ್ಳುವುದು ಜಗವೆಲ್ಲವು

ಶುಭಸಂದೇಶ: ಮತ್ತಾಯ 28:1-10


‘ಸಬ್ಬತ್’ ದಿನ ಕಳೆದಿತ್ತು. ಭಾನುವಾರ ಬೆಳಗಾಗುವುದರಲ್ಲಿತ್ತು. ಮಗ್ದಲದ ಮರಿಯಳು ಮತ್ತು ಆ ಇನ್ನೊಬ್ಬ ಮರಿಯಳು ಸಮಾಧಿಯನ್ನು ನೋಡಲು ಬಂದರು. ಇದ್ದಕ್ಕಿದ್ದಂತೆ ಭೂಮಿ ಗಡಗಡನೆ ನಡುಗಿತು. ಆಗ ದೇವದೂತನು ಸ್ವರ್ಗದಿಂದ ಇಳಿದುಬಂದನು. ಸಮಾಧಿಯ ಕಲ್ಲನ್ನು ಹಿಂದಕ್ಕೆ ಉರುಳಿಸಿ ಅದರ ಮೇಲೆ ಕುಳಿತುಕೊಂಡನು.  ಆತನ ರೂಪ ಮಿಂಚಿನಂತೆ ಹೊಳೆಯುತ್ತಿತ್ತು; ಉಡುಪು ಹಿಮದಂತೆ ಬೆಳ್ಳಗಿತ್ತು. ಕಾವಲಿನವರು ಆತನನ್ನು ಕಂಡು ಭಯದಿಂದ ನಡುಗುತ್ತಾ ಸತ್ತಂತಾದರು. ಆಗ ದೂತನು ಆ ಮಹಿಳೆಯರಿಗೆ, “ಹೆದರಬೇಡಿ, ಶಿಲುಬೆಗೇರಿಸಿದ ಯೇಸುವನ್ನು ನೀವು ಹುಡುಕುತ್ತಿದ್ದೀರೆಂದು ನಾನು ಬಲ್ಲೆ. ಅವರು ಇಲ್ಲಿಲ್ಲ; ಅವರೇ ಹೇಳಿದಂತೆ ಪುನರುತ್ಥಾನ ಹೊಂದಿದ್ದಾರೆ. ಬನ್ನಿ, ಅವರನ್ನಿಟ್ಟಿದ್ದ ಸ್ಥಳವನ್ನು ನೋಡಿ. ಈಗ ಬೇಗನೆ ಹೋಗಿ, ಅವರ ಶಿಷ್ಯರಿಗೆ, ‘ಸತ್ತಿದ್ದವರು ಪುನರುತ್ಥಾನ ಹೊಂದಿದ್ದಾರೆ; ಅವರು ನಿಮಗಿಂತ ಮುಂಚಿತವಾಗಿ ಗಲಿಲೇಯಕ್ಕೆ ಹೋಗುವರು; ಅಲ್ಲೇ ಅವರನ್ನು ಕಾಣುವಿರಿ,’ ಎಂದು ತಿಳಿಸಿರಿ. ನಾನು ನಿಮಗೆ ತಿಳಿಸಬೇಕಾದ ಸಮಾಚಾರ ಇದೇ, ಮರೆಯದಿರಿ,” ಎಂದನು. ಅದರಂತೆಯೇ ಆ ಮಹಿಳೆಯರು ಭಯಮಿಶ್ರಿತ ಆನಂದದಿಂದ ಸಮಾಧಿಯನ್ನು ಬಿಟ್ಟು ಕೂಡಲೇ ಹೊರಟರು. ಶಿಷ್ಯರಿಗೆ ಈ ಸಮಾಚಾರವನ್ನು ಮುಟ್ಟಿಸಲು ಧಾವಿಸಿದರು. ತಟ್ಟನೆ, ಯೇಸುವೇ ಅವರನ್ನು ಎದುರುಗೊಂಡು, “ನಿಮಗೆ ಶುಭವಾಗಲಿ!” ಎಂದರು. ಆ ಮಹಿಳೆಯರು ಹತ್ತಿರಕ್ಕೆ ಬಂದು, ಅವರ ಪಾದಕ್ಕೆರಗಿ ಪೂಜಿಸಿದರು. ಆಗ ಯೇಸು ಅವರಿಗೆ, “ಭಯಪಡಬೇಡಿ, ನನ್ನ ಸೋದರರ ಬಳಿಗೆ ಹೋಗಿ ಅವರು ಗಲಿಲೇಯಕ್ಕೆ ಹೋಗಬೇಕೆಂದೂ ಅಲ್ಲಿ ಅವರು ನನ್ನನ್ನು ಕಾಣುವರೆಂದೂ ತಿಳಿಸಿರಿ,” ಎಂದು ಹೇಳಿದರು.

15.04.22 - "ನನ್ನ ಪಿತನೇ ಕೊಟ್ಟಿರುವ ಕಷ್ಟದ ಕೊಡವಿದು; ಇದರಲ್ಲಿರುವುದನ್ನು ನಾನು ಕುಡಿಯದೆ ಹೋದರೆ ಹೇಗೆ?”

ಮೊದಲನೇ ವಾಚನ: ಯೆಶಾಯ 52:13-53:12


ನನ್ನ ದಾಸನಿದೋ, ಕೃತಾರ್ಥ ಆಗುವವನಾತ ಮಹಿಮಾನ್ವಿತ ಏರುವನು ಉನ್ನತ ಪದವಿಗಾತ. ಆತನ ಮುಖ ನರಮಾನವರ ಮುಖಕ್ಕಿಂತ ಆತನ ರೂಪ ನರಪುತ್ರರ ರೂಪಕ್ಕಿಂತ ವಿಕಾರಗೊಂಡಿದೆ ನಿಜ; ಆದರೆ ಹಲವರು ನೋಡಿ ಆದರು ಚಕಿತ. ಅಂತೆಯೆ ಹಲರಾಷ್ಟ್ರಗಳು ಚಕಿತವಾಗುವುವು ಅಚ್ಚರಿಗೊಂಡು ಬಾಯಿಮುಚ್ಚಿಕೊಳ್ಳುವರು ಅರಸರು ಆತನನು ಕಂಡು. ಏಕೆನೆ, ನೋಡುವರವರು ಅಪೂರ್ವ ಸಂಗತಿಯೊಂದನು ಗ್ರಹಿಸಿಕೊಳ್ಳುವರವರು ಎಂದೂ ಕೇಳದ ವಿಷಯವನು. ನಂಬುವರಾರು ನಾವು ಕೇಳಿದ ಸಂಗತಿಯನು? ಗುರುತಿಸುವರಾರು ಸರ್ವೇಶ್ವರನ ಶಕ್ತಿಯನು? ಸರ್ವೇಶ್ವರನ ಮುಂದೆ ಬೆಳೆದನಾತ ಸಸಿಯಂತೆ ಒಣನೆಲದೊಳಗೆ ಇಳಿಯುವ ಬೇರಿನಂತೆ. ಆತನಲಿ ಅಂದಚೆಂದಗಳಾವುವೂ ಇರಲಿಲ್ಲ, ನೋಡಲು ಲಕ್ಷಣವಾದುವು ಏನೂ ಕಾಣಲಿಲ್ಲ. ಧಿಕ್ಕರಿಸಲ್ಪಟ್ಟವನು, ಮನುಜರಿಂದ ತಿರಸ್ಕೃತನು, ದುಃಖಕ್ರಾಂತನು, ಕಷ್ಟಸಂಕಟ ಅನುಭವಿಸಿದವನು. ನೋಡಿದವರು ಮುಖ ತಿರುಗಿಸುವಷ್ಟು ನಿಂದಕನು ! ನಾವೋ ಲಕ್ಷ್ಯಕ್ಕೂ ತೆಗೆದುಕೊಳ್ಳಲಿಲ್ಲ ಆತನನು. ನಿಜವಾಗಿ ವಹಿಸಿಕೊಂಡನಾತ ನಮ್ಮ ಬಾಧೆಗಳನು ಹೊರೆಯಂತೆ ಹೊತ್ತನಾತ ನಮ್ಮ ಕಷ್ಟಸಂಕಟಗಳನು ನಾವು ಭಾವಿಸಿದ್ದಾದರು ಏನು? ಆತ ದೇವರಿಂದ ಬಾಧಿತನೆಂದು ದಂಡನೆಗೆ ಗುರಿಯಾದವನು, ತಿರಸ್ಕೃತನಾದವನೆಂದು ! ನಿನ್ನ ಸೃಷ್ಟಿಕರ್ತನೆ ನಿನಗೆ ಪತಿಯು ‘ಸೇನಾಧೀಶ್ವರನಾದ ಸರ್ವೇಶ್ವರ’ ಆತನ ಹೆಸರು. ಇಸ್ರಯೇಲಿನ ಪರಮಪಾವನನೆ ನಿನ್ನ ಉದ್ಧಾರಕನು. ‘ಸರ್ವಲೋಕದ ದೇವ’ ಆತನ ನಾಮಧೇಯ. ತೊಳಲುತ್ತಿದ್ದೆವು ನಾವೆಲ್ಲರು ದಾರಿತಪ್ಪಿದ ಕುರಿಗಳಂತೆ ಹಿಡಿಯುತ್ತಿದ್ದನು ಪ್ರತಿಯೊಬ್ಬನು ತನ್ನ ತನ್ನ ದಾರಿಯನ್ನೆ. ನಮ್ಮೆಲ್ಲರ ದೋಷವನು ಸರ್ವೇಶ್ವರ ಹಾಕಿದ್ದ ಆತನ ಮೇಲೆ. ಬಾಧೆಗಳಿಗೊಳಗಾದ, ಹಿಂಸೆ ಸಹಿಸಿದ ಆತ ಬಾಯ್ದೆರೆಯದೆ. ಹೌದು, ಬಾಯ್ದೆರೆಯದಿದ್ದ ಬಲಿಗೊಯ್ದ ಕುರಿಮರಿಯಂತೆ ತುಪ್ಪಟ ಕತ್ತರಿಸುವವನ ಮುಂದಿರುವ ಮೂಕ ಕುರಿಮರಿಯಂತೆ. ಎಳೆದೊಯ್ದರು ಬಂಧನದಿಂದ, ನ್ಯಾಯಸ್ಥಾನದಿಂದ ಹೌದು, ದೂರಮಾಡಿದರು ಆತನನು ಜೀವಲೋಕದಿಂದ. ವಧೆಯಾದನಾತ ನಮ್ಮ ಜನರ ಪಾಪದ ದೆಸೆಯಿಂದ. ಆದರೂ ಸಮಕಾಲೀನವರಾರು ಮರುಗಲಿಲ್ಲ ಕನಿಕರದಿಂದ. ಮಾಡಲಿಲ್ಲ ಆತ ಯಾವ ಪಾಪಕೃತ್ಯ ಅವನ ಬಾಯಲಿರಲಿಲ್ಲ ವಂಚನೆಯ ವಾಕ್ಯ ಹೂಣಿದರಾತನನು ಸತ್ತಮೇಲೆ ದುರುಳರ ಹಾಗೂ ದುಷ್ಕರ್ಮಿಗಳ ನಡುವೆ. ಸರ್ವೇಶ್ವರನ ಚಿತ್ತದಂತೆ ಜಜ್ಜರಿತನಾದ ಹಿಂಸೆಬಾಧೆಗಳಿಂದ ಪಾಪ ಪ್ರಾಯಶ್ಚಿತ್ತಕ್ಕಾಗಿ ತನ್ನ ಪ್ರಾಣವನೆ ಸಮರ್ಪಿಸಿದ. ಈ ಪರಿ ಕಾಣುವನು ತನ್ನ ಸಿರಿಸಂತಾನವನು ಪಡೆಯುವನು ಚಿರಜೀವವನು ತಾನೇ ನೆರವೇರಿಸುವೆನು ಸರ್ವೇಶ್ವರನ ಸಂಕಲ್ಪವನು. ತೃಪ್ತನಾಗುವನಾತ ಕಂಡು ತನ್ನ ಪ್ರಾಣಯಾತನೆಯ ಫಲವನು. ಸಜ್ಜನನಾದ ಆ ನನ್ನ ದಾಸ ತರುವನು ಸನ್ಮಾರ್ಗಕೆ ಬಹು ಜನರನು. ತಾನೇ ಹೊತ್ತುಕೊಳ್ಳುವನು ಅವರ ಅಪರಾಧಗಳ ಹೊರೆಯನು. ಎಂತಲೆ ನೀಡುವೆ ಇವನಿಗೆ ಪಾಲನ್ನು ದೊಡ್ಡವರ ಸಂಗಡ ಹಂಚಿಕೊಳ್ಳುವನು ಸೂರೆಯನ್ನು ಬಲಿಷ್ಠರ ಸಂಗಡ ಏಕೆನೆ ಪ್ರಾಣವನ್ನೆ ಧಾರೆಯೆರೆದು ಮರಣಹೊಂದಿದ ದ್ರೋಹಿಗಳೊಂದಿಗೆ ತನ್ನನೆ ಒಂದಾಗಿ ಎಣಿಸಿಕೊಂಡ. ಅನೇಕರ ಪಾಪವನ್ನು ಹೊತ್ತು ಅವರಿಗಾಗಿ ಪ್ರಾರ್ಥಿಸಿದ.

ಕೀರ್ತನೆ: 31:2, 6, 12-13, 15-16, 17, 25

ಶ್ಲೋಕ: ಪಿತನೇ, ನನ್ನಾತ್ಮವನ್ನು ನಿಮ್ಮ ಕೈಗೊಪ್ಪಿಸುತ್ತೇನೆ

ನನಗೆ ಕಿವಿಗೊಡು ಪ್ರಭು, ನನ್ನನು ಬಿಡಿಸು ಬೇಗನೆ |
ನನ್ನಾಶ್ರಯಗಿರಿ, ದುರ್ಗಾಸ್ಥಾನವಾಗಿರು
ನೀನೆ ||
ಇಲ್ಲಸಲ್ಲದ ದೇವರನು ಅವಲಂಬಿಪರನು ನೀ ಒಲ್ಲೆ |
ನಾನಾದರೋ ಪ್ರಭು ಭರವಸೆಯಿಟ್ಟಿರುವುದು ನಿನ್ನಲ್ಲೆ ||

ನುಚ್ಚು ನೂರಾದೆ, ಮಡಕೆಚಿಪ್ಪಿನಂತಾದೆ |
ಸತ್ತವರಂತಾದೆ : ನೆನಪಿಗೆ ಬಾರದಾದೆ ||
ನನಗೆ ವಿರುದ್ಧ ಜನರಾಡುವ ಗುಸುಗುಸು
ಮಾತು ಕೇಳಿ ಬರುತಿದೆ |
ಭಯಭೀತಿ ಎನ್ನನಾವರಿಸಿದೆ, ಒಳಸಂಚು,
ಪ್ರಾಣಹರಣ ನಡೆಯುತಿವೆ

ನಿನ್ನ ಕೈಯಲ್ಲಿದೆ ನನ್ನ ಇಡೀ
ಜೀವಮಾನ |
ಬೆನ್ನಟ್ಟಿ ಬರುವ ವೈರಿಯಂದ ರಕ್ಷಿಸೆನ್ನ ||
ಬೆಳಗಿಸಲಿ‌ ದಾಸನನು ನಿನ್ನ ಮುಖ ತೇಜವು |
ಕಾಪಾಡಲಿ ಎನ್ನನು ನಿನ್ನನಂತ ಪ್ರೇಮವು ||

ನಿನಗೆ ಮೊರೆಯಿಡುವೆ, ನನಗಾಗದಿರಲಿ
ಹೇ ಪ್ರಭು ಮಾನಭಂಗ |

ದುರುಳರಿಗಾಗಲಿ‌ ಆಶಾಭಂಗ ಮೂಕರಾಗವರು ಸೇರಲಿ ನರಕ |

ಎರಡನೇ ವಾಚನ: ಹಿಬ್ರಿಯರಿಗೆ 4:14-16, 5:7-9

ಸ್ವರ್ಗಲೋಕಕ್ಕೆ ಏರಿಹೋದ ದೇವರ ಪುತ್ರನಾದ ಯೇಸುವೇ ನಮಗೆ ಶ್ರೇಷ್ಠ ಹಾಗೂ ಪ್ರಧಾನಯಾಜಕ ಆಗಿರುವುದರಿಂದ ನಾವು ನಿವೇದಿಸುವ ವಿಶ್ವಾಸದಲ್ಲಿ ಸದೃಢರಾಗಿರೋಣ. ಈ ಪ್ರಧಾನ ಯಾಜಕ, ನಮ್ಮ ದೌರ್ಬಲ್ಯಗಳನ್ನು ಕಂಡು ಅನುಕಂಪ ತೋರದೆ ಇರುವವರಲ್ಲ. ಅವರು, ನಮ್ಮಂತೆಯೇ ಇದ್ದುಕೊಂಡು ಎಲ್ಲಾ ವಿಷಯಗಳಲ್ಲೂ ಶೋಧನೆ-ಸಂಕಟಗಳನ್ನು ಅನುಭವಿಸಿದರು. ಆದರೆ ಪಾಪವನ್ನು ಮಾತ್ರ ಮಾಡಲಿಲ್ಲ. ಆದಕಾರಣ, ನಾವು ಸಮಯೋಚಿತ ಸಹಾಯವನ್ನು ಅವರ ಅನುಗ್ರಹದಿಂದ ಪಡೆಯಲು ಮತ್ತು ಅವರ ಕರುಣೆಯನ್ನು ಸವಿಯಲು ಧೈರ್ಯದಿಂದ ಅವರ ಕೃಪಾಸನವನ್ನು ಸಮೀಪಿಸೋಣ. ಕ್ರಿಸ್ತಯೇಸು ಈ ಭೂಲೋಕದಲ್ಲಿದ್ದಾಗ, ತಮ್ಮನ್ನು ಮರಣದಿಂದ ಕಾಪಾಡಲು ಶಕ್ತರಾದ ದೇವರನ್ನು ಉಚ್ಚಸ್ವರದಿಂದ ಕೂಗುತ್ತಾ ಕಣ್ಣೀರಿಡುತ್ತಾ ವಿನಂತಿಸಿ ಪ್ರಾರ್ಥಿಸಿದರು. ಅವರ ಭಯಭಕ್ತಿಯನ್ನು ನೋಡಿ ದೇವರು ಅವರ ಮೊರೆಯನ್ನು ಆಲಿಸಿದರು. ಯೇಸು, ದೇವರ ಪುತ್ರರಾಗಿದ್ದರೂ ಹಿಂಸೆಬಾಧೆಗಳನ್ನು ತಪ್ಪಿಸಿಕೊಳ್ಳದೆ ವಿಧೇಯತೆಯನ್ನು ಅನುಭವದಿಂದ ಅರಿತುಕೊಂಡರು. ಹೀಗೆ, ಅವರು ಸ್ವತಃ ಪರಿಪೂರ್ಣರಾಗಿ ತಮಗೆ ವಿಧೇಯರಾಗುವ ಎಲ್ಲರಿಗೂ ಶಾಶ್ವತ ಜೀವೋದ್ಧಾರಕ್ಕೆ ಕಾರಣರಾದರು.

ಶುಭಸಂದೇಶ: ಯೊವಾನ್ನ 18:1-19:42


ಯೇಸುಸ್ವಾಮಿ ತಮ್ಮ ಶಿಷ್ಯರೊಡನೆ ಹೊರಟು, ಕೆದ್ರೋನ್ ಹಳ್ಳವನ್ನು ದಾಟಿ, ಅಲ್ಲೇ ಇದ್ದ ತೋಟವನ್ನು ಹೊಕ್ಕರು. ಅವರು ತಮ್ಮ ಶಿಷ್ಯರೊಡನೆ ಆಗಾಗ ಅಲ್ಲಿಗೆ ಬರುವುದು ವಾಡಿಕೆ. ಅವರನ್ನು ಹಿಡಿದುಕೊಡಲಿದ್ದ ಯೂದನಿಗೆ ಆ ಸ್ಥಳ ಚೆನ್ನಾಗಿ ಗೊತ್ತಿತ್ತು ಆದುದರಿಂದ ಯೂದನು ಸೈನಿಕರ ಒಂದು ತಂಡವನ್ನೂ ಮುಖ್ಯ ಯಾಜಕರು ಮತ್ತು ಫರಿಸಾಯರು ಕಳುಹಿಸಿದ ಕಾವಲಾಳುಗಳನ್ನೂ ಕರೆದುಕೊಂಡು ದೀವಟಿಗೆ, ಪಂಜು ಮತ್ತು ಆಯುಧಗಳ ಸಮೇತ ಅಲ್ಲಿಗೆ ಬಂದನು. ಯೇಸುಸ್ವಾಮಿಗೆ ತಮಗೆ ಸಂಭವಿಸಲಿರುವುದೆಲ್ಲವೂ ತಿಳಿದಿತ್ತು ಎಂದೇ ಮುಂದೆ ಬಂದು, “ನೀವು ಯಾರನ್ನು ಹುಡುಕುತ್ತಿದ್ದೀರಿ?” ಎಂದು ಕೇಳಿದರು. ಅವರು, “ನಜರೇತಿನ ಯೇಸುವನ್ನು” ಎಂದರು. ಯೇಸು, “ನಾನೇ ಆತನು” ಎಂದು ಉತ್ತರಕೊಟ್ಟರು. ಅವರನ್ನು ಹಿಡಿದುಕೊಡಲಿದ್ದ ಗುರುದ್ರೋಹಿ ಯೂದನು ಅವರ ಸಂಗಡವೇ ನಿಂತುಕೊಂಡಿದ್ದನು. “ನಾನೇ ಆತನು,” ಎಂದು ಯೇಸು ನುಡಿಯುತ್ತಲೇ, ಅವರೆಲ್ಲರೂ ಹಿಂದೆ ಸರಿದು ನೆಲದ ಮೇಲೆ ಬಿದ್ದರು. ಯೇಸು ಮತ್ತೊಮ್ಮೆ, “ನೀವು ಯಾರನ್ನು ಹುಡುಕುತ್ತಿದ್ದೀರಿ?” ಎಂದು ಕೇಳಲು, “ನಜರೇತಿನ ಯೇಸುವನ್ನು” ಎಂದು ಉತ್ತರ ಬಂದಿತು. ಅದಕ್ಕೆ ಯೇಸು, “ನಾನೇ ಆತನೆಂದು ನಿಮಗೆ ಆಗಲೇ ಹೇಳಿದೆ. ನೀವು ಹುಡುಕುತ್ತಾ ಇರುವುದು ನನ್ನನ್ನಾದರೆ, ಮಿಕ್ಕ ಇವರನ್ನು ಹೋಗಬಿಡಿ,” ಎಂದು ನುಡಿದರು. ‘ನೀವು ನನಗೆ ಕೊಟ್ಟವರಲ್ಲಿ ಒಬ್ಬನನ್ನಾದರೂ ಕಳೆದು ಕೊಳ್ಳಲಿಲ್ಲ’ ಎಂದು ತಾವೇ ನುಡಿದ ಮಾತು ನೆರವೇರುವಂತೆ ಯೇಸು ಹೀಗೆಂದರು ಅಷ್ಟರೊಳಗೆ ಸಿಮೋನ ಪೇತ್ರನು ತನ್ನಲ್ಲಿದ್ದ ಖಡ್ಗವನ್ನು ಹಿರಿದು, ಪ್ರಧಾನ ಯಾಜಕನ ಸೇವಕನಾದ ಮಾಲ್ಕನ ಬಲಗಿವಿಯನ್ನು ಕತ್ತರಿಸಿಬಿಟ್ಟನು. ಆಗ ಯೇಸು ಪೇತ್ರನಿಗೆ, “ನಿನ್ನ ಖಡ್ಗವನ್ನು ಒರೆಯಲ್ಲಿ ಹಾಕು. ನನ್ನ ಪಿತನೇ ಕೊಟ್ಟಿರುವ ಕಷ್ಟದ ಕೊಡವಿದು; ಇದರಲ್ಲಿರುವುದನ್ನು ನಾನು ಕುಡಿಯದೆ ಹೋದರೆ ಹೇಗೆ?” ಎಂದು ನುಡಿದರು.

ಅನ್ನನ ಮುಂದೆ ಯೇಸು ಅನಂತರ ಸೈನಿಕರು, ಸಹಸ್ರಾಧಿಪತಿ ಹಾಗು ಯೆಹೂದ್ಯರು ಕಳುಹಿಸಿದ್ದ ಕಾವಲಾಳುಗಳು ಯೇಸುವನ್ನು ಹಿಡಿದು ಕಟ್ಟಿ ಮೊದಲು ಅನ್ನನ ಬಳಿಗೆ ಕೊಂಡೊಯ್ದರು. ಅನ್ನನು, ಆ ವರ್ಷ ಪ್ರಧಾನ ಯಜಕನಾಗಿದ್ದ ಕಾಯಫನ ಮಾವ. ಸಮಸ್ತ ಜನತೆಗಾಗಿ ಒಬ್ಬನು ಸತ್ತರೆ ವಿಹಿತವೆಂದು ಸಲಹೆ ಕೊಟ್ಟವನು ಈ ಕಾಯಫನೇ. ಗುರುವನ್ನು ಅಲ್ಲಗಳೆದ ಪೇತ್ರ ಸಿಮೋನ್ ಪೇತ್ರನು ಮತ್ತು ಪ್ರಧಾನ ಯಾಜಕನಿಗೆ ಪರಿಚಿತನಾಗಿದ್ದ ಇನ್ನೊಬ್ಬ ಶಿಷ್ಯನು ಯೇಸುಸ್ವಾಮಿಯನ್ನು ಹಿಂಬಾಲಿಸುತ್ತಾ ಹೋದರು. ಪರಿಚಿತನಾಗಿದ್ದ ಶಿಷ್ಯನು ಯೇಸುವಿನೊಡನೆ ಪ್ರಧಾನ ಯಾಜಕನ ಮನೆಯ ಅಂಗಳವನ್ನು ಹೊಕ್ಕನು. ಪೇತ್ರನು ಹೊರಗಡೆ ಬಾಗಿಲ ಬಳಿಯಲ್ಲೇ ನಿಂತನು. ಪರಿಚಿತನಾಗಿದ್ದವನು ಅನಂತರ ಹೊರಗೆ ಬಂದು ದ್ವಾರಪಾಲಕಿಗೆ ಹೇಳಿ ಪೇತ್ರನನ್ನು ಒಳಕ್ಕೆ ಕರೆದುಕೊಂಡು ಹೋದನು. ಆ ದ್ವಾರಪಾಲಕಿಯು ಪೇತ್ರನನ್ನು ನೋಡಿ, “ನೀನೂ ಯೇಸುವಿನ ಶಿಷ್ಯರಲ್ಲಿ ಒಬ್ಬನಲ್ಲವೆ?” ಎಂದು ಕೇಳಿದಳು. ಅದಕ್ಕೆ ಪೇತ್ರನು, “ಇಲ್ಲ, ನಾನಲ್ಲ,” ಎಂದುಬಿಟ್ಟನು. ಆಗ ಚಳಿಯಿದ್ದುದರಿಂದ ಸೇವಕರೂ ಕಾವಲಾಳುಗಳೂ ಇದ್ದಲಿನ ಬೆಂಕಿ ಮಾಡಿ, ಸುತ್ತಲೂ ನಿಂತು ಚಳಿಕಾಯಿಸಿಕೊಳ್ಳುತ್ತಿದ್ದರು. ಪೇತ್ರನೂ ಅವರ ಸಂಗಡ ನಿಂತುಕೊಂಡು ಚಳಿಕಾಯಿಸಿಕೊಳ್ಳತೊಡಗಿದನು. ಅಷ್ಟರಲ್ಲಿ ಪ್ರಧಾನಯಾಜಕನು ಯೇಸುಸ್ವಾಮಿಯನ್ನು ಅವರ ಶಿಷ್ಯರ ವಿಷಯವಾಗಿ ಹಾಗು ಬೋಧನೆಯ ವಿಷಯವಾಗಿ ವಿಚಾರಿಸಿದನು.

ಮನಸ್ಸಿಗೊಂದಿಷ್ಟು :  ಪಾದ ತೊಳೆದು ದೀನತೆಯನ್ನು ಮೆರೆದ ಯೇಸು, ಈಗ ತಮ್ಮ ಹಿಡಿಯ ಬಂದವರ ಮುಂದೆ ತೋರುವ ಅಧಿಕಾರಯುತ ವರ್ತನೆಗೆ ಕಾರಣವಾದರು ಏನು? ಎರಡೂ ಭಾವಗಳ ಹಿಂದಿನ ಸ್ಫೂರ್ತಿ ಸೆಲೆ ಪ್ರೀತಿಯೇ. ಅಡಗಿ ಕುಳಿತ್ತಿರಬಹುದು ಎಂದುಕೊಂಡು ಬಂದ ಸೈನಿಕರನ್ನು ಯೇಸು ದೈರ್ಯವಾಗಿ ಎದುರಿಸುತ್ತಾರೆ. "ನಾನೇ ಯೇಸು" ಎನ್ನುತ್ತಾರೆ, "ಶಿಷ್ಯರನ್ನು ಬಿಡಿ" ಎನ್ನುತ್ತಾರೆ, "ಈ ರೀತಿ ಬರಬೇಕಾಗಿತ್ತೇ" ಎಂದು ವ್ಯಂಗ್ಯವಾಗಿ ಕೇಳುತ್ತಾರೆ. ಒಟ್ಟಿನಲ್ಲಿ ಕೆಲವೇ ಘಂಟೆಗಳಲ್ಲಿನ ಸಾವು ನೋವು  ಅವರನ್ನು ವಿಚಲಿತರನ್ನಾಗಿಸಿಲ್ಲ. ಅದು ತಾವು ಮಾಡಬೇಕಾದ ಕಾರ್ಯದ ಕಡೆಗಿನ ಪ್ರೀತಿ, ಕಾರ್ಯವನ್ನು ವಹಿಸಿದ ಪಿತನ ಮೇಲಿನ ಪ್ರೀತಿ, ತಾವು ಪ್ರಾಣ ನೀಡಬೇಕಾಗಿರುವ ಮಾನವನ  ಮೇಲಿನ ಪ್ರೀತಿ. ಈ ಕಷ್ಟದ ಸಮಯದಲ್ಲೂ ಪ್ರೀತಿ ಬರಿದಾಗಲಿಲ್ಲ .   

ಇತ್ತ ಯೇಸು ಜೊತೆಗಿದ್ದಾಗ ಇಡೀ ಗುಂಪನ್ನೇ ಎದುರು ಹಾಕಿಕೊಳ್ಳುವಷ್ಟು   ಧೈರ್ಯ ತೋರಿದ ಪೇತ್ರ, ನಂತರ ಒಬ್ಬ ದ್ವಾರಪಾಲಕಿಯ ಮುಂದೆ ಧೈರ್ಯ ಕಳೆದುಕೊಳ್ಳುತ್ತಾನೆ. 

ಯೇಸು ಸದಾ ನಮ್ಮೊಡನಿರಲಿ.

ಪ್ರಶ್ನೆ : ನಿಜಕ್ಕೂ ನಮ್ಮ ಮನ ಯೇಸುವಿನ ಯಾತನೆಯ ಧ್ಯಾನ ಮಾಡುತ್ತಿದೆಯೇ?

ಪ್ರಭುವೇ,
ತಾವಾಗಿಯೇ ಒಪ್ಪಿಸಿಕೊಂಡಿರಿ
ವೈರಿಗಳ ಮುಂದೆ
ಪಡೆಯಲೆಂದು ಪಾಪ ಪರಿಹಾರವ 
ನಿಮ್ಮ ಮಂದೆ
ದುಗುಡವಿಲ್ಲ ಬರಲಾಗದಿದ್ದರೂ 
ಯಾರೂ ನಿಮ್ಮ ಹಿಂದೆ
ಭರವಸೆ ಸದಾ 
ಜೊತೆಗಿರುವರೆಂದು ತಂದೆ
ನಮ್ಮದೋ ನಿಮ್ಮಿಂದಲೇ 
ತಪ್ಪಿಸಿಕೊಳ್ಳುವ ಹುನ್ನಾರ
ದುಗುಡವಿಲ್ಲ ಕಂಡೂ ಕಂಡೂ
ನಿಮ್ಮ ಆ ಹಿಂಸೆ ನೋವ 
ಪೇತ್ರನಂತೆ ಅರಿಯಲಾರೆ 
ಎನ್ನುತ್ತಲೇ ಇರುವೆನಲ್ಲ 
ಮಿಡಿಯಲಿ ನಿಮಗಾಗಿ 
ನಮ್ಮ ಈ ಮನ
ನುಡಿ ನಡೆಯಲ್ಲಿ 
ಮಾಡುತ್ತಿರಲಿ 
ನಿಮ್ಮ ಶಿಲುಬೆಯ ಸನ್ಮಾನ     

14.04.22 - “ಸ್ನಾನ ಮಾಡಿಕೊಂಡವನು ಕಾಲುಗಳನ್ನು ತೊಳೆದುಕೊಂಡರೆ ಸಾಕು, ಅವನ ಮೈಯೆಲ್ಲಾ ಶುದ್ಧವಾಗಿರುತ್ತದೆ"

ಮೊದಲನೇ ವಾಚನ: ವಿಮೋಚನಕಾಂಡ 12:1-8, 11-14

ಸರ್ವೇಶ್ವರಸ್ವಾಮಿ ಮೋಶೆ ಮತ್ತು ಆರೋನರ ಸಂಗಡ ಮಾತನಾಡಿ ಹೀಗೆಂದರು: “ಎಲ್ಲ ಮಾಸಗಳಲ್ಲಿ ಇದೇ ನಿಮಗೆ ಆದಿ ಮಾಸವಾಗಿರಬೇಕು. ಇದೇ ನಿಮಗೆ ಪ್ರತಿ ವರ್ಷದ ಮೊದಲನೆಯ ತಿಂಗಳಾಗಿರಬೇಕು. ಈ ವಿಷಯದಲ್ಲಿ ನೀವು ಇಸ್ರಯೇಲರ ಸಮಾಜಕ್ಕೆಲ್ಲ ಈ ರೀತಿ ಕಟ್ಟಳೆ ಇಡಬೇಕು: ‘ಈ ತಿಂಗಳ ಹತ್ತನೆಯ ದಿನದಲ್ಲಿ ನಿಮ್ಮ ನಿಮ್ಮ ಗೋತ್ರಗಳ ಪ್ರತಿಯೊಂದು ಮನೆಯವರು ಒಂದೊಂದು ಕುರಿಮರಿಯನ್ನಾಗಲಿ, ಆಡುಮರಿಯನ್ನಾಗಲಿ ಆರಿಸಿಕೊಳ್ಳಬೇಕು ಕುಟುಂಬವು ಚಿಕ್ಕದಾಗಿದ್ದು ಒಂದು ಮರಿಯನ್ನು ಪೂರ್ತಿಯಾಗಿ ತಿನ್ನಲಾಗದಿದ್ದರೆ ಹತ್ತಿರದ ನೆರೆಮನೆಯ ಕುಟುಂಬದೊಂದಿಗೆ ಸೇರಿ ಒಬ್ಬೊಬ್ಬನು ಇಷ್ಟಿಷ್ಟು ತಿನ್ನುವನೆಂದು ಲೆಕ್ಕ ಹಾಕಿ ಜನಗಳ ಸಂಖ್ಯಾನುಸಾರ ಮರಿಗಳನ್ನು ಆರಿಸಿಕೊಳ್ಳಲಿ. ಆ ಮರಿಯು ಯಾವ ದೋಷವೂ ಇಲ್ಲದ ಒಂದು ವರ್ಷದ ಗಂಡಾಗಿರಬೇಕು. ಕುರಿಗಳಿಂದಾಗಲಿ ಆಡುಗಳಿಂದಾಗಲಿ ಅದನ್ನು ಆರಿಸಿಕೊಳ್ಳಬಹುದು. ಈ ತಿಂಗಳಿನ ಹದಿನಾಲ್ಕನೆಯ ದಿನದವರೆಗೆ ಅವುಗಳನ್ನು ಇಟ್ಟುಕೊಂಡಿದ್ದು ಆ ದಿನದ ಸಂಜೆ ವೇಳೆಯಲ್ಲಿ ಇಸ್ರಯೇಲ್ ಸಮಾಜದವರೆಲ್ಲರು ತಮ್ಮ ತಮ್ಮ ಕೂಟಗಳಲ್ಲಿ ಕೊಯ್ಯಬೇಕು ಅವುಗಳ ರಕ್ತದಲ್ಲಿ ಸ್ವಲ್ಪ ತೆಗೆದು ತಾವು ಆ ಭೋಜನ ಮಾಡುವ ಮನೆಯ ಬಾಗಿಲಿನ ಎರಡು ನಿಲುವು ಕಂಬಗಳಿಗೂ ಮೇಲಿನ ಪಟ್ಟಿಗೂ ಹಚ್ಚಬೇಕು. ಆ ರಾತ್ರಿಯಲ್ಲೇ ಆ ಮಾಂಸವನ್ನು ತಿನ್ನಬೇಕು. ಅದನ್ನು ಬೆಂಕಿಯಲ್ಲಿ ಸುಟ್ಟು ಹುಳಿಯಿಲ್ಲದ ರೊಟ್ಟಿಗಳ ಮತ್ತು ಕಹಿ ಆದ ಪಲ್ಯಗಳ ಸಮೇತ ಊಟಮಾಡಬೇಕು. ಆ ಭೋಜನವನ್ನು ಮಾಡಬೇಕಾದ ಕ್ರಮ ಇದು: ನೀವು ನಡುಕಟ್ಟಿಕೊಂಡು, ಕೆರಮೆಟ್ಟಿಕೊಂಡು ಊರುಗೋಲನ್ನು ಹಿಡಿದುಕೊಂಡು, ಬೇಗಬೇಗನೆ ಊಟ ಮಾಡಬೇಕು. ಏಕೆಂದರೆ ಅದು ಸರ್ವೇಶ್ವರಸ್ವಾಮಿಗೆ ಆಚರಿಸತಕ್ಕ ಪಾಸ್ಕಹಬ್ಬ. ‘ಆ ರಾತ್ರಿ ನಾನು ಈಜಿಪ್ಟ್ ದೇಶದ ನಡುವೆ ಹಾದು ಹೋಗುವೆನು; ಮನುಷ್ಯರಾಗಿ ಇರಲಿ, ಪ್ರಾಣಿಗಳಾಗಿರಲಿ ಚೊಚ್ಚಲಾದುದೆಲ್ಲವನ್ನು ಸಂಹರಿಸುವೆನು. ಈಜಿಪ್ಟ್ ದೇಶದ ಸಮಸ್ತ ದೇವತೆಗಳನ್ನೂ ದಂಡಿಸುವೆನು. ನಾನೇ ಸರ್ವೇಶ್ವರ! ನೀವು ಬಾಗಿಲಿಗೆ ಹಚ್ಚಿದ ಆ ರಕ್ತವು ನೀವಿರುವ ಮನೆಗಳನ್ನು ಸೂಚಿಸುವುದು. ಅದನ್ನು ಕಂಡು ನಿಮಗೆ ಯಾವ ಹಾನಿಯನ್ನು ಮಾಡದೆ ಮುಂದಕ್ಕೆ ದಾಟಿ ಹೋಗುವೆನು. ನಾನು ಈಜಿಪ್ಟಿನವರನ್ನು ಸಂಹರಿಸುವಾಗ ನಿಮಗೆ ಯಾವ ಕೇಡೂ ಆಗದು. ಆ ದಿನವು ನಿಮಗೆ ಸ್ಮರಣೀಯ ದಿನವಾಗಿರುವುದು. ಅಂದು ನೀವು ಸರ್ವೇಶ್ವರನ ಗೌರವಾರ್ಥ ಹಬ್ಬವನ್ನು ಕೊಂಡಾಡಬೇಕು. ಅದನ್ನು ಶಾಶ್ವತ ನಿಯಮವೆಂದು ತಲತಲಾಂತರಕ್ಕೂ ಆಚರಿಸಬೇಕು’.

ಕೀರ್ತನೆ: 116:12-13, 15-16, 17-18

ಶ್ಲೋಕ: ನಾವು ದೇವರಿಗೆ ಕೃತಜ್ಞತಾಸ್ತೋತ್ರವನ್ನು ಸಲ್ಲಿಸಿ,
ಪಾನಾಪಾತ್ರೆಯಿಂದ ಕುಡಿಯುವಾಗ ಕ್ರಿಸ್ತೇಸುವಿನ ರಕ್ತದಲ್ಲಿ ಪಾಲ್ಗೊಳ್ಳುತ್ತೇವೆ.

ನನಗಿದೆ ಪ್ರಭುವಿನಲಿ ಪ್ರೀತಿ |
ಅಲಿಸಿಹನಾತ ನನ್ನ ವಿನಂತಿ ||

ಪ್ರಭು ಎನಗೆ ಮಾಡಿದ ಮಹೋಪಕಾರಗಳಿಗಾಗಿ |
ನನ್ನಿಂದೇನು ಮಡಲು‌ ಸಾಧ್ಯ
ಪ್ರತಿಯಾಗಿ ? ||
ಎತ್ತಿ ಹಿಡಿವೆನು ರಕ್ಷಣೆಯ
ಪಾನಪಾತ್ರೆಯನು |
ಪ್ರಖ್ಯಾತಪಡಿಸುವೆನು ಪ್ರಭುವಿನ‌ ನಾಮವನು ||

ಪ್ರಭು ಅಲ್ಪವೆಂದೆಣಿಸನು |
ತನ್ನ‌ ಭಕ್ತರ ಮರಣವನು ||
ಹೇ ಪ್ರಭು ಕರುಣಿಸು ನಾ ನಿನ್ನ ಕಿಂಕರನು |
ನಿನ್ನ ದಾಸಿಯ ಮಗನು‌ ನಿನ್ನ ಸೇವಕನು |
ಬಿಡಸಿರುವೆ  ನೀ ನನ್ನ ಬಂಧನಗಳನು ||

ಅರ್ಪಿಸುವೆ ನಾ ನಿನಗೆ ಕೃತಜ್ಞತಾ ಬಲಿಗಳನು |
ಪ್ರಖ್ಯಾತಪಡಿಸುವೆನು ಪ್ರಭುವಿನ ನಾಮವನು ||
ಹೇ ಜೆರುಸಲೇಮೇ ನಿನ್ನ ಮಧ್ಯದೊಳು |

ಅತನಿರುವ  ಮಂದಿರದ ಅಂಗಳದೋಳು ||

ಎರಡನೇ ವಾಚನ: 1 ಕೊರಿಂಥಿಯರಿಗೆ 11: 23-26

ಸಹೋದರರೇ, ನಿಮಗೆ ಮಾಡಿದ ಉಪದೇಶವನ್ನು ನಾನು ಪ್ರಭುವಿನಿಂದಲೇ ಪಡೆದೆನು. ಅದೇನೆಂದರೆ; ಪ್ರಭುಯೇಸು, ತಮ್ಮನ್ನು ಹಿಡಿದುಕೊಡಲಾದ ಆ ರಾತ್ರಿ ರೊಟ್ಟಿಯನ್ನು ತೆಗೆದುಕೊಂಡು ದೇವರಿಗೆ ಕೃತಜ್ಞತಾಸ್ತೋತ್ರವನ್ನು ಸಲ್ಲಿಸಿ ಅದನ್ನು ಮುರಿದು, “ಇದು ನಿಮಗಾಗಿ ಒಪ್ಪಿಸಲಾಗುವ ನನ್ನ ಶರೀರ, ಇದನ್ನು ನನ್ನ ಸ್ಮರಣೆಗಾಗಿ ಮಾಡಿ,” ಎಂದರು. ಅಂತೆಯೇ ಭೋಜನದ ಕೊನೆಯಲ್ಲಿ ಪಾನ ಪಾತ್ರೆಯನ್ನು ತೆಗೆದುಕೊಂಡು, “ಈ ಪಾತ್ರೆ ನನ್ನ ರಕ್ತದಿಂದ ಮುದ್ರಿತವಾದ ಹೊಸ ಒಡಂಬಡಿಕೆ; ಇದನ್ನು ನೀವು ಪಾನಮಾಡುವಾಗಲೆಲ್ಲಾ ನನ್ನ ಸ್ಮರಣೆಗಾಗಿ ಮಾಡಿರಿ,” ಎಂದರು. ಎಂದೇ, ನೀವು ಈ ರೊಟ್ಟಿಯನ್ನು ಭುಜಿಸಿ ಈ ಪಾತ್ರೆಯಿಂದ ಪಾನಮಾಡುವಾಗಲೆಲ್ಲಾ ಪ್ರಭು ಬರುವ ತನಕ ಅವರ ಮರಣವನ್ನು ಸಾರುತ್ತೀರಿ.

ಶುಭಸಂದೇಶ: ಯೊವಾನ್ನ 13:1-15


ಅಂದು ಪಾಸ್ಕ ಹಬ್ಬದ ಹಿಂದಿನ ದಿನ. ತಾವು ಈ ಲೋಕವನ್ನು ಬಿಟ್ಟು ಪಿತನ ಬಳಿಗೆ ಹೋಗಬೇಕಾದ ಗಳಿಗೆ ಬಂದಿರುವುದು ಎಂದು ಯೇಸುಸ್ವಾಮಿಗೆ ತಿಳಿದಿತ್ತು. ಈ ಲೋಕದಲ್ಲಿದ್ದ ತಮ್ಮವರನ್ನು ಯಾವಾಗಲೂ ಪ್ರೀತಿಸುತ್ತಿದ್ದ ಅವರು ಆ ಪ್ರೀತಿಯ ಪರಮಾವಧಿಯನ್ನು ಈಗ ತೋರಿಸಲಿದ್ದರು. (ಯೇಸುವನ್ನು ಗುರುದ್ರೋಹದಿಂದ ಹಿಡಿದುಕೊಡಬೇಕೆಂಬ ಆಲೋಚನೆಯನ್ನು ಸೈತಾನನು ಸಿಮೋನನ ಮಗ ಇಸ್ಕರಿಯೋತಿನ ಯೂದನಲ್ಲಿ ಈಗಾಗಲೇ ಹುಟ್ಟಿಸಿದ್ದನು). ಊಟಕ್ಕೆ ಎಲ್ಲರೂ ಕುಳಿತಿದ್ದರು. ಪಿತನು ಎಲ್ಲವನ್ನೂ ತಮ್ಮ ಕೈಗೆ ಒಪ್ಪಿಸಿರುವರೆಂದೂ ತಾವು ದೇವರ ಬಳಿಯಿಂದ ಬಂದಿದ್ದು, ಈಗ ದೇವರ ಬಳಿಗೇ ಮರಳುತ್ತಿದ್ದೇನೆಂದೂ ಯೇಸುವಿಗೆ ತಿಳಿದಿತ್ತು. ಅವರು ಊಟದಿಂದ ಎದ್ದು, ತಮ್ಮ ಮೇಲುಹೊದಿಕೆಯನ್ನು ತೆಗೆದಿಟ್ಟರು. ಅಂಗವಸ್ತ್ರವನ್ನು ಸೊಂಟಕ್ಕೆ ಕಟ್ಟಿಕೊಂಡರು. ಅನಂತರ ಒಂದು ಬೋಗುಣಿಗೆ ನೀರು ಸುರಿದುಕೊಂಡು ತಮ್ಮ ಶಿಷ್ಯರ ಕಾಲುಗಳನ್ನು ತೊಳೆಯುತ್ತಾ ತಾವು ಕಟ್ಟಿಕೊಂಡಿದ್ದ ಅಂಗವಸ್ತ್ರದಿಂದ ಒರಸತೊಡಗಿದರು. ಹೀಗೆ, ಅವರು ಸಿಮೋನ ಪೇತ್ರನ ಹತ್ತಿರಕ್ಕೆ ಬಂದಾಗ ಆತ, “ಪ್ರಭುವೇ, ನೀವು ನನ್ನ ಕಾಲುಗಳನ್ನು ತೊಳೆಯುವುದೇ?” ಎಂದನು. ಯೇಸು, “ನಾನು ಮಾಡುತ್ತಿರುವುದು ನಿನಗೆ ಈಗ ಅರ್ಥವಾಗದು, ಮುಂದೆ ಅರ್ಥವಾಗುತ್ತದೆ,” ಎಂದು ಉತ್ತರಿಸಿದರು. “ನೀವು ನನ್ನ ಕಾಲುಗಳನ್ನು ತೊಳೆಯುವುದು ಎಂದಿಗೂ ಕೂಡದು,” ಎಂದು ಪೇತ್ರನು ಪ್ರತಿಭಟಿಸಿದನು. ಅದಕ್ಕೆ ಯೇಸು, “ನಾನು ತೊಳೆಯದಿದ್ದರೆ ನಿನಗೆ ನನ್ನಲ್ಲಿ ಪಾಲು ಇಲ್ಲ,” ಎಂದು ನುಡಿದರು. ಆಗ ಪೇತ್ರನು, “ಹಾಗಾದರೆ ಪ್ರಭೂ, ನನ್ನ ಕಾಲುಗಳನ್ನು ಮಾತ್ರವಲ್ಲ, ನನ್ನ ಕೈಗಳನ್ನೂ ತಲೆಯನ್ನೂ ತೊಳೆಯಿರಿ,” ಎಂದನು. ಯೇಸು, “ಸ್ನಾನಮಾಡಿಕೊಂಡವನು ಕಾಲುಗಳನ್ನು ತೊಳೆದುಕೊಂಡರೆ ಸಾಕು, ಅವನ ಮೈಯೆಲ್ಲಾ ಶುದ್ಧವಾಗಿರುತ್ತದೆ. ನೀವೂ ಕೂಡ ಶುದ್ಧರಾಗಿದ್ದೀರಿ. ಆದರೆ ನಿಮ್ಮಲ್ಲಿ ಎಲ್ಲರೂ ಶುದ್ಧರಲ್ಲ,” ಎಂದು ಹೇಳಿದರು. ತಮ್ಮನ್ನು ಗುರುದ್ರೋಹದಿಂದ ಹಿಡಿದುಕೊಡುವವನು ಯಾರೆಂಬುದು ಅವರಿಗೆ ಗೊತ್ತಿತ್ತು. ಅದಕ್ಕಾಗಿಯೇ ಅವರು, ‘ನಿಮ್ಮಲ್ಲಿ ಎಲ್ಲರೂ ಶುದ್ಧರಲ್ಲ,’ ಎಂದು ಹೇಳಿದರು. ಶಿಷ್ಯರ ಪಾದಗಳನ್ನು ತೊಳೆದ ಮೇಲೆ ಯೇಸು ತಮ್ಮ ಮೇಲುಹೊದಿಕೆಯನ್ನು ಹಾಕಿಕೊಂಡು ಕುಳಿತುಕೊಂಡರು. ತಮ್ಮ ಶಿಷ್ಯರಿಗೆ, “ನಿಮಗೆ, ನಾನು ಮಾಡಿರುವುದು ಏನೆಂದು ಅರ್ಥವಾಯಿತೇ? ‘ಬೋಧಕರೇ, ಪ್ರಭುವೇ’ ಎಂದು ನೀವು ನನ್ನನ್ನು ಕರೆಯುತ್ತೀರಿ; ನೀವು ಹಾಗೆ ಹೇಳುವುದು ಸರಿಯೆ. ನಾನು ಬೋಧಕನೂ ಹೌದು, ಪ್ರಭುವೂ ಹೌದು. ನಿಮಗೆ ಪ್ರಭುವೂ ಬೋಧಕನೂ ಆಗಿರುವ ನಾನೇ ನಿಮ್ಮ ಕಾಲುಗಳನ್ನು ತೊಳೆದಿರುವಾಗ ನಿವು ಸಹ ಒಬ್ಬರ ಕಾಲುಗಳನ್ನು ಇನ್ನೊಬ್ಬರು ತೊಳೆಯುವ ಹಂಗಿನಲ್ಲಿದ್ದೀರಿ. ನಾನು ನಿಮಗೆ ಒಂದು ಆದರ್ಶವನ್ನು ಕೊಟ್ಟಿದ್ದೇನೆ. ನಾನು ನಿಮಗೆ ಮಾಡಿದಂತೆಯೇ ನೀವೂ ಇತರರಿಗೆ ಮಾಡಿರಿ.

ಮನಸ್ಸಿಗೊಂದಿಷ್ಟು  :  ಯೇಸು ಪಿತನ ಬಳಿಗೆ ಹೋಗುವ ಅಥವಾ ಕಾಣುವ ಹತ್ತಿರದ ಸಮಯದಲ್ಲಿ ಪರ ಪ್ರೀತಿಯ ಉತ್ತುಂಗವನ್ನು ಮೆರೆಯುತ್ತಾರೆ.  
ನಾವು ದೇವರಿಗೆ ಹತ್ತಿರವಾದಷ್ಟೂ ನಮ್ಮಲ್ಲಿನ ಮಾನವೀಯತೆ, ದೀನತೆ, ಪರ ಪ್ರೀತಿ ಜಾಗೃತವಾಗುತ್ತದೆ. ಇನ್ನೂ ಅತ್ಯಂತ ನೋವು, ಕಷ್ಟದ ಸಮಯವೂ ದೇವರ ಸಾನಿಧ್ಯ ಹತ್ತಿರದಲ್ಲೇ ಇರುವ ಸಂಕೇತ. ಯೇಸುವಿನ ಪಾದ ತೊಳೆಯುವಿಕೆ ಈ ಕಾರ್ಯ ನಮ್ಮ ಹೃದಯದಲ್ಲಿನ ಅಹಂ ಅನ್ನು ತೊಳೆದು ಹಾಕಲಿ 

ಪ್ರಶ್ನೆ : ನಾನೇ ಶ್ರೇಷ್ಠನೆಂಬ ನಮ್ಮ ಅಹಮಿಕೆಯ ಯೇಸು ತೊಳೆದು ಶುದ್ಧಿಯಾಗಿಸಲು ನಾವು ಸಿದ್ಧರೇ? 

ಪ್ರಭು,
ಜಗದೊಡೆಯ ನೀ 
ಬಾಗಿಹೆ ಮೊಣಕಾಲೂರಿ 
ಪಾದವ ತೊಳೆಯಲು 
ಲೋಕ ರೂಢಿಯ ಮೀರಿ 
ಗುರುವೂ ದೊರೆಯೂ 
ಸೇವಕನಾಗಳೆಂಬುದ ಸಾರಿ
ಹೊರಡಲಣಿಯಾದ್ದೀರಲ್ಲ   
ಹಿಂಸೆ ತ್ಯಾಗದ ತೆರನ್ನೇರಿ
ತೊಳೆಸಿಕೊಳ್ಳುತ್ತಿರುವೆ ದಿನವೂ  
ಲಜ್ಜೆಯಿಲ್ಲದೆ ಕಾಲ ಚಾಚಿ
ಶುದ್ಧಿಯಾಗಿಸಿ ಈ ನನ್ನ ಮನವ 
ಪಶ್ಚಾತ್ತಾಪದ ಕಣ್ಣೀರಿಳಿಸಿ 

13.04.22 - “ನಿಮ್ಮಲ್ಲೇ ಒಬ್ಬನು ನನಗೆ ದ್ರೋಹ ಬಗೆಯುತ್ತಾನೆ, ಎಂದು ನಿಮಗೆ ಖಂಡಿತವಾಗಿ ಹೇಳುತ್ತೇನೆ,”

ಮೊದಲನೇ ವಾಚನ: ಯೆಶಾಯ 50: 4-9

ದಣಿದವರನ್ನು ಹಿತನುಡಿಗಳಿಂದ ತಣಿಸುವಂತೆ ಅನುಗ್ರಹಿಸುತ್ತಾನೆನಗೆ ಸ್ವಾಮಿ ಸರ್ವೇಶ್ವರ ಶಿಕ್ಷಿತರ ನಾಲಗೆಯನು; ಶಿಷ್ಯನೋಪಾದಿ ನಾನು ಆತನನ್ನು ಆಲಿಸುವಂತೆ ಬೆಳಬೆಳಗೂ ನನ್ನನೆಚ್ಚರಿಸಿ ಚೇತನಗೊಳಿಸುತ್ತಾನೆ ನನ್ನ ಕಿವಿಯನು. ತೆರೆದಿಹನು ಸ್ವಾಮಿ ಸರ್ವೇಶ್ವರ ನನ್ನ ಕಿವಿಯನು ಎಂದೇ ವಿಮುಖನಾಗಲಿಲ್ಲ ನಾನು, ಪ್ರತಿಭಟಿಸಲಿಲ್ಲ ಆತನನು. ಬೆನ್ನುಕೊಟ್ಟೆನು ಹೊಡೆಯುವವರಿಗೆ ಗಡ್ಡ ಒಡ್ಡಿದೆನು ಅದನ್ನು ಕೀಳುವವರಿಗೆ ಮುಖ ಮರೆಮಾಡಲಿಲ್ಲ ಉಗುಳುಬುಗುಳಿಗೆ. ನೆರವಾಗಿಹನು ನನಗೆ ಸ್ವಾಮಿ ಸರ್ವೇಶ್ವರ ಎಂದೇ ತಲೆತಗ್ಗಿಸಲಿಲ್ಲ ನಾನು ನಾಚಿಕೆಯಿಂದ ಗಟ್ಟಿಮಾಡಿಕೊಂಡೆ ಮುಖವನು ಕಗ್ಗಲ್ಲಿನ ಹಾಗೆ ಆಶಾಭಂಗಪಡಲಾರೆನೆಂದು ಗೊತ್ತು ನನಗೆ. ನನ್ನ ಪರ ತೀರ್ಪುಕೊಡುವವನು ಇಹನು ಹತ್ತಿರದಲೆ ನನಗೆ ಪ್ರತಿಕಕ್ಷಿ ಯಾರೆ ಬರಲಿ ಮುಂದಕೆ. ನನ್ನೊಡನೆ ವ್ಯಾಜ್ಯಮಾಡಬಲ್ಲವನಾರೇ ನಿಲ್ಲಲಿ ನ್ಯಾಯಕೆ. ಇಗೋ, ಸ್ವಾಮಿ ಸರ್ವೇಶ್ವರ ನಿಂತಿಹರು ನನಗೆ ನೆರವಾಗಿ ನಿರ್ಣಯಿಸುವವನು ಯಾರು ನನ್ನನ್ನು ಅಪರಾಧಿಯಾಗಿ? ನುಸಿತಿಂದ ವಸ್ತ್ರದಂತೆ ಅಳಿದು ಹೋಗುವರವರು ಜೀರ್ಣವಾಗಿ.


ಕೀರ್ತನೆ: 69:8-10, 21-22, 31, 33-34

ಶ್ಲೋಕ: ಪ್ರೀತಿಮಯ ದೇವಾ, ಜೀವೋದ್ಧಾರಕಾ, ಸದುತ್ತರ ನೀಡೆನಗೆ

ಒಡನೆ ಕೈ ನೀಡಿ ಕಾಪಾಡು ದೇವಾ |
ಕುತ್ತಿಗೆಗೆ ಬಂದಿದೆ ತುಂಬು ಪ್ರವಾಹ ||

ನನ್ನವರಿಗೇ ನಾನನ್ಯನಾದೆನಯ್ಯಾ |
ಒಡಹುಟ್ಟಿದವರಿಗೇ ಹೊರಗಿನವನಾದೆನಯ್ಯಾ ||
ಅಗ್ನಿಯಂತೆನ್ನ ದಯಿಸುತ್ತಿದೆ ನಿನ್ನಾಲಯದಭಿಮಾನ |
ಎನ್ನ ಮೇಲೆರಗಿದೆ ನಿನ್ನ ಕಡು ದ್ರೋಹಿಗಳ ದೂಷಣ ||
ಅತ್ತತ್ತು ನಾ ಒಪ್ಪೊತ್ತಿದ್ದುದೆಲ್ಲಾ |
ಚುಚ್ಚುಮಾತಿಗೆ ಕಾರಣವಾಯಿತಲ್ಲಾ ||

ಹಸಿದ ನನಗೆ ವಿಷಬೆರತ  ಆಹಾರವಿತ್ತರಯ್ಯಾ |
ಬಾಯಾರಿದೆನಗೆ ಕಹಿ ಕಾಡಿಯನು ಕೊಟ್ಟರಯ್ಯಾ ||

ಅವರಿಗೆ ಬಡಿಸಿದ ಊಟವೆ ಅವರಿಗೆ ಉರುಲಾಗಲಿ |
ಅವರ ಹಬ್ಬದೌತಣವೇ ಅವರಿಗೆ ಬೊನಾಗಲಿ ||
ಸ್ವಾಮಿ ದೇವನಿಗಿದುವೇ ಸುಪ್ರೀತ |
ಕೊಂಬುಗೊರೆಸುಳ್ಳ ಗೂಳಿಬಲಿಗಿಂತ ||

ಬಡಬಗ್ಗರ ಮೊರೆಗೆ ಪ್ರಭು ಕಿವಿಗೊಡದಿರನು |
ಸೆರೆಯಲ್ಲಿಹ ತನ್ನವರ ತಿರಸ್ಕರಿಸನು ||
ಭೂಮ್ಯಾಕಾಶಗಳು ಅತನನು ಕೊಂಡಾಡಲಿ |
ಸಾಗರಗಳು ಜಲಚರಗಳು ಅತನನು‌

ಭಜಿಸಲಿ ||


ಶುಭಸಂದೇಶ: ಮತ್ತಾಯ 26:14-25


ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾದ ಇಸ್ಕರಿಯೋತಿನ ಯೂದ ಎಂಬಾತ ಮುಖ್ಯ ಯಾಜಕರ ಬಳಿಗೆ ಹೋದನು. “ನಿಮಗೆ ನಾನು ಯೇಸುವನ್ನು ಹಿಡಿದುಕೊಟ್ಟರೆ ನನಗೇನು ಕೊಡುವಿರಿ?” ಎಂದು ಅವರನ್ನು ವಿಚಾರಿಸಿದನು. ಅವರೋ, ಅವನಿಗೆ ಮೂವತ್ತು ಬೆಳ್ಳಿ ನಾಣ್ಯಗಳನ್ನು ನಿಗದಿ ಮಾಡಿ ಕೊಟ್ಟರು. ಆ ಗಳಿಗೆಯಿಂದ ಯೇಸುವನ್ನು ಹಿಡಿದೊಪ್ಪಿಸಲು ಅವನು ಸಂದರ್ಭ ಕಾಯುತ್ತಾ ಇದ್ದನು. ಅಂದು ಹುಳಿರಹಿತ ರೊಟ್ಟಿಯ ಹಬ್ಬದ ಮೊದಲನೆಯ ದಿನ. ಶಿಷ್ಯರು ಯೇಸುಸ್ವಾಮಿಯ ಬಳಿಗೆ ಬಂದು, “ತಮಗೆ ಪಾಸ್ಕ ಭೋಜನವನ್ನು ನಾವು ಎಲ್ಲಿ ಸಿದ್ಧಪಡಿಸಬೇಕೆನ್ನುತ್ತೀರಿ?” ಎಂದು ಕೇಳಿದರು. ಅದಕ್ಕೆ ಅವರು, “ಪಟ್ಟಣದಲ್ಲಿ ನಾನು ಸೂಚಿಸುವಂಥವನ ಬಳಿಗೆ ಹೋಗಿರಿ, ‘ನನ್ನ ಕಾಲ ಸವಿೂಪಿಸಿತು, ಪಾಸ್ಕವನ್ನು ನನ್ನ ಶಿಷ್ಯರ ಸಮೇತ ನಿನ್ನ ಮನೆಯಲ್ಲಿಯೇ ಆಚರಿಸಬೇಕೆಂದಿದ್ದೇನೆ’; ಇದನ್ನು ನಮ್ಮ ಗುರುವೇ ಹೇಳಿಕಳುಹಿಸಿದ್ದಾರೆ ಎಂದು ಅವನಿಗೆ ತಿಳಿಸಿರಿ,” ಎಂದರು. ಯೇಸು ಸೂಚಿಸಿದಂತೆಯೇ ಶಿಷ್ಯರು ಹೋಗಿ ಪಾಸ್ಕ ಭೋಜನವನ್ನು ತಯಾರಿಸಿದರು. ಸಂಜೆಯಾಯಿತು. ಯೇಸುಸ್ವಾಮಿ ಹನ್ನೆರಡು ಮಂದಿ ಶಿಷ್ಯರ ಸಂಗಡ ಊಟಕ್ಕೆ ಕುಳಿತರು. ಅವರೆಲ್ಲರೂ ಊಟಮಾಡುತ್ತಿದ್ದಾಗ ಯೇಸು, “ನಿಮ್ಮಲ್ಲೇ ಒಬ್ಬನು ನನಗೆ ದ್ರೋಹ ಬಗೆಯುತ್ತಾನೆ, ಎಂದು ನಿಮಗೆ ಖಂಡಿತವಾಗಿ ಹೇಳುತ್ತೇನೆ,” ಎಂದರು. ಶಿಷ್ಯರು ಬಹಳ ಕಳವಳಗೊಂಡರು. ಒಬ್ಬರಾದ ಮೇಲೊಬ್ಬರು, “ಸ್ವಾವಿೂ, ನಾನೋ? ನಾನೋ?” ಎಂದು ಕೇಳತೊಡಗಿದರು. ಅದಕ್ಕೆ ಪ್ರತ್ಯುತ್ತರವಾಗಿ ಯೇಸು, “ಊಟದ ಬಟ್ಟಲಲ್ಲಿ ನನ್ನೊಡನೆ ಕೈ ಅದ್ದಿ ಉಣ್ಣುವವನೇ ನನಗೆ ದ್ರೋಹ ಬಗೆಯುತ್ತಾನೆ. ನರಪುತ್ರನೇನೋ ಪವಿತ್ರ ಗ್ರಂಥದಲ್ಲಿ ಬರೆದಿರುವ ಪ್ರಕಾರ ಹೊರಟುಹೋಗುತ್ತಾನೆ, ನಿಜ. ಆದರೆ ಅಯ್ಯೋ, ನರಪುತ್ರನಿಗೆ ದ್ರೋಹ ಬಗೆಯುವವನ ದುರ್ಗತಿಯನ್ನು ಏನೆಂದು ಹೇಳಲಿ! ಅವನು ಹುಟ್ಟದೇ ಇದ್ದಿದ್ದರೆ ಎಷ್ಟೋ ಚೆನ್ನಾಗಿತ್ತು!” ಎಂದರು. ಗುರುದ್ರೋಹಿಯಾದ ಯೂದನು ಆಗ, “ಗುರುವೇ, ಅವನು ನಾನಲ್ಲ ತಾನೇ?” ಎಂದನು. ಅದಕ್ಕೆ ಯೇಸು, “ಅದು ನಿನ್ನ ಬಾಯಿಂದಲೇ ಬಂದಿದೆ,” ಎಂದರು.




ಮನಸ್ಸಿಗೊಂದಿಷ್ಟು :  ಕಾಲು ತೊಳೆದು ದಾಸನ ವಿನಯ ತೋರಿದ ಯೇಸುವನ್ನು ಸಣ್ಣ ಮೊತ್ತಕ್ಕೆ ಜೂದಾಸ ದ್ರೋಹ ಮಾಡುತ್ತಾನೆ. ದೇವರ ಚಿತ್ತಕ್ಕಿಂತ ನಮ್ಮ ಯೋಜನೆಗಳಲ್ಲೇ ನಾವು ಬದುಕಿದರೆ ಜೂದಾಸನಂತೆ ನಿರಾಸರಾಗಬಹುದುಭ್ರಮನಿರಸನಗೊಳ್ಳಬಹುದು ಹಾಗೂ ದೈವ ಯೋಜನೆಗೆ ನಮ್ಮದೇ ಆದ ರೀತಿಯಲ್ಲಿ ದ್ರೋಹ ಬಗೆಯಬಹುದುದೈವ ಚಿತ್ತಕ್ಕೆ ಅನುಗುಣವಾಗಿ ಬಾಳೋಣ. ಇಂದಿನ ಶುಭಸಂದೇಶದಲ್ಲಿ ಶಿಷ್ಯರೆಲ್ಲರೂ ಯೇಸುವನ್ನು ಸ್ವಾಮಿಪ್ರಭು ಎಂದು ಕರೆದರೆ ಜೂದಾಸ ಮಾತ್ರ ಇನ್ನೂ ‘ಗುರುವೇ?’ ಎನ್ನುತ್ತಿದ್ದಾನೆ.

ಪ್ರಶ್ನೆ : ಯೇಸು ನಮಗೆ ಗುರು ಮಾತ್ರವೇ ಅಥವಾ ನಮ್ಮ ಸಕಲವೂ ಆದ ಪ್ರಭು ದೇವರೇ

ಪ್ರಭುವೇ,
ಜೂದಾಸ ದ್ರೋಹವೆಸಗಲು
ಪಡೆದದ್ದು ಮೂವತ್ತು
ಬೆಳ್ಳಿ ನಾಣ್ಯ
ನಾವಾದರೋ ಹೃದಯದೊಳು
ನೀಡಿರುವೆವು ನಿಮಗೆಷ್ಟು
ಮೌಲ್ಯ
ನಮ್ಮೊಳಗಿನ ಜೂದಾಸನ
ಕ್ಷಮಿಸಿರಿ
ನಿಮ್ಮೊಳಗಿನ ಪ್ರೇಮವ
ಕಲಿಸಿರಿ.

12.04.22 - "ನೀವು ನನ್ನನ್ನು ಹುಡುಕುವಿರಿ, ‘ಆದರೆ ನಾನು ಹೋಗುವಲ್ಲಿಗೆ ನೀವು ಬರಲಾರಿರಿ"

ಮೊದಲನೇ ವಾಚನ: ಯೆಶಾಯ 49:1-6

ಕಿವಿಗೊಡಿ ನನ್ನ ದ್ವೀಪನಿವಾಸಿಗಳೇ, ಆಲಿಸಿ ನನ್ನನ್ನು ದೂರದ ಜನಾಂಗಗಳೇ, ಸರ್ವೇಶ್ವರ ಕರೆದನೆನ್ನನ್ನು ಗರ್ಭದಲ್ಲಿದ್ದಾಗಲೇ; ಹೆಸರಿಟ್ಟನೆನಗೆ ನಾನು ತಾಯಿಯ ಉದರಲ್ಲಿದ್ದಾಗಲೇ. ಮಾಡಿದನು ನನ್ನ ನುಡಿಯನ್ನು ಹರಿತವಾದ ಖಡ್ಗವನ್ನಾಗಿ ಮುಚ್ಚಿಟ್ಟಿಹನು ನನ್ನನ್ನು ತನ್ನ ಕರದ ನೆರಳಿನಲ್ಲಿ ರೂಪಿಸಿಹನು ನನ್ನನ್ನು ಚೂಪಾದ ಬಾಣವನ್ನಾಗಿ, ಬಚ್ಚಿಟ್ಟಿಹನು ನನ್ನನು ತನ್ನ ಬತ್ತಳಿಕೆಯಲ್ಲಿ. ಆತನೆನಗೆ ಇಂತೆಂದ: “ನೀನೆನ್ನ ದಾಸ; ನನ್ನ ಮಹಿಮೆ ಬೆಳಗಿಸುವ ಇಸ್ರಯೇಲ.” ಇಂತೆಂದುಕೊಂಡೆ ನಾನಾಗ: ವ್ಯರ್ಥವಾಯಿತು ನನ್ನ ಸಾಮಥ್ರ್ಯವೆಲ್ಲ ಶೂನ್ಯವಾಗಿ ಹೋಯಿತು ನನ್ನ ಶಕ್ತಿಯೆಲ್ಲ ನನಗೆ ದೊರಕುವುದು ನ್ಯಾಯ ಸರ್ವೇಶ್ವರನ ಕೈಯಲ್ಲೇ, ನನಗೆ ಬರುವುದು ಬಹುಮಾನ ಆ ದೇವರಿಂದಲೇ. ಯಕೋಬ್ಯರನ್ನು ತನ್ನ ಬಳಿಗೆ ಕರೆತರಲು ಇಸ್ರಯೇಲರನ್ನು ತನ್ನೊಂದಿಗೆ ಸೇರಿಸಿಕೊಳ್ಳಲು ತನ್ನ ದಾಸನನ್ನಾಗಿ ನನ್ನ ರೂಪಿಸಿದನು, ತಾಯ ಗರ್ಭದಲ್ಲಿದ್ದಾಗಲೇ ಮಾಡಿದನಿದನು. ಸನ್ಮಾನ್ಯನು ನಾನು ಸರ್ವೇಶ್ವರನ ದೃಷ್ಟಿಯಲಿ ನನ್ನ ಶಕ್ತಿಸಾಮಥ್ರ್ಯ ಇರುವುದು ಆ ದೇವರಲಿ. ಮತ್ತೆ ಆತ ಇಂತೆಂದನು ನನಗೆ: “ಮಹತ್ಕಾರ್ಯವೇನೂ ಅಲ್ಲ ನನ್ನ ದಾಸನಾದ ನಿನಗೆ ಕುಲಗಳನು ಉದ್ಧರಿಸುವ ಮಾತ್ರಕೆ ಇಸ್ರಯೇಲರಲಿ ರಕ್ಷಿತರಾದವರನ್ನು ಮರಳಿ ಬರಮಾಡುವ ಮಾತ್ರಕೆ. ನೇಮಿಸಿರುವೆನು ನಿನ್ನನ್ನು ಜ್ಯೋತಿಯನ್ನಾಗಿ ಸರ್ವಜನಾಂಗಗಳಿಗೆ ನನ್ನ ರಕ್ಷಣೆ ವ್ಯಾಪಿಸಿರುವಂತೆ ಮಾಡಲು ಜಗದ ಕಟ್ಟಕಡೆಯವರೆಗೆ.”

ಕೀರ್ತನೆ: 71:1-2, 3-4, 5-6, 15, 17

ಶ್ಲೋಕ: ವರ್ಣಿಸುವೆನು ದಿನವೆಲ್ಲ ನಿನ್ನ ನ್ಯಾಯನೀತಿಯನು

ಆಶ್ರಯಕೋರಿ ಹೇ ಪ್ರಭು ನಾ ಬಂದಿರುವೆ |
ಆಶಾ ಭಂಗವಾಗದಿರಲೆಂದು ನಾ ಬೇಡುವೆ ||

ಸತ್ಯ ಸ್ವರೂಪನೆ, ನನ್ನ ಬಿಡಿಸಿ ರಕ್ಷಿಸಲಯ್ಯಾ |
ನನಗೆ ಕಿವಿಗೊಟ್ಟು ನನ್ನನುದ್ಧರಿಸಯ್ಯ ||
ನೀನಾಗಿರು ನನಗಾಶ್ರಯದುರ್ಗ, ಕೋಟೆಕೊತ್ತಲು |
ನೀನೇ ನನ್ನ ದುರ್ಗ ,ಕೋಟೆ ನನ್ನನು ರಕ್ಷಿಸಲು ||

ದುರುಳರ ಕೈಯಿಂದೆನ್ನನು ದೇವಾ, ಬಿಡಿಸಯ್ಯ |
ಕ್ರೂರ ಕೇಡಿಗರ ವಶದಿಂದೆನ್ನನು ತಪ್ಪಿಸಯ್ಯ ||
ಸ್ವಾಮಿ ದೇವಾ, ನೀನೇ ನನ್ನ ಭರವಸೆ |
ಬಾಲ್ಯದಿಂದಲೂ ನೀನೇ ನನ್ನ ನಂಬಿಕೆ ||

ವರ್ಣಿಸುವೆನು ದಿನವೆಲ್ಲ ನಿನ್ನ ನ್ಯಾಯ ನೀತಿಯನು |
ವಿತರಿಸಲು ಅಸದಳವಾದ ನಿನ್ನಗಣಿತ ರಕ್ಷಣೆಯನು ||
ದೇವಾ ಬಾಲ್ಯಾರಭ್ಯ ನನಗೆ ಬೋಧಿಸಿರುವೆಯಲ್ಲವೆ ?  |

ನಿನ್ನ ಅದ್ಭುತ ಕಾರ್ಯಗಳನೆಂದಿಗು ನಾ ಘೋಷಿಸುತ್ತಿರುವೆ ||

ಶುಭಸಂದೇಶ: ಯೊವಾನ್ನ 13:21-33, 36-38


ಯೇಸುಸ್ವಾಮಿ ಮನಸ್ಸಿನಲ್ಲಿ ಬಹಳವಾಗಿ ನೊಂದುಕೊಂಡರು. ಅವರು, “ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ನಿಮ್ಮಲ್ಲೊಬ್ಬನು ದ್ರೋಹ ಬಗೆದು ನನ್ನನ್ನು ಹಿಡಿದೊಪ್ಪಿಸುವನು,” ಎಂದು ಸ್ಪಷ್ಟವಾಗಿ ಹೇಳಿದರು. ಯೇಸು ಯಾರನ್ನು ಕುರಿತು ಹಾಗೆಂದರೆಂದು ತಿಳಿಯದೆ ಶಿಷ್ಯರು ಒಬ್ಬರನ್ನೊಬ್ಬರು ಸಂಶಯದಿಂದ ನೋಡುವವರಾದರು. ಯೇಸುವಿನ ಪಕ್ಕದಲ್ಲೇ ಒರಗಿ ಕುಳಿತಿದ್ದ ಅವರ ಆಪ್ತ ಶಿಷ್ಯನಿಗೆ, ಸಿಮೋನ ಪೇತ್ರನು, “ಯಾರನ್ನು ಕುರಿತು ಹಾಗೆ ಹೇಳುತ್ತಿದ್ದಾರೆಂದು ಕೇಳು,” ಎಂದು ಸನ್ನೆ ಮಾಡಿದನು. ಅಗ ಆ ಶಿಷ್ಯನು, ಯೇಸುವಿನ ಮಗ್ಗುಲಿಗೆ ಸರಿದು, “ಅಂತವನು ಯಾರು ಪ್ರಭೂ?” ಎಂದು ಕೇಳಿದನು. ಯೇಸು, “ನಾನು ರೊಟ್ಟಿಯ ತುಂಡನ್ನು ಬಟ್ಟಲಿನಲ್ಲಿ ಅದ್ದಿ ಅದನ್ನು ಯಾರಿಗೆ ಕೊಡುತ್ತೇನೋ ಅವನೇ,” ಎಂದು ಹೇಳಿ ರೊಟ್ಟಿಯ ತುಂಡನ್ನು ಅದ್ದಿ ಸಿಮೋನನ ಮಗ ಇಸ್ಕರಿಯೋತಿನ ಯೂದನಿಗೆ ಕೊಟ್ಟರು. ಯೂದನು ಅದನ್ನು ತೆಗೆದುಕೊಂಡದ್ದೇ ತಡ, ಸೈತಾನನು ಅವನನ್ನು ಹೊಕ್ಕನು. ಆಗ ಯೇಸು, “ನೀನು ಮಾಡಬೇಕೆಂದಿರುವುದನ್ನು ಬೇಗನೆ ಮಾಡಿಮುಗಿಸು,” ಎಂದರು. ಊಟಕ್ಕೆ ಕುಳಿತಿದ್ದ ಶಿಷ್ಯರಿಗೆ, ಯೇಸು ಹಾಗೇಕೆ ಹೇಳಿದರೆಂದು ಅರ್ಥವಾಗಲಿಲ್ಲ. ಯೂದನ ವಶದಲ್ಲಿ ಹಣದ ಚೀಲವಿದ್ದುದರಿಂದ, ‘ಹಬ್ಬಕ್ಕೆ ನಮಗೆ ಬೇಕಾದುದನ್ನು ಕೊಂಡು ಬಾ,” ಎಂದೋ, ‘ಬಡವರಿಗೆ ಏನಾದರೂ ಕೊಡು’ ಎಂದೋ, ಯೇಸು ಹೇಳಿರಬೇಕೆಂದು ಕೆಲವು ಶಿಷ್ಯರು ಭಾವಿಸಿದರು. ಆ ರೊಟ್ಟಿಯ ತುಂಡನ್ನು ತೆಗೆದುಕೊಂಡಕೂಡಲೇ ಯೂದನು ಎದ್ದು ಹೊರಟುಹೋದನು; ಆಗ ರಾತ್ರಿಯಾಗಿತ್ತು. ಹೊಸ ಕಟ್ಟಳೆ ಯೂದನು ಹೊರಟುಹೋದಮೇಲೆ ಯೇಸುಸ್ವಾಮಿ ಹೀಗೆಂದರು: “ಈಗ ನರಪುತ್ರನ ಮಹಿಮೆ ಪ್ರಕಟವಾಗುವುದು. ಆತನಲ್ಲಿ ದೇವರ ಮಹಿಮೆಯೂ ಪ್ರಕಟವಾಗುವುದು. ದೇವರ ಮಹಿಮೆ ಆತನಲ್ಲಿ ಪ್ರಕಟವಾದರೆ, ದೇವರೇ ನರಪುತ್ರನ ಮಹಿಮೆಯನ್ನು ತಮ್ಮಲ್ಲಿ ಪ್ರಕಟಪಡಿಸುವರು, ತಕ್ಷಣವೇ ಪ್ರಕಟಪಡಿಸುವರು. ಪ್ರಿಯ ಮಕ್ಕಳೇ, ಇನ್ನು ತುಸುಕಾಲ ಮಾತ್ರ ನಾನು ನಿಮ್ಮೊಡನೆ ಇರುತ್ತೇನೆ, ಆಮೇಲೆ ನೀವು ನನ್ನನ್ನು ಹುಡುಕುವಿರಿ, ‘ಆದರೆ ನಾನು ಹೋಗುವಲ್ಲಿಗೆ ನೀವು ಬರಲಾರಿರಿ’ ಎಂದು ನಾನು ಯೆಹೂದ್ಯರಿಗೆ ಹೇಳಿದಂತೆಯೇ ನಿಮಗೂ ಹೇಳುತ್ತೇನೆ. ಆಗ ಸಿಮೋನ ಪೇತ್ರನು, “ಪ್ರಭುವೇ, ನೀವು ಹೋಗುವುದಾದರೂ ಎಲ್ಲಿಗೆ?” ಎಂದು ಕೇಳಿದನು. “ನಾನು ಹೋಗುವಲ್ಲಿಗೆ ನೀನು ಈಗ ಬರಲಾರೆ. ಅನಂತರ ಬರುವೆ,” ಎಂದು ಯೇಸು ಉತ್ತರಕೊಡಲು ಪೇತ್ರನು, “ಈಗಲೇ ನಿಮ್ಮ ಹಿಂದೆ ಬರಲು ಏಕಾಗದು? ಪ್ರಭೂ, ನಿಮಗಾಗಿ ಪ್ರಾಣವನ್ನು ಕೊಡಲೂ ಸಿದ್ಧನಿದ್ದೇನೆ,” ಎಂದನು. ಆಗ ಯೇಸು, “ನನಗಾಗಿ ಪ್ರಾಣವನ್ನು ಕೊಡಲೂ ಸಿದ್ಧನಿರುವೆಯಾ? ನಾನು ನಿನಗೆ ನಿಜವಾಗಿ ಹೇಳುತ್ತೇನೆ ಕೇಳು: ನೀನು ನನ್ನನ್ನು ಅರಿಯೆನೆಂದು ಮೂರುಬಾರಿ ತಿರಸ್ಕರಿಸುವ ತನಕ ನಾಳೆ ಮುಂಜಾನೆ ಕೋಳಿ ಕೂಗುವುದಿಲ್ಲ,” ಎಂದು ನುಡಿದರು.

ಮನಸ್ಸಿಗೊಂದಿಷ್ಟು : ತಿಳಿದೂ ತಿಳಿದೂ ಸೈತಾನನ ಆಣತಿಗೆ ಓಗೊಟ್ಟ ಜೂದಾಸ, ಮಾನವ ಸಹಜ ಭಯಕ್ಕೆ ತನ್ನ ಪ್ರೀತಿ ಪಾತ್ರರನ್ನು ಅಲ್ಲಗೆಳೆದ ಪೇತ್ರ. ಎಲ್ಲವೂ ತಿಳಿದಿದ್ದರೂ ಪ್ರೀತಿಯಲ್ಲಿ ವ್ಯತ್ಯಾಸ ಮಾಡದ ಯೇಸು, ಎಲ್ಲರೂ ಇಂದಿನ ಶುಭಸಂದೇಶದಲ್ಲಿದ್ದಾರೆ. ಮಾನವ ಸಹಜ ಭಯ, ಆಸೆ, ದುರಾಸೆಗಳಿಗೆ ನಾವು ಶರಣಾಗುತ್ತೇವೆ, ಸೈತಾನನನ್ನು ನಾವೇ ಆಹ್ವಾನಿಸುತ್ತೇವೆ. ಕೊನೆಗೆ ಯೇಸುವಿನ ಆ ಪ್ರೀತಿಯೇ ನಮ್ಮನು ಪೊರಯಬೇಕು, ಅದನ್ನೇ ನಾವು ನೆಚ್ಚಿಕೊಳ್ಳಬೇಕು.

ಪ್ರಶ್ನೆ : ಯೇಸುವನ್ನು ದಿನಕೆಷ್ಟು ಬಾರಿ ಅಲ್ಲಗಳೆಯುತ್ತೇವೆ.

ಪ್ರಭುವೇ,
ಅರಿಯನೆಂದು 
ಅಲ್ಲಗಳೆದಿರುವೆ 
ನಿನ್ನ ಅನುದಿನ
ಬಗೆದಿರುವೆ ದ್ರೋಹ 
ಹೃದಯದಲ್ಲಿ ನಾ
ಪಶ್ಚಾತ್ತಾಪದಲ್ಲಿ
ಯೂದನಂತಾಗದೆ
ಪೇತ್ರನಂತಾಗಲು
ಆತ್ಮರ ವರವಿರಿಸಿ
ಬಂಡೆಯಲ್ಲದಿದ್ದರೂ
ನಿಮ್ಮ ರಾಜ್ಯದ ಕೋಟೆಯ
ಒಂದು ಸಣ್ಣ ಕಲ್ಲಾಗಿಸಿ



11.04.22 - “ಆಕೆಯ ಗೊಡವೆ ನಿನಗೆ ಬೇಡ. ನನ್ನ ಶವಸಂಸ್ಕಾರದ ದಿನಕ್ಕಾಗಿ ಆಕೆ ಅದನ್ನು ಇಟ್ಟುಕೊಳ್ಳಲಿ"

ಮೊದಲನೇ ವಾಚನ: ಯೆಶಾಯ 42:1-7

ಇಗೋ, ನನ್ನ ದಾಸನು ! ನನ್ನ ಆಧಾರ ಪಡೆದವನು ನನ್ನಿಂದ ಆಯ್ಕೆಯಾದವನು ನನಗೆ ಪರಮ ಪ್ರಿಯನು. ನೆಲೆಗೊಳಿಸಿರುವೆ ಇವನಲ್ಲಿ ನನ್ನ ಆತ್ಮವನು ಅನ್ಯರಾಷ್ಟ್ರಗಳಿಗೆ ಸಾರುವನಿವನು ಸದ್ಧರ್ಮವನು. ಆತ ಕೂಗಾಡುವಂಥವನಲ್ಲ, ಕಿರಿಚಾಡುವಂಥವನಲ್ಲ, ಹಾದಿಬೀದಿಗಳಲ್ಲಿ ಅವನ ಧ್ವನಿ ಕೇಳಿಸುವುದೇ ಇಲ್ಲ. ಮುರಿಯುವುದಿಲ್ಲ ಆತ, ಜಜ್ಜಿದ ದಂಟನು ನಂದಿಸುವುದಿಲ್ಲ ಆತ, ಕಳೆಗುಂದಿದ ದೀಪವನು ತಪ್ಪದೆ ಸಿದ್ಧಿಗೆ ತರುವನಾತ ಸದ್ಧರ್ಮವನು. ಎಡವಿ ಬೀಳನವನು, ಎದೆಗುಂದನವನು ಜಗದೊಳು ಸ್ಥಾಪಿಸುವ ತನಕ ಸದ್ಧರ್ಮವನು, ಎದುರುನೋಡುವುವು ದ್ವೀಪ- ದ್ವೀಪಾಂತರಗಳು ಆತನ ಧರ್ಮಶಾಸ್ತ್ರವನು. ಆಕಾಶಮಂಡಲವನ್ನುಂಟುಮಾಡಿ ಹರಡಿದ ದೇವರು, ಭೂಮಂಡಲವನ್ನೂ ಅದರಲ್ಲಿ ಬೆಳೆದು ದೆಲ್ಲವನ್ನೂ ವೃದ್ಧಿಗೊಳಿಸುವವನು, ಭೂನಿವಾಸಿಗಳಿಗೆ ಜೀವವನ್ನೂ ಭೂಚರರಿಗೆ ಜೀವಾತ್ಮವನ್ನೂ ಅನುಗ್ರಹಿಸುವಾ ಸರ್ವೇಶ್ವರ ಇಂತೆನ್ನುತಿಹನು: ಸರ್ವೇಶ್ವರಸ್ವಾಮಿಯಾದ ನಾನು ಕೈ ಹಿಡಿದು ಕಾದಿರಿಸುವೆನು ನಿನ್ನನು, ಕರೆದಿಹೆನು ನಿನ್ನನ್ನು ಸದ್ಧರ್ಮ ಸಾಧನೆಗಾಗಿ ಇತ್ತಿರುವೆನು ನಿನ್ನನು ಜನರಿಗೆ ಒಡಂಬಡಿಕೆಯಾಗಿ ನೇಮಿಸಿರುವೆನು ನಿನ್ನನು ರಾಷ್ಟ್ರಗಳಿಗೆ ಬೆಳಕಾಗಿ. ಕೊಡುವೆ ನೀನು ಕಣ್ಣನ್ನು ಕುರುಡರಿಗೆ ತರುವೆ ಬಂಧಿಗಳನ್ನು ಸೆರೆಯಿಂದ ಹೊರಗೆ ಕತ್ತಲೆಯ ಕಾರಾಗೃಹದಿಂದ ಅವರನ್ನು ಬೆಳಕಿಗೆ.

ಕೀರ್ತನೆ: 27:1, 2, 3, 13-14

ಶ್ಲೋಕ: ನನಗೆ ಬೆಳಕು, ನನಗೆ ರಕ್ಷೆ ಪ್ರಭುವೆ

ನನಗೆ ಬೆಳಕು‌ ನನಗೆ ರಕ್ಷೆ ಪ್ರಭುವೆ |
ನಾನಾರಿಗೂ ಅಳುಕೆನು ||

ನನ್ನ ಬಾಳಿಗಾಧಾರ ಪ್ರಭುವೆ |
ನಾನಾರಿಗೂ ಅಂಜೆನು ||
ಕೇಡು ಮಾಡಬಂದರೆನಗೆ ಕೊಲೆಕಡುಕರು |
ಎಡವಿಬಿದ್ದರು, ತಾವೇ ಅಳಿದುಹೋದರು ||

ಸೇನೆ ಸಮೇತ ಶತ್ರು ಬಂದರೂ ಎದೆಗುಂದೆನು |
ಸಮರಕ್ಕೆರಗಿದರೂ ನಾ ಭರವಸೆಯಿಂದಿರುವೆನು‌ ||

ಪ್ರಭುವಿನೊಳಿತನು ನಾ ಕಾಣುವೆ ಜೀವಲೋಕದೊಳು |
ನಾನಿಟ್ಟಿರುವೆ ನಂಬಿಕೆ ನಿರೀಕ್ಷೆ ಅದರೊಳು ||
ಪ್ರಭುವನು ಎದುರುನೋಡುತ್ತಿರು ಮನವೇ

ಧೈರ್ಯದಿಂದ ನಿರೀಕ್ಷಿಸುತ್ತಿರು ಎದೆಗುಂದದೆ ||

ಶುಭಸಂದೇಶ: ಯೊವಾನ್ನ 12:1-11


ಪಾಸ್ಕಹಬ್ಬಕ್ಕೆ ಇನ್ನೂ ಆರು ದಿನಗಳಿರುವಾಗ ಯೇಸುಸ್ವಾಮಿ ಬೆಥಾನಿಯಕ್ಕೆ ಬಂದರು. ಅವರು ಲಾಸರನನ್ನು ಸಾವಿನಿಂದ ಜೀವಕ್ಕೆ ಎಬ್ಬಿಸಿದ ಊರದು. ಯೇಸುವಿಗೆ ಅಲ್ಲಿ ಒಂದು ಔತಣವನ್ನು ಏರ್ಪಡಿಸಲಾಗಿತ್ತು. ಮಾರ್ತಳು ಬಡಿಸುತ್ತಿದ್ದಳು. ಯೇಸುವಿನೊಡನೆ ಪಂಕ್ತಿಯಲ್ಲಿ ಊಟಕ್ಕೆ ಕುಳಿತಿದ್ದವರಲ್ಲಿ ಲಾಸರನೂ ಒಬ್ಬ. ಆಗ ಮರಿಯಳು ಸುಮಾರು ಅರ್ಧ ಲೀಟರಿನಷ್ಟು, ಅತ್ಯಂತ ಬೆಲೆಬಾಳುವ ಅಚ್ಚ ಜಟಾಮಾಂಸಿ ಸುಗಂಧ ತೈಲವನ್ನು ತಂದು ಯೇಸುವಿನ ಪಾದಗಳಿಗೆ ಹಚ್ಚಿ, ತನ್ನ ತಲೆಗೂದಲಿನಿಂದ ಆ ಪಾದಗಳನ್ನು ಒರಸಿದಳು. ತೈಲದ ಸುವಾಸನೆ ಮನೆಯಲ್ಲೆಲ್ಲಾ ಹರಡಿತು. ಯೇಸುವನ್ನು ಹಿಡಿದುಕೊಡಲಿದ್ದ ಹಾಗೂ ಶಿಷ್ಯರಲ್ಲಿ ಒಬ್ಬನಾಗಿದ್ದ ಇಸ್ಕರಿಯೋತಿನ ಯೂದನು, “ಈ ಸುಗಂಧ ತೈಲವನ್ನು ಮುನ್ನೂರು ದೆನಾರಿ ನಾಣ್ಯಗಳಿಗೆ ಮಾರಿ, ಬಂದ ಹಣವನ್ನು ಬಡಬಗ್ಗರಿಗೆ ಕೊಡಬಹುದಿತ್ತಲ್ಲಾ?” ಎಂದನು. ಬಡವರ ಹಿತಚಿಂತನೆಯಿಂದೇನೂ ಅವನು ಹೀಗೆ ಹೇಳಲಿಲ್ಲ. ತನ್ನ ವಶದಲ್ಲಿ ಇಡಲಾಗಿದ್ದ ಹಣದ ಚೀಲದಿಂದ ಸ್ವಂತ ಉಪಯೋಗಕ್ಕಾಗಿ ಬಳಸುತ್ತಿದ್ದ ಕಳ್ಳ ಅವನು. ಆಗ ಯೇಸು, “ಆಕೆಯ ಗೊಡವೆ ನಿನಗೆ ಬೇಡ. ನನ್ನ ಶವಸಂಸ್ಕಾರದ ದಿನಕ್ಕಾಗಿ ಆಕೆ ಅದನ್ನು ಇಟ್ಟುಕೊಳ್ಳಲಿ. ಬಡಬಗ್ಗರು ನಿಮ್ಮ ಬಳಿಯಲ್ಲಿ ಯಾವಾಗಲೂ ಇರುತ್ತಾರೆ. ಆದರೆ ನಾನು ಯಾವಾಗಲೂ ನಿಮ್ಮ ಬಳಿ ಇರುವುದಿಲ್ಲ,” ಎಂದರು. ಲಾಸರನ ಕೊಲೆಗೆ ಹಂಚಿಕೆ ಯೇಸುಸ್ವಾಮಿ ಅಲ್ಲಿರುವುದನ್ನು ಕೇಳಿ ಯೆಹೂದ್ಯರ ಒಂದು ದೊಡ್ಡಗುಂಪು ಬಂದಿತು. ಯೇಸುವನ್ನು ಮಾತ್ರವಲ್ಲ, ಅವರು ಸಾವಿನಿಂದ ಜೀವಕ್ಕೆ ಎಬ್ಬಿಸಿದ ಲಾಸರನನ್ನೂ ಕಾಣಲು ಆ ಜನರು ಅಲ್ಲಿಗೆ ಬಂದಿದ್ದರು. ಲಾಸರನ ನಿಮಿತ್ತವಾಗಿ ಅನೇಕ ಯೆಹೂದ್ಯರು ತಮ್ಮನ್ನು ಬಿಟ್ಟು ಯೇಸುವಿನಲ್ಲಿ ನಂಬಿಕೆಯಿಟ್ಟ ಕಾರಣ ಲಾಸರನನ್ನು ಕೂಡ ಕೊಲ್ಲಬೇಕೆಂದು ಮುಖ್ಯಯಾಜಕರು ಆಲೋಚಿಸಿದರು. ಜೆರುಸಲೇಮಿಗೆ ರಾಜಪ್ರವೇಶ ಲಾಸರನ ನಿಮಿತ್ತವಾಗಿ ಅನೇಕ ಯೆಹೂದ್ಯರು ತಮ್ಮನ್ನು ಬಿಟ್ಟು ಯೇಸುವಿನಲ್ಲಿ ನಂಬಿಕೆಯಿಟ್ಟ ಕಾರಣ ಲಾಸರನನ್ನು ಕೂಡ ಕೊಲ್ಲಬೇಕೆಂದು ಮುಖ್ಯಯಾಜಕರು ಆಲೋಚಿಸಿದರು.

ಮನಸ್ಸಿಗೊಂದಿಷ್ಟು :  ಸುಮಾರು 300 ದಿನಗಳ ಅಥವಾ ೯ ತಿಂಗಳ ದಿನಗೂಲಿಯಷ್ಟು ಭಾರಿ ಬೆಲೆಯ ಸುಗಂಧ ದ್ರವ್ಯವನ್ನು ಮರಿಯಳು  ಯೇಸುವಿಗಾಗಿ ವ್ಯಯಿಸುತ್ತಾಳೆ. ಯಹೂದ್ಯ ಸಂಪ್ರದಾಯದಲ್ಲಿ ಒಬ್ಬ ಮಹಿಳೆ ಕೂದಲನ್ನು ಕಟ್ಟದೆ ಬಿಡಬಾರದು ಎಂಬುದನ್ನೂ ಲೆಕ್ಕಿಸದೆ ತನ್ನ ಕೂದಲಿನಿಂದ ಯೇಸುವಿನ ಪಾದವನ್ನು ಒರೆಸಿ ಯೇಸುವಿಗಿಂತ ಶ್ರೇಷ್ಠವಾದುದು ಮತ್ತೇನಿಲ್ಲ ಎಂಬ ಸಂದೇಶವನ್ನು ಲೋಕಕ್ಕೆ ನೀಡುತ್ತಾಳೆ. ಈ ಲೋಕದ ಸರ್ವವೂ ಅದೆಷ್ಟೇ ಮೌಲ್ಯದ್ದಾಗಿದ್ದರೂ, ಸಂಪ್ರದಾಯದ ಹಿನ್ನಲೆಯದ್ದಾಗಿದ್ದರೂ  ಯೇಸುವಿನ ಮುಂದೆ ಗೌಣ್ಯವಾಗಬೇಕು ಎಂಬ ಸಂದೇಶ ನಮ್ಮ ಹೃದಯದಲ್ಲಿ ಆ ಸುಗಂಧ ದ್ರವ್ಯದ ಪರಿಮಳದಂತೆ  ಹರಡಿ, ವ್ಯಾಪಿಸಿ ಉಳಿದುಕೊಳ್ಳಲಿ.

ಪ್ರಶ್ನೆ : ಯೇಸುವಿಗೆ ನಮ್ಮ ಜೀವನದಲ್ಲಿ ನಾವು ಕೊಟ್ಟಿರುವ ಮೌಲ್ಯವೆಷ್ಟು?

10.04.22 - ‘ನನ್ನ ಕಾಲ ಸವಿೂಪಿಸಿತು, ಪಾಸ್ಕವನ್ನು ನನ್ನ ಶಿಷ್ಯರ ಸಮೇತ ನಿನ್ನ ಮನೆಯಲ್ಲಿಯೇ ಆಚರಿಸಬೇಕೆಂದಿದ್ದೇನೆ’


ಗರಿಗಳ ಭಾನುವಾರ   
 ಮೊದಲನೇ ವಾಚನ: ಯೆಶಾಯ: 50:4-7

ದಣಿದವರನ್ನು ಹಿತನುಡಿಗಳಿಂದ ತಣಿಸುವಂತೆ ಅನುಗ್ರಹಿಸುತ್ತಾನೆನಗೆ ಸ್ವಾಮಿ ಸರ್ವೇಶ್ವರ ಶಿಕ್ಷಿತರ ನಾಲಗೆಯನು; ಶಿಷ್ಯನೋಪಾದಿ ನಾನು ಆತನನ್ನು ಆಲಿಸುವಂತೆ ಬೆಳಬೆಳಗೂ ನನ್ನನೆಚ್ಚರಿಸಿ ಚೇತನಗೊಳಿಸುತ್ತಾನೆ ನನ್ನ ಕಿವಿಯನು. ತೆರೆದಿಹನು ಸ್ವಾಮಿ ಸರ್ವೇಶ್ವರ ನನ್ನ ಕಿವಿಯನು ಎಂದೇ ವಿಮುಖನಾಗಲಿಲ್ಲ ನಾನು, ಪ್ರತಿಭಟಿಸಲಿಲ್ಲ ಆತನನು. ಬೆನ್ನುಕೊಟ್ಟೆನು ಹೊಡೆಯುವವರಿಗೆ ಗಡ್ಡ ಒಡ್ಡಿದೆನು ಅದನ್ನು ಕೀಳುವವರಿಗೆ ಮುಖ ಮರೆಮಾಡಲಿಲ್ಲ ಉಗುಳುಬುಗುಳಿಗೆ. ನೆರವಾಗಿಹನು ನನಗೆ ಸ್ವಾಮಿ ಸರ್ವೇಶ್ವರ ಎಂದೇ ತಲೆತಗ್ಗಿಸಲಿಲ್ಲ ನಾನು ನಾಚಿಕೆಯಿಂದ ಗಟ್ಟಿಮಾಡಿಕೊಂಡೆ ಮುಖವನು ಕಗ್ಗಲ್ಲಿನ ಹಾಗೆ ಆಶಾಭಂಗಪಡಲಾರೆನೆಂದು ಗೊತ್ತು ನನಗೆ.

ಕೀರ್ತನೆ: 22:8-9, 17-18, 19-20, 23-24

ಶ್ಲೋಕ: ದೇವಾ, ಓ ಎನ್ನ ದೇವಾ, ಏಕೆನ್ನ ಕೈ ಬಿಟ್ಟೆ?

ದೇವಾ ಓ ಎನ್ನ ದೇವಾ ಏಕೆನ್ನ ಕೈ ಬಿಟ್ಟೆ ? |
ಕಿವಿಗೊಡದೆ ಏಕೆ ದೂರವಾಗಿ ಬಿಟ್ಟೆ ? ||

ಇತ್ತನಿವನು ಭರವಸೆ , ಪ್ರಭುವೆ ತನ್ನುದ್ಧಾರಕ ನೆಂದು |
ಅತನಿಗಿವನು ಮೆಚ್ಚುಗೆಯಾದರೆ
ರಕ್ಷಿಸಲಿ ಇಂತೆಂದು ||

ಮಾತೆಯುದರದಿಂದ ಎನ್ನನು ಹೊರ ಬರಿಸಿದವನು ನೀನು |
ನಿಶ್ಚಿಂತೆಯಾ ಕೂಸನು ಆಕೆಯ ಮಡಿಲಿನಲಿ ಇರಿಸಿದವನು ನೀನು ||

ಎಣಿಸಬಹುದಿದೆ ನನ್ನೆಲುಬುಗಳನ್ನೆಲ್ಲವನು |
ಹಿಗ್ಗುತ್ತಹರು ದುರುಗುಟ್ಟಿ ನೋಡೆನ್ನನು ||
ನನ್ನ ಉಡುಗೆಗಳನ್ನು ಹಂಚಿಕೊಂಡರು |
ನನ್ನ ಅಂಗಿಗೋಸ್ಕರ ಚೀಟು ಹಾಕಿದರು ||

ನನ್ನಿಂದ ದೂರ ಸರಿಯಲು ಬೇಡ, ಪ್ರಭು |
ನೀನೆನ್ನ ಶಕ್ತಿ, ನೆರವಾಗಲು ತ್ವರೆ ಮಾಡು ||
ಕತ್ತಿಗೆ ತುತ್ತಾಗದಂತೆ ತಪ್ಪಿಸು |
ಕುಕ್ಕುರಗಳಿಂದ ಪ್ರಾಣವನುಳಿಸು ||

ಮಣಿಯಿರಿ, ಪ್ರಭುವಿನಲಿ ಭಯ ಭಕುತಿಯುಳ್ಳವರೆ  |
ಭಜಿಸಿರಿ ಇಸ್ರಯೇಲರೆ , ಯಾಕೋಬ ಕುಲಜರೇ ||

ತೃಣೀಕರಿಸನು, ತಿರಸ್ಕರಿಸನು ದಲಿತನನು |
ವಿಮುಖನಾಗನು, ಪ್ರಾರ್ಥನೆಗೆ ಕಿವಿಗೊಡುವನು ||


ಎರಡನೇ ವಾಚನ: ಪಿಲಿಪ್ಪಿಯರಿಗೆ: 2:6-11

ದೇವಸ್ವರೂಪಿ ತಾನಾಗಿದ್ದರೂ ನಿರುತ ದೇವರಿಗೆ ಸಮನಾದ ಆ ಸಿರಿ ಪದವಿಯನಾತ ಹಿಡಿದಿಟ್ಟುಕೊಳ್ಳಲಿಲ್ಲ ಬಿಡಲೊಲ್ಲೆನೆನುತ. ತನ್ನನೇ ಬರಿದು ಮಾಡಿಕೊಂಡು ದಾಸನ ರೂಪವನು ಧರಿಸಿಕೊಂಡು ಮನುಜನಾಕಾರದಲಿ ಕಾಣಿಸಿಕೊಂಡು ನರಮಾನವರಿಗೆ ಸರಿಸಮನಾದ. ತನ್ನನೇ ಆತ ತಗ್ಗಿಸಿಕೊಂಡು ವಿಧೇಯನಾಗಿ ನಡೆದುಕೊಂಡು ಮರಣಪರಿಯಂತ, ಹೌದೌದು, ಶಿಲುಬೆಯ ಮರಣಪರಿಯಂತ ವಿಧೇಯನಾದ. ಎಂತಲೇ ಪರಮೋನ್ನತ ಸ್ಥಾನಕ್ಕೇರಿಸಿದನಾತನನು ಇತ್ತನು ಹೆಸರುಗಳೊಳುತ್ತಮ ಹೆಸರನು ದೇವಪರಮನು. ಯೇಸುವಿನ ಹೆಸರಿಗೆಂದೇ ಮೊಣಕಾಲೂರಿ ಮಣಿವರು ಸ್ವರ್ಗವಾಸಿಗಳು, ಭೂನಿವಾಸಿಗಳು, ಪಾತಾಳ ಜೀವರಾಶಿಗಳು. ‘ಕ್ರಿಸ್ತ ಯೇಸುವೇ ಪ್ರಭು’ ಎಂದೆಲ್ಲರಿಗೆ ಅರಿಕೆ ಮಾಡುವರು ಪಿತದೇವನ ಮಹಿಮೆಯನು ಈ ಪರಿ ಹೊಗಳಿ ಸಾರುವರವರು.

ಶುಭಸಂದೇಶ: ಮತ್ತಾಯ 26:14-27;66


ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾದ ಇಸ್ಕರಿಯೋತಿನ ಯೂದ ಎಂಬಾತ ಮುಖ್ಯ ಯಾಜಕರ ಬಳಿಗೆ ಹೋದನು. “ನಿಮಗೆ ನಾನು ಯೇಸುವನ್ನು ಹಿಡಿದುಕೊಟ್ಟರೆ ನನಗೇನು ಕೊಡುವಿರಿ?” ಎಂದು ಅವರನ್ನು ವಿಚಾರಿಸಿದನು. ಅವರೋ, ಅವನಿಗೆ ಮೂವತ್ತು ಬೆಳ್ಳಿ ನಾಣ್ಯಗಳನ್ನು ನಿಗದಿಮಾಡಿ ಕೊಟ್ಟರು. ಆ ಗಳಿಗೆಯಿಂದ ಯೇಸುವನ್ನು ಹಿಡಿದೊಪ್ಪಿಸಲು ಅವನು ಸಂದರ್ಭ ಕಾಯುತ್ತಾ ಇದ್ದನು. ಅಂದು ಹುಳಿರಹಿತ ರೊಟ್ಟಿಯ ಹಬ್ಬದ ಮೊದಲನೆಯ ದಿನ. ಶಿಷ್ಯರು ಯೇಸುಸ್ವಾಮಿಯ ಬಳಿಗೆ ಬಂದು, “ತಮಗೆ ಪಾಸ್ಕ ಭೋಜನವನ್ನು ನಾವು ಎಲ್ಲಿ ಸಿದ್ಧಪಡಿಸಬೇಕೆನ್ನುತ್ತೀರಿ?” ಎಂದು ಕೇಳಿದರು. ಅದಕ್ಕೆ ಅವರು, “ಪಟ್ಟಣದಲ್ಲಿ ನಾನು ಸೂಚಿಸುವಂಥವನ ಬಳಿಗೆ ಹೋಗಿರಿ, ‘ನನ್ನ ಕಾಲ ಸವಿೂಪಿಸಿತು, ಪಾಸ್ಕವನ್ನು ನನ್ನ ಶಿಷ್ಯರ ಸಮೇತ ನಿನ್ನ ಮನೆಯಲ್ಲಿಯೇ ಆಚರಿಸಬೇಕೆಂದಿದ್ದೇನೆ’; ಇದನ್ನು ನಮ್ಮ ಗುರುವೇ ಹೇಳಿಕಳುಹಿಸಿದ್ದಾರೆ ಎಂದು ಅವನಿಗೆ ತಿಳಿಸಿರಿ,” ಎಂದರು. ಯೇಸು ಸೂಚಿಸಿದಂತೆಯೇ ಶಿಷ್ಯರು ಹೋಗಿ ಪಾಸ್ಕ ಭೋಜನವನ್ನು ತಯಾರಿಸಿದರು. ಸಂಜೆಯಾಯಿತು. ಯೇಸುಸ್ವಾಮಿ ಹನ್ನೆರಡು ಮಂದಿ ಶಿಷ್ಯರ ಸಂಗಡ ಊಟಕ್ಕೆ ಕುಳಿತರು. ಅವರೆಲ್ಲರೂ ಊಟಮಾಡುತ್ತಿದ್ದಾಗ ಯೇಸು, “ನಿಮ್ಮಲ್ಲೇ ಒಬ್ಬನು ನನಗೆ ದ್ರೋಹ ಬಗೆಯುತ್ತಾನೆ, ಎಂದು ನಿಮಗೆ ಖಂಡಿತವಾಗಿ ಹೇಳುತ್ತೇನೆ,” ಎಂದರು. ಶಿಷ್ಯರು ಬಹಳ ಕಳವಳಗೊಂಡರು. ಒಬ್ಬರಾದ ಮೇಲೊಬ್ಬರು, “ಸ್ವಾವಿೂ, ನಾನೋ? ನಾನೋ?” ಎಂದು ಕೇಳತೊಡಗಿದರು. ಅದಕ್ಕೆ ಪ್ರತ್ಯುತ್ತರವಾಗಿ ಯೇಸು, “ಊಟದ ಬಟ್ಟಲಲ್ಲಿ ನನ್ನೊಡನೆ ಕೈ ಅದ್ದಿ ಉಣ್ಣುವವನೇ ನನಗೆ ದ್ರೋಹ ಬಗೆಯುತ್ತಾನೆ. ನರಪುತ್ರನೇನೋ ಪವಿತ್ರ ಗ್ರಂಥದಲ್ಲಿ ಬರೆದಿರುವ ಪ್ರಕಾರ ಹೊರಟುಹೋಗುತ್ತಾನೆ, ನಿಜ. ಆದರೆ ಅಯ್ಯೋ, ನರಪುತ್ರನಿಗೆ ದ್ರೋಹ ಬಗೆಯುವವನ ದುರ್ಗತಿಯನ್ನು ಏನೆಂದು ಹೇಳಲಿ! ಅವನು ಹುಟ್ಟದೇ ಇದ್ದಿದ್ದರೆ ಎಷ್ಟೋ ಚೆನ್ನಾಗಿತ್ತು!” ಎಂದರು. ಗುರುದ್ರೋಹಿಯಾದ ಯೂದನು ಆಗ, “ಗುರುವೇ, ಅವನು ನಾನಲ್ಲ ತಾನೇ?” ಎಂದನು. ಅದಕ್ಕೆ ಯೇಸು, “ಅದು ನಿನ್ನ ಬಾಯಿಂದಲೇ ಬಂದಿದೆ,” ಎಂದರು. ಅವರೆಲ್ಲರೂ ಊಟ ಮಾಡುತ್ತಿರುವಾಗ ಯೇಸುಸ್ವಾಮಿ ರೊಟ್ಟಿಯನ್ನು ತೆಗೆದುಕೊಂಡು ದೈವಸ್ತುತಿ ಮಾಡಿ, ಅದನ್ನು ಮುರಿದು, ಶಿಷ್ಯರಿಗೆ ಕೊಡುತ್ತಾ, “ಇದನ್ನು ತೆಗೆದುಕೊಂಡು ಭುಜಿಸಿರಿ, ಇದು ನನ್ನ ಶರೀರ,” ಎಂದರು. ಬಳಿಕ ಪಾನಪಾತ್ರೆಯನ್ನು ತೆಗೆದುಕೊಂಡು, ದೇವರಿಗೆ ಕೃತಜ್ಞತಾ ಸ್ತೋತ್ರವನ್ನು ಸಲ್ಲಿಸಿ, ಅದನ್ನು ಅವರಿಗೆ ಕೊಡುತ್ತಾ ಇಂತೆಂದರು: “ಇದರಲ್ಲಿ ಇರುವುದನ್ನು ಎಲ್ಲರೂ ಪಾನಮಾಡಿ; ಇದು ನನ್ನ ರಕ್ತ, ಸಮಸ್ತ ಜನರ ಪಾಪಕ್ಷಮೆಗಾಗಿ ಸುರಿಸಲಾಗುವ ಒಡಂಬಡಿಕೆಯ ರಕ್ತ. ನಾನು ನನ್ನ ಪಿತನ ಸಾಮ್ರಾಜ್ಯದಲ್ಲಿ ದ್ರಾಕ್ಷಾರಸ ನಿಮ್ಮ ಸಂಗಡ ಹೊಸದಾಗಿ ಕುಡಿಯುವ ದಿನದವರೆಗೂ ಅದನ್ನು ಇನ್ನು ಕುಡಿಯುವುದಿಲ್ಲ ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ,” ಎಂದರು. ಬಳಿಕ ಅವರೆಲ್ಲರು ಕೀರ್ತನೆ ಹಾಡಿ, ಓಲಿವ್ ಗುಡ್ಡಕ್ಕೆ ಹೊರಟರು. ಆಗ ಯೇಸು ತಮ್ಮ ಶಿಷ್ಯರಿಗೆ, “ ‘ ಕುರಿಗಾಹಿಯನ್ನು ಕೊಲ್ಲುವೆನು ಕುರಿಗಳು ಚದರುವುವು,’ ಎಂದು ಪವಿತ್ರ ಗ್ರಂಥದಲ್ಲೇ ಬರೆದಿದೆ. ಅದರಂತೆಯೇ ನೀವೆಲ್ಲರೂ ಇದೇ ರಾತ್ರಿ ನನ್ನಲ್ಲಿ ವಿಶ್ವಾಸ ಕಳೆದುಕೊಂಡು ಹಿಮ್ಮೆಟ್ಟುವಿರಿ. ನಾನಾದರೋ ಪುನರುತ್ಥಾನಹೊಂದಿ ನಿಮಗಿಂತ ಮುಂದಾಗಿ ಗಲಿಲೇಯಕ್ಕೆ ಹೋಗುವೆನು,” ಎಂದರು. ಇದನ್ನು ಕೇಳಿದ ಪೇತ್ರನು, “ಎಲ್ಲರು ತಮ್ಮಲ್ಲಿ ವಿಶ್ವಾಸ ಕಳೆದುಕೊಂಡು ಹಿಮ್ಮೆಟ್ಟಿದರೂ ನಾನು ಮಾತ್ರ ಎಂದಿಗೂ ಹಾಗೆ ಮಾಡುವುದಿಲ್ಲ” ಎಂದು ಸಾರಿ ಹೇಳಿದನು. ಅದಕ್ಕೆ ಯೇಸು, “ಇದೇ ರಾತ್ರಿ ಕೋಳಿ ಕೂಗುವ ಮೊದಲೇ ‘ಆತನನ್ನು ನಾನರಿಯೆ’ ಎಂದು ನೀನು ಮೂರು ಬಾರಿ ನನ್ನನ್ನು ನಿರಾಕರಿಸುವೆ; ಇದು ಖಂಡಿತ,” ಎಂದರು. ಆದರೆ ಪೇತ್ರನು, “ನಾನು ತಮ್ಮೊಡನೆ ಸಾಯಬೇಕಾಗಿ ಬಂದರೂ ಸರಿಯೆ, ತಮ್ಮನ್ನು ಮಾತ್ರ ನಿರಾಕರಿಸೆನು,” ಎಂದು ನುಡಿದನು. ಅದರಂತೆಯೇ ಉಳಿದ ಶಿಷ್ಯರೂ ದನಿಗೂಡಿಸಿದರು. ಅನಂತರ ಯೇಸುಸ್ವಾಮಿ ಅವರೊಡನೆ ಗೆತ್ಸೆಮನೆ ಎಂಬ ತೋಪಿಗೆ ಬಂದರು. ಅಲ್ಲಿ ಶಿಷ್ಯರಿಗೆ, “ನಾನು ಅತ್ತ ಹೋಗಿ ಪ್ರಾರ್ಥನೆ ಮಾಡಿ ಬರುವವರೆಗೂ ನೀವು ಇಲ್ಲೇ ಕುಳಿತಿರಿ,” ಎಂದರು. ಬಳಿಕ ಪೇತ್ರನನ್ನೂ ಜೆಬೆದಾಯನ ಇಬ್ಬರು ಕುಮಾರರನ್ನೂ ತಮ್ಮೊಂದಿಗೆ ಕರೆದುಕೊಂಡು ಮುಂದಕ್ಕೆ ಹೋದರು. ಅಲ್ಲಿ ಸ್ವಾಮಿ ಚಿಂತಾಕ್ರಾಂತರಾದರು, ದುಃಖಭರಿತರಾದರು. “ನನ್ನ ಮನೋವೇದನೆ ಪ್ರಾಣಹಿಂಡುವಷ್ಟು ತೀವ್ರವಾಗಿದೆ. ನೀವು ಇಲ್ಲೇ ಇದ್ದು ನನ್ನೊಡನೆ ಎಚ್ಚರವಾಗಿರಿ,” ಎಂದರು. ಅನಂತರ ಅವರು ಅಲ್ಲಿಂದ ಇನ್ನೂ ಸ್ವಲ್ಪ ಮುಂದಕ್ಕೆ ಹೋಗಿ, ನೆಲದ ಮೇಲೆ ಅಧೋಮುಖವಾಗಿ ಬಿದ್ದು ಪ್ರಾರ್ಥನೆ ಮಾಡಿದರು. “ನನ್ನ ಪಿತನೇ, ಸಾಧ್ಯವಾದರೆ ಈ ಕಷ್ಟದ ಕೊಡವು ನನ್ನಿಂದ ದೂರವಾಗಲಿ, ಆದರೂ ನನ್ನ ಚಿತ್ತದಂತೆ ಅಲ್ಲ, ನಿಮ್ಮ ಚಿತ್ತದಂತೆಯೇ ಆಗಲಿ,” ಎಂದರು. ಅನಂತರ ಆ ಮೂವರು ಶಿಷ್ಯರ ಬಳಿಗೆ ಬಂದು, ಅವರು ನಿದ್ರಿಸುತ್ತಿರುವುದನ್ನು ಕಂಡರು. ಪೇತ್ರನನ್ನು ಉದ್ದೇಶಿಸಿ, “ಏನಿದು, ಒಂದು ಗಂಟೆಯಾದರೂ ನನ್ನೊಡನೆ ಎಚ್ಚರವಾಗಿರಲು ನಿಮ್ಮಿಂದ ಆಗದೇ ಹೋಯಿತೇ? ಪ್ರಲೋಭನೆಗೆ ಒಳಗಾಗದಂತೆ ಎಚ್ಚರವಾಗಿದ್ದು ಪ್ರಾರ್ಥನೆ ಮಾಡಿರಿ. ಆತ್ಮಕ್ಕೇನೋ ಆಸಕ್ತಿ ಇದೆ, ಆದರೆ ದೇಹಕ್ಕೆ ಶಕ್ತಿಸಾಲದು,” ಎಂದರು. ಎರಡನೆಯ ಬಾರಿ ಹಿಂದಕ್ಕೆ ಹೋಗಿ ಇಂತೆಂದು ಪ್ರಾರ್ಥನೆಮಾಡಿದರು: “ನನ್ನ ಪಿತನೇ, ನಾನು ಸೇವಿಸದ ಹೊರತು ಈ ಕಷ್ಟದ ಕೊಡ ನನ್ನಿಂದ ತೊಲಗದಾದರೆ ಅದು ನಿಮ್ಮ ಚಿತ್ತದಂತೆಯೇ ಆಗಲಿ.” ಯೇಸು ಮರಳಿ ಆ ಶಿಷ್ಯರ ಬಳಿಗೆ ಬಂದಾಗ ಅವರು ಇನ್ನೂ ನಿದ್ರಾವಸ್ಥೆಯಲ್ಲಿದ್ದರು. ಅವರ ಕಣ್ಣುಗಳು ಭಾರವಾಗಿ ಇದ್ದವು. ಪುನಃ ಅವರನ್ನು ಬಿಟ್ಟು ಹಿಂದಿರುಗಿ ಮೂರನೆಯ ಬಾರಿ ಅದೇ ಮಾತುಗಳನ್ನು ಹೇಳಿ ಪ್ರಾರ್ಥಿಸಿದರು .

ಅದಾದ ಬಳಿಕ ಶಿಷ್ಯರನ್ನು ಸಮೀಪಿಸಿ, “ನೀವು ಇನ್ನೂ ನಿದ್ರಿಸಿ ವಿಶ್ರಮಿಸುತ್ತಾ ಇರುವಿರೋ? ಸಾಕು, ಸಮಯ ಸಮೀಪಿಸಿಬಿಟ್ಟಿತು. ನರಪುತ್ರನು ದುರ್ಜನರ ಕೈವಶವಾಗಲಿದ್ದಾನೆ. ಎದ್ದೇಳಿ, ಹೋಗೋಣ. ನನಗೆ ದ್ರೋಹ ಬಗೆಯುವವನು ಹತ್ತಿರವೇ ಇದ್ದಾನೆ, ನೋಡಿ,” ಎಂದರು. ಯೇಸುಸ್ವಾಮಿ ಇನ್ನೂ ಮಾತನಾಡುತ್ತಿದ್ದ ಹಾಗೆ, ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾದ ಯೂದನು ಅಲ್ಲಿಗೆ ಬಂದನು. ಖಡ್ಗಗಳನ್ನೂ ಲಾಠಿಗಳನ್ನೂ ಹಿಡಿದಿದ್ದ ಒಂದು ದೊಡ್ಡ ಗುಂಪು ಅವನೊಂದಿಗೆ ಇತ್ತು. ಮುಖ್ಯ ಯಾಜಕರೂ ಜನರ ಪ್ರಮುಖರೂ ಅವರನ್ನು ಕಳುಹಿಸಿದ್ದರು. ‘ನಾನು ಯಾರಿಗೆ ಮುದ್ದಿಡುತ್ತೇನೋ ಆತನೇ ಆ ವ್ಯಕ್ತಿ. ಆತನನ್ನು ಹಿಡಿದುಕೊಳ್ಳಿ,’ ಎಂದು ಆ ಗುರುದ್ರೋಹಿ ಅವರಿಗೆ ಮೊದಲೇ ಸೂಚನೆ ಕೊಟ್ಟಿದ್ದನು. ಅದರಂತೆಯೇ ಅವನು ಯೇಸುಸ್ವಾಮಿಯ ಸಮೀಪಕ್ಕೆ ನೇರವಾಗಿ ಬಂದು, “ಗುರುವೇ, ನಮಸ್ಕಾರ,” ಎಂದು ಹೇಳುತ್ತಾ ಅವರಿಗೆ ಮುದ್ದಿಟ್ಟನು. ಯೇಸು ಅವನಿಗೆ, “ಮಿತ್ರಾ, ನೀನು ಮಾಡಬಂದ ಕಾರ್ಯವನ್ನು ಮಾಡಿ ಮುಗಿಸು,” ಎಂದರು. ಆಗ ಆ ಜನರು ಹತ್ತಿರಕ್ಕೆ ಬಂದು, ಯೇಸುವನ್ನು ಹಿಡಿದು ಬಂಧಿಸಿದರು. ಕೂಡಲೆ ಯೇಸುವಿನ ಸಂಗಡ ಇದ್ದ ಒಬ್ಬನು ತನ್ನ ಖಡ್ಗವನ್ನು ಹಿರಿದು, ಪ್ರಧಾನ ಯಾಜಕನ ಆಳನ್ನು ಹೊಡೆದು ಅವನ ಕಿವಿಯನ್ನು ಕತ್ತರಿಸಿಬಿಟ್ಟನು. ಆಗ ಯೇಸು ಅವನಿಗೆ, “ನಿನ್ನ ಖಡ್ಗವನ್ನು ಒರೆಗೆ ಹಾಕು. ಖಡ್ಗ ಎತ್ತಿದವರೆಲ್ಲರೂ ಖಡ್ಗದಿಂದಲೇ ಹತರಾಗುವರು. ನಾನು ನನ್ನ ಪಿತನನ್ನು ಕೇಳಿಕೊಂಡರೆ ಅವರು ತಕ್ಷಣವೇ ಹನ್ನೆರಡು ದಳಗಳಿಗಿಂತಲೂ ಹೆಚ್ಚು ದೇವದೂತರನ್ನು ಕಳಿಸುವುದಿಲ್ಲವೆಂದು ಕೊಂಡೆಯಾ? ಆದರೆ, ಈ ಪ್ರಕಾರವೇ ಆಗಬೇಕು ಎನ್ನುವ ಪವಿತ್ರ ಗ್ರಂಥದ ವಾಕ್ಯ ನೆರವೇರುವುದಾದರೂ ಹೇಗೆ?” ಎಂದರು. ಅದೇ ಸಂದರ್ಭದಲ್ಲಿ ಯೇಸುಸ್ವಾಮಿ ಜನರ ಗುಂಪನ್ನು ಉದ್ದೇಶಿಸಿ, “ದರೋಡೆಗಾರನನ್ನು ಹಿಡಿಯುವುದಕ್ಕೋ ಎಂಬಂತೆ ಖಡ್ಗಗಳನ್ನೂ ಲಾಠಿಗಳನ್ನೂ ಹಿಡಿದುಕೊಂಡು ನನ್ನನ್ನು ಬಂಧಿಸಲು ಬರಬೇಕಾಗಿತ್ತೆ? ನಾನು ಪ್ರತಿದಿನವೂ ಮಹಾದೇವಾಲಯದಲ್ಲಿ ಕುಳಿತು ಬೋಧನೆ ಮಾಡುತ್ತಾ ಇದ್ದೆ. ಆಗ ನೀವು ನನ್ನನ್ನು ಬಂಧಿಸಲಿಲ್ಲ. ಆದರೆ ಪವಿತ್ರ ಗ್ರಂಥದ ಪ್ರವಾದನೆಗಳು ಈಡೇರಲೆಂದೇ ಇದೆಲ್ಲಾ ಜರುಗಿದೆ,” ಎಂದರು. ಆಗ ಶಿಷ್ಯರೆಲ್ಲರೂ ಯೇಸುವನ್ನು ತೊರೆದು ಪಲಾಯನ ಮಾಡಿದರು. ಬಳಿಕ ಯೇಸುಸ್ವಾಮಿಯನ್ನು ಬಂಧಿಸಿದ್ದವರು ಅವರನ್ನು ಪ್ರಧಾನಯಾಜಕ ಕಾಯಫನ ಬಳಿಗೆ ಕರೆದೊಯ್ದರು. ಅಲ್ಲಿ ಧರ್ಮಶಾಸ್ತ್ರಿಗಳೂ ಪ್ರಮುಖರೂ ಸಭೆ ಸೇರಿದ್ದರು. ಪೇತ್ರನಾದರೋ ದೂರದಿಂದ ಯೇಸುವನ್ನು ಹಿಂಬಾಲಿಸುತ್ತಿದ್ದನು. ಅವನು ಪ್ರಧಾನ ಯಾಜಕನ ಭವನದವರೆಗೂ ಬಂದು, ಹೊರಾಂಗಣವನ್ನು ಹೊಕ್ಕು ಪಹರೆಯವರ ಜೊತೆ ಕುಳಿತುಕೊಂಡನು. ಇದೆಲ್ಲ ಹೇಗೆ ಕೊನೆಗೊಳ್ಳುವುದೆಂದು ನೋಡಬೇಕೆಂಬ ಉದ್ದೇಶ ಅವನದಾಗಿತ್ತು. ಇತ್ತ ಮುಖ್ಯ ಯಾಜಕರೂ ಉಚ್ಚನ್ಯಾಯಸಭೆಯ ಸದಸ್ಯರೆಲ್ಲರೂ ಯೇಸುವನ್ನು ಮರಣದಂಡನೆಗೆ ಗುರಿಪಡಿಸುವ ಸಲುವಾಗಿ ಸುಳ್ಳುಸಾಕ್ಷಿಯನ್ನು ಹುಡುಕುತ್ತಿದ್ದರು. ಹಲವಾರು ಸುಳ್ಳುಸಾಕ್ಷಿಗಳು ಮುಂದೆ ಬಂದರು. ಆದರೂ ಸರಿಯಾದ ಒಂದು ಸಾಕ್ಷ್ಯವೂ ಅವರಿಗೆ ದೊರಕಲಿಲ್ಲ. ಕಡೆಗೆ ಇಬ್ಬರು ಮುಂದೆ ಬಂದು, “ಮಹಾದೇವಾಲಯವನ್ನು ಕೆಡವಿಬಿಟ್ಟು ಅದನ್ನು ಮೂರು ದಿನಗಳಲ್ಲಿ ಮರಳಿ ಕಟ್ಟುವ ಶಕ್ತಿ ನನಗಿದೆ,’ ಎಂದು ಇವನು ಹೇಳಿದ್ದಾನೆ,” ಎಂದರು. ಆಗ ಪ್ರಧಾನಯಾಜಕನು ಎದ್ದುನಿಂತು ಯೇಸುವನ್ನು ನೋಡಿ, “ಈ ಜನರು ನಿನಗೆ ವಿರುದ್ಧ ತಂದಿರುವ ಆರೋಪಣೆಗಳನ್ನು ಕೇಳುತ್ತಿರುವೆಯಾ? ಇವುಗಳಿಗೆ ನಿನ್ನ ಉತ್ತರ ಏನು?” ಎಂದು ಪ್ರಶ್ನಿಸಿದನು. ಆದರೆ ಯೇಸು ಮೌನವಾಗಿದ್ದರು. “ಜೀವಂತ ದೇವರ ಮೇಲೆ ಆಣೆಯಿರಿಸಿ ನಾನು ನಿನ್ನನ್ನು ಕೇಳುತ್ತಿದ್ದೇನೆ, ‘ನೀನು ದೇವರ ಪುತ್ರ ಹಾಗೂ ಅಭಿಷಿಕ್ತನಾದ ಲೋಕೋದ್ಧಾರಕನೋ?’ ನಮಗೆ ಹೇಳು,” ಎಂದನು ಆ ಪ್ರಧಾನಯಾಜಕ. ಅದಕ್ಕೆ ಯೇಸು, “ಅದು ನಿಮ್ಮ ಬಾಯಿಂದಲೇ ಬಂದಿದೆ; ಮಾತ್ರವಲ್ಲ, ನಾನು ಹೇಳುವುದನ್ನು ಕೇಳಿ: ನರಪುತ್ರನು ಸರ್ವಶಕ್ತ ದೇವರ ಬಲಗಡೆ ಆಸೀನನಾಗಿರುವುದನ್ನೂ ಆಕಾಶದ ಮೇಘಗಳ ಮೇಲೆ ಬರುವುದನ್ನೂ ಇನ್ನು ಮುಂದಕ್ಕೆ ಕಾಣುವಿರಿ,” ಎಂದರು. ಇದನ್ನು ಕೇಳಿದ್ದೇ ಪ್ರಧಾನಯಾಜಕನು ತನ್ನ ಉಡುಪನ್ನು ಕೋಪದಿಂದ ಹರಿದುಕೊಂಡನು. “ಇವನು ದೇವದೂಷಣೆ ಆಡಿದ್ದಾನೆ. ಇನ್ನು ನಮಗೆ ಸಾಕ್ಷಿಗಳು ಏತಕ್ಕೆ? ಇವನಾಡಿದ ದೇವದೂಷಣೆಯನ್ನು ನೀವೇ ಕೇಳಿದ್ದೀರಿ. ಈಗ ನಿಮ್ಮ ತೀರ್ಮಾನ ಏನು?” ಎಂದು ಕೇಳಿದನು. ಅವರು, “ಇವನಿಗೆ ಮರಣ ದಂಡನೆ ಆಗಬೇಕು,” ಎಂದು ಉತ್ತರಕೊಟ್ಟರು. ಬಳಿಕ ಅವರು ಯೇಸುಸ್ವಾಮಿಯ ಮುಖದ ಮೇಲೆ ಉಗುಳಿದರು; ಅವರನ್ನು ಗುದ್ದಿದರು. ಕೆಲವರು ಅವರ ಕೆನ್ನೆಗೆ ಹೊಡೆದು, “ಎಲೈ ಕ್ರಿಸ್ತಾ, ನಿನ್ನನ್ನು ಹೊಡೆದವರಾರು? ನಮಗೆ ಪ್ರವಾದಿಸಿ ಹೇಳು,” ಎಂದರು. ಇತ್ತ ಪೇತ್ರನು ಹೊರಾಂಗಣದಲ್ಲಿ ಕುಳಿತಿದ್ದನು. ದಾಸಿಯೊಬ್ಬಳು ಆತನ ಬಳಿಗೆ ಬಂದು, “ನೀನು ಸಹ ಗಲಿಲೇಯದ ಯೇಸುವಿನೊಂದಿಗೆ ಇದ್ದವನು,” ಎಂದಳು. “ನೀನು ಹೇಳುವುದು ಏನೆಂದು ನನಗೆ ತಿಳಿಯದು,” ಎಂದು ಪೇತ್ರನು ಎಲ್ಲರ ಮುಂದೆ ನಿರಾಕರಿಸಿದನು. ಆತ ಅಲ್ಲಿಂದ ಎದ್ದು ಹೆಬ್ಬಾಗಿಲ ಬಳಿ ಬಂದಾಗ ಇನ್ನೊಬ್ಬ ದಾಸಿ ಆತನನ್ನು ಕಂಡು, “ಈತ ನಜರೇತಿನ ಯೇಸುವಿನೊಂದಿಗೆ ಇದ್ದವನೇ,” ಎಂದು ಅಲ್ಲಿದ್ದವರಿಗೆ ತಿಳಿಸಿದಳು. ಪೇತ್ರನು, “ಆ ಮನುಷ್ಯ ಯಾರೋ ನಾನರಿಯೆ,” ಎಂದು ಆಣೆಯಿಟ್ಟು ಇನ್ನೊಮ್ಮೆ ನಿರಾಕರಿಸಿದನು. ಸ್ವಲ್ಪ ಹೊತ್ತಾದ ಮೇಲೆ ಅಲ್ಲಿ ನಿಂತಿದ್ದವರು ಪೇತ್ರನ ಹತ್ತಿರಕ್ಕೆ ಬಂದು, “ಖಂಡಿತವಾಗಿ ನೀನೂ ಅವರಲ್ಲಿ ಒಬ್ಬನು. ನೀನು ಮಾತನಾಡುವ ರೀತಿಯೇ ನಿನ್ನನ್ನು ತೋರಿಸಿಕೊಡುತ್ತದೆ,” ಎಂದು ಹೇಳಿದರು. ಆಗ ಪೇತ್ರನು ತನ್ನನ್ನೇ ಶಪಿಸಿಕೊಳ್ಳಲಾರಂಭಿಸಿ, “ಆ ಮನುಷ್ಯನನ್ನು ನಾನು ಖಂಡಿತವಾಗಿ ಅರಿಯೆನು,” ಎಂದು ಆಣೆಯಿಟ್ಟು ಹೇಳಿದನು. ಆ ಕ್ಷಣವೇ ಕೋಳಿಕೂಗಿತು. “ಕೋಳಿಕೂಗುವ ಮೊದಲೇ, ‘ಆತನನ್ನು ನಾನರಿಯೆ’ನೆಂದು ನನ್ನನ್ನು ಮೂರು ಬಾರಿ ನಿರಾಕರಿಸುವೆ,” ಎಂದ ಸ್ವಾಮಿಯ ನುಡಿ ಪೇತ್ರನ ನೆನಪಿಗೆ ಬಂದಿತು. ಆತನು ಅಲ್ಲಿಂದ ಹೊರಗೆ ಹೋಗಿ, ಬಹಳವಾಗಿ ವ್ಯಥೆಪಟ್ಟು ಅತ್ತನು. 

ಬೆಳಗಾಯಿತು. ಎಲ್ಲ ಮುಖ್ಯ ಯಾಜಕರೂ ಜನರ ಪ್ರಮುಖರೂ ಸೇರಿ ಯೇಸುವನ್ನು ಕೊಲ್ಲಿಸುವುದಕ್ಕೆ ಸಮಾಲೋಚನೆ ಮಾಡಿದರು. ಅಂತೆಯೇ ಯೇಸುವಿಗೆ ಬೇಡಿ ಹಾಕಿಸಿ, ಅವರನ್ನು ರಾಜ್ಯಪಾಲ ಪಿಲಾತನ ಬಳಿಗೆ ಕರೆದೊಯ್ದು ಅವನ ವಶಕ್ಕೆ ಒಪ್ಪಿಸಿದರು. ಯೇಸುಸ್ವಾಮಿ ದಂಡನೆಗೆ ಗುರಿಯಾದರೆಂಬುದನ್ನು ಕಂಡು, ಗುರುದ್ರೋಹಿ ಯೂದನು ಪರಿತಾಪಗೊಂಡನು. ಆ ಮೂವತ್ತು ಬೆಳ್ಳಿ ನಾಣ್ಯಗಳನ್ನು ಮುಖ್ಯಯಾಜಕರ ಮತ್ತು ಪ್ರಮುಖರ ಬಳಿಗೆ ಮರಳಿ ತಂದನು. “ನಾನು ನಿರ್ದೋಷಿಯನ್ನು ಹಿಡಿದುಕೊಟ್ಟು ಪಾಪಕಟ್ಟಿಕೊಂಡೆ,” ಎಂದು ಹೇಳಿದನು. ಅದಕ್ಕೆ ಅವರು, ‘ಅದರಿಂದ ನಮಗೇನು? ಅದನ್ನು ನೀನೇ ನೋಡಿಕೋ,’ ಎಂದುಬಿಟ್ಟರು. ಆಗ ಅವನು ಆ ಹಣವನ್ನು ದೇವಾಲಯದಲ್ಲೇ ಎಸೆದು, ಹೊರಟುಹೋಗಿ ನೇಣು ಹಾಕಿಕೊಂಡು ಸತ್ತನು. ಮುಖ್ಯ ಯಾಜಕರು ಆ ಹಣವನ್ನು ತೆಗೆದುಕೊಂಡು, “ಇದು ರಕ್ತದ ಕ್ರಯ. ಇದನ್ನು ಕಾಣಿಕೆ ಕೋಶದಲ್ಲಿ ಹಾಕುವುದು ಸರಿಯಲ್ಲ,” ಎಂದುಕೊಂಡರು. ಕಡೆಗೆ ಒಂದು ನಿರ್ಧಾರಕ್ಕೆ ಬಂದರು. ಪರದೇಶಿಗಳನ್ನು ಹೂಳುವುದಕ್ಕೋಸ್ಕರ ‘ಕುಂಬಾರನ ಹೊಲ’ವನ್ನು ಆ ಹಣಕೊಟ್ಟು ಕೊಂಡುಕೊಂಡರು. ಈ ಕಾರಣದಿಂದಲೇ ಅದನ್ನು ‘ನೆತ್ತರ ನೆಲ’ ಎಂದು ಇಂದಿಗೂ ಕರೆಯಲಾಗುತ್ತಿದೆ. ಹೀಗೆ, “ಮೂವತ್ತು ಬೆಳ್ಳಿ ನಾಣ್ಯಗಳನ್ನೆತ್ತಿ ಸರ್ವೇಶ್ವರಸ್ವಾಮಿ ನನಗಿತ್ತ ಆದೇಶದಂತೆ ‘ಕುಂಬಾರನ ಹೊಲ’ ಕೊಳ್ಳಲು ಅದನ್ನು ತೆತ್ತರು. ಅಮೂಲ್ಯ ವ್ಯಕ್ತಿಗೆ ಕಟ್ಟಿದ ಬೆಲೆಯದು, ಇಸ್ರಯೇಲ ಜನರು ಒಪ್ಪಿದ ಮೊತ್ತವದು,” ಎಂದು ವಚನಿಸಿದ ಪ್ರವಾದಿ ಯೆರೆವಿೂಯನ ಮಾತುಗಳು ಈಡೇರಿದವು. ಯೇಸುಸ್ವಾಮಿಯನ್ನು ರಾಜ್ಯಪಾಲನ ಮುಂದೆ ನಿಲ್ಲಿಸಿದರು. “ನೀನು ಯೆಹೂದ್ಯರ ಅರಸನೋ?” ಎಂದು ರಾಜ್ಯಪಾಲ ಪ್ರಶ್ನಿಸಿದನು. ಅದಕ್ಕೆ ಯೇಸು, “ಅದು ನಿಮ್ಮ ಬಾಯಿಂದಲೇ ಬಂದಿದೆ,” ಎಂದು ಮರುನುಡಿದರು. ಆದರೆ ಮುಖ್ಯಯಾಜಕರೂ ಊರಪ್ರಮುಖರೂ ಮಾಡಿದ ಆಪಾದನೆಗಳಿಗೆ ಅವರು ಏನೂ ಉತ್ತರ ಕೊಡಲಿಲ್ಲ. ಆಗ ಪಿಲಾತನು, “ಇವರು ನಿನಗೆ ವಿರುದ್ಧ ಇಷ್ಟೆಲ್ಲಾ ಹೇಳುತ್ತಿರುವುದು ನಿನಗೆ ಕೇಳಿಸುತ್ತಿಲ್ಲವೆ?” ಎಂದನು. ಯೇಸು ಯಾವುದಕ್ಕೂ ಉತ್ತರ ಕೊಡಲಿಲ್ಲ. ಇದರಿಂದ ರಾಜ್ಯಪಾಲನಿಗೆ ಅತ್ಯಾಶ್ಚರ್ಯವಾಯಿತು. ಪ್ರತಿ ಪಾಸ್ಕ ಹಬ್ಬದ ಸಂದರ್ಭದಲ್ಲಿ ಜನರು ಬಯಸುವ ಒಬ್ಬ ಕೈದಿಯನ್ನು ಬಿಡುಗಡೆ ಮಾಡುವುದು ರಾಜ್ಯಪಾಲನ ಪದ್ಧತಿಯಾಗಿತ್ತು. ಆಗ ಬರಬ್ಬನೆಂಬ ಕುಪ್ರಸಿದ್ಧ ಕೈದಿಯೊಬ್ಬನು ಸೆರೆಯಲ್ಲಿದ್ದನು. ಹೀಗಿರಲಾಗಿ, ಪಿಲಾತನು ಅಲ್ಲಿ ಕೂಡಿದ್ದ ಜನರನ್ನು ಉದ್ದೇಶಿಸಿ, “ನಾನು ಯಾರನ್ನು ಬಿಡುಗಡೆ ಮಾಡಬೇಕೆನ್ನುತ್ತೀರಿ? ಬರಬ್ಬನನ್ನೋ ಅಥವಾ ‘ಕ್ರಿಸ್ತ’ ಎಂದು ಕರೆಯಲಾಗುವ ಯೇಸುವನ್ನೋ?” ಎಂದು ಕೇಳಿದನು. ಆ ಜನರು ಅಸೂಯೆಯಿಂದಲೇ ಯೇಸುವನ್ನು ಹಿಡಿದೊಪ್ಪಿಸಿದ್ದಾರೆಂದು ಅವನಿಗೆ ಅರಿವಾಗಿತ್ತು. ಅದೂ ಅಲ್ಲದೆ, ಪಿಲಾತನು ನ್ಯಾಯಪೀಠದಲ್ಲಿ ಕುಳಿತಿರುವಾಗ, “ನೀವು ಆ ಸತ್ಪುರುಷನ ತಂಟೆಗೆ ಹೋಗಬೇಡಿ; ಆತನ ದೆಸೆಯಿಂದ ಕಳೆದ ರಾತ್ರಿ ಕನಸಿನಲ್ಲಿ ಬಹಳ ಸಂಕಟಪಟ್ಟಿದ್ದೇನೆ,” ಎಂದು ಅವನ ಪತ್ನಿ ಹೇಳಿಕಳುಹಿಸಿದಳು. ಇತ್ತ, ಬರಬ್ಬನನ್ನು ಬಿಡುಗಡೆಮಾಡಿ ಯೇಸುವನ್ನು ಕೊಲ್ಲಬೇಕೆಂದು ಕೇಳಿಕೊಳ್ಳುವಂತೆ ಮುಖ್ಯ ಯಾಜಕರು ಮತ್ತು ಪ್ರಮುಖರು ಜನರನ್ನು ಪ್ರಚೋದಿಸಿದರು. ರಾಜ್ಯಪಾಲನು ಪುನಃ ಜನರ ಗುಂಪನ್ನು ನೋಡಿ, “ಈ ಇಬ್ಬರಲ್ಲಿ ಯಾರನ್ನು ನಿಮಗೆ ಬಿಟ್ಟುಕೊಡಲಿ?” ಎಂದು ಕೇಳಿದನು. ಅದಕ್ಕೆ ಅವರು “ಬರಬ್ಬನನ್ನೇ” ಎಂದು ಉತ್ತರಕೊಟ್ಟರು. “ಹಾಗಾದರೆ, ‘ಕ್ರಿಸ್ತ’ ಎಂದು ಕರೆಯಲಾಗುವ ಯೇಸುವನ್ನು ಏನುಮಾಡಲಿ?” ಎಂದು ಪಿಲಾತನು ಮರುಪ್ರಶ್ನೆ ಹಾಕಿದನು. ಅವರೆಲ್ಲರು, “ಅವನನ್ನು ಶಿಲುಬೆಗೇರಿಸಿ,” ಎಂದು ಉತ್ತರಿಸಿದರು. “ಏಕೆ? ಇವನೇನು ಕೇಡು ಮಾಡಿದ್ದಾನೆ?” ಎಂದು ಪಿಲಾತನು ಕೇಳಲು, “ಶಿಲುಬೆಗೇರಿಸಿ, ಶಿಲುಬೆಗೇರಿಸಿ,” ಎಂದು ಅವರು ಇನ್ನೂ ಹೆಚ್ಚಾಗಿ ಆರ್ಭಟಿಸಿದರು. ಕೈ ತೊಳೆದುಕೊಂಡರೆ ಕರ್ತವ್ಯ ನೀಗೀತೆ? ಪಿಲಾತನು ತನ್ನ ಪ್ರಯತ್ನದಿಂದ ಏನೂ ಫಲಿಸುತ್ತಿಲ್ಲವೆಂದೂ ಅದಕ್ಕೆ ಬದಲಾಗಿ ದಂಗೆ ಏಳುವ ಸೂಚನೆಯಿದೆಯೆಂದೂ ಮನಗಂಡನು. ಆದುದರಿಂದ ನೀರನ್ನು ತರಿಸಿ, “ಈ ನಿರಪರಾಧಿಯ ರಕ್ತಪಾತಕ್ಕೆ ಹೊಣೆ ನಾನಲ್ಲ; ಅದಕ್ಕೆ ನೀವೇ ಹೊಣೆಗಾರರು,” ಎಂದು ಹೇಳಿ ಜನರೆದುರಿಗೆ ಕೈ ತೊಳೆದುಕೊಂಡನು. ಅದಕ್ಕೆ ಜನರೆಲ್ಲರೂ, “ಅವನ ರಕ್ತ ನಮ್ಮ ಮೇಲೂ ನಮ್ಮ ಮಕ್ಕಳ ಮೇಲೂ ಇರಲಿ,” ಎಂದು ಕೂಗಿಕೊಂಡರು. ಬಳಿಕ ಪಿಲಾತನು ಅವರ ಇಷ್ಟದಂತೆಯೇ ಬರಬ್ಬನನ್ನು ಬಿಟ್ಟುಕೊಟ್ಟನು. ಯೇಸುವನ್ನು ಕೊರಡೆಗಳಿಂದ ಹೊಡೆಸಿ ಶಿಲುಬೆಗೇರಿಸಲು ಒಪ್ಪಿಸಿಬಿಟ್ಟನು. ರಾಜ್ಯಪಾಲನ ಸೈನಿಕರು ಯೇಸುಸ್ವಾಮಿಯನ್ನು ರಾಜಭವನದ ಒಳಕ್ಕೆ ಕರೆದೊಯ್ದರು. ಅವರ ಸೈನ್ಯಪಡೆಯೆಲ್ಲವು ಸ್ವಾಮಿಯನ್ನು ಸುತ್ತುಗಟ್ಟಿತು. ಸೈನಿಕರು ಅವರ ಉಡುಪನ್ನು ಸುಲಿದು, ಕಡುಗೆಂಪು ಮೇಲಂಗಿಯೊಂದನ್ನು ಅವರಿಗೆ ಹೊದಿಸಿದರು. ಮುಳ್ಳಿನಿಂದ ಒಂದು ಕಿರೀಟವನ್ನು ಹೆಣೆದು, ಅವರ ತಲೆಯ ಮೇಲೆ ಇರಿಸಿದರು. ಕೈಗೆ ಒಂದು ಕೋಲನ್ನು ಕೊಟ್ಟರು. ಆ ಮೇಲೆ ಅವರ ಮುಂದೆ ಮೊಣಕಾಲೂರಿ, “ಯೆಹೂದ್ಯರ ಅರಸನಿಗೆ ಜಯವಾಗಲಿ!” ಎಂದು ಹೇಳಿ ಪರಿಹಾಸ್ಯ ಮಾಡಿದರು. ಅವರ ಮೇಲೆ ಉಗುಳಿದರು. ಆ ಕೋಲನ್ನು ಕಿತ್ತುಕೊಂಡು ತಲೆಯ ಮೇಲೆ ಹೊಡೆದರು. ಹೀಗೆ ಪರಿಹಾಸ್ಯ ಮಾಡಿ ಆದಮೇಲೆ, ಹೊದಿಸಿದ್ದ ಮೇಲಂಗಿಯನ್ನು ತೆಗೆದುಹಾಕಿ, ಅವರ ಉಡುಪನ್ನೇ ಪುನಃ ತೊಡಿಸಿದರು. ಬಳಿಕ ಅವರನ್ನು ಶಿಲುಬೆಗೇರಿಸಲು ಕರೆದೊಯ್ದರು. ಸೈನಿಕರು ಯೇಸುಸ್ವಾಮಿಯನ್ನು ಕರೆದುಕೊಂಡು ಊರಹೊರಗೆ ಹೋಗುತ್ತಿದ್ದಾಗ ಸಿರೇನ್ ಪಟ್ಟಣದ ಸಿಮೋನ್ ಎಂಬಾತನನ್ನು ಕಂಡರು. ಯೇಸುವಿನ ಶಿಲುಬೆಯನ್ನು ಹೊತ್ತು ಬರುವಂತೆ ಅವನನ್ನು ಬಲವಂತಮಾಡಿದರು. ಅವರೆಲ್ಲರು ಗೊಲ್ಗೊಥ ಎಂಬ ಸ್ಥಳಕ್ಕೆ ಬಂದು ಸೇರಿದರು. (ಗೊಲ್ಗೊಥ ಎಂದರೆ ‘ಕಪಾಲ ಸ್ಥಳ’ ಎಂದು ಅರ್ಥ). ಅಲ್ಲಿ ಕಹಿಬೆರೆಸಿದ ದ್ರಾಕ್ಷಾರಸವನ್ನು ಯೇಸುವಿಗೆ ಕುಡಿಯಲು ಕೊಟ್ಟರು. ಅವರು ಅದನ್ನು ರುಚಿನೋಡಿ ಕುಡಿಯಲು ಇಚ್ಛಿಸಲಿಲ್ಲ. ಯೇಸುವನ್ನು ಶಿಲುಬೆಗೇರಿಸಿದ ಬಳಿಕ ಅವರ ಉಡುಪಿಗಾಗಿ ಸೈನಿಕರು ಚೀಟುಹಾಕಿ ತಮ್ಮತಮ್ಮೊಳಗೇ ಹಂಚಿಕೊಂಡರು. ಅನಂತರ ಅಲ್ಲೇ ಕುಳಿತು ಕಾವಲುಕಾಯುತ್ತಾ ಇದ್ದರು. “ಈತ ಯೇಸು, ಯೆಹೂದ್ಯರ ಅರಸ” ಎಂದು ಬರೆದಿದ್ದ ದೋಷಾರೋಪಣೆಯ ಫಲಕವನ್ನು ಅವರ ಶಿರಸ್ಸಿನ ಮೇಲ್ಭಾಗದಲ್ಲಿ ಇಟ್ಟರು. ಯೇಸುವಿನ ಬಲಗಡೆ ಒಬ್ಬನು, ಎಡಗಡೆ ಒಬ್ಬನು, ಹೀಗೆ ಇಬ್ಬರು ಕಳ್ಳರನ್ನು ಅವರ ಸಂಗಡ ಶಿಲುಬೆಗೇರಿಸಿದರು. ಪಕ್ಕದಲ್ಲಿ ಹಾದು ಹೋಗುತ್ತಿದ್ದ ಜನರು ತಲೆಯಾಡಿಸುತ್ತಾ “ಮಹಾದೇವಾಲಯವನ್ನು ಕೆಡವಿ ಮೂರು ದಿನಗಳಲ್ಲಿ ಅದನ್ನು ಮತ್ತೆ ಕಟ್ಟಬಲ್ಲವನೇ, ಈಗ ನಿನ್ನನ್ನು ನೀನೇ ರಕ್ಷಿಸಿಕೋ; ನೀನು ದೇವರ ಪುತ್ರನಾದರೆ ಶಿಲುಬೆಯಿಂದ ಇಳಿದು ಬಾ,” ಎಂದು ಮೂದಲಿಸಿದರು. ಅಂತೆಯೇ ಮುಖ್ಯ ಯಾಜಕರು, ಧರ್ಮಶಾಸ್ತ್ರಿಗಳು ಮತ್ತು ಪ್ರಮುಖರು, “ಇವನು ಇತರರನ್ನು ರಕ್ಷಿಸಿದ; ಆದರೆ ತನ್ನನ್ನು ತಾನೇ ರಕ್ಷಿಸಿಕೊಳ್ಳಲು ಇವನಿಂದಾಗದು; ಇಸ್ರಯೇಲಿನ ಅರಸನಂತೆ! ಈಗ ಶಿಲುಬೆಯಿಂದ ಇಳಿದು ಬರಲಿ; ಆಗ ಇವನನ್ನು ನಂಬುತ್ತೇವೆ. ದೇವರಲ್ಲಿ ಭರವಸೆಯಿಟ್ಟಿದ್ದ; ತಾನು ‘ದೇವರ ಪುತ್ರ’ ಎಂದು ಹೇಳಿಕೊಳ್ಳುತ್ತಿದ್ದ; ದೇವರಿಗೆ ಇಷ್ಟವಾದವನು ಇವನಾಗಿದ್ದರೆ ದೇವರೇ ಬಂದು ಇವನನ್ನು ಬಿಡುಗಡೆಮಾಡಲಿ,” ಎಂದು ಅಪಹಾಸ್ಯ ಮಾಡುತ್ತಿದ್ದರು. ಯೇಸುವಿನೊಡನೆ ಶಿಲುಬೆಗೇರಿಸಲಾಗಿದ್ದ ಕಳ್ಳರು ಕೂಡ ಅದೇ ರೀತಿ ಅಣಕಿಸಿದರು. ಆಗ ನಡುಮಧ್ಯಾಹ್ನ. ಆಗಿನಿಂದ ಮೂರು ಗಂಟೆಯವರೆಗೂ ನಾಡಿನಲ್ಲೆಲ್ಲಾ ಕತ್ತಲೆ ಕವಿಯಿತು. ಸುಮಾರು ಮೂರು ಗಂಟೆಯ ಸಮಯದಲ್ಲಿ ಯೇಸುಸ್ವಾಮಿ, “ಏಲೀ, ಏಲೀ, ಲಮಾ ಸಬಕ್ತಾನಿ?” ಅಂದರೆ, “ನನ್ನ ದೇವರೇ, ನನ್ನ ದೇವರೇ, ನನ್ನನ್ನೇಕೆ ಕೈಬಿಟ್ಟಿರಿ?” ಎಂದು ಗಟ್ಟಿಯಾಗಿ ಕೂಗಿಕೊಂಡರು. ಅಲ್ಲಿ ನಿಂತಿದ್ದವರಲ್ಲಿ ಕೆಲವರು ಇದನ್ನು ಕೇಳಿ, “ಇವನು ಎಲೀಯನನ್ನು ಕರೆಯುತ್ತಿದ್ದಾನೆ,” ಎಂದರು. ಕೂಡಲೇ ಅವರಲ್ಲೊಬ್ಬನು ಓಡಿಹೋಗಿ ಸ್ಪಂಜನ್ನು ತೆಗೆದುಕೊಂಡುಬಂದು, ಅದನ್ನು ಹುಳಿರಸದಲ್ಲಿ ತೋಯಿಸಿ, ಒಂದು ಕೋಲಿನ ತುದಿಗೆ ಸಿಕ್ಕಿಸಿ, ಯೇಸುವಿಗೆ ಕುಡಿಯಲು ಕೊಟ್ಟನು. ಮಿಕ್ಕವರು, “ತಾಳು, ಇವನನ್ನು ರಕ್ಷಿಸಲು ಎಲೀಯನು ಬರುವನೋ ನೋಡೋಣ,” ಎಂದರು. ಯೇಸುಸ್ವಾಮಿ ಮತ್ತೊಮ್ಮೆ ಗಟ್ಟಿಯಾಗಿ ಕೂಗಿ ಅಸುನೀಗಿದರು.

ಆಗ ಇಗೋ, ಮಹಾದೇವಾಲಯದ ತೆರೆಯು ಮೇಲಿಂದ ಕೆಳಗಿನವರೆಗೆ ಇಬ್ಭಾಗವಾಗಿ ಸೀಳಿಹೋಯಿತು; ಭೂಮಿ ನಡುಗಿತು, ಬಂಡೆಗಳು ಸಿಡಿದವು; ಸಮಾಧಿಗಳು ತೆರೆದುಕೊಂಡವು. ನಿಧನಹೊಂದಿದ್ದ ಅನೇಕ ಭಕ್ತರ ದೇಹಗಳು ಜೀವಂತವಾಗಿ ಎದ್ದವು. ಹೀಗೆ ಎದ್ದವರು ಸಮಾಧಿಗಳಿಂದ ಹೊರಗೆ ಬಂದು, ಯೇಸು ಪುನರುತ್ಥಾನ ಹೊಂದಿದ ಬಳಿಕ ಪವಿತ್ರ ನಗರಕ್ಕೆ ಹೋಗಿ ಅನೇಕರಿಗೆ ಕಾಣಿಸಿಕೊಂಡರು. ಶತಾಧಿಪತಿ ಮತ್ತು ಅವನ ಸಂಗಡ ಯೇಸುವನ್ನು ಕಾಯುತ್ತಿದ್ದವರು ಭೂಕಂಪವನ್ನೂ ನಡೆದುದೆಲ್ಲವನ್ನೂ ಕಂಡು ಭಯಭ್ರಾಂತರಾದರು. “ಸತ್ಯವಾಗಿಯೂ ಈತ ದೇವರ ಪುತ್ರನೇ ಸರಿ,” ಎಂದರು. ಯೇಸುವನ್ನು ಗಲಿಲೇಯದಿಂದ ಹಿಂಬಾಲಿಸಿ ಬಂದಿದ್ದ ಹಾಗೂ ಅವರ ಸೇವೆ ಮಾಡಿದ ಮಹಿಳೆಯರೂ ಅಲ್ಲಿದ್ದರು. ಅವರು ಇದೆಲ್ಲವನ್ನು ದೂರದಿಂದ ನೋಡುತ್ತಾ ಇದ್ದರು. ಅವರಲ್ಲಿ ಮಗ್ದಲದ ಮರಿಯಳು, ಯಕೋಬ ಹಾಗೂ ಜೋಸೆಫನ ತಾಯಿ ಮರಿಯಳು ಮತ್ತು ಜೆಬೆದಾಯನ ಮಕ್ಕಳ ತಾಯಿ ಇದ್ದರು. ಸಂಜೆಯಾಯಿತು. ಅರಿಮತಾಯ ಊರಿನ ಜೋಸೆಫ್ ಎಂಬ ಒಬ್ಬ ಧನವಂತನು ಅಲ್ಲಿಗೆ ಬಂದನು. ಈತನು ಸಹ ಯೇಸುವಿನ ಶಿಷ್ಯನಾಗಿದ್ದನು. ಈಗ ಪಿಲಾತನ ಬಳಿಗೆ ಹೋಗಿ ಯೇಸುವಿನ ಪಾರ್ಥಿವ ಶರೀರವನ್ನು ತನಗೆ ಕೊಡಿಸಬೇಕೆಂದು ಬೇಡಿದನು. ಪಿಲಾತನು ಅದನ್ನು ಕೊಡುವಂತೆ ಅಪ್ಪಣೆಮಾಡಿದನು. ಜೋಸೆಫ್ ಅದನ್ನು ತೆಗೆದುಕೊಂಡು ಶುದ್ಧವಾದ ನಾರುಮಡಿ ವಸ್ತ್ರದಿಂದ ಸುತ್ತಿದನು. ತನಗೆಂದು ಬಂಡೆಯಲ್ಲಿ ಕೊರೆಯಲಾಗಿದ್ದ ಹೊಸ ಸಮಾಧಿಯಲ್ಲಿ ಅದನ್ನು ಇರಿಸಿದನು. ಆ ಸಮಾಧಿಯ ದ್ವಾರಕ್ಕೆ ಒಂದು ದೊಡ್ಡ ಕಲ್ಲನ್ನು ಉರುಳಿಸಿ ಹೊರಟುಹೋದನು. ಮಗ್ದಲದ ಮರಿಯಳು ಮತ್ತು ಆ ಇನ್ನೊಬ್ಬ ಮರಿಯಳು ಅಲ್ಲೇ ಸಮಾಧಿಗೆ ಎದುರಾಗಿ ಕುಳಿತುಕೊಂಡಿದ್ದರು. ಸಾವಿಗೆ ಸಮಾಧಿಯ ಸಾಕ್ಷಿ ಮಾರನೆಯ ದಿನ, ಅಂದರೆ, ‘ಸಿದ್ಧತೆಯ ದಿನ’ ಕಳೆದ ಮೇಲೆ, ಮುಖ್ಯ ಯಾಜಕರು ಮತ್ತು ಫರಿಸಾಯರು ಕೂಡಿ ಪಿಲಾತನ ಬಳಿಗೆ ಬಂದರು. “ಸ್ವಾವಿೂ, ಆ ಮೋಸಗಾರ ಬದುಕಿದ್ದಾಗ, ‘ಮೂರು ದಿನಗಳಾದ ಮೇಲೆ ನಾನು ಪುನರ್ಜೀವಂತನಾಗಿ ಏಳುವೆನು,’ ಎಂದು ಹೇಳಿದ್ದು ನಮಗೆ ಜ್ಞಾಪಕದಲ್ಲಿದೆ. ಆದ್ದರಿಂದ ಮೂರನೆಯ ದಿನದ ತನಕ ಅವನ ಸಮಾಧಿಗೆ ಭದ್ರವಾದ ಕಾವಲಿರಿಸಲು ಅಪ್ಪಣೆಯಾಗಬೇಕು; ಇಲ್ಲದಿದ್ದರೆ ಅವನ ಶಿಷ್ಯರು ಅವನನ್ನು ಕದ್ದುಕೊಂಡು ಹೋಗಿ, ಸತ್ತವನು ಬದುಕಿಬಂದಿದ್ದಾನೆ ಎಂದು ಜನರಿಗೆ ಹೇಳಬಹುದು; ಆಗ ಮೊದಲನೆಯ ಮೋಸಕ್ಕಿಂತ ಕಡೆಯದೇ ಕಡುಮೋಸವಾದೀತು,” ಎಂದು ಕೇಳಿಕೊಂಡರು. ಪಿಲಾತನು ಅವರಿಗೆ, “ಕಾವಲುಗಾರರು ಇದ್ದಾರಲ್ಲವೆ? ಹೋಗಿ ನಿಮಗೆ ಬೇಕಾದಂತೆ ಭದ್ರಪಡಿಸಿಕೊಳ್ಳಿ” ಎಂದನು.  ಅವರು ಹೋಗಿ, ಸಮಾಧಿಯ ಕಲ್ಲಿಗೆ ಮುದ್ರೆ ಹಾಕಿ, ಕಾವಲಿರಿಸಿ, ಸಮಾಧಿಯನ್ನು ಸುಭದ್ರ ಪಡಿಸಿದರು.

ಮನಸ್ಸಿಗೊಂದಿಷ್ಟು : ಯೇಸುಕ್ರಿಸ್ತರು ಜೆರುಸಲೇಮನ್ನು ಪ್ರವೇಶಿಸಿದ ಘಟನೆ ಮೈನವಿರೇಳಿಸುವಂಥದ್ದು. ಸಾವಿರಾರು ಸಂಖ್ಯೆಯಲ್ಲಿ ಸೇರಿದ ಜನ ಯೇಸುವಿಗೆ ಕೊಟ್ಟ ಸ್ವಾಗತ ಐತಿಹಾಸಿಕ. ಯೇಸು ಬದುಕಿದ್ದ ಸುಮಾರು 160 ವರ್ಷಗಳ ಹಿಂದೆ ತಮ್ಮ ವೈರಿಗಳನ್ನು ಬಗ್ಗು ಬಡಿದ ಸೈಮನ್ ಮೆಕಾಭಿಯಸ್ ಎಂಬ ಸೈನ್ಯಾಧಿಕಾರಿಗೆ ಇದೇ ರೀತಿಯ ಸ್ವಾಗತವನ್ನು ಜನ ಜೆರುಸಲೇಮಿನಲ್ಲಿ ಕೊಟ್ಟಿದ್ದರು. ಯೇಸು ಸಹಾ ತಮ್ಮನ್ನು ಕಷ್ಟಗಳಿಂದ ಬಿಡಿಸುವ ಅದೇ ರೀತಿಯ ಕ್ರಾಂತಿಕಾರಿ ರಾಜ ಎಂಬ ಬಲವಾದ ನಂಬಿಕೆಯಿಂದಲೇ, ಒಬ್ಬ ರಾಜನಿಗೆ ಕೊಡುವ ಸ್ವಾಗತವನ್ನು ಗೌರವವನ್ನು ಯೇಸುವಿಗೆ ನೀಡುತ್ತಾರೆ.

ಆದರೆ ಯೇಸುವಿನ ಆಶಯವೇ ಬೇರೆಯಾಗಿತ್ತು ಯೇಸು ಒಂದು ಕತ್ತೆಯ ಮೇಲೆ ಶಾಂತಿದೂತನಾಗಿ ಪ್ರವೇಶಿಸುತ್ತಾರೆ. ಅಂದಿನ ಸಮಾಜದಲ್ಲಿ ಕತ್ತೆಗೆ ಮಹತ್ವದ ಸ್ಥಾನವಿತ್ತು. ಯುದ್ಧಕ್ಕೆ ಹೊರಟ ರಾಜ ಕುದುರೆಯ ಮೇಲೂ, ಶಾಂತಿಯನ್ನು ಸಾರುವ ರಾಜ ಕತ್ತೆಯ ಮೇಲೆ ಕೂತು ಸಾಗುವ ಪದ್ಧತಿಯಿತ್ತು. ಜನ ಅಂದು ಸಂಭ್ರಮಿಸಿದರೂ, ಕೆಲವೇ ದಿನಗಳ ಅಂತರದಲ್ಲಿ ಯೇಸು ನಿಸ್ಸಹಾಯಕರಾಗಿ ಪಿಲಾತನ ಎದುರು ನಿಂತಿರುವುದನ್ನು ಕಂಡು ಅವರ ನಿರೀಕ್ಷೆಗೆ ಪೆಟ್ಟು ಬಿತ್ತು. ಇಂದು ಗರಿಗಳನ್ನು ಹಿಡಿದು ಸ್ತುತಿಗೀತೆ ಹಾಡುತ್ತಿರುವ ನಾವು ಯೇಸುವಿನಿಂದ ಏನನ್ನು ನಿರೀಕ್ಷಿಸುತ್ತಿದ್ದೇವೆ?

ಹೊಸಾನ್ನ  ಎಂಬುದರ ಮೂಲ ಅರ್ಥ ’ರಕ್ಷಿಸು’  ಎಂದು ಪಂಡಿತರ ಅಭಿಪ್ರಾಯ. ರೋಗದ ಭಯದ ಮೇಲೆ ಮನೆಯಲ್ಲಿರುವ  ಸಂದರ್ಭದಲ್ಲಿ ಹೊಸಾನ್ನದ ’ರಕ್ಷಿಸು’ ಎಂಬ ಮೊತೆ ನಮ್ಮದಾಗಲಿದೇವಾಲಯಕ್ಕೆ ಹೋಗಲು ಸಾಧ್ಯವಾಗಿಲ್ಲದಿರಿವುದರಿಂದ ನಮ್ಮ ಮನೆಗೇ ಮನಕ್ಕೆ ಯೇಸುವನ್ನು ಸಂಭ್ರಮದಿಂದ ಸ್ವಾಗತಿಸೋಣ.

ಪ್ರಶ್ನೆ :  ರಕ್ಷಿಸು ಎಂಬ ನಮ್ಮ ಮೊರೆ ಯಾವುದೆಲ್ಲದರಿಂದ?

ಪ್ರಭುವೇ,
ಜೆರುಸಲೇಮ್ ದ್ವಾರಕ್ಕೆ
ಬಂದಿರಿ ಗರಿ ಜಯಘೋಷಗಳ 
ನಡುವೆ ರಾಜನಂತೆ
ದಿನಗಳಂತರದಲ್ಲಿನಿಂತಿರಿ  
ಮೌನದಿ ಪಿಲಾತನ 
ಮುಂದೆ ಅಪರಾಧಿಯಂತೆ
ಹೊತ್ತಿರಿ ಶಿಲುಬೆಯ 
ಕಲ್ವಾರಿಯೆಡೆಗೆ ದೀನನಂತೆ
ತೂಗಿ ಮಡಿದಿರಿ ಘೋರ
ನೋವಿನಿಂದ ಕಳ್ಳನಂತೆ
ನಾನಾದರೋ ಇರುವೆ
ಏನೂ ಅಗಿಲ್ಲದಂತೆ
ಬನ್ನಿರಿ ಈ ಮನದ ದ್ವಾರಕ್ಕೆ
ನನ್ನ ಪಶ್ಚಾತ್ತಾಪದ
ಗರಿಗಳ ನಡುವೆ
ನಿಮ್ಮೊಡನೆ ನಾನೂ 
ಬರುವೆ ಸಿಮೋನನಂತೆ