ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 15:22-31
ಅನಂತರ ಪ್ರೇಷಿತರೂ ಸಭಾಪ್ರಮುಖರೂ ಇಡೀ ಧರ್ಮಸಭೆಯ ಸಮ್ಮತಿಪಡೆದು, ತಮ್ಮಲ್ಲಿ ಕೆಲವರನ್ನು ಆರಿಸಿ, ಪೌಲ ಮತ್ತು ಬಾರ್ಸಬರೊಂದಿಗೆ ಅಂತಿಯೋಕ್ಯಕ್ಕೆ ಕಳುಹಿಸಬೇಕೆಂದು ನಿರ್ಧರಿಸಿದರು. ಅಂತೆಯೇ, ಸಹೋದರರಲ್ಲಿ ಬಹು ಗೌರವಾನ್ವಿತರಾದ ಬಾರ್ನಬ ಎಂದು ಕರೆಯಲಾದ ಯೂದ ಮತ್ತು ಸೀಲ ಎಂಬ ಇಬ್ಬರನ್ನು ಆರಿಸಿದರು. ಈ ಕೆಳಗಿನ ಪತ್ರವನ್ನು ಬರೆದು ಅವರ ಕೈಯಲ್ಲಿ ಕಳುಹಿಸಿದರು. “ಅಂತಿಯೋಕ್ಯ, ಸಿರಿಯ ಮತ್ತು ಸಿಲಿಸಿಯಗಳಲ್ಲಿ ವಾಸಿಸುವ ಯೆಹೂದ್ಯೇತರ ಸಹೋದರರಿಗೆ - ಪ್ರೇಷಿತರೂ ಸಭಾಪ್ರಮುಖರೂ ನಿಮ್ಮ ಸಹೋದರರೂ ಆದ ನಮ್ಮ ಶುಭಾಶಯಗಳು! ನಮ್ಮ ಕಡೆಯ ಕೆಲವು ಜನರು ನಮ್ಮಿಂದ ಯಾವ ಆದೇಶವನ್ನೂ ಪಡೆಯದೆ ನಿಮ್ಮನ್ನು ತೊಂದರೆಗೆ ಈಡುಮಾಡಿ ನಿಮ್ಮ ಮನಸ್ಸನ್ನು ಕಲಕಿದರೆಂಬ ಸಮಾಚಾರ ನಮ್ಮ ಗಮನಕ್ಕೆ ಬಂದಿದೆ. ಆದುದರಿಂದ ನಾವೆಲ್ಲರೂ ಸಭೆಸೇರಿ ಪ್ರತಿನಿಧಿಗಳನ್ನು ಆರಿಸಿ ನಿಮ್ಮಲ್ಲಿಗೆ ಕಳುಹಿಸಲು ನಿರ್ಧರಿಸಿದೆವು. ನಮ್ಮ ಪ್ರಭುವಾದ ಯೇಸುಕ್ರಿಸ್ತರಿಗಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟಿರುವ ನಮ್ಮೊಲವಿನ ಬಾರ್ನಬ ಮತ್ತು ಪೌಲರೊಡನೆ ಈ ಪ್ರತಿನಿಧಿಗಳು ಬರುತ್ತಿದ್ದಾರೆ. ಇವರೇ ನಾವು ಕಳುಹಿಸುತ್ತಿರುವ ಯೂದ ಮತ್ತು ಸೀಲ. ಇವರು ನಾವು ಬರೆದಿರುವುದನ್ನು ನಿಮಗೆ ಖುದ್ದಾಗಿ ತಿಳಿಸುವರು. ವಿಗ್ರಹಗಳಿಗೆ ನೈವೇದ್ಯವಾದುದು ಅಪವಿತ್ರವಾದುದು. ಅದನ್ನು ಸೇವಿಸಬಾರದು; ರಕ್ತವನ್ನಾಗಲಿ ಕುತ್ತಿಗೆ ಹಿಸುಕಿ ಕೊಂದ ಪ್ರಾಣಿಗಳನ್ನಾಗಲಿ ತಿನ್ನಬಾರದು; ಅನೈತಿಕತೆಯಿಂದ ದೂರವಿರಬೇಕು. ಈ ಅಗತ್ಯ ನಿಯಮಗಳ ಹೊರತು ಬೇರೆ ಯಾವ ಹೊರೆಯನ್ನೂ ನಿಮ್ಮ ಮೇಲೆ ಹೇರುವುದು ವಿಹಿತವಲ್ಲವೆಂಬುದು ಪವಿತ್ರಾತ್ಮ ಅವರ ಹಾಗೂ ನಮ್ಮ ತೀರ್ಮಾನ. ಈ ನಿಯಮಗಳನ್ನು ಅನುಸರಿಸಿದರೆ, ನಿಮಗೆ ಒಳಿತಾಗುವುದು, ನಿಮಗೆ ಶುಭವಾಗಲಿ!” ಅಂತೆಯೇ ಪ್ರತಿನಿಧಿಗಳು ಅಲ್ಲಿಂದ ಅಪ್ಪಣೆಪಡೆದು ಅಂತಿಯೋಕ್ಯಕ್ಕೆ ಹೋದರು. ಅಲ್ಲಿ ಭಕ್ತಸಭೆಯನ್ನು ಒಟ್ಟುಗೂಡಿಸಿ ಅವರಿಗೆ ಆ ಪತ್ರವನ್ನು ಕೊಟ್ಟರು. ಪತ್ರದಲ್ಲಿದ್ದ ಪ್ರೋತ್ಸಾಹದಾಯಕ ಸಂದೇಶವನ್ನು ಓದಿದ್ದೇ - ಭಕ್ತಾದಿಗಳು ಆನಂದಭರಿತರಾದರು.
ಕೀರ್ತನೆ: 57:8-9, 10, 12
ಶ್ಲೋಕ: ನಿನ್ನ ಸ್ತುತಿಸುವೆನು ಪ್ರಭೂ ಜನಾಂಗಗಳ ಮುಂದೆ
ಶುಭಸಂದೇಶ: ಯೊವಾನ್ನ 15:12-17
ಯೇಸುಸ್ವಾಮಿ ತಮ್ಮ ಶಿಷ್ಯರಿಗೆ: "ನಾನು ಕೊಡುವ ಆಜ್ಞೆ ಏನೆಂದರೆ: ನಾನು ನಿಮ್ಮನ್ನು ಪ್ರೀತಿಸಿದಂತೆಯೇ ನೀವು ಸಹ ಒಬ್ಬರನ್ನೊಬ್ಬರು ಪ್ರೀತಿಸಬೇಕು. ಗೆಳೆಯರಿಗಾಗಿ ತನ್ನ ಪ್ರಾಣವನ್ನೇ ಧಾರೆಯೆರೆಯುವ ಪ್ರೀತಿಗಿಂತ ಮಿಗಿಲಾದ ಪ್ರೀತಿ ಯಾರಲ್ಲೂ ಇಲ್ಲ. ನಾನು ಆಜ್ಞಾಪಿಸಿದಂತೆ ನಡೆದರೆ ನೀವು ನನ್ನ ಗೆಳೆಯರು. ನಾನಿನ್ನು ನಿಮ್ಮನ್ನು ದಾಸರೆಂದು ಕರೆಯುವುದಿಲ್ಲ. ಧಣಿಯ ಕೆಲಸಕಾರ್ಯಗಳು ದಾಸನಿಗೆ ತಿಳಿಯವು. ನಾನಾದರೋ ಪಿತನಿಂದ ಕೇಳಿಸಿಕೊಂಡದ್ದನ್ನೆಲ್ಲಾ ನಿಮಗೆ ತಿಳಿಸಿದ್ದೇನೆ. ಈ ಕಾರಣ ನಿಮ್ಮನ್ನು ಗೆಳೆಯರೆಂದು ಕರೆದಿದ್ದೇನೆ. ನೀವು ನನ್ನನ್ನು ಆರಿಸಿಕೊಳ್ಳಲಿಲ್ಲ, ನಾನೇ ನಿಮ್ಮನ್ನು ಆರಿಸಿಕೊಂಡಿದ್ದೇನೆ. ನೀವು ಲೋಕಕ್ಕೆ ಹೋಗಬೇಕು, ಸಫಲರಾಗಬೇಕು; ಆ ಫಲ ಶಾಶ್ವತವಾಗಿರಬೇಕೆಂದೇ ನಿಮ್ಮನ್ನು ನೇಮಿಸಿದ್ದೇನೆ. ಹೀಗಿರಲಾಗಿ ನೀವು ನನ್ನ ಹೆಸರಿನಲ್ಲಿ ಪಿತನಿಂದ ಏನು ಕೇಳಿದರೂ ನಿಮಗೆ ಅದು ಸಿಗುವುದು. ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬುದೇ ನಾನು ನಿಮಗೆ ಕೊಡುವ ಆಜ್ಞೆ". ಎಂದರು.
No comments:
Post a Comment