ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

03.08.22 - “ತಾಯಿ, ನಿನ್ನ ವಿಶ್ವಾಸ ಅಚಲವಾದುದು. ನಿನ್ನ ಕೋರಿಕೆ ನೆರವೇರಲಿ,”

ಮೊದಲನೇ ವಾಚನ: ಪ್ರವಾದಿ ಯೆರೆಮೀಯನ ಗ್ರಂಥ 31:1-7



ಸರ್ವೇಶ್ವರಸ್ವಾಮಿ ಹೀಗೆನ್ನುತ್ತಾರೆ: “ಕಾಲ ಬರಲಿದೆ, ಆಗ ಇಸ್ರಯೇಲಿನ ಸಕಲ ಗೋತ್ರಗಳಿಗೆ ನಾನೇ ದೇವರಾಗಿರುವೆನು. ಅವರು ನನಗೆ ಪ್ರಜೆಯಾಗಿರುವರು.  ಇದು ಸರ್ವೇಶ್ವರನಾದ ನನ್ನ ನುಡಿ. ಅಳಿದುಳಿದಾ ಜನಕ್ಕೆ ಅರಣ್ಯದಲ್ಲಿ ದಯೆ ದೊರೆಯಿತು. ಇಸ್ರಯೇಲ್ ಶಾಂತಿಯನ್ನು ಅರಸುತ್ತಾ ಹೋಗುವಾಗ ಸರ್ವೇಶ್ವರನಾದ ನಾನು ದೂರದಿಂದ ಅದಕ್ಕೆ ದರ್ಶನಕೊಟ್ಟು: ‘ನಾನು ನಿನ್ನನ್ನು ಪ್ರೀತಿಸುವುದು ಶಾಶ್ವತ ಪ್ರೇಮದಿಂದ. ಈ ಕಾರಣದಿಂದ ನಿನ್ನನ್ನು ಆಕರ್ಷಿಸಿಕೊಂಡಿದ್ದೇನೆ ಅಚಲ ಪ್ರೇಮದಿಂದ.  ಇಸ್ರಯೇಲೆಂಬ ಯುವತಿಯೇ, ನಿನ್ನ ಪಾಳುಬಿದ್ದ ಪ್ರದೇಶಗಳನ್ನು ನಾನು ಪುನಃ ಕಟ್ಟುವೆನು, ಅವು ಕಟ್ಟಡಗಳಿಂದ ಕೂಡಿರುವುವು. ನೀನು, ಮತ್ತೆ ತಾಳಮೇಳಗಳನ್ನು ತೆಗೆದುಕೊಂಡು ನಲಿದಾಡುವವರ ನಾಟ್ಯಗಳಲ್ಲಿ ಭಾಗವಹಿಸುವೆ.  ಸಮಾರಿಯದ ಗುಡ್ಡಗಳಲ್ಲಿ ಮರಳಿ ದ್ರಾಕ್ಷಾತೋಟಗಳನ್ನು ಮಾಡಿಕೊಳ್ಳುವೆ. ನೆಡುವವರೇ ನೆಟ್ಟ ಫಲಗಳನ್ನು ಸವಿಯುವರು. ಹೌದು, ದಿನ ಬರುವುದು. ಆಗ ಕಾವಲುಗಾರರು ಎಫ್ರಯಿಮಿನ ಗುಡ್ಡಗಳ ಮೇಲೆ ನಿಂತು, ‘ಎದ್ದೇಳಿ, ಹೋಗೋಣ. ಬನ್ನಿ ಸಿಯೋನಿಗೆ, ನಮ್ಮ ದೇವರಾದ ಸರ್ವೇಶ್ವರನ ಸನ್ನಿಧಾನಕ್ಕೆ’ ಎಂದು ಕೂಗಿ ಕರೆ ನೀಡುವರು.” ಸರ್ವೇಶ್ವರ ಹೀಗೆನ್ನುತ್ತಾರೆ: “ಯಕೋಬನನ್ನು ಕುರಿತು ಹರ್ಷಧ್ವನಿಗೈಯಿರಿ ಜನಾಂಗಗಳಾ ಶಿರೋಮಣಿಗೆ ಜೈಕಾರಮಾಡಿರಿ. ‘ಸರ್ವೇಶ್ವರ ಆಳಿದುಳಿದಾ ಇಸ್ರಯೇಲರನ್ನು ರಕ್ಷಿಸಿಹನು’ ಎಂದು ಘೋಷಿಸುತ್ತಾ ಸ್ತುತಿಸಿರಿ.

ಕೀರ್ತನೆ: 31-10,11-12,13

ಶ್ಲೋಕ: ಕುರಿಮಂದೆಯನ್ನು ಕಾಯುವ ಕುರುಬನಂತೆ ಪ್ರಭು ನಮ್ಮನ್ನು ಕಾಪಾಡುವರು 

ಶ್ಲೋಕ:  ಕುರಿಮಂದೆಯನ್ನು  ಕಾಯುವ  ಕುರುಬನಂತೆ  ಪ್ರಭು  ನಮ್ಮನ್ನು  ಕಾಪಾಡುವರು.

ರಾಷ್ಟ್ರಗಳೇ, ಸರ್ವೇಶ್ವರನ  ವಾಕ್ಯವನ್ನು  ಕೇಳಿರಿ|
ದೂರದ  ದ್ವೀಪಗಳಲ್ಲೂ  ಅದನ್ನು  ಸಾರಿರಿ||
ಇಸ್ರಾಯೇಲರನ್ನು  ಚದುರಿಸಿದಾತ|
ಕುರಿಮಂದೆಯನ್ನು  ಕಾಯುವ  ಕುರುಬನಂತೆ|
ಅವರನ್ನು  ಕೂಡಿಸಿ  ಕಾಪಾಡುವೆನೆಂದು   ಪ್ರಕಟಿಸಿರಿ||

ಸರ್ವೇಶ್ವರ  ಯಕೋಬರ  ವಿಮೋಚಕ|
ಅವರನ್ನು  ಅವರಿಗಿಂತ  ಬಲಿಷ್ಠರ  ಕೈಯಿಂದ  ಬಿಡಿಸಿದಾತ|
ಅವರು  ಬಂದು  ಹಾಡುವರು  ಸಿಯೋನ್  ಶಿಖರದಲಿ|
ಬರುವರು  ಪ್ರವಾಹ  ಪ್ರವಾಹವಾಗಿ||
ಧಾನ್ಯ,  ದ್ರಾಕ್ಷರಸ,  ಎಣ್ಣೆ,  ಕುರಿ,  ಕುರಿಮರಿ|
ಸರ್ವೇಶ್ವರನ  ಈ  ವರದಾನಗಳನು  ಅನುಭವಿಸಲಿಕ್ಕಾಗಿ||

ಆಗ  ನಿಟ್ಯವಾಡಿ  ನಲಿದಳು  ಯುವತಿ|
ಹರ್ಷಿಸುವರು  ಯುವಕರು  ಮುದುಕರು  ಜೊತೆಯಾಗಿ||
ಅವರ  ದುಃಖವನ್ನು  ಸಂತೋಷವಾಗಿಸುವೆನು|
ವ್ಯಸನ  ತೊರೆದು  ಆನಂದಿಸುವಂತೆ  ಅವರನು  ಸಂತೈಸುವೆನು||


ಘೋಷಣೆ:

ಅಲ್ಲೆಲೂಯ, ಅಲ್ಲೆಲೂಯ!
ಬೋಧಿಸೆನಗೆ  ಪ್ರಭೂ,  ನಿನ್ನ  ಮಾರ್ಗವನು,
ಶತ್ರುರಹಿತ  ಹಾದಿಯಲಿ  ನಡೆಸು  ಎನ್ನನು,,
ಅಲ್ಲೆಲೂಯ!


ಶುಭಸಂದೇಶ: ಮತ್ತಾಯ 15:21-28


ಯೇಸುಸ್ವಾಮಿ ಅಲ್ಲಿಂದ ಹೊರಟು ಟೈರ್ ಹಾಗೂ ಸಿದೋನ್ ಪ್ರಾಂತ್ಯಕ್ಕೆ ಹೋದರು. ಅಲ್ಲಿ ವಾಸವಾಗಿದ್ದ ಕಾನಾನ್ ನಾಡಿನ ಮಹಿಳೆ ಒಬ್ಬಳು ಅವರ ಬಳಿಗೆ ಬಂದಳು. “ಸ್ವಾಮೀ, ದಾವೀದ ಕುಲಪುತ್ರರೇ, ನನಗೆ ದಯೆತೋರಿ, ನನ್ನ ಮಗಳಿಗೆ ದೆವ್ವಹಿಡಿದು ಬಹಳ ಸಂಕಟಪಡುತ್ತಿದ್ದಾಳೆ,” ಎಂದು ಕೂಗಿಕೊಂಡಳು. ಯೇಸು ಆಕೆಗೆ ಒಂದು ಮಾತನ್ನೂ ಹೇಳಲಿಲ್ಲ. ಶಿಷ್ಯರು ಹತ್ತಿರಕ್ಕೆ ಬಂದು, “ಇವಳನ್ನು ಕಳಿಸಿಬಿಡಿ, ಒಂದೇ ಸಮನೆ ಗೋಳಿಡುತ್ತಾ, ನಮ್ಮನ್ನು ಬೆಂಬತ್ತಿ ಬರುತ್ತಿದ್ದಾಳೆ,” ಎಂದು ಕೇಳಿಕೊಂಡರು. ಆಗ ಯೇಸು, “ನನ್ನನ್ನು ಕಳಿಸಿರುವುದು ತಪ್ಪಿಹೋದ ಕುರಿಗಳಂತಿರುವ ಇಸ್ರಯೇಲ್ ಜನಾಂಗದವರ ಬಳಿಗೆ ಮಾತ್ರ,” ಎಂದರು. ಆದರೂ ಆಕೆ ಯೇಸುವಿಗೆ ಅಡ್ಡಬಿದ್ದು, “ಸ್ವಾಮೀ, ಸಹಾಯ ಮಾಡಿ,” ಎಂದು ಯಾಚಿಸಿದಳು. ಅದಕ್ಕೆ ಯೇಸು, “ಮಕ್ಕಳ ಆಹಾರವನ್ನು ತೆಗೆದು ನಾಯಿಗಳಿಗೆ ಎಸೆಯುವುದು ಸರಿಯಲ್ಲ,” ಎಂದರು. ಆಗ ಆಕೆ, “ಅದು ನಿಜ ಸ್ವಾಮೀ, ನಾಯಿಗಳಾದರೂ ತಮ್ಮ ಯಜಮಾನನ ಮೇಜಿನಿಂದ ಕೆಳಕ್ಕೆ ಬೀಳುವ ಚೂರುಪಾರನ್ನು ತಿನ್ನುತ್ತವೆ, ಅಲ್ಲವೇ?’ ಎಂದು ಮರುತ್ತರ ಕೊಟ್ಟಳು. ಆಗ ಯೇಸು, “ತಾಯಿ, ನಿನ್ನ ವಿಶ್ವಾಸ ಅಚಲವಾದುದು. ನಿನ್ನ ಕೋರಿಕೆ ನೆರವೇರಲಿ,” ಎಂದರು. ಅದೇ ಕ್ಷಣದಲ್ಲಿ ಆಕೆಯ ಮಗಳು ಗುಣ ಹೊಂದಿದಳು.




No comments:

Post a Comment