ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

30.01.10 - “ಶಾಂತವಾಗಿರು ಮೊರೆಯಬೇಡ”

ಸಂತ ಮಾರ್ಕನು ಬರೆದ ಶುಭಸಂದೇಶದಿಂದ ವಾಚನ - 4 :35-41

“ಶಾಂತವಾಗಿರು ಮೊರೆಯಬೇಡ,

ಆ ದಿನ ಸಾಯಂಕಾಲ ಯೇಸುಸ್ವಾಮಿ ತಮ್ಮ ಶಿಷ್ಯರಿಗೆ, “ಸರೋವರದ ಆಚೆದಡಕ್ಕೆ ಹೋಗೋಣ,” ಎಂದರು. ಆಗ ಶಿಷ್ಯರು ಜನರ ಗುಂಪನ್ನು ಬಿಟ್ಟು ದೋಣಿಯಲ್ಲಿ ಕುಳಿತಿದ್ದ ಯೇಸುವನ್ನು ಹಾಗೆಯೇ ತಮ್ಮ ಜೊತೆಯಲ್ಲಿ ಕರದುಕೊಂಡು ಹೊರಟರು. ಆ ದೋಣಿಯ ಸಂಗಡ ಬೇರೆ ದೋಣಿಗಳೂ ಇದ್ದವು. ಸ್ವಲ್ಪ ಮುಂದೆ ಹೋಗುವಷ್ಟರಲ್ಲೇ ದೊಡ್ಡ ಬಿರುಗಾಳಿ ಎದ್ದಿತು. ಅಲೆಗಳು ದೋಣಿಗೆ ಅಪ್ಪಳಿಸತೊಡಗಿದವು. ದೋಣಿಯೊಳಗೆ ನೀರು ನುಗ್ಗಿ ಅದು ತುಂಬಿ ಹೋಗುವುದರಲ್ಲಿತ್ತು. ಯೇಸುವಾದರೋ ದೋಣಿಯ ಹಿಂಭಾಗದಲ್ಲಿ ದಿಂಬನ್ನು ಒರಗಿ ನಿದ್ದೆ ಮಾಡುತ್ತಿದ್ದರು. ಶಿಷ್ಯರು ಅವರನ್ನು ಎಬ್ಬಿಸಿ, “ಗುರುವೇ, ನಾವು ಸಾಯುತ್ತಿದ್ದೇವೆ, ತಮಗೆ ಚಿಂತೆಯೇ ಇಲ್ಲವೇ?” ಎಂದರು. ಆಗ ಯೇಸು ಎಚ್ಚೆತ್ತು, ಬಿರುಗಾಳಿಯನ್ನು ಗದರಿಸಿದರು. ಸರೊವರಕ್ಕೆ, “ಶಾಂತವಾಗಿರು ಮೊರೆಯಬೇಡ,” ಎಂದು ಆಜ್ಞಾಪಿಸಿದರು. ತಕ್ಷಣ ಬಿರುಗಾಳಿ ನಿಂತಿತು. ವಾತಾವರಣ ಪ್ರಶಾಂತವಾಯಿತು. ಅನಂತರ ತಮ್ಮ ಶಿಷ್ಯರಿಗೆ, “ಏಕೆ ಇಷ್ಟು ಭಯ? ಇನ್ನೂ ನಿಮಗೆ ವಿಶ್ವಾಸವಿಲ್ಲವೇ?” ಎಂದರು. ಶಿಷ್ಯರಾದರೋ ಭಯಭ್ರಾಂತರಾಗಿ “ಗಾಳಿಯೂ ಸರೋವರವೂ ಇವರು ಹೇಳುವಂತೆ ಕೇಳಬೇಕಾದರೆ ಇವರು ಯಾರಿರಬಹುದು?” ಎಂದು ತಮ್ಮತಮ್ಮೊಳಗೆ ಮಾತಾಡಿಕೊಂಡರು.

29.01.10 - ಭೂಮಿಯಲ್ಲಿರುವ ಕಾಳುಗಳಲ್ಲಿ ಅತಿ ಚಿಕ್ಕದಾಗಿರುವ ಸಾಸಿವೆ

ಸಂತ ಮಾರ್ಕನು ಬರೆದ ಶುಭ ಸಂದೇಶದಿಂದ ವಾಚನ - 4 : 26-34

ದೇವರ ಸಂದೇಶವನ್ನು ಅವರವರ ತಿಳುವಳಿಕೆಗೆ ತಕ್ಕಂತೆ ಉಪದೇಶಿಸುತ್ತಿದ್ದರು

ಯೇಸುಸ್ವಾಮಿ ಇನ್ನೊಂದು ಸಾಮತಿಯನ್ನು ಹೇಳಿದರು: " ದೇವರ ಸಾಮ್ರಾಜ್ಯವು ರೈತನೊಬ್ಬನು ತನ್ನ ಹೊಲದಲ್ಲಿ ಮಾಡಿದ ಬಿತ್ತನೆಗೆ ಹೋಲಿಕೆಯಾಗಿದೆ.ಬಿತ್ತನೆಯಾದ ಬಳಿಕ ಅವನು ರಾತ್ರಿಯಲ್ಲಿ ಮಲಗಿರಲಿ, ಹಗಲಲ್ಲಿ ಎದ್ದಿರಲಿ, ಅವನಿಗೆ ಹೇಗೆಂದು ತಿಳಿಯದೆಯೇ ಆ ಬೀಜವು ಮೊಳೆತು ಬೆಳೆಯುತ್ತಿರುತ್ತದೆ.ಭೂಮಿ ಮೊದಲು ಸಸಿಯನ್ನೂ ಅನಂತರ ಹೊಡೆಯನ್ನು ತರುವಾಯ ತೆನೆತುಂಬಾ ಕಾಳನ್ನೂ ತನ್ನಷ್ಟಕ್ಕೆ ತಾನೇ ಉತ್ಪತ್ತಿ ಮಾಡುತ್ತದೆ. ಬೆಳೆಯು ಮಾಗಿದಾಗ ಸುಗ್ಗಿಯು ಬಂತೆಂದು ವ್ಯವಸಾಯಗಾರನು ಕುಡುಗೋಲನ್ನು ಬಳಸುತ್ತಾನೆ," ಎಂದರು.ಯೇಸುಸ್ವಾಮಿ ತಮ್ಮ ಉಪದೇಶವನ್ನು ಮುಂದುವರಿಸಿ," ದೇವರ ಸಾಮ್ರಾಜ್ಯವನ್ನು ಇನ್ನು ಯಾವುದಕ್ಕೆ ಹೋಲಿಸೋಣ? ಅದಕ್ಕಾಗಿ ಯಾವ ಸಾಮತಿಯನ್ನು ಉಪಯೋಗಿಸೋಣ? ಭೂಮಿಯಲ್ಲಿರುವ ಕಾಳುಗಳಲ್ಲಿ ಅತಿ ಚಿಕ್ಕದಾಗಿರುವ ಸಾಸಿವೆ ಕಾಳಿಗೂ ಅದನ್ನು ಹೋಲಿಸಬಹುದು.ಸಾಸಿವೆ ಕಾಳು ಚಿಕ್ಕದಾಗಿದ್ದರೂ ಬಿತ್ತನೆಯ ತರುವಾಯ ಮೊಳೆತು, ಎಲ್ಲಾ ಕಾಯಿಪಲ್ಯದ ಸಸ್ಯಗಳಿಗಿಂತಲೂ ದೊಡ್ಡದಾಗಿ ಬೆಳೆಯುತ್ತದೆ.

ಹಕ್ಕಿಗಳು ಕೂಡ ಬಂದು ಅದರ ನೆರಳಿನಲ್ಲಿ ಗೂಡು ಕಟ್ಟಿ ವಾಸಿಸುವಷ್ಟು ದೊಡ್ಡದಾಗಿ ರಂಬೆಯನ್ನು ಅದು ತಳೆಯುತ್ತದೆ" ಎಂದರು. ಯೇಸುಸ್ವಾಮಿ ಈ ಬಗೆಯ ಸಾಮತಿಗಳನ್ನು ಉಪಯೋಗಿಸಿ ಜನರಿಗೆ ದೇವರ ಸಂದೇಶವನ್ನು ಅವರವರ ತಿಳುವಳಿಕೆಗೆ ತಕ್ಕಂತೆ ಉಪದೇಶಿಸುತ್ತಿದ್ದರು. ಸಾಮತಿಗಳನ್ನು ಉಪಯೋಗಿಸದೆ ಅವರು ಬೋಧಿಸುತ್ತಿರಲಿಲ್ಲ. ಆದರೆ ತಮ್ಮ ಆಪ್ತ ಶಿಷ್ಯರೊಡನೆ ಪ್ರತ್ಯೇಕವಾಗಿದ್ದಾಗ ಅವರಿಗೆ ಎಲ್ಲವನ್ನು ವಿವರಿಸಿ ಹೇಳುತ್ತಿದ್ದರು.

28.01.2010 - ರಟ್ಟಾಗದ ಗುಟ್ಟಿಲ್ಲ

ಸಂತ ಮಾರ್ಕನು ಬರೆದ ಶುಭ ಸಂದೇಶದಿಂದ ವಾಚನ - 4 : 21-25


"ಕೇಳುವುದಕ್ಕೆ ಕಿವಿಯುಳ್ಳವನು ಕೇಳಿಸಿಕೊಳ್ಳಲಿ. ನೀವು ಕೇಳುವುದನ್ನು ಎಚ್ಚರಿಕೆಯಿಂದ ಗಮನಿಸಿರಿ"

ಯೇಸು ತಮ್ಮ ಬೋಧನೆಯನ್ನು ಮುಂದುವರಿಸುತ್ತಾ,"ಯಾರದರೂ ಉರಿಯುವ ದೀಪವನ್ನು ತಂದು ಬಟ್ಟಲ ಒಳಗಾಗಲಿ,ಮಂಚದ ಕೆಳಗಾಗಲಿ ಇಡುವುದುಂಟೆ? ನಿಶ್ಚಯವಾಗಿಯೂ ಇಲ್ಲ, ಅದನ್ನು ದೀಪ ಸ್ತಂಭದ ಮೇಲೆ ಇಡುತ್ತಾರೆ. ಬೆಳಕಿಗೆ ಬಾರದ ಮುಚ್ಚುಮರೆಯಿಲ್ಲ. ರಟ್ಟಾಗದ ಗುಟ್ಟಿಲ್ಲ.ಕೇಳುವುದಕ್ಕೆ ಕಿವಿಯುಳ್ಳವನು ಕೇಳಿಸಿಕೊಳ್ಳಲಿ. ನೀವು ಕೇಳುವುದನ್ನು ಎಚ್ಚರಿಕೆಯಿಂದ ಗಮನಿಸಿರಿ; ಇತರರಿಗೆ ನೀವು ಕೊಟ್ಟ ಅಳತೆಯಲ್ಲೇ ದೇವರು ನಿಮಗೂ ಅಳೆದು ಕೊಡುವರು; ಇನ್ನೂ ಅಧಿಕವಾಗಿ ಕೊಡುವರು.ಉಳ್ಳವನಿಗೆ ಇನ್ನೂ ಹೆಚ್ಚಾಗಿ ಕೊಡಲಾಗುತ್ತದೆ.ಇಲ್ಲದವನಿಗೆ ಇರುವ ಕಿಂಚಿತ್ತನ್ನೂ ಕಸಿದುಕೊಳ್ಳಲಾಗುತ್ತದೆ," ಎಂದರು.

26.01.2010 - ನನಗೆ ತಾಯಿ ಯಾರು

ಸಂತ ಮಾರ್ಕನು ಬರೆದ ಶುಭಸಂದೇಶದಿಂದ ವಾಚನ - 3: 31-35

"ದೈವೇಚ್ಛೆಯನ್ನು ಯಾರು ನೆರವೇರಿಸುತ್ತಾರೋ ಅವರೇ ನನಗೆ ಸಹೋದರ,ಸಹೋದರಿ, ತಾಯಿ,"

ಯೇಸುಸ್ವಾಮಿಯ ತಾಯಿ ಮತ್ತು ಸಹೋದರರು ಅಲ್ಲಿಗೆ ಬಂದರು. ಒಳಗೆ ಜನರು ಯೇಸುವಿನ ಸುತ್ತಲೂ ಗುಂಪಾಗಿ ಕುಳಿತ್ತಿದ್ದರು. ಆದುದರಿಂದ ಅವರು ಹೊರಗೇ ನಿಂತು, ಯೇಸುವಿಗೆ ಬರಬೇಕೆಂದು ಹೇಳಿಕಳುಹಿಸಿದರು." ನಿಮ್ಮ ತಾಯಿಯೂ ಸಹೋದರರು ಹೊರಗೆ ನಿಮಗಾಗಿ ಕಾದಿದ್ದಾರೆ" ಎಂದು ಯೇಸುವಿಗೆ ತಿಳಿಸಿದರು. ಅದಕ್ಕೆ ಯೇಸು "ನನಗೆ ತಾಯಿ ಯಾರು,? ಸಹೋದರರು ಯಾರು?" ಎನ್ನುತ್ತಾ ತಮ್ಮ ಸುತ್ತಲೂ ಕುಳಿತಿದ್ದವರ ಮೇಲೆ ದೃಷ್ಠಿ ಹರಿಸಿ,’ ಇಗೋ ನನ್ನ ತಾಯಿ! ಇಗೋ ನನ್ನ ಸಹೋದರರು! ದೈವೇಚ್ಛೆಯನ್ನು ಯಾರು ನೆರವೇರಿಸುತ್ತಾರೋ ಅವರೇ ನನಗೆ ಸಹೋದರ,ಸಹೋದರಿ, ತಾಯಿ," ಎಂದರು.

25.01.2010 - ಜಗತ್ತಿಗೆಲ್ಲಾ ಶುಭ ಸಂದೇಶವನ್ನು ಪ್ರಬೋಧಿಸಿರಿ

ಸಂತ ಮಾರ್ಕನು ಬರೆದ ಶುಭ ಸಂದೇಶದಿಂದ ವಾಚನ - 16: 15-18

"ಕೈಗಳಿಂದ ಸರ್ಪಗಳನ್ನು ಎತ್ತಿದರೂ,ವಿಷ ಪದಾರ್ಥಗಳನ್ನೇನಾದರು ಕುಡಿದರೂ ಯಾವ ಹಾನಿಯೂ ಅವರಿಗಾಗದು"


ಯೇಸು ತಮ್ಮ ಶಿಷ್ಯರಿಗೆ ಹೀಗೆಂದರು;"ನೀವು ಎಲ್ಲೆಡೆಗಳಿಗೂ ಹೋಗಿ,ಜಗತ್ತಿಗೆಲ್ಲಾ ಶುಭ ಸಂದೇಶವನ್ನು ಪ್ರಬೋಧಿಸಿರಿ.ವಿಶ್ವಾಸವಿಟ್ಟು ದೀಕ್ಷಾಸ್ನಾನ ಪಡೆಯುವವನು ಜೀವೋದ್ಧಾರ ಹೊಂದುವನು.ವಿಶ್ವಾಸಿಸದಿರುವವವನು ಖಂಡನೆಗೆ ಗುರಿಯಾಗುವನು.ವಿಶ್ವಾಸಿಸುವುದರಿಂದ ಈ ಅದ್ಭುತ ಕಾರ್ಯಗಳು ಆಗುವುವು.ಅವರು ನನ್ನ ಹೆಸರಿನಲ್ಲಿ ದೆವ್ವಗಳನ್ನು ಬಿಡಿಸುವರು;ಹೊಸ ಭಾಷೆಗಳಲ್ಲಿ ಮಾತಾಡುವರು.;ಕೈಗಳಿಂದ ಸರ್ಪಗಳನ್ನು ಎತ್ತಿದರೂ, ವಿಷ ಪದಾರ್ಥಗಳನ್ನೇನಾದರು ಕುಡಿದರೂ ಯಾವ ಹಾನಿಯೂ ಅವರಿಗಾಗದು.ಅವರು ರೋಗಿಗಳ ಮೇಲೆ ಕೈಯಿಟ್ಟರೆ ರೋಗಿಗಳು
ಗುಣ ಹೊಂದುವರು.

24.01.2010 - ಎಲ್ಲರೂ ಅವರನ್ನು ಹೊಗಳುವವರೇ

ಸಂತ ಲೂಕನು ಬರೆದ ಶುಭಸಂದೇಶದಿಂದ ವಾಚನ -  1: 1-4, 4 : 4-21

“ನೀವು ಈ ಪವಿತ್ರ ವಾಕ್ಯವನ್ನು ಕೇಳುತ್ತಿದ್ದ ಹಾಗೆಯೇ ಅದು ಇಂದು ನೆರವೇರಿತು”

ಸನ್ಮಾನ್ಯ ಥೆಯೊಫಿಲನೇ, ನಮ್ಮ ಮಧ್ಯೆ ನೆರೆವೇರಿರುವ ಘಟನೆಗಳ ವರದಿಯನ್ನು ಬರೆದಿಡಲು ಹಲವರು ಪ್ರಯತ್ನಿಸಿದ್ದಾರೆ. ಪ್ರಾರಂಭದಿಂದ ಕಣ್ಣಾರೆ ಕಂಡು ಶುಭಸಂದೇಶವನ್ನು ಸಾರಿದವರಿಂದಲೇ ನಾವು ಕೇಳಿದ ಘಟನೆಗಳವು.ನಾನು ಆಮೂಲಾಗ್ರವಾಗಿ ವಿಚಾರಿಸಿದ ಅವೆಲ್ಲವನ್ನು ನಿನಗೋಸ್ಕರ ಕ್ರಮಬದ್ಧವಾಗಿ ಬರೆಯುವುದು ಉಚಿತವೆಂದು ನನಗೂ ತೋರಿತ್ತು. ನಿನಗೆ ಉಪದೇಶಿಸಲಾಗಿರುವ ವಿಷಯಗಳು ಸತ್ಯವಾದುವೆಂದು ಇದರಿಂದ ನಿನಗೆ ಉಪದೇಶಿಸಲಾಗಿರುವ ವಿಷಯಗಳು ಸತ್ಯವಾದುವೆಂದು ಇದರಿಂದ ನಿನಗೆ ಮನದಟ್ಟಾಗುವುದು. ಯೇಸುಸ್ವಾಮಿ ಪವಿತ್ರಾತ್ಮ ಶಕ್ತಿಯಿಂದ ಕೂಡಿ ಗಲಿಲೇಯಕ್ಕೆ ಮರಳಿಬಂದರು. ಅವರ ವಿಷಯ ಸುತ್ತಮುತ್ತೆಲ್ಲಾ ಹರಡಿತು. ಅಲ್ಲಿನ ಪ್ರಾರ್ಥನಾ ಮಂದಿರಗಳಲ್ಲಿ ಅವರು ಬೋಧಿಸುತ್ತಾ ಬಂದರು. ಎಲ್ಲರೂ ಅವರನ್ನು ಹೊಗಳುವವರೇ!


ಯೇಸುಸ್ವಾಮಿ ತಾವು ಬೆಳೆದ ಊರಾದ ನಜರೇತಿಗೆ ಬಂದರು. ವಾಡಿಕೆಯ ಪ್ರಕಾರ ಸಬ್ಬತ್‌ದಿನ ಪ್ರಾರ್ಥನಾಮಂದಿರಕ್ಕೆ ಹೋದರು. ಅಲ್ಲಿ ಪವಿತ್ರ ಗ್ರಂಥವನ್ನು ಓದುವುದಕ್ಕೆ ಅವರು ಎದ್ದು ನಿಂತಾಗ, ಪ್ರವಾದಿ ಯೆಶಾಯನ ಗ್ರಂಥದ ಸುರುಳಿಯನ್ನು ಅವರ ಕೈಗೆ ಕೊಟ್ಟರು. ಅದನ್ನು ಬಿಚ್ಚಿದಾಗ ಈ ಕೆಳಗಿನ ವಚನಗಳು ಯೇಸುವಿನ ಕಣ್ಣಿಗೆ ಬಿದ್ದವು: “ ದೇವರಾತ್ಮ ನನ್ನ ಮೇಲಿದೆ ದೀನದಲಿತರಿಗೆ ಶುಭಸಂದೇಶವನ್ನು ಬೋಧಿಸಲೆಂದು ಅವರೆನ್ನನು ಅಭಿಷೇಕಿಸಿದ್ದಾರೆ; ಬಂಧಿತರಿಗೆ ಬಿಡುಗಡೆಯನ್ನು, ಅಂಧರಿಗೆ ದೃಷ್ಟಿದಾನವನ್ನು ಪ್ರಕಟಿಸಲೂ ಶೋಷಿತರಿಗೆ ಸ್ವಾತಂತ್ರ್ಯ ನೀಡಲೂ ದೇವರು ತಮ್ಮ ಜನತೆಯನ್ನು ಉದ್ದರಿಸುವ ಕಾಲ ಬಂತೆಂದು ಸಾರಲೂ ಅವರು ನನ್ನನ್ನು ಕಳುಹಿಸಿದ್ದಾರೆ.”ಈ ವಾಕ್ಯವನ್ನು ಓದಿ, ಸುರುಳಿಯನ್ನು ಸುತ್ತಿ, ಪ್ರಾರ್ಥನಾಮಂದಿರದ ಸೇವಕನ ಕೈಗಿತ್ತು, ಯೇಸು ಕುಳಿತುಕೊಂಡರು. ಅಲ್ಲಿದ್ದ ಎಲ್ಲರ ಕಣ್ಣುಗಳು ಅವರ ಮೇಲೆಯೇ ನಾಟಿದ್ದವು. ಆಗ ಯೇಸು, “ನೀವು ಈ ಪವಿತ್ರ ವಾಕ್ಯವನ್ನು ಕೇಳುತ್ತಿದ್ದ ಹಾಗೆಯೇ ಅದು ಇಂದು ನೆರವೇರಿತು,” ಎಂದು ವಿವರಿಸಲಾರಂಭಿಸಿದರು.

ಚಿಂತನೆ:
“ದೇವರಾತ್ಮವು ನನ್ನಮೇಲಿದೆ, ದೀನದಲಿತರಿಗೆ ಶುಭಸಂದೇಶವನ್ನು ಭೋಧಿಸಲೆಂದು ಅವರೆನ್ನನು ಅಭಿಷೇಕಿಸಿದ್ದಾರೆ; ಬಂಧಿತರಿಗೆ ಬಿಡುಗಡೆಯನ್ನು, ಅಂದರಿಗೆ ದೃಷ್ಟಿದಾನವನ್ನು ಪ್ರಕಟಿಸಲೂ ದಬ್ಬಾಳಿಕೆಗೀಡಾದವರಿಗೆ ಸ್ವಾತಂತ್ರ್ಯ ನೀಡಲೂ ದೇವರು ತಮ್ಮ ಜನತೆಯನ್ನು ಉದ್ಧರಿಸವ ಕಾಲ ಬಂತೆಂದು ಸಾರಲೂ ಅವರು ನನ್ನನ್ನು ಕಳುಹಿಸಿದ್ದಾರೆ.” (ಲೂಕ 4:18-19). ಲೂಕನ ಶುಭಸಂದೇಶದಲ್ಲಿ ಬರುವ ಈ ವಾಚನದಲ್ಲಿ ಯೇಸುವು ಧರೆಗಿಳಿದು ಬಂದ ಉದ್ದೇಶವನ್ನು ನಮಗೆ ತಿಳಿಯ ಪಡಿಸುತ್ತದೆ. ಅವರ ಸೇವಾ ಜೀವನದ ಆರಂಭದಿಂದಲೇ ಪವಿತ್ರಾತ್ಮರಿಗೆ ಮತ್ತು ಪವಿತ್ರಗ್ರಂಥಕ್ಕೆ ಒತ್ತು ನೀಡಿರುವುದನ್ನು ಗಮನಿಸಬೇಕು. ಯೇಸುವಿನ ಈ ಎಲ್ಲಾ ಯೋಜನೆಗಳು ಮತ್ತು ಅವರ ಜೀವನದಲ್ಲಿ ನೆರವೇರಿಸಿದ ಎಲ್ಲಾ ಕಾರ್ಯಗಳು ಪವಿತ್ರಾತ್ಮರಿಂದ ಪ್ರೇರಿತವಾದವುಗಳು, ಅವರ ಭೋದನೆ, ರೋಗಿಗಳಿಗೆ ನೀಡಿದ ಉಪಶಮನ, ದೆವ್ವಗಳ ಉಚ್ಚಾಟನೆ ಇವೆಲ್ಲವೂ ಪವಿತ್ರಾತ್ಮರ ಶಕ್ತಿಯಿಂದಲೇ ಸಾಧ್ಯವಾಯಿತು. ಯೇಸು ಪ್ರಕಟಿಸಿದ ಬಿಡುಗಡೆ ಕೇವಲ ದೇವರಿಂದ ಆಯ್ಕೆಯಾದ ಒಂದು ಜನಾಂಗಕ್ಕೆ ಮಾತ್ರವಲ್ಲ ಬದಲಾಗಿ ಅದು ಇಡೀ ಮಾನವ ಜನಾಂಗಕ್ಕೆ(ಯೇಸು ವಿಶೇಷವಾಗಿ ಬಡವರ,ದೀನ ದಲಿತರ, ಶೋಷಿತವರ್ಗದವರನ್ನು ಸಂತೈಸಿದರು) ಪ್ರಕಟಿಸಿರುವ ಬಿಡುಗಡೆ ಎಂದು ಲೂಕನ ಶುಭಸಂದೇಶ ಸಾರುತ್ತದೆ.


ಇಂದಿನ ನಮ್ಮ ಸಮಾಜದಲ್ಲಿ ರಾಜಕೀಯ ಪುಡಾರಿಗಳು ಚುನಾವಣೆಯ ಸಂದರ್ಭದಗಳಲ್ಲಿ ತಮ್ಮ ಪ್ರಣಾಳಿಕೆಯನ್ನು ಜನತೆಯ ಮುಂದೆ ಪ್ರಕಟಿಸುವಾಗ,ಮತಗಳಿಕೆಯ ಉದ್ದೇಶವನ್ನು ಇರಿಸಿಕೊಂಡು ಜನರ ಮನಸ್ಸಿಗೆ ತಟ್ಟುವಂತಹ ಭಾಷೆಯಲ್ಲಿ ದೊಡ್ಡ ದೊಡ್ಡ ಅಶ್ವಾಸನೆಗಳನ್ನು ನೀಡುತ್ತಾರೆ.ಆದರೆ ಸರ್ವಜನರ ಸರ್ವತೋಮುಖ ವಿಮೋಚನೆಯ ಬಗ್ಗೆ ಕಾಳಜಿತೋರುವ ಯೋಜನೆಗಳು ಅಪರೂಪವಾಗಿಬಿಟ್ಟಿವೆ. ಚುನಾವಣೆಯ ನಂತರದಲ್ಲಿ ಬಡವನು ಬಡವನಾಗಿಯೇ ಉಳಿಯುತ್ತಾನೆ.ಶೋಷಣೆಗೆ ಒಳಗಾದವನು ಶೋಷಿತನಾಗಿಯೇ ಜೀವನ ಮುಂದುವರೆಸುತ್ತಾನೆ.ಯೇಸುವಿನ ಯೋಜನೆಯಲ್ಲಿ ಸರ್ವರ ಉದ್ದಾರದ ಭರವಸೆಗಳಿವೆ.ಜೀವವಿಲ್ಲದ ಬದುಕಿಗೆ ಜೀವ ತುಂಬುವ, ಜೀವವನ್ನು ನಾಶಮಾಡುವಂತಹ ಶಕ್ತಿಗಳನ್ನು ಧಮನಮಾಡುವಂತಹ ಉದ್ದೇಶಗಳು ಯೇಸುವಿನ ಕಾಯಕ ಯೋಜನೆಯಲ್ಲಿದೆ.


23.01.2010 - ಈತನಿಗೆ ಹುಚ್ಚು ಹಿಡಿದಿದೆ

ಸಂತ ಮಾರ್ಕನು ಬರೆದ ಶುಭಸಂದೇಶದಿಂದ ವಾಚನ -  3: 20-21

ಯೇಸುವಿಗೂ ಶಿಷ್ಯರಿಗೂ ಊಟಮಾಡಲು ಕೂಡ ಬಿಡುವಿಲ್ಲದೆ ಹೋಯಿತ್ತು.

ಯೇಸುಸ್ವಾಮಿ ಮನೆಗೆ ಹೋದಾಗ ಜನರು ಗುಂಪುಗುಂಪಾಗಿ ಬಂದರು. ಯೇಸುವಿಗೂ ಶಿಷ್ಯರಿಗೂ ಊಟಮಾಡಲು ಕೂಡ ಬಿಡುವಿಲ್ಲದೆ ಹೋಯಿತ್ತು. “ಈತನಿಗೆ ಹುಚ್ಚು ಹಿಡಿದಿದೆ,” ಎಂದು ಜನರು ಮಾತಾಡಿಕೊಳ್ಳುತ್ತಿದ್ದರು. ಆದ್ದರಿಂದ ಯೇಸುವಿನ ಬಂಧುಗಳು ಯೇಸುವನ್ನು ಹಿಡಿದುತರಲು ಹೊರಟರು.

22.01.2010 - ಇವರಿಬ್ಬರಿಗೆ ‘ಬೊವನೆರ್ಗೆಸ್’ ಎಂದರೆ ‘ಸಿಡಿಲಮರಿಗಳು’ ಎಂಬ ಹೆಸರನ್ನಿಟ್ಟರು

ಸಂತ ಮಾರ್ಕನು ಬರೆದ ಶುಭಸಂದೇಶದಿಂದ ವಾಚನ - 3: 13-19

ಯೇಸು ಹನ್ನೆರಡು ಮಂದಿಯನ್ನು ಆಯ್ದುಕೊಂಡು, ‘ಪ್ರೇಷಿತರು’ ಎಂದು ಅವರಿಗೆ ಹೆಸರಿಟ್ಟರು.

ಅನಂತರ ಯೇಸುಸ್ವಾಮಿ ಬೆಟ್ಟವನ್ನೇರಿ, ತಮಗೆ ಒಪ್ಪಿಗೆಯಾದವರನ್ನು ಕರೆದರು. ಅವರು ಹತ್ತಿರಕ್ಕೆ ಬಂದರು. ಯೇಸು ಹನ್ನೆರಡು ಮಂದಿಯನ್ನು ಆಯ್ದುಕೊಂಡು, ‘ಪ್ರೇಷಿತರು’ ಎಂದು ಅವರಿಗೆ ಹೆಸರಿಟ್ಟರು. “ನನ್ನ ಜೊತೆಯಲ್ಲಿ ಇರಲು ನಿಮ್ಮನ್ನು ಆರಿಸಿಕೊಂಡಿದ್ದೇನೆ. ಶುಭಸಂದೇಶವನ್ನು ಸಾರಲು ನಿಮ್ಮನ್ನು ಕಳಹಿಸುತ್ತೇನೆ. ದೆವ್ವಗಳನ್ನು ಬಿಡಿಸುವ ಅಧಿಕಾರವನ್ನು ನಿಮಗೆ ಕೊಡುತ್ತೇನೆ”, ಎಂದು ಅವರಿಗೆ ಹೇಳಿದರು. ಹೀಗೆ ನೇಮಕಗೊಂಡ ಹನ್ನೆರಡು ಮಂದಿ ಯಾರೆಂದರೆ: ಸಿಮೋನ(ಯೇಸು ಈತನಿಗೆ ‘ಪೇತ್ರ’ ಎಂದು ಹೆಸರಿಟ್ಟರು). ಜೆಬೆದಾಯನ ಮಗ ಯಕೋಬ ಮತ್ತು ಅವನ ಸಹೋದರ ಯೊವಾನ್ನ(ಯೇಸು ಇವರಿಬ್ಬರಿಗೆ ‘ಬೊವನೆರ್ಗೆಸ್’ ಎಂದರೆ ‘ಸಿಡಿಲಮರಿಗಳು’ ಎಂಬ ಹೆಸರನ್ನಿಟ್ಟರು). ಅಂದ್ರೆಯ, ಫಿಲಿಪ್ಪ, ಬಾರ್ತಲೊಮಾಯ, ಮತ್ತಾಯ, ತೋಮ, ಅಲ್ಫಾಯನ ಮಗ ಯಕೋಬ, ತದ್ದಾಯ, ದೇಶಾಭಿಮಾನಿ ಆದ ಸಿಮೋನ ಮತ್ತು ಮುಂದೆ ಗುರುದ್ರೋಹಿಯಾಗಲಿದ್ದ ಯೂದ ಇಸ್ಕರಿಯೋತ.

21.01.2010 - “ನೀವು ದೇವರ ಪುತ್ರ”

ಸಂತ ಮಾರ್ಕನು ಬರೆದ ಶುಭಸಂದೇಶದಿಂದ ವಾಚನ್ 3: 7-12

ಆದರೆ ಯೇಸು, ತಾವು ಯಾರೆಂಬುದನ್ನು ಪ್ರಕಟಿಸಬಾರದೆಂದು ಅವುಗಳಿಗೆ ಕಟ್ಟಪ್ಪಣೆ ಮಾಡುತ್ತಿದ್ದರು.

ಯೇಸುಸ್ವಾಮಿ ತಮ್ಮ ಶಿಷ್ಯರ ಜೊತೆಯಲ್ಲಿ ಗಲಿಲೇಯ ಸರೋವರದ ತೀರಕ್ಕೆ ಹೊರಟು ಹೋದರು. ಸಾವಿರಾರು ಜನರು ಅವರನ್ನು ಹಿಂಬಾಲಿಸಿದರು. ಈ ಜನರು ಯೇಸು ಮಾಡುತ್ತಿದ್ದ ಮಹತ್ಕಾರ್ಯಗಳ ಸಮಾಚಾರವನ್ನು ಕೇಳಿ, ಗಲಿಲೇಯ ಪ್ರಾಂತ್ಯದಿಂದ, ಜುದೇಯ ಪ್ರಾಂತ್ಯದಿಂದ, ಜೆರುಸಲೇಮ್ ನಗರದಿಂದ, ಇದುಮೇಯ ಪ್ರಾಂತ್ಯದಿಂದ, ಜೋರ್ಡನ್ ನದಿಯ ಪೂರ್ವ ಪ್ರದೇಶ ಹಾಗು ಟೈರ್-ಸಿದೋನ್ ಪಟ್ಟಣಗಳ ಸುತ್ತಮುತ್ತಲಿಂದ ಬಂದಿದ್ದರು. ಜನಸಂದಣಿ ಅಧಿಕವಾಗುತ್ತಿದ್ದುದರಿಂದ ಅವರು ತಮ್ಮ ಮೈಮೇಲೆ ಬಿದ್ದಾರೆಂದು ಯೇಸು, ತಮಗೆ ಒಂದು ದೋಣಿಯನ್ನು ಸಿದ್ಧವಾಗಿಡಲು ಶಿಷ್ಯರಿಗೆ ಹೇಳಿದರು. ಯೇಸು ಅನೇಕರನ್ನು ಗುಣಪಡಿಸಿದ್ದರಿಂದ ರೋಗಿಗಳೆಲ್ಲರೂ ಅವರನ್ನು ಮುಟ್ಟಬೇಕೆಂದು ಮುನ್ನುಗ್ಗಿ ಮೇಲೆ ಮೇಲೆ ಬೀಳುತ್ತಿದ್ದರು. ದೆವ್ವಗಳು ಸಹ ಅವರನ್ನು ಕಂಡಾಗಲೆಲ್ಲಾ ಅವರ ಪಾದಕ್ಕೆರಗಿ, “ನೀವು ದೇವರ ಪುತ್ರ” ಎಂದು ಕಿರುಚುತ್ತಿದ್ದವು. ಆದರೆ ಯೇಸು, ತಾವು ಯಾರೆಂಬುದನ್ನು ಪ್ರಕಟಿಸಬಾರದೆಂದು ಅವುಗಳಿಗೆ ಕಟ್ಟಪ್ಪಣೆ ಮಾಡುತ್ತಿದ್ದರು.

20.01.2010 - "ನಿನ್ನ ಕೈಯನ್ನು ಚಾಚು”

ಸಂತ ಮಾರ್ಕನು ಬರೆದ ಶುಭ ಸಂದೇಶದಿಂದ ವಾಚನ :  3: 1- 6

“ಸಬ್ಬತ್ ದಿನದಲ್ಲಿ ಏನು ಮಾಡುವುದು ಧರ್ಮ? ಒಳಿತನ್ನೊ ಅಥವಾ ಕೆಡುಕನ್ನೊ?

ಯೇಸುಸ್ವಾಮಿ ಪ್ರಾರ್ಥನಾಮಂದಿರಕ್ಕೆ ಪುನ: ಹೋದರು. ಅಲ್ಲಿ ಒಬ್ಬ ಬತ್ತಿದ ಕೈಯುಳ್ಳವನು ಇದ್ದನು. ಅವನನ್ನು ಸಬ್ಬತ್ ದಿನದಲ್ಲಿ ಗುಣಪಡಿಸಿದ್ದೇ ಆದರೆ ಯೇಸುವಿನ ವಿರುದ್ಧ ತಪ್ಪು ಹೊರಿಸಬಹುದೆಂಬ ಉದ್ದೇಶದಿಂದ ಕೆಲವರು ಹೊಂಚುಹಾಕುತ್ತಿದ್ದರು. ಯೇಸು ಬತ್ತಿದ ಕೈಯುಳ್ಳವನಿಗೆ, “ಎದ್ದು ಮುಂದಕ್ಕೆ ಬಾ,” ಎಂದರು. ಬಳಿಕ ಅಲ್ಲಿದ್ದವರನ್ನು ಉದ್ದೇಶಿಸಿ, “ಸಬ್ಬತ್ ದಿನದಲ್ಲಿ ಏನು ಮಾಡುವುದು ಧರ್ಮ? ಒಳಿತನ್ನೊ ಅಥವಾ ಕೆಡುಕನ್ನೊ? ಒಬ್ಬನ ಪ್ರಾಣವನ್ನು ಉಳಿಸುವುದೋ ಅಥವಾ ಅಳಿಸುವುದೋ ಹೇಳಿ,” ಎಂದು ಕೇಳಲು ಅವರು ಮಾತೇ ಎತ್ತಲಿಲ್ಲ. ಯೇಸು ಸುತ್ತಲೂ ಇದ್ದವರನ್ನು ಕೋಪದಿಂದ ದಿಟ್ಟಿಸಿ ಅವರ ಹೃದಯ ಕಲ್ಲಾಗಿರುವುದನ್ನು ಕಂಡು, ಮನನೊಂದು, ಬತ್ತಿದ ಕೈಯುಳ್ಳವನಿಗೆ, “ನಿನ್ನ ಕೈಯನ್ನು ಚಾಚು,” ಎಂದರು. ಅವನು ಚಾಚಿದನು, ಅದು ಸಂಪೂರ್ಣ ಸ್ವಸ್ಥವಾಯಿತು. ಫರಿಸಾಯರು ಅಲ್ಲಿಂದ ಹೊರಗೆ ಹೋದರು. ಕೊಡಲೇ ಹೆರೋದಿಯರೊಡನೆ ಸೇರಿಕೊಂಡು ಯೇಸುವನ್ನು ಕೊಲೆಮಾಡಲು ಒಳಸಂಚು ಹೂಡಿದರು.

19.01.2010- "ನರಪುತ್ರನು ಸಬ್ಬತ್ತಿಗೂ ಒಡೆಯ”

ಸಂತ ಮಾರ್ಕನು ಬರೆದ ಶುಭಸಂದೇಶದಿಂದ ವಾಚನ - 2: 23-28

“ಸಬ್ಬತ್ ದಿನ ಇರುವುದು ಮನುಷ್ಯನಿಗಾಗಿ ಹೊರತು ಮನುಷ್ಯ ಇರುವುದು ಸಬ್ಬತ್ತಿಗಾಗಿ ಅಲ್ಲ."

ಅದೊಂದು ಸಬ್ಬತ್ ದಿನ. ಯೇಸುಸ್ವಾಮಿ ಗೋಧಿಯ ಹೊಲಗಳಲ್ಲಿ ಹಾದು ಹೋಗುತ್ತಿದ್ದರು. ಜೊತೆಯಲ್ಲಿದ್ದ ಅವರ ಶಿಷ್ಯರು ತೆನೆಗಳನ್ನು ಕೀಳಲಾರಂಭಿಸಿದರು. ಇದನ್ನು ಕಂಡ ಫರಿಸಾಯರು, “ನೋಡು, ಸಬ್ಬತ್  ದಿನದಲ್ಲಿ ನಿಷಿದ್ಧವಾದುದನ್ನು ನಿನ್ನ ಶಿಷ್ಯರು ಮಾಡುತ್ತಿದ್ದಾರೆ, ಇದು ಸರಿಯೇ?” ಎಂದು ಯೇಸುವನ್ನು ಪ್ರಶ್ನಿಸಿದರು. ಅದಕ್ಕೆ ಯೇಸು, “ಹಿಂದೆ, ಅರಸ ದಾವೀದನು ಮತ್ತು ಸಂಗಡಿಗರು ಹಸಿದಿದ್ದು, ಉಣ್ಣಲು ಏನೂ ಇಲ್ಲದಿದ್ದಾಗ ಏನು ಮಾಡಿದರೆಂಬುದನ್ನು ನೀವು ಓದಿರಬೇಕಲ್ಲವೇ? ಪ್ರಧಾನ ಯಾಜಕ ಅಬಿಯಾತರನ ಕಾಲದಲ್ಲಿ ಅವನು ದೇವಮಂದಿರದೊಳಕ್ಕೆ ಹೋಗಿ,ಯಾಜಕನ ಹೊರತು ಬೇರೆ ಯಾರೂ ತಿನ್ನಬಾರದಾಗಿದ್ದ ನೈವೇದ್ಯದ ರೊಟ್ಟಿಗಳನ್ನೇ ತಿಂದ; ಅಲ್ಲದೆ, ತನ್ನ ಸಂಗಡ ಇದ್ದವರಿಗೂ ಕೊಟ್ಟನಲ್ಲವೇ?” ಎಂದು ಅವರನ್ನು ಕೇಳಿದರು. ಬಳಿಕ ಯೇಸು ಅವರಿಗೆ, “ಸಬ್ಬತ್ ದಿನ ಇರುವುದು ಮನುಷ್ಯನಿಗಾಗಿ ಹೊರತು ಮನುಷ್ಯ ಇರುವುದು ಸಬ್ಬತ್ತಿಗಾಗಿ ಅಲ್ಲ. ಅದುದರಿಂದ ನರಪುತ್ರನು ಸಬ್ಬತ್ತಿಗೂ ಒಡೆಯ,” ಎಂದರು.

18.01.2010 - ಹಳೆಯ ಅಂಗಿ; ಹೊಸ ತೇಪೆ.

ಸಂತ ಮಾರ್ಕನು ಬರೆದ ಶುಭ ಸಂದೇಶದಿಂದ ವಾಚನ 2: 18-22

"ಮದುವಣಿಗನು ಜೊತೆಯಲ್ಲಿ ಇರುವಾಗ ಅವನ ಆಪ್ತರು ಉಪವಾಸ ಮಾಡುವುದುಂಟೆ?"

ಯೊವಾನ್ನನ ಶಿಷ್ಯರು ಮತ್ತು ಫರಿಸಾಯರು ಉಪವಾಸವ್ರತವನ್ನು ಕೈಗೊಂಡಿದ್ದ ಒಂದು ಸಂದರ್ಭದಲ್ಲಿ, ಕೆಲವು ಜನರು ಯೇಸುಸ್ವಾಮಿಯ ಬಳಿಗೆ ಬಂದರು. ಅವರು, “ಯೊವಾನ್ನನ ಶಿಷ್ಯರು ಮತ್ತು ಫರಿಸಾಯರ ಶಿಷ್ಯರು ಉಪವಾಸ ವ್ರತಗಳನ್ನು ಕೈಗೊಳ್ಳುತ್ತಾರೆ, ಆದರೆ ನಿನ್ನ ಶಿಷ್ಯರೇಕೆ ಹಾಗೆ ಮಾಡುವುದಿಲ್ಲ?” ಎಂದು ಕೇಳಿದರು. ಅದಕ್ಕೆ ಯೇಸು. ಮದುವಣಿಗನು ಜೊತೆಯಲ್ಲಿ ಇರುವಾಗ ಅವನ ಆಪ್ತರು ಉಪವಾಸ ಮಾಡುವುದುಂಟೆ? ಖಂಡಿತವಾಗಿಯೂ ಇಲ್ಲ. ಅವನು ತಮ್ಮ ಜೂತೆಯಲ್ಲಿರುವಷ್ಟು ಕಾಲ ಅವರು ಉಪವಾಸ ಮಾಡಲಾಗದು. ಮದುವಣಿಗನು ಅವರಿಂದ ಅಗಲಬೇಕಾಗುವ ಕಾಲ ಬರುವುದು. ಆಗ ಅವರು ಉಪವಾಸ ಮಾಡುವರು. “ಹಳೆಯ ಅಂಗಿಗೆ ಹೊಸ ಬಟ್ಟೆಯ ತೇಪೆಯನ್ನು ಯಾರು ಹಾಕುವುದಿಲ್ಲ. ಹಾಕಿದಲ್ಲಿ, ಹೊಸ ತೇಪೆಯು ಹಳೆಯ ಅಂಗಿಯನ್ನು ಹಿಂಜುವುದರಿಂದ ಹರಕು ಹೆಚ್ಚಾಗುತ್ತದೆ. ಅಂತೆಯೇ ಹಳೆಯ ಬುದ್ದಲಿಗಳಲ್ಲಿ ಹೊಸ ಮದ್ಯವನ್ನು ಯಾರು ತುಂಬಿಡುವುದಿಲ್ಲ. ತುಂಬಿಟ್ಟರೆ ಅದರಿಂದ ಬುದ್ದಲಿಗಳು ಬಿರಿಯುತ್ತದೆ. ಮದ್ಯವು ಮತ್ತು ಬುದ್ದಲಿಗಳು ಎರಡೂ ನಷ್ಟವಾಗುತ್ತದೆ. ಆದುದರಿಂದ ಹೊಸ ಬುದ್ದಲಿಗಳಲ್ಲೇ ತುಂಬಿಡಬೇಕು,” ಎಂದರು

17.01.10 - ಆತ ಹೇಳಿದಂತೆ ಮಾಡಿ



ಸಂತ ಯೊವಾನ್ನನು ಬರೆದ ಶುಭ ಸಂದೇಶದಿಂದ ವಾಚನ  - 2: 1-11

ಯೇಸು ಮಾಡಿದ ಮೊದಲನೆಯ ಸೂಚಕಕಾರ್ಯ ಇದು.


ಮಾರನೆಯ ದಿನ ಗಲಿಲೇಯದ ಕಾನ ಎಂಬ ಊರಿನಲ್ಲಿ ಒಂದು ಮದುವೆ ನಡೆಯಿತು. ಯೇಸುಸ್ವಾಮಿಯ ತಾಯಿ ಅಲ್ಲಿಗೆ ಬಂದಿದ್ದರು. ಯೇಸುವಿಗೂ ಅವರ ಶಿಷ್ಯರಿಗೂ ಆ ಮದುವೆ ಆಮಂತ್ರಣವಿತ್ತು. ಆ ಸಂದರ್ಭದಲ್ಲಿ ದ್ರಾಕ್ಷಾರಸ ಸಾಲದೆ ಹೋಯಿತು. ಆಗ ಯೇಸುವಿನ ತಾಯಿ,” ಅವರಲ್ಲಿ ದ್ರಾಕ್ಷಾರಸ ಮುಗಿದು ಹೋಗಿದೆ,” ಎಂದು ಯೇಸುವಿಗೆ ಹೇಳಿದರು. ಅದಕ್ಕೆ ಯೇಸು, “ಅಮಾ, ಇದನ್ನು ನನಗೇಕೆ ಹೇಳುತ್ತೀ? ನನ್ನ ಗಳಿಗೆ ಇನ್ನೂ ಬಂದಿಲ್ಲ” ಎಂದು ಉತ್ತರಕೊಟ್ಟರು.. ತಾಯಿ ಸೇವಕರಿಗೆ,” ಆತ ಹೇಳಿದಂತೆ ಮಾಡಿ,” ಎಂದು ತಿಳಿಸಿದರು. ಯೆಹೂದ್ಯರ ಶುದ್ಧಾಚಾರ ಪದ್ಧತಿಯಂತೆ ಆರು ಕಲ್ಲಿನ ಬಾನೆಗಳನ್ನು ಅಲ್ಲಿ ಇಟ್ಟಿದ್ದರು.. ಅವು ಒಂದೊಂದು ಎರಡು ಮೂರು ಕೊಡ ನೀರು ಹಿಡಿಯುವಷ್ಟು ದೊಡ್ಡದಾಗಿದ್ದವು. ಯೇಸುಸ್ವಾಮಿ ಸೇವಕರಿಗೆ, “ಆ ಬಾನೆಗಳಲ್ಲಿ ನೀರು ತುಂಬಿರಿ,” ಎಂದು ಹೇಳಿದರು. ಅವರ ಕಂಠದವರೆಗೆ ತುಂಬಿದರು. ಯೇಸು, “ಈಗ ತೋಡಿಕೊಂಡು ಹೋಗಿ ಔತಣದ ಮೇಲ್ವಿಚಾರಕನಿಗೆ ಕೊಡಿ,” ಎಂದು ಹೇಳಲು ಅವರು ಹಾಗೆ ಮಾಡಿದರು. ಮೇಲ್ವಿಚಾರಕನು ದ್ರಾಕ್ಷಾರಸವಾಗಿ ಮಾರ್ಪಟ್ಟಿದ್ದ ನೀರಿನ ರುಚಿ ನೋಡಿದರು. ಅದು ಎಲ್ಲಿಂದ ಬಂದಿತೆಂಬುದು ಅವನಿಗೆ ತಿಳಿದಿರಲಿಲ್ಲ. ನೀರನ್ನು ತೋಡಿಕೊಂಡು ಬಂದ ಸೇವಕರಿಗೆ ಮಾತ್ರ ತಿಳಿದಿತ್ತು. ಆದುದರಿಂದ ಅವನು ಮದುಮಗನನ್ನು ಕರೆದು, “ಜನರೆಲ್ಲರು ಉತ್ತಮವಾದ ದ್ರಾಕ್ಷಾರಸವನ್ನು ಮೊದಲು ಹಂಚುತ್ತಾರೆ; ಅತಿಥಿಗಳು ಯೆಥೇಚ್ಚವಾಗಿ ಕುಡಿದಾದ ಮೇಲೆ ಸಾಧಾರಣ ದ್ರಾಕ್ಷಾರಸವನ್ನು ಕೊಡುತ್ತಾರೆ. ನೀನಾದರೋ ಉತ್ತಮವಾದುದನ್ನು ಈವರೆಗೂ ಇಟ್ಟಿದ್ದೀಯಲ್ಲಾ!” ಎಂದು ಹೇಳಿದನು.


ಯೇಸು ಮಾಡಿದ ಮೊದಲನೆಯ ಸೂಚಕಕಾರ್ಯ ಇದು. ಇದನ್ನು ಗಲಿಲೇಯ ನಾಡಿನ ಕಾನ ಊರಿನಲ್ಲಿ ಮಾಡಿ ತಮ್ಮ ಮಹಿಮೆಯನ್ನು ತೋರ್ಪಡಿಸಿದರು. ಅವರ ಶಿಷ್ಯರಿಗೂ ಅವರಲ್ಲಿ ವಿಶ್ವಾಸ ಮೂಡಿತು. ಇದಾದ ಮೇಲೆ ಯೇಸು, ಅವರ ತಾಯಿ, ಸಹೋದರರು ಮತ್ತು ಶಿಷ್ಯರು ಕಫರ್ನವುಮಿಗೆ ಹೋಗಿ ಅಲ್ಲಿ ಕೆಲವು ದಿನ ತಂಗಿದ್ದರು.  

16.01.10 - "ನನ್ನನ್ನು ಹಿಂಬಾಲಿಸು"

ಸಂತ ಮಾರ್ಕನು ಬರೆದ ಶುಭ ಸಂದೇಶದಿಂದ ವಾಚನ  - 2:13-17

ಸುಂಕದವರು, ಪಾಪಿಷ್ಠರು, ಇವರೆಲ್ಲರು ಯೇಸು ಮತ್ತು ಅವರ ಶಿಷ್ಯರ ಪಂಕ್ತಿಯಲ್ಲೇ ಊಟಕ್ಕೆ ಕುಳಿತರು.

ಯೇಸುಸ್ವಾಮಿ ಪುನ: ಗಲಿಲೇಯ ಸರೋವರದ ತೀರಕ್ಕೆ ಹೋದರು. ಜನರ ಗುಂಪು ಅವರನ್ನು ಸುತ್ತುಗಟ್ಟಿತು. ಯೇಸು ಅವರಿಗೆ ಪ್ರಭೋದಿಸಿದರು. ಅಲ್ಲಿಂದ ಹೊರಟು ಹೋಗುತ್ತಿರುವಾಗ, ಅಲ್ಫಾಯನ ಮಗನಾದ ಲೇವಿಯ ಸುಂಕವಸೂಲಿಗಾಗಿ ಉಕ್ಕಡದಲ್ಲಿ ಕುಳಿತ್ತಿರುವುದನ್ನು ಯೇಸು ಕಂಡರು. “ನನ್ನನ್ನು ಹಿಂಬಾಲಿಸು,” ಎಂದು ಹೇಳಿ ಕರೆದರು. ಲೇವಿ ಎದ್ದು ಅವರನ್ನು ಹಿಂಬಾಲಿಸಿದನು. ತದ ನಂತರ ಯೇಸು ಲೇವಿಯ ಮನೆಯಲ್ಲಿ ಊಟಕ್ಕೆ ಕುಳಿತ್ತಿದ್ದರು. ಬಹು ಮಂದಿ ಸುಂಕದವರು, ಪಾಪಿಷ್ಠರು, ಅಲ್ಲಿಗೆ ಬಂದರು. ಇವರೆಲ್ಲರು ಯೇಸು ಮತ್ತು ಅವರ ಶಿಷ್ಯರ ಪಂಕ್ತಿಯಲ್ಲೇ ಊಟಕ್ಕೆ ಕುಳಿತರು. ಇಂಥವರು ಬಹುಮಂದಿ ಯೇಸುವನ್ನು ಹಿಂಬಾಲಿಸುತ್ತಿದ್ದರು. ಫರಿಸಾಯ ಪಂಥಕ್ಕೆ ಸೇರಿದ್ದ ಧರ್ಮಶಾಸ್ತ್ರಿಗಳಲ್ಲಿ ಕೆಲವರು, ಸುಂಕದವರ ಮತ್ತು ಇತರ ಪಾಪಿಗಳ ಪಂಕ್ತಿಯಲ್ಲಿ ಯೇಸು ಊಟ ಮಾಡುವುದನ್ನು ಕಂಡು, “ಈತನನ್ನು ಇಂಥಾ ಬಹಿಷ್ಕೃತ ಜನರ ಜೊತೆಯಲ್ಲಿ ಊಟಮಾಡುವುದೇಕೆ?” ಎಂದು ಯೇಸುವಿನ ಶಿಷ್ಯರೊಡನೆ ಆಕ್ಷೇಪಿಸಿದರು.

14.01.10 - “ತಾವು ಮನಸ್ಸು ಮಾಡಿದಲ್ಲಿ ನನ್ನನು ಗುಣಮಾಡಬಲ್ಲಿರಿ”

ಸಂತ ಮಾರ್ಕನು ಬರೆದ ಶುಭ ಸಂದೇಶದಿಂದ ವಾಚನ - 1:40-45

“ಖಂಡಿತವಾಗಿ ನನ್ನ ಮನಸ್ಸಿದೆ, ನಿನಗೆ ಗುಣವಾಗಲಿ”

ಒಮ್ಮೆ ಕುಷ್ಠರೋಗಿಯೊಬ್ಬನು ಯೇಸುಸ್ವಾಮಿಯ ಬಳಿಗೆ ಬಂದು, ಮೊಣಕಾಲೂರಿ, “ತಾವು ಮನಸ್ಸು ಮಾಡಿದಲ್ಲಿ ನನ್ನನು ಗುಣಮಾಡಬಲ್ಲಿರಿ” ಎಂದು ದೈನ್ಯದಿಂದ ಬೇಡಿಕೊಂಡನು. ಯೇಸುವಿನ ಮನ ಕರಗಿತು. ಅವರು ಕೈ ಚಾಚಿ, ಕುಷ್ಠರೋಗಿಯನ್ನು ಮುಟ್ಟಿ,”ಖಂಡಿತವಾಗಿ ನನ್ನ ಮನಸ್ಸಿದೆ, ನಿನಗೆ ಗುಣವಾಗಲಿ,” ಎಂದರು. ತಕ್ಷಣ ಅವನ ಕುಷ್ಠವು ಮಾಯವಾಯಿತು. ಅವನು ಗುಣಹೊಂದಿದನು. ಯೇಸು ಅವನಿಗೆ ,” ಎಚ್ಚರಿಕೆ! ನೀನು ಗುಣ ಹೋಂದಿರುವುದನ್ನು ಯಾರಿಗೂ ಹೇಳಕೂಡದು. ಆದರೆ ನೆಟ್ಟಗೆ ಯಾಜಕನ ಬಳಿಗೆ ಹೋಗು; ಅವನು ನಿನ್ನನ್ನು ಪರೀಕ್ಷಿಸಿ ನೋಡಲಿ. ಅನಂತರ ಮೋಶೆ  ನಿಯಮಿಸಿರುವ ಶುದ್ಧೀಕರಣ ವಿಧಿಗಳನ್ನು ಅನುಸರಿಸು. ಇದು ಜನರಿಗೆ ಸಾಕ್ಷಿಯಾಗಿರಲಿ,” ಎಂದು ಎಚ್ಚರಿಸಿ ಅವನನ್ನು ಕೂಡಲೇ ಕಳುಹಿಸಿಬಿಟ್ಟರು.ಅದರೆ ಅವನು ಹೋಗಿ ಈ ಸಮಾಚಾರವನ್ನು ಎಲ್ಲೆಲ್ಲೂ ಸಾರಿದನು. ಈ ಕಾರಣ ಯೇಸು ಬಹಿರಂಗವಾಗಿ ಯಾವ ಪಟ್ಟಣದೊಳಕ್ಕೂ ಹೋಗಲು  ಆಗಲಿಲ್ಲ. ಆದುದರಿಂದ ನಿರ್ಜನ ಪ್ರದೇಶಗಳಲ್ಲೇ ಇರತೊಡಗಿದರು. ಆದರೂ ಜನರು ನಾಲ್ದೆಸೆಗಳಿಂದ ಅವರು ಇದ್ದಡೆಗೆ ಬರುತ್ತಲೇ ಇದ್ದರು.

12.01.10 - "ಸುಮ್ಮನಿರು, ಇವನನ್ನು ಬಿಟ್ಟು ತೊಲಗು" ಎಂದು ಆ ದೆವ್ವಕ್ಕೆ ಅಜ್ಞಾಪಿಸಿದರು"

ಸಂತ ಲೂಕ ಬರೆದ ಶುಭ ಸಂದೇಶದಿಂದ ವಾಚನ - 1:21-28

"ಇದೇನು ಹೊಸ ಬೋಧನೆ! ಈತ ದೆವ್ವಗಳಿಗೆ ಕೂಡ ಅಧಿಕಾರದಿಂದ ಅಜ್ಞಾಪಿಸುತ್ತಾನೆ"

ಯೇಸುಸ್ವಾಮಿ ಶಿಷ್ಯರೊಂದಿಗೆ ಕಫರ್ನಾವುಮ್ ಎಂಬ ಊರನ್ನು ಸೇರಿದರು. ಸಬ್ಬತ್ ದಿನ ಬಂದ ಕೂಡಲೇ ಯೇಸುಸ್ವಾಮಿ ಪ್ರಾರ್ಥನಾಮಂದಿರಕ್ಕೆ ಹೋಗಿ ಬೋಧಿಸತೊಡಗಿದರು.ಅವರ ಉಪದೇಶವನ್ನು ಕೇಳಿ ಜನರು ಬೆರಗಾದರು.ಏಕೆಂದರೆ ಯೇಸು,  ಧರ್ಮಶಾಸ್ತ್ರಿಗಳಂತೆ ಬೋಧಿಸದೆ ಅಧಿಕಾರವಾಣಿಯಿಂದ ಪ್ರಬೋಧಿಸುತ್ತಿದ್ದರು. ಅಲ್ಲಿ ದೆವ್ವ ಹಿಡಿದ ಒಬ್ಬನಿದ್ದನು. ಅವನು,"ನಜರೇತಿನ ಯೇಸುವೇ,ನಿಮಗೇಕೆ ನಮ್ಮ ಗೊಡವೆ? ನೀವು ನಮ್ಮ ವಿನಾಶಕ್ಕಾಗಿ ಬಂದವರೇನು? ನೀವು ಯಾರೆಂದು ನನಗೆ ಗೊತ್ತು. ದೇವರಿಂದ ಬಂದ ಪರಮಪೂಜ್ಯರು ನೀವು."ಎಂದು ಕಿರುಚಿದನು.ಆದರೆ ಯೇಸುಸ್ವಾಮಿ ಅವನನ್ನು ಗದರಿಸಿ, "ಸುಮ್ಮನಿರು,ಇವನನ್ನು ಬಿಟ್ಟು ತೊಲಗು"ಎಂದು ಆ ದೆವ್ವಕ್ಕೆ ಅಜ್ಞಾಪಿಸಿದರು.ದೆವ್ವವು ಆ ಮನುಷ್ಯನನ್ನು ಒದ್ದಾಡಿಸಿ,ಗಟ್ಟಿಯಾಗಿ ಚೀರುತ್ತಾ, ಅವನನ್ನು ಬಿಟ್ಟುಹೋಯಿತು.

ಜನರೆಲ್ಲರೂ ಆಶ್ಚರ್ಯಚಕಿತರಾದರು."ಇದೇನು ಹೊಸ ಬೋಧನೆ! ಈತ ದೆವ್ವಗಳಿಗೆ ಕೂಡ ಅಧಿಕಾರದಿಂದ ಅಜ್ಞಾಪಿಸುತ್ತಾನೆ; ಅವು ಈತ ಹೇಳಿದ ಹಾಗೆ ಕೇಳುತ್ತವೆಯಲ್ಲ! ಎಂದು ಪರಸ್ಪರ ಮಾತಾಡಿಕೊಂಡರು.ಕೂಡಲೇ ಗಲಿಲೇಯ ಪ್ರಾಂತ್ಯದ ಎಲ್ಲೆಡೆಗೂ ಯೇಸುವಿನ ಸಮಾಚಾರ ಹಬ್ಬಿ ಹರಡಿತು.

11.01.10- "ನನ್ನನ್ನು ಹಿಂಬಾಲಿಸಿ ಬನ್ನಿ, ನಿಮ್ಮನ್ನು ಮನುಷ್ಯರನ್ನೇ ಹಿಡಿಯುವವರನ್ನಾಗಿ ಮಾಡುವೆನು,"

ಸಂತ ಮಾರ್ಕನು ಬರೆದ ಶುಭಸಂದೇಶದಿಂದ ವಾಚನ

ಯೇಸು ಅವರನ್ನು ಕರೆದರು.ಅವರೂ ತಮ್ಮ ತಂದೆ ಜೆಬುದಾಯನನ್ನು ಕೂಲಿಯಾಳುಗಳ ಸಂಗಡ ದೋಣಿಯಲ್ಲೇ ಬಿಟ್ಟು ಹಿಂಬಾಲಿಸಿದರು.

ಯೊವಾನ್ನನು ಬಂಧಿತನಾದ ಬಳಿಕ ಯೇಸುಸ್ವಾಮಿ ಗಲಿಲೇಯಕ್ಕೆ ಹೋಗಿ ದೇವರ ಶುಭಸಂದೇಶವನ್ನು ಸಾರಿದರು: "ಕಾಲವು ಪರಿಪಕ್ವವಾಗಿದೆ,ದೇವರ ಸಾಮ್ರಾಜ್ಯವು ಸಮೀಪಿಸಿದೆ;ಪಶ್ಚಾತ್ತಾಪಪಟ್ಟು ಪಾಪ ಜೀವನಕ್ಕೆ ವಿಮುಖರಾಗಿ ದೇವರಿಗೆ ಅಭಿಮುಖರಾಗಿರಿ.ಶುಭಸಂದೇಶದಲ್ಲಿ ವಿಶ್ವಾಸವಿಡಿ" ಎಂದು ಘೋಷಿಸಿದರು.

ಯೇಸುಸ್ವಾಮಿ ಗಲಿಲೇಯ ಸರೋವರದ ತೀರದಲ್ಲಿ ನಡೆದು ಹೋಗುತ್ತಿದ್ದಾಗ ಸಿಮೋನನನ್ನೂ ಆತನ ಸಹೋದರ ಅಂದ್ರೇಯನನ್ನೂ ಕಂಡರು.ಬೆಸ್ತರಾದ ಇವರು ಸರೋವರದಲ್ಲಿ ಬಲೆಬೀಸುತ್ತಾ ಇದ್ದರು.ಯೇಸು ಅವರಿಗೆ,"ನನ್ನನ್ನು ಹಿಂಬಾಲಿಸಿ ಬನ್ನಿ, ನಿಮ್ಮನ್ನು ಮನುಷ್ಯರನ್ನೇ ಹಿಡಿಯುವವರನ್ನಾಗಿ ಮಾಡುವೆನು," ಎಂದು ಕರೆದರು. ತಕ್ಷಣವೇ ಅವರು ತಮ್ಮ ಬಲೆಗಳನ್ನು ಬಿಟ್ಟು ಯೇಸುವನ್ನು ಹಿಂಬಾಲಿಸಿದರು.ಇನ್ನೂ ಸ್ವಲ್ಪ ಮುಂದಕ್ಕೆ ಹೋಗುತ್ತಿದ್ದಾಗ,ಜೆಬುದಾಯನ ಮಕ್ಕಳಾದ ಯಾಕೋಬ ಮತ್ತು ಯೊವಾನ್ನರನ್ನು ಯೇಸು ಕಂಡರು.ಅವರು ದೋಣಿಯಲ್ಲಿ ಕುಳಿತು ತಮ್ಮ ಬಲೆಗಳನ್ನು ಸರಿಪಡಿಸುತ್ತಿದ್ದರು.ಕೂಡಲೇ, ಯೇಸು ಅವರನ್ನು ಕರೆದರು.ಅವರೂ ತಮ್ಮ ತಂದೆ ಜೆಬುದಾಯನನ್ನು ಕೂಲಿಯಾಳುಗಳ ಸಂಗಡ ದೋಣಿಯಲ್ಲೇ ಬಿಟ್ಟು ಹಿಂಬಾಲಿಸಿದರು.

10.01.10 - "ನೀನೇ ನನ್ನ ಪುತ್ರ, ನನಗೆ ಪರಮ ಪ್ರಿಯನು; ನನ್ನ ಮೆಚ್ಚುಗೆಗೆ ಪಾತ್ರನು,"

ಸಂತ ಲೂಕ ಬರೆದ ಶುಭ ಸಂದೇಶದಿಂದ ವಾಚನ - 3:15-16, 21-22

ಪವಿತ್ರಾತ್ಮ ಸಶರೀರವಾಗಿ ಒಂದು ಪಾರಿವಾಳದ ರೂಪದಲ್ಲಿ ಯೇಸುವಿನ ಮೇಲೆ ಇಳಿದರು.

"ಈ ಯೊವಾನ್ನನೇ ಎಲ್ಲರು ಎದುರು ನೋಡುತ್ತಾ ಇರುವ ಅಭಿಷಿಕ್ತನಾದ ಲೋಕೋದ್ಢಾರಕ ಆಗಿರಬಹುದೇ?" ಎಂದು ಜನರು ತಮ್ಮ ಮನಸ್ಸಿನಲ್ಲೇ ಆಲೋಚಿಸುತ್ತಿದ್ದರು. ಅದಕ್ಕೆ ಉತ್ತರವಾಗಿ ಯೊವಾನ್ನನು" ನಾನು ನಿಮಗೆ ನೀರಿನಿಂದ ಸ್ನಾನ ದೀಕ್ಷೆ ಕೊಡುತ್ತಿದ್ದೇನೆ. ಆದರೆ ನನಗಿಂತಲೂ ಶಕ್ತರೊಬ್ಬರು ಬರುತ್ತಾರೆ. ಅವರ ಪಾದ ರಕ್ಷೆಗಳನ್ನು ಬಿಚ್ಚುವುದಕ್ಕೂ ನಾನು ಅರ್ಹನಲ್ಲ. ಅವರು ನಿಮಗೆ ಪವಿತ್ರಾತ್ಮ ಅವರಿಂದಲೂ ಅಗ್ನಿಯಿಂದಲೂ ದೀಕ್ಷಾಸ್ನಾನ ಕೊಡುವರು." ಎಂದು ನುಡಿದರು.

ಜನರೆಲ್ಲರು ಸ್ನಾನದೀಕ್ಷೆ ಪಡೆದು ಪ್ರಾರ್ಥಿಸುತ್ತಿರಲು,ಆಕಾಶವು ತೆರೆಯಿತು.ಆಗ ಪವಿತ್ರಾತ್ಮ ಸಶರೀರವಾಗಿ ಒಂದು ಪಾರಿವಾಳದ ರೂಪದಲ್ಲಿ ಯೇಸುವಿನ ಮೇಲೆ ಇಳಿದರು.ಅಲ್ಲದೆ,"ನೀನೇ ನನ್ನ ಪುತ್ರ, ನನಗೆ ಪರಮ ಪ್ರಿಯನು; ನನ್ನ ಮೆಚ್ಚುಗೆಗೆ ಪಾತ್ರನು," ಎಂಬ ದೈವ ವಾಣಿ ಕೇಳಿಸಿತು.

ಚಿಂತನೆ :

ಇಂದು ಧರ್ಮಸಭೆ ಪ್ರಭು ಯೇಸುವಿನ ದೀಕ್ಷಾಸ್ನಾನದ ಮಹೋತ್ಸವವನ್ನು ಆಚರಿಸುತ್ತದೆ. ಇಂದಿನ ಮೊದಲನೇ ವಾಚನದಲ್ಲಿ ಯೆಶಾಯ ಪ್ರವಾದಿಯು ದೇವರಿಗೆ ಅಭಿಮುಖರಾಗಿರಿ, ಆತನಿಗಾಗಿ ಹಾದಿಯನ್ನು ಸಿದ್ದಪಡಿಸಿಕೊಳ್ಳಿ, ಮತ್ತು ತೀತನಿಗೆ ಬರೆದ ಪತ್ರದಲ್ಲಿ, ದೇವರು ತೋರಿದ ಪ್ರೀತಿ ಮತ್ತು ಕರುಣೆಯಿಂದಾಗಿ ನಾವೆಲ್ಲರೂ ರಕ್ಷಣೆ ಪಡೆದಿದ್ದೇವೆ ಎಂಬ ಸಂದೇಶವನ್ನು ನೀಡುತ್ತಿವೆ. ಲೂಕನ ಶುಭಸಂದೇಶದಿಂದ ಆಲಿಸಿದ ಇಂದಿನ ಮೂರನೇ ವಾಚನವು ನಮ್ಮ ಗಮನವನ್ನು ಪ್ರಭು ಯೇಸುವಿನ ದೀಕ್ಷಾಸ್ನಾನದ ಕಡೆಗೆ ಹರಿಸುತ್ತಿದೆ. ಪಾಪರಹಿತ ಯೇಸುವಿಗೆ ಸ್ನಾನಿಕ ಯೊವಾನ್ನನು ನೀಡುವ ದೀಕ್ಷಾಸ್ನಾನದ ಅವಶ್ಯಕತೆ ಇದೆಯೇ? ಯೇಸು ಪಡೆಯುವ ದೀಕ್ಷಾಸ್ನಾನವು ಒಂದು ವಿಧಿಯಾಚರಣೆಗಾಗಿ ಅಲ್ಲ, ಪಾಪಗಳ ಕ್ಷಮೆಗಾಗಿಯೂ ಅಲ್ಲ. ಯೇಸು ಸ್ನಾನದೀಕ್ಷೆ ಪಡೆದುದುದರ ಮೂಲ ಉದ್ದೇಶವೇ ಬೇರೆಯಾಗಿತ್ತು. ಜೆರುಸಲೇಮಿನ ಪ್ರಾರ್ಥನಾ ಮಂದಿರದಲ್ಲಿ ಯೆಶಾಯ ಪ್ರವಾದಿಯ ಗ್ರಂಥದಿಂದ ಅವರು ಓದಿದ ವಾಚನದಲ್ಲಿ ಅವರು ಭುವಿಗಿಳಿದು ಬಂದುದರ ಮೂಲ ಉದ್ದೇಶವು ಸ್ಪಷ್ಟವಾಗಿ ವ್ಯಕ್ತವಾಗಿದೆ.“ದೇವರಾತ್ಮವು ನನ್ನಮೇಲಿದೆ, ದೀನದಲಿತರಿಗೆ ಶುಭಸಂದೇಶವನ್ನು ಭೋಧಿಸಲೆಂದು ಅವರೆನ್ನನು ಅಭಿಷೇಕಿಸಿದ್ದಾರೆ; ಬಂಧಿತರಿಗೆ ಬಿಡುಗಡೆಯನ್ನು, ಅಂದರಿಗೆ ದೃಷ್ಟಿದಾನವನ್ನು ಪ್ರಕಟಿಸಲೂ ದಬ್ಬಾಳಿಕೆಗೀಡಾದವರಿಗೆ ಸ್ವಾತಂತ್ರ್ಯ ನೀಡಲೂ ದೇವರು ತಮ್ಮ ಜನತೆಯನ್ನು ಉದ್ಧರಿಸವ ಕಾಲ ಬಂತೆಂದು ಸಾರಲೂ ಅವರು ನನ್ನನ್ನು ಕಳುಹಿಸಿದ್ದಾರೆ.” (ಲೂಕ 4:18-19). ಯೇಸು ಸಾಮಾನ್ಯ ಜನರೊಂದಿಗೆ ಜೋರ್ದಾನ್ ನದಿಯಲ್ಲಿ ದೀಕ್ಷಾಸ್ನಾನವನ್ನು ಸ್ವೀಕರಿಸಿ ಬಡವರೊಡನೆ, ದೀನದಲಿರೊಡನೆ, ದಿಕ್ಕಿಲ್ಲದವರೊಡನೆ ಗುರುತಿಸಿಕೊಂಡು, ತಾನು ಧರೆಗಿಳಿದು ಬಂದ ಉದ್ದೇಶವನ್ನು ಸ್ಪಷ್ಟವಾಗಿ ನಮಗೆ ಮನದಟ್ಟು ಮಾಡುತ್ತಿದ್ದಾರೆ.

09.01.10 - “ದೇವರು ದಯಪಾಲಿಸದೆ ಹೋದರೆ ಮಾನವನಿಗೇನೂ ದಕ್ಕದು"

ಸಂತ ಯೊವಾನ್ನನು ಬರೆದ ಶುಭ ಸಂದೇಶದಿಂದ ವಾಚನ - 3:22-30

"ಆತನ ಸ್ವರ ಕೇಳಿ ಹರ್ಷಿಸುತ್ತಾನೆ.ಇಂಥ ಆನಂದದಿಂದ ನಾನೀಗ ಭರಿತನಾಗಿದ್ದೇನೆ.ಆತ ಬೆಳೆಯುತ್ತಿರಬೇಕು, ನಾನು ಅಳಿಯುತ್ತಿರಬೇಕು.”
ಯೇಸುಸ್ವಾಮಿ ತಮ್ಮ ಶಿಷ್ಯರೊಡನೆ ಜುದೇಯ ಪ್ರಾಂತ್ಯಕ್ಕೆ ಬಂದು ಅವರೊಡನೆ ಕೆಲವು ಕಾಲ ಅಲ್ಲೇ ಉಳಿದುಕೊಂಡು ದೀಕ್ಷಾಸ್ನಾನ ಮಾಡಿಸತೊಡಗಿದರು. ಅತ್ತ ಯೊವಾನ್ನನು ಕೂಡ ಸಾಲಿಮ್ ಎಂಬ ಊರಿಗೆ ಹತ್ತಿರವಾಗಿದ್ದ ಐನೋನ್ ಎಂಬ ಸ್ಥಳದಲ್ಲಿ ನೀರು ಹೆಚ್ಚಾಗಿದ್ದುದರಿಂದ ಸ್ನಾನ ದೀಕ್ಷೆಯನ್ನು ಮಾಡಿಸುತ್ತಿದ್ದನು.ಜನರು ಬಂದು ಸ್ನಾನ ದೀಕ್ಷೆಯನ್ನು ಪಡೆಯುತ್ತಿದ್ದರು. ಯೊವಾನ್ನನು ಆಗ ಇನ್ನೂ ಬಂಧಿತನಾಗಿರಲಿಲ್ಲ.

ಶುದ್ಢಾಚಾರವನ್ನು ಕುರಿತು ಯೊವಾನ್ನನ ಶಿಷ್ಯರಿಗೂ ಯೆಹೂದ್ಯನೊಬ್ಬನಿಗೂ ವಿವಾದ ಎದ್ದಿತು. ಅವರು ಯೊವಾನ್ನನ ಬಳಿಗೆ ಬಂದು, “ಗುರುವೇ, ಜೋರ್ಡಾನಿನ ಆಚೆಕಡೆಯಲ್ಲಿ ನಿಮ್ಮೊಡನೆ ಒಬ್ಬನು ಇದ್ದನಲ್ಲವೇ ಆತನನ್ನು ಕುರಿತು ನೀವೇ ಸಾಕ್ಷಿ ಹೇಳಲಿಲ್ಲವೇ? ಈಗ ನೋಡಿ, ಆತನೇ ದೀಕ್ಷಾಸ್ನಾನ ಮಾಡಿಸುತ್ತಿದ್ದಾನೆ. ಎಲ್ಲರೂ ಅತನ ಬಳಿಗೆ ಹೋಗುತ್ತಿದ್ದಾರೆ,” ಎಂದು ದೂರಿತ್ತರು. ಅದಕ್ಕೆ ಯೊವಾನ್ನನು, “ದೇವರು ದಯಪಾಲಿಸದೆ ಹೋದರೆ ಮಾನವನಿಗೇನೂ ದಕ್ಕದು.‘ನಾನು ಲೋಕೋದ್ಧಾರಕನಲ್ಲ; ಆತನ ಮುಂದೂತ ಮಾತ್ರ’ ಎಂದು ನಾನು ಹೇಳೀದ್ದಕ್ಕೆ ನೀವೇ ಸಾಕ್ಷಿಗಳಾಗಿದ್ದೀರಿ. ಮದುಮಗಳು ಮಗನಿಗೆ ಸೇರಿದವಳು. ಮದುಮಗನ ಗೆಳೆಯನಾದರೋ ಪಕ್ಕದಲ್ಲಿದ್ದು ಮದುಮಗನ ಕರೆಗೆ ಕಿವಿಗೊಡುತ್ತಾನೆ; ಆತನ ಸ್ವರ ಕೇಳಿ ಹರ್ಷಿಸುತ್ತಾನೆ.ಇಂಥ ಆನಂದದಿಂದ ನಾನೀಗ ಭರಿತನಾಗಿದ್ದೇನೆ.ಆತ ಬೆಳೆಯುತ್ತಿರಬೇಕು, ನಾನು ಅಳಿಯುತ್ತಿರಬೇಕು.” ಎಂದನು.

08.01.10- "ತಾವು ಮನಸ್ಸು ಮಾಡಿದರೆ ನನ್ನನ್ನು ಗುಣಮಾಡಬಲ್ಲಿರಿ"

ಸಂತ ಲೂಕ ಬರೆದ ಶುಭ ಸಂದೇಶದಿಂದ ವಾಚನ - 5 : 12-16

ಅವರ ಉಪದೇಶವನ್ನು ಕೇಳುವುದಕ್ಕೂ ತಮ್ಮ ತಮ್ಮ ರೋಗ ರುಜಿನಗಳನ್ನು ವಿಮುಕ್ತರಾಗುವುದಕ್ಕೂ ಜನರು ತಂಡೋಪತಂಡವಾಗಿ ಬರುತ್ತಿದ್ದರು.

ಯೇಸುಸ್ವಾಮಿ ಒಂದು ಪಟ್ಟಣದಲ್ಲಿ ಇದ್ದಾಗ, ಮೈಯೆಲ್ಲಾ ಕುಷ್ಠ ಹಿಡಿದಿದ್ದ ರೋಗಿಯೊಬ್ಬನು ಅಲ್ಲಿಗೆ ಬಂದು ಅವರಿಗೆ ಅಡ್ಡ ಬಿದ್ದು, "ಸ್ವಾಮಿ, ತಾವು ಮನಸ್ಸು ಮಾಡಿದರೆ ನನ್ನನ್ನು ಗುಣಮಾಡಬಲ್ಲಿರಿ.’ ಎಂದು ಬೇಡಿಕೊಂಡನು. ಯೇಸು ಕೈ ಚಾಚಿ ಅವನನ್ನು ಮುಟ್ಟಿ "ಖಂಡಿತವಾಗಿಯೂ ನನಗೆ ಮನಸ್ಸಿದೆ ಗುಣವಾಗಲಿ." ಎಂದರು. ತಕ್ಷಣವೇ ಕುಷ್ಠವು ಮಾಯವಾಗಿ ಅವನು ಗುಣಹೊಂದಿದನು. ಇದನ್ನು ಯಾರಿಗೂ ಹೇಳಕೂಡದು ಎಂದು ಯೇಸು ಅವನನ್ನು ಎಚ್ಚರಿಸಿ "ನೀನು ನೆಟ್ಟಗೆ ಯಾಜಕನ ಬಳಿಗೆ ಹೋಗು;ಅವನು ನಿನ್ನನ್ನು ಪರೀಕ್ಷಿಸಿ ನೋಡಲಿ;ನಂತರ ಮೋಶೆ ನಿಯಮಿಸಿರುವ ಪ್ರಕಾರ ನೀನು ಗುಣಹೊಂದಿದ್ದಕ್ಕಾಗಿ ಶುದ್ಢೀಕರಣ ವಿಧಿಯನ್ನು ಅನುಸರಿಸು; ಇದು ಜನರಿಗೆ ಸಾಕ್ಷಿಯಾಗಿರಲಿ." ಎಂದರು.

ಯೇಸು ಎಷ್ಟು ಎಚ್ಚರಿಸಿದರೋ ಅಷ್ಟು ಅಧಿಕವಾಗಿ ಅವರ ಸುದ್ದಿ ಹರಡಿತು. ಅವರ ಉಪದೇಶವನ್ನು ಕೇಳುವುದಕ್ಕೂ ತಮ್ಮ ತಮ್ಮ ರೋಗ ರುಜಿನಗಳನ್ನು ವಿಮುಕ್ತರಾಗುವುದಕ್ಕೂ ಜನರು ತಂಡೋಪತಂಡವಾಗಿ ಬರುತ್ತಿದ್ದರು. ಯೇಸುವಾದರೋ ನಿರ್ಜನ ಪ್ರದೇಶಕ್ಕೆ ಹೋಗಿ ಎಂದಿನಂತೆ ಪ್ರಾರ್ಥನೆಯಲ್ಲಿ ಮಗ್ನರಾಗುತ್ತಿದ್ದರು.

07.01.10 - ,ದೀನ ದಲಿತರಿಗೆ ಶುಭ ಸಂದೇಶವನ್ನು ಬೋಧಿಸಲೆಂದು ಅವರೆನ್ನನು ಅಭಿಷೇಕಿಸಿದ್ದಾರೆ.

ಸಂತ ಲೂಕ ಬರೆದ ಶುಭ ಸಂದೇಶದಿಂದ ವಾಚನ - 4: 14 -22

"ಈ ಪವಿತ್ರ ವಾಕ್ಯವನ್ನು ಕೇಳುತ್ತಿದ್ದ ಹಾಗೆ ಅದು ಇಂದು ನೆರವೇರಿತು"


ಯೇಸು ಸ್ವಾಮಿ ಪವಿತ್ರಾತ್ಮರ ಶಕ್ತಿಯಿಂದ ಕೂಡಿ ಗಲಿಲೇಯಕ್ಕೆ ಮರಳಿ ಬಂದರು.ಅವರ ವಿಷಯ ಸುತ್ತಮುತ್ತೆಲ್ಲಾ ಹರಡಿತು. ಅಲ್ಲಿನ ಪ್ರಾರ್ಥನಾ ಮಂದಿರದಲ್ಲಿ ಅವರು ಬೋಧಿಸುತ್ತಾ ಬಂದರು. ಎಲ್ಲರು ಅವರನ್ನು ಹೊಗಳುವವರೇ! ಯೇಸುಸ್ವಾಮಿ ತಾವು ಬೆಳೆದ ಊರಾದ ನಜರೇತಿಗೆ ಬಂದರು. ವಾಡಿಕೆಯ ಪ್ರಕಾರ ಸಬ್ಬತ್ ದಿನ ಪ್ರಾರ್ಥನಾಮಂದಿರಕ್ಕೆ ಹೋದರು. ಅಲ್ಲಿ ಪವಿತ್ರ ಗ್ರಂಥವನ್ನು ಓದುವುದಕ್ಕೆ ಅವರು ಎದ್ದು ನಿಂತಾಗ, ಪ್ರವಾದಿ ಯೆಶಾಯನ ಗ್ರಂಥದ ಸುರಳಿಯನ್ನು ಅವರ ಕೈಗೆ ಕೊಟ್ಟರು. ಅದನ್ನು ಬಿಚ್ಚಿದಾಗ ಈ ಕೆಳಗಿನ ವಚನಗಳು ಯೇಸುವಿನ ಕಣ್ಣಿಗೆ ಬಿದ್ದವು; ದೇವರಾತ್ಮ ನನ್ನ ಮೇಲಿದೆ,ದೀನ ದಲಿತರಿಗೆ ಶುಭ ಸಂದೇಶವನ್ನು ಬೋಧಿಸಲೆಂದು ಅವರೆನ್ನನು ಅಭಿಷೇಕಿಸಿದ್ದಾರೆ. ಬಂಧಿತರಿಗೆ ಬಿಡುಗಡೆಯನ್ನು, ಅಂಧರಿಗೆ ದೃಷ್ಠಿದಾನವನ್ನು ಪ್ರಕಟಿಸಲೂ, ಶೋಷಿತರಿಗೆ ಸ್ವಾತ್ರಂತ್ಯ ನೀಡಲೂ ದೇವರು ತಮ್ಮ ಜನತೆಯನ್ನು ಉದ್ಧರಿಸುವ ಕಾಲ ಬಂತೆಂದು ಸಾರಲೂ ಅವರು ನನ್ನನ್ನು ಕಳುಹಿಸಿದ್ದಾರೆ".

ಈ ವಾಕ್ಯವನ್ನು ಓದಿ,ಸುರಳಿಯನ್ನು ಸುತ್ತಿ ಪ್ರಾರ್ಥನಾಮಂದಿರದ ಸೇವಕನ ಕೈಗಿತ್ತು, ಯೇಸು ಕುಳಿತುಕೊಂಡರು. ಅಲ್ಲಿದ್ದ ಎಲ್ಲರ ಕಣ್ಣುಗಳು ಅವರ ಮೇಲೆಯೇ ನಾಟಿದ್ದವು. ಆಗ ಯೇಸು, ನೀವು "ಈ ಪವಿತ್ರ ವಾಕ್ಯವನ್ನು ಕೇಳುತ್ತಿದ್ದ ಹಾಗೆ ಅದು ಇಂದು ನೆರವೇರಿತು," ಎಂದು ವಿವರಿಸಲಾರಂಭಿಸಿದರು. ಎಲ್ಲರೂ ಅವರನ್ನು ಬಹುವಾಗಿ ಮೆಚ್ಚಿಕೊಂಡರು. ಅವರ ಬಾಯಿಂದ ಬಂದ ಮಧುರ ಮಾತುಗಳನ್ನು ಕೇಳಿ ಅಚ್ಚರಿಗೊಂಡರು."ಇವನು ಜೋಸೆಫನ ಮಗನಲ್ಲವೆ?" ಎಂದು ಮಾತನಾಡಿಕೊಂಡರು.

06.01.10 - ರೊಟ್ಟಿಗಳ ಅದ್ಭುತವನ್ನು ಅವರು ಇನ್ನೂ ಗ್ರಹಿಸಿಕೊಂಡಿರಲಿಲ್ಲ.

ಸಂತ ಮಾರ್ಕನು ಬರೆದ ಶುಭ ಸಂದೇಶದಿಂದ ವಾಚನ - 6:45-52

ಯೇಸು ಸರೋವರದ ನೀರಿನ ಮೇಲೆ ನಡೆದುಕೊಂಡು ಅವರ ಬಳಿಗೆ ಬಂದು, ಅವರನ್ನು ದಾಟಿ ಮುಂದೆ ಹೋಗುವುದಲ್ಲಿದ್ದರು.

ಯೇಸುಸ್ವಾಮಿ, ತಾವು ಜನರ ಗುಂಪನ್ನು ಕಳುಹಿಸಿಬಿಡಿವಷ್ಟರಲ್ಲಿ ಶಿಷ್ಯರು ದೋಣಿ ಹತ್ತಿ ತಮಗಿಂತ ಮುಂದಾಗಿ ಸರೋವರದ ಆ ಕಡೆಗಿದ್ದ ಬೆತ್ಸಾಯಿದಕ್ಕೆ ಹೋಗುವಂತೆ ಆಜ್ಞಾಪಿಸಿದರು. ಜನರನ್ನು ಬೀಳ್ಕೊಟ್ಟ ಬಳಿಕ ಯೇಸು ಪ್ರಾರ್ಥನೆ ಮಾಡಲು ಬೆಟ್ಟಕೆ ಹೋದರು. ಕತ್ತಲೆ ಕವಿದಾಗ ದೋಣಿಯು ಸರೋವರದ ಮಧ್ಯೆ ಸಾಗಿತ್ತು. ಇತ್ತ ಯೇಸು ಒಬ್ಬರೇ ದಡದಲ್ಲಿದ್ದರು.ಎದುರುಗಾಳಿ ಬೀಸುತ್ತಿದ್ದರಿಂದ ಶಿಷ್ಯರು ಹುಟ್ಟು ಹಾಕಿ ದಣಿದು ಹೋಗಿದ್ದರು. ಇದನ್ನು ಕಂಡು ಯೇಸು ಸರೋವರದ ನೀರಿನ ಮೇಲೆ ನಡೆದುಕೊಂಡು ಅವರ ಬಳಿಗೆ ಬಂದು, ಅವರನ್ನು ದಾಟಿ ಮುಂದೆ ಹೋಗುವುದಲ್ಲಿದ್ದರು. ಆಗ ಸುಮಾರು ರಾತ್ರಿಯ ಕಡೆ ಜಾವದ ಸಮಯ.ಸರೋವರದ ಮೇಲೆ ನಡೆದು ಬರುತ್ತಿದ್ದ ಯೇಸುವನ್ನು ಶಿಷ್ಯರು ನೋಡಿದರು; ಭೂತವೆಂದು ಭಾವಿಸಿ ಭಯದಿಂದ ಚೀರಿದರು.ಅವರೆಲ್ಲರೂ ಯೇಸುವನ್ನು ನೋಡಿ ದಿಗಿಲುಗೊಂಡಿದ್ದರು.

 ತಕ್ಷಣವೇ ಯೇಸು ಅವರೊಡನೆ ಮಾತನಾಡುತ್ತಾ, " ಭಯಪಡಬೇಡಿ, ಬೇರೆ ಯಾರೂ ಅಲ್ಲ, ನಾನೇ; ಧೈರ್ಯದಿಂದಿರಿ," ಎಂದು ಅವರೊಡನೆ ಮಾತಾಡಿ ದೋಣಿಯನ್ನು ಹತ್ತಿದರು. ಆಗ ಎದುರುಗಾಳಿ ನಿಂತಿ ಹೋಯಿತು. ಶಿಷ್ಯರು ಬೆಕ್ಕಸ ಬೆರಗಾದರು. ಅವರ ಬುದ್ಧಿ ಮಂದವಾಗಿತ್ತು. ರೊಟ್ಟಿಗಳ ಅದ್ಭುತವನ್ನು ಅವರು ಇನ್ನೂ ಗ್ರಹಿಸಿಕೊಂಡಿರಲಿಲ್ಲ.

05.12.10 - ಊಟ ಮಾಡಿದವರಲ್ಲಿ ಗಂಡಸರ ಸಂಖ್ಯೆಯೇ ಐದು ಸಾವಿರ.

ಸಂತ ಮಾರ್ಕನು ಬರೆದ ಶುಭಸಂದೇಶದಿಂದ ವಾಚನ : 6:34-44

ಸ್ವರ್ಗದತ್ತ ಕಣ್ಣೆತ್ತಿ ನೋಡಿ, ದೇವರಿಗೆ ಸ್ತೋತ್ರ ಸಲ್ಲಿಸಿದರು

ಯೇಸು ದೋಣಿಯಿಂದ ಇಳಿದಾಗ ಅಲ್ಲಿ ದೊಡ್ದ ಸಮೂಹವೇ ಸೇರಿತ್ತು. ಆ ಜನರು ಕುರಬನಿಲ್ಲದ ಕುರಿಗಳಂತಿರುವುದನ್ನು ಕಂಡು ಯೇಸುವಿನ ಮನ ಕರಗಿತು; ಅನೇಕ ವಿಷಯಗಳನ್ನು ಕುರಿತು ಅವರಿಗೆ ಉಪದೇಶವಿತ್ತರು.ಅಷ್ಟರಲ್ಲಿ ಸಂಜೆಯಾಗುತ್ತಾ ಬಂತು.ಶಿಷ್ಯರು ಯೇಸುವಿನ ಬಳಿಗೆ ಬಂದು "ಈಗಾಗಲೇ ಹೊತ್ತು ಮೀರಿ ಹೋಯಿತು;ಇದು ನಿರ್ಜನ ಪ್ರದೇಶ; ಇನ್ನು ಜನರನ್ನು ಕಳುಹಿಸಿಬಿಡಿ.ಅವರು ಸಮೀಪದ ಊರುಕೇರಿಗಳಿಗೆ ಹೋಗಿ ಊಟಕ್ಕೆ ಏನಾದರು ಕೊಂಡಿಕೊಳ್ಳಲಿ,’ ಎಂದರು.’ ಆಗ ಯೇಸು ,"ನೀವೇ ಅವರಿಗೆ ಊಟಕ್ಕೇನಾದರು ಕೊಡಿ," ಎಂದರು. ಅದಕ್ಕೆ ಶಿಷ್ಯರು " ನಾವು ಹೋಗಿ ಇನ್ನೂರು ದೆನಾರಿ ನಾಣ್ಯಗಳ ಬೆಲೆಯಷ್ಟು ರೊಟ್ಟಿಯನ್ನು ಕೊಂಡು ತಂದು ಅವರಿಗೆ ಊಟಕ್ಕೆ ಬಡಿಸೋಣವೇನು?" ಎಂದರು. ಯೇಸು, "ನಿಮ್ಮಲ್ಲಿ ಎಷ್ಟು ರೊಟ್ಟಿಗಳಿವೆ? ಹೋಗಿ ನೋಡಿಕೊಂಡು ಬನ್ನಿ." ಎಂದರು. ಅವರು ವಿಚಾರಿಸಿಕೊಂಡೂ ಬಂದು, ನಮ್ಮಲ್ಲಿ ಐದು ರೊಟ್ಟಿ ಮತ್ತು ಎರಡು ಮೀನುಗಳಿವೆ," ಎಂದು ತಿಳಿಸಿದರು.

ಎಲ್ಲರು ಪಂಕ್ತಿ ಪಂಕ್ತಿಯಾಗಿ ಹಸಿರು ಹುಲ್ಲಿನ ಮೇಲೆ ಊಟಕ್ಕೆ ಕುಳಿತುಕೊಳ್ಳಬೇಕೆಂದು ಯೇಸು ಅಪ್ಪಣೆ ಮಾಡಿದರು. ಅವರು ಐವತ್ತರಂತೆಯೂ ನೂರರಂತೆಯೂ ಪಂಕ್ತಿಯಲ್ಲಿ ಕುಳಿತರು.ಯೇಸು ಆ ಐದು ರೊಟ್ಟಿಗಳನ್ನೂ ಎರಡು ಮೀನನ್ನು ತೆಗೆದುಕೊಂಡು, ಸ್ವರ್ಗದತ್ತ ಕಣ್ಣೆತ್ತಿ ನೋಡಿ, ದೇವರಿಗೆ ಸ್ತೋತ್ರ ಸಲ್ಲಿಸಿದರು. ತರುವಾಯ ಆ ರೊಟ್ಟಿಗಳನ್ನು ಮುರಿದು ಜನರಿಗೆ ಬಡಿಸುವಂತೆ ಅವನ್ನು ಶಿಷ್ಯರಿಗೆ ಕೊಟ್ಟರು. ಅಂತೆಯೇ ಎರಡು ಮೀನುಗಳ ತಿಂದು ತೃಪ್ತರಾದರು ಇನ್ನೂ ಉಳಿದಿದ್ದ ರೊಟ್ಟಿ ಮತ್ತು ಮೀನಿನ ತುಂಡುಗಳನ್ನು ಒಟ್ಟುಗೂಡಿಸಿದಾಗ, ಅವು ಹನ್ನೆರೆಡು ಬುಟ್ಟಿ ತುಂಬ ಆದವು.ಊಟ ಮಾಡಿದವರಲ್ಲಿ ಗಂಡಸರ ಸಂಖ್ಯೆಯೇ ಐದು ಸಾವಿರ.

02.01.2010 - ಅಭಿಷಿಕ್ತನಾದ ಲೋಕೋದ್ಧಾರಕ ನಾನಲ್ಲ

ಸಂತ ಯೊವಾನ್ನನು ಬರೆದ ಶುಭ ಸಂದೇಶದಿಂದ ವಾಚನ  - 1: 19-28


"ನನ್ನ ಬಳಿಕ ಬರಬೇಕಾಗಿದ್ದವರು ಅವರೇ. ಅವರ ಪಾದರಕ್ಷೆಗಳನ್ನು ಬಿಚ್ಚುವುದಕ್ಕೂ ನಾನು ಯೋಗ್ಯನಲ್ಲ"

ಜೆರುಸಲೇಮಿನ ಯೆಹೂದ್ಯ ಅಧಿಕಾರಿಗಳು, ಯಾಜಕರನ್ನೂ ಲೇವಿಯರನ್ನೂ ಯೊವಾನ್ನನ ಬಳಿಗೆ ಕಳುಹಿಸಿದರು. ಇವರು “ನೀನು ಯಾರು?” ಎಂದು ಪ್ರಶ್ನಿಸಿದರು. ಯೊವಾನ್ನನು ಅದಕ್ಕೆ ಉತ್ತರವಾಗಿ,”ಅಭಿಷಿಕ್ತನಾದ ಲೋಕೋದ್ಧಾರಕ ನಾನಲ್ಲ,” ಎಂದು ಸ್ಪಷ್ಟವಾಗಿ ಹೇಳಿದನು. ಏನನ್ನೂ ಮರೆಮಾಚಲಿಲ್ಲ. ಹಾಗಾದರೆ “ನೀನು ಎಲೀಯನೋ?” ಎಂದು ಕೇಳಲು ‘ಅಲ್ಲ’ ಎಂದನು. “ನೀನು ಬರಬೇಕಾಗಿದ್ದ ಪ್ರವಾದಿಯಿರಬಹುದೇ?” ಅವರು ಮತ್ತೆ ಕೇಳಲು , ಅದೂ ಅಲ್ಲ,” ಎಂದು ಮರುನುಡಿದನು. “ಹಾಗಾದರೆ ನೀನು ಯಾರೆಂದು ನಮಗೆ ತಿಳಿಸು.ನಮ್ಮನ್ನು ಕಳುಹಿಸಿದವರಿಗೆ ನಾವು ಉತ್ತರಕೊಡಬೇಕಾಗಿದೆ. ನಿನ್ನನು ಕುರಿತು ನೀನು ಏನು ಹೇಳುತ್ತಿ?” ಎಂದು ಅವರು ಮತ್ತೊಮ್ಮೆ ಕೇಳಿದರು. ಅದಕ್ಕೆ ಯೊವಾನ್ನನು,”ಫ್ರಭುವಿನ ಮಾರ್ಗವನ್ನು ನೇರಗೊಳಿಸಿರೆಂಬ ಬೆಂಗಾಡಿನಲ್ಲಿ ಕೂಗುವವನ ಸ್ವರವೇ ನಾನು”,ಎಂದು ಯೆಶಾಯ ಪ್ರವಾದಿಯ ಮಾತುಗಳಲ್ಲೇ ಉತ್ತರಕೊಟ್ಟನು.


ಆಗ ಫರಿಸಾಯರ ಕಡೆಯಿಂದ ಬಂದಿದ್ದ ಕೆಲವರು,”ನೀನು ಲೋಕೋದ್ಧಾರಕನಾಗಲಿ, ಎಲೀಯನಾಗಲಿ, ಬರಬೇಕಾಗಿದ್ದ ಪ್ರವಾದಿಯೇ ಆಗಲಿ ಅಲ್ಲವೆಂದ ಮೇಲೆ ಸ್ನಾನದೀಕ್ಷೆ ಕೊಡುವುದೇಕೆ? ಎಂದು ಪ್ರಶ್ನಿಸಿದರು. ಪ್ರತ್ಯುತ್ತರವಾಗಿ ಯೊವಾನ್ನನು “ನಾನು ನಿಮಗೆ ನೀರಿನಿಂದ ಸ್ನಾನ ದೀಕ್ಷೆ ಕೊಡುತ್ತಿದ್ದೇನೆ. ನಿಮಗೆ ತಿಳಿಯದ ಒಬ್ಬ ವ್ಯಕ್ತಿ ನಿಮ್ಮ ನಡುವೆ ಇದ್ದಾರೆ. ನನ್ನ ಬಳಿಕ ಬರಬೇಕಾಗಿದ್ದವರು ಅವರೇ. ಅವರ ಪಾದರಕ್ಷೆಗಳನ್ನು ಬಿಚ್ಚುವುದಕ್ಕೂ ನಾನು ಯೋಗ್ಯನಲ್ಲ,” ಎಂದನು. ಯೊವಾನ್ನನು ಸ್ನಾನ ದೀಕ್ಷೆ ಕೊಡುತ್ತಿದ್ದ ಜೋರ್ಡಾನ್ ನದಿಯ ಆಚೆ ದಡದಲ್ಲಿದ್ದ ಬೆಥಾನಿಯ ಎಂಬಲ್ಲಿ ಇದೆಲ್ಲವೂ ನೆಡೆಯಿತು.


01.01.10 - ‘ಯೇಸು’ ಎಂಬ ಹೆಸರನಿಟ್ಟು ನಾಮಕರಣ ಮಾಡಿದರು

ಸಂತ ಲೂಕನು ಬರೆದ ಶುಭ ಸಂದೇಶದಿಂದ ವಾಚನ - 2: 16-21


“ ಅವರು ಮರಿಳನ್ನೂ, ಜೋಸೇಫನನ್ನೂ ಗೋದಲಿಯಲ್ಲಿ ಮಲಗಿದ್ದ ಶಿಶುವನ್ನೂ ಕಂಡರು...
ಎಂಟನೆಯ ದಿನದಂದು ಮಗುವಿಗೆ ‘ಯೇಸು’ ಎಂಬ ಹೆಸರನಿಟ್ಟು ನಾಮಕರಣ ಮಾಡಿದರು.”

ಕುರುಬರು ತ್ವರೆಯಾಗಿ ಹೋಗಿ, ಮರಿಳನ್ನೂ, ಜೋಸೇಫನನ್ನೂ ಗೋದಲಿಯಲ್ಲಿ ಮಲಗಿದ್ದ ಶಿಶುವನ್ನೂ ಕಂಡರು. ಕಂಡ ಮೇಲೆ ಆ ಮಗುವಿನ ವಿಷಯವಾಗಿ ದೂತನು ತಮಗೆ ಹೇಳಿದ್ದನ್ನೆಲ್ಲ ಅವರಿಗೆ ತಿಳಿಯಪಡಿಸಿದರು. ಕುರುಬರು ಹೇಳಿದ ವಿಷಯವನ್ನು ಕೇಳಿದವರೆಲ್ಲರೂ ಆಶ್ಚರ್ಯಪಟ್ಟರು.

ಮರಿಯಳಾದರೋ ಈ ವಿಷಯಗಳನ್ನೆಲ್ಲಾ ಮನಸ್ಸಿನಲ್ಲಿಯೇ ಇಟ್ಟುಕೊಂಡು ಆಲೋಚಿಸುತ್ತಾ ಬಂದಳು. ಕುರುಬರು ತಾವು ಕೇಳಿದ್ದನ್ನು ನೆನೆಯುತ್ತಾ, ದೇವರ ಮಹಿಮೆಯನ್ನು ಸಾರುತ್ತಾ, ಕೊಂಡಾಡುತ್ತಾ ಹಿಂದಿರುಗಿದರು. ದೇವದೂತನು ಅವರಿಗೆ ತಿಳಿಸಿದಂತೆ ಎಲ್ಲವೂ ಸಂಭವಿಸಿತ್ತು. ಎಂಟನೆಯ ದಿನ ಶಿಶುವಿಗೆ ಸುನ್ನತಿ ಮಾಡಬೇಕಾಗಿದ್ದ ಸಂದರ್ಭದಲ್ಲಿ ಅದಕ್ಕೆ ‘ಯೇಸು’ ಎಂಬ ಹೆಸರನಿಟ್ಟು ನಾಮಕರಣ ಮಾಡಿದರು. ಈ ಹೆಸರನ್ನು ಮರಿಯಳು ಗರ್ಭಿಣಿಯಾಗುವುದಕ್ಕೆ ಮುಂಚೆಯೇ ದೂತನು ಸೂಚಿಸಿದ್ದನು.